ಜಗನ್ನಾಥ ಹಾಸಿಗೆಯ ಮೇಲೆ ಕಾಲುಚಾಚಿ ಲಾಂದ್ರದ ದೀಪವನ್ನು ಸಣ್ಣ ಮಾಡಿದ. ಕೈಕಾಲುಗಳನ್ನು ಚಾಚುವುದೇ ದೊಡ್ಡ ಸುಖವೆನಿಸುವಷ್ಟು ಸುಸ್ತಾಗಿತ್ತು. ಮಧ್ಯಾಹ್ನದ ಊಟವಾದ ಮೇಲೆ ಶ್ರೀಪತಿರಾಯರಿಗೆ ತನ್ನ ನಿರ್ಧಾರವನ್ನು ಹೇಳಲು ಹೊರಟು, ಅವರು ಅನ್ಯಮನಸ್ಕ ರಾಗಿದ್ದನ್ನು ಕಂಡು ಸುಮ್ಮನಾಗಿದ್ದ. ಸಂಜೆ ಯಥಾಪ್ರಕಾರ ಹೊಲೆಯರು ಬಂದಿದ್ದರು. ಆದರೆ ಹತ್ತು ಜನ ಯುವಕರಲ್ಲಿ ಒಬ್ಬನಿಗಾದರೂ ತಾನು ಹೇಳಿದ್ದು ಅರ್ಥವಾಗಿತ್ತೆ? ಅವರ ಮನಸ್ಸಿನಲ್ಲಿ ಏನು ನಡೆಯುತ್ತಿದೆ ತನಗೆ ತಿಳಿಯುವುದಿಲ್ಲ. ಅಂಗಳದಲ್ಲಿ ದೂರ ನಿಲ್ಲುತ್ತಿದ್ದವರು ಅಂಗಳದ ಅಂಚಿನ ತನಕ ಬರುವಂತೆ ಮಾಡಲು ವಾರ ಬೇಕಾಯಿತು. ಆದರೆ ಅಂಗಳ ಹತ್ತಿ ಚಾಪೆಯ ಮೇಲೆ ಕೂರಲು ಪ್ರಾಯಶಃ ಅವರು ಯಾವತ್ತೂ ಒಲ್ಲರು. ತಾನು ಹುಡುಗನಾಗಿದ್ದಾಗ ಈ ಪಿಳ್ಳನ ಅಪ್ಪ ಭರ್ಮ ದಾರಿಯಲ್ಲೆಲ್ಲಾದರೂ ಎದುರಾದರೆ ಥಟ್ಟನೆ ಸರಿದು, ಮರದ ಹಿಂದೆ ಅವಿತು, ತೊಟ್ಟಿದ್ದ ಕಪ್ಪು ಅಂಗಿಯನ್ನು ಬಿಚ್ಚಿ, ಕಣ್ಣಿಗೆ ಬೀಳುವುದೇ ತಪ್ಪೇನೊ ಎನ್ನುವಂತೆ ದಾರಿಯಂಚಿನಲ್ಲಿ ನಿಂತು ಬಾಗಿ ನಮಸ್ಕರಿಸಿ ತಾನು ಕಣ್ಮರೆಯಾದ ಮೇಲೆ ತೋಳಿಲ್ಲದ ಕಾಲರಿಲ್ಲದ ಕಪ್ಪು ಅಂಗಿಯನ್ನು ಮತ್ತೆ ಹಾಕಿಕೊಳ್ಳುತ್ತಿದ್ದ. ಇಲ್ಲ, ಒಡೆಯನೆಂಬ ಕಾರಣದಿಂದ ನನ್ನ ಒತ್ತಾಯಕ್ಕೆ ಅವರು ಒಪ್ಪಿದರೆ ಸಾಲದು. ನನ್ನ ಕ್ರಿಯೆ ಅವರ ಮೇಲೆ ನಿಂತಿದೆ. ರಾತ್ರೆ ಊಟವಾದ ಮೇಲೆ ಮೇಜಿನೆದುರು ಪೆನ್ ಹಿಡಿದು ಕೂತ.

ಮೊದಲು ಪೇಪರುಗಳಿಗೆ ನನ್ನ ಉದ್ದೇಶವನ್ನು ಬರೆದು ತಿಳಿಸುವುದು. ರಾಯರಿಗೆ ಹಾಗೇ ಗೊತ್ತಾಗಲಿ. ನಾನಾಗಿ ಅವರ ಮೇಲೆ ಹೇರುವುದು ಬೇಡ. ಊರಲ್ಲಿ ನಿಷ್ಠುರವಾಗುವ ಧೈರ್ಯ ಮಾಡಲಾರರು; ಅಲ್ಲದೆ ನಾನು ಹೇಳಿದರೆ ದಾಕ್ಷಿಣ್ಯ ಮಾಡಿಕೊಂಡಾರು. ವೈಯಕ್ತಿಕವಾಗಿ ನನಗೆ ಸಾಧ್ಯವಾದ್ದನ್ನ ಶುರುಮಾಡಿಬಿಡುವುದು. ಸೇರುವವರು ಸೇರಲಿ. ಜಗನ್ನಾಥ ಹೀಗೆ ನಿರ್ಧರಿಸಿ ಪೇಪರುಗಳಿಗೆ ಕಳುಹಿಸಲೆಂದು ಒಂದು ಪುಟ್ಟ ಲೇಖನವನ್ನು ಬರೆದ. ಮೂರು ಸಾರಿ ಬರೆದು ಹರಿದು ಹಾಕಿದ. ಮಾತಿನಲ್ಲಿ ಮೂಡಿಸಲು ಪ್ರಯತ್ನಪಟ್ಟಾಗ ರೊಮಾಂಟಿಕ್ ಆದರ್ಶವಾದಂತೆ ಕಾಣಿಸುತ್ತದೆ. ಭ್ರಾಮಕ ಜಗತ್ತಿನಲ್ಲಿ ಬದುಕುತ್ತಿರುವ ಐಲು ಮನುಷ್ಯರಂತೆ ತಾನು ಕಾಣುತ್ತೇನೆ. ‘ಹೊಲೆಯರು ಮಂಜುನಾಥನ ದೇವಸ್ಥಾನವನ್ನು ಪ್ರವೇಶಿಸಿದಲ್ಲಿ ರಕ್ತಕಾರಿ ಸಾಯುತ್ತಾರೆಂದು ಜನರೆಲ್ಲರ ನಂಬಿಕೆ. ಭೂತರಾಯ ಅವರ ಕಾಲು ಹಿಡಿದು ಎಳೆದು ರಕ್ತ ಕಾರಿಸುತ್ತಾನೆಂದು ಪ್ರತೀತಿ. ರಾಷ್ಟ್ರಾಧ್ಯಕ್ಷರೂ ನಂಬುವ ಈ ದೇವರ ಮಹಿಮೆಗೆ ಆಘಾತವಾಗದ ಹೊರತು ಇಂಡಿಯಾದ ಜನತೆ ತಮ್ಮ ಜೀವನಕ್ಕೆ ತಾವು ಜವಾಬ್ದಾರರಾಗಲರರು. ದೇವರಲ್ಲಿ ನಂಬಿಕೆ ಹೋದ ಮೇಲೆ ಉಂಟಾಗುವ ಸಂಕಟದಲ್ಲಿ ಮಾತ್ರ ನಾವು ಸೃಷ್ಟಿಶೀಲ ಜನರಾದೇವು. ಶೂದ್ರರ ದೇವರಾದ ಭೂತರಾಯ ಈಗ ಶೂದ್ರರ ವಿರುದ್ಧವೇ ದುಡಿಯುವಂತೆ ಮಾಡಿದ ಮಂಜುನಾಥನನ್ನು…’

ಬರೆದದ್ದು ಸರಿಯಲ್ಲವೆನ್ನಿಸಿ ಹರಿದು ಹಾಕಿದ. ಮತ್ತೊಂದು ಬರೆದ. ‘ಈ ದೇವಸ್ಥಾನ ವೈಜ್ಞಾನಿಕ ದೃಷ್ಟಿಯ ಪರಮ ವೈರಿ. ಜಕಣಿ ಬಿಡಿಸುವವನು ಭೂತರಾಯ. ಜಮೀಂದಾರರಿಗೆ ಕರಾರುವಾಕ್ಕಾಗಿ ಗೇಣಿ ಕೊಡಿಸುವವನು ಭೂತರಾಯ; ಈ ಭೂತರಾಯನನ್ನು ಆಳುವವ ಶ್ರೀಮಂಜುನಾಥ. ನಮ್ಮ ಬದುಕು ಸೃಷ್ಟಿಶೀಲವಾಗದಂತೆ, ನಾವು ಇತಿಯಾಸದಲ್ಲಿ ಪಾಲ್ಗೊಳ್ಳ ದಂತೆ ನಮ್ಮನ್ನು ಬಂಧಿಸಿಟ್ಟಿರುವ ಈ ದೇವರ ಕಾರ್ಣಿಕವನ್ನು ನಾಶಮಾಡದ ಹೊರತು ಏನೂ ಸಾಧ್ಯವಿಲ್ಲ. ದೇವರನ್ನು ನಾಶಮಾಡುವುದೆಂದರೆ ನಿಜವಾಗಿಯೂ ಜೇನುಗೂಡಿಗೆ ಕೈಹಾಕಿದಂತೆ. ಈ ಭಾರತದಲ್ಲಿ ಸಮಾಜವನ್ನು ಅರ್ಥಪೂರ್ಣವಾಗಿಸುವಂತಹ ಕ್ರಿಯೆಯನ್ನು ಅಸಾಧ್ಯ ಮಾಡಿರು ವವನು ಮಂಜುನಾಥ. ಇಲ್ಲಿ ಕ್ರಿಯೆ ಅಸಾಧ್ಯವಾದದ್ದರಿಂದ ಸಾಮಾಜಿಕ ಜೀವನಕ್ಕೆ ಅರ್ಥವೇ ಇಲ್ಲದಂತಾಗಿದೆ. ಈ ಲೌಕಿಕ ಸತ್ಯವನ್ನು ಮಾಯೆಯೆಂದು ಜರಿಯುವುದರ ಮೂಲಕ ನಾವು ಆತ್ಮವಂಚನೆಯಲ್ಲಿ ಬದುಕುತ್ತಿದ್ದೇವೆ. ಆದ್ದರಿಂದ ದೊಡ್ಡದೊಂದು ಕ್ರಾಂತಿಯಾಗಬೇಕಾದರೆ ನಮ್ಮಲ್ಲಿರುವ ಅತ್ಯಂತ ಹೀನ ಜನರಾದ ಹೊಲೆಯರು ತಲೆಯೆತ್ತಿ ನಿಲ್ಲಬೇಕು. ಅವರು ಮುಂದೆ ಇಡಬಹುದಾದ ಒಂದು ಹೆಜ್ಜೆ ಮಾತ್ರ ನಿಜವಾದುದು. ಶತಮಾನಗಳ ಸತ್ಯವನ್ನು ಒಂದೇ ಒಂದು ಹೆಜ್ಜೆಯ ಮೂಲಕ ಬದಲಿಸಬಲ್ಲವರು ಈ ಹೊಲೆಯರು. ಉತ್ತಮ ಜಾತಿಯವರು ಎಷ್ಟೇ ಮೇಲೆ ಬರಲಿ ನಾವು ಪ್ರಗತಿಯ ಭ್ರಮೆಯಲ್ಲೆ ಬದುಕುತ್ತಿರುತ್ತೇವೇ ಹೊರತು…’

ಜಗನ್ನಾಥ ಮತ್ತೆ ಹರಿದು ಹಾಕಿದ. ಕ್ರಿಯೆಯ ಬಗ್ಗೆ ಮಾತ್ರ ಬರೆಯಬೇಕು. ಮಾತಿನಲ್ಲಿ ಏನು ಹೇಳಿದರೂ ತಾನು ಐಲು ಮನುಷ್ಯನಂತೆ ಕಂಡೇನು. ನನ್ನಲ್ಲಿರುವ ಸುಳ್ಳುಗಳನ್ನೆಲ್ಲ ಕಳೆದುಕೊಂಡು ನಿಜವಾದ ಗಟ್ಟಿ ಮನುಷ್ಯನಾಗಲೆಂದು ಈ ಕ್ರಿಯೆಗೆ ಕೈ ಹಾಕಿದ ನಾನು ಮತ್ತೆ ಮಾತಿನ ಗೋಪುರ ಕಟ್ಟಕೂಡದು. ಹೀಗೆ ನಿರ್ಧರಿಸಿ ಜಗನ್ನಾಥ ತಾನು ಉದ್ದೇಶಿಸಿದ ಕ್ರಿಯೆಯನ್ನು ಮಾತ್ರ ಹೇಳುವ ಪುಟ್ಟ ಕಾಗದವನ್ನು ಬರೆದ. ‘ಸ್ವಾಮಿ, ಇಡೀ ಭಾರತದಲ್ಲಿ ಹೆಸರುವಾಸಿಯಾದ ಶ್ರೀ ಮಂಜುನಾಥ ದೇವಾಲಯಕ್ಕೆ ಹರಿಜನ ಪ್ರವೇಶ ಮಾಡಿಸಬೇಕೆಂದು ನಾನು ನಿರ್ಧರಿಸಿದ್ದೇನೆ. ಇದಕ್ಕೆ ಅಮಾವಾಸ್ಯೆಯ ಮೂರನೇ ಜಾತ್ರೆಯ ದಿನ ಸರಿಯಾದ್ದೆಂದು ನನ್ನ ಅಭಿಪ್ರಾಯ. ಯಾಕೆಂದರೆ ಭಾರತಾದ್ಯಂತ ಭಕ್ತರು ಭಾರತೀಪುರಕ್ಕೆ ಆ ದಿನ ಬಂದಿರುತ್ತಾರೆ. ಅವರ ಕಣ್ಣೆದುರಲ್ಲೆ ದೇವಸ್ಥಾನದೊಳಕ್ಕೆ ಹೋಗುವ ಹೊಲೆಯರು ರಕ್ತಕಾರಿ ಸಾಯುತ್ತಾರೆಂಬುದು ಸುಳ್ಳೆಂದು ರುಜುವಾತು ಮಾಡಿ ತೋರಿಸಿದ್ದೇ ಆದಲ್ಲಿ ಜನಮನದಲ್ಲಿ ಹೊಸ ವಿಚಾರ ಮೂಡೀತೆಂದು ನನ್ನ ಭರವಸೆ. ಇದಕ್ಕೆ ಪ್ರಗತಿಶೀಲರೆಲ್ಲರ ಬೆಂಬಲವನ್ನು ಈ ಮೂಲಕ ಕೋರುತ್ತೇನೆ. ಜಗನ್ನಾಥ, ಭಾರತೀಪುರ.’

ಇಂಗ್ಲಿಷಿನಲ್ಲೊಂದು ಕನ್ನಡದಲ್ಲೊಂದು ಹೀಗೆ ಕಾಗದ ಬರೆದು ಬೆಂಗಳೂರಿನ ಎರಡು ವೃತ್ತ ಪತ್ರಿಕೆಗಳ ವಿಳಾಸ ಬರೆದ ಲಕೋಟೆಯಲ್ಲಿಟ್ಟು ರಾತ್ರೆಯೇ ಮನೆಯಿಂದ ಹೊರಗೆ ಹೊರಟ. ಟಾರ್ಚಿನ ಬೆಳಕಲ್ಲಿ ಗುಡ್ಡ ಇಳಿದು ಪೋಸ್ಟಾಫೀಸಿಗೆ ಹೋಗಿ ಡಬ್ಬಿಯಲ್ಲಿ ಕಾಗದವನ್ನು ಹಾಕಿದ್ದೇ ಜಗನ್ನಾಥನಿಗೆ ಅತ್ಯಂತ ಸಂತೋಷವಾಯಿತು. ಬಹಳ ಗೆಲುವಿನಿಂದ ಹಿಂದಕ್ಕೆ ನಡೆದು ಬಂದು ಮನೆ ಸೇರಿ, ಮಹಡಿಯನ್ನು ಓಡುತ್ತೋಡುತ್ತಾ ಹತ್ತಿ ಹಾಸಿಗೆಯ ಮೇಲೆ ಬಿದ್ದ. ಚಳಿಯಲ್ಲು  ಮೈ ಬಿಸಿಯಾಗಿ ಬೆವತಿತ್ತು.

* * *

ನಿದ್ದೆ ಬರಲಿಲ್ಲ. ಮನಸ್ಸು ತೀರಾ ಪ್ರಚೋದಿತವಾಗಿತ್ತು. ಹೊರಗೆ ಗಾಢವಾದ ಕತ್ತಲು. ದೀಪವನ್ನು ದೊಡ್ಡ ಮಾಡಿ ಮಾರ್ಗರೆಟ್‌ಗೆ ಬರೆಯುತ್ತಿದ್ದ ಕಾಗದವನ್ನು ಮುಂದುವರೆಸಿದ. Then I thought that we all live in the womb of God and we will not begin to live unless we act and make our existence in society meaningful. ಬರೆದ ವಾಕ್ಯ pompous ಎನ್ನಿಸಿ ಹೊಡೆದು ಹಾಕಿದ. ನಿಜವಾದ್ದನ್ನ ಹೇಳಬೇಕಾದರೆ Dear Margaret I have failed you also because I am not yet a man ಎಂದು ಬರೆಯಬೇಕು. ಹೊಲೆಯರ ಮೂಲಕ ಈ ಕ್ರಿಯೆಯಲ್ಲಿ ನಾನು ಮತ್ತೆ ಮನುಷ್ಯನಾಗಿ – ಇಲ್ಲ ಹಾಗೆ ಬರೆದರೂ ನಿಜವಲ್ಲ. ವಿಪರೀತ ಆತ್ಮಪರೀಕ್ಷೆಯ ರೋಗದಿಂದ ನಾನು ಇನ್ನೂ ಹುಷಾರಾಗಿಲ್ಲ. ಸಾಂಕೇತಿಕವಾಗಿ ಹೇಳುವುದಾದರೆ ಮಾರ್ಗರೆಟ್, ಇಲ್ಲಿಯವರೆಗೂ ಕನ್ನಡಿಯೆದುರೇ ನಿಂತು ನನ್ನನ್ನು ನಾನು ರಮಿಸಿಕೊಳ್ಳುತ್ತ ಹೋದೆ. ಕನ್ನಡಿಯಿಲ್ಲದೇ ನನಗೇ ನಾನು ನಿಜವಾಗಿರಲಾರೆ. ಮೈಸೂರಿನಲ್ಲಿ ಬಿ.ಎ. ಓದುವಾಗ ನೆಹರೂ ಆದರ್ಶವಾದ ಕನ್ನಡಿಯಾಯ್ತು. ನನ್ನ ಮಾತಿನ ಕ್ರಮ, ನನ್ನ ಗತ್ತು, ನನ್ನ ಭಂಗಿ – ಎಲ್ಲ ಆಕರ್ಷಕವಾಗಿ ಕಾಣುವ ಉಪಾಯಗಳಾಯ್ತು. ಆತ್ಮಪರೀಕ್ಷೆಯ ಗೀಳು ಕನ್ನಡಿಗಳ ನಡುವೆ ನನ್ನ ರೂಪವನ್ನು ನಿರಂತರವಾಗಿ ಸೃಷ್ಟಿಸಿದುವು. ನನ್ನ ಎತ್ತರ, ನನ್ನ ಉದ್ದನೆಯ ನುಣುಪು ಕೂದಲು, ನನ್ನ ವಿಶಾಲವಾದ wistful ಕಣ್ಣುಗಳು, ಎಲ್ಲರನ್ನೂ ಒಲಿಸಿಕೊಳ್ಳಬಲ್ಲ ನನ್ನ ಮತು, ತತ್ಪರವಾಗುವ ನನ್ನ ಸ್ವಭಾವ – ಎಲ್ಲ ಕೂಡಿ ನಾನು ಸುಳ್ಳಾಗುತ್ತ ಜಳ್ಳಾಗುತ್ತ ಮೃದುವಾಗುತ್ತ ಹೋದೆ.

ಕಾಗದದಲ್ಲಿ ಇವೆಲ್ಲವನ್ನೂ ಬರೆಯಲಾರದೆ ಜಗನ್ನಾಥ ಎದ್ದು ನಿಂತು ರೂಮಿನಿಂದ ಹೊರಗೆ ಬಂದು ಮಹಡಿಯ ವಿಶಾಲವಾದ ಹಜಾರದಲ್ಲಿ ಅಡ್ಡಾಡಿದ. ಗುಡ್ಡದ ಮೇಲಿನ ವಿಶಾಲವಾದ ಮನೆ, ಆಗರ್ಭ ಶ್ರೀಮಂತಿಕೆ, ಮರ್ಯಾದೆ, ಧೀರವಾದ ಎತ್ತರವಾದ ರೂಪ – ಈ ಭೂತ ಕನ್ನಡಿಗಳ ಎದುರು ನಿಂತೇ ಬೆಳೆದೆ. ಇನ್ನೊಬ್ಬರ ಕಣ್ಣಲ್ಲಿ ಪ್ರತಿಫಲಿತನಾಗದೆ ನಾನು ಇದ್ದೇನೆ ಎಂದು ಅನ್ನಿಸುವುದೇ ಇಲ್ಲ. ನನ್ನ ಸ್ವಭಾವದಲ್ಲಿರುವ ದ್ರೋಹ ನಿನಗೆ ಗೊತ್ತಿಲ್ಲ ಮಾರ್ಗರೆಟ್. ಆತ್ಮಪರೀಕ್ಷೆಯಲ್ಲಿ ಬಾತುಕೊಳ್ಳುತ್ತ ಹೋಗಿ ಕ್ರಿಯೆ ಎದುರಾದೊಡನೆ ನಿರ್ವಿಣ್ಣನಾಗಿ ಬಿಡುತ್ತೇನೆ. ಆ ಕ್ಷಣದಲ್ಲಿ ಪ್ರಿಯನಾಗಲು ಏನಾದರೂ ಮಾಡಬಲ್ಲ ಮಿಂಡನ ವ್ಯಕ್ತಿತ್ವ ನಂದೆಂದು ಯಾವ ದಿನ ನನಗೆ ಹೊಳೆದುಬಿಟ್ಟಿತು, ಅಂದಿನಿಂದ ಮನಸ್ಸಿಗೆ ಶಾಂತಿಯಿಲ್ಲವಾಯ್ತು. ನನ್ನನ್ನು ಉಜ್ಜಿ ಬಿಗಿದು ಜಿಡ್ಡನ್ನೆಲ್ಲ ಕರಗಿಸಿ, ಹೊತ್ತಿಸಿ, ಉರಿಸಬಲ್ಲ ಕ್ರಿಯೆಯಲ್ಲಿ ಈ ತನಕ ನಾನು ತೊಡಗಿಯೇ ಇಲ್ಲ ಮಾರ್ಗರೆಟ್.

ಈಗ ನನಗೆ ನಿಜವಾಗಿ ಅನ್ನಿಸುತ್ತಿರುವುದು ಭಯ. ಕಾಗದ ಪ್ರಕಟವಾಗುತ್ತದೆ, ಅದನ್ನೋದಿ ಭಾರತೀಪುರದವರೆಲ್ಲ ನನ್ನನ್ನು ನಾಯಿಯಂತೆ ಕಾಣುತ್ತಾರೆಂಬ ದಿಗಿಲು. ಟಪ್ಪಾಲು ಪೆಟ್ಟಿಗೆಯಲ್ಲಿ ಕಾಗದವನ್ನು ಹಾಕಿದಾಗಿದ್ದ ಹುಮ್ಮಸ್ಸು ಇಳಿದು ಹೋದಂತೆ ಅತಂತ್ರನಾಗುತ್ತಿರುವ ಅನುಭವ. ಆದರೆ ಏನೂ ಮಾಡದೆ ಇರುವುದು ಕೂಡ ಅಸಹನೀಯವಾಗಿತ್ತಲ್ಲವೆ ನನಗೆ- ಜಗನ್ನಾಥ ತನ್ನ ಮನಸ್ಸನ್ನು ಅಮೂಲಾಗ್ರ ಶೋಧಿಸಿಕೊಳ್ಳಬೇಕೆಂದು ನಿಶ್ಚಯಿಸಿ ಬರೆಯುತ್ತಿದ್ದ ಕಾಗದದ ಎದುರು ಹೋಗಿ ಮತ್ತೆ ಕುತ. ಕಿಟಕಿ ಹೊರಗೆ ಗೊಡ್ಡಗಳಾಚೆ ಗೆರೆ ಚಂದ್ರ. ಹುಳುಗಳ ಜಿರ‍್ರೆನುವ ಕರಕರೆ. ಚಳಿ.

