ಕಾಗದದ ಮೇಲೆಯೇ ಉಳಿದ ಕಾಯಿದೆಗಳು

ಗ್ರಾಮೀಣ ಸ್ತ್ರೀಯರಿಗೆ ಹಿಂದೂ ಉತ್ತರಾಧಿಕಾರಿ ಹಕ್ಕಿನ ಕಾಯಿದೆ, ದತ್ತಕ, ವಿಚ್ಛೇದನ, ಜೀವನ ಪರಿಹಾರ, ದ್ವಿಭಾರ್ಯಾ ಪ್ರತಿಬಂಧಕ ಕಾಯಿದೆ, ವರದಕ್ಷಿಣೆ ನಿಷೇಧ ಕಾಯಿದೆ, ಬಾಲ್ಯವಿವಾಹ, ಪ್ರತಿಬಂಧಕ ಕಾಯಿದೆ ಮುಂತಾದ ವಿಷಯಗಳಲ್ಲಿ ತಿಳಿವಳಿಕೆಯ ಕೊರತೆ ಇರುವುದು ಸ್ಪಷ್ಟವಾಗಿ ತಿಳಿದು ಬರುತ್ತದೆ.

ಸ್ತ್ರೀಯರ ಹಕ್ಕುಗಳು ಮತ್ತು ಸುರಕ್ಷಿತತೆ, ಸಂರಕ್ಷಣೆಯ ವಿಷಯ ಮತ್ತು ತಂದೆಯ ಆಸ್ತಿಯನ್ನು ಹಂಚುವ ವಿಷಯದಲ್ಲಿ ಇರುವ ಕಾಯಿದೆಗಳು ಕೇವಲ ಕಾಗದದ ಮೇಲಷ್ಟೆ ಉಳಿದಿವೆ. ನಾನು ಕೊಲ್ಹಾಪುರ ಜಿಲ್ಲೆಯ ಕಾಯಿದೆ ಮತ್ತು ಸಲಹಾ ಸಮಿತಿಯ (ಲೀಗಲ್ ಹೆಡ್) ಸದಸ್ಯೆಯಾಗಿದ್ದೆನು ಮತ್ತು ಕನ್ಸಿಲೇಟರ್‌ಳಾಗಿ ಕಳೆದ ಏಳು ವರ್ಷಗಳಿಂದ ಕೆಲಸ ಮಾಡಿದ್ದೇನೆ. ಸರ್ವೆಸಾಧಾರಣವಾಗಿ ಶೇಕಡ ೧೦ರಿಂದ ೧೫ರಷ್ಟು ಸ್ತ್ರೀಯರಲ್ಲಿ ವಿಚ್ಛೇದನ ಮತ್ತು ಜೀವನ ಪರಿಹಾರಗಳ ಕಾಯಿದೆಯ ವಿಷಯವಾಗಿ ಬಹಳ ಸಾಮಾನ್ಯವಾದ ತಿಳಿವಳಿಕೆಯು ಇದೆ. ರೂಢಿ, ಪರಂಪರೆಯ ಜಬರದಸ್ತ್ ಗುರುತು, ಶಿಕ್ಷಣದ ಕೊರತೆ, ಕಾಯಿದೆಗಳ ಬಗ್ಗೆ ತಿಳಿದುಕೊಳ್ಳುವ ಜಾಗರೂಕತೆ ಮತ್ತು ಉತ್ಸುಕತೆಯ ಅಭಾವ, ಆತ್ಮವಿಶ್ವಾಸದ ಕೊರತೆ, ಭಯ, ಆರ್ಥಿಕ ಬಲ ಮತ್ತು ಮಾನಸಿಕ ಕೊರತೆಯಿಂದಾಗಿ ಕಾಯಿದೆಗಳೆಲ್ಲವು ಕಾಗದದ ಮೇಲಷ್ಟೆ ಉಳಿದುಕೊಳ್ಳುವಂತಾಗಿವೆ. ವಿಶೇಷವಾಗಿ ಪರಿತ್ಯಕ್ತರು (ತ್ಯಜಿಸಲ್ಪಟ್ಟ), ವಿಧವೆಯರು, ಅಂಗಹೀನತೆಯುಳ್ಳವರು ಮತ್ತು ಯಾರೋ ಒಬ್ಬನು ಇಟ್ಟುಕೊಂಡವಳು ಅಥವಾ ಪುನರ್ ವಿವಾಹ ಮಾಡಿಕೊಂಡಂಥ ಗ್ರಾಮೀಣ ಸ್ತ್ರೀಯರ ಸ್ಥಿತಿಯು ಅತ್ಯಂತ ಶೋಚನೀಯವಾಗಿದೆ.

