ಸ್ತ್ರೀಶಿಕ್ಷಣದ ಬೆಳವಣಿಗೆ: ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು

‘ನ ಹೀ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ’ ಎಂಬುದು ಗ್ರಂಧೋಕ್ತಿ. ಜ್ಞಾನವನ್ನು ಬಿಟ್ಟರೆ ಮನುಷ್ಯನಿಗೆ ಶ್ರೇಷ್ಠತ್ವವಿಲ್ಲ. ಯಾರಿಗೆ ಜ್ಞಾನವಿಲ್ಲವೋ ಅವರನ್ನು ಪಶುಗಳಿಗಿಂತ ಕೀಳೆಂದು ಭಾವಿಸಿರುವುದಾದರೂ ಏಕೆ? ಜ್ಞಾನಾರ್ಜನೆಯಿಂದ ಮನುಷ್ಯರು ತಮ್ಮ ಮಾನವೀಯ ಬುದ್ದಿಯನ್ನು ಮತ್ತು ಸದಸದ್ವಿವೇಕ ಶಕ್ತಿಯನ್ನು ಯೋಗ್ಯವಾದ ರೀತಿಯಿಂದ ಬೆಳೆಸಿಕೊಳ್ಳುತ್ತಾರೆ. ಸ್ವತಃ ತನ್ನ ಜೀವನವನ್ನು ಉಜ್ವಲಗೊಳಿಸಿಕೊಂಡು ತನ್ನ ಸಹಜೀವಿಗಳೆಲ್ಲರ ಬದುಕಿನ ಕರ್ಣಧಾರತ್ವವನ್ನು ಪಡೆಯುವುದು. ಈ ತತ್ತ್ವಜ್ಞಾನ ಮಾನ್ಯವಾಗಿದ್ದರೂ ಕೂಡಾ ಸ್ತ್ರೀ-ಶಿಕ್ಷಣದ ವಿಷಯದಲ್ಲಿ ಬಹಳ ದೊಡ್ಡ ಅಪೇಕ್ಷೆಯನ್ನು ಮತ್ತೆ ರೂಪಿಸಿಕೊಳ್ಳಬೇಕಾಗಿ ಬಂದಿದೆ. ಬ್ರಿಟಿಷರ ಕಾಲದಲ್ಲಿ  ಹಿಂದೂಸ್ಥಾನದ ಪಾಲಕತ್ವವನ್ನು ಶಿರಸಾವಹಿಸಿದ ಆಂಗ್ಲರು ರಾಷ್ಟ್ರಸಂಬಂಧಿಯಾಗಿ ಇದೊಂದು ಪವಿತ್ರ ಕೆಲಸವೆಂಬ ಭಾವನೆ ಮೂಡಿಸಿದ್ದರು. ಆದರೆ, ತತ್ತ್ವತಃ ಮುಖ್ಯವಾಗಿ ತನ್ನ ರಾಜ್ಯದ ಬಂಡಿ(ಚಕ್ಕಡಿ)ಯನ್ನು ಹೊಡೆಯುವುದಕ್ಕೆ ಕೇವಲ ಭಾರವಾದ ಕೆಲಸಗಳನ್ನು ಮಾಡುವಂತಹ ಸುಶಿಕ್ಷಿತರಾದ ನೌಕರರನ್ನು ಇಲ್ಲಿಯೇ ರೂಪಿಸುವುದು ಅವರಿಗೆ ಹೆಚ್ಚು ಅನುಕೂಲಕರವೆನಿಸಿತು. ಈ ಜಾಣತನದ ವಿಚಾರವನ್ನು ಆಧರಿಸಿಯೇ ಭಾರತೀಯರಿಗಾಗಿ ಒಂದು ಶಿಕ್ಷಣ ಯೋಜನೆ ಯನ್ನು ರೂಪಿಸಬೇಕೆಂದು ಬ್ರಿಟಿಷ್ ಸರಕಾರ ಮುಂದಾಯಿತು. ಕ್ರಿ.ಶ. ೧೮೨೯ರಲ್ಲಿ ಸರ್ ಧಾಮಸ್ ಮನ್ರೋಸಾಹೇಬ್ ಎಂಬಾತ ಮದ್ರಾಸ್ ಪ್ರಾಂತ್ಯಕ್ಕೆ ಅನ್ವಯಿಸುವಂತೆ ಒಂದು ಶೈಕ್ಷಣಿಕ ಯೋಜನೆಯನ್ನು ರೂಪಿಸಿ, ಈಸ್ಟ್ ಇಂಡಿಯಾ ಕಂಪನಿಯ ಡೈರೆಕ್ಟರರಿಗೆ ಸಾದರ ಪಡಿಸಿದ್ದನು. ಆದರೆ ಮುಂದೆ ಅಖಿಲ ಭಾರತದ ಸ್ತರದಲ್ಲಿ ಒಂದು ಶೈಕ್ಷಣಿಕ ಯೋಜನೆಯನ್ನು ರೂಪಿಸುವುದು ನಮಗೆ ಪರಿಣಾಮಕಾರಿ ಉಪಯೋಗವೇ ಆಗುತ್ತದೆ ಎಂದು ತಿಳಿದ ಆಡಳಿತಾಧಿಕಾರಿಗಳು ಅಂಥ ಯೋಜನೆಯನ್ನು ರೂಪಿಸುವ ದಿಶೆಯಲ್ಲಿ ಕಾರ್ಯಪ್ರವೃತ್ತರಾದರು. ಕ್ರಿ.ಶ. ೧೮೩೫ರಲ್ಲಿ ಲಾರ್ಡ್ ಮೆಕಾಲೆ ಸಾಹೇಬನ ಶೈಕ್ಷಣಿಕ ವ್ಯವಸ್ಥೆಯ ಸ್ವರೂಪಕ್ಕೆ ಸಂಬಂಧಿಸಿದಂತೆ ಒಂದು ಟಿಪ್ಪಣೆಯು ಹೊರಬಂದಿತು. ಆ ಹೊತ್ತಿಗೆ ಶಿಕ್ಷಣದ ಸೌಲಭ್ಯ  ಮತ್ತು ಶಾಲೆಗಳು ಇರಲಿಲ್ಲವೆಂದಲ್ಲ. ಆದರೆ  ಸ್ತ್ರೀಯರಿಗೆ ಶಿಕ್ಷಣವೆಂಬ ವಿಷಯದಲ್ಲಿ ಯಾರಲ್ಲೂ ಎಂಥದೇ ಆಸಕ್ತಿ ಇರಲಿಲ್ಲ. ‘ಯಾರ ಕೈಯಲ್ಲಿ ತೊಟ್ಟಿಲ ಹಗ್ಗವೋ ಅವಳಿಂದ ಜಗತ್ತಿನ ಉದ್ಧಾರ’ ಎಂಬ ಹೇಳಿಕೆಯು ಬ್ರಿಟಿಷರ ಕಾಲದಲ್ಲಿಯೂ ಪೊಳ್ಳಾಗಿತ್ತು. ಭಾರತದಲ್ಲಿನ ರಾಜಕೀಯ ಪಾರತಂತ್ರ್ಯದಿಂದಾಗಿ ಎಲ್ಲಾ ಕಡೆಗಳಿಂದಲೂ ಸ್ತ್ರೀಯರಿಗೆ ದೈನ್ಯಸ್ಥಿತಿಯು ಬಂದೊದಗಿತು. ಅಂದರೆ ಇಂಗ್ಲಿಷರ ಆಡಳಿತ ಕಾಲದಲ್ಲಿಯೂ ಹೆಣ್ಣುಮಕ್ಕಳ ಶಾಲೆಗಳು ಕೆಲವಷ್ಟೇ ಇದ್ದವು. ದೆಹಲಿಯಲ್ಲಿ ಬ್ರಿಟಿಷರ ಆಡಳಿತವು ಆರಂಭವಾಗುವ ಸುಮಾರಿನಲ್ಲಿ  ಪಂಜಾಬಿ ಸ್ತ್ರೀಯರು ನಡೆಸುತ್ತಿದ್ದ ಹೆಣ್ಣು ಮಕ್ಕಳ ಆರು ಶಾಲೆಗಳಿದ್ದವು ಎಂದು ಹೇಳಲಾಗಿದೆ. ಆದರೆ ಬ್ರಿಟಿಷ್ ಆಡಳಿತ ಆರಂಭವಾದ ಮೇಲೆ ಸರಕಾರಿ ಅಭಾವ ಉಂಟಾಗಿ ಇವುಗಳೆಲ್ಲವು ಮುಚ್ಚಿ ಹೋಗಿದ್ದವು.

ಬ್ರಿಟಿಷರ ಆಡಳಿತಾವಧಿಯಲ್ಲಿಯೂ ಸ್ತ್ರೀ-ಶಿಕ್ಷಣಕ್ಕೆ ಉತ್ತೇಜನಾತ್ಮಕ ಪರಿಸ್ಥಿತಿ ಇಲ್ಲದಿರುವುದು ಗಮನಕ್ಕೆ ಬರುತ್ತದೆ. ಮೇಲ್ನೋಟಕ್ಕೆ ಈ ವಿಚಾರ ವಿರೋಧಾಭಾಸಾತ್ಮಕ ಎಂದೆನಿಸಬಹುದು. ಇಂಗೆಂಡಿನಲ್ಲಿ ಸ್ತ್ರೀಯರು ಬಹಳ ಮುಂದುವರೆದಿದ್ದಾರೆ; ಸ್ವತಂತ್ರ ಶೀಲರೂ ಮತ್ತು ಕರ್ತೃತ್ವಶಾಲಿಗಳೂ ಆಗಿದ್ದಾರೆ ಎಂಬ ಖ್ಯಾತಿ  ಇತ್ತು. ಅಲ್ಲದೆ ಆ ಹೊತ್ತಿನಲ್ಲಿ ಆ ಸಾಮ್ರಾಜ್ಯದ ಆಡಳಿತವಿದ್ದುದು ಒಬ್ಬ ರಾಣಿಯ ಕೈಯಲ್ಲಿ. ಇಂಥ ಅಧಿಕಾರವುಳ್ಳ ಸಾಮ್ರಾಜ್ಯದ ಅಡಿಯಲ್ಲಿ ಇದ್ದಂಥ ಭಾರತದಲ್ಲಿ ಮಾತ್ರ ಸ್ತ್ರೀಯರ ಕರ್ತೃತ್ವ ಶಕ್ತಿಗೆ ಉತ್ತೇಜನ ದೊರೆತಿರಲಿಲ್ಲ ಎಂಬುದಾದರೂ ಏಕೆ, ಹೇಗೆ? ಈ ಸಂಗತಿ ವಿರೋಧಾತ್ಮಕವಾದುದು ಎಂದೆನಿಸಿದರೂ ಬ್ರಿಟಿಷ್ ರಾಜ್ಯಾಡಳಿತದ ಮೊದಲ ಕಾಲಖಂಡದಲ್ಲಿ ಇದು ಸಾಧ್ಯವಾಗಿತ್ತು ಎಂಬುದನ್ನು ನಿರಾಕರಿಸಲು ಬರುವುದಿಲ್ಲ. ಮುಖ್ಯವಾಗಿ ಇದಕ್ಕೆ ಎರಡು ಕಾರಣಗಳಿವೆ. ಒಂದು  ಬ್ರಿಟಿಷ್ ಆಡಳಿತಗಾರರು ತಮ್ಮ ಮಾತೃ ಭೂಮಿಯಲ್ಲಿ ಉದಾರಮತ ವಾದಿಗಳು ಮತ್ತು ಸ್ತ್ರೀ ದಾಕ್ಷಿಣ್ಯಪರರೂ ಆಗಿದ್ದರು. ಆದರೆ ಹಿಂದೂ ಸಂಸ್ಕೃತಿ, ಆಚಾರ, ವಿಚಾರ, ಶ್ರದ್ಧೆ, ರೂಢಿ ಮತ್ತು ಪರಂಪರೆ ಇವುಗಳೊಂದಿಗೆ ಅವರು ಪರಿಪೂರ್ಣವಾಗಿ ಅಪರಿಚಿತರಾಗಿದ್ದರು. ಹಾಗಾಗಿ ಹಿಂದೂಸ್ಥಾನದಲ್ಲಿ ಶಿಕ್ಷಣ ಯೋಜನೆಯನ್ನು ರೂಪಿಸುವಾಗ ಅವರ ಮನಸ್ಸಿನಲ್ಲಿ ಒಂದೆಡೆ ಸಂಭ್ರಮವೂ ಮತ್ತು ಮತ್ತೊಂದೆಡೆ ಗೊಂದಲಗಳೂ ನಿರ್ಮಾಣವಾಗಿದ್ದವು. ಒಂದರ್ಧದಲ್ಲಿ ಇದು ಸ್ವಾಭಾವಿಕವೂ ಹೌದು.

