ಜಗನ್ನಾಥ ಭಾರತೀಪುರ ತಲ್ಪಿದಾಗ ರಾತ್ರೆ ಒಂಬತ್ತು ಗಂಟೆಯಾಗಿತ್ತು. ಮನೆಯಲ್ಲಿ ಚಿಕ್ಕಿ ಮತ್ತು ಹೊರಗೆಲಸದ ಆಳಲ್ಲದೆ ಇನ್ನು ಯಾರೂ ಇರಲಿಲ್ಲ. ಸೊರಗಿದ ಮುಖ ಚಿಕ್ಕಿಯನ್ನು ನೋಡಿ ಏನಾದರೂ ಹೇಳಬೇಕೆನ್ನಿಸಿತು. ನಾನು ಮುಟ್ಠಾಳ ಅಲ್ಲ ಚಿಕ್ಕಿ, ನನ್ನ ನಿಶ್ಚಯ ಅಪಕ್ವ ಎನ್ನಿಸಿದರೆ ಇಡೀ ಯೋಜನೇನ್ನ ಕೈಬಿಡುತ್ತೇನೆ ಎಂದು ಹೇಳಲು ಪ್ರಯತ್ನಿಸಿದ. ಆಗಲಿಲ್ಲ. ‘ಆಯಾಸವಾಗಿದೆ, ಸ್ನಾನಮಾಡಿ ಊಟ ಮಾಡುತ್ತೇನೆ’ ಎಂದು ಸ್ನಾನದ ಮನೆಗೆ ಹೋದ. ಅವನ ಮನೆಯಲ್ಲಿ ಯಾವ ಹೊತ್ತಿಗೆಂದರೂ ಬಿಸಿ ನೀರು ಸಿದ್ಧವಿರುತ್ತಾದ್ದರಿಂದ ಮೈ ಬೆವರುವಂತೆ ಸ್ನಾನ ಮಾಡಿದ.

ಚಿಕ್ಕಿ ಬಡಿಸಿದರು. ಸ್ವಲ್ಪ ಸಾರನ್ನ ಊಟ ಮಾಡಿ ರೂಮಿಗೆ ಹೋದ. ಡಿಸೆಂಬರಿನ ಚಳಿರಾತ್ರೆ. ಸ್ವಲ್ಪ ಹೊತ್ತು ಓದುತ್ತ ಕೂತಿದ್ದವನು ದೀಪ ಆರಿಸಿ ಮಲಗಿದ. ಉಲ್ಲಾಸವಿಲ್ಲದೆ ಏನು ಮಾಡಿಯೂ ಪ್ರಯೋಜನವಿಲ್ಲ; ಒಟ್ಟು ವಾತಾವರಣ ತನಗೆ ಮಂಕು ಹಿಡಿಸುವಂತಿತ್ತು. ಶಾಲನ್ನು ಹೊದ್ದು ಕಾಲು ಚಾಚಿ ಕಣ್ಣು ಮುಚ್ಚಿದೊಡನೆ ಹಾಯೆನ್ನಿಸಿತು. ಹಗಲಿನ ಜೀವನವೆಲ್ಲ ಸಾರ್ವಜನಿಕವಾಗುತ್ತ ಹೋದ್ದರಿಂದ ರಾತ್ರೆ ಹಾಸಿಗೆಯಲ್ಲಿ ಮಲಗಿ ನಿದ್ದೆ ಹತ್ತುವ ತನಕವೂ ಅವನು ಅನುಭವಿಸುತ್ತಿದ್ದ ಏಕಾಂತ ಪ್ರಿಯವಾಗಿತ್ತು.

ಅವತ್ತು ಪೇಪರಿನಲ್ಲಿ ಬಂದಿದ್ದ ಕಾಗದಗಳನ್ನು ನೆನಸಿಕೊಂಡ. ಖಂಡಿಸುವ ಕಾಗದಗಳಾಗಲೀ, ಹೊಗಳುವ ಕಾಗದಗಳಾಗಲೀ ಅರ್ಥ ಪೂರ್ಣವೆನ್ನಿಸಿರಲಿಲ್ಲ. ಮನಸ್ಸು ಹಗುರಾಗಿ ಹರಿದಾಡಿತು. ಮಾರ್ಗರೆಟ್ ಆ ಸ್ಕೂಲನ್ನು ಇಷ್ಟಪಡುವಳೆ, ದೇಸಾಯದ ಆದರ್ಶಕ್ಕೂ ಸ್ಕೂಲಿನಲ್ಲಿ ನಡೆಯುವ ವಾಸ್ತವಕ್ಕೂ ನಡುವೆ ಕಂದಕ ಕಂಡು ಅವಳಿಗೆ ಭ್ರಮನಿರಸನ ವಾಗಲಿಕ್ಕಿಲ್ಲವೆ- ಮಾರ್ಗರೆಟ್ಟಿಗೆ ದೇಸಾಯರ ಬಗ್ಗೆ ಬರೆಯಬೇಕು ಎಂದು ನಿರ್ಧರಿಸಿದ. ತಾಯಿಯ ನೆನಪಾಯಿತು. ಮತ್ತೆ ಸ್ಟ್ರಾಟ್‌ಫರ‍್ಡಿನಲ್ಲಿ ನೋಡಿದ ಕೋರಿಯೋಲೇನಸ್ ನಾಟಕ, ಹುಡುಗನಾಗಿದ್ದಾಗ ರಾತ್ರೆಯಲ್ಲ ಕೂತು ನೋಡುತ್ತಿದ್ದ ಯಕ್ಷಗಾನ. ಪ್ರತಿವರ್ಷ ಜಾತ್ರೆಯ ಸಮಯದಲ್ಲಿ ಒಂದು ಯಕ್ಷಗಾನ ತಮ್ಮ ಮನೆಯ ಖರ್ಚಿನಿಂದ ನಡೆಯುತ್ತಿತ್ತು. ಆದರೆ ಈ ವರ್ಷ ಆಡಿಸಿರೆಂದು ಕೇಳಲು ಯಾರೂ ಬಂದಿರಲಿಲ್ಲವೆಂದೂ ನೋವಾಯಿತು.

