ಪರೀಕ್ಷಿತ ರಾಜನನ್ನೂ ಕಚ್ಚುವ ಕ್ರಿಮಿಯಾಗಿ ಮಂಜುನಾಥ ಪ್ರವೇಶಿಸುತ್ತಿದ್ದಾನೆ; ಅವನು ಸರ್ವಾಂತರ್ಯಾಮಿ; ವರ್ತಮಾನದಲ್ಲೇ ಶತಮಾನಗಳನ್ನು ಜಿಗಿಯಬಲ್ಲವನ ಹೊಳೆಯುವ ಶೂಗಳ ಕೆಳಗಿನ ನೆಲ ಕರಗುತ್ತಿದೆ; ಪ್ರಭುವೇ ವಾಸಿ; ಅವನ ಜೊತೆ ಹೋರಾಡಬಹುದು; ಪುರಾಣಿಕನಂತೆ ಅವನು ಸುಳ್ಳಲ್ಲ; ಮೋಸ ಮಾಡಲಿಕ್ಕಾದರೂ ಈ ವಾಸ್ತವತೆ ಜೊತೆ ತೊಡಗೋದು ಹೆಚ್ಚು ಆರೋಗ್ಯ ಎಂದು ರಾಯರಿಗೆ ಜಗನ್ನಾಥ ಹೇಳಿದ. ದೇವರ ಗರ್ಭದೊಳಗಿರುವವರು ನಿಷ್ಕ್ರಿಯರಾದಂತೆ ಅದರ ಹೊರಗಿರುವೆನೆಂದು ಭ್ರಮಿಸುವ ಪುರಾಣಿಕರೂ ನಿಷ್ಕ್ರಿಯರಾಗಿದ್ದಾರೆ; ಲಿಬರಲ್ ಆಗ್ತಾ ಆಗ್ತಾ ನೀವೂ ನಿಷ್ಕ್ರಿಯರಾಗಿದ್ದೀರಿ ರಾಯರೆ ಎಂದ. ಇಡೀ ಭಾರತೀಪುರ ಬದಲಾವಣೆಯಲ್ಲಿ ಹೊರಳಿಕೊಳ್ಳದ ಹೊರ್ತು ಇಲ್ಲಿ ಬದುಕು ಸೃಷ್ಟಿಶೀಲವಾಗಲಾರದು ಎಂದು ವಾದಿಸಿದ.

‘ಸರಿಯಯ್ಯ, ಏನತ್ಮಧ್ಯೆ ಮಕ್ಕಳನ್ನು ಹೆರಬೇಕು, ಬೆಳೆಸಬೇಕು, ರಾಮನವಮಿ, ಕೃಷ್ಣಾಷ್ಟಮಿ, ಗೌರೀಪೂಜೇಂತ ಸಡಗರ ಮಾಡಬೇಕು. ಅಂತೋಣಿ ಡಾಕ್ಟ್ರಿಂದ ಔಷಧಿ ತರಬೇಕು ಅಲ್ವ? ನಿನಗಿನ್ನೂ ಅಹಂಕಾರ, ಮಾಡ್ತೇನೆ ಎನ್ನೊ ಪೌರುಷದಲ್ಲಿ ನಂಬಿಕೆ. ಸರಿ. ನಿನ್ನಂಥೋರೂ ಅವಶ್ಯ.’

ಮಾತಿನ ಖುಷಿಗಾಗಿಯೇ ಮಾತಾಡುವ ರಾಯರ ಹತ್ತಿರ ಕೆಲವು ಸಾರಿ ವಾದ ಮಾಡಿ ಪ್ರಯೋಜನವಿಲ್ಲವೆನ್ನಿಸಿ ಜಗನ್ನಾಥ ಸುಮ್ಮನಾದ. ಸೀಬಿನಕೆರೆಯಲ್ಲಿ ನಡೆಯುವಾಗ ಹೇಳಿದರು.

‘ಏಕ್‌ದಂ ತೀರಾ ದೊಡ್ಡ ಕ್ರಾಂತಿಗೆ ಕೈಹಾಕಿದರೆ ಕೊನೇಲಿ ಪುರಾನಿಕರ ಹಾಗೆ ಆಗಿಬಿಡಬಹುದು.’

