ಅನಂತಕೃಷ್ಣ ನನಗಿಂತ ಚಿಕ್ಕವ. ಅಷ್ಟೇನೂ ಅಲ್ಲ – ನಾಲ್ಕೈದು ವರ್ಷ ಇರಬಹುದು. ನನ್ನ ಹತ್ರ ಅವ ಯಾವತ್ತೂ ಗುಟ್ಟು ಮಾಡಲ್ಲ. ಅವನ ಜೀವನದ ಒಂದು ದುರಂತ ಕತೆ ಹೇಳ್ತೀನಿ ಕೇಳು. ನಮ್ಮಂಥ ಆದರ್ಶವಾದಿಗಳಿಗೆ ಅದರಲ್ಲೊಂದು ಪಾಠವಿದೆ.

ಅನಂತಕೃಷ್ಣ ತುಂಬ ಚಿಕ್ಕವನಾಗಿದ್ದಾಗಲೇ ಸ್ವಾತಂತ್ರ್ಯ ಚಳುವಳೀಗೆ ಸೇರಿಕೊಂಡು ಇಂಟರ್‌ಮೀಡಿಯೆಟ್ ಓದ್ತ ಇದ್ದವ್ನು ಜೈಲಿಗೆ ಹೋದ. ಈ ವಿದ್ಯಾಭ್ಯಾಸ ನಮ್ಮನ್ನ ಗುಲಾಮಗಿರಿಗೆ ತಯಾರು ಮಾಡುತ್ತೆ, ನಿಜವಾದ ವಿದ್ಯಾರ್ಜನೆ ಕಾಲೇಜಲ್ಲಿ ಸಾಧ್ಯವಿಲ್ಲ ಅಂತ ಸಾವಿರಾರು ಯುವಕರಿಗೆ ಅನ್ನಿಸಿದ ಹಾಗೆ ಅವನಿಗೂ ಅನ್ನಿಸಿತ್ತು. ಸಾಹಿತ್ಯದಲ್ಲಿ ತುಂಬ ಒಳ್ಳೆ ವಿದ್ಯಾರ್ಥಿ. ಇವತ್ತಿಗೂ ಎಷ್ಟು ಚೆನ್ನಾಗಿ ಅವ ಬರೀತಾನೆ ಮಾತಾಡ್ತಾನೆ ಅಂತೀಯ? ಮನೇವ್ರು ಕಂದಾಚಾರದ ಜನ. ಅಪ್ಪ ಶಿರಸ್ತೇದಾರ. ಅನಂತಕೃಷ್ಣನ ತಾಯಿ ಸತ್ತಮೇಲೆ ಎರಡನೇ ಸಂಬಂಧ ಮಾಡಿಕೊಂಡಿದ್ದ. ಚಿಕ್ಕ ತಾಯಿ ಪರಮ ಕ್ರೂರಿ.

ಸರ್ಕಾರಾನ್ನ ನಿಂದಿಸೋ ಮಗ ಮನೇಲಿರೋದು ನೌಕರಿ ಮಡೋ ಅಪ್ಪನಿಗೆ ಬೇಡಿತ್ತು. ಬೆಳೀತಿದ್ದ ಹೆಣ್ಣು ಮಕ್ಕಳಿದ್ದ ಮನೆಯಾದ್ದರಿಂದ ಚಿಕ್ಕತಾಯಿಗೆ ಜಾತಿಯಲ್ಲದ ಜಾತೀಲಿ ಊಟ ಮಾಡೋ ಮಗನೊಬ್ಬನನ್ನ ಮನೇಲಿ ಇರಿಸಿಕೊಂಡು ಊರೆಲ್ಲ ಮಾತಾಡೋದು ಬೇಡಿತ್ತು. ಒಟ್ಟಿನಲ್ಲಿ ಪ್ರೀತಿ ಮಮತೆ ಕಾಣದ ಸುಡುಗಾಡು ಮನೆ. ಹೀಗಿರೋವಾಗ ಸ್ವಾತಂತ್ರ್ಯ ಚಳುವಳೀನೂ ಪ್ರಾಯಶಃ ಒಂದು ನೆವವಾಗಿರಬೇಕು – ಅನಂತಕೃಷ್ಣನ ಹಾಗೆ ಬಹಳ ಜನ ಹುಡುಗರಿಗೆ. ಮಗ ಮನೆ ಬಿಟ್ಟ.