ಇಂಗ್ಲೆಂಡಿನಲ್ಲಿ ಆರು ವರ್ಷ ಏನು ಮಾಡಿದ? ಬಹಳ ಸೂಕ್ಷ್ಮವಾದ ದ್ರೋಹದ ಮೂಲಕ ಬಿಳಿಯರಿಗೂ ಕರಿಯರಿಗೂ ಪ್ರಿಯನಾಗಿ ಬದುಕಿದೆ. ಅಂದರೆ ಎಂ.ಎ. ಪಾಸ್ ಮಾಡಿದಾಗ ನನ್ನ ಪ್ರೊಫೆಸರ್ the most charming and honest young man that i have met for year ಎಂದು ಹೇಳುವುದು ಸಾಧ್ಯವಾಗುವಂತೆ ಬದುಕಿದೆ. ವೈಯಕ್ತಿಕ ಜೀವನವೊಂದೇ ನಿಜವೆಂದು ವಾದಿಸಿ ಅಸ್ತಿತ್ವವಾದಿಯಾಗಿ ಆಕರ್ಷಕನಾದೆ. ನನ್ನ ಕಪ್ಪು ಕಣ್ಣು, ಕಪ್ಪು ಕೂದಲು, ಇಟಾಲಿಯನ್ನರ ಮೈ ಬಣ್ಣ, ಮಾತಿನ ಗತ್ತು – ಎಲ್ಲವನ್ನೂ ಸೂಕ್ಷ್ಮವಾಗಿ ಉಪಯೋಗಿಸಿಕೊಂಡೆ. ಲಿಬರಲ್ ಆದೆ, ಗಾರ್ಡಿಯನ್ ಓದಿದೆ. ಕಾರಣ ನನ್ನ ಗೊತ್ತುಗುರಿಯಿಲ್ಲದ ಸಡಿಲವಾದ ಜೀವನ ಕ್ರಮವನ್ನು ಲಿಬರಲ್ ಧೋರಣೆಯ ಮೂಲಕ ಸಮರ್ಥಿಸಿಕೊಳ್ಳುವುದು ಸಾಧ್ಯವಾಗಿತ್ತು. ಯಾವಳೊಬ್ಬಳಿಗೂ ಸಂಪೂರ್ಣ ಗಂಟು ಬೀಳದಂತೆ ಹಲವಾರು ಹುಡುಗಿಯರ ಸಖ್ಯ ಬೇಕೆನ್ನಿಸಿದ್ದರಿಂದ, ಆದರೆ ಅದು ಸಾಧ್ಯವಾಗದ್ದರಿಂದ, ಕಾಮಸ್ವಾತಂತ್ರ್ಯದ ವಾದಿಯಾದೆ; ಇಂಗ್ಲಿಷರ ಪ್ಯೂರಿಟನ್ ಮನೋವೃತ್ತಿಯ ಉಗ್ರವಿರೋಧಿಯಾದೆ; ಫ್ರೆಂಚರ ಜೀವನ ಸಂತೋಷವನ್ನು ಕೊಂಡಾಡಿದೆ. ನನಗೆ ಸ್ವೇಚ್ಛೆಯಾಗಿರುವುದು ಬೇಕಿತ್ತು; ಆದ್ದರಿಂದ ಬದುಕೇ ಅಸಂಗತ ಎಂದೆ. ಹುಡುಗಿಯರನ್ನು ಸೆಡ್ಯೂಸ್ ಮಾಡುವ ವಿವಿಧ ಘಟ್ಟಗಳಲ್ಲಿ ತತ್ಪರರಾಗಿದ್ದ ಗೆಳೆಯರಿಗೆ ಹೀರೋ ಆದೆ. ಇಂಗ್ಲಿಷ್ ಹುಡುಗಿ ತನ್ನನ್ನು ತಿರಸ್ಕರಿಸಿದಳೆಂದು ನೋಯುತ್ತಿದ್ದ ಭಾರತೀಯರ ಗೆಳೆಯ ನನ್ನ ಐರೋಪ್ಯ ಸಂಸ್ಕೃತಿಯ ಖಂಡನೆಯನ್ನು ಮನಸಾರೆ ಮೆಚ್ಚಿದ; ಹಾಗೆಯೇ ಮಧ್ಯಮ ವರ್ಗದ ಮರ್ಯಾದೆಯಲ್ಲಿ ಸಿಕ್ಕಿಬಿದ್ದ ಇಂಗ್ಲಿಷರವನೂ ಮೆಚ್ಚಿದ. ಒಳಗಿನ ಗುಪ್ತ ಆಸೆಗಳಿಗೆ ಹೀಗೆ ವಿಚಾರದ ಬಹಿರಂಗ ವೇಷಗಳು. ಒಟ್ಟಿನಲ್ಲಿ ಸದಾ ವೇಷಧಾರಿಯಾದ ಮಿಂಡನ ಬದುಕು.

ಒಂದು ದಿನ ಲಂಡನ್ ಯೂನಿವರ್ಸಿಟಿ ಯೂನಿಯನ್ನಿನ ಪಬ್ಬಿನಲ್ಲಿ ಮಾರ್ಗರೆಟ್ಟಳ ಪರಿಚಯವಾದದ್ದನ್ನು ಜಗನ್ನಾಥ ನೆನಪಿಸಿಕೊಂಡ. ಜೊತೆಗೆ  ಚಂದ್ರಶೇಖರನಿದ್ದ. ಬೆಂಗಳೂರಿನ ಮಧ್ಯಮ ವರ್ಗದ ಜೀವನಕ್ಕೆ ಬೇಸತ್ತು ಲಂಡನ್ನಿಗೆ ಬಂದವ. ಸ್ಲಮ್ ಸ್ಕೂಲುಗಳಲ್ಲಿ ಸಪ್ಲೈ ಟೀಚಿಂಗ್‌, ಸಾಯಂಕಾಲದ ಕಾಲೇಜುಗಳಲ್ಲಿ ಅಭ್ಯಾಸ, ಏಕಾಂಗಿತನ ಸಹಿಸಲಾರದೆ ಪಬ್ ಮುಚ್ಚುವ ತನಕ ಡ್ರಾಫ್ಟ್‌ಬಿಯರಿನ ಪಾನ. ಬೆಂಗಳೂರಲ್ಲಿ ಬ್ರಾಹ್ಮಣವಾದಿ; ಲಂಡನ್ನಿನಲ್ಲಿ ಉಗ್ರ ಸಾಮ್ಯವಾದಿ. ಬ್ರಿಟಿಷರ ವರ್ಣನೀತಿಯನ್ನು ಖಂಡಿಸಲು ಏನಾದರೂ ಮಾಡಲೇಬೇಕು. PROTEST ಎನ್ನುವ ಮಾಸಿಕ ತಂದರೆ ಹೇಗೆ – ಎಂದು ನಿತ್ಯ ಚರ್ಚಿಸುವಾಗ ರೂಬೆನ್ಸ್ ಎನ್ನುವ ಜ್ಯೂ ಗೆಳೆಯನೂ ಜೊತೆಗಿರುತ್ತಿದ್ದ. ಆದರೆ ಅವತ್ತು ಅವನಿರಲಿಲ್ಲ. ಫಾರ್‌ಸ್ಟರ್ ಮೇಲಿನ ಥೀಸಿಸ್‌ಗೆ ಒಂದು ಸ್ಪಷ್ಟರೂಪ ಕೊಡಲು ಹೆಣಗುತ್ತಿದ್ದ ಜಗನ್ನಾಥನಿಗೆ ಲೈಬ್ರರಿಯಿಂದ ಹೊರಗೆ ಬರುವಾಗ ತನಗೆ ಸ್ವಂತ ಹೇಳುವುದು ಏನೂ ಇಲ್ಲವೆನಿಸಿದ್ದರಿಂದ ಅತ್ಯಂತ ಖಿನ್ನನಾಗಿ ಕೂತಿದ್ದ. ತನ್ನ ಜೊತೆಯ ಬ್ರಿಟಿಷ್ ಉಪಾಧ್ಯಾಯರ  ಅಸಡ್ಡೆಯಿಂದ ಕ್ರುದ್ಧನಾಗಿದ್ದ ಚಂದ್ರಶೇಖರ ಇಂಡಿಯನ್ ಜೀನಿಯಸ್ ಎಷ್ಟು ಹಿರಿದಾದ್ದು, ಈ ಸ್ಲಮ್ ಮಕ್ಕಳು ಹೇಗೆ ಅನ್‌ಟೀಚಬಲ್, ನಮ್ಮ ಪ್ರತಿಭೆಯನ್ನು ನಿಯೋ ಕಲೋನಿಯಲಿಸಂ ಹೇಗೆ ಕುಗ್ಗಿಸಿದೆ ಎಂದು ಲೆಕ್ಚರ್ ಕೊಡುತ್ತಿದ್ದ. ಜಗನ್ನಾಥನಿಗೆ ಅವನ ಮಾತು ಅವತ್ತು ಬೇಡಿತ್ತು. ಎದ್ದು ಹೋಗಿ ಇನ್ನೊಂದರ್ಧ ಪೈಂಟ್ ಬಿಯರನ್ನೂ, ಚೀಸ್ ಅಂಡ್ ಆನಿಯನ್ ಫ್ಲೇವರ‍್ಡ್‌ಕ್ರಿಸ್ಟ್‌ನ್ನೂ ಕೊಂಡುತಂದ. ಪೈಪ್ ಹಚ್ಚಿದ. ಚಂದ್ರಶೇಖರ ಮಾತಾಡುತ್ತಲೇ ಇದ್ದ. ಜಗನ್ನಾಥನಿಗೆ ಇದ್ದಕ್ಕಿದ್ದಂತೆ ತಾನು ಯಾವತ್ತು ಒರಿಜಿನಲ್ ಆಗಲಾರೆ, ತಾನೊಂದು ಬರಿ ನಕಲು ಪ್ರತಿ ಎನ್ನಿಸಿತು. ಆಡುವ ಮಾತು ಎಂಜಲು, ವಿಚಾರ ಎಂಜಲು. ಫಾರ್‌ಸ್ಟರ್ ಬಗ್ಗೆ ಹೇಳಲು ಒಂದೇ ಒಂದು ಹೊಸ ಮಾತು ಹೊಳೆದಿರಲಿಲ್ಲ. ಆಕರ್ಷಕವಾದ ಬಂಡಾಯದ ಮಾತಾಡುತ್ತ, ಎಲ್ಲರನ್ನೂ ಒಲಿಸಿಕೊಳ್ಳುವ ವಿನಯದಿಂದ ವರ್ತಿಸುತ್ತ, ವಿಚಾರದಲ್ಲಿ ಮುಳ್ಳುಹಂದಿಯಾಗಿ, ಆಚಾರದಲ್ಲಿ ಬೆಚ್ಚಗಿರುವ ಮೂಲೆ ಹುಡುಕುವ ಬೆಕ್ಕಾಗಿ ಏರುತ್ತ, ಒಳಗೇನು ಸತ್ಯವಿಲ್ಲದಿದ್ದರೂ ಮೇಲಕ್ಕೇರುತ್ತ, ನುಣ್ಣಗಾಗುತ್ತ – ಥತ್‌ನನ್ನ ಎನ್ನಿಸಿತು. ಈಲ್ ತರಹದ ಪ್ರಾಣಿ. ವಿಚಾರದ ವೇಷ ಧರಿಸಿದ ಮಾತುಗಳೆಲ್ಲ ಸುಳ್ಳು, ಮನಸ್ಸಿನ ತುಂಬ ಅರೆಹೊರೆದ ಬಯಕೆಗಳಿವೆಯೆಂಬುದು ಮಾತ್ರ ಸತ್ಯ. ಶ್ರೀಮಂತನಾಗಿ ಹುಟ್ಟಿದ ನನಗೆ ಗೊತ್ತಿಲ್ಲ ಗುರಿಯಿಲ್ಲ. ನಾನಿದ್ದೇನೆ ಎಂಬುದನ್ನು ಗುರುತಿಸಿಕೊಳ್ಳಲು ಈ ಬಂಡಾಯ, ಈ ಕ್ರಾಂತಿ, ಈ ಸಾಹಿತ್ಯದ ಜಾಣ ಚರ್ಚೆ, ಈ ಬಗೆಬಗೆಯ ಕನ್ನಡಿಗಳು – ಒಳಗೆ ಮಾತ್ರ ಯಾವ ನಂಬಿಕೆಯೂ ಇಲ್ಲ. ನನ್ನ ಮಾತು ನನಗೆ ನಿಜವೆನ್ನಿಸಲು ಆಡಿಯನ್ಸ್‌ಹುಡುಕುತ್ತಿರುವುದೇ ನನ್ನ ಪಾಲಿನ ಸತ್ಯ.

ಹೀಗೆ ಜಗನ್ನಾಥ ತನ್ನ ಬಗ್ಗೆ ಹೇಸುತ್ತ ಕೂತಿದ್ದಾಗ ಮಾರ್ಗರೆಟ್‌ಸೀದ ತಾನಿದ್ದ ಕಡೆಗೆ ಬಂದಿದ್ದಳು. ಕೈಯಲ್ಲಿ ಬಿಯರ್ ಹಿಡಿದು ‘May I join you’ ಎಂದು ಕುರ್ಚಿ ಎಳೆದು ಪಕ್ಕದಲ್ಲಿ ಕೂತಳು. ಕೆನ್ನೆಯ ಮೇಲೆ ಚೆಲ್ಲಿದ ಕಪ್ಪು ಕೂದಲು, ಕಪ್ಪು ಕಣ್ಣು, ಖುಷಿಯ ಜೀವ ಎನ್ನಿಸುವಂತೆ ಸ್ವಲ್ಪ ತೋರವಾದ ಮೈಕಟ್ಟು, ಮುದ್ದಾದ ತುಟಿಗಳು – ಎದ್ದುನಿಂತು ಕೋಟ್ ಬಿಚ್ಚಿ ಇನ್ನೊಂದು ಕುರ್ಚಿಯ ಮೇಲೆ ಎಸೆದಳು. ಕುತ್ತಿಗೆಯಲ್ಲಿ ದಪ್ಪ ರುದ್ರಾಕ್ಷಿ ಸರವಿತ್ತು. ತಿಳಿಯಾದ ನೀಲಿಯ ಡ್ರೆಸ್ ಹಾಕಿದ್ದಳು. ಕೂದಲನ್ನು ಕೆನ್ನೆಯಿಂದ ತಳ್ಳುತ್ತ, ಉಲ್ಲಾಸದಿಂದ ನಗುತ್ತ, ‘I am Margaret’ ಎಂದು ಕೈಯೊಡ್ಡಿದ್ದಳು. ತನ್ನನ್ನು ಪರಿಚಯ ಮಾಡಿಕೊಳ್ಳಲು ಹೊರಟ ಜಗನ್ನಾಥನಿಗೆ ‘I have seen you’ ಎಂದರು. ಬ್ರಿಟನ್‌ನಲ್ಲಿ ಭಾರತೀಯನಾಗಿರುವುದು ಎಂದರೆ ಏನು ಎನ್ನುವ ಬಗ್ಗೆ ಯೂನಿಯನ್ನಿನಲ್ಲಿ ನೀನು ಮಾಡಿದ ಸ್ಪೀಚ್‌ತುಂಬಿ ಸಿನ್ಸಿಯರ್‌ ಅಂಡ್ ಮೂವಿಂಗ್‌ ಆಗಿ ಇತ್ತು ಎಂದಳು.