ಇನ್ನೇನು ನಿದ್ದೆ ಹತ್ತಬೇಕು ಅನ್ನುವಷ್ಟರಲ್ಲಿ ಹೊರಗಿನಿಂದ ಯಾರೂ ‘ಅಯ್ಯೋವರ’ ಎಂದು ಕೂಗಿ ಕರೆದದ್ದು ಕೇಳಿಸಿತು. ಭಯಗ್ರಸ್ತವಾದ ಸ್ವರ. ಜಗನ್ನಾಥ ಎದ್ದು ಟಾರ್ಚ್ ಹಿಡಿದು ಕೆಳಗೆ ಬಂದ. ಅಮಾವಾಸ್ಯೆಯ ಎದುರಿನ ದಟ್ಟವಾದ ಕತ್ತಲು. ಅಂಗಳದಾಚೆ ನಿಂತು ಯಾರೋ ಅಳುತ್ತಿದ್ದಾರೆ.

ಟಾರ್ಚ್‌ಬೆಳಕಿನಲ್ಲಿ ಪಿಳ್ಳನ ಅಪ್ಪ ಅವ್ವ ಕಂಡರು. ಪಿಳ್ಳನ ಅಪ್ಪ ಬರಿ ಲಂಗೋಟಿಯಲ್ಲಿ ನಿಂತು ಚಳಿಯಲ್ಲಿ ನಡುಗುತ್ತಿದ್ದ. ಅವನ ಕೂದಲೆಲ್ಲ ಕೆದರಿ ಕಣ್ಣು ಕೆಂಪಾಗಿದ್ದುವು. ಬಾಯಿಂದ ಹೆಂಡದ ವಾಸನೆ ಬರುತ್ತಿತ್ತು. ‘ಏನು ವಿಷಯ?’ ಎಂದು ಸಮಾಧಾನದಿಂದ ಜಗನ್ನಾಥ ಕೇಳಿದ.

ಗಾಬರಿಯಲ್ಲಿ ಪಿಳ್ಳನ ಅಪ್ಪ ಮಾತಾಡಿದ. ಜಗನ್ನಾಥ ಮತ್ತೆ ಮತ್ತೆ ಅವನನ್ನು ಪ್ರಶ್ನಿಸಿದ ಮೇಲೂ ತಿಳಿದದ್ದು ಇಷ್ಟೆ. ರಾತ್ರೆ ಪೊಲೀಸರು ಬಂದು ಪಿಳ್ಳನನ್ನು ಎಳೆದುಕೊಂಡು ಹೋದರು. ಎಲ್ಲಿಗೆ ಗೊತ್ತಿಲ್ಲ; ಯಾಕೆ ಗೊತ್ತಿಲ್ಲ.

‘ಗುಡಿಸಲಿಗೆ ಹೋಗಿರಿ, ನಾನವನ್ನ ಕರ್ಕೊಂಡು ಬರ್ತೀನಿ’ ಎಂದು ಸಮಾಧಾನ ಹೇಳಿದ. ಅವುಗಳು ಇನ್ನೂ ಅಳುತ್ತಿದ್ದುದು ನೋಡಿ ಗದರಿಸಬೇಕಾಯ್ತು. ಉಟ್ಟ ವಸ್ತ್ರದಲ್ಲೆ ಕಾರಿನಲ್ಲಿ ಸೀದ ಭಾರತೀಪುರದ ಪೊಲೀಸ್ ಸ್ಟೇಶನ್ನಿಗೆ ಹೋದ.

ಜಗನ್ನಾಥನನ್ನು ನೋಡಿದೊಡನೆ ಭರ್ಜರಿ ಮೀಸೆಯ ದಫೇದಾರನೊಬ್ಬ ಎದ್ದು ನಿಂತು ನಮಸ್ಕಾರ ಮಾಡಿದ. ‘ಯಾರು ಡ್ಯೂಟಿ ಮೇಲಿರೋದು?’ ಜಗನ್ನಾಥ ಅಧಿಕಾರವಾಣಿಯಿಂದ ಕೇಳಿದ.

