ಹಿಸುಕಿ ಹಾಕುತ್ತಿರುವ ವೈಧವ್ಯ ಮತ್ತು ಮೈಚೆಲ್ಲಿ ವಿರಮಿಸುತ್ತಿರುವ ಸಮಾಜ

ಸುಶೀಲ ಬಾಟ್ ಎಂಬಾಕೆ ಗಾರಗೋಟಿಯಲ್ಲಿದ್ದಂಥ ಒಬ್ಬಳು ವಿಧವೆ. ಅವಳನ್ನು ವಿಧವಾ ಹೆಂಗಸು ಎನ್ನುವುದಕ್ಕಿಂತ ತರುಣಿ ಎಂದು ಹೇಳುವುದೇ ಹೆಚ್ಚು ಉಚಿತ. ಹತ್ತು ವರ್ಷದೊಳಗಿನ ಮೂರು ಮಕ್ಕಳು ಅವಳಿಗೆ. ಗಂಡನೋ ಕುಡುಕ, ಹೆಂಡದ ವ್ಯಸನದಲ್ಲಿಯೇ ಬದುಕಿದ್ದನು ಹಾಗೂ ಸತ್ತೂ ಹೋದನು! ಅವನ ಸಾವಿನಿಂದ ಆಕೆಗೆ ಆಕಾಶವೇ ಕಳಚಿ ಬಿದ್ದಂತಾಯಿತು, ಅಲ್ಲದೆ ಸುಶೀಲಳಿಗೆ ಬೇರೆ ಯಾವುದೇ ಆಧಾರವೂ ಇರಲಿಲ್ಲ. ಇನ್ನು ಮಕ್ಕಳನ್ನು ಸಾಕುವುದಾದರೂ ಹೇಗೆ? ಈ ಪ್ರಶ್ನೆಯು ಗಂಡನ ಸಾವಿನ ದುಃಖ ಕ್ಕಿಂತಲೂ ಅಧಿಕ ದುಃಖವನ್ನು ತರುವಂತಹದ್ದಾಗಿತ್ತು! ಸಂಬಂಧಿಗಳಿಂದ ಒಣ ಉಪದೇಶ ಮತ್ತು ಶಾಬ್ದಿಕ ಸಹಾನೂಭೂತಿ, ಉಳಿದಂತೆ ಯಾವ ಆಧಾರವು ಸಿಕ್ಕದ್ದರಿಂದ ಅವಳಿಗೆ ಚಿಂತೆಯು ತೀವ್ರವಾಗಿ ಬಾಧಿಸಲಾರಂಭಿಸಿತು. ಹಾಗಾಗಿ ನಿಯಮಿತವಾಗಿ ನಮ್ಮಲ್ಲಿಗೆ ಬರುತ್ತಿದ್ದಳು. ಮೊದಲಿಗೆ ಸರ್ಕಾರಿ ಮೆಸ್ಸೊಂದರಲ್ಲಿ ಅಡುಗೆ ಕೆಲಸವನ್ನು ಕೊಡಿಸಿದೆವು. ಆದರೆ ನಾಲ್ಕು ತಿಂಗಳಲ್ಲಿ ಅದೂ ಕೈಬಿಟ್ಟು ಹೋಯಿತು. ಆದರೆ ಹೊಟ್ಟೆ ಹೊರೆಯಲೇ ಬೇಕಲ್ಲ; ಹೊಲದಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಳು. ಮಕ್ಕಳೆಲ್ಲ ಚಿಕ್ಕವು, ಒಬ್ಬ ಮಗನನ್ನು ಕೊಲ್ಹಾಪುರದ ಅನಾಧಾಲಯದಲ್ಲಿಯೂ ಮತ್ತೊಬ್ಬನನ್ನು ಪಾಟಗಾಂವ್ ಎಂಬಲ್ಲಿನ ಆಶಮ ಶಾಲೆಯಲ್ಲಿಯೂ ಪ್ರಯತ್ನಪಟ್ಟು ಸೇರಿಸಿದಳು. ಅನಂತರ ಮೂರನೆಯ ಮಗ ಮತ್ತು ಎರಡು ಆಡುಗಳೊಂದಿಗೆ ಒಂದು ಚಿಕ್ಕ ಕೋಣೆಯಲ್ಲಿ ಜೀವನ ನಡೆಸಲಾರಂಭಿಸಿದಳು. ಅವಳ ಮುಖ್ಯ ಆಸೆಯೆಂದರೆ ಮಕ್ಕಳು ದೊಡ್ಡವಾಗುತ್ತವೆ, ಸುಖವನ್ನು ತರುತ್ತವೆ ಎಂಬುದಾಗಿತ್ತು.

ಹೀಗೆ ಸುಶೀಲೆಯಂಥ ಅನೇಕರು ನಮ್ಮ ಸಮಾಜದಲ್ಲಿ ಅತ್ಯಂತ ದಿಕ್ಕಿಲ್ಲದವರಾಗಿ ಮತ್ತು ದಯನೀಯವಾಗಿ ಬದುಕುತ್ತಿದ್ದಾರೆ. ಸಮಾಜದಲ್ಲಿ ವೈಧವ್ಯವು ದುರ್ಲಕ್ಷಿತ ಮತ್ತು ಕನಿಷ್ಠ ಸ್ಥಾನದ್ದಾಗಿ ಪರಿಣಮಿಸಿದೆ. ಆರ್ಥಿಕ ಪರಾವಲಂಬನೆ, ಮನೆಯಲ್ಲಿ ಯಾರಿಗೂ ಬೇಡವಾದ ವ್ಯಕ್ತಿಯನ್ನಾಗಿ ಮಾಡಿಬಿಟ್ಟಿದೆ. ಇದರಿಂದಾಗಿ ಅನೇಕ ವಿಧವೆಯರು ಮಾನಸಿಕವಾಗಿ ಒಳಗೊಳಗೇ ಬೇಯುತ್ತಲಿದ್ದಾರೆ. ಸುಶಿಕ್ಷಿತ ಮತ್ತು ಶಿಮಂತ ಕುಟುಂಬಗಳಲ್ಲಿನ ವಿಧವೆಯರು ಆರ್ಥಿಕ ಸಂಕಟಗಳನ್ನು ಮತ್ತು ನಿಂದನೆಗಳನ್ನು ಎದುರಿಸುವಂತಹ ಪರಿಸ್ಥಿತಿ ಬರುವುದಿಲ್ಲ. ಆದರೆ ಮಧ್ಯಮವರ್ಗೀಯ ಮತ್ತು ಸರ್ವೆಸಾಮಾನ್ಯ ಬಹುಸಂಖ್ಯಾತ ಕುಟುಂಬಗಳಲ್ಲಿ ವಿಧವಾ ಸ್ತ್ರೀಯರ ಸ್ಥಿತಿ ಮಾತ್ರ ಅತ್ಯಂತ ಚಿಂತಾಜನಕ. ವಿಧವೆಯರ ಪ್ರಶ್ನೆಗಳನ್ನು ವಿಚಾರ ಮಾಡುವಾಗ ಕೆಲವಾರು ವಿಶಿಷ್ಟವೂ ಪವಿತ್ರವೂ ಎಂದು ಮಾನ್ಯ ಮಾಡಿರುವ ನೆಲೆಗಳಲ್ಲಿ ವಿಧವೆಯರು ಬಹುದೊಡ್ಡ ಸಂಖ್ಯೆಯಲ್ಲಿ ನಲೆಸಿದ್ದಾರೆ ಎಂಬ ಸಂಗತಿ ಲಕ್ಷಿಸುವಂತಹದ್ದಾಗಿದೆ.

ದಯನೀಯ ಪರಿಸ್ಥಿತಿ

ವೃಂದಾವನವು ಹಿಂದೂಗಳ ಅತ್ಯಂತ ಪವಿತ್ರ ತೀರ್ಧಕ್ಷೇತ್ರ. ಶ್ವೇತ ಬಣ್ಣದ ವೇಷದಲ್ಲಿ ಕೇಶಮುಂಡನ ಮಾಡಿಕೊಂಡು, ಕೃಶತೆ ಮತ್ತು ಅಶಕ್ತತೆಗಳಿಂದ ಉಂಟಾದ ಬಿಳುಚಿನಿಂದ ಕೂಡಿದಂಥ ವಿಧವೆಯರು ಬಹುದೊಡ್ಡ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ. ಬೆಳಗಿಗೆ ತೀರ್ಧದಲ್ಲಿ ಸ್ನಾನ ಮುಗಿಸಿಕೊಂಡು ದೇವರ ನಾಮವನ್ನು ಜಪಿಸುತ್ತಾ, ತಮ್ಮ ಅಸ್ತಿತ್ವದ ಅರಿವನ್ನು ಉಂಟು ಮಾಡುವ ಪ್ರಯತ್ನವನ್ನು ಅವರು ಮಾಡುತ್ತಿರುತ್ತಾರೆ. ಈ ನಗರದ ಮತ್ತೊಂದು ಭಾಗದಲ್ಲಿನ ಭಜನಾ ಆಶ್ರಮಗಳಲ್ಲಿ ಅನೇಕರ ವಾಸ್ತವ್ಯವಿದ್ದು, ಬೆಳಿಗ್ಗೆ ನಾಲ್ಕು ಗಂಟೆ ಮತ್ತು ಮಧ್ಯಾಹ್ನದ ನಂತರ ನಾಲ್ಕು ಗಂಟೆ ಹೀಗೆ ದೇವರ ನಾಮಸ್ಮರಣೆ ಮಾಡುವ ಸಾಮುದಾಯಿಕ ಕಾರ್ಯಕ್ರಮದಲ್ಲಿ ಅವರು ತೊಡಗಿಕೊಂಡಿರುತ್ತಾರೆ. ಪ್ರಾರ್ಧನೆ ಮಾಡುವ ಕಾರ್ಯಕ್ಕಾಗಿ ಅವರಿಗೆ ಸಿಕ್ಕುವುದು ಎಂಟಾಣೆ, ಹನ್ನೆರಡಾಣೆಗಳಷ್ಟೆ. ವರ್ಷಾನು ವರ್ಷಗಳಿಂದ ಅವರ ಬದುಕು ಸಾಗಿಬಂದಿರುವುದು ಹೀಗೆಯೇ. ಅಂದರೆ ಅವರು ಬದುಕುತ್ತಿರುವುದು ಕೇವಲ ಶಾಬ್ದಿಕ ಅರ್ಧದಲ್ಲಿ! ಬೇರೆ ಮತ್ತಾವುದೇ ಅರ್ಧವು ಅವರ ಬದುಕಿನಲ್ಲಿ ಉಳಿದಿಲ್ಲ. ಬೃಂದಾವನದಲ್ಲಿಯಷ್ಟೆ ವಿಧವೆಯರು ನೆಲೆಸಿದ್ದಾರೆ ಎಂದಲ್ಲ, ದಕ್ಷಿಣ ಭಾರತದಲ್ಲಿ, ಅಂತೆಯೇ ಬಂಗಾಳ, ಅಸ್ಸೋಮ್, ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲಿನ ಧಾರ್ಮಿಕ ಪವಿತ್ರ ಕ್ಷೇತ್ರಗಳೆಲ್ಲ ವಿಧವೆಯರಿಗೆ ಆಧಾರವನ್ನು ನೀಡುವುವುಗಳಾಗಿವೆ.

