ಅಂಧಶ್ರದ್ಧೆಯ ಅಂಧಕಾರದಲ್ಲಿ

ಗ್ರಾಮೀಣ ಮಹಿಳಾ ಕಾರ್ಮಿಕರ ಶಿಬಿರವೊಂದನ್ನು ಗಾರಗೋಟಿಯಲ್ಲಿನ ಮೌನಿ ವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು. ಕರ್ಮವೀರ ಹಿರೇ ಮಹಾವಿದ್ಯಾಲಯದ ಸದಸ್ಯರು ಮತ್ತು ಕಾರ್ಮಿಕ ಶಿಕ್ಷಣ ಕೇಂದ್ರ, ಕೊಲ್ಹಾಪುರ ಇವರುಗಳ ಸಹಯೋಗ ದೊಂದಿಗೆ ಹೊಲದ ಕೂಲಿಕಾರ ಮಹಿಳೆಯರಿಗಾಗಿ ನಡೆದದ್ದು ಈ ಶಿಬಿರ. ಇದರಲ್ಲಿ ಗಾರಗೋಟಿಗೆ ಹತ್ತಿರದ ಹಳ್ಳಿಗಳ ಸುಮಾರು ೫೦ ಜನ ಮಹಿಳೆಯರಿದ್ದರು. ೨೫ ರಿಂದ ೫೦ರ ವಯೋಮಾನದ ಮತ್ತು ಹೊಲಗಳಲ್ಲಿ ದುಡಿಯುವಂಥ ಈ ಸ್ತ್ರೀಯರೊಂದಿಗೆ ಇರುವ ಒಂದು ಅವಕಾಶ ನನಗೆ ಸಾಧ್ಯವಾಯಿತು ಈ ಮೂಲಕ. ಪೂರ್ವಪರಿಚಯವು ಇದ್ದುದರಿಂದ ಅವರು ನನ್ನೊಂದಿಗೆ ಬಹಳ ಮುಕ್ತವಾಗಿ ಮಾತನಾಡುತ್ತಿದ್ದರು. ಅವರನ್ನೆಲ್ಲ ನಮ್ಮವರಂತೆ ಆಗಿಸುವಲ್ಲಿ ನನಗೆ ಮೊದಲಿಗಿಂತಲೂ ಹೆಚ್ಚು ಯಶಸ್ಸು ಸಾಧ್ಯವಾಯಿತು.

ಪ್ರಶ್ನಾವಳಿಗಳ ಸಹಾಯದಿಂದ ಅವರ ಬಗೆಗಿನ ಮಾಹಿತಿಯನ್ನು ಅವರ ಅಭಿಪ್ರಾಯ ವನ್ನು ಕೇಳಿ ಸಂಕಲನಗೊಳಿಸುವುದಕ್ಕೆ ಪ್ರಯತ್ನಿಸಿದೆ. ನನ್ನ ಈ ಪ್ರಯತ್ನಕ್ಕೆ ಅವರು ಪೂರ್ಣ ಮನಸ್ಸಿನಿಂದ ಬಹಳ ಮುಕ್ತವಾಗಿಯೇ ಸಹಕರಿಸಿದರು. ೫೦ರ ಪೈಕಿ ೧೩ ಜನರು ಹಿಂದುಳಿದ ವರ್ಗದವರಾಗಿದ್ದರು. ಮತ್ತು ಅವರೆಲ್ಲಾ ಅನಕ್ಷರಸ್ಥರು. ಕೇವಲ ನಾಲ್ವರು ಮಾತ್ರ ನಾಲ್ಕನೆಯ ತರಗತಿಯವರೆಗೆ ಓದಿದ್ದರು ಹಾಗೂ ಇಬ್ಬರು ಮಾತ್ರ ಏಳನೆಯ ತರಗತಿಯವರೆಗೆ ಮುಂದುವರೆಸಿದ್ದರು. ಜಮೀನಿನ ಒಡೆತನದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದಾಗ ಅವರಿಂದ ತಿಳಿದು ಬಂದುದೇನೆಂದರೆ, ಶೇಕಡ ೫೬ರಷ್ಟು  (ಶೇಕಡ ೩೨ ಮಂದಿ ಸ್ತ್ರೀಯರು) ಸ್ತ್ರೀಯರಿಗೆ ಸ್ವಲ್ಪವೂ ಭೂಮಿ ಇರಲಿಲ್ಲ. ಅವರು ತಮ್ಮ ಹೊಟ್ಟೆಪಾಡಿಗಾಗಿ ಬೇರೆಯವರ ಜಮೀನನ್ನು ಅವಲಂಬಿಸಿಕೊಂಡು ಇರಬೇಕಾಗಿತ್ತು. ಶೇ. ೨೪ರಷ್ಟು ಸ್ತ್ರೀಯರಿಗೆ ಒಂದು ಎಕರೆಗಿಂತಲೂ ಕಡಿಮೆ ಜಮೀನಿತ್ತು. ಆ ಭೂಮಿಯೂ ಕಲ್ಲು ಜರುಗುಮಯ. ಹಾಗಾಗಿ ಈ ಸ್ತ್ರೀಯರೂ ಕೂಡ ಬೇರೆಯವರಲ್ಲಿಗೆ ಕೆಲಸಕ್ಕೆ ಹೋಗದಿದ್ದರೆ ಮನೆಯಲ್ಲಿನ ಒಲೆಯು ಉರಿಯುತ್ತಿರಲಿಲ್ಲ ಎಂಬುದು ಅವರ ದೈನಂದಿಕ ಅನುಭವ. ಇನ್ನುಳಿದಂತೆ ಆರು ಮಂದಿ ಸ್ತ್ರೀಯರ ಕುಟುಂಬಕ್ಕೆ ಮೂರು ನಾಲ್ಕು ಎಕರೆ ಜಮೀನಿದೆ. ಆದರೆ ದೊಡ್ಡ ದೊಡ್ಡ ಸಂಸಾರಗಳು, ತಿನ್ನುವವರು, ಉಣ್ಣುವವರ ಬಾಯಿಗಳೇ ಜಾಸ್ತಿ. ಆದರೆ ಅವು ಕೂಡಾ ನೀರಾವರಿ ಸೌಲಭ್ಯವಿಲ್ಲದಂಥ ಹೊಲಗಳು. ಮಳೆ ಬಂದರೆ ಭತ್ತ ಮತ್ತು ರಾಗಿಯನ್ನು ಬೆಳೆಯಬಹದು. ಹಾಗಾಗಿ ಅವರೂ ಕೂಡ ಹೊಲಗಳಿಗೆ ಕೂಲಿಗಳಾಗಿ ಹೋಗದೆ ಗತ್ಯಂತರವಿಲ್ಲ. ಈ ಬಗೆಯಲ್ಲಿ ಒಟ್ಟಾರೆ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯೇ ಎಲ್ಲರಿಗೂ. ಆರ್ಥಿಕ ದೃಷ್ಟಿಯಿಂದ ದುರ್ಬಲರು, ಶೈಕ್ಷಣಿಕ ದೃಷ್ಟಿಯಿಂದ ತೀರಾ ಹಿಂದುಳಿದವರು, ಸಾಮಾಜಿಕ ದೃಷ್ಟಿಯಿಂದ ದುರ್ಲಕ್ಷಿತರು ಮತ್ತು ಹೊರಗಿನ ಜಗತ್ತಿನ ಬದಲಾವಣೆಗಳು ಹೊರಗಿನ ಪರಿವರ್ತನೆಗಳ ಬಗ್ಗೆ ಬಹಳಷ್ಟು ಸ್ವಷ್ಟ ತಿಳಿವಳಿಕೆ ಇಲ್ಲದಿರುವಂಥ ಸ್ತ್ರೀ ವರ್ಗವಾಗಿತ್ತು. ಅವರೊಂದಿಗೆ ಕಳೆದ ಐದು ದಿನಗಳ ಅನುಭವದಿಂದ ಈ ಕೆಲವು ನಿರೀಕ್ಷಣಗಳನ್ನು ಪ್ರಸ್ತಾಪಿಸಬಹುದು.

ಕುಟುಂಬ ಯೋಜನೆ

ಕುಟುಂಬ ಯೋಜನೆಯ ವಿಷಯವು ಅವರ ಜೀವ, ಲಜ್ಜೆ ಮತ್ತು ಸಂಕೋಲೆಯನ್ನು ಮೀರಿ ಪ್ರಸ್ತಾಪಿಸಬೇಕಾದುದು ಎಂಬ ಅವರ ಮಾನಸಿಕ ಸಿದ್ಧತೆಯು ಗೋಚರವಾಯಿತು. ಕುಟುಂಬ ಯೋಜನೆಯು ಅವರಿಗೆ ಪೂರ್ಣವಾಗಿ ಒಪ್ಪಿತವಾದರೂ ಮುಖ್ಯವಾಗಿ ಕಂಡು ಬಂದಂತಹ ಒಂದೇ ವಿಷಯವೆಂದರೆ ಒಂದು ಮಗು ಇರುವ ಬಗ್ಗೆ ಯಾರಿಗೂ ಒಪ್ಪಿಗೆ ಇಲ್ಲ. ಅಲ್ಲದೆ ಗಂಡುಮಕ್ಕಳು ಇರಲೇಬೇಕು ಎಂಬ ಬಗ್ಗೆ ಎಲ್ಲರಲ್ಲೂ ಒಕ್ಕೊರಲಿನ ಅಭಿಪ್ರಾಯ. ಆದರೆ ಮೂರು ಮಕ್ಕಳಿಗಿಂತ ಹೆಚ್ಚಿನ ಮಕ್ಕಳು ಬೇಡ ಎಂಬ ಬಗ್ಗೆಯೂ ಅವರಲ್ಲಿ ಶೇಕಡ ೮೦ರಷ್ಟು ಸ್ತ್ರೀಯರು ನೇರವಾಗಿ ಅಭಿಪ್ರಾಯಪಟ್ಟರು. ಉಳಿದವರ ಪ್ರಕಾರ ಮಕ್ಕಳಿರಬೇಕು. ವಿಶೇಷವಾಗಿ ಇಬ್ಬರು ಹೆಣ್ಣು ಮಕ್ಕಳು ಬೇಕೇಬೇಕು. ಏಳೆಂಟು ವರ್ಷಗಳಾಗುತ್ತಲೇ ‘ಸಣ್ಣಪುಟ್ಟ ಕೈಕೆಲಸಗಳಿಗೆ’, ‘ನೆರವಿಗೆ’ ಅವರು ಸರಿಯಾದವರಾಗಿರು ತ್ತಾರೆ. ಎಲ್ಲಾ ಸ್ತ್ರೀಯರಿಗೂ ಹೆಣ್ಣುಮಗು ಬೇಕು. ಕಾರಣ ಅವರಿಗೆ ಕಷ್ಟಮಯವಾದ ದುಡಿಮೆಗೆ ನೆರವಾಗಿ ನಿಲ್ಲುವುದಕ್ಕೋಸ್ಕರ.