ಅಖಿಲ ಭಾರತದ ಮಟ್ಟದಲ್ಲಿ ಒಂದು ಶಿಕ್ಷಣ ಯೋಜನೆಯನ್ನು ಹಮ್ಮಿಕೊಳ್ಳುವ ಉಪಕ್ರಮವನ್ನು ಸರ್ಕಾರವು ಯಾವಾಗ ಕೈಗೆತ್ತಿಕೊಂಡಿತೋ ಆಗ ಸಹಜವಾಗಿಯೇ ಸ್ತ್ರೀ- ಶಿಕ್ಷಣದ ಪ್ರಶ್ನೆಯೂ ಎದ್ದಿತು. ಆದರೆ ಈ ವಿಷಯದಲ್ಲಿ ಭಾರತೀಯರ ಮನೋಭೂಮಿಕೆಯ ಬಗ್ಗೆ ಯಾವುದೇ ತಿಳಿವಳಿಕೆ ಇಲ್ಲದ ಕಾರಣ ಮಧ್ಯವರ್ತಿ ಸರ್ಕಾರವು ಹತ್ತಿರದ ಬಂಗಾಳಿ ಪಂಡಿತರೊಂದಿಗೆ ಸಮಾಲೋಚಿಸಿತು. ಹಿಂದೂ ಸ್ತ್ರೀಯರ ದುರ್ದೈವದಿಂದಾಗಿ ಪಕ್ಕಾ ಸನಾತನಿಗಳೂ ಆದರೆ ವೈದಿಕ ಪರಂಪರೆಯನ್ನು ಬಿಟ್ಟಿದ್ದರೂ ಬ್ರಾಹಣರನ್ನೇ ಪ್ರಮಾಣರೆಂದು ಒಪ್ಪಿಕೊಂಡಿದ್ದಂಥ ಪಂಡಿತರು ಅವರಿಗೆ ಸಿಕ್ಕರು. ಅವರು ಮನುವಿನ ವಿಚಾರಗಳ ಮೂಲ ನೆಲೆಯ ಮೇಲೆಯೇ ಬ್ರಿಟಿಷ್ ಅಧಿಕಾರಿಗಳಿಗೆ ಸ್ತ್ರೀಯರಿಗೆ ಶಿಕ್ಷಣ ನೀಡುವುದು ಮಹಾಪಾಪ ಎಂಬ ಸಲಹೆ ನೀಡಿದರು. ಆಗಿನ ಸರಕಾರ ಅದನ್ನು ಒಪ್ಪಿಕೊಂಡಿತು. ಮತ್ತೊಂದು ಕಾರಣವೂ ಹೀಗಿದೆ: ಬ್ರಿಟಿಷರು ಭಾರತದಲ್ಲಿನ ಜನರ ಧಾರ್ಮಿಕ ಭಾವನೆಗಳನ್ನು ನೋಯಿಸುವುದಕ್ಕೆ ಹೆದರುತ್ತಿದ್ದರು. ಅಲ್ಲದೆ ಸ್ತ್ರೀ-ಶಿಕ್ಷಣದ ಪ್ರಶ್ನೆಯು ಇಲ್ಲಿನ ಸ್ತ್ರೀಯರಿಗೆ ಸೀಮಿತವಾಗಿದ್ದರಿಂದ ಆ ಹೊತ್ತಿನ ಕಠಿಣವಾದ ಸಾಮಾಜಿಕ ರೂಢಿ ಮತ್ತು ಪರಂಪರೆಗಳಲ್ಲಿ ಹಸ್ತಕ್ಷೇಪ ಮಾಡಿ ಮೃದುಗೊಳಿಸುವ ತಯ್ಯಾರಿಯನ್ನು ಅವರು ಮಾಡಿಕೊಂಡಿರಲಿಲ್ಲ. ಹಾಗಾಗಿ ಹಿಂದೂ ಸ್ತ್ರೀಯರಿಗೆ ಶಿಕ್ಷಣ ಸೌಲಭ್ಯವನ್ನು ಒದಗಿಸುವ ಬಗ್ಗೆ ವಿಚಾರ ಮಾಡಲು ಇಂಗ್ಲಿಷರು ಹೆದರಿಕೊಂಡರು. ಆ ಕಾರಣ ಸ್ತ್ರೀ-ಶಿಕ್ಷಣದ ವಿಚಾರವನ್ನು ಅವರು ತಮ್ಮ ಯೋಜನೆಯಿಂದ ಸಂಪೂರ್ಣವಾಗಿ ತೆಗೆದುಹಾಕಿಬಿಟ್ಟರು. ಈ ಧೋರಣೆಯು ೧೮೫೪ರವರೆವಿಗೂ ಅಂದರೆ ಸರ್ ಚಾರ್ಲ್ಸ್‌ವುಡ್ ಸಾಹೇಬರ ಪ್ರಸಿದ್ಧ ಶೈಕ್ಷಣಿಕ ರೂಪುರೇಶೆ ಹೊರಬರುವವರೆಗೂ ಚಾಲ್ತಿಯಲ್ಲಿತ್ತು ಎಂಬುದು ಗಮನೀಯ ಸಂಗತಿ.

ಬ್ರಿಟಿಷ್ ಸರಕಾರ ಮತ್ತು ಸಮಾಜವು ಸ್ತ್ರೀ-ಶಿಕ್ಷಣದ ಬಗ್ಗೆ ಔದಾಸೀನ್ಯ ಭಾವವನ್ನು ಹೊಂದಿದ್ದುದರ ಬಗ್ಗೆ ತರುಣ ಸಮಾಜ ಸುಧಾರಕರು ವಿರೋಧವನ್ನು ವ್ಯಕ್ತಪಡಿಸುವುದಕ್ಕೆ ಆರಂಭಿಸಿದರು. ಸಮಾಜದವರಿಂದ ತೀವ್ರ ವಿರೋಧವು ಆರಂಭವಾದುದನ್ನು ಸಹಿಸಿ ಕೊಳ್ಳುತ್ತಲೇ ತರುಣರು ಸ್ತ್ರೀ-ಶಿಕ್ಷಣದ ಕಾರ್ಯಪ್ರಗತಿಯ ದೃಷ್ಟಿಯಿಂದ ತಮ್ಮ ಪ್ರಯತ್ನಗಳನ್ನು ಆರಂಭ ಮಾಡಿದರು. ಶಿಮತಿ ರಮಾಬಾಯಿ ರಾನಡೆಯವರಂಥ ಕಾರ್ಯಕರ್ತರು ಸ್ತ್ರೀ-ಶಿಕ್ಷಣದ ಕಾರ್ಯವನ್ನು ಆಗುಮಾಡುವಲ್ಲಿ ಸಂಪೂರ್ಣವಾಗಿ ತೊಡಗಿಸಿ ಕೊಂಡಿದ್ದರು. ಸುಧಾರಣವಾದಿಗಳಂತೂ ಕ್ರಿಶ್ಚಿಯನ್ ಮಿಷನರಿನಗಳು ನಡೆಸುತ್ತಿದ್ದ ಶಾಲೆಗಳಿಂದ ಲಾಭ ಪಡೆಯುವುದಕ್ಕೂ ಮುಂದಾದುದು ಇಲ್ಲಿ ಗಮನಾರ್ಹ. ಕಾರಣ ಸರ್ಕಾರಿ ಮತ್ತು ಖಾಸಗಿ ಹೆಣ್ಣುಮಕ್ಕಳ ಶಾಲೆಗಳು ಆಗ್ಗೆ ಇರಲಿಲ್ಲ. ಹಾಗಾಗಿ ಸುಧಾರಣವಾದಿಗಳು ಈ ವಿಷಯದಲ್ಲಿ ಸಮಾಜದಿಂದ ತೀವ್ರ ಆತ್ಯಂತಿಕ ಕೋಪವನ್ನು ಎದುರಿಸಬೇಕಾಯಿತು. ಬಹುಜನ ಸಮಾಜದಿಂದ ಸ್ತ್ರೀ-ಶಿಕ್ಷಣಕ್ಕೆ ವಿರೋಧ, ಕಲಿಯುವ ಹೆಣ್ಣುಮಕ್ಕಳನ್ನು ಆ ಹೊತ್ತಿನ ಪರಂಪರಾಗತ ವಿಚಾರಾನುಸಾರ ‘ಬಹಳ ದೊಡ್ಡವರು’ ಎಂದು ವ್ಯಂಗ್ಯವಾಗಿ ಕರೆಯುತ್ತಿದ್ದರು. ಅಲ್ಲದೆ ಮಿಷನರಿಗಳ ಶಾಲೆಯಲ್ಲಿ ಶಿಕ್ಷಕಿಯರಾದವರು ಪಾದದವರೆಗೂ ಉದ್ದವಾಗಿರುವಂಥ ಉಡುಪನ್ನು ಧರಿಸುವುದು ಮತ್ತು ಕೈಯಲ್ಲಿ ಬೈಬಲನ್ನು ಹಿಡಿದು ಕಲಿಸಲು ಆರಂಭಿಸಿದ್ದರು. ಇಂಥ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವ್ಯಕ್ತವಾಗುವ ಸಾಮಾಜಿಕ ಮತ್ತು ಧಾರ್ಮಿಕ ವಿರೋಧಗಳ ತೀವ್ರತೆಯನ್ನು ಕಡಿಮೆ ಮಾಡಬೇಕು ಎಂದೆನಿಸಿದರೆ, ಸ್ತ್ರೀ-ಶಿಕ್ಷಣವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕೊಟ್ಟಿರೆ ಸರಿಯಾದೀತು ಎಂಬ ವಿಚಾರವನ್ನು ಸುಧಾರಣವಾದಿಗಳು ಮಂಡಿಸಿದರು. ಸ್ತ್ರೀ-ಶಿಕ್ಷಣದ ಮಹತ್ವ ಕುರಿತಂತೆ ಸಮಾಜಕ್ಕೆ ತಿಳಿಸಿಕೊಡುವುದು ಆವಶ್ಯಕ ಮತ್ತು ಅದು ನಿರುಪದ್ರವಿಯಾದ ಅಂಶ ಎಂಬುದನ್ನು ಸ್ಪಷ್ಟಪಡಿಸುವುದಕ್ಕಾಗಿ ಸ್ತ್ರೀ- ಶಿಕ್ಷಣದ ಪ್ರಚಾರದ ಬಗ್ಗೆ ಸರಕಾರಕ್ಕೆ ಕೂಡ ಒತ್ತಾಯ ಮಾಡಬೇಕಾಗಿತ್ತು. ಇದರಲ್ಲಿ ಖಾಸಗಿ ಪ್ರಯತ್ನಗಳಿಗೂ ಪ್ರಾಧಾನ್ಯತೆ ಅವಶ್ಯವಿರಬೇಕು ಎಂಬ ಹಿನ್ನೆಲೆಯಲ್ಲಿ ಸಮಾಜ ಸುಧಾರಕರು ಕಾರ್ಯಪ್ರವೃತ್ತರಾದರು. ಖಾಸಗಿ ಪ್ರಯತ್ನಕ್ಕೆ ಚಾಲನೆ ಸಿಕ್ಕಬೇಕು ಎಂಬ ಕಾರಣದಿಂದ ೧೮೪೯ರಲ್ಲಿ ಎಲ್ವಿನ್ ಸ್ಟನ್ ಕಾಲೇಜಿನ ಕೆಲವಾರು ಉತ್ಸಾಹಿ ಮಹಿಳಾ ವಿದ್ಯಾರ್ಥಿಗಳು ಸ್ವತಃ ತಾವೇ ಮುಂಬಯಿ ಯಲ್ಲಿ ಒಂದು ಮಹಿಳಾ ಶಾಲೆಯನ್ನು ಆರಂಭಿಸಿದುದು ಗಮನಾರ್ಹ ಸಂಗತಿ. ಅದರಲ್ಲಿ ಅವರೇ ಸ್ವತಃ ಕಲಿಯುವುದಾಗಿತ್ತು.

