ಆಂಗಿಕಂ ಭುವನಂ ಯಸ್ಯ ವಾಚಿಕಂ ವಾರ್ಙಯಂ
ಆಹಾರ‍್ಯಂ ಚಂದ್ರ ತಾರಾದಿ ತಂ ನಮಃ ಸಾತ್ವಿಕಂ ಶಿವಂ ||
(ನಂದಿಕೇಶ್ವರ – ಅಭಿನಯ ದರ್ಪಣ)
ಗಾಂಧರ್ವ ಚೇಹ ನಾಟ್ಯಂ ಚ ಯಃ ಸಮ್ಯಕ್ ಪರಿಪಾಲಯೇತ್
ಸ ಈಶ್ವರ ಗಣೇಶಾನಾಂ ಲಭತೆ ಸದ್ಗತಿಂ ಪರಾಮ್ ||
(ಭರತ – ನಾಟ್ಯ ಶಾಸ್ತ್ರ)

ಎರಡು ಖ್ಯಾತ ನಾಟ್ಯ ಗ್ರಂಥಗಳ ಆರಂಭ ಮತ್ತು ಮುಕ್ತಾಯ ಶ್ಲೋಕಗಳಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬ್ರಹ್ಮದ ಪ್ರಸ್ತಾಪ ಇದೆ. ಒಂದರಲ್ಲಿ ಪರಬ್ರಹ್ಮಶಿವನ ವಿರಾಟ್‌ನರ್ತನದ ದರ್ಶನವಾದರೆ ಇನ್ನೊಂದರಲ್ಲಿ ನರ್ತನಕಲೆಯನ್ನು ಪರಿಪಾಲಿಸಿದವನು ಬ್ರಹ್ಮರ್ಷಿಯಾಗುವ ವಿಶ್ವಾಸ. ಇಬ್ಬರೂ ಮುನಿಗಳ ಇಂಗಿತದಂತೆ ನಾಟ್ಯಶಾಸ್ತ್ರವೂ ವೇದೋಪನಿಷತ್ತುಗಳಂತೆ ಬ್ರಹ್ಮಜ್ಞಾನಕ್ಕೆ ಇರುವ ಮತ್ತೊಂದು ಮಾರ್ಗ. ವೇದೋಪನಿಷತ್ತುಗಳಂತೆ ನೃತ್ಯವೂ ಶಾಸ್ತ್ರೀಯವಾಗಿ ಗುರುವಿನಿಂದ ಪಡೆಯಬೇಕಾದ ಜ್ಞಾನವೆಂದಾಯಿತು. ಈ ನಿಟ್ಟಿನಲ್ಲಿ ನಾಟ್ಯ ಗುರುವಿನ ಹೊಣೆಯೇನು ? ನರ್ತಕಿಯಾಗುವವಳ ಅರ್ಹತೆಗಳೇನು ನೃತ್ಯದ ಸಾಧ್ಯತೆಗಳೇನು ಸಾಧನೆಗೆ ಅಡ್ಡಿ ಆಗುವ ತೊಡಕುಗಳೇನು ? ಎಂಬುದು ವಿಚಾರಯೋಗ್ಯವಾದುದು.

ಭಾರತೀಯ ತತ್ವಶಾಸ್ತ್ರದಂತೆ, ಜನ ಮಾನಸದಲ್ಲಿ ನೆಲೆಗೊಂಡ ಶ್ರದ್ಧೆಯಂತೆ ಕೂಡ – ಈ ಜಗತ್ತೇ ಒಂದು ಈಶ್ವರಿಯ ನೃತ್ಯ. ಈಶ್ವರನ ಈ ವಿಶ್ವತೋ ನೃತ್ಯವನ್ನು ಮಾನವ ಲೋಕಕ್ಕೆ ತಂದು, ಅದನ್ನು ಮಾನವರು ಅರ್ಥಮಾಡಿಕೊಂಡು ತಾವೂ ನರ್ತಿಸುವಂತೆ ಕಲಿಸಿಕೊಡುವುದು ಸತ್ಯ ಸಾಕ್ಷಾತ್ಕಾರವಾದ ಬ್ರಹ್ಮರ್ಷಿಯೊಬ್ಬನಿಂದ ಮಾತ್ರ ಸಾಧ್ಯ. ಸತ್ಯದರ್ಶನದಿಂದ ಒದಗಿಬಂದ ಈ ಕಲಾ ಸಂಪತ್ತು ಕೇವಲ ಮನರಂಜನೆಗಾಗಿ ಅಥವಾ ಯಶಸ್ಸಿಗಾಗಿಯೇ ಅಲ್ಲದೆ ಆತ್ಮಾನು ಸಂಧಾನಕ್ಕಾಗಿ ವಿನಿಯೋಗವಾಗುವುದು ವಿಹಿತ.

ಇಂದ್ರಿಯಾತೀತವಾದುದನ್ನು, ಭಾವಾತೀತವಾದುದನ್ನು ಅಮೂರ್ತವಾದುದನ್ನು ಅನುಭವವೇದ್ಯವಾಗಿಸುವುದೇ ಭಾರತೀಯ ನೃತ್ಯಕಲೆ. ಋಗ್ವೇದದಲ್ಲಿಯೇ ಪ್ರಸ್ತಾಪಗೊಂಡ ಈ ಪ್ರಾಚೀನಕಲೆ ಅರ್ಷೇಯ ಜ್ಞಾನದ ದರ್ಜೆ ಪಡೆದು ಶಾಸ್ತ್ರೀಯ ಕಲೆಯಾಗಿ ಇಂದಿನವರೆಗೆ ಅವ್ಯಾಹತವಾಗಿ ಹರಿದುಬಂದು ಭಾರತೀಯ ಸಂಸ್ಕೃತಿಗೆ ಜೀವನ ದಾಯಿನಿಯಾದ ಜೀವಂತ ಕಲಾನದಿ. “ಚಿತ್ರಕಲೆಯ ರೇಖಾವಿನ್ಯಾಸ ಮತ್ತು ವರ್ಣವೈಭವ; ಶಿಲ್ಪಕಲೆಯ ರೂಪ ಲಾವಣ್ಯ; ನಟನ ಜೀವನಾನುಕರಣ, ಕವಿಯ ಭಾವನಾ ವಿಲಾಸ, ಸಂಗೀತದ ರಾಗ-ಲಯಗಳೆಲ್ಲವೂ ಸಮಸಮವಾಗಿ ಬೆರೆತ ಅವಿನಾಶೀ ಪರಿಪೂರ್ಣ ಕಲೆಯೇ ಭಾರತೀಯ ನೃತ್ಯಕಲೆ ಎನ್ನುತ್ತಾರೆ ಕೌಶಿಕ ವಿ.ಎಸ್‌.

ಭಾರತದಲ್ಲಿ ತತ್ವಶಾಸ್ತ್ರ ಧಾರ್ಮಿಕ ಪೂಜಾವಿಧಿ ಮತ್ತು ಪ್ರದರ್ಶನ ಕಲೆಗಳಾದ ಸಂಗೀತ ಮತ್ತು ನೃತ್ಯ ಹಾಸುಹೊಕ್ಕಾಗಿ ಹೆಣೆದು ಕೊಂಡಿರುವುದು ಒಂದೇ ಗುರಿಗಾಗಿ -ಪ್ರತಿಯೊಬ್ಬ ವ್ಯಕ್ತಿಯಲ್ಲೂ ಹುದುಗಿರುವ ದೈವತ್ವವನ್ನು ಅವನಿಗೆ ಪರಿಚಯಿಸಿ ಅವನ ಜೀವನವನ್ನು ಆನಂದಮಯವಾಗಿಸುವು. ಪ್ರತಿಯೊಬ್ಬನ ವೈಯಕ್ತಿಕ ಉದ್ಧಾರ, ಆನಂದಕ್ಕಾಗಿಯೇ ಈ ಮೂರು ಕ್ಷೇತ್ರಗಳು! ಪ್ರದರ್ಶನಕಲೆಯ ಮಿಕ್ಕೆಲ್ಲ ಪ್ರಯೋಜನಗಳೂ ಅನುಷಂಗಿಕವಾಗಿ ಬರುವವು.

ನೃತ್ಯವು ಇತರ ವಿದ್ಯೆಗಳಂತೆ ಪುಸ್ತಕದ ಮೂಲಕವಾಗಲೀ ಶ್ರವಣ ಮಾಧ್ಯಮದಿಂದಾಗಲೀ “ಹೇಳಿ”ಕೊಡಲು ಸಾಧ್ಯವಾಗದ ಪ್ರಾಯೋಗಿಕ ವಿದ್ಯೆ ದೇಹದ ಎಲ್ಲಾ ಅಂಗಾಗಳೂ ಪಾಲ್ಗೊಳ್ಳುವ ವಿಶೇಷ ಪ್ರದರ್ಶನ ಕಲೆಯಾದ ನೃತ್ಯವನ್ನು ಪ್ರತ್ಯಕ್ಷ “ತೋರಿಸಿ” ಕೊಡುವ ಗುರು ಬೇಕೇ ಬೇಕು. ಶಿಷ್ಯೆ ನೋಡಿ ಕಲಿಯಬೇಕು. ಗುರುವು ಭಾವಗಳ ಮೂಲಕವೇ ಭಾವಾತೀತವಾದುದನ್ನು – ಆನಂದವನ್ನು ಅನುಭವಿಸುವ ರೀತಿಯನ್ನು ಶಿಷ್ಯೆಗೆ ಮನಗಾಣಿಸಬೇಕಾಗುವುದು. ಇದೇ ಕಾರಣ ನಮ್ಮ ಸಂಸ್ಕೃತಿಯಲ್ಲಿ ಗುರು-ಶಿಷ್ಯ ಸಂಬಂಧ ವಿಶಿಷ್ಟವಾದುದು – ತಾಯಿ ಮಗುವಿನ ಸಂಬಂಧದಂತೆ ಅಲೌಕಿಕವಾದುದು. ಈ ಸಮರಸದ ಬಾಂಧವ್ಯದಲ್ಲಿ ಮಾತಿಗೆ ಮೀರಿದ ಅಂತರ್ಯದ “ಕೊಡು-ಕೊಳ್ಳುವುದು” ಗುರು ಶಿಷ್ಯರಲ್ಲಿ ನಡೆದಿರುತ್ತದೆ. ಈ ಕೊಡುಕೊಳ್ಳುವುದು ಅವ್ಯಾಹತವಾಗಿ ಶಿಷ್ಯೆಯ ಸರ್ವಾಂಗೀಣ ಅಭಿವೃದ್ಧಿಗೆ ವ್ಯಕ್ತಿತ್ವದ ವಿಕಸನಕ್ಕೆ ಗುರುಕುಲವಾಸ ಅಗತ್ಯ. ಗುರುವಿಗೆ ಶಿಷ್ಯೆಯಲ್ಲಿ ಪ್ರೀತಿ-ವಿಶ್ವಾಸ ಸದಾಶಯವಿರುವಂತೆ ಶಿಷ್ಯೆಗೆ ಗುರುವಿನಲ್ಲಿ ಪ್ರೀತಿ-ಭಕ್ತಿ, ಪೂರ್ಣಶ್ರದ್ಧೆ, ವಿನಯ ವಿಧೇಯತೆ ಅತ್ಯಾವಶ್ಯಕ. ಇಂದಿನ ಭಾರತೀಯ ನೃತ್ಯಕ್ಷೇತ್ರದ ಖ್ಯಾತನಾಮರೆಲ್ಲರೂ ಹಲವು ವರ್ಷಗಳ ಕಾಲ ಗುರುಕುಲದಲ್ಲಿ ನೃತ್ಯಾಭ್ಯಾಸ ನಡೆಸಿದವರು. ಗುರು-ಶಿಷ್ಯ ಸಂಬಂಧದ ವಿಶೇಷ ಅನುಭವ ಪಡೆದವರು ಗುರುವಿನ ಜೀವನದಲ್ಲಿ ನೃತ್ಯಕಲೆಯನ್ನು ಈ ಕಲೆಯಲ್ಲೇ ಗುರುವಿನ ಜೀವನವನ್ನು ಪ್ರತ್ಯಕ್ಷ ಕಂಡು ಮೈಗೂಡಿಸಿಕೊಂಡವರು. ಕಲೆ ಮತ್ತು ಜೀವನವನ್ನು ಒಂದಾಗಿಸಿಕೊಂಡವರು.

