ಸ್ತ್ರೀಸ್ವಾತಂತ್ರ್ಯದ ದಿಕ್ಕುಗಳು

ಎಲ್ಲಾ ಸಾಮಾಜಿಕ ಘಟಕಗಳ ಸಹಕಾರದಿಂದ, ಸಾಮಾಜಿಕ ಸಂಸ್ಥೆಗಳ ಕಾರ್ಯಗಳ ಸಹಾಯದಿಂದ ಮತ್ತು ಅಧಿಕಾರಿಗಳ ಸಲಹೆಯ ಮೂಲಕ ಎಲ್ಲಾ ಸ್ತರಗಳು ಮತ್ತು ಎಲ್ಲ ಸಂಬಂಧಿತ ನೆಲೆಗಳ ಪ್ರಯತ್ನದಿಂದ ಸ್ತ್ರೀಯರ ಪ್ರಶ್ನೆಗಳನ್ನು ಬಿಡಿಸಬೇಕಾಗಿದೆ. ಆ ದೃಷ್ಟಿಯಿಂದ ವಿಚಾರ ಮಾಡಿದಾಗ ಮುಂದಿನ ವಷಗಳಲ್ಲಿ ಸ್ತ್ರೀಯರ ಪ್ರಶ್ನೆಗಳು ಪರಿಹಾರವಾಗಬೇಕು ಮತ್ತು ಸ್ತ್ರೀ-ಪುರುಷ ಸಮಾನತೆಯ ಯುಗವು ನಿರ್ಮಾಣವಾಗಬೇಕು. ಈ ದೃಷ್ಟಿಯಿಂದ ಅನುಕೂಲಕರ ಸಾಮಾಜಿಕ ಪರಿಸ್ಥಿತಿ ಮತ್ತು ಪೋಷಕ ವಾತಾವರಣವು ನಿರ್ಮಿತವಾಗುವುದು ಅಗತ್ಯ. ಆ ಹಿನ್ನೆಲೆಯಲ್ಲಿ ಈ ಕೆಳಗಿನ ಅಂಶಗಳನ್ನು ಪರಿಶೀಲಿಸ ಬಹುದು.

೧. ಎಲ್ಲಕ್ಕಿಂತ ಮಹತ್ವದ ವಿಷಯವೆಂದರೆ ಸ್ತ್ರೀಯರ ಪ್ರಶ್ನೆ, ಸ್ಥಾನಮಾನ ಮತ್ತು ಆರ್ಥಿಕ ನೆಲೆಗಳು. ಇವುಗಳ ಸ್ಪಷ್ಟ ಸ್ವರೂಪವನ್ನು ಮತ್ತು ವಾಸ್ತವ ಪರಿಸ್ಥಿತಿಯನ್ನು ಗಮನಿಸುವುದು ತುಂಬಾ ತುರ್ತಾದ ಕೆಲಸ. ಕೇವಲ ಸರ್ವೆಸಾಧಾರಣವಾದ ವಿಚಾರಗಳಿಂದ ಮಂಡಿಸುವುದು ಉಪಯುಕ್ತ. ಇಲ್ಲದಿದ್ದರೆ ಅದಕ್ಕೆ ಶೇಕಡವಾರು ಆಧಾರ ಮತ್ತು ಸಮಷ್ಟೀಕರಣ ನೀಡುವುದು ಅಗತ್ಯ. ಆ ಕಾರಣವಾಗಿ Social Welfare Board, ಕುಟುಂಬ ಯೋಜನೆ ಮತ್ತು ಆರೋಗ್ಯ ಖಾತೆ, Labour Planning and Employment ಖಾತೆಯವರುಗಳು ಒಂದಾಗಿ ಕಲೆತು ಸಂಶೋಧನ ವಿಭಾಗ ಅಥವಾ ಕೇಂದ್ರವೊಂದನ್ನು ಸ್ಥಾಪಿಸಬೇಕಾಗುವುದು. ಅದರೊಂದಿಗೆ ಸ್ತ್ರೀಯರ ಪ್ರಶ್ನೆಗಳ ಸಂಬಂಧದ ಸಂಶೋಧನೆಯನ್ನು  ಕೈಗೆತ್ತಿಕೊಳ್ಳಬೇಕು. ಅದನ್ನು ಪ್ರಶಿಕ್ಷಿತ ಉದ್ಯೋಗಿಗಳು ಮತ್ತು ಅವರಲ್ಲಿಯೂ ಪ್ರಮುಖವಾಗಿ ಸ್ತ್ರೀಯರನ್ನು ಸಮಾವೇಶಗೊಳಿಸಿ ಅತ್ಯಂತ ಶಾಸ್ತ್ರೀಯ ರೀತಿಯಲ್ಲಿ ಮತ್ತು ನಿರ್ದಿಷ್ಠ ಉದ್ದೇಶಗಳಿಂದ ಕೈಗೊಳ್ಳಬೇಕಾದ್ದು ಅವಶ್ಯ. ಸ್ತ್ರೀಯರ ಸ್ಥಾನಮಾನ, ಆರ್ಥಿಕ ಪರಿಸ್ಥಿತಿ, ಉದ್ಯೋಗದ ಸ್ವರೂಪ, ಲಭ್ಯವಾಗುತ್ತಿರುವ ಸೌಲಭ್ಯಗಳು, ಕಲ್ಯಾಣಕಾರಿ ಯೋಜನೆಗಳು, ಲಾಭ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹ ಮಾಡಬೇಕು. ಇನ್ನು ಅವುಗಳ ಒಟ್ಟಾರೆ ಸ್ವರೂಪವು ಕೇವಲ ಅಂದಾಜಿನ ನೆಲೆಯದ್ದಾಗಿರದೆ ಆ ಪ್ರಶ್ನೆಗಳನ್ನು ಬಿಡಿಸುವುದಕ್ಕೆ ಸಾಧ್ಯವಾಗುವಂತಹ ದೃಷ್ಟಿಯಿಂದ ಕೈಗೊಂಡುದಾಗಿರಬೇಕು. ಪೂರ್ವಗ್ರಹಗಳು ಮತ್ತು ವೈಯಕ್ತಿಕ ಅಭಿಪ್ರಾಯಗಳ ಛಾಪು ಬೀಳಬಾರದು. ಅಲ್ಲದೆ ಅವುಗಳ ಮೇಲೆ ವಿಶಿಷ್ಟ ದೃಷ್ಟಿಯಲ್ಲಿ ದಕ್ಷತೆಯನ್ನು ಹೊಂದಿರಬೇಕಾಗುತ್ತದೆ.

೨. ಕೇಂದ ಸರ್ಕಾರವು ಸ್ವತಂತ್ರ ಆಯೋಗವೊಂದನ್ನು ರಚಿಸಬೇಕು. ಕೇಂದ್ರೀಯ ಆಯೋಗವು ಪ್ರತಿಯೊಂದು ರಾಜ್ಯದಲ್ಲಿಯೂ ಬೇರೆ ಬೇರೆ ಆಯೋಗಗಳನ್ನು ಸ್ಥಾಪಿಸಬೇಕು. ಆ ಮೂಲಕ ಸ್ತ್ರೀಯರ ಪ್ರಶ್ನೆಗಳನ್ನು ಸ್ಪಷ್ಟವಾಗಿ ಅಧ್ಯಯನ ಮಾಡಬೇಕು. ಈ ಅಧ್ಯಯನದಲ್ಲಿ ಸ್ತ್ರೀಯರ ವಿಷಯವಾಗಿ ನಿರ್ಮಾಣವಾಗುವ ಅತ್ಯಾಚಾರ ಪ್ರಸಂಗಗಳು, ವಿವಾಹಿತ ಸ್ತ್ರೀಯರ ಮೇಲಾಗುತ್ತಿರುವ ಹಿಂಸೆ ಮತ್ತು ಕೊಲೆ ಮುಂತಾದ ಅಂಶಗಳು ಇಲ್ಲಿ ಗಮನೀಯ. ಹಾಗೆಯೇ ವಿಧವೆಯರಿಗೆ ಅವರವರ ಪತಿಯ ಆಸ್ತಿಯನ್ನು ಕಾಯಿದೆ ಬದ್ಧವಾಗಿ ಸಿಗುವ ಭಾಗದ ಬಗೆಗಿನ ತೊಂದರೆಗಳು, ವಿಚ್ಛೇದನ, ಗರ್ಭಪಾತಕ್ಕೆ ಸಂಬಂಧಿಸಿದಂತೆ ಕಾಯಿದೆಗಳಲ್ಲಿನ ತೊಂದರೆಗಳು, ಬಾಲ್ಯವಿವಾಹ ಮತ್ತು ವರದಕ್ಷಿಣೆ ಪದ್ಧತಿಯ ಅವಲಂಬನೆ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಿ ಅವುಗಳನ್ನು ನಿವಾರಿಸುವ ದಿಶೆಯಲ್ಲಿನ ಅಂಶಗಳನ್ನು ಸೂಚಿಸಬೇಕು. ಕಾಯಿದೆಯನುಸಾರ ಸ್ತ್ರೀಯರಿಗೆ ಇರುವ ಸಂರಕ್ಷಣೆಗಳು, ಅವುಗಳಿಂದ ಪಾರಾಗುವಿಕೆ, ಕಾಯಿದೆಯ ಬಗ್ಗೆ ಜ್ಞಾನವಿರುವಿಕೆ ಮತ್ತು ಪುರೋಗಾಮಿ ವಿಚಾರಗಳು ಇದರಲ್ಲಿ ಸೇರಿಕೊಂಡಿರಬೇಕಾದ್ದು ಅವಶ್ಯ.

