ವಿವಾಹ ವಿಚ್ಛೇದನದ ಪ್ರಶ್ನೆಗಳು

ಇತ್ತೀಚೆಗಿನ ಕಾಲದಲ್ಲಿ ಸುಶಿಕ್ಷಿತ ಮತ್ತು ಸಮಂಜಸ ಸ್ತ್ರೀ-ಪುರುಷರಲ್ಲಿ ವಿವಾಹ ವಿಚ್ಛೇದನ ಇಲ್ಲವೆ ದೂರವಾಗುವಿಕೆಯು ಹೆಚ್ಚಾಗಿ ಪ್ರಿಯವಾಗುತ್ತಿರುವ ಪ್ರವೃತ್ತಿಯಾಗಿದೆ. ಪತಿಯ ಸಂರಕ್ಷಣೆ ಇದ್ದೂ ಇಲ್ಲದಂತೆ ಆಗಿರುವ ಅನನ್ಯಗತಿಕ ಪರಿತ್ಯಕ್ತರು ವಿಚ್ಛೇದನ ಮಾರ್ಗವನ್ನು ಹಿಡಿಯುತ್ತಿದ್ದಾರೆ.  ಅವರಿಗೆ ಆ ಮಾರ್ಗವನ್ನು ಮುಕ್ತವಾಗಿ  ರೂಪಿಸಿಕೊಡ ಬೇಕಾಗಿದೆ. ಅಲ್ಲದೆ ಅವರು ತಮ್ಮ ಇಚ್ಛಾನುಸಾರ ಹೊಸ ಸಂಸಾರವನ್ನು ಕಟ್ಟಿಕೊಳ್ಳುವುದಕ್ಕೂ ಅವರಿಗೆ ಅವಕಾಶ ಒದಗಿಸಿಕೊಡಬೇಕಾದ್ದು ನ್ಯಾಯ, ತಮ್ಮನ್ನು ಸರಿಯಾಗಿ ಅರ್ಧ ಮಾಡಿಕೊಂಡು ಹೊಂದಿಕೊಳ್ಳಲಾಗದಂತಹ ವ್ಯಕ್ತಿಗಳನ್ನು ಬಿಟ್ಟು ಬೇರೆಯಾಗಿ ಬದುಕುವುದು ಸೂಕ್ತವೆಂಬ ಭಾವನೆಗಳು ವ್ಯಕ್ತವಾಗುತ್ತಲಿವೆ ಇಂದು ಅನೇಕರಲ್ಲಿ. ಆದರೂ ಇವತ್ತಿಗೂ ವಿಚ್ಛೇದನ ಅಂದರೆ ಸ್ತ್ರೀ-ಮುಕ್ತಿಯ ವಿಚಾರವನ್ನು ತಲೆಯಲ್ಲಿ ತುಂಬಿಕೊಂಡಿರುವವರು ಅಟ್ಟಹಾಸದ ಮತ್ತು ಹಟಮಾರಿ ಸ್ತ್ರೀಯರು ಕೈಗೊಂಡಿರುವ ನಿರ್ಣಯ ಎಂಬುದಾಗಿ ಅನೇಕರ ಪ್ರತಿಕ್ರಿಯೆಯಾಗಿದೆ. ಹೊಂದಿಕೊಂಡು ಹೋಗುವುದು ಆವಶ್ಯಕವಾಗಿತ್ತು; ಸುಮ್ಮನೆ ಜಗ್ಗಾಡುವುದು ಬೇಡವಾಗಿತ್ತು – ಎಂಬಂಥ ಉದ್ಗಾರಗಳು ಮತ್ತು ವಿವಾಹ ವಿಚ್ಛೇದನದಲ್ಲಿ ಸ್ತ್ರೀಯರ ವಿಷಯವಾಗಿ ಕೆಟ್ಟ ಕುತೂಹಲದ ಕಾಳಜಿ  ತೋರಿಸುವಂತಹ ಅನೇಕರು ಸಮಾಜದಲ್ಲಿ ಕಾಣಸಿಗುತ್ತಾರೆ. ಸಮಾಜ ಸುಧಾರಕ ಮಂಡಳಿಗಳಿಗೆ, ಹಳೆಯ ವಿಚಾರಗಳನ್ನೇ ತುಂಬಿಕೊಂಡಿರುವವರಿಗೆ, ಸ್ತ್ರೀಯನ್ನು ಅನಾಧೆ, ಅಬಲೆ, ಆಶ್ರಯದಿಂದ ಮಾತ್ರ ಬದುಕುವವಳು ಎಂಬ ದೃಷ್ಟಿಕೋನದಿಂದ ನೋಡುವವರಿಗೆ, ವಿಚ್ಛೇದನೆ ಪಡೆಯುವುದರ ಬಗ್ಗೆ (ಸ್ತ್ರೀಯರ ವಿಷಯವಾಗಿ ಅಲ್ಲದಿದ್ದರೂ) ಶಂಕೆಗಳೇ ಹೆಚ್ಚಾಗಿ ಕಾಣುತ್ತವೆ. ಮೊದಲು ಅಂದರೆ ವಿಚ್ಛೇದನದ ಕಾಯಿದೆಯು ಅನುಷ್ಠಾನಕ್ಕೆ ಬಂದೊಡನೆ ಕುಟುಂಬ ಸಂಸ್ಥೆಯು ನಾಶವಾಗುತ್ತದೆ. ಹಾಗೂ ಸ್ತ್ರೀಯರು ಮುಕ್ತರಾಗುವರೆಂಬ ಕಾರಣದಿಂದ ಮತ್ತೆ ಮತ್ತೆ ವಿಚ್ಛೇದನೆ ಕೇಳುವವರ ಸಂಖ್ಯೆಯೂ ಹೆಚ್ಚಾಗಬಹುದು. ಪಾಶ್ಚಾತ್ಯ ದೇಶಗಳಲ್ಲಿ ಇಂದು ವಿಚ್ಛೇದನದ ಪ್ರಕ್ರಿಯೆಯ ಪ್ರವೃತ್ತಿ ಎಷ್ಟರ ಮಟ್ಟಿಗೆ ಹೆಚ್ಚಾಗಿರುವುದೆಂಬ ಅಂಕಿ ಅಂಶವನ್ನು ಅಂದಾಜು ಮಾಡಿದರೆ, ನಮ್ಮ ದೇಶದಲ್ಲಿಯೂ ವಿಚ್ಛೇದನ ಪಡೆಯಲು ಬಯಸುವವರ ಸಂಖ್ಯೆ ಬೆಳೆಯಬಹುದು ಎಂಬುದರಲ್ಲಿ ಅನುಮಾನಗಳಿಲ್ಲ. ಅನಾಚಾರ ಮತ್ತು ಸ್ವೇಚ್ಛಾಚಾರಕ್ಕೆ ಕಾಯಿದೆಬದ್ಧ ಸ್ವರೂಪವು ದೊರೆಕಿದರೆ ಸಮಾಜ ಸ್ವಾತಂತ್ರ್ಯದಿಂದಲೇ ವಿಚ್ಛೇದನ ಪಡೆಯುವಂಥ ಪರಿಸ್ಥಿತಿಯು ನಿರ್ಮಾಣವಾಗಬಹುದಾಗಿದೆ.

ಮತ್ತೊಂದು ಕಾಳಜಿಯು ಇಂಥದಿದೆ, ವಿಚ್ಛೇದನ ಪಡೆದಂಥ ದಂಪತಿಗಳ ಮಕ್ಕಳನ್ನು ಪೋಷಿಸುವುದು ಮತ್ತು ಯೋಗ್ಯ ರೀತಿಯಲ್ಲಿ ಬೆಳೆಸುವುದು ಕಷ್ಟವಾಗುತ್ತದೆ ಎಂಬುದನ್ನು ಲಕ್ಷಿಸಬೇಕು. ಅಲ್ಲದೆ ವಿವಾಹಿತ ಸ್ತ್ರೀಯು ಆ ಬಗ್ಗೆ ಗಂಭೀರವಾಗಿ, ಆಲೋಚಿಸಿಯೇ ವಿಚ್ಛೇದನದ ಸಾಧ್ಯತೆ ಮತ್ತು ನಿರ್ಣಯವನ್ನು ಕೈಗೊಳ್ಳಬೇಕಾದ್ದು ಅವಶ್ಯ. ಇಂಥ ಕುಟುಂಬಗಳಲ್ಲಿನ ಮಕ್ಕಳ ಪೋಷಣೆಯ ಚಿಂತೆಯಿಂದಾಗಿಯೇ, ವಿವಾಹ ವಿಚ್ಛೇದನದ ವಿಚಾರವಾಗಿ ಮತ್ತು ವಿಶೇಷತಃ ಸ್ತ್ರೀಯರ ವಿಚಾರವಾಗಿ ಕಟುವಾದ ಉದ್ಗಾರಗಳು ಕೇಳಿಬರುತ್ತಿರುವುವು ಎಂಬುದು ಗಮನೀಯ.

