ಸ್ತ್ರೀ: ಶರೀರವನ್ನು ವಿಕ್ರಯ ಮಾಡುತ್ತಿರುವ ವೇಶ್ಯೆ

ವೇಶ್ಯಾವೃತ್ತಿ ಪ್ರಾಚೀನತಮವಾದುದಾಗಿದ್ದು ಜಗತ್ತಿನಾದ್ಯಂತ ಗೌರವಿಸುತ್ತಾ ಬರಲಾಗಿದೆ. ಇದರ ಅರ್ಧವಿಷ್ಟೆ, ಪುರುಷರು ಸಾವಿರಾರು ವರ್ಷಗಳಿಂದ ಸ್ತ್ರೀಯರ ಬದುಕನ್ನು ಹಿಂಡುತ್ತಾ ಬಂದಿದ್ದಾರೆ. ಹೆಂಡತಿಯು ಮಕ್ಕಳನ್ನು ಕೊಡುವುದಕ್ಕಾಗಿ, ವೇಶ್ಯೆಯು ಶಾರೀರಿಕ ಸುಖವನ್ನು ನೀಡುವುದಕ್ಕಾಗಿ ಮತ್ತು ಕಲಾವಂತ ಸ್ತ್ರೀಯು ಆತ್ಮದ ಸುಖಕ್ಕಾಗಿ ಪುರುಷರಿಗೆ ಅವಶ್ಯವಾಗಿ ಬೇಕಾದವರು ಎಂಬಂಥ ಉದ್ಗಾರ ವ್ಯಕ್ತವಾಗಿದೆ. ಡೆಮಾಸ್ಥಿನೀಸ್‌ನಲ್ಲಿ ಪುರುಷನ ಜೀನವದಲ್ಲಿ ಸ್ತ್ರೀಯ ಸ್ಥಾನ ಯಾವುದು ಎಂಬುದರ ಹಿನ್ನಲೆಯಲ್ಲಿ ವ್ಯಕ್ತವಾದುದಾಗಿದೆ ಇದು. ಇಂದ್ರಿಯ ಲಾಲನೆಯ ತೃಪ್ತಿಗಾಗಿ ಸ್ತ್ರೀಯನ್ನು ಕ್ರಯ-ವಿಕ್ರಯದ ವಸ್ತುವನ್ನಾಗಿ ಮಾಡಿದ ಕಲ್ಪನೆಯು ಜಡ, ಸೋಮಾರಿ, ಸುಖಾಸುಖಿ ಸಮಾಜದ ಸಮೃದ್ಧ ಮೆದುಳಿನಿಂದ ಹೊರಬಂದುದು ಎಂಬುದರಲ್ಲಿ ಎರಡು ಮಾತಿಲ್ಲ. ಸುಖಾಸೀನ, ಸ್ವೇಚ್ಛಾಬದುಕು ಸಾಧ್ಯವಾಯಿತೋ ಆಗ ಅದರ ಮೇಲೆ ವೈವಾಹಿಕ ನೀತಿಯಂಥ ಬಂಧನಗಳನ್ನು ಹೇರಲಾಗುತ್ತದೆ. ಅನಂತರದಲ್ಲಿ ಆ ಕೃತ್ರಿಮ ಬಂಧನಗಳನ್ನು ರೂಪಿಸಿದ್ದು ಸೋಮಾರಿತನದಿಂದ ಕೂಡಿದ ಚಟದ ಬದುಕಿನಲ್ಲಿ ಏನೆಲ್ಲ ತೊಂದರೆಗಳು ಬರಲಾರಂಭಿಸಿದವೋ ಅಂಥ ಸಮಸ್ಯೆಯಿಂದ ಪಾರಾಗಲು ಮಾಡಿದ  ಪ್ರಯತ್ನ ಆಗ ಉಂಟಾದುದೇ ನಕಲಿ, ತೋರಿಕೆ ಮತ್ತು ಹೊರಗೆ ಪಾವಿತ್ರ್ಯ ತೋರಿಕೆ, ಒಳಗೆ ಅಪಾವಿತ್ರ್ಯವನ್ನು ರೂಢಿಸಿಕೊಂಡಿರುವಿಕೆಯಂಥ ಸರ್ವ ಸುಧಾರಣಮಯ ಎನಿಸುವ ಸಾಮಾಜಿಕ ಲಕ್ಷಣಗಳು. ಈ ಖೊಟ್ಟಿ ಸುಧಾರಣೆಯ ಕಲ್ಪನೆಯಲ್ಲಿಯೇ ವೇಶ್ಯಾ ವೃತ್ತಿಯನ್ನು ಕುರಿತು ಸಮರ್ಧನೆ ಮಾಡಿಕೊಳ್ಳುತ್ತಲಿರುವುದು.

ವೈವಾಹಿಕ ಜೀವನದ ಪವಿತ್ರತೆಯು ಖಾಯಮ್ಮಾಗಿರಬೇಕು ಎಂಬುದರಿಂದ ರಾಜಾರೋಷವಾಗಿ ವೈವಾಹಿಕ ಪಾವಿತ್ರ್ಯ ಭಾಗಗಳನ್ನು ಅನುಗೊಳಿಸಲಾಗಿದೆ. ತಮ್ಮ ತಂದೆ-ತಾಯಿಗಳ ಗೌರವಕ್ಕೆ ಚ್ಯುತಿಯುಂಟಾಗಬಾರದು ಎಂಬ ಕಾರಣ, ಬೇರೆಯವರ ತಂದೆ-ತಾಯಿಯರನ್ನು ಬಜಾರಿನಲ್ಲಿ ನಿಲ್ಲಿಸುವುದು. ಒಟ್ಟಾರೆ ಸ್ತ್ರೀ ಜಾತಿಗೆ ಪ್ರತಿಷ್ಠಿತವಾಗಿರುವ ಪಾತಿವ್ರತ್ಯ, ಪಾವಿತ್ರ್ಯ ನೀತಿಯ ಶೀಖರವನ್ನು ಉರುಳಿಸುವುದಕ್ಕೆ, ಕೆಲವಾರು ಸ್ತ್ರೀಯರ ಪಾವಿತ್ರ್ಯದ ಬಗ್ಗೆ ಚೆಲ್ಲಾಟವಾಡುವುದು ಸಾಮಾನ್ಯ ವಿಚಾರವಾಗಿದೆ. ಇಂಥ ಪರಸ್ಪರ ವಿರೋಧಿ, ಕೃತ್ರಿಮ, ಹಾಸ್ಯಾಸ್ಪದ ಮತ್ತು ಭಯಂಕರ ಸಂಗತಿಗಳ ಕೋಡುಬಳೆ (ವಿವಿಧ ಧಾನ್ಯಗಳ ಮಿಶ್ರಣದಿಂದ ಮಾಡಿರುವ ತಿಂಡಿ)ಯಾಗಿದೆ ವೇಶ್ಯಾವೃತ್ತಿ. ಸುಧಾರಿತ ಸಮಾಜದಲ್ಲಿನ ಸಂಸ್ಕೃತಿಯ ಕಳಸವೆಂದರೆ, ಯಾರನ್ನು ಸಮಾಜದ ಪಾವಿತ್ರ್ಯದ ರಕ್ಷಕರೆಂದು ಎನ್ನಲಾಗಿದೆಯೋ ಅವರೇ ಇಂಥ ಸ್ತ್ರೀಯರನ್ನು ಹೀನರು, ಪತಿತರು ಎಂಬುದಾಗಿ ಪಶುಗಳಿಗಿಂತಲೂ ಗೌಣವಾಗಿ ಭಾವಿಸಿದ್ದಾರೆ. ಅಲ್ಲದೆ ಅವರನ್ನೂ ಕ್ರಯವಿಕ್ರಯದ ವಸ್ತುವನ್ನಾಗಿ ಮಾಡಲಾಗಿದೆ. ಅದರ ದೈನಂದಿನ ಜೀವನ ಕ್ರಮವನ್ನು ನಾಚಿಕೆಗೇಡು, ಕಷ್ಟಮಯ, ಕ್ರೂರತನ, ಅಪವಿತ್ರತೆ ಮತ್ತು ಢೋಂಗೀತನ ಇವುಗಳ ಮೂರ್ತಿಮಂತ ಸಾಕ್ಷ್ಯವೆಂದರೆ ವೇಶ್ಯಾವೃತ್ತಿ ಎಂದೆನ್ನುವಂತೆ ಆಗಿದೆ.

ಇಲ್ಲಿ ಮುಖ್ಯವಾಗಿ ಕೇಳಬಹುದಾದ ಒಂದು ಪ್ರಶ್ನೆಯಿದೆ. ಅದೆಂದರೆ ಈ ವೃತ್ತಿಯು ನಾಚಿಕೆಗೇಡಿನ ಉದ್ಯೋಗವಾಗಿರುವುದು ಎಂದಾದರೆ ಸ್ತ್ರೀಯರು ಅತ್ತಕಡೆ ವಾಲುತ್ತಿರುವು ದಾದರೂ ಏತಕ್ಕೆ? ಸಮಾಜ ಸೇವಕರ ಒಟ್ಟಾರೆ ಅಭಿಪ್ರಾಯವೆಂದರೆ ವೇಶ್ಯಾ ವೃತ್ತಿಯಲ್ಲಿ ತೊಡಗಿರುವ ಸ್ತ್ರೀಯರು ಹೀನ ಮನೋವೃತ್ತಿಯವರಾಗಿದ್ದು ಸ್ವಂತ ಖುಷಿಯಿಂದ ಇದಕ್ಕೆ ಬಂದವರೇನಲ್ಲ. ಅವರನ್ನು ಈ ವೃತ್ತಿಯೆಡೆಗೆ ಎಳೆದೊಯ್ಯುವ ಕಾರಣಗಳು ಈ ಕೆಳಗಿನಂತೆ ಇವೆ.

ನಮ್ಮ ದೇಶದಲ್ಲಿ ದಾರಿದ್ರ್ಯವು ಎಲ್ಲೆಡೆಯಿಂದಲೂ ನುಂಗಿ ಹಾಕುತ್ತಿರುವಂತಹ ಒಂದು ಮಹಾಭಯಂಕರ ರೋಗವಾಗಿದೆ. ಅನಾಥರು ಮತ್ತು  ಅಬಲೆಯರು ಆದ ಸ್ತ್ರೀಯರನ್ನು ಇಂಥ ವೃತ್ತಿಯ ಕಡೆಗೆ ಎಳೆದುಕೊಂಡು ಹೋಗುವುದು ಸಹಜ. ಪುರುಷನ ಪ್ರಾಬಲ್ಯ ಮತ್ತು ಸ್ತ್ರೀಯ ದೌರ್ಬಲ್ಯ ಇವೆರಡೂ ಒಂದು ವಿಚಿತ್ರ ಜೋಡಿಯಾಗಿದ್ದು, ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿ ಇರುವುದಾಗಿದೆ. ಪುರುಷನ ಪ್ರಭಾವದ ಸಂರಕ್ಷಣೆಯನ್ನು ಪುರುಷನ ಶಾರೀರಿಕ ಬಲ ಮತ್ತು ಸಾಮಾಜಿಕ, ಸಾಂಸ್ಕೃತಿಕ ಪರಂಪರೆಗಳು ಮಾಡಿಕೊಂಡು ಬಂದಿವೆ. ಇಂಥ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಶಿರಸ್ತ್ರಾಣಕ್ಕೆ ದಾರಿದ್ರ್ಯದ ಜೊತೆಯು ಸಿಕ್ಕುವುದರಿಂದಾಗಿ ಸ್ತ್ರೀಯರು ಈ ಕಡೆಗೆ ಹೊರಳುತ್ತಿರುವಂತೆ ಕಾಣುತ್ತದೆ. ಆರ್ಥಿಕ ದೌರ್ಬಲ್ಯವನ್ನು ಸರಿಪಡಿಸಿಕೊಳ್ಳವುದಕ್ಕಾಗಿ ಶರೀರ ವಿಕ್ರಯ ಮತ್ತು ಅನಂತರದಲ್ಲಿ ನೈತಿಕ ಅಧಃಪತನದ ಅರಿವಿನ ಕಾರಣದಿಂದ ಉಂಟಾಗುವ ಹೇಯಭಾವ ಇವುಗಳಲ್ಲಿಯೇ ಈ ವೇಶ್ಯೆಯರು ಸೀಳಿ ಹೋಗಿರುತ್ತಾರೆ. ತಾರುಣ್ಯದ ಉತ್ಸಾಹವೆಲ್ಲ ಜಾರಿಹೋದ ಮೇಲೆ ವೇಶ್ಯೆಗೆ ಗಿರಾಕಿಗಳೇ ಏಕೆ? ಅವಳು ತಂಗಿದ್ದ ಸ್ಥಳದಲ್ಲಿನ ಚರ್ಮರೋಗದಿಂದ ಬಳಲುವ ನಾಯಿ ಕೂಡ ಮೂಸಿ ನೋಡುವುದಿಲ್ಲ. ಪುರುಷನ ಮನರಂಜನೆಯ ಕಾರಣ ಯಾರ ತಾರುಣ್ಯವು ಕಳೆದು ಹೋಯಿತೋ, ಅಂಥವಳ ಮರಣ ಸಮಯದಲ್ಲಿ ಬೇವಾರಸೀ ಪ್ರೇತವನ್ನು ಹೊತ್ತೊಯ್ಯುವ ಅಂಬುಲೆನ್ಸ್ ಮಾತ್ರವಷ್ಟೇ ಉಳಿದಿರುತ್ತದೆ. ಗಂಡನಿಗೆ ಆರ್ಥಿಕ ಸಂಕಷ್ಟಗಳು ಉಂಟಾದ ಕಾರಣವೂ ಸ್ತ್ರೀಯರು ಇಂಥ ವೃತ್ತಿಗೆ ಇಳಿಯುತ್ತಾರೆ. ಇಲ್ಲವೆ ಲೋಭಿ, ಸೋಮಾರಿ, ನಿರ್ಘೃಣ ಮತ್ತು ಕನಿಕರವಿಲ್ಲದಂಥ ಪುರುಷರು ತಮ್ಮ ಲಾಭಕ್ಕಾಗಿ ಮತ್ತು ಸುಖಕ್ಕಾಗಿ ತನ್ನ ಪತ್ನಿ ಅಥವಾ ಪ್ರೇಯಸಿಯರನ್ನು ಈ ವೃತ್ತಿಗೆ ನೂಕುತ್ತಾರೆ. ‘ಲೀಗ್ ಆಫ್ ನೇಶನ್ಸ್’ ಸಂಸ್ಥೆಯು ಬೇರೆ ಬೇರೆ ದೇಶಗಳಲ್ಲಿ ಈ ಬಗ್ಗೆ ಸಂಗ್ರಹಿಸಿರುವ ಮಾಹಿತಿಯೂ ಈ ಮೇಲಣ ಚಿತ್ರಣವನ್ನೇ ನೀಡುತ್ತದೆ.

