ಅಡಿಗರು ಮತ್ತು ರಾಯರು ಚಾಪೆ ಹಾಸಿ ಸ್ವಲ್ಪ ಹೊತ್ತು ಮಲಗಿ ಕಾಫಿ ಕುಡಿದು ಹೊರಟುಹೋದಿದ್ದರು. ಜಾತ್ರೆ ದಿನ ಜಗನ್ನಾಥನ ಮನೆಗೆ ಬರಬಹುದಾದ ನೂರಾರು ಯಾತ್ರಿಕರಿಗಾಗಿ ಅಡಿಗರು ತಂದ ಒಣಗಿದ ಬಾಳೆಲೆ ಕಟ್ಟುಗಳನ್ನೂ ದೊನ್ನೆಗಳನ್ನೂ ಚಿಕ್ಕಿ ಕೊಂಡಿದ್ದರು. ಆದರೆ ತಮ್ಮಲ್ಲಿಗೆ ಯಾರಾದರೂ ಇನ್ನು ಮುಂದೆ ಊಟಕ್ಕೆ ಬರುವುದುಂಟೆ ಎಂದು ದುಃಖಿಸುತ್ತ ಜಗಣ್ಣನಿಗೆ ಬುದ್ಧಿ ಹೇಳುವಂತೆ ಅಡಿಗರನ್ನು ಬೇಡಿದ್ದಳು. ಕಾಲಾಯ ತಸ್ಮೈ ನಮಃ ಎಂದು ಸಮಾಧಾನ ಹೇಳಿದ ಅಡಿಗರಿಗೆ ‘ನಿಮ್ಮ ಮಕ್ಕಳಿಗೆ ಕೊಡಿ’ ಎಂದು ಬಾಳೆಲ್ಲಿ ಜಿಲೇಬಿ ಕಟ್ಟಿಕೊಟ್ಟರು.

ಇಬ್ಬರೂ ಹೋದ ಮೇಲೆ ಜಗನ್ನಾಥ ಆತುರದಿಂದ ಹೊಲೆಯರ ಯುವಕರಿಗಾಗಿ ಕಾದ. ಚಾವಡಿಯಲ್ಲಿ ಕುರ್ಚಿಯ ಮೇಲೆ ಕೂತು ಇವತ್ತು ಬಂದವರು ತನ್ನನ್ನು ಮುಟ್ಟುವರೋ ನೋಡಬೇಕು ಅಂದುಕೊಂಡ. ಈ ತನಕ ಆ ಬಗ್ಗೆ ತಾನು ವಿಚಾರ ಮಾಡಲೇ ಇಲ್ಲವಲ್ಲ ಎನ್ನಿಸಿತು. ಮರಳಿನಲ್ಲಿ ಅಕ್ಷರ ಕಲಿಯುತ್ತಿದ್ದವರಿಗೆ ತಾನು ತಂದ ಹೊಸ ಸ್ಲೇಟು ಬಳಪಗಳನ್ನು ಕೊಡಲೆಂದು ಪಕ್ಕದಲ್ಲಿಟ್ಟುಕೊಂಡಿದ್ದ. ಅವರು ಕಲಿಯಲೇಬೇಕಾದ ಅತ್ಯಗತ್ಯ ಅಕ್ಷರಗಳು ಯಾವುವು, ಓದಲು ಕಲಿತ ಮೇಲೆ ಅವರಿಗೆ ಕೊಡಲು ಯೋಗ್ಯವಾದ ಪುಸ್ತಕಗಳು ಎಷ್ಟಿವೆ? ‘ಚೋಮನ ದುಡಿ’ ಓದಿಸಬೇಕು. ಮತ್ತೆ ತಾನೇ ಸರಳವಾಗಿ ಬರೆಯಬೇಕು : ಬಸವಣ್ಣನ ಬಗ್ಗೆ, ಈಸೂರಿನ ಬಗ್ಗೆ, ಫ್ರೆಂಚ್ ರಷ್ಯನ್ ಕ್ರಾಂತಿಗಳ ಬಗ್ಗೆ, ಚೀನಾದ ಸಾಂಸ್ಕೃತಿಕ ಕ್ರಾಂತಿಯ ಬಗ್ಗೆ. ಕೆಲವು ಪುಟಗಳನ್ನು ಆಗಲೇ ಬರೆದಿದ್ದ. ಅವುಗಳನ್ನು ನಾಳೆ ಓದುವುದೆಂದುಕೊಂಡ. ಅವರ ಜೊತೆ ಏನನ್ನಾದರೂ ಮಾತಾಡಲು ಮುಜುಗರಪಡಬಾರದು. ಅವರಿಗೆ ನಿಜವಾಗುವಷ್ಟು ಮಾತ್ರ ನಿಜ ಎನ್ನುವ ಕಠಿಣ ವ್ರತಿಯಾಗಬೇಕು. ತನಗೆ ನಿಜವಾದದ್ದನ್ನೆಲ್ಲ ಅವರಿಗೂ ನಿಜ ಮಾಡುತ್ತ ಹೋಗಬೇಕು. ತನ್ನನ್ನು ಅವರು ತಾವಾಗಿಯೇ ಮುಟ್ಟುವಷ್ಟು ಮುಂದುವರೆದರೆ ಆ ಘಳಿಗೆಯಿಂದ ಉಳಿದದ್ದೆಲ್ಲ ಕ್ರಮೇಣ ನಿಜವಾಗುತ್ತ ಹೋಗುತ್ತದೆ : ಮಂಜುನಾಥ ಹಿಂದೆ ಸರಿಯುತ್ತ ಹೋಗುತ್ತಾನೆ. ಅರಳಲು ಪ್ರಾರಂಭವಾಗುತ್ತದೆ. ಆತುರದಿಂದ ಕಾದ.

ದೂರದಿಂದ ಬರುವುದು ಕಾಣಿಸಿತು. ಜಡೆಗಟ್ಟಿದ ಕಪ್ಪು ಕೂದಲಿನಲ್ಲಿ ಕೆಂಪು ಧೂಳು; ಬರಿ ಮೈ ಮೇಲೆ ಕಪ್ಪು ಕಂಬಳಿ. ಸೊಂಟದಲ್ಲಿ ಲಂಗೋಟಿ ಮಾತ್ರ. ಸಿಕ್ಕಿಸಿದ ಕತ್ತಿ.

ಅಂಗಳಕ್ಕೂ ಆಚೆ ನಿಂತವು. ಬನ್ನಿ ಎಂದ. ಅಂಗದೊಳಕ್ಕೆ ಬಂದವು. ಬನ್ನಿ ಎಂದ. ಬರದೇ ಅಂಜುತ್ತ ಅಂಗಳದ ನಡುವೆ ನಿಂತವು. ನಿಲ್ಲುವುದೇ ತಪ್ಪೇನೊ, ಈ ಸಂಜೆಯ ಹೊತ್ತಲ್ಲಿ ತಾವು ಇರುವುದೇ ತಪ್ಪೇನೊ ಎನ್ನುವಂತೆ ಕಾಲುಗಳನ್ನು ಸೊಟ್ಟಮಾಡಿ ಬೆನ್ನು ಕುಸಿದು ನಿಂತವು. ಚಾವಡಿಯ ಹತ್ತಿರ ಬನ್ನಿ ಎಂದ. ನಿಧಾನವಾಗಿ ಕಾಲೆಳೆಯುತ್ತ ಬಂದವು. ಚಾವಡಿಯನ್ನೇರಿ ಕೂತುಕೊಳ್ಳಿ ಎನ್ನಲು ಜಗನ್ನಾಥನಿಗೆ ಧೈರ್ಯ ಬರಲಿಲ್ಲ. ವಾತಾವರಣದಲ್ಲಿ ಒತ್ತಾಯದ ಹಿಂಸೆಯಿತ್ತು. ಕೂರಿ ಎಂದ. ಬುಡಕ್ಕೆ ಕಂಬಳಿ ಹಾಸಿ ಕೂತವು. ಬಿಗಿದಿದ್ದು ಸಡಿಲವಾಗಲೇಂದು ಪಕ್ಕದಲ್ಲಿದ್ದ ತಟ್ಟೆಯಿಂದ ಅಡಿಕೆ ಹೊಗೆಸೊಪ್ಪುಗಳನ್ನು ಎಸೆದ. ಒಬ್ಬ ಆಸೆಯಿಂದ ಕೈ ಮಾಡಿ ಹಿಡಿದು ಜೊತೆಯವರಿಗೆ ಹಂಚಿದ. ಹಾಕಿಕೊಳ್ಳಿ ಎಂದು ತಾನೂ ಎಲೆಗೆ ಸುಣ್ಣ ಹಚ್ಚುತ್ತ ಅಡಿಕೆ ಜಗಿದ. ಮುಂದೆ ನಡೆಯುವುದೆಲ್ಲ ಸಾಮಾನ್ಯ ನಡವಳಿಕೆ ಎನ್ನುವ ವಾತಾವರಣ ಸೃಷ್ಟಿಸಲು ಜಗನ್ನಾಥ ಪ್ರಯತ್ನಿಸಿದ. ಆದರೆ ಹೊಲೆಯರು ಅವನ ಎದುರು ಹೊಗೆಸಪ್ಪಿಗೆ ಸುಣ್ಣ ತಿಕ್ಕಲಿಲ್ಲ. ಗಾಬರಿಯಾಗಿ ಕೂತಿದ್ದವು. ಚಳಿ ಬಿಡಿಸುವುದು ಹೇಗೆ ತಿಳಿಯದೆ ಜಗನ್ನಾಥ ನೆನಪಿಗೆ ಬಂದ ಹೆಸರನ್ನು ಕರೆದ: ‘ಪಿಳ್ಳ’

ಒಬ್ಬ ಓ ಎಂದ. ಇವನೇ ಪಿಳ್ಳ ಎಂದು ಜಗನ್ನಾಥ ಮತ್ತೆ ಗುರುತಿಸಿಕೊಳ್ಳುತ್ತ ಹೇಗೆ ಎತ್ತರವಾಗಿ ಗಟ್ಟಿಮುಟ್ಟಾಗಿ ಕರ್ರಗೆ ಇದ್ದಾನೆ ಎಂದುಕೊಂಡ. ತಲೆಯ ತುಂಬ ಪೊದೆ ಪೊದೆ ಕೂದಲು. ಮುಖದ ಮೇಲೆ ಎಳೆಯ ಮೀಸೆ, ಕುರುಚಲು ಗಡ್ಡ, ಕಟ್ಟುಮಸ್ತಾದ ದೇಹದ ಸುಂದರ ಯುವಕ. ಇವನನ್ನೆ ನಾಯಕ ಮಾಡಿಕೊಳ್ಳುವುದು ಎನ್ನಿಸಿತು.

‘ಇನ್ನುಳಿದ ಐದು ಜನ ಯಾಕೆ ಬಂದಿಲ್ಲ?’

‘ಬೆಸ್ತೂರಿಗೆ ಹೋಗಿವೆ ಒಡೆಯ.’

‘ಬಾಯಿಗೆ ಹಾಕ್ಕೊಳ್ಳಿ.’

ಜಗನ್ನಾಥ ಎಲೆ ಜಗಿಯುತ್ತ ಕಾದ. ಸಡಿಲವಾಗಿರಬೇಕು; ಅಡಿಕೆ ಬಾಯಿಗೆ ಹಾಕಿಕೊಂಡು ಹೊಗೆಸೊಪ್ಪನ್ನು ಸುಣ್ಣದಿಂದ ತಿಕ್ಕಿದುವು. ತಾನು ಮುಂದೆ ಹೇಳೇಬೇಕೆಂದಿರುವುದು ಎಷ್ಟು ಅಸಂಗತ ಎನ್ನಿಸಿತು. ಅತ್ಯಂತ ಸರಳವಾದ ಮಾತುಗಳಲ್ಲಿ ಹೇಳಿದ: ಅಮಾಸೆ ಮಾರನೇ ದಿನ ರಥೋತ್ಸವ; ನೀವು ನನ್ನ ಜೊತೆ ಆ ದಿವಸ ದೇವಸ್ಥಾನದೊಳಗೆ ಬರಬೇಕು. ಹೊಲೆಯರು ಸುಮ್ಮನೇ ಕೂತಿದ್ದವು. ಯಾಕೆ ಎಂದು ಅವು ಕೇಳಲಿಲ್ಲ, ಯಾವ ದಿಕ್ಕಿನಲ್ಲಿ ಅವುಗಳ ಮನಸ್ಸು ಹರಿಯುತ್ತಿದೆಯೊ? ನಿಲ್ಲಿಸಿ, ತನ್ನ ಮಾತು ಜಗ್ಗೆದ್ದು ಅವರ ಮನಸ್ಸುನ್ನು ಹಿಡಿಯುವಂತೆ ಮಾಡುವುದು ಹೇಗೆ? ತಿಳಿಯಲಿಲ್ಲ. ಯಾಕೆ ಎಂದು ತಾನೆ ಪ್ರಶ್ನೆ ಕೇಳಿ ಉತ್ತರಿಸಲು ಪ್ರಯತ್ನಿಸಿದ. ಹೊಲೆಯರು ಸುಮ್ಮನೇ ಹೊಗೆಸೊಪ್ಪನ್ನು ಬಾಯಲ್ಲಿಟ್ಟುಕೊಂಡು ಕೂತಿದ್ದವು. ಗಾಂಧಿ, ಅಂಬೇಡ್ಕರ್, ನಿಗ್ರೋ ಗುಲಾಮರು – ಏನೇನೋ ಬಡಬಡಿಸಿದ – ಹೊಲೆಯರು ಹಾಗೇ ಕೂತಿದ್ದವು. ಎಲ್ಲ ಎಷ್ಟು ಅಸಂಗತ ಎನ್ನಿಸಿತು, ಎಷ್ಟು ಹಾಸ್ಯಾಸ್ಪದ ಎನ್ನಿಸಿತು.

‘ಇನ್ನು ಮುಂದೆ ನೀವು ಸ್ಲೇಟಿನಲ್ಲಿ ಬರೆಯೋದು ಓದೋದು ಕಲೀಬೇಕು’

ಎಂದು ಮಾತು ಬದಲಾಯಿಸಿ ಒಂದು ಸ್ಲೇಟಿನ ಮೇಲೆ ‘ಬಸವ’ ಎಂದು ಬರೆದು ‘ಪಿಳ್ಳ ತಗೋ’ ಎಂದು ಚಿಟ್ಟೆಯ ಮೇಲೆ ಕೂತವನು ಸ್ಲೇಟನ್ನು ಒಡ್ಡಿದ. ಪಿಳ್ಳ ಎದ್ದು ನಿಂತ. ಜಗನ್ನಾಥ ತಗೊ ಎಂದ. ಪಿಳ್ಳ ಸ್ವಲ್ಪ ಹತ್ತಿರ ಬಂದು ಎಸೆದ ಸಾಮಾನು ಹಿಡಿಯುವುದಕ್ಕೆ ಸನ್ನದ್ಧನಾದವನಂತೆ ನಿಂತ.