‘ನಾನು ಸಾರ್ ಯಾಕೆ?’

‘ಸ್ವಲ್ಪ ಇನ್ಸ್‌ಪೆಕ್ಟರನ್ನ ಕರೀರಿ.’ ಜಗನ್ನಾಥ ಮೇಜಿನ ಎದುರಿದ್ದ ಕುರ್ಚಿಯ ಮೇಲೆ ಕೂತ, ದಫೇದಾರ ನಿಂತೇ ಇದ್ದ.

‘ಸಾಹೇಬ್ರು ಮಲಗವ್ರೆ ಸಾರ್.’

‘ನಮ್ಮನೇ ಆಳು ಪಿಳ್ಳನನ್ನ ಸ್ಟೇಶನ್ನಿಗೆ ತಂದಿದೀರಲ್ಲ ಯಾಕೇಂತ  ಕೇಳಲಿಕ್ಕೆ ಬಂದೆ’ ಜಗನ್ನಾಥ  ಗಡುಸಾಗಿ ಹೇಳಿದ.

‘ಅದು ಕೇಸಾಗಿದೆ ಸಾರ್, ಕ್ರಿಮಿನಲ್ ಕೇಸು.’

‘ಅದೇನು ಕೇಸು ತಿಳಿಸಿ. ನಾನು ಜಾಮೀನು ನಿಲ್ತೀನಿ ಬೇಕಾದರೆ. ಅವನನ್ನ ಮೊದಲು ಲಾಕಪ್ಪಿಂದ ಹೊರಗೆ ಬಿಡಿ.’

ದಫೇದಾರ ತಬ್ಬಿಬ್ಬಾದಂತೆ ಕಂಡಿತು. ನಿಂತೇ ಇದ್ದವನು ವಿನಯದಿಂದ ಹೇಳಿದ :

‘ಈ ಹೊಲೇ ಮುಂಡೇಮಕ್ಕಳು ಹೆಚ್ಚಿಕೊಂಡಿದಾವೆ ಸಾರ್. ಈ ಪಿಳ್ಳ ಅದ್ಯಾರೋ ಸೆಟ್ಟರ ಪೈಕಿ ಒಂದು ಹುಡುಗೀಯ ಮಾನಭಂಗ ಮಾಡಕ್ಕೆ ಹೋದ್ನಂತೆ. ಕಂಪ್ಲೈಂಟ್ ಬಂತು ಅದಕ್ಕೇ..’

‘ಸ್ಟೇಟ್‌ಮೆಂಟ್ ಎಲ್ಲಿ ತೋರಿಸಿ.’

‘ಹುಡುಗಿ ಕಡೇವ್ರು ಬಂದು ಕೇಸ್ ಮಾಡೋದು ಬೇಡ, ಗುಲ್ಲಾಗುತ್ತೆ, ನಾಲ್ಕು ಬಾರಿಸಿ ಬುದ್ಧಿ ಕಲಿಸಿ ಅಟ್ಟಿ ಅಂದ್ರು ಸಾರ್.’ ದಫೇದಾರ ಹೆದರಿಕೊಂಡು ಹೇಳಿದ.

ಜಗನ್ನಾಥನಿಗೆ ಸಿಟ್ಟು ಬಂತು.

‘ಈ ಥರಾ ಮಾಡೋದು ಕಾನೂನಿಗೆ ವಿರುದ್ಧವಾದ್ದು ದಫೇದಾರ್. ನಾನು ಡಿ.ಎಸ್.ಪಿ.ಗೆ ನಿಮ್ಮ ವಿರುದ್ಧ ಕಂಪ್ಲೈಂಟ್ ಮಾಡಿದ್ರೆ ಏನಾಗಬಹುದು ಗೊತ್ತ? ಎಲ್ಲಿ ಪಿಳ್ಳ? ಆ ಹುಡುಗಿ ಕಡೇವ್ರು ಎಲ್ಲಿದ್ದಾರೆ?’

‘ಅವರೂ ನಿಮ್ಮ ಆಳುಗಳೇ ಸಾರ್. ಶೀನಪ್ಪ ಅಂತ ಸೆಟ್ಟರ ಪೈಕಿ ಒಬ್ಬ ಇಲ್ಲ – ಅವನೆ, ಒಡೇರು ಊರಲ್ಲಿಲ್ಲ – ಇದ್ದಿದ್ರೆ ಅವರೇ ಕಂಪ್ಲೈಂಟ್ ಮಾಡ್ತಿದ್ರು ಅಂತ ಶೀನಪ್ಪ ಬಂದು ಹೇಳಿದ ಸಾರ್.’

‘ಪಿಳ್ಳ ಎಲ್ಲಿ? ಮೊದಲು ಅವನ್ನ ತೋರಿಸಿ.’

‘ಹಾಗಾದ್ರೆ ಕೇಸ್ ದಾಖಲೆ ಮಾಡಿಕೊಂಡು ಬಿಡ್ತೀವಿ ಸಾರ್.’

