ಪ್ರೌಢ ಕುಮಾರಿಕೆಯರ ಪ್ರಶ್ನೆಗಳು

ಸಮಾಜದಲ್ಲಿ ಸ್ತ್ರೀಯರಿಗೆ ಸಂಬಂಧಿಸಿದಂತೆ ಏನೆಲ್ಲ ಪ್ರಶ್ನೆಗಳು ನಿರ್ಮಾಣವಾಗುತ್ತಿವೆ. ಅವುಗಳಲ್ಲಿ ಪ್ರೌಢ ಕುಮಾರಿಕೆಯರ ಸಮಸ್ಯೆಗಳು ಕೂಡ ಅತೀವ ಚಿಂತನೀಯವಾದ ವಿಷಯಗಳಾಗಿರುವುದು ಸ್ಪಷ್ಟವಾಗಿ ಅರಿವಿಗೆ ಬರುತ್ತಿವೆ. ವಿಶೇಷವಾಗಿ ನಗರಗಳಲ್ಲಿನ ಮಧ್ಯಮ ಮತ್ತು ಉಚ್ಚ ಮಧ್ಯಮ ವರ್ಗದ ಸಮಾಜದಲ್ಲಿ ಇಂಥ ಉಪವರ್ (ಮದುವೆಯ ವಯಸ್ಸು ಮೀರಿದ) ಹೆಣ್ಣುಮಕ್ಕಳ  ಸಂಖ್ಯೆಯು ಹೆಚ್ಚಾಗುತ್ತಿರುವುದು ಗಮನಿಸಬೇಕಾದ ಸಂಗತಿ. ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಹೆಣ್ಣುಮಕ್ಕಳ ವಿವಾಹವು ಚಿಕ್ಕ ವಯಸ್ಸಿನಲ್ಲಿಯೇ ನಡೆಯುವ ರೂಢಿ ಇರುವಂಥ ಜಾತಿ ಪಂಗಡಗಳಲ್ಲಿ ಈ ಪ್ರಶ್ನೆಯು ಮುಖ್ಯವಾಗಿ ಅರಿವಿಗೆ ಬರುವುದಿಲ್ಲ. ಆದರೆ ಇತ್ತೀಚೆಗೆ ತಾಲೂಕು ಕೇಂದ್ರಗಳಲ್ಲಿ ಮಹಾವಿದ್ಯಾಲಯ (ಪದವಿ) ಶಿಕ್ಷಣದ ಅನಕೂಲತೆಯು ಒದಗಿ ಬಂದಿರುವುದರಿಂದ ಹೆಣ್ಣುಮಕ್ಕಳ ವಿಷಯದಲ್ಲಿನ ಇಂದಿನ ಪ್ರಶ್ನೆಗಳು ವಿಶೇಷವಾಗಿ ನಿರ್ಮಾಣವಾಗುತ್ತಿರುವುದು ಕಂಡ ಬರುತ್ತದೆ. ಸುಶಿಕ್ಷಿತರು ಮತ್ತು ಉದ್ಯೋಗ ಮಾಡುತ್ತಿರುವ ಹೆಣ್ಣುಮಕ್ಕಳಿಗೆ ಇದು ಇಲ್ಲವೆ ಅದು ಎಂಬಂಥ ಕಾರಣಗಳಿಂದ ಜೊತೆಗಾರರು ಸಿಗುವುದು ಕಠಿಣವಾಗುತ್ತದೆ. ವಯಸ್ಸು ಮೀರಿ ಮದುವೆ ಕೂಡಿಬರುವುದು ಇನ್ನೂ ಕಠಿಣ. ನಮ್ಮ ಸಮಾಜದಲ್ಲಿ ೪೦-೪೫ ವರ್ಷ ವಯಸ್ಸಿನ ಪುರುಷರು ೨೦ ವರ್ಷ ವಯಸ್ಸಿನ ಹೆಣ್ಣುಮಕ್ಕಳ  ಕೈಹಿಡಿಯಲು ಅಪೇಕ್ಷಿಸುತ್ತಾರೆ. ಆಶ್ವರ್ಯವೆಂದರೆ ಅದು ಪೂರ್ಣವೂ ಆಗಿಬಿಡುತ್ತದೆ. ಆದರೆ ಇದಕ್ಕೆ ವಿರುದ್ಧವಾದ ಪ್ರಕ್ರಿಯೆ ನಡೆಯುವುದು ಮಾತ್ರ ಅಸಾಧ್ಯವೇ! ಯೋಗ್ಯ ವಯಸ್ಸಿನಲ್ಲಿ ವಿವಾಹದ ಅವಕಾಶವೂ ಒದಗಿಬರಲಿಲ್ಲವೋ ಆಯಿತು, ಅನಂತರ ವಿವಾಹ ಸಂಧಿಯು ಕೂಡಿ ಬರುವುದು ಮಾತ್ರ ಬಹಳ ಕಷ್ಟಕರ.

ಸರ್ವೆ ಸಾಧಾರಣವಾಗಿ ಪ್ರೌಢ ಕುಮಾರಿಕೆಯರು ಎಂದು ಮದುವೆ ಇಲ್ಲದೆ ಇರುವಂಥವರ ಹಿನ್ನಲೆಯನ್ನು ಕುರಿತು ವಿಚಾರ ಮಾಡಿದರೆ ಅಲ್ಲಿ ಕಾಣುವ ಪ್ರಮುಖ ವಿಚಾರಗಳು ಹೀಗಿವೆ:  ೧. ನೈಸರ್ಗಿಕತೆ ೨. ಸಾಮಾಜಿಕತೆ ೩. ಪರಿಸ್ಥಿತಿಜನ್ಯ ಕಾರಣಗಳು. ಅಂದರೆ ಹಾಸುಹೊಕ್ಕಾದ ಘಟಕಗಳಿಂದಾಗಿ ಮತ್ತು ವಾತಾವರಣದಿಂದಾಗಿ ಅವರಿಗೆ ಅಂಥ ಸ್ಥಿತಿಯು ಒದಗಿ ಬರುತ್ತದೆ. ಯಾವುದೋ ಒಂದು ಕಾರಣವಷ್ಟೇ ಇದರ ಹಿಂದಿದೆ ಎಂದು ಹೇಳುವುದಕ್ಕೆ ಬರುವುದಿಲ್ಲ. ಕೆಲವಾರು ಬಾರಿ ಅನೇಕ ಕಾರಣಗಳಿಂದಲೂ ಅವಿವಾಹಿತರಾಗಿ ಉಳಿಯ ಬೇಕಾಗುತ್ತದೆ.

ಸುಯೋಗ್ಯ ಆಯ್ಕೆಗಾಗಿ ವರನ ಕಡೆಯವರು ಬೇರೆ ಬೇರೆ ಮಂಡಳಿಗಳ ಮೂಲಕ ಜಾಹೀರಾತು ನೀಡವ ಪದ್ಧತಿಯು ದಿನೇ ದಿನೇ ಹೆಚ್ಚು ಜನಪ್ರಿಯವಾಗುತ್ತಲಿದೆ. ಈ ಜಾಹೀರಾತಗಳನ್ನು ಅಭ್ಯಸಿಸಿದಾಗ ಸುಸ್ವರೂಪ, ಅಂದಾಜು ಎತ್ತರ, ಕನ್ನಡಕ ಧರಿಸಿಲ್ಲದ ಹಾಗೂ ವಿಶಿಷ್ಟವಾಗಿ ಜಾತಿ ಮತ್ತು ಮನೆತನಗಳ ವಧುವು ಬೇಕೆಂದು ಬಹುಸಂಖ್ಯಾತರ ಅಪೇಕ್ಷೆಗಳಿರುತ್ತವೆ. ಅಲ್ಲದೆ ವಿಶಿಷ್ಟ ಸ್ಥಳದಲ್ಲಿಯೇ ಉದ್ಯೋಗದಲ್ಲಿರಬೇಕು ಎಂಬುದಕ್ಕೂ ಹೆಚ್ಚು ಪ್ರಾಧಾನ್ಯವಿರುತ್ತದೆ. ಹಾಗಾಗಿ ಸ್ಮಾರ್ಟ್, ತೆಳ್ಳಗೆ ಕನ್ನಡಕ ಧರಿಸಿಲ್ಲದ ಎಂಬ ಚೌಕಟ್ಟಿನಲ್ಲಿ ಬರದಿರುವ ವಿವಾಹೇಚ್ಚಿತ ಹೆಣ್ಣುiಕ್ಕಳಿಗೆ ಇಲ್ಲಿ ಮೊದಲಿಗೇ ‘ಇಷ್ಟವಿಲ್ಲ’ ಎಂಬ ಮುದ್ರೆಯು ಬಿದ್ದಿರುತ್ತದೆ. ಜಾಹಿರಾತನ್ನು ನೀಡದೆಯೇ ನೋಡುವುದಕ್ಕೆಂದು ಬಂದವರು ಬೇಡವಾದಂಥ ನೆಲೆಯಿಂದಲೇ ವಧುವಿಗೆ ಆಯ್ಕೆಯ ಕಾರ್ಯಕ್ಕೆ ತೊಡಗಿದಾಗ, ಇರುವುದೆಲ್ಲ ಬಹಳಷ್ಟು ಭಿನ್ನವಾದಂಥ ನಿಕಷವೇ. ಹುಡುಗನನ್ನು ವರ ಎಂಬ ವರ್ಗೀಕರಣದಲ್ಲಿ ನೋಡುವುದು ಆತನ ಕರ್ತೃತ್ವ ಮತ್ತು ಹಣವನ್ನು. ಆದರೆ ಹೆಣ್ಣನ್ನು ವಧು ಎಂಬುದಾಗಿ ನೋಡುವಲ್ಲಿ ಹೀಗೆ ನೋಡಬೇಕು ಎಂದು ನಿಶ್ಚಯವು ಇರುವುದರಿಂದ  ಆ ನಿಕಷಕ್ಕೆ ಹೊಂದದಿರುವ ಹೆಣ್ಣುಮಕ್ಕಳಿಗೆ ಮದುವೆ ಎಂಬುದು ತಾರುಣ್ಯದಲ್ಲಿನ ಒಂದು ಕನಸು. ಇದನ್ನು ಒಪ್ಪಿಕೊಂಡು ಆ ವಿಚಾರಗಳನ್ನು ಕೈಬಿಟ್ಟು ಬಿಡುವುದು ಅನಿವಾರ್ಯವಾಗಿ ಬಿಡುತ್ತದೆ.

