ಅಂಧಶ್ರದ್ಧೆಯ ಕತ್ತಲೆಯಲ್ಲಿ

ಕಳೆದ ಹತ್ತು ವರ್ಷಗಳಿಂದ ಭವಾನಿ ಮಾತಾ ಮಹಿಳಾ ನಾಗರೀ ಪಥ ಸಂಸ್ಥೆಯ ಚೇರ್‌ಮನ್ನಳಾಗಿದ್ದೆ. ಆಗ ನನಗೆ ಗ್ರಾಮೀಣ ಭಾಗದಲ್ಲಿನ ಸುಮಾರು ಐದುಸಾವಿರ ಸಭಾಸದ ಮಹಿಳೆಯರನ್ನೆಲ್ಲಾ ಮನೆಮನೆಗೆ ಕಳುಹಿಸುವ ಒಂದು ಅವಕಾಶವು ಸಾಧ್ಯವಾಯಿತು. ಅವರ ಧಾರ್ಮಿಕ ತಿಳಿವಳಿಕೆ, ರೂಢಿ ಮತ್ತು ಪರಂಪರೆಯ ಹಿನ್ನಲೆಯನ್ನು ಹಾಗೂ ಅವನ್ನು ಮನವರಿಕೆ ಮಾಡುವ ದೃಷ್ಟಿಯಿಂದ ಅವರಿಗಾಗಿ ಅನೇಕ ಶಿಬಿರಗಳನ್ನು ಏರ್ಪಡಿಸಲಾಗಿತ್ತು. ಧಾರ್ಮಿಕ ತತ್ತ್ವಜ್ಞಾನದ ಯತ್ಕಿಂಚಿತ್ತು ಅರ್ಧವನ್ನು ತಿಳಿಯದಂಥ ನಮ್ಮ ಸಾವಿರಾರು ಗ್ರಾಮೀಣ ಸ್ತ್ರೀಯರು ಅಂಧಶ್ರದ್ಧೆ, ಕರ್ಮಕಾಂಡ, ಉಪವಾಸ ವ್ರತಗಳನ್ನು ಮಾಡುತ್ತಾ ಇದ್ದಾರೆ. ಜೊತೆಗೆ ಅವರಿಗೆ ಬೇಕಾಗಿರುವುದು ದೇವಕೃಪೆ. ಹಾಗಾಗಿ ಸ್ವಾಮೀಜಿಗಳು, ಪೂಜಾರಿಗಳ ಜಾಲಗಳಲ್ಲಿ ಸಿಲುಕಿಕೊಂಡು ಬಿಟ್ಟಿದ್ದಾರೆ. ಗ್ರಾಮೀಣ ಭಾಗದಲ್ಲಿ ಸ್ತ್ರೀ ಸಾಕ್ಷರತೆಯ ಪ್ರಮಾಣವು ಸರಾಸರಿ ಶೇ. ೧೩ರಷ್ಟಿದೆ. ಕೆಲವು ಪ್ರದೇಶಗಳಲ್ಲಂತೂ ಅದು ೩ ರಿಂದ ೪ರ ಸರಾಸರಿಯಲ್ಲೇ ಇದೆ. ಶಿಕ್ಷಣದಿಂದ ವಂಚಿತರಾಗಿರುವುದು ಅವರಿಗೆ ಬಹುದೊಡ್ಡ ಶಾಪ. ಮನೆಯಲ್ಲಿನ ದಾರಿದ್ರ್ಯ, ಆರ್ಥಿಕ ಅಡಚಣೆಗಳು, ಸಾಮಾಜಿಕ ದೃಷ್ಠಿಕೋನದಲ್ಲಿ ರೂಢವಾಗಿರುವ ಪಾರಂಪರಿಕತೆ, ಗ್ರಾಮೀಣ ಪ್ರದೇಶಗಳಲ್ಲಿನ ಸಂಕುಚಿತ ವಾತಾವರಣ, ಶಾಲೆಯಲ್ಲಿನ ಅನುಕೂಲತೆಗಳ ಅಭಾವ, ಪಾಲಕರ ಉದಾಸೀನತೆ, ತಾಯಿಯು ಮತ್ತೆ ಮತ್ತೆ ಗರ್ಭವತಿಯಾಗುತ್ತಿರುವುದು, ತನಗಿಂತಲೂ ಚಿಕ್ಕವರನ್ನು ನೋಡಿಕೊಳ್ಳುವಿಕೆ, ಮನೆಗೆಲಸಗಳು, ಹೊರಗಿನ ಕೆಲಸಗಳು ಅಧಿಕ. ಶಿಕ್ಷಣಕ್ಕೆ ಸೇರಿದರೆ ಅದು ಮುಗಿಯುವ ಹೊತ್ತಿಗೆ ಹುಡುಗಿಗೆ ವಯಸ್ಸಾಗಿರುತ್ತದೆ. ಜೊತೆಗೆ ಗಂಡನ ಬಗ್ಗೆ ಉಪೇಕ್ಷೆಯೂ ಬೆಳೆಯುತ್ತದೆ. ಕಾರಣ ಕಲಿತ ಹೆಣ್ಣಿನಲ್ಲಿ ಉದ್ಧಟತನ ಬೆಳೆಯುವುದು ಎಂಬ ಭಾವನೆ ಬೇರೂರಿದೆ. ಮತ್ತೊಂದೆಡೆ ಒಲೆ ಮತ್ತು ಮಕ್ಕಳದ್ದೇ ಅವಳ ಬದುಕಿನ ಕಾರ್ಯ ಕ್ಷೇತ್ರವಾಗಿರುವಾಗ ಕಲಿತು ಮಾಡುವುದಾದರೂ ಏನನ್ನು? ಇವೇ ಮೊದಲಾದ ಅನೇಕ ಕಾರಣಗಳು ಗ್ರಾಮೀಣ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳ್ಳುವಂತೆ ಮಾಡಿವೆ.

