ಬಲಾತ್ಕಾರ

ಬಲಾತ್ಕಾರಗಳ ವರದಿಯು ಇಂದು ವರ್ತಮಾನ ಪತ್ರಿಕೆಗಳ ಸಾಪ್ತಾಹಿಕ ಸುದ್ದಿಗಳಾಗಿ ಉಳಿದಿಲ್ಲ. ಬದಲಾಗಿ ದೈನಿಕವಾದ ನಿಯಮಿತ ಘಟನೆಗಳಾಗಿ ಹೋಗಿವೆ. ಪ್ರಗತಿ ಎಂಬುದಾಗಿ ಸಂಸ್ಕೃತಿಯಲ್ಲಿ ಏನನ್ನು ಭಾವಿಸಿರುವೆವೋ ಅದರ ಆವಶ್ಯಕ ಭಾಗವಾಗಿ ನಡೆಯುತ್ತಿದೆ. ಈ ಬುದ್ದಿವಂತ ಮನುಷ್ಯ ಪ್ರಾಣಿಗಳು ಮನುಷ್ಯ ಭಾಷೆಯಲ್ಲಿ ಪಾಶವೀ ಬಲಾತ್ಕಾರವನ್ನು ಸರ್ವಸಮ್ಮತಗೊಳಿಸಿ ಬಿಟ್ಟಿದ್ದಾರೆ. ನಿಜವಾಗಿಯು ಹೇಳಬಹುದಾದರೆ ಪಶು, ಪ್ರಾಣಿಗಳ ಜೀವನದಲ್ಲಿಯೂ ಬಲಾತ್ಕಾರಕ್ಕೆ ಸ್ಥಾನವಿಲ್ಲ.

ಪಶುವು ಬುದ್ದಿಹೀನವೇನಲ್ಲ, ಬದಲಾಗಿ ಅಲ್ಪಬುದ್ದಿಯದ್ದಾಗಿದೆ. ಯಾವಾಗ ಸ್ವಬಲದ ಸಂಧಿ ದೊರೆಯುವುದೋ ಆಗ ಮಾತ್ರ ಅದನ್ನು ಬಳಸಿಕೊಳ್ಳುವುದನ್ನು ಕಾಣುತ್ತೇವೆ. ಮನುಷ್ಯ ಪಶುವಿಗಿಂತಲೂ ಶ್ರೇಷ್ಠ ಬುದ್ದಿಯುಳ್ಳ ಪಗಲ್ಭ. ಆದರೆ ಪಶುವಿಗೆ ತನ್ನ ಅಲ್ಪಬುದ್ದಿಯನ್ನು ಅಡ್ಡ ಮಾರ್ಗದತ್ತ ಹೊರಳಿಸುವುದಕ್ಕೆ ಅವಕಾಶವಿಲ್ಲ. ಅಲ್ಲದೆ ಮನುಷ್ಯನ ಹಾಗೆ ಬಲಪ್ರಯೋಗ ಮಾಡುವುದಕ್ಕಾಗಿ ಆಯುಧಗಳೇ ಮೊದಲಾದ ಸಾಧನಗಳನ್ನು ಉಪಯೋಗಿಸುವ ಸಾಮರ್ಥ್ಯ ಮತ್ತು ಕೌಶಲ್ಯಗಳೂ ಅವಕ್ಕಿಲ್ಲ. ಎಂತಲೇ ಬಲಾತ್ಕಾರದಲ್ಲಿನ  ಬೀಭತ್ಸತೆ ಮತ್ತು ರೌದ್ರತೆಯು ಮನುಷ್ಯ ನೆಲೆಯದ್ದೇ ಆಗಿರುತ್ತದೆ. ಪಶು ಬದುಕಿನಲ್ಲಿ ಸ್ವಚ್ಚ ಹಾಗೂ ಮುಕ್ತ ವ್ಯವಹಾರವಿರುತ್ತದೆ. ಪಶುವಿಗಿಂತಲೂ ಹೀನವಾಗಿ ವರ್ತಿಸುವ ಮನುಷ್ಯರು ಮಾತ್ರವೇ ಬಲಾತ್ಕಾರದಂತಹ ನೀಚ ಕೃತ್ಯವನ್ನು ಮಾಡುವವರಾಗಿದ್ದಾರೆ.

ಹೊಲಕ್ಕೆ ಕೆಲಸ ಮಾಡಲು ಹೋಗಿದ್ದಳು ಒಬ್ಬ ಸ್ತ್ರೀ; ಬೆಳೆದು ನಿಂತಿರುವ ಜೋಳ, ಬಹಳ ದೊಡ್ಡದಾಗಿತ್ತು ಜಮೀನು. ಆ ಹೆಣ್ಣಿನ ಮೈಮೇಲಿನ ವಸ್ತ್ರಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ. ಮೊಳಕಾಲಿನ ಕೆಳಗಿನ ಭಾಗದ ಕಾಲುಗಳು ಬಾಗಿದ್ದು, ಕಾಲುಗಳು ಅತ್ತತ್ತ ಬಾಗಿವೆ. ಜನಸೇಂದ್ರಿಯದಿಂದ ರಕ್ತವು ಹರಿಯುತ್ತಿದೆ. ಎರಡೂ ಕೈಗಳು ಆ ಪಕ್ಕ ಈ ಪಕ್ಕಗಳಲ್ಲಿ ಬಿದ್ದಿವೆ. ತೆರೆದಿರುವ ಬಾಯಿ ಮತ್ತು ಕಣ್ಣುಗಳು, ನಾಲಿಗೆ ಹೊರ ಚಾಚಿ ದಂತ ಪಂಕ್ತಿಗಳಲ್ಲಿ ಸಿಲುಕಿದೆ. ಕುತ್ತಿಗೆಯ ಸುತ್ತ ಅವಳದೇ ಸೀರೆಯ ಸೆರಗನ್ನು ಗಟ್ಟಿಯಾಗಿ ಬಿಗಿಯಲಾಗಿದೆ ಮತ್ತು ಮೈಮೇಲೆಲ್ಲ ಉಗುರುಗಳ ಕೆರತದ ಗುರುತುಗಳು. ತಲೆಯ ಬಳಿ ಎರಡು ಚಪ್ಪಲಿಗಳು, ಕೈಬಳೆಗಳೆಲ್ಲ ತುಂಡು ತುಂಡಾಗಿ ಬಿದ್ದಿವೆ. ಇಂಥ ಪ್ರೇತವನ್ನು ನೋಡಿದೊಡನೆ ಮೈಯಲ್ಲೆಲ್ಲ ರೋಮಾಂಚನ ಉಂಟಾಗುವುದು ಸಹಜ. ಹೀಗೆ ಬಲಾತ್ಕಾರ ಮಾಡಿ ಅವಳನ್ನು ಕೊಂದ ನರಾಧಮನನ್ನು ಚೌಕದಲ್ಲಿ ನಿಲ್ಲಿಸಿ ಸಾಯುವವರೆಗೂ ಪೆಟ್ಟುಕೊಡುವ ಶಿಕ್ಷೆಯೇ ಯೋಗ್ಯವೆಂಬ ಭಾವನೆ ಮನಸ್ಸಿನಲ್ಲಿ ಬಾರದೆ ಇರಲಾರದು. ಇಂಥ ಪುರುಷರ ಸ್ಥಾನ ಪಶುಗಳಿಗಿಂತ ಕೆಳಗಿನದ್ದು ಮತ್ತು ಹೀನತಮವಾದುದೆಂದು ಮತ್ತೆ ಹೇಳಬೇಕಾಗಿಲ್ಲ. ಕೇವಲ ತರುಣ, ಪ್ರೌಢ ಮತ್ತು ಮುಪ್ಪಿನ ಕಡೆಗೆ ವಾಲುತ್ತಿರುವ ಸ್ತ್ರೀಯರ ಮೇಲಷ್ಟೇ ಬಲಾತ್ಕಾರ ಆಗುತ್ತದೆ ಎಂದೇನಿಲ್ಲ. ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳು, ವಯಸ್ಸಿಗೆ ಬಂದ ಅಥವಾ ಇನ್ನೂ ಬಾರದಿರುವ ಎಳೆಯ ಕೋಮಲ ತರುಣಿಯರು, ಅಲ್ಲದೆ ಕೇವಲ ಹೆಣ್ಣಿನ ಶರೀರದ ದೇಹವೂ ಪುರುಷ ವಾಸನೆಗೆ ಬಲಿಯಾಗುತ್ತದೆಂಬುದು ಸ್ಪಷ್ಟ. ಬಲಾತ್ಕಾರ ವಿಕೃತವಾದುದ್ದು ಅದೊಂದು ಘೋರ ಅನಾಚಾರ.

ಸಾರ್ವಜನಿಕ ಬದುಕಿನಲ್ಲಿ ಸ್ತ್ರೀಯರಿಗೆ ಸಂಬಂಧಿಸಿದ ವಿಚಾರಗಳು ಆರೋಗ್ಯ ಕರವಾದುವುಗಳಾಗಿಲ್ಲ. ಅವಳನ್ನು ನೋಡವ ದೃಷ್ಟಿಯೇ ಮೂಲತಃ ಶಾರೀರಿಕ ನೆಲೆಯದ್ದು. ಅವಳ ಬಗೆಗೆ ಸತತವಾಗಿ ಅನಾಚಾರ, ದುರಾಚಾರದ ತರಂಗಗಳೇ ಮನಸ್ಸಿನಲ್ಲಿ ಏಳುತ್ತವೆ. ಸಹಜವಾಗಿಯೇ ಆ ತರಂಗಗಳಿಂದ ಭೀತಿ ಮತ್ತು ಆತಂಕಗಳು ಉಂಟಾಗುತ್ತವೆ. ಢೋಂಗಿತನದ ಮತ್ತು ಕೃತ್ರಿಮತೆಯ ಆಗ್ರಹ ಮತ್ತು ಭೀತಿಯ ಸಂಬಂಧಗಳಿಂದ ಸ್ತ್ರೀ-ಪುರುಷರಲ್ಲಿ ಉಂಟಾಗುವ ಸಮಾಗಮವೂ ಬಲಾತ್ಕಾರವೇ.

ಇಂದು ಬಲಾತ್ಕಾರಕ್ಕೆ ನಿಜವಾಗಿಯೂ ಬಲಿಯಾಗುತ್ತಿರುವವಳು ಸ್ತ್ರೀಯೇ. ಈ ಸ್ಥಿತಿ ಇಂದಿನದ್ದೇ ಅಲ್ಲ, ಇದಕ್ಕೆ ಇತಿಹಾಸದಲ್ಲಿ ಕೂಡ ದಾಖಲೆ ಸಿಕ್ಕುತ್ತದೆ. ಭಗವಾನ್ ಇಂದ್ರನು ಗೌತಮ ಪತ್ನಿಯೊಂದಿಗೆ ಸಮಾಗಮ ಮಾಡಿದ, ಅವಳನ್ನು ಮೋಸಗೊಳಿಸುವ ಸಲುವಾಗಿ ಅಲ್ಲಿ ಅವನು ಅವಳ ಪತಿಯ ರೂಪವನ್ನು ಧಾರಣ ಮಾಡಿಕೊಂಡಿದ್ದನು. ಆ ಮೋಸವು ಬಯಲಾಗಿ ನಿಜವಾದ ಋಷಿಯು ಶಾಪಕೊಡಲು ಇಂದ್ರನ ಮೈಯಲ್ಲಿ ಸಹಸ್ರ ರಂಧ್ರಗಳಾದವು (ಸಹಸ್ರ ಯೋನಿ); ಇಂದ್ರನಿಗೆ ಅವನ ಕೃತ್ಯದ ಕಾರಣ ಶಿಕ್ಷೆಯಾಯಿತು. ಆದರೆ ಅಲ್ಲಿ ಅಹಲ್ಯೆ ಕೂಡ ಶಾಪಿತ ಶಿಲೆಯಾದಳು. ಅವಳ ದೋಷವೇನೂ ಇಲ್ಲದಿದರೂ ಅವಳು ಶಿಕ್ಷೆಯಿಂದ ಮುಕ್ತಳಾಗಲಿಲ್ಲ. ಪ್ರಭು ಶ್ರೀ ರಾಮಚಂದ್ರನ ಪಾದಸ್ಪರ್ಶದಿಂದ ಅವಳಿಗೆ ಮುಕ್ತಿ ಬಂದಿತು. ಹಾಗಿದ್ದರೂ ಕೂಡಾ ಆ ಮುಕ್ತಿಯು ನ್ಯಾಯವಾದುದೇನಲ್ಲ! ದುರ್ದೈವವೆಂದರೆ, ಸಾವಿರಾರು ವರ್ಷಗಳ ನಂತರ ಇಂದೂ ಕೂಡಾ ಬಲಾತ್ಕಾರಕ್ಕೆ ಶಿಕಾರಿಯಾದ ಸ್ತ್ರೀಗೆ ಅಂಥದೇ ನ್ಯಾಯವನ್ನು ಸಮಾಜವು ನೀಡುತ್ತಲಿದೆ.

