ಉತ್ತರ ವೈದಿಕ ಸಮಾಜ

ಯಜುರ್ವೇದ ಹಾಗೂ ಇತರ ವೇದಗಳು, ಬ್ರಾಹ್ಮಣಗಳು, ಆರಣ್ಯಕಗಳು, ಶ್ರೌತ ಸೂತ್ರಗಳು ಮುಂತಾದವುಗಳ ರಚನೆಯಾಗುವ ಕಾಲಕ್ಕೆ ವೈದಿಕ ಸಮಾಜ ಬೇರೆಯದೇ ಸ್ವರೂಪವನ್ನು ತಳೆಯುತ್ತಿತ್ತು. ಒಟ್ಟಾರೆಯಾಗಿ ಇಂಥ ಬದಲಾವಣೆಗಳನ್ನು ಈ ಕೆಳಗಿನಂತೆ ಕ್ರೋಡೀಕರಿಸಬಹುದು.

೧. ಭೌಗೋಲಿಕ ಸ್ಥಿತ್ಯಂತರ – ಸಪ್ತಸಿಂಧುವಿನಿಂದ ಗಂಗಾ ಬಯಲಿಗೆ

೨. ಕಬ್ಬಿಣದ ಬಳಕೆ

೩. ಕೃಷಿ ಪ್ರಾಧಾನ್ಯತೆ ಹಾಗೂ ಹಳ್ಳಿಗಳ ಬೆಳವಣಿಗೆ

೪. ವರ್ಣವ್ಯವಸ್ಥೆಯ ಉಗಮ ಹಾಗೂ ರಾಜ್ಯ ಕಲ್ಪನೆ

ಉತ್ತರ ವೇದಕಾಲದಲ್ಲಿ ಉಲ್ಲೇಖಿತವಾದ ಭೌಗೋಲಿಕ ಪ್ರದೇಶವು ಗಂಗಾ-ಯಮುನಾ ನದಿ ಪ್ರದೇಶದಲ್ಲಿ ಕೇಂದ್ರಿತವಾಗಿದೆ. ಸಪ್ತಸಿಂಧೂ ಪ್ರದೇಶ ಈ ಕಾಲದ ಆರ್ಯರ ಸ್ಮೃತಿಯಿಂದ ಕ್ರಮೇಣ ಮರೆಯಾಯಿತು. ಕ್ರಿ.ಪೂ. ೧೦೦ರ ವೇಳೆಗೆ ಸರಸ್ವತಿ ನದಿ ಬತ್ತಿಹೋಗತೊಡಗಿತೆಂದು ಸಾಹಿತ್ಯದಲ್ಲಿ ಸೂಚಿತವಾಗಿದೆ. ಭೂಗರ್ಭಶಾಸ್ತ್ರಜ್ಞರ ಅಭಿಪ್ರಾಯದ ಪ್ರಕಾರ ಸರಸ್ವತಿಗೆ ನೀರು ಪೂರೈಸುತ್ತಿದ್ದ ಜಲಾನಯನ ಪ್ರದೇಶದಲ್ಲಿ ಆದ ಭೂಮೇಲ್ಮೈ ಮಾರ್ಪಾಟುಗಳಿಂದ ಸರಸ್ವತಿಯ ನೀರು ಬೇರೆ ನದಿಗಳಿಗೆ ಹರಿದು ಹೋಗತೊಡಗಿತು. ಹಾಗಾಗಿ ಕ್ರಮೇಣ ಸರಸ್ವತಿ ಬತ್ತಿಹೋಯಿತು. ಈ ಸಂಧಿಯಲ್ಲೇ ಆರ್ಯರು ಗಂಗಾ-ಯಮುನಾ ನದಿಗಳ ಪ್ರದೇಶಕ್ಕೆ ತಮ್ಮ ವಸತಿಗಳನ್ನು ವಿಸ್ತರಿಸಿದ್ದರು. ಈ ಕಾಲದಲ್ಲಿ ಪ್ರಸ್ತುತ ಪ್ರದೇಶದಲ್ಲಿ ಕುರುವಂಶದ ರಾಜರು ವಾಸಿಸಿದ್ದರು. ಇವರು ತಮ್ಮನ್ನು ‘ಭರತ’ನ ವಂಶದವರೆಂದು ಕರೆದುಕೊಳ್ಳುತ್ತಾರೆ. ವಿದ್ವಾಂಸರ ಪ್ರಕಾರ ಭರತ ಹಾಗೂ ಪುರುಬುಡಕಟ್ಟುಗಳು ಈ ಕಾಲದಲ್ಲಾಗಳೇ ಸೇರಿ ಹೋಗಿದ್ದವು. ಹೀಗೆ ಕುರು ರಾಜರು ತಮ್ಮ ವಂಶವಳಿಯನ್ನು ಸ್ಥಾಪಿಸಿದರು. ‘ಮಹಾಭಾರತ’ ಕಾವ್ಯದ ಮೂಲ ಕಥೆ ಕುರು ವಂಶದ ವೀರರ ಮಧ್ಯೆ ನಡೆದ ಯುದ್ಧವನ್ನು ನಿರೂಪಿಸುತ್ತದೆ. ಕುರುಗಳ ಭರತ ವಂಶದವರಾದುದರಿಂದ, ಅವರನ್ನು ‘ಭಾರತ’ ಎಂದೂ, ಅವರು ನೆಲೆಸಿದ ಪ್ರದೇಶವನ್ನು ಭಾರತ ಎಂದೂ ಕರೆಯಲಾಗಿದೆ. ಕುರುವಂಶದ ವೀರರ ಸಂಘರ್ಷ ಕೂಡ ‘ಭಾರತ’ವಾಯಿತು. ವೈದಿಕರು ಈ ‘ಭಾರತ’ ಎಂಬ ದೇಶವಾಚಿಯನ್ನು ತಾವು ಪಸರಿಸಿದ ಪ್ರದೇಶಗಳಿಗೆಲ್ಲ ಅನ್ವಯಿಸತೊಡಗಿದರು. ಕುರು ವಂಶದ ರಾಜಧಾನಿ ಗಂಗಾನದಿಯ ದಡದ ಮೇಲಿನ ಹಸ್ತಿನಾಪುರವಾಗಿತ್ತು. ಯಮುನಾನದಿಯ ಪಶ್ಚಿಮಕ್ಕೆ ಇಂದಿನ ಹರ‍್ಯಾಣ ಆಗ ದೆಹಲಿಗಳಲ್ಲಿ ಕುರುಕ್ಷೇತ್ರ ಹಾಗೂ ಇಂದ್ರಪ್ರಸ್ಥಗಳಿದ್ದವು. ಕುರುಭೂಮಿಯ ಪೂರ್ವಕ್ಕೆ ಪಾಂಚಾಲ ದೇಶವಿತ್ತು. ಅಹಿಚ್ಛತ್ರ ಇದರ ಪ್ರಮುಖ ಪಟ್ಟಣವಾಗಿತ್ತು.  ಕುರು-ಪಾಂಚಾಲಗಳು ಸೇರಿದ ಪ್ರದೇಶವನ್ನು ಆರ್ಯಾವರ್ತ ಎಂದು ನಂತರ ಗುರುತಿಸುತ್ತಿದ್ದರು. ಈ ಪ್ರದೇಶದಲ್ಲೇ ಶ್ರೇಷ್ಠವಾದ ವೈದಿಕ ಆಚರಣೆ ಪ್ರಚಲಿತದಲ್ಲಿತ್ತೆಂದು ತಿಳಿದುಬರುತ್ತದೆ.

