ಕಾಶೀ ವಿಶ್ವನಾಥನ ದರ್ಶನಕ್ಕೆ ಭಾರತೇಂದು ಬಾಬೂ ಹರಿಶ್ಚಂದ್ರರು ಹೊರಟು ನಿಂತಾಗ ಸೇವಕ ಶಾಲನ್ನು ತಂದು ಕೊಟ್ಟ, ಹರಿಶ್ಚಂದ್ರ ಬಾಬು ಶಾಲನ್ನು ನೋಡಿ,

“ಇದೇನು! ಇಂಥ ಶಾಲು ಎರಡಿತ್ತೆ?” ಎಂದು ಕೇಳಿದರು.

“ಇಲ್ಲ… ದಿವಾನ್ ಮುಂಶೀ….” ಸೇವಕನ ಬಾಯಿಂದ ಮಾತುಗಳು ಉರುಳುತ್ತಿದ್ದಂತೆ ಸಿಡಿಮಿಡಿಗೊಂಡು, ಭಾರತೇಂದು ದಿವಾನ್ ಮುಂಶಿಯವರಿದ್ದಲ್ಲಿಗೇ ಹೊರಟರು.

ಹಾಳು ಹಣ”

ಕೈಯಲ್ಲಿ ಶಾಲನ್ನು ಹಿಡಿದು ತಮ್ಮ ಕಡೆ ಬರುತ್ತಿದ್ದ ಭಾರತೇಂದುವನ್ನು ಕಂಡು ಪರಿಸ್ಥಿತಿಯನ್ನು ಗ್ರಹಿಸಿದ ಮುಂಶಿಜೀಯವರು ಭಾರತೇಂದು ಅವರಿಗೆ ಹೇಳಿದರು.

“ಬಾಬು,  ಆ ದಿನವೇ ಎರಡು ಕಂಬಳಿಗಳನ್ನು ಆ ಮುದುಕನಿಗೆ ಕೊಟ್ಟು ಕಳುಹಿಸಿ ಇದನ್ನು ತರಿಸಿದೆ. ಒಗೆಸಿಟ್ಟಿದ್ದೇನೆ.”

“ಏಕೆ?”

“ಅಲ್ಲ, ಇಂಥ ಶಾಲನ್ನು ಆ ಬಡಪಾಯಿ ತೆಗೆದು ಕೊಂಡು ಏನು ಮಾಡಿಯಾನು?”

“ಏಕೆ? ಇದರಿಂದ ಅವನ ಚಳಿ ದೂರವಾಗುತ್ತಿರಲಿಲ್ಲವೆ?”

“ಹಾಗಲ್ಲ, ಇದು…”

“ಆ ಕಂಬಳಿಯಿಂದ ನನ್ನ ಚಳಿ ದೂರವಾಗುತ್ತಿರಲಿಲ್ಲವೆ?”

“ಹಾಗಲ್ಲ, ಇದು ನಿಮ್ಮಂಥವರಿಗೆ ಒಪ್ಪುವುದು. ಆ ಬಡಪಾಯಿಗೆ ಕಂಬಳಿಗಳೇ ಸಾಕು.”

“ನಮ್ಮಂಥವರಿಗೆ ಅಂದರೆ?”

“ಅಂದರೆ ಶ್ರೀಮಂತರಿಗೆ.”

“ಶ್ರೀಮಂತ-ಬಡವ-ಥೂ ಈ ಹಾಳು ಹಣ ಮಾನವ ಮಾನವನ ಮಧ್ಯೆ ಎಷ್ಟೊಂದು ಭೇದವನ್ನುಂಟು ಮಾಡುತ್ತಿದೆ” ಎಂದು ಗೊಣಗಿದರು.

“ಅದರೂ ಈ ಹರಿಶ್ಚಂದ್ರ ಒಮ್ಮೆ ಕೊಟ್ಟದ್ದನ್ನು ತೊಟ್ಟುಕೊಳ್ಳುವುದಿಲ್ಲ ಎಂದು ತಮಗೆ ತಿಳಿಯದೆ?” ಎಂದು ಕೇಳಿದರು. ದನಿಯಲ್ಲಿ ನೀವು ಮಾಡಿದ್ದು ತಪ್ಪು ಎಂಬ ಆಕ್ಷೇಪಣೆ ಎದ್ದು ಕಾಣಿಸುತ್ತಿತ್ತು.

ಶಾಲನ್ನು ಉರಿಯಲ್ಲಿ ಎಸೆದುಬಿಟ್ಟರು

“ಗೊತ್ತು. ಆದರೂ ಈ ಶಾಲು ಅಪರೂಪವಾದುದು. ಇದರ ಕಸೂತಿ ಕೆಲಸ, ಜರಿ ಇವೆಲ್ಲ ಅನುಪಮ. ಏನಿಲ್ಲವೆಂದರೂ ಇದಕ್ಕೆ ಒಂದು ಸಾವಿರ ರೂಪಾಯಿಗಳು ಆಗಬಹುದು. ಅಗಲೇ ಒಂಬೈನೂರು ಕೊಟ್ಟು ನೀವೇ ಕೊಳ್ಳಲಿಲ್ಲವೇ?”

“ಆದರೇನು? ಇದರ ಪ್ರಯೋಜನ ಬಡವನಿಗೂ ಒಂದೇ, ಧನಿಕನಿಗೂ ಒಂದೇ. ಮಾಡುವುದೇನು? ಈಗ ತಂದಿಟ್ಟಿದ್ದೀರಿ. ನಾನು ಇದನ್ನು ಉಪಯೋಗಿಸಲಾರೆ; ಇನ್ನೊಬ್ಬರಿಗೆ ಕೊಡುವುದೂ ಸರಿಯಲ್ಲ. ಬನ್ನಿ” ಎಂದು ಮುಂದೆ ಹೆಜ್ಜೆಯನ್ನಿಟ್ಟು ಅಗ್ಗಿಷ್ಟಿಕೆಯ ಬಳಿ ಹೋಗಿ ಆ ಉರಿಯಲ್ಲಿ ಅದನ್ನು ಎಸೆದುಬಿಟ್ಟರು.

ಅದನ್ನು ತೆಗೆದುಕೊಳ್ಳುವ ಸಾಹಸ ಯಾರಿಗೂ ಇರಲಿಲ್ಲ. ಅದು ಸುಟ್ಟು ಹಿಡಿ ಬೂದಿಯಾಯಿತು. ಅನಂತರ ಬಾಬು ವಿಶ್ವೇಶ್ವರನ ದರ್ಶನಕ್ಕೆ ಹೊರಟು ಹೋದರು.

ಹಟಮಾರಿ, ಸರಳ ಸ್ವಭಾವ

ದಿನವೂ ಬೆಳಿಗ್ಗೆ ಎದ್ದು ತುಳಸಿಗಿಡಕ್ಕೆ ನೀರು ಹಾಕುವುದು, ಗೋವಿಗೆ ಮೇವು ಹಾಕಿ ನಮಸ್ಕರಿಸುವುದು, ವ್ಯಾಯಾಮ ಮಾಡುವುದು. ಸ್ನಾನಾಹ್ನೀಕಗಳನ್ನು ಮುಗಿಸಿಕೊಂಡು ಹಿರಿಯರಿಗೆ ನಮಸ್ಕರಿಸುವುದು, ಕಾಶೀ ವಿಶ್ವನಾಥನ ದರ್ಶನಕ್ಕೆ ಹೋಗಿ ಬರುವುದು. ಇದು ಅವರ ನಿತ್ಯ ಪದ್ಧತಿಯಾಗಿತ್ತು. ಒಂದು ದಿನ ವಿಶ್ವನಾಥನ ದರ್ಶನ ಮುಗಿಸಿಕೊಂಡು ಬರುವಾಗ ದಶಾಶ್ವಮೇಧ ಘಾಟಿನಲ್ಲಿ ಒಬ್ಬ ಮುದುಕ ಚಳಿಯಲ್ಲಿ ಗಡಗಡ ನಡುಗುತ್ತಿದ್ದುದನ್ನು ಕಂಡರು. ಬಾಬು ಹರಿಶ್ಚಂದ್ರರಿಗೆ ಆತನನ್ನು ನೋಡಿ ಕರುಳು ಹಿಂಡಿದಂತಾಯಿತು. ಅವರು ತಮ್ಮ ಮೈಮೇಲಿದ್ದ ಶಾಲನ್ನು ಅವನಿಗೆ ಹೊದಿಸಿ ಬಂದಿದ್ದರು. ಆದರೆ ಮುಂಶಿಯವರು ಆತನಿಂದ ಶಾಲನ್ನು ವಾಪಸ್ಸು ತಂದದ್ದು ಅವರ ಈ ಸಿಟ್ಟಿಗೆ ಕಾರಣವಾಗಿತ್ತು.

ಬಾಬು ಹರಿಶ್ಚಂದ್ರರು ಮುಂಶಿಯವರನ್ನು ತಮ್ಮ ತಂದೆಯವರಂತೆ ಗೌರವದಿಂದ ಕಾಣುತ್ತಿದ್ದರು. ದೇವರ ದರ್ಶನ ಮಾಡಿಕೊಂಡು ಬಂದ ಮೇಲೆ ದಿವಾನ್ ಮುಂಶಿಯವರ ಬಳಿ ಹೋಗಿ “ದಾದಾ, ಕ್ಷಮಿಸಿ. ನಾನು ಬಹಳ ಒರಟಾಗಿ ನಡೆದುಕೊಂಡೆ. ನಿಮ್ಮ ಮನಸ್ಸಿಗೆ ನೋವಾಗಿರಬೇಕು. ಆದದ್ದು ಆಯಿತು. ದಯಮಾಡಿ ಕ್ಷಮಿಸಿಬಿಡಿ” ಎಂದು ನಮಸ್ಕಾರ ಮಾಡಿದರು.

ಒಂದೆಡೆ ಹಟಮಾರಿತನ, ಇನ್ನೊಂದೆಡೆ ಬಲು ಕೋಮಲ ಸ್ವಭಾವ. ತನ್ನ ತಪ್ಪನ್ನು ಒಪ್ಪಿಕೊಂಡು ಬಿಡುವಷ್ಟು ಸರಳ.

ಮನೆತನ

ಭಾರತೇಂದುವಿನ ಈ ಸ್ವಭಾವಕ್ಕೆ ಅವರು ಬೆಳೆದು ಬಂದ ವಾತಾವರಣ ಕಾರಣ. ಅವರು ಹುಟ್ಟಿದ್ದು ಧನಿಕ ಸೇಠ್ ಅಮೀಚಂದರ ವಂಶದಲ್ಲಿ. ಬ್ರಿಟಿಷರ ಅಚ್ಚುಮೆಚ್ಚಿ ಗೆಳೆಯರಾಗಿ ರಾಷ್ಟ್ರದ್ರೋಹ ಪ್ರಜಾದ್ರೋಹ ಎಂಬ ಭಾವನೆ ಇಲ್ಲದೆ ಹಣವನ್ನು ಶೇಖರಿಸುವುದು ಅಮೀಚಂದರ ಜೀವನದ ಗುರಿಯಾಗಿತ್ತು. ಭಾರತೇಂದುವಿನ ತಂದೆ ಬಾಬೂ ಗೋಪಾಲಚಂದರು ಅದೇ ಪರಂಪರೆಯನ್ನು ಕಾಪಾಡಿಕೊಂಡು ಬಂದಿದ್ದರು. ೧೮೫೭ ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರಿಗೆ ನೆರವಿನಹಸ್ತ  ನೀಡಿದ್ದರು. ಬ್ರಿಟಿಷ್ ಕಂಪನಿ ಸರ್ಕಾರ ತನ್ನ ಅತ್ಯಮೂಲ್ಯವಾದ ಸಂಪತ್ತನ್ನು ಗೋಪಾಲಚಂದರ ಮನೆಯಲ್ಲಿಟ್ಟಿತ್ತು.

