ಪುನರ್ವಿವಾಹ

ಸ್ತ್ರೀಯರಿಗೆ ಪುನರ್ವಿವಾಹ ಎಂಬ ಸಂಗತಿಯು ಇಂದಿನ ಸಮಾಜಕ್ಕೆ ಹೊಸತಾದುದೇನಲ್ಲ ಹಾಗೂ ವಿಚಿತ್ರವೆಂದೂ ಎನಿಸುವುದಿಲ್ಲ. ಮೊದಲ ಪತಿಯು ಮರಣ ಹೊಂದಿದ ಮೇಲೆ ಪತ್ನಿಯು ಪರಾವಲಂಬಿ ಜೀವನವನ್ನು ನಡೆಸಬೇಕಾಗುತ್ತದೆ. ಹಾಗೆ ಬದುಕುವುದಕ್ಕಿಂತ ವಿಧವಾ ಸ್ತ್ರೀಯರು ಪುನರ್ ವಿವಾಹವಾಗಬೇಕು. ಇದರಿಂದ ಅವರ ದೈಹಿಕ ತಳಮಳ, ಆರ್ಥಿಕ ಪರಾವಲಂವನೆ ಮತ್ತು ಒಂಟಿತನದ ಬದುಕು ಇಲ್ಲವಾಗುವುದು. ಈ ವಿಚಾರವನ್ನು ಕಳೆದ ಅನೇಕ ವರ್ಷಗಳಿಂದ ಸಮಾಜ ಸುಧಾರಕರು ಹೇಳುತ್ತಲೇ ಬಂದಿದ್ದಾರೆ. ಅಂದರೆ ಇಂದು ಪುನರ್ ವಿವಾಹಕ್ಕೆ ಮೊದಲ ವಿವಾಹದಷ್ಟು ಮಾನ್ಯತೆ ಕೊಡದಿದ್ದರೂ, ಮೃತನಾದ ಪತಿಯ ಸ್ಮೃತಿಯಲ್ಲಿಯೇ ಮುಂದಿನ ಪೂರ್ಣ ಜೀವನವನ್ನು ಸವೆಸಬೇಕು ಎಂದೇನಿಲ್ಲವಲ್ಲ ಎಂಬ ಮಾನ್ಯತೆಯಂತೂ ಸಿಕ್ಕಿದೆ. ಸ್ತ್ರೀಯ ಪುನರ್ ವಿವಾಹ ಎಂಬ ವಿಚಾರವನ್ನು ನಿಷಿದ್ಧವೆಂದು ಮಾತ್ರವೇ ಒಪ್ಪಿಕೊಂಡಿಲ್ಲವೆಂಬುದು ಗಮನೀಯ. ಅದು ಪುರುಷನಿಗೆ ಇರುವ ಪುನರ್ ವಿವಾಹದಂತೆಯೇ ಶಾಸ್ತ್ರಸಿದ್ದವೂ ನ್ಯಾಯವೂ ಮತ್ತು ಪವಿತ್ರವೂ ಆದುದಾಗಿದೆ ಎಂಬುದು ಒಪ್ಪಿತ. ಆದರೂ ಅದನ್ನು ಆಗುಗೊಳಿಸುವಂತಹ ಬಗೆಯಲ್ಲಿ ಸಾಮಾಜಿಕ ಪರಿಸ್ಥಿತಿಯನ್ನು ಸುಧಾರಣೆಗೊಳಿಸುವುದು ಅತ್ಯಗತ್ಯ. ಆರ್ಥಿಕ ಪರಾವಲಂಬನೆ, ಶಾರೀರಿಕ ಶ್ರಮ, ಮಾನಸಿಕ ತಳಮಳ, ಪರಾಕಾಷ್ಠೆ ಮುಟ್ಟಿದ ಬಂಧನಗಳು, ಆಶುಭ ದರ್ಶನ ಮತ್ತು ಜನ್ಮೇಪಿ ದುಡಿದರೂ ಬೇಡದ ವಸ್ತುವಿನಂತೆ ಕಾಣುವುದು- ಇವು ಪೂರ್ವ ಕಾಲದಿಂದಲೂ ಇರುವ ವಿಧವೆಯರ ಜೀವನ ಚರ್ಯೆಗಳಾಗಿವೆ. ಹಾಗಾಗಿ ಅವಳಿಗೆ ಸಂಪುಷ್ಟತೆಯು ಬರಬೇಕಾದರೆ ಪುನರ್ ವಿವಾಹದ ಆವಶ್ಯಕತೆಯನ್ನು ಪ್ರಪಾದಿಸಬೇಕು. ಅಂದರೆ ಆರ್ಥಿಕ ದೃಷ್ಟಿಯಿಂದ ಸ್ವಾವಲಂಬಿಯಾಗಿರದ ಕಾರಣ ಉಂಟಾಗುವ ದುಷ್ಕಳ ಪರಿಸ್ಥಿತಿಯನ್ನು ಇಲ್ಲವಾಗಿಸುವ ಪ್ರಕ್ರಿಯೆಯಾಗಿಯೂ ಇದನ್ನು ಪುರಸ್ಕರಿಸಬಹುದಾಗಿದೆ.