ದಾರಿದ್ರ್ಯವು ಒಂದು ಪ್ರಮುಖ ಕಾರಣವೇನೋ ಹೌದು; ಆದರೆ ದಾರಿದ್ರ್ಯದಿಂದ ಉದ್ಭವಿಸುವ ವ್ಯಸನಿಗಳ ತವರುಮನೆ ಮತ್ತು ವಿಕೃತಿಗಳ ವಾಸ್ತವ್ಯ ಈ ಸಂಗತಿಗಳೂ ಕೂಡಾ ವೇಶ್ಯಾವೃತ್ತಿಗೆ ಕಾರಣವಾಗುತ್ತಿರುವುದು ಸ್ಪಷ್ಟ. ವಯಸ್ಸಿಗೆ ಬಂದ ಮಗಳು ದಾರಿದ್ರ್ಯದ ಗುಡಿಸಲಲ್ಲಿರುವ ತಾಯಿ-ತಂದೆಯರು ಸಮಾಗಮ ಮಾಡುವುದನ್ನು ನೋಡಿದಳೆಂದರೆ ಸಾಕು, ಅವಳು ಒಂದೇ ರಾತ್ರಿಯಲ್ಲಿ ಮೈನೆರೆಯುತ್ತಾಳೆ. ತನ್ನ ಬಡ ತಂದೆ-ತಾಯಿಗಳ ಕಾರಣವಾಗಿಯೂ ಹೆಣ್ಣುಮಕ್ಕಳಿಗೆ ಹೊಟ್ಟೆಪಾಡಿಗಾಗಿ ಈ ವೃತ್ತಿ ಹಿಡಿಯುವುದು ಅನಿವಾರ್ಯ. ಕೊರತೆ ಹಾಗೂ ಅಪೂರ್ಣವಾದ ಶಿಕ್ಷಣದ ಅಭಾವ ದಿಂದಾಗಿಯೂ ಸಾಮಾನ್ಯವಾಗಿ ಇಂಥ ಉದ್ಯೋಗಗಳನ್ನು ಆಧರಿಸಬೇಕಾಗಿ ಬರುತ್ತದೆ. ಔದ್ಯೋಗೀಕರಣ ಮತ್ತು ನಗರೀಕರಣಗಳ ಕಾರಣದಿಂದಾಗಿ ನಗರಕ್ಕೆ ಹೋಗುವವರು ಮತ್ತು ಬಡತನ, ಉಪವಾಸಗಳ ಉಪಟಳದಿಂದ ಬಿಡುಗಡೆ ಹೊಂದುವುದಕ್ಕಾಗಿ ಧಾವಿಸುವವರು ಇದ್ದಾರೆ. ಅಂಥವರು ಬಂದು ವಾಸ ಮಾಡುವ ಗುಡಿಸಲುಗಳಲ್ಲಿ ಇಂಥ ಅನೇಕ ಅಸಾಂಸ್ಕೃತಿಕ, ಅಸಾಮಾಜಿಕ ಮತ್ತು ಅನಾರೋಗ್ಯದ ಬದುಕು ನಡೆಯುತ್ತಿರುತ್ತದೆ. ಇಂಥ ಝೋಪಡಿಗಳಲ್ಲಿ ಇರುವ ಜನರ ಬದುಕು ಪಶುವಿಗೆ ಸಮಾನವಾಗಿರುವುದು. ಅಂಥಲ್ಲಿ ಇರುವ ತಾರುಣ್ಯ ಅವಸ್ಥೆಯಲ್ಲಿನ ಹೆಣ್ಣುಮಕ್ಕಳು ಅಜ್ಞಾನದಿಂದಾಗಿ ಪುರುಷ ವಾಸನೆಗೆ ಬಲಿಯಾಗುತ್ತಾರೆ.

ಅನೇಕ ವೇಳೆ ಅಜ್ಞಾನ, ಅಸಹಾಯಕತೆಯಿಂದ ಕಾಲುಗಳು ಸ್ಥಗಿತವಾದವೋ ಸಾಮಾಜಿಕ ಮೌಲ್ಯಗಳು ಅಂಥವರನ್ನು ಇನ್ನೂ ಕೆಳಗೆ ನೂಕುವುದು ಸಾಮಾನ್ಯ. ಜೀವನ ಪೂರ್ತಿ ಅಂಥ ಇಕ್ಕಟ್ಟಿನ ಜಾರುವ ಮಾರ್ಗದಲ್ಲಿಯೇ ಸಾಗಬೇಕಾಗುತ್ತದೆ. ಸ್ತ್ರೀ ಒಮ್ಮೆ ಪತಿತಳಾದಳೆಂದರೆ ಆಯಿತು ಸದಾ ಅವಳು ಪತಿತಳೇ ಆಗಿಬಿಡುತ್ತಾಳೆ. ಸಮಾಜದ ಕಡೆಯಿಂದ ಹಾಗೂ ಕುಟುಂಬದ ಕಡೆಯಿಂದ ಅವಳು ಸದಾ ಉಪೇಕ್ಷೆಯನ್ನೆ ಕಾಣಬೇಕಾಗುತ್ತದೆ, ಈ ಪೀಡನೆಯಿಂದ ವೈಫಲ್ಯತೆಯು ನಿರ್ಮಾಣವಾಗುತ್ತದೆ ಅವಳಲ್ಲಿ. ಶರೀರ ವಿಕ್ರಯದ ವೃತ್ತಿಯನ್ನು ಹಿಡಿಯದೆ ಬೇರೆ ಮಾರ್ಗವೇ ಇಲ್ಲದಂತಾಗುತ್ತದೆ ಅವಳ ಪಾಲಿಗೆ. ಲೈಂಗಿಕ ವ್ಯವಹಾರದ ವಿಷಯಲ್ಲಿನ ಅಜ್ಞಾನದ ಕಾರಣವಾಗಿಯೂ ಅನೇಕ ಜನರಿಗೆ ಇಂಥ ವೃತ್ತಿಯನ್ನು ಅವಲಂಬಿಸುವಂತಹ ಸರದಿ ಬರುವುದುಂಟು.

ಕೆಲವಾರು ಅಲ್ಪವಯಸ್ಸಿನ ವಿವಾಹಿತ ಹೆಣ್ಣುಮಕ್ಕಳು ವಿಧವಾ ವಿವಾಹ, ಇಷ್ಟ ಪಡದ ಗಂಡ, ಉಗ್ರಸ್ವರೂಪಿ ಅತ್ತೆ, ಅವಿಭಕ್ತ ಕುಟುಂಬದ ತೊಂದರೆಗಳು ಮತ್ತು ಹಿಂಸೆಗಳಿಂದ ಬೇಸತ್ತು ಹೋಗುವುದು ಸಹಜ. ಆಗ್ಗೆ ಯಾವುದಾದರೂ ವೇಶ್ಯಾಗೃಹ ನಡೆಸುವ ಸ್ತ್ರೀಯ ಸಹವಾಸದಿಂದ ಅವರ ಬಲೆಯೊಳಗೆ ಬಿದ್ದು ಒಮ್ಮೆ ಜಾರಿದರೆಂದರೆ ಆಯಿತು ಮತ್ತೆ ಒಣಗಿದ ಭೂಮಿಗೆ ಕಾಲಿಡುವುದಕ್ಕೆ ಅವಕಾಶವೇ ಸಾಧ್ಯವಾಗುವುದಿಲ್ಲ ನಮ್ಮ ಸಮಾಜ ವ್ಯವಸ್ಥೆಯಲ್ಲಿ. ಹಾಗಾಗಿ ಮುಂದೆ ಅವಳು ಆ ವೃತ್ತಿಯಲ್ಲೇ ತೊಡಗಿಕೊಳ್ಳುವುದು ಅನಿವಾರ್ಯ. ಸ್ತ್ರೀಯರಲ್ಲಿನ ಅಜ್ಞಾನ, ಶಿಕ್ಷಣದ ಕೊರತೆ, ಒಮ್ಮೆ ಅಡ್ಡಹಾದಿಯಲ್ಲಿ ನಡೆದ ಮೇಲೆ ಮತ್ತೆ ಹಿಂತಿರುಗಲು ಮುಚ್ಚಿ ಹೋಗಿರುವ ದಾರಿ, ವೇಶ್ಯಾಗೃಹದ ವೃತ್ತಿಯ ಮೇಲೆ ಸರ್ಕಾರದ ನಿಯಂತ್ರಣ ಇಲ್ಲದಿರುವುದು ಇತ್ಯಾದಿ ಕಾರಣಗಳಿಂದಾಗಿ ಈ ವೃತ್ತಿಯಲ್ಲಿ ತೊಡಗಿಸಿ ಕೊಳ್ಳುತ್ತಿರುವ ಸ್ತ್ರೀಯರ ಸಂಖ್ಯೆಯು ದಿನೇ ದಿನೇ ಹೆಚ್ಚಾಗುತ್ತಲಿದೆ.

ಚಿಕ್ಕ ವಯಸ್ಸಿನಲ್ಲಿಯೇ ಪತಿಯ ಸುಖದಿಂದ ಮತ್ತು ಸಂಸಾರದ ಸುಖದಿಂದ ವಂಚಿತರಾದ ವಿಧವೆಯರು ಕುಟುಂಬಗಳಲ್ಲಿ ಹೊಟ್ಟೆಪಾಡಿಗಾಗಿ ಬಹಳ ಕಷ್ಟ ಪಡುತ್ತಿರುತ್ತಾರೆ. ತಮ್ಮ ಅಥವಾ ನೆರೆಯವರ ಕುಟುಂಬಗಳಲ್ಲಿ ಅಥವಾ ಸಂಬಂಧಿಗಳ ಮನೆಯಲ್ಲಿ ನಡೆಯುವ ಹಬ್ಬ-ಹರಿದಿನಗಳು, ವಿಶೇಷ ಸಮಾರಂಭಗಲ್ಲಿ ಸ್ತ್ರೀ-ಪುರುಷರು ಕೂಡಿದಾಗ ಬರುವ ಹಾಸ್ಯ ವಿನೋದದ ಪ್ರಸಂಗಗಳು, ಬಸಿರೂಟ, ನಾಮಕರಣ, ಸಮಾರಂಭ ಇತ್ಯಾದಿ ವಿಧಿಗಳು ಆಗಾಗ ನಡೆಯುತ್ತಿರುತ್ತವೆ. ಇಂಥ ಪ್ರಸಂಗಗಳಲ್ಲಿ ವಿಧವೆಯರ ಮನಸ್ಸು ಮೋಹದಲ್ಲಿ ಸಿಲುಕುವ ಸಾಧ್ಯತೆಯನ್ನು ನಿರಾಕರಿಸಲು ಬರುವುದಿಲ್ಲ. ಈ ಅನಾಥ ಜೀವಗಳ ಅಯೋಗ್ಯವಾದ ಲಾಭವನ್ನು ಪಡೆದು ನಿರುಮ್ಮಳವಾಗಿ ಇರುವಂಥ ಸಮಾಜ ಕಂಟಕರೂ ಇರುತ್ತಾರೆ. ಇಂಥ ಯಾರೋ ಒಬ್ಬರಲ್ಲಿ ಮುಗ್ಧಳಾದ ಚಿಕ್ಕವಯಸ್ಸಿನ ವಿಧವೆಯು ಸಿಕ್ಕಿ ಬೀಳುವುದುಂಟು. ಮುಂದೆ ನಿಸರ್ಗವು ಅವಳನ್ನು ಮೋಸದ ಬಲೆಯಲ್ಲಿ  ಸಿಲುಕಿಸಿದಾಗ  ಪಾಪದ ಭೀತಿಯು ಆವರಿಸಿ ಮನೆಯ ಆಸರೆಯಿಂದ ಹೊರಗೆ ನಡೆಯುತ್ತಾಳೆ. ಯಾರಾದರೂ ಒಬ್ಬರ ಮಧ್ಯಸ್ಥಿಕೆಯಲ್ಲಿ ವಿಶ್ವಾಸದಿಂದ ಬಿಡುಗಡೆಗೊಳ್ಳುವ ಪ್ರಯತ್ನದಲ್ಲಿ ಇರುವಾಗಲೇ ಅವಳು ವೇಶ್ಯಾವೃತ್ತಿಗೆ ನೂಕಲ್ಪಟ್ಟಿರುತ್ತಾಳೆ. ಗರ್ಭಪಾತದ ಸಂಬಂಧಿ ಕಾಯಿದೆ ಇದ್ದರೂ ಕೂಡಾ ಅವಳು ಸಾಮಾಜಿಕ ದೃಷ್ಟಿಯಲ್ಲಿ ಅನೈತಿಕ ಮಾರ್ಗ ಹಿಡಿದಿರುವುದರಿಂದ ಮುಕ್ತವಾಗಿ ಅದರಿಂದ ಬಿಡುಗಡೆ ಪಡೆಯುವುದಕ್ಕೆ ಸಾಧ್ಯವಿಲ್ಲ. ಒಮ್ಮೆ ಹಾದಿ ತಪ್ಪಿದ ವಿಧವೆಯು ಮುಂದೆ ತಾನು ಸನ್ಮಾರ್ಗದಲ್ಲಿ ನಡೆಯಬೇಕೆಂಬ ದೃಢ ಮನಸ್ಸಿನಿಂದ ಯಾವುದಾದರೊಂದು ವಿಧವಾಶ್ರಮದಲ್ಲಿ ಹೋಗುವುದಕ್ಕೆ ಇಚ್ಛಿಸಿದರೂ ಆ ವಿಧವೆಗೆ ಅಂಥ  ಸಂರಕ್ಷಣೆ ಸಿಗುತ್ತದೆ ಎಂಬ ಭರವಸೆ ಸಾಧ್ಯವಿಲ್ಲ. ವಿಧವೆಗೆ ತನ್ನ ಆಸ್ತಿಯ ಮೇಲೆ ಅಧಿಕಾರ ಪ್ರಾಪ್ತವಾಗಿ, ಹೊಟ್ಟೆಬಟ್ಟೆಗಳು ಯಾವ ಕಿರಿಕಿರಿಯೂ ಇಲ್ಲದೆ ನಡೆದು, ಹಣಗಳಿಕೆಯ ಹಿನ್ನಲೆಯಲ್ಲಿ ಔದ್ಯೋಗಿಕ ಶಿಕ್ಷಣ ಮತ್ತು ಉದ್ಯೋಗ ಸೌಲಭ್ಯವೂ ಒದಗಬಹುದಾದರೆ ಮಾತ್ರ ಅವಳು ಪ್ರತಿಷ್ಠೆಯಿಂದ ಬದುಕುವ ಅವಕಾಶ ಬರುತ್ತದೆ. ಪುನರ್ ವಿವಾಹದ ಮೇಲಣ ಸಾಮಾಜಿಕ ಬಹಿಷ್ಕಾರವು ಇಲ್ಲವಾಗದಿದ್ದರೆ ಅನೇಕ ಮೋಹವಿವಶ ವಿಧವೆಯರ ಪ್ರಶ್ನೆಯು ಸುಲಭವಾಗಿ ಮತ್ತು ಮುಕ್ತವಾಗಿ ಬಗೆಹರಿಯುವುದಿಲ್ಲ. ಹಾಗೆಯೇ ವಿಧವೆಯರ ಅಡ್ಡಹೆಜ್ಜೆ ಮತ್ತು ನೀತಿಮತ್ತೆಯ ಕಲ್ಪನೆಗಳು ಈ ವಿಷಯದಲ್ಲಿ ಯೋಗ್ಯ ರೀತಿಯಲ್ಲಿ ಚರ್ಚಿತವಾಗಿ ಅವರ ಸಂರಕ್ಷಣೆಯ ದೃಷ್ಟಿಯಿಂದ ದೇಶಾದ್ಯಂತ ಅನುಕೂಲತೆಗಳು ಏರ್ಪಡುವುದು ಅವಶ್ಯ.

