ತ್ಯಜಿಸಲ್ಪಟ್ಟ ಸ್ತ್ರೀಯರ ಪ್ರಶ್ನೆಗಳು

ತ್ಯಜಿಸಲ್ಪಟ್ಟವಳು ಅಂದರೆ ಗಂಡನನ್ನು ಬಿಟ್ಟಿರುವ ಸ್ತ್ರೀ. ಈ ತ್ಯಾಗ ಉಂಟಾಗಿರುವುದು ಒಂದೇ ದೃಷ್ಟಿಯಿಂದ ಇಬ್ಬರು ವ್ಯಕ್ತಿಗಳ ಮಟ್ಟಿಗಷ್ಟೇ. ಕಾಯಿದೆಯ ಅನುಸಾರ ಸಮ್ಮತಿ ಇಲ್ಲದಿದ್ದರೂ, ಆದರೆ ಸ್ವಯಂ ನಿರ್ಣಾಯಕವಾದಂತಹ ವಿವಾಹ ವಿಚ್ಛೇದನವಿದು. ಇಂಥ ಪರಿಸ್ಥಿತಿಯಲ್ಲಿ ಬಿಟ್ಟುಬಿಡುವ ವ್ಯಕ್ತಿ ತನ್ನ ಜೋಡಿದಾರ ವ್ಯಕ್ತಿಗೆ ತಾನು ಈ ಬಗೆಯ ವಿಚ್ಛೇದನವನ್ನು ಒಪ್ಪಿಕೊಳ್ಳುವುದಕ್ಕೋ ಅಥವಾ ವಿಚಾರ ಮಾಡುವುದಕ್ಕೋ ಹೀಗೆ ಯಾವುದೇ ನಿರ್ಣಯ ತೆಗೆದುಕೊಳ್ಳಲು ಅವಕಾಶ ನೀಡುವುದಕ್ಕೆ ಸಿದ್ಧನಿರುವುದಿಲ್ಲ. ಏನೇ ಆದರೂ ಸರಿಯೇ ಇಬ್ಬರು ಒಂದು ಕಡೆ ಇರುವ ಸಾಧ್ಯತೆಯೇ ಇಲ್ಲ ಎಂಬಂಥ ಮನಃಸ್ಥಿತಿಯಿಂದ ತೆಗೆದುಕೊಂಡ ನಿರ್ಣಯದಿಂದಾಗಿಯೇ ಇಂಥ ಸ್ಥಿತಿಯು ನಿರ್ಮಾಣವಾಗುತ್ತದೆ. ಮನಸ್ಸು ಮುರಿಯಿತು ಮತ್ತು ಸಹವಾಸ ಅಸಹ್ಯವಾಯಿತು ಎಂದೊಡನೆ ವಿವಾಹ ಬಂಧನವನ್ನು ಮುರಿದುಬಿಡಲಾಗುತ್ತದೆ.

ವಿವಾಹ ಬಂಧನದ ನಂತರದಲ್ಲಿ ಒಬ್ಬರಿಂದ ಒಬ್ಬರು ಸಂಬಂಧ ಹರಿದುಕೊಳ್ಳುವುದಕ್ಕೆ ನೋಡುವಂತಹ ವ್ಯಕ್ತಿಗಳ ಈ ಪ್ರಶ್ನೆಯು ಕೇವಲ ಅವರಿಬ್ಬರ ಮಟ್ಟಿಗಷ್ಟೆ ಸೀಮಿತವಾಗುವುದಿಲ್ಲ. ಅದರಿಂದ ಮಕ್ಕಳು, ಕುಟುಂಬ ಸಂಸ್ಥೆಗಳ ಮೇಲಾಗುವ ಪರಿಣಾಮವನ್ನು ನಿರ್ಲಕ್ಷಿಸುವುದಕ್ಕೆ  ಬರುವುದಿಲ್ಲ, ಹಾಗಾಗಿ ಇದನ್ನು ಒಂದು ಸಾಮಾಜಿಕ ಪ್ರಶ್ನೆಯೆಂದೇ ಭಾವಿಸಿ ಅತ್ತಕಡೆಗೆ ನೋಡಬೇಕಾಗುತ್ತದೆ. ತ್ಯಜಿಸಲ್ಪಟ್ಟ ಸ್ತ್ರೀಯರ ಪ್ರಶ್ನೆಗಳು ಎಂದರೆ ಕೇವಲ ಕೈಹಿಡಿದ ಗಂಡನು ತ್ಯಜಿಸಿದ್ದಾನೆ ಎಂಬ ಶಬ್ದಾರ್ಧದಲ್ಲಿಯೇ ಗ್ರಹಿಸಲು ಬರುವುದಿಲ್ಲ. ಕೆಲವು ಮನೆಗಳಲ್ಲಿ ಅನೇಕ ಬಾರಿ ಪತ್ನಿಯನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸಲಾಗುತ್ತಿರುತ್ತದೆ. ಹಾಗಾಗಿ ಆ ಸ್ತ್ರೀಯು ಪತಿಯ ಮನೆಯನ್ನು ಬಿಟ್ಟು ಹೋಗದೆ ಅನ್ಯಮಾರ್ಗವೇ ಇರುವುದಿಲ್ಲ. ಇಂಥ ಸ್ತ್ರೀಯರನ್ನು ಕೂಡಾ ತ್ಯಜಿಸಲ್ಪಟ್ಟ ಸ್ತ್ರೀಯರೆಂದೇ ಗ್ರಹಿಸಬೇಕಾಗಿದೆ ನಾವು. ಕಾರಣ ಅವಳು ಶಾರೀರಿಕವಾಗಿ ಅಲ್ಲದಿದ್ದರೂ ಮಾನಸಿಕವಾಗಿ ಮಾತ್ರ ಪರಿತ್ಯಕ್ತರೇ ಆಗಿರುತ್ತಾರೆ, ಬೇಡವಾಗಿರುತ್ತಾರೆ ಮತ್ತು ಅವಳನ್ನು ಹಾಗೆ ಹಿಂಸಿಸುವಲ್ಲಿ ಗಂಡ ಮತ್ತು ಇತರರು ರಾಕ್ಷಸೀ ಆನಂದವನ್ನು ಪಡೆಯುತ್ತಿರುತ್ತಾರೆ.

