ಮೈ.ಸೋ.ಪ.ದ (ಮೈಸೂರು ಸೋಷಲಿಸ್ಟ್ ಪಕ್ಷದ) ನೀಲಕಂಠಸ್ವಾಮಿ ಮತ್ತು ರಂಗರಾವ್ ಕೈಯಲ್ಲೊಂದು ಬ್ಯಾಗು, ಬಾವುಟ ಹಿಡಿದು ಜಗನ್ನಾಥನ ಮನೆಗೆ ಸೀದ ಬಂದಿದ್ದರು. ಶ್ರೀಪತಿರಾಯರು ಅವರನ್ನು ಸ್ವಾಗತಿಸಿ, ಚಿಕ್ಕಿಯಿಂದ ಕಾಫಿ ತಿಂಡಿ ಮಾಡಿಸಿ ಕೊಡಿಸಿ ಆಫೀಸಿಗೆ ಅಂಟಿಕೊಂಡಿದ್ದ ದೊಡ್ಡ ರೂಮೊಂದರಲ್ಲಿ ಇಳಿಸಿದರು. ಜಗನ್ನಾಥ ಬಂದೊಡನೆ ನೀಲಕಂಠಸ್ವಾಮಿ ತನ್ನ ಪರಿಚಯ ಮಾಡಿಕೊಂಡ. ಪೊಲಿಟಿಕಲ್ ಸೈನ್ಸ್ ಎಂ.ಎ. ಮುಗಿಸಿ ಫೈನಲ್ ಲಾ ವಿದ್ಯಾರ್ಥಿ; ಲಾ ಕಾಲೇಜಿನ ಅಸೋಸಿಯೇಷನ್ನಿನ ಅಧ್ಯಕ್ಷ; ಮೈ.ಸೋ.ಪ.ದ ಕಾರ್ಯದರ್ಶಿ. ಇವರ ಭಾಷಾಣವಿಲ್ಲದೆ ಯಾವ ಫಂಕ್ಷನ್ನೂ ಮೈಸೂರಲ್ಲಿ ನಡೆಯುವುದಿಲ್ಲೆಂದು ತನ್ನನ್ನು ಹೊಗಳಿದ ರಂಗರಾವ್ ಪರಿಚಯವನ್ನು ಆಮೇಲೆ ನೀಲಕಂಠಸ್ವಾಮಿಯೇ ಮಾಡಿಕೊಟ್ಟ; ಪೊಲಿಟಿಕಲ್ ಸೈನ್ಸ್ ಎಂ.ಎ. ಮುಗಿಸಿದ್ದಾರೆ; ರಿಸರ್ಚ್ ಮಾಡುತ್ತಿದ್ದಾರೆ; ಸಂಘ ಕಟ್ಟುತ್ತಿದ್ದಾರೆ. ತಾವು ಯಾಕೆ ಸೋಷಲಿಸ್ಟ್ ಪಕ್ಷದಿಂದ ಒಡೆದು ಬೇರೆ ಪಕ್ಷ ಕಟ್ಟಬೇಕಾಯ್ತೆಂದು ನೀಲಕಂಠಸ್ವಾಮಿ ವಿವರಿಸಿದ. ಪಾರ್ಟಿ ಅಧ್ಯಕ್ಷ ಪಕ್ಷವನ್ನು ತನ್ನ ವೈಯಕ್ತಿಕ ಲೋಭೆಗಳಿಗಾಗಿ ಉಪಯೋಗಿಸಿ ಕೊಂಡದ್ದರಿಂದ ತನ್ನ ಜಾತಿಯವನನ್ನೆ ಕಾರ್ಯದರ್ಶಿ ಸ್ಥಾನಕ್ಕೆ ಆರಿಸಿದ್ದರಿಂದ – ಇತ್ಯಾದಿ. ಮಾತಾಡುವಾಗ ನೀಲಕಂಠಸ್ವಾಮಿ ತನ್ನ ಗುಂಗುರು ಕೂದಲಿಗೆ ಕೈ ಹಾಕಿ, ಒಂದು ಕೂದಲನ್ನು ಬೇರ್ಪಡಿಸಿ, ಜಗ್ಗಿ ಎಳೆದು ಕಿತ್ತು ಅದರ ಬೇರನ್ನು ನೋಡಿ, ಕೆಳಗೆ ಹಾಕಿ, ಮತ್ತೆ ಅದೇ ಸ್ಥಳದಲ್ಲಿ ಇನ್ನೊಂದು ಕೂದಲನ್ನು ಹುಡುಕುವುದು ನೋಡಿ ಜಗನ್ನಾಥನಿಗೆ ಬಹಳ ಹಿಂಸೆಯಾಯಿತು.