ಮಹಾರಾಷ್ಟ್ರದಲ್ಲಿ ಇಂದು ಮಹಿಳಾ ದಕ್ಷತಾ ಸಮಿತಿ ಮತ್ತು ಕಾಯಿದೆಯ ವಿಷಯದಲ್ಲಿ ಸಲಹೆ ನೀಡುವಂತಹ ಸಮಿತಿಗಳು ಸ್ಥಾಪಿತವಾಗಿವೆ. ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಅವು ಕಾರ್ಯ ನಿರ್ವಹಿಸುತ್ತಲಿವೆ. ಸ್ತ್ರೀಯರ ಮೇಲೆ ಆಗುವ ಅನ್ಯಾಯ ಮತ್ತು ದೌರ್ಜನ್ಯಗಳ ವಿರುದ್ಧ ಭಾಷಣ ಮಾಡುವ ಕೆಲಸ ಹಾಗೂ ವಿಚ್ಛೇದನ, ಜೀವನ ಪರಿಹಾರದ ಒಪ್ಪಂದ, ಅನ್ಯೋನ್ಯತೆಯನ್ನು ಸಾಧಿಸುವುದಕ್ಕಾಗಿ ಕಾಯಿದೆಯ ಅನು ಸಾರವಾಗಿಯೇ ಸಲಹೆಗಳನ್ನು ನೀಡಲಾಗುತ್ತಿದೆ. ಆದರೆ ಇಲ್ಲಿಯೂ ವಕೀಲರ ಸೇವೆಯು ಉಚಿತವಾಗಿ ದೊರಕುವಂಥ ಆವಶ್ಯಕತೆಯು ಇದೆ. ಕಾರಣ ಇದರಿಂದ ಲಾಭ ಪಡೆಯುವ ಸ್ತ್ರೀಯರ ಸಂಖ್ಯೆ ಬಹಳ ಕಡಿಮೆ ಪ್ರಮಾಣದಲ್ಲಿದೆ. ಪರಿಹಾರ ದೊರಕಿಸಿಕೊಳ್ಳುವುದಕ್ಕೆ ಏನಿಲ್ಲವೆಂದರೂ ೩ ರಿಂದ ೪ ವರ್ಷಗಳೇ ಬೇಕಾಗುತ್ತದೆ. ಆಲಸ್ಯ, ತರ್ಕ ಮತ್ತು ಅಧಿಕ ಖರ್ಚು ಉಂಟಾಗುವುದರಿಂದಾಗಿ ಈ ದಿಶೆಯಲ್ಲಿ ಬಹಳಷ್ಟು ಸ್ತ್ರೀಯರು ತೊಂದರೆಗೆ ಸಿಕ್ಕು ನರಳುವಂತಾಗಿದೆ. ಅಲ್ಲದೆ ಇಂಥ ಕೆಲಸಗಳನ್ನು ಮಾಡುವ ಸಮಿತಿಗಳೂ ಕೂಡ ಇರುವುದು ತಾಲೂಕು ಮಟ್ಟಗಳಲ್ಲಿಯೇ. ಹಾಗಾಗಿ ಈ ಬಗ್ಗೆ ಶೇಕಡ ೯೦ ರಷ್ಟು ಗ್ರಾಮೀಣ ಮಹಿಳೆಯರಿಗೆ ಏನೂ ತಿಳಿದೇ ಇಲ್ಲ. ಆ ಕಾರಣವಾಗಿ ಆತ್ಮಬಲ, ನಿರ್ಧಾರ ಮತ್ತು ಆತ್ಮವಿಶ್ವಾಸ ಹಾಗೆಯೇ ಆರ್ಥಿಕ ಕೊರತೆ, ಮಾನಸಿಕವಾಗಿ ಯಾವ ಆಧಾರವೂ ಇಲ್ಲದ ಬಹುಸಂಖ್ಯಾತ ಸ್ತ್ರೀಯರು ತಮಗೆ ಒದಗಿ ಬಂದ ಸ್ಥಿತಿಯಲ್ಲಿಯೇ ನಿರಾಧಾರ ಆಶ್ರಿತರಂತೆ ಬದುಕುತ್ತಿರುವುದು ಕಂಡುಬರುತ್ತದೆ.