ಇಂದು ಪುನರ್ ವಿವಾಹದ ಆವಶ್ಯಕತೆಯು ಯೋಗ್ಯವಾದುದಾಗಿದೆ ಎಂಬುದಾಗಿ ಮಾನ್ಯತೆ ಮಾಡುವಾಗ್ಗೆ, ಮೊದಲು ಸಾಂಸಾರಿಕವಾಗಿ ಸುಖೋಪಭೋಗವನ್ನು ಪಡೆಯಲು ಅವಳಿಗೂ ನ್ಯಾಯಯುತವಾದ ಹಕ್ಕಿದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಆರ್ಥಿಕ ದೃಷ್ಟಿಯಿಂದ ಸ್ವಾವಲಂಬಿಯಾಗಿದ್ದರೆ ವಿಧವಾ ಸ್ತ್ರೀಯೂ ಸ್ವತಂತ್ರವಾಗಿ ಜೀವನ ನಡೆಸುತ್ತಾಳೆ. ಇಲ್ಲವೆ ಪತಿಯ ನಿಧನಾನಂತರ ಕಾಯಿದೆಬದ್ಧವಾಗಿ ಅವಳಿಗೆ ಆಸ್ತಿಯ ಪಾಲು ಪಡೆಯುವ ಹಕ್ಕು ಇರುತ್ತದೆ. ಅವಳ ಮತ್ತು ಅವಳ ಮಕ್ಕಳು ಮರಿಗಳ ಪೋಷಣೆಯ ಜವಾಬ್ದಾರಿಯನ್ನು ಹೊರುವುದಕ್ಕೆ ಇದರಿಂದ ಸಾಧ್ಯವಾಗುತ್ತದೆ ಎಂದೇನಿಲ್ಲ. ಆದರೆ, ಪೂರ್ವ ಕಾಲದಲ್ಲಿ ಮನೆಯಲ್ಲಿನ ಒಂದು ಬೇಡದ ವ್ಯಕ್ತಿ ಎಂಬ ಅವಳ ಜೀವನ ಸ್ವರೂಪವು ಇಲ್ಲವಾಗಬೇಕು ಎಂಬ ಪ್ರಮುಖ ಉದ್ದೇಶವನ್ನು ಪ್ರಮುಖವಾಗಿ ಇಟ್ಟುಕೊಂಡೇ ಪುನರ್ ವಿವಾಹದ ಬಗ್ಗೆ ಪ್ರಪಾದನೆ ಮಾಡಲಾಗಿತ್ತು. ಆದರೆ ನಂತರದ ಕಾಲದಲ್ಲಿ ವಿಧವೆಯರ ವಿವಾಹದ ವಿಚಾರವನ್ನು ಮನಶ್ಯಾಸ್ತ್ರೀಯ ದೃಷ್ಟಿಯಿಂದ ಪರಿಶೀಲಿಸುವುದೂ ಅಗತ್ಯವೆಂಬುದು ಗಮನಕ್ಕೆ ಬರಲಾರಂಭಿಸಿತು. ಪುರುಷರು ತಮ್ಮ ಮೊದಲ ಪತ್ನಿಯು ತೀರಿಕೊಂಡ ಅನಂತರ ಮತ್ತೊಬ್ಬ ಪತ್ನಿಯನ್ನು ತಂದುಕೊಳ್ಳುವುದು ಹೇಗೆ ನೈಸರ್ಗಿಕ ಕಾರಣವಾಗಿರುವುದೋ, ಹಾಗೆಯೇ ವಿಧವೆಯ ಪುನರ್ವಿವಾಹವನ್ನು ಮಾಡುವುದು ಆವಶ್ಯಕ. ಪುರುಷರಿಗೆ ಸ್ತ್ರೀ ಸಹವಾಸದ ಆವಶ್ಯಕತೆ ಇರುವುದು ಸಹಜ; ಇದನ್ನು ಒಪ್ಪಿಕೊಂಡೇ ಅತ್ತಕಡೆ ನೋಡಬೇಕಾಗುತ್ತದೆ. ಪುರುಷ ತನ್ನ ಪತ್ನಿಯ ಮರಣಾನಂತರ ಸಂನ್ಯಾಸಿ, ಬೈರಾಗಿ ಆಗುವುದಿಲ್ಲ; ಯಾವ ವಿರೋಧವೂ ಇಲ್ಲದೆ ಈ ಸಮಾಜವು ಅವನ ಪುನರ್ವಿವಾಹ ವನ್ನು ಮಾನ್ಯ ಮಾಡಿದೆ. ಅಂಥದೇ ಭೂಮಿಕೆಯ ಮೂಲಕ ವಿಧವೆಯ ಪುನರ್ ವಿವಾಹದೆಡೆ ನೋಡುವುದಕ್ಕೆ ಸಿದ್ಧಗೊಳ್ಳಬೇಕು. ಸುಳ್ಳು, ಅಸ್ವಾಭಾವಿಕತೆ, ಅನೈಸರ್ಗಿಕ ಕಲ್ಪನೆ ಇವನ್ನು ಬಿಟ್ಟು ಗಂಭೀರವಾಗಿ ವಸ್ತುನಿಷ್ಠ ದೃಷ್ಟಿಕೋನದಿಂದಲೇ ವಿಧವೆಯರ ಜೀವನ ಪರಿಸ್ಥಿತಿಯ ಬಗ್ಗೆ ಚರ್ಚಿಸಬೇಕು.

ಸ್ತ್ರೀಯ ಜೀವನ ಪ್ರೇಮ, ಸುಖ, ಸಮಾಧಾನ ಮತ್ತು ತೃಪ್ತಿಯನ್ನು ಹೊಂದಿದ ಮೇಲೆ ಪತಿಯ ನಿಧನವಾಗಿ ವೈಧವ್ಯದ ಕೊಡಲಿ ಬಿದ್ದಿತು ಎಂದಾಗ ಅವಳಿಗೆ ಮಾನಸಿಕ ಆಧಾರದ ಆವಶ್ಯಕತೆ ಇರುತ್ತದೆ. ಪುರುಷ ಸಹವಾಸದ ಸೆಳೆತ, ನಿಸರ್ಗ ಸಹಜ ಶೃಂಗಾರ ಭಾವನೆಗಳು ಮತ್ತು ಕುಂಕುಮ (ತಿಲಕ) ಹಚ್ಚಿಕೊಂಡು ಯಾರಾದರೂ ಸ್ವಾಮಿತ್ವದಡಿಯಲ್ಲಿ ಸುರಕ್ಷಿತವಾಗಿ ಬದುಕುವ ಆನಂದ ಕೆಲವಾರು ವಿಧವೆಯರ ವಿಷಯದಲ್ಲಿ ಗೌಣವಾಗಿರುತ್ತದೆ. ಆದರೆ ಪುನರ್ವಿವಾಹದ ಅಗತ್ಯ ಬರುವುದು ಅವರ ಮಾನಸಿಕ ಕಾರಣವಾಗಿಯೇ, ಮುದಿ ವಯಸ್ಸಿನಲ್ಲಿ ಕೂಡ ಸ್ತ್ರೀಗೆ ಪತಿಯ ಸಹವಾಸದ ಆಕರ್ಷಣೆ ಇರುತ್ತದೆ. ಅದು ಒಂಟಿತನದ ಶ್ಯೂನ್ಯಾವಸ್ಥೆಯನ್ನು ಕಳೆದುಕೊಳ್ಳುವುದಕ್ಕಾಗಿ. ಆ ಕಾರಣವಾಗಿಯೇ! ಸುಮಾರು ಐವತ್ತು ವರ್ಷವಾದ ವಿವಾಹಿತ ಸ್ತ್ರೀಯರು ತಮ್ಮ ಪತಿಯೊಂದಿಗೆ ಪ್ರೇಮದ ಮಾತುಗಳು, ಸುಖ-ದುಃಖದ ಸಂದರ್ಭಗಳು, ವಾದ ಮತ್ತು ತಂಟೆಕೋರ ತನವನ್ನು ಸಹ ತೋರ್ಪಡಿಸುತ್ತಿರುವುದು ಕಂಡಬರುತ್ತದೆ. ತಮ್ಮ ಮುದಿತನದ ಬಗೆಗಿನ ಅರಿವನ್ನು ಮರೆಯಲು ಅವರಿಗೆ ಸಾಧ್ಯವಾಗುತ್ತಿರುವುದು ಆ ಮೂಲಕವೇ. ಅಲ್ಲದೆ ಗಂಡುಮಕ್ಕಳು, ಹೆಣ್ಣುಮಕ್ಕಳು ತಂತಮ್ಮ ಹಿರಿಯರ ಉಸಾಬರಿಯಲ್ಲಿ ಇದ್ದುಕೊಂಡು ಮದುವೆಯಾದ ಮಕ್ಕಳ ಸಂಸಾರದಲ್ಲಿ ಪ್ರೌಢ ವಿಧವಾ ಸ್ತ್ರೀಯರ ಆವಶ್ಯಕತೆ ಬಂದಿತೆಂದರೆ, ಅದು ಕೇವಲ ತಮ್ಮ ಚಿಕ್ಕ ಚಿಕ್ಕ ಮಕ್ಕಳಿಗೋಸ್ಕರವೇ. ಆ ಮೂಲಕವೇ ಅವರ ಆಸ್ಥೆ, ಕಾಳಜಿಯು ನಿರ್ಮಾಣವಾಗಿರುತ್ತದೆ. ಅಂದರೆ ವಿಧವಾ ಸ್ತ್ರೀಯರಿಗೆ ಮಾತೃತ್ವ ಭಾಗ್ಯವು ಇಲ್ಲವಾಗಿರುವುದರಿಂದ ಸಂಬಂಧಿಗಳ ಮಕ್ಕಳ ಆರೈಕೆ ಅವರಿಗೆ ಆನಂದವನ್ನು ತಂದು ಕೊಡುತ್ತದೆ. ಈ ಕಾರಣದಿಂದಲೇ ನೋಡುವ ದೃಷ್ಟಿಕೋನದಿಂದಾಗಿ ಬರುವ ನಿರಾಶಾಜನಕ ಮನಃಸ್ಥಿತಿಯಲ್ಲಿ ಪುರುಷ ಎಂಬುದಾಗಿ ಪತಿಯ ಸಹವಾಸದ ಆವಶ್ಯಕತೆಯು ಇರುತ್ತದೆ. ಅಂದರೆ ಯಾರು ಮುದಿತನದಲ್ಲಿ ವಯೋವೃದ್ಧರು, ವಿಧವಾ ಸ್ತ್ರೀಯರು ಮದುವೆಯ ಮೋಹದಲ್ಲಿ ಬೀಳಬಾರದು ಎಂಬ ವಿರಕ್ತಿಯ ಭಾವದಿಂದ ಹೇಳಲಾರಂಭಿಸುತ್ತಾರೆಯೋ, ಆಗ್ಗೆ ಎಲ್ಲಾ ಉಪಭೋಗಗಳನ್ನು ಅನುಭವಿಸಿಯೂ ನಾವು ವಿರಕ್ತರಾಗಿದ್ದೇವೆ ಎನ್ನುತ್ತಾರೆ. ಇದು ಸುಳ್ಳುಭಾವವನ್ನು ವ್ಯಕ್ತಪಡಿಸುತ್ತಿರುವ ಅವರ ಪ್ರಯತ್ನವೇ ಹೌದು. ಅಂದರೆ ನಮ್ಮ ಹಾಗೆಯೇ ಅವಳು ತ್ಯಾಗದಿಂದ, ವಿರಕ್ತಿಯಿಂದ ಇರಬೇಕು ಎಂಬ ಅರ್ಧವು ಇಲ್ಲಿ ಅಭಿಪ್ರೇತವಾಗುತ್ತದೆ. ಸರ್ವ ಉಪಭೋಗದಲ್ಲಿ ತೊಡಗಿದ್ದುಕೊಂಡು ಅಂಥ ಖೊಟ್ಟಿ ವಿರಕ್ತಿಯ ದಿಮಾಖು ತೋರುವಂಥದು ಇಂದಿನ ಪ್ರಪಂಚದಲ್ಲಿ ಅಗತ್ಯವಾಗಿರುವಂಥದೇನಲ್ಲ. ಅವರು ಸ್ವತಃ ಸರ್ವ ಬಗೆಯ ಸುಖಗಳನ್ನು ಅನುಭವಿಸುತ್ತಿರುತ್ತಾರೆ, ಆದರೆ ವಿಧವಾ ಸ್ತ್ರೀಯರನ್ನು ಕುರಿತಂತೆ ಮಾತ್ರ ಶಾರೀರಿಕ ಮತ್ತು ಮಾನಸಿಕ ದೃಷ್ಠಿಯಿಂದ ಒಂಟಿತನದಲ್ಲಿಯೇ ಸುಖವಿದೆ ಎಂದು ಒಪ್ಪಬೇಕು ಎಂಬ ಅಪೇಕ್ಷೆಯನ್ನು ವ್ಯಕ್ತಪಡಿಸುತ್ತಲಿದ್ದಾರೆ. ಅಂಥವರ ದುರ್ದೈವೀ ಬದುಕಿನ ಬಗ್ಗೆ ಕೇವಲ ಒಣ ಸಹಾನುಭೂತಿಯನ್ನು ತೋರಿಸುವುದೇ ಇಲ್ಲಿನ ಮುಖ್ಯ ದೃಷ್ಟಿ. ಅಂಥವರ ಮನೋವೃತ್ತಿಯು ಬಹಳ ಸಂಕುಂಚಿತ ನೆಲೆಯದ್ದೆಂದೇ ಹೇಳಬೇಕು. ಕಾರಣ ವಯೋವೃದ್ಧ ಪುರುಷರ ಅಥವಾ ಸ್ತ್ರೀಯರ ಮಾನಸಿಕ ಒಂಟಿತನದ ಟೊಳ್ಳುತನ ಸ್ಪಷ್ಟವಾಗಿ ಲಕ್ಷ್ಯಕ್ಕೆ ಬರುವಂತಹದ್ದೇ ಆಗಿದೆ. ಪುನರ್ ವಿವಾಹವು ಇಂಥ ಸಮಸ್ಯೆಗಳಿಗೆ ಪರಿಹಾರವಾಗಬಹುದು ಎಂಬ ದೃಷ್ಟಿಯಿಂದಲೇ ಸಮರ್ಥಿಸುವುದು ಅಗತ್ಯ.

