ಬಹಳ ಉತ್ಸಾಹದಿಂದ ಜಗನ್ನಾಥ ಬೆಳಿಗ್ಗೆ ಎದ್ದು ಮುಖ ತೊಳೆದು ಕಾಫಿ ಕುಡಿದು ಗೇರು ಗುಡ್ಡದ ಮೇಲೆ ಸುತ್ತಾಡಿ ಬರಲು ಹೋದ. ತೊಯ್ದ ಜೇಡರ ಬಲೆಗಳ ಮೇಲೆ, ಹಸಿರು ಹುಲ್ಲಿನ ಮೇಲೆ, ಹಿಮವನ್ನು ಹರಿದು ಬಿದ್ದ ಬಿಸಿಲು ಸುಂದರವಾಗಿತ್ತು; ದೇವಸ್ಥಾನದ ಶಿಖರವನ್ನು ಆಭರಣ ಮಾಡಿತ್ತು. ಮಾರ್ಗರೆಟ್ ಕಾಗದದ ವಾಕ್ಯಗಳನ್ನೆಲ್ಲ ನೆನಸಿಕೊಂಡ. ತನ್ನ ಸ್ವಭಾವಕ್ಕೆ ಸಂಭ್ರಮದ ಅಗತ್ಯ ಎಷ್ಟಿದೆಯೆಂದು ತಿಳಿದೂ ಈಗ ಜಗನ್ನಾಥನಿಗೆ ಕಸಿವಿಸಿಯಾಗಲಿಲ್ಲ. ನಾನು ನಾನೇ, ಏನು ಮಾಡಲಿಕ್ಕಾಗುತ್ತೆ ಎಂದು ಕಾಕೆಹಣ್ಣಿನ ಗಿಡಗಳನ್ನು ಹುಡುಕುತ್ತ ಓಡಾಡಿದ. ಗುಡ್ಡದ ದಾಸವಾಳದ ಹಣ್ಣುಗಳು, ಕಾಕೆಹಣ್ಣುಗಳು ಎಂದರೆ ಹುಡುಗನಾಗಿದ್ದಾಗ ತನಗೆ ಬಹಳ ಪ್ರೀತಿ.

ತನ್ನ ಮನಸ್ಸು ಯಾವುದೋ ನಿಶ್ಚಯಕ್ಕೆ ಬಂದಿದೆ; ಆದರೆ ಅದು ಯಾವುದೆಂದು ಸ್ಪಷ್ಟವಾಗಲಿಲ್ಲ. ತಿಂಡಿಯಾದ ಮೇಲೆ ಬರೆಯುತ್ತ ಕೂತ. ಪೇಟೆಗೆಂದು ಹೊರಟ. ಜನ ತನ್ನನ್ನು ದ್ವೇಷ, ಭಯಗಳಿಂದ ನೋಡತ್ತಾರೆಂದು ಮುಜುಗರವಾಗಲಿಲ್ಲ. ಕೆದರಿದ ಕ್ರಾಪು ಹಣೆ ತುಂಬ ವಿಭೂತಿಯ ವೆಂಕಟಕೃಷ್ಣರಾಯರನ್ನು ಉತ್ಸಾಹದಿಂದ ಮಾತಾಡಿಸಿದ. ಬೆಳಿಗ್ಗೆ ನಾಲ್ಕು ಗಂಟೆಗೆ ತಣ್ಣೀರು ಹೊಯ್ದುಕೊಂಡು, ಎರಡು ಗಂಟೆಗಳ ಕಾಲ ಪೂಜೆ ಮಾಡಿ, ನಂತರ ಗೋವುಗಳನ್ನು ತೊಳೆದು ಕುಂಕುಮ ಹಚ್ಚಿ ಪೂಜಿಸಿ, ಅಕ್ಕಚ್ಚು ಕುಡಿಯಲು ಕೊಟ್ಟು ಹಾಲು ಕರೆದು, ತದನಂತರ ಮಂಜುನಾಥ ದೇವಸ್ಥಾನಕ್ಕೆ ಹೋಗಿ ಅಲ್ಲಿ ಮಧ್ಯಾಹ್ನದ ತನಕ ಕಣ್ಣು ಮುಚ್ಚಿ ಜಪಿಸುತ್ತ ಕೂರುತ್ತಿದ್ದ, ವಾರಕ್ಕೆರಡು ಬಾರಿಯಾದರೂ ಅರಳಿ ಮರದ ಬುಡದಲ್ಲಿ ನಿಂತು ಗರುಡಪಕ್ಷಿಯ ದರ್ಶನವಾದ ಮೇಲೆ ಊಟ ಮಾಡುತ್ತಿದ್ದ, ಈ ನಿಷ್ಠಾವಂತ ಬ್ರಾಹ್ಮಣನನ್ನ ‘ಇಷ್ಟೆಲ್ಲ ಯಾವ ಸಲುವಾಗಿ’ ಎಂದು ಕೇಳಿದರೆ ಗಂಭೀರವಾಗಿ ಆತ ಉತ್ತರಿಸುತ್ತಿದ್ದ – ಮುಂದಿನ ಜನ್ಮದಲ್ಲಾದರೂ ತಾನು ಅಮೇರಿಕಾದಲ್ಲಿ ಹುಟ್ಟಬೇಕೆಂದು. ಜಗನ್ನಾಥ ನಸುನಗುತ್ತ ‘ಏನು ಇವತ್ತು ಮನೆಯಲ್ಲೆ ಇದೀರಲ್ಲ’ ಎಂದಿದ್ದಕ್ಕೆ ‘ಇವಳು ಹೊರಗೆ ನನ್ನದೇ ಅಡಿಗೆ’ ಎಂದರು. ತನ್ನನ್ನು ಆತ ದ್ವೇಷಿಸುತ್ತಿರಬಹುದು, ಆದರೆ ತೋರಿಸಿಕೊಳ್ಳುವುದಿಲ್ಲ. ಚೌಕದಲ್ಲಿ ವಾಸು ಸಿಕ್ಕಿದ. ತುಂಬ ಕಾಳಜಿಯ ಮುಖ ಮಾಡಿ ‘ಈ ಹೊಲೇರ ಸವಾಸ ಕಟ್ಟಿಕೊಂಡು ಯಾಕೆ ಊರಿಡೀ ನಿಷ್ಠುರ ಕಟ್ಟಿಕೋತೀಯಯ್ಯ’ ಎಂದು ಬುದ್ಧಿ ಹೇಳಿದ; ನೀವು ವಿದ್ಯಾವಂತರು, ಶ್ರೀಮಂತರು, ಹೇಗೂ ತಾಳಿಕೋತೀರಿ ಎಂದು ಬಹುವಚನದಲ್ಲಿ ಮುಂದುವರಿಸಿದ. ತನು ಅಂಗಡಿ ತೆರೆಯುವ ಪ್ರಯತ್ನ ಅಷ್ಟಕ್ಕೆ ನಿಂತಿದೆ, ಸಾಲಕ್ಕೆ ನಿಮ್ಮ ಹತ್ತಿರ ಬರಬೇಕಾಗಬಹುದೆಂದು ಸೂಚಿಸಿ ಹೊರಟುಹೋದ. ಜೋಯಿಸರ ಮನೆಯೊಳಗೆ ಹೋಗುವ ಧೈರ್ಯವಾಗಲಿಲ್ಲ; ಸೂತಕದ ಮನೆ ಬಿಕೋ ಎನ್ನುತ್ತಿತ್ತು. ರಾಯರನ್ನು ಕಂಡ; ಯಾರಿಗೋ ಅರ್ಜಿ ಬರೆದುಕೊಡುತ್ತಿದ್ದರು. ಯಾವಾಗಲೂ ಈ ಬಿಟ್ಟಿ ಕೆಲಸವೇ ಅವರ ಪಾಲಿಗೆ.

ತಾನು ಇಂಗ್ಲೆಂಡಿನ ಬರುವಾಗ ತಂದಿದ್ದ ಶಿವಾಸ್ ರೀಗಲ್ ವ್ಹಿಸ್ಕಿಯನ್ನು ಒಂದು ದಿನ ಹೋಗಿ ಪುರಾಣಿಕರಿಗೆ ಕಡಬೇಕು ಎಂದುಕೊಂಡು. ಅವರ ಹುಟ್ಟಿದ ತಾರೀಖು ಯಾವುದೆಂದು ಗೊತ್ತಿದ್ದರೆ ಚೆನ್ನಾಗಿರುತ್ತಿತ್ತು.

ಔಷಧಿ ಬಾಟ್ಲಿ ಹಿಡಿದುಕೊಂಡು ಬರುತ್ತಿದ್ದ ದೇವಸ್ಥಾನದ ಅರ್ಚಕರ ಮಗ ಗಣೇಶ ಎದುರು ಸಿಕ್ಕ. ಇವನದು ಬಹಳ ವಿಚಿತ್ರವಾದ ಮುಖವೆನ್ನಿಸಿತು. ಬಾಲಕನ ದೇಹ; ಆದರೆ ಗುಳಿಬಿದ್ದ ಕಣ್ಣುಗಳ ಮುದಿಮುಖ. ಸೀಲ್ ಹಾಕಿದಂತೆ ಮುಚ್ಚಿದ ಬಾಯಿ. ತನ್ನ ಕಡೆಯೇ ನೋಡುತ್ತಿದ್ದ ಗಣೇಶನಿಗೆ ಉತ್ತರವಾಗಿ ಜಗನ್ನಾಥ ಮುಗುಳ್ನಕ್ಕ. ಗಣೇಶ ಮಾತಾಡಲೆಂಬಂತೆ ನಿಂತಿದ್ದು ನೋಡಿ ಆಶ್ಚರ್ಯವಾಯಿತು. ಜಗನ್ನಾಥನೂ ನಿಂತ. ಗಣೇಶ ಏನೋ ಹೇಳಲು ಪ್ರಯತ್ನಿಸುತ್ತ ಉಗ್ಗುತ್ತಿರುವುದು ಕಂಡು ಜಗನ್ನಾಥನಿಗೆ ಯಾತನೆಯಾಯಿತು. ಆದರೆ ಅದನ್ನು ತೋರಗೊಂಡದಂತೆ ಇದು ಬಹಳ ಸಹಜ ಸನ್ನಿವೇಶ ಎನ್ನುವ ಹಾಗೆ ಗಣೇಶನ ಮಾತು ಪೂರ್ಣವಾಗಲು ಕಾದ. ಮುಖವನ್ನೇಲ್ಲ ವಿಕಾರವಾಗಿ ಒಡೆದುಕೊಂಡು ಗಣೇಶ, ನಿಮ್ಮಲ್ಲಿ ಶರತ್‌ಚಂದ್ರರ ಕಾದಂಬರಿಗಳು ಸಿಗುತ್ತವೆಯೇ ಎಂದು ಕೇಳಿದ. ಅವನ ಸ್ನೇಹ ಆಶ್ಚರ್ಯವೆನ್ನಿಸಿತು. ‘ಇವೆ ಯಾವಾಗಲಾದರೂ ಬನ್ನಿ’ ಎಂದು ಪ್ರೀತಿಯಿಂದ ಮಾತಾಡಿ ಗಣೇಶನಿಗೆ ಹಿಂಸೆಯಾಗಬಾರದೆಂದು ಜಗನ್ನಾಥ ನಡೆದುಬಿಟ್ಟ.

ಮಧ್ಯಾಹ್ನ ಪೂಜೆ ಭಟ್ಟ, ಅಡಿಗೆ ಭಟ್ಟರ ಮಕ್ಕಳ ಜೊತೆ ಊಟವಾಯ್ತು. ಚಿಕ್ಕಿಯನ್ನು ಮಾತಾಡಿಸಲು ಪ್ರಯತ್ನಿಸಿ ಸೋತು, ಕೈತೊಳೆದು ರೂಮಿಗೆ ಹೋಗುವ ಮುಂಚೆ ಆಗತಾನೇ ಪೂಜೆಯಾದ್ದರಿಂದ ಹೊಸ ಹೂವು ಹೊಸ ತುಳಸಿಗಳಿಂದಾಗಿ ಸವಿಯಾಗಿ ವಾಸನೆ ಬರುತ್ತಿದ್ದ ದೇವರ ಕೋಣೆಯ ಎದುರು ನಿಂತು ಯೋಚಿಸಿದ. ಅವನ ವಿಚಾರ ಇನ್ನಷ್ಟು ಗಟ್ಟಿಯಾಯಿತು. ತನಗೇ ಅದನ್ನು ತೀರಾ ಸ್ಪಷ್ಟಪಡಿಸಿಕೊಳ್ಳಲು ಇಚ್ಛಿಸದೆ ರೂಮಿಗೆ ಹೋಗಿ ಒಂದರ್ಧ ತಾಸು ನಿದ್ದೆ ಮಾಡುವುದು ಉತ್ತಮವೆಂದು ಕಣ್ಣು ಮುಚ್ಚಿದ. ಸಾಯಂಕಾಲ ತನಗಿರುವ ತೀವ್ರತೆಯನ್ನೆಲ್ಲ, ಶಕ್ತಿಯನ್ನೆಲ್ಲ ದುಡಿಸಿಕೊಳ್ಳಲು ಪ್ರಯತ್ನಿಸಿದ. ಲಘುವಾಗಿ ಅದೂ ಇದೂ ಯೋಚಿಸುತ್ತ ತನ್ನೊಳಗೇ ನಕ್ಕ. ವೆಸ್ಟ್ ಇಂಡಿಯನ್ನರು ಏರ್ಪಡಿಸಿದ್ದ ನೃತ್ಯ ಒಂದರಲ್ಲಿ ಮಾರ್ಗರೆಟ್ ಅವನನ್ನು ಸಂಗೀತ ಪ್ರಾರಂಭವಾದೊಡನೆ ತಮಾಷೆ ಮಾಡಲೆಂದು ಕುಣಿಯಲು ಎಳೆದಿದ್ದಳು. ಹೆಜ್ಜೆ ಹಾಕಲು ಬರದ ತಾನು ಬೆವರುತ್ತ ಎಷ್ಟು ಪೆಚ್ಚಾಗಿದ್ದೆ. ಮಾರ್ಗರೆಟ್ ಹೇಗೆ ನಕ್ಕಳು ಎಂಬುದನ್ನು ನೆನೆಸಿಕೊಂಡ. Jagan, relax ಎನ್ನುತ್ತ ಅವಳು, ತನ್ನ ಸೆಟೆದುಕೊಂಡಿದ್ದ ದೇಹವನ್ನೆಲ್ಲ ಲಯಕ್ಕೆ ಮೃದುಗೊಳಿಸಲು ವಿಶ್ವಪ್ರಯತ್ನ ಮಾಡಿ ಸೋತಿದ್ದಳು. ಮೈಮರೆತು ಕುಣಿಯುವ, ಹಾಡುವ ಜೀವನದ ಸಾಧ್ಯತೆಗಳು ಗೊತ್ತಿಲ್ಲದ ಪೆದ್ದ ನೀನು’ ಎಂದು ಮಾರ್ಗರೆಟ್ ರೇಗಿದ್ದಳು. ಕುಡಿದಾಗಲೂ ತಾನು ಸಂಪೂರ್ಣ ಸಡಿಲವಾಗಿದ್ದಿಲ್ಲ.

ಥಟ್ಟನೆ ಎದ್ದು ಕೂತ. ಟ್ರಂಕಿನಿಂದ ಶಿವಾಸ್ ರೀಗಲ್ ವ್ಹಿಸ್ಕಿಯ ಬಾಟಲನ್ನು ತೆಗೆದು ಕಾಗದದಲ್ಲಿ ಸುತ್ತಿ ತಲೆ ಬಾಚಿಕೊಂಡ. ಹೊರಗೆ ಒಂದು ಬಹಳ ದಿವಸಗಳಿಂದ ಉಪಯೋಗಿಸದ ಕಾರನ್ನು ಗ್ಯಾರೇಜಿನಿಂದ ಹೊರಗೆ ತಂದು ಡ್ರೈವ್ ಮಾಡಿಕೊಂಡು ಸೀದ ಪುರಾಣಿಕರ ಮನೆಕಡೆ ಹೊರಟ. ಕಾರಿನ ಮೇಲೆ ಹೋಗಬೇಕೆಂದರೆ ಅವರ ಮನೆಗೆ ತುಂಬ ಬಳಸಾಗುತ್ತದೆ, ಅದೂ ಕೊರಕಲ ದಾರಿ. ದ್ವೀಪದಂತಿದ್ದ ಅವರ ಮನೆ ತಲುಪಿ ವ್ಹಿಸ್ಕಿಯನ್ನು ಹಿಡಿದುಕೊಂಡು ಎರಡು ಸಾರಿ ಬೆಲ್ ಮಾಡಿದ ಮೇಲೆ ಯಥಾಪ್ರಕಾರ ಘೂರ್ಕ ಬಂದು ಬಾಗಿಲು ತೆಗೆದು, ಸೆಲ್ಯೂಟ್ ಮಾಡಿದ, ಹಜಾರದಲ್ಲಿ ಕೂರಿಸಿ ಸ್ಲಿಪ್ಪಿನ ಮೇಲೆ ಜಗನ್ನಾಥನ ಹೆಸರು ಬರೆಸಿಕೊಂಡು ತಟ್ಟೆಯಲ್ಲಿಟ್ಟು ಮೇಲೆ ಹೋದ. ಪುರಾಣಿಕರು ಇಳಿದು ಬಂದರು. ಸ್ಲಿಪರ್ ಹಾಕಿಕೊಂಡು, ತುಂಬ ಹಳೆಯದಾದರೂ ಸುಂದರವಾಗಿದ್ದೆ ರೇಷ್ಮೆ ಗೌನ್ ಧರಿಸಿದ್ದ ಪುರಾಣಿಕರು ಕೈ ನೀಡಿ ಕುಲುಕಿ, ‘Excuse me. I am not dressed’ ಅಂದರು. ಜಗನ್ನಾಥ ‘ಪರವಾಗಿಲ್ಲ. ಮುಂಚೆ ತಿಳಿಸದೇ ಬಂದದ್ದಕ್ಕೆ ಕ್ಷಮಿಸಿ’ ಎಂದ. ‘Not at al. You must feel free to drop in at any time’ ಎಂದು ಅವನನ್ನು ಮೇಲೆ ಕರೆದುಕೊಂಡು ಹೋದರು.

‘ಏನು ಬಂದ ವಿಷಯ?’ ಎಂದು ಕೇಳದೆ ತನ್ನನ್ನು ಸ್ವಾಗತಿಸಿದ ಪುರಾಣಿಕರ ಸಭ್ಯತೆಯನ್ನು ಜಗನ್ನಾಥ ಗಮನಿಸಿದ. ‘ನನಗೆ ಕೆಲಸವಿದೆ. ಹೋಗಬೇಕು. ಐದು ನಿಮಿಷ ನಿಮ್ಮನ್ನ ನೋಡಿ ಹೋಗೋಣೆಂದು ಬಂದೆ’, ಎಂದು ಜಗನ್ನಾಥ ನಾಚುತ್ತ ವ್ಹಿಸ್ಕಿಯನ್ನು ಅವರಿಗೆ ಕೊಟ್ಟ. ‘No you mustn’t give this to me. This is liquid velvet’ ಎಂದು ಬಹಳ ಸಂಭ್ರಮದಿಂದ ವ್ಹಿಸ್ಕಿಯನ್ನು ತೆಗೆದುಕೊಂಡು ಜಗನ್ನಾಥನನ್ನು ವಂದಿಸಿದರು. ‘Let us celebrate this meeting, I will fix you a drink’ ಎಂದರು. ‘ಬೇಡ ನನಗೆ ಈಗಿನ್ನೂ ಊಟವಾಗಿದೆ’ ಎಂದು ಜಗನ್ನಾಥ ಕ್ಷಮೆ ಕೇಳಿದ. ‘Then some liqueur is the right thing for you’ ಎಂದು ಒತ್ತಾಯಪಡಿಸುತ್ತ ಸುಂದರವಾದ ನೀಳವಾದ ಗಾಜಿನ ಬಟ್ಟಲಲ್ಲಿ ಸುರಿದು ಕೊಟ್ಟರು. ತಾವೂ ಬಗ್ಗಿಸಿಕೊಂಡು ‘Cheers’ ಎಂದರು.

