ವಿವಾಹಿತ ಸ್ತ್ರೀಯರು ಬದುಕುವುದು ಹೇಗೆ?

ಮುಂಬಯಿಯ ಧಾರಾವಿಯಲ್ಲಿನ ಮಿಲಿಂದ ನಗರದಲ್ಲಿ ನಡೆದ ಸರೋಜ ಎಂಬ ಹೆಸರಿನ ಯುವತಿಯ ಕೊಲೆಯ ವಿಚಾರವನ್ನು ಓದಿದೆ. ಪತಿ ಮಹಾಶಯನು ಕೈಕಾಲುಗಳನ್ನು ಕಟ್ಟಿಹಾಕಿ, ಡ್ರಿಲ್ಲಿಂಗ್ ಮಿಶನ್‌ನಿಂದ ಸರೋಜಾಳ ತಲೆ ಮತ್ತು ಕೈಕಾಲುಗಳಿಗೆಲ್ಲ ರಂಧ್ರಗಳನ್ನು ಕೊರೆದು ಅಮಾನುಷವಾದ ರೀತಿಯಲ್ಲಿ ಕೊಂದು ಹಾಕಿದ್ದನು. ಹೀಗೆ ಅತ್ಯಂತ ಕ್ರೂರವಾಗಿ ಪತ್ನಿಯನ್ನು ಕೊಂದು ಹಾಕಿದ ಪತಿಯ ಈ ಕೃತ್ಯವು ಸಾಮಾಜಿಕವಾಗಿ ಒಂದು ಲಜ್ಜಾಸ್ಪದವಾದ ವಿಷಯ. ಇಂದಿಗೂ ಸ್ತ್ರೀಯರ ಮೇಲೆ ಇಂಥ ಅಮಾನುಷ ಹಲ್ಲೆಯನ್ನು ಮಾಡುವ ಮೂಲಕ ಮರಣಕ್ಕೆ ನೂಕುವ ಈ ಪ್ರಕ್ರಿಯೆಯು ಪುರುಷನ ಕ್ರೂರ ಮನಸ್ಸಿನ ಮತ್ತು ಶಾರೀರಿಕ ಸಾಮರ್ಥ್ಯದ ತುಚ್ಛತೆಯಲ್ಲದೆ ಮತ್ತೇನೂ ಅಲ್ಲ. ಇದನ್ನು ಸಮಾಜವು ಅವಶ್ಯ ಗಂಭೀರವಾಗಿ ಪರಿಗಣಿಸಬೇಕು. ಪರಪುರುಷರಿಂದ ಸ್ತ್ರೀಯರ ಮೇಲಾಗುವ ಅತ್ಯಾಚಾರ ಮತ್ತು ಬಲಾತ್ಕಾರದ ವಿರುದ್ಧ ಸಂಘಟಿತರಾಗಿ ಎಲ್ಲ ಕಡೆಗಳಲ್ಲೂ ಪರಿಷತ್ತುಗಳು ಮತ್ತು ಪ್ರತಿಭಟನಾ ಸಭೆಗಳನ್ನು ಏರ್ಪಡಿಸಲಾಯಿತು. ಹಾಗೂ ನಿಷೇಧವೇ ಅಲ್ಲದೆ ಇಂಥ ಪುರುಷರಿಗೆ ಕಠಿಣ ಶಾಸನದ ಮೂಲಕ ಶಿಕ್ಷೆಯಾಗುವಂತೆ ಮಾಡಬೇಕು. ಜೊತೆಗೆ ಸ್ತ್ರೀಯರಿಗೆ ಸಂರಕ್ಷಣೆ ದೊರೆಯಬೇಕು ಎಂಬ ದೃಷ್ಟಿಯ ಹಿನ್ನಲೆಯಾಗಿ ಅನೇಕ ಬೇಡಿಕೆ ಗಳನ್ನು ಇಲ್ಲಿ ಮಂಡಿಸಲಾಗಿತ್ತು. ಸಮಾಜವು ಈ ಸಮಸ್ಯೆಯ ಮೂಲಕ ಸ್ತ್ರೀಯರಿಗೆ ಬೆಂಬಲವಾಗಿ ನಿಂತಿತ್ತು ಮತ್ತು ಶಾಸನೋಕ್ತವಾಗಿಯೂ ಇಂಥ ಪುರುಷರಿಗೆ ಕಠಿಣ ಶಿಕ್ಷೆಯನ್ನು ವಿಧಿಸುವ ದೃಷ್ಟಿಯಿಂದ ಕಾಯಿದೆಬದ್ಧವಾಗಿ ಅಗತ್ಯವಾದ ನೇತೃತ್ವವನ್ನು ವಹಿಸಿತ್ತು.

ಪರಪುರುಷರ ವಾಸನೆಗಳಿಗೆ ಬಲಿಯಾಗಿ ಜೀವನವನ್ನು ನಾಶ ಮಾಡಿಕೊಳ್ಳುವ ತರುಣಿಯರಿಗೆ ಮತ್ತು ಅಲ್ಪ ವಯಸ್ಸಿನ ಹೆಣ್ಣು ಮಕ್ಕಳಿಗೆ ಸಂರಕ್ಷಣೆಯ ಆವಶ್ಯಕತೆಯು ಇದೆ. ಸ್ತ್ರೀಯರು ಪವಿತ್ರ ವಿವಾಹ ಸಂದರ್ಭದಲ್ಲಿ ಮಂಗಳಕರವಾದ ಸಪ್ತಪದಿಯನ್ನು ತುಳಿದು ಮಾವನ ಮನೆಗೆ ಪಾದಾರ್ಪಣೆ ಮಾಡುತ್ತಾರೆ ಮತ್ತು ಪತಿಯನ್ನು ಪರಮೇಶ್ವರನಾಗಿ ಭಾವಿಸಿ ಆತ್ಮಾರ್ಪಣೆ ಮಾಡಿಕೊಳ್ಳುತ್ತಾರೆ. ಅಂಥವರ ಮೇಲೂ ಸಂಸಾರದಲ್ಲಿ ಆಗುವ ದೌರ್ಜನ್ಯ ಮತ್ತು ಶಾರೀರಿಕ ಆಘಾತದ ಬಗ್ಗೆ ವಿವರಗಳನ್ನು ಗಂಭೀರವಾಗಿ ಪರಿಗಣಿಸ ಬೇಕಾಗಿದೆ. ವಿವಾಹವಾದ ಅನಂತರ ಕೆಲವಾರು ವರ್ಷಗಳಲ್ಲಿಯೇ ಟಿಕ್ ಟ್ವೆಂಟಿ (ವಿಷ) ಸೇವಿಸಿಯೊ, ಬೆಂಕಿ ಹಚ್ಚಿಕೊಂಡೊ, ಬಾವಿಯಲ್ಲಿ ಬಿದ್ದೊ ಆತ್ಮಹತ್ಯೆ ಮಾಡಿಕೊಂಡ ವಿವಾಹಿತ ಸ್ತ್ರೀಯರ ವಿವರಗಳನ್ನು ನಾವು ಗಮನಿಸುತ್ತಲೇ ಇರುತ್ತೇವೆ.  ಆ ಆತ್ಮಹತ್ಯೆಯು ಸ್ವಂತ ಕೃತ್ಯವೋ ಅಥವಾ ಮಾವನ ಮನೆಯ ಸದಸ್ಯರೆಲ್ಲರಿಂದ ಆದ ಆತ್ಯಂತಿಕ ಮಟ್ಟದ ಪೀಡನೆಯ ಅಸಹಾಯಕತೆಯಲ್ಲಿ ಪ್ರಕಟವಾದ ಆಗತಿಕ ದೇಹ ವಿಸರ್ಜನೆಯೊ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಮದುವೆ ಸಮಾರಂಭದಲ್ಲಿನ ಮಾನಾಪಮಾನದ ಪ್ರಶ್ನೆ, ವರದಕ್ಷಿಣೆಯ ಕಾರಣದಿಂದಾಗಿ ಉಂಟಾಗುವ ಗಲಭೆ, ಮದುವೆಯ ನಂತರದಲ್ಲಿ ತವರು ಮನೆಯಿಂದ ಹಣ ಮತ್ತು ಆಭರಣಗಳನ್ನು ಪಡೆದುಕೊಳ್ಳುವ ಮನೋಭಾವ, ತಾಯಿ-ತಂದೆಯರ ಇಚ್ಛೆಯನುಸಾರ ಇಷ್ಟವಿಲ್ಲದ ಹುಡುಗಿಯನ್ನು ಮದುವೆಯಾಗುವುದು, ಪತ್ನಿಯ ಚಾರಿತ್ರ್ಯದ ಬಗ್ಗೆ ಸಂಶಯ ಮತ್ತು ಅದರಿಂದಾಗಿ ಅವಳನ್ನು ಕೂಡಿ ಹಾಕುವಿಕೆ ಹಾಗೂ ಹಿಂಸೆ ಮಾಡುವ ರೀತಿ ಇತ್ಯಾದಿ ಕಾರಣಗಳಿಂದಾಗಿ ವಿವಾಹಿತ ತರುಣಿಯರ ಬದುಕು ಬಹಳ ಕಠಿಣವಾಗಿದೆ.

ಇತ್ತೀಚಿನ ಕೆಲವು ವರದಿಗಳನ್ನು ನೋಡಬಹುದು. ಮುಳಶಿ ತಾಲೂಕಿನ ಪೀಡ ಎಂಬಲ್ಲಿನ ರೈತನ ಮಗಳನ್ನು ಪತಿ ಗೃಹದವರು ಬಾವಿಗೆ ನೂಕಿ ಕೊಂದು ಹಾಕಿದರು. ಆದರೆ ಅದನ್ನು ಆತ್ನಹತ್ಯೆ ಎಂದು ಹೇಳಲಾಯಿತು. ಹಾಗೆಯೇ ಸಾತಾರಾ ರಸ್ತೆಯಲ್ಲಿನ ಪ್ರೇಮನಗರದ ವಸಾಹತುವಿನಲ್ಲಿನ ಸೌಭಾಗ್ಯವತಿ ಪೂಜಾ ಸೇಠಿಯಾ ಎಂಬ ಇಪ್ಪತ್ತೆರಡು ವರ್ಷದ ವಿವಾಹಿತ ತರುಣಿಯು ಮೈಗೆ ಬೆಂಕಿ ಹತ್ತಿ ಸುಟ್ಟು ಸಾವನ್ನಪ್ಪಿದಳು. ಪೂಜಾಳ ಪತಿಯು ಅವಳ ಕಡೆಯವರಿಂದ ಮತ್ತೆ ಮತ್ತೆ ಹಣ ತರುವಂತೆ ಅವಳನ್ನು ಒತ್ತಾಯಿಸುತ್ತಿದ್ದನು. ಅವಳು ಸಾಯುವ ಹಿಂದಿನ ದಿವಸದವರೆಗೂ ಅವನ ಒತ್ತಾಯವು ಸಾಗಿತ್ತು. ಆದರೆ ಅವಳು ಆಕಸ್ಮಿಕ ಬೆಂಕಿಯಿಂದ ಸತ್ತಳೋ ಇಲ್ಲವೆ ಬೆಂಕಿ ಹಚ್ಚಿ ಸಾಯಿಸಲಾಯಿತೋ ಎಂಬುದರ ಚರ್ಚೆಯ ಆವಶ್ಯಕತೆಯು ಇಲ್ಲ.