ಹೀಗೆ ತನ್ನ ಶಿಷ್ಯರಿಗೆ ಕಲೆಯನ್ನು ಕಲಿಸುವಂತೆಯೇ ಮಾನಸಿಕ ಧಾರ್ಮಿಕ-ಆಧ್ಯಾತ್ಮಿಕ ಪ್ರಭಾವವನ್ನು ಬೀರುವ ಗುರುವಿನ ಹೊಣೆ ಗುರುತರ. ನೃತ್ಯಕಲೆಯ ಆಳವಾದ, ವ್ಯಾಪಕವಾದ ಜ್ಞಾನ, ನೃತ್ಯದ ಸಾಮಾಜಿಕ-ಧಾರ್ಮಿಕ-ಆಧ್ಯಾತ್ಮಿಕ ಪ್ರಭಾವದ ಅರಿವು, ಯೋಗ್ಯ ಕಲಾಪೇಕ್ಷಿಯನ್ನು ಗುರುತಿಸಿ ಪೋಷಿಸುವ ಸಾಮರ್ಥ್ಯ; ಕಲೆಯನ್ನು ಶಿಷ್ಯರಿಗೆ ಪೂರ್ಣ ರೂಪದಲ್ಲಿ ಪ್ರೀತಿ ಪೂರ್ವಕ ಕಲಿಸಿಕೊಡುವ ಅಪಾರ ತಾಳ್ಮೆ; ಎಲ್ಲಕ್ಕಿಂತ ಮಿಗಿಲಾಗಿ ಶಿಷ್ಯೆಯು ಧನಕ್ಕಾಗಿ ಅಥವಾ ಖ್ಯಾತಿಗಾಗಿ ಮಾತ್ರ ಹಾತೊರೆಯದೆ ಮುಂದುವರೆದು ತನ್ನ ಆತ್ಮೋನ್ನತಿಗಾಗಿ ಕಲೆಯನ್ನು ಉಪಾಸನೆ-ಆರಾಧನೆ ಮಾಡುವಂತೆ ಅವಳಲ್ಲಿನ ಕಲಾ ಪ್ರೇಮವನ್ನು ಸದಾ ಬೆಳಗಿಸಿಕೊಡುವುದು ಗುರುವಿನ ಕರ್ತವ್ಯ. ಆಗ ಮಾತ್ರ ಗುರುಪೀಠಕ್ಕೆ ಬ್ರಹ್ಮಸ್ಥಾನ, ನೃತ್ಯಕಲೆಯು ತನ್ನ ಮೂಲೋದ್ದೇಶಕ್ಕಾಗಿ ಊರ್ಜಿತವಾಗಿ ತನ್ನ ಅಂತಸ್ಸತ್ವವನ್ನು ಕಾಯ್ದುಕೊಳ್ಳಲು ಸಾಧ್ಯ.

ತನ್ನ ಮಕ್ಕಳ ಸ್ವಭಾವವನ್ನರಿತ ತಾಯಿಯಂತೆ ಗುರುವಿಗೆ ತನ್ನೆಲ್ಲಿ ಶಿಷ್ಯರ ಗುಣಾವಗುಣಗಳು ವಿಶೇಷತೆಗಳು ವಿದಿತ. ಪ್ರತಿಯೊಬ್ಬ ಶಿಷ್ಯನಿಗೂ ತನ್ನದೇ ಆದ “ಮನೋಧರ್ಮ”ವಿರುವುದು, ಅಭಿವ್ಯಕ್ತಿ ಶೈಲಿಯಿರುವುದು ಅದನ್ನು ಗುರುತಿಸಿ ಸಾಣೆಹಿಡಿದು ಹೊಳಪಿಡಬಲ್ಲ ಗುರು ಶಿಷ್ಯೆಗೆ ಎರಡನೆಯ ತಾಯಿ. ಭೌತಿಕ ಪ್ರಪಂಚಕ್ಕೆ ತಂದ ತಾಯಿ ಹಾಲೂಡಿಸಿ ಉಣಿಸಿ ಬೆಳೆಸಿದ ಮಗುವಿಗೆ ನೃತ್ಯದ ಮೂಲಕ ಕಾಯೋನ್ನತಿ, ಮನೋನ್ನತಿ ಮತ್ತು ಆತ್ಮೋನ್ನತಿಯನ್ನಿತ್ತು ಮಾನವ ದೇಹವನ್ನು ದೇವಾಯತನ ಮಾಡುವ ಗುರು ಕಲಾಪ್ರಪಂಚಕ್ಕೆ ತಂದ ಎರಡನೆಯ ತಾಯಿ. ಶಿಷ್ಯೆಯ ವಿದ್ವತ್ತಿನ ಮಟ್ಟವನ್ನು ಅಳೆದು ರಂಗಪ್ರವೇಶದ ಸಮಯವನ್ನು ನಿರ್ಧಾರ ಮಾಡಲು ಅವಳ ಗುರುವಿಗೆ ಮಾತ್ರ ಸಾಧ್ಯ ಮತ್ತು ವಿಹಿತ. ಹೀಗಲ್ಲದೆ ಹೊರಗಿನವರ ಒತ್ತಾಯಕ್ಕೆ ಮಣಿದು ಕಾಲಕ್ಕೆ ಮೊದಲೇ ರಂಗದ ಮೇಲೆ ತಂದರೆ ಬಲಿತಿರದ ಕಾಯಿಯನ್ನು ಕಿತ್ತು ಹಣ್ಣು ಮಾಡುವಂತೆ ವಿಫಲಯತ್ನವಾಗುವುದು.

ರಂಗಪ್ರವೇಶವಾದರೆ ಕಲಿಕೆಯ ಹಂತ ಮುಗಿಯೆತೆಂಬ ಮನೋಭಾವ ನರ್ತಕಿಯ ಅಭಿವೃದ್ಧಿಗಿರುವ ದೊಡ್ಡ ತೊಡಕು. ರಂಗ ಪ್ರವೇಶದಿಂದಲೇ ನಿಜವಾದ ಕಲೆ ಪ್ರದರ್ಶನದ ರಿತಿ ನೀರಿಯ ಕಲಿಕೆ ಆರಂಭವಾಗುವುದು. ನಂತರದ ಪ್ರತಿಯೊಂದು ನೃತ್ಯ ಪ್ರಯೋಗದಲ್ಲಿಯೂ ಸೂಕ್ಷ್ಮತರ ಅಂಶಗಳಲ್ಲಿ ಕಂಡ ದೋಷಗಳನ್ನು ತಿದ್ದುವುದೂ ಉತ್ತೇಜನಾ ಪೂರ್ವಕ ಪ್ರಶಂಸೆ ಕೊಡುವಷ್ಟೇ ಅಗತ್ಯವಾದುದು. ಈ ತಿದ್ದುವಿಕೆಯನ್ನು ಯಾವುದೇ ಹಿಂಜರಿಕೆಯಿಲ್ಲದೆ ಮಾಡುವ ಗುರುವು ನರ್ತಕಿಯ ಮತ್ತು ನೃತ್ಯಕಲೆಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ಕಲಾಪಾಲಕ.

ನಮ್ಮ ಸಂಸ್ಕೃತಿಗೆ ವಿಶಿಷ್ಟವಾದ ಗುರು ಪರಂಪರೆಯಲ್ಲಿ ಕಲಿತ ನೃತ್ಯ ವಿದ್ಯೆಯನ್ನು ಪಾಶ್ಚಾತ್ಯ ರೀತಿಯಲ್ಲಿ “ಪರೀಕ್ಷೆ” ಮಾಡುವುದು, ವಿದ್ಯಾರ್ಥಿಗಳನ್ನು ಹೋಲಿಸಿ ಅಂಕಪಟ್ಟಿ ಮಾಡಿ ರ‍್ಯಾಂಕ್‌ನಿರ್ಧರಿಸುವುದು ಸ್ಪರ್ಧೆಗಳನ್ನಿಟ್ಟು ಬಹುಮಾನ ಕೊಡುವುದು-ಒಟ್ಟಿನಲ್ಲಿ ವ್ಯಕ್ತಿಗತ ನೆಲೆಯಲ್ಲಿ ಕಲಿಸಿ ಬೆಳೆಸಬೇಕಾದ ಕಲೆಯನ್ನು ಸ್ಪರ್ಧಾತ್ಮಕ ನೆಲೆಗೆ ತರುವುದು, ಅಲ್ಲಿ ತೇರ್ಗಡೆಯಾದವರು ಮನೋಧರ್ಮವೆಂದರೆ ಹುಟ್ಟಿನಿಂದ ಪಡೆದಿರುವ ಸೃಜನಶಕ್ತಿಯನ್ನು ಕಲಾಪದ್ಧತಿಯ ಚೌಕಟ್ಟಿನೊಳಗೆ ಪ್ರಯೋಗಿಸಿ ಕಲೆಗೆ ಅಭಿವ್ಯಕ್ತಿ ಕೊಡುವ ಕಲಾವಂತಿಕೆ ದೈವದತ್ತ ಸೃಜನ ಸಾಮರ್ಥ್ಯ ಮತ್ತು ಗುರುದತ್ತ ಕಲಾಪದ್ಧತಿ ಎರಡಕ್ಕೂ ನರ್ತಕಿ ಚಿರಋಣಿ, ಮಾತ್ರ ಕಲಾವಿದರೆನ್ನುವ ಭಾವನೆಯನ್ನು ವಿದ್ಯಾರ್ಥಿಗಳಲ್ಲಿ ತರುವುದು ಕಲೆಗೆ ಮತ್ತು ಕಲಾವಿದನಿಗೆ ದ್ರೋಹ ಬಗೆದಂತೆ. ಶಿಷ್ಯರ ಕಲಾಸ್ಫೂರ್ತಿಯ ಸೆಲೆಯನ್ನೇ ಬತ್ತಿಸಿದಂತೆ. ನೃತ್ಯವು ಗುರುವಿನಿಂದ ನೇರ ಶಿಷ್ಯಳಿಗೆ ಬರುವ, ವೈಯಕ್ತಿಕವಾಗಿ ಕೊಟ್ಟದ್ದರಿಂದ ಸಿಗುವ ಕಲೆ, ಗುರುವು ಕೊಟ್ಟದು ಒಂದೇ ಆದರೂ ಒಬ್ಬೊಬ್ಬ ಶಿಷ್ಯೆಯೂ ಅದನ್ನು ಅರ್ಥೈಸುವುದು ಮತ್ತು ಪುನರಾವರ್ತಿಸುವುದು ತನಗೇ ವಿಶಿಷ್ಟ ವಾದರೀತಿಯಲ್ಲಿ ತನ್ನ “ಸ್ವಭಾವಕ್ಕೆ ಅನುಸಾರವಾಗಿ ತುಲನೆಗೆ ಆಧಾರವೇ ಇಲ್ಲದಂತಹ ನೃತ್ಯಕಲೆಯಲ್ಲಿ ಸ್ಪರ್ಧಾತ್ಮಕ ಮನೋಭಾವ ಬರುವುದು ಚಿಂತಾಜನಕ. ಈ ಸ್ಪರ್ಧಾತ್ಮಕ ಮನೋಭಾವದಿಂದ ಸಹ ಕಲಾವಿದರಲ್ಲಿ ಮಾತ್ಸರ್ಯ, ನೃತ್ಯ ಪ್ರಯೋಗಗಳ ಆಯೋಜನೆಯಲ್ಲಿನ ರಾಜಕೀಯ, ಪಕ್ಷಪಾತ ಭಾವ, “ಕಲಾ ಪೋಷಣೆ”ಯ ಸೋಗಿನಲ್ಲಿ ಧನದ ಶಿಫಾರಸಿನ ಮೂಲಕ ಒತ್ತಾಯ ಇತ್ಯಾದಿ ನಕಾರಾತ್ಮಕ ಬೆಳವಣಿಗೆಯೂ ನೃತ್ಯಕಲೆಗೆ ಮಾರಕ. ಇದಾಗದ ಹಾಗೆ ಎಚ್ಚರ ವಹಿಸುವುದೂ ಗುರುವಿನ ಆದ್ಯ ಕರ್ತವ್ಯ. ಇಂದಿನ ಜಾಗತಿಕ ಸನ್ನಿವೇಶದಲ್ಲಿ ಇಂತಹ ನಿರೀಕ್ಷೆ ಅತಿಯೆನಿಸಿದರೂ ಭಾರತೀಯ ನೃತ್ಯಕಲೆಯ ದೃಷ್ಟಿಯಿಂದ ಸ್ಪರ್ಧಾತ್ಮಕ ಮನೋಭಾವ ಮತ್ತು ಚಟುವಟಿಕೆಗಳು ಎಷ್ಟು ಕಡಿಮೆಯಾದರೆ ಅಷ್ಟು ಒಳಿತು. ಈ ವಿಷಯದಲ್ಲಿ ಕಲೆಯ ಗುರುಹಿರಿಯರಲ್ಲಿ ವಿಚಾರ ವಿನಿಮಯ ಸ್ವಾಗತಾರ್ಹ.

ಆತ್ಮೋನ್ನತಿಯ ಮಾರ್ಗ ತಿಳಿಸುವ ಗುರುವಿನಂದ ಶಿಷ್ಯೆಯು ಕಲಿಯುವುದೇ ನೃತ್ಯ ಯೋಗಾಭ್ಯಾಸ. ವಿದುಷಿ ಬಾಲಸರಸ್ವತಿ ವಿವರಿಸಿದಂತೆ ಕ್ರಿಯಾಶೀಲ ನೃತ್ಯದಲ್ಲಿನ ಸಾಮರಸ್ಯದಿಂದ ಬರುವ ಏಕಾಗ್ರಚಿತ್ತಸ್ಥಿತಿಯೇ ಯೋಗ ಸ್ಥಿತಿ. ಪಾದಗಳು ಲಯದಲ್ಲಿ ಕೈಗಳು ಅಭಿನಯದಲ್ಲಿ ಭಾವಪೂರ್ಣ ಕಣ್ಣುಗಳು ಕೈಗಳನ್ನನು ಸರಿಸಿ, ಕಿವಿಗಳು ನಟುವಾಂಗದಲ್ಲಿ ಮತ್ತು ಸ್ವತ: ನರ್ತಕಿಯ ಗಾಯನದಲ್ಲಿ -ಎಲ್ಲ ಕ್ರಿಯೆಗಳೂ ಸಮರಸದಲ್ಲಿ ನಡೆದಾಗ ಮನಸ್ಸು ಏಕಾಗ್ರತೆಯನ್ನು ಸ್ಪಷ್ಟತೆಯನ್ನು ಪಡೆಯುತ್ತದೆ. ನರ್ತಕಿಯ ಅಂತರ್ಹಭಾವವು ಇವೈದೂ ಕ್ರಿಯೆಗಳನ್ನು ಪ್ರಯೋಗಿಸಿಕೊಂಡು “ಸೌಂದರ್ಯ”ದ ಆಸ್ವಾದನೆ ಮಾಡುತ್ತದೆ. ಯೋಗಾಚಾರ್ಯ ಬಿ.ಕೆ.ಎಸ್‌. ಅಯ್ಯಂಗಾರ್ ಅವರು ಕಂಡರಿಸಿದಂತೆ ಯೋಗ ಮತ್ತು ನೃತ್ಯದು ವಿಶಿಷ್ಟ ಸಂಬಂಧ. ಒಂದು ಯೋಗಾಸನದಲ್ಲಿ ಹೊರಗೆ ಸ್ಥಿರತೆ ಕಂಡರೂ ದೇಹದೊಳಗೆ ಅನೇಕ ಕ್ರಿಯೆಗಳು ಸಮರಸದಲ್ಲಿ ನಡೆಯುತ್ತಿದ್ದರೆ ಮಾತ್ರ ಈ ಸ್ಥಿರತೆ ಸಾಧ್ಯ. ನೃತ್ಯದಲ್ಲಿ ಹೊರಗೆ ಅನೇಕ ಕ್ರಿಯೆಗಳು ಮೇಳೈಸಿದಾಗ ಅಂತರ್ಯದಲ್ಲಿ ಸಮಾಧಿ ಸಮಾನವಾದ ಸ್ಥಿರತೆ ಬರುವುದು. ಯೋಗಿಯೂ ಅನುಭವಿಸುವ ಮನಃ ಪ್ರಶಾಂತತೆಯನ್ನೇ ನರ್ತಕಿ ತನ್ನ ನೃತ್ಯದಲ್ಲಿ ಅನುಭವಿಸುವುದೇ ಅಲ್ಲದೆ ನೃತ್ಯಕಲೆಯ ಮೂಲಕ ಈ ಪ್ರಶಾಂತತೆಯನ್ನು ಒಂದು ಸೌಂದರ್ಯದ ಹೊನಲಾಗಿ ಪರಿವರ್ತಿಸಿ ಪ್ರೇಕ್ಷಕರ ಅನುಭವಕ್ಕೆ ತರುವಳು. ಲಯಾನುಸಾರ ನರ್ತಿಸುವಾಗ ನರ್ತಕಿಯ ದೇಹ ಮತ್ತು ಮನಸ್ಸು ಮಾನವೀಯ ದೌರ್ಬಲ್ಯಗಳನ್ನು ನೀಗಿಕೊಂಡು ದೈವೀಕ ಶಕ್ತಿಯ ಸೌಂದರ್ಯದ ನಳಿಕೆಯಾಗುತ್ತದೆ.

ಈ ರೀತಿಯ ಯೌಗಿಕ ಮನಸ್ಥಿತಿಯಲ್ಲಿ ನರ್ತಿಸಿ ಕಲಾನಂದವನ್ನು ಕೊಡುವ -ತಾನೂ ಆಸ್ವಾದಿಸುವ ಹಂತಕ್ಕೆ ತಲುಪಲು ನರ್ತಕಿಗಿರಬೇಕಾದ ಅರ್ಹತೆಗಳೇನು ? ನೃತ್ಯಕಲೆಯಲ್ಲಿ ನೃತ್ಯಗುರುವಿನಲ್ಲಿ ಪೂರ್ಣ ಶ್ರದ್ಧೆ ಮತ್ತು ಆರಾಧನಾಭಾವ; ಶಾರೀರಿಕ ಮತ್ತು ಮಾನಸಿಕ ಸ್ವಸ್ಥತೆ ಹಾಗೂ ದೃಢತೆ; ಬುದ್ಧಿ ಸೂಕ್ಷ್ಮತೆ; ಮಿಗಿಲಾಗಿ ಪ್ರತಿಭಾ ಶಕ್ತಿ ಇವು ನಾಲ್ಕೂ ಮೂಲತಃ ಇದ್ದರೆ ಮಾತ್ರ ನೃತ್ಯಕಲಿಕೆಯ ನಿರ್ಧಾರ ಸಂಗತವಾಗುವುದು. ನಂದಿಕೇಶ್ವರರು ವಿಶದೀಕರಿಸುವಂತೆ ಬಹಿಃಪ್ರಾಣಗಳಾದ ಮೃದಂಗ, ತಾಳ, ಕೊಳಲು, ಹಾಡು, ಶೃತಿ, ಗೆಜ್ಜೆ, ವೀಣೆ ಮತ್ತು ಖ್ಯಾತಗಾಯಕ – ಇವುಗಳನ್ನು ಆಶ್ರಯಿಸಿ ನರ್ತಿಸುವುದನ್ನು ಕಲಿಯುವುದು ಮತ್ತು ಅಭ್ಯಾಸ ಮಾಡುವುದು ಒಂದು ಭಾಗ. ನರ್ತಕಿಗೆ ತಾನು ಪ್ರಸ್ತುತ ಪಡಿಸುವ ನೃತ್ಯದ ನಟುವಾಂಗದ ಕಂಠಪಾಠ, ಹಾಡಿನ ಅರ್ಥ ಮತ್ತು ಭಾವದ ಪೂರ್ಣ ಪರಿಚಯ ಮತ್ತು ಹಾಡಿನ ಲಯ ಮತ್ತು ರಾಗಭಾವದ ಜ್ಞಾನ ಇವು ಅತ್ಯಾವಶ್ಯಕ, ಅಂತಃ ಪ್ರಾಣಗಳಾದ ಚಟುವಟಿಕೆ, ನಿಲುವು, ಸಮತ್ವ, ಚಪಲತೆ-ಚುರುಕುತನ, ನೋಟ, ಶ್ರಮವಿಲ್ಲದಿರುವಿಕೆ, ಬುದ್ಧಿ, ಶ್ರದ್ಧೆ, ಒಳ್ಳೆಯ ಮಾತು, ಹಾಡುಗಾರಿಕೆ ಇವುಗಳನ್ನು ಬಲಪಡಿಸಿಕೊಳ್ಳುವುದ ಮತ್ತೊಂದು ಭಾಗ. ಸಾಹಿತ್ಯಾಭ್ಯಾಸ ಮಾಡಿ ಕಥಾವಸ್ತು ವಿಷಯ ಸಂಗ್ರಹಣೆ, ನೃತ್ಯ ಪ್ರಯೋಗಗಳನ್ನು ವೀಕ್ಷಿಸಿ ಸಂಸ್ಕೃತಿಯ ಆಳವಾದ ಪರಿಚಯ ಮಾಡಿಕೊಳ್ಳುವುದು ಮೂರನೆಯ ಭಾಗ. ಇವು ಮೂರು ಭಾಗಗಳನ್ನು ನಿರಂತರ ಅಭ್ಯಾಸದಿಂದ ಮಾತ್ರ ನರ್ತಕಿಯ ನೃತ್ಯಪಟುತ್ವ ಉಳಿಸಿಕೊಳ್ಳಬಹುದು. ಪ್ರಾವೀಣ್ಯ ಗಳಿಸಬಹುದು.

ಧನಾರ್ಜನೆ, ಯಶಸ್ಸು, ದೇಹಾರೋಗ್ಯ ಮುಂದಾದುವೆಲ್ಲ ಕಲಾ ಪ್ರಪಂಚದ ಹೊಸ್ತಿಲಲ್ಲೇ ಕಲಾರಾಧನೆಯ ಮೊದಲ ಹಂತದಲ್ಲೇ ಸಿಗುವ ಐಹಿಕ ಸಿದ್ಧಿಗಳ ಕಲಾವಿದೆ ನಿಜವಾದ ಕಲಾರಾಧನೆ ಮತ್ತು ಕಲಾಸಿದ್ಧಿ ಈ ಹೊಸ್ತಿಲು ದಾಟಿದ ನಂತರವೇ! ಅವಳೆದುರಿಗೆ ವಿಸ್ತಾರವಾದ ಕಲಾಲೋಕವೇ ತೆರೆದಿರುತ್ತದೆ. ಆಧ್ಯಾತ್ಮಿಕದಲ್ಲಿ ನೆಲೆಗೊಂಡ ನೃತ್ಯ ಗುರುವಿಗೆ ಶಿಷ್ಯೆಯನ್ನು ಐಹಿಕ ಸಿದ್ಧಿಗಳಲ್ಲೇ ನಿಲ್ಲಲು ಬಿಡದೆ ಕಲೆಯ ಒಳ ಅಂಗಳಕ್ಕೆ ತಳ್ಳುವ – ನುಗ್ಗಿಸುವ ಸಾಮರ್ಥ್ಯವಿರುವುದು. ಅಂತಹಗುರುವೇ ಬ್ರಹ್ಮರ್ಷಿ ತುಲ್ಯ ಗುರು.

