ಭಾರತದಲ್ಲಿನ ಹೆಣ್ಣುಮಕ್ಕಳ ಶೈಕ್ಷಣಿಕ ಪ್ರಗತಿ

ಹೆಣ್ಣುಮಕ್ಕಳ ಶಿಕ್ಷಣದ ಬಗೆಗಿನ ಈವರೆಗಿನ ನಿರ್ದಿಷ್ಟ ವಿವರಗಳನ್ನು ಕೋಷ್ಠಕದಲ್ಲಿ ವಿವರಿಸಲಾಗಿದೆ. ಅಂದಾಜು ಶೇಕಡವಾರು ನೆಲೆಯಿಂದ ಸ್ಪಷ್ಟವಾಗುವುದೇನೆಂದರೆ, ವಿದ್ಯಾರ್ಥಿನಿಯರು ಎಲ್ಲಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಪ್ರಾಥಮಿಕ ಶಾಲೆಗೆ ಸೇರಿದ್ದಾರೆ. ಹಾಗೂ ಎಲ್ಲಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿ ಪದವಿಪೂರ್ವ ಕಾಲೇಜು ಮಟ್ಟದಲ್ಲಿ ಇರುವುದು ಕಂಡುಬರುತ್ತದೆ. ಅಲ್ಲದೆ ಇಲ್ಲಿ ಮತ್ತೊಂದು ವಿಷಯ ಗಮನಾರ್ಹ. ಕೋಷ್ಠಕದಲ್ಲಿ ತೋರಿಸಲಾಗಿರುವ ಶೇಕಡವಾರು ಸಂಖ್ಯೆಯು ಹೆಸರು ದಾಖಲಿಸಿದ್ದಕ್ಕಷ್ಟೇ ಸೀಮಿತವಾಗಿದೆ. ಹೆಸರು ದಾಖಲಿಸಿದ ಮೇಲೆ ಶಾಲೆಯನ್ನು ಬಿಟ್ಟ ಹೆಣ್ಣುಮಕ್ಕಳ ಸಂಖ್ಯೆ ಯಾಗಲೀ ಹಾಗೂ ಮುಂದಿನ ತರಗತಿಗಳಿಗೆ ಹೋದ ವಿದ್ಯಾರ್ಥಿನಿಯರ ಸಂಖ್ಯೆಯಾಗಲಿ ಕ್ರಮಬದ್ಧವಾಗಿ ಉಪಲಬ್ಧವಿಲ್ಲ. ಆದರೆ ಸ್ತ್ರೀ-ಶಿಕ್ಷಣವು ಇಳಿಮುಖವಾಗುತ್ತಿರುವ ಪ್ರಶ್ನೆಯು ಬಹಳ ಗಂಭೀರವೂ ಮಹತ್ವದ್ದೂ ಆಗಿದೆ ಎಂಬುದನ್ನು ಹಲವಾರು ಶಿಕ್ಷಣ ತಜ್ಞರು ಸ್ಪಷ್ಟವಾಗಿ ತೋರಿಸಿಕೊಟ್ಟಿದ್ದಾರೆ.

ಶಾಲೆಯಲ್ಲಿ ಹೆಣ್ಣುಮಕ್ಕಳ ಪ್ರಮಾಣವು ಕಡಿಮೆಯಾಗಿರುವುದಕ್ಕೆ ಕಾರಣಗಳಿವೆ. ಸ್ತ್ರೀ- ಶಿಕ್ಷಣದ ವಿಚಾರವಾಗಿ ರಾಷ್ಟ್ರೀಯ ಆಯೋಗವು ನೀಡಿರುವ ಕಾರಣಗಳು ಹೀಗಿವೆ:

ಪಾಲಕರ ದಾರಿದ್ರ್ಯ, ಬಡತನ, ಕುಟುಂಬದಲ್ಲಿ ಸ್ತ್ರೀಗೆ ಇರುವ ಗೌಣ ಸ್ಥಾನ, ಸ್ತ್ರೀ- ಶಿಕ್ಷಣದ ಬಗ್ಗೆ ಪಾಲಕರಿಗೆ ಇರುವ ಪರಂಪರಾಗತವಾದ ದೃಷ್ಟಿಕೋನ, ಬಾಲ್ಯವಿವಾಹ, ಸ್ತ್ರೀ-ಶಿಕ್ಷಣದ ಬಗೆಗಿನ ತಪ್ಪು ತಿಳಿವಳಿಕೆ, ಹೆಣ್ಣುಮಕ್ಕಳು ಮನೆಯಲ್ಲಿ ಮಾಡಲೇಬೇಕಾದಂಥ ಕೆಲಸಗಳು, ಶಾಲೆಯಲ್ಲಿ ಇರುವ ಶೈಕ್ಷಣಿಕ ತೊಂದರೆಗಳು ಇತ್ಯಾದಿ.