ಕುಟುಂಬ ಯೋಜನೆಯ ಬಗ್ಗೆ ಅವರ ಶಬ್ದಗಳು ಇಂತಿವೆ:

‘ತಾಯಿ, ಗಂಡನಿಗೆ ತಿಳಿಸಿ ಹೇಳುವವರು ಯಾರು? ಪುರುಷನೆದುರು ಇದು ನಡೆಯುತ್ತದೆಯೇ? ಇಂಥದನ್ನೇನಾದರೂ ಮಾತನಾಡಲು ಹೋಗುವುದೆಂದರೆ ಹೊಡೆತ ತಿನ್ನುವ ಸರದಿಯೇ!’

ಮಾವ-ಅತ್ತೆಯರ ‘ಒಪ್ಪಿಗೆ’ ಪಡೆಯದ ಹೊರತು ಆಪರೇಶನ್‌ನ ಹೆಸರನ್ನು ತೆಗೆಯುವುದಾದರು ಹೇಗೆ? ಅದು ಕೂಡ ಮಾತನಾಡುವುದು ಕದ್ದು ಮುಚ್ಚಿ. ಗಂಡನೊಂದಿಗೆ ತಂಬಾಕು ಚೀಲ ತೆಗೆಯುವುದು, ದೇವರ ವಿಚಾರವನ್ನು ಹಿಡಿಯುವುದು, ಜೋಗಿತಿಣಿಗೆ ಕೇಳುವುದು, ಹೊಲದ ಕೆಲಸದ ಭಯ ಇರಬಾರದು, ದುಡ್ಡು-ನೆಂಟರ ದಾರಿ ಇರಬಾರದು. ಆಗ ಮಾತ್ರ ಮಕ್ಕಳಾಗುವುದನ್ನು ನಿಲ್ಲಿಸುವ ಆಪರೇಶನ್ ವಿಚಾರ.

‘ನಮಗೆ ಏಳೆಂಟು ಬಾರಿ ಈ ಸುತ್ತಿನಲ್ಲಿ (ಹೆರಿಗೆ) ಸಿಲುಕುವುದಕ್ಕೆ ಸುಖವೆನಿಸುವುದಿಲ್ಲ. ಆದರೆ ಈ ವಿಷಯದಲ್ಲಿ ಗಂಡನಿಗೆ ಬಹಳ ಕೆಟ್ಟ ಕೋಪ, ಸಂಬಂಧವೇ ಕಡಿದು ಹೋಗುವಂತಹ ವೇಳೆ ಬಂದಿತೆಂದು ಹೆದರಿ ಬಾಯಿಯನ್ನು ಮುಚ್ಚಿಕೊಂಡಿದ್ದೇವೆ. ಕೂಲಿನಾಲಿಯು ನಮ್ಮ ಜನುಮಕ್ಕೆ ಅಂಟಿಕೊಂಡು ಬಂದಿದೆ. ಮನೆಯಲ್ಲಿಯೂ ದುಡಿಯುವುದು, ಮಕ್ಕಳ ಕಷ್ಟವನ್ನು ಸಹಿಸುವುದು.’

ಆಪರೇಶನ್ (ಶಸ್ತ್ರ ಚಿಕಿತ್ಸೆ) ಎಂಬುದು ಎಲ್ಲ ದೃಷ್ಟಿಯಿಂದಲೂ ಯೋಗ್ಯ. ಆದರೆ ಅದನ್ನು ಪುರುಷರು ಮಾಡಿಸಿಕೊಳ್ಳಬೇಕು ಎಂಬುದಾಗಿ ಎಲ್ಲಾ ಸ್ತ್ರೀಯರು ತಮ್ಮ ಇಚ್ಚೆಯನ್ನು ವ್ಯಕ್ತಪಡಿಸಿದರು. ಅವರ ಪ್ರಕಾರ ‘ಶಸ್ತ್ರ ಚಿಕಿತ್ಸೆಯಿಂದಾಗಿ ಅಶಕ್ತತೆಯು ಉಂಟಾಗುತ್ತದೆ. ಸೊಂಟ ನೋವು ಬಂದು ಕೆಲಸವಾಗುವುದಿಲ್ಲ!’ ಆದರೆ ಈ ಭೀತಿ ನಿರಾಧಾರವಾದುದು ಎಂದು ಅವರಿಗೆ ತಿಳಿಸಿ ಹೇಳುವ ಪ್ರಯತ್ನವನ್ನು ನಾನು ಮಾಡಿದೆನು. ಆದರೆ ಅದು ಅವರಿಗೆ ಸ್ವಲ್ಪವಾದರೂ ತಟ್ಟಿತು ಎಂದೆನಿಸಲಿಲ್ಲ ನನಗೆ. ಅವರ ಒಟ್ಟಾರೆ ಅನುಭವವೆಂದರೆ ಪುರುಷ ವರ್ಗವೂ ಮಾತ್ರ ಆಪರೇಶನ್‌ಗೆ ಸಿದ್ಧವಾಗಿಲ್ಲ, ಕಾರಣ ಅವರಿಗೆ ಕೂಡಾ ಅದೇ ರೀತಿಯ ಭಯವು ಇದೆ. ಅಲ್ಲದೆ ಈ ಸ್ತ್ರೀಯರು ಗಂಡಂದಿರಿಗಿಂತ ತಾವೇ ಆಪರೇಶನ್ ಮಾಡಿಸಿಕೊಳ್ಳಲು ತಯಾರಾಗಿರುವುದನ್ನು ಹೇಳಿದರು. ಅದು ಈ ಅರ್ಧದಲ್ಲಿ ಅಂದರೆ ಸಮಯ ಬಂದರೆ ಗಂಡನಾದವನು ಆರೋಗ್ಯಶಾಲಿಯಾಗಿರಬೇಕು. ಒಳ್ಳೆಯದೋ ಕೆಟ್ಟದೋ ಆದಾಗ ಆತ ಅವಶ್ಯವಾಗಿ ಆಗುವಂತಿರಬೇಕು.

ಕುಟುಂಬ ಯೋಜನೆಯ ಮಹತ್ವ ಗ್ರಾಮೀಣ ಸ್ತ್ರೀಯರಿಗೆ ಅರ್ಧವಾಗಿದೆ. ಒಂದಾದರೂ ಗಂಡುಮಗು ಬೇಕೇ ಬೇಕು. ಹಾಗಾದಾಗ ಕುಟುಂಬ ಯೋಜನೆಯ ಸೌಲಭ್ಯ ಸ್ವೀಕಾರಾರ್ಹ. ಇದು ಪುರುಷ ಪ್ರಧಾನ ವ್ಯವಸ್ಥೆಯ ಬಿಗಿಯಾದ ಹಿಡಿತ. ಸಾಮಾಜಿಕ ರೂಢಿ ಮತ್ತು ಪರಂಪರೆಯ ಪರದೆಗಳು ಬೇರೆ, ಚಿಕ್ಕ ವಯಸ್ಸಿನಲ್ಲಿ ಮದುವೆ! ಅಜ್ಞಾನ ಮತ್ತು ಹಳ್ಳಿಗಳಲ್ಲಿನ ವಾತಾವರಣದ ಛಾಪು, ಸರ್ವಾರ್ಧದಿಂದಲೂ ಸ್ತ್ರೀಯರ ಸ್ಥಾನಮಾನವು ಕನಿಷ್ಠವಾಗಿರುವುದು ಇತ್ಯಾದಿ ಕಾರಣಗಳಿಂದ ಕುಟುಂಬ ಯೋಜನೆಯಲ್ಲಿ ತೊಂದರೆಗಳು ನಿರ್ಮಾಣವಾಗುತ್ತಿವೆ. ಅಧಿಕಾರದ ಯಾವುದೇ ಕಾಯಿದೆ ಮತ್ತು ಕಾರ್ಯಕ್ರಮ ಹಾಗೂ ಯೋಜನೆಗಳಿಗಿಂತ ಕುಟುಂಬ ಯೋಜನೆಯ ಚಳವಳಿ ಹಳ್ಳಿಗಳಲ್ಲಿ ಮಾತ್ರವಲ್ಲ, ಅಲ್ಲಿನ ಸಾಮಾನ್ಯ ಸ್ತ್ರೀಯರನ್ನು ಕೇವಲ ಸ್ವರ್ಶಿಸಿ ಹೋಗಿದೆ. ಕೌಟುಂಬಿಕ ಹಿನ್ನಲೆ ಅನುಕೂಲವಾಗಿಲ್ಲದೆ ಇರುವುದರಿಂದ ಅದಕ್ಕೆ ಯಶಸ್ಸು ದೊರೆಯುವುದು ಕಷ್ಟವಾಗುತ್ತಿದೆ.

