ಎಲ್ಲ ವರ್ಗದ ಜನರಲ್ಲೂ ಬದುಕು ಸಫಲವಾಗುವ ಒಳಮಾರ್ಗಗಳೆಷ್ಟೋ ಇರುವಾಗ, ಈ ಬಿಸಿಲಿಗೊಡ್ಡಿ ಮೌನದಲ್ಲಿ ಊರುವ, ಅರಳುವ, ಫಲಿಸುವ ಕ್ರಿಯೆ ನಡೆಯುತ್ತಿರುವಾಗ ಪುರುಷ ಪ್ರಯತ್ನದಲ್ಲಿ ನಂಬುವುದು ಬರಿ ಅಹಂಕಾರವೆ? ಈ ಕ್ರಿಯೆ ನನಗೋಸ್ಕರವೆ? ಊರಿಗೂ ಅಗತ್ಯವೆ? – ಜಗನ್ನಾಥ ಈ ಪ್ರಶ್ನೆಗಳಿಂದೆಲ್ಲ ಮತ್ತೆ ಬಾಧಿತನಾಗಿ ನೋಡಿದ. ಸುಮಾರು ಹತ್ತು ಅಡಿಗೂ ಹೆಚ್ಚು ಎತ್ತರದ ಪಾಗಾರ. ಕಬ್ಬಿಣದ ಗೇಟು, ನಾಯಿಗಳಿವೆ ಎಚ್ಚರಿಕೆ ಎನ್ನುವ ಬೋರ್ಡು.

‘ನಿಮ್ಮ ಮನೆತನ ಬಿಟ್ಟರೆ ಒಂದು ಕಾಲಕ್ಕೆ ಇವರೇ ಇಲ್ಲಿಗೆ ದೊಡ್ಡ ಜಮೀಂದಾರರು. ಆದರೆ ಎಲ್ಲ ಈಗ ಕರಗಿ ಹೋಗ್ತಾ ಇದೆ. ಇವರಿಗಿಂತ ಇವರ ಶಾನುಭೋಘನೇ ಒಂದು ದಿನ ದೊಡ್ಡ ಸಾಹುಕಾರ ಆಗ್ತಾನೆ. ಆಗ್ಲೆ ಅವನೊಂದು ಲಾರಿ ಬೇರೆ ಇಟ್ಟಿದಾನೆ’ ಎಂದು ಶ್ರೀಪತಿರಾಯರು ಗೇಟಿನಲ್ಲಿದ್ದ ಕಾಲಿಂಗ್ ಬೆಲ್ಲನ್ನು ಒತ್ತಿದರು. ಆಶ್ಚರ್ಯದಿಂದ ನೋಡಿದ ಜಗನ್ನಾಥನಿಗೆ.

‘ಇನ್ನೂ ದೊಡ್ಡ ಆಶ್ಚರ್ಯ ನೋಡ್ತೀಯಂತೆ ಸುಮ್ಮನಿರು. ಮನೇಲಿ ವಿದ್ಯುಚ್ಛಕ್ತಿ ತಯಾರಿಸೋ ಮೋಟಾರೇ ಇಟ್ಟುಕೊಂಡಿದಾರೆ. ಮನೆಲಿರೋದು ಬಲ್ಬಿನ ದೀಪ’ ಎಂದು ನಾಲ್ಕಂತಸ್ತಿನ ಮನೆ ಮೇಲೆ ಇದ್ದ ದೊಡ್ಡ ಏರಿಯಲ್ಲನ್ನು ತೋರಿಸಿದರು.

‘ಈ ವಿಶ್ವದ ಮೂಲೆ ಮೂಲೆ ಜೊತೆಗೂ ಪುರಾಣಿಕರು ಕಾಂಟ್ಯಾಕ್ಸ್ ಇಟ್ಟುಕೊಂಡಿದ್ದಾರೆ’ ಎಂದು ಕಣ್ಣು ಮಿಟುಕಿಸಿದರು.

ಪಾಗಾರದಿಂದ ಬಹಳ ದೂರದಲ್ಲಿ ಮನೆಯಾದ್ದರಿಂದ ಬೆಲ್ ಕೆಲಸ ಮಾಡುತ್ತಿದೆಯೋ ಇಲ್ಲವೋ ತಿಳಿಯಲಿಲ್ಲ. ಮತ್ತೆ ಬಿಲ್ ಒತ್ತಿದರು. ‘ಒಂದು ಕಾಲದ ದೊಡ್ಡ ಕ್ರಾಂತಿಕಾರ. ಅರವಿಂದರು ಬಾಂಬ್ ತಯಾರಿಸ್ತಿದ ಕಾಲದವ’ ಎಂದರು.

ಎರಡನೇ ಸಾರಿ ಬೆಲ್ ಮಾಡಿದ ಮೇಲೆ ಖಾಕಿ ಸಮವಸ್ತ್ರ ಧರಿಸಿದ ಘೂರ್ಕನೊಬ್ಬ ಕೀಗಳನ್ನು ತಂದ. ‘ಇದು ಮೊದಲನೇ ಆಶ್ಚರ್ಯ. ಕಾದಿರು’ ಎಂದರು ರಾಯರು. ಘೂರ್ಕ ಸೆಲ್ಯೂಟ್ ಮಾಡಿ ಇಬ್ಬರನ್ನೂ ಕರೆದುಕೊಂಡು ಹೋಗಿ ಎತ್ತರದ ತೇಗದ ಮರದ ಛಾವಣಿಯ ವಿಶಾಲವಾದ ಹಜಾರದಲ್ಲಿ ಕೂರಿಸಿದ.

ಹಜಾರದ ಒಂದು ಮೂಲೆಯಲ್ಲಿ ಹ್ಯಾಟ್ ಇಡುವ ಸ್ಟ್ಯಾಂಡಿತ್ತು. ಅದರಲ್ಲಿ ಒಂದು ಈವನಿಂಗ್ ಹ್ಯಾಟ್, ಒಂದು ಸಾದಾ ಸನ್‌ಹ್ಯಾಟು, ಮೃದುವಾದ ಕೂದಲಿನ ಕಾಶ್ಮೀರದ ಟೋಪಿ, ಬಗೆಬಗೆಯ ವಾಕಿಂಗ್ ಸ್ಟಿಕ್‌ಗಳು ಇದ್ದವು. ಇನ್ನೊಂದು ಮೂಲೆಯಲ್ಲಿ ಮೂರು ಕೋವಿಗಳು ಮರದ ಸ್ಟ್ಯಾಂಡ್ ಮೇಲಿದ್ದವು. ಗೋಡೆಗಳ ಮೇಲೆ ಸುತ್ತಲೂ ಉತ್ತಮ ಅಭಿರುಚಿಯಲ್ಲಿ ಫ್ರೇಂ ಮಾಡಿದ ಪಾಶ್ಚಾತ್ಯ ಚಿತ್ರಕಾರರ ಪ್ರಿಂಟ್‌ಗಳು; ಬ್ರೂಗಲ್‌ನ ಇಕಾರಸ್; ಸೂರ್ಯ ಮಿನುಗುವ ಹಳ್ಳಿಯ, ಗೋದಿ ಗದ್ದೆಗಳ, ಹೊಳೆಯುವ ಬೆಳಕು ನೆರಳಿನ ದಾರಿಯ ಕಾನ್ಸ್‌ಟೇಬಲ್‌ನ ಚಿತ್ರ ‘ದಿ ಕಾರ‍್ನ್‌ಫೀಲ್ಡ್‌’; ಸ್ಫುಟವಾದ, ಶುದ್ಧವಾದ ನೀಲಿ, ಕಂದು, ಬೂದು ಬಣ್ಣಗಳ ಮೃದುವಾದ ವಿನ್ಯಾಸದ ಜಾನ್‌ಸೆಲ್ ಕೋಟ್‌ಮನ್ನನ ‘ಗ್ರೇಟಾ ಬ್ರಿಡ್ಜ್‌’; ಹೊಗಾರ‍್ತ್‌ಚಿತ್ರಿಸಿದ ಖುಷಿ ನಗುವಿನ ‘ದಿ ಶ್ರಿಂಪ್‌ಗರ‍್ಲ್’; ಸರ್ ಜೋಶುವ ರೆನಾಲ್ಡ್‌ನ ‘ಏಜ್‌ಆಫ್ ಇನ್ನೊಸೆನ್ಸ್’ – ಹೆಚ್ಚು ಪಾಲು ಚಿತ್ರಗಳು ಬ್ರಿಟಿಷ್ ಚಿತ್ರಕಾರರವು ಎಂಬುದನ್ನು ಜಗನ್ನಾಥ ಕುತೂಹಲದಿಂದ ಗಮನಿಸಿದ. ತಾವು ಕುತಿದ್ದ ಕುರ್ಚಿಗಳೂ ಅಷ್ಟೆ; ಸಪುರವಾದ ಕಾಲುಗಳ ನೆಟ್ಟನೆಯ ಬೆನ್ನಿನ ವಿಕ್ಟೋರಿಯಾ ಕಾಲದವು. ಘೂರ್ಕ ತಂದುಕೊಟ್ಟ ಕಾಗದದ ಮೇಲೆ ರಾಯರು ಇಬ್ಬರ ಹೆಸರನ್ನೂ ಬರೆದುಕೊಟ್ಟರು. ಘೂರ್ಕ ಅದನ್ನು ಚಿತ್ರ ಕೆತ್ತಿದ ತಟ್ಟೆಯ ಮೇಲಿಟ್ಟುಕೊಂಡು ಮಹಡಿ ಹತ್ತಿಹೋದ.

ಜಗನ್ನಾಥ ರಾಯರನ್ನು ಆಶ್ಚರ್ಯದಲ್ಲಿ ನೋಡಿದ. ಹಜಾರದ ಒಳಗೆ ಹೊಳೆಯುವ ದೊಡ್ಡ ಹಿತ್ತಾಳೆಕುಂಡ ಒಂದರಲ್ಲಿ ಆಸ್ಫಡಿಸ್ಟ್ರಾ ತರಹದ ಒಂದು ಗಿಡ. ನಾಲ್ಕು ಗೋಡೆಯ ಸುತ್ತವೂ ಬಗೆಬಗೆಯ ಕ್ಯಾಕ್ಟಸ್‌ಗಳು. ಹೊರಗೆ ಊಟಿಯಿಂದ ತಂದಿರಬಹುದಾದ ಇಂಗ್ಲಿಷ್ ಜಾತಿಯ ಗುಲಾಬಿ ಗಿಡಗಳು. ‘ಈಚೆಗೆ ಇಂಗ್ಲೆಂಡಿನಲ್ಲಿ ಮನೆಯೊಳಗೆ ಆಸ್ಫಡಿಸ್ಟ್ರಾ ಬೆಳೆಸಲ್ಲ’ ಎಂದು ಜಗನ್ನಾಥ ತುಂಟು ನಗುತ್ತ ಹೇಳಿದ.

ಸ್ವಲ್ಪ ಹೊತ್ತಿಗೆ ಮಹಡಿಯಿಂದ ಒಬ್ಬರು ಇಳಿದು ಬರುತ್ತಿದ್ದ ಮೃದುವಾದ ಸಪ್ಪಳ ಕೇಳಿಸಿತು. ಮಹಡಿಯ ಮೆಟ್ಟಲುಗಳಿಗೆ ಕಾರ್ಪೆಟ್ ಹಾಕಿರಬೇಕೆಂದುಕೊಂಡು ಜಗನ್ನಾಥ ಯಜಮಾನನಿಗಾಗಿ ಕುತೂಹಲದಿಂದ ಕಾದ.

‘How do you do?’ ಎನ್ನುತ್ತ ಒಬ್ಬ ಸುಮಾರು ಅರವತ್ತು ವರ್ಷ ವಯಸ್ಸಿನ ವ್ಯಕ್ತಿ ಕೈಯೊಡ್ಡಿ ತುಂಬ ಚುರುಕಾಗಿ ನಡೆದು ಹಜಾರಕ್ಕೆ ಬಂದರು. ರಾಯರ ಕೈ ಕುಲುಕಿದರು. ಕಂದು ಬಣ್ಣದ ಈ ಕಾಲಕ್ಕೆ ಅಗಲವೆನ್ನಿಸುವ ಪ್ಯಾಂಟ್ ತೊಟ್ಟು, ವೇಸ್ಟ್ ಕೋಟ್‌ಹಾಕಿ ಟೈಕಾಲರ್ ಧರಿಸಿದ್ದ, ತುಂಬ ನುಣ್ಣಗೆ ಶೇವ್ ಮಾಡಿಕೊಂಡಿದ್ದರಿಂದ ಹೊಳೆಯುವ ಗಲ್ಲದ ಪುರಾಣಿಕ ತನಗೆ ಕೈಚಾಚಿದರು. ರಾಯರು ಕನ್ನಡದಲ್ಲಿ ತನ್ನ ಪರಿಚಯ ಮಾಡಕೊಟ್ಟರು – ‘ಜಗನ್ನಾಥ, ಆನಂದರಾವ್ ಮಕ್ಕಳು.’

ಪುರಾಣಿಕರು ನೋಡಲು ತೆಳ್ಳಗೆ ಇದ್ದರೂ ಗಟ್ಟಿಯಾಗಿ ಕೈ ಅಮುಕಿ ಕುಲುಕಿದರು.

‘Pleased to meet you. I have heard such a lot about you from Sripathi, my only friend in this blessed place. I used to know your mother, a beautiful, cultured lady. She used to play sweetly on the Veena — come in please come in’ ಎಂದು ಪುರಾಣಿಕರು  ನಿಂತು ಒಳಗೆ ಕೈಮಾಡಿ ತೋರಿಸಿದರು. ‘After you’ ಎಂದು ಮುಂದೆ ಹೋಗಲು ಜಗನ್ನಾಥನನ್ನು ಒತ್ತಾಯಿಸಿದರು. ಪುರಾಣಿಕರ ಬಾಯಲ್ಲಿ ಕೃತಕವೆನ್ನಿಸಿದ ಇಂಗ್ಲಿಷ್ ಬಿಬಿಸಿಯ ಡಿಂಬಲ್‌ಬಿಯ ಉಚ್ಚಾರಣೆಯನ್ನು ನೆನಪಿಗೆ ತರುವಂತಿತ್ತು.

ಊಹಿಸಿದ್ದಂತೆ ಮಹಡಿ ಮೆಟ್ಟಲುಗಳಿಗೆ ಕೆಂಪು ಕಾರ್ಪೆಟ್ ಹೊದಿಸಿತ್ತು. ಚೆನ್ನಾಗಿ ಪಾಲಿಶ್ ಮಾಡಿದ ಹೊಳೆಯುವ ಹಿತ್ತಾಳೆಯ ಬ್ಯಾನಿಸ್ಟರ್ ಇದ್ದ ಮರದ ಸ್ಟೇರ್‌ಕೇಸು, ಸ್ಟೇರ್‌ಕೇಸಿನ ಪ್ರತಿ ತಿರುವಿನಲ್ಲೂ ಪ್ರಸಿದ್ಧ ಚಿತ್ರಕಾರರ ಪ್ರಿಂಟ್‌ಗಳು. ಮೂರನೇ ಮಹಡಿಯಲ್ಲಿ ಪುರಾಣಿಕರ ಸ್ಟಡಿ. ಬಾಗಿಲನ್ನು ತಳ್ಳಿ ಪುರಾಣಿಕರು ‘Please come in’ ಎಂದು ಕೈಮಾಡಿ ಒಳಗೆ ತೋರಿಸಿದರು.

ಒಳಗೆ ಬಂದವನೆ ಜಗನ್ನಾಥ ದಂಗುಬಡಿದವನಂತೆ ನಿಂತ.

“Please sit down’ ಎಂದರು ಪುರಾಣಿಕರು. ಹಣೆಯ ಮೇಲಿಳಿದ ಉದ್ದ ಬಿಳಿಗೂದಲಿನ ರಾಸಿಯನ್ನು ತಳ್ಳಿಕೊಂಡರು. ಕಾಶ್ಮೀರಿ ರತ್ನಗಂಬಳಿಯ ಮೇಲೆ ಸುತ್ತಲೂ ಸೋಫಾಗಳಿದ್ದುವು. ಮೂಲೆಯೊಂದರಲ್ಲಿ ಸುಂದರವಾಗಿ ಕೆತ್ತಿದ ಬರೆಯುವ ಬೀಟೆ ಮರದ ಮೇಜು. ಅದರೆದುರು ಮೆತ್ತೆ ಹಾಕಿದ ತಿರುಗುವ ಕುರ್ಚಿ. ಎದುರುಬದುರಾಗಿ ಗೋಡೆಗಳಿಗೆ ಒರಗಿ ನಿಂತ ಗಾಜಿನ ಕಪಾಟುಗಳಲ್ಲಿ ಪುಸ್ತಕಗಳು. ಮಧ್ಯದಲ್ಲಿ ಕೊರೆದ ಅಗ್ಗಿಷ್ಟಿಕೆ, ಬೆಳಿಗ್ಗೆ ಉರಿಯುತ್ತಿದ್ದು ಈಗ ಆರುತ್ತಿರುವ ಕೆಂಡಗಳು, ಫೈರ್‌ಪ್ಲೇಸಿನ ಮೇಲೆ ಗಾಜಿನ ಪ್ರಾಣಿಗಳು, ಜಪಾನಿ ಬೊಂಬೆಗಳು, ಬಾಯಲ್ಲಿ ಚುಟ್ಟ ಕಚ್ಚಿದ ಚರ್ಚಿಲ್‌ನ ಫ್ರೇಂ ಹಾಕಿದ ವ್ಯಂಗ್ಯಚಿತ್ರ. ಸೋಫಾ ಒಂದರ ಕೆಳಗೆ ಮೃದುವಾದ ರಗ್ಗಿನ ಮೇಲೆ ಮೈ ತುಂಬ ರೋಮದ ಜೂಲು ನಾಯಿಯೊಂದು ಕಣ್ಮುಚ್ಚಿ ಕತ್ತು ಚಾಚಿ ಹಿತವಾಗಿ ಮಲಗಿತ್ತು. ಜಗನ್ನಾಥ ಕಪಾಟಿನಲ್ಲಿದ್ದ ಪುಸ್ತಕಗಳ ಮೇಲೆ ಕಣ್ಣುಹಾಯಿಸಿದ : ರೇನಾಲ್ಡ್ಸ್‌ನ ಕಾದಂಬರಿಗಳು, ರಸೆನ್, ಬರ್ನಾಡ್‌ಶಾ, ಕಿಪ್ಲಿಂಗ್, ಚರ್ಚಿಲ್, ಶೇಕ್ಸ್‌ಪಿಯರ್‌, ಟಾಲ್‌ಸ್ಟಾಯ್‌, ಫಾರ್‌ಸ್ಟರ್. ಫಾರ್‌ಸ್ಟರ್‌ನ ‘ಹೊವಾರ್ಡ್ಸ್ ಎಂಡ್’ ಪುಸ್ತಕವನ್ನೆಳೆದು ಪುಟ ತಿರುಗಿಸಿದ. ಪುರಾಣಿಕರು ಅದನ್ನು ಓದಿದ್ದರೆಂಬ ಕುರುಹುಗಳು ಕಂಡವು. ಕೆಂಪು ಪೆನ್ಸಿಲ್‌ನಲ್ಲಿ ಗುರುತು ಮಾಡಿ ರೈಟ್‌ಗಳನ್ನು ಹಾಕಿದ್ದ ಈ ಭಾಗ ಜಗನ್ನಾಥನ ಕಣ್ಣು ಸೆಳೆಯಿತು.