‘ವಿಶ್ರಮಿಸಿಕೊಳ್ಳಿ, ಆಮೇಲೆ ನಿಮ್ಮನ್ನ ನೋಡ್ತೇನೆ’ ಎಂದು ಜಗನ್ನಾಥ ತನ್ನ ರೂಮಿಗೆ ಬಂದ. ಹಿಂದಿನಿಂದ ಶ್ರೀಪತಿರಾಯರು ಬಂದರು. ಬಾಗಿಲು ಹಾಕಿ ಜಗನ್ನಾಥನಿಗೆ ಆಪ್ತವಾಗಿ ಮೆತ್ತಗೆ ಹೇಳಿದರು :

‘ಸ್ವಲ್ಪ ಜಾಗರೂಕತೆಯಿಂದ ಅವರ ಹತ್ರ ನಡಕೋಬೇಕು ಜಗಣ್ಣ. ಅವರೇನು ಮಾತಾಡಿಕೋತಿದ್ರು ಗೊತ್ತ? ನಾನು ಹೊರಗೆ ನಿಂತಿದ್ದು ಗೊತ್ತಿರಲಿಲ್ಲಾಂತ ಕಾಣತ್ತೆ. ನೀಲಕಂಠಸ್ವಾಮಿ ಹೇಳಿದ : ‘ಜಗನ್ನಾಥರನ್ನ ನಮ್ಮ ಪಾರ್ಟಿ ಅಧ್ಯಕ್ಷರನ್ನಾಗಿ ಮಾಡಿಕೊಂಡರೆ ಹೇಗೋ ರಂಗರಾವ್’ ಅಂತ. ಅದಕ್ಕೆ ರಂಗರಾವ್, ‘A brahmin is a brahmin ಎಂದ. ರಂಗರಾವ್ ಒಕ್ಕಲಿಗರೋನು, ನೀಲಕಂಠಸ್ವಾಮಿ ಹೇಳ್ದ : ‘It is strategy Ranga Rao ಮುಂದಿನ ಸಾರಿ ಇಲ್ಲಿಂದ ಜಗನ್ನಾಥ ನಮ್ಮ ಪಕ್ಷಕ್ಕೆ ಒಳ್ಳೆ ಕ್ಯಾಂಡಿಡೇಟ್ ಆಗ್ತಾನೆ’ ಅಂತ. ನನಗವ್ರ ಮಾತು ಕೇಳಿ ಬಹಳ ಬೇಜಾರಾಯ್ತು. ಬಂದವ್ನೆ ರಂಗರಾವ್ ಏನು ಮಾಡ್ದ ಗೊತ್ತ? ಬಟ್ಟೆ ಬದಲಾಯಿಸಿ ಸೀದ ದೇವಸ್ಥಾನಕ್ಕೆ ಹೋಗಿ ಪ್ರಸಾದ ತಗೊಂಬಂದ. ‘ನೀವು ಹೀಗೆ ಮಾಡಿದ್ದು ಸರಿಯಲ್ಲ’ ಅಂತ ನಾನು ಅಂದದ್ದಕ್ಕೆ ‘ನನ್ನ ಗುರ್ತು ಯಾರಿಗೂ ಇಲ್ವಲ್ಲ, ಪರವಾಗಿಲ್ಲ, ನಮ್ಮ ತಾಯಿಗೆ ಮಂಜುನಾಥ ಸ್ವಾಮೀಂದ್ರೆ ತುಂಬ ಭಕ್ತಿ’ ಅಂದ. ನೀಲಕಂಠಸ್ವಾಮೀನೂ ಅವನನ್ನ ಬೈದ ಕಾರಣ ಇಷ್ಟೆ; ಲಿಂಗಾಯ್ತ ಆದ್ರಿಂದ ಅವನಿಗೆ ಬ್ರಾಹ್ಮಣರ ದೇವಸ್ಥಾನದ ಪ್ರಸಾದದಲ್ಲಿ ಅಷ್ಟು ಅದರ ಇಲ್ಲ. ಯಾಕೆ ಇವನ್ನೆಲ್ಲ ಹೇಳಕ್ಕೆ ಬಂದೇಂದ್ರೆ ನಿನಗೆ ರಾಜಕೀಯ ಹೊಸದು. ಜೋಕೆಯಾಗಿರು.’

ರಾಯರು ನಾಟಕೀಯವಾಗಿ ರಸವತ್ತಾಗಿ ಹೇಳಿದ್ದನ್ನು ಜಗನ್ನಾಥ ಸಮಾಧಾನದಿಂದ ಕೇಳಿಸಿಕೊಂಡ. ‘ನಮ್ಮ ಪರ್ಪಸ್‌ಗಾಗಿ ಇಂಥ ಎಲ್ಲವನ್ನೂ ದುಡಿಸಿಕೊಳ್ಳಬೇಕಾಗತ್ತೆ’ ಎಂದ. ರಾಯರು ನಕ್ಕರು. ‘ನೀನೊಬ್ಬ ಮೂರ್ಖ. ಅವರೇ ನಿನ್ನ ಎಕ್ಸ್‌ಪ್ಲಾಯಿಟ್ ಮಾಡ್ತಾರೆ – ಬೇಕಾದರೆ ನೋಡು’ ಎಂದರು. ಜಗನ್ನಾಥ ಡಿ.ಸಿ. ಜೊತೆ ತನ್ನ ಭೇಟಿಯನ್ನು ವಿವರಿಸಿದ. ‘ನನಗಿದು ಮೊದಲೇ ಗೊತ್ತಿತ್ತು. ಅವನೊಬ್ಬ ಶುದ್ಧ ಕರಪ್ಟ್‌ಫೆಲೋ’ ಎಂದು ರಾಯರು ಎದ್ದು ನಿಂತರು. ಜಗನ್ನಾಥ ಹಾಸಿಗೆಯ ಮೇಲೆ ಕಾಲು ಚಾಚಿದ.

‘ಇನ್ನೂ ಯಾರಾರೋ ಬಂದಾರು ಮನೆಗೆ. ಚಿಕ್ಕಿಗೊಬ್ಬರಿಗೇ ಅಡಿಗೆ ಮಾಡೋದು ಕಷ್ಟ. ನನ್ನ ಹೆಂಡತೀನ್ನ ಕಳಿಸಿಕೊಡ್ತೀನಿ’ ಎಂದರು ರಾಯರು.

