ಫಸ್ಟ್‌ ಬಸ್ಸಿಗೆ ಕಾದ. ಅದರಲ್ಲಿ ಬಂದ ದಿನಪತ್ರಿಕೆಯನ್ನು ಆತಂಕದಿಂದ ಓದಿದ. ಮೊದಲನೇ ಪೇಜಿನಲ್ಲಿ ತನ್ನ ಪತ್ರವನ್ನು ಸುದ್ದಿಯಾಗಿ ಹಾಕಿದ್ದರು. ನೋಡಿದೊಡನೆಯೇ ಭಯವಾಯಿತು; ಇನ್ನು ಹೆಜ್ಜೆ ಹಿಂದಿಡುವಂತಿಲ್ಲವೆಂದು ಸಂತೋಷವಾಯಿತು. ಚಿಕ್ಕಿಯೂ ಪೇಪರನ್ನು ಓದಿ ತಿಳಿದುಕೊಳ್ಳಲಿ ಎಂದು ನಡುಮನೆಯಲ್ಲೆ ಪೇಪರನ್ನು ಬಿಟ್ಟು ಗೇರು ಗುಡ್ಡ ಹತ್ತಿನಡೆದ. ವೇಗವಾಗಿ ಗುಡ್ಡವನ್ನು ಹತ್ತಿ ನೆತ್ತಿಯ ಮೇಲೆ ನಿಂತ. ಇಷ್ಟರಲ್ಲೆ ಭಾರತೀಪುರದವರೆಲ್ಲ ಪೇಪರನ್ನು ಓದಿರುತ್ತಾರೆ. ಸ್ವೆಟರಿನ ಒಳಗೆ ಮೈ ಬೆಚ್ಚಗಾಗಿತ್ತು; ಬಿಸಿಯಾದ ಮುಖದ ಮೇಲೆ ಶೀತಗಾಳಿ ಬೀಸುತ್ತಿತ್ತು. ಹಿಮ ಕರಗಿ ಊರು ಬಿಸಿಲಿನಲ್ಲಿ ತೊಯ್ದಿತ್ತು.

ಇನ್ನು ಹದಿನೈದು ದಿನಗಳಲ್ಲಿ ಜಾತ್ರೆ. ಹೊಲೆಯರನ್ನ ಅಷ್ಟರಲ್ಲಿ ತಯಾರು ಮಾಡಿರಬೇಕು. ಏಕಾಗ್ರತೆಯಿಂದ ಪ್ರತಿ ಗಳಿಗೆಯೂ ಪ್ರಯತ್ನಿಸಬೇಕು.

ದೇವಸ್ಥಾನದ ಶಿಖರ ನೋಡುತ್ತ ನೆನಪಾಯಿತು. ಅಮಾವಾಸ್ಯೆ ದಿನ ಸಹಸ್ರಾರು ಜನ ಹೊಳೆಯಲ್ಲಿ ಸ್ನಾನ ಮಾಡುತ್ತಾರೆ. ಮಾರನೇ ದಿನ ರಥೋತ್ಸವ. ಹುಡುಗನಾಗಿದ್ದಾಗ ಸೂರ್ಯೋದಯಕ್ಕೆ ಮೊದಲೇ ಎದ್ದು ತಾಯಿಯ ಜೊತೆ ಸ್ನಾನಕ್ಕೆಂದು ಹೋಗುತ್ತಿದ್ದ. ಅವರ ಹಿಂದೆ ನಾನು ಚಳಿಯಲ್ಲಿ ಕುಣಿಯುತ್ತ, ನೂಕು ನುಗ್ಗಲಲ್ಲೂ ಜನ ನಮಗೆ ದಾರಿ ಬಿಡುತ್ತಿದ್ದರು. ಮೈ ನಡುಗಿಸುವ ಚಳಿಯಲ್ಲಿ ಅಂಗಿ ಚಡ್ಡಿ ಬಿಚ್ಚಿ ದುಂಡಗೆ ನಿಂತು ನೀರನ್ನು ನೋಡುತ್ತಿದ್ದೆ. ಆಗಲೇ ಮುಳುಗು ಹಾಕಿ ಎದ್ದ ತಾಯಿ ಬೆನ್ನಿನ ಮೇಲೆ ಎದೆಯ ಮೇಲೆ ಒದ್ದೆಯಾದ ಕೂದಲನ್ನು ಚೆಲ್ಲಿ ಕೊಂಡು ‘ಬಾ ಮುಳುಗು’ ಎಂದು ನಗುತ್ತಿದ್ದಳು. ಉಹು ಹುಹು ಚಳಿ ಎಂದು ನಾನು ಹಬೆ ಏಳುವ ನೀರನ್ನು ಆಸೆಯಿಂದ ಭಯದಿಂದ ನೋಡುತ್ತಿದ್ದೆ. ‘ನೀರು ಬೆಚ್ಚಗಿದೆ ಬಾ’ ಎನ್ನುತ್ತಿದ್ದರು ಅಮ್ಮ. ಕೈಹಿಡಿದು ಎಳೆಯುತ್ತಿದ್ದರು. ನಗುತ್ತ ಮುಳುಗಿಸುತ್ತಿದ್ದರು. ರೋಮಾಂಚನವಾಗಿ ಬೆಚ್ಚಗಿನ ನೀರಿನಲ್ಲಿ ಕೈಕಾಲುಗಳನ್ನು ಬಡಿಯುತ್ತ ತಾಯಿಯ ಸುತ್ತ ನೀರಿನ ತುಂತುರಿನ ಕೋಲಾಹಲ ಮಾಡುತ್ತಿದ್ದೆ. ಇಳಿದಾದ ಮೇಲೆ ಏಳಿಸುವದೇ ಅಮ್ಮನಿಗೆ ದೊಡ್ಡ ಕಷ್ಟವಾಗು ತ್ತಿತ್ತು. ಸೀತವಾಗಂತೆ ಕೂದಲ್ನನು ಚೆನ್ನಾಗಿ ಒರೆಸುತ್ತಿದ್ದರು. ಅವರ ದೀರ್ಘ ಕೂದಲಿನ ರಾಶಿಯಿಂದ ಮಾತ್ರ ನೀರು ತೊಟ್ಟಿಕ್ಕುತ್ತಿರುತ್ತಿತ್ತು. ಅಲ್ಲಿಂದ ಸೀದ ದೇವಸ್ಥಾನಕ್ಕೆ. ದೇವಸ್ಥಾನದ ಎದುರಿಗಿದ್ದ ಅಶ್ವತ್ಥಕ್ಕೆ ಪ್ರದಕ್ಷಿಣತೆ. ಅಮ್ಮ ಮೂರು ಪ್ರದಕ್ಷಿಣೆ ಹಾಕುವಷ್ಟರಲ್ಲೆ ನಾನು ಹತ್ತು ಪ್ರದಕ್ಷಿಣೆ ಹಾಕಿ ಮೈಕೈಯೆಲ್ಲ ಬೆಚ್ಚಗಾಗಿರುತ್ತಿತ್ತು. ಅಶ್ವತ್ಥದ ಮೇಲೆ ಮಂಗಗಳು. ಎಷ್ಟು ಧೈರ್ಯದಿಂದ ಹಲ್ಲು ಕಿರಿಯುವ, ಮರಿಗಳ ಹೇನು ಹುಡುಕುವ ಮಂಗಗಳು. ಅಣಕಿಸಿದರೆ ಅಟ್ಟಿಕೊಂಡು ಬರುತ್ತಾವೆ. ಕೈಯಲ್ಲಿರುವ ಬಾಳೆಹಣ್ಣು ಕಸಿದು ತಿನ್ನುತ್ತಾವೆ. ಕೆಮ್ಮಣ್ಣು ಜೇಡಿಮಣ್ಣು ಬಳಿದ ಪಾಗಾರದಾಟಿ ಬಂದರೆ ಆಲದಮರ. ಸಾಮಾನ್ಯವಾಗಿ ಅದರ ಕೆಳಗೆ ರಾಮನೆಂಬ ಕ್ಷೌರಿಕ. ಮಕ್ಕಳ ತಲೆಯನ್ನು ತನ್ನ ತೊಡೆಗಳಿಗೆ ಸಿಕ್ಕಿಸಿ ಹೆರೆಯುವನು. ಅಲ್ಲಾಡಿದರೆ ಬೈಯುವನು. ದೊಡ್ಡವರಾದರೆ ಮಾತ್ರ ಗೌರವದ ದ್ಯೋತಕವಾಗಿ ಅವರ ಬೆನ್ನ ಹಿಂದೆ ಕೂತು ತಲೆಯ ಹಿಂದೆಸೆಯನ್ನು ಹೆರೆಯುವನು. ಉಳಿದವರೆಲ್ಲ ಕತ್ತು ನೋಯುವಷ್ಟು ಬಗ್ಗಿಸಿ ಕೂರಬೇಕು. ಅವನ ಕತ್ತಿಯಾಡುವ ಜಾಗಕ್ಕೆ ತಮ್ಮ ಇಡೀ ತಲೆಯನ್ನು ಬಗ್ಗಿಸಿಯೋ ವಾರೆ ಮಾಡಿಯೋ ಒಡ್ಡುತ್ತ ಅವನು ಹೇಳಿದಂತೆ ಕೇಳಿ ಸಹಿಸಬೇಕು. ಇಲ್ಲ – ಅಮಾವಾಸ್ಯೆ ದಿನ ಅವನು ಅಲ್ಲಿರುತ್ತಿರಲಿಲ್ಲ. ಬಟ್ಟೆಯ ಗಂಟು ಬಿಚ್ಚುತ್ತಲೋ ಪೇಟ ಸುತ್ತುತ್ತಲೊ ಕೂತ ಹಾವಾಡಿಗರು ಅಲ್ಲಿರುತ್ತಿದ್ದರು. ಅಥವಾ ಫೋಟೋ ತೆಗೆಯುವವರು. ಬಿಸಿಲಿಗಿಟ್ಟು ಪ್ರಿಂಟ್ ಮಾಡುವ ಫೋಟೋಗಳು. ಇನ್ನೊಂದು ಅಮಾವಾಸ್ಯೆ ಜಾತ್ರೆಯ ತನಕ ಉಳಿದು ಕ್ರಮೇಣ ಮಾಸಿಹೋಗುವ ಬಣ್ಣದ ಫೋಟೋಗಳು. ರಥಬೀದಿಯ ತುಂಬ ಜಾತ್ರೆಗೆಂದು ಬಂದ ಅಂಗಡಿಗಳು. ರಥ ಸಿದ್ಧವಾಗಿ ನಿಂತಿರುತ್ತಿತ್ತು. ರಥದ ಗೋಪುರದ ಸುತ್ತ ಮೇಷ, ವೃಷಭ, ಮಿಥನು, ಕರ್ಕಾಟಕ ಇತ್ಯಾದಿ ರಾಶಿಗಳ ಚಿತ್ರಗಳು. ರಥದ ಎದುರು ಬೆಳಗಿನ ಹಿಮಕ್ಕೆ ತೊಯ್ದ ಎರಡು ದಪ್ಪ ದಪ್ಪ ಮಿಣಿಗಳು ಹೆಬ್ಬಾವಿನಂತೆ ಬಿದ್ದಿರುತ್ತಿದ್ದವು. ನಾನು ಮಿಣಿಗಳಿಗೆ ಹತ್ತಿರವಾಗಿ, ಆದರೆ ತುಳಿಯಂತೆ ಎಚ್ಚರವಹಿಸಿ ಅಂಕುಡೊಂಕಾಗಿ ನಡೆಯುತ್ತ ಅಮ್ಮನನ್ನು ಹಿಂಬಾಲಿಸುತ್ತಿದ್ದೆ.