ದಫೇದಾರ ಪಿಳ್ಳನನ್ನು ಹೊರಗೆ ಬಿಡಲು ಸುಲಭವಾಗಿ ತಯಾರಿಲ್ಲವೆಂದು ಜಗನ್ನಾಥನಿಗೆ ಅನ್ನಿಸಿತು. ಸ್ವಲ್ಪ ಜೋರಾಗಿ ಗದರಿಸಿದ:

‘ನೋಡಿ, ಕಾನೂನಿನ ಪ್ರಕಾರ ನೀವು ನಡಕೊಂಡಿಲ್ಲಾಂತ ನಾನು ಗಲಾಟೆ ಮಾಡಬೇಕಾಗುತ್ತೆ. ಮೊದಲು ಪಿಳ್ಳನ್ನ ನನಗೆ ತೋರಿಸಿ.’

‘ದೊಡ್ಡೋವ್ರ ಮಾತು ನಾನು ತೆಗೆದು ಹಾಕಲ್ಲ ಸಾರ್. ಆದ್ರೆ ಈ ಮಾದಿಗ ಸೂಳೇ ಮಕ್ಕಳು -’

‘ರೀ, ದಫೇದಾರ್‌, ಎಲ್ಲಿ ಪಿಳ್ಳ ಹೇಳಿ?’

ಜಗನ್ನಾಥ ನಡುಗುತ್ತ ಎದ್ದು ನಿಂತ. ದಫೇದಾರ ಬೀಗದಕ್ಕೆ ಗೊಂಚಲನ್ನು ಹಿಡಿದು ಹೊರಟ. ಲಾಕಪ್ಪಿನ ಬೀಗ ತೆಗೆದು ದಫೇದಾರ ಮಾತಾಡದೇ ನಿಂತ. ಜಗನ್ನಾಥ ಟಾರ್ಚ್‌ಬಿಟ್ಟು ನೋಡಿದ. ಮೂಲೆಯಲ್ಲಿ ಪಿಳ್ಳ ಮುದುಕಿ ಕೂತಿದ್ದ. ಅವನಿಗೆ ಮೈ ಪರಿವೆ ಇದ್ದಂತೆ ಕಾಣಿಸಲಿಲ್ಲ. ‘ಪಿಳ್ಳ’ ಎಂದು ಕೂಗಿದ ಮೇಲೆ ಅವನು ಯಾತನೆಯಿಂದ ವಿಕಾರವಾಗಿದ್ದ ಮುಖವನ್ನೆತ್ತಿದ. ಕಣ್ಣುಗಳು ಬಾತಿದ್ದುವು. ಮೂಗು ತುಟಿಗಳಿಂದ ರಕ್ತ ಹರಿದಿತ್ತು. ಅವನ ಕಣ್ಣಿನಲ್ಲಿ ತನ್ನನ್ನು ಗುರುತಿಸಬಲ್ಲ ದೃಷ್ಟಿಯಿದ್ದಂತೆ ಕಾಣಿಸಲಿಲ್ಲ. ಜಗನ್ನಾಥ ಹತ್ತಿರ ಹೋಗಿ ಟಾರ್ಚ್‌ಹಾಕಿ ನೋಡಿದ. ಅವನು ತಂದುಕೊಟ್ಟ ಬಿಳಿ ಬಟ್ಟೆಯ ಮೇಲೆಲ್ಲ ರಕ್ತದ ಗುರುತುಗಳಿದ್ದುವು. ಅಂಗಿಯ ತೋಳು ಕಾಲರು ಹರಿದಿದ್ದುವು.

‘ನೀವೇನು ಮನುಷ್ಯರೋ ಮೃಗಗಳೋ?’

‘ಮುಖದ ಮೇಲೆ ಹೊಡೆದದ್ದು ಶೀನಪ್ಪ ಕಡೇವ್ರೆ ಸಾರ್. ಬಾಯಿ ಬಿಡಿಸೋಕೇಂತ ನಾನು ನಾಲ್ಕು ಏಟು ಹೊಡೆದದ್ದು ನಿಜ. ಇಲ್ದೆ ಇದ್ರೆ ನಾಲಗೆ ಬಿಚ್ಚಲ್ಲ ಸಾರ್.’

