ಒಬ್ಬನೇ ನಡೆಯುವಾಗ ಜಗನ್ನಾಥ ಹೊಂಡಗಳನ್ನು ಬಳಸುವುದಿಲ್ಲ…. ಹಾರುತ್ತಾನೆ. ಅದೂ ಎಳೆ ಬಿಸಿಲು, ಡಿಸೆಂಬರ್ ದಿನಗಳ ಚಳಿ, ಜೋರಾಗಿ ನಡೆಯಲು ಖುಷಿ. ಬೆಳಿಗ್ಗೆ ಕಾಫಿ ತಿಂಡಿ ಮುಗಿಸಿದವನೇ ಶ್ರೀಪತಿರಾಯರನ್ನು ನೋಡಿಬರುತ್ತೇನೆಂದು ಚಿಕ್ಕಿಗೆ ಹೇಳಿ ಪೇಟೆ ಕಡೆ ಹೊರಟಿದ್ದ. ಅಕ್ಕಪಕ್ಕದ ಗಿಡಗಳ ಎಲೆ ಚಿವುಟಿ ಮೂಸುತ್ತ, ಶ್ರೀಪತಿರಾಯರಿಗೆ ತಾನು ಸುಮಾರು ಒಂದು ತಿಂಗಳಿಂದ ಹವಣಿಸುತ್ತಿರುವುದನ್ನು ಹೇಗೆ ವಿವರಿಸಬೇಕೆಂದು ಯೋಚಿಸುತ್ತಾ ವೇಗವಾಗಿ ಗುಡ್ಡ ಇಳಿಯುತ್ತಿದ್ದ ಜಗನ್ನಾಥನಿಗೆ ಬೆಳ್ತಂಗಡಿಯ ನರಹರಿರಾಯರು ಎದುರಾದರು. ತಲೆಗೆ ಮುಂಡಾಸು, ಕಿವಿಯಲ್ಲಿ ಒಂಟಿ, ಸುಕ್ಕುಬಿದ್ದ ಮುಖ – ಕಾತರದ ಕಣ್ಣುಗಳು.

‘ಏನು ದೇವರ ದರ್ಶನಕ್ಕೆ ಹೊರಟಿದ್ದೊ?’

ಚೀಲ ಮತ್ತು ಕೊಡೆಯನ್ನು ಒಟ್ಟಿಗೇ ಹಿಡಿದು ನಮಸ್ಕಾರ ಮಾಡಿದರು. ನೂರು ಕಡೆ ತೇಪೆ ಹಾಕಿದ ಬೂದು ಬಣ್ಣಕ್ಕೆ ತಿರುಗಿದ ಕೊಡ, ಒಂದು ಒಂಟಿಗೆ ಹರಳಿಲ್ಲ, ಧೂಳು ತುಂಬಿದ ಕಾಲಲ್ಲಿ ಚಪ್ಪಲಿಯಿಲ್ಲ.

‘ಇಲ್ಲ ಹೀಗೇ ಪೇಟೆಗೇಂತ…’

ಜಗನ್ನಾಥ ಅವರ ಮಾತಿಗೆ ಕಾದು ನಿಂತ. ನರಹರಿರಾಯರು ಪಕ್ಕದ ಕಿಸೆಗೆ ಕೈ ಹಾಕಿ ಹುಡುಕಿದರು. ಇವರನ್ನು ಮನೆಗೆ ಕರೆದುಕೊಂಡು ಹೋಗಿ ಕಾಫಿ ಕೊಟ್ಟು ಉಪಚರಿಸದೆ ನಡೆದು ಬಿಡುವುದು ಸರಿಯೆ – ಜಗನ್ನಾಥನಿಗೆ ಸಂದಿಗ್ಧವಾಯಿತು.

‘ಮನೆಗೆ ಹೋಗಿ ಬಾಯಾರಿಕೇಗೆ ಏನಾದರೂ ತಗೊಳ್ಳಿ, ಮಧ್ಯಾಹ್ನದೊಳಗೆ ಬಂದು ಬಿಡುತ್ತೇನೆ.’

ಜಗನ್ನಾಥ ಪಂಚೆಯನ್ನು ಮೇಲೆತ್ತಿ ಕಟ್ಟಿ ಅವರಸರಿಂದ ನರಹರಿರಾಯರನ್ನು ನೋಡಿದ. ನರಹರಿರಾಯರು ತುಂಬ ರಗಳೆ ಮಾಡಿಕೊಳ್ಳುತ್ತ ಎರಡು ಕಿಸೆಯನ್ನೂ ಹುಡುಕುತ್ತಿದ್ದರು. ಜಗನ್ನಾಥನಿಗೆ ಏನೆಂದು ಹೊಳೆಯಲಿಲ್ಲ. ಕೊನೆಗೆ ನೂರೊಂದು ಚೀಟಿಗಳ ನಡುವಿನಿಂದ ನರಹರಿರಾಯರು ಒಂದು ಕಾಗದ ತೆಗೆದು ತೋರಿಸಿದರು. ಮಾತಾಡುವುದೇ ಅಪರಾಧವೇನೊ ಎನ್ನುವ ರೀತಿಯಲ್ಲಿ ಹೇಳಿದರು:

‘ನಿಮ್ಮ ತಂದೆಯವರ ಕಾಲದಲ್ಲಿ ಮಾಡಿದ ಸಾಲ ತೀರಿಸಿಲ್ಲಾಂತ ನಿಮಗೆ ಬೇಜಾರಾಗಿ ಹೀಗೆ ಬರ‍್ದಿರಬಹುದು ಅನ್ನಿಸ್ತು. ನಾನೇನು ಮಾಡ್ಲಿ ಹೇಳಿ? ಐದು ಮಕ್ಕಳಿಗೆ ಮದುವೆ ಮಾಡೋದರಲ್ಲಿ ಸುಣ್ಣ ಆದೆ. ಈ ಸಾರಿ ಫಸಲು ಕೈಗೆ ಹತ್ಲಿಲ್ಲ.’

ಜಗನ್ನಾಥನಿಗೆ ಕೂಡಲೇ ನರಹರಿರಾಯರ ಮುಖದಲ್ಲಿನ ಕಾತರದ ಕಾರಣ ಹೊಳೆಯಿತು. ಪ್ರಾಯಶಃ ತಾನು ನೂರೋ ನೂರೈವತ್ತೊ ಅಂಥ ಕಾಗದ ಬರೆಯುವಾಗ ಸಾಕಷ್ಟು ಸಮಾಧಾನದಿಂದ ವಿವರಿಸದೇ ಇರಬಹುದು:

‘ಛೆ ಛೆ ಇಲ್ಲ ನರಹರಿರಾಯರೆ. ನೀವು ಮಾಡಿರೋ ಸಾಲಾನ್ನ ಹಿಂದಕ್ಕೆ ಕೊಡಬೇಕಾಗಿಲ್ಲಾಂತ್ಲೇ ನಾನು ಬರೆದಿರೋದು. ನಮ್ಮ ಅಪ್ಪ, ಆಮೇಲೆ ನಮ್ಮ ರೈಟರು ನಡಸ್ತಾ ಇದ್ರಲ್ಲ ಈ ಸಾಲಾ ಕೊಡೋ ವ್ಯವಹಾರ, ಆಮೇಲೆ ಬಡ್ಡಿ ವಸೂಲು ಮಾಡೋದು, ಮಂಜುನಾಥನಿಗೆ ಹುಯ್ಲು ಕೊಡೋದು ಇವೆಲ್ಲ ನನಗೆ ಇಷ್ಟವಿಲ್ಲ. ಹೀಗೇನೇ ಉಳಿದವರಿಗೂ ನಾನು ಬರ್ದಿದೀನಿ. ಮನೇಗೆ ಹೋಗಿರಿ – ಆಮೇಲೆ ಮಾತಾಡೋಣಂತೆ.’

ನರಹರಿರಾಯರ ದೈನ್ಯದಿಂದ ತುಂಬಿದ ಮುಖದಲ್ಲಿ ಜಗನ್ನಾಥನ ಮಾತಿನ ಅರ್ಥ ಆದಂತೆ ಕಾಣಲಿಲ್ಲ; ಹಲ್ಲುಗಳು ಬಿದ್ದ ಬಾಯಿ ನಗಬೇಕೆಂದು ನಕ್ಕಿತು – ಅಷ್ಟೆ. ಕೊಡೆ ಚೀಲಗಳನ್ನು ಒಟ್ಟಾಗಿ ಹಿಡಿದು ಕೈ ಮುಗಿದು ಲೋಕಾಭಿರಾಮದ ಮಾತು ಹುಡುಕುತ್ತ ಹಾಗೇ ನಿಂತರು. ಜಗನ್ನಾಥ ಮನೆಗೆ ಹೋಗಿ ವಿಶ್ರಮಿಸಿಕೊಳ್ಳಿ ಎಂದು ಉಪಚಾರ ಹೇಳಿ ಹೊರಟುಬಿಟ್ಟ. ಪ್ರಾಮಿಸರಿ ನೋಟುಗಳನ್ನೆಲ್ಲ ಹರಿದು ಹಾಕುವಾಗಲೇ ಜಗನ್ನಾಥ ಯೋಚಿಸಿದ್ದ : ಸಾಲದ ಸಂಬಂಧವನ್ನು ಕಡಿದುಹಾಕಿಕೊಳ್ಳುವಾಗ ಈ ಜನರ ಜೊತೆಗೆ ತನಗಿದ್ದ ಮುಖ್ಯ ಕೊಂಡಿಯನ್ನು ಕಿತ್ತಂತೆ. ಬೇರೆ ಏನನ್ನೊ ಸೃಷ್ಟಿಸಿಕೊಳ್ಳಬೇಕು. ಅದಕ್ಕೆ ಹುಡುಕಬೇಕು. ಚಿಕ್ಕಿ ಕೊಟ್ಟ ಕಾಫಿಯನ್ನು ಕುಡಿಯುತ್ತ ನರಹರಿರಾಯರು ತಬ್ಬಿಬ್ಬಾಗಿ ಯೋಚಿಸುತ್ತಾರೆ. ಸಾವಿರಾರು ರೂಪಾಯಿಯ ಸಾಲವನ್ನು ಜಗನ್ನಾಥ ಯಾಕೆ ಬಿಟ್ಟ? ಮುಂದೆ ಸಾಲ ಬೇಕಾದರೆ ಏನು ಗತಿ? ಚಿಕ್ಕಿಯೂ ಕಾತರಳಾಗುತ್ತಾಳೆ. ತನ್ನ ದಿಂಬಿನ ಕೆಳಗೆ ಗೊತ್ತಾಗದಂತೆ ಇನ್ನೊಂದು ಮಂತ್ರಿಸಿದ ತಾಯಿತ ಇಡಿಸುತ್ತಾಳೆ. ಇನ್ನಷ್ಟು ಹರಕೆ ಹೇಳಿಕೊಳ್ಳುತ್ತಾಳೆ. ತಾನು ದೇವಸ್ಥಾನದ ಧರ್ಮದಶಿತ್ವಕ್ಕೆ ರಾಜೀನಾಮೆ ಕೊಟ್ಟದ್ದು ಅವಳಿಗೆ ತಿಳಿದಿದೆ. ಊರಲ್ಲೆಲ್ಲ ಗುಸುಗುಸು ಹಬ್ಬಿದೆ. ಮಂಜುನಾಥನ ದರ್ಶನಕ್ಕೆಂದು ರಾಷ್ಟ್ರಪತಿಗಳು ಬಂದಿದ್ದಾಗ ಜಗನ್ನಾಥನಿಗೆ ಅವರನ್ನು ನೋಡಲು ಆಮಂತ್ರಣ ಹೋಯಿತು. ಚಿಕ್ಕಿಗೆ ಸಡಗರ. ಆದರೆ ತಾನು ಬರುವುದಿಲ್ಲವೆಂದು ಜಗನ್ನಾಥ ಹೇಳಿಕಳುಹಿಸಿದ್ದು ಕೇಳಿ ಅವಳು ಕಂಗಾಲಾಗಿದ್ದಳು. ಅವತ್ತೇ ಅವನು ತನ್ನ ಧರ್ಮದರ್ಶಿತ್ವಕ್ಕೆ ರಾಜೀನಾಮೆ ಕೊಟ್ಟಿದ್ದ.