ಕೆಲವಾರು ವಿಚಾರವಂತರ ಅಭಿಪ್ರಾಯದಲ್ಲಿ ವೇಶ್ಯವೃತ್ತಿಯು ಸಮಾಜಕ್ಕೆ ಅಗತ್ಯವಾದುದು. ಲೈಂಗಿಕ ಪ್ರೇರಣೆ ಮತ್ತು ಆರ್ಥಿಕ ಪರಾವಲಂಬನೆ ಇವು ಅನುಕ್ರಮವಾಗಿ ಪುರುಷರು ವೇಶ್ಯಯರಲ್ಲಿಗೆ ಬರುವುದಕ್ಕೆ ಮತ್ತು ಸ್ತ್ರೀಯರು ದೇಹವಿಕ್ರಯ ಮಾಡಿಕೊಳ್ಳುವುದಕ್ಕೆ ಪ್ರಮುಖ ಕಾರಣಗಳಾಗಿವೆ. ವಿವಾಹಿತರು, ಅವಿವಾಹಿತರು ಮತ್ತು ವಿಧುರ ಪುರುಷರು ತಮ್ಮ  ವಾಸನಾಕಾಂಕ್ಷೆಯ ದಮನಕ್ಕಾಗಿ ಅವರೆಡೆಗೆ ಹೋಗುತ್ತಿರುವುದು ಸ್ವಷ್ಟ. ಪುರುಷನು ವೇಶೆಯ ಬಳಿಗೆ ಹೋಗುತ್ತಾನೆಂಬ ಕಾರಣಕ್ಕೆ ಅವನನ್ನು ಧಿಃಕ್ಕರಿಸುವುದಕ್ಕಿಂತಲೂ ನೂರುಪಟ್ಟು ಹೆಚ್ಚಾಗಿ ದೇಹ ವಿಕ್ರಯ ಮಾಡಿಕೊಳ್ಳುವ ವೇಶ್ಯೆಯೆಂದು ಆಕೆ ಧಿಃಕ್ಕರಿಸಲ್ಪಡುತ್ತಿದ್ದಾಳೆ. ವೇಶ್ಯೆಯರನ್ನು ಧಿಃಕ್ಕರಿಸುವ ಪ್ರಕ್ರಿಯೆಯಲ್ಲಿ ಸ್ತ್ರೀಯರು ಪುರುಷರಿಗಿಂತಲೂ ಮುಂದಿದ್ದಾರೆ. ಎಲ್ಲಿ ಸ್ತ್ರೀಯರಿಂದ ವೇಶ್ಯೆಯರಿಗೆ ಸಹಾನುಭೂತಿ ಸಿಕ್ಕುವುದಿಲ್ಲವೋ, ಅಂಥಲ್ಲಿ ಪುರುಷರಿಂದ ಇದನ್ನು ಅಪೇಕ್ಷಿಸುವುದರಲ್ಲಿ ಏನಿದೆ ಅರ್ಧ? ಅಂದರೆ ಸ್ತ್ರೀಯರು ಮುಕ್ತವಾಗಿ ಅಥವಾ ಕದ್ದುಮುಚ್ಚಿ ಶರೀರ ವಿಕ್ರಯ ವೃತ್ತಿಯನ್ನು ಮಾಡುತ್ತಿದ್ದರೂ ಅನಂತ ಬಗೆಯ ಉಪೇಕ್ಷೆಗಳು, ಶಾರೀರಿಕ ತೊಂದರೆಗಳು, ಮಾನಸಿಕ ಹಿಂಸೆಯನ್ನು ಅನುಭವಿಸುತ್ತಲೇ ಇರಬೇಕಾಗುತ್ತದೆ. ಆದರೆ ಪುರುಷರ ಬಗ್ಗೆ ಮಾತ್ರ ಎಲ್ಲವನ್ನೂ ತಿಳಿದಿದ್ದರೂ ದುರ್ಲಕ್ಷ್ಯ ಮಾಡಲಾಗುತ್ತದೆ. ಇದರಂಥ ಅಪ್ರಮಾಣಿಕ ನೈತಿಕತೆ ಮತ್ತೆಲ್ಲಿ ಶೋಧಿಸಿದರೂ ಸಿಕ್ಕುವುದಿಲ್ಲ. ಸ್ತ್ರೀಯರನ್ನು ನರಕಕ್ಕೆ ತಳ್ಳುವಂಥ ಪಾಪಿಗಳನ್ನಾಗಿ ಮಾಡಲಾಗಿದೆ. ಅಲ್ಲದೆ ಹೀಗೆ ತಳ್ಳಿಸಿಕೊಳ್ಳಲ್ಪಡುತ್ತಿರುವವರು ಎಲ್ಲಾ ರೀತಿಯಿಂದಲೂ ಉಪೇಕ್ಷಿತ ಬದುಕನ್ನು ಅನುಭವಿಸುತ್ತಿದ್ದಾರೆ.

ವೇಶ್ಯಾವೃತ್ತಿಯನ್ನು ಕೈಗೊಂಡಿರುವ ಸ್ತ್ರೀಯರು ಹೀನ ಮನೋವೃತ್ತಿಯವರೇ ಆಗಿರುತ್ತಾರೆ. ಕಣ್ಸೆಳೆಯುವಂತೆ ಸಿಂಗರಿಸಿಕೊಳ್ಳುವುದು, ಬಾಗಿ ಬಳುಕುವುದು, ಕಷ್ಟಪಡದಂತಹ ಸುಖಲೋಲುಪತೆ ಇವುಗಳ ಆಪ್ಯಾಯಮಾನತೆಯಿಂದಾಗಿಯೇ ಅವರು ಬರುವುದು ಇಂಥ ವೃತ್ತಿಯ ಕಡೆಗೆ. ಕೆಲವಾರು ಸ್ತ್ರೀಯರ ವಿಷಯದಲ್ಲಿ ಲೈಂಗಿಕ ಸುಖದ ದುರ್ಭರವಾದ ದುಃಖ, ವೈಚಿತ್ರ್ಯಮಯವಾದ ಅಸಹ್ಯ ವಾಸನಾ ಪ್ರವೃತ್ತಿ ಈ ಕಾರಣಗಳಿಂದಾಗಿಯೂ ಇಂಥವು ಸಂಭವಿಸುವುದುಂಟು. ಲೈಗಿಂಕ ಸಮಾಗಮದಲ್ಲಿ ನಾವಿನ್ಯತೆಯ ಆಕಾಂಕ್ಷೆ ಎಂಬ ತತ್ತ್ವವು ಸ್ತ್ರೀ-ಪುರುಷರಿಬ್ಬರಿಗೂ ಅನ್ವಯಿಸುತ್ತದೆ. ಆದರೆ ಈ ವಿಷಯದಲ್ಲಿ ಸ್ತ್ರೀ ಮಾತ್ರ ವೇಶ್ಯೆ ಎಂಬುದಾಗಿ ಕರೆಸಿಕೊಂಡು ಬದುಕಬೇಕಾಗಿರುವುದು ವಿಪರ್ಯಾಸ. ಪುರುಷ ಮಾತ್ರ ಸಮಾಜದಲ್ಲಿ ಮುಖವೆತ್ತಿಕೊಂಡು ಆರಾಮವಾಗಿ ಓಡಾಡುತ್ತಿದ್ದಾನೆ. ಸುಖದ ಲಾಲಸೆ, ಸಿಂಗರಿಸಿಕೊಂಡು ಮರೆಯುವ ಅಭಿರುಚಿ, ದುರ್ಬಲ ಮನಸ್ಸು ಹಾಗೂ ಡೌಲಿನ ಸಾಮಾನ್ಯ ಚಲನಚಿತ್ರಗಳೂ ಕೂಡಾ ಇವರನ್ನು ದಾರಿ ತಪ್ಪಿಸುವಲ್ಲಿ ಮುಖ್ಯ ಕಾರಣೀಭೂತ ಅಂಶಗಳಾಗಿವೆ. ಕಡಿಮೆ ಕಷ್ಟದಲ್ಲಿ ಹೆಚ್ಚು ಹಣವನ್ನು ಗಳಿಸುವಂತಹ ಮಾರ್ಗ ಎಂಬುದಾಗಿ ಒಮ್ಮೆ ದೇಹ ವಿಕ್ರಯದ ಅಭ್ಯಾಸ ಮಾಡಿಕೊಂಡರೆ ಅದರಲ್ಲಿ ದೋಷಗಳಾಗುವುದೂ ಕಾಣುವುದಿಲ್ಲ. ಹೀಗೆ ಸ್ವಂತ ಖುಷಿಯಿಂದ ಈ ವೃತ್ತಿಯನ್ನು ಹಿಡಿಯುವ ಸ್ತ್ರೀಯರ ವಿಷಯದಲ್ಲಿ ಮುಂದೆ ಬೆನ್ನುಹತ್ತುವ ಪಾಪದ ಫಲಗಳ ವಿಚಾರವಾಗಿ ಯಾವುದೇ ರೀತಿಯಲ್ಲಿ ಕರುಣೆ, ದಯೆಯನ್ನು ತೋರಬೇಕಾಗಿಲ್ಲ. ಆದರೆ ಇಂಥ ಕಾರಣಗಳಿಂದ ವೇಶ್ಯಾವೃತ್ತಿಯ ಕಡೆಗೆ ಹೊರಳುವ ಸ್ತ್ರೀಯರ ಸಂಖ್ಯೆಯು ಬಹಳಷ್ಟಿದೆ ಎಂದೆನಿಸುವುದಿಲ್ಲ. ಸ್ತ್ರೀಯಾದವಳಿಗೆ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಅಗತ್ಯವಾದ ಕೆಲಸ ಸಿಕ್ಕುದಿರುವುದು ಮತ್ತು ಅವಳಿಗೆ ಬೆಂಗಾವಲಾದ ಸಂರಕ್ಷಕರಾರೂ ದಯಾಳು ಮನುಷ್ಯರಾಗಿ ಇರದಿರುವುದು. ಈ ಎರಡು ಕಾರಣಗಳಿಂದ ವೇಶ್ಯಾವೃತ್ತಿಯು ವರ್ಷಾನುವರ್ಷಗಳಿಂದ ನಡೆದುಕೊಂಡು ಬಂದಿದೆ.

ಇಂದು ದೇವದಾಸಿ ಪದ್ಧತಿಯು ಕೂಡಾ ವೇಶ್ಯಾವೃತ್ತಿಯು ಹೆಚ್ಚಾಗುವುದಕ್ಕೆ ಕಾರಣ ವಾಗಿದೆ. ದೇವದಾಸಿ ಎಂಬ ಪವಿತ್ರ ಹೆಸರಿನಲ್ಲಿ ವೇಶ್ಯಾವೃತ್ತಿಯು ದೇವತೆಗಳ ಆಶೀರ್ವಾದ ದೊಂದಿಗೆ ನೂರಾರು ವರ್ಷಗಳಿಂದ ಯಾವ ಅಡ್ಡಿಯೂ ಇಲ್ಲದೆ ಚಾಲ್ತಿಯಲ್ಲಿದೆ. ಏನಾದರೂ ಸ್ವಲ್ಪ ಖಾಯಲೆ, ತೊಂದರೆಗಳು ಬಂದರೆ ಸಾಕು ದೇವರಲ್ಲಿ ಬೇಡಿಕೊಂಡು ಹುಡುಗಿಯನ್ನು ದೇವರೊಂದಿಗೆ ವಿವಾಹ ಮಾಡಿಕೊಡಲಾಗುತ್ತದೆ. ನಂತರ ಆಕೆ ವಯಸ್ಸಿಗೆ ಬಂದ ಮೇಲೆ ಸಮಾಜದಲ್ಲಿನ ಯಾರೇ ಪುರುಷನ ಉಪಭೋಗಕ್ಕೆ ಬಳಸಿಕೊಳ್ಳುವ ಅವಕಾಶವಾಗುವುದು. (ಮಹಾರಾಷ್ಟ್ರದಲ್ಲಿ) ದೇವದಾಸಿ ಖಂಡೋಬಾ ಎಂಬ ದೇವರಿಗೆ ಬಿಟ್ಟ ಹೆಂಗಸು. ಇಂಥ ಕರ್ಮಠ ಧರ್ಮಶ್ರದ್ಧೆಗಳಿಂದ ಉದ್ಭವಿಸುವ ಲಾಂಛನಾಸ್ಪದ ವ್ರತ ನಿಯಮಗಳು ಇರುವ ಕಾರಣ ಅಡ್ಡ ಮಾರ್ಗದಲ್ಲಿ ಇಂಥವು ಚಾಲ್ತಿಯಲ್ಲಿವೆ. ಇಂದು ದೇವದಾಸಿ ಪದ್ದತಿಗೆ ಕಾಯಿದೆ ಬದ್ಧವಾಗಿ ನಿರ್ಬಂಧ ಹೇರಲಾಗಿದೆ. ಆದರೂ ತಂದೆ-ತಾಯಿಗಳ ರಾಜಾರೋಷ ಒತ್ತಾಯದ ಕಾರಣ ದೇವದಾಸಿಗಳ ಸಂಖ್ಯೆಯು ಹೆಚ್ಚಾಗುತ್ತಲೇ ಇದೆ. ಹಾಗಾಗಿ ಈ ಧಾರ್ಮಿಕ ಭಾವನೆಗಳ ವಿಕೃತಿಯಲ್ಲಿ ಸಿಕ್ಕು ಹಾಕಿಕೊಂಡಿರುವ ಸ್ತ್ರೀಯರ ಸಮೂಹಕ್ಕೆ ಭಾದಿಸುತ್ತಿರುವುದು ಕಾಯಿದೆಯಿಂದಲೂ ನಿಲುಗಡೆ ಇಲ್ಲದಂಥ ವಸ್ತುಸ್ಥಿತಿ.

ವೇಶ್ಯೆ ಎಂದರೆ ಪುರುಷ ಜಾತಿಯು ಸ್ತ್ರೀ ಜಾತಿಯ ವಿಷಯದಲ್ಲಿ ಕೈಗೊಂಡಿರುವ ರಸಹಿಂಡುವಂಥ ಕಾರ್ಯ. ಶರೀರ ವಿಕ್ರಯ ಕಾರ್ಯದೆಡೆ ಹೊರಳುವಲ್ಲಿ ಪ್ರಮುಖವಾಗಿರುವ ಆರ್ಥಿಕ, ಸಾಮಾಜಿಕ, ನೈತಿಕ ಮತ್ತು ಸಾಂಸ್ಕೃತಿಕ ಅಂಶಗಳನ್ನು ಒಪ್ಪಬೇಕಾದ್ದು ಅವಶ್ಯ. ವೇಶ್ಯೆ ಎಂದರೆ ಮೂರ್ತಿಮಂತ ದುದೆವಿ; ಇನ್ನು ವೇಶ್ಯೆಯ ಜೀವನವೆಂದರೆ ನರಕವಾಸವೇ ಸರಿ. ಅಂಧಕಾರಮಯ ನರಕದ ರಂಧ್ರದಲ್ಲಿ ತಳಮಳ, ಅಸ್ವಸ್ಥತೆಯಿಂದ ಬಿದ್ದಿರುವ ಜೀವಿಯೇ ವೇಶ್ಯೆ. ಹೀಗೆ ವೇಶ್ಯಾವೃತ್ತಿಯಲ್ಲಿ ತೊಡಗಿರುವ ಸ್ತ್ರೀಯರ ಪ್ರಶ್ನೆಯನ್ನು ಸಾಮಾಜಿಕ ಪಾತಳಿಯ ಮೇಲೆ ವಸ್ತುನಿಷ್ಠ ದೃಷ್ಟಿಕೋನದಿಂದ ಬಿಡಿಸಬೇಕಾದ ಆವಶ್ಯಕತೆಯು ಇದೆ.

