ಹೊಸಬರನ್ನು ಭೇಟಿಯಾದಾಗ ಎದುರಾಗುವ ಮೊದಲ ಪ್ರಶ್ನೆ:ನೀವು ಎಲ್ಲಿಯವರು?  ನೀವೇ ಉತ್ತರಿಸಿ ಎಂದರೆ ಕೆಲವರು ತೆಲುಗನೆಂದೂ, ಇನ್ನು ಕೆಲವರು ಮಲಯಾಳಿ ಎಂದೂ, ಮತ್ತೂ ಕೆಲವರು ನೋಡಲು ಕ್ರೈಸ್ತರಂತೆ ಇದ್ದೀರಿ ಆದರೆ ಹೆಸರು ಶರ್ಮ ಎನ್ನುವ ಗೊಂದಲ ಎಂದೋ ಉತ್ತರಿಸುತ್ತಿದ್ದರು. ಯಾವುದೇ ಇತರೆ ಸಣ್ಣ, ಪುಟ್ಟ ಲೇಬಲ್ಗಳಿಗೆ ತಳುಕಿಕೊಳ್ಳಬಾರದು ಎಂಬ ಆದರ್ಶವೋ, ಅಥವಾ ನನ್ನನ್ನು ಇಂಥ ವರ್ಗ ಎಂದು ತೀರ್ಮಾನಿಸಿದ ಪ್ರಶ್ನಿಗರ ತರ್ಕದಿಂದ ಬೆದರಿಯೋ, ಒಟ್ಟಾರೆ ನಾನು ಒಬ್ಬ ಅಪ್ಪಟ ಭಾರತೀಯ ಎಂದು ಉತ್ತರಿಸಿಬಿಡುತ್ತಿದ್ದೆ. ಮೊನ್ನೆ ನೇಚರ್ ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನೆಯ ವಿವರಗಳು ನನ್ನ ಈ ಜಾಣತನದ ಉತ್ತರವನ್ನೂ ಪ್ರಶ್ನಿಸುತ್ತಿವೆ.

ಅಪ್ಪಟ ಭಾರತೀಯರು ಎಂದರೆ ಯಾರು ಎನ್ನುವ ಪ್ರಶ್ನೆಗೆ ಉತ್ತರ ಹೇಳಲು ಕಷ್ಟ. ಇಂದಿನ ಭಾರತೀಯರು ನೇಚರ್ ಪತ್ರಿಕೆಯ ಪ್ರಬಂಧ ಭಾರತದಲ್ಲಿರುವ ಎಲ್ಲ ಜನತೆಯೂ ಮೂಲತಃ ಎರಡು ವಿಶಿಷ್ಟ ಸಮೂಹದ ಮಿಶ್ರಣವಾಗಿ ಜನಿಸಿವೆ ಎನ್ನುತ್ತಿದೆ. ಹೈದರಾಬಾದ್ನಲ್ಲಿರುವ ಸೆಂಟರ್ ಫಾರ್ ಸೆಲ್ಯುಲಾರ್ ಅಂಡ್ ಮಾಲಿಕ್ಯುಲಾರ್ ಬಯಾಲಜಿಯ ಮಾಜಿ ನಿರ್ದೇಶಕ ಡಾ. ಲಾಲ್ಜಿ ಸಿಂಗ್ ಮತ್ತು ಸಂಗಡಿಗರು ಭಾರತದ 17 ವೈವಿಧ್ಯಮಯ ಜನಾಂಗಗಳ ಡಿಎನ್ರ ರಚನೆಯನ್ನು ಪರೀಕ್ಷಿಸಿ ಪ್ರಕಟಿಸಿರುವ ಈ ಪ್ರಬಂಧದಲ್ಲಿ ಇಂದು ಭಾರತವಾಸಿಗಳಾಗಿರುವ ಸಾವಿರಕ್ಕೂ ಮಿಗಿಲಾದ ಜಾತಿ, ಪಂಗಡಗಳಿಗೆ ಸೇರಿದ ಹಾಗೂ 400ಕ್ಕೂ ಹೆಚ್ಚು ವಿವಿಧ ಭಾಷೆಗಳನ್ನು ಮಾತನಾಡುವ ಜನಾಂಗಗಳು ಸುಮಾರು 5000 ವರ್ಷಗಳಿಗೂ ಹಿಂದೆ ಭಾರತದಲ್ಲಿದ್ದ ಎರಡು ವಿಶಿಷ್ಟ ಜನಾಂಗಗಳ ಶಾಖೆಗಳೆಂದು ತೀರ್ಮಾನಿಸಲಾಗಿದೆ. ಉತ್ರರಭಾರತದ ಮೂಲ ನಿವಾಸಿಗಳು ಹಾಗೂ ದಕ್ಷಿಣ ಭಾರತದ ಮೂಲನಿವಾಸಿಗಳು ಎಂದು ಲಾಲ್ಜಿ ಸಿಂಗ್ ಹೆಸರಿಸಿರುವ ಈ ಎರಡು ಪಂಗಡಗಳ ತಳಿ ಅವಶೇಷಗಳು ನಮ್ಮ, ನಿಮ್ಮೆಲ್ಲರ ಜೀವಕೋಶಗಳಲ್ಲೂ ಅಚ್ಚಳಿಯದೆ ಉಳಿದಿವೆಯಂತೆ.