ವರದಕ್ಷಿಣೆ ಪದ್ಧತಿ

ಈ ಸ್ತ್ರೀಯರನ್ನು ಮುಖತಃ ಭೇಟಿಯಾದಾಗ ಅವರಿಗೆ ವರದಕ್ಷಿಣೆ ಪದ್ಧತಿಯ ಅನಿಷ್ಟ ಪರಿಣಾಮಗಳ ಅರಿವು ಇರುವುದು ಸ್ಪಷ್ಟವಾಯಿತು. ಇಷ್ಟು ಮಾತ್ರವಲ್ಲ ವರದಕ್ಷಿಣೆಯ ಕಾರಣ ವಿವಾಹಿತ ಸ್ತ್ರೀಯರ ಮೇಲಾಗುತ್ತಿರುವ ಹಿಂಸೆ ಮತ್ತು ಪ್ರಾಸಂಗಿಕ ಆತ್ಮಹತ್ಯೆ ಅಥವಾ ಕೊಲೆ ಈ ವಿಷಯಗಳು ವರ್ತಮಾನ ಪತ್ರಿಕೆಗಳಲ್ಲಿ ಬರುತ್ತಿರುವ ಸುದ್ದಿಗಳ ಬಗ್ಗೆಯೂ ಅವರಿಗೆ ಅರಿವಿತ್ತು. ಆದಾಗ್ಯೂ ಅವರ ಮಾತುಗಳಲ್ಲಿ ಅಸಹಾಯಕತೆಯು ಎದ್ದು ಕಾಣುತ್ತಿತ್ತು. ಕಾರಣ ವರದಕ್ಷಿಣೆ ಪದ್ಧತಿಯು ಸಮಾಜಕ್ಕೆ ಮಾನ್ಯವಾಗಿರುವುದರಿಂದ ಅವರು ಆ ಬಗ್ಗೆ ಏನನ್ನೂ ಮಾಡುವಂತಿರಲಿಲ್ಲ. ಅವರು ಅತ್ಯಂತ ಕಳಕಳಿಯಿಂದ ಮನಃಪೂರ್ವಕವಾಗಿಯೇ ಮಾತನಾಡುತ್ತಿದ್ದರು ಈ ವಿಚಾರವಾಗಿ.

‘ವರದಕ್ಷಿಣೆ ಕೊಟ್ಟುದಲ್ಲದೆ ಹಸುವನ್ನು ಮಾರಿದರೊ ಹೇಗೆ?’

‘ಪೂರ್ವಿಕರ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ಮಾರ್ಗವನ್ನು ಮುರಿಯುವುದಕ್ಕೆ ಹೇಗಾಗುತ್ತದೆ. ಹೊಟ್ಟೆಯಲ್ಲಿ ಮಗಳು ಹುಟ್ಟಿದಳು, ಕೊಟ್ಟುದನ್ನು ಕೊಡಬೇಕಾದ್ದು ಅವಶ್ಯವಲ್ಲವೆ! ವರದಕ್ಷಿಣೆಯನ್ನೂ ಕೊಡುವುದು ಮತ್ತು ಮಗಳನ್ನೂ ಕೊಡುವುದು; ಇದು ಬಿಟ್ಟರೆ ಹೆಣ್ಣಿನ ಜಾತಿಗೆ ಬೇರೇನಿದೆ.’

ತಮಗೆ ಹೆಣ್ಣು ಮಕ್ಕಳಿರುವವರು ಮಾತ್ರವೇ ವರದಕ್ಷಿಣೆ ಪದ್ಧತಿಗೆ ವಿರೋಧ ವ್ಯಕ್ತ ಪಡಿಸುತ್ತಿದ್ದುದು ಕಂಡ ಬಂತು ಎಲ್ಲಾ ಸ್ತ್ರೀಯರಲ್ಲೂ. ವಿಶೇಷವಾಗಿ ಸಾಮಾಜಿಕ ರೂಢಿಗಳು ಮತ್ತು ಪೂರ್ವಿಕರ ಕಾಲದಿಂದಲೂ ಎಲ್ಲಾ ಸ್ತರಗಳಲ್ಲೂ, ಜಾತಿ ಪಂಗಡ ಗಳವರಲ್ಲೂ ವರದಕ್ಷಿಣೆ ಪದ್ಧತಿಯು ಮಾನ್ಯವಾಗಿದೆ. ಹಾಗಾಗಿ ಆ ವಿಚಾರದ ಬಗ್ಗೆ ವೈಯಕ್ತಿಕವಾಗಿ ವಿರೋಧ ವ್ಯಕ್ತಪಡಿಸುವುದಕ್ಕೆ ಅವರು ಸ್ವಲ್ಪವಾದರೂ ತಯಾರಾಗಿ ದ್ದಂತೆ ಕಾಣಿಸಲಿಲ್ಲ.

ವರದಕ್ಷಿಣೆಯನ್ನು ಏಕೆ ಕೊಡಬೇಕು? ಈ ಪ್ರಶ್ನೆಗೆ ಶೇ. ೪೨ರಷ್ಟು ಸ್ತ್ರೀಯರು (೨೧ ಜನ ಸ್ತ್ರೀಯರು) ಅಭಿಪ್ರಾಯಪಟ್ಟದ್ದು ಹೀಗೆ: ‘ಕೊಟ್ಟ ಮನೆಯಲ್ಲಿ ಹೆಣ್ಣು ಮಗಳು ಸುಖವಾಗಿರಬೇಕು, ಆ ಕಾರಣವಾಗಿ ಅವಳು ಮಾವನ ಮನೆಯಲ್ಲಿ ತೊಂದರೆಗೆ ಒಳಗಾಗುವುದಿಲ್ಲ. ಸುಖಸಂತೋಷದಿಂದ ಇರಬೇಕು ಎಂಬ ಕಾರಣದಿಂದ ವರದಕ್ಷಿಣೆಯನ್ನು ಕೊಡಬೇಕಾಗುತ್ತದೆ. ಶೇಕಡ ೪೦ ರಷ್ಟು ಸ್ತ್ರೀಯರ ಅಭಿಪ್ರಾಯದಂತೆ ವರದಕ್ಷಿಣೆ ಪದ್ಧತಿಯು ಸಾಮಾಜಿಕ ಸಂಪ್ರದಾಯ, ಎಂತಲೇ ಅದನ್ನು ನಾವು ಪರಿಪಾಲಿಸಿಕೊಂಡು ಬರಬೇಕು. ವರದಕ್ಷಿಣೆ ಇಲ್ಲದಂಥ ಮದುವೆ ಎಂಬ ಕಲ್ಪನೆಯು ಅವರಿಗೆ ಸ್ವಲ್ಪವೂ ಮೂಡುವುದಿಲ್ಲ. ಹುಡುಗಿ ಎಂದರೆ ವರದಕ್ಷಿಣೆ ಎಂಬುದು ಅವರ ಸ್ಥಾಯಿ ತಿಳಿವಳಿಕೆ ಮತ್ತು ದೃಢವಾದ ಶ್ರದ್ಧೆ. ಶೇಕಡ ಹತ್ತರಷ್ಟು ಸ್ತ್ರೀಯರ ಅಭಿಪ್ರಾಯದಂತೆ ಮದುವೆ ಮತ್ತು ಗಂಡಿನ ಶಿಕ್ಷಣದ ಖರ್ಚನ್ನು ತುಂಬಿಕೊಡಬೇಕಾದ ದೃಷ್ಟಿಯಿಂದಲಾದರೂ ವರದಕ್ಷಿಣೆ ಕೊಡುವುದು ಅಗತ್ಯ. ಆದರೆ, ಇಲ್ಲಿ ಮುಖ್ಯವಾಗುವ ಪ್ರಶ್ನೆ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಖರ್ಚು ಆಗುವುದಿಲ್ಲವೆ? ಹೀಗೆ ಪ್ರತಿಪ್ರಶ್ನೆ ಮಾಡಿದರೆ ಸಿಗುವ ತಕ್ಷಣದ ಉತ್ತರವೆಂದರೆ, ‘ಹೆಣ್ಣುಮಕ್ಕಳಿಗೆ ಹೆಚ್ಚು ಶಿಕ್ಷಣ ಕೊಡಿಸುವ ಅಗತ್ಯವಿಲ್ಲ.’ ಖರ್ಚು ವೆಚ್ಚವಿಲ್ಲದೆ ಎಷ್ಟು ಸಾಧ್ಯವೋ ಅಷ್ಟೇ ಶಿಕ್ಷಣವನ್ನು ಕೊಡಿಸಬಹುದು. ಗಂಡು ಮಗನಷ್ಟು ಖರ್ಚು ಹೆಣ್ಣುಮಗಳ ಶಿಕ್ಷಣದಲ್ಲಿ ಆಗುವುದಿಲ್ಲ ಮತ್ತು ಮಾಡಲಾಗುವುದಿಲ್ಲ. ಮತ್ತೆ ಶೇಕಡ ನಾಲ್ಕರಷ್ಟು ಮಹಿಳೆಯರ ಅಭಿಪ್ರಾಯವೆಂದರೆ ಹೆಣ್ಣುಮಗಳ ತಾಯಿ-ತಂದೆಯರು ತಮ್ಮ ಆಸ್ತಿಯನ್ನು ತಮ್ಮ ಗಂಡುಮಕ್ಕಳಿಗೋಸ್ಕರವೇ ಕಾದಿರಿಸುತ್ತಾರೆ. ಪರಂಪಾರನುಗತವಾಗಿ ಅದು ಗಂಡುಮಕ್ಕಳಿಗೇ ಲಭಿಸುತ್ತಾ ಬಂದಿದೆ. ಹೀಗಾಗಿ ಆರ್ಥಿಕ ಸಾಮರ್ಥ್ಯವಿದ್ದವರು ವರದಕ್ಷಿಣೆಯ ರೂಪದಲ್ಲಿ ಹೆಣ್ಣುಮಗಳ ಮದುವೆಗೆ ಖರ್ಚು ಮಾಡುವುದಕ್ಕೆ ಹಿಂದೆಮುಂದೆ ನೋಡಬಾರದು. ಉಳಿದಂತೆ ಕೇವಲ ಶೇಕಡ ನಾಲ್ಕರಷ್ಟು ಸ್ತ್ರೀಯರು ಮಾತ್ರವೇ ಅಭಿಪ್ರಾಯಪಟ್ಟಂತೆಲ್ಲಾ ವರದಕ್ಷಿಣೆ ಪದ್ಧತಿಯು ಎಲ್ಲಾ ರೀತಿಯಿಂದಲೂ ಯೋಗ್ಯವಾದು ದಲ್ಲ. ಸಾಲಸೂಲ ಮಾಡುವುದು, ಸಾಹುಕಾರರ ಹಿಡಿತದಲ್ಲಿ ಸಿಲುಕುವುದು, ಮದುವೆ ನಿಧಾನವಾಗುವುದು ಇತ್ಯಾದಿ ಅನೇಕ ಅನಿಷ್ಟ ಪರಿಣಾಮಗಳಿಗೆ ಕಾರಣವಾಗುತ್ತದೆ. ಈ ಬಗ್ಗೆ ವಿಚಾರ ಮಾಡಿಯೇ ವರದಕ್ಷಿಣೆ ಪದ್ಧತಿಯ ಬಗ್ಗೆ ಕಾಯಿದೆ ಬದ್ಧವಾಗಿ ನಿರ್ಬಂಧವನ್ನು ಹೇರಬೇಕು, ಒಟ್ಟಾರೆ ಬಹುಸಂಖ್ಯಾತ ಸ್ತ್ರೀಯರು ವಿವಿಧ ಕಾರಣಗಳನ್ನು ಆಧಾರವಾಗಿಟ್ಟು ಕೊಂಡು ವರದಕ್ಷಿಣೆಯನ್ನು ಅಯೋಗ್ಯವಾದುದೆಂದು ಅಭಿಪ್ರಾಯಪಟ್ಟರೂ ಅದು ಕೇವಲ ಕೊಡುವುದಕ್ಕೆ ಸಾಮರ್ಥ್ಯವಿಲ್ಲದಿದುದರಿಂದ ಮಾತ್ರ.

