ಮಾರನೇ ಬೆಳಿಗ್ಗೆ ಕಾವೇರಿ ಮನೆಗೆಲಸಕ್ಕೆ ಬರಲಿಲ್ಲ. ಸೆಟ್ಟಿ ಮುಖ ತೋರಿಸಲಿಲ್ಲ. ಶಾನುಭೋಗ ಶಾಸ್ತ್ರಿಗಳು ಬಹಳ ವಿನಯದಿಂದ ಎದುರು ನಿಂತು ನಡೆದದ್ದೆಲ್ಲ ತನಗೆ ಗೊತ್ತಿಲ್ಲವೆನ್ನುವಂತೆ ನಟಿಸುತ್ತ, ‘ಇನ್ನು ಮುಂದೆ ಸೆಟ್ಟಿ ಕಡೆ ಆಳುಗಳು ಕೆಲಸಕ್ಕೆ ಬರಲ್ಲ ಅಂತಿದಾರೆ. ಏನು ಮಾಡೋದು?’ ಎಂದರು. ‘ಕನ್ನಡಾ ಜಿಲ್ಲೆಗೆ ಹೋಗಿ ಬೇರೆ ಆಳುಗಳನ್ನು ತರಿಸಿದರಾಯಿತು’ ಎಂದು ಜಗನ್ನಾಥ ಹೇಳಿ ರಾಯರ ಮಗ ರಂಗಣ್ಣನಿಗೆ ‘ಅಪ್ಪ ಮನೇಲೇ ಇದ್ರ?’ ಎಂದು ಕೇಳಿದ. ‘ಟಪಾಲು ತಗೊಂಡು ಬರ್ತೀನಿಂತ ಹೇಳಿದ್ರು’ ಎಂದು ರಂಗಣ್ಣ ಖಾತೆ ಪುಸ್ತಕದಲ್ಲಿ ಏನೋ ಬರೆಯುತ್ತ ಕೂತ.

ಜಗನ್ನಾಥ ಅಫೀಸಿನಿಂದ ಹೊರಗೆ ಬಂದು ಅಡ್ಡಾಡಿದ. ದೂರದಿಂದ ರಾಯರು ಬರುತ್ತಿರುವುದು ಕಂಡು ಅವನಿಗೆ ಖುಷಿಯಾಯಿತು. ಅಂಗಳದಲ್ಲೆಲ್ಲ ಅವರಿಗಾಗಿ ಕಾದುನಿಂತ. ವೇಗವಾಗಿ ನಡೆದುಬಂದ ರಾಯರು ಗಾಬರಿಯಾಗಿದ್ದಂತೆ ಕಂಡರು. ಶಾಲಿಗ್ರಾಮವನ್ನು ಹೊಲೆಯರಿಗೆ ಮುಟ್ಟಿಸಿದ್ದನ್ನು ಪೂಜೆಯ ಭಟ್ಟರು ಮತ್ತು ಅಡಿಗೆಯವರು ಊರೆಲ್ಲ ಪ್ರಚಾರ ಮಾಡಿದ್ದರು. ಜನರು ಮಾತಾಡಿಕೊಳ್ಳುತ್ತಿದ್ದುದನ್ನು ಕೇಳಿ ರಾಯರು ನಿನ್ನೆ ಮನೆಗೆ ಬಂದಿದ್ದರು, ಇದ್ದಕ್ಕಿದ್ದಂತೆ ಜಗನ್ನಾಥ ಬೆಂಗಳೂರಿಗೆ ಹೋಗಿದ್ದಾನೆಂದು ತಿಳಿದು ಗಾಬರಿಯಾಗಿದ್ದರು.

ಜಗನ್ನಾಥ ರಾಯರನ್ನು ಮಹಡಿಯ ಮೇಲೆ ಕರೆದುಕೊಂಡು ಹೋಗಿ ಗುಟ್ಟಾಗಿ ಪಿಳ್ಳನಿಗೆ ಪೊಲೀಸರು ಹೊಡೆದದ್ದನ್ನು ಹೇಳಿದ. ಅದೂ ತನ್ನ ಕಿವಿಯ ಮೇಲೆ ಬಿದ್ದಿದೆಯೆಂದು ರಾಯರು ಹೇಳಿ, ಇದು ಹಿಂಸಾಚಾರಕ್ಕೆ ದಾರಿ ಮಾಡಿಕೊಡಬಹುದೆಂದು ಆತಂಕಿಸಿದರು. ನನ್ನ ನಿಶ್ಚಯ ತೀರಾ ಅಪಕ್ವವಾದ್ದು ಎನ್ನಿಸಿದ ಕ್ಷಣ ನಾನು ಹಿಂದೆಗೆಯುತ್ತೇನೆ ರಾಯರೇ ಎಂದದ್ದಕ್ಕೆ ಇಷ್ಟಾದ ಮೇಲೆ ನೀನು ಹಿಂದಿರುಗೋದು ಸಹ ಸಾಧ್ಯವಿಲ್ಲ ಜಗಣ್ಣ ಎಂದು ನಿಟ್ಟುಸಿರಿಟ್ಟರು. ಕಾವೇರಿಯನ್ನು ಪಿಳ್ಳ ಬಯಸಿದ್ದರಿಂದ ತನಗೆ ಸಂತೋಷವೇ ಆಗಿದೆಯೆಂಬುದನ್ನು ಹೇಳಿದರೆ ರಾಯರಿಗೆ ಅರ್ಥವಾಗಲಿಕ್ಕಿಲ್ಲವೆಂದು ಜಗನ್ನಾಥ ಸುಮ್ಮನಾದ.

‘ಇವತ್ತು ಪೇಪರಿನಲ್ಲಿ ಏನಿದೆ?’

‘ಏನಿಲ್ಲ. ಯಥಾಪ್ರಕಾರ ಒಂದಿಷ್ಟು ವಾಚಕರ ಪತ್ರಗಳಿವೆ. ಮೈಸೂರು ಸೋಷಲಿಸ್ಟ್ ಪಕ್ಷದ ನೀಲಕಂಠಸ್ವಾಮಿ ಮತ್ತು ರಂಗರಾವ್ ಭಾರತೀಪುರಕ್ಕೆ ಚಳುವಳಿಯಲ್ಲಿ ಭಾಗವಹಿಸಲು ಹೊರಟಿದ್ದಾರೆಂಬ ಸುದ್ದಿಯಿದೆ. ಮಾಗಡಿ ಅನಂತಕೃಷ್ಣ ಸರ್ವೋದಯ ಕಾರ್ಯಕರ್ತರ ಪರವಾಗಿ ತಾನೂ ಬರುತ್ತಿದ್ದೇನೆಂದು ನನಗೆ ಬರೆದಿದ್ದಾನೆ – ಅಷ್ಟೆ.’

