ವೈದಿಕ ಸಾಹಿತ್ಯ

ಭಾರತೀಯ ಸಾಹಿತ್ಯದಲ್ಲಿ ಅತ್ಯಂತ ಪ್ರಾಚೀನವಾದದ್ದು ವೇದ ಕಾಲದ ಸಾಹಿತ್ಯವಾಗಿದೆ. ವೈದಿಕ ಸಾಹಿತ್ಯದಲ್ಲಿ ಮೂಲ ಸಂಹಿತೆಗಳು, ಅವುಗಳ ಶಾಖೆಗಳು, ಬ್ರಾಹ್ಮಣಗಳು ಹಾಗೂ ಅರಣ್ಯಕಗಳೆಂಬ ಪ್ರಕಾರಗಳಿವೆ. ಮೂಲ ಸಂಹಿತೆಗಳಲ್ಲಿ ಅತೀ ಪ್ರಾಚೀನವಾದದ್ದು ಋಗ್ವೇದವಾಗಿದೆ. ಇದರಲ್ಲಿ ಒಟ್ಟೂ ೧೦೧೭ ಋಕ್ಕುಗಳು (ಸ್ತುತಿಗಳು ಅಥವಾ ಪದ್ಯಗಳು) ಇವೆ. ಇವನ್ನು ೧೦ ಮಂಡಲಗಳನ್ನಾಗಿ ವಿಭಾಗಿಸಲಾಗಿದ್ದು, ೧೦ನೇ ಮಂಡಲವು ಋಗ್ವೇದದ ಸಂಗ್ರಹವಾದ ಇನ್ನೂರು ವರ್ಷಗಳಷ್ಟು ನಂತರ ಸೇರಿಸಲಾಗಿದೆ. ಈ ಸ್ತುತಿಗಳನ್ನು ಬೇರೆ ಬೇರೆ ಪುರೋಹಿತ ವಂಶಗಳು, ಬೇರೆ ಬೇರೆ ದೇವತೆಗಳಿಗಾಗಿ ರಚಿಸಿವೆ ಎಂದು ತಿಳಿದುಬರುತ್ತದೆ. ಆ ದೇವತೆಗಳಲ್ಲಿ ಇಂದ್ರ, ವರುಣ, ಸೋಮ, ಸೂರ್ಯನ ಹಲವು ರೂಪಗಳು, ಆಶ್ವಿನ್‌, ಮರುತ್‌, ವಾಯು, ಅಗ್ನಿ, ಯಮ ಉಷಸ್‌, ರುದ್ರ ತ್ವಷ್ಟ್ರ, ಗಂಧರ್ವ ಹಾಗೂ ಅಪ್ಸರಸ್‌ಗಳು ಮುಖ್ಯವಾದವುಗಳು. ಈ ದೇವತೆಗಳನ್ನು ತೃಪ್ತಿಪಡಿಸಲು ಯಜ್ಞ ಎಂಬ ತಂತ್ರವನ್ನು ಹಾಕಿಕೊಂಡಿದ್ದರು. ಯಜ್ಞದ ಸಂದರ್ಭದಲ್ಲಿ ಆಯಾ ದೇವತೆಯ ಹೆಸರಿಗೆ ಹವಿಸ್ಸನ್ನು ಅರ್ಪಿಸಿ ಅವರನ್ನು ಆಹ್ವಾನಿಸುವ ಸಂಬಂಧಿಸಿ ಋಕ್ಕುಗಳು ಪ್ರಚಲಿತದಲ್ಲಿ ಬಂದಿರಬೇಕು. ಜೊತೆಗೆ ವೈದಿಕ ಜನರ ಪಾರಲೌಕಿಕ ಕಲ್ಪನೆಗಳು ಋಕ್ಕುಗಳಲ್ಲಿ ಹೊರಹೊಮ್ಮಿದೆ.

ಋಗ್ವೇದದ ಕಾಲವನ್ನು ಕ್ರಿ. ಪೂ. ೧೫೦೦ರಿಂದ ೧೦೦೦ದ ಅವಧಿಯಲ್ಲಿ ಇಡಬಹುದು. ಆದರೆ ಈ ವೇದದ ಅತ್ಯಂತ ಪ್ರಾಚೀನ ಭಾಗಗಳು ೧೫೦೦ (ಕ್ರಿ. ಪೂ.)ಕ್ಕಿಂತಲೂ ಪ್ರಾಚೀನವಾಗಿರುವ ಸಾಧ್ಯತೆಯೂ ಇದೆ. ಅದೇ ರೀತಿ ೧೦ನೆಯ ಮಂಡಲ ಹಾಗೂ ಇನ್ನೂ ಕೆಲ ಋಕ್ಕುಗಳು ಕ್ರಿ. ಪೂ. ೧೦೦೦ಕ್ಕಿಂತಲೂ ನಂತರ ರಚಿತವಾಗಿರುವುದು ಕಂಡುಬರುತ್ತದೆ.

ಕಾಲಾಂತರದಲ್ಲಿ ಮತ್ತೂ ಮೂರು ಸಂಹಿತೆಗಳು ಅಸ್ತಿತ್ವಕ್ಕೆ ಬಂದವು. ಇವುಗಳಲ್ಲಿ ಯಜುಸ್‌ಹಾಗೂ ಸಾಮವೇದಗಳು ಋಗ್ವೇದದ್ದೇ ಬೆಳವಣಿಗೆಗಳು. ಬಹುಶಃ ಋಕ್ಕುಗಳ ಯಜ್ಞಸಂಬಂಧೀ ಅಂಶಗಳನ್ನು ನಿರೂಪಿಸುತ್ತ ಯಜುರ್ವೇದ ಆಕಾರ ತಳೆಯಿತಾದರೆ, ಅದೇ ಋಕ್ಕುಗಳನ್ನು ರಾಗಬದ್ಧವಾಗಿ ಹಾಡುವ ಸಂಪ್ರದಾಯ ಸಾಮವೇದವಾಗಿ ರೂಪುಗೊಂಡಿತು. ಹಾಗಾಗಿ ಸಾಮವೇದದ ಬಹುತೇಕ ಋಕ್ಕುಗಳು ಋಗ್ವೇದದವೇ ಆಗಿವೆ. ಯಜುರ್ವೇದದಲ್ಲಿ ಅಧ್ಯಯನಗಳು ಯಜ್ಞ ವಿಧಿವಿಧಾನಗಳನ್ನು ಋಕ್ಕುಗಳ ಜೊತೆಗೆ ಬೆಳೆಸಿದ್ದಾರೆ. ಯಜುರ್ವೇದದಲ್ಲಿ ‘ಶುಕ್ಲ’ ಹಾಗೂ ‘ಕೃಷ್ಣ’ ಎಂಬ ಎರಡು ಶಾಖೆಗಳಿವೆ. ವೇದಗಳಲ್ಲಿ ಕೊನೆಯದಾದ ಅಥರ್ವ ವೇದವು ಯಜ್ಞ ಕೇಂದ್ರಿತ ವೈಧಿಕ ಆರ್ಯರ ಕೃತಿಯಲ್ಲ. ಇದು ಮುಖ್ಯವಾಗಿ ಮಂತ್ರ, ತಂತ್ರಗಳ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಆರ್ಯೇತರ ಜಾನಪದ ಸಂಸ್ಕೃತಿಯ ಮೂಲದಿಂದ ಅಥರ್ವ ವೇದ ಹುಟ್ಟಿದ್ದು ಸ್ಪಷ್ಟವಾಗಿದೆ. ವೈದಿಕ ಆರ್ಯರೂ ಇಂಥ ಆಚರಣೆಗಳನ್ನು ಕ್ರಮೇಣ ರೂಡಿಸಿಕೊಂಡರು. ಈ ಕಾರಣದಿಂದ ಅಥರ್ವ ವೇದವನ್ನು ವೇದಗಳ ಒಂದು ಭಾಗವೆಂದು ಪ್ರಾಚೀನ ಸಂಪ್ರದಾಯಗಳು ಒಪ್ಪಿಗೊಂಡಿರಲಿಲ್ಲ. ಅಥರ್ವ ವೇದದಲ್ಲಿ ಶೌನಕೀಯ ಹಾಗೂ ಪೈಪ್ಪಲಾದ ಎಂಬ ಎರಡು ಶಾಖೆಗಳಿವೆ.

ಸಂಹಿತೆಗಳಿಗೆ ಕಾಲಕ್ರಮದಲ್ಲಿ ಬ್ರಾಹ್ಮಣಗಳು ಹಾಗೂ ಆರಣ್ಯಕಗಳೆಂಬ ಪೂರಕ ಸಾಹಿತ್ಯಗಳು ಬೆಳೆದವು. ಬ್ರಾಹ್ಮಣಗಳು ಯಜ್ಞ ಸಂಸ್ಕೃತಿಯ ವಿಧಿವಿಧಾನಗಳ ವಿಸ್ತಾರವಾದ ನಿರೂಪಣೆಗಳಾಗಿವೆ. ‘ಐತರೇಯ’, ‘ಕೌಶೀತಕಿ’, ‘ಜೈಮೀನೀಯ’, ‘ತಾಂಡ್ಯ’, ‘ಶತಪಥ’ ಹಾಗೂ ‘ಗೋಪಥ’ಗಳೆಂಬ ಬ್ರಾಹ್ಮಣಗಳಿವೆ. ಆರಣ್ಯಕಗಳು ಹಾಗೂ ಉಪನಿಷತ್ತುಗಳು ವೈದಿಕರ ಯಜ್ಞ ಹಾಗೂ ಪಾರಲೌಕಿಕ ಕಲ್ಪನೆಗಳ ನಿಗೂಢತೆಯನ್ನು, ಸಾಂಕೇತಿಕತೆಯನ್ನು ನಿರೂಪಿಸುವ ಸಂಪ್ರದಾಯಗಳಾಗಿವೆ. ಉಪನಿಷತ್ತುಗಳಲ್ಲಿ ಕೆಲವು ಮಾತ್ರ ಕ್ರಿ. ಪೂ. ೬೦೦ರಷ್ಟು ಹಿಂದೆ ರಚಿತವಾಗಿವೆ. ಈ ಎಲ್ಲವುಗಳ ಜೊತೆಗೆ ಬ್ರಾಹ್ಮಣಗಳಂತೇ ಶ್ರೌತ ಸೂತ್ರಗಳು ವಿಭಿನ್ನ ಯಜ್ಞಗಳ ವಿಧಿ- ವಿಧಾನವನ್ನು ವಿವರಿಸಲು ಅಸ್ತಿತ್ವಕ್ಕೆ ಬಂದಿವೆ. ಗೃಹ್ಯ ಸೂತ್ರಗಳೆಂಬ ಇನ್ನೊಂದು ಪ್ರಕಾರದ ಸಾಹಿತ್ಯ ಕೌಟುಂಬಿಕ ಆಚರಣೆಗಳನ್ನು ಸಂಬಂಧಿಸಿದೆ.

ಯಜುರ್ವೇದ ಹಾಗೂ ಇನ್ನಿತರ ವೈದಿಕ ಸಾಹಿತ್ಯಗಳನ್ನು ಕ್ರಿ, ಪೂ. ೧೦೦೦ರಿಂದ ೬೦೦ರವರೆಗಿನ ಕಾಲಾವಧಿಗೆ ಸೇರಿಸಬಹುದು. ಇವುಗಳಲ್ಲಿ ಕ್ರಿ. ಪೂ. ೬೦೦ರ ನಂತರದ ಪ್ರಕ್ಷಿಪ್ತ ಭಾಗಗಳಲ್ಲಿ ಇದ್ದಿರಬಹುದಾದರೂ ವೈದಿಕ ಇತಿಹಾಸದ ರಚನೆಯನ್ನು ಮಾಡುವಾಗ ಇತಿಹಾಸಕಾರರು ಕ್ರಿ. ಪೂ. ೬೦೦ ಕ್ಕೂ ಹಿಂದಿನವುಗಳನ್ನು ಮಾತ್ರ ಪರಿಗಣಿಸುತ್ತಾರೆ. ವೈದಿಕ ಸಾಹಿತ್ಯವು ಒಂದು ಮೌಖಿಕ ಸಂಪ್ರದಾಯವಾಗಿದ್ದು ಸಾವಿರಾರು ವರ್ಷಗಳವರೆಗೆ ಕೇಳಿ- ಕಲಿತು ಬಂದದ್ದಾಗಿದೆ. ೧೯ನೇ ಶತಮಾನದಲ್ಲಿ ಪಾಶ್ಚಾತ್ಯ ವಿದ್ವಾಂಸರು ಇಂಥ ಸಂಪ್ರದಾಯಗಳನ್ನು ಸಂಗ್ರಹಿಸಿ, ಭಾಷಾಂತರಿಸುವ ಪ್ರಯತ್ನ ನಡೆಸಿದರು. ವೈದಿಕ ಭಾಷೆಯ, ಅದರಲ್ಲೂ ಋಗ್ವೇದದ ಅನೇಕ ಶಬ್ದಾರ್ಥಗಳು ಸ್ಪಷ್ಟವಿಲ್ಲ. ಈ ಎಲ್ಲ ಗೊಂದಲಗಳಿಂದಾಗಿ ವೇದಗಳನ್ನು ಆಧರಿಸಿ ಕಟ್ಟುವ ಇತಿಹಾಸವು ಇನ್ನೂ ಅನೇಕ ವಿವಾದಗಳಿಂದ ತುಂಬಿದೆ. ಇಂಥ ವಿವಾದಗಳಲ್ಲಿ ವೇದಗಳ ಕಾಲವನ್ನು ಕುರಿತು ವಿವಾದಗಳಿವೆ. ಆರ್ಯರ ಮೂಲದ ಕುರಿತ ವಿವಾದಗಳು ಇವೆ. ಆರ್ಯರ ಸಮಾಜವನ್ನು ಹೇಗೆ ನಿರೂಪಿಸಬೇಕು ಎಂಬ ಕುರಿತೂ ವಿವಾದಗಳಿವೆ.

ಆರ್ಯರು ಹಾಗೂ ಅವರ ಮೂಲದ ಕುರಿತ ಸಮಸ್ಯೆ

‘ಆರ್ಯ’ ಎಂಬ ಶಬ್ದ ಋಗ್ವೇದದಲ್ಲೇ ಕಾಣಿಸಿಕೊಳ್ಳುತ್ತದೆ. ಯಜ್ಞ ಯಾಗಾದಿಗಳನ್ನು ನಡೆಸುವ ವೈದಿಕ ಕುಲ ಬಾಂಧವರು ತಮ್ಮನ್ನು ಆರ್ಯರೆಂದು ಕರೆದುಕೊಂಡಿದ್ದಾರೆ. ನಂತರ ಕುಲೀನರಿಗೆ ಈ ಪದವನ್ನು ಉಪಯೋಗಿಸುವ ಸಂಪ್ರದಾಯ ಬೆಳೆದರೂ ಮೊದಲು ಇದೊಂದು ಜನಸೂಚೀ ಶಬ್ದವಾಗಿತ್ತು. ಈ ಶಬ್ದವನ್ನು ಪ್ರಾಚೀನ ಇರಾನಿನ ಅವೆಸ್ತ ಗ್ರಂಥಗಳಲ್ಲೂ ಕಾಣಬಹುದು. ಅಂದರೆ ‘ಆರ್ಯ’ ಎನ್ನುವ ಜನರು ಪ್ರಾಚೀನ ಇರಾಣ, ಅಫ್ಘಾನಿಸ್ತಾನ ಹಾಗೂ ಸಿಂಧೂ ಬಯಲಿನ ಪ್ರದೇಶದಲ್ಲಿ ಹರಡಿಕೊಂಡಿದ್ದರು.

ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿದ್ದ ಸರ್‌. ವಿಲಿಯಂ ಜೋನ್ಸ್‌‌‌ ಎಂಬ ವಿದ್ವಾಂಸರು ಆರ್ಯರ ಮೂಲದ ಸಂಬಂಧಿಸಿ ಒಂದು ವಾದವನ್ನು ಹುಟ್ಟುಹಾಕಿದರು. ಅದೆಂದರೆ ಪ್ರಾಚೀನ ಸಂಸ್ಕೃತ, ಗ್ರೀಕ್‌, ಲ್ಯಾಟಿನ್‌, ಅವೆಸ್ತ ಭಾಷೆಗಳೆಲ್ಲವೂ ಅನೇಕ ಸಾಮ್ಯತೆಗಳನ್ನು ಹೊಂದಿದು ಮೂಲದಲ್ಲಿ ಒಂದೇ ಭಾಷಾ ಕುಟುಂಬಕ್ಕೆ ಸೇರಿವೆ ಎಂಬುದು. ಇದನ್ನಾಧರಿಸಿ ವಿದ್ವಾಂಸರು ಇಂಡೋ-ಯುರೋಪಿಯನ್‌ ಭಾಷಾ ಕುಟುಂಬವನ್ನು ಪ್ರತಿವಾದಿಸಿ ಈ ಭಾಷೆಯನ್ನು ಮಾತನಾಡುವವರು ಮೂಲತಃ ಒಂದೇ ಜನಾಂಗವಾಗಿದ್ದರು ಎಂದು ವಾದಿಸಿದರು. ಇಂದಿಗೆ ಸುಮಾರು ಮೂರು ಸಾವಿರದಿಂದ ಆರು ಸಾವಿರ ವರ್ಷಗಳ ಪೂರ್ವದಲ್ಲಿ ಕಪ್ಪು ಸಮುದ್ರ ಹಾಗೂ ಉರಾಲ್‌ ಪ್ರದೇಶದಿಂದ ಈ ಜನಾಂಗವು ವಾಯವ್ಯ ಭಾರತ, ಮಧ್ಯ ಏಷಿಯಾ, ಮಧ್ಯ ಪ್ರಾಚ್ಯ, ಮೆಡಿಟರೇನಿಯನ್‌ ತೀರ ಹಾಗೂ ಯುರೋಪಿನ ಭಾಗಗಳಿಗೆ ಪಸರಿಸಿತು ಎಂಬ ವಲಸೆಯ ಸಿದ್ಧಾಂತವೂ ಪ್ರಚಲಿತದಲ್ಲಿ ಬಂದಿತು. ಈ ವಾದದ ಒಂದು ತಾರ್ಕಿಕ ಬೆಳವಣಿಗೆಯಾಗಿ ಆರ್ಯರು ಸಿಂಧೂ ಸಂಸ್ಕೃತಿಯ ಜನರ ಮೇಲೆ ದಾಳಿ ನಡೆಸಿ, ನಾಗರಿಕತೆಯನ್ನು ಹಾಳುಗೆಡವಿದರು, ಅಲ್ಲಿ ಪ್ರಬಲರಾಗಿದ್ದ ದ್ರಾವಿಡರನ್ನು ದಕ್ಷಿಣಕ್ಕೆ ಒತ್ತಿದರು ಎಂಬೆಲ್ಲ ವಾದಗಳೂ ಬೆಳೆದವು. ಆರ್ಯರ ದಾಳಿಯಿಂದ ಸಿಂಧೂ ಸಂಸ್ಕೃತಿ ನಾಶವಾಯಿತೆಂಬ ವಾದವನ್ನು ಈಗ ಕೈಬಿಡಲಾಗಿದೆ. ಆದರೆ ದ್ರಾವಿಡ ಭಾಷಾ ಸಂಶೋಧನೆಗಳು ಇನ್ನು ಆಗಬೇಕಾಗಿವೆ. ಈ ಹಂತದಲ್ಲಿ ಕಳೆದ ಕೆಲ ವರ್ಷಗಳಿಂದ ಆರ್ಯರ ಮೂಲ ಭಾರತವೇ, ಅವರು ಸರಸ್ವತಿ ತೀರದಿಂದಲೇ ಹೊರದೇಶಗಳಿಗೆ ವಲಸೆ ಹೋಗಿದ್ದಾರೆ. ಅವರೇ ಸಿಂಧೂ ನಾಗರಿಕತೆಯ ಕರ್ತೃಗಳು ಎಂಬ ವಾದವನ್ನು ಮಂಡಿಸಲಾಗುತ್ತಿದೆ. ಆದರೆ ಇಂಥ ವಾದಗಳು ಸದ್ಯಕ್ಕೆ ಅಸಂಬದ್ಧವಾಗಿ ತೋರುತ್ತಿವೆ.

ಒಂದು ಭಾಷೆಯನ್ನು ಮಾತನಾಡಿದವರೆಲ್ಲ ಒಂದೇ ಜನಾಂಗದವರು ಎಂಬ ವಾದವನ್ನು ವಿದ್ವಾಂಸರು ಈಗ ದೋಷಪೂರ್ಣ ಎಂದು ಗುರುತಿಸುತ್ತಾರೆ. ಆದರೆ ‘ಆರ್ಯ’ರೆಂಬ ಜನಸಮುದಾಯವು ಇಂಡೋ-ಯುರೋಪಿಯನ್‌ ಭಾಷೆಯನ್ನು ಮಾತನಾಡುವ ಹಾಗೂ ಅನೇಕ ಸಾಂಸ್ಕೃತಿಕ ಅಂಶಗಳನ್ನು ಸಮನಾಗಿ ಹೊಂದಿರುವ ಜನರಾಗಿದ್ದರು. ‘ಆರ್ಯ’ ಸಂಸ್ಕೃತಿ ಆಕಾರ ತಳೆದದ್ದು ಬಹುಶಃ ಇರಾನ್‌, ಅಫ್ಘಾನಿಸ್ತಾನ ಹಾಗೂ ವಾಯವ್ಯ ಭಾರತದ ಪ್ರದೇಶದಲ್ಲಿ ಇರಬೇಕು ಹಾಗೂ ಇದು ಕ್ರಿ.ಪೂ. ೨೦೦೦ದಿಂದ ೧೫೦೦ರ ಅವಧಿಯಲ್ಲಿ ನಡೆದಿರಬೇಕು. ಈ ಜನರು ಅಗ್ನಿಪೂಜಕರಾಗಿದ್ದರು. ಇಂದ್ರ, ವರುಣ, ಯಮ ಮುಂತಾದ ದೇವತೆಗಳ ಪೂಜಕರಾಗಿದ್ದರು. ಸೋಮಪಾನ ಇವರಲ್ಲಿ ಧಾರ್ಮಿಕ ಆಚರಣೆಯಾಗಿತ್ತು. ಇವರ ಕುದುರೆ ಸವಾರಿ ಮಾಡುವ ತಂತ್ರದಲ್ಲಿ ಪರಿಣತರಾಗಿದ್ದರು ಹಾಗೂ ವೇಗವಾಗಿ ಚಲಿಸಬಲ್ಲ, ಕದಿರುಗಳುಳ್ಳ ಗಾಲಿಗಳ ಹಗುರಾದ ರಥಗಳನ್ನು ತಯಾರಿಸುವ ಕಲೆಯನ್ನು ಅರಿತಿದ್ದರು. ಇಂಥ ಜನರ ಸಂಸ್ಕೃತಿಯ ಕುರಿತು ವಿವರಗಳು ನಮಗೆ ಮಧ್ಯ ಪ್ರಾಚ್ಯದಲ್ಲಿ ಕ್ರಿ.ಪೂ. ೧೬೦೦ರ ಸುಮಾರಿಗೆ ಕೊರೆಸಲ್ಪಟ್ಟ ಶಾಸನಗಳು, ಅವೆಸ್ತಾಗ್ರಂಥ ಹಾಗೂ ಋಗ್ವೇದಗಳಿಂದ ತಿಳಿದುಬರುತ್ತದೆ. ಕ್ರಿ.ಪೂ. ೧೦೦೦ದ ಸಮಯಕ್ಕಾಗಲೇ ಭೌಗೋಲಿಕ ವ್ಯತ್ಯಾಸದಿಂದಾಗಿ ಆರ್ಯರ ಭಾಷೆ ಹಾಗೂ ಸಂಸ್ಕೃತಿಗಳೂ ಭಿನ್ನ ಭಿನ್ನವಾಗಿ ಬೆಳೆದಿದ್ದವು.