ಇಂತಹ ಗುರುವಿನಡಿ ಕಲಿತ ನರ್ತಕಿಯ ಸಾಧನೆಯಾದರೂ ಏನು ? ಸಾಧ್ಯತೆಗಳೇನು ನೃತ್ಯದಲ್ಲಿ ಮತ್ತು ಅಭಿನಯದಲ್ಲಿ ಸರಿಸಮವಾಗಿ ಪಳಗಿದ ನರ್ತಕಿಯು ತನ್ನ ಚಿದಾಕಾಶದಲ್ಲಿ ಈಶ್ವರನ ವಿಶ್ವನರ್ತನವನ್ನು ಪರಿಭಾವಿಸಿ ಅನುಭವಿಸಬಲ್ಲಳು. ನೃತ್ಯದಲ್ಲಿ ನುರಿತ ತನು, ಅಭಿನಯದಲ್ಲಿ ಸಾಣೆಹಿಡಿದ ಮನ-ಎರಡೂ ಈಜುರೆಕ್ಕೆಗಳನ್ನು ಪ್ರಯೋಗಿಸುತ್ತ ಆನಂದದಲ್ಲಿ ಈಜಾಡಬಲ್ಲಳು. ತನ್ನ ನೃತ್ಯ ನೌಕೆಯನ್ನೇರಿದ ಪ್ರೇಕ್ಷಕನ ಮನಸ್ಸನ್ನೂ ಆನಂದದಲ್ಲಿ ತೇಲಾಡಿಸಬಲ್ಲಳು.

ಆತ್ಮಾನಂದದ ಮೂರ್ತರೂಪವೇ ನೃತ್ತವೆನ್ನಬಹುದು. ದೇಹವಿಡೀ ಪ್ರಾಣಶಕ್ತಿಸಂಚಾರದ ಹರ್ಷವೇ ನೃತ್ಯವೆನ್ನಬಹುದು. ಆತ್ಮ ದೇಹಗಳ ಐಕ್ಯತೆಯೇ ನೃತ್ಯವೆನ್ನಬಹುದು! ತಾಯಿ ಕಂದನ ಕಂಕುಳಿಗೆ ಕೈಯಿತ್ತು ನಿಲ್ಲಿಸಿದಾಗ ಕುಣಿಯುವ ಐದಾರು ತಿಂಗಳ ಮಗು; ದೊಂಬರಾಟ ನೋಡುತ್ತ ತಮಟೆಯ ದುಡಿತಕ್ಕೆ ಹೆಜ್ಜೆಹಾಕುತ್ತಾ ಚಪ್ಪಾಳೆಯಿಕ್ಕುವ ಐದಾರು ವರ್ಷದ ಬಾಲಕ; ಬೆನ್ನಿಗಂಟಿದ ಮಣಭಾರ ಚೀಲವನ್ನು ಲೆಕ್ಕಿಸದೆ ಕುಣಿತದ ಹೆಜ್ಜೆಯಲ್ಲಿ ಶಾಲೆಯ ಹೊರ ಓಡಿಬರುವ ಮಕ್ಕಳು; ಸ್ನಾನದ ಮನೆಯಲ್ಲಿ ಮೇಮೇಲೆ ಹರಿವ ನೀರಿನಿಂದ ಪುಳಕಗೊಂಡ ದೇಹ ವಿನಾಕಾರಣ ಮಾಡುವ ಹಾಡು ಕುಣಿತ; ಒನೆದು ಬಿಟ್ಟಿದ್ದ ಕಾಳರಾಶಿಯ ಸುತ್ತ ಹಾಡುತ್ತ ಕುಣಿವ ತರುಣಿಯರು; ಅದ ನೋಡಿ ಊರುಗೋಲನ್ನು ಕುಟ್ಟಿ ಪರೋಕ್ಷವಾಗಿ ಕುಣಿವ ವೃದ್ಧ ಎಲ್ಲ ಮಾನವರ ಬದುಕಿನ ಮಜಲುಗಳನ್ನು ನೃತ್ಯವು ಹೊಕ್ಕಿ ಬಳಸಿದೆ. ಈ ಮಾನವ ಸಹಜ ಹರ್ಷ ಜನ್ಯ ಲಯಬದ್ದ ಕುಣಿತವೇ ಶಾಸ್ತ್ರದ ರೀತಿಯ ಒಪ್ಪಪಡೆದ ನೃತ್ಯ.

ಲಾಕ್ಷಣಿಕವಾಗಿ ನೃತ್ಯದಲ್ಲಿ ಹಸ್ತ ಮುದ್ರೆಗಳು ಅಂಗಭಂಗಿಗಳು ಯಾವುದೇ ಅರ್ಥವನ್ನು ಸೂಚಿಸುವದಿಲ್ಲ. ಯಾವುದೇ ಭಾವದ-ಸನ್ನಿವೇಶದ ಕಥೆಯ – ಕಲ್ಪನೆಯ ಅಭಿನಯವಿರುವುದಿಲ್ಲ. ಅಂಗ ಪ್ರತ್ಯಂಗ ಉಪಾಂಗಗಳ ಲಾವಣ್ಯವನ್ನು ಗತಿಶೀಲ ಹೊಂದಾಣಿಕೆಯ ಚಲನೆಗಳ ಮೂಲಕ ಅಲಂಕಾರಿಕ ರೀತಿಯಲ್ಲಿ ಉಲ್ಲಾಸಪೂರ್ಣವಾಗಿ ಪ್ರದರ್ಶಿಸುವುದೇ ನೃತ್ಯ.

ನೃತ್ತದ ಅಭ್ಯಾಸದಿಂದ “ಅಂಗಶುದ್ಧಿ” (ಅಂಗಗಳ ಚಲನೆಯಲ್ಲಿ ರೇಖೆ-ಸಮತೋಲನ-ಹೊಂದಾಣಿಕೆ) ಪಡೆದ ನರ್ತಕಿ ಯೋಗದಲ್ಲಿಯಂತೆ ತನ್ನ ಶರೀರದ ಪ್ರತಿಯೊಂದು ಸ್ನಾಯು, ಕೀಲು, ಅವಯವದ ಆಂತರಿಕ ತಿಳುವು ಅದರ ರಚನಾಕ್ರಮ, ಚಲನಾವಿಧಾನದ ಪೂರ್ಣ ಪರಿಚಯವಷ್ಟೇ ಅಲ್ಲದೆ ಅದರಲ್ಲಿನ ಸೌಂದರ್ಯವನ್ನು ಕಾಣುವ ಕೌಶಲ್ಯ ಪಡೆಯುವಳು. ಸೂಕ್ಷ್ಮಮತಿ ನರ್ತಕಿಗೆ ಈ ಶರೀರವು ತನ್ನ ಅಧೀನದಲ್ಲಿರುವ ಸಾಧನವೆಂಬ ಅರಿವು ಮೂಡುವುದೇ ಒಂದು ಮಹತ್ಸಾಧನೆ. ಹೊರಗಿನ ತಾಳವಾದ್ಯಗಳಲ್ಲಿನ ಲಯವಷ್ಟೇ ಅಲ್ಲದೆ ತನ್ನ ಶರೀರದ್ದೇ ಆದ ಆಂತರ್ಲಯದ ಸೂಕ್ಷ್ಮ ಜ್ಞಾನವೂ ಸಿಗುವುದು. ಹೊರಗಿನ ಸಂಗೀತದ ರಾಗಕ್ಕೆ ಲಯಕ್ಕೆ ತನ್ನದೇ ಶಾರೀರಿಕ ಲಯದಲ್ಲಿ ಸ್ಪಂದಿಸುವ ದೈಹಿಕ ಕ್ಷಮತೆ ಮತ್ತು ಮಾನಸಿಕ ಸ್ಪಷ್ಟತೆ ಸಿಗುವುದು ಮತ್ತೊಂದು ಗಣನೀಯ ಸಾಧನೆ. ಈ ಮೂಲಕ “ಕಾಲ”ದ ಅರಿವೂ ಅಂತಸ್ಥವಾಗುವುದು. ನೃತ್ಯ ಭಾಗಗಳ ನಿರ್ವಹಣೆಯಲ್ಲಿ ರಂಗದ ಬಯಲನ್ನು ಕ್ರಮಿಸುವಾಗ ಆಕಾಶದ ಅರಿವಿನ ಜೊತೆಗೆ ಆಂತರ್ಯದಾಕಾಶದ ಭಾವೂ ಆಗುವುದು. ಲೌಕಿಕ ಮಾಪನವನ್ನು ಮೀರಿ, ಕಾಲ ಮತ್ತು ಆಕಾಶದ ಆಂತರಿಕ ಅನುಭವವನ್ನು ಪಡೆದಾಗ ನರ್ತಕಿಗೆ “ಅನಂತ”ದ ಅಮೂರ್ತದ ಸುಳುಹು ಸಿಗಬಹುದೇನೋ!

ನೃತ್ಯದ ಓಜಸ್ಸಿಗೆ ಅಭಿನಯದ ಶಕ್ತಿಯೂ ಸೇರಿದರೆ ನೃತ್ಯ ಸಾಧ್ಯತೆಗಳ ತೆರೆಗಳು ಅಗಣಿತ. ನೃತ್ಯದಲ್ಲಿ ಕೇವಲ ಆನಂದ ಸೌಂದರ್ಯಕ್ಕಾಗಿ ಮಣಿದ “ಹಸ್ತ”ಗಳು, ಅಂಗ ಚಲನೆಗಳು ನಿರ್ಧಿಷ್ಟ ಅರ್ಥವನ್ನು ಪಡೆದಾಗ ನಿವೇದನಾಕಾರ್ಯಕ್ಕೆ ಸಾಟಿಯಿಲ್ಲದ ಸಾಧನಗಳಾಗುತ್ತವೆ. “ಹಸ್ತಗಳ ಬಳಕೆಯಲ್ಲಿ ಪ್ರಾವೀಣ್ಯ ಪಡೆದು ನೃತ್ಯದ ಒಳಗೊಳಗೆ ಸರಿದ ನರ್ತಕಿಗೆ ಈ ಜಗತ್ತೇ ಅಭಿನಯದ ವಸ್ತುವಾಗಿ ಅಭಿನಯಿಸುವ ನಟರಾಜನೇ ತನ್ನೊಳಗೆ ಬಂದಂತೆ! ಹಕ್ಕಿಯ ಹಾರಾಟ; ಹೂಗಳ ಒಲೆದಾಟ, ಲತೆಗಳ ಬಳುಕಾಟ, ಚಿಣ್ಣರ ಕುಣಿದಾಟ, ತೆಂಗಿನ ತುಯ್ದಾಟ, ಮುಂಗಾರಿನ ಸುರಿದಾಟ, ಅಲೆಗಳ ಏರಾಟ, ಮೋಡಗಳ ಸರಿದಾಟ, ಸೂರ್ಯ ಚಂದ್ರರ ಓಡಾಟ, ದಿನರಾತ್ರಿಗಳ ನಡೆದಾಟ-ಎಲ್ಲೆಲ್ಲೂ ಅವನ ಆಂಗಿಕಾಭಿನಯವೇ ದುಂಬಿಯ ಝೇಂಕಾರ ; ಹಕ್ಕಿಗಳಿಂಚರ; ನಾಗನ ಪೂತ್ಕಾರ; ಕುದುರೆಯ ಹೇಷಾರ; ಆನೆಯ ಘೀಂಕೃತಿ, ಗಾಳಿಯ ಸುಯ್ಯಾರ, ಸಿಡಿಲು ಗುಡುಗುಗಳ ಭೋಂಕಾರ – ಗೆಜ್ಜೆ, ವೀಣೆ, ಕೊಳಲು ಕಹಳೆ, ಮೃದಂಗ, ನಗಾರಿ, ಭೇರಿ – ಮಾನವರ ಸಕಲ ವಾಕ್‌ಶಕ್ತಿ – ಕೇಳಿಸುವ ಕೇಳಿಸದ ಶಬ್ದವೆಲ್ಲವೂ – ಅವನ ವಾಚಿಕ ಅಭಿನಯಕ್ಕೆ ಕೊನೆಯಲ್ಲಿ ?