ಕೆಲವಾರು ಸಾಮಾಜಿಕ ತಜ್ಞರು ಇಂಥ ಸಮಸ್ಯೆಗಳ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯ ಗಳು ಹೀಗಿವೆ. ಸಾಮಾಜಿಕ ಸಂಸ್ಥೆ ಎಂಬ ಕಾರಣದಿಂದ ವೇಶ್ಯೆಯರು ಆವಶ್ಯಕವಾಗಿ ಬೇಕಾಗುತ್ತಾರೆ. ವೇಶ್ಯೆಯರು ಸಮಾಜದ ಮನಸ್ಸಿನಲ್ಲಿ ಭಯಂಕರವಾಗಿ ಕುದಿಯುತ್ತಿರುವ ವಾಸನೆಗಳನ್ನು ನಿಯಂತ್ರಿಸುವ ‘safety walves’ ಇದ್ದಂತೆ. ಆದರೆ ವೇಶ್ಯೆಯರ ಬದುಕು ಮಾತ್ರ ಒಂದು ಪೀಕದಾನಿ (ಉಗುಳು ಬಟ್ಟಲು). ಯಾರಾದರೂ ಬಂದು ಉಗುಳಿ ಹೋಗಬಹುದಾದಂಥದು. ವೇಶ್ಯೆಯರನ್ನು ಒಂದು ಸಾಧನರೂಪಿ ಎಂದೊಪ್ಪುವ ಸಮಾಜದ ದೃಷ್ಟಿಕೋನದಿಂದಾಗಿಯೇ ವರ್ಷಾನುವರ್ಷಗಳಿಂದ ಸ್ತ್ರೀಯರ ಮೇಲೆ ಅನ್ಯಾಯ ಮಾಡುತ್ತಲೇ ಬರಲಾಗಿದೆ. ಸದ್ಯದ ಮಟ್ಟಿಗೆ ವೇಶ್ಯಾವೃತ್ತಿ ಸಮಸ್ಯೆಯು ತ್ವರಿತವಾಗಿ ನಿರ್ಮೂಲನೆ ಮಾಡುವಷ್ಟು ಸರಳವೂ, ಸಾಮಾನ್ಯವೂ ಆಗಿ ಉಳಿದಿಲ್ಲ. ಅಲ್ಲದೆ ವೇಶ್ಯೆಯರ ವಸತಿಯನ್ನು ನಗರದಾಚೆಗೆ ಕಳಿಸಿರಿ, ಇದನ್ನು ನಿರ್ಬಂಧಗೊಳಿಸಿರಿ, ವೇಶ್ಯಾ ವೃತ್ತಿಯಿಂದ ಸಮಾಜವು ನಿಕೃಷ್ಟ ಮತ್ತು ಅನೈತಿಕತೆಯೆಡೆಗೆ ಸಾಗುತ್ತಿದೆ. ಹಾಗಾಗಿ ಅದನ್ನು ನಿಲ್ಲಿಸಿರಿ ಎಂಬ ಘೋಷಣೆಗಳನ್ನು ಹಾಕಿಯೋ ಅಥವಾ ಬೇಡಿಕೆಗಳನ್ನಿಟ್ಟೋ ಅದನ್ನು ಇಲ್ಲವಾಗಿಸುವು ದಕ್ಕೆ ಆಗುವುದಿಲ್ಲ. ಆ ಕಾರಣ ವೇಶ್ಯೆಯರನ್ನು ಸಮಸ್ಯೆಯೆಂದು ಒಪ್ಪಿಕೊಳ್ಳುವುದಕ್ಕಿಂತ ಅವರನ್ನು ಸಮಾಜದ ಒಂದು ಘಟಕ ಎಂದು ಭಾವಿಸಿಯೇ ಅವರಿಗೆ ಪ್ರತಿಷ್ಠೆಯನ್ನು ನಿರ್ಮಾಣ ಮಾಡಿಕೊಡುವ ದೃಷ್ಟಿಯಿಂದ ಪ್ರಯತ್ನ ಮಾಡಬೇಕಾದ್ದು ಅವಶ್ಯ.

ವೇಶ್ಯಾವೃತ್ತಿಯು ಪುರುಷನ ಪಶು ಮನೋವೃತ್ತಿಯಿಂದಲೇ ಕಾಯಿದೆ ಬದ್ಧವಾಗಿಯೇ ರೂಪುಗೊಂಡಿರುವುದಾಗಿದೆ. ಅದರ ಮೇಲೆ ಕಾಯಿದೆಯನಸಾರ ನಿರ್ಬಂಧ ತರುವುದು ಕಷ್ಟ. ಕಾರಣ ಪುರುಷರ ಪಶು ಪ್ರವೃತ್ತಿಯ ಮೇಲೆ ನಿಯಂತ್ರಣ ತರುವಂಥ ಪರಿಣಾಮಕಾರಿ ಕಾಯಿದೆ ಅಸ್ತಿತ್ವದಲ್ಲಿ ಇರುವುದೇ? ವೇಶ್ಯಾವೃತ್ತಿಯ ನಿರ್ಮೂಲನೆ ಎಂಬ ಹಿನ್ನಲೆಯಲ್ಲಿ ಕೇವಲ ವೇಶ್ಯಾ ವಸತಿಗಳ ಸ್ಥಳಾಂತರ ಅಥವಾ ಉಚ್ಚಾಟನೆಗೆ ತೊಡಗುವುದು ಸರಿಯಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ವೇಶ್ಯೆಯರನ್ನು ಹಿಡಿದು ಸುಧಾರಣ ಜೈಲುಗಳಲ್ಲಿ ಇಡುವುದರಿಂದಲೂ ಸಮಸ್ಯೆ ಪರಿಹಾರವಾಗುವುದಿಲ್ಲ. ಏಕೆಂದರೆ ಶರೀರ ವಿಕ್ರಯ ಮಾಡುವಂತಹ ಸ್ತ್ರಿಯರ ಅಸ್ತಿತ್ವವು ಪುರುಷ ದೇಹಧಾರಿ ಜನತೆಗೆ ಆವಶ್ಯಕವೆಂದು ಒಪ್ಪಿಕೊಂಡಿರುವುದರಿಂದ ಅವರ ಸಂಖ್ಯೆಯನ್ನು  ಕಡಿಮೆಗೊಳಿಸುವುದು ಹೇಗೆಂಬ ಬಗ್ಗೆ ವಿಚಾರ ಮಾಡುವುದು ಅತ್ಯಗತ್ಯ. ಹಾಗೆ ಮಾಡುವಲ್ಲಿ ಸ್ತ್ರೀ-ಪುರುಷರಿಬ್ಬರೂ ಮುಂದಾಳತ್ವ ವನ್ನು ವಹಿಸಬೇಕು. ಅಂದರೆ ಸ್ತ್ರೀ-ಪುರುಷರ ಸಾಮಾಜಿಕ ಸೇವಾ ಸಂಸ್ಥೆಗಳು, ಸಾಂಸ್ಕೃತಿಕ ಸಂಘಟನಾ ಸಂಸ್ಥೆಗಳು ಈ ಪ್ರಶ್ನೆಗಳನ್ನು ಉಪೇಕ್ಷಿಸಬಾರದು. ಅದರಂತೆಯೇ ಅನೈತಿಕ ಮಾರ್ಗದ ಸ್ತ್ರೀಯರೆಂದಷ್ಟೆ ಗಮನಿಸದೆ, ಅವರನ್ನು ಸಮಾಜದ ಮುಖ್ಯ ಘಟಕವೆಂದು ಭಾವಿಸಿ ನೈತಿಕ ನೆಲೆಯಿಂದ ಬಿಡಿಸುವ ಜವಾಬ್ದಾರಿಯನ್ನು ಹೊರಬೇಕಾಗಿದೆ.

ವೇಶ್ಯೆಯರ ಜೀವನವನ್ನು ಆಧರಿಸಿದಂತೆ ‘ಮಂಡಿ’ ಎಂಬ ಚಲನ ಚಿತ್ರವೊಂದು ಎಲ್ಲೆಡೆ ಪ್ರದರ್ಶಿತವಾಯಿತು. ಅದು ಸರ್ವೆಸಾಮಾನ್ಯ ಸಮಸ್ತ ಜನಮಾನಸವನ್ನು ಪರಿವರ್ತನೆ ಮಾಡುವ ದೃಷ್ಟಿಯಿಂದ ಪ್ರಭಾವಿತವಾದುದೆಂದು ಎನಿಸಬಹುದು. ಆದರೆ ವಸ್ತುಸ್ಥಿತಿ ಮಾತ್ರ ಹಾಗಿಲ್ಲ, ವೇಶ್ಯಾ ಜೀವನ ಹೇಗಿದೆ ಎಂಬುದನ್ನು ತಿಳಿಯುವ ಉತ್ಸುಕತೆಯಿಂದ ಮತ್ತು ಅವರ ಶರೀರ ವಿಕ್ರಯ ಕಲೆಯ ಮಜಾ ನೋಡುವುದಕ್ಕಾಗಿ ಬಹುಸಂಖ್ಯಾತ ಪ್ರೇಕ್ಷಕರು ಇಂಥ ಚಲನ ಚಿತ್ರಗಳಲ್ಲಿ ಜಮಾಯಿಸುತ್ತಾರೆ. ಕಧೆ, ಕಾದಂಬರಿಗಳಲ್ಲಿ ವೇಶ್ಯಾ ಸ್ತ್ರೀಯರ ನರಕ ವಾಸದ ಜೀವನವು ಚಿತ್ರಿತವಾಗಿರುತ್ತದೆ. ಸಮಾಜ ಸೇವಕರು, ಕಾರ್ಯಕರ್ತರು ತಂತಮ್ಮ ವಿವರಣೆ-ವ್ಯಾಖ್ಯಾನಗಳ ಬರವಣಿಗೆಯ ಮೂಲಕ ಈ ಪ್ರಶ್ನೆಗಳ ಬಗ್ಗೆ ಬೆಳಕು ಚೆಲ್ಲುವುದಕ್ಕೆ ಪ್ರಯತ್ನಿಸುತ್ತಿದ್ದಾರೆ, ಸಮಾಜಶಾಸ್ತ್ರೀಯ ತಜ್ಞರು ಮತ್ತು ಅಧ್ಯಯನಕಾರರೂ ವೇಶ್ಯಾವೃತ್ತಿಯ ಹುಟ್ಟು, ವಸ್ತುಸ್ಥಿತಿ ಮತ್ತು ಸ್ವರೂಪವನ್ನು  ಸೂಕ್ಷ್ಮವಾಗಿ ಮನದಟ್ಟು ಮಾಡುವಲ್ಲಿ ಪ್ರಯತ್ನಿಶೀಲರಾಗಿದ್ದಾರೆ. ವೇಶ್ಯಾವೃತ್ತಿಯ ಕಡೆಗೆ ಹೊರಳಿರುವ ತರುಣಿಯರನ್ನು ವೇಶ್ಯಾ ಗೃಹದಿಂದ ಬಿಡುಗಡೆಗೊಳಿಸುವ ಜವಾಬ್ದಾರಿಯು ಪೊಲೀಸ್ ಇಲಾಖೆಗೆ ಬರುತ್ತದೆ. ವೇಶ್ಯಾ ಗೃಹಗಳ ಚಾಲಕರು, ಚಾಲಕಿಯರು ಇವರುಗಳ ಮೇಲೆ ದೂರು ದಾಖಲಿಸಿರುವ ವಿಚಾರಗಳೂ ದಿನ ಪತ್ರಿಕೆಗಳಲ್ಲಿ ಬಂದಿವೆ. ಆದರೆ ಇವೆಲ್ಲಾ ಪ್ರಯತ್ನಗಳೂ ಮೋಸದವು, ಮೇಲು ಮೇಲಿನ ಸಂಗತಿಗಳು ಮತ್ತು ತೋರಿಕೆಗಾಗಿ ಬಂದಂಥವು ಎಂಬುದು ಸ್ಪಷ್ಟವಾಗಿ ತಿಳಿದಿರುವಂಥ ವಿಚಾರವೇ. ಕಾರಣ ನಿರ್ದಿಷ್ಟ ನಿಯಂತ್ರಣದಿಂದ ಹಿತಕಾರಕವಾದ ಸುಧಾರಣೆಯಾಗ ಬೇಕು. ಆದರೆ ಅದಕ್ಕಿಂತ ಭಿನ್ನವಾಗಿ ಲಂಚಗುಳಿತನ, ಕ್ರೌರ್ಯ ಮತ್ತು ಆಧುನಿಕತೆಯ ಪ್ರವಾಹ ರೂಪದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಸುಂದರವಾಗಿ ಈ ‘ಗೋಂಡಸ್’ ವೃತ್ತಿಯನ್ನು ನಡೆಸಲಾಗುತ್ತಿದೆ.

ವೇಶ್ಯೆಯರ ನಿಜವಾದ ಸಂಖ್ಯೆ ಎಷ್ಟು? ಎಂಬುದನ್ನು ಶೋಧಿಸುವುದು ಬಹಳ ಕಷ್ಟ. ಅಲ್ಲದೆ ಆ ಸಂಖ್ಯೆಯು ಬೆಳೆಯುತ್ತಲಿದೆ ಎಂಬುದನ್ನು ನಿರಾಕರಿಸುವುದಕ್ಕೆ ಬರುವುದಿಲ್ಲ. ೧೯೨೧ರ ಹೊತ್ತಿಗೆ ನಮ್ಮ ದೇಶದಲ್ಲಿ ಅಂದಾಜು ಸುಮರು ೧೫ ರಿಂದ ೨೦ ಲಕ್ಷ ಸಂಖ್ಯೆಯಲ್ಲಿ ವೇಶ್ಯೆಯರಿದ್ದರು. ಈ ಸಂಖ್ಯೆಯು ೧೯೭೭ರ ಸುಮಾರಿಗೆ ಸುಮಾರು ೮೦ ಲಕ್ಷಗಳಿಗೇರಿತು ಎಂಬ ಅಭಿಪ್ರಾಯವಿದೆ. ಕೇವಲ ಮುಂಬಯಿ ಪ್ರದೇಶವೊಂದರಲ್ಲಿಯೇ  ಸುಮಾರು ೨೦ರಿಂದ ೨೫ ಸಾವಿರ ವೇಶೆಯರಿದ್ದಾರೆಂದು ಅಂದಾಜು. ವೇಶ್ಯೆಯರ ವಸತಿ ಎಂದು ಗುರುತಿಸಲಾಗಿರುವ ಭಾಗದಲ್ಲಿದ್ದು ವೃತ್ತಿಶೀಲ ವೇಶ್ಯೆಯರು ಎಂಬುದಾಗಿ ಜೀವನ ನಡೆಸುತ್ತಿರುವವರದೇ ಇಷ್ಟು ದೊಡ್ಡ ಸಂಖ್ಯೆ. ಇನ್ನು ಕದ್ದುಮುಚ್ಚಿ ವ್ಯವಹರಿಸುತ್ತಾ ಹಣಗಳಿಸುತ್ತಿರುವವರು ಎಷ್ಟೋ. ಸುಲಭವಾಗಿ ಉತ್ಪನ್ನ ತರುವ ಮಾರ್ಗವೆಂದು ಹವ್ಯಾಸಿ ವೇಶ್ಯೆಯರ ಪ್ರಮಾಣವೂ ಬೆಳೆಯುತ್ತಲೇ ಇದೆ. ಈ ನಿಷ್ಕರ್ಷವನ್ನು ಡಾ. ಪುಣೇಕರ ಅವರು ತಮ್ಮ ‘prostitudes in Bombay’ ಎಂಬ ಪ್ರಬಂಧದಲ್ಲಿ ಮಂಡಿಸಿದ್ದಾರೆ. ಅಂಥವು ವೃತ್ತಿಶೀಲರಾದ ಕ್ಯಾಬರೆ ನರ್ತಕಿಯರು, ಕಾಲ್‌ಗರ್ಲ್ಸ್‌ಗಳು, ಎಕ್ಸ್‌ಟ್ರಾ ನಟಿಯರು, ನೃತ್ಯಾಂಗಣ, ಡ್ಯಾನ್ಸಿಂಗ್ ಪಾರ್ಟ್‌ನರ್‌ಗಳಾಗಿರುವಂತಹ ಆವರಣದಲ್ಲಿ ನಡೆಯುತ್ತಿರು ವಂತವಾಗಿವೆ. ಪ್ರೌಢರಾದ ಕುಮಾರಿಕೆಯರು, ವಿಧವೆಯರು, ಪರಿತ್ಯಕ್ತರು, ವಿವಾಹಿತರು ಮತ್ತು ಅವಿವಾಹಿತ ಸ್ತ್ರೀಯರುಗಳೆಲ್ಲ ಇದರಲ್ಲಿದ್ದಾರೆ. ಹಾಗೆಯೇ ಲೈಂಗಿಕ ವಿಕೃತಿಗೆ ಬಿದ್ದಂತಹ ತರುಣಿಯರೂ ಕೂಡ ಇವರೊಂದಿಗೆ ಸೇರಿಕೊಂಡಿರುವುದು ಸ್ಪಷ್ಟ.

ಇಂದಿನ ಸಮಾಜದಲ್ಲಿ ಯಾರ ಮೇಲೆ ವೇಶ್ಯೆ ಎಂಬುದಾಗಿ ಯಾವ ಕಳಂಕವನ್ನು ಹೊರಿಸಲಾಗಿದೆಯೋ ಮತ್ತು ಅವರ ಮೇಲೆ ಎಂಥ ಅನ್ಯಾಯವಾಗುತ್ತಿದೆಯೋ ಅದನ್ನು ಕುರಿತು ಅತ್ಯಂತ ಗಂಭೀರವಾಗಿ ವಿಚಾರ ಮಾಡಬೇಕಾದ್ದು ಅವಶ್ಯ.