ವಿವಾಹ ವಿಚ್ಛೇದನದ ವಿಷಯದಲ್ಲಿ ವಿಶೇಷವಾಗಿ ಪರಿತ್ಯಕ್ತ ಸ್ತ್ರೀಯರ ವಿಚಾರವನ್ನು ಮಾಡುವಾಗ ಒಂದು ಮಹತ್ವದ ವಿಷಯವನ್ನು ಗಮನಿಸಬೇಕು. ಅದೆಂದರೆ ಪತಿಯು ಮನಸಿಕವಾಗಿ ಅಥವಾ ಪ್ರತ್ಯಕ್ಷ ದೈಹಿಕವಾಗಿ ಅವಳನ್ನು ಬಿಟ್ಟುಬಿಟ್ಟ ಮೇಲೆ ವಿಚ್ಛೇದನ ಪಡೆಯುವುದಕ್ಕೆ ಆ ಸ್ತ್ರೀಗೆ ಅವಕಾಶವಿರುತ್ತದೆ. ಅದನ್ನು ಪಡೆಯುವುದಕ್ಕಾಗಿ ತಗುಲುವ ಕೋರ್ಟ್ ಕಚೇರಿಗಳ ಖರ್ಚಿಗೆ ಹಣದ ಅನುಕೂಲತೆಯನ್ನು ಮಾಡಿಕೊಳ್ಳುವಂತಹ ಸಾಮರ್ಥ್ಯವು ಇಲ್ಲದಿರುವುದರಿಂದ ಕಾಯಿದೆ ಬದ್ಧವಾಗಿ ವಿಚ್ಛೇದನವನ್ನು ಪಡೆಯುವುದಕ್ಕೆ ಆಗುವುದಿಲ್ಲ. ಅಲ್ಲದೆ, ಈ ಸಂಬಂಧವಾಗಿ ಸಂಬಂಧಿಕರಾರೂ ಸಹಾಯ ಮಾಡುವುದಕ್ಕೆ ಉತ್ಸುಕರಾಗಿರುವುದಿಲ್ಲ. ಅದರೊಂದಿಗೆ ವಿಚ್ಛೇದನಾನಂತರ ‘ಎಂಜಲು ಸ್ತ್ರೀ’ ಎಂಬ ಕಾರಣದಿಂದಾಗಿ ಯಾವ ಪುರುಷನೂ ಅವಳನ್ನು ವಿವಾಹವಾಗುವುದಕ್ಕೆ ಉತ್ಸುಕತೆ ತೋರುವುದಿಲ್ಲ. ಅಂತೆಯೇ ವಿವಾಹಾನಂತರದ ಪೀಡನೆಯ ಕಾರಣ ವಿಚ್ಛೇದನ ಪಡೆದಂತಹ ಸ್ತ್ರೀಯರೂ ಕೂಡಾ ಮತ್ತೆ ವಿವಾಹವೆಂಬ ವ್ಯವಸ್ಥೆಯೆಡೆ ಹೊರಳಲು ತಯಾರಾಗುತ್ತಾರೆ ಎಂಬುದೂ ಸುಲಭವಲ್ಲದ ಸಂಗತಿ. ಕೆಲವಾರು ಸಂದರ್ಭಗಳಲ್ಲಿ ಪರಿತ್ಯಕ್ತ ಸ್ತ್ರೀಯರು ಊರಿನ ಪಂಚರುಗಳ ಸಮ್ಮುಖದಲ್ಲಿ ವಿಚ್ಛೇದನ ಪಡೆದು ತಮ್ಮ ಮಾರ್ಗವನ್ನು ಮುಕ್ತಗೊಳಿಸಿಕೊಳ್ಳುವುದುಂಟು. ಆದರೆ ಅದು ಕಾಯಿದೆ ಬದ್ಧವಾದ ಮಾರ್ಗವಲ್ಲ. ಗಂಡನು ತ್ಯಜಿಸಿದ ಮೇಲೆ ಸ್ತ್ರೀಯು ಎಲ್ಲಾ ಕಡೆಗಳಿಂದಲೂ ಹೆಣ್ಣೆಂಗ್ಸು ಅಸಹಾಯಕಿ, ಅಬಲೆ ಎಂಬ ಕಾರಣದಿಂದ ಅನಾದರಣೆಗೆ ಒಳಗಾಗುತ್ತಾಳೆ. ಅದರೊಂದಿಗೆ ಹಣ ಗಳಿಕೆಯ ಅಸಾಮರ್ಥ್ಯದಿಂದಾಗಿ ಅವಳ ಬದುಕು ವಿಲಕ್ಷಣವಾಗಿ ಅವಳು ಅನಿವಾರ್ಯವಾಗಿ ಅನೈತಿಕ ಮಾರ್ಗದೆಡೆಗೆ ಸೆಳೆಯಲ್ಪಡುವಂಥ ಸಂಭವವೂ ಇರುತ್ತದೆ. ಯಾವ ಕಾರಣಕ್ಕೂ ಸುಧಾರಿಸುವುದಿಲ್ಲ ಎಂದಾಗ ಕೆಲವು ವೇಳೆ ಪುರುಷನಲ್ಲಿ ಆಶ್ರಯ ಪಡೆಯಬೇಕಾಗುವುದು. ಇಲ್ಲದಿದ್ದರೆ ಬದುಕುವುದಕ್ಕೆ ಕಠಿಣವಾಗುತ್ತದೆ. ಇಂಥ ಅನುಭವಗಳಿಂದ ಯಾರಾದರೂ ಒಬ್ಬ ಪುರುಷನನ್ನು ಹತ್ತಿರಕ್ಕೆ ಮಾಡಿಕೊಳ್ಳಬೇಕಾದುದು ಅನಿವಾರ್ಯ, ಇಂಥ ಸ್ತ್ರೀಯನ್ನು ಸಮಾಜವು ನೋಡುವ ರೀತಿ ‘ವರ್ಜ್ಯ ಸ್ತ್ರೀ’ ಎಂಬುದಾಗಿರುವುದು ಗಮನಾರ್ಹ. ಆದರೆ ಇಲ್ಲಿ ಇಂಥ ಪರಿಸ್ಥಿತಿಗೆ ಕಾರಣವಾದ ಅಂಶಗಳನ್ನು ಸಹಾನುಭೂತಿ ಪೂರ್ವಕವಾಗಿ ವಿಚಾರ ಮಾಡುವುದು ಅಗತ್ಯವೆಂಬುದರತ್ತ  ಗಮನಿಸುವುದಿಲ್ಲ.