ಪುಣೆಯ ಶುಭಾಂಗಿ ವಾಗ್‌ಳಿಗೆ ಇಬ್ಬರು ಗಂಡು ಮಕ್ಕಳು. ಆದರೆ ಅತ್ತೆಯ ಪೀಡನೆ ಮತ್ತು ಇಬ್ಬರ ನಡುವೆ ಜಗಳವು ಸದಾ ಇದ್ದೇ ಇರುತ್ತಿತ್ತು. ಶುಭಾಂಗಿಯು ಒಮ್ಮೆಲೆ ಗಂಭೀರವಾಗಿ ಕಾಯಿಲೆಗೆ ಒಳಗಾದಳು ಮತ್ತು ಜ್ಞಾನ ವಿಹೀನಳಾಗಿದ್ದಾಗಲೇ ತನ್ನ ತಂದೆಯೊಂದಿಗೂ ಮಾತನಾಡಲಾಗದೆ ಮರಣ ಹೊಂದಿದಳು. ಇಂಥ ಅನೇಕ ಉದಾಹರಣೆಗಳು ಸಮಾಜದಲ್ಲಿ ನಿದರ್ಶನವಾಗಿ ಸಿಕ್ಕುತ್ತವೆ. ಅವುಗಳಿಂದ ಮನಸ್ಸಿಗೆ ಭಯಾನಕ ಕಂಪನ ಉಂಟಾಗುತ್ತದೆ. ವಿವಾಹಿತ ಸ್ತ್ರೀಯರ ಮೇಲೆ ಜರುಗುತ್ತಿರುವ ಅನ್ಯಾಯ ಮತ್ತು ಪಾರಂಪರಿಕ ತೊಂದರೆಯ ಪ್ರವೃತ್ತಿಗೆ ಬಲಿಯಾಗುತ್ತಿರುವ ಸ್ತ್ರೀಯರ ಸಂಖ್ಯೆಯು ಹೆಚ್ಚೋ ಕಡಿಮೆಯೋ? ಮೊದಲಿಗಿಂತಲೂ ಇದು ಹೆಚ್ಚಾಗಿದಯೋ ಅಥವಾ ಕಡಿಮೆಯಾಗಿದೆಯೋ? ಅವರುಗಳ ದೋಷವು ಇರುವುದೋ ಅಥವಾ ಇಲ್ಲವೋ? ಎಂಬಂಥ ಈ ಪ್ರಶ್ನೆಗಳು ಗೌಣವಾದುವಷ್ಟೇ ಮಾತ್ರವಲ್ಲ, ಅವು ಅನಗತ್ಯವೂ ಆದುವಾಗಿವೆ.

ವರ್ತಮಾನ ಪತ್ರಿಕೆಯಲ್ಲಿ ಬರುವ ವರದಿಗಳ ಅನುಸಾರ ಪತಿಯ ಗೃಹದವರ ಪೀಡನೆಗೆ ಬೇಸತ್ತು ಆತ್ಮಹತ್ಯೆಯ ಪ್ರಯತ್ನ ಮಾಡುವ ಸ್ತ್ರೀಯರ ಸಂಖ್ಯೆ ಖಚಿತವಾಗಿ ಎಷ್ಟು ಎಂಬುದನ್ನು ಅಂದಾಜಿನ ಪ್ರಕಾರದಲ್ಲಿ ಹೇಳಬೇಕು. ಹಾಗೆ ಗುರುತಿಸಿದಲ್ಲಿ ಮಾತ್ರ ಆ ಪ್ರವೃತ್ತಿಯನ್ನು ನಿಲ್ಲಿಸುವ ದೃಷ್ಟಿಯಿಂದ ಎಲ್ಲ ಸ್ತರಗಳು ಮತ್ತು ಘಟಕಗಳ ಮೂಲಕ ಪ್ರಯತ್ನ ಮಾಡುವುದಕ್ಕೆ ಸಾಧ್ಯವಾಗುವುದು ಎಂಬುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ಸ್ತ್ರೀಯು ಪತಿ ಗೃಹದ ಸದಸ್ಯರ ಹಾಗೂ ಪತಿಯಿಂದಲೂ ದೌರ್ಜನ್ಯಕ್ಕೆ ಒಳಗಾಗಿ ಸಾಯುವಂಥ ಅವಸ್ಥೆಯಲ್ಲಿ ಆಸ್ಪತ್ರೆಗಳಿಗೆ ದಾಖಲು ಮಾಡಲ್ಪಡುತ್ತಾಳೆ. ಕೆಲವಾರು ಜನರು ಈ ದೌರ್ಜನ್ಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಾರಾದರೆ, ಮತ್ತೆ ಕೆಲವರು ಕೊಲ್ಲಲ್ಪಡುತ್ತಾರೆ. ಬೆಳಕಿಗೆ ಬರುವ ಮತ್ತು ವರ್ತಮಾನ ಪತ್ರಿಕೆಗಳು ದಾಖಲಿಸುವ ಇಂಥ ಕೆಲವು ಕೃತ್ಯಗಳಷ್ಟೆ ಸಮಾಜದಲ್ಲಿ ಚರ್ಚೆಗೆ ಒಳಗಾಗುತ್ತವೆ. ಸಂವೇದನ ಶೀಲತೆ ಮತ್ತು ಮಾನವೀಯತೆಯನ್ನು ಒಪ್ಪಿಕೊಳ್ಳುವಂಥ ಮನಸ್ಸಿಗೆ ಇಂಥವು ವ್ಯಧೆಯನ್ನು, ಕಳಂಕವನ್ನು ತರುವಂಥವಾಗಿವೆ. ಆದರೆ ಪ್ರತಿಷ್ಠಿತವಾದಂತಹ ದೊಡ್ಡ ಕುಟುಂಬಗಳಲ್ಲಿ ಹಾಗೂ ಅತ್ಯಂತ ಬಡ ಕುಟುಂಬಗಳಲ್ಲಿ, ಹಳ್ಳಿಗಾಡುಗಳಲ್ಲಿ ಇಂಥ ಘಟನೆಗಳು ಸಂಭವಿಸಿದರೆ ಅವುಗಳು ಹೊರಬರುವುದೇ ಇಲ್ಲ. ಕುಟುಂಬದ ಮರ್ಯಾದೆಯನ್ನು ಕಾಪಾಡುವಂತಹ, ಮತ್ತು ಪ್ರತಿಷ್ಠೆಯನ್ನು ರಕ್ಷಿಸುವಂತಹ ದೃಷ್ಟಿಯಿಂದ ಎರಡು ಕಡೆಯ ಸದಸ್ಯರು ಇಂಥ ಘಟನೆಗಳನ್ನು ಮುಚ್ಚಿ ಹಾಕುತ್ತಾರೆ.

ಸ್ತ್ರೀಯರ ಶಿಕ್ಷಣದ ಪ್ರಗತಿ, ಸ್ತ್ರೀಯರಲ್ಲಿ ಹಕ್ಕಿನ ಅರಿವು, ಅವರಿಗೆ ಸಾಧ್ಯವಾಗುತ್ತಿರುವ ಆರ್ಥಿಕ ಸಾಮರ್ಥ್ಯ, ಅವರಲ್ಲಿ ತುಂಬಿರುವಂತಹ ಸ್ವಾಭಿಮಾನ, ವಾಸ್ತವ ಬದುಕಿನ ಸ್ಥಿತಿಯ ಸಂಬಂಧವಾಗಿ ಬೆಳೆಯುತ್ತಿರುವ ಅಪೇಕ್ಷೆ ಇಂದು ಸಾಮಾಜಿಕವಾಗಿ ಆಗಿರುವ ಮುಖ್ಯ ಬದಲಾವಣೆಗಳಾಗಿವೆ. ಅಲ್ಲದೆ, ಪುರುಷ ವರ್ಗದ ಸಂಬಳದ ಕೊರತೆ, ಅದರಿಂದಾಗಿ ಪತ್ನಿಯ ಆರ್ಥಿಕ ಸಹಾಯದ ಆವಶ್ಯಕತೆಯ ನಿರ್ಮಾಣ ಆ ಕಾರಣ ಪುರುಷ ಅಹಂಕಾರವನ್ನು ಕಡಿಮೆ ಮಾಡವ ಅವರ ಪ್ರವೃತ್ತಿ ಇತ್ಯಾದಿಗಳು ಸೇರಿಕೊಂಡ ಸ್ತ್ರೀಯರಿಗೆ ವ್ಯಕ್ತಿ ಸ್ವಾತಂತ್ರ್ಯವು ಸಾಧ್ಯವಾಗಿದೆ. ಜೊತೆಗೆ ವ್ಯಕ್ತಿತ್ವ ವಿಕಾಸದ ಸಂಧಿಯು ಉಪಲಬ್ಧವಾಗುತ್ತಲಿದೆ ಎಂಬ ಅಭಿಪ್ರಾಯಗಳುಂಟು. ಇದು ಸಕೃತ್ ದರ್ಶನದ ದೃಷ್ಟಿಯಿಂದ ನಿಜವೂ ಎನ್ನಿಸುತ್ತಲಿದೆ. ಆದರೆ ವಾಸ್ತವವಾಗಿ ಈ ಅಭಿಪ್ರಾಯವು ಪೂರ್ಣತಃ ಗ್ರಾಹ್ಯ ಮತ್ತು ನಿರ್ವಿವಾದಿತ ಸತ್ಯವಲ್ಲ ಎಂಬುದು ಅನುಭವದಿಂದ ಗೊತ್ತಾಗುತ್ತಲಿದೆ. ಕಾರಣ ಸ್ತ್ರೀಯರಲ್ಲಿ ಬೆಳೆದಿರುವ ಮಹತ್ವ, ವಿಸ್ತರಿಸಲ್ಪಟ್ಟಿರುವ ಸ್ಥಾನ ಮತ್ತು ನೀಡಲಾಗಿರುವ ಸ್ವಾತಂತ್ರ್ಯವು ವಂಚನೆಯದ್ದು ಮತ್ತು ಪುರುಷ ಪ್ರಧಾನ ಸಮಾಜವು ಸ್ವಾರ್ಧ ದೃಷ್ಟಿಯಿಂದ ನೀಡಿರುವುದೆಂಬುದು ಸ್ಪಷ್ಟ ಗೋಚರ. ಅಲ್ಲದೆ ಸ್ತ್ರೀಯರಿಗೆ ಮಾನ್ಯತೆಯು ಲಭಿಸುತ್ತಾ ಬರುತ್ತಿರುವುದರಿಂದ ಆ ಆಮಿಷ (ಲಂಚ)ವನ್ನು ಅವರು ಅವಶ್ಯಕವಾಗಿ ಒಪ್ಪಿಕೊಳ್ಳಲೇ ಬೇಕಾಗಿದೆ.