ಸೂರ್ಯ ಚಂದ್ರ ತಾರಾದಿ ಖಚರಗಳೇ ಆಭೂಷಣವಾದವನ ಕ್ಷಣಕ್ಕೊಂದು ಆಹಾರ್ಯಾಭಿನಯ ದಿನದಿನವೂ ಕುಂದುವ ವೃದ್ಧಿಸುವ ಚಂದ್ರ, ಹುಟ್ಟುತ್ತಿರುವ ಕಿರುತಾರೆಗಳು, ಸಾಯುತ್ತಿರುವ ಹಿರಿತಾರೆಗಳು, ಅಕ್ಷದಲ್ಲಿ ಚಲಿಸುತ್ತಿರುವ ಗ್ರಹಗಳು, ಅಕ್ಷದಿಂದ ಹೊರಬೀಳುವ ಉಲ್ಕೆಗಳು – ಭುವನವೇ ಆಂಗಿಕ ಅಭಿನಯ ಸರ್ವ ವಾಙ್ಮಯವೇ ವಾಚಿಕಾಭಿನಯ, ಖಚರಗಳೇ ಆಹಾರ್ಯಾಭಿನಯ ಸಾಕಾರಗೊಳಿಸುವುದು ಕೇವಲ ಬ್ರಹ್ಮರ್ಷಿಗೆ ಮಾತ್ರ ಸಾಧ್ಯ. ಈ ವಿರಾಟ್‌ಪುರುಷನ ಸಾತ್ವಿಕಾಭಿನಯವೇನಿರಬಹುದು ? ಮಾನವನ ಸೃಷ್ಟಿಯಿರಬಹುದೇ ? ಮಾನವ ಪಶುವಿಗೆ ಧೀಶಕ್ತಿ ಮತ್ತು ವಿವೇಚನಾ ಶಕ್ತಿಯುಳ್ಳ ಮೆದುಳನ್ನು ಜೋಡಿಸಿ, ಮನಸ್ಸೆಂಬ ಆರನೆಯ ಇಂದ್ರಿಯವನ್ನು ಅಳವಡಿಸಿ ಅದರಲ್ಲಿ ಭಾವಗಳನ್ನು ತುಂಬಿದ ಮೇಲೆ “ಬದುಕು” ಕಥಾವಸ್ತು ಒದಗಿಸಿ ಈ “ಮಾನವ”ನ ಮೂಲಕ ಸಾತ್ವಿಕಾಭಿನಯದ ರಸಾಸ್ವಾದ ಮಾಡುವನೇನೋ! ನಟರಾಜನ ಚತುರ್ವಿಧ ಅಭಿನಯದ ವಿಸ್ತಾರಕ್ಕೆ ಎತ್ತರಕ್ಕೆ ಲಗ್ಗೆಯಿಡುವ ನರ್ತಕಿಯ ಸಾಧ್ಯತೆಗೆ ಮಿತಿಯೆಲ್ಲಿ? ಮನೋಧರ್ಮದ ಬೆಳವಣಿಗೆಗೆ ತಕ್ಕಂತೆ ಪಡೆದ ಜೀವನಾನುಭವಕ್ಕೆ ಅಳವಟ್ಟಂತೆ ಕಥಾವಸ್ತುವನ್ನಾಯ್ದು ಸಂಗತ ಭಾವಗಳೊಡನೆ ಅಭಿನಯಿಸುವ ನರ್ತಕಿ ರಸಾನಂದದ ಸ್ರೋತವಾಗಬಲ್ಲಳು.

ಭಾರತದ ಶಾಸ್ತ್ರೀಯ ನೃತ್ಯದ ಕಥಾವಸ್ತುವಿನ ಬಗ್ಗೆ ಹೇಳುವುದಾದರೆ, ರುಕ್ಮಿಣಿದೇವಿ ಅರುಂಡೇಲ್ ವಿವರಿಸುವಂತೆ ಪಾಶ್ಚಾತ್ಯ ನೃತ್ಯವು ನರ್ತಕಿಯ ವ್ಯಕ್ತಿತ್ವದ, ವೈಯಕ್ತಿಕ ಅನಿಸಿಕೆಗಳ ಅಭಿವ್ಯಕ್ತಿಯಾದರೆ ಭಾರತದಲ್ಲಿ ನೃತ್ಯವು ಆಧ್ಯಾತ್ಮಿಕ ಅನುಭವದ ಒಂದು ಮಾರ್ಗವಾಗಿ ಬೆಳೆದು ಬಂದ ಕಲೆ, ಇದೇ ಕಾರಣ, ವಿಭಿನ್ನ ಶೈಲಿಯ ಭಾರತೀಯ ನೃತ್ಯಗಳ ಕಥಾವಸ್ತು ಮತ್ತು ಅದರ ಸಂಗೀತ ಎರಡೂ ಸ್ಥಾಯೀ ಭಾವದಿಂದ ರಸೋತ್ಪತ್ತಿಗಾಗಿ ಸಾದಾರಣೀಕರಣಗೊಂಡ ಅಂಶಗಳು. ಭಾರತದ ಉದ್ದಗಲಕ್ಕೂ (ಭಾಷೆಯ ಅಡ್ಡಿಯನ್ನೂ ಮೀರಿ) ಎಲ್ಲ ಸ್ತರದ ಜನತೆಗೆ ಅಲ್ಪಸ್ವಲ್ಪವಾದರೂ ತಿಳಿದಿರುವ ಕಥಾವಸ್ತು ಅಂತೆಯೇ ಆಯಾ ಭಾವಗಳಿಗೆ ಸೂಚಿಸಿದ ರಾಗಗಳು. ಮಹಾಭಾರತ-ರಾಮಾಯಣ-ಭಾಗವತದ ಕಥೆಗಳು, ಮಹಾಪುರುಷರ ಜೀವನಘಟನೆಗಳು, ಮಹರ್ಷಿಗಳ ಚರಿತ್ರೆಗಳು ಪ್ರತಿಯೊಬ್ಬ ಭಾರತೀಯನಿಗೆ ಗೊತ್ತಿರುವ ವಿಷಯ. ಗೊತ್ತಿಲ್ಲದುದನ್ನು ತಿಳಿಯುವ ಮಾರ್ಗಗಳೂ ಅನೇಕ ಮತ್ತು ಸುಲಭ. ಈ ಕಥೆಗಳ ಹಿಂದಿರುವ ತತ್ವವೂ ಸರ್ವವಿದಿತ. ಪುಣ್ಯ ಪುರುಷರ, ಸಾಧ್ವಿಯರ ಕಥೆಗಳ ಮೂಲಕ ಅಲೌಕಿಕದ ಪಾರಮಾರ್ಥಿಕದ ಅನುಭವ ಪಡೆಯುವುದು ನೃತ್ಯಕಲೆಯ ಮೂಲ ಉದ್ದೇಶ.

ದುರ್ಗಾ, ಗಣೇಶ, ರಾಮ, ಸೀತೆ, ರಾವಣ, ಕೈಕೇಯಿ, ಕೃಷ್ಣ ಅರ್ಜುನ, ದುರ್ಯೋಧನ ದ್ರೌಪದಿ ಕುಂತಿ ನಳದಮಯಂತಿ ಸಾವಿತ್ರಿ ಸತ್ಯವಾನ ಹರಿಶ್ಚಂದ್ರ ಶಕುಂತಲೆ, ಚಂದ್ರಹಾಸ ವಿಶ್ವಾಮಿತ್ರ ದುರ್ವಾಸ ನಾರದ ರಾಮಕೃಷ್ಣ ವಿವೇಕಾನಂದ ಗಾಂಧಿ – ಜಾನಪದ ವ್ಯಕ್ತಿಗಳೂ ಕೂಡ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಗುಜರಾತಿನಿಂದ ಬಂಗಾಳದವರೆಗೆ ಎಲ್ಲರಿಗೂ ಪರಿಚಿತರು ಮತ್ತು ಇಂದಿಗೂ ಜೀವಂತ ವ್ಯಕ್ತಿಗಳು. ಇವರೆಲ್ಲರೂ ಕೇವಲ ಪಾತ್ರಗಳಾಗಿ ಉಳಿಯದೆ ಭಾರತೀಯ ಜನಮಾನಸದಲ್ಲಿ ನೆಲೆನಿಂತ ಆತ್ಮೀಯರು. ಇಂತಹ ಸಮೃದ್ಧ ಸಂಸ್ಕೃತಿಯ ಆಧ್ಯಾತ್ಮಿಕ ಹಿನ್ನೆಲೆಯುಳ್ಳ ನರ್ತಕಿಗೆ ಕೇವಲ ಮಾನವರೇ ಏಕೆ ಪ್ರಾಣಿಗಳು ಪಕ್ಷಿಗಳು ತರುಲತೆಗಳು ಜಲಚರ ಸರೀಸೃಪಗಳು ಕೀಟವೂ ಸಹ ಅಭಿನಯ ಯೋಗ್ಯ ಪಾತ್ರಗಳು. ನಂದಿ – ಕಾಮಧೇನು, ಪುಣ್ಯಕೋಟಿ ಜಾಂಬವಂತ ಹನುಮಂತ ಆದಿಶೇಷ ಜಟಾಯು ಗರುಡ ಹಂಸ ಪಾರಿಜಾತ ಕಲ್ಪವೃಕ್ಷ ಅಶ್ವತ್ಥ ಮಕರ ಮಂಡೂಕ ಕೂರ್ಮ ವರಹ ಕಾಳಿಂಗ ಮೀನು ಭ್ರಮರ ಪತಂಗ – ಎಲ್ಲವೂ ಕಥೆಗಳಲ್ಲಿ ಬರುವ ಪರಿಚಿತ ಪಾತ್ರಗಳು. ಸಾತ್ವಿಕಾಭಿನಯದಲ್ಲಿ ಮಾನವೀ ಸಂಬಂಧಗಳ ಜೊತೆಗೇ ಬರುವ ಭಾವ (Emotions)ಗಳಷ್ಟೇ ಅಲ್ಲದೆ ಮಾನವನ ಯೋಜನೆಗಳು, ವಿಚಾರಧಾರೆಗಳು, ಆದರ್ಶಗಳು, ತತ್ವಗಳು ಕುಡ ಕಥಾನಕದಲ್ಲಿ ಅಭಿವ್ಯಕ್ತಿವಾಗುವವು. ಸಮಾಜದ, ಅದರ ಪರ್ಯಾವರಣದ ಏಳಿಗೆಗಾಗಿ ತಾನು ಕಂಡ “ದರ್ಶನ”ದ ಪ್ರದರ್ಶನಕ್ಕೆ “ನಿದರ್ಶನ”ವಾಗಿ ಕಥಾವಸ್ತುವನ್ನು ಆರಿಸಿಕೊಳ್ಳಲು ನರ್ತಕಿಗೆ “ವಿಶ್ವ” ಭಂಡಾರವೇ ತೆರೆದಿರುವುದು. ಪ್ರಕೃತಿಯ ಚರಾಚರ ವಸ್ತುಗಳೆಲ್ಲವನ್ನೂ ತನ್ನ ಅಭಿನಯದ ಮೂಲಕ ಪುನಃ ಸೃಷ್ಟಿಸುವುದಷ್ಟೇ ಅಲ್ಲದೆ ಆವುಗಳೇ ತಾನಾಗಿ ಕಥೆ ಮುಂದುವರಿಸಬಲ್ಲಳು. ಹಾವನ್ನು ತೋರಿಸಿ ಬೆಚ್ಚಿದರೆ ತಾನು ಹಾವಾಗಿ ಹರಿಯುವಳು. ಬಳ್ಳಿಯಲ್ಲಿನ ಹೂವನ್ನು ಬಿಡಿಸಿ ಮುಡಿದುಕೊಂಡರೆ ತಾನೇ ಬಳ್ಳಿಯಾಗಿಯೂ ಒನೆದಾಡುವಳು. ಬೆಣ್ಣೆ ಕದ್ದನೆಂದು ಕೋಪಿಸಿ ಕೃಷ್ಣನನ್ನು ಥಳಿಸಿದವಳು ಅದೇ ಕೃಷ್ಣನಾಗಿ ಕಣ್ಣುಜುತ್ತ ನಿಲ್ಲುವಳು – ಹೊರಗಿದ್ದು ತೋರಿಸಿದುದನ್ನು ಒಳಹೊಕ್ಕು, ಜೀವ ತುಂಬವ ನರ್ತಕಿ ದೇಹಾತೀತಳು. ಯಶೋದೆಯ ಕೋಪ, ಕೃಷ್ಣ ಭಯ, ದುಃಖ, ಮತ್ತೊಮ್ಮೆ ತಾಯಿಯ ಮಮತೆ, ಹೆಮ್ಮೆ ಎಲ್ಲಾ ಭಾವಗಳನ್ನೂ ಏರಿಳಿವ ನರ್ತಕಿ ಭಾವಾತೀತಳೂ ಹೌದು. ಐದು ಸಾವಿರ ವರ್ಷಗಳ ಹಿಂದಿನ ಕೃಷ್ಣ ಶಕುಂತಲೆಯರನ್ನು ಇಂದು ಜೀವಂತವಾಗಿಸುವ ನರ್ತಕಿ ಮುಂದೆ ಬರಬಹುದಾದ ಕಲ್ಕಿಯನ್ನು ರಂಗದ ಮೇಲೆ ತರುವಳು. ಮುಂದಾಗುವುದನ್ನು ರಂಗದ ಮೇಲೆ “ಆಗಿಸ” ಬಲ್ಲ ಕಾಲಾತೀತಳು. ತನ್ನದೇ ಊರಿನ ಜಾನಪದ ನಾಯಕನಾಗಿ ಮೀಸೆ ತಿರುವುವಳು ಮಥುರೆಯ ಕಂಸನಾಗಿ ಕತ್ತಿ ಝಳುಪಿಸುವಳು. ಪಂಜಾಬಿನ ಗಿದ್ಧಾ ಕುಣಿವ ಹುಡುಗಿ ಮರುಗಳಿಗೆ ದಕ್ಷಿಣದ ಕೂರವಂಜಿಯಾಗುವಳು ಕೇರಳದ ಬಲಿಚಕ್ರವರ್ತಿಯ ದಾನವನ್ನು ಉತ್ತರದ ಪಟ್ಟಣದಲ್ಲಿ ಕಂಡರಿಸುವ, ಹಸ್ತಿನಾವತಿಯ ರಾಜಸಭೆಯಲ್ಲಿನ ವಸ್ತ್ರಪಹರಣವನ್ನು ತಮಿಳುನಾಡಿನ ರಂಗಮಂದಿರದಲ್ಲಿ ಅಭಿನಯಿಸುವ ನರ್ತಕಿ ದೇಶಾತೀತಳೂ ಸಹ.