ಜಗನ್ನಾಥ ಎಂದು ನಿಂತ ಸ್ಲೇಟನ್ನು ಪಿಳ್ಳನ ಒಡ್ಡಿದ ಕೈಗೆ ಹತ್ತಿರ ತಂದ. ಪಿಳ್ಳ ಕೈಗಳನ್ನು ಥಟ್ಟನೆ ಕೆಳಗೆ ಮಾಡಿದ. ‘ಬಿದ್ದರೆ ಸ್ಲೇಟು ಒಡೆಯುತ್ತೆ ತಗೋ’ ಎಂದು ಜಗನ್ನಾಥ ಇನ್ನೂ ಬಗ್ಗಿದ. ಪಿಳ್ಳನ ಕೈಗಳು ಚಕ್ಕನೆ ಇನ್ನೂ ಕೆಳಕ್ಕೆ ಹೋದವು. ಜಗನ್ನಾಥ ಮತ್ತೂ ಬಗ್ಗಿದ. ಈಗ ಪಿಳ್ಳ ಇನ್ನಷ್ಟು ಬಗ್ಗಲಾರದೇ ಚಿಟ್ಟೆಯ ಕೆಳಗೆ ಕೈಯೊಡ್ಡಿ ನೆಲದ ಮೇಲೆ ಕೂತುಬಿಟ್ಟ. ಇನ್ನೂ ಜಗನ್ನಾಥ ಬಗ್ಗಿದರೆ ಪಿಳ್ಳ ಭೂಮಿಯೊಳಕ್ಕೆ ಹೊಕ್ಕು ಬಿಡಲೂ ಪ್ರಯತ್ನಿಸಿಬಿಡಬಹುದೆನ್ನಿಸಿತು. ಈ ಒಡ್ಡುವ, ದೂರವಾಗುವ, ನಾಟಕ ಎಷಟು ಹಾಸ್ಯಾಸ್ಪದವಾಯಿತೆನ್ನಿಸಿ ಜಗನ್ನಾಥ ಬೇಸರದಿಂದ ಸ್ಲೇಟನ್ನು ಕೈಬಿಟ್ಟ. ಪಿಳ್ಳ ಅದನ್ನು ಹಿಡಿದುಕೊಂಡ. ಜಗನ್ನಾಥ ತಾನೇನು ಬರೆದಿದ್ದೇನೆ ಓದು ಎಂದ. ಪಿಳ್ಳ ಬಹಳ ಕಷ್ಟಪಡುತ್ತ ಕತ್ತಿನ ನರಗಳೆಲ್ಲ ಉಬ್ಬುವಂತೆ ಸ್ಲೇಟನ್ನೆ ನೋಡುತ್ತಿದ್ದು ‘ಬಸವ’ ಎಂದ. ಉಳಿದ ಸ್ಲೇಟುಗಳ ಮೇಲೆ ‘ಕಮಲ’, ‘ಕರಗ’, ‘ರಮಣ’, ‘ಚಪಲ’, ಎಂದು ಬರೆದು ಒಬ್ಬೊಬ್ಬನಿಗೂ ಒಂದೊಂದು ಸ್ಲೇಟು ಎಸೆದು ಓದಿ ಎಂದ. ಇಬ್ಬರು ತಡವರಿಸಿ ಓದಿದರು; ಇನ್ನಿಬ್ಬರು ಓದಲಿಲ್ಲ.

ಜಗನ್ನಾಥ ಮತ್ತೆ ಹೊಲೆಯುರ ಯಾಕೆ ದೇವಾಲಯ ಪ್ರವೇಶಿಸಬೇಕೆಂದು ಹೇಳಿದ. ತನ್ನ ಮಾತೆಲ್ಲ ಸ್ವಗತವಾಗುತ್ತಿದೆ ಎನ್ನಿಸಿದರೂ ಭಂಡಗೆಟ್ಟವನಂತೆ ತನ್ನ ಮನಸ್ಸಿನಲ್ಲಿರುವುದನ್ನೆಲ್ಲ ಹೇಳಿ ‘ಏನಾದರೂ ಕೇಳಿ’ ಎಂದ, ಯಾರು ಮಾತಾಡಲಿಲ್ಲ. ‘ಏ ಪಿಳ್ಳ ಏನಾದ್ರೂ ಕೇಳೊ’ ಎಂದ. ಬೇರೆ ಯಾರಾದರೂ ಕಂಡರೆ ನಾಚಿಕೆ ಪಡಬೇಕಾದಂಥ ಸನ್ನಿವೇಶ; ಏನೋ ಕಳ್ಳತನ ಮಾಡುತ್ತಿರುವ ಹಾಗೆ – ಈ ಹೊಲೆಯರ ಜೊತೆ ಆಪ್ತವಾಗಿ ಮಾತಾಡುವ ತನ್ನ ಪ್ರಯತ್ನ ಎನ್ನಸಿತು.

ಪಿಳ್ಳ ನಾಚುತ್ತ ತಲೆ ಕರೆದುಕೊಂಡ :

‘ನನ್ನಪ್ಪ ಹೇಳ್ತು. ಹೊಲತೀನ್ನ ನಂಗೆ ತರಬೇಕಂತೆ. ಐವತ್ತು ರೂಪಾಯಿ ತೆರೆ ಕೊಡ್ಬೇಕಂತೆ’.

‘ಯಾವ ಹೊಲತಿನೊ?’

ಜಗನ್ನಾತ ಹಾಸ್ಯ ಮಾಡಿ ಅವರನ್ನು ನಗಿಸಲು ಪ್ರಯತ್ನಿಸಿದ. ಇನ್ನೊಬ್ಬ ಹೊಲೆಯ ನಗುತ್ತ ಹೇಳಿದ :

‘ಪಿಳ್ಳನಿಗೊಂದು ಹೊಲತಿಯಯ್ಯ. ಅದನ್ನು ತರಾಕೆ ತೆರ ತೆತ್ತಬೇಕಲ್ಲ. ಆ ಹೊಲ್ತಿ ನಿಮ್ಮನೇಲಿ ಬಂದು ಗೆಯ್ದು ಸಾಲ ತೀರಿಸತ್ತೆ.’

ಪಿಳ್ಳನಿಗೊಂದು ಹೊಲತಿ. ಯಾವ ಹೊಲತಿ? ಹೇಗಿದೆ ಅದು? ಪಿಳ್ಳ ಅದನ್ನು ಪ್ರೀತಿಸಿದ್ದಾನೆಯ? ವಯಸ್ಸಿಗೆ ಬಂದೊಡನೆ ಹೊಲೆಯರ ಹುಡುಗರು ತಮ್ಮ ತಾಯಿತಂದೆಗೆ ದುಂಬಾಲು ಬೀಳುತ್ತವಂತೆ – ಮದುವೆ ಮಾಡಿಸು ಅಂತ. ಮುದಿ ಹೊಲತಿಯರು ಚಿಕ್ಕಿಗೆ ಕಷ್ಟ ಸುಖ ಹೇಳಿಕೊಳ್ಳುವಾಗ ಜಗನ್ನಾಥ ಕೇಳಿಸಿಕೊಂಡಿದ್ದ.

‘ನಾಳೆ ಶಾನುಭೋಗರನ್ನ ಕೇಳು. ಹೇಳಿರ‍್ತೇನೆ. ಯಾವಾಗ ಲಗ್ನ?’

ಇನ್ನೆರಡು ತಿಂಗಳು ತಡ ಎಂದು ಹೊಲೆಯರು ಹೇಳಿದವು. ತೆರ ಇಷ್ಟು ಸುಲಭವಾಗಿ ಸಿಗುತ್ತದಲ್ಲ ಎಂದು ಪಿಳ್ಳನ ಮುಖ ಅರಳಿತ್ತು. ತಾಯಿಯಂತಾಗಲೀ, ಚಿಕ್ಕಿಯಂತಾಗಲೀ ತಾನು ಸತಾಯಿಸದೆ ತೆರ ಕೊಡಲು ಒಪ್ಪಿದ್ದೇ ಅದಕ್ಕೆ ಕಾರಣ. ಪ್ರಾಯಶಃ ಇಷ್ಟು ಸುಲಭವಾಗಿ ಒಪ್ಪಿದರೂ ಅವುಗಳಿಗೆ ತಾನು ಅರ್ಥವಾಗದೆ ದೂರವಾಗಬಹುದೇನೊ.

ಹೊಲೆಯರು ಹೊರಟು ಹೋದ ಮೇಲೆ ಜಗನ್ನಾಥನಿಗೊಂದು ಉಪಾಯ ಹೊಳೆಯಿತು. ನನ್ನ ಹಾಗೇ ಹೊಲೆಯರೂ ಬಿಳಿಯಂಗಿ ತೊಟ್ಟು ಬಿಳಿ ಪಂಚೆ ಉಡಬೇಕು. ಆಗ ನನ್ನನ್ನು ಮುಟ್ಟಬಹುದು ಎಂಬ ಭಾವನೆ ಅವರಲ್ಲಿ ಮೂಡೀತು. ಈ ವಿಚಾರ ಹೊಳೆದದ್ದೆ ಖುಷಿಯಾಯಿತು. ರಾಯರ ಅಂಗಡಿಯಿಂದ ಹತ್ತು ಜನಕ್ಕೂ ಮುಂಡು ಪಂಚೆಗಳನ್ನು ಕೊಳ್ಳುವುದು; ಶಾಮನ ಅಂಗಡಿಯಿಂದ ಮುಂಡು ತೋಳಿನ ರೆಡಿಮೇಡ್ ಬಿಳಿಯಂಗಿಗಳನ್ನು ಕೊಂಡುತರುವುದು; ನಾಳೆಯೇ – ಎಂದು ಒಳಗೆ ಹೋಗಲು ಎದ್ದು ನಿಂತ. ಕಾವೇರಿ ಕಟ್ಟಿಗೆ ಹೊತ್ತು ದನವನ್ನು ಅಟ್ಟುತ್ತ ಅಂಗಳದೊಳಗೆ ಬಂದಳು. ಓರೆಗಣ್ಣಿಂದ ತನ್ನನ್ನು ನೋಡಿದಳು. ನಾಚಿಕೆಯಿಂದ ನಕ್ಕಳು. ಹೀಗೆ ತನ್ನೆದುರು ಸುಳಿದಾಡೆಂದು ಹೇಳಿರಬಹುದಾದ ಜನಾರ್ಧನ ಸೆಟ್ಟಿ ಟಾರ್ಚ್ ಹಿಡಿದು ಲವಲವಿಕೆಯಿಂದ ತನ್ನನ್ನು ಮಾತಾಡಿಸಲು ಬಂದ. ಅವನು ಪೇಪರಿನಲ್ಲಿ ಸುದ್ದಿ ಓದಿರಬೇಕು. ತುಂಬ ಆಪ್ತನಂತೆ ಹತ್ತಿರಬಂದ. ‘ಈ ಹೊಲೇರ ಸವಾಸ ನಿಮಗೆ ಯಾಕಯ್ಯ?’ ಎಂದ. ಅವನ ಧೈರ್ಯ ಕಂಡು ಜಗನ್ನಾಥನಿಗೆ ಸಿಟ್ಟು ಬಂತು. ‘ಕೆಲಸ ಹೇಗೆ ನಡೀತಿದೆ?’ ಎಂದು ಅಪ್ಪಣೆಯ ಧಾಟಿಯಲ್ಲಿ ಕೇಳಿ ಉತ್ತರಕ್ಕೆ ಕಾಯದೆ ಒಳಗೆ ಹೋದ. ಜವಾನ ಗ್ಯಾಸ್‌ಲೈಟ್‌ಗಳನ್ನು ಹಚ್ಚುತ್ತ ಕೂತಿದ್ದ. ಮಧ್ಯಾಹ್ನ ಊಟ ಲೇಟಾದ್ದರಿಂದ ಹಸಿವಿಲ್ಲ ಎಂದು ಚಿಕ್ಕಿಗೆ ಹೇಳಿ ತನ್ನ ರೂಮಿಗೆ ಹೋಗಿ ಮಲಗಿದ. ಕೈಗೆ ಸಿಕ್ಕ ಪುಸ್ತಕವೊಂದನ್ನೆತ್ತಿಕೊಂಡು ಓದಲು ಪ್ರಯತ್ನಿಸಿದ. ಪುರಾಣಿಕರನ್ನು ಆಗಾಗ ಹೋಗಿ ನೋಡುತ್ತಿರಬೇಕೆನ್ನಿಸಿತು. ಆದರೆ ಸುಮ್ಮನೇ ಸಮಯ ಹಾಳು ಎಂದುಕೊಂಡ. ಒಣಗಿದ ತನ್ನ ಬಟ್ಟೆಗಳನ್ನು ಮಡಿಸಿಡುವ ನೆವದಲ್ಲಿ ಕಾವೇರಿ ಕೋಣೆಗೆ ಹೊರಗೆ ಓಡಾಡಿದಳು. ಓದುತ್ತಿರುವ ತನಗೆ ಲಾಟೀನಿನ ದೀಪ ಸಾಲದೆಂದು ಗಮನಿಸಿ ಕೆಳಗಿನಿಂದ ಗ್ಯಾಸ್‌ಲೈಟ್ ತಂದು ಮೇಜಿನ ಮೇಲಿಟ್ಟಳು. ಜಗನ್ನಾಥ ಉದ್ವೇಗದಿಂದ ಉಸಿರಾಡುತ್ತ ಅವಳನ್ನು ನೋಡದೆ ಓದಲು ಪ್ರಯತ್ನಿಸಿದ. ಜೀವನದಿಂದ ತಾನು ಹೀಗೂ ದೂರವಾಗಿ ಬಿಡುತ್ತಿದ್ದೇನೆ ಎನ್ನಿಸಿತು. ಮಾರ್ಗರೆಟ್ಟಿಗೆ ಬರೆಯಬೇಕೆಂದು ನಿಶ್ಚಯಿಸಿದ. ಕಾವೇರಿ ಹೊರಟು ಹೋದಳೆಂದು ಸಮಾಧಾನವಾಯಿತು.