‘ಚಿಕ್ಕೀಗೆ ಸಮಾಧಾನ ಹೇಳಿದ್ರ ರಾಯರೆ?’

‘ಹೇಳ್ದೆ. ಅವರು ಅಡಿಗರಿಗೆ ಹೇಳಿಕಳಿಸಿದಾರಂತೆ. ಶಾಲಿಗ್ರಾಮಾನ್ನ ಶುದ್ದ ಮಾಡಿ ಪೂಜೆಮಾಡಿ ಹೋಗೀಂತ. ಅದರ ತೀರ್ಥವಿಲ್ಲದೆ ತಾನು ಹೇಗೆ ಊಟ ಮಾಡ್ಲಿ ಅಂತ ಅವರು ಅಳ್ತಾರೆ. ನಂಗವರನ್ನ ನೋಡಿದ್ರೆ ಪಾಪ ಅನ್ನಿಸತ್ತೆ. ನಾಳೆ ಗೋಪಾಲ ಬರ್ತಾನಂತಲ್ಲ – ಅದೇ ಅವರಿಗೆ ನೆಮ್ಮದಿ.’

ರೈಟರ್ ಕೃಷ್ಣಯ್ಯನ ಮಗನ ವಿಷಯದಲ್ಲಿ ತಾಯಿಗೂ ಚಿಕ್ಕಿಗೂ ಇದ್ದ ವಾತ್ಸಲ್ಯ ಜಗನ್ನಾಥನಿಗೆ ಆಶ್ಚರ್ಯದ ವಿಷಯ. ಅವನಿಗೆ ಗೋಪಾಲ ಬರುತ್ತಿದ್ದಾನೆಂದು ಕೇಳಿ ಸಂತೋಷವಾಯಿತು. ಒಟ್ಟಿನಲ್ಲಿ ಚಿಕ್ಕಿ ಗೆಲುವಾಗಿರೋದು ಅವನಿಗೆ ಬೇಕಿತ್ತು.

ರಾಯರು ಹೊರಡುವಾಗ ಹೇಳಿದರು :

‘ಬಿಳಿ ಬಟ್ಟೆ ಹಾಕ್ಕೊಂಡು ಪೇಟೇ ಬೀದೀಲಿ ಓಡಾಡಬೇಡೀಂತ ಹೊಲೇರ ಹುಡುಗರಿಗೆ ಹೇಳು ಜಗಣ್ಣ. ಜನರ ಕಣ್ಣಿಗೆ ಅವರು ತೀರಾ ಬಿದ್ರೆ ಗಲಾಟೆಯಾಗಬಹುದು.’

* * *

ಸಂಜೆ ಹೊಲೆಯರ ಯುವಕರು ಬಂದರು. ಮೈಕೈ ನೋವಾಗಿದ್ದರೂ ಪಿಳ್ಳ ಬಂದಿದ್ದು ನೋಡಿ ಜಗನ್ನಾಥನಿಗೆ ಗೆಲುವಾಯಿತು. ಅವನ ಮುಖದಲ್ಲಿ ತಾನು ಹಿಂದೆಂದೂ ಕಾಣದಿದ್ದ ಸ್ನೇಹವಿತ್ತು – ಅಲ್ಲವೆ? ಜಗನ್ನಾಥ ಡಿ.ಸಿ.ಯನ್ನು ನೋಡಿದ್ದೇನೆ ಎಂದು ಹೇಳಿದ. ಅವರು ನಿಮ್ಮ ಜಾತಿಯವರೆ ಎಂದು ಅವರಲ್ಲಿ ಧೈರ್ಯ ತುಂಬಿದ. ನೀವು ದೇವಾಲಯ ಪ್ರವೇಶ ಮಾಡುವುದಕ್ಕೆ ಸಹಾಯ ಮಾಡಲಯ ಮೈಸೂರಿನಿಂದ ಈ ಇಬ್ಬರು ಬಂದಿದಾರೆ ಎಂದು ನೀಲಕಂಠಸ್ವಾಮಿ ಮತ್ತು ರಂಗರಾವ್‌ರನ್ನು ಪರಿಚಯ ಮಾಡಿಕೊಟ್ಟು ಹೊಲೆಯರ ಯುವಕರಿಗೆ ಸಮಾಜವಾದ ಕುರಿತು ಮಾತಾಡುವಂತೆ ನೀಲಕಂಠಸ್ವಾಮಿಗೆ ತಿಳಿಸಿ, ತಾನಿದ್ದರೆ ಮುಜುಗರವಾದೀತೆಂದು ಮನೆಯೊಳಗೆ ಹೋದ.

ರಾಯರ ಹೆಂಡತಿ ಭಾಗ್ಯಮ್ಮ, ರಜದ ಮೇಲೆ ಬಂದಿದ್ದ ಮಗಳು ಸಾವಿತ್ರಿ ಚಿಕ್ಕಿಗೆ ಸಹಾಯ ಮಾಡಲು ಬಂದಿದ್ದರು. ಜಗನ್ನಾಥ ಸುತ್ತಾಡಿ ಬರಲು ಗುಡ್ಡ ಇಳಿದು ನಡೆದ.