ಜಗನ್ನಾಥನಿಗೆ ವಿಪರೀತ ಸುಸ್ತೆನ್ನಿಸಿತ್ತು. ದಫೇದಾರನಿಗೆ ಪಿಳ್ಳ ಒಬ್ಬ ಮನುಷ್ಯ ಎಂದು ಅನ್ನಿಸುತ್ತಲೇ ಇಲ್ಲ. ಅನಾಮತ್ತಾಗಿ ವ್ಯಕ್ತವಾಗುವ ಈ ಕ್ರೌಯ್ದ ಹಿಂದೆ ಶತಮಾನಗಳ ಮೌಢ್ಯವಿತ್ತು. ಕುಲೀನ ಹುಡುಗಿಯನ್ನು ಹೊಲೆಯ ಬಯಸಿದ್ದ. ಆದರೆ ಯಾರು ಬೇಕಾದರೂ ಮಾಡಿರಬಹುದಾಗಿದ್ದ ಈ ತಪ್ಪು ಹೊಲೆಯನಲ್ಲಿ ಘೋರ ಪಾತಕವಾಗಿ ಕಂಡಿತ್ತು. ಹೀಗೆನ್ನಿಸುವುದು ಎಷ್ಟು ಸಹಜವೆಂದು ಜಗನ್ನಾಥನಿಗೆ ತಿಳಿದಿದ್ದರಿಂದ, ದಫೇದಾರನ ಮೇಲೆ ರೇಗುವುದು ನಿಷ್ಪ್ರಯೋಜಕವೆನ್ನಿಸಿ ತನ್ನ ಯಾತನೆಯನ್ನೆಲ್ಲ ನುಂಗಿಕೊಂಡು, ‘ಪಿಳ್ಳ, ಎದ್ದೇಳು. ಬಾ’ ಎಂದ.

ಗಟ್ಟಿಮುಟ್ಟಾದ ಯುವಕ ಪಿಳ್ಳ ದಿಗಿಲಿನಿಂದ ಪಶುವಿನ ಹಾಗೆ ಮೂಲೆಯಲ್ಲಿ ಬಿದ್ದಿದ್ದ. ಜಗನ್ನಾಥನಿಗೆ ಅವನ ಬಿಳಿ ಬಟ್ಟೆಯ ಮೇಲಿನ ರಕ್ತವನ್ನು ನೋಡುತ್ತಿದ್ದಂತೆ ಹೊಟ್ಟೆ ತೊಳಸಿಬಂದಂತಾಯಿತು. ದಫೇದಾರ, ‘ಏಳು’ ಎಂದು ಗದರಿಸಿದ್ದು ಕೇಳಿ ಪಿಳ್ಳ ಭಯಗ್ರಸ್ತ ಹುಳುವಿನಂತೆ ಇನ್ನಷ್ಟು ಮುದುಡಿಕೊಂಡ. ‘ದಪೇದಾರ್ ನೀವು ಸುಮ್ಮನಿರಿ’ ಎಂದು ಜಗನ್ನಾಥ ಪಿಳ್ಳನ ಬಳಿಗೆ ಹೋಗಿ ಅವನನ್ನು ಎತ್ತಲು ಕೈಯೊಡ್ಡಿದ.

‘ಅವನನ್ನು ನೀವ್ಯಾಕೆ ಮುಟ್ತೀರಿ ಸಾರ್. ಅವನಗೇನೂ ಧಾಡಿ ಬಡ್ದಿಲ್ಲ. ಎದ್ದು ನಿಲ್ತಾನೆ’ ಎಂದು ದಫೇದಾರ ಮತ್ತೆ ರೋಪಿನಲ್ಲಿ ಮಾತಾಡಿದ. ಜಗನ್ನಾಥ ಅದನ್ನು ಗಮನಿಸದೆ ಪಿಳ್ಳನ ರಟ್ಟೆಯನ್ನು ಮೃದುವಾಗಿ ಹಿಡಿದ. ಜಗನ್ನಾಥ ತನ್ನನ್ನು ಮುಟ್ಟಿದೊಡನೆ ಪಿಳ್ಳ ಭಯದಿಂದ ಕುಸಿಯುವಂತೆ ಕಂಡಿತು. ‘ಹೆದರಬೇಡ ಪಿಳ್ಳ. ನನ್ನ ಜೊತೆ ಬಾ’ ಎಂದು ಜಗನ್ನಾಥ ಪಿಳ್ಳನ ಭಯವನ್ನು ಲೆಖ್ಖಕ್ಕೆ ತೆಗೆದುಕೊಳ್ಳದೆ ಅವನನ್ನು ಲಾಕಪ್ಪಿನಿಂದ ಹೊರಗೆ ಮೆತ್ತಗೆ ನಡೆಸಿಕೊಂಡು ಹೋಗಿ ಕಾರಿನಲ್ಲಿ ಕೂರಿಸಿದ. ದಫೇದಾರ ತನ್ನ ಕಣ್ಣನ್ನೆ ನಂಬದವನಂತೆ ನೋಡುತ್ತ ನಿಂತಿದ್ದನ್ನು ಗಮನಿಸಿದ ಜಗನ್ನಾಥ ‘ನಾಳೆ ಬೇಕಾದ್ರೆ ಇನ್ಸ್‌ಪೆಕ್ಟರಿಗೆ ನಾನೇ ಹೇಳ್ತೇನೆ’ ಎಂದು ಡ್ರೈವ್ ಮಾಡಿಕೊಂಡು ಹೊರಟ.