ಆಶ್ಚರ್ಯಕಾರಕ ಉದಾಹರಣೆಗಳು

ಗ್ರಾಮೀಣ ಸ್ತ್ರೀಯರ ಕಾರ್ಯಕ್ಷೇತ್ರ ಇಂದಿಗೂ ವಿಸ್ತಿರಿಸಿಲ್ಲ. ಅಂಟಾರ್ಟಿಕಾದಲ್ಲಿ ಮಹತ್ವದ ಕಾರ್ಯದಲ್ಲಿ ತೊಡಗಿಕೊಂಡಿರುವ ಡಾ. ಅದಿತಿ ಪಂತ ಮತ್ತು ಡಾ. ಸುದೀಪ್ತ ಘೋಷ್ ಎಂಬಿಬ್ಬರು ಸಮಾಜಶಾಸ್ತ್ರಜ್ಞರು ಮಹಿಳೆಯರು. ಹಾಗೆಯೇ ಚಂದ್ರಪ್ರಭಾ ಐತಜಾಲ, ರೀಟಾ ಗೋಬು, ಬಚೇಂದ್ರಿಪಾಲ ಎಂಬ ಮಹಿಳೆಯರು ಎವೆರೆಸ್ಟ್ ಶಿಖರವನ್ನು ಏರುವುದಕ್ಕೆಂದು ಹೋಗಿದ್ದರು. ಚಿಪ್ರೋಆಂದೋಲನದಲ್ಲಿನ ಸ್ತ್ರೀಯರು, ಮುಸ್ಲಿಂ ಸ್ತ್ರೀಯರು ಚಲನಚಿತ್ರ ನಿಷೇಧದ ವಿರುದ್ಧ ರಸ್ತೆಗಿಳಿದು ಹೋರಾಟ ಮಾಡಿದ್ದರು. ನಜಮಾ ಬಾಂಗೀ, ರಜಿಯಾ ಪಟೇಲ್, ಅಲ್ಲದೆ ಬುರುಖಾಧಾರಿ ಸಹಕಾರಿ ಮತ್ತು ನಾಗರಿಕ ಸ್ವಾತಂತ್ರಕ್ಕಾಗಿ ಅಂತೆಯೇ ವಿವಿಧ ವಿಚಾರಗಳಿಗಾಗಿ ಜಿದ್ದಿನಿಂದ ವಾದಿಸುವ ಸ್ತ್ರೀ ವಕೀಲರು, ಸುಪ್ರೀಂ ಕೋರ್ಟಿನಲ್ಲಿ ಅದಕ್ಕಾಗಿ ಧ್ವನಿ ಎತ್ತುವ ಸ್ತ್ರೀಯರು ಭಾರತೀಯ ಸ್ತ್ರೀ-ಸಮಾಜದಲ್ಲಿ ಪ್ರತಿನಿಧಿತ್ವ ವಹಿಸುವವರಾಗಿದ್ದಾರೆ ಎಂದು ಹೇಳುವುದು ಉಂಟು. ಆದರೆ ಇವರಲ್ಲಿ ಯಾರೂ ಗಾಮೀಣ ಮಹಿಳೆಯರಲ್ಲ. ಇಂದಿಗೂ ಗ್ರಾಮೀಣ ಸ್ತ್ರೀಯರ ಬದುಕು ವಸ್ತುಗಳಂತೆ ಈ ಮೌಲ್ಯಗಳಲ್ಲಿಯೇ ಬಂಧಿಸಲ್ಪಟ್ಟಿದೆ: ಅವಹೇಳನ, ಮಾನಹಾನಿ, ಅತೀವ ಕಷ್ಟ ಇವುಗಳಿಂದ ಅವರ ಬದುಕು ಓತಪ್ರೋತವಾಗಿದೆ. ಇದರ ಬಗ್ಗೆ ಆಶ್ಚರ್ಯ ಮೂಡಿಸುವಷ್ಟು ಮಟ್ಟದಲ್ಲಿ ನೂರಾರು ಉದಾಹರಣೆಗಳು ಸಿಗುತ್ತವೆ.