‘Miss Schlegel, the real thing’s money, and all the rest is a dream.’

‘You’re still wrong. You’ve forgotton Death.’

Leonard could not understand.

You’ve forgotton Death ಎನ್ನುವ ಮಾತಿನ ಕಡೆ ಎರಡು ಗೀರುಗಳಿದ್ದವು. ಜಗನ್ನಾಥನಿಗೆ ಪುರಾಣಿಕರ ಒಳಜೀವನದ ಬಗ್ಗೆ ಈ ಎರಡು ಗೀರುಗಳು ಕುತೂಹಲ ಹುಟ್ಟಿಸಿದುವು. ಪುಸ್ತಕಗಳನ್ನು ಬಿಟ್ಟು ಮುಂದೆ ನಡೆದ. ಸ್ಟಡಿಯ ಪೂರ್ವ ಮತ್ತು ಪಶ್ಚಿಮಕ್ಕೆ ದೊಡ್ಡ ದೊಡ್ಡ ಗಾಜಿನ ಕಿಟಕಿಗಳು; ಗೋಡೆಯ ಮುಕ್ಕಾಲದಷ್ಟು ದೊಡ್ಡದಾಗಿದ್ದ ಈ ಕಿಟಕಿಗಳಿಗೆ ನೀಲಿಬಣ್ಣದ ದಪ್ಪನೆಯ ಕರ್ಟನ್‌ಗಳು. ಕಿಟಕಿಯ ಮೂಲಕ ನೋಡಿದ. ಮರಗಳ ಮರೆಯಲ್ಲಿ ಭಾರತೀಪುರ. ಹೊಳೆ, ಮಂಜುನಾಥ ದೇವಸ್ಥಾನದ ಬೂದು ಬಣ್ಣದ ಶಿಖರ. ಕಿಟಕಿಯ ಕೊನೆಯಲ್ಲಿ ಮೂಲೆಯ  ಮೇಜಿನ ಮೇಲಿದ್ದ ಬೃಹದಾಕಾರದ ರೇಡಿಯೋನ್ನ ಗಮನಿಸಿದ. ಪುರಾಣಿಕರೂ ಅವನ ಕುತೂಹಲವನ್ನು ಗಮನಿಸಿರಬೇಕು. ಹತ್ತಿರ ಬಂದು ಹೆಮ್ಮೆಯಿಂದ ಹೇಳಿದರು:

‘I can get almost all the major short-wave stations in the world on that radio.’

ಸ್ವಲ್ಪ ಸುಮ್ಮನಿದ್ದು ಅಗ್ಗಿಷ್ಟಿಕೆಯ ಎದುರು ನಿಂತರು. ಪೈಪ್ ಹೊತ್ತಿಸುತ್ತ, ಕಣ್ಣುಗಳಲ್ಲಿ ನಗುತ್ತ ಹೇಳಿದರು:

‘I am in total retreat. Sripathy must have told you.’

ಜಗನ್ನಾಥ ಮೇಜಿನ ಹತ್ತಿರವಿದ್ದ ಸೋಫಾದ ಮೇಲೆ ಕೂತ. ರೇಡಿಯೋ ಅವರಿಗೆ ಇಂಗ್ಲಿಷ್ ಕಲಿಸಿಕೊಟ್ಟಿರಬೇಕು. ‘This is more comfortable. Come’ ಎಂದು ಪುರಾಣಿಕರು ತನಗೆ ಹತ್ತಿರವಿದ್ದ ಬೂರುಗದ ಹತ್ತಿಯ ಕೆಂಪು ಕುಶನ್‌ಗಳಿದ್ದ ಒಂದು ಸೋಫಾ ತೋರಿಸಿದರು.

ಕೂದಲಷ್ಟೇ ಅಲ್ಲ ಪುರಾಣಿಕರ ಹುಬ್ಬುಗಳೂ ಬೆಳ್ಳಗಿದ್ದವು ಎಂಬುದನ್ನು ಜಗನ್ನಾಥ ಗಮನಿಸಿದ. ಕಿವಿಗಳ ಮೇಲೂ ಕೂದಲಿದ್ದುದರಿಂದ ಚೂಪಾದ ಮುಖದ ಹೊಳೆಯುವ ಕಣ್ಣುಗಳ ಪುರಾಣಿಕರು ಥಟ್ಟನೆ ಮೊಟ್ಟುಗಳಲ್ಲಿ ಪಿಳಿ ಪಿಳಿ ಕಣ್ಣುಬಿಡುತ್ತ ನೋಡುವ ಪ್ರಾಣಿಯಂತೆ ಕಂಡರು. ಬಿಳುಚಿದ ಮುಖ, ತೆಳುವಾದ ತುಟಿಗಳು, ನೀಳವಾದ ಮೂಗು – ಆದರೆ ಅವರ ಜೀವಂತಿಕೆಯಿದ್ದುದೆಲ್ಲ ಕಣ್ಣುಗಳಲ್ಲಿ, ಕೂದಲು ತುಂಬಿದ ಕಿವಿಗಳಲ್ಲಿ, ಪುಸ್ತಕದಿಂದ ನಿಧಾನವಾಗಿ ಓದಿದವರಂತೆ ಮತ್ತೆ ಹೇಳಿದರು :

‘Yes. I am living here in exile with my books, a few friends like Sripathy, and my ailing wife. Excuse me I have been talking in a monologue without offering you anything. What will you have to drink?’

ಪುರಾಣಿಕರು ಸೈಡ್ ಟೇಬಲ್ ಒಂದರ ಗಾಜಿನ ಬಾಗಿಲನ್ನು ಸರಿಸಿದರು. ಅದರೊಳಗೆ ವಿಲಾಯಿತಿ ಬ್ರಾಂಡಿ, ವ್ಹಿಸ್ಕಿ, ಜಿನ್ ವೈನ್, ಶೆರಿ ಇದ್ದುವು. ಕಟ್‌ಗ್ಲಾಸ್‌ನ ಬಟ್ಟಲುಗಳನ್ನು ಹೊರತೆಗೆದು ಪುರಾಣಿಕರು ಪ್ರಶ್ನಾರ್ಥಕವಾಗಿ ಜಗನ್ನಾಥ ಕಡೆ ನೋಡಿದರು. ಇಂಡಿಯಾಕ್ಕೆ ಬಂದ ಮೇಲೆ ಕುಡಿಯುವುದನ್ನು ಬಿಟ್ಟಿದ್ದ ಜಗನ್ನಾಥ, ರಾಯರು ಜೊತೆಯಲ್ಲಿದ್ದಾರೆಂದು ಸಂಕೋಚಪಡುತ್ತ,

‘I am not particular about any. Thanks’ ಎಂದ.

‘Have some whisky. I can assure you, it is not adulterated. My friend Avdhani brings it from Bombay for me. It is awfully cold these days, you see, although we have a bright day today’ ಎಂದು ಪುರಾಣಿಕರು ಸುಂದರವಾದ ಎರಡು ಕಟ್‌ಗ್ಲಾಸ್ ಟಂಬ್ಲರ್‌ಗಳಲ್ಲಿ ವ್ಹಿಸ್ಕಿಯನ್ನು ಹೊಯ್ದರು. ಅದಕ್ಕೆ ಪ್ರಭುಗಳ ಸೋಡಾ ಫ್ಯಾಕ್ಟರಿಯ ಸೋಡವನ್ನು ಬೆರೆಸುತ್ತ,

‘Tell me when to stop. You must excuse this awful soda and sorry there is no ice’ ಎಂದರು. ಜಗನ್ನಾಥನಿಗೆ ಅವನ ಗ್ಲಾಸ್ ಕೊಟ್ಟು ರಾಯರಿಗೆ ‘The teatotaller will have a fresh lime as usual’ ಎಂದು ಬೆಲ್ ಒತ್ತಿದರು. ಬಿಳಿ ಬಟ್ಟೆ ತೊಟ್ಟ ಅಡಿಗೆಯವನು ಬಾಗಿಲ ಬಳಿ ನಿಂತ. ‘ನಾಯರ್, ಇವರಿಗೊಂದು ನಿಂಬೆಹಣ್ಣಿನ ಪಾನಕ ಮಾಡಿ ತಾ’ ಎಂದರು. ಅದು ಜಗನ್ನಾಥ ಕೇಳಿಸಿಕೊಂಡ ಪುರಾಣಿಕರ ಮೊದಲನೇ ಕನ್ನಡ ವಾಕ್ಯ; ಅವರ ಕನ್ನಡ ಇಂಗ್ಲಿಷ್‌ಗಿಂತ ಕೃತಕವಾಗಿತ್ತೆಂದು ಗಮನಿಸಿದ.