* * *

ಮಾರನೇ ಬೆಳಿಗ್ಗೆ ಎದ್ದವನೇ ರಾಯರ ಅಂಗಡಿಯಿಂದ ಹತ್ತು ಜೊತೆ ಬಿಳಿ ಖಾದಿ ಮುಂಡುಗಳನ್ನೂ ಶ್ಯಾಮನಿಂದ ಹತ್ತು ಜೊತೆ ಅಂಗಿಗಳನ್ನೂ ಕೊಂಡುತಂದ. ಜಗನ್ನಾಥ ಅಂಗಡಿಯಿಂದ ಹಿಂದಕ್ಕೆ ಬರುವುದನ್ನು ಕಾಯುತ್ತಿದ್ದ ಶ್ಯಾನುಭೋಗ ಶಾಸ್ತ್ರಿ ಖಾತೆ ಪುಸ್ತಕ ಹಿಡಿದು ರೂಮಿಗೆ ಬಂದ. ರಾಯರ ಮಗ ರಂಗಣ್ಣನನ್ನು ಕೆಲಸಕ್ಕೆ ಸೇರಿಸಿದ ಮೇಲಿನಿಂದ ಶಾಸ್ತ್ರಿಗೆ ವ್ಯಕ್ತಪಡಿಸಲಾರದ ಅಸಮಾಧಾನವಾಗಿರುವುದನ್ನು ಗಮನಿಸಿದ್ದ ಜಗನ್ನಾಥ ಮೃದುವಾಗಿ ‘ಏನು’ ಎಂದ. ತೀರಿಹೋದ ರೈಟರ್ ಕೃಷ್ಣಯ್ಯನ ಮಗ ಗೋಪಾಲ ಜಾತ್ರೆ ಹೊತ್ತಿಗೆ ಮನೆಗೆ ಬರುತ್ತೇನೆಂದೂ ಒಂದು ನೂರು ರೂಪಾಯಿ ಬೇಕೆಂದೂ ಮೈಸೂರಿನಿಂದ ಕಾಗದ ಬರೆದಿರುವ ವಿಷಯವನ್ನು ಶಾಸ್ತ್ರಿ ತಿಳಿಸಿ, ಕಳಿಸಬೇಕೇ ಎಂದು ಕೇಳಿದ. ಮನೆಯ ಹುಡುಗನಂತೆ ಸಾಕುತ್ತಿದ್ದ ಗೋಪಾಲನಿಗೆ ಹಣ ಕಳುಹಿಸುವ ವಿಷಯದಲ್ಲಿ ಶಾನುಭೋಗನ ಸಣ್ಣತನ ಕಂಡು ಜಗನ್ನಾಥನಿಗೆ ರೇಗಿತು. ‘ಅದನ್ನೇನು ನನ್ನ ಹತ್ರ ಕೇಳೋದು? ಕಳಿಸಿ’ ಎಂದ. ‘ಅಲ್ಲ ಹದಿನೈದು ದಿವಸಗಳ ಕೆಳಗೆ ನೂರಾಐವತ್ತು ಕಳಿಸಿತ್ತು; ಅದಕ್ಕೇ ಕೇಳಿದೆ’ ಎಂದು ವೈಯ್ಯಾರದಿಂದ ನಗುತ್ತ ಶಾಸ್ತ್ರಿ ಹೇಳಿದ. ಜಗನ್ನಾಥ ‘ಪರವಾಗಿಲ್ಲ ಕಳಿಸಿ’ ಎಂದು ತಾನು ಓದುತ್ತಿದ್ದ ಪುಸ್ತಕ ಎತ್ತಿಕೊಂಡ.

ಟಪಾಲು ಬಸ್ ಬಂತು. ತನಗೆ ಬಂದ ಕಾಗದಗಳಲ್ಲಿ ಮಾರ್ಗರೆಟ್ಟಿಂದ ಒಂದು ಕಾಗದವಿರುವುದನ್ನು ಕಂಡು ಜಗನ್ನಾಥ ಉದ್ವೇಗದಿಂದ ಕಾಗದ ಒಡೆದು ಓದಿದ. ಪ್ರೀತಿಯಿಂದ, ಅವಸರದಿಂದ ಸಣ್ಣದೊಂದು ಕಾಗದ ಬರೆದಿದ್ದಳು. ನೀನೊಬ್ಬ ನಂಬಿಕೆಗೆ ಅನರ್ಹನಾದ ರ್ಯಾಸ್ಕಲ್; ಯಾಕೆ ಇಷ್ಟು ದಿನ ಕಾಗದ ಬರೆದಿಲ್ಲ; ಈಗ ಇಂಗ್ಲೆಂಡಲ್ಲಿ ಎಲೆಕ್ಷನ್ನಿನ ಬಿಸಿ; ಕಲರ‍್ಡ್ ಜನರಿಗೆ ಮೋಸ ಮಾಡಿದ ಲೇಬರ್ ಪಕ್ಷ ಚುನಾವಣೆಯಲ್ಲಿ ಗೆಲ್ಲಲೇ ಕೂಡದೆಂದು ನನಗನ್ನಿಸುತ್ತೆ; ಇಂಗ್ಲಿಷ್ ಜನರಿಗೆ ಈ ಎರಡು ಪಕ್ಷಗಳಲ್ಲಿ ನಿಜವಾದ ಚಾಯ್ಸ್ ಇಲ್ಲದಿರೋದರಿಂದ ಡೆಮಾಕ್ರಸಿ ಹೇಗೆ ಸುಳ್ಳಾಗಿದೆ ನೋಡು; ವಿಲ್ಸನ್ ಮತ್ತು ಹೀತ್ ನಿಜವಾಗಿ ಟ್ವೇಡಲ್‌ಡಮ್ ಎಂಡ್ ಟ್ವೆಡಲ್‌ಡೀ – ಇತ್ಯಾದಿ ಗೀಚಿ ತನಗೆ ಭಾರತಕ್ಕೆ ಬರಲು ಇಷ್ಟವೆಂದಿದ್ದಳು. ಬೆಂಗಳೂರಿನ ಹತ್ತಿರ ಒಂದು ಇಂಟರ್ ನ್ಯಾಷನಲ್ ಸ್ಕೂಲ್ ಇದೆಯಂತಲ್ಲ, ಜೆ.ಕೆ.ಫಿಲಾಸಫಿ ಮೇಲೆ ಕಟ್ಟಿದ್ದು, ಅಲ್ಲಿ ನಾನು ಇಂಗ್ಲಿಷ್ ಮತ್ತ ಹಿಸ್ಟರಿ ಪಾಠ ಹೇಳುತ್ತೇನೆ. ಪ್ರಿನ್ಸಿಪಾಲರಿಗೆ ಬರೆದಿದ್ದೇನೆ, ಅವರು ತಂದೆಗೆ ಪರಿಚಯ, ನೀನೊಂದು ಮಾತು ಕೇಳಿ ಬರಿ ಎಂದಿದ್ದಳು. ತುಂಬ ಪ್ರೀತಿಯಿಂದ ಕಾಗದ ಮುಗಿಸಿದ್ದಳು. ಚಳಿಯಲಲಿ ನೀನು ಬೇಕೆನಿಸುತ್ತೆ, ನಿನ್ನ ಮೈ ಎಷ್ಟು ಬೆಚ್ಚಗೆ ನೆನಪಾಗುತ್ತೆ ಎಂದು ಚುಕ್ಕೆಗಳನ್ನು ಹಾಕಿ ಇಬ್ಬರಿಗೂ ಆಪ್ತವಾಗಿ ಗೊತ್ತಿದ್ದ ನೆನಪುಗಳನ್ನು ಕೆರಳಿಸಿದ್ದಳು. ನಿನ್ನ ಭಾವುಕ ಕಣ್ಣುಗಳಿಂದ ಎಷ್ಟು ಜನರನ್ನು ವಂಚಿಸಲು ಹವಣಿಸುತ್ತಿದ್ದೀಯ ಜೋಕೆ ಎಂದು ಗೇಲಿ ಮಾಡಿದ್ದಳು.

ಜಗನ್ನಾಥ ಕೂಡಲೇ ಅವಳಿಗೊಂದು ಉತ್ತರ ಬರೆದ. ಎಲ್ಲ ಹೊರೆ ಹಗುರವಾಗಿ ಬಿಟ್ಟಿತು. ತನ್ನ ಯೋಜನೆ ತಿಳಿಸಿ ಇನ್ನೊಂದು ವಾರದಲ್ಲೆ ಬೆಂಗಳೂರಿಗೆ ಹೋಗಿ ಫಿಕ್ಸ್ ಮಾಡುತ್ತೇನೆಂದು ಹೇಳಿ ಕಾಗದವನ್ನು ಟಪಾಲು ಪೆಟ್ಟಿಗೆಗೆ ಸ್ವತಃ ಹಾಕಿ ಬಂದ. ಹೊಲೆಯರಿಗೆಂದು ಬಂಡಾಯದ ಇತಿಹಾಸವನ್ನು ಸರಳವಾದ ಕನ್ನಡದಲ್ಲಿ ಬರೆಯಲು ಕೂತ.

ಮಧ್ಯಾಹ್ನ ಊಟದ ಹೊತ್ತಿಗೆ ಮನೆಯ ಪರಿಚಾರಕರನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲವೆಂದು ಚಿಕ್ಕಿಗೆ ದುಃಖವಾಗಿರಬೇಕು. ತಾನು ಪರಿಶಂಚನೆ, ಚಿತ್ರಾಹುತಿ, ಆಪೋಶನ ಯಾವುದನ್ನು ಆಚರಿಸೆ ಊಟ ಮಾಡುತ್ತೇನೆಂದು ಪಕ್ಕದಲ್ಲಿ ಕೂತ ಮನೆಯ ಅರ್ಚಕನಾದ ಗಣಪತಿ ಭಟ್ಟನಿಗೆ ಮುಜುಗರವಾಗಿದ್ದರಿಂದ ಊಟ ಪ್ರಾರಂಭಿಸುವ ತನಕ ಆತ ತನ್ನ ಕಡೆ ನೋಡುವುದಿಲ್ಲ. ಎಡ ಹಸ್ತವನ್ನು ನೆಲಕ್ಕೂರಿ ಅವನು ಊಟ ಮಾಡುವುದು. ಲೋಟವನ್ನೆತ್ತಿ ಗಳಕ್ ಗಳಕ್ ಶಬ್ದ ಮಾಡುತ್ತ ನಿರರ್ಗಳವಾಗಿ ನೀರು ಕುಡಿಯುವುದು. ಕಣ್ಣು ಮುಚ್ಚಿ ತೃಪ್ತಿ ಪಡುತ್ತ ಸವಿಯುತ್ತ ಊಟ ಮಾಡುವುದು. ಇನ್ನು ಅಡಿಗೆ ಭಟ್ಟರ ಇಬ್ಬರು ಹುಡುಗರು. ಕಮಾನಾಗಿ ಕತ್ತರಿಸಿದ ತಲೆ, ದೊಡ್ಡ ಜುಟ್ಟು. ಈಚೆಗೆ ಉಪನಯನವಾದ್ದರಿಂದ ಊಟದ ವೇಳೆಯಲ್ಲಿ ಮಾತಾಡುವುದಿಲ್ಲ. ಬಡಿಸಲು ಬರುವಾತ ಲೇವಡಿ ಮಾಡಲೆಂದೇ ಸಾರು ತರಲು ಮಜ್ಜಿಗೆ ಬಡಿಸಲು, ಸೇರುವುದಿಲ್ಲವ ಎಂದು ಅವನ ವ್ರತಭಂಗ ಮಾಡಲು ಪ್ರಯತ್ನಿಸುತ್ತಾನೆ. ಇನ್ನೊಂದು ಚೌಲವಾಗದ ಐದಾರು ವರ್ಷದ ಹುಡುಗ. ತಂದೆಯೆಂದರೆ ಅದಕ್ಕೆ ಎಷ್ಟು ಭಯವೆಂದರೆ ಅವರು ಆಸುಪಾಸಿನಲ್ಲಿ ಎಲ್ಲಾದರೂ ಇದ್ದರೆ ಮಾತು ಸಹ ಆಡುವುದಿಲ್ಲ. ಸಾಹುಕಾರ್ರ ಮನೆಯಲ್ಲೇ ಬಾಳಬೇಕಾಗಿ ಬಂದದ್ದರಿಂದ ಉಸಿರಾಡಲೂ ಹೆದರಿ ಈ ಮಕ್ಕಳು ಬೆಳೆಯುತ್ತಿದ್ದಾವೆಂದು ಜಗನ್ನಾಥನಿಗೆ ಗೊತ್ತು. ಆದರೆ ಅವ ಏನೂ ಮಾಡಲಾರ.

ಊಟ ಮುಗಿಸಿ ರೂಪಮಿಗೆ ಬರುವಾಗ ಚಿಕ್ಕಿ ಎದುರಾದರು. ಅವರನ್ನು ಕಂಡೊಡನೆ ಜಗನ್ನಾಥನಿಗೆ ಸಂಕಟವಾಯಿತು. ತನ್ನ ಧೈರ್ಯವನ್ನೆಲ್ಲ ಮುರಿದುಬಿಡಬಲ್ಲ ಶೋಕ ಅವರ ಮುಖಭಾವದಲ್ಲಿತ್ತು. ಅವರಿಗೆ ಪ್ರಿಯವಾಗಲೆಂದು ‘ಗೋಪಾಲ ಜಾತ್ರೆಗೆ ಬರುತ್ತೇನೇಂತ ಬರ‍್ದಿದಾನೆ’ ಎಂದು ಹೇಳಿ ಮಹಡಿ ಹತ್ತಿದ. ಅಷ್ಟರಲ್ಲೇ ರಾಯರು ಲಗುಬಗೆಯಿಂದ ಕೈಯಲ್ಲಿ ಪೇಪರ್ ಹಿಡಿದು ಬಂದರು.

‘ಜಗನ್ನಾಥ ನೀನು ಸುದ್ದಿಯಾಗಿದ್ದೀಯ’ ಎಂದು ರಾಯರು ಶಿವಮೊಗ್ಗದಿಂದ ಹೊರಡುತ್ತಿದ್ದ ದಿನಪತ್ರಿಕೆ,‘’ಜಾಗೃತಿ’ಯನ್ನು ಕೊಟ್ಟರು. ಸ್ವಭಾವತಃ ರಾಜಕಾರಣಿಯಾದ ರಾಯರಿಗೆ ಸುದ್ದಿಯಾಗುವುದೆಂದರೆ ಎಷ್ಟು ಮಹತ್ವದ ಸಂಗತಿಯೆಂದು ಜಗನ್ನಾಥನಿಗೆ ನಗು ಬಂತು. ‘ಜಾಗೃತಿ’ ಜಗನ್ನಾಥನ ಶ್ರೀಮಂತಿಕೆಯನ್ನು ಎತ್ತಿ ತೋರಿಸಿ ಅವನ ಕ್ರಾಂತಿಕಾರತೆಯನ್ನು ಹೊಗಳಿತ್ತು. ‘ಇದರ ಎಡಿಟರ್ ಈಗಾಗಲೇ ಮೂರು ನಾಲ್ಕು ಪಕ್ಷ ಬದಲಾಯಿಸಿದಾನೆ’ ಎಂದು ರಾಯರು ಹೇಳಿದರು.‘’ನಾಳೆ ಬೆಂಗಳೂರಿನ ಪತ್ರಿಕೆಗಳಲ್ಲೂ ಸಂಪಾದಕರಿಗೆ ಪತ್ರಗಳಿರುತ್ತವೆ’ ಎಂದು ಉತ್ಸಾಹದಿಂದ ರಾಯರು ಹೇಳಿ ಓದುತ್ತ ಕುಳಿತರು.

ರಾಯರಿಗೆ ತನ್ನ ಕ್ರಿಯೆಯಲ್ಲಿ ಉತ್ಸಾಹವಿಲ್ಲದಿದ್ದರೂ ತನ್ನ ಬಗ್ಗೆ ಎಷ್ಟು ಕಾಳಜಿ ಎಂಬುದನ್ನು ಜಗನ್ನಾಥ ಗಮನಿಸಿದ. ನಾವು ಯಾರನ್ನು ಬದಲಾಯಿಸುತ್ತೇವೆಯೊ ಅವರನ್ನ ನಾವು ಪ್ರೀತಿಸೋದು. ಅಲ್ಲವೆ? ಈ ಹುಡುಗನ ಸ್ವಭಾವದ ಮಾರ್ಪಾಟಿಗೆ ತಾನು ಕಾರಣ ಎಂದು ರಾಯರಿಗೆ ತನ್ನ ಮೇಲೆ ಪ್ರೀತಿ. ಹಾಗೆಯೇ ಮಾರ್ಗರೆಟ್ಟನ್ನು ಇವತ್ತಿಗೂ ತಾನು ಪ್ರೀತಿಸಲು ಕಾರಣ : ಅವಳನ್ನು ಬದಲಾಯಿಸಲು ತಾನು ಕಾರಣನಾದೆ ಎಂದು. ಬದಲಾಯಿಸಿದ್ದು ಮಾತ್ರ ನಿಜವಾಗಿ ನಮ್ಮದಾಗುತ್ತದೆ.

