ಇಂಗ್ಲೆಂಡಿನಿಂದ ಜಗನ್ನಾಥ ಭಾರತೀಪುರಕ್ಕೆ ಹಿಂದಕ್ಕೆ ಬಂದದ್ದು ಸುಮಾರು ಆರು ತಿಂಗಳು ಕೆಳಗೆ. ತನ್ನನ್ನು ಶಿವಮೊಗ್ಗ ರೈಲ್ವೆ ಸ್ಟೇಷನ್ನಿನಿಂದ ಕರೆದು ತರಲು ಚಿಕ್ಕಿ ಕಾರು ಕಳಿಸಿದ್ದರು. ಡ್ರೈವರ್ ಬುಡನ್ ಬಹಳ ಸಡಗರದಿಂದ ತನ್ನ ಬ್ಯಾಗುಗಳನ್ನೆತ್ತಿ ಕಾರಿಗಿಡುತ್ತ ನೀವು ಇಂಗ್ಲೆಂಡಿನಿಂದ ಹೊಸ ಕಾರು ತರ್ತೀರಂತ ತಿಳ್ದಿದ್ದೆ ಸಾರ್ ಎಂದು ಬರಿಗೈಯಲ್ಲಿ ಬಂದದ್ದಕ್ಕೆ ದುಃಖಪಟ್ಟಿದ್ದ. ನಿಮ್ಮ ತಾಯಿ ತೀರಿದ ಮೇಲೆ ಈ ಕಾರು ಶೆಡ್ಡಿಂದ ಹೊರಗೆ ಬರೋದೇ ಇಲ್ಲ ಸಾರ್, ಚಿಕ್ಕಮ್ಮ ಸದಾ ಮನೇಲೇ ಇರ್ತಾರೆ ಸಾರ್ ಎಂದು ಮನೆಯ ವಿಷಯವನ್ನೆಲ್ಲ ದಾರಿಯುದ್ದಕ್ಕೂ ಸಾದರಪಡಿಸಿದ್ದ. ಭಾರತೀಪುರವನ್ನು ಪ್ರವೇಶ ಮಾಡುವಲ್ಲಿ ಮಾವಿನ ತೋರಣ ಕಟ್ಟಿತ್ತು. ದೇವಸ್ಥಾನದ ಮುಖ್ಯ ಅರ್ಚಕರರಾದ ಸೀತಾರಾಮಯ್ಯ, ಊರಿನ ಶ್ರೀಮಂತ ವ್ಯಾಪಾರಿಗಳಾದ ಪ್ರಭುಗಳು, ಎಂ.ಎಲ್.ಎ. ಗುರಪ್ಪ ಗೌಡರು, ಶ್ರೀಪತಿರಾಯರು, ಮನೆಯ ಶಾನುಭೋಗ ವಿಶ್ವನಾಥಶಾಸ್ತ್ರೀ, ಬಿಳಿಯಂಗಿ ಖಾಕಿಚಡ್ಡಿ ಹಾಕಿದ ಊರಿನ ಹೈಸ್ಕೂಲ್ ಹುಡುಗರು, ದೊಗಳೆ ಪ್ಯಾಂಟ್ ಅಂಗಾರ ಅಕ್ಷತೆ ತೊಟ್ಟ ಮುಖ್ಯೋಪಾಧ್ಯಾಯರು-ಹೀಗೇ ಎಷ್ಟೋ ಜನ ತೋರಣದ ಬುಡದಲ್ಲಿ ತನ್ನನ್ನು ಸ್ವಾಗತಿಸಲು ಕಾದು ನಿಂತಿದ್ದು ನೋಡಿ ತುಂಬ ಮುಜುಗರವಾಗಿತ್ತು. ಜಗನ್ನಾಥನ ಕಣ್ಣುಗಳು ಎಲ್ಲೋ ಹಿಂದೆ ನಿಂತಿದ್ದ ಶ್ರೀಪತಿರಾಯರನ್ನು ಹುಡುಕುತ್ತಿರುವಂತೆಯೇ ತಲೆಯ ಮೇಲೆ ಮಂತ್ರಾಕ್ಷತೆ ಬಿತ್ತು. ಹಣೆಯ ಮೇಲೆ ಕುಂಕುಮ ಬಂತು. ಸೀತಾರಾಮಯ್ಯನವರ ಬಾಯಿಯಿಂದ ಆಶೀರ್ವಚನ ಮಂತ್ರ ಧಾರಾಕಾರವಾಗಿ ಸುರಿಯಿತು. ಭೂತರಾಯನ ಪ್ರಸಾದ ಸಿಂಗಾರವನ್ನು ಸೀತಾರಾಮಯ್ಯನವರೇ ಇರಬೇಕು ಕೈಯಲ್ಲಿ ಇಟ್ಟಿದ್ದರು. ಹೀಗೆ ಎರಗಿದ ಮಂಜುನಾಥನಿಂದ ಚೇತರಿಸಿಕೊಳ್ಳುವುದರೊಳಗೆ ಗುರಪ್ಪಗೌಡರು ಕೈಯಲ್ಲಿ ಲಿಂಬೆಹಣ್ಣು ಕೊಟ್ಟು ಹಾರ ಹಾಕಿದ್ದರು: ಕೈಮುಗಿದು ಊರಿನ ಸೌಭಾಗ್ಯ ಮಂಜುನಾಥನ ಕೃಪೆ ಇತ್ಯಾದಿ ಪುಟ್ಟ ಭಾಷಣ ಬಿಗಿದಿದ್ದರು. ಹೀಗೆ ಮೊದಲೇ ನಿಗದಿಯಾಗಿದ್ದ ತನ್ನ ಸ್ಥಾನ, ಮಾನ, ಕರ್ತವ್ಯಗಳ ಲೋಕದಲ್ಲಿ ನೀರಿಗೆ ಬಿದ್ದ ಕಡಲೆಯಂತೆ ತಾನು ಉಬ್ಬಿಕೊಳ್ಳಬಹುದಾದ ಸಾಧ್ಯತೆ ಕಂಡು ಜಗನ್ನಾಥನಿಗೆ ಗಾಬರಿಯಾಗಿತ್ತು. ಪ್ರಾಯಶಃ ಈ ಜನರ ಮನಸ್ಸಿನಲ್ಲಿ ನಿಜವಾಗಿ ತೊಡಗಬೇಕೆಂದರೆ ಮಂಜುನಾಥನನ್ನು ಮೊದಲು ತಿರಸ್ಕರಿಸಬೇಕು, ಅಂದರೆ ಅವನನ್ನು ನಂಬುವ ಜಾಗದಲ್ಲಿ ಇವರನ್ನು ನೋಯಿಸಬೇಕು ಎಂದು ಅಸ್ಪಷ್ಟವಾಗಿ ಜಗನ್ನಾಥನಿಗೆ ತಲೆಯ ಮೇಲೆ ಮಂತ್ರಾಕ್ಷತೆ ಅನಾಮತ್ತಾಗಿ ಬಿದ್ದ ಮರುಕ್ಷಣ ಅನ್ನಿಸಿತು.

ಶ್ರೀಪತಿರಾಯರು ಬಾಯಲ್ಲಿ ಕವಳ ತುಂಬಿಕೊಂಡು, ಪಂಚೆಯ ಅಂಚನ್ನು ಕೈಯಲ್ಲಿ ಹಿಡಿದು ಹಿಂದುಗಡೆಯೆಲ್ಲೋ ಮುಗುಳು ನಗುತ್ತ ನಿಂತಿದ್ದರು. ಅವರ ನಗುವಿನ ಅರ್ಥ ಜಗನ್ನಾಥನಿಗೆ ಆಗಿತ್ತು. ನೀನು ಪ್ರಧಾನ ಧರ್ಮದರ್ಶಿಯಾದ್ದರಿಂದ ನಿನ್ನ ನಿರೀಶ್ವರವಾದವನ್ನು ನುಂಗಿಕೊಂಡು ಬದುಕು, ಇಗೋ ನಾನು ಬದುಕುತ್ತಿಲ್ಲವೇ ಹಾಗಿ, ಅವರವರ ನಂಬಿಕೆ ಅವರವರಿಗೇಂತ ತಿಳಿದು- ಎನ್ನುವ ವಿಚಾರವನ್ನು ಅವರ ಪೊದೆ ಹುಬ್ಬಿನ ಕೆಳಗಿನ ಕಣ್ಣುಗಳು ಸೂಚಿಸುವಂತೆ ನಗುತ್ತಿದ್ದವು. ಬಾಯಲ್ಲಿದ್ದ ಕವಳವನ್ನುಗಿದು ಕೈಯೊಡ್ಡಿ ಬಂದರು; ಅಪ್ಪಿಕೊಂಡು ಬೆನ್ನು ತಟ್ಟಿದರು. ಗುರುಪ್ಪಗೌಡರ ಜೊತೆ, ಆಯಾಸವಾಗಿರಬೇಕಲ್ಲವೆ ಇತ್ಯಾದಿ ಲೋಕಾಭಿರಾಮ ಮಾತಿನಲ್ಲಿ ದನಿಗೂಡಿಸಿದರು. ಮನುಷ್ಯ ಹೇಗೆ ವಯಸ್ಸಾಗುತ್ತ ನಿರ್ಬಲವಾಗಿ ಜೀವನವನ್ನು ಸಹ್ಯಮಾಡಿಕೊಳ್ಳಲೆಂದು ಲಿಬರಲ್ ಹ್ಯಾಪತನ ಹೇಗೆ ಒಂದಲ್ಲ ಒಂದು ದಿನ ಕಟ್ಟಿಟ್ಟದ್ದು ಎಂದು ಜಗನ್ನಾಥನಿಗೆ ಬಹಳ ಹೆದರಿಕೆಯಾಗಿತ್ತು. ಈ ಮುಗುಳು ನಗುವಿನ ಸೋಲಿನ ಒಪ್ಪಿಗೆಯ ಆಚೆ ಇನ್ನೂ ಯಾವುದಾದರೂ ಜರೂರು ಈ ವ್ಯಕ್ತಿಯಲ್ಲಿ ಉಳಿದಿದೆಯೇ ಎಂದು ಜಗನ್ನಾಥ ಅವತ್ತಿನಿಂದ ಇವತ್ತಿನವರೆಗೂ ರಾಯರಲ್ಲಿ ಹುಡುಕುತ್ತಲೇ ಇದ್ದಾನೆ. ನಲವತ್ತೆರಡರ ಚಳುವಳಿಯಲ್ಲಿ ಒಬ್ಬಂಟಿಯಾಗಿ ಕಛೇರಿ ಎದುರು ಉಪವಾಸ ಮಲಗಿ, ಅದಕ್ಕೂ ಹಿಂದೆ ಗಾಂಧಿಯ ಕರೆಗೆ ಜವಳಿ ಅಂಗಡಿಗೆ ಬೆಂಕಿಯಿಕ್ಕಿ- ಈಗ ಮುಗುಳು ನಗುವಿನ ಸೌಮ್ಯನಾಗ ಬೇಕಾಯಿತೇ ಈ ಪೊದೆ ಹುಬ್ಬಿನವ ಎಂದು ಭಾರತದಲ್ಲಿ ನಮ್ಮನ್ನು ಹಣ್ಣು ಮಾಡುವ ಪರಿಸರದ ಬಗ್ಗೆ ಜಗನ್ನಾಥ ತುಂಬ ಯೋಚಿಸಿದ್ದ.

ಎಲ್ಲರನ್ನೂ ಬಿಟ್ಟು ರಾಯರ ಜೊತೆ ಮನಗೆ ಬಂದಿದ್ದ. ಚಿಕ್ಕ ಸಕೇಶಿಯಾದ್ದರಿಂದ ಮುಖ ತೋರಿಸಿರಲಿಲ್ಲ. ಯಾರ ಮನೆಯದೋ ಹುಡುಗಿಯರು ಮನೆಯ ಹೊಸಿಲು ದಾಟುವ ಮುಂಚೆ ಓಕುಳಿ ಸುಳಿದು ಚೆಲ್ಲಿದ್ದರು. ನಡುಮನೆಯಲ್ಲಿ ಹಓಗಿ ರಾಯರ ಹತ್ತಿರ ಮಾತಾಡುತ್ತ ಕೂತ. ಅವನಿಗೆ ಗೊತ್ತು: ಮನೆ ದೇವರಿಗೆ ತಾನು ಮೊದಲು ನಮಸ್ಕಾರ ಮಾಡಿ ಆಮೇಲೆ ಚಿಕ್ಕಿಯಿಂದ ತಂಪಾದ ಹಾಲನ್ನು ಪಡೆದು ಕುಡಿಯಬೇಕೆಂದು ಚಿಕ್ಕಿ ಕಾದಿದ್ದಾರೆ. ಈ ನರಸಿಂಹ ಶಾಲಿಗ್ರಾಮ ಸಾವಿರ ವರ್ಷದಿಂದ ಮನೆಯಲ್ಲಿ ಪೂಜೆ ಮಾಡಿಸಿಕೊಂಡಿದ್ದೆಂದು ಪ್ರತೀತಿ. ಹಣೆಯ ಮೇಲೆ ಇಷ್ಟಗಲ್ಲ ಕುಂಕುಮವಿಟ್ಟಿದ್ದ ಶಾನುಭೋಗ ಟೋಪಿಯನ್ನು ಕಂಕುಳಲ್ಲಿ ಅದುಮಿಕೊಂಡು ಒಳಗಿನಿಂದ ಹೊರಗೆ ಹೊರಗಿನಿಂದ ಒಳಗೆ ಸುತ್ತಾಡಿದ್ದ. ದೇವರಿಗೆ ನಮಸ್ಕರಿಸಿ ಬಾ ಎಂದು ಹೇಳಲು ಯಾರಿಗೂ ಧೈರ್ಯವಿಲ್ಲ. ಜಗನ್ನಾತ ‘ಚಕ್ಕೀ’ ಎಂದು ಕರೆದ. ಚಿಕ್ಕಿ ನಡುಮನೆಗೆ ಬಂದು ಹಾಲು ಕೊಟ್ಟಿದ್ದರು. ಪ್ರೀತಿಯಿಂದ ಅವರನ್ನು ನೋಡಿದ. ಮಾತಿನ ಅವಶ್ಯಕತೆಯಿರಲಿಲ್ಲ. ಆದರೆ ಅವರು ಕೇಳಿದ್ದರೆ ಹೇಳಲೇಬೇಕಾಗುತ್ತಿತ್ತು. ಕ್ಷಮಿಸಿ. ದೇವರನ್ನು ನಂಬಿದರೆ ಇಲ್ಲಿಗೆ ತೀರಾ ಒಳಗಿನವನಾಗಿ ನಿರಾಕಾರನಾಗಿ ಬಿಡುತ್ತೇನೆಂದು ನನಗೆ ಭಯ. ದೇವರ ವಿಷಯದಲ್ಲಿ ಹೊರಗುಳಿಯದೆ ನಾನು ನಿಜವಾಗಿ ಈ ಊರಿನಲ್ಲಿ ತೊಡಗಲಾರೆ. ಇಗೋ ಚಿಕ್ಕಿ ತೊಡಗುವುದಕ್ಕೆಂದು ನಾನು ಬಂದಿದ್ದೇನೆ, ನಿಜ ಆಗುವುದಕ್ಕೆ, ಗಟ್ಟಿಯಾಗುವುದಕ್ಕೆ. ಹೊಕ್ಕಾಗ ಸಿಗುವುದಕ್ಕೆ. ಆದರೆ ಮಾತಾಡದೆ ಅವರನ್ನು ಪ್ರೀತಿಯಿಂದ ನೋಡುತ್ತ ಹಾಲು ಕುಡಿದಿದ್ದ. ನೋಡಲು ಅಮ್ಮನ ಹಾಗಿ. ಆದರೆ ಕೂದಲು ಕಮ್ಮಿ. ಸ್ವಲ್ಪ ಸಣ್ಣ ಹಣೆ. ಮುಖವನ್ನು ಸ್ವಲ್ಪ ಓರೆ ಮಾಡಿ ಮಾತಾಡುವುದಂತೂ ಅಮ್ಮನಂತೆಯೇ. ಬಿಳೀ ಸೀರೆ ಬಿಳಿ ಕುಪ್ಪಸ. ತನಗಿದ್ದ ಆಸ್ತಿಯನ್ನು ಈ ಮನೆಗೇ ಸೇರಿಸಿ ಬಾಲವಿಧವೆಯಾದಾಗಿನಿಂದ ಇಲ್ಲೇ ಬೆಳೆದವಳು. ತನ್ನನ್ನು ಬೆಳಸಿದವಳು. ದೂರಕ್ಕೆ ಭಾರತೀಪುರದವರೆಲ್ಲ ಮಂಜುನಾಥನ ಒಕ್ಕಲೆಂದು ಕಂಡರೂ ಹತ್ತಿರದಿಂದ ನೋಡಿದಾಗ ಒಬ್ಬೊಬ್ಬರೂ ಪ್ರತ್ಯೇಕ. ಆದರೆ ಮಂಜುನಾಥ ಆಳುವುದು ಏನನ್ನ, ಇವರ ಅಜ್ಞಾನವನ್ನೇ, ಅಥವಾ-ಜಗನ್ನಾಥನಿಗೆ ಯೋಚಿಸುವುದು ಕಷ್ಟವಾಯಿತು.