ಈ ಎಲ್ಲಾ ವಿಚಾರಗಳು ಸರಕಾರದ ಮೇಲೆ ಒಪ್ಪಿಗೆಯಾಗುವಂತಹ ಪರಿಣಾಮ ಬೀರಿದವು. ಆ ಕಾರಣ ೧೮೫೪ರ ರಹಸ್ಯ ಸಭೆಯಲ್ಲಿ ಸ್ತ್ರೀ-ಶಿಕ್ಷಣದ ಜವಾಬ್ದಾರಿಯು ತನ್ನ ಮೇಲೆಯೇ ಇದೆ ಎಂಬುದನ್ನು ಮಾನ್ಯ ಮಾಡಿ ಸ್ತ್ರೀ-ಶಿಕ್ಷಣವನ್ನು ತನ್ನ ಕಲಂನಲ್ಲಿ (ಗೊತ್ತುವಳಿ)ಯ ಶೈಕ್ಷಣಿಕ ಧೋರಣೆಯಾಗಿ ಸ್ವೀಕರಿಸಿ ಯೋಜನೆಯಲ್ಲಿ ಇದನ್ನು ಸೇರ್ಪಡೆಗೊಳಿಸಿ ಜಾಹೀರುಗೊಳಿಸಿತು. ಈ ಹೊತ್ತಿಗೆ ಸಂಪೂರ್ಣ ಭಾರತದಲ್ಲಿ ಸುಮಾರು ೯೫ ಹೆಣ್ಣುಮಕ್ಕಳ ಶಾಲೆಗಳಿದ್ದವು ಮತ್ತು ಅಂದಾಜು ಮೂರೂವರೆ ಸಾವಿರ ಹೆಣ್ಣುಮಕ್ಕಳು ಅಲ್ಲಿ ಕಲಿಯುತ್ತಿದ್ದರು. ಸರ್ಕಾರವು ಈ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಹಾಯ ನೀಡವ ಮತ್ತು ಹೊಸ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ನಿರ್ಧಾರ ಕೈಗೊಂಡಿತು. ಸರ್ಕಾರದ ಈ ನವೀನ ಧೋರಣೆಗಳಿಂದಾಗಿ ಸ್ತ್ರೀ-ಶಿಕ್ಷಣದ ಹೆಜ್ಜೆ ತೀವ್ರಗತಿಯನ್ನು ಪಡೆದು ಮುನ್ನಡೆಯುವಂತಾಯಿತು. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರಿ ಧನಸಹಾಯ ಅಲ್ಪ ಪ್ರಮಾಣದ್ದಾಗಿದ್ದರೂ ಇಲ್ಲಿ ಆರ್ಥಿಕ ದೃಷ್ಟಿಗಿಂತ ಪ್ರತಿಷ್ಠೆಯ ದೃಷ್ಟಿಯೇ ಮುಖ್ಯವಾಯಿತು. ಅಂದರೆ ಸ್ತ್ರೀ-ಶಿಕ್ಷಣದ ಚಳವಳಿಯ ಪ್ರಕ್ರಿಯೆಯಲ್ಲಿ ಸರಕಾರಕ್ಕೆ ಬೆಂಬಲವಾಗಿ ನಿಂತುಕೊಂಡುದೇ ಇಲ್ಲಿನ ಅತ್ಯಂತ ಪರಿಣಾಮಕಾರಿ ಸಂಗತಿ. ಪಂಜಾಬಿನಲ್ಲಿ ಬ್ರಹ್ಮ ಸಮಾಜ ಮತ್ತು ಆರ್ಯ ಸಮಾಜಗಳವರು ಆರಂಭಿಸಿದ ಕನ್ಯಾ ಶಾಲೆಗಳೆಡೆ ಈ ಮೊದಲು ಯಾರೂ ಅಪ್ಪಿತಪ್ಪಿ ಕೂಡಾ ನೋಡುತ್ತಿರಲಿಲ್ಲ. ಈ ವಿಚಾರಾನಂತರ ಅಲ್ಲಿ ವಿದ್ಯಾರ್ಥಿನಿಯರ ಸಂಖ್ಯೆಯು ಹೆಚ್ಚಾಯಿತು. ಮಿಷನರಿಗಳು ತೆರೆದ ಶಾಲೆಗಳು ಸರಕಾರಿ ಶಾಲೆಗಳು ಮತ್ತು ಸಮಾಜ ಸುಧಾರಣೆಗಾಗಿ ತೊಡಗಿಕೊಂಡ ಸಮಾಜ ಸೇವಕರ ಮುಂದಾಳತ್ವ ಹಾಗೂ ಅವಿಶ್ರಾಂತ ಪ್ರಯತ್ನಗಳಿಂದಾಗಿ ನಡೆಯುತ್ತಿದ್ದ ಖಾಸಗಿ ಶಾಲೆಗಳು ಹೆಚ್ಚು ಕ್ರಿಯಾಶೀಲವಾದವು. ಇವೆಲ್ಲವುಗಳ ಕಾರಣ ಸಾವಿರಾರು ಹೆಣ್ಣುಮಕ್ಕಳು ವಿದ್ಯೆ ಕಲಿಯುವುದಕ್ಕೆ ಆರಂಭಿಸಿದರು.

ಸ್ತ್ರೀ-ಶಿಕ್ಷಣದ ಪ್ರಗತಿಯು ಯಾವ ರೀತಿಯಲ್ಲಿ ಆಗುತ್ತ ನಡೆಯಿತು ಎಂಬುದನ್ನು ಒಂದು ಅಂದಾಜಿನ ಮೂಲಕ ಗಮನಕ್ಕೆ ತೆಗೆದುಕೊಳ್ಳಬಹುದು. ೧೮೭೭-೭೮ರಲ್ಲಿ ಕೇವಲ ೬೬,೬೧೫ ಹೆಣ್ಣು ಮಕ್ಕಳು ಬ್ರಿಟಿಷ್ ಭಾರತದಲ್ಲಿ ಶಿಕ್ಷಣ ಪಡೆಯುತ್ತಿದ್ದರು. ೧೮೮೧-೮೨ರ ಹೊತ್ತಿಗೆ ಪ್ರಾಥಮಿಕ ಶಾಲೆಯಲ್ಲಿ ಹೆಸರು ನೋಂದಯಿಸಿದ ಹೆಣ್ಣುಮಕ್ಕಳ ಸಂಖ್ಯೆ ಸುಮಾರು ೧,೧೯,೬೦೭. ಅಂದರೆ, ಪ್ರತಿ ನೂರು ಗಂಡುಮಕ್ಕಳೊಂದಿಗೆ ಆರು ಮಂದಿ ಹೆಣ್ಣುಮಕ್ಕಳ ಪ್ರಮಾಣವಿತ್ತು. ೧೮೮೨-೮೩ರಲ್ಲಿ ೩,೪೮೭ ಶಾಲೆಗಳಲ್ಲಿ ೧,೬೨,೨೦೭ ವಿದ್ಯಾರ್ಥಿನಿಯರು ಕಲಿಯುತ್ತಿದ್ದರು. ಶೈಕ್ಷಣಿಕ ಯೋಜನೆಯಲ್ಲಿ ಸುಧಾರಣೆ ತರುವ ದೃಷ್ಟಿಯಿಂದ ನೇಮಕಗೊಂಡ ಹಂಟರ್ ಕಮಿಷನ್ ಸ್ತ್ರೀ-ಶಿಕ್ಷಣದ ಬಗ್ಗೆ ಹಲವಾರು ಉಪಯುಕ್ತ ಸೂಚನೆಗಳನ್ನು ತನ್ನ ಅಹವಾಲಿನಲ್ಲಿ ನಮೂದಿಸಿತ್ತು. ಅದು ಹೆಣ್ಣು ಮಕ್ಕಳು ಮತ್ತು ಶಾಲೆಗಳ ಸಂಖ್ಯೆಯ ಮೇಲೆ ಧನಾತ್ಮಕ ಪರಿಣಾಮವನ್ನು ತರುವಂತಹದ್ದಾಗಿತ್ತು. ೧೮೯೧-೯೨ರಲ್ಲಿ ೩.೩೧.೦೪೩ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಖಾಸಗಿ ಮತ್ತು ಸರಕಾರಿ ಶಾಲೆಗಳಲ್ಲಿದ್ದರು. ಆದರೆ ಆ ಹೊತ್ತಿಗೆ ಕಾಲೇಜಿನಲ್ಲಿ ಇದ್ದ ವಿದ್ಯಾರ್ಥಿನಿಯರ ಸಂಖ್ಯೆ ಕೇವಲ ೭೬ ಮಾತ್ರ. ೧೮೮೬ರಲ್ಲಿ ಪ್ರಪ್ರಥಮವಾಗಿ ಆರು ಜನ ವಿದ್ಯಾರ್ಥಿನಿಯರು ಮದ್ರಾಸಿನ ಮೆಡಿಕಲ್ ಕಾಲೇಜಿನಲ್ಲಿ ಹೆಸರು ದಾಖಲಿಸಿದರು. ೧೮೮೧ರ ವರ್ಷದಲ್ಲಿ ಪ್ರತಿ ೧೮೦ ಹೆಣ್ಣು ಮಕ್ಕಳಲ್ಲಿ ಒಬ್ಬಳೇ ಒಬ್ಬಳು ಪ್ರಾಥಮಿಕ ಶಾಲೆಗೆ ಸೇರಿ ಶಿಕ್ಷಣ ಪಡೆಯುತ್ತಿದ್ದಳು. ಅದು ೧೮೮೬ರ ಹೊತ್ತಿಗೆ ಶೇಕಡ ಒಂದಕ್ಕೆ ಬಂದುದು ಕಂಡು ಬಂದಿತು. ಮದ್ರಾಸ್ ಮತ್ತು ಮುಂಬಯಿ ಪ್ರಾಂತ್ಯಗಳಲ್ಲಿ ಸ್ತ್ರೀ-ಶಿಕ್ಷಣ ಬಹಳಷ್ಟು ಪ್ರಗತಿ ಹೊಂದಿದ್ದಿತು.