ರಾಯರ ಹಾಗೆ ತಾನು ಸ್ವಭಾವತಃ ರಾಜಕೀಯದ ಮನುಷ್ಯನಲ್ಲ. ಇದು ರಾಯರಿಗೂ ಗೊತ್ತು. ಆದ್ದರಿಂದ ರಾಜಕೀಯ ನಿನಗೆ ಬೇಡ ಎನ್ನುತ್ತಾರೆ.

ರಾಯರು ತುಂಬ ಹೊತ್ತು ಮಾತಾಡದೆ ಕೂತಿದ್ದರು. ಜಗನ್ನಾಥ ಬರೆಯುತ್ತ ಕೂತ. ಏನೂ ಮಾತಾಡದೆಇವರ ಜೊತೆ ಇರುವುದು ಸಾಧ್ಯವೆನ್ನಿಸಿ ಕೃತಜ್ಞನಾದ. ಅಕ್ಕಪಕ್ಕದಲ್ಲಿದ್ದರೆ ಸಾಕು. ಕೆಲವರ ಹತ್ತಿರ ಮಾತ್ರ ಈ ಸಂಬಂಧ ಸಾಧ್ಯ. ಮಾರ್ಗರೆಟ್ ಜೊತೆ ಇದು ಕೆಲವೊಮ್ಮೆ ಸಾಧ್ಯವಾಗಲಿಲ್ಲ. ಒಬ್ಬರನ್ನೊಬ್ಬರು ಸದಾ ಕೆಣಕಿಕೊಂಡೇ ರಮಿಸಿಕೊಂಡೋ ಇರಬೇಕಾಗಿ ಬರುತ್ತಿತ್ತು.

ರಾಯರು ಹೋದ ಮೇಲೆ ಪ್ರಭು ಬಂದ. ಆರಾಮಾಗಿ ಕೂತು ಪಾಸಿಂಗ್ ಶೋ ಸಿಗರೇಟು ಹಚ್ಚಿದ. ಮುಂದಿನ ಸಾರಿ ಚುನಾವಣೆಗೆ ನೀವೇ ನಿಲ್ಲಬೇಕು. ಒಕ್ಕಲಿಗರಿಗೆ ಈ ಸೀಟು ಬಿಟ್ಟುಕೊಡಬಾರದು. ಜಗನ್ನಾಥ ಮಾತು ಬೇಕಿಲ್ಲೆಂದು ಸೂಚಿಸಲು ಆಕಳಿಸಿದ. ಕಾಫಿ ತಂದ ಚಿಕ್ಕಿಗೆ ‘ಹಗ್ಗಕ್ಕೆ ಹೇಳಿಕಳಿಸಿದ್ದರಂತೆ ಎಷ್ಟು ದಪ್ಪದ ಮಿಣಿ ಬೇಕು’ ಎಂದು ಪ್ರಭು ಕೇಳಿ ತಿಳಿದುಕೊಂಡ. ಶಿವಮೊಗ್ಗದಿಂದ ತರಿಸಿ ಕೊಡುತ್ತೇನೆ ಎಂದ. ಜಗನ್ನಾಥ ಪ್ರಸನ್ನನಾದ ಘಳಿಗೆಗೆ ಕಾದು ‘ನಾನು ನೀವೂ ಬೆಂಗಳೂರಿಗೆ ಹೋಗಿ ಮಿನಿಸ್ಟರನ್ನು ನೋಡಿ ಬರುವ ಮಾರಾಯರೆ, ಎಲೆಕ್ಟ್ರಿಸಿಟಿ ಬೇಕೂಂತ ಒಂದು ಅರ್ಜಿ ಕೊಟ್ಟು ಬರುವ’ ಎಂದ. ‘ನೀವೇನೋ ಹರಿಜನ ಉದ್ಧಾರಕ್ಕೆ ನಿಂತಿದ್ದೀರಿ, ಆದರೆ ಅವಕ್ಕೆ ಕೃತಜ್ಞತೆ ಉಂಟೂಂತ ತಿಳ್ದಿದೀರ? ನಾಳೆ ಅವು ಓಟ್ ಹಾಕೋದು ಸರ್ಕಾರದ ಪಕ್ಷಕ್ಕೇನೆ’ ಎಂದು ಎದ್ದು ನಿಂತ. ಹೋಗುವ ಮುಂಚೆ,

‘ನಿಮ್ಮಂಥ ವಿದ್ಯಾವಂತರ ಜೊತೆ ಮಾತಾಡೋದು ಒಂದು ದೊಡ್ಡ ಲಾಭ ಮಾರಾಯರೆ. ಇನ್ನೊಂದು ಸಾರಿ ಬರ‍್ತ ನನ್ನ ಮಗನನ್ನು ಕರ್ಕೊಂಡು ಬರ್ತೀನಿ. ಅವನು ಎಂಜಿನಿಯರ್ ಆಗಲಿಕ್ಕೆ ಲಾಯಕ್ಕೋ, ಐಎಎಸ್ ಮಾಡಬೇಕೋ ನೀವೇ ನೋಡಿ ಹೇಳಿ’

ಎಂದು ನಮಸ್ಕಾರ ಮಾಡಿ ಹೋದ. ಜಗನ್ನಾಥ ಮತ್ತೆ ಬರೆಯಲು ಕೂತ. ತನ್ನ ಮನಸ್ಸಿನಲ್ಲಿ ನಡೆಯುತ್ತಿರುವುದನ್ನು ಬರೆದಿಡಬೇಕೆಂದು ಆಸೆಯಾಯಿತು. ಹೊಸದೊಂದು ನೋಟ್ ಬುಕ್ಕನ್ನು ತೆರೆದು ಹೀಗೆ ಪ್ರಾರಂಭಿಸಿದ :

* * *

ಮೊದಲಿನಿಂದಲೂ ಮನುಷ್ಯನ ಮಿತಿಗಳೇನು ಎಂದು ನಾನು ಯೋಚಿಸಿದ್ದಿಲ್ಲ; ಸಾಧ್ಯತೆಗಳೇ ನನ್ನ ಕಾಳಜಿ. ವಿಚಾರಗಳು ಉಮ್ಮಳಿಸಿ ಬರುತ್ತಾವೆ; ವಾಸ್ತವತೆಯೆಂದರೆ ನನಗೆ ಅಸಮಾಧಾನ. ನನ್ನ ಸಮಸ್ಯೆ ಇದು : ಮಾರ್ಗರೆಟ್ ಜೊತೆ, ಅಥವಾ ಪೀಟರ್, ಟಾಮ್, ರೂಬೆನ್ಸ್ ಜೊತೆ ಹೈಡ್ ಪಾರ್ಕ್‌ನಲ್ಲಿ ಬಿಸಿಲಿಗೆ ಮೈಚೆಲ್ಲಿ ಕೂತೋ, ಯೂನಿಯನ್ ಬಾರ್‌ನಲ್ಲಿ ಡ್ರಾಫ್ಟ್ ಬಿಯರ್ ಕುಡಿಯುತ್ತಲೋ ಎಷ್ಟೊಂದು ಆರಾಮಾಗಿ ವಿಚಾರಗಳ ಚೆಂಡಾಟ ನಾನು ಆಡಿದ್ದೇನೆ. ಸ್ನೇಹಿತರ ಜೊತೆ ಏನನ್ನಾದರೂ ವಿಚಾರ ಮಾಡಲು ಸಾಧ್ಯವಿರುವುದರಿಂದ ನಾನು ನಿಜವಾಗಿ ಸ್ವತಂತ್ರ ಎನ್ನುವ ಭ್ರಮೆಯಲ್ಲಿದ್ದೆ – ಬಹಳ ದಿನ. ಹೇಗೆ ಬೇಕಾದರೂ ಯೋಚಿಸುತ್ತ, ಯಾವ ನಿರ್ಬಂಧವಿಲ್ಲದೆ ಎಲ್ಲೆಂದರಲ್ಲಿಗೆ ತುಯ್ಯುತ್ತ ಉತ್ಸಾಹದಲ್ಲಿ ಮುಖ ಕೆಂಪಾಗಿ ಅರಳುತ್ತಿದ್ದ ಕಾಲ ನಿಧಾನವಾಗಿ ನನಗೆ ಸುಳ್ಳಾಯ್ತು. ವಿಚಾರ ಎಷ್ಟು ನಿಜ ತಿಳಿಯಲು ಅದು ವಸ್ತವದ ಜೊತೆ ಉಜ್ಜಾಡಬೇಕು. ಅಂದರೆ ಈಗ ಹೊಲೆಯರ ಯುವಕರು ತಯ್ಯಾರಾಗಿ ನಿಲ್ಲುವಷ್ಟು ನನ್ನ ವಿಚಾರ ನಿಜವಾಗುತ್ತದೆ – ಅಷ್ಟೆ. ಈ ನಿಕಷದ ಅಗತ್ಯ ನನ್ನ ವ್ಯಕ್ತಿತ್ವಕ್ಕೆ ಇದೆ.

ನನ್ನ ವರ್ಗದವರ ಜೊತೆ, ಮಾರ್ಗರೆಟ್ ಜೊತೆ ಯೋಚಿಸಿದ್ದೆಲ್ಲ ನಿಜವೆಂಬ ಭ್ರಮೆಯಲ್ಲಿರುವುದು ಸಾಧ್ಯ. ಹೊಲೆಯರ ಗುಲಾಮಗಿರಿ ನನ್ನ ಮಾನವೀಯತೆಯ ಸಾಧ್ಯತೆಗಳನ್ನು ಮೊಟಕು ಮಾಡುತ್ತದೆಂದು ಅನ್ನಿಸಿದ ಘಳಿಗೆಯಿಂದ ನಾನು ನಿಜವಾದ ಸ್ವಾತಂತ್ರ್ಯದ ಹುಡುಕಾಟಕ್ಕೆ ತೊಡಗಿದಂತಾಗಿದೆ.

ರಾಯ್‌ನಂತಹ ಮುಕ್ತ ವೈಚಾರಿಕನಿಗಿಂತ ಇನ್ನೂ ದೇವರ ಗರ್ಭದಲ್ಲಿದ್ದು ಒದ್ದೆಯುತ್ತಿದ್ದ ಗಾಂಧೀಯೇ ಹೆಚ್ಚು ನಿಜ. ಪುರಾಣಿಕರ ಜೊತೆ ವಿಚಾರದ ಚೆಂಡಾಟಕ್ಕಿಂತ ಈ ವಾಸ್ತವತೆಯನ್ನು ರೂಪಿಸುತ್ತಿದ್ದ ಪ್ರಭುವಿನಂಥ ಖದೀಮನ ಜೊತೆ ಸೆಣಸಾಡುವುದು ಹೆಚ್ಚು ಅರ್ಥಪೂರ್ಣ.

ಉದಾಹರಣೆಗೆ ಕಮ್ಯೂನಿಸ್ಟ್ ಪಕ್ಷದ ದೀಕ್ಷಿತ್. ಬೆಂಗಳೂರಿನಲ್ಲೊಮ್ಮೆ ಅವನ ಜೊತೆ ವಾದಿಸುತ್ತಿದ್ದಂತೆ ನನಗೆ ತುಂಬ ಕಸಿವಿಸಿಯಾಯಿತು. ಚಾರ್ಮಿನಾರ್ ಸೇದುತ್ತ ಇಂಗ್ಲೀಷಲ್ಲವನು ವಾದಿಸಿದ್ದ. ಯಾವ ಭಾರತೀಯ ಭಾಷೆಯೂ ಸರಿಯಾಗಿ ಬರೆದ ಅವನಿಗೆ ಗಾಂಧಿ ಬರೀ ಒಂದು ಮೋಸ. ಹರಿದ ಅಂಗಿದೊಗಳೆ ಪ್ಯಾಂಟಿನ ಮೈಪರಿವೆಯಿಲ್ಲದೆ ಮಗ್ನನಾದ ಮನುಷ್ಯ. ಅವನಿಗೆ ಹೇಳೀದೆ: ಈ ಜನ ನಿಮಗೆ ತಿಳಿದೇ ಇಲ್ಲ; ಗಾಂಧಿಗೆ ಈ ನೆಲ ಗೊತ್ತು. ಪರಿಸರವನ್ನು ಮಥಿಸಬಲ್ಲ ಕಡಗೋಲು ಒರಟೊರಟಾಗಿರಬೇಕಾಗುತ್ತೆ. ಬುದ್ಧಿಜೀವಿ ಗಾಳಿಯಲ್ಲಿ ಅಲೆಯುವ ಧ್ವನಿ ತರಂಗಗಳನ್ನು ಹಿಡಿಯಬಲ್ಲ ಏರಿಯಲ್‌ನಂತಿದ್ದರೆ ಸಾಲದು; ತನ್ನ ಮೈಮನಸ್ಸಿನಲ್ಲೂ ಪರಿಸರದ ಗುಣಗಳನ್ನು ಪಡೆದ ಒರಟು ಕಡೆಗೋಲೂ ಆಗಿರಬೇಕು. ಹಿಂದೂಧರ್ಮದ ಆಕರ್ಷಣೆಯನ್ನು ತನ್ನೊಳಗೂ ಗುರುತಿಸಿಕೊಳ್ಳದವನು ಇಲ್ಲಿ ಯಾವ ನಿಜವಾದ ವಿಚಾರವನ್ನೂ ಮಾಡಲಾರ. ಒಪ್ಪಿದ. ಆದರೆ ಆರ್ಥಿಕ ವ್ಯವಸ್ಥೆ ಮೊದಲು ಬದಲಾಗಬೇಕು ಎಂದು ನಗುತ್ತ ಹೇಳಿದ.

ಬಂಗಾಳದ ಕಾಳಿಯ ಭಕ್ತನಿಗೂ, ತಲೆ ಕತ್ತರಿಸಬೇಕೆನ್ನುವ ಉಗ್ರ ಕಮ್ಯುನಿಸ್ಟನಿಗೂ ಸಂಬಂಧವಿದೆಯಲ್ಲವೆ? – ಹೀಗೇ ಬಹಳ ಹೊತ್ತು ವಾದಿಸಿದೆ. ‘ಈಗ ನನ್ನ ಸಮಸ್ಯೆ ವೇಜ್ ತೀರ್ಮಾನ’ ಎಂದು ನಗುತ್ತ ಕೈ ಕುಲುಕಿ ಹೊರಟುಹೋದ.