ರಾಯರು ಊರಿನ ರಾಜಕೀಯದ ಬಗ್ಗೆ ಖುಷಿಯಾಗಿ ಮಾತಾಡಲು ಪ್ರಾರಂಭಿಸಿದರು, ರಾಜಕೀಯವೆಂದರೆ ರಾಯರಿಗೆ ಹುರಿಗಾಳು ಇದ್ದಹಾಗೆ. ‘ಈ ಗುರಪ್ಪಗೌಡ ಹೇಗೆ ಗೆದ್ದದ್ದು ಅಂತಿ. ಮೊದಲು ಇವ ಜಸ್ಟೀಸ್ ಪಾರ್ಟಿ ಅಲ್ಲವೆ? ೮೨ರಲ್ಲಿ ಕಾಂಗ್ರೆಸ್ ಸೇರಿದ. ಈ ಸಾರಿ ಚುನಾವಣೇಲಿ ತಟ್ಟೆ ತುಂಬ ಮಂಜುನಾಥನ ಪ್ರಸಾದ ಕುಂಕುಮವನ್ನ ತಗೊಂಡು ಹಳ್ಳಿಲಿ ಮನೆ ಮನೆಗೆ ಹೋದ. ಪ್ರಸಾದನ್ನ ಮುಟ್ಟಿಸಿ ಆಣೆ ಹಾಕಿಸಿಕೊಂಡ, ನಿಮಗೇ ಓಟುಕೊಡ್ತೀನಿ ಅಂತ. ಮೊದಲೇ ಗೌಡರ ಮಕ್ಕಳು ಅಲ್ವ? ಜೊತೆಗೇ…’

ಜಗನ್ನಾಥನಿಗೆ ಪ್ರಯಾಣದಿಂದ ಆಯಾಸವಾಗಿತ್ತು, ಸ್ನಾನಮಾಡಲೆಂದು ಎದ್ದು ನಿಂತ. ರಾಯರಿಗೆ ಹೇಳಬೇಕೆನ್ನಿಸಿತು: ಚುನಾವಣೇ ವಿಷಯ ಬೇಡ. ಈ ಚಿಲ್ಲರೆ ರಾಜಕೀಯ ಬಿಟ್ಟುಬಿಡಿ. ಈ ಭಾರತೀಪುರದಲ್ಲಿ ಮೂಲಭೂತವಾದ ಕ್ರಿಯೆ ಸಾಧ್ಯವೇಂತ ಯೋಚಿಸೋಣ.

‘ಸ್ನಾನಕ್ಕೆ ಏಳಿ’ ಎಂದ. ‘ಇಲ್ಲ ನನ್ನ ಸ್ನಾನವಾಗಿದೆ’ ಎಂದರು ರಾಯರು. ‘ಊಟಕ್ಕೆ ಇಲ್ಲೇ ಇರಿ’ ಎಂದರು ಚಿಕ್ಕಿ. ರಾಯರು ತಾನು ಯಾಕೆ ಈ ಸಾರಿ ಮುನಿಸಿಪಲ್ ಚುನಾವಣೆಗೆ ನಿಲ್ಲಲಿಲ್ಲ, ನಿಂತಿದ್ದರೂ ಹಿಂದಿನಂತೆ ಸೋಲೋದು ಖಂಡಿತವಾಗಿತ್ತು ಇತ್ಯಾದಿ ಮಾತಿಗೆ ಪ್ರಾರಂಭಿಸಿದರು. ಗಾಂಧಿಯನ್ನು ಒಂದು ಕಾಲದಲ್ಲಿ  ಹಿಂಬಾಲಿಸಿದ ಈ ಮಂದಿಯ ಬಗ್ಗೆಯೇ ಜಗನ್ನಾಥನಿಗೆ ಬೇಸರವಾಯಿತು. ಆದರೆ ಇಂಗ್ಲೆಂಡಿನ ಪಬ್ಬುಗಳ ಹಿತಕರವಾದ ವಾತಾವರಣದಲ್ಲಿ ಬೆಳೆದ ಮಾರ್ಕ್ಸ್‌ವಾದದಿಂದ ರಾಯರನ್ನು ತಾನು ಅಳೆಯುವುದು ಸರಿಯಲ್ಲವೆಂದುಕೊಂಡು ಬಚ್ಚಲಿಗೆ ಹೋಗಿ ಸ್ನಾನ ಮಾಡಿದ. ಟಬ್ಬಿನಲ್ಲಿ ಮಲಗಿ ಸ್ನಾನ ಮಾಡಿ ಬಂದವನಿಗೆ ಮುಖಕ್ಕೆ ಸೋಪು ಹಚ್ಚಿಕೊಂಡು ಚೊಂಬಿಗಾಗಿ ತಡಕಾಡುವುದು, ಧಾರಾಳವಾಗಿ ಮೈಮೇಲೆ ನೀರು ಸುರಿದುಕೊಳ್ಳುವುದು ಬಹಳ ಖುಷಿಯೆನ್ನಿಸಿತು. ಈ ಹೊಳೆಯುವ ತಾಮ್ರದ ಚೊಂಬು, ಬೋಗುಣಿಯಲ್ಲಿ ನೆನೆಯಿಸಿ ಇಟ್ಟ ಮತ್ತಿಯ ಲೋಳಿ, ಮನೆಯಲ್ಲಿ ಕುಟ್ಟಿಸಿ ಪುಡಿ ಮಾಡಿದ ಸೀಗೇ ಪುಡಿ – ಮತ್ತೆ ಈ ಗಂಧದ ಸೋಪು ಬಾಲ್ಯವನ್ನು ನೆನಪಿಗೆ ತಂದವು. ಎಷ್ಟು ಒರೆಸಿಕೊಂಡರೂ ಮೈಬೆವರುತ್ತಲೇ ಇರುವಷ್ಟು ಸ್ನಾನ ಮಾಡಿ ಬಂದು ರಾಯರ ಜೊತೆ ಊಟ ಮಾಡಿದ ನನ್ನ ಬದಲಿಗೆ ಪ್ರಭುಗಳು ಈ ತನಕ ಧರ್ಮದರ್ಶಿಗಳಾಗಿರುವುದಲ್ಲವೆ, ಅವರೇ ಮುಂದುವರಿಯಲಿ ಎಂದ. ಒಳಗಿನಿಂದ ಈ ಮಾತು ಕೇಳಿಸಿಕೊಂಡ ಚಿಕ್ಕಿ ಅದು ಹೇಗಾಗುತ್ತೋ ಎಂದರು. ರಾಯರು ಅರ್ಥಪೂರ್ಣವಾಗಿ ತನ್ನನ್ನು ನೋಡಿ ನಕ್ಕರು.

ಊರಿಗೆ ಬಂದ ಮಾರನೇ ದಿನದಿಂದಲೇ ತನಗೂ ಭಾರತೀಪುರಕ್ಕೂ ನಡುವೆ ಹೊಸ ಸಂಬಂಧವನ್ನು ಸೃಷ್ಟಿಸಿಕೊಳ್ಳಲು ಪ್ರಯತ್ನಿಸಿದ್ದ. ಹೈಸ್ಕೂಲಿನ ಸಭಾಂಗಣದಲ್ಲಿ ತನ್ನನ್ನು ಸತ್ಕರಿಸಲು ಸೇರಿದ ಜನರಿಗೆ ರಸೆಲ್ಲನ ವಿಚಾರ ಕುರಿತು ಮಾತನಾಡಿದ್ದರಿಂದ ಕಿಂಚಿತ್ತೂ ಪ್ರಯೋಜನವಾಗಲಿಲ್ಲವೆನ್ನುವುದು ಜನ ತನ್ನ ಮಾತಿಗೆ ತಲೆದೂಗುತ್ತ ಮೆಚ್ಚುತ್ತಿದ್ದ ಕ್ರಮದಿಂದಲೇ ತಿಳಿದಿತ್ತು. ನಾಗರಾಜ ಶಾಸ್ತ್ರೀಗಳಂತೂ ತನ್ನ ಜ್ಞಾನವನ್ನು ಕೊಂಡಾಡಿದ್ದರು. ‘ಇದೆಲ್ಲ ನಮಗೇನು ಹೊಸೆ? ಲೋಕಾಯುತ ಮಾರ್ಗದಲ್ಲಿ ಆಗಲೇ ಬಂದು ಹೋದದ್ದಲ್ಲವೆ?” ಎಂದಿದ್ದರು.

ಯಾವ ಮಾರ್ಗದಿಂದ ನಾನು ಇಲ್ಲಿ ನಿಜವಾದೇನು? ಊರು ಸೃಷ್ಟಿಶೀಲವಾದೀತು? ಕ್ರಮ ಯಾವುದು? – ಎಂದು ಜಗನ್ನಾಥ ಬಹಳ ಯೋಚಿಸಿದ. ಮೊದಲನೇ ಅಗತ್ಯ ಜನ ಹೇಗೆ ಬದುಕುತ್ತಾರೆ ಎಂದು ತಿಳಿಯುವುಉದ ಎನ್ನಿಸಿತು. ಶಿವಮೊಗ್ಗದಿಂದ ಬರುವಾಗ ದಾರಿಯಲ್ಲಿ ಅವನನ್ನು ಈ ಪ್ರಶ್ನೆ ಬಾಧಿಸಿತ್ತು. ಬ್ರಾಹಣನಾಗಿ ಶ್ರೀಮಂತನಾಗಿ ಹುಟ್ಟಿ ಬೆಳೆದ ತನಗೆ ಈ ನೆಲದ ವಿಷಯ ಹೆಚ್ಚು ತಿಳಿಯದು. ಫಲ ಕೊಡುವ ನಾಲ್ಕಾರು ಮರಗಳನ್ನು ಗುರುತಿಸಬಲ್ಲೆ; ಕೆಲವು ಹಕ್ಕಿಗಳ ಹೆಸರು ಹೇಳಬಲ್ಲೆ; ಭಾರತೀಪುರದಿಂದ ತನ್ನ ಒಕ್ಕಲುಗಳಿದ್ದ ಹಳ್ಳಿಗಳಿಗೆ ಹೋಗುವ ಒಂದೆರಡು ಒಳದಾರಿಗಳನ್ನು ನೆನಪುಮಾಡಿಕೊಳ್ಳಬಲ್ಲೆ – ಬಿಟ್ಟರೆ ಇನ್ನೇನೂ ತಿಳಿಯದು. ತಾನು ಧಣಿಯಾದ್ದರಿಂದ ಓಡಾಡುವಾಗ ಸರಿದು ನಿಲ್ಲುತ್ತಾರೆ, ನೆಲ ನೋಡುತ್ತಾರೆ, ಕಣ್ಣಿಗೆ ಬೀಳುವುದೇ ತಪ್ಪೇನೋ ಎನ್ನುವಂತೆ ನಟಿಸುತ್ತಾರೆ – ಆದರೆ ಯಾರಿಗೂ ತಾನು ನಿಜವಲ್ಲ. ತನ್ನ ಬೆನ್ನು ತಿರುಗಿದಾಕ್ಷಣವೇ ಅವರ ಮುಖಗಳಲ್ಲಿ ಬದಲಾವಣೆಯಾಗುತ್ತದೆ. ಇಷ್ಟು ದೈನ್ಯದಿಂದ ತನ್ನೆದುರು ಸುಳಿದಾಡುವ ಶೂದ್ರರು ಕಣ್ಣುಕಟ್ಟಿ ಬಿಟ್ಟರೂ ವಾಸನೆ ಸ್ಪರ್ಶಗಳಿಂದಲೇ ಭಾರತೀಪುರದ ಸುತ್ತುಮುತ್ತಲಿನ ಕಾಡುಗುಡ್ಡಗಳನ್ನೆಲ್ಲ ಓಡಾಡಿ ಬರಬಲ್ಲರೆಂದು ಅವನಿಗೆ ಗೊತ್ತಿತ್ತು. ಅವರು ತನ್ನನ್ನು ಒಪ್ಪಿಕೊಳ್ಳಲು ಬೇಟೆಯಾಡಬೇಕು, ಕಳ್ಳು ಕುಡಿಯಬೇಕು, ಕವಳ ಹಾಕಬೇಕು, ಖದೀಮನಾಗಬೇಕು – ಆದರೆ ಈ ಬಗೆಯ ಪರಿವರ್ತನೆಗೆ ಕೊನೆಯಿಲ್ಲವೇನೋ!

ಉದಾತ್ತವಾಗಿ ನಡೆದುಕೊಂಡರೆ ತಾನು ಆಕರ್ಷಕ ವ್ಯಕ್ತಿಯಾಗುತ್ತೆನೆಂದು ಭಾವಿಸಿ ಆದರ್ಶದ ಬೆನ್ನು ಬಿದ್ದ ವಯಸ್ಸು ಕಳೆದಿತ್ತು. ಮುವ್ವತ್ತು ದಾಟಿದೆ: ಈಗ ತಾನು ಗಟ್ಟಿಯಾಗದೇ ಹೋದರೆ, ಆದರೆ ಹೇಗೆ – ಎಂದು ಮತ್ತೆ ಮತ್ತೆ ಜಗನ್ನಾಥ ಯೋಚಿಸಿದ. ಯೋಚನೆಯಿಂದ ಬಗೆಯರಿಯುವ ಪ್ರಶ್ನೆಯೇ ಅಲ್ಲ ಇದು ಎಂದು ಅವನಿಗೆ ತಿಳಿಯಿತು. ಯಾಕೆಂದರೆ ಯೋಚಿಸುವುದೆಂದರೆ ತಳವೇ ಇರದ ಕೂಪದಲ್ಲಿ ಕಂತುತ್ತಾ ಹೋದಂತೆ. ತನ್ನ ಗೊಡವೆಯಿಲ್ಲದಂತೆ ತನ್ನ ಸುತ್ತ ಜೀವನ ಮೌನವಾಗಿ ರೂಪವಾಗುತ್ತಿತ್ತು. ಮದುವೆಗೆ ಸಾಲ, ಬೇಸಾಯಕ್ಕೆ ಸಾಲ, ಮದ್ದಿಗೆ ಸಾಲ – ಆತಂಕದಲ್ಲಿ ಮಾತ್ರ ತನಗೂ ಸಾಮಾನ್ಯ ಜನರಿಗೂ ಸಂಬಂಧ. ತಾನು ನಿಜವಾಗಿ ಏನು ಎಂಬುದು ಯಾವತ್ತೂ ತಿಳಿಯಲಾರದಂತಹ ಗೌರವದ ರಕ್ಷೆ. ಮಂಜುನಾಥರ ರಕ್ಷೆ. ಇವನ ಅಂಕೆಯಲ್ಲಿರುವ ಭೂತರಾಯರ ಭಯದ ರಕ್ಷೆ. ಕೈಯಲ್ಲಿ ಸಿಂಗಾರ ಹಿಡಿದು ಥತ್ತರ ನಡುಗುತ್ತ ಮೈಮೇಲೆ ಬಂದ ಭೂತರಾಯ ಕೇಳುತ್ತಾನೆ: ಈ ಸ್ಥಳದಲ್ಲಿ ಧರ್ಮ ಸಾಂಗವಾಗಿ ನಡೆಯುತ್ತಿದೆಯಾ? ಧರ್ಮದರ್ಶಿ ಅದಕ್ಕೆ ಉತ್ತರಿಸಬೇಕು: ನಡೆಯುತ್ತಿದೆ. ಸಾಲಾಗಿ ನಿಂತ ಆರ್ತರು ಒಬ್ಬನಾದ ಮೇಲೆ ಇನ್ನೊಬ್ಬ ಎದುರು ಬಂದು ಕೈಮುಗಿದು ನಿಲ್ಲುತ್ತಾನೆ. ಕೇಳಿಕೊಳ್ಳುತ್ತಾನೆ. ಸರಿ. ಐದು ರೂಪಾಯಿ ಹಾಕ್, ಪ್ರಸಾದ ತಗೊ. ಹತ್ತು ರೂಪಾಯಿ ಹಾಕ್, ಪ್ರಸಾದ ತಗೊ. ಇಂತಹ ನ್ಯಾಯದ ಇತ್ಯರ್ಥದಲ್ಲಿ ತನ್ನಂಥವರಿಗೆ ರಕ್ಷೆ. ಈ ಜಗನ್ನಾಥನ ಬದಲು ಅವನ ಹೆಸರಿನಲ್ಲೆ ಪ್ರಭುಗಳು ಧರ್ಮದರ್ಶಿಗಳಾಗಿದ್ದರು – ಜಗನ್ನಾಥ ರಾಷ್ಟ್ರಪತಿಗಳು ಬಂದಾಗ ಧೈರ್ಯಮಾಡಿ ರಾಜೀನಾಮೆ ಕೊಟ್ಟ ಮೇಲೆ ಪ್ರಭುಗಳಿಗೇ ಆ ಪಟ್ಟ ಹೋಯಿತು. ದಾಕ್ಷಿಣ್ಯದ ಬಂಧನಗಳನ್ನೆಲ್ಲ ಮುರಿದು ಹೊರಬರುವ ತನಕ ಈ ಊರಿನಲ್ಲಿ ತನಗೊಂದು ಸ್ಪಷ್ಟ ಆಕಾರವಿರಲಿಲ್ಲ. ಮಂಜುನಾಥನೊಬ್ಬ ನಿರಾಕಾರಿ; ತಾನೊಬ್ಬ ನಿರಾಕಾರಿ – ಏತನ್ಮಧ್ಯೆ ಕಟ್ಟಿ ಹಾಕಿದ ಭೂತರಾಯನಾದರೂ ನಿಜವೆ?