ಚೌಕಕ್ಕೆ ಬಂದಿದ್ದರು. ಸಂದಿಯಲ್ಲಿ ಕೊಡೆ ರಿಪೇರಿಯವ, ಅಂಗಡಿಯೊಂದರ ಚಿಟ್ಟೆಯ ಮೇಲೆ. ಜಗನ್ನಾಥ ಸಣ್ಣ ಹುಡುಗನಿದ್ದಾಗಲೂ ಅದೇ ಜಾಗದಲ್ಲಿ ಆ ಅಂಗಡಿ ಇತ್ತು. ಹರಿದ ಕೊಡೆ ಬಟ್ಟೆ ಹೊಲಿದು ತೇಪೆ ಹಾಕುವುದು, ಹೊಸ ತಂತಿ ಹಾಕಿ ಕಡ್ಡಿಗಳನ್ನು ಕಟ್ಟುವುದು, ಕುದುರೆಯನ್ನು ರಿಪೇರಿ ಮಾಡಿ ಕೊಡೆ ಕುಸಿಯದಂತೆ ಮಾಡುವುದು – ಇತ್ಯಾದಿ ಸೂಕ್ಷ್ಮಗಳನ್ನು ತಿಳಿದಿದ್ದ ಆ ಸ್ಥಳದ ಮಾಲಿಕನ ಹೆಸರು ರಂಗಪ್ಪ. ಕಪ್ಪು ಟೋಪಿ ಹಾಕಿ ಕನ್ನಡಕ ಧರಿಸಿ ಏಕಾಗ್ರನಾಗಿ ಕೂತಿರುತ್ತಿದ್ದ. ಈಗಲೂ ಒಂದು ಮಾಸಿದ ಕಪ್ಪು ಟೋಪಿ ಹಾಕಿ ಕೂತಿದ್ದಾನೆ. ಅವನು ಕೂತ ಜಾಗದಲ್ಲಿ ಕಂಬಕ್ಕೊಂದು ಕಟ್ಟಿದ ಬೋರ್ಡು. ಸೊಟ್ಟ ಅಕ್ಷರಗಳ ಆ ಬೋರ್ಡು ಮುಂಚಿನಿಂದಲೂ ಜಗನ್ನಾಥನಿಗೆ ತಮಾಷೆಯ ವಿಷಯ. ಯಾಕೆಂದರೆ ಬೋರ್ಡಿನಲ್ಲಿ ಹೀಗೆ ಬರೆದಿತ್ತು : ಕೊಡೆರಿ ಪೇರಿ ರಂಗಪ್ಪ. ಆಶ್ಚರ್ಯವೆಂದರೆ ಈಗಲೂ ಅದೇ ಬೋರ್ಡು ಹಾಗೇ ಇದೆ. ರಾಯರಿಗೆ ಬೋರ್ಡಿನ ವಿಷಯ ಹೇಳಿದ. ‘ಅವನ ಮಗಳೊಬ್ಬಳು ಹೈಸ್ಕೂಲಲ್ಲಿ ಎಸ್‌.ಎಸ್.ಎಲ್.ಸಿ. ಪಾಸ್ ಮಾಡಿದಳು. ಯಾರೋ ಲಾರಿ ಡ್ರೈವರ್ ಜೊತೆ ಬೊಂಬಾಯಿಗೆ ಓಡಿ ಹೋದಳು. ಈಗ ಪಾಪ ರಂಗಪ್ಪ ಒಂಟಿಯಾಗಿದಾನೆ’ ಎಂದರು ರಾಯರು.

ಇದ್ದಕ್ಕಿದ್ದಂತೆ ರಾಯರು ತಮ್ಮ ಯೋಚನೆಯ ತುದಿ ಮುಟ್ಟಿ ಹೇಳಿದರು :

‘ಹೀಗೆ ಎಲ್ಲರೂ ಅಂಡು ತೊಳೆಯೋದರಲ್ಲೆ ಕಾಲ ಕಳೆಯೋದು ನಿಜವಾದ ಕ್ರಿಯೆಯಲ್ಲ ಅಂತ ನಾನೂ ಒಪ್ಪುತ್ತೀನಿ, ಕಾಲುವೆ ತೋಡಿಸಬೇಕು. ತಮ್ಮ ಅಂಡು ತಾವೇ ತೊಳ್ಕೊಳ್ಳೋದನ್ನ ಜನರಿಗೆ ಕಲಿಸಿಕೊಡಬೇಕು.