ವೇಶ್ಯಾವೃತ್ತಿಯ ಮೇಲೆ ನಿಯಂತ್ರಣ ಹಾಕುವುದಕ್ಕಾಗಿ ರಾಷ್ಟ್ರೀಯ ಪಾತಳಿಯಲ್ಲಿ ಸ್ತ್ರೀಯ ಆರೋಗ್ಯ, ಅಭ್ಯುದಯ ಮತ್ತು ಸಂರಕ್ಷಣೆಯ ನಿರ್ಣಯಗಳನ್ನು ಕೈಗೊಳ್ಳುವುದು ಅವಶ್ಯ. ಉಪಾಯವಿಲ್ಲದೆ ಸ್ತ್ರೀಯರು ವೇಶ್ಯಾವೃತ್ತಿಯ ಕಡೆಗೆ ಹೊರಳಬಾರದು ಎಂಬ ದೃಷ್ಟಿಯಿಂದ ಅವರ ಬಗ್ಗೆ ಆರ್ಥಿಕತೆಯ ಆಧಾರವನ್ನು ರೂಪಿಸಲು ವ್ಯಾಪಕ ನೆಲೆಯಿಂದ ವಿಚಾರ ಮಾಡಬೇಕಾಗುತ್ತದೆ. ವಿಧವೆಯರು, ಪರಿತ್ಯಕ್ತೆಯರು, ಪ್ರೌಢ ಕುಮಾರಿಕೆಯರು ಮತ್ತು ವಿಚ್ಛೇದಿತ ಸ್ತ್ರೀಯರು ಇವರುಗಳಿಗೆ ಪತಿ ಮತ್ತು ತಂದೆ ಇವರುಗಳ ಆಸ್ತಿಯಲ್ಲಿ ಕಾಯಿದೆ ಬದ್ಧವಾಗಿ ಪಾಲು ಸಿಗಬೇಕು, ಹಿಂದೂವಿವಾಹ ಕಾಯಿದೆಯಲ್ಲಿ ಈ ವಿಚಾರವನ್ನು ಸೇರಿಸಿ ಅನುಕೂಲ ಮಾಡಿದ್ದರೂ ಸಹಜವಾಗಿ ಮತ್ತು ಬೇಗನೆ ಆಸ್ತಿಯಲ್ಲಿ ಪಾಲು ಲಭಿಸುವುದಿಲ್ಲ. ವಾರಸುದಾರಿಕೆ ಹಕ್ಕಿನ ಬಗ್ಗೆ ಕಾಯಿದೆಬದ್ಧ ಅನುಕೂಲತೆಯಿದ್ದರೂ, ಕೋರ್ಟು ಕಚೇರಿಗಳಿಗೆಲ್ಲ ಅಲೆಯ ಬೇಕಾಗುತ್ತದೆ. ಆದರೆ, ಈ ಸಂಬಂಧವಾಗಿ ಅಂಥ ಧೈರ್ಯ ಸ್ತ್ರೀಯರಲ್ಲಿ ಇರುತ್ತದೆ ಎಂದು ಯೋಚಿಸುವುದಕ್ಕೆ ಸಾಧ್ಯವಿಲ್ಲ. ಕಾಯಿದೆಗಳ ಬಗೆಗಿನ ಅಜ್ಞಾನ, ಕೋರ್ಟು ಕಚೇರಿಗಳಿಂದ ಹಕ್ಕುಗಳನ್ನು ಪಡೆಯುವಲ್ಲಿ ಬರುವ ಅಡಚಣೆಗಳು ಮತ್ತು ಅದಕ್ಕಾಗಿ ತಲಗುವ ಖರ್ಚುವೆಚ್ಚಗಳನ್ನು ಭರಿಸುವ ಸಾಮರ್ಥ್ಯವಿಲ್ಲ ದಿರುವುದು ಇಲ್ಲಿ ಗಮನಾರ್ಹ. ಅಲ್ಲದೆ, ಕುಟುಂಬದ ಸದಸ್ಯರುಗಳೂ ಇಂಥ ಪಾಲು ದಕ್ಕದಂತೆ ಒಗ್ಗಟ್ಟಾಗಿ ನಿಲ್ಲುವುದು, ಹುಡುಗಿ, ಹೆಣ್ಣೆಂಗಸು, ಅಬಲೆ ಎಂಬ ಕಾರಣಗಳಿಂದಾಗಿ ಪುರುಷನ ಆಸ್ತಿ ಮತ್ತು ಸಂಪತ್ತಿನ ಮೇಲೆ ಹೆಂಡತಿಯ ಹಕ್ಕು ಕಾಯಿದೆಬದ್ಧವಾಗಿ ಸಾಬೀತಾಗಿದೆ. ಆದಾಗ್ಯೂ ಪ್ರತ್ಯಕ್ಷ ವ್ಯವಹಾರದಲ್ಲಿ ಅದರ ಲಾಭದ ವಿಷಯದಲ್ಲಿ ವಸ್ತುಸ್ಥಿತಿಯು ಸಮಾಧಾನಕರವಾಗಿಲ್ಲ. ಅಲ್ಲದೆ ನಮ್ಮ ದೇಶದಲ್ಲಿ ದಾರಿದ್ರ್ಯದಲ್ಲಿ ಸಿಲುಕಿರುವ ಕುಟುಂಬಗಳ ಸಂಖ್ಯೆ ಎಷ್ಟು ಹೆಚ್ಚಾಗಿದೆ ಎಂದರೆ, ಅವರಿಗೆ ಸಂಪತ್ತೇ ಇಲ್ಲ, ಹಾಗಿರುವಾಗ ಅವರ ಭಾಗದ ವಿಷಯವಾದರೂ ಎಲ್ಲಿ? ಹೀಗೆ ಪರಿಣಾಮಕಾರಿ ದಾರಿದ್ರ್ಯದ ಫಲವಾದ ದಟ್ಟ ಬಡತನ ಮತ್ತು ನಿರಾಧಾರತೆಯು ಸ್ತ್ರೀಯರನ್ನು ವೇಶ್ಯಾವೃತ್ತಿಯತ್ತಲೇ ವಿದ್ಯುಕ್ತ ಗೊಳಿಸುತ್ತದೆ. ಹಾಗಾಗಿ ಅಂಥವರ ಆರ್ಥಿಕ ಜವಾಬ್ದಾರಿಯನ್ನು ಸಮಾಜವೇ ಕೈಗೆತ್ತಿ ಕೊಳ್ಳುವುದು ಅಗತ್ಯ.

ವೇಶ್ಯಾವೃತ್ತಿಯೆಡೆ ಹೋಗುವ ತರುಣಿಯರ ಸಂಖ್ಯೆಯು ಬೆಳೆಯಬಾರದು ಎಂಬ ಕಾರಣಕ್ಕಾಗಿ ಹುಡುಗ-ಹುಡುಗಿಯರಿಗೆ ಲೈಂಗಿಕ ಶಿಕ್ಷಣ ನೀಡುವುದು ಆವಶ್ಯಕ. ಕೇವಲ ಶಾಲೆಯಲ್ಲಿ ಮಾತ್ರವಲ್ಲ, ಇತರೆ ಸಾಮಾಜಿಕ, ರೈತಾಪಿ ಮತ್ತು ಆರ್ಥಿಕ ಕಾರ್ಯ ಮಾಡುವಂತಹ ಸಂಸ್ಥೆಗಳು, ಯುವಕ ಮಂಡಳಿಗಳು, ಮಹಿಳಾ ಸಂಘಟನೆಗಳು. ಭಜನಾ ಮಂಡಳಿಗಳು ಇತ್ಯಾದಿ ಸಂಸ್ಥೆಗಳಲ್ಲಿ ಮತ್ತು ಸಂಘಟನೆಗಳಿಂದಲೂ ಈ ಕಾರ್ಯ ನಡೆಯಬೇಕಾದ್ದು ಅವಶ್ಯ. ಇದರಿಂದ ಭಾವೀ ಜನಾಂಗ ಆ ವೇಶ್ಯಾ ವೃತ್ತಿಯನ್ನು ಕೈಗೊಳ್ಳುವುದಿಲ್ಲ ಮತ್ತು ಬಹಳಷ್ಟು ತರುಣರು ಗುಪ್ತರೋಗಕ್ಕೆ ಬಲಿಯಾಗುತ್ತಿರುವುದು ತಪ್ಪುತ್ತದೆ.

ವೇಶ್ಯಾವೃತ್ತಿಯ ಬಗ್ಗೆ ವ್ಯಾಪಕ ಪಾತಳಿಯ ಮೇಲೆ ಸಂಶೋಧನ ಅಧ್ಯಯನವು ನಡೆಯಬೇಕಾಗಿದೆ. ಅವರ ವಸ್ತುನಿಷ್ಠ ಸಮಸ್ಯೆ ಏನೆಂಬುದು ಆ ಮೂಲಕ ಗಮನಕ್ಕೆ ಬರಬಹುದು. ಆ ಆಧಾರದ ಮೇಲೆ ರೂಪಿತವಾದ ಪ್ರಶ್ನೆಗಳನ್ನು ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಹಿನ್ನೆಲೆಯಲ್ಲಿ ಪರಿಶೀಲಿಸುವುದಕ್ಕೆ ಸಾಧ್ಯವಾಗುತ್ತದೆ. ಇದರಿಂದ ಒಂದು ನಿರ್ಣಯವನ್ನು ಕಂಡುಕೊಳ್ಳಬಹುದು ಎಂಬುದು ಗಮನಾರ್ಹ. ಸಾಮಾಜಿಕ ಸಂಸ್ಥೆಗಳಂಥ ಮಾಧ್ಯಮಗಳ ಮೂಲಕ ಸರ್ಕಾರ ಇದನ್ನು ಕೈಗೆತ್ತಿಕೊಳ್ಳಬೇಕು. ಇಂದು ಈ ಜವಾಬ್ದಾರಿಯು ಸರಕಾರ ಮತ್ತು ಇತರೆ ಸಂಸ್ಥೆಗಳ ಕಡೆಯಿಂದ ಕೈಬಿಟ್ಟು ಹೋಗುತ್ತಿದೆ. ಅಲ್ಲದೆ ಆ ಪ್ರಶ್ನೆಯು ಅತ್ಯಂತ ಉಪೇಕ್ಷೆ, ದುರ್ಲಕ್ಷ್ಯಕ್ಕೂ ಒಳಗಾಗುತ್ತಿದೆ. ಶರೀರ ವಿಕ್ರಯ ಮಾಡಿಕೊಳ್ಳುತ್ತಿರುವ ಸ್ತ್ರೀಯರನ್ನು ಸಾಮಾಜಿಕವಾಗಿ ಅಗತ್ಯವಾದವರು ಎಂದು ಭಾವಿಸಿದರಷ್ಟೇ ಅವರಿಗೆ ಏನಾದರೂ ಅನುಕೂಲತೆ ಮಾಡಿಕೊಡುವುದಕ್ಕೆ ಸಾಧ್ಯ. ವೇಶ್ಯೆಯರ ಮೇಲೆ ಕಠೋರ ನಿರ್ಬಂಧ ಹಾಕುವುದು ಮತ್ತು ಕಾಯಿದೆಗಳನ್ನು ಹೇರುವುದರಿಂದ ಈ ಪ್ರಶ್ನೆಯು ಪರಿಹಾರವಾಗುವುದಕ್ಕೆ ಸಾಧ್ಯವೆ? ಸರ್ಕಾರದ ಪರಿಹಾರ ಕ್ರಮಗಳೆಂದರೆ ವೇಶ್ಯಾಗೃಹಗಳ ಮೇಲೆ ಧಾಳಿ ಮಾಡುವುದು ಹಾಗೂ ದಲ್ಲಾಳಿಗಳನ್ನು ಶಿಕ್ಷಿಸುವಂತಹ ಸಾಮಾನ್ಯ ನೆಲೆಯವಷ್ಟೆ. ಮೇಲುಮೇಲಿನ ಹಾಗೂ ಕುದುರೆ ಗಾಡಿ (ಟಾಂಗಾ) ಬಂದಂತೆ ಮಧ್ಯೆ ಮಧ್ಯೆ ಇಂಥವು ಚಾಲ್ತಿಯಲ್ಲಿರುತ್ತವೆ. ವೇಶ್ಯೆಯರ ವಯಸ್ಸನ್ನು ಆಧರಿಸಿ ಕೆಲವಾರು ಕಾನೂನುಗಳನ್ನು ರೂಪಿಸಲಾಗಿದೆ. ಆದರೆ ಹಣಕೊಟ್ಟು ಕಾನೂನುಗಳ ಅನುಸಾರವೇ ವಯಸ್ಸನ್ನು ಬದಲಾಗಿ ದಾಖಲಿಸಲು ಬರುವುದಿಲ್ಲವೆ? ಇನ್ನು ಧಾಳಿ ಮಾಡುವ ಪೋಲಿಸರು ಸಾಮಾಜಿಕ ಅರಿವಿನಿಂದ ಪ್ರೇರಿತವಾಗಿರುವವರೇ ಆಗಿರುತ್ತಾರೆಯೇ? ಸರಕಾರಿ ಕಾಯಿದೆಗಳು ಮತ್ತು ಪೋಲಿಸರು ಇವರುಗಳಿಂದಷ್ಟೇ ಈ ಸಮಸ್ಯೆಯು ದೂರವಾಗಬಹುದೇ? ವೇಶ್ಯೆ ಎಂಬ ಅಪರಾಧವನ್ನು ಹಾಗೆ ಕಾಯಿದೆ ಬದ್ಧವಾಗಿ ತಿಳಿಯಲು ಆಗುವುದಿಲ್ಲ. ಹೀಗಿರುವಾಗ ಶಿಕ್ಷೆ ಯಾರಿಗೆ ಮತ್ತು ಏತಕ್ಕಾಗಿ? ದಲ್ಲಾಳಿಗಳ ಮೂಲಕ ವೇಶ್ಯೆಯರಲ್ಲಿಗೆ ಹೋಗುವ ಪುರುಷನೂ ತಪ್ಪಿತಸ್ಥನಾಗದಿದ್ದ ಹೊರತು ಈ ವೃತ್ತಿಯು ನಿಂತು ಹೋಗುವುದಾದರೂ ಹೇಗೆ?

ಈ ವೃತ್ತಿಯನ್ನು ನಡೆಸುವ ಸ್ತ್ರೀಯರು ಗರ್ಭಾಶಯ ಮತ್ತು ಗುಪ್ತ ರೋಗಗಳಿಂದಾಗಿ ಅತ್ಯಂತ ಸಂಕಷ್ಟದ ಬದುಕನ್ನು ನಡೆಸುತ್ತಿರುತ್ತಾರೆ. ಸಂತತಿ ನಿಯಂತ್ರಣದ ಸಾಧನಗಳನ್ನು ಬಳಸುವ ಕಾರಣ ವೇಶ್ಯಯರ ಗರ್ಭಕೋಶ ಕೂಡ ದುರ್ಬಲವಾಗುತ್ತಾ ಬರುತ್ತದೆ. ಆದರೂ ವೇಶ್ಯೆಯರು ತಮ್ಮ ಮಾತೃತ್ವದ ಅಧಿಕಾರವನ್ನು ನಿರಾಕರಿಸುವಲ್ಲಿಯೇ ಅವರ ಹಿತವು ಅಡಗಿದೆ ಎಂದು ನಾವು ಭಾವಿಸುತ್ತಿರುವುದಾದರೂ ಏಕೆ? ಮಗನ ಸಹಾಯದಿಂದ ಅವಳು ಈ ವೃತ್ತಿಯಿಂದ ಹೊರಹೋಗುವುದಕ್ಕೆ ಇಚ್ಚಿಸಿದರೆ ಅದನ್ನು ಕೃತಿಗಿಳಿಸಿ ನೈತಿಕತೆಯೆಡೆಗೆ ಹೊರಳಲು ಸಮಾಜವು ಸಹಕರಿಸುವುದಕ್ಕೆ ಸಿದ್ಧವಿರಬೇಕಾದ್ದು ಅವಶ್ಯ. ಈ ಹಂತದಲ್ಲಿ ಅವಳಿಗೆ ಮತ್ತು ಅವಳ ಸಂತಾನಕ್ಕೆ ಆಧಾರವು ಸಿಕ್ಕಬೇಕು. ಬಾಬಾಸಾಹೇಬ ಆಮ್ಟೆಯವರು ಮಹಾರೋಗಿಗಳಿಗೋಸ್ಕರ ‘ಆನಂದವನ’ ಒಂದನ್ನು ನಿರ್ಮಾಣ ಮಾಡಿಕೊಟ್ಟು ಅತ್ಯಂತ ದುರ್ಭರರಾದ ಅಸಹಾಯಕರಿಗೆ ಸಾಮಾಜಿಕವಾಗಿ ಮಾನ್ಯತೆಯನ್ನು ತಂದುಕೊಟ್ಟರು. ಸಾಮಾಜಿಕವಾಗಿ ಅಪರಾಧಿ ಎಂದು ನಿರ್ಧರಿಸಲ್ಪಟ್ಟ ಈ ವೇಶ್ಯೆಯರಿಗಾಗಿ ಹೀಗೆ ಆನಂದವನಗಳನ್ನು ನಿರ್ಮಾಣ ಮಾಡುವಂತಹ ಕಾರ್ಯಕ್ಕೆ ಮುಂದಾಗುವವರು ಯಾರು? ಇನ್ನು ಮೇಲೆ ಸರ್ಕಾರವಾದರೂ ಅವರೆಡೆಗೆ ಲಕ್ಷ್ಯವಹಿಸುವುದು ಅಗತ್ಯ.