ಮುಖ್ಯವಾಗಿ ಗಮನಿಸಬೇಕಾದ ಮತ್ತೊಂದು ಸಂಗತಿಯುಂಟು, ಅದೆಂದರೆ ತಮ್ಮ ವಯಸ್ಸಿನ ನಲವತ್ತನೆಯ ವರ್ಷದಲ್ಲಿ ಪ್ರತಿಯೊಬ್ಬ ಸ್ತ್ರೀಯೂ ಒಂದು ತಕರಾರನ್ನು ಎತ್ತುತ್ತಲಿರುವುದು. ಪತಿಯ ಮರಣಾನಂತರ ಅವಳು ಎಷ್ಟೇ ಒಳ್ಳೆಯವಳಾಗಿ ನಡೆದುಕೊಳ್ಳುತ್ತಿದ್ದರೂ ಅವಳ ವರ್ತನೆಯ ಬಗ್ಗೆ ಸಮಾಜದಲ್ಲಿನ ಅನೇಕರು ತಮ್ಮ ದೃಷ್ಟಿಯನ್ನು ಇಟ್ಟೇ ಇರುತ್ತಾರೆ. ಅವಳ ವರ್ತನೆ ಎಷ್ಟೇ ಶುಚಿರ್ಭೂತವಾದುದಾಗಿದ್ದರೂ, ಜನರ ದೃಷ್ಟಿಯಲ್ಲಿ ಅವಳು ಮಂಗಳಸೂತ್ರ ರಹಿತ ಸ್ತ್ರೀಯೇ. ಹಾಗಾಗಿ ಅವಳ ಆಚರಣೆಯ ಬಗ್ಗೆ ಜನರು ಖಾತ್ರಿ ಹೊಂದಿರುತ್ತಾರೆ ಎಂಬ ಬಗ್ಗೆ ಯಾವ ವಿಶ್ವಾಸವೂ ಇಲ್ಲ. ಮನೆಯಲ್ಲಿನ ಪುರುಷರೊಂದಿಗೆ ನೆರೆಹೊರೆಯ ವಿವಾಹಿತ ಸ್ತ್ರೀಯರು ಮಾತನಾಡುವುದರಲ್ಲಿ ಅಂಥ ಅಕ್ಷೇಪಾರ್ಹವಾದುದೇನೂ ಇರುವುದಿಲ್ಲ. ಆದರೆ ವಿಧವಾ ಸ್ತ್ರೀಯರು ಏನಾದರೂ ಹಾಗೆ ಮಾಡಿದರೆ ಮಾತ್ರ ಸಂಶಯಕ್ಕೆ ಕಾರಣವಾಗುತ್ತದೆ. ಅಂದರೆ ಪೂರ್ವಕಾಲದ ಹಾಗೆ ಅತ್ಯಂತ ಸಂಶಯದಿಂದಲೇ ಅವರೆಡೆಗೆ ನೋಡುವ ಪಾರಂಪರಿಕವಾದ ಒತ್ತಡಮಯ ಪರಿಸ್ಥಿತಿಯ ಪ್ರಖರತೆ ಇಂದು ಇಲ್ಲದಿರಬಹುದು. ಆದರೂ ಇಂದು ವಿವಾಹಿತ ಸ್ತ್ರೀಯರು ಮತ್ತು ವಿಧವಾ ಸ್ತ್ರೀಯರ ವರ್ತನೆಯ ಅರ್ಧ ಸಾಮಾನ್ಯವಾಗಿ ಸಮರ್ಥಿಸುವ ಹಿನ್ನಲೆಯು ಒಂದೇ ರೀತಿಯದ್ದಾಗಿರುವುದಿಲ್ಲ ಎಂಬುದು ಗಮನಾರ್ಹ. ಆದರೆ ವಿಧವಾ ಸ್ತ್ರೀಯೆಡೆಗೆ  ಎಂದಿನಂತೆಯೇ ಇದೆ ಸಂಶಯಾತ್ಮಕ ದೃಷ್ಟಿ. ಅಲ್ಲದೆ ಇಂಥ ಸ್ತ್ರೀಗೂ ಕೂಡಾ ತನ್ನ ಬಗೆಗಿನ ಸ್ವಾಭಿಮಾನ, ಸಂರಕ್ಷಣೆಯ ಆವಶ್ಯಕತೆ ಬೇಕೆಂಬ ಭಾವನೆಯುಂಟಾದರೆ ಪುರುಷರ ಸಹಕಾರ ಪಡೆಯುವ ಹಕ್ಕು ಇದ್ದೇ ಇದೆ. ವಿವಾಹಿತ ಸ್ತ್ರೀಯರ ಹಾಗೆಯೇ ಸುಭದ್ರಮಯ ಬದುಕು ಅವಳಿಗೆ ಸಹಜವಾಗಿ ಬೇಕೆನಿಸಿದರೆ, ಅವಳು ಪುನರ್ ವಿವಾಹದ ವಿಚಾರ ಮಾಡುವುದು ನೈಸರ್ಗಿಕವಾದುದೇ ಅಲ್ಲವೆ? ಮನಸ್ಸಿನ ಅಂತರಾಳದಲ್ಲಿನ ನಿಜವಾದ ಇಚ್ಚೆಗಳನ್ನು ಅದುಮಿಟ್ಟು, ತ್ಯಾಗದ ಹೆಸರಿನ ಬದುಕನ್ನು ಹಿಡಿದು ತನ್ನ ಸ್ವಂತದ ಮಾನಸಿಕ ಮತ್ತು ಶಾರೀರಿಕ ಮುದುಡುವಿಕೆಯನ್ನು ಮಾಡಿಕೊಳ್ಳಬೇಕಾದ ಅಗತ್ಯವಾದರೂ ಏತಕ್ಕೆ?