೩. Social Welfare Boardನ್ನು ಪುನಾರಚಿಸಿ ಆ ಸಂಸ್ಥೆಗೆ ಸ್ವಾಯತ್ತತೆಯನ್ನು ನೀಡಬೇಕು. ಸ್ತ್ರೀಯರಿಗಾಗಿ ಆವಶ್ಯಕವಾಗಿರುವಂಥ ಕಲ್ಯಾಣಕಾರಿ ಕಾರ್ಯಕ್ರಮಗಳ ರೂಪುರೇಶೆ, ನಿಯೋಜನೆಗಳ ಸುಸೂತ್ರತೆ ಮತ್ತು ವ್ಯವಸ್ಥಾಪನೆ ಈ ಮೊದಲಾದ ಜವಬ್ದಾರಿಗಳೂ ಆ ಮಂಡಳಿಯ ಮೇಲಿರಬೇಕು. ಕೇಂದ್ರ ಪಾತಳಿಯ ಮೇಲೆ Central Social welfare Board ಮತ್ತು ರಾಜ್ಯ ಮಟ್ಟದಲ್ಲಿ State Social Welfare Boardಗಳಿದ್ದು ಸ್ತ್ರೀಯರಿಗೆ ಮಾರ್ಗದರ್ಶನ ಸಲಹೆಗಳು ಲಭ್ಯವಾಗುವ ದೃಷ್ಟಿಯಿಂದ ಸ್ವತಂತ್ರವಾದ ಸಲಹಾ ವಿಭಾಗಗಳನ್ನು ಆರಂಭಿಸಬೇಕಾಗಿದೆ. ಕಾಯಿದೆಗಳಿಗೆ ಸಂಬಂಧಿಸಿದ ಸಲಹೆಗಳು, ಅನಾಥ ಗೃಹಗಳು, ಮಹಿಳಾಶ್ರಮಗಳು, ಉದ್ಯೋಗ ಸಂಬಂಧಿ ಅವಕಾಶಗಳ ಉಪಲಬ್ಧತೆ, ಅವರಿಗಾಗಿ ಇರುವಂಥ ವಿಕಾಸ ಕಾರ್ಯಕ್ರಮಗಳು ಮತ್ತು ಸವಲತ್ತುಗಳು ಇತ್ಯಾದಿ ಮಾಹಿತಿಗಳು ಇಲ್ಲಿ ಪೂರೈಕೆಯಾಗುವಂತಿರಬೇಕು. ಅಲ್ಲದೆ ಸ್ತ್ರೀಯರಿಗೇ ವಿಶಿಷ್ಟವಾದ ಕೆಲವು ಪ್ರಶ್ನೆಗಳು ಮುಕ್ತವಾಗಿ ಹೇಳುವುದಕ್ಕೆ ಬರುವಂಥವಾಗಿರುವುದಿಲ್ಲ. ಆ ಕಾರಣ ಆ ಸಂಬಂಧವಾಗಿ ಅವರಿಗೆ ಮನಶ್ಯಾಸ್ತ್ರೀಯ ಸಲಹೆಗಳನ್ನು ನೀಡುವ ಮತ್ತು ಅವರನ್ನು ಕಾಪಾಡುವಂತಹ ಕೆಲಸಗಳನ್ನು ಮಾಡುವ ಪ್ರಯತ್ನವೂ ಅಗಬೇಕಿದೆ. ವಿಶೇಷವಾಗಿ ಸಾಮಾಜಿಕ ಕಾರ್ಯದಲ್ಲಿ ಅಭಿರುಚಿ ಇರುವ ಮತ್ತು ಮನಶ್ಯಾಸ್ತ್ರೀಯ ಶಿಸ್ತನ್ನು ಅಭ್ಯಸಿಸಿರುವ ಮತ್ತು ಆ ಕ್ಷೇತ್ರದಲ್ಲಿ ಅನುಭವವಿರುವಂಥವರೇ ಇದರ ಕೌನ್ಸಿಲಿಂಗ್ ಕೆಲಸವನ್ನು ಕೈಗೆತ್ತಿಕೊಳ್ಳಬೇಕು.

೪. ರಾಷ್ಟ್ರೀಯ ಪಾತಳಿಯ ಮೇಲೆ ಮಹಿಳಾ ಸಂಘಟನೆಯೊಂದು ಸ್ಥಾಪಿತವಾಗಬೇಕು. ರಾಷ್ಟ್ರೀಯ ಸಂಘಟನೆಗಳು ಹೇಗೆ ಕೇಂದ್ರ ಪಾತಳಿಯಿಂದ ತಾಲೂಕು ಮಟ್ಟದ ಪಾತಳಿಯವರೆಗೆ ಸುಸೂತ್ರವಾದ ರೀತಿಯಲ್ಲಿ ರಚನಾತ್ಮಕವಾಗಿ ರೂಪುಗೊಂಡಿರುತ್ತವೆಯೋ ಮತ್ತು ಅವು ಪ್ರಜಾಪ್ರಭುತ್ವದ ತತ್ವಗಳ ಮೇಲೆ ಆಧಾರಿತವಾಗುತ್ತದೆಯೋ ಹಾಗೆಯೇ ಸ್ತ್ರೀಯರ ಪ್ರಶ್ನಾವಳಿಗಳನ್ನು ಬಿಡಿಸುವುದಕ್ಕೆ ಮಹಿಳೆಯರು ಸಂಘಟಿತರಾಗಬೇಕು. ಅದು ಕೇವಲ ನಗರಗಳ ಮಟ್ಟದಲ್ಲಿ ಮತ್ತು ವಿಶಿಷ್ಟ ವಿಷಯಗಳಿಗಷ್ಟೆ ಆಗಿರುವ ಸಂಘಟನೆಯಾಗಿರದೆ ಸಮಗ್ರ ನೆಲೆಯಲ್ಲಿ ಅದರ ನೆಲೆಗಳು ಹರಡಿಕೊಂಡಿರಬೇಕಾದ್ದು ಅನಿವಾರ್ಯ. ಅಂದರೆ ಈ ವಿಷಯಗಳಲ್ಲಿನ ಸ್ತ್ರೀಯರ ಉದಾಸೀನತೆ, ಮಹಿಳಾ ಕಾರ್ಯಕರ್ತರ ಕೊರತೆ, ಅಲ್ಪಪ್ರಮಾಣದಲ್ಲಿರುವ ಮಹಿಳಾ ಸುಶಿಕ್ಷಿತರು, ಹಣದ ಕೊರತೆ ಮತ್ತು ನೇತೃತ್ವದ ಅಭಾವ, ಬೇಕೋ ಬೇಡವೋ ಎಂಬ ಮನೋಭಾವ ಹಾಗೂ ಅನಾರೋಗ್ಯಕರ ಸ್ಪರ್ಧೆ, ಸಂಘಟನೆಗಳಲ್ಲಿ ರಾಜಕಾರಣವಾದ ಪ್ರವೇಶದಿಂದಾಗುವ ತೊಂದರೆಗಳು- ಇತ್ಯಾದಿ ಅನೇಕ ಅಡ್ಡಿಗಳು ಇಲ್ಲಿ ಉದ್ಭವವಾಗುವವು. ಆದರೆ ಆ ದಿಶೆಯಲ್ಲಿ ಹೆಜ್ಜೆಹಾಕದ ಹೊರತು ಸ್ತ್ರೀ ಮತ್ತು ಚಳವಳಿಯ ಹೆಜ್ಜೆಯು ಸಧೃಡವಾಗುವುದಿಲ್ಲ. ರಾಜ್ಯ, ಜಿಲ್ಲೆ ಮತ್ತು ತಾಲೂಕು ಘಟಕಗಳನ್ನು ಒಪ್ಪಿಕೊಂಡ ಅವುಗಳಲ್ಲಿ ಸುಸೂತ್ರತೆ ಮತ್ತು ಸಂಪರ್ಕವನ್ನು ಇಟ್ಟುಕೊಂಡ ಕಾರ್ಯನಿರ್ವಹಿಸುವುದು ಇಂದು ಬಹಳ ಅಗತ್ಯ. ಒಮ್ಮೆ ಮಾತ್ರ ಬಲಾತ್ಕಾರದ ಸಂದರ್ಭವನ್ನು ಇಟ್ಟುಕೊಂಡು ಸಭೆಯನ್ನು ಕರೆಯಲಾಯಿತು. ಆ ಕುರಿತು ಭಾಷಣ ಮಾಡಬಹುದು ಅಥವಾ ಇನ್ನೂ ಹೆಚ್ಚೆಂದರೆ ಆ ಕಾರಣವಾಗಿ ಕೇವಲ ಒಂದು ಪ್ರತಿಭಟನಾ ಮೆರವಣಿಗೆ ಮಾಡಿ ನಮ್ಮ ನಿವೇದನೆಯನ್ನು ಸಲ್ಲಿಸಿದರೆ ಸಾಕು, ನಮ್ಮ ಕೆಲಸ ಆಯಿತು ಎಂದುಕೊಂಡರೆ ಅದು ನಡೆಯುವಂತಹದ್ದಲ್ಲ. ಅವುಗಳಲ್ಲಿ ಸಾತತ್ಯವಿರಬೇಕಾದ್ದು ಆವಶ್ಯಕ. ಅಲ್ಲದೆ ಸಂಘಟಿತ ಪ್ರಯತ್ನಗಳಿಂದ ಅನ್ಯಾಯಗಳ ವಿರುದ್ಧವಾಗಿ ಮೇಲಿಂದ ಮೇಲೆ ಪ್ರತೀಕಾರವನ್ನು ಕೈಗೊಳ್ಳುತ್ತಿದ್ದರೆ ಸಾಮಾಜಿಕ ಒತ್ತಡವು ನಿರ್ಮಾಣವಾಗಿ ಇಚ್ಛಿತವಾದ ಪರಿಣಾಮವನ್ನು ಸಾಧಿಸಬಹುದು.