‘The labour party appears to be winnging the election this time also. The prediction of the “Daily Herlad” has failed’ ಎಂದು ಮಾತು ಶುರು ಮಾಡಿದರು. ಜಗನ್ನಾಥನಿಗೆ ರೇಡಿಯೋದ ಮೇಲಿದ್ದ ಒಂದು ಮಾಸಿದ ಫೋಟೋ ಕಂಡಿತು. ಹಿಂದಿನ ಸಾರಿ ಈ ಫೋಟೋವನ್ನು ಅವನು ಗಮನಿಸಿರಲಿಲ್ಲ. ಎದ್ದು ಹೋಗಿ ಆಸಕ್ತಿಯಿಂದ ಫೋಟೋ ನೋಡುತ್ತ, ‘ಲೇಬರ್ ಅಧಿಕಾರಕ್ಕೆ ಬಂದರೆ ಕನ್ಸರ್ವೇಟಿವ್ ಪಕ್ಷದಂತೆ ನಡಕೋತಾರೆ. ಆದರೆ ಕನ್ಸರ್ವೇಟೀವ್‌ಗಳು ಅಧಿಕಾರಕ್ಕೆ ಬಂದರೆ ಎಷ್ಟೋ ವಿಷಯಗಳಲ್ಲಿ ಲೆಫ್ಟಿಸ್ಟ್ ನೀತಿಯನ್ನೇ ಅನುಸರಿಸುತ್ತಾರೆ. ಇಂಗ್ಲೆಂಡ್ ರಾಜಕೀಯ ವಿಚಿತ್ರ’ ಎಂದ. ಜಗನ್ನಾಥ ಮಾಸಿದ ಫೋಟೋವನ್ನು ನೋಡುತ್ತಿರುವುದನ್ನು ಗಮನಿಸಿದ ಪುರಾಣಿಕರು,

‘That was taken many decades ago, whn I married’ ಎಂದರು.

ಫೋಟೋ ಅತ್ಯಂತ ಕುತೂಹಲಕಾರಿಯಾಗಿತ್ತು, ಪುರಾಣಿಕರ ಪಕ್ಕದಲ್ಲಿ ಅವರ ಹೆಂಡತಿ ನಿಂತಿದ್ದರು, ಪುರಾಣಿಕರು ಪೇಟ ಸುತ್ತಿ, ಕೋಟ್ ತೊಟ್ಟು ಕಚ್ಚೆ ಪಂಚೆಯುಟ್ಟಿದ್ದರು. ಪಕ್ಕದಲ್ಲಿದ್ದ ಅವರ ಹೆಂಡತಿ ಮೈತುಂಬ ಸೆರಗು ಹೊದ್ದು ನಡುವೆ ಬೈತಲೆ ತೆಗೆದು ತಲೆಯೆತ್ತಿ ನಸುನಗುತ್ತ ಪುರಾಣಿಕರ ಮೈಗೊತ್ತಿಕೊಂಡು ನಿಂತಿದ್ದರು. ಮೂರು ಗುಂಡಿಗಳನ್ನೂ ಹಾಕಿದ್ದ ಪುರಾಣಿಕರ ಕಪ್ಪು ಕೋಟಿನಲ್ಲಿ ಜಗನ್ನಾಥನನ್ನು ಆಕರ್ಷಿಸಿದ್ದ ಸಂಗತಿಯೆಂದರೆ ಅದರ ದೊಡ್ಡ ದೊಡ್ಡ ಕಾಲರುಗಳು. ಎಲ್ಲಕ್ಕಿಂತ ಮುಖ್ಯವಾಗಿ ಅವರ ಕ್ರಾಂತಿಕಾರಿ ವಿವಾಹದ ಹಿಂದಿದ್ದ ಹೊಸಯುಗದ ಧೋರಣೆಯನ್ನೆಲ್ಲ ಭಟ್ಟಿ ಇಳಿಸಿದ್ದ ವಿವರವೆಂದರೆ ಇಂತಹ ಫೋಟೋದಲ್ಲಿ ಸಾಮಾನ್ಯವಾಗಿ ಗಂಡ ಹೆಂಡಿರು ಹಾರ ಹಾಕಿಕೊಂಡೋ ಬಾಸಿಂಗ ತೊಟ್ಟೋ ನಿಲ್ಲುವಂತೆ ನಿಲ್ಲದೆ ಕೈಗಳಲ್ಲಿ ಇಬ್ಬರೂ ಪುಸ್ತಕ ಹಿಡಿದು ನಿಂತದ್ದು. ಗಂಡ ಹೆಂಡತಿ ಇಬ್ಬರೂ ಯಾವುದೋ ಪುಸ್ತಕವನ್ನು ಫೋಟೋದಲ್ಲಿ ಪ್ರಾಮುಖ್ಯವಾಗಿ ಕಾಣುವಂತೆ ಕಾನ್ವೋಕೇಷನ್ನಿನ ಸಂದರ್ಭದಲ್ಲಿ ನಿಲ್ಲುವ ರೀತಿಯಲ್ಲಿ ಎದೆಗವಚಿಕೊಂಡು ಹಿಡಿದು ನಿಂತಿದ್ದರು. ಗಂಡಹೆಂಡಿರಿಬ್ಬರ ಕಣ್ಣುಗಳಲ್ಲೂ ಹೀಗೆ ಪುಸ್ತಕಗಳನ್ನು ಹಿಡಿದು ನಿಂತ ತಾವು ಎಲ್ಲರಿಗಿಂತ ಭಿನ್ನರು ಎಂಬ ಭಾವನೆ ಇದ್ದಂತಿತ್ತು. ಫೋಟೋದ ಕೆಳಗೆ ಇಬ್ಬರ ಹೆಸರೂ, ಇದು ಅಕ್ಷತ ವಿಧವಾ ವಿವಾಹದ ಸಂದರ್ಭದಲ್ಲಿ ತೆಗೆದದ್ದೆಂದೂ ಬರೆದಿತ್ತು.

ಮೈಮರೆತು ಫೋಟೋದ ಪ್ರತಿಯೊಂದು ವಿವರವನ್ನೂ ನೋಡುತ್ತ ನಿಂತ ಜಗನ್ನಾಥನಿಗೆ ಪುರಾಣಿಕರು,

‘Have you succeeded in shocking the medieval citizens of our town?’ ಎಂದು ಕೇಳಿದರು. ಜಗನ್ನಾಥ ನಗುತ್ತ ‘ಏನೋ ಪ್ರಯತ್ನವಂತೂ ನಡೆದಿದೆ’ ಎಂದ. ಗ್ಲಾಸನ್ನು ಕೆಳಗಿಟ್ಟು, ‘ಇನ್ನೊಮ್ಮೆ ಬಂದು ನೋಡ್ತೇನೆ, ಈಗ ಹೋಗಬೇಕು, ಕ್ಷಮಿಸಿ’ ಎಂದು ಕೈ ಕುಲುಕಿದ. ‘Thanks for the wonderful whisky. Nothing else could have please me more’ ಎಂದು ಪುರಾಣಿಕರು ಮತ್ತೊಮ್ಮೆ ಕೈಕುಲುಕಿ, ಪೈಪ್ ಎತ್ತಿಕೊಂಡರು. ಗೇಟಿನ ತನಕ ಬಂದು ‘Come again’ ಎಂದು ಬೀಳ್ಕೊಟ್ಟರು.

ಜಗನ್ನಾಥ ಬಹಳ ಹರ್ಷದಿಂದ ಮನೆಗೆ ಹಿಂದುರುಗಿದ. ಆದರೆ ಸಂಜೆ ತಾನು ಮಾಡಬೇಕೆಂದಿದ್ದುದು ನೆನಪಾದಂತೆ ತಳಮಳವಾಯಿತು. ಯಾಕೆ ತಾನು ಇದ್ದಕ್ಕಿದ್ದಂತೆ ಹೀಗೆ ಎದ್ದುಹೋಗಿ ಪುರಾಣಿಕರನ್ನು ನೋಡಿ ಬಂದೆ ಎಂದು ತನ್ನ ವರ್ತನೆಯ ಬಗ್ಗೆ ಆಶ್ಚರ್ಯಪಟ್ಟ.

* * *

ಸಾಯಂಕಾಲವಾಗುವುದನ್ನೆ ಆಸೆಯಲ್ಲಿ ಭಯದಲ್ಲಿ ಕಾದಿದ್ದ ಜಗನ್ನಾಥನಿಗೆ ಅಂಗಳದಾಚೆ ಹೊಲೆಯರು ಬಂದು ನಿಂತಿದ್ದುದು ಕಾಣಿಸಿತು. ಮಹಡಿಯಿಂದ ಇಳಿಯುವಾಗ ತನ್ನ ಕಾಲುಗಳು ನಿರ್ಬಲವಾಗಿವೆ ಎನ್ನಿಸಿತು. ಅಂಗೈ ಬೆವತಿತ್ತು. ಅಂಗಳದಾಚೆ ಅವು ನಿಂತಿದ್ದಾವೆ; ಏನನ್ನೂ ನಿರೀಕ್ಷಿಸದೆ ಅವು ನಿಂತಿದ್ದಾವೆ – ಎಂದ ತನಗೇ ಅಂದುಕೊಂಡು ಚಾವಡಿಗೆ ಬಂದ. ‘ ಸ್ವಲ್ಪ  ಇರಿ, ಬಂದೆ’ ಎಂದು ಒಳಗೆ ಹೋದ. ಏನು ಹೇಳಿದರೂ ಬೆಪ್ಪಾಗಿ ಕೇಳಿಸಿಕೊಳ್ಳುತ್ತವೆ; ಈಗ ಪಂಚೆಯುಟ್ಟು ಅಪರಾಧಿಗಳಂತೆ ನಿಂತಿವೆ. ಜಗನ್ನಾಥನಿಗೆ ಯಾತನೆಯಾಯಿತು. ಚಾವಟಿಯಲ್ಲಿ  ಹೊಡೆದಂತಾಗಬೇಕು. ಆಗ ಎಚ್ಚತ್ತಾವು. ಮೋಸ ದಹ ದುರಾಸೆಯ ಈ ಪ್ರಪಂಚಕ್ಕೆ ಬಂದು ಬಿದ್ದು ಕೈಯೊಡ್ಡಿ ಯಾವು. ಬಯಸಿದವು. ಕಲಿತಾವು.