ಭಾರತದಲ್ಲಿ ಹೆಣ್ಣುಮಕ್ಕಳ ಶಿಕ್ಷಣದಲ್ಲಿನ ಇಳಿಮುಖತೆಯ ಕಾರಣಗಳನ್ನು ಶೋಧಿಸುವುದಕ್ಕಾಗಿ ಅನೇಕ ಸಂಶೋಧನಾತ್ಮಕ ಅಧ್ಯಯನಗಳನ್ನು ಕೈಗೊಳ್ಳಲಾಗಿದೆ. ಆ ಮೂಲಕ ಸ್ಪಷ್ಟವಾಗಿ ತಿಳಿದುಬಂದಿರುವ ಸಂಗತಿ ಎಂದರೆ, ಶೇ. ೯೫ರಷ್ಟು ಇಳಿಮುಖತೆಯು ಆರ್ಥಿಕ ಕಾರಣಗಳಿಂದಾಗಿಯೇ ಆಗುತ್ತಿರುವುದು. ಅಂದರೆ ಬಡತನದ ಮೂಲದಿಂದಲೇ ಇದು ಹುಟ್ಟಿಕೊಳ್ಳುತ್ತಿರುವುದು. ಅದರ ನಂತರದಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಕಡೆಗೆ ನೋಡುತ್ತಿರುವ ಪರಂಪರಾಗತ ದೃಷ್ಟಿಕೋನ ಮತ್ತು ಪಾಲಕರ ಉದಾಸೀನತೆ ಇವುಗಳು ಕೂಡಾ ಹೆಣ್ಣುಮಕ್ಕಳ ಶಿಕ್ಷಣದಲ್ಲಿ ಖಂಡತೆಯನ್ನು ತರುವಂತಹ ಅಂಶಗಳಾಗಿವೆ. ಹೆಣ್ಣುಮಕ್ಕಳಿಗೆ ಸಂಬಂಧಿಸಿದಂತೆ ಉದ್ಭವವಾಗುವ ಬೇರೆ ಬೇರೆ ಸಮಸ್ಯೆಗಳನ್ನು ಈ ಕೆಳಗಿನಂತೆ ವರ್ಗೀಕರಿಸಬಹುದಾಗಿದೆ.

ಭಾರತದಲ್ಲಿನ ಹೆಣ್ಣು ಮಕ್ಕಳ ಶೈಕ್ಷಣಿಕ ಪ್ರಗತಿ

ವರ್ಷ

೧ರಿಂದ ೪ನೆಯ ತರಗತಿಯಲ್ಲಿನ ಹೆಣ್ಣುಮಕ್ಕಳ ನೋಂದಣಿಯಾದ ಹೆಸರುಗಳು (ಹಾಜರಾತಿ)

ಹೆಸರು ನೋಂದಾಯಿಸಿದ ಹೆಣ್ಣುಮಕ್ಕಳ ಆ ವಯೋಮಾನದ ಒಟ್ಟು ಜನಸಂಖ್ಯಾ ಪ್ರಮಾಣ

೫ರಿಂದ ೭ನೆಯ ತರಗತಿಯಲ್ಲಿನ ಹೆಣ್ಣುಮಕ್ಕಳ ನೋಂದಣಿ ಗೊಂಡ ಹೆಸರು(ಹಾಜರಾತಿ)

ಹೆಸರು ನೋಂದಾಯಿಸಿದ ಹೆಣ್ಣುಮಕ್ಕಳ ಆ ವಯೋ ಮಾನದ ಒಟ್ಟು ಜನಸಂಖ್ಯಾ ಪ್ರಮಾಣ

೮ರಿಂದ ೧೦ನೆಯ ತರಗತಿಯಲ್ಲಿನ ಹೆಣ್ಣುಮಕ್ಕಳ ನೋಂದಣಿ ಗೊಂಡ ಹೆಸರು (ಹಾಜರಾತಿ)

ಹೆಸರು ನೋಂದಾಯಿಸಿದ ಹೆಣ್ಣುಮಕ್ಕಳ ಆ ವಯೋ ಮಾನದ ಒಟ್ಟು ಜನಸಂಖ್ಯಾ ಪ್ರಮಾಣ

೧೧ರಿಂದ ೧೨ನೆಯ  ತರಗತಿಯಲ್ಲಿನ ಹೆಣ್ಣುಮಕ್ಕಳ ನೋಂದಣಿ ಗೊಂಡ ಹೆಸರು (ಹಾಜರಾತಿ)