ಜಗನ್ನಾಥ ವೇಗವಾಗಿ ಗುಡ್ಡ ಇಳಿದು ರಸ್ತೆ ಸೇರಿದ. ಫರ್ಲಾಂಗು ನಡೆದರೆ ಪೇಟೆ ಪ್ರಾರಂಭವಾಗುತ್ತದೆ. ಟೋಲ್‌ಗೇಟಿನಿಂದ ಬೇರೊಂದು ವಾಸನೆಯ ಪ್ರಪಂಚ. ದೋಸೆ ವಾಸನೆಯ ಹೊಗೆ ತುಂಬಿದ ಹೋಟೆಲುಗಳು. ನಡೆಯುವವರ ಮುಖಗಳನ್ನು ಉದ್ದವೊ ಅಗಲವೊ ಮಾಡುವ ನಿಲುವುಗನ್ನಡಿಗಳಿದ್ದ ಕ್ಷೌರಿಕರ ಅಂಗಡಿಗಳು. ಜಗನ್ನಾಥ ಹೆಚ್ಚಾಗಿ ಆಕಡೆ ಈಕಡೆ ನೋಡದೆ ನಡೆದ. ಯಾರಾದರೂ ಎದ್ದು ನಿಲ್ಲುತ್ತಾರೆ. ಕುಶಲ ಕೇಳುತ್ತಾರೆ. ಏನು ಕಾರು ಬಿಟ್ಟು ನಡದೇ ಬಂದಿರಲ್ಲ ಎನ್ನುತ್ತಾರೆ. ಸುಮ್ಮನೇ ನಿಲ್ಲುತ್ತಾರೆ. ಅಥವಾ ಅಷ್ಟು ದೂರ ವಿನಾಕಾರಣ ಜೊತೆಗೆ ನಡೆದು ಬರುತ್ತಾರೆ. ಇಲ್ಲವಾದರೆ ತಾನೇನು ತಿಳಿಯುತ್ತೇನೊ ಎಂದು ಸಂಕೋಚ ಪಡುತ್ತಾರೆ. ಏನು ದೇವರ ದರ್ಶನಕ್ಕೆ ಹೊರಟದ್ದೊ ಎಂದು ಎಲ್ಲರೂ ಕೇಳಿಯೇ ಕೇಳುತ್ತಾರೆ.

ಜಗನ್ನಾಥ ಒಕ್ಕಲಿಗರ ವಿದ್ಯಾರ್ಥಿನಿಲಯ ದಾಟಿ ಹೋದ. ಅದರ ಬಲಕ್ಕೆ ತಾನು ಓದಿದ ಶ್ರೀ ಮಂಜುನಾಥ ಕೃಪಾಪೋಷಿತ ಹೈಸ್ಕೂಲು. ಯಾರೋ ಹುಡುಗರು ವಾಲಿಬಾಲ್ ಆಡುತ್ತಿದ್ದರು. ಈಗಲೂ ಹೈಸ್ಕೂಲು ಬೆಳೆದಿಲ್ಲ – ಎರಡು ರೂಮು ಹೆಚ್ಚಾಗಿರಬಹುದು ಅಷ್ಟೆ. ನಿಮ್ಮ ತಾಯಿಯ ಹೆಸರಿನಲ್ಲಿ ಒಂದು ವಿಂಗ್ ಕಟ್ಟಿಸಿಕೊಡಿ ಎಂದು ವಾರ ಹಿಂದೆ ಊರಿನ ಎಂ.ಎಲ್.ಎ. ಗುರಪ್ಪಗೌಡರು ಒತ್ತಾಯ ಮಾಡಿದರು. ಜಗನ್ನಾಥ ‘ನೋಡೋಣ’ ಎಂದಿದ್ದ. ಮಂಜುನಾಥನ ದರ್ಶನಕ್ಕೆ ರಾಷ್ಟ್ರಪತಿಗಳು ಬರುತ್ತಾರೆಂದು ರಸ್ತೆಯ ಮೇಲೆ ಕೆಂಪುಮಣ್ಣು ಹಾಕಿಸಲು ಮಾಡಿದ ಖರ್ಚು ದುರ್ವ್ಯಯವಲ್ಲವೇ ಎಂದು ಅವರ ಹತ್ತಿರ ವಾದಿಸಲು ಹೋಗಿ ಸುಮ್ಮನಾಗಿದ್ದ. ಹೈಸ್ಕೂಲಿನ ಮೇಲೆ ಇನ್ನೊಂದು ಗುಡ್ಡದಲ್ಲಿ ಟಿ.ಬಿ. ಹಿಂದೊಮ್ಮೆ ಗಾಂಧಿ ಬಂದಾಗ ಅಲ್ಲಿ ಇಳಿಸಲು ವ್ಯವಸ್ಥೆ ಮಾಡಿದ್ದರಂತೆ. ಆದರೆ ಗಾಂಧಿ ಬಂದವರೆ ಸೀದ ಹೊಲೆಯರ ಕೇರಿಗೆ ಹೋದರಂತೆ. ಆಗ ಜಗನ್ನಾಥನ ತಂದೆಯವರೂ ಊರಿನ ಮುಖಂಡರಾಗಿದ್ದರಿಂದ ಹೊಲೆಯರ ಕೇರಿಗೆ ಹೋಗಬೇಕಗಿ ಬಂತಂತೆ. ಆಮೇಲೆ ಪಂಚಗವ್ಯ ಮಾಡಿಸಿಕೊಂಡರಂತೆ. ಶ್ರೀಪತಿರಾಯರಿಂದ ಕೇಳಿದ ಕಥೆ, ಗಾಂಧಿಯೊಬ್ಬರು ಮಂಜುನಾಥನ ದರ್ಶನ ಮಾಡಲಿಲ್ಲ – ಅಷ್ಟೆ. ಈಗ ದೇವಸ್ಥಾನದ ಪ್ರಸಾದ ಪಡೆಯದೇ ಹೋದ ಮಂತ್ರಿಯಿಲ್ಲ.

ಇನ್ನು ಮುಂದೆ ಪೇಟೆ ನಾರುವ ನೂರು ಬೀದಿಗಳಾಗುತ್ತವೆ. ತಗ್ಗಿನ ಪ್ರದೇಶದಲ್ಲಿ ಪೇಟೆ. ಶ್ರೀ ಮಂಜುನಾಥ ಸ್ವಾಮಿಯಿಂದಾಗಿ ಹುಟ್ಟಿಕೊಂಡದ್ದು, ಅನಾಮತ್ತಾಗಿ ಎತ್ತೆತ್ತಲೋ ಬೆಳೆದದ್ದು. ಬೀದಿಗಳು ತಿರುಗುವಲ್ಲಿ ಉಚ್ಚೆಯ ವಾಸನೆ. ಗೋಡೆಗಳ ಮೇಲೆ ಅದೆಷ್ಟೋ ಕಾಲದಿಂದ ಇರುವ ಲಿವರ್‌ಕ್ಯೂರ್‌ಜಾಹೀರಾತು. ಗುರಪ್ಪ ಗೌಡರಿಗೆ ಓಟು ಕೊಡಿ ಎನ್ನುವ ಈಚಿನ ಬರಹ. ಅಂಗಡಿಗಳ ಎದುರು ಓಡಾಡುವ ರೈತರು. ದೀವರ ಹೆಂಗಸರು. ಮೊಣಕಾಲಿನ ತನಕ ಸೀರೆ, ಕಿವಿಯಲ್ಲಿ ಬುಗುಡಿ, ಮೂಗಿನಲ್ಲಿ ಮೂಗುತಿ, ಒಂದು ಹೊರೆ ಹೂ ಮುಡಿದು ಬಿಗಿಯಾಗಿ ಜಡೆ ಹಾಕಿದ ತಲೆ. ದೇವಸ್ಥಾನದಲ್ಲಿ ಮದುವೆಗೆಂದೊ, ಭೂತರಾಯನಲ್ಲಿ ನಿಮಿತ್ಯ ಕೇಳಲೆಂದೊ, ಸೀರೆ ರವಿಕೆ ಬಟ್ಟೆ ಕೊಳ್ಳಲೆಂದೂ – ಗಾಡಿಯಲ್ಲಿ ಬಂದು ಬಹಳ ಸಂಭ್ರಮದಿಂದ ಪೇಟೆ ಸುತ್ತುವ ಹಳ್ಳಿಯ ಜನ. ಉಸುರುಬುರುಡೆ ಬೇಕೂಂತ ಒಬ್ಬ ಹುಡುಗ ತಾಯಿಯನ್ನು ಕಾಡುತ್ತಿದ್ದ – ಇನ್ನೊಬ್ಬ ಹುಡುಗನ ಬಾಯಲ್ಲಿದ್ದ ಬೆಲೂನು ನೋಡಿ. ಎಲ್ಲ ಮುಗಿದ ಮೇಲೆ ಹೋಟೆಲಲ್ಲಿ ಬಜೆ ತಿಂದು ಕಾಫಿ ಕುಡಿದು, ಇನ್ನಷ್ಟು ಬಜೆ ಕಟ್ಟಿಸಿಕೊಂಡು ಹೋಗುತ್ತಾರೆ. ಇಂಗ್ಲೆಂಡಲ್ಲಿ ಐದು ವರ್ಷಗಳಿದ್ದರೂ ಜಗನ್ನಾಥನಿಗೆ ಏನೂ ಮರೆತಿಲ್ಲ. ಹಾಗಾದರೆ ಬದಲಾವಣೆಯಾಗಿಯೇ ಇಲ್ಲವೆ? ಅಥವಾ ನನಗೆ ಕಾಣಿಸುತ್ತಿಲ್ಲವೆ?