ಶಾರೀರಿಕ ನ್ಯೂನ್ಯತೆ

ದೃಷ್ಟಿ, ಎತ್ತರ ಮತ್ತು ಬಣ್ಣ ಈ ವಿಚಾರಗಳು ಯಾರ ಕೈಯಲ್ಲಿಯೂ ಇಲ್ಲ. ಕಪ್ಪು ಬಣ್ಣ, ಕುರೂಪತ್ವ, ಉಬ್ಬು ಹಲ್ಲು, ಮೂಗಿನ ರೀತಿ, ಮೆಳ್ಳೆಗಣ್ಣು ಇತ್ಯಾದಿ ಸ್ವರೂಪಗಳು ನೈಸರ್ಗಿಕ ಕಾರಣಗಳಿಂದಾಗಿ ಉಂಟಾದುವು. ಅಲ್ಲದೆ ಅಂಗ ಊನತೆ, ಅಪಂಗತ್ವ, ಅಶಕ್ತತೆ, ಅಂಧತ್ವ, ಹಸಿವು, ಕಿವುಡು ಇವುಗಳಿಗೂ ಕೂಡ ಮದುವೆಯ ಬಜಾರಿನಲ್ಲಿ ಶೂನ್ಯ ಮೌಲ್ಯ ಮತ್ತು ಕೆಲವು ಬಾರಿ ವಜಾ ಮಾಡುವ ಕಾರಣಗಳಾಗಿವೆ. ಹಾಗಾಗಿ ಜೊತೆಗಾರ ಸಿಕ್ಕುವ ಅಪೇಕ್ಷೆಯನ್ನು ಹೊಂದುವುದೇ ಒಂದು ರೀತಿಯಲ್ಲಿ ಅನೈಸರ್ಗಿಕ ಎನಿಸುತ್ತದೆ. ಕೆಲವು ವೇಳೆ ಮಂದಬುದ್ದಿ, ಮಿದುಳಿನ ಅಪೂರ್ಣ ಬೆಳವಣಿಗೆ, ಮಾನಸಿಕ ಅಶಕ್ತತೆ ಇತ್ಯಾದಿ ಕಾರಣಗಳಿಂದಲೂ ಮದುವೆ ಸಾಧ್ಯವಾಗುವುದಿಲ್ಲ. ಅಂದರೆ ಶಾರೀರಿಕ ನ್ಯೂನ್ಯತೆ ಮತ್ತು ಮಾನಸಿಕ ವಿಕೃತಿಗಳಿಂದಾಗಿ ಅವಿವಾಹಿತರಾಗಿಯೇ ಉಳಿಯುವವರಿಗೆ ಸಾಮಾಜಿಕ ಮತ್ತು ಕೌಟುಂಬಿಕವಾಗಿ ಮಾನ್ಯತೆ ಇರುತ್ತದೆ. ಹಾಗಾಗಿ ಅವರು ಮದುವೆಯಾಗಲಿಲ್ಲ ಎಂಬ ಕಾರಣ ಮಾನಸಿಕವಾಗಿ ಬಹಳ ಕಿರಿಕಿರಿಯನ್ನು ಸಹಿಸುವ ಅಗತ್ಯ ಬರುವುದಿಲ್ಲ. ಮಾನಸಿಕ ತಯಾರಿಯ ಮೂಲಕ ಪ್ರಾಪ್ತ ಪರಿಸ್ಥಿತಿಯ ಎದುರು ಹೋಗುವ ಅಪೇಕ್ಷೆಯನ್ನು ಅಪರಿಹಾರ್ಯವೆಂಬಂತೆ ಅವರ ಮನಸ್ಸಿಗೆ ತರಲಾಗಿರುತ್ತದೆ.

ವರದಕ್ಷಿಣೆ, ಗೌರವ ಕಾಣಿಕೆ, ಬಂಗಾರದ ಆಭರಣಗಳು- ಇವುಗಳಿಗಾಗಿ ಆವಶ್ಯಕವಾದ ಹಣ ಇಲ್ಲದಿರುವುದರಿಂದಲೂ ಕುಟುಂಬದಲ್ಲಿ ಹೆಣ್ಣುಮಕ್ಕಳ ಮದುವೆಯನ್ನು ಹೊಂದಿಸುವುದು ಕಷ್ಟಕರವಾಗುತ್ತದೆ. ಬಡತನ ಮತ್ತು ಕುಟುಂಬದಲ್ಲಿನ ಮಕ್ಕಳ ಸಂಖ್ಯೆಯ  ಬಾಹುಳ್ಯ ಇವುಗಳಿಂದಾಗಿ ಮದುವೆಗೆ ಅವಶ್ಯವಾದಷ್ಟು ಆರ್ಥಿಕ ಅನುಕೂಲತೆಯನ್ನು ರೂಪಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗೆ ಮಾಡುತ್ತಿರುವ ಮನುಷ್ಯರಿಗೆ ಆಕಸ್ಮಿಕ ಮೃತ್ಯು ಅಥವಾ ಆಕಸ್ಮಿಕ ಆರ್ಥಿಕ ಅಡಚಣೆಯು ಬಂದೊದಗಿದರೆ ಆ ಕಾರಣವಾಗಿ ಆ ಕುಟುಂಬದಲ್ಲಿನ ಹುಡುಗಿಯ ಮೇಲೆ ಜವಬ್ದಾರಿಯು ಬಂದು ಬೀಳುತ್ತದೆ. ಉದ್ಯೋಗ ಅಂಥ ಹೆಣ್ಣಿನ ಮದುವೆಯನ್ನು ನಿಶ್ವಿತಗೊಳಿಸುವ ಕಾರಣೀಭೂತ ಘಟಕವೂ ಆಗಬಹುದು. ಹುಡುಗಿ ಗಳಿಸುವಂಥವಳಾದಳು ಎಂದರೆ, ಕುಟುಂಬದ ಸದಸ್ಯರಿಗೆ ಅವಳ ಗಳಿಕೆಯ ರುಚಿಯು ಹತ್ತುತ್ತದೆ. ವಿಶೇಷವಾಗಿ ದೊಡ್ಡಕುಟುಂಬ ಮತ್ತು ತಂದೆಯ ಪೆನ್‌ಶನ್ ಮೂಲಕ ಬದುಕುವವರಾಗಿದ್ದರೆ ಗಳಿಸುವ ಹೆಣ್ಣುಮಗಳ ಮದುವೆಯ ವಿಚಾರ ಬರುವುದು ಕೇವಲ ತಾಯಿಯ ಮನಸ್ಸಿನಲ್ಲಷ್ಟೆ. ಉಳಿದಂತೆ ಎಲ್ಲರೂ ಅವಳ ಮದುವೆಯಾಯಿತು ಎಂದರೆ ನಮ್ಮದು ಹೇಗೆ ನಡೆಯುತ್ತದೆ ಎಂಬ ವಿಚಾರದಿಂದ ಗ್ರಸ್ತರಾಗಿರುವವರೇ ಆಗಿರುತ್ತಾರೆ ಹೆಚ್ಚಾಗಿ. ಚಿಕ್ಕಮಕ್ಕಳ ಶಿಕ್ಷಣ, ಮನೆಯ ಖರ್ಚಿನ ಭರಿಸುವಿಕೆ ಮತ್ತು ತ್ಯಾಗದ ಭೂಮಿಕೆಯಲ್ಲಿ ಹೆಣ್ಣುಮಕ್ಕಳಿಗೆ ತಮ್ಮ ಮದುವೆಯ ಇಚ್ಚೆಯನ್ನು ವ್ಯಕ್ತಪಡಿಸುವುದು ಅಸಾಧ್ಯವೇ ಸರಿ. ಆರ್ಥಿಕ ಬಿಕ್ಕಟ್ಟು ಹೆಚ್ಚಾಗಬಾರದು, ಮಾನಸಿಕ ಸ್ವಾಸ್ಥ್ಯದಿಂದ ವಿಚಲಿತವಾಗಬಾರದು, ಕುಟುಂಬದಲ್ಲಿ ಸಂಕಷ್ಟ ಪರಿಸ್ಥಿತಿ ಉಂಟಾಗಬಾರದು ಮತ್ತು ಸಣ್ಣಮಕ್ಕಳ ಮನಸ್ಸಿನ ಮೇಲೆ ಈ ವಾತಾವರಣದ ಪರಿಣಾಮವೂ ಬಾಧಿಸಬಾರದು ಎಂಬ ಕಾರಣವಾಗಿ ಹೆಣ್ಣುಮಕ್ಕಳು ಮದುವೆಯ ವಿಚಾರವನ್ನು ಎತ್ತುವ ಧೈರ್ಯ ಮಾಡುವುದಿಲ್ಲ. ಹಾಗೊಮ್ಮೆ ಅದನ್ನು ಏರ್ಪಡಿಸುವುದಕ್ಕಾಗಿ ಮುಂದಾದರೆ ಕುಟುಂಬದಲ್ಲಿ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾಗುತ್ತದೆ. ಅಲ್ಲದೆ ಅದನ್ನು ಅರಿತ ತಂದೆ ಹಾಗೂ ಇತರೆ ಸದಸ್ಯರು ಉತ್ಸುಕರಾಗದ ಕಾರಣ ಕ್ರಮೇಣ ಈ ವಿಷಯ ಹಿಂದೆ ಹಿಂದೆ ಸರಿಯುತ್ತದೆ.