ಪಿಳ್ಳ ಜಗುಲಿ ಹತ್ತಲೊಲ್ಲ. ಒತ್ತಾಯ ಮಾಡಿ ಜಗಲಿ ಹತ್ತಿಸಿದ ಮೇಲೆ ನಡುಮನೆಯೊಳಗೆ ಬರಲೊಲ್ಲ. ಜಗನ್ನಾಥ ಆಳನ್ನು ಎಬ್ಬಿಸಿ ಗ್ಯಾಸ್‌ಲೈಟ್ ಹತ್ತಿಸಿದ. ಒಳಗೆ ಹೋಗಿ ಟಿಂಕ್ಚರ್‌, ಹತ್ತಿ, ಡೆಟ್ಟಾಲ್ ತಂದು ಪಿಳ್ಳನ ಬಟ್ಟೆಯನ್ನು ಬಿಚ್ಚಿದ. ಜಗನ್ನಾಥನ ಶುಶ್ರೂಷೆಯಿಂದಾಗಿ ಪಿಳ್ಳ ನರಳಿದ. ಪಿಳ್ಳನ ಕಪ್ಪು ದೇಹವಿಡೀ ಬಾಸುಂಡೆಗಳಿದ್ದುವು. ಗಾಯಗಳನ್ನು ತೊಳೆದು ಟಿಂಕ್ಚರ್ ಹಚ್ಚಿ ಅವನನ್ನು ಚಾಪೆಯ ಮೇಲೆ ಮಲಗಿಸಿದ. ಒಳಗಿನಿಂದ ಬ್ರಾಂಡಿಯನ್ನು ತಂದು ಅವನಿಗೆ ಸ್ವಲ್ಪ ಕುಡಿಸಿದ ಮೇಲೆ ಪಿಳ್ಳ ಚೇತರಿಸಿಕೊಳ್ಳುತ್ತಿದ್ದಂತೆ ಕಂಡಿತು.

ಬೆತ್ತಲೆಯಾಗಿದ್ದ ಪಿಳ್ಳ ಚಳಿಯಲ್ಲಿ ನಡುಗುತ್ತಿದ್ದ. ಜಗನ್ನಾಥ ತನ್ನದೊಂದು ಅಂಗಿ ಪಂಚೆಯನ್ನು ತಂದು ಅವನಿಗೆ ಉಡಿಸಿ ಹೊದ್ದುಕೊಳ್ಳಲು ಕಂಬಳಿ ಕೊಟ್ಟ. ಪಿಳ್ಳನ ಮುಖ ಗಾಬರಿಯಿಂದ ವಿಕಾರವಾಗಿತ್ತು, ಜಗನ್ನಾಥ ಮೆತ್ತಗೆ ಕೇಳಿದ :

‘ಸಯಂಕಾಲ ತುಂಬ ಕುಡ್ದಿದ್ಯ?’

ಪಿಳ್ಳ ಹೌದೆಂದು ತಲೆ ಹಾಕಿದ. ಕಷ್ಟಪಟ್ಟು ಎದ್ದು ಕೂತ.

‘ನೀನು ಮಾಡಿದ್ದು ನಿಜವೆ?’

ಪಿಳ್ಳ ಕೂತಲ್ಲಿಂದಲೆ ಜಗನ್ನಾಥನ ಕಾಲಿಗೆ ಬಿದ್ದ. ಜಗನ್ನಾಥ ‘ಛೆ. ಎದ್ದೇಳು’ ಎಂದು ಹೇಳಿದ.

‘ಯಾರು ಕಾವೇರಿಯ?’

ಪಿಳ್ಳನ ಮೌನ ಹೌದೆಂದಿತು.

‘ಆಸೆ ಹುಟ್ಟಿದ್ದು ತಪ್ಪಲ್ಲ ಪಿಳ್ಳ, ನೀನು ಹೊಲೆಯ ಆದ್ದರಿಂದ ದೊಡ್ಡ ಪಾತಕವಾಗಿ ಕಾಣತ್ತೆ ಉಳಿದವರಿಗೆ. ಇಷ್ಟಪಡದ ಹುಡುಗೀನ್ನ ಬಲಾತ್ಕರಿಸಬಾರದು -ಅಷ್ಟೆ. ಏನಾಯ್ತು ನನ್ನ ಹತ್ರ ಹೇಳು.’

ಜಗನ್ನಾಥನಿಗೆ ಆಶ್ಚರ್ಯವಾಗುವಂತೆ ಇಡೀ ತಮ್ಮ ನಡುವಿನ ವಾತಾವರಣ ಪ್ರಥಮ ಬಾರಿಗೆ ತಿಳಿಯಾಗಿತ್ತು. ಪಿಳ್ಳ ತೊದಲುತ್ತ ಮಾತಾಡಿದ್ದ; ಅವನು ನಿಜವಾಗಿ ಆಡಿದ್ದ ಮೊದಲನೇ ಮಾತುಗಳು ಅವು. ಗ್ಯಾಸ್‌ಲೈಟ್ ಬೆಳಕಿನಲ್ಲಿ ಚಾವಡಿಯ ಮೇಲೆ ಹೀಗೆ ಎದುರುಬದರಾಗಿ ಕೂತು ಮಾತಾಡಿದ್ದು ಜಗನ್ನಾಥನಿಗೆ ಸದಾ ನೆನಪಿನಲ್ಲಿ ಉಳಿಯುವ ಘಟನೆಯಾಯಿತು.