ಭವಿಷ್ಯ ಕಾಲವೇ ಅಂಧಕಾರಮಯವಾಗಿರುವ ವರ್ತಮಾನ ಕಾಲದಲ್ಲಿ ಸಮಾಜದ ದೃಷ್ಟಿಯಿಂದ ಭಾರವೆನಿಸಿರುವ ಅಡನಾಡಿ ಮತ್ತು ಅಕುಶಲ, ಶಾರೀರಿಕ ದೃಷ್ಟಿಯಿಂದ ದುರ್ಬಲವಾಗಿರುವ ವಿಧವೆಯರ ಸಂಖ್ಯೆ ಬಹಳ ದೊಡ್ಡದಿದೆ. ಬೃಂದಾವನದಲ್ಲಿನ ದೇವಾಲಯದಲ್ಲಿ ಮತ್ತು ಅಲ್ಲಿನ ಪರಿಸರದಲ್ಲಿ ಇರುವವರ ಸಂಖ್ಯೆ ಸುಮಾರು ೭೦೦೦ ದಿಂದ ೧೦,೦೦೦. ವಾರಣಾಸಿಯಲ್ಲಿ ಅದರ ಸಂಖ್ಯೆ ಸುಮಾರು ಇಪ್ಪತ್ತು ಸಾವಿರ. ಹರಿದ್ವಾರ, ಗೋಕುಲ ಗೋವರ್ಧನ, ಅಯೋಧ್ಯೆ ಮತ್ತು ಇತರ ಪವಿತ್ರ ಸ್ಥಳಗಳಲ್ಲಿ ಇನ್ನೂ ಸಾವಿರಾರು ಸಂಖ್ಯೆಯಲ್ಲಿ ಅವರು ವಾಸಿಸಿರುವ ಬಗ್ಗೆ ಮಾಹಿತಿ ಉಪಲಬ್ಧವಿದೆ.

ಸಮಾಜ ಕಲ್ಯಾಣ ಖಾತೆಯು ವಿಧವೆಯರ ಸಂಖ್ಯೆಯ ಬಗ್ಗೆ ಅಂದಾಜು ಮಾಡಿರುವಂತೆ, ನಮ್ಮ ದೇಶದಲ್ಲಿ ಪ್ರತಿವರ್ಷ ಹತ್ತಿರ ಹತ್ತಿರ ಒಂದು ಲಕ್ಷ ಸ್ತ್ರೀಯರು ನಿರಾಧಾರರಾಗಿ ವಿಧವೆಯರ ವರ್ಗೀಕರಣದಲ್ಲಿ ಸೇರಿಕೊಳ್ಳುತ್ತಿದ್ದಾರೆ. ಆದರೆ ಈ ಖಾತೆಯ ಅಂದಾಜಿನ ಬಗ್ಗೆ ಮತಭೇದವಿದೆ. ಆದಾಗ್ಯೂ ವಿಧವೆಯರ ಸಂಖ್ಯೆ ಬಹಳ ದೊಡ್ಡದಿದೆ ಎಂಬುದು ಮಾತ್ರ ನಿಶ್ಚಿತ. ಪರಸ್ವಾಧೀನಳಾಗಿ ಬದುಕುವ ಪಾತಳಿಯನ್ನು ತಂದೊದಗಿಸಿದ ಕಾರಣ ಪರಮೇಶ್ವರನ ಬಗ್ಗೆ ಅವರಿಗೆ ಎಂಥ ಪ್ರೀತಿಯು ಉಂಟಾದೀತು? ಇನ್ನು ನಡೆಯುತ್ತಿರುವ ಭಜನೆಗಳಲ್ಲಿ ಅವರು ಎಷ್ಟರ ಮಟ್ಟಿಗೆ ಅಂತಃಕರಣ ಪೂರ್ವಕವಾಗಿ ಆನಂದಿಸುತ್ತಿರಬಹುದು? ಭಕ್ತಿ, ಶ್ರದ್ಧೆ ಈ ಭಾವನೆಗಳು ಎಷ್ಟು ಪ್ರಖರವಾಗಿದ್ದೀತು? ಈ ಮೊದಲಾದ ಪ್ರಶ್ನೆಗಳೆಲ್ಲ ಅನುತ್ತರಿತವೇ! ಕೇವಲ ಹೇಗೋ ಉದರ ನಿರ್ವಹಣೆ ಮಾಡುವುದಕ್ಕಾಗಿ ಮತ್ತು ಸಮ ದುಃಖಿಗಳಾದ ಕಾರಣ ಧರ್ಮಕ್ಷೇತ್ರಗಳು ವಾಸ್ತವ್ಯದ ನೆಲೆಗಳಲ್ಲಿ ಅಷ್ಟರಲ್ಲಿಯೇ ಶುದ್ಧವಾಗಿ ಮತ್ತು ವ್ಯವಹಾರದ ಹೇತುವಿನಿಂದ ಅವರು ನೆಲೆಸಿದ್ದಾರೆ.

ಕಾಯಿದೆಗಳು ಮತ್ತು ವಿಧವೆಯರು

ಸಾಮಾಜಿಕ ಸುಧಾರಣೆಯಲ್ಲಿ ಮಹತ್ವದ ಹೆಜ್ಜೆಯಾಗಿ ಹಿಂದೂ ಪುನರ್ವಿವಾಹ ಕಾಯಿದೆಯನ್ನು ೧೯೫೬ರಲ್ಲಿ ಜಾರಿಗೆ ತರಲಾಯಿತು. ನಮ್ಮ ಸಮಾಜ ಮತ್ತು ಶಾಸನಗಳು ಕಾಯಿದೆಗಳನ್ನು ತರುವುದರಲ್ಲಿ ಪುರೋಗಾಮಿಗಳಾಗಿವೆ. ೧೯೭೧ರ ಜನಗಣತಿಯ ಅನುಸಾರ ಸುಮಾರು ೨೩ ದಶಲಕ್ಷ ವಿಧವೆಯರಿದ್ದರು. ಅಂದರೆ ಅಂದಾಜು ಒಟ್ಟು ಸ್ತ್ರೀ ಸಂಖ್ಯೆಯ ಶೇಕಡ ೧೦ರಷ್ಟು ಸ್ತ್ರಿಯರು ವಿಧವೆಯರಾಗಿದ್ದರು. ಈ ಹಿನ್ನಲೆಯಿಂದ ಹೇಳುವುದಾದರೆ ವಿಧವೆಯರ ಸಂಖ್ಯೆಯನ್ನು ದುರ್ಲಕ್ಷಿಸುವಂಥದಲ್ಲ. ಅವರ ಪ್ರಶ್ನೆಗಳನ್ನು ಗಂಭೀರವಾಗಿ ವಿಚಾರ ಮಾಡಬೇಕೆಂಬುದು ಮಾನ್ಯವಾಗಿರುವ ಸಂಗತಿ. ೧೯೭೧ರ ಜನಗಣತಿಯ ಅನುಸಾರ ವಿಧುರರ ಸಂಖ್ಯೆ ಕೇವಲ ಎಂಟು ದಶಲಕ್ಷವಾಗಿತ್ತು. ಈ ಮೂಲಕ ಸ್ಪಷ್ಟವಾಗುವುದೇನೆಂದರೆ ಒಂದು ಶತಮಾನಕ್ಕಿಂತಲೂ ಹಳೆಯದಾದ ಪುನರ್ ವಿವಾಹ ಕಾಯಿದೆಯು ಕೇವಲ ಕಾಗದದ ಮೇಲಷ್ಟೆ ಇತ್ತು ಎಂಬುದು ಕಂಡು ಬರುತ್ತದೆ.

ವಿಧವಾ ಸ್ತ್ರೀಯರ ವಿಷಯದಲ್ಲಿ ಮತ್ತೊಂದು ಕಾಯಿದೆಯು ಉಪಯುಕ್ತವಾಗ ಬಹುದು. ಅದೆಂದರೆ ಹಿಂದೂ ವಾರಸ(ಉತ್ತರಾಧಿಕಾರಿ) ಕಾಯಿದೆ, ಕ್ರಿ.ಶ. ೧೯೫೬ರಲ್ಲಿ ಇದನ್ನು ಜಾರಿಗೊಳಿಸಲಾಯಿತು. ಹಿಂದೂ ಸ್ತ್ರೀಗೆ ಈ ಕಾಯಿದೆಯನುಸಾರ ಮೊತ್ತ ಮೊದಲಿಗೆ ವಾರಸಾ ಹಕ್ಕು ಪ್ರಾಪ್ತವಾಯಿತು. ಈ ಕಾಯಿದೆಯು ಜಾರಿಗೊಂಡ ನಂತರ ಯಾರಾದರೂ ಹಿಂದುವು ಮೃತ್ಯುಪತ್ರವನ್ನು ಮಾಡದೆ ಮರಣ ಹೊಂದಿದರೆ ಅವನ ಸಂಕಷ್ಟಾರ್ಜಿತ ಸಂಪಾದನೆಯು ಇಲ್ಲವೆ ಪಿತ್ರಾರ್ಜಿತ ಆಸ್ತಿಯು ಅವನ ಪತ್ನಿ, ಗಂಡುಮಕ್ಕಳು, ಹೆಣ್ಣುಮಕ್ಕಳು ಮತ್ತು ತಾಯಿಯರಿಗೆ ಭಾಗ ಮಾಡಿಕೊಡಲಾಗುವುದು. ಹಾಗೆಯೇ ಅವನಿಗೆ ಮೊದಲೇ ಅವನ ಮಗ ಅಥವಾ ಮಗಳು ಮರಣ ಹೊಂದಿದ್ದರೆ, ಅವರ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ಆ ಮೃತ ಮಗನ ಅಥವಾ ಮಗಳ ಪಾಲನ್ನು ಕೊಡಲಾಗುವುದು. ಹೆಂಡತಿಗೆ ಮತ್ತು ಮಗಳಿಗೆ ಸಿಕ್ಕ ಭಾಗಕ್ಕೆ ಅವರೇ ಪೂರ್ಣವಾಗಿ ಮಾಲೀಕತ್ವದ ಅಧಿಕಾರವನ್ನು ಹೊಂದಿರುತ್ತಾರೆ.