ಬಲಾತ್ಕಾರ ಎಂಬ ಪದವನ್ನು ಸಂಕೋಚದಿಂದ ಬಳಸಲಾಗುತ್ತಿದೆ. ಬಲಾತ್ಕಾರ ಸಂಗತಿಯು ಸುದ್ದಿಯಾಗಬಾರದು ಎಂಬುದಾಗಿ ಎಲ್ಲರೂ ಒಳಗೊಳಗೇ ಚಡಪಡಿಸುತ್ತಿರು ತ್ತಾರೆ. ಆ ಸುದ್ದಿ ಯಾರಿಗೂ ತಿಳಿಯಬಾರದು ಎಂಬ ದೃಷ್ಟಿಯಿಂದ ಮಹಾಪ್ರಯಾಸವನ್ನೇ ಮಾಡಲಾಗುವುದು. ಸುಧಾರಿತವಾಗಿರುವ ಸಭ್ಯ ಸಮಾಜದಲ್ಲಿ ಬಲಾತ್ಕಾರವು ಚರ್ಚೆಯ ವಿಷಯವಾಗಬಾರದು ಎಂಬುದೇ ನಮ್ಮ ಮುಖ್ಯ ಅಪೇಕ್ಷೆ. ಪತ್ರಿಕೆಗಳಲ್ಲಿನ ಇಂತಹ ಸುದ್ದಿಗಳು ನಮ್ಮ ಮಕ್ಕಳ ದೃಷ್ಟಿಗೆ ಬೀಳಬಾರದು, ಆ ಕುರಿತಂತೆ ಕುಟುಂಬದಲ್ಲಿ ಹೆಚ್ಚಿನ ಚರ್ಚೆಯಾಗಬಾರದು ಎಂಬುದೇ ಬಹುಸಂಖ್ಯಾತ ಜನರ ಇಚ್ಛೆ. ಅಂದರೆ ಬಲಾತ್ಕಾರದ ಘಟನೆಯ ಹಿಂದಿನ ಪರಿಸ್ಥಿತಿಯನ್ನು ತಿಳಿದುಕೊಂಡು ಅದರ ವಿರುದ್ಧ ಧ್ವನಿ ಎತ್ತುವುದು, ಸಂಘಟಿತ ರೀತಿಯಲ್ಲಿ ಅದನ್ನು ದಾಖಲಿಸುವುದು ಆವಶ್ಯಕವಾಗಿದೆ ಎಂಬ ಮನೋಭಾವದವರ ಸಂಖ್ಯೆಯೇ ಅಧಿಕ. ಖಾಸಗಿಯಾಗಿ ಬಲಾತ್ಕಾರಿತ ಸ್ತ್ರೀಯ ಬಗ್ಗೆ ಗುಸುಗುಸು ವ್ಯಕ್ತವಾಗಬಹುದು, ಆದರೆ ಸಾರ್ವಜನಿಕವಾಗಿ ಮತ್ತು ಸಂಘಟಿತ ರೀತಿಯಲ್ಲಿ ಆ ಭಾವನೆಗಳನ್ನು ವ್ಯಕ್ತಪಡಿಸುವ ಪ್ರವೃತ್ತಿಯು ಅನೇಕರಲ್ಲಿ ಕಾಣಸಿಕ್ಕುವುದಿಲ್ಲ. ಬಲಾತ್ಕಾರಕ್ಕೊಳಗಾದ ಸ್ತ್ರೀಯತ್ತ ಕರುಣೆಯ ಹಿನ್ನಲೆಯಿಂದಷ್ಟೇ ದೃಷ್ಟಿಸುತ್ತದೆ ಸಮಾಜ. ಆದರೆ ಅವಳಿಗೆ ನ್ಯಾಯವನ್ನು ಒದಗಿಸುವ ಯಾವ ತಯ್ಯಾರಿಯೂ ಇಲ್ಲಿ ಇರುವುದಿಲ್ಲ. ಇನ್ನು ಅವಳನ್ನು ಸ್ವೀಕರಿಸುವ ವಿಚಾರವಂತೂ ದೂರವೇ.

ನಮ್ಮ ದೇಶದಲ್ಲಿ ವರ್ಷಕ್ಕೆ ಸುಮಾರು ಮೂರು ಸಾವಿರದಷ್ಟು ಬಲಾತ್ಕಾರದ ಅಪರಾಧಗಳನ್ನು ನೋಂದಾಯಿಸಲಾಗುವುದು. ಪೊಲೀಸರಲ್ಲಿ ದಾಖಲಾದ ಅಪರಾಧಗಳ ಅಂದಾಜು ಸಂಖ್ಯೆ ಇಷ್ಟು; ಇನ್ನು  ಕೆಲವಾರು ಬಾರಿ ಅಂಥದನ್ನು ನೋಂದಾಯಿಸುವ ನಿರ್ಣಯವನ್ನು ಕೆಲವರು ಕೈಗೊಳ್ಳುವುದಿಲ್ಲ, ಕಾರಣ ಬಲಾತ್ಕಾರವು ಕುಮಾರಿಯರು, ವಿವಾಹಿತರು, ವಿಧವೆಯರು, ಪರಿತ್ಯಕ್ತರು ಇಂಥ ಯಾರೇ ಸ್ತ್ರೀಯ ಮೇಲೆಯೂ ಆಗಬಹುದು, ಹಾಗಾಗಿ ಈ ದುರ್ಘಟನೆಯ ಕೇಸನ್ನು ದಾಖಲಿಸಿ ಅವಮರ್ಯಾದೆಗೆ ಈಡಾಗುವುದಕ್ಕಿಂತ ಹಾಗೇ ಇರುವುದು ಸರಿಯೆಂದು ಕೆಲವರು ತಿಳಿಯುತ್ತಾರೆ. ಆದರೂ ಕೆಲವಾರು ಪ್ರಕರಣಗಳಲ್ಲಿ ಈ ವಿಚಾರವು ಕಡಿಮೆ ಕಾಲಾವಧಿಯಲ್ಲಿ ಅತ್ಯಂತ ಗಂಭೀರ ಚರ್ಚೆಗೆ ಒಳಗಾಗುವುದುಂಟು. ಉದಾಹರಣೆಗೆ ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ದೇಸಾಯಿಗಂಜ್ ಎಂಬಲ್ಲಿನ ಪೊಲೀಸ್ ಠಾಣೆಗೆ ಹೋದ ಮಧುರಾ ಎಂಬ ಯುವತಿಯೊಬ್ಬಳದು ಅಸಹಾಯಕ ಪರಿಸ್ಥಿತಿ. ಅದನ್ನು ಲಾಭವಾಗಿ ಮಾಡಿಕೊಂಡ ಇಬ್ಬರು ಪೊಲೀಸರು ಅವಳ ಮೇಲೆ ಬಲಾತ್ಕಾರವೆಸಗಿದ ಘಟನೆಯು ನಾಲ್ಕೈದು ವರ್ಷಗಳ ಹಿಂದೆ ನಡೆಯಿತು. ಸಂರಕ್ಷಣೆಯ ಕೆಲಸಕ್ಕಾಗಿಯೇ ನೇಮಕಗೊಂಡಿರುವವರು ಪೊಲೀಸರು. ಆದರೆ ಅವರೇ ಅಂಥ ಕೃತ್ಯವನ್ನು ಮಾಡಿದ್ದು ಕೇವಲ ಮಹಾರಾಷ್ಟ್ರವೇ ಮಾತ್ರವಲ್ಲ, ಇಡೀ ದೇಶದ್ಯಾಂತ ಅದರ ಚರ್ಚೆ ನಡೆಯಿತು. ಮಹಿಳಾ ಸಂಘಟನೆಗಳು ಪ್ರತಿಭಟನೆ ಮಾಡಿ ನಿಷೇಧವನ್ನು ಆಚರಿಸುವಂತೆ ಕರೆ ನೀಡಿದವು. ಪರಿಣಾಮವಾಗಿ ಬಲಾತ್ಕಾರ ವಿರೋಧಿ ಪರಿಷತ್ತನ್ನು ಆಯೋಜಿಸಲಾಯಿತು. ಬಲಾತ್ಕಾರದ ಸುದ್ದಿಗಳಿಗೆ ಮತ್ತು ವರ್ಣನೆಗಳಿಗೆ ವೃತ್ತಪತ್ರಿಕೆಗಳು ಸಾಪ್ತಾಹಿಕಗಳು ಮತ್ತು ಮಾಸಿಕಗಳು ಹೆಚ್ಚು ಪ್ರಧಾನ್ಯತೆಯನ್ನು ನೀಡಿದವು. ಅಸಹಾಯಕ ಮಧುರಾಳಿಗೆ ತನ್ನ ಬಗ್ಗೆಯೇ ಇಷ್ಟೆಲ್ಲ ಚರ್ಚೆ ನಡೆಯುತ್ತದೆ ಎಂಬ ತಿಳಿವಳಿಕೆಯೂ ಇಲ್ಲದಿರಬಹುದು. ಆದರೆ ಪೊಲೀಸರ ವಿರುದ್ಧ ಅಪರಾಧದ ಬಗ್ಗೆ ಕೇಸು ದಾಖಲಿಸಲಾಯಿತು. ಈ ಕುರಿತಂತೆ ಬೇರೆ ಬೇರೆ ನ್ಯಾಯಾಲಯಗಳಲ್ಲಿ ಬೇರೆ ಬೇರೆ ನಿರ್ಣಯಗಳು ಹೊರಬಿದ್ದಿವು. ಕೊನೆಗೆ ಸರ್ವೋಚ್ಚ ನ್ಯಾಯಾಲಯವು ಆ ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಆರೋಪಮುಕ್ತಗೊಳಿಸಿತು. ಕಾರಣ ಮಥುರಾಳ ಬಲತ್ಕಾರ ಸಂದರ್ಭದಲ್ಲಿ ಆಕೆ ಪ್ರತಿರೋಧ ವ್ಯಕ್ತಪಡಿಸಿದ ಕುರುಹುಗಳನ್ನು ಆ ನ್ಯಾಯಾಲಯಕ್ಕೆ ಕಾಗದ ಪತ್ರಗಳ ಮುಖೇನ ಸಲ್ಲಿಸಿರಲಿಲ್ಲ. ಮಂಜುಶಿ ಸಾರಡಾಳನ ಕೊಲೆಗೈದ ಶರದ್ ಸಾರಡಾನಿಗೆ ಸರ್ವೋಚ್ಚನ್ಯಾಯಾಲಯದ ತೀರ್ಪು ನಿರ್ದೋಷಿ ಎಂದು ಬಿಡುಗಡೆ ಹೊಂದಲು ಕಾರಣವಾಗಿತ್ತು. ಹೆಚ್ಚುಕಮ್ಮಿ ಅದೇ ಪರಿಣಾಮ ಮಧುರಾಳ ಮೇಲಾದ ಅನ್ಯಾಯದ ವಿಷಯದಲ್ಲಿಯೂ ಆಯಿತು. ಬಲಾತ್ಕಾರದಂಥ ಅಂಶದ ಬಗ್ಗೆ ಬಹಳಷ್ಟು, ಚರ್ಚೆಗಳಾಗುತ್ತಿವೆ. ಆದರೆ ಬಲಾತ್ಕಾರಕ್ಕೆ ಒಂದೇ ಉತ್ತರವೆಂದರೆ ಪ್ರತೀಕಾರ. ಇಂಥ ಕಾಯಿದೆಯು ಬಹಳ ಆವಶ್ಯಕ, ಇದನ್ನು ಸ್ತ್ರೀಯರಿಗೂ ತಿಳಿಸಿಕೊಡುವುದೂ ಅಗತ್ಯ. ಅಕ್ಕು ಯಾದವ ಎಂಬ ಬಲಾತ್ಕಾರಿ ಪಾಶವೀ ಪುರುಷನನ್ನು ನಾಗಪುರದ ಕೆಲವಾರು ಸ್ತ್ರೀಯರು ಕೊಂದುಹಾಕಿದ್ದಾರೆ. ಮತ್ತು ಮತ್ತೊಬ್ಬನನ್ನು ಕೊಲ್ಲುವುದು ನಮ್ಮ ಮುಂದಿನ ಗುರಿ ಎಂದು ಹೇಳಿದ್ದಾರೆ. ಮಹಾರಾಷ್ಟದಲ್ಲಿ ಈಗ್ಗೆ ಪ್ರತಿಕಾರಕ್ಕೆ ಸ್ತ್ರೀಯರು ಮುಂದಾಗಿರುವುದರಿಂದಲೇ ಪ್ರಸ್ತುತ ಬರಹದ ಧ್ವನಿ ಅನುಷ್ಠಾನಕ್ಕೆ ಬಂದಿರುವುದು.

ಇಂಡಿಯನ್ ಸಿವಿಲ್ ಕೋಡ್‌ನ ೩೭೫ನೆಯ ಕಲಮ್ಮು ಅಪರಾಧಕ್ಕೆ ಸಂಬಂಧಿಸಿದುದಾಗಿದೆ. ೭೬ನೆಯ ಕಲಮ್ಮಿನಲ್ಲಿ ಅಪರಾಧ ಮಾಡಿದವನಿಗೆ ಏನು ಶಿಕ್ಷೆ ಎಂಬುದನ್ನು ಹೇಳಲಾಗಿದೆ. ಅಂಥವರಿಗೆ ಕರಿನೀರಿನ ಅಥವಾ ಗಡೀಪಾರಿನ ಶಿಕ್ಷೆಯನ್ನು ನೀಡುವುದು ಅವಶ್ಯ. ಆದರೆ ಇಂದಿಗೂ ಅದನ್ನು ಒಬ್ಬನಾದರೂ ವ್ಯಕ್ತಿಗೆ ನೀಡಿರುವುದು ಗಮನಕ್ಕೆ ಬಂದಿಲ್ಲ. ಎಷ್ಟು ಜನಕ್ಕೆ ಅದನ್ನು ನೀಡಬೇಕಾಗಿದೆ ಮತ್ತು ನೀಡಲಾಗುತ್ತಿದೆ ಎಂಬ ಪ್ರಶ್ನೆಯನ್ನು ಗಮನಕ್ಕೆ ತೆಗೆದುಕೊಂಡರೂ ಕಾಣುವುದಿಲ್ಲ. ಬಹಳಷ್ಟು ಜನರು ಬಲಾತ್ಕಾರದ ಘಟನೆಯ ಬಗ್ಗೆ ದೂರು ದಾಖಲಿಸುವುದಿಲ್ಲ ಮತ್ತು ಕಾಯಿದೆಯ ಎದುರು ಬರುವುದೂ ಇಲ್ಲ. ಕಾರಣ ಬಲಾತ್ಕಾರವನ್ನು ‘ಸಾಮಾಜಿಕ ದೋಷಣೆ’ (Social Stigma) ಎಂದು ಒಪ್ಪಲಾಗಿರುವುದು. ಹಾಗೆಯೇ ಇದಕ್ಕೆ ಸಾಕ್ಷಿದಾರರು ಸಿಕ್ಕುವುದು ಬಹಳ ಕಠಿಣ. ಬಲಾತ್ಕಾರ ನಡೆದ ತಕ್ಷಣವೇ ವೈದ್ಯಕೀಯ ತಪಾಸಣೆ ಆದರೆ ಅಪರಾಧ ಸಾಬೀತಾಗುವಂಥ ಪುರಾವೆಗಳು ಸಿಕ್ಕುತ್ತವೆ ಹಾಗೂ ಅಪರಾಧದ ಗುರುತು ಲಭ್ಯವಾಗುತ್ತದೆ. ಮೋಸಮಾಡಿ ಸಂಭೋಗ ಮಾಡಿದ ಪುರುಷನೂ ಬಲಾತ್ಕಾರದ ಕಾಯಿದೆಯಡಿ ಶಿಕ್ಷೆಗೆ ಪಾತ್ರನಾಗಬೇಕು. ಅನೇಕ ವೇಳೆ ಸ್ತ್ರೀಯರನ್ನು ವಾಮಮಾರ್ಗಕ್ಕೆ ಎಳೆಯುವಲ್ಲಿ ಪುರುಷರು ಅವರ ಮೇಲೆ ಇತರರ ಕಡೆಯಿಂದ ಬಲಾತ್ಕಾರ ಮಾಡಿಸುತ್ತಿರುತ್ತಾರೆ. ಇಂಥ ಸಂದರ್ಭಗಳಲ್ಲಿ ಕಾಯಿದೆಯು ದುರ್ಬಲವಾಗುತ್ತದೆ. ಕಾರಣ ಬಲಾತ್ಕಾರದ ಬಗ್ಗೆ ದೂರು  ದಾಖಲಿಸುವುದಿಲ್ಲ. ಕೆಲವು ಬಾರಿ ಭೀಕರ ರೀತಿಯಲ್ಲಿ ಬಲಾತ್ಕಾರ ಮಾಡಿದ್ದರೂ ಶಿಕ್ಷೆಯಿಲ್ಲದೆ ಪಾರಾಗುತ್ತಾರೆ. ಇಂಥ ಸ್ತ್ರೀಯರು ಇನ್ನು ಕುಮಾರಿಕೆಯರಾಗಿದ್ದರಂತೂ ಅವರ ಮದುವೆಯಾಗುವುದು ಬಹಳೇ ಕಠಿಣ. ಅಪಮಾನಕ್ಕೊಳಗಾದುದರಿಂದ ಅವರೊಂದಿಗೆ ವಿವಾಹವಾಗಲು ಯಾವ ಪುರುಷರು ಸಿದ್ಧರಾಗುವುದಿಲ್ಲ.