ವೈದಿಕ ಸಾಹಿತ್ಯ ಆರ್ಯಪಂಗಡಗಳ ಒಂದು ನಿರಂತರ ಭೌಗೋಳಿಕ ಸಾಂಸ್ಕೃತಿಕ ಸ್ಥಿತ್ಯಂತರವನ್ನು ಪ್ರತಿಬಿಂಬಿಸುತ್ತದೆ. ಇದರ ಪ್ರಾರಂಭ ಸಪ್ತ ಸಿಂಧೂ ಭಾಗದಲ್ಲಿ ಕಾಣಿಸಿಕೊಂಡರೆ ವೈದಿಕ ಕಾಲಕ ಅಂತ್ಯದ ವೇಳೆಯಲ್ಲಿ ಸಮಾಜ, ಹಾಗೂ ಭೌಗೋಳಿಕ ಅಂಶಗಳೆರಡೂ ಬದಲಾಗಿದ್ದವು. ಈ ಸ್ಥಿತ್ಯಂತರವನ್ನು ಎರಡು ಪ್ರಮುಖ ಘಟ್ಟಗಳನ್ನಾಗಿ ಗುರುತಿಸಲಾಗಿದೆ. ಅದೆಂದರೆ ಪೂರ್ವ ವೇದಕಾಲ ಹಾಗೂ ಉತ್ತರ ವೇದಕಾಲ.

ಪೂರ್ವ ವೈದಿಕ ಸಮಾಜ

ಋಗ್ವೇದದಲ್ಲಿ ನಾವು ನೋಡುವ ವೈದಿಕ ಆರ್ಯರ ಸಮಾಜವನ್ನು ಇತರ ವೈದಿಕ ಸಾಹಿತ್ಯಗಳು ಬಿಂಬಿಸುವ ಸಮಾಜಕ್ಕಿಂತ ಭಿನ್ನವಾದದ್ದು ಎಂದು ಗುರುತಿಸಬಹುದು. ಇದನ್ನು ರಚಿಸಿದ ಜನರು ಸಪ್ತಸಿಂಧೂ ಪ್ರದೇಶದಲ್ಲಿ ವಾಸವಾಗಿದ್ದರು. ಪಂಜಾಬಿನ ಐದು ನದಿಗಳಾದ ಶುತುದ್ರು(ಸಟ್ಲಜ್‌), ಪಿಚಾಶ್‌‌(ಬಿಯಾಸ್‌), ಪರುಶ್ನಿ(ರಾವಿ), ಅಸಿಕ್ನಿ (ಚಿನಾಬ್‌) ಹಾಗೂ ವಿತಸ್ತ(ಝೆಲಮ್‌)ಗಳ ಉಲ್ಲೇಖ ಋಗ್ವೇದದಲ್ಲಿ ಬರುತ್ತದೆ. ಇವುಗಳ ಜೊತೆಗೆ ಸಿಂಧೂ ಹಾಗೂ ಸರಸ್ವತಿ ನದಿಗಳು ಸೇರಿ ಸಪ್ತಸಿಂಧೂ ಪ್ರದೇಶದ ಸೀಮೆಯನ್ನು ಗುರುತಿಸಬಹುದು. ವೈದಿಕ ಸಮುದಾಯ ಈ ನದಿ ತೀರಗಳಲ್ಲಿ ಮಾತ್ರ ಕೇಂದ್ರೀಕೃತವಾಗಿತ್ತು. ಸರಸ್ವತಿ ನದಿಗೂ ಪೂರ್ವದಲ್ಲಿ ದೃಷದ್ದತಿ ಹಾಗೂ ಯಮುನಾ ನದಿಗಳು ಹಾಗೂ ಸಿಂಧೂ ನದಿಗೂ ಪಶ್ಚಿಮದಲ್ಲಿ ಗೋಮತಿ ನದಿಯ ಉಲ್ಲೇಖವೂ ಬರುತ್ತದೆ. ಅಂದರೆ ಪಶ್ಚಿಮದಲ್ಲಿ ಇಂದಿನ ಅಫ್ಘಾನಿಸ್ತಾನದ ಪ್ರದೇಶದ ಕೆಲ ಸಮಾಜಗಳ ಜ್ಞಾನವೂ ಈ ಜನರಿಗಿತ್ತು. ಇವರ ದೇವತಾ ಕಲ್ಪನೆಯಲ್ಲಿ ಹಾಗೂ ಪುರಾಣಗಳಲ್ಲಿ ಮಧ್ಯ ಏಶಿಯಾದ ಭೌಗೋಲಿಕ ಅಂಶಗಳನ್ನು ಸೂಚಿಸುವ ರೂಪಕಗಳು ಅನೇಕವಿವೆ ಎಂದು ವಿದ್ವಾಂಸರು ಗುರುತಿಸುತ್ತಾರೆ.

ವೈದಿಕ ಸಾಹಿತ್ಯ ಆರ್ಯ ಮತ್ತು ದಾಸ ವರ್ಣಗಳ ಉಲ್ಲೇಖ ಮಾಡುತ್ತದೆ. ಆರ್ಯ ವರ್ಣ ಎಂದರೆ ಗೌರವರ್ಣ ಹಾಗೂ ದಾಸ ವರ್ಣವೆಂದರೆ ಕಪ್ಪು ಬಣ್ಣ ಎಂಬ ಅರ್ಥದಲ್ಲಿ ಬಳಸಲಾಗಿದೆ. ಇವರು ಅಗ್ನಿ ಪೂಜಕರಾಗಿದ್ದು ತಮ್ಮ ಯಜ್ಞಯಾಗಾದಿ ಆಚರಣೆಗಳನ್ನು ‘ವ್ರತ’ ಎಂದು ಕರೆದುಕೊಳ್ಳುತ್ತಿದ್ದರು. ಇವರ ಮಂತ್ರಗಳಲ್ಲಿನ ಶಕ್ತಿಯನ್ನು ‘ಬ್ರಹ್ಮನ್‌’ ಎಂದು ತಿಳಿದಿದ್ದರು. ಇವರು ಇಂದ್ರ ಅಥವಾ ದೇವಾ ಎನ್ನುವ ಈ ಹಿಂದೆ ಉಲ್ಲೇಖಿಸಿದ ಯಜ್ಞದ ಮೂಲಕ ಹವಿಸ್ಸನ್ನು ಒಯ್ಯುವ ದೇವತೆಗಳ ಪೂಜಕರಾಗಿದ್ದರು. ವೈದಿಕ ಆರ್ಯರು ತಮ್ಮ ಗುರುತನ್ನು ಹೇಗೆ ಕಟ್ಟಿಕೊಂಡಿದ್ದರು ಎಂಬುದನ್ನು ಅವರು ಅವೈದಿಕ ಜನರ ಕುರಿತು ನೀಡುವ ವಿವರಣೆಗಳಿಂದ ಗ್ರಹಿಸಬಹುದು.

