ಹೆಣ್ಣುಮಕ್ಕಳ ಪ್ರಾಥಮಿಕ ಶಿಕ್ಷಣದ ಕಡೆಗೆ ಗ್ರಾಮೀಣ ಸ್ತ್ರೀಯರ ದೃಷ್ಟಿಕೋನ

ನಮ್ಮ ದೇಶದಲ್ಲಿ ಶಾಲೆಯ ಮುಖವನ್ನೇ ನೋಡದಂಥ ಅಥವಾ ಅದರ ಮೆಟ್ಟಿಲನ್ನು ಹತ್ತದಿರುವಂಥ ಮಕ್ಕಳ ಸಂಖ್ಯೆ ಸುಮಾರು ೪ ಕೋಟಿ ೭೦ ಲಕ್ಷದಷ್ಟಿದೆ. ಇದು ೧೯೮೦-೯೦ರ ಕಾಲದ ಅಂದಾಜು ಸಂಖ್ಯೆಯಲ್ಲಿ ಸುಮಾರು ೩ ಕೋಟಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳಿದ್ದಾರೆ. ಅಂದರೆ ಮೂರನೆಯ ಎರಡು ಅಂಶಕ್ಕಿಂತಲೂ ಹೆಚ್ಚು. ಶಾಲೆಗೆ ಸೇರದಿರುವ ೧೦೦ ಮಕ್ಕಳಲ್ಲಿ ಹೆಣ್ಣುಮಕ್ಕಳ ಸಂಖ್ಯೆ ೬೫. ಪ್ರಾಥಮಿಕ ಶಿಕ್ಷಣಕ್ಕೆ ವ್ಯಾಪಕತೆಯನ್ನು ತರುವ ಉದ್ದೇಶದಿಂದ ಕಾರ್ಯಕ್ರಮ ಕೈಗೊಂಡಿರುವ ಸಮಿತಿಗಳು ೧೯೮೨-೮೩ರವರೆಗೆ ೩ ಕೋಟಿ ೨೦ ಲಕ್ಷಕ್ಕಿಂತಲೂ ಹೆಚ್ಚು ಜನರಿಗೆ ಶಿಕ್ಷಣ ನೀಡುವ ಲಕ್ಷ್ಯವನ್ನು ಹಮ್ಮಿಕೊಂಡಿತ್ತು. ಅದೇ ರೀತಿಯಲ್ಲಿ ೧೯೮೨ರಿಂದ ೮೩ರ ಅವಧಿಯಲ್ಲಿ ಶಿಕ್ಷಣ ಯೋಗ್ಯರಾದ ಮಕ್ಕಳಲ್ಲಿ ಶೇಕಡ ೫೦ರಷ್ಟು ಮಕ್ಕಳು ಶಾಲಾ ಬಾಹ್ಯವಾಗಿದ್ದು, ಅಂಶಕಾಲೀನ ದೃಷ್ಟಿಯಿಂದಲಾದರೂ ಸೇರಿಸಬೇಕೆಂದು ಸೂಚನೆಯೂ ಹೊರಟಿತ್ತು. ಆರನೆಯ ಪಂಚವಾರ್ಷಿಕ ಯೋಜನೆಯ ಅಡಿಯಲ್ಲಿ ಸುಮಾರು ೨೨ ರಾಜ್ಯಗಳು ೧ ಕೋಟಿ ೪೦ ಸಾವಿರ ಮಕ್ಕಳಿಗಾಗಿ ಇಂಥ ಶಾಲಾಬಾಹ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು. ಆ ಸಂಖ್ಯೆಯನ್ನು ಲೆಕ್ಕಕ್ಕೆ ತೆಗೆದುಕೊಂಡರೂ ಮೇಲೆ ಉಲ್ಲೇಖಿಸಿದ ಸಮಿತಿಯ ಶಿಫಾರಸ್ಸಿನ ಅನುಸಾರ ಮಕ್ಕಳ ಶಿಕ್ಷಣದ ಉದ್ದಿಷ್ಟತೆಯನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಇಂದಿನವರೆಗಿನ ಅನುಭವದ ಹಿನ್ನಲೆಯಲ್ಲಿ ಶಿಕ್ಷಣದ ವಿಷಯವಾಗಿ ಅದರಲ್ಲಿಯೂ ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣದ ವಿಷಯದಲ್ಲಿಯಂತೂ ನಿರ್ಧಾರಿತ ಗುರಿಯನ್ನು ಮುಟ್ಟುವ ಯಶಸ್ಸನ್ನು ಸಾಧಿಸಲಾಗಲಿಲ್ಲ.