ಬಲಾತ್ಕಾರದಲ್ಲಿ ಪುರುಷರು ತಮ್ಮ ಶಕ್ತಿಯನ್ನು ಬಳಸುತ್ತಾರೆ. ಆದರೆ ಅದು ನಡೆಯಿತು ಎಂದು ಸಿದ್ಧಪಡಿಸಿ ತೋರಿಸುವುದು ಬಹಳ ಮಹತ್ವದ ಕೆಲಸ. ಅದಿಲ್ಲದೆ ತಪ್ಪಿತಸ್ಥರಿಗೆ ಶಿಕ್ಷೆಯಾಗುವುದಿಲ್ಲ. ಹಾಗಾಗಿ ಸ್ತ್ರೀಯು ಅಸಹಾಯಕತೆಯಿಂದ ಬಲಾತ್ಕಾರವನ್ನು ಸಹಿಸಿ ಕೊಳ್ಳುವುದಕ್ಕಿಂತ ಪ್ರತೀಕಾರ ಮಾಡಬೇಕು. ಅರಚಿಕೊಳ್ಳುವುದು, ಕೂಗಿಕೊಳ್ಳುವುದು, ಗಿಬುರುವುದು, ಕಚ್ಚುವುದು, ಒದೆಯುವುದು, ಏನೆಲ್ಲ ಸಾಧವೋ ಆ ಮೂಲಕ ಪ್ರತಿಕಾರಕ್ಕೆ ಮುಂದಾಗಬೇಕಾದ್ದು ಅವಶ್ಯ. ಕಾರಣ ಇಂಡಿಯನ್ ಪಿನಲ್ ಕೋಡ್ ೧೦೦ನೆಯ ಕ್ರಮಾಂಕದ ಕಲಂನ ಪ್ರಕಾರ ಬಲಾತ್ಕಾರ ಮಾಡಲು ನೋಡುವ ಅಥವಾ ಬಲಾತ್ಕಾರಕ್ಕೆ ಮುಂದಾಗುವ ವ್ಯಕ್ತಿಗೆ ಕಪಾಳಮೋಕ್ಷ ಮಾಡುವುದಕ್ಕೆ ಮತ್ತು ಅವನನ್ನು ಸಾಯಿಸುವುದಕ್ಕೆ ಸ್ತ್ರೀಗೆ ಅವಕಾಶವಿದೆ. ಮಾತ್ರವಲ್ಲ ಈ ಸೌಲಭ್ಯ ಆ ಹೊತ್ತಿನಲ್ಲಿ ಅಲ್ಲಿ ಹಾಜರಿದ್ದ ಇತರೆ ಯಾರೇ ನಾಗರಿಕರಿಗೂ ಇರುತ್ತದೆ. ಹಾಗಾಗಿ ಈ ಪಿನಲ್ ಕೋಡ್‌ನ ಬಗ್ಗೆ ಸ್ತ್ರೀಯರಿಗೆ ಮಾಹಿತಿ ನೀಡಬೇಕಾದ್ದು ಅವಶ್ಯ. ಜೊತೆಗೆ ಇದು ಸಮಾಜದಲ್ಲಿಯೂ ರೂಢವಾಗಬೇಕು. ಈ ಕಾಯಿದೆಯ ಮೂಲಕ ಸ್ತ್ರೀಗೆ ನೀಡಿರುವ ಪ್ರತಿಕಾರದ ಹಕ್ಕು ಅವಳಲ್ಲಿ ಶಾರೀರಿಕ ಪ್ರತಿಕಾರಕ್ಕೆ ಶಕ್ತಿಯನ್ನು ತಂದುಕೊಡುವುದಲ್ಲದೆ ಮಾನಸಿಕ ಧೈರ್ಯವನ್ನು ತುಂಬುವುದಾಗಿದೆ. ದುಷ್ಟರು ಮತ್ತು ಕಾಮಾಂಧರ ಮನಃ ಪರಿವರ್ತನೆ ಸಾಧ್ಯವಿಲ್ಲ. ಹಾಗಾಗಿ ಬಲಾತ್ಕಾರಿತ ಸ್ತ್ರೀಯು ಆತ್ಮಘಾತುಕವಾದ ಮಾರ್ಗವನ್ನು ಸ್ವೀಕರಿಸದೆ ಇಂಥ ಪ್ರವೃತ್ತಿಯ ಮೂಲಕ ಪ್ರತಿಕಾರವನ್ನೆಸಗುವುದಕ್ಕೆ ಮುಂದಾಗಬೇಕು. ಬಲಾತ್ಕಾರದಂಥ ವಿಕೃತಿಯನ್ನು ಮಟ್ಟ ಹಾಕುವುದಕ್ಕೆ ಕಾಯಿದೆಗಳ ಸಂಪೂರ್ಣ ಅರಿವು ಸ್ತ್ರೀಯರಿಗೆ ಸಿಕ್ಕಬೇಕಾದ್ದು ಅವಶ್ಯ. ಅಹಲ್ಯೆಯ ಹಾಗೆ ಸ್ವತಃ ಶಿಲೆಯಂತೆ ನಿರ್ಜೀವಿತಳಾಗಿ ಬಿದ್ದಿರುವುದು ಬೇಕಿಲ್ಲ. ಇಂದಿನ ಸಮಾಜದಲ್ಲಿ ಪಾರಾಗುವ ಯುಕ್ತಿಯನ್ನು ಹುಡುಕುವುದಕ್ಕಿಂತ ಪ್ರತಿಕಾರದ ಮತ್ತು ಆತ್ಮಕ್ಲೇಶಕ್ಕಿಂತ ಅಪರಾಧಿಗೆ ಶಿಕ್ಷೆ ನೀಡುವುದಕ್ಕೆ ಜಿದ್ದು ಬೆಳೆಸಿಕೊಳ್ಳುವುದು ಬಹಳೇ ಅವಶ್ಯ.

ವಿನೋಬಾ ಭಾವೆಯವರು ೧೯೭೪ರ ಅಖಿಲ ಭಾರತೀಯ ಸ್ತ್ರೀಶಕ್ತಿ ಸಮ್ಮೇಳನದಲ್ಲಿ ಹೇಳಿದಂತೆ, ಸ್ತ್ರೀಯರ ಮೇಲೆ ಬಲಾತ್ಕಾರಕ್ಕೆ ಮುಂದಾಗುತ್ತಿರುವ ಪುರುಷನನ್ನು ಬಂದೂಕಿನಿಂದ ಹೊಡೆದು ಸಾಯಿಸುವ ಅಧಿಕಾರವನ್ನು ನಾನು ನಿಮಗೆ ಕೊಡುತ್ತೇನೆ. ಬಂದೂಕು ಹೊಂದಿರುವ ಅಥವಾ ತತ್ಸಮವಾದ ಆಯುಧಗಳನ್ನು ತನ್ನಲ್ಲಿ ಇಟ್ಟುಕೊಂಡಿರುವಂಥ ಸ್ತ್ರೀಯರ ಬಳಿಗೆ ಪುರುಷ ಹೋಗುತ್ತಾನಾದರೂ ಏತಕ್ಕೆ? ಇದೊಂದು ಮುಖ್ಯವಾದ ಪ್ರಶ್ನೆಯಿಂದಲೇ ನೇಪಾಳದಲ್ಲಿ ಬಲಾತ್ಕಾರಕ್ಕೊಳಗಾದ ಸ್ತ್ರೀಗೆ ಸಂರಕ್ಷಣೆ ನೀಡಲು ರೂಪಿಸಿ ಕೊಂಡಿರುವ ಕಾಯಿದೆಯು ಗಮನಾರ್ಹವಾದುದು, ಅಲ್ಲಿ ಬಲತ್ಕಾರಕ್ಕೆ ಒಳಗಾದ ಸ್ತ್ರೀ ತನಗಾದ ಅನ್ಯಾಯದ ಸೇಡು ಅಥವಾ ಪ್ರತಿಕಾರಕವಾಗಿ ಬಲತ್ಕಾರವಾದ ಒಂದು ಗಂಟೆಯ ಒಳಗಡೆ ಬಲತ್ಕಾರ ಮಾಡಿದ ವ್ಯಕ್ತಿಯನ್ನು ಕೊಂದು ಹಾಕಬಹುದು. ಕಾಯಿದೆಯನುಸಾರ ಆ ಕೊಲೆ ಅಥವಾ ಹತ್ಯೆಯಿಂದ ಅವಳಿಗೆ ವಿನಾಯತಿ ದೊರೆಯುತ್ತದೆ. ನಮ್ಮ ದೇಶದಲ್ಲಿಯೂ ಸಹ ಕಠೋರ ಶಿಕ್ಷೆಯಾಗಿ ಅಂಥ ಕಾನೂನನ್ನು ರೂಪಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಸ್ತ್ರೀ ಸಂಘಟನೆಗಳು ಹೋರಾಡಬೇಕಾಗಿದೆ. ಹಾಗೆಯೇ ಇತರೆ ಸಂಸ್ಥೆಗಳು, ಸಂಘಟನೆಗಳು, ಮಂಡಳಿಗಳು ಸಹ ಈ ದೃಷ್ಟಿಯಿಂದ ವಿಚಾರ ಮಾಡುವುದು ಬಹಳ ಜರೂರಿಯಾಗಿದೆ. ವಕೀಲರು, ಅಪರಾಧಿ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ತ್ರೀಯರು ತಾಂತ್ರಿಕ ದೃಷ್ಟಿಯಿಂದ ಅಮೂಲಾಗ್ರವಾಗಿ ವಿಚಾರ ಮಾಡುವುದು ಅವಶ್ಯ.

ಬಲಾತ್ಕಾರ ಮಾಡುವವರಿಗೆ ಕಾಯಿದೆಯಲ್ಲಿನ ಬೇರೆ ಬೇರೆ ಮಾರ್ಗಗಳ ಮೂಲಕ ಪಾರಾಗುವ ಅವಕಾಶವನ್ನು ಪೂರ್ಣವಾಗಿ ಇಲ್ಲವಾಗಿಸಬೇಕು. ಮನೆಯಲ್ಲಿ ಮತ್ತು ಮನೆಯ ಹೊರಗಡೆಯಲ್ಲಿ ಸುರಕ್ಷಿತತೆ ಇರಬೇಕು ಸ್ತ್ರೀಯರಿಗೆ ಕೇವಲ ನ್ಯಾಯಲಯ ಮತ್ತು ಪೊಲೀಸ್ ನಿಯಂತ್ರಣದ ಮೇಲಷ್ಟೆ ಸ್ತ್ರೀ ಸುರಕ್ಷತತೆಯ ಜವಾಬ್ದಾರಿಯನ್ನು ಬಿಟ್ಟು ಬಿಟ್ಟು ಸುಮ್ಮನಿರುವುದಕ್ಕೆ ಸಾಧ್ಯವಿಲ್ಲ. ಅತ್ಯಾಚಾರಿಗಳಿಗೆ ದೈಹಿಕ ಶಿಕ್ಷೆ ನೀಡುವ ವ್ಯವಸ್ಥೆ ಮತ್ತು ಅದಕ್ಕಾಗಿ ಅಂಥ ಪ್ರಕರಣಗಳ ತಪಾಸಣೆ ಮಾಡುವ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿದೆ ಎಂಬುದು ಸಾಮಾನ್ಯ ಸಂಗತಿ. ಅವರು ಆ ಕೆಲಸವನ್ನು ಸ್ವಚ್ಚವಾಗಿ ಮಾಡಲೇಬೇಕು. ಅದರ ಜೊತೆಗೆ ಸಮಾಜವೂ ಸಮಾಜದ ಸ್ವಾಸ್ಥ್ಯಕ್ಕಾಗಿಯೇ ಸ್ತ್ರೀ ಸುರಕ್ಷತತೆಯ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳುವುದು ಅಗತ್ಯ. ಮಾತ್ರವಲ್ಲ ಇದು ಸಮಾಜದ ಪ್ರತಿಯೊಂದು ಘಟಕಗಳ ಮೇಲೂ ಇರುವ ಸಾಮಾಜಿಕ ಜವಾಬ್ದಾರಿಗಳಲ್ಲಿ ಒಂದು. ಅವುಗಳು ಅದನ್ನು ಸಮರ್ಧವಾಗಿ ನಿರ್ವಹಿಸಬೇಕು. ಅತ್ಯಾಚಾರ ನಡೆದ ಬಗ್ಗೆ ಗುಸುಗುಸು ವ್ಯಕ್ತಪಡಿಸುವವರೇ ಬಹಳಷ್ಟು ಮಂದಿ. ಆದರೆ ಆ ಬಗ್ಗೆ ಪುರಾವೆಗಳನ್ನು ಸಂಗ್ರಹಿಸುವಲ್ಲಿ ಸಹಕಾರದ ಸುಳಿವೇ ಇಲ್ಲ. ಕಾಯಿದೆಯ ಚೌಕಟ್ಟನ್ನು ಸಡಿಲಗೊಳಿಸುವಲ್ಲಿ, ಪುರಾವೆಗಳ ಕುಂದುಕೊರತೆಗಳೇ ಕಾರಣೀಭೂತ ಅಂಶಗಳು. ಎಂತಲೇ ಸಮಾಜವೇ ಅತ್ಯಾಚಾರಿಗಳಿಗೆ ಯೋಗ್ಯ ಶಿಕ್ಷೆಯನ್ನು ನೀಡಬಹುದು. ಸ್ತ್ರೀ ಸುರಕ್ಷ ಕಾಯಿದೆಯ ಮೂಲಕ ನೀಡಿರುವ ಅಧಿಕಾರವನ್ನು ಕೇವಲ ಸ್ತ್ರೀಯರೇ ಉಪಯೋಗಿಸಿದರೆ ನಡೆಯುವುದಿಲ್ಲ. ಬದಲಾಗಿ ಪ್ರತಿಯೊಬ್ಬ ನಾಗರಿಕನು ಅತ್ಯಂತ ಉಪಯುಕ್ತವಾದ ಈ ಅಧಿಕಾರವನ್ನು ಅವಶ್ಯ ಬಳಸಿಕೊಳ್ಳಬೇಕು. ಎಲ್ಲಿ ನಾರಿಯ ಮಾನವನ್ನು ಕಾಪಾಡಲಾಗುವುದೋ ಅಲ್ಲಿ ದೇವತೆಗಳು ಸುಖಸಂಚಾರ ಮಾಡುತ್ತಿರುತ್ತಾರೆ ಎಂಬುದು ನಮ್ಮ ಪೂರ್ವಜರ ಬೋಧನೆ. ಅದರ ಹಿಂದಿನ ಸೂತ್ರವನ್ನು ಮನಗಂಡರೆ ಮಾತ್ರ ಸ್ತ್ರೀ ಸುರಕ್ಷತತೆಗೆ ಧಕ್ಕೆ ಉಂಟಾಗುವುದಿಲ್ಲ. ಈ  ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಸಮಾಜದಲ್ಲಿನ ಎಲ್ಲ ಘಟಕಗಳು ಸ್ತ್ರೀ ಸುರಕ್ಷತತೆಯು ಸಮಾಜದ ಸುರಕ್ಷತತೆಯ ಭಾಗವೇ ಎಂಬುದಾಗಿ ತಮ್ಮ ಸ್ವಾತಂತ್ರ್ಯ ಹಾಗೂ ತಮ್ಮ ಜವಾಬ್ದಾರಿಯನ್ನು ನಿರ್ವಹಿಸ ಬೇಕು. ಸ್ತ್ರೀ ಸಂರಕ್ಷಣೆಯು ಸ್ತ್ರೀ ವಿಷಯದ ಕಾಯಿದೆ, ಪೊಲೀಸ್ ನಿಯಂತ್ರಣ ವ್ಯವಸ್ಥೆ ಮತ್ತು ನ್ಯಾಯಾಲಯಗಳಂಥ ಸಂಸ್ಥೆಗಳಿಗೆ ಸಂಬಂಧಿಸಿದುದಾಗಿದೆ ನಿಜ, ಆದರೆ ಅದಕ್ಕಿಂತಲೂ ಮುಖ್ಯವಾಗಿ ಅದರ ಬಗೆಗಿನ ಜಾಗರೂಕತೆಗೆ ಸುಸಂಸ್ಕೃತ ಸಮಾಜವು ಅತ್ಯಂತ ಪ್ರಭಾವಶಾಲಿ ಅಂಶಗಳಾಗಬಹುದು.