ಇತ್ತೀಚಿನ ದಿನಗಳಲ್ಲಿ ಸ್ತ್ರೀಯ ಶೈಕ್ಷಣಿಕ ಸ್ಥಾನಮಾನವು ವಿಸ್ತರಿಸಿದೆ. ಅವಳ ವ್ಯಾವಹಾರಿಕ ಬುದ್ದಿವಂತಿಕೆಯೂ ಬೆಳೆದಿದೆ. ಆರ್ಥಿಕ ಮಗ್ಗುಲಿನಿಂದಲೂ ಅನೇಕ ಸ್ತ್ರೀಯರು ಕುಟುಂಬದ ಗಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಮಕ್ಕಳ ಪಾಲನೆ ಪೋಷಣೆಯ ಜವಾಬ್ದಾರಿಯನ್ನು ಹೊರುವಲ್ಲಿಯೂ ತತ್ಪರರಾಗಿದ್ದಾರೆ. ಪೋಸ್ಟಾಫಿಸು, ಬ್ಯಾಂಕು, ವಿಮಾ ಕಛೇರಿಗಳು, ರೇಶನ್ ಮತ್ತು ಪೇಟೆ ವ್ಯವಹಾರಗಳಿಗೆಂದು ಅವರು ಮನೆಯಿಂದ ಹೊರಗೆ ಬರುತ್ತಲಿದ್ದಾರೆ. ಇನ್ನು ನೌಕರಿ ಮಾಡುತ್ತಲೇ ಸಂಸಾರವನ್ನು ಸಮರ್ಧವಾಗಿ ನಿಭಾಯಿಸುತ್ತಲಿರುವ ವಿಷಯವನ್ನೂ ಪುರುಷರು ಸ್ಪಷ್ಟವಾಗಿ ತಿಳಿದಿದ್ದಾರೆ. ಪತ್ನಿಯು ನಿಜವಾದ ಅರ್ಧದಲ್ಲಿ ಮತ್ತು ಬದಲಾಗುವ ಪರಿಸ್ಥಿತಿಯನ್ನು ಅರಿತು ಎದುರಿಸಿ ಸಮರ್ಧವಾಗಿ ಸಂಸಾರದಲ್ಲಿ ಕೃತಿಶೀಲಳಾಗಿ ಭಾಗೀದಾರಳಾಗುವುದನ್ನು ಕಂಡ ಮೇಲೆ ಆಕೆಯ ಮೇಲೆ ಇನ್ನು ಜವಾಬ್ದಾರಿಗಳನ್ನು ವಹಿಸಲಾಗಿದೆ. ಪುರುಷರು ತಮ್ಮ ಮೇಲಿನ ಜವಾಬ್ದಾರಿಗಳನ್ನೆಲ್ಲ ಅವಳ ಮೇಲೆ ದೂಡಿ ಪ್ರಸಂಗ ಬಂದಾಗ ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ಮತ್ತು ಅದರ ಪರಿಣಾಮಗಳನ್ನು ಎದುರಿಸುವ ಕಾರ್ಯವನ್ನು ಅವಳಿಗೇ ಬಿಡುವ ಪ್ರಕ್ರಿಯೆಯೂ ಕಾಣುತ್ತಲಿದೆ. ಆದರೆ ಇದು ಪುರುಷರು ಬಹಳ ದೊಡ್ಡ ಮನಸ್ಸಿನಿಂದ ಮಾಡಿರುವಂತಹ ಕೆಲಸವೇನಲ್ಲ. ಬದಲಾಗಿ ಪುರುಷರು ತಮ್ಮನ್ನು ತಾವು ಬಹಳಷ್ಟು ಮಟ್ಟಿಗೆ ಈ ಕಾರ್ಯಗಳಿಂದ ಬಿಡುಗಡೆ ಪಡೆದುಕೊಳ್ಳುವುದಕ್ಕೆ ಮಾಡಿರುವ ಮುಖ್ಯ ಹೇತುವಾಗಿದೆ. ಹೆಂಡತಿಯ ಸಲಹೆ ಪಡೆದು ನಿರ್ಣಯ ಕೈಗೊಳ್ಳಲಾಗುತ್ತಿದೆ ಎಂಬ ಪ್ರತಿಷ್ಠೆಯಿಂದ ಸಲಹೆಗೆ ಪ್ರತಿಯಾಗಿ ಅವಳ ಸಾಂಸಾರಿಕ ಗೊಂದಲಗಳನ್ನು ಹೆಚ್ಚು ಮಾಡಿದಂತಾಗಿದೆಯೇ ಹೊರತು ಬೇರೇನೂ ಅಲ್ಲ. ಆದರೂ ಇಂದು ಬೆರಳೆಣಿಕೆಯಷ್ಟು ಅಪವಾದಗಳ ಶೋಧನೆಯೇ ಆಗಿದೆ. ಬಹುತೇಕ ಕುಟುಂಬಗಳಲ್ಲಿ ಇಂಥ ಪರಿಸ್ಥಿತಿ ಕಂಡುಬರುತ್ತಿರುವುದು ಗಮನೀಯ. ಪುರುಷನು ತನ್ನ ಅಹಂಕಾರವನ್ನೆಲ್ಲಾ ನುಂಗಿಕೊಂಡು ಪತ್ನಿಯಾದವಳಿಗೆ ಸರಿಸಮನಾದ ಮತ್ತು ಆಗಾಗ್ಗೆ ಶ್ರೇಷ್ಠ ದರ್ಜೆಯನ್ನು ಕೊಟ್ಟಂಥ ಪ್ರತಿಷ್ಠೆಯನ್ನು ತೋರುತ್ತಿರುತ್ತಾನೆ. ಆದರೆ ಇದು ಒಂದು ನೆಪವಲ್ಲದೆ ಮತ್ತೇನೂ ಅಲ್ಲ. ಕಾರಣ ನಿಜವಾದ ಅರ್ಧದಲ್ಲಿ ಸ್ವತಃ ತನಗೆ ಸರಿಸಮನಾದ ಸ್ಥಾನ, ಸ್ವಾತಂತ್ರ್ಯ ಮತ್ತು ಕೆಲಸದ ವಿಭಜನೆಯಲ್ಲಿ ಸಮಾನತೆಯನ್ನು ಕೊಡುವುದಕ್ಕೆ ಆತ ಇಂದಿಗೂ ಸಿದ್ಧನಾಗಿಲ್ಲ. ಪತ್ನಿಗೆ ಬರೋಬರಿಯಾದ ಸ್ಥಾನ ಮತ್ತು ಶ್ರೇಷ್ಠತ್ವವನ್ನು ಯಾವುದೇ ಇಚ್ಚಿಯಿಲ್ಲದೆ ವೈಚಾರಿಕ ಪಾತಳಿಯಿಂದ ಕರ್ತೃತ್ವಗೊಳಿಸಿರುವ ಪತಿಗಳು ಸಮಾಜದಲ್ಲಿ ಬಹಳೇ ಕಡಿಮೆ ಕುಟುಂಬಗಳಲ್ಲಿ ಕಾಣಿಸಿಕ್ಕುತ್ತಾರೆ. ಅದಕ್ಕಿಂತಲೂ ಹೆಚ್ಚಾಗಿ ಬಹಳಷ್ಟು ಪುರುಷರಿಗೆ ಇದು ಇಂದಿಗೂ ಒಪ್ಪಿತ ಸಂಗತಿಯಾಗಿಲ್ಲ.

ಕೌಟುಂಬಿಕ ಜವಾಬ್ದಾರಿಗಳ ವಿಷಯಗಳಿಂದಾಗಿ ಅವಳ ಬಗೆಗಿನ ಪ್ರೀತಿಯು ಕಡಿಮೆಯಾಗುವುದಿಲ್ಲ ತಾನೆ? ಶುದ್ಧ ಚಾರಿತ್ರ್ಯದ ಪಾಲನೆ ಸಾಧ್ಯವಾದುವಷ್ಟೆ? ಭಿನ್ನ ಗೆಳತಿಯರ ಸಮೂಹವು ಒಳ್ಳೆಯ ಮನೆಗಳಿಂದ ಬಂದಿರುವಂಥವು ತಾನೆ? ಸಂಬಂಧಿಗಳ ಬಗ್ಗೆ ಅವಳಲ್ಲಿ ತೀವ್ರ ಅಸ್ಥೆಯು ಉಂಟಷ್ಟೆ? ಸಮಯದ ನಿರ್ಬಂಧಗಳನ್ನು ಅವಳು ಪಾಲಿಸ ಬಲ್ಲಳು ತಾನೆ? ಪತ್ನಿಯಾಗಿ ಅವಳು ಎಲ್ಲಾ ಬಗೆಯ ಸುಖಗಳನ್ನು ನೀಡುವಲ್ಲಿ ಕೊರೆತೆಯುಂಟು ಮಾಡುತ್ತಿಲ್ಲವಷ್ಟೆ? ಇಂಥ ತತ್ಪರಗಳನ್ನು ಎಣಿಸುವ ಬಹುಸಂಖ್ಯಾತ ಪುರುಷರನ್ನು ನೋಡಿದಾಗ ಸಮಾನತೆಯ ಮತ್ತು ಸ್ತ್ರೀಯರ ದರ್ಜೆಯನ್ನು ಎತ್ತರಿಸಿರುವುದಾಗಿ ವಾದ ಮಾಡುವವರು ವಸ್ತುಸ್ಥಿತಿಯ ಬಗ್ಗೆ ಗಮನ ಹರಿಸಿಲ್ಲವೆಂದು ಅನಿಸುತ್ತದೆ. ಕೆಲವಾರು ಅಂಶಗಳಲ್ಲಿ ಸ್ತ್ರೀಯರ ದರ್ಜೆಯು ಸುಧಾರಿಸಿದೆ ಎಂಬ ಸಕೃತ್ ದರ್ಶನವೊಂದು ಕಂಡಬಂದರೂ, ಅವರನ್ನು ಕಾಣುತ್ತಿರುವ ದೃಷ್ಟಿಕೋನದಲ್ಲಿ ಯಾವ ಮೂಲಭೂತ ಬದಲಾವಣೆಯೂ ಆಗಿರುವಂತೆ ಕಾಣುವುದಿಲ್ಲ. ‘ಸ್ತ್ರೀ’ಯನ್ನು ಒಬ್ಬ ಸ್ವತಂತ್ರ ವ್ಯಕ್ತಿಮತ್ತೆ ಯಂತೆ ಕಾಣದೆ ಪತ್ನಿ, ಸಹೋದರಿ, ಮಗಳು, ಅತ್ತೆ ಎಂಬಿವೇ ಮೊದಲಾದ ಸಂಬಂಧಗಳ ಹಿನ್ನೆಲೆಯಲ್ಲಿಯೇ ನೋಡಲಾಗುತ್ತಿದೆ. ಅವಳ ಸ್ವತಂತ್ರ ಅಸ್ತಿತ್ವವನ್ನೇ ಒಪ್ಪದೆ, ಅವಳನ್ನು ಗೌಣ ದರ್ಜೆಯಲ್ಲಿಯೇ ಪರಿಭಾವಿಸಲಾಗುತ್ತಿದೆ. ಒಂದೊಮ್ಮೆ ‘ಸ್ತ್ರೀ’ಗೆ ನಿಜವಾದ ಅರ್ಧದಲ್ಲಿ ಸ್ವಾತಂತ್ರ್ಯವನ್ನು ನೀಡಿದ್ದರೆ ಜನಿಸುವ ಮಗು ಗಂಡು ಅಥವಾ ಹೆಣ್ಣು ಯಾವುದೇ ಆಗಿದ್ದರೂ ಕುಟುಂಬದವರಿಗೆ ಬಹಳ ಸಂತೋಷವೇ ಆಗುತ್ತಿತ್ತು. ಇದರೊಂದಿಗೆ ಹುಡುಗ-ಹುಡುಗಿಯರ ವಿವಾಹವನ್ನು ಸ್ವಲ್ಪ ನಿಧಾನವಾಗಿಯೇ ಮಾಡುವುದಕ್ಕೆ ಸಾಧ್ಯ ಸಂದರ್ಭವು ಪ್ರಾಪ್ತವಾಗುತ್ತಿತ್ತು. ಇನ್ನು ಇದರಿಂದ ವರದಕ್ಷಿಣೆ ಪದ್ಧತಿಯು ಕೊನೆಗೊಂಡು ಅತ್ತೆ-ಸೊಸೆಯರ ಅಭಿಪ್ರಾಯಕ್ಕೆ ಮತ್ತು ಪತಿ-ಪತ್ನಿಯರ ವಿಚಾರಗಳಿಗೆ ಬಹಳಷ್ಟು ಮಹತ್ವವೂ ಲಭ್ಯವಾಗುತ್ತಿತ್ತು. ಪರಿತ್ಯಕ್ತಳು ಅಥವಾ ವಿಚ್ಛೇದಿತಳಾದ ಸ್ತ್ರೀ ಮತ್ತು ವಿಧುರ ಪುರುಷ ಇವರುಗಳನ್ನು ಸಮಾಜವು ಗಂಭೀರ ಪಾತಳಿಯಿಂದ ಪರಿಗಣಿಸುತ್ತಿತ್ತು. ಪುರುಷರ ಬಾಹ್ಯ ಖಯಾಲಿಗಳನ್ನು ಚರ್ಚಿಸದೆ, ಸ್ತ್ರೀಯರ ವಿಷಯಲ್ಲಿ ಮಾತ್ರ ಅಂಥವುಗಳನ್ನು ಬೆಟ್ಟದೆತ್ತರ ಮಾಡುವಂತಹ ಪ್ರವೃತಿಯು ಬಲಗೊಂಡಿರದಿದ್ದರೆ ನೌಕರಿ ಮಾಡಿ ಮನೆಗೆ ಬರುವ ಸ್ತ್ರೀಯರಿಗೆ ಮತ್ತು ಪುರುಷರಿಗೆ ಮನೆಯ ಕೆಲಸವನ್ನು ಹಾಗೆಯೇ ಮಾಡುವ ಅಪೇಕ್ಷೆಯು ಉಂಟಾಗುತ್ತಿತ್ತು. ಆದರೆ ಇಂಥ ಚಿತ್ರವು ಸಾಧ್ಯವಾಗಿಲ್ಲ. ಹಾಗಾಗಿಯೇ ಸ್ತ್ರೀಯರ ಸ್ವಾತಂತ್ರ್ಯ, ಸ್ತ್ರೀ-ಮುಕ್ತಿ ಮತ್ತು ಸ್ತ್ರೀ-ಪುರುಷ ಸಮಾನತೆ ಎಂಬಂಥ ಈ ಮೌಲ್ಯಗಳನ್ನು ಪೋಷಿಸುವ ತಯಾರಿಯೂ ಸಮಾಜದಲ್ಲಿ ದರ್ಶಿಸುವುದಕ್ಕೆ ಸಾಧ್ಯವಾಗಿಲ್ಲ. ಅರ್ಧಾತ್ ಆ ದೃಷ್ಟಿಯಿಂದ ವಿಚಾರಗಳು ಆಚಾರಗಳು ಕೃತಿಗೊಳ್ಳಬೇಕೆಂಬ ದಿಶೆಯಲ್ಲಿ ಪ್ರಯತ್ನಗಳು ಆಗುತ್ತಲಿವೆ; ಆದರೆ ಅದರ ಗತಿಯು ಮಂದವೂ, ಮರ್ಯಾದಿತವೂ ಮತ್ತು ವಿಶಿಷ್ಟವೂ ಆದ ಸಮಾಜದೊಂದಿಗೆ ಹೊಂದಿಕೊಂಡುದಾಗಿರುತ್ತದೆ.