ರೂಢಿಗಳ ಪ್ರಭಾವ

ಜಾತಿ, ಗೋತ್ರ, ಧರ್ಮ, ಕುಂಡಲಿ ಇತ್ಯಾದಿ ವಿಷಯಗಳು ಇಂದಿಗೂ ಮದುವೆಯ ಸಂಬಂಥದಲ್ಲಿ ಪ್ರಭಾವೀ ಅಂಶಗಳಾಗಿವೆ. ಹುಡುಗಿ ಇಷ್ಟವಾಗದೆ ಇದ್ದರೆ ಬರುವ ಮೊದಲ ಕಾರಣ ಜಾತಕ-ಕುಂಡಲಿ ಕೂಡಿಬರುವುದಿಲ್ಲ. ಇದೊಂದು ಎಲ್ಲರಿಗೂ ಇರುವ ಪರಿಣಾಮಕಾರಿ ಅಸ್ತ್ರ. ವಂಶ, ಮನೆತನ, ಆರ್ಥಿಕ ಅನುಕೂಲತೆ, ಸಂಬಂಧ ಕೂಡಿಬರುವುದು ಈ ಮುಂತಾದುವುಗಳೆಡೆ ದೃಷ್ಟಿಸುವವರೂ ಹೆಚ್ಚಾಗಿದ್ದಾರೆ. ಹೆಣ್ಣುಮಕ್ಕಳ ವಿಷಯದಲ್ಲಿ ವಯಸ್ಸು ಕೂಡಾ ಬಹಳ ಮಹತ್ವದ ಘಟ್ಟ. ವರನಿಗಿಂತಲೂ ವಧುವಿನ ವಯಸ್ಸು ವಿಶಿಷ್ಟವಾಗಿ ವರ್ಷಕ್ಕಿಂತಲೂ ಕಡಿಮೆ ಇರಬೇಕು ಎಂದು ಒತ್ತಾಯ ಮಾಡುವವರೂ ಇದ್ದಾರೆ.

ಹೆಣ್ಣುಮಗಳ ವಯಸ್ಸು ಹೆಚ್ಚಾಯಿತು ಮತ್ತು ಪರಿಸ್ಥಿತಿಜನ್ಯ ಕಾರಣಗಳಿಂದ ಅವರ ವಿವಾಹ ಕೂಡಿ ಬರಲಿಲ್ಲ. ಆಗ ಅಂಥ ಹೆಣ್ಣಿನ ವಿಷಯದಲ್ಲಿ ಮದುವೆ ಆಗದಿರುವುದಕ್ಕೆ ಯಾವ ಕಾರಣಗಳಿವೆ ಎಂಬುದನ್ನೂ ಶೋಧಿಸಲಾರಂಭಿಸುತ್ತಾರೆ. ಅಲ್ಲದೆ ಅವಳ ಚಾರಿತ್ರ್ಯದ ಬಗೆಯೂ ನಿಜ-ಸುಳ್ಳು ಸಂಗತಿಗಳನ್ನು ಹರಡಲಾಗುತ್ತದೆ. ಅದರೊಂದಿಗೆ ಆ ಹೆಣ್ಣುಮಗಳ ವಿವಾಹ ಇಷ್ಟು ವರ್ಷಗಳಾದರೂ ಕೂಡಿ ಬರಲಿಲ್ಲ ಎಂದರೆ, ಮೂಲತಃ ಅವಳಲ್ಲಿಯೇ ಏನಾದರೂ ದೋಷವಿದ್ದಿರಬೇಕು ಎಂಬುದಾಗಿಯೂ ಗ್ರಹಿಸಲಾಗುತ್ತಿರುವುದು ಗಮನಾರ್ಹ. ಹಾಗಾಗಿ ಅವಳನ್ನು ನೋಡುವ ಕಾರ್ಯಕ್ರಮವೇನೋ ಜರುಗುತ್ತದೆ, ಆದರೆ ತಿರಸರಿಸಿ ಕ್ರೂರ ಚೇಷ್ಟೆಯನ್ನು ಮಾಡುವಂಥ ಪ್ರಯತ್ನವನ್ನು ಕೂಡಾ ವರನ ಪಕ್ಷದ ಸದಸ್ಯರ ಕಡೆಯಿಂದ ವ್ಯಕ್ತವಾಗುತ್ತದೆ. ಮಾತ್ರವಲ್ಲ, ಮಧ್ಯಸ್ಥಿಕೆದಾರರ ಮೂಲಕ ಅವಳನ್ನು ನಿರಾಕರಿಸಿದ ಕಾರಣಗಳನ್ನು ಆ ಕುಟುಂಬದವರೆಗೆ ಹೇಗೆ ತಲುಪಿಸಬೇಕು ಎಂಬ ಬಗೆಯೂ ವಿಶೇಷ ಕಾಳಜಿಯನ್ನು ವಹಿಸಲಾಗುತ್ತದೆ. ತೋರಿಸುವುದು ಮತ್ತು ನೋಡುವುದು ಈ ಬಗೆಯಲ್ಲಿ ಅನೇಕ ಬಾರಿ ಭಾಗಿಯಾಗಿ ನಿರಾಶೆಯನ್ನೇ ಸೆರಗಿನಲ್ಲಿ ಕಟ್ಟಿಕೊಂಡ ಮೇಲೆ ಮತ್ತೆ ಮತ್ತೆ ಈ ಪ್ರಸಂಗದ ಎದುರು ಹೋಗುವಲ್ಲಿ ಅಸಹನೀಯತೆ ಮತ್ತು ಹಿಂಜರಿಕೆಯು ನಿರ್ಮಾಣವಾಗುತ್ತದೆ. ಕೆಲವೊಂದು ಬಾರಿ ತಾಯಿ-ತಂದೆಯರು ಅಂತರಜಾತಿಯವರಾಗಿದ್ದು ವಿವಾಹವಾಗಿರುತ್ತಾರೆ. ಆಗ ತಾಯಿ, ಅಜ್ಜ, ಅಜ್ಜಿ, ಚಿಕ್ಕಮ್ಮ ಇವರ ಪೈಕಿ ಯಾರನ್ನಾದರೂ ಒಳ್ಳೆಯವರು ಎಂದು ಹೇಳದೆ ಇದ್ದರೆ ಹುಡುಗಿಯೂ ಹಾಗೆಯೇ ಇದ್ದಿರಬೇಕು ಎಂಬ ನೆಲೆಯಿಂದಲೂ ಅವಳನ್ನು ನಿರಾಕರಿಸಲಾಗುತ್ತದೆ.

ವರನ ಬಗೆಗಿನ ಅಪೇಕ್ಷೆಗಳು

ಸುಶಿಕ್ಷಿತರು, ಆರ್ಥಿಕ ದೃಷ್ಟಿಯಿಂದ ಸ್ವಾವಲಂಬಿ ಮತ್ತು ವಿಚಾರ ಸ್ವಾತಂತ್ರ್ಯವುಳ್ಳ ಹೆಣ್ಣುಮಕ್ಕಳಿಗೆ ಪತಿಯ ವಿಷಯದಲ್ಲಿ ವಿಶಿಷ್ಟವಾದ ದೊಡ್ಡ ಅಪೇಕ್ಷೆಗಳಿವೆ. ಯಾವರೀತಿಯಲ್ಲಿ  ವಧು ಆಯ್ಕೆಗಾಗಿ ಜಾಹಿರಾತನ್ನು ನೀಡಲಾಗುತ್ತದೆಯೋ ಅದರಂತೆಯೇ ವರನ ಬಗ್ಗೆಯೂ ಸ್ಪಷ್ಟ ಅಪೇಕ್ಷೆಗಳು ವ್ಯಕ್ತವಾಗುವ ಜಾಹಿರಾತಿನ ಪ್ರಮಾಣಗಳು ಹೆಚ್ಚಾಗುತ್ತಿವೆ. ಅಂದರೆ ಪತಿಯ ಸಂಬಂಧವಾಗಿ ಅಪೇಕ್ಷಿಸುವ ಮತ್ತು ಆಯ್ದುಕೊಳ್ಳುವ ಹುಡುಗಿಯ ಅಧಿಕಾರವನ್ನು ಯಾವುದೇ ಕಾರಣದಿಂದಲೂ ನಿರಾಕರಿಸುವ ಅಥವಾ ಆ ದೃಷ್ಟಿಕೋನವನ್ನು ತಪ್ಪು ಎಂದು ಭಾವಿಸುವುದು ಅಪ್ರಸ್ತುತ ಮತ್ತು ಅನೈಸರ್ಗಿಕ ಎಂದೆನಿಸುತ್ತದೆ. ಆದರೆ ಬೆಳೆದಿರುವಂಥ ಅವರ ಅಪೇಕ್ಷೆಯನ್ನು ಅತಿರೇಕವಾಗಿವೆ ಮತ್ತು ಅವುಗಳನ್ನು ಹುಡುಗನೆಂದು ‘ವರ’ನನ್ನು ನಿರಾಕರಿಸುವ ಪ್ರಯತ್ನ ಮಾಡಿದರೆಂದರೆ, ಅವರ ಈ ಪ್ರವೃತ್ತಿಯು ಶೀಘ್ರವಾಗಿ ಒಂದಲ್ಲ ಒಂದು ಮಾರ್ಗಗಳಿಂದ ಎಲ್ಲೆಡೆ ಚರ್ಚಿತವಾಗುವುದು ಸಹಜ. ಅವರ ಈ ವರ್ತನೆಯು ನಮ್ಮ ರೂಢಿಪ್ರಿಯ ಸಮಾಜಕ್ಕೆ ಮತ್ತು ಮದುವೆಗೆ ಒಂದು ವ್ಯಾಪಾರೀ ಸ್ವರೂಪ ಬಂದುದರಿಂದ ಮತ್ತೊಂದು ಪಾರ್ಟಿಗೆ ಇದು ಉದ್ಧಟತನದ್ದಾಗಿಯೇ ಕಾಣಿಸುತ್ತದೆ. ಇಂಥ ಹುಡುಗಿಯನ್ನು ಮದುವೆಯಾದರೆ ನಾನು ಸುಖವಾಗಿರಲಾರೆ ಎಂಬ ಖಾತ್ರಿಯು ವಿವಾಹೇಚ್ಛಿತ ವರನಲ್ಲಿ ಬರುವುದುಂಟು. ಇಂಥ ಸ್ವತಂತ್ರ ಪ್ರವೃತ್ತಿಯ ಹುಡುಗಿಯನ್ನು ವಿವಾಹ ಮಾಡಿಕೊಂಡರೆ ನಮ್ಮ ಹುಡಗನನ್ನು ಅವಳು ನಮ್ಮಿಂದ ದೂರ ಮಾಡಿಬಿಡುತ್ತಾಳೆ ಮತ್ತು ಮುಪ್ಪಿನಲ್ಲಿ ಸ್ವಲ್ಪ ಸುಖವೂ ಸಿಕ್ಕುವುದಿಲ್ಲ ಎಂಬುದು ದೃಢವಾಗಿ, ವರನ ತಂದೆ ತಾಯಿಗಳು ಆ ದಾರಿಗೆ ಹೋಗುವುದೇ ಬೇಡ ಎಂಬ ವ್ಯಾವಹಾರಿಕ ಮಾರ್ಗವನ್ನು ಸ್ವೀಕರಿಸುತ್ತಾರೆ.