ದೇವದಾಸಿ

ದೇವದಾಸಿ ಎಂಬ ಶಬ್ದದಲ್ಲಿನ ‘ದಾಸಿ’ ಎಂಬ ಶಬ್ದವನ್ನು ಸುಸಂಸ್ಕೃತರು, ಸುಶಿಕ್ಷಿತರು, ವಿಚಾರವಂತರೂ ಆದ ಆಧುನಿಕ ಸಮಾಜದಲ್ಲಿ ಕಾಲಬಾಹ್ಯವೆಂದು ತಿಳಿಯಲಾಗಿದೆ. ಆದರೆ ಈ ದೇವದಾಸಿ ಸಂಪ್ರದಾಯವು ಮಾತ್ರ ಹೆಚ್ಚಾಗುತ್ತಲೇ ನಡೆಯುತ್ತಿರುವುದು ವಿದಿತ. ದೇವದಾಸಿಯರ ಸಮಸ್ಯೆಗಳು ಮತ್ತು ಅವರ ಗಂಭೀರ ಪ್ರಶ್ನೆಗಳ ಬಗ್ಗೆ ಸಮಾಜ ಮತ್ತು ಸರಕಾರದ ಗಮನ ಸೆಳೆಯುವುದಕ್ಕಾಗಿ ೧೫ನೆಯ ಜೂನ್ ೧೯೮೦ರಂದು ನಿಪ್ಪಾಣಿಯ ಮಹಾತ್ಮ ಜೋತಿಬಾ ಫುಲೆ ಸiತಾ ಪ್ರತಿಷ್ಠಾನದ ವತಿಯಿಂದ ಒಂದು ಬೃಹತ್ ಸಮಾವೇಶವು ನಡೆಯಿತು. ಇದರ ಮೊದಲ ಸಭೆ ೨೦ನೆಯ ಸೆಪ್ಟಂಬರ್ ೧೯೭೪ರಲ್ಲಿ ಗಡಹಿಂಗ್ಲಜ್‌ನಲ್ಲಿ ಸೇರಿತ್ತು. ಆನಂತರ ಐದಾರು  ವರ್ಷಗಳವರೆಗೂ ಸಮಾಜ ಧುರೀಣರಿಗೆ ಈ ಪ್ರಶ್ನೆಯೆಡೆ ನೋಡುವುದಕ್ಕೆ ಸಮಯಾವಕಾಶವೇ ಕೂಡಿಬಂದಿರಲಿಲ್ಲ.

ದೇವದಾಸಿ ಸಂಪ್ರದಾಯದ ಉಗಮ

ನಿಜವಾಗಿಯೂ ನೋಡುವುದಾದರೆ ದೇವರು ಅಮೂರ್ತ, ಆಂತರಿಕ, ಅನಾಮಿಕ ಸರ್ವಸಾಕ್ಷಿಯಂತಹ ಒಂದು ಆದ್ವಿತೀಯ ಶಕ್ತಿ. ಈ ಶಕ್ತಿಯನ್ನು ವಿಡಂಬನಗೊಳಿಸುವಂತೆ ಸ್ವಾರ್ಧ, ಹಿಂಡುವಿಕೆ, ಭ್ರಷ್ಟಾಚಾರ, ಅನೈತಿಕತೆಗಳ ಪರಂಪರೆಯೊಂದು ತಮ್ಮ ಹೊಟ್ಟೆಪಾಡಿಗಾಗಿ (wested interest) ರೂಪುಗೊಂಡಿತು. ಹಾಗೆಯೇ ತಮ್ಮ ಕಾಮವಾಸನೆಗಾಗಿ ಕೆಲವು ವಿಶಿಷ್ಟ ಸಂಪ್ರದಾಯಗಳ ನಿರ್ಮಾಣದ ಮೂಲಕ ಸಮಾಜವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಹುಟ್ಟಿಕೊಂಡದ್ದಾಗಿದೆ. ದೇವದಾಸಿ ಸಂಪ್ರದಾಯದ ಬೆಳವಣಿಗೆಯಲ್ಲಿ ಜಮೀನ್ದಾರರು, ಊರಿನ ಸಾಹುಕಾರರು, ಉಚ್ಚ ವರ್ಣೀಯರು, ವರ್ಗೀಯರು, ದೇವರ ಪೂಜಾರಿ ಮತ್ತು ದೇವಸ್ಥಾನದ ಪರಿಚಾರಕರುಗಳೆಲ್ಲರೂ  ಸೇರಿಕೊಂಡಿದ್ದಾರೆ. ಆರ್ಯ ಸಂಸ್ಕೃತಿಯು ಅನಾರ್ಯರ ಮೇಲೆ ಎಂಥ ಆಕ್ರಮಣ ಮಾಡಿತ್ತು ಎಂಬುದಕ್ಕೆ ಉದಾಹರಣೆ ಎಂದರೆ ಯಲ್ಲಮ್ಮ ದೇವಿ ಮತ್ತು ರೇಣುಕಾದೇವಿಯರ ಕಧೆಗಳು. ಸ್ತ್ರೀಯ ಮನಸ್ಸಿನ ಮೇಲೆ ನಿಯಂತ್ರಣ ಮಾಡುವ ಪುರುಷ ವ್ಯಕ್ತಿಯ ದ್ಯೋತಕವೇ ಜಮದಗ್ನಿ! ಪರಪುರುಷನ ವಿಚಾರವನ್ನು ಮನಸ್ಸಿನಲ್ಲಿ ತಂದುಕೊಂಡಳು ಎಂಬ ಕಾರಣದಿಂದ ಜಮದಗ್ನಿಯು ಪತ್ನಿಯನ್ನು ಕೊಲ್ಲುವಂತೆ ಆಜ್ಞಾಪಿಸಿದ ತನ್ನ ಮಗ ಪರಶುರಾಮನಿಗೆ. ತಂದೆಯ ಮಾತನ್ನು ಶಿರಸಾ ವಹಿಸಿದ ಮಗ ಪರಶುರಾಮ ತಾಯಿ ರೇಣುಕೆಯ ರುಂಡಮುಂಡಗಳನ್ನು ಬೇರ್ಪಡಿಸುತ್ತಾನೆ. ಕೆಲವು ಕ್ಷಣಗಳಲ್ಲಿಯೇ ಜಮದಗ್ನಿಯು ತಧಾಸ್ತು ಎಂದು ಹೇಳಿದನಲ್ಲದೆ, ವರಕೇಳುವಂತೆ ಹೇಳಿದ ಮಗನಲ್ಲಿ. ಆಗ ಅಲ್ಲಿ ಮಾತಂಗ ಸಮಾಜಕ್ಕೆ ಸೇರಿದ ಕನ್ಯೆಯೊಬ್ಬಳು ಹೋಗುತ್ತಿದ್ದಳು. ಪರಶುರಾಮ ಜಮದಗ್ನಿಯ ಆಜ್ಞಾನುಸಾರ ಆ ಸ್ತ್ರೀಯ ಮಸ್ತಕ(ರುಂಡ)ವನ್ನು ತುಂಡಾಗಿಸಿ ತಾಯಿಯ ಮುಂಡಕ್ಕೆ ಸೇರಿಸಿಡುತ್ತಾನೆ. ಆಗ ತಾಯಿಗೆ ಜೀವ ಬರುತ್ತದೆ. ಜಮದಗ್ನಿಯು ಅವಳಿಗೆ ಉಪಶಾಪ ನೀಡಿದಾಗ ಹೇಳುತ್ತಾನೆ, ಜನರು ನಿನ್ನನ್ನು ಆದರಿಸುತ್ತಾರೆ, ವ್ಯಾಪಕ ರೀತಿಯಲ್ಲಿ ನಿನ್ನ ಮಹಿಮೆಯನ್ನು ಕೊಂಡಾಡುತ್ತಾರೆ, ನಿನ್ನ ಸೇವಕರಾಗುತ್ತಾರೆ. ರೇಣುಕಾ ಪ್ರವಾಸಕ್ಕೆ ಹೊರಡುತ್ತಾಳೆ ಜನ ವಿಚಾರಿಸುತ್ತಾರೆ, ಯಲ್ಲೂ ಅಮ್ಮ ಅರ್ಧಾತ್ ತಾಯಿ ಎಲ್ಲಿಗೆ ಹೊರಟಿರುವೆ ಆ ಬಗೆಯಲ್ಲಿ ರೇಣುಕೆಗೆ ಯಲ್ಲಮ್ಮ ಎಂಬ ಹೆಸರು ಪ್ರಾಪ್ತವಾಯಿತು. ಮತ್ತೊಂದು ಅರ್ಧವೆಂದರೆ ಯಲ್ಲಮ್ಮ ಯಲ್ಲರಿಗೂ ಅಮ್ಮ ಅವಳ ಸೇವೆ ಮಾಡುವ, ಅವಳೊಂದಿಗೆ ಮದುವೆಯಾಗುವ ಹೆಣ್ಣು ಮಕ್ಕಳಿಗೆ ದೇವದಾಸಿ ಎನ್ನುತ್ತಾರೆ. ಈ ಕಧೆಯ ಎಲ್ಲ ಅಂಶಗಳು ಖಚಿತವಾಗಿ ತಿಳಿಯುವುದಿಲ್ಲ. ಭಾವನೆಗಳಿಗೆ ದಕ್ಕುವುದಿಲ್ಲ. ಆದರೆ ಸ್ತ್ರೀಯನ್ನು ಆಟವಾಡಿಸುವುದು ಹೇಗೆ ಎಂಬುದನ್ನು ಇದು ಸೂಕ್ಷ್ಮವಾಗಿ ಹೇಳುತ್ತದೆ.

ಒಬ್ಬ ನಿರಪರಾಧಿ ಮಾತಂಗಿ ಸ್ತ್ರೀಯ ಕೊಲೆಯಾಗುತ್ತದೆ ಸುಲಭವಾಗಿ. ಒಟ್ಟಾರೆ ಈ ಪ್ರಸ್ತಾವನೆಯ ಲಹರಿಯ ಖಾತರಿ ಯಾರಿಗಿದೆ? ಅವಳನ್ನು ಪುನಃ ಜೀವಂತಗೊಳಿಸುವಂತೆ ಮೊರೆ ಇಡುವವರು ಯಾರು ಇರಲಿಲ್ಲ. ಈ ನನ್ನ ತಾಯಿಗೆ, ಪತ್ನಿಗೆ, ಸಹೋದರಿಗೆ ಹೊಡೆದದ್ದು ಏಕೆ ಎಂಬುದಾಗಿ ಆಕ್ರೋಶದಿಂದ ವಿಚಾರಿಸುವವರು ಯಾರು? ಹಾಗಾಗಿ ಈ ಮಾತಂಗಿ ಸ್ತ್ರೀಯು ವಿನಾಕಾರಣ ಸದ್ದುಗದ್ದಲವಿಲ್ಲದೆ ಬಲಿಯಾದಳು! ರೇಣುಕೆಯು ಮಾತ್ರ ದೇವ ಸ್ವರೂಪವನ್ನು ಪಡೆದಳು. ಈ ಭಯಾನಕವಾದ ವಿಸಂಗತತೆಯ ಪರಿಣಾಮವೆಂದರೆ ಈ ದೇವಿಗೆ ಭಕ್ತಿಣಿಯರಾಗಿ ಬೇಕಾಗಿರುವವರು ಕೆಳವರ್ಗದವರು, ದೀನದುರ್ಬಲರು, ದರಿದ್ರರು, ದಲಿತ ಸಮಾಜ ಸ್ತರದವರು. ಈ ದೇವಿಯನ್ನು ಕೇಳಬೇಕೆನುಸುತ್ತದೆ, ಏಕೆ ತಾಯಿ ಜಮದಗ್ನಿ, ಪರಶುರಾಮರಂಥ ವಿದ್ಯಾವಿಭೂಷಿತರು, ಉಚ್ಚ ಮಹನೀಯ ಸಂಸ್ಕೃತಿಯವರು, ಸಜ್ಜನ ಶಿಮಂತರು ಮತ್ತು ಮೇಲುವರ್ಗದಲ್ಲಿನ ಹೆಣ್ಣುಮಕ್ಕಳ ಸೇವೆ ನಿನಗೆ ಏಕೆ ಬೇಡ? ನಿರಪರಾಧಿ ಮಾತಂಗಿ ಸ್ತ್ರೀಯ ಮೆದುಳನ್ನು ಧಾರಣೆ ಮಾಡಿಕೊಂಡಿರುವ ನೀನು, ಕಡುಬಡವರಾದ ಹೆಣ್ಣುಮಕ್ಕಳ ಬಲಿಯನ್ನೇಕೆ ಕೇಳುವೆ? ಯಾವ ರೀತಿಯಿಂದ ನೀನು ನಿನ್ನ ಜೀವ ತೆಗೆಸಿಕೊಂಡೆಯೋ ಹಾಗೆಯೇ ಮೂಕರಾದ ಕುರಿಮರಿಗಳಂಥ ಸ್ತ್ರೀಯರು ನಿನ್ನೆದುರು ಬರುವುದು ಈ ಖಾತ್ರಿಯಿಂದಲೇ.