‘ರಾಯರೆ, ಚಿಕ್ಕಿ ನನ್ನ ಹತ್ರ ಮಾತಾಡ್ತಾನೇ ಇಲ್ಲ. ತುಂಬ ಹೆದರಿಬಿಟ್ಟಿದ್ದಾರೆ ಅನ್ನಿಸತ್ತೆ. ಅಡಿಗೆ ಮಾಡಲಿಕ್ಕೆ ಜನ ಇಲ್ಲ. ಸ್ವಲ್ಪ ಅವ್ರಿಗೆ ಧೈರ್ಯ ಹೇಳ್ತೀರ?’

‘ಆಗಲಿ ಜಗಣ್ಣ. ನಾನ್ಯಾಕೆ ಇಲ್ಲಿಗೆ ಅರ್ಜೆಂಟಾಗಿ ಬಂದದ್ದು ಅಂದ್ರೆ – ನೀನು ಕೂಡ್ಲೆ ಒಂದು ಕೆಲಸ ಮಾಡಬೇಕು. ಶಿವಮೊಗ್ಗದಲ್ಲಿ ಹರಿಜನ ಡಿ.ಸಿ. ಸತ್ಯಪ್ರಕಾಶ್ ಇದಾನೆ. ಅವನಿಗೊಂದು ಮಾತು ನೀನು ಹೇಳಬೇಕು; ಜಾತ್ರೆ ಹೊತ್ತಿಗೆ ಹಿಂಸಾಚಾರವಾಗದಂತೆ ಪೊಲೀಸ್ ದಳಾನ್ನ ಕಳುಹಿಸಬೇಕು ಅಂತ. ಆಂಧ್ರದಲ್ಲಿ ಹೊಲೆಯರನ್ನ ಸುಟ್ಟುಹಾಕಿದ ವರದಿಗಳನ್ನ ನೀನು ಓದಿರಬಹುದು. ಈ ಊರಲ್ಲೂ ಹಾಗೆಲ್ಲ ಆಗಲ್ಲಾಂತ ಹೇಳಕ್ಕೆ ಆಗಲ್ಲ.’

ಜಗನ್ನಾಥನಿಗೆ ರಾಯರು ಹೇಳಿದ್ದು ಸರಿಯೆನ್ನಿಸಿತು.

‘ಈಗಲೇ ಹಾಗಾದ್ರೆ ಶಿಮೊಗ್ಗಕ್ಕೆ ಹೋಗ್ತೀನಿ. ಸಾಯಂಕಾಲದೊಳಗೆ ಬರ್ತೀನಿ. ನೀವು ಸ್ವಲ್ಪ ಚಿಕ್ಕಿ ಜೊತೆಗಿದ್ದು ಅವರಿಗೆ ಧೈರ್ಯ ಹೇಳಿ.’

ಎಂದು ಜಗನ್ನಾಥ ಶುಭ್ರವಾದ ಅಂಗಿ ಪಂಚೆ ತೊಟ್ಟು ಹೊರಟುಬಿಟ್ಟ.

ದಾರಿಯಲ್ಲಿ ವಾಸು ಕೈಯೊಡ್ಡಿ ಕಾರು ನಿಲ್ಲಿಸಿದ. ಅವನ ಜೊತೆ ಪ್ರಭು ಮತ್ತು ನಾಗರಾಜ ಜೋಯಿಸರಿದ್ದರು. ಜಗನ್ನಾಥನಿಗೆ ಏಕಾಂತದ ಆವಶ್ಯಕತೆಯಿತ್ತು. ಆದರೆ ವಾಸು ‘ಶಿಮೊಗ್ಗಕ್ಕೆ ಹೋಗ್ತಿದೀಯ? ಹಾಗಾದರೆ ನಾವೂ ಬರ‍್ತೇವೆ’ ಎಂದಾಗ ದಾಕ್ಷಿಣ್ಯದಲ್ಲಿ ಕಾರಲ್ಲಿ ಕೂರಿಸಿಕೊಂಡ. ವಾಸು ಹರಟಲು ಪ್ರಾರಂಭಿಸಿದ. ಶಿಮೊಗ್ಗದಲ್ಲಿ ಸಿಹಿ ತಿಂಡಿ ತಯಾರಿಸಬಲ್ಲ ಉತ್ತರ ದೇಶದವನೊಬ್ಬನಿದ್ದಾನೆ; ಅವನನ್ನು ಕರ‍್ಕೊಂಡು ಬರಬೇಕು. ಜಾತ್ರೆ ಹೊತ್ತಿಗೆ ಅಂಗಡಿ ಸಿದ್ಧವಾಗಬೇಕು. ಇಷ್ಟೆಲ್ಲ ಯಾಕೆ ಮೈಮೇಲೆ ಹಾಕ್ಕೊಂಡಿದಿ ಜಗಣ್ಣ ನಿನಗಿದು ಬೇಡಿತ್ತು – ಇತ್ಯಾದಿ.

ಜಗನ್ನಾಥ ಉತ್ತರ ಕೊಡದೆ ಡ್ರೈವ್ ಮಾಡಿದ. ಜೋಯಿಸರು ವಾಸುಗೆ ಹೇಳಿದರು. ‘ಜಗನ್ನಾಥರಾಯರು ಮಾಡುತ್ತಿರೋದು ಸರಿಯೋ ತಪ್ಪೋ ಅನ್ನೋ ಪ್ರಶ್ನೆಗಿಂತ ಮುಖ್ಯವಾಗಿ ಇನ್ನೊಂದು ಪ್ರಶ್ನೆಯಿದೆ. ಉಪನಿಷತ್ತು ಹೇಳತ್ತೆ : ಒಬ್ಬ ಋಷಿಗೆ ಎಲ್ಲವುದೂ ಕಾಣಿಸೋದು ಸಾಧ್ಯವಾಗಿದ್ದ ಪಕ್ಷದಲ್ಲಿ ಅವನು ಹೇಳಿದ್ದೇ ಪ್ರಮಾಣವಾಗುತ್ತಿತ್ತಲ್ಲ. ಯಾಕೆ ಬೇರೆ ಬೇರೆ ಋಷಿಗಳ ಅಗತ್ಯವಿರುತ್ತಿತ್ತು ಅಂತ. ಸ್ಥಗಿತವಾದ್ದು ಚಲಿಸಲಿ ಅಂತ ಜಗನ್ನಾಥರಾಯರು ಹೊರಟಿದ್ದಾರೇ ವಿನಹ…’

‘ಶಿವಮೊಗ್ಗದಲ್ಲಿ ಏನಾಯಿತು ಜೋಯಿಸರೆ?’ ಪ್ರಭುಗಳು ಕೇಳಿದರು.