ಕಾಯಿದೆಗಳಿಂದ ವಿಧವೆಯರಿಗೆ ಆರ್ಥಿಕ ಸಂರಕ್ಷಣೆ ಸಿಗುವುದು. ಆದರೆ ಕಾಯಿದೆಗಳ ಬಗ್ಗೆ ಅವರಿಗಿರುವ ಅಜ್ಞಾನ, ಮೈದುನ-ಅತ್ತೆ-ಮಾವಂದಿರ ದಬ್ಬಾಳಿಕೆಯಿಂದಾಗಿ ಕಾಯಿದೆಗಳ ವಿಚಾರ ಮಾತನಾಡುವುದು ಸುಲಭವಲ್ಲ. ಸ್ವಂತ ಮಕ್ಕಳಿಗೋಸ್ಕರ ಭಾಗವನ್ನು ಕೇಳಬೇಕೆಂದರೆ ಜಗಳ ಮಾಡುವುದೇ ಮೊದಲಾದ ಕಾರಣಗಳಿಂದ ವಿಧವೆಯಾದವರೇ ಆರ್ಥಿಕ ದೃಷ್ಟಿಯಿಂದ ತ್ವರಿತವಾಗಿ ತಮ್ಮ ಸಮಸ್ಯೆಗಳನ್ನು ಬಿಡಿಸಿಕೊಳ್ಳುವುದು ಅತ್ಯಂತ ಕಠಿಣವಾಗಿದೆ. ಕಾಯಿದೆಗಳು ನೀಡುವಂತಹ ಸಂರಕ್ಷಣೆಯು ಶಿಮಂತ ವಿಧವೆಯರಿಗೆ ಲಾಭದಾಯಕವಾಗಿರುವುದು. ಆದರೆ ಮಧ್ಯಮ ವರ್ಗೀಯ, ಅಶಿಕ್ಷಿತ ಮತ್ತು ಗ್ರಾಮೀಣ ಭಾಗದಲ್ಲಿನ ವಿಧವೆಯರು ಇದನ್ನು ಮಾತನಾಡವುದು ಎಂದರೆ ಒಂದು ಮಹಾಭಯಂಕರವಾದ ವಿಷಯವೇ. ‘ಈ ತಾಯಿಯ ಧನ್ಯತೆಯು ಎಂಥದು? ಬಂಗಾರದಂತಹ ಗಂಡ ಸತ್ತನು, ಸಂಸಾರವು ಉಧ್ವಸ್ತವಾಯಿತು, ಕುಂಕುಮ ಅಳಿಸಿ ಹೋಯಿತು, ಜೀವನವೇ ಸರ್ವನಾಶವಾಗಿ ಹೋಯಿತು. ಹೀಗಿರುವಾಗ ಕಾಯಿದೆಬದ್ಧವಾಗಿ ಭಾಗ ಪಡೆದುಕೊಂಡು ಇವಳು ಹಣದಿಂದ ಮೆರೆಯುತ್ತಾಳೆಂದು ಕಾಣುತ್ತದೆ. ಏಕೆ ಬೇಕು ಅವಳಿಗೆ ಹಣದ ಈ ಕಾವು? ನಾಲ್ಕು ತುತ್ತು ಹೊಟ್ಟೆಗೆ ಮತ್ತು ಎರಡು ಸೀರೆಗಳು ಮೈಗೆ, ಅದಕ್ಕಾಗಿ ಇಷ್ಟೊಂದು ಜಟಾಪಟಿಯಾದರೂ ಏಕೆ?’ ಎಂಬ ಉದ್ಗಾರಗಳನ್ನೂ ಕೇಳಬೇಕಾಗಿ ಬರುತ್ತದೆ.

ಕಡಿಮೆಯಲ್ಲಿ ಕಡಿಮೆ ಆವಶ್ಯಕತೆ ಮತ್ತು ನಿರಿಚ್ಛೆಯ ಜೀವನ ಇವೇ ವಿಧವೆಯರ ನೈಸರ್ಗಿಕ ಜೀವನವಾಗಿರಬೇಕು ಎಂಬುದು ನಮ್ಮ ಸಮಾಜದಲ್ಲಿರುವ ಪಾರಂಪರಿಕವಾದ ದೃಢ ತಿಳಿವಳಿಕೆ. ವಿಧವೆ ಸ್ತ್ರಿಯರು ಬಹಳ ವಿಶಿಷ್ಟ ರೀತಿಯಿಂದ ಬದುಕಬೇಕು. ಸಮಾಜದಿಂದ ಮಾನ್ಯವಾಗಿರುವ ಪಧ್ಯಗಳನ್ನು ಪಾಲಿಸುತ್ತಾ ಅಂಥ ಆಚರಣೆಗಳನ್ನು ಇಟ್ಟುಕೊಂಡು ತಮ್ಮ ಆಯಸ್ಸನ್ನು ಕಳೆಯಬೇಕು. ಹೀಗಿರುವಾಗ ಕಾಯಿದೆಗಳಿಗೆ ಕೈಹಾಕಿ ಸ್ವಾವಲಂಬನೆ ಮತ್ತು ಸ್ವಾಭಿಮಾನದಿಂದ ಆನಂದವನ್ನು ಪಡೆದುಕೊಳ್ಳುವ ಧೈರ್ಯವು ಅವರಿಗೆಲ್ಲಿ ಎಲ್ಲಿಂದ ಬರಬೇಕು? ಇದು ಅದು ಯಾರಿಗೆ ರುಚಿಸುವುದು? ಅಷ್ಟೊಂದು ಸ್ವತಂತ್ರ ಪ್ರವೃತ್ತಿ ಮತ್ತು ಸ್ವಯಂಪೂರ್ಣ ಪದ್ಧತಿಗಳಿಂದ ಜೀವನವನ್ನು ನಡೆಸುವುದಕ್ಕಾಗಿ ಗೆರೆಕೊರೆದ ಮಾಗ ಮತ್ತು ರೀತಿ ರಿವಾಜುಗಳನ್ನೆಲ್ಲ ಮುರಿಯುವ ಸಾಹಸವು ಅವರಲ್ಲಿ ಬರುವುದಾದರೂ ಹೇಗೆ? ಎಂತಲೇ ಅವರಿಗೆ ಮೊದಲು ಆರ್ಥಿಕ ಸ್ವಾತಂತ್ರ್ಯವು ಸಿಗಬೇಕಾದ್ದು ಅವಶ್ಯ.

ಪ್ರತಿಷ್ಠಿತ ಮನೆಗೆಲಸದ ಹೆಂಗಸು

ವಿಧವೆ ಸ್ತ್ರೀಯರೆಂದರೆ ಮನೆಯಲ್ಲಿನ ಕೆಲಸದ ಹೆಂಗಸರೆಂದು ತಿಳಿದವರಾಗಿದ್ದಾರೆ. ಅಂದರೆ ಯಾವುದೇ ಒಂದು ಕುಟುಂಬದಲ್ಲಿಯಾದರೂ ಸರಿ ಅವರ ಸ್ಥಾನವೇ ಅಂಥದ್ದು. ತೀರಾ ಹತ್ತಿರದ ಸಂಬಂಧಿಗಳಾಗಿದ್ದರೂ ಸರಿಯೇ, ಅವಳು ಮಾತ್ರ ಮನೆಗೆಲಸದವಳಂತೆಯೇ ಬದುಕು ನೂಕಬೇಕು. ಮಕ್ಕಳು-ಮರಿಗಳು, ಆಗು-ಹೋಗುಗಳು, ನಾದಿನಿ ಮತ್ತು ಮನೆಗೆ ಬಂದು ಹೋಗುವವರು ಇವರಿಗಾಗಿ ಕಷ್ಟಪಡುತ್ತ ಇರುವುದು ಅನಿವಾರ್ಯ. ಮದುವೆ ಕಾರ್ಯಗಳು, ನಾಮಕರಣ, ಮುಂಜಿ, ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಧಿಗಳು ಇತ್ಯಾದಿಗಳಿಗಾಗಿ ಮನೆಯಿಂದ ಹೊರಹೋಗಿ ಮರೆಯಾಗಿರಬೇಕು. ಅಲ್ಲದೆ ಮನಸ್ಸು ನೆಲೆಗೊಂಡಿರುವ ನೆಲೆಗಳಲ್ಲಿ ಅವರಿಗೆ ವರ್ಜ್ಯವಿರುವುದರಿಂದ ಅವರ ವ್ಯಕ್ತಿ ಸ್ವಾತಂತ್ರ್ಯದ ಮೇಲೆ ಒಂದು ಮರ್ಯಾದೆಯು(ಮಿತಿ) ಉಂಟಾಗಿದೆ. ಕೇವಲ ಮಂದಿರಗಳಿಗೆ ಹೋಗುವುದು ಮತ್ತು ಭಜನೆಗಳ ನಿಮಿತ್ತಗಳಿಗಷ್ಟೇ ಅವರಿಗೆ ಹೊರಗೆ ಹೋಗುವ ಅವಕಾಶ ಲಭಿಸುತ್ತದೆ. ಈ ಸಾಧ್ಯತೆ ದಿನವೂ ಇಲ್ಲದಿದ್ದರೂ ಏಕಾದಶಿ, ಪೌರ್ಣಿಮೆ, ಸಂಕಷ್ಟಹರ ಚತುರ್ಥಿ ಮೊದಲಾದ ನಿರ್ದಿಷ್ಟ ದಿನಗಳಲ್ಲಿ ಮಾತ್ರವೇ ಅವರಿಗೆ ಹೊರಗಡೆಗೆ ಹೋಗುವಂತಹ ಸಂದರ್ಭವು ಸಿಗುವುದು. ಆದರೆ ಅಲ್ಲಿಯೂ ಹೊರಗಿನ ಮನುಷ್ಯರ ಖೊಟ್ಟಿ ಸ್ತುತಿ ಮತ್ತು ಕೆಲವು ಬಾರಿ ನಿಂದಿಸಿ ಮಾತನಾಡುವುದನ್ನು ಅನಿವಾರ್ಯವಾಗಿ ಸಹಿಸಿಕೊಳ್ಳಬೇಕು. ಇಂಥ ಅಡ್ಡಿಗಳಲ್ಲಿ ಸಿಕ್ಕಿಯೂ ಅವರು ಮನೆಯಿಂದ ಹೊರಹೊರಟಾಗಲೂ ಆರ್ಥಿಕ ದೃಷ್ಟಿಯಿಂದ ದಯನೀಯ ಸ್ಥಿತಿಯ ಬಗ್ಗೆ ಸಹನೆಯುಳ್ಳವರಾಗಿರುವುದು ಅತ್ಯವಶ್ಯ. ಹಾಗೆಯೇ ಸಮಾಜದಿಂದ ಬೇಡ ಬೇಡ ಎನಿಸುವಷ್ಟು ಆರೋಪಗಳನ್ನು ಸಹಿಸಿಕೊಳ್ಳಲು ತಯಾರಿರಬೇಕು. ಇನ್ನೊಂದೆಡೆ ಸಜ್ಜನತ್ವದ ಬುರುಖಾ ತೊಟ್ಟಿರುವ ಜನರಿಂದ ಅವರ ಅಸಹಾಯಕತೆಯ ಲಾಭ ಪಡೆಯುವ ಸಂಭವವೂ ಇರುತ್ತದೆ. ಹಾಗಾಗಿ ಬಹುತೇಕ ವಿಧವೆಯರಿಗೆ ಇತ್ತ ಕುತ್ತು  ಅತ್ತ ಬಾವಿ ಎಂಬಂಥ ಸಂಕಟಗಳನ್ನು ಅನಿವಾರ್ಯವಾಗಿ ಸಹಿಸಿಕೊಳ್ಳುವುದು ಅಗತ್ಯವಾಗಿರುತ್ತದೆ.

