ಗ್ರಾಮೀಣ ಸ್ತ್ರೀಯರ ಮುಕ್ತಿಗಾಗಿ

ಗ್ರಾಮೀಣ ಸ್ತ್ರೀಯರನ್ನು ಎಚ್ಚರಗೊಳಿಸುವುದು ಅತ್ಯಂತ ಮಹತ್ವದ ಪ್ರಶ್ನೆ. ಸ್ತ್ರೀ ಶಿಕ್ಷಣದ ಪ್ರಸಾರ ಮತ್ತು ಗುಲಾಮಗಿರಿಯ ಮಾನಸಿಕತೆಯ ದೃಷ್ಟಿಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಒಂದು ರೀತಿಯ ಸಮರ ಪಾತಳಿಯ ಮೇಲೆ ರಾಜಕೀಯ ವಚನ ಬದ್ಧತೆ ಮತ್ತು ಪಕ್ಷ ಭೇದಗಳನ್ನೆಲ್ಲ ಮರೆತು ಎಲ್ಲ ಸ್ತರಗಳಿಂದಲೂ ಪ್ರಧಾನವಾಗಿ ಪ್ರಯತ್ನಿಸಬೇಕು. ಗ್ರಾಮೀಣ ಸ್ತ್ರೀಯ ಅಂಧಶ್ರದ್ಧೆಗಳ ನಿರ್ಮೂಲನೆ, ರೂಢಿ ಸಂಪ್ರದಾಯಗಳಿಂದ ಬಿಡುಗಡೆಯ ಹಾದಿಯನ್ನು ತಿಳಿದುಕೊಳ್ಳುವುದು ಮತ್ತು ಆತ್ಮ ವಿಶ್ವಾಸದಿಂದ ಪ್ರಬೋಧಿತಳಾಗುವುದು ಅತ್ಯಂತ ಜರೂರಿಯ ಕೆಲಸವಾಗಿದೆ.

ಗ್ರಾಮೀಣ ಸ್ತ್ರೀಯರಲ್ಲಿ ಬಾಲ್ಯವಿವಾಹ, ವರದಕ್ಷಿಣೆಯ ಕಾರಣ ಎದುರಿಸಬೇಕಾದ ಮಾವನ ರೋಷ, ಮಾವನ ಮನೆಯ ವಾಸ, ಗಂಡನ ಬಾಹ್ಯ ಖಯಾಲಿಗಳು, ಸವತಿ ತರುವುದು, ಇಲ್ಲವೆ ಇಟ್ಟುಕೊಳ್ಳುವಿಕೆಯಿಂದ ಉಂಟಾಗುವ ಪೀಡನಾ ಸಮಸ್ಯೆಗಳು ಒಂದೆಡೆ. ಇನ್ನು ವ್ಯಸನಾಧೀನತೆಯೇ ಮೊದಲಾದ ಅಂಶಗಳಿಂದ ಪೀಡಿತಳೂ, ಶೋಷಿತಳೂ ಆಗಿದ್ದಾಳೆ ಸ್ತ್ರೀ. ಕಾಯಿದೆ ಕಾನೂನುಗಳಿದ್ದಾಗ್ಯೂ ಆ ಬಗ್ಗೆ ಅವರಿಗೆ ಜ್ಞಾನವಿಲ್ಲ. ಹಾಗಾಗಿ ಪತ್ನಿ ಯಾದವಳೇ ತಕರಾರು ಮಾಡಬೇಕು ಎಂದೇನೂ ಇಲ್ಲ; ಬದಲಾಗಿ ಈ ಬಗ್ಗೆ ಯಾರೇ ತಕರಾರು ಮಾಡಿದರೂ ಸರಿಯೇ ತತ್‌ಕ್ಷಣ ಬಂಧಿಸುವಂತಹ ಪ್ರಕ್ರಿಯೆ ಚಾಲ್ತಿಗೆ ಸೇರಬೇಕು. ಸರಕಾರವೇ ಈ ಬಗೆಯ ಕೇಸುಗಳನ್ನು (ಮೊಕದ್ದಮೆ) ನಡೆಸಬೇಕು. ತಾಲೂಕು ಮಟ್ಟದಲ್ಲಿ ಕಾಯಿದೆಬದ್ಧ ಸಹಾಯ ಸಲಹೆಗಳು ಮತ್ತು ಮಾರ್ಗದರ್ಶನದ ಸೆಲ್‌ಗಳನ್ನು ಕಾಯಮ್ಮಾಗಿಯೇ ಬಹಳ ಅವಶ್ಯವಾದುದೆಂಬಂತೆ ಸ್ಥಾಪಿಸಬೇಕು. ಸ್ತ್ರೀಯರ ವಿಷಯವಾಗಿ ಕಾಯಿದೆಗಳನ್ನು ಪ್ರಸಾರ ಮಾಡುವ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕಾದ್ದು ಅವಶ್ಯ. ಅನಾವಶ್ಯಕವಾದ ಮತ್ತು ಒತ್ತಾಯಪೂರ್ವಕವಾದ ಗರ್ಭಧಾರಣೆಯೂ ಕೂಡಾ ಗ್ರಾಮೀಣ ಸ್ತ್ರೀಯ ಆತ್ಯಂತಿಕ ತಲೆನೋವಿನ ಸಮಸ್ಯೆಯಾಗಿದೆ. ಈ ವಿಷಯವಾಗಿ ಕಾಯಿದೆಬದ್ಧ ಮತ್ತು ಆಗ್ರಹ ಪೂರ್ವಕವಾದ ಸಮಾನ ನಾಗರಿಕ ಕಾಯಿದೆಯನ್ನು ಜಾರಿಗೊಳಿಸುವುದು ಅವಶ್ಯ ಕಾರ್ಯವಾಗಿದೆ.

ಮಹಿಳಾ ಮಂಡಳಿಗಳು, ಸ್ತ್ರೀ-ಸಂಘಟನೆಗಳು, ಸ್ತ್ರೀ-ಮುಕ್ತಿ ಆಂದೋಲನಗಳು ಅಥವಾ ಬೇರೆ ಯಾವುದೇ ಸ್ತ್ರೀ-ಸಂಘಟನೆಗಳೊಂದಿಗೆ ಇತರೆ ಸ್ವಯಂಸೇವಾ ಸಂಸ್ಥೆ ಮತ್ತು ಆಂದೋಲನಗಳ ನೇತಾರರು ಹಾಗೂ ಕಾರ್ಯಕರ್ತರು ಸ್ತ್ರೀಯರ ಈ ಪ್ರಶ್ನೆಗಳನ್ನು ಬಿಡಿಸುವಂತಹ ವಚನ ಬದ್ಧತೆಗೆ ಮುಂದಾಗಬೇಕು. ಆರೋಗ್ಯದ ಪುನರ್ ವ್ಯವಸ್ಥೆ, ಆದಿವಾಸಿಗಳ ಜೀವನ ಪ್ರಶ್ನೆಗಳು,  ಚಿಪ್‌ಕೋ ಆಂದೋಲನ, ಭಾರತ್ ಜೋಡೋ ಅಭಿಯಾನ, ವೃಕ್ಷ ಸಂವರ್ಧನ ಚಳವಳಿ, ಪರ್ಯಾವರಣದ ರಕ್ಷಣೆ, ಪ್ರಜಾಪ್ರಭುತ್ವದ ಹಕ್ಕುಗಳ ರಕ್ಷಣೆ, ಜಾಗತಿಕ ಶಾಂತಿಯೇ ಮೊದಲಾದ ಎಲ್ಲ ಚಳವಳಿಗಳಲ್ಲಿಯೂ ಗ್ರಾಮೀಣ ಸ್ತ್ರೀಯ ಪ್ರಬೋಧನೆ ಮತ್ತು ಸಂರಕ್ಷಣೆ ಈ ಅಂಶವನ್ನು ಅವಿಭಾಜ್ಯವೆಂದು ಒಪ್ಪಿಕೊಳ್ಳ ಬೇಕಾಗಿದೆ. ಕಾರಣ ಗ್ರಾಮೀಣ ಸ್ತ್ರೀ ಅನೇಕ ಅವೈಚಾರಿಕ ರೋಗಗಳಿಗೆ ಅಳವಡಿಸಿ ಪೀಡಿತಳಾಗಿದ್ದಾಳೆ.