ಮೂರನೆಯ ಸಂಗತಿಯೆಂದರೆ, ಸ್ತ್ರೀಯು ಇಂದು ಪರಾವಲಂಬಿಯಾಗಿದ್ದಾಳೆ, ಇಂದಿನ ಸಮಾಜದಲ್ಲಿ ಒಬ್ಬಳೇ ‘ಹೆಣ್ಣುಮಗಳು’ ಹೇಗೆ ಜೀವಿಸಬಲ್ಲಳು? ಸಮಾಜ ಕಂಟಕಿಗಳು ಅವಳನ್ನು ಹಾಗೆ ಒಂಟಿಯಾಗಿ ಬದುಕುವುದಕ್ಕೆ ಬಿಡುವುದಿಲ್ಲ ಎಂಬ ತಿಳಿವಳಿಕೆಯನ್ನು  ಅವಳು ಹೊಂದಿರಬೇಕಾದ್ದು ಅಗತ್ಯವಲ್ಲವೆ? ವಿಚ್ಛೇದನ ಪಡೆದುಕೊಂಡು ಸ್ವತಂತ್ರಳಾದ ಮೇಲೆ ತನ್ನ ಜೀವನ ನಿರ್ವಹಣೆಯ ವ್ಯವಸ್ಥೆಯನ್ನು ಮಾಡಿಕೊಳ್ಳುವಷ್ಟು ಅವಳು ಸಮರ್ಧಳಾಗಿದ್ದಾಳೆಯೇ? ಈ ಬಗೆಯ ಪ್ರಶ್ನೆಯ ಚಿಹ್ನೆಗಳಿಂದ ಸ್ತ್ರೀಯು ಸ್ವತಂತ್ರ್ಯ, ಸ್ವಾವಲಂಬಿ ಮತ್ತು ಸ್ವಯಂಪೂರ್ಣಳಾಗಿ ಇರುವುದಕ್ಕೆ ಸಾಧ್ಯವಿಲ್ಲ. ಈ ಅಂಶಗಳನ್ನು ಕುರಿತಂತೆ ವಿಚಾರ ಮಾಡಿಯೇ ತೀರಬೇಕು. ಕಾರಣ ವಿಚ್ಛೇದನ ನಂತರ ಅವಳ ದೈನ್ಯಾವಸ್ಥೆಯು ಬೆಳೆಯುವುದು, ಅಲ್ಲದೆ ಅತ್ಯಂತ ಶೋಚನೀಯ ಪರಿಸ್ಥಿತಿಯು ಉಂಟಾಗಬಹುದು. ಹಾಗಾಗಿ ವಿಚ್ಛೇದನವು ಸಾಧ್ಯತೆಯ ಸಮಾಧಾನಾವಸ್ಥೆ ಮತ್ತು ಸುಖದ ದಾರಿಯಲ್ಲಿ ನಿಂತು ನಡೆಯುವಂಥದಾಗಿರುವುದಿಲ್ಲ- ಈ ಮೊದಲಾದ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವುದುಂಟು. ವಿಶೇಷತಃ ಸ್ತ್ರೀಯರು ವಿಚ್ಛೇದನದ ವಿಷಯದಲ್ಲಿ ಒಮ್ಮೆಲೆ ಮುಂದಾಗಬಾರದು, ಬದಲಾಗಿ ಸಹನೆಯಿಂದ ಇರಬೇಕು. ಎಲ್ಲವನ್ನು ಅರಗಿಸಿಕೊಂಡು ಸಹಿಸಿಕೊಂಡ ಇರಬೇಕು ಎಂಬ ನೆಲೆಯ ನಿಟ್ಟುಸಿರಿನ ಚಿಂತನೆಗಳಾಗಿವೆ ಇವು.

ಹಿಂದೂ ವಿವಾಹ ಕಾಯಿದೆಯು ೧೯೫೫-೫೬ರಲ್ಲಿ ರೂಪುಗೊಂಡಿತು. ಹಿಂದೂ ವಿವಾಹಿತ ಸ್ತ್ರೀಗೆ ಬೇಡವೆನಿಸಿದ್ದ ಗಂಡನ ಬಿಗಿ ಹಿಡಿತದಿಂದ ಬಿಡುಗಡೆಗೊಳ್ಳುವಂಥ ಕಾಯಿದೆಬದ್ಧ ಮಾರ್ಗವೊಂದು ಲಭ್ಯವಾಯಿತು. ಈ ಮೂಲಕ ವಿವಾಹ ವಿಚ್ಛೇದನ ಸಂಬಂಧದ ನಿಯಮ ಮತ್ತು ಯೋಜನೆಯ ವಿಚಾರಗಳನ್ನು ನಿರ್ಣಯಿಸುವ ಮೊದಲು ಈ ಮೇಲಿನ ಮೂರು ಅಂಶಗಳ ಹಿನ್ನೆಲೆಯಲ್ಲಿ ವಿಚ್ಛೇದನದ ಬಗ್ಗೆ ಯೋಚಿಸುವುದಕ್ಕೆ ಚಿಂತನೆಯ ಮೂಲಕವೇ ಉತ್ತರ ಕೊಡಬಹುದಾಗಿದೆ.

ಪಾಶ್ವಾತ್ಯ ದೇಶಗಳಲ್ಲಿನ ವಿಚ್ಛೇದನದ ಅಂಕಿ-ಅಂಶಗಳನ್ನು ಗಮನಿಸಿದರೆ, ಭೀತಿದಾಯಕವೂ ಮತ್ತು ನಿರಾಶಾಜನಕವೂ ಆದ ವಿಚಾರಗಳು ಮನಸ್ಸಿನಲ್ಲಿ ಮೂಡುವುದು ಸ್ವಾಭಾವಿಕ. ಅತ್ಯಂತ ಕ್ಷುಲ್ಲಕವೆಂಬ ಕಾರಣಗಳಿಗಾಗಿಯೂ ವಿಚ್ಛೇದನ ಪಡೆದು ಮದುವೆ ಎಂಬುದು ಗೊಂಬೆಯಾಟದ ದಿಶೆಯಲ್ಲಿ ನಡೆಯುತ್ತಿರುವುದು ಗಮನಕ್ಕೆ ಬರುತ್ತದೆ. ವಿಚ್ಛೇದನಗಳ ಪ್ರಮಾಣವು  ತೀವ್ರವಾಗಿ ಬೆಳೆಯುತ್ತಿರುವುದನ್ನು ಲಕ್ಷಿಸಿದ ನಂತರ, ಪಾಶ್ಚಾತ್ಯ ದೇಶಗಳ ವಾಸ್ತವ ಚಿತ್ರಣವು ಕಣ್ಣಮುಂದೆ ಸುಳಿದು, ವಿವಾಹ ವಿಚ್ಛೇದನ ಕಾಯಿದೆಯಿಂದ ಕುಟುಂಬ ಸಂಸ್ಥೆಯು ಮುರಿದು ಹೋಗಬಹುದು ಎನಿಸುವುದು ಸಹಜ. ಹೊಣೆಗಾರಿಕೆಯೇ ಇಲ್ಲದಂಥ ರೀತಿಯಲ್ಲಿ ಮದುವೆಯನ್ನು ನಿಶ್ವಯಿಸುವುದು ಅಥವಾ ಮದುವೆಯನ್ನು ಮುರಿಯುವುದು ಮತ್ತು ವಿಚ್ಛೇದನ ಪಡೆಯುವುದು ಈ ಅಂಶಗಳನ್ನು ಸಮಾಜ ಸ್ವಾಸ್ಥ್ಯ, ಕುಟುಂಬದ ಧೈರ್ಯ ಮತ್ತು ಮಕ್ಕಳು ಮರಿಗಳ ಪೋಷಣೆಯ ದೃಷ್ಟಿಯಿಂದ ಬಹಳ ಘಾತುಕವಾದ ರೀತಿಯದ್ದಾಗಿದೆ ಎಂಬುದರಲ್ಲಿ ಶಂಕೆಯೇ ಇಲ್ಲ. ಆದರೆ ನಿಜವಾಗಿಯೂ ಪರಸ್ಪರ ವಿರುದ್ಧ ಸ್ವಭಾವದ, ಬೇಕು ಬೇಡಗಳ ವಿಚಾರವಾಗಿ ಪರಸ್ಪರ ವಿರುದ್ಧವಾಗಿರುವ, ಒಬ್ಬರು ಮತ್ತೊಬ್ಬರ ಬಗ್ಗೆ ಲವಲೇಶ ಪ್ರೀತಿಯನ್ನು  ಹೊಂದಿರದಂಥ ತಿರಸ್ಕಾರ ಮನೋಭಾವದ ಪತಿಪತ್ನಿಯರು ಏಕತ್ರ ಇದ್ದು ಕುಟುಂಬವನ್ನು ವರ್ಧಿಸುವಂಥ ವಿಚಾರವು ಒಂದು ರೀತಿಯಲ್ಲಿ ಕಾಯಿದೆ ಬದ್ಧವಾದ ವ್ಯಭಿಚಾರವೇ ಅಲ್ಲವೆ? ಮದುವೆಯಾದ ಮೇಲೆ ವಿವಾಹಿತ ಸ್ತ್ರೀಯು ತನ್ನ ಹೊಟ್ಟೆಗಾಗಿ, ಮಕ್ಕಳ ಪಾಲನೆ ಪೋಷಣೆಗಾಗಿ, ತಾಯಿ-ತಂದೆಯವರ ವಂಶದ ಹೆಸರಿಗಾಗಿ ಸಮಾಜದ ಟೀಕೆಗೆ ಗುರಿಯಾಗಬಾರದು- ಮುಂತಾದ ಈ ಕಾರಣಗಳಿಗಾಗಿ ತನಗೆ ಯಾವ ರೀತಿಯಲ್ಲೂ ಅಗತ್ಯವಿಲ್ಲದ ಮನುಷ್ಯನೊಂದಿಗೆ ವರ್ಷಾನುವರ್ಷ ಗಟ್ಟಲೆ ಪತ್ನೀ ವ್ರತವನ್ನು ಆಚರಿಸುವಂಥ ಪ್ರಕ್ರಿಯೆಯು ಒಂದರ್ಧದಲ್ಲಿ ಮನುಷ್ಯತ್ವವನ್ನು ಬಿಟ್ಟು ಕೊಡುವಂಥದ್ದಾಗಿರುವುದಿಲ್ಲವೆ? ರೋಗಿ, ವಿಕೃತ, ದುರಾಚಾರಿ ಮತ್ತು ಪತ್ನಿಯನ್ನು ಹಿಂಸಿಸುವಲ್ಲಿ ಅಸುರೀ ಆನಂದವನ್ನು ಪಡೆದು ಧನ್ಯನಾಗುವ ಪತಿಯೊಂದಿಗೆ ಏಕರೂಪತ್ವ ಪಡೆಯಬೇಕೆಂಬ ನೀತಿರೂಪ ತತ್ತ್ವಗಳು ಎಂಥವು? ಯಾವ ಆಧಾರದ ಮೇಲೆ ಇವನ್ನು ಸಮರ್ಧನೀಯ ಎಂದು ನಿಶ್ಚಯಿಸ ಬಹುದಾಗಿವೆ? ಹೀಗೆ ಅನಿಚ್ಛೆಯ ಮಾನಸಿಕ ಪರಿಸ್ಥಿತಿಯಲ್ಲಿ ಸಮಾಗಮ ಪಡೆದು ಜನುಮ ಪಡೆಯುವ ಸಂತಾನಗಳು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಹೇಗೆ ಸಾಮರ್ಥ್ಯ ಪಡೆದಿರುತ್ತವೆ? ಈ ವಿಚಾರಗಳ ಹಿನ್ನೆಲೆಯಲ್ಲಿ ವಿಚ್ಛೇದನದ ಪ್ರಕ್ರಿಯೆಯಲ್ಲಿ ಸ್ತ್ರೀಯರು ಈ ಸಮಾಜದ ಅನೀತಿಗೆ ಮತ್ತು ಕುಟುಂಬದ ವಿಘಟನೆಗೆ ಯಾವ ರೀತಿಯಲ್ಲಿ ಕಾರಣಕರ್ತಳಾಗಿದ್ದಾಳೆ? ಈ ಮೊದಲಾದ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರವನ್ನು ಶೋಧಿಸುವಂಥ ಪ್ರಯತ್ನಗಳು ನಡೆಯಬೇಕಾಗಿವೆ.

