ಇಂದಿನ ಸ್ತ್ರೀಜೀವನದ ಸಮಸ್ಯೆಗಳು

ಪತಿ ಚಾರಿತ್ರ್ಯಹೀನ, ವಿಷಯಾಸಕ್ತ ಮತ್ತು ಒಳ್ಳೆಯ ಗುಣಗಳ ಅಭಾವ ಉಳ್ಳವನಾಗಿದ್ದರೂ ಪತ್ನಿಯು ಅವನನ್ನು ದೇವರಂತೆಯೇ ಕಾಣಬೇಕು.
(ಮನು ೫-೧೫೪)

ಸ್ತ್ರೀಯರು ತಮ್ಮ ಪತಿಯ ಆಜ್ಞೆಯನ್ನು ಪಾಲಿಸಬೇಕು. ಇದೇ ಅವರ ಪರಮ ಧರ್ಮವಾಗಿದೆ.
(ಯಾಜ್ಞವಲ್ಕ್ಯ ೧-೧೮)

ಸ್ತ್ರೀಯರಿಗೆ ಸ್ವತಂತ್ರ ಯಜ್ಞ ಸಂಸ್ಕಾರ ಅಥವಾ ಉಪವಾಸಗಳೆಂಬುವುದಿಲ್ಲ. ಪತಿಯ ಸೇವೆ ಮಾಡುವುದರಿಂದಲೇ ಅವಳಿಗೆ ಸ್ವರ್ಗದಲ್ಲಿ ಉತ್ತಮ ಸ್ಥಾನವು ಲಭ್ಯವಾಗುತ್ತದೆ.
(ಮನು ೫-೧೪೫)

ಪತಿ ಜೀವಿಸಿರುವಾಗ ಯಾವ ಸ್ತ್ರೀ ಉಪವಾಸ ಮಾಡುತ್ತಾಳೋ ಹಾಗೂ ವ್ರತಗಳನ್ನು ಆಚರಿಸುತ್ತಾಳೋ ಅವಳು ಪತಿಯ ಆಯಸ್ಸನ್ನು ಕಡಿಮೆ ಮಾಡುತ್ತಾಳೆ. ಹಾಗೆ ಮಾಡುವುದರಿಂದ ಅವಳು ಹೋಗುವುದು ನರಕಕ್ಕೇ. ಯಾವ ಸ್ತ್ರೀಗಾದರೂ ತೀರ್ಥ ಬೇಕಾಗಿದೆ ಎಂದರೆ ಅವಳು ತನ್ನ ಪತಿಯನ್ನು ಸ್ನಾನ ಮಾಡಿಸಬೇಕು. ಅವನ ಪಾದಗಳನ್ನು ತೊಳೆಯಬೇಕು ಮತ್ತು ನೀರನ್ನೇ ತೀರ್ಥವಾಗಿ ಸ್ವೀಕರಿಸಬೇಕು. ಹಾಗೆ ಮಾಡಿದಾಗ ಅವಳಿಗೆ ಉತ್ತಮ ಲೋಕವು ಪ್ರಾಪ್ತವಾಗುತ್ತದೆ.
(ಅತ್ರಿ ೧೩೬-೩೭)

ಸ್ತ್ರೀಗೆ ಪತಿಯ ಹೊರತಾಗಿ ಬೇರೆ ಲೋಕವು ಇಲ್ಲ. ಯಾವ ಸ್ತ್ರೀಯು ತನ್ನ ಪತಿಗೆ ವಿರುದ್ಧವಾಗಿ ವರ್ತಿಸುತ್ತಾಳೆಯೋ, ಅವಳು ಮರಣಾನಂತರ ಪತಿಯ ಲೋಕಕ್ಕೆ ಹೋಗುವುದಕ್ಕೆ ಶಕ್ತಳಾಗಿರುವುದಿಲ್ಲ, ಹಾಗಾಗಿಯೇ ಅವಳು ಎಂದಿಗೂ ಪತಿಗೆ ವಿರುದ್ಧವಾಗಿ ನಡೆಯಬಾರದು.
(ವಾಸಿಷ್ಟ ೨೧-೧೪)

ಯಾವ ಸ್ತ್ರೀಯು ತನ್ನ ಪಿತನ ಕುಲ ಅಭಿಮಾನವನ್ನು ಕಾಯುತ್ತಾ  ತನ್ನ ಪತಿಯನ್ನು ಅವಜ್ಞೆ ಮಾಡುತ್ತಾಳೋ ಅಂಥವಳ ಕೈಯ ಅನ್ನವನ್ನು ಯಾರೂ ತಿನ್ನಬಾರದು. ಅಂಥ ಸ್ತ್ರೀಯನ್ನು ಕುಲಟೆಯೆಂದೇ ತಿಳಿಯಬೇಕು.
(ಅಂಗೀರಸ ೬೯)

ಯಾವಾಗ ಪತಿಯು ಅಪಮಾರ್ಗದಲ್ಲಿ ತೊಡಗಿಕೊಳ್ಳುತ್ತಾನೆಯೋ, ಕುಡುಕ ನಾಗಿರುತ್ತಾನೆಯೋ ಇಲ್ಲವೆ ರೋಗಗಳಿಂದ ಪೀಡನೆಗೊಳಗಾಗಿರುತ್ತಾನೆಯೋ ಆಗ ಸ್ತ್ರೀಯೇನಾದರೂ ಅವನನ್ನು ಅವಜ್ಞೆ ಮಾಡಿದರೆ ಮೂರು ತಿಂಗಳ ಕಾಲ ಅವಳನ್ನು ದೂರವಾಗಿಟ್ಟಿರಬೇಕು. ಆಗ ಅವಳಿಂದ ಆಭರಣಗಳು ಮತ್ತು ಒಳ್ಳೆಯ ವಸ್ತ್ರಗಳನ್ನು ತೆಗೆದುಕೊಂಡಿರುವುದು ಅವಶ್ಯ.
(ಮನು ೧೦-೨೮)

ಸ್ತ್ರೀಯರ ಸ್ವಾತಂತ್ರ್ಯವು ಸ್ವತಃ ಸ್ವಾತಂತ್ರ್ಯದಷ್ಟು ಯಾರಿಗೆ ಪ್ರಿಯವಾಗಿರುತ್ತದೆಯೋ ಮತ್ತು ಯಾರು ಸ್ತ್ರಿಯನ್ನು ವಂಶಮಾತೆ ಎಂದು ಒಪ್ಪಿರುತ್ತಾರೆಯೋ ಅಂಥವರಿಗೆ ಸ್ವಲ್ಪಕೂಡ ಮಾನ್ಯವಾಗುವುದಿಲ್ಲ ಇಂಥ ವಚನಗಳು. ಅಂಥವೆಲ್ಲ ಸ್ಮೃತಿ ಗ್ರಂಥಗಳಲ್ಲಿ ತುಂಬಿ ಹೋಗಿವೆ. ಈ ಇಪ್ಪತ್ತನೆಯ ಶತಮಾನದಲ್ಲಿಯೂ ಸ್ತ್ರೀಯ ಸ್ಥಿತಿಯು ಸ್ಮೃತಿ ಗ್ರಂಥಗಳಲ್ಲಿನ ವಚನಗಳಂತೆ ಇಲ್ಲದಿದ್ದರೂ, ಆಧುನಿಕ ನವಗ್ರಹಗಳ ಆವರ್ತನದಲ್ಲಿ ಸಿಲುಕಿ ಹೋಗಿವೆ. ಸ್ಮೃತಿ ಗ್ರಂಥಗಳ ಈ ಮೇಲಣ ಉಲ್ಲೇಖಗಳನ್ನು ಆಧುನಿಕ ಸಂದರ್ಭದಲ್ಲಿ ಈ ಕೆಳಗಿನಂತೆ ಮಂಡಿಸಬಹುದಾಗಿದೆ:

“ಪತಿ ಚಾರಿತ್ರ್ಯಹೀನವಾಗಿದ್ದರೂ ನಡೆಯುತ್ತದೆ; ಆದರೆ ಪತ್ನಿ ಮಾತ್ರ ನೈತಿಕತೆಯನ್ನು ಕಾಯ್ದುಕೊಳ್ಳುವವಳಾಗಿರಬೇಕು. ಪತಿಯ ಚಾರಿತ್ರ್ಯ ಹೀನತೆಯ ಕಡೆ ಕಣ್ಮುಚ್ಚಿಕೊಂಡು ಸಂಸಾರದ ಗಾಡಿಯನ್ನು ಎಳೆದೊಯ್ಯಬೇಕು.”

“ಸ್ತ್ರೀಯರು ಪತಿಯ ಆಧಾರವಿಲ್ಲದೆ ಬದುಕುವುದು ಅಧರ್ಮ, ಸಾಮಾಜಿಕ ದೃಷ್ಟಿಯಲ್ಲಿ ಇದು ಅಮಾನ್ಯವಾದ ಮಾರ್ಗವೇ ಸರಿ.”

“ಕುಮಾರಿ ಮಾತೆಯನ್ನಾಗಿ ಮಾಡುವ ಪುರುಷನ ‘ಕರ್ತೃತ್ವ’ವು ಕ್ಷಮ್ಯ. ಆದರೆ ಕುಮಾರಿ ಮಾತೆಯ ಶಾರೀರಿಕ ಮತ್ತು ಮಾನಸಿಕ ಅವಸ್ಥೆಯೆಂಬುದು ಭಯಂಕರ ನರಕವಾಸವೇ ಸರಿ.”

“ವಿಧವೆಯಾದ ಸ್ತ್ರೀಯು ಎಲ್ಲಾ ಬಗೆಯ ಭೌತಿಕ ಸುಖಗಳನ್ನು ಕಳೆದುಕೊಳ್ಳುತ್ತಾಳೆ. ಧಾರ್ಮಿಕ, ಸಾಂಸ್ಕೃತಿಕ ಮತ್ತು ಉತ್ಸವ ಸಮಾರಂಭಗಳಲ್ಲಿ ಅವಳನ್ನು ಉಪೇಕ್ಷಿಸಲಾಗಿರುತ್ತದೆ. ವಿಧವಾ ಅಥವಾ ಪುನರ್ವಿವಾಹ ಕಾಯಿದೆಯು ರೂಪಿತವಾಗಿದ್ದರೂ ಅವಳು ನಾಚಿಕೆಗೇಡಾದ ಬದುಕನ್ನು ಬದುಕಲೇ ಬೇಕಾಗಿರುವುದು ಗಮನಾರ್ಹ.”

ಯಾವ ಸ್ತ್ರೀಯು ತನ್ನ ತಂದೆಯ ಕುಲದ ಅಭಿಮಾನವನ್ನು ಹೊಂದಿರುತ್ತಾಳೆಯೋ ಅಂಥವಳನ್ನು ಮಾವನ ಮನೆಯ ಪೀಡನೆಯು ಇಂದಿಗೂ ‘ಮಂಜುಶಿ ಸಾರಡಾ’ಳನ್ನಾಗಿಸಿದೆ. ಅಂಥ ಅನೇಕ ‘ಮಂಜುಶಿ’ಗಳೂ ಚೀತ್ಕಾರ ಮಾಡುತ್ತಲೇ ಸ್ವರ್ಗ ವಾಸಿಗಳಾಗುತ್ತಿದ್ದಾರೆ.

‘ಸ್ತ್ರೀಯರ ದುಃಖ ಮತ್ತು ಪರವಶತೆಗಳು ಇಂದಿಗೂ ಮುಕ್ತಾಯವನ್ನು ಕಂಡಿಲ್ಲ. ಪುರೋಗಾಮಿಯಂಥ ಇಂದಿನ ಕಾಲದಲ್ಲಿ ಬಹುತೇಕ ಲಾಭಗಳನ್ನು ವಿಪರೀತವಾಗಿ ಪಡೆಯುತ್ತಿದ್ದರೂ ಇಂದಿನ ವಿವಾಹಿತ (ಮತ್ತು ಅವಿವಾಹಿತ) ತರುಣಿಯರು ಮಾತ್ರ ಒಂದು ಬಗೆಯ ಅಸಹಾಯಕತೆಯನ್ನು ಸಹಿಸಲೇ ಬೇಕಾಗಿದೆ.

‘ಸ್ತ್ರೀಯರ ಸುಖ-ದುಃಖಗಳೆಲ್ಲ ಇಂದಿಗೂ ವಿವಾಹದಲ್ಲಿಯೇ ಸಿಲುಕಿಕೊಂಡಿವೆ.’

“ರಾಜವಾಡೆಗಳನ್ನು ಸ್ವಚ್ಛವಾಗಿ ಇಡುವುದಕ್ಕಾಗಿ ಹೇಗೆ ಚರಂಡಿ (ಗಟಾರ)ಗಳೋ ಹಾಗೆಯೇ ಸಮಾಜಕ್ಕಾಗಿ ವೇಶ್ಯೆಯರು. ಪರಮೇಶ್ವರನು ಅತ್ಯಂತ ಉದಾತ್ತ ಭಾವದಿಂದ ಯಾವ ಸ್ತ್ರೀಯನ್ನು ನಿರ್ಮಿಸಿದ್ದಾನೆಯೋ ಏನೋ. ಆದರೆ ಅವಳನ್ನು ಕಾಮವಾಸನೆಯ ಸಾಧನವನ್ನಾಗಿ ಮಾಡಿದ ಪುರುಷನು ಮಾತ್ರ ನೀಚ ಕೋಟಿಗಿಂತಲೂ ನೀಚವಾದ ಕೃತ್ಯವೊಂದನ್ನು ಮಾಡಿದ್ದಾನೆ. ಆದರೆ ಆ ಬಗ್ಗೆ ಪುರುಷ ಜಾತಿಗೆ ಯಾವುದೇ ಸಂತಾಪವೂ ಇಲ್ಲ, ದುಃಖವೂ ಇಲ್ಲ.”

‘ಸ್ತ್ರೀಯು ಈ ಜಗತ್ತಿನಲ್ಲಿ ಸ್ವತಃ ತನಗಾಗಿ ಅಸ್ತಿತ್ವದಲಿಲ್ಲ. ಅವಳು ಇರುವುದು ಪುರುಷನಿಗಾಗಿ, ಅವಳ ವ್ಯಕ್ತಿತ್ವವೆಲ್ಲವೂ ಪುರುಷ ಸಮರ್ಪಿತವಾದುದು.’ ಈ ಮಾತುಗಳಲ್ಲಿ ತರ್ಕತೀರ್ಧ ಲಕ್ಷ್ಮಣಶಾಸ್ತ್ರಿ ಜೋಶಿಯವರು ಹಿಂದೂಸ್ಥಾನದಲ್ಲಿನ ಸ್ತ್ರೀಯರ ಸಂಬಂಧ ವಾಗಿನ ತತ್ತ್ವಜ್ಞಾನದ ಸಾರವನ್ನು ಸಾಧಾರವಾಗಿ ಮಂಡಿಸಿದ್ದಾರೆ.

‘ಕಳೆದ ನೂರು-ಎರಡು ನೂರು ವರ್ಷಗಳಲ್ಲಿ ಈ ವರದಕ್ಷಿಣೆಗೆ ‘ಜಿಝಿಯಾ’ ಕಂದಾಯದ ಸ್ವರೂಪವೇ ಬಂದುಬಿಟ್ಟಿದೆ. ವರದಕ್ಷಿಣೆ ಪದ್ಧತಿಯು ಒಂದು ರೀತಿಯಲ್ಲಿ ಸ್ತ್ರೀಯ ದಾಸ್ಯತ್ವದ ದಾರುಣ ಆವಿಷ್ಕಾರವಾಗಿದೆ. ಸಮಾಜ ಸುಧಾರಣೆಯು ಸಾಧ್ಯವಾಗಬೇಕು ಎಂದಾದರೆ ಪುರುಷರು ಪೀಡನ ಪೂರ್ವಕವಾದ ಒತ್ತಾಯ ಮನಸ್ಸನ್ನು ಸಂಪೂರ್ಣ ಸುಧಾರಣೆ ಮಾಡಿಕೊಳ್ಳಬೇಕಾದ್ದು ಅವಶ್ಯ’- ಎಂಬುದು ಡಾ.ಚಿತ್ರಾನಾಯಿಕ ಅವರ ಅಭಿಪ್ರಾಯ.

ವರದಕ್ಷಿಣೆಯನ್ನು ತೆಗೆದುಕೊಳ್ಳುತ್ತಿರುವವರದು ಒಂದು ಕಾಡು ಜನಾಂಗದ ಒಂದು ಸ್ವತಂತ್ರ ಬುಡಕಟ್ಟು ಇದ್ದಂತೆ ಆಗಿದೆ. ವಯೋನುಗುಣವಾದ ಸುಶಿಕ್ಷಿತ ರೂಪವತಿ ಹುಡುಗಿಯರ ಮದುವೆಗಳು ತಡವಾಗುತ್ತಿರುವ ಮುಖ್ಯ ಕಾರಣವೆಂದರೆ, ವರದಕ್ಷಿಣೆಯ ಬಾಹುಳ್ಯ ಮನೋವೃತ್ತಿ ಎಂಬುದಾಗಿ ಪ್ರೊ. ಶಿ ಕೆ. ಕ್ಷೀರಸಾಗರ ಎಂಬ ವಿಚಾರ ತಜ್ಞರು ಅಭಿಪ್ರಾಯ ಪಟ್ಟಿರುತ್ತಾರೆ.

‘ಸ್ತ್ರೀಯರ ಪ್ರವಾಸವೆಂಬುದು ಗರ್ಭಾಶಯದಲ್ಲಿನ ಅಂಧಕಾರದಿಂದ ಹಿಡಿದು ಸಮಾಧಿಯ ಅಂಧಕಾರದವರೆಗಿನ ಒಂದು ಅಪೂರ್ಣವಾದ ಅನಂತ ಯಾತ್ರೆಯಾಗಿದೆ. ರೆಕ್ಕೆ ಕತ್ತರಿಸಲ್ಪಟ್ಟ ಜಟಾಯುವಿನ ಅವಸ್ಥೆಯಿಂದ ಭಾರತೀಯ ಸ್ತ್ರೀಯು ಹೊರಬರುವು ದಾದರೂ ಎಂದಿಗೆ? ಮಧ್ಯಮ ವರ್ಗೀಯ ಸ್ತ್ರೀಯ ಜೀವನ ಎಂದರೆ ಎಂಥ ಪ್ರಯಾಸದಾಯಕ ವಾದ ಸಂಗತಿ’? ಎಂಬುದಾಗಿ ಇಂದಿನ ಭಾರತೀಯ ಸ್ತ್ರೀಯರ ಬದುಕನ್ನು ಬಣ್ಣಿಸಿದ್ದಾರೆ ಅಮೃತಾಪ್ರೀತಂ.

‘ಬಹುತೇಕ ಸುಶಿಕ್ಷಿತ ಸ್ತ್ರೀಯರ ಅವಸ್ಥೆಯು’ Her masters voice’ (ಒಡೆಯನ ಉವಾಚ) ಅಥವಾ echo (ಪ್ರತಿಧ್ವನಿ) ಎಂಬಂತೆಯೇ ಆಗಿದೆ. ಅಂದರೆ ಸ್ತ್ರೀ-ಪುರುಷರ ಸಮಾನತೆಯು ಕಾಣುತ್ತಿರುವುದು ಕಾಗದ ಪತ್ರಗಳಲ್ಲಿ.

ಕಮಲಾ ಭಸೀನ ಎಂಬುವವರು ಬರೆಯುತ್ತಾರೆ ‘ಲೈಂಗಿಕ ಜೀವನದಲ್ಲಿ ಸ್ತ್ರೀಯ ಇಚ್ಛೆಗೆ ಕೊಂಚವೂ ಬೆಲೆಯಿಲ್ಲ (ಕಿಮ್ಮತ್). ತನ್ನ ಮಾಲೀಕ ಬಯಸಿದಾಗಲ್ಲೆಲ್ಲ ಸಮಾಗಮಕ್ಕೆ ಸಜ್ಜಾಗಿರುವುದೇ ಅವಳ ಧರ್ಮ. ಅದಕ್ಕಾಗಿಯೇ ಲೈಂಗಿಕ ಸಂಬಂಧದ ವಿಷಯದಲ್ಲಿ ವಿವಾಹಿತ ಸ್ತ್ರೀ-ಪುರುಷರುಗಳ ಸಂಬಂಧವು ಅವ್ಯವಸ್ಥೆಯ ಸ್ವರೂಪದ್ದಾಗಿದೆ. ವಿವಾಹಿತ ಸ್ತ್ರೀಯು ಅನ್ನ, ವಸ್ತ್ರ ಮತ್ತು ಆಶ್ರಯ ಇವುಗಳ ವಿನಿಮಯಕ್ಕಾಗಿ ತನ್ನ ಶರೀರವನ್ನು ಒಪ್ಪಿಸಿಕೊಳ್ಳುತ್ತಾಳೆ ಎಂಬಂತಾಗಿದೆ.