ನಿಶ್ಛಯ ಗಟ್ಟಿಯಾಯಿತು. ಜಗನ್ನಾಥ ದೇವರ ಮನೆಯ ಎದುರು ನಿಂತ.

ಕತ್ತಲಿನ ಕೋಣೆಯಲ್ಲಿ ಹೊಳೆಯುವ ಕಂಚಿನ ದೀಪಗಳು. ಸಂಪುಟದಲ್ಲಿ ಮನೆಯ ದೇವರಾದ ನರಸಿಂಹ ಶಾಲಿಗ್ರಾಮವಿದೆ. ಅದಕ್ಕೆ ಮುಟ್ಟುಚಟ್ಟಾದರೆ ಮನೆಯೊಳಗೆ ಕಾಳಿಂಗಸರ್ಪ ಬರುತ್ತದೆ, ತೋಟಕ್ಕೆ ಬೆಂಕಿ ಬೀಳುತ್ತದೆ ಎಂದು ನಂಬಿಕೆ. ಸಾವಿರ ವರ್ಷದ ಶಾಲಿಗ್ರಾಮವಂತೆ. ನಿತ್ಯ ಅದರ ತೀರ್ಥವನ್ನು ಎಷ್ಟು ವರ್ಷಗಳಿಂದಲೋ ಈ ಮನೆತನದವರು ಕುಡಿದ ಮೇಲೆಯೇ ಊಟ ಮಾಡುವುದು.

ಮತ್ತೊಮ್ಮೆ ಸ್ನಾನ ಮಾಡಿ ಬಂದ ಪೂಜೆಯ ಭಟ್ಟರು ನಂದಾದೀಪಕ್ಕೆ ಎಣ್ಣೆ ಹಾಕಿದರು. ಹಗಲು ರಾತ್ರೆ ಉರಿಯುವ ಈ ದೀಪಕ್ಕೊಂದು ವಾಸನೆಯೂ ಇದೆ ಅನ್ನಿಸಿತು. ಗಂಧ, ಸಂಜೆಯ ಹೊತ್ತಿಗೆ ಮಲಿನವಾಗಿರುವ ತುಳಸಿ, ಶಂಕುಪುಷ್ಪ, ಗುಲಾಬಿ, ಕೆಂಡಸಂಪಿಗೆ, ಎಣ್ಣೆ, ಊದುಬತ್ತಿ ಮಿಶ್ರಿತವಾದ ಕೊಳೆಯುವ ಸವಿವಾದ ವಾಸನೆ, ಬತ್ತಿಯಿಂದ ಬತ್ತಿಗೆ ಅಂಟಿ ಉರಿಯುತ್ತಲೇ ಇರುವ ದೀಪದ ಚೂಪಾದ ನಾಲಗೆ, ಇದರಿಂದ ಅಂಟಿಸಿಕೊಂಡ ಬೆಂಕಿಯ ಎದುರು ಉಪನಯನ; ಮತ್ತೆ ಈ ಬೆಂಕಿಯಿಂದಲೇ ಲಗ್ನದ ಹೋಮ. ಪ್ರಾಯಶಃ ಸಾವಿರ ವರ್ಷಗಳಿಂದಲೂ ಉರಿಯುತ್ತ ಬಂದಿರುವ ಬೆಂಕಿಯೆಂದು ಚಿಕ್ಕಿ ತಿಳಿದಿದ್ದಾರೆ. ಸನಾತನವಾದ ದೀಪ.

ಈ ಸಾತತ್ಯದ ಕಲ್ಪನೆಯನ್ನು ಕಂಡರೆ ಜಗನ್ನಾಥನಿಗೆ ಕೆಲವೊಮ್ಮೆ ನಗುಬರುತ್ತದೆ. ಮಜ್ಜಿಗೆಯಿಂದ ಹೆಪ್ಪು. ಈ ಹೆಪ್ಪಿನ ಮಜ್ಜಿಗೆಯಿಂದ ನಾಳೆಯ ಹೆಪ್ಪು, ಅದರ ಮಜ್ಜಿಗೆಯಿಂದ ನಾಡಿದ್ದಿನ ಮೊಸರು ಹೀಗೆ ವರ್ಷವಿಡೀ ಅದೇ ಮಜ್ಜಿಗೆಯಿಂದ ಹಾಲು ಹೆಪ್ಪಾಗುತ್ತ ಹೋಗುತ್ತದೆಂದು ಚಿಕ್ಕಿ ವರ್ಷಕ್ಕೊಂದು ಸಾರಿ ಹೊಸ ಹೆಪ್ಪು ಮಾಡುತ್ತಾರೆ – ಸ್ವಾತಿ ಮಳೆಯ ನೀರನ್ನು ಹಾಲಿಗೆ ಹಾಕಿ. ಆದರೆ ಆ ದೀಪ ಮಾತ್ರ ಮನೆಗೆ ಅಗ್ನಿಯನ್ನು ಒದಗಿಸುತ್ತ ಶತಮಾನಗಳಿಂದ ಉರಿಯುತ್ತಲೇ ಇದೆ.

ಸಂಬಳ ತೆಗೆದುಕೊಳ್ಳವ ಆರ್ಚಕ ಭಟ್ಟರ ಕಾಪಾಡಿಕೊಂಡು ಬಂದ ಶಿಖೆ ಇದು. ಎಲ್ಲೋ ಒಂದು ದಿನ ಮರೆತದ್ದರಿಂದ ಎಣ್ಣೆ ತೀರಿ ಯಾಕೆ ಇದು ಆರಿರಬಾರದು? ಭಟ್ಟರು ಅವಸರದಿಂದ ಕಡ್ಡಿ ಗೀರಿ ಹತ್ತಿಸಿರಬಾರದು? – ಆದರೂ ನಂಬಿಕೆ; ಮನೆತನದ ದೀಪ, ಸಾವಿರ ವರ್ಷದಿಂದ ಉರಿದು ಬಂದಿರುವ ದೀಪ, ಪಿತೃಗಳು ಹೊತ್ತಿಸಿಟ್ಟಿರುವ ದೀಪ ಇತ್ಯಾದಿ.

ಪೂಜೆಯ ಭಟ್ಟರ ಎದುರಲ್ಲೇ ಒಳಗೆ ಹೋಗಿ ನರಸಿಂಹ ಶಾಲಿಗ್ರಾಮ ತರುವುದೆ? ಅಂಗಿ ಹಾಕಿಕೊಂಡು ಮೈಲಿಗೆಯಲ್ಲೆ ಒಳಗೆ ಹೋಗುವುದೆ? ಸಂಪುಟ ಸಮೇತ ತುರುವುದೆ? ಜಗನ್ನಾಥನಿಗೆ ಎದೆ ಹೊಡೆದುಕೊಳ್ಳತೊಡಗಿತು. ಪಾದಗಳು ಬೆವರಿದವು. ಇನ್ನು ಹಿಂದೆಗೆಯಲಾರೆನೆನ್ನಿಸಿ ಒಳಗೆ ಹೋದ, ಮೈಲಿಗೆಯಲ್ಲಿ ಸಾಹುಕಾರ್ರು ಒಳ ಬರುವುದು ನೋಡಿ ಭಟ್ಟರು ಅವಾಕ್ಕಾದರು.

ತಾನೇನೂ ಅಸಾಮಾನ್ಯವಾಗಿ ವರ್ತಿಸುತ್ತಿಲ್ಲೆಂದು ನಟಿಸುವುದು ಜಗನ್ನಾಥನಿಗೆ ಅವಶ್ಯಕವಾಗಿತ್ತು. ಆದರೂ ಗಾಬರಿಯಾದ ಭಟ್ಟರ ಕಣ್ಣೆದುರು ಹಿಂಸೆಗೆ ಕೆರಳಿ ನಿಂತವನಂತೆ ಜಗನ್ನಾಥ ಕೈಯೊಡ್ಡಬೇಕಾಯ್ತು. ಯಾರೂ ಕೈಹಿಡಿದುರ ತನ್ನನ್ನು ಎಳೆಯದಿದ್ದರೂ ಮನೆ ಮಂದಿಯೆಲ್ಲ ತನ್ನನ್ನು ಹಿಂದಕ್ಕೆ ಜಗ್ಗುತ್ತಿದ್ದರೂ ಎಂಬಂತೆ ಉಸಿರುಕಟ್ಟಿ ಮುನ್ನುಗ್ಗಿ ಸಂಪುಟದ ಸಮೇತವಾಗಿ ಶಾಲಿಗ್ರಾಮವನ್ನು ಎತ್ತಿದ. ತಾನು ಅನುಭವಿಸುತ್ತಿರುವ ಒತ್ತಡ ಎಷ್ಟು ಹಾಸ್ಯಾಸ್ಪದ ಎಂದು ಅನ್ನಿಸಿದರೂ ಕಣ್ಣುಗಳು ಉರಿಯುತ್ತಿದ್ದುವು. ಮುಖ ಬಿಸಿಯಾಗಿತ್ತು. ನೆಟ್ಟಗೆ ಚೂಪಾಗಿ ಉರಿಯುವ ದೀಪದ ಹಿಂದೆ ನಿಂತ ಭಟ್ಟರು ದೀರ್ಘ ನೆರಳಾಗಿದ್ದರು. ಜಗನ್ನಾಥ ಮುಗುಳ್ನಗಲು ಪ್ರಯತ್ನಿಸಿ ವಿಕಾರವಾಗಿ ಅವರ ಕಡೆ ನೋಡಿದ ಏನು ಮಾಡಬೇಕೆಂದು ತೋಚದ ಭಟ್ಟರು ಬತ್ತಿಯನ್ನು ತಳ್ಳಿ ದೀಪವನ್ನು ಬೆಳೆಸುತ್ತ, ನಗಲು ಪ್ರಯತ್ನಿಸುತ್ತ ‘ಏನು ಬೇಕಿತ್ತು?’ ಎಂದು ಕೇಳಿದರು. ಜಗನ್ನಾಥ ಸಮಾಧಾನದಿಂದ ‘ಏನಿಲ್ಲ’ ಎಂದು ಸಣ್ಣದನಿಯಲ್ಲಿ ಹೇಳಿ, ‘ಐದು ನಿಮಿಷ ಅಷ್ಟೆ. ಹಿಂದಕ್ಕೆ ತಂದು ಬಿಡ್ತೀನಿ’ ಎಂದು ಸಭ್ಯವಾದ ಮಾತಿನಲ್ಲಿ ಕ್ಷಮೆ ಬೇಡುವವನಂತೆ ಕೇಳಿದ.