ಇಂಗ್ಲೆಂಡಿನಲ್ಲಿದ್ದಾಗ ಉದ್ದ ಕೂದಲಿನ ಸ್ನೇಹಿತರ ಜೊತೆ ಆರಾಮಾಗಿ ಪಬ್ಬುಗಳಲ್ಲಿ ನಿರಾತಂಕವಾಗಿ ನಡೆಸಿದ ಚರ್ಚೆಗಳು: ಜೀವನಕ್ಕೆ ಅರ್ಥವಿಲ್ಲ. ಮನುಷ್ಯ ಮನಸ್ಸಿನಲ್ಲಿ ಮಾತ್ರ ಸ್ವತಂತ್ರ. ಯಾವ ಸಾಮಾಜಿಕ ರಾಜಕೀಯ ಬದಲಾವಣೆಯಿಂದಲೂ ಮನುಷ್ಯನ existential reality ಬದಲಾಗಲಾರದು – ಇತ್ಯಾದಿ. ಮಂಜುನಾಥನ ಕೂಪವಾದ ಭಾರತೀಪುರದಲ್ಲಿ ಈ ವಾದಗಳೆಲ್ಲ ತಮಾಷೆಯಾಗಿ ಕಂಡಿದ್ದವು. ಪ್ರತಿ ಮಧ್ಯಾಹ್ನವೂ ದೊಡ್ಡ ಘಂಟೆಯನ್ನು ಬಾರಿಸಿಕೊಳ್ಳುತ್ತ ಕಾಲ ಇಲ್ಲಿ ಸ್ಥಗಿತವಾಗಿತ್ತು, ಹುಟ್ಟಿನಿಂದ ಸಾವಿನ ತನಕ ಜೀವನ ಮೊದಲೇ ನಿಗದಿಯಾದಂತೆ ನಡೆಯುತ್ತಿತ್ತು.

ಜನರನ್ನು ತಿಳಿಯುವುದೆಂದರೇನು? ಅವರ ಜೊತೆ ತೊಡಗುವುದೆಂದರೇನು? ಆಸ್ತಿಯಿಂದಾಗಿ ಜಗನ್ನಾಥನಿಗೆ ಮೊದಲೇ ನಿಗದಿಯಾದ ಒಂದು ಸಂಬಂಧವಿತ್ತು. ಎಷ್ಟು ಮಿಸುಕಾಡಿದರೂ ಈ ಸಂಬಂಧದಲ್ಲಿ ಕಿಂಚಿತ್ತಾದರೂ ವ್ಯತ್ಯಾಸ ಮಾಡಿಕೊಳ್ಳುವುದು ಅಸಾಧ್ಯವೆಂದು ಅವನಿಗೆ ತಿಳಿಯತೊಡಗಿತು. ಭಾರತೀಪುರಕ್ಕೆ ಬಂದವನೆ ಬಿಳಿಯ ಅಂಗಿ ಅಡ್ಡ ಪಂಚೆ ಉಡಲು ಪ್ರಾರಂಭಿಸಿದ, ಸಾಹುಕಾರ್ರು ಎಷ್ಟು ಸರಳ ವ್ಯಕ್ತಿ ಎಂದು ಜನ ಹೊಗಳಿದರು. ಶಾನುಭೋಗರೇ ಸಾಹುಕಾರ್ರ ಹಾಗೆ ಕಾಣ್ತಾರೆ ಎಂದು ಆಡಿಕೊಂಡರು. ಜನರ ಮನಸ್ಸಿನಲ್ಲಿ ತನ್ನನ್ನು ನಾಟಿಸಿಕೊಳ್ಳುವುದು ಹೇಗೆ? ಏನಾದರೂ ಮಾಡಲಾರದೇ ಹೋದಲ್ಲಿ ಆತ್ಮಹತ್ಯೆ ಮಾಡಿಕೊಂಡೇನು ಎನ್ನಿಸಿತು. ಬೆಳಿಗ್ಗೆ ಏಳುವುದು; ಲೆಖ್ಖಪತ್ರ ನೋಡುವುದು; ಸಾಲ ಕೊಡುವುದು; ಊಟ ಮಾಡುವುದು; ಅಡಿಕೆ ಧಾರಣೆ ಚರ್ಚಿಸುವುದು; ಹೊಸ ಸಸಿಗಳನ್ನು ನೆಡಿಸುವುದು – ಎಂಥ ಅರ್ಥಹೀನ ಜೀವನ. ಒಳಗೆ ಇನ್ನಷ್ಟು ಲಡ್ಡಾಗುತ್ತ ಹೋಗುತ್ತಿದ್ದೇನೆ ಎಂದು ಭಯವಾಗಿತ್ತು. ಷಂಡನಾದಷ್ಟೂ, ಅಜಾತಶತ್ರುವಾದಷ್ಟೂ, ಹಸನ್ನುಖಿಯಾದಷ್ಟೂ, ವ್ಯವಸ್ಥೆಗೆ ಇವನಿಂದ ಯಾವ ಅಪಾಯವೂ ಇಲ್ಲವೆನಿಸಿಷ್ಟೂ – ತಾನು ಗುಣ್ಯವ್ಯಕ್ತಿಯಾಗುತ್ತಾ, ಚೂರು ಚೂರೇ ಕೊಳೆಯುತ್ತಾ, ಮಂಜುನಾಥನ ಮಹಿಮೆಗೆ ಗೊಬ್ಬರವಾಗುತ್ತಾ ಹೋಗುತ್ತೇನೆಂಬುದು ಜಗನ್ನಾಥನಿಗೆ ಸ್ಪಷ್ಟವಾಯಿತು.

ಶಾನುಭೋಗ ವಿಶ್ವನಾಥ ಶಾಸ್ತ್ರಿ ತಮ್ಮ ದೃಷ್ಟಿಯ ಉಯ್ಯಾಲೆಯಲ್ಲಿ ತನ್ನನ್ನು ಸುಖವಾಗಿ ಕೂರಿಸಿ ತೂಗುತ್ತಿದ್ದುದನ್ನು ತಾನು ಸಹಿಸಿಕೊಳ್ಳುವ ಕ್ರಮದಲ್ಲೇ ತನ್ನ ಜೀವನಕ್ರಮದ ಹೇಯತೆಯೆಲ್ಲ ಜಗನ್ನಾಥನಿಗೆ ಭಟ್ಟಿ ಇಳಿದಂತಿತ್ತು. ರೈಟರ್ ಕೃಷ್ಣಯ್ಯ ತೀರಿ ಹೋದ ಮೇಲೆ ಮನೆಯ ವೈವಾಟನ್ನು ನೋಡಿಕೊಳ್ಳಲು ವಿಶ್ವನಾಥಶಾಸ್ತ್ರಿ ಎನ್ನುವ ಶಾನುಭೋಗನೊಬ್ಬನಿದ್ದ. ಜಗನ್ನಾಥ ಇಂಗ್ಲೆಂಡಲ್ಲಿದ್ದಾಗ ಮೊದಲು ತಾಯಿಯ ಮೇಲ್ವಿಚಾರಣೆಯಲ್ಲಿ, ಅವರು ಸತ್ತ ಮೇಲೆ ಚಿಕ್ಕಿಯ ಮೇಲ್ವಿಚಾರಣೆಯಲ್ಲಿ ಈ ಶಾನುಭೋಗ ಹೆಗ್ಗಣವಾಗಿದ್ದ.

ವಿಶ್ವನಾಥ ಶಾಸ್ತ್ರಿಯ ವಾಸ ರೈಟರ್ ಕೃಷ್ಣಯ್ಯ ಇದ್ದಲ್ಲೆ. ಮನೆಯ ಉತ್ತರದ ಪಕ್ಕಕ್ಕೆ ಅಫೀಸು (ಶಾಸ್ತ್ರೀಯ ಭಾಷೆಯಲ್ಲಿ ‘ಎಸ್ಟೇಟು ಆಫೀಸು’). ಅದಕ್ಕೆ ಅಂಟಿಕೊಂಡಂತೆ ಒಂದು ಮನೆ. ಆರು ಚಿಳ್ಳೆಪಿಳ್ಳೆ ಮಕ್ಕಳು, ಹೆಂಡತಿ, ವಿಧವೆಯಾದ ಅತ್ತೆ – ಇಷ್ಟು ಶಾಸ್ತ್ರೀಯ ಸಂಸಾರ. ರೈಟರ್ ಕೃಷ್ಣಯ್ಯ ತೀರುವುದರ ಮುಂಚೆಯೇ ಅವರ ಹೆಂಡತಿ ಸತ್ತದ್ದರಿಂದ, ಅವರ ಒಬ್ಬನೇ ಮಗ ಗೋಪಾಲನನ್ನು ತನ್ನ ತಾಯಿಯ ಇಷ್ಟದಂತೆ ಜಗನ್ನಾಥನೇ ಓದಿಸುತ್ತಿದ್ದುದರಿಂದ ಕೃಷ್ಣಯ್ಯನ ಅಧಿಕಾರ, ಮನೆ, ಮೆತ್ತೆ ಹಾಕಿದ ಕುರ್ಚಿ, ಕಪ್ಪು ಆಯಿಲ್ ಕ್ಲಾತನ್ನು ಹೊದಿಸಿದ ಮೇಜು ಇತ್ಯಾದಿಗಳೆಲ್ಲ ವಿಶ್ವನಾಥ ಶಾಸ್ತ್ರಿಗೆ ಅನಿವಾರ್ಯವಾಗಿ ವರ್ಗವಾಗಿದ್ದವು.

ಶಾಸ್ತ್ರಿಯನ್ನು ಕಂಡರೆ ಜಗನ್ನಾಥನಿಗೆ ಗೋಡೆಗೆ ಅಂಟಿಕೊಂಡ ಹಸಿ ಹಸಿ ಮೈಯ ಹಲ್ಲಿಯ ನೆನಪಾಗುತ್ತಿತ್ತು. ಬೆಕ್ಕು ಕಣ್ಣಿನ ಬಿಳಿಯ. ಎಲ್ಲರೂ ಹುಬ್ಬುಗಳು ಕೂಡುವಲ್ಲಿ ಮಾತ್ರ ಮಂಜುನಾಥನ ಪ್ರಸಾದ ಹಚ್ಚಿಕೊಂಡರೆ ಶಾಸ್ತ್ರಿ ಮಾತ್ರ ಹಳೆಯ ಕಾಲದ ಮುತ್ತೈದೆಯರ ಹಾಗೆ ಹಣೆಯ ಮೇಲೆ ಇಷ್ಟಗಲ ಕುಂಕುಮವಿಟ್ಟುಕೊಳ್ಳುತ್ತಿದ್ದ. ಎಷ್ಟಗಲದ ಕುಂಕುಮ ಅದೆಂದರೆ – ಜಗನ್ನಾಥ ಒಮ್ಮೆ ರಾಯರೆದುರು ತಮಾಷೆ ಮಾಡಿದ್ದ – ಮಂಜುನಾಥನ ಮಹಿಮೆಯನ್ನು ಅಬ್ಬರಿಸಿ ಕಣ್ಣಿರಿಗೆರಚುವಷ್ಟು; ರಾಷ್ಟ್ರಪತಿಗಳ ಹೆಂಡತಿಯ ಹಣೆಯಿಂದ ಹಿಡಿದು ತರಕಾರಿ ಮಾರುವ ಬೆಂಗಳೂರಿನ ಹೆಂಗಸಿನ ಹಣೆಯ ತನಕ ಈ ಕುಂಕುಮ ಪ್ರಸಾದ ಪ್ರಸಿದ್ಧವಾದುದರಿಂದ ಈ ವ್ಯಕ್ತಿ ಭಾರತೀಪುರದವನೇ ಎಂಬುದನ್ನು ಬೆಂಗಳೂರಿನ ಮಹಾತ್ಮಾಗಾಂಧಿ ರಸ್ತೆಯಲ್ಲೂ ಸಾರುವಷ್ಟು. ಸಾಲದ್ದಕ್ಕೆ ರೈಟರ್ ಕೃಷ್ಣಯ್ಯನ ಸ್ಥಾನಕ್ಕೆ ಬಂದವನು ತಾನಾದ್ದರಿಂದ ಈ ಕುಂಕುಮದ ಜೊತೆಗೇ ಕಚ್ಚೆಪಂಚೆ, ಅದರೊಳಕ್ಕೆ ತೂರಿಸಿದ ಶರ್ಟು, ಟೈ, ಗ್ಯಾಬರ‍್ಡೀನ್ ಕೋಟು, ಕರಿ ಟೊಪ್ಪಿ (ಶಿವಮೊಗ್ಗಕ್ಕೆ ಹೋಗುವಾಗ ಜರಿಪೇಟ) ಇಲ್ಲದೆ ಅವನು ಜನರ ಕಣ್ಣಿಗೆ ಬೀಳುತ್ತಿರಲಿಲ್ಲ. (ಟೋಪಿ ಮತ್ತು ಟೈಗಳಿಲ್ಲದೆ ಜಗನ್ನಾಥನ ಕಣ್ಣಿಗೆ ಅವನು ಬಿದ್ದಿದ್ದೆಂದರೆ ಒಂದು ದಿನ ಇಳಿಹೊತ್ತ್ತಿನಲ್ಲಿ ತೋಟದೊಳಗೆ ವೆಂಕಪ್ಪನೆಂಬ ಆಳಿನ ಹೆಂಡತಿಗೆ ಐದು ರೂಪಾಯಿ ನೋಟನ್ನು ತೋರಿಸುತ್ತ ಕಾಮಾತುರದ ಆರ್ತಭಂಗಿಯಲ್ಲಿ ಆತ ನಿಂತಿದ್ದಾಗ. ಒಂದು ಕಾಲನ್ನು ಧರೆಯ ಮೇಲಿಟ್ಟು, ಇನ್ನೊಂದನ್ನು ತಗ್ಗಿನಲ್ಲಿಟ್ಟು ಅವಳಿಗೆ ಹತ್ತಿರವಾಗಲೆಂದು ಮೊಳಕಾಲೆತ್ತರದ ಧರೆಯನ್ನು ಹತ್ತಲು ಹವಣಿಸುತ್ತ, ಸುತ್ತಮುತ್ತ ನೋಡುತ್ತ, ಇಗೊ ಎನ್ನುವಷ್ಟರಲ್ಲಿ ಹತ್ತಿಬಿಟ್ಟು ವಯ್ಯಾರದಲ್ಲಿ ಒಲ್ಲದ ಅವಳ ಮೈಯನ್ನು ಒಳಚಿದಾಗ ಮಾತ್ರ ಶಾಸ್ತ್ರಿ ಟೋಪಿ ಹಾಕಿರಲಿಲ್ಲ. ಟೈ ಕಟ್ಟಿರಲಿಲ್ಲ)