ಸಂಗೀತದಲ್ಲಿರುವ ಸಾಹಿತ್ಯ ನರ್ತಕಿಯ ಸೃಷ್ಟಿಕಾರ್ಯಕ್ಕೆ ಪ್ರೇರಕ ಮಾತ್ರ. ಸೃಷ್ಟಿಕಾರ್ಯ ಮುಂದುವರೆದಂತೆ ಸಾಹಿತ್ಯ ಹಿನ್ನೆಲೆಗೆ ಸರಿಯುತ್ತದೆ. ನರ್ತಕಿ ಅಭಿನಯದ ಮೂಲಕ ನಿರ್ದೇಶಿಸಿದಂತೆ ಪಾತ್ರಗಳು ಪರಿಕರಗಳು ರಂಗದಲ್ಲಿ ತಮ್ಮ ಸ್ಥಾನವನ್ನು ಪಡೆಯುತ್ತವೆ. ಅವಳು ಮತ್ತೆ ನಿರ್ದೇಶಿಸುವವರೆಗೆ ಅವು ಅಲ್ಲಿಯೇ ಇರುವುದು ಅನಿವಾರ್ಯ. ನರ್ತಕಿ ನಿರ್ದೇಶಿಸಿದುದನ್ನು ಪ್ರೇಕ್ಷಕನು ಹಾಗೆಯೇ ಮಾನ್ಯ ಮಾಡಿ ತನ್ಮೂಲಕ ನರ್ತಕಿಯೊಡನೆ ಅವಳ ಸೃಷ್ಟಿಯ ಲೋಕದಲ್ಲಿ ನುಸುಳಿ ತಾನೂ ಮಾನಸಿಕವಾಗಿ ನರ್ತಿಸುತ್ತಾನೆ. ಹಾಗೆ ಮಾನ್ಯ ಮಾಡಿ ನುಸುಳಿದಾಗ ಮಾತ್ರ ಆನಂದ ಅವನದಾಗುವುದು.

ಉದಾಹರಣೆಗೆ “ಕೃಷ್ಣಾ ನೀ ಬೇಗನೆ ಬಾರೋ… ಮುಖವನ್ನೇ ತೋರೋ” ಎಂಬ ಪಲ್ಲವಿಗೆ ನರ್ತಕಿ ತನ್ನ ಮನೋಧರ್ಮದಂತೆ ಅರ್ಥ ಕಥೆ ಕಲ್ಪಿಸಿ ವಿಸ್ತರಿಸುವಳು. ಕೃಷಣನಿಗೆ ಮುಖ ಮಾರ್ಜನ ಮಾಡಿಸಲಿರಬಹುದು – ಬೆಣ್ಣೆ ಉಣಿಸಲಿರಬಹುದು… ಅಥವಾ ಗೋಪಿಯ ದೂರಿನಂತೆ ಅವನ ಮೋರೆ ಪರೀಕ್ಷಿಸಿ ಬೆಣ್ಣೆ ಕದ್ದು ತಿಂದನೋ ಇಲ್ಲಿ ಮಣ್ಣುತಿಂದನೋ – ಅಥವಾ ಮಗುವನ್ನು ಕಾಣದೆ ತಲ್ಲಣಗೊಂಡ ತಾಯಿಯ ಆರ್ತತೆಯಲ್ಲಿ ಮಗುವನ್ನು ಎದುರಿಗೆ ಬಾರೆಂದು ಬೇಡಿಕೊಳ್ಳುವಳೋ – ನರ್ತಕಿಯ ಆಯ್ಕೆಗೆ ಬಿಟ್ಟದ್ದು.

ನೃತ್ಯದ ಆರಂಭವಾದಾಗ ಬರಿದಾಗಿದ್ದ ರಂಗ ನರ್ತಕಿಯ ಇಚ್ಛೆಯಂತೆ ಮನೆಯ ಮುಂದಿನ ಅಂಗಳವಾಗಿ, ಅಲ್ಲಿ ಒರಳು, ಮರ, ಮಣ್ಣು, ಹಗ್ಗ, ಮನೆಯ ಬಾಗಿಲ ಹೊಸ್ತಿಲು, ಕೃಷ್ಣನ ಗೆಳೆಯರು, ದೂರಿತ್ತ ಗೋಪಿ- ಎಲ್ಲರೂ ತುಂಬಿಕೊಳ್ಳುವರು. ಅಥವಾ ಸ್ನಾನದ ಮನೆಯಾಗಿ ನೀರಿನ ಹಂಡೆ ತಂಬಿಗೆ, ಕೂರುವ ಮಣೆ, ವಸ್ತ್ರಗಳು ಉದ್ಭವವಾಗುವವು. ಪ್ರೇಕ್ಷಕನ ಮನೋರಂಗದಲ್ಲಿಯೂ ಸಹ. ಒಮ್ಮೆ ಮಾಡುವ ಕೈಸನ್ನೆಯಿಂದ ಸೃಷ್ಟಿಸಿದ ಎಲ್ಲವನ್ನೂ ಅಳಿಸಿ ಮುಂದಿನ ಸೃಷ್ಟಿಗೆ ಅಣಿಯಾಗುವ ನರ್ತಕಿಯು ಎಲ್ಲದರೊಳಗೆ ತಾನು – ತನ್ನೊಳಗೆ ಎಲ್ಲವೂ ಆದವಳು. ಈ ಘಟ್ಟಕ್ಕೆ ಬರಲು ಅನೇಕ ಹಂತಗಳನ್ನು ನರ್ತಕಿ ದಾಟಿರುವಳು. ಈ ಹಂತಗಳನ್ನು ಸೂತ್ರವಾಗಿ ಹೇಳಿರುವುದನ್ನು “ಅಭಿನಯ ದರ್ಪಣ” ದಲ್ಲಿ ಕಾಣಬಹುದು.

ಯತೋ ಹಸ್ತಃ ತತೋ ದೃಷ್ಟಿ: “ಹಸ್ತ”ವು ಸೂಚಿಸುವ ವಿಷಯಕ್ಕೆ ದೇಹದ ಇತರ ಅಂಗಗಳನ್ನು ಏಕೀಕರಿಸಿ ಶಾರೀರಿಕವಾದುದನ್ನು ಇಂದ್ರಿಯ ನೆಲೆಗೆ ತರಲು ದೃಷ್ಟಿಯೇ ಆದಿಯಾಗಿ ಇತರ ಇಂದ್ರಿಯಗಳನ್ನು ಒಟ್ಟುಗೂಡಿಸುವುದು. ಉದಾಹರಣೆಗೆ ನೆಲುವಿನ ಮೇಲಿರುವ ಬೆಣ್ಣೆ ಗಡಿಗೆಯನ್ನು ಇಳಿಸುವುದಕ್ಕೆ “ಹಸ್ತ”ದ ಜೊತೆಗೆ ಎತ್ತಿದ ಹಿಮ್ಮಡಿ ಮತ್ತು ತೋಳುಗಳು, ಎತ್ತಿದ ಮುಖ-ಇವೆಲ್ಲಾ ಅಂಗಗಳ ಕ್ರಿಯೆಯನ್ನು ಸೂಚಿಸುವ “ಇಳಿಸುವುದು” ವೀಕ್ಷಿಸಲು ದೃಷ್ಟಿಯು ಮುಂದಾಗುವುದು. “ಹಸ್ತವನ್ನು ಹಿಂಬಾಲಿಸಿ ಕ್ರಿಯೆಯನ್ನು – ಹಸ್ತವನ್ನಲ್ಲ – ನೋಡುವುದು. ದೃಷ್ಟಿಯ ಜೊತೆಗೆ ಸದ್ದನ್ನಾಲಿಸಲು ಕಿವಿ, ಬೆಣ್ಣೆಯ ರುಚಿಯನ್ನರಸಿ ನಾಲಗೆ – ಎಲ್ಲದರ ಕಲ್ಪನೆ ದೃಷ್ಟಿಯ ಜೊತೆಗೆ ಸಮ್ಮಿಳಿಸುವುದು. ದೈಹಿಕ ಅಭಿನಯ ಇಂದ್ರಿಯಗಳ ನೆಲೆ ಮುಟ್ಟುವುದು.

ಯತೋ ದೃಷ್ಟಿಃ ತತೋ ಮನಃ :- ಇಂದ್ರಿಯಗಳು “ಬೆಣ್ಣೆಗಡಿಗೆ” ಯನ್ನು ಅನುಭವಿಸಲು ಮನಸ್ಸಿನ ಏಕಾಗ್ರತೆ ಬೇಕು. ನರ್ತಕಿಯು ತನ್ನ ವೈಯಕ್ತಿಕ ಮಾನಸಿಕ ಸ್ಥಿತಿಯನ್ನು ಮರೆತು ಗೋಪಿಯಾಗಿ ಅಥವಾ ಕೃಷ್ಣನಾಗಿ, ಆಪಾತ್ರದ ಮನಸ್ಥಿತಿಯನ್ನು ಹೊಕ್ಕು ಬೆಣ್ಣೆಗಡಿಗೆಯನ್ನು ಇಳಿಸಬೇಕು. ಅಂತೆಯೇ ಪ್ರೇಕ್ಷಕನೂ ಸಹ ತನ್ನ ಅಂದಿನ – ನಿಜ ಜೀವನದ ಮಾನಸಿಕ ಸ್ಥಿತಿಯಿಂದ ಹೊರಬಂದು ನರ್ತಕಿಯ ನಿರ್ದೇಶನದಂತೆ ಬೆಣ್ಣೆಗಡಿಗೆ ಇಳಿಸಬೇಕು. ಅಂದರೆ ನರ್ತಕಿ ಪ್ರೇಕ್ಷಕ ಇಬ್ಬರೂ ಇಂದ್ರಿಯ ನೆಲೆಯನ್ನು ದಾಟಿ ಮಾನಸಿಕ ನೆಲೆಗೂ ಬರಬೇಕು.