ಯಲ್ಲಮ್ಮ, ಜೋಗಪ್ಪ, ಜೋಗಿಣಿಯರು, ಖಂಡೋಬಾನ ವಾಘ್ಯಾ; ಮುರುಳಿಗಳು ಇವರೆಲ್ಲ ದೇವದಾಸಿಯರು. ಶಾಂತದುರ್ಗಾ, ಮಂಗೇಶನ ಭಕ್ತರಾಗಿ ದೇವದಾಸಿಯರು ಇದ್ದಾರೆ. ಹೆಸರುಗಳು ಏನೇ ಇರಲಿ, ಈ ಸಂಪ್ರದಾಯದ ಉಗಮವು ಸಮಾಜದಲ್ಲಿ ಇತರ ಅನೇಕ ವಿಸಂವಾದಿತ, ವಿಸಂಗತ, ವಿಕೃತ ಮತ್ತು ವಿಚಿತ್ರವಾದ ರೂಢಿ, ಪರಂಪರೆಗಳ ರೀತಿಯಲ್ಲಿಯೇ ಯಾರೋ ಜಮದಗ್ನಿಯಂಥ ಸ್ವಾರ್ಥ, ಲಾಲಸೆಯಂಥವರ ವಿಚಾರಗಳ ಮೂಲಕವೇ ಬೆಳೆದುಬಂದುದಾಗಿದೆ.

ಭಾತರದ ದುರ್ಬಲ ಘಟಕವಾದ ಮಹಿಳೆಯರ ಅನೇಕ ಉಗ್ರ ಸಮಾವೇಶಗಳ ಮೂಲವು ಇಂಥ ಸಾಮಾಜಿಕ ಮತ್ತು ಜಾತೀಯವಾದಿ ಸಂಘರ್ಷಗಳಲ್ಲಿ ಕಾಣಿಸುತ್ತದೆ. ಪ್ರಾಚೀನವಾದುದು, ಪರಂಪರಾಗತ ರೂಢಿ, ಶಿಕ್ಷಣದ ಅಭಾವ, ದೈವವಾದೀ ಅಂಥಶ್ರದ್ಧೆ ಇವುಗಳ ಪೂರ್ಣ ವರ್ಚಸ್ಸು ತಲತಲಾಂತರವಾಗಿ ನಮ್ಮ ಮನಸ್ಸಿನ ಮೇಲೆ ನಾಟಿರುವುದಿರಂದ ದೇವದಾಸಿಯಂಥ ಸಂಪ್ರದಾಯಗಳು ಇಂದಿಗೂ ಕಾಣಿಸುತ್ತವೆ. ಮಹರಾಷ್ಟ್ರ-ಕರ್ನಾಟಕದ ಸೀಮಾ ಪ್ರದೇಶಗಳಲ್ಲಿನ ಎಂಟು ಜಿಲ್ಲೆಗಳಲ್ಲಿ ಈ ಸಂಪ್ರದಾಯದಿಂದ ಬಲಿಹೋಗಿರುವ ಹುಡುಗ-ಹುಡುಗಿಯರ ಸಂಖ್ಯೆಯ ಪ್ರಮಾಣ ಭಯವನ್ನು ಉಂಟು ಮಾಡುವಷ್ಟಿದೆ. ಅದರ ಪ್ರಮುಖ ಕೇಂದ್ರ ನಿಪ್ಪಾಣಿ ಪಟ್ಟಣ. ಬೆಳಗಾವಿ, ನಿಪ್ಪಾಣಿ, ಚಿಕ್ಕೋಡಿ, ಅಥಣಿ ಈ ಭಾಗಗಳಲ್ಲಿ ದೇವದಾಸಿಯರಿದ್ದಾರೆ. ಖಂಡೋಬಾನ ಪ್ರಸಿದ್ಧ  ದೇವಾಲಯದಲ್ಲಿ ಇರುವ ಮುರಳಿ ಮತ್ತು ಗೋವಾದಲ್ಲಿನ ಭಾರಿಣಿಯರನ್ನು ಉಚ್ಚ ಸಮಾಜದ, ಧನವಂತರ ಭೋಗದ ದಾಸಿಯರಾಗಿಯೇ ಬಳಸಿಕೊಳ್ಳುತ್ತಾ ತಮ್ಮ ಸ್ವಂತ ಮನೆಗಳ ಬಾಗಿಲಗಳನ್ನು ಬಂದು ಮಾಡಿದ್ದಾರೆ. ಸಾಧನ ಸಂಪತ್ತು, ಕುಟುಂಬದ ಮಾನ, ಮರ್ಯದೆಯನ್ನು ಜೀವಂತವಾಗಿ ರಕ್ಷಿಸಿಕೊಳ್ಳುವ ಹಕ್ಕು ಸಮಾಜದಲ್ಲಿ ಜನಸಾಮಾನ್ಯರಿಗೂ ಇದೆಯಲ್ಲವೆ? ಆದರೆ ಸಕವಿ ಎಂಬ ಹಳ್ಳಿಯಲ್ಲಿ ದೇವದಾಸಿಯರ ಮನೆಗೆ ಬಾಗಿಲುಗಳನ್ನು ಮಾಡಿಸಬಾರದು ಎಂಬುದು ಸಂಪ್ರದಾಯವಿದೆ.  ಬನ್ನಿ-ಹೋಗಿ ಮನೆ ನಿಮ್ಮದು ಎಂಬ ನ್ಯಾಯದಿಂದ ಯಾರು ಬೇಕಾದರೂ, ಯಾವ ಹೊತ್ತಿನಲ್ಲಾದರೂ ಆ ಮನೆಯಲ್ಲಿ ಹೋಗಬಹುದು. ನಿಜವಾಗಿಯೂ ಈ ಸಂಪ್ರದಾಯವನ್ನು ಹುಟ್ಟು ಹಾಕಿದವರ ಬುದ್ದಿಚಾತುರವನ್ನು ಮೆಚ್ಚಲೇ ಬೇಕು.

ಧರ್ಮದ ಒತ್ತಡ, ಚಡಪಡಿಕೆ, ಉಗಮ ಸ್ಥಾನಗಳಲ್ಲಿ ಇರುವ ಪ್ರಯತ್ನವೇ ಈ ಸಂಪ್ರದಾಯದ ಸಂದರ್ಭದಲ್ಲಿಯೂ ಬರುತ್ತದೆ. ಎಸ್.ಟಿ.ಯಂಥ (ರಾಜ್ಯ ಸರಕಾರಿ) ವಾಹನದಲ್ಲಿ ಪ್ರವಾಸ ಮಾಡಿದಾಗ ಉಂಟಾದ ಅನುಭವ ಹೀಗಿದೆ. ಮೂರು ಸೀಟಿನ ಆಸನದಲ್ಲಿ ಕುಳಿತಿದ್ದ ಸ್ತ್ರೀಯೊಬ್ಬಳಿಗೆ ಸ್ವಲ್ಪ ಆಕಡೆಗೆ ಸರಿಯುವಂತೆ ಮನವಿ ಮಾಡಿಕೊಂಡೆ. ಅವಳು ಹೇಳಿದಳು ತಾಯಿ, ‘ಆ ಕಡೆಗೆ ಜೋಗತಿ ಇದ್ದಾಳೆ ದೇವರ ಮನುಷ್ಯೆ ಕೋಲ್ಹಾಪುರಕ್ಕೆ ಹೋಗಬೇಕಾಗಿದೆ. ಅವಳಿಗೆ ಅಪ್ಪಿತಪ್ಪಿ ತನ ಕಾಲುಗೀಲು ತಾಕಿದರೆ ಅವಳಿಗೆ ಬಹಳ ಕೆಡುಕಾಗುತ್ತದೆ. ಇಲ್ಲದ ದೂಷಣೆ…, ಆದರೆ ಇದೇ ಜೋಗತಿಯ ಹತ್ತಿರ ಎಷ್ಟು ಜನ ಬಂದು ಹೋಗುತ್ತರೆ ಎಂಬ ವಿಷಯ ಕುಚೋದ್ಯ ವ್ಯಕ್ತಿಗಳ ಬಾಯಲ್ಲಿ ನೀರೂರಿಸುತ್ತದೆ. ಸರ್ವೆಸಾಮಾನ್ಯ ಮನುಷ್ಯರಲ್ಲಿ ಮಾತ್ರವೇ ಭೀತಿ ಮತ್ತು ಜುಲುಮೆ, ಒತ್ತಡದಿಂದ ಆದರದಿಂದ ವರ್ತಿಸುತ್ತಾರೆ. ಜೋಗವ್ವ ನೀಡಿರಿ ಎಂದು ಹೇಳುತ್ತಾಳೆ, ಅವಳ ಪರಡಿಗೆಯಲ್ಲಿ, ಜೋಳಿಗೆಯಲ್ಲಿ ಏನಾದರೂ ಬೀಳುತ್ತದೆ. ಜಮೀನುದಾರರು, ವ್ಯಾಪಾರಿಗಳು, ಅಲ್ಪಸ್ವಲ್ಪ ಸೆರಗಿಗೆ ಹಾಕುವುದು ಕೂಡ ಈ ಭೀತಿಯ ಕಾರಣವಾಗಿಯೇ. ದೇವದಾಸಿ ಪದ್ಧತಿಯ ಬಗ್ಗೆ ಮನಸ್ಸಿನಲ್ಲಿ ಜುಗುಪ್ಸೆ, ದ್ವೇಷ, ತಿರಸ್ಕಾರ ಹೊಂದಿದವರು ಕೂಡಾ ಅವರುಗಳ ಬಗ್ಗೆ ಕೆಟ್ಟದ್ದಾಗಿ ಮಾತಾಡಲು ಬಯಸುವುದಿಲ್ಲ. ಈ ಸಂಪ್ರದಾಯ ಹುಟ್ಟಿಕೊಂಡದ್ದು ಭೀತಿಯಿಂದ. ಎಂಬುದು ಸ್ಪಷ್ಟ. ರೋಗರುಜಿನಗಳು, ಅಪಮೃತ್ಯು, ಬಂಜೆತನ, ಮಕ್ಕಳು ಬದುಕದಿರುವುದು, ಗಂಡುಮಗು ಹುಟ್ಟದಿರುವುದು, ಬಾವಿಯ ನೀರು ಬತ್ತಿಹೋಗುವುದು, ಹೊಲದಲ್ಲಿ ಬೆಳೆ ಬಾರದಿರುವುದು, ಬಾವಿ ತೆಗೆದರೆ ನೀರು ಬಾರದಿರುವುದು, ಅಣ್ಣತಮ್ಮಂದಿರು ಸಾಯುವುದು. ಮೇಲಿಂದ ಮೇಲೆ ಹಾವು ಕಾಣಿಸಿಕೊಳ್ಳುವುದು, ವಿಚಿತ್ರ ದೃಶ್ಯಗಳು ಕಾಣಿಸುವುದು, ಆರ್ಥಿಕ, ಸಾಮಾಜಿಕ ಆಪತ್ತುಗಳಲ್ಲಿ ನೆಲಕಚ್ಚುವುದು- ಇತ್ಯಾದಿ ಕಾರಣಗಳಿಂದ ದೇವರಲ್ಲಿ ವ್ರತವನ್ನು ಬೇಡಿಕೊಳ್ಳಲಾಗುತ್ತದೆ. ನನ್ನ ಮಗುವನ್ನು ನಿನಗೆ ಅರ್ಪಿಸುತ್ತೇನೆ ಈ ಮಾತನ್ನು ನಡೆಸಿಕೊಟ್ಟರೆ. ಸಂಖ್ಯಾಶಾಸ್ತ್ರದ ದೃಷ್ಟಿಯಿಂದ ಶೇ. ೫೦ರಷ್ಟು ಮಾತುಗಳು ಹೇಳಿಕೊಂಡಿರುವ ರೀತಿಯಲ್ಲಿಯೇ ನಡೆಯುತ್ತವೆ. ಈ ವ್ರತದಿಂದ ಒಂದು ನಿರ್ಮಲ, ಮುಗ್ದ, ನಿಷ್ಕಳಂಕ ಜೀವವೊಂದು ಸುಟ್ಟು ಬೂದಿಯಾಗುತ್ತದೆ.