ಹೆಸರು ನೋಂದಾಯಿಸಿದ ಹೆಣ್ಣು

೧೯೫೦-೫೧

೩,೫೪೯

೨೦.೧

೫೫೯

೪.೬

೨೦೪

೧.೮

೩೭

೦.೫

೧೯೬೦-೬೧

೭೮೨೩

೩೫.೦

೧,೮೭೬

೧೨.೫

೭೪೧

೫.೪

೧೩೨

೧.೬

೧೯೭೦-೭೧

೨೬,೮೫೦

೬೮.೬

೬,೭೮೫

೩೩.೦

೨,೨೫೯

೧೨.೨

೩೯೧

೩.೫

೧೯೮೦-೮೧

೩೮,೫೧೫

೧೧೦.೭

೧೮,೪೫೬

೭೪.೦

೫,೨೮೫

೨೨.೬

೧,೦೮೯

೭.೪

೧೯೮೪-೮೫

೩೬,೭೩೦

೧೧೦.೦

೨೩,೫೦೦

೯೦.೦

೭,೮೪೨

೩೦.೯

೧,೮೬೯

೧೧.೪

ಆಧಾರ: ರಿಪೋರ್ಟ್ ಆಫ್ ಎಜುಕೇಷನ್ ಕಮಿಷನ್

. ಕೌಟುಂಬಿಕ ಸಮಸ್ಯೆಗಳು: ಹೆಣ್ಣುಮಕ್ಕಳಿಗೆ ಕುಟುಂಬದಲ್ಲಿ ಯಾವಾಗಲೂ ಗೌಣ ಸ್ಥಾನವನ್ನು ಕೊಡುತ್ತಾ ಬರಲಾಗಿದೆ. ಅವಳನ್ನು ಪರರ ಧನವೆಂದು ತಿಳಿದುಕೊಂಡು ಒಲೆ ಮತ್ತು ಮಕ್ಕಳು ಇವಷ್ಟೇ ಅವಳ ಕಾರ್ಯಕ್ಷೇತ್ರವೆಂದು ಒಪ್ಪಿಸಲಾಗಿರುತ್ತದೆ. ಹಾಗಾಗಿ ಮನೆಯ ಕೆಲಸ ಮತ್ತು ಚಿಕ್ಕಮಕ್ಕಳನ್ನು ನೋಡಿಕೊಳ್ಳುವುದು ಇಂತಹ ಪಾರಂಪರಿಕ ಕೆಲಸಗಳನ್ನು ಅವರ ಮೇಲೆ ಪೂರ್ಣವಾಗಿ ಒಪ್ಪಿಸಿರುವ ಕಾರಣ ಅವರ ಶಿಕ್ಷಣದ ಬಗ್ಗೆ ದುರ್ಲಕ್ಷ್ಯವನ್ನು ತೋರಿಸಲಾಗಿರುತ್ತದೆ. ತಂದೆ-ತಾಯಿಗಳು ತಮ್ಮ ಹೆಣ್ಣುಮಕ್ಕಳ ಬಗ್ಗೆ ಅವರ ಶಾಲೆಯ ಬಗ್ಗೆ ದುರ್ಲಕ್ಷ್ಯವನ್ನು ತೋರುತ್ತಿರುವುದು ಒಂದು ಪಾರಂಪರಿಕ ಶಾಪದ ಹಾಗೆಯೇ ಆಗಿದೆ. ಈ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವಂತೆ ಮಾಡುವಲ್ಲಿ ಹಳ್ಳಿಗಳಲ್ಲಿನ ಜನರಿಗೆ ಸಾಮಾಜಿಕ ಪ್ರಬೋಧನೆಯನ್ನು ನೀಡುವುದು ಅಗತ್ಯ. ಹೆಣ್ಣುಮಕ್ಕಳ ವಿಷಯದಲ್ಲಿ ಕೌಟುಂಬಿಕ ಸ್ಥಾನ ಮತ್ತು ಸಾಮಾಜಿಕ ಪ್ರತಿಷ್ಠೆಯನ್ನು ಅವರಲ್ಲಿ ರೂಪಿಸಿ ಬೆಳೆಸುವುದು ಆವಶ್ಯಕ. ಶ್ರಮ ವಿಭಜನೆ, ಗಂಡು/ಹೆಣ್ಣು ಮಕ್ಕಳಿಗೆ ಸಮಾನವಾದ ದರ್ಜೆ ಈ ವಿಚಾರವಾಗಿ ಹುಟ್ಟಿನಿಂದಲೇ ಸಂಸ್ಕಾರವೊಂದನ್ನು ರೂಢಿಸಿಕೊಳ್ಳಬೇಕಾಗಿದೆ. ಈ ದಿಶೆಯಲ್ಲಿ ಮಹಿಳಾ ಶಿಕ್ಷಕಿಯರ ಸಂಘಟನೆಗಳನ್ನು ಸ್ಥಾಪಿಸಿ, ಅವರಿಗೆ ಈ ಜವಾಬ್ದಾರಿಗಳನ್ನು ವಹಿಸಬೇಕು.

