ಕುಮಾರಿ ಮಾತೆಯರ ಸಮಸ್ಯೆಗಳು

ಭಾರತೀಯ ಸ್ತ್ರೀಯರ ಸಮಸ್ಯೆಗಳ ಬಗ್ಗೆ ಚರ್ಚಿಸುವಾಗ ಕುಮಾರಿ ಮಾತೆಯರ ಪ್ರಶ್ನೆಗಳನ್ನು ಕಡೆಗಣಿಸುವುದಕ್ಕೆ ಸಾಧ್ಯವಿಲ್ಲ. ‘ಕುಮಾರಿ ಮಾತಾ’ ಎಂಬ ಸಂಜ್ಞೆ ಅಥವಾ ವಿಶೇಷಣಗಳು ಭಾರತೀಯರಿಗೆ ಹೊಸದಾದುವೇನಲ್ಲ. ಕುಂತಿಯೇ ಮೊದಲ ಪ್ರಸಿದ್ಧ ‘ಕುಮಾರಿ ಮಾತಾ,’ ಆದರೆ ಇಂದು ಕುಮಾರಿ ಮಾತೆಯರ ಸಮಸ್ಯೆಗಳು ಅತ್ಯಂತ ಕ್ರೂರ ಮತ್ತು ಜಟಿಲವಾದುವುಗಳಾಗಿವೆ. ಅಲ್ಲದೆ  ಈ ಪ್ರಶ್ನೆಗಳು ಇಂದು ಉಗ್ರ ಸ್ವರೂಪವನ್ನು ಧಾರಣೆ ಮಾಡಿಕೊಳ್ಳತ್ತಲಿವೆ ಎಂಬುದು ಗಮನೀಯ. ವಿವಾಹದ ವಯಸ್ಸು ಹೇಗೆ ಹೆಚ್ಚಾಗುತ್ತಾ ಹೋಗುತ್ತಿದೆಯೋ ಹಾಗೆ ಈ ಸಮಸ್ಯೆಗಳೂ ಬೆಳೆಯುತ್ತಲಿವೆ. ಕುಮಾರಿ ಮಾತೆಯರು ಎಂಬುದಾಗಿ ಇವರನ್ನು ಧಿಃಕ್ಕರಿಸುತ್ತಿರುವ ಸಮಾಜ, ಅವಳನ್ನು ವೇಶ್ಯೆ ಎಂಬುದಾಗಿ ಸ್ವೀಕರಿಸುವುದಕ್ಕೆ ಸಿದ್ಧವಿದೆ ಎಂಬ ವಸ್ತುಸ್ಥಿತಿಯನ್ನು ನಿರಾಕರಿಸಲು ಬರುವುದಿಲ್ಲ. ಲೈಂಗಿಕ ಭಾವನೆಗಳು ಮತ್ತು ಪುರುಷನ ಬಗೆಗಿನ ಆಸಕ್ತಿ ಇವು ನೈಸರ್ಗಿಕವಾದುವುಗಳು. ಆದರೆ ಇತ್ತೀಚೆಗೆ ವಿವಾಹಗಳು ತಡವಾಗಿ ಆಗುತ್ತಿವೆ. ವಯಸ್ಸಿಗೆ ಬಂದ ಹೆಣ್ಣುಮಕ್ಕಳ ವಿವಾಹವು ನಾನಾ ಕಾರಣಗಳಿಂದ ವಿಳಂಬವಾಗುತ್ತಿದೆ; ಆದರೆ ಈ ಹಂತದಲ್ಲಿ ಅವರಲ್ಲಿನ ಕಾಮವಿಕಾರ ಮಾತ್ರ ಜಾಗೃತವಾಗಿಯೇ ಇರುತ್ತದೆ ಎಂಬುದು ಗಮನಾರ್ಹ. ಅಶ್ಲೀಲ ಸಾಹಿತ್ಯ, ಮುಚ್ಚುಮರೆಯಿಲ್ಲದ ಮತ್ತು ಕಣ್ಣುಸೆಳೆಯುವ ಚಲನ ಚಿತ್ರಗಳು, ತಂದೆಯಾದಿಗಳ ಹಗುರ ವರ್ತನೆ, ನೈತಿಕ ಮೌಲ್ಯಗಳ ಉಲ್ಟಾಪಲ್ಟ, ಅನೈತಿಕ ಸಂಕಲ್ಪಗಳಲ್ಲಿನ ಬದಲಾವಣೆ, ಸ್ವಾತಂತ್ರ್ಯದಲ್ಲಿನ ಸೈರಾಚಾರಕ್ಕೆ ಹೊಂದುವಂಥ ಅನುಕೂಲಮಯ ಅರ್ಧ, ಲೈಂಗಿಕ ವಿಷಯಗಳಲ್ಲಿನ ಅಜ್ಞಾನ ಇವುಗಳಿಂದಾಗಿ ತರುಣಿಯರ ಮನಸ್ಸಿನಿಲ್ಲಿ ಅನೇಕ ಬಗೆಯ ತಲ್ಲಣಗಳು ಉಂಟಾಗುತ್ತವೆ. ಅವುಗಳೊಂದಿಗೆ ಲೈಂಗಿಕ ವಿಕೃತಿ, ಕಳ್ಳಪ್ರವೃತ್ತಿ, ಆ ವಿಷಯವಾಗಿನ ಹಾತೊರೆಯುವಿಕೆ ಹಾಗೂ ಆ ಬಗ್ಗೆ ರಹಸ್ಯವನ್ನು ಕಾಪಾಡಿಕೊಳ್ಳುವ ಪ್ರವೃತ್ತಿ, ಪಾಲಕರ ವಿಷಯದಲ್ಲಿನ ಅವಿಶ್ವಾಸ ಮತ್ತು ಆಪ್ತರನ್ನು ಸಾಧಿಸುವಲ್ಲಿ ಉಂಟಾದ ಅಪಯಶಸ್ಸು- ಇವುಗಳಿಂದಾಗಿ ಕುಮಾರಿ ಮಾತೆಯರ ಸಂಖ್ಯೆಯು ಹೆಚ್ಚಾಗುತ್ತಿದೆ ನಮ್ಮ ದೇಶದಲ್ಲಿ.

ಪಾಶ್ಚಾತ್ಯ ದೇಶಗಳಲ್ಲಿ ಕುಮಾರಿ ಮಾತೆಯರಿಗೆ ಮಾರ್ಗದರ್ಶನ ಮಾಡವುದರೊಂದಿಗೆ ಕಾಯಿದೆಗೆ ಹೊರತಾದ ಮಕ್ಕಳನ್ನು ಸಾಕುವ ತಯ್ಯಾರಿಯನ್ನು ಸಮಾಜ ಮತ್ತು ಸರಕಾರವು ಹಮ್ಮಿಕೊಂಡಿದೆ. ಅತ್ತಕಡೆ ನೀತಿ ಮೌಲ್ಯಗಳ ವಿಚಾರವನ್ನು ಮಹತ್ವದ್ದಾಗಿ ಒಪ್ಪಿಕೊಳ್ಳಲಾಗುತ್ತಿಲ್ಲ. ಹೇಗೆ ಮಾನವನಿಗೆ ಅನ್ನ, ವಸ್ತ್ರ ಮತ್ತು  ವಾಸಕ್ಕೆ ಆಶ್ರಯಗಳು ಅವಶ್ಯವಾಗಿರುವುವೋ ಹಾಗೆಯೇ ಲೈಂಗಿಕ ಹಸಿವನ್ನು ಅನುಭೋಗಿಸುವುದೂ ಕೂಡಾ ನಿಸರ್ಗಥರ್ಮವೇ. ಪಾಶ್ಚಾತ್ಯರು ಈ ವಿಚಾರಗಳನ್ನು ಒಪ್ಪಿಕೊಂಡಿರುವ ಕಾರಣದಿಂದ ಸಮಾಗಮದ ಸುಖವನ್ನು ಪಡೆಯುವಲ್ಲಿ ಅನೈತಿಕತೆಯು ತಲೆದೋರುತ್ತದೆ ಎಂದು ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ ಸುಮಾರು ೧೫ ರಿಂದ ೧೯ರ ವಯೋವರ್ಗದವರಲ್ಲಿನ ಶೇ. ೬೦ರಷ್ಟು ಹೆಣ್ಣುಮಕ್ಕಳು ಲೈಂಗಿಕ ಸಮಾಗಮ ಪಡೆದವರಾಗಿರುತ್ತಾರೆ ಎಂಬುದು ಗಮನಾರ್ಹ ಸಂಗತಿ. ಭಾರತದಲ್ಲಿ ಈ ಬಗೆಯ ಶೇಕಡವಾರು ಸಂಖ್ಯೆ ಇಲ್ಲದಿದ್ದರೂ ಅದು ಬೆಳೆಯುತ್ತಲಿದೆ ಎಂಬುದು ಮಾತ್ರ ಸತ್ಯವಾದ ಸಂಗತಿ. ಕಾರಣ ಕುಮಾರಿ ಮಾತೆಯರ ಸಂಖ್ಯೆ ಎಷ್ಟಿದೆ? ಎಂಬ ದೃಷ್ಟಿಯಿಂದ ಗಮನಿಸುವುದಕ್ಕೆ ಆ ಬಗ್ಗೆ ಖಚಿತ ಮಾಹಿತಿಯು ಉಪಲಬ್ಧವಾಗುವುದಿಲ್ಲ. ಏಕೆಂದರೆ ಕುಮಾರಿ ಮಾತೆಯರು ಸಾಮಾಜಿಕವಾಗಿ ಬಹಿರಂಗದಲ್ಲಿ ಕಾಣಿಸಿಕೊಳ್ಳದೇ ಇರುವುದು. ವಿವಾಹಪೂರ್ವ ಸಂಬಂಧದಲ್ಲಿ ಉಂಟಾದ ಗರ್ಭಧಾರಣೆಯನ್ನು ಹೆಣ್ಣುಮಕ್ಕಳೇ ತೆರುವುಗೊಳಿಸಿಕೊಳ್ಳುತ್ತಾರೆ. ಇತ್ತೀಚೆಗೆ ಗರ್ಭಪಾತವು ಕಾಯಿದೆ ಬದ್ಧವಾಗಿದೆ. ಆದರೆ ವಿವಾಹಪೂರ್ವ ಗರ್ಭಪಾತವು ಅತ್ಯಂತ ಗುಪ್ತವಾಗಿ ನಡೆಸಬೇಕಾದಂಥ ಕಾರ್ಯ. ಕಾರಣ ಇಲ್ಲಿ ಆ ಹೆಣ್ಣುಮಗಳ ಭವಿಷ್ಯದ ದೃಷ್ಟಿಯೊಂದಿಗೆ, ಆ ಮನೆತನದ ಮರ್ಯಾದೆಯ ಸಂಗತಿಗಳೂ ಸೇರಿಕೊಂಡಿರುತ್ತವೆ. ಹಾಗಾಗಿ ಈ ಸಮಯವನ್ನು ಉಪಯೋಗಿಸಿ ಕೊಳ್ಳುವಲ್ಲಿ ನಗರಗಳಲ್ಲಿ ಅಲ್ಲದಿದ್ದರೂ ತಾಲೂಕಿನ ಸ್ಥಳಗಳಲ್ಲಿ ವೈದ್ಯ ಸಮೂಹ ಶೋಷಣೆಗೆ ಸಿದ್ಧವಾಗಿದೆ. ಇಂಥ ಸಂಬಂಧಗಳ ಸಮಸ್ಯೆಯಲ್ಲಿ ಸಿಲುಕಿದ ಕುಮಾರಿ ಮಾತೆಯರ ಮುಕ್ತಿಗಾಗಿ ಅವಳ ತಂದೆತಾಯಯರಿಂದ ಬಲವಂತವಾಗಿ ಹೆಚ್ಚೆಚ್ಚು ಹಣವನ್ನು ಫಿಜಿನ ರೂಪದಲ್ಲಿ ವಸೂಲು ಮಾಡುತ್ತಿದ್ದಾರೆ. ಅಂದರೆ ಅರೆಶಿಕ್ಷಣ ಪಡೆದ ಹೆಣ್ಣುಮಕ್ಕಳು, ಹಳ್ಳಿಯಲ್ಲಿನ ಯುವತಿಯರು, ಗುಡಿಸಲುಗಳು ಮತ್ತು ಹಳೆಯ ಗಲ್ಲಿಗಳಲ್ಲಿ ಇರುವ ವಯಸ್ಸಿಗೆ ಬಂದ ಹೆಣ್ಣುಮಕ್ಕಳಿಗೆ ಹಾಗೂ ಒಳ್ಳೆಯ ಮನೆತನದ ಹೆಣ್ಣುಮಕ್ಕಳಿಗೆ ಮಾಸಿಕ ಸರದಿಯ ಅನಂತರ ಗರ್ಭಧಾರಣೆಯಾಗುತ್ತದೆ ಎಂಬ ತಿಳಿವಳಿಕೆಯೂ ಇಲ್ಲವಾಗಿದೆ.