ಎಲ್ಲಿ ತಮ್ಮನ್ನು ನೋಡುವನೊ, ನೋಡಿದರೆ ಎದ್ದು ನಿಲ್ಲಬೇಕೊ ಎಂದು ಅಂಗಡಿಗಳಲ್ಲಿ ಕೂತವರಿಗೆ ಅನುಮಾನ. ಅರ್ಜೆಂಟಲ್ಲಿದ್ದಂತೆ ಜಗನ್ನಾಥ ನಡೆದ. ಅಲ್ಲೊಂದು ಇಲ್ಲೊಂದು ಟೈಟ್ ಪ್ಯಾಂಟುಗಳೂ ಕಾಣುತ್ತಾವೆ. ದೇವರ ದರ್ಶನಕ್ಕೆಂದು ಬಂದ ಯಾತ್ರಿಕರ ಮಕ್ಕಳಿರಬಹುದು. ಆದರೆ ಅಂಗಡಿಯ ಬೆಂಚಿನ ಮೇಲೆ ಕೂತ ಇವರೆಲ್ಲ ಬಲು ಹಳಬರೇ. ಬೆಳಿಗ್ಗೆ ತಿಂದ ಅವಲಕ್ಕಿಯನ್ನೊ, ದೋಸೆಯನ್ನೊ ಜೀರ್ಣಿಸಿಕೊಳ್ಳುತ್ತಾ ಕೂತವರು. ಹೊಗೆ ತುಂಬಿದ ಒಲೆಯೆದುರು ಇವರ ಹೆಂಗಸರು ಇಡೀ ದಿನ ಕೂತಿರುತ್ತಾರೆ. ಇಲ್ಲಿ ಪೇಟೆ ಬೀದಿಯಲ್ಲಿ ಪರಸ್ಪರ ಸಾನ್ನಿಧ್ಯವನ್ನು ಅನುಭವಿಸುತ್ತ ಇವರು ಮೌನವಾಗಿ ಕೂತಿರುತ್ತಾರೆ, ದೇವರ ದರ್ಶನಕ್ಕೆಂದು ನಿತ್ಯ ಬರುವ ಹೊಸ ಮುಖಗಳನ್ನು ನೋಡುತ್ತ. ಹೀಗೆ ಪ್ರತಿದಿನ ಒಬ್ಬರಿಗೊಬ್ಬರು ಹಾಜರಿ ಹಾಕಿ ಊಟದ ಹೊತ್ತಿಗೆ ಮನೆಗೆ – ಅಥವಾ ಮನೆಯಲ್ಲಿ ತೊಂದರೆಯಿದ್ದಾಗ ದೇವಸ್ಥಾನಕ್ಕೆ – ಊಟಕ್ಕೆ ಹೋಗುತ್ತಾರೆ. ಒಟ್ಟು ಮಂಜುನಾಥನನ್ನು ನಂಬಿ ಬದುಕುತ್ತಾರೆ. ಯಾವುದೋ ಹಳ್ಳಿಯಲ್ಲಿ ಇವರ ಗದ್ದೆಯಿಂದ, ಅದರ ಕೆಸರನ್ನು ತುಳಿದು ಯಾವುದೋ ರೈತ ಉಳುತ್ತಾನೆ.

ಭೂತರಾಯನಿಗೆ ಹೆದರಿ ಇವರಿಗೆ ಗೇಣಿ ಕೊಡುತ್ತಾನೆ. ಕುಂಬಳಕಾಯಿ, ಸೌತೆಕಾಯಿ, ಬಾಳೆಗೊನೆ ಕೊಡುತ್ತಾನೆ. ಹೇಗೋ ಉದರಂಭರಣ ನಡೆಯುತ್ತದೆ. ಯಾರೋ ಹೆರುತ್ತಾರೆ, ಯಾರೋ ಸಾಯುತ್ತಾರೆ. ವರ್ಷಕ್ಕೆ ಕಡಿಮೆಯೆಂದರೆ ನಾಲ್ಕೈದು ವೃದ್ಧಿ, ನಾಲ್ಕೈದು ಸೂತಕ, ಹತ್ತಾರು ಮದುವೆ- ಅಂತೂ ಕಾಲ ಚಲಿಸುತ್ತದೆ. ಕೂದಲು ನೆರೆಯುತ್ತದೆ, ಹಲ್ಲು ಬೀಳುತ್ತದೆ.

ಜಗನ್ನಾಥನಿಗೆ ಭಯವಾಯಿತು. ಮಾರ್ಗರೆಟ್ಟಿಗೆ ಮನಸ್ಸಿನಲ್ಲೆ ಬರೆಯುತ್ತಿದ್ದ ಕಾಗದದಲ್ಲಿ ಹೇಳಿದ: Life has ceased to be creative here. ಮಂಜುನಾಥ ಸ್ವಾಮಿ ಈ ಜೀವನಕ್ರಮದ ಕ್ಯಾನ್ಸರ್. ಈ ಪೇಟೆಯೊಂದು ಅವನಿಗಾಗಿ ಬೆಳೆದ ಕ್ಯಾನ್ಸರ್‌.

ಶ್ರೀ ಮಂಜುನಾಥ ಬಸ್ ಸರ್ವಿಸ್ ಕಂಪನಿಯ ಫಸ್ಟ್ ಬಸ್ ಶಿವಮೊಗ್ಗದಿಂದ ಬಂದು ಧೂಳೆಬ್ಬಿಸುತ್ತ ಬೀದಿಯ ತುದಿಯಲ್ಲಿ ಹೋಗಿ ನಿಂತಿತು. ಹೀಗೆ ಪ್ರತಿ ಬೀದಿಯ ತುದಿಯಲ್ಲೂ ನಿಲ್ಲುತ್ತದೆ; ಜುಟ್ಟು ಬಿಟ್ಟು ಪಂಚೆ ಹೊದ್ದ ಬ್ರಾಹ್ಮಣ ಹುಡುಗರು ಮುತ್ತುತ್ತಾರೆ. ಯಾತ್ರಿಕರನ್ನು ಕಾಡುತ್ತಾರೆ; ನಮ್ಮ ಮನೆಗೆ ಬನ್ನಿ, ನಮ್ಮ ಮನೆಗೆ ಬನ್ನಿ. ಕನ್ನಡ ಅರ್ಥವಾಗದಂತೆ ಕಂಡ ಯಾತ್ರಿಕರಿಗೆ ಹಿಂದಿಯಲ್ಲಿ ಕಾಟ. ಯಾತ್ರಿಕರಿಗೆ ಉಳಿದುಕೊಳ್ಳಲು ಜಗನ್ನಾಥನ ತಂದೆ ಕಟ್ಟಿಸಿಕೊಟ್ಟ ಧರ್ಮಛತ್ರವಿದೆ. ಆದರೆ ಅದು ಸಾಲದಾಗುತ್ತದೆ. ಎಷ್ಟು, ಏನು, ವ್ಯವಹಾರದ ಮಾತಾದ ಮೇಲೆ ಹುಡುಗರು ಯಾತ್ರಿಕರ ಟ್ರಂಕ್ ಹೊರುತ್ತಾರೆ. ಹೊಳೆಯಲ್ಲಿ ಸ್ನಾನ, ದೇವರ ದರ್ಶನ, ಪಿತೃಗಳಿಗೆ ತರ್ಪಣ, ಪುಣ್ಯಸ್ಥಳಗಳ ದರ್ಶನ, ಗುಡ್ಡದ ಮೇಲಿನ ಭೂತರಾಯನಿಗೆ ಹರಕೆಯ ಸಲ್ಲಿಕೆ, ಹಿಂದಕ್ಕೆ ಹೋಗುವ ರಿಸರ್ವೇಶನ್ ಇಷ್ಟಕ್ಕೂ ಕಂಟ್ರಾಕ್ಟು ಹೊತ್ತು ಯಾತ್ರಿಕನನ್ನು ತಮ್ಮ ಮನೆಗೆ ಯಾರೋ ಸಾಗಿಸಿಕೊಂಡು ಹೋಗುತ್ತಾರೆ. ಖದೀಮ ಹುಡುಗರು – ಒಂದೇ ಮನೆಯವರು ಎರಡು ಮನೆಯವರಂತೆ ಪೈಪೋಟಿ ನಡೆಸಿ ಯಾತ್ರಿಕರನ್ನು ವಂಚಿಸುವುದೂ ಉಂಟು. ಹೊಗೆ ಕಟ್ಟಿದ ಮಹಡಿಯ ಮನೆಗಳಿಗೆ ಯಾತ್ರಿಕರು ಮಕ್ಕಳು ಮರಿಕಟ್ಟಿಕೊಂಡು ಹೋಗುತ್ತಾರೆ. ಒಂದೆರಡು ದಿನ ಇಳಿದುಕೊಳ್ಳುತ್ತಾರೆ. ಹೀಗೆ ಪ್ರತಿನಿತ್ಯ ಹೊಸ ಮುಖಗಳನ್ನು ನೋಡುತ್ತಲೇ ಇರುವ ಬಲು ಹಳೆಯ ಪೇಟೆ ಇದು.

‘ನಮಸ್ಕಾರ ಜಗನ್ನಾಥರಾಯರಿಗೆ, ದೇವರ ದರ್ಶನಕ್ಕೆಂದು ಸವಾರಿ ಹೊರಟಂತಿದೆ.’