ವಿಶಿಷ್ಟ ವಯಸ್ಸಿನ ಅನಂತರ ಸ್ತ್ರೀಯು ಪುನರ್ ವಿವಾಹದ ಬಗ್ಗೆ ವಿಚಾರ ಮಾಡಬಾರದು. ಆದರೆ ಆ ಒಂದು ವಯಸ್ಸನ್ನು ನಿರ್ದಿಷ್ಟವಾಗಿ ಇದೇ ಎಂದು ಒಂದು ಲಕ್ಷ್ಮಣ ರೇಖೆಯನ್ನು ಎಳೆದು ತೋರಿಸುವುದಕ್ಕೆ ಬರುವುದಿಲ್ಲ. ನಲವತ್ತನೆಯ ವಯಸ್ಸಿನ ನಂತರ ಸ್ತ್ರೀಯ ಮನಸ್ಸು ಸಂಸಾರದಿಂದ ವಿರಕ್ತಿ ಹೊಂದುತ್ತದೆ ಎಂಬುದು ನಿಜ, ಆದರೂ ಸಾಂಸಾರಿಕ ವಿಚಾರಗಳು ಮತ್ತು ಪುರುಷ ಸಹವಾಸದ ಆಕರ್ಷಣೆ ಸ್ತ್ರೀಗೆ ಇರುವುದೇ ಇಲ್ಲವೆಂದು ಹೇಳುವುದಕ್ಕೆ ಬರುವುದಿಲ್ಲ. ಪುರುಷನು ವಿಧುರನಾದಾಗ ಅವನಿಗೆ ನಲವತ್ತು ವರ್ಷಗಳಾಗಿದ್ದರೂ ಸರಿಯೇ ಪುನರ್ ವಿವಾಹದ ಬಗ್ಗೆ ವಿಚಾರ ಮಾಡುತ್ತಾನೆ. ಕಾರಣ ಸಣ್ಣಮಕ್ಕಳಿದ್ದರೆ ಅವುಗಳ ಪಾಲನೆ, ಪೋಷಣೆ ಅಥವಾ ಮಕ್ಕಳು ದೊಡ್ಡವಾಗಿದ್ದರೆ ಅವರ ಉಸಾಬರಿ ವಹಿಸುವುದು, ಅವರಿಗೆ ಅಡುಗೆ ಮಾಡಿ ಬಡಿಸುವ ವ್ಯವಸ್ಥೆ, ವೈವಾಹಿಕ ಸುಖದ ಇಚ್ಛೆ, ಸ್ತ್ರೀ ಸಹವಾಸದ ಅನುಭವ ಮತ್ತು ಅಗತ್ಯ ವೃದ್ದಾಪ್ಯದಲ್ಲಿ ಉದ್ಭವವಾಗುವ ರೋಗರುಜಿನಗಳ ಕಾರಣ ಆರೈಕೆ ಮಾಡುವುದಕ್ಕೆ ಒಬ್ಬಳು ಹಕ್ಕಿನ ವ್ಯಕ್ತಿ- ಹೀಗೆ ವಿವಿಧಾಂಗಗಳಲ್ಲಿ ವಿಚಾರ ಮಾಡಿ ಪುರುಷರು ಪುನರ್ ವಿವಾಹವಾಗುವಂತೆ ಸಂಬಂಧಿಗಳು ಒತ್ತಡ ಹೇರುತ್ತಾರೆ. ಅನೇಕ ಬಾರಿ ಪ್ರೌಢ ಕುಮಾರಿಯರು ಇಲ್ಲವೆ ಆರ್ಥಿಕವಾಗಿ ಸಂಕಷ್ಟದೊಳಗೆ ಇರುವಂತಹ ತರುಣಿಯರು, ವಿಧವಾ ಸ್ತ್ರೀಯರು ಇರುವಂಥ ಸ್ಥಳಗಳನ್ನು ಸೂಚಿಸಲಾಗುತ್ತದೆ ಮತ್ತು ಮದುವೆಯನ್ನು ಕೂಡಿಸಿ ಕೊಡಲಾಗುವುದು. ಪುರುಷರಂತೆಯೇ ಸ್ತ್ರೀಯರಿಗೂ ಶೃಂಗಾರಿಕ ವಾಸನೆಯ ಕಾರಣವಾಗಿ ಅಲ್ಲದಿದ್ದರೂ, ಖಾತ್ರಿಯ ಆಧಾರಕ್ಕಾಗಿಯಾದರೂ ಪುನರ್ ವಿವಾಹವು ಹೆಚ್ಚು ಅಗತ್ಯವಾಗಿದೆ. ಇದನ್ನು ಅವಳ ಹತ್ತಿರದವರೆಲ್ಲರೂ ತಿಳಿಯಬೇಕಾದ್ದು ಅವಶ್ಯ. ಪುರುಷರ ಜೀವನದಲ್ಲಿ ಪೂರ್ಣತೆಯು ಉಂಟಾಗುವುದಕ್ಕಾಗಿ ಮತ್ತು ಸಹವಾಸದಿಂದ ಆನಂದ ತರುವುದಕ್ಕಾಗಿ ಹೇಗೆ ನಲವತ್ತನೆಯ ವರ್ಷದಲ್ಲಿ ಮದುವೆಯು ಅಗತ್ಯವೆಂದು ಭಾವಿಸಲಾಗುವುದೋ ಹಾಗೆಯೇ ಸ್ತ್ರೀಯರೂ ಒಬ್ಬ ರೊಬ್ಬರೊಡನೆ ಸಹಚರ್ಯದಿಂದ ಬದುಕುವುದನ್ನು ರೂಢಿಸಿಕೊಳ್ಳುವುದಕ್ಕೆ ಸಾಧ್ಯವಿದೆ. ಅಲ್ಲದೆ ಕೆಲವಾರು ವರ್ಷಗಳ ಕಾಲ ಸಂಸಾರ ನಡೆಸಿರುವ ಸ್ತ್ರೀಯರಿಗೆ ಸಂಸಾರದಿಂದ ಮತ್ತು ಶೃಂಗಾರದಿಂದ ಮನಸ್ಸನ್ನು ತೆಗೆದು ಹಾಕುವುದು ಅವಶ್ಯವೆಂದು ಹೇಳುವುದು ಪ್ರಮಾದವೇ ಸರಿ. ಪ್ರೌಢ ವಯಸ್ಸಿನಲ್ಲಿಯೂ ಪುರುಷ ಸಹವಾಸದ ಆಕರ್ಷಣೆ ಉಂಟಾಗುವುದು ಅನೈಸರ್ಗಿಕವೆಂಬ ಭಾವನೆ ತಪ್ಪು. ಎಂತಲೇ ಶಾರೀರಿಕ ವಾಸನೆ, ಮಾನಸಿಕ ಪ್ರೇಮ, ಪುರುಷ ಸಹವಾಸದ ರೂಢಿ, ಮಕ್ಕಳ ಜವಾಬ್ದಾರಿಯನ್ನು ಹೊರುವ ದೃಷ್ಟಿಯಿಂದ ಮತ್ತು ಅವರಿಗೆ ತಂದೆಯ ಕೊರೆತೆಯ ಅರಿವು ಉಂಟಾಗಬಾರದೆಂಬ ದೃಷ್ಟಿಯೂ ಇಲ್ಲಿ ಗಮನಿಸಬೇಕು. ಹಾಗಾಗಿ ಪುನರ್ ವಿವಾಹದ ವಿಚಾರವನ್ನು ಕೇವಲ ಬಾಲವಿಧವೆಯ ದೃಷ್ಟಿಕೋನದಿಂದಷ್ಟೇ ಮಾಡಿದರೆ ನಡೆಯುವುದಿಲ್ಲ. ಈ ಕಾಲದಲ್ಲಿ ಪ್ರೌಢ ವಿಧವೆಯರ ಸಂದರ್ಭವನ್ನು ಗಮನಿಸಿ ಅವರ ಆವಶ್ಯಕತೆಯನ್ನು ಮಾನ್ಯ ಮಾಡಬೇಕಾಗಿದೆ.