ನಾನೊಬ್ಬನೇ ನನ್ನಲ್ಲೇ ಪಡೆಯಬಹುದಾದ ನಿವೃತ್ತಿ ಪ್ರಯೋಜನವಿಲ್ಲವೆನ್ನಿಸಿದ್ದರಿಂದಲೇ ಈ ಎಲ್ಲ ಪರದಾಟ. ಎಲ್ಲದರಿಂದ ಮುಕ್ತನಾದ ಭ್ರಮೆಯ ಅಡಿಗರಂತಾಗಬಹುದು; ಮಹಡಿ ಮೇಲಿನ ರೂಮನ್ನು ಇಂಗ್ಲೆಂಡ್ ಮಾಡಿಕೊಳ್ಳಬಹುದು; ಇರುವುದನ್ನು ಒಪ್ಪಿಕೊಂಡು ದಳಗಳ ಮಿತಿಗೆಷ್ಟೇ ಅರಳು ಎನ್ನುವ ವಾಸ್ತವವಾದಿಯಾಗಬಹುದು. ಎಲ್ಲ ಕಾಲದಲ್ಲೂ ಯಾವ ಗಳಿಗೆಯನ್ನಾದರೂ ಅವಾಕ್ಕಾಗಿಸುವಂತೆ ಅರಳಿಸಬಲ್ಲ ಸಂಗೀತಗಾರರಿಲ್ಲವೆ? ಬದಲಾವಣೆಯ ಹಿಂಸೆ ಯಾಕೆ ಬೇಕು ಅನ್ನಿಸುತ್ತೆ. ಹೊಗುವ ಉಜ್ಜುವ, ಬೆಂಕಿ ಹುಟ್ಟಿಸುವ ಕ್ರಿಯೆ ಅದು. ಅರಳೀದ ಹೂವು ಇಬ್ಬನಿಯನ್ನು ಸ್ವೀಕರಿಸಿ ಹೇಗೊ ಅಂತೂ ತಾಗಿದ ಬಿಸಿಲಿಗೆ ಮಣಿ ಮಣಿ ಹೊಳೆಯುವ ಸಡಗರದ ಕ್ರಮ ಬೇರೆ. ಆದರೆ ನಾಗಮಣಿ ನಂದಿಹೋದದ್ದನ್ನು ಹೇಗೆ ಮರೆಯುವುದು ಸಾಧ್ಯ? ನಾನು ಕಂಡಿಲ್ಲವೆಂದಲ್ಲ; ಮಾರ್ಗರೆಟ್ ಜೊತೆ ಚಳಿಗಾಲದಲ್ಲಿ ಬೆತ್ತಲೆಯಾಗಿ ಮಲಗಿದ್ದಾಗ ಅಲಾಪದ ನಿರವಧಿಯಂತೆ ಅವಸರವಿಲ್ಲದೆ ಮಾರ್ದವತೆ. ವಾಸ್‌ನಲ್ಲಿ ಕೆಂಪುಗುಲಾಬಿ. ಬಿರಿದ ಆಹ್ವಾನದಲ್ಲಿ ಶಂಖದಂತೆ ಒಳಗೆ ಸೆಳೆದುಕೊಳ್ಳುವ ಸುರುಳಿ ಸುರುಳಿ ತಿರುಪು ಪಕಳೆಗಳ ಗೌಪ್ಯ. ಭದ್ರವಾದ ತೊಟ್ಟಿನ ತುದಿಯಲ್ಲಿ ಕೋಮಲವಾದ ಹೂವಿನ ಹಗುರ. ನೋಡಿಸಿಕೊಳ್ಳುವ, ಬಚ್ಚಿಟ್ಟುಕೊಳ್ಳುವ ಗುಲಾಬಿ. ಬಿಸಿಗೆ ಬಿಸಿ ಹೆಣೆಯುತ್ತ, ಇನ್ನಷ್ಟು ನುಸುಳಿ ಮೈಗೆ ಒತ್ತಿಕೊಳ್ಳುವ ಮಾರ್ಗರೆಟ್ಟಿನ ಉಸಿರು ಕತ್ತಿನ ಮೇಲೆ. ಅವಳ ಕೂದಲನ್ನು ಕೆನ್ನೆಯಿಂದ ತಳ್ಳುವ ಭಯವಿಲ್ಲದಂತೆ ನಿರತಂಕನಾದ ಕ್ಷಣ. ಲೋಭವಿಲ್ಲದ, ಆತುರವಿಲ್ಲದ, ಆಲಾಪದಂತೆ ಕೊಂಚ ಏರುವ, ಕೊಂಚ ಇಳಿಯುವ, ಎಷ್ಟೆಂದರಷ್ಟು ವಿಸ್ತರಿಸುವ ಸೌಖ್ಯ. ಶಿಖರಕ್ಕೇರುವ ಆತುರವನ್ನು ನಿರಂತರ ಮುಂದೂಡಬಲ್ಲ ಮೈಥುನ ಹೀಗೆ ಸಾಧ್ಯವಾದದ್ದು ಎಲ್ಲೋ ಕೆಲವೊಮ್ಮೆ.

ಆದರೂ ಮಾರ್ಗರೆಟ್ ಯಾಕೆ ನನ್ನ ನಿರಾಕರಿಸಿದಳು? ನನಗೂ ಯಾಕೆ ಅವಳು ಸಾಲದೆನ್ನಿಸಿತು? ಈ ನೆಲದಲ್ಲಿ ಏನನ್ನೂ ನೆಟ್ಟು ಬೆಳೆಯದ, ಹಾಗೇ ಹುಟ್ಟಿ ಹಾಗೇ ಉದುರುವ ಈ ಹೊಲೆಯರ ಮೂಲಕ ಯಾಕೆ ನಿಜವಾಗಬೇಕೆನ್ನಿಸಿತು? ಅಡಿಗರ ಅನುಭಾವ, ಮಾರ್ಗರೆಟ್ ಜೊತೆ ಮೈಥುನ ಯಾಕೆ ಸಾಲದೆನ್ನಿಸಿತು?

* * *

ಬರೆದುದ್ದನ್ನು ಓದಿದ. ಅತೃಪ್ತಿಯಾಯಿತು. ಆರು ತಿಂಗಳುಗಳ ಕೆಳಗೂ ಪ್ರಾಯಶಃ ತಾನಿದನ್ನು ಬರೆಯಬಹುದಿತ್ತು. ಒಳಗಿನ ಎಲ್ಲ ವಿಚಾರಗಳನ್ನೂ ಪ್ರತ್ಯಕ್ಷಪಡಿಸಿಕೊಂಡು ನೋಡಲಾರೆ. ತನ್ನೂ ತಾನು ಆದರ್ಶವಾದಿಯಾಗಿಯೇ ಉಳಿದಿದ್ದೇನೆ, ಕನ್ನಡಿಯ ಎದುರು ಈಗ ಹಿಗ್ಗುವ ಮತ್ತೆ ಕುಗ್ಗುವ ಆಟ.

ಹೊಲೆಯರು ಬರುವ ಮುಂಚೆ ಓಡಾಡಿ ಬರೋಣವೆಂದು ಜಗನ್ನಾಥ ತೋಟದ ಕಡೆ ಹೋದ. ಆಸ್ತಿಯಲ್ಲಿ ತನಗೆ ಆಸಕ್ತಿಯಿದೆಯೆಂದು ಅವನು ಈಚೆಗೆ ನಟಿಸುತ್ತಿದ್ದಾನೆ – ಅಷ್ಟೆ. ಇಲ್ಲವಾದರೆ ತಾನು ಈ ಪರಿಸರದಲ್ಲಿ ಸುಳ್ಳಾಗಿ ಬಿಡುತ್ತೇನೆ. ಏನೋ ಶೀನಪ್ಪ, ಏನು ಶೆಟ್ಟರೆ ಎಂದು ವಿಚಾರಿಸುತ್ತ ಅಡ್ಡಾಡಿದ. ಅವರೆಲ್ಲರ ವರ್ತನೆಯಲ್ಲೂ ಸುದ್ದಿ ತಿಳಿದ ಮೇಲೆ ಬದಲಾವಣೆಯಾಗಿತ್ತು. ಸಾಹುಕಾರರು ಹೊಲೆಯರು ಜೊತೆ ಸೇರಿ ಕೀಳಾಗುವುದು ಅವರಿಗೆ ಯಾತನೆಯ ವಿಷಯವಾಗಿತ್ತೆಂಬುದನ್ನು ಗಮನಿಸಿದ. ತಾನು ಜರ್ಬಿನ ಮನುಷ್ಯವಾಗಿದ್ದರೆ ತಾವು ತಗ್ಗಿ ನಡೆಯಬೇಕಲ್ಲ – ಆಗಲೇ ಅವರಿಗೆ ಸುಖ, ತೃಪ್ತಿ. ತಾನು ಎಷ್ಟು ನಿರ್ದಯನಾಗಬಲ್ಲೆನೂ ಅಷ್ಟು ತಾನು ತೋರಿಸುವ ಕರುಣೆಗೆ ಅವರಲ್ಲಿ ಬೆಲೆ. ಬದಲಾಯಿಸುವ ಕ್ರಿಯೆಯ ಮೂಲಕ ಮಾತ್ರ ಈ ಜನರಿಗೆ ತಾನು ಹೊಸಬನಾಗುವುದು ಸಾಧ್ಯ. ಇಲ್ಲವಾದರೆ ರುಮಾಲು ಮೀಸೆಯ ಸಾಹುಕಾರ್ರ ಚಿತ್ರಕ್ಕೆ ತಾನು ಕ್ರಮೇಣ ಸರಿಹೊಂದುವುದನ್ನೆ ಬಯಸುತ್ತ ಇವರು ಕಾದಿರುತ್ತಾರೆ.

ಮಾವಿನ ಮರದ ಬುಡದಲ್ಲಿ ನಿಂತ. ಈ ಸಾರಿ ಸಮೃದ್ಧವಾದ ಹೂವು. ಪ್ರಾಯಶಃ ಚಿಕ್ಕಿಯ ಯೋಚನೆಯೆಲ್ಲ ಎರಡು ವರ್ಷಕ್ಕಾಗುವಷ್ಟು ಉಪ್ಪಿನಕಾಯಿ ಹಾಕಿಡಬೇಕೆಂದು. ಅದಕ್ಕಾಗಿಯೇ ಇರಬೇಕು – ಶಾಸ್ತ್ರಿಗಳ ಹತ್ತಿರ ನಿನ್ನೆ ಶಿವಮೊಗ್ಗದಿಂದ ಆರು ದೊಡ್ಡ ಗಾಜಿನ ಜಾಡಿಗಳನ್ನು ತರುವಂತೆ ಚಿಕ್ಕಿ ಹೇಳಿದರು.

ತೊಗಟೆಯ ಮೇಲೆ ಇರುವೆಗಳು. ಈ ಶೂದ್ರರು ಹುರಿದು ತಿನ್ನುವ ಕೆಂಜಿಗ. ರಾತ್ರೆ ಹಿತ್ತಲಲ್ಲಿ ಬೆಂಕಿ ಉರಿಸಿ ನೀರು ಕಾಯಿಸಿಕೊಂಡು ಸ್ನಾನ ಮಾಡುತ್ತಾರೆ. ಸುಖದ ನೂರು ಒಳದಾರಿಗಳಿವೆ. ನನ್ನ ಹುಡುಕಾಡ ಮಾತ್ರ ಬೇರೆ. ರಗಳೆಯಾಗಿ ನಡೆದು ಅಂಗಳಕ್ಕೆ ಬಂದ.

ದೂರದಿಂದ ಹೊಲೆಯರು ಬರುತ್ತಿರುವುದು ಕಾಣಿಸಿತು. ಕೆಲಸಕ್ಕೆ ಬರುವವರಂತೆ ನಡೆಯುತ್ತಿದ್ದಾರೆ. ಉತ್ಸಾಹವಿಲ್ಲ. ಪಿಳ್ಳನಿಗೆ ತಾನು ಚಲುವನೆಂಬ ಅರಿವೇ ಇರಲಿಕ್ಕಿಲ್ಲ. ಇವತ್ತು ಅವರಿಗೇನೂ ತಾನು ಹೇಳಕೂಡದೆಂದು ನಿರ್ಧರಿಸಿ ‘ಇರಿ ಬಂದೆ’ ಎಂದು ರೂಮಿಗೆ ಹೋಗಿ ಪಂಚೆ ಶರ್ಟುಗಳನ್ನು ತಂದ. ಜೊತೆಗೆ ಈ ಬಟ್ಟೆಗಳನ್ನು ಒಗೆಯಲು ಸೋಪಿನ ತುಂಡುಗಳನ್ನು ತಂದ ಆರು ಜನ ಮಾತ್ರ ಬಂದಿದ್ದರು. ಬರಲೇಬೇಕೆಂದು ಕಡ್ಡಾಯ ಮಾಡುವುದು ಅವನಿಗೆ ಇಷ್ಟವಿಲ್ಲದ್ದರಿಂದ ಒಬ್ಬೊಬ್ಬನಿಗೂ ಒಂದೊಂದು ಬಿಳಿ ಶರ್ಟು, ಒಂದೊಂದು ಪಂಚೆ ಮತ್ತು ಸೋಪಿನ ಚೂರುಗಳನ್ನು ಕೊಟ್ಟ. ತಾನು ತೊಡುತ್ತಿದ್ದ ಬಟ್ಟೆಗಳ ಹಾಗೇ ಅವು ಇದ್ದವು. ಜೇಬು, ಕಾಲರು, ಮುಂಡು ತೋಳು, ಅಂಚಿನ ಪಂಚೆ-ತೊಟ್ಟಾಗ ತನ್ನ ಅಂತಸ್ತಿನ ಜನರಂತೆಯೇ ಅವರು ಕಾಣಬೇಕು.

‘ಎಲ್ಲಿ ಅಂಗಿಗಳನ್ನು ಹಾಕಿಕೊಳ್ಳಿ. ನೋಡುವ’ ಎಂದ.

ಕೆಲವರಿಗೆ ಬಿಗಿ, ಕೆಲವರಿಗೆ ದೊಗಳೆ, ಪಂಚೆಯನ್ನುಡಿ ಎಂದಾಗ ಮಾತ್ರ ಎಲ್ಲರೂ ಹಿಂಜರಿದರು. ಒತ್ತಯ ಮಾಡಿದ ಮೇಲೆ ಉಟ್ಟರು. ಇಡೀ ಜನ್ಮದಲ್ಲಿ ಅವರು ಮಂಡಿಯ ಕೆಳಗೆ ಪಂಚೆ ಉಟ್ಟಿದ್ದಿರಲಿಕ್ಕಿಲ್ಲ. ಮುಜುಗರವಾಗಿ ಬಿಚ್ಚಿದರು. ಮಡಿಸಿ ಕಂಕುಳಲ್ಲಿ ಸಿಕ್ಕಿಸಿಕೊಂಡರು. ಜಗನ್ನಾಥ ಪಿಳ್ಳನಿಗೆ ಹೇಳಿದ:

‘ನಾಳೆ ಈ ಹೊತ್ತಿಗೆ ಬನ್ನಿ. ಕೆಲಸ ಮುಗಿದದ್ದೆ ಸ್ನಾನ ಮಾಡಿ ಈ ಬಟ್ಟೆ ತೊಟ್ಟು ಬನ್ನಿ. ನಾಚಿಕೋಬೇಡಿ. ಉಳಿದವರಿಗೂ ಬರಹೇಳಿ. ಅವರಿಗೂ ಪಂಚೆ ಅಂಗಿಗಳಿವೆ.’

ಪಿಳ್ಳ ತಲೆ ಕೆರೆಯುತ್ತ ನಿಂತ. ಜಗನ್ನಾಥನಿಗೆ ನೆನಪಾಯಿತು. ‘ಮದುವೆಗೆ ಮುಂಚೆ ಹಣ ಸಿಕ್ಕರೆ ಆಯಿತಲ್ಲ? ಇನ್ನೂ ಎರಡು ತಿಂಗಳಿದೆ. ಈಗ ಯಾಕೆ ಅವಸರ?’ ಎಂದ. ಬಂದ ಹುಡುಗರಿಗೆ ‘ಬಾಯಿಗೆ ಕೊಟ್ಟು’ ಕಳಿಸಿದ.