ಓಡಬೇಕೆಂಬ ಅಸೆಯನ್ನು ಅದುಮಿಕೊಂಡು ತಲೆ ತಗ್ಗಿಸಿ ದೇವರ ಮನೆ ಬಾಗಿಲು ದಾಟಿದ. ನಿಧಾನವಾಗಿ ನಡೆಯುತ್ತ ಚಾವಡಿಗೆ ಬಂದ. ಅನಾವಶ್ಯಕವೆನ್ನಿಸಿದರೂ, ಅವನ ಕೈ ಮಾತ್ರ ಶಾಲಿಗ್ರಾಮವಿದ್ದ ಸಂಪುಟವನ್ನು ನೋಯುವಷ್ಟು ಗಟ್ಟಿಯಾಗಿ ಹಿಡಿದುಕೊಂಡಿತ್ತು.

ಚಾವಡಿಯಿಂದಿಳಿದು ಅಂಗಳಕ್ಕೆ ಬಂದ. ನಿಂತ. ಹಿಂದಕ್ಕೆ ತಿರುಗಿ ನೋಡಬೇಕೆಂಬ ಆಸೆಯನ್ನು ಅದುಮಿಕೊಂಡು. ಆದರೂ ಬಾಗಿಲಲ್ಲಿ ಚಿಕ್ಕಿ, ಪೂಜೆಯ ಭಟ್ಟರು, ಅಡಿಗೆಯವರು, ಅವರ ಮಕ್ಕಳು ನಿಂತು ತನ್ನನ್ನು ನೋಡುತ್ತ ನಿಂತಿದ್ದಾರೆ ಎನ್ನಿಸಿತು. ತನ್ನ ಬೆನ್ನಿನ ಮೇಲೆ ಚುಳುಕಾಗುವಂತೆ ಚಿಕ್ಕಿ ತನ್ನನ್ನು ನೋಡುತ್ತಿದ್ದಾರೆ. ಹಿಂದಕ್ಕೆ ತಿರುಗಿ ಅವರ ಕಣ್ಣಿಗೆ ಕಣ್ಣಿಟ್ಟು ನೋಡಿ, ಅವರ ಆರ್ತತೆಯನ್ನು ಜರಿದುಬಿಡುವುದರಿಂದ ತನ್ನ ಈ ಯಾತನೆಯನ್ನು ಕಳೆದುಕೊಳ್ಳಬಹುದಿತ್ತು. ಆದರೆ ತಿರುಗಿ ನೋಡಲಾರದಷ್ಟು ಅವನಿಗೆ ಭಯವಾಗಿತ್ತು. ಅಥವಾ ಕಣ್ಣಿಗೆ ಕಣ್ಣಿಟ್ಟು ನೋಡಿ ಅವರನ್ನು ತಿರಸ್ಕರಿಸುವ ಹಿಂಸೆ ಅತಿಯಾದೀತೆಂದೂ ಅನ್ನಿಸಿತ್ತು. ಸಂಪುಟ ಹಿಡಿದ ಕೈ ಬೆವರುತ್ತಿತ್ತು. ಈ ನರಸಿಂಹ ಶಾಲಿಗ್ರಾಮ ಪ್ರಾಯಶಃ ಹೊಸಿಲು ದಾಟಿದ್ದೇ ಇಲ್ಲ. ಚಿಕ್ಕಿ ಮಾತಾಡಲಾರದಷ್ಟು ಅವಾಕ್ಕಾಗಿ ನಿಂತಿರಬಹುದು. ತಾನು ಹಿಂದಕ್ಕೆ ಬರಲಿ ಎಂದು ತಮ್ಮ ಪ್ರಾಣವನ್ನೆಲ್ಲ ಕಣ್ಣಲಿಟ್ಟು ನನ್ನನ್ನು ಪ್ರಾರ್ಥನೆಯಲ್ಲಿ ಸೆಳೆಯುತ್ತಿರಬಹುದು. ಯಾಕೆ ನಾನು ಸುಮ್ಮದೇ ಹೀಗೆ ನಿಂತಿದ್ದೇನೆ ಎಂದು ಎದುರು ನೋಡಿದ. ಬಿಳಿ ಪಂಚೆಯುಟ್ಟು ಹೊಲೆಯರು ಅನಾಥರಂತೆ ಅಂಗಳದಾಚೆ ನಿಂತಿದ್ದುವು. ಅವುಗಳ ಕಣ್ಣುಗಳು ಏನನ್ನೂ ನಿರೀಕ್ಷಿಸುತ್ತಿರುವಂತೆ ತೋರಲಿಲ್ಲ. ಬಾಗಿಲಲ್ಲಿ ನಿಂತ ಚಿಕ್ಕಿಯನ್ನ ತನ್ನನ್ನ ಅವು ಸುಮ್ಮನೇ ನೋಡುತ್ತಿದ್ದಾವೆ ಅಷ್ಟೆ. ಮುಂದೇನು ಸ್ಫೋಟಿಸೀತು ಎಂದವಕ್ಕೆ ಗೊತ್ತಿಲ್ಲ. ಬೇಕಿಲ್ಲ.

ಜಗನ್ನಾಥ ನಿಧಾನವಾಗಿ ನಡೆದ. ದೂರದ ಬೆಟ್ಟದ ಹೆಗಲಿನ ಮೇಲೆ ಸೂರ್ಯ ಕೆಂಪು ಉಂಡೆಯಾಗಿದ್ದ. ಹುಲ್ಲಿನ ದಿಬ್ಬದ ಮೇಲೆ ಸಂಜೆಯ ಹಿಂದೆಗೆಯುವ ತೆಳು ಬಿಸಿಲು ಬಿದ್ದಿತ್ತು. ಗುಡ್ಡದ ಕೆಳಗೆ ಹಾವಿನಂತೆ ಡೊಂಕಾದ ರಸ್ತೆಯಲ್ಲಿ ಶಿವಮೊಗ್ಗದಿಂದ ಲಾಸ್ಟ್ ಬಸ್ಸು ಧೂಳೆಬ್ಬಿಸುತ್ತ ಬರುವುದು ಕಂಡಿತು. ಕೊರಳಿನ ಗಂಟೆಯನ್ನು ಶಬ್ದ ಮಾಡುತ್ತ ಹಸು ಕರುಗಳು ಕೊಟ್ಟಿಗೆ ಕಡೆ ಬಂದವು. ಈ ಹೊತ್ತಿಗೆ ಚಿಕ್ಕಿ ಎದುರು ನಿಂತರಬೇಕಿತ್ತು. ಕಾವೇರಿ ತಲೆಯ ಮೇಲೆ ಒಂದು ಹೊರೆ ಸೌದೆ ಹೊತ್ತು, ಸೀರೆಯನ್ನು ಮೇಲಕ್ಕೆ ಸಿಕ್ಕಿಸಿಕೊಂಡು, ಭಾರಕ್ಕೆ ಅವಸರವಾಗಿ ಹೆಜ್ಜೆಹಾಕುತ್ತ ಅಂಗಳ ಹಾಯ್ದಳು. ಈ ಹೊಲೇರ ಕುರ್ದೆಗಳು ಅಯ್ಯನವರಂತೆ ಬಿಳಿಯಂಗಿ ತೊಟ್ಟು ಬಿಳಿ ಪಂಚೆಯುಟ್ಟದ್ದು ಅವಳಿಗೆ ಹಾಸ್ಯಸ್ಪದವಾಗಿ ಕಂಡಿರಬೇಕು; ಕಿಸಕ್ಕೆಂದು ನಕ್ಕಳು.

ಜಗನ್ನಾಥನಿಗೆ ಇದ್ದಕ್ಕಿದ್ದಂತೆ ಎಷ್ಟು ಅಸಂಬದ್ದ ಸನ್ನಿವೇಶ ಅನ್ನಿಸಿತ್ತು. ಈ ಶಾಲಿಗ್ರಾಮ ನನ್ನ ಪಾಲಿಗೆ ಬರಿ ಒಂದು ಕಲ್ಲಿನ ಉಂಡೆ. ಆದರೂ ಅದರ ಸುತ್ತ ಉತ್ಕಟ ನಾಟಕ! ಈ ಕಲ್ಲಿನುಂಡೆಯನ್ನು ಮುಟ್ಟುವುದು ಹೊಲೆಯರಿಗೆ ಒಂದು ಮಹತ್ವದ ಅನುಭವ ಅಂತ ಆಕೆ ನಾನು ತಿಳಿದಿದ್ದೇನೆ? ಇಡೀ ಅಂಗಳವನ್ನು ಒಂದು ಅಯಸ್ಕಾಂತ ಕ್ಷೆತ್ರ ಮಾಡಿ ಕಣ್ಣ ಮುಂದೆ ಹೊಲೆಯರನ್ನೂ ಬೆನ್ನ ಹಿಂದೆ ಚಿಕ್ಕಿಯನ್ನೂ ನಿಲ್ಲಿಸಿಕೊಂಡು ತಾನು ಈಗ ಮಾಡುತ್ತಿರುವುದಕ್ಕೂ, ತುಂಬ ತಿಳಿಯಾಗಿ ತರ್ಕಬದ್ಧವಾಗಿ ವಿಚಾರಮಾಡಿ ದೇವರಿಲ್ಲವೆಂಬ ವೈಜ್ಞಾನಿಕ ತೀರ್ಮಾನಕ್ಕೆ ಬಂದ ತನ್ನ ವ್ಯಕ್ತಿತ್ವಕ್ಕೂ ಏನಾದರೂ ಸಂಬಂಧವಿದೆಯೇ ಎಂದು ಸಂದೇಹವಾಯಿತು.

ಹೊಲೆಯರಿಗೆ ಮುಟ್ಟಿಸಹೋಗುವುದರ ಮೂಲಕ ಈ ಕಲ್ಲಿನುಂಡೆಯನ್ನು ಶಾಲಿಗ್ರಾಮ ಮಾಡುತ್ತಿರೋದು ತಾನೇ ಎಂದು ಜಗನ್ನಾಥನಿಗೆ ತನ್ನ ಕ್ರಿಯೆಯ ಆಭಾಸ ಥಟ್ಟನೇ ಹೊಳೆಯಿತಾದರೂ ಅಲ್ಲಾಡಲಾರದಂತೆ ನಿಂತ. ತುಂಬ ಪ್ರಯತ್ನಪಟ್ಟು ಬೆನ್ನ ಹಿಂದೆ ನೋಡಿದ. ಚಿಕ್ಕಿಯಾದಿಯಾಗಿ ಮನೆಮಂದಿಯೆಲ್ಲ ನಿಂತಿದ್ದರು. ಜಗುಲಿಯ ಮೂಲೆಯಲ್ಲಿ ಕೆಲಸದ ಆಳುಗಳೂ ನಿಂತಿದ್ದರು. ತನ್ನನ್ನೇ ನೋಡುತ್ತಿದ್ದರು. ಚಿಕ್ಕಿಯ ಬಾಯಿ ಒಣಗಿರಬೇಕು; ಇಲ್ಲದಿದ್ದಲ್ಲಿ ತನ್ನನ್ನವರು ಖಂಡಿತ ಕರೆಯುತ್ತಿದ್ದರು. ಮಗನ ಹೆಣವನ್ನು ಸ್ಮಶಾನಕ್ಕೆ ಒಯ್ಯುವುದನ್ನು ನೋಡುತ್ತ ನಿಂತ ತಾಯಿಯಂತೆ ಅವರು ನಿಂತಿದ್ದರು. ಯಾವತ್ತೂ ಹೊಸಲು ದಾಟದ ಸಾವಿರ ವರ್ಷದ ನರಸಿಂಹ ಶಾಲಿಗ್ರಾಮದ ಬಗ್ಗೆ ಅವರು ಯೋಚಿಸುತ್ತಿರಬಹುದಾದ್ದೆಲ್ಲ ಜಗನ್ನಾಥನ ಪ್ರಜ್ಞೆಯ ಒಂದಂಶವಾಗಿಬಿಟ್ಟಿತು. ಚಿಕ್ಕಿಯ ಕಣ್ಣಗಳೂ ತನ್ನೊಳಗಿದ್ದಾವೆ ಎನ್ನಿಸಿ ಕೈಯಲ್ಲಿ ಬಿಗಿಯಾಗಿ ಹಿಡಿದಿದ್ದ ಕಪ್ಪು ಶಿಲೆ ಕೆಂಡದಂತೆ ಉರಿಯಿತು.

ಹೊಲೆಯರಿಗಾಗಿ ತಾನಿದನ್ನು ಮಾಡುತ್ತಿರುವುದೊ ಅಥವಾ ತನಗಾಗಿಯೊ? ಬ್ರಾಹ್ಮಣತ್ವದ ವಿಸರ್ಜನೆಗಾಗಿಯೂ? ಹೀಗೇ ವಿಸರ್ಜಿಸಿಕೊಳ್ಳುತ್ತ ಅಡಿಗರು ಹೇಳುವ ಅವಧೂತನ ದಾರಿಯನ್ನು ನಾನೀಗ ತುಳಿಯುತ್ತಿರುವುದೊ? ಹೇಗೆ ಈ ಘಳಿಗೆಯಲ್ಲಿ ತಾನು ಕಲಿತಿದ್ದ ಮಾರ್ಕ್ಸ್ ರಸೆಲ್ಲರೆಲ್ಲ ತನ್ನಿಂದ ಇಂಗಿಹೋಗುತ್ತಿದ್ದಾರೆಂದು ಜಗನ್ನಾಥನಿಗೆ ತಬ್ಬಿಬಾಯಿತು.

ತಾನು ವಿಚಾರ ಮಾಡಿದ್ದನ್ನು ಮತ್ತೆ ಸ್ಪಷ್ಟಪಡಿಸಿಕೊಳ್ಳಲು ಪ್ರಯತ್ನಿಸಿದ. ಯಾವುದನ್ನೂ ನಿರೀಕ್ಷಿಸದ ಹೊಲೆಯರೂ ಇನ್ನೂ ರೂಪಧಾರಣಮಾಡದ ಪ್ರೇತಗಳಂತೆ ಎದುರು ನಿಂತಿದ್ದಾವೆ. ನಾನು ಹೀಗೆ ತುಯ್ಯುತ್ತ ಇಲ್ಲಿ ನಿಂತಿರಲಾರೆ. ನನ್ನ ನಿರ್ಧಾರ ನಿರ್ಬಲವಾದ ಘಳಿಗೆ ಚಿಕ್ಕಿಯ ಕಣ್ಣುಗಳು ನನ್ನನ್ನು ಆಕ್ರಮಿಸಿ ಗೆದ್ದುಬಿಡುತ್ತವೆ. ಈ ನಿಮಿಷ ಶಾಲಿಗ್ರಾಮವನ್ನು ಮುಂದೊಡ್ಡಿ ನಡೆದಿರುವ ನಾನು, ಆಳುಕಿನಲ್ಲಿ ಹಿಮ್ಮೆಟ್ಟುವ ನಾನು ಬೇರೆಯಲ್ಲ. ಯಾಕೆ ಈ ಕ್ರಿಯೆ ನನ್ನ ತಲೆಗೆ ಬಂತು? ಊರಿನ ಮಂಜುನಾಥನಿಗಿಂತ ಮೊದಲು ಮನೆಯ ಇಷ್ಟದೇವತೆಗೆ ಹೊಲೆಯ ಸ್ಪರ್ಶವಾಗಬೇಕು. ಇಲ್ಲವೇ ನನ್ನ ನಿರ್ಧಾರ ನಿಜವಾಗಲಾರದು, ದೃಢವಾಗಲಾರದು, ಹೊಲೆಯರು ಹಳೆಯದನ್ನು ನೀಗಿ ಹೊಸದನ್ನು ಪಡೆಯಲಾರರು. ಈ ಕ್ರಿಯೆಗೆ ಅಗತ್ಯವಾದ ಹಿಂಸೆಗೆ ನಾನು ತಯಾರಾದರೆ ಪರಿವರ್ತನೆಯ ಹಿಂಸೆಯ ಮೊದಲನೇ ಪಾಠ ಕಲಿತಂತೆ-ಇತ್ಯಾದಿ ಯೋಚಿಸಿದ್ದೆ. ನಾನು ಯೋಚಿಸಿದ್ದು ಸರಿ ಎಂದು ಮುಂದೆ ಹೆಜ್ಜೆಯಿಡಬೇಕು-ಅಷ್ಟೆ. ಇಲ್ಲವಾದರೆ ಬೆನ್ನ ಹಿಂದಿನ ಚಿಕ್ಕಿ ಗೆಲ್ಲುತ್ತಾರೆ. ಮತ್ತೊಮ್ಮೆ ನಿಷ್ಠುರವಾಗಿ ತಿರುಗಿ ನೋಡಿದ. ಇಡೀ ಮನೆ ಪ್ರೇತಕಳೆ ಹೊತ್ತು ನಿಂತಿತ್ತು; ತನ್ನನ್ನು ತಿರಸ್ಕರಿಸಿ ಅಂಗಳದಲ್ಲಿ ಬಿದ್ದ ಒಂದು ಶುಷ್ಕವಸ್ತುವನ್ನಾಗಿ ಮಾಡಿತ್ತು.

ಈ ಭೀತಿ ಮತ್ತು ಆತಂಕದ ಸನ್ನಿವೇಶ ಮೊದಲೇ ಅಪರಾಧಿಗಳಂತೆ ಪಂಚೆಯುಟ್ಟು ನಿಂತಿದ್ದ ಹೊಲೆಯರಿಗೆ ದಿಗಿಲು ಹುಟ್ಟಿಸಿರಬೇಕು. ತನು ಮುಂದೆ ಹೆಜ್ಜೆ ಇಟ್ಟು ಅಂಗಳ ಹಾದು ಹೋಗಿ ಅವುಗಳಿಗೆ ಕೈಯಲ್ಲಿರುವ ಶಿಲೆಯನ್ನು ಒಡ್ಡದಿದ್ದರೆ ಅವು ಹೊರಟು ಹೋದಾವು. ತುರ್ತಾಗಿ ಏನನ್ನಾದರೂ ಮಾಡಿಬಿಡಬೇಕಾದ ಸನ್ನಿವೇಶದಲ್ಲಿ ತಾನಿದ್ದೇನೆಂದು ಮನದಟ್ಟಾ ದೊಡನೆ ಜಗನ್ನಾಥ ಸರಸರ ಹೆಜ್ಜೆ ಹಾಕಿದ.

ನಡೆಯುವಾಗ ಅಂದುಕೊಂಡ; ಮುಖ್ಯವಾದ ಪ್ರಶ್ನೆ ಇದು: ದೇವರು ಯಾಕೆ ನನ್ನನ್ನು ಹೀಗೆ ಆಕ್ರಮಿಸಿದ್ದಾನೆ? ಕಲ್ಲೆಂದು ಸ್ಥಾಪಿಸಹೋದದ್ದು ಯಾಕೆ ಶಾಲಿಗ್ರಾಮವಾಯಿತು? ಗಂಟೆಗಳು ಯಾಕೆ ನನ್ನೊಳಗೆ ಮೊಳಗುತ್ತಾವೆ? ವಿಲಕ್ಷಣವಾದೊಂದು ವಿದ್ಯುಕ್ತಕ್ರಿಯೆಯ ಪುರೋಹಿತನ ಹಾಗೆ ತಾನು ಪ್ರತಿ ಹೆಜ್ಜೆಗೂ ಕಲ್ಲನ್ನು ಶಾಲಿಗ್ರಾಮ ಮಾಡುತ್ತ, ಆದರೆ ಇದು ಶಾಲಿಗ್ರಾಮವಲ್ಲ ಬರಿ ಕಲ್ಲೆಂದು ಸಾರಲು ಯತ್ನಿಸುತ್ತ ನಡೆದಿದ್ದೇನೆ. ಯಾವ ಸ್ಪಷ್ಟ ಅಪೇಕ್ಷೆಯೂ ಇಲ್ಲದೆ ಮೇಯುವಾಗ ಮುಖ ಎತ್ತಿ ನೋಡುವ ಪಶುವಿನ ಕಣ್ಣುಗಳ ಹಾಗೆ ಹೊಲೆಯರ ಕಣ್ಣುಗಳು ನನ್ನನ್ನು ನೋಡುತ್ತಿವೆ, ಏನನ್ನೂ ನಿರೀಕ್ಷಿದೆ. ಅವಕ್ಕೆ ಭೂತವಿಲ್ಲ, ಭವಿಷ್ಯವಿಲ್ಲ. ಬೆನ್ನ ಹಿಂದಿನ ಕಣ್ಣುಗಳಲ್ಲಿ ಅಂತಃಕಾರಣವಿದೆ. ಜಗ್ಗುತ್ತಾವೆ. ನಾನೀಗ ಮಗುಚಿಕೊಳ್ಳುವೆನೊ, ಮಗ್ಗಲು ಬದಲಿಸಿ ಅವುಗಳ ಮನಸ್ಸಿನಲ್ಲಿ ಫಲವಾಗುತ್ತಾಗುವೆನೊ ನೋಡಬೇಕು.