ಮುಂಬಯಿ ರಾಜ್ಯದಲ್ಲಿ ಭಾರತೀಯ ಹೆಣ್ಣುಮಕ್ಕಳಿಗಾಗಿ ಮೊದಲು ಶಾಲೆಯನ್ನು ತೆರೆದ ಶ್ರೇಯಸ್ಸು ಅಮೆರಿಕನ್ ಮಿಷನರಿ ಸಂಸ್ಥೆಗೆ ಸಲ್ಲುತ್ತದೆ. ಕ್ರಿ.ಶ. ೧೮೨೪ರಲ್ಲಿ ಆ ಸಂಸ್ಥೆಯು ಮುಂಬಯಿಯಲ್ಲಿ ಒಂದು ಶಾಲೆಯನ್ನು ಆರಂಭಿಸಿತು. ಶಿ ದಾದಾಬಾಯಿ  ನವರೂಜಿ, ಮಹಾತ್ಮಾಗಾಂಧೀಜಿ, ಜ್ಯೋತಿಬಾ ಫುಲೆ, ಪಂಡಿತ ರಮಾಬಾಯಿ, ರಮಾಬಾಯಿ ರಾನಡೆ, ಪ್ರಾಧ್ಯಾಪಕ ಧೋಂಡೋ ಕೇಶವಕರ್ವೆ ಇತ್ಯಾದಿ ಗಣ್ಯರಿಗೆ ಮಹಾರಾಷ್ಟ್ರದಲ್ಲಿನ ಶಿಕ್ಷಣ ಪ್ರಸಾರದ ಶ್ರೇಯಸ್ಸು ಲಭ್ಯವಾಗುತ್ತದೆ. ಕ್ರಿ.ಶ. ೧೮೫೩ರವರೆಗೆ ಆ ಹೊತ್ತಿನ ಬ್ರಿಟಿಷ್ ಸರ್ಕಾರದ ಧೋರಣೆಯಿಂದಾಗಿ ಒಬ್ಬ ಸ್ತ್ರೀಯೂ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುವುದಕ್ಕೆ ಸಾಧ್ಯವಾಗಲಿಲ್ಲ. ಆನಂತರ ೧೮೫೪ರಲ್ಲಿ ಬ್ರಿಟಿಷ್ ಸರ್ಕಾರವು ಸ್ತ್ರೀ ಶಿಕ್ಷಣಕ್ಕೆ ಮಾನ್ಯತೆಯನ್ನು ಕೊಟ್ಟುದರಿಂದ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆರಂಭ ಸಿಕ್ಕಿತು. ಈ ಹೊತ್ತಿನಲ್ಲಿಯೇ ಮುಂಬಯಿ ಸರ್ಕಾರದ ವತಿಯಿಂದ ಬಂದ ಕರೆಯ ಮೇರೆಗೆ ಕುಮಾರಿ ಮೇರಿ ಕಾರ್ಪೆಂಟ್ ಎಂಬುವವರು ಮುಂಬಯಿಗೆ ಭೇಟಿಕೊಟ್ಟರು. ಅವರ ಸಲಹೆಯಂತೆ ಮುಂಬಯಿ ಸರ್ಕಾರವು ೧೮೭೦-೭೧ರಲ್ಲಿ ಎರಡು ಮಹಾವಿದ್ಯಾಲಯಗಳನ್ನು ಆರಂಭಿಸಿತು. ೧೯೦೨ರವರೆಗೆ ಈ ಸಂಸ್ಥೆಗಳಲ್ಲಿ ಸುಮಾರು ೨೩೪ ಜನ ಹೆಣ್ಣುಮಕ್ಕಳು ವಿದ್ಯಾಭ್ಯಾಸ ಮಾಡಿದ್ದರು. ಇದೇ ಸುಮಾರಿನಲ್ಲಿನ ಮತ್ತೊಂದು ವಿಶೇಷ ಸಂಗತಿಯಂದರೆ ೧೮೮೪ರಲ್ಲಿ ಹೆಣ್ಣುಮಕ್ಕಳಿಗೋಸ್ಕರ ಒಂದು ಶಾಲೆ ಆರಂಭವಾಯಿತು. ಪುಣೆಯಲ್ಲಿ ಮಾಧ್ಯಮಿಕ ಶಿಕ್ಷಣದ ಪ್ರಸಾರದಿಂದಾಗಿ ಮಹಾವಿದ್ಯಾಲಯದ ಶಿಕ್ಷಣಕ್ಕೂ ತಂತಾನೆ ಒಂದು ಖಚಿತ ಗತಿಯು ಸಿಕ್ಕಿತು. ೧೯೦೨ ರ ಆನಂತರ ಮಹಾತ್ಮ ಗಾಂಧೀಜಿಯವರ ಚಳವಳಿಯಿಂದಾಗಿ ಸಮಾಜದ ಪೂರ್ಣ ಅಂಗ ಪಲ್ಲಟವಾಯಿತು. ಅಂದರೆ ಇಲ್ಲಿ ಸ್ತ್ರೀಗೆ ಪ್ರಪ್ರಥಮವಾಗಿ ರಾಜಕೀಯ ಹಕ್ಕೊಂದು ಪ್ರಾಪ್ತವಾಯಿತು.

೧೯೪೭ರವರೆಗಿನ ಹೆಣ್ಣು ಮಕ್ಕಳ ಶಿಕ್ಷಣ ಪ್ರಸರಣ

ಸಂಸ್ಥೆ

ವರ್ಷ

ಕೇವಲ ಹೆಣ್ಣು ಮಕ್ಕಳಿಗಾಗಿಯೇ ಇದ್ದಂಥ ಶಿಕ್ಷಣ ಸಂಸ್ಥೆಗಳು

ಎಲ್ಲ ಸಂಸ್ಥೆಗಳ ಶಿಕ್ಷಣ ಪಡೆಯುತ್ತಿದ್ದ ಹೆಣ್ಣುಮಕ್ಕಳ ಸಂಖ್ಯೆ

ಮಹಾವಿದ್ಯಾಲಯ

 ೧೯೦೧-೦೨

೭೫

೧೯೩೬-೩೭

೧,೨೪೫

೧೯೪೬-೪೭

೦೧

೫,೧೭೭

ಮಾಧ್ಯಮಿಕ  ಶಾಲೆಗಳು

೧೯೦೧-೦೨

೬೭

೪,೯೩೪

೧೯೩೬-೩೭  ೧೦೪

೨೫,೮೨೦

೧೯೪೬-೪೭

೧೮೪

೬೨,೬೨೯

ಪ್ರಾಥಮಿಕ  ಶಾಲೆಗಳು

೧೯೦೧-೦೨

೭೬೮

೭೬,೦೬೩

೧೯೩೬-೩೭

೧,೪೭೮

೨,೮೭,೦೬೧

೧೯೪೬-೪೭

೧,೮೦೪

೪,೮೯,೭೮೯

ವಿಶೇಷ ಶಾಲೆಗಳು

೧೯೦೧-೦೨

೧೯೩೬-೩೭

೫೧

೩,೨೯೧

೧೯೪೬-೪೭

೪೦೪

೧೫,೪೯೮

ಮುಂಬಯಿಯಲ್ಲಿ ಬಹಳಷ್ಟು ಸುಧಾರಣಾವಾದಿ ಮಂಡಳಿಗಳು ಇದ್ದುದರಿಂದ ಅವರ ಕಾಲದಲ್ಲಿ ಹೆಣ್ಣುಮಕ್ಕಳು ಶೈಕ್ಷಣಿಕ ಪ್ರಗತಿ ಈ ಇಲಾಖೆಯಲ್ಲಿ ಬಹಳವಾಗಿತ್ತು. ಮದ್ರಾಸಿನಲ್ಲಿ ಬಹಳ ಹಿಂದಿನಿಂದಲೇ ಮಿಷನರಿಗಳು ಶಿಕ್ಷಣದ ಪ್ರಚಾರಾರ್ಧವಾಗಿ ಕಾರ್ಯನಿರತರಾಗಿದ್ದರು. ಅದರ ಪರಿಣಾಮವು ಸ್ತ್ರೀ-ಶಿಕ್ಷಣದ ಮೇಲೂ ಆಗಿದ್ದರಿಂದ ಒಟ್ಟಾರೆ ನೋಡಿದಾಗ ಸ್ತ್ರೀಯರ ಸಾಕ್ಷರತೆಯು ಹೆಚ್ಚಾಗಿದ್ದಿರಬೇಕು. ಬ್ರಿಟಿಷ್ ಭಾರತದಲ್ಲಿ ಒಟ್ಟಾರೆ ಶೇಕಡ ೧ಕ್ಕೂ ಕಡಿಮೆ ಸ್ತ್ರೀಯರು ಅಕ್ಷರಸ್ಥರಾಗಿದ್ದರು. ಅಂದರೆ ೧೯೦೧ರ ಜನಗಣತಿಯನುಸಾರ ಅಖಿಲ ಭಾರತದಲ್ಲಿ ೧೦೦ ಜನರಲ್ಲಿ ೧೦ ಮಂದಿ ಪುರುಷರು ಅಕ್ಷರಸ್ಥರಾಗಿದ್ದರೆ, ಸ್ತ್ರೀಯರ ಸಾಕ್ಷರತೆಯ ಸಂಖ್ಯೆ ಶೇಕಡ ೧ಕ್ಕಿಂತಲೂ ಕಡಿಮೆ ಅರ್ಧಾತ್ ಏಳು ದಶಾಂಶದಷ್ಟೇ ಇದ್ದಿತು. ಆ ಕಾಲಕ್ಕೆ ಸ್ತ್ರೀಶಿಕ್ಷಣದ ವಿಷಯದಲ್ಲಿ ಉಂಟಾದ ಪ್ರಗತಿ ಸೀಮಿತವಾಗಿದ್ದುದು ನಗರಕ್ಕಷ್ಟೇ. ನಗರಗಳಲ್ಲಿನ ಶಿಮಂತರು ಮತ್ತು ಮೇಲು ಮಧ್ಯಮ ವರ್ಗದವರು ತಂತಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸುವುದಕ್ಕೆ ಮುಂದಾಗಿದ್ದರು. ವಿದ್ಯಾವಂತ ಹುಡುಗರಿಗೆ ವಿದ್ಯಾವಂತ ಹೆಂಡತಿಯರೇ, ಅವಶ್ಯ ಬೇಕಾಗಿತ್ತು. ಸಂಪತ್ತಿನ ದೃಷ್ಟಿಯಿಂದಲೂ ಶಿಕ್ಷಣವು ಅನುಕೂಲಕರವೇ; ವಿದ್ಯಾಭ್ಯಾಸ ಮಾಡುವಾಗ ಹೆಣ್ಣುಮಕ್ಕಳ ವಯಸ್ಸು ಹೆಚ್ಚಾಗುತ್ತದೆ. ಆದರೂ ಬಹಳಷ್ಟು ಕಾಳಜಿಯನ್ನು ವಹಿಸದಿರುವವರು, ಸಂಪನ್ನರು, ಸುಬುದ್ಧರು ಮತ್ತು ಅಲ್ಪಸಂಖ್ಯಾತ ಪಂಗಡದವ ರಾಗಿದ್ದವರೆಲ್ಲ ತಂತಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸಲಾರಂಭಿಸಿದರು. ಆದರೆ ಹಳ್ಳಿಗಳಲ್ಲಿಯೇ ಸಮುದ್ರದೋಪಾದಿಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ನೆಲೆಸಿದ್ದ ಬಹುಜನ ಸಮಾಜವು ಬಹುತೇಕ ಈ ವಿಷಯದಲ್ಲಿ ಉದಾಸೀನತೆಯನ್ನು ಹೊಂದಿತ್ತೆಂದು ಹೇಳಬೇಕು. ದಾರಿದ್ರ್ಯ, ಅಜ್ಞಾನಮಯ ಧಾರ್ಮಿಕ ತಿಳಿವಳಿಕೆಗಳು, ರೂಢಿ-ಅಂಥಶ್ರದ್ಧೆಯ ಹುಚ್ಚು ಕಲ್ಪನೆಗಳು, ಬಾಲ್ಯವಿವಾಹ ಪದ್ಧತಿ ಮತ್ತು ಶಾಲೆಗಳ ಅಭಾವ ವಗೈರೆ ಕಾರಣಗಳಿಂದಾಗಿ ಸ್ತ್ರೀ-ಶಿಕ್ಷಣದ ವಿಷಯದಲ್ಲಿ ಹಲವಾರು ಅಡಚಣೆಗಳು ಉಂಟಾಗಿದ್ದವು.