ಜನ್ಮ, ಬಾಲ್ಯ

ಇಂಥ ಆಂಗ್ಲಭಕ್ತರ ಮನೆತನದಲ್ಲಿ, ಸಂಪತ್ತಿನ ಸುಪ್ಪತ್ತಿಗೆಯ ಮೇಲೆ ಬಾಲ್ಯವನ್ನು ಕಳೆದರು ಭಾರತೇಂದು. ೧೮೫೦ ನೇ ಇಸವಿ ಸೆಪ್ಟೆಂಬರ್ ೯ನೇ ತಾರೀಖು ಸೋಮವಾರ ಜನಿಸಿದರು. ಅವರು ಐದು ವರ್ಷದವರಿದ್ದಾಗ ತಾಯಿಯನ್ನು ಕಳೆದುಕೊಂಡರು. ತಂದೆಯವರು ಹತ್ತನೇ ವರ್ಷದಲ್ಲಿ ತೀರಿಹೋದರು. ಅನಂತರ ಮಲತಾಯಿಯ ಆರೈಕೆಯಲ್ಲಿ ಬೆಳೆದರು. ಈ ಮಲತಾಯಿಯ ವ್ಯವಹಾರ ಬಾಲಕ ಭಾರತೇಂದುವಿನಲ್ಲಿ ಹಟಮಾರಿತನವನ್ನು ಬೆಳೆಸಿತು. ಅಪಾರ ಸಂಪತ್ತಿನ ಉತ್ತಾರಾಧಿಕಾರಿಯಾದರೂ ಎಕೋ ಸಂಪತ್ತಿನ ಬಗ್ಗೆ ಜುಗುಪ್ಸೆ. ಇವರ ವಂಶದವರಲ್ಲಿ ಕಂಡು ಕೇಳರಿಯದ ಔದಾರ್ಯ ಇವರಿಗೆ ಸಹಜ ಸ್ವಭಾವವಾಗಿ ಬಂದಿತ್ತು. ಈ ಅಪಾರ ಸಂಪತ್ತನ್ನೂ ಪರೋಪಕಾರದಲ್ಲಿ, ನಾಡು ನುಡಿಯ ಸೇವೆಯಲ್ಲಿ ತೊಡಗಿಸಿ, ಜೀವನದ ಕೊನೆ ಘಳಿಗೆಯಲ್ಲಿ ಹಣದ ಮುಗ್ಗಟ್ಟಿನಲ್ಲಿ ತೊಳಲಿದರು. “ಈ ಹಾಳು ಸಂಪತ್ತು ನಮ್ಮ ಹಿರಿಯರ ಮಾನವತೆಯನ್ನು ಚಿವುಟಿಹಾಕಿತು. ರಾಷ್ಟ್ರೀಯತೆಯನ್ನು ಬೆಳೆಯಲು ಬಿಡಲಿಲ್ಲ. ದೇಶದ್ರೋಹಕ್ಕೆ ಪುಟಗೊಟ್ಟಿತು. ದೇಶದ ಶತ್ರುಗಳ ಹಿಂಬಾಲಕರನ್ನಾಗಿ ಮಾಡಿತು. ಇದು ಅವರ ವಿನಾಶಕ್ಕೆ ಕಾರಣವಾಯಿತು. ಇದನ್ನು ನಾನು ನಾಶ ಮಾಡಿ ಸೇಡು ತೀರಿಸುತ್ತೇನೆ” ಎಂದು ಹೇಳುತ್ತಿದ್ದರಂತೆ.

ಭಾರತೇಂದು ಹರಿಶ್ಚಂದ್ರರಿಗೆ ಮದುವೆಯಾದದ್ದು  ಹದಿಮೂರನೇ ವಯಸ್ಸಿನಲ್ಲಿ. ಈ ಮದುವೆಯಿಂದ ಓದು ಬರಹ ವ್ಯವಸ್ಥಿತವಾಗಿ ನಡೆಯಲು ಮೊದಲೇ ಇದ್ದ ಅಡ್ಡಿ ಆತಂಕಗಳ ಜೊತೆಗೆ ಇದೂ ಒಂದು ಸೇರಿಕೊಂಡಿತು. ತಂದೆಯವರು ದಿವಂಗತರಾದ ಮೇಲೆ ಹರಿಶ್ಚಂದ್ರರು ಕ್ವೀನ್ಸ್ ಕಾಲೇಜಿನಲ್ಲಿ ಪ್ರವೇಶವನ್ನು ಪಡೆದರು. ಆದರೆ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಓದುವುದು ಅವರಿಗೆ ಹಿಡಿಸಲಿಲ್ಲ. ಆದುದರಿಂದ ಕಾಲೇಜನ್ನು ಬಿಟ್ಟು ಹೊರ ಬಂದರು.

ಪ್ರತಿಭಾನ್ವಿತ

ಆದರೆ ಭಾರತೇಂದು ಹರಿಶ್ಚಂದ್ರರ ಪ್ರತಿಭೆ ಅಪೂರ್ವವಾದುದು. ಅವರಿಗೆ ಸುಮಾರು ಇಪ್ಪತ್ತೆರಡು ಭಾಷೆಗಳು ಬರುತ್ತಿದ್ವಂತೆ. ಸಂಸ್ಕೃತ, ಬಂಗಾಲಿ, ಹಿಂದೀ, ಇಂಗ್ಲೀಷ್ ಮುಂತಾದ ಭಾಷೆಗಳ ಮೇಲೆ ಅವರ ಪ್ರಭುತ್ವ ಅಪಾರವಾದುದು. ಚಿಕ್ಕಂದಿನಲ್ಲೆ ಒಂದು ಬಂಗಾಲಿ ನಾಟಕವನ್ನು ಓದಿ ಅರ್ಥಮಾಡಿಕೊಂಡು ತಾನೂ ನಾಟಕವನ್ನು ಬರೆಯಬೇಕೆಂದು ನಿಶ್ಚಯಿಸಿದರಂತೆ. “ಆಗ ಇನ್ನೂ ಹನ್ನೊಂದು ವರ್ಷ. ಜಗನ್ನಾಥನ ಯಾತ್ರೆಗೆ ಹೋಗಿದ್ದೆ. ವರ್ಧಮಾನ್ ನಿಲ್ದಾಣದಲ್ಲಿ ವಿಧವಾ ವಿವಾಹ ಎಂಬ ಬಂಗಾಲಿ ನಾಟಕವನ್ನು ಕೊಂಡುಕೊಂಡೆ. ಭಾಷೆ ಬರುತ್ತಿರಲಿಲ್ಲ. ಆದರೂ ಕಷ್ಟಪಟ್ಟು ಅದನ್ನು ಓದಿ ಮುಗಿಸಿದೆ. ಅದರಿಂದ ಬಂಗಾಲಿ ಭಾಷೆಯನ್ನು ಕಲಿತದ್ದು ಮಾತ್ರವಲ್ಲ, ಒಂದು ಹೊಸ ಬೆಳಕನ್ನು ಪಡೆದೆ” ಎಂದು ಅವರೇ ಹೇಳಿಕೊಂಡಿದ್ದಾರೆ.

ಈ ಹೊಸ ಬೆಳಕು ನಾಡುನುಡಿಯ ವಿಕಾಸದತ್ತ ಭಾರತೇಂದುವನ್ನು ಕರೆದೊಯ್ದಿತು. ಹಿಂದೀ ಸಾಹಿತ್ಯದ ಆಧುನಿಕಯುಗ ಅವರಿಂದ ಪ್ರಾರಂಭವಾಯಿತು. ಸಮಾಜ ಸುಧಾರಕನನ್ನಾಗಿಯೂ ದೇಶಭಕ್ತನನ್ನಾಗಿಯೂ ಮಾಡಿತು.

ಪ್ರವಾಸಿ

ಭಾರತೇಂದುವಿಗೆ ಪ್ರವಾಸವೆಂದರೆ ಪಂಚಪ್ರಾಣ. ಅವರು ಉತ್ತರ ಭಾರತದ ಪ್ರಸಿದ್ಧ ನಗರಗಳನ್ನೂ ತೀರ್ಥ ಕ್ಷೇತ್ರಗಳನ್ನೂ ನೋಡಿದ್ದರು. ಇವುಗಳ ಹೃದಯಂಗಮ ವಿವರಣೆಯನ್ನು ವಿನೋದಪೂರ್ಣ ಶೈಲಿಯಲ್ಲಿ ಮಾಡುತ್ತಿದ್ದರು. ಪತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದರು. ಅವರಿಗೆ ಜನಜೀವನವನ್ನು ಅರ್ಥಮಾಡಿಕೊಳ್ಳಲು ಈ ಯಾತ್ರೆ ನೆರವಾಯಿತು. ಅನೇಕ ಗಣ್ಯವ್ಯಕ್ತಿಗಳ ಸಂಪರ್ಕ ಆಯಿತು. ಬ್ರಿಟಿಷ್ ರಾಜನೀತಿಯ ರಹಸ್ಯವನ್ನರಿಯಲು ಕಾರಣವಾಯಿತು. ಅಂತೆಯೇ ಸರ್ವಪ್ರಯತ್ನದಿಂದ ರಾಷ್ಟ್ರದ ಜನತೆಯಲ್ಲಿ ರಾಷ್ಟ್ರಾಭಿಮಾನವನ್ನು ಹೊಡೆದೆಬ್ಬಿಸಲು ಸಂಕಲ್ಪ ಮಾಡಲು ನಾಂದಿಯಾಯಿತು.

ಪ್ರವಾಸದ ಅನುಭವದ ಜೊತೆಗೆ ಪಂಡಿತ ನಂದಕಿಶೋರವರ ಬೋಧನೆಯೂ ಇವರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಕಾರಣವಾಯಿತು. ಪಂಡಿತರು ಹೇಳಿ ಕೊಡುತ್ತಿದ್ದ ಭಾಷೆ ಇಂಗ್ಲಿಷ್, ಜೊತೆಯಲ್ಲೆ ಅವರು ಸ್ವಾತಂತ್ರ್ಯದ ಮಹತ್ವ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಜನಾಂಗಗಳ ಇತಿಹಾಸ, ಸ್ವಾಭಿಮಾನ, ಸಮಾಜ ಸುಧಾರಣೆಯ ಮಹತ್ವ ಮುಂತಾದುವುಗಳನ್ನೂ ಬೋಧಿಸಿದರು.

ಬಾಬು ಅವರು ತಮ್ಮ ಹದಿನಾರನೇ ವಯಸ್ಸಿನಲ್ಲಿ ವ್ಯಾಪಕ ಪ್ರವಾಸಮಾಡಿದರು. ಅವರಿಗೆ ಈ ಪ್ರವಾಸ ಜನಜೀವನವನ್ನು ವಿಮರ್ಶಾತ್ಮಕ ದೃಷ್ಟಿಯಿಂದ ನೋಡವುದನ್ನು ಕಲಿಸಿತು. ಸಮಾಜದ ಕುಂದುಕೊರತೆಗಳನ್ನೂ ಅದರ ಕಾರಣಗಳನ್ನೂ ಅರಿಯಲು ಅವಕಾಶವನ್ನೊದಗಿಸಿತು.

ಭಾರತೇಂದು ಸ್ವಂತವಾಗಿ ಓದಿ ಎಷ್ಟು ಕಲಿತರೊ ಅದಕ್ಕಿಂತ ಹೆಚ್ಚು ಲೋಕಾನುಭವದಿಂದ ಕಲಿತರು.

ವಿಕಾಸದ ಶಕ್ತಿ

ದೈವದತ್ತವಾದ ಪ್ರತಿಭೆ. ತೀಕ್ಷ್ಣ ಬುದ್ಧಿ. ಲೋಕಾನುಭವ. ಆಳವಾದ ಪಾಂಡಿತ್ಯ. ಸೂಕ್ಷ್ಮ ದೃಷ್ಟಿ. ಜೊತೆಯಲ್ಲಿ ಅಪಾರ ಸಂಪತ್ತಿನ ಒಡೆತನ. ಸಂಪತ್ತನ್ನು ಇತರರ ನೆರವಿಗಾಗಿ ಬಳಸಬೇಕೆಂಬ ಔದಾರ್ಯ. ಜೊತೆಯಲ್ಲಿ ವಿಶ್ವೇಶ್ವರನ ದಯೆಯಿಂದ ಲಭ್ಯವಾದ ವಿವೇಕ ಇವೆಲ್ಲವೂ ಒಟ್ಟು ಸೇರಿ ನಾಡಿನ ಭಾಗ್ಯದಿಂದ ಭಾರತೇಂದು ಹರಿಶ್ಚಂದ್ರರು ಕೇವಲ ವ್ಯಕ್ತಿಯಾಗಿ ಉಳಿಯದೆ ನಾಡುನುಡಿಯ ವಿಕಾಸದ ಶಕ್ತಿಯಾಗಿ ಪರಿಣಮಿಸಿದರು. ಅವರು ಬಾಳಿದ್ದು ಕೇವಲ ಮೂವತ್ತ ನಾಲ್ಕೇ ವರ್ಷ. ಈ ಅಲ್ಪಾವಧಿಯಲ್ಲಿ ನಾಟಕ, ಲಘು ಪ್ರಬಂಧಗಳು, ಪ್ರೌಢ ಪ್ರಬಂಧಗಳು, ಸಂಶೋಧನಾತ್ಮಕ ಲೇಖನಗಳು, ಯಾತ್ರಾ ವಿವರಣೆಗಳ, ಲಘು ಹಾಸ್ಯದ ಚುಟುಕುಗಳು, ಆಖ್ಯಾನಕ ಕಾವ್ಯಗಳು, ಭಕ್ತಿಗೀತೆಗಳು ಶೃಂಗಾರ ಹಾಗೂ ರಾಷ್ಟ್ರಪ್ರೇಮವನ್ನು ಕುರಿತ ಕಾವ್ಯಗಳು – ಹೀಗೆ ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಪತ್ರಿಕಾ ಸಂಪಾದಕರಾಗಿ, ಪ್ರಕಾಶನದ ಹೊಣೆ ಹೊತ್ತು ಇವರು ಸಲ್ಲಿಸಿರುವ ಸೇವೆ ಸ್ತುತ್ಯವಾದುದು. ಸಂಸ್ಕೃತ, ಬಂಗಾಲಿ ಹಾಗೂ ಇಂಗ್ಲಿಷಿನಿಂದ ಉತ್ತಮ ಕೃತಿಗಳನ್ನು ಭಾಷಾಂತರಿಸಿ ಹಿಂದೀ ಭಾಷೆಯ ಸಮೃದ್ಧಿಗೆ ಕಾರಣರಾದರು. ಅವರು ವಿಲಾಸಿ ರಂಗಭೂಮಿಯ ಜನಕರಾಗಿ ಸ್ವತಃ ನಾಟಕಗಳಲ್ಲಿ ಅಭಿನಯಿಸುತ್ತ ಸಹೃದಯರ ಪಡೆಯನ್ನೇ ನಿರ್ಮಿಸಿದರು. ಹಿಂದೀಭಾಷೆ ಹಾಗೂ ನಾಗರೀ ಲಿಪಿಗೆ ಬ್ರಿಟಿಷರ ಒಡೆದು ಆಳುವ ನೀತಿಯಿಂದಾಗಿ ಬಂದೊದಗಿದ್ದ ಗಂಡಾಂತರಕ್ಕೆ ಪ್ರತಿಭಟನೆಯನ್ನು ಸೂಚಿಸಿ ದೊಡ್ಡ ಆಂದೋಲನದ ನೇತಾರರಾದರು. ತಮ್ಮ ಔದಾರ್ಯದಿಂದ ಕವಿಜನಾಶ್ರಯರಾಗಿ ಅನೇಕರಿಂದ ಸಾಹಿತ್ಯ ಸೇವೆಯು ಅವ್ಯಾಹತವಾಗಿ ನಡೆಯುವಂತೆ ನೋಡಿಕೊಂಡರು. ಹಿಂದೀ ಸಾಹಿತ್ಯದ ನವ್ಯತೆಗೂ ಸಮೃದ್ಧಿಗೂ ಕಾರಣಪುರುಷರಾದರು.