‘What have you been doing in this medieaval town?’ ಪುರಾಣಿಕರು ಪೈಪನ್ನು ರೇಡಿಯೋ ಮೇಲೆ ಬಿಟ್ಟು ವ್ಹಿಸ್ಕಿಯನ್ನು ಸವಿಯುತ್ತ ಮತ್ತೆ ಅಗ್ಗಿಷ್ಟಿಕೆ ಎದುರು ನಿಂತು ಕೇಳಿದರು. ಜಗನ್ನಾಥ ತನ್ನ ಯೋಜಿತ ಕ್ರಿಯೆಗೆ ಪುರಾಣಿಕರೇನು ಅನ್ನುತ್ತಾರೆಂಬ ಕುತೂಹಲದಿಂದ,

‘ಇವತ್ತಿನ ಪೇಪರ್‌ನೋಡಿದಿರ?’ ಎಂದು ರಾಯರ ಕಡೆ ನೋಡಿದ. ನೀವೇ ಅವರಿಗೆ ವಿವರಿಸಿ ಎಂದು ಸೂಚಿಸುವಂತಿತ್ತು ಅವನ ನೋಟ. ಅಷ್ಟರಲ್ಲಿ ಪುರಾಣಿಕರು ಇನ್ನೇನೊ ನೆನೆದು, ಪೈಪ್ ಎಳೆಯುತ್ತ,

‘Excuse me. I have a problem which only Mr. Jagannath can solve. As you perhaps know i have never been abroad. A cold climate would kill me as my lungs are weak. For nearly forty years now I have lived in this room amidst these books and my pictures. Early in the morning and in the evening I walk round my garden’ ಎಂದು ಮನೆಯ ಸುತ್ತದ ತೋಟ ತೋರಿಸಿದರು. ‘This is my world and meet nobody. Yet I inhabit a large world, thanks to my radio. Yesterday midnight I heard Swan Lake, God knows from which station and it was not a bad performance. It was perhaps midday where it was played, and doesn’t this fill you with wonder?’

ಪುರಾಣಿಕರು ತನ್ನಷ್ಟಕ್ಕೆ ಮಾತಾಡಿಕೊಳ್ಳುತ್ತ ರೂಮನ್ನು ಸುತ್ತಿದರು. ಅವರ ಬೆನ್ನು ಸ್ವಲ್ಪ ಬಾಗಿತ್ತೆಂಬುದನ್ನೂ, ಅವರ ಉಲನ್ ಟ್ರೌಜರ್ಸ್ ಅಂಡಿನ ಹತ್ತಿರ ಸವೆದು ದಾರಗಳು ಕಾಣುತ್ತಿದ್ದವೆಂಬುದನ್ನೂ ಜಗನ್ನಾಥ ಗಮನಿಸಿದ.

‘I Have never stepped out of my compound, but have mentally reconstructed all the famous places in London. Look I was about to ask you for a clarification and I began to wander.’

ಪುರಾಣಿಕರು ಬರೆಯುವ ಮೇಜಿನ ಬಳಿ ಜಗನ್ನಾಥನನ್ನು ಕರೆದರು. ಒಂದು ಶೀಟ್‌ಕಾಗದದ ಮೇಲೆ ರಸ್ತೆಗಳ ಚಿತ್ರ ಬರೆದು,

‘If you enter Fleet Street from this end, you can see the dome of St. Paul’s, can’t you? Where do you find the pub that the great Dr. Johnson inhabited? To our right or left?’

‘Right, perhaps’ ಎಂದು ಜಗನ್ನಾಥ, ‘ಹೀಗೆ ಹೋದರೆ Gough Square ಸಿಗತ್ತೆ, ಅಲ್ಲಿ ಡಿಕ್ಷನರಿ ಮಾಡುವಾಗ ಅವ ವಾಸವಾಗಿದ್ದ ಮನೆಯಿದೆ. ಈಗ ಅದು ಜಾನ್‌ಸನ್ ಮ್ಯೂಸಿಯಂ ಆಗಿದೆ’ ಎಂದು ಕಾಗದದಲ್ಲಿ ಬರೆದು ತೋರಿಸಿದ.

‘I know that. Thats a lot. Do you know many books i have read trying to locate some of these famous historical places? The book I read was vague about this pub. And I haven’t had sleep many nights trying to figure out whether it was to the right of the Street or left.’

ಪುರಾಣಿಕರ ಕಣ್ಣುಗಳು ಖುಷಿಯಿಂದ ಮಿನುಗಿದವು. ‘To the right then. Good’ ಎಂದು ತಮಗೇ ಅಂದುಕೊಂಡು ಮಗ್ನರಾದರು. ನಂತರ ಹಸನ್ಮುಖಿಯಾಗಿ ಜಗನ್ನಾಥನ ಕಡೆಗೇ ನೋಡುತ್ತ ಕೇಳಿದರು :

‘You must be tired of listening only to me. You must meet my friend. I Shall bring him here’ ಎಂದು ಅವರ ಸ್ಟಡಿಯಿಂದ ಇನ್ನೊಂದು ಕೋಣೆಗೆ ಹೋದರು.

ಜಗನ್ನಾಥ ಶ್ರೀಪತಿರಾಯರನ್ನು ನೋಡಿದ ; ಖಾದಿಯ ಅಡ್ಡಪಂಚೆಯುಟ್ಟು ಮುಂಡು ತೋಳಿನ ಅಂಗಿ ಹಾಕಿ ಸೋಫಾದ ಮೇಲೆ ಕಾಲು ಮಡಚಿ ಕೂತಿದ್ದರು. ಅಷ್ಟೇ ಅಲ್ಲ – ಎಲೆಗೆ ಸುಣ್ಣ ಹಚ್ಚುತ್ತಿದ್ದರು. ಅವರ ಮುಖದ ಮೇಲಿದ್ದ ಮುಗುಳ್ನಗು ತನ್ನನ್ನು ಕೆದಕುವಂತಿತ್ತು. ಮುಗುಳ್ನಗು ಕಾತರಕ್ಕೆ ತಿರುಗಿ ಹೇಳಿದರು:

‘ನಿಂತ ನೆಲ ಚೂರು ಚೂರೇ ಕರಗ್ತ ಇದೆ. ಎಷ್ಟೋ ವರ್ಷಗಳಿಂದ ಒಬ್ಬನೇ ಒಬ್ಬ ಗೇಣಿದಾರ ಇವರ ಮುಖ ನೋಡಿದ್ದಿಲ್ಲ; ಇವರು ಅವನ ಮುಖ ನೋಡಿದ್ದಿಲ್ಲ. ಎಲ್ಲ ಶ್ಯಾನುಭೋಗರ ಮುಖಾಂತರ ವ್ಯವಹಾರ. ಕೊಬ್ಬಿದ ಹೆಗ್ಗಣ ಆಗಿದಾನೆ ಅವ. ಮತ್ತೆ ಈ ಸ್ನೇಹಿತ ಇನ್ನೊಂದು ಹೆಗ್ಗಣ. ಇನ್ನೊಂದು ಐದಾರು ವರ್ಷದಲ್ಲಿ ಇವರ ಸೂಟೆಲ್ಲ ಹರಿದು ಹೋಗಿರುತ್ತೆ. ಈಗ್ಲೇ ಓ.ಡಿ. ವ್ಯವಹಾರ ಶುರುವಾಗಿದೆ.’

‘My friend Avdhani’

ಕತ್ತು ಮುಚ್ಚುವ ಸ್ವೆಟರ್ ಹಾಕಿ, ದೊಗಳೆ ಪ್ಯಾಂಟ್ ತೊಟ್ಟಿದ್ದ ಅವಧಾನಿಯನ್ನು ಪುರಾಣಿಕರು ಪರಿಚಯ ಮಾಡಿಸಿದರು. ಅವಧಾನಿ ಕಾಲಿನ ಮೇಲೆ ಸಂಪೂರ್ಣ ಸ್ವಾಧೀನವಿಲ್ಲದೆ ನಡೆದು ಬಂದು ಕೂತ. ಅವನ ಗ್ಲಾಸಿನಲ್ಲಿದ್ದ ದ್ರವ ಸರಾಯಿಯಿರಬೇಕೆಂದು ಜಗನ್ನಾಥ ವಾಸನೆಯಿಂದ ಊಹಿಸಿದ. ಅವಧಾನಿಗೆ ಸುಮಾರು ನಲವತ್ತು ವರ್ಷಗಳಾಗಿದ್ದಿರಬಹುದು. ಇಂಗ್ಲೆಂಡಿನ ಸುಂದರವಾದ ಫ್ಲ್ಯಾಟನ್ನು ಹೋಲುತ್ತಿದ್ದ ಪುರಾಣಿಕರ ಸ್ಟಡಿಯಲ್ಲಿ ಅವಧಾನಿಯನ್ನು ನೋಡುತ್ತ ನೋಡುತ್ತ ಜಗನ್ನಾಥನಿಗೆ ಏನೋ ವಿಪರ್ಯಾಸದ ಅನುಭವ ತನಗಾಗುತ್ತಿದೆಯಲ್ಲ ಇದಕ್ಕೆ ಕಾರಣವೇನು ಎಂದು ಊಹಿಸುತ್ತಿದ್ದಂತೆ ಅವಧಾನಿಯ ಮುಖ ವಿಲಕ್ಷಣವಾಗಿದೆ ಎನ್ನಿಸಿತು. ಅವನ ಹಣೆಯ ಎಡಪಾರ್ಶ್ವದಲ್ಲಿ ಭೂತರಾಯನ ಹರಕೆಗಾಗಿ ಹಾಕಿದ ಬರೆಯ ಗುರ್ತಿತ್ತು. ಪುರಾಣಿಕರ ನೀಟಾಗಿ ಕ್ಷೌರ ಮಾಡಿದ ಮುಖ, ಅವರ ಸಭ್ಯ ನಿಲುವು ಗತ್ತುಗಳಿಗೆ ವಿರೋಧವಾಗಿ ಅವಧಾನಿಯ ಕಣ್ಣುಗಳಲ್ಲಿ ಗಿಬುರು, ಮುಖದ ಮೇಲೆ ಐದಾರು ದಿನಗಳ ಬಿಳಿ ಕರಿ ಕೂಳೆಗಳು ಇದ್ದುವು. ಬೆಳಿಗ್ಗೆ ಇವನು ಮುಖವನ್ನು ತೊಳೆದೇ ಇಲ್ಲವೆನಿಸಿತು.

‘Drink is the only consolation of a lonely life, you see’

ಪುರಾಣಿಕರು ನಗುತ್ತ ಸ್ನೇಹಿತನ ಅವಸ್ಥೆಯ ಮುಜುಗರ ಮುಚ್ಚಲು ಹೇಳಿದರು :

‘He does all my shopping for me. Hence you can guess how well travelled he must be within the country’.