ಕೆಲವಾರು ಹೆಣ್ಣುಮಕ್ಕಳಿಗೆ ಡಾಕ್ಟರ್ ಅಥವಾ ಇಂಜಿನಿಯರ್ ಆಗಿರುವಂಥ ಪತಿಯೇ ಬೇಕಾಗಿರುತ್ತದೆ. ನಗರದಲ್ಲಿ ವಾಸವಾಗಿದ್ದು ಕಾರು ಮತ್ತು ಬಂಗಲೆಗಳನ್ನು ಹೊಂದಿರುವ ಮತ್ತು ಯಾರೂ ಸಂಬಂಧಿಗಳಿಲ್ಲದ ಎಂಬಿತ್ಯಾದಿ ಶರತ್ತುಗಳನ್ನು ಹುಡುಗಿಯರು ಹಾಕುವುದುಂಟು. ಎತ್ತರ ಕಡಿಮೆ, ಅತ್ತೆ ಕಠಿಣ ಸ್ವಭಾವದವಳು, ವರನಿಗೆ ಮದುವೆಯಾಗಿಲ್ಲದ ಸೋದರಿಯರಿದ್ದಾರೆ ಅಂದರೆ ಜವಾಬ್ದಾರಿ ಬಹಳ ಎಂಬ ಕಾರಣವಾಗಿಯೂ ತಮ್ಮ ಕೋಪವನ್ನು ವ್ಯಕ್ತಪಡಿಸುವ ತರುಣಿಯರಿದ್ದಾರೆ. ಆದರೆ ಅವರೆಲ್ಲ ಆರ್ಥಿಕ ದೃಷ್ಟಿಯಿಂದ ತಮ್ಮ ಕಾಲ ಮೇಲೆ ತಾವು ನಿಂತುಕೊಂಡಿರುವಂತಹ ಸ್ವಾವಲಂಬಿಗಳು. ಆದರೂ ಮುಂದೆ ಮುಂದೆ ಕಾಲ ಸರಿದಂತೆ ಮದುವೆಯ ಬಜಾರಿನಲ್ಲಿ ಅವರ ಬೆಲೆ ಕಡಿಮೆಯಾಗುತ್ತಾ ಹೋಗುವುದು. ಅನಂತರ ಅವರು ತಮ್ಮ ಶರತ್ತುಗಳು ಮತ್ತು ಆಗ್ರಹಳಂಥ ಸಂಗತಿಗಳನ್ನು ಪಕ್ಕಕ್ಕೆ ಸರಿಸಿ ಮದುವೆಗಾಗಿ ಕೆಳಕ್ಕೆ ಇಳಿಯುತ್ತಾರೆ. ಆದರೆ ಆ ಹೊತ್ತಿಗೆ ವಯಸ್ಸು ಹೆಚ್ಚಾಗಿರುವುದರಿಂದ ಅದರ ಹಂಬಲಗಳ (ಇಚ್ಚೆ) ಪ್ರವೃತ್ತಿಯು ಮದುವೆಯನ್ನು ಹೊಂದಿಸುವುದರಲ್ಲಿ ಉಪಯೋಗಕ್ಕೆ ಬರುತ್ತದೆ ಎಂದೇನಿಲ್ಲ. ಅದರಲ್ಲಿಯೂ ಒಬ್ಬ ಬಡವಿ, ಪ್ರತೀಕ್ಷೆ ಮಾಡುವಾಕೆ ಮತ್ತು ದುಡಿಯುತ್ತಿರುವವಳು ಎಂಬ ಕಾರಣದಿಂದ ಯಾರಾದರೊಬ್ಬ ಪುರುಷ ಉಪಕಾರದ ಭಾವನೆಯಿಂದ ಅವಳನ್ನು ವರಿಸಲು ಮುಂದಾಗಬಹುದು. ಆದರೆ ಅಂಥ ಉದಾಹರಣೆಗಳು ಬಹಳಷ್ಟು ಸಿಕ್ಕುವುದಿಲ್ಲ.

ದುಡಿಯದೆ ಇರುವವರ ಬಗೆಗಿನ ನಿಂದನೆಗಳು

ನೌಕರಿಯಲ್ಲಿದ್ದೋ ಅಥವಾ ಅನ್ಯಮಾರ್ಗದಲ್ಲಿ ದುಡಿದೋ ಹಣ ಗಳಿಸಲಾದ ಪ್ರೌಢ ಕುಮಾರಿಕೆಯರು ಕುಟುಂಬಕ್ಕೆ ಹೊರೆಯಾಗಿರುತ್ತಾರೆ. ಕುಟುಂಬದಲ್ಲಿ ಅನಾವಶ್ಯಕ ವ್ಯಕ್ತಿ ಎಂಬುದಾಗಿ ದೃಷ್ಟಿಸುತ್ತಾರೆ ಅವರೆಡೆಗೆ. ತಾಯಿತಂದೆಯರಿಗೂ ಅವರ ಅಸ್ತಿತ್ವದಿಂದ ತೊಂದರೆ ಯಾಗುವಂಥ ಉದಾಹರಣೆಗಳೂ ಇವೆ. ಅವರು ಭಾವನೆಯ ಸುಖಕ್ಕೆ ಹತ್ತಿಕೊಂಡಿರುವ ಗ್ರಹಗಳು ಎಂಬುದಾಗಿ ಅವರ ಬಗ್ಗೆ ಪ್ರತಿಮೆಗಳನ್ನು ರೂಪಿಸಿರುವುದೂ ಉಂಟು. ಕುಟುಂಬದಲ್ಲಿನ ವಿವಾಹ ಕಾರ್ಯಗಳು, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಮಾರಂಭಗಳಲ್ಲಿ ಅವರು ಹೆಚ್ಚು ಭಾಗವಹಿಸಬಾರದು ಎಂಬ ಅಪೇಕ್ಷೆಯೂ ವ್ಯಕ್ತವಾಗುತ್ತದೆ ಎಲ್ಲರಲ್ಲಿ. ಕೆಲವರಂತೂ ಹಾಗೆ ನೇರವಾಗಿ ಸೂಚಿಸುವುದೂ ಉಂಟು. ಆದರೆ ಅವರ ಮನಸ್ಸು ಮತ್ತು ಭಾವನೆಗಳ ವಿಚಾರವೇನು ಎಂಬುದನ್ನು ಕುರಿತು ಯಾರೂ ಆಲೋಚಿಸುವುದೇ ಇಲ್ಲ. ಅಂದರೆ ಇಂಥ ಘಟನೆಗಳು ಎಲ್ಲ ಕುಟುಂಬಗಳಲ್ಲೂ ಸಹಜ ಎಂದು ಹೇಳುವಂತಿಲ್ಲ, ಆದರೆ ಹೆಚ್ಚುಕಮ್ಮಿ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾದ ಮಾತುಗಳಲ್ಲಿಯೂ ವ್ಯಕ್ತವಾಗುವುದಿಲ್ಲ. ಇನ್ನು ಅವರ ಬಗೆಗಿನ ಪ್ರೀತಿ ಕಾಳಜಿಗಳಲ್ಲಿಯೂ ಆ ಸಹಾನೂ ಭೂತಿಯು ಕಾಣಸಿಗದು. ಬದಲಾಗಿ ಕುಚೇಷ್ಟೆ ಮತ್ತು ನಡತೆಯ ಬಗ್ಗೆ ಅಸಮ್ಮತಿ ವ್ಯಕ್ತವಾಗುವುದು ಸ್ಪಷ್ಟವಾಗಿ ಗೋಚರಿಸುತ್ತಿರುತ್ತದೆ. ಅಲ್ಲದೆ ಅವರ ಮೇಲೆ ಅನೇಕ ನಿರ್ಬಂಧಗಳನ್ನು ಹೇರಿ ಅವರಲ್ಲಿ ಏಕೆ ಬೇಕು ಇಂಥ ಜೀವನ ಎಂಬ ಭಾವನೆಗಳು ಹುಟ್ಟುವಂಥ ಸಂಭವವೂ ಉಂಟು. ಇನ್ನು ಅವರು ಹಾಗೆ ಬದುಕಬೇಕೆಂಬುದರ ವಿಚಾರವು ಕುಟುಂಬದ ಎಲ್ಲರ ಅಪೇಕ್ಷೆಯೂ ಹೌದು. ಜೊತೆಗೆ ಉದ್ಯೋಗವಿಲ್ಲದ ಅಥವಾ ಗಳಿಸಲಾರದಂಥ ಪ್ರೌಢ ಕುಮಾರಿಕೆಯರು ಕುಟುಂಬದಲ್ಲಿ ಯಾವುದಾದರೂ ಕೆಲಸವನ್ನು ಮಾಡಲೇಬೇಕಾದ್ದು ಅವಶ್ಯ. ಪ್ರತಿ ಉತ್ತರಗಳನ್ನು ನೀಡವಂತಿಲ್ಲ, ಎಲ್ಲ ಹಂತಗಳಲ್ಲೂ ಮುಂದೆ ಮುಂದೆ ಹೋಗಿ ಎಲ್ಲರ ಸೇವೆ ಮಾಡಬೇಕು. ಎಲ್ಲೆಲ್ಲಿ ಶಾರೀರಿಕ ಬಲದ ಆವಶ್ಯಕತೆ ಇರುವುದೋ ಅಲ್ಲೆಲ್ಲ ಅವರಿಗೆ ಬೆಂಬಲವಾಗಿ ನಿಲ್ಲುವುದನ್ನು ಒಪ್ಪಿಕೊಂಡಿರಬೇಕು ಎಂಬ ಅಪೇಕ್ಷೆಯೂ ಇಲ್ಲಿರುತ್ತದೆ. ಖಾಯಿಲೆಯಾದವರ ಸೇವೆಯೂ ಅವರಿಗೆ ಮೀಸಲಾಗಿ ಇಟ್ಟಿರುವಂಥ ಮುಖ್ಯ ಕೆಲಸ.