ಮಾರನೇ ದಿನ ಶ್ರೀಪತಿರಾಯರು ಬೆಂಗಳೂರಿಂದ ಹೊರಡುವ ದಿನ ಪತ್ರಿಕೆಗಳನ್ನು ತಂದರು. ವಾಚಕರ ವಾಣಿಯಲ್ಲಿ ಜಗನ್ನಾಥನ ಬಗ್ಗೆ ಬಂದ ಪತ್ರಗಳನ್ನೆಲ್ಲ ಗಟ್ಟಿಯಾಗಿ ಓದಿದರು. ಹೊಲೆಯರಿಗೆ ತನ್ನ ಮನಸ್ಸನ್ನು ಬಿಚ್ಚಿ ತೋರಿಸುವುದರಲ್ಲಿ ತಾನಿನ್ನೂ ಯಶಸ್ವಿಯಾಗದಿರುವಾಗ ಪತ್ರಿಕೆಗಳು ತೆಗಳಿಕೆ ಹೊಗಳಿಕೆಗಳೆರಡೂ ಜಗನ್ನಾಥನಿಗೆ ವಿಪರ್ಯಾಸವಾಗಿ ಕಂಡಿತು. ಖಂಡಿಸುವ ಒಂದು ಪತ್ರ ಹೀಗೆ ಹೇಳಿತ್ತು: ಬೇಕೆಂದೇ ಸವರ್ಣೀಯರ ಮನಸ್ಸು ನೋಯಿಸುವ ಹರಿಜನ ದೇವಾಲಯ ಪ್ರವೇಶದ ಹಠಮಾರಿತನ ಹೇಗೆ ಗಾಂಧಿವಾದಕ್ಕೆ ದೂರವಾದ್ದು -ಇತ್ಯಾದಿ. ದೈವಭಕ್ತನೊಬ್ಬ ಹರಿಜನ ಪ್ರೇಮದಿಂದ ದೇವಾಲಯ ಪ್ರವೇಶವಾಗಬೇಕೆಂಬೂದಕ್ಕೂ, ಪಾಶ್ಚಾತ್ಯರಿಂದ ಪ್ರಭಾವಿತನಾದ ನಿರೀಶ್ವರವಾದಿಯೊಬ್ಬ ಹಿಂದೂಧರ್ಮದ ನಾಶದ ದೃಷ್ಟಿಯಿಂದ ಹರಿಜನ ದೇವಾಲಯ ಪ್ರವೇಶವಾಗಬೇಕೆಂಬುದಕ್ಕೂ ಇರುವ ವ್ಯತ್ಯಾಸವನ್ನು ಇನ್ನೊಬ್ಬ ದಪ್ಪ ದಪ್ಪ ಮಾತುಗಳಲ್ಲಿ ವಿಶ್ಲೇಷಿಸಿದ್ದ. ಕಮ್ಯೂನಿಸ್ಟ್ ಪಕ್ಷದ ದೀಕ್ಷಿತ್: ಜಮೀನುದಾರ ವರ್ಗದವನೊಬ್ಬನ ಆದರ್ಶವಾದದಿಂದ ಹುಟ್ಟಿದ ಈ ಕ್ರಿಯೆ ವಿಫಲವಾಗುವುದು ಖಂಡಿತವೆಂದೂ, ಆರ್ಥಿಕ ಕ್ರಾಂತಿಯಿಂದ ಮಾತ್ರ ಜಾತಿಭೇದ ತೊಡೆಯಬಹುದೆಂದೂ, ಆದರೂ ತಾನು ಜಗನ್ನಾಥರಿಗೆ ಬೆಂಬಲ ಕೊಡುವುದಾಗಿಯೂ ಹೇಳಿಕೆ ಕೊಟ್ಟಿದ್ದ. ಸರ್ವೋದಯ ಕಾರ್ಯಕರ್ತರಾದ ಮಾಗಡಿ ಅನಂತಕೃಷ್ಣರು ಮಹಾತ್ಮಗಾಂಧಿ, ಸಂತ ವಿನೋಬಾಜೀಗೆ ಪ್ರಿಯವಾದ ಈ ಕೆಲಸಕ್ಕೆ ಮುಂದಾದ ಜಗನ್ನಾಥರ ಜೊತೆ ಎಲ್ಲರೂ ಸಹಕರಿಸಬೇಕೆಂದು ಕರೆಕೊಟ್ಟಿದ್ದರು. ಅಹಿಂಸೆಯ ಅಗತ್ಯ ಒತ್ತಿ ಹೇಳಿದ್ದರು. ಹರಿಜನ ದೇವಾಲಯ ಪ್ರವೇಶದಿಂದ ಮಂಜುನಾಥನ ಕೀರ್ತಿ ಬೆಳೆಯುವುದೆಂದು ಸವರ್ಣೀಯರಿಗೆ ಮನ ಒಲಿಯುವಂತೆ ವಾದಿಸಿದ್ದರು.

‘ಈ ಅನಂತಕೃಷ್ಣ ಯಾರೂಂತೀಯ?’ ಎಂದು ಶ್ರೀಪತಿರಾಯರು ಉತ್ಸಾಹದಿಂದ ಕಥೆ ಪ್ರಾರಂಭಿಸಿದರು. ಸ್ವಾತಂತ್ರ್ಯ ಚಳುವಳಿಯಲ್ಲಿ ತನ್ನ ಜೊತೆಗಾರ, ವಾಗ್ಮಿ. ಚಿತ್ರದುರ್ಗದಲ್ಲಿ ಕಾಂಗ್ರೆಸ್ ಮುಖಂಡರೆಲ್ಲ ಜಾತೀಯವಾಗಿಗಳಾಗಿದ್ದರಿಂದ ಈತ ಬೇಸತ್ತ. ಅಸೆಂಬ್ಲಿಗೆ ಟಿಕೆಟ್ ಸಿಗಲಿಲ್ಲ – ಜಯಪ್ರಕಾಶರ ಕರೆ ಕೇಳಿ ಜೀವದಾನ ಮಾಡಿದ. ಬುದ್ಧಿವಂತ. ಸ್ನೇಹಪರ ಮನುಷ್ಯ, ಮನೆ ಬಿಟ್ಟು ಚಳುವಳಿ ಸೇರಿದ ಆದರ್ಶವಾದಿ, ಆಸೆಬುರುಕನಾದರೂ ಮರ್ಯಾದಸ್ಥ. ಕುಡೀತಿದ್ದ, ಈಗ ಬಿಟ್ಟಿರಬೇಕು, ನನ್ನ ಹಾಗೇ ಹೆಂಡತೀಂದ ದೂರ ಇರೋಕೆ ಅವ ಏನೆಲ್ಲ ಉಪಾಯ ಹೂಡ್ತಾನೆ ಅಂತಿ – ರಾಯರು ಮನಸ್ಸು ಬಿಚ್ಚಿ ಹರಟಲು ಪ್ರಾರಂಭಿಸಿದ್ದರು.

‘ಬಲು ಜಾಣ, ಬಲು ಜಾಣ. ಎಂಥ ಮಾತುಗಾರ ಅಂತಿ? ಕ್ವಿಟ್ ಇಂಡಿಯಾ ಚಳುವಳೀಲಿ ಅವನು ಮಾಡಿದ ಭಾಷಣಗಳು ಇನ್ನೂ ನನಗೆ ನೆನಪಿವೆ. ತುಂಬ ಅನುಕೂಲದಿಂದ ಇರಬಹುದಿತ್ತು. ಆದ್ರೆ ಚಳುವಳೀಲಿ ಎಲ್ಲ ಕಳಕೊಂಡ. ಆಮೇಲೆ ಕಾಂಗ್ರೆಸ್ ಒಳಜಗಳಗಳಲ್ಲಿ ಹೇಸಿಗೆ ಮಾಡಿಕೊಂಡ. ಕುಲಗೆಟ್ಟು ಹೋದ. ರೋಸಿ ಸರ್ವೋದಯ ಸೇರಿದ. ಅವನೂ ಒಬ್ಬ ಕನಸುಗಾರ ಗೊತ್ತ? ಎಷ್ಟು ಕುಲಗೆಟ್ಟರೂ ಈ ಜನರು ಎಂದರೆ ನನಗೆ ಪ್ರೀತಿ ಕಣಯ್ಯ.’

ರಾಯರ ಕಣ್ಣುಗಳು ಸ್ನೇಹದಿಂದ ಹೊಳೆಯುತ್ತಿದ್ದುವು. ಕೆಲವು ವಿಷಯದಲ್ಲಿ ರಾಯರು ಪಕ್ವವಾಗಿ ಯೋಚಿಸುತ್ತಾರೆಂದು ಜಗನ್ನಾಥನಿಗೆ ಅವರ ಬಗ್ಗೆ ಅಪಾರ ಗೌರವ ಮೂಡಿತು.

ರಾಯರು ಹೋದ ಮೇಲೆ ಹೊಸ ನೋಟು ಬುಕ್ಕಲ್ಲಿ ಬರೆಯಲು ಕೂತ. ಮಧ್ಯಾಹ್ನ ತನ್ನ ಮನೆದೇವರಿಗೆ, ನರಸಿಂಹ ಶಾಲಿಗ್ರಾಮಕ್ಕೆ ನಡೆಯುತ್ತಿದ್ದ ಪೂಜೆಯ ಮಂತ್ರ, ಜಾಗಟೆಯ ಶಬ್ದ ಕೇಳಿ ಕಸಿವಿಸಿಯಾಯಿತು. ಈ ಪೂಜೆ ಮುಗಿಯುತ್ತಿದ್ದಂತೆ ಮಂಜುನಾಥನಿಗೆ ಸಲ್ಲುವ ಮಹಾಮಂಗಳಾರತಿಯ ಗಂಟೆ. ತಾನು ಈ ಊರಲ್ಲಿ ಪ್ರೇತವಾಗಿಬಿಟ್ಟಿದ್ದೇನೆ ಅನ್ನಿಸಿತು. ಬರೆದ : ನನ್ನ ಮನೆಯಲ್ಲೂ ಪೂಜೆ ನಡೆಯುತ್ತಿದೆ. ಎಲ್ಲೂ ಮುಷ್ಟಿಗೆ ಸಿಗದಂತೆ ದೇವರು ಆವರಿಸಿಕೊಂಡಿದ್ದಾನೆ. ನನ್ನ ಬಾಲ್ಯದ ಕಿರೀಟ ಅವನ ಮೇಲಿದೆ. ಎಷ್ಟೊಂದು ದಿನ ಅವನ ದರ್ಶನ ಮಾಡಿ ಅಮ್ಮನ ಜೊತೆ ಹೊರಗೆ ಬಂದು ಮೆಟ್ಟಲಿನ ಮೇಲೆ ಶಾಂತವಾಗಿ ಕೂತಿಲ್ಲ. ಪ್ರಸಾದದ ಬಾಳೆಹಣ್ಣನ್ನು ಮಂಗಗಳು ಬಂದು ಕೈಯಿಂದ ಕಸಿದುಕೊಂಡು ಹೋಗುತ್ತಿದ್ದುವು. ಬಲಿಪಾಡ್ಯ, ಅಕ್ಷತ್ತದಿಗೆ, ಗಣೇಶಛತಿ, ಉತ್ಥಾನದ್ವಾದಶಿ, ಮಹಾಲಯ ಅಮಾವಸ್ಯೆ ಇತ್ಯಾದಿಯಾಗಿ ತಿಥಿಗಳನ್ನು ದೇವರಿಗೆ ಹಂಚಿಕೊಂಡು, ಸಣ್ಣ ದೊಡ್ಡ ಗಂಟೆಗಳನ್ನು ಬಾರಿಸಿಕೊಂಡು, ಹುಟ್ಟು ಸಂಭೋಗ ಸಾವುಗಳಲ್ಲಿ ಆವರ್ತಿಸುತ್ತ ಕಾಲ ಇಲ್ಲಿ ತೂಕಡಿಸುತ್ತಿದೆ. ಹೊಲೆಯರು ಬಡಿದೆಬ್ಬಿಸಿಯಾರೆಂದು ನನ್ನ ಭರವಸೆ. ಆದರೆ ನೆರಳಿನಂತೆ ಬರುತ್ತಾವೆ. ಅವಕ್ಕಿನ್ನೂ ವ್ಯಕ್ತಿತ್ವ ದಕ್ಕದ್ದರಿಂದ ನನ್ನ ವಿಚಾರ ಪ್ರೇತವಾಗಿ ಉಳಿದಿವೆ.

ಸಾಯಂಕಾಲ ಹೊರಗೆ ಬಂದು ಅಂಗಳದಲ್ಲಿ ಕಾದ. ದನಗಳೆಲ್ಲ ಕೊಟ್ಟಿಗೆ ಸೇರುವುದನ್ನು ನೋಡುತ್ತ ಚಿಕ್ಕಮ್ಮ ನಿಂತಿದ್ದರು. ತನ್ನ ನಿರ್ಧಾರ ಬಹಿರಂಗವಾದಂದಿನಿಂದ ಅವರು ಒಂದೇ ಹೊತ್ತು ಊಟ ಮಾಡುತ್ತಿದ್ದಾರೆಂದು ಜಗನ್ನಾಥನಿಗೆ ಗೊತ್ತಾಗಿತ್ತು. ಈ ಮೌನ ಯುದ್ಧ ಅವನಿಗೆ ಅಸಹನೀಯವಾಗಿತ್ತು. ಅವರ ಜೊತೆ ಕೂತು ಮಾತಾಡಿ ತನ್ನ ಕಡೆ ಒಲಿಸಿಕೊಳ್ಳುವುದು ಅಸಾಧ್ಯ. ಮೌನವೇ ಅವರ ಅಸ್ತ್ರ. ಜಗನ್ನಾಥನಿಗೆ ಚಿಕ್ಕಿಯ ಬಗ್ಗೆ ರೇಗಿತು. ನಮ್ಮ ಜೀವನದ ಗೊಡ್ಡುತನವೆಲ್ಲ ಅವರಲ್ಲಿ ಹೆಪ್ಪುಗಟ್ಟಿದೆ ಎನ್ನಿಸಿದೆ.

ಹೊಲೆಯರು ಹತ್ತಿರ ಬಂದಾಗಲೇ ಜಗನ್ನಾಥನಿಗೆ ತಿಳಿದದ್ದು – ಅವು ಪಂಚೆಯನ್ನು ಮೇಲಕ್ಕೆತ್ತಿ ಕಟ್ಟಿ ಬಂದಿಲ್ಲ. ಪಂಚೆಯನ್ನು ಹರಿದು ಅರ್ಧಮಾಡಿ ಉಟ್ಟಿದ್ದಾವೆಂದು. ಬಟ್ಟೆಯ ಮೇಲಿನ ಆಸೆಯಿಂದ ಉಳಿದವೂ ಲಂಗೋಟಿ ಕಟ್ಟಿ ಹಾಜರಾಗಿದ್ದುವು. ಜಗನ್ನಾಥ ಸಿಟ್ಟನ್ನು ನುಂಗಿಕೊಂಡು ನೋಡಿದ, ಹಾಸ್ಯಾಸ್ಪದವಾಗಿ ಎದುರು ನಿಂತಿದ್ದುವು. ಎಂದೂ ಕಾಲರ್ ಇರುವ ಅಂಗಿ ಹಾಕಿರದಿದ್ದರಿಂದ ಅವು ಮುಜುಗರದಿಂದ ಕಾಲರನ್ನು ಒಳಗಡೆ ಮಡಚಿಕೊಂಡಿದ್ದುವು; ಯಾವುದೇ ತೂತಿಗೆ ಯಾವುದೋ ಗುಂಡಿ ಹಾಕಿಕೊಂಡಿದ್ದುವು, ನೆರಪೇತಲಗಳಂತೆ ಭಯದಲ್ಲಿ, ಹೊಸ ಬಟ್ಟೆ ತೊಟ್ಟ ಅವಮಾನದಲ್ಲಿ ನಿಂತಿದ್ದುವು.