ಹೀಗೆ ಅಲ್ಪ ಶಿಕ್ಷಣವನ್ನು ಪಡೆದುದರ ಕಾರಣ ಸಾಮಾನ್ಯವಾಗಿ ಹೆಣ್ಣುಮಕ್ಕಳು ಮುಂದೆ ಅಂಧಕಾರದಲ್ಲಿ ತೊಳಲುತ್ತಾರೆ. ಮದುವೆಯ ಅನಂತರ  ಕುಲಾಚಾರಗಳು, ಪೂಜಾರ್ಚನೆಗಳು, ಉಪವಾಸ, ವ್ರತಗಳು ಇತ್ಯಾದಿಗಳ ಬೆನ್ನು ಹತ್ತುತ್ತಾರೆ. ಡಾಕ್ಟರರಿಗಿಂತ ಬೇರೆಯವರನ್ನು ಕಾಣುವುದರೆಡೆಗೇ ಇವರಿಗೆ ಅಧಿಕ ಕಾಳಜಿ. ನಿವಾಳಿಸುವಿಕೆ, ತಾಯತಗಳು, ಮಂತ್ರಿಸಿದ ದಾರಗಳು, ವ್ರತಗಳು, ಪೂಜಾರಿ, ದೇವರು, ಪಂಚಾಂಗಗಳಂಥ ಚಾಳಿಯಲ್ಲಿಯೇ ಸಿಲುಕಿಕೊಂಡಿರುವುದು ಕಂಡುಬರುತ್ತದೆ. ವೈಜ್ಞಾನಿಕ ಪ್ರವೃತ್ತಿ ಮತ್ತು ತರ್ಕ ಸಂಗತತೆಯ ವಿಚಾರ ಸರಣಿಗಳಿಂದ ಅವರು ಕೋಟ್ಯಾವಧಿ ಮೈಲುಗಳಷ್ಟು ಹಿಂದೆ ಇದ್ದಾರೆ ಎಂಬುದು ಬಹಳ ಸತ್ಯವಾದ ಸಂಗತಿ.

