ಕಾಫಿ ಮುಗಿಸಿ ರಾಯರು ಹೊಗೆಸೊಪ್ಪಿಗೆ ಸುಣ್ಣ ತಿಕ್ಕುತ್ತ ಕೂತರು. ಜಗನ್ನಾಥ ತನ್ನ ಬಾಲ್ಯದ ಕಥೆಯನ್ನು ಪ್ರಾರಂಭಿಸಿದ.

‘ನನಗೂ ಅವಧೂತತನಕ್ಕೂ ನಡುವೆ ಐದು ರೂಪಾಯಿಯ ಒಂದು ಕಂದಕವಿದೆ ರಾಯರೆ. ಗೊತ್ತ ನಿಮಗೆ – ಯಾವತ್ತು ಸುಬ್ರಾಯ ಅಡಿಗರಿಗೆ ನಾನು ಅವರಿಂದ ಕದ್ದ ಐದು ರೂಪಾಯನ್ನ ಹಿಂದಕ್ಕೆ ಕೊಡ್ತೋನೋ, ಅವತ್ತೇ ನಾನು ಅನುಭಾವಿಯಾಗಿ ಮಂಜುನಾಥನ ಎದುರು ಕೈ ತಟ್ಟುತ್ತ ಕುಣೀತೇನೆಂತ ಕಾಣುತ್ತೆ.’

ಜಗನ್ನಾಥ ಮೋಜಿನಿಂದ ಮಾತಾಡಿದ. ಆದರೂ ನೆನಪು ಅವನನ್ನು ಕಲಕಿತ್ತು. ಇಂತಹ ಮನಃಸೂಕ್ಷ್ಮಗಳಲ್ಲಿ ಅಷ್ಟು ಆಸಕ್ತರಲ್ಲದ ರಾಯರೂ ಜಗನ್ನಾಥ ತೀವ್ರವಾಗಿ ಮಾತಾಡುತ್ತಿದ್ದುದರಿಂದ ಸಹಾನುಭೂತಿಯಿಂದ ಕೇಳಿಸಿಕೊಂಡರು.

ಜಗನ್ನಾಥ ಹೈಸ್ಕೂಲು ಓದುತ್ತಿದ್ದಾಗ ಸುಬ್ರಾಯ ಅಡಿಗರು ಅವನಿಗೆ ಬಹು ಪ್ರಿಯರಾದ ವ್ಯಕ್ತಿ. ಮದುವೆಯಾದ ಮೇಲೆ ಇದ್ದಕ್ಕಿದ್ದಂತೆ ವಿರಾಗಿಗಳಾಗಿ ಇಡೀ ಇಂಡಿಯಾ ದೇಶವನ್ನು ಸುತ್ತಾಡಿ ಬಂದ ಖಯಾಲಿ ಮನುಷ್ಯ ಅವರು. ಇಂಗ್ಲೀಷ್ ಹಿಂದಿ – ಎರಡು ಭಾಷೆಗಳನ್ನು ಮಾತಾಡಲು, ಓದಲು ಬಲ್ಲವರು. ತಾಯಿಗೆ ಬಹಳ ಬೇಕಾದವರು. ಅವರು ಮೀರಾ ಭಜನ್ ಹಾಡುವುದು; ತಾಯಿ ವೀಣೆ ನುಡಿಸುವುದು – ರೈಟರ್ ಕೃಷ್ಣಯ್ಯ ಕೇಳುತ್ತ ಕೂರುವುದು. ಹಿಮಾಲಯ ಹತ್ತಿ ಹೃಷಿಕೇಶ ಬದರಿಗಳನ್ನು ಸುತ್ತಾಡಿದ ಸಾಹಸ ಕಥೆ; ಅಲ್ಲಿನ ನಿಷ್ಠುರ ಸೌಂದರ್ಯದ ಬಗ್ಗೆ ಅವರ ಹಾವ ಭಾವಯುಕ್ತ ವರ್ಣನೆ – ಹುಡುಗನಿದ್ದಾಗ ಜಗನ್ನಾಥನನ್ನು ಮೈಮರೆಸುತ್ತಿತ್ತು. ‘ಬಿಸಿಲಿದ್ದಾಗ ಆ ಪರ್ವತದ ಮೇಲೆ ನಿಂತು ನೋಡಿದರೆ ಜಗಣ್ಣ ಏನೂಂತೀಯಾ? ಸಾವಿರಾರು ಅಡಿ ಆಳದ ಪ್ರಪಾತ ಕೆಳಗೆ. ಆದರೆ ಎಲ್ಲ ಎಷ್ಟು ತಿಳಿ, ಎಷ್ಟು ಸ್ಪಷ್ಟ, ಎಷ್ಟು ನಿರ್ಮಲ ಅಂದರೆ ಇಗೋ ಒಂದು ಪಾವಲಿಯನ್ನು ನೀನು ಮೇಲಿಂದ ಹೀಗೆ ಎತ್ತಿ ಹಾಕಿದರೆ ಅದು ಕೆಳಗೆ ಬೀಳುವ ತನಕ ಫಳ ಫಳ ಹೊಳೆಯುತ್ತ ಸ್ಫುಟವಾಗಿ ಕಣ್ಣಿಗೆ ಕಾಣಿಸುತ್ತಿರುತ್ತೆ.’ ವರ್ಣಿಸುವಾಗ ಅವರು ಡಬ್ಬಿಯಿಂದ ವಿರಾಮವಾಗಿ ಚಿಟಿಕೆ ನಸ್ಯ ತೆಗೆದು ಸೇವಿಸುತ್ತಿದ್ದರು. ಬೆಕ್ಕಸ ಬೆರಗಾದ ಕಣ್ಣುಗಳಿಂದ ತಲ್ಲೀನನಾದ ಜಗನ್ನಾಥನನ್ನು ನೋಡುತ್ತ ಮತ್ತೊಮ್ಮೆ ಆ ಸೌಂದರ್ಯವನ್ನು ಅನುಭವಿಸುತ್ತಿದ್ದರು.

ಅಡಿಗರು ಜಗನ್ನಾಥನಿಗೆ ಸಂಸ್ಕೃತ ಹೇಳಿಕೊಡಲು ನಿತ್ಯ ಬರುತ್ತಿದ್ದರು. ಎಂಥ ಹುಚ್ಚು ಅವರದ್ದೆಂದರೆ – ವಿಷ್ಣುಕ್ರಾಂತಿಯನ್ನು ಹುಲ್ಲಿನಿಂದ ಬೆರಳಿನಲ್ಲಿ ಬೇರ್ಪಡಿಸಿ ಹಿಡಿದು ನೀಲಮೇಘಶ್ಯಾಮನನ್ನು ನೆನೆಯುತ್ತ ಅವರು ಅತ್ತಿದ್ದನ್ನು ಜಗನ್ನಾಥ ನೋಡಿದ್ದಾನೆ. ಒಂದು ಸಾರಿ ಅವರು ಜಗನ್ನಾಥನನ್ನು ಭಾರತೀಪುರದಿಂದ ಬಹಳ ದೂರ ಕಾಡಿನಲ್ಲಿ ನಡೆಸಿಕೊಂಡು ಹೋಗಿ ಹಾಳುಬಿದ್ದ ಜೈನ ಬಸ್ತಿಯೊಂದರ ಬಳಿಯಲ್ಲಿದ್ದ ಕೊಳದ ದಂಡೆಯ ಮೇಲೆ ಕೂರಿಸಿದರು. ನಿರ್ಜನವಾದ ಪ್ರದೇಶ. ಸಂಜೆಯ ಹೊತ್ತು. ಅವತಾರಗಳ ಬಗ್ಗೆ ಮಾತಾಡುತ್ತ ಮಾತಾಡುತ್ತ ಮೈ ಮರೆತು ಕುಣಿದರು. ದನ ಕಾಯುವ ಹುಡುಗನೊಬ್ಬನ ಕೊಳಲಿನ ಧ್ವನಿ ಕೇಳಿಸಿತು. ‘ಕೃಷ್ಣ ನೀ ಬೇಗನೆ ಬಾರೊ’ ಎಂದು ಮಧುರವಾಗಿ ಹಾಡಲು ಪ್ರಾರಂಭಿಸಿದರು. ಜಗನ್ನಾಥನಿಗೆ ಮುಜುಗರ, ನಾಚಿಕೆ. ತನ್ನನ್ನೆ ಅವರು ಶ್ರೀಕೃಷ್ಣನೆಂದು ಭಾವಿಸುತ್ತ ಹಾಡುತ್ತಿದ್ದಾರೆಂದು ತಿಳಿದ ಮೇಲಂತೂ ದಿಗಿಲು, ಆದರೆ ಅಡಿಗರ ಆವೇಶ ಬಾಲಕನಾಗಿದ್ದ ತನ್ನನ್ನು ನಿಧಾನವಾಗಿ ಆಕ್ರಮಿಸಿದ್ದರಿಂದ ಕಣ್ಣುಗಳಿಂದ ನೀರು ಹರಿದಿತ್ತು. ‘ನೀನು ಸಾಮಾನ್ಯ ಹುಡುಗನಲ್ಲ, ಜಗಣ್ಣ ಶುಕಮುನಿಯಂತೆ ನೀನು ಒಬ್ಬ ದೊಡ್ಡ ಭಗವದ್ಭಕ್ತ’ ಎಂದು ಅವರು ಹೇಳಿದ್ದು ಕೇಳಿ ಕೋಡುಬಳೆಗಳ ಬಗ್ಗೆ ತನಗಿದ್ದ ವಿಶೇಷವಾದ ಆಸೆಯ ಬಗ್ಗೆ ನಾಚಿಕೆ ಹುಟ್ಟಿತು.