. ಸಾಮಾಜಿಕ: ಗಂಡುಮಕ್ಕಳಿಗೆ ವಿಪುಲ ಶೈಕ್ಷಣಿಕ ಸೌಲಭ್ಯಗಳು ಇರುವಷ್ಟು ಗ್ರಾಮೀಣ ಹೆಣ್ಣುಮಕ್ಕಳಿಗೆ ಸಿಕ್ಕುವುದಿಲ್ಲ. ಗಂಡುಮಕ್ಕಳನ್ನು ಹೆಣ್ಣುಮಕ್ಕಳಿಗಿಂತ ಶ್ರೇಷ್ಠ, ವಂಶದ ಜ್ಯೋತಿ ಎಂದು ಭಾವಿಸುವ ಮೂಲಕ ವರಿಷ್ಠ ಸಾಮಾಜಿಕ ದೃಷ್ಟಿಕೋನವು ರೂಪು ಗೊಂಡಿರುವುದನ್ನು ಕಾಣಬಹುದಾಗಿದೆ. ಹೆಣ್ಣುಮಕ್ಕಳಿಗೆ ಶಿಕ್ಷಣವಿಲ್ಲದಿದ್ದರೂ ನಡೆಯುತ್ತದೆ. ಅವಳ ಶಿಕ್ಷಣಕ್ಕೆ ಮಾಡುವ ಖರ್ಚು ಒಂದು ರೀತಿಯಲ್ಲಿ ಅನಾವಶ್ಯಕ. ಅಲ್ಲದೆ ಹೆಚ್ಚು ಶಿಕ್ಷಣ ಪಡೆದ ಹೆಣ್ಣುಮಕ್ಕಳಿಗೆ ಹೆಚ್ಚು ವಿದ್ಯಾವಂತನಾದ ವರನನ್ನು ಶೋಧಿಸಬೇಕಾದ ಕೆಲಸ ಬೇರೆ. ಅಲ್ಲದೆ ಈ ಸಂಬಂಧವಾಗಿ ವರದಕ್ಷಿಣೆಯ ಖರ್ಚು ಅಧಿಕ. ಹಾಗೆಯೇ ಕನ್ಯೆ ಪರರ ಸೊತ್ತು ಎಂಬ ಭಾವನೆಗಳೂ ಸೇರಿಕೊಂಡು ಅವಳ ಶಿಕ್ಷಣದ ಬಗ್ಗೆ ಉಪೇಕ್ಷೆಯನ್ನು ಮಾಡುತ್ತಾ ಬರಲಾಗಿದೆ. ಧರ್ಮ, ಜಾತಿ-ಪಂಥ, ಸಂಸ್ಕೃತಿ ಮತ್ತು ನೀತಿಮತ್ತೆಗಳನ್ನು ರೂಪಿಸಿಕೊಂಡ ಅವರನ್ನು ಶಾಲೆಗೆ ಕಳಿಸುವ ವಿಷಯದಲ್ಲಿ ನಿರ್ಬಂಧಗಳೂ ಉಂಟಾಗಿವೆ. ಬಾಲ್ಯದಲ್ಲಿಯೇ ಮದುವೆ, ಹತ್ತು ವರ್ಷಗಳು ಆದ ನಂತರ ಶಾಲೆಗೆ ಕಳುಹಿಸುವಲ್ಲಿ ಪಾಲಕರು ಕೋಪಿಸುಕೊಳ್ಳುವುದು ಇತ್ಯಾದಿ ರೂಢಿಗಳಿಂದಾಗಿ ಶಾಲೆಯನ್ನು ಬಿಡಿಸಿ ಮನೆಗೆಲಸದಲ್ಲಿ ತೊಡಗಿಸಲಾಗುತ್ತದೆ. ನಿಧಾನವಾಗಿ ಈ ಪರಿಸ್ಥಿತಿಯಲ್ಲಿ ಸುಧಾರಣೆ ಉಂಟಾಗುತ್ತಿದ್ದರೂ ಹಳ್ಳಿಗಾಡುಗಳಲ್ಲಿ ಇಂದಿಗೂ ಈ ವೈಚಾರಿಕ ಗೊಂದಲ ಕಾಣಿಸುತ್ತಿರುವುದುಂಟು. ಅಮೆರಿಕಾದಲ್ಲಿ ಶೇ. ೯೦ಕ್ಕಿಂತಲೂ ಅಧಿಕ ಸ್ತ್ರೀಯರು ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡುತ್ತಿರುವುದು ಕಂಡಬರುತ್ತದೆ. ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡುವುದು ತಮ್ಮ ನೈತಿಕ ಹಕ್ಕು ಎಂದು ಭಾವಿಸಿದೆ ಇಲ್ಲಿನ ಸ್ತ್ರೀ ವರ್ಗ. ಅದೇ ರೀತಿಯಲ್ಲಿ ಇಲ್ಲಿಯೂ ಅತಿ ಹೆಚ್ಚಾಗಿ ಸ್ತ್ರೀಯರನ್ನು ಪ್ರಾಥಮಿಕ ಶಾಲೆಯ ಶಿಕ್ಷಕರನ್ನಾಗಿ ನೇಮಿಸುವುದು ಅವಶ್ಯ. ಹಾಗಾದಾಗ ಹೆಣ್ಣುಮಕ್ಕಳ ಉಪಸ್ಥಿತಿಯು ಶಾಲೆಯಲ್ಲಿ ಹೆಚ್ಚಾಗಿ ಆ ಬಗೆಗಿನ ತಪ್ಪು ತಿಳಿವಳಿಕೆಯು ದೂರವಾಗುತ್ತದೆ.