ಹಾಗೆ ನೋಡಿದರೆ ತನ್ನ ದಟ್ಟ ನೆನಪುಗಳಿಗೆಲ್ಲ ಕೇಂದ್ರವಾಗಿದ್ದವರು ತಾಯಿ ಮತ್ತು ಮಂಜುನಾಥ. ಮಹಡಿ ಮೆಟ್ಟಲು ತಿರುಗುವ ಮೂಲೆಗಳಲ್ಲಿ ಭಯವಾದರೆ ಭೂತರಾಯ. ಸಮೃದ್ಧವಾದ ಕಪ್ಪು ಕೂದಲಿನ, ಎತ್ತರವಾದ ಬೋಳು ಹಣೆಯ, ಬಿಳಿಸೀರೆ ಕುಪ್ಪಸ ತೊಟ್ಟ ತಾಯಿ; ತನ್ನ ಪ್ರಾಣ ರಕ್ಷಣೆಯ ನೆನಪನ್ನು ಬಂಗಾರದ ಕಿರೀಟವಾಗಿ ಏರಿಸಿಕೊಂಡು ರಥದ ಮೇಲೆ ಕೂತು ಊರೆಲ್ಲ ಸುತ್ತಿ ಸಾಯಂಕಾಲ ಗುಡಿಗೆ ಸೇರುತ್ತಿದ್ದ ಮಂಜುನಾಥ.

ಮನಸ್ಸು ಆರ್ದ್ರವಾಗಿ ತನ್ನ ಕ್ರಿಯೆಯಿಂದ ವಿಮುಖನಾಗುತ್ತಿದ್ದೇನೆಂದು ಬೆಚ್ಚಿ ಜಗನ್ನಾಥ ಹಲಸಿನ ಮರಕ್ಕೊರಗಿ ನಿಂತ. ವ್ಯಾಮೋಹ ಬಿಡದೆ ಮಂಜುನಾಥನನ್ನು ತಿರಸ್ಕರಿಸಲಾರೆ ಎಂದುಕೊಂಡು ಗುಡ್ಡ ಇಳಿದು ಬಂದ. ಪೇಪರಿನಲ್ಲಿ ಸುದ್ದಿಯನ್ನು ಓದಿರುವ ಚಿಕ್ಕಿಯನ್ನು ಎದುರಿಸಲು ತಯ್ಯಾರಾಗುತ್ತ ನಿಧಾನವಾಗಿ ನಡೆದ.

ಸೀದ ರೂಮಿಗೆ ಹೋಗಿ ಸ್ವೆಟರನ್ನು ಬಿಚ್ಚಿ ಸ್ನಾನ ಮಾಡಲು ಮಹಡಿ ಇಳಿಯುತ್ತಿದ್ದಾಗ ಚಿಕ್ಕಿ ಎದುರಾದರು. ಹೆಣದಂತೆ ಅವರ ಮುಖ ಬಿಳುಚಿಕೊಂಡಿತ್ತು. ನಿಂತರು, ಅವರ ತುಟಿಗಳು ಅದುರಿದವು – ಆದರೆ ಮಾತು ಹೊರಡಲಿಲ್ಲ. ಜಗನ್ನಾಥನ ಎದೆ ಹೊಡೆದುಕೊಳ್ಳತೊಡಗಿತು. ಚಿಕ್ಕಿ ದೊಡ್ಡದೊಂದು ಕಂಬಕ್ಕೊರಗಿ ನಿಂತಿದ್ದರು. ಜಗನ್ನಾಥ ಅವರನ್ನು ದುರುಗುಟ್ಟಿ ನೋಡುತ್ತ ಅವರ ಭಯದ ಕಂಪನವನ್ನು ತಾನೂ ಅನುಭವಿಸಿದ. ಅವ್ಯಕ್ತಕ್ಕೆ ಹೆಜ್ಜೆಯನ್ನಿಡುವ ಮುನ್ನದ ಈ ದಿಗಿಲಿನಿಂದಾಗಿ ಹೊಸ ಸೃಷ್ಟಿ ಸಾಧ್ಯವಾಗುವ ಭರವಸೆ ಮೂಡಿತು. ತಾನು ಇರುವುದು ನಿಜ, ಮಾಡುತ್ತಿರುವುದು ನಿಜ. ಸುಳ್ಳುಗಳ ವಿಸರ್ಜನೆಯ ಪ್ರಾರಂಭ ಇದು ಎನ್ನಿಸಿತು. ಚಿಕ್ಕಿ ಮಾತಾಡಲೇ ಇಲ್ಲ. ಆಳು ಬರುವಂತೆ ಅವರ ಮುಖ ವಿಕಾರವಾಯಿತು. ಈ ಕ್ಷಣದಲ್ಲಿ ಮಾತಾಡಿ ಪ್ರಯೋಜನವಿಲ್ಲವೆನ್ನಿಸಿ ಜಗನ್ನಾಥ ಮುಂದೆ ಹೆಜ್ಜೆಯಿಟ್ಟ. ಮತ್ತೇನೋ ಅನ್ನಿಸಿ ನಿಂತ. ನಾಗಂದಿಗೆಯ ಮೇಲಿದ್ದ ಚನ್ನೆಮಣೆಯನ್ನು ದಿಟ್ಟಿಸಿ ನೋಡಿದ. ತಾಯಿಯ ಜೊತೆ ಕೂತು ಆಡಿದ ಮಣೆ. ಭಾರವಾದ ಮರದಲ್ಲಿ ಮಾಡಿದ್ದು.

ಚಿಕ್ಕಿ ಮಹಡಿ ಹತ್ತಿ ಹೋದರು. ಜಗನ್ನಾಥ ಸ್ನಾನ ಮಾಡಿ ಶುಭ್ರವಾದ ಬಿಳಿ ಪಂಚೆ ಶರ್ಟು ತೊಟ್ಟು ಚೌಕದಲ್ಲಿದ್ದ ರಾಯರ ಖಾದಿಯಂಗಡಿ ಕಡೆ ಹೊರಟ. ಪರಿಚಿತ ಮುಖಗಳನ್ನು ನೋಡಲು ಮತ್ತೆ ದಿಗಿಲಾಯಿತು. ಪುಸ್ತಕದಂಗಡಿ ಕಿಣಿ ತನ್ನ ಮುಖ ನೋಡಿದರೂ ನೋಡದವನಂತೆ ನಟಿಸಿದ. ಜಗನ್ನಾಥನಿಗೆ ಸಂಕಟವಾಯಿತು. ಇನ್ನು ನಾನು ಯಾರಿಗೂ ಬೇಡದವನಾಗಬೇಕು. ಪ್ರಾತಃಕಾಲದಿಂದ ನಾನು ತಿರಸ್ಕೃತನಾದೆ. ಬೇರವರ ಕಣ್ಣಿನ ಕನ್ನಡಿಯಲ್ಲಿ ಹಿಗ್ಗುತ್ತಿದ್ದ ನಾನು ಮಣ್ಣಿನೊಳಗೆ ಬಿದ್ದ ಬೀಜದಂತೆ ಕಾಯಬೇಕು. ಯಾತನೆಯಲ್ಲಿ ಬಿರಿಯಬೇಕು. ತಳ್ಳಿ ತಳ್ಳಿ ಕತ್ತಲಿಂದ ಬೆಳಕಿಗೆ ಮೊಳಕೆಯೊಡೆಯಬೇಕು. ಹೋಟೆಲಿನ ಕೃಷ್ಣಪ್ಪ ಬೀದಿ ಕಡೆ ನೋಡುತ್ತಿದ್ದವನು ತಲೆತಗ್ಗಿಸಿದ. ಮೈಲಿ ಕಜ್ಜಿಯಿಂದ ತೂತುತೂತಾಗಿ ದರಗಾಗಿ ಇದ್ದ ಅವನ ಮುಖ ಆಮೆಯ ಚಿಪ್ಪಿನಂತೆ ಕಂಡಿತು. ಕಣ್ಣುಗಳು ಕಂತಿಹೋದ ಮುಖಗಳು. ಒಬ್ಬರೂ ನಮಸ್ಕಾರ ಎನ್ನಲಿಲ್ಲ, ತನ್ನಲ್ಲಿ ಸಾಲ ಪಡೆದ ದರ್ಜಿ ಶ್ಯಾಮನ ಹೊರತಾಗಿ. ಇಡೀ ಬೀದಿಯಿಂದ ತಿರಸ್ಕೃತನಾದೆ. ಪ್ರಾತಃಕಾಲದಿಂದ, ಕಪ್ಪು ಟೋಪಿಯವ ಅಕ್ಷರ ಬರದವನಿರಬೇಕು, ನಮಸ್ಕಾರ ಎಂದು ಕೈಮುಗಿದು ನಿಂತ. ತಾನು ಸಾಗಿದ ಮೇಲೆ ನಡೆದ. ಅಮಾವಾಸ್ಯೆ ಜಾತ್ರೆಗೆಂದು ಹೊಸ ಸುಣ್ಣ ತೊಟ್ಟು ಮನೆಗಳು, ಅಂಗಡಿಗಳು, ಅಸಹ್ಯ ಹಿತ್ತಲಿನ ಕಳೆಯೇರಿದ ಮುಂಭಾಗಗಳಾಗಿದ್ದುವು. ನಗುವ ಮುಖ. ಆದರೆ ನಾರುವ ಅಂಡಿನ ಭಾರತೀಪುರದ ಹಿತ್ತಲಿಂದ ಹಿತ್ತಲಿಗೆ ಹೊಲೆಯರು ಕುಕ್ಕೆಯಲ್ಲಿ ಹೇಲು ಹೊತ್ತು ನಡೆಯುತ್ತಾರೆ; ಬೀದಿಯಲ್ಲವರು ಕಾಣಿಸಿಕೊಳ್ಳುವುದೇ ಇಲ್ಲ. ಈ ನೆಲದಲ್ಲಿ ಏನನ್ನೂ ನೆಡದ, ಆದರೆ ಈ ನೆಲ ಬಿಟ್ಟು ಬೇರೆ ಏನೂ ಇಲ್ಲದ ಹೊಲೆಯರ ಕಣ್ಣುಗಳಿಗಿನ್ನೂ ನಾನು ಬಿದ್ದಿಲ್ಲ – ಬೀಳುತ್ತೇನೆ. ಬಿದ್ದು ಹೊಸಬನಾಗುತ್ತೇನೆ.

