ಸಮಾನತೆಗಾಗಿ

ಪುರುಷ ಪ್ರಧಾನ ಸಂಸ್ಕೃತಿಯಿಂದಾಗಿ ಲಿಂಗಭೇದ ಆಧಾರಿತ ಶ್ರಮವಿಭಜನೆಯ ಕಾರಣ ಮತ್ತು ಸಾಂಸ್ಕೃತಿಕ ಸಂಸ್ಕಾರಗಳಿಂದಾಗಿ ಸ್ತ್ರೀಯರ ಕಾರ್ಯಕ್ಷೇತ್ರವು ಬಹಳ ಸೀಮಿತವಾಗಿದೆ. ಸ್ತ್ರೀ ಎಂದೊಡನೆ ಅಬಲೆ, ಪರಾವಲಂಬಿ ಮತ್ತು ಸೂಕ್ಷ್ಮಜೀವಿ ಎಂಬ ಮುದ್ರೆ ಗುರುತುಗಳನ್ನು ನಿರ್ದಿಷ್ಟಗೊಳಿಸಲಾಗಿರುವುದು ಗಮನಾರ್ಹ. ಒಲೆ ಮತ್ತು ಮಕ್ಕಳು ಇವೇ ಅವರ ಮುಖ್ಯ ಕಾರ್ಯಕ್ಷೇತ್ರಗಳು. ಆ ರಿಂಗಣದಿಂದ ಹೊರಬರಬಾರದು ಅವರು ಎಂಬ ವೈಚಾರಿಕ ನಿರ್ಬಂಧವನ್ನು ರೂಪಿಸಲಾಗಿದೆ. ನೀತಿ, ತ್ಯಾಗ, ಪಾವಿತ್ರ್ಯ, ಸಹನಶೀಲತೆ, ಕುಲೀನತೆ, ಶಾಲೀನತೆಯಂಥ ಗುಣಗಳನ್ನು ಶಾಶ್ವತವಾಗಿ ಗುತ್ತಿಗೆ ನೀಡಲಾಗಿದೆ ಅವರಿಗೆ. ಹಾಗಾಗಿ ಸ್ತ್ರೀಯರ ಬದುಕಿನಲ್ಲಿ ದಾಸ್ಯ, ಪರಾವಲಂಬಿ ವೃತ್ತಿ, ನಿರ್ಣಯಗಳಲ್ಲಿ ಅಶಕ್ತತೆ, ವೈಚಾರಿಕ ಗುಲಾಮಗಿರಿ, ವ್ರತ-ನಿಯಮಗಳು, ಧಾರಣೆಗಳು ಬಹಳ ಗಟ್ಟಿಗೊಂಡವು. ಪರಿಣಾಮವಾಗಿ ಕೌಟುಂಬಿಕ-ಸಾಮಾಜಿಕ-ಸಾಂಸ್ಕೃತಿಕ-ಧಾರ್ಮಿಕ-ರಾಜಕೀಯ ಕ್ಷೇತ್ರಗಳಲ್ಲಿ ಅವರ ಸ್ಥಾನವನ್ನು ಗೊತ್ತುಪಡಿಸುವಿಕೆ, ಹಕ್ಕುಗಳನ್ನು ಬಜಾಯಿಸುವುದು ಮತ್ತು ಸ್ವಾತಂತ್ರ್ಯವನ್ನು ಉಪಭೋಗಿಸುವಿಕೆ ಈ ಪ್ರವೃತ್ತಿಗೆ ಸಂಕುಚಿತತೆಯು ಆವರಿಸಿತು.