ಸ್ತ್ರೀ-ಶಿಕ್ಷಣಕ್ಕೆ ಚಾಲನೆ ನೀಡಿ ಸ್ತ್ರೀಯರಲ್ಲಿ ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸುವ ಅತ್ಯಂತ ನಿಕಟ ಉಪಾಯಗಳೆಂದರೆ ಪ್ರಾಥಮಿಕ ಶಿಕ್ಷಣವನ್ನು ನಿರ್ದಿಷ್ಟ ಮತ್ತು ಉಚಿತವಾಗಿ ಲಭಿಸುವಂತೆ ಮಾಡುವುದು. ಈ ವಿಷಯದಲ್ಲಿ ಬ್ರಿಟಿಷ್ ಸರ್ಕಾರ ತನ್ನ ಜವಾಬ್ದಾರಿಯನ್ನು ತಿಳಿದಕೊಂಡಿರಲಿಲ್ಲ. ಇದಕ್ಕೆ ಮುಖ್ಯ ಪುರಾವೆ ಎಂದರೆ, ಇಂಗ್ಲೆಂಡಿನಲ್ಲಿ ೧೮೭೦ರ ಸಾಲಿನಲ್ಲಿ ನಿರ್ದಿಷ್ಟ ಶಿಕ್ಷಣ ಪದ್ಧತಿಯೊಂದು ಜಾರಿಗೆ ಬಂದಿತು. ಅದು ೧೮೮೦ರ ಹೊತ್ತಿಗೆ ನಿರ್ದಿಷ್ಟ ಶಿಕ್ಷಣದೊಂದಿಗೆ ಉಚಿತ ಶಿಕ್ಷಣವಾಗಿಯೂ ಸಾರ್ವತ್ರಿಕ ವಾಯಿತು. ಅದೇ ಧೋರಣೆಯನ್ನು ಅನುಸರಿಸಿ ಇಲ್ಲಿಯೂ ಸ್ವೀಕರಿಸುವಂತೆ iಹಾತ್ಮ ಫುಲೆ ಅವರು ಹಂಟರ್ ಆಯೋಗದ ಮುಂದೆ ಸಾದರಪಡಿಸಿದ್ದರು. ಆದರೆ ಸರಕಾರವು ಅದನ್ನು ಮಾನ್ಯ ಮಾಡಲೇ ಇಲ್ಲ. ಅದೇ ಕಾಲದಲ್ಲಿ ಇಟಲಿ, ಪೋರ್ಚುಗಲ್, ಫ್ರಾನ್ಸ್, ಸ್ಪೈನ್, ಡೆನ್ಮಾರ್ಕ್, ಆಸ್ಟ್ರೇಲಿಯಾ, ಹಂಗೇರಿ, ಸ್ವೀಡನ್, ನಾರ್ವೆ ಮೊದಲಾದ ರಾಷ್ಟ್ರಗಳಲ್ಲಿ ಉದ್ದಿಷ್ಟ ಮತ್ತು ಉಚಿತವಾದ ಪ್ರಾಥಮಿಕ ಶಿಕ್ಷಣದ ನೀತಿಯು ಸ್ವೀಕರಿಸಲ್ಪಟ್ಟಿತು. ಆದರೆ ಬ್ರಿಟಿಷ್ ಸರಕಾರವು ಮಾತ್ರ ಭಾರತದಲ್ಲಿ ಅಂಥ ಧೋರಣೆಯನ್ನು ಸ್ವೀಕರಿಸುವುದಕ್ಕೆ ಮುಂದಾಗಲಿಲ್ಲ. ದೇಶ-ವಿದೇಶಗಳ ಉದಾಹರಣೆಯನ್ನು ನೋಡಿ ಸರ್ಕಾರದಲ್ಲಿ ನಾಮಕರಣಗೊಂಡಿದ್ದ ಗೋಖಲೆಯವರು ೧೯೧೧-೧೨ರಲ್ಲಿ ದೆಹಲಿಯ ವಿಧಾನ ಮಂಡಲದಲ್ಲಿ ಪ್ರಾಥಮಿಕ ಶಿಕ್ಷಣವನ್ನು  ಉಚಿತ ಮತ್ತು ಉದ್ದಿಷ್ಟ ನೆಲೆಯಲ್ಲಿ ಅನುಷ್ಠಾನಗೊಳಿಸುವಂತೆ ಗೊತ್ತುವಳಿ ಯೊಂದನ್ನು ಮಂಡಿಸಿದರು. ಆದರೂ ಐಚ್ಚಿಕ ತತ್ವದ ಮೇಲೆ ಶಿಕ್ಷಣವನ್ನು ಪ್ರಸರಣ ಮಾಡುವ ದುರಾಗ್ರಹ ಪ್ರವೃತ್ತಿಯನ್ನು ಸರ್ಕಾರವು ಕೈಬಿಡಲಿಲ್ಲ. ಹಾಗಾಗಿ ಸ್ತ್ರೀ-ಶಿಕ್ಷಣದ ಪ್ರಗತಿಯು ಅತ್ಯಂತ ಮಂದಗತಿಯಲ್ಲಿ ಆಗುತ್ತಿತ್ತು.

ಪುನಃ ೧೯೧೭ರಲ್ಲಿ ಪಟೇಲ್ ಅವರು ಮುನಿಸಿಪಾಲಿಟಿಯ ವ್ಯಾಪ್ತಿಯಲ್ಲಿ ಅನ್ವಯಿಸುವಂತೆ ಶಿಕ್ಷಣದ ತತ್ವ್ತಗಳನ್ನು ಅನುಷ್ಠಾನಕ್ಕೆ ತರಬೇಕು ಎಂಬುದಾಗಿ ಒಂದು ಕಾಯಿದೆಯನ್ನೇ ಪಾಸು ಮಾಡಿದರು. ಈ ಕಾಯಿದೆಯಲ್ಲಿ ಸ್ತ್ರೀಯರ ಶಿಕ್ಷಣದ ಬಗ್ಗೆ ಪ್ರಥಮವಾಗಿ ನಿರ್ದೇಶನವೊಂದನ್ನು ರೂಪಿಸಲಾಗಿತ್ತು. ಪ್ರಾಥಮಿಕ ಶಿಕ್ಷಣವು ಉದ್ದಿಷ್ಟ ಮತ್ತು ಉಚಿತ ನೆಲೆಯಲ್ಲಿ ಜಾರಿಗೊಳಿಸುವ ವಿಚಾರವು ಬಲವಾಗತೊಡಗಿತು. ಅಲ್ಲದೆ ಅಂಥ ಧೋರಣೆಯನ್ನು ಯೋಜಿಸುವ ನಿರ್ಣಯವನ್ನು ಪ್ರಾಂತ್ಯ ಪ್ರಾಂತ್ಯಗಳ ಮರ್ಜಿಯ ಮೇಲೆ ಮತ್ತು ಅನುಕೂಲತೆಯ ಮೇಲೆ ಅವರಿಗೆ ಒಪ್ಪಿಸುವುದಕ್ಕೆ ನಿರ್ಧರಿಸಲಾಯಿತು. ೧೯೨೧ರಲ್ಲಿ ಈ ಪ್ರಶ್ನೆಯನ್ನು ವಿಚಾರಕ್ಕೆ ಕೈಗೆತ್ತಿಕೊಳ್ಳಲು ಚಂದಾವರಕರ್ ಸಮಿತಿಯು ನೇಮಕಗೊಂಡಿತು. ಹತ್ತು ವರ್ಷಗಳಲ್ಲಿ ಮುಂಬಯಿ ಪ್ರಾಂತ್ಯದಲ್ಲಿ ಎಲ್ಲೆಡೆ ಉದ್ದಿಷ್ಟ ಶಿಕ್ಷಣವನ್ನು ರೂಪಿಸುವ ಬಗ್ಗೆ ಸಮಿತಿಯು ಯೋಜನೆಯೊಂದನ್ನು ರೂಪಿಸಿಕೊಟ್ಟಿತು. ೧೯೨೧ರಲ್ಲಿ ಪ್ರಾಥಮಿಕ ಶಿಕ್ಷಣದ ಬಗೆಗಿನ ಕಾಯಿದೆಯೊಂದು ಜಾರಿಗೆ ಬಂದುದಾದರೂ ಸಾಕಷ್ಟು ಹಣವಿಲ್ಲದ್ದರಿಂದ ಇಷ್ಟವಿದ್ದರೂ ಪ್ರಾಂತ್ಯ ಪ್ರಾಂತ್ಯಗಳಲ್ಲೆಲ್ಲ ಪ್ರಾಥಮಿಕ ಶಿಕ್ಷಣವು ಉಚಿತ ಮತ್ತು ಉದ್ದಿಷ್ಟ ನೆಲೆಯಲ್ಲಿ ಅನುಷ್ಠಾನಗೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ಹೆಣ್ಣುಮಕ್ಕಳ ಶಿಕ್ಷಣದ ವಿಚಾರವು ಒಂದು ಪಕ್ಕದಲ್ಲಿಯೇ ಉಳಿಯುವಂತಾಯಿತು. ಆ ಪರಿಣಾಮವಾಗಿ ಅವರ ಶಿಕ್ಷಣದ ಪ್ರಗತಿ ನಿರಾಶಾಜನಕ ಸ್ಥಿತಿಯಲ್ಲಿಯೇ ಸ್ಥಗಿತಗೊಂಡಿತ್ತು ಎಂಬುದು ಗಮನಾರ್ಹ.

೧೯೩೨ರಲ್ಲಿ ಇಪ್ಪತ್ತೈದು ಕೋಟಿ ಜನಸಂಖ್ಯೆಯ ಪೈಕಿ ಎರಡೂವರೆ ಕೋಟಿ ಅಕ್ಷರಸ್ಥರಿದ್ದರು. ಅವರಲ್ಲಿದ್ದ ಸ್ತ್ರೀಯರ ಸಂಖ್ಯೆ ಅರ್ಧಕೋಟಿ. ಸ್ತ್ರೀ-ಶಿಕ್ಷಣದ ಬಗೆಗಿನ ಔದಾಸೀನ್ಯತೆ, ಸಾಮಾಜಿಕ ಮಾನ್ಯತೆಯ ಅಭಾವ, ಸ್ತ್ರೀಯೆಡೆ ಹರಿಸುತ್ತಿದ್ದ ಪರಂಪರಾಗತ ದೃಷ್ಟಿಕೋನ, ‘ಒಲೆ ಮತ್ತು ಮಕ್ಕಳು’ಗಳು ಇದರಾಚೆಗಿನ ಅವಳ ಕ್ಷೇತ್ರಕ್ಕೆ ಅಮಾನ್ಯತೆ, ಕೆಲವಾರು ಸಮಾಜ ಸುಧಾರಕರ ವಿರೋಧ ಇತ್ಯಾದಿಗಳಿಂದಲೂ ಸ್ತ್ರೀಯರ ಶಿಕ್ಷಣವು ತುಚ್ಚತೆಗೆ ಒಳಗಾಗಿಯೇ ಇತ್ತು. ಅಲ್ಲದೆ ಸ್ತ್ರೀ-ಶಿಕ್ಷಣಕ್ಕಾಗಿ ಹಣಕಾಸಿನ ಉಪಲಬದ್ಧತೆಯೂ ಸಾಧ್ಯವಾಗಲಿಲ್ಲ. ಶಿಕ್ಷಣ ಸಾಧನಗಳು ಮತ್ತು ಸಾಕಷ್ಟು ಶಿಕ್ಷಕರ ಅಭಾವ, ಹೆಣ್ಣುಮಕ್ಕಳಿಗೆ ಸ್ವತಂತ್ರ ಶಾಲೆಗಳ ಅಭಾವ, ಅತ್ಯಂತ ಕಡಿಮೆ ಶಿಕ್ಷಕರ ಸಂಖ್ಯೆ ಈ ಸ್ಥಿತಿಯನ್ನು ಬದಲಾಯಿಸುವ ದೃಷ್ಟಿಯಿಂದ ಬಹಳಷ್ಟು ಪ್ರಯತ್ನಗಳು ಕೂಡಾ ನಡೆಯಲಿಲ್ಲ. ‘ನ ಹೀ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ’ ಎಂಬುದಾಗಿ ಹೇಳುತ್ತದೆ ನಮ್ಮ ಪರಮ ಪವಿತ್ರ ಗ್ರಂಥ. ಅಂದರೆ ಯಾರಿಗೆ ಜ್ಞಾನವಿಲ್ಲವೋ ಅಂಥವರನ್ನು ಪಶುಗಳಿಗಿಂತ ಶ್ರೇಷ್ಠವೆಂದು ತಿಳಿಯುವುದಕ್ಕೆ ಕಾರಣಗಳಿಲ್ಲ. ಜಗತ್ತಿನಲ್ಲಿ ಪವಿತ್ರವಾದುದು ಇದಕ್ಕಿಂತಲೂ ಮತ್ತೊಂದು ಇಲ್ಲವೇ ಇಲ್ಲ. ಜ್ಞಾನಾರ್ಜನೆಯಿಂದ ಮನುಷ್ಯನು ಮಾನವೀಯ ಬುದ್ದಿ ಸದಸದ್ವಿವೇಕ ಶಕ್ತಿಯೇ ಮೊದಲಾದವುಗಳನ್ನು ತನ್ನಲ್ಲಿ ಯೋಗ್ಯವಾದ ರೀತಿಯಲ್ಲಿ ರೂಪಿಸಿಕೊಳ್ಳಬಹುದು. ಇದರಿಂದ ತನ್ನ ಬದುಕನ್ನು ಉಜ್ವಲಗೊಳಿಸಿಕೊಳ್ಳುವುದಕ್ಕೆ ಸಾಧ್ಯವಿದೆ. ಇದು ಸರ್ವಮಾನ್ಯ ಸಂಗತಿಯಾಗಿದ್ದರೂ ಸ್ತ್ರೀ-ಶಿಕ್ಷಣದ ವಿಷಯವಾಗಿ ಬ್ರಿಟಿಷರ ಕಾಲದಲ್ಲಿ ಉಂಟಾದ ವಿಕಾಸವು ಮಾತ್ರ ಉತ್ಸಾಹ ಜನಕವೂ ಆಶಾದಾಯಕವೂ ಆದುದಾಗಿರಲಿಲ್ಲ. ಈ ಪರಿಸ್ಥಿತಿ ಸಾಮಾಜಿಕ ಪರಂಪರೆ ಮತ್ತು ರೂಢಿಗಳ ಕುರುಹುಗಳು, ರಾಜಕೀಯ ಪಾವಿತ್ರ್ಯತೆ, ಸಾಂಸ್ಕೃತಿಕ ನಿರಕ್ಷರತೆ ಮತ್ತು ದಾರಿದ್ರ್ಯ ಪೀಡಿತ ಬಹುಜನ ಸಮಾಜ ಹಾಗೂ ಬ್ರಿಟಿಷ್ ಸರ್ಕಾರದ ಜೌದಾಸೀನ್ಯತೆ ಇವುಗಳಿಂದಾಗಿಯೇ ಉಂಟಾಯಿತೆಂಬುದು ಗಮನಾರ್ಹ.