ಜಗನ್ನಾಥ ಧೈರ್ಯಮಾಡಿ ರಾಯರ ಅಂಗಡಿಯೊಳಗೆ ಹೋದ. ಚಾಪೆಯ ಮೇಲೆ ಮಾಸಿದ ದಿಂಬಿತ್ತು. ಒರಗಿ ಕೂತ. ಹಲ್ಲಿಲ್ಲದ ನಗುವಿನ ಗಾಂಧಿ ಫೋಟೋವನ್ನೂ ಕಚ್ಚೆ ಪಂಚೆಯುಟ್ಟು ವೇಸ್ಟ್ ಕೋಟ್ ಧರಿಸಿದ ನೆಹರೂವಿನ ಒಂದು ಅಪೂರ್ವ ಫೋಟೋವನ್ನೂ ಕುತೂಹಲದಿಂದ ನೋಡಿದ. ಒಬ್ಬರೇ ಕೂತು ಎಲೆಯಡಿಕೆಯ ಚೀಲ ಬಿಚ್ಚುತ್ತಿದ್ದ ಶ್ರೀಪತಿರಾಯರು ಸ್ನೇಹದಿಂದ ನೋಡಿ ನಕ್ಕರು. ‘ಕಾಫಿ ಕುಡಿತೀಯ?’ ಎಂದರು. ಜಗನ್ನಾಥ ‘ಆಗಲಿ’ ಎಂದ. ರಾಯರು ಎದ್ದು ನಿಂತು ಚಪ್ಪಾಳ ತಟ್ಟಿದರು. ಎದುರಿಗಿದ್ದ ಗೋವಿಂದಯ್ಯನ ಹೋಟಲಲ್ಲಿ ಬ್ಯಾಟರಿಯಿಂದ ನಡೆಯುತ್ತಿದ್ದ ರೇಡಿಯೋದಲ್ಲಿ ಹಿಂದಿ ಹಾಡೊಂದು ಜೋರಾಗಿ ಬರುತ್ತಿದ್ದುದರಿಂದ ಯಾರಿಗೂ ಕೇಳಿಸಿರಲಿಕ್ಕಿಲ್ಲ. ಜೊತೆಗೆ ಕಾವಲಿಯನ್ನು ಕುಟ್ಟಿ ದೋಸೆ ರೆಡಿಯಾಯಿತೆಂದು ಸೂಚಿಸುವ ಶಬ್ದ. ‘ತೊಂದರೆ ಬೇಡಿ’ ಎಂದು ಹೇಳಿದರೂ ಕೇಳದೆ ರಾಯರು ಸ್ವತಃ ಎದ್ದುಹೋಗಿ ಕಾಫಿ ಹೇಳಿ ಬಂದು ಕೂತರು.

‘ಯಾಕೋ ರಾಘವ ಪುರಾಣಿಕರು ಹೇಳಿ ಕಳಿಸಿದಾರೆ. ನೋಡಿ ಬರೋಣ ಬರ್ತೀಯಾ?’ ಎಂದರು.

‘ಆಗಲಿ’ ಎಂದ ಜಗನ್ನಾಥ.

‘ಪುರಾಣಿಕರನ್ನ ನೋಡಿದೀಯೇನು?’

‘ಹುಡುಗನಾಗಿದ್ದಾಗ ಅಮ್ಮನ ಜೊತೆ ಅವರ ಮನೆಗೆ ಹೋಗಿದ್ದ ನೆನಪು. ಅವರು ಯಾರನ್ನೂ ನೋಡಲ್ವಂತಲ್ಲ.’

ರಾಯರು ಮುಗುಳ್ನಕ್ಕರು. ಏನಾದರೂ ಮಾತಾಡಬೇಕೆಂದು ಜಗನ್ನಾಥ ಹೇಳಿದ.

‘ಅವರ ಕಥೆ ಕೇಳಿದೇನೆ. ೧೯೨೦ನೇ ಇಸವೀಲಿ ವಿಧವಾ ವಿವಾಹ ಮಾಡಿಕೊಂಡ್ರಂತಲ್ಲ?’

‘ಅವರ ಮದುವೇಗೆ ಹೋಗಿದ್ದವರಲ್ಲಿ ನಾನೂ ಒಬ್ಬ. ಮದುವೆ ಹಿಂದಿನ ರಾತ್ರೆ ಒಂದು ಘಟನೆಯಾಯ್ತು. ಲಾರೀಲಿ ಕೆಲವರು ಮದ್ವೇಗೇಂತ ಬರ್ತಾ ಇದ್ರು. ಅವರಲ್ಲಿ ಒಬ್ಬ ಹಿಂದೆ ಕೂತಿದ್ದವ ಜೊಂಪು ಹತ್ತಿ ಕೆಳಗೆ ಬಿದ್ದು ಸತ್ತು ಹೋದ. ಎಲ್ಲ ಏನು ಮಾತಾಡಿಕೊಂಡ್ರು ಗೊತ್ತ? ಮುಂಡೇ ಮದುವೆಗೆ ಮುನ್ನೂರು ವಿಘ್ನ ಅಂತ. ಊರಿಗೆ ಊರೇ ಪುರಾಣಿಕರಿಗೆ ಬಹಿಷ್ಕಾರ ಹಾಕ್ತು. ಆಮೇಲಿಂದ ಪುರಾಣಿಕರು ಸಂಪೂರ್ಣ ಬದಲಾಗಿ ಬಿಟ್ರು. ನೀನೇ ನೋಡು – ಅವರು ಹೇಗೆ ಬದುಕ್ತಾರೆ ಅಂತ. ನಾನು ಹೇಳಿದರೆ ಖಂಡಿತ ನೀನು ನಂಬಲ್ಲ, ಕಣ್ಣಾರೆ ನೋಡಬೇಕು.’

ರಾಯರಿಗೆ ಮುಖ್ಯ ವಿಷಯ ಮಾತಾಡಲು ಸಂಕೋಚವಾಗಿತ್ತು. ಜಗನ್ನಾಥ ಅದನ್ನು ಊಹಿಸಿ ಹೇಳಿದ :

‘ನಿಜ. ಸಮಾಜಾನ್ನ ಎದುರು ಹಾಕ್ಕೊಂಡ್ರೆ ಒಂದೊಂದು ಸಾರಿ ಈ ಸಮಾಜದಲ್ಲಿ ಯಾವ ಬೇರೂ ಇಲ್ದಂಗೆ ಆಗಿಬಿಡಬಹುದು. ಅಂತರ್ಜಾತೀಯ ವಿವಾಹಗಳ ಪಾಡನ್ನ ನಾನು ಬೆಂಗಳೂರಿನಲ್ಲಿ ನೋಡಿದೇನೆ. ಇಂಗ್ಲಿಷ್ ಮಾತಾಡಿಕೋತ, ಪಾರ್ಟಿ ಕೊಟ್ಟುಕೋತ, ಅಜಂತ ಎಲ್ಲೋರಾದ ಚಿತ್ರಕಲೇನ್ನ ಅಡ್ಮೈರ್ ಮಾಡ್ತ, ಜಾನಪದ ಕಲೆಯ ವಸ್ತುಗಳನ್ನು ಸಂಗ್ರಹಿಸ್ತ, ಮಕ್ಕಳನ್ನ ಕಾನ್ವೆಂಟಿನಲ್ಲಿ ಓದಿಸ್ತ, ಕಂಟೋನ್ಮೆಂಟಲ್ಲಿ ಬದುಕ್ತಾರೆ.’

ನಿಲ್ಲಿಸದಂತೆ ತಾನು ಯಾಕೆ ಮಾತಾಡುತ್ತಿದ್ದೇನೆಂದು ಜಗನ್ನಾಥನಿಗೆ ಆಶ್ಚರ್ಯವಾಯಿತು. ಮಾರ್ಗರೆಟ್ಟನ್ನು ಮದುವೆಯಾಗಿ ಇಂಡಿಯಾಕ್ಕೆ ಬಂದಿದ್ದರೆ ತನ್ನ ಪಾಡು ಹಾಗಾದೀತೆಂದು ಭಯವಿತ್ತಲ್ಲವೆ? ರಾಯರು ಮಾತಾಡಲಿಲ್ಲ. ಮುಖ್ಯ ವಿಷಯಕ್ಕೆ ಬರಬಹುದೆಂದು ಜಗನ್ನಾಥ ಕಾಯುತ್ತಿದ್ದಂತೆ ಅಂಗಡಿಗೆ ವೆಂಕಟರಾಯ ಪ್ರಭುಗಳು ಬಂದು ‘ನಮಸ್ಕಾರ’ ಎಂದರು.