ಸಾಮಾಜಿಕ ಉಪೇಕ್ಷೆ

ಅತ್ಯಂತ ಸುಶಿಕ್ಷಿತವೂ ಮತ್ತು ಸ್ತ್ರೀ-ಸ್ವಾತಂತ್ರ್ಯಕ್ಕೆ ಹೆಚ್ಚಿನ ಮಾನ್ಯತೆಯೂ ಇರುವ ಕುಟುಂಬದಲ್ಲಿಯೂ ಕೂಡ ಅರಿಶಿಣ-ಕುಂಕುಮದ ಸಮಾರಂಭವೂ ನಡೆಯುತ್ತದೆ. ಆದರೆ ಅದಕ್ಕೆ ವಿಧವಾ ಸ್ತ್ರೀಯರನ್ನೂ ಆಮಂತ್ರಿಸುವ ಸಾಹಸವನ್ನು ಮಾತ್ರ ಅಂಥವರಾರೂ ಮಾಡುವುದಿಲ್ಲ. ಅಂದರೆ ಇದರರ್ಧ ಪತಿಯ ಮರಣವು ಸಾಮಾಜಿಕ ದೃಷ್ಟಿಯಲ್ಲಿ ಪತ್ನಿಯ ಅಪರಾಧ ಅಥವಾ ಪಾಪವೆಂಬ ಭಾವನೆಯನ್ನು ಹೊಂದಿರುವುದಾಗಿದೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ವಿಧವೆಯರು ಸಹಭಾಗಿಯಾಗುವುದನ್ನೂ ಸಮಾಜವು ಮಾನ್ಯಮಾಡಿಲ್ಲ. ಮದುವೆ-ಮುಂಜಿ-ನಾಮಕರಣ, ಅರಿಶಿನ-ಕುಂಕುಮ, ಸತ್ಯನಾರಾಯಣ ಪೂಜೆ, ಗೃಹ ಪ್ರವೇಶ ಮತ್ತು ವಾಸ್ತುಶಾಂತಿ, ಮಡಿಲು ತಂಬುವಿಕೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಅವರ ಉಪಸ್ಥಿತಿಯು ಅನಾವಶ್ಯಕ. ಒಂದೊಮ್ಮೆ ಇದ್ದರೆ ಇತರರಿಂದ ಮೂಗು ಮುರಿಸಿಕೊಂಡು ಮತ್ತು ಹಣೆಗಂಟು ಹಾಕಿದ, ಉಚಿತವಲ್ಲದ ದರ್ಶನವೆಂಬ ಉದ್ಗಾರವನ್ನು ಕೇಳುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಆಗ ಉಂಟಾಗುವ ಕಟುವಾದ ಅನುಭವದಿಂದಾಗಿಯೇ ಅವರು ಇಂಥ ಕಾರ್ಯಕ್ರಮಕ್ಕೆ ಬರಲು ಅಂಜುತ್ತಾರೆ. ಎಂತಲೇ ಅವರ ಜಗತ್ತಿಗೆ ಒಂದು ಮಿತಿಯು ಉಂಟಾಗಿರುತ್ತದೆ. ಸಮಾಜದ ಒಂದು ಘಟಕವೆಂಬುದಾಗಿ ಬದುಕುವಲ್ಲಿ ಅನೇಕ ಬಂಧನಗಳು ಉಂಟಾದುದರಿಂದ ಅವರಿಗೆ ಮಾನಸಿಕವಾಗಿ ತಳಮಳ ಉಂಟಾಗುತ್ತದೆ. ಆರ್ಥಿಕ ದೃಷ್ಟಿಯಿಂದ ಸ್ವಾತಂತ್ರ್ಯವೇ ಇಲ್ಲದಂಥ ವಿಧವೆಯರಿಗಂತೂ ಅವರ ಜೀವಮಾನದಲ್ಲಿ ಸಾಮಾಜಿಕ ಸ್ಥಾನಮಾನವೇ ಸಿಕ್ಕುವುದಿಲ್ಲ. ಇನ್ನು ಕುಟುಂಬ ದಲ್ಲಿಯೂ ಕೂಡ ಅವರನ್ನು ಎಲ್ಲಾ ಬಗೆಯಲ್ಲೂ ತಳಮಳಗಳು ಉಂಟಾಗುತ್ತಲೇ ಇರುತ್ತವೆ. ನೀತಿಮತ್ತೆಯ ವಿಷಯದಲ್ಲಿ ಅವರ ಬಗ್ಗೆ ಇನ್ನಿಲ್ಲದ ನಿಕಷವನ್ನು ಮಾಡುತ್ತಿರುತ್ತಾರೆ. ಅವರ ಚಾರಿತ್ರ್ಯದ ಬಗ್ಗೆಯಂತೂ ಆಧಾರವೇ ಇಲ್ಲದೆ ಎಂತೆಂತಹದ್ದೋ ಆರೋಪಗಳನ್ನು (ಪ್ರೌಢರಾಗಿದ್ದವರ ವಿಚಾರದಲ್ಲಿಯೂ) ಮಾಡಲಾಗುತ್ತದೆ. ಪತಿಯ ನಿಧನಾನಂತರ ಪರಪುರುಷರೊಂದಿಗೆ ಮಾತನಾಡುವುದು, ಅವರ ಸಹಾಯವನ್ನು ಪಡೆದುಕೊಳ್ಳುವುದು ಎಂದರೆ ಒಂದು ಮಹಾಭಯಂಕರವಾದ ಅಪರಾಧ. ಈ ಕಾರಣದಿಂದಾಗಿ ಅವರು ಹೆಜ್ಜೆಹೆಜ್ಜೆಗೂ ಬಹಳ ವಿಚಾರ ಪೂರ್ವಕವಾಗಿ ವರ್ತಿಸುವ, ವ್ಯವಹರಿಸುವಂಥ ಒಂದು ಗಂಭೀರ ಅನಿವಾರ್ಯತೆಯು ಬಂದೊದಗುತ್ತದೆ.

ಯಾವ ಭಾರತೀಯ ಸಂಸ್ಕೃತಿಯನ್ನು ನಾವು ಭಕ್ತಿಯಿಂದ ಉಧೋ ಉಧೋ ಎಂದು ಉದ್ಗರಿಸುತ್ತಿದ್ದೇವೆಯೋ ಅದರ ಸಂಪನ್ನ ವೇದವಾಙ್ಮಯಗಳು ಮತ್ತು ರಾಮಾಯಣ  ಮಹಾಭಾರತಗಳಂತಹ ಅಮೂಲ್ಯ ಗ್ರಂಥಗಳ ಬಗ್ಗೆ ನಮಗೆ ಅಭಿಮಾನವನ್ನೂ ಹೊಂದಿದ್ದೇವೆ. ಹಾಗೆಯೇ ವಿಧವಾ ವಿವಾಹವನ್ನು ಮಾಡುವಂಥ ಮಹರ್ಷಿ ಕರ್ವೆಯವರ ಗುಣಗಾನ ಮಾಡಲಾಗುತ್ತಿದೆಯೋ ಅದೇ ಭೂಮಿಯಲ್ಲಿ ವಿಧವೆಯರಿಗೆ ಪಶು ಪ್ರಾಣಿಗಳಂತಹ ಜೀವನವನ್ನು ಅನುಭವಿಸಬೇಕಾಗಿ ಬಂದಿದೆ. ತೀರ್ಧ ಕ್ಷೇತ್ರಗಳಂಥ ಸ್ಥಳಗಳಲ್ಲಿ ಅರ್ಧಂಬರ್ಧ ಹೊಟ್ಟೆಯಲ್ಲಿ ನೀರಸ ಜೀವನವನ್ನು ಸಾಗಿಸುವಂಥವರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ವಿಧವೆಯರನ್ನು ಪುನರ್ ವಿವಾಹವಾಗಿ ಅವರಿಗೆ ಸ್ಥಾನ ಮತ್ತು ಸಂರಕ್ಷಣೆಯನ್ನು ನೀಡುವುದಕ್ಕೆ ಯಾವ ಪುರುಷರೂ ತಯಾರಿಲ್ಲ. ಒಂದೊಮ್ಮೆ ಇಂಥ ವಿವಾಹಕ್ಕೆ ಯಾರಾದರೂ ಪುರುಷರು ಮುಂದಾದರೂ ಅವರ ದೃಷ್ಟಿಯಲ್ಲಿಯೂ ವಿಧವೆಯರ ವಿಷಯದಲ್ಲಿರುವ ಕಾರುಣ್ಯ ಮತ್ತು ತಾವೇನೋ ಅವರಿಗೆ ಬಹುದೊಡ್ಡ ಉಪಕಾರ ಮಾಡುತ್ತಿದ್ದೇವೆ ಎಂಬುದಿರುತ್ತದೆ. ಇಂಥ ಭಾರದ ಕೆಳಗೆ ಅವರು ದಾಸಿಯರಂತೆ ಬದುಕಲು ಬರಬೇಕು ಎಂಬುದೇ ಅವರಲ್ಲಿರುವ ಮುಖ್ಯದೃಷ್ಟಿ. ಇದಕ್ಕೆ ಕೆಲವರು ಅಪವಾದವಾಗಿರಬಹುದು.

