ಪತಿಯ ದೃಷ್ಟಿಕೋನದಲ್ಲಿ ಭೋಗವಸ್ತು

ಗ್ರಾಮೀಣ ಸ್ತ್ರೀಯರು ಅತ್ತೆಯ ಮನೆಯ ಬದುಕನ್ನು ಅನುಭವಿಸುತ್ತಲೇ ಆನಂದವಾಗಿದ್ದೇನೆಂದು ಪತಿಗೆ ತೋರಿಸುವುದಕ್ಕಾಗಿ ಹಸನ್ಮುಖಿಗಳಾಗಿರಬೇಕಾಗುತ್ತದೆ.  ಹಣೆಯ ಮೇಲಣ ಕುಂಕುಮವು ಪತ್ನಿಯ ಭಾಗ್ಯ. ಒಲೆ ಮತ್ತು ಪುತ್ರಭಾಗ್ಯ- ಇವೇ ಆಕೆಯ ಜೀವನ ಮಂತ್ರ. ಇದೇ ಪರಿಧಿಯೊಳಗೆ ಸದಾ ತಿರುಗುತ್ತಿರುತ್ತಾಳೆ ಗ್ರಾಮೀಣ ಸ್ತ್ರೀ. ಆ ಕಾರಣ ಸ್ವಾತಂತ್ರ್ಯದ ಶ್ವಾಸ, ಸ್ವಂತ ನಿರ್ಣಯದ ಧ್ಯಾಸ, ಸ್ವತ್ವವನ್ನು ಕಾಪಾಡಿಕೊಳ್ಳುವ ತೃಷೆ, ಸ್ವಾಭಿಮಾನ ಮತ್ತು ನಿರ್ಧಾರಗಳ ಸಾಕ್ಷ್ಯ ಅಥವಾ ಸತ್ಯ ಇವು ಯಾವುವನ್ನೂ ಸಂರಕ್ಷಿಸಿಕೊಳ್ಳಲಾರದವರಾಗಿದ್ದಾರೆ.

ಗ್ರಾಮೀಣ ಸ್ತ್ರೀಯರಿಗೆ ಪತಿಯಿಂದ ಸುಖ ಸಿಗುತ್ತದೆ, ಅದು ಕೇವಲ ಶಾರೀರಿಕ ಪಾತಳಿಯದ್ದು ಮಾತ್ರ. ಸಂತಾನ ಪ್ರಾಪ್ತಿ ಮತ್ತು ವಂಶಾಭಿವೃದ್ದಿಗಾಗಿ ವೈವಾಹಿಕ ಸಂಬಂಧವು ಆವಶ್ಯಕವೆಂಬುದು ಸರ್ವೆಸಾಮಾನ್ಯ ಸಂಗತಿ. ಪುತ್ರನೇ ಹುಟ್ಟಬೇಕು  ಎಂಬುದರೆಡೆಗೇ ಸದಾ ಸೆಳೆತ ಎಲ್ಲರಿಗೂ. ಸಂತಾನ ಪ್ರಾಪ್ತಿ ಎಂಬುದು ಪತಿ-ಪತ್ನಿಯರಿಬ್ಬರ ಮಿಲನದ ಪರಿಪಾಕ ರೂಪವಾಗಿದ್ದರೂ, ಒಂದೊಮ್ಮೆ ಹೆಣ್ಣುಮಗು ಜನಿಸಿತೆಂದರೆ ಅದರ ದೋಷ-ರೋಷವೆಲ್ಲ ಪತ್ನಿಯ ಮೇಲೆಯೇ. ಒಂದು ರೀತಿಯೊಳಗೆ ಇದು ಅಲಿಖಿತವಾಗಿ ನಿತ್ಯ ಚಾಲ್ತಿಯಲ್ಲಿ ಇರುವ ನಿಯಮ. ಗ್ರಾಮೀಣ ಸ್ತ್ರೀಯರ ವಿಷಯದಲ್ಲಿ ಇದು ಕಪ್ಪು ಶಿಲೆಯ ಮೇಲಿನ ರೇಖೆಯಾಗಿರುವುದಂತೂ ನಿಶ್ಚಿತ. ಪುತ್ರನು ಜನಿಸುವವರೆಗೂ ಅವಳ ಮೇಲೆ ಗರ್ಭತ್ವವನ್ನು ಒತ್ತಾಯದಿಂದ ಹೇರಲಾಗುತ್ತದೆ. ಒಂದೊಮ್ಮೆ ಪುತ್ರ ಜನಿಸದೆ ಇದ್ದರೆ ಮತ್ತೊಂದು ವಿವಾಹವಾಗಿ ಸವತಿಯರನ್ನು ತರುವುದು ಕೂಡ ಒಂದು ಸಾಮಾನ್ಯ ರೂಢಿ. ದ್ವಿಪತ್ನಿತ್ವದ ಪ್ರತಿಬಂಧಕ ಕಾನೂನನ್ನೂ ಕೂಡಾ ಇಲ್ಲಿ ಲೆಕ್ಕಿಸುವುದಿಲ್ಲ. ವಂಶಾಭಿವೃದ್ದಿಗಾಗಿ ಗಂಡು ಸಂತಾನವನ್ನು ನೀಡದ ಸ್ತ್ರೀಯರೆಲ್ಲರೂ ಇಂಥ ತೀವ್ರ ಪೀಡನೆಯನ್ನು ಎದುರಿಸಬೇಕಾದ್ದು ಅನಿವಾರ್ಯ. ಕೊಟ್ಟಿಗೆಯಲ್ಲಿನ ಪಶುಗಳಿಗಿಂತಲೂ ಕಡಿಮೆ ಕಿಮ್ಮತ್ತು ಅವಳಿಗೆ.