ಮಾತಿನಲ್ಲಿ ಶಾನುಭೋಗ ಶಾಸ್ತ್ರಿ ಬಲು ನಿಪುಣ. ಸಮಯಕ್ಕೆ ಸರಿಯಾದ ಮಾತು ಬರದೇ ಅವನು ತಬ್ಬಿಬ್ಬಾದ್ದನ್ನು ಜಗನ್ನಾಥ ಕಂಡದ್ದೇ ಇಲ್ಲ. ಉಪಚಾರ, ಘಾಟಿತನ, ನಯವಿನಯ ಗಳಿಂದ ನೊರೆಗರೆಯುವ ಅವನ ಮಾತುಗಳಿಂದ ಸಾರಾಂಶ ರೂಪವಾಗಿ ‘ಆಗಬಹುದು’ ಅಥವಾ ‘ಆಗಲ್ಲ’ ಎನ್ನುವ ಅಭಿಪ್ರಾಯವನ್ನು ಕಡೆದು ತೆಗೆಯುವುದು ಯಾರಿಗೂ ಸಾಧ್ಯವಿರಲಿಲ್ಲ. ಕೆಲವು ಮಾತುಗಳಲ್ಲಿ ಬಿಗಿಯುತ್ತ, ಇನ್ನು ಕೆಲವು ಮಾತುಗಳಲ್ಲಿ ಸಡಿಲಿಸುತ್ತ, ಈಗ ಬೆಕ್ಕಾಗುತ್ತ, ಈಗ ಪೇಚಿಗೆ ಸಿಕ್ಕ ಇಲಿಯಾಗುತ್ತ, ನೀಡುತ್ತಿದ್ದಾನೆ ಎನ್ನುವಷ್ಟರಲ್ಲೆ ನಿಗ್ರಹಿಸುತ್ತ ಶಾಸ್ತ್ರಿ ನೇಯುತ್ತಿದ್ದ ಮಾತಿನ ಜಾಲದ ಸಂಪೂರ್ಣ ಅನುಭವವಾಗುತ್ತಿದ್ದುದು ಸಾಲ ಕೇಳಲು ಬರುತ್ತಿದ್ದವರಿಗೆ.

ಜಗನ್ನಾಥನಿಗೆ ಏಕಾದಶಿ ದಿನ ಮಾತ್ರ ಶಾಸ್ತ್ರಿಯ ಮುಖ ನೋಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ; ಮಂಜುನಾಥನ ಕುಂಕುಮ ಪ್ರಸಾದವಿಲ್ಲದ ಅವನ ಬೋಳುಹಣೆ ಬಿಕೋ ಎಂದು ಹಾಳು ಸುತಿಯುವಂತಿರುತ್ತಿತ್ತು. ಹೀಗೆ ಹಣೆಯಲ್ಲಿ ಮಂಜುನಾಥನ ಪ್ರಸಾದದ ಇರುವಿಕೆ, ಅಥವಾ ಇಲ್ಲದಿರುವಿಕೆಯಿಂದಲೇ ಜನರ ಮೂಡಿನ ಮೇಲೇ ಶಾಸ್ತ್ರಿ ಪ್ರಭಾವ ಬೀರುತ್ತಿದ್ದುದರಿಂದಲೋ ಏನೋ ಭಾರತೀಪುರದವರೆಲ್ಲ ಆತನನ್ನು ಕುಂಕುಮದ ಶಾಸ್ತ್ರಿಗಳೆಂದು ಕರೆಯುವುದು ಬಹಳ ಸಮರ್ಪಕವೆನ್ನಿಸುತ್ತಿತ್ತು.

ಈ ಶಾಸ್ತ್ರಿ ಜಗನ್ನಾಥನನ್ನು ನಿಸ್ಸಹಾಯಗೊಳಿಸುವಷ್ಟು ಅವನ ಸುತ್ತ ಮಾತಿನ ಬೆಣ್ಣೆಯ ಕೋಟೆಯನ್ನೇ ಕಟ್ಟಿದ್ದ. ಇಂಗ್ಲೆಂಡಿಂದ ಬಂದಾಗ ಜಗನ್ನಾಥನಿಗೆ ಇದ್ದ ಜನಸಂಪರ್ಕದ ಏಕಮಾತ್ರ ಮಾಧ್ಯಮವೆಂದರೆ ಅವನಿಗಿದ್ದ ಆಸ್ತಿ. ಆದರೆ ಜಗನ್ನಾಥ ಯಾವುದರಲ್ಲೂ ತನ್ನನ್ನೂ ಮೀರಿಹೋಗದಂತಹ ವ್ಯವಸ್ಥೆಯನ್ನು ಶಾಸ್ತ್ರಿ ನಿರ್ಮಿಸಿದ್ದ. ತನ್ನ ಕಿವಿಗೆ ಬೀಳುವಂತೆ ಶಾಸ್ತ್ರಿ ಗಟ್ಟಿಯಾಗಿ ಜನರ ಹತ್ತಿರ ತನ್ನನ್ನು ಹೊಗಳುತ್ತಿದ್ದ ವೈಖರಿ ಜಗನ್ನಾಥನನ್ನು ತುಸುತುಸುವೇ ನಿರ್ಬಲನನ್ನಾಗಿ ಮಾಡಿತ್ತು. ತನಗಿದ್ದಂತೆಯೇ ಶಾಸ್ತ್ರಿಗೂ ಎಲ್ಲರೂ ತನ್ನನ್ನು ಪ್ರೀತಿಸಬೇಕೆಂಬ, ಯಾರೂ ತನ್ನನ್ನು ದ್ವೇಷಿಸಬಾರದೆಂಬ ಆಸೆಯಿದ್ದುದನ್ನು ಕಂಡು ಜಗನ್ನಾಥನಿಗೆ ತನ್ನ ಬಗ್ಗೆ ಹೇಸಿಗೆ ಹೆಚ್ಚಾಗಿತ್ತು. ತನಗಿರುವ ದೌರ್ಬಲ್ಯ ಶಾಸ್ತ್ರಿಗೆ ತಿಳಿದಿದಿಯೆಂದು ಈ ದೌರ್ಬಲ್ಯವನ್ನು ಬಳಸಿಕೊಂಡು ಅವನು ಗಟ್ಟಿಯಾಗುತ್ತಿದ್ದಾನೆಂದು ಇನ್ನಷ್ಟು ತನ್ನ ಬಗ್ಗೆ ಜುಗುಪ್ಸೆ ಹುಟ್ಟಿತ್ತು. ತನ್ನ ವ್ಯಕ್ತಿತ್ವದ ವಿಕಾರದ ಇನ್ನೊಂದು ರೂಪವಾದ ಈ ಶಾಸ್ತ್ರಿ ಹಿತವಾದ ಪ್ರತಿಬಿಂಬವನ್ನು ಮೂಡಿಸಿಕೊಳ್ಳಲು ಹೇಗೆ ಮಾತಿನ ಜಾಲವನ್ನು ಕಟ್ಟುತ್ತಾನೆಂದು ಕಂಡು ಗಾಬರಿಯಾಯಿತು. ಈ ನುಣ್ಣನೆಂದು ಹಸಿಹಸಿ ಮೈಯ ಜಂತುವನ್ನು ನಾನು ನೋಯಿಸಬಲ್ಲೆನಾದರೆ ನನ್ನ ದೌರ್ಬಲ್ಯವನ್ನೆ ಮೀರಲು ಪ್ರಾರಂಭಿಸಿದಂತೆ ಎಂದು ಅನ್ನಿಸತೊಡಗಿತು.

ವೆಂಕಪ್ಪನ ಹೆಂಡತಿಯ ಜೊತೆಗೆ ಶಾಸ್ತ್ರಿ ನಿಂತಿದ್ದ ದೃಶ್ಯ ಕಂಡಂದಿನಿಂದ ತನಗೆ ಈ ಶಾಸ್ತ್ರಿ ಅಭೇಧ್ಯನಲ್ಲ ಎಂದು ಯಾಕೆ ಧೈರ್ಯ ಹುಟ್ಟಿತೋ ತಿಳಿಯದು. ಅವತ್ತು ವಯ್ಯಾರದಲ್ಲಿ ಒಲ್ಲದ ಆ ಹೆಣ್ಣನ್ನು ಅವನು ಬಳಚುತ್ತಿದ್ದುದನ್ನು ನೋಡಿದಾಗ ಮಾತಿನಲ್ಲೂ ಈತ ನನ್ನನ್ನು ಹೀಗೆ ಬಳಚುತ್ತಿದ್ದಾನಲ್ಲವೆ ಎನ್ನಿಸಿ ಅತಿ ಹೇಸಿಗೆಯಾಗಿ ಸೀದಾ ಆಫೀಸಿಗೆ ಬಂದಿದ್ದ. ಅಲ್ಲಿ ಕೂತು ಶಾಸ್ತ್ರಿಗಾಗಿ ಕಾದ. ಹಣೆಯ ತುಂಬ ಕುಂಕುಮ ನಗುತ್ತ ಗ್ಯಾಸ್‌ಲೈಟ್ ಹಚ್ಚಿಟ್ಟು ಆಫೀಸಿಗೆ ಶಾಸ್ತ್ರಿ ಬಂದ. ಟೈ ಇರಲಿಲ್ಲ; ಆದರೆ ಟೋಪಿಯಿತ್ತು.

‘ಏನು ಶಾಸ್ತ್ರಿಗಳೆ ನಿಮ್ಮನ್ನೊಂದು ವಿಷಯ ಕೇಳಬೇಕೆಂದಿದ್ದೆ. ಯಾರ್ಯಾರು ಈ ಸಾರಿ ಗೇಣಿ ಬಾಕಿ ಮಾಡಿಕೊಂಡಿದ್ದಾರೆ ನೋಡಬೇಕು. ಪುಸ್ತಕ ತನ್ನಿ.’

ಶಾಸ್ತ್ರಿ ಸುಳ್ಳು ಲೆಖ್ಖ ಬರೆಯುತ್ತಿದ್ದಾನೆಂದು ಜಗನ್ನಾಥನಿಗೆ ಗುಮಾನಿಯಿತ್ತು. ಹಿಡಿದರೆ ಶಾಸ್ತ್ರಿ ತಣ್ಣಗಾಗುತ್ತಾನೆ; ತನ್ನನ್ನು ಬಳಚುವುದನ್ನು ಬಿಡುತ್ತಾನೆ – ಎಂದು ಭಾವಿಸಿ ಜಗನ್ನಾತ ಸ್ವಲ್ಪ ಜೋರಿನಲ್ಲಿಯೇ ಕೇಳಿದ.

‘ಅಯ್ಯೋ ಪಾಪ. ಯಾಕೆ ಕಣ್ಣು ಹಾಳುಮಾಡಿಕೋತೀರಿ ರಾತ್ರೀಲಿ ಆ ಪುಸ್ತಕ ನೋಡಿ, ನಾಳೆ ಖುದ್ದು ನಾನೇ ನಿಮಗೆ ಓದಿ ಹೇಳ್ತೇನೆ. ತವು ಇಂಥ ವಿಷಯಕ್ಕೆಲ್ಲ ಯಾಕೆ ಶ್ರಮ ತಗೋಬೇಕು’. ಶಾಸ್ತ್ರಿಗಳು ಕತ್ತು ಬಳುಕಿಸುತ್ತ ಹೇಳಿದರು.

ಜಗನ್ನಾಥ ನಿಷ್ಠುರವಾಗಿ ಗಟ್ಟಿಯಾಗಿ ಕೇಳಿದ:

‘ಇಲ್ಲ. ಏನು ಉತ್ಪತ್ತಿಯಿದೆ ಏನು ಖರ್ಚಿದೆ ಎಲ್ಲ ನಾನು ಖುದ್ದು ಪರೀಕ್ಷೆ ಮಾಡಬೇಕೂಂತಿದೀನಿ. ನಾನು ಕೇಳಿದ ಪುಸ್ತಕ ಕೊಡಿ. ರೂಮಿಗೆ ತಗೊಂಡು ಹೋಗ್ತಾ ಇದೇನೆ.’

ಶಾಸ್ತ್ರಿ ಪೆಚ್ಚಾಗಿದ್ದರೂ ತೋರಗೊಡದೆ ಒಂದು ಖಾತೆ ಪುಸ್ತಕ ಎತ್ತಿಕೊಟ್ಟಿದೆ. ಇಷ್ಟೊಂದು ಉದಾತ್ತರಾದ ನೀವು ಸಣ್ಣ ವಿಷಯದಲ್ಲಿ ಮನಸ್ಸು ಕೆಡಿಸಿಕೊಳ್ಳಬೇಕೇ ಎಂಬ ಪಶ್ಚಾತ್ತಾಪದ ಧಾಟಿಯಿತ್ತು – ಪುಸ್ತಕದ ಧೂಳು ಹೊಡೆದು, ಊದಿ ಬಹಳ ನಾಜೂಕಾಗಿ ಕೈಗೆತ್ತಿಕೊಟ್ಟ ಅವನ ಕ್ರಮದಲ್ಲಿ, ಜಗನ್ನಾಥ ಥಟ್ಟನೇ ಅಳುಕದ್ದ. ಅಳುಕಿದೆನಲ್ಲ ಎಂದು ಸಿಟ್ಟಾಗಿದ್ದ. ಈ ಶಾಸ್ತ್ರಿಯ ಮೋಸವನ್ನೆಲ್ಲಾದರೂ ಪತ್ತೆಮಾಡಲಾರದೆ ಹೋದರೆ ಎಂದು ಹೆದರಿದ್ದ. ತೋಟದಲ್ಲಿ ನಡೆದ ದೃಶ್ಯ ನೆನೆದು ಧೈರ್ಯ ತಂದುಕೊಂಡಿದ್ದ.

ಮಾರನೇ ದಿನ ಬೆಳಿಗ್ಗೆ ಶಾಸ್ತ್ರಿಯನ್ನು ಕರೆದು ಹೇಳಿದ:

‘ಇದೇನು ಶಾಸ್ತ್ರಿಗಳೇ ಸುಮಾರು ಮುವ್ವತ್ತು ಜನ ಅಡಿಕೆ ಬಾಕಿ ಮಾಡಿಕೊಂಡಿದ್ದಾರೆ. ಹೋಗಿ ಅವರನ್ನು ನೋಡಿ ಮಾತಾಡಬೇಕು. ಬುಡನ್ನಿಗೆ ಹೇಳಿ – ಇಬ್ಬರೂ ಹೋಗೋಣ.’

ಶಾಸ್ತ್ರಿ ಜಗ್ಗಿದಂತೆ ಕಾಣಲಿಲ್ಲ.

‘ಅವರಿಗೇ ಹೇಳಿಕಳಿಸಿದರೆ ಆಯ್ತಲ್ಲ ಸಾರ್. ಅವರ ಮನೇ ಬಾಗಿಲಿಗೆ ನಾವು ಯಾಕೆ ಹೋಗಬೇಕು? ಅವರಿಗೂ ಪಾಪ ಸಂಕೋಚವಾಗತ್ತೆ – ಏನು ಇಷ್ಟು ಸಣ್ಣ ವಿಷಯಕ್ಕೆ ಖುದ್ದು ಸಾಹುಕಾರ್ರೇ ಬಂದ್ರಲ್ಲ ಅಂತ.’

‘ಆಗಲಿ ಶಾಸ್ತ್ರಿಗಳೇ ಪರವಾಗಿಲ್ಲ. ನಾವು ಹೋಗಿ ಬರೋಣ’.