ವಿವಿಧತೆಯಲ್ಲೂ ಏಕತೆ ಎನ್ನುವುದು ಭಾರತೀಯರ ಮಂತ್ರ. ಗಾಂಧೀಜಿಯವರು ಹೇಳಿದ ಈ ಮಾತಿಗೆ ಮೊದಲ ಪ್ರಧಾನಿ ಜವಹರಲಾಲ್ ನೆಹರೂರವರು ಮತ್ತೊಂದು ವ್ಯಾಖ್ಯೆ ನೀಡಿದ್ದರು: ಭಾಷೆ, ಕುಲ, ಬಣ್ಣ, ಸಂಸ್ಕೃತಿ, ಶ್ರೀಮಂತಿಕೆ ಎಲ್ಲದರಲ್ಲೂ ಸಂಪೂರ್ಣ ಭಿನ್ನವಾಗಿ ತೋರುವ ಸಾವಿರಾರು ಜನಸಮೂಹಗಳು ಈ ದೇಶದಲ್ಲಿ ನೆಲೆಸಿವೆ. ಯಾವುದೇ ಭೂಪ್ರದೇಶದಲ್ಲಿ ಇಲ್ಲದಷ್ಟು ಜನವೈವಿಧ್ಯ ಭಾರತದಲ್ಲಿದೆ. ಇದಕ್ಕೆ ಈ ದೇಶದ ಚಾರಿತ್ರಿಕ ಹಿನ್ನೆಲೆಯೂ ಕಾರಣ. ಸಮೃದ್ಧ ಜಲ, ನೆಲ ಸಿರಿಯ ಈ ನಾಡಿಗೆ ಎಲ್ಲೆಲ್ಲಿಂದಲೋ, ಯಾರ್ಯಾರೋ ವಲಸೆ ಬಂದ ಚರಿತ್ರೆ ಇದೆ. ಸುಮಾರು 5000 ವರ್ಷಗಳ ಹಿಂದೆ ಭರತವರ್ಷ ಎನ್ನುವ ಈ ಭೂಭಾಗಕ್ಕೆ ಆಸ್ಟ್ರೇಲಿಯ-ಮಲಯಾ ಮೂಲದ ಜನಾಂಗ ವಲಸೆ ಬಂದಿತೆಂದೂ, ಅನಂತರ ಎರಡುಸಾವಿರ ವರ್ಷಗಳಾದ ಮೇಲೆ ಯುರೋಪು-ಆಫ್ರಿಕಾ ಮೂಲದ ಜನತೆ ಉತ್ತರ ಭಾಗದಿಂದ ವಲಸೆ ಬಂದಿತೆಂದೂ ಈ ಹಿಂದೆ ನಂಬಲಾಗಿತ್ತು. ಭಾರತದಲ್ಲಿರುವ ನೂರಾರು ಭಾಷೆ, ಸಂಸ್ಕೃತಿ, ಚಹರೆಗಳಲ್ಲಿನ ಸಾಮ್ಯಗಳನ್ನು ಚರಿತ್ರೆಯೊಂದಿಗೆ ತಾಳೆ ಹಾಕಿ ಹೀಗೆ ತೀರ್ಮಾನಿಸಲಾಗಿತ್ತು. ವೈದ್ಯಕೀಯ ದೃಷ್ಟಿಕೋನದಿಂದ ವಿವಿಧ ಜನಾಂಗಗಳಲ್ಲಿನ ತಳಿದೋಷಗಳನ್ನು ಪರಿಗಣಿಸಿದಾಗಲೂ ಅಷ್ಟೆ. ಭಾರತದಲ್ಲಿನ ಪ್ರತಿಯೊಂದು ಜಾತಿ, ವರ್ಗ, ಪಂಗಡವೂ ವಿಶಿಷ್ಟವಾಗಿ ತೋರುತ್ತಿದ್ದುವು.  