. ಕಾನೂನು: ಇಂದಿನ ಗ್ರಾಮೀಣ ಶಿಕ್ಷಣದ ನೀತಿ-ನಿಯಮಗಳೆಲ್ಲ ಪ್ರಮುಖವಾಗಿ ಜಿಲ್ಲಾ ಪರಿಷತ್ತು ಮತ್ತು ಪಂಚಾಯತಿ ಸಮಿತಿಗಳಲ್ಲಿದೆ. ನನಗೆ ಅನಿಸುವಂತೆ ಇಲ್ಲಿನ ಒಂದು ಮುಖ್ಯ ತೊಡಕೆಂದರೆ ಇಲ್ಲಿ ಕೆಲಸ ಮಾಡುವವರೆಲ್ಲ ಹೆಚ್ಚಾಗಿ ಪುರುಷರೇ. ಕ್ವಚಿತ್ತಾಗಿ ಒಬ್ಬೊಬ್ಬರು ಸದಸ್ಯೆಯರು ಇರಬಹುದಷ್ಟೆ. ಅದು ಕೂಡಾ ಪುರುಷರ ದಯೆಯಿಂದ ಆಗುವಂತಹದ್ದು. ಇಲ್ಲಿ ಶಿಕ್ಷಣ ಸಮಿತಿಯ ಸದಸ್ಯರು, ಅಧಿಕಾರಿಗಳು, ಪದಾಧಿಕಾರಿಗಳಾಗಿ ಮಹಿಳೆಯರ ಸಂಖ್ಯೆಯು ಹೆಚ್ಚಾಗಿದ್ದರೆ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಚಾಲನೆಯು ಸಿಕ್ಕುತ್ತದೆ. ಅಲ್ಲದೆ ಶಾಲೆಗಳ ಶೈಕ್ಷಣಿಕ ಮತ್ತು ವ್ಯವಸ್ಥಾತ್ಮಕ ಪರಿಶೀಲನೆಯು ಗಂಭೀರವಾಗಿ ಆಗುವುದರಿಂದ ಅಲ್ಲಿ ಸುಧಾರಣೆಯು ಉಂಟಾಗುವುದು. ಅನ್ಯ ಮತ್ತು ಪರಿಣಾಮಕಾರಕ ವ್ಯವಸ್ಥೆಯನ್ನು ಮಾಡುವ ಮೂಲಕವೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರಾಧಾನ್ಯತೆಯನ್ನು ನೀಡುವುದು ಅವಶ್ಯ. ಮುಂಬಡ್ತಿ, ವರ್ಗಾವಣೆ, ವೇತನ ಮತ್ತಿತರೆ ಆಡಳಿತಾತ್ಮಕ ಕಾರ್ಯಗಳಲ್ಲಿ ಸಿಲುಕಿಕೊಂಡಿರುವ ಆಡಳಿತ ವರ್ಗವು, ಅದರಿಂದ ಹೊರಬರಬೇಕು ಮತ್ತು ಹೆಣ್ಣುಮಕ್ಕಳ ಶೈಕ್ಷಣಿಕ ವಿಸ್ತಾರದ ದೃಷ್ಟಿಯಿಂದ  ಪ್ರಶಿಕ್ಷಣ, ಅಧ್ಯಯನ ವೇದಿಕೆಗಳು, ಶಿಬಿರಗಳೇ ಮೊದಲಾದವುಗಳನ್ನು ರೂಪಿಸುವತ್ತ ತಮ್ಮ ಲಕ್ಷ್ಯವನ್ನು ಕೇಂದ್ರೀಕರಿಸಬೇಕಾಗಿದೆ. ಅಲ್ಲದೆ ಇಂದಿನ ಶಾಸನಾತ್ಮಕ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರುವುದರಲ್ಲಿಯೂ ಇದೆ. ರಾಜ್ಯಮಟ್ಟದಲ್ಲಿ ಸ್ವತಂತ್ರ ಸ್ತ್ರೀ-ಶಿಕ್ಷಣ ಮಂಡಳಿಯೊಂದನ್ನು ಆರಂಭಿಸುವ ಕೆಲಸವೂ ಆಗಬೇಕು. ರಾಜ್ಯಸ್ತರದಿಂದಲೇ ಜಿಲ್ಲೆ ಮತ್ತು ತಾಲೂಕು ಮಟ್ಟದ ಪಾತಳಿಯವರೆಗೂ ಇರುವ ವಿಭಾಗೀಯ ಮಟ್ಟದಲ್ಲಿ ನಡೆಯುತ್ತಿರುವ ಹೆಣ್ಣುಮಕ್ಕಳ ಶಿಕ್ಷಣದ ಬಗೆಗಿನ ಎಲ್ಲಾ ಆಡಳಿತಾತ್ಮಕ ಕಾರ್ಯಗಳ ಪರಿಶೀಲನೆಯೂ ನಡೆಯಬೇಕಾಗಿದೆ.

. ಅಂಶಕಾಲಿಕ ಶಿಕ್ಷಣ: ಇಂದಿನ ಪ್ರಾಥಮಿಕ ಶಿಕ್ಷಣವು ಪೂರ್ಣವಾಗಿ ಕಾಲಬದ್ಧ ವಾದುದಾಗಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿನ ಹೆಣ್ಣುಮಕ್ಕಳು ಈ ಪೂರ್ಣ ವೇಳೆಯವರೆಗೂ ಶಾಲೆಯಲ್ಲಿ ಇರಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅವರಿಗೆ ಅಂಶಕಾಲಿಕವಾಗಿ ಶಿಕ್ಷಣ ನೀಡುವ ಶಾಲೆಗಳನ್ನು ಆರಂಭಿಸಬೇಕಾಗಿದೆ. ೧ ರಿಂದ ೪ನೆಯ ತರಗತಿಯವರೆಗೆ ಇಂಥ ಅಂಶಕಾಲಿಕ ವರ್ಗಗಳನ್ನು ಸಹಜವಾಗಿಯೇ ಆರಂಭಿಸಬೇಕು. ಈ ಮೂಲಕ ಅಧ್ಯಯನ ಕ್ರಮವೊಂದು ನಿಶ್ಚಿತವಾಗಿಯೂ ಪೂರ್ಣಗೊಳ್ಳಬಹುದು. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಮಧ್ಯಾಹ್ನ ಅಥವಾ ಬೆಳಿಗ್ಗೆ ೩ ರಿಂದ ೪ ಗಂಟೆಗಳವರೆಗೆ ಈ ಶಾಲೆಗಳು ನಡೆಯಬೇಕು. ಇಂಥ ಪ್ರಯೋಗವೊಂದನ್ನು ಮಾಡಿ ನೋಡಬೇಕು ಎಂಬುದು ನನ್ನ ಪ್ರಮುಖವಾದ ಆಗ್ರಹ. ಹೆಣ್ಣುಮಕ್ಕಳಿಗೆ ಶಿಕ್ಷಣವು ಪ್ರಿಯವಾಗಬೇಕು, ಶಾಲೆಯು ಇಷ್ಟವಾಗಬೇಕು ಮತ್ತು ಮನೆಯಲ್ಲಿರುವುದಕ್ಕಿಂತ ಶಾಲೆಗೆ ಹೋಗುವುದು ಒಳ್ಳೆಯದು ಎಂದೆನಿಸಬೇಕು. ಈ ದೃಷ್ಟಿಯಿಂದ ಶಾಲೆಯ ಭೌತಿಕ ರಚನೆ ಮತ್ತು ಅಧ್ಯಯನ ಕ್ರಮದಲ್ಲಿ ಪುನರಾಚನೆ ಮಾಡುವುದು ಅವಶ್ಯ. ಅವರ ನೈಸರ್ಗಿಕ ಪ್ರಕೃತಿ ಮತ್ತು ಕಲೆಯನ್ನು ಗಮನಿಸಿ ಬಿಡುವಿನ ರಜೆ ವೇಳೆಯಲ್ಲಿ ಹಾಡುಗಾರಿಕೆ, ಹೊಲಿಗೆ, ಅಡುಗೆಯಂಥ ಶಿಕ್ಷಣವನ್ನು ನೀಡಬಹುದು.

. ಆರ್ಥಿಕ: ಬಡತನವು ಗ್ರಾಮೀಣ ಬದುಕಿಗೆ ಅಂಟಿಕೊಂಡಿರುವ ಒಂದು ದೊಡ್ಡ ಶಾಪ. ಶೈಕ್ಷಣಿಕ ದೃಷ್ಟಿಯಿಂದಲಂತೂ ಇದು ಒಂದು ಮುಖ್ಯವಾದ ಅಡ್ಡಿಯೇ. ಹಾಗಾಗಿ ಪಾಲಕರು ತಿಳಿದಿದ್ದರೂ ಸಾಧ್ಯವಾಗದಂತಹ ಇಕ್ಕಟ್ಟಿನಲ್ಲಿ ಸಿಲುಕುವಂತೆ ಆಗುತ್ತದೆ. ವಿಶೇಷವಾಗಿ ಹೆಣ್ಣುಮಕ್ಕಳಿಗಾಗಿ ಶಿಕ್ಷಣಕ್ಕೆ ಒಂದು ಪೈಸೆಯನ್ನು ಖರ್ಚು ಮಾಡಲಾಗದಂಥ ಅಸಾಮರ್ಥ್ಯವುಳ್ಳವರ ಸಂಖ್ಯೆ ಹೆಚ್ಚು. ಅಲ್ಲದೆ ಮಗನಿಗೆ ಶಿಕ್ಷಣವೊ ಇಲ್ಲವೆ ಮಗಳಿಗೋ ಎಂಬ ವಿಚಾರದಲ್ಲಿ ಗಂಡುಮಕ್ಕಳಿಗೆ ಈ ವಿಷಯದಲ್ಲಿ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತಾರೆ. ಹಾಗಾಗಿ ಹೆಣ್ಣುಮಕ್ಕಳಿಗೆ ಮನೆಯ ಕೆಲಸ ಮತ್ತಿತರ ಅರ್ಥಾರ್ಜನೆಯ ನೆಲೆಯಲ್ಲಿ ತೊಡಗಿಸಲಾಗುವುದು. ಈ ಕಾರಣದಿಂದ ಅವರ ಶಿಕ್ಷಣಕ್ಕೆ ಮೋಡ ಕವಿಯುತ್ತಲೇ ಬರುತ್ತಿದೆ. ಈ ವಿಷಯದಲ್ಲಿ ಸರ್ಕಾರವು ಗಮನ ಹರಿಸಬೇಕು. ರಾಷ್ಟ್ರದ ಸವಾಂಗೀಣ ವಿಕಾಸದ ದೃಷ್ಟಿಯಿಂದ ಸ್ತ್ರೀ-ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕೊಟ್ಟು, ಬೇಕಾದ ಆರ್ಥಿಕ ಸೌಲಭ್ಯವನ್ನು ಒದಗಿಸುವುದು ಆವಶ್ಯಕ. ಆ ಹಿನ್ನೆಲೆಯಲ್ಲಿ ಇಂಥ ವಿಚಾರಗಳತ್ತ ಗಮನ ಹರಿಸಬಹುದು:

ಅ. ಗ್ರಾಮೀಣ ಪ್ರದೇಶದಲ್ಲಿನ ಎಲ್ಲಾ ಬಡ ಕುಟುಂಬಗಳ ಹೆಣ್ಣುಮಕ್ಕಳಿಗೆ ಸ್ಲೇಟು, ಪುಸ್ತಕಗಳು, ಎಕ್ಸರ್‌ಸೈಜ್‌ಗಳು ಮತ್ತಿತರೆ ಅಗತ್ಯ ಪರಿಕರಗಳನ್ನು ಉಚಿತವಾಗಿ ಪೂರೈಸುವುದು.

ಆ. ದೊಡ್ಡ ದೊಡ್ಡ ಊರುಗಳಲ್ಲಿನ ಶಾಲೆಗಳಲ್ಲಿ ೫ ರಿಂದ ೧೦ನೆಯ ತರಗತಿಯವರೆಗೆ ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ ವರ್ಗಗಳಿರಬೇಕು. ವಾಚನಾಲಯಗಳನ್ನು ಸ್ಥಾಪಿಸುವುದಕ್ಕೆ ಪೂರ್ಣ ಆರ್ಥಿಕ ಸಹಾಯ ದೊರೆಯಬೇಕು.

ಇ. ತಾಲೂಕು ಮಟ್ಟದಲ್ಲಿ ಹೆಣ್ಣುಮಕ್ಕಳಿಗೆ ಉಚಿತ ವಸತಿ ಗೃಹಗಳ ಸೌಲಭ್ಯ ಅವಶ್ಯ.