ಜಗನ್ನಾಥ ಬಲಗಡೆ ತಿರುಗಿ ನೋಡಿದ. ತನ್ನನ್ನು ಹಂಗಿಸಲೆಂದು ಹೀಗೆ ಕೇಳುತ್ತಾರೊ, ಅಥವಾ ಬರಿ ಅಭ್ಯಾಸವೊ? ಕೈ ಮುಗಿದು ನಗುತ್ತ ನಿಂತಿದ್ದವರು ಊರಿನ ಪ್ರಖ್ಯಾತ ಪಂಚಾಂಗದ ಕರ್ತೃಗಳಾದ ನಾಗರಾಜ ಜೋಯಿಸರು. ರಾಷ್ಟ್ರಪತಿಗಳು ಬಂದಾಗ ಸಂಸ್ಕೃತದಲ್ಲಿ ಅವರ ಗುಣಗಾನ ಮಾಡಿದ ಶ್ಲೋಕಗಳನ್ನು ರಚಿಸಿ ಪ್ರಿಂಟ್ ಮಾಡಿಸಿ ಕೊಟ್ಟವರು. ಅವರ ಮಗ ಶಿವಮೊಗ್ಗದಲ್ಲಿ ಲಾಯರು. ಹಳೆಯ ಕಾಲದ ರೀತಿಯಲ್ಲೆ ಲೆಖ್ಖ ಹಾಕಲು ಒಪ್ಪದೆ ಗ್ರಹಗತಿಯನ್ನು ಆಂಗ್ಲರ ಪ್ರಕಾರ ನಿರ್ಣಯ ಮಾಡಿದರೆಂದು ಅವರ ಮೇಲೆ ಹಿಂದೊಮ್ಮೆ ಮಠದ ಸ್ವಾಮಿಗಳು ಬಹಿಷ್ಕಾರ ಹಾಕಿದ್ದನ್ನು, ಅದರ ವಿರುದ್ಧ ತಾನು ಹೋರಾಡಿದ್ದನ್ನು, ಸಂಸ್ಕೃತದಲ್ಲಿ ತಾನು ಲೇವಡಿ ಮಾಡಿ ಅವರ ಮೇಲೆ ಶ್ಲೋಕ ರಚಿಸಿದ್ದನ್ನು ಅವರು ಯಾವತ್ತೂ ತನಗೆ ಹಲ್ಲು ಬಿಟ್ಟು ರಸವತ್ತಾಗಿ ವರ್ಣಿಸುತ್ತಾರೆ. ತಾನು ಆಧುನಿಕ, ಆದ್ದರಿಂದ ಇದು ಹಿಡಿಸುತ್ತದೆ ಎಂದು ಘಾಟಿ ಬುದ್ದಿಯ ಜೋಯಿಸರಿಗೆ ಗೊತ್ತು. ದೇವರಿಲ್ಲವೆಂದು ವಾದಿಸಲು ಬೇಕಾದರೂ ನಾಗರಾಜ ಜೋಯಿಸರಿಗೆ ಬರುತ್ತದೆ. ಮಂಜುನಾಥ ಸ್ವಾಮಿಯ ಮುಖ್ಯ ಪೂಜಾರಿಗಳಾದ ಸೀತಾರಾಮಯ್ಯ ಇವರ ದಾಯಾದಿಗಳು; ಹಾಗಾಗಿ ಸಹಜವಾಗಿ ಇವರಿಗೆ ಹೊಟ್ಟೆಯುರಿ.

ಒತ್ತಾಯ ಮಾಡಿ ಕರೆದರೆಂದು ಜಗನ್ನಾಥ ಅವರ ಮನೆಯ ಚಿಟ್ಟೆಯೇರಿ ಕೂತ. ನಾಗರಾಜ ಜೋಯಿಸರ ಕಿರಿಯ ಮಗ ಒಬ್ಬನೇ ಹಿಂದಕ್ಕೆ ಬಂದ. ಅವನ ಜೊತೆ ಯಾತ್ರಿಕರಿರಲಿಲ್ಲ. ಜೋಯಿಸರ ಮುಖ ಪೆಚ್ಚಾಯಿತು. ಬಳ್ಳಾರಿಯಿಂದ ಒಂದು ಕುಟುಂಬ ಬಂದದ್ದು ಉಡುಪರ ಮನೆಗೆ ಹೋಯಿತೆಂದು ಮಗ ಹೇಳಿದ. ಆಗಲಿ, ಸೆಕೆಂಡ್ ಬಸ್ಸಿಗೆ ಕಾದಿರು ಎಂದು ಜೋಯಿಸರು ಸಮಾಧಾನ ಹೇಳಿ ಜಗನ್ನಾಥನಿಗೆ ಒಳಗಿನಿಂದ ಕುರ್ಚಿ ತರಿಸುತ್ತೇನೆ ಎಂದರು. ಬೇಡ ಚಾಪೆಯೇ ಸಾಕು ಎಂದ ಜಗನ್ನಾಥ. ಕಾಫಿ ಖಂಡಿತ ಬೇಡವೆಂದ. ಶಿವಮೊಗ್ಗದಲ್ಲಿರುವ ನಿಮ್ಮ ಹಿರಿಯ ಮಗನಿಗೆ ಪ್ರಾಕ್ಟೀಸು ಹೇಗಿದೆ ಎಂದು ವಿಚಾರಿಸಿದ. ಈ ಪ್ರಾಂತದಲ್ಲೆಲ್ಲ ಭೂತರಾಯನಿಗೇ ಹುಯ್ಲು ಕೊಡೋದಲ್ವ. ಲಾಯರ್‌ಗೆ ಪ್ರಾಕ್ಟೀಸ್ ಎಲ್ಲಿಂದಾಗಬೇಕು ಎಂದು ಜೋಯಿಸರು ದೂರುವ ಸ್ವರದಲ್ಲಿ ಹೇಳಿದರು. ಹೊಳೆಯುವ ಕೆಂಪು ಒಂಟಿಗಳ, ಕೆಂಪು ಹಲ್ಲಿನ ಮುಖವನ್ನು ಹತ್ತಿರ ತಂದು ಪಕ್ಕದಲ್ಲೆ ಕೂತರು. ಬಹಳ ಆಪ್ತವಾಗಿ ಮಾತು ಪ್ರಾರಂಭಿಸಿದರು. ಇವತ್ತು ಪ್ರಶಸ್ತವಾದ ದಿನವಿರಬೇಕು; ನುಣ್ಣಗೆ ಮುಖ ತಲೆ ಬೋಳಿಸಿಕೊಂಡಿದ್ದಾರೆ. ಬಂಗಾರದಲ್ಲಿ ಕಟ್ಟಿಸಿದ ರುದ್ರಾಕ್ಷಿ ಸರ ಕೊರಳಿನಲ್ಲಿದೆ. ಯಾತ್ರಿಕರನ್ನು ಆಕರ್ಷಿಸುವ ಮುಖ್ಯ ಸಾಧನ – ಈ ಒಂಟಿ, ಈ ಬಂಗಾರ, ಈ ಮಾತಿನ ಬೆಡಗು, ಹತ್ತಿರ ಕೂತು ಮಾತಾಡುವ ಈ ಆಪ್ತತೆ.

‘ಶ್ರೀ ಮಂಜುನಾಥನನ್ನು ಪರಶುರಾಮ ಸ್ಥಾಪಿಸಿದ್ದೆಂಬುದು ನಿಜವಲ್ಲ ಜಗನ್ನಾಥರಾಯರೆ. ಯಾರಾದರೂ ಸಂಶೋಧಕರು ಲಿಂಗವನ್ನು ಕಿತ್ತು ನೋಡಿದರೆ ಗೊತ್ತಾಗುತ್ತೆ. ಈಗಲೇ ಬಿರಕು ಸಹ ಬಿಟ್ಟಿದೆ= ಇರೋದು ಮೂರೇ ಇಂಚು ಆಳ. ಯಾಕೆ ಗೊತ್ತ? ಯದುತೀರ್ಥ ಸ್ವಾಮಿಗಳು ಅದನ್ನು ಸ್ಥಾಪಿಸಿದ್ದು. ನನ್ನ ಹತ್ರ ಕೇಳಿ ಹೇಳ್ತೇನೆ; ದಾಯಾದಿ ಮತ್ಸರಾಂತ ನನ್ನ ಮಾತನ್ನು ಯಾರೂ ಒಪ್ಪದಿರಬಹುದು…’

ನಾಗರಾಜ ಜೋಯಿಸರು ಇನ್ನಷ್ಟು ಹತ್ತಿರ ಸರಿದರು. ಕಿವಿಯಲ್ಲಿ ಇನ್ನಷ್ಟು ಗುಟ್ಟಾಗಿ ಕಣ್ಣುಗಳನ್ನು ಅರಳಿಸಿ ಹೇಳಿದರು :

‘ಅಲ್ಲ ಜಗನ್ನಾಥರಾಯರೆ, ನೀವು ಓದಿರೋವ್ರು ನಿಮಗೆ ಗೊತ್ತಾಗುತ್ತೆ. ಅದ್ವೈತ ಸಿದ್ಧಾಂತದಲ್ಲಿ ಭೂತದ ಪೂಜೆಗೆ ಜಾಗ ಇದೆಯ ಹೇಳಿ? ಈಗ ನಿಜವಾಗಿ ಪೂಜೆ ಸಲ್ಲೋದು ಯಾರಿಗೆ? ನಿಜ ಹೇಳಿ.’

ಜೋಯಿಸರ ಧ್ವನಿ ಇನ್ನಷ್ಟು ತಗ್ಗಿತು, ಕಣ್ಣುಗಳು ನಿಷ್ಠುರವಾಗಿ ಜಗನ್ನಾಥನನ್ನ ನೋಡಿದುವು:

‘ಹೇಳಿ. ಜನ ಹೆದರೋದು ಯಾರಿಗೆ? ರಾಷ್ಟ್ರಪತಿಗಳ ಪೂಜೆ ಸಹ ಸಂದದ್ದು ಯಾರಿಗೆ? ಮಂಜುನಾಥನಿಗೆ ಕೊಡೋ ಹುಯ್ಲನ್ನೆಲ್ಲ ಪಂಚಾಯ್ತಿ ಮಾಡೋದು ಯಾರು?’

ಜೋಯಿಸರು ಮೌನವಾಗಿ ಒಂದು ಕ್ಷಣ ಜಗನ್ನಾಥನನ್ನು ದುರುಗುಟ್ಟಿ ನೋಡಿದರು.

‘ಮಂಜುನಾಥನ ಹೆಸರಿನಲ್ಲಿ ಈ ಪೂಜೇ ಎಲ್ಲಾ ಸಲ್ಲೋದು ಭೂತರಾಯನಿಗೆ ಹೌದೋ ಅಲ್ಲವೋ? ಅವನಿಗೆ ಕೆಂಪನ್ನದ ಬಲಿಯಾಕೆ ಕೊಡೋದು ಹೇಳಿ? ಗಣಮಗ ಕೆಂಪು ಬಟ್ಟೆ ಯಾಕೆ ಉಡ್ತಾನೆ ಹೇಳಿ? ಮಂಜುನಾಥನ ಪ್ರಸಾರಾಂತ ಭೂತರಯ ಹಣೇಗೆ ಎದೇಗೆ ಹಚ್ಚಿಕೋತಾನಲ್ಲ ಈ ಕುಂಕುಮ ಇದು ಕೆಂಪಾಗಿರೋದಕ್ಕೆ ಅರ್ಥವೇನು ಹೇಳಿ. ವಿಭೂತಿಯಲ್ಲದೆ ಕುಂಕುಮ ಪ್ರಸಾದವಾರಿಗೋದಕ್ಕೆ ಅರ್ಥವೇನು ಹೇಳಿ.’

ಜೋಯಿಸರು ತಮ್ಮ ಹಣೆಯ ಮೇಲಿದ್ದ ಮಂಜುನಾಥ ಪ್ಲಸ್ ಭೂತರಾಯನ ಪ್ರಸಾದವಾದ ಕುಂಕುಮ ತೋರಿಸಿದರು. ಮತ್ತೆ ಮೌನವಾಗಿದ್ದು ತಾವೇ ಹೇಳಿದರು :

‘ಭೂತರಾಯನಿಗೆ ಆಗ್ತಾ ಇದ್ದದ್ದು ರಕ್ತದ ಬಲಿ. ಹಾಗಾದ್ರೆ ಪ್ರಶ್ನೆ ಈ ಮಂಜುನಾಥನಿಗೂ ಈ ಭೂತರಾಯನಿಗೂ ಏನು ಸಂಬಂಧಾಂತ.’

ಈಗ ಜೋಯಿಸರು ಚಾವಡಿಯ ಗೋಡೆಗೆ ನೇತು ಹಾಕಿದ್ದ ಮಂಜುನಾಥನ ಫೋಟೋ ತೋರಿಸಿದರು. ಮುಷ್ಟಿಗಾತ್ರದ ಲಿಂಗವನ್ನು ಮುಚ್ಚಿದ ಸೌಮ್ಯವಾದ ಮುಖ. ಈ ಮುಖದ ಮೇಲೆ ಒಂದು ಗೇಣುದ್ದದ ಬಂಗಾರದ ಕಿರೀಟ.

ಜಗನ್ನಾಥ ಚಿತ್ರವನ್ನೆ ನೋಡುತ್ತಿದ್ದುದನ್ನು ಗಮನಿಸಿದ ಜೋಯಿಸರು ಕಿರೀಟವನ್ನೆ ಉದಾಹರಣೆಗೆ ತೆಗೆದುಕೊಂಡರು.

‘ಈ ಕಿರೀಟಾನ್ನೆ ಉದಾಹರಣೆಗೆ ತಗೊಳ್ಳೋಣ. ನೀವು ಮಗುವಾಗಿದ್ದಾಗ ನಿಮಗೆ ಬಾಲಗ್ರಹ. ಮೂರು ದಿನ ನಿಮಗೆ ಧಾತು ತಪ್ಪಿತ್ತು. ನನ್ನ ತೊಡೆಯ ಮೇಲೇ ಮಲಗಿಸಿಕೊಂಡು ನಾನೇ ಮೃತ್ಯುಂಜಯ ಜಪ ಮಾಡಿದೆ. ಜೊತೆಗೆ ಸುಬ್ರಾಯ ಅಡಿಗರೂ ಇದ್ದರು – ಬೇಕಾದರೆ ಅವರನ್ನು ಕೇಳಿ. ಹೇಳ್ತಾರೆ. ಮೈತುಂಬ ಚಿಟಿಕಿ ಹಾಕಿದರೂ ನಿಮಗೆ ಎಚ್ಚರವಾಗಲಿಲ್ಲ. ಆಗ ನಿಮ್ಮ ತಾಯಿಗೆ ನಾನೇ ಹೇಳಿದೆ. ಮಂಜುನಾಥನಿಗೆ ಬಂಗಾರದ ಕಿರೀಟ ಮಾಡ್ಸಿಕೊಡ್ತೀನಿ ಅಂತ ಹರಕೆ ಹೇಳಿಕೊಳ್ಳಿ ಅಂತ. ದೇವಸ್ಥಾನದ ಅಭಿವೃದ್ಧಿ ಆಗಬಾರ್ದೂಂತ ಹೊಟ್ಟೆಕಿಚ್ಚು ನನಗಿದ್ದಿದ್ರೆ ಈ ಹರಕೆ ಹೇಳಿಕೊಳ್ಳಿ ಅಂತ ನಿಮ್ಮಮ್ಮನಿಗೆ ಹೇಳ್ತಿದ್ನ ನಾನು? ಯಾಕೆ ಹೇಳಕ್ಕೆ ಹೊರಟೇಂದ್ರೆ – ಮಂಜುನಾಥನ ತಲೇ ಮೇಲೆ ಈ ಕಿರೀಟ ಬಂದ್ರೂನೂ ನಿಮ್ಮ ಪ್ರಾಣ ಉಳಿಸೋಕೆ ಪೂಜೆ ಸಂದದ್ದು ಭೂತರಾಯನಿಗೇನೆ. ಅಂದರೆ ಮಂಜುನಾಥನ ಹೆಸರಲ್ಲಿ ಕೆಲಸ ಮಾಡೋದೆಲ್ಲ ಈ ಭೂತರಾಯನೇ. ಶ್ರೋತ್ರೀಯನಾದವನು ಈ ಭೂತರಾಯನಿಗೆ ಪೂಜೆ ಮಾಡೋದು ಸರಿಯೆ?’

ಕಿರೀಟವನ್ನೆ ಉದಾಹರಣೆಗೆ ತೆಗೆದುಕೊಂಡದ್ದರಿಂದ ಜಗನ್ನಾಥನ ತಾಯಿಯನ್ನೂ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದಂತಾಗಿ ಜೋಯಿಸರು ತಮ್ಮ ಮಾತಿನ ಭರಕ್ಕೆ ತಾವೇ ತಬ್ಬಿಬ್ಬಾದರು. ಮುಂದೇನು ಹೇಳುವುದು ಅವರಿಗೆ ತಿಳಿಯಲಿಲ್ಲ. ಏನೋ ಹೇಳ ಹೋಗಿ ಮತ್ತೇನೋ ಹೇಳಿದರು :

‘ಒಟ್ಟು ಜನರ ನಂಬಿಕೆ. ಇಡೀ ಭಾರತಕ್ಕೆಲ್ಲ ಈ ನಂಬಿಕೆ ಹಬ್ಬೇ ಇದ್ರೆ ರಾಷ್ಟ್ರಪತಿಗಳೂ ಇಲ್ಲಿಗೆ ಬರ್ತಿದ್ರೇನು? ಅವರಿಗೆ ಹೃದ್ಯೋಗದ ಭಯ. ಇಲ್ಲಿಂದ ಹಿಂದಕ್ಕೆ ಹೋಗುವಾದ ಅವರ ಮುಖ ಹೇಗೆ ಅರಳಿತ್ತು ನೋಡಿದ್ರ? ನನ್ನ ಸಂಸ್ಕೃತ ಕಾವ್ಯ ನೋಡಿ ಅವರಿಗೆ ಬಹಳ ಸಂತೋಷವಾಯ್ತು. ಕಟ್ಟು ಹಾಕಿಸಿಕೊಟ್ಟೆ. ವಿಮಾನದಲ್ಲಿ ತಗೊಂಡು ಹೋದ್ರು.’

ಜಗನ್ನಾಥನಿಗೆ ಒಳಗೊಳಗೇ ನಗು. ತಡೆದುಕೊಂಡು ಕೇಳಿದ :

‘ಮಂಜುನಾಥನಿಗೂ ಭೂತರಾಯನಿಗೂ ಏನೋ ಸಂಬಂಧ ಅಂದ್ರಲ್ಲ – ಅದೇನು ಹೇಳಿ.’

‘ಈ ಪ್ರದೇಶದ ಮೂಲನಿವಾಸಿಗಳಿದ್ದಾರಲ್ಲ – ಮಂಡೀ ಮೇಲೆ ಪಂಚೆಯುಡೋ ಜನ, ಕುರಿ ಕೋಳಿ ಕೊಯ್ದು ತಿನ್ನೋ ಜನ – ಅವರ ದೇವರು ಈ ಭೂತರಾಯ. ಬ್ರಾಹ್ಮಣ ಯತಿಗಳು ಈ ಭೂತರಾಯನ ಮೇಲೆ ಮಂಜುನಾಥನನ್ನ ಸ್ಥಾಪಿಸಿ ಈ ಪ್ರಾಂತದ ಮೂಲನಿವಾಸಿಗಳು ನಮಗೆ ನಡಕೊಳ್ಳೋ ಹಾಗೆ ಮಾಡಿದ್ರು.’

‘ಅದಕ್ಕೇ ಹಾಗಾದರೆ ಭೂತರಾಯ ಈಗ ಗೇಣಿದಾರರ ವಿರುದ್ಧಾನೇ ಎಲ್ಲಾ ತೀರ್ಪನ್ನೂ ಕೊಡೋದು ಅನ್ನಿ.’

ಜೋಯಿಸರು ಜಾಣರು; ಅವರಿಗೆ ಜಗನ್ನಾಥನ ಮಾತಿನ ಕೊಂಕು ಅರ್ಥವಾಗಿತ್ತು. ಆದರೂ ತನ್ನ ಮಾತು ಎತ್ತೆತ್ತಲೋ ಹರಿಯಿತೆಂದು ದಿಗಿಲಾಗಿ,

‘ಆದರೆ ಈ ದೇವರು ಬಲು ಕಾರ್ಣಿಕ, ಬಲು ಕಾರ್ಣಿಕ, ಪೂಜೆ ಮಾಡೋವರು ನಿಷ್ಠೆಯಿಂದ ಉಳಿಸಿಕೊಂಡು ಬರಬೇಕು ಅಷ್ಟೆ. ಮಂಜುನಾಥ ಬರೀ ನೆವ ಆಗಬಾರ್ದು ಅಂತ ನನ್ನ ಮಾತಿನ ತಾತ್ಪರ್ಯ, ಇನ್ನೇನಿಲ್ಲ.’

ಜೋಯಿಸರು ಜಾರಿಕೊಳ್ಳುತ್ತಿರುವುದನ್ನು ನೋಡಿ ಜಗನ್ನಾಥ ಎದ್ದು ನಿಂತ. ‘ಈ ಬಗ್ಗೆ ನೀವೊಂದು ಲೇಖನ ಬರೀಬೇಕು. ಶಾಸ್ತ್ರಿಗಳೇ’ ಎಂದ. ‘ಒಟ್ಟು ನಿಮ್ಮ ಪ್ರೋತ್ಸಾಹ ಬೇಕು. ನಾನು ಬರೆದ ಶ್ರೀ ಮಂಜುನಾಥ ಮಹಿಮೇನ್ನ ಪ್ರಕಟಿಸಿದವರು ನಿಮ್ಮ ತಾಯವರೆ. ಅದರದ್ದೊಂದು ಪ್ರತಿ ನಿಮಗೆ ಬೇಕೇನು – ಕೊಡಲ?’

‘ಬೇಡ, ಮನೇಲಿದೆ’ ಎಂದು ಜಗನ್ನಾಥ ಎದ್ದು ನಿಂತ. ‘ಕಾಫಿ ಕುಡೀದೇ ಹೊರಟುಬಿಟ್ರಲ್ಲ’ ಎಂದು ಜೋಯಿಸರು ಹೇಳಿದ್ದಕ್ಕೆ ‘ಛೆ ಪರವಾಗಿಲ್ಲ’ ಎಂದು ಬೀದಿಗಿಳಿದು ಮತ್ತೊಮ್ಮೆ ನಮಸ್ಕರಿಸಿ ನಡೆದ.