ಪುತ್ರನಾಗಬೇಕು ಎಂಬ ಒಂದು ಧ್ಯಾಸದಿಂದಲೇ ಪತಿಯಾದವನು ವಿಷಯಾಸಕ್ತನೂ ಮತ್ತು ಅಸಂಯಮಿಯೂ ಆಗುತ್ತಾ ಹೋಗುತ್ತಿರುವನು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಪತ್ನಿಯ ಶರೀರವು ದುರ್ಬಲವಾಗುತ್ತಾ ಹೋಗುತ್ತದೆ ಈ ಕಾರಣವಾಗಿ. ಆದರೂ ಆಕೆ ಈ ಲೈಂಗಿಕ ಅಮಾನುಷತ್ವದ ತಕರಾರನ್ನು ತನ್ನ ಮೇಲಿನ ಯಾರಲ್ಲಿ ಮಾಡುವುದು? ಕೇವಲ ಮನಸ್ಸಿನೊಳಗೆ ಹೇಳಿಕೊಳ್ಳುತ್ತಿರಬಹುದಷ್ಟೆ:

ರೂಪು ಇಲ್ಲವೆ ಲಾವಣ್ಯ | ಬಿಡದೆಂದು ಮಾಳಿಗೆಯನು |
ಜೀವನವಿದನು | ನಾಶಗೈಯುತಿದೆ ನಿತ್ಯವೂ |
ರಾತ್ರಿಯೂ ಹಗಲೂ ಬಿಡದೆ | ಚಂದನ ಬಳ್ಳಿಗೆ
ಸುತ್ತುಗಟ್ಟಿ ಅಂಟಿರುವುದು | ಸಾಯುವುದಕಾಗಿಯೇ ಸರ್ಪವು |

ಗ್ರಾಮೀಣ ಸ್ತ್ರೀಯರಿಗೆ ಪುರುಷೀ ಅಹಂಕಾರ, ಪತಿಶಾಹಿ ಮತ್ತು ತನ್ನನ್ನು ಕೇಳುವವರು ಯಾರೂ ಇಲ್ಲ ಎಂಬ ಮನೋಭಾವದಿಂದ ಪತಿಗಳಿಂದ ಬರುವ ಹುಕುಮ್‌ಶಾಹಿ (ಆಜ್ಞಾಧಾರಕತೆ) ಮುಂತಾಗಿ ಎಲ್ಲದರ ಬಾಯಿಗೆ ತುತ್ತಾಗಬೇಕಾದ್ದು ಸಾಮಾನ್ಯ. ಸ್ತ್ರೀಯರ ಲೈಂಗಿಕ ಸಂಬಂಧಿ ವಿಷಯಗಳಲ್ಲಿ ಅವರ ಅಡಚಣೆಗಳ ಬಗ್ಗೆ ಕೇಳುವಂಥ ಗಂಡಂದಿರು ಬಹಳೇ ವಿರಳ. ಬದಲಾಗಿ ಆ ಕಾರಣ ಅನೇಕ ರೀತಿಯ ನಿಂದನೆಗಳನ್ನು ಕೇಳಬೇಕಾಗುತ್ತದೆ. ಅನ್ಯಥಾ ಅದೂ ಕೂಡ ಒಂದು ರೀತಿಯ ಬಲತ್ಕಾರವೆಂದೇ ಭಾವಿಸುವುದು ಇಂದು ಅಗತ್ಯ. ಗ್ರಾಮೀಣ ಸ್ತ್ರೀಯರು ಇಂದಿಗೂ ತಮ್ಮ ಬದುಕಿನಲ್ಲಿರುವ ಇಂಥ ಅಸಂತುಷ್ಟ ಸಂಬಂಧವನ್ನು ಎದುರಿಸಿ ಅನುಭವಿಸುತ್ತಿರುವುದು ಒಂದು ದಿವ್ಯ ಪ್ರಕ್ರಿಯೆಯೇ ಆಗಿದೆ.

ಇಂಥ ಪೀಡನೆಗಳು ಯಾವ ಗ್ರಾಮೀಣ ಸ್ತ್ರೀಯರಿಗೆ ಅಸಹ್ಯವೆನಿಸುತ್ತದೆಯೋ ಅವರು ಉಪಾಧಿಗೊಳಗಾಗುತ್ತಾರೆ. ಮೈಯಲ್ಲಿ ಏನೋ ಗಾಳಿ ಸೇರಿಕೊಂಡಿದೆ ಎಂದೆನ್ನಲಾಗುತ್ತದೆ ಇದನ್ನು. ಆದರೆ ನಿಜವಾದ ಕಾರಣವನ್ನು ಹೇಳುವುದಾದರೂ ಹೇಗೆ? ಯಾರಿಗೆ ಅರ್ಧವಾಗುತ್ತದೆ ಇದು? ವಿರುದ್ಧವಾಗಿ ಪೂಜೆ-ಪುನಸ್ಕಾರ, ಮಂತ್ರ-ತಂತ್ರ, ಭೂತ ಬಿಡುಸುವಿಕೆಯೇ ಮೊದಲಾದ ಬಗೆಗಳು ಆರಂಭವಾಗುತ್ತದೆ. ಈ ಬಗೆಯ ಯಾತನಾಮಯ ಜೀವನವನ್ನು ಎದುರಿಸುವುದು ಅನಿವಾರ್ಯವಾಗುತ್ತದೆ. ಪತ್ನೀ ಸುಖವನ್ನು ಕೊಡಲಾರದಂಥ ಸ್ತ್ರೀಯರು ಅಸಮರ್ಧರು ಎಂದು ಪತಿ ಗೃಹದವರೆಲ್ಲ ಮಾತನಾಡಲು ಆರಂಭಿಸುತ್ತಾರೆ. ಆದರೆ ಅದಕ್ಕೆ ಕಾರಣೀಭೂತರಾದ ಪತಿ ಮಹಾಶಯರು ಮಾತ್ರ ಸಮಾಜದ ಸಹಾನುಭೂತಿಗೆ ಸದಾ ಪಾತ್ರರು. ಅವರಿಗೆ ಬೇರೆ ಮದುವೆಯಾಗುವುದಕ್ಕೆ ಇದೊಂದು ರೀತಿಯಲ್ಲಿ ಸಾಮಾಜಿಕ ಅನುಜ್ಞೆ.