ಸಿಮೊನ್ ದ ಬೋವಾಳು ಅಭಿಪ್ರಾಯ ಪಟ್ಟಿರುವಂತೆ, ‘ಅನಿಚ್ಛೆಯಿಂದ ಆದಂಥ ಸಮಾಗಮವು ಬಹುತೇಕವಾಗಿ ಅತ್ಯಾಚಾರವೇ ಆಗಿರುತ್ತದೆ. ಅದಕ್ಕೆ ಅಂತ್ಯವೆಂಬುದೇ ಇಲ್ಲ. ಅನೇಕ ಕೋಪೋದ್ರಿಕ್ತ ಗಂಡಸರುಗಳು ತಮ್ಮ ತಮ್ಮ ಹೆಂಡತಿಯರಿಗೆ ಶರೀರ ಸುಖವನ್ನು ಕೊಡಲಿಲ್ಲ ಎಂಬ ಕಾರಣಕ್ಕಾಗಿ ಕೊಂದು ಹಾಕಿರುವಂಥ ಹಲವಾರು ಉದಾಹರಣೆಗಳನ್ನು ಗಮನಿಸಬಹುದಾಗಿದೆ.’

ಮಾನವೇಂದ್ರನಾಥರಾಯ್ ಅವರು ಸ್ಪಷ್ಟವಾಗಿ ಅಭಿಪ್ರಾಯ ಪಟ್ಟಿರುವಂತೆ, ‘ಅನಿಚ್ಛೆಯಿಂದ ಮಾಡುವಂತಹ ಸಮಾಗಮದ ವೈವಾಹಿಕ ಜೀವನವು ಕಾಯಿದೆಬದ್ಧ ವ್ಯಭಿಚಾರವೇ ಹೌದು.’

‘ವಿವಾಹಿತ ಸ್ತ್ರೀಯು ಒಂದು ಮನೆಯಿಂದ ಮತ್ತೊಂದು ಮನೆಗೆ ಬಂದವಳಾಗಿರುತ್ತಾಳೆ. ಅಂದರೆ ಪಿತನ ಅಂಕೆಯಿಂದ ಪತಿಯ ಅಂಕೆಗೆ ಬಂದಥವಳು. ಇಲ್ಲಿ ಆಜ್ಞಾಪಾಲನೆ ಮಾಡುವಂತಹ ವ್ಯಕ್ತಿಯು ಬದಲಾದುದಷ್ಟೆ. ಪತಿನಿಷ್ಠೆ ಎಂಬ ಧರ್ಮವನ್ನು ಅವಳ ತಲೆಯ ಮೇಲೆ ಸಂಸ್ಥಾಪಿಸಲಾಯಿತು. ಪತಿವ್ರತೆಯೆಂಬ ಕಲ್ಪನೆಯ ಹುಳುವನ್ನು ಭಾರತೀಯ ಸ್ತ್ರೀಯರ ತಲೆಯೊಳಗಿನಿಂದ Brain wash ಮಾಡಿ ತೆಗೆಯಬೇಕಾಗಿದೆ’ ಎಂಬುದಾಗಿ ತಮ್ಮ ಅಭಿಪ್ರಾಯ ಮಂಡಿಸಿರುವರು ಡಾ. ಪ್ರಮಿಳಾ ಕಪೂರ್.

ಸ್ವತಂತ್ರ ದೇಶಗಳಲ್ಲಿ ಸ್ತ್ರೀಗೆ ಪುರುಷರ ಸಮಾನ ಸ್ಥಾನವನ್ನು ನೀಡಿರುವುದು ಒಂದು ಸಂಗತಿಯಷ್ಟೆ. ಸಾಮಾಜಿಕ, ಶೈಕ್ಷಣಿಕ, ವೈವಾಹಿಕ ಮತ್ತು ಧಾರ್ಮಿಕ ವಿಷಯಗಳ ಮೂಲಕ ಅವಳ ಮೇಲೆ ಹೇರಿರುವ ಅನ್ಯಾಯಯುತ ವಿಷಮತೆಗಳನ್ನು ಇಂದು ವಾಸ್ತವವಾಗಿಯೂ ಮತ್ತು ಕಾಯಿದೆಬದ್ಧವಾಗಿಯೂ ದೂರ ಮಾಡಲಾಗಿದೆ. ಆದರೆ ಸ್ವತಂತ್ರ ಹೋರಾಟದಲ್ಲಿ ಉತ್ಸಾಹದಿಂದ ಹೋರಾಡುವ ಸ್ವಾತಂತ್ಯಪ್ರಿಯ ಸೈನಿಕರು ಆನಂತರದಲ್ಲಿಯೂ ಶಾಂತತೆಯ ಕಾಲದಲ್ಲಿ ಅಷ್ಟೇ ಹುರುಪಿನಿಂದ ಮತ್ತು ಆತ್ಮವಿಶ್ವಾಸದಿಂದ ಹೋರಾಟದಲ್ಲಿ ತೊಡಗಿಕೊಳ್ಳಬಹುದು, ಸ್ತ್ರೀಯರ ಜೀವನವು ಎಲ್ಲಾ ನೆಲೆಗಳಿಂದಲೂ ಅತಿಶಯವಾಗಿ ಸುಧಾರಿಸ ಬಹುದು ಎಂಬ ಅಪೇಕ್ಷೆಯು ಇತ್ತು. ಕೆಲವಾರು ವಿಚಾರಗಳಲ್ಲಿ ಅದು ನಿಜವೂ ಆಯಿತು. ಸಾಹಿತ್ಯ, ಸಂಗೀತ, ಕಲೆಯಂಥ ಕ್ಷೇತ್ರಗಳಲ್ಲಿ ಸ್ತ್ರೀಯರು ವೈಯಕ್ತಿಕ ನೆಲೆಯಿಂದ ತಮ್ಮ ಕಾರ್ಯಕ್ಷಮತೆಯನ್ನು ಮೆರೆದರು. ಅವರ ವೈಯಕ್ತಿಕ ಗುಣಮತ್ತೆಯ ಕಕ್ಷೆಯು ಬಹಳ ಚೆನ್ನಾಗಿಯೇ ಪಸರಿಸಿತು. ಬುದ್ದಿಮತ್ತೆಯ ಉಚ್ಚ ಪಾತಳಿಯಿಂದಾಗಿ ಪ್ರಾಪ್ತವಾದ ಅಧಿಕಾರಿಗಳ ಸ್ಥಾನವು ಅವರಿಗೆ ಸಿಕ್ಕಿತು. ಕೆಲವರಂತೂ ಅವರವರ ವಿವಕ್ಷಿತ ಕ್ಷೇತ್ರದಲ್ಲಿ ಎಂಥ ಉತ್ತಮವಾದ ಯಶಸ್ಸನ್ನು ಸಂಪಾದಿಸಿದರೆಂದರೆ, ಸ್ತ್ರೀಯದ್ದು ಎಂದಲ್ಲವಾದರೂ ಆ ಕ್ಷೇತ್ರದ ಯಶಸ್ಸು ಎಂಬುದಾಗಿ ಅದು ಭೂಷಣಾಸ್ಪದ ಎಂಬಂತೆ ಪರಿಗಣಿಸಲಾಯಿತು.