ಸೌಂದತ್ತಿಯ ಎಲ್ಲಮ್ಮನ ಹೆಸರಿನಲ್ಲಿ ದೇವರಿಗೆಂದು ಬಿಡುವ ದೇವದಾಸಿ ಹೆಣ್ಣುಮಕ್ಕಳ ಸಂಖ್ಯೆ ಅನೇಕ ಸಾವಿರಗಳಷ್ಟಿದೆ. ವರದಕ್ಷಿಣೆಯ ಪ್ರಾಬಲ್ಯದಲ್ಲಿ ಅಸಂಖ್ಯ ತರುಣಿಯರ ದಕ್ಷತೆ ಮತ್ತು ಕಾರ್ಯಕ್ಷಮತೆಯು ಮಣ್ಣು ಪಾಲಾಗುತ್ತಿದೆ. ವರದಕ್ಷಿಣೆ ಸಾವು, ಮಾವನ ಮನೆಯ ವಾಸ, ಬಲಾತ್ಕಾರ, ಅತ್ಯಾಚಾರ, ಆತ್ಮಹತ್ಯೆಗೆ ಒಳಗಾಗುವಂತಹ ಪರಿಸ್ಥಿತಿಜನ್ಯ ಸಂಕಷ್ಟಗಳಲ್ಲಿ ಸಿಲುಕಿಕೊಂಡಿರುವ ಸಾವಿರಾರು ಸ್ತ್ರೀಯರು ಸಿಕ್ಕುತ್ತಾರೆ. ೧೯೫೨ರಲ್ಲಿ ಪಾರ್ಲಿಮೆಂಟಿನಲ್ಲಿದ್ದ ಸ್ತ್ರೀಯರ ಪ್ರಾತಿನಿಧ್ಯ ಸಂಖ್ಯೆ ೫೦. ಅದು ೧೯೮೪ರ ಚುನಾವಣೆಯಲ್ಲಿ ಅದು ೪೩ಕ್ಕೆ ಇಳಿದಿತ್ತು. ಇನ್ನು ಗ್ರಾಮೀಣ ಭಾಗದಲ್ಲಿ ಸ್ತ್ರೀಯರ ರಾಜಕೀಯ ಜಾಗರೂಕತೆ ಮತ್ತು ಪಕ್ಷೀಯ ನಿಷ್ಠೆ ಹೆಚ್ಚು ಕಮ್ಮಿ ಏನೂ ಇಲ್ಲವೆಂಬಂಥ ಸ್ಥಿತಿಯಲ್ಲೇ ಇದೆ ಎಂಬುದು ಗಮನಾರ್ಹ. ಸಭೆಗಳಲ್ಲಿ ಸ್ತ್ರೀಯರ ಉಪಸ್ಥಿತಿಯು ಇರುತ್ತದೆ. ಹಾಗೆಯೇ ಮತದಾನದಲ್ಲಿ ಸಹಭಾಗಿತ್ವವೂ ಇರುತ್ತದೆ, ಆದರೆ ಅದು ಕೇವಲ ಕುರುಡು ತನದಿಂದ ಮಾಡುತ್ತಿರುವ ಕೈಂಕರ್ಯ. ಮಾತನಾಡುವ ಧಣಿಯೇ ಬೇರೆ, ಸ್ವತಂತ್ರ ವಿಚಾರಗಳಿಗೆ ಅವಕಾಶವೂ ಇಲ್ಲ, ಅಭಿಪ್ರಾಯಗಳೂ ಇಲ್ಲ. ಗ್ರಾಮೀಣ ಪ್ರದೇಶಗಳಲ್ಲಿನ ಗ್ರಾಮ ಪಂಚಾಯತಿಗಳಲ್ಲಿ ಮೀಸಲಾತಿಯ ಕಾರಣವಾಗಿ ನಾಮಕಾವಸ್ತೆ ಸ್ತ್ರೀ ಸದಸ್ಯೆಯರು ಆಯ್ಕೆಯಾಗಿ ಬರುತ್ತಾರೆ. ಆದರೆ ಅದರಲ್ಲಿ ಅವರ ನಿಜವಾದ ಸಹಭಾಗಿತ್ವವು ಇರುವುದೇ ಇಲ್ಲ. ಬಹಳ ಕಷ್ಟದಿಂದ ಕೂಡಿಸಿಟ್ಟ ಒಂದಷ್ಟು ಹಣವನ್ನು ಗಂಡನ ವ್ಯಸನಾಧೀನತೆಯಿಂದಾಗಿ ಕಳೆದುಕೊಳ್ಳಬೇಕಾಗುತ್ತದೆ. ಜೊತೆಗೆ ಅವನ ಹೊಡೆತ, ಬಡಿತದ ದೌರ್ಜನ್ಯಕ್ಕೆ ಬಲಿಯಾಗುವ ಪ್ರಸಂಗಗಳು ಸಾವಿರಾರು ಸ್ತ್ರೀಯರೆದುರು ನಿತ್ಯ ಉಲ್ಬಣಿಸಿ ಬರುತ್ತಲೇ ಇವೆ.