ಆಗತಾನೆ ವಯಸ್ಸಿಗೆ ಬಂದ ಹೆಣ್ಣುಮಕ್ಕಳಿಗೆ ಒಂದೆಡೆ ಲೈಂಗಿಕ ಸುಖದ ವಿಷಯವಾಗಿ ಆಕರ್ಷಣೆ ಉಂಟಾಗುತ್ತಿದ್ದರೆ, ಮತ್ತೊಂದೆಡೆ ಸಂಸ್ಕಾರದ ಕಾರಣವಾಗಿ ಒಂದು ಬಗೆಯ ಗೊಂದಲ ಮತ್ತು ಮಾನಸಿಕ ಭೀತಿಯು ಅನಾಮಿಕವಾದ ರೀತಿಯಲ್ಲಿ ಮೂಡಿರುತ್ತದೆ. ಆದರೂ, ಯಾವುದೋ ಒಂದು ಕ್ಷಣದಲ್ಲಿ ಅವರು ಮೋಹಕ್ಕೆ ಬೀಳುವುದುಂಟು. ವಿಶೇಷವಾಗಿ ಅವರ ಮನಸ್ಸಿನಲ್ಲಿ ಉಂಟಾದ ಈ ಸಂಘರ್ಷದ ಬಗ್ಗೆ ತಮ್ಮ ತಾಯಿಯಲ್ಲಿಯೂ ಹೇಳುವುದಕ್ಕೆ ಅವರಿಗೆ ಸಾಧ್ಯವಾಗುವುದಿಲ್ಲ. ಇನ್ನು ಹಿರಿಯ ಸಹೋದರಿಗೂ ಅಷ್ಟು  ಹತ್ತಿರವಾಗಿರುವುದಿಲ್ಲ. ಸಮವಯಸ್ಕರಾದ ಗೆಳತಿಯರು ಕೂಡ ಇದರ ಬಗ್ಗೆ ಸರಿಯಾದ ಸಲಹೆ ಕೊಡುವುದರ ಬಗ್ಗೆ ಖಾತ್ರಿ ಇಲ್ಲ. ಅಂಥ ಸಂದರ್ಭದಲ್ಲಿ ಅವರು ಲೈಂಗಿಕ ಸುಖವನ್ನು ಉಪಭೋಗಿಸುವ ತಪ್ಪಿಗೆ ಮುಂದಾಗುವರು. ಕೆಲವು ಬಾರಿ ಮನೆಯ ಅಕ್ಕ ಪಕ್ಕ ಇರುವಂಥ ತರುಣರು, ಹತ್ತಿರದ ಸಂಬಂಧಿಗಳು, ಹೊಲದ ಕೆಲಸ, ಮನೆಕಟ್ಟುವ ಕೆಲಸ ಮತ್ತು ಇತರ ಕಾರಣಗಳಿಂದ ತಾರುಣ್ಯಕ್ಕೆ ಬಂದಿರುವ ಹೆಣ್ಣುಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸುವವರು ಉದ್ದೇಶಪೂರಕವಾಗಿ ಅಡಚಣೆಯುಂಟು ಮಾಡಿ ಅವರನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ. ಕುಮಾರಿ ಮಾತೆಯರಾದ ಅವರು ಬಹಿರಂಗವಾಗಿ ಜೀವನ ನಡೆಸುವಂತಿಲ್ಲ. ಆದಕಾರಣ ಅಂಥವರ  ಗರ್ಭವನ್ನು ತೆಗೆದುಹಾಕುವುದಕ್ಕಾಗಿ ವಿಪರೀತವಾದ ಗ್ರಾಮೀಣ ಉಪಾಯಗಳನ್ನು ಪ್ರಯೋಗಿಸಿ ಆ ಯುವತಿಯ ಶರೀರದ ಮೇಲೆ ಘಾಸಿಯುಂಟು ಮಾಡುತ್ತಾರೆ. ಈ ಹಿನ್ನಲೆಯಲ್ಲಿ ಹೊಡೆತ, ಬಡಿತ ಮತ್ತು ಹಿಂಸೆಯೂ ಆಗುವುದುಂಟು. ಅವರ ಮನಃಸ್ಥಿತಿಯನ್ನು ಯಾರೂ ಗಮನಕ್ಕೆ ತೆಗೆದು ಕೊಳ್ಳುವುದಕ್ಕೆ ಸ್ವಲ್ಪವೂ ಸಿದ್ಧರಿರುವುದಿಲ್ಲ. ಇಂಥ ತರುಣಿಯರ ಶಾರೀರಿಕ ಪೀಡನೆ, ಮಾನಸಿಕ ಪ್ರಹಾರ, ಸಮಾಗಮದ ವಿಷಯದ ಬಗೆಗಿನ ತಿರಸ್ಕಾರ, ವಿವಾಹದ ಬಗ್ಗೆ ತಿರಸ್ಕಾರ, ಪುರುಷ ಜಾತಿಯ ಬಗ್ಗೆ ಆತ್ಯಂತಿಕ ಜುಗುಪ್ಸೆಯಂಥ ಸ್ಥಿತಿಯು ಉಂಟಾಗುತ್ತದೆ. ಇಲ್ಲವೆ ಅವರು ಅತ್ಯಂತ ಚಂಚಲರು, ಪತಿಯೊಂದಿಗೆ ಏಕನಿಷ್ಠರಾಗಿ ಇರದಂಥವರು, ವಾಸನೆಯ ಸಂತೃಪ್ತಿಗಾಗಿ ತಾಮಸ ಪ್ರವೃತ್ತಿಯಿಂದ ಎಂಥ ಮಾರ್ಗವನ್ನಾದರೂ ಅವಲಂಬಿಸಿ ಪ್ರಮಾದಮಯವಾದ ಜೀವನದೆಡೆಗೆ ಹೊರಳುವುದನ್ನೂ ನೋಡಬಹುದಾಗಿದೆ.

