Politics is not enough’

ದೇಸಾಯರು ತಮ್ಮ ಮಾತಿನ ತೀವ್ರತೆಯಲ್ಲಿ ಇನ್ನೊಂದು ಹಂತ ಇನ್ನೇನು ಏರಲಿದ್ದಂತೆ ಕಂಡಿತು. ಕಾರನ್ನು ಸರ್ವೀಸಿಗೆ ಬಿಟ್ಟು ಊಟ ಮಾಡಿ ಬಾ ಎಂದು ಬುಡನ್ನಿಗೆ ಹೇಳಲು ಜಗನ್ನಾಥ ಹೊರಗೆ ಹೋಗುವ ಅವಕಾಶವನ್ನು ದೇಸಾಯರ ಮಾತಿನ ಮಧ್ಯೆ ಹುಡುಕುತ್ತಿದ್ದ, ಭಾರತೀಪುರದಿಂದ ಬೆಂಗಳೂರಿನ ತನಕ ಡ್ರೈವ್ ಮಾಡಿ ಅವನಿಗೆ ಸುಸ್ತಾಗಿರಬೇಕು. ‘ಸ್ವಲ್ಪ ಕ್ಷಮಿಸಿ’ ಎಂದು ಜಗನ್ನಾಥ ಹೊರಗೆ ಹೋದ. ಬುಡನ್ನಿಗೆ ದುಡ್ಡು ಕೊಟ್ಟು ಕಳಿಸಿದ. ಒಳಗೆ ಬಂದಾಗ ದೇಸಾಯರು ತನ್ನನ್ನು ಮರೆತಿರುವಂತೆ ಕಂಡಿತು. ಅವರ ಮುಖದಲ್ಲಿ ಒಂದು ನಿಮಿಷದ ಹಿಂದಿದ್ದ ತೀವ್ರತೆಯೆಲ್ಲ ಇಂಗಿತ್ತು. ಏನನ್ನೊ ಓದುತ್ತ ಕೂತಿದ್ದರು – ಕಾಲಿನ ಮೇಲೆ ಕಾಲು ಹಾಕಿ ಆರಾಮಾಗಿ ಒಂದು ಕಾಲನ್ನು ಆಡಿಸುತ್ತ. ಎಲ್ಲ ದಿಕ್ಕುಗಳಿಂದಲು ಬೆಳಕನ್ನು ಪಡೆಯುವ ಗಾಜಿನ ಕಿಟಕಿಗಳಿದ್ದ, ಸುಖವಾದ ಸೋಫಾಗಳಿಂದ ಸಜ್ಜಾದ ವಿಶಾಲವಾದ ಅವರ ಕೋಣೆಯಿಂದ ಅವರ ಮನಸ್ಸು ಗೈರುಹಾಜರಾಗಿದ್ದಂತೆ ಕಂಡಿತು.

ಕ್ಯಾಲೆಂಡರುಗಳಲ್ಲಿ ಅವನಿಗೆ ಪರಿಚಯವಾಗಿದ್ದ ವರ್ಣರಂಜಿತವಾದ ಗುಂಡಗಿನ ಮುಖವಲ್ಲ – ಚೂಪಾದ ಉದ್ದ ಮುಖ. ನುಣ್ಣಗೆ ಕ್ಷೌರ ಮಾಡಿದ ಕೆನ್ನೆಗಳು. ಎತ್ತರವಾದ ಹಣೆ. ಕ್ಯಾಲೆಂಡರಿನ ಚಿತ್ರದ ವಿಶಾಲ ಕಣ್ಣುಗಳಲ್ಲ – ತೀಕ್ಷ್ಣವಾಗಿ ನೋಡಬಲ್ಲ ಸಣ್ಣ ಕಣ್ಣುಗಳು. ಆದರೆ ಸಭ್ಯ ಕಣ್ಣುಗಳು. ಎದ್ದು ನಿಂತಾಗ ಕುಳ್ಳಗೆ, ದಪ್ಪಗೆ ಶುಭ್ರವಾದ ಮುಖದ ಮಿಠಾಯಿ ಅಂಗಡಿಯ ಮಾಲೀಕನಂತೆ ಕಾಣುತ್ತಿದ್ದ ವ್ಯಕ್ತಿ. ಇವರನ್ನು ನೋಡುತ್ತ ತನ್ನ ಪ್ರಜ್ಞೆ ಭಾರತೀಪುರದಲ್ಲಿದ್ದಾಗಿನ ನಿಷ್ಠುರ ತೀವ್ರತೆಯನ್ನು ಚೆಲ್ಲಿಕೊಂಡು ವ್ಯಂಗ್ಯದ ಹೊಸ ಆಯಾಮ ಪಡೆದಿತ್ತು. ನಲವತ್ತೆರಡರ ಕ್ವಿಟ್ ಇಂಡಿಯಾ ಚಳುವಳಿಯ ಹೀರೋ. ಜೈಲಿನಿಂದ ತಪ್ಪಿಸಿಕೊಂಡ ಈ ವ್ಯಕ್ತಿಯನ್ನು ಹಿಡಿದುಕೊಟ್ಟರೆ ಹತ್ತು ಸಾವಿರ ರೂಪಾಯಿ ಬಹುಮಾನವನ್ನು ಕೊಡುತ್ತೇವೆಂದು ಆಗಿನ ಬ್ರಿಟಿಷ್ ಸರ್ಕಾರ ಘೋಷಿಸಿತ್ತು. ಬೊಂಬಾಯಿಯ ಯುಕವರ ನಾಯಕರಾಗಿ ಇಂಕ್ವಿಲಾಬ್ ಜಿಂದಾಬಾದಿಗೆ ಪ್ರಾಸ ಕೂಡಿಸುವ ಕೆಲವು ಹೆಸರುಗಳಲ್ಲಿ ಇವರದೂ ಒಂದಾಗಿತ್ತು. ಈಗ ಇಂಟರ್‌ನ್ಯಾಷನಲ್ ಸ್ಕೂಲಿನ ಯಜಮಾನರಾಗಿದ್ದಾರೆ.

