ಭಾರತೀಯರಿಗೆ ಜಗತ್ತಿನಷ್ಟೇ ಭಾಷೆಯೂ ಸೋಜಿಗದ ಮತ್ತು ನಿಗೂಢವಾದ ಸಂಗತಿ. ‘ಗುಹಾ ತ್ರೀಣಿ ನಿಹಿತಾ ನೇಂಗಯಂತಿ ತುರೀಯಂ ವಾಚೋ ಮನುಷ್ಯಾ ವದನ್ತಿ’ ‘ತಿಳಿಯದ ಮುಕ್ಕಾಲುಭಾಗ ಗುಹೆಯಲ್ಲಿ ಅಡಗಿದೆ,  ನಾಲ್ಕನೆಯ ಒಂದು ಭಾಗವನ್ನು ಜನರು ನುಡಿಯುತ್ತಾರೆ’ ಎನ್ನುತ್ತದೆ ಋಗ್‌ವೇದ (1-164-45). ವಾಕ್, ಎಂದರೆ ಮಾತು, ನಿಗೂಢ ತತ್ವವಾಗಿ ಮತ್ತು ದೇವತೆಯಾಗಿ ಇವೆರಡರ ಸಮೀಕರಣದ ಋಷಿ-ವಾಕ್-ಅಂಭೃಣಿಯಾಗಿ ವೇದದಲ್ಲಿ ಕಂಡುಬರುತ್ತದೆ. ಪುರಾಣಗಳಲ್ಲಿ ಈ ವಾಗ್ದೇವತೆ ಸರಸ್ವತಿ. ಬ್ರಹ್ಮನ ಮಡದಿ. ಬ್ರಹ್ಮನು ವಾಚಸ್ಪತಿ-ವಾಕ್ಪತಿ, ಸೃಷ್ಟಿಕರ್ತ. ಆದ್ದರಿಂದ ಜಗತ್ತಿನ ಸೃಷ್ಟಿಯ ಶಕ್ತಿಯೇ ವಾಕ್ ಆಗಿ ಕಾಣುವುದು. ಪುರಾಣಗಳನ್ನನುಸರಿಸಿದ ಆಗಮ ಪ್ರಣೀತವಾದ ಸರಸ್ವತಿ ಅಥವಾ ಶಾರದೆಯ ವಿಗ್ರಹಗಳ ಬಿಳಿಯ ಬಣ್ಣ, ವೀಣೆ, ಪುಸ್ತಕ, ಜಪಮಾಲೆ, ಗಿಳಿ ಇವೆಲ್ಲ ವಾಕ್ ತತ್ವದ ಪರಿಕರಗಳಾಗಿ ಕಾಣುತ್ತವೆ. ವಾಕ್‌ದೇವಿಗೆ ವಿದ್ಯೆ ಅಥವಾ ಕಲಿಕೆಯ ಅಭಿನ್ನ ರೂಪ. ಋಗ್ವೇದದ ಜ್ಞಾನ ಸೂಕ್ತ (10-6-71) ಇದನ್ನು ಮಾರ್ಮಿಕವಾಗಿ ಚಿತ್ರಿಸುತ್ತದೆ. ಉಪನಿಷತ್ತಿನ ಶಾಂತಿ ಮಂತ್ರ ಒಂದು ‘ವಾಙ್ಮೇ ಮನಸಿ ಪ್ರತಿಷ್ಠಿತಾ ಮನೋ ಮೇ ವಾಚಿ ಪ್ರತಿಷ್ಠಿತಂ’ ‘ನನ್ನ ಮಾತು ಮನಸ್ಸಿನಲ್ಲಿ ನೆಲೆಗೊಂಡಿದೆ, ಮನಸ್ಸು ಮಾತಿನಲ್ಲಿ ನೆಲೆಗೊಂಡಿದೆ’ ಎಂದು ಮಾತು ಮನಸ್ಸುಗಳ ಅವಿನಾಭಾವವನ್ನು ಹೇಳುತ್ತದೆ. ವೈದಿಕ ಅವೈದಿಕ ಮತಗಳೆಲ್ಲವೂ ವಾಕ್ ಎನ್ನುವುದು ಮನಸ್ಸು ಮತ್ತು ಕಾಯ ಎರಡರ ನಡುವಿನ ಕರಣ, ಆದ್ದರಿಂದ ಅವೆರಡರ ಕೊಂಡಿ ಮತ್ತು ಅವೆರಡರ ಗುಣ ಲಕ್ಷಣ ಹೊಂದಿದ್ದು ಎಂದು ಭಾವಿಸುತ್ತವೆ. ವೇದ ಸಂಹಿತೆಯ ಕಾಲದ ನಂತರ, ಸಂಹಿತೆಗಳ ವ್ಯಾಖ್ಯಾನ ಆರಂಭವಾಗಿ ಒಂದು ನಿರ್ದಿಷ್ಟ ಭಾಷೆಯ ಮೂರ್ತ ವಿವರಗಳನ್ನು ಕಲೆಹಾಕಿ ವಿಶ್ಲೇಷಿಸುವ ಪ್ರಯತ್ನಗಳು ಆರಂಭವಾದವು. ವೇದ ಬ್ರಾಹ್ಮಣಗಳಲ್ಲೇ ಆರಂಭವಾದ ಈ ಪ್ರಯತ್ನ ಶಿಕ್ಷಾ, ವ್ಯಾಕರಣ, ಛಂದಸ್ಸು ಮತ್ತು ನಿರುಕ್ತ ಎಂಬ ವೇದಾಂಗಗಳಲ್ಲಿ ಸ್ವತಂತ್ರ ಶಾಸ್ತ್ರಗಳಾಗಿ ಬೆಳೆದವು. ದರ್ಶನಗಳು ಅದರಲ್ಲಿಯೂ ವಿಶೇಷವಾಗಿ ನ್ಯಾಯ ಮತ್ತು ಪೂರ್ವಮೀಮಾಂಸಾ ಶಾಸ್ತ್ರಗಳು ಮನಸ್ಸು-ಶಬ್ದ-ಅರ್ಥಗಳ ಸಂಬಂಧವನ್ನು ಚರ್ಚಿಸುತ್ತವೆ. ವ್ಯಾಕರಣ, ಮೀಮಾಂಸಾ, ನ್ಯಾಯ (ತರ್ಕ) ಶಾಸ್ತ್ರಗಳನ್ನು ಭಾಷೆಗೆ ಸಂಬಂಧಿಸಿದಂತೆ ಪದ-ವಾಕ್ಯ-ಪ್ರಮಾಣಶಾಸ್ತ್ರಗಳೆಂದು ಕರೆದಿದ್ದಾರೆ. ಅಲಂಕಾರ ಶಾಸ್ತ್ರ ಭಾಷೆಯ ಸೌಂದರ್ಯ ವನ್ನು ಚರ್ಚಿಸುತ್ತದೆ. ಆದ್ದರಿಂದ ಭಾರತೀಯರ ಭಾಷಾಧ್ಯಯನವನ್ನು ತಿಳಿಯಲು ಇವೆಲ್ಲ ಆಕರ ಶಾಸ್ತ್ರಗಳು. ಇವಲ್ಲದೆಯೂ ವಿವಿಧ ವೇದಾಂತ ದರ್ಶನಗಳೂ ತಂತ್ರಶಾಸ್ತ್ರವೂ ಭಾಷೆಗೆ ಸಂಬಂಧಿಸಿದ ವಿವಿಧ ವಿಚಾರಗಳನ್ನು ಪ್ರಸ್ತಾಪಿಸುತ್ತವೆ.

ವೇದಗಳಲ್ಲಿ

ವೇದಗಳಲ್ಲಿ ನಾಲ್ಕು ಭಾಗಗಳಿವೆ. ಮೊದಲನೆಯದು ಸಂಹಿತಾಭಾಗ. ಇದನ್ನು ಮಂತ್ರಭಾಗ ಎಂದೂ ಕರೆಯುತ್ತಾರೆ. ಬಹುಪಾಲು ದೇವತಾಸ್ತುತಿ ಪರವಾಗಿದ್ದ ಋಷಿಗಳ ಸ್ಫೂರ್ತಿಯಿಂದ ಬಂದ ಸೂಕ್ತಗಳಿವು. ವೇದ, ಶ್ರುತಿ, ಎಂದರೆ ಇದೇ ಮುಖ್ಯವಾಗಿ ಗ್ರಾಹ್ಯ. ಎರಡನೆಯದು ಬ್ರಾಹ್ಮಣ ಭಾಗ. ವೈದಿಕ ಕರ್ಮ(ಕ್ರಿಯಾಕಲಾಪ)ಗಳ ವಿಧಿ-ನಿಷೇಧಗಳನ್ನೂ ಮತ್ತು ಆಯಾ ಕರ್ಮಗಳಲ್ಲಿ ಬಳಸುವ ಸೂಕ್ತಗಳನ್ನೂ, ಅದರ ಕ್ರಮಗಳನ್ನೂ, ವಿವರಗಳನ್ನೂ, ವಿವರಣೆಗಳನ್ನೂ ಬ್ರಾಹ್ಮಣಗಳಲ್ಲಿ ಕಾಣುತ್ತೇವೆ. ಇದರಿಂದಾಗಿ ಬ್ರಾಹ್ಮಣಗಳು ಸಂಹಿತೆಯನ್ನು ‘ಪಾಠ್ಯ’ (ಟೆಕ್ಸ್ಟ್) ಎಂದು ಪರಿಗಣಿಸುತ್ತವೆ. ಮೂರನೆಯದು ಆರಣ್ಯಕ. ಇದರಲ್ಲಿ ಮಂತ್ರ, ಬ್ರಾಹ್ಮಣಗಳಲ್ಲಿ ಹೇಳಿದ್ದನ್ನು ಮಾನಸಿಕವಾಗಿ ಅನುಸಂಧಾನ ಮಾಡುತ್ತಾ ಅಧ್ಯಾತ್ಮದ ಕಡೆಗೆ ನಡೆಯುವುದಿದೆ. ಕೊನೆಯದು ಉಪನಿಷತ್. ಇದು ಅಧ್ಯಾತ್ಮಪರವಾದದ್ದೆ. ಮೊದಲಿಗೆ ಉಲ್ಲೇಖಿಸಿರುವಂತಹ ಋಗ್ಮಂತ್ರಗಳು, ತೈತ್ತಿರೀಯ ಸಂಹಿತೆಯ 6-4-7-3 ಮಂತ್ರ ಮುಂತಾದ ಕಡೆ ತುಂಬಾ ಆಸಕ್ತಿದಾಯಕ ಮಾತುಗಳಿವೆ. ಆದರೆ ಇವೆಲ್ಲ ಸ್ಫೂರ್ತಿಯಿಂದ ಬಂದ ಮಾತುಗಳು; ಶಾಸ್ತ್ರೀಯ ಚಿಂತನೆಗಳಲ್ಲ. ಆದ್ದರಿಂದ ಇಲ್ಲಿ ಬರುವ ಉದ್ಗಾರ, ಒಗಟು, ರೂಪಕಗಳನ್ನು ವ್ಯಾಖ್ಯಾನಿಸಿಕೊಳ್ಳುವುದು ಅನಿವಾರ್ಯ. ಇಂಥ ಸಂಗತಿಗಳು ವಚನಗಳಂತಹ ಅನುಭಾವೀ ಪರಂಪರೆಯಲ್ಲಿ ಪ್ರತಿಫಲಿತ ವಾಗುತ್ತಲೇ ಬಂದಿವೆ. ಸಂಹಿತೆಯ ನಂತರ ಸಂಹಿತೆಗಳನ್ನು ಅರ್ಥೈಸುವ ಬ್ರಾಹ್ಮಣಗಳಲ್ಲಿ ಭಾಷಾಶಾಸ್ತ್ರದ ಆರಂಭವಿದೆ.

ಬ್ರಾಹ್ಮಣಗಳಲ್ಲಿ ವೈದಿಕ ಕರ್ಮಗಳನ್ನು ವಿವರಿಸುವಾಗ ಅದಕ್ಕೆ ಸಂಬಂಧಿಸಿದ ದೇವತೆ, ದ್ರವ್ಯ ಮುಂತಾದವುಗಳನ್ನೂ ವಿವರಿಸಲಾಗುತ್ತದೆ. ಅಂಥ ಪ್ರಸಂಗಗಳಲ್ಲಿ ಪದಗಳನ್ನು ವಿಶ್ಲೇಷಿಸುವ ಮತ್ತು ರೂಪಕ ಸೃಷ್ಟಿಯ ಕಥೆ ಹೇಳುವುದಿದೆ. ಉದಾಹರಣೆಗೆ ‘ತಮ್ ವಾ ಏತಮ್ ವರಣಸಂತಂ ವರುಣ ಇತ್ಯಾಚಕ್ಷತೆ’ ಎಂದು ವರುಣ ಶಬ್ದದ ನಿರ್ವಚನವನ್ನು ಗೋಪಥಬ್ರಾಹ್ಮಣ (1-6ರಲ್ಲಿ) ಕೊಡುತ್ತದೆ. ಶತಪಥಬ್ರಾಹ್ಮಣ (1-4-5-8 ರಿಂದ 12) ಮಾತಿನ ಅರ್ಥ ವಿವರಣೆ ಅಥವಾ ವ್ಯಾಖ್ಯಾನ ಇಂಗಿತಕ್ಕೂ ಉಕ್ತಿಗೂ ಸಂಘರ್ಷ ತರುವುದನ್ನು ಚಿತ್ರಿಸುತ್ತದೆ.

ಆರಣ್ಯಕಗಳು ಮಂತ್ರಗಳನ್ನು ರಹಸ್ಯವೆಂದು ತಿಳಿದು ಅವುಗಳನ್ನು ಧ್ಯಾನಕ್ಕೆ ಬಳಸುತ್ತವೆ. ಬ್ರಾಹ್ಮಣಗಳಲ್ಲಾಗಲೇ ಸ್ವಧಾ, ವಷಟ್, ಹುಂಫಟ್, ಮುಂತಾದ ಪದಗಳಿಗೆ ‘ಅರ್ಥ’ ಹೇಳಲಾಗದು, ಆದರೆ ಅದಕ್ಕೆ ವಿಶಿಷ್ಟ ವಿನಿಯೋಗವಿದೆ ಎಂದು ಗುರುತಿಸಲಾಗಿತ್ತು. ಇದರಿಂದ ಶಬ್ದಗಳಿಗೆ ಅರ್ಥಕ್ಕಿಂತ ಮಿಗಿಲಾದ ಶಕ್ತಿ ಇದೆ ಹಾಗೂ ಈ ಶಕ್ತಿ ಯಥಾವತ್ತಾದ ಉಚ್ಚಾರಣೆಯಿಂದಲೇ ಎಂಬ ಭಾವನೆ ಉಪನಿಷತ್ತುಗಳ ಕಾಲಕ್ಕೆ ಶಿಕ್ಷಾ ಶಾಸ್ತ್ರಕ್ಕೆ ಎಡೆಮಾಡಿಕೊಟ್ಟಿತು (ಮಂತ್ರಗಳ ಈ ಮಾಂತ್ರಿಕತೆಯ ರೂಪವು ತಂತ್ರಶಾಸ್ತ್ರದ ಭಾಷಾ ಚಿಂತನೆಯನ್ನು ಬೇರೊಂದು ಮಜಲಿಗೆ ಕೊಂಡೊಯ್ದಿದೆ. ತಂತ್ರದ ಬೀಜಾಕ್ಷರದ ಕಲ್ಪನೆಯ ಹಿಂದಿನ ಭಾವ ವೈದಿಕ ವ್ಯಾಕರಣ ಪರಂಪರೆಯನ್ನು ಪುರಸ್ಕರಿಸದೆ ಇರುವಂತೆ ತೋರುತ್ತದೆ). ಇದಲ್ಲದೆ ಆರಣ್ಯಕಗಳಲ್ಲಿ ಸಂಹಿತೆಯ ಪಾಠವನ್ನು ಯಥಾವತ್ತಾಗಿ ಕಾಪಾಡಿಕೊಳ್ಳಲು ಮತ್ತು ಅವುಗಳನ್ನು ಕುರಿತು ಧ್ಯಾನಿಸಲು ಅನುಕೂಲವಾಗುವಂತೆ ಪದಪಾಠವು ಪ್ರಾರಂಭವಾಯಿತು. ಪದಪಾಠವೆನ್ನುವುದು ಸಂಹಿತೆಯ ಒಂದೊಂದು ಪದವನ್ನೂ ಬಿಡಿಸಿ ಹೇಳುವುದು. ಮುಂದೆ ಪಾಠ ಮತ್ತು ಆನುಪೂರ್ವಿಗಳನ್ನು ಕಾಪಾಡಿಕೊಳ್ಳಲು ಪದಪಾಠವನ್ನಾಧರಿಸಿ ಕ್ರಮ, ಜಟಾ, ಘನ ಎಂಬ ಪಾಠಗಳು ಹುಟ್ಟಿದವು. ಪದ ಪಾಠದಲ್ಲಿ ಪದಗಳನ್ನು ಬಿಡಿಸಲು ಸಂಧಿ ವಿಭಾಗ, ಸಮಾಸ ವಿಶ್ಲೇಷಣೆ ಮುಂತಾದ ಸ್ಪಷ್ಟ ನಿಯಮಗಳನ್ನು ಅಪೇಕ್ಷಿಸುತ್ತವೆ. ಉಚ್ಛಾರಣೆಯಲ್ಲಿ ವ್ಯತ್ಯಾಸವಾಗುತ್ತಿರುವಾಗಲೇ ಮೌಖಿಕ ಪರಂಪರೆಯಲ್ಲೇ ಸಂಹಿತೆಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳುವ ಪ್ರಯತ್ನ ಮತ್ತು ಪದಗಳನ್ನು ಕುರಿತ ಧ್ಯಾನವು ಶಿಕ್ಷಾ ಮತ್ತು ವ್ಯಾಕರಣ ಶಾಸ್ತ್ರಗಳಿಗೆ ನಾಂದಿ ಹಾಡಿತು. ಐತರೇಯ ಆರಣ್ಯಕದಲ್ಲಿ ಶಾಕಲ್ಯ ಮಾಂಡೂಕೇಯ ಮುಂತಾದ ವೈಯ್ಯಕರಣರ ಹೆಸರು ಕೇಳಿ ಬರುತ್ತದೆ. ಉಪನಿಷತ್ತುಗಳು ಬ್ರಹ್ಮವಿದ್ಯೆಯನ್ನು ಹೇಳುತ್ತವೆ. ಮಾತು ಗಳಿಗೆ  ಸಿಲುಕದ ಪರಬ್ರಹ್ಮ ಇದರ ಆತ್ಯಂತಿಕ ಗುರಿ. ಆದರೆ ವ್ಯಕ್ತವಾದ ಜಗತ್ತೆಲ್ಲ ನಾಮ-ರೂಪಾತ್ಮಕವಾದದ್ದು. ಬ್ರಹ್ಮನಿಂದ ಜಗತ್ತು ಸೃಷ್ಟಿಯಾಗುವು ದನ್ನು ಛಾಂದೋಗ್ಯೋಪನಿಷತ್ ‘ನಾಮರೂಪೇ ವ್ಯಾಕರಣವಾಣಿ’ ಎಂದಿದೆ. ನಾಮ-ರೂಪಗಳ ಅವಿನಾಭಾವ ಸಂಬಂಧದಿಂದ ಬುದ್ದಿ, ಮನಸ್ಸುಗಳಿಗೆ ಗಮ್ಯವಾದ ಅಪರ ಬ್ರಹ್ಮವನ್ನು ಶಬ್ದಬ್ರಹ್ಮವೆಂದು ಕರೆದಿದೆ.  ಮೈತ್ರಾಯಣಿ ಉಪನಿಷತ್ ‘ಶಬ್ದಬ್ರಹ್ಮಣಿ ನಿಷ್ಣಾತಃ ಪರಬ್ರಹ್ಮಾಧಿಗಚ್ಛತಿ’ ಎನ್ನುತ್ತದೆ. ಇದು ನಾನಾ ರೂಪದಲ್ಲಿ ಕಾಣುವ ಜಗತ್ತಿನ ಹಿಂದೆ ಒಂದು ಪರತತ್ವವನ್ನು ಕಂಡಂತೆ ನಾನಾ ಶಬ್ದಗಳ ಹಿಂದೆ ಪರಾವಾಕ್ ಒಂದನ್ನು ಕಾಣುವ ವಿಧಾನ. ವಾಕ್‌ನ ಪರ ರೂಪ ಕಾಣುವುದು ಒಂದಾದರೆ ವ್ಯಷ್ಟಿಯಲ್ಲಿ ಅದರ ಭೌತಿಕ ರೂಪದ ಜಿಜ್ಞಾಸೆಯೂ ನಡೆದಿದೆ. ಛಾಂದೋಗ್ಯದಲ್ಲಿ ತಿಂದ ಊಟದಲ್ಲಿರುವ ತೇಜಸ್ಸಿನ ಅಣು ರೂಪವೇ ವಾಕ್. ‘ತೇಜೋ ಅಶಿತಂ ತ್ರೇಧಾ ವಿಭಜ್ಯತೆ….ಯೋ ಅಣಿಷ್ಟಃ ಸಾ ವಾಕ್’. (6-5-3) ವಾಕ್ ಒಂದು ಅಂಗ, ಇಂದ್ರಿಯ, ಕರ್ಮೇಂದ್ರಿಯ. ಇದರ ಕೆಲಸವನ್ನೆ ಧ್ಯಾನಕ್ಕೆ ಬಳಸುವ ಉಪಾಸನೆ ತೈತ್ತಿರೀಯೋಪನಿಷತ್ತಿನಲ್ಲಿ ಇದೆ. ಇದೇ ಸಂದರ್ಭದಲ್ಲಿ ಶಿಕ್ಷಾ ಶಾಸ್ತ್ರದ ಮೂಲ ಸೂತ್ರವನ್ನೂ ಅಲ್ಲಿ ಹೇಳಿದೆ. ಈ ಭಾಗವನ್ನು ಶಿಕ್ಷಾವಲ್ಲಿ ಎಂದೇ ಹೆಸರಿಸಿದೆ.