ಶಿಮಂತರು, ಸುಂದರ ತರುಣಿಯರು, ಅಲ್ಲದೆ ನೌಕರಿಯಲ್ಲಿ ಇರುವಂಥ ವಿಧವೆಯರು, ಆಗಿದ್ದರೆ ಅವಳ ವಿವಾಹ ಸಹಜವಾಗಿಯೇ ಕೂಡಿ ಬರುತ್ತದೆ. ಬದಲಾಗಿ ಬಡವಳೂ ಮಧ್ಯಮ ವರ್ಗದವಳೂ ಮತ್ತು ಅರ್ಧಶಿಕ್ಷಿತ ವಿಧವೆಯನ್ನೋ ಸ್ವೀಕರಿಸುವುದಕ್ಕೆ ತಯಾರಿರುವುದು ವಿರಳ.

ಕೆಲವಾರು ಪರಿಹಾರ ಮಾರ್ಗ

ವಿಧವೆಯ ಪ್ರಶ್ನೆಗಳನ್ನು ಕುರಿತಂತೆ ಸಾರಾಸಗಟಾಗಿ ವಿಚಾರ ಮಾಡುವುದು ಅಸಾಧ್ಯ ಸಂಗತಿ. ಕಾರಣ ಸಂತತಿ ಸಹಿತ ಮತ್ತು ಸಂತತಿ ರಹಿತ; ಬಡವ ಮತ್ತು ಶಿಮಂತ; ಉದ್ಯೋಗದಲ್ಲಿರುವ ಮತ್ತು ಇಲ್ಲದಿರುವ; ಸುಶಿಕ್ಷಿತ ಅಥವಾ ಅಶಿಕ್ಷಿತ ಈ ಅಂಶಗಳ ಹಿನ್ನಲೆಯಲ್ಲಿ ಅವರ ಪ್ರಶ್ನೆಗಳ ಸ್ವರೂಪವು ಬದಲಾಗುತ್ತಾ ಹೋಗುತ್ತವೆ. ಅಲ್ಲದೆ ತರುಣರು ಪ್ರೌಢರು ಮತ್ತು ಇಳಿವಯಸ್ಸಿನಲ್ಲಿರುವ ವಿಧವೆಯರು ಎಂಬುದು ಕೂಡಾ ಅವರ ಪರಿಸ್ಥಿತಿಯನ್ನು ಬದಲಿಸುವುದೇ ಆಗಿರುತ್ತದೆ. ಆದರೆ ಈ ಎಲ್ಲರ ವಿಷಯಗಳಲ್ಲೂ ಒಂದು ಅಂಶವು ಮಾತ್ರ ಸಾಮಾನ್ಯವಾದುದಾಗಿರುತ್ತದೆ. ಅದೆಂದರೆ ಯಾವ ವಿಧವೆಯರಿಗೂ ವಿವಾಹ ಕಾರ್ಯದಲ್ಲಿ ಪ್ರತ್ಯಕ್ಷ ಸಹಭಾಗಿತ್ವಕ್ಕೆ ಅವಕಾಶವಿಲ್ಲ. ಅರಿಶಿನ-ಕುಂಕುಮ ಸಮಾರಂಭಗಳಲ್ಲಿಯೂ ಅವಳ ಉಪಸ್ಥಿತಿಯು ವರ್ಜ್ಯ. ಗೃಹ ಪ್ರವೇಶ ಮತ್ತು ಇತರೆ ಇಂತಹ ಸ್ವರೂಪದ ಮಂಗಳ ಕಾರ್ಯದ ಪ್ರಸಂಗಗಳಲ್ಲಿಯೂ ಅವಳ ಹಾಜರಾತಿಯನ್ನು ಅನಾವಶ್ಯಕವೆಂದು ಒಪ್ಪಿಕೊಳ್ಳಲಾಗಿದೆ.

ಉನ್ನತ ಶಿಕ್ಷಣ ಪಡೆದವರು ಮತ್ತು ವಿದೇಶಕ್ಕೆ ಹೋಗಿಬಂದಂಥ ಸ್ತ್ರೀಯರು ಕೂಡ ತಮ್ಮ ಮನೆಗೆ ಬಂದ ವಿಧವೆಯರಿಗೆ ಇತರ ವಿವಾಹಿತ ಮೈತ್ರಿಣಿಯರ ಎದುರು ಕುಂಕುಮ ಕೊಡುವುದಿಲ್ಲ. ಅಂದರೆ ಆ ವಿಧವಾ ಸ್ನೇಹಿತೆಯ ಉಪಸ್ಥಿತಿಯಿಂದಾಗಿ ಯಾರಿಗೂ ‘Enjoy’ ಮಾಡುವುದಕ್ಕೆ ಸಾಧ್ಯವಾಗದೆ ಹೋಗುತ್ತದೆ. ಅರ್ಧಾತ್ ಕುಂಕುಮವು ಸೌಭಾಗ್ಯದ ಪ್ರತೀಕವೆನಿಸಿದೆಯೋ ಇಲ್ಲವೊ? ವಿವಾಹಿತ ಸ್ತ್ರೀಯರು ಕುಂಕುಮವನ್ನು ಹಚ್ಚಿಕೊಳ್ಳಬೇಕೋ ಬೇಡವೋ? ವಿಧವೆಯರು ಕುಂಕುಮವನ್ನೂ ಹಚ್ಚಿಕೊಳ್ಳಬಾರದೆಂದು ಎಲ್ಲಿದೆ? ಈ ಮೊದಲಾದ ವಾದದ ವಿಚಾರಗಳನ್ನು ಪಕ್ಕಕ್ಕೆ ಇಟ್ಟರೂ ನಾಲ್ಕಾರು ಜನರೊಂದಿಗೆ ಇರುವಾಗ ವಿಧವೆಯರನ್ನು ಬಿಟ್ಟು ಉಳಿದ ಸ್ತ್ರೀಯರಿಗಷ್ಟೇ ಕುಂಕುಮ ನೀಡಿ ಅವರಿಗೆ ಕೊಡದಿರುವುದು ಕ್ರೂರತನವಲ್ಲದೆ ಮತ್ತೇನೂ ಅಲ್ಲ. ಅರಿಶಿನ-ಕುಂಕುಮ ಸಮಾರಂಭವನ್ನು ಒಂದು ರೀತಿಯ ಡೌಲಿನಿಂದ ಮಾಡಲಾಗುತ್ತದೆ. ಶಿಮಂತಿಕೆಯ ಪ್ರದರ್ಶನ ಮಾಡುವಂಥ ಸುಸಂಧಿಯನ್ನಾಗಿ ತೆಗೆದುಕೊಳ್ಳಲಾಗಿರುತ್ತದೆ ಇದನ್ನು. ಆದರೆ ಅಲ್ಲಿಯೂ ಜೀವಸ್ಯ-ಕಂಠಸ್ಯರಾಗಿದ್ದಂತಹ ವಿಧವಾ ಸ್ನೇಹಿತೆಯರನ್ನು ಆಹ್ವಾನಿಸುವ ವಿಚಾರವು ಆ ಸಮಾರಂಭಪ್ರಿಯ ಗೃಹಣಿಯರ ಮನಸ್ಸಿನಲ್ಲಿ ಬರುವುದೇ ಇಲ್ಲ. ಮನಸ್ಸಿನ ಶಿಮಂತಿಕೆ ಮತ್ತು ವಿಚಾರಗಳ ವೈಭವ ಅವರಲ್ಲಿ ಇರುವುದಿಲ್ಲ.

ಅರ್ಧಾತ್ ಸಾಮಾಜಿಕ ರೂಢಿ ಮತ್ತು ಪರಂಪರೆಯ ವಿರುದ್ಧವಾಗಿ ಹೋಗುವ ಎದೆಗಾರಿಕೆ ಇಲ್ಲವಾದುದರಿಂದ ತಲತಲಾಂತರವಾಗಿ ಅವರು ಈ ಸಂಪ್ರದಾಯವನ್ನು ಪಾಲಿಸಿಕೊಂಡೇ ಬರುತ್ತಿದ್ದಾರೆ. ಹಾಗಿದ್ದೂ ಒಮ್ಮೆ ಅಂಥದನ್ನು ಮಾಡುವ ಆವಶ್ಯಕತೆಯು ಇದೆಯೇ ಎಂಬುದನ್ನು ಶಾಸ್ತ್ರೀಯ, ವೈಜ್ಞಾನಿಕ ಮತ್ತು ತರ್ಕಸಂಗತ ದೃಷ್ಟಿಯಿಂದ ವಿಚಾರ ಮಾಡಬೇಕು. ಆಗ ಇಂಥ ಭೇದಭಾವವನ್ನು ಮಾಡುವಂತಹ ಪ್ರಸಂಗಗಳೇ ಬರುವುದಿಲ್ಲ.