ಬಿಳಿಯರು ಮತ್ತು ಕರಿಯರ ನಡುವೆ ಬದುಕುವ ಭಾರತೀಯ ಹೇಗೆ ಸೂಕ್ಷ್ಮ ದ್ರೋಹ  ಮಾಡುತ್ತಾನೆಂದೂ, ಸ್ವದೇಶದಲ್ಲಿ ಜಾತಿಪದ್ದತಿಗೆ ಬಗ್ಗಿ ನಡೆಯುವ ಭಾರತೀಯ ಇಂಗ್ಲೆಂಡಲ್ಲಿ ಬಂಡಾಯಗಾರನಾಗುವುದರ ಸೈಕಾಲಜಿ ಯಾವುದೆಂದು ಜಗನ್ನಾಥ ಮಾತಾಡಿದ್ದ. ನೆಹರೂ ಯಾಕೆ ಭಾವುಕವಾಗಿ ಭಾರತೀಯನಾದರೂ ವಿಚಾರದಲ್ಲಿ ಮಾತ್ರ ಪಾಶ್ಚಾತ್ಯ ಎಂಬುದನ್ನು ವಿವರಿಸಿದ್ದ. ಯಥಾಪ್ರಕಾರ ತಾನು ಅವತ್ತು ನಿಂತು ಕೈಗಳನ್ನು ಬೀಸುತ್ತ ಮಾತಾಡಿದ ಗತ್ತು, ಯೋಚಿಸುವುದೂ ಭರ್ಜರಿಯಾದ ಕ್ರಿಯೆಯೆಂದು ಸೂಚಿಸುವಂತಿತ್ತು. ಪರೋಕ್ಷವಾಗಿ ತನ್ನ ವ್ಯಕ್ತಿತ್ವದ ಸೂಕ್ಷ್ಮ ವಿದ್ರೋಹವನ್ನೆ ವಿಶ್ಲೇಷಿಸಿಕೊಂಡು ಆಡಿದ ಮಾತುಗಳು. ತನ್ನ ಒಳಗುದಿಗೆ ಕಾರಣವಾದದ್ದರ ಪ್ರಾಮಾಣಿಕ ಶೋಧನೆ ಕೂಡ ಕೊನೆಯಲ್ಲಿ ತನ್ನ ಕೀರ್ತಿಗೇ ಕಾರಣವಾದದ್ದನ್ನು ಜಗನ್ನಾಥ  ಮಾರ್ಗರೆಟ್ಟಿನ ಮೆಚ್ಚಿಗೆಯಲ್ಲಿ ಕಂಡ. ಸುಲಭವಾಗಿ ಮೆಚ್ಚುವವಳು ಇವಳಲ್ಲ ಎನ್ನುವುದು ಸ್ವತಂತ್ರ ವಿಚಾರಕ್ಕೆ ದ್ಯೋತಕವಾದ ಅವಳ ಮಾಡ್‌ಡ್ರೆಸ್ಸಿನಲ್ಲಿ, ಬೆನ್ನಿನ ತನಕ ಚೆಲ್ಲಿದ ಕೂದಲಿನಲ್ಲಿ ವ್ಯಕ್ತವಾದ್ದರಿಂದ, ಅವಳ ಭಾಷೆಯಲ್ಲಿ ವ್ಯಂಗ್ಯದ ಒಗರು ಕಂಡದ್ದರಿಂದ ಜಗನ್ನಾಥನಿಗೆ ಅವಳ ಮೆಚ್ಚಿಗೆಯಿಂದ ಸುಖವಾಯಿತು. ತನ್ನ ನಿಜವಾದ ಪೂರ್ವಿಕರು ಬೈರನ್ ಮತ್ತು ನೆಹರೂ ಎಂದು ತನ್ನನ್ನು ಹೀಯಾಳಿಸಿಕೊಂಡರೂ ಮಾರ್ಗರೆಟ್ಟಿನ ವಿಮರ್ಶಾತ್ಮಕ ಕಣ್ಣಿನಲ್ಲಿ ತಾನು ಇನ್ನಷ್ಟು ಆಕರ್ಷಕನಾದೇನು. ಚಂದ್ರಶೇಖರ್‌ನನ್ನು ಪರಿಚಯ ಮಾಡಿಕೊಟ್ಟ. ಮಾರ್ಗರೆಟ್ ತಾನು ಟೀಚರ್ ಆಗಿರುವುದಾಗಿಯೂ, ಬಿಡುವಿನಲ್ಲಿ ಲಂಡನ್‌ಯೂನಿವರ್ಸಿಟಿಯ ಇತಿಹಾಸದ ಎಂ.ಎ.ಗೆ ಕೆಲಸ ಮಾಡುತ್ತಿರುವುದಾಗಿಯೂ ಹೇಳಿಕೊಂಡಳು. Oh, how thirsty I am ಎಂದು ಗಟಗಟನೆ ಅರ್ಧ ಪೈಂಟ್ ಬಿಯರನ್ನು ಕುಡಿದು ಕೈಯಿಂದ ಬಾಯಿ ಒರೆಸಿಕೊಂಡಳು. ನಿನ್ನ ಗಮನಕ್ಕಾಗಿ ನಾನು ಕಾತರಳೆಂದೂ, ಜೊತೆಗೇ ನಾನು ಸ್ವತಂತ್ರಳೆಂದೂ ಒಟ್ಟಿಗೇ ಸೂಚಿಸುತ್ತಿದ್ದ ಹುಡುಗಿಯ ವ್ಯಕ್ತಿತ್ವದಿಂದ ಜಗನ್ನಾಥನ ಮೈ ಮನಸ್ಸುಗಳೆರಡೂ ಜಾಗೃತವಾದವು. ಖಾಲಿಯಾದ ಮೂರು ಗ್ಲಾಸುಗಳನ್ನು ಎತ್ತಿಕೊಂಡು ಜಗನ್ನಾಥ ಎದ್ದ. ಮಾರ್ಗರೆಟ್ಟಳೂ ಎದ್ದು, ‘ನಾನು ದುಡಿಯುತ್ತಿದ್ದೇನೆ, ನಾನೇ ಕೊಡುವೆ’ ಎಂದಳು. ಜಗನ್ನಾಥ ಬೇಡ ಎಂದು ಕೌಂಟರ್‌ಗೆ ಹೋದ. ತುಂಬಿದ ಗ್ಲಾಸುಗಳನ್ನು ತಟ್ಟೆಯ ಮೇಲಿಟ್ಟು ತರುವಾಗ, At least let me help ಎಂದು ಮಾರ್ಗರೆಟ್ ಎದ್ದು ಬಂದಳು. ಸಿಗರೇಟ್ ಕೊಂಡು ತಂದಳು. ಜಗನ್ನಾಥ ಲವಲವಿಕೆಯಿಂದ ಅವಳ ಸಿಗರೇಟ್ ಹಚ್ಚಿ ಮಾತಿಗೆ ಶುರುಮಾಡಿದ. ಹೊಸಬಳೊಬ್ಬಳ ಪರಿಚಯವಾದೊಡನೆ ಅವಳ ಮನಸ್ಸನ್ನು ಆಕ್ರಮಿಸಿ ಅಲ್ಲಿ ನಿಜವಾಗಲು ತಾನು ತೋರಿಸುತ್ತಿದ್ದ ಬೇಟೆಗಾರನ ಚಾಕಚಾಕ್ಯತೆಯನ್ನು ತಕ್ಷಣ ಗಮನಿಸಿಕೊಂಡ. ಕೆಲವೇ ನಿಮಿಷಗಳ ಕೆಳಗೆ ಎಷ್ಟೊಂದು ಖಿನ್ನನಾಗಿದ್ದೆ. ಆದರೆ ತನ್ನ ಬಾಗಿನ ಕತ್ತು, ಪರೀಕ್ಷಕ ನೋಟ, ಉತ್ಕಟ ಮಾತು, ಹಾವಭಾವಗಳ ಹೃತ್ಪೂರ್ವಕತೆ ಮಾರ್ಗರೆಟ್ಟಿನ ಅಂತರಂಗದಲ್ಲಿ ತನ್ನನ್ನು ಊರಿಬಿಡಲು ಹವಣಿಸುತ್ತಿದ್ದುವು. ಸಮ್ಮತಿ, ವಿರೋಧ, ಆತ್ಮವಿಮರ್ಶೆ- ಎಲ್ಲವೂ ಬೇಟೆಯ ಸಾಧನಗಳಾದವು. ಕೆನ್ನೆ ಮೇಲೆ ಬಿದ್ದ ಕೂದಲನ್ನು ತಳ್ಳುತ್ತ, ಮೈಕೈಗಳನ್ನು ಆರಾಮಾಗಿ ಸಡಲಿಸಿಕೊಳ್ಳುತ್ತ, ನಿಸ್ಸಂಕೋಚದ ತನ್ನ ಮೈ ಮನಸ್ಸುಗಳನ್ನು ಜಗನ್ನಾಥನ ಗಮನಕ್ಕೆ ಒಡ್ಡಿ, ಈಗ ಒಪ್ಪುತ್ತ, ಮರುಕ್ಷಣ ಅನುಮಾನಿಸುತ್ತ ಮಾತಿನಲ್ಲಿ ಒಬ್ಬರನ್ನೊಬ್ಬರು ಸುಖವಾಗಿ ಬರೆದರು. ಚಂದ್ರಶೇಖರ್‌ಅಸೂಯೆ ತಡೆಯಲಾರದೆ ಐರೋಪ್ಯದ ಲಿಬರಲ್ ವಿಚಾರವೆಲ್ಲ ಷಂಡತನವೆಂದೂ, ಮೋಸವೆಂದೂ, ಚೆಗೆವಾರನ ಹಾಗೇ ಕ್ರಿಯೆಯಲ್ಲಿ ತೊಡಗಿದಾಗ ಮಾತ್ರ ಈ ಐರೋಪ್ಯ ಲಿಬರಲ್ ಮೋಸ ಬಯಲಾಗುತ್ತದೆಂದೂ ಉಗ್ರವಾಗಿ ವಾದಿಸಿದ. ಮನುಷ್ಯನ ಜೀವನದ ಅಂತಿಮ ಶೂನ್ಯತೆ ಬಗ್ಗೆ ಮಾತಾಡೋದು, ನಮ್ಮ ನ್ಯೂನತೆಗಳೇನೂಂತ ವಿಶ್ಲೇಷಿಸಿಕೋತಾ ಹೋಗೋದು ಡಿಕಡೆಂಟ್ ಜನ ಆಡೋ ಗೇಮ್ ಎಂದು ವಾದಿಸಿದ. ನೀವಿಬ್ಬರು ಹೇಗೆ ಆರಾಮಾಗಿ ಕೂತು ಎಷ್ಟು ಕ್ರೂರವಾಗಿ ಆಕರ್ಷಕವಾಗಿ ಮನುಷ್ಯನ ಚರ್ಚಿಸುತ್ತಿದೀರಲ್ಲ, ಇದು ಲುಮುಂಬಾನ ಆಫ್ರಿಕಾದಲ್ಲಿ ಸಾಧ್ಯವಿತ್ತೆ, ಕಾಡುಬಿದ್ದ ಚೆಗೆವಾರನಿಗೆ ಸಾಧ್ಯವಿತ್ತೇ – ಸಾಮಾನ್ಯ ಜನ ಎದ್ದು ನಿಲ್ಲಬೇಕು. ನಿಮ್ಮ ಭ್ರಾಮಕ ಪ್ರಪಂಚ ಹರಿದು ಹೋಗುತ್ತೆ ಎಂದು ಹಾಸ್ಯ ಮಾಡಿದ. ಬಿಯರ್ ತಲೆಗೇರಿರಬೇಕು, ಅಥವಾ ತಡಿಯಲಾರದಷ್ಟು ಹೊಟ್ಟೆಕಿಚ್ಚಾಗಿರಬೇಕು – ಯಾಕೆಂದರೆ ಚಂದ್ರಶೇಖರ್ ಹೇಳ್ತಾ ಇದ್ದದ್ದನ್ನೇ ಹೆಚ್ಚು ಕಡಮೆ ಜಗನ್ನಾಥ ಮತ್ತು ಮಾರ್ಗರೆಟ್ ಸಹ ಮಾತಾಡ್ತ ಇದ್ದರು. ಮಾರ್ಗರೆಟ್ ತನ್ನ ತಂದೆಯೂ ಭಾರತೀಯ, ಗುಜರಾತಿಂದ ಬಂದವರು, ತಾಯಿ ಇಂಗ್ಲಿಷರವಳು, ಆದರೆ ತಂದೆಯೆಂದ್ರೆ ತನಗೆ ಹೆಚ್ಚು ಇಷ್ಟ ಎಂದಳು. ನೀನು ಹೇಳೋದನ್ನೆಲ್ಲ ನಾನೂ ಒಪ್ತೀನಿ ಎಂದಳು. ಪಬ್ಬಿನಲ್ಲಿ ಕೂತು ಒಪ್ಪೋದು ಸುಲಭ, ಜಗನ್ನಾಥ ಹೀಗೇ ಮಾತಾಡ್ತಾ ಇದ್ದರೆ ನೆಹರೂ ಸರ್ಕಾರದಲ್ಲಿ ಅಂಬಾಸಡರ್‌ ಆಗ್ತಾನೆ ಎಂದು ಚಂದ್ರಶೇಖರ್‌ ಅಣಕಿಸಿದ. ಜಗನ್ನಾಥನಂತಹ ವಾಕ್ಪಟುಗಳು ಬಹಳ ಬೇಗ ಇಂಡಿಯಾದಲ್ಲಿ ಮೇಲಕ್ಕೆ ಬರ್ತಾರೆ; ನೆಹರೂ, ಕೃಷ್ಣಮೆನನ್ ಸಕ್ಸೆಸ್ ಗುಟ್ಟು ಮತ್ತೇನು ಎಂದ. ಕ್ಷಣದ ಹಿಂದೆ ಜಗನ್ನಾಥ ಕೂಡ ಇದೇ ಮಾತಾಡಿದ್ದ. ಪಬ್ ಮುಚ್ಚಿದ ಮೇಲೇ ಅವರು ಎದ್ದದ್ದು. ‘ಬೈ’ ಎಂದು ಚಂದ್ರಶೇಖರ ಎದ್ದು ಹೋದ. ಹೋಗುವಾಗ ಸ್ವೀಟಾಗಿ ವರ್ತಿಸಲು ಪ್ರಯತ್ನಿಸಿದ್ದ. ನಿನ್ನ ರೋಷಾನ್ನ ನಾನು ಮೆಚ್ತೇನೆ ಎಂದು ಮಾರ್ಗರೆಟ್‌ಹೇಳಿ ಅವನ ಕೈಕುಲುಕಿದ್ದಳು. ಜಗನ್ನಾಥನಿಗೆ ಚಂದ್ರಶೇಖರನ ವ್ಯಂಗ್ಯದಲ್ಲೂ ಅಸೂಯೆಯಲ್ಲೂ ವ್ಯಕ್ತವಾಗಿದ್ದ ಪ್ರಾಣಶಕ್ತಿ ಕಂಡು ಕಸಿವಿಸಿಯಾಗಿತ್ತು. ಅವನ ಕಹಿಯಾದ ಮಾತು, ಅಸೂಯೆಯಲ್ಲಿ ಉರಿದ ದುರ್ಬಲತೆ ಮಾರ್ಗರೆಟ್ಟಳ ಹೆಣ್ತನವನ್ನು ಪ್ರಚೋದಿಸಿದಂತೆ ಕಂಡಿತು. ಚಂದ್ರಶೇಖರ್‌ ಹೋದೊಡನೆಯೇ ಹೇಳಿದ :