ಜಗನ್ನಾಥ ರಾಯರ ಖಾದಿಯಂಗಡಿಗೆ ಬರುವುದನ್ನು ಚೌಕದಲ್ಲೆ ಇದ್ದ ದಿನಸಿ ಅಂಗಡಿಯ ವೆಂಕಟರಾಯ ಪ್ರಭುಗಳು ನೋಡಿದ್ದರು. ಪ್ರಭುಗಳು ಊರಿಗೆಲ್ಲ ದೊಡ್ಡ ವರ್ತಕರು; ಜಗನ್ನಾಥನನ್ನು ಬಿಟ್ಟರೆ ಅವರೇ ಆಸುಪಾಸಿನಲ್ಲೆಲ್ಲ ದೊಡ್ಡ ಹಣವಂತರೆಂದು ಖ್ಯಾತಿ. ಜಗನ್ನಾಥ ರಾಜೀನಾಮೆ ಕೊಟ್ಟಮೇಲೆ ಅವರೇ ದೇವಸ್ಥಾನದ ಧರ್ಮದರ್ಶಿತ್ವವನ್ನು ವಹಿಸಿಕೊಂಡಿದ್ದರು.

ಪ್ರಭುಗಳು ಭಾರತೀಪುರದ ಎಲ್ಲ ವ್ಯಾಪಾರವನ್ನೂ ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದರು; ಹಿರಿಮಗ ಅವರ ಜೊತೆಗೇ ದಿನಸಿಯಂಗಡಿಯಲ್ಲಿದ್ದ; ಎರಡನೆಯವ ಜವಳಿ ವ್ಯಾಪಾರೊ ಮೂರನೆಯವ ಮಂಜುನಾಥ ರೈಸ್ ಮಿಲ್ ಮಾಲಿಕ; ನಾಲ್ಕನೆಯವನ ಹೆಸರಿನಲ್ಲಿ ಮಂಜುನಾಥ ಲಾರಿ ಸರ‍್ವೀಸ್ – ಹೀಗೆ, ಶಿವಮೊಗ್ಗಕ್ಕೆ ಹೋಗಿ ಬರುವ ಮಂಜುನಾಥ ಬಸ್ ಸರ್ವಿಸ್ಸಿನ ಆರು ಬಸ್ಸುಗಳ ಮಾಲಿಕರೂ ಪ್ರಭುಗಳೇ. ಅಳಿಯಂದಿರನ್ನು ಕೂಡ ಪ್ರಭುಗಳು ಬೇರೆ ಬೇರೆ ಉದ್ಯೋಗಕ್ಕೆ ಹಚ್ಚಿದ್ದರು. ಒಬ್ಬ ಮಂಜುನಾಥ ಸೋಡಾ ಫ್ಯಾಕ್ಟರಿ ನಡೆಸುತ್ತಿದ್ದ; ಇನ್ನೊಬ್ಬ ಸೈಕಲ್ ಶಾಪ್ ಇಟ್ಟಿದ್ದ; ಮತ್ತೊಬ್ಬ ಊರಿಗೆ ದೊಡ್ಡ ಹೋಟೆಲಿನ ಯಜಮಾನ. ಒಬ್ಬನ ಮಾಲು ಇನ್ನೊಬ್ಬನಿಗೆ ಸಪ್ಲೈ; ಒಬ್ಬನನ್ನು ಕೇಳದೆ ಇನ್ನೊಬ್ಬ ಹೆಜ್ಜೆಯಿಡ.

ಪ್ರಭುಗಳ ವ್ಯವಹಾರ ಕುಶಲತೆ ಇಡೀ ಶಿವಮೊಗ್ಗ ಜಿಲ್ಲೆಯಲ್ಲೇ ಪ್ರಸಿದ್ಧವಾಗಿತ್ತು. ಎರಡನೇ ಮಹಾಯುದ್ಧದ ಸಮಯದಲ್ಲಿ ಅಕ್ಕಿ, ಸೀಮೆಎಣ್ಣೆ, ಸಕ್ಕರೆಗಳನ್ನು ಕಾಳಸಂತೆಯಲ್ಲಿ ಮಾರಿ ಚೆನ್ನಾಗಿ ಗಳಿಸಿದ್ದರೆಂಬುದು ಎಲ್ಲರಿಗೂ ಗೊತ್ತೆಂದು ಪ್ರಭುಗಳಿಗೂ ಗೊತ್ತು. ಒಂದೆರಡು ಬಾರಿ ಪೊಲೀಸ್ ಸರ್ಚ್ ಆದರೂ ಪ್ರಭುಗಳು ಜಗ್ಗಿರಲಿಲ್ಲ; ಈ ಸ್ವಾತಂತ್ರ್ಯ ಬಂದ ಮೇಲೆ ಅವರು ಖಾದಿಯನ್ನೆ ಹಾಕುತ್ತಾರೆ.

ಪ್ರಭುಗಳ ಪಾಲಿಸಿ ಇದು : ಮರ್ಯಾದೆ ಬಿಟ್ಟು ದುಡ್ಡು ಮಾಡು ; ದುಡ್ಡು ಮಾಡಿದ ಮೇಲೆ ಮರ್ಯಾದೆ ಹೇಗೂ ತಾನಾಗಿಯೇ ಬರತ್ತೆ. ಈ ಮಾತನ್ನು ಅವರೇ ತಕ್ಕಡಿ ಎದುರು ಕೂತು ಬೆಲ್ಲವನ್ನು ತೂಗುತ್ತ ಗಿರಾಕಿಗಳಿಗೆ ಆಗಾಗ ಹೇಳುವುದುಮಟು. ಊರಲ್ಲಿ ಬಹಳ ಜನರ ಲೆಖ್ಖ ಅವರ ಒಂದಲ್ಲ ಒಂದು ಅಂಗಡಿಯಲ್ಲಿ ಇರುತ್ತಿತ್ತಾದ್ದರಿಂದ, ದೇವಸ್ಥಾನದಲ್ಲಿ ನಿತ್ಯ ನಡೆಯುತ್ತಿದ್ದ ಅನ್ನ ಸಂತರ್ಪಣೆಗೆ ಅವರೇ ಕಂಟ್ರಾಕ್ಟ್ ಹಿಡಿದವರಾದ್ದರಿಂದ ಅವರು ಗಣ್ಯ ವ್ಯಕ್ತಿಗಳಾಗಿಬಿಟ್ಟಿದ್ದರು. ಹೋದ ಸಾರಿ ಮುನಸಿಪಾಲಿಟಿ ಪ್ರೆಸಿಡೆಂಟ್ ಕೂಡ.

ಭಾರತೀಪುರದ ಹೆಚ್ಚು ಪಾಲು ವ್ಯಾಪಾರ ಮಂಜುನಾಥನ ದರ್ಶನಕ್ಕಾಗಿ ಬರುವ ಭಕ್ತರು ಮಾಡುತ್ತಿದ್ದ ಖರ್ಚಿನ ಮೇಲೆ ಆಗುತ್ತಿತ್ತಾದ್ದರಿಂದ ಮಂಜುನಾಥನ ಮಹಿಮೆಯಲ್ಲಿ ಪ್ರಭುಗಳಿಗೆ ವಿಶೇಷವಾದ ಆಸಕ್ತಿಯಿರುವುದು ಸಹಜವೆಂದು ತನ್ನನ್ನು ನೋಡಲು ಪ್ರಭುಗಳು ಬರುತ್ತಿದ್ದಂತೆಯೇ ಜಗನ್ನಾಥ ಊಹಿಸಿದ.

ಪ್ರಭುಗಳು ಮಾತಿನಲ್ಲಿ ಬಹಳ ಜಾಣರು. ಬಂದವರೇ ನಾಗಮಣಿಯ ಸಾವಿಗಾಗಿ ದುಃಖಿಸಿದರು. ನಿಮಗೆ ತಿಂಡಿಕೊಟ್ಟು ಕಾಫಿ ಕೊಟ್ಟು ಹೋಯಿತಂತಲ್ಲ ಹುಡುಗಿ ಅದಕ್ಕೇನಾಗಿತ್ತಪ್ಪ ಎಂದು ಆಶ್ಚರ್ಯಪಟ್ಟರು. ಜಗನ್ನಾಥನ ಅಪತ್ಕಾಲದ ಸಹಾಯವನ್ನು ಕೊಂಡಾಡಿದರು. ಜಗನ್ನಾಥನ ಜೊತೆ ಚಾಪೆಯ ಮೇಲೇ ಕೂತರು. ರಾಯರು ತೋರಿಸಿದ ಕುರ್ಚಿ ಬೇಡವೆಂದರು. ಕಾಫಿ ಬಂತು. ರಾಯರು ಪ್ರಭುಗಳಿಗೂ ಒಂದು ಕಾಫಿ, ಎನ್ನಲು ‘ಸಕ್ಕರೆಯಿಲ್ಲದ ಕಾಫಿ ಕಣಯ್ಯ’ ಎಂದು ಜೇಬಿನಿಂದ ಸ್ಯಾಕ್ರೀನಿನ ಡಬ್ಬಿ ತೆಗೆದರು. ಜಗನ್ನಾಥನ ಮುಖವನ್ನು ಆಗಾಗ ನೋಡುತ್ತ ಶ್ರೀಪತಿರಾಯರನ್ನು ತನ್ನ ಸಭೆ ಮಾಡಿಕೊಂಡು ಮಾತಾಡಿದರು.