ಜಗನ್ನಾಥ ಬಂದೊಡನೆ ಪ್ರೀತಿಯಿಂದ ಕೈ ಕುಲುಕಿದ್ದರು. ಎಷ್ಟೋ ವರ್ಷಗಳ ಸ್ನೇಹಿತನಂತೆ ಆಪ್ತವಾಗಿ ಮಾತಾಡುತ್ತ ಈಚೆಗೆ ತನಗೆ ಮೈ ಹುಷಾರಿಲ್ಲ ಎಂದಿದ್ದರು. ಐದು ನಿಮಿಷಗಳೊಳಗೆ ಜಗನ್ನಾಥ ಬಂದ ಕೆಲಸ ಕೈಗೂಡಿತ್ತು. ಮಾರ್ಗರೆಟ್‌ತನಗೂ ಬರೆದದ್ದಾಗಿಯೂ, ಮುಂದಿನ ಜೂನ್‌ಅವಳು ಸ್ಕೂಲಿನಲ್ಲಿ ಕೆಲಸ ಪ್ರಾರಂಭಿಸಬಹುದೆಂದೂ, ಅವಳ ತಂದೆ ತನಗೆ ಪರಿಚಯದವರೆಂದೂ ದೇಸಾಯಿ ಹೇಳಿ ಇದಕ್ಕಾಗಿ ನೀವಿಷ್ಟು ದೂರ ಬರಬೇಕಿತ್ತೆ ಎಂದು ಕೇಳಿದ್ದರು.

ದೇಸಾಯರ ವ್ಯಕ್ತಿತ್ವದಿಂದ ಹೊಮ್ಮುತ್ತಿದ್ದ ಸಭ್ಯ ನಾಗರಿಕ ವಾತಾವರಣದಿಂದ ಜಗನ್ನಾಥನಿಗೆ ಕ್ರಮೇಣ ಸುಖವಾಯಿತು. ಬಿಟ್ಟುಬಂದ ಭಾರತೀಪುರದ ಯಾವ ಒತ್ತಡಗಳೂ ಇಲ್ಲದೆ ವಿಚಾರದ ಚೆಂಡಾಟ ಸಾಧ್ಯವಾಯಿತು. ಟೀ ತರಲು ಜವಾನನಿಗೆ ಹೇಳಿ ದೇಸಾಯರು ಈಚೆಗೆ ನೀವು ಸುದ್ದಿಯಾಗಿದ್ದೀರಲ್ಲವೆ ಎಂದು ಕೇಳಿದರು.

ದೇಸಾಯರಿಗೆ ತನ್ನ ಒಳಗಿನ ಕಷ್ಟವನ್ನೆಲ್ಲ ಹೇಳಿಕೊಂಡುಬಿಡಬಹುದೆಂದು ಜಗನ್ನಾಥನಿಗೆ ಅನ್ನಿಸಿತ್ತು. ನಾವಾಗಲೀ ಹೊಲೆಯರಾಗಲೀ ನಿಜವಾಗಿ ಸಿದ್ಧವಾಗಿಲ್ಲ ದೇಸಾಯರೆ. ಆದ್ದರಿಂದ ನನ್ನ ಅಹಂಕಾರಕ್ಕಾಗಿ ಅವರನ್ನು ದೇವಸ್ಥಾನದೊಳಕ್ಕೆ ಕರೆದುಕೊಂಡು ಹೋಗುವುದು ಮೂರ್ಖತನವಾದೀತು. ಆದ್ದರಿಂದ ನನ್ನ ಇಡೀ ಪ್ಲಾನನ್ನು ಕೈಬಿಡೋಣವೆ. ಕಾಯೋದು ಉತ್ತಮವಲ್ಲವೆ ಅನ್ನಿಸಿದೆ. ಕೈಬಿಡುವುದಕ್ಕೂ ಧೈರ್ಯಬೇಕು. ಆತಂಕವಿಲ್ಲದೆ ಯೋಚಿಸಬೇಕು. ಒಂದು ದಿನದ ಮಟ್ಟಿಗೆ ಶಾಂತವಾಗಿ ವಿಚಾರ ಮಾಡಬೇಕೂಂತ ಊರು ಬಿಟ್ಟು ಬಂದಿದೀನಿ. ನೀವೇನು ಹೇಳುತ್ತೀರಿ?

ಆದರೆ ಜಗನ್ನಾಥ ಕೇಳಲಿಲ್ಲ. ಮನಸ್ಸಿನಲ್ಲೆ ತನ್ನ ವಿಚಾರವನ್ನು ತಿರುವಿಹಾಕುತ್ತ ದೇಸಾಯರ ಮಾತು ಕೇಳುತ್ತ ಕೂತ. ಈಚೆಗೆ ಕಟ್ಟಿಸಿದ ಹಲ್ಲುಗಳು ತೊಂದರೆ ಕೊಡುತ್ತಿರಬೇಕು – ಇಲ್ಲದಿದ್ದರೆ ಮಾತಿನಲ್ಲಿ ಮೈಮರೆಯುವ ಮನುಷ್ಯ ಈತ ಎನ್ನಿಸಿತು.

