ಗಂಗಾಬಯಲಿನಲ್ಲಿ ರಾಜ್ಯ ವ್ಯವಸ್ಥೆಯ ಉಗಮ

‘ರಾಜ್ಯ’ ಎಂಬ ವ್ಯವಸ್ಥೆಯನ್ನು ಮನುಷ್ಯ ಸಮಾಜಗಳು ನಾಗರಿಕ ಅವಸ್ಥೆಯಲ್ಲಿ ರೂಢಿಸಿಕೊಂಡಿವೆ. ಈ ವ್ಯವಸ್ಥೆಯ ಕೆಲ ಪ್ರಾಥಮಿಕ ರೂಪರೇಷೆಗಳ ನಿರ್ಮಾಣಕ್ಕೂ ಸಾವಿರಾರು ವರ್ಷಗಳೇ ಬೇಕಾಗಿವೆ. ರಾಜ್ಯವು ಒಂದು ಆಳ್ವಿಕೆಯ ವ್ಯವಸ್ಥೆ, ಅದು ಒಂದು ನಿರ್ದಿಷ್ಟ ಭೌಗೋಳಿಕ ಸೀಮೆಯಲ್ಲಿ ವಾಸಿಸುವ ಜನರನ್ನು ಆಳುವ ಸಾರ್ವಭೌಮ ಶಕ್ತಿಯಾಗಿದೆ. ಈ ಆಳ್ವಿಕೆಯನ್ನು ಒಂದು ಆಡಳಿತ ವ್ಯವಸ್ಥೆಯ ಮೂಲಕ ನಡೆಸಲಾಗುತ್ತದೆ. ಪ್ರಭುತ್ವವನ್ನು ಈ ವ್ಯವಸ್ಥೆಯಲ್ಲಿ ಚಲಾಯಿಸುವ ಕೆಲವರಿಗೆ ಆಳುವ ಅಧಿಕಾರವನ್ನು ವಹಿಸಲಾಗುತ್ತದೆ. ಈ ರೀತಿಯಲ್ಲಿ ರಾಜ್ಯ ಎಂಬುದು ಒಂದು ಸಂಕೀರ್ಣವಾದ ಹಾಗೂ ಅಮೂರ್ತೀಕರಿಸಿದ ಅಧಿಕಾರ ವ್ಯವಸ್ಥೆಯಾಗಿದೆ.

ಪ್ರಾಚೀನ ಭಾರತದಲ್ಲಿ ಕ್ರಿ.ಪೂ. ಆರು ಅಥವಾ ಐದನೇ ಶತಮಾನದಲ್ಲಿ ಇಂಥ ವ್ಯವಸ್ಥೆಗಳು ಬೆಳೆದು ಬರಲು ಪ್ರಾರಂಭಿಸಿದ್ದವು. ಕ್ರಿ.ಪೂ. ಮೂರನೇ ಶತಮಾನದಲ್ಲಿ ರಾಜ ಪ್ರಭುತ್ವದ ಸಾಮ್ರಾಜ್ಯ ನಿರ್ಮಾಣವಾಗಿದ್ದು ಕಂಡುಬರುತ್ತದೆ. ಕೌಟಿಲ್ಯನ ಅರ್ಥಶಾಸ್ತ್ರವು ಇಂಥ ರಾಜ್ಯದ ಆಳ್ವಿಕೆಯನ್ನು ಗಳಿಸುವ ಹಾಗೂ ನಡೆಸುವ ತಂತ್ರವನ್ನು ಬೋಧಿಸುತ್ತದೆ. ಭಾರತೀಯ ಇತಿಹಾಸವು ಈ ಕಾಲದ ನಂತರ ರಾಜಮನೆತನಗಳ ಇತಿಹಾಸವಾಗಿ ಮಾರ್ಪಟ್ಟಿವೆ.