ಮಕ್ಕಳಿರುವ ವಿಧವಾ ಸ್ತ್ರೀಯರ ವಿಷಯದಲ್ಲಿ ಬಹುತೇಕವಾಗಿ ಪುನರ್ ವಿವಾಹದ ವಿಚಾರವನ್ನು ಧೋಕದಾಯಕವೆಂದು ಮತ್ತು ಕುಟುಂಬ ಸ್ವಾಸ್ಥ್ಯವನ್ನು ಹಾಳು ಮಾಡುವಂಥದೆಂದೂ ಒಪ್ಪಿಕೊಳ್ಳಲಾಗಿದೆ. ಕಾರಣ ಅವರ ಜವಾಬ್ದಾರಿಯು ಈ ವಿಷಯದಲ್ಲಿ ಬಹಳ ಗಂಭೀರ. ಹಾಗಾಗಿ ಅಂಥ ಸ್ತ್ರೀಯರು ವಿವಾಹದ ಗೊಂದಲದಲ್ಲಿ ಬೀಳಬಾರದೆಂದು ಬಹಳಷ್ಟು ಜನರು ಹೇಳುವುದು ಕಂಡುಬರುತ್ತದೆ. ಆದರೆ ಇಲ್ಲಿ ಒಂದು ವಿಚಾರವನ್ನು ಗಮನಿಸಬೇಕು. ಅಂಥ ಸ್ತ್ರೀಯರು ಪುನರ್ ವಿವಾಹ ಮಾಡಿಕೊಳ್ಳುವಲ್ಲಿಯೂ ತಮ್ಮ ಜವಾಬ್ದಾರಿಯ ಬಗ್ಗೆ ಎಚ್ಚರ ಹೊಂದಿರುತ್ತಾರೆ. ಅಲ್ಲದೆ ಇಂಥ ವಿವಾಹಗಳು ತರುಣ ವಯಸ್ಸಿನಲ್ಲಿ ಆಗುವಂಥ ಪ್ರೇಮ ವಿವಾಹದ ಸ್ವರೂಪದವುಗಳಂತೆ ಇರುವುದಿಲ್ಲ. ಸಹವಾಸದಿಂದ ಒಬ್ಬರೊಬ್ಬರಲ್ಲಿ ಜೀವಾತ್ಮಕ ಸಂಬಂಧಗಳು ಉಂಟಾಗಬಹುದು. ಅಥವಾ ಸಂಬಂಧಿಗಳು, ಮಧ್ಯಸ್ಥಿಕೆದಾರರು ಈ ಬಗ್ಗೆ ಒಂದು ಪೂರ್ವಕಲ್ಪನೆಯನ್ನು ನೀಡಿಯೇ ಪುನರ್ ವಿವಾಹದ ಸಾಧ್ಯತೆಯನ್ನು ನಿರ್ಮಾಣ ಮಾಡುತ್ತಾರೆ. ಆನಂತರದಲ್ಲಿಯೇ ಅಂತಿಮ ನಿರ್ಣಯವು ಸಾಧ್ಯವಾಗವುದು. ಹಾಗಾಗಿ ಮಕ್ಕಳ ಜವಾಬ್ದಾರಿಯನ್ನು ನಿರಾಕರಿಸುವ ಮೂಲಕ ವಿಧವೆಯರು ತಮ್ಮ ವೈವಾಹಿಕ ಬದುಕಿನ ಸುಖವನ್ನು ಕುರಿತು ವಿಚಾರ ಮಾಡುತ್ತಾರೆಂದು ಭಾವಿಸಬೇಕಾಗಿಲ್ಲ. ಅಲ್ಲದೆ ಮಕ್ಕಳು ತಮ್ಮ ಜವಾಬ್ದಾರಿಯನ್ನು ತಾವೇ ಹೊರುವಷ್ಟು ದೊಡ್ಡವರಾಗಿದ್ದರೆ, ಅವರ ಕಾರಣದಿಂದ ಪುನರ್ ವಿವಾಹಕ್ಕೆ ಉಂಟಾಗುತ್ತವೆನ್ನಲಾದ ಸಂಭವನೀಯ ಅಡಚಣೆಗಳ ಬಗ್ಗೆ ಭಯ ಪಡುವಂತಹ ಅಗತ್ಯವೂ ಇಲ್ಲ. ಆದರೆ ಮಕ್ಕಳಿರುವ ವಿಧವೆಯನ್ನು ವಿವಾಹವಾಗುವುದಕ್ಕೆ ಪುರುಷರೇ ಉತ್ಸುಕರಾಗಿರುವುದಿಲ್ಲ, ಕಾರಣ ಸವತಿಯ ಮಕ್ಕಳು ಇವರು ಎಂದು ಹೇಳುವಲ್ಲಿ ನೈತಿಕ ದೃಷ್ಟಿಯಿಂದ ಸ್ತ್ರೀಗೆ ದೊಡ್ಡಸ್ತಿಕೆ ಮತ್ತು ತ್ಯಾಗದ ಸಂಗತಿಗಳು ಇರುತ್ತವೆ. ಆದರೆ ಪುರುಷನಿಗೆ ಅದಿರದೆ ತನ್ನ ವ್ಯಕ್ತಿತ್ವಕ್ಕೆ ಕುಂದುಂಟಾಗುವುದು ಎಂಬ ಭಾವನೆಯು ಬರುತ್ತಿರುತ್ತದೆ. ಹಾಗಾಗಿ ಪುನರ್ ವಿವಾಹವಾಗುವಲ್ಲಿ ವಿಧವಾ ಸ್ತ್ರೀ ತನ್ನ ಮಕ್ಕಳನ್ನು ಮೊದಲ ಮಾವನ ಮನೆ ಅಥವಾ ತನ್ನ ತವರು ಮನೆಯಲ್ಲಿ (ಈ ಸಾಧ್ಯತೆಯು ಬಹಳ ಕಡಿಮೆ) ಬಿಟ್ಟು ಬರಬೇಕು ಅಥವಾ ಪುನರ್ ವಿವಾಹಿತ ಪತಿಯ ಸಮ್ಮತಿ ಪಡೆದು ಪತಿಯ ಮನೆಗೆ ಕರೆದುಕೊಂಡು ಬರಬೇಕಾದ್ದು ಅವಶ್ಯ.

