ಜಗನ್ನಾಥನ ಕಥೆ ಮುಗಿದ ಮೇಲೆ ‘ಬಾ ಚಿಕ್ಕಿ ಏನು ಮಾಡ್ತಿದಾರೊ ನೋಡೋಣ’ ಎಂದು ರಾಯರು ಎದ್ದರು. ತನ್ನ ಕಥೆ ಕೇಳಿಸಿಕೊಂಡು ಅವರು ಬರೇ ನಕ್ಕಿದ್ದರು. ಚಿಕ್ಕಿ ಕೊಟ್ಟ ಮಣೆಯ ಮೇಲೆ ಕೂತರು. ‘ಇನ್ನರ್ಧ ಗಂಟೆ ಹಸಿವು ತಡಕೊಳ್ಳಿ’ ಎಂದು ಚಿಕ್ಕಿ ‘ಅರಳು ಹಿಟ್ಟು ಕಲಸಿ ಕೊಡಲಾ?’ ಎಂದರು. ರಾಯರು ಬೇಡ ಅಂದರು.

ಒಳಗೆ ಚಿಕ್ಕಿ ತಾವೇ ಸ್ವತಃ ಜಿಲೇಬಿ ಮಾಡುತ್ತಿದ್ದರು. ಅಡಿಗರಿಗೆ ಜಿಲೇಬಿ ಬಲು ಪ್ರಿಯವಾದ ತಿಂಡಿ. ಅಡಿಗರು ಊಟಕ್ಕಿರುತ್ತಾರೆಂದು ಚಿಕ್ಕಿಯ ಸಡಗರ ನೋಡಿ ಜಗನ್ನಾಥನಿಗೆ ನಗು ಬಂತು. ದೊಡ್ಡ ತಪ್ಪಲೆಯಲ್ಲಿ ಮಾಡಿದ ಅನ್ನ, ಬೋಗಣಿ ತುಂಬ ಮಾಡಿದ ಹುಳಿ ತಿನ್ನಲು ಎಂದಿನಂತೆ ಇಪ್ಪತ್ತೋ ಇಪ್ಪತ್ತೈದು ಬ್ರಾಹ್ಮಣರು ಇವತ್ತು ಇಲ್ಲವೆಂದು ಚಿಕ್ಕಿಗಾಗಿದ್ದ ದುಃಖ ಇಳಿದಂತೆ ಕಂಡಿತು. ಆಳುಗಳು ಉಣ್ಣುತ್ತಾವೆ. ಅಥವಾ ಕೊಟ್ಟಿಗೆ ಕೆಲಸದ ಹೊಲತಿಯಿದ್ದಾಳೆ ಎಂದವರು ಸಮಾಧಾನಪಟ್ಟಿರಬೇಕು.

ಚಿಕ್ಕಿಗೆ ಕೊಟ್ಟಿಗೆ ಕೆಲಸದ ಹೊಲತಿಯೆಂದರೆ ಪ್ರೀತಿ. ಹಂದಿಯ ಮರಿಗಳ ಹಾಗೆ ಅವಳಿಗೆ ಮಕ್ಕಳೆಂದು ಅವರು ಹಾಸ್ಯ ಮಾಡಿದ್ದನ್ನು ಜಗನ್ನಾಥ ಕೇಳಿದ್ದಾನೆ. ಮೈಲಿಗೆಯಲ್ಲಿದ್ದಾಗ ಅವಳ ಜೊತೆ ಚಿಕ್ಕಿಯ ಕಷ್ಟಸುಖದ ಮಾತು ನಡೆಯುವುದು. ಎಷ್ಟು ಕುರ್ದೆಗಳೇ ನಿಂಗೆ ಎಂದು ಹಾಸ್ಯದಿಂದ ಶುರುವಾದ್ದು, ಅವಳ ಗಂಡನ ಹಾದರ, ಹಿರಿಮಗನ ಕುಡಿತದ ಚಟ, ತೆರ ಬಾಕಿ ಮಾಡಿಕೊಂಡ ಅಳಿಯನ ಸಮಾಚಾರ, ಕಿರಿಮಗಳು ಮೋಸಮಾಡಿ ತೀರ್ಥಹಳ್ಳಿಯ ಹೊಲೆಯನೊಬ್ಬನ ಜೊತೆ ಓಡಿಹೋದ್ದು, ಚಿಕ್ಕಮಗಳೂರು ಕಾಫಿ ತೋಟಕ್ಕೆ ಹೋದ ಮಗನೊಬ್ಬ ಒಮ್ಮೆಯಾದರೂ ಹಿಂದಕ್ಕೆ ಬಾರದ್ದು, ಮಗುವನ್ನು ದೆಯ್ಯ ಮೆಟ್ಟಿದ್ದು-ಇತ್ಯಾದಿ ಮಾತುಗಳು ಆರಾಮಾಗಿ ಚಿಕ್ಕಿಗೆ ಸ್ನಾನದ ಹೊತ್ತಾಗುವ ತನಕ ಹರಡಿಕೊಳ್ಳುತ್ತೆ. ಹಿಟ್ಟು ಕಲಸುತ್ತಿದ್ದ ಚಿಕ್ಕಿ ಶ್ರೀಪತಿರಾಯರಿಗೆ ಹೇಳಿದಳು: ‘ಅವಕ್ಕೆ ಹಾಸಕ್ಕೆ ಹೊದೆಯೋಕ್ಕೆ ಬೇಕಾದಷ್ಟು ಇರೋವಾಗ ದೇವಸ್ಥಾನದೊಳಗೆ ಹೋಗಿ ಅವಕ್ಕೇನು ಕಡೀಬೇಕಾಗಿದೆ ಹೇಳಿ’.

ಚಿಕ್ಕಿ ನೇರವಾಗಿ ವಿಷಯಕ್ಕೆ ಬಂದರೆಂದು ಜಗನ್ನಾಥನಿಗೆ ಖುಷಿಯಾಯಿತು.

‘ಹಾಗಲ್ಲ ಚಿಕ್ಕಿ, ನಮ್ಮ ದೇಶದಲ್ಲಿ ಈ ಕೀಳು ಜನ ಬಂಡಾಯ ಎದ್ದಾಗಲೇ ನಮ್ಮ ಜೀವನಕ್ಕೊಂದು ಅರ್ಥ ಬರೋದು. ವಿಯಟ್ನಾಂ ದೇಶದ ಬಡ ರೈತರು ನೋಡಿ – ಅಮೇರಿಕಾದಂಥ ದೇಶಾನ್ನೇ ಎದುರು ಹಾಕ್ಕೊಂಡು ಹೋರಾಡ್ತಾ ಇದಾರಲ್ಲ. ಅದೇ ಈ ಕಾಲದ ಅದ್ಭುತ ಸಂಗತಿ. ಹಾಗೇನೇ ಅಮೇರಿಕಾದ ನೀಗ್ರೋಗಳ ಹೋರಾಟ. ಇಂಥ ಜನ ಎದ್ದು ನಿಂತಾಗ ಅವರ ಜೀವನ ಅರಳೋದು ಮಾತ್ರವಲ್ಲ ನಮ್ಮ ಜೀವನಾನೂ ಅರಳತ್ತೆ. ಅವರು ಮನುಷ್ಯರಾಗದ ಹೊರ್ತು ನಮ್ಮ ಮನುಷ್ಯತ್ವಾನೂ ಅಪೂರ್ಣವಾಗೇ ಉಳಿಯುತ್ತೇ.’

ಚಿಕ್ಕಿಯ ಮುಖದಲ್ಲಿ ಸಹನೆ ನೋಡಿ ತನ್ನ ಮಾತುಗಳೆಲ್ಲ ಬಾಷಣದಂತಾಗಿ ಬಿಟ್ಟಿತೆಂದು ಜಗನ್ನಾಥನಿಗೆ ನಾಚಿಕೆಯಾಯಿತು.

‘ನಂಗೆ ನಿನ್ನ ಮಾತು ಅರ್ಥವಾಗಲ್ಲ ಜಗಣ್ಣ. ಈಗ ಹೊಲೇರು ಮಕ್ಕಳನ್ನು ಸ್ಕೂಲಿಗೆ ಕಳಿಸಿದರೆ ಅವಕ್ಕೆ ದುಡ್ಡು ಸಿಕ್ಕತ್ತಂತೆ. ಆ ದುಡ್ಡನ್ನು ಅವು ಏನು ಮಾಡ್ತಿದಾವೆ ಗೊತ್ತ? ಕುಡಿದು ಹಾಳು ಮಾಡ್ತಿದಾವೆ. ಅವಕ್ಕೆ ಉದ್ಧಾರ ಆಗಬೇಕೂಂತ ಅನ್ನಿಸ್ದ ಹೊರ್ತು ನೀನು ಮಾಡೋದೆಲ್ಲ ನೀರಿನಲ್ಲಿ ಹೋಮ ಮಾಡಿದಂತೆ’.

ಚಿಕ್ಕಿ ನಿಟ್ಟುಸಿರಿಟ್ಟು ಹೇಳಿದರು.