ಅವಧಾನಿಯನ್ನು ಮಾತಾಡಲು ಪುರಾಣಿಕರು ಪ್ರಚೋದಿಸುತ್ತಿದ್ದಾರೆಂದು ಜಗನ್ನಾಥನಿಗೆ ಗೊತ್ತಾಯಿತು. ಅವಧಾನಿ ಸರಾಯನ್ನು ಗಟಗಟನೆ ಕುಡಿದು ಗ್ಲಾಸನ್ನು ಕೆಳಗಿಟ್ಟು, ಕೈಯಿಂದ ಬಾಯೊರೆಸಿಕೊಂಡು ಹೇಳಿದ :

‘Mr. Puranik is a great gentleman. He is my refuge. I run away from my home to this place everyday. My home is infected, you understand, by pilgrims.’

ಅವಧಾನಿ ಎಳೆದೆಳೆದು ಮಾತಾಡಿದ. ಪುರಾಣಿಕರು ಹೊಗಳಿಸಿಕೊಳ್ಳಲು ಮುಜುಗರ ಪಡುತ್ತ ಮಾತು ಬದಲಾಯಿಸಲು ಹೇಳಿದರು.

‘Mr. Avdhani is an agnostic, but he claims that he has psychic powers. Perhaps he has. For myself I don’t believe in any of that kind of stuff. Mr. Avdhani claims that he was a medium once and Bhootha Raya used to speak through him. I have always laughed at this kind of nonsense. Yet I would like to do some research you know in this area.’

ಅವಧಾನಿ ಉತ್ಸಾಹಗೊಂಡ. ಎಳೆದೆಳೆದು ಮಾತಾಡುತ್ತ ಸೈಕಿಕ್ ಪವರ್ಸ್ ನಿಜವೆಂದು ವಾದಿಸಿದ. ಈ ಬರೆಯಿಂದಾಗಿ ಭೂತರಾಯನ ಅಂಶ ತನ್ನಲ್ಲಿದೆಯೆಂದು ಹೇಳಿದ. ನನ್ನ ಕಣ್ಣುಗಳನ್ನು ನೋಡುತ್ತಲೇ – ನೋಡಿ, ಈ ಕಣ್ಣುಗಳನ್ನು ನೋಡುತ್ತಲೇ ಇರಬೇಕೆಂದು ನಿಮಗನ್ನಿಸುವುದಿಲ್ಲವೆ, ನನ್ನ ಸೈಕಿಕ್ ಪವರ್ಸ್‌ನಿಂದ ಪುರಾಣಿಕರನ್ನು ಅನೇಕ ಅನಿಷ್ಟಗಳಿಂದ ಕಾಪಾಡಿದ್ದೇನೆ ಎಂದು ಕೊಚ್ಚಿಕೊಂಡ. ಯಾತ್ರಿಕರನ್ನು ಬೈದ. ಅವಳ ಸಂಬಂಧಿಗಳನ್ನೆಲ್ಲ ತಂದು ಮನೆಯಲ್ಲಿಟ್ಟುಕೊಂಡು ತನ್ನನ್ನು ಮನೆಬಿಡುವಂತೆ ಮಾಡಿದ ಗಯ್ಯಾಳಿ ಹೆಂಡತಿಯನ್ನು ದೂಷಿಸಿದ. ಅಮಲಿನಲ್ಲಿ ಭಾವಾತಿರೇಕದಿಂದ  ಮಾತಾಡುತ್ತ ಪುಟ್ಟಮ್ಮ ಮತ್ತು ಪುರಾಣಿಕರು ಎಂದೂ ತನ್ನನ್ನು ಕೈಬಿಡುವುದಿಲ್ಲವೆಂದು ಅಳಲು ಪ್ರಾರಂಭಿಸಿದ. ಹೆಂಡತಿಯ ಶೀಲದ ಬಗ್ಗೆ ತನಗೆ ಸಂಶಯವಿದೆಯೆಂದೂ, ಅವಳ ಸೋದರಮಾವ ತನ್ನ ಆಸ್ತಿಗಾಗಿ ಮಾಟ ಮಾಡಿಸಿದ್ದಾನೆಂದೂ, ತನಗಿರುವ ಸೈಕಿಕ್ ಪವರ್ಸ್‌ನಿಂದಾಗಿ ಅವನ ಪಡಪೋಶಿ ನಡೆಯುತ್ತಿಲ್ಲವೆಂದೂ, ಅವನನ್ನು ತಾನು ಮುಂದಿನ ಅಮಾವಾಸ್ಯೆಯೊಳಗಾಗಿ ಮುಗಿಸುವುದು ಖಂಡಿತವೆಂದೂ, ಭೂತರಾಯನಿಗೆ ತಾನೆಲ್ಲ ಹೇಳಿದ್ದೇನೆಂದೂ ರೇಗಾಡಿದ. ಇಂಗ್ಲಿಷ್‌ನಲ್ಲಿ ಪ್ರಾರಂಭವಾಗಿದ್ದ ಮಾತು ಗೋಳಿಗೆ, ಕೋಪಕ್ಕೆ ತಿರುಗಿದೊಡನೆಯೇ ಕನ್ನಡವಾಗಿತ್ತು. ಪುರಾಣಿಕರು ಗಂಭೀರವಾಗಿ ಅವನ ಕಡೆಯೆ ನೋಡುತ್ತ ಕರುಣೆಯಿಂದ, ಆದರೆ ನಿಷ್ಠುರವಾಗಿ ಅವನನ್ನೆಬ್ಬಿಸಿ ಒಳಗೆ ಕರೆದುಕೊಂಡು ಹೋದರು. ಸ್ವಲ್ಪ ತಡೆದು ಬಂದು ಕಳಕಳಿಯಿಂದ ವಿವರಿಸಿದರು:

‘You must pardon my friend’s misbehaviour. For Mr. Jagannath who has seen cocktail parties this may not be an unusual sight. Mr. Avdhani needs to read more of Russel. He is very sensible and helpful, but breaks down when he drinks. He is very unhappy, you see.’

ಪುರಾಣಿಕರು ತಮ್ಮ ಸ್ಥಿಮಿತವನ್ನು ಕಳೆದುಕೊಂಡಿರಲಿಲ್ಲ. ‘Let me fill you glass’ ಎಂದರು. ಜಗನ್ನಾಥ ‘ಬೇಡ, ಥ್ಯಾಂಕ್ಸ್‌’ ಎಂದ. ಕೂಡಲೇ ಹೊರಟು ಹೋಗಬೇಕೆನ್ನಿಸಿ ಎದ್ದು ನಿಂತ. ಆದರೆ ಪುರಾಣಿಕರ ಗಮನ ಸೆಳೆಯುವುದು ಸಾಧ್ಯವಾಗಲಿಲ್ಲ; ಅವರು ಯಾವುದೋ ಗುಂಗಿನಲ್ಲಿದ್ದಂತೆ ಅನ್ನಿಸಿತು.

‘The only way is to westernise ourselves. Look at Avdhani’s. This country grabs you by the neck when you are weak.’

ಇಷ್ಟು ಹೊತ್ತೂ ಸುಮ್ಮನಿದ್ದ ರಾಯರು ಜಗನ್ನಾಥ ಚಡಪಡಿಸುತ್ತಿರುವುದನ್ನು ಗಮನಿಸಿ ಪುರಾಣಿಕರನ್ನು ಕೇಳಿದರು:

‘ಇವತ್ತಿನ ಪೇಪರ್ ನೋಡಿದಿರ?’

‘No. It if ages since I have looked at newspapers. Does anything new ever happen in this country?’

ಜಗನ್ನಾಥ ಆಶ್ಚರ್ಯದಿಂದ ರೇಡಿಯೋ ತೋರಿಸಿ ಕೇಳಬೇಕೆನ್ನುವಷ್ಟರಲ್ಲೆ ಪುರಾಣಿಕರು ಹೇಳಿದರು :

‘I abhor news. I listen only to music, and occasionaly to serious talk and poetry.’

ಇವರ ಬಿಳಿಯ ಕೂದಲನ್ನು ಕತ್ತರಿಸಲು ತಿಂಗಳಿಗೊಮ್ಮೆಯಾದರೂ ಕ್ಷೌರಿಕ ಬರುವುದಿಲ್ಲವೇ, ಅವನೂ ಇವರ ಜೊತೆ ಭಾರತೀಪುರದ ಸುದ್ದಿ ಮಾತಾಡದೆ ಹೊರಟು ಹೋಗುವನೇ ಎಂದು ಜಗನ್ನಾಥ ಆಶ್ಚರ್ಯಪಟ್ಟ. ತನ್ನ ಕ್ರಿಯೆಯ ಬಗ್ಗೆ ಶ್ರೀಪತಿರಾಯರು ಪುರಾಣಿಕರಿಗೆ ವಿವರಿಸುತ್ತಿರುವುದು ಅಸಂಗತವೆನ್ನಿಸಿತು. ರಾಯರು ತನ್ನ ಮಾತುಗಳಲ್ಲೆ ವಿವರಿಸುತ್ತಿದ್ದುದನ್ನು ಕೇಳಿದಾಗಲಂತೂ ತುಂಬ ನಾಚಿಕೆಯಾಯಿತು; ಪುರಾಣಿಕರ ಕಣ್ಣಲ್ಲಿ ತಾನೊಬ್ಬ ಮೂರ್ಖನಾಗಿ ಕಾಣಿಸುತ್ತಿರಬಹುದೆನ್ನಿಸಿತು. ಆದರೆ ಪುರಾಣಿಕರು ಗಂಭೀರವಾಗಿ ರಾಯರು ಹೇಳಿದ್ದನ್ನೆಲ್ಲ ಕೇಳಿಸಿಕೊಂಡು ಹೇಳಿದರು:

‘I wish you good luck Mr. Jagannath. I was also a rebel once, you see’ ಎಂದು ತುಸು ಸುಮ್ಮನಿದ್ದು ನಿಟ್ಟುಸಿರೆಳೆದು ಹೇಳಿದರು :

‘I am sorry to say so, but I think it is utterly futile in India. We live in the womb of God. Perhaps you can save yourself, and a few others who are like you. But collective action is impossible. Therefore I say — Westernise yourself. Stay sane. But don’t attempt to change this country. She is amorphous’

ಪುರಾಣಿಕರು ಲೆಕ್ಚರ್ ಕೊಡುವ ಧಾಟಿಯಲ್ಲಿ ಮಾತಾಡಿದರು. ತಾನು ಉಪಯೋಗಿಸುತ್ತಿದ್ದ ಮಾತಾದ ‘Womb of God’ ನ್ನು ಅವರ ಬಾಯಲ್ಲಿ ಕೇಳಿ ಜಗನ್ನಾಥನಿಗೆ ಹೆದರಿಕೆಯಾಯಿಗೆ. ‘ಹೋಗೋಣ ರಾಯರೆ’ ಎಂದ.