ದೇವದಾಸಿ ಅಂದುಇಂದು: ಒಂದು ಶೋಧ

ಅನೇಕ ಬಗೆಯ ಕುವ್ರತಿಗಳ ನಗ್ನನೃತ್ಯವು ಎಲ್ಲಾ ಕ್ಷೇತ್ರಗಳಲ್ಲಿಯೂ ಕಂಡುಬರುತ್ತದೆ. ಅಂಥಶ್ರದೆಯ ಭಕ್ತಿಯಿಂದಾಗಿ ಅಂದು ದೇವದಾಸಿ ನಿರ್ಮಾಣವಾಗಿದ್ದಳು. ಆದರೆ ಇಂದು ದೊಡ್ಡ ದೊಡ್ಡ ನಗರಗಳಲ್ಲಿ ಸುಸಂಪನ್ನ ಶಿಮಂತ ಅರಬ್ಬರ ವಾಸನೆಗಳನ್ನು ಪೂರೈಸುವುದಕ್ಕಾಗಿ  ದೇವದಾಸಿ ಸಂಪ್ರದಾಯವನ್ನು ತೀರಾ ಪದ್ಧತಿಯ ಅನುಸಾರವೇ ಸಮಾಜದಲ್ಲಿ ರೂಪಿಸಲಾಗುತ್ತದೆ. ಹಳ್ಳಿಗಳಲ್ಲಿ ಕಡುಬಡವರು, ಕಲಿತ ವಸತಿಗಳಲ್ಲಿನ ಹೆಣ್ಣುಮಕ್ಕಳನ್ನು ಗುಪ್ತವಾಗಿ ಇಂಥದಕ್ಕೆ ತಳ್ಳಲಾಗುತ್ತದೆ. ಬೇಕುಬೇಕಾದ ಹಾಗೆ ಅವಘಢನೆಗಳು ಇಂಥ ಬಡ ಕುಟುಂಬಗಳಲ್ಲಿ ಘಟಿಸುತ್ತಿರುತ್ತವೆ.  ಯಲ್ಲೂ ತಾಯಿಯ ಪ್ರಕೋಪವೇ ಇದಕ್ಕೆ ಮುಖ್ಯ ಕಾರಣವೆಂದು ಅವಳ ಪಾಲಕರ ಮನಸ್ಸಿನ ಮೇಲೆ ಪದ್ಧತಿಯನುಸಾರ ಬಿಂಬಿಸಲಾಗುತ್ತದೆ. ಅವರ ಬೆನ್ನುಹತ್ತಿ ಸಹಾನುಭೂತಿ ತೋರಿ, ಆರ್ಥಿಕ ಸಹಾಯ ಮಾಡವುದರ ಮೂಲಕ ಅವರನ್ನು ಭಕ್ತರ ದೃಷ್ಟಿಯಿಂದ ತೆಕ್ಕೆಗೆ ತೆಗೆದುಕೊಳ್ಳುತ್ತಾರೆ. ಮಗಳನ್ನು ಯಲ್ಲಮ್ಮನಿಗೆ ಅರ್ಪಿಸದೆ ಬೇರೆ ದಾರಿಯೇ ಇಲ್ಲ ಎಂಬ ಖಾತ್ರಿಯನ್ನು ಪಾಲಕರಲ್ಲಿ ಮೂಡಿಸಲಾಗುತ್ತದೆ. ಆಗ್ಗೆ ನೋಡುವಂತಹ ನುಣುಪಾದ ದೇಹ…. ಜಗತ್ತಿನ ಪೇಟೆಯಲ್ಲಿ ಮಾರಾಟಕ್ಕೆ ಬರುವುದು. ಕೆಲವೆಡೆಗಳಲ್ಲಿ ದೇವಾಲಯದ  ಪೂಜಾರಿ ಮತ್ತು ಪರಿಚಾರಕರನ್ನು ಹಿಡಿದುಕೊಳ್ಳಲಾಗುತ್ತದೆ, ಅದರಿಂದಲೂ ದೇವರಿಗೆ ಶರಣು ಹೋಗುತ್ತವೆ ಆಗ ಚಿಂತಾವ್ಯಾಕುಲವಾದ ಜೀವಗಳು. ಇದು ಬರುವುದು ಪರಿಚಾರಕರ ಮೂಲಕ, ಸದಾ ಸಂಪರ್ಕ ಇರುವುದರಿಂದ ದೇವರ ತೀರ್ಪು ಎಂಬುದಾಗಿ ಹೇಳಿ ಹೆಣ್ಣುಮಗಳನ್ನು ಮೋಸಗೊಳಿಸಲಾಗುತ್ತದೆ. ಎಳೆಯ ಕುಸುಮಗಳನ್ನು ವಾಸನೆಗಳಿಂದ ತುಂಬಿ ಧಗಧಗಿಸುವ ಅಗ್ನಿಕುಂಡದಲ್ಲಿ ಪಾಲಕರು ಸ್ವತಃ ತಮ್ಮ ಕೈಗಳಿಂದಲೇ ಹಾಕುತ್ತಾರೆ. ಪಾಲಕರಿಗೆ ಈತನಕವೂ ಇದು ತಪ್ಪು ಎಂದು ತಿಳಿದಿಲ್ಲ. ಈಗ್ಗೆ ಈ ಬಗ್ಗೆ ಸ್ವಲ್ಪ ಮಟ್ಟಿಗೆ ವಿಚಾರ ಮಾಡಲಾಗುತ್ತಿದೆ.

ಪ್ರವಹಿಸುವ ಸಾಧನಗಳಾಗಿ ಸಂಪರ್ಕ ಮಾಧ್ಯಮಗಳು, ವೃತ್ತ ಪತ್ರಿಕೆಗಳ ವಿತರಣೆಯ ವ್ಯವಸ್ಥೆ, ರೇಡಿಯೋ ಇತ್ಯಾದಿಗಳು ಇಂದು ಹೆಚ್ಚಾಗಿವೆ. ಆವಶ್ಯಕತೆಯ ಕಾರಣ ತಾಲೂಕುಗಳಲ್ಲಿನ ಕಾರ್ಯಾಲಯಗಳಿಗೆ ಹೋಗುವಂತಾಗಿರುವುದು. ಸಾಮಾಜಿಕ ಸಂಪರ್ಕಗಳು ಹೆಚ್ಚಾಗಿರುವುದರಿಂದ ಇತರೆ ಅಂಥವಿಶ್ವಾಸ, ಶ್ರದ್ಧೆ ಮತ್ತು ನಿಷ್ಠೆಗಳ ಮೇಲೆ ಸ್ವಲ್ಪ ಪರಿಣಾಮ ಉಂಟಾದ ಹಾಗೆಯೇ ಇಂಥ ಸಂಪ್ರದಾಯದ ಮೇಲೆಯೂ ಆಗಿದೆ. ಅಗತಿಕರಾಗಿ, ಬೇರೆ ಮಾರ್ಗವಿಲ್ಲದೆ ಇದನ್ನೇ ಅವಲಂಬನೆ ಮಾಡುತ್ತಿದ್ದ ಪಾಲಕರು ಸ್ವಲ್ಪ ಮಟ್ಟಿಗೆ ಇಂದು ಜಾಗೃತರಾಗಿದ್ದಾರೆ. ದೇವದಾಸಿಯರ ಮಕ್ಕಳು ಇಂದು ಶಿಕ್ಷಣವನ್ನು ಕೊಂಚಮಟ್ಟಿಗೆ ಪಡೆದಿರುವುದರಿಂದ ಸಮಕಾಲೀನ ಪರಿಸ್ಥಿತಿಯ ಬಗ್ಗೆ ವಿಚಾರ ಮಾಡಲು ಮತ್ತು ಕಣ್ಣಿನ ಮೇಲೆ ಮುಚ್ಚಿದ್ದ ಹೊದಿಕೆಯನ್ನು ದೂರ ಸರಿಸಲು ಶಕ್ತರಾಗಿದ್ದಾರೆ. ಆ ಮೂಲಕ ಇತರ ಸಾಮಾಜಿಕ ಸ್ತ್ರೀಯರ ಕಡೆಗೆ ನೋಡುವಂತಹ ಧೈರ್ಯ ಮತ್ತು ವೈಚಾರಿಕ ಶಕ್ತಿಯು ಸಾಧ್ಯವಾಗಿದೆ. ದೇವದಾಸಿಯರಲ್ಲಿನ ಈ  ಎಚ್ಚರ ಗಂಭೀರ ಪ್ರಮಾಣದಲ್ಲಿ  ಹೆಚ್ಚಾಗಿದೆ. ಆದರೂ ಅತಿಶಯವಾದ ಖೇದ ಮತ್ತು ದುರ್ದೈವದ ಸಂಗತಿ ಎಂದರೆ  ಈ ಎಚ್ಚರ ಅವರನ್ನು ಹೆಚ್ಚು ಬೆಳಕಿನೆಡೆಗೆ ಒಯ್ಯುವುದಾಗಿಲ್ಲ. ಸ್ವತಃ ತಮಗೆ ಒತ್ತಿಕ್ಕಿರುವ ವಿಚಿತ್ರ ಕತ್ತಲೆಯು ತಮ್ಮ ಜೀವ ಕೊಳ್ಳುತ್ತಿರುವುದರ ಬಗ್ಗೆ ಜಾಗೃತಿಯ ಅರಿವು ಉಂಟಾಗಿದೆ. ಹಿಡಿದರೆ ಕಚ್ಚುತ್ತದೆ, ಬಿಟ್ಟರೆ ಓಡುತ್ತದೆ ಎಂಬಂತಾಗಿದೆ ಅವರ ಅವಸ್ಥೆ. ಹೊಟ್ಟೆಪಾಡಿಗಾಗಿ ದಿನವೂ ಒಬ್ಬರಿಗೆ ದೇಹವನ್ನು ಒಪ್ಪಿಸುವ ರೂಢಿಯುಳ್ಳ ದೇವದಾಸಿಯರು ತಮ್ಮ ಮೇಲಿನ ಶಾರೀರಿಕ ಅತ್ಯಾಚಾರವನ್ನು ನಿರಾಕರಿಸುತ್ತಿಲ್ಲ. ತಾರುಣ್ಯ ಇರುವವರೆಗೂ ಈ ದಂಧೆಯಿಂದ ಹೊರಬರುವುದು ಅಸಾಧ್ಯ. ಆ ನಂತರ ರೋಗದಿಂದ ಜರ್ಜರಿತವಾದ ಅವಸ್ಥೆಯಲ್ಲಿ ಸಾಯುವವರೆಗೂ ಬದುಕಿ ನರಳುತ್ತಾರೆ. ಅವರದು ಹುರುಕು ಹತ್ತಿದ ನಾಯಿಯಂತಹ ಜೀವನ. ಇಂಥವರನ್ನು ನೋಡಿದ ತರುಣ ದೇವದಾಸಿಯರು ನಮಗೆ ಸಾಮಾನ್ಯ ಉದ್ಯೋಗ ಬೇಕೆಂದು ಬಯಸುತ್ತಿದ್ದಾರೆ. ಆದರೆ ಬೇರೆ ದಾರಿಯಿಲ್ಲ, ಅಡ್ಡಿಗಳೇ ಬಹಳ.

ಭಯಾನಕವಾದ ಭಾವನೆಗಳು, ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕ ಅಡಚಣೆಗಳು ಅರಿವಿಗೆ ಬಂದಿರುವುದರಿಂದ ಇಂದಿನ ದೇವದಾಸಿ ಅಂದಿನ ದೇವದಾಸಿಯರಿಗಿಂತ ಹೆಚ್ಚು ದುಃಖಿಯೂ, ಅಸ್ವಸ್ಥಳು, ಸಂತ್ರಸ್ಥಳೂ ಮತ್ತು ಸಂತಾಪಿಯೂ ಆಗಿದ್ದಾಳೆ. ಮುಂದೆ ಹೋಗುವ ಕ್ರಾಂತಿಯ ಮಾರ್ಗವಂತೂ ಬಹಳ ಕಷ್ಟದಾಯಕ. ಅತ್ಯಂತ ಕ್ಲೇಶಕಾರಕ ಅವಸ್ಥೆಯಿಂದಲೇ ಪ್ರತಿಯೊಂದು ಹೋರಾಟವನ್ನು ಮುನ್ನಡೆಸಬೇಕಾಗುತ್ತದೆ. ಇಂದಿನ ದೇವದಾಸಿಯು ಸಮ್ಮೇಳನ, ಪರಿಷತ್ತುಗಳಲ್ಲಿ ಧ್ವನಿ ಮಾಡುವಷ್ಟು ಬೆಳೆದಿದ್ದಾಳೆ. ಈ ಧ್ವನಿಯಿಂದ ಸಮಾಜದ ಮತ್ತು ಸರಕಾರದ ಕಿವಿಯ ಮೇಲಣ ಅಭೇದ್ಯ ಪರದೆಯು ಸ್ವಲ್ಪವಾದರೂ ಹಿಂಜಿ ಹರಿಯಬಹುದು! ಅಥವಾ ಸದಾ ಧ್ವನಿ ಎತ್ತುವ ಕಂಠದ ಮೇಲೆ ಒತ್ತಡ ಹೇರಿ ಧ್ವನಿ ಎತ್ತುವ ದೇಹವನ್ನೇ ನಷ್ಟಗೊಳಿಸಬಹುದು. ಹೆಚ್ಚು ಕಾರ್ಯ… ಅನುಕೂಲಕರವಾದುದರಿಂದ ಪುಣೆಯಲ್ಲಿನ ವೇಶ್ಯೆಯರ ಮಕ್ಕಳು ಮರಿಗಳ ಬಗ್ಗೆ ಪ್ರಾಧ್ಯಾಪಕ ವಿಲಾಸ ವಾಘ್ ಅವರು ಸರ್ವೇಕ್ಷಣೆ ಕೈಗೊಂಡಿದ್ದರು. ಆಗ ತಿಳಿದು ಬಂದ ಪ್ರಮುಖ ವಿಚಾರವೆಂದರೆ ಶೇಕಡ ೬೦ಕ್ಕಿಂತ ಅಧಿಕ ವೇಶ್ಯೆಯರು ಹರಿಜನ ವರ್ಗಕ್ಕೆ ಸೇರಿದವರಾಗಿದ್ದರು ಎಂಬುದು. ಇನ್ನು ದೇವದಾಸಿಯರ ವಿಷಯದಲ್ಲಿ ಈ ಪ್ರಮಾಣ ಶೇಕಡ ೯೦ರಷ್ಟಿದೆ. ಗುಜರ, (ಗುಜರಾಧಿ) ಜೈನ, ಲಿಂಗಾಯಿತ, ಬ್ರಾಹ್ಮಣ ಮತ್ತು ಉಚ್ಚ ಮರಾಠಾ ಜಾತಿಯವರಲ್ಲಿ ದೇವದಾಸಿಯರು ಸಿಕ್ಕುವುದಿಲ್ಲ. ಈ ಸಂಬಂಧವಾಗಿ ದೇವದಾಸಿಯಾಗಿದ್ದ ನನ್ನ ವಿದ್ಯಾರ್ಥಿನಿಯೊಬ್ಬಳಲ್ಲಿ ವಿಚಾರ ಮಾಡಿದಾಗ ಅವಳು ಹೇಳಿದಳು, ಮೇಡಂ ಇಂಥವರ ಸಂಖ್ಯೆ ನಮ್ಮಲ್ಲಿ ಹೆಚ್ಚಾಗಿಯೇ ಇದೆ. ಹೊಟ್ಟೆಪಾಡಿಗಾಗಿ ನನ್ನ ತಾಯಿ ಮತ್ತು ಸಹೋದರಿಯರು ಬಜಾರಿನಲ್ಲಿ ಕುಳಿತಿದ್ದಾರೆ. ದೊಡ್ಡ ದೊಡ್ಡ ಹೋಟೆಲುಗಳಲ್ಲಿ ಮುಕ್ತವಾಗಿ ವೇಶ್ಯಾವೃತ್ತಿಯನ್ನು ನಡೆಸುತ್ತಿರುವ ಶೇಕಡವಾರು ಸಂಖ್ಯೆಯನ್ನು ಏತಕ್ಕೆ ಮುಚ್ಚಿಡತ್ತಾರೆ? ಮತ್ತೊಬ್ಬಳು ಹೇಳಿದಳು ತಾಯಿ, ಈ ಹೆಂಗಸರು ನಾಲ್ಕಾರು ರೂಪಾಯಿಗಳನ್ನು ಸಂಪಾದಿಸುತ್ತಿದ್ದಾರೆ, ಅವರು ೪೦೦ ರೂಪಾಯಿಗಳನ್ನು ಸಂಪಾದಿಸುತ್ತಿದ್ದಾರೆ, ಅಲ್ಲಿಯೂ ವರ್ಗ ಮತ್ತು ವರ್ಣ ಭೇದವು ಇದ್ದೇ ಇದೆ. ಅವರಿಬ್ಬರ ಮುಖ್ಯ ಪ್ರಶ್ನೆಯೆಂದರೆ ಸ್ತ್ರೀಜಾತಿಯು ಹೊಟ್ಟೆಪಾಡಿಗಾಗಿ ಶರೀರವನ್ನು ಮಾರಿಕೊಳ್ಳಬೇಕಾಗಿದೆ ಈ ಸಾಮಾಜಿಕ ವ್ಯವಸ್ಥೆಯಲ್ಲಿ. ಇದು ಬಹಳೇ ಜೀವನ ಮಾರಕ ಎಂಬ ಸಂಗತಿಯನ್ನು ಮನಸ್ಸಿಗೆ ಮೂಡುವಂತೆ ಅವರಿಗೆ ಹೇಳುವುದಕ್ಕೆ ನಾನು ಬಹಳ ಪ್ರಯಾಸಪಡಬೇಕಾಯಿತು.