೧೯೮೧ರ ಜನಗಣತಿಯ ಅನುಸಾರ ಇಂದಿಗೂ ಭಾರತದಲ್ಲಿ ಶೇಕಡ ೭೯ರಷ್ಟು ಜನರು ನಿರಕ್ಷರಿಗಳಾಗಿದ್ದಾರೆ. ಇದರರ್ಧವೆಂದರೆ ನಮ್ಮ ದೇಶದಲ್ಲಿ ಇಂದಿಗೂ ಕೂಡ ಮೂರನೆಯ ಎರಡರಷ್ಟು ಅಂಶದ ಜನತೆ ಅಜ್ಞಾನದ ಅಂಧಕಾರದಲ್ಲಿ ತೊಳಲಾಡುತ್ತಿದ್ದಾ ರೆಂಬುದು. ಸ್ತ್ರೀಯರ ಶಿಕ್ಷಣದಲ್ಲಿ ಪ್ರಗತಿಯಾಗಿದ್ದರೂ ಸಹ ೧೯೮೧ರ ಜನಗಣತಿಯ ಅನುಸಾರ ಸಾಕ್ಷರ ಸ್ತ್ರೀಯರ ಸಂಖ್ಯೆ ಪ್ರತಿ ೧೦೦೦ಕ್ಕೆ ಕೇವಲ ೨೪೯ ಮಾತ್ರ. ಗ್ರಾಮೀಣ ಭಾಗದಲ್ಲಿಯಂತೂ ಈ ಪ್ರಮಾಣ ನಿಶ್ವಿತವಾಗಿ ಇನ್ನೂ ಕಡಿಮೆಯೇ. ಭಾರತದಂತಹ ವಿಕಾಸಶೀಲ ರಾಷ್ಟ್ರಕ್ಕೆ ನಿರಕ್ಷರತೆ ಎಂಬುದು ಒಂದು ಶಾಪವೇ. ಸರ್ಕಾರವು ಪ್ರಾಥಮಿಕ ಶಿಕ್ಷಣಕ್ಕೆ ಸಾರ್ವತ್ರೀಕರಣದ ಪ್ರತಿಜ್ಞಾ ಬದ್ಧತೆಯನ್ನು ಹಮ್ಮಿಕೊಂಡಿದೆ. ಮಹಾರಾಷ್ಟ್ರದಲ್ಲಿ ಹತ್ತನೆಯ ತರಗತಿಯವರೆಗೆ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣದ ಕಾರ್ಯಕ್ರಮವನ್ನು ರೂಪಿಸಿಕೊಂಡಿದೆ. ಪ್ರಾಥಮಿಕ ಶಿಕ್ಷಣವು ಕಡ್ಡಾಯ ಮತ್ತು ಉಚಿತವಾಗಿದ್ದರೂ ಕೂಡ ಇಂದಿಗೂ ಆ ವಯಸ್ಸಿನ ಗಂಡು-ಹೆಣ್ಣು ಮಕ್ಕಳು ಬಹುದೊಡ್ಡ ಸಂಖ್ಯೆಯಲ್ಲಿ ಶಿಕ್ಷಣ ವ್ಯವಸ್ಥೆಯಿಂದ ಹೊರಗಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳ ಶಿಕ್ಷಣದ ವಿಷಯದಲ್ಲಿ ನಿರಾಶಾಜನಕ ಸಂಗತಿಯೇ ಇದೆ. ಪಾಲಕರ ಅಜ್ಞಾನ, ದಾರಿದ್ರ್ಯ, ಅಲ್ಪವೇತನದ ಮೇಲೆ ಮಕ್ಕಳನ್ನು ದುಡಿಸುವ ಅಗತ್ಯ, ಮನೆಯ ಅಡಚಣೆಗಳು, ಚಿಕ್ಕಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ, ಹೊಲದ ಕೆಲಸ ಮತ್ತು ದನಕರುಗಳ ಪಾಲನೆ ಇತ್ಯಾದಿ ಕಾರಣಗಳಿಗಾಗಿ ಹೆಣ್ಣುಮಕ್ಕಳು ಶಾಲೆಗೆ ಹೋಗದಿರುವುದು ಮತ್ತು ಹೋದರೂ ಮಧ್ಯದಲ್ಲಿಯೇ ಬಿಟ್ಟುಬಿಡುವುದು ಸಾಮಾನ್ಯವಾಗಿದೆ. ಕೊಠಾರಿ ಆಯೋಗದ ಅಭಿಪ್ರಾಯದಂತೆ ಗಂಡುಮಕ್ಕಳಿಗೆ ಪ್ರಾಥಮಿಕ ಶಿಕ್ಷಣಕ್ಕೆ ಕಳಿಸುವ ವಿಚಾರದಲ್ಲಿ ಬೆಳವಣಿಗೆ ಉಂಟಾಗಿದೆ. ಶೇ. ೯೦ರಷ್ಟು ಮಕ್ಕಳ ಹೆಸರನ್ನು ಪ್ರಾಥಮಿಕ ಶಾಲೆಗಳಲ್ಲಿ ನೊಂದಾಯಿಸುವುದು ಕಂಡು ಬಂದಿರುವ ಮುಖ್ಯ ಸಂಗತಿ. ಆದರೆ ಶಾಲೆಯ ಮೆಟ್ಟಿಲನ್ನು ಹತ್ತದಿರುವ ಹೆಣ್ಣುಮಕ್ಕಳ ಸಂಖ್ಯೆ ಮಾತ್ರ ಬಹಳೇ ದೊಡ್ಡದು. ಆ ದೃಷ್ಟಿಯಿಂದ ಗ್ರಾಮೀಣ ಸ್ತ್ರೀಯರು ತಮ್ಮ ಹೆಣ್ಣುಮಕ್ಕಳ ಶಿಕ್ಷಣದ ಕಡೆಗೆ ನೋಡುವ ದೃಷ್ಟಿಕೋನ ಬಹಳ ಮಹತ್ವದ್ದಾಗಿಯೇ ಕಾಣುತ್ತದೆ. ಅದನ್ನು ಅಧ್ಯಯನ ಮಾಡುವ ಪ್ರಯತ್ನಗಳೂ ನಡೆದಿವೆ.

ಕೊಲ್ಹಾಪುರ ಜಿಲ್ಲೆಯ ಭುದರಗಡೆ ತಾಲೂಕಿನಲ್ಲಿಯ ಗಾರಗೋಟಿ ಮತ್ತು ಮಡೂರ ಎಂಬೆರಡು ಊರುಗಳನ್ನು ಸದರಿ ಸಂಶೋಧನೆಗಾಗಿ ಆರಿಸಿಕೊಳ್ಳಲಾಗಿತ್ತು. ಈ ಎರಡೂ ಊರುಗಳಲ್ಲಿನ ಸ್ತ್ರೀಯರನ್ನು ಆರಿಸುವಾಗ ಸ್ತರದ ಪದ್ಧತಿಯನ್ನು ಉಪಯೋಗಿಸಿಕೊಂಡಿದ್ದೆನು. ಊರಿನಲ್ಲಿನ ಪ್ರತಿಯೊಬ್ಬರನ್ನೂ ಸೇರಿಸಿಕೊಂಡಂತೆ ೨೫ರ ಪ್ರಮಾಣದಲ್ಲಿ ಒಟ್ಟು ೫೦ ಜನ ಸ್ತ್ರೀಯರನ್ನು ಆರಿಸಲಾಗಿತ್ತು. ಪ್ರಶ್ನಾವಳಿಯ ಆಧಾರದ ಮೇಲೆ ಅವರು ತಮ್ಮ ಹೆಣ್ಣುಮಕ್ಕಳ ಪ್ರಾಥಮಿಕ ಶಿಕ್ಷಣದ ಬಗ್ಗೆ ಹೊಂದಿರುವ ದೃಷ್ಟಿಕೋನವೇನೆಂಬುದನ್ನು ಅಭ್ಯಸಿಸುವ ಪ್ರಯತ್ನ ಮಾಡಿದ್ದೆನು. ಅದರ ಪ್ರಮುಖ ಉದ್ದೇಶಗಳು ಏನೆಂಬುದು ಈ  ಕೆಳಗಿನಂತೆ ಸ್ಪಷ್ಟವಾದವು:

ಅ) ಗ್ರಾಮೀಣ ಭಾಗದಲ್ಲಿನ ಸ್ತ್ರೀಯರು ತಮ್ಮ ಪುತ್ರಿಯರ ಪ್ರಾಥಮಿಕ ಶಿಕ್ಷಣದ ಬಗ್ಗೆ ಹೊಂದಿರುವ ದೃಷ್ಟಿಕೋನವನ್ನು ಅಭ್ಯಸಿಸುವುದು.