ವೈದಿಕ ಆರ್ಯರು ಸದಾ ಕೆಲವು ಅವೈದಿಕ ಜನರ ಜೊತೆ ಹೋರಾಡುತ್ತಿದ್ದರು. ಅವರನ್ನು ಪ್ರಾಣಿ, ದಾಸ, ದಸ್ಯು, ಅಸುರ, ರಾಕ್ಷಸ ಎಂದೆಲ್ಲ ಕರೆಯಲಾಗಿದೆ. ವೈದಿಕರು ಯಜ್ಞ ಯಾಗಾದಿಗಳನ್ನು ಮಾಡದವರು, ಬೇರೆ ಭಾಷೆಯನ್ನಾಡುವವರು. ಆದರೆ ಗೋವುಗಳನ್ನು, ಸಂಪತ್ತನ್ನು ಅಪಾರವಾಗಿ ಹೊಂದಿದವರುಆಗಿದ್ದರು. ಅವರು ವೈದಿಕರ ಗೋವುಗಳನ್ನು ಹಾರಿಸಿಕೊಂಡು ಹೋಗುತ್ತಿದ್ದರು. ದಾಸರು ಹಾಗೂ ದಸ್ಸುಗಳು ವೈದಿಕರಿಗಿಂತ ಭೌತಿಕವಾಗಿ ಮುಂದುವರೆದಿದ್ದರು. ಅವರು ಪುರ(ರಕ್ಷಿತ ವಸತಿ)ಗಳಲ್ಲಿ ವಾಸವಾಗಿರುತ್ತಿದ್ದರು. ಅವರು ಕಪ್ಪು ಬಣ್ಣದವರು, ಮೂಗಿಲ್ಲಾದವರು, ಅನ್ಯ ಭಾಷೆಯನ್ನಾಡುವವರು. ದಾಸರು ಬಹುಶಃ ಆರ್ಯ ಪೂರ್ವ ಜನರಾಗಿದ್ದಿರಬಗುದು. ಏಕೆಂದರೆ ಈ ದಾಸರಲ್ಲಿ ಕಿರಾತ, ಕೀಕಟ, ಚೌಂಡಾಲ ಮುಂತಾದ ಬುಡಕಟ್ಟುಗಳಿದ್ದವು. ದಸ್ಸುಗಳು ಯಜ್ಞ, ದೇವ, ವ್ರತ ಬ್ರಹ್ಮನ್‌‌‌‌ಗಳನ್ನು ಹೊಂದಿರದವರು. ಇವರು ಶಿಶ್ನಪೂಜೆ, ಮೂಢ ವಸ್ತುಗಳ ಪೂಜೆ ಮಾಡುವವರಾಗಿದ್ದರು. ಆಸುರರು ಅಸ್ಸೀರಿಯಾದ ಜನರು ಎಂಬ ವಾದವಿದೆ. ವೈದಿಕರಿಗೆ ಅಸುರರು ವೈರಿಗಳಾಗಿದ್ದರೇ ವಿನಃ ಅಸುರರು ಸಂಪೂರ್ಣ ಅವೈದಿಕರಾಗಿರಲಿಲ್ಲ. ರಾಕ್ಷಸರು ವೈದಿಕ ದೇವತೆಗಳ ವೈರಿ ದೇವತೆಗಳಾಗಿದ್ದರು. ಅಸುರರೂ ವೈದಿಕ ದೇವತೆಗಳ ವೈರಿಗಳಾಗಿ ನಂತರ ಕಾಣಿಸಿಕೊಳ್ಳುತ್ತಾರೆ. ಇಂದ್ರನು ಇಂಥ ಅವೈದಿಕ ಪಂಗಡದವರ ದೇವತೆಗಳಾದ ವೃತ್ಯ, ಶಂಬರ, ವಲ ಮುಂತಾದವರನ್ನು ಸಂಹರಿಸುತ್ತಾನೆ.

ವೈದಿಕರ ಜೀವನದಲ್ಲಿ ಯಜ್ಞಕ್ಕೆ ಪ್ರಧಾನ ಸ್ಥಾನವಿದ್ದದ್ದು ಸ್ವಪ್ಟ. ಈ ಯಜ್ಞದ ಮೂಲಕ ಅವರು ತಮ್ಮ ದೇವತೆಗಳನ್ನು ಆಹ್ವಾನಿಸಿ ಹವಿಸ್ಸನ್ನು ನೀಡಿ ತೃಪ್ತಿ ಪಡಿಸುತ್ತಿದ್ದರು. ಅವರ ದೇವತಾ ಸ್ತುತಿಯಲ್ಲಿ ತಮಗೆ ಗೋವು, ಕುದುರೆ, ರಥ ಮುಂತಾದ ಸಂಪತ್ತನ್ನೆಲ್ಲ ದೇವರು ನೀಡಬೇಕು, ತಾವೆಲ್ಲ ಸುಖವಾಗಿರಬೇಕು ಎಂಬ ಪ್ರಾರ್ಥನೆಗಳು, ತಮ್ಮ ವೈರಿಗಳನ್ನು ಸೋಲಿಸಿ ಅವರ ಸಂಪತ್ತನ್ನು ಸುಲಿದು ತಮಗೆ ನೀಡಬೇಕೆಂಬ ಕೋರಿಕೆಗಳು ವಿಪುಲವಾಗಿರತ್ತವೆ.