ಈ. ರಜಾ ಅವಧಿಯಲ್ಲಿ ಹೆಣ್ಣುಮಕ್ಕಳಿಗೆ ಹೊಲಿಗೆ, ಕಸೂತಿ, ನೇಯ್ಗೆ, ಬೊಂಬು ಮತ್ತು ಬೆತ್ತ ಹೆಣೆಯುವಿಕೆ, ಖಾದ್ಯ ಪದಾರ್ಧಗಳ ತಯಾರಿಕೆ ಇತ್ಯಾದಿಗಳಲ್ಲಿ ತರಬೇತಿ ತರಗತಿಗಳನ್ನು ನೀಡಬೇಕು. ಇಲ್ಲಿ ಕಲಿಸುವ ಶಿಕ್ಷಕರಿಗೆ ಗೌರವಧನ ಕೊಡಬೇಕು.

ಉ. ಎಲ್ಲ ಮಾಧ್ಯಮಗಳು ಮತ್ತು ಸಾಧನಗಳನ್ನು ವ್ಯಕ್ತಿ, ಸಂಸ್ಥೆಗಳು, ಸಂಘಟನೆಗಳು ಮತ್ತು ಸರ್ಕಾರ ಉಪಯೋಗಿಸಿಕೊಂಡು ಸ್ತ್ರೀ-ಶಿಕ್ಷಣದ ಮಹತ್ವವನ್ನು ಮನಗಾಣಿಸಬೇಕು. ಆ ದಿಶೆಯಲ್ಲಿ ಪ್ರಭಾವಿಸುವಂತಹ ಕಾರ್ಯಗಳಿಗೆ ಹೆಚ್ಚು ಪ್ರಾಧಾನ್ಯತೆಯನ್ನು ಕೊಡಬೇಕು.

ಊ. ಹೆಣ್ಣುಮಕ್ಕಳು ಶಿಕ್ಷಣ ವ್ಯವಸ್ಥೆಯನ್ನು ಹೆಚ್ಚು ವಿಸ್ತರಣಗೊಳಿಸುವ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿರುವ ಶಾಲೆಗಳಿಗೆ ಉತ್ತೇಜಿಸುವುದಕ್ಕೆ ಆರ್ಥಿಕ ಸೌಲಭ್ಯವನ್ನು ಒದಗಿಸಬೇಕು. ಅಂದರೆ ವಿಕಾಸಕ್ಕಾಗಿ ಫಂಡು ಸ್ಥಾಪಿಸುವುದು, ಆದರ್ಶ ಶಿಕ್ಷಕರಿಗೆ ಪುರಸ್ಕಾರ ನೀಡವುದು ಮತ್ತು ಹೆಣ್ಣುಮಕ್ಕಳ ಸಾರ್ವಜನಿಕ ಶಿಕ್ಷಣದ ಬಗ್ಗೆ ಹೆಚ್ಚು ಕಾರ್ಯನಿರ್ವಹಿಸುವುದಕ್ಕೆ ಪ್ರಾಧಾನ್ಯತೆ ನೀಡುವ ಬಗ್ಗೆಯೂ ಹೆಚ್ಚಾಗಿ ಚರ್ಚೆಗಳಾಗಬೇಕು.