ಸ್ವಾತಂತ್ರ್ಯ ಚಳುವಳಿಯ ಆ ದಿನಗಳಲ್ಲಿ ಹೊಟ್ಟೆಪಾಡು ಹೊರೆಯೋದು ಅಂಥದ್ದೊಂದು ಸಮಸ್ಯೆಯಾಗಿರಲಿಲ್ಲ. ಊರಿಂದ ಊರಿಗೆ ಪ್ರಯಾಣ. ಠಿಕಾಣಿ ಬಿಟ್ಟಲ್ಲಿ ಊಟ. ಭಾಷಣ, ಭಾಷಣ ಅಂದ್ರೆ ಎಂಥ ಭಾಷಣ ಅನಂತಕೃಷ್ಣಂದು!

ಹೀಗಾಗಿ ಕಾಂಗ್ರೆಸ್ ನಾಯಕರಿಗೆಲ್ಲ ಅನಂತಕೃಷ್ಣ ಪ್ರಿಯನಾದ ವ್ಯಕ್ತಿಯಾದ. ನಿದ್ದೆಯಿಂದ ಎಬ್ಬಿಸಿ ಭಾಷಣ ಮಾಡೋ ಅಂದ್ರೆ ನಿರರ್ಗಳವಾಗಿ ಶುರುಮಾಡಿಬಿಡ್ತಿದ್ದ. ಅನಂತಕೃಷ್ಣ ಈ ಅಮಲಿನಲ್ಲಿ ಮೈಮರೆತು ದೇಶಾದ್ಯಂತ ಓಡಾಡಿದ. ಮನೆ ಸಂಪರ್ಕ ಸಂಪೂರ್ಣ ಕಳಕೊಂಡ. ಅವನೊಬ್ಬ ಖಾಸಗಿ ಮನುಷ್ಯ ಅನ್ನೋದೇ ಪತ್ತೆಗೆ ಸಿಗದ ಹಾಗೆ ಸದಾ ಜನರ ಮಧ್ಯೆ ಬದುಕಿದ. ಮಾತಿಗಾಗಿ ಜನ ತನ್ನ ಹತ್ರ ಬರ್ತಾರೆ. ತನ್ನನ್ನ ಅನುಸರಿಸ್ತಾರೆ, ಹೊಗಳ್ತಾರೆ ಅನ್ನೋದನ್ನ ತಿಳಿದು ಯಾರು ಕರದ್ರೆ ಅವರಿಗೆ ಪ್ರಚಾರ ಮಾಡೋ ಯಂತ್ರವಾದ. ಪುಷ್ಕಳವಾದ ಪದಗುಚ್ಛಗಳಲ್ಲದೆ ಅವನೊಳ್ಗೆ ಇನ್ನೇನೂ ಇಲ್ವೇನೋ ಅಂತ ನನಗೆ ಅನೇಕ ಸಾರಿ ಅನ್ಸಿದ್ದುಂಟು.

ಅನಂತಕೃಷ್ಣ ನೋಡಲು ಆಕರ್ಷಕ ವ್ಯಕ್ತಿ. ತಾನಾಡ್ತಿದ್ದ ಎಲ್ಲ ಮಾತುಗಳನ್ನೂ ನಂಬುತ್ತಿದ್ದ ಆತ ಅದರ್ಶದ ಅಮಲಿನಲ್ಲಿ ಒಮ್ಮೆ ಗಾಂಧೀಜಿ ಆಶ್ರಮಕ್ಕೆ ಹೋಗಿದ್ದ. ಅಲ್ಲಿ ಗಾಂಧೀಜಿಗೆ ಪ್ರಿಯಶಿಷ್ಯನಾದ. ಮಲಗಿದಾಗ ಅವರಿಗೆ ಬೀಸಣಿಗೆ ಬೀಸೋದು, ಜೊತೆಗೆ ವಾಕ್ ಹೋಗೋದು, ‘ಹರಿಜನ’ದಲ್ಲಿ ಅವರು ಬರೆದದ್ದನ್ನು ಕನ್ನಡಕ್ಕೆ ಮಾಡೋದು; ಅನಂತಕೃಷ್ಣ ಏನೇ ಮಾಡಲಿ ಅದರಲ್ಲೊಂದು ಸ್ಟೈಲ್ ಇರ್ತಿತ್ತು. ಗಾಂಧಿ ಆಶ್ರಮದಲ್ಲಿದ್ದಾಗ ಅನಂತಕೃಷ್ಣ ಬಾವಿಗೆ ಬಿದ್ದದ್ದು.