ಉತ್ತರ ವೇದಕಾಲದ ಜನರಿಗೆ ಕುರು-ಪಾಂಚಾಲದಿಂದ ಹೊರಗಿದ್ದ ಅನೇಕ ಪ್ರದೇಶಗಳೂ ಪರಿಚಯವಿದ್ದವು. ಅದರಲ್ಲಿ ಪಾಂಚಾಲದಿಂದಲೂ ಪೂರ್ವಕ್ಕೆ ಗಂಗಾ ಬಯಲಿನಲ್ಲಿ ಆರ್ಯ ಸಂಸ್ಕೃತಿಯ ವಿಸ್ತರಣೆ ಕ್ರಿ.ಪೂ. ೬೦೦ರ ಸುಮಾರಿಗೆ ಆಗಿತ್ತು. ವಿದೇಶ ಮಾಧವನೆಂಬ ರಾಜನು ತನ್ನ ಬ್ರಾಹ್ಮಣ ಮಂತ್ರಿಯ ಜೊತೆ ಅಗ್ನಿಯನ್ನು ಹೊತ್ತೊಯ್ದು ಬಿಹಾರದ ಗಂಡಕಿ (ಸದಾನೀರ) ನದಿ ತೀರದಲ್ಲಿ ಆರ್ಯರನ್ನು ನೆಲೆಗೊಳಿಸಿದ ಕಥೆ ಇದೆ. ಬ್ರಾಹ್ಮಣ ಹಾಗೂ ಉಪನಿಷತ್ತುಗಳಲ್ಲಿ ವಿದೇಹದ ಹಾಗೂ ಕಾಶಿಯ, ಕೋಸಲದ ಉಲ್ಲೇಖ ಬರುತ್ತದೆ. ಈ ರಾಜರೆಲ್ಲ ವೈದಿಕ ಸಂಸ್ಕೃತಿಯನ್ನು ಪಾಲಿಸುವವರಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಈ ರಾಜ್ಯಗಳಿಗೂ ಪೂರ್ವದಲ್ಲಿ ಬಿಹಾರದ ರಾಜಗೀರ ಪ್ರದೇಶದ ಮಗಧ ಹಾಗೂ ಅದಕ್ಕೂ ಪೂರ್ವದ ಕಡೆಗಿದ್ದ ವಂಗದ ಉಲ್ಲೇಖಗಳೂ ವೈದಿಕ ಕಾಲದ ಕೊನೆಯ ಹಂತದಲ್ಲಿ ಬರುತ್ತವೆ. ‘ಮಗಧ’ ಜನರನ್ನು ವ್ರಾತ್ಯ (ಅನಾರ್ಯ)ರೆಂದು ಕರೆಯಲಾಗಿದೆ.

ಯಮುನಾ ನದಿ ತೀರದಲ್ಲಿದ್ದ ಉಶೀನರ, ಶಿಬಿ, ಮತ್ಸ್ಯ ಹಾಗೂ ಶಲ್ಪರೆಂಬ ಜನರೂ ವೈದಿಕ ಜನರಿಗೆ ಪರಿಚಯವಿದ್ದರು. ದಕ್ಷಿಣದಲ್ಲಿ ರೇವಾ(ನರ್ಮದಾ) ನದಿ ಹಾಗೂ ವಿದರ್ಭ (ಮಹಾರಾಷ್ಟ್ರದ ನಾಗಪುರ ಪ್ರದೇಶ)ಗಳನ್ನೂ ಉತ್ತರ ವೈದಿಕ ಸಾಗಿತ್ಯ ಉಲ್ಲೇಖಿಸುತ್ತದೆ. ಬಹುಶಃ ಕ್ರಿ.ಪೂ. ೬೦೦ರ ಸುಮಾರಿಗೆ ಈ ಪ್ರದೇಶಗಳಲ್ಲೆಲ್ಲ ವೈದಿಕ ಸಂಸ್ಕೃತಿಯ ಪ್ರಸಾರವಾಗಿರಲೂಬಹುದು. ಬಹುಶಃ ಈ ಸಂದರ್ಭದಲ್ಲೇ ‘ಸಮುದ್ರ’ದ ಜ್ಞಾನವೂ ಇವರಿಗಾಗಿರ ಬಹುದು. ಉತ್ತರದಲ್ಲಿ ಹಿಮಾಲಯ ಪರ್ವತಾವಳಿ, ಹಾಗೂ ವಾಯುವ್ಯ ಭಾರತದ ಕೇಕೆಯ, ಮಾದ್ರ, ಕಾಂಬೋಜ, ಗಾಂಧಾರ, ಉತ್ತರ ಕುರು ದೇಶಗಳನ್ನು ಕುರಿತು ವೈದಿಕ ಜನರಿಗೆ ಗೊತ್ತಿತ್ತು. ಆದರೆ ಆರ್ಯಾವರ್ತ ಹಾಗೂ ಕೋಸಲ, ವಿದೇಹ, ಕಾಶಿ ಮುಂತಾದ ಪ್ರದೇಶಗಳಲ್ಲಿ ಮಾತ್ರ ಉತ್ತರ ವೇದಕಾಲದ ವೈದಿಕ ಸಂಸ್ಕೃತಿ ಪ್ರಚಲಿತದಲ್ಲಿತ್ತು.

ಉತ್ತರ ವೈದಿಕ ಕಾಲದ ಸಾಂಸ್ಕೃತಿಕ ಅವಶೇಷಗಳು ನಮಗೆ ಪ್ರಾಕೃತ ಶಾಸ್ತ್ರೀಯ ಉತ್ಖನನಗಳಲ್ಲಿ ಸಾಕಷ್ಟು ದೊರೆತಿವೆ. ಮುಖ್ಯವಾಗಿ ಒಂದು ಪ್ರಕಾರದ ಬೂದು ಬಣ್ಣದ, ಉತ್ಕ್ರಷ್ಟ ಗುಣಮಟ್ಟದ ಮಡಿಕೆಗಳು ಈ ಕಾಲದ ವಸತಿಗಳಲ್ಲಿ ಸಿಗುತ್ತವೆ. ಈ ಮಡಿಕೆಗಳ ಒಳಭಾಗದಲ್ಲಿ ಬಿಳಿ ಬಣ್ಣದ ಚಿತ್ರಗಳಿರುತ್ತವೆ. ಇವನ್ನು Painted Grey Ware (p.g.w) ಎಂದು ಸೂಚಿಸಲಾಗುತ್ತದೆ. (ಪಿ.ಜಿ.ಡಬ್ಲ್ಯು) ಮಡಿಕೆಗಳನ್ನು ಉಪಯೋಗಿಸುತ್ತಿದ್ದ ಜನರು ಕೃಷಿ ಪ್ರಧಾನ ಹಳ್ಳಿ ಸಂಸ್ಕೃತಿಯವರಾಗಿದ್ದರು. ಕುರು-ಪಾಂಚಾಲ ಪ್ರದೇಶದಲ್ಲಿ ಕ್ರಿ.ಪೂ. ೧೧೦೦ರಿಂದ ೬೦೦ರ ಅವಧಿಯಲ್ಲಿ ಪಿ.ಜಿ.ಡಬ್ಲ್ಯು ಸಂಸ್ಕೃತಿಯ ಅವಶೇಷಗಳು ದೊರಕುತ್ತವೆ. ಹಾಗಾಗಿ ಪಿ.ಜಿ.ಡಬ್ಲ್ಯು ಸಂಸ್ಕೃತಿಯು ಉತ್ತರ ವೈದಿಕ ಸಾಹಿತ್ಯದಲ್ಲಿ ಪ್ರತಿನಿಧಿಸಲ್ಪಟ್ಟ ಹಳ್ಳಿ ಸಂಸ್ಕೃತಿ ಎಂಬುದರಲ್ಲಿ ಸಂಶಯವಿಲ್ಲ. ಈ ಜನರು ತಡಿಕೆ ಹಾಗೂ ಮರದ ಕಂಭ, ಹುಲ್ಲಿನ ಸೂರುಗಳಿಂದ ನಿರ್ಮಿಸಿದ ಗುಡಿಸಲುಗಳಲ್ಲಿ ವಾಸಿಸುತ್ತಿದ್ದರು. ಹಸ್ತಿನಾಪುರ, ಅಹಿಚ್ಛತ್ರ, ಕೌಶಂಬಿ ಮುಂತಾದ ಸ್ಥಳಗಳೆಲ್ಲ ಈ ಕಾಲದಲ್ಲಿ ಸಣ್ಣ ಸಣ್ಣ ಹಳ್ಳಿಗಳಾಗಿದ್ದವು.