ಸಂಸ್ಕೃತಿಯನ್ನು ಜಪಿಸುವಂತಹ ಏಕಾಧಿಕಾರಿ (ಸಾಂಪ್ರದಾಯಿಕ) ಕುಟುಂಬದಲ್ಲಿನ ಸ್ತ್ರೀ ಪತಿಯಲ್ಲಿ ಏಕನಿಷ್ಠೆಯನ್ನು ಹೊಂದಿರಬೇಕು. ಮಾವನ ಮನೆಯಲ್ಲಿನ ಸಂಬಂಧಿತ ಜನರ ಮನಸ್ಸನ್ನು ತೃಪ್ತಿಗೊಳಿಸುವಂತಹ ಕೆಲಸವೂ ಅವಳದ್ದೇ. ಮಕ್ಕಳಿಗೆ ರೀತಿ- ರಿವಾಜುಗಳನ್ನು ಕಲಿಸುವುದರಿಂದ ಹಿಡಿದು ಮನೆಯ ರೀತಿ-ನೀತಿಗಳು ಮತ್ತು ಧಾರ್ಮಿಕ ಕಾರ್ಯನಿಷ್ಠೆಯನ್ನು ಅವಳೇ ಪಾಲಿಸಬೇಕು. ಇಂಥ ಅಪೇಕ್ಷೆಗಳ ಪೂರ್ಣತೆಯ ಸತ್ವ ಪರೀಕ್ಷೆಯಲ್ಲಿ ಅವಳು ಪತಿಯ ದೃಷ್ಟಿಗೆ ಬಂದಳೆಂದರೆ ಅವಳನ್ನು ವ್ಹಾ ವ್ಹಾ ಎಂದು ಪ್ರಶಂಸಿಸಲಾಗುವುದು. ಒಂದೊಮ್ಮೆ ಇದರಲ್ಲಿ ಕೊಂಚವಾದರೂ ಅವಳಿಂದ ದುರ್ಲಕ್ಷ್ಯ ಉಂಟಾಗಿ ಅಪೇಕ್ಷೆ ಭಂಗವಾಯಿತೆಂದರೆ ಅವಳ ವಿಷಯದಲ್ಲಿ ಮಾನಸಿಕ ಆಘಾತ ಗೊಳಿಸುವ ಕ್ರಿಯೆಯು ಆರಂಭವಾಗಿಯೇ ಬಿಡುತ್ತದೆ. ಆ ಬಗ್ಗೆ ಅವಳು ವಿರೋಧವನ್ನು ತೋರಿದಳೆಂದರೆ ಅವಳಿಗೆ ದೈಹಿಕವಾಗಿ ಹಿಂಸಿಸುವುದಕ್ಕೂ ಆ ಕುಟುಂಬದವರು ಹಿಂದೆ ಮುಂದೆ ನೋಡುವುದಿಲ್ಲ. ಪರಂಪರಾಗತ ವಿಚಾರಗಳಲ್ಲಿ, ನಿಶ್ಚಿತವಾದ ಜೀವನ ಕ್ರಮಗಳ ಪರಿಪಾಲನೆಗಳಲ್ಲಿ, ಪೂರ್ವಾಪರವಾಗಿ ಸಾಗುತ್ತ ಬಂದಿರುವ ಕುಟುಂಬ ರಚನೆಯಲ್ಲಿ, ಸಾಮಾಜಿಕ ಪದ್ಧತಿಗಳು ಮತ್ತು ನೈತಿಕತೆಯ ಕಲ್ಪನೆ- ಇವುಗಳಲ್ಲಿ ಕೇವಲ ಕೆಲಸಗಳಿಗಷ್ಟೇ ಸೀಮಿತವಾದ ಅನುಕೂಲಗಳನ್ನು ಬದಲಿಸಿ ಒಟ್ಟಾರೆ ಅವು ಸಂಗತಗೊಳ್ಳಬೇಕು ಎಂಬ ಅಪೇಕ್ಷೆಯೂ ಇದೆ. ಆ ಕಾರಣ ಹೊಸತರೊಂದಿಗೆ ಸಂಬಂಧ ಪಡೆಯುವಾಗಲೂ ಹಳೆಯ ಪದ್ಧತಿಗಳನ್ನು ಕೈಬಿಡುವ ಒಪ್ಪಿಗೆಯು ಇಲ್ಲದಿರುವುದು ಗಮನಾರ್ಹ. ಅಲ್ಲದೆ ಹಾಗೆ ಬಿಡುವುದು ಬಹಳೇ ಕಠಿಣವಾಗಿರುವುದರಿಂದ ವಿವಾಹಿತ ಸ್ತ್ರೀಯರಿಗೆ ಆತ್ಯಂತಿಕ ಗಡಿಬಿಡಿಯನ್ನು, ಮಾನಸಿಕವಾಗಿ ದಂದ್ವತೆಯನ್ನು, ಶಾರೀರಿಕವಾಗಿ ಹಿಂಸೆಗೂ ಹಾಗೂ ಕೌಟುಂಬಿಕ ಸಂಘರ್ಷಕ್ಕೂ ಗುರಿಯಾಗಬೇಕಾಗುತ್ತದೆ. ಸಹನಶೀಲ ಶಕ್ತಿಯ ಆಚೆಗೆ ಸಂಘರ್ಷವು ದಾಟಿತೆಂದರೆ ಆತ್ಮವಿನಾಶದ ಸರದಿಯು ಬರುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಅಂಥದನ್ನು ತರಲಾಗುತ್ತದೆ ಎಂದೂ ಹೇಳಬಹುದಾಗಿದೆ.

ಜಾಗರೂಕತೆಯ ಆವಶ್ಯಕ

ಸ್ತ್ರೀಯರ ಬದುಕಿನ ಹಿನ್ನಲೆಯನ್ನು ಗಮನಿಸಿದಾಗ ಹುಟ್ಟಿನಿಂದ ಹಿಡಿದು ಸಾಯುವವರೆಗೂ ಅವಳಿಗೆ ಗೌಣಸ್ಥಾನ ಹಾಗೂ ಕನಿಷ್ಠ ದರ್ಜೆಯನ್ನು ನೀಡಿರುವುದು ಸ್ಪಷ್ಟವಾಗಿದೆ. ಇನ್ನು ಅವಳ ಮೇಲೆ ಪ್ರತಿಯೊಂದು ಹಕ್ಕನ್ನು ಪ್ರಪಾದಿಸುವ ವಿಚಾರ ಸರಣಿಯು ಕೂಡ ಅದೇ ನೆಲೆಯದ್ದಾದ್ದರಿಂದ ಕುಟುಂಬದಲ್ಲಿನ ಇತರ ಸದಸ್ಯರು ಕೂಡ ಅದೇ ರೀತಿಯಲ್ಲಿ ಅವಳನ್ನು ನಡೆಸಿಕೊಳ್ಳುತ್ತಾರೆ. ಪತ್ನಿಯಾಗಿ ಅವಳ ಆಶ್ಚಯಕರವೂ, ಅಪರೂಪವೂ ಆದ ದಿನಗಳು ಮುಗಿದುವೆಂದರೆ ಸಾಕು, ಅವಳ ಮೇಲೆ ಸಿಟ್ಟು ಮಾಡುವ ಪ್ರಸಂಗಗಳು ಮತ್ತೆ ಮತ್ತೆ ಬರಲಾರಂಭಿಸುತ್ತವೆ. ಮದುವೆಯಲ್ಲಿ ಉಂಟಾದ ಮಾನಾಪಮಾನ ಗಳು, ವರದಕ್ಷಿಣೆ, ತವರು ಮನೆಯಿಂದ ಪ್ರತಿ ಹಬ್ಬಹರಿದಿನಗಳಿಗೂ ಕಾಣಿಕೆ ತರುವಂತೆ ಅವಳಿಗೆ ಒತ್ತಾಯ ಮುಂತಾದವು ಸದಾ ಆಗುತ್ತಲೇ ಇರುತ್ತವೆ. ಅಲ್ಲದೆ ಅವಳ ವರ್ತನೆಯನ್ನು ಅಣುಕು ಮಾಡುತ್ತಾ ತಿರಸ್ಕರಿಸುವಂಥ ರೂಢಿಗಳೂ ಸಾಮಾನ್ಯ. ಮನೆಯ ಕೆಲಸ ಕಾರ್ಯಗಳು ಮತ್ತು ಸಂಬಂಧಿಕರನ್ನು ಉಪಚರಿಸುವಲ್ಲಿ ವಿವಿಧ ಕಾರಣಗಳಿಂದ ಮತ್ತೆ ಮತ್ತೆ ಸಂಭವಿಸುವ ಪ್ರಮಾದಗಳಿಂದಾಗಿ ಹೊಡೆತ ಬಡಿತಗಳೂ ಆರಂಭವಾಗುತ್ತವೆ. ಇಂಥ ಸಮಯದಲ್ಲಿ ತವರಿನ ಕಡೆಯವರೆಲ್ಲ ಅತ್ಯಂತ ಸಮಾಧಾನವುಳ್ಳವರಾಗಿರಬೇಕು. ಮದುವೆ ಮಾಡಿಕೊಟ್ಟಾದ ಮೇಲೆ ಆ ಹುಡುಗಿ ತಮ್ಮ ಪಾಲಿಗೆ ಸತ್ತಳು ಎಂಬ ಪ್ರವೃತ್ತಿ ಅವರಲ್ಲಿರುತ್ತದೆ. ಕಾರಣ ತಮ್ಮ ವಿವಾಹಿತ ಹೆಣ್ಣುಮಕ್ಕಳ ಬಗ್ಗೆ ಮತ್ತೆ ಮತ್ತೆ ತಂದೆ-ತಾಯಿಗಳು ವಿಚಾರಿಸ ಲಾರಂಭಿಸಿದರೆಂದರೆ ಅದು ಮಾವನ ಮನೆಯವರಿಗೆ ಸಹ್ಯ ವಿಷಯವಾಗುವುದಿಲ್ಲ. ಆ ಕಾರಣ ಅವರ ಕೋಪವನ್ನು ಆಹ್ವಾನಿಸುವುದಕ್ಕಿಂತ ಮಗಳಿಗೆ ಕೊಟ್ಟಾಯಿತು; ಅಲ್ಲಿಗೆ ನಮ್ಮ ಜವಾಬ್ದಾರಿಯೂ ಮುಗಿಯಿತು ಎಂಬ ಮನೋಭಾವದಿಂದ ಅವಳ ಬಗ್ಗೆ ಬಹಳವಾಗಿ ವಿಚಾರಣೆ ಮಾಡುವುದಕ್ಕೂ ಹೋಗುವುದಿಲ್ಲ. ಅಲ್ಲದೆ ಆ ಕುರಿತು ಬಹಳ ಆಳವಾಗಿ ವಿಚಾರಿಸಿ ಅವಳ ದುಃಖವನ್ನು ಅರಿಯಲಾಯಿತು ಎಂಬ ಕಾರಣದಿಂದ ಮಗಳನ್ನು ಖಾಯಮ್ಮಾಗಿ ತವರಿಗೆ ಕಳುಹಿಸಿಬಿಟ್ಟರೆ ಏನು ಮಾಡುವುದು? ಎಂಬ ಭೀತಿಯು ಒಳಹೊಕ್ಕಿರುವುದರಿಂದ ಅವಳ ಬಗ್ಗೆ ಅಧಿಕವಾಗಿ ಚಿಂತಿಸುವಂತಿಲ್ಲ. ತವರು ಮನೆಯವರು ಶಿಮಂತರಾಗಿದ್ದರೂ ತಾವು ಭಾರವನ್ನು ಹೊರುವುದಕ್ಕಾಗಲಿ ಅಥವಾ ಮಗಳ ಕಾರಣ ಸಂಬಂಧಿಕರ ಅಪ್ರಿಯತೆಗೆ ಗುರಿಯಾಗುವುದಕ್ಕಾಗಲಿ ಇಚ್ಛಿಸದೆ ಮಾವನ ಮನೆಯವರ ಪೀಡನೆಯನ್ನು ಸಹಿಸಿಕೊಂಡು ಇರುತ್ತಾರೆ. ಅಲ್ಲದೆ ಅದರಲ್ಲಿಯೂ ಅವಳು ಮನೆಗೆ ಹಿರಿಯ ಮಗಳಾಗಿದ್ದು, ಗಂಡನ ಮನೆಯಲ್ಲಿರದೆ ತವರು ಮನೆಗೆ ಹಿಂತಿರುಗಿ ಬಂದಳೆಂದರೆ ಆಯಿತು, ಅವಳ ತಂಗಿ ಹಾಗೂ ತಮ್ಮಂದಿರ ಮದುವೆಗಳಿಗೆಲ್ಲ ಅವಳು ಅಡ್ಡಿಯೇ ಆಗಿಬಿಡುತ್ತಾಳೆ. ತವರಿಗೆ ಹಿಂತಿರುಗಿ ಬಂದಿದ್ದಾಳೆ ಎಂಬ ವಿಷಯವು ಬಹಳ ಕಠಿಣವಾದುದು. ಆ ಕಾರಣಕ್ಕಾಗಿಯಾದರೂ ಅವಳು ಗಂಡನ ಮನೆಯ ಪೀಡನೆಯನ್ನೆಲ್ಲ ಸಹಿಸಿಕೊಂಡು ತವರು ಮನೆಯಿಂದ ದೂರವಾಗಿ ಇರಬೇಕಾಗುತ್ತದೆ. ಒಂದೊಮ್ಮೆ ಎಲ್ಲಿಯೂ ಹೋಗದೆ ಸ್ವತಂತ್ರಳಾಗಿ ಇರಬೇಕೆಂದರೆ, ಆರ್ಥಿಕವಾಗಿ ತನ್ನ ಸ್ವಂತ ಕಾಲಿನ ಮೇಲೆ ನಿಲ್ಲುವಂತಹ ಶಕ್ತಿಯು ಇಲ್ಲದಿರುವುದರಿಂದ ಅವಳಿಗೆ ಈ ಪ್ರಚಂಡ ಉಸಿರುಗಟ್ಟಿಸುವಿಕೆಯನ್ನು ಸಹಿಸಿಕೊಳ್ಳಲೇ ಬೇಕಾಗಿದೆ. ಅದನ್ನು ಬಿಟ್ಟು ಸಹನ ಶಕ್ತಿಯ ಆಚೆಗೆ ಹೋದರೆ ಅವಳಿಗೆ ಮಾನಸಿಕವಾಗಿ ಬೇಗುದಿಗೊಳ್ಳುತ್ತಲೇ ಪರಿಹಾರವಿಲ್ಲದೆ ಮೃತ್ಯುವಿಗೆ ಹತ್ತಿರವಾಗುವುದು ತೀರಾ ಅನಿವಾರ್ಯವಾಗುತ್ತದೆ.

