ಯಥಾಪ್ರಕಾರ ಮಾರನೆ ಬೆಳಿಗ್ಗೆ ನಸುಕಿನಲ್ಲೆ ಎದ್ದು ಜಗನ್ನಾಥ ತನ್ನ ಮನೆಯ ಹಿಂದೆ ನಡೆದ, ಗುಡ್ಡದ ಮೇಲೆ ಮನೆ. ಮನೆಯ ಹಿಂದೆ ಇನ್ನೊಂದು ಗುಡ್ಡ. ತನಗೆ ಸೇರಿದ ಗೇರುತೋಟವಿರುವ ಗುಡ್ಡ. ಅರ್ಧಕ್ಕರ್ಧ ಗೇರು ಬೀಜ ಕಳುವಾಗುತ್ತಿತ್ತೆಂದು ಜಗನ್ನಾಥನಿಗೆ ಗೊತ್ತು.

ಗೇರುಗುಡ್ಡದ ನೆತ್ತಿಗೇರಿ ಬೆಳಗಿನ ಹೊತ್ತು ಭಾರತೀಪುರ ನೋಡುವುದೆಂದರೆ ಅವನಿಗೆ ಖುಷಿ. ದಟ್ಟ ಹಸಿರಿನ ಹಲಸಿನ ಮರಗಳು, ಈ ಕಾಲದಲ್ಲೂ ಹೂ ಬಿಡುವ ಮಾವಿನ ಮರಗಳು, ಕಣಿವೆಗಳಲ್ಲಿ ಓಲಾಡುತ್ತ ನಿಂತಿರುವ ಅಡಿಕೆ ತೋಟಗಳ, ಈ ಮಧ್ಯೆ ಹೆಂಚಿನ ಮನೆಗಳು. ಹಳ್ಳಿಯೂ ಅಲ್ಲ ಪಟ್ಟಣವೂ ಅಲ್ಲದ ಊರು. ಪೂರ್ವದಿಕ್ಕಿಗೆ ಸರ್ಪದಂತೆ ವಕ್ರವಾಗಿ ಹರಿಯುವ ಹೊಳೆ, ಪಕ್ಕಕ್ಕೆ ಮಂಜುನಾಥನ ಗುಡಿಯ ಗೋಪುರ. ಯಾವ ಎತ್ತರದ ಪ್ರದೇಶದಿಂದಲೂ ಕಾಣುತ್ತದೆ. ಬಿಸಿಲು ಮಳೆಯಲ್ಲಿ ಸೋಕಿ, ಹಕ್ಕಿಗಳಿಗೆ ಗೂಡಾಗಿ ಹಳೆಯದಾದ್ದು. ಗುಡಿಯ ಪಕ್ಕಕ್ಕೇ ಭೂತರಾಯನ ಗುಡ್ಡ – ಮುಟ್ಟುನಿಲ್ಲದ ಹೆಂಗಸು ಈ ಗುಡ್ಡ ಹತ್ತಿ ಭೂತರಾಯನ ಗುಡಿಗೆ ಹೋಗುವಂತಿಲ್ಲ.

ಅಮಾವಾಸ್ಯೆ ಜಾತ್ರೆಗೆ ಸುಮಾರು ಇನ್ನೊಂದು ತಿಂಗಳಿದೆ. ಅಷ್ಟರಲ್ಲಿ ತಾನೂ ಹೊಲೆಯರೂ ಸಿದ್ಧರಾಗಿರಬೇಕು. ಇಡೀ ದೇಶದಿಂದ ಭಕ್ತರು ಬಂದಿರುತ್ತಾರೆ. ನಾಳೆ ನಾಡಿದ್ದರಲ್ಲಿ ಪತ್ರಿಕೆಗಳಲ್ಲಿ ನನ್ನ ಕಾಗದ ಬರುತ್ತೆ; ರಾಯರಿಗೆ ಇವತ್ತೇ ತಿಳಿಸಿಬಿಡುವುದು.

ಜಗನ್ನಾಥ ಗುಡ್ಡದ ನೆತ್ತಿಯ ಮೇಲೆ ಓಡಾಡಿದ. ಚಳಿಯೆಂದು ಕತ್ತು ಮುಚ್ಚುವ ಕಂದು ಬಣ್ಣದ ಸ್ವೆಟರ್ ಹಾಕಿದ್ದ. ಮಾರ್ಗರೆಟ್ ಕೊಂಡುಕೊಟ್ಟ ಸ್ವೆಟರ್. ಇಡೀ ಭಾರತೀಪುರವನ್ನೇ ಕವಿದಿದ್ದ ಹಿಮ ಬೆಳಗಿನ ಸೂರ್ಯನ ಶಾಖಕ್ಕೆ ಕರಗುತ್ತಿತ್ತು. ಗೇರು ಗುಡ್ಡದ ನೆತ್ತಿಯಿಂದ ಊರು ಸುಂದರವಾಗಿ ಕಾಣುತ್ತದೆ. ಹೊಳೆಯುವ ಹೆಂಚಿನ ಮನೆಗಳು, ಹಸಿರು, ಬಿಸಿಲು ಬಿದ್ದಲ್ಲಿ ಕನ್ನಡಿಯಾದ ಹೊಳೆ. ಗುಡ್ಡದ ಮೇಲೆ ಹಸಿರುಹುಲ್ಲುಗಳಲ್ಲಿ ಕಟ್ಟಿಕೊಂಡ ಪುಟಾಣಿ ಜೇಡರ ಬಲೆಗಳ ಮೇಲೆ ಮಂಜಿನ ತುಂತುರು; ಬಿಸಿಲಿನ ಕೋಲಿಗೆ ಒಡ್ಡಿಕೊಂಡ ಕೋನಗಳಲ್ಲಿ ಈ ತುಂತುರು ಹೊಳೆಯುವ ರತ್ನಗಳು; ಗುಡ್ಡ ಇಳಿದು ಬೀದಿಯಲ್ಲಿ ನಡೆದಾಗ ಮಾತ್ರ ಮಂಜುನಾಥನ ದಾಸೋಹದಲ್ಲಿ ಹೊಟ್ಟೆ ಮಾತ್ರ ಬೆಳೆದ ಬಡಕಲು ಜನ; ಬಸ್ ಬಂದರೂ ಬೀದಿ ಬಿಟ್ಟೇಳದ ಪುಷ್ಟ ನಾಯಿಗಳು, ದೇವಸ್ಥಾನದ ಅಶ್ವತ್ಥಮರದಲ್ಲಿ ಕೈಯಿಂದ ನಿರ್ಭಯವಾಗಿ ಬಾಳೆಹಣ್ಣುನ್ನು ಇಸಕೊಳ್ಳುವ ಕೋತಿಗಳು. ಆಕಾಶದಲ್ಲಿ ಮಾತ್ರ ಸದಾ ಆರೋಗ್ಯ ತುಂಬಿದ ಪಕ್ಷಿಗಳು. ಮೇಲಿನಿಂದ ನೋಡಿದಾಗ ಕಾಣುವುದೇ ಬೇರೆ; ಮೂತ್ರದ ವಾಸನೆ ಬರುವ ಬೀದಿಗಳಲ್ಲಿ ನಡೆದಾಗ ಅನ್ನಿಸುವುದೇ ಬೇರೆ.

ಗುಡ್ಡ ಇಳಿದು ಬರುವಾಗ ಪ್ರಭುಗಳೂ ನಡೆಸುತ್ತಿದ್ದ ಮಂಜುನಾಥ್ ಬಸ್ ಸರ್ವಿಸ್ಸಿನ ಮೊದಲನೇ ಬಸ್ಸು ಶಿವಮೊಗ್ಗಕ್ಕೆ ಹೋಗುತ್ತಿರುವುದು ಕಾಣಿಸಿತು. ಓಡುತ್ತೋಡುತ್ತ ಗುಡ್ಡ ಇಳಿದ. ಮೈ ಬೆಚ್ಚಗಾಗಿತ್ತು. ಸ್ನಾನ ಮಾಡಿ ಊಟದ ಮನೆಗೆ ಬಂದ. ಸುಮಾರು ಇಪ್ಪತ್ತು ಬಾಳೆಲೆಗಳು ಎದುರು ಕೆಲವು ಪರಿಚಿತರು ಹಲವು ಅಪರಿಚಿತರು ಕೂತಿದ್ದರು. ಮಂಜುನಾಥನ ದರ್ಶನಕ್ಕೆ ಎಲ್ಲೆಲ್ಲಿಂದಲೋ ಹಾಜರಾದ ಜನ. ಬಡವರೆಲ್ಲ ಬರುವುದು ತನ್ನ ಮನೆಗೆ, ಅಥವಾ ತನ್ನ ಹಿರಿಯರು ಕಟ್ಟಿಸಿದ ಛತ್ರಕ್ಕೆ. ದುಡ್ಡಿರುವ ಜನರನ್ನು ದಾರಿಯ ಮೇಲೇ ಊರಿನ ಬ್ರಾಹ್ಮಣರು ಬುಕ್ ಮಾಡಿರುತ್ತಾರೆ.

ಅವಲಕ್ಕಿ ಉಪ್ಪಿಟ್ಟು ತಿಂದು ಕಾಫಿಕುಡಿದು ಜಗನ್ನಾಥ ಪೇಟೆಗೆ ಹೊರಟ. ರಾಯರನ್ನು ನೋಡಿ ಹೇಳಿಯೇ ಬಿಡುವುದೆಂದು. ನೀವು ಕುಗ್ಗಿದ್ದೀರಿ. ಈ ಮೂಲಕ ನಿಮಗೂ ಚೈತನ್ಯ ಬಂದೀತು. ಊರಿಗೂ ಹೊಸ ಜೀವ ಬಂದೀತು. ಹೊಲೆಯರು ಇಡಬಹುದಾದ ಮೊದಲನೇ ಹೆಜ್ಜೆಯಲ್ಲಿ ನಾವೆಲ್ಲ ಸತ್ತು ಹುಟ್ಟುತ್ತೇವೆ. ಇಲ್ಲವಾದರೆ ಮಂಜುನಾಥನ ಕೂಪದಲ್ಲಿ ಹೀಗೇ ಕಂತುತ್ತಲೇ ಇರುತ್ತೇವೆ. ಊರು ಶತಮಾನಗಳಿಂದ ಕೊಳೀತಿದೆ ಎಂದು ನಿಮಗನ್ನಿಸುವುದಿಲ್ಲವೆ ರಾಯರೆ. ಇಷ್ಟಕ್ಕೆಲ್ಲ ಮಂಜುನಾಥನೇ ಹೇಗೆ ಕಾರಣ ಎಂದು ವಾದದಲ್ಲಿ ನಾನು ಒಪ್ಪಿಸಲಾರೆ; ಕ್ರಿಯೆಯಿಂದ ಮಾತ್ರ ನಮಗಿದು ಸಿದ್ಧವಾಗಿಬೇಕು. ಸಮಾಜ ಜೀವನ ಅರ್ಥಹೀನವಾಗಿದೆ; ಯಾಕೆಂದರೆ ಸಮಾಜದ ಒಳಗೆ ಕ್ರಿಯೆಯೇ ಸಾಧ್ಯವಾಗಿಲ್ಲ -ಉಣ್ಣುವುದು, ಸಂಭೋಗಿಸುವುದು, ಸಾಯುವುದು ಬಿಟ್ಟು, ಚಕ್ರಕ್ಕೆ ಕೈ ಹಚ್ಚಿ; ತಿರುಗಿಸೋಣ; ರಥೋತ್ಸವದ ದಿನವೆ.

ಈಚೆಗೆ ತನಗೇ ತಾನು ತುಂಬ ಮಾತಾಡಿಕೊಳ್ಳುತ್ತಿದ್ದೇನೆ ಎನ್ನಿಸಿತು ಜಗನ್ನಾಥನಿಗೆ. ಹೊಲೆಯರ ಹತ್ತಿರ ಮಾತಾಡುವುದು ಸಾಧ್ಯವಾದರೆ ಇದು ನಿಂತೀತು. ದಾರಿಯುದ್ದಕ್ಕೂ ಯಾಂತ್ರಿಕವಾಗಿ ನಮಸ್ಕಾರ ಮಾಡುತ್ತ ನಡೆದ. ಚಾವಡಿಯಲ್ಲಿ ಕೂತಿದ್ದ ನಾಗರಾಜ ಜೋಯಿಸರನ್ನು ನೋಡಿದರೂ ನೋಡದಂತೆ ಮುಂದೆ ಹೋದ. ಸೀದ ರಥ ಬೀದಿಯಲ್ಲಿದ್ದ ರಾಯರ ಮನೆ ಕಡೆಗೆ.