ಸಾಮಾಜಿಕ ಮೌಲ್ಯಗಳು ಬದಲಾಗುತ್ತಲಿವೆ; ಆದರೆ ಆ ನೆಲೆಯ ಆಧಾರಗಳನ್ನು ಪರಿಗಣಿಸಿದರೆ ಶಾಶ್ವತ ಮಾನವೀಯ ಕಲ್ಯಾಣದೊಂದಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತಲಿದೆ ಇದರಲ್ಲಿ. ಇನ್ನು ಕುಮಾರಿ ಮಾತೆಯರ ಮಗುವಿನ ದೋಷವಿಲ್ಲ, ಸಮಾಜ ಧುರೀಣರೇನೋ ಇದನ್ನು ಮಾನ್ಯಮಾಡಿದ್ದಾರೆ! ಆದರೆ ಈ ಪ್ರಶ್ನೆಯು ಕೇವಲ ಮಾನ್ಯತೆಯನ್ನು ಕೊಟ್ಟುದಷ್ಟರಿಂದ ಪರಿಹರಿಸುವಷ್ಟು ಸಾಮಾನ್ಯವಾದುದಲ್ಲ. ಕುಮಾರಿ ಮಾತೆಯರ ವಿಷಯದಲ್ಲಿ ಯಾವಾಗಲೂ ಗರ್ಭಪಾತವೊಂದೇ ಪರಿಹಾರವಾಗುವುದಿಲ್ಲ. ಒಂದು ದೃಷ್ಟಿಯಲ್ಲಿ ಕುಮಾರಿಕೆಯರ ಮಾತೃತ್ವವೂ ಇಂದಿಗೂ ಸಮಾಜದಲ್ಲಿ ಅಮಾನ್ಯ. ಸಾಮಾಜಿಕ ದೃಷ್ಟಿಯಿಂದ ಅದನ್ನು ಮಹಾಪಾಪ ಮತ್ತು ಅಕ್ಷಮ್ಯ ಅಪರಾಧವೆಂದೇ ತಿಳಿಯಲಾಗಿದೆ. ಆದರೂ ಮತ್ತೊಂದು ದೃಷ್ಟಿಯಿಂದ ಕುಮಾರಿ ಮಾತೆಯರ ವಿಷಯದಲ್ಲಿ ಘಟಿಸಿರುವ (ತಿಳಿದೋ ತಿಳಿಯದೆಯೋ) ದುರ್ದೈವಿಯಾದ ಅಪಘಾತವೆಂಬ ವಸ್ತುನಿಷ್ಠತೆ ಯಿಂದ ಅವರೆಡೆಗೆ ನೋಡಿದರೆ, ಅವರ ಸಮಸ್ಯೆಗಳನ್ನು ಸಹಾನುಭೂತಿಯಿಂದ ವಿಚಾರಿಸಲು ಅನುಕೂಲವಾಗುತ್ತದೆ. ಕುಮಾರಿ ಮಾತೆಯರು ತಲೆ ಎತ್ತಿ ಬದುಕಲು ಸಾಧ್ಯವಾಗುತ್ತಿಲ್ಲ ಎಂಬುದು ಇಂದಿನ ನಿಜವಾದ ಸಂಗತಿಯಾದರೂ, ಇಂಥ ಕುಮಾರಿಕೆಯರನ್ನು ಪಾಪಿಗಳು, ಅಕ್ಷಮ್ಯ ತಪ್ಪಿತಸ್ಥರು ಎಂದು ನಿರ್ಣಯಿಸಬಾರದು. ಅಲ್ಲದೆ ಸಾಮಾಜಿಕ ದೃಷ್ಟಿಯಿಂದ ಅವರನ್ನು ತಿರಸ್ಕರಿಸಲೂ ಬಾರದು ಕುಮಾರಿಮಾತೆ ಎಂಬುದು ಪ್ರತಿಷ್ಠೆಯ ಮತ್ತು ಸನ್ಮಾನೀಯವಾದ ಸ್ಥಿತಿಯೇನಲ್ಲ; ಹಾಗೆಯೇ ಅಪ್ರತಿಷ್ಠೆಯ ಕಾರಣವಾಗಿ ಆತ್ಮಹತ್ಯೆಯೊಂದನ್ನು ಬಿಟ್ಟು ಅನ್ಯಮಾರ್ಗವಿಲ್ಲ ಎಂಬಂಥ ಅಪಮಾನಾಸ್ಪದ ವಿಷಯವೂ ಅಲ್ಲ. ಗರ್ಭಪಾತವು ಒಂದು ತಾತ್ಪೂರ್ತಿಕ ಪರಿಹಾರ ಮಾರ್ಗವಾಗಿ ಹಾದಿತಪ್ಪಿದ ತರುಣಿಯರಿಗೆ ವೈವಾಹಿಕ ಮತ್ತು ಸನ್ಮಾನದಿಂದ ಬದುಕುವ ಸಂಧಿಯನ್ನು ಒದಗಿಸುವ ಉಪಯುಕ್ತ ಮಾರ್ಗವಹುದು. ಆದರೆ ಇಂಥ ಸ್ಥಿತಿಯಲ್ಲಿ ಸಿಲುಕಿದ ಎಲ್ಲರಿಗೂ ಆ ಮಾರ್ಗವನ್ನು ಅವಲಂಬನೆ ಮಾಡುವುದಕ್ಕೆ ಸುಲಭವಾಗಿ ಸಾಧ್ಯವಾಗುತ್ತದೆ ಎಂದೇನಿಲ್ಲ. ಶ್ರದ್ದಾನಂದ ಆಶ್ರಮದಂಥ ಸಮಾಜ ಸೇವಾ ಸಂಸ್ಥೆಯು ಕಳೆದ ೫೦ ವರ್ಷಗಳಲ್ಲಿ ಸುಮಾರು ೫,೦೦೦ ಬಾಲಕರನ್ನು ಪೋಷಿಸಿದೆ ಮತ್ತು ಅಷ್ಟೇ ಸಂಖ್ಯೆಯ ಮಾತೆಯರಿಗೆ ತಮ್ಮ ಜೀವನವನ್ನು ಸ್ಥಿರಗೊಳಿಸಿಕೊಳ್ಳುವಲ್ಲಿ ಸಹಾಯ ಮಾಡಿದೆ. ಕಲ್ಕತ್ತಾದ ಮದರ್ ಧೆರೆಸ್ಸಾ ಅವರು ಕೂಡಾ ಸಾವಿರಾರು ಮಕ್ಕಳ ವಿಷಯದಲ್ಲಿ ಈ ಕಾರ್ಯವನ್ನೇ ಮಾಡುತ್ತಾ ಬಂದಿದ್ದಾರೆ.

ಈ ಎಲ್ಲಾ ಕಾರಣವಾಗಿ ಕುಮಾರಿ ಮಾತೆಯರ ಪ್ರಶ್ನೆಗಳನ್ನು ಸಮಾಜವು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಅಲ್ಲದೆ ಇಂಥ ದುರ್ದೈವ ಪರಿಸ್ಥಿತಿಯು ಹೆಣ್ಣುಮಕ್ಕಳಿಗೆ ಬಂದೊದಗದಂತೆ ಎಚ್ಚರಿಕೆಯನ್ನು ವಹಿಸುವುದೂ ಬಹಳ ಆವಶ್ಯಕ. ಪಾಶ್ಚಾತ್ಯ ದೇಶಗಳಲ್ಲಿ ಕುಮಾರಿ ಮಾತೆ ಎಂಬುದು ಸ್ವೀಕೃತವಾಗಿರುವ ಸಮಸ್ಯೆ. ಹಾಗಾಗಿ ನಮ್ಮಲ್ಲಿ ಇದನ್ನು ಇನ್ನು ಮುಂದೆ ನಿರಾಕರಿಸುವ ಪ್ರಶ್ನೆಯಾಗಿಸಬೇಕಾಗಿಲ್ಲ. ನಿರ್ಗತಿಕ ಮಕ್ಕಳ ಸಂಖ್ಯೆ ಬೆಳೆಯುತ್ತಿರುವುದನ್ನು ಲಕ್ಷ್ಯಕ್ಕೆ ತೆಗೆದುಕೊಂಡರೆ, ಕುಮಾರಿ ಮಾತೆಯರ ಸಂಖ್ಯೆಯು ಹೆಚ್ಚಾಗಿರುವುದು