ಸಾಮಾಜಿಕ ಪರಿವರ್ತನೆಗಳಿಂದ ಶಿಕ್ಷಣದ ಪ್ರಸಾರ, ಆರ್ಥಿಕ ಸ್ವಾತಂತ್ರ್ಯ ಮತ್ತು ವಿಚಾರಗಳ ಪುರೋಗಾಮಿ ದಿಶೆಗಳು ಆರಂಭವಾಗಿವೆ. ಜೊತೆಗೆ ಸಾಮಾಜಿಕ ಚಳವಳಿಗಳು, ದುರ್ಬಲ ಘಟಕಗಳ ಅಸ್ತಿತ್ವ ಮತ್ತು ದಾಖಲಿಸಿಕೊಳ್ಳಬೇಕು ಎಂಬ ದೃಷ್ಟಿಯಿಂದ ಬಂದ ಜಾಗರೂಕತೆ, ಬೆಳೆಯುತ್ತಿರುವ ಸಂಘಟನಾ ಪ್ರವೃತ್ತಿಯೇ ಮೊದಲಾದ ಕಾರಣಗಳಿಂದಾಗಿ ಸ್ತ್ರೀಯರ ಪ್ರಶ್ನೆಗಳ ಬಗ್ಗೆ ವಿಚಾರ-ಚರ್ಚೆಗಳು ನಡೆಯುತ್ತಿವೆ. ಈ ಕಾರಣವಾಗಿ ಸಮಾವೇಶ, ಸಮ್ಮೇಳನಗಳನ್ನು ಆಯೋಜಿಸಿ ಅವುಗಳನ್ನು ಸಮಾಜದ ಎದುರು ಮಂಡಿಸಲಾಗುತ್ತಿದೆ. ಆದರೆ ಇಂಥ ವಿಚಾರಗಳನ್ನು ವಿರೋಧಿಸುವ ಪ್ರವೃತ್ತಿಯು ಕೂಡ ಬಲಗೊಳ್ಳುವ ಅಪಾಯಗಳಿವೆ. ಕಾರಣ ಸ್ತ್ರೀಯರ ಸ್ವಾತಂತ್ರ್ಯ ಎಂದರೆ ಪುರುಷರೊಂದಿಗೆ ಹೋರಾಟ ಎಂಬ ತಪ್ಪು ಸಮೀಕರಣವನ್ನು ಮಂಡಿಸಲಾಗುತ್ತಿರುವುದು.

ಪುರುಷರಿಗೆ ಸರಿಸಮನಾಗಿ ನಿಂತು ಸ್ತ್ರೀಯರು ಕೆಲಸ ಮಾಡದೆ ಇರುವಂಥ ಕ್ಷೇತ್ರಗಳು ಇಂದು ಯಾವುವೂ ಇಲ್ಲ. ಡಾ.ಆನಂದಿಬಾಯಿ ಜೋಶಿ ಅವರಂತಹ ಧೈರ್ಯವಂತೆ, ಸಾಹಸಿ, ಬುದ್ದಿವಂತೆ, ನೈತಿಕ ಸಾಮರ್ಥ್ಯ ಮತ್ತು ಸಾಮಾಜಿಕ ಸಂಘಟಕತ್ವಗಳಂಥ ಅಭೂತಪೂರ್ವ ಚಿತ್ರಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಸಮಾಜಕ್ಕೆ. ಹಾಗೆಯೇ ಪಂಡಿತೆ ರಮಾಬಾಯಿ, ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ, ರಮಾಬಾಯಿ ರಾನಡೆ ಇತ್ಯಾದಿ ಅನೇಕ ಸ್ತ್ರೀಯರ ಚರಿತ್ರೆ ಎಂದರೆ ಆತ್ಯಂತಿಕ ನೆಲೆಯ ಹೋರಾಟ ರೂಢಿಗಳ ವಿರುದ್ಧ ಧ್ವನಿ ಎತ್ತುವ ಮನೋಧೈರ್ಯ ಮತ್ತು ಸಾಮಾಜಿಕ ಸಂಘಟನೆಯ ಅರಿವು ಇವುಗಳ ಒಟ್ಟು ಸಂಗಮವೇ ಆಗಿವೆ. ರಷ್ಯಾದ ವೆಲೆಟಿನಾಳು ಅಂತರಿಕ್ಷದಲ್ಲಿ ಹಾರಾಡುತ್ತಾಳೆ; ಚೀನೀ ಸ್ತ್ರೀಯರು ಬಿರುಗಾಳಿಮಯ ಸಮುದ್ರದ ಆಹ್ವಾನವನ್ನು ಸ್ವೀಕರಿಸಿ ವಿಲಕ್ಷಣ ಧೈರ್ಯವನ್ನು ಪ್ರದರ್ಶಿಸುತ್ತಿದ್ದಾರೆ; ವಿಯಟ್ನಾಂ ಮುಕ್ತಿಯ ಹೋರಾಟದಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಸ್ತ್ರೀಯರು ಬೇರೆಬೇರೆ ನೆಲೆಗಳಲ್ಲಿ ಸಹಭಾಗಿಗಳಾಗಿ ದುಡಿದಿದ್ದಾರೆ ಮತ್ತು ಸ್ಪೂರ್ತಿದಾಯಕ ಕಾರ್ಯಗಳನ್ನು ನಿರ್ವಹಿಸಿರುವುದನ್ನು ನೋಡಿದರೆ ಅವರನ್ನು ಅಬಲೆಯರು ಎಂದ ಹೇಳುವುದಕ್ಕೆ ಯಾರೂ ನಾಲಿಗೆಯನ್ನು ಹೊರಳಿಸಲಾರರು ಎಂದೆನಿಸುತ್ತದೆ. ಇದು ಮತ್ತು ಇಂಥ ಉದಾಹರಣೆಗಳು ಸಮಾಜದಲ್ಲಿ ಬೇಕಾದಷ್ಟು ಕಾಣಿಸುತ್ತವೆ. ಎಂತಲೇ ಸ್ತ್ರೀ-ಪುರುಷರ ಸಮಾನತೆಯ ಮೇಲೆ ಆಧಾರಿತವಾಗಿರುವ ಸ್ತ್ರೀ-ಸ್ವಾತಂತ್ರ್ಯವನ್ನು ಯಾವುದೇ ಅಡ್ಡಿಗಳಿಲ್ಲದೆ ಮಾನ್ಯ ಮಾಡುವುದು ಬಹಳ ಆವಶ್ಯಕ. ಪುರುಷರಿಗಿಂತ ಸ್ತ್ರೀಯರೇ ಶ್ರೇಷ್ಠ ಎಂಬುದು ಇದಾಗಿಲ್ಲ. ಸ್ತ್ರೀ-ಸ್ವಾತಂತ್ರ್ಯ ಎಂದರೆ ಸ್ತ್ರೀ-ಪುರುಷರ ನಡುವಣ ಸಂಘರ್ಷ ಆಗಿರದೆ, ರೂಢಿ ಪರಂಪರೆಗಳ ವಿರುದ್ದದ ಹೋರಾಟ ಎಂಬುದನ್ನು ಒಪ್ಪಿಕೊಳ್ಳಬೇಕು. ಆದರೆ ಯಾವ್ಯಾವುವು ಈ ರೂಢಿ ಪರಂಪರೆಯ ಬಂಧನಗಳ ಪರವಾಗಿರುವವೋ ಅವುಗಳ ವಿರುದ್ದ ಹೋರಾಟ ಇದೇ ಅದರ ಸ್ಪಷ್ಟವಾದ ಅರ್ಧ.