ರಥಬೀದಿಗೆ ತಿರುಗುವಲ್ಲಿ ತರಕಾರಿ ಅಂಗಡಿ, ಅಂದರೆ ಬರೀ ಬಣ್ಣದ ಸೌತೇಕಾಯಿ, ಕುಂಬಳಕಾಯಿ, ಚೀನೀಕಾಯಿ, ತೆಂಗು, ವಾಟಬಾಳೆ, ಕರಿಬಾಳೆ, ತೊಂಡಕಾಯಿ, ಕಲ್ಯಾಣ ಬಾಳೆ ಕಾಯಿ ಮಾರುವ ಅಂಗಡಿ. ಜಗನ್ನಾಥನಿಗೆ ಊರಿಗೆ ಬಂದಾಗಿನಿಂದ ಅನ್ನಿಸಿದೆ. ಈ ನೆಲದಲ್ಲಿ ಇನ್ನೇನು ಬೆಳೆದೀತೆಂದು ಯಾರೂ ಪ್ರಯತ್ನಿಸಿಲ್ಲ. ಅಡಿಕೆ ಧಾರಣೆ ಏರಿದ್ದೇ ಭತ್ತದ ಗದ್ದೆಗಳನ್ನೂ ಅಡಿಕೆ ತೋಟವಾಗಿ ಪರಿವರ್ತಿಸಲು ಶುರುಮಾಡಿದರು. ನೆಲದ ಸಾರ ಸರ್ವಸ್ವವೆಲ್ಲ ಗೋಟೂ ಅಡಿಕೆಗಳಾದವು. ಒಂದು ಕಡೆ ಮಂಜುನಾಥ, ಇನ್ನೊಂದು ಕಡೆ ಅಡಿಕೆ – ಇನ್ನೇನೂ ಅರಳದ ನೆಲ. ಆಶ್ಚರ್ಯವೆಂದರೆ ತರಕಾರಿಯಂಗಡಿಯಲ್ಲಿ ಒಂದು ಒಣಗುತ್ತಿದ್ದ ಕಾಲಿಫ್ಲವರ್ ಇತ್ತು. ಜಗನ್ನಾಥ ಕುತೂಹಲದಿಂದ ಅಂಗಡಿಯ ಬ್ಯಾರಿಯನ್ನು ಕೇಳಿದ : ಎಲ್ಲಿ ಬೆಳೆದದ್ದು ಇದು? ಬಣ್ಣದ ಮುಂಡು ಉಟ್ಟಿದ್ದ ಬ್ಯಾರಿ ಗೌರವದಿಂದ ಎದ್ದು ನಿಂತು ಎಲೆಯಡಿಕೆ ಉಗುಳಿ ಬಂದು, ತಲೆಗೆ ಸುತ್ತಿದ್ದ ವಸ್ತ್ರವನ್ನು ಹೆಗಲಿಗೆ ಹಾಕಿಕೊಂಡು ತಬ್ಬಿಬ್ಬಾದ. ಕೂಡಲು ಬೆಂಚು ತೋರಿಸುವುದು ಸರಿಯೆ ಎಂದು ತಿಳಿಯದೆ ನಿಂತ ಬ್ಯಾರಿಗೆ ಜಗನ್ನಾಥ ನಸುನಗುತ್ತ,

‘ಈ ಕಾಲಿಫ್ಲವರ್ ಭಾರತೀಪುರಕ್ಕೆ ಹೇಗೆ ಬಂತು ಅಂತ ಕೇಳಿದೆ’ ಎಂದು ಮತ್ತೆ ಹೇಳಿದ.

‘ಶಿವಮೊಗ್ಗದಿಂದ ಒಂದೊಂದು ಸಾರಿ ತರಿಸ್ತೀನಿ ಧಣಿಯರೆ, ಇದು, ಬಟಾಣಿ, ಕ್ಯಾರೇಟ್ – ಪುರಾಣಿಕರ ಪೈಕಿ ಜನ ಕೊಳ್ಳೋದು ಉಂಟೆ ಶಿವಾಯಿ ಬೇರೆ ಯಾರೂ ಇವನ್ನ ತಿನ್ನಲ್ಲ.’

ಜಗನ್ನಾಥನ ಮುಖದಲ್ಲಿ ನಗು ಅರಳಿತ್ತು. ‘ಆಗಲಿ. ಒಳ್ಳೇದು’ ಎಂದು ಮುಂದೆ ನಡೆದ. ಬ್ಯಾರಿ ಅಂಗಡಿಯ ಮಹಡಿ ಮೇಲೆ ‘ಶ್ರೀ ಮಂಜುನಾಥನ ಪ್ರಸನ್ನ, ಬ್ರಾಹ್ಮಣ ಯುವಜನ ಸಭಾ’ ಎಂದು ಬೋರ್ಡು ಹಾಕಿತ್ತು. ಇಂಗ್ಲೆಂಡಿನಿಂದ ಬಂದ ಶುರುವಿನಲ್ಲಿ ಕುತೂಹಲದಿಂದ ಈ ಸಭೆಯಲ್ಲಿ ಏನು ನಡೆಯುತ್ತದೆ ಎಂದು ತಿಳಿಯಲು ಪ್ರಯತ್ನಿಸಿದ್ದ. ಅಲ್ಪ ಸ್ವಲ್ಪ ಶ್ರೀಮಂತರಾದರವರ ನಿರುದ್ಯೋಗಿ ಮಕ್ಕಳು ಅಲ್ಲಿ ಸೇರುತ್ತಾರೆ. ಇಸ್ಪೀಟು ಆಡುತ್ತಾರೆ. ತಿಂಡಿಯಾದ ಮೇಲೆ ಇಡೀ ಮಧ್ಯಾಹ್ನ. ಹೆಸರಿಗೆ ಕೇರಂ ಬೋರ್ಡಿದೆ – ಆಡುವವರಿಲ್ಲ. ಒಂದಿಪ್ಪತ್ತೈದು ರಟ್ಟು ಹರಿದ ಕಾದಂಬರಿಗಳಿವೆ – ಅಷ್ಟೆ. ಜಾಯಿಕಾಯಿ ಪೆಟ್ಟಿಗೆಯಲ್ಲಿ ಈ ಪುಸ್ತಕಗಳು, ಪೆಟ್ಟಿಗೆಯ ಮೇಲೆ ಕೇರಂಬೋರ್ಡು, ರೂಮಿನ ನಡುವೆ ಕಸಗುಡಿಸದ ನೆಲದ ಮೇಲೆ ಈಚಲು ಚಾಪೆ. ಅದರ ಮೇಲೆ ಇಸ್ಪೀಟಾಡುವ ಹುಡುಗರು. ಗೋಡೆಯ ಮೇಲೆ ಯಥಾಪ್ರಕಾರ ಕಿರೀಟ ಹೊತ್ತ ಮಂಜುನಾಥನ ಪಟ, ಇಂಡಿಯಾದ ಭೂಪಟದೊಳಗೆ ತಲೆಗೂದಲನ್ನು ಹಿಮಾಲಯ ಪರ್ವತವಾಗಿ ಹರಡಿ ನಿಂತ ಭಾರತಮಾತೆ, ನೂಲು ತೆಗೆಯುವ ಗಾಂಧಿ.

ಚರಂಡಿ ನಾರುತ್ತಿದ್ದರೂ ರಥಬೀದಿಯಲ್ಲಿ ಮಾತ್ರ ಪ್ರತಿ ಬೆಳಿಗ್ಗೆ ಮತ್ತು ಸಂಜೆ ಬೀದಿಗೆ ಸಗಣಿನೀರು ಚಿಮುಕಿಸಿ, ರಂಗೋಲೆ ಹಾಕಿರುತ್ತಾರೆ ಹೆಂಗಸರು. ಕಾರಣ ಒಮ್ಮೊಮ್ಮೆ ಪಲ್ಲಕ್ಕಿಯ ಮೇಲೆ ಮಂಜುನಾಥಸ್ವಾಮಿ ಆಗಮಿಸುತ್ತಾನೆ. ಕೆಲವು ಮನೆಗಳ ಎದುರು ಅಡಿಕೆಗೊನೆ, ಭತ್ತದ ಗೊಂಚಲುಗಳ ಸೌಂದರ್ಯದ ಪ್ರಯತ್ನ. ಅಮಾವಾಸ್ಯೆಯ ಜಾತ್ರೆ ಹತ್ತಿರವಾಗುತ್ತಿರುವುದರಿಂದ, ಉಜ್ಜಿದ ಕಪ್ಪು ಚಾವಡಿಗಳು, ಹಿಟ್ಟಿನ ಬಿಳಿರಂಗೋಲೆ, ಸುಣ್ಣ ತೊಡಿಸಿದ ಗೋಡೆಗಳು. ಓದಿದ ಹುಡುಗರಿದ್ದ ಮನೆಗಳಲ್ಲಿರಬೇಕುಉ – ಅಲ್ಲೊಂದು ಇಲ್ಲೊಂದು ನೆಹರು ಜೊತೆ ನಿಂತ ಕೆನಡಿ, ನಗುತ್ತಿರುವ ಪುಷ್ಟವಾದ ಮುಖದ ಕೆನಡಿ. ಸಾಮಾನ್ಯವಾಗಿ ಮನೆಯ ಹಿರಿಮಗ ಮಲಗುವ ಚಾವಡಿಯ ಪಕ್ಕದಲ್ಲಿರುವ ಈ ರೂಮುಗಳಲ್ಲಿ ಈ ಕೆನಡಿಯ ಜೊತೆಗೇ ಕ್ಯಾಲೆಂಡರಿನ ಮಧುಬಾಲ, ಅಥವಾ ಒದ್ದೆ ಮುಂಡುಟ್ಟ ಹುಡುಗಿಯ ಚಿತ್ರ. ಚೂರ್ಣಗಳ ವಾಸನೆ ಬರುವ ಆಯುರ್ವೇದ ಪಂಡಿತರ ಅಂಗಡಿಯ ಬೆಂಚಿನ ಮೇಲೆ ಕೆಲವು ಮುದುಕರು. ಶ್ಯಾಮ ಪಂಡಿತರು ಎದ್ದು ನಮಸ್ಕಾರ ಮಾಡಿದರು. ಇದ್ದಕ್ಕಿದ್ದಂತೆ ಗೋಡೆಯೊಂದರ ಮೇಲೆ ‘ಕೀರ್ತಿಗೊಬ್ಬ ಮಗ ಆರತಿಗೊಬ್ಬ ಮಗಳು’ ಎನ್ನುವ ಜಾಹೀರಾತು. ಕೋನದಾಕೃತಿಯಲ್ಲಿ ಬೀಡಕಟ್ಟಿಟ್ಟ ಪೆಟ್ಟಿಗೆಯಂಗಡಿಯೊಂದರಲ್ಲಿ ಸಾಲಾಗಿ ಜೋಡಿಸಿಟ್ಟ  ನಿರೋಧ್ ಪೊಟ್ಟಣಗಳು. ವಿಪರ್ಯಾಸವೆಂದರೆ ಭಾರತೀಪುರದಲ್ಲಿನ್ನೂ ವಿದ್ಯುದ್ದೀಪವಿಲ್ಲ. ಊರಿಗೆ ಏಕಮಾತ್ರ ಜೈನನಾದ ಅಗಲವಾದ ಮುಖದ ಜಿನೇಂದ್ರನ ಅಂಗಡಿಯಲ್ಲಿ ಒಂದರ ಮೇಲೊಂದು ಪೇರಿಸಿಟ್ಟ ತಾಮ್ರದ ಪಾತ್ರೆಗಳು, ಸ್ಟೈನ್‌ಲೆಸ್ ಲೋಟ ತಟ್ಟೆಗಳು.

