ಸ್ತ್ರೀಮುಕ್ತಿ: ಆದರೆ ಯಾರಿಂದ?

‘ಅಹೋ, ನಮ್ಮವರು’ ಅವರು ನನಗೆ ಉಪನ್ಯಾಸ ನೀಡುವುದಕ್ಕೆ ಒಂಟಿಯಾಗಿ ಹೋಗಲು ಅನುಮತಿ ನೀಡುತ್ತಿಲ್ಲ. ಅವರ ಜೊತೆ ಸೇರಿದಂತೆ ಹೋಗುವುದು ಇಲ್ಲದಿದ್ದರೆ… ಎಂಬುದು ವಿದ್ಯಾವಂತೆಯೂ, ಸುಪ್ರಸಿದ್ಧ ಲೇಖಕಿಯು ಆಗಿರುವ ಪ್ರಾಧ್ಯಾಪಕಿಯೊಬ್ಬರು ಮಾಡಿರುವ ಕೌತುಕ ಮಿಶ್ರಿತ ಉದ್ಗಾರ.

ಇಪ್ಪತ್ತೈದು ವರ್ಷಗಳ ಕಾಲ ಉದ್ಯೋಗದಲ್ಲಿದ್ದು, ಶೈಕ್ಷಣಿಕ ವಾತಾವರಣದಲ್ಲಿ ನೆಲೆಸಿರುವ ವೈದ್ಯ ಹುದ್ದೆಯಲ್ಲಿರುವ ಮಗನ ಪ್ರಾಧ್ಯಾಪಕಿಯೊಬ್ಬರು ಹೇಳುತ್ತಾರೆ. ನಾನು ಕೊಲ್ಹಾಪುರಕ್ಕೆ ವಿಚಾರ ಸಂಕಿರಣಕ್ಕೆ ಹೋಗಬೇಕಾಗಿತ್ತು; ಆದರೆ ಆ ಹೊತ್ತಿಗೆ ಸರಿಯಾಗಿ ಅವರ ಪತಿಗೆ ಖಾಯಿಲೆಯಾಯಿತು. ಅದಕ್ಕಿಂತಲೂ ಮುಖ್ಯವಾದುದೆಂದರೆ ರಿಜರ್ವೇಶನ್, ರಿಕ್ಷಾ ಹಿಡಿಯುವುದು, ಬೇರೆ ಊರಿಗೆ ಪ್ರವಾಸ, ಈ ತೊಂದರೆಗಳೆಲ್ಲ ಏಕೆ ಎಂದು ನಾನು ಅದಕ್ಕೆ ಹೋಗದೆ ಕ್ಯಾನ್ಸಲ್ ಮಾಡಿದೆ. ತಾಯಿ ಆರಾಮಾಯಿತು, ನಿನಗೆ ವೇತನದಲ್ಲಿ  ಮಾತ್ರ ಪುರುಷರಿಗೆ ಸಮಾನವೇ; ಆದರೆ ಕೆಲಸದಲ್ಲಿ ಮಾತ್ರ ಹೆಣ್ಣು ಎಂಬ ಸವಲತ್ತು ಮತ್ತು ಔದಾಸೀನ್ಯ ಪ್ರವತ್ತಿ.

ಒಬ್ಬ ವಕೀಲೆ ಹೆಣ್ಣುಮಗಳು ತನ್ನ ಲೆಟರ್ ಪ್ಯಾಡ್ ಮೇಲೆ ತನ್ನ ಹೆಸರಿನ ಕೆಳಗೆ ತನ್ನ ಪತಿಯ ‘ಕೇರ್ ಆಫ್’ ಹೆಸರು ಹಾಕಿ ಅವರ ಆದರ್ಶ ಪತ್ನಿ ತಾನು ಎಂದು ಕ್ಷುಲ್ಲಕ ಪ್ರಯತ್ನದ ಮೂಲಕ ತೋರಿಸಿರುವುದು ಕಾಣುತ್ತದೆ. ಅವಳನ್ನು ಸ್ವತಂತ್ರವಾಗಿ ಯಾರು ಏಕೆ ಗುರುತಿಸುವುದಿಲ್ಲ? ಅವಳ ಸ್ವತಂತ್ರ ಅಸ್ತಿತ್ವ ಅವಳಿಗೆ ಮಾನ್ಯವಾಗಿಲ್ಲವೇನು? ಹಾಗೆಯೇ ಪ್ರಯಾಣ ಹೊರಡುವಲ್ಲಿ ಪತಿಯು ಜೊತೆಗಿದ್ದರೆ ಯಾವ ತೊಂದರೆಯೂ ಇಲ್ಲವೆ? ಒಂದೊಮ್ಮೆ ಡಾಕ್ಟರ್ ಪತಿ-ಪತ್ನಿಯರು ದವಾಖಾನೆಯನ್ನು ಮುಚ್ಚಿ ಮನೆಗೆ ಹೋಗುವಾಗ ಪತಿಯನ್ನು ದೂರತಳ್ಳಿ ಸ್ಕೂಟರ್ ವಾಹನದೊಂದಿಗೆ ವೈದ್ಯೆಯನ್ನು ಅಪಹರಿಸಿಕೊಂಡು ಹೋಗಿ ಅವಳ ಮೇಲೆ ಬಲಾತ್ಕಾರ ಮಾಡಿದಾಗ ಪತಿ ಏಕೆ ಅವಳ ಸಂರಕ್ಷಣೆಗೆ ಧಾವಿಸುವುದಿಲ್ಲ? ಅಂದರೆ ಇಂಥ ಪ್ರಸಂಗಗಳು ಸ್ತ್ರೀಗೆ ಒದಗುವುದನ್ನು ಪುರುಷರ ಆಧಾರವಿದ್ದರೂ ತಪ್ಪಿಸುವುದಕ್ಕೆ ಸಾಧ್ಯವಿಲ್ಲ. ಹಾಗಿರುವಾಗ ಸ್ತ್ರೀಯರು ಸತತವಾಗಿ ಪುರುಷರನ್ನು ಅವಲಂಬಿಸಿಯೇ ಇರುವಂಥ ಮತ್ತು ಸ್ವತಃ ತಮ್ಮನ್ನು ದರ್ಬಲೆ, ಅಸಹಾಯಕಿ ಎಂದು ತಿಳಿಯುವ ಅಟ್ಟಹಾಸವನ್ನು ಏಕೆ ಮಾಡಬೇಕು?

ಈ ಮೇಲಿನ ಉದ್ಗಾರಗಳನ್ನು ಕೇಳಿದಾಗ ಈ ಮತ್ತು ಇಂಥ ಪ್ರಚಾರದ ವಿಚಾರ ತರಂಗಗಳು ಮನಸ್ಸಿನಲ್ಲಿ ಏಳುತ್ತವೆ. ವಿಶೇಷವಾಗಿ ಸುಶಿಕ್ಷಿತ, ಸುಸಂಸ್ಕೃತ ವಾತಾವರಣದಲ್ಲಿ ಬೆಳೆದ ಮತ್ತು ವಿದ್ಯಾಭ್ಯಾಸದ ಮೂಲಕ ನಿರ್ಭೀತತೆ ಹಾಗೂ ವೈಚಾರಿಕ ಪಾತಳಿಯನ್ನು ಬೆಳೆಸಬಹುದು ಎಂಬ ಅಪೇಕ್ಷೆಯುಳ್ಳ ಸ್ತ್ರೀಯರು ತಮ್ಮ ಉದ್ಗಾರಗಳನ್ನು ಮತ್ತು ವಿಚಾರಗಳನ್ನು ಆತ್ಮ ಪರಿವೀಕ್ಷಣೆಗೆ ಒಳಗು ಮಾಡಿಕೊಳ್ಳಬೇಕು. ಇಂಥ ಮೌಲ್ಯಮಾಪನ ಮಾಡಿಕೊಳ್ಳುವುದು ತೀರಾ ಅಗತ್ಯ.