ರಾಜ್ಯ ಎಂಬುದು ಭಾರತೀಯ ಪರಿಭಾಷೆಯಲ್ಲಿ ‘ರಾಜ’ ಎಂಬ ಶಬ್ದದಿಂದ ಹುಟ್ಟಿದೆ. ಆದರೆ ರಾಜ್ಯವನ್ನು ಸ್ಟೇಟ್‌ ಎಂಬರ್ಥದಲ್ಲಿ ಗ್ರಹಿಸಿದರೆ ಇದೊಂದು ಪ್ರಭುತ್ವದ ವ್ಯವಸ್ಥೆ. ‘ಪ್ರಭುತ್ವ’ ರಾಜರಲ್ಲೇ ಇರಬೇಕೆಂದೇನು ಇಲ್ಲ ಎಂಬುದು ಕೂಡ ಇಲ್ಲಿ ಮುಖ್ಯವಾಗುತ್ತದೆ. ಈ ಪ್ರಭುತ್ವದ  ವ್ಯವಸ್ಥೆ, ಅಧಿಕಾರ ಹಂಚಿಕೆ ಹಾಗೂ ಹೊಂದಾಣಿಕೆಯ ರಚನೆಯಾಗಿದೆ. ಈ ರೀತಿಯ ರಚನೆ ಮನುಷ್ಯ ಸಮಾಜದಲ್ಲಿನ ಒಂದು ಸಂಕೀರ್ಣ ಬೆಳವಣಿಗೆಯಾಗಿದೆ. ಅಂದರೆ ರಾಜ್ಯ ವ್ಯವಸ್ಥೆ ಹುಟ್ಟಬೇಕಾದರೆ ಅದಕ್ಕೆ ಪೂರ್ವಭಾವಿಯಾದ ಸಾಮಾಜಿಕ ಬೆಳವಣಿಗೆ ನಡೆದಿರುತ್ತದೆ. ಸಮಾಜದಲ್ಲಿ ಶ್ರೇಣಿಕರಣ ಅಥವಾ ವರ್ಗ ವಿಭಜನೆ ಪ್ರಾರಂಭವಾಗಿರುತ್ತದೆ. ಸಮಾಜದ ಉತ್ಪದನಾ ಸಂಬಂಧಗಳು ತಂತ್ರಜ್ಞಾನಕ್ಕೆ ಪೂರಕವಾಗಿ ಬೆಳೆದಿರುತ್ತವೆ. ರಾಜ್ಯದಲ್ಲಿ ಆಳುವ ವರ್ಗಗಳ ಕೈಯಲ್ಲಿ ಆಧಿಕಾರ ಕೇಂದ್ರಕೃತವಾದಂತೆಲ್ಲ ಕಾಯ್ದೆ, ಕಾನೂನು, ತಾತ್ವಿಕ ತಿಳುವಳಿಕೆಗಳು, ಸ್ಥಾನಮಾನ ಮುಂತಾದವುಗಳ ನಿರೂಪಣೆಯಾಗುತ್ತವೆ. ಒಟ್ಟಾರೆಯಾಗಿ ರಾಜ್ಯದ ಬೆಳವಣಿಗೆ ರಾಜ್ಯ ಸಂಸ್ಕೃತಿಯ ಬೆಳವಣಿಗೆಯ ಜೊತೆ ಜೊತೆಗೆ ಆಗಬೇಕು, ಹಾಗಾಗಿ ರಾಜ್ಯದ ಉಗಮ ಒಂದು ಸಮಾಜದ ಸಮಗ್ರ ಪರಿವರ್ತನೆಯನ್ನು ಹುಟ್ಟುಹಾಕುತ್ತದೆ. ಜನರನ್ನೆಲ್ಲ ಪ್ರಜಾ ಸಮೂಹ ಅಥವಾ ವಿಧೇಯ ಪ್ರಜೆಗಳನ್ನಾಗಿ ಪರಿವರ್ತಿಸುವುದೆಂದರೆ ರಾಜ್ಯ ಸಂಸ್ಕೃತಿಯನ್ನು ಬೆಳೆಸಿದಂತೆ ಪ್ರಾಚೀನ ರಾಜರ ಕೇಂದ್ರಿತ ರಾಜ್ಯಗಳು ರಾಜನ ಅತಿಮಾನುಷತ್ವ, ದೈವತ್ವಗಳನ್ನು ರಾಜವಂಶಗಳ ಅನುಚಾರತೆಯನ್ನು ಹಾಗೂ ಅವುಗಳ ಅನಿವಾರ್ಯತೆಯನ್ನು ಕುರಿತ ಲೋಕ ದೃಷ್ಟಿಯನ್ನು ಪ್ರತಿಪಾದಿಸುತ್ತದೆ. ಆದರೆ ಈ ರಾಜನಿಗೆ ಅತಿಮಾನುಷತೆಯನ್ನು ಆರೋಪಿಸುವ ಸಾಮಾಜಿಕ ಸಂಸ್ಥೆಗಳು ಹಾಗೂ ಅದನ್ನು ಸ್ವೀಕರಿಸಿ ಜೀವನವನ್ನು ರೂಪಿಸಿಕೊಂಡ ಸಾಮಾಜಿಕ ವರ್ಗಗಳು ಇಂಥ ರಾಜ್ಯಗಳಿಗೆ ಮೂಲಭೂತ ಅಗತ್ಯಗಳಾದವು. ಈ ಕಾರಣಗಳಿಂದ ಪ್ರಸ್ತುತ ಸಂದರ್ಭದಲ್ಲಿ ಒಂದು ಆಳ್ವಿಕೆಯ ವ್ಯವಸ್ಥೆ ಎಂಬುದಕ್ಕೆ ಒತ್ತು ಕೊಟ್ಟು ‘ರಾಜ್ಯ’ವನ್ನು ನೋಡಬೇಕಾಗುತ್ತದೆ.

ಮೌರ್ಯ ಸಾಮ್ರಾಜ್ಯವೆಂಬ ಪೂರ್ಣ ಪ್ರಮಾಣದ ‘ರಾಜ್ಯ’ ಆರಂಭವಾಗುವುದಕ್ಕೆ ಮೊದಲು ಈ ಪ್ರದೇಶದಲ್ಲಿ ವಿವಿಧ ರೀತಿಯ ರಾಜಕೀಯ ವ್ಯವಸ್ಥೆ ಅಸ್ತಿತ್ವದಲ್ಲಿತ್ತು. ಅಂದರೆ ರಾಜ್ಯ ಸ್ವರೂಪಕ್ಕೆ ಹೋಲಿಕೆಯಾಗುವ ಹಲವಾರು ರಾಜಕೀಯ ವ್ಯವಸ್ಥೆಗಳು ಕಂಡುಬರುತ್ತವೆ. ಅವುಗಳಿಗೆ ‘ಜನಪದ’ಗಳೆಂದು ಕರೆಯುತ್ತಾರೆ. ಜನಪದಗಳು ರಚನೆ ಯಾಗುವುದಕ್ಕೆ ಮೊದಲು ಜನರು ತಮ್ಮದೇ ಆದ ಕುಲಗಳನ್ನು ರಚಿಸಿಕೊಂಡಿರುತ್ತಾರೆ. ಹಾಗೂ ಅವರು  ವಾಸಮಾಡುವ ಪ್ರದೇಶಕ್ಕೆ ‘ಜಾನಪದ’ ಎಂದು ಹೆಸರು. ಇದೊಂದು ಬುಡಕಟ್ಟು ವ್ಯವಸ್ಥೆ ಹಾಗೂ ಇವುಗಳಲ್ಲಿದ್ದ ಜನರ ಕಸುಬು ‘ಬೇಟೆ’ ಹಾಗೂ ಪಶುಸಂಗೋಪನೆ. ತಮ್ಮ ಗಡಿಗಳನ್ನು ಅರಣ್ಯ, ನದಿ, ತೊರೆ, ಬೆಟ್ಟಗಳಿಂದ ಗುರುತಿಸಿಕೊಳ್ಳುತ್ತಿರುತ್ತಾರೆ. ಕ್ರಮೇಣ ಕ್ಷತ್ರಿಯ ರಾಜರು ಇಂಥ ಜನಪದಗಳ ಮೇಲೆ ಏಕಸ್ವಾಮ್ಯ ಸ್ಥಾಪಿಸುತ್ತಾರೆ. ಈ ರೀತಿ ರಾಜರಿಂದ ಕೂಡಿದ ಜನಪದಗಳು ಅಸ್ತಿತ್ವಕ್ಕೆ ಬರುತ್ತವೆ. ಅಲ್ಲದೆ ರಾಜರುಗಳ ಏಕಸ್ವಾಮ್ಯ ಇಲ್ಲದ ‘ಗಣ ಸಂಘ ಪದ್ಧತಿ’ಯ ಆಳುವ ವಂಶಗಳು ಇರುತ್ತವೆ. ಇವುಗಳು ತಮ್ಮದೇ ಲಾಂಛನ ಹೊಂದಿದ್ದು ತಮ್ಮಲ್ಲಿಯೇ ಒಬ್ಬ ಮುಖ್ಯಸ್ಥನನ್ನು ಆಯ್ಕೆಮಾಡಿ ಕೊಳ್ಳುತ್ತಿರುತ್ತವೆ. ಈ ರೀತಿ ಮೊದಲಿಗೆ ೧. ಗಣ ಪ್ರಭುತ್ವಗಳು ೨. ರಾಜ ಪ್ರಭುತ್ವಗಳು ಗಂಗಾಬಯಲಿನಲ್ಲಿ ಏಳಿಗೆ ಹೊಂದುತ್ತವೆ. ಈ ಜನಪದಗಳನ್ನು ಮಹಾ ಜನಪದಗಳು ಎಂದುಕರೆಯುತ್ತೇವೆ. ಗಂಗಾ ಬಯಲಿನಲ್ಲಿದ್ದ ರಾಜ್ಯ ಅಥವಾ ಪ್ರಭುತ್ವಗಳು ಕ್ರಿ.ಪೂ. ೬ನೇಯ ಶತಮಾನದ ಕಾಲದ ಹದಿನಾರು ‘ಮಹಾಜನಪದ’ಗಳನ್ನು ಬೌದ್ಧರ ಪಾಳಿ ಸಾಹಿತ್ಯವು ಹೆಸರಿಸುತ್ತದೆ. ಇವುಗಳ ಕುರಿತು ಪಾಣಿನಿಯು ಅಷ್ಟಾಧ್ಯಾಯಿಯಲ್ಲಿ ವಿವರಿಸಿದ್ದಾನೆ. ಆ ಹದಿನಾರು ಮಹಾಜನಪದಗಳು ಈ ಕೆಳಕಂಡಂತೆ ಇವೆ.