ಬ) ೧. ಊರಿನಲ್ಲಿ ಇರುವ ಶಿಕ್ಷಣ ವ್ಯವಸ್ಥೆಯ ಅನುಕೂಲತೆ
೨. ಸ್ತ್ರೀಯರ ಶೈಕ್ಷಣಿಕ ದರ್ಜೆ

ಕ) ಕುಟುಂಬದಲ್ಲಿನ ಮಕ್ಕಳ ಸಂಖ್ಯೆ ಮತ್ತು ಆರ್ಥಿಕ ಸ್ತರ

ಈ ಮೂರು ಪ್ರಮುಖ ಅಂಶಗಳ ಅನುಸಾರ ಸ್ತ್ರೀಯರನ್ನು ವರ್ಗವಾಗಿ ವಿಂಗಡಿಸಿ ಅವರ ಪುತ್ರಿಯರ ಪ್ರಾಥಮಿಕ ಶಿಕ್ಷಣದ ಬಗೆಗಿನ ದೃಷ್ಟಿಕೋನವನ್ನು ಅರಿಯುವುದು. ಪ್ರಶ್ನಾವಳಿಯ ಆಧಾರದಿಂದ ಮೇಲಿನ ಮುಖ್ಯ ಉದ್ದೇಶಗಳ ಹಿನ್ನೆಲೆಯಲ್ಲಿ ಸಂಶೋಧನ ನಿಬಂಧವೊಂದನ್ನು ರಚಿಸಲಾಯಿತು. ಯಾವ ಅರ್ಧದಿಂದ ಶಿಕ್ಷಣದ ವಿಷಯವಾಗಿನ ಲಭ್ಯ ಸಂಕಲ್ಪನೆಗಳನ್ನು ಉಪಯೋಗಿಸಲಾಯಿತು ಎಂಬುದರ ವಿವೇಚನೆ ಇಂತಿದೆ:

. ಉಪಲಬ್ಧವಿರುವ ಶಿಕ್ಷಣದ ಅನುಕೂಲತೆ: ಇದರಲ್ಲಿ ಶಾಲೆಯ ಕಟ್ಟಡ ಮತ್ತು ಪರಿಸರ, ಮನೆಗೂ ಶಾಲೆಗೂ ಇರುವ ಅಂತರ, ಶಿಕ್ಷಕರ ಸಂಖ್ಯೆ ಮತ್ತು ವರ್ತನೆ, ಇತರೆ ಉಪಕ್ರಮ ಮತ್ತು ಕಾರ್ಯಕ್ರಮಗಳೇ ಮೊದಲಾದ ವಿಷಯಗಳ ಸಂಬಂಧವಾಗಿ ವಿಚಾರ ಮಾಡಲಾಯಿತು.

. ಸ್ತ್ರೀಯರ ಶೈಕ್ಷಣಿಕ ದರ್ಜೆ: ಇದರಲ್ಲಿ ಶಿಕ್ಷಣದ ಕಕ್ಷೆಯನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆ ಕೇವಲ ಸಾಕ್ಷರ ಮತ್ತು ನಿರಕ್ಷರ ಎಂಬುದಾಗಿ ವರ್ಗೀಕರಣ ಮಾಡಲಾಯಿತು. ಉಚ್ಚ ಶಿಕ್ಷಣವನ್ನು ಹೊಂದಿರುವ ಗ್ರಾಮೀಣ ಸ್ತ್ರೀಯರನ್ನು ಈ ಸಂದರ್ಭದಲ್ಲಿ ಪರಿಗಣಿಸಿರುವುದಿಲ್ಲ.

. ಆರ್ಥಿಕ ಸ್ತರ: ಸ್ತ್ರೀಯರ ಕುಟುಂಬದ ಮಾಸಿಕ ಉತ್ಪನ್ನವನ್ನು ಇಲ್ಲಿ ಮುಖ್ಯವಾಗಿ ಲಕ್ಷ್ಯಕ್ಕೆ ತೆಗೆದುಕೊಳ್ಳಲಾಗಿದೆ. ಉಚ್ಚಸ್ತರ ಎಂದರೆ ೧೫೦೦-೦೦ ರೂಪಾಯಿಗಳಿಂದ ೨೦೦೦-೦೦ ರೂಪಾಯಿಗಳವರೆಗಿನ ಮಾಸಿಕ ಉತ್ಪನ್ನ ಹೊಂದಿರುವವರು. ಮಧ್ಯಮ ಸ್ತ್ರೀ ಎಂದರೆ ೫೦೦-೦೦ ರೂಪಾಯಿಗಳಿಂದ ೧೦೦೦-೦೦ ರೂಪಾಯಿಗಳವರೆಗೆ ಮಾಸಿಕ ಉತ್ಪನ್ನ ಉಳ್ಳವರು. ಇನ್ನು ಕನಿಷ್ಠ ಸ್ತ್ರೀ ಎಂದರೆ ಮಾಸಿಕ ೫೦೦-೦೦ ರೂಪಾಯಿಗಳು ಇಲ್ಲವೆ ಅದಕ್ಕಿಂತಲೂ ಕಡಿಮೆ ಆದಾಯ ಹೊಂದಿರುವವರು.

ಮೇಲಿನ ಅಂಶಗಳ ಆಧಾರದ ಮೇಲೆ ಈ ಕೆಳಗಿನಂತೆ ಗ್ರಾಮೀಣ ಸ್ತ್ರೀಯರ ವರ್ಗೀಕರಣವನ್ನು ಕೋಷ್ಠಕ ರೂಪದಲ್ಲಿ ಗುರುತಿಸಬಹುದು.

ಗ್ರಾಮೀಣ ಸ್ತ್ರೀಯರ ನಿರಕ್ಷಾನುಸಾರ ವರ್ಗೀಕರಣ

ಸಂಖ್ಯೆ

ಘಟಕ

ವರ್ಗೀಕರಣ

ಸ್ತ್ರೀಯರ ಸಂಖ್ಯೆ

೧. ಉಪಲಬ್ಧ ಶಿಕ್ಷಣದ ಅನುಕೂಲತೆ ಅ. ಚೆನ್ನಾಗಿದೆ ೨೫
ಬ. ಕನಿಷ್ಠ ೨೫
೨. ಸ್ತ್ರೀಯರ ಶೈಕ್ಷಣಿಕ ದರ್ಜೆ ಅ. ಸಾಕ್ಷರತೆ ೧೮
ಬ. ನಿರಕ್ಷರತೆ ೧೮
೩. ಹೆಣ್ಣುಮಕ್ಕಳ ಸಂಖ್ಯೆ ೧-೩  ೧೮
೪-೫ ೨೦
೬-೮ ೧೨
೪. ಆರ್ಥಿಕ ಸ್ತರ ಉಚ್ಚ ೦೯
ಮಧ್ಯಮ ೧೫
ಕನಿಷ್ಠ ೩೬

ಆರಿಸಿದ ಸ್ತ್ರೀಯರನ್ನು ಪ್ರತ್ಯಕ್ಷವಾಗಿ ಭೇಟಿಯಾಗಿ ಪ್ರಶ್ನಾವಳಿಯನ್ನು ಆಧಾರವಾಗಿಟ್ಟು ಕೊಂಡು ಮಾಹಿತಿ ಸಂಗ್ರಹಿಸಲಾಯಿತು. ಅದರಿಂದ ದತ್ತವಾದ ನಿಷ್ಕರ್ಷೆಗಳು ಈ ಕೆಳಗಿನಂತೆ ಇವೆ:

೧. ಆಯ್ದ ೫೦ ಮಂದಿ ಗ್ರಾಮೀಣ ಸ್ತ್ರೀಯರ ಪೈಕಿ ೩೨ ಸ್ತ್ರೀಯರ ಅಭಿಪ್ರಾಯದಂತೆ ಹೆಣ್ಣುಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಕೊಡುವುದರಿಂದ ಅನುಕೂಲವಾಗುತ್ತದೆ. ಅವರಿಗೆ ಪ್ರಾಥಮಿಕ ಶಿಕ್ಷಣದ ಮಹತ್ವ ತಿಳಿದಿತ್ತು ಎಂಬುದು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. ಶಿಕ್ಷಣಕ್ಕಾಗಿ ಯಾವುದೇ ಫಿಜು ಇಲ್ಲದಿರುವುದು ಮತ್ತು ಖರ್ಚಿನ ಭಾರವೂ ಬೀಳದಿರುವುದು ಇವರ ಇಷ್ಟದ ಪ್ರಮುಖ ಕಾರಣ. ಅಲ್ಲದೆ ಊರಿನಲ್ಲಿಯೇ ಪ್ರಾಥಮಿಕ ಶಾಲೆಯು ಇರುವುದು ಮತ್ತು ಮನೆಗೆ ಅದು ಬಹಳ ಹತ್ತಿರದಲ್ಲಿಯೇ ಇರುವುದು ಹೆಣ್ಣುಮಕ್ಕಳಿಗೆ ಸಹಜವಾಗಿ ಶಾಲೆಗೆ ಕಳುಹಿಸುವುದಕ್ಕೆ ಸಾಧ್ಯವಾಗುತ್ತದೆ. ಅಂದರೆ ಅರಿವು, ಖರ್ಚು ಮತ್ತು ಅನುಕೂಲತೆ ಈ ಮೂರು ನೆಲೆಗಳಿಂದ ವಿಚಾರ ಮಾಡಿದಾಗ ಹೆಣ್ಣುಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ನೀಡುವ ಅನುಕೂಲತೆಯು ಅವರಲ್ಲಿ ಕಂಡಬಂದಿತು. ಆದರೆ ಶಿಕ್ಷಕ ಎಂಬ ಘಟಕದ ವಿಷಯದಲ್ಲಿ ಶೇ. ೫೦ ರಷ್ಟು ಸ್ತ್ರೀಯರು ವಿರೋಧವನ್ನು ವ್ಯಕ್ತಪಡಿಸಿದರು. ಅಂತೆಯೇ ಅಷ್ಟೇ ಸಂಖೆಯ ಜನರು ಅನುಕೂಲ ದೃಷ್ಟಿಕೋನದಿಂದಲೇ ಅಭಿಪ್ರಾಯ ಮಂಡಿಸಿದರು. ಶಿಕ್ಷಕರ ವಿಷಯವಾಗಿನ ವಿರೋಧದಲ್ಲಿ ಶೈಕ್ಷಣಿಕ ದರ್ಜೆ, ಎರಡು ಕುಟುಂಬಗಳ ನಡುವಣ ಕಲಹ, ಮಕ್ಕಳ ಬಗೆಗಿನ ಅವಸ್ಥೆ, ಶಾಲೆಯಲ್ಲಿನ ಮಕ್ಕಳ ಜಗಳ, ಅವರು ಮೇಲಿಂದ ಮೇಲೆ ರಜೆ ಹೋಗುವುದು, ಮಕ್ಕಳನ್ನು ಹದ್ದುಬಸ್ತಿನಲ್ಲಿ ಇಡವಲ್ಲಿ ಅವರ ಅಪಯಶಸ್ಸು, ಬೋಧಿಸುವ ವಿಷಯದಲ್ಲಿನ ತಕರಾರು ಇತ್ಯಾದಿ ಹಲವು ಕಾರಣಗಳಿರುವುದು ಗಮನಕ್ಕೆ ಬಂದಿತು.

೨. ಗಾರಗೋಟಿ ಎಂಬ ಊರಿನಲ್ಲಿ ಮೌನಿ ವಿದ್ಯಾಪೀಠ ಎಂಬ ಶಿಕ್ಷಣ ಕೇಂದ್ರವಿದೆ. ಅಲ್ಲಿ ಬೇರೆ ಬೇರೆ ಸ್ತರಗಳಲ್ಲಿ ಹದಿನಾಲ್ಕು ಸಂಸ್ಥೆಗಳು ಜ್ಞಾನದಾನದ ಕೆಲಸವನ್ನು ಮಾಡುತ್ತಲಿವೆ. ಬಾಲವಾಡಿಯಿಂದ ಹಿಡಿದು ಪಿಎಚ್.ಡಿ. ಪದವಿಯವರೆಗೂ ಶಿಕ್ಷಣ ನೀಡುವಂಥ ಕೇಂದ್ರಗಳಾಗಿರುವುದರಿಂದ ಆ ಶೈಕ್ಷಣಿಕ ವಾತಾವರಣದ ಪರಿಣಾಮವು  ಗ್ರಾಮೀಣ ಸ್ತ್ರೀಯರ ಮೇಲೆ ಗಂಭೀರವಾಗಿ ಆಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಈ ಊರಿನಲ್ಲಿಯ ಎಲ್ಲಾ ಸ್ತ್ರೀಯರೂ ತಮ್ಮ ಪುತ್ರಿಯರಿಗೆ ಪ್ರಾಥಮಿಕ ಶಿಕ್ಷಣವನ್ನು ನೀಡವುದು ಹೆಚ್ಚು ಅನುಕೂಲವೆಂದೇ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ. ಅಲ್ಲದೆ ಈ ವಿದ್ಯಾಪೀಠದಲ್ಲಿನ ಶೈಕ್ಷಣಿಕ ದರ್ಜೆಯು ಉನ್ನತ ಮಟ್ಟದ್ದಾಗಿದೆ. ಗ್ರಾಮೀಣ ಸ್ತ್ರೀಯರ ಹೆಣ್ಣುಮಕ್ಕಳ ಶಿಕ್ಷಣದ  ಬಗ್ಗೆ ಅಲ್ಲಿನ ದೃಷ್ಟಿಕೋನವೂ ಅನುಕೂಲಕಾರಿಯೇ ಆಗಿದೆ. ಕೆಳಗಿನ ಕೋಷ್ಠಕವು ನೀಡುವ ಮಾಹಿತಿ ಸಮರ್ಧತೆಯನ್ನು ಉಳ್ಳುದಾಗಿದೆ.