‘ಮಗನಿಗಿನ್ನೂ ಮುವ್ವತ್ತು ವರ್ಷ. ನಾಗಮಣೀದು ಹೀಗಾಯ್ತು. ಏನು ಮಾಡೋದು. ಎರಡನೇ ಸಂಬಂಧಕ್ಕೆ ಒಪ್ಪಿ ಯಾರೋ ಹೆಣ್ಣು ಕೊಡಲು ಬಂದಿದಾರೆ. ಓದಿದ ಹುಡುಗ – ಅವನನ್ನೊಂದು ಮಾತು ಕೇಳಿ ಮುಂದಿನ ವರ್ಷ ಲಗ್ನ ನಿಶ್ಚಯಿಸಬೇಕು’ – ಜೋಯಿಸರು ನಿಟ್ಟುಸಿರು ಬಿಟ್ಟು ಹೇಳಿದರು.

ಪ್ರಭುಗಳು ಜಗನ್ನಾಥನನ್ನು ಕೇಳಿದರು :

‘ಇಂಗ್ಲೆಂಡಿಂದ ನೀವೊಂದು ಹೊಸ ಕಾರು ಯಾಕೆ ತರ್ಲಿಲ್ವೊ?’

ಜಗನ್ನಾಥ ಉತ್ಸಾಹವಿಲ್ಲದೆ ‘ಸುಮ್ಮನೆ’ ಎಂದ.

‘ಈ ರೋಡಲ್ಲಿ ಒಳ್ಳೆ ಕಾರು ನಾಲ್ಕು ದಿನ ಬರಲ್ಲ. ಸರಿಯೆ. ಮಾರಾಯ್ರೆ ಈ ಸ್ವಾತಂತ್ರ್ಯ ಬಂದ ಮೇಲೆ ಕೈಬಿಸಿಯಾಗದೆ ಏನೂ ಕೆಲಸ ಆಗಲ್ಲ.’

ಡ್ರೈವ್ ಮಾಡುವಾಗ ಮಾತಾಡೋದು ತನಗೆ ಇಷ್ಟವಿಲ್ಲವೆಂದು ಸೂಚಿಸಲು ರಿಯರ್ ಕನ್ನಡಿಯನ್ನು ಸರಿಮಾಡುತ್ತ ಜಗನ್ನಾಥ ಕಾರು ಓಡಿಸಿದ. ಪ್ರಭುಗಳು ವಾಸುವಿಗೆ ಹೇಳಿದರು :

‘ಈ ಹೊಸ ಡಿ.ಸಿ. ಮಾರಾಯ್ರೆ, ಲಂಚವಿಲ್ದೆ ಏನೂ ಕೆಲಸ ಮಾಡಲ್ಲ. ಹರಿಜನ ಅಲ್ವೊ? ಅವನನ್ನ ಹಿಡಿಯೋರು ಯಾರು ಹೇಳಿ? ಮಂತ್ರಿ ಬೇರೆ ಸಂಬಂಧ ಅಂತೆ’.

ವಾಸು ಜಗನ್ನಾಥನನ್ನು ಚುಚ್ಚಲೆಂದೇ ಹೊಲೆಯರು ಮೇಲೆ ಬಂದರೆ ಏನೇನು ಅನಾಹುತಗಳಾಗುತ್ತವೆನ್ನುವುದನ್ನು ವರ್ಣಿಸಲು ಪ್ರಾರಂಭಿಸಿದ. ಯಾವನೋ ಹೊಲೆಯ ಎಂ.ಪಿ. ಡೆಲ್ಲಿಯಲ್ಲಿ ಪಕ್ಕದ ರೂಮಲ್ಲಿದ್ದ ಹೆಣ್ಣನ್ನ ಕೆಣಕಲು ಹೋಗಿ ನೆಹರೂ ಹತ್ತಿರ ಹೇಗೆ ಛೀಮಾರಿ ಹಾಕಿಸಿಕೊಂಡ ಎನ್ನುವ ಕಥೆಯಿಂದ ಅವನ ವ್ಯಾಖ್ಯಾನ ಪ್ರಾರಂಭವಾಗಿ ಜೋಕುಗಳಲ್ಲಿ ಪರ್ಯವಸಾನವಾಯಿತು. ಯಾವನೋ ಒಬ್ಬ ಹೊಲೆಯ ಮಂತ್ರಿಯಂತೆ. ಮಂತ್ರಿಯಾದ ದಿನ ಅವನೂ ಅವನ ಹೆಂಡ್ತೀನೂ ಬೆಂಗಳೂರಿಗೆ ಬಂದು ಒಂದು ಹೋಟ್ಲಲ್ಲಿ ಇಳ್ಕೊಂಡ್ರಂತೆ. ರೂಮ್ ವಿತ್‌ಬಾತ್‌ರೂಮ್ ಅಟ್ಯಾಚ್ಡ್. ಹೆಂಡತಿ ಕಕ್ಕಸ್ಸಿಗೆ ಹೋದಳು. ನೋಡಿದಳು. ದಿಗ್ಭ್ರಮೆಯಾಗಿ ಕೂತುಬಿಟ್ಟಳು. ಎಷ್ಟು ಹೊತ್ತಾದ್ರೂ ಹೆಂಡತಿ ಬರ್ಲಿಲ್ವಲ್ಲ ಅಂತ ಮಾರಾಯ ಗಂಡ ಒಳಗೆ ಹೋಗಿ ನೋಡಿದ. ಏನು ನೋಡೋದು? – ಕೂತುಬಿಟ್ಟಿದ್ದಾಳೆ ಮಾರಾಯತಿ ನೆಲದ ಮೇಲೆ. ಗಂಡನನ್ನು ನೋಡಿ ‘ನೋಡಿದ್ರ ಏಸು ಸೆಂದಾಕೈತೆ! ಇಲ್ಲೆ ಉಂಡು ಮಕ್ಕೊಬಹುದಲ್ಲ?’ ಎಂದ್ಳು.