ಆದರೆ ಈ ವೈಯಕ್ತಿಕ ಪಾತಳಿಯ ಮೇಲಣ ಪ್ರಗತಿಯಿಂದಷ್ಟೇ ಅಖಿಲ ಭಾರತೀಯ ಸ್ತ್ರೀಯರ ಜೀವನದ ಪಾತಳಿಯನ್ನು ಎತ್ತರಿಸುವುದಕ್ಕೆ ಸಾಧ್ಯವಿಲ್ಲ. ಅಲ್ಲದೆ ಹೀಗೆ ಪ್ರಗತಿ ಸಾಧಿಸಿರುವಂತಹ ಸ್ತ್ರೀಯರ ಸಂಖ್ಯೆಯೂ ತೀರಾ ನಗಣ್ಯವೇ ಆಗಿದೆ. ಅಖಿಲ ಭಾರತೀಯ ಸರ್ವೆಸಾಮಾನ್ಯ ಸ್ತ್ರೀಯರ ಬದುಕಿನ ಪಾತಳಿಯನ್ನು ಎತ್ತರಿಸುವಂತಹ ಸಾಮಾಜಿಕ ಕೊರತೆ, ಅನ್ಯಾಯವನ್ನು ಇಲ್ಲವಾಗಿಸುವ ತಳಮಳ ಮತ್ತು ವಿಶೇಷವಾಗಿ ಸಂಘಟಿತ ಪ್ರಯತ್ನಗಳ ಆವಶ್ಯಕತೆಯು ಇದೆ. ಎಂತಲೇ ಮೇಲೆ ಉಲ್ಲೇಖಿಸಲಾಗಿರುವ ಕ್ಷೇತ್ರಗಳಲ್ಲಿನ ಸರ್ವೆಸಾಮಾನ್ಯ ಸ್ತ್ರೀಯರ ಜೀವನದ ವಿಚಾರಗಳು ಸಾಮಾನ್ಯ ಸ್ತ್ರೀಯರದ್ದಾಗಿರುವುದಾದರೂ ಎಲ್ಲಿ, ಎಂಬುದನ್ನು ತಿಳಿಯುವುದಕ್ಕಾದರೂ ಮಾಡಬೇಕಾಯಿತು.

‘ಸ್ತ್ರೀಯನ್ನು ರೂಪಿಸುವಾಗ ಸೃಷ್ಟಿಕರ್ತನು ಅನೇಕ ಮೂಲಗಳಿಂದ ಪ್ರಾಕೃತಿಕ ಅಂಶಗಳನ್ನು ತೆಗೆದುಕೊಂಡಿದ್ದಾನೆ. ಚಂದ್ರಮನಿಂದ ಪೂರ್ಣಾಕಾರ, ಬಳ್ಳಿ (ಲತೆ)ಯ ಗುಮ್ಮಟ, ಎಳೆಯ ಅಂಕುರದ ಅಂಟು, ಹುಲ್ಲಿನ ಎಸಳುಗಳಿಂದ ಥರಥರ ಗುಡುವಿಕೆ, ಬಿದಿರಿನಿಂದ ಸಿಡಿಸಿಡಿತ್ವ, ಹೂವುಗಳಿಂದ ಮೋಜು, ಹುಲ್ಲಿನ ಹಗುರತ್ವ, ಆನೆಯ ಸೊಂಡಿಲಿನ ಕೋನಾಕೃತಿ, ಜಿಂಕೆಯ ಕಟಾಕ್ಷ, ಭೃಂಗಗಳು ಗುಂಡಾಗಿರುವಂಥ ಅಂಶಗಳೆಲ್ಲವೂ ಅಲ್ಲಿ ಸಮಾವೇಶವಾಗಿವೆ. ಹಾಗೆಯೇ ಸೂರ್ಯ ಬಿಂಬಗಳಿಂದ ಆನಂದ, ನವಿಲಿನ ಬಿಂಕ (ಒನಪು), ಗಿಳಿಯ ಮಾಧುರ್ಯ, ವ್ಯಾಘ್ರದ ಕ್ರೌರ್ಯ, ಅಗ್ನಿಜ್ಯೋತಿಯಿಂದ ಉದಾರತೆ ಗಳೆಲ್ಲವನ್ನು ತೆಗೆದು ಸೇರಿಸಿಕೊಂಡನು. ಜೊತೆಗೆ ಮಂಜುಗಡ್ಡೆಯ ಶೀತಲತ್ವ, ಗುಬ್ಬಚ್ಚಿಗಳ ಚಿಂವ್- ಚಿಂವ್ ಗುಟ್ಟುವಿಕೆ, ಕೋಗಿಲೆಯ ಕುಹೂ ಕುಹೂ ಗಾನ, ಕೊಕ್ಕರೆ (ಬಕ)ಯ ಢೋಂಗಿತನ, ಚಕ್ರವಾಕಗಳ ಪ್ರೇಮನಿಷ್ಠೆ- ಹೀಗೆ ಸರ್ವಗುಣಗಳನ್ನು ಸಂಗಮಗೊಳಿಸಿಕೊಂಡು ಸ್ತ್ರೀಯನ್ನು  ನಿರ್ಮಿಸಿದ ಸೃಷ್ಟಿಕರ್ತನು ಅವಳನ್ನು ಪುರುಷನಿಗೆ ಒಪ್ಪಿಸಿದ’ ಎಂಬುದಾಗಿ ‘ಸ್ತ್ರೀ: ಒಂದು ಸಮಾಜಶಾಸ್ತ್ರೀಯ ದರ್ಶನ’ ಎಂಬ ಕೃತಿಯಲ್ಲಿ ಪ್ರೊ.ಗೊ.ದ. ಕುಲಕರ್ಣಿ ಯವರು ವಿವರಿಸಿದ್ದಾರೆ.