ಯುಗಪ್ರವರ್ತಕ

ಭಾರತೇಂದು ಹರಿಶ್ಚಂದ್ರರನ್ನು ಆಧುನಿಕ ಹಿಂದೀ ಸಾಹಿತ್ಯದ ಯುಗಪುರುಷ ಎಂದು ಕರೆಯುತ್ತಾರೆ. ಅವರು ಬಾಳಿದ್ದು ಭಾರತೀಯ ಇತಿಹಾಸದಲ್ಲಿನ ಒಂದು ಸಂಕ್ರಾಂತಿ ಕಾಲದಲ್ಲಿ. ಬ್ರಿಟಿಷ್ ಸರ್ಕಾರದ ಕ್ರೂರ ಸಾಮ್ರಾಜ್ಯ ಶಾಹಿ ನೀತಿಯಿಂದ ಬೇಸತ್ತು ಬಂಡೆದ್ದ ದೇಶಭಕ್ತರನ್ನು ವಿದ್ರೋಹಿಗಳೆಂದೂ, ದಂಗೆಕೋರರೆಂದೂ ಸಾರಿ ಹತ್ತಿಕ್ಕಲಾಗಿತ್ತು. ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಹೀಗೆ ದುರಂತವಾಗಿ ಕೊನೆಗೊಂಡಾಗ ಜನ ಹತಾಶರಾದರು. ದೇಶದ ಜನತೆಯನ್ನು ಸಂಘಟಿಸದೆ, ಅವರಲ್ಲಿ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸದೆ ಇದ್ದರೆ ಬ್ರಿಟಿಷರೊಡನೆ ಹೋರಾಡಿ ಗೆಲ್ಲುವುದು ಅಸಾಧ್ಯ ಎಂದು ಸಮಾಜದ ಮುಂದಾಳುಗಳು ಯೋಚಿಸುತ್ತಿದ್ದರು.

ತಮ್ಮ ಕಾಲಕ್ಕೆ ಹಿಡಿದ ಕನ್ನಡಿ

ವಿದೇಶೀ ಆಡಳಿತ ಎಷ್ಟೋ ಸುಭದ್ರವಾಗಿತ್ತು. ನಿಜ, ಆದರೆ ಒಡೆದು ಆಳುವ ಬ್ರಿಟಿಷರ ನೀತಿಯಿಂದಾಗಿ ಆಗಾಗ್ಗೆ ದಂಗೆಗಳಾಗುತ್ತಿದ್ದವು. ಬ್ರಿಟಿಷರ ನೀತಿಯು ಕೇವಲ ಸಾಮಾಜಿಕ ಹಾಗೂ ರಾಜಕೀಯ ರಂಗದಲ್ಲಿ ಮಾತ್ರವಲ್ಲದೆ ಭಾಷೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲೂ ನುಸುಳಿ ಬಂದದ್ದು ದೊಡ್ಡ ಕುತ್ತಾಗಿತ್ತು. ಬ್ರಿಟಿಷರು ತಮ್ಮ ಆಡಳಿತ ನಿರ್ವಹಣೆಗೆ ಬೇಕಾಗಿದ್ದ ಗುಮಾಸ್ತರ ಪಡೆಯನ್ನು ಸಿದ್ಧಗೊಳಿಸಲು ಶಾಲಾ ಕಾಲೇಜುಗಳನ್ನು ತೆರೆದು ಹೊಸ ಬಗೆಯ ಶಿಕ್ಷಣ ನೀತಿಯನ್ನು ಜಾರಿಗೆ ತಂದರು. ಇದರಿಂದಾಗಿ ಭಾರತೀಯ ಪರಂಪರಾಗತ ಶಿಕ್ಷಣ ಕೇಂದ್ರಗಳು ಗತವೈಭವದ ಸ್ಮಾರಕಗಳಾದವು. ಹೊಸ ಪೀಳಿಗೆಯ ಸುಶಿಕ್ಷಿತ ವರ್ಗ ಭಾರತೀಯ ಸಾಹಿತ್ಯ ಹಾಗೂ ಸಂಸ್ಕೃತಿಯ ಪರಿಚಯವಿಲ್ಲದವರಾಗಿದ್ದರು. ಎಲ್ಲಕ್ಕೂ ಮಿಗಿಲಾಗಿ ಭಾರತೀಯ ಸಮಾಜ ಬಡತನದ ಪೆಡಂಭೂತದ ತೆಕ್ಕೆಯಲ್ಲಿ ಸಿಕ್ಕಿ ನರಳುತ್ತಿತ್ತು. ಹೇಗಾದರೂ ಇಲ್ಲಿಯ ಸಂಪತ್ತನ್ನು ದೋಚಿಕೊಂಡು ಹೋಗುವುದು ಬ್ರಿಟಿಷರ ನೀತಿಯಾಗಿತ್ತು.

ಭಾರತೇಂದು ಹರಿಶ್ಚಂದ್ರರು ಸಾಮಾಜಿಕ ಪರಿಸ್ಥಿತಿಯನ್ನು ಆಳವಾಗಿ ಅಭ್ಯಾಸ ಮಾಡಿದರು. ಅದೊಂದು ಗೊಂದಲದ ಬೀಡಾಗಿತ್ತು. ಒಂದೆಡೆ ಆಂಗ್ಲರ ಅಂಧಾನುಕರಣೆಯಲ್ಲಿ ನಿರತರಾದವರಿದ್ದರೆ, ಇನ್ನೊಂದೆಡೆ ಮಡಿವಂತಿಕೆಯಿಂದ ಎಲ್ಲ ಹೊಸ ವಿಚಾರಕ್ಕೂ ಮೂಗು ಮುರಿಯುವ ಜನರಿದ್ದರು.

ಅಂದಿನ ಆರ್ಥಿಕ ನೀತಿ ಮತ್ತು ಜಮೀನುದಾರರು ಹಾಗೂ ದೇಶೀ ರಾಜ ಮಹಾರಾಜರುಗಳ ಅವಿವೇಕ ಅನ್ಯಾಯಗಳೂ ಭಾರತೇಂದು ಹರಿಶ್ಚಂದ್ರರ ಪ್ರತಿಭೆಗೆ ಸಾಕಷ್ಟು ಪ್ರಚೋದನೆಯನ್ನಿತ್ತಿದ್ದವು. ’ವಿಷಸ್ಯ ವಿಷಂ ಔಷಧಂ’ ಮತ್ತು ’ಅಂಧೇರ್ ನಗರೀ ಚೌಪಟ್ ರಾಜಾ, ಟಕಾಸೇರ್ ಭಾಜೀ  ಟಕಾಸೇರ್ ಖಾಜಾ’ ಎಂಬ ಕೃತಿಗಳಲ್ಲಿ ಈ ಅಂಶಗಳನ್ನು ಸ್ಪಷ್ಟವಾಗಿ ಕಾಣಬಹುದು.

’ವಿಷಸ್ಯ ವಿಷಮೌಷಧಂ’ನಲ್ಲಿ ಭಂಡಾಚಾರ್ಯನ ಒಂದೇ ಪಾತ್ರ. ಈ ಪಾತ್ರದ ಮೂಲಕ ದೇಶೀಯ ಸಂಸ್ಥಾನಾಧೀಶರ, ರಾಜ ಮಹಾರಾಜರ ಅನ್ಯಾಯವನ್ನು, ಅವರು ಆ ಕಾರಣದಿಂದಾಗಿ ತಮ್ಮ ಅಸ್ತಿತ್ವವನ್ನು ಕಳೆದು ಕೊಳ್ಳುತ್ತಿದ್ದುದನ್ನೂ ಚಿತ್ರಿಸಿದ್ದಾರೆ. ಅಂಧೇರ್ ನಗರಿಯಲ್ಲಿ ಬಿಹಾರ ಪ್ರಾಂತದ ಒಬ್ಬ ಜಮೀನುದಾರನನ್ನು ಮನಸ್ಸಿನಲ್ಲಿಟ್ಟುಕೊಂಡು ಅಂದಿನ ಅತ್ಯಾಚಾರವನ್ನು ಪ್ರಹಸನವಾಗಿ ಚಿತ್ರಿಸಿದ್ದಾರೆ. ಪ್ರಹಸನದಲ್ಲಿ ’ಹಾಸ್ಯ’ ಜೀವಾಳ. ಸ್ವತಃ ಭಾರತೇಂದು ಹರಿಶ್ಚಂದ್ರರು ಈ ಪ್ರಹಸನದಲ್ಲಿ ಅಭಿನಯಿಸುತ್ತಿದ್ದು, ಅದು ಬಹಳ ಪರಿಣಾಮಕಾರಿಯಾಗಿತ್ತಂತೆ. ಬ್ರಜರತ್ನದಾಸ ಎಂಬುವರು ಭಾರತೇಂದು ಹರಿಶ್ಚಂದ್ರ ಎಂಬ ತಮ್ಮ ಕೃತಿಯಲ್ಲಿ ನ್ಯಾಷನಲ್ ಥಿಯೇಟರಿನಲ್ಲಿ ಅಭಿನಯಿಸಿದ ಈ ಪ್ರಹಸನದಿಂದ ಪ್ರಭಾವಿತನಾದ ಜಮೀನುದಾರನು ತನ್ನ ಓರೆಕೋರೆಗಳನ್ನು ತಿದ್ದಿಕೊಂಡದ್ದು ಮತ್ರವಲ್ಲ ಭಾರತೇಂದುಜೀಯವರ ಒಬ್ಬ ಮಿತ್ರನೂ ಆದನು ಎಂದು ಬರೆದಿದ್ದಾರೆ.

ಆರ್ಥಿಕಸ್ಥಿತಿ

ಮೊದಲು ಭಾರತವನ್ನು ವ್ಯಾಪಾರಿ ಕಂಪನಿಯಾದ ಈಸ್ಟ್ ಇಮಡಿಯಾ ಕಂಪನಿ ಆಳುತ್ತಿತ್ತು. ೧೮೫೭ ರಲ್ಲಿ ದೇಶದಲ್ಲೆಲ್ಲ ಹೋರಾಟ ನಡೆದ ನಂತರ ಆಡಳಿತವನ್ನು ಬ್ರಿಟಿಷ್ ಪಾರ್ಲಿಮೆಂಟ್ ವಹಿಸಿಕೊಂಡಿತು. ಅದಾದ ನಂತರ ಭಾರತದ ಆರ್ಥಿಕವ್ಯವಸ್ಥೆ ಹೊಸ ರೂಪ ತಾಳುವುದು ಎಂದು ಜನ ನೀರಿಕ್ಷಿಸಿದ್ದರು. ಶೋಷಣೆ ದೂರವಾಗಿ ಸಮೃದ್ಧಿಯನ್ನು ಸಾಧಿಸುವ ಕನಸನ್ನು ಕಂಡವರಿದ್ದರು. ಆದರೆ ಆಳರಸರ ನೀತಿ ಭಾರತದ ಕೈಗಾರಿಕೆಗಳನ್ನು ಮೊಟಕುಗೊಳಿಸಿ ಇಂಗ್ಲೆಂಡಿನಲ್ಲಿ ಸಿದ್ಧವಾದ ವಸ್ತುಗಳನ್ನು ಮಾರುವ ಮಾರುಕಟ್ಟೆಯಾಗಿ ಭಾರತವನ್ನು ವ್ಯವಸ್ಥೆಗೊಳಿಸುವುದಾಗಿತ್ತು. ಇದರಿಂದ ಅಪಾರ ಸಂಪತ್ತು ಪ್ರತಿ ವರ್ಷ ವಿದೇಶಕ್ಕೆ ಹರಿದು ಹೋಗುತ್ತಿತ್ತು. ಬೆಲೆ ಏರಿಕೆ, ಕ್ಷಾಮ, ಕೃತಕ ಅಭಾವ, ಸುಂಕದ ಹೊರೆ ಇವುಗಳಿಂದಾಗಿ ಆರ್ಥಿಕ ವ್ಯವಸ್ಥೆ ಹದಗೆಟ್ಟಿತ್ತು.