ನನಗೆ ಇಂದು ಎಚ್ಚರವೇ ಆಗಲಿಲ್ಲ. ಇಂದು ‘ನನ್ನ ಇವರು’ ನಳದಲ್ಲಿ ಎರಡು ಕೊಡ ನೀರನ್ನು ಹಿಡಿದು ತಂದಿದ್ದರು. ಎದ್ದ ಮೇಲೆ ಅದನ್ನು ನೋಡಿ ನನಗೆ ಎಷ್ಟು ನಾಚಿಕೆಯಾಯಿತೆಂದರೆ, ನಾನು ‘ಇವರಿಗೆ’ ಶಪಥ (ಆಣೆ) ಮಾಡಿ ಹೇಳಿದೆ ನಾಳೆಯಿಂದ ನನಗೆ ಕೂಗಿ ಎಬ್ಬಿಸಬೇಕು, ಇದು ಪದವೀಧರಳಾದ ಗೃಹಿಣಿಯೊಬ್ಬಳು ನಾಚುತ್ತಾ ಸಂಕೋಚದಿಂದ ಹೇಳಿದ ಅಮೃತವಾಣಿ.

ನನಗೆ ಖಾಯಿಲೆ, ಅವರು (ಪತಿ) ಕುಕ್ಕರ್ ಇಟ್ಟು ಅಡುಗೆ ಮಾಡಿದರು. ನನಗೆ ಈಗ ಬಿದ್ದುಕೊಂಡು ಇರುವುದಕ್ಕೆ ಸಾಧ್ಯವೇ ಇಲ್ಲ. ಡಾಕ್ಟರರು ಏನನ್ನಾದರೂ ಹೇಳಿರಲಿ, ನಾನು ಮಾತ್ರ ಎದ್ದು ಕೆಲಸಕ್ಕೆ ಹೋಗುವುದು ಖಾತ್ರಿ. ಮಧ್ಯಮ ವರ್ಗಿಯ ಸ್ತ್ರೀಯರನ್ನು ಪ್ರತಿನಿಧಿಸುವ ಪ್ರೌಢ ಸ್ತ್ರೀಯೊಬ್ಬಳು ಈ ಬಗೆಯ ನೆಲೆಯ ಮೇಲೆ ಮಾತನಾಡುತ್ತಿರುವುದು ಕೇಳಿಬಂತು.

ಶಿಕ್ಷಣದ ಪ್ರಸಾರ ಮತ್ತು ಆರ್ಥಿಕ ಸಂಬಂಧವನ್ನು ಬಿಡಿಸುವ ದೃಷ್ಟಿಯಿಂದ ಮಹಿಳೆಯರು ಉದ್ಯೋಗ ಮಾಡುವುದಕ್ಕೆ ಮಾನ್ಯತೆ ದೊರೆಯಿತು. ಇದರಿಂದ ಮನೆಯ ಮತ್ತು ಹೊರಗಿನ ಜವಾಬ್ದಾರಿಗಳು ಹೆಚ್ಚಾದವು. ಹೀಗೆ ಅವಳ ಕೃತ್ರಿಮ ಸ್ವಾತಂತ್ರ್ಯವನ್ನು ಸಮಾಜ ಮಾನ್ಯಮಾಡಿದೆ. ಗುಲಾಬಿ ಬದುಕಿನಿಂದ ಮಹಿಳೆಯರಿಗೆ ಬಿಡುಗಡೆ ಮಾಡಬೇಕು ಎಂಬ ದೃಷ್ಟಿಯಿಂದ ಕಾಯಿದೆಗಳನ್ನು ರೂಪಿಸಲಾಗಿದೆ. ಹಿಂದೂ ವಿವಾಹ ಮತ್ತು ವಿಚ್ಚೇದಿತೆಗೆ ಜೀವನಾಂಶ ಕಾಯಿದೆ, ವರದಕ್ಷಿಣೆ ವಿರೋಧಿ ಕಾಯಿದೆ, ವಾರಸುದಾರಿಕೆಯ ಹಕ್ಕು ಮತ್ತು ದತ್ತಕ ವಿಧಾನದ ಸೌಲಭ್ಯ, ವಿಚ್ಛೇದನ, ಗರ್ಭಪಾತಗಳಿಗೆ ಕಾಯಿದೆ ಬದ್ದ ಮಾನ್ಯತೆ ಇತ್ಯಾದಿ ಕಾಯಿದೆಗಳು ರೂಪಿತವಾಗಿವೆ. ಸಮಾನ ವೇತನದ ತತ್ತ್ವಗಳೂ ಮಾನ್ಯವಾಗಿವೆ. ಅತ್ಯಾಚಾರ, ಬಲತ್ಕಾರಗಳ ವಿರುದ್ಧ ಮಹಿಳೆಯರು ಸಂಘಟಿತರಾಗಿ ಧ್ವನಿ ಎತ್ತುವುದಕ್ಕೆ ಆರಂಭಿಸಿದ ಮೇಲೆ ಆ ಪ್ರಶ್ನೆಯನ್ನು ಕೂಡ ಕಾಯಿದೆ ಬದ್ದವಾಗಿ ಪರಿಹರಿಸುವ ಪ್ರಯತ್ನಗಳು ನಡೆದಿವೆ.

ಆದರೆ ಈ ಸ್ವರೂಪದ ಕಾಯಿದೆಗಳಿಂದ ಸಮಾಜದಲ್ಲಿ ಮಹಿಳೆಯರ ಸ್ಥಾನಗಳ ಮೂಲಭೂತ ಸ್ವರೂಪದಲ್ಲಿ ಬದಲಾವಣೆಯುಂಟಾಗುವುದಕ್ಕೆ ಸಾಧ್ಯವೇ? ಅಥವಾ ಇವು ಕೇವಲ ಕಾಗದದ ಮೇಲೆ ಇರುವಂಥವು ಮಾತ್ರವೇ? ಇನ್ನು ಅವುಗಳನ್ನು ತಿಳಿದುಕೊಳ್ಳುವ ಉತ್ಸುಕತೆ ಎಷ್ಟು ಮಂದಿ ಮಹಿಳೆಯರಲ್ಲಿದೆ? ಕಾಯಿದೆಗಳನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಹಿಳೆಯರು ಪೂರ್ಣ ತಿಳಿವಳಿಕೆಯಿಂದ ಮಾಡತ್ತಿದ್ದಾರೆಯೇ? ಕೌಟುಂಬಿಕ ಜವಾಬ್ದಾರಿಗಳು ಮತ್ತು ಗೃಹಿಣಿ ಎಂಬ ಜಗತ್ತಿನಲ್ಲಿಯೇ ಇರದೆ ಸ್ವತಃ ತಮ್ಮ ವ್ಯಕ್ತಿಮತ್ತೆಯಲ್ಲಿಯೇ ವಿಕಾಸವಾಗಬೇಕು ಎಂಬಂಥ ಅಸಮಾಧಾನದ ತುಡಿತ ಅವರುಗಳಲ್ಲಿ ಇದೆಯೇ? ಅನ್ಯಾಯ ಮತ್ತು ಪರತಂತ್ರಗಳಿಂದಾಗಿ ಅವರು ಕೋಪೋದ್ರೇಕಗೊಳ್ಳುವರೇ? ನಿಜವಾದ ಅರ್ಧದಲ್ಲಿ ಮಹಿಳೆಯರಿಗೆ ಆರ್ಥಿಕ-ಸಾಮಾಜಿಕ-ಸಾಂಸ್ಕೃತಿಕ ಮತ್ತು ವೈಚಾರಿಕ ಸ್ವಾತಂತ್ರ್ಯದ ಸ್ಥಾನ ಮತ್ತು ಮನುಷ್ಯೆ ಎಂಬುದಾಗಿ ಬೇರೆ ಸ್ಥಾನ ಮತ್ತು ಸ್ವಾತಂತ್ರ್ಯ ಬೇಕಾಗಿಲ್ಲವೆ? ಮಹಿಳೆಯರು ತಮ್ಮ ನಡವಳಿಕೆಗಳಿಂದ ಸ್ವತಃ ತಮ್ಮ ಸ್ವಾತಂತ್ರ್ಯವನ್ನು ನಿಗದಿಗೊಳಿಸಿಕೊಂಡು ಬಿಟ್ಟಿರುವರೇ? ಸ್ತ್ರೀಯನ್ನು ಸ್ತ್ರೀಯರೇ ಅರ್ಧ ಮಾಡಿಕೊಳ್ಳದಿರುವುದ ರಿಂದ ಅವರ ಸ್ಥಿತಿ ದಯನೀಯವಾಗಿದೆ ಎಂಬುದರ ಅರಿವು ಅವರಿಗೆ ಬರದಿರುವುದೇ ಇಂಥ ಅನೇಕ ವೈಚಾರಿಕ ಪ್ರಶ್ನೆಗಳು ಮೇಲಿಂದ ಮೇಲೆ ಉದ್ಗಾರಗಳಾಗಿ ಕೇಳಿದಾಗಲೆಲ್ಲ ಮನಸ್ಸಿನಲ್ಲಿ ಸತಾಯಿಸುತ್ತಿರುತ್ತವೆ.