ಶಾರೀರಿಕ ಮತ್ತು ಮಾನಸಿಕವೂ ಆದ ಇಂಥ ಕಷ್ಟಗಳು ಹಾಗೂ ಎಡರುಗಳಿಂದ ರೋಸಿಹೋಗಿ ಕೆಲಮೊಮ್ಮೆ ಅವರ ಮಾನಸಿಕ ಸಮತೋಲನ ತಪ್ಪಿಹೋಗುವುದು. ಜೊತೆಗೆ ನೈತಿಕ ದೃಷ್ಟಿಯಿಂದಲೂ ಅಧಃಪತನ ಉಂಟಾಗುವುದಲ್ಲದೆ ಮಾನಸಿಕವಾಗಿ ವಿಕೃತಿಯು ಆವರಿಸುವ ಅಪಾಯವೂ ಉಂಟು. ಕೌಟುಂಬಿಕ ಪ್ರೇಮವು ದಕ್ಕದಿರುವಾಗ, ಅತ್ತ ಸಾಮಾಜಿಕ ಪ್ರತಿಷ್ಠೆಯು ಸಾಧ್ಯವಾಗದ್ದರಿಂದ ಸಂಬಂಧಿಗಳ ಉಪೇಕ್ಷೆಯನ್ನು ಸಹಿಸಬೇಕಾಗುತ್ತದೆ. ಸಮವಯಸ್ಕ ಸ್ನೇಹಿತೆಯರು ಸಂಸಾರಸ್ಥರಾಗಿರುತ್ತಾರೆ. ಆದರೆ ಇವರಿಗೆ ಹಬ್ಬ-ಸಮಾರಂಭಗಳು, ಕಾರ್ಯಕ್ರಮ-ವಿಧಿಗಳಲ್ಲೆಲ್ಲ ಸಹಯೋಗ ಹೊಂದಿ ಮನಸಾರೆ ಆನಂದವನ್ನು ಅನುಭವಿಸುವ ಅವಕಾಶವು ಸಿಕ್ಕುವುದಿಲ್ಲ. ಹಾಗಾಗಿ ಅವರಲ್ಲಿ ಒಂಟಿನತದ ಭಾವನೆಗಳು ಗಂಭೀರವಾಗಿ ಬೆಳೆಯುತ್ತಲೇ ಹೋಗುತ್ತವೆ. ಆಧಾರ ರಹಿತವಾದ ಜೀವನದಲ್ಲಿ ಬದುಕಬೇಕಾದ ಕಲ್ಪನೆಯಿಂದ ಅವರಲ್ಲಿ ಮನಸ್ಸಿನಲ್ಲಿ ಶೂನ್ಯತೆಯು ಆವರಿಸುತ್ತದೆ. ಇದರಿಂದಾಗಿ ಅವರು ನಡೆದುಕೊಳ್ಳುವ ರೀತಿಯಲ್ಲಿ ಅಸಂಭವನೀಯ ಮತ್ತು ಚಮತ್ಕಾರಗೊಳಿಸುವಂಥ ಮೋಸಗಳೂ ನಿರ್ಮಾಣವಾಗುತ್ತದೆ. ಆರಂಭದಲ್ಲಿ ಕುಟುಂಬ ಮತ್ತು ಸಮಾಜದೆಡೆಯಿಂದ ಅವರಿಗೆ ಸಿಕ್ಕುವ ಸಹಾನುಭೂತಿ ಮತ್ತು ಆತ್ಮೀಯತೆಯು ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ಹೇಗ್ಹೇಗೆ ವಯಸ್ಸು ಬೆಳೆಯುತ್ತಾ ಹೋಗುತ್ತದೆಯೋ ಮತ್ತು ಶಾರೀರಿಕವಾಗಿ ಕಷ್ಟಪಡುವಂಥ ಚೈತನ್ಯವೂ ಕಡಿಮೆಯಾಗುತ್ತಾ ಹೋಗುತ್ತದೆಯೋ ಹಾಗ್ಹಾಗೇ ಅವರ ಸ್ಥಿತಿಯೂ ಅತ್ಯಂತ ದಯನೀಯವಾಗುತ್ತಾ ಹೋಗುತ್ತದೆ.