ಭಾರತೇಂದು ಹರಿಶ್ಚಂದ್ರರು ವಾಸ್ತವಿಕ ಜೀವನದ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿದ್ದರು. ಅದರ ಬಗ್ಗೆ ಜನ ಜಾಗೃತಿಯನ್ನುಂಟು ಮಾಡಲು ತಮ್ಮ ಪ್ರತಿಭೆಯನ್ನು ಉಪಯೋಗಿಸಿಕೊಂಡರು. ಪತ್ರಿಕೆಗಳನ್ನು ಇದಕ್ಕಾಗಿ ಬಳಸಿದಿರು. ಕಾವ್ಯ, ನಾಟಕ ಮುಂತಾದ ಹಲವಾರು ಸಾಹಿತ್ಯದ ಪ್ರಕಾರಗಳಲ್ಲಿ ಹೊಸ ಚೇತನವನ್ನು ತುಂಬುವ ಮೂಲಕ ಯುಗ ನಿರ್ಮಾಪಕರಾದರು.

ರಾಷ್ಟ್ರೀಯತೆ

ಭಾರತೇಂದುಜೀಯವರ ಪ್ರತಿಭೆಯಿಂದ, ಕಾವ್ಯ, ಸಾಹಿತ್ಯ, ಗದ್ಯ ಸಾಹಿತ್ಯ, ನಾಟಕ ಸಾಹಿತ್ಯ ಎಲ್ಲ ಮೈ ತುಂಬಿ ಬೆಳೆದವು. ಅವರ ಸಾಹಿತ್ಯಸೃಷ್ಟಿಯ ಪ್ರೇರಕ ಶಕ್ತಿ ರಾಷ್ಟ್ರಪ್ರೇಮ. ಈ ರಾಷ್ಟ್ರೀಯ ಭಾವವನ್ನು ನೇರವಾಗಿ ಸಾಹಿತ್ಯ ಮಾಧ್ಯಮದಲ್ಲಿ ಹೇಳುವುದೂ ಸಾಧ್ಯವಿಲ್ಲದ ಕಾಲ ಅದಾಗಿತ್ತು. ನೇರವಾಗಿ ಯಾರೂ ರಾಷ್ಟ್ರೀಯ ಭಾವನೆಯನ್ನು ಪ್ರಕಟಿಸುವಂತಿರಲಿಲ್ಲ. ಆಳರಸರ ಮನೋಧರ್ಮವನ್ನು, ಅವರು ಎಸಗುತ್ತಿದ್ದ ಅನ್ಯಾಯ, ಅನಾಚಾರ, ಅಧರ್ಮಗಳನ್ನು ಟೀಕಿಸಿದರೆ ಅವರನ್ನು ಹತ್ತಿಕುವುದು, ಅಂದಿನ ಬ್ರಿಟಿಷ್ ಸರಕಾರದ ನೀತಿಯಾಗಿತ್ತು. ವೈಯಕ್ತಿಕವಾಗಿಯಾಗಲೀ ಸಾಮೂಹಿಕವಾಗಿಯಾಗಲೀ ಏನನ್ನೂ ರಾಷ್ಟ್ರಪ್ರೇಮದ ಹೆಸರಿನಲ್ಲಿ ಮಾಡುವಂತಿರಲಿಲ್ಲ. ಇಂತಹ ಕಷ್ಟ ಪರಿಸ್ಥಿತಿಯಲ್ಲಿ ದಿಟ್ಟ ಹೆಜ್ಜೆಯನ್ನಿಡಲು ದಾರಿ ತೋರಿದವರು ಭಾರತೇಂದು ಹರಿಶ್ಚಂದ್ರ. ಅವರು ನೇರವಾಗಿ ಸರ್ಕಾರವನ್ನು ಟೀಕಿಸಿ ರಾಷ್ಟ್ರಪ್ರೇಮವನ್ನು ಚೇತನಗೊಳಿಸಿದರೆ ಅಂತಹ ನಾಟಕವನ್ನು ಆಡಲು ಸರ್ಕಾರ ಬಿಡುತ್ತಿರಲಿಲ್ಲ. ಅಂತಹ ಪುಸ್ತಕವನ್ನು ಪ್ರಕಟಿಸಲು ಬಿಡುತ್ತಿರಲಿಲ್ಲ. ಹರಿಶ್ಚಂದ್ರರು ಇದನ್ನು ಪರೋಕ್ಷವಾಗಿ ಮಾಡಿದರು. ಅಂದಿನ ಭಾಷಾ ಪ್ರೇಮ, ಸಾಹಿತ್ಯ ಪ್ರೇಮ, ಕಲಾ ಪ್ರೇಮ ಎಲ್ಲವೂ ರಾಷ್ಟ್ರೀಯ ಪ್ರಜ್ಞೆಯನ್ನು ಮೂಡಿಸುವ ಸಾಧನಗಳಾದವು. ’ನಿಜ ಭಾಷಾ ಉನ್ನತಿಯೇ ಸರ್ವ ಉನ್ನತಿಗೆ ಆಧಾರ’ ಎಂಬ ಘೋಷಣೆಯನ್ನು ಮೊಳಗಿಸಿ ಭಾಷೆಗೊಂದು ಹೊಸ ಸ್ವರೂಪವನ್ನು ನೀಡಿ ಖಚಿತವಾದ ಶೈಲಿಯನ್ನು ರೂಢಿಸಿಕೊಟ್ಟರು ಭಾರತೇಂದು. ಅವರಿಗೆ ಪರಂಪರಾಗತವಾಗಿ ಬಂದ ಭಾಷೆ ಬ್ರಜ ಭಾಷೆ. ಸುಮಾರು ಐದು ಶತಮಾನಗಳಿಂದ ಬ್ರಜ ಭಾಷೆಯೊಂದರಲ್ಲಿಯೇ ಕವಿಗಳು ಕಾವ್ಯವನ್ನು ರಚಿಸುತ್ತಿದ್ದರು. ಅದು ಪ್ರೀತಿ, ಸ್ನೇಹ, ಸೌಂದರ್ಯದ ಅನುಭವ ಇಂತಹ ವಿಷಯಗಳಿಗೆ ಸೊಗಸಾದ ಮಾಧ್ಯಮವಾಗಿತ್ತು; ಆದರೆ ಜೀವನದ  ಕಷ್ಟ, ನೋವುಗಳನ್ನೂ ನಾನಾ ಮುಖವಾಗಿ ಸಮಾಜವನ್ನು ಕಾಡುತ್ತಿದ್ದ ಸಹಸ್ರಾರು ಸಮಸ್ಯೆಗಳನ್ನೂ ಹೇಳುವಲ್ಲಿ ಆ ಭಾಷೆಗೆ ತಕ್ಕಷ್ಟು ಸಾಮರ್ಥ್ಯವಿಲ್ಲ ಎಂದು ತೋರಿತು ಭಾರತೇಂದು ಅವರಿಗೆ. ಅದರಿಂದಲೇ ಆಧುನಿಕ ಗದ್ಯ ಶೈಲಯನ್ನು ರೂಪಿಸುವಾಗ ’ಖಡೀ ಬೋಲೀ’ ಎಂಬ ಹಿಂದಿಯ ರೂಪವನ್ನು ಆರಿಸಿಕೊಂಡರು. ಅದರಲ್ಲಿದ್ದ ಕುಂದುಕೊರತೆಗಳನ್ನು ಗುರುತಿಸಿ, ಅದರಲ್ಲಿ ಹೊಸತನವನ್ನು ತಂದರು. ಗದ್ಯಶೈಲಿಯ ಜನಕನೆಂದು ಅವರು ಖ್ಯಾತಿ ಪಡೆದರು. ಇಷ್ಟಾದರೂ ಕಾವ್ಯದಲ್ಲಿ ಹಳೆಯ ಬ್ರಜ ಭಾಷೆಯನ್ನೇ ಬಳಸಿದರು. ನಾಟಕ ಹಾಗೂ ಚಂಪೂ ಕಾವ್ಯಗಳಲ್ಲಿ ಗದ್ಯ ಭಾಗವನ್ನು ಖಡೀ ಬೋಲೀಯಲ್ಲಿಯೂ ಪದ್ಯಭಾಗವನ್ನು ಬ್ರಜ ಭಾಷೆಯಲ್ಲಿಯೂ ಬರೆಯಲು ಇದೇ ಕಾರಣವಾಯಿತು.

ಇತಿಹಾಸದ ಅಧ್ಯಯನ, ನಿರೂಪಣೆ

ಸಾಹಿತ್ಯದಲ್ಲಿ ರಾಷ್ಟ್ರೀಯ ಚೇತನವು ಮೂರು ಮುಖವಾಗಿ ಗೋಚರಿಸುತ್ತದೆ. ಒಂದು : ಹಿಂದಿನ ಚರಿತ್ರೆಯ ಸ್ಮರಣೆ, ಹಿಂದಿನ ಆದರ್ಶಗಳು, ಸಾಧನೆಗಳು, ಹಿರಿಯರ ನೆನಪು. ಎರಡನೆಯದು : ನಾನಿರುವ ಕಾಲದಲ್ಲಿ ನಮ್ಮ ಸ್ಥಿತಿ ಮತ್ತು ಕಷ್ಟ ನಿಷ್ಠುರಗಳ ಪ್ರಜ್ಞೆ ಮೂರನೆಯದು : ಮುಂದೆ ನಮ್ಮ ಜನದ ಜೀವನ ಉತ್ತಮಗೊಳ್ಳಲು ಏನು ಮಾಡಬೇಕೆಂಬ ಚಿಂತನೆ. ಈ ಮೂರರ ಮಹತ್ವವನ್ನು ಅರಿತಿದ್ದ ಬ್ರಿಟಿಷ್ ಶಾಸಕರು ಚಾಣಾಕ್ಷರಾದುದರಿಂದಲೇ ಒಂದು ಹೊಸ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತಂದರು. ಇದು ಭಾರತದ ವಿದ್ಯಾರ್ಥಿಗಳಿಗೆ ಹಿಂದಿನ ಚರಿತ್ರೆಯಲ್ಲಿ ಆಸಕ್ತಿ ಹುಟ್ಟುವಂತಿರಲಿಲ್ಲ, ತಮ್ಮ ಕಾಲದಲ್ಲಿನ ದಾಸ್ಯ, ಅಜ್ಞಾನ, ಬಡತನ ಮೊದಲಾದುವನ್ನು ಕುರಿತು ಚಿಂತೆ ಬರುವಂತಿರಲಿಲ್ಲ, ಭವಿಷ್ಯದಲ್ಲಿ ದಾಸ್ಯದಿಂದ ಬಿಡಿಸಿಕೊಂಡು ಸುಖ ಸಂಪತ್ತುಗಳ ಭಾರತವನ್ನು ಕಟ್ಟುವುದು ಹೇಗೆ ಎಂಬ ಯೋಚನೆ ಮಾಡುವಂತಿರಲಿಲ್ಲ. ಅವರಿಗೆ ಬರೀ ನಿರಾಸೆಯೇ. ಭಾರತೀಯ ಭಾಷೆಗಳ ಸಾಹಿತ್ಯವನ್ನು ಹತ್ತಿಕ್ಕಿ ಇಂಗ್ಲಿಷ್ ಭಾಷೆಯ ಕಲಿಕೆಗೆ ಪ್ರೋತ್ಸಾಹವನ್ನು ಕೊಟ್ಟರು. ಇರುವ ಇತಿಹಾಸವನ್ನೂ, ಅದರಲ್ಲಿ ಹೊರ ಹೊಮ್ಮುವ ಆದರ್ಶಗಳನ್ನೂ ವಿರೂಪಗೊಳಿಸಿ ಅದು ಅನುಪಯೋಗಿ ಎಂಬುವಂತೆ ಬರೆಸಿದರು. ಸಾಂಪ್ರದಾಯಿಕ ಭೇದಭಾವಕ್ಕೆ ಇಂಬುಗೊಟ್ಟು ಒಡೆದು ಆಳುವ ನೀತಿಯಿಂದಾಗಿ ದಿನಬೆಳಗಾದರೆ ಹಿಂದುಗಳೂ ಮುಸಲ್ಮಾನರೂ ಪರಸ್ಪರ ಕಚ್ಚಾಡುತ್ತಿರುವಂತೆ ವಾತಾವರಣವನ್ನು ನಿರ್ಮಿಸಿದರು. ಎರಡೂ ಕೋಮಿನಲ್ಲಿದದ ನೇತಾರರನ್ನು ಗುರುತಿಸಿ ಅವರನ್ನು ಶಾಂತಿ ಶಿಸ್ತಿನ ಹೆಸರಿನಲ್ಲಿ ಜೈಲಿಗೆ ತಳ್ಳಿ ನಿರಾಸೆಯನ್ನು ರೂಢಿಸುತ್ತಿದ್ದರು.