ಭಾರತದಲ್ಲಿ ಇಷ್ಟೊಂದು ವಿಶಿಷ್ಟ ಪಂಗಡಗಳು ಇವೆಯಾದರೆ ನಿಜವಾದ ಭಾರತೀಯರು ಯಾರು? ಭಾರತದ ಮೂಲನಿವಾಸಿಗಳ ವಾರಿಸುಗಳು ಯಾರು? ಇಷ್ಟೊಂದು ವ್ಯತ್ಯಾಸಗಳು ಉಂಟಾಗಲು ಕಾರಣವೇನಿರಬಹುದು? ಭಾರತದ ಮೇಲೆ ಆಗಿಂದಾಗ್ಗೆ ನಡೆದ ವಿದೇಶೀಯರ ದಾಳಿಗಳ ಫಲವೇ? ಅಥವಾ ಸಹಜವಾಗಿಯೇ ಜೈವಿಕ ಕಾರಣಗಳಿಂದಾಗಿ ಉಂಟಾದ ವ್ಯತ್ಯಾಸಗಳೇ ಎನ್ನುವ ಪ್ರಶ್ನೆಗಳನ್ನು ತೀರ್ಮಾನಿಸುವುದು ಸಾಧ್ಯವಾಗಿರಲಿಲ್ಲ.  ಈ ಪ್ರಶ್ನೆಗಳಿಗೀಗ ಯಾವುದೇ ಪೂರ್ವಾಗ್ರಹವಿಲ್ಲದ ಉತ್ತರ ದೊರಕಿಸುವ ಪ್ರಯತ್ನ ಇದು ಎನ್ನುತ್ತದೆ ನೇಚರ್ ಪತ್ರಿಕೆ.

ಲಾಲ್ಜಿ ಸಿಂಗ್ ಮತ್ತು ಸಂಗಡಿಗರು ಭಾರತದ 13 ರಾಜ್ಯಗಳಲ್ಲಿರುವ ಒಟ್ಟು 25 ಪಂಗಡಗಳ ವ್ಯಕ್ತಿಗಳಿಂದ ಪಡೆದ ರಕ್ತದ ಮಾದರಿಯಿಂದ ತಳಿರಾಸಾಯನಿಕ ಡಿಎನ್ಎಯನ್ನು ಪ್ರತ್ಯೇಕಿಸಿದರು. ಪ್ರತಿವ್ಯಕ್ತಿಯ ಗುಣವಿಶೇಷಗಳನ್ನು ಡಿಎನ್ಎ ಪ್ರತಿನಿಧಿಸುತ್ತದೆಯಷ್ಟೆ. ಡಿಎನ್ಎಯಲ್ಲಿರುವ ಜೀನ್ಗಳೇ ಈ ಪ್ರತಿನಿಧಿಗಳು. ಆದರೆ ಡಿಎನ್ಎಯಲ್ಲಿ ಜೀನ್ಗಳಷ್ಟೆ ಅಲ್ಲದೆ ವ್ಯಕ್ತಿಯ ಬದುಕಿಗೆ, ಜೀವನಕ್ಕೆ ನೆರವಾಗದ ಅಂಶಗಳೂ ಇರುತ್ತವೆ. ಇವು ಜೀವಿಯ ಬದುಕನ್ನು ನೇರವಾಗಿ ಬಾಧಿಸುವುದಿಲ್ಲವಾದ್ದರಿಂದ, ಜೀವಿಯ ವಿಕಾಸದಲ್ಲಿ ಅವುಗಳಿಗೆ ವಿಶೇಷ ಪಾತ್ರವೇನೂ ಇರುವುದಿಲ್ಲ ಎನ್ನುವ ನಂಬಿಕೆ ಇದೆ. ಹೀಗಾಗಿ ಎರಡು ಜೀವಿ ಅಥವಾ ಜನಾಂಗದ ನಡುವೆ ಇಂತಹ ಅಂಶಗಳಲ್ಲಿ ಇರುವ ವ್ಯತ್ಯಾಸಗಳು ಹಾಗೂ ಸಾಮ್ಯ ಆ ಜೀವಿ ಹಾಗೂ ಜನಾಂಗಗಳ ನಡುವಣ ಸಂಬಂಧವನ್ನು ತೋರಿಸುತ್ತವೆ. ಎಸ್ಎನ್ಪಿ (ಸಿಂಗಲ್ ನ್ಯೂಕ್ಲಿಯೋಟೈಡ್ ಪಾಲಿಮಾರ್ಫಿಸಂ) ಎಂದು ವಿಜ್ಞಾನಿಗಳು ಕರೆಯುವ ಈ ಅಂಶಗಳ ನಡುವಣ ವ್ಯತ್ಯಾಸ ಕಾಣಲು ಅತಿ ಭಿನ್ನವಾಗಿರುವ ಮಾನವ, ಕತ್ತೆಗಳ ನಡುವಣ ಸಂಬಂಧ ಎಷ್ಟು ಎಂಬುದನ್ನೂ ತಿಳಿಸಬಲ್ಲುವು. ಲಾಲ್ಜಿ ಸಿಂಗ್ ಮತ್ತು ಸಂಗಡಿಗರು ಈ 25 ಪಂಗಡಗಳ ವ್ಯಕ್ತಿಗಳ ಡಿಎನ್ಎಯಲ್ಲಿರುವ ಎಸ್ಎನ್ಪಿ ಗಳನ್ನು ವಿಶ್ಲೇಷಿಸಿ, ವಿವಿಧ ಪಂಗಡಗಳ ನಡುವಣ ಸಂಬಂಧವನ್ನು ಗುರುತಿಸಿದ್ದಾರೆ.

ಯುರೋಪಿನ ಕೆಲವು ಜನಾಂಗಗಳು ಹಾಗೂ ಅಂಡಮಾನ್ ನಿಕೋಬಾರ್ ದ್ವೀಪಸಮೂಹದ ಮೂಲನಿವಾಸಿಗಳಾದ ಜರವ, ಒಂಗೆಗಳ ಜೊತೆಗೆ ಭಾರತದಲ್ಲಿ ಮೇಲ್ವರ್ಗ ಎನ್ನಿಸಿಕೊಳ್ಳುವ ಹಲವು ಪಂಗಡಗಳು, ಬುಡಕಟ್ಟು ನಿವಾಸಿಗಳೆನ್ನಿಸಿಕೊಳ್ಳುವ ಪಂಗಡಗಳು ಲಾಲ್ಜಿ ಸಿಂಗ್ ತಂಡದ ವಿಶ್ಲೇಷಣೆಗೊಳಪಟ್ಟಿವೆ. ವಿವಿಧ ಜಾತಿ, ಭಾಷೆ ಹಾಗೂ ಭೌಗೋಳಿಕ ನೆಲೆಗಳಿಂದ ಈ ಪಂಗಡಗಳನ್ನು ಸಿಂಗ್ ತಂಡ ಆಯ್ದುಕೊಂಡಿರುವುದು ಒಂದು ವಿಶೇಷ. ಇವರ ಡಿಎನ್ಎಯಲ್ಲಿ ಸಾಮಾನ್ಯವಾಗಿರಬಹುದಾದ ಅಂಶಗಳನ್ನು ಗುರುತಿಸಿ, ಅವುಗಳ ಪ್ರಮಾಣವನ್ನು ಸಿಂಗ್ ತಂಡ ಲೆಕ್ಕಿಸಿದೆ.  ಅಷ್ಟೇ ಅಲ್ಲ, ಪಾಕಿಸ್ತಾನದ ಪಠಾನ್ ಪಂಗಡದ ಜೊತೆಗೂ ಇವುಗಳನ್ನು ತಾಳೆ ಹಾಕಿದ್ದಾರೆ. ಇವರ ಪ್ರಕಾರ ಈ ಇಪ್ಪತ್ತೈದು ಪಂಗಡಗಳಲ್ಲೂ ಸಾಕಷ್ಟು ಸಾಮ್ಯತೆಗಳಿವೆ. ಉತ್ತರಭಾರತದ ಜನಾಂಗಗಳಲ್ಲಿ ಹೆಚ್ಚಿರುವ ಗುಣಗಳು, ದಕ್ಷಿಣ ಭಾರತದ ಪಂಗಡಗಳಲ್ಲಿ ಕಡಿಮೆಯಾಗಿಯೂ, ದಕ್ಷಿಣ ಭಾರತದ ಪಂಗಡಗಳಿಗೆ ವಿಶಿಷ್ಟವಾಗಿರುವ ಗುಣಗಳು ಉತ್ತರಭಾರತದ ಪಂಗಡಗಳಲ್ಲಿ ಕಡಿಮೆಯಾಗಿ ಕಂಡಿವೆ. ಆದರೆ ಯಾವುವೂ ಅತ್ಯಂತ ವಿಶಿಷ್ಟವೆನ್ನಿಸುವುವವಲ್ಲ. ಆದ್ದರಿಂದ ಈ ಎಲ್ಲ ಜನಸಮೂಹಗಳೂ ಎರಡು ವಿಶಿಷ್ಟ ಮೂಲವಾಸಿಗಳ ವಾರಿಸುಗಳಿರಬೇಕು ಎಂದು ಸಿಂಗ್ ತಂಡ ಅಂದಾಜು ಮಾಡಿದೆ. ಭಾಷಾವಾರು ಪಂಗಡಗಳಿಗೆ ಹೋಲಿಸಿದಾಗ ಈ ಮೂಲವಾಸಿಗಳಲ್ಲಿ ಒಂದು ಭಾರತದ ಉತ್ತರ ದಿಕ್ಕಿನಿಂದ ವಲಸೆ ಬಂದಿರಬೇಕು ಎಂದೂ, ಮತ್ತೊಂದು ದಕ್ಷಿಣ ದಿಕ್ಕಿನಿಂದ ವಲಸೆ ಬಂದಿರಬೇಕೆಂದೂ ತೀರ್ಮಾನಿಸಿದ್ದಾರೆ. ಇವೆರಡೂ ಪಂಗಡಗಳೂ ಜೊತೆಗೂಡಿ ಉಳಿದ ಪಂಗಡಗಳು ಜನಿಸಿರಬೇಕು. ಹಾಗೂ ಅನಂತರ ಭಾರತಕ್ಕೆ ವಲಸೆ ಬಂದ ಇತರೆ ಜನಾಂಗಗಳ ಜೊತೆ ಬೆರಕೆಯಾಗಿ ವಿಶಿಷ್ಟವೆನ್ನಿಸುವ ಗುಣಗಳನ್ನು ಪಡೆದುಕೊಂಡಿರಬೇಕು ಎಂದು ತರ್ಕಿಸಿದ್ದಾರೆ. ಒಟ್ಟಾರೆ, ಕಕುಲದಲ್ಲಿ ಕೀಳ್ಯಾವುದೋಕಿ ಎನ್ನುವ ಕವಿಯ ಆಶಯಕ್ಕೆ ವಿಜ್ಞಾನಿ ಪುರಾವೆ ನೀಡುತ್ತಿದ್ದಾನೆ ಎನ್ನೋಣವೇ?

1. David Reich et al., Reconstructing Indian population History, Nature, Vol. 461,  Pp , 489-493, (24 September 2009), 2009.

2. Aravinda Chakravarti., Tracing Indiaಕಿs invisible threads, Nature, Vol. 461, 487-488, (24 September 2009) 2009.