ಇಂಥ ಪರಿಸ್ಥಿತಿಯಲ್ಲಿ ತಾಯಿ-ತಂದೆಯರು ಮಗಳನ್ನು ಗಂಡನ ಮನೆಯ ಪೀಡನೆಯಿಂದ ಬಿಡುಗಡೆಗೊಳಿಸುವ ದೃಷ್ಟಿಯಲ್ಲಿ ನಿಶ್ಚಿತ ಮಾರ್ಗಗಳನ್ನು ಅವಶ್ಯ ಕೈಗೊಳ್ಳಬೇಕು. ಮೊಟ್ಟಮೊದಲು ಮಾನಸಿಕವಾಗಿ ಸ್ಥೈರ್ಯ ತುಂಬುವುದರ ಮೂಲಕ ನಾವು ನಿನ್ನ ಬೆನ್ನಿಗಿದ್ದೇವೆ ಎಂದು ಅವಳಿಗೆ ಧೈರ್ಯ ತುಂಬುವ ಭೂಮಿಕೆಯನ್ನು ಸ್ವೀಕಾರ ಮಾಡಬೇಕಾಗುತ್ತದೆ. ಇಂತಹ ವಿವಾಹಿತ ಸ್ತ್ರೀಯರಿಗೆ ಸಮಾಜದಲ್ಲಿ ಸಹಾನುಭೂತಿ ದೊರೆಯಬೇಕಾದ್ದು ಅವಶ್ಯ. ಪರಿತ್ಯಕ್ತಳು, ವಿಚ್ಛೇದಿತಳು ಎಂಬುದಾಗಿ ಅವಳು  ತನ್ನ ಉಳಿದ ಬದುಕನ್ನು ಕಳೆಯಬೇಕಾಗಿ ಬಂದರೆ ಅಂಥ ದೌರ್ಜನ್ಯ, ಪೀಡನೆ, ಯಾತನೆಗಳಿಂದ ಅವಳನ್ನು ಮುಕ್ತಿಗೊಳಿಸುವುದು ಅಗತ್ಯ. ಆಗ ಅವಳ ಸಂಬಂಧಿಕರು, ಅಕ್ಕಪಕ್ಕದವರು ಸಹ ಅವಳನ್ನು ಆದರಿಸಿ ಬೆಂಬಲಿಸ ಬೇಕಾಗುತ್ತದೆ. ಕಷ್ಟಪಟ್ಟು ಬದುಕುವ ಅವಳ ಅಧಿಕಾರವನ್ನು ಯಾರೂ ನಿರಾಕರಿಸಬಾರದು.

ಗಂಡನ ಮನೆಯ ಪೀಡನೆಯನ್ನು ಒಳ್ಳೆಯ ಮನಸ್ಸಿನಿಂದಲೇ ಸಹಿಸುವ ಮೂಲಕ ನಾವು ಸಂಸ್ಕೃತಿಯ ಜಪ ಮಾಡುತ್ತಲಿದ್ದೇವೆ. ತಾಯಿ-ತಂದೆಯರ ಕುಲಕ್ಕೆ ಕಳಂಕ ಬರಗೊಡುವುದಿಲ್ಲ; ವಂಶಕ್ಕೆ ಮಸಿ ಬಳಿಯುವುದಿಲ್ಲ. ಹೆಣ್ಣು ಜನುಮಕ್ಕೆ ಬಂದಿರುವೆ; ನನ್ನ ಹಣೆ ಬರಹದಲ್ಲಿ ಏನು ಬರೆದಿದೆಯೋ ಅದನ್ನು ಅನುಭವಿಸುವ ಸಹನಶೀಲ ಶಕ್ತಿಯನ್ನು ನಾನು ತೋರಿಸಲೇಬೇಕು. ಇಂಥ ನಿರ್ಧಾರ ಹೊಂದಿ ಪೀಡನೆಗಳನ್ನು ಸಹಿಸಿಕೊಳ್ಳುತ್ತಾ ಇರುವುದರಿಂದ ಗಂಡನ ಮನೆಯವರಿಗೆ ಅದೇ ಅನುಕೂಲಕರ ಮಾರ್ಗವೆನಿಸಿ  ಬಿಟ್ಟಿದೆ. ಅದಕ್ಕೆ ಬದಲಾಗಿ ಇಂತಹ ಪೀಡನೆಯನ್ನು  ಜಾಗರೂಕತೆಯಿಂದ ಆ ಹೊತ್ತಿಗೆ ವಿರೋಧ ಮಾಡಿದರೆ ಮತ್ತು ಅದರಿಂದ ಬಿಡುಗಡೆ ಪಡೆದುಕೊಂಡರೆ ಸ್ವಂತ ಕಾಲಿನ ಮೇಲೆ ನಿಂತುಕೊಳ್ಳುವಂತಹ ಮಾರ್ಗವು ಸಿಗುತ್ತದೆ. ಜೀವನವನ್ನು ಕಳೆದುಕೊಂಡು ಕುಳಿತುಕೊಳ್ಳುವುದಕ್ಕಿಂತ ಕಷ್ಟಪಟ್ಟು ಬದುಕುವುದಕ್ಕೆ ಸಾಧ್ಯ ಎಂಬ ನಿಲುವಿಗೆ ಮತ್ತು ಆತ್ಮವಿಶ್ವಾಸದ ವಿಚಾರವನ್ನು ಕೈಗೊಂಡರೆ ಆತ್ಮವಿನಾಶದ ಅತ್ಯಂತ ಕೊನೆಯ ತುದಿಗೆ ಹೋಗುವಂಥ ಪರಿಸ್ಥಿತಿಯು ಬರುವುದಿಲ್ಲ. ಪೀಡನೆಗಳನ್ನು ಸಹಿಸಿಕೊಂಡು ಇರುವುದಕ್ಕಿಂತ ಮಾನಸಿಕವಾಗಿ ದೃಢವಾಗಬೇಕು. ತಾನು ಅಪ್ರಸ್ತುತವೂ ಸಮಾಜಕ್ಕೆ ಅಮಾನ್ಯವೂ ಆದ ಕೆಲಸಗಳಲ್ಲಿ ತೊಡಗುತ್ತಿಲ್ಲವಲ್ಲ; ಬದುಕಲು ನ್ಯಾಯ ಮಾರ್ಗವನ್ನೇ ಅವಲಂಬಿಸಿದ್ದೇನೆ ಎಂಬ ವಿಧಾಯಕ ವಿಚಾರವನ್ನು ಹಿಡಿಯಬೇಕು. ಅಂಥವರು ತಮ್ಮ ವಿಚಾರಗಳಿಗೆ ಬದ್ಧರಾಗಿದ್ದು ಸಾಮಾಜಿಕ, ನೈತಿಕ ಪ್ರತಿಮೆಗಳನ್ನು ಪ್ರಜ್ವಲಿಸುವಂತೆ ರೂಢಿಗೊಳಿಸಬಹುದು. ಇದರಿಂದ ಪತಿಯ ಗೃಹದವರಿಗೆಲ್ಲ ದಂಡನೆ ನೀಡುವುದಕ್ಕೆ ಸಾಧ್ಯ.