ಅಡಿಗರದು ನಿಷ್ಕಲ್ಮಷವಾದ, ದೇವರ ಅಮಲಿನಿಂದ ಮತ್ತೇರಿದ ಜೀವನ. ಬಾಳೆಲೆ ಕೊಯ್ದು ತಂದು ಬಿಸಿಲಲ್ಲಿ ಒಣಗಿಸಿ ಅದರಿಂದ ಊಟದೆಲೆ ದೊನ್ನೆಗಳನ್ನು ಮಾಡುವುದು; ತಕಲಿಯಲ್ಲಿ ಜನಿವಾರ ತೆಗೆಯುವುದು; ಹೊಳೆಯ ದಂಡೆಗೆ ಹೋಗಿ ದರ್ಭೆ ಕೊಯ್ದು ತರುವುದು – ಇವುಗಳನ್ನು ಮಾರುವುದು. ಕರೆದಲ್ಲಿಗೆ ಹೋಗಿ ಪೌರೋಹಿತ್ಯ ಮಾಡಿ ಕೊಟ್ಟಷ್ಟನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಬರುವುದು. ಹೀಗೆ ಸಂಪಾದಿಸಿದ ಹಣದಿಂದ ಗಾರ್ಹಸ್ಥ್ಯ ನಡೆಸುವುದು. ಆದರೆ ಬಂದವರಿಗೆಲ್ಲ ಊಟವಾಗಬೇಕು; ಕಾಫಿಯಾಗಬೇಕು; ತಪ್ಪಿದರೆ ಬೆಲ್ಲದ ಪಾನಕವಾದರೂ ಆಗಬೇಕು. ಯಾವುದಕ್ಕೂ ಕಮ್ಮಿಯಾಗಬಾರದು. ಮನೆ ತುಂಬ ಮಕ್ಕಳು ಬೇರೆ, ವರ್ಷಕ್ಕೊಂದರಂತೆ. ಅಲ್ಲೊಂದು ಅಳುತ್ತಿರುತ್ತೆ; ಇಲ್ಲೊಂದು ಉಚ್ಚೆ ಹೊಯ್ದು ತಟ್ಟುತ್ತಿರುತ್ತೆ; ಮಗದೊಂದು ಸಿಂಬಳ ಸುರಿಸುತ್ತ ಪನ್ನೇರಳೆ ತಿನ್ನುತ್ತಿರುತ್ತೆ – ಏತನ್ಮಧ್ಯೆ ಸುಬ್ರಾಯ ಅಡಿಗರು ತಕಲಿಯಲ್ಲಿ ನೂಲು ತೆಗೆಯುತ್ತ ದೇವರ ಮಹಿಮೆ ಕೊಂಡಾಡುತ್ತಾರೆ. ಅಥವಾ ಯಾವನೋ ಮೂರ್ಖ ಬಾಬನನ್ನೊ, ದೈವಭಕ್ತ ವಿಧವೆಯನ್ನೂ, ಉಪನಿಷತ್ತಿನ ವಾಕ್ಯವೊಂದಕ್ಕೆ ಶಂಕರ ರಾಮಾನುಜ ಮಾಧ್ವರ ಭಾಷ್ಯವನ್ನೊ ಹೊಗಳುತ್ತಾ ತಲ್ಲೀನರಾಗುತ್ತಾರೆ.

ಸುಬ್ರಾಯ ಅಡಿಗರು ಯಾರಲ್ಲೂ ದೋಷ ಕಾಣರು. ಕೆಲವರ ಹೃದಯದಲ್ಲಿ ಪರಮೇಶ್ವರನ ಸ್ವರೂಪ ಸ್ಫುಟವಾಗಿ ಕಂಡರೆ ಇನ್ನು ಕೆಲವರಲ್ಲದು ಮಸುಕಾಗಿತ್ತದೆ, ಅಹಂಕಾರದಿಂದ ಆವೃತ್ತವಾಗಿರುತ್ತದೆ ಎಂದು ಅವರ ಸಿದ್ದಾಂತ.

ಮನೆ ತುಂಬ ಮಕ್ಕಳು. ಕೆಲವು ಸತ್ತವು. ಕೆಲವು ಬದುಕಿದವು. ನಿತ್ಯವೂ ಅವರು ಇಷ್ಟು ಅಚ್ಯುತಾನಂತ ಗೋವಿಂದಕ್ಕೆ ಇಷ್ಟು ದೂರ ನಡೆದಂತಾಯಿತೆಂದು ಲೆಖ್ಖ ಹಾಕುತ್ತ ಹಳ್ಳಿಯಿಂದ ಪೇಟೆಗೆ ದಾರಿ ಸವೆಸಿ ಬಾಳೆಲೆ ಮಾರಿ ಅಂತೋಣಿ ಡಾಕ್ಟ್ರ ಹತ್ತಿರ ಔಷಧಿ ಕೊಂಡು ಗಾರ್ಹಸ್ಥ್ಯ ನಡೆಸಿದರು. ಸತ್ತದ್ದೆಷ್ಟು, ಹುಟ್ಟಿದ್ದೆಷ್ಟು, ಯಾವುದರ ಹುಟ್ಟುಹಬ್ಬ ಯಾವತ್ತು ಲೆಖ್ಖ ಗೊತ್ತಿದ್ದ ಅವರ ಹೆಂಡತಿ ಬಾಣಂತಿಯಿದ್ದಾಗಲೇ ಸತ್ತಳು. ಪುಣ್ಯಾತಿಗಿತ್ತಿ ಅವಳೇನೋ ಕಣ್ಣು ಮುಚ್ಚಿದಳೆಂದರೆ ಮನೆ ನಡೆಯಬೇಡವೆ. ಚಿಳ್ಳೆ ಪಿಳ್ಳೆ ಮಕ್ಕಳನ್ನು ಊರೂರು ಅಲೆಯುವ ತಾನು ಆರೈಕೆ ಮಾಡುವುದು ಸಾಧ್ಯವೆ – ಆದ್ದರಿಂದ ಸತ್ತ ಹೆಂಡತಿಯ ತಂಗಿಯನ್ನೆ ಅಡಿಗರು ಮತ್ತೆ ಮದುವೆಯಾದರು. ಅವಳಿಂದ ಇನ್ನಷ್ಟು ಮಕ್ಕಳು ಹುಟ್ಟಿದವು. ಎಷ್ಟು? ಯಾಕೆ? – ಈ ದೇಹದ ದೌರ್ಬಲ್ಯ ತೀರಲು ಇನ್ನೆಷ್ಟು ಜನ್ಮವೆತ್ತಬೇಕೋ ಎಂದು ಸುಬ್ರಾಯ ಅಡಿಗರು ವ್ಯಸನದಿಂದ ನಗುತ್ತಾರೆ. ಮಂಜುನಾಥ ವಿರಾಗಿಗಳ ದೇವ ಮಾತ್ರನಲ್ಲ – ಅನುರಾಗಿಗಳ ದೇವನೂ ಕೂಡ; ಸಂಸಾರ ನಡೆಸುವ ಹರಕೆ ಹೊತ್ತವ ತಾನು ಎನ್ನುತ್ತಾರೆ. ಏತನ್ಮಧ್ಯೆ ಅವರಿಗೆ ಕೆಲವು ಕಾಲ ವೈರಾಗ್ಯ ಪ್ರಾಪ್ತವಾಗಿತ್ತು. ಕಾಲಲ್ಲಿ ತನಗೆ ಚಕ್ರವಿದೆ, ಅದಕ್ಕೇ ಈ ಪರಿಭ್ರಮಣದ ಹುಚ್ಚು ಎಂದು ಅವರು ಆಗ ಭರತವರ್ಷದ ಮೂಲೆ ಮೂಲೆ ಸುತ್ತಿ ಸಂತರನ್ನು ಮಹಿಮರನ್ನು ನೋಡಿ ಬಂದದ್ದು. ಆಗಲೇ ಅವರು ವಾರ್ಧಾದಲ್ಲಿ ಕರ್ಮಯೋಗದ ಮುಖಾಂತರ ಮೋಕ್ಷದ ದಾರಿಯಲ್ಲಿದ್ದ ಗಾಂಧೀಜಿಯ ಪ್ರಾರ್ಥನಾ ಸಭೆಗೆ ಹೋದದ್ದು; ಹರಿಜನ ಘಂಡಿಗೆ ತನ್ನ ಕಿವಿಯಲ್ಲಿದ್ದ ಒಂಡಿಗಳನ್ನೂ ಯಜ್ಞೋಪವೀತದಲ್ಲಿದ್ದ ಉಂಗುರವನ್ನೂ ಕೊಟ್ಟು ಅವರ ಕೃಪೆಗೆ ಪಾತ್ರರಾದದ್ದು.

ವೈರಾಗ್ಯದ ಬೆಂಕಿ ಆರುತ್ತಿದ್ದಂತೆ ಮನೆಯ ಕಡೆ ಕಾಲು ಎಳೆಯಿತು. ಬಂದಾಗ ನೋಡಿದ್ದೇನು? ಬಾಲವಿಧವೆಯಾಗಿದ್ದ ತಂಗಿ ಬಸುರಾಗಿದ್ದಳು. ಯಾರಿಗೆ ಯಾಕೆ ಬಸುರಾದಳೆಂದು ಕೆದಕಲಿಲ್ಲ; ತಂಗಿಯನ್ನು ಬಯ್ಯಲಿಲ್ಲ. ಹೆಂಡತಿಯ ಕಿರಿಕಿರಿಯನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಹೊಟ್ಟೆ ಬೆಳೆಯಿತು. ಊರು ಮಾತಾಡಿತು, ಯಾರನ್ನೋ ಹಿಡಿದು ಗರ್ಭ ತೆಗೆಸಿಕೊಂಡಳು – ಏನು ಮಾಡಲಿಕ್ಕಾಗುತ್ತೆ? ಅವಳ ಪ್ರಾರಬ್ಧ – ಆದರೆ ಘಟಶ್ರಾದ್ಧ ಮಾಡದೆ ಬೇರೆ ದಿಕ್ಕಿದೆಯೆ ? ಪೌರೋಹಿತ್ಯದಿಂದಲೇ ಮಕ್ಕಳ ಹೊಟ್ಟೆ ಹೊರೆಯಬೇಕಲ್ಲವೆ? ಕರ್ಮಫಲ ತೀರಲೇಬೇಕಲ್ಲವೆ? ಎಂದು ತಂಗಿಯನ್ನು ಜಾತಿಯಿಂದ ಹೊರಹಾಕಿದರು. ಆದರೆ ಮನೆಯಲ್ಲಿ ಅವಳನ್ನು ಇಟ್ಟುಕೊಂಡರು. ಚಾವಡಿಯಲ್ಲಿ ಮಲಗುತ್ತಾಳೆ; ಚಾವಡಿಯಲ್ಲಿ ಊಟ ಮಾಡುತ್ತಾಳೆ; ಬಾಳೆಲೆ ಕೊಯ್ದು ತರುತ್ತಾಳೆ ; ತಲೆ ಬೋಳಿಸಿಕೊಂಡೇ ಇದ್ದಾಳೆ – ಅವಳ ವೈರಾಗ್ಯ ತನ್ನದಕ್ಕಿಂತ ದೊಡ್ಡದೆಂದು ಹೊಗಳಿದರು. ದೇವಸ್ಥಾನಕ್ಕೆ ಅವಳ ಹಾಗೆ ಯಾರು ಇಡೀ ದಿನ ಸುತ್ತು ಬರುತ್ತಾರೆ? ಒಳಗೆ ಬರುವುದಿಲ್ಲ, ಮೈಲಿಗೆ ಮಾಡುವುದಿಲ್ಲ. ಹೆಣ್ಣುಮಕ್ಕಳಿಗೆ ತಲೆ ಬಾಚುತ್ತಾಳೆ. ನಿತ್ಯ ಅಂಗಳ ಅವಳೇ ಸಾರಿಸುತ್ತಾಳೆ. ತಾವರೆ ಎಲೆಯ ಮೇಲಿನ ನೀರಿನ ಬಿಂದುವಿನಂತೆ ಅಂತೂ ಸಾರಿಸುತ್ತಾಳೆ. ತಾವರೆ ಎಲೆಯ ಮೇಲಿನ ನೀರಿನ ಬಿಂದುವಿನಂತೆ ಅಂತೂ ಬದುಕುತ್ತಾಳೆ, ಕರ್ಮ ಸವೆಸುತ್ತ. ಅಣ್ಣ ಎನ್ನುವ ಪ್ರೀತಿ ಅವಳಿಗೆ ಹೋಗಿಲ್ಲ; ತಂಗಿ ಎನ್ನುವ ಮೋಹ ತನಗೆ ಹರಿದಿಲ್ಲ. ತಪ್ಪು ಸರಿ ಮಂಜುನಾಥನಿಗೆ ಬಿಡೋಣ. ಅಡಿಗರ ಮಾತನ್ನು ಊರೂ ಒಪ್ಪಿತು – ಯಾರ ಮನೆಯ ದೋಸೆಯಲ್ಲಿ ತೂತಿಲ್ಲ ಹೇಳಿ.