ಪ್ರಾಕ್ತನ ಶಾಸ್ತ್ರೀಯ ಅವಶೇಷಗಳು ಸೂಚಿಸುವಂತೆ ಈ ಜನರಿಗೆ ಕ್ರಿ.ಪೂ. ೧೦೦೦ರ ಸುಮಾರಿಗೆ ಕಬ್ಬಿಣದ ತಂತ್ರಜ್ಞಾನದ ಪರಿಚಯವಾಯಿತು. ಮೊದಮೊದಲು ಕಬ್ಬಿಣವನ್ನು ಕೇವಲ ಬಾಣದ, ಈಟಿಯ ಮೊನೆ, ಖಡ್ಗ, ಚೂರಿ ಮುಂತಾದ ಯುದ್ಧ ಸಾಧನಗಳಿಗಾಗಿ ಮಾತ್ರ ಬಳಸುತ್ತಿದ್ದರು. ಆದರೆ ಕ್ರಿ.ಪೂ. ೬೦೦ರ ಸುಮಾರಿಗೆ ವಿಧವಿಧದ ಕಬ್ಬಣದ ಅಯುಧಗಳು ಬಳಕೆಯಲ್ಲಿ ಬಂದವು. ಅವೆಂದರೆ ನೇಗಿಲಿನ ಕುಳ, ಗುದ್ದಲಿ, ಕತ್ತಿ, ಕೊಡಲಿ, ಬಾಚಿ, ಗರಗಸ, ಉಳಿ ಮುಂತಾದವು. ಇವು ಆಗಿನ ಕಾಲದಲ್ಲಿ ವ್ಯವಸಾಯದ ತಂತ್ರಜ್ಞಾನವೊಂದೇ ಅಲ್ಲದೇ, ಮರಗೆಲಸ ಕೂಡ ಬೆಳೆದಿದ್ದಕ್ಕೆ ಸಾಕ್ಷಿಯಾಗಿವೆ.

ಸಪ್ತಸಿಂಧೂ ಪ್ರದೇಶಕ್ಕೂ, ಗಂಗಾ ಯಮುನಾ ನದಿಗಳ ಬಯಲಿಗೂ ಒಂದು ಮುಖ್ಯವಾದ ಭೌಗೋಲಿಕ ವ್ಯತ್ಯಾಸವಿತ್ತು. ಸಪ್ತ ಸಿಂಧೂ ಪ್ರದೇಶ ಒಣಹವೆಯ ಪ್ರದೇಶವಾಗಿದ್ದು, ಮಳೆ ಅತ್ಯಂತ ಕಡಿಮೆಯಾಗಿತ್ತು. ಆದರೆ ಸರಸ್ವತಿಯಿಂದ ಪೂರ್ವಕ್ಕೆ ಗಂಗಾ ಬಯಲಿನಲ್ಲಿ ಸಾಗಿದಂತೆ ಗೊಂಡಾರಣ್ಯಗಳು, ಆರ್ದ್ರ ಹವೆಯೂ, ನಿಯತಕಾಲಿಕ ಮಳೆಯೂ ಹೆಚ್ಚುತ್ತದೆ. ಗಂಗಾ ಬಯಲು ಈ ರೀತಿ ವ್ಯವಸಾಯಕ್ಕೆ ಯೋಗ್ಯವಾದ ಫಲವತ್ತಾದ ಭೂಮಿಯಾಗಿದ್ದರೂ ಅರಣ್ಯಗಳಿಂದಾಗಿ ದುರ್ಗಮವಾಗಿತ್ತು. ಮೈದಿಕ ಬುಡಕಟ್ಟುಗಳ ರಾಜುರು ಹಾಗೂ ವೀರರು ತಮ್ಮ ಜನರನ್ನು ಇಂಥ ದುರ್ಗಮ ಪ್ರದೇಶಗಳಲ್ಲಿ ನೆಲೆಯೂರಿಸಿದ ಮುಂದಾಳುಗಳಾದರು. ಇವರು ವ್ಯವಸಾಯ ಯೋಗ್ಯವಾದ ಭೂಮಿಯನ್ನು ಪಡೆಯಲು ಅರಣ್ಯಗಳನ್ನು ಕಡಿಯಬೇಕಿತ್ತು. ಅಲ್ಲಿ ಈಗಾಗಲೇ ಇರವ ಸ್ಥಾನಿಕ ಬುಡಕಟ್ಟುಗಳ ಜೊತೆ ಹೋರಾಡಬೇಕಿತ್ತು. ಕ್ರಿ.ಪೂ. ೮೦೦ರ ಸುಮಾರಿಗೆ ಗಂಗಾಬಯಲಿನಲ್ಲಿ ವ್ಯವಸಾಯ ವಿಸ್ತರಣೆ ಸಡೆಸುತ್ತಿದ್ದ ಅನೇಕ ಬುಡಕಟ್ಟುಗಳು ಕಂಡುಬರುತ್ತವೆ. ಇಂಥ ಬುಡಕಟ್ಟುಗಳೆಲ್ಲ ನಂತರ ‘ಜನಪದ’ಗಳೆನ್ನಿಸಿ ಕೊಂಡವು. ವೈದಿಕ ಸಾಹಿತ್ಯ ಈ ಕುರಿತು ಹೆಚ್ಚಿನ ವಿವರಣೆ ನೀಡುವುದಿಲ್ಲ. ಬದಲಾಗಿ ನಮಗೆ ಆರ್ಯರು ಹೇಗೆ ಗಂಗಾಬಯಲಿನಲ್ಲಿ ನೆಲೆ ನಿಂತರು ಎಂಬ ಚಿತ್ರ ಸಿಗುತ್ತದೆ.

ಆರ್ಯ ರಾಜರು ಹಾಗೂ ವಿಶಃಗಳು ಈಗ ಪ್ರಧಾನವಾಗಿ ವ್ಯವಸಾಯವನ್ನವಲಂಬಿಸಿದ್ದು ಕಂಡುಬರುತ್ತದೆ. ಅವರ ಯಜ್ಞಗಳಲ್ಲಿ ಕೂಡ ಪ್ರಾಣಿಗಳ ಜೊತೆಗೇ, ಅದಕ್ಕೂ ಪ್ರಧಾನವಾಗಿ ಧಾನ್ಯಗಳನ್ನು ಉಪಯೋಗಿಸತೊಡಗಿದರು. ದಾನದ ವಸ್ತುಗಳಲ್ಲಿ ಧಾನ್ಯವೂ ಸೇರಿತು.ಅರಣ್ಯಗಳನ್ನು ಕಡಿಯುವಲ್ಲಿ ಆರ್ಯರಿಗೆ ಮುಖ್ಯವಾಗಿ ಒದಗಿಬಂದ ಸಾಧನಗಳು ಎರಡು: ಅಗ್ನಿ ಮತ್ತು ಕಬ್ಬಿಣ ಆಯುಧಗಳು. ಸ್ಥಳೀಯ ಬುಡಕಟ್ಟಿನವರ ವಿರೋಧವನ್ನೆದುರಿಸಿ ಅಡವಿಗಳನ್ನು ವ್ಯವಸಾಯ ಭೂಮಿಯನ್ನಾಗಿ ಪರಿವರ್ತಿಸುವ ಘಟನೆಗಳೇ ಮಹಾಭಾರತದ ‘ಖಾಂಡವವನ ದಹನ’ ದಂಥ ಕಥೆಗಾಗಿ ಮೈದಳೆದಿದೆ ಎಂಬುದು ಸ್ಪಷ್ಟ. ಈ ಕಾಲದಲ್ಲೂ ‘ಗೋಗ್ರಹಣ’ದ ಕಥೆಗಳು ಬರುತ್ತವೆ. ಯಜ್ಞ ಯಾಗದಿಗಳಲ್ಲಿ ಯುಫಿಗಳಿಗೆ, ಬ್ರಾಹ್ಮಣರಿಗೆ ಸಹಸ್ರಾರು ಗೋವುಗಳನ್ನು ದಾನ ಮಾಡಿದ ಉಲ್ಲೇಖಗಳು ಸಾಮಾನ್ಯವಾಗಿವೆ. ಬಹುಶಃ ಗೋವು ಈ ಕಾಲದ ಯುಫಿಗಳ ಆಶ್ರಮದಲ್ಲಿ ಬಿಟ್ಟರೆ ಉಳಿದೆಡೆಗಳಲ್ಲಿ ವ್ಯವಸಾಯ ಸಾಧನವಾಗಿ ಪರಿವರ್ತಿತವಾದಂತೆ ಕಂಡುಬರುತ್ತದೆ. ನಮಗೆ ಯಮುನಾನದಿಯಿಂದ ಪಶ್ಚಿಮಕ್ಕೆ ಈ ಕಾಲದಲ್ಲೂ ಪಶುಸಂಗೋಪನೆ ನಡೆಸುವ ಬುಡಕಟ್ಟುಗಳು ಇದ್ದದ್ದು ಕಂಡುಬರುತ್ತದೆ. ಅದರೆ ಆರ್ಯ ಸಂಸ್ಕೃತಿ ಮಾತ್ರ ವ್ಯವಸಾಯ ಪ್ರಧಾನವಾಗಿ ಪರಿವರ್ತಿತವಾಯಿತು.