೧. ಕಾಶಿ ಇದು ಈಗಿನ ವಾರಣಾಸಿ ಪ್ರದೇಶದಲ್ಲಿತ್ತು. ಬನಾರಸ್‌ರಾಜಧಾನಿ ಯಾಗಿದ್ದು. ನದಿ ದಡದಲ್ಲಿದ್ದ ಇದು ಸರಕು ಉತ್ಪಾದನೆ ಹಾಗೂ ಉತ್ತಮ ಗುಣಮಟ್ಟದ ಬಟ್ಟೆ ಉತ್ಪಾದನೆ ಕೇಂದ್ರವಾಗಿತ್ತು.
೨. ಕೋಸಲ ಇದು ಈಗಿನ ಈಶಾನ್ಯ ಉತ್ತರ ಪ್ರದೇಶದಲ್ಲಿತ್ತು. ಇದರ ಮೊದಲ ರಾಜಧಾನಿ; ಶ್ರಾವಸ್ತಿ, ನಂತರ ಸಾಕೇತ(ಆಯೋಧ್ಯ) ರಾಜಧಾನಿಯಾಯಿತು.
೩. ಅಂಗ ಬಿಹಾರದ ಬಾಗಲ್ಪುರ ಪ್ರದೇಶದಲ್ಲಿತ್ತು. ಇದರ ರಾಜಧಾನಿ ಚಂಪಾನಗರ.
೪. ಮಗಧ ಮೊದಲು ರಾಜಗೃಹವು ರಾಜಧಾನಿಯಾಗಿತ್ತು. ನಂತರ ಪಾಟಲಿಪುತ್ರ.
೫. ವಜ್ಜಿ ವೈಶಾಲಿ ಪ್ರಾಂತ್ಯ. ಇದೊಂದು ಗಣ ಪ್ರಭುತ್ವ.
೬. ಮಲ್ಲ ಹಿಮಾಲಯದ ತೆಹ್ರಿ ಪ್ರದೇಶದ ಗಣ ಸಂಘವಾಗಿತ್ತು.
೭. ಚೇದಿ ನರ್ಮದಾ ನದಿ ಭಾಗದಲ್ಲಿತ್ತು.
೮. ವತ ಕೌಶಾಂಬಿ ರಾಜಧಾನಿ, ಜಮುನಾ ನದಿ ಪ್ರದೇಶ, ರಾಜಪ್ರಭುತ್ವ.
೯. ಕುರು  ಹಸ್ತಿನಾವತಿ ರಾಜಧಾನಿ, ಸರಸ್ವತಿ ಮತ್ತು ದೃಶದ್ವತಿ ನದಿ ಪ್ರದೇಶ.
೧೦. ಪಂಚಾಲ ಕಪಿಲ ರಾಜಧಾನಿ.
೧೧. ಮತ್ಸ್ಯ ಉತ್ತರ ಪ್ರದೇಶ ಭರತಪುರ ಪ್ರಾಂತ್ಯ.
೧೨. ಶೂರಸೇನ ಈಗಿನ ಮಧುರಾ ಪ್ರಾಂತ್ಯ.
೧೩. ಅಶ್ಮಕ ಗೋದಾವರಿ ನದಿ ದಡದಲ್ಲಿ, ವ್ಯಾಪಾರ ಕೇಂದ್ರ.
೧೪. ಅವಂತಿ ಉಜ್ಜೈನಿ ರಾಜಧಾನಿ.
೧೫. ಗಾಂಧಾರ ಕಾಂದಾಹಾರ ಕಣಿವೆ ಪ್ರದೇಶ, ತಕ್ಷಶಿಲೆ ರಜಧಾನಿ, ವ್ಯಾಪರ ಹಾಗೂ ಬ್ರಾಹ್ಮಣ ಕಲಿಕಾಕೇಂದ್ರ.
೧೬. ಕಾಂಬೋಜ ಕಾಶ್ಮೀರ ಪ್ರಾಂತ್ಯದ ಕುಕ್ಕುಟವತಿ ನಗರ.