‘ಹಾಗಲ್ಲ ಚಿಕ್ಕಿ. ನಾವು ಉಪಕಾರ ಮಾಡಿದ್ರೆ ಅವರು ಸರಿಹೋಗಲ್ಲ-ನಿಜ. ಅವರು ನಮ್ಮನ್ನು ಧಿಕ್ಕರಿಸಿ ನಿಲ್ಲಬೇಕು. ಆಗ ಅವ್ರಿಗೆ ತಾವೂ ಮನುಷ್ಯರು ಅನ್ನಿಸತ್ತೆ, ತಾವು ಕೀಳೂ ಜನ ಅನ್ನೋದನ್ನ ಅವೇ ಒಪ್ಪಿಕೊಳ್ಳೊ ಹಾಗೆ ನಾವು ಮಾಡಿದೀವಲ್ಲ, ಇದು ಭಯಂಕರ ವಿಷಯ. ಅದಕ್ಕೇ ನಾನು…’

‘ಏನೇ ಮಾಡೊ ಜಗಣ್ಣ, ಮನೆತನದ ಮರ್ಯಾದೆ ಮರೀಬೇಡ. ಸೂರ್ಯನ್ನ ತಿನ್ನಕ್ಕೆ ಹೋಗಿ ಹನುಮಂತ ಮೂತಿ ಸುಟ್ಟುಕೊಂಡನಂತೆ. ರಾಯರನ್ನ ಕೇಳು ಹೇಳ್ತಾರೆ. ನೀನಿನ್ನೂ ಕೂಸು. ಮೂರು ದಿನ ನಿನಗೆ ಎಚ್ಚರಾನೇ ಬರ್ಲಿಲ್ಲ. ಅಡಿಗರು ತೊಡೇ ಮೇಲೆ ಮಲಗಿಸಿಕೊಂಡು ಮೃತ್ಯುಂಜಯ ಜಪ ಮಾಡ್ತ ಕೂತರು. ನಿನ್ನಮ್ಮ ಎದುರು ಕೂತು ಕಣ್ಣೀರಿಡ್ತ ದೇವರನ್ನ ಬೇಡಿಕೊಂಡ್ರು: ಒಬ್ನೇ ಮಗ ಉಳಿಸು ಅಂತ – ದೇವರ ಕೋಣೆ ಎದುರು. ನಂಗಿನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ. ಮನೇಲಿ ಎಲ್ರೂ ಉಪಾಸ. ನಿಂಗೆ ಮೈತುಂಬ ಚಿಟಿಕೆ ಹಾಕಿ ಎಷ್ಟು ಸುಟ್ಟರೂ ಧ್ಯಾಸ ಬರ್ಲಿಲ್ಲ. ಕೊನೇಗೆ ನಿನ್ನಮ್ಮ ಮಂಜುನಾಥ ಸ್ವಾಮಿಗೆ ಬಂಗಾರದ ಕಿರೀಟ ಮಾಡಿಸಿ ಕೋಡ್ತೀನಿಂತ ಹರಕೆ ಹೇಳಿಕೊಂಡ ತಕ್ಷಣ ನೀನು ಕಣ್ಣುಬಿಟ್ಟೆ. ಇದನ್ನೆಲ್ಲ ನೀನು ಈಗ ಮರೆತು ಬಿಡೋದು ಸರಿಯೊ?’

ರಾಯರು ತುಂಬ ಸಹಾನುಭೂತಿಯಿಂದ ಚಿಕ್ಕಿಯ ಕಡೆಗೆ ನೋಡುತ್ತಿದ್ದರು. ಉದ್ವೇಗದಲ್ಲಿದ್ದ ಚಿಕ್ಕಿಗೆ ಏನು ಹೇಳುವುದೂ ಸರಿಯಲ್ಲವೆನ್ನಿಸಿ ಜಗನ್ನಾಥ ಸುಮ್ಮನಾದ.

‘ಯೋಚನೆ ಮಾಡಬೇಡಿಯಮ್ಮ. ಜಗಣ್ಣ ದುಡುಕ್ತಾನೇಂತ ತಿಳೀಬೇಡಿ.’

ರಾಯರ ಸಂತೈಸುವ ಮಾತಾಡಿದರು. ಇಬ್ಬರೂ ಮೆಲ್ಲನೆ ಅಲ್ಲಿಂದೆದ್ದು ಮಹಡಿಗೆ ಹೋದರು. ಗಂಟೆ ಒಂದಾಗಿತ್ತು. ಅಷ್ಟರಲ್ಲೇ ಸುಬ್ರಾಯ ಅಡಿಗರು ಬಂದರು. ‘ಊಟಕ್ಕಿನ್ನೂ ಅರ್ಧಗಂಟೆಯಿದೆ. ಇಸ್ಪೀಟಾಡಲು ಅಡಿಗರ ಅಭ್ಯಂತರವಿಲ್ಲ ತಾನೆ?’ ಎಂದು ರಾಯರು ನಗುತ್ತ ಕೇಳಿದರು. ‘ಮೂರು ಕೈಯಾಗತ್ತೆ ಸರಿ. ಇಪ್ಪತ್ತೆಂಟರ ಆಟ ಆಡೋಣ’ ಎಂದು ಅಡಿಗರು ಕೂತರು. ಉತ್ಸಾಹವಿಲ್ಲದಿದ್ದರೂ ಜಗನ್ನಾಥ ಆಗಲಿ ಎಂದ. ಎಲೆಗಳಿಗೆ ಏನು ಮಾಡೋದು? ‘ಗೂಡಲ್ಲಿ ನೋಡೋ ಇದ್ದೇ ಇರತ್ತೆ’ ಎಂದರು ರಾಯರು.

‘ಇಸ್ಪೀಟಾಟ ಗೊತ್ತಿಲ್ಲದೆ ಇದ್ದರೆ ಜೈಲಲ್ಲಿ ಹುಚ್ಚೇ ಹಿಡಿದು ಬಿಡ್ತಿತ್ತು ಮಾರಾಯರೇ’ ಎಂದು ಅಡಿಗರಿಗೆ ಹೇಳಿದರು.

‘ಮಳೆಗಾಲದಲ್ಲಿ ಮತ್ತೇನು ನಮಗೆ ಕೆಲಸ ಅಂತೀರಿ. ತಕಲೀಲಿ ನೂಲು ತೆಗೆಯೋದು ಅಥವಾ ಹಲಸಿನ ಹಪ್ಪಳ ಸುತ್ತ ತಿಂತಾ  ಇಸ್ಪೀಟಾಡೋದು’ ಎಂದು ಸುಬ್ರಾಯ ಅಡಿಗರು ನಕ್ಕರು.

ಎಲ್ಲದಕ್ಕೂ ಸೈ ಎನ್ನುವ ಜನ. ಆದರೆ ನಾನು ಯಾಕೆ ಹಾಗಲ್ಲವೆಂದು ಯೋಚಿಸುತ್ತ ಜಗನ್ನಾಥ ಇಸ್ಪೀಟು ಹುಡುಕಿದ. ಅದೂ ನಿಜವಲ್ಲ. ರಾಯರು ಮಿಲ್ ಬಟ್ಟೆ ಸುಟ್ಟವರಲ್ಲವೆ? ಅಡಿಗರು ದೇವರ ಬಗ್ಗೆ ಹುಚ್ಚಾಗಿದ್ದಿಲ್ಲವೆ? ಎಲ್ಲೆಲ್ಲೆಂದರೆ ಅಲ್ಲಲ್ಲಿ ತೊಡಗುವ ಜನರೆಂದರೇ ಬೇರೆ. ಪ್ರಾಯಶಃ ಅಮ್ಮ ಮಾತ್ರ ಹಾಗಿದ್ದರು. ಕರಾವು, ಊಟ, ಉಪಚಾರ, ಹಬ್ಬ-ಹರಿದಿನ, ನೆಂಟರಿಷ್ಟರಿಗೆ ಉಡುಗೊರೆ, ಹಾಡು-ಹಸೆಯಲ್ಲಿ ಅವರು ತಲ್ಲೀನರು. ಪ್ರಯೋಗಕ್ಕೆ ಪೂರ್ವದಲ್ಲಿ ಧ್ಯಾನ, ಧಾರಣ, ಸ್ಮರಣ, ಮನನ, ಅಧ್ಯಯನ, ಅನುಷ್ಠಾನ, ಸಿದ್ಧಿ ಎಂಬ ಹಂತಗಳಿವೆಯೆಂದು ಅಡಿಗರು ಹೇಳುತ್ತಾರೆ. ತಾನು ಯಾವ ಹಂತದಲ್ಲಿದ್ದೇನೊ?

ಗೂಡಲ್ಲಿ ಇಸ್ಪೀಟೆಲೆ ಇಲ್ಲ. ಮಾರ್ಗರೆಟ್‌ಗೆ ರಾಜಕೀಯ ಬೇಕು. ಮ್ಯೂಸಿಯಂಗೆ ಹೋಗಬೇಕು, ಒಳ್ಳೆ ಬಟ್ಟೆ ತೊಡಬೇಕು, ಹರಟೆ ಬೇಕು, ಕುತೂಹಲದಿಂದ ವಿಂಡೋ ಶಾಪಿಂಗ್ ಮಾಡುತ್ತ ಬೀದಿ ಬೀದಿಯಲೆಯಬೇಕು. ಆದರೆ ಒಂದೇ ಒಂದು ಉದ್ದೇಶಕ್ಕೆ ನಾನು ಈಗ ಬದ್ಧನಾಗಿದ್ದೇನೆ.

ತಾಕತ್ತಿಲ್ಲದಿದ್ದರೆ ಯೋಗಭ್ರಷ್ಟರಾಗುತ್ತಾರೆಂದು ಅಡಿಗರು ಹೇಳುತ್ತಾರೆ. ಯೋಗಃ ಚಿತ್ತವೃತ್ತಿ ನಿರೋಧಃ-ಅಡಿಗರೇ ಹೇಳಿದ್ದು. ಒಂದೇ ಒಂದು ಪಾಯಿಂಟಿನ ಸುತ್ತ ನನ್ನ ಮನಸ್ಸು ಸುತ್ತುತ್ತೆ. ಆದರೆ ಈ ಕೇಂದ್ರದಲ್ಲಿ ಹೊಲೆಯರು ಜೀವಂತ ವ್ಯಕ್ತಿಗಳಾಗಿ ಇನ್ನೂ ನನಗೆ ಕಾಣುತ್ತಿಲ್ಲ. ಇಳಿ ಸಂಜೆಯ ಹೊತ್ತು ಬರುವ ಉದ್ದ ನೆರಳುಗಳು, ದೂರದಲ್ಲೆ ನಿಂತು ಆಲಿಸುವ ಕಪ್ಪು ದೇಹಗಳು. ಮತ್ತೆ ತಮ್ಮ ತಮ್ಮ ಗುಡಿಸಲುಗಳಿಗೆ ಹೋಗತಕ್ಕವು. ಅವು ಕುಡಿಯುವಾಗ ಏನು ಮಾಡುತ್ತಾವೆ, ರಾತ್ರೆ ಹೇಗೆ ಸಂಭೋಗಿಸುತ್ತಾವೆ, ಏನು ಯೋಚಿಸ್ತಾವೆ, ಮಕ್ಕಳನ್ನು ಹೇಗೆ ಮುದ್ದಿಸುತ್ತಾವೆ, ಹೇಗೆ ಅಳುತ್ತಾವೆ – ತಿಳಿಯದು. ಹೆಸರುಗಳೇ ಮರೆಯುತ್ತವೆ. ಯಾರು ಪಿಳ್ಳ, ಯಾರು ಕರಿಯ, ಯಾರು ಮುದ್ದ…