ಗಂಗಾಬಯಲಿನ ಮೆಕ್ಕಲು ಮನ್ಣಿನಲ್ಲಿ ಕಬ್ಬಿಣದ ಕುಳಗಳುಳ್ಳ ಭಾರೀ ನೇಗಿಲುಗಳಿಂದ ಆಳವಾಗಿ ಉಳುಮೆ ನಡೆಸುತ್ತಿದ್ದರು. ಅಗತ್ಯಕ್ಕೆ ತಕ್ಕಂತೆ ೬,೮,೧೨,೨೪ ಎತ್ತುಗಳನ್ನು ಕಟ್ಟಿನೇಗಿಲನ್ನು ಎಳೆಸುತ್ತಿದ್ದರು. ಕೃತಕ ನೀರಾವರಿ ಪದ್ಧತಿಗಳನ್ನು ಕಂಡುಕೊಂಡರು. ಅವುಗಳಲ್ಲಿ ನದಿ ಪಕ್ಕದ ಬಯಲುಗಳಲ್ಲಿ ನೀರಿನಮಟ್ಟ ಮೇಲೆ ಇರುವ ಜಾಗದಲ್ಲಿ ಬಾವಿಗಳನ್ನು ತೋಡಿ ನೀರನ್ನು ಎತ್ತಿ ಹೊಯ್ಯುವ ವಧಾನ ಸಾಮಾನ್ಯವಾಗಿ ಪ್ರಚಲಿತದಲ್ಲಿತ್ತು. ಜೊತೆಗೆ ಹೊಳೆಗಳ ನೀರನ್ನು ಕಾಲುವೆಗಳ ಮೂಲಕ ಹರಿಸುವ, ಮಳೆ ನೀರನ್ನು ಹಂಚಿಕೊಳ್ಳುವ ವ್ಯವಸ್ಥೆಯೂ ಬೆಳೆಯಿತು. ಈ ಬದಲಾದ ಕೃಷಿ ವಿಧಾನದಲ್ಲಿ ಗೋಧಿ (ಗೋಧೂಮ) ಹಾಗೂ ಭತ್ತ(ಶಾಲಿ, ವ್ರೀಹಿ)ಗಳನ್ನು ಬೆಳೆಯತೊಡಗಿದರು. ನೀರಿನ ವ್ಯವಸ್ಥೆಯಿಂದಾಗಿ ಭತ್ತವನ್ನು ನಾಟಿಮಾಡುವ ಪದ್ಧತಿ ಕೂಡ ಮಗಧದ ಸುತ್ತು ಮುತ್ತಲಿನ ಭಾಗಗಳಲ್ಲಿ ಜನಪ್ರಿಯವಾದದ್ದು ಕಂಡುಬರತ್ತದೆ. ವೈದಿಕ ವಿಧಾನವನ್ನು ಅನುಸರಿಸಿ ಇಳುವರಿಯನ್ನು ಹೆಚ್ಚುಮಾಡಿಕೊಂಡರು. ಭತ್ತ, ಗೋಧಿಗಳಲ್ಲದೆ ಈ ಕಾಲದ ಸಾಹಿತ್ಯ ಹಾಗೂ ಪ್ರಾಕ್ತನ ಆಧಾರಗಳು ತಿಳಿಸುವಂತೆ ಉದ್ದು, ಮಸೂರ ಮುದ್ಗ, ಬಲ್ಪ ಮುಂತಾದ ಬೇಳೆ ಕಾಳುಗಳು, ಎಳ್ಳು, ಸಾಸಿವೆ ಮುಂತಾದ ಎಣ್ಣೆಕಾಳುಗಳು, ಕಬ್ಬು ಇವು ಈ ಕಾಲದಲ್ಲಿ ಸಾಮನ್ಯವಾಗಿ ಬೆಳೆಯುತ್ತಿದ್ದವು.

ಈ ರೀತಿ ಗಂಗಾ ಬಯಲಿನಲ್ಲಿ ಕೃಷಿ ವಿಸ್ತರಣೆಯಾದಂತೆಲ್ಲ ಹಳ್ಳಿಗಳು ತಲೆ ಎತ್ತತೊಡಗಿದವು. ಗೋವಳದ ಬೀಡುಗಳಾದ ಗ್ರಾಮಗಳು ಈಗ ನೆಲೆ ನಿಂತವರ ಹಳ್ಳಿಗಳಾದವು. ಇಂಥ ಹಳ್ಳಗಳಲ್ಲಿ ವ್ಯವಸಾಯ ಹಾಗೂ ಪಶುಸಂಗೋಪನೆಯನ್ನು ಜಂಟಿಯಾಗಿ ನಿರ್ವಹಿಸುತ್ತಿದ್ದ ಕುಟುಂಬಗಳಿರುತ್ತಿದ್ದವು. ಮನೆ ಕಟ್ಟುವ ಕಲೆಯ ಜೊತೆಗೇ, ಮನೆಗೆ ಸಂಬಂಧಿಸಿದ ಧಾರ್ಮಿಕ ವಿಧಿಗಳು, ಅಗ್ನಿ ಕಾರ್ಯಗಳನ್ನೂ ಬೆಳೆಸಲಾಯಿತು. ಗೃಹ್ಯ ಸೂತ್ರಗಳು ಇಂಥ ವಿಧಿಗಳನ್ನು ದಾಕಲಿಸುತ್ತವೆ. ಕುಟುಂಬದ ಮುಖ್ಯಸ್ಥನು ‘ಯಜಮಾನ’ ಅಂದರೆ ಯಜ್ಞವನ್ನು ನಡೆಸುವವನೆಂದು ಕರೆಯಲ್ಪಟ್ಟಿತು. ಕುಟುಂಬಗಳು ತಮ್ಮದೇ ಆದ ವ್ಯವಸಾಯ ಭೂಮಿಯ ವಹಿವಾಟನ್ನು ನಡೆಸುತ್ತಿದ್ದವು. ಇದೇ ಮುಂದೆ ಖಾಸಗಿ ಆಸ್ತಿಯ ಪರಿಕಲ್ಪನೆಯಾಗಿ ಬೆಳೆದಿರಬಹುದು. ಈಗಿನ ಕುಟುಂಬಗಳು ಪಿತೃಪ್ರಧಾನ ಕುಟುಂಬಗಳಾಗಿದ್ದು ಗಂಡಿನ ತಲೆಮಾರಿನವರ ವಾಸಸ್ಥಾನವಾಗಿತ್ತು. ಕುಟುಂಬದ ವ್ಯವಸ್ಥೆಯ ಉಗಮದಲ್ಲೇ ಪಿತೃಪ್ರಧಾನ ವ್ಯವಸ್ಥೆ ಬಂದಿದ್ದರಿಂದ, ಕೌಟುಂಬಿಕ ಧರ್ಮಾಚರಣೆಗಳಲ್ಲಿ ಸ್ತ್ರೀ ಗಂಡಸನ್ನನುಸರಿಸುವವಳಾದಳು.