ಏಕಾಂಗಿ ಮತ್ತು ಅಸುರಕ್ಷಿತ ಪ್ರೌಢ ಕುಮಾರಿಕೆಯರು

ಉದ್ಯೋಗದಲ್ಲಿ ಇದ್ದುಕೊಂಡು ಆರ್ಥಿಕ ದೃಷ್ಟಿಯಿಂದ ಸ್ವತಂತ್ರರಾಗಿರುವ ಕುಮಾರಿಕೆಯರ ಪರಿಸ್ಥಿತಿಯು ಸ್ವಲ್ಪಮಟ್ಟಿಗೆ ಭಿನ್ನವಾಗಿರುತ್ತದೆ. ಅವರ ದಡಿಮೆಯನ್ನೇ ಪೂರ್ಣವಾಗಿ ಅವಲಂಬಿಸಿರುತ್ತದೆ ಕುಟುಂಬ. ಅವರ ಅಗತ್ಯ ಕುಟುಂಬಕ್ಕೆ ಬಹಳ. ಆ ಕಾರಣ ಅವರ ಪರಿಗಣನೆಯು ಮನೆಯಲ್ಲಿ ಇರುತ್ತದೆ. ಅವರು ತಮ್ಮ ಮನೆಯಲ್ಲಿ ಒಂದು ರೀತಿಯಲ್ಲಿ ಬೆದರಿಕೆಯುಂಟು ಮಾಡುವವರು ಆಗಿರುತ್ತಾರೆ. ಅವರ ಅಭಿಪ್ರಾಯಕ್ಕೆ ಬೆಲೆಯೂ ಇರುತ್ತದೆ ಮನೆಯೊಳಗೆ. ತಾಯಿತಂದೆಯರೂ ಕೂಡಾ ಅವರ ಅಡಿಯಲ್ಲಿ ಇರುತ್ತಾರೆ. ಆದರೂ ಆರಂಭಕ್ಕೆ ಅವರ ತ್ಯಾಗವನ್ನು ಗೌರವಿಸಲಾಗುವುದು. ಅವರ ಕಷ್ಟ, ಸಂಸಾರಕ್ಕಾಗಿ ಹಾತೋರೆಯುವ ಪ್ರವೃತ್ತಿ, ಸಹೋದರ ಸಹೋದರಿಯರ ಮೇಲಣ ವಾತ್ಸಲ್ಯ, ತಾಯಿತಂದೆಯರ ಬಗೆಗಿನ ಅವರ ಕಾಳಜಿ ಈ ಎಲ್ಲ ವಿಚಾರಗಳನ್ನು ಇಟ್ಟುಕೊಂಡು ಅವರನ್ನು ಸ್ತುತಿಸುವುದೂ ಉಂಟು. ಅವರ ವಿಷಯದಲ್ಲಿ ಅತ್ಯಂತ ಕೃತಜ್ಞತೆ ಮತ್ತು ಆದರದ ಭಾವನೆಗಳಿರುತ್ತದೆ. ಆದರೆ ಕೆಲವಾರು ವರ್ಷಗಳ ಅನಂತರ ವಿಶೇಷವಾಗಿ ಆ ಹುಡುಗಿ ತನಗಾಗಿ ಸ್ವಲ್ಪ ಹೆಚ್ಚು ಹಣವನ್ನು ಖರ್ಚುಮಾಡಲು ತೊಡಗಿದಂತೆ, ಸ್ನೇಹಿತೆಯರೊಂದಿಗೆ ಕೆಲವಾರು ಬಾರಿ ಬೇರೆಡೆ ಭೋಜನಕ್ಕೆ ಹೋಗುವುದು, ಪ್ರವಾಸ ಮತ್ತು ಬೇರೆ ಬೇರೆ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾರಂಭಿಸಿದರೆ ಇರುಸುಮುರುಸು ಆರಂಭ. ಹಾಗೆಯೇ ಮುಪ್ಪಿನ ಕಾಲಕ್ಕೆ ಅನುಕೂಲವಾಗುತ್ತದೆ ಎಂದು ನಿಯಮಿತವಾಗಿ ಉಳಿತಾಯ ಮಾಡಲಾರಂಭಿಸಿ ಮನೆಯ ಖರ್ಚಿಗೆ ಸ್ವಲ್ಪ ಕೈ ಬಿಗಿಹಿಡಿದಳೆಂದರೆ ಅವಳು ಅದರ ಬಗ್ಗೆ ಇಷ್ಟವಿಲ್ಲದಂತಹ ಮಾತುಗಳನ್ನು ಕೇಳಬೇಕಾದ್ದು ಅನಿವಾರ್ಯ. ಅದರ ಬಗ್ಗೆ ಸದಸ್ಯರಿಂದ ಕೋಪವೂ ವ್ಯಕ್ತವಾಗುವುದುಂಟು. ಆಗ್ಗೆ ವ್ಯಕ್ತವಾಗುವ ಭಾವನೆಗಳೆಂದರೆ,  ‘ನಾವೇನು ಅವಳನ್ನು ಕೈಬಿಟ್ಟು ಬಿಡುತ್ತೇವೆಯೇ’? ಈಗ ಜೀವನಪೂರ್ತಿ ಹೊಣೆ ಹೊತ್ತಿರುವಾಗ ಕೈಬಿಗಿ ಮಾಡಿ ವರ್ತಿಸುವ ಅಗತವಾದರೂ ಏನು? ಇಂಥ ಪರಿಸ್ಥಿತಿಯಲ್ಲಿ ತಾಯಿ-ತಂದೆಯರು ಸಹಮತ ಹೊಂದಲೇ ಬೇಕಾಗುತ್ತದೆ. ಇದಲ್ಲದೆ ಒಂದೊಮ್ಮೆ ತಮ್ಮನ ಮದುವೆಯಾಗಿದ್ದರೆ ಪ್ರೌಢ ಕುಮಾರಿಕೆ(ಅಕ್ಕ)ಯು ಕುಟುಂಬದಲ್ಲಿ ವಾದಗ್ರಸ್ತೆಯೇ ಹೌದು. ಇನ್ನು ತಮ್ಮ-ತಂಗಿಯರುಗಳ, ಪತ್ನಿ-ಪತಿಯರೊಂದಿಗಿನ ಸಂಬಂಧದಲ್ಲಿ ಆತಂಕ ಮತ್ತು ತಾಯಿ-ತಂದೆಯರ ದಯನೀಯ ಪರಿಸ್ಥಿತಿಯು ಇಂಥದರ ನಿರ್ಮಾಣದಲ್ಲಿ ಮುಖ್ಯ ವಿಷಯವಾಗಿರುತ್ತಾಳೆ. ನಾದಿನಿ-ಭಾವಂದಿರ ಬಗ್ಗೆ ಸಂಶಯಾತ್ಮಕತೆ, ಅನಿಷ್ಟವಾದ ಸ್ಪರ್ಧೆ, ಅತ್ಯಾಕಾಂಕ್ಷೆ ಹಾಗೂ ಸಂಸಾರದ  ಸುಖಕ್ಕೆ ಎರವಾಗುವುದೂ ಉಂಟು. ಪರಿಣಾಮವಾಗಿ ಕೌಟುಂಬಿಕ ಕಲಹ ಮತ್ತು ಗಂಭೀರ ಪರಿಸ್ಥಿತಿಯುಂಟಾಗಿ ಅವರು ಕೊನೆಗೆ ಆರ್ಥಿಕ ದೃಷ್ಟಿಯಿಂದ ಸ್ವತಂತ್ರರಿರುವುದರಿಂದ ಪ್ರತ್ಯೇಕವಾಗಿ ಇರುವಂಥ ನಿರ್ಣಯ ಕೈಗೊಳ್ಳಬಹುದು.

ಪ್ರೌಢ ಕುಮಾರಿಕೆಯರು ಸಮಾಜದಲ್ಲಿ ಅತ್ಯಂತ ಎಚ್ಚರಿಕೆಯಿಂದ ನಡೆದುಕೊಳ್ಳುವುದು ಅಗತ್ಯ. ಮಂಗಳಸೂತ್ರ ಧರಿಸಿರುವ ವಿವಾಹಿತ ಸ್ತ್ರೀಯರು ಸೌಭಾಗ್ಯಾದಿ ಅಲಂಕಾರಗಳ ಆಧಾರದಿಂದ ಹೇಗೆ ವರ್ತಿಸಿದರೂ ಸಮಾಜಕ್ಕೆ ಅವರ ಬಗ್ಗೆ ನಿರಪೇಕ್ಷ್ಯ. ಅಥವಾ ವಿವಾಹಿತ ಸ್ತ್ರೀಯರ ಅಂಥ ವರ್ತನೆ ಸಂಭವನೀಯವಾದುದೆಂದು ತಿಳಿದು ಅದರ ಬಗ್ಗೆ ಚರ್ಚೆಯನ್ನೂ ಮಾಡುವುದಿಲ್ಲ. ಆದರೆ ಪ್ರೌಢ ಕುಮಾರಿಕೆಯರ ಕಡೆಗೆ ಮಾತ್ರ ಎಲ್ಲರ ಕಣ್ಣು ನೆಟ್ಟುಕೊಂಡೇ ಇರುತ್ತದೆ. ಕೆಲವರಂತೂ ಅವರ ಪರಿಸ್ಥಿತಿಯ ದುರ್ಲಾಭ ಪಡೆಯುವ ಸಂಧಿಯ ದಾರಿಯನ್ನೇ ಕಾಯುತ್ತಿರುತ್ತಾರೆ. ಮತ್ತೆ ಕೆಲವರಿಗೆ ಅವರ ವಿಷಯವನ್ನೇ ಜಗಿಯುವ, ಮೆಲುಕು ಹಾಕುವ ವ್ಯಸನ ಉಂಟಾಗಿರುತ್ತದೆ. ಮದುವೆಯಾಗದಿರುವುದಕ್ಕೆ ಕಾರಣ ಪೂರ್ವಜನ್ಮದ ಪಾಪವೆಂದು ತಿಳಿದು ಅವರು ಹೆಜ್ಜೆಹೆಜ್ಜೆಗೂ ವರ್ತಿಸಬೇಕಾಗುತ್ತದೆ ಎಂಬ ಅಪೇಕ್ಷೆ. ನಿಜಾನಿಜವಾದ ಹಾರು ಸುದ್ದಿಗಳನ್ನು ಪ್ರಚಾರ ಮಾಡುತ್ತಾ ಅವರನ್ನು ಹಂಗಿಸುತ್ತಿರಲಾಗುತ್ತದೆ. ನೈತಿಕ ಬಂಧನಗಳು, ರೂಢಿ ಮತ್ತು ಆಚರಣೆಗಳ ಪಾಶವನ್ನು ಪ್ರೌಢ ಕುಮಾರಿಕೆಯರಿಗಾಗಿಯೇ ಹೆಚ್ಚು ಗಂಭೀರವಾಗಿ ಹೆಣೆಯಲಾಗಿರುತ್ತದೆ. ಯಾರು ಶಿಮಂತ ಕುಟುಂಬಗಳಲ್ಲಿ ಮತ್ತು ಸೋದರನ ಆಧಾರದಲ್ಲಿ ಸುರಕ್ಷಿತ ಬದುಕನ್ನು ನಡೆಸುತ್ತಿರುತ್ತಾರೆಯೋ ಅಂಥವರು ಇಂಥ ತೊಂದರೆಗಳನ್ನು ನೇರವಾಗಿ ಸಹಿಸಿಕೊಂಡಿರಬೇಕಾಗಿ ಬರುವುದಿಲ್ಲ. ಆದರೂ ಅವರೆಡೆ ನೋಡುವ ಪ್ರವೃತ್ತಿ ಮಾತ್ರ ಇದೇ ಆಗಿರುತ್ತದೆ. ಪ್ರೌಢ ಕುಮಾರಿಕೆಯರಿಗೆ ಸಾಂಸಾರಿಕ ಜವಾಬ್ದಾರಿಗಳಾವೂವೂ ಇರುವುದಿಲ್ಲ. ಮಕ್ಕಳು ಮರಿಗಳ ಉಸಾಬರಿಯೂ ಇಲ್ಲ; ಹಾಗಾಗಿ ಸ್ವತಂತ್ರ ಜೀವನವನ್ನು ನಡೆಸುತ್ತಿರುವ ಜನರ ಹಾಗೆ ಭಾಸವಾಗುತ್ತಾರೆ. ಅಂದರೆ ಸ್ವಾತಂತ್ರ್ಯವೆಂಬುದು ನಮ್ಮ ಸಮಾಜದಲ್ಲಿ ಅವರಿಗೆ ಸಂಬಂಧಿಸಿದಂತೆ ಒಂದು ಶಾಪ, ಪರಿಹಾರ ಸಾಧ್ಯವಾಗದೆ ಕುಮಾರಿಕೆಯರಾಗಿಯೇ ಇರುವಂಥ ಪರಿಸ್ಥಿತಿ ಇರುವುದರಿಂದಾಗಿ ಅವರ ಬಗ್ಗೆ ಮಾಡುವ ಟೀಕೆಗಳನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳುವುದೇ ಇಲ್ಲ. ಬದಲಾಗಿ ಅವರ ಸ್ವಾತಂತ್ರ್ಯದ ಬಗ್ಗೆ ಚರ್ಚೆಗಳನ್ನು ಮಾಡಲಾಗುತ್ತದೆ. ಒಂದೆಡೆ ಸ್ವಾತಂತ್ರ್ಯದ ಉಪಭೋಗವನ್ನು ಪಡೆಯುವಂತಹ ಮೋಹ, ಮತ್ತೊಂದೆಡೆ ಸಾಮಾಜಿಕ ಪರಂಪರೆ ಮತ್ತು ರೂಢಿಗಳಿಂದ ನಿರ್ಮಾಣವಾಗಿರುವ ಪದ್ಧತಿಗಳನ್ನು ಪಾಲಿಸುವ ಒತ್ತಾಯ ಇವುಗಳ ನಡುವಣ ಬಿಕ್ಕಟ್ಟನ್ನು  ಸಹಿಸಿಕೊಳ್ಳಬೇಕಾಗುತ್ತದೆ. ಆದರೆ ಅದರಿಂದ ಮಡಿಲಿಗೆ ಬೀಳುವುದು ನಿರಾಶೆಯೇ.