ಜಗನ್ನಾನ ಕಾರನ್ನು ನಿಧಾನ ಮಾಡಿ ಪಕ್ಕದಲ್ಲಿ ಕೂತ ವಾಸುವನ್ನು ಕ್ರೂರವಾಗಿ ನೋಡಿ,

‘Shut up. You have become disgusting’ ಎಂದ. ಜಗನ್ನಾಥನ ಮೈ ಸಿಟ್ಟಿನಿಂದ ನಡುಗುತ್ತಿರುವುದನ್ನು ನೋಡಿ ವಾಸು ಪೆಚ್ಚಾದ. ಪ್ರಭುಗಳು ಮಾತು ಬದಲಾಯಿಸಿದರು :

‘ಜಗನ್ನಾಥರಾಯರು ನಾನು ಹೇಳಿದ್ದನ್ನ ಮನಸ್ಸಿಗೆ ತಂದುಕೊಂಡೇ ಇಲ್ಲ. ಈ ಗುರಪ್ಪಗೌಡನ್ನ ನಂಬಿಕೊಂಡ್ರೆ ಊರು ಉದ್ಧಾರವಾಗಲ್ಲ ಮಾರಾಯರೆ. ಗೌಡರ ಮಕ್ಕಳಿಗೆ ಏನು ಬೇಕೂ ಅಷ್ಟು ಮಾಡ್ತಾನೆ. ಶಾನುಭೋಗರನ್ನ ಹೆದರಿಸೋದು. ಶ್ರೀಮಂತ ಗೌಡರ ಮನೆ ಎದುರಿರೋ ರೋಡನ್ನ ದುರಸ್ತು ಮಾಡಿಸೋದು. ಅಮಲ್ದಾರನ್ನ ವರ್ಗ ಮಾಡಿ ಮಾಡಿಸೋದು ಇಷ್ಟೆ ಶಿವಾಯಿ ಅವನು ಇನ್ನೇತಕ್ಕೂ ಪ್ರಯೋಜನ ಇಲ್ಲ. ನೀವೇನಾದ್ರೂ ಮಾಡಿದ್ರೆ ಮಾಡಬೇಕು ಅಷ್ಟೆ.’

ಜಗನ್ನಾಥ ಹೂಗುಟ್ಟಿದ. ಮಾತಾಡಲಿಲ್ಲ. ಜಗನ್ನಾಥನ ಸಿಟ್ಟನ್ನ ಜೋಕೆಂದು ತಿಳಿದುಕೊಳ್ಳುವ ಪ್ರಯತ್ನ ವಿಫಲವಾದ್ದರಿಂದ ಕಾರಿನಿಂದ ಇಳಿಯುವಾಗ ವಾಸು, ‘Excuse me’ ಎಂದ. ನ್ಯಾಷನಲ್ ಲಾಡ್ಜ್ ಎದುರು ಮೂವರನ್ನೂ ಇಳಿಸಿ ಜಗನ್ನಾಥ ಸೀದ ಡಿ.ಸಿ. ಯವರ ಆಫೀಸಿಗೆ ಹೋದ.