ಆಶ್ರಮದಲ್ಲೊಂದು ನಾಯಿಡು ಜಾತಿ ಹುಡುಗಿ – ಅನಾಥ ಹುಡುಗಿ. ಕಟ್ಟುನಿಟ್ಟಾಗಿ ಬೆಳೆದವಳು. ಅನಂತಕೃಷ್ಣನಿಗೂ ಅವಳಿಗೂ ವಾಲಂಟಿಯರ್‌ಕೆಲಸ ಮಾಡ್ತ ಪರಿಚಯವಾಯ್ತು. ಪರಿಚಯ ಸ್ನೇಹವಾಯ್ತು. ತನ್ನ ಆದರ್ಶವಾದವನ್ನ ಜಗತ್ತಿಗೆ ಪ್ರೂವ್ ಮಾಡಿ ತೋರಿಸಲಿಕ್ಕೊಂದು ಛಾನ್ಸ್ ಬೇಕೂಂತ ಅನಂತಕೃಷ್ಣ ಕಾದಿದ್ದ. ಸ್ವಯಂಸೇವಕಿಯಾದ ತನಗೆ ಒಬ್ಬ ಸ್ವಯಂ ಸೇವಕ ಜೊತೇಗಿದ್ರೆ ಒಳ್ಳೇದಲ್ವೆ ಅಂತ ಅವಳು ಕಾದಿದ್ಳು. ಅಂತರ್ಜಾತೀಯ ವಿವಾಹಾನ್ನೇ ಮಾಡಿಕೋಬೇಕೂಂತ ಹಠತೊಟ್ಟಿದ್ದ ಅನಂತಕೃಷ್ಣ ಅವಳನ್ನ ಮದುವೆಯಾಗ್ತೀಯ ಅಂತ ಕೇಳ್ದ. ಮಹಾತ್ಮಜಿಯನ್ನು ಕೇಳೋಣ ಅಂತ ಅವಳು ಹೇಳಿದ್ಳು. ಗಾಂಧೀಜಿ ವಿಷಯ ಗೊತ್ತಲ್ಲ? ಕಾಮಕ್ಕಾಗಿ ಮದುವೆ ಆಗಬಾರ್ದು, ಮಗುವಿಗಾಗಿ ಮಾತ್ರ ಹೆಂಡತೀನ್ನ ಕೂಡಬೇಕು, ಇಬ್ಬರೂ ಒಟ್ಟಾಗಿ ಬ್ರಹ್ಮಚರ್ಯ ಪಾಲಿಸಬೇಕು ಇತ್ಯಾದಿ ಬೋಧಿಸಿ ಅನಂತಕೃಷ್ಣನಿಗೂ ಅವಳಿಗೂ ಒಂದು ದಿನ ಸಾಮೂಹಿಕ ಮದುವೆ ಜೊತೆ ಲಗ್ನ ಅಂತ ಗಾಂಧೀಜಿ ನಿಶ್ಚಯ ಮಾಡಿದ್ರು.