ಪ್ರತಿ ಶಬ್ದದ ಮೇಲೂ ಘಾತಹಾಕಿ ಅತ್ಯಂತ ಹೃತ್ಪೂರ್ವಕವೆನ್ನಿಸುವಂತೆ ದೇಸಾಯರು ಮಾತಾಡಿದರು. ಕಣ್ಣುಗಳನ್ನು ಕಿರಿದುಮಾಡಿ ತನ್ನನ್ನು ಸಿಕ್ಕಿಸುವಂತೆ ನೋಡುತ್ತ ಅವರು ರಾಜಕೀಯ ಯಾಕೆ ಸಾಲದೆಂದು ವಿವರಿಸಿದರು. ವಿಕ್ಟೋರಿಯಾ ಕಾಲದ ಉದ್ದುದ್ದ ವಾಕ್ಯಗಳಲ್ಲಿ ಮರಾಠಿ ಉಚ್ಚಾರಣೆಯ ಇಂಗ್ಲಿಷ್ ಮಾತುಗಳಿಂದ ಅವರು ತೋಡಿಕೊಂಡ ಆತ್ಮವೃತ್ತದಲ್ಲಿ ಪಿಸುಮಾತುಗಳಲ್ಲಿ ಕೇಳಿಸಬೇಕಾಗಿದ್ದ ಸತ್ಯಗಳೂ ಯಾಕೆ ಅಬ್ಬರಿಸುತ್ತವೆಂದು ಜಗನ್ನಾಥನಿಗೆ ಕಸಿವಿಸಿಯಾಯಿತು. ಅತ್ಯಂತ ಆಪ್ತ ವಿಷಯಕ್ಕೆ ಸಾರ್ವಜನಿಕ ಭಾಷಣದ ಚೌಕಟ್ಟು ಕೊಡುತ್ತಿದ್ದ ಅವರ ಭಾಷೆಯಿಂದಾಗಿ ಜಗನ್ನಾಥನಿಗೆ ಅವರು ಬಯಸಿದ ಗಮನವನ್ನು ಕೊಡಲಾಗಲಿಲ್ಲ.

‘I had traumatic experience when India became independent’ ಎಂದು ಅವರು ಮತ್ತೆ ಮಾತಿಗೆ ಪ್ರಾರಂಭಿಸಿ ಜಗನ್ನಾಥನನ್ನು ನೆಟ್ಟು ನೋಡುತ್ತ ಮೌನವಾದರು; ತನ್ನ ಮಾತಿನ ತೀವ್ರತೆ ಜಗನ್ನಾಥನಲ್ಲಿ ಬೇರೂರಿ ಒಡೆದುಕೊಳ್ಳಲು ಕಾದರು; ತಮ್ಮ ಅನುಭವ ಜಗನ್ನಾಥನ ಗಮನದಲ್ಲಿ ಫಲವತ್ತಾಗುವುದನ್ನು ನಿರೀಕ್ಷಿಸಿದರು. ಆದರೆ ಅವರ ಹಾವಭಾವದ ತೀವ್ರತೆಯಲ್ಲಿ ಜಗನ್ನಾಥ ತಲ್ಲೀನನಾಗಲು ಒಪ್ಪದೆ ಸರಿದು ನಿಂತಿದ್ದ.

ಇಂಡಿಯಾ ಸ್ವಾತಂತ್ರ್ಯ ಪಡೆದಾಗ ದೇಸಾಯರು ಪ್ಯಾರಿಸ್‌ನಲ್ಲಿದ್ದರಂತೆ. ಪೇಪರಿನಲ್ಲಿ ಸುದ್ದಿ ತಿಳಿದೊಡನೆ ಅವರಿಗೆ ವಿಚಿತ್ರವಾದ ಅನುಭವವಾಯಿತು. ನಲವತ್ತೆರಡರ ಚಳುವಳಿಯಲ್ಲಿ ತಾನು ಪ್ರಾಣವನ್ನು ಒತ್ತೆಯಿಟ್ಟು ಹೋರಾಡದಿದ್ದರೂ ಈ ಸ್ವಾತಂತ್ರ್ಯ ಹೇಗೂ ಬರುತ್ತಿತ್ತಲ್ಲವೆ ಎನ್ನಿಸಿ ತನ್ನ ಜೀವನದಲ್ಲೆ ದೊಡ್ಡದೊಂದು ಕಂದಕ ಬಾಯ್ದೆರೆದಂತಾಯಿತು. ಇಲ್ಲಿಯ ತನಕ ತಾನು ಇಲ್ಯೂಶನ್ನಿನಲ್ಲಿ ಬದುಕುತ್ತಿದ್ದೆ ಎನ್ನಿಸಿತು. ನಾನಿಲ್ಲದೆಯೂ ಚರಿತ್ರೆ ಚಲಿಸತ್ತೆ. ಅದಕ್ಕಿರುವ ಅಗತ್ಯ ಒತ್ತಡಗಳ ತರ್ಕವೇ ಬೇರೆ. ಇರುವ ಒಂದು ಜೀವನದಲ್ಲಿ ಪ್ರೇಮ ಮತ್ತು ಸಫಲತೆಗೆ ಹಾತೊರೆಯುವ ಈ ಬದುಕನ್ನು ಒಂದೇ ಉದ್ದೇಶಕ್ಕೆ ಕಟ್ಟಿ ಹಾಕುವುದು ತಪ್ಪಾಗತ್ತೆ. ಚರಿತ್ರೆ impersonal ಆದ್ದರಿಂದ…,,