* * *

SATHYAPRAKASH, B.A. B.L., IN

ಬೋರ್ಡ್‌ನೋಡಿ ಜಗನ್ನಾಥ ಚೀಟಿಯಲ್ಲಿ ತನ್ನ ಹೆಸರು ಬರೆದು ಉದ್ದ ಸ್ಟೂಲಿನ ಮೇಲೆ ಕೂತಿದ್ದ ಒಂದು ಬಡಕಲು ವ್ಯಕ್ತಿಯ ಕೈಯಲ್ಲಿ ಕೊಟ್ಟ. ಅವನ ಹಣೆಯಲ್ಲಿ ಅಂಗಾರ ಅಕ್ಷತೆ. ಎರಡು ಕಣ್ಣಿನ ಪಕ್ಕಕ್ಕೂ ಅಳಿಸಿ ಹೋಗುವ ಸ್ಥಿತಿಯಲ್ಲಿದ್ದ ಶಂಖ ಚಕ್ರಗಳ ಗೋಪಿ ಮುದ್ರೆಗಳಿದ್ದುವು. ಜುಟ್ಟಿನ ತಲೆಯ ಮೇಲೆ ಮಾಸಿದ ಬಿಳಿ ಟೋಪಿಯಿತ್ತು. ಕಾಲಲ್ಲಿ ಚಪ್ಪಲಿಯಿರಲಿಲ್ಲವಾದರೂ ಪ್ಯೂನಿನ ಸಮವಸ್ತ್ರವಾದ ಬಿಳಿಕೋಟು, ಬಿಳಿದೊಗಳೆ ಪ್ಯಾಂಟ್ ತೊಟ್ಟಿದ್ದ ಬಲರಾಮ ಗೋವಿನಂತಹ ಬಡಕಲು ಬ್ರಾಹ್ಮಣ. ಸಾಹೇಬರು ಗಂಟೆ ತಟ್ಟಿದ ಕೂಡಲೇ ಬಾಣದಂತೆ ಒಳನುಗ್ಗುವ ಹೊರನುಗ್ಗುವ ಪ್ಯೂನು. ಉಳಾಯ್ ಪಿದಾಯ್, ಉಳಾಯ್ ಪಿದಾಯ್, ಉಳಾಯ್ ಪಿದಾಯ್ – ಜಾತ್ರೆಯಲ್ಲಿ ಕರ್ಪೂರದ ಚೆಂಡನ್ನು ಪೆಟ್ಟಿಗೆಯ ಒಳಗೆ ಹೊರಗೆ ಆಡಿಸುತ್ತಿದ್ದ ಜಾದೂಗಾರನ ಕೈಚಳಕ ನೆನಪಾಯ್ತು. ಪ್ರತಿ ಸಾರಿ ಚೀಟಿ ಕೊಡುವಾಗಲೂ ಸತ್ಯ ಪ್ರಕಾಶರನ್ನು ಅನಿವಾರ್ಯವಾಗಿ ಮುಟ್ಟುತ್ತ, ಕಾರಣ – ಮನೆಯಲ್ಲಿ ನಿತ್ಯವೂ ಸಾಯಂಕಾಲ ಸ್ನಾನ ಮಾಡಿ, ಜನಿವಾರ ಬದಲಾಯಿಸಿ, ದನದ ಉಚ್ಚೆ ಸಗಣಿ ಸೇವಿಸಿ, ಗಾರ್ಹಸ್ಥ್ಯ ನಡೆಸಬೇಕಾಗಿ ಬಂದ ಪ್ಯೂನಾಗಿರಬಹುದು ಇವನು. ಜಗನ್ನಾಥ ಕನಿಕರದಿಂದ ಅವನ ಜೋಬದ್ರ ಮುಖ ನೋಡಿದ. ತನ್ನ ವೇಷಭೂಷಣ ನೋಡಿ ಅವನಿಗೆ ಗೌರವ ಹುಟ್ಟಿರಲಿಲ್ಲ. ‘ಸಾಹೇಬ್ರು ಕೆಲಸ ಮಾಡ್ತಿದಾರೆ. ಕಾಯಬೇಕು’ ಎಂದ. ‘ಚೀಟೀನ್ನ ಕೊಟ್ಟುಬನ್ನಿ, ದಯವಿಟ್ಟು’ ಎಂದು ಜಗನ್ನಾಥ ಆತನನ್ನು ವಿನಯದಿಂದ ಕೇಳಿಕೊಂಡ ಮೇಲೆ ಮುಖ ಸೊಟ್ಟಗೆ ಮಾಡಿ ಆತ ಒಳಗೆ ಹೋದ. ಪಾಪ, ಸವರ್ಣೀಯರ ಮೇಲಿನ ಜಿದ್ದನ್ನೆಲ್ಲ ಈ ಬಡ ಪ್ರಾಣಿಯ ಮೇಲೆ ಸತ್ಯಪ್ರಕಾಶ ತೀರಿಸಿ ಕೊಳ್ಳುತ್ತಿರಬಹುದು. ಏಕಕಾಲದಲ್ಲಿ ಪಿಳ್ಳನೂ ಸತ್ಯಪ್ರಕಾಶನೂ ಈ ಬಡ ಬ್ರಾಹ್ಮಣ ಮನುಷ್ಯನೂ ಇರುವ ಈ ದೇಶದ ವಾಸ್ತವವನ್ನು ಅರ್ಥಮಾಡಿಕೊಳ್ಳುವುದು ಎಷ್ಟು ಜಟಿಲ ಎನ್ನಿಸಿತು.

ಕೂಡಲೇ ಒಳಗೆ ಕರೆದುಕೊಂಡು ಬರಲು ಸಾಹೇಬರು ಹೇಳಿದ್ದರಿಂದ ಪ್ಯೂನ್‌ನ ಮುಖದಲ್ಲಿ ಈಗ ವಿನಯವಿತ್ತು. ಬಾಗಿಲನ್ನು ತೆರೆದು ಗೌರವದಿಂದ ಬಾಗಿದ. ಸತ್ಯಪ್ರಕಾಶ್‌ಎದ್ದು ನಿಂತು ಜಗನ್ನಾಥನ ಕೈಲುಕಿದರು. ಕುಳ್ಳಗೆ ಕಪ್ಪಗೆ ಇದ್ದ ಸತ್ಯಪ್ರಕಾಶರ ಮುಖದ ಒರಟೊರಟಾದ ದೊಡ್ಡ ಕಿವಿಗಳು. ಅವರ೪ ಹಾವಭಾವದಲ್ಲಿ ಒಲಿಸಿಕೊಳ್ಳುವ ಬಡಿವಾರ ಎದ್ದು ಕಾಣುತ್ತಿತ್ತು. ಎದುರಿದ್ದವರಿಗೆ ನೀವೆ ನನ್ನ ಸರ್ವಸ್ವ ಎಂದು ಹೇಳಲು ಪ್ರಯತ್ನ ಪಡುತ್ತಿದ್ದ ಅವರ ಅಗಲವಾದ ನಗು ಈ ಮನುಷ್ಯ ಪದವಿಯಿಂದ ಪದವಿಗೆ ಅಷ್ಟು ಬೇಗನೆ ಏರುತ್ತ ಹೋದ ಕ್ರಮವನ್ನು ಹೇಳುತ್ತಿತ್ತು.

‘ಬನ್ನಿ, ಕೂತುಕೊಳ್ಳಿ. ನೀವು ನನ್ನನ್ನು ನೋಡಲು ಬಂದು ನನ್ನನ್ನು ಧನ್ಯನಾಗಿ ಮಾಡಿದಿರಿ.’