‘ಮಾತಾಡ್ತಾನೆ ಅಷ್ಟೆ, ಆದರೆ ಪೌಂಡನ್ನ ಬ್ಲಾಕ್‌ನಲ್ಲಿ ಮಾರಿ ಬೆಂಗಳೂರಿನ ಜಯನಗರ ಬಡಾವಣೇಲಿ ಮಹಡಿ ಮನೆ ಕಟ್ಟಿಸ್ತಾ ಇದಾನೆ.’

ಮಾರ್ಗರೆಟ್ಟಿನ ಕಣ್ಣಲ್ಲಿ ಒಂದು ಕ್ಷಣದಲ್ಲೆ ಚಂದ್ರಶೇಖರ್‌ಹೆಣವಾಗಿರಬಹುದು.

ಆದರೆ ತನ್ನ ಈ ಗೆಲುವಿನಿಂದ ನಾಚಿಕೆಯಾಗಿ ಹೇಳಿದ :

‘ಚಂದ್ರಶೇಖರ್ ಬಡವ, ಹಲ್ಕ. ಆದ್ದರಿಂದ ಅವನಿಗೆ ಅರ್ಥವಾಗೋ ಸಂಕಟಗಳು ನನಗೆ ಆಗಲ್ಲ.’

ಹೀಗೆ ಮಾತಾಡಿ ಪ್ರಾಯಶಃ ತಾನು ಮಾರ್ಗರೆಟ್‌ ಕಣ್ಣಲ್ಲಿ ಇನ್ನಷ್ಟು ದೊಡ್ಡವನಾಗಿದ್ದೆ. ‘Oh, I know the type’ ಎಂದಳು.

ಇಬ್ಬರೂ ಬ್ಲೂಮ್ಸ್‌ಬರಿಯಲ್ಲಿದ್ದ ಮಾರ್ಗರೆಟ್ಟಿನ ಫ್ಲ್ಯಾಟಿನ ತನಕ ನಡೆದರು. I will fix something for you to eat, ಬಾ, ಎಂದು ಮಾರ್ಗರೆಟ್ ಕರೆದಳು. ಬಾಗಿಲು ತೆರೆಯುತ್ತ, ನನ್ನ ಲ್ಯಾಂಡ್‌ಲೇಡಿಗೆ ತುಂಬ ಸಂಶಯದ ಪ್ರಕೃತಿ, ಮೆತ್ತಗೆ ಹತ್ತಿ ಬಾ ಎಂದು ಕೈ ಹಿಡಿದು ಕತ್ತಲಿನಲ್ಲಿ ಮಹಡಿ ಹತ್ತಿಸಿದಳು. ರಿಲ್ಯಾಕ್ಸ್ ಎಂದು ಸೋಫಾ ಕಂ ಬೆಡ್ಡನ್ನು ತೋರಿಸಿ ಕೋಟನ್ನು ತೆಗೆಯಲು ಸಹಾಯ ಮಾಡಿದಳು. ರವಿಶಂಕರನ ಸಿತಾರ್‌ಮುದ್ರಿಕೆಯನ್ನು ಹಾಕಿ ‘I won’t be a minute’ ಎಂದು ಅಡಿಗೆ ಮನೆಗೆ ಹೋದಳು.

ಜಗನ್ನಾಥ ಮಾರ್ಗರೆಟ್ಟಿನ ಬೆಡ್‌ಸಿಟಿಂಗ್ ರೂಮನ್ನು ಕುತೂಹಲದಿಂದ ಪರೀಕ್ಷಿಸಿದ. ಅವಳ ರೂಮಿನಲ್ಲಿ ಉಪಯೋಗಿಸಿದ್ದ ಅಲಂಕಾರದ ವಸ್ತುಗಳಲ್ಲಿ ಹೆಚ್ಚು ಪಾಲು ನೀಲಿ ವರ್ಣವಾಗಿದ್ದುವು. ಅವಳ ಮೇಜಿನ ಮೇಲೆ ಜೋತ ಮೊಲೆಗಳ ಬರಿ ಮೈಯಲ್ಲಿ ಕೈಗಳನ್ನೆತ್ತಿ ನಿಂತಿದ್ದ ಪರಮಹಂಸರ ಫೋಟೋ ಇತ್ತು. ಗೋಡೆಯ ಮೇಲೆ ಗೊಗೇನ್ನನ ಚಿತ್ರ. ಮೂಲೆಯಲ್ಲಿ ಹಳೆಯದಾದ ರೇಡಿಯೋ ಗ್ರಾಂ. ಊಟದ ಟೇಬಲ್ಲಿನ ಮೇಲೆ ಹಾಗೇ ಬಿಟ್ಟ ತಟ್ಟೆಗಳು, ಜರ್ನಲ್‌ಗಳು. ಒಳ್ಳೆಯ ಅಭಿರುಚಿಯ ಜೊತೆಗೆ ಸೋಮಾರಿತನದ ಚಿಹ್ನೆಗಳು. ತನಗೆ ಒಳ್ಳೆಯ ರುಚಿಯಿದೆ, ಆದರೆ ಬೂರ್ಜ್ವಾ ಅಲ್ಲ ಎಂಬುದನ್ನು ವ್ಯಕ್ತಪಡಿಸುವ ಪಾಪ್ ಚಿತ್ರಗಳು. ವಿಯಟ್ನಾಂ ಯುದ್ಧದ ಭೀಕರತೆಯನ್ನು ಹೇಳುವ ಚಿತ್ರದ ಕಟಿಂಗ್‌ಗಳು. ಬಾಗಿಲಿನ ಸ್ಟಾಂಡಿನ ಮೇಲೆ ಅವಳು ಬಿಚ್ಚಿಟ್ಟ ಡಫಲ್ ಕೋಟು. ನೋಡಲು ಸರಳವಾದ ಆದರೆ ತುಂಬ ಮೆತ್ತಗೆ ಹಿತವಾಗಿದ್ದ ಸೋಫಾಗಳು. ಜಗನ್ನಾಥ ಗ್ಯಾಸ್ ಒಲೆಯ ಎದುರು ಕೈ ಕಾಯಿಸಿಕೊಳ್ಳುತ್ತ ಕೂತ. ಒಳಗಿನಿಂದ ಮಾರ್ಗರೆಟ್ ಅಲ್ಲೆ ವ್ಹಿಸ್ಕಿಯಿದೆ ತಗೊ ಎಂದಳು. ಪುಸ್ತಕದ ಕಪಾಟಿನ ಮೇಲಿದ್ದ ವ್ಹಿಸ್ಕಿಯನ್ನು ಸುರಿದುಕೊಂಡು ‘ನಿನಗೆ?’ ಎಂದ. ಬೇಡ ಎದಂದಳು. ಜಗನ್ನಾಥ ಅಡಿಗೆ ಮನೆ ಒಳಗೆ ಹೋಗಿ ಫ್ರಿಜ್ ತೆರೆದು ಐಸ್ ಹಾಕಿಕೊಂಡ. ಸಾಸೇಜುಗಳನ್ನು ಫ್ರೈಮಾಡುತ್ತಿದ್ದ ಮಾರ್ಗರೆಟ್‌ಗೆ ತೊಂದರೆ ತಗೋಬೇಡ ಎಂದ. ‘ಒಂದು ನಿಮಿಷ ಕೂತಿರು’ ಎಂದಳು. ‘ನಿನಗೆ ಪರಮಹಂಸರು ಇಷ್ಟವೇ?’ ಎಂದ. ‘ಹೌದು. ನೀನು ಇಶರ್‌ವುಡ್ ಓದಿದೀಯ, ನನಗೆ ಪ್ರಿಯನಾದ ಲೇಖಕ ಅವನು’ ಎಂದಳು. ಫಾರ್‌ಸ್ಟರ್ ತರಹದ ಲೇಖಕ ಅಲ್ಲವೆ?’ ಎಂದ. ‘ಹೌದು, ಪರಮಹಂಸ, ವ್ಹಿಟ್‌ಮನ್ ಎಲ್ಲವದನ್ನೂ ಒಪ್ಪಿಕೋತಾರೆ, ಏನನ್ನೂ ನಿರಾಕರಿಸಲ್ಲ. ಸೃಷ್ಟಿಯಲ್ಲಿರೋ ಎಲ್ಲಾ ಸಂಕೀರ್ಣತೇನ್ನೂ ಒಳಗೊಳ್ಳೊ ವ್ಯಕ್ತಿತ್ವಗಳು’ ಎಂದಳು. ‘ಏನನ್ನಾದರೂ ತುಂಬಬಲ್ಲ ಬ್ಯಾಗುಗಳು. ಅವರ ವ್ಯಕ್ತಿತ್ವ ಪಾಯಸ ಇದ್ದ ಹಾಗೆ’ ಎಂದ. ‘ನಾನು ಒಪ್ಪಲ್ಲ’ ಎಂದು ಮಾರ್ಗರೆಟ್ ನಗುತ್ತ, ಬ್ರೆಡ್, ಚೀಸ್, ಸಾಸೇಜುಗಳನ್ನು ಮೇಜಿಗೆ ತಂದಳು.

ತಿಂದಾದ ಮೇಲೆ ಕಪ್ಪು ಕಾಫಿ ಕುಡಿದರು. ನಾಳೆ ತೊಳದೆರಾಯಿತು ಎಂದರೂ ಒಪ್ಪದೆ ಮಾರ್ಗರೆಟ್ ತಟ್ಟೆಗಳನ್ನು ತೊಳೆಯಲು ಜಗನ್ನಾಥ ಸಹಾಯ ಮಾಡಿದ. ‘ನನ್ನ ತಾಯಿ ನ್ನ ತಂದೇನ್ನ ನಿರ್ವೀರ್ಯನನ್ನಾಗಿ ಮಾಡಿದಾಳೆ. ನಾನವಳನ್ನ ಹೇಟ್ ಮಾಡ್ತೀನಿ’ ಎಂದಳು. ಹೊರಡುವಾಗ ‘ನಾಳೆ ಭಾನುವಾರ, ಲಂಚ್‌ಗೆ ಬಾ. ನನ್ನ ತಂದೇನ್ನ ಹೋಗಿ ನೋಡಿ ಬರಬಹುದು. ಇಲ್ಲೇ ಇದಾರೆ’ ಎಂದಳು. ಜಗನ್ನಾಥ ಹುರುಪಿನಿಂದ ತನ್ನ ಫ್ಲ್ಯಾಟಿಗೆ ಹಿಂದಿರುಗಿದ. ತಾನು ಪ್ರೀತಿಸಿದ್ದ ಹುಡುಗಿಯರಲ್ಲೆಲ್ಲ ಮಾರ್ಗರೆಟ್ ತುಂಬ ನಿಜವಾದ ಹೆಣ್ಣಲ್ಲವೆ, ಅವಳ ಜೊತೆಗಿದ್ದಾಗ ತನ್ನ ವ್ಯಕ್ತಿತ್ವ ನಿರಂಬಳತೆಯನ್ನೂ ಗಟ್ಟಿತನವನ್ನೂ ಪಡೆಯುತ್ತದೆ ಎನ್ನಿಸಿತು.