ಇವುಗಳಲ್ಲಿ ಬಹುತೇಕ ಮಹಾ ಜನಪದಗಳು ‘ರಾಜ’ ಪ್ರಭುತ್ವ ಹೊಂದಿದ್ದು ಕ್ಷತ್ರಿಯರಿಂದ ಆಳಲ್ಪಡುತ್ತಿದ್ದವು. ಇವುಗಳಲ್ಲದೆ ಬೌದ್ಧ ಸಾಹಿತ್ಯವು ಈ ಕೆಳಕಂಡ ಗಣರಾಜ್ಯಗಳು ಅಥವಾ ಗಣ ಸಂಘಗಳ ಬಗ್ಗೆ ಪ್ರಾಸ್ತಾಪಿಸಿರುತ್ತದೆ.

೧. ಕಪಿಲ ವಸ್ತುವಿನ ಶಾಕ್ಯರು (ಹಿಮಾಲಯದ ತೆಹರಿ ಪ್ರದೇಶ)

೨. ಅಲ್ಲಕಪ್ಪದ ಮಲ್ಲರು

೩. ಕೆಶ ಪಟ್ಟದ ಕಲಮರು

೪. ಸಾಮ ಸುಮಾಸ ಬೆಟ್ಟಗಳ ಭಗ್ಗರು

೫. ಮಿಥಿಲ ಪ್ರದೇಶದ ವಿದೇಹರು

೬. ವಾರಾಣಾಸಿ ಉತ್ತರಕ್ಕಿದ್ದ ಲಿಚ್ಚಿವಿಗಳು

೭. ವೈಶಾಲಿ ಪ್ರಾಂತ್ಯದ ಜ್ಞಾತ್ರಿಕರು

೮. ಪಿಪ್ಪವನದ ಮೌರ್ಯ

೯. ಪಾವ ಮತ್ತು ಕುಷಿನಗರದ ಮಲ್ಲರು

ಈ ರಾಜ್ಯಗಳು ಪರಸ್ಪರ ಕಾದಾಟದಲ್ಲಿ ತೊಡಗಿದ್ದು ಒಂದನ್ನೊಂದು ಆಕ್ರಮಿಸಲು ಪ್ರಯತ್ನಿಸುತ್ತಿದ್ದವು. ಇವುಗಳಲ್ಲಿ ಬಲಶಾಲಿಯಾಗಿ ಹೊರ ಹೊಮ್ಮಿದ ರಾಜ್ಯಗಳೆಂದರೆ ಕೋಸಲ ಹಾಗೂ ಮಗಧ. ಕೋಸಲ ರಾಜ್ಯಕ್ಕೆ ಪುರೋಹಿತರ ಬೆಂಬಲವು ಇತ್ತು. ಇದರ ಮೊದಲು ರಾಜಧಾನಿ ಶಾವಸ್ತಿ. ಇದು ಐರಾವತಿ ನದಿ ದಡದಲ್ಲಿದ್ದು. ಇದರ ಸಾಂಪ್ರದಾಯಿಕ ರಾಜಧಾನಿ ‘ಸಾಕೇತ’ ಅಥವಾ ಅಯೋಧ್ಯೆ. ಆರಂಭಿಕ ಆರ್ಯರ ನೆಲೆಯೂ ಆಗಿದ್ದು, ವ್ಯಾಪಾರಿ ಮಾರ್ಗವಾಗಿತ್ತು. ಕೋಸಲದ ರಾಜಕುಮಾರ ದಿಗಾವು ಕಾಶಿಯನ್ನು ವಶಪಡಿಸಿ ಕೊಂಡು ರಾಜ್ಯದಲ್ಲಿ ವಿಲೀನಗೊಳಿಸಿಕೊಂಡನು. ಅಲ್ಲದೇ ಸುತ್ತ ಮುತ್ತಲಿನ ಅನೇಕ ಗಣ ಸಂಘಗಳನ್ನು ವಶಪಡಿದಿ ಕೊಳ್ಳಲಾಯಿತು. ಕೋಸಲದ ಮತ್ತೊಬ್ಬ ರಾಜನಾದ ‘ಪ್ರಸೇನಜೀತ್‌’ ಕ್ಷತ್ರಿಯನಾಗಿದ್ದು ವೈದಿಕ ಆಚರಣೆಗಳನ್ನು ಮಾಡುತ್ತಿದ್ದನ್ನು. ಕ್ರಿ.ಪೂ. ೫ನೇಯ ಶತಮಾನದಲ್ಲಿ ಈ ಎಲ್ಲಾ ಮಹಾಜನಪದಗಳು ಒಂದನ್ನೊಂದು ಆಕ್ರಮಿಸುತ್ತಾ ಕೊನೆಗೆ ಕೋಸಲ ಮತ್ತು ಮಗಧ ಎರಡು ಮಾತ್ರ ಪ್ರಬಲವಾಗಿ ಉಳಿದುಕೊಂಡವು. ಸುಮಾರು ಕ್ರಿ.ಪೂ. ೪೮೫ರ ವೇಳೆಗೆ ಕೋಸಲವು ಮಗಧ ರಾಜ್ಯದಲ್ಲಿ ವಿಲೀನವಾಗುವುದರೊಂದಿಗೆ ಗಂಗಾಬಯಲಿನಲ್ಲಿ ಬೃಹತ್‌ರಾಜ್ಯ ಸ್ಥಾಪನೆಯಾಯಿತು.