ವಿವಾಹವು ಪವಿತ್ರ ಸಂಸ್ಕಾರ ಎಂಬ ವಿಚಾರವು ಮನಸ್ಸಿನಲ್ಲಿ ಉಂಟಾಗಬೇಕು. ಇದು ಸಾಧ್ಯವಾಗದೆ ಕ್ರೂರವಾಗಿ ಶರೀರದೊಂದಿಗೆ ಆಟವಾಡುವ ವಾಸನಾ ಪುರುಷನೇ ಸರಿ. ಪತಿಗಳಾದವರು ವ್ಯಸನಿ ಮತ್ತು ನಿರ್ದಯಿ ಕೃತ್ಯಗಳನ್ನು ಮಾಡುತ್ತಲಿದ್ದಾರೆ. ಸಮಾಜ ಸಮೃದ್ದಿ, ಕುಟುಂಬ ಸಂಸ್ಥೆ ಮತ್ತು ಮಾನಸಿಕ ಸೌಖ್ಯದ ಸಂವರ್ಧನೆಯನ್ನು ಸಾಧಿಸುವುದಕ್ಕೆ ಆಗುವುದಿಲ್ಲ. ಹಾಗಾಗಿ ಜಗ್ಗುತ್ತಾ ಎಳೆಯುತ್ತಾ ಮನಸ್ಸಿಲ್ಲದೆ ಜುಲುಮೆಯಿಂದ ದಿನವೂ ಬಲಾತ್ಕಾರಿಕವಾದಂಥ ಬದುಕನ್ನು ನಡೆಸುವುದಕ್ಕಿಂತಲೂ ಕಾಯಿದೆಬದ್ಧವಾಗಿ ಅದರಿಂದ ಬಿಡುಗಡೆ ಪಡೆಯುವುದು ಸೂಕ್ತ. ಅಂಥ ಧೈರ್ಯವುಳ್ಳ ಸ್ತ್ರೀಯರು ಈ ಬಗ್ಗೆ ಉಪೇಕೆಯನ್ನು  ತಾಳಬಾರದು. ಕ್ಷುಲ್ಲಕ ಕಾರಣಗಳು, ಸ್ವಭಾವದಲ್ಲಿನ ಭಿನ್ನತೆ, ಪದೇ ಪದೇ ಉಂಟಾಗುವ ಮತಭೇದಗಳಿಂದ ಸ್ತ್ರೀಯರು ವಿಚ್ಛೇದನಕ್ಕೆ ಮುಂದಾಗುವಲ್ಲಿ ಪ್ರವೃತ್ತವಾಗುವಂತಹುಗಳಲ್ಲ. ಏಕೆಂದರೆ ಇವು ಇಂದಿನ ಸಮಾಜದಲ್ಲಿನ ವಸ್ತುಸ್ಥಿತಿಯೇ ಆಗಿರುವುದು ಗಮನಾರ್ಹ. ಈ ಕಾರಣಗಳನ್ನು ಮುಂದಿಟ್ಟುಕೊಂಡು ವಿಚ್ಛೇದನಕ್ಕೆ ಮುಂದಾದರೆ ಅನೀತಿ ತಾಂಡವವಾಡುತ್ತದೆ, ಸ್ವೇಚ್ಛಾಚಾರವೂ ಬೆಳೆಯುತ್ತದೆ, ಜೊತೆಗೆ ಕುಟುಂಬ ಸ್ವಾಸ್ಥ್ಯವು ಹದಗೆಡುತ್ತದೆ. ಇದರಿಂದ ಸಮಾಜದ ಗತಿಯು ಸ್ಥಗಿತವಾಗಿ ವಿಪರೀತತೆಯನ್ನು ಕಾಣುವಂತಾಗುತ್ತದೆ. ವಿವಾಹವೆಂಬುದರ ಪಾವಿತ್ರ್ಯವು ನಾಶವಾಗುತ್ತದೆ ಎಂಬ ಅಂಶಗಳನ್ನು ಸಹಿಸಿಕೊಳ್ಳಬೇಕೆಂಬ ಕಾರಣಗಳು ಬೇಕಿಲ್ಲ.