‘ಪಂಚೇನ ಏನು ಮಾಡಿದ್ರಿ?’ ಪಿಳ್ಳನನ್ನು ದುರುಗುಟ್ಟಿ ನೋಡುತ್ತ ಜಗನ್ನಾಥ ಕೇಳಿದ.

ಉತ್ತರ ಕೇಳಿ ಜಗನ್ನಾಥನಿಗೆ ನಗು ಬಂತು. ಮನೆಯಲ್ಲಿ ಅಪ್ಪ, ಚಿಗಪ್ಪ, ಅಣ್ಣ, ತಮ್ಮ, ಬಂದ ನೆಂಟ ಹೀಗೆ ಹಲವರಿಗೆ ಅರ್ಧ ಹರಿದ ಪಂಚೆಗಳನ್ನು ಲಂಗೋಟಿ ಮಾಡಿ ಹಂಚ ಬೇಕಾಯ್ತು. ಅರ್ಧ ಪಂಚೆ ನಿಮಗೆ ಸಾಕೆಂದು ಮನೆಯಲ್ಲಿ ಗದರಿಸಿದ್ದರಿಂದ ಬೇರೆ ಮಾರ್ಗವಿರಲಿಲ್ಲ. ಜಗನ್ನಾಥ ಹೇಳಿದ: ಈ ಅರ್ಧ ಪಂಚೆಗಳನ್ನೂ ಲಂಗೋಟಿ ಮಾಡಿ ಹಂಚಿಬಿಡಿ. ನಿಮಗೆ ಬೇರೆ ಪಂಚೆ ಕೊಡುತ್ತೆನೆ. ನೀವು ಇಡಿಯಾಗಿ ಉಟ್ಟುಕೋಬೇಕು. ನನ್ನ ಹಾಗೇ ನಾಚಿಕೊಳ್ಳದೆ ಪೇಟೆಯಲ್ಲೂ ಓಡಾಡಬೇಕು. ನೀವು ನನ್ನ ಜೊತೆ ಮಂಜುನಾಥ ಗುಡಿಗೆ ಬರುವವರು. ಉಳಿದ ಹೊಲೆಯರನ್ನು ಮೂಢನಂಬಿಕೆಯಿಂದ ಎಚ್ಚರಿಸಬೇಕಾದ ಹೊಸ ಜನಾಂಗದವರು.

ತನ್ನ ಎಷ್ಟೋ ಶಬ್ದಗಳು ಅವಕ್ಕೆ ಅರ್ಥವಾಗದೇ ಕಣ್ಣು ಬಿಡುತ್ತ ನಿಂತಿರುವುದು ಕಂಡು ಜಗನ್ನಾಥನಿಗೆ ಮತ್ತೆ ನಾಚಿಕೆಯಾಯಿತು. ತಾನು ನಿರುಪಯೋಗಿ ಎಂದು ಹೇಸಿಗೆ ಪಡುತ್ತ ಒಳಗೆ ಹೋದ. ಇನ್ನಷ್ಟು ನಾನು ಗಟ್ಟಿಯಾಗಬೇಕು, ಹೇಗೆ ಎಂದು ರಾತ್ರೆಯೆಲ್ಲ ಯೋಚಿಸಿದ. ಉಳುವುದಷ್ಟೇ, ಬಿತ್ತುವುದಷ್ಟೇ, ಮಳೆಗಾಗಿ ಕಾಯುವುದಷ್ಟೇ ತನು ಮಾಡಬಹುದಾದ್ದೆನ್ನಿಸಿ ನಿರಾಶೆಯ ಮಂಕಿನಲ್ಲಿ ಬೆಳಿಗ್ಗೆ ಎದ್ದು ಗೇರುಗುಡ್ಡ ಸುತ್ತಾಡಿ ಬಂದ. ಮನೆಯೊಳಗೆಲ್ಲ ಚಿಕ್ಕಿಯ ನಿಟ್ಟುಸಿರು ಕೇಳೀಸುತ್ತಿದೆ ಎನ್ನಿಸಿತು.

ತನಗೆ ತಿಳಿಯದಂತೆ ಚಿಕ್ಕಿ ತನ್ನನ್ನು ಚುಚ್ಚುತ್ತಿದ್ದರು. ಕಾಫಿ ಕೊಡುವಾಗ ಅವರು ನೋಡುವ ಕ್ರಮದಲ್ಲಿ, ತಲೆ ಕೆದರಿಕೊಂಡಿರುವ ವಿಧದಲ್ಲಿ, ಉಪವಾಸದಿಂದ ಮುಖ ಬಾಡಿಸಿ ಕೊಂಡ ರೀತಿಯಲ್ಲಿ ; ಎಲ್ಲಕ್ಕಿಂತ ಹೆಚ್ಚಾಗಿ ಊಟದ ಹೊತ್ತಿಗೆ ಬರಿದಾದ ಊಟದ ಮನೆಯನ್ನು ಅವರು ನೋಡಿ, ನಿಟ್ಟುಸಿರಿಡುತ್ತ ಜಗನ್ನಾಥನ ಕಣ್ಣು ಹುಡುಕುವ ಸಂಕಟ ತುಂಬಿದ ಮೌನದಲ್ಲಿ.

ಮಧ್ಯಾಹ್ನ ಟಪಾಲಿನ ಜೊತೆ ಶ್ರೀಪತಿರಾಯರು ಬಂದರು. ತನ್ನ ಕ್ರಿಯೆಯನ್ನವರು ಮನಸಾರೆ ಒಪ್ಪದಿದ್ದರೂ ಸುದ್ದಿಯ ಬಗ್ಗೆ ತೋರಿಸುತ್ತಿದ್ದ ಸಂಭ್ರಮ ನೋಡಿ ಜಗನ್ನಾಥನಿಗೆ ಅವರ ಬಗ್ಗೆ ಕೆಲವೊಮ್ಮೆ ಗೌರವ ಕಡಿಮೆಯಾಗುತ್ತಿತ್ತು.

‘ಅಲ್ಲ ಜಗಣ್ಣ, ಗುರುಪ್ಪಗೌಡ ಏನಾದರೂ ಸ್ಟೇಟ್‌ಮೆಂಟ್ ಕೊಟ್ಟಿದ್ದಾನೆ ನೋಡು – ಖದೀಮ! ಹರಿಜನರು ದೇವಸ್ಥಾನದ ಒಳಗೆ ಬರಬಾರ್ದು ಅನ್ನಲಾರ – ಕಾಂಗ್ರೆಸ್‌ಮನ್‌ಅಲ್ವ? ಬರಬೇಕು ಅನ್ನಲಾರ. ಯಾಕೆಂದ್ರೆ ಓಟು ಸಿಗಲ್ಲ. ಏನೋ ಹೇಳೊ ಜಗಣ್ಣ – ಮೂಲಭೂತ ರಾಜಕೀಯಕ್ಕೆ ಈ ದೇಶದಲ್ಲಿ ತಯಾರಾಗೋರು ಬ್ರಾಹ್ಮಣರೇ ಹೊರ್ತು ಶೂದ್ರರಲ್ಲ. ಯಾಕೆಂದರೆ ಈಗಿರೋ ವ್ಯವಸ್ಥೇಂದ ಅವರಿಗೆ ಸಾಕಷ್ಟು ಲಾಭವಾಗ್ತ ಇದೆ. ಎಲ್ಲಾ ನೌಕರೀನೂ ಹೆಚ್ಚು ಕಡಿಮೆ ಈಗ ಗೌಡರೀಗೊ ಲಿಂಗಾಯ್ತರಿಗೋ ಸಿಗ್ತಾ ಇದೆ ನೋಡು. ಹಿಂದೆ ಬ್ರಿಟಿಷರಿದ್ದಾಗ್ಯೂ ಅಷ್ಟೆ – ಇವೆಲ್ಲ ಜಸ್ಟೀಸ್ ಪಾರ್ಟೀಲಿ ಇದ್ದುವು. ತಮಾಷೆ ಗೊತ್ತ? ಈ ಶೂದ್ರರೆಲ್ಲ ಈಗ ನವ ಬ್ರಾಹ್ಮಣರಾಗ್ತಾ ಇದಾರೆ. ಕಂದಾಯದ ಮಂತ್ರಿ ಬಿಷ್ಟೆಗೌಡ ಒಂದು ಸಾರಿ ಗುರಪ್ಪ ಗೌಡನ ಮನೆಗೆ ಊಟಕ್ಕೆ ಬಂದಿದ್ನಂತೆ. ಆಯ್ತ? ಬಿರಿಯಾನಿ ಊಟಾನ್ನ ಗುರುಪ್ಪ ಗೌಡ ಹಾಕಿಸ್ಥ. ಬಿಷ್ಟೇಗೌಡ ಬಿರಿಯಾನಿ ಉಂಡ. ಉಂಡಾದ ಮೇಲೆ ಮೊಸರನ್ನ ಬಂತು. ಮೊಸರನ್ನ ಬ್ರಾಹ್ಮಣರ ಊಟ ಅಲ್ವ? ಬಿಷ್ಟೇಗೌಡ ಶೂದ್ರ – ಬಿರಿಯಾನಿ ತಿಂದ ಬಾಯನ್ನು ತೊಳ್ಕೊಂಡು ಬಂದು ಬ್ರಾಹ್ಮಣ – ಮೊಸರನ್ನಾನ್ನ ತಿಂದನಂತೆ. ಹೊಟ್ಟೇಲಿ ಒಟ್ಟಾದ್ರೂ ಪರವಾಗಿಲ್ಲ – ಬಾಯಲ್ಲಿ ಬ್ರಾಹ್ಮಣ ಮತ್ತು ಶೂದ್ರ ಆಹಾರ ಒಟ್ಟಾಗಬಾರ‍್ದೂಂತ. ಇಂಥ ಜನ ಇವು…’

ರಾಯರು ಏನೋ ಹೇಳಹೋಗಿ ಏನೋ ಹೇಳಿದ್ದರು. ವಾಸ್ತವಿಕತೆಯ ಪ್ರಜ್ಞೆ ರಾಯರನ್ನು ಹೇಗೆ ಸಿನಿಕನನ್ನಾಗ ಮಾಡುತ್ತಿದೆ ಕಂಡು ಜಗನ್ನಾಥ ನೊಂದ. ಶೂದ್ರ ಹೀಗೆ ವರ್ತಿಸುತ್ತಾಬೆಂಬ ನೋವಿಗೆ ಬದಲಾಗಿ ರಾಯರು ಅವನ ದೌರ್ಬಲ್ಯ ಕಂಡು ಹಿಗ್ಗುತ್ತಿದ್ದರು. ಬ್ರಾಹ್ಮಣನ ಪ್ರಜ್ಞೆಯಲ್ಲಿ ಹೊಕ್ಕಿರುವ ಈ ಕೊಂಕು ಹೇಗೆ ಅವನನ್ನು ಪರಿಕೀಯನನ್ನಾಗಿ ಮಾಡುತ್ತದೆ ಎಂದು ಜಗನ್ನಾಥನಿಗೆ ನೋವಾಯಿತು. ಮಾತು ಬದಲಾಯಿಸಲು.

‘ರಾಯರೆ ಪೇಪರ್‌ನಲ್ಲಿ ಏನಿದೆ?’ ಎಂದು ಕೇಳಿದ. ರಾಯರು ಪೇಪರ್ ಬಿಚ್ಚಿ ಮೈಸೂರು ಸೋಷಲಿಸ್ಟ್ ಪಕ್ಷದ ನೀಲಕಂಠಸ್ವಾಮಿ ಚಳುವಳಿಯಲ್ಲಿ ತಾನು ಭಾಗವಹಿಸುವುದಾಗಿ ಕೊಟ್ಟು ಹೇಳಿಕೆ ಓದಿದರು. ‘ಇವನನ್ನ ನಂಬಬೇಡಯ್ಯ. ಸೋಷಲಿಸ್ಟ್ ಪಕ್ಷದ ಸೆಕ್ರೆಟರಿ ಬ್ರಾಹ್ಮಣಾಂತ ಜಗಳ ಆಡಿ ಇವ ಮೈಸೋಪ ಅಂತ ಹೊಸ ಪಾರ್ಟಿ ಕಟ್ಟಿದಾನೆ. ಲಿಂಗಾಯುತ. ಯಾವತ್ತು ಕಾಂಗ್ರೆಸ್ ಸೇರ್ತಾನೊ ಹೇಳಕ್ಕಾಗಲ್ಲ. ಅವನ ಜೊತೆ ರಂಗರಾವ್ ಅಂತ ಇನ್ನೊಬ್ಬ ಇದಾನೆ. ಹೆಸರು ಮಾತ್ರ ಬ್ರಾಹ್ಮಣಂದು – ಆದ್ರೆ ಅವ ಗೌಡ. ಪಕ್ಕಾ ಬ್ರಹ್ಮದ್ವೇಷಿಯಂತೆ. ನಮ್ಮ ಸರ್ವೋದಯದ ಅನಂತಕೃಷ್ಣನಿಗೆ ಇವರೆಲ್ಲ ಗೊತ್ತು. ಅಂದ ಹಾಗೆ ಅವನೂ ಕಾಗದ ಬರ್ದಿದಾನೆ – ಬರ್ತಾನಂತೆ. ಒಟ್ಟಿನಲ್ಲಿ ಯಾವ ಇಶ್ಯಾನೂ ಇಲ್ದೆ ಸೋಮಾರಿಗಳಾಗಿದ್ದ ರಾಜಕಾರಣಿಗಳಿಗೆ ನೀನೊಂದು ಪ್ಲ್ಯಾಟ್‌ಫಾರಂ ಮಾಡಿಕೊಟ್ಟ ಹಾಗಾಯ್ತು.’

ರಾಯರು ನಕ್ಕರು. ಆದೆ ಜಗನ್ನಾಥನಿಗೆ ಹೀಗೆ ತನ್ನ ಉದ್ದೇಶವೆಲ್ಲ ಚಿಲ್ಲರೆ ಯಾದೀತೆಂದು ಹೆದರಿಕೆಯಾಯಿತು. ನಾನು ಯೋಚಿಸಿದ್ದ ತೀವ್ರವಾದ ಕ್ರಿಯೆಯನ್ನು ಪರಿಶುದ್ಧವಾಗಿ ಉಳಿಸಿಕೊಳ್ಳುವುದು ಹೇಗೆಂಬುದೇ ತನ್ನ ಮುಂದಿನ  ಹೋರಾಟವಾಗಬೇಕು.