ಸ್ಪಷ್ಟವಾಗುತ್ತದೆ. ಹಾಗಾಗಿ ವಯಸ್ಸಿಗೆ ಬಂದ ಹೆಣ್ಣುಮಕ್ಕಳಿಗೆ ಲೈಂಗಿಕ ಜ್ಞಾನವನ್ನು ನೀಡವುದು ಆವಶ್ಯಕವೆನಿಸುತ್ತದೆ. ಅಲ್ಲದೆ ಪಾಲಕರು ತಾರುಣ್ಯಾವಸ್ಥೆಗೆ ಬಂದಿರುವ ತಮ್ಮ ಹೆಣ್ಣುಮಕ್ಕಳೊಂದಿಗೆ ಅತ್ಯಂತ ವಿಶ್ವಾಸದಿಂದ ಮತ್ತು ಆತ್ಮೀಯತೆಯಿಂದ ವರ್ತಿಸುವ ಮೂಲಕ ಸಂದರ್ಭಾನುಸಾರವಾಗಿ ಮಾಹಿತಿಯನ್ನು ತಿಳಿಯುವುದು ಅವಶ್ಯ. ಈ ಹಂತದಲ್ಲಿ ಯಾವುದೇ ಬಗೆಯ ಸಂಕೋಚವನ್ನು ಇಟ್ಟುಕೊಳ್ಳುವಂತಿಲ್ಲ. ಅಥವಾ ಈ ರೀತಿಯಲ್ಲಿ ನಡೆದುಕೊಳ್ಳುವುದರಿಂದ ಮಗಳಿಗೆ ಅನೈತಿಕತೆಯೆಡೆ ಹೊರಳುವುದಕ್ಕೆ ದಾರಿ ತೋರಿಸಿದಂತಾಗುತ್ತದೆ ಎಂದು ಯೋಚಿಸುವಂತೆಯೂ ಇಲ್ಲ. ದೋಷವು ಕೇವಲ ಕುಮಾರಿ ಮಾತೆಯರದೇ ಆಗಿರದೆ ಅವಳೊಂದಿಗೆ ಅದಕ್ಕಿಂತಲೂ ಹೆಚ್ಚಾಗಿ ಜವಾಬ್ದಾರನಾಗುವ ಘಟಕವೆಂದರೆ ಪುರುಷ! ಆದರೆ ಅವನು ಮಾತ್ರ ಅತ್ಯಂತ ಸುರಕ್ಷಿತನಾಗಿ ಪಾರಾಗುತ್ತಾನೆ. ಪಿತೃತ್ವದ ಜವಾಬ್ದಾರಿಯನ್ನು ತಳ್ಳಿಹಾಕಿ ಬಿಡುಗಡೆ ಹೊಂದುತ್ತಾನೆ. ಅವನನ್ನು ತಪ್ಪಿತಸ್ಥನನ್ನಾಗಿ ಮಾಡುವಲ್ಲಿ ಸಾಕಷ್ಟು ಸ್ಪಷ್ಟ ಸಾಕ್ಷ್ಯಗಳು ಸಿಗುವುದಿಲ್ಲ. ಆದರೆ ಸ್ತ್ರೀಯಾದವಳು ಮಾತ್ರ ಅದರ ಅಂಕುರ(ಮೊಳಕೆ)ವನ್ನು ಉದರದಲ್ಲಿ ಬೆಳೆಸುತ್ತಾಳೆ. ಜೊತೆಗೆ ಸಾಮಾಜಿಕ ದೃಷ್ಟಿಯಿಂದ ಅಧಃಪತನ ಹೊಂದಿದ ಕೆಟ್ಟ ನಡತೆಯವಳು ಮತ್ತು ದಾರಿ ತಪ್ಪಿದವಳು ಎಂದು ಹೇಳಲಾಗುತ್ತದೆ. ಎಂತಲೇ ಕುಮಾರಿ ಮಾತೆಯ ಕಡೆಗೆ ನೋಡುವ ದೃಷ್ಟಿಯು ಅವಶ್ಯ ಸ್ವಚ್ಛವಾದುದಾಗಿರಬೇಕು. ಅದರ ಒಳಗಿನಿಂದಲೇ ಕಾರಣಗಳನ್ನು ವಸ್ತುನಿಷ್ಠವಾಗಿ ಅರಿಯುವುದಕ್ಕೆ ಸಾಧ್ಯವಾಗುತ್ತದೆ.