ರಾತ್ರೆ ಊಟಕ್ಕೆ ರಾಯರೂ ಇದ್ದರು. ಊಟದ ಮನೆಯಲ್ಲಿ ಪ್ರಥಮ ಬಾರಿಗೆ ಒಬ್ಬ ಲಿಂಗಾಯತ ಮತ್ತು ಒಕ್ಕಲಿಗ ಊಟ ಮಾಡುತ್ತಿದ್ದಾರೆಂದು ಜಗನ್ನಾಥನಿಗೆ ಸಂತೋಷವಾಯಿತು. ಚಿಕ್ಕಿ ಮೌನವಾಗಿ ಬಡಿಸಿದರು. ನಾಳೆ ಇನ್ನಷ್ಟು ಜನ ನಮ್ಮ ಪಾರ್ಟಿಯವರು ಬರ್ತಿದಾರೆ ಎಂದು ನೀಲಕಂಠಸ್ವಾಮಿ ಹೇಳಿದ. ಇಲ್ಲೊಂದು ರೈತಸಂಘ ಶುರು ಮಾಡಬೇಕೆಂದು ರಂಗರಾವ್ ಸೂಚಿಸಿದ.

ಮಾರನೇ ದಿನ ಪತ್ರಿಕೆಯಲ್ಲಿ ಭಾರತೀಪುರದ ಬ್ರಾಹ್ಮಣ ಯುವಕ ಸಂಘದವರು ಹರಿಜನ ದೇವಾಲಯ ಪ್ರವೇಶವನ್ನು ಖಂಡಿಸಿ ಬರೆದ ಪತ್ರವಿತ್ತು. ಟಪಾಲು ಬಸ್ಸಿನಲ್ಲಿ ಜಗನ್ನಾಥನಿಗೆ ಎರಡು ಕಾಗದದಗಳು ಬಂದವು. ಮೈಸೂರು ಯೂನಿವರ್ಸಿಟಿಯಲ್ಲಿ ಸಮಾಜಶಾಸ್ತ್ರದ ರೀಡರ್ ಆಗಿದ್ದ ರಮೇಶಚಂದ್ರನಿಂದ ಒಂದು. ರಮೇಶಚಂದ್ರ ಜಗನ್ನಾಥನಿಗೆ ಹಳೆಯ ಪರಿಚಯ. ನಂಜನಗೂಡಿನ ಒಂದು ಪ್ರಸಿದ್ಧ ಹೊಯ್ಸಳ ಕರ್ನಾಟಕ ಮನೆತನದವನು. ಬಿ.ಎ. ಮುಗಿಸುವ  ತನಕ ಕಿವಿಗೆ ಒಂಟಿ ಹಾಕುತ್ತಿದ್ದ ಈತ ಇಂಗ್ಲೆಂಡಲ್ಲಿ ತ್ರೀಪೀಸ್ ಸೂಟನ್ನು ಚೂರೂ ಇಸ್ತ್ರಿ ಕೆಡದಂತೆ ನಾಜೂಕಾಗಿ ಧರಿಸಲು ಕಲಿತಿದ್ದ. ಕನ್ನಡಕವನ್ನು ಕರ್ಚೀಫಿನಿಂದ ಒರೆಸುತ್ತ ತುಸು ಬಾಗಿ ಕೂತು ಅವನು ಗಂಭೀರವಾದ ಚರ್ಚೆಗೆ ಪ್ರಾರಂಭಿಸುವುದನ್ನು ಕಂಡವರೆಲ್ಲ ಅವನೊಬ್ಬ ಬುದ್ಧಿಜೀವಿಯೆಂದೇ ತಿಳಿಯುತ್ತಿದ್ದರು. ಭಾರತದ ಜಾತಿವ್ಯವಸ್ಥೆಯನ್ನು ಅತ್ಯಂತ ಸೂಕ್ಷ್ಮವಾಗಿ ಅವನು ಎತ್ತಿಹಿಡಿಯುತ್ತಿದ್ದ. ‘ಅಲ್ಲಾರೀ ನೋಡಿ ಎಂಥ ರಿಚ್ ಲೈಫ್ ಲೀಡ್ ಮಾಡ್ತಾರೆ ಕುಂಬಾರ‍್ರು ಅನ್ನೋದು ನಿಮಗೆ ಗೊತ್ತೇನ್ರಿ?’ ಆದರೆ ಮಾತ್ರ ಇಂಗ್ಲೆಂಡಲ್ಲಿದ್ದ ಕಲರ‍್ಡ್ ಫೀಲಿಂಗನ್ನ ಅಷ್ಟೇ ಉಗ್ರವಾಗಿ ಅವ ಖಂಡಿಸುತ್ತಿದ್. ‘ನೀವು ಹಿಪೋಕ್ರಿಟ್’ ಎಂದು ಜಗನ್ನಾಥ ಅಂದರೆ, ‘May I have a cigarette please?’ ಎಂದು ಸಿಗರೇಟ್ ಹಚ್ಚಿ,

‘ನಿಮ್ಮ ಕಳಕಳಿ ಅರ್ಥವಾಗತ್ತೆ. ಆದ್ರೆ ಜಗನ್ ಈಗ ಎಜ್ಯುಕೇಟೆಡ್ ಆಗಿರೋ ಶೂದ್ರರು ಏನಾಗಿದಾರೆ ನೋಡಿ – ಮೈಸೂರು ಯೂನಿವರ್ಸಿಟಿ ಗತಿ ಏನಾಯ್ತು? ಒಕ್ಕಲಿಗರಿಗೂ ಲಿಂಗಾಯ್ತರಿಗೂ ನಿತ್ಯ ಜಗಳ ಅಲ್ಲಿ. ಒಂದು ಕಾಲದಲ್ಲಿ ಹಿರಿಯಣ್ಣ. ರಾಧಾಕೃಷ್ಣನ್ ಇದ್ದ ಯೂನಿವರ್ಸಿಟೀಲಿ ಇಗ ನಡೆಯೋದೆಲ್ಲ ಕಾಳಪ್ಪ ಸಿದ್ಧಪ್ಪರ ದರ್ಬಾರು. ಇದನ್ನ ಖಂಡಿಸ್ಬೇಕು ಹೊರ್ತು ಜಾತಿ ವ್ಯವಸ್ಥೇನ ಬೈದು ಏನು ಪ್ರಯೋಜ್ನ ಹೇಳಿ.’