ಇಂದಿನ ದೇವದಾಸಿಯರು ತಮ್ಮ ಮಗಳನ್ನು, ಸೋದರಿಯನ್ನು ಈ ವಾಸನೆಯ ಖೆಡ್ಡಾದಲ್ಲಿ ಬೀಳಿಸುವ ಬದಲು ಅದರಿಂದ ಅವರನ್ನು ಉಳಿಸುವ ಬಗ್ಗೆ ಬಹಳ ಗಂಭೀರವಾಗಿ ಆಲೋಚನೆ ಮಾಡಬೇಕಾಗಿದೆ. ಆದರೆ ಸ್ತ್ರೀಯರೇ ಇದಕ್ಕೆ ಉತ್ತೇಜನವನ್ನು ಕೊಡುತ್ತಿದ್ದಾರೆ. ಈ ನರಕದಲ್ಲಿ ಜನುಮವೆತ್ತಿರುವುದರಿಂದ ಭಾವನೆಗಳೆಲ್ಲ ಪೂರ್ಣವಾಗಿ ಬತ್ತಿ ಹೋಗಿರುವ ದೇವದಾಸಿಯರ ಮುಂದಾಳು ಹೆಣ್ಣೊಬ್ಬಳು ಚಿಕ್ಕ ವಯಸ್ಸಿನ ದೇವದಾಸಿಯರಿಗೆ ಮೊದಲ ರಾತ್ರಿಯನ್ನು ಹೇಗೆ ಎದುರಿಸಬೇಕು.

ದೇವದಾಸಿ ಸಂಪ್ರದಾಯವನ್ನು ಇಲ್ಲವಾಗಿಸುವುದು ಹೇಗೆ?

ಬ್ರಿಟಿಷರ ಆಡಳಿತಾವಧಿಯಲ್ಲಿ ೧೯೩೪ರ ಹೊತ್ತಿಗೆ ದೇವದಾಸಿ ಪ್ರತಿಬಂಧಕ ಕಾಯಿದೆಯು ಜಾರಿಗೆ ಬಂದಿತು. ಅದಕ್ಕೆ ಸಂಬಂಧಿಸಿದವರಿಗೆ ಆರು ತಿಂಗಳ ಕಠಿಣ ಶಿಕ್ಷೆ ಮತ್ತು ೫೦೦ ರೂಪಾಯಿಗಳ ದಂಡವನ್ನು ಶಿಕ್ಷೆಯಾಗಿ ನಿಗದಿಗೊಳಿಸಲಾಗಿತ್ತು. ದೇವದಾಸಿಯಾಗುವವಳು ಒಂದೊಮ್ಮೆ ವಿದ್ಯಾವಂತಳಾಗಿದ್ದರೆ ಅವಳಿಗೂ ಶಿಕ್ಷೆ ಇತ್ತು. ಆದರೆ ಕರ್ನಾಟಕದಲ್ಲಿನ ವರಿಷ್ಠ ಪೊಲೀಸ್ ಅಧಿಕಾರಿಗಳಿಗೆ ಈ ಬಗ್ಗೆ ಏನೂ ತಿಳಿಯದಿದ್ದುದು ನನ್ನ ಅನುಭವಕ್ಕೆ ಬಂತು. ಬಹುಶಃ ಕಾಯಿದೆಗಿಂತ ಎಲ್ಲಮ್ಮಳ ಭೀತಿಯೇ ಅವರಿಗೆ ಅಧಿಕವಾಗಿದ್ದಿರಬೇಕು.

ಬ್ರಿಟಿಷರು ಈ ಕಾಯಿದೆಯನ್ನು ಜಾರಿಗೆ ತರುವುದಕ್ಕೆ ಮುಂಚೆಯೇ ಅಂದರೆ ಕ್ರಿ.ಶ. ೧೯೨೫ರಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರರು ನಿಪ್ಪಾಣಿಯಲ್ಲಿ ಒಂದು ಸಮ್ಮೇಳನ ಮಾಡಿ ದೇವದಾಸಿ ಸಂಪ್ರದಾಯದ ನಿರ್ಮೂಲನದ ಬಗ್ಗೆ ಒತ್ತಾಯ ಮಂಡಿಸಿದ್ದರು. ಸುಮಾರು ೮೦ ವರ್ಷಗಳ ಹಿಂದೆಯೇ ಆ ಮೇಧಾವಿ ಮುಂದಾಳು ಮಾಡಿದ ಬೇಡಿಕೆಯನ್ನು ಇಂದು ಮತ್ತೆ ಪುನರುಚ್ಚರಿಸುವುದು ಅಗತ್ಯ. ಚಳವಳಿ ಮಾಡಲು ಬರುವುದಿಲ್ಲ, ಸಂಘಟಿತರಾಗುವುದಕ್ಕೆ ಸಾಧ್ಯವಿಲ್ಲ ಎಂಬ ಕಾರಣವಾಗಿಯೇ ಅನೇಕರಿಗೆ ಈ ಬಗ್ಗೆ ಬಹಳೇ ದುರ್ಲಕ್ಷ್ಯ. ಈ ಬೇಡಿಕೆಯನ್ನು ಶಿಭಾಸ್ಕರರಾವ್ ಜಾಧವ ಅವರೂ ಬೆಂಬಲಿಸಿದ್ದರು ಆ ಹೊತ್ತಿಗೆ. ಆ ಸಮ್ಮೇಳನದಲ್ಲಿ ಗೀತೆ ಹಾಡಿದ್ದಂಥ ವೀರಪ್ಪ ಮಾನೆ ಮತ್ತು ಅಣ್ಣಾ ಸನದಿಯವರಲ್ಲಿ ವಯೋವೃದ್ಧರಾಗಿರುವ ವೀರಪ್ಪಮಾನೆ ಈ ಸಾಲುಗಳನ್ನು ನೆನಪಿಸಿ ಕೊಳ್ಳುತ್ತಿದ್ದುದ್ದನ್ನು ಡಾ. ನರೇಂದ್ರ ಕುಕಡೆ ಅವರು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

ಏತಕ್ಕೆ ಬೇಡುವಿರಿ ಭಿಕ್ಷೆಯನು
ಏತಕ್ಕೆ ಇವರಲ್ಲಿ ಯಾಚನೆ
ಮೊಳಗಲಿ ಸಮರರಣದುಂಧುರ!

ದೇವದಾಸಿಯರು ಇಂದಿಗೂ ಭಿಕ್ಷೆ ಬೇಡುತ್ತಿದ್ದಾರೆ ಎನ್ನುವುದು ದೇಶದ ಮಟ್ಟಿನ ದುರ್ದೈವ. ೧೯೩೧ರಲ್ಲಿ ಮಾಲಿಕವಾಡದಲ್ಲಿನ ಶ್ರೀ ಘಟ ಕಾಂಬಳೆ ಎಂಬ ದಲಿತ ಜಿಲ್ಲಾಧಿಕಾರಿಗಳವರು ಅಥಣಿಯಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಸಂಪರ್ಕ ಕಾರ್ಯವನ್ನು ಹಮ್ಮಿಕೊಂಡಿದ್ದರು. ಅಲ್ಲಿ ಈ ರಾಕ್ಷಸಿ ಪ್ರವೃತ್ತಿಯ ಸಂಪ್ರದಾಯದ ಗಂಭೀರ ಪರಿಣಾಮವನ್ನು ಸಮಾಜದೆದುರು ಮೂರ್ತ ಸ್ವರೂಪದಲ್ಲಿ ಸಾದರ ಪಡಿಸಿದರು. ಆದರೆ ಮುಂದೆ ತೀರಾ ಬೆರಳೆಣಿಕೆಯಷ್ಟು ಪ್ರಯತ್ನಗಳಷ್ಟೆ ಈ ಬಗ್ಗೆ ನಡೆದಿವೆ. ಈ ಗಂಭೀರ ಪ್ರಶ್ನೆಯೆಡೆ ನಾವು ದುರ್ಲಕ್ಷ್ಯ ಮಾಡಿರುವುದಕ್ಕೆ ಯಾವುದೇ ರೀತಿಯಲ್ಲಿಯೂ ಕ್ಷಮೆಯೇ ಇಲ್ಲ. ಈ ಸಮ್ಮೇಳನದಲ್ಲಿ ಸ್ತ್ರೀಯರ ದುಃಖ ನಿವೇದನೆ, ಜೋರಾಗಿ ಅಳುತ್ತಲೇ ಸಮಾಜದೆದುರು ತಮ್ಮ ಜೀವನದ ಹರುಕು ಸ್ವರೂಪವನ್ನು ಆತ್ಮಚರಿತ್ರೆಯ ರೂಪದಲ್ಲಿ ಪ್ರದರ್ಶಿಸುತ್ತಿದ್ದ ವಿಚಾರಗಳು, ಬದುಕಿನ ಆತ್ಮಪ್ರತಿಷ್ಠೆಯ ವರ್ಣನೆಯಲ್ಲಿನ ವಿವರಗಳು, ಮಧ್ಯಮ ಮತ್ತು ಮೇಲು ವರ್ಗಕ್ಕೆ ನಾಲ್ಕು ದಿನಗಳ ಕಾಲ ಓದುವುದಕ್ಕೆ ಮತ್ತು ಕೇಳುವುದಕ್ಕೆ ಲಭ್ಯವಾದಂತಾಯಿತು. ಒಂದ ಬಹಳ ರುಚಿಕಟ್ಟಾದ ಹೊಸ ವಿಷಯವು ಓದುವುದಕ್ಕೆ, ಚರ್ಚಿಸುವುದಕ್ಕೆ ಸಿಕ್ಕರೆ ಸಾಕು! ಇದಕ್ಕಿಂತಲೂ ಹೆಚ್ಚಿಗೆ ಏನು ಸಾಧ್ಯವಾಗುತ್ತದೆ. ಮಹಾದೇವ ಮೋರೆಯವರಂತಹ ತೀರಾ ಕೆಳವರ್ಗದ ಜನರ ದುಃಖವನ್ನು ಅವರಲ್ಲಿಯೇ ಒಂದಾಗಿ ಬೆರೆತು ಮಾಹಿತಿ ಸಂಗ್ರಹಿಸಿ ಲೇಖನ ಬರೆದರೆ ಅದು ಕಟುವಾಗಬೇಕೆ? ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಕಪ್ಪುಚಾಮರ ಹಿಡಿದು ನಿಷೇಧವನ್ನು ವ್ಯಕ್ತಪಡಿಸಿದರೆ ಅವರನ್ನು ‘ರಾಷ್ಟ್ರದ್ರೋಹಿ’ ಎಂದು ನಿರ್ಧರಿಸುವುದು! ಈ So called ಬುದ್ದಿವಂತರಿಗೆ, ಸುಸಂಸ್ಕೃತರಿಗೆ ಹೇಗೆ ಸಾಧ್ಯ? ಸಮ್ಮೇಳನದಲ್ಲಿ ಒಬ್ಬ ಹದಿನಾರು ಹದಿನೇಳು ವರ್ಷದ ಸುಂದರ ದೇವದಾಸಿ ಹೆಣ್ಣುಮಗಳೊಬ್ಬಳು ನನಗೆ ಮದುವೆ ಮಾಡಿಕೊಂಡು ಸಂಸಾರವನ್ನು ನಡೆಸಬೇಕೆಂಬ ಇಚ್ಚೆ ಇದೆ ಯಾರಾದರೂ ತಯಾರಾಗಿರುವರೆ? ಎಂದು ಸವಾಲು ಹಾಕುತ್ತಾಳೆ. ಆಗ ಹಿಂದಿ ಚಿತ್ರರಂಗದ ಹಿರೋನ ಹಾಗೆ ಯಾವೊಬ್ಬ ತರುಣನು ಮುಂದೆ ಬರುವುದಿಲ್ಲ. ಆದರೆ ಇಂಥ ಕಧಾನಕವನ್ನು ಹೊಂದಿದ ಚಲನಚಿತ್ರ ಮಾತ್ರ ವರ್ಷಾನುಗಟ್ಟಲೆ ಒಂದೇ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿರುತ್ತದೆ. ಯೋಗ್ಯವಾದ ಕೆಲಸ, ಸಂರಕ್ಷಣೆ ಮತ್ತು ಸಾಮಾಜಿಕ ಮಾನ್ಯತೆಯನ್ನು ಬಯಸುವ ಭಗಿನಿಯರ ಇಚ್ಚೆಯನ್ನು  ಪೂರೈಸುವುದರ ಅಂಗವಾಗಿ ಸಮಾಜ, ಸರಕಾರ, ಮಹಿಳಾ ಸಂಘಟನೆಗಳು ಇಂದು ಏನು ಮಾಡುತ್ತಿವೆ? ಎಂಥ ಯೋಜನೆಗಳನ್ನು ಹಾಕಿಕೊಂಡಿವೆ? ಇವಕ್ಕೆ ಉತ್ತರಗಳೆಲ್ಲ ನಕಾರಾತ್ಮಕವಾದುವುಗಳೇ! ಆದರೂ ಇಂಥ ಸಮ್ಮೇಳನಗಳು ನಡೆಯಬೇಕಾದ್ದು ಅವಶ್ಯ. ಜನರ ಮನಸ್ಸು ಆ ಮೂಲಕ ಸ್ವಲ್ಪಮಟ್ಟಿಗೆ ಕಲುಕುತ್ತದೆ ನಿಜ. ಆದರೆ ಮುಂದಿನ ಕಾರ್ಯಗಳನ್ನು ನಿರ್ವಹಿಸುವವರಾರು? ಸಂಸ್ಥೆಗಳು ಅಥವಾ ವ್ಯಕ್ತಿಗಳು ಇದನ್ನು ಹೇಗೆ ಪೂರೈಸಬಲ್ಲರು.