ಜಗನ್ನಾಥ ಪ್ರತಿಸಲ ಈ ರಥಬೀದಿಯಲ್ಲಿ ನಡೆಯುವಾಗಲೂ ಏನಾದರೂ ಹೊಸದು ಕಂಡಿತೇ ಎಂದು ಹುಡುಕುತ್ತಾನೆ. ಈ ಸಾರಿ ಪ್ರತಿ ಅಂಗಡಿಯಲ್ಲೂ ಅವನ ಕಣ್ಣಿಗೆ ಬಿದ್ದ ಒಂದು ಚಿತ್ರವೆಂದರೆ ಆರ್ಟ್ ಪೇಪರಿನ ಮೇಲೆ ಅಚ್ಚು ಮಾಡಿದ್ದ ರಾಷ್ಟ್ರಪತಿಗಳು ಬರಿಮೈಯಲ್ಲಿ ಮಂಜುನಾಥ ಸ್ವಾಮಿಗೆ ಕೈಮುಗಿದು ನಿಂತ ಫೋಟೊ. ಬೆಲೆ ಎಪ್ಪತ್ತು ಪೈಸೆ. ದೇವಸ್ಥಾನದ ಕಮಿಟಿಯವರೇ ಬೆಂಗಳೂರಿಂದ ಮಾಡಿಸಿ ತರಿಸಿದ್ದು.

ನೇರವಾಗಿ ಹೊಳೆಯನ್ನು ಹೋಗಿ ಮುಟ್ಟುವ ಬೀದಿಯಲ್ಲಿ ಜಗನ್ನಾಥ ರಾಯರನ್ನು ನೋಡುವ ತವಕದಲ್ಲಿ ಬೇಗ ಬೇಗನೆ ನಡೆದು ಹೋಗಿ ರಾಯರ ಮನೆ ಎದುರು ನಿಂತ. ರಾಯರು ಚೌಕದಲ್ಲಿರುವ ತಮ್ಮ ಖಾದಿ ಅಂಗಡಿಗಿನ್ನೂ ಹೋಗಿರಲಿಕ್ಕಿಲ್ಲ. ಇನ್ನೂ ಒಂಬತ್ತು ಗಂಟೆಯಾಗಿರಲಿಲ್ಲ. ಕತ್ತಲಿನ ನಡುಮನೆಯಲ್ಲಿ ನಿಂತು ರಾಯರೇ ಎಂದು ಕೂಗಿದ. ಇನ್ನೂ ಅಡಿಗೆಗೆ ಇಟ್ಟಿರಲಿಕ್ಕಿಲ್ಲವಾದ್ದರಿಂದ ಹೊಗೆಯಿರಲಿಲ್ಲ. ಊಟದ ಮನೆಯಿಂದ ಬಾಯಿ ಒರೆಸಿಕೊಳ್ಳುತ್ತ ರಾಯರ ಬದಲು ಇನ್ನು ಯಾರೋ ಬಂದರು. ಮಧ್ಯ ವಯಸ್ಸಿನ ಕ್ರಾಪು ತಲೆಯ ಧಡೂತಿ ಮನುಷ್ಯ. ಜರಿಯ ವಸ್ತ್ರ ಹೆಗಲಿನ ಮೇಲೆ. ಕರ್ಚೀಫಿನಿಂದ ಬಾಯಿ ಒರೆಸಿಕೊಳ್ಳುತ್ತ ಬಂದ ಅವರ ಜೊತೆ ಟೆರಿಲೀನ್ ಸೀರೆಯುಟ್ಟಿದ್ದ ಹುಡುಗಿಯೊಬ್ಬಳಿದ್ದಳು. ಹೊಟ್ಟೆ ಕಾಣುವಂತೆ ರವಿಕೆ ತೊಟ್ಟಿದ್ದ ಆಕೆ ಭಾರತೀಪುರದವಳೆಂದು ಅನ್ನಿಸಲಿಲ್ಲ. ರಾಯರ ಮಗ ರಂಗಣ್ಣನ ಜೊತೆ ಅವರಿಬ್ಬರೂ ತನ್ನನ್ನು ಗಮನಿಸದೆ ಹೊರಗೆ ಹೋದರೆ. ಅಡಿಗೆ ಮನೆಯಿಂದಲೇ ಭಾಗ್ಯಮ್ಮ, ‘ಉಡುಪರು ಸಿಗ್ಧೇ ಹೋದ್ರೆ, ರಾಮ ಜೋಯಿಸರಿಗೆ ನಾನು ಹೇಳಿದೀನೀಂತ ಹೇಳು. ಅವರೇ ತರ್ಪಣ, ಸ್ನಾನ, ದೇವರ ದರ್ಶನ ಎಲ್ಲ ಮಾಡಿಸ್ತಾರೆ – ನಾನು ಹೇಳಿದೀನೀಂತ ಹೇಳು’ ಎಂದು ಗಟ್ಟಿಯಾಗಿ ಹೇಳುತ್ತ ಹೊರಗೆ ಬಂದು ಜಗನ್ನಾಥನನ್ನು ನೋಡಿ ಹೆದರಿದಂತೆ ನಿಂತರು. ಕೂತುಕೊ ಎಂದು ಒಳಗೆ ಹೋಗಿ ಕಂಚಿನ ಲೋಟದಲ್ಲಿ ಕಾಫಿ ತಂದು ಕೊಟ್ಟರು. ಒಂದು ನಿಮಿಷ ಇಬ್ಬರೂ ಮಾತಾಡಲಿಲ್ಲ. ಭಾಗ್ಯಮ್ಮನೇ ಮಾತಿಗೆ ಶುರುಮಾಡಿದರು.

‘ಬೆಳಿಗ್ಗೆ ಬಸ್ನಲ್ಲಿ ಶಿವಮೊಗ್ಗಕ್ಕೆ ಹೋದ್ರು, ನಾಳೆ ಸಾಯಂಕಾಲ ಬರ್ತಾರೆ.’

ಜಗನ್ನಾಥ ಬೆಲ್ಲದ ಸಿಹಿಕಾಫಿಯನ್ನು ಕುಡಿಯುತ್ತ ಮಣೆಯ ಮೇಲೆ ಕೂತಿದ್ದವನು ಮಾತಾಡಲಿಲ್ಲ.

‘ಅದೇನೋ ಹೇಳಿದ್ರಪ್ಪ, ಒಂದು ವರ್ಷ ಇವಳು ಶಿವಮೊಗ್ಗದಲ್ಲೆ ಮೇಡಂ ಆಗಿ ಇರ್ಲಿ. ಅಲ್ಲಿ ಸ್ನೇಹಿತರ ಮನೇಲಿ ಇರಲಿಕ್ಕೆ ಏರ್ಪಾಟು ಮಾಡಿ ಬರ್ತೀನೀಂತ. ಏನಾದ್ರೂ ಅವರಿಗೆ ಕೊಡದೆ ಊಟ ಮಾಡಿಕೊಂಡಿರ‍್ಕೆ ಸಾಧ್ಯವ? ಹಾಗಾದ್ರೆ ಅವಳ ಸಂಬಳದಲ್ಲಿ ಏನು ಉಳಿದೀತು. ಅಂದರೆ ಇವರು ನನಗೆ ಜವಾಬೇ ಕೊಡಲಿಲ್ಲ. ಒಂದು ಮಾತು ಡಿ.ಓ.ಗೆ ಹೇಳಿದ್ರೆ ಏನಾಗತ್ತೆ ಅಂದರೆ ಮೈಮೇಲೆ ಬರ್ತಾರೆ. ವಿದ್ಯಾಮಂತ್ರಿಯಾಗಿರೋವು ತನ್ನ ಜೊತೆ ಜೈಲಿನಲ್ಲಿದ್ರು ಅಂತ ಅವರೇ ಹೇಳಿಕೋತಾರೆ. ಏನಾಗಿ ಏನು ಪ್ರಯೋಜನ ಹೇಳು. ಇವರು ಹೇಳ್ದಂಗೆ ಕುಣಿದೂ ಕುಣಿದೂ ನಂಗಂತೂ ಸಾಕಾಯ್ತು ಜಗಣ್ಣ. ನಿಮ್ಮಮ್ಮ ಬದುಕಿದ್ರೆ ಅವರೇ ನಿಂಗೆ ಹೇಳ್ತಿದ್ರು. ಇವರು ತನ್ನ ಜವಳಿ ಅಂಗಡೀಗೆ ಬೆಂಕಿಹಾಕಿದಾಗ ನನ್ನ ತವರಿನಲ್ಲಿ ಕೊಟ್ಟು ನಾಲ್ಕು ರೇಷ್ಮೆ ಸೀರೇನ್ನು ಇವರ ಮಾತು ಕೇಳಿ ನಾನು ಬೆಂಕಿಗೆ ಹಾಕ್ಲಿಲ್ವಾಂತ ಯಾರನ್ನಾದರೂ ಕೇಳು. ಈಗ ಮಗಳು ಸಂಬಳವಿಲ್ದೆ ಮನೇಲಿ ಕೂತಿದಾಳೆ. ಪಥ ಸಾಗಬೇಕಲ್ಲ – ಏನು ಮಾಡೋದು ಹೇಳು. ನಾನು ನಿತ್ಯ ಹೇಳ್ತೀನಿ, ಇವರಿಗೆ : ಒಂದು ಎಮ್ಮೇನಾದ್ರೂ ತೆಗೆಸಿಕೊಡಿ, ಹಾಲು ಮಾರಿ ಜೀವನ ಮಾಡ್ತೀನಿ. ನಮ್ಮ ಅಂತಸ್ತು ನಮ್ಮ ಮರ್ಯಾದೆ ಅಂತ ಇದ್ರೆ ಹೊಟ್ಟೆ ಮೇಲೆ ಒದ್ದೆಬಟ್ಟೆ ಹಾಕ್ಕೋಳ್ಳಬೇಕಾಗುತ್ತೆ. ಆದ್ರೆ ಕಿವಿ ಮೇಲೆ ಹಾಕಿಕೊಳ್ಳಬೇಕಲ್ಲ ಇವರು. ನಂಗಂತೂ ಜೀವನ ಸಾಕು ಸಾಕಾಗಿದೆ ಜಗಣ್ಣ. ಮಾರಾಯ ಈಗ ನೀನು ನನ್ನ ಮಾನ ಉಳಿಸಬೇಕು. ಚಿಕ್ಕ ವಯಸ್ಸಿನಿಂದ ನಿನ್ನನ್ನ ನಾನು ನೋಡಿದ್ದಲ್ಲ – ಅದಕ್ಕೇ ಮರ್ಯಾದೆ ಬಿಟ್ಟು ನಿನ್ನನ್ನ ಕೇಳ್ತಿದೀನಿ. ಈಗ ಬಂದಿದ್ರಲ್ಲ ಅವರು ಚಿಕ್ಕಮಗಳೂರಿನವರು. ನನ್ನ ತಾಯಿ ತಮ್ಮನ ಸ್ನೇಹಿತರು. ಅದಕ್ಕೇ ಮನೆಗೆ ಬಂದ್ರು. ಹೆಚ್ಚೂಂದ್ರೆ ನಾನೊಂದು ಹತ್ತು ರೂಪಾಯಿ ಸಂಪಾದಿಸಬಹುದು ಅಷ್ಟೆ. ನಿನ್ನಾಣೆ – ನಾನು ರಂಗಣ್ಣನ್ನ ಇವರನ್ನ ಕರ್ಕೊಂಬರಕ್ಕೆ ಬಸ್ಸಿಗೆ ಕಳಿಸಲಿಲ್ಲ. ಅವರಿಗೆ ಮೋಸ ಮಾಡಬೇಕೂಂತ ನಾನು ಕನಸು ಮನಸಲ್ಲಿ ಎಣಿಸಿಲ್ಲ ಮಾರಾಯ. ಅದ್ರೇನು ಮಾಡ್ಲಿ ಹೇಳು.’