ತುಲನಾತ್ಮಕ ಪರಿಸ್ಥಿತಿ

ಗ್ರಾಮೀಣ ಮತ್ತು ನಗರದ ಸ್ತ್ರೀಯರನ್ನು ತುಲನೆ ಮಾಡಿದರೆ, ಅವರಲ್ಲಿ ಭೂಮಿ ಆಕಾಶದಷ್ಟು ಅಂತರವಿರುವುದು ನಮಗೆ ತಿಳಿದು ಬರುತ್ತದೆ. ಗ್ರಾಮೀಣ ಭಾಗದಲ್ಲಿ ಬಡತನದ ರೇಖೆಯಿಂದ ಕೆಳಗಡೆ ಜೀವನ ನಡೆಸುವವರ ಸಂಖ್ಯೆಯು ಸುಮಾರು ೪೨ ಕೋಟಿ, ೨೨ ಲಕ್ಷಗಳಷ್ಟಿದೆ ಎಂದು ವರದಿಯೊಂದು ತಿಳಿಸಿದೆ. ಆದರೆ ಅದರ ಸಂಖ್ಯೆ ಇನ್ನೂ ಹೆಚ್ಚಾಗಿರುವುದು ಎಂಬುದು ವಾಸ್ತವ; ಅರ್ಧಶಾಸ್ತ್ರಜ್ಞರೂ ಇದನ್ನೇ ಹೇಳಿದ್ದಾರೆ. ಉದಾ.ಗೆ ಪ್ರಾಧ್ಯಾಪಕ ಸಿ.ಹೆಚ್. ಹನುಮಂತರಾವ್ ಅವರ ಅಭಿಪ್ರಾಯದಂತೆ, ದೇಶದಲ್ಲಿನ ಪೂರ್ವ ಮತ್ತು ಮಧ್ಯ ಭಾಗದಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಬಡತನದ ತೀವ್ರತೆಯು ಅಧಿಕವಾಗಿದ್ದು, ಶೇ.೬೨.೪ರಷ್ಟು ಜನತೆ ಬಡತನದ ರೇಖೆಯ ಕೆಳಗಡೆ ನಿರ್ಧನರೂ ಮತ್ತು ಅಶಕ್ತರೂ ಆಗಿ ಜೀವನ ನಡೆಸುತ್ತಿದ್ದಾರೆ. ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ದಾರಿದ್ರ್ಯದ ತೀವ್ರತೆಯು ಅಧಿಕವಾಗಿದೆ. ಕುಟುಂಬದ ದಾರಿದ್ರ್ಯದ ಎಲ್ಲ ಝಳವು ಸ್ತ್ರೀಯರ ಮೇಲೆಯೇ ಆವರಿಸುತ್ತದೆ. ಸ್ತ್ರೀಯರ ದರ್ಜೆ, ವಿವಾಹದ ವಯಸ್ಸು, ಅತ್ಯಲ್ಪ ಸಂಖ್ಯೆ, ಹೆಣ್ಣುಮಗಳು ಜನಿಸಿದೊಡನೆ ಅವಳನ್ನು ಕಾಣುವ ದೃಷ್ಟಿಕೋನ, ಆರೋಗ್ಯ ವಿಷಯದಲ್ಲಿನ ಸೌಲಭ್ಯಗಳು, ನೀರು, ಕಕ್ಕಸ್ಸು, ಸಾಮಾಜಿಕ, ಸಾಂಸ್ಕೃತಿಕ ಪದ್ಧತಿಗಳ ಜೊತೆಗೆ ಆರ್ಥಿಕ ಪರಿಸ್ಥಿತಿಯೂ ಮಹತ್ವದ್ದಾಗಿರುತ್ತದೆ. ಶಿಕ್ಷಣ, ಮನರಂಜನೆ, ಪ್ರಚಾರ ಮಾಧ್ಯಮಗಳು, ಸರ್ಕಾರದ ವಿವಿಧ ಕಲ್ಯಾಣಕಾರಿ ಕಾರ್ಯಕ್ರಮಗಳು, ಸ್ತ್ರೀಯರಿಗೆ ಸಂಬಂಧಿಸಿದ ಕಾಯಿದೆಗಳು, ಆಸ್ಪತ್ರೆಗಳು, ಅಗತ್ಯ ಅನುಕೂಲತೆಗಳು ಇತ್ಯಾದಿ ವಿಚಾರಗಳಲ್ಲಿ ಗ್ರಾಮೀಣ ಸ್ತ್ರೀಯರನ್ನು ನಗರದ ಸ್ತ್ರೀಯರೊಂದಿಗೆ ತುಲನೆ ಮಾಡಿದಾಗ ಬಹಳ ಹಿಂದಿದ್ದಾರೆ. ಉಪೇಕ್ಷಿತ ಮತ್ತು ದುರ್ಲಕ್ಷಿತ ಅಂಶಗಳಂತೂ ಅವಶ್ಯ ಗಮನಿಸುವಂತಹವೇ ಆಗಿದೆ. ಆ ದೃಷ್ಟಿಕೋನದಿಂದ ನೋಡಲು ಈ ಕೆಳಗಣ ಅಂಶಗಳನ್ನು ಪರಿಗಣಿಸಬಹುದು:

೧. ೧೯೮೧ರ ಜನಗಣತಿಯ ಅನುಸಾರ ಭಾರತದಲ್ಲಿ ನಗರದ ಸ್ತ್ರೀಯರ ಸಂಖ್ಯೆ ಶೇ. ೫೬.೮ ದಶಲಕ್ಷವಾಗಿತ್ತು. ಗ್ರಾಮೀಣ ಸ್ತ್ರೀಯರ ಸಂಖ್ಯೆ ಇದಕ್ಕಿಂತಲೂ ಅಧಿಕವಾಗಿತ್ತು. ಸಂಖ್ಯಾತ್ಮಕ ದೃಷ್ಟಿಯಲ್ಲಿ ಅತ್ಯಧಿಕವಾಗಿರುವ ಈ ಘಟಕವನ್ನು ತೀರಾ ಉಪೇಕ್ಷಿಸಲಾಗಿದೆ. ದೇಶದಲ್ಲಿನ ಸ್ತ್ರೀಸಾಕ್ಷರತೆ ಪ್ರಮಾಣವು ಸರಾಸರಿ ಶೇ. ೨೪.೯ರಷ್ಟು ಆಗಿದೆ. ಆದರೆ ದೇಶದ ಪಾತಳಿಯ ಮೇಲೆ ಗಮನಿಸಿ ಹೇಳುವುದಾದರೆ ನಗರ ಸ್ತ್ರೀಯರ ಸಾಕ್ಷರತೆಯ ಪ್ರಮಾಣವು ಶೇ. ೪೭.೮೨ ರಷ್ಟಿದೆ. ಆದರೆ ಗ್ರಾಮೀಣ ಸ್ತ್ರೀಯರ ಸಾಕ್ಷರತಾ ಪ್ರಮಾಣದ ಸರಾಸರಿಯು ಶೇ. ೧೩ರಷ್ಟು ಮಾತ್ರ.

೨. ನಮ್ಮ ದೇಶದಲ್ಲಿ ಸ್ತ್ರೀಯರ ವಿವಾಹದ ಸರಾಸರಿ ವಯಸ್ಸು ೧೮.೩೨ ವರ್ಷಗಳು. ನಗರ ಪ್ರದೇಶಗಳಲ್ಲಿ ಅದು ೧೭.೬ ವರ್ಷಗಳಾಗಿದ್ದರೆ, ಗ್ರಾಮೀಣ ಭಾಗದಲ್ಲಿ ೧೬.೫ ವರ್ಷಗಳು. ನಗರಗಳಲ್ಲಿ ಸ್ತ್ರೀಯರ ವಿವಾಹದ ವಯಸ್ಸು ಗ್ರಾಮೀಣ ಸ್ತ್ರೀಯರೊಂದಿಗೆ ತುಲನೆ ಮಾಡಿದಾಗ ಅದು ಇನ್ನೂ ಹೆಚ್ಚಾಗಿ ಬೆಳೆದಿರುವುದು ಸ್ಪಷ್ಟ.

೩. ಸ್ತ್ರೀಯರ ಆಯಸ್ಸಿನ ದೃಷ್ಟಿಕೋನದಿಂದ ಅಧ್ಯಯನ ಮಾಡಿದಾಗ ಈ ಅಂಶಗಳು ಕಂಡುಬರುತ್ತವೆ. ಗ್ರಾಮೀಣ ಸ್ತ್ರೀಯರಿಗಿಂತ ನಗರದ ಸ್ತ್ರೀಯರ ಆಯಸ್ಸು ಹೆಚ್ಚಾಗಿದೆ. ೧೯೭೮-೮೦ರ ಕಾಲದಲ್ಲಿನ ನೋಂದಾವಣಿಯ ಆಧಾರದ ಅನುಸಾರ ಗಮನಕ್ಕೆ ಬರುವುದೇನೆಂದರೆ, ನಗರದ ಸ್ತ್ರೀಯರ ಆಯಸ್ಸು ಸರಾಸರಿ ೬೦.೮ ವರ್ಷಗಳು. ಆದರೆ ಗ್ರಾಮೀಣ ಸ್ತ್ರೀಯರ ಸರಾಸರಿ ಆಯಸ್ಸು ೫೦.೩ ವರ್ಷಗಳು. ಅಂದರೆ ಗ್ರಾಮೀಣ ಸ್ತ್ರೀಯರ ಆರೋಗ್ಯವನ್ನು ತೀರಾ ದುರ್ಲಕ್ಷಿಸಲಾಗುತ್ತಿದೆ.