ಅವರು ಮಾತಾಡುತ್ತಿದ್ದಂತೆ ಜಗನ್ನಾಥನ ಗಮನ ಅವರ ಕೈಗಳ ಮೇಲೆ ಹೋಯಿತು. ಭಾಷಣದ ಬೀಸಿನಲ್ಲಿ ಅವರ ಕೈಗಳು ಚಲಿಸುತ್ತಿದ್ದುವು. ನಾನು ಆಮೇಲೆ ಅರವಿಂದರನ್ನು ಓದಿದೆ; ಜೆ.ಕೆ. ಯವರನ್ನು ಭೆಟ್ಟಿ ಮಾಡಿ ಅವರ ಜೊತೆ ಕೆಲವು ಕಾಲ ಕಳೆದ; ನಿಜವಾದ ಒಂದೇ ಒಂದು  ಕ್ರಾಂತಿಯೆಂದರೆ, ಸರ್ವಕಾಲಕ್ಕೂ ಅರ್ಥಪೂರ್ಣವಾದ ಕ್ರಾಂತಿಯೆಂದರೆ…. ‘The only revolution’ ಎನ್ನುವಾಗ ದೇಸಾಯರು ಪ್ರತಿಯೊಂದು ಪದವನ್ನೂ ಕಠೋರ ಗೊಳಿಸಿದ್ದರು; ತನ್ನ ಮನಸ್ಸನ್ನು ಹೊಕ್ಕು ವಶಪಡಿಸಿಕೊಳ್ಳುವ ಹವಣಿಕೆಯಲ್ಲಿ ಶಬ್ದಗಳನ್ನು ಅಟ್ಟುತ್ತಿದ್ರು. ಅಗೊ ಆ ಅನುಭವ ಹೇಗಾಗುತ್ತದೆಂದರೆ, ಇದ್ದಕ್ಕಿದ್ದಂತೆ ನಿನ್ನ ಮೌನದಲ್ಲಿ ಹೇಗೆ ಸಿದ್ಧಿಸುತ್ತವೆಂದರೆ, when the break through comes… ಹೀಗೆನ್ನುವಾಗ ದೇಸಾಯರು ಎದ್ದು ನಿಂತಿದ್ದರು. ತನ್ನನ್ನು ದಿಟ್ಟಿಸಿ ನೋಡುತ್ತ ಕಣ್ಣಲ್ಲಿ ನೀರೊಡೆದು ಮೃದುವಾಗಿದ್ದರು. ಅವರಿಗಾದ break-through ಹೀಗೆ ಮತ್ತೆ ಅವರಿಗೇ ನಿಜವಾಗಲು ಕೇಳಿಸಿಕೊಳ್ಳುವ ಇನ್ನೊಬ್ಬ ಬೇಕಲ್ಲವೆ ಎಂದು ಜಗನ್ನಾಥನಿಗೆ ಅನುಮಾನವಾಯಿತು. ಇನ್ನೊಂದು ಪ್ರಜ್ಞೆಯನ್ನು ಮಾತಿನಲ್ಲಿ ಹೀಗೆ ಆವರಿಸಿ ವಶಪಡಿಸಿಕೊಳ್ಳದೇ ಇದ್ದಲ್ಲಿ ಪ್ರಾಯಶಃ ದೇಸಾಯರು ಈ ರೂಮಿನಲ್ಲಿ ಪ್ರೇತದಂತೆ ಇದ್ದುಬಿಡಬಹುದು. ‘ಜನರ ಕಣ್ಣಲ್ಲೆ ಬದುಕಿದ ರಾಜಕಾರಣಿ ಚಿಪ್ಪೊಳಗೆ ಸೇರಿ ಸಣ್ಣಗೆ ಉಸಿರಾಡುತ್ತ ಮೃದುವಾಗಲು ಹವಣಿಸುತ್ತಾನೆ; ಆದರೆ ಆ ಬದುಕನ್ನೂ ತೀಕ್ಷ್ಣವಾದ ಬೆಳಕಿನಲ್ಲಿ ಊಹಿಸಿಕೊಳ್ಳುತ್ತಾನೆ, ಯಾಕೆ ಹೇಳಿ’ ಎಂದು ದೇಸಾಯರನ್ನು ಕೇಳಿ ಬೆಚ್ಚಿಸಬೇಕೆನ್ನಿಸಿತು.

ಜಗನ್ನಾಥನ ಗಮನ ತಾನು ಒಡ್ಡಿದ ತೀವ್ರತೆಯಿಂದ ಜಾರಿಕೊಳ್ಳುತ್ತಿದೆ ಎಂದು ದೇಸಾಯರಿಗೆ ಅನ್ನಿಸಿರಬೇಕು. ಇದ್ದಕ್ಕಿದ್ದಂತೆ ಪೆಚ್ಚಾದರು. ಜಗನ್ನಾಥನಿಗೆ ತನ್ನ ತಾಯಿಯ ನೆನಪಾಯಿತು. ಪ್ರಾಯಶಃ ದೇಸಾಯರು ಹೇಳುತ್ತಿರುವುದು ಸಾಧ್ಯವಾಗುವುದು ಹಕ್ಕಿಗೂಡಿನಂತೆ ಬೆಚ್ಚಗಿರುವ ಸಾಂಸಾರಿಕ ಜೀವನದ ಆಪ್ತತೆಯಲ್ಲಿ ಮಾತ್ರ. ಅಲ್ಲಿ ಉಮೇದು, ಸ್ವಾರ್ಥ, ಪಶುತ್ವ, ದೈವಿಕತೆ, ಮೃದುತ್ವ, ನಿರಪೇಕ್ಷವಾದ ಸೌಖ್ಯ ನಿರಂಬಳವಾಗಿ ಉತ್ತಿ ಬದುಕನ್ನು ಹದ ಮಾಡುತ್ತವೆ. ಒಂಟಿ ಜೀವನ ನಡೆಸಿದ ದೇಸಾಯರು ಎಲ್ಲವನ್ನೂ ಊಹಿಸಬಲ್ಲರು ಅಷ್ಟೆ. ಆದರೆ ತನ್ನ ತಾಯಿ ಗಾಳಿಗೊಡ್ಡಿದ ಪರಿಮಳದ ಹೂವಿನಂತೆ ಸವೆದರು. ಹೊತ್ತಿ ಉರಿದು ನಂದಿಬಿಡುವ ಪ್ರಖರತೆ ಅವರಲ್ಲಿರಲಿಲ್ಲ.

ಟೀ ಬಂದಿತ್ತು. ಜಗನ್ನಾಥ ಇಂಟರ್‌ನ್ಯಾಷನಲ್ ಸ್ಕೂಲಿನ ಕಿಚನ್‌ನಲ್ಲಿ ತಯಾರಾದ ಕ್ರೀಮ್ ಕೇಕನ್ನು ತುಂಬ ಆಸೆಯಿಂದ ತಿಂದ. ದೇಸಾಯರು ಟೀ ಕುಡಿಯುತ್ತ ಮಂಕಾದ್ದನ್ನು ಕಂಡು ವಿಷಯ ಬದಲಿಸಲು ಜಗನ್ನಾಥ ಪ್ರಯತ್ನಿಸಿದ. ಇನ್ನೊಮ್ಮೆ ಮುಷ್ಟಿ ಕಟ್ಟಿ ತನ್ನನ್ನು ಹೊರ ಚೆಲ್ಲುವ ಕ್ಷಣ ಒದಗುವ ತನಕ ದೇಸಾಯರು ತನ್ನ ಅಸ್ತಿತ್ವದಿಂದಲೇ ಗೈರುಹಾಜರಾಗಿ ಬಿಟ್ಟಿದ್ದಾರೆ ಎನ್ನಿಸಿತ್ತು.