ದಲಿತ ವರ್ಗಕ್ಕೆ ಇರುವ ಎಲ್ಲ ಸವಲತ್ತುಗಳು ನಮ್ಮ ಮಕ್ಕಳಿಗೂ ಸಿಕ್ಕಬೇಕು ಎಂಬ ಬೇಡಿಕೆಯನ್ನು ೧೯ನೆಯ ಜೂನ್ ೧೯೮೦ರ ಸಮ್ಮೇಳನದಲ್ಲಿ ಕ್ರಮಾಂಕ ೫(ಅ)ರಲ್ಲಿ ಮಂಡಿಸಲಾಯಿತು. ಅಸ್ಪೃಶ್ಯ ಮಕ್ಕಳು ಏನೇನು ಅನುಭವಿಸುತ್ತಿದ್ದಾರೋ ಅದಕ್ಕಿಂತಲೂ ತ್ರೀವ್ರವಾದ ದುಃಖವನ್ನು ಈ ಮಕ್ಕಳು ಸಹಿಸಬೇಕಾಗಿ ಬಂದಿದೆ. ‘ಅನೌರಸತ್ವ’ (ಸ್ವಂತ ಮಕ್ಕಳಲ್ಲದಿರುವುದು) ಎಂಬ ವಿಷಯವು ಈ ಎಳೆಯ ಜೀವಗಳನ್ನು ಭಾವನಾತ್ಮಕವಾಗಿ ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಬಾಧಿಸುತ್ತಿರುತ್ತದೆ. ದಾರಿದ್ರ್ಯ, ಬಡತನದ ರೇಖೆಯಿಂದ ಕೆಳಗೆ ಬದುಕುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಜನಸಂಖ್ಯೆ ಹೆಚ್ಚಾಗುತ್ತಿದೆ ಎಂಬಂತೆಯೇ, ದೇವದಾಸಿಯರ ಮತ್ತು ಅವರ ಮಕ್ಕಳ ಪ್ರಮಾಣವೂ ಹೆಚ್ಚಾಗುತ್ತಲೇ ಇದೆ. ಬಾಲಾಪರಾಧಿಗಳ ಪ್ರಶ್ನೆಯೂ ಇವುಗಳೊಂದಿಗೆ ನಿಕಟ ಸಂಬಂಧ ಹೊಂದಿರುವುದಾಗಿ ಪ್ರಸ್ತಾಪಿಸಲಾಗುತ್ತಿದೆ. ಅಲ್ಪವಯಸ್ಸಿನ ಈ ಮಕ್ಕಳು ಸಾಮಾಜಿಕವಾಗಿ ವಿಘಾತವಾದ ಕೆಲಸಗಳನ್ನು ಮಾಡುವ ಮೂಲಕ ಹೊಟ್ಟೆ ತುಂಬಿಸಿ ಕೊಳ್ಳುತ್ತಾರೆ. ಹೀಗೆ ಕೆಳಮಟ್ಟಕ್ಕೆ ಇಳಿದ ಮೊಗ್ಗುಗಳ ಪ್ರಮಾಣ ಶೇಕಡವಾರು ಎಷ್ಟಿದೆ? ಎಂಬುದನ್ನು ಕಲ್ಪಿಸಿಕೊಳ್ಳುವುದು ಭಯಾನಕ. ಅನಾಥಾಶ್ರಮ, ಬಾಲಾಪರಾಧಿಗಳಿಗಾಗಿ ಸಂಸ್ಥೆಗಳನ್ನು ಆರಂಭಿಸಿದರೆ ಕೆಲವಾರು ಮಧ್ಯಮವರ್ಗೀಯರಿಗೆ ಹೊಟ್ಟೆಬಟ್ಟೆಗೆ ಅನುಕೂಲವಾಗಬಹುದು. ಆದರೆ ಈ ಮಕ್ಕಳ ಭವಿಷ್ಯದ ಪ್ರಶ್ನೆ ಮಾತ್ರ ಹಾಗೆಯೇ ಅನುತ್ತರಿತವಾಗಿಯೇ ಉಳಿಯುತ್ತದೆ. ದಲಿತ ಸಮಘಟನೆಗಳಂತೆ ಈ ಗಂಡು/ಹೆಣ್ಣು ಮಕ್ಕಳ ಸಂಘಟನೆಗಳನ್ನು ಕಟ್ಟುವುದಕ್ಕೆ ಯಾರೂ ಬರುವುದಿಲ್ಲ. ಇದಕ್ಕೆ ಕಾರಣ ಚದುರಿದ ಸಮಾಜ, ನಾವು ತಂದೆಯಿಲ್ಲದವರಾಗಿದ್ದೇವೆ ಎಂದು ಜಗತ್ತಿಗೆ ಹೇಳಲು ನಾಚಿಕೆ ಇತ್ಯಾದಿಗಳು.

ಈಗೀಗ ದೇವದಾಸಿಯರ ಮಕ್ಕಳ ವಿವಾಹಗಳು ಕೊಂಚ ಮಟ್ಟಿನಲ್ಲಾದರೂ ಆಗಲಿ ನಡೆಯುತ್ತಿವೆ. ಆಂದೋಲನಗಳು ಆರಂಭಗೊಂಡ ಮೇಲೆ ಯಾರಾದರೂ ಒಬ್ಬ ಇನಾಂದಾರ, ವ್ಯಾಪಾರಿಯೊಂದಿಗೆ ದೇವದಾಸಿಯರ  ಮಕ್ಕಳನ್ನು ಒಳ್ಳೆಯ ಕಡೆ ಕೊಟ್ಟು ಮದುವೆ ಮಾಡಲಾಗುತ್ತಿದೆ. ಆದರೆ ಅಂಥ ಉದಾಹರಣೆಗಳು ಬಹಳೇ ಕಡಿಮೆ. ಪುಣೆ, ಮುಂಬಯಿಯಲ್ಲಿದ್ದು ಚೆನ್ನಾಗಿ ಗಳಿಸುತ್ತಿರುವ ದೇವದಾಸಿಯರ ಮಕ್ಕಳು ಕಾಲೇಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಆ ಪ್ರಮಾಣವೂ ಬಹಳ ಕಡಿಮೆ. ಈ ಅಪವಾದಾತ್ಮಕ ಉದಾಹರಣೆಗಳಿಂದ ದೇವದಾಸಿಯರ ಮಕ್ಕಳ ಭವಿಷ್ಯದ ಪ್ರಶ್ನೆ ಬಹಳ ಗಂಭೀರವಾಗಿರುವುದು ಮನದಟ್ಟಾಗುತ್ತದೆ. ನಿರ್ಧಾರಿತವಾಗಿ ಬಂದಿರುವ ಹಕ್ಕುಗಳು, ಪಾತ್ರತೆಯ ಶಕ್ತಿ, ಆವಶ್ಯಕತೆಗಳು -ಇಂಥವುಗಳಿದ್ದೂ ಕೂಡ ಅವರಿಗೆ ಅದನ್ನು ಮಂಡಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅವರ ಭವಿಷ್ಯಕ್ಕೆಲ್ಲ ಕಗ್ಗತ್ತಲು ಆವರಿಸಿದೆ.

ದೇವದಾಸಿಯರನ್ನು ಧಾರ್ಮಿಕ ರೂಢಿಗಳಿಂದ ಮುಕ್ತಗೊಳಿಸಿದರೆ?

ಇವತ್ತಿನ ಸಂದರ್ಭದಲ್ಲಿ ಈ ಮಾತು ಅಸಾಧ್ಯವೇ ಸರಿ. ಈ ಪ್ರಶ್ನೆಯ ವಿರುದ್ಧ ಹೋರಾಟ ಮಾಡತ್ತಿರುವ ಕಾರ್ಯಕರ್ತರಿಗೆ ಬಂದ ಅನುಭವವು ಮತ್ತೆ ಮತ್ತೆ ವಾಚಾಳಿಯಂತೆ ಹೇಳುವಂತಹದ್ದೇ ಆಗಿದೆ. ಡಿ.ವೈ.ಎಸ್.ಪಿ. ಅವರಿಗೂ ಸಹ ೧೯೩೪ರ ಕಾನೂನು ಗೊತ್ತಿಲ್ಲ. ಇತ್ತೀಚೆಗೆ ಸೌಂದತ್ತಿಯ ಯಲ್ಲಮ್ಮ ದೇವಿಯ ಮಂದಿರದಲ್ಲಿ ಅಜ್ಞಾನಿ ಗಂಡು-ಹೆಣ್ಣು ಮಕ್ಕಳಿಗೆ ಲಿಂಬೆ ಸೊಪ್ಪನ್ನು ಉಡಿಸಿ ದೇವಿಯೊಂದಿಗೆ ಮದುವೆಯನ್ನು ಮಾಡುವ ಸಮಾರಂಭವನ್ನು ಏರ್ಪಡಿಸುವುದನ್ನು ನಿರ್ಬಂಧಿಸಲಾಗಿದೆ. ಆದರೆ ಮುಕ್ತದಾರಿ ಮುಚ್ಚಿಹೋದರೆ ಕಳ್ಳಹಾದಿಗಳು ಸಾಕಷ್ಟು ಸಿಕ್ಕುತ್ತವೆ. ಸಣ್ಣಪುಟ್ಟ ಊರಿನ ದೇವಾಲಯಗಳಲ್ಲಿ, ಪೂಜಾರಿಗಳ ಮನೆಗಳಲ್ಲಿ ಈ ದೀಕ್ಷಾ ವಿಧಿಯು ಸಾಮಾನ್ಯವೆಂಬಂತೆ ನಡೆಯುತ್ತಿವೆ. ಮಾಘ ಮಾಸದಲ್ಲಿ ಬರುವ ಹುಣ್ಣಿಮೆಯಂದು ಸೌಂದತ್ತಿಯಲ್ಲಿ ದೇವಿಯ ದರ್ಶನಕ್ಕೆಂದು ಬಹುದೊಡ್ಡ ಪ್ರಮಾಣದಲ್ಲಿ ದೇವದಾಸಿಯರು ಸೇರುತ್ತಾರೆ. ಆ ಸಮಯದಲ್ಲಿ ಯೋಜನೆಯನ್ನು ಹಮ್ಮಿಕೊಂಡು ಜಾಗೃತಿ ಮತ್ತು ಪುನರ್ ವಸತಿಯ ಕೆಲಸವನ್ನು ಹಮ್ಮಿಕೊಳ್ಳುವುದಕ್ಕೆ ಸುಲಭ ಸಾಧ್ಯವಾಗಬಹುದು. ಸರಕಾರವು ಸಮರೋಪಾದಿಯಲ್ಲಿ ಈ ಕೆಲಸವನ್ನು ಕೈಗೆತ್ತಿಕೊಂಡರೆ ಇತರೆ ಸಾಮಾಜಿಕ ಸಂಸ್ಥೆಗಳೂ ಈ ಬಗ್ಗೆ ಆಸಕ್ತಿ ತಳೆಯಲು ಅನುಕೂಲ. ಆದರೆ ಕಠೋರವೂ ಮತ್ತು ಗಂಭೀರ ಕಾರ್ಯಕ್ರಮವೂ ಆದ ಇದನ್ನು ಅಧಿಕಾರ ಹಿಡಿದ ಯಾವ ಪಕ್ಷಗಳಿಗೆ ಹಿಡಿಸುತ್ತದೆ? ಇಂಥ ಸಂಪ್ರದಾಯ ಉಳಿದುಕೊಂಡು ನಡೆಯುತ್ತಿರುವುದು ಅನೇಕರಿಗೆ ಯೋಗ್ಯವೂ ಹಿತಕಾರಕವೂ ಆಗಿರುವುದಲ್ಲವೆ! ಹಾಗಾಗಿ ಅವು ಇಂಥ ಆಂದೋಲನಗಳಲ್ಲಿನ ಹವೆಯನ್ನೇ ತೆಗೆದು ಹಾಕುವಲ್ಲಿ ನಿಪುಣತೆಯನ್ನು ತೋರುತ್ತಲಿವೆ. ಧರ್ಮರೂಢಿಯ ತ್ಯಾಗವನ್ನು ಮಾಡುವುದಕ್ಕೆ ಮಾನಸಿಕವಾಗಿ ತಯಾರಾಗಬೇಕಾದ್ದು ದೇವದಾಸಿಯರಿಗೆ ಬಹಳ ಅವಶ್ಯ. ಆದರೆ ಸನ್ಮಾನ್ಯತೆ ಅವರಿಗೆ ಸಿಕ್ಕುವ ಸಾಧ್ಯತೆಯುಂಟೆ? ನಾವು ದೇವಿಯ ಭಕ್ತರಾಗಿದ್ದೇವೆ, ಆದರೆ ನಮಗೆ ಹೊಟ್ಟೆಪಾಡಿಗಾಗಿ ಮಾನಮರ್ಯಾದೆಯನ್ನು ಮಾರಿಕೊಳ್ಳುವುದು ಬೇಕಾಗಿದೆಯೇ ಎಂದು ಇಂದಿನ ತರುಣಿ ದೇವದಾಸಿಯರು ಹೇಳುತ್ತಾರೆ. ಅಂದರೆ ಅವರಿಗೆ ಈ ಧಾರ್ಮಿಕ ಸಂಪ್ರದಾಯದಲ್ಲಿನ ಟೊಳ್ಳುತನ ಮತ್ತು ವಿಸಂಗತತೆಯು ಸ್ಪಷ್ಟವಾಗಿಯೇ ಅರ್ಧವಾಗಿದೆ. ದೇವಿಯೊಂದಿಗೆ ಮದುವೆಯಾಗುವುದು ಎಂಥ ತಪ್ಪು ಎಂಬುದೂ ಅವರಿಗೆ  ಈಗ ಮನದಟ್ಟಾಗಿದೆ. ಈ ಸಾಧ್ಯತೆ ಸ್ವಲ್ಪಮಟ್ಟಿಗೆ ಆಗಿರುವುದಾದರೂ ಅನ್ಯಮಾರ್ಗವು ಉಪಲಬ್ಧವಾಗದೆ ಇರುವುದರಿಂದ ಹೀಗೆ ಜಾಗೃತ ಮನಸ್ಸುಳ್ಳ ಸ್ತ್ರೀಯರೂ ಕೂಡ ಹೊಟ್ಟೆಪಾಡಿಗೆ ಈ ಚಕ್ರದೊಳಗೇ ಸುತ್ತುತ್ತಿದ್ದಾರೆ ಎಂಬುದು ಗಮನೀಯ.