೪. ಪ್ರತಿ ಸಾವಿರ ಜನಸಂಖ್ಯೆಯಲ್ಲಿ ಪ್ರತಿ ವರ್ಷ ಎಷ್ಟು ಮಂದಿ ಜನಿಸುವರೋ ಅದರ ಪ್ರಮಾಣವೇ ಜನನ ದರ. ಗ್ರಾಮೀಣ ಭಾಗಗಳಿಗಿಂತ ನಗರಗಳಲ್ಲಿ ಜನನ ದರ ಕಡಿಮೆ ಪ್ರಮಾಣದಲ್ಲಿದೆ. ೧೯೮೫ರಲ್ಲಿ ಗ್ರಾಮೀಣ ಜನನದ ಪ್ರಮಾಣ ೧೮.೧ರಷ್ಟು ಇದ್ದುದು ಕಂಡು ಬರುತ್ತದೆ. ಈ ಹಿನ್ನೆಲೆಯಿಂದ ಗ್ರಾಮೀಣ ಸ್ತ್ರೀಯರು ಕುಟುಂಬ ಯೋಜನೆಯ ಸವಲತ್ತನ್ನು ಪಡೆಯುವಲ್ಲಿ ಬಹಳ ಹಿಂದುಳಿದಿದ್ದಾರೆ.  ಈ ಪ್ರಕಾರ ಗರ್ಭಿಣಿಯಾಗುವುದು, ಮಗುವಿಗೆ ಜನ್ಮನೀಡುವುದು, ಅವುಗಳನ್ನು ಪೋಷಿಸುವುದರಲ್ಲಿಯೇ ಅವಳು ಸಿಲುಕಿಕೊಂಡು ಬಿಟ್ಟಿದ್ದಾಳೆ.

೫. ಮರಣ ಪ್ರಮಾಣದಲ್ಲಿಯೂ ಈ ಅಂತರವು ಹೆಚ್ಚಾಗಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ದೇಶದಲ್ಲಿನ ನಗರದ ಸ್ತ್ರೀಯರ ಮೃತ್ಯು ಪ್ರಮಾಣವು ೭.೧ (ಪ್ರತಿ ಸಾವಿರಕ್ಕೆ) ರಷ್ಟಿದ್ದರೆ, ಗ್ರಾಮೀಣ ಸ್ತ್ರೀಯರ ಪ್ರಮಾಣವು ೧೩.೨ (ಪ್ರತಿ ಸಾವಿರಕ್ಕೆ) ರಷ್ಟಿದೆ. ನಿಕೃಷ್ಟ ಆಹಾರ, ವೈದ್ಯಕೀಯ ಸೌಲಭ್ಯದ ಕೊರತೆ, ಬಡವರ್ಗದ ಸ್ತ್ರಿಯರಲ್ಲಿನ ಕನಿಷ್ಠ ದರ್ಜೆ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ, ಪರಂಪರಾಗತವಾದ ದೃಷ್ಟಿಕೋನ, ಗರ್ಭಧಾರಣೆ, ಅಜ್ಞಾನ, ಉಪವಾಸ, ಅನಾರೋಗ್ಯ ಮತ್ತು ಆ ಬಗ್ಗೆ ದುರ್ಲಕ್ಷ್ಯ ಇವೇ ಮೊದಲಾದ ಕಾರಣಗಳು ಇಂಥ ಪರಿಸ್ಥಿತಿಗೆ ಜವಾಬ್ದಾರವಾಗಿವೆ.