ಸ್ವತಂತ್ರಪೂರ್ವ ಕಾಲದಲ್ಲಿನ ಸ್ತ್ರೀ-ಶಿಕ್ಷಣ ಸಂಬಂಧವಾದ ಪರಿಸ್ಥಿತಿಯ ಸಂಕ್ಷಿಪ್ತ ವಸ್ತುನಿಷ್ಠ ನಿರೂಪಣೆಯನ್ನು ಈವರೆಗೆ ಮಾಡಲಾಯಿತು. ಇನ್ನು ಮುಂದೆ ಸ್ವಾತಂತ್ರ್ಯಾ ನಂತರದ ಸಂದರ್ಭದಲ್ಲಿ ಉಂಟಾದ ಪ್ರಗತಿಯ ಬಗ್ಗೆ ವಿವೇಚಿಸಬಹದು.

ಸ್ವಾತಂತ್ರ್ಯಾನಂತರ ಕ್ರಿ.ಶ. ೧೯೪೯ರಲ್ಲಿ ಸ್ವತಂತ್ರ ಭಾರತದಲ್ಲಿ ಹೊಸ ಘಟಕವೊಂದು ಸಿದ್ಧವಾಯಿತು. ಇದರಲ್ಲಿ ಸ್ತ್ರೀಯರಿಗೆ ಆರ್ಥಿಕ, ಸಾಮಾಜಿಕ ಹಕ್ಕುಗಳು ಪ್ರಾಪ್ತವಾದವು. ಯಾವುದೇ ರೀತಿಯಲ್ಲೂ ವಿಶೇಷ ಪ್ರಯತ್ನ ಮಾಡದಿದ್ದರೂ ಸ್ತ್ರೀಯರಿಗೆ ಮತದಾನದ ಹಕ್ಕು ಕೊಡಲಾಯಿತು. ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ತ್ರೀಯರು ನಿರ್ವಹಿಸಿದ ವಿಶೇಷ ಕಾರ್ಯಗಳಿಂದಾಗಿಯೇ ಅವರಿಗೆ ಇಂಥ ರಾಜಕಾರಣದ ನವೀನ ಕ್ಷೇತ್ರವೊಂದು ಮುಕ್ತವಾದುದು. ಸ್ವಾತಂತ್ರ್ಯೋತ್ತರ ಕಾಲದಲ್ಲಿ ರಾಷ್ಟ್ರೀಯ ಪಾತಳಿಯ ಮೇಲೆ ಬೇರೆ ಬೇರೆ ಸಮಿತಿಗಳು ಮತ್ತೆ ಮತ್ತೆ ಸ್ಥಾಪನೆಗೊಂಡವು. ೧೯೫೯-೬೯ರ ಕಾಲದಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಮಹಿಳಾ ಶಿಕ್ಷಣ ಮಂಡಳಿಯೊಂದನ್ನು ಸ್ಥಾಪಿಸಿತು. ಈ ಮಂಡಳಿಯು ಸ್ತ್ರೀ-ಶಿಕ್ಷಣದ ಕಾರ್ಯಕ್ರಮಕ್ಕೆ ವಿಶಿಷ್ಟ ಗತಿಯನ್ನು ತರುವುದಕ್ಕಾಗಿ ಅನೇಕ ಶಿಫಾರಸ್ಸುಗಳನ್ನು ಮಾಡಿತ್ತು. ಇವುಗಳಲ್ಲಿನ ಕೆಲವಾರು ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರವು ಮಾನ್ಯ ಮಾಡಿದ್ದು ಗಮನೀಯ. ಕೋಠಾರಿ ಆಯೋಗ ೧೯೬೯ರಲ್ಲಿ ಸಾದರ ಪಡಿಸಿದ ಅಹವಾಲಿನಲ್ಲಿ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಸ್ತ್ರೀಯರ ಶಿಕ್ಷಣದ ಬಗ್ಗೆಯೇ ವಿಶೇಷವಾಗಿ ಚರ್ಚಿಸಿತ್ತು. ಆ ವೇಳೆಯಲ್ಲಿಯೂ ಗಂಡುಮಕ್ಕಳ ಮತ್ತು ಹೆಣ್ಣುಮಕ್ಕಳ ಶಾಲೆಯಲ್ಲಿ ದಾಖಲಿಸಿದ ಸಂಖ್ಯೆಗಳ ವ್ಯತ್ಯಯವನ್ನು ಆಯೋಗವು ಮುಖ್ಯವಾಗಿ ದಾಖಲಿಸಿತ್ತು. ಕೊಠಾರಿ ಆಯೋಗವು ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳ ಪ್ರಾಥಮಿಕ ಶಿಕ್ಷಣದ ಸಂದರ್ಭವನ್ನು  ಸೂಕ್ಷ್ಮವಾಗಿ ಅಧ್ಯಯನ ಮಾಡಿ ನೀಡಿದ ನಿಷ್ಕರ್ಷ ಹೀಗಿದೆ. ಕೆಳಗಿನ ಸ್ತರದಲ್ಲಿ ಇರುವ ಪ್ರಾಥಮಿಕ ಶಿಕ್ಷಣ ಸಂದರ್ಭದಲ್ಲಿ ಗಂಡುಮಕ್ಕಳ ವಿಚಾರವಾಗಿ ಬಹಳಷ್ಟು ಕಠಿಣ ಸಮಸ್ಯೆಗಳಿಲ್ಲ. ಕಾರಣ ೯ರಿಂದ ೧೧ನೆಯ ವಯಸ್ಸಿನವರೆಗಿನ ಹುಡುಗರಲ್ಲಿ ಶೇಕಡ ೯೦ರಷ್ಟು ಮಕ್ಕಳು ಶಾಲೆಯಲ್ಲಿ ತಮ್ಮ ಹೆಸರುಗಳನ್ನು ದಾಖಲಿಸಿರುತ್ತಾರೆ. ಆದರೆ ಹೆಣ್ಣುಮಕ್ಕಳ ವಿಷಯದಲ್ಲಿ ಪ್ರಾಥಮಿಕ ಶಿಕ್ಷಣದ ೧ ರಿಂದ ೪ನೆಯ ತರಗತಿಯ ಸ್ತರದಲ್ಲಿ ಈ ವ್ಯತ್ಯಾಸ ಇನ್ನೂ ಹೆಚ್ಚಾಗಿರುವಂತೆ ಕಾಣುತ್ತದೆ. ಅಂದರೆ ೧೦೦ ಜನ ಹುಡುಗರೊಂದಿಗೆ ಕೇವಲ ೪೦ ಜನ ಹೆಣ್ಣುಮಕ್ಕಳಷ್ಟೇ ಶಾಲೆಗೆ ಸೇರಿದ್ದರು.