‘ಗೊತ್ತ ರಾಯರೆ? ನನ್ನ ಕಿರಿಮಗ ಸಂಜಯನಿಗೆ ಜಗನ್ನಾಥರಾಯರೆಂದರೆ ಬಹಳ ಭಕ್ತಿ. ಬಹಳ ಮಮತೆ. ಈಗಿನ ಕಾಲದ ಹುಡುಗರಿಗೆ ಬಲು ಬುದ್ಧಿ ಅನ್ನೋದಕ್ಕೆ ಹೇಳ್ತೀನಿ: ಯಾರೋ ಹೇಳಿದರು – ಯಾರು ಅಂತ ಬೇಡ ಈಗ – ಕೆಲವರ ಬಾಯಿ ಎಷ್ಟು ಕೆಟ್ಟದ್ದು ಅಂತ ನಾನು ಹೇಳೋದು ಬೇಕಿಲ್ಲವಲ್ಲ – ಒಟ್ಟು ಸಹಿಸಲ್ಲ ಜನಕ್ಕೆ – ಏನಪ್ಪಾ ಅಂದರೆ ನಮ್ಮ ಜಗನ್ನಾಥರಾಯರ ಬುದ್ಧೀನ್ನ ಒಬ್ಬಳು ಇಂಗ್ಲಿಷ್ ಹುಡುಗಿ ಕೆಡಿಸಿದಾಳೆ. ಅದಕ್ಕೇ ಇವರು ಹರಿಜನರನ್ನ ಹಿಡಕೊಂಡು – ಪಾಪ ಆ ಮನುಷ್ಯನಿಗೆ ಮಹಾತ್ಮರು ಹೇಳಿರೋದೇನೂಂತ ಗೊತ್ತೇ ಇಲ್ಲ – ಅಥವಾ ಗೊತ್ತಿಲ್ಲದೆ ಏನು? ಅವನ ಸಿಟ್ಟಿಗೆಲ್ಲ ಮುಖ್ಯ ಕಾರಣಾಂದರೆ ಪಡುಬಿದ್ರೆಯಲ್ಲಿರೋ ಜಗನ್ನಾಥರಾಯರ ತೋಟ ತನಗೆ ಸಿಗಲಿಲ್ಲ ಅಂತ. ನನ್ನ ಮಗ ಸಂಜಯ ಆಗ ಅಂಗಡೀಲೇ ಕೂತಿದ್ದ. ಅಂದಂಗೆ ಏನೂಂದ ಗೊತ್ತ? ಹೈಸ್ಕೂಲಲ್ಲಿ ಅವ ಎಸ್‌.ಎಸ್‌.ಎಲ್‌.ಸಿ. ಓದ್ತಿದಾನೆ; ಈ ವರ್ಷ ಪಬ್ಲಿಕ್ ಪರೀಕ್ಷೆಗೆ ಕೂರ್ತಾನೆ. ಅವನಿಗು ಇವರ ಹಾಗೇ ಇಂಗ್ಲೆಂಡಿಗೆ ಹೋಗಿ ಬರೋ ಆಸೆ ರಾಯರೆ. ಜಗನ್ನಾಥರಾಯರ ದಯ ಇದ್ದರೆ ಅದೂ ಯಾಕೆ ಆಗಬಾರ್ದು ಅನ್ನಿ? ನಾನು ಏನು ಹೇಳ್ತಿದ್ದೆ? ಹಾ. ಅವ ಏನೂಂದ ಗೊತ್ತೆ? ಹೊಲೇರೂ ನಮ್ಮ ಹಾಗೆ ಮನುಷ್ಯರಲ್ಲವ ಅಂದ. ಅವನ ಮಾತಿಗೆ ಏನು ಜವಾಬು ಕೊಡೋದು ಹೇಳಿ.’

ಮಾಣಿ ತಂದು ಕೊಟ್ಟ ಕಾಫಿಗೆ ಸ್ಯಾಕ್ರೀನ್ ಹಾಕಿ ಕದರಿದರು. ಕಣ್ಣುಮುಚ್ಚಿ ಎರಡು ಗುಟುಕು ಕುಡಿದು ಕೆಳಗಿಟ್ಟು :

‘ಕಾಲ ಬದಲಾಯಿಸ್ತ ಇದೆ ಅನ್ನೋಕೆ ಹೇಳ್ತೀನಿ. ಶ್ರೀಪತಿರಾಯರಿಗೂ ಗೊತ್ತು ಕೇಳಿ. ಶಿವಮೊಗ್ಗಕ್ಕೆ ಬಂದಿರೊ ಡೆಪ್ಯುಟಿ ಕಮಿಷನರ್‌ ಇದಾರಲ್ಲ ಸತ್ಯಪ್ರಕಾಶ್ – ಅವರು ಹರಿಜನರಂತೆ. ಅಡಿಕೆ ಸೊಸೈಟಿ ಡೈರೆಕ್ಟರ್ ಆಗಿದಾರಲ್ಲ ನಮ್ಮ ಬೀಗರು – ಶ್ರೀನಿವಾಸ ಪ್ರಭುಗಳು – ಹೇಳ್ತಾ ಇದ್ದರು : ಬಹಳ ಜಾಣನಂತೆ. ವೇದ ಉಪನಿಷತ್ತೆಲ್ಲ ಓದಿಕೊಂಡಿದಾನಂತೆ. ನಮ್ಮ ನಾಗರಾಜ ಜೋಯಿಸರಿಗೇ ನಾಚಿಕೆಯಾಗಬೇಕಂತೆ – ಅಷ್ಟು ಅವರಿಗೆ ಜ್ಯೋತಿಷ್ಯ, ಪುರಾಣ ಗೊತ್ತಂತೆ. ಶಷಸಕಾರಗಳು ಸ್ವಲ್ಪ ಐಬಾದರೂ ಬಹಳ ಚೆನ್ನಾಗಿ ಮಾತಾಡ್ತಾನಂತೆ.’

ಪ್ರಭುಗಳು ಇದ್ದಕ್ಕಿದ್ದಂತೆ ದನಿ ತಗ್ಗಿಸಿದರು. ಶ್ರೀಪತಿರಾಯರ ಹತ್ತಿರ ವಾಲಿ ಗುಟ್ಟಿನಲ್ಲೆಂಬಂತೆ ಹೇಳಿದರು :

‘ಈಗ ಅವ ನಮ್ಮೂರಿಗೆ ಬಂದ ಅನ್ನಿ. ನಮ್ಮ ಮನೆಗೇ ಮಸಲು ಬಂದರು ಅನ್ನಿ. ಒಳಗೆ ಬನ್ನಿ ಅಂತ ಕರೀತೀನೊ ಇಲ್ಲವೋ? ಕಾಫಿ ಕೊಡ್ತೀನೊ ಇಲ್ಲವೊ? ಕರಟದಲ್ಲಿ ಕಾಫಿ ಕೊಡಕ್ಕೆ ಆಗತ್ತ? ಬೆಳ್ಳಿ ಬಟ್ಟಲಲ್ಲೆ ಕೊಡ್ತೀನಿ ಅಲ್ಲವ? ಕಾಲಾಯ ತಸ್ಮೈ ನಮಃ, ಅದಕ್ಕೇ ನನ್ನ ಮಗ ಹಾಗೆ ಮಾತಾಡಿದ್ದು ಕಂಡು ಪರವಾಗಿಲ್ಲ ಭೇಷ್ ಎಂದುಕೊಂಡೆ.’

ಜಗನ್ನಾಥ ಆಶ್ಚರ್ಯಪಡುತ್ತ ಕಾದ. ಮಾತಿನ ನೀರು ಪಾಯಸಕ್ಕೆ ಹೊಟ್ಟೆ ಉಬ್ಬರಿಸಿದಂತಿತ್ತು. ಇಷ್ಟೆಲ್ಲ ಮಾತಾಡಿದ ಮೇಲೆ ಈ ಪ್ರಭು ತನ್ನ ವಾದವನ್ನು ತದ್ವಿರುದ್ಧ ದಿಕ್ಕಿನಲ್ಲಿ ಹೇಗೆ ತಿರುಗಿಸಿಯಾನು? ಅವನ ಉದ್ದೇಶ ಅದೆಂಬುದರಲ್ಲಿ ಸಂಶಯವಿರಲಿಲ್ಲ. ಪ್ರಭುಗಳ ಬೆಲೂನನ್ನು ತೂತು ಮಾಡಬೇಕೆನ್ನಿಸಿತು :

‘ಹಾಗಾದರೆ ಪ್ರಭುಗಳೆ ನೀವೂ ನನ್ನ ಜೊತೆ ಜಾತ್ರೆ ದಿನ ಹೊಲೆಯರನ್ನು ದೇವಸ್ಥಾನದೊಳಗೆ ಕರಕೊಂಡು ಹೋಗಲಿಕ್ಕೆ ಬರೋವ್ರು ಅನ್ನಿ.’

‘ಓಹೋ’ ಎಂದರು ಪ್ರಭುಗಳು. ಜಗನ್ನಾಥನಿಗೆ ದಿಗ್ಭ್ರಮೆಯಾಯಿತು. ಪ್ರಭುಗಳು ಬಿಡಲಿಲ್ಲ:

‘ಮೊದಲೇ ಹೇಳಿದೆನಲ್ಲ. ಕಾಲಾಯ ತಸ್ಮೈನಮಃ, ಕಾಲ ಪ್ರಾಪ್ತಿಯಾದಾಗ ಎಲ್ಲ ಆಗತ್ತೆ. ಅದಕ್ಕೇ ನಿಮ್ಮನ್ನ ಬಯ್ಯುತ್ತಿದ್ದವರಿಗೆ ಹೇಳಿದೆ. ಅಲ್ಲ ನಮ್ಮ ಜಗನ್ನಾಥರಾಯರಿಗೆ ಇಷ್ಟೂ ತಿಳಿದಿಲ್ಲವೆಂದು ನಿಮ್ಮ ಎಣಿಕೆಯೋ? ನೀವು ಓದಿದ್ದೆಷ್ಟು? ಅವರು ಓದಿದ್ದೆಷ್ಟು? ಇಂಗ್ಲೆಂಡಿಗೆ ಹೋಗಿ ಬಂದ ಅವರಿಗೆ ನೀವು ಯಾವುದು ಸರಿ ಯಾವುದು ತಪ್ಪು ಅಂತ ಕಲಿಸಿಕೊಡ್ರೀರಿ ಅಲ್ವ? ಮಂಜುನಾಥನ ತಲೆಯ ಮೇಲಿರೋದು ಅವರ ಕಿರೀಟ. ದೇವಸ್ಥಾನದ ದೊಡ್ಡ ಗಂಟೆ, ಇಡೀ ಊರಿಗೆ ಕೇಳುವ ಗಂಟೆ ಮಾಡಿಸಿಕೊಟ್ಟವರು ಅವರ ಹಿರಿಯರು, ಛತ್ರ ಕಟ್ಟಿಸಿಕೊಟ್ಟವರು ಅವರ ಮನೆತನದವರು, ದೇವರ ತೀರ್ಥ ಬರದೆ ಪುಣ್ಯಾತ್ಮ ಅವರ ತಂದೆ ಊಟ ಮಾಡಿದ್ದಿಲ್ಲ. ಇಂಥ ಮನೆತನದಲ್ಲಿ ಹುಟ್ಟಿದ ಒಬ್ಬ ಸಾತ್ವಿಕರು ಸಾಕಷ್ಟು ಯೋಚನೆ ಮಾಡದೆ ಏನಾದರೂ ಕಾರ್ಯ ಮಾಡ್ತಾರೇಂತ ನೀವು ತಿಳಿದಿರ ? ಹೀಗೇ ಅಂದರೆ. ಖಂಡಿತವಾಗಿ. ಯಾರನ್ನೂ ಬೇಕಾದ್ರೂ ಕೇಳಿ. ಅಲ್ಲ – ಅವರನ್ನ ನಾನು ಕೇಳೇಬಿಟ್ಟೆ – ಈಗ ಭಾರತೀಪುರದಲ್ಲಿ ಹೈಸ್ಕೂಲು ನಡೀತಿರೋದು ದೇವಸ್ಥಾನದಿಂದ ಹಣದಿಂದ. ಈ ಊರಿನ ವ್ಯಾಪಾರದಲ್ಲಿ ಅರ್ಧಕ್ಕರ್ಧ ನಡೆಯೋದು ಮಂಜುನಾಥನ ದರ್ಶನಕ್ಕೆ ಬರೋ ಯಾತ್ರಿಕರಿಂದ. ಇಲ್ದೆ ಇದ್ರೆ ಇಲ್ಲಿರೋ ನೂರಾರು ಕುಟುಂಬಗಳ ಉದರಂಭರಣ ಹೇಗಾಗಬೇಕು? ಮಂಜುನಾಥನ ಕೀರ್ತಿಗೆ ಧಕ್ಕೆ ಬಂದರೆ ಈ ದೇವರನ್ನೆ ನಂಬಿಕೊಂಡು ಬದುಕೋ ನಮ್ಮಂಥ ನೂರಾರು ಜನರ ಗತಿ ಏನಾಗಬೇಕು? ನಮ್ಮಂಥವರ ಮಕ್ಕಳೇನೋ ಶಿವಮೊಗ್ಗಕ್ಕೆ ಹೋಗಿ ಓತ್ತಾರೆ ಅನ್ನೋಣ; ಆದರೆ ದೇವಸ್ಥಾನ ನಡೆಸೋ ಹೈಸ್ಕೂಲು ಇಲ್ದಿದ್ರೆ ಬಡವರ ಮಕ್ಕಳಿಗೆ ವಿದ್ಯೆ ಎಲ್ಲಿ ಇರ್ತಿತ್ತು? ಹೋಗ್ಲಿ. ಅಡಿಕೇ ತೋಟಾನೇ ತಗೊಳ್ಳಿ. ಈಗ ಕಳ್ಳತನ ಎಷ್ಟು ಹೆಚ್ಚಾಗಿದೆ ನಾನು ಹೇಳ್ಬೇಕಾಗಿಲ್ಲ. ಭೂತರಾಯನ ಭಯಾನೂ ಇಲ್ದೇ ಇದ್ದಿದ್ರೆ ಒಂದೇ ಒಂದು ಅಡಿಕೆನಾದ್ರೂ ನಮ್ಮ ಕೈಗೆ ದಕ್ಕತ್ತ ಹೇಳಿ? ಇದನ್ನೆಲ್ಲ ಜಗನ್ನಾಥರಾಯರು ಯೋಚಿಸಿರಲ್ಲ ಅಂತ ನಿಮ್ಮ ಎಣಿಕೆಯೋ ಎಂದು ನಾನು ಕೇಳೇಬಿಟ್ಟೆ. ನಂಗೆ ಹಿಂದೊಂದು ಮುಂದೊಂದು ಮಾತಿಲ್ಲಾಂತ ನಿಮಗೆ ಗೊತ್ತಿಲ್ಲ?”

ಶ್ರೀಪತಿರಾಯರು ಬೀದಿ ಕಡೆ ನೋಡುತ್ತ ಕೂತಿದ್ದರು. ಔನ್ಸ್‌ಗೆರೆಗಳಿದ್ದ  ಬಿರಡೆ ಹಾಕಿದ ಔಷಧಿ ಬಾಟಲು ಹಿಡಿದು ನಿಂತಿದ್ದ ಅರ್ಚಕರ ಮಗ ಗಣೇಶನ್ನ ‘ಯಾರಿಗೆ ಹುಶಾರಿಲ್ಲವೊ?’ ಎಂದು ಕೇಳಿದರು. ‘ಚಿಕ್ಕಮ್ಮನಿಗೆ’ ಎಂದು ಅವನು ಹೇಳಿದ. ‘ನಿನ್ನ ಹೆಂಡತೀನ್ನ ಮನೆಗೆ ಸ್ವಲ್ಪ ಕಳಿಸೊ. ಇವಳು ನೋಡಬೇಕೂಂತಿದ್ದಳು’ ಎಂದರು. ಗಣೇಶ ಉಗ್ಗುತ್ತ ‘ಆಗಲಿ’ ಎಂದ. ಅವನು ಜಗನ್ನಾಥನನ್ನು ತುಂಬ ಆಸಕ್ತಿಯಿಂದ ನೋಡುತ್ತ ನಿಂತಿದ್ದ. ಜಗನ್ನಾಥನ ಜೊತೆ ಪ್ರಭುಗಳು ಮಾತಾಡುತ್ತಿರುವುದನ್ನುನೋಡಿದ ಹಲವರು – ದಿನಸಿ ಅಂಗಡಿಗೆ ಬಂದವರು, ದೇವದರ್ಶನಕ್ಕೆ ಬಂದವರು, ಜವಳಿ ಖರೀದಿ ಮಾಡಲು ಬಂದ ಹಳ್ಳಿಯವರು – ಖಾದಿಯಂಗಡಿಯಲ್ಲಿ ನೆರೆದಿದ್ದರು. ಎಲ್ಲರೂ ಪ್ರಾಯಶಃ ತಾನು ಉದ್ದೇಶಿಸಿದ ಕ್ರಿಯೆಯ ಬಗ್ಗೆ ತಿಳಿದಿದ್ದಾರೆಂದು ಜಗನ್ನಾಥ ಊಹಿಸಿದ. ಅವನ ಮನಸ್ಸಿನ ಭಾರ ಎಷ್ಟೋ ಕಡಿಮೆಯಾಗಿತ್ತು. ಪ್ರಭುಗಳ ಜೊತೆ ಮಾತಾಡಿ ಪ್ರಯೋಜನವಿಲ್ಲವೆನ್ನಿಸಿದರೂ ಕಳಕಳಿಯಿಂದ ಅವರಿಗೆ ಹೇಳಿದ :

ಪ್ರಭುಗಳೇ ನಿಮ್ಮ ಕೊನೇ ಮಾತಿಗೆ ಉತ್ತರ ಇದು. ನಮ್ಮದಿನ್ನೂ ಮಧ್ಯಯುಗದ ಆರ್ಥಿಕ ವ್ಯವಸ್ಥೆ. ಇದರ ಕೇಂದ್ರದಲ್ಲಿರೋನು ಮಂಜುನಾಥ. ಅವನ ಮಹಿಮೆ ಕಡಿಮೆಯಾದರೆ ನಿಮ್ಮ ವ್ಯಾಪಾರವೆಲ್ಲ ಬುಡಮೇಲಾಗುತ್ತೆ ಅಂತ ನೀವು ಹೆದರೋದು ಸಹಜವೆ. ಆದ್ರೆ ನೋಡಿ ಈ ಮಂಜುನಾಥನಿಂದಾಗಿ ನಮ್ಮ ಜೀವನ ಕ್ರಮದಲ್ಲಿ ಏನೂ ಬದಲಾವಣೆ ಆಗದೆ ಹಾಗೇ ನಿಂತು ಬಿಟ್ಟಿದೆ. ನಾವು ಕೊಳೀತಾ ಇದೀವಿ. ಮಂಜುನಾಥನನ್ನ ನಾಶ ಮಾಡಿದ ಮೇಲೆ ನಾವು ನಮ್ಮ ಜೀವನಕ್ಕೆ ಜವಾಬ್ದಾರರಾಗಬೇಕಾಗತ್ತೆ. ಹೊಸ ಹೊಸ ಹಾದಿಗಳನ್ನು ಹುಡುಕಬೇಕಾಗತ್ತೆ. ಈ ಊರಲ್ಲಿ ಒಂದು ಹೆಂಚಿನ ಕಾರ್ಖಾನೆ ಹಾಕಿಸೋಣ. ಈ ಭೂಮಿ ಒಳಗೆ ತಾಮ್ರ ಇರಬಹುದೂಂತ ಕೇಳಿದೀನಿ – ಗಣಿ ತೋಡಿಸೋಣ. ಈಗ ಅಡಿಕೆ ಮಾತ್ರ ಬೆಳೀತ ಇದೀವಿ. ಇನ್ನೇನೇನ್ನೂ ಬೆಳೆಯಕ್ಕೆ ಆಗತ್ತೆ ಪ್ರಯೋಗ ಮಾಡಿ ನೋಡೋಣ. ನಾವೀಗ ಗೊಡ್ಡಾಗಿದೀವಿ. ಹೊಲೇರು ದೇವಸ್ಥಾನದೊಳಗೆ ಹೋದ್ರು ಅನ್ನಿ – ಈಗ ಭೂತರಾಯನ ಭಯ ಮಂಜುನಾಥನ ಮಹಿಮೇಲಿ ನಂಬಿಕೊಂಡಿರೋ ಇಡೀ ದೇಶದ ಮನಸ್ಸಿನಲ್ಲೆ ಚೂರಾದ್ರೂ ಬದಲಾವಣೆ ಆಗಬೇಕಾಗತ್ತೆ. ಈಗ ಚೂರು ಬಿರುಕು ಬಿಟ್ಟಿದ್ದು ನಾಳೆ ಹೆಚ್ಚು ಸಡಿಲವಾಗತ್ತೆ. ನಾವು ಸ್ವತಂತ್ರರಾಗ್ತೀವಿ. ಇದಕ್ಕೆಲ್ಲ ಮುಖ್ಯವಾದ್ದು; ಹೊಲೆಯರು ತಯಾರಾಗೋದು. ಚರಿತ್ರೇಲಿ ಅವರು ತಮ್ಮ ಮೊದಲನೇ ಹೆಜ್ಜೆ ಇಡೋ ಹಾಗೆ ಮಾಡಬೇಕು. ದೇವಸ್ಥಾನದ ಹೊಸಿಲ ಒಳಗೆ ಅವರು ಇಡೋ ಮೊದಲನೇ ಹೆಜ್ಜೆ ನೂರಾರು ವರ್ಷಗಳ ವಾಸ್ತವತೇನ್ನೆ ಬದಲಿಸಬಹುದು. ಈ ಹೊಲೆಯರ ಮೂಲಕ ನಾವೆಲ್ಲ ಮತ್ತೆ ಜೀವಂತರಾಗಬಹುದು. ಶಾಕ್ ಆಗದೇ ಏನೂ ಆಗಲ್ಲ ನೋಡಿ.’