ತಿಳಿವಳಿಕೆಸಾಮೂಹಿಕ ಭ್ರಮೆ ಮತ್ತು ಅಂಧಶ್ರದ್ಧೆ

ಗ್ರಾಮೀಣ ಭಾಗದಲ್ಲಿ ತರ್ಕಕ್ಕಿಂತ ಶ್ರದ್ಧೆಗೇ ಹೆಚ್ಚಿನ ಮಹತ್ವವಿರುತ್ತದೆ. ಸಾರಾಸಾರವನ್ನು ಕುರಿತು ವಿಚಾರಿಸದೆ ಕೇವಲ ಸಾಂಪ್ರದಾಯವಾಗಿ ಬಂದಿರುವ ಸಂಗತಿಗಳನ್ನು ಒಪ್ಪಿಕೊಂಡಿರು ತ್ತಾರೆ. ಶಕುನ-ಅಪಶಕುನಗಳ ವರ್ಚಸ್ಸು ಹೆಚ್ಚಾಗಿ ಕಂಡು ಬರುತ್ತದೆ ಇಲ್ಲಿ. ವೈಜ್ಞಾನಿಕ ದೃಷ್ಟಿಕೋನದಿಂದ ‘ಕಾರಣ ಮೀಮಾಂಸೆ’ಯ ಬಗ್ಗೆ ಅವರು ಆಲೋಚಿಸುವುದಿಲ್ಲ. ಮಾಟಮಂತ್ರ, ಜಾದೋಟೋ(ನ), ಭೂತಬಾಧೆ, ಭಾನಾಮತಿ ಮತ್ತು ಚಮತ್ಕಾರಗಳು ಇತ್ಯಾದಿಗಳ ಮೇಲೆ ಅವರಿಗೆ ಬಹಳ ವಿಶ್ವಾಸ. ಆ ಕಾರಣ ಪೂಜೆ, ಪ್ರಾರ್ಧನೆ, ದಾನ, ಬಲಿ ಇಂಥ ಕರ್ಮಕಾಂಡಗಳಿಂದಲೇ ತುಂಬಿಹೋಗಿದೆ ಅವರ ಜೀವನ. ಭಾರತೀಯ ಗ್ರಾಮಗಳ ವೈಶಿಷ್ಟ್ಯಗಳನ್ನು ಲಕ್ಷಿಸಿದ ನಾನು ಇಂದು ಅವುಗಳ ಪ್ರಭಾವ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಪರಿಶೀಲಿಸುವ ಪ್ರಯತ್ನವನ್ನು ಮಾಡಿದೆ. ನಿಶ್ಚಿತ ಪ್ರಶ್ನಾವಳಿಗಳ ಸಹಾಯದಿಂದ ಸ್ತ್ರೀಯರನ್ನು ಮಾತನಾಡಿಸಿದೆನು. ಅವರು ಈ ಬಗ್ಗೆ ಬಹಳ ಮುಕ್ತವಾಗಿಯೇ ಮಾತನಾಡಿದರು. ಇಂದಿಗೂ ನಮ್ಮ ಸಮಾಜದಲ್ಲಿ ಸ್ತ್ರೀಯರು ಎಷ್ಟು ಹಿಂದುಳಿದಿದ್ದಾರೆ ಎಂಬುದು ಈ ಮೂಲಕ ನನಗೆ ತಿಳಿದು ಬಂದಿತು.

ದೇವರ ಹೇಳಿಕೆ, ಭವಿಷ್ಯವನ್ನು ನೋಡುವವರು ರೋಗರುಜಿನಗಳನ್ನು ವಾಸಿಮಾಡುತ್ತಾರೆ. ಅವರ ಮಾರ್ಗದರ್ಶನ ಉಪಯುಕ್ತಕರ ಎಂಬುದು ಅವರಲ್ಲಿದ್ದ ವಿಶ್ವಾಸ. ಅದನ್ನು ಸಮರ್ಥಿಸುವಾಗ ಅವರು ಹೇಳಿದ ವಿಚಾರಗಳೆಂದರೆ, ದೇವರು ಕೋಪಿಸಿಕೊಂಡ ಕಾರಣಕ್ಕೆ ರೋಗ ರುಜಿನಾದಿಗಳು ಬರುತ್ತವೆ. ಹಾಗಾಗಿ ದೇವರ ಇಚ್ಚೆಯನ್ನು ಪೂರ್ಣಗೊಳಿಸುವುದು ಅವಶ್ಯ. ದೇವತಾ ಕಾರ್ಯದಂಥ ವಿಷಯದಲ್ಲಿ ಪೂಜಾರಿಯೆಡೆಗೆ ಯಾವಾಗ ಬೇಕಾದರೂ ಹೋಗಬಹುದಾಗಿದೆ. ಅದಕ್ಕೆ ಹಣವು ಖರ್ಚಾಗುವುದಿಲ್ಲ. ಇದರಿಂದ ರೋಗಕ್ಕೆ ಮಾತ್ರವಲ್ಲ, ಕುಟುಂಬಕ್ಕೆ ಸುಖವು ಸಿಕ್ಕುತ್ತದೆ. ಡಾಕ್ಟರರ ಬಳಿಗೆ ಹೋಗುವುದೆಂದರೆ ಬಹಳ ಖರ್ಚು, ಹಾಗಾಗಿ ಆ ಬಗ್ಗೆ ಭಯವಾಗುತ್ತದೆ. ತಿನ್ನುವುದರ ಮೇಲೆ, ಉಣ್ಣುವುದರ ಮೇಲೆ ನಿರ್ಬಂಧ ಮತ್ತು ಹಣವೂ ಬಹಳ ಬೇಕು. ದೇವರ ಅವಕೃಪೆಯಿಂದಾಗಿಯೇ ರೋಗರುಜಿನ ಗಳುಂಟಾಗುತ್ತವೆ. ಹಾಗಾಗಿ ಇಲ್ಲಿ ವೈದ್ಯರ ಔಷಧೋಪಚಾರವು ನಡೆಯುತ್ತದೆ ಎಂದು ಹೇಳಲಾಗುವುದಿಲ್ಲ. ಈ ಬಗೆಯಲ್ಲಿ ಸಮರ್ಥಿಸಿದ ಸ್ತ್ರೀಯರು ಒಟ್ಟು ಐವತ್ತರ ಸಂಖ್ಯೆಯಲ್ಲಿ ನಲವತ್ಮೂರು ಜನ. ಉಳಿದ ಏಳು ಜನರ ಅಭಿಪ್ರಾಯದಂತೆ ರೋಗರುಜಿನಗಳಿಗೆ ಡಾಕ್ಟರರ ಬಳಿ ಹೋಗಿ ಚಿಕಿತ್ಸೆ ಪಡೆಯಬೇಕು. ಹೀಗೆ ಮಾಡಿದರೆ, ರೋಗವು ವಾಸಿಯಾಗುವುದಿಲ್ಲ. ಅದನ್ನು ಬಿಟ್ಟು ದೇವ ದೇವ ಎನ್ನುತ್ತಾ ಕೂರುವುದು ಮತ್ತು ದೇವತಾಕಾರ್ಯ, ಜೋಗಿಣಿಯ ಕಡೆ ಹೋದರೆ ಯಾವ ನಷ್ಟವೂ ಇಲ್ಲವೆಂಬುದು ಅವರ ವಿಚಾರ.