ಶಿಕ್ಷಾಶಾಸ್ತ್ರ

ಯಾವುದೇ ಭಾಷೆಯ ಸ್ಥಾಯಿಯಾದ ಉಚ್ಚಾರಣಾ ಘಟಕಗಳು ಆ ಭಾಷೆಯ ಅವಿನಾಶೀ ಮೂಲದ್ರವ್ಯ. ಅದಕ್ಕೇ ಅವುಗಳನ್ನು ಅಕ್ಷರ ಎನ್ನುವುದು. ಅಕ್ಷರಗಳೇ ಶಬ್ದಗಳನ್ನು ತೋರುವುದರಿಂದ ಅಕ್ಷರಗಳನ್ನು ‘ವರ್ಣ’ ಎಂದು ಕರೆಯುತ್ತಾರೆ. ವರ್ಣಗಳು, ಅದರ ಹಿಂದಿನ ಸೂಕ್ಷ್ಮಾಂಶಗಳು, ಅವುಗಳು ಒಗ್ಗೂಡಿ ಪದ/ಶಬ್ದವಾಗುವ ರೀತಿ ಮುಂತಾದವುಗಳ ವಿವರಣೆ ವಿಶ್ಲೇಷಣೆ ಶಿಕ್ಷಾಶಾಸ್ತ್ರದಲ್ಲಿದೆ. ಇದನ್ನು ಬೇಕಿದ್ದರೆ ಪ್ರಾಚೀನ ಫೋನೆಟಿಕ್ಸ್ ಎನ್ನಿ. ತೈತ್ತಿರೀಯೋಪನಿಷತ್ತಿನಲ್ಲಿ ಮಂತ್ರೋಚ್ಚಾರಣೆಯ ಉಪಾಸನೆಗೆ ಪೂರ್ವಭಾವಿಯಾಗಿ ಶಿಕ್ಷಾದ ಪ್ರಸ್ತಾಪ ಹೀಗಿದೆ: ‘ವರ್ಣಃ ಸ್ವರಃ | ಮಾತ್ರಾ ಬಲಂ | ಸಾಮ ಸಂತಾನಃ | ಇತ್ಯುಕ್ತಃ ಶಿಕ್ಷಾಧ್ಯಾಯಃ|’ ಅಕಾರಾದಿಗಳು ವರ್ಣಗಳು. ಪಾಣಿನೀಯ ಶಿಕ್ಷಾದಲ್ಲಿ ಇವು ಹೇಗೆ ಹುಟ್ಟುತ್ತವೆ ಎಂದು ಹೇಳಿದೆ. ‘ಆತ್ಮ ಬುದ್ದಿಯ ಜತೆ ಸೇರಿ ಅರ್ಥ ಹೇಳುವ ಇಚ್ಛೆಯಿಂದ ಮನಸ್ಸು ದೇಹದ ಕಾವನ್ನು ತಾಗಿ ಅದು ಗಾಳಿಯನ್ನು ಮೇಲೆ ದೂಡುತ್ತದೆ. ಆ ಪ್ರಾಣ ಎದೆಗೆ ಬಂದಾಗ ಸ್ವರ ಹುಟ್ಟುತ್ತದೆ. (ಇದು ಉದಾತ್ತ ಮುಂತಾದ ಸಂಗೀತದ ಸ್ವರಗಳು) ಹಾಗೆ ಮೇಲೆ ಬಂದ ಪ್ರಾಣ ನೆತ್ತಿಯ ಕಡೆ ಹೋಗುವುದನ್ನು ತಡೆದು ಬಾಯಿಗೆ ತಿರುಗಿಸಿ ಗಂಟಲಿನಿಂದ ತುಟಿಯವರೆಗೆ ಆ ಗಾಳಿಯನ್ನು ನಾಲಿಗೆ ಬಾಯಿಯ ಬೇರೆಬೇರೆ ಭಾಗಗಳಿಗೆ ತಾಗಿ ನಿಯಂತ್ರಿ ಸುವುದರಿಂದ ವರ್ಣಗಳ ಸೃಷ್ಟಿಯಾಗುತ್ತದೆ’. ಈ ವರ್ಣಗಳಲ್ಲಿ ಸ್ವತಂತ್ರವಾಗಿ ಉಚ್ಚಾರಗೊಳ್ಳುವ ಸ್ವರಗಳು ಮತ್ತು ಸ್ವರದ ಜತೆಗೇ ಸಾಮಾನ್ಯವಾಗಿ ಉಚ್ಚರಿಸಬೇಕಾದ ವ್ಯಂಜನಗಳು ಎಂದು ಎರಡು ವಿಧ. ಗಂಟಲಿನಿಂದ ಎದೆಯ ಮಧ್ಯದಲ್ಲಿ ಸ್ಥಾನ ಪಲ್ಲಟದಿಂದ ಉದಾತ್ತ, ಅನುದಾತ್ತ, ಸ್ವರಿತವೆಂಬ ಏರಿಳಿತಗಳು ಆಗುವುದನ್ನೂ ಸ್ವರಗಳೆಂದೇ ಕರೆಯುತ್ತಾರೆ. ಈ ಸ್ವರಗಳಿಗೆ ಕಾಲ ಗತಿಯ ಲಯದ ಲೆಕ್ಕ ಕೊಡುವ – ಹ್ರಸ್ವ, ದೀರ್ಘ, ಪ್ಲುತಗಳು ಮಾತ್ರಾ. ಇವುಗಳನ್ನು ನಿಯಂತ್ರಿಸುವ ಶ್ವಾಸದಲ್ಲಿನ ಪ್ರಯತ್ನ ಬಲ. ಈ ಪ್ರಯತ್ನದಲ್ಲಿನ ಸಮತೆಯನ್ನು ಕಾಪಾಡುವ ನಾಭಿಯಿಂದ ಬಂದ ಸಮತೋಲನ ಸಾಮ. ವರ್ಣಗಳು ಗುಂಪುಗೂಡಿ ಶಬ್ದ, ಪದ, ವಾಕ್ಯಗಳಾಗಿ ಅರ್ಥಾಭಿವ್ಯಕ್ತಿಗೆ ಅನುವು ಮಾಡಿಕೊಡುವ ಮನಸ್ಸಿನ ಲಯ ಸಂತಾನ. ಹೀಗೆ ಮನಸ್ಸು, ನಾಭಿ, ಎದೆ, ಶ್ವಾಸ, ಗಂಟಲುಗಳ ಮೂಲಕ ಹೊರಬಂದು ನಾಲಗೆ ಗಂಟಲು, ಬಾಯ ಆಂಗಳ, ವಸ್ಡು, ಹಲ್ಲು, ತುಟಿಗಳಲ್ಲಿ ನಿಯಂತ್ರಿಸಲ್ಪಟ್ಟು ಹೊರಬಂದ ಪ್ರಾಣ/ಗಾಳಿ ವರ್ಣ. ಕೆಲವು ವರ್ಣಗಳು ಬಾಯ ಜತೆಗೆ ಮೂಗನ್ನು ಸೇರಿ ಹೊರಬರುತ್ತವೆ ಅವಕ್ಕೆ ಅನುನಾಸಿಕಗಳೆಂದು ಹೆಸರು. ಅನುನಾಸಿಕ, ಕಂಪ (ನಡುಗಿದ ಸ್ವರ), ಯೋಗವಾಹ (ಅನುಸ್ವಾರ, ವಿಸರ್ಗ, ಜಿಹ್ವಾಮೂಲೀಯ, ಉಪಧ್ಮಾನೀಯ) ಸ್ವತಂತ್ರ ಉಚ್ಚಾರಣೆ ಹೊಂದಿಲ್ಲವಾದ್ದರಿಂದ ಅವನ್ನು ಅನುಪ್ರಧಾನ ಎಂದು ಕರೆಯಲಾಗಿದೆ. ಅನುನಾಸಿಕ ಸ್ವರಗಳೂ, ಅನುನಾಸಿಕ ಯ, ವ ಕಾರಗಳೂ, ಉದಾತ್ತಾದಿ ಸ್ವರಗಳೂ ವೇದಗಳಲ್ಲಿ ಪ್ರಮುಖವಾಗಿದ್ದು, ವೇದೋತ್ತರಕಾಲದಲ್ಲಿ ಅನಿಯತವಾದವು. ಆದ್ದರಿಂದ ಬರವಣಿಗೆಯಲ್ಲಿ ಕಂಡು ಬರುವುದಿಲ್ಲ. ಬರವಣಿಗೆಯೇ ಪ್ರಧಾನವಾದ ಸಂಸ್ಕೃತ-ಶಾಸ್ತ್ರೀಯ ಭಾಷೆಯಲ್ಲಿ ಉಚ್ಚಾರಣೆಯ ಚರ್ಚೆ ಗೌಣವಾಯಿತು. ಇದರಿಂದ ಶಿಕ್ಷಾಶಾಸ್ತ್ರ ವೇದಾಂಗವಾಗಿಯೇ ಚಾಲ್ತಿ ಪಡೆಯಿತು. ವೇದಾಂಗವಾದ ಶಿಕ್ಷಾ ಪ್ರಾತಿಶಾಖ್ಯೆ ಗಳನ್ನಾಧರಿಸಿವೆ. ಪ್ರಾತಿಶಾಖ್ಯೆಗಳೆಂದರೆ ವೇದದ ಪ್ರತಿ ಶಾಖೆಗೂ ಅನ್ವಯಿಸಿ ದಂತಿರುವ ಶಿಕ್ಷಾ ಮತ್ತು ವ್ಯಾಕರಣವನ್ನು ವಿವರಿಸುವ ಪ್ರಾಚೀನ ಗ್ರಂಥಗಳು. ಋಗ್ವೇದಕ್ಕೆ ಶೌನಕೀಯ, ಶುಕ್ಲಯುಜುರ್ವೇದಕ್ಕೆ ಕಾತ್ಯಾಯನ, ಕೃಷ್ಣ ಯಜುರ್ವೇದಕ್ಕೆ ತೈತ್ತಿರೀಯ, ಸಾಮವೇದಕ್ಕೆ ಪೌಷ್ಯ, ಅಥರ್ವಣವೇದಕ್ಕೆ ಶೌನಕೀಯ ಎಂಬ ಪ್ರಾತಿಶಾಖ್ಯೆಗಳು ಪ್ರಚಾರದಲ್ಲಿವೆ. ಪ್ರತಿ ಶಾಖೆಯಲ್ಲಿನ ಉಚ್ಚಾರ ಭೇದಗಳು, ಅದರಿಂದ ಸಂಧಿ, ಛಂದಸ್ಮತಿಗಳು – ಅವುಗಳಲ್ಲಿನ ಪಲ್ಲಟ, ಇವುಗಳಿಂದಾದ ಕೆಲವು ಅರ್ಥವ್ಯತ್ಯಯ, ಉಚ್ಚಾರಣೆ ಜತೆಗಿನ ಕರವಿನ್ಯಾಸ ಮುಂತಾದ ವಿವರಣೆ ಹಾಗೂ ಕೆಲವು ರಹಸ್ಯಗಳನ್ನು ಪ್ರಾತಿಶಾಖ್ಯೆ ಗಳಲ್ಲಿ ಕಾಣಬಹುದು. ಇವು ಸೂತ್ರದ ರೂಪದಲ್ಲಿ ಹೇಳಿ ವ್ಯಾಕರಣದ ಮುಂದಿನ ರೂಪಕ್ಕೆ ಬುನಾದಿಯಾಗಿದೆ. ಆದರೆ ಇವು ಸೂತ್ರಬದ್ಧವಾಗಿಲ್ಲ (ಎಂದರೆ ತುಂಬ ಸುವ್ಯವಸ್ಥಿತವೂ ಸರ್ವತೋಮುಖವೂ ಆಗಿಲ್ಲ). ಪ್ರಾತಿಶಾಖ್ಯೆ ಗಳನ್ನಾಧರಿಸಿ ನಾರದೀಯ, ವಾಸಿಷ್ಠ ಮುಂತಾದ 32 ಶಿಕ್ಷಾಗ್ರಂಥಗಳಿವೆ. ವೈಯ್ಯಕರಣಿ ಪಾಣಿನಿಯ ಹೆಸರಿನಲ್ಲಿ ಒಂದು ಪಾಣಿನೀಯ ಶಿಕ್ಷಾ ಇದೆ. ಇದು ಲೋಕ-ವೇದಗಳೆರಡಕ್ಕೂ ಸೇರಿದ್ದು. ಪಾಣಿನಿಯ ನಂತರ ಪ್ರಾಕೃತಗಳನ್ನು ಸಂಸ್ಕೃತ ಜನ್ಯ ಎಂದು ಭಾವಿಸಿ ಪ್ರಾಕೃತ ವ್ಯಾಕರಣಗಳಲ್ಲಿ ಸಂಸ್ಕೃತದಿಂದ ಪ್ರಾಕೃತಕ್ಕಾದ ವರ್ಣಪಲ್ಲಟವಾಗಿಯೇ ಚರ್ಚಿಸಿರುವುದನ್ನು ಕಾಣಬಹುದು. ಇದೇ ಮುಂದೆ ತದ್ಭವಗಳ ಚರ್ಚೆಯಾಗಿ ಬೆಳೆಯಿತು.

ಮಾಹೇಶ್ವರ ಸೂತ್ರಗಳು

ಶಬ್ದ ಅಥವಾ ಸದ್ದು ಧ್ವನ್ಯಾತ್ಮಕ ವರ್ಣಾತ್ಮಕ ಎಂದು ಎರಡು ವಿಧ. ಮನಸ್ಸಿನ ವಿವಕ್ಷೆ. ಅರ್ಥದ ಹಂಗು ಇಲ್ಲದೆ ಹೊರಟದ್ದೆಲ್ಲ ಸದ್ದು ಧ್ವನ್ಯಾತ್ಮಕ, ಭಾಷೆಯಲ್ಲಿ ಪ್ರಯುಕ್ತವಾಗುವುದು ವರ್ಣಾತ್ಮಕ. ವರ್ಣಗಳು ಅರ್ಥ ನೀಡುವ ಪುಂಜಗಳಾದಾಗ ಅವು ಶಬ್ದ ಎನಿಸಿಕೊಳ್ಳುತ್ತವೆ. ವರ್ಣ ಗಳಿಂದ ಮುಂದಿನ ಚರ್ಚೆಯಾದ ವ್ಯಾಕರಣವನ್ನು ‘ಶಬ್ದಶಾಸ್ತ್ರ’ ಎಂದೇ ಕರೆಯುತ್ತಾರೆ. ಉಚ್ಚಾರಣೆಯ ಕ್ರಮವಾಧರಿಸಿ ಅ,ಆ,ಇ, ಈ ಮುಂತಾಗಿ ಸ್ವರ, ವರ್ಗೀಯ ವ್ಯಂಜನ, ಅವರ್ಗೀಯ ವ್ಯಂಜನ ಎಂದು ವರ್ಣಮಾಲೆಯನ್ನು ವಿಂಗಡಿಸಿಕೊಳ್ಳುವುದು ವ್ಯಾಕರಣದ ಮೊದಲ ಪಾಠ. ಪ್ರಸಿದ್ಧ ವೈಯ್ಯಕರಣಿ ಪಾಣಿನಿ ವರ್ಣಮಾಲೆಯನ್ನು ಕೊಂಚ ಭಿನ್ನವಾಗಿ ಕೊಡುತ್ತಾನೆ. ಅವು ಹದಿನಾಲ್ಕು ಸೂತ್ರಗಳಾಗಿವೆ. ‘ಅಇಉಣ್ | ಋಲೃಕ್ | ಏಓಙ್ | ಐಓಚ್ | ಹಯವರಟ್ | ಲಣ್ | ಞಮಙಣನಮ್| ಝಭಙ್ | ಫಢಧಷ್ | ಜಬಗಡದಶ್ | ಖಫಛಠಥ ಚಟತವ್ | ಕಪಯ್ | ಶಷಸರ್ | ಹಲ್|’ ಇವನ್ನು ಶಿವಸೂತ್ರ ಅಥವಾ ಮಾಹೇಶ್ವರ ಸೂತ್ರಗಳೆಂದು ಕರೆಯುತ್ತಾರೆ. ನೃತ್ತದ ಅರ್ಥಾಶ್ರಿತವಲ್ಲ. ಅದರ ಕೊನೆಗೆ ಬಂದ ಢಕ್ಕೆ ಸದ್ದು ಧ್ವನ್ಯಾತಕ. ಅದರಿಂದ ವರ್ಣಗಳ ಸ್ವರೂಪ ವ್ಯಕ್ತವಾಗಿ ಪಾಣಿನಿಯ ವ್ಯಾಕರಣಕ್ಕೆ ಬುನಾದಿಯಾಯಿತು. ಈ ರೀತಿಯ ವರ್ಣವಿಭಾಗ ನಿರೂಪಣೆ ಅಕ್ಷರಗಳು ವರ್ತಿಸುವ ರೀತಿಗೆ ಅನುಗುಣವಾಗಿದೆ. ಕೊನೆಯಲ್ಲಿನ ಅರ್ಧಾಕ್ಷರಗಳ ಜತೆ ಸೇರಿ ಪ್ರತಿ ಅಕ್ಷರ ತನ್ನ ಮತ್ತು ಆ ನಡುವಿನ ಅಕ್ಷರಗಳ ಸಂಕೇತವಾಗಿ ಪಾಣಿನಿ ಯಲ್ಲಿ ಅತಿ ಬಿಗಿಯಾದ ಸಂಕ್ಷಿಪ್ತ ಸೂತ್ರಕರಣಕ್ಕೆ ದಾರಿ ಮಾಡಿಕೊಟ್ಟಿದೆ. ಹಾಗೆಯೇ ಗಮನ ಶಿಕ್ಷಾದಿಂದ ವ್ಯಾಕರಣಕ್ಕೆ ಹೊರಳಿದ್ದನ್ನೂ ಇದು ಸೂಚಿಸುತ್ತದೆ.

ಅಕ್ಷರಗಳು ಅರ್ಥವತ್ತಾಗಿ ಕೂಡಿಕೊಂಡಾಗ ‘ಶಬ್ದ’. ಅದು ಬೇರೆ ಶಬ್ದ ಗಳೊಡನೆ ಕೂಡಿಕೊಳ್ಳಲು ಯೋಗ್ಯವಾಗುವುದು ಪ್ರತ್ಯಯಗಳಿಂದ. ಹಾಗೆ ಪ್ರತ್ಯಯ ಸಹಿತ ಶಬ್ದ ‘ಪದ’. ವ್ಯಾಕರಣದ ಮುಖ್ಯ ಚಿಂತನೆ ಇದೇ ಆದ್ದರಿಂದ ವ್ಯಾಕರಣವನ್ನು ಶಬ್ದಶಾಸ್ತ್ರ ಅಥವ ಪದಶಾಸ್ತ್ರ ಎಂದು ಹೆಸರು. ‘ಅಥ ಶಬ್ದಾನುಶಾಸನಂ’ ಎಂದು ಮಾರ್ಗದರ್ಶಕ ಅನುಶಾಸನವಾಗಿ – ನಿಯಮವಾಗಿ ವ್ಯಾಕರಣ ಹೇಳಿದ್ದರಿಂದ ಅದನ್ನನುಸರಿಸಿ ವೇದೋತ್ತರ ಕಾಲದ ವ್ಯಾಕರಣಬದ್ಧ ಭಾಷೆ ಸಂಸ್ಕೃತವೆನ್ನಿಸಿಕೊಂಡಿತು.

ಪದವಾಗುವ ಮುನ್ನಿನ ಶಬ್ದದ ಮೂಲರೂಪ ಕ್ರಿಯಾಸೂಚಕವಾಗಿದ್ದರೆ ‘ಧಾತು’, ಕ್ರಿಯಾಸೂಚಕವಲ್ಲದಿದ್ದರೆ ‘ಪ್ರಾತಿಪದಿಕ’. ಪ್ರಾತಿಪದಿಕಗಳಿಗೆ ಲಿಂಗ, ವಿಭಕ್ತಿ, ವಚನ ಸೂಚಿಸುವ ಸುಪ್ ಪ್ರತ್ಯಯಗಳನ್ನು ಸೇರಿಸಿದಾಗ ನಾಮಪದಗಳು. ಧಾತುಗಳಿಗೆ ಲಕಾರ (ಕಾಲ/ಭಾವಸೂಚಿ), ಪುರುಷ್, ವಚನ ಸೂಚಿಸುವ ತಿಙ್ ಪ್ರತ್ಯಯಗಳನ್ನು ಸೇರಿಸಿದಾಗ ಕ್ರಿಯಾಪದಗಳು. ವಾಕ್ಯದಲ್ಲಿ ಬೇರೆ ಪದಗಳೊಂದಿಗೆ ಸೇರಿ ಪೂರ್ಣ ಅರ್ಥಕೊಡಲು, ಅಥವಾ ಅರ್ಥದ ಆಕಾಂಕ್ಷೆ ಹುಟ್ಟಿಸಲು ಕೊನೆಯಲ್ಲಿರುವ ಈ ಪ್ರತ್ಯಯಗಳೇ ಕಾರಣ. ಪೂರ್ಣ ಕ್ರಿಯಾಪದದಲ್ಲೇ ಈ ಆಕಾಂಕ್ಷೆಯೂ ಪೂರ್ಣವಾಗುವುದು. ಸುಬಂತ ಅಥವ ತಿಙಂತವಾದದ್ದೇ ಪದ (ಸುಪ್ತಿಙಂತಂ ಪದಂ). ಪದಗಳಿಗೆ ‘ಕೃತ್, ತದ್ದಿತ, ಸಮಾಸ ಎಂಬ ಮೂರು ಪ್ರಧಾನ ವೃತ್ತಿಗಳಿವೆ. ಕೃತ್ ಎಂದರೆ ಕ್ರಿಯಾರೂಪದಿಂದ ನಾಮರೂಪಕ್ಕೆ (ಅಥವಾ ಅವ್ಯಯಕ್ಕೆ) ಬದಲಿಸಲು ಸೇರಿಸುವ ಪ್ರತ್ಯಯಗಳು. ತದ್ದಿತ ಒಂದು ನಾಮಪದದಿಂದ ಇನ್ನೊಂದು ನಾಮಪದ ಸಾಧಿಸುವುದು. ಸಮಾಸ ಎರಡು ಸುಬಂತಗಳನ್ನು (ನಾಮಗಳನ್ನು) ಒಟ್ಟುಮಾಡಿ ಒಂದೇ ಪದವಾಗಿಸುವುದು.