ರಮೇಶಚಂದ್ರ ಭಾರತೀಯ ಹಿಪೋಕ್ರಸಿಯ ಅತ್ಯಂತ ಮುಗ್ಧ ಚಿತ್ರವಾಗಿದ್ದ. ಆಳವಾದ ನಂಬಿಕೆಯಿಂದ ವಾದಿಸುತ್ತಿದ್ದ ; ಶೂದ್ರ ಹೆಂಗಸರು ಹಾದರ ಮಾಡಿದರೆ ಸರಿ ಆದರೆ ಬ್ರಾಹ್ಮಣರ ಹೆಂಗಸರು ಮಾಡಲ್ಲ; ಇಂಡಿಯಾದಲ್ಲಿ ನ್ಯೂರೋಟಿಕ್ಸ್ ಇಲ್ಲ; ಐರೋಪ್ಯ ಸಂಸ್ಕೃತಿಗಿಂತ ಭಾರತೀಯ ಸಂಸ್ಕೃತಿ ದೊಡ್ಡದು ; ಬ್ರಿಟಿಷರು ಇಂಡಿಯಾಕ್ಕೆ ಬಂದು ಇಂಗ್ಲಿಷ್ ಹೇಳಿಕೊಡದಿದ್ದರೆ ನಮ್ಮಲ್ಲಿ ಎಲೆಕ್ಟ್ರಿಸಿಟಿ ರೈಲುಗಳೇ ಇರ್ತಿರಲಿಲ್ಲ; ಸ್ವಾತಂತ್ರ್ಯ ಇನ್ನೂ ತಡವಾಗಿ ಬರ‍್ಬೇಕಿತ್ತು; ಅಕ್ಷರ ಬಾರದವರಿಗೆ ಓಟಿನ ಹಕ್ಕು ಕೊಟ್ಟಿದ್ದು ತಪ್ಪು; ಕ್ಲೆನ್ಲಿನೆಸ್ ಅಂತ ಬಡಕೊಳ್ಳೊ ಈ ಇಂಗ್ಲಿಷ್ ಜನ ಅಂಡನ್ನ ತೊಳ್ಕಳ್ಳೋದೆ ಇಲ್ಲಲ್ರಿ? – ಇತ್ಯಾದಿ. ರಮೇಶಚಂದ್ರನ ಮುದ್ದಾದ ಮೀಸೆ, ಅವನು ಎರಡು ಕೈಗಳನ್ನೂ ಎದೆಗೊತ್ತಿಕೊಂಡು ವಾತಾಡುವ ಕಳಕಳಿ ನೋಡುತ್ತ ಜಗನ್ನಾಥ ಆಕಳಿಸುತ್ತಿದ್ದ.

ರಮೇಶಚಂದ್ರನ ಭವಿಷ್ಯ ಜಗನ್ನಾಥ ಊಹಿಸಿದಂತೆಯೇ ರೂಪಪಡೆದಿತ್ತು. ಭಾರತೀಯ ಸ್ತ್ರೀಯ ಪಾತಿವ್ರತ್ಯವನ್ನು ನಂಬಿದ್ದವ ಇಂಗ್ಲೆಂಡಲ್ಲಿ ಒಂದು ಹುಡುಗೀನ್ನ ಪ್ರೀತಿಸಿದ, ಪ್ರೀತಿಸಿ ದಾಗಲೂ ಈ ಹುಡುಗೀನ್ನ ತಾನೆಂದೂ ಮದುವೆಯಾಗಲಾರೆ ಎಂದು ರಮೇಶನಿಗೆ ಗೊತ್ತಿತ್ತೆಂದು ಜಗನ್ನಾಥನಿಗೆ ಗೊತ್ತು. ಅವಳನ್ನು ಬಿಟ್ಟು ಹಿಂದಿರುಗುವಾಗ ಪಾಶ್ಚಾತ್ಯ ಸಾಹಿತ್ಯದಲ್ಲಿ ಅವನು ಮೆಚ್ಚಿಕೊಂಡಿದ್ದ ಪ್ರೇಮದುರಂತದ ದುಃಖವನ್ನು ಸವಿದ. ಇಂಡಿಯಾಕ್ಕೆ ಬಂದು ಪಾಶ್ಚಾತ್ಯರ ಸ್ವಚ್ಛತೆ, ಆನೆಸ್ಟಿ, ಪೊಲಿಟಿಕಲ್ ಮೆಚೂರಿಟಿ ಹೊಗಳುತ್ತ ಹೊಯ್ಸಳ ಕರ್ಣಾಟಕದವರಾಗಿದ್ದ ಎಕ್ಸಿಕ್ಯೂಟಿವ್ ಎಂಜಿನಿಯರ್ ಒಬ್ಬರಿಗೆ ಅಚ್ಚುಮೆಚ್ಚಾದ. ನಾಲ್ಕಾರು ಹೆಣ್ಣುಗಳನ್ನು ಇಂಟರ್‌ವ್ಯೂ ಮಾಡಿದ ನಂತರ ಅಷ್ಟೇನೂ ಸುಂದರಳಲ್ಲದಿದ್ದ ಅವರ ಮಗಳನ್ನೇ ಮದುವೆಯಾದ. ಆಮಂತ್ರಣ ಪತ್ರಿಕೆಯಲ್ಲಿ ತನ್ನ ಹೆಸರಿನ ಮುಂದೆ M.A. (London) ಹಚ್ಚಿಕೊಂಡ.