ಸತ್ಯಪ್ರಕಾಶನ ಕನ್ನಡ ಎಷ್ಟು ಕೃತಕ ಎನ್ನಿಸಿತು. ಅಸ್ಪೃಶ್ಯನಾಗಿದ್ದ ಹುಡುಗ ಹೀಗೆ ಆಫೀಸರಾಗಿ ಪರಿವರ್ತನೆಯಾಗುವಾಗ ಎಲ್ಲ ನೈಜತೆಯನ್ನೂ ಕಳೆದುಕೊಳ್ಳುತ್ತಾನಲ್ಲ. ‘ನಿಮ್ಮ ಊರು ಯಾವುದು?’ ಇತ್ಯಾದಿ ಉಪಚಾರದ ಪ್ರಶ್ನೆಗಳನ್ನು ಕೇಳುತ್ತ ಜಗನ್ನಾಥ ಅವರ ಅಫೀಸನ್ನು ಕುತೂಹಲದಿಂದ ನೋಡಿದ. ಗಾಂಧಿ, ಗುಲಾಬಿ ತೊಟ್ಟ ನೆಹರೂ, ಮೈಸೂರಿನ ಮುಖ್ಯಮಂತ್ರಿಗಳ ಫೋಟೋಗಳು ಒಂದು ಗೋಡೆಯ ಮೇಲಿದ್ದುವು. ಜಗನ್ನಾಥನ ಬೆನ್ನ ಹಿಂದೆ ಮಂಜುನಾಥ ಸ್ವಾಮಿಯ ದೊಡ್ಡದೊಂದು ಫೋಟೋ ಇತ್ತು. ಬಹಳ ಹಿಂದಿನಿಂದ ಇರುವ ಫೋಟೋ ಅದು ಎನ್ನುವುದು ಊದುಬತ್ತಿ ಆರಿಸಿ ಕುಂಕುಮಗಳ ಕಲೆಯಿಂದ ಗೊತ್ತಾಗುತ್ತಿತ್ತು. ಇವತ್ತು ಉರಿಸಿರಬಹುದಾದ ಊದುಬತ್ತಿಯ ಅವಶೇಷವಾದ ಬೂದಿ ಫೋಟೋದ ಕಟ್ಟಿನ ಮೇಲೆ ಬಿದ್ದಿತ್ತು. ಟೇಬಲ್ಲಿನ ಮೇಲಿನ ಖಾದೆ ಬಟ್ಟೆಯನ್ನು ಸವರುತ್ತ, ಚಪಲದಲ್ಲಿ ಬೆಲ್ಲಿನ ಜೊತೆ ಆಡುತ್ತ ಸತ್ಯಪ್ರಕಾಶ್ ಪುಸ್ತಕ ಓದಿದ ಹಾಗೆ ಮಾತಾಡಿದರು.

‘ನಮದು ತುಮಕೂರು ಸ್ವಾಮಿ. ನಮ್ಮ ಸಮಾಜ ಉದ್ಧಾರವಾಗಬೇಕಾದರೆ ನಿಮ್ಮಂತಹ ಯುವಕರು ದೇಶಸೇವೆಗೆ ಕಂಕಣಬದ್ಧರಾಗಿ ನಿಲ್ಲಬೇಕು. ಕಾರಂತರು ಹೇಳುತ್ತಾರಲ್ಲ ಹಾಗೆ ಮರಳಿ ಮಣ್ಣಿಗೆ ನೀವು ಬಂದಿದ್ದೀರಿ. ಮೊನ್ನೆ ಬೆಂಗಳೂರಿಗೆ ಡೆಪ್ಯೂಟಿ ಕಮೀಷನರ್ಸ್ ಕಾನ್ಫರನ್ಸಿಗೆಂದು ಹೋದಾಗ ನಾರಾಯಣರಿಗೆ ತಿಳಿಸಿದೆ ಗೊತ್ತಲ್ಲ ನಾರಾಯಣ್‌ನಮ್ಮ ನೆಂಟರು – ನನ್ನ ಹೆಂಡತೀನೂ ಅವರ ಹೆಂಡತೀನೂ ಖಾಸ ಅಕ್ಕ ತಂಗಿಯರು. ಅವರು ಆರೋಗ್ಯದ ಮಂತ್ರಿಗಳು – ಗೊತ್ತಿರಬೋದು ನಿಮಗೆ. ನಿಮ್ಮ ವಿಷಯ ಅವರಿಗೆ ಹೇಳಿದೆ. ಬಹಳ ಸಂತೋಷ ಪಟ್ಟರು.’

ಜಗನ್ನಾಥ ಸುಮ್ಮನೇ ಕೂತ. ಇಡೀ ವಾತಾವರಣದ ಕೃತಕತೆಯಿಂದ ಅವನಿಗೆ ಕಸಿವಿಸಿಯಾಗುತ್ತಿತ್ತು. ಟೇಬಲ್ಲಿನ ಮೇಲೆ ಕಾಗದದ ಹೂಗಳಿದ್ದವು. ಕಾಫಿ ಕಲೆಗಳ ಟೇಬಲ್‌‌ಕ್ಲಾತ್‌. ಬೆಲ್ ಮಾಡಲು ಹಾತೊರೆಯುವ ಸತ್ಯಪ್ರಕಾಶರ ಬೆರಳುಗಳು.

‘ತಾವು ಇಂಗ್ಲೆಂಡಲ್ಲಿ ಇದ್ದಿರೀಂತ ಕೇಳಿದೆ. ನಾನು ಒಂದು ಟೂರ್ ಹೋಗಿದ್ದೆ. ಜಪಾನಿಗೆ, ಅದೇ ಕೋ-ಆಪರೇಟಿವ್ ಮೂವ್‌ಮೆಂಟಿನ ಸಂಬಂಧದಲ್ಲಿ. ಅದೇನು ದೇಶ – ನೋಡಿದ್ರೆ ಆಶ್ಚರ್ಯವಾಯ್ತು. ನಮ್ಮ ಜನ ಶುದ್ಧ ಸೋಮಾರಿಗಳು. ಈಗ ನಮ್ಮ ಜನರನ್ನೆ ತಗೊಳ್ಳಿ, ಎಷ್ಟು ಸವಲತ್ತನ್ನ ಸರ್ಕಾರ ಒದಗಿಸಿಕೊಟ್ಟಿದೆ! ಆದ್ರೆ ಎಲ್ಲವನ್ನೂ ಅವು ದುರುಪಯೋಗ ಮಾಡ್ತಾವೆ. ಹಾಸ್ಟೆಲಲ್ಲಿ ಹುಡುಗರು ಬಿಟ್ಟಿ ಊಟ ಮಾಡಿಕೊಂಡು ಹೆಂಡ ಕುಡಿದು ಕಾಲ ಹಾಳುಮಾಡ್ತಾವೆ. ಅದಕ್ಕೇ ಅವಕ್ಕೆ ನಾನು ಹೇಳ್ತೀನಿ : ಬ್ರಾಹ್ಮಣ ಹುಡುಗರನ್ನ ನೋಡಿ ಎಷ್ಟು ಕಷ್ಟಪಟ್ಟು ಬೀದಿ ದೀಪದಲ್ಲಿ ಅವು ಓದಿ ಪಾಸ್ ಮಾಡ್ತಾವಲ್ಲ ನಿಮಗೇನು ಧಾಡಿ ಬಡೆದಿದೆ ಅಂತ? ಈಗ ನೋಡಿ ನಮ್ಮ ಪ್ಯೂನ್ ಗೋವಿಂದಾಚಾರ‍್ರ ಮಗನೂ ಎಸ್‌.ಎಸ್.ಎಲ್.ಸಿ. ನನ್ನ ಮಗನೂ ಎಸ್‌.ಎಸ್.ಎಲ್.ಸಿ. ಅವರ ಮಗ ಥ್ರೂ ಔಟ್ ಫಸ್ಟ್‌ಕ್ಲಾಸ್. ನಮ್ಮ ಮಗನಿಗೇನು ಕಡಿಮೆ? ಆದ್ರೆ ಒಂದೊಂದು ಕ್ಲಾಲ್ಲೂ ಅವ ಗ್ರೇಸ್ ತಗೊಳ್ದೆ ಪಾಸಾಗಲ್ಲ.’