ಮೇಲಿನ ಸಾಮಾಜಿಕ ಬದಲಾವಣೆಳನ್ನನುಸರಿಸಿಯೇ ವೈದಿಕದಲ್ಲಿ ವರ್ಣಕಲ್ಪನೆ ರೂಪುತಳೆಯಿತು. ನಮಗೆ ಋಗ್ವೇದದ ೧೦ನೆಯ ಮಂಡಲದಲ್ಲಿನ ಪುರುಷಸೂಕ್ತ ನಾಲ್ಕು ವರ್ಣಗಳ ಒಂದು ಸಮಾಜದ ಕಲ್ಪನೆಯನ್ನು ನೀಡುತ್ತದೆ. ೧೦ನೇ ಮಂಡಲವನ್ನು ಕ್ರಿ.ಪೂ. ೮೦೦ರ ಸುಮಾರಿಗೆ ಋಗ್ವೇದಕ್ಕೆ ಸೇರಿಸಲಾಗಿದೆ. ಅಂದರೆ ಕ್ರಿ.ಪೂ. ೮೦೦ರ ಸುಮಾರಿಗೆ ಆರ್ಯರಲ್ಲಿ ನಾಲ್ಕು ವರ್ಣಗಳ ಕಲ್ಪನೆ ಬೆಳೆಯುತ್ತಿತ್ತು. ಇದೇ ಕಾಲ ಹಾಗೂ ಇದರ ನಂತರದ ಕಾಲದ ವೈದಿಕ ಸಾಹಿತ್ಯದಲ್ಲಿ ವರ್ಣಕಲ್ಪನೆ ಮತ್ತೆ ಮತ್ತೆ ಬರುತ್ತದೆ. ಈ ಕಲ್ಪನೆಯ ಪ್ರಕಾರ ಸಮಾಜ (ವೈದಿಕ ಸಮಾಜ) ನಾಲ್ಕು ವಿಭಿನ್ನ ರೀತಿಯ ಜನರಿಂದ ಕೂಡಿದೆ ಹಾಗೂ ಈ ಸಮಾಜದ ಸೃಷ್ಟಿ ವರ್ಣಕಲ್ಪನೆಯನ್ನಾಧರಿಸಿ ಆಗಿದೆ. ಆ ವರ್ಣಗಳೆಂದರೆ ಬ್ರಾಹ್ಮಣ, ರಾಜನ್ಯ(ನಂತರ ಕ್ಷತ್ರಿಯ), ವೈಶ್ಯ ಹಾಗೂ ಶೂದ್ರ ಎಂಬವು. ಬ್ರಾಹ್ಮಣರು ಪುರುಷ ತನ್ನನ್ನು ಅರ್ಪಿಸಿ ಸಮಾಜವನ್ನು ಸೃಜಿಸಿದ ಆದಿ ಪುರುಷನ ಮುಖದಿಂದ, ರಾಜನ್ಯರು ಆತನ ಭುಜದಿಂದ, ವೈಶ್ಯರು ಆತನ ತೊಡೆಯಿಂದ ಹಾಗೂ ಶೂದ್ರರು ಆತನ ಪಾದದಿಂದ ಬಂದರು. ಪುರಾಣದ ಪುರುಷಸೂಕ್ತದ ಈ ಪುರಾಣವನ್ನು ನಂತರ ಆಯಾ ವರ್ಣಗಳ ಕೆಲಸ ಹಾಗೂ ಸಾಮಾಜಿಕ ಸ್ಥಾನಮಾನಗಳನ್ನು ಸೂಚಿಸಲು ಬಳಸಲಾಯಿತು. ಇದರ ಪ್ರಕಾರ ಬ್ರಾಹ್ಮಣರು ಮಜನ, ಯಾಜನ, ಅಧ್ಯಯನ, ಅಧ್ಯಾಪನ, ದಾನ, ಪ್ರತಿಗ್ರಹಗಳನ್ನು ಮಾಡಬೇಕು. ಕ್ಷತ್ರಿಯರು ರಾಜ್ಯಪಾಲನೆ ಯುದ್ಧ, ಧರ್ಮ (ವರ್ಣಧರ್ಮ) ರಕ್ಷಣೆ ಮಾಡಬೇಕು. ವೈಶ್ಯರು ಸಂಪತ್ತಿನ ಉತ್ಪಾದನೆ ಮಾಡಬೇಕು ಹಾಗೂ ಶೂದ್ರರು ಈ ಮೇಲಿನ ಮೂರು ವರ್ಣಗಳ ಸೇವೆಯನ್ನು ಮಾಡಬೇಕು ಎಂದಾಗುತ್ತದೆ.

ನಾಲ್ಕು ವರ್ಣಗಳ ಕಲ್ಪನೆ ಉತ್ತರ ಕಾಲದಲ್ಲಿ ಸಿದ್ಧವಾಗುವ ಕಾಲಕ್ಕಾಗಲೇ ಸಮಾಜದ ಶ್ರೇಣೀಕೃತ ವಿಭಾಗವಾಗತೊಡಗಿತ್ತು ಎಂಬುದು ಸ್ಪಷ್ಟ. ಇದಕ್ಕೆ ಮುಖ್ಯ ಕಾರಣ ಎಂದರೆ ರಾಜ್ಯ ವ್ಯವಸ್ಥೆಯ ನಿರ್ಮಾಣ ಈ ಕಾಲದಲ್ಲಿ ಪ್ರಾರಂಭವಾದದ್ದು. ಹಾಗಾಗಿ ‘ಜನ’ ಎಂದು ಸಾಮುದಾಯಿಕವಾಗಿ ಗುರುತಿಸಲ್ಪಡುತ್ತಿದ್ದವರಲ್ಲೇ ನಾಲ್ಕು ವಿಭಿನ್ನ ಶ್ರೇಣೀಕರಣವಾಗಬೇಕಾಯ್ತು. ‘ರಾಜ’ ಎಂಬ ಶಬ್ದ ಆಳುವವ ಎಂದಾಗಿ ಆಳಿಸಿಕೊಳ್ಳುವವರೆಲ್ಲ ‘ಪ್ರಜಾ’ ಎಂಬ ಹೊಸ ಶಬ್ದದಲ್ಲಿ ಸೂಚಿತವಾಗತೊಡಗಿದರು. ಇಂಥ ಆಳ್ವಿಕೆಯ ಪ್ರದೇಶ ‘ರಾಜ್ಯ’ ಅಥವಾ ‘ರಾಷ್ಟ್ರ’ ಎಂದು ಕರೆಯಲ್ಪಟ್ಟಿತು.