ಸ್ತ್ರೀಯರಿಗೆ ಸ್ವಾತಂತ್ರ್ಯವೆಂದರೆ ಪುರುಷರಿಗೆ ಗುಲಾಮಗಿರಿ ಎಂದು ಭಾವಿಸುವುದು ಹುಚ್ಚುತನವಾಗಿಯೇ ತೋರುತ್ತದೆ. ಸ್ತ್ರೀ-ಮುಕ್ತಿ ಎಂದರೆ ಸ್ತ್ರೀ-ಪುರುಷರಿಗೆ ಸಲ್ಲುವ ಸಮಾನ ದರ್ಜೆಯೇ ಹೌದು. ಅದು ಅನಿಷ್ಟ ಮತ್ತು ಅನಾರೋಗ್ಯಕರ ಸ್ಪರ್ಧೆಗಳ ಸಂತೆಯಾಗಿರದೆ, ವೈಚಾರಿಕ ನೆಲೆಯುಳ್ಳ ಚಟುವಟಿಕೆಯೇ ಆಗಿರುವುದು ಸ್ಪಷ್ಟ. ನಿರಂಕುಶತ್ವ ಸ್ವೈ(ರಾ)ಚಾರ, ಕುಪ್ಪಳಿಸುವಿಕೆ, ಭ್ರಾಂತಿ ಇವುಗಳೆಲ್ಲ ಸ್ವಾತಂತ್ರ್ಯವಲ್ಲ. ಸಮಾನತೆ ಮತ್ತು ಸ್ವಾತಂತ್ರ್ಯ ಒಂದರಿಂದ ಮತ್ತೊಂದನ್ನು ಬಿಡಿಸಲು ಬಾರದಂತಹ ಅಂಗಗಳಾಗಿವೆ. ಈ ಗಂಭೀರ ಅಂಶವನ್ನು ಲಕ್ಷ್ಯದಲ್ಲಿಟ್ಟುಕೊಂಡು ಕೇವಲ ಸ್ತ್ರೀಯರು ಮಾತ್ರವಲ್ಲ ಪುರುಷರೂ ಕೂಡ ಈ ಸ್ತ್ರೀ-ಮುಕ್ತಿಯ ಹೋರಾಟದಲ್ಲಿ ಸೇರಿಕೊಂಡು ಕಾರ್ಯನಿರ್ವಹಿಸುವ ಜವಾಬ್ದಾರಿಯನ್ನು ಹೊರಬೇಕಾಗಿದೆ.

ಸೌಭಾಗ್ಯ ಮತ್ತು ಅಲಂಕಾರ ಸಮೂಹ

ಪುರುಷರ ವರ್ಚಸ್ಸನ್ನು ತೋರಿಸುವ ಮತ್ತು ಸೌಭಾಗ್ಯವೆಂದು ಅಲಂಕಾರದ ಆಧಾರದಿಂದ ತನ್ನನ್ನು ರಕ್ಷಣೆ ಮಾಡಿಕೊಳ್ಳುವುದು ಪರಾವಲಂಬಿತ್ವದ ದ್ಯೋತಕಗಳಾಗಿವೆ. ಹಾಗಾಗಿ ಮಂಗಳಸೂತ್ರ, ಕುಂಕುಮ ಮತ್ತು ಬಳೆಗಳೇ ಮೊದಲಾದವುಗಳನ್ನು ಧರಿಸುವ ಆವಶ್ಯಕತೆ ಇಲ್ಲವೆಂಬ ವಿಚಾರವನ್ನು ಮಂಡಿಸಲಾಗುತ್ತಿರುವುದುಂಟು. ಕೆಲವಾರು ವಿವಾಹಿತ ಸ್ತ್ರೀಯರು ಅದನ್ನು ಧರಿಸುವುದನ್ನು ಬಿಟ್ಟುಬಿಟ್ಟಿರುವುದೂ ಕಂಡುಬರುತ್ತದೆ. ಅಂದರೆ ಅದನ್ನು ತ್ಯಜಿಸಿಬಿಟ್ಟರೆ ಸ್ತ್ರೀಯರು ವೈಚಾರಿಕ ಗುಲಾಮಗಿರಿಯಿಂದ ಮುಕ್ತರಾಗಿ ಸ್ವತಂತ್ರರಾಗಿಬಿಟ್ಟರು ಎಂದರ್ಧವಲ್ಲ. ಹಾಗೆಯೇ ಅವರು ಅದನ್ನು ಧರಿಸುವ ಮೂಲಕ ಪಾರಂಪರಿಕ ಆಚಾರ-ವಿಚಾರಗಳಿಗೆ ಆಹಾರವಾಗಿ ಬಿಟ್ಟಿದ್ದಾರೆ ಎಂದೂ ಅಲ್ಲ. ಇತ್ತೀಚೆಗೆ ಕುಂಕುಮವು ಬಟ್ಟೆಯ ಬಣ್ಣಕ್ಕೆ ಅನುಗುಣವಾಗಿ ಬದಲಾಗುತ್ತಿದೆ. ಅಲ್ಲದೆ ಮಂಗಳಸೂತ್ರದ ಆಕಾರವೂ ಬಹಳಷ್ಟು ಆಧುನಿಕವಾಗಿರುವುದು ಗಮನಾರ್ಹ. ಎಷ್ಟೋ ಜನ ಬಡ ಹೆಣ್ಣುಮಕ್ಕಳಿಗೆ ಮಂಗಳಸೂತ್ರದ ಎರಡು ಬಟ್ಟಲುಗಳನ್ನು ಖರೀದಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಹಾಗೆಯೇ ಹೊಲ-ಗದ್ದೆಗಳಲ್ಲಿ, ಮನೆ ಬಾಗಿಲುಗಳಲ್ಲಿ  ದುಡಿಯುತ್ತಾ ದುಡಿಯುತ್ತಾ ಕುಂಕುಮದ ಗುರುತನ್ನು ಇಟ್ಟುಕೊಂಡೇ ಇರುವುದಕ್ಕೆ ಪುರುಸೊತ್ತು ಸಹ ಇರುವುದಿಲ್ಲ. ಅಂದರೆ ಅವರು ಸ್ವತಂತ್ರರಾಗಿದ್ದಾರೆಯೇ? ಅಥವಾ ಶಿಮಂತ ಮರ್ಗದ ಮಹಿಳೆಯರಿಗೆ ಆಭರಣದ ಬೇರೆ ಬೇರೆ ಸೆಟ್ಟುಗಳೇ ಇರುತ್ತವೆ. ಮಂಗಳಸೂತ್ರ ಇರುವುದೊ ಇಲ್ಲವೋ ಎಂಬ ಪ್ರಶ್ನೆಗಳು ಗೌಣವಾಗಿರುತ್ತದೆ ಅವರಿಗೆ. ಹಾಗಾಗಿ ಕುಂಕುಮ, ಬಳೆಗಳು, ಮಂಗಳಸೂತ್ರಗಳನ್ನು ಧರಿಸುವುದು ಅದೂ ಧರಿಸದಿರುವುದಕ್ಕೂ ಮತ್ತು ಸ್ತ್ರೀಯರ ಮಾನಸಿಕ ಮುಕ್ತಿಯ ವಿಷಯಕ್ಕೂ ಸಂಬಂಧ ಕಲ್ಪಿಸಿ ನಿರರ್ಧಕವಾಗಿ ವಾದಿಸುವುದು ಅನುಚಿತ. ತಾತ್ಪೂರ್ತಿಕವಾಗಿಯಾದರೂ ಈ ವಾದವನ್ನು ಪಕ್ಕಕ್ಕಿಡಬೇಕು. ಕಾರಣ ಸ್ತ್ರೀಮುಕ್ತಿಯ ಚಳವಳಿಯನ್ನು ಪೋಷಾಕುಗಳು, ಆಭರಣಗಳು, ವಾಚಾಳಿತನದ ಪದ್ಧತಿಯಂಥ ಬಾಹ್ಯ ಅಂಶಗಳೊಂದಿಗೆ ಸಂಬಂಧ ಕಲ್ಪಿಸುವುದರಲ್ಲಿ ಯಾವುದೇ ಖಚಿತ ಉದ್ದೇಶವಿಲ್ಲ. ಸೀರೆಗೆ ಬದಲಾಗಿ ಪ್ಯಾಂಟು-ಶರ್ಟ್ಸ್‌ಗಳನ್ನು ಧರಿಸುವುದು; ಅಯ್ಯೋ ಛೀ ಎಂಬ ಉದ್ಗಾರಗಳಿಗೆ ಬದಲಾಗಿ ಸಾಲಾ, ಭಾರ, ಅಮ್ಮನೆ, ಹೋಡಿಗೋಲಿ, ಡೌಲು ಇತ್ಯಾದಿ ಶಬ್ದಗಳನ್ನು ಬಳಸುವುದು, ಪುರುಷರಂತೆ ಇರುವುದು, ಅವರಂತೆ ಪೋಷಾಕುಗಳನ್ನು ಧರಿಸುವುದು ಮತ್ತು ನಡೆದಾಡವ ರೀತಿಯನ್ನು ರೂಢಿಸಿಕೊಳ್ಳುವುದು- ಇವುಗಳನ್ನು ಸ್ತ್ರೀ-ಸ್ವಾತಂತ್ರ್ಯವೆಂದು ತಿಳಿಯುವ ಸಾಮಾನ್ಯ ನೆಲೆಯಲ್ಲಿ ನಿಲ್ಲಬಾರದು. ಅಲ್ಲದೆ ಆ ಕಾರಣವಾಗಿಯೂ ಸ್ತ್ರೀ-ಮುಕ್ತಿಯ ವಿಷಯವಾಗಿ ತಪ್ಪು ತಿಳಿವಳಿಕೆ ಬೆಳೆದು ಸರ್ವೇಸಾಮಾನ್ಯ ಸ್ತ್ರೀಯರು ಅದರಿಂದ ದೂರವಾಗುತ್ತಿರುವ ಅಪಾಯವೂ ನಿರ್ಮಾಣವಾಗಿದೆ. ಅದನ್ನು ಇಲ್ಲವಾಗಿಸುವುದು ಬಹಳ ಅಗತ್ಯ. ಇಂಥ ಪೋಳ್ಳು ವಾದಗಳು ಈ ಚಳವಳಿಗೆ ಮಾರಕವಾಗಿ ಪರಿಣಮಿಸುತ್ತಿವೆ.

ದೊಡ್ಡ ನಗರಗಳಲ್ಲಿ ಮತ್ತು ಸುಶಿಕ್ಷಿತ ಸ್ತ್ರೀಯರಲ್ಲಿ ಇಂದು ವಿಚಾರ ಮಾಡಲಾಗು ತ್ತಿರುವುದು ಸ್ತ್ರೀಯರ ಪ್ರಶೆಗಳನ್ನೇ. ಈ ಕಾರಣ ಅಲ್ಲಿ ಸಂಘಟಿತರಾದ ಸ್ತ್ರೀಯರು ಅನ್ಯಾಯದ ವಿರುದ್ಧ ಪ್ರತೀಕಾರವನ್ನು ಮಾಡುತ್ತಿದ್ದಾರೆ. ವಿಭಾಗ ಮಟ್ಟಗಳಲ್ಲಿ ಸಮಾವೇಶಗಳನ್ನು ಆಯೋಜಿಸಿಕೊಂಡು ಪ್ರಶ್ನೆಗಳ ಚರ್ಚೆ ಮತ್ತು ಪರಿಹಾರಗಳ ಬಗ್ಗೆ ಆಲೋಚಿಸುತ್ತಿದ್ದಾರೆ. ಅಂದರೆ ಅಂಥವು ಸಾಧ್ಯವಾಗುತ್ತಿರುವುದು ಮುಂಬಯಿ, ಪುಣೆ, ನಾಗಪುರ, ದೆಹಲಿ ಮೊದಲಾದ ನಗರಗಳಲ್ಲಿ.