ತ್ಯಜಿಸುವ ಕ್ರಿಯೆ, ಸ್ವಯಂ ನಿರ್ಣಯದ ಲಗ್ನ, ವಿಚ್ಛೇದನಗಳಂಥ ಸಂಗತಿಗಳು ಮಾನಸಿಕ ಅಸಮ್ಮತಿಯಿಂದ ಉಂಟಾಗುವುವು. ಆದರೆ ಈ ಅಸಮ್ಮತಿಗಳು ಹುಟ್ಟಿಕೊಳ್ಳುವ ಕಾರಣಗಳು ಮಾತ್ರ ಶಾರೀರಿಕ ಮತ್ತು ಬಾಹ್ಯ ಪರಿಸ್ಥಿತಿಯವಾಗಿರುತ್ತವೆ ಎಂಬ ವಿಚಾರವು ನಿರಾಕರಣೀಯವೇನಲ್ಲ. ಕಾರಣ ಅಂಥ ಉದಾಹರಣೆಗಳು ಘಟಿಸುತ್ತಿರುವ ಅನುಭವಗಳು ಎಲ್ಲರಿಗೂ ಸ್ಪಷ್ಟಗೋಚರ. ಸರಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳ ಕಡೆಯಿಂದ ಮಹಿಳ ಆಶ್ರಮಗಳು ನಡೆಯುತ್ತವೆ. ಅವುಗಳು ವಿಚ್ಛೇದನ ಅಥವಾ ಭಗ್ನ ವಿವಾಹಗಳಂಥ ಕೇಸುಗಳನ್ನು ನ್ಯಾಯಾಲಯಗಳು ಮತ್ತು ಅದರ ಸಂಬಂಧ ಮೂಲಗಳಿಂದ ಅಭ್ಯಸಿಸಿದರೆ ಭಗ್ನ ಮದುವೆಗಳಿಗೆ ಕಾರಣಗಳಾವುವು ಎಂಬುದು ಸ್ಪಷ್ಟವಾಗಿ ಗಮನಕ್ಕೆ ಬರುತ್ತವೆ. ಮಹಿಳಾ ಆಶ್ರಮಗಳಂಥ ಸಂಸ್ಥೆಗಳಂತೂ ಸಾಮಾಜಿಕ ರೋಗಗಳಿಗೆ ಒಂದು ರೀತಿಯಲ್ಲಿ ವಿಚಿಕಿತ್ಸಕ ದವಾಖಾನೆಗಳೇ (ಆಸ್ಪತ್ರೆ) ಆಗಿವೆ. ಅಲ್ಲಿ ಬೇರೆ ಬೇರೆ ರೀತಿಗಳ ಸಾಮಾಜಿಕ ರೋಗಿ ಮತ್ತು ಅದರ ನಾನಾ ಉದಾಹರಣೆಗಳನ್ನು ಏಕತ್ರ ನೋಡುವುದಕ್ಕೆ ಲಬ್ಯವಾಗುತ್ತವೆ. ಆ ಕಾರಣಗಳನ್ನು ಅಭ್ಯಸಿಸಿದರೆ ಪಪತ್ನಿಯರ ನಡುವಣ ವೈಮನಸ್ಯ, ಕಿರಿಕಿರಿ, ಸಂಘರ್ಷಗಳು ಹೆಚ್ಚಾಗಿ ಬೆಳೆದು ಕೊನೆಗೆ ವಿಕೋಪಾವಸ್ಥೆಯನ್ನು ತಲುಪಿದ್ದು ಹೇಗೆ ಎಂಬುದು ಗಮನಕ್ಕೆ ಬರುತ್ತದೆ. ಆ ಕಾರಣಗಳನ್ನು ವಿಚಾರ ಮಾಡುವಾಗ ಗಂಡನಿಂದ ಆಗುವ ಶಾರೀರಿಕ ಹಿಂಸೆಗಳೂ ಬಹಳ ಮುಖ್ಯವಾಗಿರುತ್ತವೆ. ಇಂದು ಕೋರ್ಟ್‌ಗಳೆಡೆ ಧಾವಿಸುತ್ತಿರುವ ಇಲ್ಲವೆ ಮಹಿಳಾ ಆಶ್ರಮದಲ್ಲಿ ಆಶ್ರಯ ಪಡೆಯುತ್ತಿರುವಂಥ ಸ್ತ್ರೀಯರಲ್ಲಿ ಸುಮಾರು ಅರ್ಧದಷ್ಟು ಸ್ತ್ರೀಯರ ಪರಿಸ್ಥಿತಿಗೆ ಪತಿಯ ಇಂಥ ಹಿಂಸೆಯ ಅತಿರೇಕವೇ ಕಾರಣ ಎಂಬುದು ಗಮನಾರ್ಹ. ಕೇವಲ ಅವಿದ್ಯಾವಂತ ಕುಟುಂಬಗಳಲ್ಲಷ್ಟೆ ಇಂಥ ಘಟನೆಗಳು ಸಂಭವಿಸುತ್ತವೆ ಎಂದೇನಿಲ್ಲ; ಸುಶಿಕ್ಷಿತರೂ ಮತ್ತು ಶಿಮಂತರೂ ಆದ ಕುಟುಂಬಗಳಲ್ಲಿಯೂ ಸಹ ಸ್ತ್ರೀಯರು ತಂತಮ್ಮ ಗಂಡಂದಿರಿಂದ ಹಿಂಸೆಯನ್ನು ಅನುಭವಿಸುತ್ತಿರುವುದು ಕಂಡುಬರುತ್ತದೆ.