ವೈದಿಕ ರಾಜನ್ಯರು ಋಗ್ವೇದ ಕಾಲದಲ್ಲಿ ತಮ್ಮ ಜನರ ಮುಖ್ಯಸ್ಥರಷ್ಟೇ ಆಗಿದ್ದರು. ಆದರೆ ಬದಲಾದ ಚಾರಿತ್ರಿಕ ಸನ್ನಿವೇಶದಲ್ಲಿ ಆಸ್ತಿಯ ಕಲ್ಪನೆ ಬೆಳೆದಂತೆಲ್ಲ, ಕೃಷಿ ಭೂಮಿ ಗೋವಿನ ಸ್ಥಾನವನ್ನು ಆಕ್ರಮಿಸಿದ ನಂತರ, ಸ್ವರಾಜ್ಯ ರಕ್ಷಣೆ ಹಾಗೂ ಪ್ರಜೆಗಳ ಆಸ್ತಿಪಾಸ್ತಿ, ಕೌಟುಂಬಿಕ ಹಾಗೂ ಸಾಮಾಜಿಕ ಪದ್ಧತಿಗಳ ರಕ್ಷಣೆಗಾಗಿ ಸಾರ್ವಭೌಮತ್ವವನ್ನು ಚಲಾಯಿಸ ಬಲ್ಲ ‘ರಾಜ ಪ್ರಭುತ್ವ’ ಬೆಳೆದುಬಂದಿತು. ರಾಜನ್ಯರು ತಮ್ಮ ಜನರ ರಕ್ಷಣೆ ಮಾಡುತ್ತ, ಯುದ್ಧದಲ್ಲಿ ಸಿಕ್ಕ ಕೊಳ್ಳೆಯೊಂದೇ ಅಲ್ಲದೇ ವಿಶಃ ಅಥವಾ ವೈಶ್ಯರಿಂದ ಬಲಿ, ಶುಲ್ಕ ಮುಂತಾದವನ್ನು ಹಕ್ಕುಬದ್ಧವಾಗಿ ವಸೂಲಿ ಮಾಡುವ ಸ್ಥಾನವನ್ನು ಗಳಿಸಿದರು. ಉತ್ತರ ವೈದಿಕ ಕಾಲದ ವ್ಯವಸಾಯೋತ್ಪಾದನೆಯಲ್ಲಿ ಹೆಚ್ಚುವರಿಯಾದಂತೆಲ್ಲ, ಗ್ರಾಮಗಳು ಸಮೃದ್ಧವಾದಂತೆಲ್ಲ ರಾಜರೂ ಅಬಾಧಿತವಾಗಿ ಶುಲ್ಕಗಳನ್ನು ವಸೂಲು ಮಾಡಿದರು. ಹೀಗೆ ಸೇರಿಸಿದ ಸಂಪತ್ತನ್ನು ರಾಜ್ಯ ನಿರ್ವಹಣೆಗೆ ಹಾಗೂ ರಾಜ್ಯದ ಪ್ರತಿಷ್ಠಿತ ವರ್ಗದ ಪಾಲನೆಗೆ ಬಳಸಿದರು. ರಾಜನು ತಾನು ಹೊಂದಿದ ಸಂಪತ್ತಿನಲ್ಲಿ ಬಹು ಭಾಗವನ್ನು ‘ರತ್ನಿನ್‌’ಗಳಿಗೆ ದಾನ ನೀಡುತ್ತಿದ್ದನು. ಇವರಲ್ಲಿ ರಾಜನ ಸಂಬಂಧಿಗಳು, ಆಪ್ತೇಷ್ಟರು, ಪುರೋಹಿತರು ಹಾಗೂ ಬ್ರಾಹ್ಮಣರು ಬರುತ್ತಾರೆ. ದಾನವಾಗಿ ಗೋವು, ಕುದುರೆ, ರಥ, ಹಿರಣ್ಯ, ಆನೆ, ಹಾಗೂ ಧಾನ್ಯಗಳನ್ನು ನೀಡುತ್ತಿದ್ದರು. ಹೀಗೆ ರಾಜನ್ಯರು ತಮ್ಮ ಬುಡಕಟ್ಟಿನ ಹಿಡಿತದಿಂದ ಹೊರಬಂದು ‘ವರ್ಣಸಮಾಜ’ದ ರಾಜ್ಯದಲ್ಲಿ ಹೊಸ ಅಧಿಕಾರ ಮೂಲಗಳನ್ನು ಗಟ್ಟಿಮಾಡಿಕೊಂಡರು.

ಈ ರಾಜ್ಯ ನಿರ್ಮಾಣ ಪ್ರಕ್ರಿಯೆಯಲ್ಲಿಯೇ ಬ್ರಾಹ್ಮಣರು ರಾಜರ ಪುರೋಹಿತರಾಗಿ ಉಚ್ಪ್ರಾಯ ಸ್ಥಿತಿಗೇರಿದರು. ಯಜ್ಞದ ಆಚರಣೆಯು ತೀರ ವಿವರವಾಗಿ ಕ್ಲಿಷ್ಟವಾಗಿ ಬೆಳೆಯಿತು. ಇಂಥ ಯಜ್ಞಗಳ ನಿರ್ವಗಣೆ ಮಾಡುವ ವಿದ್ಯೆಯಾಗಿ ಉತ್ತರ ವೇದಕಾಲದ ಸಾಹಿತ್ಯ ಬೆಳೆಯಿತು. ಕೇವಲ ದೇವತೆಗಳಿಗೆ ಹವಿಸ್ಸನ್ನು ಅರ್ಪಿಸಿ ಬುಡಕಟ್ಟಿನ ಒಳಿತನ್ನು ಕೋರುವುದಷ್ಟೇ ಅಲ್ಲದೇ ರಾಜರ ಸಾರ್ವಭೌಮತ್ವವನ್ನು, ದೈವತ್ವವನ್ನು ಬೆಳೆಸುವ ಯಾಗಗಳೂ ಪ್ರಚಲಿತದಲ್ಲಿ ಬಂದವು. ಅವುಗಳಲ್ಲಿ ಅಶ್ವಮೇಧ, ರಾಜಸೂಯ, ವಾಜಪೇಯ  ಮುಂತಾದವು ಮುಖ್ಯವಾಗಿವೆ. ಇವು ವರ್ಷಾವಧಿ ನಡೆಯುವ ಯಾಗಗಳಾಗಿದ್ದು ರಾಜರು ಅಪಾರ ದಾನ-ದಕ್ಷಿಣೆಗಳನ್ನು ಈ ಸಂದರ್ಭದಲ್ಲಿ ನೀಡಬೇಕಿತ್ತು. ಜೊತೆಗೆ ರಾಜರ ಮೂರ್ಧಾಭಿಷೇಕದ ಆಚರಣೆಗಳು ರಾಜತ್ವಕ್ಕೆ ಅನಿವಾರ್ಯವಾದವು. ರಾಜರು ಬ್ರಾಹ್ಮಣರಿಂದ ಧಾರ್ಮಿಕ ವಿಚಾರದಲ್ಲಿ, ಆ ಮೂಲಕ ಐಹಿಕ ವಿಚಾರಗಳಲ್ಲಿ ಮಾರ್ಗದರ್ಶನವನ್ನು ಪಡೆಯುತ್ತಿದ್ದರು.

ಹೀಗೆ ರಾಜ ಆಥವಾ ಕ್ಷತ್ರಿಯ ಹಾಗೂ ಬ್ರಹ್ಮಣ ವರ್ಣಗಳು ಪೂರಕವಾಗಿ ವರ್ತಿಸಿದರೆ, ಕ್ಷತ್ರಿಯ ಹಾಗೂ ವೈಶ್ಯರಲ್ಲೂಪುರಕ ಸಂಬಂಧಗಳೇರ್ಪಟ್ಟವು. ಆದರೆ ಕ್ಷತ್ರಿಯರು ಮೂಲತಃ ‘ವಿಶಃ’ಗಳ ಗುಲಗಳೇ ಆಗಿದ್ದು ನಂತರ ಅವರ ಮೇಲೆ ಆಳ್ವಿಕೆ ನಡೆಸುವ ಪ್ರಭಾವಗಳಿಸಿ ಕೊಂಡಿದ್ದವರಾಗಿದ್ದರು. ವೈಶ್ಯರ ಪಾಲನೆ ಹಾಗೂ ರಕ್ಷಣೆ ರಾಜನದಾದ್ದರಿಂದ ಹಾಗೂ ಅವರಿಂದ ಹುಟ್ಟುವಳಿಯ ಒಂದು ಭಾಗವನ್ನು ವಸೂಲಿ ಮಾಡುತ್ತಿದ್ದನು. ಅದಕ್ಕಾಗಿ ರಾಜನನ್ನು ‘ವಿಶಮತ್ತ’ (ಅಂದರೆ ವಿಶಃಗಳನ್ನು ತಿನ್ನುವವನು) ಎಂದು ಕರೆಯಲಾಗಿದೆ.