ಆದ್ದರಿಂದಲೇ ಭಾರತೇಂದುಜೀಯವರು ಭಾರತೀಯರೇ ತಮ್ಮ ದೇಶದ ಚರಿತ್ರೆಯನ್ನು ಅಭ್ಯಾಸ ಮಾಡಿ ಚರಿತ್ರೆಯ ಪುಸ್ತಕಗಳನ್ನು ಬರೆಯುವುದರ ಆವಶ್ಯಕತೆಯನ್ನು ಕಂಡುಕೊಂಡರು. ಅದಕ್ಕಾಗಿ ಸ್ವತಃ ಸಂಶೋಧನೆಯನ್ನು ನಡೆಸಿದರು. ಪುರಾತತ್ವ ಹಾಗೂ ಇತಿಹಾಸವನ್ನು ಆಳವಾಗಿ ಅಭ್ಯಾಸ ಮಾಡಿದರು. ’ಕಾಶ್ಮೀರ ಕುಸುಮ’ ಎಂಬುದು ಅವರು ಬರೆದ ಮೊದಲ ಇತಿಹಾಸ ಗ್ರಮಥ. ಅದರಲ್ಲಿ ಹನ್ನೆರಡನೆಯ ಶತಮಾನದ ಪ್ರಸಿದ್ಧ ದೊರೆ ಜಯಸಿಂಹನಿಂದ ಮೊದಲ್ಗೊಂಡು ತಮ್ಮ ಕಾಲದವರೆಗಿನ ಕಾಶ್ಮಿರದ ಚರಿತ್ರೆಯನ್ನು ಬರೆದಿದ್ದಾರೆ. ಇದರಂತೆ ಮಹಾರಾಷ್ಟ್ರದ ಇತಿಹಾಸ, ಬೂಂದೀ ರಾಜವಂಶ ಮುಂತಾದ ಸಣ್ಣಪುಟ್ಟ ಇತಿಹಾಸ ಕೃತಿಗಳನ್ನು ಬರೆದರು. ಮೇವಾಡದ ರಾಜವಂಶದ ಇತಿಹಾಸವನ್ನು ’ಉದಯ ಪುರೋದಯ’ ಎಂಬ ಹೆಸರಿನಿಂದ ಬರೆದರು. ಮಹಮ್ಮದರ ಜನ್ಮದಿಂದ ಹಿಡಿದು ಭಾರತದಲ್ಲಿ ಮುಸ್ಲಿಮರು ರಾಜ್ಯವನ್ನು ಸ್ಥಾಪಿಸಿದ ಹಾಗೂ ರಾಜ್ಯವನ್ನು ಕಳೆದುಕೊಂಡು ಕೇವಲ ಇಸ್ಲಾಂ ಧರ್ಮವನ್ನು ಮಾತ್ರ ಉಳಿಸಿಕೊಂಡ ಇತಿಹಾಸವನ್ನು ’ಬಾದಶಾಹ ದರ್ಪಣ’ ಎಂಬ ಹೆಸರಿನಿಂದ ಬರೆದು ಪ್ರಕಟಿಸಿದರು. ಲಾರ್ಡ್ಲಿಟನ್ ದೆಹಲಿಯಲ್ಲಿ ೧೮೭೭ ರಲ್ಲಿ ನಡೆಸಿದ ಮೊದಲ ದರ್ಬಾರಿನ ಇತಿಹಾಸವನ್ನು ’ದಿಲ್ಲೀ ದರ್ಬಾರ್ ದರ್ಪಣ’ ಎಂಬ ಹೆಸರಿನಲ್ಲಿ ಬರೆದರು.

ಇಸ್ಲಾಂ ಧರ್ಮದ ಮುಖ್ಯವಾದ ಐದು ಮಹಾತ್ಮರ ಜೀವನ ಚರಿತ್ರೆಯನ್ನು ’ಪಂಚ ಪವಿತ್ರ ಆತ್ಮಾ’ ಎನ್ನುವ ಅಂಕಿತದಲ್ಲಿ ಬರೆದರು. ಇದರಲ್ಲಿ ಪೈಗಂಬರ್ ಮಹಮ್ಮದ್, ಬೀಬೀ ಫಾತಿಮಾ, ಅಲೀ, ಇಮಾಂಹಸನ್ ಮತ್ತು ಇಮಾಂ ಹುಸೈನ್ ಇವರ ಜೀವನ ಚರಿತ್ರೆಇದೆ.

ಪ್ರಾಚೀನ ಪ್ರಶಸ್ತಿಗಳನ್ನೂ ದಾನಪತ್ರಗಳನ್ನೂ ಸಂಗ್ರಹಿಸಿ ಸಂಶೋಧಿಸಿ ಹದಿನಾರು ಲೇಖನಗಳನ್ನು ಬರೆದರು. ಅವು ’ಪುರಾತತ್ವ ಸಂಗ್ರಾಹ’ ಎಂಬ ಹೆಸರಿನಲ್ಲಿ ಅಚ್ಚಾದವು. ವಾಲ್ಮೀಕಿ ರಾಮಾಯಣದ ಕಾಲ ನಿರ್ಣಯವನ್ನು ಮಾಡಲು ’ರಾಮಾಯಣ ಕಾ ಸಮಯ್’ ಎಂಬುದನ್ನು ರಚಿಸಿದರು. ಜಗತ್ತಿನ ಪ್ರಮುಖ ಹಾಗೂ ಪ್ರೇರಕ ಘಟನೆಗಳನ್ನು ಕುರಿತು ಬರೆದ ಕೃತಿ ’ಕಾಲಚಕ್ರ’, ’ಚರಿತಾವಲೀ’ ಎಂಬ ಗ್ರಂಥದಲ್ಲಿ ವಿಕ್ರಮಾದಿತ್ಯ, ಕಾಳಿದಾಸ, ಶಂಕರಾಚಾರ್ಯ, ರಾಮಾನುಚಾಜಾರ್ಯ ಮುಂತಾದ ಹದಿನಾರು ಮಹಾನುಭಾವರ ಜೀವನ ಗಾಥೆಯನ್ನೂ, ಫ್ರಾನ್ಸ್ ದೇಶದ ಸಂತ ಫ್ರಾನ್ಇಸಸ್ ಮತ್ತು ಮೂರನೇ ನೆಪೋಲಿಯನ್, ಜರ್ಮನಿಯ ಐದನೇ ಚಾರ್ಲ್ಸ್ ಮತ್ತು ಫ್ರೆಡರಿಕ್ ವಿಲಿಯಮ್ಸ್ ಇವರ ಸಾಧನೆಗಳನ್ನೂ, ಮಲ್ಹಾರಿರಾವ್ ಹೋಳ್ಕರ್, ಟೀಪೂಸುಲ್ತಾನ್ ಇವರ ಚರಿತ್ರೆಯನ್ನೂ ಬರೆದಿದ್ದಾರೆ.

ಭಾರತೇಂದು ಅವರು ವ್ಯಾಸರು ಬರೆದಿರುವ ಹದಿನೆಂಟು ಪುರಾಣಗಳ ವಿಷಯಸೂಚಿಯನ್ನೂ, ಫಲಶ್ರುತಿಯನ್ನೂ ಸಂಗ್ರಹಿಸಿ ’ಅಷ್ಟಾದಶ ಪುರಾಣೋಂ ಕೀ ಉಪಕ್ರಮಣಿಕಾ’ ಎಂಬ ಗ್ರಂಥವನ್ನು ಬರೆದರು.

ಭಾರತೇಂದು ಹರಿಶ್ಚಂದ್ರರು ಪ್ರಶಸ್ತಿ ಸಂಗ್ರಹ, ಶ್ರುತಿರಹಸ್ಯ, ನಾರದ ಭಕ್ತಿಸೂತ್ರ, ಚತುಃಶ್ಲೋಕೀ ಭಾಗವತ ಮುಂತಾದ ಧಾರ್ಮಿಕ ಗ್ರಂಥಗಳನ್ನು ಖುರಾನಿನ ಆಯ್ದ ಭಾಗಗಳ ಹಿಂದೀ ಭಾಷಾಂತರವನ್ನೂ ರಚಿಸಿದದಾರೆ. ಭಕ್ತಮಾಲಾ ಎಂಬ ಗ್ರಂಥದಲ್ಲಿ ಅನೇಕ ಮುಸಲ್ಮಾನ ಭಕ್ತಕವಿಗಳನ್ನು ಉಲ್ಲೇಖಿಸಿ ಅವರ ಬಗ್ಗೆ ತಮ್ಮ ಅಪಾರ ಗೌರವವನ್ನು ತೋರಿಸಿದ್ದಾರೆ.

ಇವರ ಹಾಸ್ಯ ಹಾಗೂ ವ್ಯಂಗ್ಯ ಪ್ರಧಾನ ಲೇಖನಗಳೂ, ಕಾಯಗಳೂ ಸಾಕಷ್ಟ ಸಂಖ್ಯೆಯಲ್ಲಿವೆ. ಆದರೆ ಎಲ್ಲವೂ ಸಂಪೂರ್ಣವಾಗಿ ಸಂಗ್ರಹವಾಗಿಲ್ಲ. ಸೀತಾ ವರನಿರ್ಣಯ, ಕೃಷ್ಣಭೋಗ, ಸ್ವರ್ಗದಲ್ಲಿ ವಿಚಾರಸಭೆ ಮುಂತಾದ ಕೃತಿಗಳನ್ನು ಇಲ್ಲಿ ಹೆಸರಿಸಬಹುದು.