ಸ್ತ್ರೀಸಂಘಟನೆಗಳು ಮತ್ತು ಉಪೇಕ್ಷಿತ ಗ್ರಾಮೀಣ ಸ್ತ್ರೀ

ಪ್ರತಿಗಾಮಿ ಸ್ತ್ರೀ-ಸಂಘಟನೆಗಳು, ಸ್ಥಿತಿವಾದಿ ಸ್ತ್ರೀ-ಸಂಘಟನೆಗಳು, ಪುರೋಗಾಮಿ ಸ್ತ್ರೀ-ಸಂಘಟನೆಗಳು, ಪ್ರಾಗತಿಕ ಸ್ತ್ರೀ-ಸಂಘಟನೆಗಳು, ಉದ್ಯೋಗದಲ್ಲಿರುವ ಸ್ತ್ರೀ ಸಂಘಟನೆಗಳು, ಸ್ತ್ರೀವಾದಿ ಘಟಕಗಳು, ಸ್ತ್ರೀಮುಕ್ತಿ ಆಂದೋಲನಗಳು ಇವೇ ಮೊದಲಾದ ಸ್ತ್ರೀ-ಸಂಘಟನೆಗಳು ಇಂದು ಕಾರ್ಯನಿರ್ವಹಿಸುತ್ತಲಿವೆ. ಆದರೆ ಗ್ರಾಮೀಣ ಭಾಗಗಳಲ್ಲಿ ಮತ್ತು ವಿಶೇಷವಾಗಿ ಅಲ್ಲಿನ ಸ್ತ್ರೀಯರಿಗೆ ಅವುಗಳ ಕಾರ್ಯಕ್ರಮಗಳಾವುವೂ ತಲುಪಿಲ್ಲ. ಇದು ದುರಾದಷ್ಟಕರ ಸಂಗತಿ. ಗ್ರಾಮೀಣ ಸ್ತ್ರೀಯರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಮಾನಸಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿನ ಪ್ರಗತಿಯು ತೀರಾ ಮಂದಗತಿಯಲ್ಲಿ ನಡೆಯುತ್ತಿದೆ. ಸ್ತ್ರೀ-ಸಂಘಟನೆಗಳಾವೂವೂ ಈ ಬಗ್ಗೆ ಗಂಭೀರವಾಗಿ ವಿಚಾರ ಮಾಡಿದಂತೆ ಕಾಣುವುದಿಲ್ಲ.