ಕೆಲವಾರು ಸ್ತ್ರೀಯರು ಶಾರೀರಿಕ ಹಿಂಸೆ ಮತ್ತು ಮಾನಸಿಕ ಪೀಡನೆಗೆ ರೋಸಿ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಸಾಮಾನ್ಯ ಸಂಗತಿ. ವಂಶ ಅಥವಾ ಕುಲದ ಸಾಮಾಜಿಕ- ಪ್ರತಿಷ್ಠೆ, ಕುಟುಂಬ, ತಾಯಿ-ತಂದೆಯರ ಗೌರವವನ್ನು ಕಾಪಾಡುವುದಕ್ಕಾಗಿ ಅನೇಕ ಸ್ತ್ರೀಯರು ಎಲ್ಲವನ್ನು ಸಹಿಸಿಕೊಳ್ಳುತ್ತಾ ಬಂದಿರುತ್ತಾರೆ. ಆದಾಗ್ಯೂ ತೀರಾ ಅಸಹನೀಯವಾದಾಗ ಮಾತ್ರವೇ ಎಲ್ಲವನ್ನೂ ತ್ಯಜಿಸಿ ಬೇರೆಯಾಗಿ ಬದುಕುವಂತಹ ಮಾನಸಿಕ ತಯ್ಯಾರಿಗೆ ಸಿದ್ಧವಾಗುತ್ತಾರೆ. ಒಂದು ಮದುವೆಯಲ್ಲಿಯೇ ತೀರಾ ಕಟುವಾದ ಅನುಭವವಾದುದರಿಂದ ಮತ್ತೆ ಪುನರ್ ವಿವಾಹದ ಗೊಂದಲದಲ್ಲಿ ಸಿಲುಕಿ ಬೀಳದಿರುವುದೇ ನಿಜವಾದ ಜಾಣ್ಮೆ. ಇಂಥ ನೆಲೆಯನ್ನೇ ಅವರು ಕೈಗೊಳ್ಳುವುದು ಅನಿವಾರ್ಯ. ಕೆಲವು ವೇಳೆ ವರದಕ್ಷಿಣೆ, ಗೌರವ, ಕೊಡುಕೊಳ್ಳುವಿಕೆ, ಮೋಸಕೃತ್ಯ ಇತ್ಯಾದಿ ಕಾರಣಗಳಿಂದಾಗಿ ಪತಿಗೃಹದಲ್ಲಿ ಒಳಗೊಳಗೇ ಪೀಡನೆಯು ನಡೆಯುತ್ತಿರುತ್ತದೆ. ಆ ಕಾರಣವಾಗಿಯೂ ಪರಿತ್ಯಕ್ತದಂಥ ನಿರ್ಣಯಕ್ಕೆ ಬರುವುದುಂಟು. ಪ್ರತ್ಯಕ್ಷ ವ್ಯಭಿಚಾರ ಅಥವಾ ವ್ಯಭಿಚಾರದ ಸಂಶಯವೂ ಕೂಡಾ ಮಹತ್ವದುವೇ. ಹುಚ್ಚು, ವ್ಯಸನಾಧೀನತೆ, ಅನಾರೋಗ್ಯ, ಮೋಸ ಇಂಥ ಕಾರಣಗಳೂ ವಿವಾಹ ಖಟ್ಲೆಯನ್ನು ಹಾಕುವಲ್ಲಿ ಕಾರಣೀಭೂತ ಅಂಶಗಳಾಗುತ್ತವೆ. ಹಾಗೆಯೇ ಕೆಲವಾರು ಬಾರಿ ವಿರುದ್ಧ ಸ್ವಭಾವಗಳಿಂದಾಗಿಯೂ ವೈಮನಸ್ಯವು ಹುಟ್ಟಿಕೊಳ್ಳುವುದುಂಟು. ಸ್ತ್ರೀಯರಲ್ಲಿ ಇರುವ ತಿಳಿಗೇಡಿತನ, ಹಟಮಾರಿ ಸ್ವಭಾವ, ಸಿಟ್ಟುಸೆಡುವು, ಎಲ್ಲದಕ್ಕೂ ಕಿರಿಕಿರಿ ಮಾಡುವಂತಹ ರೂಢಿ, ಸಿಂಗಾರದ ಬಗೆಗಿನ ಅತಿರೇಕತೆ- ಅಂಥವೂ ಮುಖ್ಯ ಸಂಗತಿಗಳೇ. ಹಾಗೆಯೇ ಪುರುಷರು ಸದಾ ತಮ್ಮ ಪತ್ನಿಯರನ್ನು ಹೀಗಳೆಯುವ ರೂಢಿ, ತನಗಿಂತ ಸಾಮಾನ್ಯಳೆಂದು ಭಾವಿಸಿ ಅಪಮಾನ ಮಾಡುವುದು, ಎಲೆ, ಅಡಿಕೆ, ತಂಬಾಕುಗಳನ್ನು ಜಗಿಯುವ ರೂಢಿ, ಹೆಚ್ಚು ದುಡಿಸಿಕೊಳ್ಳುವುದರಲ್ಲಿ ಅಸುರೀ ಆನಂದ ಪಡೆಯುವಂಥ ಒಲವು, ಜೊತೆಗೆ ಮತ್ತೊಂದು ಪಕ್ಷವನ್ನು ಅರ್ಧ ಮಾಡಿಕೊಳ್ಳುವ ಪಾತ್ರತೆಯ ಸಂಗತಿಗಳಲ್ಲಿನ ಅತಿರೇಕತೆಯು ಕೂಡಾ ಒಬ್ಬರಿಂದ ಒಬ್ಬರು ವಿಭಕ್ತರಾಗುವಂತಹ ಪರಿಸ್ಥಿತಿಯುಂಟಾಗಲು ಕಾರಣವಾಗುತ್ತದೆ.