ಮತ್ತೊಂದು ಸಂಗತಿಯೆಂದರೆ, ವಿಚ್ಛೇದನ ಪಡೆದ ದಂಪತಿಗಳ ಮಕ್ಕಳ ಪಾಲನೆ ಪೋಷಣೆ ಮತ್ತು ವ್ಯಕ್ತಿತ್ವ ವಿಕಸನದಲ್ಲಿ ಅಡಚಣೆ ಉಂಟಾಗಬಹುದು. ವಿಚ್ಛೇದನವು ಸಂತತಿಯ ದೃಷ್ಟಿಯಿಂದ ಅಯೋಗ್ಯವಾದ ಪ್ರಕ್ರಿಯೆ ಎಂಬುದು ಸರ್ವೆಸಾಮಾನ್ಯವಾಗಿ ನಿಜ. ಮಕ್ಕಳ ಜನುಮಾನಂತರ ಆ ಮಕ್ಕಳ ದೋಷವೇನೂ ಇಲ್ಲದಿದ್ದರೂ ಆ ಮಕ್ಕಳಿಗೆ ತಂದೆ ಅಥವಾ ತಾಯಿ ಇವರಿಬ್ಬರಲ್ಲಿ ಒಬ್ಬರ ಆಧಾರವು ವಿವಾಹ ವಿಚ್ಛೇದನದಿಂದ ಇಲ್ಲವಾಗುತ್ತದೆ. ಹೀಗೆ ಮಾಡುವ ಅಧಿಕಾರವು ತಂದೆ ತಾಯಿಗಳಿಗೆ ಪ್ರಾಪ್ತವಾಗುವುದಿಲ್ಲ ಎಂಬುದನ್ನು ನಿರಾಕರಿಸುವುದಕ್ಕೆ ಬರುವುದಿಲ್ಲ. ಆದರೂ ಇದರಿಂದ ಇಬ್ಬರ ಸಾನಿಧ್ಯವು ಹಿತಕಾರಕವಾಗುತ್ತದೆ ಎಂಬುದರ ಬಗ್ಗೆಯೂ ಯಾವುದೇ ಖಾತ್ರಿ ಇಲ್ಲ. ಇಂಥಲ್ಲಿ ಸುಖಶಾಂತಿಯ ವಿಚಾರವೇ ಸಾಧ್ಯವಾಗದಿರುವಾಗ ಇಂಥ ಕುಟುಂಬಗಳಲ್ಲಿ ಮಕ್ಕಳಿಗಾಗಿ ಪಪತ್ನಿಯರು ಏಕತ್ರ ಇರುವುದು ಹೆಚ್ಚು ಉಪಕಾರಕವೆಂದು ಭಾವಿಸುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು  ಲಕ್ಷಿಸಬೇಕು. ವ್ಯಸನಿಯಾದ ತಂದೆಯು ತಾಯಿಯ ಮೇಲೆ ದೈಹಿಕ, ಮಾನಸಿಕವಾಗಿ ದೌರ್ಜನ್ಯ ಮಾಡುವುದು, ವಿಷಯ ಲಂಪಟತ್ವದ ಚಾಳಿಯಿಂದಾಗಿ ಮನೆಯಲ್ಲಿ ತಾಯಿಯನ್ನು ನಿರ್ಲಕ್ಷಿಸಿ ಕೆಟ್ಟದ್ದಾಗಿ ನಡೆಸಿಕೊಳ್ಳುವುದು, ಇಬ್ಬರ ನಡುವೆ ಸತತವಾಗಿ ಜಗಳ ಈ ಮುಂತಾದ ಪ್ರಸಂಗಗಳಲ್ಲಿ ಮಕ್ಕಳು ಮೂಕರೋ ಅಥವಾ ಮೌನ ಸಾಕ್ಷಿದಾರರೋ ಅಥವಾ ನ್ಯಾಯಾಧೀಶರಾಗುವ ಸಂದರ್ಭವೋ ಮತ್ತೆ ಮತ್ತೆ ಬರುತ್ತಿರುತ್ತದೆ. ಮಕ್ಕಳಿಗೆ ಅಂಥ ಸಂದರ್ಭಗಳಲ್ಲಿ ತಮ್ಮ ದೃಷ್ಠಿಯಿಂದ ತಂದೆ ತಾಯಿಗಳ ಏಕತ್ರವಾದ ಸಾನ್ನಿಧ್ಯವು ತ್ರಾಸದಾಯಕ ಎನಿಸುತ್ತದೆ. ಅಲ್ಲದೆ ಆ ಕಾರಣಗಳಿಂದಾಗಿ ಅವರಲ್ಲಿಯೂ ಕೀಳುಭಾವನೆ, ವಿಕೃತಿಯು ನಿರ್ಮಾಣವಾಗುವುದೆಂಬ ಸಾಧ್ಯತೆಯನ್ನು ನಿರಾಕರಿಸುವುದಕ್ಕೆ ಬರುತ್ತದೆಯೇ? ದುಷ್ಟ, ವ್ಯಸನಿ, ಪಶುಸ್ವರೂಪಿ, ಅಹಂಕಾರಿಯಾದಂಥ ತಂದೆಯಿಂದ ಮಗನನ್ನು ದೂರ ಮಾಡುವುದು ತಾಯಿಯ ಮುಖ್ಯ ಕರ್ತವ್ಯ. ಇಂಥ ವಿಚಾರವನ್ನು ‘ಮಾತೃತ್ವ ಉತ್ಕೃಷ್ಟ’ದ ಉದಾಹರಣೆಯಾಗಿ ಒಪ್ಪಬೇಕಾದಂಥ ತಯಾರಿಯೊಂದನ್ನು ಸಮಾಜವು ರೂಪಿಸಿಕೊಳ್ಳಬೇಕಾದ್ದು ಅವಶ್ಯ. ಸದಾ ಕಲಹಮಯವಾಗಿರುವ ವಾತಾವರಣದಲ್ಲಿ ಸಮಾಜವು ಮಕ್ಕಳ ಆರೋಗ್ಯ ಸ್ವಾಸ್ಥ್ಯತೆಯ ಬೆಳವಣಿಗೆಯನ್ನು ಅಪೇಕ್ಷಿಸುವುದರಲ್ಲಿ ಯಾವ ಅರ್ಧವೂ ಇರುವುದಿಲ್ಲ. ಹಾಗಾಗಿ ಸಂತಾನದ ಕಾರಣವನ್ನು ಮುಂದೆ ಮಾಡಿ ವಿಚ್ಛೇದನದಿಂದ ಮಕ್ಕಳನ್ನು ಪೋಷಿಸುವ ಸಮಸ್ಯೆಯು ಉದ್ಭವವಾಗಬಹುದು. ಮಕ್ಕಳು ಬೇವಾರೀಶ್‌ಗಳೂ (ದಿಕ್ಕಿಲ್ಲದವರು), ನಿರಾಧಾರರೂ ಆಗುತ್ತಾರೆ ಎಂಬ ಭೀತಿಯು ಉಂಟಾಗುತ್ತದೆ. ಹಾಗಾಗಿ ವಿಚ್ಛೇದನದ ವಿಚಾರವನ್ನು ಮನಸ್ಸಿನಲ್ಲಿ ತರಬಾರದು ಎಂದು ನಿಶ್ಚಿತವಾಗಿ ಹೇಳುವುದು ಸಮರ್ಧನೀಯವೆನಿಸುವುದಿಲ್ಲ.

ಕಾಯಿದೆಯ ಅನುಸಾರವಾಗಿ ಗಮನಿಸಬೇಕಾದ ಸರ್ವೆಸಾಧಾರಣಾ ಅಂಶವೆಂದರೆ, ಯಾವ ಪಕ್ಷವು ದೋಷಿ ಎನಿಸುತ್ತದೆಯೋ ಅಥವಾ ನ್ಯಾಯಾಲಯವು ನಿರ್ಧರಿಸುತ್ತದೆಯೋ ಅವರುಗಳಿಗೆ ಮಕ್ಕಳ ಪಾಲಕತ್ವವನ್ನು ಕೊಡಬಾರದು. ನಿರ್ದೋಷಿಯಾದ ವ್ಯಕ್ತಿಗೇ ಮಕ್ಕಳನ್ನು ಒಪ್ಪಿಸಬೇಕು ಮತ್ತು ಅವರ ಪಾಲಕತ್ವದ ವೆಚ್ಚವನ್ನೆಲ್ಲ ದೋಷಿಯಿಂದ ಮಾಡಿಸಬೇಕು. ಈ ಪದ್ಧತಿಯು ಯೋಗ್ಯವೆನಿಸುವುದು. ಅದಕ್ಕೆ ಬದಲಾಗಿ ಇಬ್ಬರೂ ಖರ್ಚಿನ ಭಾರವನ್ನು ಯೋಗ್ಯ ಪ್ರಮಾಣದಲ್ಲಿ ಹೊರುವಂಥ ನ್ಯಾಯವನ್ನು ಹೇಳುವ ಅಗತ್ಯವಿಲ್ಲ. ಸಮಾಜದ ಘಟಕವಾಗಿ ನಿರ್ದೋಷಿ ವ್ಯಕ್ತಿ ಸ್ತ್ರೀಯಾಗಿದ್ದರೂ ಪಾಲಕಳಾಗಲು ಸಾಧ್ಯವಿದೆ. ಪಾಲಕತ್ವದ ಹಕ್ಕನ್ನು ಕಾಯಿದೆಬದ್ಧವಾಗಿ ಸ್ತ್ರಿಯರಿಗೆ ಒದಗಿಸುವ ವಿಷಯದಲ್ಲಿ ವಿಚ್ಛೇದನ ಕಾಯಿದೆಗಳು ತಪ್ಪು ಮಾಡಿದರೂ ಕೂಡ ಮಕ್ಕಳ ದೃಷ್ಟಿಯಿಂದ ಅದು ಲಾಭದಾಯಕವೇ ಆಗುತ್ತದೆ. ಅಶಿಕ್ಷಿತಳೂ ವ್ಯಾವಹಾರಿಕ ಜ್ಞಾನ ಇಲ್ಲದವಳೂ ಆದ ಸ್ತ್ರೀಯು ಮಕ್ಕಳ ಪಾಲನೆ-ಪೋಷಣೆಯಲ್ಲಿ ದಕ್ಷತೆಯನ್ನು ತೋರಿಸುವುದಕ್ಕೆ ಸಾಧ್ಯವಿಲ್ಲ ಎಂಬುದು ತಪ್ಪು ತಿಳಿವಳಿಕೆಯಾಗಿದೆ.