ಗ್ರಾಮೀಣ ಸ್ತ್ರೀಯರ ಚಳವಳಿಯನ್ನು ಒಂದು ಸ್ವತಂತ್ರವಾದ, ಸ್ವಯಂ ಗತಿಯುಳ್ಳ ಆಂದೋಲನವನ್ನಾಗಿ ಮಾಡಬಾರದು. ಬದಲಾಗಿ ಎಲ್ಲ ಶ್ರಮಿಕರು, ಶೋಷಿತರು ಮತ್ತು ಪದ ದಲಿತರ ಆಂದೋಲನದ ಭಾಗವಾಗಬೇಕಾದ್ದು ಅವಶ್ಯ. ಕಾರಣ ಸಮಾಜದಲ್ಲಿನ ಇತರೆ ಘಟಕಗಳಂತೆಯೇ ಮಾನವೀಯ ಸಮಾಜದ ಇತಿಹಾಸದ ವಿಶಿಷ್ಟ ಸ್ತರದಲ್ಲಿಯೇ ಸ್ತ್ರೀಯ ಗುಲಾಮಗಿರಿಯೂ ನಿರ್ಮಾಣವಾಗಿದೆ. ಎಂತಲೇ ಸ್ತ್ರೀ ಗುಲಾಮಗಿರಿಯ ಬಗ್ಗೆ ಸ್ವತಂತ್ರವಾಗಿ ಆಲೋಚಿಸಿದರೆ ಯಾವುದೇ ಮಾರ್ಗವು ಕಾಣಿಸಲಾರದು. ಬದಲಾಗಿ ಎಲ್ಲಾ ಶೋಷಿತರ ಮುಕ್ತಿಯ ಹಂತದಲ್ಲಿಯೇ ಸ್ವತಂತ್ರವೂ ವಿಕಾಸಮಯವೂ ಆದ ಮುಕ್ತ ಮಾರ್ಗವೊಂದು ಸ್ತ್ರೀಯರಿಗೂ ಸಾಧ್ಯವಾಗುತ್ತದೆ.

ಸ್ತ್ರೀ-ಪುರುಷರ ಕುಟುಂಬದಲ್ಲಿ ಅಂತರ್ಗತವಾದ ವಿಷಮತೆಯೆಂಬುದು ಹೊರಗಿನ ಸರ್ವಾಂಗೀಣ ವಿಷಮತೆಯ ಭಾಗವೇ ಆಗಿರುತ್ತದೆ. ಗ್ರಾಮೀಣ ಸ್ತ್ರೀಯರೆಲ್ಲ ದಾರಿದ್ರ್ಯ, ಸತತ ಕೆಲಸಗಳು, ಉತ್ಪಾದನ ಕ್ಷೇತ್ರದಲ್ಲಿನ ಗೌಣ ಸ್ಥಾನ, ಗರ್ಭಧಾರಣೆ ಮತ್ತು ಮಕ್ಕಳ ಪಾಲನೆ ಇವುಗಳಿಂದ ಬಹಳೇ ಹೀನ ಪರಿಸ್ಥಿತಿಯನ್ನು ಅನುಭವಿಸಬೇಕಾಗಿ ಬಂದಿದೆ. ಇದರಿಂದಾಗಿ ಅವರಿಗೆ ಅನ್ಯಾಯವನ್ನು ನಿವಾರಣೆ ಮಾಡಿಕೊಳ್ಳುವಂತಹ ಸಾರ್ವತ್ರಿಕವೂ ಶಾಶ್ವತವೂ ಮತ್ತು ಆಜ್ಞಾಪ್ರಧಾನವೂ ಆದ ಮಾರ್ಗವು ಕಾಣಿಸುತ್ತಿಲ್ಲ. ಏನೇ ಆದರೂ ಅನ್ಯಾಯದ ತಾತ್ತ್ವಿಕ, ಸಾಂಪ್ರದಾಯಿಕವಾದ ಅವೈಚಾರಿಕ ಅಂಶಗಳನ್ನು ದೂರಮಾಡುವ ಪ್ರಯತ್ನವೂ ನಡೆಯಲೇ ಬೇಕಾಗಿದೆ.