ಪಿಳ್ಳ ಬಲಾತ್ಕಾರ ಮಾಡಿರಲಿಲ್ಲ. ಕುಡಿದಿದ್ದ. ಏನೋ ಹಾಡಿಕೊಳ್ಳುತ್ತ ಒಬ್ಬನೇ ಬರುತ್ತಿದ್ದ. ತಾನು ಉಟ್ಟಿದ್ದ ಬಿಳಿ ಬಟ್ಟೆ ನೋಡಿ ಹೆಂಡದಂಗಡಿಯಲ್ಲಿ ಎಲ್ಲರೂ ಹಾಸ್ಯ ಮಾಡಿದ್ದರು. ಸಿಟ್ಟು ಬಂದಿತ್ತು. ಖುಷಿಯೂ ಆಗಿತ್ತು. ಹೀಗೇ ಬರ್ತಾ ಇದ್ದಾಗ ಕತ್ತಲಾಗೋ ಹೊತ್ತಿಗೆ ಮೊಟ್ಟಿನ ಸಂದಿ ಏನೋ ಕಂಡ ಹಾಗೆ ಆಯ್ತು. ಹತ್ತಿರ ಹೋಗಿ ನೋಡಿದಾಗ ಜನಾರ್ಧನ ಸೆಟ್ಟಿ ಕಾವೇರಿಯ ಬಟ್ಟೆಯನ್ನೆಲ್ಲ ಬಿಚ್ಚುತ್ತಿದ್ದ. ಅವರಿಗೆ ತಾನು ನಿಂತದ್ದು ಕಾಣಿಸಲಿಲ್ಲ. ಹೀಗೇ ನೋಡುತ್ತಿದ್ಂತೆ ತನಗೇನಾಯಿತೋ ತಿಳಿಯದು. ಬೆತ್ತಲೆಯಾದ ಕಾವೇರಿಯಿದ್ದಲ್ಲಿಗೆ ಸೀದಾ ತಾನು ನಡೆದುಬಿಟ್ಟಿದ್ದೆ. ಕೈಯನ್ನೊಡ್ಡಿ ಪಿಳ್ಳ ನಡೆದುಬರುತ್ತಿರುವುದನ್ನು ಕಂಡು ಸೆಟ್ಟಿ ಓಡಿದ. ಕಾವೇರಿ ಮೈ ಮುಚ್ಚಿಕೊಂಡಳು. ತಾನು ಹಾಗೇ ನಿಂತಿದ್ದ. ಇದ್ದಕ್ಕಿದ್ದಂತೆ ಹಿಂದಿನಿಂದ ಜನಾರ್ದನ ಸೆಟ್ಟಿ ಬಂದು ತಲೆಯ ಮೇಲೆ ಹೊಡೆದ. ಧ್ಯಾಸ ತಪ್ಪಿತು, ಎಚ್ಚರಾದ ಮೇಲೆ ಅಲ್ಲಿ ಯಾರೂ ಇರಲಿಲ್ಲ. ಪಿಳ್ಳ ಎದ್ದು ಮನೆಗೆ ಹೋದ. ಯಾರಿಗೆ ಏನೂ ಹೇಳಲಿಲ್ಲ. ಕುಡಿದು ಜಗಳಾಡಿ ಬಂದಿದ್ದಾನೆ ಎಂದು ಅಪ್ಪ ಅವ್ವ ತಿಳಿದಿರಬೇಕು. ಸ್ವಲ್ಪ ಹೊತ್ತಾದ ಮೇಲೆ ಪೊಲೀಸಿನವನೊಬ್ಬ ರಾತ್ರೆ ಬಂದು ಎಳೆದುಕೊಂಡು ಹೋಗಿ ಮೈಮುರಿಯುವ ಹಾಗೆ ಹೊಡೆದು ಲಾಕಪ್ಪಿಗೆ ಹಾಕಿದ.

ತಾನು ಬಯಸಿದ ಹೆಣ್ಣಿನ ಬಗ್ಗೆ ಪಿಳ್ಳನಿಗೂ ಆಸೆ ಹುಟ್ಟಿತೆಂಬುದು ಜಗನ್ನಾಥನಿಗೆ ವಿಚಿತ್ರವಾದ ಅನುಭವವನ್ನು ತಂದಿತು. ಗ್ಯಾಸ್‌ಲೈಟ್ ಬೆಳಕಿನಲ್ಲಿ ಕೂತು ಕಪ್ಪು ಬಲಿಷ್ಠ ದೇಹ ತನ್ನದರ ಹಾಗೇ ವಾಸನಾಯುಕ್ತವಾದ್ದು, ಜೀವಂತವಾದ್ದು. ಈಗ ತಾನು ಅವನನ್ನು ನಿಜವಾಗಿ ಮುಟ್ಟಬಹುದೆನ್ನಿಸಿತು.