ಭಾಗ್ಯಮ್ಮ ಮಂಡಿ ಮಡಿಸಿ ಕೂತು ಎಡಗೈ ಮೇಲೆ ತಲೆಯಿಟ್ಟು ತನ್ನ ಮನಸ್ಸನ್ನು ಒಲಿಸಿಕೊಳ್ಳಲು ಮಾಡುತ್ತಿದ್ದ ಹಾವಭಾವಗಳನ್ನು ನೋಡುತ್ತ ಜಗನ್ನಾಥನಿಗೆ ಬಹಳ ಕಷ್ಟವಾಯಿತು. ಒಳಗೆ ನಿಂತ ಸಾವಿತ್ರಿ ಬಾಗಿಲ ಮರೆಯಿಂದ ತಾಯಿಗೆ ಸನ್ನೆ ಮಾಡುತ್ತ ಪೇಚಾಡುತ್ತಿದ್ದುನ್ನು ನೋಡಿ ಜಗನ್ನಾಥ ಮಾತು ಬದಲಾಯಿಸಲು ಹೇಳಿದ.

‘ನಾನು ಯಾಕೆ ಬಂದೇಂದ್ರೆ ಭಾಗ್ಯಮ್ಮ, ನಮ್ಮ ಆಫೀಸ್‌ನಲ್ಲಿ ಲೆಖ್ಖ ಬರೆಯೋಕೊಬ್ಬ ಹುಡುಗ ಬೇಕು. ನಿಮ್ಮ ರಂಗಣ್ಣ ಹೈಸ್ಕೂಲ್ ಮುಗಿಸಿ ಮನೇಲೆ ಇದಾನಲ್ಲ ಅವನಿಗ್ಯಾಕೆ ಕೆಲಸ ಕೊಡಬಾರ್ದು ಅಂತ ಅನ್ನಿಸಿ ಇಲ್ಲಿಗೆ ನಿಮ್ಮನ್ನೇ ಕೇಳೋಣಾಂತ ಬಂದೆ. ನಾಳೆಯಿಂದ್ಲೇ ಕಳಿಸಿಕೊಡಿ. ಅಡ್ವಾನ್ಸ್ ಸಂಬಳ ಬೇಕಾದ್ರೆ ಇನ್ನೂರು ಕೊಟ್ಟಿರ್ತೀನಿ. ನನಗೂ ಒಬ್ಬ ನಂಬಿಗಸ್ತ ಹುಡುಗ ಬೇಕು ನೋಡಿ. ಹೊತ್ತಾಗುತ್ತೆ ಹೋಗ್ತೀನಿ’ ಎಂದು ಎದ್ದು ನಿಂತ. ಕೃತಜ್ಞತೆಯಿಂದ ಅರಳಿದ ಭಾಗ್ಯಮ್ಮನ ಮುಖ ನೋಡುವುದಕ್ಕೆ ಜಗನ್ನಾಥನಿಗೆ ತುಂಬ ಮುಜುಗರವಾಗಿತ್ತು. ‘ಕೂಡ್ಲೆ ಕಳಿಸಿ. ನನಗೂ ಅರ್ಜೆಂಟಾಗಿ ಕೆಲಸಕ್ಕೆ ಬೇಕು’ ಎಂದು ಪ್ರಯತ್ನಪೂರ್ವಕವಾಗಿ ವ್ಯಾವಹಾರಿಕ ಧ್ವನಿಯಲ್ಲಿ ಮಾತಾಡಿ ಅಲ್ಲಿ ನಿಲ್ಲದೆ ನಡೆದುಬಿಟ್ಟ. ಮೂಲೆಯಲ್ಲಿ ಕೂತು ಭಾಗ್ಯಮ್ಮ ತನ್ನನ್ನು ಒಲಿಸಿಕೊಳ್ಳಲು ಮಾಡಿದ ಹಾವಭಾವ, ಅವರ ಮಾತುಗಳು ಜಿನಗುತ್ತಿದ್ದ ಅಸಹನೀಯವಾದ ಕೃತಕ ನಯ, ನಡುನಡುವೆ ಅವರು ಪ್ರಯತ್ನಿಸುತ್ತಿದ್ದ ಅಭಿಮಾನ- ಇವುಗಳ ಹಿಂದಿದ್ದ ದುರಂತದಿಂದ ಅವನ ಮನಸ್ಸು ಭಾರವಾಗಿತ್ತು. ‘ಅವರಿಗೆ ಈ ವಿಷಯ ತಿಳಿಸಬೇಡ’ ಎಂದು ಭಾಗ್ಯಮ್ಮನಿಗೆ ತನ್ನನ್ನು ಬೇಡಿಕೊಳ್ಳಬೇಕಾಗಿ ಬಂದಿತಲ್ಲ. ಎಲ್ಲಿ ಹಾಗೆ ಬಾಯಾರೆ ಬೇಡಿಕೊಳ್ಳುವರೋ ಎಂದು ಒದ್ದಾಡುತ್ತ ಕೂತಿದ್ದ ಜಗನ್ನಾಥ ಹೊರಬಂದವನೆ ನಿಟ್ಟುಸಿರಿಟ್ಟ.

ಇದ್ದಕ್ಕಿದ್ದಂತೆ ಜಗನ್ನಾಥನಿಗೆ ಮಂಕು ಕವಿದಿತ್ತು. ಬದುಕುವ ಕ್ರಿಯೆಯಲ್ಲಿ ಕನಸುಗಳೆಲ್ಲ ಹೇಗೆ ಸವೆದು ಹೋಗುತ್ತವೆ ಎನ್ನಿಸಿತು. ಏನೇ ಮಾಡಲಿ ಎಲ್ಲವೂ ಇರುವಂತೆಯೇ ಇರುತ್ತದೇನೊ. ಪ್ರಾಯಶಃ ಏನೂ ಹೂಬಿಡಲಾರದ ನೆಲ ಇದು. ಭೂತರಾಯನ ಪ್ರಸಾದವಾದ ಸಿಂಗಾರವನ್ನು ಕಿವಿಯಲ್ಲಿ ಸಿಕ್ಕಿಸಿಕೊಂಡ ದೀವರ ಗುಂಪೊಂದು ಗುಡ್ಡ ಇಳಿದು ಎದುರಾಯಿತು. ಅಡಿಕೆ ಮಾತ್ರ ಇಲ್ಲಿ ಹೂಬಿಡುತ್ತದೆ. ಕೈಯಲ್ಲಿ, ಕಿವಿಗಳ ಮೇಲೆ, ತಲೆಯ ಮೇಲೆ, ತೂಗುವ ನೀಳವಾದ ಮರಗಳ ಮೇಲೆ. ದೇವಸ್ಥಾನಕ್ಕೆಂದು ಶುಭ್ರರಾಗಿ ಬಂದ ದೀವಜನಾಂಗದ ಗಂಡಸರ ಮುಖಗಳ ಪ್ರಸನ್ನವಾಗಿದ್ದವು. ನಾನು ಯೋಚಿಸಿದಂತೆ ಅವರು ಮಂಜುನಾಥನ ಬಗ್ಗೆ ಯೋಚಿಸುವುದೇ ಇಲ್ಲ. ಮಳೆ ಬಂದ ವಿಷಯ, ಬರದ ವಿಷಯ, ಎಮ್ಮೆ ಕರುಹಾಕಿದ ವಿಷಯ, ಗೇಣಿ ಬಾಕಿಯಾದ ವಿಷಯ ಮಾತಾಡುತ್ತಾರೆ. ಮರೆಯುತ್ತಾರೆ. ಜಗಳವಾಡುತ್ತಾರೆ. ಹರಕೆ ಹೊರುತ್ತಾರೆ. ಇದು ಸಾಲದು ಎಂದು ಯಾತನೆಯಲ್ಲಿ, ಆತಂಕದಲ್ಲಿ ಅವರು ಎಚ್ಚರರಾಗಬೇಕೆಂದು ನಾನು ಚಕ್ರಕ್ಕೆ ಕೈಹಚ್ಚಿದ್ದೇನೆ. ತಲೆಯ ಮೇಲೆ ಹೇಲುಹೊರುವ ಕರಿ ಮೈಯವರೂ ಕೈ ಹಚ್ಚುವರೆ ನನ್ನ ಜೊತೆ- ಎಂದು ಕಾದಿದ್ದೇನೆ.

ಜಗನ್ನಾಥ ವಿಚಾರಕ್ಕೆ ಬೆಚ್ಚಗಾಗುತ್ತ ಕೈ ಬೀಸಿ ನಡೆದ. ಚೌಕ ತಲ್ಪಿದ ಮೇಲೆ ಸಂದಿಗೊಂದಿಗಳಾದ ಬೀದಿಗಳ ಮೂಲಕ ಮನೆಯ ಕಡೆ ನಡೆದ. ದಾರಿಲ್ಲಿ ಮತ್ತೆ ನಾಗರಾಜ ಜೋಯಿಸರ ಮನೆ. ಕವಳ ಉಗಿದು ಮೈ ಮೇಲಿನ ಧೋತ್ರವನ್ನು ಸರಿಯಾಗಿ ಹೊದ್ದುಕೊಳ್ಳುತ್ತ ಕರದೇಬಿಟ್ಟರು. ಜಗನ್ನಾಥ ಅವರ ಚಾವಡಿಯನ್ನೇರಿ ‘ಹೋಗಬೇಕು’ ಎಂದ. ‘ಒಂದು ನಿಮಿಷ ದಯಮಾಡಿ’ ಎಂದು ಚಾವಡಿಯಲ್ಲಿ ಚಾಪೆ ಮೇಲೆ ಕೂರಿಸಿ ತಾನು ಇನ್ನೊಂದು ತುದಿಯಲ್ಲಿ ಕೂತು ಎಲೆಯಡಿಕೆ ತಟ್ಟೆಯನ್ನು ನಡುವೆ ಇಟ್ಟರು. ಬಂಗಾರದಲ್ಲಿ ಕಟ್ಟಿದ ರುದ್ರಾಕ್ಷಿಸರವನ್ನು ಒಳಗಿನಿಂದೆತ್ತಿ ಹೊದ್ದ ಧೋತ್ರದ ಮೇಲೆ ಹಾಕಿಕೊಂಡರು. ಎಲೆಯೊಂದನ್ನೆತ್ತಿ ತೊಟ್ಟು ಕೊಯ್ಯುತ್ತ ನವಿರಾಗಿ ಸುಲಿಯುತ್ತ ಮಾತಿಗೆ ಸನ್ನದ್ಧರಾದರು.

‘ಅವತ್ತು ನೀವು ಹೈಸ್ಕೂಲಲ್ಲಿ ರಸೆಲ್ ವಿಷಯ ಹೇಳಿದ್ರಲ್ಲ-ಅದನ್ನೇ ಯೋಚಿಸ್ತ ಇದ್ದೆ. ನಮ್ಮಲ್ಲಿ ಈ ದೇವಸ್ಥಾನಗಳು, ಈ ಮೂಢನಂಬಿಕೆಗಳು ವೇದಗಳ ಕಾಲದಲ್ಲಿ ಇರಲೇ ಇಲ್ಲ ಅಂತ ನನ್ನ ಎಣಿಕೆ. ಅರ್ಥಾತ್ ನನ್ನ ಮಾತಿನ ತಾತ್ಪರ್ಯ ಏನೆಂದರೆ ಪೂರ್ವಭಿಮುಖನಾಗಿ ನಿಂತು ಸವಿತೃದೇವನನ್ನು ನಮಗೆಲ್ಲರಿಗೂ ಧೀಶಕ್ತಿಯನ್ನು ದಯಪಾಲಿಸು ಎಂದು ಒಂಟಿಯಾಗಿ ನಿಂತು ಪ್ರಾರ್ಥಿಸೋ ನಮ್ಮ ಸಂಪ್ರದಾಯದಲ್ಲಿ ದೇವಸ್ಥಾನ, ಪೂಜೆ, ವ್ರತಗಳಿಗೆ ಖಂಡಿತ ಜಾಗ ಇಲ್ಲ. ನೀವು ಧರ್ಮದರ್ಶಿತ್ವಕ್ಕೆ ರಾಜೀನಾಮೆ ಕೊಟ್ಟಿದ್ದೀರಿ-ನಿಮಗೆ ನನ್ನ ಮಾತು ಅರ್ಥವಾಗುತ್ತೆ – ಅದಕ್ಕೆ ಹೇಳ್ತೀನಿ – ನಾವು ಸವಿತೃವನ್ನು ಪ್ರಾರ್ಥಿಸೋದು ನನ್ನಲ್ಲಿ ಧೀಶಕ್ತಿಯನ್ನು ಪ್ರಚೋದಿಸು ಅಂತಲ್ಲ – ನಮ್ಮಲ್ಲಿ ಪ್ರಚೋದಿಸು ಅಂತ – ಅರ್ಥಾತ್ ಇಡೀ ಮಾನವ ಕುಟುಂಬದಲ್ಲಿ ಅಂತ. ಧೀಶಕ್ತಿ ಎಂದರೆ ಏನು? – ವೈಜ್ಞಾನಿಕ ತಿಳುವಳಿಕೆ. ನಿಮ್ಮ ರಸೆಲ್ ಹೇಳ್ತಾನಲ್ಲ – ಅದೇ.’