ಶಿಕ್ಷಣ ಸೌಲಭ್ಯದ ಉಪಲಬ್ಧತೆಯ ಪರಿಣಾಮ ಮತ್ತು ಸ್ತ್ರೀಯರ ದೃಷ್ಟಿಕೋನ

ಊರು 

ಶಿಕ್ಷಣ ಸಂಬಂಧಿ 
ಸೌಲಭ್ಯ

ಊರಿನ ಒಟ್ಟಾರೆ   ಮಹಿಳೆಯರು

ಶಿಕ್ಷಣ ಸಂಬಂಧಿ ಅನುಕೂಲ ದೃಷ್ಟಿ ಕೋನವನ್ನು ವ್ಯಕ್ತಪಡಿಸಿದ ಶೇಕಡವಾರು ಸ್ತ್ರೀಯರು

ಗಾರಗೋಟಿ ಬಾಲವಾಡಿಯಿಂದ ಪಿಎಚ್.ಡಿ ಪದವಿಯ ವರೆಗಿನ ಶಿಕ್ಷಣದ

ಉಪಲಬ್ದತೆ

    ೨೫ ಶೇ. ೯೬ (೨೪)
   
ಮಡೂರು ಪ್ರಾಥಮಿಕ ಶಾಲೆ     ೨೫ ಶೇ. ೩೨ (೮)

ಈ ರೀತಿಯಲ್ಲಿ ಶಿಕ್ಷಣದ ಸೌಲಭ್ಯ ಆವಶ್ಯಕವಾದುದು ಎಂಬುದನ್ನು ಗಮನಕ್ಕೆ ತೆಗೆದುಕೊಂಡು ತಮ್ಮ ಹೆಣ್ಣುಮಕ್ಕಳ ಶಿಕ್ಷಣ ಸಂಬಂಧಿ ಧೋರಣೆ ಮತ್ತು ಪ್ರಗತಿಯ ಬಗ್ಗೆ ವಿಚಾರ ಮಾಡವುದಕ್ಕೆ ಇಷ್ಟಪಟ್ಟಿರುತ್ತಾರೆ.

೩. ಗ್ರಾಮೀಣ ಭಾಗದಲ್ಲಿ ಸ್ತ್ರೀಯರ ಸಾಕ್ಷರತೆಯ ಘಟಕವೂ ಕೂಡ ಹೆಣ್ಣುಮಕ್ಕಳ ಶಿಕ್ಷಣದ ಬಗೆಗಿನ ಧೋರಣೆ ಮತ್ತು ಪ್ರಗತಿಯ ಬಗ್ಗೆ ವಿಚಾರ ಮಾಡುವಲ್ಲಿ ಅತ್ಯಂತ ಜವಾಬ್ದಾರಿಯುತವಾಗಿರುತ್ತದೆ.

ಅಕ್ಷರಸ್ಥ ಸ್ತ್ರೀಯರು ತಮ್ಮ ಹೆಣ್ಣುಮಕ್ಕಳ ಪ್ರಾಥಮಿಕ ಶಿಕ್ಷಣದ ಬಗ್ಗೆ  ನಿಶ್ಚಿತವಾಗಿ ಪೋತ್ಸಾಹಿಸಿ ಅದರ ಆವಶ್ಯಕತೆಯನ್ನು ಪ್ರಪಾದಿಸಿದ್ದಾರೆ. ಆದರೆ ಅನಕ್ಷರಸ್ಥ ಸ್ತ್ರೀಯರಿಗೆ ಅದರ ಮಹತ್ವವೇನೆಂಬುದು ಅರಿವಾಗಿದ್ದರೂ ಅದು ಅತ್ಯಂತ ಆವಶ್ಯಕವಾದುದು, ಅದಕ್ಕಾಗಿ ಬರುವ ಅಡಚಣೆಗಳನ್ನೆಲ್ಲ ಹಿಂದಕ್ಕೆ ನೂಕಿ ಅದನ್ನು ಪಡೆಯಲೇಬೇಕು ಎಂಬುದು ಭಾಸವಾಗಿಲ್ಲ. ಮುಂದಿನ ಕೋಷ್ಠಕದಲ್ಲಿನ ವಿವರಗಳಿಂದ ಈ ಘಟಕದ ಪರಿಣಾಮವು ಲಕ್ಷ್ಯಕ್ಕೆ ಬರಬಹುದು.

ಮಹಿಳೆಯರ ಸಾಕ್ಷರತೆಯನುಸಾರ ಹೆಣ್ಣುಮಕ್ಕಳ ಶಿಕ್ಷಣ ಸಂಬಂಧಿ ಅಂಶಗಳು

ಶೈಕ್ಷಣಿಕ ದರ್ಜೆ

ಗ್ರಾಮೀಣ ಮಹಿಳೆಯರ  ಅಂದಾಜು ಸಂಖ್ಯೆ

ಅನುಕೂಲಕರ ದೃಷ್ಟಿಕೋನವನ್ನು ವ್ಯಕ್ತಪಡಿಸಿದ ಶೇಕಡಾವಾರು ಮಹಿಳೆಯರು

ಅಕ್ಷರಸ್ಥರು       ೧೮ ಶೇ.೧೦೦
ಅನಕ್ಷರಸ್ಥರು       ೩೨ ಶೇ. ೪೩.೭

ಇದರನುಸಾರ ತಾಯಿಯೇ ಅಕ್ಷರದ ಅಗತ್ಯವನ್ನು ಮನಗಂಡು ಆ ದೃಷ್ಟಿಯಿಂದ ಪ್ರಾಥಮಿಕ ಶಿಕ್ಷಣದ ವಿಸ್ತಾರದೊಂದಿಗೆ ಪ್ರೌಢ ಅನಕ್ಷರಸ್ಥ ಮಹಿಳೆಯರಿಗೆ ಸಾಕ್ಷರತೆಯ ಮಹತ್ವವನ್ನು ಅರಿವಿಗೆ ಬರುವಂತೆ ಮಾಡಬೇಕಾದ್ದು ಆವಶ್ಯಕವೆನಿಸುತ್ತದೆ.

೪. ಮಹಿಳೆಯ ಆರ್ಥಿಕ ಸ್ತರಕ್ಕೆ ಸಂಬಂಧಿಸಿದಂತೆ ಕಂಡುಬಂದಿರುವ ಸಂಗತಿಯೇನೆಂದರೆ, ಉತ್ಪನ್ನಕ್ಕೆ ಅನುಸಾರವಾಗಿಯೇ ಹೆಣ್ಣುಮಕ್ಕಳ ಪ್ರಾಥಮಿಕ ಶಿಕ್ಷಣದ ಅನುಕೂಲತೆ ಮತ್ತು ಪ್ರತಿಕೂಲತೆಯು ಅವಲಂಬಿತವಾಗಿರುವುದಿಲ್ಲ. ಆರ್ಥಿಕ ದೃಷ್ಟಿಯಿಂದ ನೋಡಿದರೆ ಕುಟುಂಬದ ಮೇಲೆ ಪ್ರಾಥಮಿಕ ಶಿಕ್ಷಣದ ಭಾರವು ಬೀಳುವುದಿಲ್ಲ. ಅಲ್ಲದೆ ಮಹಾರಾಷ್ಟ್ರ ರಾಜ್ಯ ಪಠ್ಯಪುಸ್ತಕ ನಿರ್ಮಿತ ಮತ್ತು ಅಧ್ಯಯನ ಕ್ರಮ ಸಂಶೋಧನ ಮಂಡಳಿಯು ಕಡಿಮೆ ಬೆಲೆಯಲ್ಲಿ ಪಠ್ಯಪುಸ್ತಕಗಳನ್ನು ಒದಗಿಸಿಕೊಡುತ್ತಿದೆ. ಹಾಗಾಗಿ ಹೆಣ್ಣುಮಕ್ಕಳ ಪ್ರಾಥಮಿಕ ಶಿಕ್ಷಣದ ಸಂದರ್ಭದಲ್ಲಿ ಪ್ರತಿಕೂಲ ದೃಷ್ಟಿಯಿಂದ ಅಭಿಪ್ರಾಯ ಹೇಳಿದ ಮಹಿಳೆಯರ ಒಂದೂ ಉದಾಹರಣೆಗಳು ಸಿಕ್ಕಲಿಲ್ಲ. ಇದರರ್ಧವೆಂದರೆ ಉಚಿತ ಶಿಕ್ಷಣವು ಗ್ರಾಮೀಣ ಮಹಿಳೆಯರ ದೃಷ್ಟಿಯಿಂದ ಉತ್ತೇಜನಕಾರಿ. ಒಂದೊಮ್ಮೆ ಈ ಸವಲತ್ತುಗಳನ್ನು ನಿಲ್ಲಿಸಿದರೆ ಮಾತ್ರ ಅವರ ಶಿಕ್ಷಣದ ವಿಸ್ತರಣೆಯ ಮೇಲೆ ಅನಿಷ್ಟ ಪರಿಣಾಮವು ಉಂಟಾಗುತ್ತದೆ.