ಗ್ರಾಮೀಣ ಸಮಾಜವು ಎಂದೂ ಲೈಂಗಿಕ ವರ್ತನೆಯನ್ನು ವಿಶೇಷ ವ್ಯಕ್ತಿಗತ ಸಂಗತಿಯೆಂದು ಮಾನ್ಯ ಮಾಡಿರುವುದಿಲ್ಲ. ಅಸಂಗತ ವಿವಾಹ, ಅಯಶಸ್ವಿ ವಿವಾಹ ಇವುಗಳೆಲ್ಲದರ ಹಂಚನ್ನು ಪತ್ನಿಯ ಮೇಲೆ ಒಡೆಯುವಂಥ ಪ್ರವೃತ್ತಿ ಎಲ್ಲೆಡೆ ಸರ್ವೇಸಮಾನ್ಯ. ಸ್ತ್ರೀ ವಿಷಯವಾಗಿನ ನೀತಿಮತ್ತೆಯು ಕೇವಲ ಈ ಇಬ್ಬಗೆಯದಷ್ಟೇ ಅಲ್ಲ; ಅದು ತೀರಾ ಅಪ್ರಾಮಾಣಿಕವಾದುದೂ ಹೌದು. ಪುರುಷರು ಯಾವ ಸಾಮಾನ್ಯ ನೀತಿಮತ್ತೆಯ ಮತ್ತು ಲೈಂಗಿಕ ನೀತಿಮತ್ತೆಯ ಡೋಲನ್ನು ಬಾರಿಸುತ್ತಿರುವರೋ ಅದು ಸ್ತ್ರೀಯರನ್ನು ಮಾತ್ರವೇ ಉದ್ದೇಶಿಸಿರುವುದಾಗಿದೆ. ಲೈಂಗಿಕ ಪಾರತಂತ್ರ್ಯದಿಂದ ವಿವಾಹ ಎಂಬುದು ಸ್ತ್ರೀಯರ ವಿಷಯದಲ್ಲಿ ಅನಿವಾರ್ಯವಾಗಿ ಬಿಟ್ಟಿದೆ. ಇಲ್ಲಿ ಸ್ತ್ರೀ ಕೇವಲ ಚರ್ಮದ ಚೀಲವಾಗಿದ್ದಾಳೆ. ಸ್ತ್ರೀಯರ ನೀತಿಮತ್ತೆಯನ್ನು ನಾಲ್ಕು ಶಬ್ದಗಳಲ್ಲಿ ಹೀಗೆ ಹೇಳಬಹುದು. ‘ವಿವಾಹ ಪೂರ್ವದಲ್ಲಿ ಕೌಮಾರ್ಯಬಂಧನ ಮತ್ತು ವಿವಾಹೋತ್ತರದಲ್ಲಿ ಪತಿ ನಿಷ್ಠೆ.’

ಗ್ರಾಮೀಣ ಭಾಗದಲ್ಲಿ ಪುರುಷರು ಹೆಣ್ಣನ್ನು ಇಟ್ಟುಕೊಂಡಿರುವುದು ಸಾಮಾನ್ಯ. ಅದು ಒಂದರ್ಥದಲ್ಲಿ ಪುರುಷತ್ವದ, ಗಂಡುಸುತನದ ಲಕ್ಷಣ. ಅಲ್ಲದೆ ಪುರುಷರು ವಿವಾಹ ಪೂರ್ವದಲ್ಲೇ ಲೈಂಗಿಕ ಸುಖವನ್ನು ಪಡೆದಿದ್ದರೂ ಅದು ಕ್ಷಮ್ಯ. ಆದರೆ ತಾನು ವಿವಾಹವಾಗ ಬಯಸುವವಳು ಮಾತ್ರ ‘ಕೋರಿ ಕುಮಾರಿಕಾ’(ಕನ್ಯೆ)ಳೇ ಆಗಿರಬೇಕು. ಪುರುಷರ ವಿವಾಹಬಾಹ್ಯ ಸಂಬಂಧವನ್ನು ದುರ್ಲಕ್ಷಿಸಲಾಗುವುದು. ನಿಜವಾಗಿಯೂ ಹೇಳಬೇಕೆಂದರೆ ಸ್ತ್ರೀ-ಪುರುಷರಿಬ್ಬರಿಗೂ ಒಂದೇ ಸಮಾನವಾದ ನೀತಿಮತ್ತೆಯ ತಕ್ಕಡಿ ಇರಬೇಕು. ಆ ನೀತಿಮತ್ತೆಗಳು ಮಾನವೀಯ ನೆಲೆಗಳ್ಳುಳ್ಳವಾಗಿರುವುದು ಅವಶ್ಯ. ಇದರ ಅರ್ಧವೆಂದರೆ ಮಾನವೀಯ ಸ್ಖಲನಶೀಲತೆಯ ವಿಚಾರವೇ ಅದರಲ್ಲಿ ಪೂರ್ಣವಾಗಿ ಇರಬೇಕು. ತಪ್ಪುಗಳನ್ನು ಸರಿಪಡಿಸಿಕೊಳ್ಳುವುದಕ್ಕೂ ಅನುವು ಮಾಡಿಕೊಡುವಂತೆ ಇರಬೇಕು. ಆದರೆ ಗ್ರಾಮೀಣ ಭಾಗಗಳಲ್ಲಿ ಕಾಣುವುದು ಮಾತ್ರ ಬಹಳಷ್ಟು ಮೌಲ್ಯರಹಿತವೂ ಕಾಲಬಾಹ್ಯವೂ ಆದ ವಿಚಾರಗಳು. ಕೇವಲ ಪತ್ನಿಯ ಚಾರಿತ್ರ್ಯ ಸಂಬಂಧಿ ಸಂಶಯವನ್ನು ಮುಖ್ಯವಾಗಿಟ್ಟುಕೊಂಡು ಅನೇಕ ಸ್ತ್ರೀಯರನ್ನು ಮನೆಗಳಿಂದ ಹೊರಹಾಕಲಾಗಿದೆ.