ಸ್ತ್ರೀಯ ಇಂದಿನ ಸಾಮಾಜಿಕ ಸ್ಥಾನವನ್ನು ಗಮನದಲ್ಲಿಟ್ಟುಕೊಂಡರೆ, ಅಥವಾ ಇಪ್ಪತ್ತನೆಯ ಶತಮಾನದಲ್ಲಿನ ಸ್ತ್ರೀಯ ದರ್ಜೆಯ ಸಂಬಂಧವಾಗಿ ವಿವೇಚನೆ ಮಾಡುವಾಗ ಒಂದು ಮಹತ್ವದ ವಿಷಯವು ತಿಳಿದು ಬರುತ್ತದೆ. ಅದೆಂದರೆ ಸ್ತ್ರೀಯು ಪುರುಷನಿಗಿಂತ ಯಾವುದರಲ್ಲಿಯೂ ಕನಿಷ್ಠಳಲ್ಲ ಎಂಬ ವಿಷಯಕ್ಕೆ ಇರುವ ಸಾಮಾಜಿಕ ಮಾನ್ಯತೆ. ಪುರುಷನು ಸ್ತ್ರೀಗಿಂತ ಶಾರೀರಿಕ ದೃಷ್ಟಿಯಲ್ಲಿ ಅಧಿಕ ಬಲಶಾಲಿಯಾಗಿದ್ದಾನೆ ಎಂಬುದು ಅಷ್ಟು ಸರಿಯಾದ ವಿಚಾರವಲ್ಲ. ‘ಸ್ತ್ರೀ-ಪುರುಷರ ನಡುವಣ ಲಿಂಗಭೇದವು ನಿಸರ್ಗ ನಿರ್ಮಿತವಾದುದು. ಅಂದರೆ ಸ್ತ್ರೀಯು ಮೊದಲು ಮಾನವಪ್ರಾಣಿ, ಆನಂತರ ಅವಳು ಸ್ತ್ರೀ. ಈ ದೃಷ್ಟಿಯಿಂದ ಸ್ತ್ರೀಯೇ ಶ್ರೇಷ್ಠ’ ಎಂದು ಡಾ. ಜಾನ್‌ಸನ್ ಅಭಿಪ್ರಾಯ ಪಟ್ಟಿದ್ದಾರೆ. ಒಬ್ಬ ಫೆಂಚ್ ಲೇಖಕಿಯು ಒಂದೆಡೆ ಹೀಗೆ ಹೇಳಿರುತ್ತಾಳೆ- ‘ಸ್ತ್ರೀಯು ಸ್ತ್ರೀ ಎಂಬುದಾಗಿಯೇ ಜನುಮವನ್ನು ಪಡೆಯುವುದಿಲ್ಲ. ಅವಳು ಸಂಸ್ಕಾರದಿಂದ ಸ್ತ್ರೀಯಾಗುತ್ತಾಳೆ. ಬಹಳ ಅಲ್ಪ ಕಾಲದಲ್ಲಿಯೇ ಸ್ತ್ರೀಯು ಪುರುಷನಿಗೆ ಸಮನಾಗಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವಂಥವಳಾಗುತ್ತಾಳೆ ಎಂಬುದು ಈಗಾಗಲೇ ಸರ್ವ ಮಾನ್ಯವಾಗಿರುವ ವಿಷಯ. ಆದರೆ ಸಾಮಾಜಿಕ ದೃಷ್ಟಿಯು ಸ್ತ್ರೀಯರ ವಿಷಯದಲ್ಲಿ ಸ್ತ್ರೀ-ಪುರುಷ ಸಮಾನತೆಯ ನ್ಯಾಯದಿಂದ ವ್ಯವಹರಿಸಲು ಅವಕಾಶಿಸಿಲ್ಲ. ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ದೃಷ್ಟಿಗಳಿಂದ ಸ್ತ್ರೀಯರಿಗೆ ಗೌಣಸ್ಥಾನ  (ಎರಡನೆಯ ದರ್ಜೆ)ವನ್ನು ನೀಡುತ್ತಾ ಬರಲಾಗಿದೆ. ಇದರಿಂದ ಸರ್ವೇಸಾಮಾನ್ಯವಾಗಿ ಸ್ತ್ರೀಯು ನಿಜವಾದ ಮಾನವೀಯ ಜೀನವದಿಂದ ವಂಚಿತಳಾಗಿದ್ದಾಳೆ. ಒಂದರ್ಥದಲ್ಲಿ ಅಂದರೆ ಆಕೆ ಇಪ್ಪತ್ತನೆಯ ಶತಮಾನದ ಭಾರತೀಯ ಸ್ತ್ರೀಯು ಪರದಾ ಪದ್ಧತಿಯನ್ನು ಅವಲಂಬಿಸಿರುವವಳು. ಒಲೆ ಮತ್ತು ಮಕ್ಕಳು ಈ ಕಾರ್ಯಕ್ಷೇತ್ರವನ್ನು ಒಪ್ಪಿಕೊಂಡಿರುವಂಥವಳು ಹಾಗೂ ಶಿಕ್ಷಣದಿಂದ ವಂಚಿತಳಾದವಳು ಎಂಬಷ್ಟಕ್ಕೇ ಉಳಿದಿಲ್ಲ.’