೫. ಅತ್ಯಂತ ಮಹತ್ವದ ಅಂಶವೆಂದರೆ, ಕುಟುಂಬದಲ್ಲಿನ ಗಂಡುಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾದಂತೆಯೇ ಹೆಣ್ಣುಮಕ್ಕಳ ಶಿಕ್ಷಣದ ವಿಷಯವಾಗಿ ಇರುವ ದೃಷ್ಟಿಕೋನದಲ್ಲಿಯೂ ಸಕಾರಾತ್ಮಕ ಧೋರಣೆಯು ಆರಂಭವಾಗಿರುವುದು. ತಮ್ಮ ಹೆಣ್ಣುಮಕ್ಕಳ ಪ್ರಾಥಮಿಕ ಶಿಕ್ಷಣದ ಬಗ್ಗೆ ಅನುಕೂಲಕರ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಬಹುತೇಕ ಸ್ತ್ರೀಯರಿಗೆ ಕಡಿಮೆ ಸಂಖ್ಯೆಯ ಗಂಡು ಮಕ್ಕಳಿದ್ದವು. ಈ ಹಿನ್ನೆಲೆಯಲ್ಲಿ ಈ ಕೆಳಗಿನ ಕೋಷ್ಠಕವನ್ನು ಗಮನಿಸಬಹುದು.

ಗಂಡುಮಕ್ಕಳ ಸಂಖ್ಯೆಯನುಸಾರ ಸ್ತ್ರೀಯರ ಬದಲಾಗಿರುವ ದೃಷ್ಟಿಕೋನ

ಗಂಡಮಕ್ಕಳ ಸಂಖ್ಯೆ

ಸ್ತ್ರೀಯರು

ಅನುಕೂಲ ದೃಷ್ಟಿಕೋನವನ್ನು ವ್ಯಕ್ತಪಡಿಸಿರುವ ಶೇ.ವಾರು ಸ್ತ್ರೀಯರು

೧-೩   ೧೮ ೯೪.೪ (೧೭)
೪-೫   ೨೦ ೫೦.೦೦ (೧೦)
೫ಕ್ಕಿಂತಲೂ ಹೆಚ್ಚು   ೧೨ ೪೧.೭ (೫)

ಇದರರ್ಧವೆಂದರೆ, ಕುಟುಂಬವು ದೊಡ್ಡದಾಗಿ ಬೆಳೆದಂತೆಲ್ಲ ಮತ್ತು ಎರಡು ಮಕ್ಕಳ ನಡುವೆ ಅಂತರ ಕಡಿಮೆಯಾಗಿದ್ದರೆ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಮಹಿಳೆಯರಲ್ಲಿ ಉದಾಸೀನತೆಯ ಪ್ರವೃತ್ತಿಯು ಬೆಳೆಯುತ್ತದೆ.

ಮೇಲಿನ ನಿಷ್ಕರ್ಷೆಯು ಪ್ರಾತಿನಿಧಿಕ ಮತ್ತು ಗಂಭೀರ ಸಂಶೋಧನೆಯ ಆಧಾರದ ಮೇಲೆಯೇ ರೂಪುಗೊಂಡಿರುವುದಾಗಿದೆ. ಆದರೂ ಹೆಣ್ಣುಮಕ್ಕಳ ಪ್ರಾಥಮಿಕ ಶಿಕ್ಷಣದ ವೇಗವನ್ನು ಬೆಳೆಸುವ ದೃಷ್ಟಿಯಿಂದ ಮತ್ತು ಶಿಕ್ಷಣದ ಬಗೆಗಿನ ಧೋರಣೆಯನ್ನು ನಿರ್ಧರಿಸುವ ಬಗ್ಗೆಯೂ ಒಂದು ಮಾರ್ಗವನ್ನು ನಿರೂಪಿಸಿರುತ್ತದೆ. ಈ ಊಹೆಗನುಸಾರ ಮುಂದಿನ ವಿವೇಚನೆಯು ಶೈಕ್ಷಣಿಕ ಕ್ಷೇತ್ರದ ಮಾರ್ಗದರ್ಶಕ ಸೂತ್ರಗಳಾಗಿ ಉಪಯುಕ್ತವಾಗಬಹುದು.

೧. ಗ್ರಾಮೀಣ ಸ್ತ್ರೀಯರು ಹೆಣ್ಣುಮಕ್ಕಳ ಪ್ರಾಥಮಿಕ ಶಿಕ್ಷಣದೆಡೆ ನೋಡುವ ದೃಷ್ಟಿಕೋನದಲ್ಲಿ ಮೊದಲಿಗಿಂತಲೂ ಬದಲಾಗಿದ್ದು ಅನುಕೂಲತೆಯು ಉಂಟಾಗಿದೆ. ಹಳ್ಳಿಗಾಡುಗಳಲ್ಲಿ ಮನೆಗಳಿಗೆ ಹತ್ತಿರವಾಗಿ ಪ್ರಾಥಮಿಕ ಶಾಲೆಗಳು ಆರಂಭವಾಗಿರುವು ದರಿಂದ ಬಾಗಿಲಿನವರೆಗೂ ಪ್ರಾಥಮಿಕ ಶಿಕ್ಷಣವು ತಲುಪಿದೆ. ಉಚಿತ ಶಿಕ್ಷಣದೊಂದಿಗೆ ಸರಕಾರವು ಶಿಕ್ಷಣದ ವಿಷಯವಾಗಿ ಕಾರ್ಯಕ್ರಮಗಳನ್ನು ರೂಪಿಸುವಾಗ ಹಳ್ಳಿಗಾಡುಗಳು, ತಾಂಡಾಗಳು, ಮತ್ತಿತರೆ ಸಣ್ಣಪುಟ್ಟವುಗಳನ್ನು ಕೇಂದ್ರಬಿಂದುವಾಗಿ ಭಾವಿಸಿ ಶಿಕ್ಷಣವನ್ನು  ವಿಸ್ತರಿಸಲು ಯತ್ನಿಸುವುದು ಆವಶ್ಯಕ. ಅಲ್ಲದೆ ಶಿಕ್ಷಕರ ನೇಮಕಾತಿ, ಶಾಲೆಯ ಕಟ್ಟಡ ಮತ್ತು ಇತರೆ ವೆಚ್ಚಗಳ ಬಗೆಯೂ ಕುಂಠಿತ ಧೋರಣೆಯನ್ನು ತಾಳಬಾರದು. ಈ ಯೋಜನೆಯನ್ನು ರೂಪಿಸುವಾಗ ಶಿಕ್ಷಣ ತಜ್ಞರು ಮತ್ತು ಗ್ರಾಮೀಣ ಶಿಕ್ಷಣ ಕ್ಷೇತ್ರದಲ್ಲಿ ನೇರವಾಗಿ ಪಾಲ್ಗೊಂಡು ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು, ಪಾಲಕರು, ಕಾರ್ಯಕರ್ತರ ವ್ಯಾವಹಾರಿಕ ಅಡಚಣೆಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕು.