ಕಮಿಷನ್‌ನಿಂದ ಸ್ಪಷ್ಟವಾಗಿ ನಮೂದಾಗಿರುವ ಮತ್ತೊಂದು ಸಂಗತಿ ಇತ್ತು. ದೇಶೀಯ ಕಾರ್ಯಕ್ರಮದಲ್ಲಿ ಅದು ಚಲಾವಣೆಗೆ ಬಂದ ೧೦ ವರ್ಷಗಳಲ್ಲಿ ಪ್ರತಿಯೊಂದು ರಾಜ್ಯದಲ್ಲಿಯೂ ಗಂಡು-ಹೆಣ್ಣು ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಉಚಿತ ಮತ್ತು ಕಡ್ಡಾಯವಾಗಿ ಮಾಡಿ ೧೫ ವರ್ಷದವರೆಗೆ ಅದನ್ನು ನೀಡಬೇಕು. ರಾಜ್ಯ ಸರ್ಕಾರವು ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ ನೆರವೇರದಿದ್ದರೆ, ಹೆಣ್ಣುಮಕ್ಕಳ ಶಿಕ್ಷಣದ ಪ್ರಶ್ನೆ ಅವರ ಮುಂದಿನ ಭವಿಷ್ಯಕ್ಕೆ ಮಹತ್ವದ ಸವಾಲೇ ಆಗುವುದು. ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣದ ಧೋರಣೆಯನ್ನು ಸ್ವೀಕರಿಸಿದ ಮೇಲೆ ನಿಜವಾದ ಅರ್ಧದಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಸಮಸ್ಯೆಯನ್ನು ಸ್ವಾತಂತ್ರ್ಯಾನಂತರದ ಕಾಲದಲ್ಲಿಯೂ ಮತ್ತೆ ದೇಶದ ಎದುರು ಪ್ರಸ್ತಾಪಿಸಬೇಕಾಯಿತು. ಸ್ವಾತಂತ್ರ್ಯೋತ್ತರ ಕಾಲದಲ್ಲಿ ನಮ್ಮ ದೇಶದೆದುರು ನಿರ್ಮಾಣವಾಗಿದ್ದಂಥ ಪ್ರಮುಖ ಸಮಸ್ಯೆಗಳು ಇಂದಿಗೂ ಪೂರ್ಣವಾಗಿ ಪರಿಹಾರವನ್ನು ಕಂಡಿಲ್ಲ. ಅವುಗಳ ಪೈಕಿ ಸ್ತ್ರೀ-ಶಿಕ್ಷಣವು ಒಂದು ಪ್ರಮುಖ ಸಮಸ್ಯೆಯೇ. ಅಂದರೆ ಸ್ತ್ರೀ-ಶಿಕ್ಷಣದ ವಿಷಯದಲ್ಲಿ ಬಂದಿರುವ ಅಡಚಣೆಗಳನ್ನು ಗಮನಕ್ಕೆ ತೆಗೆದುಕೊಂಡು ಆ ದೃಷ್ಟಿಯಲ್ಲಿ ಪ್ರಯತ್ನಗಳನ್ನು ಮಾಡಬೇಕಾಗಿದೆ. ೧೯೫೮-೫೯ರ ಸಾಲಿನಲ್ಲಿ ಸ್ತ್ರೀ-ಶಿಕ್ಷಣದ ಬಗ್ಗೆ ಅಧ್ಯಯನ ಮಾಡಿ, ಆ ಬಗ್ಗೆ ಅನೇಕ ಶಿಫಾರಸ್ಸುಗಳನ್ನು ಸಹ ಮಾಡಲಾಯಿತು. ಹೆಣ್ಣುಮಕ್ಕಳ ಶಿಕ್ಷಣದ ಕಡೆಗೆ ನೋಡುತ್ತಿರುವ ಪರಂಪರಾಗತ ದೃಷ್ಟಿಕೋನದಿಂದಾಗಿ ಅವರ ಶಿಕ್ಷಣದೆಡೆ ದುರ್ಲಕ್ಷಿಸುತ್ತಲೇ ಬರಲಾಗಿದೆ. ಕೇವಲ ಉಚಿತ ಶಿಕ್ಷಣ ನೀಡುವುದರಿಂದಷ್ಟೇ ಶಿಕ್ಷಣ ಸವಿಮಯವಾಗುತ್ತದೆ ಎಂದು ಹೇಳುವಂತಿಲ್ಲ. ಶಿಕ್ಷಣಕ್ಕೆ ತಗಲುವ ಫಿಜನ್ನು ಮಾಫಿ ಮಾಡುವುದರ ಜೊತೆಗೆ ಪುಸ್ತಕಗಳು, ಎಕ್ಸರ್‌ಸೈಜ್‌ಗಳು ಮತ್ತು ಅವಶ್ಯ ಬಟ್ಟೆಗಳನ್ನು ಸಹ ಪೂರೈಸಬೇಕಾದುದು ಆವಶ್ಯಕ. ಈ ಸಮಿತಿಯ ಮತ್ತೊಂದು ಸೂಚನೆ ಎಂದರೆ ೯ ರಿಂದ ೧೧ ವರ್ಷದ ವಯೋಮಾನದಲ್ಲಿನ ಶೇ. ೮೦ರಷ್ಟು ಹೆಣ್ಣುಮಕ್ಕಳು ಕಡ್ಡಾಯವಾಗಿ ಶಾಲೆಗೆ ಬರುವುದಕ್ಕೆ ಹೆಸರನ್ನು ನೋಂದಾಯಿಸುವಂತೆ ಮಾಡಬೇಕು. ಹಾಗೂ ಶಿಕ್ಷಣವನ್ನು ಅವರು ಪಡೆಯುವಂತಾಗಬೇಕು ಎಂಬುದಾಗಿತ್ತು. ಈ ಪ್ರಮಾಣವನ್ನು ಸಾಧಿಸುವುದಕ್ಕೆ ಕೇಂದ್ರ ಸರ್ಕಾರದಿಂದ ಹಣದ ಸಹಾಯವು ಕೊಡಬೇಕಾದ್ದು ಮತ್ತು ಯಾರು ಕೆಲವಾರು ಕಾರಣಗಳಿಂದ ಶಾಲೆಯನ್ನು ಬಿಟ್ಟಿರುತ್ತಾರೋ ಅಥವಾ ೯ ರಿಂದ ೧೧ ವರ್ಷ ವಯೋಮಾನದಲ್ಲಿ ಇರುವ ಹೆಣ್ಣುಮಕ್ಕಳಿಗೆ ಶಿಕ್ಷಣ ಮುಂದುವರೆಸಲು ಒಂದು ಅವಕಾಶವನ್ನು ಉಪಲಬ್ಧಗೊಳಿಸಿ ಕೊಡುವುದಕ್ಕಾಗಿ ಈ ಆರ್ಥಿಕ ಸಹಾಯವನ್ನು ಬಳಸಿಕೊಳ್ಳಬಹುದು.

ಸ್ತ್ರೀ-ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿಚಾರ ಮಾಡುವಾಗ ಈ ಸಾಮಾಜಿಕ ಸಂದರ್ಭವನ್ನು ವಿಶೇಷವಾಗಿ ಗಮನಿಸಬೇಕು. ಶಿಕ್ಷಣದಿಂದಾಗಿ ಸ್ತ್ರೀಯು ಸಾಧಿಸುವ ವೈಯಕ್ತಿಕ ಪ್ರಗತಿಯು ಅಂತಿಮವಾಗಿ ಸರ್ವ ಸಮಾಜಕ್ಕೆ ಉಪಯೋಗವಾಗಬೇಕು ಎಂಬುದೇ ಅವಳನ್ನು ಶಿಕ್ಷಿತಳನ್ನಾಗಿ ಮಾಡುವುದರ ಮುಖ್ಯ ಉದ್ದೇಶ. ಸ್ತ್ರೀಯರಿಗೂ ಒಂದು ಸ್ವತಂತ್ರವಾದ ವ್ಯಕ್ತಿತ್ವವಿದೆ ಮತ್ತು ಅದೇ ಸಮಯಕ್ಕೆ ಸಮಾಜದ ಒಂದು ಘಟಕವೆಂದು ಅವರನ್ನು ಮುಖ್ಯವಾಗಿ ಪರಿಗಣಿಸಬೇಕು. ಒಬ್ಬ ಸ್ವತಂತ್ರ ವ್ಯಕ್ತಿ ಎಂಬುದಾಗಿ ಸ್ತ್ರೀಯ ಸ್ಥಾನವನ್ನು ನಾವು ಮಾನ್ಯ ಮಾಡಬೇಕಾಗಿದೆ. ಸ್ತ್ರೀ ಮತ್ತು ಪುರುಷರು ಜನ್ಮತಃ ಮತ್ತು ನಿಸರ್ಗತಃ ಸಮಾನರು. ಎಂತಲೇ ಪುರುಷನಿಗೆ ಶಿಕ್ಷಣ ಪಡೆಯುವ ಹಕ್ಕು ಎಷ್ಟಿರುವುದೋ ಅಷ್ಟೇ ಸ್ತ್ರೀಯರಿಗೂ ಇದೆ. ನಾವು ಉದಾರ ಮನಸ್ಸಿನಿಂದ ಅವಳ ಈ ಹಕ್ಕನ್ನು ಅವಳು ಉಪಭೋಗಿಸುವುದಕ್ಕೆ ಅನುವು ಮಾಡಬೇಕು. ಸ್ತ್ರೀಯೂ ಒಬ್ಬ ವ್ಯಕ್ತಿಯೇ! ಹಾಗೆಯೇ ಅವಳು ಸಮಾಜದ ಒಂದು ಘಟಕವೇ. ಕುಟುಂಬ, ಸಮಾಜ ಮತ್ತು ದೇಶ ಇವೇ ಮೊದಲಾದ ವಿವಿಧ ರೂಪಗಳಲ್ಲಿ ಅವಳ ಸ್ಥಾನ ಯಾವುದು ಎಂಬುದುದನ್ನು ನೋಡುವುದು ಆವಶ್ಯಕ.

ಸ್ತ್ರೀ-ಶಿಕ್ಷಣದ ಬಗ್ಗೆ ಎರಡು ಅಭಿಪ್ರಾಯಗಳಿವೆ. ಮೊದಲನೆಯದರ ಪ್ರಕಾರ ಸ್ತ್ರೀ ಸರ್ವಪ್ರಥಮವಾಗಿ ಒಬ್ಬಳು ಗೃಹಿಣಿ. ಅವಳು ಮನೆಯನ್ನೇ ತನ್ನ ಸ್ವಂತದ ಕಾರ್ಯಕ್ಷೇತ್ರವೆಂದು ಭಾವಿಸಿ, ಉಳಿದ ವಿಷಯಗಳು ತನಗೆ ಗೌಣವೆಂದು ತಿಳಿದು ಕೊಳ್ಳಬೇಕು. ಅವಳು ಮೊದಲಿಗೆ ಒಬ್ಬ ಜವಾಬ್ದಾರಿ ಹೊಂದಿರುವಂತಹ ಮಾತೆ. ಅಲ್ಲದೆ ತನ್ನ ಸಂಸ್ಕೃತಿಯ ಮತ್ತು ನೀತಿ, ಮೌಲ್ಯಗಳನ್ನು ಸಂರಕ್ಷಿಸುವುದು ಅವಳ ಮುಖ್ಯ ಕರ್ತವ್ಯ.

ಮತ್ತೊಂದು ಅಭಿಪ್ರಾಯದಂತೆ ಸ್ತ್ರೀ-ಪುರುಷನಿಗೆ ಮೈತ್ರಿಣಿ ಮತ್ತು ಸಹಚಾರಿಣಿ. ಹಾಗಾಗಿ ಅವಳು ಪ್ರತಿಯೊಂದು ಕ್ಷೇತ್ರದಲ್ಲಿಯೂ ಪುರುಷನಿಗೆ ಬೆಂಬಲವನ್ನು ಕೊಡಬೇಕು. ಪುರುಷನಿಗೆ ಯಾವ್ಯಾವ ಕಾರ್ಯಕ್ಷೇತ್ರಗಳಲ್ಲಿ ಅವಕಾಶವಿದೆಯೋ ಅಲ್ಲೆಲ್ಲ ಸ್ತ್ರೀಗೂ ಮುಕ್ತ ಅವಕಾಶವಿರಬೇಕು.