ಬ್ರಾಹ್ಮಣ, ಕ್ಷತ್ರಿಯ ಹಾಗೂ ವೈಶ್ಯ ಈ ಮೂರೂ ವರ್ಣಗಳೂ ದ್ವಿಜವರ್ಣಗಳೆನಿಸಿಕೊಂಡಿವೆ. ಈ ಮೂರೂ ವರ್ಣಗಳೂ ಆರ್ಯರ ಬ್ರಾಹ್ಮಣ, ರಾಜನ್ಯ ಹಾಗೂ ವಿಶಃ ಋಗ್ವೇದ ಕಾಲದ ಪಂಗಡಗಳಿಂದಲೇ ಉದಿಸಿದ್ದು ಸ್ಪಷ್ಟ. ಇವರಿಗೆಲ್ಲ ಯಜ್ಞ ಸಂಸ್ಕೃತಿ ಸಾಮಾನ್ಯವಾಗಿತ್ತು. ಹಾಗಾಗಿ ಉಪನಯನ ಸಂಸ್ಕಾರ ಹಾಗೂ ಮಂತ್ರೋಚ್ಚಾರಣೆಗಳು ಆಯಾ ವರ್ಗಕ್ಕೆ ಬೇರೆ ಬೇರೆ ಪದ್ಧತಿಯಲ್ಲಿದ್ದವು. ಉಪನಯನ ಸಂಸ್ಕಾರವನ್ನು ಇವರು ಎರಡನೆಯ ಹುಟ್ಟು ಎಂದು ಪರಿಗಣಿಸಿದ್ದರಿಂದ ‘ದ್ವಿಜ’ವೆಂದು ಕರೆದುಕೊಳ್ಳುತ್ತಿದ್ದರು. ಆದರೆ ವರ್ಣ ವ್ಯವಸ್ಥೆಯಲ್ಲಿ ವೈಶ್ಯರು ಉತ್ಪಾದಕರಾಗಿ ರಾಜ ಹಾಗೂ ಬ್ರಾಹ್ಮಣರಿಗಿಂತ ಕೆಳಹಂತದಲ್ಲಿ ಬರುತ್ತಿದ್ದರು. ವರ್ಣ ವ್ಯವಸ್ಥೆಯಲ್ಲಿ ನಾಲ್ಕನೆಯ ವರ್ಣವಾದ ‘ಶೂದ್ರ’ ವರ್ಣವು ಮಾತ್ರ ದ್ವಿಜವರ್ಣವಾಗಿರಲಿಲ್ಲ. ಅಂದರೆ ಆರ್ಯ ಮೂಲದ್ದಾಗಿರಲಿಲ್ಲ. ಆರ್ಯರ ವೈದಿಕ ವಿಧಿ, ವಿಧಾನಗಳ್ಯಾವವೂ ಇದರ ಸಂಸ್ಕೃತಿಯಾಗಿರಲಿಲ್ಲ ಎಂದು ತೋರುತ್ತದೆ. ಹಾಗಾದರೆ ಶೂದ್ರರು ಆರ್ಯರ ವರ್ಣ ಕಲ್ಪನೆಯಲ್ಲಿ ಹೇಗೆ ಅಂತರ್ಗತರಾದರು? ಎಂಬ ಪ್ರಶ್ನೆ ಏಳುತ್ತದೆ.

‘ಶೂದ್ರ’ ಎನ್ನುವ ಶಬ್ದ ಮೂಲತಃ ಒಂದು ಬುಡಕಟ್ಟಿನ ಹೆಸರಾಗಿತ್ತು. ಇವರೂ ವೈದಿಕ ಬುಡಕಟ್ಟುಗಳಂತೇ ಋಗ್ವೇದ ಕಾಲದಲ್ಲಿ ಪಶುಸಂಗೋಪನೆ ಮಾಡಿಕೊಂಡಿದ್ದಂತೆ ತೋರುತ್ತದೆ. ವೈದಿಕ ಬುಡಕಟ್ಟುಗಳು ಶೂದ್ರರ ಗೋವುಗಳನ್ನೇಲ್ಲ ಅಪಹರಿಸಿ ಕ್ರಮೇಣ ಅವರನ್ನು ತಮ್ಮ ದಾಸ-ದಾಸಿಯರನ್ನಾಗಿ ಪರವರ್ತಿಸಿದರು. ಬಹುಶಃ ನಾಲ್ಕು ವರ್ಣಗಳ ಕಲ್ಪನೆಯನ್ನು ಹುಟ್ಟುಹಾಕಿದ ಬುಡಕಟ್ಟುಗಳಿಗೆ ಶೂದ್ರರೇ ದಾಸ- ದಾಸಿಯರಾಗಿದ್ದ ರಿಂದ, ‘ಶೂದ್ರ’ ಶಬ್ದವನ್ನು ದಾಸ್ಯಕ್ಕೆ ಸಮೀಕರಿಸಿರಬಹುದು. ಉತ್ತರ ವೈದಿಕ ಸಮಾಜದಲ್ಲಿ ಪ್ರಾರಂಭದಲ್ಲಿ ಬ್ರಾಹ್ಮಣರಾದಿಯಾಗಿ ಆರ್ಯವರ್ಣದವರಿಗೆಲ್ಲರಿಗೂ ಈ ಶೂದ್ರರೇ ದಾಸರಾಗಿದ್ದರೆಂದು ತೋರುತ್ತದೆ. ಅಂದರೆ ಅವರು ಶ್ರಮದ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಹಾಗಾಗಿ ಶೂದ್ರರು ಪುರುಷನ ಪಾದದಿಂದ ಹುಟ್ಟಿ ಬಂದರು ಹಾಗೂ ಅವರ ಕರ್ತವ್ಯ ಎಂದರೆ ಮೇಲಿನ ಮೂರು ವರ್ಣಗಳನ್ನು ಸೇವಿಸುವರು ಎಂದು ನಿರೂಪಿಸಲಾಗಿದೆ. ಆರ್ಯ ಸೇವಕ ವರ್ಗವಾದ್ದರಿಂದ ಇವರು ಆರ್ಯರ ಸಮಾಜದ ಒಂದು ಭಾಗವಾಗಿದ್ದರು. ಹಾಗಾಗಿ ಆರ್ಯರ ವಿಶ್ವ ಕಲ್ಪನೆಯಲ್ಲಿ ಅವರೂ ಸ್ಥಾನ ಪಡೆಯುತ್ತಾರೆ. ಯಜ್ಞ ಯಾಗಾದಿಗಳಲ್ಲಿ ‘ಜನ’ ಕಲ್ಪನೆ ಬಂದಲ್ಲೆಲ್ಲ ಶೂದ್ರರೇ ಇರುತ್ತಾರೆ. ಆದರೆ ಶೂದ್ರರು ಎಲ್ಲ ವರ್ಣಗಳಿಗಿಂತ ಸ್ಥಾವಮಾನದಲ್ಲಿ ಕೀಳಾಗಿದ್ದರು. ಆರ್ಯರ ವರ್ಣ ಕಲ್ಪನೆ ಭೌಗೋಳಿಕವಾಗಿ ವಿಸ್ತರಿಸಿದಂತೆಲ್ಲ ‘ಶೂದ್ರ’ ವರ್ಣದ ಅರ್ಥ ಹಾಗೂ ವ್ಯಾಪ್ತಿ ಬದಲಾದದ್ದು ಕಂಡುಬರುತ್ತದೆ. ವ್ಯವಸಾಯವನ್ನಳವಡಿಸಿಕೊಂಡ ಆರ್ಯರ ಸಮಾಜಕ್ಕೆ ಶ್ರಮಜೀವಿಗಳ ವರ್ಗದ ಅಗತ್ಯ ಹೆಚ್ಚುತ್ತಾ ಹೋಯಿತ. ವಿಭಿನ್ನ ಅವೈದಿಕ ಹಿನ್ನೆಲೆಯ ಜನರನ್ನು ಹೊಸದಾಗಿ ಉದಿಸುತ್ತಿದ್ದ ರಾಜ್ಯ ವ್ಯವಸ್ಥೆಯಲ್ಲಿ ಆರ್ಯರು ಶ್ರಮಿಕರನ್ನಾಗಿ ಅಳವಡಿಸಿಕೊಂಡರು. ಇವರಿಗೆಲ್ಲ ‘ಶೂದ್ರ’ರೆಂಬ ಪರಿಭಾಷೆ ಬೆಳೆದುಕೊಂಡು ಬಂದಿತು.