ಗ್ರಾಮೀಣ ಸ್ತ್ರೀಯರಿಗೆ ಮೂಲತಃ ಸಂಘಟನೆಯೇ ಸಾಧ್ಯವಾಗಿಲ್ಲ. ಹಾಗಾಗಿ ಅವರಲ್ಲಿ ಜಾಗರೂಕತೆ ಎಂಬುದು ಹೇಗೆ ಸಾಧ್ಯ? ಅಂಧಶ್ರದ್ಧೆ ಮತ್ತು ಅಜ್ಞಾನದ ಅಂಧಕಾರದಲ್ಲಿ ಹೇಗೋ ಒಂದು ಅಂದಾಜಿನಂತೆ ದಾರಿ ಸವೆಸುತ್ತಿದ್ದಾರೆ. ಕಾಯಿದೆಗಳ ವಿಷಯದಲ್ಲಿ ಅವರಿಗೆ ಯಾವುದೇ ತಿಳಿವಳಿಕೆ ಇಲ್ಲ. ಅಲ್ಲದೆ ಸ್ತ್ರೀಯ ಬಗೆಗಿನ ಪರಂಪರಾಗತ ದೃಷ್ಟಿಕೋನದಲ್ಲಿ ಯಾವ ಬದಲಾವಣೆಯೂ ಸಾಧ್ಯವಾಗಿಲ್ಲ. ಸ್ತ್ರೀ ಭೋಗವಸ್ತು ಎಂಬ ಪ್ರತಿಮೆಯೇ ಇಂದಿಗೂ ಸ್ವೀಕೃತವಾಗಿರುವಂತಹ ಸಂಗತಿ. ಗ್ರಾಮೀಣ ಭಾಗದಲ್ಲಿ ಸ್ತ್ರೀಗಿರುವ ಗೌಣ ಸ್ಥಾನವೂ ಅವಳಿಗೆ ಒಂದು ಮುಖ್ಯ ಸಮಸ್ಯೆಯೇ ಆಗಿದೆ. ಪ್ರಾಚೀನ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳು, ವ್ರತ ವೈಕಲ್ಯಗಳ ಬಗ್ಗೆ ಆಗ್ರಹ, ಮಾತೃತ್ವದ ಅವಾಸ್ತವ ಬಡಿವಾರ ಮತ್ತು ಗೌರವ, ಗೃಹಿಣಿ ಎಂಬ ಭೂಮಿಕೆಯಲ್ಲಿಟ್ಟು ಸಾಕು ಸಾಕೆನಿಸುವಷ್ಟು ವಿಜೃಂಭಿಸುತ್ತಿರುವುದಾಗಿದೆ. ಶಿಕ್ಷಣದಿಂದ ವಂಚಿತಳನ್ನಾಗಿ ಮಾಡಿರುವಿಕೆ, ಚಿಕ್ಕ ಮಯಸ್ಸಿಗೇ ಬೇಗನೆ ಮದುವೆ, ನೀತಿಮತ್ತೆಯ ಹೊಲಸು ಕಲ್ಪನೆಗಳು, ಮಾವನ ಮನೆಯ ವಾಸ ಮತ್ತು ಪೀಡನೆ ಮುಂತಾದವುಗಳಿಂದಾಗಿ ಅವರಿಗೆ ಯಾವ ಹೊಸ ವಿಚಾರಗಳ ಸ್ಪರ್ಶವೂ ಆಗುತ್ತಿಲ್ಲ. ಇಂತಹ ಸಮಾಜ ವ್ಯವಸ್ಥೆಯನ್ನು ನಿರ್ಮಿಸುವ, ಉಳಿಸಿಕೊಳ್ಳುವ ಪ್ರಯತ್ನ ಇಂದಿಗೂ ನಿಂತಿಲ್ಲ. ಸ್ತ್ರೀ-ಸಂಘಟನೆಗಳು, ಮಂಡಳಿಗಳು, ಮಂಚ್‌ಗಳು ಇವುಗಳ ಕಾರ್ಯವ್ಯಾಪ್ತಿ ನಗರಗಳಿಗಷ್ಟೇ ಸೀಮಿತ. ಗ್ರಾಮೀಣ ಭಾಗಗಳೆಡೆಗೆ ಅವು ಅಕ್ಷಮ್ಯ ದುರ್ಲಕ್ಷ್ಯ ಮಾಡಿರುವುದರಿಂದ ಗ್ರಾಮೀಣ ಸ್ತ್ರೀಯರು ಅನೇಕ ಬಗೆಯ ದುರ್ದೈವಗಳಿಗೆ ಎರವಾಗುತ್ತಿ ದ್ದಾರೆ. ಈ ಬಗ್ಗೆ ಲಕ್ಷ್ಯ ಹರಿಸುವುದು ಅವಶ್ಯ.