ಪಿತ, ಪತಿ, ಪುತ್ರ ಎಂಬ ಸಂಬಂಧಗಳ ಮೂಲಕ ಪುರುಷರು ಅವಳನ್ನು ರಕ್ಷಣೆ ಮಾಡುವುದು ಎಂಬುದಾಗಿದೆ, ‘ನ ಸ್ತ್ರೀ ಸ್ವಾತಂತ್ರ್ಯಮರ್ಹಂತಿ’ ಎಂಬ ಮನುವಿನ ಮಾತಿನ ಮತಿತಾರ್ಧ. ರಕ್ಷಿತೆ ಎಂಬುದು ಸ್ತ್ರೀಯ ಸುತ್ತ ಪುರುಷನ ಅಭಿಮಾನದ ಬಲೆಯನ್ನು ಹೆಣೆದುಬಿಟ್ಟಿದೆ. ರಕ್ಷಿತೆ, ಅಬಲೆ ಎಂಬುವುಗಳಿಂದ ಮತ್ತು ಮನುವಿನ ಇತರೆ ದಂಡಕಗಳ ಅನುಸಾರ ಅವಳಿಗೆ ಖಾಯಿಲೆ, ವೃದ್ದಾಪ್ಯ ಮೊದಲಾದುವುಗಳೊಂದಿಗೆ ಕೆಲವಾರು ಕೋಮಲ ಅಂಶಗಳು ಸೇರಿಕೊಂಡು ದಯೆಯ ಮಾಪನವು ನಿರ್ಧಾರವಾಯಿತು. ಇದರಿಂದ ಸಾಮಾಜಿಕ ವ್ಯವಹಾರದಲ್ಲಿ ಪುರುಷ ಪ್ರಧಾನತೆಯು ಸ್ಥಿರವಾಗಿ ಬೇರೂರಲು ಆಧಾರವೂ ಉಂಟಾಯಿತು.

ಮಹಿಳೆಯರಿಗೂ ಹೀಗೆ ಅವಲಂಬಿತರಾಗಿ ಇರುವುದು ಹೆಚ್ಚು ಯೋಗ್ಯವೂ ಮತ್ತು ಸೌಖ್ಯವೂ ಎಂದೆನಿಸಿತು. ಆ ಈ ವೇಳೆಗಳ ಪ್ರವೃತ್ತಿಯಿಂದ ಇಂದಿನ ಮಹಿಳೆಯರು ಹೊರಬರುವುದಕ್ಕೆ ತಯಾರಾಗಿದ್ದಾರೆಯೇ ಮಹಿಳೆಯರು ಪುರುಷರ ಅಂಹಂಕಾರದ ಕೊಂಬನ್ನು ಸಂರಕ್ಷಿಸುವುದರಲ್ಲಿಯೇ ಧನ್ಯತೆ ಇದೆಯೆಂದು ತಿಳಿದು ಶರೀರ, ಮನಸ್ಸು ಮತ್ತು ಬುದ್ದಿಯನ್ನು ಹಿಂಡಿ ಹಿಂಸಿಸಿ, ಮತು ಶೋಷಿಸಿ ಅದನ್ನು ತ್ಯಾಗವೆಂದು ರೂಪಿಸಿರುವುದು ಅತ್ಯಂತ ದುರ್ದೈವದ ಸಂಗತಿ.

ಸ್ತ್ರೀ ‘ಸ್ವತ್ವ’, ‘ಸ್ವಂತಿಕೆ’ ಯಾವುದರಲ್ಲಿದೆ? ಎಂಬುದನ್ನು ಸ್ತ್ರೀಜಾತಿಯಲ್ಲಿ ಶೋಧಿಸುವ ಪ್ರವೃತ್ತಿಯನ್ನು ಬಿಟ್ಟು, ಆ ಸ್ವತ್ವದ ಶೋಧವನ್ನು ಮಾನವ ಎಂಬುದಾಗಿ, ವ್ಯಕ್ತಿ ಎಂಬುದಾಗಿ ಪರಿಗಣಿಸುವುದು ಅವಶ್ಯ. ಹಾಗೆ ಮಾಡಿದಲ್ಲಿ ಸ್ತ್ರೀ ಎಂಬುದು ಕಡಿಮೆ ಯಾಗುತ್ತದೆ.

ಸ್ತ್ರೀ ಎಂಬುದಾಗಿ ಎಲ್ಲ ಸ್ತರದಲ್ಲಿನ ಸ್ತ್ರೀಯರು ತಮ್ಮ ಸ್ವತಂತ್ರ ಅಸ್ತಿತ್ವಕ್ಕೆ ಭಾಧೆಯನ್ನು ತಂದುಕೊಳ್ಳುವ ವಿಚಾರವನ್ನು ಸ್ಪಷ್ಟವಾಗಿ ದೃಷ್ಟಿಸಿ ಕಳೆದುಕೊಳ್ಳ ಬೇಕಾಗಿರುವುದೂ ಅವಶ್ಯ.

ಸ್ತ್ರೀಯ ದೇಹ ಭಿನ್ನವಾಗಿರುವುದರಿಂದಲೇ ಅವಳೆಡೆ ಪುರುಷರಿಗಿಂತ ಭಿನ್ನವಾದ ದೃಷ್ಟಿಯಿಂದ ನೋಡಲಾಗುತ್ತಿರುವುದು. ಈ ಪರಿಣಾಮವಾಗಿ ಸ್ತ್ರೀಯರು ಅನೇಕ ಪ್ರಕಾರದ ಮಾನಸಿಕ ಸಂಘರ್ಷಕ್ಕೆ ಮತ್ತು ಶಾರೀರಿಕ ಅತ್ಯಾಚಾರಕ್ಕೆ ಎದುರಾಗಬೇಕಾಗಿದೆ. ನಿಸರ್ಗ ಪುರುಷನ ಒಪ್ಪಿಗೆಯಂತೆ ಸ್ತ್ರೀಯರ ಶಾರೀರಿಕ ರಚನೆ ಭಿನ್ನವೂ ಮತ್ತು ಕಣ್ಣುಗಳ ದೃಷ್ಟಿಗೆ ಸುಖವನ್ನು ತರುವಂಥದ್ದು ಆಗಿದೆ. ಇತ್ತ ಕಡೆ ಪುರುಷರಿಗಿಂತ ತಾವು ಬಹಳ ಭಿನ್ನ. ಸೂಕ್ಷ್ಮ ಮತ್ತು ತಮಗೆ ಸಂರಕ್ಷಣೆಯ ಆವಶ್ಯಕತೆ ಮತ್ತು ಕಾಪಾಡುವ ಅಗತ್ಯವಿದೆ ಎಂದು ಭಾವಿಸಿಕೊಂಡು ವ್ಯವಹರಿಸುತ್ತಿರುವ ಸ್ತ್ರೀಯರ ಸಂಖ್ಯೆ ಬಹಳ ದೊಡ್ಡ ಪ್ರಮಾಣದಲ್ಲಿದೆ. ಸಾರ್ವಜನಿಕ ಸ್ಥಳಗಳು, ಬಸ್ ನಿಲ್ದಾಣಗಳು, ಪೇಟೆ-ಅಂಗಡಿಗಳು, ಸಿನಿಮಾ ಗೃಹಗಳು, ಕಾರ್ಯಾಲಯಗಳು ಇತ್ಯಾದಿ ಸ್ಥಳಗಳಲ್ಲಿ ಸ್ತ್ರೀಯರ ಮಾತುಗಳು, ಹಾವ-ಭಾವಗಳು, ಗೊಂದಲಗಳು, ನಡತೆ ಇವುಗಳನ್ನೆಲ್ಲ ನೋಡಿದಾಗ ಭಾಸವಾಗುವುದೇನೆಂದರೆ ಇವೇ ಸಂಗತಿಗಳು ಅವರ ಗೌಣ ಸ್ಥಾನಕ್ಕೆ ಕಾರಣವಾಗಿವೆ.