ತನ್ನ ಹೈಸ್ಕೂಲು ಕಾಲದ ಟ್ರಂಕಲ್ಲಿ ಇಸ್ಪೀಟೆಲೆಗಳು ಇರುಬಹುದೇ ಎಂದು ಅಮ್ಮನ ಕೋಣೆಗೆ ಹೋದ. ಹಿತ್ತಾಳೆಯ ಹಳೆಯ ಕಾಲದ ಟ್ರಂಕು, ಅದರ ಮೇಲೆ ನೆಗ್ಗಾದ ಗುರುತುಗಳು, ಶಿವಮೊಗ್ಗದ ತನಕ ತನ್ನ ಜೊತೆಗಿತ್ತು, ಮುಚ್ಚಳ ತೆಗೆದ. ಹೈಸ್ಕೂಲಲ್ಲಿ ಅವನು ಬರೆಯುತ್ತಿದ್ದ ನೋಟುಪುಸ್ತಕಗಳು. ಶೆಣೈ ಅಂಗಡಿಯಿಂದ ಪೇಪರ್ ತಂದು ರಟ್ಟು ಹಾಕಿ ಹೊಲಿದು ಕೊಡುತ್ತಿದ್ದ ಕೆಲಸ ರೈಟರ್ ಕೃಷ್ಣಯ್ಯನದು. ಆ ದಿನಗಳಲ್ಲಿ ತನ್ನ ಹತ್ತಿರ ಒಂದು ಉತ್ತರಮುಖಿ ಪೆನ್ ಇತ್ತು. ಆ ಮೇಲೆ ಬ್ಲಾಕ್‌ಬರ್ಡ್. ಅಮ್ಮ ಕೊಟ್ಟ ಶಾಲಿನ ವಿಷಯ ಹೇಗೆ ಮಾರ್ಗರೆಟ್ ಹಾಸ್ಯಮಾಡುತ್ತಿದ್ದಳು, ತೇಪೆ ಹಾಕಿ ನುಣುಪಾದ ಶಾಲು, ಕಾಶಿಯಿಂದ ಅಮ್ಮ ತಂದುಕೊಟ್ಟಿದ್ದು, ಈಗಲೂ ಅದನ್ನು ಹೊದ್ದು ಮಲಗುತ್ತೇನೆ.

ಜಗನ್ನಾಥ ನೋಟ್‌ಬುಕ್‌ನ್ನು ತಿರುವಿದ: ಕ್ಲೈವ್ ಬಗ್ಗೆ, ಪೇಜಿನ ಮೇಲೆ ‘ಶ್ರೀ ಮಂಜುನಾಥ ಪ್ರಸನ್ನ’ ಎಂದು ಬರೆದಿದ್ದ. ಇನ್ನೊಂದು ಪುಸ್ತಕದ ಮೇಲೂ ಶ್ರೀ ಮಂಜುನಾಥ ಪ್ರಸನ್ನ, ಖಾಲಿ ಜಾಗದಲ್ಲೆಲ್ಲ ಶ್ರೀ ಮಂಜುನಾಥ ಪ್ರಸನ್ನ, ಆಗ ಎಡಗಣ್ಣು ಅದುರಿದರೆ, ಎಡಗಾಲು ಎಡವಿದರೆ, ಪ್ರಶ್ನೆ ಪತ್ರಿಕೆಗೆ ಕೈಯೊಡ್ಡುವಾಗ ಮಂಜುನಾಥನ ಸ್ಮರಣೆ. ತಮಾಷೆಯೆಂದರೆ ಈಗಲೂ ನನಗೆ ಮಂಜುನಾಥನ ಸ್ಮರಣೆ. ರೀತಿ ಬೇರೆ ಅಷ್ಟೆ. ಪೆಟ್ಟಿಗೆಯ ಸಂದಿನಲ್ಲಿ ಇಸ್ಪೀಟ್ ಪ್ಯಾಕಿತ್ತು. ಕಿವಿ ಮಡಚಿದ ಎಲೆಗಳು. ರಾಯರಿಗೆ ‘ಜಾರೋದೇ ಇಲ್ಲ. ಬಹು ಹಳೆಯದು’ ಎಂದು ಕೂಗಿ ಹೇಳಿದ. ‘ಆಗತ್ತೆ ಬಿಡು’ ಎಂದರು ರಾಯರು.

ರಾಯರೇ ಮೂವರಿಗೂ ಎಲೆ ಹಂಚಿದರು. ಅಡಿಗರ ಹೊಟ್ಟೆ ಗೊಳ್ ಎಂದು ಶಬ್ದ ಮಾಡಿತು. ‘ಹಸಿವಾಗ್ತ ಇರುಬಹುದಲ್ಲ? ಎಂದ ಜಗನ್ನಾಥ. ‘ಇನ್ನರ್ಧ ಗಂಟೆ ಕಾಯಬಹುದು. ಪರವಾಯಿಲ್ಲ’ ಎಂದರು ಅಡಿಗರು. ರಾಯರು ಆಟ ಹೇಳಿದರು. ಜಗನ್ನಾಥ ಒಂದು ಸಂಖ್ಯೆ ಮೇಲೇರಿಸಿದ. ಅಡಿಗರು ‘ಬೇಡ’ ಎಂದರು. ‘ಟ್ರಂಪ್’ ಎಂದು ಕೇಳಿದರು. ಜಗನ್ನಾಥ ‘ಡೈಮಂಡ್’ ಎಂದ. ‘ಡಿಪ್’ ಎಂದರು ರಾಯರು. ‘ಎಸ್’ ಎಂದು ಜಗನ್ನಾಥ ಡಿಪ್ ತೆಗೆದು ಮುಖ ಸಿಂಡರಿಸಿದ. ‘ನಿಮ್ಮದು ಇಳಿತ’ ಎಂದು ಅಡಿಗರಿಗೆ ಹೇಳಿದ.

‘ನಿಮ್ಮ ಹಿರೇ ಮಗ ಏನು ಮಾಡ್ತ ಇದಾನೆ ಅಡಿಗರೆ?’ ಜಗನ್ನಾಥ ಕೇಳಿದ.

‘ಅದೊಂದು ಕಥೆ, ಇವಳಿಗೂ ನನ್ನ ಸೊಸೆಗೂ ಎಣ್ಣೆ ಸೀಗೆ. ನಿತ್ಯರಾದ್ಯಂತ. ಮಗನಿಗೂ ಪೌರೋಹಿತ್ಯ ಸೇರದು, ನಿನ್ನ ಇಷ್ಟದಂತೆ ಮಾಡಯ್ಯ ಎಂದೆ. ಶಿವಮೊಗ್ಗದಲ್ಲಿ ಹೋಟೆಲು ಸೇರಿದ್ದಾನೆ. ಎರಡನೆಯವಳನ್ನು ಸಾಗರಕ್ಕೆ ಕೊಟ್ಟಿದ್ದೆನಲ್ಲ-ಗಂಡ ಸತ್ತು ಈಗ ಮನೆ ಸೇರಿದ್ದಾಳೆ. ಅವಳಿಗೆ ಮೂರು ಹೆಣ್ಣು. ನಾನೇ ಮದುವೆ ಮಾಡಬೇಕು. ನನ್ನ ಮಗಳಿಗೂ ಇವಳಿಗೂ ಸರಿಯಿಲ್ಲ. ಅಂತೂ ನಡೀತಿದೆ.’

ಅಡಿಗರು ವ್ಯಸನದಿಂದ ಹೇಳಿಕೊಂಡರು. ಆದರೂ ಮುಖದಲ್ಲಿ ನಗೆಯಿತ್ತು. ನೈಲಾ ತೂರಿಸಿಬಿಟ್ಟು ಹೇಳಿದರು:

‘ನನಗೂ ಈಚೆಗೆ ಮೈಯಲ್ಲಿ ಸರಿಯಿಲ್ಲ ಜಗಣ್ಣ. ಹಿಂದಿನ ಹಾಗೆ ಸರ್ಕೀಟು ಮಾಡಲಾರೆ’.

ಆಟದಲ್ಲಿ ಸೋತವನು ಜಗನ್ನಾಥನೆ. ಚಿಕ್ಕಿ ಬಂದು ಊಟಕ್ಕೆ ಕರೆದರು. ಮೂವರು ಹೋಗಿ ಊಟಕ್ಕೆ ಕೂತರು. ಮನೆಯ ಅರ್ಚಕರು, ಅಡಿಗೆಯವರು, ಅವರ ಮಕ್ಕಳು – ಎಲ್ಲರ ಊಟ ಮುಗಿದದ್ದರಿಂದ ಈಗ ಊಟಕ್ಕೆ ಮೂವರೆ ಆದರು. ಮೂರು ಜನರಿಗೂ ಚೆನ್ನಾಗಿ ಹಸಿವಾಗಿತ್ತು.

* * *

ತುಂಬ ಸುಖದಿಂದ ಸಾರಿನ ಅನ್ನ ಊಟ ಮಾಡುತ್ತ ಅಡಿಗರು ಅದೂ ಇದೂ ಮಾತಾಡಿ ಕೊನೆಗೆ,

‘ನಿಜವೋ ಜಗನ್ನಾಥ ನಾನು ಕೇಳಿದ್ದು’ ಎಂದರು. ಜಗನ್ನಾಥ ‘ನಿಜ’ ಎಂದ. ಅಡಿಗರೇ ಮುಖ್ಯ ವಿಷಯಕ್ಕೆ ಬಂದರೆಂದು ಜಗನ್ನಾಥನಿಗೆ ಸಂತೋಷವಾಯಿತು.