ಗಂಡನ ಮನೆಯಲ್ಲಿ ವಿಪರೀತ ಪೀಡನೆಯಾಗುತ್ತಿದ್ದರೂ ನಮ್ಮ ಮನೆಯ ಈ ಸಂಗತಿಯನ್ನು ಅಕ್ಕಪಕ್ಕದವರಿಗೆಲ್ಲ ಹೇಗೆ ಹೇಳಬೇಕು. ಇದರಿಂದ ಮನೆತನದ ಮರ್ಯಾದೆಯೇ ಹೋಗುತ್ತದೆ ಅಲ್ಲವೆ? ಎಂಬ ಪಾರಂಪರಿಕ ನಂಬಿಕೆಯಿಂದ ದೌರ್ಜನ್ಯ ವನ್ನು ಸಹಿಸಿಕೊಂಡು, ಸುಖದ ಖೋಟಾ ಮುಖವಾಡವನ್ನು ಧರಿಸಿ ಆಯಸ್ಸನ್ನು ಕಳೆಯ ಬೇಕಾಗಿಲ್ಲ. ಆದರೆ ಬಹಳಷ್ಟು ಜನರ ಈ ಪ್ರವೃತ್ತಿಯಿಂದಾಗಿ ದೌರ್ಜನ್ಯದ ತೀವ್ರತೆಯನ್ನು ಅಕ್ಕಪಕ್ಕದವರು ಗಮನಿಸದಂತಾಗಿದೆ. ಬದಲಾಗಿ ಅಕ್ಕಪಕ್ಕದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ತೊಂದರೆಯ ಬಗ್ಗೆ ಕಲ್ಪನೆಯನ್ನು ಉಂಟುಮಾಡಬೇಕು. ಇನ್ನು ಅಕ್ಕಪಕ್ಕದವರೂ ಸಹ ಇದು ಖಾಸಗಿ ಸಂಗತಿ ಮತ್ತು ಅವರ ಕುಟುಂಬದ ವಿಷಯವೆಂದು ದುರ್ಲಕ್ಷಿಸಿ ತಟಸ್ಥರಾಗಿರುವುದರಲ್ಲಿ ಯಾವ ಉಪಯೋಗವೂ ಇಲ್ಲ. ಇಂಥ ಪ್ರಶ್ನೆಗಳನ್ನು  ಒಂದು ಸಾಮಾಜಿಕ ಕರ್ತವ್ಯ ಮತ್ತು ಅಕ್ಕಪಕ್ಕದಲ್ಲಿ ಇರುವವರು ಅದನ್ನು ಒಂದು ಧರ್ಮವೆಂಬುದಾಗಿ ತಿಳಿದು ಅವಳ  ಮೇಲಿನ ದೌರ್ಜನ್ಯ, ತೊಂದರೆಯ ವಿಚಾರವನ್ನು ಅವಳ ತವರಿನ ಜನರಿಗೆ ತಿಳಿಸಬೇಕು. ಸಮಯ ಬಂದಾಗ, ಪ್ರಸಂಗಾವಧಾನವನ್ನು ಸಾಧಿಸಿ ಪೊಲೀಸರಿಗೂ ದೂರು ಮುಟ್ಟಿಸುವ ಬಗ್ಗೆ ಕಾಳಜಿಯುಳ್ಳವರಾಗಿರಬೇಕು. ಇಂಥ ಕಾರ್ಯಗಳಿಗಾಗಿ ಹಿಡಿಯುವ ಸಮಯ, ಖರ್ಚು ಮಾಡಬೇಕಾಗುವ ಹಣ ಮತ್ತು ಶಕ್ತಿ ಇವೆಲ್ಲ ಅಪವ್ಯಯವೆಂದು ಭಾವಿಸಬೇಕಿಲ್ಲ. ಬದಲಾಗಿ ಒಬ್ಬ ನಿರಪರಾಧಿ ಸ್ತ್ರೀಯನ್ನು ಮಾನಸಿಕ ಸ್ತಬ್ಧತೆಯಿಂದ ಮತ್ತು ದೌರ್ಜನ್ಯದಿಂದ ಬಿಡುಗಡೆಗೊಳಿಸುವುದಕ್ಕಾಗಿ ಮಾಡಿದಂಥ ಆತ್ಮ ಸಮಾಧಾನದ ಕೆಲಸವೆಂದು ತಿಳಿದುಕೊಳ್ಳಬೇಕು.

ಮೂರನೆಯ ಅಂಶವೆಂದರೆ ಇಂಥ ಸಮಸ್ಯೆಗಳನ್ನು ಕುರಿತಂತೆ ಉಪನ್ಯಾಸ, ಭಾಷಣಗಳನ್ನು ಮಾಡುವ ಕೆಲಸದಲ್ಲಿಯೂ ತೊಡಗಿಕೊಳ್ಳಬೇಕು. ಸಾಮಾಜಿಕ ಸಂಸ್ಥೆ, ಮಹಿಳಾ ಮಂಡಳಿ, ಯವಕ ಮಂಡಳಿ ಮತ್ತು ಸಾಮಾಜಿಕ ಕಾರ್ಯಕರ್ತರುಗಳೆಲ್ಲ ಇದರಲ್ಲಿ ತೊಡಗುವುದು ಅನಿವಾರ್ಯ. ಅಲ್ಲದೆ, ವಿವಾಹಿತ ಸ್ತ್ರಿಯ ಮೇಲೆ ಅನ್ಯಾಯವೆಸಗುವ ಕುಟುಂಬಗಳ ಮೇಲೆ ಈ ಎಲ್ಲಾ ಸಂಸ್ಥೆಗಳು ಮತ್ತು ಸಮಾಜವು ಬಹಿಷ್ಕಾರವನ್ನು ಹಾಕಬೇಕು. ಅವರ ಕೃತ್ಯಗಳನ್ನೆಲ್ಲ ಸಾಮಾಜಿಕ ನಿಷೇಧವೆಂದು ಸಂಘಟಿತ ವಿರೋಧದಿಂದ ದಾಖಲಿಸುವುದು ಅಗತ್ಯ. ಅಲ್ಲದೆ ಅಂತಹ ಸಂಗತಿಗಳು ಖಾಸಗಿ ವಿಷಯಗಳಾಗಿಲ್ಲದೆ, ಸ್ತ್ರೀಯ ಮೇಲಿನ ದೌರ್ಜನ್ಯ ಮತ್ತು ಕೊಲೆಯಂಥ ಕಾಡು (ಅರಣ್ಯಕ) ಪ್ರವೃತ್ತಿಯು ಎಲ್ಲರಿಗೂ ಕಳಂಕಪ್ರಾಯವಾದ ವಿಷಯವೆಂಬುದಾಗಿ ಪರಿಗಣಿಸಬೇಕು. ಮುಕ್ತ ಮತ್ತು ಸಾಮುದಾಯಿಕ ರೀತಿಯಿಂದ ಆ ಬಗೆಯನ್ನು ವಿರೋಧಿಸಬೇಕಾದ ಆವಶ್ಯಕತೆಯನ್ನು ಗಮನಿಸಬೇಕು. ಅಲ್ಲದೆ ಅಂಥ ಕುಟುಂಬಗಳಿಗೆಲ್ಲಾ ಸಾಮಾಜಿಕ ಬಹಿಷ್ಕಾರದಂತಹ ಝಳವನ್ನು ತೀವ್ರವಾಗಿ ಮುಟ್ಟಿಸುವುದು ಅವಶ್ಯ. ಭಾವತೀವ್ರತೆ, ಅತ್ಯಾಚಾರ ಮತ್ತು ಬಲಾತ್ಕಾರ, ನೀರಿನ ದುರ್ಭಿಕ್ಷೆ, ದಲಿತರ ಮೇಲಿನ ದೌರ್ಜನ್ಯ ಇತ್ಯಾದಿ ವಿಚಾರಗಳನ್ನು ಆಧರಿಸಿ ಮೋರ್ಚ (ಮೆರವಣಿಗೆ) ಮಾಡಲಾಗುತ್ತದೆ, ಸಭೆಗಳನ್ನೂ ಸೇರಿಸಲಾಗುತ್ತದೆ. ಆದರೆ ಅದಕ್ಕಿಂತಲೂ ಗಂಭೀರವಾಗಿರುವ ವಿವಾಹಿತ ಸ್ತ್ರಿಯರ ಪ್ರಶ್ನೆಗಳನ್ನು ಕೈಗೆತ್ತಿಕೊಂಡು ಆಂದೋಲನ ಮಾಡುವಂಥ ಅನಿವಾರ್ಯತೆ ಇಂದಿದೆ. ಅಂದರೆ ಆ ಕಡೆಗೆ ಸರಕಾರ ಮತ್ತು ಸಮಾಜದ ಲಕ್ಷ್ಯವನ್ನು ಸೆಳೆಯಬೇಕಾಗಿದೆ. ಸಾಮಾಜಿಕ ಒತ್ತಡದಂಥ ಪರಿಣಾಮಕಾರಿ ಅಸ್ತ್ರವನ್ನು ಬಳಸಬೇಕಾದ್ದು ತೀರಾ ಅವಶ್ಯ.

ಕಠೋರ ಶಿಕ್ಷೆಯ ಯೋಜನೆ

ಕೆಲವೊಮ್ಮೆ ವಿವಾಹಾನಂತರದ ಮುರ್ನಾಲ್ಕು ವರ್ಷಗಳಲ್ಲಿಯೇ ಯಾರೇ ಸ್ತ್ರೀಯು ಮರಣ ಹೊಂದಿದರೆ, ಅದು ನೈಸರ್ಗಿಕವೊ ಅಥವಾ ಅನೈಸರ್ಗಿಕವೋ ಎಂಬುದನ್ನು ಪರೀಕ್ಷಿಸಿ ಖಚಿತಗೊಳ್ಳಬೇಕು. ಹಾಗೆ ಮಾಡುವಲ್ಲಿ ವೈದ್ಯ ಸಮೂಹವು ಅತ್ಯಂತ ದಕ್ಷ ಮತ್ತು ಪ್ರಾಮಾಣಿಕವಾಗಿರಬೇಕು. ಸರಕಾರಿ ಆಸ್ಪತ್ರೆಗಳು ಮತ್ತು ಖಾಸಗಿ ಆಸ್ಪತ್ರೆಗಳ ವಿಷಯದಲ್ಲಿಯೂ ಸಹ ಗಂಭೀರವಾಗಿ ಪರಿಶೀಲನೆಯಾಗಬೇಕು ಎಂಬ ದೃಷ್ಟಿಯಿಂದಲೇ ಈ ಪದ್ಧತಿಯನ್ನು ಜಾರಿಗೆ ತರಬೇಕು. ಹಿಂಸೆ ಮಾಡಿ, ಪ್ರಜ್ಞೆ ತಪ್ಪಿದ ಅವಸ್ಥೆಯಲ್ಲಿರುವ ಸ್ತ್ರೀಯರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುವಂತಹ ಕ್ರೂರ ಆಟ ಆಡುವವರನ್ನು ತತ್‌ಕ್ಷಣವೇ ಪೊಲೀಸರ ವಶಕ್ಕೆ ಕೊಡಬೇಕಾದ್ದು ಅವಶ್ಯ. ಮಾತ್ರವಲ್ಲದೆ ಯಾವುದೇ ಬಗೆಯ ಮೋಹಕ್ಕೋ ಅಥವಾ ಒತ್ತಾಯಕ್ಕೋ ಸಿಲುಕಿ ಬಲಿಯಾಗದೆ ಮೆಡಿಕಲ್‌ನ ವಾಸ್ತವ ವರದಿಯನ್ನು ಕೊಡುವಂಥ ಎಚ್ಚರವನ್ನು ವಹಿಸಬೇಕಾಗುತ್ತದೆ.