* * *

ಮಾರನೇ ದಿನ ಭಾನುವಾರ; ಬೆಳಗಿನಿಂದ ಮಳೆ, ಕೆಸರು, ಚಳಿ. ಜಗನ್ನಾಥ ಬಸ್ ಹತ್ತಿ ಮಾರ್ಗರೆಟ್ ಇದ್ದಲ್ಲಿಗೆ ಹೋದ. ಆಗ ತಾನೇ ಸ್ನಾನ ಮುಗಿಸಿದ್ದಳು. ರೂಮು ಬೆಚ್ಚಗೆ ಹಿತವಾಗಿತ್ತು. ಗ್ಯಾಸ್ ಅಗ್ಗಿಷ್ಟಿಕೆಯ ಎದುರು ಕೂತ. ಕಾಫಿಯೇ ಟೀಯೋ ಎಂದಳು. ನಾನು ಮಾಡ್ತೇನೆ ಎಂದು ಮಾರ್ಗರೇಟ್ ಜೊತೆ ಕಿಚನ್ನಿಗೆ ಹೋದ. ತಾನು ಬರುತ್ತೇನೆಂದು ರೂಮನ್ನು ಮಾರ್ಗರೆ‌ಟ್ ಸ್ವಚ್ಛವಾಗಿ ಇಟ್ಟದ್ದು ನೋಡಿ ಜಗನ್ನಾಥನಿಗೆ ಖುಷಿಯಾಯಿತು. ಟೀ ಪಾಟ್‌ಗೆ ಬಿಸಿ ನೀರು ಹೊಯ್ಯುವಾಗ ಅವಳ ಹತ್ತಿರ ನಿಂತಿದ್ದ. ಶಾಮಫೂ ಮಾಡಿದ ಅವಳ ಕೂದಲಿನ ವಾಸನೆ ಹಿತವೆನ್ನಿಸಿತು. ‘ಈಗಲೇ ಜಡೆ ಹಾಕುವಷ್ಟು ಉದ್ದ ಕೂದಲಿದೆ’ ಎಂದು ಅವಳ ಕೂದಲನ್ನು ಕೈಯಿಂದ ಎತ್ತಿದ. ಅಂಚಿನಲ್ಲಿದ್ದ ನವಿಲುಗಳಿದ್ದ ಸಡಿಲವಾದ ಲಂಗ ಮತ್ತು ಬ್ಲೌಸ್ ಧರಿಸಿದ್ದಳು. ಅವಳ ಮೈಗೆ ಮೈ ತಾಗುವಂತೆ ನಿಂತಿದ್ದ. ಅವಳ ಭುಜದ ಮೇಲೆ ಕೈಯಿಟ್ಟು ತಾನು ಬರೆಯಲು ಒದ್ದಾಡುತ್ತಿದ್ದ ಥೀಸಿಸ್ ವಿಷಯ ಮಾತಾಡಿದ. ಟೀ ಕುಡಿಯುತ್ತ ತಾಯಿ, ಭಾರತೀಪುರದ ವಿಷಯ ಹೇಳಿದ. ಶ್ರೀಪತಿರಾಯರು ತನಗೆ ಶಾ, ಇಂಗರ್‌ಸಾಲರನ್ನು ಓದಿಸಿದ್ದು ಹೇಳಿದ. ‘ಯಾರು ಇಂಗರ್‌ಸಾಲ?’ ಎಂದು ಕುತೂಹಲದಿಂದ ಕೇಳಿದ್ದಳು. ಸಂಪೂರ್ಣ ರಿಲ್ಯಾಕ್ಸ್ ಆಗಿದ್ದಳು. ಇಡೀ ಒಂದು ಬಾಟ್ಲಿ ವೈನ್ ಕುಡಿದು ಮಾತಾಡಿದರು. ಊಟಕ್ಕೆ ಚಿಕನ್ ಕರಿ ಅನ್ನ ಮಾಡಿದ್ದಳು. ನನಗೆ ವೆಜಿಟೇರಿಯನ್ ಆಹಾರವೇ ನಿಜವಾಗಿ ಸೇರೋದು ಎಂದು ತನ್ನ ಉಪನಯನ ಇತ್ಯಾದಿ ವಿವತಿಸಿದ. ಊಟ ಮುಗಿಸಿ ಫಿನ್ಸ್‌ಬರಿಯಲ್ಲಿದ್ದ ಮಾರ್ಗರೆಟ್ ತಂದೆಯ ಮನೆಗೆ ಹೋದರು. ಡಾಕ್ಟರಾಗಿದ್ದ ದೇಸಾಯರು ನೋಡಲು ಮಗಳನ್ನು ಹೋಲುತ್ತಿದ್ದರು. ಹಿಂದಿಯಲ್ಲಿ ಜಗನ್ನಾಥನನ್ನು ಮಾತಾಡಿಸಿದರು. ನನಗೆ ಹಿಂದಿ ಬರಲ್ಲ ಎಂದ ಜಗನ್ನಾಥ. ದೇಸಾಯಿ ತಿದ್ದಿದ ಮೂಗು, ದುಂಡು ಮುಖ, ಮಂಕಾದ ಕಣ್ಣುಗಳ ತೋರ ಶರೀರದ ವ್ಯಕ್ತಿ. ಬೋಳು ತಲೆಯನ್ನು ಉಜ್ಜಿಕೊಳ್ಳುತ್ತ ಇಂಡಿಯಾದ ವಿಷಯ ಕೇಳಿದರು. ಬೆಂಗಳೂರನ್ನು ನಾನು ನೋಡಿದ್ದೇನೆ ಅಂದರು. ಅವರ ಇಂಗ್ಲಿಷಿನಲ್ಲಿ ತನಗಿಂತ ಹೆಚ್ಚಾದ ಆಕ್ಸೆಂಟ್ ಇತ್ತು. ನಿಮಗೆ ಗುಜರಾತಿ ಮಾತನಾಡಲು ಯಾರೂ ಸಿಗಲ್ವೆ ಎಂದು ಜಗನ್ನಾಥ ಕೇಳಿದ. ಸಿಗುತ್ತಾರೆ ಎಂದು ಅವರು ಮೌನವಾದರು. ಒಳಗಿನಿಂದ ಟೀ ಟ್ರಾಲಿಯನ್ನು ತಳ್ಳಿಕೊಂಡು ಮಾರ್ಗರೆಟ್ ತಾಯಿಯ ಜೊತೆ ಬಂದಳು. ಅವಳ ತಾಯಿ ನಿಷ್ಠುರವಾದ ಮಾತಿನ ನೀಲ ಕಣ್ಣಿನ ಬ್ಲಾಂಡ್ ಕೂದಲಿನ ಹೆಂಗಸು. ಅವಲ ಸುಕ್ಕು ಬಿದ್ದ ಮುಖದಲ್ಲಿ ದೇಸಾಯಿಗಿಂತ ಹೆಚ್ಚು ವಯಸ್ಸು ಕಾಣುತ್ತಿತ್ತು. ಮನೆಯಲ್ಲಿ ಐದು ಜನ ಭಾರತೀಯ ವಿದ್ಯಾರ್ಥಿಗಳನ್ನು ಬೆಡ್ ಆಂಡ್ ಬ್ರೇಕ್‌ಫಾಸ್ಟಿಗೆ ಇಟ್ಟುಕೊಂಡಿದ್ದ ಅವಳು ಭಾರತೀಯ ವಿದ್ಯಾರ್ಥಿಗಳ dirty habits ಬಗ್ಗೆ ಹೇಳಿದಳು; ಇಂಡಿಯಾ God ridden country ಎಂದಳು. ತಾಯಿಗೂ ಮಗಳೀಗೂ ವಾಗ್ವಾದವಾಯಿತು. ತಂದೆ ಸುಮ್ಮನೆ ಕೂತಿದ್ದರು. ಇದು ಪರೋಕ್ಷವಾಗಿ ಗಂಡನ ಬಗ್ಗೆ ಅತೃಪ್ತಿಯನ್ನು ವ್ಯಕ್ತಪಡಿಸುವ ರೀತಿಯೆಂದು ತಿಳಿದ ಜಗನ್ನಾಥ ಸುಮ್ಮನೇ ಕೂತ. ಭಾರತದ ದಾರಿದ್ರ‍್ಯಕ್ಕೆ ಬ್ರಿಟಿಷರೇ ಕಾರಣವೆಂದು ಮಾರ್ಗರೆಟ್ ವಾದಿಸಿದಳು. ಬ್ರಿಟಿಷರಿಲ್ಲದಿದ್ದರೆ ಭಾರತೀಯರಲ್ಲಿ ಇಷ್ಟೂ ವೈಜ್ಞಾನಿಕ ದೃಷ್ಟಿಯಿರುತ್ತಿರಲಿಲ್ಲೆಂದೂ, ಇಂಗ್ಲಿಷ್ ಮನೆಗಳಲ್ಲಿ ಇಂಡಿಯನ್ ಕರಿ ತಯಾರಿಸಿ ಎಲ್ಲ ಕಡೆಯೂ ಮಸಾಲೆ ವಾಸನೆಯನ್ನು ಭಾರತೀಯರು ಹರಡುತ್ತಾರೆಂದೂ, ಕರ್ಟನ್‌ಗಳನ್ನು ಸದಾ ಹಾಕಿಯೇ ಇರುತ್ತಾರೆಂದೂ ಅಸಂಬದ್ಧವಾಗಿ ತಾಯಿ ಮಾತಾಡಿದರು. ಆಮೇಲೆ ಕೆಲಸವಿದೆಯೆಂದು ಒಳಗೆ ಹೋದರು. ತಾಯಿಯ ಜೊತೆ ಅಡಿಗೆ ಮನೆಯಲ್ಲಿ ‌ಪ್ರಾಯಶಃ ಕಹಿಯಾದ ಮಾತಾಡಿ ರಚ್ಚು ತೀರಿಸಿಕೊಲ್ಳಲೆಂದು ಮಾರ್ಗರೆಟ್ಟೂ ಹೋದಳು. ದೇಸಾಯಿ ಎದ್ದು ನಿಂತು ನಿಟ್ಟುಸಿರುಬಿಟ್ಟು, I am very unhappy ಎಂದರು. ಬೇಕಾದರೆ ನನ್ನ ಮಗಳನ್ನು ಕೇಳು, ಹೇಳುತ್ತಾಳೆ ಎಂದರು. ತನ್ನ ಸಹಾನುಭೂತಿಯನ್ನು ದೇಸಾಯಿ ಬೇಡುವ ಕ್ರಮ ನೋಡಿ ಜಗನ್ನಾಥನಿಗೆ ಮುಜುಗರವಾಯಿತು. ‘ಹೆಚ್ಚುದಿನ ಇಲ್ಲಿರಬೇಡ. ಇಂಡಿಯಾಕ್ಕೆ ಹೋಗು. ನನ್ನ area ಬಿಟ್ಟು ಹೊರಗೆ ಹೋದರೆ ನಾನು ಯಾರು? ಡಾಕ್ಟರೆಂದು ಯಾರು ಗುರುತಿಸುತ್ತಾರೆ? ಪ್ರಾಯಶಃ ಒಬ್ಬ ಇಂಡಿಯನ್ ಕಂಡಕ್ಟರ್‌ಎಂದುಕೊಳ್ಳುತ್ತಾರೆ’ ಎಂದು ಗೊಣಗುತ್ತ ರೂಮಿನಲ್ಲಿ ಸುತ್ತಾಡಿದರು. ಹೊರಗೆ ಬಂದ ಮಾರ್ಗರೆಟ್ಟಿಗೂ ನೀರೊಡೆಯುವಂತಿದ್ದ ಕಣ್ಣುಗಳಲ್ಲಿ ಸಿಟ್ಟಿತ್ತು. ‘ರೆಚಡ್ ಕಂಟ್ರಿ, ರೆಚಡ್ ಪೀಪಲ್’ ಎಂದು ಜಗನ್ನಾಥನ ಕೈ ಹಿಡಿದು ನಡೆದಳು. ಅವಳನ್ನಲ್ಲೆ ಅಪ್ಪಿಕೊಂಡು ಸಂತೈಸಬೇಕೆನ್ನಿಸಿತು. ಬಸ್ ಹಿಡಿದು ನಡೆದಳು. ಬಸ್ ಹಿಡಿದು ಅವಳ ಫ್ಲ್ಯಾಟಿಗೆ ಬರುವ ತನಕ ಇಬ್ಬರೂ ಮಾತಾಡಲಿಲ್ಲ. ಸಂಜೆಯಾಗಿತ್ತು. ಬಾಗಿಲು ಹಾಕಿದ್ದ ಜಗನ್ನಾಥ ಮಾರ್ಗರೆಟ್ಟನ್ನು ತಬ್ಬಿ ಹಿಡಿದುಕೊಂಡು ಮುತ್ತಿಟ್ಟ. ಅವಳ ಕಣ್ಣುಗಳಲ್ಲಿ ನೀರಾಡಿ ಹರಿಯಿತು. ಎದೆಯ ಮೇಲೆ ತಲೆಯಿಟ್ಟು ಬಿಕ್ಕಿದಳು. ನಾನು ಈ ರಾತ್ರೆ ಇಲ್ಲೆ ಇರಲೆ ಎಂದ. ಅವಳು ಒಪ್ಪಿಗೆಯಲ್ಲಿ ತಲೆಯಾಡಿಸಿದಳು.