ವೇಶ್ಯೆಯರಿಗೆ ಪರ್ಯಾಯ ವೃತ್ತಿಯನ್ನು ಕಲ್ಪಿಸುವುದು, ಅವರ ಆರೋಗ್ಯ ದೃಷ್ಟಿಯಿಂದ ಅಗತ್ಯ ಸೇವೆ ಒದಗಿಸುವುದಲ್ಲದೆ, ಗುಪ್ತ ರೋಗಗಳನ್ನು ನಿಯಂತ್ರಣಕ್ಕೆ ತರಬೇಕು. ಹಾಗೆಯೇ ಮುಕ್ತವಾಗಿ ಮತ್ತು ನಿಶ್ಚಿಂತವಾದ ಮನಸ್ಸಿನಿಂದ ಅವರು ವೈದ್ಯರ ಸಲಹೆ ಮತ್ತು ಪರಿಹಾರೋಪಾಯಗಳನ್ನು ಪಡೆದುಕೊಳ್ಳಲು ಜರುಗಬೇಕಾದಂಥ ದೃಷ್ಟಿಯಲ್ಲಿ ವಿಶಿಷ್ಟ ವಾತಾವರಣವೊಂದನ್ನು ರೂಪಿಸಬೇಕಾಗುತ್ತದೆ. ನಮ್ಮ ಸಮಾಜದಲ್ಲಿ ಲೈಗಿಂಕ ಹಸಿವನ್ನು ನೀಗಿಸಿಕೊಳ್ಳುವ ವ್ಯಾವಹರಿಕ ಪ್ರವೃತ್ತಿಯು ನಿರ್ಮಾಣವಾಗಿಲ್ಲ. ಹಾಗಾಗಿ ಅಂಥವರು ಗುಪ್ತವಾಗಿ ಅನೈತಿಕ ಮಾರ್ಗವೇ ಸೂಕ್ತವೆಂದು ಭಾವಿಸಿ ಅಡ್ಡ ಹಾದಿಯ ಮೂಲಕ ಅದನ್ನು ತಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ವೇಶ್ಯಾವೃತ್ತಿಯು ನಷ್ಟವಾಗುವುದೆಂದು ಆಶಿಸುವುದು ಎಲ್ಲಾ ರೀತಿಯಲ್ಲಿಯೂ ಅವ್ಯವಹಾರಿಕ ಎನಿಸುತ್ತದೆ. ಅಂದರೆ ವೇಶ್ಯಾವೃತ್ತಿ ಯನ್ನು ಕೈಗೊಂಡಿರುವ ಸ್ತ್ರೀಯರನ್ನು ಸಾಮಾಜಿಕ ವರ್ತುಲದಿಂದ ಹೊರಗಿಟ್ಟರೆ ಅವರ ಸುಧಾರಣೆಯು ಸಾಧ್ಯವೇ ಇಲ್ಲ. ಬದಲಾಗಿ ಅವರ ಪ್ರಶ್ನೆ, ಸಮಸ್ಯೆಗಳನ್ನು ನಮ್ಮವು ಎಂದು ಭಾವಿಸಿ ಅವುಗಳ ಕಡೆ ನೋಡುವಂಥ ಎಚ್ಚರವು ನಮ್ಮಲಿಲ್ಲದಿರುವುದು ದುರ್ದೈವದ ಸಂಗತಿ.

ವೇಶ್ಯಾವೃತ್ತಿಯಲ್ಲಿ ಸಿಲುಕಿರುವಂಥವರ ಪದ್ಧತಿಯನ್ನು ನಿಲ್ಲಿಸಬೇಕಾದರೆ, ಈ ವೃತ್ತಿ ಅಥವಾ ದಂಧೆಯನ್ನು ಮಾಡುತ್ತಿರುವ ಸ್ತ್ರೀಯರನ್ನು ಅನೈತಿಕ ಮತ್ತು ಅಪರಾಧಿಗಳೆಂದು ಒಪ್ಪಿರುವ ಭೂಮಿಕೆಯನ್ನು ಮೊದಲು ಬಿಟ್ಟು ಬಿಡಬೇಕಾಗುತ್ತದೆ. ವೇಶ್ಯಾ ಗೃಹಗಳು, ಮಧ್ಯಸ್ಥಿಕೆದಾರರು ಹಣ ಗಳಿಸುವ ಸಾಧನಗಳ ಕೇಂದ್ರಗಳಾಗಿವೆ. ಆದರೆ ವೇಶ್ಯೆಯರು ಮಾತ್ರ ಅತ್ಯಂತ ಹೀನ ಅವಸ್ಥೆಯಲ್ಲಿ ಬದುಕುತ್ತಿದ್ದಾರೆ ಎಂಬ ಸಂಗತಿಯನ್ನು ಮಾತ್ರ ನಿರಾಕರಿಸುವಂತಹದ್ದಲ್ಲ. ಹಾಗಾಗಿ ವೇಶ್ಯಾವೃತ್ತಿಯ ದೃಷ್ಟಿಯಿಂದ ಪ್ರತಿಬಂಧಾತ್ಮಕ ಉಪಾಯಗಳು ಮತ್ತು ಸುಧಾರಣೆಗಳ ಮೂಲ ಉದ್ದೇಶವು ಗೆರೆ ಕೊರೆಯುವಂಥ ಮಾರ್ಗವನ್ನು ಅವಲಂಬಿಸಿರಬೇಕು ‘Prevative measurs and curative measurs’ ಎಂಬ ಮಾರ್ಗಗಳ ಮೂಲಕ ಅದನ್ನು ಪರಿಶೀಲಿಸಬೇಕು. ಅದಕ್ಕಾಗಿ ಸಾರ್ವಜನಿಕ ಶಿಕ್ಷಣಾಲಯದ ಶೈಕ್ಷಣಿಕ ಮಾರ್ಗಗಳನ್ನು ಮತ್ತು ವೈದ್ಯಕೀಯ ಮಾರ್ಗಗಳನ್ನು ಅವಲಂಬಿಸುವುದು ಅವಶ್ಯ. ವಿವಾಹ ವಯಸ್ಸಿನ ಮಿತಿಯನ್ನು ಹೆಚ್ಚಿಸುವುದು, ಅವಿವಾಹಿತ ಮಾತೆಯರಿಗೆ ಸಂರಕ್ಷಣಾ ವ್ಯವಸ್ಥೆ ಮಾಡುವುದು, ಅನಾಥ ಹುಡುಗ-ಹುಡುಗಿಯರಿಗೂ ಯೋಗ್ಯ ಆಶ್ರಯ ಮತ್ತು ಸಂರಕ್ಷಣೆಯನ್ನು ನೀಡುವುದು, ಶೈಕ್ಷಣಿಕ ಸೌಲಭ್ಯವನ್ನು ಒದಗಿಸುವಂಥ ಕಾರ್ಯ ಆಗಬೇಕು. ಹಾಗೆಯೇ ಪರಿಶುದ್ಧ ಆಶ್ರಯದ ಸೌಲಭ್ಯ, ಅನೈತಿಕ ವ್ಯವಹಾರಗಳಿಂದ ಶಿಮಂತರಾಗಿರುವ ಮಧ್ಯಸ್ಥಿಕೆ ದಾರರನ್ನು ಹಿಡಿದು ಕಠಿಣವಾಗಿ ಶಿಕ್ಷಿಸಬೇಕು. ವೇಶ್ಯಾವೃತ್ತಿಯಿಂದ ಸಾರ್ವಜನಿಕ ಜೀವನದ ಮೇಲೆ ಹೇಗೆ ಮತ್ತು ಎಂತಹ ಪರಿಣಾಮ ಬೀರುತ್ತದೆ ಮತ್ತು ಅಂಥ ಸ್ತ್ರೀಯರು ಶಾರೀರಿಕವಾಗಿ ಅನುಭವಿಸುವ ತೊಂದರೆ ಎಷ್ಟು ಭಯಾನಕ ಪ್ರಮಾಣವನ್ನು ತಲುಪುತ್ತದೆ ಎಂಬುದನ್ನು ಕುರಿತು ಸಮಾಜಕ್ಕೆ ಅರಿವುಂಟು ಮಾಡಬೇಕಾಗುತ್ತದೆ.

ಸಂಸರ್ಗ ಜನ್ಯ ರೋಗಗಳನ್ನು ವಾಸಿ ಮಾಡುವುದಕ್ಕೆ ಸ್ವತಂತ್ರ ಖಾಸಗಿ ಕ್ಲಿನಿಕ್ಸ್‌ಗಳನ್ನು ಆರಂಭಿಸುವುದು, ವೇಶ್ಯೆಯರ ಪ್ರಶ್ನೆಗಳ ವಸುನಿಷ್ಠ ಮಾಹಿತಿಯನ್ನು ಕಲೆಹಾಕಿ ಅವರ ಸಲಹೆಯ ಅನುಸಾರ ಪರ್ಯಾಯ ವೃತ್ತಿಗಳ ಬಗ್ಗೆ ಪ್ರಶಿಕ್ಷಣವನ್ನು ಒದಗಿಸುವುದು, ಸುರಕ್ಷಿತತೆಗಾಗಿ ಮನೆಗಳ ವ್ಯವಸ್ಥೆ ಮತ್ತು ನಿರುದ್ಯೋಗಿ ಸ್ತ್ರೀಯರಿಗೆ ಭತ್ಯೆ ನೀಡುವ ವ್ಯವಸ್ಥೆಯಾಗಬೇಕು. ಅವರ ಉಪಜೀವನದ ಸಾಧನೆಗಳಿಗಾಗಿ ಅಲ್ಲದಿದ್ದರೂ ಮಾನಸಿಕ ಚಂಚಲತೆ ಮತ್ತು ವ್ಯವಧಾನಕ್ಕಾಗಿ ಅವರಿಗೆ ಕೆಲಸವನ್ನು ಒದಗಿಸಿಕೊಡುವ ಬಗ್ಗೆಯೇ ಹೆಚ್ಚು ಪ್ರಾಧ್ಯಾನ್ಯತೆ ನೀಡುವುದು ಅಗತ್ಯ. ಅಲ್ಲಿ ಇಲ್ಲಿನ ಅನೀತಿಯ ಪ್ರಖ್ಯಾತಿ ಎಂದಲ್ಲ, ಆದರೆ ಪುರುಷ ವಾಸನೆಗೆ ಬಲಿಬಿದ್ದು ವೇಶ್ಯಾವೃತ್ತಿಯ ಕಡೆಗೆ ಹೊರಳುವ ಅವಕಾಶವುಳ್ಳ ಮತ್ತು ಮೋಸದ ಜಾಗವನ್ನು ಶೋಧಿಸಿ ಗಂಭಿರವಾದ ಯೋಜನೆಗಳನ್ನು ಹಾಕಿಕೊಳ್ಳುವುದು ಅಗತ್ಯ. ಆದರೆ ಈ ಪ್ರಚಿಕಿತ್ಸಕ ಮಾರ್ಗವನ್ನು ಹಮ್ಮಿಕೊಳ್ಳುವಾಗ ವಿಪರೀತವಾದ ನೀತಿ ಮತ್ತೆಗಳ ನಿಕಷವನ್ನು ರೂಪಿಸಿಕೊಳ್ಳಬಾರದು. ಅಂದರೆ ಸ್ತ್ರೀಯರು ನಿರ್ದೋಷಿಗಳು, ನಿಷ್ಕಳಂಕಿತರೂ ಮತ್ತು ನಿರಪರಾಧಿಗಳು ಆಗಿರುವಂಥ ಪ್ರಯತ್ನದಲ್ಲಿದ್ದರೂ ಪುರುಷರ ಸ್ವೈರಾಚಾರಕ್ಕೆ ಬಲಿಯಾಗಬಹುದು. ಆಗ್ಗೆ ಕೂಡಾ ಸ್ತ್ರೀಯರನ್ನು ಅಪರಾಧಿಗಳಾಗಿ ಕಂಡು ಸಮಾಜದಿಂದ ಬಹಿಷ್ಕಾರ ಮಾಡಲಾಗಿರುತ್ತದೆ. ಹಾಗೆಯೇ ಇತರೆ ಸ್ತ್ರೀಯರು ಮಾಡುವ ವಿಡಂಬನೆಯನ್ನು ಸಹಿಸಿಕೊಂಡು ಉಪೇಕ್ಷಿತರಾಗಿದ್ದಾರೆ. ಪುರುಷರು ಮಾತ್ರ ಪ್ರಕಾಶಿಸುವ  ನೆತ್ತಿಯುಳ್ಳವರಂತೆ ಓಡಾಡತ್ತಿರುತ್ತಾರೆ. ಸ್ತ್ರೀಯ ಹೆಜ್ಜೆ ವಕ್ರವಾದ ಬಗ್ಗೆ ಮಾತ್ರವೇ ಮಾತುಗಳು ಕೇಳಿ ಬರುತ್ತವೆ. ಆದರೆ ಪುರುಷ-ಸ್ತ್ರೀಯರಿಬ್ಬರೂ ಸೇರಿ ಮಾಡಿದ ಕೃತ್ಯವಾಗಿರುವಾಗ ಇದರಲ್ಲಿ ಪುರುಷನ ಹೆಜ್ಜೆಯ ವಕ್ರತೆಯನ್ನು ಏಕೆ ಗುರುತಿಸುವುದಿಲ್ಲ? ಅವಳ ಅಪರಾಧವನ್ನು ಸ್ವಾದಭರಿತವೆಂಬಂತೆ ಚರ್ಚಿಸುವುದು ಮತ್ತು ಪುರುಷನನ್ನು ಮಾತ್ರ ಸುರಕ್ಷಿತವಾಗಿ ಬಿಡುಗಡೆ! ಈ ಸಂಬಂಧವಾಗಿ ಪುರುಷರಿಗೆ ಸಮಾಜ ಮತ್ತು ಕಾಯಿದೆಯ ಅನುಸಾರ ಏನು ಶಿಕ್ಷೆ ಕೊಡಲಾಗುವುದು? ಎಂತಲೇ ಕಟುವಾದ ಪರಿಹಾರ ಎಂಬುದು ಈ ಕಾಲದಲ್ಲಿ ಸ್ತ್ರೀಗೆ ಬೇರೆಯಾದ ನಿಕಷ ಮತ್ತು ಪುರುಷನಿಗೆ ಬೇರೆಯಾದ ನಿಕಷವನ್ನು ಆಧರಿಸಿ ಮಾಡುತ್ತಿರುವುದು ಸೂಕ್ತವಲ್ಲ.

