ಮೈಸೂರಿನ ಹೆಬ್ಬಾಳದಲ್ಲಿ ೧೯೯೦ರಲ್ಲಿ ಸ್ಥಾಪನೆಗೊಂಡ ಭಾರತ್ ಕ್ಯಾನ್ಸರ್ ಸಂಸ್ಥೆ ಮತ್ತು ಆಸ್ಪತ್ರೆ ಸದಾಶಾರದಾ ಗಂಥಿ ಮತ್ತು ಸಂಶೋಧನಾ ಸಂಸ್ಥೆಯ ಒಂದು ಅಂಗ. ಇದೊಂದು ಲಾಭದಾಯಕವಲ್ಲದ ಸಂಸ್ಥೆಯಾಗಿದ್ದು ಮೈಸೂರು ಮತ್ತು ಸುತ್ತಮುತ್ತಲ ಜನರಿಗೆ ಉನ್ನತ ಮಟ್ಟದ ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸೆಯ ಅವಕಾಶವನ್ನು ಕಲ್ಪಿಸಿದೆ. ಅನಿವಾಸಿ ಭಾರತೀಯರಾದ ಡಾ|| ಬಿ.ಎಸ್. ಅಜಯ್‌ಕುಮಾರ್ ಅವರಿಂದ ಸ್ಥಾಪನೆಗೊಂಡಿತು.
ಪ್ರಾರಂಭಿಕ ಹಂತದಲ್ಲೇ ಕ್ಯಾನ್ಸರ್ ರೋಗ ಪತ್ತೆ, ಕ್ಯಾನ್ಸರ್ ಬಗ್ಗೆ ಹಾಗೂ ಅದರ ಕಾರಣಗಳ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುವುದು, ಕ್ಯಾನ್ಸರ್ ಸಂಶೋಧನೆ ಸಂಸ್ಥೆಯ ಹೆಗ್ಗುರಿಯಾಗಿದೆ. ಅತ್ಯಾಧುನಿಕ ಉಪಕರಣಗಳು ಹಾಗೂ ಚಿಕಿತ್ಸಾ ವಿಧಾನಗಳನ್ನು ಹೊಂದಿರುವ ಈ ಆಸ್ಪತ್ರೆಯಲ್ಲಿ ಬಡ ರೋಗಿಗಳು ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಪಡೆಯುತ್ತಾರೆ. ರೋಗಿಗಳಿಗೆ ಉಚಿತ ಊಟ ಹಾಗೂ ಕೀಮೋಥೆರಪಿ ನೀಡಲಾಗುತ್ತಿದೆ. ಈ ಸಂಸ್ಥೆಯ ವತಿಯಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸಲಾಗುತ್ತಿದೆ.
ಕ್ಯಾನ್ಸರ್ ರೋಗದ ಉಪಶಮನ ಹಾಗೂ ರೋಗ ನಿವಾರಣೆಗಾಗಿ ಶ್ರಮಿಸುತ್ತಿರುವ ಅಸಂಖ್ಯಾತ ರೋಗಿಗಳ ಆಶಾಕಿರಣ ಭಾರತ್ ಕ್ಯಾನ್ಸರ್ ಸಂಸ್ಥೆ.
ದಿನಕ್ಕೆ ೫೦ ರೋಗಿಗಳಿಗೆ ಚಿಕಿತ್ಸೆ ನೀಡಬಲ್ಲ ಸಂಪೂರ್ಣ ಸುಸಜ್ಜಿತ ರೇಡಿಯೇಷನ್ ಥೆರಪಿ ವಿಭಾಗ, ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ವಿಭಾಗ, ೧೦೦ ಒಳರೋಗಿಗಳಿಗೆ ಹಾಸಿಗೆ ಸೌಲಭ್ಯ, ರೋಗಿಗಳ ಪುನರ್ವಸತಿ ಸೇವಾ ವಿಭಾಗ, ಮಾನಸಿಕ ಮತ್ತು ಸಾಮಾಜಿಕ ಸಲಹಾ ವಿಭಾಗಗಳ ಮೂಲಕ ವೈದ್ಯಕೀಯ ರಂಗದಲ್ಲಿ ಜನಸೇವೆ ಕೈಗೊಂಡಿರುವ ಅದ್ವಿತೀಯ ಸಂಸ್ಥೆ ಭಾರತ್ ಕ್ಯಾನ್ಸರ್ ಸಂಸ್ಥೆ.
Categories
ಭಾರತ್ ಕ್ಯಾನ್ಸರ್ ಸಂಸ್ಥೆ