ಮಗಧ ರಾಜ್ಯದ ಏಳಿಗೆ     

ಈ ರಾಜ್ಯದ ಆರಂಭದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಮಹಾಭಾರತ ಮತ್ತು ಪುರಾಣಗಳ ಪ್ರಕಾರ ಇದರ ಸ್ಥಾಪಕ ಬೃಹದ್ರತ. ರಾಮಾಯಣದ ಪ್ರಕಾರ ‘ವಸುಮತಿ’ ಇದರ ಸ್ಥಾಪಕ. ಆದರೆ ನಮಗೆ ಇದರ ಬಗ್ಗೆ ಹೆಚ್ಚಿನ ದಾಖಲೆಗಳು ದೊರೆಯುವುದು ಬಿಂಬಸಾರನ ಆಳ್ವಿಕೆ ಕಾಲದಿಂದ. ಈ ರಾಜ್ಯವು ಫಲವತ್ತಾದ ಕೃಷಿ ಭೂಮಿ, ನದಿಗಳು ಹಾಗೂ ಕಬ್ಬಿಣ, ತಾಮ್ರದ ಅದಿರು ಮುಂತಾದವುಗಳಿಂದ ಕೂಡಿದ ಸಂಪದ್ಭರಿತ ಪ್ರದೇಶವಾಗಿತ್ತು. ಹಾಗೂ ಇದರ ಮೊದಲ ರಾಜಧಾನಿ ರಾಜಗೃಹ ನಗರವಾಗಿತ್ತು. ಈ ಸಾಮ್ರಾಜ್ಯವು ಬಿಂಬಸಾರ ಕಾಲದಿಂದ ಹೆಚ್ಚು ಆಕ್ರಮಣಶೀಲವಾಯಿತು.

ಬಿಂಬಸಾರ (ಕ್ರಿ.ಪೂ. ೫೪೪ ಕ್ರಿ.ಪೂ. ೪೯೧)

ಬಿಂಬಸಾರನು ಮಗಧದ ‘ಪ್ರದ್ಯೋತನ’ನ ವಂಶದ ನಾಲ್ಕನೇ ಅರಸ ಹಾಗೂ ಗೌತಮ ಬುದ್ಧನ ಸಮಕಾಲೀನ. ಇವನು ೧೫ ವರ್ಷದವನಾಗಿದ್ದಾಗ ರಾಜನಾದನು. ಒಂದು ಹೇಳಿಕೆ ಪ್ರಕಾರ ಇವನು ತನ್ನ ತಂದೆಯಿಂದ ಉತ್ತರಾಧಿಕಾರಯಾಗಿ ನೇಮಕಗೊಂಡಿದ್ದನು. ಮತ್ತೊಂದು ಹೇಳಿಗೆ ಪ್ರಕಾರ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ವಜ್ಜಿ ರಾಜ್ಯದಲ್ಲಿ ಸೇನಾಧಿಕಾರಿಯಾಗಿದ್ದನು. ಬಿಂಬಸಾರನು ಆಕ್ರಮಂ ಮತ್ತು ಮೈವಾಹಿಕ ಸಂಬಂಧಗಳ ಮೂಲಕ ರಾಜ್ಯವನ್ನು ವಿಸ್ತರಿಸಿದನು.

‘ಅಂಗ’ ರಾಜ್ಯದ ಮೇಲೆ ದಾಳಿ ಮಾಡಿ ಅದರ ರಾಜ ಬ್ರಹ್ಮದತ್ತನನ್ನು ಯುದ್ಧದಲ್ಲಿ ಕೊಂದು ಅದನ್ನು ತನ್ನ ರಾಜ್ಯದಲ್ಲಿ ವಿಲೀನಗೊಳಿಸಿಕೊಂಡು ಅದರ ರಾಜ್ಯಪಾಲನಾಗಿ ಅಜಾತಶತ್ರುವನ್ನು ನೇಮಿಸಿದ. ಕೋಸಲದ ರಾಜಕುಮಾರಿಯನ್ನು ವಿವಾಹವಾಗಿ ಒಂದು ಲಕ್ಷ ಕಂದಾಯ ಬರುವ ಕಾಳಿಯ ಹಳ್ಳಿಗಳನ್ನು ಪಡೆದನು. ಇದರಿಂದ ಕೋಸಲ ಮತ್ತು ಮಗದ ರಾಜ್ಯಗಳ ಮಧ್ಯೆ ಇದ್ದ ವೈರತ್ವ ಕಡಿಮೆ ಮಾಡಿತು. ಲಿಚ್ಚವಿ ರಾಜಕುಮಾರಿಯನ್ನು ವಿವಾಹವಾದನು. ಈ ವೈವಾಹಿಕ ಸಂಬಂಧಗಳು ಇವನ ಪ್ರತಿಷ್ಟೆ ಗೌರವಗಳನ್ನು ಹೆಚ್ಚಿಸಿದವು. ಹಾಗೂ ಪಶ್ಚಿಮ ಮತ್ತು ಉತ್ತರದ ಕಡೆ ರಾಜ್ಯ ವಿಸ್ತರಿಸಲು ಅನುಕೂಲ ಮಾಡಿದವು.

ಬಿಂಬಸಾರನು ಆವಂತಿ ರಾಜ್ಯದ ರಾಜನಾದ ಚಂಡಪ್ರದ್ಯೋತ ಮಹಾಸೇನನ ವಿರುದ್ಧ ಯುದ್ಧ ಮಾಡಿದನು. ಆದರೆ ಇದರಲ್ಲಿ ಯಾರೊಬ್ಬರು ಜಯ ಸಾಧಿಸಲಿಲ್ಲ. ಅದಾಗ್ಯೂ ಇವರಿಬ್ಬರ ಮಧ್ಯೆ ಸ್ನೇಹ ಏರ್ಪಟಿತ್ತು. ಗಾಂಧಾರ ರಾಜ್ಯದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ವೃದ್ಧಿಸಿದನು. ಈ ರೀತಿ ಬಿಂಬಸಾರನ ರಾಜ್ಯದಲ್ಲಿ ಎಂಬತ್ತು ಸಾವಿರ ಹಳ್ಳಿಗಳಿದ್ದು ರಾಜ್ಯದ ವಿಸ್ತೀರ್ಣ ೨೩೦೦ ಮೈಲಿಗಳಾಗಿತ್ತು. ವ್ಯವಸ್ಥಿತ ಆಡಳಿತವನ್ನು ರೂಪಿಸಿದ್ದ ಬಿಂಬಸಾರನು ಅನೇಕ ಅಧಿಕಾರಿಗಳನ್ನು ನೇಮಿಸಿದ್ದನು. ಅವರನ್ನು ರಾಜಭಟರೆಂದು ಕರೆಯುತ್ತಿದ್ದರು. ಅವರಲ್ಲಿ ನಾಲ್ಕು ವಿಭಾಗಗಳಿದ್ದವು. ಅವುಗಳೆಂದರೆ:

೧. ಸಂಬದ್ಧಕರು – ಸಾಮಾನ್ಯ ಆಡಳಿತ

೨. ಸೇನಾ ನಾಯಕ ಮಹತ್ತರರು – ಸೈನ್ಯದ ಮುಖ್ಯಸ್ಥರು

೩. ವ್ಯವಹಾರಿಕ ಮಹತ್ತರರು – ನ್ಯಾಯಧೀಶರು

೪. ಮಹತ್ತರರು – ಕಂದಾಯ ವಸೂಲಿ ಮಾಡುವವರು

ನ್ಯಾಯಾಡಳಿತವು ಕ್ರಮಬದ್ಧವಾಗಿದ್ದು ಚಾವಟಿ ಶಿಕ್ಷೆ, ಬರೆ, ನಾಲಿಗೆ ಕೀಳುವುದು, ಶಿರಶ್ಚೇದ ಮುಂತಾದ ಶಿಕ್ಷೆಗಳನ್ನು ಅಪರಾಧಿಗಳಿಗೆ ಜಾರಿಗೊಳಿಸಿದ್ದನು. ೧೬ ಭಾಗ ಕಂದಾಯವನ್ನು ವಸೂಲಿ ಮಾಡುತ್ತಿದ್ದನು. ಜೈನ, ಬೌದ್ಧ, ವೈದಿಕ ಧರ್ಮಗಳಿಗೆ ರಾಜ್ಯದಲ್ಲಿ ಮನ್ನಣೆ ನೀಡಿದನು. ಆಡಳಿತದಲ್ಲಿ ತನ್ನ ಮಕ್ಕಳ ಸಹಾಯವನ್ನು ಪಡೆಯುತ್ತಿದ್ದನು.

ಬೌದ್ದಧರ್ಮದ ಪ್ರಕಾರ  ಇವನು ತನ್ನ ಮಗನಾದ ಅಜಾತಶತ್ರುವಿನ ಪರವಾಗಿ ಪದವಿ ತ್ಯಾಗ ಮಾಡಿದನು. ನಂತರ ಅಜಾತಶತ್ರುವೇ ಇವನನ್ನು ಕೊಲೆ ಮಾಡಿದನು.

ಅಜಾತ ಶತ್ರು (ಕ್ರಿ.ಪೂ.೪೯೨೪೬೦)

ಇವನು ತನ್ನ ತಂದೆಯಂತೆ ರಾಜ್ಯ ವಿಸ್ತಾರಕ್ಕೆ ಕೈಹಾಕಿದನು. ಮೊದಲಿಗೆ ಕೋಸಲದ ರಾಜನಾದ ಪ್ರಸೇನಜೀತ್‌ನ ಮೇಲೆ ದಂಡತ್ತಿ ಹೋಗಿ ಅವನನ್ನು ಯುದ್ದದಲ್ಲಿ ಸೋಲಿಸಿದನು. ನಂತರ ಶಾಂತಿ ಒಪ್ಪಂದವಾಗಿ ಪ್ರಸೇನಜಿತ್‌ನ ಮಗಳನ್ನು ವಿವಾಹವಾದನು. ಇದಾದ ನಂತರ ವೈಶಾಲಿಯ ಲಿಚ್ಚವಿಗಳೊಂದಿಗೆ ಯುದ್ಧ ಮಾಡಿದನು. ಸುಮಾರು ಹದಿನಾರು ವರ್ಷಗಳ ಕಾಲ ಅವರೊಂದಿಗೆ ಯುದ್ಧ ಮಾಡಿ ಕೊನೆಗೆ ಜಯ ಸಾಧಿಸಿದನು. ಇದರಿಂದ ಕಾಶಿ ಮತ್ತು ವೈಶಾಲಿಗಳು ಮಗಧ ರಾಜ್ಯದಲ್ಲಿ ವಿಲೀನವಾದವು ಹಾಗೂ ಪಾಟಲಿಪುತ್ರ ನಗರಕ್ಕೆ ಬುನಾದಿ ಹಾಕಿದನು. ಲಿಚ್ಚವಿಗಳು, ೯ ಮಲ್ಲಗಣರಾಜ್ಯಗಳು ಹಾಗೂ ೧೮ ಕಾಶಿ ಗಣ ರಾಜ್ಯಗಳ ಒಕ್ಕೂಟವನ್ನು ಸೋಲಿಸಿ ಅವುಗಳನ್ನು ವಶಪಡಿಸಿಕೊಂಡನು. ಅವಂತಿ ರಾಜ್ಯದ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದನು. ಈ ರೀತಿಯಾಗಿ ಮಗಧ ರಾಜ್ಯವನ್ನು ಮತ್ತಷ್ಟು ವಿಸ್ತರಿಸಿದನು.

ಅಜಾತಶತ್ರುವಿನ ನಂತರ ಅವನ ಮೊಮ್ಮಗನಾದ ಉದಯನನು ಮಗಧದ ರಾಜನಾದನು. ಇವನು ರಾಜಧಾನಿಯನ್ನು ರಾಜಗೃಹದಿಂದ ಪಾಟಲಿಪುತ್ರಕ್ಕೆ ಸ್ಥಳಾಂತರಿಸಿದನು. ಅನೇಕ ಯುದ್ಧಗಳಲ್ಲಿ ಅವಂತಿ(ಪಾಲಕ) ರಾಜನನ್ನು ಸೋಲಿಸಿದನು. ಇದೇ ಸೇಡಿಗಾಗಿ ಆವಂತಿಯವರು ಇವನನ್ನು ಧರ್ಮ ಸಭೆ ನಡೆಸುತ್ತಿದ್ದಾಗ ಕೊಲೆ ಮಾಡಿದರು. ಇವನ ನಂತರ ಅನಿರುದ್ಧ, ಮುಂಡಾ ಮತ್ತು ನಾಗ-ದರ್ಶಕರವರು ಕ್ರಮವಾಗಿ ಆಳ್ವಿಕೆ ಮಾಡಿದರು. ಇವರು ದುರ್ಬಲರಾಗಿದ್ದರಿಂದ ಈ ಅವಕಾಶವನ್ನು ಬಳಸಿಕೊಂಡ ಮಗಧದ ಮಂತ್ರಿಯಾಗಿದ್ದ ಶಿಶುನಾಗನು ದರ್ಶಕನನ್ನು ಕೊಲೆ ಮಾಡಿ ಮಗಧದ ರಾಜನಾದನು ಹಾಗೂ ಕ್ರಿ.ಪೂ. ೪೩೦ರಲ್ಲಿ ಶಿಶುನಾಗ ವಂಶದ ಆಳ್ವಿಕೆಯನ್ನು ಆರಂಭಿಸಿದನು ಹಾಗೂ ರಾಜಧಾನಿಯನ್ನು ಪಾಟಲಿಪುತ್ರದಿಂದ ರಾಜಗೃಹಕ್ಕೆ ಸ್ಥಳಾಂತರಿಸಿದನು.