ಹೊಯ್ದಾಟಕ್ಕೆ ಅತೀತವಾದ ಸ್ಥಿತಿಯನ್ನು ಮುಟ್ಟಬೇಕೆಂದು ದೇಸಾಯರು ಮತ್ತೆ ಮಾತಿಗೆ ಶುರುಮಾಡಿದರು. ಈ ಅತೀತವಾದ ಸ್ಥಿತಿ ಮೌನದಲ್ಲಿ ಅನುಭವಕ್ಕೆ ಬರುವಂಥದೆಂದು ವಿವರಿಸಿದರು. ಆದರೆ ಎಷ್ಟೊಂದು ಅಬ್ಬರದ ಮಾತುಗಳಲ್ಲಿ. ತನ್ನ ತಾಯಿಗದು ಪ್ರಾಯಶಃ ದಕ್ಕಿದ್ದಿರಬಹುದೆ? ಎಸ್ಟೇಟಿನ ಉಸ್ತುವಾರಿ ತಂದೆಗೆ. ಅಷ್ಟು ಸರಸಪ್ರಿಯನಲ್ಲದ ದುಡ್ಡಿಗಂಟಿಕೊಂಡ ಮನುಷ್ಯ ತನ್ನ ಅಪ್ಪ. ತಾಯಿಗವರ ಮೇಲೆ ಪ್ರೀತಿಯಿತ್ತೆ ಹೇಳುವುದು ಅಸಾಧ್ಯ. ಅತಿಥಿ ಸತ್ಕಾರ, ಮನೆಗೆಲಸ, ಮೈಕೈ ನೋವು, ದನಕರುಗಳ ಆರೈಕೆ, ಹೂವಿನ ಗಿಡಗಳನ್ನು ಬೆಳೆಸುವುದು, ಸಂಗೀತ – ಇಷ್ಟರಲ್ಲೆ ತಾಯಿ ಹದವಾಗಿ ಸತ್ತರೆ? ದೇಸಾಯರು ವಿವರಿಸಿದ ತತ್ವವನ್ನು ತಾಯಿ ವೈಚಾರಿಕವಾಗಿ ಖಂಡಿತ ತಿಳಿದಿರಲಿಲ್ಲ. ಮಾತಿಗೆ, ವಿಚಾರಕ್ಕೆ ದಕ್ಕದೇ ಇದ್ದದ್ದೂ ನಿಜವೆನ್ನಿಸುವುದು ಎಷ್ಟು ಕಷ್ಟ? ತನಗೆ ಮಾತ್ರವಲ್ಲ, ಅದನ್ನೇ ಹೇಳುವ ಈ ದೇಸಾಯರಿಗೂ; ಅಥವಾ ದೇಸಾಯರಿಗೆ ತಿಳಿದಿದೆ. ಆದರೆ ಅದಕ್ಕೆ ತಕ್ಕ ಮಾತು ತಿಳಿಯದೆ ಭ್ರಷ್ಟರಾಗಿದ್ದಾರೆ.

‘ಸ್ಕೂಲನ್ನು ನೋಡಿ’ ಎಂದು ದೇಸಾಯರು ತನ್ನನ್ನು ಕರೆದುಕೊಂಡು ಹೋದರು. ಅಮೇರಿಕ, ಇಂಗ್ಲೆಂಡ್, ಜರ್ಮನಿ – ಎಲ್ಲ ದೇಶಗಳ ಮಕ್ಕಳೂ ಸ್ಕೂಲಲ್ಲಿದ್ದರು. ಯಾವ ಕಂಢೀಶನಿಂಗೂ ಆಗದಂತೆ ಇಲ್ಲಿ ಮಕ್ಕಳನ್ನು ಬೆಳೆಸಲು ಯತ್ನಿಸುತ್ತೇವೆ ಎಂದು ದೇಸಾಯರು ವಿವರಿಸುತ್ತ ನಡೆದರು. ವಿಶಾಲವಾದ, ರಮ್ಯವಾದ ಜಾಗದಲ್ಲಿ ಸ್ಕೂಲಿತ್ತು. ಭಾರತೀಯ ಮಕ್ಕಳ ಜೊತೆ ಯುರೋಪಿನ ಮಕ್ಕಳು ಒಂದು ಮರದ ಕೆಳಗೆ ಆಡುತ್ತಿದ್ದುದನ್ನು ಕಂಡ. ‘ಎಷ್ಟು ಫೀಸ್’ ಎಂದು ಜಗನ್ನಾಥ ಮೃದುವಾಗಿ ದೇಸಾಯರನ್ನು ಕೇಳಿದ. ದೇಸಾಯರು ತುಂಬ ನಾಚಿಕೆಯಿಂದ, ‘ವರ್ಷಕ್ಕೆ ಒಂದು ಮಗುವಿಗೆ ನಾಲ್ಕು ಸಾವಿರವಾದರೂ ಖರ್ಚಾಗುತ್ತೆ. ಬಡವರ ಮಕ್ಕಳಿಗೆ ಇಂಥ ವಿದ್ಯಭ್ಯಾಸ ಕೊಡುವುದು ಸಾಧ್ಯವಿಲ್ಲವೆಂದು ನನಗೆ ದುಃಖವಾಗುತ್ತೆ’ ಎಂದರು. ಅವರ ಕಸಿವಿಸಿ ಪ್ರಾಮಾಣಿಕವಾದದ್ದು ಎಂದು ಜಗನ್ನಾಥನಿಗೆ ಅನ್ನಿಸಿತು. ಅವರನ್ನು ತಾನು ನೋಯಿಸಿರಬಹುದೆಂದು ಬೇಸರವಾಯಿತು. ಚಿತ್ರಕಲೆ ಹೇಳಿಕೊಡುತ್ತಿದ್ದ ಕೆಂಬಣ್ಣದ ತಲೆಕೂದಲಿನ, ಸೀರೆ ಉಟ್ಟ ಅಮೇರಿಕನ್ ಮಹಿಳೆಯೊಬ್ಬಳು ಬಣ್ಣವನ್ನು ಅಕಸ್ಮಾತ್ ಚೆಲ್ಲಿದ್ದ ಏಳೆಂಟು ವರ್ಷದ ಭಾರತೀಯ ಹುಡುಗಿಯೊಂದನ್ನು ಹೊಡೆಯಲು ಕೈ ಎತ್ತಿದ್ದಳು. ಯಾರೋ ಬರುತ್ತಿರುವುದು ಕಂಡು ‘Child, don’t be clumsy’ ಎಂದು ಎತ್ತಿದ ಕೈಯನ್ನು ಅವಸರದಲ್ಲಿ ಸೊಂಟದ ಮೇಲಿಟ್ಟಳು. ದೇಸಾಯರು ಇದನ್ನು ಬೇಕೆಂದೇ ಗಮನಿಸದೆ ಜಗನ್ನಾಥನನ್ನು ಆಕೆಗೆ ಪರಿಚಯ ಮಾಡಿಕೊಟ್ಟರು. ಜಗನ್ನಾಥ ಆಸಕ್ತಿಯಿಂದ ಮಕ್ಕಳು ಬರೆದ ಚಿತ್ರಗಳನ್ನೆಲ್ಲ ನೋಡಿ ಹೊರಗೆ ಬಂದ.