ಇದು ಕೇವಲ ಶಿಮಂತ ಮತ್ತು ಉಚ್ಚ ವರ್ಗೀಯ ಮಹಿಳೆಯರ ಹೋರಾಟ ಎಂಬಂಥ ತಪ್ಪು ತಿಳಿವಳಿಕೆಯನ್ನು ಮೊದಲು ದೂರ ಮಾಡಬೇಕಾಗಿದೆ. ಸಾಮಾಜಿಕ ಪರಿವರ್ತನೆಯ ಮತ್ತು ವಿಚಾರ ಮಂಥನಗಳ ಅರಿವಿರುವಂಥ ಜಾಗೃತ ಸ್ತ್ರೀಯರೇ ಇದರಲ್ಲಿ ಸೇರಿಕೊಂಡಿರುವವರು ಎಂಬುದು ಗಮನಾಹ. ಸಾಮಾಜಿಕ ಸಂಘಟನೆಯನ್ನು ಒಪ್ಪುವಂತಹ, ಪ್ರಜಾಪ್ರಭುತ್ವ, ಸಮಾನತೆ ಮತ್ತು ಸ್ವಾತಂತ್ರ್ಯಗಳಂಥ ಮೌಲ್ಯಗಳನ್ನು ಸಂರಕ್ಷಿಸುವಂಥ ಪ್ರವೃತ್ತಿಯುಳ್ಳವರು ಮತ್ತು ಧೈರ್ಯದಿಂದ ಅನ್ಯಾಯ ಹಾಗೂ ಶೋಷಣೆಗಳ ವಿರುದ್ಧ ನೊಂದವರ ಉಸಿರಿನಿಂದ ಧ್ವನಿ ಎತ್ತುತ್ತಿರುವಂತಹ ಸ್ತ್ರೀಯರ ವಿಚಾರಗಳಿವು. ಆದರೆ ಇಂದಿಗೂ ಗ್ರಾಮೀಣ ಭಾಗದಲ್ಲಿ ಶ್ರಮಪಡುತ್ತಿರುವ, ಬಂಧನದಲ್ಲಿರುವ, ಅಜ್ಞಾನಿ ಸ್ತ್ರೀಯರ ತನಕ ಸ್ತ್ರೀ-ಸ್ವಾತಂತ್ರ್ಯ ವಿಷಯದ ವಿಚಾರವು ತಲುಪಿರುವುದಿಲ್ಲ. ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂನೆಯಿಲ್ಲದೆ ಸ್ತ್ರೀ-ಸ್ವಾತಂತ್ರ್ಯದ ವಿಷಯದಲ್ಲಿ ಮೊದಲ ಮೆಟ್ಟಿಲನ್ನು ಏರುವುದೂ ಬಹಳ ಕಠಿಣ.

ಅಲ್ಲದೆ ಬಲಾತ್ಕಾರ, ವಿವಾಹಿತ ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ಕೊಲೆ, ಬಾಲ್ಯವಿವಾಹ, ಸತಿ ಸಹಗಮನ ಇತ್ಯಾದಿ ಪ್ರಶ್ನೆಗಳ ಜಟಿಲತೆ ಮತ್ತು ಅಮಾನುಷತ್ವವನ್ನು ಗಮನಿಸಬೇಕಾಗಿದೆ. ಆನಂತರ ಇಂದು ಬಹುಸಂಖ್ಯಾತ ಸ್ತ್ರೀಯರು ಅವುಗಳ ವಿರುದ್ಧ ಧ್ವನಿ ಎತ್ತುವಲ್ಲಿ ಶಾಮೀಲಾಗುತ್ತಿರುವಂತೆ ಕಾಣುತ್ತಿದೆ. ಇದನ್ನು ಜಾಗರೂಕತೆಯ ಒಳ್ಳೆಯ ಲಕ್ಷಣವೆಂದು ಒಪ್ಪಿಕೊಂಡು, ಅವರ ವಿಚಾರಗಳಿಗೆ ಸರಿಯಾದ ದಿಶೆಯನ್ನು ಒದಗಿಸಿ ಕೊಡುವಂತಹ ಕೆಲಸ ಮಾಡಬೇಕು. ಇದನ್ನು ಸಾಮಾಜಿಕ ಕಾರ್ಯಕರ್ತರು ಮತ್ತು ಸುಶಿಕ್ಷತ ಸ್ತ್ರೀಯರು ಮಾಡುವುದು ಆವಶ್ಯ.