ಜಗನ್ನಾಥ ಮೈಮರೆತು ಮಾತಾಡಿದ. ಶ್ರೀಪತಿರಾಯರು ಯಾಕೆ ಮಾತಾಡಿ ಗಂಟಲು ಒಣಗಿಸಿಕೊಳ್ಳುತ್ತಿ ಎಂದು ಸೂಚಿಸುವ ಹಾಗೆ ಅವನ ಕಡೆ ನೋಡುತ್ತಿದ್ದರು. ಅಂಗಡಿಯಲ್ಲಿ ಸೇರಿದ್ದವರು ಅರ್ಥವಾಗದೆ ಜಗನ್ನಾಥನ ಮುಖವನ್ನು ದಿಟ್ಟಿಸಿ ನೋಡುತ್ತ ನಿಂತಿದ್ದರು. ಪ್ರಭುಗಳು ರಾಯರಿಂದ ಹೊಗೆಸೊಪ್ಪು ಪಡೆದು ಸುಣ್ಣ ಹಾಕಿ ಅದನ್ನು ತಿಕ್ಕುತ್ತ ಹೇಳಿದರು :

‘ಛೆ ಛೆ ನೀವು ತಪ್ಪು ತಿಳೀಬಾರ್ದು. ನನಗೆ ನಷ್ಟವಾಗತ್ತೇಂತ ನಾನು ಹೇಳಿದ್ದಲ್ಲಪ್ಪ. ನೀವು ನೋಡಿದ ಹಾಗೇ ನಾನು ಕುಂದಾಪುರದಿಂದ ಬರಿಯೊಂದು ತಕ್ಕಡಿ ಹಿಡಿದು ಬಂದವನು. ನನಗೆ ಆದ ಸಂಪಾದನೆಯೆಲ್ಲ ಮಂಜುನಾಥ ದೇವರ ಪ್ರಸಾದ ಅಂತ ನಾನು ತಿಳ್ದಿದೇನೆ ಶಿವಾಯಿ ನನ್ನ ಸ್ವಂತದ್ದು ಅಂತ ತಿಳಿದಿಲ್ಲ. ಈಗ್ಲೂ ನನಗೆ ಎರಡು ಗಂಜಿ ಊಟ ಸಾಕು. ನನ್ನ ಮಕ್ಳಿಗೂ ಕೂಡ. ಇರೋ ಒಂದೆ ದುಶ್ಚಟ ಅಂದ್ರೆ ಈ ಹೊಗೇಸೊಪ್ಪು ಆಯಿತ? ಇವೆಲ್ಲ ಯಾಕೆ ಹೇಳ್ಲಿಕ್ಕೆ ಬಂದೆ ಅಂದ್ರೆ ನೀವೇನೋ ಹೇಳ್ತಿದ್ರಲ್ಲ – ಅದು ಸರಿ. ಆದರೆ ತಾಮ್ರದ ಗಣಿ ಆಗೋಕೆ ಹೆಂಚಿನ ಕಾರ್ಖಾನೆಯಾಗೋಕೆ ಎಲೆಕ್ಟ್ರಿಸಿಟಿ ಬೇಕೊ ಬೇಡವೊ? ಶಿವಮೊಗ್ಗದಿಂದ ಭಾರತೀಪುರದ ತನಕ ರೈಲು ವ್ಯವಸ್ಥೆ ಆಗಬೇಕೊ ಬೇಡವೊ? ಈ ಹಾಳು ಮಣ್ಣಿನ ರಸ್ತೆಗೆ ಕಾಂಕ್ರೀಟು ಆಗಬೇಕೊ ಬೇಡವೊ? ಅಷ್ಟೆ ಅಲ್ಲ ಮಂಗಳೂರಲ್ಲಿ ಬಂದರಾಗಬೇಕು, ಇಲ್ಲಿಂದ ಮಂಗಳೂರಿಗೆ ಮತ್ತೆ ರೈಲು ವ್ಯವಸ್ತೆಯಾಗಬೇಕು. ಹೌದೊ ಅಲ್ಲವೋ ಹೇಳಿ.’

ಪ್ರಭು ತುಂಬ ಜಾಣ ಎನ್ನಿಸಿತು ಜಗನ್ನಾಥನಿಗೆ. ಮೆಚ್ಚಿಗೆಯಿಂದ ರಾಯರ ಕಡೆ ನೋಡಿದ. ರಾಯರ ಮುಖದಲ್ಲೂ ತುಂಟ ನಗೆ ಮೂಡಿತ್ತು. ಜಗನ್ನಾಥ ಪ್ರಭುಗಳ ಸವಾಲಿಗೆ ಸರಿಯಾದ ಜವಾಬು ಹುಡುಕುತ್ತ ಮಾತಾಡಿದ.

‘ಒಪ್ಪಿದೆ. ಎಲೆಕ್ಟ್ರಿಸಿಟಿಗಾಗಿ ಚಳವಳಿ ಮಾಡೋಣ. ರೈಲಿಗಾಗಿ ಕಾದಾಡೋಣ. ಜನರ ಜೀವನಾನ್ನ ಮೂಲಭೂತವಾಗಿ ಬದಲಾಯಿಸಕ್ಕೆ ಇರೋ ದಾರಿಗಳನ್ನೆಲ್ಲ ಹುಡುಕೋಣ. ಆದರೆ ಹೀಗೆ ನಮಗೆ ಹುಡುಕಬೇಕೂಂತ ಅನ್ನಿಸೋದು ಯಾವಾಗ ಅಂದ್ರೆ ನಮಗೆ ಮಂಜುನಾಥ ನಲ್ಲಿರೋ ನಂಬಿಕೆಗೆ ಏಟುಬಿದ್ದಾಗ. ಅದಕ್ಕೆ ಇಲ್ಲಿ ಯಾವ ನೆಲೇನೂ ಇಲ್ಲೆ ಇರೋ ಹೊಲೇರಿದ್ದಾರಲ್ಲ ಅವರೇ ಕ್ರಾಂತೀನ್ನ ಪ್ರಾರಂಭಿಸಬೇಕು.’

ಪ್ರಭುಗಳೂ ಮಾತಿನ ಖುಷಿಯಲ್ಲಿದ್ದಂತೆ ಕಂಡಿತು. ಮಾತಿನ ಚಕಮಕಿಯಾಗಿ ಈ ಮುಖಾಮುಖಿ ಬೆಳೆಯುತ್ತಿರುವುದನ್ನು ಕಂಡು ಜಗನ್ನಾಥನಿಗೆ ಕಸಿವಿಸಿಯಾಗತೊಡಗಿತು. ಆದರೆ ದಾಕ್ಷಿಣ್ಯ ಪ್ರವೃತ್ತಿಯ ಮನುಷ್ಯನಾದ್ದರಿಂದ ಜಗನ್ನಾಥ ಸಹಿಸಿಕೊಂಡು ಕೂತ. ಪ್ರಭುಗಳು ಹೊಗೆಸೊಪ್ಪು ಉಗುಳಿಬಂದು ಹೇಳಿದರು :

‘ಎಲೆಕ್ಟ್ರಿಸಿಟಿ ಮೊದಲು ಬರಲಿ, ಮಂಜುನಾಥನ ಪ್ರಭಾವ ಕ್ರಮೇಣ ಕಡಿಮೆಯಾಗು ತ್ತೇಂತಲೂ ಕೆಲವರು ಮಸಲು ಹೇಳಿದ್ರು ಅನ್ನಿ. ಆಗ ನೀವೇನು ಹೇಳ್ತೀರಿ? ಅಲ್ಲ ವಾದಕ್ಕೆ ಹೇಳ್ದೆ ಅಷ್ಟೆ. ಈಗ ನಾವು ದೇವ್ರು ದಿಂಡ್ರು ದಯ ಕರ್ಮ ಅಂತ ಒದ್ದಾಡೋದೇ ಹೊರ್ತು ಬೊಂಬಾಯಿ ಕಲ್ಕತ್ತಾದಲ್ಲಿರೋರು ಒದ್ದಾಡ್ತಾರ?’