ಇವತ್ತು ಬೆಳಿಗ್ಗೆ ಮದುವೆಯಾಗಬೇಕು. ಮದುವೆಗೆ ಒಂದು ಘಂಟೆ ಮುಂಚೆ ಒಂದು ಮರದ ಕೆಳಗೆ ಅನಂತಕೃಷ್ಣನೂ ಆ ನಾಯ್ಡು ಹುಡುಗೀನೂ ನಿಂತಿದಾರೆ. ಅವಳು ಮರಕ್ಕೆ ಒರಗಿ ನಿಂತು ಇಬ್ಬರೂ ಒಟ್ಟಾಗಿ ಹೇಗೆ ದೇಶಸೇವೆ ಮಾಡಬೇಕು ಅನ್ನೋದನ್ನ ವಿವರಿಸ್ತಿದಾಳೆ. ಈ ತನಕ ಅವಳು ಅವನ್ನ ಮುಟ್ಟಿಲ್ಲ. ಅವನು ಅವಳನ್ನ ಮುಟ್ಟಿಲ್ಲ. ಬೇಕೂಂತ ಅನ್ಸಿದ್ದೂ ಇಲ್ಲ. ಹೀಗೆ ಮಾತಾಡಿದ್ದದ್ದೇ ಹೊರ್ತು ಇನ್ನು ಏನೂ ಇಬ್ಬರ ನಡುವೆ ಜರುಗಿದ್ದಿಲ್ಲ.

ಇನ್ನೇನು ಮದುವೆ ಮುಹೂರ್ತ ಸಮೀಪಿಸ್ತ ಇದೆ. ಇಬ್ಬರೂ ಒರಟೊರಟಾದ ಹೊಸ ಖಾದಿಬಟ್ಟೆ ತೊಟ್ಟು ನಿಂತಿದಾರೆ – ಖೈದಿಗಳ ಹಾಗೆ. ಅವಳು ತನ್ನ ಚಪ್ಪಟೆ ಎದೇನ್ನ ಕುಪ್ಪಸದಿಂದ ಬಿದಿಗು ಇನ್ನಷ್ಟು ಚಪ್ಪಟೆ ಮಾಡಿಕೊಂಡಿದಾಳೆ. ಅನಂತಕೃಷ್ಣ ಮುಖಾನ್ನ ಬಹಳ ಗಂಭೀರಮಾಡಿಕೊಂಡು ಅವಳ ಮಾತು ಕೇಳ್ತ ನಿಂತಿದಾನೆ. ಯಾವ ಮಾತೂ ಹೊಸತಲ್ಲ ; ಯಾಕೇಂದ್ರೆ ಅವನೇ ಈ ತನಕ ಮಾತಾಡ್ತ ಬಂದ ಶಬ್ದಗಳು ಅವು.