ಹೊಲೆಯರ ಹತ್ತಿರ ಹೋಗಿ ನಿಂತ. ಒಡೆಯ ಎಷ್ಟ ಹತ್ತಿರ ಬಂದುಬಿಟ್ಟನೆಂದು ಅವು ಹಿಂದಕ್ಕೆ ಸರಿದವು. ಸಂಪುಟದ ಮುಚ್ಚಳ ತೆರೆಯುವಾಗ ಜಗನ್ನಾಥನಿಗೆ ತನ್ನ ಕ್ರಿಯೆ ಎಷ್ಟು ಅಭಾಸವೆನ್ನಿಸಿತೆಂದರೆ, ಈಗ ಶಂಖ ಜಾಗಟೆಗಳು ಮೊಳಗಿದರೆ ಸರಿಯಾದ ವ್ಯಾಖ್ಯಾನವಾಗುತ್ತೆ ಅಂದುಕೊಂಡ. ಆದರೆ ಬೆತ್ತಲೆಯಾದ ಕಪ್ಪದ ಕಲ್ಲನ್ನು ಅಂಗೈ ಮೇಲಿಟ್ಟು ಹೊಲೆಯರಿಗೆ ಒಡ್ಡಿ ನಿಂತ ಮುಹೂರ್ತ ನಿಧಾನವಾಗಿ ತನಗೆ ಪರಿವೆಯಿಲ್ಲದಂತೆ ತನ್ನನ್ನು ಆಕ್ರಮಿಸಿತು. ಗಂಟಲಿನ ನರಗಳು ಉಬ್ಬಿದವು. ಆಳವಾದ ನಡುಗುವ ಸ್ವರದಲ್ಲಿ,

‘ಮುಟ್ಟಿ’ ಎಂದ.

ಸುತ್ತಲೂ ನೋಡಿದ. ಸೂರ್ಯ ಮುಳುಗುತ್ತಿದ್ದಾನೆ. ಬಾಗಿಲಲ್ಲಿ ಭಯಗ್ರಸ್ತರಾಗಿ ನಿಂತ ಚಿಕ್ಕಿ, ಪೂಜೆ ಭಟ್ಟರು. ಅಲ್ಲದೆ ಜನಾರ್ಧನಸೆಟ್ಟಿ ಅಂಗಳದೊಂದು ಮೂಲೆಯಲ್ಲಿ ನಿಂತಿದ್ದ. ಒಕ್ಕಲಿಗೆ ಜಾತಿಯ ಆಳುಗಳು ಸೊಂಟಕ್ಕೆ ಕತ್ತಿ ಸಿಕ್ಕಿಸಿ ಇನ್ನೊಂದು ಮೂಲೆಯಲ್ಲಿ ಗುಂಪಾಗಿ ನಿಂತು ನೋಡುತ್ತಿದ್ದುವು. ಮುಖ ಒರೆಸಿಕೊಳ್ಳುತ್ತ ಕಾವೇರಿ ಚಿಟ್ಟೆಗೊರಗಿ ನಿಂತಿದ್ದಳು. ಎದುರು ಬೆಪ್ಪರಂತೆ ಹೊಲೆಯರು ನಿಂತಿದ್ದವು. ಜಗನ್ನಾಥನ ಮೈ ಕಂಪಿಸಿತು, ಕೂದಲುಗಳು ಎದ್ದು ನಿಂತವು. ಪುಸಲಾಯಿಸುವ ಸ್ವರದಲ್ಲಿ.

‘ಮುಟ್ಟಿ’ ಎಂದು ಎರಡನೆ ಬಾರಿ ಬೇಡಿದ.

ಆಡಬೇಕಾದ ಮಾತುಗಳೆಲ್ಲ ಗಂಟಲೆಲ್ಲ ಹೂತವು. ಇದು ಯಃಕಶ್ಚಿತ್ ಪದಾರ್ಥ ಮುಟ್ಟಿ; ನನ್ನ ಜೀವನವನ್ನೆ ಕೈಯಲ್ಲಿ ಹಿಡಿದು ಒಡ್ಡಿದ್ದೇನೆ ಮುಟ್ಟಿ; ನನ್ನ ಅಂತರಂಗದ ಅತ್ಯಂತ ಆಯಸ್ಥಳವನ್ನು ಮುಟ್ಟಿ; ಸಂಜೆಯ ಅರ್ಚನೆಯ ಹೊತ್ತಿದು. ಮುಟ್ಟಿ. ಎಂದೂ ಆರದ ದೀಪ ಅಲ್ಲಿ ಬರಿದೇ ಉರಿಯುತ್ತಿದೆ. ಹಿಂದೆ ನಿಂತವರು ಎಷ್ಟು ಋಣಾನುಬಂಧಗಳನ್ನು ಜ್ಞಾಪಿಸುತ್ತ ಜಗ್ಗುತ್ತಿದ್ದಾರೆ. ಯವುದಕ್ಕಾಗಿ ಕಾದಿದ್ದೀರಿ. ನಾನು ಏನು ಒಡ್ಡಿದ್ದೇನೆ. ಪ್ರಾಯಶಃ ಹೀಗೆ : ನಾನು ಇಗೋ ಇದು ಬರಿ ಕಲ್ಲು ಎಂದು ಒಡ್ಡಿದ್ದರಿಂದಲೇ ಇದು ಶಾಲಿಗ್ರಾಮ. ಒಡ್ಡಿದ್ದನ್ನು ನೀವು ಮುಟ್ಟಿದರೆ ಅವರಿಗೆಲ್ಲ ಇದು ಕಲ್ಲಗುತ್ತದೆ. ಈ ನನ್ನ ಆರ್ತತೆ ಶಾಲಿಗ್ರಾಮವಾಗುತ್ತದೆ; ನಾನು ಒಡ್ಡಿದ್ದರಿಂದ ನೀವು ಮುಟ್ಟಿದ್ದರಿಂದ ಅವರೆಲ್ಲ ನೋಡಿದ್ದರಿಂದ ಈ ಕಪ್ಪಾಗುತ್ತಿರುವ ಸಂಜೆಯಲ್ಲಿ ಕಲ್ಲು ಶಾಲಿಗ್ರಾಮವಾಗಲಿ, ಶಾಲಿಗ್ರಾಮ ಕಲ್ಲಾಗಲಿ. ಕಾಡುಹಂದಿ ಬರಲಿ, ಹುಲಿ ಬರಲಿ ಹೆದರದೇ ಇರುವ ಪಿಳ್ಳ ಮುಟ್ಟು. ಆಮೇಲೆ ದೇವಸ್ಥಾನದ ಹೊಸಲು ದಾಟುವ ಒಂದೇ ಒಂದು ಹೆಜ್ಜೆ. ಶತಮಾನಗಳು ಪಲ್ಲಟವಾಗುತ್ತವೆ. ಈಗ ಮುಟ್ಟಿ, ಕಲಿಯಿರಿ, ಮುಟ್ಟಿ. ಎಷ್ಟು ಸುಲಭ. ಮುಟ್ಟಿ.

ಕೈ ಬೆವರುತ್ತಿತ್ತು. ಹೊಲೆಯರು ಬೆಪ್ಪಾಗಿ ಹಿಂದೆ ಸರಿದರು. ತನ್ನ ಆರ್ತತೆಯನ್ನೆಲ್ಲ ಇವು, ಅವರು, ಸಂಜೆ ತಿರಸ್ಕರಿಸಿದ್ದುವು. ಜಗನ್ನಾಥ ತನಗೆ ಸಾಧ್ಯವಾದ ವಿವೇಕದಿಂದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಯತ್ನಿಸಿದ. ಅವನಿಗೆ ಗೊತ್ತು : ಕಳ್ಳರನ್ನು ಹಿಡಿಯಲೆಂದು ಮಂತ್ರಿಸಿದ ಕಾಯಿ ಮುಟ್ಟಿಸುವುದನ್ನು ಇವರು ನೋಡಿದ್ದಾರೆ. ತಟ್ಟೆಯ ಮೇಲೆ ಕೆಂಪು ಮಂತ್ರಾಕ್ಷತೆ: ಅದರ ಮೇಲೆ ಜುಟ್ಟು ಕಂಕುಮವಿರುವ ಕಾಯಿ ಮುಖದಂತೆ ನೋಡುತ್ತ ಎಲ್ಲರಿಂದ ಮುಟ್ಟಿಸಿಕೊಂಡು ಕೊನೆಗೆ ತನ್ನ ಎದುರೇ ಬಂದಾಗ ಹೇಗೆ ನರಗಳು ಉಬ್ಬಿ, ಉಸಿರು ಕಟ್ಟಿ ಮೂರ್ಛೆ ಹೋಗುವವರಿದ್ದಾರೆ ಎಂಬುದನ್ನಿವರು ನೋಡಿದ್ದಾರೆ. ಸಿಂಗರ ಹಿಡಿದು ಕುಂಕುಮ ಬಳೆದುಕೊಂಡು ಥತ್ತರ ಕಂಪಿಸುತ್ತ ಶಿಕಷೆ ವಿಧಿಸುವ ಭೂತರಾಯ, ಈ ಒಡ್ಡಿರುವ ಮುಹೂರ್ತದಲಿ ಅವರಿಗೆ ಪ್ರತ್ಯಕ್ಷವಾಗಿದ್ದಾನೆ.

‘ಇದು ಬರಿ ಕಲ್ಲು, ಮುಟ್ಟಿ ನೋಡಿ, ನಿಮಗೇ ಗೊತ್ತಾಗುತ್ತೆ. ಹೀಗೆ ಆಡಿದರೆ ನೀವು ಪೆದ್ದರಾಗೇ ಉಳಿತೀರಿ.’