ಅಕ್ಷರಗಳ ಜೋಡಣೆ – ಸಂಧಿ, ಪ್ರತ್ಯಯ ಸೇರಿಸಿ ಪದರಚನೆ – ಸುಬಂತ, ತಿಙಂತ, ಕೃದಂತ, ತದ್ದಿತ, ಸಮಾಸಗಳು, : ಪದಗಳು ಕ್ರಿಯಾಪದದ ಜತೆಗೆ ಅನ್ವಯವಾಗಿ ಆಕಾಂಕ್ಷೆ ಪೂರ್ಣವಾಗುವ ಕಾರಕ. ಇವು ವ್ಯಾಕರಣದ ಮುಖ್ಯ ಪ್ರಕ್ರಿಯೆಗಳು. ಈ ನಿಯಮಗಳಿಗೆ ಸಂಬಂಧಿಸಿದ ಸೂತ್ರಪಾಠವನ್ನೇ ವ್ಯಾಕರಣ ಅಥವ ಶಬ್ದಾನುಶಾಸನ ಎನ್ನುವುದು. ಧಾತುಗಳ ಪಟ್ಟಿಯಾದ ಧಾತುಪಾಠ, ಉ (ಉಣ್)ನಿಂದ ಆರಂಭಿಸಿದ ಕೃದಂತ ಸಂಬಂಧೀ ಪ್ರತ್ಯಯಗಳ ಉಣಾದಿ ಪಾಠ್, ತ್ಯದಾದಿ, ಯವಾದಿ ಮುಂತಾಗಿ ಸಮಾನರೂಪ ಹೊಂದಿರುವ ಪ್ರಾತಿಪಾದಿಕಗಳ ವರ್ಗೀಕರಣವಾದ ಗಣ ಪಾಠ ಪ್ರಾತಿಪದಿಕಗಳ ಲಿಂಗ ನಿರ್ಣಯಿಸುವ ಲಿಂಗಾನುಶಾಸನ ವ್ಯಾಕರಣದ ಅಂಗಗಳು. ಕೆಲವರು ಶಿಕ್ಷಾ ಶಾಸ್ತ್ರವನ್ನು ಲಿಂಗಾನುಶಾಸನಕ್ಕೆ ಬದಲಾಗಿ ವ್ಯಾಕರಣಾಂಗವೆಂದು ಪರಿಗಣಿಸುತ್ತಾರೆ.

ಸಂಸ್ಕೃತ ಮತ್ತು ಅದರಿಂದ ಹೊಮ್ಮಿದ ಆರ್ಯ ಭಾಷೆಗಳಲ್ಲಿ ಲಿಂಗ ನಿರ್ಣಯವು ಪ್ರಾಚೀನ ಪುರಾಣ ಕಲ್ಪನೆಗಳನ್ನಾಧರಿಸಿದೆ. ಹಾಗೆಯೇ ಭಿನ್ನ ಮೂಲಗಳಿಂದ ಬಂದ ಶಬ್ದಗಳ ವರ್ತನೆ ಸಂಸ್ಕೃತದಲ್ಲಿ ಒಗ್ಗುವಾಗ ಭಿನ್ನ ಧೋರಣೆ ತೋರುತ್ತದೆ. ಇದರಿಂದಾಗಿ ಪದಗಳ ವರ್ಗೀಕರಣವನ್ನಾಧರಿಸಿದ ರೂಪಸಿದ್ದಿಗೆ ಸಂಬಂಧಿಸಿದ ಸೂತ್ರ ರಚನೆ ವಿಭಕ್ತ ವ್ಯಾಕರಣ ವೆನ್ನಿಸಿಕೊಳ್ಳುತ್ತದೆ. ಬ್ರಾಹ್ಮಣಗಳಲ್ಲಿ ವೇದಪಾಠದ ಸಂದರ್ಭದಲ್ಲಿ ಆರಂಭವಾಗಿ ಪ್ರಾತಿಶಾಖ್ಯೆಗಳಲ್ಲಿ ಬೆಳೆದು ಸಂಸ್ಕೃತ, ಪ್ರಾಕೃತ ಮುಂತಾದ ನಿರ್ದಿಷ್ಟ ಭಾಷಾ ವ್ಯಾಕರಣಗಳಲ್ಲಿ ಇದು ಕಾಣುತ್ತದೆ. ಇದು ನಿರ್ದಿಷ್ಟ ಭಾಷಾಧ್ಯಯನ ಎನ್ನಬಹುದು.

ಶಬ್ದ-ಪದ-ವಾಕ್ಯಗಳ ರಚನೆಯ ಹಿಂದಿನ ಅರ್ಥಸೂತ್ರತೆಯ ಕಡೆಗೆ ಅದರಿಂದ ಭಾಷಾ ಸಾಮಾನ್ಯದ ಹಿಂದಿನ ಮಾನಸಿಕ ಮತ್ತು ಅಧ್ಯಾತ್ಮಿಕ ಚಿಂತನೆ ಮತ್ತು ತಾತ್ವಿಕ ಚರ್ಚೆಗೆ ಗಮನಹರಿಸುವ ಶಾಸ್ತ್ರವನ್ನು ಅವಿಭಕ್ತ ವ್ಯಾಕರಣ ಎನ್ನುತ್ತಾರೆ. ಆರಣ್ಯಕಗಳ ಕೆಲವು ಭಾಗಗಳಲ್ಲೂ ಉಪನಿಷತ್ತುಗಳಲ್ಲೂ ಆರಂಭವಾದ ಜಿಜ್ಞಾಸೆ ಮತ್ತು ದರ್ಶನಶಾಸ್ತ್ರಗಳಲ್ಲಿ ಬೆಳೆದ ಚರ್ಚೆಗಳಲ್ಲಿ ಇದರ ಹರಹನ್ನು ಕಾಣಬಹುದು. ಇದು ಮಾತಿನ ಅಖಂಡತೆ ಐಕ್ಯತೆಗಳನ್ನು ಹೆಚ್ಚು ಲಕ್ಷಿಸುತ್ತದೆ. ಭರ್ತೃಹರಿ ಹೇಳುವಂತೆ ಇದು ಶಬ್ದತತ್ವ ಅಥವ ಶಬ್ದಬ್ರಹ್ಮ ವಿವೇಕ. ಈ ನೆಲೆಯಲ್ಲಿ ವ್ಯಾಕರಣವೂ ಶಬ್ದಮೀಮಾಂಸೆ ಎಂಬ ಒಂದು ದರ್ಶನವಾಯಿತು. ವಿಭಕ್ತ ಅವಿಭಕ್ತ ವ್ಯಾಕರಣಗಳು ಹೊಯ್-ಕೈಯ್ಯಗಿ ಬೆಳೆದವು.

ಪಾಣಿನೀಯ ವ್ಯಾಕರಣ

ಇಂದ್ರಶ್ಚಂದ್ರಃ ಕಾಶಕೃತ್ಸ್ನಃ ಆಪಿಶಲಿಃ ಶಾಕಟಾಯನಃ | ಪಾಣಿನ್ಯಮರಜೈ ನೇಂದ್ರಾಃ ಜಯನ್ತ್ಯಷ್ಟಾದಿಶಾಬ್ದಿಕಾಃ | ಹೀಗೆ ವೈಯ್ಯಕರಣಿಗಳು ವೈದಿಕ ವೈದಿಕೇತರ ಪರಂಪರೆಗಳಲ್ಲಿ ಹಲವರು ಕಂಡುಬರುತ್ತಾರೆ. ಆದರೆ ಪಾಣಿನಿ ಇವರೆಲ್ಲರಲ್ಲಿ ಅತ್ಯಂತ ಹೆಚ್ಚು ಯಶಸ್ವಿ. ಈತ ಮಾಹೇಶ್ವರ ಪಂಥಕ್ಕೆ ಸೇರಿದವನು. ಸುಮಾರು ಕ್ರಿ.ಪೂ. 7ನೇ ಶತಮಾನದವನು. ಈತನ ಅಷ್ಟಾಧ್ಯಾಯಿ (ಎಂಟು ಅಧ್ಯಾಯಗಳ ಗ್ರಂಥ) ನಮಗೆ ಸಿಗುವ ಅತ್ಯಂತ ಪ್ರಾಚೀನವೂ ಪ್ರೌಢವೂ ಆದ ವ್ಯಾಕರಣ ಗ್ರಂಥ. ಇವನಿಗಿಂತ ಹಿಂದೆ ಐಂದ್ರ ಪರಂಪರೆ ಮತ್ತು ಹಲವು ವ್ಯಾಕರಣಕಾರರು ಇದ್ದರು. ಪಾಣಿನಿಯೇ ಶಾಕಲ್ಯ, ಕಾಶಕೃತ್ಸ್ನ ಮುಂತಾದ 12 ವೈಯ್ಯಕರಣರ ಹೆಸರನ್ನು ಅಭಿಪ್ರಾಯವನ್ನೂ ಉದ್ಧರಿಸುತ್ತಾನೆ.

ಪಾಣಿನಿಯು, ಸುಮಾರು 2000 ಧಾತುಗಳ ಧಾತುಪಾಠ, ವಿಭಿನ್ನ ಕಾರ್ಯಗಳಿಗಾಗಿ ತಯಾರಿಸಿದ ಗಣಪಾಠವಲ್ಲದೆ ಒಂದೊಂದರಲ್ಲಿಯೂ ನಾಲ್ಕು ಪಾದಗಳಿರುವ ಎಂಟು ಅಧ್ಯಾಯಗಳಲ್ಲಿ 3983 ಸೂತ್ರಗಳಲ್ಲಿ ವ್ಯಾಕರಣ ನಿಯಮಗಳನ್ನು ರಚಿಸಿದ್ದಾನೆ. ‘ಅಲ್ಪಾಕ್ಷರಂ ಅಸಂದಿಗ್ಧಂ ಸಾರವತ್ ಸರ್ವತೋ ಮುಖಂ| ’ ಎಂಬ ಮಾತಿಗೆ ನಿದರ್ಶನದಂತಿದೆ ಈತನ ಸೂತ್ರಗಳು. ಸೂತ್ರಗಳು ಎಷ್ಟು ಅಡಕವಾಗಿದೆಯೆಂದರೆ ವ್ಯಾಖ್ಯಾನವಿಲ್ಲದೆ ಅರ್ಥವಾಗದು. ಸು.ಕ್ರಿ.ಪೂ. 4 ರಿಂದ 2ನೇ ಶತಮಾನದಲ್ಲಿದ್ದ ಕಾತ್ಯಾಯನ-ವರರುಚಿ ಇದಕ್ಕೆ ವಾರ್ತಿಕಗಳನ್ನು ಬರೆದ. ಅದರಲ್ಲಿ ಪ್ರಕ್ರಿಯೆಗಳ ವಿಸ್ತರಣೆ ಇದೆ. ಸು.ಕ್ರಿ.ಪೂ. 2ನೇ ಶತಮಾನದ ಪತಂಜಲಿ ಸೂತ್ರ, ವಾರ್ತಿಕಗಳೆರಡಕ್ಕೂ ವಿಸ್ತಾರವಾದ ವ್ಯಾಖ್ಯಾನ ಮಾಡಿ, ತಾತ್ವಿಕಾಂಶಗಳ ವಿವೇಚನೆ ನಡೆಸಿ, ವ್ಯಾಕರಣ ಪ್ರಕ್ರಿಯೆ ಮತ್ತು ದರ್ಶನಗಳ ಮತ್ತು ಅವುಗಳ ಸಂಬಂಧದ ಅದ್ಭುತ ನೋಟವನ್ನು ಕೊಟ್ಟಿದ್ದಾನೆ. ಈ ಮೂವರನ್ನೂ ಒಟ್ಟಿಗೆ ಮುನಿತ್ರಯಂ ಎಂದು ನಿರ್ದೇಶಿಸುವ ವಾಡಿಕೆ ಇದೆ. ಏಕೆಂದರೆ ಈ ಮೂವರಿಂದ ಒಟ್ಟಾಗಿ ಒಂದು ಪರಂಪರೆ ಸೃಷ್ಟಿಯಾಗಿದೆ. ಅಷ್ಟಾಧ್ಯಾಯಿಯಲ್ಲಿ ಮೊದಲ ಏಳು ಅಧ್ಯಾಯ ಮತ್ತು ಎಂಟನೆ ಅಧ್ಯಾಯದ ಮೊದಲ ಪಾದ ಒಂದು ಘಟಕ. ಅದು ಸಪಾದ ಸಪ್ತಾಧ್ಯಾಯಿ. ಎಂಟನೆ ಅಧ್ಯಾಯದ ಕೊನೆಯ ಮೂರು ಪಾದಗಳು ಇನ್ನೊಂದು ಘಟಕ – ಅದು ತ್ರಿಪಾದಿ. ಎರಡಸ್ನೆ ಭಾಗದ ನಿಯಮ ಮೊದಲ ಭಾಗಕ್ಕೆ ಅನ್ವಯಿಸುವುದಿಲ್ಲ. ಪಾಣಿನಿಯ ಕಾಲಕ್ಕಾಗಲೇ ವೈದಿಕ ರೂಪದಲ್ಲಿ ಮಾರ್ಪಾಟಾಗಿತ್ತು. ಪಾಣಿನಿಯ ಮುಖ್ಯ ಲಕ್ಷ್ಯ ಲೌಕಿಕ ಸಂಸ್ಕೃತ. ಅದರ ವಿಧಿ-ನಿಷೇಧಾತ್ಮಕ ನಿಯಮಗಳನ್ನು ಮೊದಲು ರೂಪಿಸಿ ತದನಂತರ ‘ಬಹುಲಂ ಚಂದಸಿ’ ಎಂದು ವೈದಿಕ ಪ್ರಯೋಗಗಳಲ್ಲಿನ ರೂಪವನ್ನು ಅಪವಾದವಾಗಿ ತೋರಿಸುತ್ತಾನೆ. ಪತಂಜಲಿ ಮಹಾಭಾಷ್ಯದಲ್ಲಿ ಸ್ಪಷ್ಟವಾಗುವಂತೆ ಶಬ್ದಾನು ಶಾಸನವಿರುವುದು ಲೌಕಿಕ ವೈದಿಕ ಶಬ್ದಗಳೆರಡಕ್ಕೂ ಸಂಬಂಧಿಸಿದಂತೆ. ಕುಂಬಾರನ ಮನೆಗೆ ಹೋಗಿ ಮಡಕೆ ಮಾಡಿಕೊಡು ಎಂದಂತೆ ಯಾರೂ ವೈಯ್ಯಕರಣಿಯ ಬಳಿ ಹೋಗಿ ಶಬ್ದವನ್ನು ಸೃಷ್ಟಿಸು ಎನ್ನುವುದಿಲ್ಲ. ಪ್ರಯೋಗದಲ್ಲಿನ ಮಾತಿನ ರೀತಿಗೆ ವ್ಯಾಕರಣವು ಕಟ್ಟುಪಾಡು ಗುರುತಿಸುತ್ತದೆ. ಹಲವು ಕಡೆಗಳಲ್ಲಿ ಹಲವು ಪ್ರಯೋಗವಿದ್ದರೂ ‘ಆರ್ಯಾವರ್ತದಲ್ಲಿರುವ ಬಲ್ಲಿದರಾದ ಶಾಸ್ತ್ರವೇತರ’ ಪ್ರಯೋಗವನ್ನು ಶಿಷ್ಟ ಪ್ರಯೋಗವೆಂದು ಗುರುತಿಸಿ ಅದಕ್ಕನುಸಾರವಾಗಿ ನಿಯಮಗಳನ್ನು ರೂಪಿಸಿದೆ. ಬೇರೆ ವ್ಯಾಕರಣ ಕಾರರನ್ನು ಪಾಣಿನಿ ಉಲ್ಲೇಖಿಸಿದಾಗ ಅವರು ಹೇಳುವ ರೂಪಗಳು ಸಾಮಾನ್ಯತಃ ಪರ್ಯಾಯರೂಪಗಳೆಂದು ಮಾನ್ಯ ಮಾಡಿದ್ದಾನೆ. ಇದು ಕಾಲತಃ ಮತ್ತು ದೇಶತಃ ಭಾಷೆಯ ಶಿಷ್ಟರೂಪಕರಣ. ಈ ಶಿಶ್ಟರೂಪ ಪಡೆದದ್ದೆ ಸಂಸ್ಕೃತ. ಕಾಲತಃ ಅದಕ್ಕಿಂತ  ಹಿಂದಿನ ಆದರೆ ಆಕಾಲಕ್ಕೆ ಪ್ರಯುಕ್ತವಲ್ಲದ ಪ್ರಯೋಗ- ಛಾಂದಸ. ದೇಶತಃ ಭಿನ್ನವಾದದ್ದು ಭಾಷಾ-ಪ್ರಾಕೃತ.

ಪ್ರಾಯಶಃ ಪಾಣಿನೀಯ ವ್ಯಾಕರಣವನ್ನೇ ವಿಧಿವತ್ತಾದ ವ್ಯಾಕರಣವೆಂದು ವ್ಯಾಪಕವಾಗಿ ಅಂಗೀಕರಿಸುವುದಕ್ಕೆ ಕೆಲವು ಕಾರಣಗಳು ಹೀಗಿರಬೇಕೆನ್ನಿಸುತ್ತದೆ.:

1.  ಮೂಲತಃ ಪ್ರಕ್ರಿಯಾತ್ಮಕ ಒತ್ತು ಪಡೆದಿದೆ, ಆದರೂ ಭದ್ರವಾದ ಭಾಷಾ ಶಾಸ್ತ್ರದ ತತ್ವಗಳನ್ನು ಒಳಗೊಂಡಿದೆ ಮತ್ತು ಅದನ್ನು ಹೇಳಲು ಖಚಿತ ವಾದ ಪರಿಭಾಷೆಯನ್ನು ರೂಢಿಸಿಕೊಂಡಿದೆ.

2.  ಲೌಕಿಕ ಸಂಸ್ಕೃತದ ಸ್ಪಷ್ಟ ನಿಯಮಗಳನ್ನು ತಿಳಿಸಿ ವೇದದಲ್ಲಿ ಅದು ಹೇಗೆ ಭಿನ್ನ ಎನ್ನುವುದನ್ನು ತಿಳಿಸಿದ್ದರಿಂದ ವೇದಾಂಗತ್ವವನ್ನು ಉಳಿಸಿ ಕೊಂಡ ಸಮಾಧಾನ ವೈದಿಕರಿಗೂ, ಭಾಷೆಯ ಪ್ರಯೋಗದ ನಿಯಮ ಮತ್ತು ತತ್ವ ಉಳಿದವರೆಲ್ಲರಿಗೂ ಗ್ರಾಹ್ಯವಾಗಿ ಎಲ್ಲರೂ ಆದರದಿಂದ ನೋಡುವ ಗ್ರಂಥವಾಯಿತು.

3.  ಎಲ್ಲಕ್ಕಿಂತ ಮಿಗಿಲಾಗಿ ಪಾಣಿನಿಯ ನಿಯಮ ರಚನೆ ಸಾರವತ್ ಮತ್ತು ಸರ್ವತೋಮುಖ. ಒಂದು ಅಧಿಕಾರಕ ನಿಯಮವನ್ನು ಆದರ್ಶಸ್ಥಿತಿಯಲ್ಲಿ ರೂಪಿಸಿಕೊಂಡು ಅದಕ್ಕೆ ಚಾಲ್ತಿಯಲ್ಲಿರುವ ರೂಪ-ಭೇದಗಳನ್ನು ತಿಳಿಸ ಲಾಗುತ್ತದೆ. ಎಷ್ಟೋ ಆದರ್ಶ ರೂಪಗಳು ಚಾಲ್ತಿಯಲ್ಲಿರದೆ ಹೋಗಿರ ಬಹುದು. ಇದರಿಂದ ಲೃಕಾರವಾಗಲ್ಲಿ ಹಲವಾರು ಶಬ್ದರೂಪಗಳಾಗಲಿ, ಎಷ್ಟೋ ಧಾತು ರೂಪಗಳಾಗಲಿ ಪ್ರಯೋಗದಲ್ಲಿಲ್ಲ. ಆದರೆ ಆದರ್ಶ ರೂಪ ಪ್ರಕ್ರಿಯೆ ಹತ್ತಿರವಾದದ್ದು. ಹೀಗೆ ಏಕಕಾಲಕ್ಕೆ ಆದರ್ಶ ಪ್ರಕ್ರಿಯೆ ಪ್ರಯೋಗಗಳೆರಡನ್ನೂ ಲಕ್ಷಿಸಿರುವ ಕೃತಿ ಇದು ಎನ್ನುವುದು ಹೆಗ್ಗಳಿಕೆ.