ದೌರ್ಜನ್ಯವೆಸಗುವ ಅತ್ತೆಗೂ ಕೂಡ  ಅಂತಹದ್ದೆ ಕಠೋರ ಶಿಕ್ಷೆಯನ್ನು ನೀಡುವಂತಹ ಕಾಯಿದೆಯನ್ನು ಜಾರಿಗೆ ತರಬೇಕಾಗಿರುವುದು ಅವಶ್ಯ. ಈ ವಿಷಯದಲ್ಲಿ ಆತ್ಮಹತ್ಯೆಗೆ ಕಾರಣೀಭೂತವಾಗುವಂತಹ ವ್ಯಕ್ತಿಗಳ ಬಗ್ಗೆಯೂ ತಿಳಿದುಕೊಂಡು ಅವರನ್ನೂ ಸಹ ಕಠಿಣ ಶಿಕೆಗೆ ಒಳಪಡಿಸಬೇಕಾಗಿದೆ. ಬಲಾತ್ಕಾರ ಮತ್ತು ಅತ್ಯಾಚಾರ ಈ ವಿಷಯಗಳ ಬಗ್ಗೆ ಆಗಬೇಕಾದ ಕಾಯಿದೆಬದ್ಧ ಅಗತ್ಯ ವಿಚಾರಗಳನ್ನು ಪುಣೆ, ಮುಂಬಯಿ, ಮತ್ತಿತರೆಡೆಗಳಲ್ಲಿ ಮಾಡಲಾಗುತ್ತಿದೆ. ಕಾರ್ಯಕರ್ತ ಮಂಡಳಿಗಳು, ಮಹಿಳಾ ಮಂಡಳಿಗಳು ಮತ್ತು ತಜ್ಞ ಲಾಯರುಗಳು ಈ ದಿಶೆಯಲ್ಲಿ ಕೆಲವಾರು ವಿಚಾರಗಳನ್ನು ಮಾಡಿರುತ್ತಾರೆ. ಸುಲಭವಾಗಿ ತಪ್ಪಿಸಿಕೊಳ್ಳುವುದಕ್ಕೆ ಆಗಬಾರದು ಎಂಬ ಕಾರಣದಿಂದ ಅವುಗಳನ್ನು ಕುರಿತಂತೆ ತೀವ್ರ ವಿಚಾರ ಮಂಥನಕ್ಕೆ ಒಳಗು ಮಾಡಲಾಗಿದೆ. ಹಾಗೆಯೇ ಕಾಯಿದೆಯ ಕ್ಷೇತ್ರದಲ್ಲಿಯೂ ತಜ್ಞರಾಗಿರುವ ಮತ್ತು ಅಪರಾಧ ಸಂಬಂಧಿ ಕಾರ್ಯಗಳಲ್ಲಿ ಪ್ರತ್ಯಕ್ಷ ಅನುಭವವುಳ್ಳ ವಕೀಲರು ಇದರಲ್ಲಿ ವಿಶೇಷ ಆಸಕ್ತಿಯನ್ನು ವಹಿಸಬೇಕಾಗಿದೆ. ವಿವಾಹಿತ ಸ್ತ್ರೀಯರ ಮೇಲೆ ದೈಹಿಕವಾಗಿ ಹಿಂಸಿಸುವವರಿಗೆ ಮತ್ತು ಹಾಗೆ ಮಾಡುವುದಕ್ಕೆ ಕಾರಣೀಭೂತರಾದವರಿಗೆ ಕಠೋರ ಶಿಕ್ಷೆಯು ಎಂಥದಿದೆ? ಮತ್ತು ಪರಿಸ್ಥಿತಿಜನ್ಯ ಪುರಾವೆಗಳನ್ನು ಒದಗಿಸಬೇಕು. ಯಾವ ರೀತಿಯಲ್ಲಿಯೂ ಅವರು ತಪ್ಪಿಸಿಕೊಳ್ಳುವುದಕ್ಕೆ ಆಗುವುದಿಲ್ಲ ಎಂಬುದನ್ನು ಕೂಡ ಅತ್ಯಂತ ಗಂಭೀರವಾಗಿ ಚರ್ಚೆ ಮಾಡುವುದರ ಮೂಲಕ ಮನವರಿಕೆ ಮಾಡಬೇಕಾಗಿದೆ. ಪೊಲೀಸ್ ಅಧಿಕಾರಿಗಳು ಸಹ ಇಂಥ ವಿಷಯಗಳಲ್ಲಿ ಅಧಿಕವಾಗಿ ದಕ್ಷತೆಯುಳ್ಳವರಾಗಿರಬೇಕು ಎಂಬ ಬಗ್ಗೆ ವಿಶೇಷ ಸೂಚನೆ ಮತ್ತು ವೈಯಕ್ತಿಕ ನಿಯಮಗಳನ್ನು ರೂಪಿಸಬೇಕಾಗುತ್ತದೆ. ಕಾಯಿದೆಬದ್ಧ ಮತ್ತು ತಾಂತ್ರಿಕ ವಿಷಯಗಳ ವಿಚಾರವಾಗಿ ತಜ್ಞ ಸಮಿತಿಯವರು ಸ್ಪಷ್ಟ ನಿಯಮ ಮಾಡಿದಲ್ಲಿ, ಯಾರಿಂದ ಯಾವ್ಯಾವ ಕಾರಣವಾಗಿ ಸ್ತ್ರೀಯ ಮೇಲೆ ಶಾರೀರಿಕ ಹಿಂಸೆಯಾಗುತ್ತಿದೆಯೋ ಅವೆಲ್ಲ ಕಾರ್ಯಗಳು ಅಪರಾಧವೆಂದು ಪರಿಗಣಿತವಾಗಿ ಕಠೋರ ಕ್ರಮಕ್ಕೆ ಪಾತ್ರವಾಗುತ್ತವೆ. ಇದರಿಂದ ದೌಜನ್ಯ, ಕೊಲೆ ಇತ್ಯಾದಿಗಳನ್ನು ಮಾಡುವವರಿಗೂ ಕೂಡ ಕಾಯಿದೆ ಬದ್ಧತೆಯ ಬಗೆಗೆ ಭಯ ಉಂಟಾಗಬಹುದು. ಶಾರೀರಿಕವಾಗಿ ಹಿಂಸಿಸುವವರಿಗೆ ಮತ್ತು ಅದಕ್ಕೆ ಕಾರಣೀಭೂತರಾಗುವವರಿಗೆ ಇಬ್ಬರಿಗೂ ಕಠೋರ ಶಿಕ್ಷೆ ನೀಡುವಂತಹದ್ದರ ಬಗ್ಗೆ ಭಯವುಂಟಾಗುವುದು. ಹಾಗಾಗಿ ಈ ದೃಷ್ಟಿಯಲ್ಲಿ ಕಾಯಿದೆಗಳಲ್ಲಿಯೇ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕಾಗುತ್ತದೆ.

ಆಸರೆ ನೀಡುವಂತಹ ಸಂಸ್ಥೆಗಳು

ವಿವಾಹಿತ ಸ್ತ್ರೀಯರ ಮೇಲೆ ಆಗುವ ದೌರ್ಜನ್ಯವನ್ನು ದಾಖಲಿಸುವ ದೃಷ್ಟಿಯಿಂದ ಸ್ತ್ರೀ-ಪುರುಷ ಕಾರ್ಯಕರ್ತರು ಮುಂದಾಳತ್ವವನ್ನು ವಹಿಸಿ ಸಮಾಜವನ್ನು ಜಾಗೃತ ಗೊಳಿಸಬೇಕಾಗಿದೆ. ವಿಚಾರ ಮಂಥನದ ದೃಷ್ಟಿಯಿಂದ ಸಮಾವೇಶ ಸಮ್ಮೇಳನ, ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಬೇಕಾಗಿರುವುದು. ಹಾಗೆಯೇ ವರ್ತಮಾನ ಪತ್ರಿಕೆಗಳು, ಮಾಸಿಕಗಳು, ಅದರಲ್ಲೂ ವಿಶೇಷತಃ ಮಹಿಳಾ ಮಾಸಿಕಗಳು ಈ ಬಗೆಯ ಘಟನೆಗಳನ್ನು ಬಯಲು ಮಾಡಿ, ಬಹಿರಂಗವಾಗಿ ದಾಖಲಿಸುವ ಮೂಲಕ ವಿಚಾರಣೆಗೆ ಚಾಲನೆ ನೀಡುವಂತಹ ದಿಶೆಯಲ್ಲಿ ಕಾರ್ಯಪ್ರವೃತ್ತವಾಗಬೇಕು. ಹೀಗೆ ಸಂಘಟಿತ ರೀತಿಯಿಂದ ಮಾಡುವ ಪ್ರಯತ್ನಗಳಿಂದ ವಿವಾಹಿತ ಸ್ತ್ರೀಯರು ಎಚ್ಚರಗೊಳ್ಳುವುದಕ್ಕೆ ಸಾಧ್ಯ. ಹಾಗೆಯೇ ವಿವಾಹೇಚ್ಛಿತ ತರುಣರಿಗೂ ಇದರಿಂದ ವಿಚಾರ ದಿಶೆಯೊಂದು ಪ್ರಾಪ್ತವಾಗುತ್ತದೆ.

ಕಾಯಿದೆಗಳ ಮೂಲಕವೇ ಈ ಪ್ರಶ್ನೆಗಳನ್ನು ಬಿಡಿಸಬಹುದು ಎಂಬುದು ಸಂಪೂರ್ಣ ಸರಿಯಲ್ಲ. ಕಾರಣ ನ್ಯಾಯಲಯದ ವಿಷಯಗಳಲ್ಲಿನ ಅನೇಕ ಗೊಂದಲಗಳು ಮತ್ತು ಪರಸ್ಪರ ವಿರೋಧಿ ವಿಷಯಗಳು ಹುಟ್ಟಿಕೊಳ್ಳುವಂಥ ಸಾಧ್ಯತೆಯನ್ನು ನಿರಾಕರಿಸುವುದಕ್ಕೆ ಬರುವುದಿಲ್ಲ. ಹಿಂಸೆಗೆ ರೋಸಿಹೋಗಿ ಪತಿಗೃಹವನ್ನು ತ್ಯಜಿಸಿ ಅಥವಾ ವಿಚ್ಛೇದನ ಪಡೆದು ಸ್ವತಂತ್ರವಾಗಿ ಬದುಕಲು ಇಚ್ಛಿಸುವ ಸ್ತ್ರೀಯರಿಗೆ ಕೇವಲ ತವರಿನ ಆಧಾರವಷ್ಟೇ ಸಿಕ್ಕರೂ ಉಪಯೋಗವಿಲ್ಲ. ಅಥವಾ ಭಾವನಾತ್ಮಕವಾಗಿ ದಯಾ ದೃಷ್ಟಿಯಿಂದಲೂ ಬಿಡಿಸುವಂಥದ್ದಲ್ಲ ಈ ಪ್ರಶ್ನೆ. ಅಂದರೆ ಅವರಿಗೆ ಇಲ್ಲಿ ಬೇಕಾಗಿರುವುದು ಮುಖ್ಯವಾಗಿ ಆರ್ಥಿಕ ಸ್ವಾತಂತ್ರ್ಯ. ಇಲ್ಲದಿದ್ದರೆ ಬೆಂಕಿಯಿಂದ ಪಾರಾಗಿ ಬಿಸಿ ಬಾಣಲಿಯಲ್ಲಿ ಬಿದ್ದಂತಾಗುತ್ತದೆ. ಆರ್ಥಿಕ ದೃಷ್ಟಿಯಲ್ಲಿ ಅವರು ಸ್ವಾವಲಂಬಿಗಳಾಗುವುದಕ್ಕೆ ವಿವಿಧ ಸಾಮಾಜಿಕ ಸಂಸ್ಥೆಗಳು ಮತ್ತು ಶಾಸನ ಯುಕ್ತವಾದ ಸಮಾಜ ಕಲ್ಯಾಣ ಇಲಾಖೆಯು ನೇತೃತ್ವ ವಹಿಸಬೇಕಾಗುವುದು. ಅವರಿಗೆ ಉತ್ಪನ್ನ ಅಥವಾ ದುಡಿಮೆಯ ಮಾರ್ಗವೊಂದು ಲಭ್ಯವಾಯಿತೆಂದರೆ, ಅವರಲ್ಲಿ ಆತ್ಮವಿಶ್ವಾಸವು ನಿರ್ಮಾಣವಾಗುತ್ತದೆ. ಸ್ವತಂತ್ರವಾಗಿ ಉದ್ಯೋಗ ಮಾಡುವಂತಹ ಹುಮ್ಮಸ್ಸು ಮತ್ತು ಆರ್ಥಿಕ ಕೊರತೆಯಿರುವವರಿಗೆಲ್ಲ ಈ ಬಗೆಯ ಸಹಾಯವು ಒದಗಿ ಬರುವುದು ಅವಶ್ಯ. ಇಂಥ ಸ್ತ್ರೀಯರಿಗೆ ಅವರವರ ಶೈಕ್ಷಣಿಕ ಪಾತ್ರತೆಗೆ ಅನುಸಾರವಾಗಿ ಸರಕಾರಿ ಮತ್ತು ಅರೆಸರಕಾರಿ ಖಾತೆಗಳಲ್ಲಿನ ಉದ್ಯೋಗದಲ್ಲಿ ಪ್ರಾಧಾನ್ಯತೆಯನ್ನು ನೀಡಬೇಕಾಗಿರುತ್ತದೆ. ಅಲ್ಲದೆ ಸಾಮಾಜಿಕ ಸಂಸ್ಥೆಗಳೂ ಸಹ ಇಂಥ ಸ್ತ್ರೀಯರಿಗೆ ಆಧಾರವಾಗಿ ನಿಂತು, ವಸತಿ ಗೃಹಗಳನ್ನು ನಿರ್ಮಾಣ ಮಾಡಿಕೊಡುವ ಪ್ರಯತ್ನವನ್ನು ಮಾಡಬೇಕು. ಅವರನ್ನು ಪುಕ್ಕಟೆಯಾಗಿ ಪೋಷಿಸಬೇಕು ಎಂಬುದು ಯಾರ ಅಪೇಕ್ಷೆಯೂ ಅಲ್ಲ; ಆದರೆ ತವರು ಮನೆಯಲ್ಲಿ ಅವರನ್ನು ಕುಟುಂಬಕ್ಕೆ ಹೊರೆ ಅಥವಾ ಕುಟುಂಬದಲ್ಲಿರುವ ಒಂದು ಅನಾವಶ್ಯಕ ಘಟಕ ಎಂಬ ದೃಷ್ಟಿಯಿಂದ ನೋಡಬಾರದು ಎಂಬುದರ ಕಡೆ ವಿಶೇಷ ಲಕ್ಷ್ಯ ವಹಿಸಬೇಕಾಗಿದೆ.