‘ನೋಡು ಜಗನ್ನಾಥ, ನೀನು ತಿಳಿದವನು. ಅಹಂಕಾರದಿಂದ ಮುಕ್ತರಾಗದ ಹೊರತು ಇಂತಹ ಕ್ರಿಯೆಗೆ ನಾವು ಕೈ ಹಾಕೋದು ಸರಿಯಲ್ಲ. ಯಾಕೆಂದರೆ ಇಡೀ ಊರಿನ ಭವಿಷ್ಯಾನ್ನೆ ಒಳಪಡಿಸೋ ಪ್ರಶ್ನೆ ಇದು.’

ಚಿಕ್ಕಿ ಮಾತು ಕೇಳುವ ಆಸಕ್ತಿಯಿಂದ ಬೋಂಡ ಬಡಿಸಲು ಬಂದರು. ಅಡಿಗರಿಗೆ ಪ್ರಿಯವಾಗಿದ್ದ ಹೀರೇಕಾಯಿ ಬೋಂಡ ಎಲ್ಲರ ಎಲೆಗಳ ಮೇಲೂ ಯಥೇಚ್ಛ ಬಿದ್ದವು. ಚಿಕ್ಕಿಗೆ ‘ಸಾಕು’, ‘ಸಾಕು’, ಎನ್ನುವ ಗಮನ ಮೂವರಿಗೂ ಉಳಿದಿರಲಿಲ್ಲ. ನಿಷ್ಠುರವಾಗಿ ಮಾತಾಡದಿದ್ದರೆ ಅಡಿಗರಿಗೆ ಅಪಚಾರ ಮಾಡಿದಂತೆನ್ನಿಸಿ ಜಗನ್ನಾಥ ಹೇಳಿದ:

‘ನಿಮ್ಮ ವಾದ ಗೊತ್ತು ಅಡಿಗರೆ. ಅವಧೂತನಾದವನಿಗೆ ಮಾತ್ರ ಈ ಸಾಮಾಜಿಕ ಕಟ್ಟಳೆಗಳನ್ನ ಧಿಕ್ಕರಿಸೋ ಅಧಿಕಾರವಿರೋದು ಅಂತ ತಾನೇ ನೀವು ಹೇಳೋದು?’

ಅಡಿಗರು ಹುಳಿಯನ್ನ ಕಲೆಸುತ್ತ, ಬೋಂಡ ಬಾಡಿಸಿಕೊಂಡು ತಿನ್ನುತ್ತ ಒಂದು ಕ್ಷಣ ಕಣ್ಣು ಮುಚ್ಚಿದ್ದು ಆಮೇಲೆ ತುಂಬ ಖಂಡಿತವಾಗಿ ಹೇಳಿದರು:

‘ಹೌದು. ಅವಧೂತನಿಗೆ ನೈವೇದ್ಯವೂ ಒಂದೆ, ಅಮೇಧ್ಯವೂ ಒಂದೆ. ಸಮದರ್ಶಿ ಅವ. ಪರಮಹಂಸರಿಗೆ ಯಜ್ಞೋಪವೀತ ಹಾಕಿಕೊಂಡಿದ್ದೇನೆಂಬ ಅಹಂಕಾರವೂ ಅಡ್ಡ ಬಂತಂತೆ, ಕಿತ್ತೊಗೆದರು. ಎಸೆದ ಎಂಜಲೆಲೆಯಿಂದ ನಾಯಿ ಕಾಗೆಗಳ ಜೊತೆ ಅನ್ನ ಹೆಕ್ಕುವನನ್ನ ಗುರುವಾಗಿ ಕಂಡರು. ಅಂಥವರಿಗೆ ಮಾತ್ರ ಹೊಲೆಯನೇನು, ಬ್ರಾಹ್ಮಣನೇನು?’

ಈ ಪರಿಚಿತ ವಾದಗಳು ಜಗನ್ನಾಥನನ್ನು ನಿಜವಾಗಿ ಕೆಣಕಲಿಲ್ಲ. ಆದರೆ ಅಡಿಗರ ಮಾತಿನ ಹಿಂದಿದ್ದ ಆವೇಶವನ್ನು ಗೌರವದಿಂದ ಕಂಡು ಏನು ಹೇಳಿದರೆ ಈಗ ಸರಿಯಾದೀತೆಂದು ಚಿಂತಿಸಿದ.

‘ಅವಧೂತನಾಗದೆ ಯಾವ ಕ್ರಿಯೇನೂ ಸಾಧ್ಯ ಇಲ್ಲ ಅಂತ ನೀವು ಹೇಳೋದಾದರೆ ಈ ಸಾಮಾಜಿಕ ಜೀವನದಲ್ಲಿ ಸಂಸಾರಿಯಾಗಿ ಇದ್ದುಕೊಂಡು ಅರ್ಥಪೂರ್ಣವಾದ ಮೂಲಭೂತ ವಾದ ಯಾವ ಕ್ರಿಯೇನೂ ಮಾಡೋಕೆ ಸಾಧ್ಯವಿಲ್ಲ ಎಂದ ಹಾಗಾಯ್ತು. ಅಲ್ಲವೆ? ಅಂದರೆ ಸಮಾಜದ ಒಳಗೆ ಏನೂ ಅರ್ಥ ಇಲ್ಲ. ಅರ್ಥ ಇರೋದೆಲ್ಲ ಈ ಸಮಾಜಾನ್ನ ಮೀರಿ ನಿಂತ ಮೇಲೇ ಎಂದ ಹಾಗಾಯ್ತು.’

ರಾಯರು ಕುತೂಹಲದಿಂದ ತನ್ನ ಮಾತು ಕೇಳುತ್ತಿದ್ದರು. ಚಿಕ್ಕಿ ಜಿಲೇಬಿಯನ್ನ ಬಡಿಸಿದರು. ಸಾಕೆಂದು ಅಡಿಗರು ಕೈಯಡ್ಡ ಮಾಡಿದರೂ ಕೇಳದೆ ಅವರ ಕೈಯಡ್ಡವಾಗದ ಎಲೆಯ ಮೂಲೆ ಹುಡುಕಿ ‘ನಿಮಗೆ ಪ್ರಿಯವಾದ್ದಲ್ಲವೆ?’ ಎಂದು ಎರಡು ಜಿಲೇಬಿ ಹಾಕಿಬಿಟ್ಟರು. ಈ ದಾಕ್ಷಿಣ್ಯ ಉಪಚಾರಗಳ ಯುದ್ಧದಲ್ಲಿ ಅಡಿಗರಿಗೆ ಜಗನ್ನಾಥನ ಮಾತು ಕೇಳಿಸಿದಂತೆ ಕಾಣಲಿಲ್ಲ. ಜಿಲೇಬಿಯನ್ನು ಬಹಳ ಇಷ್ಟಪಟ್ಟು ತಿನ್ನುತ್ತ ಹೇಳಿದರು:

‘ನೋಡು ಜಗಣ್ಣ ನನಗೆ ಜನಿವಾರವಿದೆ. ಇದು ನನ್ನ ಜೀವನೋಪಾಯದ ಲಾಂಛನ ಅಷ್ಟೆ, ಇದಿರೋದರಿಂದ ಪೌರೋಹಿತ್ಯಕ್ಕೆ ಕರೀತಾರೆ, ದೇವಸ್ಥಾನದಲ್ಲಿ ಸಾಮವೇದದ ಸೇವೇಗೆ ಕರೀತಾರೆ, ನೀಲಕಂಠೇಶ್ವರನ ಅರ್ಚನೆಗೆ ನೀನೇ ನೇಮಿಸಿದೀಯ. ಆದರೆ ದೇವರ ಕೈಯಲ್ಲಿ ಬಿದ್ದರೆ ನಾನು ಮಂಗಳಾರತೀಲಿ ಇರೋ ಕರ್ಪೂರದಂತೆ ಉರಿದು ಉರಿದು ಹೋಗ್ತೀನಿ. ಕರ್ಮಕ್ಕಂಟಿಕೊಂಡಿರೋ ತನಕ, ವ್ಯಾಮೋಹಿ ಆಗಿರೋ ತನಕ ಈ ಲೋಕದ ಆಚಾರ ಎಲ್ಲ ಬೇಕಾಗುತ್ತೆ, ಕೊನೇಲಿ ಏನೂ ಇಲ್ಲ.’

ಏನೋ ಪಾಯಿಂಟ್ ಮಾಡಲು ಹೋಗಿ ಅಡಿಗರು ಇನ್ನೇನೊ ಹೇಳಿಬಿಟ್ಟರು. ಅವರ ಮಾತಿನ ಕ್ರಮವೇ ಹಾಗೆ. ಭಾವನೆ ಬೀಸಿದತ್ತ ಅಲೆಯುವ ಮಾತುಗಳು. ಜಗನ್ನಾಥ ವ್ಯಂಗ್ಯವಾಗಿ ಮಾತಾಡಿ ಅಡಿಗರ ಗಮನವನ್ನು ಸೆಳೆಯಲು ನೋಡಿದ. ಹೃತ್ಪೂರ್ವಕವಾದ ಮಾತುಗಳೆಲ್ಲ ಅಡಿಗರ ಭೋಳೆ ಮನಸ್ಸಿನಲ್ಲಿ ಜಿಲೇಬಿಯಂತೆಯೇ ಹಿತವಾಗಿ ಕರಗಿಬಿಡುತ್ತವೆ ಅನ್ನಿಸಿದ್ದರಿಂದ.

‘ಪುರಾಣ ಏನು ಹೇಳುತ್ತೆ ನೋಡಿ: ಬ್ರಹ್ಮರ್ಷಿ ವಸಿಷ್ಠ ಊರ್ವಶಿ ಅನ್ನೋ ಸೂಳೆ ಮಗ. ಈ ವಸಿಷ್ಠ ಅರುಂಧತಿ ಎನ್ನುವ ಹೊಲತೀನ್ನ ಮದುವೆ ಮಾಡಿಕೊಂಡ. ಮದುವೆಯಾಗೋ ವಧೂವರರು ಈ ಹೊಲತೀ ದರ್ಶನಾ ಮಾಡ್ಲೇಬೇಕು. ಆದ್ದರಿಂದ ಎಂಥ ಕ್ರಾಂತಿಕಾರಕ ಧರ್ಮ ನಮ್ಮದು. ಅಲ್ವ ?’ ಎಂದ.