ವಿಧವೆಯರ ಪ್ರಶ್ನೆಯ ಸ್ವರೂಪವನ್ನು ತಿಳಿದುಕೊಳ್ಳುವ ದೃಷ್ಟಿಯಿಂದ ಮತ್ತು ಅವುಗಳ ಬಗ್ಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳುವುದಕ್ಕೆ, ಅವರ ಆರ್ಥಿಕ ಪರಿಸ್ಥಿತಿ ಹಾಗೂ ಖಚಿತ ಮಾಹಿತಿಗಳನ್ನು ಉಪಲಬ್ಧಗೊಳಿಸಿಕೊಳ್ಳುವುದು ಅತ್ಯಂತ ಅವಶ್ಯ. ಈ ಕೆಲಸ ಬಹಳೇ ಕಠಿಣವೆಂಬುದು ನಿಜ. ಅಲ್ಲದೆ ಅವರ ಸಂಖ್ಯೆಯೂ ಬಹಳ ದೊಡ್ಡದಾಗಿರುವುದರಿಂದ ಬಹಳ ಖರ್ಚಿನ ಕೆಲಸವೇ. ಆದ್ದರಿಂದ ಸರ್ಕಾರವು ಅದನ್ನು ಕೈಗೆತ್ತಿಕೊಂಡರೆ ತೊಂದರೆಯಿಲ್ಲ. ಜನಗಣತಿಯಲ್ಲಿ ಸಂಗ್ರಹಿಸಿರುವ ಶೇಕಡವಾರು ವಿವರಗಳು ಉಪಯುಕ್ತವಾಗದೆ ಇದ್ದರೆ ಸಂತಾನ-ಸಂತಾವಿಲ್ಲದ, ಉದ್ಯೋಗಿ-ಉದ್ಯೋಗವಿಲ್ಲದ, ಆರ್ಥಿಕ ದೃಷ್ಟಿಯಿಂದ ಸ್ವಾವಲಂಬಿ ಮತ್ತು ಪರಾವಲಂಬಿ- ಈ ಮೊದಲಾದ ಪ್ರಕಾರದ ಮಾಹಿತಿಯನ್ನು ಸಂಗ್ರಹಿಸುವುದು ಅವಶ್ಯ. ಸಂಶೋಧನ ಪದ್ಧತಿಯಲ್ಲಿ ಮತ್ತು ಸುಶಿಕ್ಷಿತ ಕರ್ಮಚಾರಿಗಳಿಂದ ಇವುಗಳನ್ನು ಸಂಗ್ರಹಿಸಬಹುದು. ಅವಶ್ಯವೆನಿಸಿದರೆ ಅರ್ಧಶಾಸ್ತ್ರೀಯ ಮತ್ತು ಸಾಮಾಜಿಕ ಸಮಸ್ಯೆಗಳ ಸಂಶೋಧನ ಕಾರ್ಯಗಳಲ್ಲಿ ತೊಡಗಿರುವ ಸಂಸ್ಥೆಗಳಿಗೆ ಈ ಜವಾಬ್ದಾರಿಯನ್ನು ವಹಿಸಿ ಅವರಿಗೆ ಆರ್ಥಿಕ ಸಹಾಯವನ್ನು ನೀಡಬೇಕು. ವಿಶೇಷವಾಗಿ ಧಾರ್ಮಿಕ ಮತ್ತು ಪವಿತ್ರ ಕ್ಷೇತ್ರ ಎಂಬ ಎಡೆಗಳಲ್ಲೆಲ್ಲ ನಿರಾಧಾರ ಜೀವನವನ್ನು ನೂಕುತ್ತಿರುವ ವಿಧವೆಯರ ಸಂಬಂಧವಾಗಿ ವಿಶ್ವಸನೀಯ ಮತ್ತು ಸರ್ವಸಮಾನ ಮಾಹಿತಿಗಳನ್ನು ಸಂಗ್ರಹಿಸುವುದು ಅಗತ್ಯ.

ಕಾಯಿದೆಗಳ ಜ್ಞಾನ ಮತ್ತು ಹಳ್ಳಿಗಾಡುಗಳ ವಾಸ್ತವ ಪರಿಸ್ಥಿತಿ

ಹಿಂದೂ ಪುನರ್ ವಿವಾಹ ಕಾಯಿದೆ ಮತ್ತು ವಿಶೇಷವಾಗಿ ಆಸ್ತಿಯ ಹಕ್ಕು ಕಾಯಿದೆಗಳ ಜ್ಞಾನವನ್ನು ಅಶಿಕ್ಷಿತ ಮತ್ತು ಗ್ರಾಮೀಣ ಭಾಗಗಳಲ್ಲಿ ಇರುವ ವಿಧವೆಯರಿಗೆ ತಲುಪಿಸುವ ದೃಷ್ಟಿಯಿಂದಲೇ ಪ್ರಯತ್ನಿಸಬೇಕು. ಕೇವಲ ಮಾಹಿತಿ ನೀಡಿ ಪ್ರಚಾರ ಮಾಡಿದರಷ್ಟೇ ಉಪಯೋಗವಿಲ್ಲ. ಬದಲಾಗಿ ಈ ನಿಟ್ಟಿನಲ್ಲಿ ನಿಯತವಾಗಿ ಮಾರ್ಗದರ್ಶನ ಮಾಡುವುದು ಅವಶ್ಯ. ಕಾಯಿದೆಬದ್ಧ ಸಲಹೆಗಳನ್ನು ಒದಗಿಸುವ ದೃಷ್ಟಿಯಿಂದ ಸರಕಾರವು ವಿಶಿಷ್ಟ ಖಾತೆಯೊಂದಕ್ಕೆ ಈ ಜವಾಬ್ದಾರಿಯನ್ನು ವಹಿಸಿಕೊಡಬೇಕಾಗಿದೆ. ಅಲ್ಲದೆ ತಾಲೂಕು ಮಟ್ಟದಲ್ಲಿಯೇ ಈ ಕೆಂದಗಳು ಸ್ಥಾಪಿತವಾಗಬೇಕು. ಇದರೊಂದಿಗೆ ಮಹಿಳಾ ಸಂಘಟನೆಗಳು, ಮಹಿಳಾ ನ್ಯಾಯವಾದಿಗಳು, ಶಿಕ್ಷಕಿಯರು, ಗ್ರಾಮ ಸೇವಕಿಯರು, ಸಮಾಜ ಕಾರ್ಯ ಕರ್ತೆಯರು, ಹಾನರರಿ ಮ್ಯಾಜಿಸ್ಟ್ರೇಟರುಗಳಾಗಿ ಕೆಲಸ ಮಾಡುವವರು, ಭಜನಾ ಮಂಡಳಿಗಳು ಮತ್ತು ಮಹಿಳಾ ಮಂಡಳಿಗಳು ಸೇರಬೇಕು. ಇನ್ನು ಪದಾಧಿಕಾರಿಗಳು, ಪಾಲಿಕೆ, ಟ್ರಸ್ಟ್, ಸಂಸ್ಥೆಗಳ ಅಧ್ಯಕ್ಷರು ಇತ್ಯಾದಿ ಮಂಡಳಿಗಳವರು ಈ ಕಾಯಿದೆಗಳ ಪರಿಪೂರ್ಣ ಮಾಹಿತಿಯನ್ನು ಸ್ವತಃ ತಾವೇ ವಿಧವೆಯರಿಗೆ ತಲುಪಿಸುವ ಸಾಮಾಜಿಕ ಜವಾಬ್ದಾರಿಯನ್ನು ಸ್ವೀಕರಿಸಬೇಕು.

ಸುಮಾರು ಒಂದೂವರೆ ಎರಡು ವರ್ಷಗಳ ಹಿಂದೆ ತಾಲೂಕು ಮಟ್ಟದಲ್ಲಿ ಕಾಯಿದೆಗಳ ಬಗ್ಗೆ ಉಚಿತ ಸಲಹೆ ಮತ್ತು ಸಹಾಯ ನೀಡುವ ಮಂಡಳಿಗಳನ್ನು ಸ್ಥಾಪಿಸಲಾಗಿದೆ. ಗಾರಗೋಟಿಯಲ್ಲಿ ಇಂಥದೊಂದು ಮಂಡಳಿ ಆಸ್ತಿಯ ಹಂಚಿಕೆ ಮತ್ತು ನ್ಯಾಯಾಲಯ ಸ್ವರೂಪದ ಎಲ್ಲ ಅಡಚಣೆಗಳ ವಿಷಯವಾಗಿ ಸಲಹೆ ನೀಡುವಂತಹ ಮಧ್ಯಸ್ಥಿಕೆಯ ಕಾರ್ಯವನ್ನು ಬಹಳ ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದೆ. ಹಾಗೆಯೇ ಮಧ್ಯಸ್ಥಿಕೆಯ ಮೂಲಕ ಕೋರ್ಟ್ ಕಚೇರಿಗಳಿಗೆ ಹೋಗಿ ವಿನಾಕಾರಣ ಖರ್ಚಾಗುವುದನ್ನು ಕೂಡಾ ತಪ್ಪಿಸಿ ಅಂತಹ ಖಟ್ಟಳೆಗಳನ್ನು ಕೊನೆ ಮುಟ್ಟಿಸುವಂತಹ ಕಾರ್ಯದಲ್ಲಿಯೂ ಇದರ ಪಾತ್ರ ವಿಶಿಷ್ಟ. ಆ ಮಂಡಳಿಗಳಲ್ಲಿ ಸ್ತ್ರೀ ಪ್ರತಿನಿಧಿಗಳಾಗಿ ಒಬ್ಬ ಮಹಿಳಾ ಸದಸ್ಯೆಯೂ ಇರುವಳು. ಅಲ್ಲದೆ ಈ ಮಂಡಳಿಯವರು ವಾರಸುದಾರಿಕೆಯ ಹಕ್ಕು ಮತ್ತು ಇತರೆ ಸ್ವರೂಪದ ವಿಧವಾ ಸ್ತ್ರೀಯರ ಅಡಚಣೆಗಳನ್ನು ಸಹಾನುಭೂತಿಯಿಂದ ವಿಚಾರ ಮಾಡಬೇಕಾದ್ದು ಅವಶ್ಯ.