ಕವಿ ಭಾರತೇಂದು

ಭಾರತೇಂದು ಹುಟ್ಟು ಕವಿಗಳು. ಕಾವ್ಯರಚನೆ ಅವರಿಗೆ ವಂಶಪಾರಂಪರ್ಯವಾಗಿ ಬಂದಿತ್ತು. ಇವರ ತಂದೆ ಗೋಪಾಲ ಚಂದ್ರರು ಗಿರಿಧರದಾಸ ಎಂಬ ಅಂಕಿತದಲ್ಲಿ ಕಾವ್ಯವನ್ನು ರಚಿಸುತ್ತಿದ್ದರು. ಪ್ರಸಿದ್ಧ ವೈಷ್ಣವ ಭಕ್ತರು. ಅವರು ಪ್ರತಿದಿನ ಕನಿಷ್ಠಪಕ್ಷ ಐದು ಕೀರ್ತನೆಗಳನ್ನು ರಚಿಸಿ ಹಾಡಿ ಊಟ ಮಾಡುತ್ತಿದ್ದರಂತೆ. ಭಾರತೇಂದು ಹರಿಶ್ಚಂದ್ರರಿಗೆ ಈ ಕಾವ್ಯರಚನೆ ರಕ್ತಗತವಾಗಿ ಬಂದಿತ್ತು. ತಂದೆ ನಲವತ್ತು ಕೃತಿಗಳನ್ನು ರಚಿಸಿದ್ದಾರೆ, ಈ ಮಗ ವೈಷ್ಣವ ಭಕ್ತಿಗೆ ಸಂಬಂಧಪಟ್ಟಂತೆ ನಲವತ್ತೊಂದು ಕೃತಿಗಳನ್ನೂ, ರಾಜಭಕ್ತಿ ಹಾಗೂ ರಾಷ್ಟ್ರಭಕ್ತಿಯನ್ನು ವಿಷಯವಾಗುಳ್ಳ ಹನ್ನೆರಡು ರಚನೆಗಳನ್ನೂ, ಹೋಲೀ, ಮಧು ಮುಕುಲ, ಪ್ರೇಮ ಫುಲವಾರೀ ಮುಂತಾದ ಶೃಂಗಾರರಸ ಪ್ರಧಾನ ಕವನಗಳನ್ನೂ ರಚಿಸಿದ್ದಾರೆ. ಕವಿ ಬಿಹಾರೀಲಾಲನ ದೋಹಾ ಎಂಬ ಪುಟ್ಟ ಛಂದಸ್ಸಿನಲ್ಲಿ ರಚಿತವಾದ ’ಸತಸ ಈ’ ಎಂಬ ಕೃತಿಯಿಂದ ಕೆಲವು ಪದ್ಯಗಳನ್ನು ಆಯ್ದು ಅದರ ಭಾವವನ್ನು ವಿಸ್ತಾರವಾದ ’ಕುಂಡಲಿನಿ’ ಛಂದಸ್ಸಿನಲ್ಲಿ ವ್ಯಾಖ್ಯಾನಿಸಿದ್ದಾರೆ. ಈ ಪದ್ಯಾನುವಾದದಲ್ಲಿ ೮೫ ದೋಹಗಳಿವೆ ಹಾಗೂ ಕಂಡಲಿನಿಗಳಿವೆ. ೧೮೭೭ ನೇ ಇಸವಿ ಜೂನ್ ತಿಂಗಳಲ್ಲಿ ಪ್ರಯಾಗದಲ್ಲಿ ನಡೆದ ’ಹಿಂದೀ ವರ್ಧಿನೀ ಸಭಾ’ ಎಂಬುದರ ಅಧ್ಯಕ್ಷತೆಯನ್ನು ಭಾರತೇಂದು ಹರಿಶ್ಚಂದ್ರರು ವಹಿಸಿದ್ದರು. ಆಗ ಅಧ್ಯಕ್ಷ ಭಾಷಣವನ್ನು ಪದ್ಯಗಳಲ್ಲಿ ಮಾಡಿದರು! ಒಂದೊಂದು ಪದ್ಯದಲ್ಲೂ ಅವರ ಭಾಷಾ ಪ್ರೇಮ ಮತ್ತು ದೇಶಭಕ್ತಿ ಪುಟಿದು ಕಾಣಿಸುತ್ತಿದೆ. “ಎಲ್ಲಿ ಸಹೋದರರೆಲ್ಲ ಸೇರಿ ತಮ್ಮ ಭಾಷೆಯ ಉನ್ನತಿಗಾಗಿ ಸಂಕಲ್ಪ ಮಾಡಲಿರುವರೊ ಆ ಪ್ರದೇಶ ಧನ್ಯ. ತನ್ನ ಭಾಷೆಯ ಏಳಿಗೆ ತನ್ನ ಎಲ್ಲ ಏಳಿಗೆಗೂ ಆಧಾರ. ತನ್ನ ಭಾಷೆಯ ಜ್ಞಾನದಿಂದಲ್ಲದೆ ಹೃದಯದ ನೋವು ಸಮಾಧಾನವನ್ನೂ ಶಾಂತಿಯನ್ನೂ ಪಡೆಯಲಾರದು. ಕೆಲವು ಸಂಸ್ಕೃತವನ್ನು ಅಭ್ಯಾಸಮಾಡಿ ಪಂಡಿತರಾಗಿದ್ದಾರೆ; ಆದರೆ ತಮ್ಮ ಮಾತೃಭಾಷೆಯ ಜ್ಞಾನವಿಲ್ಲದಿದ್ದರೆ ಅವರು ಮಾತನಾಡಬಲ್ಲರೇ? ಕಷ್ಟಪಟ್ಟು ಕೆಲವರು ಫಾರಸಿಯನ್ನು ಕಲಿತರು. ಕಷ್ಟಪಟ್ಟದ್ದರ ಫಲವೇನು? ಅವರು “ಆಬ್ ಆಬ್” ಎಂದು ಕಿರುಚಿದರೆ ಹತ್ತಿರವಿರುವ ನೀರು ಅವರಿಗೆ ಎಟಕಿದಂತೆ ಆದೀತೆ? (ಫಾರಸೀ ಭಾಷೆಯಲ್ಲಿ ಆಬ್ ಎಂದರೆ ನೀರು ಎಂದರ್ಥ) ತಾಯ್ನುಡಿಯ ಅರಿವಿಲ್ಲದವನು ಅಜ್ಞನಾಗಿಯೇ ಉಳಿಯುತ್ತಾನೆ. ನಾವು ಒಬ್ಬರೋ ಇಬ್ಬರೋ ಬೇರೆ ಭಾಷೆಗಳನ್ನು ಕಲಿತು ಇಷ್ಟು ಜ್ಞಾನ ಸಂಪಾದಿಸಬಹುದು; ಮನೆಮಂದಿಗೆಲ್ಲಾ ಅದರಿಂದೇನೂ ಪ್ರಯೋಜನವಾಗದು. ಸರ್ವರ ಏಳಿಗೆಗೆ ಅಡಿಪಾಯ ತಾಯ್ನುಡಿಯ ಜ್ಞಾನ. ವಿವಿಧ ಕಲೆಗಳು, ಅಪಾರ ಜ್ಞಾನ, ಶಿಸ್ತು ಎಲ್ಲವನ್ನೂ ಬೇರೆ ಭಾಷೆಗಳಿಂದ ಕಲಿತು ತನ್ನ ತಾಯ್ನುಡಿಯ ಸಿರಿವಂತಿಕೆಯನ್ನು ಹೆಚ್ಚಿಸಬೇಕು. ಇದೇ ವಿಕಾಸದ ಸೋಪಾನ. ಸೋದರರೇ, ನಿಮ್ಮ ಭಾಷೆಯನ್ನು ಯತ್ನಪೂರ್ವಕವಾಗಿ ಜಗತ್ತಿನಲ್ಲಿ ಪ್ರಚಾರ ಮಾಡಿ. ರಾಜಕಾರ್ಯ, ನ್ಯಾಯಾಲಯ ಎಲ್ಲೆಲ್ಲೂ ನಿಮ್ಮ ಭಾಷೆಗೆ ಗೌರವಪೂರ್ಣ ಸ್ಥಾನ ದೊರಕಿಸಲು ಯತ್ನಿಸಿ. ಆಗ ನಿಮಗೆ ಗೌರವ ಬರುವುದು. ಜಗತ್ತಿನ ಯಾವ ರಾಷ್ಟ್ರವನ್ನು ಬೇಕಾದರೂ ನೋಡಿ. ಅದರ ವಿಕಾಸ, ಬಲ, ಬುದ್ಧಿ, ಧನಸಂಪತ್ತಿ, ವೈಜ್ಞಾನಿಕ ಪ್ರಗತಿಯನ್ನು ನೋಡಿ. ನಮ್ಮ ದೇಶದ ಹೀನಸ್ಥಿತಿಯನ್ನೂ ನೋಡಿ. ಎದ್ದೇಳಿ, ತ್ವರೆಮಾಡಿ, ದುಃಖದೈನ್ಯವನ್ನು ತೊಲಗಿಸಿ ಅದಕ್ಕೆ ಮೊದಲು ನಿಮ್ಮ ಭಾಷೆಯ ಏಳಿಗೆ-ಸರ್ವವಿಧ ವಿಕಾಸವನ್ನು ಸಾಧಿಸಿ. ಅದೇ ಎಲ್ಲಕ್ಕೂ ನಾಂದಿ. ಅದೇ ಅಡಿಪಾಯ”.

ಅವರ ಅಧ್ಯಕ್ಷಭಾಷಣದಲ್ಲಿ ಅವರು ಹೇಳಿದ ವಿಷಯಗಳು ಇವು. ಇಲ್ಲಿ ಸಾಮಾನ್ಯವಾಗಿ ಭಾರತೇಂದು ಹರಿಶ್ಚಂದ್ರರ ವ್ಯಾವಹಾರಿಕ ಜೀವನದ ಆಸೆ ಆಕಾಂಕ್ಷೆಗಳ ಸಂದೇಶವನ್ನಿತ್ತರೆ, ಅವರ ಆಂತರಿಕ ಅಂದರೆ ಆತ್ಮದ ಮೊರೆ, ಭಕ್ತ ಹೃದಯದ ಅನಿಸಿಕೆಗಳೂ ಅನುಭವಾರೂಢವಾದುದರಿಂದ ಹೃದಯಸ್ಪರ್ಶಿಯಾಗಿವೆ. ಭಾರತೇಂದು ಹರಿಶ್ಚಂದ್ರರು ವೈಷ್ಣವರು. ರಾಧಾವಲ್ಲಭ ಅವರ ಉಪಾಸ್ಯ. ವಲ್ಲಭಾಚಾರ್ಯರು ಗುರುಗಳು. ಆದುದರಿಂದ ಶ್ರೀ ವಲ್ಲಭರಲ್ಲಿ ಅವರದು ಅನನ್ಯ ಭಕ್ತಿ

ಭಕ್ತ, ಕವಿ

ಭಗವಂತನಿಗೂ ಭಕ್ತನಿಗೂ ಅಜಗಜಾಂತರವಿದೆ ಎಂಬುದು ಅವರ ನಂಬಿಕೆ. ನನ್ನ ಅವಗುಣಗಳಿಗೂ ನಿನ್ನ ಗುಣಗಳಿಗೂ ಲೆಕ್ಕವಿದೆಯೆ ಎಂದು ಹೇಳುವಾಗ, ಜೀವನಿಗೂ ಈಶನಿಗೂ ಇರುವ ಭೇದವನ್ನು ತಿಳಿಸುವುದರ ತಾತ್ಪರ್ಯ ಮಾನವರ ಉದ್ಧಾರಕ್ಕೆ ಇರುವ ಒಂದೇ ಮಾರ್ಗ – ಭಕ್ತಿ. ಇದರಿಂದ ಪರಮಾತ್ಮನ ಮನಸ್ಸು ಕರಗಬೇಕು. ಅವನು ಅನುಗ್ರಹಿಸಬೇಕು. ಅದಕ್ಕಾಗಿ ದೈನ್ಯ.

“ಪ್ರಿಯತಮ! ನನ್ನನ್ನು ಪರೀಕ್ಷಿಸಬೇಡ. ನಾನು ಪರೀಕ್ಷೆಗೆ ಅರ್ಹನಲ್ಲ. ನೀನೇ ಮನಸ್ಸಿನಲ್ಲಿ ಯೋಚಿಸಿ ನೋಡು.

ಪಾಪದ ಕಾರಣ ಹುಟ್ಟಿದೆ; ಪಾದಲ್ಲೆ ಇಡೀ ಜೀವನ ಕಳೆಯಿತು.

ನಿನ್ನೆದುರು ಬಂದು ಈಗ ನ್ಯಾಯದ ತಕ್ಕಡಿಯಲ್ಲಿ ನನ್ನನ್ನು ತೂಗೆಂದು ಕೇಳಿಕೊಳ್ಳುವುದು ಹೇಗೆ? ಕೀಟಕ್ಕಿಂತಲೂ ಕೀಳು, ಅತಿ ಅಧಮ, ಅಜ್ಞಾನಿ ಎಲ್ಲ ಬಗೆಯಲ್ಲೂ  ದೀನ ಹೀನ. ಅಂಥವನನ್ನು ಒರೆಹಚ್ಚಲು ಹೋದರೆ ಅವ ಹೇಗೆ ತಾನೆ ಅದನ್ನು ಎದುರಿಸಬಲ್ಲ! ಹೇ ದಯಾನಿಧೆ! ಭಕ್ತವತ್ಸಲ! ಕರುಣಾಮಯ! ಭವಭಯ ಹಾರೀ! ನೋಡು ದುಃಖಿಯಾದ ಈ ಹರಿಶ್ಚಂದ್ರನನ್ನು ಕೈಹಿಡಿದು ಉದ್ಧರಿಸು” ಎಂದು ತಮ್ಮ ನೂರಾರು ಪದ್ಯಗಳಲ್ಲಿ ದೈನ್ಯರಾಗಿ ಬೇಡಿಕೊಂಡಿದ್ದಾರೆ. ಭಗವಂತನ ಕೃಪೆಯನ್ನು ಯಾಚಿಸುವಾಗ ಅಜಾಮಿಳ, ಗಜೇಂದ್ರ ಮುಂತಾದವರ ದೃಷ್ಟಾಂತವೂ, ಅವರನ್ನು ಉದ್ಧರಿಸಿದಂತೆ ತನ್ನನ್ನೂ ಉದ್ಧರಿಸಬೇಕೆಂಬ ಆಗ್ರಹವೂ ಎದ್ದು ಕಾಣುತ್ತದೆ. ತನ್ನ ನಿಷ್ಠೆಯನ್ನು ಹೇಳಿಕೊಳ್ಳುವಲ್ಲಿ ಏನೂ ಸಂಕೋಚಪಟ್ಟಿಲ್ಲ. ಪ್ರೇಮ ಫುಲವಾರೀ ಎಂಬ ರಚನೆಯಲ್ಲಿ “ಚಂದ ಮಿಟೈ, ಸೂರಜ ಮಿಟೈ ಮಿಟೈ ಜಗತ ಕೇ ನೇಮ! ಯಹ ಶ್ರೀ ಹರೀಚಂದ ಕೋ ಮಿಟೈನ ಅವಿಚಲ ಪ್ರೇಮ” (ಅಂದರೆ, ಚಂದ್ರನು ಅಳಿಯಬಹುದು, ಸೂರ್ಯನೂ ಅಳಿಯಬಹುದು. ಜಗತ್ತಿನ ನಿಯಮಗಳು ಅಳಿದು ಹೋಗಬಹುದು. ಆದರೆ ಶ್ರೀ ಹರಿಶ್ಚಂದ್ರನ ದೃಢವಾದ ಅವಿಚಲ ಪ್ರೇಮವಂತೂ ಅಳಿಯುವುದಿಲ್ಲ) ಎನ್ನುತ್ತಾರೆ. ಇಂತಹ ಪ್ರೇಮಭಾವ ಪ್ರಧಾನ ಭಕ್ತಿಯಿಂದ ಪ್ರೇರಿತರಾಗಿ ಅನೇಕ ಗೀತೆಗಳನ್ನು ಹಾಡಿದ್ದಾರೆ. ಕೃಷ್ಣ, ರಾಧಾ, ಗೋಪಿಯರು ಇವರನ್ನೂ ವೃಂದಾವನ, ಕೃಷ್ಣನ ಕೊಳಲು, ಯಮುನೆ ಮುಂತಾದುವನ್ನೂ ಕುರಿತು ಹಾಡಿರುವ ಗೀತೆಗಳು ರಸಪುಷ್ಟಿಯಿಂದ ಸಹೃದಯರ ಮನಸೆಳೆಯುವಂತಿವೆ.