My young friend, you must excuse my pessimism, I admire your impatience; it is healthy. I also took an interest once in this town. Then I did some research on Bhootha Raya, who, according to me, is the God of passion and psychic energy. Unlike Manjunatha who represents the intlectual and religious aspect of Indian thinking. Which is hepocritical — I needn’t and that. I wrote down all the fascinating songs and tales about Bhootharaya which I collected from the peasants. I was very young man then and very impatient, like Mr. Jagannath now. In those days of bomb throwing, Bhootharaya fascinated me and I wondered why and how he came to be, to be…’

‘Subjugated’ ಜಗನ್ನಾಥ ಸೇರಿಸಿದ.

‘Yes, subjugated to the Nirguna Brahman, the God of the hypocritic Indian liberal. The material is still with me. I shall search for it and give it to you. You can make use of it if you like.’

‘ಹೋಗೋಣಲ್ಲವೆ?’ ಎಂದು ಜಗನ್ನಾಥ ಹೆಜ್ಜೆಯಿಟ್ಟ. ಯಾವ ಅವಸರವಾಗಲೀ ಉದ್ವಿಗ್ನತೆಯಾಗಲೀ ಇಲ್ಲದೆ ರಾಯರು ನಿಂತೇ ಇದ್ದರು. ಪುರಾಣಿಕರ ಹೊಳೆಯುವ ಕಪ್ಪು ಶೂಗಳು, ನುಣ್ಣನೆ ಕ್ಷೌರ ಮಾಡಿದ ಗಲ್ಲ, ಕೈಗಳನ್ನು ಹಿಂದಕ್ಕೆ ಕಟ್ಟಿ ತುಸು ಬಾಗಿ ನಿಂತ ಗತ್ತು – ಈ ಅಚ್ಚುಕಟ್ಟಿನ ಮೂಲಕ ವ್ಯಕ್ತವಾದ ಆತ್ಮ ನಂಬಿಕೆ ಕಂಡು ಜಗನ್ನಾಥ ಬೆರಗಾದ. ಅವರ ಪ್ಯಾಂಟುಗಳು ಸವೆಯುತ್ತಿವೆ. ಅವರ ಇಂಗ್ಲಿಷ್‌ನಲ್ಲಿ ಇನ್ನೂ ಕನ್ನಡದ ಛಾಯೆಯಿದೆ, ಅವರ ಆಪ್ತನಾದ ಅವಧಾನಿಗೆ ಭೂತಚೇಷ್ಟೆಗಳಲ್ಲಿ ನಂಬಿಕೆಯಿಂದೆ  – ಇತ್ಯಾದಿಗಳನ್ನು ನೆನೆಯುತ್ತ ಜಗನ್ನಾಥ ಅವರನ್ನು ಹಾಸ್ಯದಲ್ಲಿ ಮರುಕದಲ್ಲಿ ನೋಡಲು ಪ್ರಯತ್ನಿಸಿದ. ಆದರೆ ಪುರಾಣಿಕರ ಸೀರಿಯಸ್ಸಾದ ಕಣ್ಣುಗಳಲ್ಲಿ ತಿಳುವಳಿಕೆಯಿತ್ತು, ಐರನಿಯಿತ್ತು. ದುರಂತ ಪ್ರಜ್ಞೆಯಿತ್ತು. ಅಲ್ಲವೆ? ಭಾರತೀಪುರದಲ್ಲಿದ್ದೂ ಶತಮಾನಗಳನ್ನು ಪುರಾಣಿಕರಂತೆ ಜಿಗಿಯಬಹುದಲ್ಲವೇ? – ಎನ್ನಿಸಿತು. ಹೀಗೆ ಜಿಗಿದದ್ದು ಸುಳ್ಳೆಂದು ಪುರಾಣಿಕರಿಗೆ ಯಾವ ಮೂಲಕ ಯಾವತ್ತು ತಿಳಿದೀತೆಂದು ಜಗನ್ನಾಥ ತಬ್ಬಿಬ್ಬಾಗಿ ಯೋಚಿಸಿದ. ಪ್ರಾಯಶಃ ಪಾಪರ್ ಎದ್ದಾಗ.

ಜಗನ್ನಾಥನಿಗೆ ಈ ತನಕ ಹೊಳೆಯದಿದ್ದ ಇನ್ನೊಂದು ಪ್ರಶ್ನೆಯೆದ್ದಿತು. ಇಷ್ಟು ಹೊತ್ತು ಅವರ ಜೊತೆಗಿದ್ದರೂ, ಎಷ್ಟೊಂದು ಮಾತುಗಳಲ್ಲಿ ಅವರು ತನ್ನನ್ನು ಗಂಭೀರವಾದ ಚರ್ಚೆಗೆ ಆಹ್ವಾನಿಸಿದರೂ, ‘ಪುರಾಣಿಕರೇ ನೀವೊಂದು ಭ್ರಾಮಕ ಜಗತ್ತನ್ನು ಸೃಷ್ಟಿಸಿಕೊಂಡು ಅದರಲ್ಲಿ ಬದುಕುತ್ತಿದ್ದೀರಿ’ ಎಂದು ತಾನೇಕೆ ಹೇಳಲಿಲ್ಲ? ಹಾಗಾದರೆ ತನಗೆ ತಿಳಿಯದಂತೆಯೇ ಪುರಾಣಿಕರನ್ನು ತಾನು ಮಗುವನ್ನು ಸಹಿಸಿಕೊಳ್ಳುವಂತೆ ಸಹಿಸಿದೆನೆ? ರಾಯರು ಕೂಡ ಪುರಾಣಿಕರ ಜೊತೆ ಈ ರೀತಿಯ ಕರುಣೆಯ ಸಂಬಂಧವನ್ನೆ ಇಟ್ಟುಕೊಂಡಿದ್ದಾರೆಯೆ? ಬೇರವರಲ್ಲಿ ತಾನು ಇಂತಹ ಭಾವನೆಯನ್ನು ಉಂಟು ಮಾಡುತ್ತೇನೆಂದು ಪುರಾಣಿಕರಿಗೆ ತಿಳಿದೇ ಇಲ್ಲವೆ? ಇನ್ನೊಮ್ಮೆ ಬಂದು ಇವರನ್ನು ಆಳವಾಗಿ ಕೆದಕಬೇಕೆನ್ನಿಸಿತು. ನನ್ನ ಕ್ರಿಯೆ ಈ ಮನುಷ್ಯನನ್ನು ಮುಟ್ಟದಲ್ಲ ಎಂದು ವ್ಯಥೆಯಾಯಿತು. ಈ ಪರೀಕ್ಷಿತ ರಾಜನನ್ನು ಕಚ್ಚು ಕ್ರಿಮಿ ಕೋಟೆಯೊಳಗೆ ಬಂದೀತೆ? ಹೇಗೆ?

ಎಲ್ಲ ಯೋಚನೆಗೂ ಮೀರಿದ ವಿಚಿತ್ರವಾದ ಅಸೌಖ್ಯದ ಭಾವನೆಯಿಂದಾಗಿ ಜಗನ್ನಾಥ ಶ್ರೀಪತಿರಾಯರಿಗೆ ‘ಹೋಗೋಣವೆ?” ಎಂದು ಮತ್ತೆ ಕೇಳಿದ. ‘Sorry if I have bored you. It is the silence of the place whihc makes me unpleasent to meet, you see,’ ಎಂದು ಪುರಾಣಿಕರು ಕೈ ನೀಡಿದರು. ಪ್ರೀತಿಯಿಂದ ತನ್ನನ್ನವರು ನೋಡಿದರು. ಜಗನ್ನಾಥನಿಗೆ ತನ್ನ ಬಗ್ಗೆ ನಾಚಿಕೆಯಾಯಿತು. ಪುರಾಣಿಕರ ಸಪುರಾದ ಕೈಯನ್ನೊತ್ತಿ ಕುಲುಕಿದ. ರಾಯರು ಹೇಳಿದರು :

‘ನಿಮ್ಮ ಹೆಂಡತಿಯನ್ನು ನೋಡಬೇಕಿತ್ತು.’

‘Oh yes’, ಥಟ್ಟನೆ ಎಚ್ಚೆತ್ತವರಂತೆ ಪುರಾಣಿಕರು ಹೇಳಿದರು. ‘You must see her. You have a very soothing effect on her.’ ಜಗನ್ನಾಥನ ಕಡೆ ತಿರುಗಿದರು. ‘Sorry she can’t come up. If you don’t mind the trouble please come down with us.’ ‘Not at all’ ಎಂದು ಜಗನ್ನಾಥ ಅವರಿಬ್ಬರ ಜೊತೆ ಹೊರಟ.