ಯಾರಿಗೆ ಸಂತಾನವಿಲ್ಲವೋ ಮತ್ತು ಉತ್ಪನ್ನದ ಮಾರ್ಗಗಳು ಉಪಲಬ್ಧವಿರುವು ದಿಲ್ಲವೋ, ಆದರೆ ಶಾರೀರಿಕವಾಗಿ ಶ್ರಮ ಪಡಲು ಸಿದ್ಧರಾಗಿರವರೋ ಅಂಥವರಿಗೆ ಉದ್ಯೋಗ ನೀಡುವುದಕ್ಕೆ ಪ್ರಾಧಾನ್ಯ ಪೂರ್ವಕವಾಗಿ ಪ್ರಯತ್ನ ಮಾಡಬೇಕು. ಕಾನೂನಿನ ವಿವಿಧ ಖಾತೆಗಳಲ್ಲಿ ಉದ್ಯೋಗಗಳನ್ನು ನೀಡುವಂಥ ಧೋರಣೆಯನ್ನು ಹೊಂದಬೇಕಾಗುತ್ತದೆ. ಪ್ರಶ್ನೆಯು ಹೀಗಿದೆ, ನಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆಯು ದಿನೇ ದಿನೇ ಗಂಭೀರ ಸ್ವರೂಪವನ್ನು ಪಡೆಯುತ್ತಲೇ ಇದೆ. ಹೀಗಿರುವಾಗ ವಿಧವೆಯರಿಗೆ ನೌಕರಿ ನೀಡಬೇಕು ಎಂದು ಹೇಳುವುದು ಅತಿರೇಕವೂ ಮತ್ತು ಅಪ್ರಸ್ತುತವೂ ಆಗಬಹುದು. ಆದರೆ ಸರಕಾರಿ, ಅರೆ ಸರಕಾರಿ, ನಿಮ್ನ ಸರಕಾರಿ ಮತ್ತು ಆ ಸಂಬಂಧಿತ ಸಂಸ್ಥೆಗಳಲ್ಲಿ ಅಂಧವರಿಗೆ ತರಬೇತಿ ಮತ್ತು ಅರೆಕಾಲಿಕ ಸ್ವರೂಪದ ಉದ್ಯೋಗವನ್ನು ನೀಡುವ ಮೂಲಕ ಅವರಿಗೆ ಆರ್ಥಿಕ ಸ್ವಾವಲಂನೆ ಮತ್ತು ಸ್ವಾತಂತ್ರ್ಯವನ್ನು ನೀಡುವ ಪ್ರಯತ್ನ ಮಾಡುವಲ್ಲಿ ಯಾವ ಅಡ್ಡಿಯೂ ಇಲ್ಲ. ಏನಿಲ್ಲವೆಂದರೂ ಹೀಗೆ ಸಹಾನುಭೂತಿ ಪೂರ್ವಕವಾಗಿ ವಿಚಾರ ಮಾಡಲು ಯಾರೂ ಆಕ್ಷೇಪಿಸಲಾರರು. ಪೂರ್ಣ ನಿರಾಧಾರರಾದ ವಿಧವೆಯರ ಸಂಖ್ಯೆಯು ಬಹಳ ಹೆಚ್ಚೇನೂ ಇಲ್ಲದಿರುವುದರಿಂದ ಸರಕಾರವು ಆ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳುವುದಕ್ಕೆ ಯಾವ ತೊಂದರೆಯೂ ಇರುವುದಿಲ್ಲ.

ಮಹಿಳಾ ಮಂಡಳಿಗಳು, ಕ್ಲಬ್‌ಗಳು, ಸರಕಾರಿ ಟ್ರಸ್ಟ್ ಸಂಸ್ಥೆಗಳು (ಉದಾ.ಗೆ ಕೊಲ್ಹಾಪುರದ ಕೋರಗಾಂವ್‌ಕರ್, ಮತ್ತು ವಾಲಾವಲಕರ ಟ್ರಸ್ಟಗಳಂಥ ಎರಡು ಸಮರ್ಧ ಸಂಸ್ಥೆಗಳವರು) ಸಾಮಾಜಿಕ ಸುಧಾರಣೆ ಮತ್ತು ಪರಿವರ್ತನೆಯ ಕಾರ್ಯವನ್ನು ಮಾಡುವ ಐಚ್ಛಿಕ ಸಂಸ್ಥೆಗಳು ಈ ವಿಷಯದ ಬಗ್ಗೆ ವಿಚಾರ ಮಾಡುವುದು ಆವಶ್ಯಕ. ಹೀಗೆ ವಿಚಾರ ಮಾಡುವಾಗ ಆರ್ಥಿಕ ಸಹಾಯಗಳನ್ನು ಗಮನಿಸುವಂತಹದ್ದೇನು ಬೇಕಾಗಿಲ್ಲವಾದರೂ ಅವರ ವಿಷಯದಲ್ಲಿ ಸಾಮಾಜಿಕ ಹೊರೆಯ ದೃಷ್ಟಿಕೋನದಿಂದಲಾದರೂ ಈ ವಾತಾವರಣವನ್ನು ನಿರ್ಮಿಸುವ ಆವಶ್ಯಕತೆಯನ್ನು ಮಹತ್ವದ್ದೆಂದು ತಿಳಿಯಬೇಕು. ವಿಧವೆಯರನ್ನು ದುರ್ಲಕ್ಷಿಸಿ, ಅವರ ವಿಷಯವಾಗಿನ ನೀತಿಮತ್ತೆಗಳನ್ನು ಅಧಿಕ ಹಟಮಾರಿತನದಿಂದ ರೂಪಿಸಿ, ವಿನಾಕಾರಣ ಸಂಶಯದ ಆಧಾರವಿಟ್ಟುಕೊಂಡು ಅವರನ್ನು ಬಂಧನದ ಅಡಿಯಲ್ಲಿ ಬದುಕುವಂತೆ ಮಾಡುವ ಪ್ರವೃತ್ತಿ ಸಮಾಜದಲ್ಲಿ ನಡೆಯುವುದಿಲ್ಲ. ಕಾರಣ ಈ ದೃಷ್ಟಿಯಿಂದ ವಿಚಾರ ಮಂಡಿಸುವುದಕ್ಕೆ ನೇತೃತ್ವವನ್ನು ವಹಿಸಬೇಕಾಗುತ್ತದೆ. ಸುಸಹ್ಯವೂ ಆನಂದವೂ ಆದ ಜೀವನವನ್ನು ನಡೆಸುವ ಹಕ್ಕನ್ನು ನಿರಾಕರಿಸುವ ಅಧಿಕಾರ ಸಮಾಜಕ್ಕೆ ಇಲ್ಲ. ಇದನ್ನು ಮನನಗೊಳಿಸುವ ಮತ್ತು ರೂಢಿ  ಪರಂಪರೆಯ ನಿಕಷಗಳ ಹೊಟ್ಟನ್ನು ತಿಳಿಸಿಕೊಡುವ ಜವಾಬ್ದಾರಿಯನ್ನು ಅವರು ಸ್ವೀಕರಿಸಬೇಕು. ಯಾವುದಾದರೂ ಮಹಿಳಾ ಮಂಡಳಿಯು ಇಂತಹ ವಿಧವೆಯರ ಅನುಭವ ಕಥನಗಳನ್ನು ತಿಳಿಸುವ ಕಾರ್ಯಕ್ರಮವೊಂದನ್ನು ಏರ್ಪಡಿಸಿ ತಮ್ಮ ವೈಚಾರಿಕ ಗುಲಾಮಗಿರಿಯನ್ನು ಬಿಟ್ಟು ಅವರ ಜೀವನವನ್ನು ಹೇಗೆ ಆನಂದದಾಯಕವಾಗಿ ಮಾಡಬೇಕು ಎಂಬ ಮಾಹಿತಿಯನ್ನು ಎಲ್ಲರಿಗೂ ತಿಳಿಸಿಕೊಡಬೇಕು.

ಪುನರ್ ವಿವಾಹವಾದ ವಿಧವೆಯರ ಸಂಸಾರವು ಎಷ್ಟು ಸುಖಕರವಾಗಿದೆ ಎಂಬುದನ್ನು ತಿಳಿಯಲು ಆ ದಂಪತಿಗಳನ್ನು ಭೇಟಿಮಾಡಿ ವಿಷಯವನ್ನು ಸಂಗ್ರಹಿಸವುದು ಅವಶ್ಯ. ಈ ಮಾಹಿತಿಯನ್ನು ಟಿ.ವಿ., ವರ್ತಮಾನ ಪತ್ರಿಕೆಗಳು, ಮಾಸಿಕಗಳು ಮತ್ತು ರೇಡಿಯೋಗಳ ಮೂಲಕ ಪ್ರಚಾರ ಮಾಡುವುದು ಅತ್ಯಗತ್ಯ. ಅದರಿಂದ ಕೆಲವಾರು ಅಂಶಗಳ ಮುಖೇನ ಐಚ್ಛಿಕ ಪರಿಣಾಮಗಳೂ ಉಂಟಾಗಬಹುದು. ಅಲ್ಲದೆ ಆ ದಿಶೆಯಿಂದ ವಿಚಾರ ಮಾಡುವ ಪ್ರವೃತ್ತಿಯೂ ಸಂಬಂಧಿಕರಲ್ಲಿ ಬೆಳೆಯಬಹುದಾಗಿದೆ. ವಿಧವಾ ಸ್ತ್ರೀಯರೂ ಆ ದೃಷ್ಟಿಯಲ್ಲಿ ವಿಚಾರ ಮಾಡುವುದಕ್ಕೆ ಉದ್ಯುಕ್ತರಾಗಬಹುದು. ವೃಂದಾವನ, ಗೋಕರ್ಣ, ಹರಿದ್ವಾರ ಮುಂತಾದೆಡೆಗಳಲ್ಲಿ ವಾಸ್ತವ್ಯ ಮಾಡಿರುವ ವಿಧವಾ ಸ್ತ್ರೀಯರುಗಳ ವಿಷಯವಾಗಿ ಪರಿಪೂರ್ಣ ಮಾಹಿತಿಯು ಉಪಲಬ್ಧವಿಲ್ಲ. ಅವರ ಬದುಕಿನ ಪ್ರಶ್ನೆಯನ್ನು ಅನಾವರಣ ಮಾಡುವ ಹಿನ್ನಲೆಯಲ್ಲಿ ಯಾವುದೇ ವಿಚಾರವನ್ನು ಮಂಡಿಸುವುದು ಬಹಳ ಕಠಿಣ. ಅಲ್ಲದೆ ಆ ಬಗೆಯ ವಾತಾವರಣದಲ್ಲಿ ಅವರು ಮಾನಸಿಕ ದೃಷ್ಟಿಯಿಂದ ಅತ್ಯಂತ ಸಮಾಧಾನವಾಗಿ ಇದ್ದಾರೆಯೋ ಇಲ್ಲವೋ ಎಂಬುದನ್ನು ಕೂಡ ಅವಶ್ಯವಾಗಿ ವಿಚಾರ ಮಾಡಬೇಕು. ಒಂದು ಅಂಶ ಮಾತ್ರ ನಿಶ್ಚಿತವಾದುದು ವಯಸ್ಸಾದವರು, ಕೆಲಸ ಮಾಡಲು ಶಾರೀರಿಕವಾಗಿ ಅಸಮರ್ಧರಾಗಿರುವವರು ಮತ್ತು ಸಂತಾನಹೀನ ವಿಧವಾ ಸ್ತ್ರೀಯರ ಆರ್ಥಿಕ ಜವಾಬ್ದಾರಿ ಯನ್ನು ಸರಕಾರವೇ ಕೈಗೆ ಎತ್ತಿಕೊಳ್ಳಬೇಕು.