ಈ ಮೇಲಿನ ಎರಡು ಅಭಿಪ್ರಾಯಗಳಲ್ಲಿ ಮೊದಲ ದೃಷ್ಟಿಯು ಮುಲತಃ ದೋಷಪೂರ್ಣ. ಮಗುವಿಗೆ ಯಾವಾಗಲೂ ಸತತವಾಗಿ ತಿನ್ನುವುದಕ್ಕೆ ಕೊಡುವುದು ಮತ್ತು ಅದರ ಶರೀರದ ಬೆಳವಣಿಗೆಗಷ್ಟೆ ಪ್ರೋತ್ಸಾಹ ಎಂಬುದು ಮಾತ್ರ ಆದರ್ಶ ಮಾತೃತ್ವವಲ್ಲ. ಬದಲಾಗಿ ಅದರ ಬೌದ್ದಿಕ ಮತ್ತು ಮಾನಸಿಕ ಬೆಳವಣಿಗೆಗೂ ಕಾರಣವಾಗಬೇಕು. ಅದಕ್ಕೆ ಒಳ್ಳೆಯ ಅಭ್ಯಾಸಗಳನ್ನು ಮಾಡಿಸಿ ಆದರ್ಶ ನಾಗರಿಕನನ್ನಾಗಿ ಮಾಡವುದೇ ಆದರ್ಶ ಮಾತೃತ್ವ. ಆ ದೃಷ್ಟಿಯಿಂದಾಗಿಯೇ ಸ್ತ್ರೀ ತಾನು ಮೊದಲು ಸುಶಿಕ್ಷಿತಳಾಗಿರಬೇಕು. ಮಾತೃತ್ವದ ಕಾರಣಕ್ಕಾಗಿ ಶಿಕ್ಷಣವನ್ನು ಬಿಡುವ ಆವಶ್ಯಕತೆ ಇಲ್ಲ. ಬದಲು ಅದರ  ಪೂರ್ಣತ್ವಕ್ಕಾಗಿ ಶಿಕ್ಷಣ ಪಡೆಯಬೇಕು. ಸ್ತ್ರೀಯನ್ನು ಮನೆಯಲ್ಲಿ ಕೂಡಿ ಹಾಕಿದರೆ ನೈತಿಕ ಮೌಲ್ಯಗಳನ್ನು ಕಾಪಾಡಲಾಗುವುದಿಲ್ಲ. ನೈತಿಕ ಮೌಲ್ಯಗಳನ್ನು ಸಂರಕ್ಷಿಸುವ ಕೆಲಸವನ್ನು ಯಾರೂ ಮುದ್ದಾಮಾಗಿ ಮಾಡಬೇಕಾಗಿಲ್ಲ ಅಥವಾ ಅದು ಅಷ್ಟೊಂದು ಅಶಕ್ತವಾಗಿರು ವಂಥದ್ದೂ ಅಲ್ಲ. ಕೇವಲ ನೈತಿಕ ಮೌಲ್ಯಗಳಿಗಾಗಿ ಸ್ತ್ರೀಯು ಸ್ವತಃ ಶಿಕ್ಷಣದ ಬೆಲೆಯನ್ನು ಬಿಟ್ಟುಕೊಡಬೇಕಾದ್ದು ಅನಾವಶ್ಯಕ. ಆರ್ಥಿಕ ಸ್ವಾವಲಂಬನೆಗಾಗಿಯಾದರೂ ಶಿಕ್ಷಣ ಬೇಕು. ಆದರೆ  ವ್ಯಕ್ತಿತ್ವದ ವಿಕಾಸಕ್ಕಾಗಿ ಮತ್ತು ಸಮಾಜ ಸೇವೆಗಾಗಿ ನಮ್ಮ ದೇಶದಲ್ಲಿ ಸ್ತ್ರೀ-ಶಿಕ್ಷಣಕ್ಕೆ ಬಹಳ ಪ್ರಾಧಾನ್ಯತೆಯನ್ನು ಕೊಡುವಂಥ ಅಗತ್ಯವಿದೆ. ಭಾರತೀಯ ಸ್ತ್ರೀಯರ ಒಟ್ಟು ಪರಂಪರೆಯೆಂದರೆ ಪುರುಷನಿಗೆ ಸರಿಸಮಾನವಾಗಿ ಕಾರ್ಯ ನಿರ್ವಹಿಸುವಂಥದ್ದು. ಸ್ವಾತಂತ್ರ್ಯ ಹೋರಾಟದಲ್ಲಿಯೂ ಸ್ತ್ರೀಯರು ಗಾಂಧೀಜಿಯವರ ನೇತೃತ್ವದಲ್ಲಿ ಪುರುಷರಿಗೆ ಜೊತೆಯಾಗಿ ನಿಂತಿದ್ದರು. ಜಗತ್ತಿನ ಇತಿಹಾಸದಲ್ಲಿ ಸ್ತ್ರೀಯರ ಈ ಸಹಕಾರ್ಯಕ್ಕೆ ನಿಲುಗಡೆ ಅಥವಾ ಬೇರ್ಪಡೆಯಂತೂ ಇಲ್ಲ. ಕಾರಣ ಸ್ವರಾಜ್ಯವೂ ಸುರಾಜ್ಯವಾಗಲೇ ಬೇಕೆಂದರೆ ಸ್ತ್ರೀ-ಶಿಕ್ಷಣಕ್ಕೆ ಪ್ರಾಧಾನ್ಯ ದೊರೆಯಬೇಕಾದ್ದು ಅತ್ಯವಶ್ಯ. ದೇಶದಲ್ಲಿನ ಶಿಕ್ಷಣ ಪದ್ಧತಿಯ ಯಶಸ್ಸು ಮತ್ತು ಸ್ವರೂಪದ ಮೇಲೆಯೇ ದೇಶದ ಭವಿಷ್ಯವೂ ಅವಲಂಬಿತವಾಗಿದೆ. ಒಟ್ಟು ಜನ ಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಅರ್ಧ ಭಾಗದಷ್ಟು ಸ್ತ್ರೀಯರೇ ಇದ್ದಾರೆ. ಅವರ ಶಿಕ್ಷಣದ ಮೇಲೆಯೇ ಅವಲಂಬಿತವಾಗಿದೆ ದೇಶದ ಭವಿಷ್ಯ. ಸ್ವಾತಂತ್ರ್ಯ ಮತ್ತು ಸುರಾಜ್ಯಗಳ ಬೇಡಿಕೆಯೂ ಇದರಲ್ಲಿಯೇ ಅಡಗಿರುವುದು.

ಇಪ್ಪತ್ತನೆಯ ಶತಮಾನದಲ್ಲಿಯೂ ಕೂಡ ಸ್ತ್ರೀ ಕುಟುಂಬದಲ್ಲಿ ಮತ್ತು  ಸಮಾಜದಲ್ಲಿ ವಿಮುಕ್ತಳಾಗಿ ಏಕೆ ಬದುಕಲಾಗುತ್ತಿಲ್ಲ ಎಂಬ ಕಾರಣಗಳನ್ನು ಶೋಧಿಸಬೇಕಾದ್ದು ಆವಶ್ಯಕ. ಇದಕ್ಕೆ ಕೆಲವು ಕಾರಣಗಳೂ ತಾತ್ತ್ವಿಕವಾದುವುಗಳಾದರೆ ಮತ್ತೆ ಕೆಲವು ಮಾನಸಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಯವುಗಳಾಗಿವೆ. ಸ್ತ್ರೀ-ಮುಕ್ತಿಗಾಗಿ ಇಂದು ಸಮಾಜದಲ್ಲಿ ಅನೇಕ ಬಗೆಯ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಆದರೆ ಈ ಉಪಕ್ರಮದಿಂದ ಅವಳನ್ನು ಅನ್ಯ ಯಂತ್ರಗಳಂತೆ ದುಡಿಸುವುದಕ್ಕಿಂತ, ಸ್ತ್ರೀಯರನ್ನು ಸ್ವತಃ ತಾನೇ ಜಾಗೃತಳಾಗುವಂತೆ ಮಾಡಬೇಕು. ಅವಳಲ್ಲಿನ ಅಸ್ಮಿತೆಯನ್ನು ಒಮ್ಮೆ ಜಾಗೃತಗೊಳಿಸಿದರೆ ಸಾಕು, ಅನೇಕ ಪ್ರಶ್ನೆಗಳು ತಂತಾನೆ ಪರಿಹಾರವಾಗುತ್ತವೆ. ಇನ್ನು ಹಾಗೆಯೇ ಉಳಿದ ಸಮಸ್ಯೆಗಳನ್ನು ಬಿಡಿಸುವುದಕ್ಕೂ ಸುಲಭವಾಗುತ್ತದೆ. ಸ್ತ್ರೀಯಲ್ಲಿ ಕರ್ತೃತ್ವದ ಬಗ್ಗೆ ಜಾಗೃತಿಯನ್ನು ತರುವುದು ಅತ್ಯಗತ್ಯ. ಅವಳಲ್ಲಿನ ಶಕ್ತಿಯ ಅರಿವನ್ನು ಅವಳಿಗೆ ತರುವುದರ ಮೂಲಕ, ಸ್ವತಃ ಸಾಮರ್ಥ್ಯದ ಸಾಕ್ಷಾತ್ಕಾರವನ್ನು ಅವಳಲ್ಲಿ ಉಂಟುಮಾಡಬೇಕು. ಈ ಕೆಲಸ ಸ್ವಲ್ಪ ಕಠಿಣ. ಆದರೆ ಸ್ತ್ರೀಯರಿಗೆ ಶಿಕ್ಷಣವನ್ನು ನೀಡುವ ಮೂಲಕ ಇದು ಸಾಧ್ಯವಾಗಬಹುದು. ಎಂತಲೇ ಸ್ತ್ರೀ-ಮುಕ್ತಿಯ ಪ್ರಶ್ನೆಯು ಸ್ತ್ರಿ-ಶಿಕ್ಷಣದೊಂದಿಗೆ ಸಂಬಂಧಿಸಿದುದಾಗಿದೆ ಎಂಬುದನ್ನು ಲಕ್ಷಿಸಬೇಕಾದ್ದು ಅವಶ್ಯ. ಸ್ತ್ರೀ-ಶಿಕ್ಷಣವು ಸ್ತ್ರೀ-ಸ್ವಾತಂತ್ರ್ಯದ ದೃಷ್ಟಿಯಿಂದ ಪ್ರಾಥಮಿಕ; ಆದರೆ ಅದು ಅತ್ಯಂತ ಪುಷ್ಠಿಯನ್ನು ತರುವಂತಹ ಆಧಾರಭೂತ ವಿಚಾರವೂ ಹೌದು. ಸ್ತ್ರೀ-ವಿಮುಕ್ತಿಯ ತಾತ್ತ್ವಿಕ ಪ್ರಶ್ನೆಗಳ ಚಿಂತನೆಯಿಂದಲೂ ಇದು ಸೂರ್ಯ ಪ್ರಕಾಶನದಷ್ಟೇ ಸ್ವಚ್ಚವೂ, ಸ್ಪಷ್ಟವಾದುದೂ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾದ ಅಂಶ.

ಸ್ವಾತಂತ್ರ್ಯೋತ್ತರ ಕಾಲದಲ್ಲಿ ಶಿಕ್ಷಣವು ಹೆಚ್ಚು ವಿಸ್ತಾರವಾಯಿತು. ಆಗ ಅನೇಕರ ಮನಸ್ಸಿನಲ್ಲಿ ಸ್ವಯಂ ಪ್ರತಿಷ್ಠೆಯ ಭಾವನೆಗಳು ಮೂಡಿದವು. ಆದರೆ ವಸ್ತುಸ್ಥಿತಿ ಮಾತ್ರ ಹಾಗಿರಲಿಲ್ಲ. ನಾವು ಯಾವ್ಯಾವ ಪ್ರಶ್ನೆಗಳನ್ನು ಎದುರಿಸಬೇಕಾಗಿದೆಯೋ ಅವುಗಳ ಪೈಕಿ ಮುಖ್ಯವಾದ ಪ್ರಶ್ನೆ ಎಂದರೆ, ಹೆಣ್ಣುಮಕ್ಕಳ ಅರ್ಥಾತ್ ಸ್ತ್ರೀಯರ ಶಿಕ್ಷಣ. ಹಾಗಾಗಿ ಸ್ವಾತಂತ್ರ್ಯೋತ್ತರ ಕಾಲದಲ್ಲಿ ಸ್ತ್ರೀಯರಿಗೆ ಪೋಷಕವಾಗಿ ಬಂದ ಕಾಯಿದೆಗಳು ಮತ್ತು ಅವುಗಳಿಂದ ‘ಸ್ತ್ರೀ-ಶಿಕ್ಷಣ’ಕ್ಕೆ ಪ್ರಾಪ್ತವಾದಂಥ ಗತಿ-ಇವುಗಳನ್ನು ಗಮನಿಸಿದಾಗ ‘ಸ್ತ್ರೀ- ಶಿಕ್ಷಣ’ದ ಪ್ರಶ್ನೆಯೇ ಉಳಿಯುವುದಿಲ್ಲ ಎಂಬುದಾಗಿ ಸಾಮಾನ್ಯ ಭಾವನೆ ಮೂಡುವ ಸಾಧ್ಯತೆಯು ಇದೆ. ಆದರೆ ವಸ್ತುಸ್ಥಿತಿ ಹಾಗಿಲ್ಲ. ಹೆಣ್ಣುಮಕ್ಕಳ ಶಿಕ್ಷಣದ ಬಗೆಗಿನ ಸ್ಥಿತಿಯನ್ನು ಗಮನಕ್ಕೆ ತೆಗೆದುಕೊಂಡರೆ ಸ್ವಾತಂತ್ರ್ಯೋತ್ತರ ಕಾಲದಲ್ಲಿ ಇಂದಿಗೂ ಅವರ ಶಿಕ್ಷಣದ ಸ್ವರೂಪವು ಎಷ್ಟು ಗಂಭೀರವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.