ಈ ರೀತಿಯಲ್ಲಿ ಸ್ತ್ರೀ-ಮುಕ್ತಿ, ಸ್ತ್ರೀ-ಸ್ವಾತಂತ್ರ್ಯ, ಸ್ತ್ರೀ-ಪುರುಷ ಸಮಾನತೆಯಂತಹ ವಿಷಯಗಳ ಬಗ್ಗೆ ವಿಚಾರ ಮಾಡಬೇಕಾಗಿದೆ. ಹಾಗೆ ಮಾಡುವಲ್ಲಿ ಅಂಥ ವಿಚಾರಗಳಲ್ಲಿ ಯಾವಾಗಲೂ ಸಂಬಂಧದ ಗೈರು ಪ್ರವೃತ್ತಿ, ಮಾರಕ ವಿಚಾರಗಳು ಮತ್ತು ಸಾಮಾನ್ಯ ವಿಚಾರಗಳನ್ನು ಮೊದಲಿಗೆ ಕಿತ್ತೆಸೆಯಬೇಕು. ಸ್ತ್ರೀ ತಾನು ಮನುಷ್ಯಳಾಗಿ ಬದುಕುವುದಕ್ಕೆ ಸಾಧ್ಯವಾಗಬೇಕು. ತನ್ನ ಸತ್ವ ಯಾವುದರಲ್ಲಿದೆ ಎಂಬುದನ್ನು ವಿಚಾರ ಪೂರ್ವಕವಾಗಿ ಶೋಧಿಸಿ, ಅದೇ ರೀತಿಯಲ್ಲಿ ಬದುಕುವಂಥ ಸ್ವಾತಂತ್ರ್ಯ ಸಾಧ್ಯವಾಗಬೇಕು ಅವರಿಗೆ. ಸ್ತ್ರೀ ಎಂದರೆ ಮಾತೆ, ಸೋದರಿ, ಹೆಂಡತಿ ಎಂಬ ಸಂಬಂಧದ ನೆಲೆಯಿಂದಲೇ ನೋಡದೆ ಅವಳನ್ನು ನೇತಾರೆ, ಅಧಿಕಾರಿ, ಸಹಕಾರಿ, ಸಲಹೆಗಾರ, ಸಂಘಟಿತತೆ ಎಂಬಿವೇ ಬೇರೆ ಬೇರೆ ದೃಷ್ಟಿಯಿಂದಲೂ ಮಾನ್ಯ ಮಾಡಬೇಕಾಗಿದೆ. ಮಾನಸಿಕ ಮುಕ್ತಿ, ವೈಚಾರಿಕ ಸ್ವಾತಂತ್ರ್ಯ ಮತ್ತು ಪುರೋಗಾಮಿ ಪ್ರವೃತ್ತಿಗಳನ್ನು ಮನಸಾರೆ ರೂಪಿಸಿಕೊಳ್ಳುವ ಧೈರ್ಯವನ್ನು ಸ್ತ್ರೀಯರು ತೋರಿದಲ್ಲದೆ ನಿಜವಾದ ಅರ್ಧದಲ್ಲಿ ಸ್ತ್ರೀಯರ ಪ್ರಶ್ನೆಗಳನ್ನು ಬಿಡಿಸ ಲಾಗುವುದಿಲ್ಲ. ಹೆಣ್ಣುತನ, ಆಭರಣಗಳ ಮೋಹ, ಬಾಗಿ ಬಳುಕುವಿಕೆ, ವ್ರತ ನಿಯಮಾದಿಗಳಲ್ಲಿ ಒಲವು, ಬೇಕು-ಬೇಡದ ರೀತಿಯ ಚಂಚಲತೆ, ಮಾತೃತ್ವದ ಮೋಹ ಮತ್ತು ಪುರುಷ ಸಂರಕ್ಷಣೆಯ ಕೃತ್ರಿಮ ಆವಶ್ಯಕತೆಗಳನ್ನು ತೋರಿ ಸ್ತ್ರೀತ್ವವನ್ನು ಜಪಿಸುವ ಮೋಹ ಬಿಡಬೇಕು. ಹಾಗಾಗದೆ ಇದ್ದರೆ ಸ್ತ್ರೀ-ಸ್ವಾತಂತ್ರ್ಯದ ಕ್ರಿಯಾಶೀಲತೆಯ ಮಾರ್ಗವಾವುದು ಎಂಬುದು ಸ್ಪಷ್ಟವಾಗುವು ದಿಲ್ಲ.