ಆಯ್ತ? ಅನಂತಕೃಷ್ಣ ಒಂದು ಕಾಲದಲ್ಲಿ ಬಹಳ ರಸಿಕ. ಮುದ್ದಣ ಮನೋರಮ ಸಂವಾದ, ಕಾಳಿದಾಸನ ಶಾಕುಂತಲ ಕಂಠಪಾಠ ಮಾಡಿದ್ದವ. ಹುಡುಗಿ ಆಡ್ತ ಇದ್ದ ಗಂಭೀರವಾದ ಮಾತು ಕೇಳ್ತ ಕೇಳ್ತ ಅವನ ಗಮನವೆಲ್ಲ ಅವಳ ತುಸು ಉಬ್ಬಿದ ಹಲ್ಲು, ಉದ್ದ ಮೂಗು, ಚಪ್ಪಟೆ ಎದೆ, ಸಣ್ಣ ಸಣ್ಣ ಆನೆಕಣ್ಣುಗಳು, ಕಿರಿದಾದ ಹಣೆಗಳ ಮೇಲೆ ಹೋಯ್ತು. ಅವಳು ಆಡ್ತಾನೆ ಆಡ್ತಾನೇ ಇದ್ದ ಚಿರಪರಿಚಿತ ಮಾತುಗಳೆಲ್ಲ ಜೇನ್ನೊಣಗಳ ಹಾಗೆ ಝೇಂಕರಿಸಲಿಕ್ಕೆ ಪ್ರಾರಂಭಿಸಿದುವು. ಇನ್ನೆಷ್ಟೋ ವರ್ಷಗಳ ತನಕ ಇದೇ ಹಣೆ ಇದೇ ಹಲ್ಲು ಇದೇ ಮೂಗು ಇದೇ ಬಾಯಿ ಇದೇ ಭಂಗಿಯಲ್ಲಿ ಇದೇ ಮಾತುಗಳನ್ನು ಆಡ್ತಾನೇ ಇರ್ತಾವಲ್ಲ ಅಂತ ಅನಂತಕೃಷ್ಣನಿಗೆ ಭಯವಾಯ್ತು. ಇವಳು ಕುರೂಪಿ, ಇವಳನ್ನ ಮದುವೆಯಾಗೋದು ಸಾಧ್ಯವೇ ಇಲ್ಲ ಅಂತ ಮನಸ್ಸು ಚೀರಿತು. ಅವಳ ಜೊತೆ ಸಂಗವನ್ನು ಕಲ್ಪಿಸಿಕೊಂಡು ಮೈ ಹೇಸಿಗೆಯಿಂದ ಕಂಪಿಸ್ತು. ಇಲ್ಲಿಂದ ಈ ಕ್ಷಣ ಓಡಿ ಬಚಾವಾಗಬೇಕು ಅನ್ನಿಸ್ತು. ಆದ್ರೆ ಕಾಲು ಕದಲದೆ ನಿಂತಿತ್ತು. ಕಣ್ಣುಗಳು ಅವಳ ಹಣೆ ಮೂಗು ಹಲ್ಲುಗಳಲ್ಲಿ ಕೀಳಲಾರದೆ ನೆಟ್ಟಿದ್ದುವು. ಓಡಿಹೋಗಬೇಕು ಎನ್ನೋ ಆಸೆಯಷ್ಟೆ ಪ್ರಬಲವಾಗಿ ನಾನೂ ಏನೂ ಮಾಡಲಾರೆ ಎನ್ನೋ ನಿಸ್ಸಹಾಯಕತೇನೂ ಏರ‍್ತ ಹೋಯ್ತು.

‘ಏನು ಹೀಗೆ ಮಂಕಾಗಿ ನೋಡ್ತಾ ಇದೀರಿ?’ ಎಂದು ಅವಳು ಮಾತು ನಿಲ್ಲಿಸಿ ಗದರಿಸಿದಳು. ಅನಂತಕೃಷ್ಣ ಬಿಳಿಚಿಕೊಂಡ ಮುಖಾನ್ನ ಅಲ್ಲಾಡಿಸಿದ. ಮಾತಾಡಲು ಉಗುಳು ನುಂಗು ಪ್ರಯತ್ನಿಸಿದ. ‘ಶ್ರೀರಂಗಪಟ್ಟಣದಲ್ಲಿ ಒಂದು ಆಶ್ರಮ ಸ್ಥಾಪಿಸಬೇಕು. ಅನಾಥ ಮಕ್ಕಳನ್ನ ಸಾಕಬೇಕು….’ ಅವಳು ಮಾತಾಡ್ತಾನೇ ಇದ್ದಳು.

ಮದುವೆಯಾಯ್ತು, ಮಗುವಾಯ್ತು. ಅನಂತಕೃಷ್ಣ ಒಗ್ಗಿ ಕೊರಗಿ ಕುಗ್ಗಿದ. ಈಗಲೂ ಹೇಳ್ತಾನೆ – ‘ನೋಡೋ ಶ್ರೀಪತಿ, ನನ್ನ ಇಡೀ ಜೀವನದಲ್ಲಿ ನನಗೆ ಅನ್ನಿಸಿದ ನಿಜವಾದ ಒಂದು ಭಾವನೆ ಅಂದ್ರೆ ಅವಳು ಕುರೂಪಿ ಅನ್ನೋದು. ಆದರೆ ನಾನಂಟಿಕೊಂಡ ತತ್ವಾನ್ನ ಮೀರಲಾರದೆ ಹೋದ’.