೫. ಸ್ತ್ರೀಯರ ಮೇಲೆ ಆಗುತ್ತಿರುವ ಅನ್ಯಾಯ, ಅವರ ವೈಚಾರಿಕ ಗುಲಾಮಗಿರಿ, ಅವರು ಅನುಭವಿಸುತ್ತಿರುವ ಶಾರೀರಿಕ ಮತ್ತು ಮಾನಸಿಕ ಹಿಂಸೆ, ಗೌಣ-ಕನಿಷ್ಠ ಸ್ಥಾನ, ಕಾರ್ಯಕ್ಷೇತ್ರಗಳ ಮೇಲೆ ಮಿತಿ, ಸಾಮಾಜಿಕ ಆಚರಣೆಗಳ ಅನಾವಶ್ಯಕವಾದ ಭಾರ, ಸಾಂಸಾರಿಕ ಜವಾಬ್ದಾರಿಗಳ ಅವಾಸ್ತವ ಭಾರ, ಬಲಾತ್ಕಾರ ಇತ್ಯಾದಿ ಪ್ರಶ್ನೆಗಳ ಬಗ್ಗೆ ಸ್ವಲ್ಪಮಟ್ಟಿನ ಅರಿವು ಉಂಟಾಗಿರುವುದು. ಇದು ಸುಶಿಕ್ಷಿತರು ಮತ್ತು ನಗರಗಳಲ್ಲಿ ವಾಸವಾಗಿರುವಂಥ ಸ್ತ್ರೀಯರದ್ದಷ್ಟೇ ಅಲ್ಲ; ಅಲ್ಲದೆ ಅವರ ಸಂಖ್ಯೆ ಬಹಳ ದೊಡ್ಡದೇನಿಲ್ಲ. ಬಹುಸಂಖ್ಯಾತ ಸ್ತ್ರೀಯರು ಮಾತ್ರ ಈ ವಿಷಯದಲ್ಲಿ ಉದಾಸೀನರು, ಅಜ್ಞಾನಿಗಳು ಮತ್ತು ಅನೇಕ ಕಾರಣಗಳಿಂದ ನಿರ್ಲಿಪ್ತ ಅಥವಾ ಆಲಿಪ್ತರೊ ಆಗಿರುವುದನ್ನು ಇಷ್ಟಪಡುತ್ತಾರೆ. ಅಂಥವರುಗಳಲ್ಲಿ ಜಾಗೃತಿಯನ್ನು ನಿರ್ಮಾಣ ಮಾಡುವಂಥ ದೃಷ್ಟಿಯಿಂದ ಮಹಿಳಾ ಸಂಘಟಕರು ಪ್ರಯತ್ನ ಮಾಡುವುದು ಆವಶ್ಯಕ. ಹೀಗೆ ಮಾಡವಲ್ಲಿ ಪ್ರಮುಖವಾಗಿ ಸಮಾವೇಶ, ಸಭೆಗಳನ್ನು ಕರೆಯಬೇಕಾಗುತ್ತದೆ. ಈ ಮೂಲಕ ಮುಖ್ಯವಾಗಿ ವರದಕ್ಷಿಣೆ ಪದ್ಧತಿ ಮತ್ತು ಬಾಲ್ಯವಿವಾಹಗಳಂಥ ಅನಿಷ್ಟ ಪದ್ಧತಿಗಳನ್ನು ಉದಾಹರಣೆ ಸಹಿತ ಚರ್ಚೆ ಮಾಡಬೇಕಾಗುತ್ತದೆ. ಪ್ರತಿಯೊಬ್ಬ ಮಾತೆಗೂ ಗೊತ್ತಿರುವಂಥದೆ! ತಾವು ತಮ್ಮ ಮಕ್ಕಳಿಗೆ ವರದಕ್ಷಿಣೆ ಕೊಟ್ಟು ಮದುವೆ ಮಾಡಿದ್ದೇವೆ. ಹಾಗಾಗಿ ಮಗನ ಮದುವೆ ಮಾಡುವಾಗ ವರದಕ್ಷಿಣೆ ತೆಗೆದುಕೊಳ್ಳುವುದರಲ್ಲಿ ಏನೂ ಭಿನ್ನವಾಗುವುದಿಲ್ಲ.

ಪ್ರತಿಯೊಬ್ಬರೂ ವ್ಯಕ್ತಿಗತ ಪಾತಳಿಯ ಮೇಲೆ ತಮ್ಮ ವೈಯಕ್ತಿಕ ವಿಚಾರವಾಗಿಯಷ್ಟೇ ವಿಚಾರ ಮಾಡುತ್ತಾರೆ. ತಮ್ಮಂಥ ಒಬ್ಬರು, ಇಬ್ಬರ ಕೃತಿಯಿಂದ ಪ್ರಚಂಡ ಸಮಾಜದ ಮೇಲೆ ಎಷ್ಟರ ಮಟ್ಟಿಗಿನ ಪ್ರಭಾವ ಉಂಟಾಗಬಹುದು ಎಂಬುದಾಗಿಯೂ ಆಲೋಚಿಸುತ್ತಾರೆ. ಆದರೆ ಒಬ್ಬೊಬ್ಬರ ಈ ಕರ್ತೃತ್ವವು ಸಾಮೂಹಿಕವಾಗುತ್ತದೆ. ಮತ್ತು ಅದರ ಸಾಮಾಜಿಕ ರೂಢಿಗಳಲ್ಲಿ ರೂಪಾಂತರ ಉಂಟಾಗಿ, ಆ ರೂಢಿಗಳು ಮದುವೆಗೆ ಬಜಾರು ಅಥವಾ ಮಾರುಕಟ್ಟೆಯ ಸ್ವರೂಪವನ್ನು ತರುತ್ತವೆ. ಇವೆಲ್ಲ ಹೆಣ್ಣುಮಗಳ ಸ್ಥಾನವನ್ನು ಅತ್ಯಂತ ಕನಿಷ್ಠಗೊಳಿಸುವಲ್ಲಿ ಕಾರಣೀಭೂತವಾಗುತ್ತವೆ. ಈ ವಿಷಯವನ್ನು ಅವರಿಗೆ ಸ್ಪಷ್ಟವಾಗಿ ಮನವರಿಕೆಯಾಗುವಂತೆ ಮಾಡಬೇಕಾಗಿದೆ. ಹಾಗೆಯೇ ಬಲಾತ್ಕಾರಗಳಂತಹ ಅಮಾನುಷ ಘಟನೆಗಳಿಂದ ಆಯಾ ಸ್ತ್ರೀಯು ಸರ್ವಾರ್ಧದಲ್ಲಿ ತನ್ನ ಬದುಕಿನಿಂದ ಬೇರೆಯಾಗುತ್ತಾಳೆ. ಕೌಟುಂಬಿಕ ಮತ್ತು ಸಾಮಾಜಿಕ ದೃಷ್ಟಿಗಳು ನೈತಿಕ ಸಂಸ್ಕಾರದ ಮೌಲ್ಯಗಳ ದೃಷ್ಟಿಯಿಂದ ಕೈಬಿಡುವಂತೆಯೊ ಬಿಸಾಡಿದ ಹಾಗೆಯೇ ಆಗುತ್ತದೆ. ಮಾನಸಿಕವಾದ ಧಕ್ಕೆಯಿಂದಲೂ ಅವಳು ಸುಧಾರಿಸಿಕೊಳ್ಳುತ್ತಾಳೆ ಎಂದು ಹೇಳುವಂತಿಲ್ಲ. ಎಂತಲೇ ಬಲಾತ್ಕಾರ ಮಾಡುವವರ ವಿರುದ್ಧ ಕಠಿಣವಾದ ಕಾನೂನುಗಳು ಇರಬೇಕು. ಯಾವ ಸ್ತ್ರೀಯು ಪುರುಷನ ವಾಸನೆಗೆ ಬಲಿಯಾಗಿದ್ದಾಳೆಯೋ ಅವಳ ಬಗ್ಗೆ ಸಹಾನುಭೂತಿ ಮತ್ತು ಅಂಥ ಪ್ರಸಂಗಗಳು ಬರಬಾರದು. ಹಾಗಾಗಿ ಅವರ ಬಗ್ಗೆ ವಹಿಸಿರುವ ಕಾಳಜಿಯಲ್ಲಿ ಅದನ್ನು ಸಂಪೂರ್ಣವಾಗಿ ಮತ್ತು ಚರ್ಚಾತ್ಮಕವಾಗಿ ಪರಿಶೀಲಿಸಬೇಕು. ಇಂದಿಗೂ ಸತಿ ಹೋಗುವ ಪದ್ಧತಿಯು ಬೃಹತ್ ಸಮಾರಂಭವನ್ನು ಏರ್ಪಡಿಸುವ ಮೂಲಕವೇ ನಡೆಯುತ್ತದೆ. ವಿಧವೆಯ ಕೇಶವಪನ ಮಾಡುವಿಕೆಯಂಥ ರೂಢಿಗಳ ವಿರುದ್ಧ ಸಂಘಟನಾತ್ಮಕವಾಗಿ ಎತ್ತುವಂತಹ ಅಗತ್ಯವನ್ನು ಮನಗಾಣಿಸಬೇಕಾಗಿದೆ. ವಿವಾಹಿತ ಸ್ತ್ರೀಯರಿಗೆ ಮಾವನ ಮನೆಯವರ ಕಡೆಯಿಂದ ಆಗುತ್ತಿರುವ ಹಿಂಸೆ, ಹೊಡೆತ-ಬಡಿತಗಳು, ಕೆಲವಾರು ಸಂದರ್ಭಗಳಲ್ಲಿ ಉಂಟಾಗುತ್ತಿರುವ ಕೊಲೆ, ಆತ್ಮಹತ್ಯೆ ಮಾಡಿಕೊಳ್ಳುವಂತಹ ನಿರ್ಧಾರಕ್ಕೆ ಬಂದು ನಿಲ್ಲುವ ಮಾನಸಿಕ ಮತ್ತು ಶಾರೀರಿಕ ಪೀಡನೆ ಇತ್ಯಾದಿಗಳ ಬಗ್ಗೆ ದೂರು ದಾಖಲಿಸುವ ಅಗತ್ಯವನ್ನು ಲಕ್ಷಿಸುವಂತೆ ಮಾಡಬೇಕಾದ್ದು ಅನಿವಾರ್ಯ. ವ್ರತ ಸಂಪ್ರದಾಯಗಳಿಗೆ ಯಾವುದೇ ಶಾಸ್ತ್ರೀಯ ವೈಧಾನಿಕ ಆಧಾರವಿಲ್ಲ ಎಂಬುದನ್ನು ಮನಗಾಣಿಸಬೇಕು. ಕೇವಲ ರೂಢಿ ಮತ್ತು ಅಂಧಶ್ರದ್ಧೆಗಳ ಆವಶ್ಯಕವೆಂಬಂತೆ ಹಬ್ಬ ಸಮಾರಂಭಗಳನ್ನು ಮಾಡಿ ಅನುತ್ಪಾದಕವಾಗಿ ಖರ್ಚು ಮತ್ತು ಶಾರೀರಿಕ ಕಷ್ಟಗಳ ಭಾರದ ಅಡಿಯಲ್ಲಿ ಸ್ತ್ರೀಯರು ಬಾಗುತ್ತಿದ್ದಾರೆ. ಅವುಗಳ ಪೊಳ್ಳು ತನವನ್ನೂ ಲಕ್ಷ್ಯಕ್ಕೆ ತಂದುಕೊಡುವಂಥ ಕೆಲಸ ಆಗಬೇಕು. ಧರ್ಮ, ಸಂಸ್ಕೃತಿ ಮತ್ತು ಮನೆತನಗಳ ಪರಂಪರೆ ಎಂಬುದಾಗಿ ಏನೇನೆಲ್ಲವನ್ನು ಸ್ತ್ರೀಯರ ಮೇಲೆ ಹೇರಲಾಗುತ್ತಿ ದೆಯೋ ಅದು ಎಂಥ ಅನ್ಯಾಯ ಕಾರಕವಾಗಿದೆ ಮತ್ತು ತರ್ಕಸಂಗತ ವಿಚಾರವನ್ನು ಆಧರಿಸಿಲ್ಲ ಎಂಬುದನ್ನು ಅರ್ಥೈಸಿ ಕೊಡಬೇಕಾಗಿದೆ. ಹಾಗೆಯೇ ಸ್ತ್ರೀ-ಸ್ವಾತಂತ್ರ್ಯ ಎಂದರೆ ಪುರುಷ-ದಾಸ್ಯವಾಗಿಲ್ಲ ಅಥವಾ ಸ್ತ್ರೀ-ಮುಕ್ತಿ ಎಂದರೆ ಪುರುಷರೊಂದಿಗಿನ ಜಗಳವಾಗಿಲ್ಲ. ಬದಲಾಗಿ ಅದು ಸ್ವತಃ ತನ್ನ ಮೇಲೆ ಹೇರಿಕೊಂಡಿರುವ ರೂಢಿ, ಪರಂಪರೆ ಮತ್ತು ಅನಿಷ್ಠ ಸಂಪ್ರದಾಯಗಳ ವಿರುದ್ಧದ ಹೋರಾಟವಾಗಿದೆ ಎಂಬುದನ್ನು ತಿಳಿಸಿಕೊಡಬೇಕಾಗಿರುವುದು ಅಗತ್ಯ. ಸ್ತ್ರೀಯರ ಸ್ವಾತಂತ್ರ್ಯ ಎಂದರೆ ಅವಳ ಸ್ವತಂತ್ರ ಅಸ್ತಿತ್ವಕ್ಕೆ ಮಾನ್ಯತೆ ದೊರೆಯುವು ದಾಗಿದೆ. ‘ಸ್ವತ್ವ’ ಶೋಧಿಸುವ ಸ್ವಾತಂತ್ರ್ಯವು ಅವಳಿಗೆ ಲಭ್ಯವಾಗಬೇಕು. ವೈಚಾರಿಕ ಗುಲಾಮಗಿರಿಯಿಂದ ಮತ್ತು ಮಾನಸಿಕ ಒತ್ತಡಗಳಿಂದ ಅವಳು ಮನಃಪೂರ್ವಕವಾಗಿ ಮುಕ್ತಳಾಗುವಂಥ ದೃಷ್ಟಿಯಿಂದ ವಿಚಾರವನ್ನು ಮಂಡಿಸಬೇಕಾಗಿದೆ.