ಕಾವಿಗೆ ಕೂತ ಕೋಳಿಯಂತೆ ತನ್ನ ವಿಚಾರವನ್ನೇ ಚಿಂತಿಸುತ್ತಿದ್ದ ಜಗನ್ನಾಥನಿಗೆ ಅನ್ನಿಸಿತು, ಇಷ್ಟು ಮಾತಾಡುತ್ತಾರಲ್ಲ ಈ ಜೋಯಿಸರಿಗೆ ಹೇಳುವುದು; ಇವರ ಮನಸ್ಸಿನಲ್ಲಿ ಹೇಗೆ ತಾನು ಯೋಜಿಸಿದ ಕ್ರಿಯೆ ಸ್ಫೋಟವಾಗುತ್ತದೆ ನೋಡುವುದು.

‘ಮೂಢನಂಬಿಕೆಗಳೆಲ್ಲ ತಪ್ಪೂಂತ ಅನ್ನಿಸಿದರೆ ಇದಕ್ಕೆ ವಿರುದ್ಧವಾಗಿ ನಮ್ಮ ನಿಮ್ಮಂಥವರು ಏನಾದರೂ ಮಾಡಬೇಕಲ್ಲವೆ ಜೋಯಿಸರೆ? ಕ್ರಿಯೆ, ಮಾತಲ್ಲ.’

ಇನ್ನೇನೋ ಥಟ್ಟನೆ ನೆನಪಾಯಿತು ಜೋಯಿಸರಿಗೆ.

‘ಛೆ ನಿನ್ನೆ ನಿಮ್ಮನ್ನ ಕಾಫೀನೂ ಕೊಡದೆ ಕಳಿಸಿದೆ. ನಾಗಮಣೀ, ನಾಗಮಣೀ, ಎಂದು ಕೂಗಿದರೂ. ನಡುಮನೆಯೊಳಗೆ ಮೃದುವಾದ ಬಳೆಯ ಸದ್ದಾಯಿತು.

‘ಸಾಹುಕಾರ್ರು ಬಂದಿದಾರೆ, ನಿನ್ನೆ ಅವರನ್ನ ಹಾಗೆ ಕಳಿಸಿದಾಯ್ತು’ ಎಂದರು. ಜಗನ್ನಾಥನ ಕಡೆ ತಿರುಗಿ, ‘ನಾಗಮಣಿ ನನ್ನ ಸೊಸೆ. ಶಿವಮೊಗ್ಗದಲ್ಲಿ ಲಾಯರ್ ಆಗಿದಾನಲ್ಲ ನನ್ನ ಮಗ ಅವನ ಹೆಂಡತಿ. ಶಿವಮೊಗ್ಗದಲ್ಲಿ ಬಾಡಿಗೆ ಹೆಚ್ಚು. ಸಂಪಾದನೆ ಸಾಲದು. ಇಲ್ಲಿ ಮನೇಲಿ ನನ್ನ ಹೆಂಡತಿ ತೀರಿಹೋದಮೇಲೆ ಬರೋವ್ರಿಗೆ ಹೋಗೋವ್ರಿಗೆ ಮಾಡಿಹಾಕೋರು ಇಲ್ಲ. ನನ್ನ ಕಿರೇಮಗಳಿಗಿನ್ನೂ ಹತ್ತು ವರ್ಷ. ಆದ್ರಿಂದ ನಾಗಮಣಿ ಇಲ್ಲೆ ಇದ್ದಾಳೆ. ಏನು ಮಾಡೋದು ಹೇಳಿ. ನಮ್ಮದು ಪ್ರಖ್ಯಾತ ಶ್ರೋತ್ರೀಯ ಮನೆತನಾಂತ ಜನ ಹುಡುಕಿಕೊಂಡು ಇಲ್ಲಿಗೆ ಬರ್ತಾರೆ. ಒಂದೊಂದು ಸಾರಿ ಮನೇಲಿ ಹದಿನೈದು ಇಪ್ಪತ್ತು ಜನ ಯಾತ್ರಿಕರಿರ್ತಾರೆ. ಹಿರೇ ಮಗನ್ನ ಲೌಕಿಕಕ್ಕೆ ಬಿಟ್ಟಿದ್ದೇನೆ. ಇನ್ನೊಬ್ಬನ ವೈದಿಕ ಧರ್ಮಕ್ಕೆ ಹಚ್ಚಿದೇನೆ. ಶಂಕರನಿಗೆ ಎಲ್ಲ ಗೊತ್ತು – ಜ್ಯೋತಿಷ್ಯ, ವೇದ, ಪೂಜಾವಿಧಿಗಳ ಎಲ್ಲ. ಪ್ರಾಚೀನವಾಗಿ ಬಂದದ್ದನ್ನ ಕೈಬಿಡಲಿಕ್ಕೆ ಆಗಲ್ವಲ್ಲ ಹೇಳಿ. ಅವನಿಗೆ ಮುಂದಿನ ಸಾರಿ ಮದುವೆ ಮಾಡಿದ ಮೇಲೆ ನಾಗಮಣಿನ್ನ ಅವಳ ಗಂಡನ ಹತ್ರ ಶಿವಮೊಗ್ಗಕ್ಕೆ ಕಳಿಸ್ತೇನೆ.’

ಜಗನ್ನಾಥ ಆಕಳಿಕೆಯನ್ನು ಕಷ್ಟಪಟ್ಟು ತಡೆದುಕೊಂಡ. ಜೋಯಿಸರ ಹತ್ತಿರ ಮಾತಾಡಿ ಪ್ರಯೋಜನವಿಲ್ಲ. ಜಡ್ಡಾದ ಜಾಗಗಳನ್ನು ಉತ್ತಲು ಕ್ರಿಯೆಯಿಮದ ಮಾತ್ರ ಸಾಧ್ಯ. ಜೋಯಿಸರು ಪೇಪರನ್ನೆತ್ತಿ ತನಗೇನೋ ತೋರಿಸಲು ಹುಡುಕುತ್ತಿದ್ದರು. ಸಾಹುಕಾರ್ರು ತನ್ನ ಮನೆಗೆ ಬರುತ್ತಾರೆ ಎನ್ನುವುದನ್ನು ಜಾಹೀರಾತು ಮಾಡಲು ಚಾವಡಿಯ ಮೇಲೇ ತನ್ನನ್ನು ಕೂರಿಸಿಕೊಂಡಿದ್ದಾನೆ. ಈ ಜನರ ಜೊತೆಗೆಲ್ಲ ಇರುವ ದಾಕ್ಷಿಣ್ಯದ ಸಂಬಂಧದಲ್ಲೆ ತನ್ನ ದೌರ್ಬಲ್ಯವಡಗಿದೆ. ಕ್ರಿಯೆಯ ಮುಖಾಂತರ ಮಾತ್ರ ನನ್ನ ಸ್ಪಷ್ಟ ರೂಪ ಈ ಜನರ ಪ್ರಜ್ಞೆಯಲ್ಲಿ ಮೂಡೀತು.

ನಾಗಮಣಿ ಎರಡು ಬಾಳೆಲೆಗಳ ಚೂರನ್ನು ತನ್ನ ಮತ್ತು ಮಾವನ ಎದುರಿಗಿಡಲು ಬಗ್ಗಿದಳು. ತನ್ನೆದುರಿಗೆ ಬಗ್ಗಿದ ಪ್ರಾಯದ ಹುಡುಗಿಯಲ್ಲಿ ಜಗನ್ನಾಥನ ಮನಸ್ಸು ನೆಟ್ಟಿತು. ಆರೋಗ್ಯ ತುಳುಕುವ ಇಂತಹ ಹೆಣ್ಣೊಂದು ಈ ಮನೆಯಲ್ಲಿದೆ ಎಂದು ಊಹಿಸುವುದೇ ಕಷ್ಟ. ತುಂಬಿದ ಎದೆಯನ್ನು ಮುಚ್ಚಿದ ಚೌಕುಳಿ ಬಟ್ಟೆಯ ರವಿಕೆ, ಸಣ್ಣ ಸೊಂಟ, ಕಂದು ಬಣ್ಣದ ಸಾದಾ ಸೀರೆಯಲ್ಲಿ ಕೊರೆದು ತೆಗೆದಿಟ್ಟಂತಹ ಆಕೃತಿ, ಎಣ್ಣೆಗೆಂಪು ಬಣ್ಣ, ಮಧ್ಯ ಬೈತಲೆ ತೆಗೆದು ಕೂದಲನ್ನು ಗಟ್ಟಿಯಾಗಿ ಬಿಗಿದು ಜಡೆಹಾಕಿದ್ದಳು. ಹಣೆಯ ಮೇಲೆ ಉದ್ದನೆಯ ಕುಂಕುಮ. ತಾಳಿಯೊಂದು ಬಿಟ್ಟರೆ ಅವಳ ಮೈಮೇಲೆ ಇನ್ನೇನೂ ಆಭರಣವಿರಲಿಲ್ಲ. ಎಲೆಯ ಮೇಲೆ ಚಕ್ಕುಲಿಬಡಿಸಿ ಅವಳು ಮೇಲೇಳುವಾಗ ಬ್ರಾಸಿಯರ್ಸ್ ತೊಡದ ಅವಳ ಮೊಲೆಗಳು ರವಿಕೆಯಲ್ಲಿ ಉಬ್ಬಿ ಅಲ್ಲಾಡಿದುವು. ಆದರೆ ತಾನು ಎಷ್ಟು ಆಕರ್ಷಕಳೆಂಬ ಪರಿಜ್ಞಾನವೇ ಅವಳಿಗಿಲ್ಲವೆನ್ನುವುದು ಅವಳ ಪ್ರತಿಯೊಂದು ಭಂಗಿಯಲ್ಲೂ ವ್ಯಕ್ತವಾಗುತ್ತಿತ್ತು. ಅವಳು ಬಗ್ಗುವುದು, ನಿಲ್ಲುವುದು, ನಡೆಯುವುದು, ಕಣ್ಣಾಡಿಸುವುದು, ಬಾಗಿಲಿನ ಹತ್ತಿರ ಕಾದುನಿಲ್ಲುವದು- ಎಲ್ಲವೂ ನಿತ್ಯದ ದುಡಿಮೆಯ ವಿವಿಧ ಭಂಗಿಗಳಾಗಿದ್ದುವೇ ವಿನಾ ಅವಳ ಸೌಂದರ್ಯದ ಅಭಿವ್ಯಕ್ತಿಗಳಾಗಿರಲಿಲ್ಲ. ಕಾವೇರಿ ಮಾತ್ರ ಸೊಪ್ಪು ಹೊತ್ತು ನಡೆಯುವುದನ್ನೂ ತನ್ನ ನಿತಂಬಗಳಾಡುವ ಚೆಲುವಿಗೆ ಉಪಯೋಗಿಸುತ್ತಿದ್ದಳು. ಸೀರಿಯಸ್ಸಾಗಿ ಮಾತಾಡುವಾಗ ಮಾರ್ಗರೆಟ್ ಅರ್ಧಕಣ್ಣು ಮುಚ್ಚಿ ಸಿಗರೇಟ್ ಎಳೆಯುವುದಾಗಲೀ, ಕೆನ್ನೆಯ ಮೇಲಿನ ಕೂದಲಿನ ಸಮೃದ್ಧಿಯನ್ನು ಹಿಂದಕ್ಕೆ ತಳ್ಳಿ ಮುಖವನ್ನು ಮೇಲಕ್ಕೆತ್ತುವುದಾಗಲೀ ಇನ್ನೊಂದು ಬಗೆಯ ಸೊಗಸು. ಬಾಗಿಲ ಬುಡದಲ್ಲಿ ತನಗೆ ಎದುರಾಗಿ ನಿಂತಿದ್ದ ನಾಗಮಣಿಯ ತ್ರಿಭಂಗಿಯಲ್ಲಿಲಿ ಅಡಿಗೆಯೊಲೆ ಹತ್ತಿಸಲು ಪಟ್ಟ ಸುಸ್ತಿನ ಪರಿಹಾರವೊ, ಅಥವಾ ಬಾವಿಯಿಂದ ನೀರು ಸೇದಿದ ಆಯಾಸದ ಶಮನದ ಉಪಾಯವೊ ಇತ್ತು – ಅಷ್ಟೆ. ಗಂಡಸರೆದುರು ಕೂರುವಂತಿಲ್ಲವಾದ್ದರಿಂದ ಬಾಗಿಲಿಗೊರಗಿ ಹೀಗೆ ತ್ರಿಭಂಗಿಯಲ್ಲಿ ನಿಂತಿದ್ದಾಳೆ. ಮೈಯಲ್ಲಿ ಅರಳುತ್ತಿರುವ ಸೌಂದರ್ಯದ ಪರಿವೆ ಸದಾ ಅಡಿಗೆ ಮನೆಯಲ್ಲಿರುವ ನಾಗಮಣಿಗೆ ಇಲ್ಲ. ರುಚಿಯಾದ ಕೂಳೂ ಬೇಯಿಸಲೆಂದೇ ಬದುಕುವ ಈ ಹೆಂಗಸರು; ಹೊಟ್ಟೆ ಸೇರಿದ ಈ ಕೂಳು ಪಾಯಿಖಾನೆಯಾದ್ದನ್ನು ಎತ್ತಲೆಂದೇ ಬದುಕುವ ಹೊಲೆಯರು; ಏತನ್ಮಧ್ಯೆ ಆಹಾರವನ್ನು ಜೀರ್ಣಿಸಿಕೊಳ್ಳುತ್ತ ಚಾವಡಿಯ ಮೇಲೆ ಕೂರುವ ಭಾರತೀಪುರದ ಪೌರರು – ಜಗನ್ನಾಥನ ಮೈಯಲ್ಲಿ ರೋಷದ ಚಲನೆಯಾಯಿತು.