ಹಿಂದಿನ ಕಾಲದಲ್ಲಿ ಚಿಕ್ಕ ವಯಸ್ಸಿಗೆ ಹೆಣ್ಣಿನ ಪತಿಯು ತೀರಿಕೊಂಡರೆ ಅವಳು, ತನ್ನ ತವರಿನಲ್ಲಿ ಬಂದು ಇರುತ್ತಿದ್ದಳು. ತವರಿನಲ್ಲಿ ಸಹೋದರರ ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನು ವಹಿಸಿಕೊಂಡು, ಆ ನೆಲೆಯಲ್ಲಿಯೇ ತನ್ನ ಅಧಿಕಾರವನ್ನು ಸಂಸ್ಥಾಪಿಸಿ ಕೊಳ್ಳುತ್ತಿದ್ದಳು. ಅಂಥವರ ಬಗ್ಗೆ ಕುಟುಂಬದಲ್ಲಿ ಆದರದ ಭಾವನೆಯೂ ಇರುತ್ತಿತ್ತು. ಇಂದು ಕೂಡಾ ಬಾಲವಿಧವೆಯರಾದ ಸ್ತ್ರೀಯರಿಗೆ ತವರಿನಲ್ಲಿ ಪೂರ್ಣವಾಗಿ ಸಂರಕ್ಷಣೆ ಕೊಟ್ಟು ನಡೆಸಿಕೊಳ್ಳುತ್ತಿರುವ ಉದಾಹರಣೆಗಳು ಅಲ್ಲಲ್ಲಿ ಸಿಕ್ಕುತ್ತದೆ. ಅದೇ ಪ್ರಕಾರದಲ್ಲಿ ವಿವಾಹಿತ ಸ್ತ್ರೀಯರಿಗೂ ಸಂರಕ್ಷಣೆ ಮತ್ತು ಸ್ಥಾನಮಾನವನ್ನು ನೀಡಬೇಕಾಗಿದೆ. ಅವರು ಮಾವನ ಮನೆಯನ್ನು ತ್ಯಜಿಸಿ ಬರುವುದು ದೌರ್ಜನ್ಯ, ಹಿಂಸೆ, ಪೀಡನೆ ಮತ್ತು ಕಷ್ಟಗಳಿಂದ ಬಿಡುಗಡೆ ಪಡೆಯುವುದಕ್ಕಾಗಿ. ಹಾಗಾಗಿ ಅವರ ಬಗ್ಗೆ ಎಲ್ಲರ ಸಹಾನುಭೂತಿಯು ದೊರೆಯಬೇಕಾದ್ದು ಅವಶ್ಯ.

ಬಾಲ್ಯವಿವಾಹ, ವರದಕ್ಷಿಣೆ ಪದ್ಧತಿ, ಮದುವೆ ಸಮಾರಂಭದಲ್ಲಿನ ಮಾನಾಪಮಾನ, ತವರಿನಿಂದ ನಿರಂತರವಾಗಿ ಆಭರಣಾಧಿಗಳನ್ನು ತೆಗೆದುಕೊಂಡು ಹೋಗುವ ಸ್ತ್ರೀಯರ ಪ್ರವೃತ್ತಿ, ಭೌತಿಕ ಸುಖದ ತೀವ್ರ ಇಚ್ಚೆ, ವೃದ್ಧರ ನಿರುಪಯೋಗತ್ವ- ಇವೇ ಮೊದಲಾದ ಅಡಚಣೆಗಳು ಇಂದು ತೀವ್ರವಾಗಿ ಬೆಳೆಯುತ್ತಿವೆ. ಇದರಿಂದ ವಿಪರೀತ ಸ್ಥಿತಿ ಮತ್ತು ಅವನತವಾಗುತ್ತಿರುವ ನೈತಿಕ ದರ್ಜೆ, ಸಾಮಾಜಿಕ ಮೌಲ್ಯಗಳ ಇಳಿಮುಖತೆ ಮತ್ತು ಆದರ್ಶ ವ್ಯಕ್ತಿಗಳ ಅಭಾವ ಇತ್ಯಾದಿಗಳಿಂದಾಗಿ ಕುಟುಂಬದಲ್ಲಿನ ವ್ಯಕ್ತಿಗಳಲ್ಲಿ ಕೃತಜ್ಞತಾ ಬುದ್ದಿಯ ಸಾರಾಸಾರಾ ವಿಚಾರಗಳು, ಸೌಹಾರ್ಧಯುತ ಭಾವನೆ ಮತ್ತು ತ್ಯಾಗ ಪ್ರವೃತಿಗಳೆಲ್ಲ ಕಡಿಮೆಯಾಗುತ್ತಲಿವೆ. ಮತ್ತೊಬ್ಬರನ್ನು ಅರ್ಧ ಮಾಡಿಕೊಳ್ಳುವ ಪ್ರವೃತ್ತಿಯು ಕಡಿಮೆ ಯಾಗಿರುವುದರಿಂದ ವ್ಯಕ್ತಿ ಸ್ವಾತಂತ್ರ್ಯವೆಂಬ ಹೆಸರಿನ ಅಡಿಯಲ್ಲಿ ತಕರಾರು ಪ್ರಜ್ಞೆಯೇ ಅಧಿಕವಾಗಿ ಬೆಳೆಯುತ್ತಿದೆ. ಸಾಮಂಜಸ್ಯಕ್ಕಿಂತ ಸಂಘರ್ಷ, ಹೊಂದಿಕೆಗಿಂತ ಅಸಾಂಗತ್ಯ, ಸಹಕಾರಕ್ಕಿಂತ ವಿರೋಧ, ಕೌಟುಂಬಿಕ ಚೌಕಟ್ಟಿನಲ್ಲಿನ ಸ್ವಾತಂತ್ರ್ಯಕ್ಕಿಂತ ಮನಸೋಚ್ಛೆ, ಅವ್ಯವಹಾರದಂಥ ಪ್ರವೃತ್ತಿಗಳು ಇವುಗಳಿಂದಾಗಿ ಸಂಸಾರದಲ್ಲಿ ನಾಲ್ಕೂ ಬದಿಗಳಿಂದ ದುಃಖದ ಸ್ಥಿತಿಯೇ ಒದಗುತ್ತಿದೆ ವಿವಾಹಿತ ಸ್ತ್ರೀಯರಿಗೆ. ಆ ಕಾರಣಕ್ಕಾಗಿಯೇ ಸಂಸಾರವು ಅಸಮಾಧಾನ, ದುಃಖ ಮತ್ತು ಕಷ್ಟಗಳ ಬೀಡಾಗುತ್ತಲಿದೆ. ಇನ್ನು ಅದರಲ್ಲಿಯೇ ಅತಿರೇಕಗಳು ಉಂಟಾದರೆ ಸ್ತ್ರೀಯರು ಆತ್ಮಹತ್ಯೆಯ ದಾರಿಯನ್ನು ಹತ್ತಿರ ಮಾಡಿಕೊಳ್ಳುವುದು ಅನಿವಾರ್ಯವಾಗಬಹುದು. ಕಾರಣ ಎಲ್ಲಾ ಮನಸ್ತಾಪಗಳ ಪರಿಣಾಮವನ್ನೂ ಅವಳ ಮೇಲೆಯೇ ತೋರಿಸಲಾಗುತ್ತದೆ. ಪತಿ, ಮೈದುನ, ಅತ್ತೆ, ನಾದಿನಿ, ಇವರುಗಳೆಲ್ಲರ ಕಡೆಯಿಂದ ಯಾವುದೇ ಬಗೆಯ ಆಸರೆ, ಭಾವನಾತ್ಮಕ ವ್ಯವಹಾರ ಮತ್ತು ಮಾನಸಿಕ ಆಧಾರಗಳು ದೊರೆಯದಂತಾಗುವುದು ಒಂದೆಡೆಯಾದರೆ, ಮತ್ತೊಂದೆಡೆ  ಅವುಗಳೊಂದಿಗೆ ದೈಹಿಕ ಹಿಂಸೆಯೂ ಆರಂಭವಾಯಿತು ಎಂದರೆ ಮುಗಿಯಿತು; ಅಂಥ ಸ್ತ್ರೀಯರು ಜೀವಂತವಾಗಿದ್ದು ಮಾರಣಾಂತಿಕ ಯಾತನೆಯನ್ನುಅನುಭವಿಸುವುದಕ್ಕಿಂತ ಆತ್ಮನಾಶದ ಮಾರ್ಗವು ಸುಖಕರವೆನಿಸಿ ಆರಿಸಿಕೊಂಡರೆ ಆಶ್ಚರ್ಯವಾವುದೂ ಇಲ್ಲ. ಅಂಥ ಪರಿಸ್ಥಿತಿಯಿಂದ ಅವರನ್ನು ಬಿಡುಗಡೆಗೊಳಿಸಬೇಕು ಎಂಬ ನೆಲೆಯಿಂದ ತವರು ಮನೆಯ ಸದಸ್ಯರು, ಸಂಬಂಧಿಗಳು, ಅಕ್ಕಪಕ್ಕದವರು, ಮಹಿಳಾ ಮಂಡಳಿಗಳು, ಸಾಮಾಜಿಕ ಸಂಸ್ಥೆಗಳು, ಸ್ತ್ರೀ-ಮುಕ್ತಿ ಚಳವಳಿಯ ಕಾರ್ಯಕರ್ತರು, ಇತರೆ ಸಾಮಾಜಿಕ ಘಟಕಗಳಂಥ ಸಂಘಟನೆಗಳು ಮತ್ತು ಪ್ರಮುಖವಾಗಿ ಕಾಯಿದೆ ಕಾನೂನು ಕರ್ತರು ಕೃತಿಶೀಲರಾಗಿರಬೇಕು. ಸಾಮಾಜಿಕ ಪರಿವರ್ತನೆಯ ಕಾರ್ಯವನ್ನು ಮಾಡುವವರೂ ಇಂಥ ವಿಷಯಗಳಲ್ಲಿ ದಕ್ಷತೆಯುಳ್ಳವರೇ ಆಗಿರುವುದು ಅತ್ಯಂತ ಅವಶ್ಯ.