ಇದು ಮತ್ತು ಇಂಥ ವಿವಿಧ ವಿಷಯಗಳ ಮೇಲೆ ಚರ್ಚೆ ನಡೆಯಬೇಕು. ಸ್ತ್ರೀ-ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಕೌಟುಂಬಿಕ ಕೆಲಸಗಳಂಥ ಸಂದರ್ಭಗಳಲ್ಲಿ ಪುರೋಗಾಮಿ ವಿಚಾರಗಳನ್ನು ಆಧಾರವಾಗಿ ಇಟ್ಟುಕೊಂಡು ಅದು ಹೇಗೆ ಸಾಧ್ಯವಾಗುತ್ತದೆ ಎಂಬ ದೃಷ್ಟಿಯಿಂದ ವಿಚಾರಗಳನ್ನು ಮಂಡಿಸಬೇಕು.

ಸಮ್ಮೇಳನಗಳು, ಸಭೆಗಳು ಮತ್ತು ವಿಚಾರ ಸಂಕಿರಣಗಳನ್ನು ಪ್ರಾಸಂಗಿಕ ಕಾರಣಗಳಿಗಾಗಿ ಆಯೋಜಿಸಬಾರದು. ಬದಲಾಗಿ ವಿಶಿಷ್ಟ ಕಾಲಾವಧಿಯನ್ನು ನಿಗದಿ ಪಡಿಸಿಕೊಂಡಿರಬೇಕು. ಹಾಗೆಯೇ ಎಲ್ಲ ವಿಷಯಗಳನ್ನು ಆತುರಾತುರವಾಗಿ ಒಂದೇ ಕಾಲಕ್ಕೆ ಪರಾಮರ್ಶಿಸುವ ಪದ್ಧತಿಯನ್ನು ಸ್ವೀಕರಿಸಬೇಕಾಗಿಲ್ಲ. ಅಲ್ಲದೆ ವಿಶಿಷ್ಟ ಸ್ಥಳದಲ್ಲಿಯೇ ಮತ್ತು ಕೇವಲ ನಗರ ಪ್ರದೇಶಗಳಲ್ಲಿಯಷ್ಟೇ ಇವನ್ನು ಆಯೋಜಿಸದೆ, ಚಿಕ್ಕ ಚಿಕ್ಕ ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಿಗೆ ನಿಧಾನವಾಗಿ ವಿಸ್ತರಿಸಬೇಕಾಗಿದೆ. ಚಿಕ್ಕ ಚಿಕ್ಕ ಸಭೆಗಳು ಮತ್ತು ಸಮಾರಂಭಗಳನ್ನು ನಡೆಸುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಗೊತ್ತುವಳಿ ಮಾಡಿ ಸರ್ಕಾರಕ್ಕೆ ಕಳುಹಿಸುವೆಡೆಗೆ ಒತ್ತುನೀಡದೆ ಹೋದರೆ ಸ್ತ್ರೀಯರಲ್ಲಿ ಜಾಗರೂಕತೆಯು ನಿರ್ಮಾಣವಾಗುವುದಕ್ಕೆ ಹೇಗೆ ಸಾಧ್ಯ? ಸ್ವಂತದ ಪ್ರಶ್ನೆಗಳ ಅರಿವು ಸಾಧ್ಯವಾಗಿ ಅದನ್ನು ಪರಿಹರಿಸಿಕೊಳ್ಳುವ ಮಹತ್ವವು ಅವರಿಗೆ ಅರಿವಿಗೆ ಬಂದಿತೋ ಇಲ್ಲವೋ ಅವರು, ಸ್ವತಂತ್ರವಾಗಿ ವಿಚಾರ ಮಾಡುವಂಥ ಪ್ರವೃತ್ತಿಯ ಮತ್ತು ಸಾರಾಸಗಟು ವಿಚಾರಗಳಿಂದ ಅವರ ನಿರ್ಣಾಯಕ ಶಕ್ತಿಯನ್ನು ಬೆಳೆಸುವ ಕಾರ್ಯವನ್ನು ಮಾಡಬೇಕಾಗಿದೆ.