ಯತೋ ಮನಃ ತತೋ ಭಾವಃ – ಮನವಿಟ್ಟ ಕಾರ್ಯದಲ್ಲಿ – ಬೆಣ್ಣೆಗಡಿಗೆ ಇಳಿಸುವಲ್ಲಿ ಕೀಲಿಸಿಕೊಂಡಿರುವ ಇಂದ್ರಿಯಗಳು ಮತ್ತು ಮನಸ್ಸು ಭಾವಕ್ಕೆ ಒಳಗಾಗುವವು. ಯಾರಾದರೂ ನೋಡಿಯಾರು, ಸದ್ದು ಕೇಳಿಯಾರೆಂಬಭಯ; ಬೇಗ ಇಳಿಸಬೇಕೆಂಬ ತವಕ; ಬೆಣ್ಣೆ ತಿನ್ನುವ ಆಸೆ – ಇತ್ಯಾದಿ ಭಾವಗಳು ಸನ್ನಿವೇಶಕ್ಕೆ ತಕ್ಕಂತೆ ಸರಿದು ಹೋಗುವವು. ಪೂರ್ಣ ರೂಪದಲ್ಲಿ ನರ್ತಕಿ ಮತ್ತು ಪ್ರೇಕ್ಷಕನ ಮನಸ್ಸು ಅಭಿನಯದಲ್ಲಿ ತನ್ಮಯವಾದಾಗ ಮಾತ್ರ ಭಾವ ಪ್ರಜೋದನೆ ಸಾಧ್ಯ.

ಯತೋ ಭಾವಃ ತತೋ ರಸಃ :- ಬೆಣ್ಣೆಗಡಿಗೆ ಇಳಿಸುವ ಕಾರ್ಯದಲ್ಲಿ ವಾಸ್ತವವಾಗಿ ಗಡಿಗೆಯಿರುವುದಿಲ್ಲ. ಬೆಣ್ಣೆಯಂತೂ ಮೊದಲೇ ಇಲ್ಲ. ಅಭಿನಯದಲ್ಲಿ ಮಾತ್ರ ಸೂಚಿತವಾಗಿ ಲೌಕಿಕ ಪ್ರತಿಕ್ರಿಯೆ ಸಂಪೂರ್ಣ ಇಲ್ಲವಾಗಿ ಭಾವವೂ – ಭಯ, ತವಕ, ಆಸೆ – ಅಲೋಕಿಕತೆ ಪಡೆಯುವುದು ಈ ರೀತಿಯ ಅಲೌಕಿಕ ಭಾವಗಳ ಅನುಭವವೇ ರಸಾಸ್ವಾದನೆ. ಒಂಬತ್ತು ಮೂಲ ಭಾವಗಳನ್ನು ನಾಟ್ಯರಸವಾಗಿಸಿ ಆನಂದಿಸುವುದೇ ನೃತ್ಯದ ಮೂಲ ಉದ್ದೇಶ. ಈ ಆನಂದವೇ ಬ್ರಹ್ಮ – “ಆನಂದೋ ಬ್ರಹ್ಮೇತಿ ವ್ಯಜಾನಾತ್‌.”

ಆಡಿದಳು ಬಾಲೆ
ನಟನವಾಡಿದಳು ರಂಗದಲಿ ಬಾಲೆ
ಅಭಿನಯದ ರಸಕೆ ತಾ ನಳಿಕೆಯಾಗಿ

ಕವಿ ಮನವು ಹಾಡಿತ್ತುಮುದದಿ ಅನುಭಾವ
ನಾದದಾ ಬೆನ್ನೇರಿ ಬಂದಿತ್ತು ರಸಭಾವ
ಅಂಶಗಳನನುಸರಿಸಿ ಪದವು ನಡೆದಿತ್ತು
ಗೆಜ್ಜೆಯಾ ಪಾದವು ತಾಳವನ್ನಿಟ್ಟಿತ್ತು
ಕಾಲವನು ಅಳೆದಿತ್ತು

ದನಿತಾಳವೆಂತಂತೆ ನಲಿದ ತನು ತಾನು
ಕೈಬೀಸಿಗೆರೆಯೆಳೆಯೆ ಜಗವರಳಿ ನಿಂತಿತ್ತು
ಸುತ್ತಿತಾ ಬರುತ್ತಿತ್ತುರಂಗದಾ ಬಯಲನ್ನು
ಬಯಲಲ್ಲಿ ಹಲಬಗೆಯ ವಿನ್ಯಾಸ ಬಿಡಿಸಿತ್ತು
ಬಯಲನ್ನೇ ಹಿಡಿದಿತ್ತು

ಅಭಿನಯಕ್ಕೆ ಸರಿದ ಮನ ಅನುಭಾವ ತೋರಿರಲು
ನಾಟ್ಯರಸ ಹೊನಲಾಗಿ ಹೊರಹರಿದು ಸೊಗೆಯಿಸಲು
ಅಂತರ್ಯದಾನಂದ ದಶದಿಕ್ಕಿಗೆರೆಚಿತ್ತು
“ನಾನು” “ನೀನೆಲ್ಲ” ನಾಟ್ಯದಲ್ಲಿ ಕರಗಿತ್ತು
“ಅದು”ವೆ ತಾನಾಗಿತ್ತು.

ಕೊರಳಲ್ಲಿ ಹಿಡಿದಳು ವಾಣಿಯನು ಹುಡುಗಿ
ಕಣ್ಣಲ್ಲಿ ಉರಿಸಿದಳು ಚಂದ್ರಾರ್ಕರನು ಮುಗುದೆ
ತೋಳಲ್ಲಿ ತೆಕ್ಕೈಸಿದಳಾಕಾಶನನು ತರುಣಿ
ಕಾಲಲ್ಲಿ ಮೆಟ್ಟಿದಳು ಕಾಲನನು ಲಲಿತೆ
ಕುಣಿದಾಡಿದಳು ಬಾಲೆ

ರಂಗವ ಅಂತರಂಗವ ಅಳೆದಳು ಭವಾನಿ
ಶಿವನಂತರಂಗವನೆ ಹಬ್ಬಿದಳು ಶಿವಾನಿ
ನಟನವಾಡಿದಳು ರಂಗದಲಿ ಗಿರಿಬಾಲೆ
ಅಭಿನಯದ ರಸಕೆ ತಾ ನಳಿಕೆಯಾಗಿ
ನಲಿದಾಡಿದಳು ಬಾಲೆ
– ತಾ.ರಾ.ಮೂರ್ತಿ

ಹಲಬಗೆಯ ಆಂಗಿಕಾಭಿನಯ ಮಾಡುವಾಗಿನ ದೈಹಿಕ ಸ್ಥಿರತೆ; ವಿವಿಧ ಭಾವಗಳನ್ನು ಅಭಿನಯಿಸುತ್ತ ಸಾಗುವ ಮನದ ನಿರ್ಲಿಪ್ತೆ; ಸಮದರ್ಶಿತ್ವ; ಆಂತಃಕರಣಬಹಿಃಕರಣಗಳನ್ನು ಹೊಂದಾಣಿಸಿ ಕಾರ್ಯ ಸಾಧಿಸುವ ಬುದ್ದಿಯ ನಿಶ್ಚಲತೆ; ಇವೆಲ್ಲವನ್ನು ಸಾಧಿಸಿದ ನರ್ತಕಿ ಸ್ಥಿತ ಪ್ರಜ್ಞೆಯಾಗುವುದು ಮತ್ತೊಂದು ಮಹತ್ಸಾಧನೆ. ಈ ಸ್ತರಕ್ಕೆ ತಲುಪಿದ ನರ್ತಕಿಗೆ ಇಡೀ ಪ್ರಪಂಚವೇ ಈಶ್ವರನ ಅಭಿನಯವೆನಿಸುವುದು ಸಹಜ. ನರ್ತಕಿಯಲ್ಲಿರಬಹುದಾದ ಮತೀಯತೆಯಷ್ಟೇ ಅಲ್ಲದೆ ಜನಾಂಗೀಯತೆಯ (ಬಿಳಿಯರು ಕರಿಯರು ಚೀನೀಯರು ಏಷೀಯರು ಇತ್ಯಾದಿ) ಗೋಡೆಯೂ ಬಿದ್ದುಹೋಗಿ “ವಸುದೈವ ಕುಟುಂಬಿಕಂ ನಿಜವೆನಿಸುವುದು. ಯಾವುದೇ ಸಂಸ್ಕೃತಿಯ ನೃತ್ಯವಾಗಲೀ, ಸಂಗೀತವಾಗಲೀ, ಇತರ ಕಲೆಗಳೂ ಕೂಡ ಈಶ್ವರಾಭಿನಯವೆನಿಸುವುದು. ವಿಶ್ವ ಮೈತ್ರಿಭಾವ ಉದಿಸುವುದು. ತಾನೂ ಮಾನ ಜಾತಿಯ ವಿಕಸನದ ಭಾಗವೆನಿಸುವುದು. ಮುಂದುವರೆದು ಈ ಮೈತ್ರಿಭಾವ ಕೇವಲ ಮಾನವರಿಗೆ ಮೀಸಲಿರದೆ ಪಶು-ಪಕ್ಷಿ ಗಿಡಮರಗಳನ್ನು – ಪ್ರಕೃತಿಯನ್ನೂ ಸೇರಿಸಿಕೊಳ್ಳುವುದು. ತಾಳ್ಮೆ ಸೌಹಾರ್ದತೆ ಬೆಳೆದು “ವಿಶ್ವಪ್ರೇಮ” ಮನೆಮಾಡುವುದು.