ಬಾಗಿಲ ಬಡುದಲ್ಲಿ ಚಕ್ಕುಲಿ ಡಬ್ಬ ಹಿಡಿದು ನಿಂತಿದ್ದ ನಾಗಮಣಿಯ ಮುಖವನ್ನು ನೋಡಿದ. ಬೆಳಕನ್ನು ಕೆನ್ನೆಯ ಮೇಲಂಚಿನಲ್ಲಿ ಹೊಳೆಯಿಸುವ  ನುಣುಪಾದ, ಮೃದುವಾದ ಚರ್ಮ. ತುಂಬಿದ ತುಟಿಗಳು, ಸ್ವಲ್ಪ ದೊಡ್ಡವೇನೋ ಅನ್ನಿಸುವ ಕಿವಿಗಳು. ತನ್ನ ಕಣ್ಣು ಅವಳ ದೊಡ್ಡ ದೊಡ್ಡ ಕಣ್ಣುಗಳನ್ನು ಹುಡುಕಿದಾಗ ತನಗೆ ಇನ್ನೊಂದು ಚಕ್ಕುಲಿಯನ್ನು ಮುಗಿಸಿದ ಮೇಲೆ ಬಡಿಸುವ ನಿರೀಕ್ಷೆಯಲ್ಲದೆ ಇನ್ನೇನೂ ಕಾಣಿಸಲಿಲ್ಲ. ಅವಳ ಆಳದಲ್ಲಿರುವ ದುಃಖವನ್ನು ಬಗೆಯುವವನಂತೆ ಇನ್ನಷ್ಟು ನೆಟ್ಟು ನೋಡಿದ. ಆದರೆ ಅವಳು ಶೂನ್ಯವನ್ನು ನೋಡುವವಳಂತೆ ಅವನನ್ನು ನೋಡುತ್ತ ನಿಂತಳೂ. ನಾಗರಾಜ ಜೋಯಿಸರು ಪೇಪರ್ ಓದುತ್ತ ‘ನೋಡಿ ಏಲಕ್ಕಿ ಬೆಳೆದರೆ ಅಡಕೆ ಬೆಳೆಗೆ ಒಳ್ಳೆಯದಲ್ಲ ಅಂತ ಯಾರೋ ಬರೆದಿದ್ದಾರೆ’ ಎಂದರು. ಜಗನ್ನಾಥ ಹೂಗುಟ್ಟಿ ನಾಗಮಣಿಯ ದುಃಖದಲ್ಲಿ ಪಾಲಾಗಲು, ಅವಳ ನಿರಪೇಕ್ಷವಾದ ಸೌಂದರ್ಯವನ್ನು ಅರ್ಚಿಸುವವನಂತೆ ನೋಡಿದ. ಆದರೆ ಕಣ್ಣು ಮಿಟುಕಿಸುವ ಕಲ್ಲಿನಂತೆ ಅವಳು ನಿಂತಿದ್ದಳು. ತನ್ನ ಆರ್ತತೆ ಎಂದೂ ಅವಳ ಮನಸ್ಸನ್ನು ತಾಗಲಾರದು ಎನ್ನಿಸಿತು. ಯಾವ ವೈಯಕ್ತಿಕ ಆಪೇಕ್ಷೆಯೂ ಇಲ್ಲದ ತನ್ನ ಪ್ರೇಮದಿಂದಲೂ ಅವಳಲ್ಲಿ ಜಡ್ಡುಗಟ್ಟಿಹೋದ ಜೀವನದ ಶಕ್ತಿಯನ್ನು ಅರಳಿಸುವುದು ಸಾಧ್ಯವಿಲ್ಲವೆನಿಸಿ ಜಗನ್ನಾಥ ಇದ್ದಕ್ಕಿದ್ದಂತೆ ನಿರ್ವಿಣ್ಣನಾದ. ಇವಳಂಥವರು ಅರಳಲಾರದೇ ಹೋದರೆ ತನ್ನ ಯೋಜಿತ ಕ್ರಿಯೆ ನಿಷ್ಫಲವೆನ್ನಿಸಿತು. ಆದರೆ ಯಾಕೆ ಅವಳ ಅಂಗಾಂಗಗಳು ಇಷ್ಟೊಂದು ಹುಚ್ಚು ಸೊಗಸಿನಿಂದ ಅರಳಿ ನಿಂತಿವೆ? ‘ಯಾಲಕ್ಕಿಯ ವಾಸನೆ ನೆಲದ ಸತ್ವವನ್ನೆಲ್ಲ ಹೀರಿಬಿಡುತ್ತದೆ ಎಂದು ಕಾಣಿಸತ್ತೆ. ಅದಕ್ಕೇ ಅದು ಅಡಿಕೆಗೆ ಒಳ್ಳೆಯದಲ್ಲವೋ  ಏನೊ. ಏನೂಂತೀರಿ?’ ಎಂದು ಜೋಯಿಸರು ಕೇಳಿದರು. ಜಗನ್ನಾಥ ಗೊತ್ತಿಲ್ಲ ಎಂದ.

‘ನನಗಿನ್ನು ಚಕ್ಕುಲಿ ಬೇಡ’ ಎಂದು ಸ್ನೇಹದಿಂದ ನಾಗಮಣಿಯನ್ನು ನೋಡುತ್ತಲೇ ಹೇಳಿದ. ‘ಇನ್ನೊಂದು ಹಾಕಿಕೊಳ್ಳಿ’ ಎಂದು ಜೋಯಿಸರು ಒತ್ತಾಯ ಮಾಡಿದರು. ನಾಗಮಣಿ ಕಾಫಿ ತರಲು ಒಳಗೆ ಹೋದಳು. ಜಗನ್ನಾಥನಿಗೆ ಎಷ್ಟು ಉತ್ಕಟವಾಗಿ ಪ್ರಯತ್ನಿಸಿದರೂ ಇನ್ನೊಬ್ಬರ ದುಃಖ ತನ್ನದಾಗುವುದು ಸಾಧ್ಯವಿಲ್ಲವೆನ್ನಿಸಿತು. ಮತ್ತೆ ಕಾಫಿ ತಂದು ಬಗ್ಗಿ ನೆಲದ ಮೇಲಿಟ್ಟಳು. ಇವಳ ಪಾಲಿಗೆ ತಾನು ಎಂದೂ ಯಾರೂ ಆಗಲಾರೆ. ಇಡೀ ಊರು ಜೀವಂತವಾದರೆ ಇವಳು ಆಸ್ಫೋಟಿಸಿಯಾಳು ಎಂದು ಬಯಸುವುದಷ್ಟೆ ಕನಸುವುದಷ್ಟೆ ನನ್ನ ಪಾಲಿಗೆ. ನಾಗಮಣಿ ಹೊರಟು ಹೋದಳು. ಜೋಯಿಸರು ಏಳಲು ಬಿಡಲಿಲ್ಲ. ಕೊರೆಯತ್ತ ಕೂತರು.

ಮತ್ತೆ ದೇವಸ್ಥಾನದ ವಿಷಯ. ಸವಿತೃವಿಗೆ ಅಭಿಮುಖನಾಗಿ ನಿಂತು ಪ್ರಾರ್ಥಿಸುವವನಿಗೆ ಪ್ರತಿಮಾರ್ಚನೆ ಸಲ್ಲದು. ಜೋಯಿಸರು, ಈಗಿನ ಅರ್ಚಕರಾದ ಸೀತಾರಾಮಯ್ಯನವರು ಒಂದೇ ಕುಟುಂಬದವರು. ಜೋಯಿಸರ ತಂದೆಯ ತಂದೆ, ಸೀತಾರಾಮಯ್ಯನವರ ಸಾಕುತಂದೆಯ ತಂದೆ ಸ್ವಂತ ಅಣ್ಣ ತಮ್ಮಂದಿರು. ಸೀತಾರಾಮಯ್ಯ ದತ್ತು ಮಗ. ಶಾಸ್ತ್ರೋಕ್ತವಾಗಿ ದತ್ತಾಗಲಿಲ್ಲ ಎನ್ನುವುದಕ್ಕೆ ತನ್ನ ಹತ್ತಿರ ರೆಕಾರ್ಡ್‌ಗಳು ಇದ್ದಾವೆ. ಆದ್ದರಿಂದ ಮಂಜುನಾಥನ ಪೂಜೆಯ ಹಕ್ಕು ನಿಜವಾಗಿ ಇರೋದು ತನಗೇ ಹೊರತು ಸೀತಾರಾಮಯ್ಯನಿಗಲ್ಲ. ಅಲ್ಲದೆ ಸೀತಾರಾಮಯ್ಯನ ಮಗನಿಗೆ ಮಡಿಯಿಲ್ಲ, ಮೈಲಿಗೆಯಿಲ್ಲ. ಒಂದು ಸಾರಿ ಆ ಗಣೇಶನಿಗೆ ಹೆಚ್ಚು ಬೇರೆ ಹಿಡಿದಿತ್ತು. ಆದರೆ ತನ್ನ ಮಗ ಹಾಗಲ್ಲ. ಇಡೀ ವೇದ ಅವನ ಬಾಯಲ್ಲಿದೆ. ಜೋಯಿಸರು ಕೇಸ್ ಹಾಕಬೇಕೆಂದಿದ್ದಾರೆ.