೬. ಸ್ತ್ರೀಯರ ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡುವಂತಹ ಧೋರಣೆಯನ್ನು ಮುಖ್ಯವಾಗಿ ಮೊದಲು ಸ್ವೀಕರಿಸಬೇಕು. ಅದರ ಜೊತೆ ಜೊತೆಗೆ ಅನೌಪಚಾರಿಕ ಮತ್ತು ಔದ್ಯೋಗಿಕ ಶಿಕ್ಷಣದ ಸೌಲಭ್ಯವನ್ನು ವಿಶೇಷವಾಗಿ ಒದಗಿಸಬೇಕು. ಪಾಲಕರು ತಮ್ಮ ಹೆಣ್ಣುಮಕ್ಕಳಿಗೆ ಕೊನೆಯ ಪಕ್ಷ ಪ್ರಾಥಮಿಕ ಶಿಕ್ಷಣವನ್ನಾದರೂ ಕೊಡಿಸಬೇಕಾದ್ದು ಅವಶ್ಯ. ಒಂದೊಮ್ಮೆ ಅದನ್ನು ಕೊಡಿಸದೆ ಹೋದಲ್ಲಿ ಆ ಪಾಲಕರಿಗೆ ದಂಡವನ್ನು ವಿಧಿಸಬೇಕು. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಉತ್ತೇಜನ ಕೊಡುವಲ್ಲಿ ವಿಶೇಷ ಪ್ರಯತ್ನಗಳನ್ನು ಹಮ್ಮಿಕೊಳ್ಳಬೇಕು. ಅಂದರೆ ಹೇಗೆ ಸಾಮಾಜಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳವರಿಗೆ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತಿದೆಯೋ ಹಾಗೆಯೇ ಇವರಿಗೂ ಶಿಕ್ಷಣದ ವಿಷಯದಲ್ಲಿ ಎಲ್ಲಾ ಬಗೆಯ ಸವಲತ್ತುಗಳನ್ನು ಉಪಲಬ್ಧಗೊಳಿಸಬೇಕು. ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಸಾಮಾಜಿಕವಾಗಿಯೂ ದುರ್ಲಕ್ಷ್ಯವಿದೆ. ಕೌಟುಂಬಿಕ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ದೃಷ್ಟಿಯಲ್ಲಿಯೂ ಹೆಣ್ಣುಮಕ್ಕಳ ಸ್ಥಾನವು ಗಂಡುಮಕ್ಕಳಿಗಿಂತ ಕನಿಷ್ಠವೆಂದೇ ತಿಳಿದು, ಅವರ ಶಿಕ್ಷಣದ ವಿಷಯದಲ್ಲಿಯೂ ಅನ್ಯಾಯವೆಸಗುತ್ತಾ ಬರಲಾಗಿದೆ. ಎಂತಲೇ ಅವರನ್ನು ಸಾಮಾಜಿಕ ದೃಷ್ಟಿಯಿಂದ ದುರ್ಬಲ ಘಟಕವೆಂದು ತಿಳಿದು ವಿಶಿಷ್ಟವಾಗಿ ವರ್ಷಾನುವರ್ಷ ನಿಯಮಾನುಸಾರವಾಗಿ ಅಲ್ಲ, ಬದಲಾಗಿ ಆರ್ಥಿಕ ಸಹಾಯವೆಂದು ವಿದ್ಯಾರ್ಥಿ ವೇತನಗಳನ್ನು ನೀಡಬೇಕಾಗಿದೆ. ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆ ಇಲ್ಲದಿದ್ದರೆ ಸ್ತ್ರೀಯರ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿಲ್ಲ.

೨. ಗ್ರಾಮೀಣ ಭಾಗದಲ್ಲಿ ಸ್ತ್ರೀಯರ ಸಮಸ್ಯೆಗಳು ತೀವ್ರವಾಗಿರುವುದು ಸ್ವಷ್ಟವಾಗಿ ಕಂಡುಬರುವ ಸಂಗತಿ. ಶಾರೀರಿಕವಾಗಿ ಕಷ್ಟ ಪಡುವಿಕೆ, ಅಜ್ಞಾನ ಮತ್ತು ಮನೆಗೆಲಸಗಳ ಜಂಜಾಟದಲ್ಲಿ ಸಿಲುಕಿರುವ ಸ್ತ್ರೀಯರು ಎಲ್ಲಾ ಬಗೆಯ ಶೋಷಣೆಯನ್ನು ಸಹಿಸಿಕೊಳ್ಳುವುದು ಅನಿವಾರ್ಯವಾಗಿದೆ. ರೂಢಿ ಮತ್ತು ಪರಂಪರೆ, ಅಂಥಶ್ರದ್ಧೆ ಮತ್ತು ದೇವ ದೇವರ್ಷಿಗಳ ಪೂಜೆ, ಪುರಸ್ಕಾರ, ವ್ರತಾದಿ ನಿಯಮಗಳು ಮತ್ತು ಆರಾಧನೆ ಇವುಗಳ ಜಬರ್‌ದಸ್ತಾದ ಪಗಡಿ (ವಸ್ತ್ರ) ಇವರ ಮೇಲೆ ಕುಳಿತಿದೆ. ಆರೋಗ್ಯ, ಮಕ್ಕಳ ಪಾಲನೆ ಪೋಷಣೆ ಇತ್ಯಾದಿ ಆತ್ಯಂತಿಕವಾದ ವರ್ತುಲ ಅವರ ಮೇಲಿರುವುದು ಕಂಡುಬರುತ್ತದೆ. ಎಂತಲೇ ಇಂಥ ಭಾಗಗಳಲ್ಲಿ ಸ್ತ್ರೀಯರ ಸಮಸ್ಯೆಗಳನ್ನು ಬಿಡಿಸುವ ದೃಷ್ಟಿಯಿಂದ ವಿಶೇಷ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ. ಹೆಣ್ಣುಮಕ್ಕಳಿಗೆ ಶಿಕ್ಷಣ ಅಂದರೆ ಉದ್ಯೋಗ ಪ್ರಧಾನ ಶಿಕ್ಷಣ ಅವರಿಗೆ ಲಭಿಸಬೇಕು. ಹಳೆಯ ರೂಢಿಗಳು, ಕಲ್ಪನೆಗಳು, ಸಂಪ್ರದಾಯ ಇವುಗಳ ಸಂಕೋಲೆಯನ್ನು ತುಂಡರಿಸುವಲ್ಲಿ ಪ್ರಜ್ಞಾಪೂರ್ವಕವಾಗಿ ಪ್ರಯತ್ನವಾಗಬೇಕು. ಗ್ರಾಮೀಣ ಪ್ರದೇಶಗಳಲ್ಲಿಯೂ ಒಂದಲ್ಲ ಒಂದು ಕಾರಣದಿಂದ ಸುಶಿಕ್ಷಿತ ಸ್ತ್ರೀಯರು ಮತ್ತು ಪುರುಷರು ಹೆಚ್ಚಾಗಿ ನೆಲೆಗೊಳ್ಳುತ್ತಿದ್ದರು. ನಗರಗಳಲ್ಲಿಯಂತೂ ಸಂಪರ್ಕ ಸಾಧ್ಯತೆಗಳು ಬಹಳ ಹೆಚ್ಚು ಅವರಿಗೆ. ಹಾಗಾಗಿ ಆರಂಭಕ್ಕೆ ವಿಶಿಷ್ಟವೂ ಉದ್ದಿಷ್ಟವೂ ಆದ ಹಿನ್ನೆಲೆಯಿಂದ ವಾತಾವರಣವೊಂದನ್ನು ನಿರ್ಮಾಣ ಮಾಡಬೇಕು. ಆ ಉದ್ದೇಶದಿಂದ ಸಭೆ, ಸಮಾರಂಭಗಳನ್ನು ನಡೆಸಬೇಕಾಗುತ್ತದೆ. ಕೇವಲ ಭಾಷಣಗಳನ್ನಷ್ಟೇ ಮಾಡುವುದರಿಂದ ಈ ಕೆಲಸವಾಗುವುದಿಲ್ಲ. ಕುಟುಂಬ ಮತ್ತು ಆರೋಗ್ಯ, ಯೋಜನ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗಳವರ ಸಹಕಾರ್ಯದಿಂದ ಸಾಕ್ಷ್ಯಚಿತ್ರ, ಪತ್ರಿಕೆಗಳು, ಪುಸ್ತಕಗಳು ಈ ಮಾಧ್ಯಮಗಳ ಮೂಲಕ ಪ್ರಯತ್ನ ಮಾಡಬೇಕು. ಇದಲ್ಲದೆ ಗ್ರಾಮ ಸೇವಕರು, ಪ್ರಾಥಮಿಕ ಶಾಲಾ ಶಿಕ್ಷಕರು, ಭಜನಾ ಮಂಡಳಿಗಳವರು ಸ್ತ್ರೀಯರಿಗೆ ಅವರ ಆಚಾರ-ವಿಚಾರಗಳಲ್ಲಿ ಬದಲಾವಣೆ ತರುವಂಥ ಮಹತ್ವದ ಅಂಶಗಳನ್ನು ತಿಳಿಸಬೇಕಾದ್ದು ಅಗತ್ಯ.