ನಮ್ಮ ಸಮಾಜದಲ್ಲಿ ಇಂದಿಗೂ ಜಾತಕ ಕುಂಡಲಿಗಳಲ್ಲಿನ ಗುಣ ಮತ್ತು ಗೋತ್ರ ಇವುಗಳ ನಿಕಷದಿಂದ ತಂದೆತಾಯಿಗಳ ಸಮ್ಮತಿಯೊಂದಿಗೆ ಬಹುತೇಕ ಮದುವೆಗಳು ನಿರ್ಧಾರವಾಗುತ್ತಲಿವೆ. ಇಲ್ಲಿ ವೈದ್ಯಕೀಯ ತಪಾಸಣೆಗಂತೂ ನೆಲೆಯೇ ಇಲ್ಲ. ಅಲ್ಲದೆ ಮದುವೆಯ ಸಂಬಂಧವು ಗಟ್ಟಿಯಾಗುತ್ತದೆ ಎಂದೊಡನೆ ಎರಡೂ ಕಡೆಯ ಸಂಬಂಧಿಗಳಿಂದ ದೋಷಗಳು ಮುಚ್ಚಿ ಹಾಕಲ್ಪಡುತ್ತವೆ ಎಂಬುದು ಇಲ್ಲಿ ಗಮನಾರ್ಹ. ಅನೇಕಬಾರಿ ಹುಡುಗನು ಶಾರೀರಿಕ ದೃಷ್ಟಿಯಿಂದ ಮದುವೆಗೆ ಅಪಾತ್ರನಾಗಿದ್ದರೂ ಕುಟುಂಬದ ಪ್ರತಿಷ್ಠಗಾಗಿ ಅವನಿಗೆ ಮದುವೆಯನ್ನು ಮಾಡುವುದುಂಟು. ಅಸಮರ್ಧರಾದಂಥ ಜೊತೆಗಾರರ ಆಯ್ಕೆಯಿಂದಾಗಿ ವೈವಾಹಿಕ ಜೀವನದಲ್ಲಿನ ಸೌಖ್ಯದ ಭಾಗವಾದಂತಹ ರತಿ ಸುಖದಲ್ಲಿ ಅಡಚಣೆಯು ನಿರ್ಮಾಣವಾಗುವುದು. ಈ ಕಾರಣವಾಗಿಯೇ ಇನ್ನು ಕೆಲವು ಸಂದರ್ಭಗಳಲ್ಲಿ ಮೇಲ್ನೋಟಕ್ಕೆ ಪುರುಷ ಅಥವಾ ಸ್ತ್ರೀ ಆರೋಗ್ಯವಾಗಿಯೇ ಕಾಣಿಸುತ್ತಿದ್ದರೂ ಸಮಾಗಮದ ವಿಷಯದಲ್ಲಿ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಅವರಿಂದ ಪೂರ್ಣ ಆನಂದ ಪಡೆಯುವುದಕ್ಕೆ ಸಾಧ್ಯಾವಾಗುವುದಿಲ್ಲ. ರತಿ ಸುಖದಲ್ಲಿ ಮಾನಸಿಕವಾಗಿ ಅನೇಕ ವೇಳೆ ತಿರಸ್ಕಾರ ಮತ್ತು ಜುಗುಪ್ಸೆಯು ತೀವ್ರವಾಗಿ ನಿರ್ಮಾಣವಾಗುವುದು ಸಹಜ. ಇದರಿಂದ ಪತಿ-ಪತ್ನಿಯರು ಶಾರೀರಿಕ ಸಂಬಂಧ ಪಡೆಯುವುದಕ್ಕೂ ಹತ್ತಿರವಾಗುವುದು ಕಷ್ಟ. ಮಾತ್ರವಲ್ಲ ಒಬ್ಬರೊಬ್ಬರ ಮುಖವನ್ನು ನೋಡುವುದಕ್ಕೂ ಇಷ್ಟವಾಗದೆ ಇರಬಹುದು. ಇಂಥ ಪರಿಸ್ಥಿತಿಯಲ್ಲಿ ಒಬ್ಬರನ್ನೊಬ್ಬರು ಅರ್ಧ ಮಾಡಿಕೊಂಡು ಮುಕ್ತ ಮನಸ್ಸಿನಿಂದ ವೈದ್ಯರ ಹತ್ತಿರ ಹೋಗುವುದಕ್ಕೆ ಸಾಧ್ಯವಾದರೆ ಅವರ ಮಾರ್ಗದರ್ಶನದಿಂದ ಒಂದುಗೂಡುವುದಕ್ಕೆ ಸಾಧ್ಯ. ಆದರೆ, ಅಂತಹ ತಿಳಿವಳಿಕೆ ನಮಗೆ ಕಾಣಸಿಕ್ಕುವುದು ಅಲ್ಪ ಪ್ರಮಾಣದಲ್ಲಿಯಷ್ಟೆ. ಪ್ರಜನನ ಅಸಾಮರ್ಥ್ಯದ ಸ್ತ್ರೀ ಎಂಬ ಕಾರಣವನ್ನು ಹೆಂಡತಿಯ ಮೇಲೆಯೇ ಎಲ್ಲರೂ ಹೇರುವುದುಂಟು. ಅವಳನ್ನು ಬಂಜೆ ಎಂಬುದಾಗಿ ದೂಷಿಸುವಂತಹ ಭಾಷೆಯೂ ಪ್ರಯೋಗಗೊಳ್ಳಲು ಆರಂಭವಾಗಿ, ಮುಂದೆ ಬಂಜೆ ಎಂಬ ನೆಲೆಯಿಂದ ಅವಳನ್ನು ಹಿಂಸಿಸುವುದೂ ಆರಂಭವಾಗುತ್ತದೆ. ಇದರೊಂದಿಗೇ ಆಗ ಪತಿಯು ಮತ್ತೊಂದು ಮದುವೆಯಾಗಿ ಮುಕ್ತನಾಗುವನು. ದ್ವಿಭಾರ್ಯಾ ಪ್ರತಿಬಂಧಕ ಕಾಯಿದೆಯಲ್ಲಿನ ಪಾರಾಗುವ ಮಾರ್ಗವನ್ನು ಆಧಾರವಾಗಿ ಹಿಡಿಯುತ್ತಾನೆ ಅಥವಾ ಹೆಂಡತಿಯೇ ಗಂಡನ ಕಿರುಕುಳವನ್ನು ಸಹಿಸಲು ಸಾಧ್ಯವಾದೆ ಬೇಸತ್ತು ಸ್ವ-ಖುಷಿಯಿಂದ ಅವನಿಗೆ ಮತ್ತೊಂದು ಮದುವೆಗೆ ಅನುಮತಿಯನ್ನು ನೀಡುತ್ತಾಳೆ.ಇಲ್ಲವೆ ಸ್ವತಃ ತಾನೇ ಪರಿತ್ಯಕ್ತಳಂತೆ ಜೀವನ ನಡೆಸುವುದಕ್ಕೆ ಸಿದ್ಧಳಾಗುವುದುಂಟು. ವಯೋಮಾನದಲ್ಲಿನ ವ್ಯತ್ಯಯಗಳು, ಶಿಕ್ಷಣದಲ್ಲಿನ ಅಂತರ, ಉದ್ಯೋಗದ ಸ್ವರೂಪ, ವಿವಾಹ ಪೂರ್ವದ ಪ್ರೇಮಭಂಗ, ಕೌಟುಂಬಿಕ ಸಂಸ್ಕಾರ ಮತ್ತು ಆ ಹಿನ್ನೆಲೆಯಲ್ಲಿನ ವ್ಯತ್ಯಾಸಗಳು ಇತ್ಯಾದಿಗಳೆಲ್ಲ ವೈವಾಹಿಕ ಬದುಕಿನಲ್ಲಿ ಸಂಘರ್ಷವನ್ನು ತರುವಂತಹ ಅಂಶಗಳು. ವೈವಾಹಿಕ ಬದುಕು ಅಸ್ಥಿರವಾಗುವುದರಿಂದ ವಿವಾಹ ವಿಚ್ಛೇದನದ ಕಡೆಗೆ ಹೋಗುವುದು ಅನಿವಾರ್ಯವಾಗುತ್ತದೆ.

ಬಹಳಷ್ಟು ಪರಿತ್ಯಕ್ತ ಸ್ತ್ರೀಯರ ಮುಂದಿರುವ ಬಹುಮುಖ್ಯ ಸಮಸ್ಯೆಗಳೆಂದರೆ ಆರ್ಥಿಕ ಅಡಚಣೆಗಳು ಮತ್ತು ಪೋಷಣೆಯ ವ್ಯವಸ್ಥೆಯ ಅಸಾಧ್ಯತೆಗಳು. ಅದರೊಂದಿಗೆ ಮಕ್ಕಳ ಪಾಲನೆ ಪೋಷಣೆಯ ಜವಾಬ್ದಾರಿಯೂ ಬಿದ್ದಿತೆಂದರೆ ಆಯಿತು; ಅನೇಕ ಪ್ರಶ್ನೆಗಳು ನಿಲ್ಲುತ್ತವೆ ಅವಳೆದುರಿಗೆ. ಕಾಯಿದೆ ಬದ್ಧತೆಯ ಅನುಸಾರ ವಿಚ್ಛೇದನ ಪ್ರಕ್ರಿಯೆಯು ಪೂರ್ತಿಯಾಗಿ ಜರುಗಿ ಜೀವನಾಂಶ ಸಿಕ್ಕುವುದಕ್ಕೆ ಆರಂಭವಾಯಿತೋ ಸರಿ, ಇಲ್ಲವಾಯಿತೋ ಅವರ ಪರಸ್ಥಿತಿಯು ಅತ್ಯಂತ ದಯನೀಯ. ಈಚೆಗಂತೂ ತವರು ಮನೆಯವರೂ ಸಹ ಅವಳ ಸಹಾಯಕ್ಕೆ ಬರಲಾರದಂತಾಗಿದ್ದಾರೆ. ವಿಭಕ್ತ ಕುಟುಂಬ ಪದ್ಧತಿ, ವ್ಯಕ್ತಿ ಸ್ವಾತಂತ್ರ್ಯ ಅಗತ್ಯವೆಂಬುದರ ನಿಜವಾದ ಅರ್ಧ, ಪ್ರಾಣ- ಆತ್ಮದಂತಹ ಗಾಢ ಸಂಬಂಧದಲ್ಲಿ ಉಂಟಾದ ಯಾಂತ್ರಿಕತೆ, ತಮ್ಮ ದೃಷ್ಟಿಯಿಂದಷ್ಟೇ ನೋಡುವ ಪ್ರವೃತ್ತಿ, ಹೆಚ್ಚಾಗುತ್ತಿರುವ ಬೆಲೆಗಳು, ಬದುಕಿನ ಬಗೆಗಿನ ಆಧುನಿಕ ಕಲ್ಪನೆಗಳು  ಇಂಥವುಗಳಿಂದಾಗಿ ಪರಿತ್ಯಕ್ತ ಸ್ತ್ರೀ ಮತ್ತು ಅವಳ ಮಕ್ಕಳ ಜವಾಬ್ದಾರಿಯನ್ನು ವಹಿಸಲು ಸಂಬಂಧಿಕರಾರೂ ಮುಂದೆ ಬರಲಾಗುತ್ತಿಲ್ಲ. ಆರ್ಥಿಕ ದೃಷ್ಟಿಯಿಂದ ಸ್ವಾವಲಂಬಿಯಾಗಿರುವಂಥ ಪರಿತ್ಯಕ್ತರು, ಸಾಮಾಜಿಕ ಪರಂಪರೆ ಮತ್ತು ರೂಢಿಗಳಿಂದ ನಿರ್ಮಾಣವಾಗುತ್ತಿರುವ ಮನಸ್ತಾಪಗಳು ಮತ್ತು ಪುರುಷರಿಂದಾದ ಮೋಸಗಳಿಂದ ಉದ್ಭವಿಸುವ ಅಸುರಕ್ಷತತೆಯಲ್ಲಿಯೇ ಮುಂದೆ ಹೋಗಬೇಕಾಗುತ್ತದೆ. ಇವುಗಳೊಂದಿಗೆ ಅನೇಕ ಬಗೆಯ ಆರೋಪಗಳೂ ಬಂದಡರುವುದುಂಟು. ಅವಳ ಎಲ್ಲ ಬಗೆಯ ನಡವಳಿಕೆಗಳಿಗೂ ಸಾಮಾಜಿಕ ದೃಷ್ಟಿಯ ಅರ್ಧಗಳನ್ನು ಅನ್ವಯಿಸುವುದು ಮತ್ತು ನೀತಿಮತ್ತೆಯ ನಿಕಷವನ್ನು ರೂಪಿಸುವುದು ನಡೆಯುತ್ತದೆ ಇಲ್ಲಿ. ಆರ್ಥಿಕ ದೃಷ್ಟಿಯಿಂದ ಬಹಳ ಸದೃಢರಾಗಿರುವ ಪರಿತ್ಯಕ್ತರಷ್ಟೆ ಇಂಥ ಪರಿಸ್ಥಿತಿಯನ್ನು ಎದುರಿಸುವುದಕ್ಕೆ ಸಿದ್ಧರಾಗಬಹುದು. ಆದರೆ ಯಾರ ವಿಷಯದಲ್ಲಿ ಆರ್ಥಿಕ ಪ್ರಶ್ನೆಯು ಬಹಳ ಮಹತ್ವದ್ದಾಗಿತ್ತದೆಯೋ, ಅವರು ತೀರಾ ಅಸ್ವಸ್ಥರಾಗಿ ಬಿಡುವುದು ಕಂಡುಬರುತ್ತದೆ.

ಪರಿತ್ಯಕ್ತ ಸ್ತ್ರೀಯರಿಗಾಗಿ ಆಗಬೇಕಾದ ಮುಖ್ಯ ವಿಚಾರವೆಂದರೆ ಅವರು ಆರ್ಥಿಕ ದೃಷ್ಟಿಯಿಂದ ತಮ್ಮ ಕಾಲಿನ ಮೇಲೆ ತಾವೇ ನಿಲ್ಲುವಂತೆ ಆಗುವುದು. ಈ ದೃಷ್ಟಿಯಿಂದ ಸರ್ಕಾರ, ಸ್ವಯಂ ಸೇವಕ ಸಂಸ್ಥೆಗಳು, ಖಾಸಗಿ ಕಾರಖಾನೆಯವರು, ಬ್ಯಾಂಕುಗಳು ಮತ್ತು ಇತರೆ ಆರ್ಥಿಕ ಸಹಾಯ ನೀಡುವ ಸಂಸ್ಥೆಗಳು, ವಸತಿ ಗೃಹಗಳವರು, ಸಮಾಜ ಕಲ್ಯಾಣ ಖಾತೆಯವರು, ಸಾಮಾಜಿಕ ಜವಾಬ್ದಾರಿಯೆಂಬಂತೆ ಇದನ್ನು ಕೈಗೆತ್ತಿಕೊಂಡು ಪ್ರಯತ್ನಿಸ ಬೇಕು. ಅಲ್ಲದೆ ವಿವಾಹ ವಿಚ್ಚೇದನಾ ನಂತರದಲ್ಲಿಯೂ ಆ ಸ್ತ್ರೀಯರ ಪುನರ್ ವಿವಾಹದ ಬಗ್ಗೆ ಆಶ್ರಮ ಚಾಲಕರು ಮತ್ತು ಸ್ವಯಂ ಸೇವಾ ಸಂಸ್ಥೆಗಳವರು ವಿಚಾರ ಮಾಡುವುದು ಅಗತ್ಯ. ಇದರಲ್ಲಿ ಯಾರಿಗೆ ಪುನರ್ ವಿವಾಹವಾಗುವುದಕ್ಕೆ ಇಷ್ಟವಿಲ್ಲವೋ ಅವರಿಗೆ ಸ್ವತಂತ್ರವೂ ಸ್ವಾವಲಂಬಿಯೂ ಆದ ಜೀವನವನ್ನು ಹೇಗೆ ನಡೆಸಬಹುದು ಎಂಬ ಬಗ್ಗೆ ಮನವರಿಕೆ ಮಾಡಬೇಕು. ಇದಕ್ಕಾಗಿ ಸಮಾಜದಲ್ಲಿನ ವಿವಿಧ ಘಟಕಗಳ ಸಹಾನುಭೂತಿಯ ಮತ್ತು ಸಹಕಾರಗಳ ಅಗತ್ಯವಿರುತ್ತದೆ. ಮಾನಸಿಕ ದೃಷ್ಟಿಯಲ್ಲಿ ಅವರನ್ನು ರಕ್ಷಿಸುವುದು ಅವಶ್ಯ. ಆ ಸಂಬಂಧವಾಗಿ ಅವಳಿಗೆ ಆಧಾರ ನೀಡುವುದು ಸಾಮಾಜಿಕ ಕಾರ್ಯದ ಒಂದು ಭಾಗವೆಂದು ಮಹಿಳಾ ಮಂಡಳಿಗಳು, ಸಂಘಟನೆಗಳು ಮತ್ತು ಕ್ಲಬ್‌ಗಳವರು ಪ್ರಯತ್ನಿಸುವುದು ಬಹಳ ಅಗತ್ಯವಾಗಿದೆ.