ಅಂಗಡಿಯ ಎದುರಿಗೆ ಅವರ ಮಗನ ಲಾರಿ ಬಂದು ನಿಂತದ್ದು ನೋಡಿ ಪ್ರಭುಗಳು ‘ಒಂದು ನಿಮಿಷ ಬಂದೆ’ ಎಂದು ಎದ್ದು ಹೋದರು. ಕೊಂಕಣಿಯಲ್ಲಿ ಏನೋ ಹೇಳಿ ಹಿಂದಕ್ಕೆ ಬಂದರು. ಹೊರಡುವ ಸನ್ನಾಹದಲ್ಲಿದ್ದ ಜಗನ್ನಾಥನಿಗೆ ಹೇಳಿದರು :

‘ನಾನು ಮೊದಲೇ ಹೇಳಿದೆನಲ್ಲ ಜಗನ್ನಾಥ ರಾಯರೆ, ನಿಮ್ಮ ಜೊತೆ ನಾನಿದೇನೆ ಅಂತ. ಒಂದು ಅರ್ಜಿ ಬರೀರಿ – ಊರಿಗೆ ಎಲೆಕ್ಟ್ರಿಸಿಟಿ ಬೇಕು ಅಂತ ನಾನು ನೀವು ವಿಧಾನಸೌಧಕ್ಕೊಂದು ಸಾರಿ ಹೋಗಿ ಬರೋಣ, ಗುರಪ್ಪ ಗೌಡರನ್ನೂ ಕರ್ಕೊಂಡು ಹೋಗೋಣ. ಶ್ರೀಪತಿರಾಯರೂ ಜೊತೆಗೆ ಬರಲಿ. ಮುಖ್ಯಮಂತ್ರಿಗಳೂ ಇವರೂ ಒಟ್ಟಾಗಿ ಜೈಲಲ್ಲಿದ್ದವರಂತಲ್ಲ. ನಿಮ್ಮಂಥ ವಿದ್ಯಾವಂತ ಯುವಕರ ಮಾತನ್ನ ನಮ್ಮ ಮುಖ್ಯಮಂತ್ರಿಗಳು ಖಂಡಿತ ತೆಗೆದು ಹಾಕಲ್ಲ. ರೈಲು ಎಲೆಕ್ಟ್ರಿಸಿಟಿ ಮೊದಲು ಮಾಡಿಕೊಳ್ಳೋಣ. ರಾಷ್ಟ್ರಪತಿಗಳು ಬಂದು ಹೋದ ಮೇಲಂತೂ ಇಡೀ ಇಂಡಿಯಾಕ್ಕೆ ಭಾರತೀಪುರದ ವಿಷಯ ಗೊತ್ತಾಗಿದೆ. ಮಂತ್ರಿಗಳು ಖಂಡಿತ ಇಲ್ಲ ಅಂತ ಅನ್ನಲ್ಲ. ನಿಮ್ಮಂಥ ಪ್ರಗತಿಶೀಲ ಯುವಕರಿದ್ದರೆ ಈ ಊರನ್ನ ನಂದನವನ ಮಾಡಬಹುದು. ಹೊತ್ತಾಗತ್ತೆ ಹೋಗ್ತೀನಿ. ಮತ್ತೆ ಮಾತಾಡೋಣ.’

ಎಂದು ಪ್ರಭುಗಳು ಹೋದದ್ದೆ ಹಲವರು ಅಲ್ಲಿಂದ ಹೋದರು. ಎಂಥ ಘಾಟಿ ವರ್ತಕ ಇವ ಎನ್ನಿಸಿತು ಜಗನ್ನಾಥನಿಗೆ. ಈಗ ಮಂಜುನಾಥನಿಂದ ಲಾಭ ಮಾಡಿಕೊಳ್ತ ಇರೋವನು ಇವನು; ನಾಳೆ ನನ್ನನ್ನ ಉಪಯೋಗಿಸಿಕೊಂಡು ತರಿಸೊ ಎಲೆಕ್ಟ್ರಿಸಿಟಿಯಿಂದಲೂ ಲಾಭ ಮಾಡಿಕೊಳ್ಳೋನೂ ಇವನೆ. ಈಗಾಗ್ಲೆ ಹೆಂಚಿನ ಕಾರ್ಖಾನೆ, ತಾಮ್ರದ ಗಣಿಗಳ ಯೋಜನೇನ್ನ ಪ್ರಭು ಹಾಕೋಕೆ ಶುರು ಮಾಡಿರಬೇಕು. ಜಗನ್ನಾಥ ನಗುತ್ತ ರಾಯರ ಕಡೆ ನೋಡಿದ. ರಾಯರಿಗೆ ತನ್ನ ಯೋಚನೆ ಅರ್ಥವಾದಂತೆನ್ನಿಸಿತು. ರಾಯರಿಗೆ ಹೇಳಿದ :

‘ನಾಳೆ ಎಲೆಕ್ಟ್ರಿಸಿಟಿಯ ನಿಜವಾದ ಬೆನಿಫಿಶರಿ ಆಗೋವ್ರೂ ಈ ಪ್ರಭುಗಳೆ. ಆಗ ಇವರ ವಿರುದ್ಧಾನೂ ಚಳುವಳಿ ಹೂಡಬೇಕಾಗುತ್ತೆ.’

ರಾಯರೂ ಅರ್ಥವಾಗಿ ಮುಗುಳ್ನಗುತ್ತ ಎದ್ದುನಿಂತರು. ಅಂಗಡಿಯನ್ನು ಹಾಗೇ ಬಿಟ್ಟು ಹೊರಟರು. ‘ಬಾಗಿಲು ಹಾಕೊಳ್ಳಲ್ವೆ?’ ಎಂದು ಜಗನ್ನಾಥ ಕೇಳಿದ್ದಕ್ಕೆ ‘ಅಂಗಡೀಲಿ ಏನಿದೇಂತ ಬಾಗಿಲು ಹಾಕ್ಕೊಬೇಕು?’ ಎಂದು ಗಟ್ಟಿಯಾಗಿ ನಕ್ಕರು. ಬೀದಿಯಲ್ಲಿ ನಡೆಯುತ್ತ ಹೇಳಿದರು :

‘ಅಲ್ಲ ಜಗಣ್ಣ, ನನಗೆ ಭಯವಾಗ್ತಿರೋದು ನಿಜ. ಆದ್ರೆ ನೀನು ಹೊಲೇರನ್ನ ದೇವಸ್ಥಾನದೊಳಗೆ ಕರ‍್ಕೊಂಡು ಹೋಗೋದ್ರಿಂದ ಏನೂ ಪ್ರಯೋಜನ ಆಗಲ್ಲಾಂತ್ಲೂ ನನಗೆ ಅನ್ನಿಸತ್ತೆ. ನನ್ನ ಮಾತು ಕಟ್ಟಿಕೋಬೇಡ. ನಾನು ಹಿಂದೆ ಜೈಲಿಗೆ ಹೋದದ್ದು ಪ್ರಾಯಶಃ ನನ್ನ ಹೆಂಡತಿ ಕಾಟದಿಂದ ತಪ್ಪಿಸಿಕೊಳ್ಳೋಕೆ ಇರಬಹುದು. ಒಟ್ಟು ನೀನು ದುಡುಕಿ ಊರಿನ ನಿಷ್ಠುರ ಕಟ್ಟಿಕೋಬಾರ್ದು ಅಂತ ಹೇಳ್ತಾ ಇದೀನಿ. ನಾನು ಹೇಳೋದು ತಪ್ಪಿರಬಹುದು. ನಂಗೆ ಭಯವಾಗ್ತಿದೆ ಅಂತ ಅನ್ನೋದೇನೋ ನಿಜ.’

‘ನಂಗೂ ಭಯ ಆಗ್ತಿದೆ ರಾಯರೆ. ಆದರೆ ನಿರ್ವಾಹವಿಲ್ಲ.’ ಜಗನ್ನಾಥನಿಗೆ ಇನ್ನೇನು ಹೇಳಬೇಕೆಂದು ತೋಚಲಿಲ್ಲ. ತುಂಬ ಸಮಾಧಾನದಿಂದ ರಾಯರು ಆಡಿದ ಮಾತಿನಿಂದ ಅವನಿಗೆ ಕಸಿವಿಸಿಯಾಗಿತ್ತು. ಈ ಮುಹೂರ್ತದಲ್ಲಿ ತಾನು ತಿರಸ್ಕೃತನಾಗಿದ್ದೇನೆ, ತಳವಿಲ್ಲದ ಪಾತಾಳಕ್ಕೆ ಹಾರಿದ್ದೇನೆ ಎನ್ನಿಸಿತ್ತು. ನೀನು ಮಾಡಹೊರಟ ಕ್ರಿಯೆಯಲ್ಲಿ ನಿನಗೆ ಸಂಪೂರ್ಣ ನಂಬಿಕೆಯಿದೆಯೊ ಎಂದು ರಾಯರು ಕೇಳಿದ್ದರೆ ಗೊತ್ತಿಲ್ಲ ಎಂದು ಜಗನ್ನಾಥ ಒಪ್ಪಿಕೊಳ್ಳುತ್ತಿದ್ದ. ಆದರೆ ಹೀಗೆ ಮೈಮೇಲೆ ಹಾಕಿಕೊಳ್ಳದಿದ್ದಲ್ಲಿ ನನ್ನ ಜೀವನಕ್ಕೆ ಅರ್ಥವಿರುತ್ತಿರಲಿಲ್ಲವೆಂದೂ ಹೇಳುತ್ತಿದ್ದ. ಈ ಸಮಾಜದ ಒಳಗೆ ಮೂಲಭೂತವಾದ ಕ್ರಿಯೆ ಸಾಧ್ಯವಾಗದೇ ಹೋದದ್ದರಿಂದಲೇ ಕ್ರಮೇಣ ಸಮಾಜ ಜೀವನ ಅರ್ಥ ಹೀನವಾಗ್ತ ಹೋಗಿದೆಯಲ್ಲವೆ ರಾಯರೆ ಎಂದು ಕೇಳಬೇಕೆನ್ನಿಸಿತು. ಆದರೆ ಕ್ರಿಯೆಗೆ ಪೂರ್ವಭಾವಿಯಾದ ಮಾತುಗಳೆಲ್ಲವೂ ಅರ್ಥಹೀನ ಗದ್ದಲವೆನ್ನಿಸಿ ಸುಮ್ಮನಾದ. ತಾನು ಆಡುವ ಮಾತುಗಳನ್ನೆಲ್ಲ ಸಲೀಸಾಗಿ ಆಡಬಲ್ಲ ಹಲವರು ಭಾರತೀಪುರದಲ್ಲಿದ್ದಾರೆನ್ನಿಸಿ ಜಗನ್ನಾಥನಿಗೆ ಹೇಸಿಗೆಯಿಂದ ಮೈನಡುಗಿತು. ಕನ್ನಡಿಯಿಲ್ಲದೆ ನಿಲ್ಲಬಲ್ಲ ಸಂಕಟಕ್ಕೆ ನಾನು ತಯಾರಾಗಬೇಕಾಗಿದೆ ಎಂದು ಸಂತೋಷವಾಯ್ತು.