ಹೌದು ಎನ್ನುವ ಹಾಗೆ ಅಡಿಗರು ಮತ್ತು ಚಿಕ್ಕಿ ತಲೆಹಾಕಿದ್ದು ನೋಡಿ ಜಗನ್ನಾಥನಿಗೆ ರೇಗಿತು:

‘ಇದನ್ನೆ ನಾನು ಆತ್ಮ ವಂಚನೆ ಅನ್ನೋದು. ಭೋಳೆತನದಷ್ಟು ಅಪಾಯ ಇನ್ನೇನೂ ಇಲ್ಲ ಅಡಿಗರೆ. ಹೀಗೆಲ್ಲ ಹೇಳೋ ಧರ್ಮ ನಮ್ಮ ದೇಶಾನ್ನ ಏನು ಮಾಡಿದೆ ನೋಡಿ. ಇಷ್ಟೆಲ್ಲ ಕ್ರಾಂತಿಕಾರಕ ಕಥೆಗಳನ್ನ ಕಟ್ಟಿರೋ ದೇಶದಲ್ಲಿ ಸಮಾಜ ನೂರಾರು ವರ್ಷಗಳಿಂದ ಇದ್ದ ಹಾಗೇ ಇದೆಯಲ್ಲ ಅದಕ್ಕೇನು ಕಾರಣ ಹೇಳಿ. ಮೇಲಿನೂರು ಮೇಲೆ, ಕೆಳಗಿನೋರು ಕೆಳಗೇ ಉಳಿಯೋ ಹಾಗೆ ಬೆಣ್ಣೆ ಹಚ್ಚೋ ಕೆಲಸ ಮಾಡ್ತಾವೆ ಈ ಪುರಾಣಗಳು, ಈ ನಂಬಿಕೆಗಳು.’

ಸುಬ್ರಾಯ ಅಡಿಗರು ಸಿಟ್ಟಾಗಲಿಲ್ಲ. ರಾಯರು ಈ ಚರ್ಚೆಯಿಂದೇನೂ ಪ್ರಯೋಜನವಿಲ್ಲವೆನ್ನುವಂತೆ ಅನುಮಾನದಿಂದ ಜಗನ್ನಾಥನನ್ನು ದಿಟ್ಟಿಸುತ್ತ ಊಟ ಮುಗಿಸಿ ಕಾದರು. ಇನ್ನೊಂದೇ ಒಂದೇ ಎಂದು ಚಿಕ್ಕಿ ಬಡಿಸಿದ ಎರಡು ಜಿಲೇಬಿಗಳಲ್ಲಿ ಒಂದನ್ನು ಅಡಿಗರು ಎತ್ತಿಕೊಂಡರು. ಸಿಹಿ ಇಷ್ಟವಿಲ್ಲದ ಜಗನ್ನಾಥ ತನ್ನ ನಾಲ್ಕು ತುತ್ತು ಊಟದ ಕೊನೆಗೆ ಬಂದು ಎಷ್ಟೋ ಹೊತ್ತಾಗಿತ್ತು. ಇತ್ತೀಚೇಗೆ ಅವನು ಆದಷ್ಟು ಕಡಿಮೆ ಊಟ ಮಾಡುವ ಪ್ರಯೋಗದಲ್ಲಿದ್ದ. ಉಳಿದವರು ಊಟದ ಕೊನೆಗೆ ಬಂದಿದ್ದಾರೆಂಬ ಪರಿವೆಯಿಲಲ್ಲದೆ ಅಡಿಗರು ನಿಧಾನವಾಗಿ ಜಿಲೇಬಿ ಮುರಿದು ಬಾಯಿಗೆ ಹಾಕಿಕೊಳ್ಳುತ್ತ ಮಾತಾಡಿದರು :

‘ನಾನು ಹೇಳೋದು ಅಷ್ಟೆ ಜಗನ್ನಾಥ. ನಿನಗೆ ನಿಜವಾಗಿ ಹೊಲೇರ ಮೇಲೆ ಪ್ರೀತಿ ಇದೆಯೊ? ಅಂಥಾ ಪ್ರೀತಿ ನಿಜವಾಗಿ ಬಂದರೆ ಆಗ ನೀನು ಪಶು ಪಕ್ಷಿ ಚಾಂಡಾಳರಲ್ಲಿ ತಾದಾತ್ಮ್ಯ ಪಡೆದು ಅವಧೂತನಾಗ್ತಿ. ಆಗ ಸಂಘರ್ಷದ ಮಾತೇ ಇಲ್ಲ. ಬಂಡಾಯ ಬೇಕೇ ಇಲ್ಲ. ತನ್ಮಯನಾಗಿ ಬದುಕ್ತಿ. ನಾನು ನೀನು ಅಂಥ ಅವಸ್ಥೆ ಮುಟ್ಟಿಲ್ಲಾಂತಲೇ ನಾನು ಹೇಳೋದು.’

ಅಡಿಗರು ಆವೇಶದಿಂದ ಮಾತಾಡಲು ಪ್ರಾರಂಭಿಸಿದ್ದರು. ಕೊನೆಯ ಜಿಲೇಬಿಯನ್ನು ಎತ್ತಿಕೊಂಡು ಹಾಗೆ ಹಿಡಿದು ಮಾತಾಡಿದರು:

‘ಇಪ್ಪತ್ತು ವರ್ಷಗಳ ಕೆಳಗೆ ದೇವರು ಎಲ್ಲೆಲ್ಲೂ ನಿಂತು ನನ್ನನ್ನು ಕರೀತಿದ್ದ. ಕೆಲವು ಕ್ಷಣವಾದರೂ ನನಗೆ ಅನುಭವ ಆಗಿದ್ದಿದೆ – ಅಥವಾ ಅಹಂಕಾರ ನನ್ನ ಹತ್ರ ಈಗ ಹಾಗೆ ಮಾತಾಡಿಸ್ತ ಇದೆಯೋ ನಾಕಾಣೆ. ಈಗ ನಾನು ಹಾಗಿಲ್ಲ. ಸಿಟ್ಟು ವಿಪರೀತ. ಮೂಗಿನ ಮೇಲೇ ಸಿಟ್ಟು. ಒಮ್ಮೊಮ್ಮೊ ಇವಳನ್ನ ಹೊಡೀತೀನಿ. ಮಕ್ಕಳು ಅತ್ತರೆ ರೇಗತ್ತೆ. ಮನೆಗೆ ಹೋಗೋಕೇ ಮನಸ್ಸಾಗಲ್ಲ. ಅಲೆದುಕೊಂಡಿರೋಣ ಅನ್ನಿಸುತ್ತೆ. ಆಯಿತ? ವಿಪರೀತ ಆಸೆ ಬೇರೆ. ಹೊಟ್ಟೆ ಕೆಡುತ್ತೇಂತ ಗೊತ್ತಿದ್ದರೂ ಇಕೊ ಹೇಗೆ ಈ ಜಿಲೇಬಿನ ತಿಂತಾ ಇದೀನಿ ನೋಡು. ಯಾಕೆ ಹೇಳ್ದೆ ಅಂದ್ರೆ – ಏನು ಹೇಳಲಿಕ್ಕೆ ಹೊರಟಿದ್ದ ಮರ್ತೇ ಹೋಯ್ತು – ನಾವೆಲ್ಲ ಇರೋದು ಮಂಜುನಾಥನ ಗರ್ಭದಲ್ಲಿ -ಒಳ್ಳೇವ್ರ, ಕೆಟ್ಟೋವ್ರ, ನನ್ನಂಥ ಆಸೆಬುರುಕರು, ನಿನ್ನಂಥ ಧೀರರು, ನಮ್ಮ ರಾಯರಂಥ ನಿಸ್ವಾರ್ಥ ಕರ್ಮಯೋಗಿಗಳು, ಮನೆತನಾಂತ ಹಂಬಲಿಸೋ ನಿಮ್ಮ ಚಿಕ್ಕಿ – ಎಲ್ಲ.’

ಜಗನ್ನಾಥನಿಗೆ ಕೊನೆಯ ಮಾತು ಕೇಳಿ ನಗು ಬಂತು. ನಾನು ಆಡುವ ಯಾವ ಮಾತಿನಿಂದಲೂ ಪ್ರಯೋಜನವಿಲ್ಲವೆನಿಸಿತು. ಆಡುತ್ತ ಆಡುತ್ತ ಅಡಿಗರು ಎತ್ತೆತ್ತಲೋ ಹೋಗಿಬಿಟ್ಟರು. ಆದರೂ ಜಗನ್ನಾಥನನ್ನು ಈಗಲೂ ಅವರ ಕೆಲವು ಮಾತುಗಳು ಮೋಹಿಸುತ್ತವೆ. ನಿಜ, ಹಿಂದಿನ ಅಡಿಗರಲ್ಲ. ಸೋತಿದ್ದಾರೆ. ಸ್ವಲ್ಪ ಜಾಳಾಗಿದ್ದಾರೆ. ಅಥವಾ ಹಿಂದೆಯೂ ಹೀಗೇ ಇದ್ದರೋ ಹೇಳಲಿಕ್ಕಾಗದು. ಮೊಸರಿಗೆ ಅನ್ನ ಬಡಿಸಲಿಕ್ಕೆ ಬಂದ ಚಿಕ್ಕಿಗೆ ಬೇಡ ಎಂದ. ರಾಯರು ಎಲ್ಲೆಯಲ್ಲೆ ಇದ್ದ ತುತ್ತು ಅನ್ನ ಸಾಕೆಂದರು. ಅವರ ಕೈ ಒಣಗಿತ್ತು. ಅಡಿಗರು ಸ್ವಲ್ಪ ಅನ್ನ ಹಾಕಿಸಿಕೊಂಡರು. ಜಗನ್ನಾಥ ಹೇಳಿದ:

‘ನಾನು ಕ್ರಿಯೆಯ ಸಾಧ್ಯತೇನ್ನ ಹುಡುಕುತ್ತ ಇದೀನಿ ಅಡಿಗರೆ. ಯಾಕೆ ಹೇಳ್ಲ? ನಮ್ಮಲ್ಲಿ ಏನಾಗಿದೆ ಅಂದ್ರೆ ಸಮಾಜದ ಹೊರಗಿರೋ ಅವಧೂತರು ಮಾತ್ರ ಪರಮಕ್ರಾಂತಿಕಾರರಾಗಲು ಸಾಧ್ಯವಾದ್ದರಿಂದ, ಸಮಾಜ ಜೀವನದೊಳಗೆ-’

ಅಡಿಗರು ಮಧ್ಯೆ ಪ್ರವೇಶಿಸಿದರು :

‘ನೀನೂ ಅವಧೂತನಾಗಿಬಿಡ್ತಿ. ಎಲ್ಲ ಮೋಹಾನೂ ಕಳೆದುಕೊಂಡುಬಿಡ್ತಿ. ನೋಡು ಬೇಕಾದ್ರೆ, ಹಾಗಾಗ್ಲೇಬೇಕಾಗತ್ತೆ, ಇಲ್ದಿದ್ರೆ ಈ ದೇಶದಲ್ಲಿ ಏನೂ ನಡೆಯಲ್ಲ. ಗಾಂಧೀಜಿ ಕೊನೆಗೆ ಆಗಿದ್ದೇನು? ನನಗೊಂದು ಕಥೆ ಗೊತ್ತಿದೆ. ಆಮೇಲೆ ಹೇಳ್ತೀನಿ, ಒರಿಸ್ಸಾದಲ್ಲಿ ನಾನು ಕೇಳಿಸಿ ಕೊಂಡಿದ್ದು. ತುಂಬ ಚಲೋ ಕಥೆ.’

ಎಂದು ಖುಷಿಯಾಗಿ ಏನನ್ನೋ ಯೋಚಿಸುತ್ತ ಅನ್ನ ಮೊಸರು ಕಲಿಸಿಕೊಂಡರು. ಹಸಿವಿಲ್ಲದವನಿಗೂ ಹಸಿವಾಗಬೇಕು – ಅಷ್ಟು ರುಚಿ ಸುಖಗಳಿಂದ ಅಡಿಗರು ಊಟ ಮಾಡುತ್ತಾರೆಂಬುದನ್ನು ಜಗನ್ನಾಥ ಗಮನಿಸಿದ.

ನೀರು ಬಡಸಲೆಂದು ಹೊಳೆಯುವ ತಾಮ್ರದ ಚೊಂಬು ಹಿಡಿದು ಮೂಲೆಯಲ್ಲಿ ನಿಂತಿದ್ದ ಚಿಕ್ಕಿ ಹೇಳಿದರು:

‘ಹಾಗಾದರೆ ನೀನು ಹೇಳೋದು ಏನು ಜಗಣ್ಣ? ಪೂಜಿಸಿದರೆ ದೇವರು, ಪೋಷಿಸಿದರೆ ಮಕ್ಕಳು, ಪಾಲಿಸಿದರೆ ಪ್ರಜೆಗಳು ಅನ್ನೊ ಗಾದೆ ಸುಳ್ಳೂಂತಲ?’

ತಾನು ಆಡುತ್ತಿದ್ದಕ್ಕೂ ಚಿಕ್ಕಿ ಹೇಳಿದ್ದಕ್ಕೂ ಸಂಬಂಧವಿಲ್ಲವೆನ್ನಿಸಿ ಜಗನ್ನಾಥ ಏನು ಹೇಳಬೇಕು ತೋಚದೆ ಸುಮ್ಮನಾದ. ಚಿಕ್ಕಿ ಮತ್ತೆ ಹೇಳಿದರು:

‘ಮದುವೆ ಮಾಡಿಕೊಂಡರೆ ಎಲ್ಲ ಸರಿಹೋಗುತ್ತೆ. ನಿನ್ನ ಅಮ್ಮ ಬದುಕಿದ್ದರೆ ಇವಕ್ಕೆಲ್ಲ ಅವಕಾಶಾನೇ ಇರ‍್ತ ಇರಲಿಲ್ಲ’ ಎಂದು ನೀರು ಬಡಿಸಿ, ಒಳಗಿನಿಂದ ಇನಷ್ಟು ಶಾವಿಗೆ ಖೀರು ತಂದರು. ಎಲ್ಲರೂ ಬೇಡ ಬೇಡ ಎಂದರೂ ಕೇಳದೆ ದೊನ್ನೆಯಲ್ಲಿ ಸ್ವಲ್ಪ ಸ್ವಲ್ಪ ಬಡಿಸಿದರು.

‘ಜಗಣ್ಣ ಈಚೇಗೆ ಸರಿಯಾಗಿ ಊಟ ಮಡೋದೂ ಇಲ್ಲ ನೋಡಿ’ ಎಂದು ದೂರಿದರು.

ಇಷ್ಟು ಹೊತ್ತು ಸುಮ್ಮನಿದ್ದ ರಾಯರು ಹೇಳಿದರು :

‘ಚಿಕ್ಕಿ ಹೇಳಿದ್ದರಲ್ಲಿ ಸತ್ಯವಿದೆ. ಮಂಜುನಾಥನ ಕೀರ್ತಿ ಯಾಕೆ ಬೆಳ್ದಿದೆ ಅಂದ್ರೆ, ನೂರಾರು ವರ್ಷಗಳಿಂದ ಕೋಟ್ಯಾಂತರ ಜನರ ಅತ್ಯಂತ ಆಪ್ತ ಸುಖದುಃಖಾನ್ನ ಅವನು ಕೇಳಿದಾನೆ. ಅವನು ಕೇಳಿದಾನೇಂತ ನಾನು ಹೇಳೋದಲ್ಲ. ಕೇಳ್ತಾನೇಂತ ಜನ ತಿಳ್ಕೊಂಡು ಬದುಕಿದಾರೆ, ಯಾಕೇಂದ್ರೆ ನನಗೆ ನಂಬಿಕೆಯಿಲ್ಲ.’

‘ಅಂಥ ನಂಬಿಕೆ ನಾಶವಾದಾಗ್ಲೇ…’

‘ಅಂಥ ಒಂದು ನಂಬಿಕೆ ಅಗತ್ಯ ಮನುಷ್ಯಸ್ವಭಾವದಲ್ಲಿ ಇರೋ ತನಕಾನೂ-’

‘ಅಂದರೆ ಈ ನೆಲದಲ್ಲಿರೋ ತಾಮ್ರಾನ ಅಗೆದು ತೆಗೆಯೋದ್ರಿಂದ, ಊರಿಗೆ ಎಲೆಕ್ಟ್ರಿಸಿಟಿ ಬರೋದ್ರಿಂದ, ಆಸ್ಪತ್ರೆಗೆ ಎಕ್ಸ್‌ರೇ ಪ್ಲಾಂಟ್ ತರಿಸೋದ್ರಿಂದ, ಅಂದರೆ ಕ್ರಮೇಣ ವೈಜ್ಞಾನಿಕ ದೃಷ್ಟಿ ಬೆಳೆಯೋದ್ರಿಂದ ಈ ನಂಬಿಕೆ ಅಗತ್ಯ ತನಗೆ ತಾನೇ-’

‘ಹೋಗಲ್ಲ ಕಣಯ್ಯ ಜಗಣ್ಣ – ಹೋಗಲ್ಲ. ರಷ್ಯದಲ್ಲಿ ದೇವರನ್ನ ನಾಶ ಮಾಡಿದ್ರು, ಏನಾಯ್ತು? ಸ್ಟಾಲಿನ್ನೇ ದೇವರಾದ -ಅಲ್ವ?’

‘ಹೀಗೆ ವಾದ ಮಾಡೋದು ಸ್ಕೂಲ್ ಡಿಬೇಟ್ ಆಗುತ್ತೆ ಅಷ್ಟೆ. ಒಂದಲ್ಲ ಒಂದು ದಿನ ಸಾಯಬೇಕಾದ ನಾವು ಏನು ಮಾಡಿ ಪ್ರಯೋಜನಾಂತ ಹೇಳಿದಂತೆ ಆಗತ್ತೆ.’

ಇಬ್ಬರ ಕೈಯೂ ಒಣಗುತ್ತಿತ್ತು. ಇನ್ನೇನು ಏಳಬೇಕೆನ್ನಿಸುವಷ್ಟರಲ್ಲಿ ಅಡಿಗರು ಮಾತಿಗೆ ಶುರುಮಾಡಿದರು :