ಬಕರೀವಿಲಾಪ

ವೈಷ್ಣವಭಕ್ತರ ಹೃದಯ ಕುಸುಮಕೋಮಲ. ಅದು ಹಿಂಸೆಯನ್ನು ಎಂದೂ ಸಹಿಸದು. ಅದನ್ನು ಖಂಡಿಸಿ ಪ್ರೇಮದ ವಿಕಾಸಕ್ಕೆ ಕಾರಣವಾದ ದಯೆಯನ್ನು ಎತ್ತಿಹಿಡಿಯುವುದು ಅವರ ನಯಜ ಮನೋಧರ್ಮ. ಹರಿಶ್ಚಂದ್ರ ’ಬಕರೀವಿಲಾಪ’ ಎಂಬುದು ಇದಕ್ಕೆ ದೃಷ್ಟಾಂತವಗಿದೆ.

ಈ ಕೃತಿ ಒಂದು ಕುರಿಯ ದುಃಖವನ್ನು ನಿರೂಪಿಸುತ್ತದೆ. ನವರಾತ್ರಿಯ ಕಾಲ. ಶರದೃತುವಿನಲ್ಲಿ ಧೂಳೆಲ್ಲ ಅಡಗಿದೆ. ಜನರಿಗೆಲ್ಲ ಹಬ್ಬದ ಸಂಭ್ರಮ. ದುರ್ಗಾ ಮಾತೆಯ ಪೂಜೆಯ ಸಂಭ್ರಮ. ಇಂತಹ ಸಂತೋಷದ ಸಮಯದಲ್ಲಿ ಈ ಪ್ರಾಣಿಯ ಪಾಲಿಗೆ ಬರೀ ಸಂಕಟ-ಕಾರಣ ಅದರ ಪುಟ್ಟ ಮುದ್ದುಮರಿಯನ್ನು ಮನುಯರು ಬಲಿ ಕೊಡುತ್ತಿದ್ದಾರೆ. “ಅಯ್ಯೋ, ಈ ಕೆಟ್ಟ ಶರದೃತು ಏಕೆ ಬಂದಿತೋ! ಈ ಮನುಷ್ಯರಿಗೂ ಮಕ್ಕಳಿಲ್ಲವೇ? ತಂದೆತಾಯಿಯರೇ, ನನ್ನ ದುಃಖವನ್ನು ನೋಡಿ. ನಾನೂ ನನ್ನ ಮಕ್ಕಳೂ ತಿನ್ನುವುದು ಹಿಡಿಹುಲ್ಲು, ಯಾರಿಗೂ ತೊಂದರೆ ಕೊಡುವುದಿಲ್ಲ. ಮನುಷ್ಯರಿಗೆ ಎಷ್ಟೋ ಸಹಾಯ ಮಾಡುತ್ತೇವೆ. ಇಷ್ಟಾದರೂ ನಮ್ಮನ್ನೆ ಅವರು ಕೊಲ್ಲುತ್ತಾರೆ. ಹೆಂಗಸರಾದರೂ ದಯೆ ತೋರಿಸುವರೋ ಎಂದರೆ ಅವರು ತಮ್ಮ ಗಂಡಂದಿರೊಂದಿಗೆ ಈ ಕ್ರೂರ ಕೆಲಸದಲ್ಲಿ ಭಾಗವಹಿಸುತ್ತಾರೆ. ಪ್ರಸಾದ ಎಂದು ನಮ್ಮನ್ನು ಹರಿದು ತಿನ್ನುತ್ತಾರೆ” ಎಂದು ಗೋಳಿಡುತ್ತದೆ. ಇಂತಹ ಕ್ರೂರ ಕೃತ್ಯಕ್ಕೆ ಧರ್ಮದ ಹೆಸರಿಡುತ್ತಾರೆ ಮನುಯರು. ಎಂತಹ ಧರ್ಮ ಇವರದು, ಇದನ್ನು ಸಮರ್ಥಿಸುವ ಆಚಾರ್ಯರು ಎಂತಹ ಹಿರಿಯರು ಎನ್ನುತ್ತದೆ.

ನಾಟಕಕಾರ – ನಟ

ಮನರಂಜನೆಯ ಜೊತೆಯಲ್ಲಿ ಪರಿಣಾಮಕಾರಿಯಾಗಿ ತಮ್ಮ ವಿಚಾರವನ್ನು ಜನತೆಗೆ ಮುಟ್ಟಿಸಲು ಇರುವ ಸಾಧನಗಳಲ್ಲಿ ನಾಟಕ ಶ್ರೇಷ್ಠವೆಂದು ಭಾರತೇಂದು ನಂಬಿದ್ದರು. ಅವರು ಆಳವಾಗಿ ನಾಟ್ಯಶಾಸ್ತ್ರವನ್ನು ಅಭ್ಯಾಸಮಾಡಿ ಒಳ್ಳೆಯ ನಾಟಕವನ್ನು ಬರೆಯುವವರ ಹಾಗೂ ಅಭ್ಯಾಸ ಮಾಡುವವರ ಉಪಯೋಗಕ್ಕಾಗಿ ’ನಾಟಕ ಅಥವಾ ದೃಶ್ಯ ಕಾವ್ಯ’ ಎಂಬ ಪುಸ್ತಕವನ್ನು ಬರೆದರು.

ಭಾರತೇಂದು ಸ್ವತಃ ನಾಟಕದಲ್ಲಿ ಅಭಿನಯಿಸುತ್ತಿದ್ದರು. ಭಾರತೇಂದು ನಾಟಕ ಮಂಡಳಿ ಎಂಬ ಸಂಸ್ಥೆಯ ಮುಲಕ ತಾವು ಬರೆದ ಹಾಗೂ ಭಾಷಾಂತರಿಸಿದ ನಾಟಕಗಳನ್ನು ಆಡಿಸುತ್ತಿದ್ದರು. ಹರಿಶ್ಚಂದ್ರರು ರಂಗಭೂಮಿಯ ಮೇಲೆ ಮೊದಲು ಬಂದದ್ದು ಲಕ್ಷ್ಮಣನ ಪಾತ್ರಾಭಿನದಯಲ್ಲಿ. ಅದೊಂದು ಶುಭದಿನ. ಹಿಂದೀ ರಂಗಮಂಚದ ಇತಿಹಾಸದಲ್ಲಿ ಹಚ್ಚಹಸುರಾಗಿ ಸದಾ ನೆನಪಿನಲ್ಲಿರುವ ದಿನ. ೧೮೬೮ನೇ ಇಸವಿ ಏಪ್ರಿಲ್ ೩ರಂದು ಕಾಶೀಸಂಸ್ಥಾನದ ಮಹಾರಾಜ ಈಶ್ವರೀ ನಾರಾಯಣ ಪ್ರಸಾದ ಸಿಂಹರ ಅಪೇಕ್ಷೆಯಂತೆ ’ಜಾನಕೀ ಮಂಗಲ’ ಎಂಬ ನಾಟಕವನ್ನು ಅಭಿನಯಿಸಲು ರಂಗಸಜ್ಜಿಕೆ ನಡೆದಿತ್ತು. ಬಾಬು ಹರಿಶ್ಚಂದ್ರರ ಮಾರ್ಗ ದರ್ಶನದಲ್ಲಿ ಎಲ್ಲ ವ್ಯವಸ್ಥೆ ನಡೆದಿತ್ತು. ಆದರೆ ಲಕ್ಷ್ಮಣನ ಪಾತ್ರವನ್ನು ನಟಿಸಬೇಕಾಗಿದ್ದ ಹುಡುಗ ಕಾಯಿಲೆ ಮಲಗಿದ. ನಾಟಕವನ್ನು ನಿಲ್ಲಿಸುವ ಸ್ಥಿತಿ ಬಂತು. ಆದರೆ ಹರಿಶ್ಚಂದ್ರರು ಒಂದು ಘಂಟೆಯೊಳಗಾಗಿ ಇಡೀ ನಾಟಕದ ಸಂಭಾಷಣೆಗಳನ್ನು ಬಾಯಿಪಾಠ ಮಾಡಿ ಲಕ್ಷ್ಮಣನ ಪಾತ್ರವನ್ನು ಅಭಿನಯಿಸಲು ನಿರ್ಧರಿಸಿದರು. ಆ ಕಾಲದಲ್ಲಿ ಗೌರವಸ್ಥ ಮನೆತನದವರು, ದೊಡ್ಡ ಮನುಷ್ಯರು, ಹೆಚ್ಚು ವಿದ್ಯಾವಂತರು ನಾಟಕಗಳಲ್ಲಿ ಅಭಿನಯಿಸುತ್ತಿರಲಿಲ್ಲ. ನಟರ ಬಗ್ಗೆ ಗೌರವವಿರಲಿಲ್ಲ. ನಾಟಕ ಕಲೆಯನ್ನು ಕೀಳೆಂದು ಭಾವಿಸಿದ್ದ ಕಾಲ. ಭಾರತೇಂದುವಿನ ಈ ನಿರ್ಧಾರ ನಿಜಕ್ಕೂ ಕ್ರಾಂತಿಕಾರಕವಾಗಿತ್ತು. ಅವರ ಅಭಿನಯ ಯಶಸ್ವಿಯಾಯಿತು. ಅಂದಿನಿಂದ ತಮ್ಮ ಬಿಡುವಿಲ್ಲದ ಜೀವನದಲ್ಲೂ ನಾಟಕದಲ್ಲಿ ಅಭಿನಯಿಸುವ ಗೀಳು ಅಂಟಿಕೊಂಡಿತು. ಸ್ವತಃ ನಾಟಕ ಮಂಡಳಿಯನ್ನು ಕಟ್ಟಿದರು. ಮಂಡಳಿಯನ್ನು ಕಟ್ಟಿಕೊಳ್ಳಲು ಕಲಾಹವ್ಯಾಸಿಗಳಿಗೆ ಮಾರ್ಗದರ್ಶನ ನಿಡಿದರು. ಹೇರಳವಾಗಿ ಧನವನ್ನಿತ್ತು ಪ್ರೋತ್ಸಾಹಿಸಿದರು. ತಮ್ಮ ಪತ್ರಿಎಕಗಳ ಮುಲಕ ಪ್ರಚಾರ ಮಾಡಿದರು. ಆಡಲು ಅರ್ಹವಾದ ನಾಟಕಗಳನ್ನು ಬರೆದುಕೊಟ್ಟರು. ಬೇರೆ ಭಾಷೆಗಳಿಂದ ಭಾಷಾಂತರಿಸಿಕೊಟ್ಟರು. ಹಲವು ನಗರಗಳಲ್ಲಿ ಕಲಾ ಹವ್ಯಾಸಿಗಳ ಕೇಂದ್ರ ಪ್ರಾರಂಭವಾಯಿತು. ಕಾಶಿಯಲ್ಲಿ ’ನ್ಯಾಷನಲ್ ಥಿಯೇಟರ್’ ಎಂಬುದು ಸ್ಥಾಪಿತವಾಯಿತು. ಭಾರತೇಂದು ಅವರ ಸಂರಕ್ಷಕರಾದರು. ’ಆರ್ಯನಾಟ್ಯ ಸಭಾ’ ಎಂಬುದು ಪ್ರಯಾಗದಲ್ಲಿ ಪ್ರಾರಂಭವಾಯಿತು. ಭಾರತೇಂದು ಅವರ ಹಲವು ನಾಟಕಗಳನ್ನು ಅಭಿನಯಿಸಿ ಯಶಸ್ವಿಯಾದ ನಾಟಕ ಮಂಡಳಿಯನ್ನು ಕಾನ್ಪುರದಲ್ಲಿ ಸ್ಥಾಪಿಸಿದವರು ಪ್ರತಾಪ ನಾರಾಯಣ ಮಿಶ್ರ. ಇವರು ಭಾರತೇಂದು ಹರಿಶ್ಚಂದ್ರರ ಜೊತೆ ದುಡಿದವರು. ಇವರಂತೆ ಕೇಶವರಾಮ ಭಟ್ಟ ಎಂಬುವರು ಬಿಹಾರದಲ್ಲೂ, ರವಿದತ್ತ ಶುಕ್ಲ ಎಂಬುವರು ಬಲಿಯಾದಲ್ಲೂ ನಾಟಕ ಮಂಡಳಿಯನ್ನು ಸ್ಥಾಪಿಸಿದರು. ಬಲಿಯಾ ಮಂಡಳಿಯಲ್ಲಿ ಭಾರತೇಂದು ಹರಿಶ್ಚಂದ್ರರು ಹರಿಶ್ಚಂದ್ರ ನಾಟಕದಲ್ಲಿ ಹರಿಶ್ಚಂದ್ರನ ಪಾತ್ರವನ್ನು ಅಭಿನಯಿಸಿದರು. “ಪಾಂಚ್ವೇ ಪೈಗಂಬರ್” ನಾಟಕದಲ್ಲಿ ಅವರ ಅಭಿನಯವನ್ನು ನೋಡಿದ್ದ ಶಿವಾನಂದನ ಸಹಾಯ ಎಂಬವರು ಅದು ಕಣ್ಣಿಗೆ ಹಬ್ಬವಾಗಿತ್ತು ಎಂದು ಹೇಳಿದ್ದಾರೆ. ಬಲಿಯಾ ಮಂಡಳಿಯು ಭಾರತೇಂದು ಹರಿಶ್ಚಂದ್ರರ ಅನೇಕ ನಾಟಕಗಳನ್ನು ಆಡಿ ಹೆಸರುವಾಸಿಯಾಯಿತು. ಭಾರತೇಂದುಜೀಯವರ ನಾಟಕದ ಕಿರ್ತಿ ಹಬ್ಬಿ ಹರಡುತ್ತಿರುವುದನ್ನು ಕಂಡು ಹಲಕೆಲವು ನಾಟಕಗಳನ್ನು ಅವರ ಹೆಸರಿನಲ್ಲಿ ಪ್ರಸಾರ ಮಾಡಿದರೆಂಬ ಐತಿಹ್ಯವೂ ಇದೆ. ಅವರು ಬರೆದ ನಾಟಕಗಳು ಏಳು:

೧) ವೈದಿಕೀ ಹಿಂಸಾ ಹಿಂಸಾ ನ ಭವತಿ

೨) ವಿಷಸ್ಯ ವಿಷಮೌಷಧಂ

೩) ಶ್ರೀ ಚಂದ್ರಾವಲೀ (ಧಾರ್ಮಿಕ)

೪) ನೀಲದೇವೀ (ಐತಿಹಾಸಿಕ)

೫) ಭಾರತ ದುರ್ದಶಾ

೬) ಅಂಧೇರ್ ನಗರೀ

೭) ಪಾಂಚ್ವೇ (ಚೂಸಾ) ಪೈಗಂಬರ್

ಅಪೂರ್ಣ ಕೃತಿಗಳು ಪ್ರೇಮಜೋಗಿನೀ ಮತ್ತು ಸತಿಪ್ರತಾಪ. ಆಧಾರಿತ ನಾಟಕ ಸತ್ಯ ಹರಿಶ್ಚಂದ್ರ.