ರಮೇಶಚಂದ್ರ ಮುದ್ದಾದ ಅಕ್ಷರದಲ್ಲಿ ಹೀಗೆ ಬರೆದಿದ್ದ : ಭಾರತೀಪುರದಲ್ಲಿ ಎಕ್ಸೆಸ್ಟಿನ್ಸಿಯಲಿಸ್ಟ್ ಸೋಷಲಿಸಂ ಅನ್ನು ತರುವ ನಿಮ್ಮ ಸಾಹಸ ಮೆಚ್ಚುತ್ತೇನೆ. ಆದರೆ ಸೋಷಿಯಾಲಿಜಿಸ್ಟ್ ಆಗಿ ನನಗೆ ನಿಮ್ಮ ಪ್ರಯತ್ನ ಸಫಲವಾಗಲಾರದು ಅನ್ನಿಸತ್ತೆ. ಈ ಹರಿಜನರ ಸಮಸ್ಯೆ ಅರ್ಬನೈಸೇಶನ್ನಿನ ಮುಖಾಂತರ ಕ್ರಮೇಣ ತೀರ್ಮಾನವಾಗಬೇಕೇ ಹೊರತು ನಿಮ್ಮ ರೀತಿಯ ಕಾರ್ಯಕ್ರಮದ ಮೂಲಕವಲ್ಲ.ಈಗ ಅಧಿಕಾರದಲ್ಲಿರುವ ನವಬ್ರಾಹ್ಮಣರಾದ ಒಕ್ಕಲಿಗರು ಲಿಂಗಾಯತರನ್ನು ವಿರೋಧಿಸುವುದೇ ಬುದ್ಧಿಜೀವಿಗಳಾದ ನಿಮ್ಮಂಥವರು ಮಾಡಬೇಕಾದ್ದು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಲಿಂಗಾಯತರು ಒಕ್ಕಲಿಗರು ವೈಸ್ ಚಾನ್ಸಲರ್ ಪದವಿಗಾಗಿ ಪರಸ್ಪರ ಹೋರಾಡುತ್ತ ಬೌದ್ಧಿಕ ಕೆಲಸದ ಪಾವಿತ್ರ್ಯವನ್ನು ಹೇಗೆ ಕಡೆಗಣಿಸುತ್ತಿದ್ದಾರೆಂಬುದು ನಿಮಗೆ ತಿಳಿದಿರಲಿಕ್ಕಿಲ್ಲ. ಮೈಸೂರಲ್ಲೂ ಅಷ್ಟೆ, ಮೆರಿಟ್‌ಗೆ ಜಾಗವಿದ್ದಲ್ಲಿ ನಾನೇ ಪ್ರೊಫೆಸರ್ ಆಗಬೇಕಿತ್ತು. ಆದರೆ… ಇತ್ಯಾದಿ.

ಇನ್ನೊಂದುಕಾಗದ ಇಂಗ್ಲೆಂಡಿಂದ ಚಂದ್ರಶೇಖರ್‌ಬರೆದದ್ದು. ತನ್ನಲ್ಲಿ ತೀವ್ರವಾದ ಕಸಿವಿಸಿಯನ್ನುಂಟುಮಾಡಿದ ಆ ಕಾಗದವನ್ನು ಜಗನ್ನಾಥ ಮತ್ತೆ ಮತ್ತೆ ಓದಿದ.