‘ನಾನು ಕೊನೇಲಿ ಹೇಳೋದು ಇಷ್ಟೆ. ತೀವ್ರತೆ ಇಲ್ದೆ ಇದ್ರೆ ಬದುಕಿದ್ದರೂ ಸತ್ತಿದ್ದ ಹಾಗೆ. ಪರಮಹಂಸರು ಪಾದದಲ್ಲಿ ಮುಟ್ಟಿದಾಗ ವಿವೇಕಾನಂದರಿಗೆ ಕಾಲಿನ ಬುಡದ ನೆಲಾನೇ ಕುಸಿಯೋ ಹಾಗಿ ಆಗಿ ಭೀತಿ ಹುಟ್ಟಿತಂತೆ. ದೇವರ ಕೈಯಲ್ಲಿ ಬಿದ್ದಾಗ ನಾವು ಹಾಗೆ ಉರೀತಾ ಇರ್ತೀವಿ, ಅಲುಗಾಡಿ ಹೋಗ್ತೀವಿ. ಅಂಥ ತಲ್ಲಣಾನ್ನ ಒಂದಲ್ಲ ಒಂದು ಸಲ ಅನುಭವಿಸದೆ ಇದ್ರೆ ಎಲ್ಲ ವ್ಯರ್ಥ. ನಿಜ – ಭಯಂಕರವಾದ ಭೀತಿ ಹುಟ್ಟತ್ತೆ. ಎಲ್ಲ ಕಳಚಿಕೋತಾ ಕಳಚಿಕೋತಾ ಹೋದ ಹಾಗೆ ಆಗತ್ತೆ, ರೋಮಹರ್ಷವಾಗತ್ತೆ. ಹೀಗೆ ಸೃಷ್ಟೀಲಿ ಕರಗಿ ಹೋಗೋವಾಗ ನಾನು ಪ್ರತ್ಯೇಕ ವಸ್ತು ಅನ್ನೋ ಭಾವನೆ ಮಾಯವಾಗಬೇಕಲ್ಲ, ಅದೇ ನೋಡಿ ಬಹಳ ಕಷ್ಟ. ಗೋವಿಂದ ಗುರುಗಳೂಂತ ಒಬ್ಬರು ಬದರಿಕಾಶ್ರಮದಲ್ಲಿ ಇದನ್ನೆ ನನಗೆ ಹೇಳಿದ್ದರು : ‘ ಆ ತನಕ ಹೋಗ್ತೀನೋ ಅಡಿಗ. ಆದರೆ ಆಗ ನನಗೆ ಭಯವಾಗಿಬಿಡತ್ತೆ, ಒದ್ದಾಡಿಕೋತ ಈಚೆ ದಡಕ್ಕೆ ಬಂದು ಬಿದ್ದಿರ್ತೀನಿ’ ಅಂತ. ಈಗ ಜಗಣ್ಣನಿಗೆ ತೀವ್ರತೆ ಇದ್ದರೆ, ಅವನ ಮನಸನ್ನ ದ್ವೇಷದಲ್ಲಾದ್ರೂ ಮಂಜುನಾಥ ಕವಿದುಕೊಂಡಿದ್ರೆ ಅವನು ಪುಣ್ಯಶಾಲಿ ಅಂತಲೇ ನಾನು ಹೇಳೋದು. ಒಪ್ಪೋದು ಬಿಡೋದು ಮುಖ್ಯವಲ್ಲ. ಆ ದಿಗಿಲು ಆ ಸಂಕಟ ಜಗಣ್ಣನಿಗೂ ಆಗೇ ಆಗತ್ತೆ. ಅಹಂಕಾರ ನಿವೃತ್ತಿ ಆಗ್ಲೇಬೇಕಾಗತ್ತೆ.

ಜನ್ನನಾ ಜಾಯತೇ ಶೂದ್ರಃ
ಕರ್ಮಣಾ ಜಾಯತೇ ದ್ವಿಜಃ
ವೇದಪಾರಾಯಣಾತ್ ವಿಪ್ರಃ
ಬ್ರಹ್ಮಜ್ಙಾನೇತಿ ಬ್ರಾಹ್ಮಣಃ

ಅಂತಾರಲ್ಲ ಯಾಕೆ? ಅಬ್ಬಬ್ಬ ಅಂದ್ರೆ ನಾವೆಲ್ಲ ದ್ವಿಜರು ಅಷ್ಟೆ. ಧ್ಯಾನ ಧಾರಣ ಮಾನನದಿಂದ ಜಗಣ್ಣ ವಿಪ್ರಾವಸ್ಥೆ ಮುಟ್ಟಿರಬಹುದು. ಕ್ರಿಯೆಯ ಮುಖಾಂತರ ಅವನು ಮಂಜುನಾಥನಿಗೂ ಜನರಿಗೂ ಇರೋ ಸಂಬಂಧಾನ್ನ ಬದಲಾಯಿಸಲಿಕ್ಕೆಂತ ಹೊರಟಿದಾನೆ. ಈ ಬದಲಾಯಿಸೋ ಭರಾಟೇಲಿ ಎಲ್ಲ ತಿಳಿತಾನೆ. ತಿಳಿಯಾಗ್ತಾನೆ. ಒಟ್ಟಾರೆ ಹೇಳೋದಾದ್ರೆ ಏನೋ ಬಿಡಿಸಿಕೊಂಡು ಬರೋಕೆ ಅವನ  ಒಳಗಿರೋದು ಏನೋ ಒದ್ದಾಡ್ತಾ ಇದೆ. ಗರ್ಭದಲ್ಲಿರೋ ಶಿಶು ತಾಯಿ ಹೊಟ್ಟೇನ ಒಡೆಯೋ ಹಾಗೆ ಇವ ಮಂಜುನಾಥನ್ನ ಒದೀತಾ ಇದಾನೆ. ಸತ್ತ ಪಿಂಡವಲ್ಲವಲ್ಲ. ಒದೀಲಿ ಬಿಡಿ. ಮಂಜುನಾಥನಿಗೆ ಇದು ಅಂಗಾಂಗದಲ್ಲೆಲ್ಲ ಪುಳಕವಾಗೋ ಸೇವೆ. ಆಯಿತ?’

ಅಡಿಗರು ಕಣ್ಣು ಮುಚ್ಚಿ ಅಮಲಿನಿಂದ ಮಾತಾಡಲು ಶುರು ಮಾಡಿದ್ದರು. ಜೊತೆಗೆ ದ್ರಾಕ್ಷಿ ಗೋಡಂಬಿಗಳನ್ನು ಶಾವಿಗೆ ಖೀರಿನಿಂದ ಆರಿಸಿ ಬಹಳ ಸುಖದಿಂದ ತಿನ್ನುತ್ತಿದ್ದರು. ಅವರ ಕೆಲವು ಮಾತುಗಳು ಗೊಡ್ಡು ಬ್ರಾಹ್ಮಣ ಸಹ ಅಡಬಲ್ಲಂಥವು; ಇನ್ನು ಕೆಲವು ಆವೇಶದಿಂದ ಮಿಂಚುವಂಥವು. ಪ್ರೀತಿ ದಿಗಿಲುಗಳಿಂದ ಅಡಿಗರ ಮಾತು ಕೇಳುತ್ತಿದ್ದ ಜಗಣ್ಣ ಇನ್ನೇನು ಬಹಳ ಸಲೀಸಾದ ಮಾತುಗಳಲ್ಲಿ ಅಡಿಗರ ಆವೇಸವೆಲ್ಲ ದ್ರವವಾಗಿ ಬಿಡುವುದನ್ನು ಕಾದ.

‘ಭ್ರಾಂತಿ. ಯಾವುದು ಭ್ರಾಂತಿ? ಯಾವುದು ನಿಜ? ಮಂಜುನಾಥನ್ನ ನಂಬಿ ಜನ ಭ್ರಾಂತೀಲಿ ಬದುಕ್ತಿದಾರೆ, ಅವರನ್ನ ಎಚ್ಚರಿಸ್ತೇನೆ, ಸಂಕಟದ ಮೂಲಕ ಅವರು ಎಚ್ಚರಾಗ್ತಾರೆ ಅಂತ ಜಗನ್ನಾಥ ಹೇಳ್ತಾನೆ. ನಿನ್ನೆ ನಿದ್ದೇಲಿ ಕಂಡ ಕನಸು ಈಗಿನ ಎಚ್ಚರದಲ್ಲಿ ಭ್ರಾಂತಿ ಅನ್ನಿಸುತ್ತೆ. ನಾಳಿನ ತಿಳುವಳಿಕೆಲಿ ಇವತ್ತಿನ ಎಚ್ಚರ ಭ್ರಾಂತಿ ಅನ್ನಿಸುತ್ತೆ. ಈ ತಿಳುವಳಿಕೆ ದಾಟಿದ ದರ್ಶನವಾದಾಗ ಯಾರು ದೇವರು, ಯಾರು ದ್ವಿಜ, ಯಾರು ಹೊಲೆಯ…’

ಮಾತು ಬದಲಾಯಿಸಲು ರಾಯರು ಹೇಳಿದರು…’

‘ಚಿಕ್ಕಿ ಹೇಳಿದ್ದನ್ನ ಅಷ್ಟು ಸುಲಭವಾಗಿ ತೆಗದು ಹಾಕಬೇಡ. ಹೆಂಡತಿ ಮಕ್ಕಳು ಇದ್ದವನಿಗೆ ಜವಾಬ್ದಾರಿ ಅರ್ಥವಾಗತ್ತೆ. ಈ ಜವಾಬ್ದಾರಿ ನಿರ್ವಹಿಸುವಾಗಲೂ ನೀನು ಹೇಳೋ ಕ್ರಿಯೆ ಸಾಧ್ಯವಾದರೆ ಮಾತ್ರ ಅದಕ್ಕೆ ಅರ್ಥ. ಹೆಂಡತಿಯ ಜೊತೆ ಬದುಕೋದೂಂದ್ರೇನು, ಮಕ್ಕಳನ್ನ ಸಾಕೋದೂಂದ್ರೇನು ತಿಳೀದೇನೆ ಕ್ರಾಂತಿ ಅಂದರೆ ಪ್ರಯೋಜನವಿಲ್ಲ. ಸುಖದುಃಖದ ಪರಿಚಯವಿಲ್ದೆ ಇದ್ರೆ ಯಾರಿಗಾಗಿ ಯಾಕಾಗಿ ಕ್ರಾಂತಿ ಮಾಡಬೇಕು ಹೇಳು. ಗಾಂಧೀಜಿ ಮಾಡಿದ ಕ್ರಾಂತಿಯಿಂದ ಎಂಥ ಭ್ರಷ್ಟ ಜನರು ಅಧಿಕಾರಕ್ಕೆ ಬಂದ್ರು ನೋಡು.’

ಚರ್ಚೆ ಹೀಗೆ ಸಾಗಿದರೆ ಆಟವಾಗಿ ಬಿಡಬಹುದೆಂದು ಗಾಬರಿಯಾಗಿ ಜಗನ್ನಾಥ ಎದ್ದು ನಿಂತ. ಮೂವರೂ ಬಚ್ಚಲಿಗೆ ಹೋದರು. ಅಡಿಗರಿಗೆ ನೀರು ತುಂಬಿದೆ ಚೊಂಬು ಕೊಟ್ಟ. ಅವರು ಕೈ ತೊಳೆದು ಪಾಣಿಪಂಚೆಯಿಂದ ಒರಸಿಕೊಂಡು ಬಚ್ಚಲಿಂದ ಹೊರಬಂದು ಕಾದರು. ಅವರ ಮುಖದಲ್ಲಿ ಆವೇಗ ಏರಿತ್ತು. ತಾನು ಹೊರಗೆ ಬರಲು ಅಡಿಗರು ಕಾದಿದ್ದಾರೆಂದು ಜಗನ್ನಾಥನಿಗೆ ತಿಳಿಯಿತು. ಅವರೇನು ಹೇಳಬೇಕೆಂದಿದ್ದಾರೆ ಎನ್ನುವುದನ್ನು ಎದುರು ನೋಡುತ್ತ ಜಗನ್ನಾಥ ಹೊರಗೆ ಬಂದ. ರಾಯರು ಎಲೆಯಡಿಕೆ ಹಾಕುವ ಅವಸರದಲ್ಲಿ ಮಹಡಿ ಹತ್ತಿ ಹೋದರು.