ಮನಸ್ಸು, ಬುದ್ದಿ, ವಿಚಾರ, ಕೃತಿ ಮತ್ತು ವರ್ತನೆ ಈ ವಿಷಯಗಳಲ್ಲಿ ಅವರು ಪುರುಷರಿಗಿಂತ ಭಿನ್ನ ಮತ್ತು ಕಡಿಮೆ ಎಂದು ಭಾವಿಸಬೇಕೆಂದಿಲ್ಲ. ಪೋಷಾಕು ಉಡುಪುಗಳಲ್ಲಿ ಪುರುಷತನವೂ ಬರುತ್ತಿದೆ. ಆದರೆ ಆ ಪೋಷಾಕಿನಲ್ಲಿನ ನಡೆ ಮತ್ತು ನಡತೆ ಹೆಣ್ಣು ಸ್ವರೂಪದ್ದೇ ಆಗಿದ್ದರೆ ಅದರ ಪರಿಣಾಮ ತಿರುಗುಮುರುಗಾಗುವಂಥ ಭೀತಿಯೇ ಅಧಿಕ. ಸೂಕ್ಷ್ಮ ಕೃತ್ರಿಮ ಧ್ವನಿ, ಸೆರಗಿನ ನಿರರ್ಧಕತೆ, ಹೊರಳುವ ಕಣ್ಣುಗಳು, ಇಶ್ಶೀ, ಅಯ್ಯೋ ಎಂಬ ದಾನ-ಧರ್ಮ ಮತ್ತು ಅದೇ ತಮ್ಮ ನೈಸರ್ಗಿಕ ವ್ಯವಹಾರ ಎಂದು ತಿಳಿಯುವ ಪ್ರವೃತ್ತಿಯನ್ನು ಬದಲಾಯಿಸುವ ಅಗತ್ಯವಿದೆ.

ಹೆಜ್ಜೆಹೆಜ್ಜೆಗೂ ಪುರುಷರ ಆಧಾರವನ್ನು ಪಡೆಯುವ ಪ್ರವೃತ್ತಿ, ಈ ಅಗತ್ಯದಿಂದ ನಿರ್ಮಾಣವಾಗುವುದಕ್ಕಿಂತ ಬಾಹ್ಯಾಂಗದಲ್ಲಿ ಸ್ತ್ರೀತ್ವವನ್ನು ಪೋಷಿಸುವುದು ಅನಾವಶ್ಯಕ. ಹಾಗೂ ಪಾರಂಪರಿಕ ಮನೋವೃತ್ತಿಯಿಂದ ನಿರ್ಮಾಣವಾಗಿರುವುದಾದರೆ ಅವರ ಕೌಟುಂಬಿಕ, ಸಾಮಾಜಿಕ, ಸಾಂಸ್ಕೃತಿಕ ಸ್ಥಾನವನ್ನು ಮೇಲೆತ್ತರಿಸುವುದಕ್ಕಿಂತ ಅದು ಅಧಿಕ ಕನಿಷ್ಠ ಮತ್ತು ಪರಾಧೀನವಾಗುವ ಅಪಾಯವೇ ಇಲ್ಲಿ ಹೆಚ್ಚು. ಸ್ತ್ರೀಯರ ಈ ಪ್ರವೃತ್ತಿಯು ಅವರ ಸ್ವಾತಂತ್ರ್ಯವನ್ನು ನಿಗದಿತಗೊಳಿಸುವುದಕ್ಕೆ ಕಾರಣೀಭೂತವಾಗಿದೆ.

ಸ್ತ್ರೀಯರು ಸೌಂದರ್ಯದ ಬಗ್ಗೆ ಕಾಳಜಿ ವಹಿಸುವುದು ಆವಶ್ಯಕ. ಇದರ ಬಗ್ಗೆ ಯಾರದೂ ಭಿನ್ನಾಭಿಪ್ರಾಯ ಇರುವಂತಿಲ್ಲ. ನೈಸರ್ಗಿಕ ಭಾವನೆ ಎಂಬುದಾಗಿ ರಸಿಕತೆ, ಸೌಂದರ್ಯ ವೃತ್ತಿ, ಅಚ್ಚುಕಟ್ಟುತನ ಇವುಗಳೆಡೆಗೆ ಅವರು ತಮ್ಮ ಲಕ್ಷ್ಯವನ್ನು ವಹಿಸುವುದೂ ಆವಶ್ಯಕ. ಆದರೆ ಕೇವಲ ಸ್ತ್ರೀತ್ವದ ಹೆಸರಿನಡಿ ಉತ್ಸಾಹ ಪರರಾಗಿ ಉಳಿದಾಗ ಪುರುಷರಿಗೋಸ್ಕರ ಸುಂದರವಾಗಿ ಕಾಣುವ ಅಟ್ಟಹಾಸ, ಪುರುಷರ ಅಹಂಕಾರಕ್ಕೆ ನೀರು, ಗೊಬ್ಬರ ಹಾಕುವುದಾಗಿರುತ್ತದೆ ಎಂಬುದರ ಎಚ್ಚರಿಕೆಯನ್ನು ಇಟ್ಟುಕೊಳ್ಳಬೇಕಾದ್ದು ಅವಶ್ಯ.

ಶಾರೀರಿಕ ಪಾತಳಿಯ ಮೇಲೆ ಹುಡುಗಿ ಎಂಬ ನೆಲೆಯಿಂದಲೇ ಸದಾ ಅವರ ಮೇಲೆ ಸಂಸ್ಕಾರಗೊಳಿಸುತ್ತಾ ಹೋದರೆ ಅದರೊಳಗಿನಿಂದಲೇ ಬಲಾತ್ಕಾರದಂತಹ ಭಯಾನಕ ಪ್ರಸಂಗಗಳು ಬೆಳೆಯುತ್ತಿರುತ್ತವೆ. ಉಚ್ಚ ವರ್ಗದಲ್ಲಿನ ಮಹಿಳೆಯೊಂದಿಗೆ ಶೋಪೀಸ್ ಎಂಬಂತೆ ವ್ಯವಹಾರ ಮಾಡಲಾಗುತ್ತಿದೆ. ಅವಳ ಶಾರೀರಿಕ ಸೌಂದರ್ಯ ಮತ್ತು ಮಾದಕತೆಗಷ್ಟೆ ಮಹತ್ವ ಕೊಡಲಾಗುತ್ತಿರುವುದು. ಇನ್ನು ಮಧ್ಯಮ ವರ್ಗೀಯ ಮಹಿಳೆಯರು ಅವರನ್ನು ಅನುಕರಣೆ ಮಾಡುವುದನ್ನೇ ಧನ್ಯತೆಯೆಂದು ಭಾವಿಸುತ್ತಾರೆ. ಅತ್ಯಂತ ಕೆಳಗಿನ ವರ್ಗದಲ್ಲಿನ ಮಹಿಳೆಯರು ಶರೀರವನ್ನು ಶ್ರಮಪಡುವ ಮತ್ತು ಭೋಗ ನೀಡುವ ಯಂತ್ರವಾಗಿ ಬಳಸಬೇಕಾಗಿದೆ. ಪುರುಷರಿಗೆ ಸಂತೋಷ ಪಡಿಸುವ, ರಮಿಸುವ ಮತ್ತು ತಕರಾರು ಮಾಡದೆ ದೇಹದ ಶಕ್ತಿಗನುಸಾರ ಅವೆಲ್ಲವನ್ನು ಸೆಳೆದುಕೊಳ್ಳುವ ‘ಸ್ತ್ರೀ’ ಎಂಬ ಪ್ರತಿಮೆಯನ್ನು ಅವರು ಅವಶ್ಯ ಬದಲಿಸಬೇಕು.

ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಪರಿಸ್ಥಿತಿಗಳಿಂದಾಗಿ ಉದ್ಯೋಗ ಮಾಡುವ ಕಾರಣವಾಗಿ ಮನೆಯಿಂದ ಹೊರಗೆ ಬೀಳುತ್ತಿರುವ ಸ್ತ್ರೀಯರ ಸಂಖ್ಯೆಯು ಬೆಳೆಯುತ್ತಿದೆ. ಹಾಗೆ ನೌಕರಿ ಮಾಡುತ್ತಿರುವಂಥ ಮಹಿಳೆಯರು ಮೊದಲು ಲಿಂಗಭೇದದ ಕಾರಣ ಲಾಭ ಮಾಡಿಕೊಳ್ಳುವ ಮೋಹವನ್ನು ಬಿಟ್ಟುಬಿಡಬೇಕು. ಕೌಟುಂಬಿಕ ಜವಾಬ್ದಾರಿಗಳು, ಮಕ್ಕಳ ಪಾಲನೆ, ಪೋಷಣೆ, ಮನೆಯ ತೊಂದರೆಗಳು ಮತ್ತು ತಮ್ಮ ಜೀವನಾಭಿವೃದ್ದಿಯ ಬಗೆಗಿನ ಉದಾಸೀನತೆ, ಗೃಹಿಣಿ ಸ್ಥಾನದ ಉನ್ನತತೆ ಇತ್ಯಾದಿಗಳಿಂದಾಗಿ ಪುರುಷರಿಗೆ ಸರಿಸಮಾನವಾಗಿ ಕಾರ್ಯ ನಿರ್ವಹಿಸುವಲ್ಲಿ ತೊಂದರೆಗಳು ಉಂಟಾಗುತ್ತವೆ. ಹಾಗಿರುವಾಗ ಅಂಥ ಸ್ತ್ರೀಯರು ಎಷ್ಟರ ಮಟ್ಟಿಗೆ ಅದನ್ನು ಸಮರ್ಧವಾಗಿ ರೂಪಿಸಿ ನಿರ್ವಹಿಸಬಲ್ಲರು? ತೊಂದರೆಗಳನ್ನು ಅಭಿವ್ಯಕ್ತಿಸುತ್ತಾ ಆ ಮಾರ್ಗದಲ್ಲಿಯೇ ಉದ್ಯೋಗದಲ್ಲಿ ಬರುವ ಜವಾಬ್ದಾರಿಗಳಿಂದ ನುಣುಚಿಕೊಳ್ಳಲಾಗುತ್ತಿದೆ. ಅದಕ್ಕಿಂತಲೂ ಹೆಚ್ಚಾಗಿ ಅದನ್ನು ಮಾಡುವುದಕ್ಕಾಗಿಯೇ ಹೆಂಗಸರ ಕೆಲಸದ ಬೆಟ್ಟವನ್ನು ಎತ್ತರಿಸುವುದು ಸಂಯುಕ್ತಿಕವೂ, ಆವರ್ತನದ ರೀತಿಯೂ ಆಗಿಬಿಟ್ಟಿದೆ. ಈ ಬಗೆಯಲ್ಲಿ ಭಾವಿಸುವುದು ಕಡಿಮೆ ಮಾಡಿಕೊಳ್ಳುವುದು ಅಗತ್ಯ.

ಸಮಾನ ಕೆಲಸ, ಸಮಾನ ವೇತನ ಎಂಬ ತತ್ತ್ವವು ಅನುಷ್ಠಾನಕ್ಕೆ ಬಂದಿರುವುದರಿಂದ ಸ್ತ್ರೀಯರಿಗೆ ಪುರುಷನಿಗೆ ಸರಿಸಮಾನವಾದ ಸ್ಥಾನಮಾನವನ್ನು ಆರ್ಥಿಕ ದೃಷ್ಟಿಯಿಂದಷ್ಟೆ ಮಾನ್ಯವಾದರೆ ಉಪಯೋಗವಿಲ್ಲ. ಕೆಲಸದಲ್ಲಿಯೂ ಅವರು ತಮ್ಮ ಸಾಮರ್ಥ್ಯವನ್ನು ತೋರ್ಪಡಿಸಬೇಕಾದ್ದು ಅವಶ್ಯ. ಅದರಲ್ಲಿ ದುರ್ಲಕ್ಷ್ಯ, ಮೈಗಳ್ಳತನ ತೋರಿಸುತ್ತಿದ್ದಾರೆ ಎಂಬುದರಿಂದಾಗಿಯೇ ಪುರುಷರಿಗಿಂತ ಸ್ತ್ರೀಯರ ದರ್ಜೆ ಕಡಿಮೆಯಾಗಿದೆ ಎಂಬ ಮಾತನ್ನು ಒಪ್ಪಿಕೊಳ್ಳುವುದಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿಯಾದರೂ ಸ್ತ್ರೀಯರು ತನ್ನ ಕಾರ್ಯಸಾಮರ್ಥ್ಯ, ಸೃಜನಶೀಲತೆ ಮತ್ತು ವಾಹಕತೆಯನ್ನು ತೋರ್ಪಡಿಸುವುದು ಅತ್ಯಗತ್ಯ. ಯಾವುದೇ ಬಗೆಯ ಅಂಗೀಕೃತ ಕೆಲಸದಲ್ಲಿ ತಾನು ‘ಸ್ತ್ರೀ’ ಎಂಬ ಕಾರಣವನ್ನು ಇಟ್ಟುಕೊಂಡು ಹಿಂದೆ ಬೀಳಬಾರದಾಗಿದೆ.

ನಾನು ‘ಸ್ತ್ರೀ’ ಎಂದು ಸಬೂಬು ಹೇಳಿ ಯಾವುದೇ ಕೆಲಸದಿಂದ ಬಿಡುಗಡೆ ಪಡೆಯುವ ಪ್ರವೃತ್ತಿಯು ಅವಳ ಅಕಾರ್ಯ ಸಾಮರ್ಥ್ಯದ ದ್ಯೋತಕವಾಗುತ್ತದೆ. ಇದರಿಂದ ಸಮಾನತೆಗೆ ಬಾಧಕವೇ ಸರಿ. ಎಂತಲೇ ಪುರುಷನಿಗೆ ಸರಿಸಮನಾಗಿ ವೇತನವನ್ನು ಪಡೆಯುವ ಅಧಿಕಾರಕ್ಕೆ ಸಾಮಾಜಿಕ ಮತ್ತು ನೈತಿಕ ಹೊರೆಯಾಗುವುದು. ಅದಕ್ಕಾಗಿ ಉದ್ಯೋಗದಲ್ಲಿರುವ ಸ್ತ್ರೀಯು ಮನೆಯಿಂದ ಹೊರಗೆ ಅಂದರೆ ಉದ್ಯೋಗದ ಸ್ತರದಲ್ಲಿ ಸ್ತ್ರೀ ಎಂಬುದಾಗಿ ಪರಿಗಣನೆಗೊಳ್ಳದೆ ವ್ಯಕ್ತಿ ಮತ್ತು ಉದ್ಯೋಗಿ ಅಥವಾ ಅಧಿಕಾರಿ ಎಂಬ ಸಂಬಂಧದಿಂದಲೇ ನಡೆದುಕೊಳ್ಳ ಬೇಕಾದ್ದು ಅವಶ್ಯ.