ಅಟ್ಟದಲ್ಲಿ ಏಣಿ ಬಿದ್ದ ಶಬ್ಧವಾಯಿತು. ನಡುಮನೆಯಲ್ಲಿ ಜೋಯಿಸರ ಮಗಳು ಇನ್ನೊಂದು ಹುಡುಗಿಯ ಜೊತೆ ಪಗಡೆಯಾಡುತ್ತಿದ್ದಳು. ಜೋಯಿಸರ ಮಗ ಓಡಿ ಬಂದು ಹೇಳಿದ : ‘ಅವರೆಲ್ಲ ಇವತ್ತು ದೇವಸ್ಥಾನದಲ್ಲೇ ಊಟ ಮಾಡುತ್ತಾರಂತೆ, ಸಾಯಂಕಾಲ ನಮ್ಮಲ್ಲಂತೆ. ಸ್ನಾನ ಪೂಜೆ ಎಲ್ಲ ಮಾಡಿಸಿದೆ. ಊರು ತೋರಿಸಿ ಬರ‍್ತೇನೆ.’ ಮತ್ತೆ ದಾರಿಯಲ್ಲಿ ನಿಂತ ಯಾತ್ರಿಕರ ಜೊತೆ ಸೇರಿ ನಡೆದ. ಜೋಯಿಸರು ಬಿಡಲೇ ಇಲ್ಲ, ಎಡಗೈ ನೆಲಕ್ಕೂರಿ ಬಲಗೈಯಲ್ಲಿ ಮುಷ್ಟಿ ಕಟ್ಟಿ, ಬಿಚ್ಚಿ, ಆರ್ತವಾಗಿ ಎದೆ ಮುಟ್ಟಿಕೊಳ್ಳುತ್ತ, ಹತ್ತಿರ ಸರಿಯುತ್ತ ಮಾತಾಡಿದರು:

‘ನೀವು ಧರ್ಮದರ್ಶಿಗಳಾಗಿದ್ದರೆ ಏನಾದರೊಂದು ಇತ್ಯರ್ಥ ಮಾಡಬಹುದಿತ್ತು. ಆದರೆ ಇಲ್ಲವಲ್ಲ? ಈಗ ನಾನೇನು ಮಾಡಬಹುದು ಹೇಳಿ? ಭಾರತೀಪುರದವರು ಕೋರ್ಟಿಗೆ ಹೋಗಬಾರದು. ಮಂಜುನಾಥನೇ ಎಲ್ಲ ನಿರ್ಣಯ ಮಾಡ್ತಾನೇಂತ ಹೇಳ್ತಾರೆ. ಆದರೆ ಇದನ್ನ ನಾನು ನಂಬಿಕೊಂಡು ಕೂರಲ? ನನ್ನ ಮಗನಿಗೆ ಹೇಳಿದೆ: ಕಾನೂನು ಹೇಗಿದೆ ತಿಳ್ಕೊ – ಕೇಸ್ ಹಾಕಣ ಅಂತ. ನಾನು ಕೇಳೋದು ಇಷ್ಟೊಂದು ಹೆಸರಾದ ದೇವಸ್ಥಾನದಲ್ಲಿ ವಿಧ್ಯುಕ್ತವಾದ ಪೂಜೆ ಪುನಸ್ಕಾರ ನಡೀಬೇಕೋ ಬೇಡವೊ – ಅಂತ. ಪ್ರಭುಗಳು ನನ್ನ ಮಾತನ್ನ ಕಿವಿಗೆ ಹಾಕ್ಕೊಳ್ಳಲ್ಲ. ಕೊಂಕಣಿ – ಅವನಿಗೇನಾಗಬೇಕು ಹೇಳಿ. ರಾಷ್ಟ್ರಪತಿಗಳಿಗೆ ನಾನೊಂದು ಕಾಗದ ಬರ‍್ದಿಟ್ಟಿದೀನಿ. ಅದನ್ನ ದಯಮಾಡಿ ನೀವು ಇಂಗ್ಲೀಷಿಗೆ ಮಾಡಿಕೊಡಬೇಕು.’

ಜಗನ್ನಾಥ ಹೂ ಎನ್ನಲಿಲ್ಲ. ಊಹು ಎನ್ನಲಿಲ್ಲ. ಜೋಯಿಸರಿಗೆ ನಿಷ್ಠುರವಾಗಿ ಹೇಳಿಬಿಡಬೇಕೆಂದು ಕಾದ. ಆದರೆ ಅವರ ಮನಸ್ಸಿನ ಜೌಗಿನಲ್ಲಿ ಏನನ್ನು ನೆಡುವುದೂ ಅಸಾಧ್ಯ. ಒಂದೇ ಮಾತಾಡುತ್ತಲೇ ಇರುತ್ತಾರೆ. ನಾಗಮಣಿ ಅರಳುವುದಿಲ್ಲ. ಯಾರೂ ಪ್ರಾಯಶಃ ಅರಳುವುದಿಲ್ಲ ಇವರ ಮಾತು ಕೇಳುತ್ತ ನಾನು ಇನ್ನಷ್ಟು ಸಡಿಲವಾದೇನು ಅಷ್ಟೆ. ನಿಧಾನವಾಗಿ ಮಂಜುನಾಥ ನನ್ನನ್ನೂ ಕವಿದುಬಿಡುತ್ತಾನೆ. ಕಾವೇರಿಗಿದ್ದಂತೆ ನಾಗಮಣಿಗೆ ಯಾಕೆ ಒಳಮಾರ್ಗಗಳು ಇಲ್ಲ. ಯಾವ ಭಾವನೆಯೂ ಇಲ್ಲದೆ ನನ್ನನ್ನು ನೋಡಿದಳು. ತಾನು ಹೆಣ್ಣೆಂಬ ಪರಿವೆಯೂ ಅವಳಿಗಿಲ್ಲವೆ? ಸುಮ್ಮನೇ ನೋಡಿದಳು ಚಕ್ಕುಲಿ ಬಡಿಸಲು ಕಾಯುತ್ತ. ನನ್ನ ನೋಟ ಅವಳ ಒಳಗೇನೂ ಹೊತ್ತಿಸಲಿಲ್ಲ. ಅವಳ ದೊಡ್ಡ ಕಣ್ಣುಗಳಲ್ಲಿ ಶೂನ್ಯ ಮಾತ್ರ ಇತ್ತು. ನೀಳವಾದ ರೆಪ್ಪೆಗಳು ಮುಚ್ಚುತ್ತ ತೆರೆಯುತ್ತ ಇದ್ದವು. ನೋಡುವಾಗಲೂ ನಾನಿದ್ದೇನೆ ಎಂಬ ಪರಿವೆ ಅವಳಿಗಿರಲಿಲ್ಲ. ಹೀಗೆ ನೂರು ಯಾತ್ರಿಕರು ಬಂದು ತಿಂದು ಹೋಗುತ್ತಾರೆ. ಅವಳನ್ನು ನೋಡುತ್ತಾರೆ. ಮತ್ತೆ ಅವರಿಗೆ ಬಡಿಸಬೇಕಾದ ಕ್ಷಣಕ್ಕಾಗಿ ನಿರೀಕ್ಷಿಸುತ್ತ ಅವರ ಎಲೆ, ಅವರ ಕೈ, ಅವರ ಬಾಯಿ, ತಿನ್ನುತ್ತ ತೃಪ್ತಿ ಪಡುವ ಅವರ ಕಣ್ಣುಗಳನ್ನು ನೊಡುತ್ತಾ ನಿಲ್ಲುತ್ತಾಳೆ, ತ್ರಿಭಂಗಿಯಲ್ಲಿ ಆಯಾಸ ಪರಿಹರಿಸಿಕೊಳ್ಳುತ್ತ. ಅವಳ ಚಕ್ಕುಲಿ ತಿಂದ ನೂರರಲ್ಲಿ ಇನ್ನೊಬ್ಬ ನಾನು ಅಷ್ಟೆ. ಮಾಂಸದಿಂದ ತುಂಬಿದ ಅವಳ ಬೆಚ್ಚಗಿನ ಮೊಲೆಗಳು, ಬೆಚ್ಚಗಿನ ಸಂದಿಗಳು ಎಂದೂ ಅವಳನ್ನು ಹೊರಳಿಸುವುದಿಲ್ಲ. ಶಿವಮೊಗ್ಗಕ್ಕೆ ಹೋಗಿ ಗಂಡನ ಜೊತೆಗಿದ್ದರೆ ಮುಟ್ಟು ನಿಂತು ಬಸುರಾಗುತ್ತಾಳೆ. ಹೆರುತ್ತಾಳೆ. ಅಷ್ಟೆ. ಹೆತ್ತು ಹೆತ್ತು ಹೊಟ್ಟೆ ಸುಕ್ಕಾಗುತ್ತದೆ ಮೊಲೆ ಜೋತುಬೀಳುತ್ತದೆ -ಅಷ್ಟೆ.

‘ಈ ಸೀತಾರಾಮಯ್ಯ ಮಾಡಿರೋ ಮೋಸ ಒಂದೋ ಎರಡೋ? ನಿಮ್ಮ ತಾಯಿ ಬಂಗಾರದ ಕಿರೀಟಾನ್ನ ಮಂಜುನಾಥನಿಗೆ ನಿಮ್ಮ ಹೆಸರಲ್ಲಿ ಮಾಡಿಕೊಟ್ಟರಲ್ಲ ಅವರು ಕೊಟ್ಟ ಬಂಗಾರ ಎಲ್ಲ ದೇವರ ತಲೇ ಮೇಲೆ ಇದೆ ಅಂತ ನೀವು ತಿಳಿದಿರ? ಹುಚ್ಚು ಅಷ್ಟೆ. ಮಗನಿಗೆ ನೇವಳ ಮಗಳು ಹೆಂಡತಿಗೆ ಸರ ಬಳೆ ಬೆಂಡೋಲೆ -ಇದಕ್ಕೆಲ್ಲ ಬಂಗಾರ ಎಲ್ಲಿಂದ ಬಂತೂಂತ ತಿಳ್ದಿದೀರಿ?’

ಜೋಯಿಸರು ಆಪ್ತವಾಗಿ ಮಾತಾಡುತ್ತ ಸರಿದು ಸರಿದು ತನ್ನ ಹತ್ತಿರವೇ ಕೂತಿದ್ದರು. ತನ್ನ ಕಿವಿಯ ಹತ್ತಿರ ಮಾತಾಡುತ್ತಿದ್ದರು. ಅವರ ಕೆಂಪು ಹಲ್ಲುಗಳನ್ನು ಕೆಂಪು ಕಲ್ಲಿನ ಒಂಟಿಯನ್ನು ಜಗನ್ನಾಥ ದುರುಗಟ್ಟಿ ನೋಡಿದ. ಇವರಿಗೆ ಹೇಳಿಕೊಂಡು ಖಂಡಿತ ಪ್ರಯೋಜನವಿಲ್ಲವೆನ್ನಿಸಿ ತುಂಬ ಬೇಸರವಾಯಿತು.

‘ಹೊತ್ತಾಗ್ತ ಇದೆ ಹೋಗಬೇಕು’ ಎಂದು ಎದ್ದು ನಿಂತ. ಈ ಕ್ಷಣ ಯಾವಾಗಲೂ ನೆನಪಾಗುತ್ತದೆ: ಮಧ್ಯಾಹ್ನ ಶೂನ್ಯವಾದ ಬೀದಿ, ಮಹಾಮಂಗಳಾರತಿಗೆ ಬಾರಿಸುವ ದೊಡ್ಡ ಗಂಟೆಯ ಶಬ್ದ. ಬೇಸರದಿಂದ ಮೈ ಮುರಿಯುತ್ತ ಹೊರಡಲು ಅನುವಾಗಿ ನಿಂತಿದ್ದಾಗ ಮಹಡಿ ಮೆಟ್ಟಲನ್ನು ದಡದಡನೆ ಇಳಿಯುತ್ತ ಜೋಯಿಸರ ಮಗಳು ಕಿರುಚಿದ್ದಳು :

‘ಅಪ್ಪಯ್ಯಾ ಅಪ್ಪಯ್ಯಾ ಬನ್ನಿ, ಅತ್ತಿಗೆ. ಅತ್ತಿಗೆ…’

ಜೋಯಿಸರು ಒಳಗೆ ಓಡಿದರು. ಜಗನ್ನಾಥನೂ ಓಡಿ ಮೆಟ್ಟಲು ಹತ್ತಿದ. ಬಣ್ಣದ ಸೌತೆಕಾಯಿಗಳನ್ನು ಬಾಳೆಯ ನಾರಿನಲ್ಲಿ ತೂಗಿದ್ದ. ಮಡಿಬಟ್ಟೆಗಳನ್ನು ಹರವಿದ್ದ ಮಹಡಿಯಲ್ಲಿ ಮೇಲ್ಫಾವಣಿಯ ತೊಲೆಗೆ ಇಳಿಬಿಟ್ಟ ಹಗ್ಗಕ್ಕೆ ನಾಗಮಣಿ ನೇತು ಬಿದ್ದಿದ್ದಳು. ಕೆಳಗೊಂದು ಏಣಿಬಿದ್ದಿತ್ತು.