ಉತ್ತರ ಪ್ರದೇಶ ಸರಕಾರವು ಕೆಲಸ ಮಾಡಲು ಅಸಮರ್ಧರಾಗಿರುವಂಥ ವಿಧವೆಯರಿಗೆ ತಿಂಗಳೊಂದಕ್ಕೆ ಆರ್ಥಿಕ ಸಹಾಯ ನೀಡುವಂಥ ಯೋಜನೆಯೊಂದನ್ನು ಕಾರ್ಯಾನ್ವಿತ ಗೊಳಿಸಿದೆ(ಈ ಯೋಜನೆ ಕರ್ನಾಟಕದಲ್ಲಿಯೂ ಆರಂಭವಾಗಿದೆ). ಸಮಾಜದಲ್ಲಿನ ಇಂಥ ದುರ್ಬಲ ಘಟಕಗಳಿಗೋಸ್ಕರ ಎಲ್ಲ ಸರ್ಕಾರಗಳೂ ಇಂಥ ಆರ್ಥಿಕ ಸಹಾಯ ಯೋಜನೆ ಗಳನ್ನು ಆರಂಭಿಸಬೇಕಾಗಿದೆ. ಶಕ್ತ್ಯಾನುಸಾರ ಕೆಲಸ ನಿರ್ವಹಿಸಿದ್ದಕ್ಕೆ ಪ್ರತಿಯಾಗಿ ಅಥವಾ ಪುಕ್ಕಟೆ ಆರ್ಥಿಕ ಸಹಾಯ ನೀಡುವಂಥ ಧೋರಣೆಯು ನಮ್ಮ ದೇಶಕ್ಕೆ ಹೊಂದುವಂಥದ್ದಲ್ಲ. ಆದರೂ ನಿರಾಧಾರ ಮತ್ತು ಶಾರೀರಿಕವಾಗಿ ಕಷ್ಟ ಪಡುವುದಕ್ಕೆ ಅಪಾತ್ರರಾಗಿರುವಂಥವರಿಗೆ ಆರ್ಥಿಕ ಆವಶಕತೆಯನ್ನು ಒದಗಿಸುವಂಥ ಜವಾಬ್ದಾರಿಯನ್ನು ಸ್ವೀಕರಿಸುವುದು ಸಾಮಾಜಿಕ ಸಂರಚನೆಯ ದ್ಯೋತಕವಾಗಿ ಒಪ್ಪಬೇಕು. ಇಂಥ ವಿಧವಾ ಸ್ತ್ರೀಯರ ಮೇಲೆ ವ್ಯಯಿಸುವ ಹಣವು ನಿರರ್ಧಕ ಮತ್ತು ನಿಷ್ಪ್ರಯೋಜಕ ಎಂದೆನಿಸುವುದಿಲ್ಲ; ಅಲ್ಲದೆ ಹಾಗೆ ಭಾವಿಸಬೇಕಾದ ಅಗತ್ಯವೂ ಇಲ್ಲ.

ಗಾರಗೋಟಿಯ ಸುಶೀಲಾಳಂತಹ ಅನೇಕ ವಿಧವಾ ಸ್ತ್ರೀಯರು ಗ್ರಾಮೀಣ ಪ್ರದೇಶಗಳಲ್ಲಿದ್ದಾರೆ. ಅವರಿಗೆ ಆರ್ಥಿಕವಾಗಿ ಆಧಾರವನ್ನು ಕೊಡುವ ಪ್ರಯತ್ನ ಉಂಟಾಗಬೇಕು. ಮಹಾರಾಷ್ಟ್ರದಲ್ಲಿ ದಿನಗೂಲಿಯಾಗಿ ಕೆಲಸ ಮಾಡುತ್ತಿರುವವರನ್ನು ಹಲವು ಮುಖ್ಯ ಯೋಜನೆಗಳಲ್ಲಿ ದುಡಿಸಿಕೊಳ್ಳಲಾಗುತ್ತಿದೆ. ಅವರಿಗೆ ಇನ್ನೂ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಬೇಕಾಗಿದೆ. ಹಾಗೆಯೇ ಇತ್ತೀಚೆಗೆ ಬ್ಯಾಂಕುಗಳಿಂದ ಬೇರೆ ಬೇರೆ ಪ್ರಕಾರಗಳಲ್ಲಿ ಸಹಾಯ ಯೋಜನೆಗಳನ್ನು ಕಾರ್ಯಾನ್ವಿತಗೊಳಿಸಲಾಗಿದೆ. ಎಮ್ಮೆಗಳು, ಕೋಳಿಗಳು ಮತ್ತು ಇತರೆ ಸಣ್ಣ ಕೈಗಾರಿಕೆಗಳಿಗೆ ಸಾಲ ನೀಡಲಾಗುತ್ತಿದೆ. ಹೀಗಿರುವಾಗ ಇಂಥ ಸಂಸ್ಥೆಗಳು ವಿಧವಾ ಸ್ತ್ರೀಯರಿಗೂ ಪ್ರಾಧಾನ್ಯತೆಯನ್ನು ನೀಡುವುದರ ಮೂಲಕ ಯಾವುದೇ ರೀತಿಯಲ್ಲಿಯೂ ವಿಳಂಬ ಮಾಡದೆ ಸಾಲವನ್ನು ಮಂಜೂರಾತಿ ಮಾಡಬೇಕಾಗುತ್ತದೆ. ಆರ್ಥಿಕ ಸಹಾಯ, ಅನುದಾನಗಳಂಥ ಯೋಜನೆಗಳನ್ನು ಹಮ್ಮಿಕೊಂಡಿರುವ ಯಾವ್ಯಾವ ಸಂಘಸಂಸ್ಥೆಗಳಿವೆಯೋ ಅವುಗಳೂ ಕೂಡ ತೀರಾ ಅಗತ್ಯವಿರುವ ವಿಧವಾ ಸ್ತ್ರೀಯರ ಬಗ್ಗೆ ಬಹಳ ಸಹಾನುಭೂತಿಯಿಂದ ವಿಚಾರ ಮಾಡಬೇಕಾದ್ದು ಬಹಳ ಆವಶ್ಯಕ. ಸಂಜಯಗಾಂಧಿ ನಿರಾಧಾರ ಯೋಜನೆಯೊಂದನ್ನು ಅನುಷ್ಠಾನಕ್ಕೆ ತಂದು, ಮನೆಯಿಲ್ಲದವರಿಗೆ ಮನೆಗಳ ವ್ಯವಸ್ಥೆಯನ್ನು ಕಲ್ಪಿಸಿ ಕೊಡುತ್ತಿರುವಂಥ ಕಾರ್ಯವು ನಡೆಯುತ್ತಿದೆ. ಆ ಕಾರ್ಯಯೋಜನೆಯಲ್ಲಿ ನಿರಾಧಾರಿಗಳಾಗಿರುವ ವಿಧವಾ ಸ್ತ್ರೀಯರನ್ನು ಸಮಾವೇಶ ಮಾಡಿಕೊಳ್ಳಬೇಕಾದ್ದು ಅವಶ್ಯ.

ಸುಶಿಕ್ಷಿತ ಸ್ತ್ರಿಯರು ಒಂದಲ್ಲ ಒಂದು ಕಾರಣಗಳಿಂದ ಸಂಘಟಿತರಾಗುತ್ತಿದ್ದಾರೆ. ಬಲಾತ್ಕಾರಗಳಂತಹ ಅಮಾನುಷ ಕ್ರೌರ್ಯದ ವಿರುದ್ಧ ಆಂದೋಲನ ನಡೆಸುತ್ತಲೂ ಇದ್ದಾರೆ. ಹಾಗೆಯೇ ಸ್ತ್ರೀ-ಸ್ವಾತಂತ್ರ್ಯದ ಪ್ರಶ್ನೆಯನ್ನು ಪ್ರಧಾನವಾಗಿ ಇಟ್ಟುಕೊಂಡು ಸಮಾಜ ಪರಿವರ್ತನೆಯ ಪ್ರಕ್ರಿಯೆಯಲ್ಲಿ ಅವರನ್ನೂ ಅವಿಭಾಜ್ಯ ಅಂಗವಾಗಿ ಪರಿಗಣಿಸುವಂತೆ ಅನೇಕ ಚರ್ಚೆಗಳನ್ನು ನಡೆಸುತ್ತಿದ್ದಾರೆ. ಅವುಗಳೊಂದಿಗೆ ಸಂಕಷ್ಟ ಪರಿಸ್ಥಿತಿಯಲ್ಲಿರುವ ವಿಧವಾ ಸ್ತ್ರೀಯರ ಪ್ರಶ್ನೆಯನ್ನು ಬಹಳೇ ಮಹತ್ವದ್ದಾಗಿ ಪರಿಗಣಿಸಿ ಅವುಗಳ ಪರಿಹಾರದ ದೃಷ್ಟಿಯಲ್ಲಿಯೂ ಮುಂದಾಳತ್ವವನ್ನು ವಹಿಸಬೇಕು. ಸಾಮಾಜಿಕ ಎಚ್ಚರವನ್ನು ಉಂಟು ಮಾಡುವುದು ಮತ್ತು ಅವರ ಬಗ್ಗೆ ಗಮನಹರಿಸುವಂತೆ ಒತ್ತಾಯ ಮಾಡುವ ಕಾರ್ಯಕ್ರಮಗಳು ಇಲ್ಲಿ ನಡೆಯಬೇಕಾದ್ದು ಅತ್ಯಂತ ಜರೂರಿ ಸಂಗತಿ. ಇಂಥ ಸ್ತ್ರೀಯರಿಗೆ ಮುಖ್ಯವಾಗಿ ಪ್ರಾಪ್ತವಾಗಿರಬೇಕಾದ ಅಂಶಗಳೆಂದರೆ ಆರ್ಥಿಕ ಸ್ವಾವಲಂಬನೆ. ಅಂದರೆ ರೂಢಿಗತ ಪರಂಪರೆಯನುಸಾರ ಅವರ ಕಡೆಗೆ ನೋಡುತ್ತಿರುವ ಪಾರಂಪರಿಕ ದೃಷ್ಟಿಕೋನವೇ ಬದಲಾಗಬೇಕು. ಸ್ವತಂತ್ರ ಸಮಾಜದ ಘಟಕವಾಗಿ ಅವರನ್ನೂ ಮಾನ್ಯ ಮಾಡುವುದರ ಹಿನ್ನಲೆಯಲ್ಲಿ ವಿಚಾರ ಮಾಡುವುದೂ ಅಗತ್ಯ. ಹಾಗೆಯೇ ಅವರ ಬಗ್ಗೆ ಪರಿಹಾರ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಆ ಕಾರಣಗಳು ಅಂತರ ರಾಷ್ಟ್ರೀಯ ಮಹಿಳಾ ವರ್ಷದಲ್ಲಿಯೇ ನಡೆಯಬೇಕು ಎಂಬ ಅಗತ್ಯವಿಲ್ಲ.