ಶಿಕ್ಷಣ ಮತ್ತು ಉದ್ಯೋಗದ ಸಂಘಟನೆಗಳಲ್ಲಿ ಸಹಭಾಗ ಹೊಂದುವ, ಈ ಉದ್ಯೋಗದ ಅನುಷಂಗವಾಗಿ ಬರುವ ಮತ್ತು ಅಪೇಕ್ಷಿತವಾದ ಕೆಲಸಗಳಲ್ಲಿಯೂ ಅವಳ ಸಂಪೂರ್ಣ ಸಹಭಾಗಿತ್ವ ಬೇಕು. ಇಂಥ ಸಮಯದಲ್ಲಿ ಕೌಟುಂಬಿಕ ತೊಂದರೆಗಳನ್ನು ಪರಿಹರಿಸಿಕೊಂಡು ಮತ್ತು ಪುರುಷ ಸದಸ್ಯರ ಮೇಲೆ ಈ ಜವಾಬ್ದಾರಿಗಳನ್ನು ವಹಿಸಿಕೊಟ್ಟು ಹೊರ ನಡೆಯಬೇಕಾಗುತ್ತದೆ. ಸಂಘಟನೆಯ ಮೀಟಿಂಗುಗಳಲ್ಲಿ, ಮೆರವಣಿಗೆ ಮತ್ತಿತರೆ ಕಾರ್ಯಗಳಲ್ಲಿ ಉತ್ಸಾಹ ತೋರಿಸುವುದು ಅಗತ್ಯ. ಆ ಹೊತ್ತಿನಲ್ಲಿ ಮನೆಗೆ ಹೋಗಿ ಮನರಂಜನೆಯಲ್ಲಿ ಮುಳುಗುವ ಮೋಹವನ್ನು ಕಳೆದುಕೊಳ್ಳಲೇಬೇಕು.

ಸ್ತ್ರೀಯರು ಕೌಟುಂಬಿಕ ಜವಾಬ್ದಾರಿಗಳಿಂದ ಮುಕ್ತವಾಗುವ ಮಾನಸಿಕ ತಯಾರಿಯಲ್ಲಿ ಇರಬೇಕು. ಇದರರ್ಧ ಅವರು ಕುಟುಂಬದ ಅಸ್ವಸ್ಥತೆ ಮತ್ತು ಕುಟುಂಬ ವಿಘಟನೆ ಭೂಮಿಕೆಯನ್ನು ಹಿಡಿಯಬೇಕು ಎಂದಲ್ಲ. ಆದರೆ ನೀನು ಎಂದರೆ ಪ್ರೇಮಸಿಂಧು ನಿನ್ನ ಮಾಯೆಯ ಸಂರಕ್ಷಣೆ ಬೇಕೆಮಗೆ. ನಿನಗೆ ನಮ್ಮ ಏನೆಲ್ಲವೂ ಹೇಳದಿದ್ದರೂ ತಿಳಿಯುತ್ತದೆ. ನಿನ್ನ ದೃಷ್ಟಿಯ ಕೌತುಕದಿಂದಲೇ ಬಲ ಬರುವುದೆಮಗೆ, ನಿನ್ನ ಅವಲಂಬನೆಯು ಸದಾ ನಮಗೆ ಬೇಕು. ಗೃಹಲಕ್ಷ್ಮಿಯು ನೀನು, ನಿನ್ನಯ ಹಸನ್ಮುಖವೆ ಮನೆಯ ಸೌಭಾಗ್ಯವು. ಸಹನಶೀಲ ಶಾಂತ ಮನಸ್ಕಳು ನೀನೆ ಮತ್ತು ತಿಳಿವಳಿಕೆಯುಳ್ಳವಳಾದರೆ ನೀನು ಪುರುಷನ ಕರ್ತೃತ್ವಕ್ಕೆಲ್ಲ ಪ್ರೇರಣೆಯಹುದು. ಮಾತೃತ್ವ ಹೊಂದುವುದು ಸಾರ್ಧಕ ಎಂಬಿತ್ಯಾದಿ ಶಬ್ದಗಳಿಂದ ಸ್ತ್ರೀಯನ್ನು ಪತ್ನಿ, ಗೃಹಿಣಿ, ಮಾತೆ ಎಂಬುದಾಗಿ ಗೌರವೋದ್ಗಾರಗಳಲ್ಲಿ ಮುಳುಗಿಸಿರುವುದು ಉಂಟು.

ಪ್ರೇಮ, ತಿಳಿವಳಿಕೆ, ಮಹತ್ವ ಮತ್ತು ಜವಾಬ್ದಾರಿ ಎಂಬೀ ಪ್ರೇಮದ ಸಂಬಂಧದ ಅಂಶಗಳನ್ನು ಕಾಪಾಡುವ ಭಾರವನ್ನು ಹೆಣ್ಣುಮಕ್ಕಳ ಮೇಲೆ ಹೊರಿಸಲಾಗಿದೆ. ಆದರೆ ಅದರಿಂದ ಅವಳಿಗೆ ದಕ್ಕಿರುವುದು ಕೇವಲ ಅರ್ಧಾಂಗಿ ಮತ್ತು ಹೆಣ್ಣು ಪಶುವೆಂಬ ಸ್ಥಾನ. ಅಂದರೆ ಸಂಬಳವಿಲ್ಲದೆ ಕೆಲಸ ಮಾಡುವಂತಹ ಸೌಲಭ್ಯ ಮತ್ತು ಮಾತೃತ್ವದ ಮಹತ್ತಿಗಾಗಿ ಅನ್ಯಾಯಕ್ಕೆ ಸುಮ್ಮನೆ ಎದುರಾಗುವುದು. ಈ ಮೂಲಕ ಸ್ತ್ರೀಯು ದಾಸ್ಯದ ಪ್ರತೀಕ ವಾಗಿದ್ದಾಳೆ.

ಜೀವನದ ಸಾರ್ಧಕತೆಯ ನಿಕಷದ ಸ್ವರೂಪವನ್ನು ಸ್ತ್ರೀಯರು ಇಂದು ಬದಲಾಯಿಸಲೇ ಬೇಕಾಗಿರುವುದು ಅಗತ್ಯ. ಆ ದಿಶೆಯಲ್ಲಿ ಕಾರ್ಯಪ್ರವೃತ್ತರಾಗುವ ಜಾಗೃತಿ ಪಡೆಯಬೇಕು. ತಾವು ಬೇರೊಬ್ಬರಿಗಾಗಿ ಜೀವನವನ್ನು ಸಾಗಿಸುತ್ತಿದ್ದೇವೆ, ಶರೀರವನ್ನು ಸವೆಯುತ್ತಿದ್ದೇವೆ ಮನಸ್ಸನ್ನು ಕೊಂದುಕೊಂಡು ಅದುಮಿಕೊಂಡು ಪರಂಪರಾಗತವಾಗಿ ಮೌಲ್ಯಗಳನ್ನು ಪರಿಪಾಲಿಸಿ ಜೋಪಾನ ಮಾಡುತ್ತಿರುವುದು ಎಷ್ಟು ಯೋಗ್ಯ ಮತ್ತು ಏನು ಉಪಯೋಗ ಎಂಬುದನ್ನು ಕುರಿತು ಅವರು ಆಲೋಚಿಸಬೇಕಾದ್ದು ಅವಶ್ಯ. ತಮ್ಮ ಜೀವನವನ್ನೆಲ್ಲ ಬೇರೆ ಯಾರದೋ ಮುಲಾಜಿಗಾಗಿ ಅವಲಂಬನೆಯಾಗಿ ಇಟ್ಟಿರುವುದು ತಪ್ಪು ಕೆಲಸವಾಗಿದೆ. ಈ ನಮ್ಮ ಮುಂದಿರುವ ಪ್ರಶ್ನೆಗಳನ್ನು ನಾವೇ ಬಿಡಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ನಮ್ಮ ನಿರ್ಣಾಯಕ ಶಕ್ತಿಯನ್ನು ಅವಶ್ಯ ರೂಪಿಸಿಕೊಳ್ಳಬೇಕಾಗಿದೆ.