ಮೂರನೆಯ ಅನುಮಾನ ಎಂದರೆ, ವಿಚ್ಛೇದನ ಪಡೆದ ಸ್ತ್ರೀಯು ಪರಾವಲಂಬಿ ಮತ್ತು ನಿರ್ಗತಿಕಗಳಾಗುತ್ತಾಳೆ, ಅವಳಿಗೆ ತವರು ಮನೆಯೂ ಇಲ್ಲ; ಮಾವನ ಮನೆಯೂ ಇಲ್ಲ. ಇಂಥ ಆಧಾರಹೀನ ಸ್ಥಿತಿಯಲ್ಲಿ ಜೀವನವನ್ನು ನಡೆಸಬೇಕಾಗಿ ಬರುತ್ತದೆ.  ಹಾಗಾಗಿ ಪತಿಯಿಂದ ವಿಭಕ್ತಳಾಗುವ ನಿರ್ಣಯವನ್ನು ಸ್ತ್ರೀಯರು ಕೈಗೊಳ್ಳುವುದು ಸುಖದಾಯಕ ನಿರ್ಣಯವೆಂದು ಎನಿಸುವುದಿಲ್ಲ. ಈ ಬಗೆಯ ಭೀತಿಯೂ ನಿರಾಧಾರವಾದುದೇ ಹೌದು. ಕಾರಣ ಬಹುತೇಕ ಹೆಣ್ಣುಮಕ್ಕಳ ತಂದೆ-ತಾಯಿಗಳು ಮಗಳ ಮದುವೆ ಮಾಡಿ ಮುಗಿಸಿದ ಅನಂತರ ‘ಕೊಟ್ಟ ಮನೆಯಲ್ಲಿಯೇ ಅವಳು ಸತ್ತರೂ ನಡೆದೀತು; ಆದರೆ ತವರಿಗೆ ಮಾತ್ರ ಹಿಂತಿರುಗಿ ಬರುವುದು ಬೇಕಾಗಿಲ್ಲ. ತವರು ಮನೆಯು ಕೇವಲ ನಾಲ್ಕು ದಿನಗಳದಷ್ಟೆ, ಮಾವನಮನೆ (ಪತಿ)ಯೇ ನಿಜವಾಗಿಯೂ ಆಧಾರವು ಅವಳಿಗೆ’ ಎಂಬ ಪರಂಪರಾಗತ ತತ್ತ್ವಗಳ ಮೂಲಕವೇ ಅವಳನ್ನು ನೋಡುತ್ತಿದ್ದಾರೆ. ಗಂಡನು ಬಿಟ್ಟು ಬಿಟ್ಟ ವಿವಾಹಿತ ಹೆಣ್ಣು ತಂದೆ-ತಾಯಿ, ಸಹೋದರ-ಸಹೋದರಿಯರು, ಅತ್ತಿಗೆ, ಸಹೋದರಿ-ಭಾವ, ಮಾವ-ಅತ್ತೆಯರೇ ಮೊದಲಾಗಿ ಯಾವ ಸಂಬಂಧಿಕರಿಗೂ ಹತ್ತಿರದವಳು ಎನಿಸುವುದಿಲ್ಲ. ಹಾಗಾಗಿ ಪರಂಪರಾಗತ ವಿಚಾರಗಳ ಅನುಸಾರ ವಿಭಕ್ತಳಾದ ಮೇಲೆ ಬಹಳೇ ದಯನೀಯ ಸ್ಥಿತಿಯು ಬರುತ್ತದೆ ಅವಳಿಗೆ. ಇಂಥ ವಿಚಾರಗಳಿಂದ ಗ್ರಸ್ತಳಾಗಿ ವಿಚ್ಛೇದನ ಪಡೆಯುವ ವಿಚಾರವು ಗಂಡನಿಗೆ ಇದ್ದರೂ ಪತ್ನಿಯಾದವಳು ಶೋಷಿತಳಾಗಿ, ದೀನಳಾಗಿ, ಪತಿಯೊಂದಿಗೆ ಇರಬೇಕಾಗುತ್ತದೆ. ಸ್ತ್ರೀಯು ಮೂಲತಃ ದುರ್ಬಲೆ ಮತ್ತು ಅನಾಥಳಲ್ಲ ಎಂಬುದನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆಯೇ ಅವಳ ಬಗ್ಗೆ ಚಿಂತನೆ ಮಾಡಲಾಗುತ್ತದೆ. ಕೇವಲ ಹೊಟ್ಟೆಗೋಸ್ಕರ ತನಗೆ ಅಪ್ರಿಯವಾದ ಮದುವೆಯ ಸಂಕೋಲೆಯಲ್ಲಿ ಸಿಕ್ಕಿಬೀಳುವುದಕ್ಕಿಂತ ಸ್ವತಂತ್ರಳಾಗಿದ್ದೇ ಆತ್ಮವಿಶ್ವಾಸದಿಂದ ಬದುಕುವುದು  ಸುಖದಾಯಕವಾಗುವಂಥ ಸಂಗತಿ. ಅಲ್ಲದೆ ಆಸ್ತಿ ಮತ್ತು ಸಂಪತ್ತಿನಲ್ಲಿ ಭಾಗ ದೊರೆಯುವಂಥ ಸೌಲಭ್ಯವೂ ಇರುವುದರಿಂದ ಆ ದಿಶೆಯಲ್ಲಿ ಅವಳು ಪ್ರಯತ್ನಿಸುವುದು ಉಚಿತವೆನಿಸುತ್ತದೆ. ಯೋಗ್ಯವಾದ ಶಿಕ್ಷಣ, ಸಾಕಷ್ಟು ಅವಕಾಶ ಮತ್ತು ಅರ್ಧೋತ್ಪಾದಕ ಕ್ಷೇತ್ರದಲ್ಲಿ ಸಹಭಾಗಿತ್ವ ಇವುಗಳು ಲಭ್ಯವಾದರೆ ಸ್ತ್ರೀಯರು ಪುರುಷರು, ಪತಿ ಎಂಬ ಸಂಬಂಧ (ಯಾರು ನಿರುಪಯುಕ್ತ ಎಂದೆನಿಸಿ ಅವನಿಂದ ವಿಭಕ್ತಳಾಗಲು ಇಚ್ಚಿಸುವರೋ ಅಂಥವರು) ಇಲ್ಲದೆಯೂ ಮನುಷ್ಯಳೆಂಬಂತೆ ಜೀವನವನ್ನು ಉಪಭೋಗಿಸಬಲ್ಲಳು. ಅದರಂತೆಯೇ ವಿಧವಾ ಸ್ತ್ರೀಯರು ಪುರುಷರ ಸಹಾಯವಿಲ್ಲದೆಯೂ ಬದುಕಲಾರರೆ? ಅಷ್ಟೇ ಅಲ್ಲ ಮಕ್ಕಳು ಮರಿಗಳನ್ನು ಸಾಕಿ, ಸಲುಹಿ ಕೌಟುಂಬಿಕ ಜವಾಬ್ದಾರಿಯನ್ನು ನಿರ್ವಹಿಸುವ ಸಾಮರ್ಥ್ಯವನ್ನು ಉಳ್ಳವರಾಗಿರುತ್ತಾರೆ. ಹಾಗಾಗಿ ವಿಚ್ಛೇದನ ಪಡೆಯುವುದರಿಂದ ಸ್ತ್ರೀಯರು ಅನಾಥರಾಗುತ್ತಾರೆ, ಅವರ ಮಕ್ಕಳು ಬೀದಿಗೆ ಬೀಳುತ್ತಾರೆ ಮತ್ತು ಪರಾವಲಂಬಿಗಳಾಗುವುದರಿಂದ ಅವರ ಸ್ಥಿತಿಯು ಅತ್ಯಂತ ದಯನೀಯವಾಗುತ್ತದೆ ಎಂಬಂಥ ವಿಚಾರಗಳನ್ನು ಹೇಳುವುದರಲ್ಲಿ ಇನ್ನು ಯಾವ ಅರ್ಧವೂ ಇಲ್ಲ. ಸ್ತ್ರೀಯರ ಜೀವನ ಸುಖಕರವಾಗಬೇಕಾದ್ದು ಜರೂರಿನ ಕಾರ್ಯ ಎಂಬ ಮೂಲ ವಿಚಾರದ ಮೇಲೆಯೇ ವಿಚ್ಛೇದನ ಕಾಯಿದೆಯು ರೂಪಿತವಾಗಿದೆ. ಕುಟುಂಬ ಸ್ವಾಸ್ಥ್ಯ ಮತ್ತು ಸಾಮಾಜಿಕ ಸ್ಥೈರ್ಯ ಇವುಗಳಿಗೆ ಅದು ಪರಿಣಾಮಕಾರಿ ಪೋಷಣೆಯೇ ಆಗುವುದು.