ಭಾರತಜನನೀ ಎಂಬುದು ಭಾರತೇಂದುಜೀಯವರ ಕೃತಿ ಎಂದು ಕವಿವಚನ ಸುಧಾ ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಅದನ್ನು ಕುರಿತು ಅವರೇ ಬರೆದರು – “ಇದು ನನ್ನ ಕೃತಿಯಲ್ಲ. ಬಂಗಾಳಿ ಭಾಷೆಯಲ್ಲಿ ಇದೇ ಹೆಸರಿನ ಒಂದು ರೂಪಕವಿದೆ. ಅದನ್ನು ನನ್ನ ಮಿತ್ರರೊಬ್ಬರು ಹಿಂದಿಯಲ್ಲಿ ಭಾಷಾಂತರಿಸಿದರು. ತಮ್ಮ ಹೆಸರನ್ನು ಹಾಕಲಿಲ್ಲ. ಹಾಕಬಾರದೆಂದೂ ಅಡ್ಡಿ ಪಡಿಸಿದರು. ನಾನು ಆ ನಾಟಕದ ಕರಡು ತಿದ್ದಿದ್ದುಂಟು. ಕವಿಯ ಕೀರ್ತಿಯನ್ನು ಅಪಹರಿಸಬಾರದು. ಆದ್ದರಿಂದ ಇರುವ ವಿಷಯವನ್ನು ತಿಳಿಸಿದ್ದೇನೆ” – ಇದು ಅವರ ಪ್ರಾಮಾಣಿಕತೆಗೆ ಕೈಗನ್ನಡಿಯಲ್ಲವೆ? ಉಳಿದ ಕೃತಿಗಳಲ್ಲಿ ಧನಂಜಯ ವಿಜಯ, ಮುದ್ರಾರಾಕ್ಷಸ ಮತ್ತು ಚಂದ್ರಾವಲೀ ನಾಟಕಾ ಎಂಬುವು ಸಂಸ್ಕೃತದಿಂದ ಭಾಷಾಂತರವಾದುವು. ಅಂತೆಯೇ ಪ್ರಾಕೃತದಿಂದ ಅನುವಾದಿತವಾದುದು ಕರ್ಪೂರ ಮಂಜರಿ. ಬಂಗಾಲಿಯಿಂದ ತುರ್ಜುಮೆ ಮಾಡಿರುವುದು – ಪಾಷಂಡ ವಿಡಂಬನ್, ವಿದ್ಯಾಸುಂದರ್ ಮತ್ತು ಭಾರತ ಜನನೀ. ದುರ್ಲಭ ಬಂಧು ಎಂದು ಷೇಕ್ಸ್ಪಿಯರನ ’ದಿ ಮರ್ಚೆಂಟ್ ಆಫ್ ವೆನಿಸ್’ ಎಂಬ ನಾಟಕದ ಹಿಂದೀ ರೂಪಾಂತರ.

ಭಾರತೇಂದು ಹರಿಶ್ಚಂದ್ರರು ಹರಿಶ್ಚಂದ್ರನಾಗಿ

ವಿಶಾಲ ದೃಷ್ಟಿ

ಹರಿಶ್ಚಂದ್ರರದು ಹಿರಿಯ ವ್ಯಕ್ತಿತ್ವ. ರಾಷ್ಟ್ರಾಭಿಮಾನ, ಭಾಷಾಭಿಮಾನ, ತಮ್ಮ ಧರ್ಮದಲ್ಲಿ ನಿಷ್ಠೆ, ಇತರರಿಗೆ ಕೈಬಿಟ್ಟು ನೆರವು ನೀಡುವ ಅಂತಃಕರಣ ಇವೆಲ್ಲ ಅವರನ್ನು ಬಹು ದೊಡ್ಡ ವ್ಯಕ್ತಿಯನ್ನಾಗಿ ಮಾಡಿದ್ದವು. ಅವರು ತಮ್ಮ ಧರ್ಮದಲ್ಲಿ ನಿಷ್ಠೆಯ ನಿಲುವು ತಾಳಿದಂತೆ ಪರಧರ್ಮದ ಬಗ್ಗೆ ಗೌರವಾದರವನ್ನು ತೋರುತ್ತಿದ್ದರು. ಅದಕ್ಕೆ ಅವರ ಕೃತಿಗಳಲ್ಲಿ ಸಾಕಷ್ಟು ಸಾಕ್ಷಿಪುರಾವೆಗಳು ದೊರೆಯುತ್ತವೆ. ’ಜೈನ ಕುತೂಹಲ’ ಎಂಬ ಗ್ರಂಥದ ಒಂದು ಪದ್ಯದಲ್ಲಿ ’ಸಬ ಮತ ಅಪನೇ ಹೀ ಹೈಂ’ (ಎಲ್ಲ ಮತಗಳೂ ನಮ್ಮ ಸನಾತನ ಧರ್ಮದ ಅವಿಭಾಜ್ಯ ಅಂಗಗಳು) ಎಂದು ಹೇಳಿದ್ದಾರೆ. “ಬಣ್ಣದ ಕನ್ನಡಕ ನನ್ನಲ್ಲಿಲ್ಲ. ಬಿಳಿಯ ಸ್ವಚ್ಛ ಗಾಜಿನ ಕನ್ನಡಕವನ್ನು ಧರಿಸಿ ನೋಡು. ಆಗ ಎಲ್ಲ ಧರ್ಮಗಳ ಯಥಾರ್ಥರೂಪ ಕಾಣಿಸುವುದು. ಎಲ್ಲರನ್ನೂ ಒಂದುಗೂಡಿಸುವ ಧರ್ಮವೇ ನಿಜವಾದ ಧರ್ಮ. ಅದೇ ಆತ್ಮನ ಅರಿವಿಗೆ ಹೆದ್ದಾರಿ” ಎಂದು ಹೇಳುತ್ತಿದ್ದರು.

ಒಟ್ಟಿನಲ್ಲಿ ಭಾರತೇಂದುಜೀಯವರು ಏನು ಬರೆದರೂ ಅದರ ಹಿನ್ನೆಲೆಯಲ್ಲಿ ಒಂದು ಉದ್ದೇಶವಿರುತ್ತಿತ್ತು. ಈ ಉದ್ದೇಶದ ಹಿಂದೆ ಅಪಾರ ಕರುಣೆಯು ತುಂಬಿರುತ್ತಿತ್ತು. ಈ ಕರುಣೆ ಒಮ್ಮೆ ಕವಿಯ ಕಂಠದಿಂದ ರಾಗ ರಾಗಿಣಿಯಾಗಿ ಹೊರಬಿದ್ದರೆ ಇನ್ನೊಮ್ಮೆ ದೃಶ್ಯಕಾವ್ಯವಾಗಿ, ಹಾಸ್ಯ ವಿಡಂಬನೆಯಾಗಿ, ಸಂಶೋಧಕನಾಗಿ, ಇತಿಹಾಸದ ಲೇಖಕನಾಗಿ, ಪತ್ರಕರ್ತನಾಗಿ ಇಲ್ಲವೆ ರಾಷ್ಟ್ರೀಯ ಜಾಗೃತಿಯ ಶಂಖಧ್ವನಿಯನ್ನು ಮೊಳಗಿಸುವ ಯುಗ ನಿರ್ಮಾಪಕನಾಗಿ ಅಲೆಗಳನ್ನೆಬ್ಬಿಸುತ್ತಿತ್ತು.

ಭಾರತೇಂದು ಒಳ್ಳೆಯ ಸಂಗೀತಗಾರರಾಗಿದ್ದರು. ತಮ್ಮ ಕವಿತೆಯನ್ನು ಇಂಪಾಗಿ ಹಾಡುತ್ತಿದ್ದರು. ಇವರ ಕವಿತೆಯನ್ನು ದೂರದಿಂದ ಕೇಳಿದವರೂ ಸಹ ಅದರ ಮಾಧುರ್ಯಕ್ಕೆ ಮಾರುಹೋಗುತ್ತಿದ್ದರು. ಹತ್ತಿರದಿಂದ ನೋಡಿದವರು ಆಕರ್ಷಕ ಗುಂಗುರು ಕಪ್ಪು ಕೂದಲು ಹಾಗೂ ಮಂದಸ್ಮಿತ ಮುಖವನ್ನು ಕಂಡು ಮುಗ್ಧರಾಗಿ ಹೋಗುತ್ತಿದ್ದರು. ಸಂಭಾಷಣೆಯಲ್ಲಿ ತೊಡಗಿದವರು ಮಧುರವಾಣಿ, ಹಾಸ್ಯದ ಹೊನಲು, ಶಿಷ್ಟ ವ್ಯವಹಾರ ಮತ್ತು ವಿನಯಶೀಲತೆಗೆ ತಲೆದೂಗಿ ಅವರಲ್ಲಿ ಅಪಾರ ಗೌರವಾದರಗಳನ್ನು ತೋರುತ್ತಿದ್ದರು. ಔದಾರ್ಯಕ್ಕಂತೂ ಹೆಸರುವಾಸಿಯಾಗಿದ್ದರು. ಹರಿಶ್ಚಂದ್ರರ ಮನೆಗೆ ಹೋಗಿ ನಿರಾಶರಾಗಿ ಮರಳಿದ ವ್ಯಕ್ತಿ ಒಬ್ಬನೂ ಇರಲಿಲ್ಲ. ಅವರಿಂದ ಸಹಾಯ ಪಡೆದವರಿಗೆ ಸಂಕೋಚವಾಗುವಂತೆ ಎಂದು ಅವರು ನಡೆದುಕೊಳ್ಳುತ್ತಿರಲಿಲ್ಲ. ಕವಿ ಕಲಾವಿದರ ಆದರಾತಿಥ್ಯದಲ್ಲಿ ಅವರು ತಮ್ಮ ಅಪಾರ ಸಂಪತ್ತನ್ನು ವ್ಯಯಮಾಡಿದರು.

ಯುಗಪುರುಷ

ಭಾರತೇಂದು ಹರಿಶ್ಚಂದ್ರರು ಹಿಂದಿ ಭಾಷೆ ಹಾಗೂ ಸಾಹಿತ್ಯದ ಸೌಭಾಗ್ಯಚಂದ್ರನಂತೆ ಉದಯಿಸಿದರು. ಅವರು ಮಾಡಿದ ದಾನ ಇಂದಿಗೂ ಅವರ ಸವಿನೆನಪಿಗೆ, ವಿದ್ಯಾಪ್ರೇಮಕ್ಕೆ ಕೈಗನ್ನಡಿಯಾಗಿದೆ. ಅವರು ನಿರ್ಮಿಸಿದ ಸಾಹಿತ್ಯ ಅವರ ಧವಳಕೀರ್ತಿಯನ್ನು ಬೆಳಗುತ್ತಿದೆ. ಅವರು ತೋರಿದ ದಾರಿಯಲ್ಲಿ ನಡೆದ ಭಾರತ ಸ್ವತಂತ್ರವಾಗಿದೆ. ಅವರು ಕಂಡ ಕನಸು ನನಸಾದರೆ ನಿಜಕ್ಕೂ ಭಾರತ ವಿಶ್ವಶಾಂತಿಯ ಅಗ್ರದೂತನಾಗುವುದರಲ್ಲಿ ಸಂದೇಹವಿಲ್ಲ.