ಹರಕೆ ಹೊತ್ತ ಮೇಲೆ ರೋಗವು ವಾಸಿಯಾಗುತ್ತದೆ ಎಂದು ಹೇಳುವ ಮತ್ತು ಅದನ್ನು ಉದಾಹರಣೆ ಸಹಿತ ಸಮರ್ಥಿಸಿದ ಸ್ತ್ರೀಯರ ಸಂಖ್ಯೆ ೪೭. ಕೇವಲ ಮೂವರು ಮಾತ್ರ ಇಲ್ಲಿ ಅಪವಾದ. ಅದರೊಂದಿಗೆ ಒಂದಕ್ಕಿಂತಲೂ ಹೆಚ್ಚು ಹರಕೆಗಳನ್ನು ಹೊರಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ ಸ್ತ್ರೀಯರು ಹೀಗಿದ್ದಾರೆ:

ಖಾಯಿಲೆಯು ವಾಸಿಯಾಗುವುದಕ್ಕೆ ಹರಕೆ ಮಾಡಿಕೊಳ್ಳುವುದು ಯೋಗ್ಯ

ಹೌದು

ಇಲ್ಲ

ಹರಕೆಯ ಮೂಲಕ ದೇವರಿಗೆ ಒಪ್ಪಿಸುವ ವಸ್ತುಗಳು ೪೭ ೦೩
ಅ. ತೆಂಗಿನಕಾಯಿ-ಊದುಬತ್ತಿ ೪೧
ಅ. ನೈವೇದ್ಯ ಮತ್ತು ತೆಂಗಿನಕಾಯಿ ೩೨
ಕ. ಘಂಟೆ ೦೫
ಡ. ಸೀರೆ-ರವಿಕೆ, ಹೊಸ ಬಟ್ಟೆ ೦೨
ಇ. ಹುಂಜ ೨೮
ಘ. ಕುರಿ ೦೮

ಹರಕೆ ಹೊರುವ ಪದ್ಧತಿಯು ಹೀಗಿರುತ್ತದೆ. ರೋಗ ಬಂದಾಗ ಅದು ಇಳಿಯುಬೇಕು ಅಥವಾ ದೋಷ ಇಳಿಯಬೇಕು, ಎಂಬ ಕಾರಣಕ್ಕಾಗಿ ಆರಂಭಕ್ಕೆ ತೆಂಗಿನಕಾಯಿ- ಊದುಬತ್ತಿಯನ್ನು ದೇವರಿಗೆ ಅರ್ಪಿಸುತ್ತಾರೆ. ಇದನ್ನು ಪ್ರಾಥಮಿಕ ಸ್ವರೂಪದ ಲಂಚವೆನ್ನಬಹುದು. ಇನ್ನು ಮನೆಯಲ್ಲಿನ ರೋಗಿ ವಾಸಿಯಾದರೆಂದರೆ ಮತ್ತು ಕೆಲಸಕಾರ್ಯಕ್ಕೆ ತೊಡಗಿದರೆಂದರೆ, ಅನುಕೂಲವಾದಂತೆ ಹೆಚ್ಚಿನ ಖರ್ಚಿನಲ್ಲಿ ಹರಕೆ ತೀರಿಸುತ್ತಾರೆ. ಕೆಲವರು ಜಾತ್ರೆಯ ಸಮಯದಲ್ಲಿ ದೇವಾಲಯದಲ್ಲಿ ಗಂಟೆ ಕಟ್ಟುವುದುಂಟು, ಮತ್ತೆ ಕೆಲವರು ಹುಂಜವನ್ನು ಕೊಯ್ದು ಬಲಿಯನ್ನು ಕೊಡುವುದೂ ಉಂಟು. ಅಲ್ಲದೆ ಮನೆಯಲ್ಲಿನ ಪುರುಷರ ಖಾಯಿಲೆ ಸಂಬಂಧವಾದರೆ ಬಹಳ ದೊಡ್ಡ ಹರಕೆ ಮತ್ತು ಹೆಂಗಸರ ಖಾಯಿಲೆಗೆ ಕಡಿಮೆ ಖರ್ಚಿನ ಹರಕೆ ಎಂದೂ ಅದರಲ್ಲಿ ಬೇರೆ ಬೇರೆಯಾಗಿ ಗುರುತಿಸಬಹುದು. ಹರಕೆಯನ್ನು ಹೇಳಿಕೊಂಡರೆಂದರೆ ಅದನ್ನು ತೀರಿಸಲಿಕ್ಕೇ ಬೇಕು. ಇಲ್ಲದಿದ್ದರೆ ದೇವರು ಇನ್ನೂ ಹೆಚ್ಚಿನ ಖರ್ಚಿಗೆ ಹಾಕಿಬಿಡುವುದುಂಟು ಎಂಬುದು ನಂಬಿಕೆ. ಈ ಬಗ್ಗೆ ಅನೇಕ ಕಧೆಯನ್ನು ಅನೇಕ ಹೆಣ್ಣುಮಕ್ಕಳು ಹೇಳಿದರು. ‘ಡಾಕ್ಟರ್ ಕೊನೆಯ ಮನುಷ್ಯ ಔಷಧ ನೀಡಬಹುದು; ಸೂಜಿ ಹಾಕಬಹುದು,’ ಆದರೆ ದೇವರ ಮರ್ಜಿ ಅನುಗ್ರಹ ಇಲ್ಲದೆ ಇದ್ದರೆ ಆತನಾದರೂ ಏನು ಮಾಡುತ್ತಾನೆ? ಎಂಬಂಥ ಅಂಧಶ್ರದ್ಧೆ ಮತ್ತು ದೇವರ ಬಗ್ಗೆ ನಿಷ್ಕಪಟತೆಯು ಈ ಹೊಲಗೆಲಸದ ಸ್ತ್ರೀಯರ ಮನಸ್ಸಿನಲ್ಲಿ ಪೂರ್ಣವಾಗಿ ತುಂಬಿ ಹೋಗಿತ್ತು.

ದೇವರಿಗೆ ಮತ್ತು ಯಾತ್ರೆಗೆ ಹೋಗುವವರ ಸಂಖ್ಯೆಯು ಅಧಿಕ. ಸಾಲ ಪಡೆದು ದೇವರ ಯಾತ್ರೆ ಹೋದವರ ಸಂಖ್ಯೆ ಕಳೆದ ವರ್ಷದೊಳಗೆ ಹೀಗಿತ್ತು:

ದೇವರು

ಸ್ತ್ರೀಯರ ಸಂಖ್ಯೆ

ಪಂಢರಪುರದ ವಿಠಲ ೦೯
ಜೋತಿಬಾ ೦೨
ಯಲ್ಲಮ್ಮ ೨೩
ಇತರೆ ೦೪

ಗುರುಹಿರಿಯರು ಮನೆತನದ ದೇವರು ಎಂದು ಭಾವಿಸಿರುವಂಥ ದೇವರ ಯಾತ್ರೆಗೆ ಹೋಗಲೇ ಬೇಕು ಎಂಬ ವಿಷಯದಲ್ಲಿ ಗಾಢವಾದ ಶ್ರದ್ಧೆ ಅವರಿಗೆ. ಈ ಭಾಗದಲ್ಲಿ ಸೌಂದತ್ತಿ ಯಲ್ಲಮ್ಮ, ದೇವಿಗೆ ಯಾತ್ರೆ ಹೋಗುವ ಸಂಪ್ರದಾಯವು ಇರುವುದರಿಂದ ಸಾಲ ಮಾಡಿಕೊಂಡು ಯಾತ್ರೆಗೆ  ಹೋಗುವ ಕುಟುಂಬಗಳು ಬಹಳವಾಗಿ ಕಂಡು ಬಂದವು. ಸಾಲವು ಇಂದಲ್ಲ ನಾಳೆ ತೀರುತ್ತದೆ; ಅದನ್ನು ತೀರಿಸಲು ದೇವರು ಕೈತುಂಬ ಕೊಡುವುದುಂಟು ಎಂಬುದು ಅವರಲ್ಲಿದ್ದ ವಿಶ್ವಾಸ. ಅವರ ನಿತ್ಯ ಆಚರಣೆಯಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಅವುಗಳನ್ನು ಪಾಲಿಸುತ್ತಿರುವುದು ಕಂಡುಬಂದಿತು. ಈ ವಿಚಾರವಾಗಿ ಸ್ತ್ರಿಯರ ವಿಷಯದಲ್ಲಿ ಕೆಲವು ಮುಖ್ಯ ಉದಾಹರಣೆಗಳೂ ಇಂತಿವೆ.

 

ಹೌದು

ಇಲ್ಲ

ರಾತ್ರಿಯ ಹೊತ್ತು ಹಾಲಿಗೆ ಹೆಪ್ಪು ಹಾಕಬಾರದು ೫೦ ೦೦
ರಾತ್ರಿಯ ಹೊತ್ತು ಕಾಚು, ವೀಳ್ಯದೆಲೆ, ಮಸಾಲೆ ಕೊಡಬಾರದು ೪೮ ೦೨
ರಾತ್ರಿಯ ಹೊತ್ತು ಉಪ್ಪು ಕೊಡಬಾರದು  ೫೦ ೦೦
ರಾತ್ರಿಯ ಹೊತ್ತು ಸುಣ್ಣ ಕೊಡಬಾರದು ೪೭ ೦೩
ದೀಪಹಚ್ಚಿದ ಮೇಲೆ ಹಣ ನೀಡಬಾರದು ೪೬ ೦೪
ಕೈಯ ಮೇಲೆ ಉಪ್ಪು ಹಾಕಬಾರದು ೫೦ ೦೦
ಮನೆಯಲ್ಲಿ ಜಗಳವಾಗುವುದರಿಂದ ಚಿಲಕ ಅಲ್ಲಾಡಿಸಬಾರದು ೪೯ ೦೧