ವಿಚ್ಛೇದನ ಪಡೆಯುವುದಕ್ಕೆ ಸಾಧ್ಯವಾಗಬೇಕು ಎಂಬ ಕಾರಣಕ್ಕಾಗಿ ಕಾಯಿದೆಯನುಸಾರ ಅದನ್ನು ಕ್ರಮಬದ್ಧಗೊಳಿಸಿದ್ದರಿಂದ, ವಿಚ್ಛೇದನ ಪಡೆಯಲಿಚ್ಚಿಸುವವರ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತಲಿದೆ. ಆದಾಗ್ಯೂ ಕಾಯಿದೆಯ ಮೂಲಕ ವಿಚ್ಛೇದನ ಪಡೆಯುವ ಸಾಧ್ಯತೆ ಇದ್ದರೂ ವಿಚ್ಛೇದಿತ ಸ್ತ್ರೀಯು ಸಾಮಾಜಿಕ ದೂಷಣೆಗೆ ಪಾತ್ರಗಳಾಗುತ್ತಲೇ ಇದ್ದಾಳೆ. ವಿಚ್ಛೇದನ ಪಡೆಯುವ ಸ್ತ್ರೀಯಲ್ಲಿ ಏನೋ ದೋಷವಿರುವುದೆಂದು ಎಲ್ಲರ ಸರ್ವೆಸಾಮಾನ್ಯವಾದ ತಿಳಿವಳಿಕೆ, ಹಾಗೆಯೇ ವಿಚ್ಛೇದನ ಪಡೆಯುವ ಸ್ತ್ರೀಯ ಕಡೆಗೆ ಭೀತಿಯುಕ್ತವಾದ ಅನಾದರಣೆಯಿಂದಲೋ ಇಲ್ಲವೆ ಅತ್ಯಂತ ದಯೆದಾಕ್ಷಿಣ್ಯದಿಂದಲೋ ನೋಡಲಾಗುತ್ತಿದೆ. ವಿಚ್ಛೇದನದ ವಿಷಯವನ್ನು ಕುರಿತಂತೆ ಮುಕ್ತ ಚರ್ಚೆಯು ಬಹಳವಾಗಿ ನಡೆಯುತ್ತಿಲ್ಲ. ಅಲ್ಲದೆ ಅದನ್ನು ವಿಚ್ಛೇದಿತ ಸ್ತ್ರೀಯೆದುರು ಮಾಡುವುದಕ್ಕೂ ಇಷ್ಟ ಪಡುವುದಿಲ್ಲ. ಹಿಂದೂ ವಿವಾಹಿತ ಸ್ತ್ರೀಯರು ಇಂದಿಗೂ ವಟ ಸಾವಿತ್ರಿಯ ವ್ರತವನ್ನು ಮಾಡುತ್ತಾ ‘ಜನುಮ ಜನುಮದಲ್ಲೂ ನನಗೆ ಇವರೇ ಪತಿಯಾಗಲಿ’ ಎಂಬುದಾಗಿ ಮನಸ್ವೀ ಪ್ರಾರ್ಧನೆ ಮಾಡುತ್ತಿದ್ದಾರೆ. ಹೀಗಿರುವ ಬಹುಸಂಖ್ಯಾತ ಸ್ತ್ರೀಯರ ಎದುರು ವಿಚ್ಛೇದನ ಪಡೆಯುವ ಸ್ತ್ರೀಯು ದೋಷಿ ಮತ್ತು ನಿಯಮವನ್ನು ಮೀರಿದಂಥ ಬಂಡುಗಾತಿಯಾಗಿ ಕಾಣಿಸುತ್ತಾಳೆ.  ಹಾಗಾಗಿ ಇಂಥ ಸ್ತ್ರೀಯರ ಬಗ್ಗೆ ಬಹುತೇಕವಾಗಿ ಸಾಮಾಜಿಕ ಮ್ಯಾನ್ಯತೆಯ ದೃಷ್ಟಿಕೋನವೊಂದನ್ನು ಸ್ವೀಕರಿಸಲಾಗುವುದಿಲ್ಲ. ಇತರೆ ಸ್ತ್ರೀಯರಂತೆ ಅರಿಷಿನ-ಕುಂಕುಮ, ಗೌರೀ ಪೂಜೆ, ಮಡಿಲು ತುಂಬುವಂಥ ಕಾರ್ಯಕ್ರಮಗಳಲ್ಲಿ ಅಂಥವರೇನಾದರೂ ಉಪಸ್ಥಿತರಾಗಿದ್ದರೆ ಅವರ ಬಗ್ಗೆ ಕೋಪವು ವ್ಯಕ್ತವಾಗುವುದುಂಟು. ಅಲ್ಲದೆ ಅವರ ಚಾರಿತ್ರ್ಯದ ಸಂಬಂಧವಾಗಿ ಶಂಕೆ ವ್ಯಕ್ತಪಡಿಸುವುದಕ್ಕೂ ಸಮಾಜವು ಹಿಂದೆಮುಂದೆ ನೋಡುವುದಿಲ್ಲ. ವಿಚ್ಛೇದನದಂಥ ಗಂಭೀರ ಸಂಗತಿಯನ್ನು ಕೂಡ ಲಕ್ಷ್ಯಕ್ಕೆ ತೆಗೆದುಕೊಂಡಿರುವಂಥ ಗಂಭೀರ ಜವಾಬ್ದಾರಿಯನ್ನು ವಿವಾಹಿತ ಸ್ತ್ರೀಯರ ಮೇಲೆಯೇ ಅಂದರೆ ಪತ್ನಿಯ ಮೇಲೆಯೇ ಹಾಕಲಾಗುತ್ತದೆ. ಅವರೇ ವಿಚ್ಛೇದನದ ಸರದಿ ಬರುವವರೆಗೂ ಸಹನೆಯಿಂದ ಇರಬೇಕು. ಅದು ಸಾಧ್ಯವಾಗಲೇಬಾರದು ಎಂಬ ದೃಷ್ಟಿಯಿಂದ ಮಾನಸಿಕ ಮತ್ತು ದೈಹಿಕ ದೌರ್ಜನ್ಯ, ಪೀಡನೆ ಮತ್ತು ದಯನೀಯ ಸ್ಥಿತಿಗಳೆಲ್ಲವನ್ನು ಸಹಿಸುತ್ತ ಬದುಕಿರಬೇಕು ಎಂಬುದು ಸಮಾಜದ ಅಪೇಕ್ಷೆ. ಆ ಕಾರಣದಿಂದ ವಿಚ್ಛೇದನದ ವಿಷಯವಾಗಿ ಸ್ತ್ರೀಯರಲ್ಲಿ ಭೀತಿ ಉಂಟಾಗುತ್ತದೆ. ಆದರೆ ಇಂಥ ಭೀತಿ ಪುರುಷರಿಗೂ ಇರಬೇಕು ಎಂಬಂಥ ಸಮಾನ ಸಮಾಜ ಧೋರಣೆಯು ಇಂದಿಗೂ ಸಾಧ್ಯವಾಗಿಲ್ಲ. ಇದರಲ್ಲಿಯೇ ಸ್ತ್ರೀಯರ ಮಾನಹಾನಿ ಮತ್ತು ದುರ್ದೈವಗಳು ಇರುವುದು. ಸುಶಿಕ್ಷಿತರು ಮತ್ತು ಸುಸಂಸ್ಕೃತರು ಎಂದು ತಿಳಿಯಲ್ಟಟ್ಟ ವ್ಯಕ್ತಿಗಳೂ ಕೂಡಾ ಈ ರೀತಿಯಲ್ಲಿಯೇ ಯೋಚಿಸುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿರುವಂಥ ಸಂಗತಿ. ಈ ಬಗೆಯ ಆಲೋಚನೆಯಲ್ಲಿ ಈ ಕೆಳಗಣ ಮೂರು ಕಾರಣಗಳು ಇವೆ:

ಮೊದಲನೆಯ ಕಾರಣವೆಂದರೆ, ಸ್ತ್ರೀಯರಿಗೆ ವಿವಾಹವು ಆವಶ್ಯಕವಾದ ಸಂಗತಿ ಎಂಬದಾಗಿ ಭಾವಿಸಿರುವುದು. ಅದಕ್ಕೆ ಸಮರ್ಧನೆಯೂ ಹೀಗಿದೆ, ಭಾರತೀಯರಲ್ಲಿ ಅವಿವಾಹಿತ ಸ್ತ್ರೀಯು ಮುಕ್ತವಾಗಿ ಅವಿವಾಹಿತ ಪುರುಷನಂತೆ ಲೈಂಗಿಕ ಸುಖವನ್ನು ಪಡೆಯುವ ಸಾಧ್ಯತೆಗಳಿಲ್ಲ. ವೇಶ್ಯೆಯರ ಬಳಿಗೆ ಹೋಗುವ ಪುರುಷರಲ್ಲಿ ಬಹಳಷ್ಟು ಹೆಚ್ಚು ಸಂಖ್ಯೆಯವರು ಅವಿವಾಹಿತರೇ. ವಿವಾಹದ ನಂತರದಲ್ಲಿಯೇ ನಿಜವಾದ ಅರ್ಧದಲ್ಲಿ ಸ್ತ್ರೀಯರು ಲೈಗಿಂಕ ಸುಖದ ಅನುಭವವನ್ನು ಪಡೆಯಬಹುದಾಗಿದೆ. ವಿವಾಹಾನಂತರದಲ್ಲಿ ಇಂಥ ಸುಖವು ಸಿಕ್ಕುತ್ತದೆ; ಆದರೆ ವಿಚ್ಛೇದನದಿಂದ ಅದರೆಡೆಗೆ ಬೆನ್ನು ತಿರುಗಿಸಬೇಕಾಗುವುದು ಅನಿವಾರ್ಯ. ಹಾಗೆ ಮಾಡುವುದಕ್ಕೆ ಸ್ತ್ರೀಗೆ ಸಾಧ್ಯವಿಲ್ಲ. ಕಾರಣ ಅವಳಿಗೆ ಪುನರ್ವಿವಾಹದ ಅವಕಾಶವಿಲ್ಲದಿರುವುದು. ಪರಿಣಾಮವಾಗಿ ಲೈಂಗಿಕ ಸುಖವಿಲ್ಲದೆಯೂ ಅವಳು ಬದುಕಬಲ್ಲಳು ಎಂಬ ಭಾವನೆಯು ಇಲ್ಲವಾಗಿದೆ. ಸಮಾಜದಲ್ಲಿ ಸರ್ವೆಸಾಮಾನ್ಯವಾಗಿ ಬಹುಸಂಖ್ಯಾತ ಜನರ ಧೋರಣೆಯು ಇದೇ ಆಗಿದೆ.