ಮಾರ್ಗರೆಟ್ ಅತ್ಯಂತ ಏಕಾಗ್ರತೆಯಿಂದ ಜಗನ್ನಾಥನನ್ನು ಅವತ್ತು ರಾತ್ರೆ ಪ್ರೀತಿಸಿದ್ದಳು. ಅವಳ ದುಃಖದ ಬಾಲ್ಯ, ಅವಳ ಕೊರತೆ, ಅವಳ ಕಾರ, ಅವಳ ಮೈಸಂದಿಗಳಲ್ಲಿ ಅಡಗಿದ್ದ ಸಂತೋಷ – ಎಲ್ಲವನ್ನೂ ಜಗನ್ನಾಥ ಸ್ವೀಕರಿಸಿದ. ತನ್ನ ತೋಳುಗಳಲ್ಲಿ ನಿದ್ದೆ ಹೋದ ಮಾರ್ಗರೆಟ್ಟಿನ ಬೆಚ್ಚಗಿನ ಬೆತ್ತಲೆ ದೇಹವನ್ನು ತಡವುತ್ತ ಗಡಿಯಾರ ನೋಡಿದ. ಎರಡು ಗಂಟೆಯಾಗಿತ್ತು. ಬೆಳಿಗ್ಗೆ ಬೇಗ ಎದ್ದು ಟೀ ಮಾಡಿ ಮಾರ್ಗರೆಟ್ ಎಬ್ಬಿಸಿದಳು. ಲ್ಯಾಂಡ್ ಲೇಡಿಗೆ ತಿಳಿಯದಂತೆ ನೀನು ಇಲ್ಲಿಂದ ಜಾರಬೇಕೆಂದಳು. ಡ್ರೆಸಿಂಗ್ ಗೌನ್ ಹಾಕಿದ್ದ ಮಾರ್ಗರೆಟ್ಟನ್ನು ಎರಡು ಕೈಗಳಲ್ಲೂ ಎತ್ತಿ ಮುದ್ದಿಟ್ಟ. ಗಿರಗಿರನೆ ಸುತ್ತಿಸಿದ. ‘ನನಗೆ ಸ್ಕೂಲಿಗೆ ಹೊತ್ತಾಗುತ್ತೆ. ನೀನಿನ್ನು ಹೊರಡು’ ಎಂದು ಅವಳು ನಕ್ಕಳು. ಹೇಗೆ ತುಂಟ ಹುಡುಗಿಯಂತೆ ಪಕಪಕನೆ ನಕ್ಕಳು.

* * *

ಮಾರ್ಗರೆಟ್ಟಿನ ಅಂತರಂಗದಲ್ಲಿ ಬೇರೂರಿ ಅರಳಿದ. ‘ಮದುವೆ ಮಾಡಿಕೊಳ್ಳೋಣ’ ಎಂದರೆ. ನನಗೆ ಮದುವೆಯಲ್ಲಿ ನಂಬಿಕೆಯಿಲ್ಲವೆಂದಳು. ‘ನೋಡು ನನ್ನ ತಂದೆಯನ್ನ ತಾಯಿ ಹೇಗೆ ಮಾಡಿಟ್ಟಿದಾಳೆ. ತಂದೆಗೆ dignity ಇಲ್ಲ’ ಎಂದಳು. ಜಗನ್ನಾಥನಿಗೂ ನಿಜವಾಗಿ ಮದುವೆ ಬೇಕಿರಲಿಲ್ಲ. ಮಾರ್ಗರೆಟ್ಟನ್ನು ಕಳೆದುಕೊಂಡುಬಿಡಬಹುದೆಂಬ ಭಯ ಅವನಿಂದ ಮದುವೆಯ ವಿಷಯ ಮಾತಾಡಿಸಿತ್ತು. ತಾನು ಒಂದಲ್ಲ ಒಂದು ದಿನ ಭಾರತೀಪುರಕ್ಕೆ ಹೋಗಲೇಬೇಕೆಂದು, ಹಾಗೆ ಮಾತ್ರ ನಿಜವಾಗಬೇಕೆಂದು ಅವನಿಗೆ ಅಸ್ಪಷ್ಟವಾಗಿ ಅನ್ನಿಸಿತ್ತು. ಭಾರತೀಪುರದಲ್ಲಿ ಮಾರ್ಗರೆಟ್ ಜೊತೆ ಇರಲಾರೆ. ಅಬ್ಸೆಂಟೀ ಲ್ಯಾಂಡ್‌ಲಾರ್ಡಾಗಿ ಬೆಂಗಳೂರಲ್ಲಿ ಮನೆ ಮಾಡಿಕೊಂಡಿರಬೇಕಾಗುತ್ತೆ. ಇಂಗ್ಲಿಷ್ ಭಾಷೆಯಲ್ಲಿ ರ್ಯಾಡಿಕಲ್ ಮಾತಾಡುತ್ತ, ಪಾರ್ಟಿಗಳನ್ನು ಕೊಡುತ್ತ, ಎಲ್ಲೋ ಕಂಟೋನ್ಮೆಂಟಲ್ಲಿ, ತಮ್ಮಂತಹ ಬೇರಿಲ್ಲದ ಇತರರ ಜೊತೆಗೆ ರವಿಶಂಕರನ ಸಂಗೀತ, ಕೊನರಕದ ಶಿಲ್ಪ, ಫೋಕ್ ಹಾಡುಗಳು – ಈ ಕೊಂಡಿಗಳಿಗೆ ಜೋತುಬಿದ್ದ ಭಾರತೀಯತೆ. ಪಾರ್ಟಿಗಳಲ್ಲಿ ಲಖನೋ ಜುಬ್ಬ ರೇಷ್ಟೆ ಸೀರೆ. ಡ್ರಾಯಿಂಗ್ ರೂಮಿನಲ್ಲಿ ದೀಪವಿಲ್ಲದ ಕಂಚಿನ ಕಾಲುದೀಪ, ನಟರಾಜ, ಕಥಕ್ಕಳಿಯ ವಿಗ್ರಹ, ನಾಜೂಕಾದ ಆಶ್ ಟ್ರೇಗಳು. ಕೂದಲು ಬೋಳಿಸಿದ ಕಂಕುಳಿನ ಬಾಬ್‌ತಲೆಯ ಸೀರೆಯುಟ್ಟ ಹೆಂಗಸರು. ಐ.ಎ.ಎಸ್. ಆಫೀಸರರ ನಾದಿನಿಯರು ಅಥವಾ ಮಿಲಿಟರಿ ಆಫೀಸರರನ್ನು ಮದುವೆಯಾಗಲು ಕಾದವರು. ಸ್ವಲ್ಪ ತಗೊಳ್ಳಿ. ಬೇಡವೆ? ಯಾಕೆ? Are you dieting?

ಮಾರ್ಗರೆಟ್‌ ಆ ತರಹದವಳಲ್ಲ. ಆದರೆ ಭಾರತಕ್ಕೆ ಬಂದರೆ ಹಾಗಾಗದೆ ವಿಧಿಯಿಲ್ಲ. ಆದರೂ ಮದುವೆಯಾಗೋಣೆಂದು ಕಾಡಿಸಿದ್ದ. ಪ್ರಣಯದ ಮಗ್ನಸ್ಥಿತಿ ಕರಗುತ್ತಿದ್ದಂತೆ ಕ್ರಮೇಣ ಪ್ರೀತಿಯಲ್ಲಿ ಮೊದಲಿನ ಏಕಾಗ್ರತೆ ಉಳಿದಿರಲಿಲ್ಲ. ತೋಳಿನಲ್ಲಿದ್ದ ಮಾರ್ಗರೆಟ್ ಏನೋ ಯೋಚಿಸುತ್ತಿದ್ದಳು; ಅಥವಾ ಜಗನ್ನಾಥ ಅವಳ ಆಲಸ್ಯವನ್ನು, ತೊಳೆಯದಿದ್ದ ಕಪ್ಪುಗಳನ್ನು, ಬಿಸಾಡಿದ ಬಟ್ಟೆಗಳನ್ನು ಜರಿಯುತ್ತಿದ್ದ. ಸಿಕ್ಕಿದವರನ್ನೆಲ್ಲ ಪ್ಲೀಸ್ ಮಾಡಲು ನೀನು ಯಾಕೆ ಪ್ರಯತ್ನಿಸುತ್ತಿ ಎಂದವಳು ಹೀಯಾಳಿಸುತ್ತಿದ್ದಳು. ಹಾಗವಳು ಹೇಳಿದಾಗ ಜಗನ್ನಾಥನಿಗೆ ತುಂಬ ನೋವಾಗುತ್ತಿತ್ತು. ಯಾವಾಗಲೂ ಕ್ರೂರವಾಗಿ ಹೊಟ್ಟೆಯುರಿಯಿಂದ ವರ್ತಿಸುತ್ತಿದ್ದ ಚಂದ್ರಶೇಖರನನ್ನು ಮಾರ್ಗರೆಟ್ ಮೆಚ್ಚಿ ಮಾತಾಡಿದಾಗಲಂತೂ ತನಗೆ ತುಂಬ ಇರಿಟೇಟ್ ಆಗುತ್ತಿತ್ತು. ಆದರೆ ತಾನು ಹೆಚ್ಚು ತೀವ್ರವಾಗಿ ಅವಳನ್ನು ಸಂಭೋಗಿಸುವಂತೆ ಕೆರಳಿಸಲೆಂದು ಹೀಗೆ ಮಾರ್ಗರೆಟ್ ಚಂದ್ರಶೇಖರನನ್ನು ಉಪಯೋಗಿಸುತ್ತಿದ್ದಾಳೆಂಬುದು ಜಗನ್ನಾಥನಿಗೆ ಪತ್ತೆಯಾಯಿತು. ಆಮೇಲೆ ಬೇಕೆಂದೇ ಜಗನ್ನಾಥ ಚಂದ್ರಶೇಖರನಿಗೆ ಹೆಚ್ಚು ಪ್ರಿಯವಾಗಿ ನಡೆದುಕೊಳ್ಳಲು ಪ್ರಾರಂಭಿಸಿದ. ಅವನನ್ನು ಹೊಗಳಲು ಶುರುಮಾಡಿದ. ಮಾರ್ಗರೆಟ್ಟಿಗೆ ಸಿಟ್ಟು ಬಂತು: ‘ಅವನು ಅಂದದ್ದನ್ನೆಲ್ಲ ಅನ್ನಿಸಿಕೊಳ್ಳುತ್ತೀಯಲ್ಲ? ನಿಮಗೆ ಗಂಡಸುತನ ಇಲ್ಲವೆ?’ ಎಂದು ಮೂದಲಿಸಿದಳು. ತನ್ನ ಸೇವೆಯಲ್ಲಿ ಅವಳ ಅಂಗಾಂಗಗಳು ಕ್ರಮೇಣ ಲಂಪಟವಾಗುತ್ತಿರುವುದನ್ನು ಕಂಡು ರೇಗಿದ. ಅವಳಿಗೆ ತೃಪ್ತಿ ತರಿಸಿ ನಿದ್ದೆ ಬರಿಸುವ ಬರಿಯೊಂದು ಸಾಧನವಾಗಿದ್ದ; ತನ್ನಲ್ಲಿದ್ದ ಮಿಂಡತನದ ಸಾಧ್ಯತೆಗಳನ್ನೆಲ್ಲ ಅವಳು ದುಡಿಸಿಕೊಳ್ಳತೊಡಗಿದ್ದಳು. ಸುಲಭವಾಗಿ ಬಿಚ್ಚಿಕೊಳ್ಳುವ ಅವಳ ಮೈಯಲ್ಲಿದ್ದ ಆಸಕ್ತಿ ತನಗೆ ಕಡಿಮೆಯಾಯಿತು. ಅರ್ಧ ನಿದ್ರೆಯಲ್ಲಿ ಅವಳ ಕಯ ತನ್ನ ಮೈಗೆ ಮಾಡುತ್ತಿದ್ದ ಅಭ್ಯಾಸಗತ ಉಪಚಾರಗಳನ್ನು ರಗಳೆಯಾಗಿ ತಳ್ಳುತ್ತಿದ್ದ. ಜಗನ್ನಾಥನ ಉಮೇದುಗಳನ್ನು, ಮಾನಸಿಕ ತುಮುಲಗಳನ್ನು, ತೀವ್ರತೆಗಳನ್ನು ಮಾರ್ಗರೆಟ್ ಆಲಸ್ಯದಿಂದ ಕಾಣಲು ಪ್ರಾರಂಭಿಸಿದಳು.