ಋಗ್ವೇದದ ಆರ್ಯರ ಸಮಾಜದಲ್ಲಿ ವಿಭಿನ್ನ ಬುಡಕಟ್ಟುಗಳಿಗೆ ಸೇರಿದ ಕುಲ ಹಾಗೂ ಗೋತ್ರಗಳು ಪ್ರಧಾನವಾಗಿದ್ದವು. ಇಂಥ ಬುಡಕಟ್ಟುಗಳ ಸದಸ್ಯರನ್ನು ‘ಜನಾ’ ಎಂದು ಕೆಲವೆಡೆ ಸೂಚಿಸಲಾಗಿದೆ. ಗೋತ್ರಗಳು ಬ್ರಾಹ್ಮಣ ಋಷಿ ಮೂಲದಿಂದ ಗುರುತಿಸಲ್ಪಡುತ್ತಿದ್ದವು. ಪ್ರತಿ ಬುಡಕಟ್ಟುಗಳಲ್ಲೂ ಕೆಲ ರಾಜನ್ಯ ವಂಶಗಳು ಇರುತ್ತಿದ್ದವು. ಇಂಥ ರಾಜನ್ಯ ವಂಶಗಳು ಸದಸ್ಯರಲ್ಲೇ ಬುಡಕಟ್ಟಿನ ಮುಂದಾಳತ್ವ ವಹಿಸಬಲ್ಲ ವೀರರು ರಾಜರಾಗುತ್ತಿದ್ದರು. ‘ರಾಜ’ ಎಂದರೆ ಒಬ್ಬ ಮುಖ್ಯಸ್ಥನಿಗಿಂತ ಹೆಚ್ಚೇನೂ ಆಗಿರಲಿಲ್ಲ. ಇಂಥ ರಾಜನ್ಯ ವಂಶಗಳು ಸದಸ್ಯರಲ್ಲೇಬುಡಕಟ್ಟಿನ ಮುಂದಾಳತ್ವ ವಹಿಸಬಲ್ಲ ವೀರರು ರಾಜರಾಗುತ್ತಿದ್ದರು. ‘ರಾಜ’ ಎಂದರೆ ಒಬ್ಬ ಮುಖ್ಯಸ್ಥನಿಗಿಂತ ಹೆಚ್ಚೇನೂ ಆಗಿರಲಿಲ್ಲ. ಇಂಥ ರಾಜನ್ಯ ವಂಶದವರು ಯಜ್ಞಯಾಗಾದಿಗಳನ್ನು ನಡೆಸಬಲ್ಲ ಪುರೋಹಿತರನ್ನು ಹೊಂದಿರುತ್ತಿದ್ದರು. ಋಗ್ವೇದದಲ್ಲಿ ಉಲ್ಲೇಖಿತವಾದ ಬುಡಕಟ್ಟುಗಳಲ್ಲಿ ಭರತ ಬುಡಕಟ್ಟಿನ ತೃತ್ತು ಕುಲದ ಸುದಾಸ ಹಾಗೂ ದಿವೋದಾಸ ಎಂಬ ರಾಜರು ಮುಖ್ಯರಾಗಿದ್ದಾರೆ. ತೃತ್ತುಗಳ ಪುರೋಹಿತ ವಿಶ್ವಾಮಿತ್ರನಾಗಿದ್ದ. ಆದರೆ ತೃತ್ತುಗಳು ವಿಶ್ವಾಮಿತ್ರನನ್ನು ಕೈಬಿಟ್ಟು ವಶಿಷ್ಟನನ್ನು  ಪುರೋಹಿತನನ್ನಾಗಿ ನಿಯಮಿಸಿಕೊಂಡರು. ಆಗ ವಿಶ್ವಾಮಿತ್ರನು ೧೦ ಬಡುಕಟ್ಟುಗಳ ಒಂದು ಸೇನೆಯನ್ನು ಕಟ್ಟಿ ಸುದಾಸನ ವಿರುದ್ಧ ಕಳುಹಿಸುತ್ತಾನೆ. ಈ ಹತ್ತು ಬುಡಕಟ್ಟುಗಳಲ್ಲಿ ಪುರು, ಯದು, ಅನು, ದೃಹ್ಯು ಹಾಗೂ ತುರ್ವಶನ್‌‘ ಪಂಚಜನರು’ ಸೇರಿದ್ದರು. ಜೊತೆಗೆ ಅಲೀನ, ಫಕ್ತ, ಬಲಾನ, ಶಿವ ಹಾಗೂ ವಿಷಣಿನ್‌ ಎಂಬ ಇನ್ನೈದು ಜನರು ಸೇರಿದ್ದರು. ಈ ಜನರಲ್ಲೇ ವೈದಿಕ ಹಾಗೂ ಅವೈದಿಕ ಪಂಗಡಗಳು ಇದ್ದವು. ಇವರ ಜೊತೆಗೆ ಅಸಸ್‌, ಸಿಗ್ರು, ಯಕ್ಷು ಮುಂತಾದ ಅನಾರ್ಯರು ಭೇಡನೆಂಬ ಜನ ಮುಂದಾಳತ್ವದಲ್ಲಿ ಸುದಾಸನ ಮೇಲೇರಿ ಬಂದಿದ್ದರು.

ಭರತ ಬುಡಕಟ್ಟಿನಲ್ಲಿ ಅನೇಕ ಇಂಥ ರಾಜನ್ಯ ಕುಲಗಳಿದ್ದವು. ಇವರೆಲ್ಲಾ ರಾವಿ ನದಿಯ ಪೂರ್ವಕ್ಕೆ, ಅದರಲ್ಲೂ ಮುಖ್ಯವಾಗಿ ಸರಸ್ವತಿ-ಯಮುನಾ ನದಿಗಳ ಪ್ರದೇಶದಲ್ಲಿ ನೆಲೆಸಿದ್ದರು. ಆ ಕಾಲದ ರಾಜನ್ಯರಲ್ಲೇ ಇವರು ಪರಾಕ್ರಮಿಗಳಾಗಿದ್ದುದು ಕಂಡುಬರುತ್ತದೆ. ಪಂಚಜನರು ಅಸಿಕ್ನಿ (ಚಿನಾಬ್‌) ಮತ್ತು ಪರುಶ್ನಿ (ರಾವಿ) ನದಿಗಳ ಪ್ರದೇಶದಲ್ಲಿದ್ದರು. ‘ಸೃಂಜಯ’ರು ಯಮುನಾ ನದಿಗೂ ಪೂರ್ವಕ್ಕೆ ಪಾಂಚಲ ಪ್ರದೇಶದಲ್ಲಿದ್ದರು.

ಈ ಜನರು ಮುಖ್ಯವಾಗಿ ಪಶು ಸಂಗೋಪರಾಗಿದ್ದರು. ಇವರು ಕುದರೆ, ಕುರಿ, ಆಡು ಮುಂತಾದ ಪ್ರಾಣಿಗಳನ್ನು ಸಾಕುತ್ತಿದ್ದರಾದರೂ ಗೋವು ಮೂಖ್ಯ ಸಾಕುಪ್ರಾಣಿಯಾಗಿತ್ತು. ಗೋವು ಒಂದು ಬುಡಕಟ್ಟಿನ ಸಂಪತ್ತಾಗಿತ್ತು. ಈ ಜನರ ಸಂಸ್ಕೃತಿಯಲ್ಲಿ ಗೋಪಾಲನೆ ಅಚ್ಚೋತ್ತಿದೆ. ರಾಜನ ಮುಖ್ಯ ಕರ್ತವ್ಯ ಎಂದರೆ ಗೋವುಗಳನ್ನು ರಕ್ಷಿಸುವುದು. ಹಾಗಾಗಿ ಆತನನ್ನು ಗೋಪ ಅಥವಾ ಗೋಪಾಲ ಎಂದು ಕರೆಯಲಾಗಿದೆ. ಪ್ರತಿ ಬುಡಕಟ್ಟು ಒಂದು ನಿರ್ದಿಷ್ಟ ಭೂಪ್ರದೇಶದಲ್ಲಿ ತನ್ನ ಗೋಪಾಲನೆ ನಡೆಸುತ್ತಿತ್ತು. ಗೋಪಾಲನೆಯನ್ನು ನಡೆಸುವ ಜನರನ್ನು ‘ವಿಶ:’ ಎಂದು ಕರೆಯಲಾಗಿದೆ. ಇಂಥ ಗೋವಳರ ಬೀಡನ್ನು ಗ್ರಾಮ ಎಂದು ಕರೆಯುತ್ತಿದ್ದರು. ಈ ರೀತಿ ಗ್ರಾಮಗಳು ಸಾಮುದಾಯಿಕ ‘ಗೋಚರ’ ಭೂಮಿಯನ್ನು ಬಳಸುತ್ತಿದ್ದವು. ಗೋವಿಗಾಗಿ ಹೊಡೆದಾಟ ವಿಭಿನ್ನ ಬುಡಕಟ್ಟುಗಳ ಮಧ್ಯೆ ಸಾಮಾನ್ಯವಾಗಿತ್ತು. ಒಬ್ಬರು ಮತ್ತೊಬ್ಬರ ಗೋವನ್ನು ಕದ್ದೊಯ್ಯುವ ‘ಗೋಗ್ರಹಣ’ಗಳು, ಗೋವಿನ ರಕ್ಷಣೆಗಾಗಿ. ಅವನ್ನು ಮರಳಿ ಪಡೆಯಲು ನಡೆಸುತ್ತಿದ್ದ ಗವಿಷ್ಠಗಳೆಂಬ ಯುದ್ಧಗಳು ಈ ಕಾಲದಲ್ಲಿ ಸಾಮಾನ್ಯವಾಗಿದ್ದವು. ಗೋಗ್ರಹಣ ಬುಡಕಟ್ಟುಗಳ ಸಂಪತ್ತನ್ನು ಹೆಚ್ಚಿಸಿಕೊಳ್ಳುವ ಮಾಧ್ಯಮವಾಗಿತ್ತು. ತಮ್ಮ ಗೋವನ್ನು ರಕ್ಷಿಸಿಕೊಳ್ಳಲಾಗದ ಬುಡಕಟ್ಟುಗಳು ಕ್ರಮೇಣ ಸ್ವಾಯತ್ತತೆಯನ್ನು ಕಳೆದುಕೊಂಡು ದುರ್ಬಲವಾಗುತ್ತಿದ್ದವು.