ಶಿಕ್ಷಾಶಾಸ್ತ್ರದ ಮುಂದುವರಿಕೆಯಾಗಿ, ವರ್ಣವಿಭಜನೆ, ಸಂಧಿ ನಿಯಮಗಳನ್ನು ಹೇಳಿದೆ. ಧಾತುಗಳಿಗೆ ಆಖ್ಯಾತ ಪ್ರತ್ಯಯ, ಕೃತ್ ಪ್ರತ್ಯಯ ಸೇರುವ ವಿಧಾನ, ಪ್ರಾತಿಪದಿಕಗಳಿಗೆ ವಿಭಕ್ತಿ ಪ್ರತ್ಯಯ, ತದ್ದಿತ ಪ್ರತ್ಯಯ ಸೇರುವ ವಿಧಾನ ಆಗ ಆಗುವ ಸಂಧಿ ಪ್ರಕ್ರಿಯೆ, ವಿಭಕ್ತಿ-ಆಖ್ಯಾತಗಳ ಸಂಬಂಧವಾದ ಕಾರಕ, ಎರಡು ನಾಮ ಪದಗಳು ಪ್ರತ್ಯಯವನ್ನು ಕಳೆದುಕೊಂಡು ಅರ್ಥದ ಆಧಾರದ ಮೇಲೆ ಒಟ್ಟಾಗಿ ಸಮಾಸವಾಗುವ ವಿಧಾನ, ಈ ಎಲ್ಲ ಪ್ರಕ್ರಿಯೆಗಳಲ್ಲಿನ ವಿಧಾಯಕ ಅಂಶಗಳನ್ನೂ ಅಪವಾದಗಳನ್ನೂ ಪಾಣಿನಿ ಸೂತ್ರೀಕರಿಸಿದ್ದಾನೆ. ಕಾಶಿಕಾದಂತಹ ಸೂತ್ರವೃತ್ತಿಗಳು ಪಾಣಿನಿಯ ಸೂತ್ರಗಳಿಗೆ ಅದೇ ಕ್ರಮವನ್ನು ಅನುಸರಿಸಿ ವಿವರಣೆ ನೀಡಿವೆ. ಆದರೆ, ಪಾಣಿನಿಯ ಸಂಜ್ಞಾ, ಪರಿಭಾಷೆಯ ಸೂತ್ರಗಳನ್ನು ಬೇರೆ ಮಾಡಿ, ಪ್ರಕ್ರಿಯಾರೂಪವನ್ನೇ ಆಧರಿಸಿ ಸೂತ್ರಗಳನ್ನೂ ವಾರ್ತಿಕಗಳನ್ನೂ ಪುನರ್ವಿಂಗಡಿಸಿ, ವ್ಯಾಖ್ಯಾನಿಸುವ ಪದ್ಧತಿ ಅರ್ವಾಚೀನಕಾಲದಲ್ಲಿ ರೂಢಿಗೆ ಬಂದಿತು. ಈ ಪ್ರಕ್ರಿಯಾ ಗ್ರಂಥಗಳಲ್ಲಿ 15ನೇ ಶತಮಾನದ ಪ್ರಕ್ರಿಯಾ ಕೌಮುದೀ, 17ನೇ ಶತಮಾನದ ಭಟ್ಟೋಜಿದೀಕ್ಷಿತನ ಸಿದ್ಧಾಂತ ಕೌಮುದೀ, ಪ್ರಮುಖ ಅಂಶಗಳನ್ನು ಸಂಗ್ರಹಿಸಿದ ವರದರಾಜ ಪಂಡಿತನ ಲಘು ಸಿದ್ಧಾಂತ ಕೌಮುದೀ ಪ್ರಮುಖವಾದವು.

ಪಾಣಿನೀಯೇತರ ವ್ಯಾಕರಣಗಳು

ಐಂದ್ರ ಸಂಪ್ರದಾಯಕ್ಕೆ ಸೇರಿದ್ದೆನ್ನಲಾದ ಕಾತಂತ್ರ ವ್ಯಾಕರಣ ಜೈನ ಪರಂಪರೆಯದೆನ್ನಲಾಗಿದೆ. ಸು.ಕ್ರಿ.ಶ. 1ನೇ ಶತಮಾನದಲ್ಲಿ (ಶಾತವಾಹನರ ಕಾಲದಲ್ಲಿ) ಶರ್ಮವರ್ಮ ಎನ್ನುವನು ಇದನ್ನು ರಚಿಸಿದ ಎಂದು ಪ್ರತೀತಿ. ಸಂಜ್ಞಾ, ಸಂಧಿ, ನಾಮಕಾರಕ ಮುಂತಾದ ವಿಷಯಾನುಸಾರವಾಗಿ 25 ಪಾದ ಗಳಲ್ಲಿ ಸರಳ, ಸುಲಲಿತ ಮಾದರಿಯಲ್ಲಿ ಲೌಕಿಕ ಸಂಸ್ಕೃತಕ್ಕಾಗಿಯೆ ನಿಯಮಗಳನ್ನು ಇಲ್ಲಿ ಹೇಳಿದೆ. ಇಲ್ಲಿನ ಪರಿಭಾಷೆ ಮುಂದೆ ಸರ್ವಮಾನ್ಯವಾಯಿತು. ಕೇಶಿರಾಜ ನಂತಹ ಕನ್ನಡ ವೈಯ್ಯಕರಣಿಗಳಿಗೆ ಇದು ಮಾದರಿ ಎನ್ನಲಾಗಿದೆ. ಪ್ರಾಯಶಃ ಬೌದ್ಧ ಧರ್ಮೀಯನಾದ ಚಂದ್ರಗೋಮಿ ಲಘು, ವಿಸ್ಪಷ್ಟ, ಸಂಪೂರ್ಣತೆಗಳನ್ನು ಗಮನದಲ್ಲಿರಿಸಿಕೊಂಡು ಲೌಕಿಕ ಸಂಸ್ಕೃತಕ್ಕಾಗಿಯೇ ಚಾಂದ್ರ ವ್ಯಾಕರಣವನ್ನು ಬರೆದ. ನೇಪಾಳ, ಟಿಬೆಟ್ ಮತ್ತು ಸಿಲೋನಿನಂತಹ ಬೌದ್ಧ ಕೇಂದ್ರಗಳಲ್ಲಿ ಇದು ಪ್ರಸಿದ್ದಿಗೆ ಬಂತು. ಭರ್ತೃಹರಿಯು ‘ಮಹಾಭಾಷ್ಯದ ಪುನರುಜ್ಜೀವಕ’ ಎಂದು ಹೊಗಳುವುದು ಈತನನ್ನೇ ಇರಬಹುದೆ ತಿಳಿಯದು. ಆದರೆ ಈತನು ಪಾಣಿನಿ ಮತ್ತು ಕಾತಂತ್ರ ಪದ್ಧತಿಗಳ ಮಿಶ್ರಣ ಮಾಡಿರುವನೆಂದು ತೋರುವುದು.

ಕ್ರಿ.ಶ. 5ನೇ ಶತಮಾನದ ಗಂಗ ದುರ್ವಿನೀತನ ಗುರು ದೇವನಂದಿ ಪಾಣಿನಿಯ ಪದ್ಧತಿಯನ್ನು ದಿಗಂಬರ ಜೈನಮತಾನುಸಾರವಾಗಿ ಪರಿಷ್ಕರಿಸಿ ಕೊಂಡ. ಹೀಗೆಯೇ ಅಮೋಘವರ್ಷನ ಕಾಲದಲ್ಲಿ ಶ್ವೇತಾಂಬರ ಅಥವಾ ಯಾಪನೀಯ ಪಂಥಕ್ಕೆ ಸೇರಿದ ಶಾಕಟಾಯನ ತನ್ನ ಶಬ್ದಾನುಶಾಸನದಲ್ಲಿ ಪಾಣಿನೀಯ ಪರಂಪರೆಗೆ ಹೊಸ ತಿರುವು ಕೊಟ್ಟ.

ಪ್ರಾಕೃತ ವ್ಯಾಕರಣಗಳು

ಬೌದ್ಧರು ಜೈನರು ಲೌಕಿಕ ಸಂಸ್ಕೃತಕ್ಕೆ ವ್ಯಾಕರಣ ಬರೆದಂತೆ ಸಂಸ್ಕೃತದ ತದ್ಭವ ಎಂದೇ ಸೂಚಿಸಿ ಪ್ರಾಕೃತ ವ್ಯಾಕರಣಗಳು ಪ್ರಾರಂಭವಾಗುವುದು ವರರುಚಿಯ ಪ್ರಾಕೃತ ಪ್ರಕಾಶದಲ್ಲಿ. ಈ ವರರುಚಿ ಅಷ್ಟಾಧ್ಯಾಯಿಗೆ ಕಾರಿಕೆ ಗಳನ್ನು ಬರೆದವನೊ ಅಲ್ಲವೊ ತಿಳಿಯದು. ಇಲ್ಲಿ ಮಹಾರಾಷ್ಟ್ರೀ ಪ್ರಾಕೃತವನ್ನು ಮುಖ್ಯವಾಗಿಯೂ ಪೈಶಾಚೀ, ಮಾಗಧೀ, ಶೌರಸೇನಿ ಪ್ರಾಕೃತಗಳನ್ನು ಅನುಬಂಧವಾಗಿಯೂ ವಿವರಿಸಿದೆ. 11-12ನೇ ಶತಮಾನದ ಸಂಸ್ಕೃತ ಶಬ್ದಾನುಶಾಸನದ ಕೊನೆಗೆ ಹೇಮಚಂದ್ರಸೂರಿ (ಜೈನ) ಶೌರಸೇನಿ, ಮಾಗಧಿ, ಪೈಶಾಚೀ, ಚೂಲಿಕಾಪೈಶಾಚೀ ಮತ್ತು ಅಪ್ರಭ್ರಂಶಗಳ ವ್ಯಾಕರಣಾಂಶಗಳನ್ನೂ ಕೊಡುತ್ತಾನೆ. ಪ್ರಾಕೃತವನ್ನು ಸಂಸ್ಕೃತಜನ್ಯ ಎಂದೇ ಇಲ್ಲೆಲ್ಲ ಧೋರಣೆ ತಳೆದಿದೆ. ಆದರೆ ಪತಂಜಲಿಯು ತನ್ನ ಮಹಾಭಾಷ್ಯದಲ್ಲಿ ಪ್ರಾಕೃತ-ಅಪಭ್ರಂಶ ಗಳನ್ನು ಅಪ-ಶಬ್ದಗಳೆಂದೂ ಅವಗಣಿಸುತ್ತಿದ್ದ ಪ್ರವೃತ್ತಿ ಇಲ್ಲಿ ಹಿಂಜರಿದಿದೆ. ವೈದಿಕ ಜಡರು ಮಾತ್ರ ಸಂಸ್ಕೃತೇತರ ಶಬ್ದಗಳನ್ನು ಅಪಶಬ್ದವೆಂದೂ ಶಬ್ದ ವೆಂದರೆ ಸಂಸ್ಕೃತ ಶಬ್ದ ಮಾತ್ರವೇ ಎಂದು ಪಟ್ಟು ಹಿಡಿದರು. ಪ್ರಾಕೃತ ವ್ಯಾಕರಣಗಳಿಗೆ ಸಂವಾದಿಯಾಗಿ ಪಾಲೀ ವ್ಯಾಕರಣ ಪರಂಪರೆಯೂ ಇದೆ. ಬೋಧಿಸತ್ವ, ಕಜ್ಜಾಯನ, ಮೊಗ್ಗಲ್ಲಾನ, ಸಬ್ಬಗುಣಕರ, ಸದ್ದನೀತಿ ಮುಂತಾದ ವರು ಪಾಲೀ ವ್ಯಾಕರಣಕಾರರಲ್ಲಿ ಪ್ರಸಿದ್ಧರು.

ಭಾಷಾ ಮೀಮಾಂಸೆ ಮತ್ತು ವ್ಯಾಕರಣ ತತ್ವ

ಪಾಣಿನಿಯ ಹೇಳುವ ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಒಂದು ತಾತ್ವಿಕದರ್ಶನ ವಿದೆ ಆದರೆ ಅದು ತಿಳಿಯುವುದು ಪತಂಜಲಿಯ ಮಹಾಭಾಷ್ಯದಿಂದಲೆ. ಆ ಮಹಾಭಾಷ್ಯದಲ್ಲಿ ‘ವ್ಯಾಡಿಯ ಸಂಗ್ರಹ’ದಿಂದ ಉಲ್ಲೇಖಗಳಿವೆ. ಪತಂಜಲಿ ಅಲ್ಲಿನ ‘ನ್ಯಾಯಬೀಜಗಳನ್ನು’ ಬಳಸಿಕೊಂಡಿದ್ದನೆಂದು ತಿಳಿದುಬರುತ್ತದೆ. ಸುಮಾರು ಪಾಣಿನಿಯ ಕಾಲದಲ್ಲಿಯೇ ರಚಿತವಾಗಿರಬಹುದಾದ ಈ ಗ್ರಂಥದ ಹೆಸರು ಸಂಗ್ರಹ ಎಂದಿದ್ದರೂ ಅದು ಒಂದು ಲಕ್ಷ ಶ್ಲೋಕಗಳಿಂದ ಕೂಡಿತ್ತು. ಕಾಲಕ್ರಮದಲ್ಲಿ ಕಳೆದು ಹೋದ ‘ಈವ್ಯಾಕರಣ್ ದರ್ಶನವು ದಕ್ಷಿಣ (ಶ್ರೀ) ಪರ್ವತದಲ್ಲಿ ಕೇವಲ ಒಂದು ಪುಸ್ತಕವಾಗಿ ಉಳಿದಿತ್ತು, ಅದನ್ನು ಚಂದ್ರಾ ಚಾರ್ಯರೇ ಮೊದಲಾದವರು ನ್ಯಾಯವನ್ನು ಅನುಸರಿಸಿ ವಿಸ್ತರಿಸಿದರು’ ಎಂದು ಭರ್ತೃಹರಿಯು ವಾಕ್ಯಪದೀಯದಲ್ಲಿ ಹೇಳಿದ್ದಾನೆ.

ಪ್ರಾಯಶಃ ಕ್ರಿ.ಶ್. ಮೂರನೆ ಶತಮಾನದಲ್ಲಿದ್ದ ಭರ್ತೃಹರಿಯ ವಾಕ್ಯ ಪದೀಯವೇ ನಮಗೆ ಉಪಲಬ್ದವಿರುವ ಮೊದಲ ಮತ್ತು ಬಹುಮುಖವಾದ ವ್ಯಾಕರಣ ದರ್ಶನದ ಗ್ರಂಥ. ಇಲ್ಲಿನ ವಿಚಾರಗಳನ್ನು ಅವನ ಗುರು ವಸುರಾತ ಸಂಗ್ರಹಿಸಿದ್ದನೆಂದು ಆತನೇ ಹೇಳಿಕೊಂಡಿದ್ದಾನೆ. ಮುಂದೆ ಜಿನೇಂದ್ರ ಬುದ್ದಿ, ಕೈಯ್ಯಟ, ಅಲ್ಲದೆ ಬೌದ್ಧ ತಾರ್ಕಿಕ – ದಿಙ್ನಿಗ ವಾಕ್ಯಪದೀಯದ ವಾದಗಳನ್ನು ಅನುವಾದಿಸಿಕೊಂಡಿದ್ದಾರೆ. ವಾಕ್ಯಪದೀಯಕ್ಕೆ ಅನೇಕ ಟೀಕೆಗಳಿದ್ದವೆಂದು ತಿಳಿದು ಬರುತ್ತದೆ. ಆದರೆ ಈಗ ಉಪಲಬ್ದವಿಲ್ಲ. ಉಪಲಬ್ದವಿರುವುದು ‘ಹರಿ’ಯು ಬರೆದ ಮೊದಲೆರಡು ಕಾಂಡಗಳ ಮೇಲಿನ ವೃತ್ತಿ. ಭರ್ತೃ (ಭಟ್ಟ) ಎಂಬ ಉಪಾಧಿಯಿದ್ದ ಹರಿಯೆ ಭರ್ತೃಹರಿ ಆದ್ದರಿಂದ ಕಾರಿಕೆ ವೃತ್ತಿಗಳನ್ನು ಬರೆದಾತ ಒಬ್ಬನೆ ಎಂಬ ವಾದವಿದೆ.

ವಾಕ್ಯಪದೀಯ ಮೂರು ಕಾಂಡಗಳಲ್ಲಿ ಒಟ್ಟು ಎರಡು ಸಾವಿರ ಕಾರಿಕೆ (ಶ್ಲೋಕ)ಗಳಲ್ಲಿದೆ. ಮೊದಲನೆಯದಾದ ಬ್ರಹ್ಮಕಾಂಡಾದಲ್ಲಿ ಶಬ್ದತತ್ವ ಅಥವಾ ವಾಕ್ ತತ್ವದ ಎಂದರೆ ಶಬ್ದಬ್ರಹ್ಮದ ವಿವೇಚನೆ ಇದೆ. ಇಲ್ಲಿಯೇ ಪ್ರಸಿದ್ಧವಾದ ಸ್ಫೋಟವಾದದ ಮಂಡನೆಯಿದೆ. (ಇದನ್ನು ಮುಂದೆ ತಿಳಿಸ ಲಾಗುವುದು.) ಎರಡನೆಯದಾದ ವಾಕ್ಯಕಾಂಡದಲ್ಲಿ ವಾಕ್ಯ-ಲಕ್ಷಣವನ್ನು ವಿಮರ್ಶಿಸಿ, ವಾಕ್ಯದಿಂದಲೇ ‘ಅರ್ಥ’, ಅದಕ್ಕೆ ಕ್ರಿಯೆಯೇ ಹೇಗೆ ಪ್ರಧಾನ ಮತ್ತು ಅರ್ಥ ಬುದ್ದಿ ಗೋಚರವಾಗುವಾಗ ಪದ-ವಾಕ್ಯಗಳ ಸಂಬಂಧ ಎಂಬ ವಿಷಯಗಳನ್ನು ವಿಸ್ತಾರವಾಗಿ ಚರ್ಚಿಸಲಾಗಿದೆ. ಮೂರನೆಯದಾದ ಪದಕಾಂಡ ದಲ್ಲಿ ಬಾಧಾ-ಸಮುದ್ದೇಶ, ಲಕ್ಷಣ-ಸಮುದ್ದೇಶವೆಂಬ ಭಾಗಗಳು ಈಗ ಲುಪ್ತ ವಾಗಿವೆ. ಉಳಿದಂತೆ ಜಾತಿ, ದ್ರವ್ಯ, ಸಂಬಂಧ, ಸಾಧನ (ಕಾರಕ), ಗುಣ, ಕ್ರಿಯಾ, ಕಾಲ, ಸಂಖ್ಯಾ, ಲಿಂಗ, ಪುರುಷ, ಉಪಗ್ರಹ (ಆಖ್ಯಾತ ಪ್ರತ್ಯಯ) ಮತ್ತು ವೃತ್ತಿ (ಕೃತ್, ತದ್ದಿತ, ಸಮಾಸ)ಗಳಿಗೆ ಸಂಬಂಧಿಸಿದಂತೆ 12 ಸಮುದ್ದೇಶಗಳಿವೆ. ಭರ್ತೃಹರಿಯ ನಂತರ ನಾಗೇಶಭಟ್ಟ ಮುಂತಾದವರು ಸ್ಫೋಟವಾದದಂತಹ ವಿಷಯಗಳನ್ನೇ ಕುರಿತು ಪ್ರಕರಣ ಗ್ರಂಥಗಳನ್ನು ರಚಿಸಿದ್ದಾರೆ.

ನಿಘಂಟುನಿರುಕ್ತಕೋಶ

ಶಬ್ದ ಸ್ವರೂಪ, ಅರ್ಥನಿರ್ಣಯ, ಯೌಗಿಕಾರ್ಥ ನಿಷ್ಪತ್ತಿಗಳನ್ನು ಬ್ರಾಹ್ಮಣ ಗ್ರಂಥಗಳಿಂದಲೆ ಕಾಣುತ್ತೇವೆ. ಇದು ವೇದಾಂಗವಾದ ನಿರುಕ್ತಕ್ಕೆ ದಾರಿಮಾಡಿಕೊಟ್ಟಿದೆ. ಕ್ರಿಶ್ತಪೂರ್ವ ಆರನೇ ಶತಮಾನಕ್ಕಿಂತಲೂ ಹಿಂದೆ ಬರೆದವನು ಯಾಸ್ಕ ನಿರುಕ್ತದ ಮೂಲ ನಿಘಂಟು ಒಂದು ಪದಕೋಶ. ಒಂದನೇ ಅಧ್ಯಾಯದಲ್ಲಿ ಪದಾರ್ಥಗಳ ಹೆಸರುಗಳು, ನಾನಾರ್ಥ ಪದಗಳೂ, ಎರಡನೇ ಅಧ್ಯಾಯದಲ್ಲಿ ಪ್ರಾಣಿಗಳೂ ಅವುಗಳ ಅಂಗಗಳೂ, ಮೂರನೇ ಅಧ್ಯಾಯದಲ್ಲಿ ಹಿಂದೆ ಹೇಳಿದ್ದರ ಗುಣಗಳೂ ಪಟ್ಟಿಯಾಗಿವೆ. ಈ ಮೂರಾಧ್ಯಾಯ ನೈಘಂಟುಕ ಕಾಂಡ. ನಾಲ್ಕನೇ ಅಧ್ಯಾಯದಲ್ಲಿ ಲೌಕಿಕ ದಲ್ಲಿಲ್ಲದೆ ವೇದದಲ್ಲಿ ಮಾತ್ರ ಇರುವ ಪದಗಳ ಪಟ್ಟಿಯಿದೆ. ಅದು ನೈಗಮ ಕಾಂಡ.  ಐದನೆಯ ಅಧ್ಯಾಯ ದೇವತೆಗಳ ಹೆಸರಿನ ಪಟ್ಟಿ. ಅದಕ್ಕೆ ದೈವತ ಕಾಂಡವೆಂದು ಹೆಸರು. ಮೂಲತಃ ವೇದವನ್ನು ಅನುಲಕ್ಷಿಸಿ, ಲೋಕ ಬಳಕೆ ಯಲ್ಲಿಯೂ ಸಮಾನವಾಗಿರುವ ಪದಗಳ ಪಟ್ಟಿ ಮಾಡುವ ಈ ಕ್ರಮವೇ, ಮುಂದೆ ಕಾವ್ಯ ಶಾಸ್ತ್ರಗಳನ್ನು ಅನುಲಕ್ಷಿಸಿ ಪದಗಳನ್ನು ಪಟ್ಟಿಮಾಡುವ ಕೋಶಗಳಿಗೆ ಕಾರಣವಾಗಿರಬೇಕು.

ನಿಘಂಟಿನಲ್ಲಿರುವ ಪದಗಳ ಉತ್ಪತ್ತಿ, ವಿವರಣೆ ಮತ್ತು ಮಂತ್ರಗಳ ಸಾಂದರ್ಭಿಕ ಅರ್ಥದ ಚರ್ಚೆ ನಿರುಕ್ತದಲ್ಲಿದೆ. ನಿರುಕ್ತದಲ್ಲಿ 12 ಅಧ್ಯಾಯಗಳೂ ಎರಡು ಪರಿಶಿಷ್ಟಾಧ್ಯಾಯಗಳೂ ಇವೆ. ನಿಘಂಟು, ನಿರುಕ್ತ ಬರೆದದ್ದು ಒಬ್ಬರೆಯಾಸ್ಕರು ಎನ್ನುವುದು ಸಾಂಪ್ರದಾಯಿಕರ ಮತ. ಆದರೆ ನಿರುಕ್ತದ ಕೊನೆಗೆ ಯಾಸ್ಕರಿಗೆ ನಮಸ್ಕಾರ ಎಂದು ಹೇಳಿರುವುದರಿಂದ ನಿಘಂಟು ನಿರುಕ್ತ ಕಾರರು ಬೇರೆಬೇರೆ ಎಂದು ಕೆಲವರ ಮತ. ಆದರೆ ವೇದಾಂಗವೆಂದು ಪರಿಗಣಿಸಿರುವುದು ನಿರುಕ್ತವನ್ನೆ. ಯಾಸ್ಕರನ್ನು ಪಾಣಿನಿಯೂ ‘ಯಾಸ್ಕಾದಿಭ್ಯೋ ಗೋತ್ರೆ’ (2.4.63) ಎನ್ನುವಲ್ಲಿ ಉಲ್ಲೇಖಿಸಿದ್ದಾನೆ. ಈತ ಧಾತುವಿನಿಂದ ಪದನಿಷ್ಪತ್ತಿ ಹೇಳುವ ಕ್ರಮ ವೈಯ್ಯಕರಣಿಗಳನ್ನು ಸೇರಿದಂತೆ ಅನೇಕ ಶಾಸ್ತ್ರ ಕಾರರನ್ನು ಪ್ರಭಾವಿಸಿದೆ. ಪಾಠ ಸೂತ್ರಪಾಠಕ್ಕೆ ಮೂಲವಾದದ್ದು ಇದರಿಂದಲೇ ಇರಬೇಕು. (ಕನ್ನಡಕ್ಕೆ ಇದು ಅವಶ್ಯವಲ್ಲ ದಿದ್ದರೂ ಕೇಶಿರಾಜನೂ ಧಾತುಗಳ ಪಟ್ಟಿ ಕೊಡುವುದನ್ನು ಸ್ಮರಿಸಬಹುದು.) ಸಾಯಣರ ಮಾಧವೀಯ ಧಾತು ವೃತ್ತಿಯವರೆಗೂ ನಿರುಕ್ತಕಾರ ಮತ್ತು ಅವನ ವ್ಯಾಖ್ಯಾನಕಾರರ ಮಾತುಗಳು ಪ್ರಮಾಣವೆಂದು ಸ್ವೀಕೃತವಾಗಿವೆ. ನಿರುಕ್ತದ ಮೇಲೆ ಅನೇಕ ವ್ಯಾಖ್ಯಾನಗಳು ಇದ್ದವು ಆದರೆ ಅದರಲ್ಲಿ ಬಹುಭಾಗ ಲುಪ್ತವಾಗಿವೆ.

ನಿರುಕ್ತದಲ್ಲಿಯೇ ಮೊದಲ ಬಾರಿಗೆ ಪದಗಳನ್ನು ನಾಮ, ಕ್ರಿಯಾ, ನಿಪಾತ, ಉಪಸರ್ಗ ಎಂದು ನಾಲ್ಕು ವಿಧವಾಗಿ  ವಿಭಜಿಸಿದೆ. ಪದಗಳಿಗೆ ಸ್ವತಂತ್ರ ಅರ್ಥವಿದೆ ಮತ್ತು ಅದು ನಿಷ್ಪನ್ನವಾಗುವ ಕ್ರಮ ಒಂದಿದೆ ಎಂದು ತನಗಿಂತ ಹಿಂದಿನವರ ಚರ್ಚೆ ಮಂಡಿಸಿ ತನ್ನ ಸಿದ್ಧಾಂತ ರೂಪಿಸಲಾಗಿದೆ. ನಾಮಪದ ಮುಂತಾದ ಪದಗಳ ಲಕ್ಷಣಗಳನ್ನು ಕೊಟ್ಟಿದೆ. ಬಹುಪಾಲು ಎಲ್ಲ ಪದಗಳೂ ಧಾತುಮೂಲವೆಂಬ ಸಿದ್ಧಾಂತವನ್ನು ಪದನಿಷ್ಪತ್ತಿ ವಿಧಾನದಲ್ಲಿ ಅಂಗೀಕರಿಸಲಾಗಿದೆ. ಹೀಗೆ ಧಾತುಸಾಧಿತ ಅರ್ಥ ಯೌಗಿಕಾರ್ಥ ಎನ್ನಿಸಿಕೊಂಡಿದೆ. ನಿರುಕ್ತ ಯೌಗಿ ಕಾರ್ಥಕ್ಕೆ ಕೊನೆಗೊಳ್ಳದೆ, ಸಂಜ್ಞಾರ್ಥ ಅಥವಾ ರೂಢ್ಯರ್ಥ ಅಥವಾ ಸಂಕೇತಿತ ಅರ್ಥದ ಬಗ್ಗೆಯು ಚಿಂತಿಸುತ್ತದೆ. ಆದ್ದರಿಂದ ವೇದ ಮಂತ್ರಗಳ ಮೊದಲ ವಿಮರ್ಶೆಯೂ ಇಲ್ಲಿದೆ. ಕೋಶಾರ್ಥವು ಪ್ರಯೋಗವನ್ನನುಲಕ್ಷಿಸಿರಬೇಕೆಂಬ ಸಂಪ್ರದಾಯಕ್ಕೆ ಇದು ಬುನಾದಿ. ಯಾಸ್ಕರ ಕಾಲಕ್ಕಾಗಲೇ ವೇದ ಉರುಹೊಡೆ ಯುವ ಸಂಗತಿಯಾಗಿರ ಬೇಕು ಅದನ್ನು ಟೀಕಿಸಿ ಬರಿಯ ಅಕ್ಷರ ಭಾರ ಹೊರುವುದಲ್ಲ ಎಂದೂ, ವೇದದ ಅರ್ಥ ತಿಳಿಸಲೋಸುಗವೇ ನಿರುಕ್ತ ರಚನೆ ಎಂದೂ ಪ್ರಸ್ತಾಪಿಸಿದ್ದಾರೆ. ಇದು ಜಗತ್ತಿನ ಮೊದಲ ನಿರುಕ್ತಿ ಪದಕೋಶ.

ನಿರುಕ್ತದ ನಂತರ ಧಾತುಪಾಠಗಳು ಒಂದು ರೀತಿಯಲ್ಲಿ ಕೋಶಗಳೇ. ಮುಂದೆ ಶಾಸ್ತ್ರ ಮತ್ತು ಮಹಾಕಾವ್ಯಗಳ ಕಾಲದಲ್ಲಿ ತಮ್ಮ ಅವಶ್ಯಕತೆಗೆ ತಕ್ಕಂತೆ ಅಂತ, ಲಿಂಗ ನಿರ್ದೇಶನದ ಕೋಶಗಳು ಬಂದವು ಅವುಗಳಲ್ಲಿ ಬೌದ್ಧ ಧರ್ಮೀಯನಾದ ಅಮರ ಸಿಂಹನ ನಾಮಲಿಂಗಾನುಶಾಸನವೆಂಬ ಅಮರಕೋಶ ಅತ್ಯಂತ ಪ್ರಸಿದ್ಧವಾದದ್ದು. ಇಲ್ಲಿಂದ ಮುಂದೆ, ವೈಜಯಂತಿ, ವಿಶ್ವ, ಅಭಿಧಾನ ರತ್ನಮಾಲಾ ಎಂಬ ಹಲಾಯುಧಕೋಶ ಮುಂತಾದವು ತಮ್ಮ ಕಾಲದ ಅವಶ್ಯಕತೆಗೆ ತಕ್ಕಂತೆ ಬಂದಿವೆ. ಶಾಸ್ತ್ರಜ್ಞರು ಕೋಶಜ್ಞರಾಗಿರಬೇಕಿತ್ತು. ಆದ್ದರಿಂದ ಕಂಠಪಾಠಕ್ಕೆ ಅನುಕೂಲವಾದ ಚಿಕ್ಕ ಪದ್ಯರೂಪಗಳಲ್ಲಿ ಇವು ರಚಿತವಾದವು. ಶಿಕ್ಷಣದ ಆರಂಭಿಕ ಹಂತದಲ್ಲಿ ಕೋಶಕ್ಕೆ ಮೊದಲ ಸ್ಥಾನ. ವಾಚ್ಯಾರ್ಥ ಪ್ರತೀತಿಗೆ ಇದನ್ನು ಮೊದಲ ಕಾರಕ ಎಂದು ಪರಿಗಣಿಸಲಾಯಿತು.

ಮೀಮಾಂಸಾ

ಭಾಷೆಯ ಮೂಲ ಘಟಕವಾದ ಧ್ವನಿಯಿಂದ ಆರಂಭಿಸಿ ವಿಶ್ಲೇಷಣಾತ್ಮಕ ವಿವೇಚನೆ ಒಂದಾದರೆ, ಅರ್ಥವನ್ನೇ ಲಕ್ಷಿಸಿ ವಾಕ್ಯವೆಂಬ ಭಾಷೆಯ ಕೊನೆ(?)ಯ ಘಟ್ಟವನ್ನು ಸಂಶ್ಲೇಷಣಾತ್ಮಕವಾಗಿ ವಿವೇಚಿಸುವುದು ಇನ್ನೊಂದು ಮುಖ್ಯಧಾರೆ. ಶಬ್ದವನ್ನು ಅಳೆದು ನೋಡಿ ವಾಕ್ಯಾರ್ಥವನ್ನು ಸ್ಪಷ್ಟಪಡಿಸಿ ಕೊಳ್ಳುವುದೇ ಮೀಮಾಂಸೆ. ವೇದಾರ್ಥ ನಿರ್ಣಯಕ್ಕೆ ತೊಡಗಿದ ಉಪಾಂಗ ವಿದು. ವೇದಾರ್ಥವನ್ನು ವೈದಿಕ ಕರ್ಮದ ಚೌಕಟ್ಟಿನಲ್ಲೇ ಅರ್ಥೈಸುವುದರಿಂದ, ‘ಕರ್ಮ ಮೀಮಾಂಸಾ’, ಅದೇ ಧರ್ಮ ಎಂದು ಭಾವಿಸಿದ್ದರಿಂದ ‘ಧರ್ಮ ಮೀಮಾಂಸಾ’ ಎಂಬ ಹೆಸರುಗಳೂ ಇವೆ. ಇದನ್ನು ವೇದದ ಅರ್ಥಗ್ರಹಣ ಪದ್ಧತಿ ಎನ್ನಬಹುದು.

ಬಿಡಿ ಶಬ್ದಗಳು ಲೋಕಕ್ಕೂ ವೇದಕ್ಕೂ ಸಮಾನ. ವೇದದಲ್ಲಿ ವಾಕ್ಯ ಮತ್ತು ಅದರ ಆನುಪೂರ್ವಿಯನ್ನು ಪ್ರಧಾನವಾಗಿ ಪರಿಗಣಿಸುವ ಶಾಸ್ತ್ರ ಮೀಮಾಂಸಾ. ವಾಕ್ಯ ಮತ್ತು ವಾಕ್ಯಸರಣಿಯಿಂದ ಬರುವ ಪ್ರಕರಣ ಮತ್ತು ಪ್ರಕರಣಗಳ ಸುಸಂಬದ್ಧತೆಯಿಂದ ಬರುವ ತಾತ್ಪಯಾರ್ಥ ಎಂದರೆ ಒಟ್ಟು ಮಾತಿನ ಸುಸಂಬದ್ಧತೆಯಾದ ಏಕವಾಕ್ಯತೆ ಮೀಮಾಂಸೆಯಲ್ಲಿ ಮುಖ್ಯವಾಗಿದ್ದು, ಈ ಶಾಸ್ತ್ರವನ್ನು ವಾಕ್ಯಶಾಸ್ತ್ರ ಎಂದೂ ಕರೆಯಲಾಗಿದೆ. ಪತಂಜಲಿ ಗಿಂತ ಹಿಂದೆ ಇದ್ದ (ಸು.ಕಿ.ಪೂ. 2ನೇ ಶ.) ಜೈಮಿನಿಯ ಮೀಮಾಂಸಾ ಸೂತ್ರಗಳೇ ಈ ಶಾಸ್ತ್ರದ ಆದ್ಯ ಗ್ರಂಥ. ಎರಡು ಸಾವಿರಕ್ಕೂ ಹೆಚ್ಚು ಸೂತ್ರಗಳನ್ನು ಅರವತ್ತು ಉಪವಿಭಾಗದಲ್ಲಿ, ಅದನ್ನು 12 ಅಧ್ಯಾಯಗಳಲ್ಲಿ ವಿಂಗಡಿಸಿದೆ. ಆದ್ದರಿಂದ ಈ ಗ್ರಂಥಕ್ಕೆ ದ್ವಾದಶಲಕ್ಷಣೀ ಎಂದೂ ಹೆಸರು. ಸು.ಕ್ರಿ.ಶ.4ನೇ ಶತಮಾನದ ಶಬರಸ್ವಾಮಿಗಳ ಭಾಷ್ಯ ದೊರೆಯುತ್ತದೆ. ಅದರಲ್ಲಿ ಉಪವರ್ಷಾಚಾರ್ಯರ ವೃತ್ತಿಯ ಉಲ್ಲೇಖವಿದೆ. ಆ ವೃತ್ತಿ ಈಗ ಉಪಲಬ್ಧವಿಲ್ಲ. ಶಾಬರ ಭಾಷ್ಯದ ಮೇಲೆ ಕ್ರಿ.ಶ. 7/8ನೇ ಶತಮಾನದ ಕುಮಾರಿ ಭಟ್ಟ ಮತ್ತು ಪ್ರಭಾವಕರ (ಗುರು)ಗಳ ಭಿನ್ನ ರೀತಿಯ ವ್ಯಾಖ್ಯಾನವಿದೆ. ಈ ಇಬ್ಬರ ಮತಕ್ಕೂ ಅನು ಯಾಯಿಗಳಿದ್ದಾರೆ. ಆದರೆ ಭಾಟ್ಟಮತ ಹೆಚ್ಚು ಮನ್ನಣೆ ಪಡೆದಿದೆ. ಇವರಲ್ಲದೆ ಮುರಾರಿಯ ಮೂರನೆ ಒಂದು ಪ್ರಸ್ಥಾನವೂ ಇದೆ. ಮೀಮಾಂಸಾದಲ್ಲಿ ಅರ್ಥಗ್ರಹಣದ ಯುಕ್ತತೆಯನ್ನು ತೋರಿಸುವ ಯುಕ್ತಿಗಳಿಗೆ ನ್ಯಾಯವೆಂದು ಹೆಸರು. ವಾಕ್ಯ, ಪ್ರಕರಣ ಪ್ರಸಂಗಗಳಲ್ಲಿನ ಸಾಂಗತ್ಯವನ್ನು ತಿಳಿಸಲು ಮತ್ತದು ಸಹಜ ಬುದ್ದಿವಂತಿಕೆಗೆ ಎಟುಕುವಂತೆ ಮಾಡಲು ಈ ನ್ಯಾಯಗಳನ್ನು ಬಳಸ ಲಾಗುತ್ತದೆ. ಪಾಠ್ಯಧಾರಿತ ವಿವೆಚನೆಗಳಲ್ಲೂ, ವಾದಗಳಲ್ಲೂ ಈ ನ್ಯಾಯಗಳಿಗೆ ವಿಶೇಷ ಸ್ಥಾನವಿದೆ. ಇದನ್ನು ನ್ಯಾಯಾಂಗದಲ್ಲೂ ಬಳಸಲಾಗುತ್ತಿತ್ತು.

ಭಾವನಾ

ವಾಕ್ಯಗಳು ಎರಡು ವಿಧ. ಒಂದು ಕ್ರಿಯಾಪದದಲ್ಲಿ ಆಕಾಂಕ್ಷೆ ಪೂರ್ಣ ಗೊಳ್ಳುವ ಕ್ರಿಯಾ ಬೋಧಕ ವಾಕ್ಯ. ಬ್ರಾಹ್ಮಣ ವಾಕ್ಯಗಳು ಪ್ರಧಾನತಃ ಇಂತಹವು. ಮೀಮಾಂಸಾ ಇದನ್ನೇ ಮುಖ್ಯ ಎಂದು ತಿಳಿಯುತ್ತದೆ. ಇನ್ನೊಂದು ರೀತಿಯ ವಾಕ್ಯ-ತಾಧಾತ್ಮ್ಯ ಬೋಧಕ. ಇಲ್ಲಿ ಜ್ಞಾನ ಅಥವಾ ಅಭಿಜ್ಞಾನವೇ ಮುಖ್ಯ. ಉತ್ತರ ಮೀಮಾಂಸಾ ಎನಿಸಿಕೊಂಡ ವೇದಾಂತದಲ್ಲಿ ಇಂಥ ವಾಕ್ಯ ಗಳೇ ಮುಖ್ಯ. ಪೂರ್ವ ಮೀಮಾಂಸಕರು ತಾದಾತ್ಮ್ಯ ವಾಕ್ಯಗಳು ಕ್ರಿಯಾ ಬೋಧಕಗಳಿಗೆ ಅಧೀನ ಎನ್ನುತ್ತಾರೆ.

ಕರ್ಮವೆ ಧರ್ಮ. ಧರ್ಮ ಚೋದನಾಲಕ್ಷಣವಾದದ್ದು. (ಜೈಮಿನಿಸೂತ್ರ 1.1.2). ಕ್ರಿಯಾಬೋಧಕ ವಾಕ್ಯವೇ ಚೋದನೆ. ಇದರಿಂದ ಕೇಳುಗನಲ್ಲಿ ಏನನ್ನೋ ಮಾಡಬೇಕೆಂಬ ಮನೋವ್ಯಾಪಾರ ಉಂಟಾಗುವುದು. ಈ ಮನೋ ವ್ಯಾಪಾರವನ್ನೇ ‘ಭಾವನಾ’ ಎನ್ನುತ್ತಾರೆ. ಕ್ರಿಯಾಪದದ ಲಿಙ್ತ್ವ (ಪ್ರಚೋದನೆ) ‘ಶಾಬ್ದೀಭಾವನ’. ಅದರ ಆಖ್ಯಾತತ್ವ (ಪ್ರತಿಕ್ರಿಯೆ) ಪ್ರಯತ್ನ ರೂಪವಾಗಿದ್ದು ಅದು ‘ಆರ್ಥೀಭಾವನಾ’ ವೇದದಲ್ಲಿ ಹೇಳುವ ವ್ಯಕ್ತಿ ಇಲ್ಲ (ಅದು ಅಪೌರುಷೇಯ). ಆದ್ದರಿಂದ ಅಲ್ಲಿ ಶಾಬ್ದೀ ಭಾವನಾ ವ್ಯಕ್ತಿ ನಿರಪೇಕ್ಷ. ಎಲ್ಲ ಕಡೆಗಳಲ್ಲಿ ಆರ್ಥೀ ಭಾವನಾ ಕೇಳುಗನನ್ನು ಅವಲಂಬಿಸಿದೆ. ಶಾಬ್ದೀ ಭಾವನಾ ಆರ್ಥೀ ಭಾವನೆಗಳಿಂದಲೇ ಸಂವಹನ ಸಂಪೂರ್ಣವಾಗುವುದು.

ಅನ್ವಯ

ಶಬ್ದಗಳು ಒಂದೊಂದಕ್ಕೂ ಒಂದೊಂದು ಅರ್ಥವಿದೆ. ವಾಕ್ಯವು ಶಬ್ದಗಳ ಸಮೂಹ. ಪದಗಳ ಅರ್ಥವೇ ವಾಕ್ಯದ ಅರ್ಥ ಎಂದು ಶಾಬರ ಭಾಷ್ಯದಲ್ಲಿ ಹೇಳಿದ್ದರೂ ಪದಗಳ ಅರ್ಥದ ಮೊತ್ತ ವಾಕ್ಯದ ಅರ್ಥವೇ ಅಥವಾ ವಾಕ್ಯದ ಅರ್ಥ ಪದಗಳ ಅರ್ಥವನ್ನು ನಿರ್ಧರಿಸುತ್ತವೆಯೆ? ಎಂಬ ಜಿಜ್ಞಾಸೆ ಇದೆ. ವಾಕ್ಯದ ಬಿಡಿ ಭಾಗಗಳನ್ನು ಎಂದರೆ ಶಬ್ದ ಮತ್ತು ಪ್ರತ್ಯಯ ಗಳನ್ನು ಅಭಿಧಾವೃತ್ತಿಯಿಂದ ತಿಳಿದು ಆ ಅಭಿಹಿತಾರ್ಥಗಳನ್ನು ಹೊಂದಿಸಿ ಕೊಳ್ಳುವ ಅನ್ವಯವನ್ನು ‘ಅಭಿಹಿತಾನ್ವಯ’ ಎನ್ನಲಾಗುತ್ತದೆ. ಇದು ಭಾಟ್ಟ ಮತ. ನಮ್ಮ ವ್ಯವಹಾರದಲ್ಲಿಯೂ ವಿಚಾರದಲ್ಲಿಯೂ ಅರ್ಥವು ಅಖಂಡವೇ ಆಗಿರುತ್ತದೆ. ಆದ್ದರಿಂದ ಶಬ್ದಾರ್ಥ ವಾಕ್ಯಾರ್ಥಗಳು ಒಂದಾದ ಮೇಲೊಂದರಂತೆ ಬರದೆ, ವಾಕ್ಯಾರ್ಥ, ಸ್ಫುರಣೆಯು ಅಖಂಡವಾಗಿರುತ್ತದೆ. ಆದ್ದರಿಂದ ಪದಗಳ ಅಭಿಧಾವೃತ್ತಿಯ (ಎಂದರೆ ವಾಚ್ಯಾರ್ಥ ತಿಳಿಯುವ) ಜತೆಯಲ್ಲೇ ಅನ್ವಯವೂ ಸೇರಿದೆ. ವಾಕ್ಯಾರ್ಥವೇ ಶಬ್ದಾರ್ಥವನ್ನೂ ನಿರ್ದೇಶಿಸುತ್ತದೆ. ಇದನ್ನು ‘ಅನ್ವಿತಾಭಿದಾನ’ ಎನ್ನಲಾಗುತ್ತದೆ. ಇದು ಗುರುಮತ ಎಂದರೆ ಪ್ರಭಾಕರ ಮತ.

ಮೀಮಾಂಸಾಶಾಸ್ತ್ರ ವಾಕ್ಯವನ್ನು ಅರ್ಥೈಸುವುದು ಅರ್ಥಗತವಾಗಿ. ಆದ್ದರಿಂದ ಒಂದು ಶ್ಲೇಷವಿದ್ದರೆ ವ್ಯಾಕರಣ ರೀತ್ಯಾ ಒಂದೇ ವಾಕ್ಯವಾದರೂ ಅರ್ಥಗತವಾಗಿ ಅದು ಎರಡು ವಾಕ್ಯಗಳಿಗೆ ಸಮ. ಶಬ್ದಗಳ ನಡುವೆ ವಿರೋಧವಿದ್ದರೆ ಹೇಗೆ ಅಸಂಬದ್ಧವಾಗುತ್ತದೊ ಹಾಗೆ ವಾಕ್ಯಗಳ ನಡುವೆ ಕೂಡ ಸಂಗತಿ ಇಲ್ಲದಿದ್ದರೆ ಅಸಂಬದ್ಧವಾಗುತ್ತದೆ. ಪದಗಳ ಅಸಂಬದ್ಧತೆ ನಿವಾರಿಸಲು ಪದ ಒಂದಕ್ಕೆ ಲಕ್ಷಣಾರ್ಥ ಕೊಟ್ಟಂತೆ ವಾಕ್ಯಗಳು ಅಸಂಬದ್ಧ ವಾಗಿದ್ದರೆ ಊಹೆ ಮಾಡಿ ವಾಕ್ಯಕ್ಕೆ ಹೊರನೋಟಕ್ಕಿರುವ ಅರ್ಥಕ್ಕಿಂತ ಭಿನ್ನವಾದ ಅರ್ಥಕೊಡಬೇಕಾಗುತ್ತದೆ. ಪಾಠ್ಯ ವಿವೇಚನೆಗೆ ಮೀಮಾಂಸಕರು ಕೊಟ್ಟ ಕೊಡುಗೆಯಲ್ಲಿ ವಾಕ್ಯಗಳನ್ನು ಹಿಡಿದಿಡುವ ಏಕವಾಕ್ಯತೆಯ ಕಲ್ಪನೆಯೂ ಮುಖ್ಯ.

ವಾಕ್ಯೋತ್ತರ ಮೀಮಾಂಸೆ

ಮೀಮಾಂಸಾ ಶಾಸ್ತ್ರ ವಾಕ್ಯಶಾಸ್ತ್ರ ಅಷ್ಟೇ ಅಲ್ಲ ವಾಕ್ಯೋತ್ತರ ಮೀಮಾಂಸೆಯ ಕಡೆಗೂ ಗಮನಹರಿಸಿದೆ. ಉಪಕ್ರಮ, ಉಪಸಂಹಾರಗಳು (ಆರಂಭ, ಮುಕ್ತಾಯ), ಅಭ್ಯಾಸ (ಪದೇ ಪದೇ ಹೇಳಿದ್ದು), ಅಪೂರ್ವತಾ (ಬೇರೆಲ್ಲೂ ಹೇಳದೆ ಈ ಪ್ರಕರಣದಲ್ಲಿ ಹೇಳಿದ್ದು), ಫಲ, ಅರ್ಥವಾದ (ಒತ್ತುಕೊಡದೆ, ಗಮನಸೆಳೆಯಲು ಮಾಡುವ ಸ್ತುತಿ, ನಿಂದೆ ಇತ್ಯಾದಿ), ಉಪಪತ್ತಿ (ವ್ಯಾಖ್ಯಾನಕ್ಕೆ ಬಳಸುವ ಯುಕ್ತಿ ಅಥವಾ ನ್ಯಾಯ) ಈ ಆರು ಅಂಶಗಳಿಂದ ಒಂದು ಪ್ರಕರಣದ ತಾತ್ಪರ್ಯಾರ್ಥ ವನ್ನು ನಿರ್ಣಯಿಸುವ ವ್ಯವಸ್ಥೆ ಎಲ್ಲ ಶಾಸ್ತ್ರಗಳಲ್ಲೂ ಅಂಗೀಕೃತ. ತಾತ್ಪರ್ಯ ನಿರ್ಣಯಿಸುವಲ್ಲಿ ಮೊದಲಿನದು ಕೊನೆಯದಕ್ಕಿಂತ ಬಲಶಾಲಿ. ಆದ್ದರಿಂದ ಯುಕ್ತಿ ನ್ಯಾಯಗಳಿಗೆ ಕೊನೆಯ ಸ್ಥಾನ.

ಮೀಮಾಂಸಕರ ಶಬ್ದಾರ್ಥ ಚಿಂತನೆ

ಶಬ್ದ, ಅದರ ಅರ್ಥ ಮತ್ತು ಅವುಗಳ ಸಂಬಂಧವನ್ನು ಜೈಮಿನಿ ಔತ್ಪತ್ತಿಕ ಎಂದು ಕರೆದಿದ್ದಾನೆ. ಇದರ ಅರ್ಥ ಅವು ಅನಾದಿ ಮತ್ತು ಪುರುಷ ಅನಪೇಕ್ಷಿತ ಆದರೆ ನಿತ್ಯ ಎಂದು. ನಿತ್ಯ ಎನ್ನುವುದು ಸ್ಥಿರ ಎನ್ನುವ ಅರ್ಥದಲ್ಲಿ. ವೇದವು ಯಾರೊಬ್ಬರು ನಿರ್ಮಿಸದ ಅಪೌರುಷೇಯ ಮಾತು. ಅಷ್ಟು ಬಿಟ್ಟರೆ ಲೌಕಿಕ ವೈದಿಕವೆಂದು ಶಬ್ದಗಳು ಬೇರೆಯಲ್ಲ. ಆದರೆ ಶಿಷ್ಟ ಮತ್ತು ಅಶಿಷ್ಟರ ಮಾತು ಬೇರೆಬೇರೆಯಾಗಿ ತೋರಬಹುದು. ಶಬ್ದದ ಅಪಪ್ರಯೋಗವಾದರೂ ಅರ್ಥವಾಗುವುದು ಶುದ್ಧರೂಪದ ಮೂಲಕವಾಗಿಯೆ. (ಈಗ ಬರವಣಿಗೆ ತಪ್ಪನ್ನು ತಿದ್ದಿ ಓದಿಕೊಂಡಂತೆ) ಶಿಷ್ಟರ ಪ್ರಯೋಗ ಶಿಷ್ಟಪ್ರಯೋಗ. ಶಿಷ್ಟರೆಂದರೆ ಆರ್ಯಾವರ್ತದಲ್ಲಿ ವಾಸಿಸುವ, ಕುಂಭದಲ್ಲಿ ಧಾನ್ಯ ತುಂಬಿರುವ, ನೆಪಗಳನ್ನು ಹೇಳದೆ ಯಾವುದಾದರೂ ವಿದ್ಯೆಯಲ್ಲಿ ನಿಷ್ಣಾತರಾದವರು. ಅನ್ಯರಿಂದ ಈ ಶಿಷ್ಟಭಾಷೆ (ಸಂಸ್ಕೃತ) ಪದಗಳನ್ನು ಎರವಲು ಪಡೆದಿದ್ದರೆ ಆಗ ಅದರ ಮೂಲ ಬಳಕೆದಾರರೆ ಆ ಪದಕ್ಕೆ ಶಿಷ್ಟರು! ಪಿಕ ನೇಮಿ ಮೊದಲಾದವು ಅಂಥ ಪದಗಳು ಎಂದು ಪಿಕನೇಮ್ಯಾದ್ಯಧಿಕರಣ ದಲ್ಲಿ ಹೇಳಿದೆ.

ವೃತ್ತಿಗಳು

ಶಬ್ದದಿಂದ ಅರ್ಥಗ್ರಹಿಸುವ ಮನಸ್ಸಿನ ವ್ಯಾಪಾರ (ಪ್ರಕ್ರಿಯೆ) ವೃತ್ತಿ. ಶಬ್ದಾರ್ಥಗಳ ಆದರ್ಶರೂಪ ಸಂಬಂಧ ಕೋಶ, ವೃದ್ಧವ್ಯವಹಾರ, ಮುಂತಾದವು ಗಳಿಂದ ತಿಳಿಯುತ್ತದೆ. ಇದನ್ನು ಮುಖ್ಯವೃತ್ತಿ ಅಥವಾ ಅಭಿಧಾವೃತ್ತಿ ಎನ್ನು ತ್ತಾರೆ. ಪ್ರಮಾಣಭೂತವಾದ ಒಂದು ವಾಕ್ಯದಲ್ಲಿನ ಪದವಾಗಲಿ ಅಥವಾ ವಾಕ್ಯಸರಣಿಯಲ್ಲಿನ ವಾಕ್ಯವಾಗಲಿ ಅಸಂಗತವೊ ಅಬದ್ಧವೊ ಆಗಿ ಕಂಡಾಗ ವಾಕ್ಯಬಲದಿಂದ ಪದಕ್ಕೂ, ಪ್ರಸಂಗದ ಬಲದಿಂದ ವಾಕ್ಯಕಕ್ಕೂ ಮುಖ್ಯಾರ್ಥಕ್ಕಿಂತ ಭಿನ್ನವಾದ ಅರ್ಥ ಕೊಡುತ್ತೇವೆ. ಅಥವಾ ಅರ್ಥವನ್ನು ಹೊಂದಿಸಿಕೊಳ್ಳುತ್ತೇವೆ. ಇದಕ್ಕೆ ಲಕ್ಷಣಾವೃತ್ತಿ ಎಂದು ಹೆಸರು. ಲಕ್ಷಣಾವೃತ್ತಿ ವಿಶೇಷ್ಯವನ್ನು ಹೇಳಿದರೆ ಅದರಿಂದ ವಿಶೇಷಣಗಳನ್ನು ಗ್ರಹಿಸುವುದಕ್ಕೆ ಗೌಣೀವೃತ್ತಿ ಎಂದು ಹೆಸರು. ರೂಪಕಗಳ ಅರ್ಥದಲ್ಲಿ ಇದು ವಿಶೇಷವಾಗಿ ಕಾಣುತ್ತದೆ. ಮುಖ್ಯಾರ್ಥದ ಒಂದು ಭಾಗವನ್ನು ಬಿಟ್ಟು ಕೊಡುವುದು ಜಹತ್ ಲಕ್ಷಣ, ಹಾಗೆ ಬಿಟ್ಟುಕೊಡದೆ ಬೇರೊಂದು ಅರ್ಥವನ್ನು ಸೇರಿಕೊಳ್ಳುವುದು ಅಜಹತ್ ಲಕ್ಷಣ. ಇವೆರಡೂ ಆಗುವ ಜಹಲ್ಲಜಹಲ್ಲಕ್ಷಣವನ್ನೂ ಕೆಲವರು ಹೇಳುತ್ತಾರೆ (ವೇದಾಂತದಲ್ಲಿ). ಇದಲ್ಲದೆ ಹಿಂದೆ ತಿಳಿಸಿದ ತಾತ್ಪರ್ಯಾರ್ಥ ಅಭಿದಾವೃತ್ತಿಗಿಂತ ಬೇರೆಯೆಂದು ತಾತ್ಪರ್ಯವೃತ್ತಿಯನ್ನು ಬೇರೆಯಾಗಿ ಮೀಮಾಂಸಕರು ಪರಿಗಣಿ ಸುತ್ತಾರೆ. ಮೀಮಾಂಸಕರ ಶಬ್ದಾರ್ಥವಿವೇಚನೆ ಮುಂದೆ ವೇದಾಂತಿಗಳಲ್ಲಲ್ಲದೆ ಅಲಂಕಾರ ಶಾಸ್ತ್ರದಂತಹ ಪಾಠ್ಯ ವಿವೇಚನೆಗಳಲ್ಲೆಲ್ಲ ವಿಶೇಷವಾಗಿ ಉಪಕಾರಕ ವಾಗಿದೆ.

ನ್ಯಾಯ ವೈಶೇಷಿಕರ ಪ್ರಮಾಣವಾಗಿ ಶಬ್ದ

ವೈಯ್ಯಕರಣಿಗಳಿಗೆ ಶಬ್ದ ಬ್ರಹ್ಮ, ಪೂರ್ವ-ಉತ್ತರ ಮೀಮಾಂಸಕರಿಬ್ಬರಿಗೂ ಶಬ್ದ ಎಂದರೆ ವೇದ ಪರಮ ಪ್ರಮಾಣ. ಆದರೆ ಮಾತಿನ ತರ್ಕದಿಂದಲೇ ಎಲ್ಲವನ್ನೂ ಸಾಧಿಸಲು ಹೊರಟವರು ನೈಯ್ಯಯಿಕರು, ಬುದ್ದಿ ಮತ್ತು ಭಾ,ಎಯ ಬೆಳವಣಿಗೆ ಹೊಯ್-ಕೈಯ್ಯಗಿದ್ದು ಬುದ್ದಿಗಮ್ಯವಾದದ್ದೆಲ್ಲದರ ವ್ಯವಸ್ಥಾಪನೆ ಭಾಷೆಯ ವ್ಯವಸ್ಥಾಪನೆಯಿಂದಲೇ ಆಗಬೇಕೆಂದು ಬಗೆದವರು ತಾರ್ಕಿಕರು. ಆಕಾಶದ ಗುಣವಾದ ಶಬ್ದ ವರ್ಣಾತ್ಮಕವಾದದ್ದೆ ಭಾಷೆ. ಆ ರೂಪದಲ್ಲಿ ಅದು ಪ್ರಮೇಯ (ತಿಳಿಯುವಂತಹದ್ದು). ಧ್ವನ್ಯಾತ್ಮಕ ಶಬ್ದಕ್ಕಿಂತ ಇದು ಭಿನ್ನವಾಗುವುದು ಸಂಜ್ಞೆ ಆಗುವುದರಿಂದ. ಅಂತಹ ಸಂಜ್ಞೆ ತನಗಿಂತ ಬೇರೆಯಾದದ್ದನ್ನೂ ತಿಳಿಸುತ್ತದೆ. ಆ ಬೆರೆಯದು ಸಂಜ್ಞಿ. ಹೀಗೆ ಜ್ಞಾನಕ್ಕೆ ಕಾರಣವಾಗುವುದು ಪ್ರಮಾಣ.

ಕಣಾದ ಪ್ರಣೀತ ವೈಶೇಷಿಕ ಸೂತ್ರಗಲು ಪ್ರಮೇಯಗಳಾದ ಪದಾರ್ಥ ಗಳನ್ನೂ ಗೌತಮ ಪ್ರಣೀತ ನ್ಯಾಯಸೂತ್ರಗಳು ಪ್ರಮಾಣಗಳನ್ನೂ ಮುಖ್ಯವಾಗಿ ಮಂಡಿಸುವ ಜೋಡಿ ಶಾಸ್ತ್ರಗಳು. ಕ್ರಿ.ಶ. 1 ರಿಂದ 3ನೇ ಶತಮಾನದಲ್ಲಿ ಬೆಳೆದು ವ್ಯಾಕರಣದಂತೆ ಸರ್ವಶಾಸ್ತ್ರೋಪಕಾರಕವಾದವು. ಸು. 11ನೇ ಶತಮಾನದಲ್ಲಿ ಎರಡೂ ಒಂದಾಗಿ ನ್ಯಾಯವೈಶೇಷಿಕ, ತರ್ಕ, ನವೀನನ್ಯಾಯ ಎನಿಸಿಕೊಂಡಿದೆ. ಆಗಿನಿಂದ ಹಿಂದಿನದನ್ನು ಪ್ರಾಚೀನನ್ಯಾಯ ಎನ್ನುತ್ತಾರೆ.

ನ್ಯಾಯಶಾಸ್ತ್ರದಲ್ಲಿ ಜ್ಞಾನಕ್ಕೆ ಕಾರಣಗಳಾದ ಪ್ರಮಾಣಗಳು ನಾಲ್ಕು. ಅವು ಪ್ರತ್ಯಕ್ಷ, ಅನುಮಾನ (ತಾರ್ಕಿಕ), ಉಪಮಾನ ಮತ್ತು ಶಬ್ದ. ಇವುಗಳಲ್ಲಿ ಮೊದಲಿನದು ನಂತರದಕ್ಕಿಂತ ಬಲವಾದದ್ದು. ವರ್ಣಸಮುಚ್ಚಯ  ಮನಸ್ಸಿನಲ್ಲಿ ಒಂದು ವಸ್ತುವನ್ನು ನೆನಪಿಸುವ ಅಥವಾ ಉದ್ಬೋಧಿಸುವ ಕೆಲಸ ಮಾಡಿದರೆ ಅದು ಸಂಜ್ಞಾ, ಬೋಧವಾದ ಅರ್ಥ ಸಂಜ್ಜಿ, ಸಂಜ್ಞಾ-ಸಂಜ್ಞೀ (ಶಬ್ದಾರ್ಥ) ಸಂಬಂಧವನ್ನು ಶಕ್ತಿ ಎನ್ನುತ್ತಾರೆ. ಪ್ರಾಚೀನರ ಪ್ರಕಾರ ಇದು ಈಶ್ವರೇಚ್ಛೆಯಿಂದ ಆದದ್ದು ನವೀನರ ಪ್ರಕಾರ ಕೇವಲ (ಸಮುದಾಯದ) ಇಚ್ಛೆ. ಬೇರೆ ಪ್ರಮಾಣಗಳಿಂದ ಬಂದ ಜ್ಞಾನಕ್ಕೆ ವಿರುದ್ಧವಲ್ಲದ ಆಪ್ತವಾಕ್ಯ ಪ್ರಮಾಣ. ಅದರಿಂದ ಬಂದ ಜ್ಞಾನ ಶಾಬ್ದಜ್ಞಾನ. ಇದು ಉಳಿದ ಪ್ರಮಾಣ ಗಳಿಗಿಂತ ಕೆಳವರ್ಗದ್ದಾದರೂ, ಉಳಿದ ಪ್ರಮಾಣಗಳು ಪೂರ್ವವಾಗುವುದು ಶಬ್ದದಿಂದಲೇ. ಪದದ ಅರ್ಥವೆ ಪದಾರ್ಥ ಆದ್ದರಿಂದ ವಸ್ತುಗಳು ಜ್ಞಾನಗಮ್ಯವಾಗುವುದೇ ಶಬ್ದದಿಂದ. ಒಂದು ವಸ್ತುವನ್ನು ನೋಡಿದಾಗ ಅದು ಯಾವುದೋ ಒಂದು ವಸ್ತುವೆಂದು ನೋಡುವುದು ನಿರ್ವಿಕಲ್ಪಕ ಪ್ರತ್ಯಕ್ಷ. ಶಬ್ದದ ಸಹಾಯದಿಂದ ಅದು ಇಂತಹದೇ ವಸ್ತುವೆಂದು ಗುರುತಿಸಿ ನೋಡುವುದು ಸವಿಕಲ್ಪಕ ಪ್ರತ್ಯಕ್ಷ. ಎಂದರೆ ಪ್ರತ್ಯಕ್ಷ ಖಚಿತ ಜ್ಞಾನವಾಗುವುದು ಶಬ್ದದಿಂದ. ಅನುಮಾನ ಅನುಮೇಯವನ್ನು ಮಂಡಿಸುವುದು ಮೂರು ಅಥವಾ ಐದು ಅವಯವ ವಾಕ್ಯಗಳಿಂದಲೇ. ಇತರರ ಜತೆ ಜ್ಞಾನವನ್ನು ಹಂಚಿಕೊಳ್ಳುವುದು ಮಾತಿನಲ್ಲೇ. ಅದಕ್ಕೆ ಬಳಸುವ ಚರ್ಚೆಯು ತರ್ಕ (ಪರಮತಖಂಡನೆ ಮಾಡಿ ಸ್ವಮತಸ್ಥಾಪನೆ), ವಾದ (ಸ್ವಮತ ಸ್ಥಾಪನೆ), ಜಲ್ಪ (ಖಂಡನ ಮಂಡನಗಳಿಲ್ಲದ ಬರಿಮಾತು, ಹರಟೆ), ವಿತಂಡ (ಕೇವಲ ಪರಮತಖಂಡನೆ) ಎಂದು ನಾಲ್ಕು ವಿಧ. ಉಪಮಾನ ಪ್ರಮಾಣದಲ್ಲಿಯೂ ಉಪಮಾವಾಕ್ಯದಿಂದ ಕೂಡಿದ ಮನಸ್ಸು ಉಪಮೆಯವನ್ನು ಕಂಡಾಗ ಉಪಮಿತಿ ಜ್ಞಾನವನ್ನು ಪಡೆಯುತ್ತದೆ. ಹೀಗೆ ಶಬ್ದವು ಸರ್ವಪ್ರಮಾಣಗಳಿಗೂ ಉಪಸ್ಕಾರಕ.