‘ಪಿಳ್ಳ, ಹೆದರದೇ ನೀವೆಲ್ಲ ನನ್ನ ಜೊತೆ ದೇವಸ್ಥಾನದೊಳಗೆ ಬರಬೇಕು ಗೊತ್ತಾಯ್ತ?’ ಕಂಪಿಸುವ ಸ್ವರದಲ್ಲಿ ಜಗನ್ನಾಥ ಕೇಳಿದ. ಪಿಳ್ಳನ ಮುಖದಲ್ಲಿ ಸ್ನೇಹ ಭಾವ ಕಾಣಿಸಿದಂತಾಗಿ ಖುಷಿಯಾಯಿತು. ಇನ್ನು ಮುಂದೆ ನಿಜವಾಗಿ ಮಾತಿಗೆ ಪ್ರಾರಂಭಿಸಬಹುದು ಎನ್ನಿಸಿತು.

‘ಇಲ್ಲೇ ಮಲಗ್ತೀಯೊ? ಗುಡಿಸ್ಲಿಗೆ ಹೋಗ್ತೀಯೊ?’

‘ಹೋಗ್ತೀನಿ ಒಡೇರೆ.’ ಪಿಳ್ಳ ಕಷ್ಟಪಟ್ಟು ಎದ್ದು ನಿಂತ.

‘ಅಷ್ಟು ದೂರ ನಾನೂ ನಿನ್ನ ಜೊತೆ ಬರ್ತೀನಿ’ ಎಂದು ಟಾರ್ಚ್‌ಹಿಡಿದು ಜಗನ್ನಾಥ ಹೊರಟ. ಕಷ್ಟಪಟ್ಟು ನಡೆಯುತ್ತಿದ್ದ ಪಿಳ್ಳನ ಕೈ ಹಿಡಿದುಕೊಂಡ.

‘ಮುಟ್ಟಬೇಡಿ ಒಡೇರೆ.’ ಪಿಳ್ಳ ಹೀಗೆ ಸ್ಪಷ್ಟವಾಗಿ ಹೇಳಿದನೆಂದು ಜಗನ್ನಾಥನಿಗೆ ಸಂತೋಷವಾಯಿತು.

‘ಕತ್ತೆ. ಮುಟ್ಟಿದ್ರೆ ಏನಾಗುತ್ತೊ?’ ಜಗನ್ನಾಥ ತಮಾಷೆ ಮಾಡಿದ.

ಹೊಲೆಯರ ಗುಡಿಗಳವರೆಗೆ ಜಗನ್ನಾಥ ನಡೆದ. ಒಳಗೆ ಹೋಗಬೇಕೆನ್ನಿಸಿತು. ಆದರೆ ಬ್ರಾಹ್ಮಣರು ತಮ್ಮ ಗುಡಿಗಳೊಳಗೆ ಬರುವುದರಿಂದ ತಮಗೆ ಕೇಡಾಗುತ್ತದೆಂದು ಹೊಲೆಯರು ನಂಬುವುದರಿಂದ ಅವರು ಕರೆಯದೇ ತಾನು ಹೋಗುವುದು ಸರಿಯಲ್ಲವೆನ್ನಿಇತು. ಹೊರಗೇ ನಿಂತು,

‘ಹೆದರಬೇಡ ಪಿಳ್ಳ. ನಾಳೆ ನನ್ನ ಬಂದು ನೀವೆಲ್ಲ ನೋಡಿ’ ಎಂದು ಮನೆಗೆ ಹಿಂದಕ್ಕೆ ಬಂದು ಮಲಗಿದ. ಚಿಕ್ಕಿ ಇನ್ನೂ ಎದ್ದೇ ಇದ್ದರು. ಆದರೆ ಜಗನ್ನಾಥನನ್ನೂ ಏನೂ ಕೇಳಲಿಲ್ಲ.

ಪಿಳ್ಳನಿಗೆ ತಾನು ಶಾಲಿಗ್ರಾಮ ಒಡ್ಡಿದೆ; ತನ್ನಲ್ಲಿ ಆಸೆ ಹುಟ್ಟಿಸಿದ ಕಾವೇರಿಯ ದೇಹಕ್ಕಾಗಿ ಪಿಳ್ಳ ಕೈಯೊಡ್ಡಿದ. ಹೀಗೆ ಪಿಳ್ಳನ ಒಳಗೆ ಎಚ್ಚೆತ್ತದ್ದನ್ನು ಗ್ರಹಿಸಲು, ಗ್ರಹಿಸಿ ಒಪ್ಪಿಕೊಳ್ಳಲು ಯತ್ನಿಸುತ್ತಿದ್ದಾಗ ತಾನು ಅಡಿಗರ ದುಡ್ಡು ಕದ್ದಿದ್ದು, ಶೀನಪ್ಪ ತೋಟದಲ್ಲಿ ಕದಿಯುತ್ತಿದ್ದುದನ್ನು ತಾನು ಪರವಶನಾಗಿ ನೋಡಿದ್ದು – ಎಲ್ಲ ನೆನಪಾಗಿ ತನ್ನ ಸ್ವಭಾವದಲ್ಲಿರುವ ಇದಕ್ಕೆಲ್ಲ ಏನು ಅರ್ಥ ತಿಳಿಯದಂತಾಯಿತು. ಸುಸ್ತಾಗಿ ನಿದ್ದೆ ಹೋದ.