ರಾಜನ್ಯರು ಈ ಬುಡಕಟ್ಟುಗಳ ರಕ್ಷಕರಾಗಿದ್ದರು. ರಾಜನ್ಯ ಕುಲದವರು ಒಬ್ಬನನ್ನು ‘ರಾಜ’ನೆಂದು ಆಯ್ಕೆ ಮಾಡುವ ‘ಗಣ’ ವ್ಯವಸ್ಥೆ ಈ ಕಾಲದಲ್ಲಿದ್ದಂತೇ ತೋರುತ್ತದೆ. ರಾಜನುಗೋವನ್ನು ರಕ್ಷಿಸುವ ಸಂದರ್ಭದಲ್ಲಿ ತನ್ನ ಪ್ರತಿಷ್ಟೆಯನ್ನು ಮೆರೆಯುತ್ತಿದ್ದನು. ಯದ್ಧದಲ್ಲಿ ಸೆರೆಹಿಡಿದುಕೊಂಡು ಬಂದ ಗೋವುಗಳನ್ನು ‘ವಿಧಾತ’ ಎಂಬ ಸಭೆಯಲ್ಲಿ ಹಂಚಿಕೊಳ್ಳುತ್ತಿದ್ದರು ಕೇವಲ ಗೋವೊಂದೇ ಅಲ್ಲ, ವೈರಿ ಬುಡಕಟ್ಟಿನ ಜನರನ್ನೂ ಸೆರೆ ಹಿಡಿದು ತಂದು ದಾಸ-ದಾಸಿಯರನ್ನಾಗಿ ಮಾಡಿಕೊಳ್ಳುತ್ತಿದ್ದರು. ವೈದಿಕ ಯಜ್ಞ-ಯಾಗಗಳು ಇಂಥ ಸಂಸತಿಯಲ್ಲಿ ನಿರ್ಣಾಯಕವಾಗಿದ್ದವು. ಬುಡಕಟ್ಟಿನ ಶ್ರೇಯೋಭಿವೃದ್ಧಿಗಾಗಿ ದೇವತೆಗಳನ್ನು ಸಂತೋಷಪಡಿಸುವ ಈ ಯಜ್ಞದ ಆಚರಣೆಯನ್ನು ಇವರು ಶ್ರೇಷ್ಠವಾದ ಕೆಲಸ ಎಂದು ತಿಳಿದಿದ್ದರು. ಈ ಯಜ್ಞದ ಮೂಲಕವೇ ಯದ್ಧದೇವತೆ ಇಂದ್ರ ಜಯವನ್ನು ತರುತ್ತಾನೆ, ವರುಣನು ಋತುವನ್ನು ಕಾಪಾಡುತ್ತಾನೆ ಎಂದೆಲ್ಲ ನಂಬಿದ್ದರು. ಯಜ್ಞಗಳನ್ನು ರಾಜನ್ಯರು ಮುಂದೆ ನಿಂತು ನಡೆಸುತ್ತಿದ್ದರು. ಈ ಯಜ್ಞಾಚರಣೆ ಹಾಗೂ ಮಂತ್ರ ವಿದ್ಯೆಯನ್ನು ಕಲಿಯುವುದನ್ನೇ ಜೀವನವನ್ನಾಗಿಸಿಕೊಂಡ ಅನೇಕ ಪ್ರಕಾರದ ಜನರಿದ್ದರು. ಅವರನ್ನು ಅವರ ವಿಶೇಷ ಕೆಲಸಕ್ಕನುಗುಣವಾಗಿ ಜರಿತ್ವ, ಸ್ತೋತೃ, ವಿಪ್ರ, ಕವಿ, ಋಷಿ, ಪುರೋಹಿತ, ಬ್ರಾಹ್ಮಣ ಎಂದೆಲ್ಲ ಕರೆಯುತ್ತಿದ್ದರು. ಇವರಲ್ಲಿ ‘ಬ್ರಾಹ್ಮಣ’ ಎಂಬ ಶಬ್ದ ಯಜ್ಞವನ್ನು ನಡೆಸಿಕೊಡುವವರಿಗೆಲ್ಲ ನಂತರ ಸಾಮಾನ್ಯವಾಗಿ ಅನ್ವಯವಾದದ್ದು ಕಂಡುಬರುತ್ತದೆ. ಬ್ರಾಹ್ಮಣರು ವಿಭಿನ್ನ ಋಷಿ ಮೂಲವನ್ನು ಗೋತ್ರಗಳ ಮೂಲಕ ಗುರುತಿಸಿಕೊಂಡಿದ್ದರು.

ಬ್ರಾಹ್ಮಣರ ಜೀವನೋಪಾಯ ಯಜ್ಞದಲ್ಲಿ ಸಿಗುವ ದಾನದಿಂದಲೇ ನಡೆಯುತ್ತಿತ್ತು. ಋಗ್ವೇದದಲ್ಲಿ ಬರುವ ದಾನಸ್ತುತಿಯಲ್ಲಿ ಗೋವು, ಕುದುರೆ, ಸುವರ್ನ, ರಥ, ದಾಸಿಯರು ಮುಂತಾದ ಬೆಲೆ ಬಾಳುವ ವಸ್ತುಗಳನ್ನು ದಾನ ನೀಡುವ ವೀರರನ್ನು ಸ್ತುತಿಸಲಾಗಿದೆ. ಅದರಲ್ಲೂ ಈ ಕಾಲದ ಪುರೋಹಿತರಲ್ಲಿ, ಋಷಿಗಳಲ್ಲಿ ದಾನ ಸ್ವೀಕರಿಸಿದ ಗೋಮಂದೆಯೇ ಇರುತ್ತಿತ್ತು ಯಜ್ಞಗಳನ್ನು ಯುದ್ಧದ ಲೂಟಿಯನ್ನು ಹಂಚಿಕೊಳ್ಳುವ ಸಂದರ್ಭದಲ್ಲೊಂದೇ ನಡೆಸುತ್ತಿರಲಿಲ್ಲ. ಇತರ ಸಂದರ್ಭಗಳಲ್ಲೂ ನಿಯತಕಾಲಿಕವಾಗಿ ನಡೆಸುತ್ತಿದ್ದರು. ಯಜ್ಞದಲ್ಲಿ ದೇವತೆಗಳಿಗೆ ಹವಿಸ್ಸನ್ನು ಅಪಿಸುವ ರೂಪದಲ್ಲಿ ತಮ್ಮ ಸಂಪತ್ತಿನ ಒಂದು ಭಾಗವನ್ನು ಸುಡುವುದರ ಮೂಲಕ ಹೆಚ್ಚುವರಿ ಉತ್ಪಾದನೆಯನ್ನು ಬಳಸುತ್ತಿದ್ದರು. ಮೊದಲು ಯಜ್ಞಯಾಗಾದಿಗಳಿಗೆಲ್ಲ ಗೋವನ್ನು ಬಲಿ ಕೊಡುವ ಪದ್ಧತಿ ಇದ್ದು ನಂತರ ಕೆಲ ನಿರ್ದಿಷ್ಟ ಪ್ರಕಾರದ ಗೋವುಗಳ ಬಲಿಯನ್ನು ಅವು ಅಘ್ನವೆಂದು ನಿಷೇಧಿಸಲಾಯಿತು. ಯಜ್ಞಗಳಲ್ಲಿ ದಾನಕ್ಕೆ ಹಾಗೂ ಸುಡಲು ಬೇಕಾಗುವ ಸಾಮಗ್ರಿಗಳನ್ನು ‘ವಿಶಃ’ಗಳು ಒದಗಿಸುತ್ತಿದ್ದರು. ಕ್ರಮೇಣ ‘ವಿಶಃ’ಗಳಿಂದ ಇಂಥ ವಸ್ತುಗಳನ್ನು ವಸೂಲಿ ಮಾಡುವುದು ರಾಜರ ಹಕ್ಕಾಯಿತು.