* * *

ಚಕ್ರವ್ಯೂಹದಂತಹ ಬೀದಿಗಳು. ಯಾವತ್ತೂ ಏನನ್ನೂ ಸೃಷ್ಟಿಸದವು. ಮಂಜುನಾಥನ ಮಹಿಮೆ ಬೆಳೆದಂತೆ ಒಂದಕ್ಕೊಂದರಂತೆ ಸೇರುತ್ತ ಬೆಳೆಯುತ್ತ ಹೋದ ಚರಂಡಿಗಳಿಲ್ಲದ ಬೀದಿಗಳು. ಹೊಲೆಯರು ಒಂದು ವಾರ ಸಾಕು, ಕುಕ್ಕೆಯಲ್ಲಿ ಹೇಲು ತುಂಬಿ ತಲೆಯ ಮೇಲೆ ಹೊರಲ್ಲ ಎನ್ನಲಿ – ಈ ಬೀದಿಗಳು ಎಷ್ಟು ನಾರಿಯಾವು ಎಂದರೆ ಮಂಜುನಾಥನ ಗರ್ಭಗುಡಿಯನ್ನೂ ದುರ್ಗಂಧ ಕವಿದೀತು. ಜಗನ್ನಾಥನ ಮೈ ಹೇಸಿಗೆಯಿಂದ ನಡುಗಿತು. ಬ್ರಾಹ್ಮಣರು, ವ್ಯಾಪಾರಿಗಳು ಇರುವ ಪೇಟೆಗಳಲ್ಲಿ ಒಂದೇ ಒಂದು ಸುಂದರವಾದ ವಸ್ತು ಸೃಷ್ಟಿಯಾಗುವುದಿಲ್ಲ  – ಯಾಕೆ? ಭಾರತೀಪುರದ ಹತ್ತು ಮೈಲುಗಳಾಚೆ ಕಲ್ಲುಮರಿಗೆ ಮಾಡುವವರಿದ್ದಾರೆ. ಗಂಧದಲ್ಲಿ ವಿಗ್ರಹ ಕೆತ್ತುವವರಿದ್ದಾರೆ. ಎರಡೇ ಎರಡು ಮೈಲುಗಳಾಚೆಯ ಹಳ್ಳಿಯಲ್ಲಿ ತೊಗಲು ಬೊಂಬೆಯಾಟ ಆಡುವವರಿದ್ದಾರೆ. ಆದರೆ ಭಾರತೀಪುರದ ಪೇಟೆಯಲ್ಲಿ ಯಾವ ಸೌಂದರ್ಯವೂ ಯಾವತ್ತೂ ಇರಲಿಲ್ಲ, ಯಾಕೆ, ಆಗೀಗ ಕಟ್ಟುವ ತೋರಣ ಬಿಟ್ಟು, ರಾಷ್ಟ್ರಪತಿಗಳು ಬಂದಾಗ ಚೆಲ್ಲಿದ ಆಮೇಲೆ ಕೆಸರಾದ ಕೆಮ್ಮಣ್ಣು ಬಿಟ್ಟು… ಜಗನ್ನಾಥ ಮಕ್ಕಳ ಹೇಲನ್ನು ತುಳಿಯದಂತೆ ಹುಷಾರಾಗಿ ನಡೆದು ಸ್ವಲ್ಪ ಅಗಲವಾಗಿದ್ದ ರಥಬೀದಿಯನ್ನು ಸೇರಿದ.

ಈ ಪೇಟೆಯ ಅತ್ಯುತ್ತಮ ಸೃಷ್ಟಿಯೆಂದರೆ ನಾಗರಾಜ ಜೋಯಿಸರ ಅನುಷ್ಟಪ್ ಛಂದಸ್ಸಿನ ಮಂಜುನಾಥ ಮಹಿಮೆಯಿರಬೇಕು. ಜಗನ್ನಾಥನಿಗೆ ನಗುಬಂತು. ಏನೇನೋ ಮಾತಾಡಿಬಿಟ್ಟೆನೆಂದು ಪ್ರಾಣಿ ಒದ್ದಾಡುತ್ತಿರಬೇಕು. ತನ್ನ ತಾಯಿ ಪ್ರಕಟಿಸಿದ್ದ ಎರಡಾಣೆ ಬೆಲೆಯ ಆ ಪುಸ್ತಕದಲ್ಲಿ ಜಗನ್ನಾಥನ ಪ್ರಾಣ ಉಳಿಸಿದ ಕಿರೀಟದ ವರ್ಣನೆಯಿತ್ತು; ಈ ಕಿರೀಟಧಾರಿಯಾದ ಶ್ರೀ ಮಂಜುನಾಥ ಬಾಲಕನಿಗೆ ಆಯುರಾರೋಗ್ಯ ಭಾಗ್ಯಾದಿಗಳನ್ನು ಕರುಣಿಸಲು ಎನ್ನುವ ಶ್ಲೋಕವಿತ್ತು. ಮತ್ತೆ ಮಂಜುನಾಥನ ಆನತಿಯನ್ನೆಲ್ಲ ಶಿರಸಾವಹಿಸಿ ನಡೆಸುವ ಭೂತರಾಯನ ಪ್ರತಾಪದ ವರ್ಣನೆಯಿತ್ತು. ರಂಗವಲ್ಲಿಗಳಿಂದಲೂ, ತಳಿರು ತೋರಣಗಳಿಂದಲೂ, ಮಂದಗಮನೆಯರಿಂದಲು, ಸ್ಫುರದ್ರೂಪಿಗಳಾದ ಭೂತರಾಯ ಭಕ್ತ ಕಿರಾತ ಸ್ತ್ರೀಪುರುಷರಿಂದಲೂ, ಮಹಾತಪಸ್ವಿಗಳಿಂದಲೂ, ಅನಾಥರಕ್ಷಕಳಾದ ಜಗನ್ನಾಥನ ಮಾತೆ ಸೀತಾದೇವಿಯಿಂದಲು ಈ ವಿಶಾಲ ಪೃಥ್ವಿಗೇ ಭೂಷಣಪ್ರಾಯವಾದ ನಗರ ಭಾರತೀಪುರವೆಂಬ ಒಂದು ಇಡೀ ಅಧ್ಯಾಯ ತುಂಬಿದ ವರ್ಣನೆಯಿತ್ತು. ಆದ್ದರಿಂದಲೇ – ಇಲ್ಲಿ ಏನೂ ಸಂಭವಿಸುವುದಿಲ್ಲ ಹೊಸದೇನೂ ಆಗುವುದಿಲ್ಲ, God has made life sterile ಎಂದು ಮಾರ್ಗರೆಟ್ಟಿಗೆ ಬರೆಯುತ್ತಿದ್ದ ಕಾಗದಕ್ಕೆ ಇನ್ನೊಂದು ಪ್ಯಾರಾ ಸೇರಿಸಿದ. ಬರೆಯದೆ ಬಹಳ ದಿನವಾಯಿತು, ಅವಳಿಗೆಲ್ಲ ಬರೆದು ತಿಳಿಸಬೇಕು.

ಕೆಲವು ತಿಂಗಳ ಹಿಂದೆ ಡೆಲ್ಲಿಗೆಂದು ಹೋದೆ. ಡಿಯರ್ ಮಾರ್ಗರೆಟ್, ಹೈದರಾಬಾದ್‌ನಲ್ಲಿ ಇನ್ನೇನು ವಿಮಾನ ಹೊರಡಬೇಕು, ಅಷ್ಟುಹೊತ್ತಿಗೆ ಸರಿಯಾಗಿ ಇಡೀ ಭಾರತದಲ್ಲಿ ಖ್ಯಾತನಾದ ಶಿರ್ನಾಳಿ ಬಾಬನೆಂಬುವನೊಬ್ಬ ಹತ್ತಿದ. ಅವನ ಪಕ್ಕದಲ್ಲಿ ಖ್ಯಾತನಾದ ಒಬ್ಬ ವಿಜ್ಞಾನಿ, ಬಾಬನ ಪರಮಭಕ್ತ. ವಿಮಾನದಲ್ಲಿ ಶ್ರೀಮಂತ ವರ್ತಕರು, ಯಾವುದೋ ಕಾನ್ಫರೆನ್ಸಿಗೆಂದು ಬಂದ ಇಪ್ಪತ್ತು ವೈಸ್ ಛಾನ್ಸಲರುಗಳು ಇದ್ದರು. ಶಿರ್ನಾಳಿ ಬಾಬನ ಕ್ಯಾರಿಸ್ಮಾನ್ನ ನೀನು ನಂಬಲು ಕಣ್ಣಾರೆ  ನೋಡಬೇಕು. ಭಕ್ತವಿಜ್ಞಾನಿ ಲೈಟ್ ಹಾಕಲು ಕೈ ಎತ್ತಿದರೆ ಬಾಬ ತಡೆದರು. ಸೌಜನ್ಯದ ಮೂರ್ತಿ. ನಾಲ್ಕೈದು ಅಮೆರಿಕನ್ ಹಿಪ್ಪಿ ಹುಡುಗಿಯರು ಹೋಗಿ ಕಾಲಿಗೆ ಬಿದ್ದರು. ಬಾಬನ ಮಾಯಾಜಾಲದಿಂದ ಅವರ ಕೈಯಲ್ಲಿ ವಿಭೂತಿ ಬಂತು. ಅದನ್ನವರು ತಿಂದರು. ಏರ್ ಹೋಸ್ಟೆಸ್‌ಗಳೂ ಕಾಲಿಗೆ ಬಿದ್ದರು. ಬಾಬ ಎಂತಹ ಸ್ಪಿರಿಚುಯಲ್ ಶಿವಲ್ರಿ ಬೆಳೆಸಿಕೊಂಡಿದ್ದಾನೆಂದರೆ ಭಕ್ತ ಕಾಲು ಮುಟ್ಟುವ ಮುಂಚೆ ತವಕದಿಂದ ಅವನು ಭಕ್ತನ ತಲೆ ಮುಟ್ಟುತ್ತಾನೆ. ಜೇನಿನಷ್ಟು ಸಿಹಿಯಾಗಿ ನಗುತ್ತ ಕೈಯೊಡ್ಡುತ್ತಾನೆ. ಭಕ್ತನ ಕೈಯಲ್ಲಿ ಬಂಗಾರದ ತಾಳಿಯೋ ವಿಭೂತಿಯೋ ಇರುತ್ತದೆ. ಇವನು ಎಲ್ಲ ರಾಜಭವನಗಳನ್ನೂ ಹೀಗೆ ಆಕ್ರಮಿಸಿದ್ದಾನೆ. ದೇಶಾದ್ಯಂತ ಜನರನ್ನು ಭಜನೆಗೆ ಹಚ್ಚಿದ್ದಾನೆ. ಕಡುಬಡವರಿಂದ ಹಿಡಿದು ರಾಷ್ಟ್ರಪತಿಗಳ ತನಕ ನಂಬುವ ಏಕಮಾತ್ರ ವ್ಯಕ್ತಿಯೆಂದರೆ ಈ ಬಾಬ. ಎಲ್ಲ ವರ್ಗ ವರ್ಣಭೇದಗಳನ್ನೂ ಸೀಳುವ ಸತ್ಯ ಇವನೊಬ್ಬನೇ. ಪ್ರಿಯ ಮಾರ್ಗರೆಟ್, ದೇವರನ್ನು ನಾಶ ಮಾಡದ ಹೊರತು ನಾವು ಖಂಡಿತ ಕ್ರಿಯೇಟಿವ್ ಆಗಲಾರೆವು. ನಾವೆಲ್ಲ ದೇವರ ಗರ್ಭದಲ್ಲಿ ಪಿಂಡಗಳಂತಿದ್ದೇವೆ, ಹುಟ್ಟಿಯೇ ಇಲ್ಲ. ಚರಿತ್ರೆಯ ಮಂಥನಕ್ಕೆ ಸಿಕ್ಕಿಲ್ಲ. ಸೀಳಬೇಕು.