ಜಗನ್ನಾಥನಿಗೆ ಹಜಾರ ದಾಟಿ ಒಳಗೆ ಹೋಗುತ್ತಿದ್ದಂತೆ ಬೇರೆ ಲೋಕಕ್ಕೇ ಬಂದಂತೆನ್ನಿಸಿತು. ಈ ಮನೆಯಲ್ಲೂ ತಲೆ ತಗ್ಗಿಸಿ ನಡೆಯಬೇಕಾದ ಬಾಗಿಲುಗಳು, ಕತ್ತಲೆಯ ಕೋಣೆಗಳು, ನಾಗಂದಿಗೆಗಳು, ಹೊಸಿಲಿನ ಮೇಲೆ ಹಿಟ್ಟಿನ ರಂಗೋಲೆ, ಕನ್ನಡಿಯಲ್ಲಿ ಚಿತ್ರಿಸಿದ ಕೃಷ್ಣರಾಧೆಯರು, ಒಣಗಿದ ತೋರಣ – ಇರುತ್ತವೆಂದು ಜಗನ್ನಾಥ ಊಹಿಸಿರಲಿಲ್ಲ. ‘Sorry you have to walk carefully. This is an ancestral part of the house you see My eccentricity made me build the other parts of the house.’ ಎಂದು ಪುರಾಣಿಕರು ಜಗನ್ನಾಥನನ್ನು ಅನಗತ್ಯವಾದ ಉಪಚಾರದಿಂದ ಕೈಹಿಡಿದು ನಡೆಸಿದರು. ಕೋಣೆಯೊಂದನ್ನು ಹೊಕ್ಕು ಮೃದುವಾಗಿ ‘ಸಾವಿತ್ರಿ’ ಎಂದು ಕರೆದು.

ಬಿಳುಚಿದ ಮುಖದ ಸಾವಿತ್ರಿ ಗಂಡನ ಧ್ವನಿ ಕೇಳಿ ಏಳಲು ಪ್ರಯತ್ನಿಸಿದಳು. ‘Please don’t bother. ಮಲಗಿರು. Sripaty has come to see you’ ಎಂದು ಪುರಾಣಿಕರು ತುಂಬ ಆತಂಕದಿಂದ ಪ್ರೀತಿಯಿಂದ ಹೇಳಿದರು. ಸಾವಿತ್ರಿಯ ಮುಖ ರಾಯರನ್ನು ನೋಡಿ ಅರಳಿತು. ಅವಳ ಸೊರಗಿದ ಮುಖ ಇನ್ನೂ ಹುಡುಗಿಯೊಬ್ಬಳದು ಎನ್ನಿಸುವಂತಿತ್ತು. ರಾಯರು ಹತ್ತಿರ ಹೋಗಿ ನಿಂತು, ‘ಜಗನ್ನಾಥ – ಯಾರೂಂತ ಗೊತ್ತಾಯ್ತ?’ ಎಂದು ಕೇಳಿದರು. ಸಾವಿತ್ರಿ ‘ಆರೋಗ್ಯವ? ಇಂಗ್ಲೆಂಡಿಂದ ಯಾವಾಗ ಬಂದಿರಿ?’ ಎಂದು ತುಂಬ ಸೌಜನ್ಯದಿಂದ ಪ್ರಶ್ನಿಸಿದರು. ರಾಯರ ಕಡೆ ಮತ್ತೆ ತಿರುಗಿ ‘ಪಾಪ, ಜೋಯಿಸರ ಸೊಸೆ ತೀರಿಹೋದಳಂತೆ. ತುಂಬ ಲಕ್ಷಣವಾದ ಹುಡುಗೀಂತ ಕೇಳಿದ್ದೆ’ ಎಂದರು. ‘ನಿಂತೇ ಇದ್ದೀರಲ್ಲ. ಕೂತುಕೊಳ್ಳಿ’ ಎಂದು ತನ್ನನ್ನಾದರೂ ಎಬ್ಬಿಸಿ ಕೂರಿಸಿ ಎಂದು ಕೇಳುವಂತೆ ಗಂಡನನ್ನು ನೋಡಿದರು. ‘You sleep, Don’t bother about us’ ಪುರಾಣಿಕರು ಹೆಂಡತಿಯ ಹಣೆಯ ಮೇಲೆ ಕೈಯಾಡಿಸಿದರು.

ಜಗನ್ನಾಥನಿಗೆ ಈ ಗಂಡ ಹೆಂಡಿರ ಅನ್ಯೋನ್ಯತೆಗಿಂತಲೂ ಹೆಚ್ಚಿನ ಆಶ್ಚರ್ಯ ಹುಟ್ಟಿಸಿದ ಸಂಗತಿಯೆಂದರೆ ಸಾವಿತ್ರಿ ಮಲಗಿದ್ದ ರೂಮಿನಲ್ಲಿದ್ದ ಮಂಜುನಾಥನ ಫೋಟೋ. ಈ ಫೋಟೋಗೆ ಗುಲಾಬಿ ಹೂಗಳನ್ನು ಮುಡಿಸಿತ್ತು. ಅವರು ಮಲಗಿದ್ದ ಹಾಸಿಗೆಯ ಪಕ್ಕದಲ್ಲಿ ಉಡುಪಿ ಶ್ರೀಕೃಷ್ಣ ಪಂಚಾಂಗವಿತ್ತು. ‘ಇನ್ನೇನು ರಥೋತ್ಸವ ಬಂದೇ ಬಿಟ್ಟಿತು’ ಎಂದು ಸಾವಿತ್ರ ರಾಯರ ಕಡೆ ನೋಡಿದರು. ‘ಹೌದು’ ಎಂದರು ರಾಯರು.

ಆಕೆಗೆ ಸುಸ್ತಾಗದಿರಲೆಂದು ಮೂವರೂ ಹೊರಗೆ ಬಂದರು. ಹಜಾರದಲ್ಲಿ ನಿಂತು ಪುರಾಣಿಕರು ರಾಯರ ಕೈಯನ್ನು ಕುಲುಕಿದರು. Thanks for cheering up my wife’ ಎಂದು ಜಗನ್ನಾಥನ ಕಡೆ ನೋಡಿ, ‘I admire you, but I am also sorry for you’ ಎಂದು ವ್ಯಸನದಿಂದ, ಪ್ರೀತಿಯಿಂದ ಅವನ ಕೈಕುಲುಕಿದರು. ‘Come again when you want to relax’ ಎಂದರು. ಜಗನ್ನಾಥ ಅವಸರಪಡುತ್ತ ರಾಯರ ಜೊತೆ ಹೊರಗೆ ಬಂದ. ಗೇಟಿನಲ್ಲಿ ನಿಂತಿದ್ದ ಘೂರ್ಕ ಸೆಲ್ಯೂಟ್ ಮಾಡಿ ಬೀಗ ಹಾಕಿಕೊಂಡ.

��!* ���p��/u ದೆ ಹೇಳಿ.’

 

‘ಭಯದ ಪ್ರಶ್ನೆಯಲ್ಲ ಜಗನ್ನಾಥ. ಜನ ನಂಬಿ ಬದುಕಿದಾರೆ. ಅವರ ನಂಬಿಕೇನ್ನ ನಾಶಮಾಡಕ್ಕೆ ನಮಗೇನು ಅಧಿಕಾರ ಅಂತ. ದೇವರಲ್ಲಿರೊ ನಂಬಿಕೆ ಕಳಕೊಂಡು ಈ ಮಂತ್ರಿ ಮಂಡಲಾನ್ನ ನಂಬಿ ಬದುಕಿ ಅಂತ ಹೇಳಕ್ಕಾಗತ್ತ?’

‘ನೀವು ಸೋತಿದೀರಿ. ಅದಕ್ಕೆ ಹೀಗೆ ಲಿಬರಲ್‌ನಂತೆ ಮಾತಾಡ್ತ ಇದೀರಿ. ಮಂಜುನಾಥನ ಮಹಿಮೇನ್ನ ನಾಶಮಾಡದ ಹೊರ್ತು ಈ ಊರು creative ಆಗಲ್ಲ. ಹೊಲೆರಿಗೆ ಮಾತ್ರ ಅದು ಸಾಧ್ಯ. ನೋಡಿ ನೀವೇ ಎಷ್ಟು ಭಯಪಡ್ತ ಇದೀರಿ.’

ಜಗನ್ನಾಥನಿಗೆ ಇನ್ನೂ ಇನ್ನೂ ಕ್ರೂರವಾಗಿ ಮಾತಾಡಬೇಕೆನ್ನಿಸಿತು. ರಾಯರು ಪಡುತ್ತಿದ್ದ ದಿಗಿಲಿನಲ್ಲಿಯೆ ತನ್ನ ಕ್ರಿಯೆ ಸಫಲವಾಗಬಹುದಾದ ಸಾಧ್ಯತೆ ಕಂಡಿದ್ದರಿಂದ ಅವನು ಉತ್ತೇಜಿತನಾಗಿ ತನ್ನ ಯೋಜನೆಗಳನ್ನೆಲ್ಲ ರೋಷದಿಂದ ಹೇಳಿಕೊಂಡ. ರಾಯರು ಸುಸ್ತಾದ ಧ್ವನಿಯಲ್ಲಿ ಮಾತಾಡಿದರು :

‘ಮನಸ್ಸಲ್ಲಿ ದ್ವೇಷವಿರಕೂಡದು, ಪರಿಶುದ್ಧವಾಗಿರಬೇಕು ಅಂತ ಗಾಂಧೀಜಿ ಹೇಳ್ತಿದ್ದರು. ಕ್ರಾಂತಿ ಮಾಡಲು ಹೊರಟಾಗ ಯಾವ ಸ್ವಾರ್ಥ ಚಿಂತನೆಯೂ ಇರಕೂಡದು.’