ಗುಡಿಸಲುಗಳು, ಕಾರ್ಮಿಕರ ವಸತಿಗಳು, ಕ್ಯಾಂಪ್ ಮೊದಲಾದ ಸ್ಥಾನಗಳು ಹಳ್ಳಿಗಳಿಂದ ನಗರಕ್ಕೆ ಬಂದು ನೆಲೆಸಿರುವ ಪ್ರದೇಶಗಳು, ವೇಶ್ಯಾ ವಸತಿಗಳ ಹತ್ತಿರದ ಜಾಗೆ. ಇವುಗಳಿಂದಾಗಿಯೇ ಸ್ತ್ರೀಯರು ವೇಶ್ಯಾವೃತ್ತಿಯ ಕಡೆಗೆ ಹೊರಳುತ್ತಾರೆ. ಬೀಡಿ ಕಟ್ಟುವವರು, ಮನೆ ಕಟ್ಟುವವರು ಅಥವಾ ಯಾವ ಯಾವ ಉದ್ಯೋಗಗಳಲ್ಲಿ ಪ್ರಮುಖವಾಗಿ ತರುಣಿಯರು ಮತ್ತು ಸ್ತ್ರೀಯರು ಇರುತ್ತಾರೆಯೋ ಅಲ್ಲೆಲ್ಲ ಸಮಾಜವು ಸ್ತ್ರೀಯರ ಪರವಾಗಿರುವ ಕಾಯಿದೆಗಳ ಬಗೆಗೆ ಎಚ್ಚರ ಮೂಡಿಸಬೇಕು. ಸ್ತ್ರೀಯರ ಹಕ್ಕುಗಳು, ಸ್ತ್ರೀಯರ ಮೇಲೆ ಆಗುತ್ತಿರುವ ಅನ್ಯಾಯಗಳು ಮತ್ತು ಸ್ತ್ರೀಯರನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಬಗ್ಗೆ ವಿಶೇಷ ತಿಳುವಳಿಕೆಯನ್ನು ನೀಡಿ ಜಾಗರೂಕರನ್ನಾಗಿಸಬೇಕು. ವೇಶ್ಯಾ ದಂಧೆಯನ್ನು ನಡೆಸುತ್ತಾ ಮತ್ತು ಅದಕ್ಕಾಗಿಯೇ ವೇಶ್ಯಾ ಗೃಹಗಳನ್ನು ಗುಪ್ತವಾಗಿ ನಡೆಸುತ್ತಾ ಹೆಸರನ್ನು ಕೆಡಿಸುತ್ತಿರುವಂಥ ಪ್ರವೃತ್ತಿಯು ಇರಬಾರದು. ಹಾಗಾಗಿ ಅದರ ಉಗಮ ಸ್ಥಾನವನ್ನು ಶೋಧಿಸಿ ಆ ಮನೋವೃತ್ತಿಯ ವಿಕೃತಿಯಿಂದ ತರುಣ ಸ್ತ್ರೀಯರನ್ನು ಪಾರು ಮಾಡುವ ಪ್ರಯತ್ನಕ್ಕೆ ಪ್ರಾಧಾನ್ಯತೆ ಕೊಡುವುದು ಸುಲಭ  ಸಾಧ್ಯವಾಗುತ್ತದೆ. ತಾತ್ಪೂರ್ತಿಕ ಮತ್ತು ದೀರ್ಘಕಾಲದ ನೆಲೆಯಿಂದ ವಿಚಾರ ಮಾಡಿ ವೇಶ್ಯಾವೃತ್ತಿಯ ಬಗ್ಗೆ ವ್ಯವಸ್ಥಿತ ಕ್ರಮ ಕೈಗೊಳ್ಳಬೇಕು. ವೇಶ್ಯಾವೃತ್ತಿಯ ಕಡೆಗೆ ಹೊರಳಬಾರದು ಎಂದರೆ, ಸ್ತ್ರೀ-ಪುರುಷ ಸಮಾನತೆಯನ್ನು ಪ್ರಸ್ಥಾಪಿಸುವುದು ಮತ್ತು ಸ್ತ್ರೀಯರ ದರ್ಜೆಯಲ್ಲಿ ಸುಧಾರಿಸುವಿಕೆ ಗಳಾಗಬೇಕು. ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಪುರುಷರಿಗೆ ಸಮನಾದ ಕಾಯಿದೆಬದ್ಧ ಮತ್ತು ವ್ಯಾವಹಾರಿಕ ಸಮಾನತೆಯನ್ನು ಪ್ರಾಪ್ತಗೊಳಿಸುವುದು ಅವಶ್ಯ. ಇದರಿಂದ ಸಾಮಾಜಿಕ ಪರಿವರ್ತನೆಯ ಪ್ರಕ್ರಿಯೆಗೆ ವೇಗವನ್ನು ಉಂಟುಮಾಡುವ ಸಾಧ್ಯತೆಯನ್ನು ಅಗತ್ಯವಾಗಿ ಕಲ್ಪಿಸಬಹುದು. ವಿಧವೆಯರು ಮತ್ತು ವಿಚ್ಚೇದಿತ ಸ್ತ್ರೀಯರ ಪುನರ್ ವಿವಾಹದಂಥ ಅಂಶಗಳನ್ನು ಹೆಚ್ಚು ಮಹತ್ವದ ಅಂಶವನ್ನಾಗಿ ಪರಿಗಣಿಸಿದ್ದರೂ ಪುನರ್ ವಿವಾಹಕ್ಕೆ ಅವರು ತಯಾರಾಗಿದ್ದಾರೆ ಎಂದು ಭಾವಿಸುವಂತಿಲ್ಲ. ಕಾರಣ ಅನೇಕ ಸ್ತ್ರೀಯರು ವಿವಾಹದಿಂದ ಸುಖಕ್ಕಿಂತ ದಃಖಗಳು, ವಿಕೃತಿಗಳು ಮತ್ತು ಮಾನಹಾನಿಗಳಂಥ ಘಟನೆಗಳಲ್ಲಿ ಬೆಂದು ಹೋಗಿರುತ್ತಾರೆ. ಹಾಗಾಗಿ ಅವರು ಪುನರ್ ವಿವಾಹದ ಸಾಧ್ಯತೆಯನ್ನು ಖಾಯಮ್ಮಾಗಿ ನಿರಾಕರಿಸುವ ಸಂಭವವೇ ಹೆಚ್ಚು. ಆ ಕಾರಣವೇ ವಿಶಿಷ್ಟ ವಯಸ್ಸಿನ ನಂತರ ಲೈಂಗಿಕ ಶಿಕ್ಷಣದ ಅನುಕೂಲವನ್ನು ಮಾಡಿಕೊಟ್ಟು ಅವರಿಗೆ ಆರ್ಥಿಕ ದೃಷ್ಟಿಯಿಂದ ಸ್ವಾವಲಂಬಿ ಮತ್ತು ಸ್ವತಂತ್ರವನ್ನಾಗಿಸುವುದೇ ನ್ಯಾಯವಾದ ಮಾರ್ಗ. ಹೀಗೆ ಮಾಡುವುದನ್ನು ನಿರಾಕರಿಸಿದುದರಿಂದಲೇ ಈ ಶತಮಾನಗಳಲ್ಲಿ ವೇಶ್ಯಾವೃತ್ತಿಯ ಭರಾಟೆಯನ್ನು ನೋಡುವಂತಹ ದೌರ್ಭಾಗ್ಯ ಒದಗಿ ಬಂದಿದೆಯಲ್ಲವೆ?

ವೇಶ್ಯಾವೃತ್ತಿಯ ಬಗೆಗಿನ ಪ್ರತಿಬಂಧಕ ಕಾಯಿದೆಯೊಂದು ೧೯೫೬ರಲ್ಲಿಯೇ ಜಾರಿಗೆ ಬಂದಿತು. ಆದರೆ ನಮ್ಮ ಸಾಮಾಜಿಕ ಪರಿಸ್ಥಿತಿಯೇ ಅದನ್ನು ಯಶಸ್ಸಿಯಾಗಿ ಇಂದಿಗೂ ಜಾರಿಗೊಳಿಸಲು ಸಾಧ್ಯವಾಗಿಲ್ಲ. ಕಾಯಿದೆಯ ಸೌಲಭ್ಯಗಳು ಏನಿವೆ? ಆ ಆಧಾರಗಳ ಮೂಲಕ ವೇಶ್ಯಾ ವೃತ್ತಿಯನ್ನು ಉಚ್ಚಾಟನೆ ಮಾಡಲು ಸಾಧ್ಯವಿದೆಯೆ? ಕಾಯಿದೆಯ ಸಹಾಯದಿಂದ ಈ ವೃತ್ತಿಯ ಮೇಲೆ ಸಂಪೂರ್ಣ ನಿಯಂತ್ರಣ ಹಾಕುವಲ್ಲಿ ಯಶಸ್ವಿ ಯಾಗಬಹುದೆ? ವೇಶ್ಯಾ ವೃತ್ತಿಯ ಮೇಲೆ ನಿಯಂತ್ರಣ ಹಾಕುವ ಮತ್ತು ಉಚ್ಚಾಟನೆ ಮಾಡುವ ದೃಷ್ಟಿಯಿಂದ ಕಾಯಿದೆಗಳು ಎಷ್ಟರ ಮಟ್ಟಿಗೆ ಉಪಯುಕ್ತವೆಂದು ಅನ್ನಿಸುತ್ತಿವೆ? ಕಾಯಿದೆಗಳಲ್ಲಿ ಯಾವ ಬಗೆಯ ಸುಧಾರಣೆಯನ್ನು ಮಾಡಿದರೆ ಈ ವೃತ್ತಿಯನ್ನು ನಿರ್ಮೂಲನಗೊಳಿಸಬಹುದು ಎಂಬ ಅಂಶಗಳು ಗಂಭೀರವಾಗುತ್ತವೆ. ಕಾಯಿದೆ ಎಂದೊಡನೆ ಅದು ಪೊಲೀಸು ನಿಯಂತ್ರಣಕ್ಕೆ ಸಂಬಂಧಿಸಿದ್ದು. ಇಂಥ ನಿಯಂತ್ರಣದ ಆಧಾರದಿಂದ ವೇಶ್ಯಾವೃತ್ತಿಯನ್ನು ಪ್ರತಿಬಂಧಿಸುವಿಕೆಯನ್ನು  ಅಮಲುಗೊಳಿಸುವುದಕ್ಕೆ ಬರುತ್ತದೆಯೇ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರವನ್ನು ಶೋಧಿಸುವ ಪ್ರಯತ್ನ ಮಾಡಿದಾಗ ತಿಳಿಯುವುದಿಷ್ಟೇ, ವೇಶ್ಯಾವೃತ್ತಿಯ ಬಗ್ಗೆ ಪ್ರತಿಬಂಧಕ ಕಾಯಿದೆಯು ಇದೆ ಎಂಬ ಹೂಂಕಾರಾತ್ಮಕ ಉತ್ತರ. ಆದರೆ ಉಳಿದಂತೆ ಯಾವುದೇ ವಿಷಯದಲ್ಲಿ ನಕಾರಾತ್ಮಕವಾದ ಉತ್ತರ ಬರುವುದೇ ಹೆಚ್ಚು ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ. ಹಾಗಾಗಿ ವೇಶ್ಯಾವೃತ್ತಿಯನ್ನು ಸಂಪೂರ್ಣವಾಗಿ ಉಚ್ಚಾಟಿಸುವ ಧ್ಯೇಯದೆಡೆ ಹೊರಳುವ ಮೊದಲು ನಮ್ಮ ಸಾಮಾಜಿಕ ಪರಿಸ್ಥಿತಿಯಲ್ಲಿ ಬದಲಾವಣೆಯನ್ನು ತರುವುದೇ ಮುಖ್ಯವಾಗಿ ಆಗಬೇಕಾದ ಜರೂರಿ ಕೆಲಸ. ಹಾಗಾಗಿ ಕೇವಲ ಕಾಯಿದೆಗಳು ಮಾತ್ರವೇ ಹೆಚ್ಚು ಉಪಯೋಗಕಾರಿಯಾಗಲಾರವು.

ವೇಶ್ಯಾವೃತ್ತಿಯು ಸಂಪೂರ್ಣವಾಗಿ ನಿರ್ನಾಮವಾಗಬೇಕು ಎಂದು ಒಪ್ಪಿಕೊಂಡು ಆ ದೃಷ್ಟಿಯಿಂದ ಕಾಯಿದೆಗಳನ್ನು ರೂಪಿಸಿದರೆ, ವೇಶ್ಯಾವೃತ್ತಿಯ ಅಪರಾಧವನ್ನು ಸಮಾಜಕ್ಕೇ ಅನ್ವಯಿಸ ಬೇಕಾಗುತ್ತದೆ. ಅದಕ್ಕಾಗಿ ಅತ್ಯಂತ ಉಗ್ತವಾದ ಕಾನೂನುಗಳನ್ನು ರೂಪಿಸಬೇಕಾದ್ದು ಅವಶ್ಯ. ಜೊತೆಗೆ ಅದನ್ನು ಸದೃಢವಾಗಿ ಜಾರಿಗೆ ತರುವುದಕ್ಕೆ ದೊಡ್ಡ ಪ್ರಮಾಣದಲ್ಲಿ ದಕ್ಷರಾದ ಪೊಲೀಸು ದಳವನ್ನು ಸುಸಜ್ಜಿತಗೊಳಿಸಿ ಇಡುವುದು ಅಗತ್ಯ ಕೆಲಸ. ಆಗ್ಗೆ ಕಾಮವಾಸನೆಯನ್ನು ಪೂರ್ಣಗೊಳಿಸಿಕೊಳ್ಳುವುದಕ್ಕಾಗಿ ವೇಶ್ಯೆಯರೆಡೆ ಗಮಿಸುವ ಅನೇಕರಿಗೆ ಅನಿಯಂತ್ರಿತವಾಗಿ ನಡೆಯುವುದಕ್ಕೆ ಅವಕಾಶವೇ ಸಿಕ್ಕುವುದಿಲ್ಲ. ಅಲ್ಲದೆ ಇಂಥ ಅಪರಾಧಗಳನ್ನು ಮಾಡುವ ಪುರುಷರು ಈ ಕಠಿಣವಾದ ಕಾಯಿದೆಗಳನ್ನು ಮುರಿಯುವುದಕ್ಕೆ ಮುಂದಾದಾಗ ಅದರಿಂದ ಉದ್ಭವವಾಗುವ ಪರಿಸ್ಥಿತಿಗಳ ಬಗ್ಗೆ ನಿರ್ಣಯಿಸುವಲ್ಲಿ ನ್ಯಾಯಾಲಯಗಳ ಕೆಲಸವೂ ಹೆಚ್ಚಾಗುತ್ತದೆ. ಹಾಗಾಗಿ ವೇಶ್ಯಾ ವೃತ್ತಿಯು ಪೂರ್ಣವಾಗಿ ನಿಂತು ಹೋಗಲೇಬೇಕು ಎಂಬ ಉದ್ದೇಶದಿಂದ ಪ್ರೇರಿತವಾಗಲು ಇಚ್ಚಿಸುವ ಸರ್ಕಾರ ಮೇಲಿನ ರೀತಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಹಾಗೆ ಕಾರ್ಯಕ್ರಮ ರೂಪಿಸಿಕೊಳ್ಳುವಂಥ ಸರ್ಕಾರವೊಂದು ಇವತ್ತಿನ ಪರಿಸ್ಥಿತಿಯಲ್ಲಿ ಸಾಧ್ಯವೆಂದು ಭಾವಿಸುವುದಕ್ಕೆ ಸಾಧ್ಯವಿಲ್ಲ. ಸಂಪೂರ್ಣವಾಗಿ ಇಲ್ಲವಾಗಿಸುವ ಧೋರಣೆಯನ್ನು ಇಂದಿನ ಕಾನೂನುಗಳು ಪರ್ಣವಾಗಿ ಮುಟ್ಟಲಾರವು. ಅಲ್ಲದೆ ಅಂಥ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಪರಿಸ್ಥಿತಿ ಕೂಡಾ ಇಲ್ಲವೆಂದೇ ಹೇಳಬಹುದು.