ಸುಬ್ರಾಯ ಅಡಿಗರು ಜಗನ್ನಾಥನನ್ನು ಮೋಹಿಸಿದ್ದರು. ತಾಯಿಗೂ ಅವರು ಇಷ್ಟವಾದ್ದರಿಂದ ಇನ್ನಷ್ಟು ಅವರ ಮೇಲೆ ತನಗೆ ಗೌರವ. ಅಂಗಿ ಹಾಕದ ಅಡಿಗರಿಗೆ ಇಂಗ್ಲಿಷ್ ಬರುತ್ತದೆಂದು ಆಶ್ಚರ್ಯ. ಅಖಿಲ ಭಾರತ ಪರ್ಯಟನದಲ್ಲಿ ಅವರು ಹಿಂದೂ ಧರ್ಮದ ಬಗ್ಗೆ ಅನೇಕ ಇಂಗ್ಲಿಷ್ ಪುಸ್ತಕಗಳನ್ನು ಗಳಿಸಿದ್ದರು. ಹೃಷಿಕೇಶದ ಶಿವಾನಂದರು ತಮ್ಮ ಪುಸ್ತಕಗಳನ್ನು ಆಟೋಗ್ರಾಫ್ ಮಾಡಿ ಹರಸಿ ಅವರಿಗೆ ಕೊಟ್ಟಿದ್ದರು.

ಜಗನ್ನಾಥನಿಗೆ ಅವರು ತಮ್ಮ ಪುಸ್ತಕಗಳನ್ನು ಕೊಡುವರು. ಎದುರು ಕೂತು ಹಾಡುವರು. ‘ಬ್ರಹ್ಮಚರ್ಯವೇ ಜೀವನ ವೀರ್ಯನಾಶವೇ ಮೃತ್ಯು’ ಎನ್ನುವ ಪುಸ್ತಕ ಕೊಟ್ಟು ಈ ಕಠಿಣ ದಾರಿ ನನಗೆ ಸಾಧ್ಯವಾಗಿಲ್ಲ; ನಿನಗೆ ಸಾಧ್ಯವೋ ನೋಡು; ಹೃಷಿಕೇಶದಲ್ಲಿದ್ದಾಗಲೇ ನನಗೆ ಸ್ಪಷ್ಟಸ್ಖಲನವಾಯಿತೆಂದ ಮೇಲೆ ನನಗೆ ಈ ಜನ್ಮದಲ್ಲಿ ನಿವೃತ್ತಿಯಿಲ್ಲವೆಂದು ಕಂಡುಕೊಂಡೆ ಎನ್ನುವರು. ತನ್ನ ದೇಹಕ್ಕಿರುವ ಸುಖದ ಸಾಧ್ಯತೆಗಳನ್ನು ಅರಿಯತೊಡಗಿದ್ದ ಜಗನ್ನಾಥನಿಗೆ ಈ ಪುಸ್ತಕ ಓದುತ್ತ ಆದ ಅವಮಾನ ಅಷ್ಟಿಷ್ಟಲ್ಲ.

ಮೈಮೇಲಿನ ಸಿಬ್ಬವನ್ನು ವಿಭೂತಿಯೆನ್ನುವ, ಹಾಡುತ್ತ ಅಳುವ, ಅಳುತ್ತ ನಗುವ, ನಿರ್ಜನ ಪ್ರದೇಶಗಳಲ್ಲಿ ಕುಣಿಯುವ, ವರ್ಷದಲ್ಲಿ ಉಳಿದ ಗಳಿಕೆಯನ್ನೆಲ್ಲ ಕಾರ್ತೀಕ ಮಾಸದಲ್ಲಿ ಸಂತರ್ಪಣೆ ಮಾಡಿ ಕಳೆದುಕೊಂಡು ಬಿಡುವ, ಮೋಹಕವಾದ ಕಣ್ಣುಗಳ, ಇಲ್ಲಿದ್ದೂ ಎಲ್ಲೋ ಇರುವ ಈ ದೇವರ ಹುಚ್ಚನಿಗೆ ಒಂದು ಸಾರಿ ನಿಜವಾದ ಹುಚ್ಚು ಹಿಡಿದುಬಿಟ್ಟಿತು. ಉಗ್ರವಾದ ಹುಚ್ಚು. ಕಲ್ಲು ಎಸೆಯುವರು; ಹತ್ತಿರ ಹೋದರೆ ಕಚ್ಚುವರು; ಉಗಿಯುವರು; ಅರ್ಧರಾತ್ರೆ ಎದ್ದು ಗೋಳೋ ಎಂದು ಅಳುವರು; ಹೆಂಡತಿಯನ್ನು ಕಂಡರೆ ಕೆಂಡವಾಗುವರು – ಹೀಗೆ ಊರೆಲ್ಲ ಸುದ್ದಿ. ಜಗನ್ನಾಥ ಧೈರ್ಯಮಾಡಿ ಅವರನ್ನು ನೋಡಹೋದಾಗ ಮಾತ್ರ ಅಳುತ್ತ ಕೂತರು. ಇನ್ನೇನು ಅವರು ಅವಧೂತರಾಗಿಬಿಡುತ್ತಾರೆ ಎಂದು ಜಗನ್ನಾಥ ಕಾದ. ಆದರೆ ಹುಚ್ಚು ಇಳಿದು ಮಂಕಾದರು. ಈ ಮಂಕನ್ನು ಧ್ಯಾನಸ್ಥಿತಿಯೆಂದು ಜಗನ್ನಾಥ ಬಗೆದ.

ಅಡಿಗರ ಅನುಯಾಯಿಯಾಗಿ ತನ್ನ ವರ್ತನೆಯನ್ನೆಲ್ಲ ಬದಲಿಸಿಕೊಳ್ಳುತ್ತ ಹೋದ ಮಗನನ್ನು ಕಂಡು ತಾಯಿಗೆ ದಿಗಿಲಾಗಿತ್ತು. ತಾಯಿ ಹೆದರುವುದನ್ನು ಕಂಡು ಜಗನ್ನಾಥ ತನ್ನ ವೈರಾಗ್ಯವನ್ನು ಇನ್ನೂ ಅತಿಮಾಡಿ ಬೆಳಿಗ್ಗೆ ಕಾಫಿ ತಿಂಡಿ ಬಿಟ್ಟು ತುಳಸಿ ಸೊಪ್ಪಿನ ಫಳಾರ ಪ್ರಾರಂಭಿಸಿದ್ದ. ಜಗನ್ನಾಥ ಮಾತಾಡುವಾಗ ಕೆಲವು ಬಾರಿ ಕಣ್ಣು ಮುಚ್ಚಿಕೊಳ್ಳುವುದು, ಆಮೇಲೆ ಕಣ್ಣುಗಳನ್ನು ದೊಡ್ಡದಾಗಿ ಅರಳಿಸಿ ಸುಮ್ಮನಾಗಿಬಿಡುವುದು, ನಡುನಡುವೆ ನಗುವುದು, ಎರಡು ಕೈಗಳನ್ನೂ ಎತ್ತಿ ಕತ್ತನ್ನು ಬಲಕ್ಕೆ ಬಾಗಿಸಿ ಆಶ್ಚರ್ಯದ ಮಾತಾಡುವುದು – ಎಲ್ಲವೂ ಅಡಿಗರ ಅನುಕರಣೆಯಾಗಿತ್ತು.