ಕೆಲವಾರು ಉಪಾಯಗಳು

ಪ್ರೌಢ ಕುಮಾರಿಕೆಯರು ಒಂದು ಬಗೆಯಲ್ಲಿ ಸಾಮಾಜಿಕ ರೂಢಿಗಳಿಗೆ ಬಲಿಪಶುಗಳು. ನೈಸರ್ಗಿಕ ಶಾಪದಿಂದಾಗಿ ಮತ್ತು ಪರಿಸ್ಥಿತಿಜನ್ಯ ಬಂಧನದಲ್ಲಿ ಸಿಲುಕಿರುವುದರಿಂದಾಗಿ ಅವರಿಗೆ ಒಂಟಿಯಾಗಿ ಬದುಕನ್ನು ನೂಕುವುದು ಅನಿವಾರ್ಯವಾಗುತ್ತದೆ. ಆ ಕಾರಣ ಇವರ ಬಗ್ಗೆ ಸಮಾಜವು ಸಹಾನುಭೂತಿ ಪೂರ್ವಕವಾಗಿ ವಿಚಾರ ಮಾಡುವುದು ಅಗತ್ಯ. ಕುಟುಂಬದಲ್ಲಿನ ಸದಸ್ಯರು ಅವರ ಮಾನಸಿಕ ಸ್ಥಿತಿಯನ್ನು ಸರಿಯಾಗಿ ಅರ್ಧ ಮಾಡಿಕೊಂಡು ನಡೆದುಕೊಳ್ಳವುದಕ್ಕೆ ಪ್ರಯತ್ನಿಸಬೇಕು. ಅವರ ಸಮಸ್ಯೆಗಳನ್ನು ಅರ್ಧಮಾಡಿಕೊಳ್ಳುವ ದೃಷ್ಟಿಯಿಂದ ಮಹಿಳಾ ಕಾರ್ಯಕರ್ತರು ಪ್ರಯತ್ನ ಮಾಡುವುದು ಅವಶ್ಯ. ಸಾಮಾಜಿಕ ಜವಾಬ್ದಾರಿ ಎಂಬುದಾಗಿ ಸಾಮಾಜಿಕ ಸಂಸ್ಥೆಗಳು ಮತ್ತು ಸರಕಾರಗಳು ಈ ಸಂಬಂಧವಾಗಿ ಪ್ರಯತ್ನಿಸಬೇಕಾಗುತ್ತದೆ. ಸಾಮಾಜಿಕ ಕಾರ್ಯದಲ್ಲಿ ಯಾರಿಗೆ ಅಭಿರುಚಿ ಇರುವುದೋ ಅಂಥ ಸಾಮಾಜಿಕ ಕಾರ್ಯಕರ್ತರನ್ನು ಮತ್ತು ಸಮಾಜ ಶಾಸ್ತಜ್ಞರನ್ನು ವಿಶೇಷ ತರಬೇತಿಯ ಮೂಲಕ ಅವರ ಪ್ರಶ್ನೆಗಳನ್ನು ತಟಸ್ಥ ಮನೋಭಾವದಿಂದ ಮತ್ತು ಸಹಾನುಭೂತಿಯಿಂದ ಅಭ್ಯಸಿಸುವುಕ್ಕೆ ನೇಮಿಸಬೇಕು. ಅಂದರೆ ರೂಢಿ ಮತ್ತು ಪರಂಪರಾಗತ ನಿಕಷಗಳು ಮತ್ತು ಪೂರ್ವಗ್ರಹ ದೂಷಿತ ದೃಷ್ಟಿಕೊನದಿಂದ ಅವರೆಡೆಗೆ ನೋಡಬಾರದು. ಅವರ ವ್ಯಕ್ತಿಗತ ವ್ಯಥೆಗಳನ್ನು ಕೌಟುಂಬಿಕ ಮತ್ತು ಸಾಮಾಜಿಕ ದೃಷ್ಟಿಕೋನಗಳಿಂದಲೇ ವಿಚಾರ ಮಾಡಬೇಕು. ಸಾಮಾಜಿಕ ಪರಿವರ್ತನೆಯ ಪ್ರಕ್ರಿಯೆಯ ಭಾಗವಾಗಿಯೇ ಇದನ್ನು ತಿಳಿಯಬೇಕು. ಯಾರಿಗೆ ಉದ್ಯೋಗ ಅಥವಾ ಸಾಮಾನ್ಯ ಕೆಲಸ ಇಲ್ಲವೋ ಅಂಥ ಪ್ರೌಢ ಕುಮಾರಿಕೆಯರಿಗೆ ಅವರ ಆಸಕ್ತಿ ಮತ್ತು ಸಾಮರ್ಥ್ಯವನ್ನು ಗಮನಿಸಿ ಕುಶಲ ಅಥವಾ ಅರ್ಧಕುಶಲ ಸ್ವರೂಪದ ಕೆಲಸಗಳನ್ನು ನೀಡುವುದಕ್ಕೆ ವಿಶೇಷ ಪ್ರಯತ್ನ ಮಾಡಬೇಕು. ಆರ್ಥಿಕ ಪರಾವಲಂಬಿತ್ವ ದಿಂದಾಗಿ ಎಲ್ಲ ಬಗೆಯಲ್ಲೂ ಅವರ ಬದುಕು ತೀರಾ ದುಃಸ್ಥಿತಿಗೊಳ ಗಾಗಿರುತ್ತದೆ. ಅದು ಅಧಿಕವಾಗಿ ಅವರ ಮಾನಸಿಕ ದುಃಸ್ಥಿತಿಗೂ ಕಾರಣವಾಗುವುದುಂಟು, ಅಲ್ಲದೆ ಉತ್ಪಾದಕ ಕಾರ್ಯದಲ್ಲಿ ತೊಡಗಿಕೊಳ್ಳುವುದರಲ್ಲಿ ಅವಕಾಶವೇ ಇಲ್ಲದುದರಿಂದಾಗಿ ಅವರಲ್ಲಿ ಸದಾಕಾಲ ಅಸಮಾಧಾನದ ಭಾವನೆಗಳು ಬೆಳೆಯುತ್ತಾ ಹೋಗುತ್ತವೆ. ಮಾನಸಿಕ ಖಾಲಿತನವು ಒಂಟಿತನದ ಅರಿವನ್ನು ತೀವಗೊಳಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ಇಂಥ ಪ್ರೌಢ ಕುಮಾರಿಕೆಯರಿಗೆ ಅರ್ಧಾರ್ಜನೆಯ ಸಾಧನಗಳನ್ನು ಉಪಲಬ್ಧಗೊಳಿಸಿ ಕೊಡುವುದು ಸಾಮಾಜಿಕ ಜವಾಬ್ದಾರಿ ಎಂದರಿತು ವ್ಯಾಪಕವಾಗಿ ಕಾರ್ಯತತ್ಪರವಾಗಬೇಕಾದ್ದು ಅವಶ್ಯ. ಈ ದೃಷ್ಟಿಯಿಂದ ಸಾಮಾಜಿಕ ಕಾರ್ಯಕರ್ತ ಮಂಡಳಿಗಳು, ವಸತಿ ಗೃಹಗಳ ಮಂಡಳಿ ಮತ್ತು ಮಹಿಳಾ ಸಂಘಟನೆಗಳು ಸರ್ಕಾರದ ವಿವಿಧ ಖಾತೆಗಳವರು ಜರೂರಿಯಾಗಿ ಪ್ರಯತ್ನಶೀಲರಾಗಬೇಕು.