ಇವೇ ಮೊದಲಾದ ಅನೇಕ ಬಗೆಯ ಲೋಕಭ್ರಮೆಗಳನ್ನು ಅವರು ಮನಃಪೂರ್ವಕವಾಗಿ ಪಾಲಿಸಿಕೊಂಡು ಬಂದಿದ್ದಾರೆ. ಅಜ್ಜ, ಮುತ್ತಜ್ಜರ ಕಾಲದಿಂದಲೂ ನಡೆಯುತ್ತಾ ಬಂದಿರುವ ಈ ಸಂಗತಿಗಳನ್ನು ಪಾಲಿಸುವುದು ಅಗತ್ಯ. ಇಲ್ಲದಿದ್ದರೆ ವಿಪರೀತ ಕೇಡು ಸಂಭವಿಸುತ್ತದೆ ಎಂಬ ಭೀತಿಯು ಅವರ ಮನಸ್ಸಿನಲ್ಲಿ ಇದೆ. ದೀಪ ಹಚ್ಚಿದ ಮೇಲೆ ಮನೆಯಲ್ಲಿನ ಹಣವನ್ನು ತೆಗೆದುಕೊಟ್ಟರೆ ಮನೆಯ ಲಕ್ಷ್ಮಿಯು ಹೊರಹೋಗುತ್ತಾಳೆ, ಉಪ್ಪನ್ನು ಕೊಟ್ಟರೆ ಕೊಡುವವನ ಉಪ್ಪಿನಿಂದ ತೆಗೆದುಕೊಳ್ಳುವವನ ಬಗ್ಗೆ ಇದ್ದ ಮಮತೆಯು ಕಡಿಮೆ ಯಾಗುತ್ತದೆ. ಹಾಗೆಯೇ ರಾತ್ರಿಯ ಹೊತ್ತು ಹೆಪ್ಪನ್ನು ಹಾಕುವುದಕ್ಕೆಂದು ಹೊರಗಿನವರಿಗೆ ಕೊಟ್ಟರೆ ಮನೆಯಲ್ಲಿ ಹಾಲು, ಹಯನು ಕಡಿಮೆಯಾಗುತ್ತದೆ ಮತ್ತು ಸಂಪನ್ನತೆಯೂ ಇಲ್ಲವಾಗುತ್ತದೆ ಎಂಬಿತ್ಯಾದಿ ಕಾರಣಗಳನ್ನು ಹೇಳಿ ಈ ಕಲ್ಪನೆಗಳನ್ನು ಬಹಳ ಮುಖ್ಯವೆಂದು ಜೋರಾಗಿ ಸಮರ್ಥಿಸಿಕೊಳ್ಳುತ್ತಿದ್ದರು ಈ ಸ್ತ್ರೀಯರು.

ಶಕುನ ಅಪಶಕುನಗಳ ವಿಷಯದಲ್ಲಿಯೂ ಇದಕ್ಕಿಂತ ಬೇರೆಯಾದ ಮನೋಭೂಮಿಕೆ ಅವರದಾಗಿರಲಿಲ್ಲ.

ಮುಂಗುಸಿಯ ಮುಖ ನೋಡುವುದು, ಕುಕ್ಕಟ (ಹುಂಜ) ಕಾಣಿಸುವುದು, ಬಲಗಣ್ಣು ಹಾರುವುದು, ಎರಡು ಮೈನಾ ಪಕ್ಷಿಗಳು ಒಟ್ಟಿಗೆ ಕಾಣುವುದು, ವಿವಾಹಿತ ಸ್ತ್ರೀ ತುಂಬಿದ ಕೊಡವನ್ನು ಹೊತ್ತು ಎದುರಿಗೆ ಬರುವುದು, ದೇವರಿಗೆ ಏರಿಸಿದ ಹೂವು ಬಲಗಡೆಯಿಂದ ಕೆಳಗೆ ಬೀಳುವುದು -ಇವು ಶುಭ ಎಂಬುದು ಅವರ ತಿಳಿವಳಿಕೆ. ಹಾಗಾದಾಗ ಏನಾದರೂ ಒಳ್ಳೆಯದು ಘಟಿಸುತ್ತದೆ. ಇದಕ್ಕೆ ವಿರುದ್ಧವಾಗಿ ಎಡಗಣ್ಣು ಹಾರುವುದು, ಎಡಬಾಹು ಕಂಪಿಸುವುದು, ರಾತ್ರಿಯ ಹೊತ್ತು ನಾಯಿ ಅಳುವುದು, ತೆಂಗಿನಕಾಯಿ ನೆಟ್ಟಗೆ ಒಡೆಯುವುದು, ಖಾಲಿಕೊಡ ಹಿಡಿದುಕೊಂಡಂಥ ಸ್ತ್ರೀಯು ಎದುರಾಗುವುದು, ಗೂಬೆ ಅರಚುವುದು, ಕನಸಿನಲ್ಲಿ ಸಿಹಿ ಊಟ ಮಾಡುವುದು, ಮೈಮೇಲೆ ಹಲ್ಲಿ ಬೀಳುವುದು ಇತ್ಯಾದಿ ಸಂಗತಿಗಳು ಅಶುಭ ಮತ್ತು ಅನಿಷ್ಟಗಳೆಂದು ಒಪ್ಪಿಕೊಳ್ಳಲಾಗಿದೆ. ಇವುಗಳಲ್ಲಿ ಒಂದು ಸಂಗತಿ ಹೇಗೋ ಘಟಿಸಿತೆಂದರೆ ಆ ದಿನವೆಲ್ಲ ಕಸಿವಿಸಿಯಾಗುತ್ತಿರುತ್ತದೆ ಮನಸ್ಸಿನಲ್ಲಿ. ಜ್ಯೋತಿಷಿ, ಪೂಜಾರಿಯಲ್ಲಿಗೆ ಹೋಗಿ ಪಂಚಾಂಗ ತೆಗೆದು ಅದಕ್ಕೆ ಪರಿಹಾರವಾಗಿ ಏನಾದರೂ ಪೂಜೆಕಾರ್ಯ ಮಾಡಿದುದಲ್ಲದೆ ಮನಸ್ಸಿಗೆ ಸಮಾಧಾನವಿರುವುದಿಲ್ಲ ಎಂಬುದು ಅವರ ಅಂಬೋಣ.

ಅವರ ಮತ್ತೊಂದು ಪಕ್ಕಾ ತಿಳಿವಳಿಕೆ ಎಂದರೆ, ಚಿಕ್ಕ ಮಕ್ಕಳಿಗೆ ದೃಷ್ಟಿ ಆಗುವುದು. ಎಲ್ಲಾ ಸ್ತ್ರೀಯರೂ ಈ ಬಗ್ಗೆ ಧ್ವನಿಗೂಡಿಸಿ ಅಭಿಪ್ರಾಯ ಮಂಡಿಸಿದರು. ಇದು ಸರ್ವೆ ಸಾಮಾನ್ಯ ಸಂಗತಿ ಎಂಬುದು ಅವರ ನಂಬಿಕೆ. ಇಂಥವು ಲಕ್ಷ್ಯಕ್ಕೆ ಬರುವುದನ್ನು ಅವರು ವಿವಿಧ ಲಕ್ಷಣಗಳ ಮೂಲಕ ಹೇಳಿದರು. ಒಂದಕ್ಕಿಂತ ಹೆಚ್ಚು ಲಕ್ಷಣಗಳನ್ನು ಹೇಳುವ ಸ್ತ್ರೀಯರೂ ಇದ್ದರು. ಇದರ ಬಗ್ಗೆ ಇಲ್ಲಿನ ಸ್ತ್ರೀಯರು ವ್ಯಕ್ತಪಡಿಸಿದ ಅಭಿಪ್ರಾಯಗಳು

ಮಕ್ಕಳಿಗೆ ದೃಷ್ಟಿ ಹತ್ತಿರುವುದರ ಲಕ್ಷಣಗಳು, ಸಹಮತ ವ್ಯಕ್ತಪಡಿಸಿದ ಸ್ತ್ರಿಯರು:

ಮುಸ್ಸಂಜೆಯ ಹೊತ್ತಿಗೆ ಮಕ್ಕಳು ಕಿರಿಕಿರಿ ಮಾಡುವುದು

೩೮

ಜ್ವರ ಬರುವುದು

೨೨

ಕಣ್ಣುರೆಪ್ಪೆ ಅಗಲವಾಗುವುದು

೨೮

ನಿದ್ರೆಯಲ್ಲಿರುವಾಗ ಭಯದಿಂದ ಕೂಗಿ ಏಳುವುದು

೧೩

ಹಸಿವು ಕಡಿಮೆಯಾಗುವುದು

೧೯

ಹಾಲು ಕುಡಿಸಿದರೆ ವಾಂತಿಮಾಡುವುದು

೨೩

ಮೈ ಹಿಡಿಯದಿರುವುದು (ದಪ್ಪವಾದಗಿರುವಿಕೆ)

೧೭

ಗುಳ್ಳೆ (ಬೊಕ್ಕೆ) ಏಳುವುದು

೦೮

ಶಾರೀರಿಕ ಕೇಡು, ಆರೋಗ್ಯದ ತಕರಾರು, ಅಜೀರ್ಣ, ಹವಾಮಾನದ ಬದಲಾವಣೆ, ಬಟ್ಟೆಗಳನ್ನು ಬಿಗಿಯಾಗಿ ಹಾಕುವುದು -ಇತ್ಯಾದಿ ಕಾರಣಗಳಿಂದ ಮಕ್ಕಳ ಆರೋಗ್ಯ ಕೆಡುತ್ತದೆ. ಈ ಸಂಗತಿಯು ಅವರಿಗೆ ಸಾಮಾನ್ಯ ಅನಾರೋಗ್ಯದ ಇಂಥ ಸಂದರ್ಭದಲ್ಲಿ ಕೊಂಚವೂ ಅರ್ಧವಾಗುವುದಿಲ್ಲ. ಪರಿಣಾಮವಾಗಿ ಮಕ್ಕಳ ಆರೋಗ್ಯಕರ ಬೆಳವಣಿಗೆ ಯಾಗುವುದಿಲ್ಲ.