ಶಿಶುನಾಗನು ಪ್ರಬಲ ಅರಸನಾಗಿದ್ದು, ಆವಂತಿ, ವತ್ಸ, ಕೋಸಲಗಳ ಮೇಲೆ ಯುದ್ಧ ಮಾಡಿ ಅವುಗಳನ್ನು ವಶಪಡಿಸಿಕೊಂಡನು. ಇವನ ನಂತರ ಕಾಲಾಶೋಕ ಆಧಿಕಾರಕ್ಕೆ ಬಂದನು. ಇವನು ಪುನಃ ರಾಜಧಾನಿಯನ್ನು ರಾಜಗೃಹದಿಂದ ಪಾಟಿಲಿಪುತ್ರಕ್ಕೆ ಸ್ಥಳಾಂತರಿಸಿದನು. ಇವನ ಕಾಲದಲ್ಲಿ ಎರಡನೇ ಬೌದ್ಧ ಸಮ್ಮೇಳನ ವೈಶಾಲಿಯಲ್ಲಿ ಜರುಗಿತು. ಇವನನ್ನು ಕೊಲೆ ಮಾಡಿದ ನಂದರು ಮಗಧ ರಾಜ್ಯದಲ್ಲಿ ತಮ್ಮ ಆಳ್ವಿಕೆ ಆರಂಭಿಸಿದರು.

ನಂದರು (ಕ್ರಿ.ಪೂ. ೩೬೪೩೨೪)

ಈ ವಂಶದ ಸ್ಥಾಪಕ ‘ಮಹಾಪದ್ಮನಂದ’. ಗ್ರೀಕ್‌ ದಾಖಲೆಗಳ ಪ್ರಕಾರ ಇವನು ಸುಂದರನಾಗಿದ್ದು ರಾಣಿಯ ಮನಸ್ಸನ್ನುಗೆದ್ದು ಕಾಲಾಶೋಕನನ್ನು ಕೊಲೆಮಾಡಿ ಅಧಿಕಾರ ಪಡೆದುಕೊಂಡನು. ಸಾಮ್ರಾಜ್ಯ ವಿಸ್ತರಣಾ ನೀತಿಯನ್ನು ಮುಂದುವರೆಸಿ ಕಳಿಂಗ, ಮಿಥಿಲ, ಶೂರಸೇನ ಮುಂತಾದ ಮಹಾಜನಪದಗಳನ್ನು ಪಶಪಡಿಸಿಕೊಂಡನು. ವಾಯುವ್ಯ ಭಾರತ, ಕಾಶ್ಮೀರ, ಪಂಜಾಬ್‌ ಹೊರತುಪಡಿಸಿದಂತೆ ಇಡೀ ಉತ್ತರ ಭಾರತವನ್ನು ತನ್ನ ಅಧೀನಕ್ಕೊಳಪಡಿಸಿಕೊಂಡಿದ್ದನು. ಕಥಾ ಸರಿತ್ಸಾಗರ ಹಾಗೂ ಹಾತಿಗುಂಫ ಶಾಸನಗಳ ಪ್ರಕಾರ ಕಳಿಂಗ ಮತ್ತು ದಕ್ಷಣ ಭಾರತದವರೆಗೂ ರಾಜ್ಯ ವಿಸ್ತರಿಸಿದ್ದನು. ಪುರಾಣಗಳ ಪ್ರಕಾರ ಇವನು ಕುಂತಲ ಪ್ರದೇಶದ ಮೇಲೂ ಅಧಿಕಾರ ಸ್ಥಾಪಿಸಿದನು. ಕ್ಷತ್ರಿಯ ಬುಡಕಟ್ಟುಗಳಾದ ಕುರು, ಪಾಂಚಾಲಗಳನ್ನು ವಶಪಡಿಸಿಕೊಂಡ. ಈ ರೀತಿ ಇವನು ಅಜಾತಶತ್ರು ಆರಂಭಿಸಿದ ವಿಸ್ತರಣೆ ಕೆಲಸ ಮುಗಿಸಿದ.

ಮಹಪದ್ಮ ನಂದನ ನಂತರ ಅವನ ೮ ಜನ ಮಕ್ಕಳು ಆಡಳಿತ ನಡೆಸಿದರು. ಈ ವಂಶದ ಕೊನೆ ದೊರೆ ಧನನಂದ. ಚಂದ್ರಗುಪ್ತ ಮೌರ್ಯನು ಧನನಂದನನ್ನು ಸೋಲಿಸಿ ಮಗಧದಲ್ಲಿ ಮೌರ್ಯ ವಂಶದ ಆಳ್ವಿಕೆ ಸ್ಥಾಪಿಸಿದನು. ಸುಮಾರು ಕ್ರಿ.ಪೂ. ೩೪೨ರ ವೇಳೆಗೆ ಗಂಗಾಬಯಲಿನಲ್ಲಿದ್ದ ಹದಿನಾರು ಮಹಾಜನಪದಗಳು, ಹಣಸಂಘಗಳು ಮಗದ ರಾಜ್ಯದಲ್ಲಿ ಬಹುತೇಕ ವಿಲೀನವಾದವು ಹಾಗೂ ಮಗಧ ರಾಜ್ಯವು ಗಂಗಾಬಯಲಿನಲ್ಲಿ ರಾಜಪ್ರಭುತ್ವ ಸ್ವರೂಪ ಪಡೆದು ಮಹಾರಾಜ್ಯವಾಗಿ ಬೆಳವಣಿಗೆ ಹೊಂದಿತು.