ನಾಲ್ಕು ವರ್ಣದ ಕಲ್ಪನೆ ಉತ್ತರ ವೇದಕಾಲದ ವೈದಿಕ ಪಂಗಡಗಳಿಗೆ ಸೀಮಿತವಾದ ಒಂದು ಲೋಕದೃಷ್ಟಿಯಾಗಿದೆ. ಇದೋಂದು ವೈದಿಕ ಕೇಂದ್ರಿತ ಸಾಮಾಗಿಕ ನಿರೂಪಣೆ. ವೈದಿಕ ಸಮಾಜದಲ್ಲಿ ಅವಿಭಾಜ್ಯ ಅಂಗವಾಗದ ಅನೇಕ ಅವೈದಿಕ ಬುಡಕಟ್ಟು ಸಮಾಜಗಳು ಈ ಕಾಲದಲ್ಲಿ ಇದ್ದವು. ಅವರೆಂದರೆ ನಾಗರು, ವ್ರಾತ್ಯರು, ನಿಷಾದರು, ಚಾಂಡಾಲರು, ಶಬರ, ಪುಶಿಂದ, ದಸ್ಯು ಮುಂತಾದವರು. ಇವರೆನ್ನೇಲ್ಲ ವರ್ಣವ್ಯವಸ್ಥೆಯ ಒಂದು ಭಾಗವನ್ನಾಗಿ ನೋಡಲು ಸಾದ್ಯವಿರಲಿಲ್ಲ ಹಾಗೂ ಕ್ರಮೇಣ ಇದನ್ನೊಂದು ವರ್ಣ ವ್ಯವಸ್ಥೆಯ ಅಭಾಸ ಎಂದು ಗ್ರಹಿಸಲಾಯಿತು. ವ್ಯೆದಿಕರು ಈ ಜನರ ಜೊತೆಗೆ ಒಂದೇ ಪ್ರದೇಶದಲ್ಲಿ ಇರುತ್ತಿದ್ದರು ಹಾಗೂ ಅವರ ಜೊತೆ ಹೋರಾಡುತ್ತಲೋ ಇಲ್ಲವೇ ಬೆರೆಯುತ್ತಲೋ ಇದ್ದರು. ಮೊದ ಮೊದಲು ವರ್ಣವ್ಯವಸ್ಥೆ ಆರ್ಯರ ರಾಜ್ಯಗಳ ವ್ಯವಸ್ಥೆ ಮಾತ್ರವಾಗಿತ್ತು. ಆದರೆ ಯಾವಾಗ ರಾಜರು ಆರ್ಯೇತರರನ್ನೂ ಸೋಲಿಸಿ ಅವರನ್ನೂ ಪ್ರಜಾ ಸಮೂಹದಲ್ಲಿ ಸೆರಿಸಿದರೋ ಆಗ ಇಂಥ ಸಮಾಜಗಳನ್ನೆಲ್ಲ ಒಳಗೊಳ್ಳುವ ವರ್ಣ ಕಲ್ಪನೆಯನ್ನು ಬೆಳೆಸಬೇಕಾಯಿತು. ಹಾಗಾಗಿ ಕ್ರಿ.ಪೂ. ೬೦೦ರ ಸುಮಾರಿಗೆ ವರ್ಣ ಸಂಕರದ ಕಲ್ಪನೆ ಉದಯವಾಗತೊಡಗಿತು. ವರ್ಣ ಸಂಕರ ಎಂದರೆ ವರ್ಣಗಳ ಮಿಶ್ರಣ ಅಥವಾ ಮಾಲಿನ್ಯ ಈ ಮಿಶ್ರಣ ಅಥವಾ ಮಾಲಿನ್ಯ ಉಂಟಾಗುವುದಕ್ಕೆ ಕಾರಣಗಳೆಂದರೆ ಅಂತರ್ವಿವಾಹ, ವೃತ್ತಿ ಬದಲಾವಣೆ, ಕರ್ತವ್ಯ ಭ್ರಷ್ಟತೆ, ಅಜ್ಞಾನ ಮುಂತಾದವು. ಈ ಕಾರಣಗಳಿಂದ ಶುದ್ದ ನಾಲ್ಕು ವರ್ಣಗಳ ಜೊತೆಗೆ ಅನೇಕ ಸಂಕೀರ್ಣ ಜಾತಿಗಳು ಹುಟ್ಟಿದವು ಎಂದು ನಿರೂಪಿಸಲಾಯಿತು. ಆರ್ಯ ವರ್ಣ ಪ್ರತಿಪಾದಕರು ತಮ್ಮ ತಿಳುವಳಿಕೆಗೆ ಬಂದ ಹೊಸ ಸಮಾಜಗಳನ್ನು ಸಂಕೀರ್ಣ ಜಾತಿಗಳೆಂದು ತಿಳಿಸಿ ಅವು ಯಾವ ಸಂಕರದಿಂದಾದವೆಂದು ವಿವರಿಸಿ ವರ್ಣವ್ಯವಸ್ಥೆಗೆ ಅವನ್ನು ಜೋಡಿಸುತ್ತಿದ್ದರು.

ಸಂಕೀರ್ಣ ಜಾತಿಯ ಕಲ್ಪನೆಯನ್ನು ಬಳೆಸಲು ಮತ್ತೊಂದು ಮುಖ್ಯ ಕಾರಣ ಎಂದರೆ ಹೆಚ್ಚುತ್ತಿದ್ದ ವೃತ್ತಿಗಳು. ಉತ್ತರ ವೈದಿಕ ಸಮಾಜದಲ್ಲಿ ವಿಭಿನ್ನ ಲೋಹಗಳ ಕೆಲಸಗಾರರು, ಬುಟ್ಟಿಹೆಣೆಯುವವರು, ನೇಯ್ಗೆಯವರು, ಬಣ್ಣ ಹಾಕುವವರು, ಬಡಗಿಗಳು, ಕುಂಬಾರರು, ಚರ್ಮಕಾರರು, ಮಣಿಕಾರರು, ನರ್ತಕರು, ಕಣಿ ಹೇಳುವವರು, ಸೂತರು, ಡೊಂಬರು ಮುಂತಾದ ಅನೇಕ ವೃತ್ತಿ ಪಂಗಡಗಳು ಅಥವಾ ಜಾತಿಗಳು ಇದ್ದವು. ವೇದ ಕಾಲದ ನಂತರ ಇವರನ್ನೆಲ್ಲ ಸಂಕೀರ್ಣ ಜಾತಿಗಳ ಪಟ್ಟಯಲ್ಲಿ ಸೇರಿಸಲಾಯಿತು.

ಪರಾಮರ್ಶನಗ್ರಂಥಗಳು

೧. ಕೋಸಾಂಬಿ ಡಿ.ಡಿ., ೧೯೬೫. ಕಲ್ಚರ್ ಆಂಡ್ಸಿವಿಲ್ಝೇಶನ್ ಇನ್ ಏನ್ಸಯೆಂಟ್ ಇಂಡಿಯ ಇನ್ ಹಿಸ್ಟಾರಿಕಲ್ ಔಟ್ ಲೈನ್, ಲಂಡನ್‌.

೨. ರೋಮಿಲಾಥಾಪರ್, ೧೯೮೫. ಫ್ರಾಮ್ ಲೀನಿಯೇಜ್ ಟು ಸ್ಟೇಟ್, ಡೆಲ್ಲಿ:ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್.

೩. ರೋಮಿಲಾ ಥಾಪರ್, ೨೦೦೨. ಅರ್ಲಿ ಇಂಡಿಯ, ಡೆಲ್ಲಿ: ಪೆಂಗ್ವಿನ ಬುಕ್ಸ್‌.

೪. ಶರ್ಮ ಆರ್. ಎಸ್‌., ೧೯೮೫. ಮೆಟಿರಿಯಲ್ ಕಲ್ಚರ್ ಆಂಡ್ಸೋಶಿಯಲ್ ಫಾರ್ಮೇಶನ್ ಇನ್ ಏನ್ಸಿಯೆಂಟ್ ಇಂಡಿಯ, ಡೆಲ್ಲಿ: ಮ್ಯಾಕ್ಮು ಲನ್‌.

೫. ಶರ್ಮ ಆರ್. ಎಸ್., ೧೯೮೩. ಪರ್ಸ್ಪೆಕ್ಟಿವ್ಸ್‌ ಇನ್‌ಸೋಶಿಯಲ್‌ ಆಂಡ್‌ ಇಕನಾಮಿಕ್‌ ಹಿಸ್ಟರಿ ಆಫ್‌ಅರ್ಲಿ ಇಂಡಿಯ, ನ್ಯೂ ಡೆಲ್ಲಿ: ಮುನ್ಯಿರಾಮ್‌ಮನೋಹರಲಾಲ್.