ಸುಮಾರು ೧೮೭೫ರವರೆಗೂ ನಮ್ಮ ಸಮಾಜವು ಶತಕಾನುಶತಕಗಳ ಗುಲಾಮಗಿರಿಯಿಂದಾಗಿ ಎಷ್ಟೊಂದು ರೀತಿಯಲ್ಲಿ ನಿಶ್ಚೇಷ್ಟವೂ ಸ್ತಬ್ಧವೂ ಆದಂತೆ ಉಳಿದುಕೊಂಡಿತ್ತು. ಅದರಲ್ಲಿ ಕೈಯಾಡಿಸುವಂತಹ ಸಾಮರ್ಥ್ಯ ಯಾರಲ್ಲಿಯೂ ಇರಲಿಲ್ಲ. ಆದರೆ ನಂತರದಲ್ಲಿ ವಿಶೇಷತಃ ಸಾತಂತ್ರ್ಯ ಹೋರಾಟದಲ್ಲಿ ಸ್ತ್ರೀಯರ ಸುಧಾರಣೆಯ ಕಾರ್ಯಾಚರಣೆಯ ಮೇಲೆಯೂ ಲಕ್ಷ್ಯ ಹರಿಯಿತು. ಆದರೆ ಅದಕ್ಕಿಂತಲೂ ಅನ್ಯಾಯದ ವಿರುದ್ಧ ಅಸಹಕಾರ, ಸತ್ಯಾಗ್ರಹ, ಹಕ್ಕುಗಳ ಅರಿವು ಇತ್ಯಾದಿ ಜಾಗರೂಕತೆಯ ಸ್ಥಿತಿಯೇ ನಿರ್ಮಾಣವಾಯಿತು. ಸ್ವಾತಂತ್ರ್ಯ ಚಳವಳಿಯಲ್ಲಿ ಸ್ತ್ರೀಯರು ಪುರುಷರ ಹೆಗಲಿಗೆ ಹೆಗಲು ಸೇರಿಸಿ ಸತ್ಯಾಗ್ರಹದಲ್ಲಿ ಧುಮುಕಿದರು. ಲಾಠಿ ಪ್ರಹಾರವನ್ನು ಸಹಿಸಿಕೊಂಡುದು ಮಾತ್ರವಲ್ಲದೆ, ಅಸ್ಪೃಶ್ಯರ ಸೇವೆಯನ್ನೂ ಮಾಡಿದರು. ಸೆರೆಮನೆಯ ವಾಸದ ಅನುಭವದೊಂದಿಗೆ ಮಕ್ಕಳು ಮರಿಗಳನ್ನು ಹೊತ್ತು, ‘ಚಲೇ ಜಾವ್’(ಭಾರತ ಬಿಟ್ಟು ತೊಲಗಿ) ಚಳವಳಿಯಲ್ಲಿಯೂ ಭಾಗವಹಿಸಿದ್ದರು. ೧೯೨೬ರಿಂದ ಸ್ತ್ರೀಯರು ಪುರುಷರಿಗೆ ಸಮನಾಗಿ ವರ್ತಿಸಲು ಆರಂಭಿಸಿದುದರಿಂದಲೇ ಸ್ವಾತಂತ್ರ್ಯಾ ನಂತರದಲ್ಲಿ ಅವರಿಗೆ ತಂತಾನೆ ಸಮಾನ ದರ್ಜೆಯು ಲಭಿಸಿತು. ಶಿಕ್ಷಣವನ್ನು ಪಡೆದು ಕೊಳ್ಳಲಾರಂಭಿಸಿದ್ದು ಕೂಡ ಸ್ತ್ರೀಯರ ದೃಷ್ಟಿಯಿಂದ ಇಲ್ಲಿ ವಿಶೇಷ ಗಮನೀಯ. ಸ್ವಾತಂತ್ರ್ಯಾ ನಂತರದಲ್ಲಿ ಇವರಿಗೆ ರಾಜಕಾರಣದಲ್ಲಿ ಭಾಗವಹಿಸುವುದಕ್ಕೂ ಅವಕಾಶ ಸಾಧ್ಯವಾಯಿತು. ಹಾಗೆಯೇ ಉದ್ಯೋಗವನ್ನು ಮಾಡಲಾರಂಭಿಸಿದರು. ಸ್ವಾತಂತ್ರ್ಯಾ ನಂತರದ ಕಾಲದಲ್ಲಿ ಸ್ತ್ರೀಯರ ಪರಿಸ್ಥಿತಿಯು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ದೃಷ್ಟಿಗಳಿಂದ ಸುಧಾರಣೆ ಉಂಟಾಯಿತು ಎಂಬುದು ಒಪ್ಪಿಕೊಳ್ಳಬಹುದಾದ ಸಂಗತಿ. ಹಿಂದೂ ವಿವಾಹ ಕಾಯಿದೆ (೧೯೫೫), ಹಿಂದೂ ವಾರಸುದಾರಿಕೆಯ ಹಕ್ಕಿನ ಕಾಯಿದೆ (೧೯೫೬), ಹಿಂದೂ ಅಜ್ಞಾನ ಮತ್ತು ಪಾಲಕತ್ವದ ಕಾಯಿದೆ (೧೯೫೬), ಹಿಂದೂ ದತ್ತಕ ಮತ್ತು ಜೀವನ ಪರಿಹಾರ ಕಾಯಿದೆ (೧೯೫೬), ಗರ್ಭಪಾತಕ ವಿಷಯದ ಕಾಯಿದೆ (೧೯೭೧), ವರದಕ್ಷಿಣೆ ವಿರೋಧಿ ಕಾಯಿದೆ ಮತ್ತು ಅದರಲ್ಲಿ ಉಂಟಾದ ಅಗತ್ಯ ಬದಲಾವಣೆಗಳು (೧೯೬೧) ಇವೇ ಮೊದಲಾದ ಕಾಯಿದೆಗಳನ್ನು ಸ್ತ್ರೀಯರ ಜೀವನದಲ್ಲಿ ಹೊಸ ಪರ್ವವನ್ನು ತರುತ್ತವೆಂದು ತಿಳಿದು ಜಾರಿಗೆ ತರಲಾಯಿತು. ಅಂದರೆ ಇವೆಲ್ಲವೂ ಸ್ತ್ರೀಯರ ಗುಲಾಮತನದ ಅಂಧಕಾರಮಯತೆಯಲ್ಲಿ ಬದುಕುವ ಪರಿಸ್ಥಿತಿಯನ್ನು ಅಂತ್ಯಗೊಳಿಸುವ ದೃಷ್ಟಿಯಿಂದ ರೂಪಿಸಿದುವಾಗಿದ್ದವು. ಆದರೆ ಈ ಎಲ್ಲಾ ಕಾಯಿದೆಗಳಲ್ಲಿಯೂ ಹುದುಗಿರುವ ಪಾರಾಗುವಂತಹ ಮಾರ್ಗದಿಂದಾಗಿ ವಿಫಲತೆಯುಂಟಾಯಿತು. ಅಲ್ಲದೆ ಈ ಎಲ್ಲಾ ಕಾಯಿದೆಗಳು ಬಹುತೇಕ ಸುಶಿಕ್ಷಿತರು ಮತ್ತು ಉಚ್ಚವರ್ಣೀಯರಿಗೆ ಉಪಯುಕ್ತವಾಗುವಂಥವಾಗಿದ್ದವು. ಕಾರಣ ಕಾಯಿದೆಗಳಿಂದಲೇ ಹಕ್ಕುಗಳನ್ನು ದಕ್ಕಿಸಿಕೊಳ್ಳಬಹುದು ಎಂದಾದರೆ ಸಾಮಾನ್ಯ ಸ್ಥಾನದಲ್ಲಿರುವ ಸ್ತ್ರೀಯರು ಹಣವನ್ನು ತರುವುದಾದರೂ ಹೇಗೆ? ಅವರಿಗೆ ಯಾರು ಸಹಾಯ ಮಾಡುತ್ತಾರೆ? ತವರಿಗೆ ಹೋಗುವುದಕ್ಕೂ ನಿರ್ಬಂಧ; ಹಾಗಿರುವಾಗ ಅವಳ ಕೂಗನ್ನು ಕೇಳುವವರಾರು? ಇನ್ನು ಅವಳಿಗೆ ನ್ಯಾಯಾಲಯಕ್ಕೆ ಹೋಗುವಂತಹ ಧೈರ್ಯವಾದರೂ ಎಲ್ಲಿಂದ ಸಾಧ್ಯ? ಶಿಕ್ಷಣ ಇಲ್ಲದಿರುವುದರಿಂದ ಎಲ್ಲಾ ವಿಷಯಗಳನ್ನು ಅರ್ಧಮಾಡಿಕೊಳ್ಳುವುದಕ್ಕೆ ಹೇಗೆ ಸಾಧ್ಯವಾಗಬೇಕು? ಇಂಥ ಅನೇಕ ಪ್ರಶ್ನೆಗಳು ಸರ್ವೆಸಾಮಾನ್ಯ. ಅಶಿಕ್ಷಿತ, ಅರ್ಧಶಿಕ್ಷಿತ, ಸ್ತ್ರೀಯರ ವಿಷಯದಲ್ಲಿ ನಿರ್ಮಾಣವಾಗುತ್ತವೆ.