ಗೇಟಿನ ತನಕ ಬಂದು ಕಳಿಸುತ್ತೇನೆಂದು ದೇಸಾಯರು ಜೊತೆಗೆ ನಡೆದರು. ಮರಗಳನ್ನು ಬೆಳೆಸಿದ ಸುಂದರವಾದ ಕಾಲುದಾರಿಯಲ್ಲಿ ನಿಂತು ಮತ್ತೆ ಮಾತಿಗೆ ಪ್ರಾರಂಭಿಸಿದರು : ನೋಡಿ sex ಬಗ್ಗೆ ನಾವು ಹೇಗೆ ಯೋಚಿಸುತ್ತೇವೆ. ನನ್ನ ನೆವ್ಯೂ ಅಮೇರಿಕಾಕ್ಕೆ ಓದಲೆಂದು ಹೋಗುವಾಗ ನಾನು ಅವನಿಗೆ ಕೇಳಿದೆ : ನೀನು ಯುವಕ. ಸೆಕ್ಸ್ ಬಗ್ಗೆ ಏನು ಯೋಚಿಸಿದ್ದೀಯ? ಅಮೆರಿಕ ಭಾರತದಂತೆ ಇಲ್ಲ; ಸೆಕ್ಸುಯಲ್ ಸ್ವಾತಂತ್ರ್ಯ ಅಲ್ಲಿ ಇಲ್ಲಿಗಿಂತ ಹೆಚ್ಚು – ಆದರೆ ನೋಡು, ಸೆಕ್ಸ್ ತಪ್ಪೂ ಅಲ್ಲ, ಸರಿಯೂ ಅಲ್ಲ. ಅದರಲ್ಲೊಂದು ಸಮಸ್ಯೆಯಿದೆ – ಅಷ್ಟೆ. ಹೆಣ್ಣಿನ ಜೊತೆ ಸಂಭೋಗದಲ್ಲಿ ನಮ್ಮ ಮೈಮನಸ್ಸು ಎರಡೂ tumscent ಆಗುತ್ತಾವೆ. ಸಂಭೋಗದ ಕ್ರಿಯೆಯಲ್ಲಿ ದೇಹ detumescent ಆಗತ್ತೆ. ಆದರೆ ಮನಸ್ಸು ಆಗಲ್ಲ. ಮನುಷ್ಯನಿಗೆ sex ನಲ್ಲಿ ನಿಜವಾದ ಶಮನ ಸಿಗಲ್ಲ; ಇದೇ ಸಮಸ್ಯೆ. ಆದ್ದರಿಂದಲೇನೇ tenderness ಬೇಕು. ತನ್ನ ಸುಖದ ಜೊತೆ ಹೆಣ್ಣಿಗೂ ಸುಖ ಸಿಗಬೇಕೆಂಬ ಆಸೆ ಬೇಕು. ನೋಡು, ಮನಸ್ಸನ್ನ ಹೇಗೆ detumescent ಸ್ಥಿತಿಗೆ ತರಬೇಕೆನ್ನೋದೇ ನಿಜವಾದ ಸಮಸ್ಯೆ. ನಮ್ಮ ರಾಜಕೀಯ ಆರ್ಥಿಕ ಪರದಾಟಗಳಿಗೂ ಮೀರಿ ಮನುಷ್ಯನ್ನ ಕಾಡೋ ಮೂಲಭೂತ ಪ್ರಶ್ನೆ ಎಂದರೆ ಇದು.