‘ಬೇಡ ನಾನೇ ಹೋಗಿ ಬರ್ತೀನಿ. ಇವತ್ತು ಸ್ವಲ್ಪ ಕೆಲಸವಿದೆ, ಔಷಧಿ ಹೊಡೆಯೋದಕ್ಕೆ ಜನಾನ್ನ ಕರ್ಕೊಂಬಾ ಅಂತ ಜನಾರ್ಧನ ಸೆಟ್ಟಿಗೆ ಹೇಳಿದೀನಿ.’

‘ಸುಮ್ಮನೇ ಮುಂದೆ ಹಾಕೋದು ಬೇಡ ಶಾಸ್ತ್ರಿಗಳೆ. ಹೊರಡಿ. ಏಯ್ ಬುಡನ್ನಿಗೆ ಹೇಳೊ. ಕಾರನ್ನ ಹೊರಗೆ ತಂದು ನಿಲ್ಲಿಸಲಿಕ್ಕೆ.’

ಜಗನ್ನಾಥ ಆಳನ್ನ ಕರೆದು ಹೇಳಿದ. ವಿವರ್ಣವಾಗಿದ್ದ ಶಾಸ್ತ್ರಿಯ ಮುಖ ಕಂಡು ಅವನಿಗೆ ಧೈರ್ಯ ಬಂದಿತ್ತು, ಒಳಗಿನಿಂದ ಶಕ್ತಿ ಉಕ್ಕಿ ಬಂದಂತಿತ್ತು.

ಶಾಸ್ತ್ರಿ ರೂಮಿನ ಬಾಗಿಲು ಹಾಕಿದ. ಕೈಮುಗಿದು ನಿಂತು ಕಣ್ಣು ಮುಚ್ಚಿ ಹೇಳಿದ.

‘ಮಕ್ಕಳೊಂದಿಗ. ಕಾಪಾಡಬೇಕು. ಲೆಖ್ಖ ಬರೆಯೋದರಲ್ಲಿ ಸ್ವಲ್ಪ ತಪ್ಪಾಗಿದೆ. ಆಮೇಲಿಂದ ಅವರು ಉಳಿದ ಗೇಣಿ ತಂದು ಕೊಟ್ಟಿದ್ದಾರೆ. ಈ ಪುಸ್ತಕದಲ್ಲಿ ಅದನ್ನು ಬರೆದಿಲ್ಲ ಅಷ್ಟೆ. ಬೇಕಾದರೆ ಮಂಡಿ ಲೆಖ್ಖ ತರಿಸಿ ನೋಡಿ. ಅಲ್ಲಿ ಅಡಿಕೇನೆಲ್ಲ ತಮ್ಮ ಹೆಸರಲ್ಲಿ ತುಂಬಿಲ್ಲವಾ ಅಂತ.’

ಎಷ್ಟಾದರೂ ಶಾಸ್ತ್ರಿ ಸೋತಿರಲಿಲ್ಲ. ಜಗನ್ನಾತ ನೇರವಾಗಿ ಮಾತಾಡಿದ.

‘ಶಾಸ್ತ್ರಿಗಳೇ ನಿಮಗೆ ಸಂಬಳ ಇಲ್ಲಿ ಇನ್ನೂರ ಐವತ್ತು ಅಲ್ಲವೆ? ಬಹಳ ಕಮ್ಮಿಯಾಯಿತು. ಇವತ್ತಿನಿಂದ ನಿಮ್ಮ ಸಂಬಳಾನ್ನ ನಾನೂರಕ್ಕೆ ಏರಿಸಿದೀನಿ. ನೀವು ನಿಮ್ಮ ಸ್ವಂತ ಲೆಖ್ಖಕ್ಕೆ ಹಾಕಿಕೊಂಡ ಅಡಿಕೇನೆಲ್ಲ ಕೊಟ್ಟುಬಿಡಿ. ಹೀಗೆ ಮೋಸ ಮಾಡೋದನ್ನ ಬೆಣ್ಣೇಲಿ ಕೂದಲು ತೆಗೆದ ಹಾಗೆ ಮಾತಾಡೋದನ್ನ ದಯಮಾಡಿ ನಿಲ್ಲಿಸಿ. ಕೂಡಲೇ ರೂಮಿಂದ ಹೊರಗೆ ಹೋಗಿ ನಾನು ಹೇಳಿದಷ್ಟು ಮಾಡಿ.’

ಪ್ರಪ್ರಥಮ ಬಾರಿಗೆ ಶಾಸ್ತ್ರಿ ಮಾತು ಕಳೆದುಕೊಂಡು ನಿಂತಿದ್ದು ನೋಡಿ ಜಗನ್ನಾಥನಿಗೆ ಸಂತೋಷವಾಯಿತು. ತನ್ನ ಬಗ್ಗೆ ಅವನು ಒಳಗಿಂದೊಳಗೆ ದ್ವೇಷ ಕಾರುತ್ತಿರಬಹುದಲ್ಲವೇ? ಗೆದ್ದೆ ಎನ್ನಿಸಿತು. ‘ಹೋಗಿ’ ಎಂದು ಮತ್ತೆ ಹೇಳಿದ. ಶಾಸ್ತ್ರಿ ಯಾಂತ್ರಿಕವಾಗಿ ಹೋದ. ಟೋಪಿಯನ್ನು ಕಂಕುಳಲ್ಲವಚಿಕೊಂಡು ಹೋದ ಶಾಸ್ತ್ರಿಯನ್ನು ಕಂಡು ಅನ್ನಿಸಿದ ಪಶ್ಚಾತ್ತಾಪವನ್ನು ಜಗನ್ನಾಥ ತೋರಿಸಿಕೊಳ್ಳಲಿಲ್ಲ.

* * *

ಈ ಘಟನೆಯಾದ ಮೇಲಿಂದ ಜಗನ್ನಾಥನಿಗೆ ಏನೋ ನೆಲೆಸಿಕ್ಕ ಅನುಭವವಾಗಿತ್ತು. ಜನರ ಜೊತೆ ಒಂದಾಗಬೇಕೆಂಬ ಅಸ್ಪಷ್ಟವಾದ ಆಸೆ ಪ್ರಬಲವಾಯಿತು. ಪ್ರತಿನಿತ್ಯ ಬೆಳಿಗ್ಗೆ ಬೇಗ ಎದ್ದು ಬಿಳಿಯಂಗಿ ಮುಂಡು ತೊಟ್ಟು ಆಳುಗಳು ಕೆಲಸ ಮಾಡುವಲ್ಲಿಗೆ ಹೋಗಲು ಶುರುಮಾಡಿದ. ಜನ ಏನು ಯೋಚಿಸ್ತಾರೆ, ಏನು ಕನಸು ಕಾಣ್ತಾರೆ, ಯಾವುದರಿಂದ ಅವರಿಗೆ ನೋವಾಗುತ್ತೆ, ಸುಖವಾಗುತ್ತೆ ಎಂದು ತಿಳಿಯಲು ಪ್ರಯತ್ನಪಟ್ಟ. ತನ್ನ ಎದುರಿಗೆ ಅತ್ಯಂತ ದೈನ್ಯದಿಂದ ವರ್ತಿಸುವ ಇವರು ನನ್ನನ್ನು ನಿಜವಾಗಿ ಗೌರವಿಸುವುದಿಲ್ಲವೆಂಬುದು ಅವನಿಗೆ ಖಾತ್ರಿಯಾಯಿತು. ಆಪ್ತವಾಗಿ ಮಾತಾಡಿಸಲು ಹೋದರೆ ಸಂಶಯಪಟ್ಟಾರು. ಜೊತೆಗೆ ಕೆಲಸ ಮಾಡಲು ಹೋದರೆ ಧಣಿಯರಿಗೆ ದುಡ್ಡಿನ ಮೇಲೆ ಆಸೆ, ಆಳುಗಳು ಕೆಲಸ ಕದಿಯುತ್ತಾರೆಂದು ಅನುಮಾನ ಇತ್ಯಾದಿ ಆಡಿಕೊಂಡಾರು. ಧಾರಾಳಿಯಾಗಿ ನಡೆದುಕೊಂಡರೆ ಒಡೆಯ ಅಪಕ್ವ ಯುವಕನೆಂದು ಸದರವಾಗಿ ಕಂಡರು. ಜಗನ್ನಾಥನಿಗೆ ಏನು ಮಾಡುವುದೆಂದು ತಿಳಿಯಲಿಲ್ಲ.

ತೋಟದಲ್ಲಿ ಬಾಳೆಗೊನೆ. ಮೆಣಸು, ಅಡಿಕೆಗೊನೆ ಕಳುವಾಗುತ್ತೆಂದು ಜಗನ್ನಾಥನಿಗೆ ಅನುಮಾನವಿತ್ತು. ಕತ್ತಲಾದ ಮೇಲೆ ಯಾರಿಗೂ ತಿಳಿಯದಂತೆ ಒಂದು ದಿನ ತೋಟದಲ್ಲಿ ಬಚ್ಚಿ ಕೂತ. ಯಾರಿಗೂ ತಿಳಿಯದಂತೆ ತಾನಿಲ್ಲ ಕದ್ದು ಕೂತಿದ್ದೇನೆಂಬುದೇ ಅವನಿಗೆ ತೀವ್ರವಾಗಿ ಸುಖವನನು ಕೊಟ್ಟಿತು. ಈ ರಾತ್ರಿ ಕಳ್ಳರು ಬರದೇ ಹೋದರೆ ಎಂದು ಚಡಪಡಿಸತೊಡಗಿದ. ಪ್ರೇಮಾತುರದಲ್ಲಿ ಕಾಯುವವನಂತೆ ಕಳ್ಳನನ್ನು ಪತ್ತೆ ಮಾಡಲು ಕಾದ. ಮಧ್ಯರಾತ್ರಿಯ ಹೊತ್ತಿನಲ್ಲಿ ಹೆಜ್ಜೆ ಸಪ್ಪಳ ಕೇಳಿ ರೋಮಾಂಚವಾಯಿತು. ಗಾಢವಾದ ಕತ್ತಲಲ್ಲೂ ಕಣ್ಣುಗಳು ಇಬ್ಬರನ್ನು ಗುರುತಿಸಿದುವು. ವಯಸ್ಸಾದವನೊಬ್ಬ, ಕಿರಿಯ ಇನ್ನೊಬ್ಬ. ಉಸಿರು ಬಿಗಿಹಿಡಿದು ಕಾದ. ಹತ್ತಿರವೇ ಬಂದರು. ತಾನಿದ್ದೇನೆಂಬುದು ಗೊತ್ತಿಲ್ಲೆ, ಆದರೆ ತನಗೆ ಪ್ರತ್ಯಕ್ಷ ತಿಳಿಯುವಂತೆ ಇಬ್ಬರು ತೋಟದಲ್ಲಿ ಕದಿಯುತ್ತಿದ್ದಾರೆಂಬುದು ತನ್ನೊಳಗೆ ಅಪಾರವಾದ ಶಕ್ತಿಯನ್ನು ಉತ್ಪತ್ತಿಮಾಡಿತ್ತು. ತನ್ನ ತೋಟದ ಬಾಳೆಗೊನೆಗಳನ್ನು ಅಡಿಕೆಗೊನೆಗಳನ್ನು ಹಿರಿಯ ಕತ್ತರಿಸಿ ಕಿರಿಯನಿಗೆ ಕೊಡುವುದನ್ನು ಕಂಡು ತನ್ನೊಳಗಿನ ಅತ್ಯಂತ ಆಪ್ತವಾದ ಆಸೆಯೇ ಸಫಲವಾದಂತೆನ್ನಿಸಿತು. ಹಿರಿಯ ಅಡಿಕೆ ಮರ ಹತ್ತುವಾಗ ಅವನು ಬೀಳಬಾರದೆಂದು ತಾನೇ ಹತ್ತುತ್ತಿರುವೆನೋ ಎಂಬಂತೆ ಉಸಿರು ಬಿಗಿ ಹಿಡಿದು ಮುಂದಿನದನ್ನು ನಿರೀಕ್ಷಿಸಿದ. ಅವನು ಕತ್ತರಿಸಿ ಕೆಳಗೆ ಬೀಳಿಸಿದ ಅಡಿಕೆಗೊನೆ ತೋಟ ಕಾಯುವವನನ್ನು ಎಚ್ಚರಿಸದಿರಲೆಂದು ಪ್ರಾರ್ಥಿಸಿದ. ಕಿರಿಯ ಎಲ್ಲವನ್ನೂ ಚೀಲದಲ್ಲಿ ಸುತ್ತಿಕೊಂಡಾದ ಮೇಲೆ ಇಬ್ಬರೂ ತಲೆಯ ಮೇಲೆ ಚೀಲಗಳನ್ನು ಹೊತ್ತಿಕೊಂಡು ಹೊರಟುರ. ಇಬ್ಬರೂ ಅಷ್ಟು ದೂರ ಹೋಗುತ್ತಿದ್ದಂತೆ ಅವರು ಯಾರಿರಬಹುದೆಂದು ತಿಳಿಯುವ ಆಸೆ ಹುಟ್ಟಿತು. ಮೆಲ್ಲ ಮೆಲ್ಲನೆ ಅವರ ಹಿಂದೆ ನಡೆದ. ತೋಟದಿಂದ ಗುಡ್ಡಕ್ಕೆ ಒಯ್ಯುವ ಈ ಕಳ್ಳ ದಾರಿಯೊಂದು ಇದೆ ಎಂಬುದೇ ಜಗನ್ನಾಥ ತಿಳಿದಿರಲಿಲ್ಲ. ಶೂದ್ರರಿಗೆ ಮಾತ್ರ ತಿಳಿದ ಇನ್ನೆಷ್ಟು ಒಳದಾರಿಗಳಿವೆಯೋ ಅವೆಲ್ಲವನ್ನೂ ತಿಳಿಯಬೇಕೆಂದು ಅತ್ಯಂತ ಕುತೂಹಲ ಹುಟ್ಟಿತು. ಗುಡ್ಡದ ನೆತ್ತಿಗೇರುವ ತನಕ ಬೆಕ್ಕಿನಂತೆ ಅವರನ್ನು ಹಿಂಬಾಲಿಸಿದ. ನೆತ್ತಿಯನ್ನು ಇನ್ನೇನು ತಲ್ಪಬೇಕುನ್ನುವ ಹೊತ್ತಿನಲ್ಲಿ ಓಡಿ ಹೋಗಿ ಹಿರಿಯನ ಕೈ ಹಿಡಿದ. ಟಾರ್ಚ್ ಹಾಕಿದ.

ಹಿರಿಯ ಅತ್ಯಂತ ಸಂಪನ್ನನಂತೆ ತನ್ನ ಹತ್ತಿರ ನಡೆದುಕೊಳ್ಳುತ್ತಿದ್ದ ಶೀನಪ್ಪನಾಗಿದ್ದ. ಸುಮಾರು ನಲವತ್ತೈದು ವರ್ಷದ ಗಟ್ಟಿಮುಟ್ಟಾದ ಮೈಯ ಈ ಆಳು ತನ್ನ ಕಿರಿಮಗ ಗಂಗಪ್ಪನ ಜೊತೆ ಕದಿಯಲು ಬಂದಿದ್ದು ನೋಡಿ ಜಗನ್ನಾಥನಿಗೆ ಇನ್ನಷ್ಟು ಶಕ್ತಿ ಉಕ್ಕಿದಂತಾಗಿತ್ತು. ಕಾಲಿಗೆ ಬಿದ್ದು ಹೊರಳಲು ಹೋದ ಶೀನಪ್ಪನಿಗೆ ‘ಏಳು’ ಎಂದ. ಓಡಲು ಹೋದ ಗಂಗಪ್ಪನನ್ನು ‘ನಿಲ್ಲು’ ಎಂದ. ‘ಇನ್ನು ಮುಂದೆ ಕದಿಯಬೇಡಿ – ಅಷ್ಟೆ. ಈ ಸಾರಿಗೆ ನಿಮ್ಮನ್ನು ಬಿಟ್ಟಿದ್ದೇನೆ’ ಎಂದು ಸಮಾಧಾನದಿಂದ ಹೇಳಿದ. ನಾನು ನಿಮಗೆ ಸರಿಸಮನಾದೆನಲ್ಲವೆ ಎಂಬ ಉತ್ಸಾಹ ಅವನ ಮಾತಿನಲ್ಲಿತ್ತು.

