‘ಭಾರತೀಯ ಸ್ತ್ರೀ-ಜೀವನ’ ಎಂಬ ವಿಚಾರವು ಒಂದು ಪರಿಕಲ್ಪನೆಯೂ ಹೌದು; ನೈಜ ಸ್ಪಷ್ಟೀಕರಣವೂ ಹೌದು. ಸ್ತ್ರೀಯರ ಬದುಕು ಮುಖ್ಯವಾಗಿ ಬೇರೂರಿ ನಿಂತಿರುವುದು ನಂಬಿಕೆಗಳು ಮತ್ತು ಭಾವನಾತ್ಮಕ ಮನಸ್ಸಿನ ಪಾತಳಿಯ ಮೇಲೆ. ಹುಟ್ಟಿದಂದಿನಿಂದ ಹಿಡಿದು ಸಾಯುವವರೆಗೂ ‘ಸ್ತ್ರೀ-ಜೀವನ’ವು ತಂತಿಯ ಮೇಲೆ ಹೆಜ್ಜೆ ಹಾಕುತ್ತಿರುವಂತಹ ಸೂಕ್ಷ್ಮ ಸ್ವರೂಪದ್ದಾಗಿದೆ. ‘ಸವಲತ್ತುಗಳ ಅಭಾವ ಮತ್ತು ಸವಲತ್ತುಗಳ ಅನುವು’ ಎರಡೂ ಬಹಳ ವಿಶಿಷ್ಟವಾದವು ಮತ್ತು ವಿಚಿತ್ರವಾದವು. ಅಭಾವದಿಂದ ಜೀವನ ಅಗತಿಕ ದೂರದ್ದಾದರೆ, ಅನುವುಗಳಿಂದ ಜೀವನ ಕಗ್ಗಂಟಾಗುವ ನೆಲೆಯದ್ದೇ ಆಗಿರುತ್ತದೆ. ಭಾರತೀಯ ಸ್ತ್ರೀಯರು ತಮ್ಮ ಬಗ್ಗೆ ತಮಗೆ ಖಚಿತ ಅರಿವು ಪಡೆದುಕೊಂಡ ಮೇಲೆ ಅವರು ನಿತ್ಯನಿರಂತರವಾಗಿ ಆಲೋಚಿಸುವುದು ತಮ್ಮ ಮಾನ, ಪ್ರಾಣಗಳ ಸಂರಕ್ಷಣೆಯನ್ನೇ. ಆನಂತರವೇ ಅವರಿಗೆ ವಾಸ್ತವ ಬದುಕಿನ ವಿವಿಧ ವಿಚಾರಗಳ ಬಗೆಗೆ ವಿಶಿಷ್ಟ ಮತ್ತು ಸೂಕ್ಷ್ಮ ಕಾಳಜಿ.

ದುರ್ಗಾಬಾಯಿ ಭಾಗವತ ಅವರು ತಮ್ಮ ಒಂದು ಲೇಖನದಲ್ಲಿ ಭಾರತೀಯ ‘ಸ್ತ್ರೀ ಬದುಕಿನ’ ಮುಖ್ಯ ಸಂಗತಿಯೆಂದರೆ ಅವರು ತಮ್ಮ ದೇಹದ ಸಂರಕ್ಷಣೆಗಾಗಿಯೇ ಚಿಂತಿಸುತ್ತಿರುತ್ತಾರೆ. ಚಿಕ್ಕ ವಯಸ್ಸಿನ ಹುಡುಗಿಯಾದರೂ ಅಷ್ಟೇ, ವಯಸ್ಸಾದ ಮುದುಕಿಯಾದರೂ ಅಷ್ಟೇ! ಜೀವಂತವಾಗಿ ಇದ್ದರೂ ಅಷ್ಟೆ, ಸತ್ತು ಹೆಣವಾಗಿದ್ದರೂ ಅಷ್ಟೆ! ಸದಾ ಅಪಮಾನವಾಗುವ ಭಯದಲ್ಲಿಯೋ, ಅಪಮಾನ ಉಂಟಾದ ದುಃಸ್ಥಿತಿಗೋ ಒಳಗಾಗಿ ಪರಿತಪಿಸುವುದರ  ಹೊರತು ಅನ್ಯ ಮಾರ್ಗಗಳು ಅವಳ ಎದುರು ಇರುವುದಿಲ್ಲ. ಹಾಗಾಗಿ ಜೀವಂತವಿರುವಾಗ ತಮ್ಮ ಬಗ್ಗೆ ಎಚ್ಚರವಾಗಿರುವಂತೆ, ಸತ್ತ ಮೇಲೆಯೂ ತನ್ನ ದೇಹ ಭೂಮಿಯಲ್ಲಿ ಹುದುಗಿಯೋ, ಇಲ್ಲವೆ ಸುಟ್ಟು ಮೂರು ಹಿಡಿ ಮಣ್ಣಾಗಿಯೋ ಗಂಗೆಯ ಒಡಲು ಸೇರಿದ ಮೇಲೆಯೇ ಆಕೆಯ ಬದುಕಿನಲ್ಲಿ ಸಾರ್ಥಕತೆಯು ಸಾಧ್ಯ. ಒಂದೊಮ್ಮೆ ಉಪಟಳಗಳಿಗೆ ಸಿಲುಕಿಕೊಂಡಳೋ ಆಯಿತು ಇದ್ದರೂ, ಇಲ್ಲದಿದ್ದರೂ ಜನಗಳ ಬಾಯಿಗೆ ಜಿಗಿಯುವುದಕ್ಕೆ ರಸಗವಳ. ಹೀಗೆ ತನ್ನ ಅಜ್ಜಿ ಬಾಲ್ಯದಲ್ಲಿ ತನಗೆ ಈ ವಿಚಾರ ಹೇಳುತ್ತಿದ್ದಳು ತನಗೆ ಅಂದು ಅರ್ಥವಾಗುತ್ತಿರಲಿಲ್ಲ; ಆಕೆ ಸತ್ತು ಮೂರು ಚಿಟಿಕೆ ಮಣ್ಣಾಗಿ ಗಂಗೆಗೆ ಹಾಕುವಾಗ ನನ್ನ ಹೃದಯ ಸ್ಪಂದಿಸುತ್ತಿತ್ತು ಆ ಸಂಗತಿ ಇಂದಿಗೂ ತನ್ನ ಮನಸ್ಸಿನಲ್ಲಿ ಉಳಿದಿದ್ದು ಮತ್ತೆ ಮತ್ತೆ ಅರ್ಥಸ್ಪಂದನಕ್ಕೆ ಒಳಗು ಮಾಡುತ್ತಿರುತ್ತದೆ ಎಂದು ಹೇಳಿದ್ದಾರೆ.

‘ಭಾರತೀಯ ಸ್ತ್ರೀಯರ’ ಜೀವನದ ಬಗೆಗೆ ವಿಭಿನ್ನ ದೃಷ್ಟಿಕೋನಗಳಿಂದ ಗಂಭೀರವಾಗಿ ಸಂಶೋಧನ ಅಧ್ಯಯನ ಮಾಡಿರುವ ಡಾ. ಲೀಲಾ ಪಾಟೀಲರು ಪ್ರಸ್ತುತ ಕೃತಿಯನ್ನು ಬರೆದಿದ್ದಾರೆ. ಅದರಲ್ಲಿನ ಅತ್ಯಂತ ಪ್ರಸ್ತುತವೆನಿಸುವ ನಾಲ್ಕು ಪ್ರಕರಣಗಳನ್ನು ಇಲ್ಲಿ ಅನುವಾದ ಮಾಡಲಾಗಿದೆ. ದತ್ತಾಂಶಗಳನ್ನು ನಿಖರವಾಗಿ ನೀಡುವ ಮೂಲಕ ಸ್ತ್ರೀ-ಬದುಕಿನ ಸಾರಾಸಾರ ವಿಚಾರಗಳನ್ನು ವಿಶ್ಲೇಷಿಸಿದ್ದಾರೆ. ಇಲ್ಲಿನ ಬರೆಹಗಳನ್ನು ಅಧ್ಯಯನ ಮಾಡಿದಾಗ ಒಟ್ಟು ಭಾರತೀಯ ಬದುಕಿನ ವಾಸ್ತವತೆಯ ಬಗೆಗೆ ಗಂಭೀರ ಅರಿವನ್ನು ಉಂಟುಮಾಡುತ್ತದೆ. ಸಾಮಾಜಿಕ ಸ್ವರೂಪದ ವಿವಿಧ ಗತಿಗಮ್ಯಗಳು ಮನಸ್ಸನ್ನು ತಾಕುತ್ತವೆ. ಜೀವನದ ಪ್ರತಿಯೊಂದು ವಿಚಾರಗಳು ಹೇಗೆ ಸ್ತ್ರೀ-ಬದುಕಿನ ಸುತ್ತಲೇ ಸುತ್ತುತ್ತಾ ಸುಖದ ಭ್ರಮೆಯನ್ನು ತರುತ್ತಲೇ ದಿಗ್ಬಂಧನಕ್ಕೆ ಈಡು ಮಾಡುತ್ತಿರುತ್ತವೆ ಎಂಬುದನ್ನು ಇಲ್ಲಿ ನಿರ್ದಿಷ್ಟವಾಗಿ ನಿರೂಪಿಸಲಾಗಿದೆ. ‘ಸ್ತ್ರೀ-ಮುಕ್ತಿ’ ಚಳವಳಿಯಲ್ಲಿ ಕ್ರಿಯಾಶೀಲರಾಗಿರುವ ಇವರು ಸ್ತ್ರೀ-ಬದುಕಿನ ಎಲ್ಲಾ ಆಗು-ಹೋಗುಗಳನ್ನು ತಮ್ಮ ಕಾರ್ಯಾಚರಣೆಯ ಅನುಭವದಿಂದ ಹೆಚ್ಚು ಸೂಕ್ಷ್ಮವಾಗಿ ಅನಾವರಣಗೊಳಿಸಿದ್ದಾರೆ. ಗ್ರಾಮೀಣ ಮತ್ತು ನಗರದ ಸ್ತ್ರೀಯರ ನಿತ್ಯ ಜೀವನ ಸ್ವರೂಪ, ವಿದ್ಯಾಭ್ಯಾಸ, ವಿವಾಹ, ವರದಕ್ಷಿಣೆ, ಪರಿತ್ಯಕ್ತತೆ, ಬಲಾತ್ಕಾರ, ವ್ಯಭಿಚಾರ, ದೈಹಿಕ ಹಿಂಸೆ, ವ್ಯವಸ್ಥೆಯು ಸ್ತ್ರೀಯರ ಬಗೆಗೆ ಹೊಂದಿರುವ ಮನೋಭಾವ ಮುಂತಾಗಿ ಏನೆಲ್ಲವೂ ಈ ಕೃತಿಯಲ್ಲಿ ಭಿನ್ನ ಭಿನ್ನ ನೋಟಗಳಿಂದ ಚರ್ಚಿತವಾಗಿವೆ.  ಈ ಎಲ್ಲಾ ವಿಚಾರಗಳ ಹಿನ್ನೆಲೆಯಲ್ಲಿ ಪ್ರಸ್ತುತ ಕೃತಿ ಮುಖ್ಯವಾದುದಾಗಿದೆ.

ಈ ಕೃತಿಯನ್ನು ಅನುವಾದ ಮಾಡಲು ಸಂತೋಷದಿಂದ ಅನುಮತಿ ನೀಡಿದ ಡಾ. ಲೀಲಾ ಪಾಟೀಲ ಅವರಿಗೆ ವಂದನೆಗಳು. ಕೃತಿಯನ್ನು ಪ್ರಕಟಿಸಲು ಸ್ಫೂರ್ತಿ ತೋರಿ, ನನ್ನಿಂದ ಆಗು ಮಾಡಿಸಿದ ಮಾನ್ಯ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಅವರಿಗೆ ತುಂಬು ಹೃದಯದ  ಕೃತಜ್ಞತೆಗಳು. ಹಾಗೆಯೇ ಕುಲಸಚಿವರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ, ಈ ಕೃತಿಯ ಬಗೆಗೆ ವಿಶೇಷ ಆಸಕ್ತಿ ವಹಿಸಿದ ಪ್ರಸಾರಾಂಗದ ನಿರ್ದೇಶಕರಾದ ಡಾ. ಎ.ಮೋಹನ ಕುಂಟಾರ್ ಅವರಿಗೆ, ಸಹಾಯಕ ನಿರ್ದೇಶಕರಾದ ಶ್ರೀ ಬಿ. ಸುಜ್ಞಾನಮೂರ್ತಿ ಮತ್ತು ಶ್ರೀ ಹೆಚ್.ಬಿ.ರವೀಂದ್ರ ಅವರುಗಳಿಗೆಲ್ಲ ನಾನು ಋಣಿಯಾಗಿದ್ದೇನೆ. ಮುಖಪುಟ ವಿನ್ಯಾಸ ಮಾಡಿದ ಶ್ರೀ ಕೆ.ಕೆ.ಮಕಾಳಿ ಅವರಿಗೆ ಹಾಗೂ ಅಕ್ಷರ ಸಂಯೋಜಿಸಿದ ಯಾಜಿ ಗ್ರಾಫಿಕ್ಸ್‌ನ ಶ್ರೀಮತಿ ಸವಿತಾ ಯಾಜಿ ಅವರಿಗೂ ನನ್ನ ವಂದನೆಗಳು.

ಡಾ.ವಿಠಲರಾವ್ ಟಿ. ಗಾಯಕ್ವಾಡ್