ಜಗನ್ನಾಥ ನಕ್ಕ. ಸೀಬಿನಕೆರೆಯಲ್ಲಿ ನಡೆದು ಬರುವಾಗ ನೆನಪಾಗಿತ್ತು: ‘ಕಮಲ ಹೇಗಿದಾಳೆ?’ ಅಂತ ಕೇಳಿದ. ‘ಯಾರು ಸೀಬಿನಕೆರೆ ಕಮಲಾನ? ನಿನ್ನ ಜೊತೆ ಓತ್ತಿದ್ದವಳು? ಬೊಂಬಾಯಿಯಲ್ಲಿದಾಳಂತೆ’ ರಾಯರು ಹೇಳಿದರು. ‘ನಿಮ್ಮನೇಗೇ ಊಟಕ್ಕೆ ಬರ್ತೀನಿ-ನಡಿ. ಅಷ್ಟು ದಿನದಿಂದ ನಿಮ್ಮ ಚಿಕ್ಕಿ ಕರೀತಾನೆ ಇದಾರೆ’ ಅಂದರು. ‘ಅಲ್ಲ ರಾಯರೆ. ಪುರಾಣಿಕರನ್ನ ನೋಡಿ ನನಗೆಷ್ಟು ಭಯವಾಯ್ತೂಂದರೆ-ಪ್ರಾಯಶಃ ಅವರ ಹಾಗೆ ನನಗೂ ಇದ್ದುಬಿಡೋಕೆ ಸಾಧ್ಯ ಅನ್ನೋ ಕಾರಣಕ್ಕೋ ಏನೋ-ಅಂತೂ ನಮ್ಮ ವರ್ಗದವರಿಗೆಲ್ಲ ಹೀಗೆ ಶತಮಾನಗಳನ್ನ ಜಿಗಿದುಬಿಡೋದು ಸಾಧ್ಯ. ಈ ಜನಕ್ಕೆ ಮಾತ್ರ ಅದು ಸಾಧ್ಯವೇ ಅಲ್ಲ’ ಎಂದು ಸಡಗರದಿಂದ ಪೇಟೆಯಲ್ಲಿ ಓಡಾಡುತ್ತಿದ್ದ ಶೂದ್ರ ಹೆಂಗಸರನ್ನ ತೋರಿಸಿದ. ‘ನೀನು ಹೇಳೋದು ನಿಜ’ ಎಂದರು ರಾಯರು. ‘ಅದಕ್ಕೇ ಮಂಜುನಾಥನ ಜೊತೆ ಗುದ್ದಾಡೋದು ಸರಿ ಅನ್ನಿಸುತ್ತೆ’ ರಾಯರನ್ನು ಒಪ್ಪಿಸಲು ಜಗನ್ನಾಥ ತೀವ್ರವಾದ ಧ್ವನಿಯಲ್ಲಿ ವಾದಿಸಿದ. ‘ಗಾಳಿ ಜೊತೆ ಗುದ್ದಾಡಿದ ಹಾಗೇ’ ಎಂದು ರಾಯರು ಕಣ್ಣು ಮಿಟುಕಿಸಿದರು. ತನ್ನೊಳಗೆ ಅನ್ನಿಸುವುದೆಲ್ಲ ರಾಯರಿಗೆ ತಿಳಿಯುವುದು ಸಾಧ್ಯವಿಲ್ಲವೆನ್ನಿಸಿ ಜಗನ್ನಾಥ ಪೆಚ್ಚಾದ. ಇವರ ಜೊತೆ ವಾದಿಸುವುದಕ್ಕಿಂತ ಹೊಲೆಯರ ಜೊತೆ ಹೆಚ್ಚು ಕಾಲ ಕಳೆಯುವುದೇ ಸರಿಯೆನ್ನಿಸಿತು.