ಗ್ರಾಮೀಣ ಭಾಗದಲ್ಲಿ ಸ್ತ್ರೀಯರ ಜಾಗೃತಿಯ ಕೆಲಸವು ಬಹಳ ಕಠಿಣವೇ ಹೌದು. ಆ ಕಾರಣ ಸಮಾಜದ ಪ್ರಖರ ವಿರೋಧವನ್ನು ಸಹಿಸಿಕೊಳ್ಳಬೇಕಾಗುತ್ತದೆ. ಇಂದು ಈ ಹಿಂದಿಗಿಂತಲೂ ರಾಜಕಾರಣ, ಸರಕಾರ ಮತ್ತು ಶಿಕ್ಷಣ ಪ್ರಸಾರಗಳಿಂದಾಗಿ ಮನೆ, ಊರು ಮತ್ತು ಪುರುಷರ ದೃಷ್ಟಿಕೋನಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅದರ ಲಾಭವನ್ನು ಪಡೆದುಕೊಂಡು ಸ್ತ್ರೀಯರು ಸರಿಸಮನಾಗಿ, ಇಲ್ಲವೆ ಅದಕ್ಕಿಂತಲೂ ಹೆಚ್ಚಾಗಿ ಇನ್ನೂ ಮುಂದೆ ಹೋಗಿ ಪುರುಷರಲ್ಲಿ ತಿಳಿವಳಿಕೆಯನ್ನು ಉಂಟು ಮಾಡಬೇಕಾಗಿದೆ. ನಗರಗಳಲ್ಲಿ, ಸ್ತ್ರೀ-ಸ್ವಾತಂತ್ರ್ಯದ ವಿಚಾರಕ್ಕೆ ಮಾನ್ಯತೆ ಮತ್ತು ಸ್ತ್ರೀ-ಪುರುಷರ ಸಮಾನತೆಯ ದೃಷ್ಟಿಗೆ ಕಾರ್ಯಾಚರಣೆ ಆರಂಭವಾಯಿತೋ ನಿಧಾನವಾಗಿ ಈ ಅಲೆಯು ಗ್ರಾಮೀಣ ಭಾಗದವರೆಗೆ ತಲುಪುತ್ತದೆ ಎಂದು ಭಾವಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಕೃತಿಬದ್ಧತೆ, ವ್ಯಾವಹಾರಿಕವಾದ  ವಿಶಿಷ್ಟ ಉದ್ದೇಶ ಮತ್ತು ಕಾಲಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಗ್ರಾಮೀಣ ಪುನಾರಚನೆಯನ್ನು ವಿಕಾಸದ ಒಂದು ಅವಿಭಾಜ್ಯ ಭಾಗವೆಂದು ಒಪ್ಪಿಕೊಂಡು ಅದರ ಮೇಲೆ ಲಕ್ಷ್ಯವನ್ನು ಕೇಂದ್ರೀಕರಣಗೊಳಿಸುವುದು ಅಗತ್ಯ. ಸರಕಾರಕ್ಕೆ ಈ ದೃಷ್ಟಿಯಿಂದ ವಿಚಾರ ಮಾಡುವಂತೆಯೂ ಮತ್ತು ಸ್ತ್ರೀಯರಿಗಾಗಿ ಖಾಸಗಿಯಾದ ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಅವರು ಅದರಲ್ಲಿ ದುಡಿಯುವ ದೃಷ್ಟಿಯಿಂದ ಒತ್ತಡ ತರುವ ಕೆಲಸದಲ್ಲಿ ತೊಡಗಬೇಕಾಗಿದೆ. ಮಹಿಳಾ ಸಂಘಟನೆಗಳು. ಅದನ್ನು ಕಾರ್ಯಕರ್ತರು ಮತ್ತು ಈ ಚಳವಳಿಯ ನೇತೃತ್ವ ವಹಿಸಿರುವಂಥ ಸ್ತ್ರೀಯರು ಕೈಗೊಳ್ಳಬೇಕು.

೮. ಸ್ವಾತಂತ್ರ್ಯಾನಂತರದ ಕಾಲದಲ್ಲಿ ಹಿಂದೂವಿವಾಹ ಕಾಯಿದೆ ೧೯೫೫, ಹಿಂದೂ ವಾರಸುದಾರಿಕೆ ಕಾಯಿದೆ ೧೯೫೬, ಹಿಂದೂ ಅಜ್ಞಾನ ಮತ್ತು ಪಾಲಕತ್ವದ ಕಾಯಿದೆ ೧೯೫೬ ಮತ್ತು ಗರ್ಭಪಾತ ಸಂಬಂಧದ ಕಾಯಿದೆ, ಕೂಲಿ ಕೆಲಸಗಾರರ ಒಟ್ಟು ವೇತನ ಕಾಯಿದೆ ೧೯೭೪- ಇತ್ಯಾದಿ ಕಾಯಿದೆಗಳು ಬಂದು ಸ್ತ್ರೀ-ಸಮಸ್ಯೆಯ ವಿಚಾರಗಳನ್ನು ಮುಖ್ಯವಾಗಿಟ್ಟುಕೊಂಡವು. ಆದರೆ ಇಷ್ಟು ಕಾಯಿದೆಗಳಿದ್ದರೂ ಅಲ್ಲಿ ಸ್ತ್ರೀಯರ ಬಗ್ಗೆ ಸ್ಪಷ್ಟ ಅರಿವಿಲ್ಲ. ಅಂಥ ಅರಿವನ್ನು ತರುವುದೇ ಇಂದಿನ ಮುಖ್ಯವಾದ ಕಾರ್ಯವಾಗಿದೆ. ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ಕಾಯಿದೆಯ ಅರಿವನ್ನು ಉಂಟುಮಾಡುವ ದೃಷ್ಟಿಯಿಂದ ಪ್ರಚಾರ ಮತ್ತು ಪ್ರಸಾರದ ಮಾಧ್ಯಮಗಳನ್ನು ಬಳಸಿಕೊಳ್ಳಬಹುದಾಗಿದೆ. ಆರೋಗ್ಯ, ಕುಟುಂಬ ಯೋಜನೆ, ಪ್ರೌಢ ಮತ್ತು ವಯಸ್ಕರ ಶಿಕ್ಷಣ, ಆಧುನಿಕ ಕೃಷಿಯ ಮಾಹಿತಿ -ಈ ಎಲ್ಲಾ ಸ್ತರಗಳ ಜನರನ್ನು ತಲುಪಲು ಹೇಗೆ ಇವುಗಳನ್ನು ಬಳಸಲಾಗುತ್ತಿದೆಯೋ ಹಾಗೆಯೇ ಈ ಯಂತ್ರಗಳ ಮೂಲಕವೇ ಸ್ತ್ರೀಯರಿಗೆ ಸಂಬಂಧಿಸಿರುವ ಕಾಯಿದೆಗಳ ಬಗ್ಗೆ ಮಾಹಿತಿಯನ್ನು ಸ್ತ್ರೀಯರಿಗೆ ತಲುಪಿಸಬೇಕಾದ ಅಗತ್ಯವಿದೆ. ಕಾಯಿದೆಯ ಆಧಾರದಿಂದ ಸಿಕ್ಕಿದ ಲಾಭದ ಬಗ್ಗೆ ಚಿಕ್ಕ ಚಿಕ್ಕ ಚಲನಚಿತ್ರ ದೃಶ್ಯಗಳ ಮೂಲಕ ತಿಳಿಸಬೇಕು. ಅಂದರೆ ಇದರ ಪ್ರಸರಣದ ದೃಷ್ಟಿಯಿಂದ ಈ ಸಾಧನ ಹೆಚ್ಚು ಪ್ರಭಾವಯುತವಾಗಬಹುದು.

೯. ಕಾರ್ಮಿಕರು, ಕೂಲಿಕೆಲಸಗಾರರು, ಮನೆಗೆಲಸ ಮಾಡುವವರು, ಬೀಡಿ ಕಾರ್ಮಿಕರು, ಚಹಾತೋಟಗಳಲ್ಲಿ ದುಡಿಯುವವರು, ಗಾಜಿನ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವವರು ಮತ್ತು ಇತರೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವಂಥ ಅಸಂಘಟಿತ ಸ್ತ್ರೀಯರಿದ್ದಾರೆ. ಅವರು ಸಂಘಟಿತರಾಗಿ ತಮ್ಮ ವೇತನ, ಕೆಲಸದ ಅವಧಿ, ಮತ್ತಿತರೆ ಸವಲತ್ತುಗಳು, ಕಲ್ಯಾಣಕಾರಕ ಯೋಜನೆಗಳು ಈ ವಿಷಯಗಳಲ್ಲಿ ನ್ಯಾಯವನ್ನು ಪಡೆಯಬೇಕಾಗಿದೆ. ಸ್ತ್ರೀ-ಮುಕ್ತಿ ಚಳವಳಿಯು ಒಂದು ಮುಖ್ಯವಾದ ಘಟ್ಟವೆಂದು ತಿಳಿದು ಮಹಿಳಾ ಕಾರ್ಮಿಕರು ಸಂಘಟಿತರಾಗಬೇಕು. ಕೇವಲ ಅವರಿಗೆ ಉತ್ತೇಜನ ನೀಡುವುದರಿಂದ  ಪ್ರಯೋಜನವಾಗುವುದಿಲ್ಲ. ಬದಲಾಗಿ ಅವರು ಇರುವಲ್ಲಿಗೆ ಪ್ರತ್ಯಕ್ಷವಾಗಿ ಹೋಗಿ, ಮಾಲೀಕರ ವಿರೋಧವನ್ನು ಎದುರಿಸಿ, ಸಂಘಟನೆಯ ಬಗ್ಗೆ ಪ್ರಸ್ತಾಪಿಸಿ ಅವರನ್ನು ಜಾಗೃತಗೊಳಿಸಬೇಕಾಗಿದೆ. ಅದಕ್ಕಾಗಿ ಶಕ್ತಿ ಮತ್ತು ಸಮಯ ಬೇಕು. ಒಮ್ಮೆ ಅವರು ಸಂಘಟಿತರಾದರೆ ಸಾಕು, ಅವರು ಆ ಸಂಘಟನೆಯ ಆಧಾರದಿಂದ ಸ್ತ್ರೀ-ಸ್ವಾತಂತ್ರ್ಯ ಮತ್ತು ಸ್ತ್ರೀ-ಪುರುಷ ಸಮಾನತೆಯ ವಿಚಾರವನ್ನು ಅವರಿಗೆ ತಲುಪಿಸುವುದಕ್ಕೆ ಸಾಧ್ಯವಾಗುತ್ತದೆ.