ಹೇಗೆ ಅವನ ಎಲ್ಲ ಭಾವನೆಗಳೂ ಕೃತಕವಾಗ್ತಾ ಹೋದವು. ಅವನಿಗೆ ಖಾರಾಂದ್ರೆ ಇಷ್ಟ; ಪುಳಿಯೋಗರೆ ಬಿಸಿಬೇಳೆಬಾತ್ ಅಂದ್ರೆ ಪ್ರಾಣ. ಆದರೆ ಅವಳು ಅಡಿಗೇಗೆ ಖಾರಹಾಕಲ್ಲ. ತರಕಾರಿ ಬೇಯ್ಸಿಟ್ಟು ತಿನ್ನಿ ಅಂತಾಳೆ. ಕಾಫಿ ಟೀ ಮನೇಲಿ ಮಾಡಲ್ಲ. ಹೇಗೋ ಒಂದು ವರ್ಷ ಅನಂತಕೃಷ್ಣ ಸಹಿಸಿಕೊಂಡು ಹೆಂಡ್ತಿ ಹೇಳಿದ ಹಾಗೆ ಕೇಳಿಕೊಂಡಿದ್ದ. ಆಮೇಲಿಂದ ಕದ್ದು ಮಸಾಲೆ ತಿನ್ನಕ್ಕೆ ಶುರುಮಾಡಿದ. ಕುಡೀಲಿಕ್ಕೂ ಪ್ರಾರಂಭಿಸಿದ. ಹೆಂಡತಿ ಮನೇಂದ ಹೊರಗೆ ಹಾಕಿದಳು; ಕಾಂಗ್ರೆಸ್ ಕಛೇರಿಗೆ ಗಂಡನ ಮೇಲೆ ದೂರುಕೊಟ್ಟಳು.

ಕಾಂಗ್ರೆಸ್ ಪಕ್ಷಾನೂ ಕೂಡ ಅನಂತಕೃಷ್ಣನ್ನ ಎಷ್ಟು ಬೇಕೋ ಅಷ್ಟು ದುಡಿಸಿಕೊಂಡು ಕಬ್ಬಿನ ಸಿಪ್ಪೇ ಹಾಗೆ ಬಿಸಾಕ್ತು. ಬ್ರಾಹ್ಮಣಾಂತ ಅವನಿಗೆ ಸೀಟು ಕೊಡಲಿಲ್ಲ. ರೋಸಿ ಹೋಗಿದ್ದ ಅನಂತಕೃಷ್ಣ ಜೀವನಧಾನಿಯಾದ. ಹೆಂಡತೀ ಜೊತೆ ಇರೋಕ್ಕಿಂತ ವಿನೋಬನ ಜೊತೆ ಸುತ್ತಾಡೋದೇ ವಾಸಿ ಅಂತ ಪಾದಯಾತ್ರೆ ಮಾಡಿದ.

ಇಷ್ಟು ಹೇಳಿದ್ರೂ ಅನಂತಕೃಷ್ಣ ಬಹಳ ದೊಡ್ಡ ಮನುಷ್ಯ ಅಂತಲೇ ನನ್ನ ಭಾವನೆ. ಅವನ ಜೀವನಕ್ಕೊಂದು ವಿಷಾದದ ಛಾಯೆ ಬೆರೆತು ಈಗ ಪಕ್ವ ಆಗಿದಾನೆ. ಕುಡೀಬಹುದು; ಆದರೆ ಸರ್ವೋದಯದ ಬಗ್ಗೆ ನಿಜವಾದ ಕಳಕಳಿಂದ ಮಾತಾಡ್ತಾನೆ. ಮನುಷ್ಯಾಂದ್ರೆ ಹೀಗೆಂತ್ಲೇ ಹೇಳಕ್ಕಾಗಲ್ಲ. ಅವನ ಜೀವನದಲ್ಲಿ ಬಿರುಕಿದೆ ನಿಜ. ಆದ್ರೆ ಒಂದು ಆದರ್ಶಕ್ಕಾಗಿ ಇವತ್ತಿಗೂ ಅವ ಬದುಕ್ತ ಇದಾನೆ ಎಂಬೋದು ನಿಜ. ನನ್ನ ಹಾಗೆ ಅವ ಸೋತು ಸುಣ್ಣಾಗಿಲ್ಲ. ಹೆಣಗ್ತಾನೇ ಇದಾನೆ.’