ಭಾನುವಾರದ ಒಂದು ಪ್ರಾತಃಕಾಲ ಬಿಸಿಲಿತ್ತು. ಹಿತ್ತಲಿನ ತೋಟದಲ್ಲಿ ಸೇಬಿನ ಮರದ ಬುಡದಲ್ಲಿ ಮಲಗಿದ್ದಳು. ಮೈಗೆ ಆಲಿವ್ ಆಯಿಲ್ ಸವರಿಕೊಂಡು, ಬರಿಯೊಂದು ಚಡ್ಡಿ ಬ್ರಾಸಿಯರ್ಸ್ ಧರಿಸಿ, ಜಮಖಾನದ ಮೇಲೆ. ಜಗನ್ನಾಥನ ಶರ್ಟುಪ್ಯಾಂಟು ಹಾಕಿ ಈಸಿ ಚೇರಿನಲ್ಲಿ ನನ್ನ ಬ್ರಾಸಿಯರ್ರಿನ ಹುಕ್ ತೆಗಿ’ ಎಂದಳು. ಜಗನ್ನಾಥ ಎದ್ದು ಹೋಗಿ ತೆಗೆದ. ಏನೋ ಯೋಚಿಸುತ್ತ ಕೂತಿದ್ದ. ಏನು ಈಗ ಮರೆತಿದೆ. ಬೇಸಿಗೆಯ ಬಿಸಲು ಬಲು ಹಿತವಾಗಿತ್ತು. ಭಾನುವಾರದ ಮೌನ. ಇದ್ದಕ್ಕಿದ್ದಂತೆ ಮುಖ ಅಡಿಯಾಗಿ ಮಲಗಿದ ಮಾರ್ಗರೆಟ್ ಹೇಳಿದಳು. ಅವಳ ಧ್ವನಿಯಲ್ಲಿ ಕ್ರೌರ್ಯವಿರಲಿಲ್ಲ : ಜಗನ್‌ನಿನ್ನ ನೊಬಿಲಿಟಿಗಿಂತ ಚಂದರ್‌ನ ಅಸೂಯೆಯೇ ಹೆಚ್ಚು ನಿಜ ಅನ್ನಿಸುತ್ತೆ. One can’t really feel that you are there. ನಿನ್ನ ಅಪೂರ್ಣತೆಯ ಯಾತನಹೆ ನಾಟಕ ಅಂತ ಅನ್ನಿಸಬಹುದು; ಆದರೆ ಚಂದರ್ ಹೆಚ್ಚು ಸಫರ್ ಮಾಡ್ತಾನೆ. ನೋಡು ಅವನ ಕ್ರೌರ್ಯ ಇದೆಯಲ್ಲ, ಅದರಿಂದ ಅವ ನಿಜ ಆಗ್ತಾನೆ. Even his meanness… But you are ot enough of a man.

ನೆನಪಿದೆ : ಸೇಬಿನ ಗಿಡ. ಬಿಸಿಲು. ಹಸಿರು ಹುಲ್ಲು. ಬ್ರಾಸಿಯರ್ಸ್ ಕಟ್ಟಿದಷ್ಟು ಜಾಗ ಬಿಳುಚಿದ ಮಾರ್ಗರೆಟ್ಟಿನ ಬೆನ್ನು, ಮಾತಾಡಿದಳು. ಯಾವ ಭಾವನೆಯೂ ಇಲ್ಲದೆ. ನನ್ನ ಮುಖ ನೋಡಲೇ ಇಲ್ಲ. ನಾನು ಸಿಗರೇಟ್ ಹಚ್ಚಿದೆ. ಆ ಘಳಿತ ನಾನು ಯಾತನೆ ಪಟ್ಟಷ್ಟು ಎಂದೂ ಪಟ್ಟಿರಲಿಕ್ಕಿಲ್ಲ. ಹುಲ್ಲನ್ನು ನೋಡುತ್ತ ಕೂತೆ; ಬಿಸಿಲಿಗೆ ಹೊಳೆಯುತ್ತಿದ್ದ ಅವಳ ಬ್ರಾಸಿಯರ‍್ಸಿನ ಹುಕ್ಕನ್ನು ನೋಡುತ್ತಲೇ ಕೂತೆ; ಹೀಗೇ ನೋಡುತ್ತ ನನ್ನ ಪ್ರಾಣವನ್ನು ವಿಸರ್ಜಿಸಿಕೊಂಡು ಬಿಡಬೇಕೆನ್ನಿಸಿತು. ಆದರೆ ಮಾರ್ಗರೆಟ್ ತಲೆ ಎತ್ತಲಿಲ್ಲ. ಕೆದರಿದ ಕಪ್ಪು ಕೂದಲಿನ ಮೇಲೆ ಬೆನ್ನಿನ ಮೇಲೆ ಸೂರ್ಯನನ್ನು ಹೊದ್ದುಕೊಂಡು ಕೈಕಾಲುಗಳನ್ನು ಚೆಲ್ಲಿ ನಿರಂಬಳ ಮಲಗಿದ್ದಳು. ಅವಳ ಪಕ್ಕದಲ್ಲಿ ಕಯಯೂರಿ ಕೂತ ನನಗೆ ಅವಳು ಈ ಸ್ಥಿತಿಯಲ್ಲಿ ನನ್ನನ್ನು ನೋಡುವುದು ಬೇಡವೆನ್ನಿಸಿತು. ಎಷ್ಟೋ ಹೊತ್ತಾದ ಮೇಲೆ ಅವಳು ತಲೆ ಎತ್ತಿದಳು. ನನ್ನನ್ನು ನೋಡಿದಳು, ನನ್ನ ಕಣ್ಣಲ್ಲಾಗ ನೀರಿತ್ತೆ? ತುಟಿ ಬಾಯಿ ಗಂಟಲು ಒಣಗಿದ್ದುವು. ಅವಳು ಎದ್ದು ಬಂದಳು. ಮಾತಾಡದೆ ನನ್ನನ್ನು ಅಪ್ಪಿದಳು. ತಬ್ಬಿ ಹೊರಳಿದಳು. ನಾನು ಬೇಕೆನ್ನಲಿಲ್ಲ, ಬೇಡವೆನ್ನಲಿಲ್ಲ. ಮುತ್ತಿಟ್ಟು ನನ್ನ ತುಟಿಗಳನ್ನು ಒದ್ದೆ ಮಾಡಿದಳು; ನಾನು ಮೈಯೊಳಗೆ ಒಣಗಿ ಹೋಗಿದ್ದೆ. ಅಮಗಿಯನ್ನು ಬಿಚ್ಚಿ ಕತ್ತಿನ ಮೇಲೆ ಎದೆಯ ಮೇಲೆ ಮುತ್ತಿಟ್ಟಳು. ನನ್ನ ಕಣ್ಣುಗಳು ತೆರೆದೇ ಇದ್ದವು, ಮುತ್ತಿಡುತ್ತ ಮುಚ್ಚುವಂತೆ ಒತ್ತಾಯ ಮಾಡಿದಳು. ಮಾತುಗಳೆಲ್ಲ ಇಂಗಿದ್ದುವು. ಹೀಗೇ ಸೂರ್ಯ, ಹುಲ್ಲು, ಹೆಣ್ಣಿನ ಮೈಗಳಲ್ಲಿ ಏನನ್ನೂ ತಳ್ಳದೇ ಏನನ್ನೂ ಬೇಡದೆ ಬಹಳ ಹೊತ್ತು ಇದ್ದೆ.

ಮಾರನೆ ದಿನ ಪ್ರೊಫೆಸರ್ ಹತ್ತಿರ ಹೋಗಿ, ‘ಹತ್ತು ಪುಟಗಳಿಗಿಂತ ಹೆಚ್ಚು ನಾನು ಫಾರ್‌ಸ್ಟರ್‌ಮೇಲೆ ಹೇಳುವಂಥದ್ದು ಇಲ್ಲ. ನನ್ನದೊಂದು ಲೇಖನ Essays in criticismನಲ್ಲಿ ಅಚ್ಚಾಗ್ತಾ ಇದೆ. ಅಷ್ಟೇ ಸಾಕು. ಡಿಗ್ರಿ ಬೇಡ’ ಎಂದೆ. ಅವರು ನನ್ನನ್ನು ಕೂರಿಸಿದರು. ‘ನೀನು ಹೀಗೆ ಭಾವಿಸುವುದು ಅನವಶ್ಯಕ, ನನ್ನ ವಿದ್ಯಾರ್ಥಿಗಳಲ್ಲಿ ನೀನು ಒಬ್ಬ ಪ್ರತಿಭಾಶಾಲಿ’ ಎಂದರು. ನಾನು ‘ಥ್ಯಾಂಕ್ಸ್’ ಎಂದು ಹೊರಗೆ ಬಂದೆ. ಒಂದು ವಾರದೊಳಗೆ ಗಂಟು ಮುಟೆ ಕಟ್ಟಿ ಸೀದ ಭಾರತೀಪುರಕ್ಕೆ ಹೊರಟೆ.

* * *

ಎರಡು ಗಂಟೆಯಾಗಿತ್ತು. ಹೊರಗೆ ನಿಶ್ಯಬ್ದ. ಜಗನ್ನಾಥ ಮಾರ್ಗರೆಟ್ಟಿಗೆ ಬರೆಯುತ್ತಿದ್ದ ಕಾಗದವನ್ನು ಹರಿದುಹಾಕಿದ. ಇನ್ನಷ್ಟು ಗಟ್ಟಿಯಾದ ಮೇಲೆ ಬರೆಯುವುದು. ನಾನು ಗಟ್ಟಿಯಾಗಲು ಪಶುಪಕ್ಷಿಗಳಂತೆ ಬದುಕುವ ಹೊಲೆಯರು ಒಂದೇ ಒಂದು ಹೆಜ್ಜೆ ಒಳಗಿಡುವ ಧೈರ್ಯ ಮಾಡಬೇಕು. ಅವರ ಬಂಡಾಯದ ಮೂಲಕ ಮಾತ್ರ ನನ್ನ ಸಫಲತೆ. ಅವರ ಮನಸ್ಸಿನ ಜೊತೆ ಗುದ್ದಾಡಬೇಕು; ಜೊತೆಗೇ ಮಂಜುನಾಥನ ಜೊತೆ ಗುದ್ದಾಡಬೇಕು. ಈ ಮುಲಕ ಮಾತ್ರ ನನ್ನ ವ್ಯಕ್ತಿತ್ವಕ್ಕೆ ನಿಶ್ಚಿತ ರೂಪ ಬರುತ್ತದೆ. ಜಿಡ್ಡು ಕರಗುತ್ತದೆ. ಇಲ್ಲಿ ಹೀಗೆ ಸೃಷ್ಟಿಯನ್ನು ಸಾಧ್ಯ ಮಾಡಿಕೊಳ್ಳುತ್ತೇನೆ, ಮತ್ತೆ ನಿನಗೆ ಬರೆಯುತ್ತೇನೆ.

ದೀಪವನ್ನು ಆರಿಸಿ ಶಾಲು ಹೊದ್ದು ಮಲಗಿದ. ಚಿಕ್ಕಿ ಹಾಸಿಗೆಯಡಿಯಲ್ಲಿ ಅಡಗಿಸಿಟ್ಟ ಮಂಜುನಾಥ ಭಂಟ ಭೂತರಾಯನ ತಾಯಿತವನ್ನು ನೆನೆದು ನಕ್ಕು. ಚಳಿಯೆಂದು ಮೇಲೊಂದು ರಗ್ಗು ಹೊದ್ದ. ನಿದ್ದೆ ಬರಲಿಲ್ಲ. ಮತ್ತೆ ಯಾವಾಗ ನಿದ್ರೆ ಹತ್ತಿತೊ. ಬಹಳ ಕೆಟ್ಟ ಕನಸು ಬಿತ್ತು. ಭಾಗ್ಯಮ್ಮ ತಲೆಗೆದರಿ ಸಿಂಗಾರ ಹಿಡಿದು ನಿಂತಿದ್ದಾರೆ. ರಂಗಣ್ಣನಿಗೆ ಹೊಡೆಯುತ್ತಿದ್ದಾರೆ. ರಂಗಣ್ಣ ವಿಲವಿಲ ಒದ್ದಾಡುತ್ತಾನೆ. ಭಾಗ್ಯಮ್ಮ ಹೊಡೆಯುವುದನ್ನು ನಿಲ್ಲಿಸುವುದೇ ಇಲ್ಲ. ಶ್ರೀಪತಿರಾರು ನಿರ್ವಿಣ್ಣರಾಗಿ ಗರಬಡಿದವರಂತೆ ಕೂತಿದ್ದಾರೆ. ಭಾಗ್ಯಮ್ಮ ಚಚ್ಚುತ್ತ ಚಚ್ಚುತ್ತ ರಂಗಣ್ಣನಿಗೆ ಧ್ಯಾಸ ತಪ್ಪುತ್ತದೆ. ಆ ಮೇಲೆ ಅವಲಕ್ಕಿ ಕುಟ್ಟುವವರಂತೆ ನಿರ್ವಿಕಾರದಿಂದ ಭಾಗ್ಯಮ್ಮ ರಂಗಣ್ಣನನ್ನು ಚಚ್ಚುತ್ತ ಕೂರುತ್ತಾರೆ. ಹುಡುಗನಿಗೆ ಮೂಗಿಂದ ಬಾಯಿಯಿಂದ ರಕ್ತ ಬರುತ್ತದೆ. ಹಿಂಡಿಟ್ಟ ಬಟ್ಟೆಯನ್ನು ಎತ್ತುವಂತೆ ಭಾಗ್ಯಮ್ಮ ರಂಗಣ್ಣನನ್ನು ಎತ್ತಲು ಹೋಗುತ್ತಾರೆ. ರಂಗಣ್ಣನ ಕತ್ತು ಮುರಿದುಹೋಗಿದೆ. ಇದ್ದಕ್ಕಿದ್ದಂತೆ ಭಾಗ್ಯಮ್ಮ ಇವಕ್ಕೆಲ್ಲ ನೀವೇ ಕಾರಣವೆಂದು ಶ್ರೀಪತಿರಾಯರನ್ನು ಬಯ್ಯುತ್ತ ಅಳುತ್ತಾರೆ. ಇದನ್ನೆಲ್ಲ ನೋಡುತ್ತ ನಿಂತಿರುವ ತನ್ನ ಕೈಗಳಲ್ಲಿ ಸಿಂಗಾರವಿದೆ ಎಂದು ಆಶ್ಚರ್ಯವಾಗುತ್ತದೆ.

ಜಗನ್ನಾಥನಿಗೆ ಎಚ್ಚರವಾಯಿತು. ಮೈ ಬೆವತಿತ್ತು.

* * *