ಜಗನ್ನಾಥ ಅಡಿಗರ ಪಕ್ಕದಲ್ಲಿ ನಿಂತ. ಅಡಿಗರು ಮಾತಾಡದೆ ಒಳಗಿನ ಸಂತೋಷವನ್ನೆಲ್ಲ ವ್ಯಕ್ತಪಡಿಸುವಂತೆ ಆರ್ದ್ರ ಕಣ್ಣುಗಳಿಂದ ಜಗನ್ನಾಥನನ್ನು ದಿಟ್ಟಿಸಿ ನೋಡಿದರು. ಹಾಳುಬಿದ್ದ ಬಸ್ತಿಯ. ಎದುರು ಕಲ್ಲಿನ ಮೇಲೆ ಕೂತಿದ್ದಾಗ ಅವರು ಮಾಡಿದ್ದು ನೆನಪಾಗಿ ಜಗನ್ನಾಥನಿಗೆ ದಿಗಿಲಾಯಿತು.

‘ಜಗಣ್ಣ, ನೀನೊಬ್ಬ ಗುಪ್ತ ಭಕ್ತ.’

ಜಗನ್ನಾಥ ನಕ್ಕ. ಅಡಿಗರು ಎಂಥ ಭೋಳೆ ಎಂದುಕೊಂಡ. ಅವನ ಬೆನ್ನಿನ ಮೇಲೆ ಅಡಿಗರು ಸಲಿಗೆಯಿಂದ ಕೈಯಿಟ್ಟರು. ಗಂಧ ಹಚ್ಚಿದ ಅವರ ಬರಿಮೈ ಅವನ ಶರ್ಟಿಗೆ ಸೋಕಿತು. ಅವನನ್ನು ತಬ್ಬುವ ಹಾಗೆ ಅವರ ಕೈ ಬೆನ್ನನ್ನು ಬಳಸಿತು. ಕತ್ತಿನ ಮೇಲೆ ಸಿಬ್ಬ, ಪರವಶನಾಗಿ ಹೊಳೆಯುವ ಕಣ್ಣುಗಳು. ಜಗನ್ನಾಥನಿಗೆ ಮುಜುಗರವಾಗಿ ಕಸಿವಿಸಿಯಾಗಿ ನಗಲು ಪ್ರಯತ್ನಿಸಿ ‘ಮೇಲೆ ಬನ್ನಿ’ ಎಂದ.

ರಾಯರು ಸುಸ್ತಾಗಿ ಚಾಪೆ ಮೇಲೆ ಕಣ್ಣುಮುಚ್ಚಿ ಮಲಗಿದ್ದರು. ಅಡಿಗರು ವೀಳ್ಯ ಹಾಕಿಕೊಳ್ಳುತ್ತ ಖುಷಿಯಲ್ಲಿ ತಾವು ಹೇಳಬೇಕೆಂದಿದ್ದ ಕತೆ ಪ್ರಾರಂಭಿಸಿದರು:

‘ಯೋಗಃ ಚಿತ್ತವೃತ್ತಿ ನಿರೋಧಃ. ಏಕಾಗ್ರತೇ ಮಹಿಮೇನ್ನ ಹೇಳೋ ಕಥೆ ಇದು. ಗೋಸಾಯಿಯೊಬ್ಬ ಒರಿಸ್ಸಾದಲ್ಲಿ ನನಗೆ ಹೇಳಿದ್ದು. ಚಿಕ್ಕಿ ಎದುರು ಹೇಳಕ್ಕಾಗಲ್ಲ ಅಂತ ಆಗ ನಾನು ನಿನಗೆ ಹೇಳ್ಲಿಲ್ಲ.

‘ಒಂದಾನೊಂದು ಕಾಲದಲ್ಲಿ ಒಬ್ಬ ಹೊಲೆಯನಿದ್ದ. ಅವನಿಗೆ ಅರಮನೇಲಿ ಕಕ್ಕಸ ಎತ್ತೋ ಕೆಲಸ. ಅರಮನೆ ಅಂದಮೇಲೆ ಹೇಳಬೇಕ? ಎತ್ತರವಾದ ಕಕ್ಕಸಗಳು. ಒಂದು ದಿನ ಅವ ಕಕ್ಕಸ ಎತ್ತಕ್ಕೆ ಹೋಗಿದ್ದಾಗ ರಾಣಿ ಕೂತಿದ್ದಳು. ಹೊಲೆಯ ಕಕ್ಕಸದ ಹೊರಗೆ ನಿಂತು ಬಗ್ಗಿದಾಗ ರಾಣಿಯ ಯೋನಿಪ್ರದೇಶವನ್ನು ಗುದ ಪ್ರದೇಶವನ್ನೂ ನೋಡಿ ಅವಾಕ್ಕಾದ. ಅವನು ಇಡೀ ಜನ್ಮದಲ್ಲಿ ಗೌರವರ್ಣದ ಸ್ತ್ರೀಯ ಆ ಭಾಗಗಳನ್ನ ನೋಡಿದ್ದೇ ಇಲ್ಲವಾದ್ದರಿಂದ ಹಗಲೂ ರಾತ್ರೆ ಅವನಿಗೆ ಅದೇ ಧ್ಯಾನವಾಗಿ ಬಿಟ್ಟಿತು. ರಾಣಿಯ ಬೆತ್ತಲೆ ಮೈ ಹೇಗಿರುತ್ತೇಂತ ಕಲ್ಪಿಸಿಕೋತ ಅವ ಅನ್ನ ಬಿಟ್ಟ, ನೀರು ಬಿಟ್ಟ, ನಿದ್ದೆ ಬಿಟ್ಟ, ಸ್ನಾನ ಬಿಟ್ಟ, ಅವನ ಮುಖ ಬತ್ತಿತ್ತು, ಕಣ್ಣು ಗುಳಿಬಿದ್ದವು, ಗಡ್ಡ ಬೆಳೀತು. ತಲೆಗೂದಲು ಜಟೆಯಾಯಿತು. ಹೊಲೆಯನ ಹೆಂಡತಿಗೆ ಗಾಬರಿಯಾಯಿತು. ತನ್ನ ಗಂಡ ಯಾಕೆ ಹೀಗೆ ಕೃಶ ಆಗಿದಾನೆ ತಿಳೀದೆ ಕಾರಣ ಹೇಳೂಂತ ಅವನನ್ನ ಕಾಡಿದಳು. ಬೇಡಿದಳು. ಒಂದು ದಿನ ಅವ ಹೀಗೆ ಹೀಗೆ ಆಯ್ತು ಅಂತ ಹೇಳಿದ. ಹೆಂಡತಿ ಬಹಳ ದಿನ ಯೋಚಿಸಿದಳು. ಗಂಡನ ಪ್ರಾಣ ಉಳಿಯೋದು ಎಲ್ಲಕ್ಕಿಂತ ಮುಖ್ಯ ಅಂತ ಅವಳಿಗೆ ಧೈರ್ಯ ಬೆಳೀತು. ಕೊನೇಗೊಂದು ದಿನ ಹೇಗೋ ಮಾಡಿ ರಾಣೀನ್ನ ನೋಡೇಬಿಟ್ಟಳು. ರಾಣಿ ಅವಳ ಕಥೇನ್ನ ಕೇಳಿ ನಕ್ಕಳು. ಆಗಲಿ ಅಂದಳು. ನಿನ್ನ ಗಂಡನ್ನ ಕರ್ಕೊಂಬಾ, ನನ್ನ ಇಡೀ ದೇಹಾನ್ನ ಅವನು ಬೆತ್ತಲೆ ನೋಡಬಹುದಂತೆ ಅಂತ ಅನ್ನು ಅಂದಳು. ಹೊಲೆಯ ಬಂದ. ನಿಂತ. ನೋಡಿದ. ಬೆತ್ತಲಾಗಿ ರಾಣಿ ನಿಂತಿದ್ದಾಳೆ. ಆದರೆ ಆಶ್ಚರ್ಯ ಅಂದರೆ ಅವನ್ನೇ ಧ್ಯಾನಿಸಿ ಧ್ಯಾನಿಸಿ ರಾಣಿ ಬೆತ್ತಲೆ ದೇಹಾನ್ನ ನೋಡೋ ಹೊತ್ತಿಗಾಗಲೇ ನೋಡಬೇಕೆನ್ನೊ ಮೋಹದಿಂದ ಅವ ಪಾರಾಗಿಬಿಟ್ಟಿದ್ದ. ಯೋಗಿಯಾಗಿಬಿಟ್ಟಿದ್ದ. ಜಟೆ ಗಡ್ಡಗಳು ಬೆಳೆದ ಹೊಲೆಯನನ್ನ ರಾಣಿ ನೋಡಿದಳು. ಬೆತ್ತಲೆ ರಾಣೀನ್ನ ಹೊಲೆಯ ನೋಡಿದ. ಅವಳ ಪಾದ ಮುಟ್ಟಿ ಹೊಲೆಯ ನಮಸ್ಕಾರ ಮಾಡಿದ. ಹೊಲೆಯನ ಪಾದ ಮುಟ್ಟಿ ರಾಣಿ ನಮಸ್ಕಾರ ಮಾಡಿದಳು.’

‘ನಾನು ಹೇಳ್ತ ಇದ್ದ ಮಾತಿನ ತಾತ್ಪರ್ಯ ಎಲ್ಲ ಈ ಕಥೆಲಿದೆ, ನಿನಗೆ ಇದರ ಅರ್ಥ ಕ್ರಮೇಣ ಹೊಳೆಯುತ್ತೆ’.