ಇವುಗಳನ್ನೆಲ್ಲ ತೀರ ಮನಸ್ಸಿಗೆ ಹಚ್ಚಿಕೊಳ್ಳಕೂಡದೆಂದು ಮತ್ತೆ ಹೊಲೆಯರಿಗಾಗಿ ಕಾದ. ಸಾಯಂಕಾಲ ಜಗನ್ನಾಥನ ಹಾಗೆ ಬಟ್ಟೆ ತೊಟ್ಟು ವಿಕಾರವಾಗಿ ಹೆಜ್ಜೆ ಹಾಕುತ್ತ, ಹತ್ತು ಜನ ಹೊಲೆಯರು ಯುವಕರೂ ಪೆಚ್ಚು ಮುಖ ಹೊತ್ತ ಬಂದವು. ಬಟ್ಟೆ ಕೊಳೆಯಾದೀತೆಂದು ಮಣ್ಣಿನ ಅಂಗಳದ ಮೇಲೆ ಕೂರಲೊಲ್ಲವು; ಸಿಮೆಂಟ್ ಚಿಟ್ಟೆ ಹತ್ತಿ ಕೂರುವ ಧೈರ್ಯ ಮಾಡಲೊಲ್ಲವು. ದೊಡ್ಡ ತಪ್ಪನ್ನು ತಲೆಯ ಮೇಲೆ ಹೊತ್ತವರಂತೆ ಅಂಗಳದಲ್ಲಿ ನಿಂತವು. ಅವು ಹಾಗೆ ನಿಂತೇ ಇದ್ದದ್ದರಿಂದ ಮಾತಾಡುವುದಾಗಲೀ ಓದುವುದಾಗಲೀ ಜಗನ್ನಾಥನಿಗೆ ಅಸಾಧ್ಯವಾಯ್ತು. ಏನೇನೋ ಓಡಾಡುತ್ತ ಹೇಳಿದ. ಏನನ್ನೂ ಕೇಳಿಸಿಕೊಳ್ಳದ ಅವು ನಿಂತೇ ಇದ್ದುವು. ಮಂಡ್ಯದ ಹಳ್ಳಿಯೊಂದರಲ್ಲಿ ನಡೆದ ಘಟನೆಯನ್ನು ವಿವರಿಸಿದ. ನೋಡಿ, ಆ ಹೊಲೆಯ ಮಾಡಿದ್ದು ಎಲ್ಲರೂ ಮಾಡುವಂತಹ ತಪ್ಪೆ. ಆದರೆ ಅವ ಹೊಲೆಯನಾದ್ದರಿಂದ ಹಿಂದೂಗಳ ಕಣ್ಣಿಗೆ ಭಯಂಕರವಾಗಿ ಕಂಡಿತು. ಅವನನ್ನು ಮರಕ್ಕೆ ಕಟ್ಟಿಹಾಕಿ ಕೈಬೆರಳುಗಳನ್ನು ಕತ್ತಿಯಿಂದ ಕೊಚ್ಚಿಹಾಕಿದರಂತೆ. ಈ ದೇಶದಲ್ಲಿ ನೀವು ಅಧಿಕ ಸಂಖ್ಯೆಯಲ್ಲಿದ್ದೀರಿ. ನೀವು ಎದ್ದು ನಿಂತರೆ ಎಲ್ಲ ಬದಲಾಗುತ್ತೆ. ಆದ್ದರಿಂದ ನೀವು ನನ್ನ ಜೊತೆ ಬಲು ಕಾರ್ಣಿಕನೆಂದು ಇಡೀ ದೇಶದಲ್ಲಿ ಪ್ರಸಿದ್ಧವಾದ ಮಂಜುನಾಥನ ಗುಡಿಗೆ ಬರಬೇಕು. ನಮ್ಮ ಕಣ್ಣಿನಲ್ಲಿ ನೀವಿನ್ನೂ ಮನುಷ್ಯರೇ ಅಲ್ಲ. ಕುರಿ ಕೋಣಕ್ಕಿಂತಲೂ ನೀವು ಅತ್ತತ್ತ. ಆದ್ರಿಂದ ನೀವು ಕೋಪ ಮಾಡಿಕೊಂಡರೆ ನಮ್ಮ ಕಣ್ಣಿಗೆ ಮನುಷ್ಯರಂತೆ ಕಾಣಕ್ಕೆ ಶುರುವಾಗ್ತಿರಿ. ಇತ್ಯಾದಿ.

ಎಷ್ಟು ಸರಳವಾಗಿ ಮಾತಾಡಿದ್ದರೂ ಅವು ನಿಜವಾಗಿ ಕೇಳಿಸಿಕೊಂಡಂತೆ ಭಾಸವಾಗಲಿಲ್ಲ. ಎದುರಿಗಿದ್ದರೂ ಎಲ್ಲೋ ಇದ್ದಂತೆ, ಎಲ್ಲಿ ಇರಲೂ ತಾವು ಅನರ್ಹರೆಂಬಂತೆ, ಯಾರಾದರೂ ಬಿಳಿ ಬಟ್ಟೆಯಲ್ಲಿದ್ದ ತಮ್ಮನ್ನು ಕಂಡಾರೆಂದು ದಿಗಿಲುಪಡುತ್ತ ಅವು ನಿಂತಿರುವ ಜೋಬದ್ರ ಭಂಗಿ ಕಂಡು ಜಗನ್ನಾಥನಿಗೆ ತಾನೂ ಹೊಲೆಯರು ಒಟ್ಟಾಗಿ ಮೀರಬೇಕಾದ ಕಠೋರ ಸತ್ಯಗಳೆಲ್ಲ ಕಣ್ಣಿಗೆ ಕಟ್ಟಿದಂತಾಯಿತು.

ಥಟ್ಟನೇ ಜಗನ್ನಾಥನಿಗೊಂಡು ವಿಚಾರ ಹೊಳೆಯಿತು. ತನ್ನ ಪ್ರಯೋಗ ಕ್ರೂರವಾಗದೆ ನಿಜವಾಗದು; ಆಘಾತವಾಗದೆ ಇವು ಎಚ್ಚರವಾಗುವುದಿಲ್ಲ. ಆದರೆ ತನ್ನಂತಹ ಲಿಬರಲ್ ಮನೋಧರ್ಮದ ಸಾತ್ವಿಕ ಈ ಆಘಾತವನ್ನು ಉಂಟುಮಾಡಬಲ್ಲೆನೆ?

ಹೊಲೆಯರನ್ನು ಕಳಿಸಿ ತನ್ನ ರೂಮಿಗೆ ಬಂದು ಕಾಲುಚಾಚಿ ಮಲಗಿದ. ಕಿಟಕಿಯಾಚೆ ಮಸಿಯಾಗುತ್ತ ಇರುವ ಗುಡ್ಡಗಳನ್ನು ಮರಗಳನ್ನು ದಿಟ್ಟಿಸುತ್ತ ತನ್ನ ದುರ್ಬಲತೆಯ ಬಗ್ಗೆ ಹೇಸಿಗೆ ಪಟ್ಟ. ಎಲ್ ಪರೆ ಹರಿದು ಒಳಗಿರುವುದನ್ನೂ ಹೊರಗಿರುವುದನ್ನೂ ಯಾಕೆ ನಾನು ನೋಡಲಾರೆ? ಬರೆಯಬೇಕೆನ್ನಿಸಿ ಮೇಜಿನ ಎದುರು ಕೂತು ನೋಟ್ ಬುಕ್ಕಲ್ಲಿ ಹೀಗೆ ಬರೆದ :

* * *

ಉದಾತ್ತನಾಗಿ ನನಗೆ ಹೊಲೆಯರನ್ನು ಮುಟ್ಟಬೇಕೆಂದು ಅನ್ನಿಸೀತು. ಆದರೆ ಹೊಟ್ಟೆಗಿಚ್ಚಿನಿಂದ ಅವರಿಗೆ ನನ್ನನ್ನು ಮುಟ್ಟಬೇಕೆಂಬ ಆಸೆ ಮೂಡಬಹುದು. ಹಾಗಿದ್ದಲ್ಲಿ ಅವರಲ್ಲಿ ಹೊಟ್ಟೆಗಿಚ್ಚು, ಆಸೆಗಳನ್ನು ಹುಟ್ಟಿಸಲೂ ನಾನು ಅಂಜಕೂಡದು. ಎಂಗೆಲ್ಸ್ ಹೇಳುವುದಿಲ್ಲವೇ? ಚರಿತ್ರೆ ಮುಂದುವರಿಯಲು ಕಾರಣ evil passions of men. ಮಂಜುನಾಥನ ಗರ್ಭವಾಸ ಮುಗಿಯಲು ಕ್ರೌರ್ಯ ಅವಶ್ಯವಾದರೆ ಸಿದ್ಧನಾಗಬೇಕು. ಹೊಲೆಯರು ತಮ್ಮ ಮುಗ್ಧತೆ ಕಳೆದುಕೊಳ್ಳುವ ತನಕ ಬಂಡಾಯ ಏಳುವುದಿಲ್ಲ. ಈ ಮುಗ್ಧತೆ ಕಳೆಯಲು ಅಸೂಯೆ, ಲೋಭ, ರೋಷ ಎಲ್ಲವೂ ಪ್ರಾಯಶಃ ಆವಶ್ಯಕ. ಎಚ್ಚರಾಗಲು ಆಯಸ್ಥಳಗಳಲ್ಲಿ ಚಿವುಟಬೇಕು. ಚಿಟಿಕೆ ಹಾಕಬೇಕು.

ನಾವು ಬಯಸುವುದನ್ನೆಲ್ಲ ಹೊಲೆಯರೂ ಬಯಸಬೇಕು. ಬ್ರಾಹ್ಮಣ ಹುಡುಗಿಯನ್ನು ಹೊಲೆಯ ಆಸೆಪಡುವಂತಾಗಬೇಕು. ಬ್ರಾಹ್ಮಣ ಹುಡುಗಿಗೆ ಹೊಲೆಯನ ಜೊತೆ ಮಲಗುವ ಆಸೆ ಹುಟ್ಟಬೇಕು.

ಆಸೆ ಹುಟ್ಟದೆ ಅವಕ್ಕೆ ಓದು ಬರೆಹ ಹತ್ತುವುದಿಲ್ಲ. ಆಸೆಯಿಂದ ಸಂಕಟ, ಸಂಕಟದಿಂದ ಪ್ರಜ್ಞೆ.

ಈಗ ಬರಿ ಪ್ರೇತಗಳು, ಹತ್ತಿರ ಹಾಯಬಾರದ ನೆರಳುಗಳು, ಮನುಷ್ಯ ಪರಮಾತ್ಮ ಸ್ವರೂಪಿಯೆಂದ ಶಂಕರನೂ ಅಸ್ಪೃಶ್ಯತೆಯನ್ನು ಖಂಡಿಸಲಿಲ್ಲ. ಕಾರಣ – ಹೊಲೆಯರು ಕೈಯೊಡ್ಡಲಿಲ್ಲ. ಆಸೆಯಲ್ಲಿ ಬೆಂದು, ಕುದ್ದು ಮನುಷ್ಯರಾಗಲಿಲ್ಲ.

ಒಳ್ಳೆ ಹೆಸರಿಗೆ ಅಧಿಕಾರವಿಲ್ಲ. ಈ ಬಟ್ಟೆಗೆ ಅಧಿಕಾರವಿಲ್ಲ. ತಪ್ಪು ಮಾಡುವ ಅಧಿಕಾರವಿಲ್ಲ. ಈ ನಾಡಿನಲ್ಲಿ ಅವರಿಗೆ ಮೀರಿ ನಿಲ್ಲಲಿದ್ದ ಒಂದೇ ಒಂದು ಮಾರ್ಗ – ಭಕ್ತಿ. ದೀನರು ಈ ನಾಡಿನಲ್ಲಿ ಅತಿ ದೀನನಾಗಲು ಮಾತ್ರ ಸ್ವಾತಂತ್ರ್ಯ. ದಾಸಾನುದಾಸನಾಗುವ ಪೈಪೋಟಿಯಲ್ಲಿ ಎಲ್ಲರನ್ನು ಮೀರಿಸಿ ಆಳ್ವಾರಾಗುವ ಹಕ್ಕು ಇದೆ.

ಎಲ್ಲಾ ಸಾಮಾಜಿಕ ಕಟ್ಟಳೆಗಳನ್ನು ಮೀರುವುದು ಅತ್ಯಂತ ದೀನನಾಗಬಲ್ಲ ಅನುಭಾವಿಗೆ ಮಾತ್ರ ಸಾಧ್ಯವೆಂದು ಈ ದೇಶ ಎಂತಹ ಮೋಸ ಮಾಡಿತು! ದೇವರ ವಿಷಯದಲ್ಲಿ ದೈನ್ಯನಾಗುವ ಶಕ್ತಿ ಬ್ರಾಹ್ಮಣನಿಗಿಂತಲೂ ಹೊಲೆಯನಿಗೆ ಹೆಚ್ಚು. ಈಗ ಹೇಲು ಹೊರುವವರು ಮುಂದೆ ತುಳಸಿಯಾಗಿ ಹುಟ್ಟಿ ದೇವರ ಕಾಲು ಸೇರುವ ಕನಸನ್ನು ಅವರಿಗೆ ಹಚ್ಚಿದ ಜಾಣರು ನಾವು. ತ್ಯಾಗದ ಮೂಲಕ ಮಾತ್ರ, ದೈನ್ಯದ ಮೂಲಕ ಮಾತ್ರ, ಅಹಂಕಾರ ವಿಸರ್ಜನೆಯ ಮೂಲಕ ಮಾತ್ರ – ಎನ್ನುವ ಸಮಾಜ ನಿತ್ಯದ ಬದುಕಿನಿಂದ ಅರ್ಥವನ್ನೆಲ್ಲ ಕಳೆದುಕೊಳ್ಳುತ್ತದೆ.

ನಿತ್ಯಜೀವನ ಅರಳಬೇಕೆಂದು ಹೊರಟ ಕ್ರಾಂತಿಕಾರನೂ ಹಾಗೇಯೇ ನಿತ್ಯ ಜೀವನದಿಂದ ದೂರವಾಗಬೇಕಾದೀತು.

ಇಷ್ಟು ಖಂಡಿ ನಿಜ: ಹೊಲೆಯರಲ್ಲಿ ಆಸೆ ಹುಟ್ಟಬೇಕು, ಅಸೂಯೆ ಹುಟ್ಟಬೇಕು. ಪ್ರಾಯಶಃ ಆಗ ಮಾತ್ರ ಪಿಂಡಕ್ಕೆ ಕಣ್ಣು ಕಿವಿ ಮೂಗು ಉಗುರುಗಳು ಹುಟ್ಟುತ್ತವೆ.

* * *

ಸ್ವಲ್ಪ ಮಜ್ಜಿಗೆಯನ್ನು ಊಟ ಮಾಡಿ, ಅಂಗಳದಲ್ಲಿ ಅಡ್ಡಾಡಿ, ರೂಮಿಗೆ ಹೋದ. ಏಟ್ಸ್ ಕವಿಯ Easter ೧೯೧೬ ಓದುತ್ತ ಯೋಚಿಸುತ್ತ ಕಣ್ಣು ಬಾಡಿತು. ದೀಪ ಆರಿಸಿ ಮಲಗಿದ. ಹೊರಗೆ ಬಿದಿರು ಹಿಂಡುಗಳಲ್ಲಿ ಜಗ್ ಎಂದು ಮಿಣುಕು ಹುಳುಗಳು ಹೊತ್ತಿ ಆರುವುದನ್ನು ನೋಡುತ್ತ ನಿದ್ದೆ ಮಾಡಿದ.