ದೃಷ್ಟಿ ತೆಗೆದು ಹಾಕುವುದಕ್ಕಾಗಿ ದೈವಿಕ ಕಾರ್ಯಗಳಿಗಿಂತ ಸಾಂಪ್ರದಾಯಿಕವಾಗಿ ನಡೆದು ಬಂದಿರುವ ಉಪಾಯಗಳನ್ನೇ ಮಾಡುತ್ತಿದ್ದಾರೆ. ಉಪ್ಪನ್ನು ನಿವಾಳಿಸಿ ನೀರಿನಲ್ಲಿ ಹಾಕುವುದು, ಉಪ್ಪು-ಮೆಣಸಿನಕಾಯಿಯನ್ನು ಬೆಂಕಿಯ ಮೇಲೆ ಹಾಕುವುದನ್ನು ಮಾಡುತ್ತಾರೆ. ಚಟಪಟ ಎಂದು ಶಬ್ದ ಮಾಡಿದರೆ ದೃಷ್ಟಿ ಹೋಯಿತು ಎಂದರ್ಧ. ಒಂದೊಮ್ಮೆ ಚಟಪಟ ಮಾಡಿದರೂ ಮತ್ತು ಬಿಕ್ಕಳಿಕೆ ಹತ್ತಿತೆಂದರೆ ದೃಷ್ಟಿ ಹೋಗಲಿಲ್ಲ ವೆಂಬುದು ನಂಬಿಕೆ. ನಿಂಬೆಹಣ್ಣನ್ನು ಕೊಯ್ದು ನಿವಾಳಿಸಿ ಎಸೆಯುವುದು, ರೊಟ್ಟಿಗೆ ಕಪ್ಪು ಮಸಿ ಹಚ್ಚಿ ನಿವಾಳಿಸಿ ಎಸೆಯುವುದು, ಗೇರುಬೀಜಕ್ಕೆ ಬೆಂಕಿಯನ್ನು ನಿವಾಳಿಸಿ ಮೂರು ದಾರಿಗಳು ಕೂಡುವಲ್ಲಿ ಎಸೆದು ಬರುವುದು. ಹೀಗೆ ಮೌಡ್ಯ, ಮೂರ್ಖ ಮಾರ್ಗಗಳಿಂದ ದೃಷ್ಟಿಯನ್ನು ತೆಗೆಯುವುದಕ್ಕೆಂದು ಸಂಪ್ರದಾಯವೊಂದನ್ನು ರೂಡಿಸಿಕೊಳ್ಳಲಾಗಿದೆ. ಅಲ್ಲದೆ ಅಮಾವಾಸ್ಯೆ, ಬುಧವಾರ ಮತ್ತು ಶನಿವಾರಗಳು ಆವಶ್ಯಕವೆಂದು ಒಪ್ಪಿಕೊಂಡಿದ್ದಾರೆ. ದೃಷ್ಟಿ ತಾಗಬಾರದು ಎಂಬ ಕಾರಣಕ್ಕಾಗಿ ಕಪ್ಪು (ಕಣ್ಣು ಕಪ್ಪು) ಹಚ್ಚುವುದು, ಕಪ್ಪು ದಾರ ಕಟ್ಟುವುದು, ಗೇರುಬೀಜ ಕಟ್ಟುವುದು ಇತ್ಯಾದಿ ನಂಬಿಕೆಗಳನ್ನು ಕೂಡ ಪಾಲಿಸಿಕೊಂಡು ಬರುತ್ತಿರುವುದನ್ನು ಅವರು ಹೇಳಿದರು. ಪ್ರತಿ ಅಮಾವಾಸ್ಯೆಯೆಂದು ತೆಂಗಿನ ಕಾಯಿಯನ್ನು ದೇವರಿಗೆ ನೀಡುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಂಥ ಸ್ತ್ರೀಯರ ಸಂಖ್ಯೆ ಇಪ್ಪತ್ಮೂರು.

ಗರ್ಭಪಾತ

ಅತ್ಯಂತ ಅತಾರ್ಕಿಕ ಮತ್ತು ಅಶಾಸ್ತ್ರೀಯ, ಗಾಢ ಅಜ್ಞಾನದ ದ್ಯೋತಕ ತಿಳಿವಳಿಕೆಯಾಗಿ ಅವರಲ್ಲಿ ಕಂಡು ಬಂದುದೇನೆಂದರೆ, ಚಿಕ್ಕ ಮಗುವಿಗೆ ತೊಡೆ ಮೇಲೆ ಮಲಗಿಸಿಕೊಂಡು ಹಾಲು ಕುಡಿಸುವವರೆಗೂ ಮತ್ತೊಂದು ಗರ್ಭ ನಿಲ್ಲುವುದಿಲ್ಲ. ಈ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ ಸ್ತ್ರೀಯರ ಸಂಖ್ಯೆ ಮೂವತ್ನಾಲ್ಕು. ಅಲ್ಲದೆ ಎರಡು ವರ್ಷಗಳವರೆವಿಗೂ ಮಕ್ಕಳಿಗೆ ಹಾಲು ಕುಡಿಸಬೇಕು ಎಂಬುದು ಎಲ್ಲ ಸ್ತ್ರೀಯರ ಅಭಿಪ್ರಾಯ. ಅಂತೆಯೇ ಅದನ್ನು ಪಾಲಿಸುತ್ತಾರೆ. ಸದ್ಯೆ ಮಕ್ಕಳುಮರಿ ಇರುವಂತಹ ಸ್ತ್ರೀಯರು ಇಪ್ಪತ್ತೊಂದು ಮಂದಿ. ಅವರಿಗೆ ಎಷ್ಟು ವರ್ಷಗಳತನಕ ಮಕ್ಕಳಿಗೆ ಹಾಲು ಕುಡಿಸಿದಿರಿ ಎಂಬುದಾಗಿ ಪ್ರಶ್ನಿಸಲು ಅವರಿಂದ ಬಂದ ಉತ್ತರ ಭಿನ್ನಭಿನ್ನವಾಗಿತ್ತು:

ಮಗುವಿನ ವಯಸ್ಸು

ಕುಡಿಸುತ್ತಿದ್ದ ಸ್ತ್ರೀಯರ ಸಂಖ್ಯೆ

ಎರಡು ವರ್ಷ

೦೫

ಮೂರು ವರ್ಷ

೦೭

ನಾಲ್ಕು ವರ್ಷದವರೆಗೆ (ಕೊನೆಯ ಮಗು)

೦೯

ಮಗುವಿಗೆ ಹಾಲು ಕುಡಿಸುತ್ತಿರುವ ಕಾರಣ ದೈಹಿಕ ಆರೋಗ್ಯದ ಮೇಲೆ ಅದರ ಪರಿಣಾಮ ಉಂಟಾಗುತ್ತದೆ. ಅಲ್ಲದೆ ಸ್ತ್ರೀಯರ ಆರೋಗ್ಯದ ಮೇಲೂ ಹಾನಿಕಾರಕ ವಾಗುತ್ತದೆ ಎಂದು ಹೇಳಿದ್ದು ಅವರಿಗೆ ಅರ್ಧವಾಗಲಿಲ್ಲ. ಬದಲಾಗಿ ಹಾಲಿನ ಪ್ರಶ್ನೆ ಮಕ್ಕಳ ಅಳುವನ್ನು ನಿಲ್ಲಿಸುವುದು, ತಾಯಿಗೆ ಸ್ವಲ್ಪಹೊತ್ತು ಅಡ್ಡಾಗುವುದಕ್ಕೆ ಮತ್ತು ವಿಶ್ರಾಂತಿ ಪಡೆಯುವುಕ್ಕೆ ಇದೊಂದು ಅವಕಾಶವೆಂಬುದು ಅವರ ಅಭಿಪ್ರಾಯ. ಇದರಿಂದ ಮಗುವಿನ ಮೇಲೆ ಮಮತೆ ಹೆಚ್ಚಾಗುತ್ತದೆ ಎಂಬ ವಿಚಾರವೂ ಅವರಲ್ಲಿ ತುಂಬಿಕೊಂಡಿತ್ತು.

ಗರ್ಭಪಾತದ ವಿಷಯವಾಗಿ ಚರ್ಚೆ ಮಾಡುವಾಗ ದೈಹಿಕ ಅಶಕ್ತತೆ, ಅನಾರೋಗ್ಯ, ಜಡತ್ವ ಮತ್ತು ಇತರೆ ಕಾರಣಗಳ ಅಸ್ಪಷ್ಟತೆಯು ಅವರಲ್ಲಿ ಇರುವುದು ಕಂಡುಬಂದಿತು. ಕೇವಲ ಶೇಕಡ ಮೂವತ್ತರಷ್ಟು ಸ್ತ್ರೀಯರು ಮಾತ್ರ ಗರ್ಭಪಾತವಾಗುವುದು ಶಾರೀರಿಕ ಮತ್ತು ಆರೋಗ್ಯ ಸಂಬಂದಧ ಘಟನೆ ಎಂದು ಮಾನ್ಯ ಮಾಡಿದರು. ಆದರೆ ಉಳಿದವರ ಅಭಿಪ್ರಾಯಗಳು ಮಾತ್ರ ಹೀಗಿದ್ದವು.