ಆಗ ಹೈಸ್ಕೂಲಿನಲ್ಲಿ ಅದೇ ಸೀಬಿನಕೆರೆ ಕಮಲ – ಈಗ ಬೊಂಬಾಯಿಯಲ್ಲಿರುವವಳು – ಓದುತ್ತಿದ್ದಳು. ಜಗನ್ನಾಥನ ಕ್ಲಾಸಿನಲ್ಲಿದ್ದ ಆಕೆಯ ಬಗ್ಗೆ Leaf, Lotus, Pearl, Umbrella ಶಬ್ದಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ನಗಾಡುವವರ ಮಧ್ಯೆ ಅಡಿಗರ ಶಿಷ್ಯನಾದ ಜಗನ್ನಾಥ ಗಂಭೀರ ಮುಖಮುದ್ರೆ ಹೊತ್ತು ಓಡಾಡುತ್ತಿದ್ದ. ಗೋಡೆಯ ಮೇಲೆ ಪೆನ್ಸಿಲ್‌ನಲ್ಲಿ ನಿತ್ಯ ಮೂಡುತ್ತಿದ್ದ ಈ ಮಾತುಗಳನ್ನು ಅಳಿಸುತ್ತಿದ್ದ. ಶರತ್‌ಚಂದ್ರರ ‘ದೇವದಾಸ’, ‘ಶ್ರೇಷಪ್ರಶ್ನೆ’ ಕಾದಂಬರಿಗಳಿಂದ ಗಾಢವಾಗಿ ಪ್ರಭಾವಿತನಾದ ಜಗನ್ನಾಥನ ಕಣ್ಣುಗಳಲ್ಲಿ ಈ ವೇಶ್ಯೆಯ ಮಗಳಾದ ಕಮಲ ಆದರ್ಶದ ಹೆಣ್ಣಾದಳು. ಜಮೀನುದಾರರ ಮಗನಾದ್ದರಿಂದ ಉಳಿದ ಹುಡುಗರು ಗೌರವಿಸುತ್ತಿದ್ದ ಜಗನ್ನಾಥನ ಗಾಂಭೀರ್ಯ ಬೆಳೆಯುತ್ತಲೇ ಹೋಯಿತು. ಅಡಿಗರ ಅನುಭಾವಪರತೆ, ಉಪಾಧ್ಯಾಯರ ಮೆಚ್ಚಿಗೆ, ಮನೆಯ ಶ್ರೀಮಂತಿಕೆ, ತಾಯಿಯ ಆದರ, ಶರತ್ ಕಾದಂಬರಿಗಳ ಭಾವುಕತೆ- ಎಲ್ಲ ಬೆರೆತು ಜಗನ್ನಾಥನಿಗೆ ನಡೆಯುವ ನೆಲ ಕಾಣದಂತಾಯಿತು.

ಒಳಗೆ ಮಾತ್ರ ಜಗನ್ನಾಥ ಬೇಯುತ್ತಿದ್ದ. ತನ್ನ ಅಂತರಂಗದ ಆರಾಧ್ಯದೇವತೆಯಾದ ಕಮಲಳ ಬಗ್ಗೆ ತನ್ನ ಪ್ರೇಮ ಪವಿತ್ರವಾದದ್ದಾದರೂ ತನ್ನ ಸಹಪಾಠಿಯೊಬ್ಬ, ಕುಂಟೆಕೋಣನಂತೆ ಬೆಳೆದಿದ್ದ ರಂಗಯ್ಯ- ಪೂಟು ಲಾಯರಿ ತಿಮ್ಮಯ್ಯ ಎನ್ನುವವನ ಮಗ- ಅವಳ ಹಾಡಿಗೆ ತಬಲ ಬಾರಿಸುತ್ತಾನೆ, ಅವಳಿಗೆ ಕರ್ಚೀಪು ಪ್ರೆಸೆಂಟ್ ಮಾಡಿದ್ದಾನೆ, ಜೊತೆಗೋದುವ ನೆವದಲ್ಲಿ ಅವಳ ಮನೆಯಲ್ಲೇ ಇರುತ್ತಾನೆ ಇತ್ಯಾದಿ ಕೇಳಿದ ದಿನದಿಂದ ಜಗನ್ನಾಥ ಬಹು ದುಃಖಿಯಾದ. ರೈಟರ್ ಕೃಷ್ಣಯ್ಯನ ಕೋಣೆಯಲ್ಲಿ ಒಮ್ಮೆ ಅಕಸ್ಮಾತ್ ತನ್ನ ಕಣ್ಣಿಗೆ ಬಿದ್ದ ‘ಕಲಿಯುಗ’ ಪತ್ರಿಕೆಯಲ್ಲಿ ವರ್ಣಿಸಿದ್ದಂತೆ ಕಮಲೆಯನ್ನು ರಂಗಯ್ಯ ಹಂತ ಹಂತವಾಗಿ ಬೆತ್ತಲೆ ಮಾಡುವುದು, ಅನಂತರ ಅವನೂ ಬೆತ್ತಲೆಯಾಗುವುದು ಇತ್ಯಾದಿಗಳನ್ನು ಸದಾ ಕಲ್ಪಿಸಿಕೊಳ್ಳಲಾರದೆ ಇರಲಾರದ, ಯಾರಿಗೂ ಹೇಳಿಕೊಳ್ಳಲಾರದ, ಅನಿವಾರ್ಯ ಸಂಕಟದಲ್ಲಿ ಊಟ, ನಿದ್ದೆ, ಓದು ಏನೂ ಸೇರದೆ ಇರುವಾಗ ಜಗನ್ನಾಥ ಅಡಿಗರ ಅನುಭಾವಕ್ಕೆ ಪೂರ್ಣ ಶರಣಾಗಲು ಮಾಡಿದ್ದ ಪ್ರಯತ್ನವೆಲ್ಲ ವಿಫಲವಾಗಿತ್ತು.

ಹೀಗಿರುವಾಗ ಇವತ್ತಿಗೂ ತನ್ನ ಕಣ್ಣಿಗೆ ಕಟ್ಟಿದಂತಿರುವ, ತನ್ನ ಜೀವನದ ಗಡಿ ಬದಲಾಯಿಸಿದ ಒಂದು ಘಟನೆ ನಡೆಯಿತು. ಅಡಿಗರು ಅವನಿಗೊಂದು ಪುಸ್ತಕ ಕೊಟ್ಟಿದ್ದರು. ಸಂತರ ಜೀವನದ ಬಗ್ಗೆ ಶಿವಾನಂದರು ಬರೆದದ್ದು. ಅದಕ್ಕೆ ತಾಯಿನಾಡು ಪತ್ರಿಕೆಯ ರಟ್ಟು ಹಾಕಿತ್ತು. ಆ ಪತ್ರಿಕೆಯ ಮೇಲಿದ್ದ ಹಳೆ ಸುದ್ದಿಯನ್ನೋದುವ ಕುತೂಹಲದಲ್ಲಿ ರಟ್ಟನ್ನು ಬಿಚ್ಚಿದ. ರಟ್ಟಿನೊಳಗಿಂದ ಐದು ರೂಪಾಯಿಯ ನೋಟೊಂದು ಬಿತ್ತು. ಗರಿಗರಿಯಾದ ಹೊಸ ನೋಟು. ಈ ರಟ್ಟೊಳಗೆ ಈ ದುಡ್ಡನ್ನೇಕೆ ಅಡಿಗರು ಬಚ್ಚಿಟ್ಟಿದ್ದಾರೆ? ಯಾರಿಂದ ಬಚ್ಚಿಟ್ಟಿದ್ದಾರೆ? ಯಾಕೆ? ಶಿವಾನಂದರು ಕೊಟ್ಟ ದುಡ್ಡೋ? ಆಪತ್ತಿನ ಕಾಲಕ್ಕೆ ಒದಗಲಿ ಎಂದು ಬಚ್ಚಿಟ್ಟರೊ? ಇತ್ಯಾದಿ ಪ್ರಶ್ನೆಗಳು ಥಟ್ಟನೇ ಎದ್ದವು. ಒಟ್ಟಿನಲ್ಲಿ ಪ್ರಪಂಚದ ಯಾವ ವ್ಯವಹಾರವನ್ನೂ ಹಚ್ಚಿಕೊಳ್ಳದ ಅಡಿಗರು ಹೀಗೆ ಹಣ ಬಚ್ಚಿಟ್ಟಿದ್ದಾರೆಂಬುದು ಜಗನ್ನಾಥನಿಗೆ ಆಶ್ಚರ್ಯವೆನ್ನಿಸಿತು.

ಈಗಲೂ ಜಗನ್ನಾಥನಿಗೆ ಸಂಪೂರ್ಣ ಅರ್ಥವಾಗದ ವಿಷಯವೆಂದರೆ ಯಾಕೆ ತಾನು ಆ ಐದು ರೂಪಾಯಿಯ ನೋಟನ್ನು ರಟ್ಟೊಳಗೆ ಸೇರಿಸದೆ ತನ್ನ ಜೇಬಿಬಲ್ಲಿಟ್ಟುಕೊಂಡೆ ಎಂಬುದು. ಯಾವುದಕ್ಕೂ ಜಗನ್ನಾಥನಿಗೆ ಕೊರತೆಯಿರಲಿಲ್ಲ. ತಾಯಿ ಅವನ ಕೈಗೆ ಹಣ ಕೊಡದಿದ್ದರೂ ಅವನು ಬಯಸಿದ್ದನ್ನೆಲ್ಲ ಕೊಂಡುಕೊಡುತ್ತಿದ್ದರು. ಆದರೂ ಹೀಗೆ ಯಾವ ಯೋಚನೆ ಗೊಂದಲಗಳೂ ಇಲ್ಲದೆ ಐದು ರೂಪಾಯಿ ನೋಟನ್ನು ಜೇಬಿಗಿಳಿಬಿಟ್ಟ ಘಳಿಗೆಯಿಂದ ತನ್ನಲ್ಲಿ ಕ್ರಮೇಣ ಪರಿವರ್ತನೆಯಗಳಾದುವು. ಆದರೆ ತನು ಬದುಕುತ್ತಿದ್ದ ಲೋಕದಲ್ಲಿ ಹೊಸ ಕಿಂಡಿಗಳನ್ನು ಕೊರೆದುಬಿಟ್ಟು ಈ ಘಟನೆಯ ಅರ್ಥ ಇನ್ನೂ ಜಗನ್ನಾಥನಿಗೆ ಹೊಳೆದಿಲ್ಲ.