ಮತ್ತೊಂದು ವಿಚಾರವೆಂದರೆ, ವೇಶ್ಯಾವೃತ್ತಿಯ ಸಂಬಂಧವಾಗಿ ಪ್ರತಿಬಂಧಕಾತ್ಮಕ ಧೋರಣೆಯನ್ನು ಅವಲಂಬಿಸಬೇಕು. ಈ ಧೋರಣೆಯ ಅನುಸಾರ ವೇಶ್ಯಾವೃತ್ತಿಯ ಅಸ್ತಿತ್ವವನ್ನು ಸರಕಾರ ಮೊದಲಿಗೆ ಮಾನ್ಯ ಮಾಡಬೇಕಾಗುತ್ತದೆ. ಜೊತೆಗೆ ಇಂಥ ವೃತ್ತಿಯನ್ನು ಮಾಡುತ್ತಿರುವುದು ಅಪರಾಧವಲ್ಲ ಎಂಬುದನ್ನು ಕೂಡಾ. ಅಂದರೆ ಇದು ಅಪರಾಧವಲ್ಲ ಎಂದು ಮಾನ್ಯ ಮಾಡಿದರೆ ಸ್ತ್ರೀಯು ಅನುಭವಿಸಬೇಕಾಗಿರುವ ದುಷ್ಪರಿಣಾಮಗಳ ಕಡೆಗೆ ದುರ್ಲಕ್ಷ್ಯ ಮಾಡುವುದಕ್ಕೆ ಬರುವುದಿಲ್ಲ, ಆದರೆ ಒಂದಲ್ಲ ಒಂದು ಸ್ವರೂಪದಲ್ಲಿ ಅದರ ಮೇಲೆ ನಿಯಂತ್ರಣ ಹಾಕಲೇ ಬೇಕೆಂಬುದು ಇದರ ಒಟ್ಟು ಧ್ವನಿ. ಸಂಪೂರ್ಣ ನಿರ್ಬಂಧ ಧೋರಣೆಯಿಂದಷ್ಟೇ ವೇಶ್ಯಾವೃತ್ತಿಯನ್ನು ಅಪರಾಧವೆಂದು ಪರಿಗಣಿಸಿರುವುದರಿಂದ ಅದು ಸಮಾಜದಿಂದ ಸಂಪೂರ್ಣವಾಗಿ ಇಲ್ಲವಾಗುವುದಿಲ್ಲ ಹಾಗೂ ಕದ್ದುಮುಚ್ಚಿ ನಡೆಸುವ ಪ್ರವೃತ್ತಿಯೊಂದು ಬೆಳೆಯಿತು. ಗುಪ್ತರೋಗದ ಸ್ವರೂಪದಲ್ಲಿ ಅದರ ಪರಿಣಾಮವು ಕಾಣಿಸಿಕೊಂಡರೂ ಕೂಡ ಬಹಿರಂಗವಾಗಿ ಅದಕ್ಕೆ ಔಷಧೋಪಚಾರ ಮಾಡುವಂತಿಲ್ಲ. ಕಾರಣ ಅದಕ್ಕೆ ಡಾಕ್ಟರರ ಸಲಹೆ ಪಡೆಯುವುದು ಕಾಯಿದೆಯ ಜಾಲದಲ್ಲಿ ಸಿಕ್ಕಿ ಬೀಳುವಂತಹ ಭೀತಿಯಿಂದಾಗಿಯೂ ಅದು ಸಾಧ್ಯವಾಗಲಿಲ್ಲ ಎಂಬುದು ಇತರೆ ದೇಶಗಳ ಒಟ್ಟಾರೆ ಅನುಭವ. ಆ ಕಾರಣದಿಂದಾಗಿಯೇ  ಸದಾ ವೇಶ್ಯಾವೃತ್ತಿಯ ವಿಷಯವಾಗಿ ನಿಯಂತ್ರಣ ಧೋರಣೆಯನ್ನು ಸ್ವೀಕರಿಸಲಾಗಿದೆ. ವೇಶ್ಯಾವೃತ್ತಿಯಲ್ಲಿ ತೊಡಗಿಕೊಂಡಿರುವ ಸ್ತ್ರಿಯರ ದಾಖಲೆಯು ಸರ್ಕಾರಿ ಪುಸ್ತಕಗಳಲ್ಲಿ ಇರುವುದು, ವೇಶ್ಯಾಪರಾಧಗಳ ಮತ್ತು ಅದರಲ್ಲಿ ತೊಡಗಿಕೊಂಡಿರುವ ಸ್ತ್ರೀಯರ ವೈದ್ಯಕೀಯ ತಪಾಸಣೆ ನಡೆಸುವುದು, ಅವರನ್ನು ಒತ್ತಾಯ ಪೂರ್ವಕವಾಗಿ ಆಸ್ಪತ್ರೆಗಳಿಗೆ ಕಳುಹಿಸಿ ಔಷಧೋಪಚಾರ ಪಡೆಯುವುದಕ್ಕೆ ಒಂದು ವ್ಯವಸ್ಥೆ ಉಂಟಾಗಿದೆ. ಆದರೂ ವೇಶ್ಯೆಯರ ಹಾಗೆಯೇ ವೇಶ್ಯಾಗಮನ ಪುರುಷರ ಮೇಲೆಯೂ ಇಂಥ ನಿರ್ಬಂಧಗಳು ಇರಬೇಕಾದ್ದು ಅವಶ್ಯ. ಅವರನ್ನು ಶಿಕ್ಷಿಸುವಂತಹ ವ್ಯವಸ್ಥೆಯನ್ನು ಕೂಡ ಅವಶ್ಯ ಮಾಡಬೇಕು.

ವೇಶ್ಯಾವೃತ್ತಿಯನ್ನು ಉಚ್ಚಾಟಿಸುವಂಥ ಧೋರಣೆಯ ವಿಚಾರವು ವೇಶ್ಯಾವೃತ್ತಿಯ ಸಂಬಂಧವಾಗಿ ಕಠಿಣ ಕಾಯಿದೆಗಳನ್ನು ರೂಪಿಸಿ ಆ ವೃತ್ತಿಯನ್ನು ನಿರ್ಮೂಲನ ಮಾಡಬೇಕು ಎಂಬ ನೆಲೆಯಿಂದಲೇ ಮಂಡಿಸಿಕೊಂಡು ಬರಲಾಗಿದೆ. ಅದರ ಉಚ್ಚಾಟನೆಗಾಗಿ, ಮಾಡುವ ಕಠಿಣ ಕಾಯಿದೆಯು ಸಮಸ್ಯಾತ್ಮಕವೂ ಅನ್ಯಾಯದ ನೆಲೆಯದ್ದೂ ಆಗಿರುವಂಥ ಸಾಧ್ಯತೆಯನ್ನು ತಳ್ಳಿ ಹಾಕುವುದಕ್ಕೆ ಬರುವುದಿಲ್ಲ. ಅದರ ವಿರುದ್ಧ ಸುಸಂಘಟಿತವಾಗಿ ಧ್ವನಿ ಎತ್ತಬಹುದು. ಆದರೆ ಮಿತಿರಹಿತ ವರ್ತನೆಯ ವ್ಯಕ್ತಿಗಳಿಗೆ ಈ ವೃತ್ತಿಯ ಉಚ್ಚಾಟನೆ ಯಾಗಬೇಕು ಎಂಬ ಭಾವನೆ ಬರುವುದಾದರೂ ಹೇಗೆ? ಇದರ ಅರ್ಧವೆಂದರೆ ಉಚ್ಚಾಟನೆಯ ಭೂಮಿಕೆ ಯನ್ನು ಬಿಟ್ಟುಬಿಡಬೇಕೆಂದಲ್ಲ. ಸಮಾಜದ ಶಾಶ್ವತ ಕಲ್ಯಾಣ ಸಾಧ್ಯತೆ ಮತ್ತು ಸ್ತ್ರೀ ಜಾತಿಯ ಶೋಷಣೆಯನ್ನು ಇಲ್ಲವಾಗಿಸುವುದಕ್ಕೆ ಉಚ್ಚಾಟನೆಯ ಧೋರಣೆಯನ್ನು ಜಾರಿಗೆ ತರಲೇ ಬೇಕಾದ್ದು ಅವಶ್ಯವೆಂಬ ತಾತ್ವಿಕ ವಿಚಾರವು ಒಪ್ಪಿತವಾಗಿರುವಂಥದೇ. ಅಲ್ಲದೆ ಆ ಕಾರಣವಾಗಿ ವ್ಯಕ್ತಿ ಸ್ವಾತಂತ್ರ್ಯದ ಮೇಲೆ ಬಂಧನ ಮತ್ತು ಖಾಸಗಿ ಜೀವನದ ಮೇಲೆ ನಿಯಂತ್ರಣ ಉಂಟಾಗುತ್ತದೆ ಎಂದು ಭಾವಿಸುವ ಅಗತ್ಯವೂ ಇಲ್ಲ.

ಇಲ್ಲಿನ ಕೆಲವು ಮುಖ್ಯವಾದ ಪ್ರಶ್ನೆಗಳೆಂದರೆ, ಯಾವ ಕಡೆಗೆ ವ್ಯವಸ್ಥಿತವಾಗಿ ನಿರ್ಲಕ್ಷಿಸ ಲಾಗುತ್ತಲಿದೆ ಎಂಬುದು. ವೇಶ್ಯಾವೃತ್ತಿಯ ಮೇಲೆ ಸಂಪೂರ್ಣ ನಿರ್ಬಂಧ, ನಿಯಂತ್ರಣ ಮತ್ತು ಉಚ್ಚಾಟನೆ ಇವುಗಳಲ್ಲಿ ಯಾವುದೇ ಅಂಶವನ್ನು ಅವಲಂಬಿಸಿ ಕಾಯಿದೆಯನ್ನು ಮಾಡಬಹುದು. ಆದರೆ ವೇಶ್ಯಾವೃತ್ತಿಯಿಂದ ಹೊರಗಡೆ ಬಂದ ಸ್ತ್ರೀಯರನ್ನು ಅವರವರ ಕುಟುಂಬಗಳು ಸ್ವೀಕರಣೆ ಮಾಡುವುದಕ್ಕೆ ತಯಾರಿರುತ್ತವೆಯೇ? ಸಮಾಜವು ಅವರೆಡೆಗೆ ಒಳ್ಳೆಯ ದೃಷ್ಟಿಯಿಂದ ನೋಡಿ ತನ್ನೊಳಗೆ ಸೇರಿಸಿಕೊಳ್ಳವುದಕ್ಕೆ ಉತ್ಸುಕವಾಗಿದೆಯೇ? ಹಾಗೆಯೇ ಅವರಿಗೆ ವಸತಿ ವ್ಯವಸ್ಥೆ ಮಾಡಿಕೊಡುವುದು ಮತ್ತು ಆರ್ಥಿಕ ದೃಷ್ಟಿಯಿಂದ ಖಾಯಮ್ಮಾದ ಜವಾಬ್ದಾರಿಯನ್ನು ಹೊರುವುದಕ್ಕೆ ಸರ್ಕಾರ ಸಮರ್ಧವಾಗಿರುವುದೇ? ಅವರ ಶಕ್ತಿ, ಸಾಮರ್ಥ್ಯಕ್ಕೆ ಅನುಗುಣವಾದ ಕೆಲಸವು ದೊರಕುತ್ತದೆ ಎಂಬ ಭರವಸೆ ನೀಡುವ ಸಾಧ್ಯತೆ ಉಂಟಾಗುವುದೇ? ಶಾರೀರಿಕವಾಗಿ ಮತ್ತು ಮಾನಸಿಕವಾಗಿ ದುರ್ಬಲವಾಗಿರುವ, ಕಲಾಕೌಶಲ್ಯ ಮತ್ತು ಶಿಕ್ಷಣ ಇಲ್ಲದಿರುವ, ಶಾರೀರಿಕವಾಗಿ ಕಷ್ಟ ಪಡುವ ಅಭ್ಯಾಸ ಇಲ್ಲದಿರುವಂಥ ಈ ಸ್ತ್ರೀಯರಿಗೆ ಇಂಥ ಕೆಲಸಗಳು ಹಿಡಿಸುತ್ತವೆಯೇ? ಅದಕ್ಕಿಂತಲೂ  ಮುಖ್ಯವಾದುದೆಂದರೆ ಅವರಿಗೆ ಕೆಲಸ ಕೊಡಲು ಯಾರಾದರೂ ತಯಾರಾಗುತ್ತಾರೆಯೇ? ಸಣ್ಣ ಉದ್ಯೋಗ ಮತ್ತು ಕೆಲಸಗಳಿಂದ ಅವರ ಜೀವನ ನಿರ್ವಹಣೆ ಸಾಧ್ಯವಾಗಬಹುದೇ? ಈ ಮೊದಲಾದ ಗಂಭೀರ ಅಂಶಗಳನ್ನು ಗಮನಕ್ಕೆ ತೆಗೆದು ಕೊಂಡಂತಿಲ್ಲ. ಕಾರಣ ಇಂದಿಗೂ ಸ್ತ್ರೀ ಸಂಬಂಧಿಯಾದ ಕಾಯಿದೆಗಳನ್ನು  ರೂಪಿಸುವಲ್ಲಿ ಪುರೋಗಾಮಿಯಾದ ಸರಕಾರಕ್ಕೆ ಕಾಯಿದೆಗಳ ಯಾದಿಯನ್ನು ಬೆಳೆಸುವಲ್ಲಿಯೇ ಹೆಚ್ಚು ರಾಜಕೀಯ ದೃಷ್ಟಿಯ ಗಮನವಾಗಿದೆ. ಆದರೆ ಪ್ರತ್ಯಕ್ಷವಾಗಿ ಈ ವೃತ್ತಿಯಲ್ಲಿ ತೊಡಗಿ ಕೊಂಡಿರುವವರ ಸಮಸ್ಯೆಗಳನ್ನು ವಸ್ತುನಿಷ್ಠವಾದ ದೃಷ್ಠಿಕೋನದಿಂದ ಬಿಡಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಸಾಮರ್ಥ್ಯ ಇಲ್ಲಿ ಇದ್ದಂತಿಲ್ಲ. ೧೯೫೬ರಲ್ಲಿ ವೇಶ್ಯಾ ಪ್ರತಿಬಂಧಕ ಕಾಯಿದೆಯೊಂದು ಜಾರಿಗೆ ಬಂದಿದ್ದರೂ ಸತತವಾಗಿ ವೇಶೆಯರ ಸಂಖ್ಯೆಯು ಬೆಳೆಯುತ್ತಲೇ ಇದೆ. ಇದರಿಂದಲೇ ಗಮನಕ್ಕೆ ಬರುತ್ತದೆ, ಕಾಯಿದೆಯ ಪರಿಣಾಮಕಾರಕವಾದ ಕ್ರಮದಲ್ಲಿರುವ ಉದಾಸೀನತೆ ಮತ್ತು ನಿರ್ಲಕ್ಷ್ಯ. ಕಾಯಿದೆಗಳಿಂದ ಸ್ತ್ರೀಯರಿಗೆ ಸುರಕ್ಷಿತತೆ, ನಿರ್ಭಯತೆ, ಆತ್ಮವಿಶ್ವಾಸ ಮತ್ತು ವಿಕಾಸಕ್ಕೆ ಅವಕಾಶವಾಗ ಲೇಬೇಕು. ಅಂದರೆ ಅವಳನ್ನು ಕೇವಲ ಸ್ತ್ರೀ ಎಂಬುದಾಗಿ ಅಲ್ಲ, ವ್ಯಕ್ತಿ ಎಂಬುದಾಗಿ ಸ್ವಾತಂತ್ರ್ಯದ ಮತ್ತು ಹಿತಬದುಕಿನ ವ್ಯವಸ್ಥೆಯಾಗಬೇಕು. ಒಂದೊಮ್ಮೆ ಈ ವಿಚಾರಗಳ ಮೂಲಕ ವೇಶ್ಯಾವೃತ್ತಿಯ ಕಡೆ ನೋಡುವಂಥದು ಸಾಧ್ಯವಾದರೆ ವೇಶ್ಯೆಯರ ಪುನರ್ ವ್ಯವಸ್ಥೆಯ ಮಾರ್ಗವನ್ನು ಕಾಯಿದೆಯಲ್ಲಿಯೂ ನಮೂದಿಸಬೇಕಾಗುತ್ತದೆ. ಮತ್ತು ಆ ಬಗೆಯ ಸೌಲಭ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನೂ ಕೊಡಬೇಕಾಗುತ್ತದೆ.