ಗೇಟು ಹತ್ತಿರವಾದ್ದರಿಂದ ಮಾತು ಮುಗಿಸುವ ಕ್ರಮ ತಿಳಿಯದೆ ದೇಸಾಯರು ಕೈಯೊಡ್ಡಿದರು. ಜಗನ್ನಾಥ ‘ಹೋಗುವ’ ಎಂದ. ದೇಸಾಯರು ‘ಮತ್ತೆ ಬನ್ನಿ’ ಎಂದರು. ‘ರಾಜಕೀಯದಲ್ಲಿ ನಿಮ್ಮ ಮನಸ್ಸಿನ ಶಾಂತಿಯನ್ನು ಕೆಡಿಸಿಕೊಳ್ಳಬೇಡಿ. ಆಗಾಗ ನಮ್ಮ ಸ್ಕೂಲಿಗೆ ಬಂದು ಇರಿ. ಗೆಸ್ಟ್‌ಹೌಸ್‌ಇದೆ. ಮಕ್ಕಳ ಜೊತೆ ಕಾಲ ಕಳೆಯಬಹುದು’ ಎಂದು ಇಷ್ಟು ಹೊತ್ತೂ ಮಾತಾಡಿದ್ದರೆ ಉದ್ದೇಶವನ್ನು ಹೊರಗೆ ಹಾಕಿದರು. ದೇಸಾಯರು ತನ್ನ ಐರನಿಯನ್ನು ಹೇಗೆ ಮೀರಿ ನಿಲ್ಲುತ್ತಾರೆ, ಕೆಲವು ಕ್ಷಣವಾದರೂ, ಎಂದು ಜಗನ್ನಾಥನಿಗೆ ಅವರ ಬಗ್ಗೆ ಗೌರವ ಹುಟ್ಟಿತು.

ಜಗನ್ನಾಥನಿಗೆ ಕಾರಲ್ಲಿ ಕೂತು ಹೊರಡುವಾಗ ಬೆಂಗಳೂರು ಸಿಟಿ ಕಡೆ ಹೊರಟಿದ್ದ ಸ್ಕೂಲಿನ ಮ್ಯಾನೇಜರರು ನನಗೊಂದು ಡ್ರಾಪ್ ಕೊಡಿ ಎಂದರು. ದಾರಿಯಲ್ಲಿ ಅವರನ್ನು ಜಗನ್ನಾಥ ‘ಮಕ್ಕಳನ್ನು ನೀವು ಪರೀಕ್ಷೆಗೆ ತಯಾರು ಮಾಡುವುದಿಲ್ಲವೆ?’ ಎಂದು ಕೇಳಿದ. ಅದಕ್ಕವರು ‘ಅಷ್ಟು ದುಡ್ಡು ಖಚು ಮಾಡಿದ ಮೇಲೆ ಪೇರೆಂಟ್ಸ್ ಸುಮ್ಮನಿರುತ್ತಾರೆಯೆ? ಕಂಡೀಶನಿಂಗ್ ಆಗದಂತೆ ಮಕ್ಕಳನ್ನು ಪರೀಕ್ಷೆಗೆ ತಯಾರು ಮಾಡಲು ದೇಸಾಯರು ಬಹಳ ಪ್ರಯತ್ನಿಸುತ್ತಾರೆ. ಕಾಂಪ್ರೊಮೈಸ್ ಮಾಡಿಕೊಳ್ಳದೆ ವಿಧಿಯಿಲ್ಲವಲ್ಲ’ ಎಂದರು.

ಹತ್ತು ಮೈಲಿಯಾಚೆ ಬೆಂಗಳೂರು ಸಿಕ್ಕಿತು. ‘ಮತ್ತೆ ನೀವು ಬರಬೇಕು. ನಾಳೆಯೇ ನಾವು ಮಾರ್ಗರೆಟ್‌ಗೆ ಇನ್ನೊಂದು ಕಾಗದ ಹಾಕುತ್ತಿದ್ದೇವೆ’ ಎಂದು ಮ್ಯಾನೇಜರ್‌ಇಳಿದರು. ಭಾವುಕರಾದ ದೇಸಾಯರಿಗೆ ಅಗತ್ಯವಾದ ಪ್ರಾಕ್ಟಿಕಲ್ ಮೈಂಡೆಡ್ ಮ್ಯಾನೇಜರ್ ಈತ ಎನ್ನಿಸಿತು.

* * *

ಹೋಟೆಲಲ್ಲಿ ಜಗನ್ನಾಥ ಊಟ ಮಾಡಿದ. ತನ್ನ ಮನಸ್ಸು ತಿಳಿಯಾದೀತೆಂದು ಭಾವಿಸಿ ಅವನು ಬೆಂಗಳೂರಿಗೆ ಬಂದಿದ್ದ. ಶಾಲಿಗ್ರಾಮವನ್ನು ಹೊಲೆಯರಿಗೆ ಒಡ್ಡಿದ ರಾತ್ರೆ ಅವನಿಗೆ ನಿದ್ದೆ ಬಂದಿರಲಿಲ್ಲ. ಮಧ್ಯರಾತ್ರೆ ಎದ್ದು ಹೊಲೆಯರ ಗುಡಿಗಳಿಗೆ ಹೋಗಿ ಅವರನ್ನು ಕರೆದೆಬ್ಬಿಸಲು ಧೈರ್ಯ ಬರದೆ ಹಿಂದಕ್ಕೆ ಬಂದಿದ್ದ. ದೇವಸ್ಥಾನಕ್ಕೆ ಹೊಲೆಯರನ್ನು ಕರೆದುಕೊಂಡು ಹೋಗಬೇಕೆಂಬುದು ಅಪಕ್ವವಾದ ತೀರ್ಮಾನವೆ? ಈ ವಿಚಾರ ಇನ್ನಷ್ಟು ಸ್ಪಷ್ಟವಾಗಲೆಂದು ಬೆಂಗಳೂರಿಗೆ ಬಂದಿದ್ದ. ಯಾವ ಅಹಂಕಾರವೂ ಇಲ್ಲದೆ ತಾನು ಘೋಷಿಸಿದ ಕ್ರಿಯೆಯನ್ನು ಕೈಬಿಡಲು ಜಗನ್ನಾಥ ತಯಾರಿದ್ದ. ಆದರೆ ಹಾಗೆ ಮಾಡುವುದೇ ಸರಿಯೆಂಬ ಬಗ್ಗೆಯೂ ಅವನಿಗೆ ಅನುಮಾನವಿತ್ತು.