ನಡೆದದ್ದನ್ನು ಮಾತ್ರ ಜಗನ್ನಾಥ ಹೇಳಬಲ್ಲ. ಆ ತನಕ ತಾಯಿಯಿಂದ ಏನನ್ನೂ ಜಗನ್ನಾಥ ಮುಚ್ಚಿಟ್ಟಿರಲಿಲ್ಲ. ಆದರೆ ಐದು ರೂಪಾಯಿಗಳನ್ನು ಜೇಬೀಗೆ ಇಳಿಸಿದ ಮೇಲೆ ಮಾತ್ರ ಬಟ್ಟೆ ಬದಲಾಯಿಸುವಾಗ ಜೇಬಿನಿಂದ ಜೇಬಿಗೆ ಆ ಹಣವನ್ನು ತಾಯಿಗೆ ತಿಳಿಯದಂತೆ ಬದಲಾಯಿಸಿದ್ದ. ಅದಕ್ಕಾಗಿ ಯಾರೂ ಬರದ ಮನೆಯ ಮೂಲೆಗಳನ್ನು ಪತ್ತೆ ಮಾಡಿದ. ತಯಿ ಬೆನ್ನುಜ್ಜುವಾಗ, ಕೂದಲುಗಳಲ್ಲಿ ಬೆರಳಾಡಿಸುತ್ತ ಆಪ್ತವಾಗಿ ಮಾತಾಡುವಾಗ ಈ ಬಚ್ಚಿಟ್ಟ ಐದು ರೂಪಾಯಿಗಳು ತಾಯಿಯ ಮಮತೆಯನ್ನು ಸಂಪೂರ್ಣ ಅನುಭವಿಸದಂತೆ ಮಾಡಿದುವು. ತನ್ನನ್ನು ಜಗಣ್ಣ ಎಂದು ಪ್ರೇಮದಿಂದ ಕರೆಯುವ ಚಿಕ್ಕಿ, ರೈಟರ್ ಕೃಷ್ಣಯ್ಯ ಯಾರಿಗೂ ತಿಳಿಯದ ಗುಟ್ಟು ತನ್ನ ಹತ್ತಿರವಿದೆಯೆಂಬ ಅಸಹನೀಯವಾದ ಭಾವನೆ ಬೆಳೆಯುತ್ತ ತನ್ನ ಮರ್ಜಿಯಲ್ಲಿ ಸೂಕ್ಷ್ಮ ಮಾರ್ಪಾಟುಗಳಾದುವು. ಎಲ್ಲರಿಂದ ತಾನು ಪ್ರತ್ಯೇಕನಾದೆ, ಪ್ರಾಯಶಃ ತನ್ನನ್ನು ಆವರಿಸಿಕೊಂಡಿದ್ದ ಹಿರಿಯರಿಗೆ ಗೊತ್ತಾಗದಂತಹ ಒಂದು ಕತ್ತಲಿನ ಮೂಲೆ ತನ್ನ ಪ್ರಜ್ಞೆಯಲ್ಲಿದೆಯೆಂಬುದೇ ತನ್ನನ್ನು ಮೋಹಿಸಿರಬೇಕು. ಆಗ ಈ ದಿಗಿಲು ತನ್ನ ಜೀವಕ್ಕೊಂದು ಹೊಸ ರುಚಿ ತಂದಿರಬೇಕು. ಯಾರಾದರೂ ಆಪ್ತನೊಬ್ಬ ತನ್ನನ್ನು ಆಗ ಈ ಹಣ ಏನು ಮಾಡುವಿ ಎಂದು ಕೇಳಿದ್ದರೆ ಪುಸ್ತಕ ಹಿಂದಕ್ಕೆ ಕೊಡುವಾಗ ರಟ್ಟಿನೊಳಗಿಟ್ಟುಬಿಡುತ್ತೇನೆ ಎಂದು ಹೇಳುತ್ತಿದ್ದ, ನಿಜವಾಗಿ.

ಆದರೆ ಆಶ್ಚರ್ಯವೆಂದರೆ ತಾನು ಹಾಗೆ ಮಾಡಲಿಲ್ಲ. ಕಳ್ಳತನದ ಉತ್ಕಟತೆಯನ್ನು ಅನುಭವಿಸಲೇಬೇಕಾದ ಸ್ಥಿತಿಯನ್ನು ಜಗನ್ನಾಥ ಮುಟ್ಟಿದ. ಒಂದು ಭಾನುವಾರ ಬೆಳಿಗ್ಗೆ ಅಡಿಗರು ಬಂದರು; ನಸುಕಿಗೆ ಮೊದಲೇ ಎದ್ದು ಸ್ನಾನಮಾಡಿ ಮೈಗೆ ಗಂಧ ಮೆತ್ತಿಕೊಂಡು ಹಳ್ಳಿಯಿಂದ ಸರ ಸರ ನಡೆದು ಬಂದಿದ್ದ ಅವರ ಮುಖ ಮೈ ಬೆವತಿದ್ದುವು. ಅವರ ಕಣ್ಣುಗಳು ಖುಷಿಯಿಂದ ಹೊಳೆಯುತ್ತಿದ್ದುವು. ಅಂಗಳದಲ್ಲಿ ಜಗನ್ನಾಥನನ್ನು ಕಂಡವರೇ, ‘ಏನೋ ಜಗಣ್ಣ, ಏನಾಯ್ತು ಅಂತಿ? ದಾರಿಯಲ್ಲಿ ಸ್ಮಶಾನ ಹಾಯ್ದು ಬಂದೆ. ಇನ್ನೂ ಕತ್ತಲು ಕತ್ತಲು. ಹೊಲೆಯನೊಬ್ಬ ಗುಂಡಿ ತೋಡುತ್ತಿದ್ದ. ಸತ್ತ ಕರುವನ್ನು ಹುಗಿಯಲಿಕ್ಕೆ ಇರಬಹುದು. ಅವನ ಕಪ್ಪು ಮೈ, ಜಡೆಗಟ್ಟಿದ ಕೂದಲು, ಪುಷ್ಪವಾದ ಮಾಂಸಖಂಡಗಳ ಭುಜ, ಅಗಿಯುವಾಗ ಅವನ ಏಕಾಗ್ರತೆ ಎಲ್ಲ ನನಗೆ ಥಟ್ಟನೆ ನೀಲಕಂಠಸ್ವಾಮಿಯ ನೆನಪು ಮಾಡಿಕೊಟ್ಟಿತು. ಹಾಗೇ ನೆನೆಯುತ್ತ ಬರುವಾಗ ಕನ್ಯಾಕುಮಾರಿ ಕ್ಷೇತ್ರದಲ್ಲಿ ಯೋಗಿಗಳೊಬ್ಬರು ಹೇಳಿದ್ದು ನೆನಪಾಯಿತು. ಈ ದೇಹ ಮೊದಲು ಶುದ್ಧವಾಗಬೇಕು, ಎಷ್ಟೆಂದರೆ ಮಲವಿಸರ್ಜನೆ ಮಾಡಿದ ನಂತರ ಶುಚಿ ಮಾಡಿಕೊಳ್ಳಬೇಕಾದ ಅಗತ್ಯ ಬೀಳಬಾರದು – ಅಷ್ಟು, ಹಾಗಾಗಬೇಕಾದಲ್ಲಿ ಎಷ್ಟು ಕಡಿಮೆ ತಿನ್ನುವುದಕ್ಕೆ ಈ ದೇಹ ಈ ಮನಸ್ಸು ಒಗ್ಗಿಕೋಬೇಕು – ನೋಡು. ಪಶುಪಕ್ಷಿಗಳಿಗೆ ಆಗ ಮನುಷ್ಯ ನಿಜವಾಗಿ ಹತ್ತಿರವಾದಾನು. ಏನೋ ಹೇಳಹೋಗಿ ಏನೋ ಹೇಳಿದೆ. ಆ ಹೊಲೆಯನೂ ಸ್ಮಶಾನ ವಾಸಿ ಪರಮೇಶ್ವರ ಯಾಕಿರಬಾರದು? ಹಾಗೆ ನಾನು ಭಾವಿಸುತ್ತೇನೆ ಅಷ್ಟೆ – ಇಲ್ಲಿ’ ಎಂದು ತಲೆ ಮುಟ್ಟಿ ತೋರಿಸಿ, ಆಮೇಲೆ ಎದೆಯ ಮೇಲೆ ಕೈಯಿಟ್ಟು ‘ಇಲ್ಲಿಯೂ ಹಾಗೆ ಅನ್ನಿಸಿದರೆ ಈ ಎಲ್ಲ ಶೃಂಖಲೆಗಳೂ ಕಳಚಿಕೊಳ್ಳುತ್ತವೆ’ ಎಂದು ಜನಿವಾರವನ್ನು ತಿರಸ್ಕಾರದಿಂದ ತೋರಿಸಿ, ‘ಎಲ್ಲಿ ಅಮ್ಮ?’ ಎಂದು ಒಳಗೆ ಹೋದರು.

ಜಗನ್ನಾಥನಿಗೆ ಮೈಯಲ್ಲಿ ಭಯದ ಸಂಚಾರವಾಗತೊಡಗಿತು. ತಾಯಿ ಅವರಿಗೆ ಉಪ್ಪಿಟ್ಟು ಕಾಫಿ ಕೊಟ್ಟರು. ಅಡಿಗರು ‘ಒರಿಸ್ಸಾದಲ್ಲಿ ಜಯದೇವ ಕವಿಯನ್ನು ಬಲ ಸೊಗಸಾಗಿ ಹಾಡ್ತಾರೆ. ಅವನ ಜನ್ಮ ಭೂಮಿ ಅದಲ್ಲದೆ? ನಾನು ಹಾಡುತ್ತೇನೆ, ನೀವು ವೀಣೆ ನುಡಿಸಿ, ನಾಳೆ. ಆಗಬಹುದಲ್ಲ?’ ಎಂದರು. ಜಗನ್ನಾಥ ಅಲ್ಲಿಂದ ಕಾಲುಕಿತ್ತು ಏನೋ ಕೆಲಸವಿದ್ದವನಂತೆ ಕೊಟ್ಟಿಗೆಗೆ ಹೋದ. ಕರು ಹಾಕಿದ್ದರಿಂದ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಗಂಗೆ ಸಿಟ್ಟಿನಲ್ಲಿ ದುರುಗುಟ್ಟಿ ನೋಡಿ ಹಾಯುವಂತೆ ಮಾಡಿತು. ನಡುಗುವ ಕೈಗಳಿಂದ ಜಗನ್ನಾಥ ಜೇಬಿನಲ್ಲಿದ್ದ ಐದು ರೂಪಾಯಿಯ ನೋಟನ್ನು ಅವಸರವಾಗಿ ಬನೀನೊಳಗೆ ತೂರಿಸಿದ. ಜೇಬಿನಿಂದ ಜೇಬಿಗೆ ಭಯದಲ್ಲಿ ವರ್ಗಾವಣೆಯಾಗಿದ್ದ ನೋಟು ಬೆವರು ತಾಕಿ ಆಗಲೇ ಹಳೆಯದಾಗಿತ್ತು. ಬನೀನನ್ನು ಪಂಚೆಯೊಳಗೆ ತೂರಿಸಿ ಕೊಟ್ಟಿಗೆಯಿಂದ ಹೊರಗೆ ಬಂದ. ಅಡಿಗರು ಕೈ ತೊಳೆಯಲು ಬಚ್ಚಲಿಗೆ ಬರುತ್ತಿದ್ದುದು ನೋಡಿ ಬಹಳ ಶಾಂತವಾಗಿ, ‘ಗಂಗೆ ಕರು ಹಾಕಿದೆ. ಹೇಗೆ ಹಾಯಕ್ಕೆ ಬರತ್ತೆ ಅಂತೀರಿ?’ ಎಂದು ಮಹಡಿಯ ಮೇಲೆ ಹೋಗಿ ಏನೋ ಓದುತ್ತ ಕೂತ.