೧೦. ಕಾಯಿದೆ ಸಂಬಂಧವಾಗಿ ಸಲಹೆ ಕೊಡುವ ಚಳವಳಿಗಳು ಏರ್ಪಡಬೇಕು. ಸ್ವಯಂಸೇವಾ ಸಂಸ್ಥೆಗಳು, ಸಾಮಾಜಿಕ ಕಾರ್ಯದ ಸಂಘಟನೆಗಳು, ಕಾರ್ಯಕರ್ತರು, ಸಮಾಜ ಕಲ್ಯಾಣ ಇಲಾಖೆ, ಸರಕಾರಿ ಮಹಿಳಾ ಮಂಡಳಿಗಳು ಮತ್ತು ಸಂಘಟನೆಗಳವರೆಲ್ಲ ಒಂದೆಡೆ ಕಲೆತುಕೊಳ್ಳಬೇಕು. ಇದಕ್ಕಾಗಿ ಈ ಮೂಲಕ ಚಳವಳಿಗೆ ಒಂದು ಖಚಿತ ದೃಷ್ಟಿಕೋನದ ಸ್ವರೂಪವು ಪ್ರಾಪ್ತವಾಗುತ್ತದೆ. ಹಾಗಾಗಿ ಸಂಘಟನೆ ಮಾಡುವ ವಿಚಾರ ಮತ್ತು ಕಾರ್ಯ ನಿರ್ವಹಿಸುವ ದೃಷ್ಟಿಯು ಇಲ್ಲಿ ಬಹಳ ಆವಶ್ಯಕ. ಈ ಮುಂದಿನ ಅಂಶಗಳು ಇದಕ್ಕೆ ಆಧಾರ ನೀಡಬಲ್ಲವೆನಿಸುತ್ತದೆ.

ಅ. ಕಾಯಿದೆಗಳ ಬಗ್ಗೆ ಉಚಿತ ಸಲಹೆ ನೀಡುವ ಕೇಂದ್ರಗಳನ್ನು ಆರಂಭಿಸಬೇಕು. ಅದು ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿದ್ದು ಸಂಸ್ಥಾತ್ಮಕ ಸ್ವರೂಪದ ಮೂಲಕ ವಿಕೇಂದ್ರೀಕರಣಗೊಂಡಿರಬೇಕು. ಪ್ರತಿಯೊಂದು ಕಾಯಿದೆಯ ಬಗ್ಗೆಯೂ ಸಮಾಜ ಶಾಸ್ತ್ರೀಯ ನೆಲೆಯಿಂದ ಅಭ್ಯಸಿಸುವಂತಹ ತಜ್ಞರು, ಸಾಮಾಜಿಕ ಕಾರ್ಯಕರ್ತರು, ಪ್ರೊಬೆಶನ್ ಆಫಿಸರುಗಳು ಮತ್ತು ಆಯಾಯ ಸ್ತರದಲ್ಲಿನ ಅನುಭವವುಳ್ಳ ಮತ್ತು ಯಾರಿಗೆ ಸಾಮಾಜಿಕ ಕಾರ್ಯದಲ್ಲಿ ಪ್ರೀತಿ ಮತ್ತು ಅರಿವು ಇದೆಯೋ ಅಂಥ ಅಡ್ವೋಕೇಟ್ ವಕೀಲರೊಬ್ಬರು ಇದರಲ್ಲಿ ಸಮಾವೇಶಗೊಂಡಿರಬೇಕು.

ಬ. ಸಂಚಾರಿ ಆರೋಗ್ಯ ಸೇವಾ ಕೇಂದ್ರಗಳು ಹೇಗೆ ಕೊಳೆಗೇರಿಗಳು  ಮತ್ತು ಹಿಂದುಳಿದ ಭಾಗಗಳಿಗೆ ಆವಶ್ಯಕವಾಗಿವೆಯೋ ಹಾಗೆಯೇ ಸಂಚಾರಿ ಉಚಿತ ಕಾನೂನು ಸಲಹಾ ಕೇಂದ್ರಗಳು ಅಥವಾ ಯುನಿಟ್ಟುಗಳು ಇಂದು ಆವಶ್ಯಕ. ಅಜ್ಞಾನಿಗಳು, ಬಡವರು ಮತ್ತು ನಿರ್ಲಕ್ಷಿತ ಮಹಿಳೆಯರ ವಾಸ್ತವ್ಯ ಹೆಚ್ಚಾಗಿರುವಂಥ ಭಾಗಗಳಿಗೆ ಈ ಕೇಂದ್ರಗಳು ನಿರ್ದಿಷ್ಟ ದಿನಗಳಲ್ಲಿ ಭೇಟಿಕೊಡಬೇಕು. ಅವರೊಂದಿಗೆ ಬೆರೆತು, ಅವರನ್ನು ಮಾತನಾಡಿಸಿ ಅವರಿಗೆ ಅವರ ಹಕ್ಕುಗಳ ಬಗ್ಗೆ ಸ್ಪಷ್ಟ ತಿಳಿವಳಿಕೆ ಕೊಡಬೇಕಾಗಿದೆ.

ಕ. ಗೃಹಿಣಿಯರು, ವಿದ್ಯಾರ್ಥಿ ವರ್ಗ, ಸಮಾಜಸೇವಾ ಕಾರ್ಯಕರ್ತರು, ಸ್ವಯಂ ಸೇವಕ ಸಂಸ್ಥೆಗಳ ಮಹಿಳಾ ಮಂಡಳಿಯ ಸಭಾಸದರು, ಗ್ರಾಮೀಣ ಸರಪಂಚರು ಮತ್ತು ಗ್ರಾಮ ಪಂಚಾಯಿತಿಯ ಸದಸ್ಯರು, ಸ್ಥಳೀಯ ನೇತಾರರುಗಳಿಗೆ ಕಾಯಿದೆಗಳ ಬಗ್ಗೆ ತಿಳಿವಳಿಕೆ ನೀಡಬೇಕಾಗಿದೆ. ಜೊತೆಗೆ ತಾಂತ್ರಿಕ ವಿಚಾರಗಳು, ಸೌಲಭ್ಯಗಳು, ಸಂಪರ್ಕಗಳು ಮತ್ತು ಸಲಹೆಗಳ ಬಗ್ಗೆ ತಿಳಿಸಿಕೊಡುವಂತಹ ಸಂಸ್ಥೆಗಳ ಬಗ್ಗೆ ಮಾಹಿತಿ ನೀಡವಂಥ ಚಿಕ್ಕ ಚಿಕ್ಕ ಸಲಹಾ ಮಂಡಳಿಗಳನ್ನು ಸ್ಥಾಪಿಸಬಹುದಾಗಿದೆ.

ಡ. ಕಾಯಿದೆಗಳ ಲಾಭವು ಸ್ತ್ರೀಯರಿಗೆ ಆಗುತ್ತಿಲ್ಲದಿರುವುದಕ್ಕೆ  ಸ್ಪಷ್ಟ ಕಾರಣಗಳಿವೆ. ಅವೆಂದರೆ ತೊಂದರೆಗಳಲ್ಲಿ ಸಿಲುಕಿಕೊಂಡಿರುವವರು, ಅಸುರಕ್ಷಿತರಾಗಿರುವವರು ಮತ್ತು ಅನ್ಯಾಯಕ್ಕೆ ಒಳಗಾಗಿರುವಂಥ ಸ್ತ್ರೀಯರು ಪೊಲೀಸರಲ್ಲಿ ಹೋಗದೆ ಉಳಿದಿರುವುದು. ಅಪರಾಧಗಳನ್ನು ದಾಖಲು ಮಾಡಿಸುತ್ತಿಲ್ಲ, ಹಾಗೂ ಅನ್ಯಾಯದ ವಿರುದ್ಧ ನಿಂತು ನ್ಯಾಯವನ್ನು ಕೇಳುತ್ತಿಲ್ಲ. ಇವುಗಳಿಂದಾಗಿ ಕಾಯಿದೆಗಳೆಲ್ಲ ಕೇವಲ ಕಾಗದದ ಮೇಲಷ್ಟೆ ಉಳಿದುಬಿಟ್ಟಿವೆ. ಮತ್ತೊಂದು ಅಂಶವು ಹೀಗಿದೆ, ಪೂರ್ಣವಾದ ಪುರಾವೆಗಳೊಂದಿಗೆ ದೂರನ್ನು ದಾಖಲಿಸುವ ಪದ್ಧತಿಯೊಂದನ್ನು ಪಾಲಿಸುತ್ತಿಲ್ಲ. ಅಲ್ಲದೆ ಅಧಿಕಾರಿಗಳು ಸಹ ಇದನ್ನು ಸರಿಯಾದ ಲಕ್ಷ್ಯವನ್ನು ವಹಿಸಿ ದಾಖಲು ಮಾಡಿಕೊಳ್ಳದೆ ಇರುವುದು ಕಂಡು ಬರುತ್ತದೆ. ಸಾಮಾಜಿಕ ಒತ್ತಡ, ಆರ್ಥಿಕ ಕೊರತೆ, ಸ್ತ್ರೀಯರಿಗೆ ತರುತ್ತಿರುವ ಅಪಕೀರ್ತಿ, ಮರ್ಯಾದೆಯ ವಿಷಯಗಳಿಂದಾದ ಸಂಕುಚಿತ ಕಲ್ಪನೆ ಮತ್ತು ರೂಢಿ ಪರಂಪರೆಯ ತೆರೆ -ಈ ವಿಚಾರಗಳಿಂದಾಗಿ ಸ್ತ್ರೀಯರ ಮೇಲಾಗುತ್ತಿರುವ ಅತ್ಯಾಚಾರದಂಥ ಘಟನೆಗಳನ್ನು ಬಹಿರಂಗಪಡಿಸದೆ ಮುಚ್ಚಿಹಾಕಲಾಗುತ್ತಿದೆ. ವರದಕ್ಷಿಣೆ, ಬಲಾತ್ಕಾರ, ಸೌಜನ್ಯಗಳಂಥ ವಿಷಯಗಳಲ್ಲಿ ಮಾತ್ರ ಕ್ವಚಿತ್ತಾಗಿ ಕಾಯಿದೆಯ ಸಹಾಯವನ್ನು ಪಡೆಯುತ್ತಿರುವುದುಂಟು. ಇತ್ತೀಚಿಗೆ ಕೆಲವಾರು ಮಹಿಳಾ ಕಾರ್ಯಕರ್ತರ ಮುಂದಾಳತ್ವ ಮತ್ತು ಸಮಾಜ ಸೇವಾಸಂಸ್ಥೆಗಳ ಆಧಾರದಿಂದಾಗಿ ಇಂಥ ಘಟನೆಗಳನ್ನು ಬಹಿರಂಗಗೊಳಿಸಿ, ವರ್ತಮಾನ ಪತ್ರಿಕೆಗಳಲ್ಲಿ ಅವುಗಳ ವಿರುದ್ಧ ಧ್ವನಿ ಎತ್ತಿ ಅಪರಾಧಿಗೆ ಶಿಕ್ಷೆಯುಂಟಾಗುವಂತೆ ಮಾಡಲಾಗುತ್ತದೆ. ಆದರೆ ಇಂದಿಗೂ ಕಾನೂನುಗಳ ಮಾರ್ಗವನ್ನು ಅವಲಂಬಿಸಿ ಮುನ್ನಡೆಯುವ ಸಂಗತಿ ಮಾತ್ರ ಸಾಮಾಜಿಕ ಶೂನ್ಯತೆಯನ್ನು ಪಡೆದಿಲ್ಲ. ಆ ರೀತಿಯ ಪರಿವರ್ತನೆ ಮತ್ತು ಸುಧಾರಣೆಯು ಬಹಳೇ ಅವಶ್ಯಕ. ಹಾಗಾಗಿ ಇದರ ಬಗ್ಗೆ ತಿಳಿವಳಿಕೆಯನ್ನು ಉಂಟು ಮಾಡುವುದು ಬಹಳ ಅಗತ್ಯ. ಈ ಕಾರ್ಯವು ಚಲನ ಚಿತ್ರಗಳು, ಶಾಹಿರಿ ಗೀತೆಗಳು, ಬೀದಿನಾಟಕ ಪ್ರದರ್ಶನಗಳು, ರೇಡಿಯೊ ಮತ್ತು ಲಿಖಿತ ಮಾಧ್ಯಮಗಳ ಮೂಲಕ ಆಗಬೇಕಾಗಿದೆ.