ನರ್ತಕಿಯ ವೈಯಕ್ತಿಕ ಸಿದ್ಧಿ, ಆಧ್ಯಾತ್ಮಿಕ ಸಾಧನೆಗಳೊಂದಿಗೆ ನೃತ್ಯದ ನಿಜೋದ್ದೇಶ ಮತ್ತು ಸಾಧನೆಯೆಂದರೆ ಪ್ರೇಕ್ಷಕನಿಗೊದಗುವ ಆನಂದ. ಪ್ರೇಕ್ಷಕನಾಗಿಯೇ ಪ್ರದರ್ಶನಗೊಳ್ಳುವ ಕಲೆಯೇ ನೃತ್ಯ. ಗೌಳಿಗನಾಗಿ ಗುರುವು ಸಾಕಿ ಸಲಹಿದ ಕಲೆ-ಕಲಾವಿದೆಯೇ ಕಾಮಧೇನು, ಪ್ರೇಕ್ಷಕನಿಗಾಗಿ ನರ್ತಕಿ ಹರಿಸಿದ ಅಮೃತ ಸಮಾನ ಕ್ಷೀರವೇ ನಾಟ್ಯ ರಸ, ಶ್ರಮ ವಹಿಸಿ ಸಾಧಿಸಿದ ನೃತ್ಯಕಲೆಯ ಪ್ರಯೋಜನವನ್ನು ನಿರಾಯಾಸವಾಗಿ ತತ್‌ಕ್ಷಣ ಪಡೆಯುವವನು ಪ್ರೇಕ್ಷಕ, ನೃತ್ಯವನ್ನು ನೋಡಿ ಆನಂದದ ಅನುಭವ ಪಡೆಯಲು ಕೆಲವು ಅರ್ಹತೆಗಳು ಅವನಿಗಿರಲೇಬೇಕು. ನಾಟ್ಯಶಾಸ್ತ್ರದ ಲಾಕ್ಷಣಿಕ ಅಂಶಗಳ ಪರಿಚಯ, ಸ್ಥೂಲವಾಗಿಯಾದರೂ ಸಂಗೀತದ ರಾಗ-ಭಾ-ಲಯಗಳ ಪರಿಚಯ; ಹಿಂದೂ ಶಾಸ್ತ್ರ, ಪುರಾಣ ಕಥೆಗಳ ಪರಿಚಯ; ಇವು ಮೂರು – ಸಂಗೀತ, ನಾಟ್ಯ, ಸಾಹಿತ್ಯದ ಪರಿಚಯ ಆಳವಾದಷ್ಟೂ ಪ್ರೇಕ್ಷಕನ ತನ್ಮಯತೆ ಹೆಚ್ಚುವುದು, ನೃತ್ಯ ಪ್ರಯೋಗಗಳನ್ನು ವೀಕ್ಷಿಸಿ ಕಲೆಯಲ್ಲಿ ಆಸಕ್ತಿ ಬೆಳೆದಂತೆ ಈ ಮೂರನ್ನು ಅಭ್ಯಸಿಸಿ ಅರ್ಜಿಸಿಕೊಳ್ಳುವುದು ಪ್ರೇಕ್ಷಕನಿಗೆ ಸಾಧ್ಯ ಮತ್ತು ಅಗತ್ಯ. ಕಲಾಸಕ್ತಿ ಬೆಳೆದಂತೆ ಕಲೆಯನ್ನು ಕಲಾವಿದರನ್ನು ಆರ್ಥಿಕವಾಗಿ ಪೋಷಿಸುವ ಹೃದಯ ವೈಶಾಲ್ಯ – ಉದಾರತೆ ಬರುವುದೂ ಸಹಜ. ಇವಲ್ಲದೆ ಬಹು ಮುಖ್ಯವಾದ ಅರ್ಹತೆಯೆಂದರೆ “ಸಹೃದಯ” ಭಾವ. ನರ್ತಕಿಯಲ್ಲಿ ಇರಲೇಬೇಕಾದ ಪ್ರತಿಭಾನಶಕ್ತಿಯಂತೆ, ನರ್ತಕಿಯು ಸೃಷ್ಟಿಸುವುದನ್ನು ವೀಕ್ಷಿಸಿ ಆಸೃಷ್ಟಿಯಲ್ಲಿ ಜಾರಿಕೊಳ್ಳುವ ವಿಶೇಷ ಮನೋಭಾವ – “ಸಹೃದಯ” ಭಾವ ಪ್ರೇಕ್ಷಕನಿಗಿರಬೇಕು. ಈ ಭಾವ ಮೂಲತಃ ಪ್ರತಿಮಾನವನಲ್ಲೂ ಉಂಟು. ಆದರೆ ಬದುಕಿನ ಜಂಜಡದಲ್ಲಿ ಮಸುಕಾಗಿರಬಹುದು. ಅದನ್ನು ಉಜ್ವಲ ವಾಗಿಬೆಳೆಸಿ ಕೊಂಡವನೇ ಸಹೃದಯ ಪ್ರೇಕ್ಷಕ. ಪ್ರೇಕ್ಷಕನ ಈ ಸಹೃದಯತೆ ಹೊರಗೆ ಕಾಣಬರುವಂಥ ಲಕ್ಷಣವಲ್ಲದ್ದರಿಂದ ನರ್ತಕಿಯು ಪ್ರೇಕ್ಷಕನ ಯೋಗ್ಯತೆಯಲ್ಲಿ ಸದಾ ಜಾಗರೂಕಳಾಗಿರುವುದು ಅತ್ಯಾವಶ್ಯಕ. ಪ್ರೇಕ್ಷಕನಿಗೆ ನೃತ್ಯದ ಶಾಸ್ತ್ರೀಯ ಪರಿಣತಿ ಇಲ್ಲದಿದ್ದರೂ ಈ “ಸಹೃದಯ” ಭಾವದ ಆಧಾರದ ಮೇಲೆ ನಾಟ್ಯರಸವನ್ನೂ ಲಯವನ್ನೂ ಸವಿಯಬಲ್ಲ. ಆನಂದಿಸಬಲ್ಲ. ನರ್ತಕಿಯ ದೋಷಗಳನ್ನೂ, ಕೊರತೆಗಳನ್ನು ಕಂಡು ಹಿಡಿಯಬಲ್ಲ. ಅವನ ಮಟ್ಟಿಗೆ ನರ್ತಕಿಯ ಇಹ-ಪರಗಳ ಸಂಬಂಧ ಸೇತು. ಇಹದ ಪರಿಕರಗಳು – ಕಥಾವಸ್ತು ಭಾವಗಳು – ಗೀತೆಗಳನ್ನೇ ಉಪಯೋಗಿಸಿಕೊಂಡು ಪರದ – ಅಲೌಕಿಕದ ಅನುಭವ ಆನಂದ ಕೊಡಬಲ್ಲ ಮಾಧ್ಯಮವಾಗುವಳು. ಇದೇ ಕಾರಣ ಅಲೌಕಿಕದ ಅನುಸಂಧಾನಕ್ಕೆಂದಿರುವ ನೃತ್ಯವನ್ನು ಮನರಂಜನೆಯ ಮಟ್ಟಕ್ಕೆ ಇಳಿಸುವ ಬದಲಿಗೆ ಪ್ರೇಕ್ಷಕನನ್ನೇ ಮನರಂಜನೆಯ ಮಟ್ಟದಿಂದ ರಸಾನುಭವದ ಸ್ಥಿತಿಗೆ ಎತ್ತುವುದು ನರ್ತಕಿ – ಪ್ರೇಕ್ಷಕ ಇಬ್ಬರಿಗೂ ಹೆಚ್ಚು ಶ್ರೇಯಸ್ಕರ.

ಭಾರತೀಯ ನೃತ್ಯ ಮತ್ತು ಸಂಗೀತದ ವೈಶಿಷ್ಟವೆಂದರೆ ಕಲಾವಿದೆಯ ಮನೋಧರ್ಮಾನುಸಾರ ಕಲೆಯ ಪ್ರದರ್ಶನವಾಗುತ್ತದೆ. ಹೇಗೆ ಜಗದೀಶ್ವರನಜಗತ್ತು ಒಂದು ಕ್ಷಣವಿದ್ದಂತೆ ಮತ್ತೊಂದು ಕ್ಷಣವಿಲ್ಲವೊ ಸೂಯೋದಯ – ಕಾಮನಬಿಲ್ಲು – ಮುಂಗಾರಿನ ಮಳೆ… ಇತ್ಯಾದಿಗಳ ಪ್ರದರ್ಶನ ಒಂದೊಂದು ಒಂದು ಸಲವಿದ್ದಂತೆ ಮತ್ತೊಮ್ಮೆ ಇಲ್ಲವೊ ಹಾಗೆಯೇ ಒಂದು ಪ್ರದರ್ಶನದಲ್ಲಿ ಆಡಿದ ನೃತ್ಯ ಅಥವಾ ಹಾಡಿದ ಕೃತಿ-ರಾಗ ಮತ್ತೊಂದು ಪ್ರದರ್ಶನದಲ್ಲಿ ಬೇರೆಯೇ ಆಗಿರುವುದು. ನವನವೋನ್ಮೇಷಶಾಲಿನೀ ಪ್ರತಿಭೆಯ ಅಭಿವ್ಯಕ್ತಿಯಾಗುವುದು. ಒಂದು ಪ್ರದರ್ಶನದ ಆಸ್ವಾದನೆ ಅದರೊಂದಿಗೇ ಮುಕ್ತಾಯವಾಗಿ ಹೋಗುವುದು. ಇದರಿಂದಾಗಿ ನರ್ತಕಿ ಮತ್ತು ಪ್ರೇಕ್ಷಕನ ಪೂರ್ಣರೂಪದ ತನ್ಮಯತೆಯಿಲ್ಲದೆ ಹೋದರೆ ರಸೋತ್ಪತ್ತಿ ಮತ್ತು ರಸಾಸ್ವಾದನೆಯಾಗದೆ ಆ ಪ್ರದರ್ಶನ ಅಷ್ಟು ವಿಫಲವಾದಂತೆ. ಆಕ್ಷಣದಲ್ಲಿಯೇ “ಜೀವಿಸಿ” ಆನಂದವನ್ನು ಸವಿಯುವದೇ ಭಾರತೀಯ ನೃತ್ಯದ ಉದ್ದೇಶ. ಕ್ಷಣಭಂಗುರವಾದುದರಲ್ಲಿ ಅಕ್ಷರನನ್ನು ಆನಂದವನ್ನು ಕಾಣುವ ಸಾಹಸ ಭಾರತಿಯರದು ! ನರ್ತಕಿ ಮತ್ತು ಪ್ರೇಕ್ಷಕ ಇಬ್ಬರೂ ನೃತ್ಯದ ಮೂಲಕ ತಮ್ಮ “ಅಹಂ”ಭಾವವನ್ನು ಲಯಗೊಳಿಸಿ “ದಿವ್ಯ”ದ ಕ್ಷಣಿಕದರ್ಶನವಾದರೂ ಪಡೆಯಲು ನರ್ತಕಿಯೇ ಕಾರಣ. ಇದರಿಂದಾಗಿಯೇ ಭಾರತದಲ್ಲಿ ಶಾಸ್ತ್ರೀಯ ನೃತ್ಯ ಮನರಂಜನೆಯ ವಿಧಾನವಾಗಿ ಉಳಿಯದೆ ಆಡಿದ ನೋಡಿದವರೆಲ್ಲರೂ ಪಾಲ್ಗೊಳ್ಳುವ ಆಧ್ಯಾತ್ಮಿಕ ಅನುಭವವೆಂದು ಪರಿಗಣಿತವಾಗಿರುವುದು. ಈ ದಿವ್ಯಾನುಭವ – ಆನಂದವನ್ನು ಕೊಡಲು ಕಲೆಯನ್ನು ಮುಂದಿನ ಪೀಳಿಗೆಗೆ ದಾನ ಮಾಡುವ ಗುರು; ಗುರುವು ದಾನವಾಗಿ ಕೊಟ್ಟುದನ್ನು ಜನತಾರ್ದನನೆದುರು ಪ್ರದರ್ಶಿಸಿ ಕಲೆಯನ್ನು ಬೆಳೆಸಿ ಅದರ ಉದ್ದೇಶ ಸಾಧಿಸುವ ಶಿಷ್ಯೆ ಇಬ್ಬರೂ ಮಹರ್ಷಿ ಸಮಾನರು.

ಐಹಿಕವಾದುದನ್ನು (ಧನ-ಖ್ಯಾತಿ) ಬಿಟ್ಟು ಕಲಾಸಾಧನೆಗೆ ಕಲಾರಾಧನೆಗೆ ತೊಡಗಿದ ನರ್ತಕಿಯ ಸಾಧ್ಯತೆಯೇನು ? ಹಕ್ಕಿ ಎಲ್ಲಿಯವರೆಗೆ ಹಾರಬಲ್ಲುದೆಂದರೆ ಆಕಾಶದೆತ್ತರಕ್ಕೆ ಎಂದಹಾಗೆ-ಸಾಮರ್ಥ್ಯ ಬೆಳೆದಂತೆ “ಮಾನಸಿಕ-ಬೌದ್ಧಿಕ” ರೆಕ್ಕೆಗಳು ಬಲಗೊಂಡಂತೆ, ಭವದ ಸ್ತರಗಳನ್ನೇರುತ್ತ ಎದುರಾದ ಮೋಡಗಳನ್ನು ದಾಟುತ್ತ ವ್ಯೋಮವನೆ ಸೀಳುತ್ತ ವಿಶ್ವಕ್ಕೆ ಹಾರುತ್ತ… ಬ್ರಹ್ಮರ್ಷಿಯೇ ಆಗಬಹುದು. ಸಾಧ್ಯತೆಯ ಅರಿವಾದರೆ ಸಾಧಿಸುವ ಛಲ ಬಂದೀತೆಂಬ ಸದಾಶಯದೊಂದಿಗೆ ಶುಭಮಸ್ತು ಶಿವಮಸ್ತು

 

ಸಹಾಯಕ ಗ್ರಂಥಗಳು

೧. ಭರತಮನಿ – ನಾಟ್ಯಶಾಸ್ತ್ರ

೨. ನಂದಿಕೇಶ್ವರ – ಅಭಿನಯ ದರ್ಪಣ

೩. ಡಾ|| ಎಚ್‌.ತಿಪ್ಪೇರುದ್ರಸ್ವಾಮಿ – ತೌಲಿನಿಕ ಕಾವ್ಯ ಮೀಮಾಂಸೆ

೪. ಅ.ನ. ಕೃಷ್ಣರಾವ್ (ಸಂಪಾದಕ) ಭಾರತೀಯ ಕಲಾದರ್ಶನ

೫. Manjula Lutsi – Bala on Bharatanatyam

೬. Eric Franklin-Dance imagery for technique & performance.