ಅಡಿಗರು ತಮ್ಮ ಸುಫರ್ದಿನಲ್ಲಿದ್ದ ನೀಲಕಂಠೇಶ್ವರನ ದೇವಸ್ಥಾನಕ್ಕೆ ಪೂಜಾರಿಗಳಾಗಿದ್ದರು. ವರ್ಷಕ್ಕೆ ಒಂದು ಚೀಲ ಅಕ್ಕಿ ಅರವತ್ತು ರೂಪಾಯಿ ಅದಕ್ಕಾಗಿ ಅವರಿಗೆ ತಮ್ಮ ಮನೆಯಿಂದ ಸಲ್ಲುವುದು. ಅಕ್ಕಿಯನ್ನು ಗಾಡಿಯಲ್ಲಿ ಕಳಿಸುತ್ತೇನೆಂದು ಅಮ್ಮ ಹೇಳಿದ್ದು ಕೇಳಿಸಿತು. ಅರವತ್ತು ರೂಪಾಯಿ ಒಟ್ಟಿಗೆ ಸಿಕ್ಕಿದ್ದೆ ಅಡಿಗರು ಯಾತ್ರೆ ಹೊರಟುಬಿಡುತ್ತಿದ್ದರು. ‘ಈ ಸಾರಿ ಎಲ್ಲಿಗೆ?’ ಎಂದರು ಅಮ್ಮ. ಇಬ್ಬರೂ ಮಹಡಿ ಹತ್ತುತ್ತಿದ್ದರು. ‘ಕಾಲಟಿ ಕ್ಷೇತ್ರಕ್ಕೆ ಹೋಗಿ ಮಲೆಯಾಳ ದೇಶವನ್ನು ನೋಡಿ ಬರುವ ಆಸೆ’ ಎಂದು ಸುಬ್ರಾಯ ಅಡಿಗರು ಹೇಳಿದರು. ಅವರು ಮಹಡಿ ಹತ್ತಿ ಮುಗಿದಾಗಿತ್ತು. ತನ್ನ ಬಳಿಗೇ ಬರುವಂತಿತ್ತು. ಜಗನ್ನಾಥ ಬೆವರಹತ್ತಿದ, ಈಗಲೂ ತಾನು ಬೇಕಾದರೆ ಐದು ರೂಪಾಯನ್ನು ರಟ್ಟೊಳಗೆ ಇಟ್ಟುಬಿಡಬಹುದೆನ್ನಿಸಿತು. ಆದರೆ ಯಾವ ಕಾರಣದಿಂದಲೋ ಕೂತ ಜಾಗದಿಂದವನು ಜಗ್ಗಲಿಲ್ಲ. ಮೈಯೆಲ್ಲ ಬೆವರಿತು. ಬರಿದೇ ನೋಡುತ್ತಿದ್ದ. ಪುಸ್ತಕದ ಅಕ್ಷರಗಳೆಲ್ಲ ಮಂಜಾದವು. ಅಡಿಗರು ಮತ್ತು ಅಮ್ಮ ಎದುರು ಬಂದು ನಿಂತರೂ ಅವರು ಬಂದದ್ದು ತನಗೆ ತಿಳಿಯಲಿಲ್ಲವೆನ್ನುವಂತೆ ನಟಿಸಿ ಪುಸ್ತಕ ಓದುತ್ತ ಕೂತ. ‘ಇಂತಹ ಏಕಾಗ್ರತೆ ಇದ್ದರೆ ದೇವರೂ ಪ್ರತ್ಯಕ್ಷನಾಗುತ್ತಾನೆ’ ಎಂದ ನಗುತ್ತ ಅಡಿಗರು ‘ಜಗಣ್ಣ, ಶಿವಾನಂದರ ಪುಸ್ತಕ ಓದಿ ಮುಗಿಸಿದ್ದರೆ ಕೊಡಯ್ಯ’ ಎಂದರು. ಥಟ್ಟನೆ ಎಚ್ಚರಾದಂತೆ ಜಗನ್ನಾಥ ನಟಿಸಿ ಪೆಟ್ಟಿಗೆ ಮುಚ್ಚಳ ತೆರೆದು ಹುಡುಕುವ ನೆವ ಮಾಡಿ ಕಾಲ ತಳ್ಳಿದ. ಅಡಿಗರು ಬೈಂಡನ್ನು ಪುಸ್ತಕದ ರಟ್ಟಿನೊಳಗೆ ತೂರಿಸಿ ಮಡಿಸುವಂತೆಯೇ ತಾನು ಮಡಿಸಿದ್ದೇನೋ ಎಂದು ಪರೀಕ್ಷಿಸಿದ್ದ. ಅಡಿಗರು ಕೊಡುವಾಗ ಬೈಂಡು ಹೇಗಿತ್ತೆಂಬುದೇ ಅನುಮಾನವಾಯಿತು. ಬೈಂಡ್ ಹಾಕಿದ ತಾಯಿನಾಡು ಪತ್ರಿಕೆಯಲ್ಲಿ ಯಾವುದೋ ಊರಿನಲ್ಲಿ ಹರತಾಳ ಎನ್ನುವ ಸುದ್ದಿಯನ್ನು ಓದುತ್ತ ಏನು ಮಾಡಬೇಕು ತೋಚದೆ ನಿಂತ. ಹಣವನ್ನು ಅಡಿಗರಿಗೆ ಹಿಂದಕ್ಕೊಪ್ಪಿಸುವುದು, ಒಪ್ಪಿಸದೇ ಇರುವುದು – ಎರಡೂ ಕಷ್ಟವಾದ ಸ್ಥಿತಿಯಲ್ಲಿ ಜಗನ್ನಾಥ ಸಿಕ್ಕಿಬಿದ್ದಿದ್ದ.

‘ಓದಿ ಮುಗಿಸಿರದೇ ಇದ್ದರೆ ಆಮೇಲೆ ಕೊಡುವಿಯಂತೆ. ಅವಸರವಿಲ್ಲ’ ಎಂದು ಅಡಿಗರು ರೂಮಿನಿಂದ ಹೊರಗೆ ಹೋದರು. ತಾಯಿ ಮೇಜಿನ ಮೇಲಿದ್ದ ತನ್ನ ಪುಸ್ತಕಗಳನ್ನು ಓರಣ ಮಾಡುತ್ತಿದ್ದಳು. ಯಾರಿಗೂ ಅನುಮಾನ ಬಂದಿರಲಿಲ್ಲ. ಪುಸ್ತಕವನ್ನು ಇನ್ನೊಂದು ದಿನ ಇಟ್ಟುಕೊಂಡು ಹಣವನ್ನು ರಟ್ಟೊಳಗೇ ಹಾಗೇ ಇಟ್ಟು ಹಿಂದಕ್ಕೆ ಕೊಡಬಹುದಿತ್ತು. ಆದರೂ ಜಗನ್ನಾಥನ ಬಾಯಿಯಿಂದ ಬಂದ ಮಾತೆಂದರೆ:

‘ಓದಿ ಆಗಿದೆ. ತಗೊಳ್ಳಿ’.

ಪುಸ್ತಕವನ್ನು ಅಡಿಗರಿಗೆ ಕೊಟ್ಟ. ಇವತ್ತಿಗೂ ಅಡಿಗರಿಗೆ ತಾನು ಹಣ ಕದ್ದ ವಿಷಯ ಗೊತ್ತಿರಲಿಕ್ಕಿಲ್ಲ. ಪ್ರಾಯಶಃ ಇಟ್ಟ ಹಣವನ್ನು ಅವರು ಮರೆತಿದ್ದರೂ ಆಶ್ಚರ್ಯವಿಲ್ಲ. ಏನೇ ಇರಲಿ ಪುಸ್ತಕವನ್ನು ಹಿಂದಕ್ಕೆ ಕೊಟ್ಟ ಘಳಿಗೆಯಲ್ಲಿ ಅವನ ಹೃದಯ ಅತಿಶಯವಾದ ಸಂತೋಷದಿಂದ ಹಿಗ್ಗಿತ್ತು. ಈ ತನಕ ಪರಿಚಯವಿಲ್ಲದಿದ್ದ ಹೊಸದೊಂದು ಸ್ವಾತಂತ್ಯ್ರವನ್ನು ಪಡೆದಂತಿತ್ತು.