ಶಬ್ದಪ್ರಮಾಣಕ್ಕೆ ಆಪ್ತ(ರ) ‘ವಾಕ್ಯ’ವೇ ಆಧಾರ. ವಾಕ್ಯವು ಪದಗಳ ಗುಂಪು. ಶಕ್ತಿ ಇರುವುದೇ ಪದ. ಸಂಜ್ಞಾ-ಸಂಜ್ಞೆ ಸಂಬಂಧವೇ ಶಕ್ತಿ. ಈ ಶಕ್ತಿ (ಸಂಕೇತ) ತಿಳಿಯುವುದು ವ್ಯಾಕರಣ, ಹೋಲಿಕೆ, ಕೋಸ, ಆಪ್ತ ವಾಕ್ಯ, ಲೋಕ ವ್ಯವಹಾರ, ವಾಕ್ಯದ ಉಳಿದ ಭಾಗ, ಬಲ್ಲವರ ವಿವರಣೆ ಮತ್ತು/ಅಥವಾ ತಿಳಿದ ಪದದ ಸಾನ್ನಿಧ್ಯ ಇವುಗಳಿಂದ. ಆಪ್ತವಾಕ್ಯಕ್ಕೆ ಸಾಮರ್ಥ್ಯ ಬರುವುದು ಆಕಾಂಕ್ಷಾ, ಯೋಗ್ಯತಾ ಮತ್ತು ಸನ್ನಿಧಿ ಎಂಬ ಮೂರು ಗುಣಗಳಿಂದ. ವಾಕ್ಯದ ಪದಗಳು ಒಂದು ಇನ್ನೊಂದನ್ನು ಅಪೇಕ್ಷಿಸಿ ಸುಸಂಬದ್ಧವಾಗುವಂತೆ ಪ್ರತ್ಯಯ ಗಳನ್ನು ಹೊಂದಿರುವುದು ಆಕಾಂಕ್ಷಾ. ಸುಸಂಬದ್ಧವಾಕ್ಯವು ಪ್ರತ್ಯಕ್ಷಾದಿ ಪ್ರಮಾಣಗಳಿಗೆ ವಿರುದ್ಧವಲ್ಲದ ‘ಅರ್ಥ’ ಕೊಡುವುದು ಯೋಗ್ಯತಾ. ಅಕ್ಷರ ಮತ್ತು ಪದಗಳು ಗೊಂದಲವಾಗದೆ ಆದರೆ ತಡೆ ಇಲ್ಲದೆ ಉಚ್ಚರಿಸುವಾಗಿನ ಕಾಲೈಕ್ಯ ಸನ್ನಿಧಿ.

ಶಬ್ದಶಕ್ತಿ

ಒಂದು ಶಬ್ದಕ್ಕೆ ಮತ್ತೊಂದು ಶಬ್ದ ಅರ್ಥವಲ್ಲ. ಆದರೆ ಅರ್ಥ ಒಂದರ ಕಲ್ಪನೆಯನ್ನು ಕೊಟ್ಟಿದ್ದು ಮಾತ್ರ ಶಬ್ದ. ಅರ್ಥಸ್ಫುರಣೆಯ ಯೋಗ್ಯತೆಯೇ ಶಕ್ತಿ. ಚೋದ್ಯವೆಂದರೆ ಶಬ್ದನಿತ್ಯತ್ವ ಒಪ್ಪದ ನೈಯ್ಯಯಿಕರ ಪ್ರಕಾರ ಸಂಸ್ಕೃತ ಶಬ್ದಗಳಿಗೆ ಮಾತ್ರ ಶಕ್ತಿಯಿದೆ. ಶಬ್ದ ನಿತ್ಯತ್ವ ಒಪ್ಪುವ ವೈಯ್ಯಕರಣಿಗಳ ಪ್ರಕಾರ ಅಪಭ್ರಂಶಗಳಿಗೂ ಶಕ್ತಿಯಿದೆ. ಮೀಮಾಂಸಕರ ಪ್ರಕಾರ ಅಪಭ್ರಂಶಗಳು ಸಂಸ್ಕೃತದ (ಶಿಷ್ತರೂಪ) ಮುಖೇನ ಅರ್ಥ ಬೋಧಕವಾಗುತ್ತವೆ. ಅಲಂಕಾರ ಶಾಸ್ತ್ರದಲ್ಲಿ ಶಕ್ತಿಯನ್ನು ಪ್ರತಿಭಾ ಎಂದು ಕರೆದರು ಹೇಳುವವನಲ್ಲಿ ಕಾರಯಿತ್ರಿಯಾಗಿಯೂ ಕೇಳುಗನಲ್ಲಿ ಭಾವಯಿತ್ರಿಯಾಗಿಯೂ ಇರುವುದು. ಇದು ಅನುಭೂತಿರೂಪದ್ದು.

ಶಾಬ್ದಬೋಧ/ವಾಕ್ಯಾರ್ಥ ಬೋಧ

ಶಬ್ದದಿಂದ ತಿಳಿಯುವುದೇ ಶಾಬ್ದಬೋಧ. ಇದಕ್ಕೆ ಪದ ಜ್ಞಾನ ಕಾರಣ, ಪದಾರ್ಥಬುದ್ದಿ ದ್ವಾರ, ಶಕ್ತಿಜ್ಞಾನ ಸಹಕಾರಿ. ಯಾವುದೇ ವಿಷಯ ಹೇಳಿದಾಗ ಆ ಮಾತು ಏನೇನನ್ನು ಒಳಗೊಳ್ಳುತ್ತದೆ ಎಂಬ ವ್ಯಾಪ್ತಿ ಅವಚ್ಛಿನ್ನ. ಏನನ್ನು ಹೊರತುಪಡಿಸುತ್ತದೆ ಎನ್ನುವುದು ಅವಚ್ಛೇದಕ. ಅವಚ್ಛಿನ್ನ ಸಾಮಾನ್ಯವನ್ನು ಎಂದರೆ ಜಾತಿಯನ್ನು, ಅವಚ್ಛೇದಕ ವಿಶೇಷವನ್ನು ಎಂದರೆ ವ್ಯಕ್ತಿಯನ್ನು ತಿಳಿಸುತ್ತದೆ. (ಉದಾ: ‘ಹಸು ಹಾಲು ಕೊಡುತ್ತದೆ’ ಎನ್ನುವಲ್ಲಿ ‘ಹಸು’ ಜಾತಿವಾಚಕ. ‘ಹಸುವನ್ನು ಕಟ್ಟಿಹಾಕು’ ಎನ್ನುವಲ್ಲಿ ‘ಹಸು’ ವ್ಯಕ್ತಿವಾಚಕ.) ಈ ಅವಚ್ಛಿನ್ನ-ಅವಚ್ಛೇದಕಗಳ ಮೂಲಕ ಅರ್ಥ ನಿರ್ಣಯಿಸುವ ಶಾಬ್ದಬೋಧ ಕ್ರಮ ನೈಯ್ಯಯಿಕರಲ್ಲಿ ವಿಶೇಷ ಪರಿಷ್ಕಾರಕ್ಕೆ ಒಳಗಾಗಿದೆ. ಶಬ್ದ ಜಾತಿಯನ್ನು ಹೇಳುತ್ತದೊ ವ್ಯಕ್ತಿಯನ್ನು ಹೇಳುತ್ತದೊ ಎಂಬ ವೈಯ್ಯಕರಣಿ ಮತ್ತು ಮೀಮಾಂಸಕರ ಚರ್ಚೆಗೆ ಇದು ಮೂರನೆಯ ಆಯಾಮ ನೀಡುತ್ತದೆ. ಲಕ್ಷಣ ಕೊಡುವಲ್ಲಿ ತರ್ಕವಾದಗಳಲ್ಲಿ ಕೂಡ ಇದಕ್ಕೆ ಮಹತ್ವವಿದೆ.

ಶಾಬ್ದಬೋಧವೂ ವಾಕ್ಯಾರ್ಥವೂ ಸಂಬದ್ಧವಾಗಿವೆ. ಭರ್ತೃಹರಿ ವಾಕ್ಯ ಲಕ್ಷಣವನ್ನು ಎಂಟು ವಿಧವಾಗಿ ತಿಳಿಸಿದ್ದಾನೆ.

1.   ಕ್ರಿಯಾಪದ (ಆಖ್ಯಾತ) ಕೇಂದ್ರಿತವಾದದ್ದು – ‘ಆಖ್ಯಾತಂ ಶಬ್ದಮ್’

2.   ಪದಗಳ ಗುಂಪು – ‘ಪದಸಂಘಟನಾ’

3.   ಪದಸಮೂಹಗಳ ಮೂಲದಲ್ಲಿರುವ ಜಾತಿ – ‘ಸಂಘಟನಾವರ್ತಿನೀ ಜಾತಿಃ’

4.   ಅವಯವಗಳಾಗಿ ವಿಂಗಡಿಸಲಾಗದ ಅರ್ಥವತ್ತಾದ ನುಡಿ – ‘ಏಕೊsನವಯವಃ ಶಬ್ದಃ’

5.   ಪದಗಳ ಪೂರ್ವಾಪರ್ಯ – ‘ಕ್ರಮಃ’

6.   ಬುದ್ದಿಗೋಚರವಾದ ಹೊಳಹಿಗೆ ಕಾರಣವಾದದ್ದು – ‘ಬುದ್ಧ್ಯನುಸಂಹೃತಿ’

7.   ಮೊದಲಪದ – ‘ಆದ್ಯಂ ಪದಂ’ ಅದನ್ನನುಸರಿಸಿದ ಉಳಿದ ಪದಗಳು.

8. ಆಕಾಂಕ್ಷಾ ಸಹಿತವಾದ ಬಿಡಿಪದಗಳು – ‘ಪೃಥಕ್ ಸರ್ವಪದಂ ಸಾಕಾಂಕ್ಷಮ್’

ಈ ಎಂಟು ಮತಗಳಲ್ಲಿ 3, 4, 6ನೇ ಮತಗಳು ಅಖಂಡವಾಕ್ಯಪರ ವಾದವು. ಉಳಿದವು ಖಂಡವಾಕ್ಯ ಪರವಾದವು. ಶಾಬ್ದಬೋಧ ಅಥವಾ ವಾಕ್ಯಾರ್ಥಬೋಧವಾಗುವಲ್ಲಿ ಕ್ರಿಯಾಪದದಿಂದಲೇ ಆಕಾಂಕ್ಷೆ ತೀರುವುದರಿಂದ ಅದೇ ವಾಕ್ಯದ ಕೇಂದ್ರವೆಂದು ಪರಿಗಣಿಸುತ್ತಾರೆ. ನೈಯ್ಯಯಿಕರು ಪ್ರಥಮಾ ವಿಭಕ್ತಿಯಲ್ಲಿರುವ ಪದ – ವಿಶೇಷ ಎನಿಸಿದ್ದು- ಮುಖ್ಯ ಎನ್ನುತ್ತಾರೆ. ಈ ನೆಲೆಗಳಿಂದ ಶಾಬ್ದ ಬೋಧಗಳನ್ನು ಹೇಳುವ ರೀತಿಗಳೂ ಭಿನ್ನವಾಗುತ್ತವೆ. ವ್ಯಾಕರಣ, ಮೀಮಾಂಸಾ, ತರ್ಕಗಳು ಕ್ರಮವಾಗಿ ಪದ, ವಾಕ್ಯ, ಪ್ರಮಾಣ ಶಾಸ್ತ್ರಗಳೆನಿಸಿದರೂ ಮೂರೂ ಶಾಸ್ತ್ರಗಳು ಮೂರೂ ವಿಷಯಗಳನ್ನು ಭಿನ್ನ ರೀತಿಗಳಲ್ಲಿ ಚರ್ಚಿಸಿವೆ. ಭಾಷೆಯ ಮೂಲಘಟಕ ವಾಕ್ಯವೆಂದು ವೈಯ್ಯಯಕರಣಿ ಗಳು, ಪದವೆಂದು ನೈಯ್ಯಯಿಕರು, ವರ್ಣಗಳೆಂದು ಮೀಮಾಂಸಕರೂ ನಿರೂಪಿಸುತ್ತಾರೆ.

ಸೌಂದರ್ಯವೆಂಬ ನಾಲ್ಕನೆಯ ಆಯಾಮ

ಪದ, ವಾಕ್ಯ, ಪ್ರಮಾಣಗಳ ಜತೆಗೆ ಸೌಂದರ್ಯವು ಮಾತಿನ ನಾಲ್ಕನೆಯ ಆಯಾಮವೆಂದು ಅದನ್ನು ಚರ್ಚಿಸುವುದೇ ಅಲಂಕಾರಶಾಸ್ತ್ರವೆಂದೂ ಕುಂತಕನು ಹೇಳುತ್ತಾನೆ. ಛಂದಸ್ಸು, ವರ್ಣ, ಪದ, ವಾಕ್ಯ, ವಾಕ್ಯಸರಣಿ (ಪ್ರಕರಣ) ಎಂಬ ಭಾಷಾ ಘಟಕಗಳೇ ನಿತ್ಯಬಳಕೆಗಿಂತ ಭಿನ್ನವಾಗಿ ಬಳಸಿದಾಗ ಹೇಗೆ ಸೌಂದರ್ಯವನ್ನು ಸೂಸುತ್ತವೆ ಎಂದು ಅಲಂಕಾರ ಶಾಸ್ತ್ರ ಚರ್ಚಿಸುತ್ತದೆ. ವೇದದಲ್ಲಿ ಶಬ್ದ ಮುಖ್ಯ, ಶಾಸ್ತ್ರದಲ್ಲಿ ಅರ್ಥ ಮುಖ್ಯ. ಸಾಹಿತ್ಯದಲ್ಲಿ ಅವೆರಡೂ ಮುಖ್ಯ. ಭಾಷೆ ಬುದ್ದಿಬೋಧಕವಾಗುವುದರ ಜತೆಗೇ ಭಾವ ಬೋಧಕವೂ ಕೂಡ. ಈ ಬೋಧೆ ಪ್ರತಿಭೆಯಿಂದ ಬರುವುದು. ಅದು ನವನವೋನ್ಮೇಷಶಾಲಿನೀ.

ಅಲಂಕಾರಶಾಸ್ತ್ರದ ಆರಂಭವಿರುವುದು ನಾಟ್ಯಶಾಸ್ತ್ರದಲ್ಲಿ. ವಾಚಿಕಾಭಿನಯ ವನ್ನು ವಿವರಿಸುವ ಸಂದರ್ಭದಲ್ಲಿ ಭರತ ಛಂದಸ್ಸು, ಅಲಂಕಾರ ಮುಂತಾದ ಭಾಷೆಯ ವಿವಿಧ ಅಂಶಗಳನ್ನೂ ವಿವರಿಸಿದ್ದಾನೆ. ಭಾವೈಕ್ಯದಿಂದ ಭಾಷೆ ರಸ ಪೋಷಕವಾಗುವುದನ್ನು ಹೇಳಿದ್ದಾನೆ. ಸ್ವರವ್ಯತ್ಯಯದಿಂದಾಗುವ ಕಾಕು, ಆಂಗಿಕಾಭಿ ನಯ, ಮುದ್ರೆಗಳಿಂದಾಗುವ ಅರ್ಥಚ್ಛಾಯೆಗಳೊಡನೆ ನೋಡಿದಾಗ ಭಾಷೆಯ ನಾಟ್ಯಮಾನತೆ ತಿಳಿಯುತ್ತದೆ. ನಾಟ್ಯವೇ ದೃಶ್ಯ ಶ್ರಾವ್ಯಗಳ ಮಿಲನವಾದ್ದರಿಂದ ಅಲ್ಲಿನ ಭಾಷಾವಿವೇಚನೆ ನಮ್ಮ ಅನುಭವ-ಜ್ಞಾನಗಳ ಬಗ್ಗೆ ಹೊಸ ಅನು ಭಾವಿಕ ಒಳನೋಟ ಕೊಡುತ್ತದೆ.

ವಾಕ್ತತ್ವ

ಬೌದ್ಧ, ಜೈನರ ದೃಷ್ಟಿ

ಜೈನ, ಬೌದ್ಧ ಆಗಮಗಳು ಮೊದಲು ದೇಶಭಾಷೆ-ಪ್ರಾಕೃತದಲ್ಲಿದ್ದವು. ಪ್ರಾಕೃತ ಮತ್ತು ಕನ್ನಡ ಸೇರಿದಂತೆ ಸಂಸ್ಕೃತ ಮತ್ತು ಸಂಸ್ಕೃತೇತರ ಭಾಷೆಗಳಿಗೆ ವ್ಯಾಕರಣ ಬರೆದವರಲ್ಲಿ ಇವರು ಪ್ರಮುಖರಷ್ಟೆ. ವೈದಿಕ ಪದವಾಕ್ಯ ಪ್ರಮಾಣ ಶಾಸ್ತ್ರಗಳ ಶಿಷ್ಟಮಾನ್ಯತೆಗೆ ಭಿನ್ನವಾಗಿ ಸರ್ವಭಾಷಾ ಸರಸ್ವತಿಯ ಕಲ್ಪನೆ ಜೈನರಲ್ಲಿದೆ. ಜಿನ ಭಗವಾನರು ಸಮವಸರಣದಲ್ಲಿ ನುಡಿದದ್ದು ಪ್ರತಿಯೊಬ್ಬರಿಗೂ ಅವರವರ ಭಾಷೆಯಲ್ಲಿ ತಿಳಿಯುತ್ತದೆಂದು ಅವರು ಭಾವಿಸುತ್ತಾರೆ. ನಾಗವರ್ಮನು ತನ್ನ ಕರ್ನಾಟಕ ಭಾಷಾಭೂಷಣದ ಮಂಗಳ ಶ್ಲೋಕದಲ್ಲಿ ‘ಯಾರ ಬಾಯಿಯಿಂದ ಹೊರಟ ಸರಸ್ವತೀ (ಮಾತು) ಸರ್ವಭಾಷಾರೂಪಿಣಿಯೋ ಅಂತಹ ಸರ್ವಜ್ಞನನ್ನು ವಂದಿಸುವೆ’ ಎಂದಿದ್ದಾನೆ. ಇದನ್ನು ಭಟ್ಟಾಕಳಂಕನು ‘ಭಗವದ್ಭಾಷೆಯು ಹುಟ್ಟುವಾಗ ಸಮುದ್ರ ಘೋಷದಂತೆ ಅವ್ಯಕ್ತವಾದ ಒಂದೇ ಭಾಷೆ. ಆದರೆ ವಿಚಿತ್ರ ಶಕ್ತಿಯ ಕಾರಣದಿಂದ ಅದು ಕೇಳುವವರ ಕಿವಿಯಲ್ಲಿ ತಮ್ಮತಮ್ಮ ಭಾಷೆಯಾಗುತ್ತದೆ. ಭಗವಂತನ ಮಾತನ್ನೇ ದೇವತೆಗಳು ದೈವೀ, ನರರು ನಾರೀ, ಶಬರರು ಶಾಬರೀ, ಪ್ರಾಣಿಗಳು ಪ್ರಾಣಿಭಾಷೆ ಎಂದು ತಿಳಿಯುತ್ತಾರೆ’ ಎಂದು ವಿವರಿಸಿದ್ದಾನೆ.

ಕಿವಿಗೆ ಕೇಳಿಸುವ  ಶಬ್ದ ಕೇಳುವ ಕ್ಷಣದಲ್ಲೇ ಹುಟ್ಟಿ ಸಾಯುತ್ತದೆ. ಅದು ಉತ್ಪನ್ನವಿನಷ್ಟ. ಇಂತಹ ಧ್ವನಿಗಳನ್ನು ಶಬ್ದವಾಗಿ, ಶಬ್ದಗಳನ್ನು ವಾಕ್ಯಗಳಾಗಿ ಹಿಡಿದಿಡುವುದು ಯಾವುದು? ಉತ್ಪನ್ನವಿನಷ್ಟವಾದ ಶಬ್ದ ವ್ಯಕ್ತಿಯ ಮನಸ್ಸಿನಲ್ಲಿ ಮತ್ತು ಸಮುದಾಯದಲ್ಲಿ ಕಾಲಾಂತರಕ್ಕೆ ಉಳಿಯುವುದು ಹೇಗೆ? ಇದೊಂದು ದೊಡ್ಡ ಜಿಜ್ಞಾಸೆ. ಜೈನರು ಅವ್ಯಕ್ತವಾದ ಅತೀತಭಾಷೆ ಬಗ್ಗೆ ಹೇಳಿದರೆ ಬೌದ್ಧರು ಉತ್ಪನ್ನವಿನಷ್ಟತೆ ಜಗತ್ತಿನ ಸ್ವರೂಪವೂ ಆಗಿರುವ ಕಡೆ ಗಮನ  ಸೆಳೆಯುತ್ತಾರೆ. ಬೌದ್ಧರ ಪ್ರಕಾರ ಭಾಷೆ ‘ಇದು ಹೀಗೆ’ ಎನ್ನುವುದಕ್ಕಿಂತ ‘ಹೀಗೆ-ಅಲ್ಲ’ ಎಂದು ಹೇಳುತ್ತದೆ. ಇದಕ್ಕೆ ಅಪೋಹವಾದವೆಂದು ಹೆಸರು. ಅಪೋಹ ಊಹಾಗೆ ವಿರುದ್ಧ. ಈ ವಾದದ ಪ್ರಭಾವ ಅದ್ವೈತ ವೇದಾಂತದ ಮೇಲೆ ಇದೆ. ಈ ತಾತ್ವಿಕ ನೆಲೆಗಳು ಸತ್ಯವು ಮಾತಿಗೆ ನಿಲುಕದ್ದು ಮೌನದಲ್ಲಿಯೆ ತಿಳಿಯಬೇಕಾದದ್ದು ಎಂದು ಸಾರುತ್ತವೆ. ಕಲಿಕೆಯೆಲ್ಲವೂ  ಮಾತಿನದು ಎಂಬ ನೆಲೆಗೆ ವಿರುದ್ಧವಾಗಿ ‘ಮೌನಂ ಜ್ಞಾನಲಕ್ಷಣಂ’ ಎಂದು ಬಗೆಯುತ್ತವೆ.