ಈ ಮೇಲಿನ ಕಾರಣಗಳಿಂದಾಗಿ ಪ್ರಾಥಮಿಕ ಮತ್ತು ಪೂರ್ವ ಮಾಧ್ಯಮಿಕ ಹಂತದಲ್ಲಿ ಶಾಲೆಯನ್ನು ಬಿಡುವ ಪ್ರಮಾಣ ಹೆಚ್ಚಾಗಿದೆ. ಉದಾ. ೧ ರಿಂದ ೪ನೆಯ ತರಗತಿಯವರೆಗಿನ ಘಟಕದಲ್ಲಿ ಶೇ. ೬೨ರಷ್ಟು ಹೆಣ್ಣುಮಕ್ಕಳು ಶಾಲೆಯನ್ನು ಬಿಡುತ್ತಿದ್ದಾರೆ. ಹಾಗೆಯೇ ೫ ರಿಂದ ೭ನೆಯ ತರಗತಿಯವರೆಗಿನ ಅವಧಿಯಲ್ಲಿ ಶಾಲೆಬಿಡುವ ಹೆಣ್ಣುಮಕ್ಕಳ ಸಂಖ್ಯೆ ಶೇ. ೩೪. ಇದು ಗಂಭೀರವೂ ಭಯಂಕರವೂ ಆಗಿರುವಂಥ ಸತ್ಯ. ಮೇಲಿನ ಅಡಚಣೆಗಳು ಮತ್ತು ಸ್ಥೂಲ ಉಪಾಯಗಳನ್ನು ವಿಸ್ತೃತ ಹಾಗೂ ಗಂಭೀರ ನೆಲೆಗಳಿಂದ ಜಿಲ್ಲಾ ಮಟ್ಟದಲ್ಲಿ ಅಧ್ಯಯನ ಮತ್ತು ಸಂಶೋಧನೆ ಮಾಡಬೇಕಾದ್ದು ಅವಶ್ಯ. ರಾಜಕೀಯ ವ್ಯಕ್ತಿಗಳು ಈ ದೃಷ್ಟಿಯಲ್ಲಿ ಮುಂದಾಳತ್ವ ವಹಿಸಬೇಕು. ಅವರ ಧ್ಯೇಯ-ಧೋರಣೆಗಳ ಮೇಲೆಯೇ ಶಿಕ್ಷಣದ ರಥವು ಮುನ್ನಡೆಯಬೇಕಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯುಳ್ಳ ನಮ್ಮ ದೇಶದಲ್ಲಿ ರಾಜಕೀಯ ತತ್ತ್ವ ಪ್ರಣಾಳಿಕೆಗಳಿಗೆ ಬಹಳೇ ಮಹತ್ವ ಉಂಟು. ಎಂತಲೇ ರಾಜಕೀಯ ಪಕ್ಷಗಳು ಸ್ತ್ರೀ-ಶಿಕ್ಷಣವನ್ನು ತಮ್ಮ ಪಕ್ಷದ ಉಪಕ್ರಮವಾಗಿ ಕೈಗೆತ್ತಿಕೊಳ್ಳಬೇಕು. ಅಲ್ಲದೆ ಅಧಿಕಾರ ಹಿಡಿದವರು ತಮ್ಮ ವಿಕಾಸ ಕಾರ್ಯಕ್ರಮದ ಮೂಲವಾಗಿ ಸ್ತ್ರೀ-ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯ ಕೊಡಬೇಕು. ಹೊಸ ರಾಷ್ಟ್ರೀಯ ಕಾರ್ಯಕ್ರಮವಾಗಿ ಇದನ್ನು ರೂಪಿಸಬೇಕಾಗಿದೆ. ಕಾರಣ ಯಾವುದೇ ವಿಕಾಸದ ಕಾರ್ಯಕ್ಕೆ ಸ್ತ್ರೀಯರ ಸಕ್ರಿಯ ಪ್ರಯತ್ನ ವಿಲ್ಲದೆ ಯಶಸ್ಸು ಸಿಕ್ಕುವುದಿಲ್ಲ. ಇದನ್ನು ನಿತ್ಯನಿರಂತರವೆಂಬ ಸತ್ಯವನ್ನು ಅರಿತುಕೊಂಡೇ ದೇಶವನ್ನು ಕಟ್ಟುವ ಮತ್ತು ಮುನ್ನಡೆಸುವ ಕಾರ್ಯವಾಗಿ ಹೆಣ್ಣುಮಕ್ಕಳ ಶಿಕ್ಷಣದ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಬೇಕು. ಅನ್ಯಧಾ ಕೇವಲ ಶಿಫಾರಸ್ಸುಗಳು ಕಾಗದದ ಮೇಲೆಯೇ ಇರುತ್ತದೆ ಎಂದು ಮತ್ತೆ ಮತ್ತೆ ಹೇಳಬೇಕಾಗಿಲ್ಲ. ಹೆಣ್ಣುಮಕ್ಕಳ ಸಾರ್ವತ್ರಿಕ ಶಿಕ್ಷಣದ ಬಗ್ಗೆ ಒಂದು ದಶಕದ ನಿಯೋಜನ ಬದ್ಧವಾದ ಕಾರ್ಯಕ್ರಮವನ್ನು ಕೈಗೊಂಡು ಗ್ರಾಮೀಣ ಹೆಣ್ಣುಮಕ್ಕಳ ಬಗ್ಗೆ ಇದರಲ್ಲಿ ಅತ್ಯಂತ ಪ್ರಧಾನವಾಗಿ ವಿಚಾರ ಮಾಡಬೇಕು.

ಇಂದು ಹೆಣ್ಣುಮಕ್ಕಳ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ನಿಜವಾಗಿಯೂ ಯೋಜನೆಗಳನ್ನು ಹಮ್ಮಿಕೊಳ್ಳಬೇಕೆಂದಿದ್ದರೆ ಮೊದಲಿಗೆ ರಾಜ್ಯ ಪಾತಾಳಿಯ ಮೇಲೇಯೇ ಸ್ತ್ರೀ-ಶಿಕ್ಷಣ ವಿಭಾಗವೊಂದನ್ನು ಆರಭಿಸಬೇಕು. ಅದರ ರೂಪುರೇಷೆಯು ಈ ಕೆಳಗಿನಂತೆ ಮೂರು ಸೂತ್ರಗಳಲ್ಲಿ ಇರಬಹುದು.

೧. ಸ್ತ್ರೀ-ಶಿಕ್ಷಣ ಸಂಚನಾಲಯ, ರಾಜ್ಯ

|

ಮಹಿಳಾ ಶಿಕ್ಷಣ ಸಮಿತಿ

|

ಮಹಿಳಾ ಶಿಕ್ಷಣ ಸಂಚಾಲಕಿ

|

೨. ಜಿಲ್ಲಾ ಮಟ್ಟದಲ್ಲಿ ಸ್ತ್ರೀ-ಶಿಕ್ಷಣ ಕಾರ್ಯಾಲಯ

|

ಜಿಲ್ಲಾ ಮಹಿಳಾ ಶಿಕ್ಷಣ ಸಮಿತಿ

|

ಜಿಲ್ಲಾ ಮಹಿಳಾ ಶಿಕ್ಷಣಾಧಿಕಾರಿ

|

೩. ತಾಲೂಕು ಮಟ್ಟದಲ್ಲಿ ಸ್ತ್ರೀ-ಶಿಕ್ಷಣ ಕಾರ್ಯಾಲಯ

|

ತಾಲೂಕು ಮಹಿಳಾ ಶಿಕ್ಷಣ ಸಮಿತಿ

|

ಮಹಿಳಾ ಶಿಕ್ಷಣ ನಿರೀಕ್ಷಕರು

|

೧. ಸ್ತ್ರೀ-ಶಿಕ್ಷಣ ಪ್ರಬೋಧನ

|

೨. ಹೆಣ್ಣುಮಕ್ಕಳ ವಸತಿ ಶಾಲೆಗಳು

|

೩. ಹೆಣ್ಣುಮಕ್ಕಳ ಸ್ವತಂತ್ರ ವರ್ಗಗಳು