ರಾಯರಿಗೆ ತನಗಾದ ಭಯವನ್ನು ಎದುರಿಸುವುದು ಕಷ್ಟವಾಗಿದೆಯೆಂದು ಜಗನ್ನಾಥನಿಗೆ ಅನ್ನಿಸಿತು. ಪಶ್ಚಾತ್ತಾಪದಿಂದ ಹೇಳಿದ :

‘ನಮಗೆ ಐತಿಹಾಸಿಕ ಪ್ರಜ್ಞೆಯಿಲ್ಲ ರಾಯರೆ. ನೀವು ಸುಸ್ತಾದವರಂತೆ ಮಾತಾಡ್ತ ಇದೀರಿ. ಆದರೆ ನೀವು ಹಿಂದೆ ಜವಳಿ ಅಂಗಡಿಗೆ ಬೆಂಕಿ ಹಾಕಿ ತಾಲ್ಲೂ ಕಛೇರಿ ಎದುರು ಮುಷ್ಕರ ಮಾಡಿದ್ರಲ್ಲ – ಅದರಿಂದಾಗಿ ನನಗಿವತ್ತು ಈ ಕೆಲಸ ಮಾಡಬೇಕಂತ ಅನ್ನಿಸಿದೆ. ನನ್ನನ್ನು ಸೃಷ್ಟಿಸೋಕೆ ನೀವು ಕಾರಣರು. ನೀವು ಈಗ ಸರಿದು ನಿಂತ ಹಾಗೆ ನಾನೂ ನಾಳೆ ಹೆದರಬಹುದು. ಸರಿದುನಿಲ್ಲಬಹುದು. ಆದರೆ ಚರಿತ್ರೆ ನಮ್ಮನ್ನೆಲ್ಲ ದುಡಿಸಿಕೊಳ್ಳುತ್ತೆ, ನಿರ್ದಯವಾಗಿ ದುಡಿಸಿಕೊಳ್ಳುತ್ತೆ.’

ರಾಯರು ಎಲೆಗೆ ಸುಣ್ಣ ಹಚ್ಚುತ್ತ ಚೇತರಿಸಿಕೊಂಡು ಹೇಳಿದರು. ಉಡಾಫೆ ಮಾತಲ್ಲಿ ಅವರು ಸಣ್ಣಗಾಗುತ್ತ ತಾನೂ ಸಣ್ಣಗಾಗುತ್ತಿದ್ದೇನೆ ಎನ್ನಿಸಿತು ಜಗನ್ನಾಥನಿಗೆ :

‘ಈ ಹೊಲೇರಿಗೆ ಬೇಕಾಗಿರೋದು ಹೆಂಡ. ದೇವರ ದರ್ಶನವಲ್ಲ. ನಿನ್ನ ಗುಲಾಮರು ಅವರು. ಆದ್ರಿಂದ ನೀನು ಹೇಳಿದ ಹಾಗೆ ಕೇಳಿಯಾರು. ನೀನು ಸುಮ್ಮನೇ ಅವರನ್ನ ಸತಾಯಿಸ್ತ ಇದೀಯ ಅಷ್ಟೆ.’

ಜಗನ್ನಾಥ ಮಾತಾಡಲಿಲ್ಲ. ರಾಯರು ಏನೇನೋ ಮಾತಾಡಲು ಪ್ರಾರಂಭಿಸಿದ್ದು ಕಂಡು ಅವನಿಗೆ ಬೇಸರವಾಯಿತು.

‘ಊರಿಗೆ ಕಳಂಕ ತರ್ತಿದಾನೆ ಅಂತ ಅಪವಾದಕ್ಕೆ ಯಾಕೆ ಗುರಿಯಾಗ್ತೀಯ? ರಾಜಕೀಯ ತುಂಬ ಹೊಲಸಾಗಿದೆ. ನೀನು ಯಾಕೆ ನಿನ್ನ ಕೈಯನ್ನ ಕೊಳೆ ಮಾಡಿಕೋಬೇಕು ಹೇಳು. ಈ ದೇಶದಲ್ಲಿ ಏನು ಮಾಡಿಯೂ ಏನೂ ಪ್ರಯೋಜನವಿಲ್ಲ. ಅಲ್ಲದೆ ನೀನು ಬ್ರಾಹ್ಮಣನಾಗಿ ಹುಟ್ಟೋ ತಪ್ಪು ಬೇರೆ ಮಾಡಿದಿ. ಒಂದೊಂದು ಸಾರಿ ಮಿಲಿಟರಿ ಡಿಕ್ಟೇಟರ್‌ಶಿಪ್ಪಿಗೇ ಈ ಜನ ಬಗ್ಗೋದು ಅನ್ನಿಸುತ್ತೆ.’

ಜಗನ್ನಾಥ ಥಟ್ಟನೇ ಕೇಳಿದ :

‘ನಾಗಮಣಿ ಸತ್ತದ್ದು ಗೊತ್ತಾಯ್ತ?’

ರಾಯರು ಉತ್ತರ ಕೊಡುವುದರೊಳಗೇ ಎದ್ದುನಿಂತು ಕಿಟಕಿಯ ಹತ್ತಿರ ಹೋದ. ಅವರಿಗೆ ಬೆನ್ನು ಹಾಕಿ ಹೇಳಿದ :

‘ಸೋಲ್ತೀನೋ ಗೆಲ್ತೀನೋ ಮುಖ್ಯವಲ್ಲ ರಾಯರೆ. ಏನಾದರೂ ಮೂಲಭೂತವಾಗಿ ಮಾಡೋದು ಸಾಧ್ಯವಾಗದೇ ಹೋದ್ರೆ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತೆ – ಅಷ್ಟೆ.’

ಆಡಿದ ಮೇಲೆ ತಾನು ನಾಟಕೀಯವಾಗಿ ವರ್ತಿಸಿದೆನೋ ಎಂದು ಜಗನ್ನಾಥನಿಗೆ ಮುಜುಗರವಾಯಿತು. ತಿರುಗಿ ಕುರ್ಚಿಯ ಮೇಲೆ ಬಂದು ಕೂತ. ರಾಯರ ಮುಖ ಗಂಭೀರವಾದ್ದು ಕಂಡು ಸಮಾಧಾನವಾಯಿತು. ತನ್ನ ತೀವ್ರತೆಯನ್ನು ಅವರು ಒಪ್ಪಿಕೊಳ್ಳುವುದರ ಮೂಲಕ ನಿಜಮಾಡಿದರೆಂದು ಕೃತಜ್ಞನಾದ. ರಾಯರು ಹೇಳಿದರು :

‘ಎಷ್ಟೋ ದೇವಸ್ಥಾನಗಳಲ್ಲಿ ಹರಿಜನ ಪ್ರವೇಶವಾದ್ರೂ ಏನೂ ಪ್ರಯೋಜನ ಆಗ್ಲಿಲ್ಲಾಂತ ನಿನಗೂ ಗೊತ್ತಿದೆ. ಆದ್ರೆ ನಿನ್ನ ಉದ್ದೇಶ ಬೇರೆ. ಅರ್ಥವಾಯ್ತು. ನನ್ನ ಭಯ ಅಂದ್ರೆ ಹೊಲೇರು ಒಳಗೆ ಹೋಗ್ತಾರೆ, ಪೇಪರಲ್ಲಿ ಸುದ್ದಿ ಬರತ್ತೆ, ಮತ್ತೆಲ್ಲ ತಣ್ಣಗಾಗುತ್ತೆ.’

ಜಗನ್ನಾಥನಿಗೆ ಮತ್ತೆ ಕಸಿವಿಸಿಯಾಯಿತು. ರಾಯರು ತನ್ನ ಅಂತರಂಗದಲ್ಲಿರುವುದನ್ನು ಕಣ್ಣುಬಿಟ್ಟು ನೋಡುತ್ತಿಲ್ಲವೆನ್ನಿಸಿತು. ಭಯಪಟ್ಟಾಗ ಅವರು ನಿಜವಾಗಿದ್ದಷ್ಟು ವಾದದಲ್ಲಿ ಅವರು ನಿಜವಾಗಿರಲಿಲ್ಲ. ಜಗನ್ನಾಥ ಸುಮ್ಮನೇ ಕೂತ. ನೀವು ಲೋಳೆಯಾಗಿದ್ದೀರಿ ರಾಯರೇ ಎಂದು ಹೇಳಬೇಕೆನ್ನಿಸಿತು. ರಾಯರು ಎದ್ದು ನಿಂತು ಹೇಳಿದರು:

‘ನೈತಿಕ ಬಲಕ್ಕೂ ತಾಕತ್ತಿರಬೇಕು ಜಗನ್ನಾಥ. ನನ್ನ ಹಾಗೆ ಸೋತವನು ನೀತಿವಂತ ಕೂಡ ಆಗಿರಲಾರ.’

ಜಗನ್ನಾಥ ಅವರ ಮಾತಿನಿಂದ ಬೆಚ್ಚಿದ. ಏನೋ ಅರಳಬಹುದೆಂಬ ಭರವಸೆ ಮತ್ತೆ ಅವನಲ್ಲಿ ಮೂಡಿತು. ರಾಯರ ಜೊತೆ ಗುಡ್ಡವಿಳಿದು ರಸ್ತೆಯ ತನಕ ನಡೆದು ಹಿಂದಕ್ಕೆ ಬಂದ. ನಾಳೆ ಪೇಪರಿನಲ್ಲಿ ತನ್ನ ಕಾಗದ ಬರುವುದನ್ನು ನಿರೀಕ್ಷಿಸುತ್ತ ರಾತ್ರೆಯನ್ನು ಕಳೆದ.