ಇಂದು ನಮ್ಮ ದೇಶದಲ್ಲಿ ಅಖಿಲ ಭಾರತೀಯ ಸ್ತ್ರೀ ಸಂಸ್ಥೆಗಳ  ಕಡೆಯಿಂದ, marriage cancellingನ ಸೌಲಭ್ಯಗಳನ್ನು ಕೆಲವೆಡೆ ಸಂಸ್ಥಾಪಿಸಲಾಗಿದೆ. ಆದರೆ ಬಹಳಷ್ಟು ಜನ ಸ್ತ್ರೀಯರಿಗೆ ಆ ವಿಷಯದಲ್ಲಿ ಯಾವ ಮಾಹಿತಿಯೂ ತಿಳಿದಿಲ್ಲ. ಅಲ್ಲದೆ ಇಂಥ ಸೌಲಭ್ಯಗಳು ನಗರಗಳಲ್ಲಿನ ಸಂಸ್ಥೆಗಳಲ್ಲಷ್ಟೆ ಇವೆ. ನವ ವಿವಾಹಿತ ಜೋಡಿಗಳಿಗೆ ತಪಾಸಣೆ ಮಾಡಲು ಇಂಥ ಕೇಂದಗಳು ಉಪಯುಕ್ತವಾಗಿವೆ. ಸಂಕಷ್ಟಮಯ ಪರಿಸ್ಥಿತಿ ಮತ್ತು ತಪ್ಪು ತಿಳಿವಳಿಕೆಯನ್ನು ದೂರಮಾಡಿ ಪಪತ್ನಿಯರನ್ನು ಒಂದು ಗೂಡಿಸುವ ದೃಷ್ಟಿಯಿಂದ ಈ ಕೆಲಸವು ಆಗಬೇಕು. ಸಾಮಾಜಿಕ ಸ್ವಾಸ್ಥ್ಯವನ್ನು ತರುವ ಹಂತದಲ್ಲಿ ಇದು ಬಹಳ ಅಗತ್ಯವಾಗಿ ಆಗಬೇಕಾದಂಥ ಕೆಲಸ. ಭೌತಿಕ ಸುಖಗಳ ಅನುಕೂಲತೆ, ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿ ಮತ್ತು ಸಾಮಾಜಿಕ ಮೌಲ್ಯಗಳಲ್ಲಿನ ಪರಿವರ್ತನೆ, ಪಾಶ್ಚಾತ್ಯರ ಸಂಪರ್ಕ, ವಿಭಕ್ತ ಕುಟುಂಬ ಪದ್ದತಿ ಇತ್ಯಾದಿ ಕಾರಣಗಳಿಂದಾಗಿ ಸಮಾಜವು ಒಂದು ರೀತಿಯ ಸಂಕ್ರಮಣಾವಸ್ಥೆಗೆ ತಲುಪುತ್ತಲಿದೆ. ಇಂಥ ಪರಿಸ್ಥಿತಿಯಲ್ಲಿ ಒಂದು ಮಾನವೀಯ ಬಂಧನದಂತಾಗಿದೆ ವಿವಾಹ. ಅದರಲ್ಲಿ ಯಾವ ದೈವೀ ಪಾವಿತ್ರ್ಯವೂ ಇಲ್ಲ. ಅದು ಒಂದು ಒಪ್ಪಂದ ಎಂಬ ನೆಲೆಯನ್ನೂ ಒಪ್ಪುವಂತಾಗಿದೆ ಇಂದು. ಅಲ್ಲದೆ ನಿಷ್ಪ್ರೇಮ ಮತ್ತು ಒತ್ತಾಯದ ವೈವಾಹಿಕ ಜೀವನದಲ್ಲಿ ಬದುಕುತ್ತಿರುವ ಪೋಲುತನವು ಬಹಳ ಪ್ರಕರ್ಷತೆಯಿಂದ ಅರಿವಿಗೆ ಬರುತ್ತಿದೆ. ಸ್ತ್ರೀಯು ಕೇವಲ ಪುರುಷಾಧೀನರು ಅಥವಾ ಪುರುಷಾವಲಂಬಿಯಾಗಿರಬೇಕು ಎಂಬುದನ್ನು ಒಪ್ಪಿಕೊಳ್ಳಬೇಕಾಗಿಲ್ಲ, ಬದಲಾಗಿ ಸ್ವತಂತ್ರವೂ ಮತ್ತು ಸ್ವಾವಲಂಬಿಯೂ ಆದ ಜೀವನವನ್ನು ಹೊಂದುವುದು ಅವಳ ಹಕ್ಕು ಎಂಬುದು ಈಗ್ಗೆ ಒಪ್ಪಿಕೊಳ್ಳುತ್ತಿರುವಂಥ ಸಂಗತಿ. ಹಾಗಾಗಿ ಕಾಯಿದೆಬದ್ಧ ವಿವಾಹ ವಿಚ್ಛೇದನ ಅಥವಾ ಸ್ವಯಂ ನಿರ್ಣಯದ ವಿವಾಹ ವಿಚ್ಛೇದನದಲ್ಲಿ ನಿರ್ಮಾಣ ವಾಗುತ್ತಿರುವ ಪರಿತ್ಯಕ್ತರ ಗಂಭೀರ ಪ್ರಶ್ನೆಗಳನ್ನು ಬಿಡಿಸುವ ಜವಬ್ದಾರಿಯನ್ನು ಸಮಾಜವು ಇಂದು ಅವಶ್ಯ ಮಾನ್ಯ ಮಾಡಲೇಬೇಕು. ಗಂಡನು ಬಿಟ್ಟುಬಿಟ್ಟಿರುವ ಸ್ತ್ರೀ ಅಥವಾ ಪರಿತ್ಯಕ್ತಳು ಎಂಬ ಶಬ್ದವೂ ಕೂಡ ಅವರನ್ನು ಉದ್ದೇಶಿಸಿದಂತೆ ಬಳಸಬಾರದು. ಬದಲಾಗಿ ಅವರಿಗೆ ವಿಭಕ್ತೆಯರು ಅಥವಾ ಬೇರಾವುದೇ ಯೋಗ್ಯ ಶಬ್ದಗಳನ್ನು ಬಳಸಿ ಅವರ ಮಾನಹಾನಿ ಆಗದಂತೆ ದಕ್ಷತೆಯನ್ನು ವಹಿಸಬೇಕಾಗಿದೆ.