ಹೀಗೆ ಪರಿತ್ಯಕ್ತವಾದ ಸ್ತ್ರೀಯರ ದುಃಖವನ್ನು ಸ್ವತಃ ಅವರನ್ನು ನಾನು ನೇರವಾಗಿ  ಭೇಟಿಯಾಗುವುದರ ಮೂಲಕ ಕಂಡು ಕೊಂಡಿದ್ದೇನೆ. (ಇದು ಲೋಕಪ್ರಭ ಪತ್ರಿಕೆಯಲ್ಲಿ ಪ್ರಕಟವಾಗಿತ್ತು). ಗಂಡುಮಗುವು ಹುಟ್ಟಲಿಲ್ಲ, ವರದಕ್ಷಿಣೆ ಕಡಿಮೆಯಾಯಿತು, ಮಾನ ಮರ್ಯಾದೆ ಎಂಬುದೇ ಇಲ್ಲ, ಬೇರೆ ಪುರುಷರೊಂದಿಗೆ ಸಂಬಂಧವನ್ನು ಇಟ್ಟುಕೊಂಡಿದ್ದಾಳೆ ಎಂಬಿತ್ಯಾದಿ ವಿಚಾರಗಳು, ಸಂಶಯಗಳು ಅವರ ಪರಿತ್ಯಕ್ತತೆಗೆ ಕಾರಣವಾಗಿದೆ. ಅಲ್ಲದೆ ತವರಿನವರ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಡಬೇಕು, ದೀಪಾವಳಿ ಹಬ್ಬಕ್ಕೆ ಮಾವನ ಮನೆಯವರು ಉಂಗುರವನ್ನು ಕೊಡಲಿಲ್ಲ, ಪತಿಯ ಹೊರ ಖಯಾಲಿಗಳಿಗೆ ವಿರೋಧ ಮಾಡಿದಳು, ಪತ್ನಿಯ ಹೊಟ್ಟೆಯಲ್ಲಿನ ಗರ್ಭವು ಸರಿಯಾಗಿಲ್ಲ ಎಂಬ ಸಂಗತಿ, ಅತ್ತೆಗೆ ತಿರುತಿರುಗಿ ಮಾತನಾಡುತ್ತಾಳೆ, ಅವಳು ಮಾಡುವ ಕೆಲಸ ಸಮಂಜಸವಾಗಿಲ್ಲ- ಎಂಬಿವೇ ಹಲವು ಬೇರೆ ಬೇರೆ ಕಾರಣಗಳನ್ನು ಇಟ್ಟುಕೊಂಡು ಸ್ತ್ರೀಯರನ್ನು ತ್ಯಜಿಸಲಾಗಿದೆ. ಅಂಥವರಿಗೆ ತವರು ಮನೆಯವರಿಂದಲೂ ಆಧಾರವಿಲ್ಲ. ವಿವಾಹ ವಿಚ್ಛೇದನ ಮತ್ತು ಜೀವನಾಂಶಗಳ ಸಂಬಂಧದ ಕಾಯಿದೆಗಳ ಬಗೆಗಿನ ತಿಳಿವಳಿಕೆಯೂ ಇಲ್ಲವೇ ಇಲ್ಲ. ಅದಲ್ಲದೆ ಹಾಗೆ ತಿಳಿದಿದ್ದರೂ ಅವುಗಳನ್ನು ಕೈಗೊಳ್ಳುವಷ್ಟು ಆರ್ಥಿಕ ಬೆಂಬಲವನ್ನಾಗಲಿ ಮತ್ತು ಮಾನಸಿಕ ಆಧಾರವನ್ನಾಗಲಿ ಕೊಡುವಂಥವರು ಯಾರೂ ಇಲ್ಲ.