ಪ್ರಿಯ ಜಗನ್,

ಮಾರ್ಗರೆಟ್‌ಎಲ್ಲ ತಿಳಿಸಿದಳು. ಬೆಂಗಳೂರಿಂದ ನನ್ನ ತಮ್ಮನೂ ಬರೆದಿದ್ದ. ಎಲ್ಲರಿಗಿಂತ ಪ್ರಾಯಶಃ ನಾನೇ ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ. ಹಗಲುಗನಸಿನಲ್ಲಿ ಬೊಜ್ಜಾದ ನಿಮ್ಮ ಆದರ್ಶವಾದವನ್ನು ಹೀಗೆ ಕರಗಿಸಿಕೊಂಡು ಆಥ್ಲಟಿಕ್ ಫಿಗರ್ ಪಡೆಯಲು ನೀವು ಪ್ರಯತ್ನಿಸುತ್ತಿದ್ದೀರಿ. ನಿಮಗೆ ಸಫರ್ ಮಾಡುವುದು ಬೇಕಾಗಿದೆ. ನಿಮ್ಮ ದುರಂತವೆಂದರೆ ಈಗಲೂ ನೀವು ಮತ್ತೊಂದು ಬಗೆಯ ಹೀರೋ ಆಗುತ್ತೀರಿ – ಅಷ್ಟೆ. ಯಾಕೆಂದರೆ ನೀವು ಹೊಲೆಯರನ್ನ ಖಂಡಿತ ಪ್ರೀತಿಸಲಾರಿರಿ. ಆತ್ಮರತವಾದ ನಿಮ್ಮ ವ್ಯಕ್ತಿತ್ವಕ್ಕೆ ನಿಜವಾದ ಪ್ರೇಮ ಸಾಧ್ಯವಿಲ್ಲ. ಅಸೂಯೆಯಲ್ಲಿ ಚಡಪಡಿಸುವ ನನಗೆ ಮನುಷ್ಯನ ದೌರ್ಬಲ್ಯದ ಮುಖಾಂತರ ತಿಳಿಯುವಷ್ಟು ಆಳವಾದ ಸತ್ಯಗಳು ಉದಾತ್ತತೆಯಲ್ಲಿ ಬದುಕುವ ನಿಮಗೆ ತಿಳಿಯಲಾರವು. ಒಂದು ಬಗೆಯ ಪಾಂಪಾಸಿಟಿಯಿಂದ ಇನ್ನೊಂದು ಬಗೆಯ ಪಾಂಪಾಸಿಟಿಗೆ ನೀವು ಹೊರಳಿಕೊಳ್ಳುತ್ತಿದ್ದೀರಿ. ಆದರೆ ನೀವು ಠೊಳ್ಳೆಂದು ನನಗೆ ಗೊತ್ತಿದ್ದರೂ ನಿಮ್ಮನ್ನು ಕಂಡರೆ ನನಗೆ ಯಾಕಷ್ಟು ಅಸೂಯೆ ಪ್ರೀತಿ ದ್ವೇಷ ತುಂಬಿದೆಯೆಂಬುದೇ ಆಶ್ಚರ್ಯ. ಜೀವನದಲ್ಲಿ ಒಟ್ಟು ಪುಣ್ಯಶಾಲಿಗಳಾದ ನಿಮ್ಮಂಥವರನ್ನು ಕಂಡು ಕರುಬುವುದರಲ್ಲೆ ಜೀವಂತವಾಗಬೇಕಾದ ದುರಂತ ನನ್ನದು. ನಾನಲ್ಲದೆ ಬೇರೆ ಯಾರು ಇಷ್ಟು ನಿಷ್ಠುರವಾದ ಸತ್ಯವನ್ನು ನಿಮಗೆ ಹೇಳಲಾರರೆಂದು ಗೊತ್ತಿರುವುದರಿಂದ  ನಿಮ್ಮ ಲಿಬರಲ್ ನಾಟಕವನ್ನು ಖಂಡಿಸಿ ಈ ಕಾಗದ ಬರೆಯುತ್ತಿದ್ದೇನೆ. ಮಾರ್ಗರೆಟ್ ನಾನು ಹೇಳೋದನ್ನ ಒಪ್ಪಲ್ಲ ಆದರೂ ಒಳಗಿನಿಂದ ಅವಳಿಗೆ ನಾನು ಹೇಳೋದು ನಿಜವೆನ್ನಿಸತ್ತೆಂತ ನನಗೆ ಗೊತ್ತು.

ಪ್ರೀತಿಯಿಂದ ನಿಮ್ಮವ
ಚಂದ್ರಶೇಖರ

ಜಗನ್ನಾಥ ಚಂದ್ರಶೇಖರನ ಕಾಗದವನ್ನು ಮರೆಯಲೆಂದು ನೀಲಕಂಠಸ್ವಾಮಿಯನ್ನು ಹುಡುಕಿಕೊಂಡು ಹೋದ. ಹೊಲೆಯರ ಜೊತೆ ಮೈ.ಸೋ.ಪ. ದ ಸೆಕ್ರೆಟರಿಯವರು ಮೀಟಿಂಗ್ ಮಾಡಿದರು ಎಂಬ ವರದಿಯನ್ನು ಪೇಪರಿಗೆ ಕಳಿಸಲು ಅವನು ಪ್ರತಿ ಎತ್ತುತ್ತಿದ್ದ. ಜಗನ್ನಾಥನನ್ನು ಕಂಡೊಡನೆ, ‘ಇಲ್ಲಿನ ಎಂ.ಎಲ್.ಎ. ಅನ್ನು ಖಂಡಿಸಿ ಒಂದು ಹೇಳಿಕೆ ನೀವು ಕೊಡಬೇಕು’ ಎಂದ.

‘ಕೊಡೋಣ, ಆದರೆ ಅವರನ್ನ ಮೊದಲು ನೋಡಿ ಮಾತಾಡೋದು ಒಳ್ಳೇದಲ್ವೆ?’

‘ಗುರಪ್ಪಗೌಡರು ಮಹಾ ಖದೀಮರು. ಪೇಚಿಗೆ ಸಿಕ್ಕಿಹಾಕ್ಕೋಬಾರದೂಂತ ಬೆಂಗಳೂರಿಗೆ ಹೋಗಿ ಕೂತಿದಾರಂತೆ.’