ಇಂದಿಗೂ ಬಹಳಷ್ಟು ಸಂಖ್ಯೆಯ ಹೆಣ್ಣುಮಕ್ಕಳಿಗೆ ಹೊಸ ವಿಚಾರಗಳು ಮತ್ತು ನಿಕಷಗಳು ಆಕರ್ಷಿತವಾಗಿಲ್ಲ. ಬೇರೆ ಬೇರೆ ಆಭರಣಗಳು, ವರದಕ್ಷಿಣೆ, ಮಾನ ಗೌರವ, ಸೀರೆಗಳು, ಮನೆಗೆ ಬೇಕಾದ ಗೃಹಿಣಿಯರ ವಸ್ತುಗಳು ಇವೇ ಅವರ ಆಸಕ್ತಿಯ ವಿಷಯಗಳು. ಸುಶಿಕ್ಷಿತ ಹೆಣ್ಣುಮಕ್ಕಳು ಕೂಡ ಹೆಣ್ಣುತನದ ಅಸ್ತ್ರವನ್ನು ಇಟ್ಟುಕೊಂಡೇ ಮಾತನಾಡುತ್ತಿರು ವುದು ಗಮನಿಸಬೇಕಾದಂಥ ಸಂಗತಿ.

ಒಲೆ ಹೋಯಿತು, ಗ್ಯಾಸ್ ಬಂದಿತು, ಆದರೆ ಹೆಣ್ಣು ಮಕ್ಕಳಿಗೆ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕಿಂತ ಹೋಂ ಸೈನ್ಸ್ ಕಲಿಕೆ ಒಳ್ಳೆಯದು ಎಂಬ ಈ ವಿಚಾರವು ಮಾತ್ರ ಇಂದಿಗೂ ಚಾಲ್ತಿಯಲ್ಲಿದೆ. ಎಷ್ಟು ತೊಲ ಬಂಗಾರದಿಂದ ಮಾಡಿಸಿರುವ ಬಳೆಗಳಿವು ಎಂಬುದಾಗಿ ಕೇಳುವಂತೆಯೇ ಯಾವ ಕಂಪನಿಯ ಫ್ರಿಜ್ ಮತ್ತು ಶ್ರೇಷ್ಠ ಮಿಕ್ಸಿ ತಯಾರಿಸುತ್ತಿರುವ ಕಂಪನಿ ಯಾವುದು ಎಂಬಿತ್ಯಾದಿ ಪ್ರಶ್ನೆಗಳ ಬಗ್ಗೆಯೇ ಹೆಚ್ಚು ಆಕರ್ಷಣೆ. ಪತಿಯು ತರುವ ವೇತನದ ಅಂದಾಜು ಹಿಡಿದು ಆ ಎತ್ತರದಲ್ಲಿ ಮೆರೆಯುತ್ತಾ ನಮ್ಮ ಅವರು ಬಹಳ ಉನ್ನತ ಆಫಿಸರಾಗಿದ್ದಾರೆ ಎಂಬುದಾಗಿ ‘white collar’ ಭಾಷೆಯಲ್ಲಿ ‘ego’ (ಅಹಂ) ಅನ್ನು ತೋರಿಸುವ ಸ್ತ್ರೀಯ ಕೃತ್ರಿಮ ಪ್ರವೃತ್ತಿ ಇಂದಿಗೂ ಬದಲಾಗಿಲ್ಲ.

ಹೆಂಗಸರ ವಿಷಯದ ಬಗ್ಗೆ ಅಪ್ರೀತಿ ಇಲ್ಲದಿರಬಹುದು. ಆದರೆ ಅದರಲ್ಲಿಯೇ ರಮಿಸುವುದು ಮತ್ತು ಅದರಿಂದಲೇ ಮತ್ಸರ ದ್ವೇಷವನ್ನು ತೋರಿಸುವುದು, ತುಲನೆ  ಮಾಡುವುದರ ಮೂಲಕ ಅನಾವಶ್ಯಕ ದ್ವೇಷದೆಡೆ ಹೊರಳುವುದು ಘಾತುಕವಾಗುತ್ತದೆ.

ನೇಯುವಿಕೆ, ಕಸೂತಿ ಕೆಲಸ, ಗೃಹ ವಿಜ್ಞಾನ, ಆಭರಣಗಳು, ಸೀರೆಗಳು, ಪತಿಯ ವೇತನ, ಬಟ್ಟೆ ಮತ್ತಿತರೆ ಶುಭ್ರತೆಯ ಕೆಲಸದ ಬಗ್ಗೆ ನಡೆಯುವ ಸಂಭಾಷಣೆಯನ್ನು ಕೇಳಿದಾಗ ಹೀಗೆನಿಸುವುದು. ಇವರೆಲ್ಲ ತಾವು ಹೆಂಗಸಿನ ಕ್ಷೇತ್ರಕ್ಕೋಸ್ಕರವೇ ಜನುಮವೆತ್ತಿ ದವರಾಗಿದ್ದಾರೆ ಎಂಬುದನ್ನು ಸಾಕ್ಷ್ಯಗೊಳಿಸುತ್ತಿದ್ದಾರೆ.

ಮಗಳು ಹುಟ್ಟಿದಳು ಎಂದೊಡನೆ ಪತಿಗಿಂತಲು ಪತ್ನಿಗೆ ಹೆಚ್ಚು ಕೋಪ. ಮಗಳನ್ನು ಕೇವಲ ದೇಹಾತ್ಮಕ ಪಾತಳಿಯ ಮೇಲಷ್ಟೆ ಬೆಳೆಸುವ ಪ್ರಯತ್ನದಲ್ಲಿ ತಾಯಿಯೆಂಬ ಕಾರಣಕ್ಕಾಗಿ ಸ್ತ್ರೀಯರು ಮುಂದಾಗುವುದು ಬಹು ಸಂಖ್ಯೆಯ ಪರಿವಾರದಲ್ಲಿ ಕಂಡು ಬರುತ್ತದೆ. ಚಿಕ್ಕ ವಯಸ್ಸಿನಿಂದಲೇ ವಿವಿಧ ಹಬ್ಬಗಳು, ಸಮಾರಂಭಗಳು ಇತ್ಯಾದಿ ಸಂಪ್ರದಾಯಗಳನ್ನು ನಡೆಸಬೇಕು. ಅವಳು ತನ್ನ ಭಾವ ಮಾತ್ರದಿಂದಲೇ ಕಮಲದ ರೀತಿಯ ಸಹಾಯ ಮಾಡುವ ಅಗತ್ಯವಿಲ್ಲ. ಹೀಗೆ ತಾಯಿಯು ಅವಳಿಗೆ ಸದಾ ಬಿಂಬಿಸುತ್ತಿರುತ್ತಾಳೆ. ಇದು ಸ್ತ್ರೀ-ಮುಕ್ತಿಯ ಮಾರ್ಗದಲ್ಲಿನ ಸ್ಥಿರ ಕಲ್ಲಾಗಿ ಬಿಟ್ಟಿದೆ. ಮನೆಗೆಲಸ, ಸಮಯದ ಬಂಧನ ಗಂಡುಮಕ್ಕಳ ಸಂಗೋಪನೆ, ಅವರ ಅನಾರೋಗ್ಯದ ಬಗ್ಗೆ ಕಾಳಜಿ ತೋರಿಸುತ್ತಾ, ಅನೇಕ ವಿಷಯಗಳಲ್ಲಿ ಮಗಳ ಮೇಲೆ ಕಠೋರವಾಗಿ ಸಂಸ್ಕಾರ ಮಾಡುವ ಹೆಂಗಸರು ಹುಡುಗ ಮತ್ತು ಹುಡುಗಿಯರನ್ನೂ ಬೆಳೆಸುವಿಕೆಯಲ್ಲೂ ಭೇದವುಂಟುಮಾಡಿ ಅವರ ವಿಕಾಸದಲ್ಲಿ ಕಂದರವನ್ನು ಏರ್ಪಡಿಸುತ್ತಾರೆ.