ಅಡಿಗರು ಜೊತೆ ತಾಯಿಯೂ ಹೊರಟು ಹೋದರು. ಈಗ ತಾನು ಕೂತಿರುವ ರೂಮಲ್ಲೆ ಆಗ ಜಗನ್ನಾಥ ಕೂತಿದ್ದ. ಬಾಗಿಲು ಹಾಕಿಕೊಂಡು ಅಗಳಿ ಹಾಕಿದ. ಈಗ ತಾನು ಏನು ಬೇಕಾದರೂ ಮಾಡಬಹುದೆನ್ನಿಸಿತು. ಬನೀನಿನ ಒಳಗೆ ಕೈಹಾಕಿ ನೋಡಿದರೆ ಬನೀನು ಒದ್ದೆ, ನೋಟು ಒದ್ದೆ, ಜನಿವಾರ ಒದ್ದೆ, ನೋಟನ್ನು ಹೊರಗೆ ತೆಗೆದು ಜೇಬಲ್ಲಿ ಹಾಕಿಕೊಂಡ. ಮೈಗೆ ಒದ್ದೆಯಾಗಿ ಅಂಟಿಕೊಂಡ ಜನಿವಾರವನ್ನು ತೆಗೆಯಬೇಕೆನ್ನಿಸಿತು. ಯಾಕೊ? ಶಾಸ್ತ್ರೋಕ್ತವಾಗಿ ತೆಗೆಯುವುದಾದರೆ ಕಾಲುಗಳ ಮೂಲಕ ಜನಿವಾರವನ್ನು ವಿಸರ್ಜಿಸಿ ಹೊಸದು ಹಾಕಿಕೊಳ್ಳಬೇಕು. ಆದರೆ ಬಲ ಅಂಗಿಯ ತೋಳಿನ ಮುಖಾಂತರ ಜನಿವಾರವನ್ನು ತೂರಿಸಿ ಕತ್ತಿನಿಂದಲೇ ಹೊರಗೆ ತೆಗೆದ. ತೆಗೆಯಬಾರದ ಕ್ರಮದಲ್ಲಿ ಜನಿವಾರ ತೆಗೆದದ್ದರಿಂದ ಮುಖದಲ್ಲಿ ಭಯ, ನಗು ಮಿಶ್ರವಾದ್ದನ್ನು ಕನ್ನಡಿಯಲ್ಲಿ ನೋಡಿಕೊಂಡ. ಜನಿವಾರವನ್ನು ಪೆಟ್ಟಿಗೆಯೊಳಗಿಟ್ಟ. ಉಪನಯನವಾದ ಮೇಲೆ ಹೀಗೆ ಅವನು ಮೈ ಮೇಲೆ ಜನಿವಾರವಿಲ್ಲದಿದ್ದ ಘಳಿಗೆಯೇ ಇರಲಿಲ್ಲ. ಮುಚ್ಚಲು ಅಂಗಿಯಿದ್ದುದರಿಂದ ತಾನು ಯಜ್ಞೋಪವೀತವಿಲ್ಲದ ಬೋಳು ಮೈಯಲ್ಲಿದ್ದೀನೆಂದು ತಾಯಿಗೆ ಗೊತ್ತಾಗದು. ಜನಿವಾರವಿಲ್ಲದೆ ಓಡಾಡಿದರೆ ಏನೂ ಆಗುವುದಿಲ್ಲ-ಅಲ್ಲವೆ? ಇದನ್ನು ಖುದ್ದು ತಿಳಿಯಲು ಆರಾಮಾಗಿ ಕೆಳಗಿಳಿದು ಬಂದ. ದೇವರ ಮನೆ ಎದುರು ನಿಂತ. ಅರ್ಚಕರು ಗಂಧ ತೇಯುತ್ತ ಕೂತಿದ್ದರು. ಅಂಗಳಕ್ಕೆ ಹೋದ. ಕಣಜದಲ್ಲಿ ಸುತ್ತಾಡಿದ. ಕಣಜದಲ್ಲೊಂದು ಮುದಿ ಸರ್ಪವಿದೆಯಂತೆ, ಎಲ್ಲಿ, ಜನಿವಾರವಿಲ್ಲದ ನಾನು ಇಲ್ಲಿ ಓಡಾಡಿದರೆ ಮುಟ್ಟು ಚಟ್ಟಾಗಬಹುದೊ ಎಂದು ಎಳೆ ಬಿಸಿಲಿನಲ್ಲಿ ಮರದ ಪೊಟರೆ, ಹುತ್ತಗಳನ್ನು ಪರೀಕ್ಷಿಸಿದ. ಸಿಳ್ಳೆ ಹಾಕುತ್ತ ‘ಕಾಯೌ ಶ್ರೀ ಗೌರೀ ಕರುಣಾ ಲಹರೀ’ ಹಾಡಿದ. ಸಿಳ್ಳೆ ಕೇಳಿದರೆ ಹಾವುಗಳು ಹೊರಬರುತ್ತವಂತೆ, ನೋಡುವ, ಎಂದು ಸಿಳ್ಳೆ ಹಾಕುತ್ತ ಮರದಡಿ ನಿಂತ. ಓಡುತ್ತೋಡುತ್ತ ಗುಡ್ಡ ಇಳಿದು ಪೇಟೆಯ ದಾರಿ ತಲ್ಪಿದ. ಶಿವಮೊಗ್ಗಕ್ಕೆ ಹೊರಟ್ಟಿದ್ದ ಸೆಕೆಂಡ್ ಬಸ್ಸು ಏದುತ್ತ ಉಬ್ಬನ್ನು ಹತ್ತುತ್ತಿತ್ತು. ಅದನ್ನು ನೋಡುತ್ತ ನಿಂತು ಹಾಗೇ ಆರಾಮಾಗಿ ಮನಸ್ಸಿನಲ್ಲೆ ಸಿಳ್ಳೆ ಹಾಕುತ್ತ ಅಡ್ಡ ಹಾದಿಯಲ್ಲಿ ನಡೆದು ಸೀಬಿನಕೆರೆಗೆ ಹೋದ. ಓಣಿಯಲ್ಲಿ ಕಮಲಳ ಮನೆ ರಂಗಯ್ಯ ಈಗ ಅಲ್ಲಿರಬಹುದೋ? ಅಲ್ಲೆ ಮಲಗಿದ್ದು ಬಹಳ ಲೇಟಾಗಿ ಎದ್ದು ಹಲ್ಲುಜ್ಜದೆ ಕಮಲ ಕೊಟ್ಟ ಕಾಫಿ ಕುಡಿಯುತ್ತಿರಬಹುದೊ? ಹೋಟೆಲಿನಿಂದ ದೋಸೆ ತರಿಸಿರಬಹುದೊ? ಸಮಾಜವೆಂದರೆ ರಂಗಯ್ಯನ ಅಪ್ಪನಿಗೆ ಎಗ್ಗಿಲ್ಲ; ಮಗನಿಗೆ ಅಪ್ಪನ ಎಗ್ಗಿಲ್ಲ. ‘ಲಂಬೋದರ ಲಕುಮಿಕರ -ಸರಿಮಾಗರಿ ಸರಿಗರಿಸ’ -ಹಾರ್ಮೊನಿಯಂ ಬಾರಿಸುತ್ತ ಸಂಗೀತದ ಪ್ರಾಕ್ಟೀಸು ಕಮಲಳ ಮನೆಯಲ್ಲಿ ನಡೆದಿತ್ತು. ಖಂಡಿತ ರಂಗಯ್ಯ ಹಾಸಿಗೆ ಮೇಲೆ ತಲೆಗೆ ಕೈಯೂರಿ ಮಲಗಿ ಕಮಲ ಹಾಡುವುದನ್ನು ಕೇಳಿಸಿಕೊಳ್ಳುತ್ತಿದ್ದಾನೆ. ಜಗನ್ನಾಥನಿಗೆ ಸಂಕಟವಾಯಿತು. ಬೀದಿಯಲ್ಲಿ ಯಾರೂ ಇರಲಿಲ್ಲ. ಆದರೂ ಯಾವುದೋ ಕಾರ್ಯದಲ್ಲಿ ಮಗ್ನನಾಗಿದ್ದವನಂತೆ ನಡೆದ. ಮೈ ಮತ್ತೆ ಬೆವರಿತ್ತು. ಕಿರಾಣಿ ಅಂಗಡಿ, ಎಣ್ಣೆ ಮಾರುವ ಅಂಗಡಿ, ಮೊಮ್ಮಗನ ಹತ್ತಿರ ಬೆನ್ನು ತುರಿಸಿಕೊಳ್ಳುತ್ತ ಕೂತ ಅಜ್ಜ, ಮೈಗೆ ಎಣ್ಣೆ ಹಚ್ಚಿಕೊಂಡು ತಾಯಿಯ ಕೈತಪ್ಪಿಸಿಕೊಂಡು ಓಡುವ ಬೋಳು ಮೈ ಹುಡುಗ, ‘ಅಯ್ಯೋವರು ಏನು ಇಷ್ಟು ಬೆಳಿಗ್ಗೆ’ ಎಂದು ಕೇಳಿದ ಮನೆಯಾಳು ಎಲ್ಲವನ್ನೂ ಗಮನಿಸುತ್ತ ತಾನು ಕಮಲಳಿಗಾಗಿ ಈ ಕಡೆ ಬಂದದ್ದಲ್ಲ ಎನ್ನುವುದನ್ನು ತನ್ನ ಧೈರ್ಯದ ನೋಟದಲ್ಲೆ ಮನದಟ್ಟು ಮಾಡಲು ಯತ್ನಿಸುತ್ತ ನಡೆದ. ಚೌಕಕ್ಕೆ ಬಂದ. ಅಂಗಡಿ ಬೀದಿ ನಡೆದ, ಆಮೇಲೆ ರಥಬೀದಿ ನಡೆದು ಸೀದ ದೇವಸ್ಥಾನಕ್ಕೆ ಹೋದ. ಜನಿವಾರವಿಲ್ಲದೆ ಬೋಳು ಮೈಯಲ್ಲಿ ಬ್ರಾಹ್ಮಣನಾದವನು ದೇವಸ್ಥಾನದೊಳಕ್ಕೆ ಹೋಗಕೂಡದೆಂಬುದು ನೆನಪಾದ್ದೆ ಹೊಸಿಲು ದಾಟಿ ಒಳಗೆ ಹೋದ.

ಜಮೀಂದಾರರ ಮಗನನ್ನು ನೋಡಿ ಎಲ್ಲರೂ ಗೌರವದಿಂದ ಒಳಗೆ ದಾರಿ ಬಿಟ್ಟರು. ಗರ್ಭಗುಡಿಯ ಬಾಗಿಲಿನ್ನೂ ತೆರೆದಿರಲಿಲ್ಲ. ಗರ್ಭಗುಡಿಯ ಕತ್ತಲಲ್ಲಿ ಉರಿಯುತ್ತಿರುವ ಎರಡು ನಂದಾದೀಪ ಕಂಡಿಯಿಂದ ಕಂಡಿತು. ಅಭ್ಯಾಸ ಬಲದಿಂದ ಕೈ ಮುಗಿದ. ಒಳ್ಳೆಣ್ಣೆ, ಊದುಬತ್ತಿ, ಲೋಭಾನ, ಕೆಂಡಸಂಪಿಗೆ ಬೆರೆತ ವಾಸನೆ.