ಗರ್ಭಪಾತದ ಕಾರಣಗಳು

ಸಹಮತ ವ್ಯಕ್ತಪಡಿಸಿದ ಸ್ತ್ರೀಯರು

ಹರಕೆಯನ್ನು ಹೊತ್ತು ತೀರಿಸದಿರುವ ಪರಿಣಾಮ

೦೫

ಪೂರ್ವಜನ್ಮದ ಪಾಪ

೦೮

ಅದೃಷ್ಠದ ಭೋಗ

೦೭

ದೇವರ ಅವಕೃಪೆ

೦೫

ಮಾಟ, ಭೂತ ಬಾಧೆ

೧೦

ಗರ್ಭಪಾತವಾಗುವುದು ದೈವೀ ಸಂಬಂಧಿ ವಿಷಯ. ಅದು ಅದೃಷ್ಟದ ಒಂದು ಭಾಗ ಎಂದು ತಿಳಿದುಕೊಳ್ಳುವ ವೃತ್ತಿಯು ಅವರ ಅಜ್ಞಾನದಿಂದ ಮತ್ತು ಅಂಧಶ್ರದ್ಧೆಯಿಂದ ನಿರ್ಮಾಣವಾದುದಾಗಿದೆ. ಮಹತ್ವದ ಸಂಗತಿ ಎಂದರೆ ಪುರುಷ ವೈದ್ಯರ ಕಡೆಯಿಂದ ತಪಾಸಣೆ ಮಾಡಿಸಿಕೊಳ್ಳುವುದು ನಾಚಿಕೆ ಮತ್ತು ಸಂಕೋಚದ ವಿಷಯವಾಗಿತ್ತು ಅವರಿಗೆ. ಹಾಗೆ ಭಾವಿಸಿರುವ ಅವರು ವೈದ್ಯರ ಬಳಿಗೆ ತಪಾಸಣೆ ಮಾಡಿಸಿಕೊಳ್ಳುವ ಸಾಧ್ಯತೆಯನ್ನು ಸ್ಪಷ್ಟವಾಗಿ  ನಿರಾಕರಿಸುತ್ತಿದ್ದರು. ಅಲ್ಲದೆ ಹಳ್ಳಿಗಳಲ್ಲಿ ಮಹಿಳಾ ವೈದ್ಯರು ಇಲ್ಲದಿರುವು ದರಿಂದ ತಪಾಸಣೆ ಮಾಡಿಸಿಕೊಳ್ಳುವ ವಿಚಾರವು ಸಹ ಅವರ ಮನಸ್ಸಿನಲ್ಲಿ ಬರುವುದೇ ಇಲ್ಲ. ಪರಿಣಾಮವಾಗಿ ಗರ್ಭಪಾತ ಉಂಟಾಗಿ ಅವರ ಆರೋಗ್ಯದ ಮೇಲೆ ಅನಿಷ್ಟ ಪರಿಣಾಮಗಳು ಆಗುತ್ತಲೇ ಬಂದಿವೆ.

ಕಾನೂನುಗಳು

ಹಿಂದೂ ವಿವಾಹ ಕಾಯಿದೆ (೧೯೫೫), ಹಿಂದೂ ವಾರಸುದಾರಿಕೆ (ಆಸ್ತಿ) ಹಕ್ಕಿನ ಕಾಯಿದೆ (೧೯೫೬), ಹಿಂದೂ ಅಜ್ಞಾನ ಮತ್ತು ಪಾಲಕತ್ವದ ಕಾಯಿದೆ (೧೯೫೬), ಹಿಂದೂ ದತ್ತಕ ಮತ್ತು ಜೀವನಾಂಶ ಕಾಯಿದೆ (೧೯೭೧), ಗರ್ಭಪಾತ ಸಂಬಂದಧ ಕಾಯಿದೆ (೧೯೭೧), ಕೂಲಿಕಾರ್ಮಿಕರ ಕನಿಷ್ಟ ವೇತನ ಕಾಯಿದೆ (೧೯೭೪), ಇವುಗಳ ರೂಪುರೇಖೆ ಮತ್ತು ಅವುಗಳಲ್ಲಿನ ಸವಲತ್ತುಗಳ ಬಗ್ಗೆ ಅವರಿಗೆ ನಾನು ತಿಳಿಸಿ ಹೇಳಿದೆ. ಕಾಯಿದೆಗಳ ಗುಣಾತ್ಮಕತೆಗಳ ದೊಡ್ಡ ಯಾದಿ(ಪಟ್ಟಿ)ಯನ್ನು ಮತ್ತು ಅದರ ಮೂಲಕ ಲಭ್ಯವಾಗುವ ಸೌಲಭ್ಯಗಳ ವಿಚಾರವನ್ನು ಕೇಳಿದ ಆ ಸ್ತ್ರೀಯರಿಗೆ ಆಶ್ಚರ್ಯವಾಯಿತು. ಕಾರಣ ಅವರಲ್ಲಿ ಆ ಬಗ್ಗೆ ತೀರಾ ಅಜ್ಞಾನವಿದ್ದುದು ಕಂಡುಬಂದಿತು. ಅವರಿಂದ ಬಂದಂಥ ಉದ್ಗಾರಗಳು ಹೀಗಿವೆ:

‘ತಾಯಿ, ಕಾಯಿದೆ ಪುಸ್ತಕವು ಕಲಿತ ಹೆಣ್ಣುಮಕ್ಕಳಿಗೆ, ನಮಗೆ ಇದರ ವಿಚಾರ ಏನೂ ತಿಳಿಯುವುದಿಲ್ಲ, ಕಾರಣ ನಮಗಿರುವ ಅನಕ್ಷರತೆ. ಗರ್ಭಪಾತ ಸಂಬಂದಧ ಕಾಯಿದೆ ಎನ್ನುತ್ತೀರಿ, ಈ ವಿಚಾರ ನ್ಯಾಯವಾದುದೇ ಹೌದು. ಆದರೆ ಗ್ರಾಮೀಣ ಸಮಾಜದಲ್ಲಿ  ನಮಗೆ ಡಾಕ್ಟರ್ ಮತ್ತು ದವಾಖಾನೆ (ಔಷಧಾಲಯ)ಗಳು ಎಲ್ಲಿವೆ? ಯಾರು ಆರಂಭಿಸುತ್ತಾರೆ? ಸೂಲಗಿತ್ತಿಯೇನೋ ಸರಿ, ಕಾಯಿದೆಯ ನೋಂದಣಿಯನ್ನು ಸಮಾಜದಲ್ಲಿ ಗಂಡಸರೇ ಮಾಡುತ್ತಾರೆ ಅಲ್ಲವೆ.’

ಸಾಮಾನ್ಯ (ಅನಕ್ಷರಸ್ಥ) ಜನರ ಪಾಲಿಗೆ ಕಾಯಿದೆಯ ಕಾಗದ ಬರಿಯ ಹಾಳೆ ಹೌದು ತಾನೆ.

ಈ ಬಗೆಯ ಶಬ್ದಗಳಲ್ಲಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಆದರೂ ಎಲ್ಲಾ ಸ್ತ್ರೀಯರು, ಕಾಯಿದೆಯ ಮಾಹಿತಿಗಳಲ್ಲಿ ಆಸಕ್ತಿ ವಹಿಸಿದರು. ಅವರ ಮುಖದ ಮೇಲೆ ಆಶ್ಚರ್ಯ ಮತ್ತು ಕಣ್ಣುಗಳಲ್ಲಿ ಹೊಸತೇನನ್ನೋ ಕೇಳಿದ ಆನಂದವು ಸ್ಪಷ್ಟವಾಗಿ ಕಾಣುತ್ತಿತ್ತು. ಆದರೂ ಸಮಾಜ ನಮ್ಮ ಪರವಾಗಿಲ್ಲ, ಹಾಗಾಗಿ ಕಾಯಿದೆಯ ಪೊಳ್ಳುತನದ ಅರಿವೂ ಅವರಿಗೆ ಇತ್ತು. ಹೃದಯದ ಈ ವಿಚಾರವನ್ನು ಅವರು ಮತ್ತೆ ಮತ್ತೆ ವ್ಯಕ್ತಪಡಿಸಿದರು. ಕಾಯಿದೆಗಳ ಆಧಾರದ ಬಗ್ಗೆ ಎಲ್ಲರಲ್ಲೂ ಶಂಕೆಯು ಕಾಣಿಸುತ್ತಿತ್ತು. ಅಲ್ಲದೆ ಕನಿಷ್ಠ ವೇತನ ಕಾಯಿದೆಯನುಸಾರ ಹೊಲಗೆಲಸದಲ್ಲಿ ಸ್ತ್ರೀ-ಪುರುಷರಿಗೆ ಸಮಾನ ಕೂಲಿ ದೊರಕಬೇಕು ಎಂಬುದರ ಬಗ್ಗೆಯೂ ಅವರಿಗೆ ಒಪ್ಪಿಗೆಯಿಲ್ಲ.

ಹೊಲದಲ್ಲಿ ಕೆಲಸ ಮಾಡುವ ಸ್ತ್ರೀಯರು ಅತ್ಯಂತ ಹೀನ ದರ್ಜೆಯ ಮತ್ತು ಪಶು ಸಮಾನವಾದ ಜೀವನವನ್ನು ನಡೆಸಬೇಕಾಗಿದೆ. ಅವರಲ್ಲಿನ ಅಜ್ಞಾನದಿಂದಾಗಿ ರೂಢಿ ಮತ್ತು ಸಂಪ್ರದಾಯದ ಒತ್ತಡದ ಅಡಿಯಲ್ಲಿ ಬದುಕುತ್ತಿದ್ದಾರೆ. ಹಾಗಾಗಿ ಅತ್ಯಂತ ಹಳತಾದ ಮತ್ತು ಹೀನವಾದ ವಿಚಾರಗಳನ್ನು ಗಟ್ಟಿಯಾಗಿ ಹಿಡಿದಿರುವುದರಿಂದ ಅವರಲ್ಲಿ ಸುಧಾರಣೆ ಹೇಗೆ ಸಾಧ್ಯ? ಇವರು ಗಂಭೀರವಾಗಿ ಕೆಲಸ ಮಾಡುವುದಾದರೂ ಹೇಗೆ? ಯಾರು? ಇಂಥ ಅನೇಕ ಪ್ರಶ್ನೆಗಳಿವೆ. ಈ ಶಿಬಿರದ ಚರ್ಚೆಯನ್ನು ತೀರಾ ಅಸ್ವಸ್ಥ ಗೊಳಿಸಿದ್ದು ಸಹಾ ಇವೇ ವಿಷಯಗಳು. ಇವುಗಳ ಬಗ್ಗೆಯೇ ಪ್ರಶ್ನೆಗಳು ಬರುತ್ತಿದ್ದವು ಇಲ್ಲಿ. ಸ್ತ್ರೀ-ಮುಕ್ತಿ ಚಳವಳಿಯು ಇವುಗಳನ್ನು ಅವಶ್ಯ ದಾಖಲಿಸಬೇಕು. ಅಷ್ಟು ಸಾಮರ್ಥ್ಯವು ನಿರ್ಮಾಣವಾಗಬಹುದು ಇದರಿಂದ ಎಂಬುದು ಇಲ್ಲಿನ ಮುಖ್ಯ ಆಶಾವಾದ.