ಸ್ತ್ರೀ-ಪುರುಷ ಸಮಾನತೆಯ ಭಾವನೆಯನ್ನು ಬೇರೂರಿಸುವುದಕ್ಕೆ ಬದಲಾಗಿ ಹುಟ್ಟಿನಿಂದಲೇ ಹುಡುಗ ಶ್ರೇಷ್ಠ ಮತ್ತು ಅವಳು ಕನಿಷ್ಠ ಎಂಬ ಭಾವನೆಗಳನ್ನು ಅವರ ಮನಸ್ಸಿನಲ್ಲಿ ರೂಪಿಸುತ್ತಾ ಬರಲಾಗುತ್ತದೆ. ಸ್ತ್ರೀ ಮತ್ತು ಪುರುಷರ ನಡುವೆ ಶಾರೀರಿಕ ವ್ಯತ್ಯಾಸವು ಜನ್ಮತಃ ಇದ್ದೇ ಇರುವುದು. ಹುಡುಗಿ ಎಂದು ಒಪ್ಪದೆ ಅವಳನ್ನು ಮಾನವ ಘಟಕವೆಂದು ಭಾವಿಸಿ ಅವಳ ಸ್ವತಂತ್ರವಾದ ವಿಕಾಸಕ್ಕೆ ಅವಕಾಶ ಮಾಡಿಕೊಡಬೇಕು. ಅದನ್ನು ಬಿಟ್ಟು ‘ಇಂದಿನ ಹುಡುಗಿ ನಾಳಿನ ಗೃಹಿಣಿ’ ಎಂಬುದಾಗಿ ಭಾವಿಸುವುದು ಬಹಳ ದುರ್ಬಲ ಮತ್ತು ಅವಳನ್ನು ಒತ್ತಿಕ್ಕುವಂಥದ್ದಾಗಿದೆ. ಇದನ್ನು ಪುರುಷರಿಗಿಂತ ಸ್ತ್ರೀಯರೇ ಸ್ಪಷ್ಟವಾಗಿ ತಿಳಿದುಕೊಳ್ಳಬೇಕಾದ್ದು ಅವಶ್ಯ.

ವರದಕ್ಷಿಣಿಗೆ ಮಾನ್ಯತೆ, ವಿಚ್ಚೇದಿತ ಹೆಣ್ಣುಮಗಳ ಬಗ್ಗೆ ತಿರಸ್ಕಾರ ಭಾವನೆ, ವಿಧವೆಯರ ಬಗ್ಗೆ ತೋರಿಸುತ್ತಿರುವ ತುಚ್ಚ ಮನೋಭಾವದ ವರ್ತನೆ, ಪ್ರೌಢ ಕುಮಾರಿಯರ ಬಗೆಗಿನ ಅತ್ಯಂತ ದಯನೀಯ ಸ್ಥಿತಿ, ಮಾತೃತ್ವದ ಬಗೆಗಿನ ಅವಾಸ್ತವ ಗೌರವ ಮತ್ತು ಬಂಜೆತನದ ಬಗ್ಗೆ ಸ್ತ್ರೀಯರ ವ್ಯಂಗ್ಯವೇ ಹೆಚ್ಚು. ತಾವೇ ಜವಾಬ್ದಾರಿ ಹೊತ್ತಂತೆ ಅವರ ಮಾನಸಿಕ ಹಿಂಸೆಗೆ ಮುಂದಾಗುತ್ತಿರುವ ಪ್ರವೃತ್ತಿ, ಅನೈತಿಕತೆಯ ಬಗ್ಗೆ ನಿಷ್ಕಾರಣ ಹೇಯತೆ ಮತ್ತು ಅತ್ಯಾಚಾರದ ವಿಷಯದಲ್ಲಿ ಹೆಣ್ಣಿನ ಬಗ್ಗೆಯೇ ಜರಿದು ಮಾತನಾಡುವ ಪ್ರವೃತ್ತಿ ಇತ್ಯಾದಿ ವಿಷಯಗಳಲ್ಲೆಲ್ಲ ಸ್ತ್ರೀಯರದ್ದೇ ಮುಂದಾಳತ್ವ. ಅದಕ್ಕೆ ಬದಲಾಗಿ ಸ್ತ್ರೀಯರ ಪ್ರಶ್ನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಅದನ್ನು ಬಿಡಿಸುವಲ್ಲಿ ಸ್ತ್ರೀಯರೇ ಮುಂದಾಳತ್ವವನ್ನು ಅವಶ್ಯ ವಹಿಸಬೇಕಾಗಿದೆ.

ಆತ್ಮವಿಶ್ವಾಸದ ಜಾಗದಲ್ಲಿ ಅಹಂಭಾವ, ಪುರುಷರಿಗೆ ಸಮನಾದ ಸ್ಥಾನಮಾನಕ್ಕೆ ಬದಲಾಗಿ ಬಿಂಕ ಮತ್ತು ಹಠಮಾರಿತನ, ಸಮನ್ವಯಕ್ಕೆ ಬದಲಾಗಿ ಒಂದು ಹೊಡೆತಕ್ಕೆ ಎರಡು ತುಂಡು ಎಂಬ ವರ್ತನೆ, ಸಾಮಂಜಸ್ಯಕ್ಕೆ ಬದಲಾಗಿ ಸ್ವೈರಾಚಾರ- ಇವುಗಳ ಅರ್ಧ ಸ್ತ್ರೀಯರ ಸ್ವತಂತ್ರ ಅಸ್ತಿತ್ವಕ್ಕೆ ಮಾನ್ಯತೆ ಇಲ್ಲ ಎಂಬುದಾಗಿದೆ. ಸಂಸ್ಕಾರದಿಂದ ದತ್ತವಾಗಿರುವ ಈ ದುರ್ಬಲ ಮನಸ್ಸುಗಳನ್ನು ಬದಲಾಯಿಸುವಂತಹ ಹಠ ಮತ್ತು ತಾಳ್ಮೆಯನ್ನು ಸ್ತ್ರೀಯರೇ ವಹಿಸಬೇಕು. ಅದಕ್ಕಾಗಿ ಅವರು ಸಂಘಟಿತರಾಗುವುದು ಆವಶ್ಯಕ. ಇಪ್ಪತ್ತನೆಯ ಶತಮಾನದಲ್ಲೂ ಕೂಡ ಪುರುಷರ ಆಶ್ರಯವಿಲ್ಲದೆ ಜೀವನ ನಡೆಸುವುದಕ್ಕೆ ಸಾಧ್ಯವಿಲ್ಲ ಎಂಬಂಥ ಆರೋಪ ತೆಗೆದರೆ ಸ್ತ್ರೀ, ಈ ವಿಷಯದಲ್ಲಿ ಸಮಾಜವನ್ನು ದೋಷಿಯನ್ನಾಗಿ ಮಾಡಲು ಬರುವುದಿಲ್ಲ.