ಈ ಕಾಯಿದೆಗಳಿಂದ ಯಾರಿಗೆ ಸಾಧ್ಯವೋ ಅವರುಗಳು ಲಾಭವನ್ನು ಪಡೆದುಕೊಂಡರು. ಈ ಅಂಶವನ್ನು ಮುಖ್ಯವಾಗಿಟ್ಟುಕೊಂಡು ಆ ದಿಶೆಯಲ್ಲಿಯೇ ಮುನ್ನಡೆಯುವುದು ಉಪಯುಕ್ತ. ಇದರಿಂದ ನಿಧಾನವಾಗಿಯಾದರೂ ಸ್ತ್ರೀಯರಲ್ಲಿ ಜಾಗರೂಕತೆಯನ್ನು ನಿರ್ಮಾಣ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಈ ಪ್ರಯತ್ನ ತೀರಾ ಮಂದಗತಿಯ ದ್ದಾಗಿರುವುದಲ್ಲದೆ, ಸುಶಿಕ್ಷಿತ ಸ್ತ್ರೀಯರಲ್ಲಿಯಷ್ಟೇ ಅಧಿಕವಾಗಿದೆ. ಭಾರತೀಯ ಸ್ತ್ರೀಗೆ ರಾಜಕೀಯ ಮತ್ತು ಆರ್ಥಿಕ ಹಕ್ಕುಗಳು ಅನಾಯಾಸವಾಗಿಯೇ ದೊರೆತವು. ಅಲ್ಲದೆ ಶಿಕ್ಷಣದ ದ್ವಾರಗಳೆಲ್ಲ ಮುಕ್ತವಾಗಿವೆ. ಅದರಿಂದಾಗಿಯೊ ಏನೋ ಸ್ತ್ರೀಯರ ಸಂಘಟನೆಯ ಕೆಲಸ ಎಂದೂ ಗಟ್ಟಿಯಾಗಿ ಬೇರುಗೊಳ್ಳಲಾಗಲಿಲ್ಲ. ಹಾಗಾಗಿಯೇ ಇಂದಿಗೂ ಸರ್ವತ್ರ ಸ್ತ್ರೀಯರ ಸಂಘಟನೆಯು ನಿಖರವಾಗಿ ಕಂಡು ಬರುತ್ತಿಲ್ಲ. ಬಹಳಷ್ಟು ಸಂಘಟನೆಗಳೆಲ್ಲ ಇರುವುದು ನಗರಗಳಲ್ಲಿಯೇ. ಹಾಗಾಗಿ ಗ್ರಾಮೀಣ ಪ್ರದೇಶದ ಸ್ತ್ರೀಯರಲ್ಲಿ ಇಂದಿಗೂ ಅಸಂಘಟನೆ ಸಾಮಾನ್ಯವಾದುದು. ಅಲ್ಲದೆ, ಇನ್ನೂ ಅವರಲ್ಲಿ ಲಜ್ಜೆತನವು ಉಳಿದಿದೆ. ಮನೆಯ ಕೆಲಸದ  ಕ್ಲಿಷ್ಟ ವಾತಾವರಣದಿಂದ ಬಿಡುವು ಪಡೆಯಬೇಕೆಂದು ಸ್ತ್ರೀಯರು ಮಹಿಳಾ ಮಂಡಳಿಗಳನ್ನು ಆರಂಭಿಸುತ್ತಿದ್ದಾರೆ ಎಂಬ ಈ ಸನ್ಮಾನನೀಯ ಅಪವಾದವನ್ನು ತಳ್ಳಿಹಾಕಬಹುದಾದರೂ, ಮಹಿಳಾ ಮಂಡಳಿಗಳಲ್ಲಿ ತಿಂದು ಕುಡಿಯುವಿಕೆ, ಮನರಂಜನೆ, ಸಖಿತನ, ನವರಾತ್ರಿ ಮತ್ತು ಅರಿಶಿನ-ಕುಂಕುಮದ ಕಾರ್ಯಕ್ರಮಗಳನ್ನು ನಡೆಸುತ್ತಿರುವುದಂತೂ ಮೇಲ್ನೋಟಕ್ಕೇ ಕಂಡು ಬರುತ್ತಿರುವುದು ಸಾಮಾನ್ಯ ವಿಷಯ.

ಬಹುಸಂಖ್ಯೆಯಲ್ಲಿ ಸ್ತ್ರೀಯರು ಇಂದು ಗೃಹಿಣಿಯರಾಗಿಯೇ ಸಂಕುಚಿತವಾದಂಥ ಬದುಕನ್ನು ನಡೆಸುತ್ತಿದ್ದಾರೆ. ಅಧಿಕ ಉತ್ಪಾದಕತೆ ಮತ್ತು ರಾಷ್ಟ್ರೀಯ ಉತ್ಪನ್ನ ಕಾರ್ಯದಲ್ಲಿ ಕೈಹಚ್ಚುವಲ್ಲಿ ಇವರ ಹಾಜರಾತಿ ಇಲ್ಲ. ಹಾಗೆಯೇ ವ್ಯಾವಸಾಯಿಕ ಉದ್ಯೋಗ ಮಾಡುವಂತಹ ಸ್ತ್ರೀ-ಪುರುಷರ ಆವಶ್ಯಕತೆಗಳನ್ನು ಪೂರೈಸುವಂಥ ಉತ್ಪಾದಕ ಕಾರ್ಯ ಕೈಗೊಂಡು ಕಾಯಮ್ಮಾಗಿ ಕೆಲಸ ಮಾಡುವಂತಹ ಸ್ತ್ರೀಯರೂ ಮುಂದೆ ಬರುತ್ತಿಲ್ಲ. ನಮ್ಮ ವ್ಯವಸ್ಥೆಯಲ್ಲಿ ಅವರಿಗೆ ಅಂಥದೊಂದು ಅವಕಾಶವನ್ನು ಉಪಲಬ್ಧಗೊಳಿಸಿ ಕೊಡುವಲ್ಲಿ ಕೂಡ ಒಂದು ಮಿತಿಯು ರೂಪಿತವಾಗಿದೆ. ತೀರಾ ಇತ್ತೀಚೆಗೆ ಅಖಿಲ ಭಾರತೀಯ ಮಹಿಳಾ ಪರಿಷತ್ತು ದೇಶವ್ಯಾಪಿಯಾಗಿ ವ್ಯಾಪಿಸಿದ್ದರೂ ಕೂಡ, ಅದರಲ್ಲಿಯೂ ಪರಿವರ್ತನೆಯ ಕೆಲಸವನ್ನು ಹೆಚ್ಚಾಗಿ ಕೈಗೆತ್ತಿಕೊಂಡಂತೆ ಕಾಣಿಸುವುದಿಲ್ಲ. ಇಂದಿನ ಭಾರತೀಯ ಸ್ತ್ರೀಯರ ಬಗ್ಗೆ ವಿಚಾರ ಮಾಡುವಲ್ಲಿ ಅವರ ಸಾಮಾಜಿಕ ಸ್ಥಾನದಿಂದ ಉದ್ಭವಿಸುವ ವಿವಿಧ ಮಗ್ಗುಲುಗಳನ್ನು ಗಮನಕ್ಕೆ ತೆಗೆದುಕೊಳ್ಳವುದು ತೀರಾ ಆವಶ್ಯಕ. ಹಾಗೆ ತೆಗೆದುಕೊಳ್ಳುವಾಗ ಸರ್ವೇಸಾಮಾನ್ಯ ಸ್ತ್ರೀಯರು ಮತ್ತು ಮಧ್ಯಮ ವರ್ಗೀಯ ಸ್ತ್ರೀಯರ ಜೀವನದ ವಿಚಾರವನ್ನು ಮುಖ್ಯವಾಗಿ ಪರಿಗಣಿಸಬೇಕಾಗುತ್ತದೆ. ಅಖಿಲ ಭಾರತೀಯ ಮಟ್ಟದಲ್ಲಿ ಸ್ತ್ರೀಯನ್ನು ಪ್ರತಿನಿಧಿಸುವಲ್ಲಿ ಅವರ ಸಮಸ್ಯೆಗಳ ಬಗ್ಗೆ ಉಹಾಪೋಹಗಳನ್ನು ಮಾಡುವಂತಹ ಪ್ರವೃತ್ತಿಗಳೇ ಹೆಚ್ಚು.