ಎರಡನೆಯ ಕಾರಣವೆಂದರೆ ಇಂದಿಗೂ ವಿವಾಹವನ್ನು ಒಂದು ಪವಿತ್ರ ಸಂಸ್ಕಾರವೆಂದು ಒಪ್ಪಿಕೊಂಡಿರುವಂಥ ಸಮಾಜ. ಅದರಿಂದಾಗಿ ವಿಚ್ಛೇದನ ಕಾಯಿದೆಯನುಸಾರ ಕರಾರು ಮಾಡಲಾಗಿದ್ದರೂ ವಿಶೇಷತಃ ಸ್ತ್ರೀಯರು ವಿವಾಹದ ಪಾವಿತ್ರ್ಯವನ್ನು ರಕ್ಷಿಸಬೇಕು ಎಂಬುದೇ ಸಮಾಜದ ತೀವ್ರ ಇಚ್ಛೆ. ಅಂದರೆ ಪತಿಯನ್ನು ಪರಮೇಶ್ವರನೆಂದು ಭಾವಿಸಿ ವಿವಾಹದ ಪವಿತ್ರ ಬಂಧನದಿಂದ ಇರುವುದರಲ್ಲಿಯೇ ಅವಳಿಗೆ ಹಿತವಿದೆ ಎಂಬ ಭೂಮಿಕೆಯೇ ಸ್ವೀಕೃತವಾಗಿದೆ. ಅಲ್ಲದೆ ೧೯೫೫ ವಿವಾಹ ಕಾಯಿದೆಯ ಪ್ರಕಾರ ವಿವಾಹವು ಈ ಸಂಸ್ಕಾರದ ಹಿನ್ನೆಲೆಯನ್ನು ಬಿಟ್ಟು ಕರಾರಿನ ಭೂಮಿಕೆಯ ಕಡೆಗೆ ಹೊರಳಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸಿದ್ದರೂ ಇಂದಿನವರೆವಿಗೂ ಈ ಕಾಯಿದೆಯು ವಿವಾಹವನ್ನು ಸಂಪೂರ್ಣವಾಗಿ ಕರಾರು (ಒಪ್ಪಂದ) ಎಂದು ಒಪ್ಪುವುದಕ್ಕೆ ಸಿದ್ಧವಿಲ್ಲ. ಹಾಗೆಯೇ ನೋಂದಣಿ (Registration) ವಿವಾಹ ಪದ್ಧತಿಯಲ್ಲಿಯೂ ಕೂಡ ಇದನ್ನು ಜನ್ಮ ಜನ್ಮದ ಸಂಬಂಧವಾಗಿಯೇ ಒಪ್ಪಿಕೊಳ್ಳಲಾಗಿದೆ. ನಪುಂಸಕತ್ವ, ನಾಲ್ಕು ವರ್ಷಗಳವರೆಗೆ ಬಿಟ್ಟು ಬಿಟ್ಟಿರುವುದು, ಏಳು ವರ್ಷಗಳವರೆಗೆ ನಾಪತ್ತೆಯಾಗಿರುವುದು, ಮಹಾ ರೋಗಿಷ್ಠ, ಪತಿಯು ಎರಡ ಅಥವಾ ಹೆಚ್ಚು ಮದುವೆ ಮಾಡಿಕೊಂಡವನಾಗಿರುವುದು, ಒಬ್ಬಳನ್ನು ಇಟ್ಟುಕೊಂಡಿರುವುದು, ಹೆಂಡತಿಯು ಒಂದೊಮ್ಮೆ ಬೇರೆಯವರಿಂದ ಇಟ್ಟುಕೊಂಡಿರುವಂಥವಳಾಗಿರುವುದು, ವೇಶ್ಯಾ ದಂಧೆಯನ್ನು ಮಾಡುತ್ತಿರುವುದು  ಇಂಥ ಕಾರಣಗಳನ್ನು ಮಾತ್ರವೇ ವಿಚ್ಛೇದನ ಕಾಯಿದೆಯು ಮುಖ್ಯವಾಗಿ ಪರಿಗಣಿಸುತ್ತದೆ. ಅಲ್ಲದೆ ಆ ಕಾರಣಗಳನ್ನು ಕೂಡಾ ಸಿದ್ಧಪಡಿಸಿ ತೊರಿಸಬೇಕು. ವಿವಾಹದಲ್ಲಿ ಸಂಸ್ಕಾರದ ಏನೆಲ್ಲ ಅಂಶಗಳು ಇವೆ.  ಹಾಗಾಗಿ ವಿಚ್ಛೇದನದಂಥ ಮಹತ್ವದ ವಿಷಯವು ಇದ್ದರೂ ಕೂಡ ಕಾಯಿದೆಯನ್ನು ಮೃದುವಾಗಿ (ಸ್ಥಿತಿ ಸ್ಥಾಪಕತ್ವದಂತೆ) ರೂಪಿಸಬೇಕಾಗಿದೆ. ವಿವಾಹ ವಿಚ್ಛೇದನವು ಸುಲಭವಾಗಿ ಆಗುವಂತಹದ್ದಲ್ಲ. ಅಲ್ಲದೆ ವಿಚ್ಛೇದನವನ್ನು ಕಾಯಿದೆ ಬದ್ಧವಾಗಿ ಮಾಡುವಂಥ ಪಂಚಗವ್ಯವು (ಹಾಲು, ಮೊಸರು, ತುಪ್ಪ, ಮೂತ್ರ, ಸಗಣಿ ಮಿಶ್ರಿತ ಆಕಳ ಜಿನಸು) ಕಹಿ ಮತ್ತು ನೀರಸವಾಗಿದೆ. ವಿಚ್ಛೇದನ ಸಂಬಂಧದ ನಿಯಮವು ಇಂದು ಮಾನವೀಯ ಆಧಾರದ ಮೇಲೆ ಸಡಿಲಗೊಳ್ಳಬೇಕಾದ್ದು ಅಗತ್ಯವಾದ ಅಂಶ.

ಮೂರನೆಯ ಕಾರಣವೆಂದರೆ, ಸಾರ್ವಜನಿಕವಾಗಿ ನಡೆಯುವಂಥ ವಿವಾಹದಲ್ಲಿ ನಿಜವಾದ ಅರ್ಧದ ಸಂಬಂಧವಿದ್ದಿರಲೇಬೇಕು ಎಂಬುದಾಗಿದೆ ಸಾಮಾಜಿಕ ಅಪೇಕ್ಷೆ. ಎಂತಲೇ ಆ ಪದ್ಧತಿಯೇ ಹೆಚ್ಚು ಭದ್ರವಾಗಿ ಇಂದಿಗೂ ಇರುವುದು. ನಿಜವಾಗಿಯೂ ಹೇಳಬೇಕೆಂದರೆ ಪತಿ-ಪತ್ನಿಯರಲ್ಲೂ ಇರುವಂಥದು ಅದೇ ಅಪೇಕ್ಷೆ. ಆದರೆ ಬೇರೆ ಬೇರೆಯಾದ ಅನೇಕ ಕಾರಣಗಳಿಂದಾಗಿ ಅವರಲ್ಲಿ ಮಾನಸಿಕ ಮಿಲನವು ಯಾವಾಗ ಆಗುವುದೇ ಇಲ್ಲವೋ ಆಗ ಪರಸ್ಪರರಲ್ಲಿ ತಿರಸ್ಕಾರವಷ್ಟೇ ಉಳಿಯುತ್ತದೆ. ಅಂಥ ಸಂದರ್ಭದಲ್ಲಿ ವಿಚ್ಛೇದನವು ಅಂಥ ಸಂಕೀರ್ಣ ನೆಲೆಯಿಂದ ಬಿಡುಗಡೆ ಪಡೆಯುವುದಕ್ಕೆ ಒಂದು ಉಪಕಾರಕ ಮಾರ್ಗವೆಂದು ಒಪ್ಪಿಕೊಳ್ಳಬಾರದೆ? ವಿವಾಹ ಸಂಬಂಧವು ಉಳಿಯಲೇ ಬೇಕು ಎಂದು ಆಗ್ರಹಿಸುವ ಸಮಾಜವು ಇಂಥ ಅಯಶಸ್ವಿ ವಿವಾಹಗಳನ್ನು ಸಂಪುಷ್ಟಗೊಳಿಸುವಂತಹ ಆವಶ್ಯಕತೆಗಳ ಕಡೆಗೂ ಲಕ್ಷ್ಯವನ್ನು ಹರಿಸ ಬೇಡವೇ? ಪತಿ-ಪತ್ನಿಯರು ಯಾವಾಗ ವಿಚ್ಛೇದನದ ಅನುಕೂಲತೆಯಿಂದ ಬೇರೆಬೇರೆಯಾಗಬಹುದೆಂದು ನಿಶ್ಚಯಿಸುತ್ತಾರೋ ಆಗ ದೋಷವು ಪತ್ನಿಯಲ್ಲಿಯೇ ಇದ್ದಿರಬೇಕು ಎಂದು ಹೇಳುವ ಬಹುಸಂಖ್ಯಾತ ಸಮಾಜ ಘಟಕದ ದೃಷ್ಟಿಕೋನದಲ್ಲಿ ಇರುವುದು ಇದೇ ತಿಳುವಳಿಕೆಯೆಂಬುದು ಅನುಭವಕ್ಕೆ ಬರುತ್ತದೆ.