ಇಂಥ ಜವಾಬ್ದಾರಿಯನ್ನು ಹೊರುವ ಪುರುಷರನ್ನು ಕಾಣಬಹುದಾದ ಸಾಧ್ಯತೆಯೂ ಇಲ್ಲದಿಲ್ಲ. ವಿಶೇಷವಾಗಿ ಆರ್ಥಿಕ ದೃಷ್ಟಿಯಿಂದ ಸ್ವಾವಲಂಬಿಯಾಗಿರುವ ವಿಧವೆಯರನ್ನು ಮದುವೆಯಾದರೆ, ಪೂರ್ವಾಶ್ರಮದ ಮಕ್ಕಳ ಪಾಲಕತ್ವದ ಜವಾಬ್ದಾರಿಯನ್ನು ವಹಿಸುವುದಕ್ಕೆ ಅವರು ಹಿಂದೆ ಮುಂದೆ ನೋಡುವುದಿಲ್ಲ. ಆ ಕಾರಣಕ್ಕಾಗಿಯಾದರೂ ಮಕ್ಕಳಿರುವ ವಿಧವೆಯರು ಆರ್ಥಿಕ ದೃಷ್ಟಿಯಿಂದ ಸ್ವಾವಲಂಬಿಯಾಗಿರುವುದು ಪ್ರಥಮವಾಗಿ ಅವಶ್ಯವೆನ್ನಬಹುದು. ಆದರೆ ಕೇವಲ ಆರ್ಥಿಕ ಸ್ವಾವಲಂಬನೆ ಯಾವುದೇ ವಿಧವೆಯ ಪುನರ್ ವಿವಾಹಕ್ಕೆ ಅನುಕೂಲ ಉಂಟುಮಾಡುವ ಘಟಕವೆಂದು ನಿರ್ಧರಿಸಲಾಗುವುದಿಲ್ಲ. ಪತಿಯ ಮರಣಾನಂತರ ಮಕ್ಕಳ ಸಂಪರ್ಣ ಪಾಲಕತ್ವದ ಜವಾಬ್ದಾರಿಯನ್ನು ತಾಯಿಯಾದವಳು ತೆಗೆದುಕೊಳ್ಳುತ್ತಾಳೆ ಎಂಬುದು ಒಪ್ಪಿತ ಸಂಗತಿ. ಆದರೆ ವಿಧವೆಯಾದ ಮೇಲೆ ಅವಳು ಮತ್ತೊಂದು ವಿವಾಹ ಮಾಡಿಕೊಂಡೊಡನೆ ತನ್ನ ಮಕ್ಕಳ ಮೇಲಣ ಅವಳ ಪ್ರೇಮ ಕಡಿಮೆಯಾಗುತ್ತದೆ. ಅಲ್ಲದೆ, ಮೊದಲ ಪತಿಯ ಪವಿತ್ರ ಸ್ಮೃತಿಯನ್ನು ಅವಳು ಮರೆತುಬಿಟ್ಟಳು ಎಂದು ಪುನರ್ ವಿವಾಹ ನಂತರದ ಪ್ರತಿಯೊಂದು ಕೃತಿಯ ಅರ್ಧವನ್ನು ಈ ದೃಷ್ಟಿಯಿಂದಲೇ ಮಾಡುತ್ತಾ ಹೋಗುವುದು ಸರಿಯಲ್ಲ. ಕಾರಣ ಹಾಗೆ ಮಾಡಿದರೆ ವೈವಾಹಿಕ ಜೀವನದಲ್ಲಿನ ಸಮಾಧಾನಕ್ಕೆ ಲೋಪವು ಬಂದೊದಗುತ್ತದೆ. ಮಗುವನ್ನಷ್ಟೆ ಮುಖ್ಯವಾಗಿ ಅವಲಂಬಿಸಿಕೊಂಡಿದ್ದ ವಿಧವೆಯು ಅವನಿಗಾಗಿ ಒಂಟಿತನದ ಬದುಕು ಇಚ್ಚಿಸಿದರೆ, ಕೊನೆಯ ತನಕವೂ ಅವಳು ಒಂಟಿಯಾಗಿಯೇ ಬದುಕಬೇಕಾದ್ದು ಅನಿವಾರ್ಯ. ಮಕ್ಕಳೊಂದಿಗೆ ಈ ಸಂಬಂಧಗಳನ್ನು ಇಟ್ಟುಕೊಂಡು ಅವರ ಸುಖ ದುಃಖಗಳಲ್ಲಿ ಎಲ್ಲಾ ಬಗೆಯಲ್ಲೂ ಸಹಭಾಗಿಯಾಗುವುದರಲ್ಲಿಯೇ ಜೀವಂತಿಕೆ ಇರುವುದು ಎಂದು ಹೇಳುವಂತಿಲ್ಲ. ಅಂದರೆ ಮಕ್ಕಳೆಡೆ ನೋಡುತ್ತಲೇ ವಿಧವೆಯರು ತಮ್ಮ ಉಳಿದ ಬದುಕನ್ನು ಕಳೆಯಬೇಕು ಎಂಬ ಅಭಿಪ್ರಾಯ ಎಲ್ಲರಿಗೂ ಇಷ್ಟವಾಗುವಂತಹದ್ದೇನಲ್ಲ.

ಆರ್ಥಿಕ ಜವಾಬ್ದಾರಿಯನ್ನು ಹೊರುವ ಸಾಮರ್ಥ್ಯ ಅಥವಾ ಅಂಥ ಅನುಕೂಲತೆ ಇರುವ ವಿಧವೆಯರು ಮಕ್ಕಳ ಆರ್ಥಿಕ ವ್ಯವಸ್ಥೆಯನ್ನು ಸೂಕ್ತವಾಗಿ ಮಾಡಬೇಕು ಎಂಬುದು ಅಪೇಕ್ಷಿತ. ಅಲ್ಲದೆ ತಾಯಿಯಾಗಿ ಮಕ್ಕಳ ಆರೈಕೆಯನ್ನು ಬಹಳ ಚೆನ್ನಾಗಿ ಮಾಡುತ್ತಾಳೆ ಎಂಬ ವಿಶ್ವಾಸದಿಂದ ಸಾಕುವುದರಲ್ಲಿ ಅಡ್ಡಿಯಿಲ್ಲ. ಹಾಗಾಗಿ ಪತಿಯ ನಿಧನಾನಂತರ ಮಕ್ಕಳ ಖಾತ್ರಿಗೆ ಲಾಯಕ್ಕಾದ ರಕ್ಷಣೆಯ ವ್ಯವಸ್ಥಿತ ಮಾರ್ಗವನ್ನು ಅವಲಂಬಿಸುವ ವಿಧವೆಯರ ಸ್ವಇಚ್ಚೆಯ ಪುನರ್ ವಿವಾಹದ ತಯಾರಿ ಸಮಾಜಕ್ಕೆ ಮಾನ್ಯವಾಗಬಹುದು. ಆದರೆ ಅದು ಆಗಲೇಬೇಕು ಎಂಬ ದೃಷ್ಟಿಯಿಂದ ಮಾತ್ರ ಪ್ರಯತ್ನವನ್ನು ಮುಂದುವರೆಸು ವಲ್ಲಿನ ಹಿನ್ನೆಲೆ ಮತ್ತು ಸಂಕುಚಿತ ಪ್ರವೃತ್ತಿಗಳಲ್ಲಿ ಮಾತ್ರ ಇಂದಿಗೂ ವಿಶೇಷವಾಗಿ ಬದಲಾವಣೆ ಆಗಿರುವಂತೆ ತೋರುವುದಿಲ್ಲ, ವೈಯಕ್ತಿಕ ಪಾತಳಿಯ ಮೇಲೆ ಅಥವಾ ಸಂಸ್ಥೆ, ವಂಡಳಿಗಳು, ಸಂಘಟನೆಗಳು ಈ ಸ್ತರದಲ್ಲಿ ಪುನರ್ ವಿವಾಹವಾಗಬೇಕು ಎಂಬ ದೃಷ್ಟಿಯಿಂದ ಬಹಳಷ್ಟು ಪ್ರಯತ್ನಗಳನ್ನೂ ಸಹ ಮಾಡುತ್ತಿಲ್ಲ. ತೀರಾ ತರುಣ ವಯಸ್ಸಿನಲ್ಲಿ ವೈಧವ್ಯ ಪ್ರಾಪ್ತವಾದ ವಿದವೆಯರು ಕೂಡ ತಮ್ಮ ಅತಿ ಚಿಕ್ಕಮಕ್ಕಳ ಕಾಳಜಿಯ ಕಾರಣದ ಹಿನ್ನಲೆಯಲ್ಲಿ ಪುನರ್ ವಿವಾಹದ ವಿಚಾರವನ್ನು ಮಾಡುವುದು ಸರಿಯಾದುದಲ್ಲ ಎಂದು ಅವಳ ಮನಸ್ಸಿನಲ್ಲಿ ಬಿಂಬಿಸಲಾಗುತ್ತದೆ. ಮೊದಲ ಮಗು ಮೂರು ಅಥವಾ ಐದು ವರ್ಷದ್ದಾಗಿದ್ದು ಮತ್ತೆ ಗರ್ಭೀಣಿಯಾಗಿದ್ದಾಗಲೇ ಪತಿಯು ಮರಣ ಹೊಂದಿದರೆ, ಆ ತರುಣ ವಿಧವೆಯ ವಿವಾಹವಾಗಬೇಕು ಎಂಬುದಾಗಿ ಹಳೆಯ ತಲೆಮಾರಿನ ಜನರು ಮನಃಪೂರ್ವಕವಾಗಿ ಹೇಳುವುದಿಲ್ಲ. ಕಾರಣ ನಮ್ಮ ಸಮಾಜದಲ್ಲಿ ಮಾತೃತ್ವಕ್ಕೆ ಬಹಳೇ ಮಹತ್ವವಿದೆ. ಆ ಕಾರಣ ಇತರೆ ಸುಖಗಳಿಗೆಲ್ಲ ಗೌಣಸ್ಥಾನ ಎಂಬುದು ಸಮಾಜದ ಮನೋಭೂಮಿಕೆಯಾಗಿದ್ದು, ಇದು ನಾವು ಹೆಚ್ಚು ಬದಲಾಗಿಲ್ಲವೆಂಬುದರ ದ್ಯೋತಕ. ಅಲ್ಲದೆ ಪುನರ್ ವಿವಾಹದ ಬಗ್ಗೆ ವಿಧವೆಯ ತಯ್ಯಾರಿಯಂತೂ ಮಾನಸಿಕ ದೃಷ್ಟಿಯಿಂದ ಆಗಲೇಬೇಕಾದ್ದು ಅವಶ್ಯ. ಏಕೆಂದರೆ ಮತ್ತೊಂದು ವಿವಾಹದ ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಮಾನಸಿಕವಾಗಿ ಗಂಭೀರತೆಯಿಂದ ರೂಪಿಸಿಕೊಳ್ಳುವ ನಿಲುವು ಇರಬೇಕು.

ವೈಧವ್ಯದ ಕಾರಣ ಧೈರ್ಯಗುಂದಿ, ಕೆಲವಾರು ವರ್ಷಗಳ ಕಾಲ ಹಾಗೆಯೇ ಜೀವನ ನಡೆಸಿದ ಅನಂತರ ನಿರ್ವಾಹವಿಲ್ಲದೆ ಪುನರ್ ವಿವಾಹದ ಇಚ್ಚೆಯನ್ನು ವ್ಯಕ್ತಪಡಿಸಬಹುದು. ಅಂಥ ದ್ವಂದ್ವ ಮನಃಸ್ಥಿತಿಯಲ್ಲಿ ನಿರ್ಣಯ ಕೈಗೊಂಡಾಗ ಪುನರ್ ವಿವಾಹ ಶಾಸ್ತ್ರಶುದ್ಧ ಮತ್ತು ನ್ಯಾಯಯುತವಾದುದಾಗಿದ್ದರೂ, ಸಂತುಷ್ಠಿಯಿಂದ ಕೂಡಿರುತ್ತದೆ ಎಂದು ಹೇಳುವಂತಿಲ್ಲ. ಎಂತಲೇ ಪುನರ್ ವಿವಾಹವು ಸ್ವೇಚ್ಛೆಯ ಭಾಗವೇ ಆಗಿರಬಹುದು, ಆದರೆ ಕೇವಲ ವಿಧವೆಯ ಇಚ್ಚೆಯ ಮಾರ್ಗವಾಗಿರುವ ಅದನ್ನು ಅವಳನ್ನು ವಿವಾಹವಾಗಲು ಉತ್ಸುಕರಾಗಿರುವ ಮತ್ತು ಇಚ್ಚಿತರಾಗಿರುವ ಪುರುಷರ ಸಹಕಾರ್ಯದಿಂದಷ್ಟೇ ಸ್ವೀಕರಿಸುವುದಕ್ಕೆ ಬರುವುದಿಲ್ಲ. ಪುನರ್ ವಿವಾಹಕ್ಕೆ ಅವಶ್ಯವಾಗಿ ಸಾಮಾಜಿಕ ಮಾನ್ಯತೆಯೂ ಬೇಕು. ಕಾರಣ ಕಾಯಿದೆಯಿಂದಷ್ಟೇ ಇಂಥ ವಿವಾಹಗಳಿಗೆ ಮಾನ್ಯತೆಯಿದ್ದರೆ ಸಾಕಾಗುವುದಿಲ್ಲ. ಇಂದು ಪುನರ್ ವಿವಾಹ ಮಾಡಿಕೊಳ್ಳುವ ಪುರುಷನ ಸಾಮಾಜಿಕ ಪ್ರತಿಷ್ಠೆಯನ್ನು ಕಡಿಮೆಯೆಂದು ಭಾವಿಸುತ್ತಿಲ್ಲ. ಆದರೆ ಅದೇ ರೀತಿಯಲ್ಲಿ ಪುನರ್ ವಿವಾಹಿತ ಸ್ತ್ರೀಯನ್ನೂ ಪರಿಭಾವಿಸುವುದು ಅಗತ್ಯ. ವ್ಯಕ್ತಿ, ಮಕ್ಕಳು ಮತ್ತು ಸಮಾಜ ಈ ಎಲ್ಲಾ ದೃಷ್ಟಿಕೋನಗಳಿಂದ ಪುನರ್ ವಿವಾಹದ ವಿಚಾರವು ನಿರ್ಧರಿತವಾಗಬೇಕು. ಬದಲಾಗಿ ಮನಸ್ಸಿಲ್ಲದ ಜೀವ, ಆತ್ಮವಿಲ್ಲದ ಪ್ರಾಣ, ಒತ್ತಿಕ್ಕಿರುವಂಥ (ಹಿಸುಕು) ಜೀವನ, ಆಯಾಸಗೊಂಡ ಆಯಸ್ಸು- ಇವೇ ವಿಧವೆಯರ ಸ್ಥಿತಿಯಾಗಿಬಿಡುತ್ತವೆ.