ಸತ್ಯಪ್ರಕಾಶ ಬೆಲ್ ಕುಟ್ಟಿಯೇ ಬಿಟ್ಟರು. ಪ್ಯೂನ್ ಓಡಿಬಂದು ಬಾಗಿ ನಿಂತ.

‘ಆಚಾರ‍್ರೆ ಮನೇಗೆ ಹೋಗಿ ಫ್ಲಾಸ್ಕಲ್ಲಿ ಒಳ್ಳೆ ಕಾಫಿ ಮಾಡ್ಸಿ ತನ್ನಿ’ ಎಂದು ಜಗನ್ನಾಥನ ಕಡೆ ತಿರುಗಿ ‘ಕ್ಯಾಂಟೀನ್ನಲ್ಲಿ ಕಾಫಿ ಚೆನ್ನಾಗಿರಲ್ಲ ಮಿಸ್ಟರ್‌ಜಗನ್ನಾಥ್’ ಎಂದರು. ಪ್ಯೂನ್ ಬ್ರಾಹ್ಮಣನಾದ್ದರಿಂದ ಅವನಿಗೆ ಬಹುವಚನದ ಗೌರವ ಕೊಟ್ಟ ಸತ್ಯಪ್ರಕಾಶ್‌ನ ವ್ಯಕ್ತಿತ್ವದ ಬಗ್ಗೆ ಜಗನ್ನಾಥನ ಕುತೂಹಲ ಹೆಚ್ಚಿತು. ಮನೆಯಿಂದ ಕಾಫಿ ತರಿಸುತ್ತಾರೆ – ತಾನು ಕುಡಿಯುತ್ತೇನೊ ಪರೀಕ್ಷಿಸಲು. ಜಿದ್ದಿಗಾಗಿ ಬ್ರಾಹ್ಮಣನನ್ನು ಪ್ಯೂನ್ ಮಾಡಿಕೋತಾರೆ; ಆದರೆ ಬಹುವಚನದಲ್ಲಿ ಅವನನ್ನು ಮಾತಾಡಿಸ್ತಾರೆ. ದೈನ್ಯದಿಂದ ನಾಜೂಕಾಗಿ ಕೃತಕ ಕನ್ನಡದಲ್ಲಿ ಮಾತಾಡುತ್ತಾರೆ; ಆದರೆ ಪ್ರಾಯಶಃ ಒಳಗೊಳಗೇ ದ್ವೇಷದಿಂದ ಕುದೀತಿದಾರೆ. ನಾನು ವಿದ್ಯಾವಂತ ಬ್ರಾಹ್ಮಣನೆಂದು ನನ್ನನ್ನು ಮೆಚ್ಚಿಸಲು ತಮ್ಮ ಸರ್ವಶಕ್ತಿಯನ್ನೂ ಉಪಯೋಗಿಸುತ್ತಿದ್ದಾರೆ. ಪಿಳ್ಳ ಮುಂದೆ ಈ ಸತ್ಯಪ್ರಕಾಶ್ ಆದಾನು. ಚಲನೆಗೆ ಕೈ ಹಚ್ಚಿದವ ಇದಕ್ಕೂ ಸಿದ್ಧನಾಗಬೇಕು.

‘ನಾನು ತಮ್ಮ ಹತ್ತಿರ ಬಂದ ಕಾರಣ ಗೊತ್ತಾಗಿರಬಹುದು.’

‘ಅದೇ ಊಹಿಸಿದೆ – ಮಿಸ್ಟರ್ ಜಗನ್ನಾಥ್. ನೀವು ಈ ಕೆಲಸ ಮಾಡ್ತಿರೋದು ದೊಡ್ಡದು. ಈಗ ನನ್ನ ನೋಡಿ. ಹೆಚ್ಚು ಕಡಿಮೆ ಎಲ್ಲ ಟೆಂಪಲ್‌ಗೂ ನಾನು ಹೋಗಿ ಬಂದಿದೀನಿ. ತಿರುಪತಿ, ರಾಮೇಶ್ವರ, ಮಧುರೆ – ಎಲ್ಲೂ ನನ್ನ ತಡೆದಿಲ್ಲ. ನಮ್ಮ ಜನ ಮೊದಲು ಎಜುಕೇಟೆಡ್ ಆಗಬೇಕು. ಇನ್ನೂ ಮೂಢನಂಬಿಕೇಲೇ ಬದುಕ್ತಿದಾವೆ. ಎಡಗೈ ಜನಕ್ಕೆ ಬಲಗೈ ಅಂದರೆ ಆಗಲ್ಲ. i have no sympathy for some of my people. ನಿಮ್ಮಂಥೋರು ಕೈ ಹಿಡಿದು ಅವರನ್ನ ಎತ್ತಬೇಕು. ನನಗೆ ಎನ್ಕರೇಜ್‌ಮೆಂಟ್ ಕೊಟ್ಟೋರು ಯಾರು ಗೊತ್ತಾ? ಗುಬ್ಬಿ ಹೈಸ್ಕೂಲಲ್ಲಿ ಒಬ್ಬ ಬ್ರಾಹ್ಮಣ ಮೇಷ್ಟ್ರು.’