ಪ್ರೌಢ ಕುಮಾರಿಕೆಯರು ಬೇರೆ ಬೇರೆ ಬಗೆಯಲ್ಲಿ ಏಕಾಂಗೀ ಜೀವನ ನಡೆಸುತ್ತಿರುವ ಸ್ತ್ರೀಯರೊಂದಿಗೆ ಸಂಪರ್ಕ ಕಲ್ಪಿಸಿಕೊಂಡು ಸ್ನೇಹವನ್ನು ಬೆಳೆಸುವ ಪ್ರಯತ್ನ ಮಾಡಬೇಕಾಗುತ್ತದೆ. ಅವರ ಅನುಭವ, ಕಲ್ಪನೆಗಳು, ವ್ಯಧೆಗಳಲ್ಲಿ ಸಾಮರಸ್ಯ ಉಂಟಾಗಿ ಒಬ್ಬರಿಗೊಬ್ಬರು ಸುಖದುಃಖದಲ್ಲಿ ಸಹಭಾಗಿಗಳಾಗಬೇಕು. ಇದು ಸಮಾಜದಲ್ಲಿನ ಇತರ ಸ್ತ್ರೀಯರಿಗಿಂತ ತಾವು ಬೇರೆಯಾಗಿದ್ದೇವೆ ಎಂಬ ಭಾವನೆಯಿಂದ ಸಮಾಜದಿಂದ ಉದ್ದೇಶಪೂರ್ವಕವಾಗಿ ದೂರ ಉಳಿಯುವ ಪ್ರವೃತ್ತಿಯನ್ನು ಕಳೆದುಕೊಳ್ಳವುದಕ್ಕೆ ಸಹಾಯಕ. ಬದಲಾಗಿ ಆ ಪ್ರವೃತ್ತಿಯು ನಿತ್ಯ ಉಣಿಸಾಗಿದ್ದು ಮತ್ತು ಒಂಟಿತನದ ತೀವ್ರ ಅರಿವನ್ನು ಇಟ್ಟುಕೊಂಡೇ ವರ್ತಿಸುವ ಕೆಟ್ಟ ಸ್ವಭಾವ, ವ್ಯಸನ ಮತ್ತು ವಿಕೃತಿಗಳಂಥವುಗಳಿಂದ ತೀವ್ರ ರೋಗಮಯವಾಗುವಂಥ ಸಾಧ್ಯತೆಗಳಿವೆ. ಇದು ನೈತಿಕ ಅಧಃಪತನಕ್ಕೂ ಕಾರಣವಾದೀತು. ಆ ಕೆಟ್ಟ ಸ್ವಭಾವದಿಂದ ದೂರವಾಗಲು ಅವರು ಆತ್ಮಚಿಂತನೆಯನ್ನು ಮಾಡಿಕೊಳ್ಳುವುದು ಅವಶ್ಯ. ಮನಸ್ಸಿನಲ್ಲಿ ಆಶಾವಾದವನ್ನು ಹೊಂದಬೇಕು, ಸದಾ ಭಾವನೆಗಳ ಲಹರಿಯಲ್ಲಿಯೇ ಸಾಗದೆ ವಾಸ್ತವ ಪರಿಸ್ಥಿತಿಯನ್ನು ಅತ್ಯಂತ ಆತ್ಮವಿಶ್ವಾಸದಿಂದ ಎದುರಿಸುವಂಥ ವ್ಯಾವಹಾರಿಕ ವಿಚಾರವನ್ನು ಮನೋಗತವಾಗಿ ಸ್ವೀಕರಿಸುವುದು ಅತ್ಯಗತ್ಯ. ತಮ್ಮಲ್ಲೆನೋ ಕೊರೆತೆಯಿದೆ ಎಂಬ ನ್ಯೂನ್ಯತೆಯ ಭಾವದಿಂದ ಅವರು ವರ್ತಿಸಬಾರದು. ಅವರು ಸಮಾಜದಲ್ಲಿ  ಮಾನವೀಯ ಘಟಕವಾಗಿ ಬದುಕಲು ಪೂರ್ಣ ಅಧಿಕಾರ ಹೊಂದಿರುತ್ತಾರೆ. ಅದನ್ನು ಅವರು ಪ್ರಸ್ಥಾಪಿಸಬೇಕು ಮತ್ತು ಸಮಾಜ ಅದನ್ನು ಮಾನ್ಯ ಮಾಡಲೇಬೇಕು. ಮತ್ತೊಬ್ಬರ ದಯೆ, ಸಹಾನುಭೂತಿಯ ದಾರಿಯನ್ನು ನೋಡದೆ ಸ್ವತಃ ತಾವೇ ಸಮಾಜದಲ್ಲಿ ಬೆರೆಯುವ ಮತ್ತು ಮುಂದಾಳತ್ವ ವಹಿಸುವ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದು ಅವರಿಗೆ ಉಪಯುಕ್ತ. ಹಾಗೆಯೇ ಧರ್ಮದ ಹೆಸರಿನ ಅಡಿಯಲ್ಲಿ ನಡೆಯುತ್ತಿರುವ ಸಮಾರಂಭ ಮತ್ತು ವ್ರತಾದಿ ವಿಧಿಗಳ ಸಮೂಹ ಇದೆಯೋ ಅವೆಲ್ಲ ತಮಗಾಗಿಯೇ ಇರುವಂಥ ಆದರ್ಶಗಳೆಂದು ಭಾವಿಸಿ ಆ ಆಧಾರದಿಂದ ಬದುಕುವುದು ಸಲ್ಲ. ಸುಶಿಕ್ಷಿತ ಪ್ರೌಢರು ಅವನ್ನೆಲ್ಲ ಇಲ್ಲವಾಗಿಸಿ ಆಧ್ಯಾತ್ಮಿಕ ವಿಚಾರ ಮತ್ತು ತಿಳಿವಳಿಕೆಯ ಲಯವನ್ನು ಅನುಷ್ಠಾನಗೊಳಿಸಬೇಕಾದ್ದು ಗಮನೀಯ. ಪ್ರಮುಖವಾಗಿ ತನಗೆ ಎಲ್ಲೆಲ್ಲಿ ಮಾನಸಿಕ ಮತ್ತು ಆತ್ಮಿಕ ಸಮಾಧಾನ ಸಾಧ್ಯವಾಗುತ್ತದೆಯೋ ಅಂಥ ಸ್ವರೂಪಗಳ ಅಧ್ಯಯನ ಮತ್ತು ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಬೇಕು. ಪ್ರೌಢ ಕುಮಾರಿಕೆಯರು ತಮ್ಮ ಜೀವನಕ್ಕೆ ಒಂದು ನಿರ್ದಿಷ್ಟ ಗತಿಯನ್ನು ರೂಪಿಸಿಕೊಳ್ಳುವುದಕ್ಕೆ ಸ್ವತಃ ತಮ್ಮ ಬಗ್ಗೆ ತಾವು ವಿಚಾರ ಮಾಡಲು ಅವಕಾಶವಿಲ್ಲ ಎಂದು ಭಾವಿಸಬಾರದು. ಬದಲಾಗಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳಲ್ಲಿ ತೊಡಗಿಕೊಂಡರೆ, ಅವರಿಗೆ ಮಾನಸಿಕ ಸಮತೋಲನವನ್ನು ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ.

ಒಂಟಿತನದ ಸ್ವರೂಪವನ್ನು ತೀವ್ರವಾಗಿ ಅರಿತಂಥ ಪ್ರೌಢ ಕುಮಾರಿಕೆಯರು ಸಾಧ್ಯವಾದರೆ ಮುನ್ನಡೆದು ಅನಾಧಾಶ್ರಮದಲ್ಲಿನ ಯಾವುದಾದರೊಂದು ಮಗುವನ್ನು ದತ್ತುವಾಗಿ ಸ್ವೀಕರಿಸಿ ಸಾಕುವುದಕ್ಕೆ ಅಡ್ಡಿಯಿಲ್ಲ. ವಿಶೇಷವಾಗಿ ಆರ್ಥಿಕ ದೃಷ್ಟಿಯಿಂದ ಸುಸ್ಥಿತಿಯಲ್ಲಿರುವವರು ಮತ್ತು ಸ್ವತಂತ್ರರಾಗಿರುವವರು ಇಂಥ ನಿರ್ಣಯವನ್ನು ತೆಗೆದುಕೊಳ್ಳುವುದು ಉಚಿತ. ಅಂಥ ಮಗುವಿನ ಪೋಷಣೆ ಮತ್ತು ಜವಾಬ್ದಾರಿಯನ್ನು ಸ್ವೀಕರಿಸಿ ಮಾತೃತ್ವದ ಹಸಿವನ್ನು ನೀಗಿಸಿಕೊಳ್ಳಬಹುದಾಗಿದೆ. ಇದರಿಂದ ಆ ಮಗುವಿಗೂ ಮಮತೆ, ಸುರಕ್ಷತೆ ಮತ್ತು ಪ್ರೀತಿಯೂ ಸಿಕ್ಕುತ್ತದೆ. ಅಲ್ಲದೆ ಅದಕ್ಕೆ ಶಿಕ್ಷಣ ಕೊಡಿಸಿದರೆ ಅದರ ವ್ಯಕ್ತಿತ್ವವನ್ನು ವಿಕಾಸಗೊಳಿಸಿದ ಸಮಾಧಾನವೂ ಸಿಗುತ್ತದೆ. ಈ ಸಂಗತಿಯು ಒಂದು ರೀತಿಯಲ್ಲಿ ಅವಾಸ್ತವ ಮತ್ತು ಅವ್ಯಾವಹಾರಿಕ ಎಂದು ಎನಿಸಬಹುದು. ಆದರೆ ವ್ಯಾಪಕ ದೃಷ್ಟಿಯಿಂದ ಮತ್ತು ಪ್ರೌಢ ಕುಮಾರಿಕೆಯರ ಹಿನ್ನಲೆಯಲ್ಲಿ ಪರಿಶೀಲಿಸಿದರೆ ಅಸ್ಥಾಯಿಯಾದುವು ಎಂದೆನಿಸುವುದಿಲ್ಲ. ಒಬ್ಬರಿಗೊಬ್ಬರ ಆಧಾರ ಒದಗಿ ಜಿದ್ದಿನಿಂದ ಜೀವನವನ್ನು ಸುಸಹ್ಯಗೊಳಿಸಿಕೊಳ್ಳಲು ಸಾಧ್ಯವಾಗುತ್ತದೆ.