೧೯೫೫ರ ಹಿಂದೂವಿವಾಹ ಕಾಯಿದೆಯಲ್ಲಿ ಇರುವ ಅನುಕೂಲತೆಗಳು ಬಹಳ ಯೋಗ್ಯವಾಗಿರುವುದಾದರೂ ನಪುಂಸಕತ್ವವನ್ನು ಸಿದ್ಧಪಡಿಸಿ ತೋರಿಸುವುದು ಬಹಳ ಕಷ್ಟದ ಕೆಲಸ. ಕಾಯಿದೆಯ ಅನುಸಾರವೇ ವಿಮೋಚನೆಯ ಫರ್ಮಾನು ಲಭ್ಯವಾದರೂ ಎರಡು ವರ್ಷಗಳ ಕಾಲ ತೊಳಲಾಡುತ್ತಾ ಇರಬೇಕಾಗುತ್ತದೆ. ಹಾಗೆಯೇ ವ್ಯಭಿಚಾರದಂಥ  ವಿಷಯದಲ್ಲಿ ಪೂರ್ಣವಾದ ಪುರಾವೆಯನ್ನು ಉಪಲಬ್ಧಗೊಳಿಸಿಕೊಳ್ಳುವುದು ಬಹಳ ತ್ರಾಸದಾಯಕವೇ ಹೌದು. ವಿಪರೀತ ಖರ್ಚು, ತೊಂದರೆ ಹಾಗೂ ಸಂಕೋಚದ ವಿಚಾರಗಳು ಮತ್ತು ವಿಳಂಬವಾಗಿ ನೀಡಲಾಗುವ ನಿರ್ಣಯ, ಇವುಗಳು ಕಾಯಿದೆಯ ವ್ಯಾಪ್ತಿಯಲ್ಲಿ ಅಧಿಕ ಪ್ರಮಾಣದಲ್ಲಿ ಗೋಚರಿಸುವ ಸಂಗತಿಗಳು. ವಿಚ್ಛೇದನ ಸಿಗುವವರೆಗೆ ಏನಿಲ್ಲವೆಂದರೂ ಸುಮಾರು ೭-೮ ವರ್ಷಗಳೇ ಹಿಡಿಯುವುದುಂಟು. ಕಣ್ಮರೆಯಾಗಿ ಹೋದ ಪತಿಗೋಸ್ಕರ ಏಳುವರ್ಷ ಕಾಯುವಂಥ ಸಂಗತಿಯು ಯೋಗ್ಯವಾದುದೆನಿಸುವುದಿಲ್ಲ. ಮದುವೆಯಾದಾಗಿ ನಿಂದ ವಿಚ್ಛೇದನಕ್ಕೆ ಅರ್ಜಿಯನ್ನು ಸಲ್ಲಿಸುವವರೆಗೆ ಪತಿಯು ಎಷ್ಟು ಆಸ್ತಿಯನ್ನು ಗಳಿಸಿರುತ್ತಾನೋ ಅದರಲ್ಲಿ ಅರ್ಧ ಭಾಗವನ್ನು ವಿಚ್ಛೇದನ ಪಡೆಯುವ ಸ್ತ್ರೀಗೆ ನೀಡುವಂತಹ ಹಕ್ಕನ್ನು ಕಾಯಿದೆಯಲ್ಲಿ ಅಳವಡಿಸಬೇಕು. ಇಲ್ಲದಿದ್ದರೆ ವ್ಯಸನಿಯೂ, ಮನೆಹಾಳನೂ ಆದ ಗಂಡನು ಎಲ್ಲಾ ಆಸ್ತಿಯನ್ನು ಹಾಳು ಮಾಡುವಂಥ ಭೀತಿ ಇರುತ್ತದೆ. ವಿಚ್ಛೇದಿತ ಸ್ತ್ರೀಗೆ ದೊರಕುವುದು ಜೀವನಾಂಶದ ತುಣುಕಷ್ಟೆ. ಅದರಲ್ಲಿಯೇ ಅವಳು ತನ್ನ ಮತ್ತು ತನ್ನ ಮಕ್ಕಳು ಮರಿಗಳ ನಿರ್ವಹಣೆಯನ್ನು  ಮಾಡಬೇಕಾಗುತ್ತದೆ. ಹಾಗಾಗಿ ವಿಚ್ಛೇದನದಿಂದ ಆರ್ಥಿಕ ಸಂಕಷ್ಟವು ನಿರ್ಮಾಣವಾಗುವುದು ಮತ್ತು ಅದರಿಂದ ಮಕ್ಕಳ ಬದುಕು ಕಷ್ಟಕರ ವಾಗುತ್ತದೆ.

ವಿಚ್ಛೇದನ ಕೇಳುತ್ತಿರುವ ಸ್ತ್ರೀಯರಲ್ಲಿ ಸುಶಿಕ್ಷಿತರ ಪ್ರಮಾಣವೇ ಹೆಚ್ಚು. ಇದರಲ್ಲಿ ಶಿಕ್ಷಣದ ದೋಷವಿಲ್ಲ, ಸ್ತ್ರೀಯರು ಜಾಗೃತರಾಗಿರುತ್ತಾರೆ ಅಷ್ಟೆ. ಪುರುಷರ ಮೋಹ ಜಾಲದಿಂದ ಸ್ತ್ರೀಯು ಬಂಧ ಮುಕ್ತಳಾಗಲು ನೋಡುತ್ತಿದ್ದಾಳೆ. ವಿಚ್ಛೇದನ ಕೇಳುವಲ್ಲಿ ಶಿಕ್ಷಣದ ದುರಭಿಮಾನವೋ ಅಥವಾ ಶಿಕ್ಷಣ ಪದ್ಧತಿಯ ದೋಷವೋ ಇಲ್ಲ. ನಿಷ್ಪ್ರೇಮವಾದ ವೈವಾಹಿಕ ಜೀವನ ಮತ್ತು ಶೋಷಣಾಯುಕ್ತ ಸಂಬಂಧಗಳಲ್ಲಿಯೇ ಬದುಕುವುದಕ್ಕಿಂತ ಅದರಿಂದ ಮುಕ್ತಿ ಪಡೆಯುವುದಕ್ಕೆ ವಿಚ್ಛೇದನೆಯ ಮಾರ್ಗವನ್ನು ಸ್ವೀಕರಿಸುವುದು ಅತ್ಯಂತ ಯೋಗ್ಯವೆಂದು ಒಪ್ಪಬಹುದಾಗಿದೆ.  ನಮ್ಮ ದೇಶದಲ್ಲಿ ಇಂದಿಗೂ ಯಾವ ಸ್ತ್ರೀಯರು ವಿಚ್ಛೇದನವನ್ನು ಕೇಳಬೇಕಾಗಿದೆಯೋ ಅವರು ಇಂಥ ಸಾಮಾಜಿಕ ಒತ್ತಡದಲ್ಲಿ ಸಿಲುಕಿದ್ದಾರೆ. ಹಾಗಾಗಿ ಪರಂಪರೆಯ ಪ್ರಭಾವದ ಮುಸುಕನ್ನು ಝಾಡಿಸಿ ದೂರ ಎಸೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಅಲ್ಲದೆ ಮಕ್ಕಳು ಮರಿಗಳ ಭಾವೀ ಜೀವನವು ನಾಶವಾಗುವುದು ಎಂಬ ಮಾನಸಿಕವಾದ ಭೀತಿ ಮತ್ತು ಸಂಬಂಧಿಗಳೆಲ್ಲರಿಂದ ಇಂಥ ನಿರ್ಣಯದಿಂದ ಹಿಂದಕ್ಕೆ ಸರಿಯಬೇಕೆಂಬ ಒತ್ತಾಯ ಪೂರ್ವಕವಾಗಿ ಬರುವಂತಹ ಸಲಹೆಯೂ ಉಂಟು. ಆ ದಿಶೆಯಲ್ಲಿ ಬೇರೆ ಯಾವ ಬಗೆಯ ಮಾರ್ಗದರ್ಶನವೂ ಸಿಕ್ಕುವುದಿಲ್ಲ. ಆ ಹಿನ್ನಲೆಯಿಂದಾಗಿ ಸ್ತ್ರೀಯ ವ್ಯಕ್ತಿ ಸ್ವಾತಂತ್ರ್ಯವನ್ನು ಮಾನ್ಯ ಮಾಡಿದ ಮೇಲೆ ಅವಳ ಅಧಿಕಾರವೂ ಅಬಾಧಿಕವಾಗಿ ಇರಬೇಕಾದ್ದು ಅವಶ್ಯ.