ಜಗನ್ನಾಥ ಪ್ರತಿನಿತ್ಯದ ತನ್ನ ಉಪಾಧ್ಯಾಯನ ಧಾಟಿಯಲ್ಲಿ ಅವರಿಗೆ ಸಮಾಧಾನ ಹೇಳಿದ. ಥಟ್ಟನೆ ಏನೆನ್ನಿಸಿತೊ ಹೊಲೆಯರಿಗೆ – ಒಟ್ಟಾಗಿ ಹಿಮ್ಮೆಟ್ಟಿದವು. ಭೀತಿಯಿಂದ ವಿಕಾರವಾದ ಮುಖವನ್ನು ಹೊತ್ತು ನಿಲ್ಲಲಾರದೆ ಓಡಲಾರದೆ ಒದ್ದಾಡಿದುವು. ಮುಟ್ಟುವ ಮುಹೂರ್ತಕ್ಕಾಗಿ ಆರ್ತನಾಗಿ ಕಾಮಿಸಿದ ಜಗನ್ನಾಥನಲ್ಲಿ ಇದ್ದಕ್ಕಿದ್ದಂತೆ ರೋಷ ಉಕ್ಕಿತು. ಕೋಪದಿಂದ ಕಂಪಿಸುವ ಸ್ವರದಲ್ಲಿ,

‘ಹೂ. ಮುಟ್ಟಿ’

ಎಂದ. ಒಡೆಯ ಬರುವುದನ್ನು ಕಂಡು ಕಂಗಾಲಾದ ಹೊಲೆಯರು ಹಿಂದಕ್ಕೆ ಸರಿದವು. ಜಗನ್ನಾಥವು ಭಾವನೆಗಳೆಲ್ಲ ಈಗ ಕ್ರೂರವಾಗಿಬಿಟ್ಟವು. ಎದುರಿಗಿದ್ದ ಹೊಲೆಯರು ಅವನಿಗೆ ಅತ್ಯಂತ ಹೇಸಿಗೆ ಹುಟ್ಟಿಸುವ ಹೊಟ್ಟೆ ಹೊಸೆಯುವ ಜಂತುಗಳಂತೆ ಕಂಡವು.

ಅವಡುಕಚ್ಚಿ ಮೆತ್ತಗೆ ಹೇಳಿದ:

‘ಏ ಪಿಳ್ಳ, ಮುಟ್ಟು. ಹೂ ಮುಟ್ಟು’

ಪಿಳ್ಳ ಕಣ್ಣು ಬಿಡುತ್ತ ನಿಂತ. ಇಷ್ಟು ದಿನ ತಾನು ಹೇಳಿದ್ದೆಲ್ಲ ಜಗನ್ನಾಥನಿಗೆ ವ್ಯರ್ಥವೆನ್ನಿಸಿತು. ಭೀಕರವಾದ ಧ್ವನಿಯಲ್ಲಿ ಕಿರುಚಿದ:

‘ಮುಟ್ಟು. ಮುಟ್ಟು. ಹೂ ಮುಟ್ಟೂ.’

ಜಗನ್ನಾಥನ ಗಂಟಲಿನಿಂದ ಬಂದ ಧ್ವನಿ ಕೆರಳಿದ ಪಶು ಮಾಡುವ ಸದ್ದಿನಂತಿತ್ತು. ಅವನಿಗೇ ತನ್ನನ್ನು ಹರಿದು ಬರುತ್ತಿದ್ದ ಸದ್ದು ಕೇಳಿ ದಿಗಿಲಾಯಿತು. ಕ್ರೌರ್ಯವೊಂದಲ್ಲದೆ ಬೇರೆ ಎಲ್ಲ ಭಾವನೆಗಳೂ ಮಾಯವಾದವು. ಭೂತರಾಯನಿಗಿಂತ ಭಯಂಕರವಾಗಿ ಹೊಲೆಯರಿಗೆ ಕಾಣಿಸಿಕೊಳ್ಳುತ್ತ,

‘ಮುಟ್ಟಿ, ಮುಟ್ಟಿ, ಮುಟ್ಟಿ’ ಎಂದು ಅರಚಲು ಪ್ರಾರಂಭಿಸಿದ. ಈ ಅಮುಕುವ ತಿವಿಯುವ ಸದ್ದಿನಿಂದ ಕಂಗಾಲಾದ ಹೊಲೆಯರು ಯಾಂತ್ರಿಕವಾಗಿ ಮುಂದೆ ಬಂದು ಜಗನ್ನಾಥ ಒಡ್ಡಿದ್ದನ್ನು ಮುಟ್ಟಿದ ಶಾಸ್ತ್ರ ಮಾಡಿ ಸರಕ್ಕನೆ ಹಿಂದೆ ಸರಿದು ನಿಂತರು.

ಕ್ರೌರ್ಯ ದುಃಖಗಳಿಂದ ನಿರ್ಬಲನಾದ ಜಗನ್ನಾಥ ಶಾಲಿಗ್ರಾಮವನ್ನು ಅಲ್ಲೆ ಎಸೆದ. ನಿಗರಿ ನಿಂತಿದ್ದ ಒಂದು ಆರ್ತತೆ ವಿಕಾರವಾಗಿ ಕೊನೆಯಾಗಿತ್ತು; ಹೊಲೆಯರು ಅಸ್ಪೃಶ್ಯರೆಂದು ಕಾಣುವ ಚಿಕ್ಕಿಗಿರುವ ಮಾನವೀಯ ಭಾವನೆಯನ್ನೂ ತಾನು ಒಂದು ಕ್ಷಣ ಕಳೆದುಕೊಂಡಿದ್ದೆ. ಹೊಲೆಯರು ಅರ್ಥಹೀನ ವಸ್ತುಗಳಾಗಿ ತನಗೆ ಕಂಡವು. ಜಗನ್ನಾಥ ಮುಖ ತಗ್ಗಿಸಿ ನಿಂತಿದ್ದ. ಹೊಲೆಯರು ಹೊರಟುಹೋದದ್ದು ಅವನಿಗೆ ತಿಳಿಯಲಿಲ್ಲ, ಸುತ್ತಮುತ್ತಲೂ ಯಾರೂ ಇಲ್ಲವೆನ್ನುವುದು ಅವನಿಗೆ ಗೊತ್ತಾದಾಗ ಕತ್ತಲಾಗಿತ್ತು. ತನ್ನ ಬಗ್ಗೆ ಅಸಹ್ಯಪಡುತ್ತ ಹಾಗೆ ಅಲೆದಾಡಿದ. ಮುಟ್ಟಿದಾಗ ಅವುಗಳೂ ನಾನೂ ಇರುವ ಮಾನವೀಯತೆಯನ್ನೂ ಕಳೆದುಕೊಂಡು ಸತ್ತೆವಲ್ಲ; ಇದಕ್ಕೆ ಕಾರಣ ತನ್ನ ಒಳಗಿದೆಯೂ ಅಥವಾ ಸಮಾಜದಲ್ಲೆ ಇದೆಯೊ ಎಂದು ತಿಳಿಯಲಾರದೆ ಬಹಳ ಹೊತ್ತು ಮಂಕಾಗಿ ಓಡಾಡಿ ಮನೆಗೆ ಬಂದ. ಚಿಕ್ಕಿ ಮುಖ ತೋರಿಸಲಿಲ್ಲ; ತಮ್ಮ ರೂಮಿನ ಬಾಗಿಲು ಹಾಕಿ ಮಲಗಿದ್ದರು. ಪೂಜೆ ಭಟ್ಟರು, ಅಡಿಗೆಯವರು ಗಂಟುಮೂಟೆ ಕಟ್ಟಿ ಹೊರಟಿದ್ದರು. ಇಷ್ಟು ಹೊತ್ತೂ ಮನೆಯ ಕಿಟಕಿಯಿಂದ ಎಲ್ಲವನ್ನೂ ನೋಡುತ್ತಿದ್ದ ಶಾನುಭೋಗ ಶಾಸ್ತ್ರಿ ಎದುರು ಬಂದು ನಿಂತ. ‘ಶಾಸ್ತ್ರಿಗಳೆ ಇವರು ನಮ್ಮ ಮನೆ ಬಿಟ್ಟು ಹೋಗುವಂತಿದೆ. ಅವರಿಗೆ ಲೆಖ್ಖ ಮಾಡಿ ಕೊಡುವುದನ್ನೆಲ್ಲ ಕೊಡಿ. ಒಂದು ತಿಂಗಳ ಸಂಬಳ ಹೆಚ್ಚು ಕೊಡಿ, ಮಧ್ಯದಲ್ಲಿ ಬೇರೆ ಕೆಲಸ ಸಿಕ್ಕಲಿಕ್ಕಿಲ್ಲ’ ಎಂದು ಸಮಾಧಾನದಿಂದ ಹೇಳಿದ. ಅಡಿಗೆಯವರು, ಪೂಜೆಯವರು ತನ್ನನ್ನು ಒಬ್ಬ ಹುಚ್ಚನೆನ್ನುವಂತೆ ನೋಡುತ್ತಿದ್ದವರು ‘ಹೋಗಿ ಬರ್ತೀವಿ’ ಎಂದು ಕೈ ಮುಗಿದು ಹೊರಟರು. ಈಗ ಇಡೀ ಮನೆಗೆ ತಾನು ಚಿಕ್ಕಿ ಇಬ್ಬರೇ ಆದೆವೆಂಬುದು ಜಗನ್ನಾಥನಿಗೆ ಅರ್ಥವಾಗಿ ದುಃಖವಾಯಿತು. ಅಡಿಗೆಯವನು ಹೋಗುವ ಮುಂಚೆ,

‘ನಿಮ್ಮ ಫಲಹಾರವನ್ನ ತಟ್ಟೇಲಿ ಇಟ್ಟಿದೇನೆ. ನಿಮ್ಮ ರೂಮಲ್ಲಿದೆ’

ಎಂದು ತನ್ನ ಕೊನೆಯ ಕರ್ತವ್ಯ ನಿರ್ವಹಿಸಿದ. ಜಗನ್ನಾಥ ‘ಆಗಲಿ, ಹೋಗಿ ಬನ್ನಿ’ ಎಂದು ಒಳಗೆ ಹೋದ.