* * *

‘ಏಯ್‌ ವಾಸು’

ಜಗನ್ನಾಥ ಕೈಹಿಡಿದು ಜಗ್ಗಿದ. ಹತ್ತು ವರ್ಷಗಳಿಂದ ನೋಡದ ಗೆಳೆಯ. ಹೋಟೆಲಿಗೆ ನುಗ್ಗುತ್ತಿದ್ದ. ಅದೇ ದೂರ ದೂರದ ಹಲ್ಲುಗಳು. ಕೋಲು ಮುಖ. ಹಿಟ್ಲರ್‌ಮೀಸೆ. ಕೂದಲು ಉದುರಿದೆ. ಹಣೆಗೆ ಕುಂಕುಮ ಹಚ್ಚಿದ್ದಾನೆ. ನಂಬುವುದೇ ಕಷ್ಟ. ಶಿವಮೊಗ್ಗದಲ್ಲಿ ಇಂಟರ್ ಮೀಡಿಯೆಟ್ ಓದುತ್ತಿದ್ದಾಗ ಇಡೀ ರಾತ್ರೆ ಕೂತು ಇಬ್ಬರೂ ಕ್ರಾಂತಿಯ ವಿಷಯ ಮಾತಾಡುತ್ತಿದ್ದರು – ಮಸಾಲೆ ಪೂರಿ ತಿನ್ನುತ್ತ, ಕಾಕನ ಹೋಟಲಲ್ಲಿ ಟೀ ಕುಡಿಯುತ್ತ. ಎಲ್ಲ ತ್ಯಾಗಕ್ಕೂ ಸಿದ್ಧನಾಗಿ ಕುದಿಯುತ್ತಿದ್ದ ಹುಡುಗ. ಹಾಗೆ ನೋಡಿದರೆ ತಾನೇ ಪುಕ್ಕಲು, ನಲವತ್ತೆರಡರ ಚಳವಳಿಯಲ್ಲಿ ಪೊಲೀಸರು ಎಷ್ಟು ಹೊಡೆದರೂ ಟಪ್ಪಾಲು ಪೆಟ್ಟಿಗೆಯನ್ನು ಎಲ್ಲಿ ಮುಚ್ಚಿಟ್ಟಿದ್ದೇನೆಂದು ವಾಸು ಬಾಯಿ ಬಿಟ್ಟಿರಲಿಲ್ಲ. ಜಗನ್ನಾಥ ಮೈಮರೆತು ಅವನ ರಟ್ಟೆಗಳನ್ನು ಗಟ್ಟಿಯಾಗಿ ಅದುಮಿ, ಅವನ ಹಣೆಯ ಕುಂಕುಮ ನೋಡುತ್ತ,

‘ಏನೋ ರ್ಯಾಸ್ಕಲ್, ಇದೇನು ಜೋಕಿಗಾಗಿ ಹಚ್ಚಿಕೊಂಡಿದಿಯಾ ಹೇಗೆ?’ ಎಂದ.

ವಾಸು ಚೇತರಿಸಿಕೊಳ್ಳುತ್ತ, ‘ಜಗಣ್ಣ ಅಲ್ವೇನೋ’ ಎಂದ. ವಾಸು ಪ್ಯಾಂಟ್ ತೊಟ್ಟು ಬುಷ್‌ಶರ್ಟ್ ಹಾಕಿದ್ದ. ‘ಮನೇಗೆ ಹೋಗೋಣ ನಡಿ’ ಎಂದ ಜಗನ್ನಾಥ. ಶ್ರೀಪತಿರಾಯರನ್ನು ನೋಡಲು ತಾನು ಹೋಗುತ್ತಿದ್ದೇನೆನ್ನುವುದು ಜಗನ್ನಾಥನಿಗೆ ಮರೆತೇ ಹೋಗಿತ್ತು. ‘ಯಾಕೋ ವಾಸು ಇಷ್ಟು ಬಡವಾಗಿದ್ದೀಯಾ? ಇಲ್ಲಿಗೆ ಯಾವಾಗ ಬಂದೆ? ಇರೋದೆಲ್ಲಿ? ಯಾರನ್ನ ಕೇಳಿದರೂ ನೀನೆಲ್ಲಿದ್ದೀಯ ಗೊತ್ತೇ ಇಲ್ಲ ಅಂದ್ರು…’

ವಾಸುವಿನ ಗಮನ ಮಾತ್ರ ಎಲ್ಲೋ ಇತ್ತು.

‘ಸ್ವಲ್ಪ ಕೆಲಸ ಇದೆ ಕಣೊ. ಆಮೇಲೆ ನೋಡ್ತೀನಿ.’

ಜಗನ್ನಾಥನಿಗೆ ಇದ್ದಕ್ಕಿದ್ದಂತೆ ನಿರಾಸೆಯಾಯಿತು. ತನಗಾಗಿದ್ದ ಸಂತೋಷ ವಾಸುವಿಗಾದಂತೆ ಕಂಡಿರಲಿಲ್ಲ. ಅಲ್ಲದೇ ತುಂಬ ಕುಗ್ಗಿದ್ದ. ಅವನ ಹಣೆಯ ಮೇಲಿನ ಮಂಜುನಾಥನ ಪ್ರಸಾದ ಪ್ರಾಯಶಃ ಜೋಕಲ್ಲ. ಜಗನ್ನಾಥನಿಗೆ ತಮ್ಮಿಬ್ಬರ ನಡುವೆ ತಕ್ಷಣ ಒಂದು ಗೋಡೆ ಎದ್ದಂತೆನಿಸಿತು. ಆದರೂ ತೋರಗೊಡದೆ,

‘ಬಾ ಕಾಫಿ ಕುಡಿಯೋಣ’ ಎಂದ.

‘ನೀನು ಈ ಹೋಟ್ಲಿಗೆ ಬರ್ತೀಯ?’

‘ಬರದೇ ಏನು, don’t be stupid.’

ಹೋಟೆಲಿನ ಯಜಮಾನ ಜಗನ್ನಾಥನನ್ನು ಕಂಡವನೆ ಎದ್ದುನಿಂತ. ಕಾಫಿ ಕುಡಿಯುತ್ತಿದ್ದ ಕೆಲವು ರೈತರೂ ಎದ್ದು ನಿಂತರು. ಜಗನ್ನಾಥನಿಗೆ ಮುಜುಗರವಾಯಿತು. ಊರಿನಲ್ಲಿ ಅವನು ಹೋಟೆಲೊಳಗೆ ಹೋದದ್ದು ಇದೇ ಮೊದಲಬಾರಿ. ಕಪ್ಪು ಕಲ್ಲಿನ ಮೇಜೊಂದನ್ನು ಒರೆಸಿ ಯಜಮಾನರೇ ಸ್ವತಃ ಇಬ್ಬರನ್ನೂ ಕುರ್ಚಿಯ ಮೇಲೆ ಕೂರಿಸಿದರು. ಜಗನ್ನಾಥನಿಗೆ ಪರಿಚಯವಿದ್ದ ಆಳುಗಳು ಒಳಗೆ ಹೋಗಿ ಕೂತರು. ವಾಸು ‘ಕಾಫಿ’ ಎಂದ. ಯಜಮಾನರೇ ಕಾಫಿ ತರಲು ಒಳಗೆ ಹೋದರು. ‘ನೀನೆಷ್ಟು ಈ ಊರಲ್ಲಿ ದೊಡ್ಡ ಮನುಷ್ಯಾನ್ನೋದು ಈಗ್ಲಾದ್ರೂ ಗೊತ್ತಾಯ್ತ?’ ವಾಸು ಚುಡಾಯಿಸುವ ಧಾಟಿಯಲ್ಲಿ ಮಾತಾಡಿದ್ದು ಕೇಳಿ ಜಗನ್ನಾಥನಿಗೆ ಖುಷಿಯಾಯಿತು.

‘ಏನು ಮಾಡ್ತಾ ಇದಿ ಹೇಳು.’

ನೊರೆಯ ಟೋಪಿ ಹಾಕಿಕೊಂಡು ಬಂದ ಬೆಚ್ಚಗಿದ್ದ ಕಾಫಿಯನ್ನು ಕುಡಿಯುತ್ತ ಜಗನ್ನಾಥ ಕೇಳಿದ.