ಸ್ಫೋಟ ತತ್ವ

ಪಾಣಿನಿಗಿಂತ ಹಿಂದೆ ಇದ್ದ ಸ್ಫೋಟಾಯನರಿಂದಲೇ ಪ್ರಾರಂಭವಾದದ್ದು ಎನ್ನಲಾದ ಸ್ಫೋಟವಾದ ಹುಟ್ಟಿ ನಾಶವಾಗುವ ಶಬ್ದದ ಹಿಂದೆ ಅವಿನಾಶಿಯಾದ ಶಬ್ದವಿದೆ ಎನ್ನುತ್ತದೆ. ‘ಸ್ಫುಟತೆ’ ಎಂದರೆ ತಂತಾನೆ ತೆರೆದುಕೊಳ್ಳುವುದು. ವರ್ಣಗಳು ಯಾವುದನ್ನು ಸ್ಫುರಿಸುತ್ತದೋ ಮತ್ತು ಯಾವುದು ಅರ್ಥವನ್ನು ಸ್ಫುರಿಸುತ್ತದೊ ಅದು ಸ್ಫೋಟ. ಈ ಸ್ಫೋಟರೂಪದ ಶಬ್ದವೇ ನಿತ್ಯ. ಇದು ಚಿತ್ತದಲ್ಲಿದ್ದು ಚಿತ್ತದಲ್ಲಿನ ಅರ್ಥದೊಂದಿಗೆ ಅವಿನಾಭಾವೀ ಸಂಬಂಧ ಹೊಂದಿರುತ್ತದೆ. ಶಿಕ್ಷಣದ ಸೌಕರ್ಯಕ್ಕಾಗಿ ಸ್ಫೋಟವನ್ನು ಈ ಕೆಳಗಿನಂತೆ ಗುರುತಿಸಬಹುದು. ಆದರೆ ವಾಸ್ತವವಾಗಿ ಅಖಂಡವಾಕ್ಯ ಸ್ಫೋಟವೇ ದಿಟವೆಂದು ವೈಯ್ಯಕರಣ ವೇದಾಂತಿ ಭರ್ತೃಹರಿ ವಾಕ್ಯಪದೀಯದಲ್ಲಿ ಹೇಳುತ್ತಾನೆ. ಸ್ಫೋಟ ವಿಭಾಗ ಹೀಗಿದೆ.

ಒಬ್ಬನ ಬಾಯಿಂದ ಇನ್ನೊಬ್ಬನ ಕಿವಿಗೆ ತಲುಪುವ ವರ್ಣಾದಿಗಳಿಂದ ಗುರುತಿಸುವ ಮಾತು ‘ವೈಖರಿ’. ಈ ವೈಖರಿಗಳ ಮೂಲರೂಪವು ವ್ಯಕ್ತಿಯ ಚಿತ್ತದಲ್ಲಿದ್ದು ವೈಖರಿಯನ್ನು ಬಾಯಿಂದ ಆಡಿಸುವುದು. ‘ಮಧ್ಯಮಾ’. ಈ ಇಂಗಿತಕ್ಕೆ ಈ ಶಬ್ದ ಈ ಶಬ್ದ ಪ್ರಕಟನಕ್ಕೆ ಈ ವರ್ಣಗಳು ಎಂದು ನಿಯಂತ್ರಿಸುವ ವ್ಯಕ್ತಿಯ ಚಿತ್ತಕ್ಕಿಂತ ಅತೀತವಾದ ನೆಲೆ ಪಶ್ಯಂತೀ. ಇಲ್ಲೀ ಶಬ್ದಾರ್ಥಗಳಿಗೆ ಭೇದವಿಲ್ಲ. ಭರ್ತೃ ಹರಿ ಹೇಳಿದ ಈ ಮೂರು ನೆಲೆಗಳಲ್ಲದೆ ಪರಾ ಎಂಬ ನಿಷ್ಕಲವಾದ ನೆಲೆಯನ್ನು ನಾಗೇಶಭಟ್ಟ ಹೇಳುತ್ತಾನೆ. ಇದು ತಂತ್ರಶಾಸ್ತ್ರವನ್ನಾಧರಿಸಿದೆ.

ಶಬ್ದಯೋಗ

ನಾಗೇಶಭಟ್ಟ ವ್ಯಾಕರಣಕ್ಕೆ ಯೋಗ-ತಂತ್ರಗಳ ಬೆಸುಗೆ ಹಾಕಿದನೆಂದರೂ ಈ ಸಂಬಂಧ ಪ್ರಾಚೀನವಾದದ್ದೆ. ವ್ಯಾಕರಣ ಮಹಾಭಾಷ್ಯ ಬರೆದ ಪತಂಜಲಿಯೇ ಯೋಗಶಾಸ್ತ್ರದ ಪ್ರಣೇತಾರ. ಶಿಕ್ಷಾಶಾಸ್ತ್ರವು ಇಂಗಿತದಿಂದ ಶಬ್ದವು ಅಭಿವ್ಯಕ್ತವಾಗುವ ಕ್ರಮವನ್ನು, ಅದನು ಧ್ಯಾನಕ್ಕೆ ಬಳಸುವ ಕ್ರಮವನ್ನು ತೈತ್ತರೀಯ ಒಪನಿಷತ್ ಹೇಳಿದರೆ ಯೋಗ ಚಿತ್ತದಲ್ಲಿ ಶಬ್ದಜ್ಞಾನವಾಗುವ ಕ್ರಮವನ್ನು, ಅದರ ಧ್ಯಾನವನ್ನೂ ಹೇಳುತ್ತದೆ.

‘ಯೋಗ’ ಚಿತ್ತವೃತ್ತಿಯ ನಿರೋಧ, ಐದು ಬಗೆಯ ಪ್ರಧಾನ ಚಿತ್ತವೃತ್ತಿ ಗಳಲ್ಲಿ ಮೊದಲನೆಯದು ಪ್ರಮಾಣ. ಪ್ರಮಾಣಗಳಲ್ಲಿ ಮೂರನೆಯದು ಮತ್ತು ಕೊನೆಯದು ಆಗಮ ಅಥವಾ ಶಬ್ದ. ಆಪ್ತನೊಬ್ಬ ಕಂಡುಕೊಂಡ ಅಥವಾ ಅನುಮಾನಿಸಿದ ಸಂಗತಿಯನ್ನು ಹೇಳಿದಾಗ ಕೇಳುಗನ ಮನಸ್ಸಿನಲ್ಲಿ ಅದೇ ವಿಷಯಕವಾದ ವೃತ್ತಿ ಉಂಟಾಗುತ್ತದೆ. ಈ ವೃತ್ತಿಯೇ ಶಬ್ದಪ್ರಮಾಣ. ಇದು ಮಿಥ್ಯಾ (ಸುಳ್ಳು)ಜ್ಞಾನ ಕೊಟ್ಟರೆ ವಿಪರ್ಯಯ ಎನಿಸಿಕೊಳ್ಳುತ್ತದೆ. ಕೆಲವು ಸಲ ಅರ್ಥವತ್ತಾದರೂ ವಿಷಯರಹಿತವಾದ ಅಲ್ಲದ್ದು ‘ವಿಕಲ್ಪ’ ಎಂದಿದೆ. (ಯೋ.ಸೂ. 1-6 ರಿಂದ 9) ಪ್ರತ್ಯಕ್ಷ ಮಾತ್ರವೇ ಸವಿವೇಷ ಜ್ಞಾನ ಕೊಡಬಲ್ಲದು. ಅನುಮಾನ, ಶಬ್ದಗಳು ಬರೀ ಊಹಾತ್ಮಕ, ಆದ್ದರಿಂದ ಪ್ರತ್ಯಕ್ಷವಿಲ್ಲದ ಶಾಬ್ದಜ್ಞಾನ ವಿಕಲ್ಪ.

ಯೋಗಸೂತ್ರದ ವಿಭೂತಿಪಾದದ 17ನೆ ಸೂತ್ರ ‘ಶಬ್ದ-ಅರ್ಥ-ಪ್ರತ್ಯಯ ಗಳನ್ನು ಒಂದಕ್ಕೆ ಇನ್ನೊಂದನ್ನಾರೋಪಿಸಿ ಬೆರಕೆಯಾಗಿದೆ. ಅವುಗಳ ಪ್ರವಿ ವಿಭಾಗದ ಮೇಲೆ ಸಂಯಮ ಮಾಡುವುದರಿಂದ ಎಲ್ಲಾ ಭೂತ ಪ್ರಾಣಿಗಳ ಕೂಗಿನ ಜ್ಞಾನ ಉಂಟಾಗುತ್ತದೆ’ ಎನ್ನುತ್ತದೆ. 1. ಧಾರಣ ಎಂದರೆ ನಿಶ್ಚಿತ ಅರ್ಥ ಸ್ಥಾನದ ಮೇಲೆ ಚಿತ್ತವನ್ನು ನಿಲ್ಲುಸುವುದು. 2. ಧ್ಯಾನವೆಂದರೆ ರತ್ಯಯವು ನಿರಂತರವಾಗಿ ಧಾರಣಾ ವಿಷಯದಲ್ಲಿ ಏಕಾಗ್ರವಾಗುವುದು. 3. ಸಮಾಧಿ ಎಂದರೆ ಧ್ಯಾನವೇ ವಿಷಯದಂತೆ ಹೊಳೆಯುತ್ತಾ ಸ್ವರೂಪ ಶೂನ್ಯ ವಾದಂತೆ ಅಂತರ್ಗತವಾಗುವುದು. ಈ ಮೂರೂ ಒಗ್ಗೂಡಿದ್ದೇ ಸಂಯಮ. ಅದರ ಜಯದಿಂದ ಪ್ರಜ್ಞೆಯ ಬೆಳಕು. ಇಂತಹ ಸಂಯಮಕ್ಕೆ ವಿಷಯವಾದ ಭಾಷೆಯ ಪ್ರವಿಭಾಗದಿಂದ ಎಂದರೆ ಗೋಜಲು ಬಿಡಿಸಿಕೊಳ್ಳುವುದರಿಂದ ಎಲ್ಲ ಪ್ರಾಣಿಗಳ ಭಾಷೆ ತಿಳಿಯುತ್ತದೆ. ಯೋಗಸೂತ್ರದ ವ್ಯಾಸಭಾಷ್ಯವನ್ನಾ ಧರಿಸಿ ವಾಕ್‌ಶಕ್ತಿಯ ಬಗ್ಗೆ ಹೀಗೆ ವಿವರಿಸಿಕೊಳ್ಳಬಹುದು.

1. ವರ್ಣಗಳ ಉಚ್ಚಾರಣೆಯೇ ವಾಕ್. ವರ್ಣಗಳನ್ನು ಏಕಕಾಲಕ್ಕೆ ಉಚ್ಚರಿಸಲಾರೆವು. ಪ್ರತ್ಯೇಕವಾದರೆ ಅವು ಒಂದಾಗುವುದು ಹೇಗೆ? ಆದ್ದರಿಂದ ವರ್ಣಗಳು ಪದ ಸ್ವರೂಪವೇ ಆಗಿವೆ. ಎಂದರೆ ಉಚ್ಚರಣಾ ಘಟಕ ಪದವೇ.

2. ಒಂದೊಂದು ವರ್ಣಕ್ಕೆ ಬೇರೆ ಅರ್ಥವಿದ್ದರೂ ಪದಕ್ಕೆ ಹಾಗೆಯೇ ವಾಕ್ಯಕ್ಕೂ ಒಂದೇ ಅರ್ಥ. ಆದ್ದರಿಂದ ವರ್ಣ ಪದ ವಾಕ್ಯ ವಿಭಾಗ ಆರೋಪಿತವಾದದ್ದು. ಅದು ನಿಜಕ್ಕೂ ಒಂದು ಕೂಗಷ್ಟೆ.

3. ಶಬ್ದ ಅಥವಾ ಕೂಗು, ಅದರ ಅರ್ಥ ಎಂದರೆ ಬಾಹ್ಯವಸ್ತು ಮತ್ತು ಪ್ರತ್ಯಯ ಎಂದರೆ ಮಾನಸಿಕರೂಪ ಈ ಮೂರನ್ನೂ ನಾವು ಬೆರೆಸಿದ್ದೇವೆ.

‘ಇದು ಹಸು ನನಗೆ ಗೊತ್ತು’ ಎನ್ನುವಲ್ಲಿ ‘ಹಸು’ ಒಂದು ಶಬ್ದ, ಬಾಹ್ಯವಸ್ತು ಮತ್ತು ನನ್ನ ಜ್ಞಾನ ಕೂಡ. ಹಸು ಎಂಬ ಸಮ್ಕೇತದಲ್ಲಿನ ಪದಾರ್ಥಗಳು ಬೆರಕೆಯಾಗಿ ನಮ್ಮ ಸ್ಮೃತಿಯಲ್ಲಿದೆ. ಹೀಗೆ ಬೆರೆತ ಶಬ್ದಾರ್ಥ ಪ್ರತ್ಯಯಗಳನ್ನು ವಿಂಗಡಿಸಿಕೊಂಡರೆ ಎಲ್ಲಾ ಕೂಗೂ ಅರ್ಥವಾಗುತ್ತದೆ. ಪ್ರಾಣಿ ಕೂಗಿಗಿಂತ ಭಾಷೆ ಸಂಕೀರ್ಣವಿರಬಹುದು. ಮೂಲತಃ ಬೇರೆಯಲ್ಲ. ಭಾಷೆ ಮನುಷ್ಯ ಮಾತ್ರದ್ದು ಎನ್ನುವುದಕ್ಕೆ ಈ ಸಿದ್ಧಾಂತ ಒಂದು ಸವಾಲು.

ಶಾರದಾ ತಂತ್ರ

ಯೋಗಧಾರಣದಲ್ಲಿ ಚಕ್ರಗಳು ಅರಿವನ್ನೂ ತಂತ್ರಶಾಸ್ತ್ರ ಶಬ್ದಾರ್ಥಕಗಳನ್ನು ಶಕ್ತಿವಾಹಕಗಳಾಗಿ ಪರಿಗಣಿಸುತ್ತದೆ. ಪ್ರಸಿದ್ಧಾರ್ಥರಹಿತವಾದ ಬೀಜಾಕ್ಷರಗಳು ಪ್ರಬಲ ಶಕ್ತಿವಾಹಕಗಳು. ಶಾಕ್ತ, ಶೈವಾದಿ ಹಲವಾರು ಪಂಥದ ಅನೇಕ ತಂತ್ರಗಳು ಇವೆ. ವಾಕ್ ಸರಸ್ವತೀ ಎಂದು ಕರೆದದ್ದೆ ಶಾರದೆಯೂ ಕೂಡ. ಶಾಕ್ತತಂತ್ರದಲ್ಲಿ ವಾಕ್‌ನ ಪ್ರಸ್ತಾಪ ವಿಶೇಷವಾಗಿದೆ.

ಶಾಕ್ತತಂತ್ರದಲ್ಲಿ ಶಬ್ದಬ್ರಹ್ಮವೂ ಪರಬ್ರಹ್ಮವೂ ಒಂದೇ. ಘನೀಭೂತ ಬ್ರಹ್ಮವು ಕರ್ಮಪರಿಪಾಕ ಸಹಿತವಾಗಿ ವಿಚಿಕೀರ್ಷಾ ಎನಿಸಿ ಮಾಯೆಯಿಂದ ಕೂಡಿದ್ದು ಜಗತ್ತಿನ ಅಂಕುರಕ್ಕೆ ಕಾರಣವಾಗುತ್ತದೆ. ಇದು ‘ಕಾರಣಬಿಂದು’, ಇದೇ ‘ಪರಾ’. ಇದರಿಂದ ಕಾರ್ಯಬಿಂದುವಾದ ‘ಕಲಾ’. ಇದು ‘ಪಶ್ಯನ್ತೀ’. ಅದರಿಂದ ನಾದ. ಇದೇ ಮಧ್ಯಮಾ, ನಾದದಿಂದ ಬೀಜರೂಪವಾದ ವರ್ಣಗಳು ಹುಟ್ಟುತ್ತವೆ. ವರ್ಣಗಳೇ ವೈಖರೀ ವಾಕ್. ಇದು ವಿರಾಟ್ ದೈವದ ಸ್ವರೂಪ. ಇದು ಹಿರಣ್ಯಗರ್ಭಾವಸ್ಥೆಯ ಜ್ಞಾನಾತ್ಮಕನಾದವನ್ನು ಅವಲಂಬಿಸಿ ಅದನ್ನು ಮರೆ ಮಾಡಿದೆ. ಹೀಗೆ ನಾದ ಕಲಾವನ್ನು ಕಲಾ ಬಿಂದುವನ್ನೂ ಆವರಿಸಿ ಮರೆಮಾಡಿರುತ್ತವೆ. ಶೈವತಂತ್ರದಲ್ಲಿ ಶಿವ ನಾದಬಿಂದು ಕಲಾತೀತ. ಎಂದರೆ ಪರಾವಾಕ್‌ಗಿಂತ ಅತೀತ. ಮೂಲಾಧಾರದಲ್ಲಿರುವ ಕಾರಣ ಬಿಂದು (ಪರಾ) ಸುಷುಮ್ನಾದಲ್ಲಿ ತೂರದೆ ಸ್ವಾಧಿಷ್ಠಾನದಲ್ಲಿ ಕಲಾಬಿಂದುವನ್ನು ಜೋದಿಸಿ, ಮಣಿಪೂರ(ಹೊಕ್ಕುಳು)ದಲ್ಲಿ ಅವ್ಯಕ್ತಪ್ರಾಣ ದಿಂದ ಮನಸ್ಸಿನ ಜತೆ ಸೇರಿ ಪ್ರಕಾಶರೂಪ ಪಶ್ಯಂತೀ ವಾಕ್ ಆಗುತ್ತದೆ. ಇದು ಯೋಗಿಗೋಚರ. ಅದು ವ್ಯಕ್ತವಾದ ವಾಯುವಿನ ಜತೆ ಸೇರಿ ಅನಾಹತದಲ್ಲಿ (ಹೃದಯದಲ್ಲಿ) ನಿಶ್ಚಯಾತ್ಮಕ ಬುದ್ದಿಯ ಸಂಸರ್ಗದಿಂದ ನಾದಮಯ ದಿಂದ ಮಾಧ್ಯಮಾವಾಕ್ ಆಗುತ್ತದೆ. (ಇದು ಮೂಕನಲ್ಲಿಯೂ ಇರುವ ವಾಕ್) ನಾದವು ವಿಶುದ್ದಿಚಕ್ರದಲ್ಲಿ (ಗಂಟಲಲ್ಲಿ) ಸ್ವರಗಳಾಗಿ ಅಜ್ಞಾಚಕ್ರದ ನಿರ್ದೇಶನದಂತೆ ಮೂರ್ಧಾಗೆ ಬಡಿದು ನಾಲಿಗೆಯನ್ನು ತಾಲ್ವಾದಿ ಸ್ಥಾನಕ್ಕೆ ತಗುಲಿಸುವುದರಿಂದ ವರ್ಣರೂಪ ವಾದ ವೈಖರೀವಾಕ್‌ಅನ್ನು ನಾದದಲ್ಲಿ ಅದನ್ನು ಬಿಂದುವಿನಲ್ಲಿ, ಬಿಂದುವನ್ನು ಕಲಾದಲ್ಲಿ ಲೀನಗೊಳಿಸುವಲ್ಲಿ. ಅದಕ್ಕೆ ಮಾತನ್ನು ಮಂತ್ರದಲ್ಲಿ ಮಂತ್ರ ಬೀಜಾಕ್ಷರದಲ್ಲಿ ಅದು ನಾದದಲ್ಲಿ ನಾದ ಸ್ಪಂದದಲಿ ಲೀನವಾಗಬೇಕು. ಅದಕ್ಕೆ ನಾಲಿಗೆಯನ್ನು ತಾಲು ಎಂದರೆ ಬಾಯ ಅಂಗಳಕ್ಕೆ ತಗುಲಿಸಿ, ಉಸಿರನ್ನು ಕುಂಭಕದಲ್ಲಿ ಹಿಡಿದಿಟ್ಟು, ಬುದ್ದಿ, ಮನಸ್ಸುಗಳನ್ನು ಪ್ರಶಾಂತಗೊಳಿಸಿ ಪ್ರಾಣ ಶಕ್ತಿಯ ಸ್ರೋತ ಮೂಲಾಧಾರದಿಂದ ಬಹಿರ್ಮುಖವಾಗದೆ ಸುಷುಮ್ನಾದಲ್ಲಿ ಒಳ ಸರಿಯುವಂತೆ ಮಾಡುವುದು. ಪದವಾಕ್ಯ ಪ್ರಮಾಣಶಾಸ್ತ್ರಗಳು ಚಿತ್ತದಿಂದ ಶಬ್ದಗಳ ಅಭಿವ್ಯಕ್ತಿ ಮತ್ತು ಅಭಿವ್ಯಕ್ತವಾದದ್ದರ ಜ್ಞಾನವನ್ನು ವಿಮರ್ಷಿಸಿದೆ. ವೇದ-ತಂತ್ರ-ಕಾವ್ಯ-ಯೋಗಗಳು ಚಿತ್ತ ಮತ್ತು ಅಭಿವ್ಯಕ್ತಿಗಳ ಶಕ್ತಿ ಮತ್ತು ಶಕ್ತಿಸ್ತೋತ್ರಗಳನ್ನು ಧ್ಯಾನಿಸುತ್ತವೆ. ಶಬ್ದೋಪಾಸನೆ ಶಬ್ದದೊಳಗಣ ನಿಃಶ್ಶಬ್ದ ವನ್ನು ತೋರುತ್ತದೆ. ವೇದಾಂತದ ವಿವಿಧ ಶಾಖೆಗಳು ಇಲ್ಲಿನ ಹಲವಾರು ಅಂಶಗಳನ್ನು ತನ್ನ ಚರ್ಚೆಗಳಲ್ಲಿ ಉಪಾಸನೆಗಳಲ್ಲಿ ಅಳವಡಿಸಿಕೊಂಡಿದೆ. ಇವರೆಲ್ಲರಿಗೂ ಮಾತನ್ನು ತಿಳಿಯುವುದೂ ಮೌನವನ್ನು ಸಾಧಿಸುವುದೂ ಎರಡೂ ಮುಖ್ಯವಾಗಿದೆ. ಭಾರತೀಯರ ಭಾಷಾ ಅಧ್ಯಯನ ಎಂದಾಗ ಚಿಂತನೆ ಮತ್ತು ಉಪಾಸನೆಗಳೆರಡನ್ನೂ ಪರಿಗಣಿಸಬೇಕಾಗುತ್ತದೆ.