ಜಗನ್ನಾಥನಿಗೆ ಮಾತು ಬೇಡವಾಗಿತ್ತು. ಚಂದ್ರಶೇಖರನ ಕಾಗದದಲ್ಲಿ ಅನೇಕ ಸುಳ್ಳುಗಳಿದ್ದರೂ ಅವನ ಒಂದೊಂದು ಮಾತು ಭರ್ಜಿಯಂತೆ ಅವನನ್ನು ಇರಿದಿತ್ತು. ನೀಲಕಂಠಸ್ವಾಮಿ, ರಂಗರಾವ್‌ರನ್ನು ಕರೆದುಕೊಂಡು ಒಳಗೆ ಹೋಗಿ ಅವರ ಜೊತೆ ಕಾಫಿ ಕುಡಿದು, ‘ಸ್ವಲ್ಪ ಕೆಲಸವಿದೆ. ಮುಗಿಸಿ ಬರುತ್ತೇನೆಂದು’ ರಾಯರನ್ನು ಹುಡುಕಿಕೊಂಡು ಹೊರಟ. ಬೆಳಗಿನಿಂದ ರಾಯರು ಬಂದಿರಲಿಲ್ಲ. ಆದರೆ ಅವರ ಹೆಂಡತಿ ಮತ್ತು ಮಗಳು ತನ್ನ ಮನೆಯಲ್ಲೆ ಚಿಕ್ಕಿಗೆ ನೆರವಾಗಿ ಇದ್ದರು.

ಜಗನ್ನಾಥ ಊರಿನ ಬೀದಿ ತಲ್ಪುತ್ತಿದ್ದಂತೆ ಬಾವುಟ ಹಿಡಿದು ಐದಾರು ಜನ ಬರುತ್ತಿರುವುದು ಕಾಣಿಸಿತು. ಬಾವುಟ ನೋಡಿ ಅವರು ನೀಲಕಂಠಸ್ವಾಮಿಯ ಕಡೆಯವರೆಂದು ಊಹಿಸಿದ. ನಿಂತು ಅವರಿಗೆ ತನ್ನ ಮನೆ ತೋರಿಸಿ, ‘ಹೋಗಿ ವಿಶ್ರಮಿಸಿಕೊಳ್ಳಿ. ಇನ್ನೊಂದು ಘಂಟೆಯಲ್ಲಿ ನಾನು ಬಂದುಬಿಡುತ್ತೇನೆ’ ಎಂದ. ಯುವಕರು ನಗುತ್ತ ಖುಷಿಯಾಗಿದ್ದರು : ಉತ್ಸವಕ್ಕೊ, ಪಿಕ್‌ನಿಕ್ಕಿಗು ಬಂದವರಂತೆ ಅವರು ಕಂರು. ‘ಆಗಲಿ ಕಾಮ್ರೇಡ್’ ಎಂದು ಅವರಲ್ಲೊಬ್ಬ ಯುವಕ ಸಲಿಗೆಯಲ್ಲಿ ತನಗೆ ಹೇಳಿದ್ದು ಕೇಳಿ ಜಗನ್ನಾಥನಿಗೆ ಮುಜುಗರವಾಯಿತು. ಆದರೆ ಅದನ್ನು ತೋರಿಸಿಕೊಳ್ಳದೆ ಸೀದ ರಾಯರ ಅಂಗಡಿ ಕಡೆ ಜಗನ್ನಾಥ ನಡೆದ.

ಪೇಟೆಯ ಬೀದಿಗಳು ಜಾತ್ರೆಗೆಂದು ಸಿಂಗರಿಸಿಕೊಂಡಿದ್ದವು. ಯಾರೂ ತನ್ನನ್ನು ಮಾತಾಡಿಸಲಿಲ್ಲ. ಹುಟ್ಟಿದೂರಿನ ಬೀದಿಗಳಿಂದ ಹೀಗೆ ತಿರಸ್ಕೃತನಾದೆನೆಂದು ಜಗನ್ನಾಥನಿಗೆ ಸಂಕಟವಾಯಿತು. ರಾಯರು ಅಂಗಡಿ ಬಾಗಿಲು ಮುಚ್ಚಿ ತನ್ನ ಮನೆಗೇ ಹೊರಡಲು ತಯ್ಯಾರಾಗಿದ್ದರು. ಅವರು ಖುಷಿಯಾಗಿದ್ದಿದ್ದಕ್ಕೆ ಕಾರಣ ಸರ್ವೋದಯದ ಮಾಗಡಿ ಅನಂತಕೃಷ್ಣ ಸಾಯಂಕಾಲ ಬರುತ್ತಾರೆಂಬ ಸುದ್ದಿ ತಿಳಿದದ್ದು. ಸತ್ಯಾಗ್ರಹದಲ್ಲಿ ಜೈಲಿನಲ್ಲಿ ಜೊತೆಗಾರನಾಗಿದ್ದ ಆಪ್ತ ಸ್ನೇಹಿತನನ್ನು ನೋಡುವ ಆತುರದಲ್ಲಿದ್ದರು. ದಾರಿಯ ಮೇಲೆ ನಡೆದುಬರುವಾಗ ತುಂಬ ಸ್ವಾರಸ್ಯವಾಗಿ ಆತನ ಕಥೆಯನ್ನು ಜಗನ್ನಾಥನಿಗೆ ಹೇಳಿದರು. ಚಂದ್ರಶೇಖರನ ಕಾಗದದಿಂದ ವ್ಯಗ್ರವಾಗಿದ್ದ ಜಗನ್ನಾಥ ರಾಯರನ್ನು ಯಾಕೆ ತಾನು ಹೀಗೆ ಹುಡುಕಿಕೊಂಡು ಬಂದೆನೆಂದು ಆಶ್ಚರ್ಯಪಡುತ್ತ ಅರೆ ಮನಸ್ಸಿನಿಂದ ಕಥೆ ಕೇಳಿಸಿಕೊಳ್ಳಲು ಪ್ರಾರಂಭಿಸಿದ. ಆದರೆ ಆ ಕಥೆಯ ನಡುವೆ ರಾಯರು ಹೇಳುವುದರಲ್ಲಿ ತನ್ಮಯನಾದ.