‘ಬಿ.ಎ. ಮುಗಸ್ಲಿಲ್ಲ ಗೊತ್ತಲ್ಲ. ಅಪ್ಪ ಮನೆಬಿಟ್ಟು ಓಡಿಸಿದ್ರು. ಆಗ ನೀನು ಇಂಗ್ಲೆಂಡಿಗೆ ಹೋದಿ. ನಾನು ನಾಟಕ ಸೇರಿದೆ. ಆ ಮೇಲೆ ಸ್ವತಃ ಕಂಪನಿ ಮಾಡಿದೆ. ಮುವ್ವತ್ತು ಸಾವಿರ ರೂಪಾಯಿ ದುಡಿದೆ. ಆಮೇಲದನ್ನ ಕಳೆದೆ. ಪ್ರಾಹಿಬಿಶನ್ ಕಾಲ. ಕಳ್ಳಭಟ್ಟಿ ತಯಾರಿಸಿ ಮಾರಿದೆ. ದುಡ್ಡು ಮಾಡಿದೆ. ಒಬ್ಬ ಶೆಟ್ಟೀ ಹುಡುಗೀನ್ನ ರಿಜಿಸ್ಟರ್ಡ್ ಮದುವೆ ಮಾಡಿಕೊಂಡೆ. ನನ್ನ ಮುಖ ನೋಡಬೇಕಾಂತ ಅಪ್ಪ ಹೇಳಿದ. ಈಗ ಮೂರು ಮಕ್ಕಳು. ಕ್ರಾಂತೀಂತ ಎಷ್ಟು ಮಾತಾಡಿದ್ರೂ ಮನೇಗೆ ಬಂದಾಗ ಹೆಂಡತಿ ಇವತ್ತು ಅಡಿಗೇಗೆ ಅಕ್ಕಿ ಇಲ್ಲ ಅಂದ್ರೆ ಹೇಗಾಗುತ್ತೆ ಹೇಳು. ಡ್ರಗ್ ಸ್ಟೋರು ಅಂತ ಹೆಸರು ಹೇಳಿ ಒಂದಷ್ಟು ದಿನ ಬ್ರಾಂದಿ ಮಾರಿದೆ. ಆಮೇಲೆ ಬಾಂಬೆ ಶೋ ಮಾಡಿದೆ. ನನ್ನ ಕಂಪನೀಲಿದ್ದ ಹುಡುಗೀರಿಗಾಗಿ ಮರ್ಚೆಂಟ್ಸು, ಪಾಲಿಟಿಶಿಯನ್ಸು ಎಲ್ಲ ನನ್ನ ಸ್ನೇಹಿತರಾದ್ರು. ಈ ಭಂಡ ಬಾಳು ಬೇಡಾಂತ ಅದನ್ನೂ ಬಿಟ್ಟೆ. ಈಗ ಒಂದು ಕಡೆ ಇರಬೇಕೂಂತ ಅನ್ಸಿದೆ. ಅದಕ್ಕೇ ಈ ಊರಿಗೆ ಬಂದೆ. ಭೂತರಾಯರು ಅಪ್ಪಣೆ ಮಾಡಿದರೆ, ಒಂದು ಸ್ವೀಟ್ ಮೀಟ್ ಸ್ಟಾಲ್ ಇಡು ಅಂತ. ಇಡ್ತಾ ಇದೀನಿ.’

‘ನಿನ್ನ ಜೀವನ ಒಂದು ಪಿಕರಸ್ಕ್‌ ನಾವೆಲ್ ಆಗಬಹುದು ನೋಡು. ನಿಜವಾಗಿ ನೀನು ಭೂತರಾಯನ್ನ ನಂಬ್ತಿಯೇನೊ?’

‘ಏನೋ ಒಂದು ಮಿಸ್ಟರಿ ಇದೇಂತ ನೀನೂ ನಂಬಲ್ವೇನಯ್ಯ?’

ವಾಸು ಎದ್ದು ಹೋಗುವ ಅವಸರದಲ್ಲಿದ್ದಂತೆ ಕಂಡಿತು.

‘ಜೀವನಾಂದ್ರೆ ಕಷ್ಟ ನೋಡು. ನೀನೇನು ಮಾಡ್ತಿದಿ ಹೇಳು. ನೀನಿಲ್ಲಿಗೆ ಹಿಂದಕ್ಕೆ ಬಂದದ್ದು, ಜಮೀನು ಮಾಡಸ್ತ ಇರೋದು ಎಲ್ಲಾ ತಿಳೀತು. ಅದೇನೋ ಒಂದು ಇಂಗ್ಲಿಷ್ ಹುಡುಗೀನ ಮದುವೆ ಮಾಡಿಕೊಂಡಿದೀಂತ ಇಲ್ಲೆಲ್ಲ ಸುದ್ದಿ. ನಿಜವೇ?’

ವಾಸು ಕಾಪಿ ಮುಗಿಸಿ ಸಿಗರೇಟ್ ಹಚ್ಚಿ ಕುತೂಹಲವಿಲ್ಲದೆ ತನ್ನ ಮಾತಿಗೆ ಕಾದ.

‘ಒಬ್ಬ ಹುಡುಗಿ ಜೊತೆ ಇದ್ದದ್ದು ನಿಜ. ಆದರೆ ನಾನವಳನ್ನ ಮದುವೆಯಾಗಿಲ್ಲ.’

‘Good. ಜಾಣ ಕಣಯ್ಯ, ಅಂತೂ ಇಂಗ್ಲೆಂಡಲ್ಲಿ ಮಜ ಮಾಡ್ದಿ ಅನ್ನು.’

ವಾಸುವಿನ ಬಾಯಲ್ಲಿ ‘ಮಜ’ ಎನ್ನುವ ಮಾತು ಕೇಳಿ ಜಗನ್ನಾಥನ ಭಾವನೆಗಳೆಲ್ಲ ಕುಸಿದುಬಿಟ್ಟವು. ಒಂದು ಕಾಲದಲ್ಲಿ ಎಷ್ಟೊಂದು ಆಪ್ತನಾಗಿದ್ದ ಆ ವಾಸು ಯಾರೋ, ಇವನು ಯಾರೋ, ತಾನು ಯಾರೊ. ಪರಸ್ಪರ ಮಾತು ಸಾಧ್ಯವೇ ಇಲ್ಲ. ತಾನು ಮತ್ತು ಮಾರ್ಗರೆಟ್ ಗಂಡ ಹೆಂಡಿರಂತೆ ಬದುಕಿದ್ದು ನಿಜ; ಮದುವೆಯಾಗದೇ ಇದ್ದುದು ನಿಜ – ಆದರೆ ಇದು ಬರಿ ಮಜಕ್ಕಲ್ಲ, ಬರಿ ಜಾಣತನ ಅಲ್ಲ, ಇನ್ನೇನೊ – ಹೇಗೆ ವಾಸುವಿಗೆ ಹೇಳುವುದ? ಅವನಿಗೆ ತಾನೀಗ ಬೇಕಿಲ್ಲ. ಕುಗ್ಗಿದ್ದಾನೆ.

‘ಬಿಡುವಾದಾಗ ಮನೆಗೆ ಬಾರಯ್ಯ’ ಎಂದು ಜಗನ್ನಾಥ ಎದ್ದ. ಹೋಟೆಲ್‌ ಯಜಮಾನ ದುಡ್ಡು ತಗೊಳ್ಳಲಿಲ್ಲ. ಹೊರಗೆ ಬಂದು ವಾಸು ಕೈಕುಲುಕಿ ಹೊರಟು ಹೋದ. ಜಗನ್ನಾಥ ಶ್ರೀಪತಿರಾಯರ ಮನೆ ಕಡೆ ನಡೆದ. ಹೊಸ ಕೊಂಡಿಗಳನ್ನು ಹುಡುಕಬೇಕು. ಈ ಪೇಟೆಯಲ್ಲಿ ಸಫಲನಾಗಬೇಕು. ಬೇರೆ ಗತಿಯಿಲ್ಲ. ಮತ್ತೆ ಮಂಕು ಕವಿಯುತ್ತಿದೆ. ಇಲ್ಲಿ ಕ್ರಿಯೆ ಸಾಧ್ಯವೆ? ಚರಿತ್ರೆಗೆ ಸೇರುವ, ಸೇರಿಸುವ ಕ್ರಿಯೆ. ಸೀಳಿ ಹೊರಕ್ಕೆ ಬರುವ, ಕಾಲಕ್ಕೆ ಜವಾಬ್ದಾರನಾಗುವ ಕ್ರಿಯೆ. ಮತ್ತೆ ಎಳೆ ಬಿಸಿಲಿನಲ್ಲಿ ಹೊಸಬನಾಗುವ, ಹೂವಾಗುವ, ಮಿಡಿಯಾಗುವ ಕ್ರಿಯೆ. ಈ ಮಾವಿನ ಮರದಂತೆ ಚಿಗುರುತ್ತಲೇ ಇರುವ ಕ್ರಿಯೆ. ಜಗನ್ನಾಥನಿಗೆ ಸ್ಪಷ್ಟವಾಗದ ಕತ್ತಿಲಿನಲ್ಲಿ ಕಪ್ಪು ಮುಖಗಳು, ಕೆದರಿದ ಕೂದಲುಗಳು, ಹೇಲಿನ ಕುಕ್ಕೆ ಹೊತ್ತು ನಡೆಯುವ ತಲೆಗಳು ಇದ್ದುವು.  ಎದುರು ಮಂಜುನಾಥ ದೇವಾಲಯದ ಹೊಳೆಯುವ ಶಿಖರ.  ಅದರ ಹಿಂದೆ ಸದಾ ಹರಿಯುವ ಶುಭ್ರವಾದ ನೀರು. ಪೇಟೆಯ ಕೊಳಕನ್ನೆಲ್ಲ ಮರೆಸುವ ಬಿಳಿ ಮರಳಿನ ರಾಶಿ, ಬಂಡೆಗಳು. ತನ್ನ ಎಳೆಯ ಕಾಲುಗಳಿಗೆ ಜಿಗಿಯುವುದನ್ನು ಕಲಿಸಿದ ಬಂಡೆಗಳು, ದೇವಸ್ಥಾನದ ಮೇಲಿನ ಗುಡ್ಡದಲ್ಲಿ ಕೆದರಿದ ಒದ್ದೆ ತಲೆಯ, ಕುಂಕುಮ ಬಳಿದುಕೊಂಡು ಕೈಯಲ್ಲಿ ಸಿಂಗಾರ ಹಿಡಿದು ಥತ್ತರ ನಡುಗುತ್ತ ಕುಣಿಯುವ ಭೂತರಾಯ, ಗರ್ಭಗುಡಿಯೊಳಗೆ ಕಿರೀಟ ಹೊತ್ತ ಶ್ರೀ ಮಂಜುನಾಥ. ಇಡೀ ಊರನ್ನು ತನ್ನ ನಾದದಿಂದ ತುಂಬುವ ತನ್ನ ಹಿರಿಯರು ಮಾಡಿಸಿಕೊಟ್ಟ ಗಂಟೆ. ಇವೆಲ್ಲ ಕಲಸಿಕೊಂಡು ಸ್ಪಷ್ಟವಾದೊಂದು ವಿಚಾರ ಸೀಳಿ ಹೊರಬರಲು ಹವಣಿಸುತ್ತಿತ್ತು. ಮತ್ತೆ ಮತ್ತೆ ಈ ವಿಚಾರವನ್ನು ಜಗನ್ನಾತ ಅನೇಕ ಮಗ್ಗುಲಿನಿಂದ ನೋಡಲು ಯತ್ನಿಸಿದ್ದಾನೆ. ಶ್ರೀಪತಿರಾಯರಿಗೆಲ್ಲ ಹೇಳಿಕೊಳ್ಳುವುದೆಂದು, ತೆರೆದ ಬಾಗಿಲಿನ ಒಳಗೆ ಹೋಗಿ ಕತ್ತಲೆಯ ನಡುಮನೆಯಲ್ಲಿ ನಿಂತು,

‘ರಾಯರು ಇದ್ದಾರಾ?’ ಎಂದ.