ಕುಮಾರಿ ಮಾತೆಯರ ಜವಾಬ್ದಾರಿಯನ್ನು ಸಮಾಜದ ವತಿಯಿಂದ ಸರಕಾರವೇ ಕೈಗೆತ್ತಿಕೊಳ್ಳಬೇಕೆಂದು ಹೇಳುವುದೇ ಸರಿ. ಆದರೆ ಸದ್ಯೆ ಆ ದೃಷ್ಟಿಯಿಂದ ಸರ್ಕಾರವು ಹೆಚ್ಚು ಕಾರ್ಯ ಪ್ರವೃತ್ತವಾಗಿಲ್ಲ. ಅಲ್ಲದೆ ಸರ್ಕಾರದಿಂದ ಆರ್ಥಿಕ ಸಹಾಯವನ್ನು ಅಪೇಕ್ಷಿಸುವುದು ಅಯೋಗ್ಯವಾದುದೇನಲ್ಲ. ವ್ಯವಸ್ಥಾಪನೆಯೇ ಮೊದಲಾಗಿ ಇತರ ಬಗೆಯ ಆಶ್ರಮ ಸೇವೆಯನ್ನು ಮಾಡಲು ಸ್ವಯಂ ಸೇವಕರಂತೆ ಮುಂದೆ ಬರಬೇಕಾಗಿವೆ. ಸಾಮಾಜಿಕ ಸಂಸ್ಥೆಗಳು. ಇಂಥ ಅನಾಧಾಶ್ರಮಗಳು ಮತ್ತು ಮಹಿಳಾ ಸಂಸ್ಥೆಗಳಿಗೆ ಸಾಮಾಜಿಕ ಮಾನ್ಯತೆಯೂ ಸಿಗಬೇಕಾದ್ದು ಅವಶ್ಯ. ಅವರ ಸಹಾಯಕ್ಕಾಗಿ ದಾನಶೂರರು ಹಾಗೂ ಶಿಮಂತ ವ್ಯಕ್ತಿಗಳು ಮುಂದಾಗುವುದು ಅಗತ್ಯವಿದೆ. ‘ಕುಮಾರಿ ಮಾತೆ’ ಎಂಬ ಕಾರಣ ಜೀವನ ಅಸ್ಥಿರವಾದಂಥವರಿಗೆ ಸ್ಥೆರ್ಯ ನೀಡಬೇಕು ಮತ್ತು ಪಿತೃತ್ವವನ್ನು ಬಹಿರಂಗವಾಗಿ ಸ್ವೀಕರಿಸಲಾಗದ ನಾಮರ್ದ (ಷಂಡ) ಪುರುಷರ ವಿಕೃತ ಮನೋವೃತ್ತಿಯಿಂದ ಜನಮವೆತ್ತಿದ ನಿಷ್ಪಾಪದ ಮಕ್ಕಳ ಪೋಷಣೆ ಅತ್ಯಂತ ದುಬಾರಿಯಾದುದಾದರೂ ಕೈಗೆತ್ತಿಕೊಳ್ಳಬೇಕು. ಅಲ್ಲದೆ ಭಾವನಾತ್ಮಕ ದೃಷ್ಟಿ ಮತ್ತು ಸಾಮಾಜಿಕ ದೃಷ್ಟಿಯಿಂದಲೂ ಇದೊಂದು ಕಗ್ಗಂಟಾಗಿರುವ ಸಮಸ್ಯೆ. ಆದರೂ ಕುಮಾರಿ ಮಾತೆಯನ್ನು ಸಮಾಜದಲ್ಲಿ ಗೌರವಾನ್ವಿತ ಸ್ತ್ರೀಯೆಂದು ಸ್ವೀಕರಿಸಲು ಧಿಃಕ್ಕರಿಸುತ್ತದೆ. ಬದಲಾಗಿ ವೇಶ್ಯೆಯ ನೆಲೆಯಿಂದ ಅವಳನ್ನು ಸ್ವೀಕರಿಸುವುದಕ್ಕೆ ಸಿದ್ಧವಿರುವ ಇಂಥ ಸಾಮಾಜಿಕ ಪುರುಷ ಪ್ರಧಾನ ಸಂಸ್ಕೃತಿಯ ದ್ವಿಮುಖ ನೀತಿಯು ತಿರಸ್ಕರಣೀಯವಾದುದು. ನಮ್ಮ ದೇಶದಲ್ಲಿ ಕುಮಾರಿ ಮಾತೆಯರ ಬೆಳೆಯುತ್ತಿರುವ ಸಂಖ್ಯೆಯಿಂದಾಗಿ ಆತ್ಮಹತ್ಯೆಯ ಪ್ರಮಾಣವೂ ಸ್ತ್ರೀಯರಲ್ಲಿ ಹೆಚ್ಚಾಗುತ್ತ್ತಿರುವುದು ಗಮನಾರ್ಹ. ಒಮ್ಮೆಲೆ ವಿಚಲಿತಗೊಂಡು, ಭವಿಷ್ಯತ್ ಕಾಲದ ಬಗ್ಗೆ ಅತ್ಯಂತ ನಿರಾಶರಾಗಿ, ಹತಬಲರಾಗಿ ಮತ್ತು ಉದಾಸೀನತೆಯಿಂದ ವೇಶ್ಯೆಯರಾಗಿ ಬದುಕುವುದಕ್ಕಿಂತ ಜೀವ ಕಳೆದಕೊಂಡು ಈ ಎಲ್ಲ ಬಗೆಯ ಉಪೇಕ್ಷೆಗಳಿಂದ ಮುಕ್ತಿ ಹೊಂದುವಂಥ ಆ ಮಾರ್ಗವನ್ನು ಹತ್ತಿರ ಮಾಡಿಕೊಳ್ಳುವಂಥ ಕುಮಾರಿ ಮಾತೆಯರು ನಿಜವಾಗಿ, ದುರ್ದೈವಿ ಜೀವಿಗಳೇ ಅಲ್ಲವೆ?