ಇ. ಸ್ತ್ರೀಯರ ಮೇಲಾಗುತ್ತಿರುವ ಅನ್ಯಾಯವು ನಿಲ್ಲಬೇಕು. ವಿಶೇಷವಾಗಿ ವರದಕ್ಷಿಣೆಯ ಕಾರಣ ನವ ವಿವಾಹಿತ ಸ್ತ್ರೀಯರ ಮೇಲೆ ಆಗುತ್ತಿರುವ ಹಿಂಸೆ, ದೌರ್ಜನ್ಯ ಮತ್ತು ಪ್ರಾಸಂಗಿಕವಾಗಿ ಆಗುತ್ತಿರುವ ಕೊಲೆಗಳು -ಇಂಥವುಗಳಿಂದ ಅವರಿಗೆ ಸಂರಕ್ಷಣೆ ಲಭ್ಯವಾಗಬೇಕು. ಈ ದಿಶೆಯಲ್ಲಿ ಸ್ವಯಂಸೇವಾ ಸಂಸ್ಥೆಗಳು, ಪ್ರತಿನಿಧಿಗಳು  ಮತ್ತು ಕಾರ್ಯಕರ್ತರು ಮುಂದಾಳತ್ವ ವಹಿಸಬೇಕು.

ಈ. ಪ್ರತಿಯೊಂದು ಮನೆಗೂ ಹೋಗಿ ಆ ಕುಟುಂಬವನ್ನು ಭೇಟಿಯಾಗಿ ಕಾಯಿದೆಗಳ ಬಗ್ಗೆ ಮಾಹಿತಿ ಸೌಲಭ್ಯಗಳ ಬಗೆಗಿನ ಜ್ಞಾನವನ್ನು ನೀಡವುದು ಸುಲಭ ಸಾಧ್ಯವಲ್ಲದ ಸಂಗತಿ. ಹಾಗೆ ಮಾಡುವುದಕ್ಕೆ ಮುಂದಾಗುವುದೂ ಬೇಕಾಗಿಲ್ಲ. ಬದಲಾಗಿ ಸ್ತ್ರೀಯರು ಎಲ್ಲಿ ಸಾಮಾನ್ಯವಾಗಿ ಒಂದೆಡೆ ಸೇರುತ್ತಿದ್ದರೋ ಅಂಥ ಸಾರ್ವಜನಿಕ ಸ್ಥಳಗಳು ಮತ್ತು ಸಂಘಟನ ಸ್ಥಳಗಳ ಕಾರ್ಯಕ್ರಮಗಳಲ್ಲಿ ಈ ವಿಷಯಗಳ ಬಗೆಗಿನ ಚರ್ಚೆಯನ್ನು ಉಪಸ್ಥಿತ ಗೊಳಿಸಬೇಕು.

ಫ. ಕೇವಲ ಕಾಯಿದೆಗಳನ್ನಷ್ಟೆ ರೂಪಿಸಿ, ಅವುಗಳ ಬಗ್ಗೆ ಮಾಹಿತಿ ನೀಡುವುದರಿಂದ ಸ್ತ್ರೀಯರ ಮೇಲೆ ಆಗುತ್ತಿರುವ ಅನ್ಯಾಯ ಕಡಿಮೆಯಾಗುತ್ತದೆ ಮತ್ತು ಸ್ತ್ರೀಯ ಸ್ಥಾನಮಾನ ಹೆಚ್ಚಾಗುತ್ತದೆ ಎಂದು ಭಾವಿಸುವುದು ಸಲ್ಲದ ಸಂಗತಿ. ಸ್ತ್ರೀಯರ ಪ್ರತಿಷ್ಠೆ, ಸ್ಥಾನಮಾನ  ಮತ್ತು ಅವರನ್ನು ನೋಡುತ್ತಿರುವ ದೃಷ್ಟಿಕೋನವು ಬದಲಾಗಬೇಕಾಗಿದೆ. ಹಳೆಯ ರೂಢಿಗಳು, ಕಲ್ಪನೆಗಳು,  ಆಚರಣೆಗಳಂಥ ಸಂಕೋಲೆಗಳನ್ನು  ತುಂಡರಿಸಬೇಕು. ಪುರುಷರ ಕಡೆಯಿಂದ ಹಕ್ಕುಗಳನ್ನು ಪಡೆಯುವ ದಾರಿಯನ್ನು ನೋಡುವುದು ಸರಿಯಾದ ಕೆಲಸವಲ್ಲ. ಇದಕ್ಕೆ ವಿರುದ್ಧವಾಗಿ ಅವರನ್ನೂ ಸಾಮಾಜಿಕ ಪರಿವರ್ತನೆಯ ಪ್ರಕ್ರಿಯೆಯಲ್ಲಿ ಶಾಮೀಲು ಗೊಳಿಸಿಕೊಂಡೇ ಸ್ತ್ರೀ-ಸ್ವಾತಂತ್ರ್ಯ ಮತ್ತು ಪುರುಷ ಸಮಾನತೆಯನ್ನು ಪ್ರಸ್ತಾಪಿಸುವುದಕ್ಕೆ ಹೆಜ್ಜೆ ಹಾಕಬೇಕಾಗಿದೆ.

ಸ್ತ್ರೀಯು ಅಸಹಾಯಕಳು, ಅಬಲೆ ಮತ್ತು ದುರ್ಬಲೆ ಎಂಬಂಥ ಯಾವ ಪ್ರತಿಮೆ ಗಳಿವೆಯೋ (ಪೂರ್ವಾಪರವಾಗಿ ಚಾಲ್ತಿಯಲ್ಲಿವೆಯೋ) ಅವನ್ನೆಲ್ಲ ಹೇಗೆ ಬದಲಿಸಬಹುದು ಎಂಬ ದಿಶೆಯಿಂದ ಸ್ತ್ರೀ ಆಂದೋಲನವು ಪ್ರಯತ್ನಿಸಬೇಕಾದ್ದು ತೀರಾ ಅವಶ್ಯ. ಮಾನಸಿಕ ಗುಲಾಮಗಿರಿ, ಸಂಸ್ಕೃತಿಯೆಂಬ ಹೆಸರಿನ ಅಡಿಯಲ್ಲಿರುವ ರೂಢಿಗಳು ಮತ್ತು ಸಂಪ್ರದಾಯದ ಭಾರ, ವ್ರತ ವೈಕಲ್ಯಗಳ ಅನಾವಶ್ಯಕ ಭಾರಗಳಿಂದ ಸ್ತ್ರೀಯರು ಬಿಡುಗಡೆ ಪಡೆಯುವುದನ್ನು ಮುಖ್ಯವಾಗಿ ತಿಳಿದುಕೊಳ್ಳಬೇಕು. ಸಮಾನತೆ, ಸ್ವಾತಂತ್ರ್ಯ ಮತ್ತು ಸನ್ಮಾನ ಇವುಗಳಿಂದಾಗಿ ಸ್ತ್ರೀಯರು ಹೋರಾಟ ಮಾಡಬೇಕಾಗಿದೆ. ಆಗ ಮಾತ್ರವೇ ಕಾಯಿದೆಗಳು ಮತ್ತು ನ್ಯಾಯಾಲಯಗಳು ಸ್ತ್ರೀಯರಿಗೆ ಸಮರ್ಧವಾದ ಸಂರಕ್ಷಣೆಯನ್ನು ನೀಡುವಂಥ ಕೆಲಸವನ್ನು ಮಾಡಬಲ್ಲವು.