‘ಭೂತರಾಯನಿಗೆ ತಪ್ಪು ಕಟ್ತೀನಿ ಒಡೇರೆ, ನನ್ನನ್ನು ಬಿಟ್ಟುಬಿಡಿ’

ಎನ್ನುತ್ತ ಗೋಗರೆದ ಶೀನಪ್ಪನಿಗೆ ತಾನು ಹೇಳಿದ್ದನ್ನು ನಂಬುವುದೇ ಕಷ್ಟವೆನಿಸಿರಬೇಕು. ಇನ್ನು ಈ ಶೀನಪ್ಪನ ಪ್ರಜ್ಞೆಯಲ್ಲಿ ನಾನೊಬ್ಬ ನಿಜವಾದ ಮನುಷ್ಯನಾದೆ ಎನ್ನುವ ಖುಷಿಯಿಂದ ಜಗನ್ನಾಥ,

‘ಒಂದು ಬಾಳೆಗೊನೆ ತಗೊಂಡು ಹೋಗು. ಉಳಿದದ್ದನ್ನ ಮನೆಗೆ ತಂದು ಹಾಕು. ನಿನಗೇನಾದರೂ ದುಡ್ಡು ಬೇಕಾಗಿದ್ದರೆ ಕೇಳು – ಕೊಡ್ತೀನಿ’ ಎಂದು ಹಿಂದಕ್ಕೆ ಹೊರಟ. ನಡುಗುತ್ತಿದ್ದ ಶೀನಪ್ಪ,

‘ಮನೇತನಕ ನಿಮ್ಮನ್ನು ಬಿಟ್ಟು ಬರ್ತೀನಿ ಒಡೇರೇ’ ಎಂದು ದಾರಿಯುದ್ದಕ್ಕೂ ಇನ್ನೂ ಯಾರ್ಯಾರು ಹೀಗೆ ಕದೀತಾರೆ, ಅವರನ್ನೆಲ್ಲ ತಾನು ಹಿಡಿದು ಪತ್ತೆ ಮಾಡ್ತೇನೆ ಇತ್ಯಾದಿ ಹೇಳುತ್ತ ಜೊತೆಗೆ ಬಂದು ಬಿಟ್ಟು ಹೋದ. ವಿನಯಕ್ಕಿಂತ ಧೂರ್ತತನದಲ್ಲೆ ನೀನು ಗಟ್ಟಿಯಾಗಿರುವುದು ಎಂಬುದನ್ನು ಸೂಚಿಸಲು ಜಗನ್ನಾಥ ಒಂದು ಮಾತೂ ಆಡದೆ ಅವನು ಹೇಳಿದ್ದನ್ನೆಲ್ಲ ಕೇಳಿಸಿಕೊಂಡ.

ಈ ಸುದ್ದಿ ಹಬ್ಬಿದೆ ತನ್ನ ವರ್ಚಸ್ಸು ಆಳುಗಳ ನಡುವೆ ಬೆಳೆದದ್ದನ್ನು ಜಗನ್ನಾಥ ಗಮನಿಸಿದ. ಭಯದಲ್ಲಿ ಮಾತ್ರ ತೋಟದ ಕೆಲಸ ಸಾಧ್ಯವೆಂಬುದನ್ನು ಅರಿತು ಜಗನ್ನಾಥ ಇನ್ನೊಂದು ಗೊಂದಲಕ್ಕೆ ಒಳಗಾದ. ಆಸ್ತಿಯನ್ನು ಊರ್ಜಿತಗೊಳಿಸಿಗೊಳ್ಳುತ್ತ ಹೋಗುವ ಆಸೆಯೇ ತನ್ನ ಇಡೀ ಮನಸ್ಸನ್ನು ಆವರಿಸಿಕೊಂಡುಬಿಟ್ಟೀತಲ್ಲವೆ? ಸಂಪತ್ತಿನ ಮೇಲೆ ನಿಜವಾದ ಆಸೆಯಿಲ್ಲದಿದ್ದರೂ. ತನಗೂ ಉಳಿದವರಿಗೂ ನಡುವೆ ಆಸ್ತಿಯಿರುವ ತನಕ ಸಂಪೂರ್ಣ ಮಾನವೀಯ ಸಂಬಂಧ ಅಸಾಧ್ಯ. ಹಾಗೆಯೇ ಆಸ್ತಿಯಿಲ್ಲದಿದ್ದಲ್ಲಿ ಯಾವ ಸಂಬಂಧವೂ ಸಾಧ್ಯವಿಲ್ಲ. ಆಸ್ತಿಯನ್ನು ಸಮಾನವಾಗಿ ಹಂಚುವುದರಿಂದ ಕೂಡ ಈ ಸಂಬಂಧದ ಪ್ರಶ್ನೆಯನ್ನು ಬಗೆಹರಿಸುವಂತಿಲ್ಲ. ಯಾಕೆಂದೆ ಭಾರತೀಪುರದಲ್ಲಿ ಆಸ್ತಿಯ ಮೂಲಕವೇ ಎಲ್ಲ ರೀತಿಯ ಸಂಬಂಧಗಳೂ ಏರ್ಪಟ್ಟಿದ್ದವು. ಒಂದೋ ಒಡೆಯನಾಗಿರಬೇಕು; ಅಥವಾ ಒಕ್ಕಲಾಗಿರಬೇಕು; ಅಥವಾ ವರ್ತಕನಾಗಿರಬೇಕು; ಅಥವಾ ಮಂಜುನಾಥನ ದಳ್ಳಾಳಇಗಳಾಬೇಕು; ಅಥವಾ ಎಲ್ಲವನ್ನೂ ಬಿಟ್ಟು ಅವಧೂತನಾಗಬೇಕು. ಕೊನೆಯ ಸಾಧ್ಯತೆ ಬಿಟ್ಟರೆ ಉಳಿದೆಲ್ಲದರಲ್ಲೂ ಆಸ್ತಿಯ ಮೂಲಕ ಮಾತ್ರ ಸಂಬಂಧಗಳು ಏರ್ಪಡುತ್ತಿದ್ದುವು. ಜಮೀಂದಾರನಾಗಿ ಮಾನವೀಯತೆ ಕಳೆದುಕೊಳ್ಳಬೇಕು; ಅಥವಾ ಗೇಣಿದಾರನಾಗಿ ಅರೆಜೀವದ ಬದುಕು ನಡೆಸಬೇಕು. ಅಥವಾ ವರ್ತಕನಾಗಿ ವಂಚನೆಮಾಡಬೇಕು. ಎಲ್ಲ ಸಂಬಂಧಗಳ ಮೂಲದಲ್ಲೂ ಇದ್ದದ್ದು ಆಸ್ತಿ; ಇದನ್ನು ಕಾಪಾಡುವ ಮಂಜುನಾಥನ ಭಂಟ ಭೂತರಾಯ. ಈ ಚಕ್ರವ್ಯೂಹದಿಂದ ಬಿಡುಗಡೆಯೇ ಇಲ್ಲವೆನ್ನಿಸಿ ಜಗನ್ನಾಥ ಇನ್ನಷ್ಟು ಅಳವಾಗಿ ಈ ಪ್ರಶ್ನೆಯನ್ನು ಹೊಕ್ಕು ನೋಡಲು ನಿರ್ಧರಿಸಿದ.

ಜನರ ಒಳಗಿನ ಬಾಳು ಹೇಗಿರುತ್ತದೆ ಎಂದು ತಿಳಿಯಬೇಕೆನ್ನಿಸಿತು. ಶೀನಪ್ಪನಂತಹ ತೋರಿಕೆಗೆ ಸಂಪನ್ನನಾಗಿದ್ದವನೂ ಕದಿಯುತ್ತಾನೆಂಬುದು, ಸಿಕ್ಕಿಬಿದ್ದ ಮೇಲೂ ಅವನು ತನ್ನೊಳಗೆ ನಿಜವಾಗಿ ನಿರ್ಬಲನಾಗಲಿಲ್ಲವೆನ್ನುವುದು, ಈ ಭಾರತೀಪುರದಲ್ಲಿ ನಿಶಾಸಂಚಾರಿ ಶೂದ್ರರಿಗೆ ಮಾತ್ರ ತಿಳಿದಿದ್ದ ಅನೇಕ ಗುಪ್ತದಾರಿಗಳಿವೆಯೆಂಬುದು, ಭೂತರಾಯನ ಅಂಕೆಗೆ ಹೆದರುವ ಈ ಜನರೂ ಪತ್ತೆಯಾಗದ ಮಾರ್ಗಗಳನ್ನು ನೀತಿನಿಯಮಕ್ಕೆ ಅತೀತವಾಗಿ ಹುಡುಕಿಕೊಳ್ಳತ್ತಾರೆಂಬುದು ಜಗನ್ನಾಥನ ಯೋಚನಾಕ್ರಮಕ್ಕೆ ಹೊಸ ಆಯಾಮವನ್ನು ಕೊಟ್ಟಿತ್ತು. ತೋರಿಕೆಗೆ ಅತ್ಯಂತ ದೀನರಾದ ಈ ಜನರಲ್ಲಿ ಯಾವುದರಿಂದಲೂ ನಾಶವಾಗಲಾರದ ಬದುಕಿನ ವಾಂಛಲ್ಯವಿದೆಯೆನ್ನಿಸಿ ಅದನ್ನು ತಿಳಿಯಬೇಕೆಂಬ ಮನಸ್ಸಾಯಿತು. ಮಂಜುನಾಥ, ಭೂತರಾಯ, ಜಮೀಂದಾರ, ವತ್ಕ, ಅನುಭಾವಿ – ಯಾರೂ ಮುಟ್ಟದ ಒಂದು ಗೂಢವಾದ ಒಳ ಪ್ರಪಂಚದಲ್ಲಿ ತಮಗೇ ತಿಳಿಯದಂತೆ ಈ ಜನ ಬದುಕುವ ಶಕ್ತಿಯನ್ನು ಪಡೆಯುತ್ತಾರೆ ಎನ್ನಿಸಿತು. ಈ ನೀತಿ ನಿಯಮಗಳನ್ನೆಲ್ಲ ದಾಟಿದ ಅವರ ಒಳಪ್ರಪಂಚದ ಧೂರ್ತತೆಯನ್ನು ಗಣನೆಗೆ ತಂದುಕೊಳ್ಳದೆ ಸಾಮಾನ್ಯರ ಬಗ್ಗೆ ಆದರ್ಶವಾದಿಯಾಗಿ ಮಾತಾಡಿದರೆ ತಾನು ಪೊಳ್ಳಾಗುತ್ತೇನೆ ಎಂದು ಅರಿವಾಯಿತು.

ಆಳುಗಳಿಗೆಲ್ಲ ಮೇಸ್ತ್ರಿಯಾಗಿದ್ದ ಜನಾರ್ಧನ ಸೆಟ್ಟಿಯೆಂಬ ಸೊಗಸುಗಾರ ಯುವಕನೊಬ್ಬನಿದ್ದ. ತನು ಸೇರೆಗಾರನಾದ್ದರಿಂದ ಸ್ವಂತ ಕೈಯಲ್ಲಿ ಕೆಲಸ ಮಾಡುವವನಲ್ಲ ಎಂಬುದನ್ನು ಸ್ಥಾಪಿಸಲೆಂಬಂತೆ ಆತ ಬಲಗೈಗೇ ವಾಚು ಕಟ್ಟಿಕೊಳ್ಳುತ್ತಿದ್ದ. ಖಾಕಿ ಪ್ಯಾಂಟು, ಹೊಳೆಯುವ ಟೆರಿಲೀನ್ ಅಂಗಿ, ಜೇಬಿಬಲ್ಲಿ ಪೆನ್ನು ಸಿಗರೇಟು ಬೆಂಕಿಪೊಟ್ಟಣ, ಓರಣವಾಗಿ ಬಾಚಿದ ತಲೆ, ಬೊಂಬಾಯಿ ನಗರವನ್ನು ಅವನು ವರ್ಣಿಸುವ ವೈಖರಿ, ತನ್ನನ್ನು ಮೆಚ್ಚಿಸಲು ಹೆಣ್ಣಾಳುಗಳಲ್ಲಿ ಅವನು ಪ್ರೋತ್ಸಾಹಿಸುತ್ತಿದ್ದ ಪೈಪೋಟಿ – ಇವುಗಳಿಂದ ದಕ್ಷ ಸೇರೆಗಾರನೆಂದು ಅವನು ಹೆಸರು ಮಾಡಿದ್ದ. ವೇಷಭೂಷಣ, ಮಾತಿನ ಮರ್ಜಿಗಳಲ್ಲಿ ಎಷ್ಟು ಪೇಟೆಯವನಂತೆ ಅವನು ಕಾಣಿಸಿಕೊಂಡರೂ ಹಣೆಯ ಮೇಲಿದ್ದ ಅಳಿಸಲಾರದ ಮಚ್ಚೆ ಅವನು ಕನ್ನಡ ಜಿಲ್ಲೆಯ ಹಳ್ಳಿಯವನೆಂಬುದನ್ನು ಮುಚ್ಚಿಡಲಾರದಂತೆ ಸಾರುತ್ತಿತ್ತು.

ಒಂದು ದಿನ ಜಗನ್ನಾಥನಿಗೆ ತನ್ನ ವಾರಿಗೆಯ ಈ ಯುವಕನನ್ನು ಮಾತಾಡಿಸಬೇಕೆನ್ನಿಸಿತು. ಆಳುಗಳಿಗೆ ಕೆಲಸ ಹೇಳುತ್ತ ನಿಂತಿದ್ದ ಅವನನ್ನು ‘ಬನ್ನಿ’ ಎಂದು ಕರೆದ. ಧಣಿಯರು ಕೂಗಿದುದು ಕೇಳಿ ಸೇದುತ್ತಿದ್ದ ಸಿಗರೇಟನ್ನು ಬಿಸಾಡಿ ಬಂದ ಸೆಟ್ಟಿಗೆ,

‘ಕೂರಿ’ ಎಂದು ತಾನು ಕೂತಿದ್ದ ಮರದ ತುಂಡಿನ ಪಕ್ಕದಲ್ಲಿದ್ದ ಇನ್ನೊಂದು ತುಂಡನ್ನು ತೋರಿಸಿದ.

‘ಬೇಡ ಸಾರ್’

ಸೆಟ್ಟಿ ವಿನಯದಿಂದ ನಿಂತೇ ಇದ್ದ. ತಮ್ಮಿಬ್ಬರ ನಡುವಿನ ಗೋಡೆಯನ್ನು ಹೇಗೆ ಒಡೆಯುವುದೆಂದು ತಿಳಿಯದೆ ಜಗನ್ನಾಥ,

‘ಪರವಾಗಿಲ್ಲ ಕೂರಿ’ ಎಂದ. ಸೆಟ್ಟಿ ಕೂರಲೇ ಇಲ್ಲ.

‘ನೀವು ಕೆಲಸ ಹೇಳ್ತಿದ್ದರಲ್ಲ ಶೀನಪ್ಪ – ಅವನಿಗೆಷ್ಟು ಮಕ್ಕಳು?’

ಶೀನಪ್ಪನನ್ನು ತಾನು ಹಿಡಿದದ್ದು ಸೆಟ್ಟಿಗೆ ತಿಳಿದಿರಬೇಕು. ತನ್ನ ಕಡೆಯ ಆಳು ಸಿಕ್ಕಿಬಿದ್ದನೆಂದು ಅವನಿಗೆ ಭಯವಾಗಿರಬೇಕು. ತಾನು ಕೇಳಿದ ಪ್ರಶ್ನೆ ಪ್ರಾಯಶಃ ಸರಿಯಲ್ಲವೆನಿಸಿ ಮಾತು ಬದಲಾಯಿಸುವುದರೊಳಗೆ ಸೆಟ್ಟಿ ಹೇಳಿದ:

‘ನನ್ನನ್ನ ಏಕವಚನದಲ್ಲೆ ಕರೀರಿ ಸಾರ್.’

‘ಏನು ಓದಿದೀರಿ?’

‘ಮಿಡ್ಲ್ ಸ್ಕೂಲು ಮುಗಿಸಿದೀನಿ ಸಾರ್.’