ಮುಗಿದ ಕೈಯನ್ನು ಹಾಗೇ ಎತ್ತಿದ. ಯಾಕೆ ಗೊತ್ತಿಲ್ಲ. ಮಧ್ಯಾಹ್ನ ಮಾತ್ರ ಬಾರಿಸಬೇಕಾದ ತನ್ನ ಪೂರ್ವಿಕರು ಮಾಡಿಸಿಕೊಟ್ಟ ದೊಡ್ಡ ಗಂಟೆಯನ್ನು ಕೈ ಹುಡುಕಿತು. ಊರಿಗೆಲ್ಲ ಕೇಳಿಸುವ ಗಂಟೆಯೆಂದು ನೆನಪಾಗಿ ರೋಮಾಂಚನವಾಯಿತು. ಬೆರಳಿನ ತುದಿಗೆ ಗಂಟೆಯ ನುಣುಪಾದ ನಾಲಿಗೆಯ ತುದಿ ಸಿಕ್ಕಿತು. ಸಿಕ್ಕಿದ್ದೇ ನಿಂತಲ್ಲಿಂದಲೇ ಕುಪ್ಪಳಿಸಿ ಬಾರಿಸಿದ. ಅಲ್ಲಿದ್ದವರೆಲ್ಲ ಕಂಗಾಲಾಗಿ ತನ್ನ ಕಡೆ ನೋಡಿದರು. ‘ಮಹಾ ಮಂಗಳಾರತಿಗೆ ಬಾರಿಸೋದದು’ ಎಂದು ಯಾರೋ ಮೂಲೆಯಲ್ಲಿ ನಿಂತವರು ಬೆಚ್ಚಿ ಕಿರುಚಿದರು. ಆದರೆ ಜಗನ್ನಾಥ ಮೈ ಮೇಲೆ ಆಳ್ವಿಕೆ ಬಂದವನಂತೆ ನಡುಗುತ್ತಿದ್ದ. ಕಂಚಿನ ನಾದದಿಂದ ಪುಳಕಿತವಾದ ಅವನ ದೇಹ ಮತ್ತೆ ಕುಪ್ಪಳಿಸಿ ಗಂಟೆಯನ್ನು ಬಾರಿಸಿತು. ಅದರ ಘೋಷ ಗುಡ್ಡಗಳು ಸುತ್ತುವರಿದ ಇಡೀ ಭಾರತೀಪುರವನ್ನು ದಿಗ್ಭ್ರಮೆಗೊಳಿಸುತ್ತದೆಂಬ ಅರಿವಿನಿಂದ ಮತ್ತನಾಗಿ ಜಗನ್ನಾಥ ಕುಪ್ಪಳಿಸಿ ಕುಪ್ಪಳಿಸಿ ಎಷ್ಟು ಸಾರಿ ಗಂಟೆ ಬಾರಿಸಿದನೊ ಮರೆತಿದೆ.

ಯಾರೊ ಅವನನ್ನು ಹಿಡಿದುಕೊಂಡರು. ಮೈಮೇಲೆ ಗಣ ಬಂದಿದೆ ಎಂದು ಬೆನ್ನನ್ನು ಸವರಿದರು. ಸಂತೈಸಿದರು. ತೀರ್ಥ ಕುಡಿಸಿ, ತೀರ್ಥವನ್ನು ತಲೆಗೆ ತಟ್ಟಿದರು. ಭೂತರಾಯನಿಗೆ ಕೋಪವಾಗಿ ಜಗನ್ನಾಥನ ಮೈಮೇಲೆ ದರ್ಶನ ಬಂದಿರಬೇಕೆಂದು ಯಾರೋ ಹೇಳಿದ್ದನ್ನು ಎಲ್ಲರೂ ಒಪ್ಪಿದರು. ಗೌರವದಿಂದ ತನ್ನ ಹಣೆಗೆ ಕುಂಕುಮ ಮೆತ್ತಿದರು. ತಮ್ಮನ್ನು ಹೀಗೆ ಎಚ್ಚರಿಸಿದ ಭೂತರಾಯನಿಗೆ ಕೈ ಮುಗಿದರು.

ಎಲ್ಲರ ಕಣ್ಣಲ್ಲಿ ಹೀರೋ ಆಗಿ ಜಗನ್ನಾಥ ಹೊರಬಂದಿದ್ದ. ಮೌನವಾಗಿ ಮನೆಯ ಕಡೆ ನಡೆದ. ಮುಖ ಕೆಂಪಾಗಿ ಕಿವಿ ಬೆಚ್ಚಗಾಗಿತ್ತು. ಗಂಟೆಯ ಘೋಷ ಇನ್ನೂ ಅವನ ಕಿವಿಯಲ್ಲಿ ಅನುರಣಿಸುತ್ತಿತ್ತು. ಅದರ ಗುಂಗಲ್ಲೆ ನಡೆದ. ಪರಿಚಿತ ಮುಖಗಳೆಷ್ಟೋ ಎದುರಾದವು. ಯಾರಿಗೂ ತನ್ನ ಗುಟ್ಟು ಗೊತ್ತಿಲ್ಲೆಂದು ಹಿಗ್ಗದ.

ಥಟ್ಟನೆ ಸೀಬಿನಕೆರೆಯ ಹಾದಿಯಲ್ಲಿ ಮತ್ತೆ ತಿರುಗಿದ. ಕಾರಣ, ದೇವಸ್ಥಾನದಿಂದಲೂ ತನ್ನ ಯೋಗಕ್ಷೇಮ ಚಿಂತಕನೊಬ್ಬ ಬೆನ್ನ ಹಿಂದೆಯೇ ಬರುತ್ತಿದ್ದನೆಂಬುದು ಗೊತ್ತಾಯಿತು. ಅವನ ಕಣ್ಣಿಂದ ಹೀಗೆ ತಪ್ಪಿಸಿಕೊಂಡವನು ಸೀದ ಕಮಲ ಇದ್ದ ಓಣಿಯ ಕಡೆ ನಡೆದ.

ಓಣಿಗೆ ತಿರುಗುವ ಮೂಲೆಯಲ್ಲಿ ಬೀಡದ ಅಂಗಡಿಯೊಂದಿತ್ತು. ಹೋಟೆಲ್ ಸುಂದರಯ್ಯನ ಸೂಳೆಗೆ ಹುಟ್ಟಿದ ಮಗ ಸುಬ್ಬ ತುದಿಯಲ್ಲಿ ಚೂಪಾಗಿ ಮೇಲೆ ಅಗಲವಾಗಿದ್ದ ಉರುಟುರುಟು ಬೀಡಾಗಳನ್ನು ಕಟ್ಟಿ ಅದಕ್ಕೆ ಲವಂಗ ಚುಚ್ಚಿ ವೈರಿನಲ್ಲಿ ಮಾಡಿದ ಗಿಡದಂಥ ಸ್ಟ್ಯಾಂಡಿನಲ್ಲಿ ಸಿಕ್ಕಿಸುತ್ತಿದ್ದ. ಇನ್ನೆರಡು ಬೀಡ ಕಟ್ಟಿದರೆ ಸ್ಟ್ಯಾಂಡಿನಲ್ಲಿರುವ ಎಲ್ಲ ತೂತುಗಳಲ್ಲೂ ಸಿಕ್ಕಿಸಿದಂತಾಗುತ್ತದೆ. ಜಗನ್ನಾಥ ಗಮನಿಸುತ್ತ ನಿಂತ. ಬೆತ್ತ ಹಿಡಿದು ನಿಂತ ಪೊಲೀಸ್‌ನವನೊಬ್ಬ ನಮಸ್ಕಾರ ಮಾಡಿದ್ದೇ ಜಗನ್ನಾಥ ನಿಂತವನು ಹೊರಟ. ಪೆಟ್ಟಿಗೆ ಹಿಡಿದ ಹಜಾಮನೊಬ್ಬ ಎದುರಾದ. ಬಲ ಪಕ್ಕದ ಮನೆಯಿಂದ ದೋಸೆ ಹೊಯ್ಯವ ಶಬ್ದ. ವಾಸನೆ. ಯಾರೋ ಜಗುಲಿಗೆ ಬಂದು ಕವಳ ತುಪ್ಪಿ ಉತ್ಸಾಹದಿಂದ ಮಾತು ಪ್ರಾರಂಭಿಸುತ್ತ ಒಳಗೆ ಹೋದರು. ಬೆಳಗಿನ ಬಿಸಿಲು ಏರುತ್ತಿತ್ತು. ಕಮಲಳ ಮನೆ ಎದುರು ಬಂದು ಜಗನ್ನಾಥ ನಿಂತ. ಹಾರ್ಮೋನಿಯಂ ಶಬ್ದವಿಲ್ಲ. ಕಿಟಕಿಯಿಂದ ಒಳಗಿನ ಬಾಗಿಲು, ಬಾಗಿಲ ಪಕ್ಕದಲ್ಲಿ ರವಿವರ್ಮನ ದಮಯಂತಿ, ಬಾಗಿಲ ಮೇಲೆ ತೋರಣವಾಗಿ ಬಳೆ ಓಡುಗಳ ಸರ ಕಂಡವು. ಸುತ್ತ ಎಲ್ಲೂ ನರಪಿಳ್ಳೆ ಕಾಣಲಿಲ್ಲ. ಚರಂಡಿಯಲ್ಲಿ ಒಂದು ಕಾಗೆ, ಒಂದು ನಾಯಿ ಮಾತ್ರ ಇದ್ದವು.

ಕಮಲಳ ಮನೆ ಜಗುಲಿ ಏರಿದ. ಕಿಟಕಿಯಿಂದ ಐದು ರೂಪಾಯಿಯ ನೋಟನ್ನು ಒಳಗೆ ತೂರಿದ. ರೋಡಿಗೆ ಹಾರಿ ಓಡಿದ. ಬೆನ್ನಿನ ಹಿಂದೆ ಊರಿನ ಕಣ್ಣುಗಳೆಲ್ಲ ಇವೆ ಎನ್ನಿಸಿ ಭಯವಾಯಿತು. ಆದರೆ ತಿರುಗಿ ನೋಡಿದರೆ ಯಾರು ಇರಲಿಲ್ಲ. ನಾಯಿ ಮಾತ್ರ ಬೊಗಳುವ ಕರ್ತವ್ಯ ಮಾಡಿ ಸುಮ್ಮನಾಗಿತ್ತು. ಓಡೋಡುತ್ತಲೆ ಮನೆಗೆ ಬಂದವನನ್ನು ತಾಯಿ ಕಾತರದಿಂದ ನೋಡಿದರು. ಆಗಲೇ ದೇವಸ್ಥಾನದಿಂದ ಯಾರೋ ಬಂದು ತನ್ನ ಮೈ ಮೇಲೆ ಭೂತರಾಯನ ದರ್ಶನ ಬಂದಿತ್ತೆಂದು ಹೇಳಿರಬೇಕು. ಆದರೆ ತಾಯಿ ಅದರ ವಿಷಯ ಮಾತಾಡಲೇ ಇಲ್ಲ. ಜಗನ್ನಾಥ ಸೀದ ರೂಮಿಗೆ ಹೋಗಿ ಅವಸರವಾಗಿ ಜನಿವಾರವನ್ನು ಹಾಕಿಕೊಂಡು ಕೆಳಗೆ ಬಂದ. ಮಾತಾಡದೆ ನಿಂತಿದ್ದ ತಾಯಿ ಜಗನ್ನಾಥನಿಗೆ ದೃಷ್ಟಿ ಸುಳಿದು ಹಾಕಿದರು.