ಕಮಲಳನ್ನು ಮತ್ತೆ ನೆನೆದ. ಪ್ರಾಯಶಃ ಈಗ ದಪ್ಪವಾಗಿದ್ದಾಳೆ. ಇದ್ದಕ್ಕಿದ್ದಂತೆ ಸುಬ್ರಾಯ ಅಡಿಗರ ನೆನಪಾಯಿತು – ನೋಡಿ ಬಹಳ ದಿನವಾಯಿತು. ನೋಡಬೇಕು. ಸುದ್ದಿ ಕೇಳಿ ಅವರು ಖಂಡಿತ ಬರುತ್ತಾರೆ. ಬಾಲ್ಯದ ಊರು, ಬಾಲ್ಯದಿಂದ ತಿಳಿದ ಜನ, ಜೊತೆಗೆ ಬೆಳೆದ ದೇವರು, ನನ್ನ ಪಾಶ್ಚಾತ್ಯ ವಿಚಾರದಿಂದ ಪ್ರಭಾವಿತವಾದ ಪ್ರಜ್ಞೆ. ನಾಗಮಣಿ, ಕಾವೇರಿ, ಮಾರ್ಗರೆಟ್, ಹೊಲೆಯರ ಹುಡುಗರು, ಈ ರಾಯರು, ಇನ್ನೊಬ್ಬರ ಕಣ್ಣಿನ ಕನ್ನಡಿಯಲ್ಲಿ ಉಬ್ಬುವ ನನ್ನ ದೌರ್ಬಲ್ಯ, ಇಲ್ಲಿ ಊರವ, ಕುಡಿಯೊಡೆಯುವ ಹೂವಾಗುವ ಹಂಬಲ-ಎಲ್ಲ ಮತ್ತೆ ಸಿಕ್ಕು ಸಿಕ್ಕಾಗಿ ಕಾಡಿತು. ಲೋಳೆ  ಲೋಳೆಯಾಗಿ ಬಿಡುತ್ತದೆ. ಪುನಃ ಪುನಃ ಕ್ರಿಯೆಯಲ್ಲೆ ಸರಳವಾಗಬೇಕು; ಗಟ್ಟಿಯಾಗಬೇಕು; ಬೇರೆ ಮಾರ್ಗವಿಲ್. ‘Margaret I am desperate, ನಾಗಮಣಿ ಸತ್ತಳಲ್ಲ. ಆದ್ದರಿಂದ ಏನು ಮಾಡಿದರೂ ಸರಿ. ಮಾಡದೇ ಕೂತಿರೋದು ಸಾಧ್ಯವೇ ಇಲ್ಲ. ಹೊಲೆಯರು ನನ್ನನ್ನು ಮುಟ್ಟಲು ತಯಾರಾಗುವರೆ-ಅದೇ ಬಹಳ ಮುಖ್ಯ ಪ್ರಶ್ನೆ.

ಮನೆಗೆ ಬರುವಷ್ಟರಲ್ಲೇ ಮೈಗೆ ಚೆನ್ನಾಗಿ ವ್ಯಾಯಾಮವಾಗಿ ಹಸಿವಾಗಿತ್ತು. ಒಂದು ಘಂಟೆಗೆ ಊಟ. ಇನ್ನೂ ಹನ್ನೆರಡು. ಚಿಕ್ಕಿ ನಡುಮನೆಯಲ್ಲಿ ಕಾದಿದ್ದರು. ಅವರ ಕಣ್ಣುಗಳು ಅತ್ತು ಬಾತಿದ್ದವು. ರಾಯರು ಜೊತೆಗಿದ್ದುದರಿಂದ ಧೈರ್ಯ ಮಾಡಿ ‘ಏನು ವಿಷಯ ಚಿಕ್ಕಿ?’ ಎಂದ.

ಚಿಕ್ಕಿ ಬಹಳ ಕಷ್ಟದಿಂದ ಉತ್ತರಿಸಿದರು,

‘ಒಬ್ಬರೂ ಇವತ್ತು ಊಟಕ್ಕೆ ಬರೋ ಹಾಗೆ ಕಾಣಲಿಲ್ಲ’.

ತನ್ನ ಮನೆಯಲ್ಲಿ ಪ್ರಾಯಶಃ ಯಾವತ್ತೂ ಹೀಗಾದ್ದಿಲ್ಲ. ಇಪ್ಪತ್ತು ಜನರಾದರೂ ನಿತ್ಯ ಊಟಕ್ಕಿರಲೇಬೇಕು. ಆದರೆ ಇವತ್ತು ಸುದ್ದಿ ತಿಳಿದ ಮೇಲೆ ಒಂದು ನರಹುಳವೂ ಮನೆಯ ಕಡೆ ಸುಳಿದಿಲ್ಲ. ಜಗನ್ನಾಥನಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ದಿಗಿಲಾಯಿತು. ಸಂಕಟವಾಯಿತು.

‘ರಾಯರು ಇವತ್ತು ಊಟಕ್ಕಿರುತ್ತಾರೆ’ ಎಂದ. ಚಿಕ್ಕಿಯ ಮುಖ ಅರಳಿದ್ದು ನೋಡಿ ಸಂತೋಷವಾಯಿತು. ಚಿಕ್ಕಿಗೆ ಧೈರ್ಯ ಹೇಳಿ ಎನ್ನುವಂತೆ ಕಣ್ಣಲ್ಲೇ ಸೂಚಿಸಿ ಬೇರೇನೋ ಕೆಲಸವಿದ್ದಂತೆ ನಟಿಸಿ ಅಂಗಳಕ್ಕೆ ಬಂದ.