ಜಗನ್ನಾಥ ಮಾತು ಮುಂದುವರಿಸುವುದು ಹೇಗೆ ತಿಳಿಯದೆ ಸುಮ್ಮನಾಗಿದ್ದ. ಸೆಟ್ಟಿಯೇ ಅಂಜುತ್ತ ಹೇಳಿದ್ದ.

‘ಶೀನಪ್ಪನಿಗೆ ನಾನೂ ಹೆದರಿಸಿದೀನಿ ಸಾರ್. ಅವನಿಗೆಷ್ಟು ಮಕ್ಕಳೂಂತ ಕೇಳಿದಿರಿ ಸಾರ್. ಮೂರು ಹೆಣ್ಣು ಮೂರು ಗಂಡು. ಮೊದಲನೇಯವಳು ಇಲ್ಲೇ ಕೆಲಸಮಾಡ್ತಾಳೆ, ಗಂಡನನ್ನು ಬಿಟ್ಟು ಬಂದಿದ್ದಾಳೆ. ಎರಡನೇಯವಳು ತೋಟಕ್ಕೆ ಸೊಪ್ಪು ತರತಾಳಾಲ್ಲ ಕಾವೇರಿ ಅಂತ – ಅವಳು. ಮೂರನೇಯವಳೂ ಇಲ್ಲೆ ಕೆಲಸ ಮಾಡ್ತಾಳೆ. ಗಂಗಪ್ಪನನ್ನ ಬಿಟ್ಟರೆ ಉಳಿದ ಎರಡು ಗಂಡು ಮಕ್ಕಳೂ ಚಿಕ್ಕವು. ಪಾಪ – ಮಕ್ಕಳೊಂದಿಗ, ನೀವಲ್ದೆ ಇದ್ರೆ ಸಾರ್, ಕೆಲಸ ಕಳ್ಕೊಳ್ತಿದ್ದ.’

ಸೆಟ್ಟಿಗೆ ಜಗನ್ನಾಥನ ಕುತೂಹಲ ಸಮಸ್ಯೆಯಾಗಿರಬೇಕು. ಆದರೆ ಶೀನಪ್ಪನ ಸಾಂಸಾರಿಕ ಜೀವನದ ಬಗ್ಗೆ ತಿಳಿಯಬೇಕೆನ್ನುವ ಜಗನ್ನಾಥನ ಉದ್ದೇಶಕ್ಕೆ ಅಪಾರ್ಥ ಕಲ್ಪಿಸಿಕೊಂಡ ಮೇಲೆಯೇ ದೂರವಿದ್ದ ಸೆಟ್ಟಿ ಹತ್ತಿರವಾದ್ದು. ಅವನು ಹತ್ತಿರವಾಗುತ್ತಿದ್ದ ಕ್ರಮ ಜಗನ್ನಾಥನ ಮುಜುಗರಕ್ಕೆ ಕಾರಣವಾದರೂ ಸೆಟ್ಟಿಯ ನಾಲಗೆ ಸಡಿಲವಾಗಲಿ ಎಂದು ಕೌತುಕದಿಂದ ಜಗನ್ನಾಥ ಕಾದ. ಶೀನಪ್ಪನ ಕೌಟುಂಬಿಕ ಜೀವನದ ವಿವರಗಳನ್ನೆಲ್ಲ ಜಗನ್ನಾಥನಿಗೆ ಪ್ರಚೋದಕವಾಗುವಂತೆ ಸೆಟ್ಟಿ ಬಣ್ಣಿಸತೊಡಗಿದ.

ಈ ಶೀನಪ್ಪ ಇರಲಿ. ಇವನ ಅಣ್ಣನೊಬ್ಬ ಸೊಸೆ ಮೇಲೆ ಕಣ್ಣು ಹಾಕಿ ಮನೆ ಬಿಟ್ಟು ಓಡಿಸಿದ್ದನಂತೆ. ಸೊಸೆಯೂ ಅಂಥವಳೆ – ಯಾರಿಗಾದರೂ ಕಾಲೆತ್ತುವ ಪೈಕಿ. ಹೀಗೆ ಸೆಟ್ಟಿ ವರ್ಣಿಸುವಾಗ ತನಗೆ ಮುಜುಗರವಾಗಿಲ್ಲವೆಂದು ತೋರಿಸಿಕೊಳ್ಳಲು ‘ಅಯ್ಯೋ ಅಂಥವರು ಬಹಳ ಜನ ಇರ್ತಾರೆ’ ಎಂದು ಜಗನ್ನಾಥ ಹೇಳಿದ್ದ. ಸೆಟ್ಟಿಯ ಉತ್ಸಾಹ ಇದರಿಂದ ಹೆಚ್ಚಿತ್ತು. ‘ಅದೇನು ಬಿಡಿ ಸಾರ್. ಈ ಶೀನಪ್ಪನ ವಿಷಯ ಕೇಳಿದರೆ ನೀವು ನನ್ನ ಮಾತನ್ನ ಖಂಡಿತ ನಂಬಲ್ಲ. ಅವನು ತನ್ನ ಹಿರೇಮಗಳನ್ನೇ ಇಟ್ಟುಕೊಂಡಿದಾನೆ ಗೊತ್ತ? ಇಲ್ದೆ ಇದ್ರೆ ಗಂಡನ ಮನೇಂದ ಮಗಳನ್ನು ಯಾಕೆ ಬಿಡಿಸುತ್ತಿದ್ದ ಹೇಳಿ.’

ಹೀಗೆ ಹೇಳಿ ಸೆಟ್ಟಿ ಸಿಗರೇಟು ಹಚ್ಚಿದ್ದ. ‘ನೀವು ಯಾಕೆ ಎಳೆಯೋದಿಲ್ಲ ಸಾರ್’ ಎಂದಿದ್ದ. ಸೆಟ್ಟಿ ಹೇಳಿದ ವಿಷಯದಿಂದ ತಾನು ಗಾಬರಿಯಾಗಿಲ್ಲವೆಂದು ತೋರಿಸಿಕೊಳ್ಳಲು ಜಗನ್ನಾಥ ಏನೋ ಕೇಳಹೋಗಿ ಇನ್ನೇನೋ ಕೇಳಿದ್ದ:

‘ಎರಡನೇ ಮಗಳಿದಾಳಲ್ಲ ಕಾವೇರಿ – ಅವಳಿಗಿನ್ನೂ ಯಾಕೆ ಶೀನಪ್ಪ ಮದುವೆ ಮಾಡಿಲ್ಲ?’

ಸೆಟ್ಟಿ ನಕ್ಕು ಹೇಳಿದ್ದ, ‘ಶೀನಪ್ಪನಿಗೆ ಅತಿ ದುರಾಸೆ ಸಾರ್. ಐನೂರು ರೂಪಾಯಿ ತೆರ ಕೊಡದ ಹಣ್ಣು ಕೊಡಲ್ಲ ಅಂತಾನೆ. ದುಡೀತಾ ಇರೋ ಮಗಳು. ಅಲ್ದೆ ಚೆನ್ನಾಗಿದಾಳೆ. ಗರ್ವ ಸೂಳೇಮಗನಿಗೆ – ಅಷ್ಟೆ.’

ಸೆಟ್ಟಿ ಇಷ್ಟೆ ಸಾಕೆನ್ನುವಂತೆ ಇನ್ನಷ್ಟು ಆಪ್ತನಾಗಿದ್ದ.

‘ಒಟ್ಟಿನಲ್ಲಿ ಜನರ ನಡತೆ ಸರಿಯಿಲ್ಲ ಸಾರ್. ದೂರದ ಬೆಟ್ಟ ನುಣ್ಣಗೇಂತ ಅಂತಾರಲ್ಲ ಅದು ನಿಜ ಸಾರ್, ಹತ್ತಿರದಿಂದ ನೋಡಿದ್ರೆ ಗೊತ್ತಾಗತ್ತೆ. ವಿದ್ಯಾ ಬುದ್ಧಿಯಿಲ್ಲದ ಈ ಮುಂಡೇಮಕ್ಳಿಗೆ ಚೂರೂ ಶೀಲ ಅನ್ನೋದೇ ಇಲ್ಲ. ಸ್ವಂತ ಮಗಳನ್ನೆ ಇಟ್ಕೋತಾವೆ. ಸೊಸೇನ್ನ ಇಟ್ಕೋತಾವೆ. ಇನ್ನೊಬ್ಬನ ಹೆಂಡತಿ ಅನ್ನೋ ಧರ್ಮ ಕರ್ಮ ಇಲ್ಲ.’

ಶಾಸ್ತ್ರಿಗೆ ತಾನು ಮಾನಭಂಗ ಮಾಡಿದ್ದ ವಿಷಯಾನ್ನ ಸೆಟ್ಟಿ ಕೇಳಿರಬೇಕು. ಹೇಗೆ ಸುದ್ದಿ ಭಾರತೀಪುರದಲ್ಲಿ ಕಿವಿಯಿಂದ ಕಿವಿಗೆ ದಾಟುತ್ತದೊ ತಿಳಿಯುವುದಿಲ್ಲ. ಶಾಸ್ತ್ರಿಯನ್ನು ಗದರಿಸಿದಾಗ ಹೊರಗೆ ನಿಂತು ಒಬ್ಬ ಆಳು ಆಲಿಸಿರಲಿಕ್ಕೆ ಸಾಕು. ಸೆಟ್ಟಿ ಬಲು ಆಪ್ತಧಾಟಿಯಲ್ಲಿ ಹೇಳಿದ:

‘ಶಾಸ್ತ್ರಿಗಳಿಗೆ ಸರಿಯಾದ ಶಾಸ್ತ್ರಿ ಮಾಡಿದ್ರಿ ಸಾರ್. ನೀವು ಬರೋಕೆ ಮುಂಚೆ ಅವರ ಹಾರಾಟ ನೋಡಬೇಕಿತ್ತು. ಅವರೇನು ಕಮ್ಮಿ ಅಂತ ತಿಳ್ಕೊಂಡಿದೀರ ಸಾರ್. ಆ ಅಮ್ಮ ಹೆಸರಿಗೆ ಹೆಂಡತಿ ಅಷ್ಟೆ. ಸ್ವಂತ ಅತ್ತೇನ್ನೆ ಅವರು ಇಟ್ಕೊಂಡಿದಾರೆ ಅಂತ ಊರಲ್ಲೆಲ್ಲ ಮಾತಾಡ್ತಾರೆ. ಹಿರೇಮಗ ಅತ್ತೇಗೇ ಹುಟ್ಟಿದ್ದಂತೆ. ಮಗಳು ಪಾಪ ಬಾಯಿ ಮುಚ್ಚಿಕೊಂಡು ಸಹಿಸ್ಕೊಂಡಿದಾರೆ. ಇನ್ನೇನು ಮಾಡಕ್ಕಾಗುತ್ತೆ ಹೇಳಿ.’

ಜಗನ್ನಾಥ ಸಮಾಧಾನದಿಂದ ಎಲ್ಲವನ್ನೂ ತಾಳಿಕೊಂಡು ಮನೆಗೆ ಬಂದವನೇ ತಲೆ ಕೆಟ್ಟಂತಾಗಿ ಸುಮ್ಮನೇ ಕೂತುಬಿಟ್ಟಿದ್ದ. ಒಳಜೀವನ ನೋಡಹೋದರೆ ಎಲ್ಲರ ಬಾಳೂ ಎಷ್ಟು ಗಂಟು ಗೋಜಲು! ಮಂಜುನಾಥನ ಗರ್ಭದಲ್ಲಿ ಎಷ್ಟೊಂದು ತಾಳಿ ಉಳಿದಿದೆ! ಜೀವನದ ಸಫಲತೆಗೆ ಎಷ್ಟೊಂದು ಒಳದಾರಿಗಳು ಕಳ್ಳದಾರಿಗಳು ಇವೆ!

ಸೆಟ್ಟಿ ಜೊತೆಯ ಆಪ್ತತೆಯಿಂದಾಗಿ ಜಗನ್ನಾಥ ಇನ್ನೊಂದು ಸಂದಿಗ್ಧಕ್ಕೆ ಒಳಗಾದ. ಈ ಮಾತುಗಳನ್ನಾಡಿದ ಮಾರನೇ ದಿನ ತನ್ನ ರೂಮು ಗುಡಿಸಲು ತಿಮ್ಮಿಯ ಬದಲು ಶೀನಪ್ಪನ ಎರಡನೇ ಮಗಳು ಕಾವೇರಿ ಬಂದಿದ್ದಳು. ಮೈಕೈ ತುಂಬಿದ ಹುಡುಗಿ ತೊಡೆಗಳು ಕಾಣುವಂತೆ ತುಂಡುಟ್ಟು ತಲೆಯ ಗಂಟಿನಲ್ಲಿ ಗುಲಾಬಿ ಮುಡಿದಿದ್ದಳು. ವಯ್ಯಾರದಿಂದ ಬಗ್ಗಿ ಮಂಚದ ಬುಡದಲ್ಲಿ ಗುಡಿಸಿದ್ದಳು. ತೋಟದ ಕೆಲಸ ನೋಡುತ್ತಿದ್ದಾಗ ಅದೇ ಬೆಡಗಿನಲ್ಲಿ ಜೊತೆಗಾರ್ತಿಯರ ಹತ್ತಿರ ಮಾತಾಡುತ್ತ ಅನಾವಶ್ಯಕವಾಗಿ ಸೆರಗು ಸರಿಪಡಿಸಿಕೊಂಡಿದ್ದಳು.

ಜಗನ್ನಾಥನಿಗೆ ಅವಳ ಬಗ್ಗೆ ಆಸೆಯಾಗಿತ್ತು ಆದರೆ ತನ್ನ ವರ್ಗದವಳೊಬ್ಬಳ ಬಗ್ಗೆ ಆಸೆಯಾಗಿದ್ದೆ ಹೇಗೆ ವರ್ತಿಸಬೇಕೆಂದು ಗೊತ್ತಿದ್ದಂತೆ ಈಗ ತಿಳಿದಿರಲಿಲ್ಲ. ಅವಳ ಜೊತೆ ಕ್ಷಣಿಕವಾದ ಮೈಸಂಬಂಧಕ್ಕಿಂತ ಆಚಿನದೇನೂ ಸಾಧ್ಯವಿರಲಿಲ್ಲ. ಆದರೆ ಕಾಮಕ್ಕೆ ಉಪಯೋಗಿಸುವ ಬರಿಯೊಂದು ವಸ್ತುವಿಗಿಂತ ಹೆಚ್ಚಿನ ವಾಸ್ತವತೆ ತಮ್ಮ ನಡುವೆ ಹುಟ್ಟಲಾರದು; ತಾನು ಕಾವೇರಿಯನ್ನು ಕೂಡಿದರೆ ಅದು ಮಾನವೀಯ ಸಂಬಂಧವಾಗಲಾರದು. ಇಷ್ಟೊಂದು ಆಸೆ ಹುಟ್ಟಿಸಬಲ್ಲ ಮೈ ಹೇಗೆ ತನಗೆ ನಿಜವಾಗಿಯೂ ಅತೀತವಾದ್ದೆಂಬುದು ವರ್ಗಭೇದದ ದುರಂತವನ್ನು ಅವನಿಗೆ ಮನದಟ್ಟು ಮಾಡಿಸಿತು. ಆದರೂ ಅವಳು ರೂಮಿಗೆ ಕಸಗುಡಿಸಲು ಬಂದಾಗಲೆಲ್ಲ ಮೈ ಬೆಚ್ಚಗಾಗಿ ಹೆದರಿಕೆಯಾಗುತ್ತಿತ್ತು.