೨. ಆಯ್ದ ಶೇ. ೫೦ರಷ್ಟು, ಗ್ರಾಮೀಣ ಸ್ತ್ರೀಯರು ವ್ಯಕ್ತಪಡಿಸಿದ ಶಿಕ್ಷಕರ ಸಂಬಂಧವಾದ ಪ್ರತಿಕೂಲ ದೃಷ್ಟಿಕೋನವನ್ನು ಮುಖ್ಯವೆಂದೇ ಪರಿಗಣಿಸಬೇಕಾಗುತ್ತದೆ. ಶಿಕ್ಷಕರು ವೇಳೆಗೆ ಸರಿಯಾಗಿ ಉಪಸ್ಥಿತರಿರುವುದು ಅವಶ್ಯ. ಅವರು ಪಾಲಕರೊಂದಿಗೆ ಮಾತನಾಡಿ ಶಿಕ್ಷಣದ ಬಗ್ಗೆ ಅವರಲ್ಲಿ ಜಾಗರೂಕತೆಯನ್ನು ನಿರ್ಮಾಣ ಮಾಡುವಂಥ ಪ್ರಯತ್ನವನ್ನು ಮಾಡಬೇಕು. ಶಿಕ್ಷಕರು ಶೈಕ್ಷಣಿಕ ಮತ್ತು ನೈತಿಕ ಮೌಲ್ಯಗಳನ್ನು ಪಾಲಿಸುವುದಲ್ಲದೆ ತಮ್ಮ ಶಿಕ್ಷಕಿ ಸಹೋದ್ಯೋಗಿಗಳೊಂದಿಗೆ ಪ್ರಾಮಾಣಿಕರಾಗಿದ್ದು ಶೈಕ್ಷಣಿಕ ಪಾವಿತ್ರ್ಯತೆಯನ್ನು ಹೆಚ್ಚಿಸಲು ಪ್ರಯತ್ನಿಸಬೇಕು. ಶಿಕ್ಷಕ-ಪಾಲಕರ ಸಂಘವನ್ನು ಸ್ಥಾಪಿಸಿ ಪಾಲಕರೊಂದಿಗೆ ಸುಸಂವಾದವನ್ನು ಏರ್ಪಡಿಸುವ ಕೆಲಸವೂ ಆಗಬೇಕಾದ್ದು ಅವಶ್ಯ. ಹೆಣ್ಣುಮಕ್ಕಳ ಶಿಕ್ಷಣದ ದೃಷ್ಟಿಯಿಂದ ಶಿಕ್ಷಕಿಯರನ್ನೇ ಪ್ರಾಥಮಿಕ ಶಿಕ್ಷಣದ ಮಟ್ಟದಲ್ಲಿ ಹೆಚ್ಚಾಗಿ ನೇಮಿಸುವಲ್ಲಿ ಪ್ರಾಧ್ಯಾನ್ಯವಿರ ಬೇಕು.

೩. ಸ್ಪಷ್ಟ ತಿಳಿವಳಿಕೆಯನುಸಾರ ಹೆಣ್ಣುಮಕ್ಕಳ ಶಿಕ್ಷಣದ ಕಡೆ ನೋಡುವ ಅನುಕೂಲ ದೃಷ್ಟಿಕೋನವು ಅನಕ್ಷರಸ್ಥರಿಗಿಂತ ಅಕ್ಷರಸ್ಥ ಸ್ತ್ರೀಯಲ್ಲಿಯೇ ಹೆಚ್ಚಾಗಿದೆ. ಈ ಮೂಲಕ ವ್ಯಕ್ತವಾಗುವುದೇನೆಂದರೆ ಹಳ್ಳಿಗಾಡುಗಳಲ್ಲೆಲ್ಲ ಮಹಿಳೆಯರಿಗಾಗಿ ಪ್ರೌಢ ಶಿಕ್ಷಣ ವ್ಯವಸ್ಥೆಯು ಅವಶ್ಯ ಇರಬೇಕು. ಇದರಿಂದ ಪ್ರಾಥಮಿಕ ಶಿಕ್ಷಣದ ವಿಸ್ತಾರದ ಪ್ರಕ್ರಿಯೆಯಾಗಿದ್ದು ಪ್ರೌಢ ವಯಸ್ಸಿಗೆ ಬಂದೊಡನೆ ಮದುವೆಯನ್ನು ಮಾಡಲು ಅವಸರಿಸುವುದು ತಪ್ಪುತ್ತದೆ. ಶಿಕ್ಷಣದಿಂದ  ವಂಚಿತರಾದ ಅನಕ್ಷರಸ್ಥ ಮಹಿಳೆಯರಿಗೂ ಶಿಕ್ಷಣವನ್ನೂ ನೀಡುವ ಬಗ್ಗೆ ಒತ್ತು ನೀಡಬೇಕು. ಹಾಗಾದಾಗ ಇಂದಿನ ಅನಕ್ಷರಸ್ಥರು, ತರುಣರು, ವಿವಾಹಿತ ಸ್ತ್ರೀಯರು ೯ ವರ್ಷದೊಳಗಿನ ವಯೋಮಾನದ ಹೆಣ್ಣುಮಕ್ಕಳಿಗೆ ಶಿಕ್ಷಣದಿಂದ ವಂಚಿತವಾಗಿಸುವುದರ ಬಗ್ಗೆ ಜಾಗರೂಕತೆಯಿಂದ ಪ್ರಯತ್ನವೊಂದನ್ನು ಮಾಡಬಹುದಾಗಿದೆ.