ಹೀಗೆ ಪರಿತ್ಯಕ್ತರಾದವರು ಬೇರೆ ವಿವಾಹವನ್ನೂ ಮಾಡಿಕೊಳ್ಳಲಾಗುವುದಿಲ್ಲ. ಸಮಾಜವು ಅವರನ್ನು ಕೆಟ್ಟ ದೃಷ್ಟಿಯಿಂದಲೇ ನೋಡುತ್ತಿರುತ್ತದೆ. ದಾರಿದ್ರ್ಯ, ಮಗನ ವಿವಂಚನೆ, ಶರೀರ ಧರ್ಮದಿಂದಾಗಿ ಬರುವ ಕಾಮವಾಸನೆಯನ್ನು ಸ್ಥಿಮಿತದಲ್ಲಿಟ್ಟುಕೊಳ್ಳಲು ನಡೆಸುವ ಹೋರಾಟ ಅನಿವಾರ್ಯ. ಅಲ್ಲದೆ ಸಾಮಾಜಿಕ ಉಪೇಕ್ಷೆ, ಗೂಂಡಾ ಮತ್ತು ಇತರೆ ಜನರಿಂದ ಉಂಟಾಗುವ ಉಪದ್ರವಗಳು, ಸತತ ಒತ್ತಡ ಮತ್ತು ಕಾಯಮ್ಮಾದ ಭೀತಿದಾಯಕ ವಾತಾವರಣ- ಈ ಮಾದಲಾದವುಗಳಿಂದಾಗಿ ಅವರು ನಿರ್ಗತಿಕವಾದ ಬದುಕಿನಲ್ಲಿಯೇ ಇರಬೇಕಾಗುತ್ತದೆ.

ವ್ಯಸನಿ ಪುರುಷರ ಪೀಡನೆ

ಗ್ರಾಮೀಣ ಭಾಗದಲ್ಲಿ ಗಂಡನ ವ್ಯಸನಾಧೀನತೆಗಳಿಂದಾಗಿ ಅನೇಕ ಸ್ತ್ರೀಯರು ನರಕಮಯ ಜೀವನವನ್ನು ಅನುಭವಿಸುತ್ತಲೇ ಸಹಿಸಿಕೊಳ್ಳುವುದು ಅನಿವಾರ್ಯವಾಗಿದೆ. ಅಂಥದನ್ನು ವಿರೋಧಿಸುವ ಶಕ್ತಿ ಸ್ತ್ರೀಯರಿಗೆ ಇಲ್ಲ. ಒಂದೊಮ್ಮೆ ವಿರೋಧಿಸಿದರೆ ಹೊಡೆತ ಬಡಿತಗಳಿಗೆ ಮತ್ತು  ಬಾಹ್ಯ ಖಯಾಲಿಗಳಿಗೆ ಆಮಂತ್ರಣ ಕೊಟ್ಟಂತೆಯೇ ಸರಿ. ಎಷ್ಟೋ ಜನರಿಗೆ ಪ್ರತಿರಾತ್ರಿಯೂ ಒದೆತ, ಗುದ್ದುಗಳ ಪ್ರಸಾದವಿಲ್ಲದೆ ಬೆಳಗಾಗುವುದೇ ಇಲ್ಲ. ಇಂಥ ಅತ್ಯಂತ ನೀರಸ ಮತ್ತು ನಿಸ್ಸಾರದ ಬದುಕನ್ನು ತನ್ನ ಪಾಲಿಗೆ ಪಡೆದಿರುವಂಥ ಸ್ತ್ರೀಯರು ನಿಜವಾಗಿಯೂ ಸಾವಿನ ಮೇಲೆ ಸಾವು ಬಂದಡರಿರುವಂಥ ಬದುಕಿನಲ್ಲಿ ತೇಕುತ್ತಿದ್ದಾರೆ. ಎಂತಲೇ ಅವರು ದುಃಖದಿಂದ ಉದ್ಗರಿಸುತ್ತಾರೆ:

ಸಮುದ್ರದ ತಟದಲ್ಲಿ | ಮಣ್ಣನು ಸುತ್ತಿಕೊಂಡಿರುವ ಬಳ್ಳಿ |
ದೇವರ ನಿರ್ದಯೆ | ಕಹಿಬಳ್ಳಿ ಕೈ ಸೇರಿತು |

ಗಂಡನನ್ನು ದೂಷಿಸುವುದಕ್ಕಿಂತ ತನ್ನ ಅದೃಷ್ಟವನ್ನೇ ಹಳಿದುಕೊಳ್ಳುತ್ತಾ ಕೂರುವ ಸರದಿ ಬರುತ್ತದೆ. ದೈವವಾದವೊಂದು ಸ್ತ್ರೀಯರ ಮನಸ್ಸಿನೊಳಕ್ಕೆ ಪಸರಿಸಿದೆ, ಗಂಡನೊಂದಿಗೆ ಸವಿಯಾಗಿ ಮಾತನಾಡಿ ಸರಿದಾರಿಗೆ ತರುವಂಥ ಸಹನಶೀಲತೆಯ ಪ್ರಯತ್ನ ಮತ್ತು ಪ್ರೇಮವನ್ನು ಕೊಡುವ ಪದ್ಧತಿಯೇ ಸ್ವೀಕಾರಾರ್ಹ. ಅವರು ಮದುವೆಯಾಗಿ ನೀಡುತ್ತಾರೆ. ಆದರೆ ಬಹುಸಂಖ್ಯಾತರ ಅನುಭವವಿದು:

ಜೀವಕ್ಕೆ ಜೀವನವ ಕೊಡುವೆನೆಂದೆ  | ಅದನು ಕೊಟ್ಟೂ ನೋಡಿದೆ |
ನೀರಿನೊಳಗಿನ ಕಲ್ಲು | ಕೊನೆಗೂ ಕೊರಡಾಗಿಯೇ ಇತ್ತು |
ಒಡೆದು ಚಂದನವನು | ಮಾಡಿದೆನದನು ಹನ್ನೆರಡು ತುಂಡು |
ಸ್ತ್ರೀಯರ ಜಾತಿಯೇ ಮರುಳು | ಪುರುಷರಲ್ಲಿರುವ ಮಮತೆಯು ಇನಿತು ಮಾತ್ರ ||

ಗ್ರಾಮೀಣ ಸ್ತ್ರೀಯರಿಗೆ ಇಂಥ ಅನುಭವವಿದ್ದರೂ ಅವರು ಸಹಿಸಿಕೊಂಡೇ ಇರುತ್ತಾರೆ. ತವರು ಮನೆಯಲ್ಲಿಯಂತೂ ಯಾವ ಅಧಿಕಾರವೂ ಇಲ್ಲ. ಚಿಕ್ಕಂದಿನಲ್ಲಿ ತಂದೆಯ ಅಂಜಿಕೆಯಲ್ಲಿ, ತಾರುಣ್ಯದಲ್ಲಿ ಗಂಡನ ಅಂಕೆಯಲ್ಲಿ ಮತ್ತು ವೃದ್ಧಾಪ್ಯದಲ್ಲಿ ಮಕ್ಕಳ ತಾಳದಲ್ಲಿ ತಂತಿಯ ಮೇಲೆ ಕಸರತ್ತು ಮಾಡುವುದಾಗಿದೆ ಸ್ತ್ರೀಯರ ಬದುಕು. ಇದೇ ಗ್ರಾಮೀಣ ಸ್ತ್ರೀಯರ ನಿತ್ಯದ ಸ್ಥಿತಿ.