೬. ಮಾತೆ ಮತ್ತು ಮಕ್ಕಳನ್ನು ಹೆರುವ ಆರೋಗ್ಯದ ನಿರ್ದೇಶನವೆಂದರೆ ಚಿಕ್ಕಮಕ್ಕಳ ಮರಣ ಪ್ರಮಾಣ. ಪ್ರತಿ ಸಾವಿರಕ್ಕೆ ಎಷ್ಟು ಎಂಬುದು ಒಂದು ವರ್ಷದಲ್ಲಿ ಪ್ರತಿ ಸಾವಿರಕ್ಕೆ ಮಕ್ಕಳ ಮರಣ ಗ್ರಾಮೀಣ ಭಾಗದಲ್ಲಿ ೧೧೪ ರಷ್ಟು. ಅದೇ ನಗರ ಪ್ರದೇಶದಲ್ಲಿ ಅದು ೬೫ರಷ್ಟು ಅಲ್ಲದೆ ಹೆಣ್ಣುಮಕ್ಕಳ ಮರಣ ಪ್ರಮಾಣವು ನಗರ ಪ್ರದೇಶದಲ್ಲಿ ೬೦ ಆಗಿದ್ದರೆ, ಗ್ರಾಮೀಣ ಭಾಗದಲ್ಲಿ ೧೧೪ರಷ್ಟಿದೆ.

೭. ೧೯೮೧ರ ಜನಗಣತಿಯ ಅನುಸಾರ ನಗರ ಪ್ರದೇಶದಲ್ಲಿ ಸ್ತ್ರೀಯರು ನೌಕರಿಯಲ್ಲಿದ್ದು ಮತ್ತು ಹಣಗಳಿಕೆಯ ಕ್ಷೇತ್ರದಲ್ಲಿ ಸಹಭಾಗಿತ್ವ ಹೊಂದಿದ್ದ ಪ್ರಮಾಣವು ಶೇಕಡ ೮.೨ರಷ್ಟಿತ್ತು. ಅದೇ ಗ್ರಾಮೀಣ ಸ್ತ್ರೀಯರ ಸಂಖ್ಯೆ ಶೇಕಡ ೨೩.೧೮ ರಷ್ಟಿತ್ತು. ಇದರಲ್ಲಿ ಪ್ರಮುಖವಾಗಿ ಹೊಲಗೆಲಸ, ಕೂಲಿಕೆಲಸ, ಹಯನು ವ್ಯವಸಾಯಗಳಂತಹ ದಿನನಿತ್ಯದ ಕಾಯಕದಲ್ಲಿಯೇ ತೊಡಗಿಕೊಂಡಿದ್ದರು. ಜೊತೆಗೆ ಅಸಂಘಟಿತ ಕ್ಷೇತ್ರಗಳಲ್ಲಿ ತೊಡಗಿ ಕೊಂಡಿದ್ದವರೂ ಇದರಲ್ಲಿ ಸೇರಿಕೊಂಡಿರುತ್ತಾರೆ. ಅಲ್ಪ ವೇತನದ ಈ ಕೆಲಸಗಳಲ್ಲಿ ಯಾವ ಜವಾಬ್ದಾರಿಯೂ ಇರುವುದಿಲ್ಲ. ದೈಹಿಕ ಶ್ರಮದ ಕೆಲಸ ಮತ್ತು ವಿಪರೀತ ದುಡಿಮೆ-ಇವೇ ಗ್ರಾಮೀಣ ಸ್ತ್ರೀಯರ ದುಡಿಮೆಯ ಸ್ಥಿತಿಯಾಗಿ ಬಿಟ್ಟಿದೆ. ವೇತನ ಶ್ರೇಣಿ, ಬೋನಸ್, ರಜೆಗಳು ಅನಾರೋಗ್ಯದ ರಜೆಗಳು, ಮೆಟರ್ನಿಟಿ (ಮಾತೃತ್ವ)ಯ ರಜೆಗಳು, ಪೆನಷನ್ (ನಿವೃತ್ತಿ ವೇತನ) ಇತ್ಯಾದಿ ಸೌಲಭ್ಯಗಳಿಲ್ಲದಂತಹ ಇದು ಪೂರ್ಣ ಬೇರೆಯದ್ದೇ ಆದ ಕ್ಷೇತ್ರ. ಗ್ರಾಮೀಣ ಸ್ತ್ರೀಯರಿಗೆ ಹೆಚ್ಚಿನ ಆರ್ಥಿಕ ಲಾಭವಂತೂ ಸಾಧ್ಯವಾಗುವುದಿಲ್ಲ.