ಖುಷಿಯಾಯಿತು : ತಲೆಯ ಮೇಲೆ ಒಣಗಿದ ಬಾಳೆಲೆ ಕಟ್ಟನ್ನು ಹೊತ್ತು, ಎರಡು ಕೈಗಳಿಗೂ ದೊನ್ನೆಗಳ ಕಟ್ಟನ್ನು ನೇತುಹಾಕಿಕೊಂಡು ಬರಿ ಮೈಯಲ್ಲಿ ಸುಬ್ರಾಯ ಅಡಿಗರು ನಿಂತಿದ್ದರು. ಅವರ ಮುಖ ಬೆವತಿತ್ತು. ಬೆನ್ನಿನ ಮೇಲೆ ಕತ್ತಿನ ಮೇಲೆ ಅವರು ಮಂಜುನಾಥನ ವಿಭೂತಿ ಎಂದು ನಗೆಯಾಡುತ್ತಿದ್ದ ಸಿಬ್ಬ ಹಿಂದಿನ ಸಾರಿ ನೊಡಿದ್ದಕ್ಕಿಂತ ಹೆಚ್ಚು ಹರಡಿತ್ತು. ವಯಸ್ಸಾದರೂ ಗಟ್ಟಿಮುಟ್ಟಾದ ಹಲ್ಲುಗಳು. ಸಂತೋಷದಿಂದ ಜಗನ್ನಾಥ ಮಾತಾಡದೆ ನಿಂತುಬಿಟ್ಟ.

‘ಇವುಗಳನ್ನು ದೇವಸ್ಥಾನಕ್ಕೆ ಕೊಟ್ಟು ಬರ್ತೀನಿ ಜಗಣ್ಣ. ಊಟಕ್ಕೆ ಬರ್ತೀನಿಂತ ಚಿಕ್ಕೀಗೆ ಹೇಳು. ಇನ್ನ ಹತ್ರಾನೂ ಬಹಳ ಮಾತಾಡೋದಿದೆ.’

ಅಡಿಗರ ಕಣ್ಣುಗಳು ಪ್ರಸನ್ನವಾಗಿದ್ದುವು. ಚೌಕದ ಮುಲಕ ಬಂದಿರುವ ಅವರಿಗೆ ಸುದ್ದಿ ಖಂಡಿತ ತಿಳಿದಿರಬೇಕು. ಆದರೂ ಅವರಿಗೆ ಭಯವಾಗಿರುವಂತೆ ಕಾಣುವುದಿಲ್ಲ. ಜಗನ್ನಾಥ ‘ಬನ್ನಿ, ಅಗತ್ಯ ಮಾತಾಡೋಣ’ ಎಂದು ಒಳಗೆ ಹೋಗಿ ಚಿಕ್ಕಿಗೆ ಹೇಳಿದ. ರಾಯರ ಜೊತೆ ಆಪ್ತಾಲೋಚನೆಯಲ್ಲಿದ್ದ ಚಿಕ್ಕಿ ಅಡಿಗರು ಊಟಕ್ಕೆ ಬರುವರೆಂದು ನಂಬಲಿಲ್ಲ. ‘ಅವರಿಗೆ ಗೊತ್ತು. ಆದರೂ ಬರ‍್ತೇನೆ ಅಂದ್ರು’ ಎಂದು ಜಗನ್ನಾಥ ಹೇಳಿದ. ಚಿಕ್ಕಿ ಲಗುಬಗೆಯಿಂದ ಅಡಿಗೆ ಮನೆಗೆ ಹೋದರು. ಜಗನ್ನಾಥ ರಾಯರ ಜೊತೆ ಮಹಡಿ ಹತ್ತಿದ. ನಿಮಗೊಂದು ಕಥೆ ಹೇಳ್ತೇನೆ ಕೇಳಿ ಎಂದು ಕಾಫಿ ಕುಡಿಯುತ್ತ ಶುರು ಮಾಡಿದ. ಚಿಕ್ಕಿಯ ಕಣ್ಣೆದುರು ಥಟ್ಟನೇ ಅವನಿಗೆ ತಾನು ತಪ್ಪಿತಸ್ಥನೆಂಬ ಭಾವನೆ ಹುಟ್ಟಿಬಿಟ್ಟಿದ್ದರಿಂದ ಮಾತಾಡಿ ಎಲ್ಲವನ್ನೂ ಮರೆಯಬೇಕೆನ್ನಿಸಿತ್ತು.