ದೇಸಾಯರು ಆಡಿದ ಮಾತಿನಿಂದ ಜಗನ್ನಾಥನ ಮನಸ್ಸಿಗೆ ಕಳವಳವಾಗಿತ್ತು. ತನ್ನ ಕ್ರಿಯೆ ಕೃತಕವಾದದ್ದಲ್ಲವೆ ಎನ್ನಿಸಿತು. ಹೊಲೆಯರ ಜೊತೆ ತಾನು ಇಷ್ಟು ದಿನಗಳೂ ಕಳೆದ ಘಳಿಗೆಗಳಲ್ಲಿ ಒಂದಾದರೂ ತನಗಾಗಲೀ ಅವರಿಗಾಗಲೀ ನಿಜವಾದ ಅನುಭವವಾಗಿರಲಿಲ್ಲ. ಈ ಕೃತಕತೆಯಿಂದ ತನ್ನ ಜೀವನ ಒಣಗೀತೆಂದು ದಿಗಿಲಾಯಿತು.

ಊಟ ಮುಗಿಸಿದವನೆ ಕಾರಿನಲ್ಲಿ ಕೂತು. ‘ಬುಡನ್, ಸೀದಾ ಭಾರತೀಪುರಕ್ಕೆ ಹೋಗೋಣ. ನಿನಗೆ ಸುಸ್ತಾಗಿದ್ದರೆ ನಾನಷ್ಟು ದೂರ ಡ್ರೈವ್ ಮಾಡ್ತೀನಿ’ ಎಂದ.

ಬೆಂಗಳೂರಲ್ಲಿ ಕೂತು ನಾನು ಯಾವ ತೀರ್ಮಾನಕ್ಕೂ ಬರಲಾರೆನೆಂದು ಒಮ್ಮಿಂದೂ ಮೈಗೆ ಜಗನ್ನಾಥನಿಗೆ ಅನ್ನಿಸಿತ್ತು. ಮತ್ತೆ ಆ ಮನೆಗೆ ಹೋಗಬೇಕು; ನರಹುಳ ಸುಳಿಯದ ಅದರ ಒಳಗೆ ಓಡಾಡಬೇಕು; ದುಃಖದಿಂದ ಸೊರಗಿದ ಚಿಕ್ಕಿಯನ್ನು ನೋಡಬೇಕು. ಈ ವಾಸ್ತವತೆಯನ್ನು ಎದುರಿಸಿ ನನ್ನ ಕ್ರಿಯೆ ಹೊಲೆಯರಿಗೆಷ್ಟು ಅಗತ್ಯ ಎಂದು ತಿಳಿಯಾಗಿ ಯೋಚಿಸಬೇಕು. ಕಾಯಬೇಕು. ಯಾವ ಘಳಿಗೆಯಲ್ಲಾದರೂ ತಾನು ಮಾಡುತ್ತಿರುವುದೆಲ್ಲ ಕೃತಕ, ತನ್ನ ಗರ್ವದಿಂದ ಹುಟ್ಟಿದ್ದು ಎನ್ನಿಸಿದೊಡನೆಯೇ ಹಿಂದೆಗೆಯುವ ಧೈರ್ಯ ತೋರಿಸಬೇಕು.

ದೇಸಾಯರ ಜೊತೆ ಮಾತಾಡುವಾಗ ವಿಚಿತ್ರವಾದ ಅನುಭವವಾಗಿತ್ತಲ್ಲವೆ ಎಂದು ದಾರಿಯಲ್ಲಿ ಜಗನ್ನಾಥ ಯೋಚಿಸಿದ. ವ್ಯಂಗ್ಯದಿಂದ ಅವರನ್ನು ನೋಡಿದೆ; ಮತ್ತೆ ಗೌರವದಿಂದ ಅವರ ಮಾತು ಕೇಳಿಸಿಕೊಂಡೆ. ಎಲ್ಲ ಸುಳ್ಳೆನ್ನಿಸಿತು. ಆದರೂ ಅವರ ತೀವ್ರತೆ ಕಾಡುವಂತಿತ್ತು. ನಾನು ಯಾಕೆ ಹೊಲೆಯರನ್ನು ದೇವಸ್ಥಾನದೊಳಗೆ ಕರೆದುಕೊಂಡು ಹೋಗುವುದು ಅನಗತ್ಯ ಎಂದುದನ್ನೆ ಅವರು ಹೇಳಲು ಪ್ರಯತ್ನಿಸಿದ್ದರೆ? ಪರ್ಯಾಯವಾಗಿ ಯಾವುದು ನಿಜವೆಂದು ಅವರು ತೋರಿಸಲು ಒದ್ದಾಡುತ್ತಿದ್ದ ಕ್ರಮದಲ್ಲೆ ತನಗೆ ಬಿರುಕು ಕಂಡಿತ್ತು. ನಾನು ಮಾಡಹೊರಟದ್ದು ಸರಿಯೋ ತಪ್ಪೋ ಯೋಚನೆಯ ಮೂಲಕ ತಿಳಿಯುವಂಥದ್ದಲ್ಲ. ಭಾರತೀಪುರದ ಹೊಲೆಯರು ಅದನ್ನು ನಿರ್ಧರಿಸುತ್ತಾರೆ. ಸಾಧ್ಯವಿದ್ದಷ್ಟು ತಳ್ಳುವುದು; ಕಾರಣವಾಗಲು ಪ್ರಯತ್ನಿಸುವುದು; ಕಾಯುವುದು; ಎಲ್ಲ ಕೃತಕವೆನ್ನಿಸಿದರೆ ಸರಿದು ನಿಲ್ಲುವುದು – ಇಷ್ಟೇ ನನಗೆ ಸಾಧ್ಯ. ದೊಡ್ಡದೊಂದು ಕಾರಣಕ್ಕೆ ಒಡ್ಡಿ ಕೊಳ್ಳದಿದ್ದರೆ ಆತ್ಮರತನಾಗಿ ಉಳಿಯುತ್ತೇನೆ.