ಕಾಫಿ ಬಂತು. ಪಿಳ್ಳನ ಜೊತೆಗಾಗಲೀ ಸತ್ಯಪ್ರಕಾಶ್‌ಜೊತೆಗಾಗಲೀ ಸಹಜವಾದ ಸಂಬಂಧ ಸಾಧ್ಯವಾಗದ ದುರಂತ ಜಗನ್ನಾಥನನ್ನು ಬಾಧಿಸಿತು. ಏನೋ ಕೃತಕತೆ ತಲೆಹಾಕತ್ತೆ. ಪ್ಯೂನ್ ಇಬ್ಬರಿಗೂ ಕಪ್ಪಿನಲ್ಲಿ ಕಾಫಿ ಬಸಿದುಕೊಟ್ಟ. ವಿಪರೀತ ಸಿಹಿಯ ಕಾಫಿ, ಅದರಲ್ಲಿ ಉಂಡುಂಡೆಯಾಗಿ ಸಿಗುವ ಹಾಲಿನ ಕೆನೆ – ಜಗನ್ನಾಥ ಕಷ್ಟಪಟ್ಟು ಕುಡಿದ.

‘ನಿಮಗೆ ನಾನು ಹೇಳಬೇಕೂಂತ ಬಂದದ್ದು ಇದು. ಜಾತ್ರೆದಿನ ಗಲಾಟೆಯಾಗಬಹುದು. ಹರಿಜನರ ವಿರುದ್ಧ ಹಿಂಸಾಚಾರ ಆಗಬಹುದು. ಆದ್ದರಿಂದ ಪೊಲೀಸ್ ಬಂದೋಬಸ್ತು ಮಾಡಬೇಕೂಂತ ನಿಮ್ಮನ್ನ ಕೇಳೋಣಾಂತ ಬಂದೆ.’

ಜಗನ್ನಾಥ ಸತ್ಯಪ್ರಕಾಶರ ಪ್ರತಿಕ್ರಿಯೆಗೆ ಕಾದ. ಸತ್ಯಪ್ರಕಾಶ್ ತುಂಬ ವಿವೇಕಶಾಲಿಯ ಮುಖ ಮಾಡಿಕೊಂಡು ಮಾತಾಡಿದರು :

‘ಅದನ್ನೆ ಹೇಳೋಕೆ ಹೊರಟಿದ್ದೆ ಮಿಸ್ಟರ್ ಜಗನ್ನಾಥ್‌, ನನಗೂ ತುಂಬ ರೆಪ್ರಸೆಂಟೇಶನ್‌ಗಳು ಬಂದಿವೆ. ಜಾತ್ರೆ ಸಮಯದಲ್ಲಿ ಈ ಎಂಟ್ರಿ ಕಾರ್ಯಕ್ರಮ ಇಟ್ಟುಕೋಬೇಡಿ. ಇನ್ನೊಂದು ದಿನ ಕ್ವಯಟ್‌ಆಗಿ ಮಾಡಿಬಿಡಿ. ನಾನೂ ನಿಮ್ಮ ಜೊತೆ ಬರ‍್ತೇನೆ. ಶಾಂತಿಗೆ ಹೆಸರಾದ ದೇಶ ನಮ್ದು. ನಾನು ಡಿ.ಸಿ.ಯಾಗಿ ರಿಪೋರ್ಟ್‌ಮಾಡಿಕೊಳ್ಳೋ ದಿನ ನಿಮ್ಮ ದೇವಸ್ಥಾನದ ಕಮಿಟಿಯೋರು ಸ್ಪೆಷಲ್ ಆಗಿ ಪೂಜೆ ಮಾಡಿಸಿ ನಂಗೆ ಪ್ರಸಾದ ಕಳ್ಸಿದ್ರು. ಎಲ್ಲ ಕ್ರಮೇಣ ಚೇಂಜ್ ಆಗೆ ಆಗ್ತಾರೆ. ಹೇಳಲ್ವೆ? ಯಂ ಶೈವಾಃ ಸಮುಪಾಸತೆ ಸಿವ ಇತಿ ಅಂತ. ರಿಲಿಜಸ್ ಟಾಲರೆನ್ಸ್ ಅಂತ ನೆಹರೂ ಕರ್ದದ್ದು ಇದನ್ನೆ. ಸ್ಲೋ ಅಂಡ್ ಸ್ಟಡಿ – ಅದೇ ನನ್ನ ಪಾಲಿಸಿ. ನಿಮ್ಮನ್ನ ಒಬ್ಬ ಹರಿಜನ ಆಗಿ ಪ್ರಾರ್ಥಿಸ್ಕೋತೀನಿ….’

ಸತ್ಯಪ್ರಕಾಶ್ ಕೈಮುಗಿದು ಎದ್ದು ನಿಂತರು. ಜಗನ್ನಾಥನಿಗೆ ಕಾಫಿಯ ಕೆಟ್ಟ ಸಿಹಿ ಇನ್ನೂ ಬಾಯಲ್ಲಿತ್ತು. ಹೇಸಿಗೆಯಿಂದ ಕಂಪಿಸುತ್ತ ಅವನೂ ಎದ್ದು ನಿಂತ.

‘ನಾವು ಮಾಡಿರೋ ನಿರ್ಧಾರದಿಂದ ಹಿಂದೆಗೆಯೋದು ಸಾಧ್ಯವಿಲ್ಲ. ಹರಿಜನರೇ ತಯಾರಾಗಿಲ್ಲ ಅನ್ನಿಸಿದ್ರೆ ಬೇರೆ ಮಾತು. ಲಾ ಅಂಡ್ ಆರ್ಡರ್‌ಗೆ ನೀವು ಜವಾಬ್ದಾರರು ಅಂತ ತಿಳಿಸೋಕೆ ಬಂದೆ ಅಷ್ಟೆ.’

ಜಗನ್ನಾಥ ಗಂಭೀರವಾಗಿ ಆದರೆ ಕಟುವಾಗಿ ಮಾತಾಡಿದ್ದು ಕೇಳಿ ಸತ್ಯಪ್ರಕಾ‌ಶ್‌ಗೆ ಗಾಬರಿಯಾಗಿರಬೇಕು. ಜಗನ್ನಾಥನ ಜೊತೆ ನಡೆದು ಕಾರಿನ ತನಕ ಬಂದರು. ಶಾಂತಿ, ಅಹಿಂಸೆ, ಹರಿಜನರು ನಿಷ್ಠುರ ಕಟ್ಟಿಕೊಂಡು ಬದುಕಲಾರರು, ಮೊದಲು ವಿದ್ಯಾವಂತರಾಗಲಿ – ಇತ್ಯಾದಿ ಗೊಣಗುತ್ತ ಕೈಮುಗಿದು ಜಗನ್ನಾಥನನ್ನು ಕಳಿಸಿಕೊಟ್ಟರು.