ಋಗ್ವೇದ ಕಾಲದ ಜನರಿಗೆ ವ್ಯವಸಾಯದ ಜ್ಞಾನ ಕೂಡ ಇತ್ತಾದರೂ ವ್ಯವಸಾಯ ನಿರ್ಣಾಯಕವಾಗಿರಲಿಲ್ಲ. ಬಹುಶಃ ಸಪ್ತ ಸಿಂಧೂ ಭಾಗದ ಶುಷ್ಕ ಹವೆಯ, ಹುಲ್ಲುಗಾವಲಿನ ಪ್ರದೇಶಗಳಲ್ಲಿ ಗೋಪಾಲನೆಯೇ ಅನುಕೂಲಕರವಾಗಿದ್ದಿರಬಹುದು. ಅದರಲ್ಲೂ ವ್ಯವಸಾದಲ್ಲಿ ಭೂಮಿಯನ್ನು ಉಳುವ ಕಲೆಯನ್ನು ಅವೈದಿಕರಿಂದ ಕಲಿತಿರಬಹುದಾದ ಸಾಧ್ಯತೆ ಇದೆ. ಎಕೆಂದರೆ ನೇಗಿಲನ್ನು ಸೂಚಿಸುವ ಅಂಗಳ, ಶಿರ ಮುಂತಾದ ಶಬ್ದಗಳು ಸಂಸ್ಕ್ರತ ಮೂಲದವಲ್ಲ. ಕತ್ತಿ ಹಾಗೂ ಗುದ್ದಲಿಗಳ ಉಪಯೋಗ ಇವರಿಗೆ ತಿಳಿದಿತ್ತು. ಇವರಿಗೆ ಪರಿಚಯವಿದ್ದ ಒಂದೇ ಧಾನ್ಯ ಎಂದರೆ ‘ಯವ’ ಅಥವಾ ಬಾರ್ಲಿ.

ಈ ಜನರಿಗೆ ಅಯಸ್‌ ಎಂಬ ಲೋಹದ ಪರಿಚಯವಿತ್ತು. ಬಹುಶಃ ತಾಮ್ರಕ್ಕೆ ಇವರು ಅಯಸ್ಸೆಂದು ಕರೆದಿರಬಹುದು. ಎಕೆಂದರೆ ನಮಗೆ ಪ್ರಾಕ್ತನ ಶಾಸ್ತ್ರೀಯವಾಗಿ ಕಬ್ಬಿಣ ಈ ಕಾಲದಲ್ಲಿದ್ದುದಕ್ಕೆ ಅಧಾರ ಸಿಗುವುದಿಲ್ಲ. ತಾಮ್ರವನ್ನು ಬಿಟ್ಟರೆ ಇವರಿಗೆ ಬಂಗಾರದ ಉಪಯೋಗ ತಿಳಿದಿತ್ತು. ಬಂಗಾರವನ್ನು ಆಭರಣಗಳಿಗೆ, ಹಾಗೂ ಗಟ್ಟಿಗಳನ್ನಾಗಿ ಮಾಡಿ ದಾನ ನೀಡಲು ಉಪಯೋಗಿಸುತ್ತಿದ್ದರು. ಇವರ ಸಮಾಜದಲ್ಲಿದ್ದ ಕೆಲವೇ ವೃತ್ತಿ ಕುಶಲದಲ್ಲಿ ಚರ್ಮಕಾರರು, ಲೋಹಕಾರರು, ನೇಕಾರರು, ಕುಂಬಾರರು ಹಾಗೂ ರಥಕರರು ಉಲ್ಲೇಖಿಸಲ್ಪಟ್ಟಿದ್ದಾರೆ. ನೇಕಾರರು ಮುಖ್ಯವಾಗಿ ಉಣ್ಣೆ ಬಟ್ಟೆಯನ್ನೇ ನೇಯುತ್ತಿದ್ದರು. ಬಟ್ಟೆಗಳಿಗೆ ಜರಿಯ ವಿನ್ಯಾಸಗಳನ್ನು ರಚಿಸುವ ಕಸೂತಿ ಕಲೆ ಇವರಿಗೆ ತಿಳಿದಿತ್ತು. ಋಗ್ವೇದದ ಜನರಿಗೆ ಅವೈದಿಕ ಸ್ಥಾನಿಕರಿಗಿಲ್ಲದ ರಥ ಹಾಗೂ ಕುದುರೆ ಸವಾರಿಯ ಪರಿಣತಿ ಇತ್ತು. ಅಕ್ಷ ಹಾಗೂ ಕದಿರುಗಳುಳ್ಳ ಗಾಲಿಗಳನ್ನು ಇವರು ತಯಾರಿಸುತ್ತಿದ್ದರು.

ಋಗ್ವೇದ ಕಾಲದ ಸಮಾಜವನ್ನು ಪುರುಷಪ್ರಧಾನ ಸಮಾಜ ಎನ್ನಬಹುದು. ಇವರ ಮುಖ್ಯ ದೇವತೆಗಳೆಲ್ಲರೂ ಪುರುಷರೇ ಆಗಿರುವುದನ್ನು ನೋಡುತ್ತೇವೆ. ಇವರು ಸಂಪೂರ್ಣ ನೆಲೆ ನಿಂತವರಾಗಿರಲಿಲ್ಲ. ಕುಟುಂಬ ಒಂದು ವಿಸ್ತೃತ ರಕ್ತ ಸಂಬಂಧಿಗಳ ಗುಂಪಾಗಿತ್ತು ಅಂದರೆ ಗಂಡ-ಹೆಂಡತಿ ಇವರಿಬ್ಬರ ತಂದೆ-ತಾಯಿ ತಮ್ಮಂದಿರೆಲ್ಲ ಒಟ್ಟಿಗೇ ಕುಟುಂಬ ಕಲ್ಪನೆಯಲ್ಲಿ ಬರುತ್ತಾರೆ. ಇವರಿಗೆ ಖಾಸಗಿ ಆಸ್ತಿಯ ಕಲ್ಪನೆಯೂ ಇರಲಿಲ್ಲ. ಕುಟುಂಗಗಳು ಅಥವಾ ಕುಲಗಳು ಸಾಮುದಾಯಿಕ ಭೂಮಿಯನ್ನು ಹೊಂದಿರುತ್ತಿದ್ದರು. ಆ ಜನರಿಗೆ ಸಾಮಾಜಿಕ ಶ್ರೇಣೀಕರಣದ ಕಲ್ಪನೆಯೂ ಇರಲಿಲ್ಲ. ನಂತರ ಕಾಲದ ವರ್ಣ-ಜಾತಿಗಳ ವ್ಯವಸ್ಥೆ ಕೂಡ ಇರಲಿಲ್ಲ. ಆರ್ಯ ಕುಲದ ಯಾರಾದರೂ ಯಾವ ವೃತ್ತಿಯನ್ನಾದರೂ ತನ್ನ ಸಥಾನಮಾನ ಕಳೆದುಕೊಳ್ಳದೇ ಅನುಸರಿಸಬಹುದಿತ್ತು. ರಾಜನ್ಯರು ಋಷಿಗಳೂ, ಪುತೋಹಿತರೂ ಆಗುತ್ತಿದ್ದರು. ಬಹುಶಃ ಋಗ್ವೇದ ಕಾಲದಲ್ಲಿಯೇ ವರ್ಣರಹಿತ ಸಮಾಜವೊಂದು ಕ್ರಮೇಣ ವರ್ಣ ಸಮಾಜವಾಗಿ ಪರಿವರ್ತನೆಯಾಗಲಿಕ್ಕೆ ಬೇಕಾದ ಸಿದ್ಧತೆಗಳು ನಡೆದಿದ್ದವು.