ಜಗನ್ನಾಥ ಸೂರಿನ ತೊಲೆಗೆ ಏನಿಯನ್ನಿಟ್ಟು ಸರ ಸರನೇ ಹತ್ತಿದ, ನಾಗಮಣಿಯನ್ನು ಮೇಲಕ್ಕೆತ್ತಿ ಮೈಗವಚಿಕೊಂಡು ‘ಕತ್ತಿ ಕೊಡಿ’ ಎಂದು ಅರಚಿದ. ಜೋಯಿಸರು ಧೋತ್ರವನ್ನೆಸೆದು ಓಡಿಹೋಗಿ ಕತ್ತಿ ತಂದುಕೊಟ್ಟರು. ಹಗ್ಗವನ್ನು ಕತ್ತರಿಸಿ ಜಗನ್ನಾಥ ಮೆಲ್ಲನೆ ನಾಗಮಣಿಯನ್ನು ಕೆಳಗಿಳಿಸಿ ನೆಲದ ಮೇಲೆ ಮಲಗಿಸಿದ. ಕತ್ತಿಗೆ ಬಿಗಿದಿದ್ದ ಕುಣಿಕೆ ಬಿಚ್ಚಿದ.

‘ಓಡಿಹೋಗಿ ಡಾಕ್ಟರನ್ನು ಕರೆದು ತನ್ನಿ’ ಎಂದ. ಜೋಯಿಸರು ಮತ್ತೆ ಓಡಿದರು. ಜಗನ್ನಾಥ ನಾಗಮಣಿಯ ಮೈಮುಟ್ಟಿ ನೋಡಿದ. ಬೆಚ್ಚಗಿದೆ ಎನ್ನಿಸಿತು. ಅಥವಾ ತನ್ನ ಭ್ರಮೆಯೊ? ಅವಳ ಕತ್ತು ಮುರಿದು ಮೂಗೂ ಬಾಯಿಂದ ರಕ್ತ ಹರಿದಿತ್ತು. ಅವಳ ಕಣ್ಣುಗುಡ್ಡೆಗಳು ಮೇಲೆ ಸಿಕ್ಕಿದ್ದುವು. ಅವಳನ್ನು ಉಸಿರಾಡಿಸಲು ತನಗೆ ಗೊತ್ತಿದ್ದು ಉಪಾಯಗಳನ್ನೆಲ್ಲ ಮಾಡಿದ. ಮುಖ ಅಡಿಯಾಗಿ ಮಲಗಿಸಿ ಬೆನ್ನನ್ನು ಒತ್ತಿದ. ಬಾಯಿಗೆ ಬಾಯಿ ಕೊಟ್ಟು ಉಸಿರಾಡಿದ. ಎದೆಯನ್ನು ಉಜ್ಜಿದ. ವಿಕಾರವಾಗಿದ್ದ ಅವಳ ಕಣ್ಣುಗಳನ್ನು ಮುಚ್ಚಿದ. ಹುಡುಗಿಯ ಕೈಯಲ್ಲಿ ನೀರು ತರಿಸಿ ಅವಳ ಮುಖವನ್ನು ತೊಳೆದ.

ಸೈಕಲ್ ಮೇಲೆ ಬಂದ ಡಾಕ್ಟರರು ಪರೀಕ್ಷಿಸಿ ‘ಪ್ರಾಣ ಹೋಗಿದೆ’ ಎಂದರು. ಜೋಯಿಸರು ತಲೆಯ ಮೇಲೆ ಕೈಹೊತ್ತು ಕೂತರು. ಅವಾಕ್ಕಾಗಿ ಮಾತಿಲ್ಲದೆ ಕೂತ ಜೋಯಿಸರಿಗೆ ಏನು ಹೇಳುವುದು ತೋರದೆ ಜಗನ್ನಾಥ ನಿಂತ. ಆ ವರ್ಷ ತಾನೇ ಪಾಸುಮಾಡಿ ಬಂದಿದ್ದ ಯುವಕ ಡಾಕ್ಟರ್:

‘ಸೂಯಿಸೈಡ್ ಆದ್ದರಿಂದ ಪೊಲೀಸರಿಗೆ ತಿಳಿಸಬೇಕು. ಪೋಸ್ಟ್‌ಮಾರ‍್ಟಂ ಮಾಡಬೇಕು. ಸಾರಿ, ನಾನು ಹೋಗ್ತೇನೆ’ ಎಂದು ಹೊರಟು ಹೋದರು. ಗದ್ದಲವಾದ್ದರಿಂದ ಜೋಯಿಸರ ಮನೆ ತುಂಬ ಜನ ನೆರೆದರು. ‘ಅಯ್ಯೋ ಎಷ್ಟು ಒಳ್ಳೇ ಹುಡುಗಿ. ಒಂದೂ ಮಾತಾಡ್ದೆ ಎಲ್ಲಾ ಕೆಲಸ ಮಾಡಿಕೊಂಡು ಹೋಗ್ತಿದ್ಳು.’ ಎಂದು ಕೆಲವು ಹೆಂಗಸರು ಹೇಳಿಕೊಂಡು ಅಳಲು ಪ್ರಾರಂಭಿಸಿದರು. ಜಗನ್ನಾಥ ನಾಗಮಣಿಯ ಗಂಡನ ಅಡ್ರೆಸ್ಸನ್ನು ಕೇಳಿ ಪಡೆದ. ಅವಳ ತಂದೆಯ ಅಡ್ರೆಸ್ ಕೇಳಿದಾಗ ತಂದೆ ತಾಯಿ ಇಬ್ಬರೂ ಇಲ್ಲವೆಂದು ತಿಳಿಯಿತು. ಹಾಸನದಲ್ಲಿ ಅಣ್ಣ ಹೋಟೆಲೊಂದರಲ್ಲಿ ಅಡಿಗೆಗಿದ್ದಾನೆಂದು ಯಾರೋ ಹೇಳಿದರು. ಅವಳ ಗಂಡನಿಗೆ ಬರುವಂತೆ ಟೆಲಿಗ್ರಾಂ ಕಳಿಸುತ್ತೇನೆಂದು ಜೋಯಿಸರಿಗೆ ಹೇಳಿ ಜಗನ್ನಾಥ ಹೊರಟ. ಮನೆಯ ತುಂಬ ಬೀದಿಯ ತುಂಬ ಸೇರಿದ್ದ ಜನರನ್ನು ನೊಡಿ ಅವನಿಗೆ ವಾಕರಿಕೆಯಾಯಿತು. ದೇವಸ್ಥಾನದ ಊಟ ಮುಗಿಸಿ ಕೈಯಲ್ಲಿ ಲೋಟ ಹಿಡಿದು ನಿಂತಿದ್ದವರು ಹಲವರು. ಎರಡು ಮೂರು ನಿಮಿಷಕ್ಕೊಮ್ಮೆ ಅವನ ಮೈ ಅಸಹನೀಯವಾಗಿ ನಡುಗತೊಡಗಿತು. ಒಣಗಿದ ಗಂಟಲನ್ನು ಒದ್ದೆಮಾಡಿಕೊಳ್ಳಲು ಯತ್ನಿಸುತ್ತ, ಆದರೆ ಉಗುಳು ನುಂಗಲು ಅಸಹ್ಯಪಡುತ್ತ ಸೀದ ಪೋಸ್ಟಾಫೀಸಿಗೆ ಹೋಗಿ, ಟೆಲಿಗ್ರಾಂ ಕೊಟ್ಟು ತನ್ನ ಮನೆಗೆ ಹೋದ, ಊಟ ಬೇಡವೆಂದು ಹೇಳಿ ರೂಮಿಗೆ ಹೋಗಿ ಹಾಸಿಗೆಯ ಮೇಲೆ ಮಲಗಿದ. ಅಳಬೇಕೆನ್ನಿಸಿತು. ಆದರೆ ಆಗಲಿಲ್ಲ. ನಿಟ್ಟುಸಿರಿಡುತ್ತ ಏನೂ ತಿಳಿಯದಂತಾಗಿ ಚಡಪಡಿಸುತ್ತ ಸಾಯಂಕಾಲವಾಗುವುದನ್ನು ಕಾದ. ದೂರದಿಂದ ಹೊಲೆಯರು ಬರುವುದು ಕಾಣಿಸಿತು. ಬರಿ ಲಂಗೋಟಿ ಉಟ್ಟ ಕಪ್ಪು ಮೈಗಳು, ಕೆದರಿದ ತಲೆಗಳು, ಏನನ್ನೂ ನಿರೀಕ್ಷಿಸದ ಕಣ್ಣುಗಳು. ಇವತ್ತು ಬೇಡವೆಂದು ಅವರಿಗೆ ಹೋಗಿ ಹೇಳಿದ. ನಾಗಮಣಿಯ ಸಾವನಿಂದ ತಾನು ಸಂಕಟಪಡುತ್ತಿದ್ದೇನೆಂಬುದು ಚಿಕ್ಕಿಗೆ ತಿಳಿದಿರಬೇಕು. ರೂಮಿಗೆ ಕಾಫಿಯನ್ನು ತಂದು ಮೇಜಿನ ಮೇಲಿಟ್ಟು ಜಗನ್ನಾಥನ ಸುಡುವ ಹಣೆ ಮುಟ್ಟಿ ನೋಡಿ ಕೆಳಗೆ ಹೋದರು. ಜಗನ್ನಾಥ ಬಾಲಕನಾಗಿದ್ದಾಗ ಮನಸ್ಸಿಗೆ ಕ್ಷೋಭೆಯಾದಾಗೆಲ್ಲ ಅವನಿಗೆ ಹೇಗೆ ಜ್ವರ ಬರುತ್ತಿತ್ತೆಂಬುದನ್ನು ತಿಳಿದ ಅವರು ಸುಮ್ಮನೇ ಹೊರಟು ಹೋದದ್ದನ್ನು ನೋಡಿ ಜಗನ್ನಾಥ ಕೃತಜ್ಞತೆಯಿಂದ ಕಣ್ಣು ಮುಚ್ಚಿ ಮಲಗಿದ. ಇದ್ದಕ್ಕಿದ್ದಂತೆ ರಾತ್ರೆ ಎಚ್ಚರವಾದಾಗ ಬೆಳದಿಂಗಳಿತ್ತು. ಜಗನ್ನಾಥನಿಗೆ ಕಿರಿಕಿರಿಯಾಗಿ ಕಿಟಕಿ ಮುಚ್ಚಿದ. ಮತ್ತೆ ಶೂನ್ಯವಾದ ಮನಸ್ಸಿನಿಂದ ಥಟ್ಟನೇ ಏನು ವಿಚಾರ ಮೂಡಿತು? ಎಲ್ಲವುದಕ್ಕೂ ನಿಶ್ಚಯಿಸು, ನುಗ್ಗು, ಹೆದರುವುದು ಅನಗತ್ಯ, ಯಾಕೆಂದರೆ ಕ್ರಿಯೆ ಸಾಧ್ಯವಾಗದಿದ್ದಲ್ಲಿ – ತನ್ನ ವಿಚಾರವನ್ನು ಮಾತಿನಲ್ಲಿ ಸ್ಪಷ್ಟಮಾಡಿಕೊಳ್ಳಲಾರದೆ ಜಗನ್ನಾಥ ಸುಮ್ಮನಾದ. ಈಗ ಬದುಕಿದ್ದು ಈಗ ಸತ್ತಿದ್ದ ನಾಗಮಣಿಯನ್ನು ಒಳಹೋಗಳು ಮತ್ತೆ ಮತ್ತೆ ಯತ್ನಿಸಲು ಸುಸ್ತಾಗಿ ನಿದ್ದೆ ಹೋದ.