ತಾತ್ತ್ವಿಕ ದೃಷ್ಟಿಯಿಂದ ತಪ್ಪು ಎಂಬುದರಿಂದಾಗಿಯಷ್ಟೇ ಸ್ತ್ರೀ-ಪುರುಷ ಸಂಘರ್ಷವನ್ನು  ಸ್ತ್ರೀ ಚಳವಳಿಯ ಮುಖ್ಯ ಅಧಿಷ್ಠಾನವಾಗಿ ಮಾಡಿಕೊಳ್ಳುವಂತಹ ಕಾರ್ಯವಲ್ಲವಿದು. ನೀರು ತುಂಬುವ ಕೆಲಸ ಮಾಡವಾಗ ಸ್ತ್ರೀಯರ ಶಕ್ತಿ ಮತ್ತು ವೇಳೆಯು ಅಪವ್ಯಯ ವಾಗುತ್ತದೆ ಎಂಬುದನ್ನು ಲಕ್ಷ್ಯದಲ್ಲಿಟ್ಟುಕೊಳ್ಳಬೇಕು. ಆರೋಗ್ಯ ವಿಷಯಕವಾದ ಯಾವುದೇ ಸೇವೆಯು ಅವರಿಗೆ ಸಮಯಕ್ಕೆ ಲಭ್ಯವಾಗುವುದಿಲ್ಲ. ಇನ್ನು ಶಿಕ್ಷಣದ ಅವಕಾಶವಂತು ದೂರವೇ. ಹಾಗೆಯೇ ಸ್ತ್ರೀಯರ ಹೆಸರಿನಲ್ಲಿ ಮಾಲೀಕ ಹಕ್ಕುಳ್ಳ ಯಾವುದೇ ಆಸ್ತಿಯೂ ಇರುವುದಿಲ್ಲ. ಇಂಥ ವಿಷಯಗಳಲ್ಲಿ ಸ್ತ್ರೀ-ಪುರುಷ ಸಮಾನತೆಯು ಪ್ರಸ್ಥಾಪಿತವಾಗಬೇಕಾದ್ದು ಅವಶ್ಯ.

ಗ್ರಾಮೀಣ ಭಾಗದಲ್ಲಿನ ಸ್ತ್ರೀಯರ ಪ್ರಶ್ನೆಯನ್ನು ವೈಯಕ್ತಿಕ ಗೋಳು ಎಂದು ಭಾವಿಸಿ ಲಕ್ಷ್ಯಕ್ಕೆ ತೆಗೆದುಕೊಳ್ಳಬಾರದು. ಬದಲಾಗಿ ಸ್ತ್ರೀಯರ ಸಾಮೂಹಿಕ ದುಃಖ, ಪರಿತಾಪಗಳ ಸಂಬಂಧವಾಗಿಯೇ ಇದನ್ನು ಕೃತಿರೂಪಕ್ಕೆ ತರುವುದು ಆವಶ್ಯಕ. ಅಂದರೆ ವೈಯಕ್ತಿಕ ಅನ್ಯಾಯದ ಕೇಸಗಳ ಮೇಲೆ ಲಕ್ಷ್ಯವನ್ನು ಕೇಂದ್ರೀಕೃತಗೊಳಿಸದೆ ಸಾಮೂಹಿಕ ಪಾತಳಿಯ ಮೇಲೆಯೇ ಈ ಪ್ರಶ್ನೆಯನ್ನು ಒಯ್ಯುವುದು ಅತ್ಯಂತ ಮುಖ್ಯವಾದ ಪ್ರಕ್ರಿಯೆ. ಸ್ತ್ರೀ-ಸಂಘಟನೆಗಳು ಕೂಡಾ ಈ ದೃಷ್ಟಿಯಿಂದಲೇ ವಿಚಾರ ಮಾಡುವುದು ಅವಶ್ಯ.