೪. ‘ಕುಟುಂಬ ಯೋಜನಾ ಕಾರ್ಯಕ್ರಮ’ಕ್ಕೆ ರಾಷ್ಟ್ರೀಯ ಧೋರಣೆಯ ಮನ್ನಣೆ ಇದೆ. ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ದೃಷ್ಟಿಯಿಂದಲೂ ಅತ್ಯಂತ ಮಹತ್ವದ್ದು ಈ ಪ್ರಶ್ನೆ. ಕುಟುಂಬದ ಆಕಾರವು ಹೆಚ್ಚಾಗಿ ಬೆಳೆದಂತೆಲ್ಲ ಮತ್ತು ಎರಡು ಮಕ್ಕಳ ನಡುವೆ ಇರಬೇಕಾದ ಅಂತರವು ಇಲ್ಲದಿದ್ದಾಗ ಹೆಣ್ಣುಮಕ್ಕಳ ಶಿಕ್ಷಣಕ್ಕೆ ನಿಲುಗಡೆ ಬರುತ್ತದೆ. ಚಿಕ್ಕಮಕ್ಕಳನ್ನು ಸಂಭಾಳಿಸುವ ಮತ್ತು ಮನೆಯಲ್ಲಿನ ಸಾಮಾನ್ಯ ಕೆಲಸಗಳಿಗೆಲ್ಲ ಹುಡುಗಿಯು ಹೆಚ್ಚು ಉಪಯುಕ್ತವಾಗಿರುವುದರಿಂದ ಅವಳ ಶಿಕ್ಷಣ ಗೌಣ ನೆಲೆಯದ್ದಾಗಿರುತ್ತದೆ. ಬಸಿರು, ಬಾಣಂತನ ಮತ್ತು ಅನಾರೋಗ್ಯದಂಥ ಚಕ್ರವರ್ತುಲದಂತಹ ಮನೆಯ ಕೆಲಸದಲ್ಲಿ ಸಿಕ್ಕು ೫ರಿಂದ ೯ ವರ್ಷದ ಗ್ರಾಮೀಣ ಹೆಣ್ಣುಮಗಳು ಮನೆಗೆ ‘ಅಸೆಟ್’ ಎಂಬಂತೆ ಪ್ರತ್ಯೇಕ ಆಗುತ್ತಾಳೆ. ಹಾಗಾಗಿ ಶಿಕ್ಷಣಕ್ಕಾಗಿ ಅವಳನ್ನು ‘ಸ್ಪೇರ್’ ಮಾಡುವುದು ಅವರಿಗೆ ಅಸಾಧ್ಯ. ಎರಡು ಮಕ್ಕಳ ನಡುವೆ ನಿಶ್ಚಿತ ಅಂತರವನ್ನು ಇಟ್ಟುಕೊಳ್ಳುವ ಬಗ್ಗೆ ಹೆಚ್ಚು ಒತ್ತು ನೀಡುವುದು  ಹೆಣ್ಣುಮಕ್ಕಳ ಶಿಕ್ಷಣದ ದೃಷ್ಟಿಯಿಂದ ಹೆಚ್ಚು ಉಪಯುಕ್ತ. ಕುಟುಂಬ ಯೋಜನೆಯ ಈ ಧೋರಣೆಯನ್ನು ಸರ್ವಾಂಗೀಣ ಮಾಧ್ಯಮಗಳೂ ಸರ್ವಪಕ್ಷೀಯ ಕಾರ್ಯಕ್ರಮವಾಗಿ ಭಾವಿಸಿ ದುಡಿಯುವುದು ಅತ್ಯಾವಶ್ಯಕ, ಪರಿಣಾಮಕಾರಕ ಎಂಬುದು ನಿರ್ವಿವಾದಿತ ಸಂಗತಿ.

೫. ‘ಉಚಿತ ಶಿಕ್ಷಣ ಇದು’ ಹೆಣ್ಣುಮಕ್ಕಳ ಶಿಕ್ಷಣದ ಪ್ರಗತಿಯ ದೃಷ್ಟಿಯಿಂದ ಉಪಯುಕ್ತವಾದ ಘಟಕ. ಗ್ರಾಮೀಣ ಭಾಗದಲ್ಲಿಯಂತೂ ಫಿಜು ಕೊಟ್ಟು ಶಾಲೆಗೆ ಬರಬೇಕು ಎಂದೊಡನೆ, ಶಾಲೆಯ ಮೆಟ್ಟಿಲನ್ನು ತುಳಿಯದಿರುವಂತೆ ಒತ್ತಾಯ ಮಾಡುವಂಥವರೇ ಹೆಚ್ಚು. ಕೇವಲ ಪ್ರಾಥಮಿಕ ಶಿಕ್ಷಣಕ್ಕೆ ಒತ್ತಾಯ ಮತ್ತು  ಹತ್ತನೆಯ ತರಗತಿಯವರೆಗೂ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣವನ್ನು ಯಧೋಚಿತ ಮಾರ್ಗವಾಗಿ ಸ್ವೀಕರಿಸುವುದರಿಂದಷ್ಟೇ ಉಪಯುಕ್ತವಾಗುವುದಿಲ್ಲ. ಈ ಸಮಸ್ಯೆಯು ಕೇವಲ ಆರ್ಥಿಕ ವಾದುದಾಗಿರದೆ ಅದು ಸಾಂಸ್ಕೃತಿಕವೂ, ಸಾಮಾಜಿಕವೂ ಆದುದಾಗಿದೆ. ಆ ಕಾರಣದಿಂದಲೇ  ಹೆಣ್ಣುಮಕ್ಕಳ ಶಿಕ್ಷಣದೆಡೆ ನೋಡುವ ದೃಷ್ಟಿಕೋನವು ಹೆಚ್ಚು ಅನುಕೂಲಕರವಾಗುವುದು ಅವಶ್ಯ. ಈ ದೃಷ್ಟಿಯಿಂದ ಅವರಲ್ಲಿ ಜಾಗರೂಕತೆ ಮತ್ತು ವೈಚಾರಿಕ ದೃಷ್ಟಿಕೋನವನ್ನು ರೂಪಿಸಬೇಕಾಗಿದೆ. ಆ ಮೂಲಕ ಅವರಲ್ಲಿ ಸಾಮಾಜಿಕವಾಗಿ ಎಚ್ಚರ ಉಂಟಾಗಬೇಕು. ಹಾಗೆಯೇ ಗ್ರಾಮೀಣ ಭಾಗದಲ್ಲಿ ಶಿಕ್ಷಣದ ವಿಸ್ತಾರ, ಶಿಕ್ಷಕರ ದರ್ಜೆಯ ಸುಧಾರಣೆ, ಶಿಕ್ಷಣ ಸಂಬಂಧೀ ಅನುಕೂಲತೆಗಳ ಉಪಲಬ್ಧತೆ, ಶಿಕ್ಷಕಿಯರ ನೇಮಕಾತಿಗೆ ಪ್ರಾಧಾನ್ಯ, ಕುಟುಂಬ ಯೋಜನೆ ಕಾರ್ಯಕ್ರಮ ಮತ್ತು ಪ್ರೌಢಶಿಕ್ಷಣ ಇತ್ಯಾದಿ ಕಾಲಬದ್ಧ ಮತ್ತು ಪ್ರಾದೇಶಿಕ ಕಾರ್ಯಕ್ರಮಗಳನ್ನು ಯೋಜಿಸುವುದು ಅಗತ್ಯವಾಗಿ ಆಗಲೇಬೇಕಾಗಿದೆ.