ಒಂದು ದಿನ ಅವಳು ರೂಮಿಗೆ ಬಂದಾಗ ಜಗನ್ನಾಥ ಕನ್ನಡಿಯೆದುರು ಕೂತು ಕ್ಷೌರ ಮಾಡಿಕೊಳ್ಳುತ್ತಿದ್ದ. ಅವನ ಹಿಂದುಗಡೆ ಟ್ರಂಕಿನ ಮೆಲೆ ಹತ್ತುರೂಪಾಯಿಯ ನೋಟಿತ್ತು. ಕನ್ನಡಿಯಲ್ಲಿ ಅದು ಕಾಣಿಸುತ್ತಿತ್ತು. ಬಹಳ ಸಡಗರದಿಂದ ಕಸಗುಡಿಸುತ್ತಿದ್ದ ಕಾವೇರಿ ನೋಟಿನ ಹತ್ತಿರ ಹೋಗಿ ಎರಡು ಸಾರಿ ಕ್ಷಣ ನಿಂತು ಆಮೇಲೆ ಟ್ರಂಕಿನ ಸುತ್ತ ಗುಡಿಸಿದ ಜಾಗವನ್ನೆ ಮತ್ತೆ ಗುಡಿಸಿದ್ದನ್ನು ನೋಡಿದ. ಜಗನ್ನಾಥ ಪರವಶನಾಗಿ ಅವಳೇನು ಮುಂದೆ ಮಾಡುತ್ತಾಳೆಂಬುದನ್ನು ನಿರೀಕ್ಷಿಸುತ್ತ ಮುಖಕ್ಕೆ ಸೋಪುಹಚ್ಚಿಕೊಂಡ. ಕಾವೇರಿ ಮೂರನೇ ಸಾರಿ ಬಗ್ಗಿದಳು. ಕನ್ನಡಿ ಕಡೆ ನೋಡಿದಳು. ತನ್ನ ಗುಪ್ತ ಸಮ್ಮತಿಯನ್ನು, ಅವಳು ಕಲುಷಿತಳಾಗುವುದನ್ನು ನೋಡಲು ತನಗಿದ್ದ ಆಸೆಯನ್ನು ಕನ್ನಡಿಯಲ್ಲಿ ಕಂಡ ತನ್ನ ಮುಖದಿಂದ ಅವಳು ಊಹಿಸಿದಳೆ? ಖಂಡಿತ ಅವಳಿಗೆ ತಾನೆಲ್ಲವನ್ನು ನೋಡುತ್ತಿದ್ದೇನೆಂಬುದು ತಿಳಿದಿರಲೇಬೇಕು. ಕೈ ಮುಖಕ್ಕೆ ಸೋಪುಹಚ್ಚುತ್ತಿದ್ದರೂ ತನ್ನ ಕಣ್ಣುಗಳು ಪರವಶವಾಗಿ ಅವಳ ಕೈಗಳನ್ನೇ ನೋಡುತ್ತಿದ್ದುದು ಅವಳಿಗೆ ಕಾಣಿಸಿರಲೇಬೇಕು. ನೋಟನ್ನೆತ್ತಿಕೊಂಡು ಬಹಳ ಸರಾಗವಾಗಿ ಸೊಂಟಕ್ಕೆ ಸಿಕ್ಕಿಸಿಕೊಂಡಳು. ಹಾಗೆ ಸಿಕ್ಕಿಸಿಕೊಳ್ಳುವಾಗ ಸೆರಗನ್ನು ಸಂಪೂರ್ಣ ಜಾರಲು ಬಿಟ್ಟು ಮೊಲೆಗಳನ್ನು ತೋರಿಸಿದಳು. ಸೆರಗನ್ನು ಹಾಗೆಯೇ ಇಳಿಬಿಟ್ಟು ಗುಡಿಸುತ್ತ ಹತ್ತಿರ ಬಂದಳು. ತಾನು ಕೂತಿದ್ದ ಕುರ್ಚಿಯ ಕೆಳಗಗೆ ಗುಡಿಸುವ ನೆವದಲ್ಲಿ ಎಡಭಾಗದ ಮೊಲೆಯನ್ನು ತನ್ನ ತೊಡೆಗೆ ಒತ್ತಿದಳು. ನಂತರ ತಾನು ಕನ್ನಡಿಯಿಟ್ಟ ಕಿಟಕಿಯ ಧೂಳು ಹೊಡೆಯುವ ನೆವದಲ್ಲಿ ತನ್ನ ಬೆನ್ನಿನ ಹಿಂದೆ ನಿಂತು ಮೈ ತಾಕುವಂತೆ ಬಗ್ಗಿದಳು. ಪುಷ್ಟವಾದ ಮೊಲೆ ಕೆನ್ನೆಯನ್ನು ಒತ್ತಿತು.

ಜಗನ್ನಾಥ ಸುಮ್ಮನೇ ಕೂತು. ಈಗ ಬಿರಿದುಕೊಂಡುಬಿಡಬಹುದಾದ ಮುಹೂರ್ತ ಭವಿಷ್ಯದಲ್ಲಿ ಬರಿ ಶೂನ್ಯವಾಗಿ ಕೊನೆಯಾಗುತ್ತದೆಂಬ ಜ್ಞಾನ ಅವನನ್ನು ನಿರ್ವೀರ್ಯನನ್ನಾಗಿ ಮಾಡಿತು. ಕಾಮದ ಆಸ್ಫೋಟ ಮುಚ್ಚಲಾರದ ಅಂತರ ನಮ್ಮ ನಡುವಿದೆ, ಕ್ಷಮಿಸು ಎಂದು ಹೇಳಬೇಕೆನ್ನಿಸಿ, ಆದರೆ ಹೇಳಲಾರದೆ, ಬೆವರುತ್ತ ಕೂತ. ಮತ್ತೊಮ್ಮೆ ಮಾರ್ಗರೆಟ್ ಜೊತೆ ಸೇಬಿನ ಮರದ ಕೆಳಗೆ ಅನ್ನಿಸುತ್ತಿದ್ದಂತೆಯೇ ಸೋತೆ ಎನ್ನಿಸಿತು. ನಾನು ನಿಜವಲ್ಲ ಎನ್ನಿಸಿತು. ಕಾವೇರಿ ಹಾಗೇ ವಯ್ಯಾರದಲ್ಲಿ ನಡೆಯುತ್ತ ರೂಮಿನಿಂದ ಹೊರಗೆ ಹೋಗಿಬಿಟ್ಟಿದ್ದಳು. ಜಗನ್ನಾಥ ಚೇತರಿಸಿಕೊಂಡು ಎದ್ದು ನಿಂತು ಸೀದಾ ಸ್ನಾನದ ಮನೆಗೆ ಹೋಗಿ ಮುಖ ತೊಳೆದುಕೊಂಡಿದ್ದ.

ಮಾರಬೇ ದಿನದಿಂದ ಕಾವೇರಿ ಕಸ ಗುಡಿಸಲು ಬರುವಾಗ ಜಗನ್ನಾಥ ರೂಮಿನಲ್ಲಿರುತ್ತಿರಲಿಲ್ಲ. ತನ್ನನ್ನು ಮಾತಾಡಿಸಲು ಬರುತ್ತಿದ್ದ ಸೆಟ್ಟಿಯಿಂದ ದೂರವಿರಲು ಪ್ರಯತ್ನಿಸಿದ. ಜನರನ್ನು ತಿಳಿಯಲು ಹೊರಡುವುದೆಂದರೆ ಅವರ ಸಂಬಂಧಗಳ ಗೋಜಲುಗಳಲ್ಲೆಲ್ಲ ಸಿಕ್ಕಿಹಾಕಿಕೊಂಡಂತೆ. ಅವರನ್ನು ಅತ್ಯಂತ ಮೂರ್ತವಾಗಿ ಗ್ರಹಿಸಲು ಹೋದರೆ, ದುರ್ಬೀನಿನಲ್ಲಿ ಚರ್ಮವನ್ನು ನೋಡಿದಂತೆನಿಸಿ ಏನೇನೋ ಕಾಣಲು ಶುರುವಾಗಿ ಮುಷ್ಟಿಗ್ರಾಹ್ಯವಾದ್ದೇನೂ ತಿಳಿಯದಂತಾಗಿಬಿಡುತ್ತದೆ. ಅವರನ್ನು ದೂರದಿಂದ ನೋಡಿ ಗ್ರಹಿಸಿದಾಗ ಮಾಡಲೇ ಬೇಕೆನ್ನಿಸುವ ರಾಜಕೀಯ ಕ್ರಿಯೆ, ಹತ್ತಿರದಿಂದ ನೋಡಿದಾಗ ಸಾಧ್ಯವಿಲ್ಲವೆನ್ನಿಸಿ, ಅಥವಾ ನಿಷ್ಟ್ರಯೋಜಕವೆನ್ನಿಸಿ ದಿಗ್ಭ್ರಾಂತರಾಗಿಬಿಡುತ್ತೇವೆ. ಮಗಳನ್ನು ಇಟ್ಟುಕೊಂಡ ಅಪ್ಪ, ಸೊಸೆಯನ್ನಿಟ್ಟುಕೊಂಡ ಮಾವ, ಅತ್ತೆ ಜೊತೆ ಮಲಗುವ ಅಳಿಯ, ಹೆಂಡತಿಯನ್ನು ಬಡಿಯುವ ಗಂಡ, ಈ ದೌರ್ಬಲ್ಯ, ಈ ರೋಷ, ಈ ಸಣ್ಣತನ, ಈ ದಿನನಿತ್ಯದ ಸುಖದುಃಖ- ಇವುಗಳನ್ನೆಲ್ಲ ನೋಡಿದಾಗ ಐತಿಹಾಸಿಕ ಪರಿವರ್ತನೆಗಳೆಲ್ಲ ಮೇಲು ಮೇಲಿನ ಘಟನೆಗಳೆನ್ನಿಸಿ ಆಳದಲ್ಲಿ ಏನೂ ಯಾವತ್ತೂ ಬದಲಾಗುವುದಿಲ್ಲವೆನ್ನಿಸಿಬಿಡುತ್ತದೆ. ನಿತ್ಯದ ಬದುಕಿನಲ್ಲಿ ನಾವು ಪಡುವ ಸುಖದುಃಖಗಳ ಸ್ವರೂಪ ಸರ್ವಕಾಲಕ್ಕೂ ಹೀಗೇ ಉಳಿಯುವಂಥದ್ದಾದರೆ, ಈ ಹಗಲು ರಾತ್ರೆಯ ಭ್ರಮಣ ಹೀಗೇ ಸಾಗಿದರೆ ಏನು ಮಾಡಿ ಏನು ಸಾಧಿಸಿದ ಹಾಗಾದೀತು? ನನ್ನಲ್ಲಿ ಆಸೆಯನ್ನು ಕೊರೆದು ನನ್ನನ್ನು ನಿರ್ವಿಣ್ಣನಾಗಿ ಮಾಡಿಹೋದ ಕಾವೇರಿಯಂಥವರ ಬದುಕನ್ನು ಬದಲಾವಣೆಯ ಮೂಲಕ ಉತ್ತಮಪಡಿಸಬಲ್ಲೆನೆಂದು ನಾನು ಯಾಕೆ ತಿಳಿಯಲಿ?

ಬಹಳ ದಿನ ಮತ್ತೆ ಜಗನ್ನಾಥ ದಿಕ್ಕು ತೋರದೆ ಯೋಚಿಸಿದ. ತೋಟವನ್ನು ಊರ್ಜಿತಗೊಳಿಸಿಸುವ ಕೆಲಸದಲ್ಲಿ ಆಸಕ್ತಿ ಮಾಯವಾಯಿತು. ಜನರ ಒಳ ಜೀವನವನ್ನು ತಿಳಿಯುವ ಕುತೂಹಲ ತನ್ನನ್ನೆಲ್ಲೆಲ್ಲೋ ಕೊಂಡೊಯ್ಯುತ್ತಿದೆ ಎಂದು ಗಾಬರಿಯಾಯಿತು. ಜೀವನ ಒಟ್ಟಿನಲ್ಲಿ ನಿರರ್ಥಕ, ಈ ನಿರರ್ಥಕತೆಯನ್ನು ಅರಿಯುವುದಷ್ಟೆ ನಾವು ಮಾಡಬಹುದಾದ್ದು ಎನ್ನುವ ತನ್ನ ಹಿಂದಿನ ಆಲಸ್ಯದ ಜೀವನದ ನೆನಪಾಗಿ ಮತ್ತೆ ತಾನು ಅದೇ ತೀರ್ಮಾನಕ್ಕೆ ಬರುತ್ತಿದ್ದೇನೆನ್ನಿಸಿ ಇನ್ನಷ್ಟು ಗಾಬರಿಯಾಯಿತು. ಸಮಾಜದ ಒಳಗಿದ್ದೇ ಈ ವಾಸ್ತವವನ್ನು ಮೂಲಭೂತವಾಗಿ ಬದಲಾಯಿಸಬಲ್ಲ ಕ್ರಿಯೆಯಲ್ಲಿ ನಾನು ತೊಡಗದಿದ್ದಲ್ಲಿ ಸತ್ತರೂ ಒಂದೆ ಇದ್ದರೂ ಒಂದೆ ಎಂಬ ಭಾವನೆ ದೃಢವಾಯಿತು.

ಒಂದು ಸಂಜೆ ದೇವಸ್ಥಾನದ ಹಿಂದಿದ್ದ ಕಲ್ಲುಬಂಡೆಗಳ ಮೇಲೆ ಕೂತಿದ್ದ. ಸಂಜೆಯ ಹೊತ್ತು. ರಾಷ್ಟ್ರಪತಿಗಳು ಬಂದು ಹೋಗಿಯಾಗಿತ್ತು. ಇದ್ದಕ್ಕಿದ್ದಂತೆ ಸಾಯಂಕಾಲದ ಪೂಜೆಯ ಗಂಟೆಯ ಶಬ್ದಗಳು ಕೇಳಿಸಿದುವು. ಆಗ ಥಟ್ಟನೇ ಜಗನ್ನಾಥನಿಗೆ ಅನ್ನಿಸಿತು. ಹೊಲೆಯರನ್ನು ಒಳಗೆ ಕರೆದುಕೊಂಡು ಹೋಗಬೇಕು. ಶತಮಾನದ ವಾಸ್ತವವನ್ನು ಹೆಜ್ಜೆಯಲ್ಲಿ ಬದಲಿಸಬೇಕು. ಮಂಜುನಾಥನನ್ನು ಮುರಿಯಬೇಕು. ತಮ್ಮ ಜೀವನಕ್ಕೆ ತಾವು ಜವಾಬ್ದಾರರಾಗುವಂತಹ ಸಂಕಟಕ್ಕೆ ಜನರನ್ನು ಒಳಪಡಿಸಬೇಕು.

ಎದ್ದು ಸೀದ ಮನೆಗೆ ವೇಗವಾಗಿ ನಡೆದುಬಂದಿದ್ದ. ಹತ್ತು ಹೊಲೆಯರ ಯುವಕರನ್ನು ಆರಿಸಿ ಅವರ ಜೊತೆ ನಿಧಾನವಾಗಿ ಮಾತಾಡಲು ಪ್ರಾರಂಭಿಸಿದ್ದ.

* * *

ಆವತ್ತಿನಿಂದ ಪ್ರತಿ ಸಂಜೆ ದೂರದಲ್ಲಿ ನೆರಳುಗಳು ಕಾಣಿಸುವುವು; ಹತ್ತಿರವಾಗುವುವು; ಒಡೇರೇ ಎನ್ನುವುವು. ಜಗನ್ನಾಥ ಬನ್ನಿ ಎನ್ನುವನು. ಅವು ಅಂಗಳದಂಚಿಗಷ್ಟೇ ಬಂದು ನಿಲ್ಲುವುವು. ಜಗನ್ನಾಥ ಮಾತಾಡುವನು. ಹೇಳುವನು. ಯೋಚಿಸಿ, ನಿಶ್ಚಯಿಸಿ, ಜವಾಬ್ದಾರಿಯಿಂದ ವರ್ತಿಸಿ. ಆದರೆ ಮಾತುಗಳಿನ್ನೂ ನಿಜವಾಗಿರಲಿಲ್ಲ. ಜಗನ್ನಾಥ ಹಗಲು ರಾತ್ರೆ ಒತ್ತರಿಸಿ ಯೋಚಿಸುವನು, ಹೇಗೆ ನಿಜ ಮಾಡಲಿ? ಅವರು ಒಪ್ಪಿ ಈ ಮಾತುಗಳೆಲ್ಲ ನಿಜವಾಗುವಂತೆ, ಕ್ರಿಯೆಯಾಗುವಂತೆ ಮಾಡಲು ಏನು ಮಾಡಲಿ? ಮಂಜುನಾಥನ ಗರ್ಭದಿಂದ ಹೇಗೆ ಸೀಳಿ ಹೊರಬರಲಿ? ಬರಿಸಲಿ?