ಆರ್ಥಿಕ ಸ್ವಾತಂತ್ರ್ಯ, ಸ್ತ್ರೀ-ಪುರುಷರಿಬ್ಬರಿಗೂ ಸಮಾನ ವೇತನ, ಸ್ತ್ರೀಯರಿಗೆ ಉದ್ಯೋಗಾವಕಾಶವನ್ನು ಹೆಚ್ಚಿಸುವುದು ಈ ದೃಷ್ಟಿಯಿಂದ ಧೋರಣಾತ್ಮಕವಾದ ಪ್ರಯತ್ನಗಳನ್ನು ಮಾಡುತ್ತಿಲ್ಲ. ನಿಜವಾಗಿಯೂ ಹೇಳುವುದಾದರೆ ಅದನ್ನು ಬಿಟ್ಟರೆ ಗ್ರಾಮೀಣ ಸ್ತ್ರೀಯರ ವಿಕಾಸಕ್ಕೆ ಯಾವುದೇ ದಿಶೆಯು ಲಭ್ಯವಾಗುವುದಿಲ್ಲ. ಸ್ತ್ರೀ-ಮುಕ್ತಿ ವಿಚಾರದ ಮೊದಲ ಹೆಜ್ಜೆಯು ಗ್ರಾಮೀಣ ಸ್ತ್ರೀಯರ ಸಂಬಂಧವಾಗಿಯೇ ಆಗಿರಬೇಕಾದ್ದು ಅತ್ಯಂತ ಅಗತ್ಯ. ನಗರದಿಂದ ದೂರವಾಗಿರುವ ಗ್ರಾಮಗಳು ಮತ್ತು ವಸತಿಗಳು ಹಾಗೂ ಅಲ್ಲಿ ಇರುವ ಸ್ತ್ರೀಯರು ಎಷ್ಟೋ ಶತಮಾನಗಳಷ್ಟು ಹಿಂದಣ ಜಗತ್ತಿನಲ್ಲಿ ಇರುವಂತೆ ಕಾಣಿಸುತ್ತಾರೆ. ಅಂಧ ಭಾಗದಲ್ಲಿ ಕೆಲಸ ಮಾಡುವಂಥ ಕಾರ್ಯಕರ್ತರೂ ಸಹ ಅವಶ್ಯವಾಗಿ ಬೇಕು. ಅದಕ್ಕಾಗಿ ಸಂಘರ್ಷವನ್ನೂ ಮಾಡಬೇಕಾಗಬಹುದು. ಸಾವಿರಾರು ವರ್ಷಗಳಿಂದ ದಾಸ್ಯದಲ್ಲಿ ಸಿಲುಕಿ ಬಿದ್ದಿರುವ ಸ್ತ್ರೀಯ ಪಾಶವು ಈಗ ಕೊಳೆಯುವ ಸ್ಥಿತಿಯಲ್ಲಿದೆ. ಅದನ್ನು ಕಿತ್ತೆಸೆಯುವ ಕೆಲಸ ಸುಲಭವಲ್ಲವಾದರೂ ಪ್ರಯತ್ನ ಸಾಧ್ಯತೆಯಂತು ಇರುವುದು. ಸ್ತ್ರೀಯರನ್ನು ಇನ್ನೂ ಗುಲಾಮರನ್ನಾಗಿ ಉಳಿಸುವುದಕ್ಕೆ ಬರುವುದಿಲ್ಲ. ಅವರನ್ನು ತಮ್ಮ ದಿಶೆಯಲ್ಲಿ ಸೇರಿಸಿಕೊಳ್ಳಬೇಕು. ಭಾರತೀಯ ಸ್ತ್ರೀ-ಚಳವಳಿಯು ಈಗ ಗ್ರಾಮೀಣ ಭಾಗದತ್ತ ಹೊರಳಬೇಕಾಗಿದೆ. ಒಂದು ರೀತಿಯಿಂದ ಇಂದು ಎಲ್ಲಾ ಬಗೆಯ ಶೋಷಣೆಯ ವಿರುದ್ಧವೂ ಹೋರಾಟದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ ಸ್ತ್ರೀ-ಚಳವಳಿ. ಹಾಗಿರುವಾಗ ಸುತ್ತಮುತ್ತಲು ನಡೆಯುತ್ತಿರುವ ಹೋರಾಟಗಳ ಬಗ್ಗೆ ಅತ್ಯಂತ ಸಂವೇದನ ಶೀಲವಾಗಿದ್ದು ಇತರೆ ಶೋಷಿತರ ಚಳುವಳಿಯೊಂದಿಗೂ ದೃಢ ಸಂಬಂಧವನ್ನು ನಿರ್ಮಿಸಿಕೊಳ್ಳಬೇಕಾಗಿದೆ. ಆಗ ಮಾತ್ರ ಸರ್ವಕಕ್ಷ ಪರಿವರ್ತನೆಯು ಸಾಧ್ಯವಾಗಿ ಸ್ವತಂತ್ರವಾಗುವ ಧ್ಯೇಯವನ್ನು ಹೊಂದುವುದಕ್ಕೆ ಸ್ತ್ರೀ-ಚಳವಳಿಗೆ ಸಾಧ್ಯವಾಗುತ್ತದೆ.