ಗಂಗಾಬಯಲಿನಲ್ಲಿ ಮಗಧ ರಾಜ್ಯದ ಏಳಿಗೆಗೆ ಕಾರಣಗಳು

ಗಂಗಾಬಯಲಿನಲ್ಲಿ ಕ್ರಿ.ಪೂ. ೭ನೇಯ ಶತಮಾನದಿಂದ ಆರಂಭವಾದ ರಾಜ್ಯ ನಿರ್ಮಾಣದ ಪ್ರಕ್ರಿಯೆ ಪ್ರಾರಂಭವಾಗುವಾಗ ಕ್ರಿ.ಪೂ. ೬ ಮತ್ತು ೫ನೇಯ ಶತಮಾನದ ವೇಳೆಗೆ ಹಲವಾರು ಬುಡಕಟ್ಟು ರಾಜ್ಯಗಳು, ರಾಜಪ್ರಭುತ್ವಗಳು, ಗಣ ಸಂಘಗಳನ್ನೊಳಗೊಂಡ ಹದಿನಾರು ಮಹಾಜನಪದಗಳು ಹಾಗೂ ಗಣರಾಜ್ಯ ಮಾದರಿ ಪ್ರಭುತ್ವಗಳು ಬೆಳವಣಿಗೆ ಹೊಂದಿದ್ದವು. ಆದರೆ ಅವುಗಳು ಕ್ರಿ.ಪೂ. ೪ನೇಯ ಶತಮಾನದ ಅಂತ್ಯದ ವೇಳೆಗೆ ಮಗದ ರಾಜ್ಯದಲ್ಲಿ ವಿಲೀನವಾದವು. ಈ ಪ್ರದೇಶದಲ್ಲಿ ಮಗದ ರಾಜ್ಯವು ಏಳಿಗೆ ಹೊಂದಲು ಅನೇಕ ಕಾರಣಗಳಿವೆ.

ಅವುಗಳೆಂದರೆ,

೧. ಮಗಧ ರಾಜ್ಯವನ್ನು ಆಳಿದ ಬಿಂಬಸಾರ, ಅಜಾತಶತ್ರು, ಮಹಾಪದ್ಮನಂದ ಮುಂತಾದವರು ಉತ್ತಮ ರಾಜನೀತಿಜ್ಞರು, ಯುದ್ಧಚತುರರು ಆಗಿದ್ದರಿಂದ ಯಶಸ್ವಿ ದಂಡಯಾತ್ರೆ, ವೈವಾಹಿಕ ಸಂಬಂಧಗಳು, ರಾಜನೀತಿ ನೈಪುಣ್ಯತೆಯಿಂದ ರಾಜ್ಯ ವಿಸ್ತರಿಸಿದರು.

೨. ಭೌಗೋಳಿಕವಾಗಿ ಮಗಧ ರಾಜ್ಯವು ಫಲವತ್ತಾದ ಕೃಷಿ ಭೂಮಿ ಹೊಂದಿದ್ದ ಗಂಗಾನದಿ ಬಯಲಿನಲ್ಲಿದ್ದು ಉತ್ತಮ ಫಸಲು ಬರುತ್ತಿದ್ದರಿಂದ ರಾಜ್ಯದ ಆದಾಯವು ಸಾಕಷ್ಟು ಪ್ರಮಾಣದಲ್ಲಿ ಬರುತ್ತಿತ್ತು. ಇದರ ವ್ಯಾಪಾರ ವಾಣಿಜ್ಯವು ಅಭಿವೃದ್ಧಿ ಹೊಂದಿ ಸಾಮ್ರಾಜ್ಯ ಶ್ರೀಮಂತವಾಯಿತು. ಇದರ ಪರಿಣಾಮವಾಗಿ ಸಮರ್ಥ ಸೈನ್ಯ ನಿರ್ಮಿಸಲು ಸಾಧ್ಯವಾಯಿತು.

೩. ವ್ಯೂಹಾತ್ಮಕವಾಗಿ ಮಗಧ ರಾಜ್ಯದ ರಾಜಗೃಹ ಮತ್ತು ಪಾಟಲಿಪುತ್ರ ನಗರಗಳು ಅತ್ಯಂತ ಆಯಕಟ್ಟಿನ ಪ್ರದೇಶದಲ್ಲಿದ್ದವು. ರಾಜಗೃಹವು ಐದು ಬೆಟ್ಟಗಳಿಂದ ಸುತ್ತುವರಿಯಲ್ಪಟ್ಟಿತ್ತು ಹಾಗೂ ಪಾಟಲಿಪುತ್ರವು ಗಂಗಾ-ಗಂಡಕ್‌ ನದಿಗಳ ಸಂಗಮ ಸ್ಥಳದಲ್ಲಿದ್ದು ಆ ನದಿಗಳು ರಕ್ಷಣೆ ಗೋಡೆಯಂತಿದ್ದವು.

೪. ಮಗಧ ರಾಜ್ಯದಲ್ಲಿ ಅಪಾರ ಪ್ರಮಾಣದ ಕಬ್ಬಿಣದ ಅದಿರು ಹಾಗೂ ತಾಮ್ರದ ಅದಿರು ಇದ್ದು ಅತ್ಯುತ್ತಮ ಗುಣಮಟ್ಟದ ಅಯುಧಗಳನ್ನು ತಯಾರಿಸಲು ಅನುಗೂಲವಾಯಿತು. ಈ ಸೌಲಭ್ಯ ಇತರೆ ರಾಜ್ಯಗಳಿಗೆ ಇರಲಿಲ್ಲ. ಅದಕ್ಕೆ ಚಾಣಕ್ಯನು ಈ ರೀತಿ ಹೇಳಿದ್ದಾನೆ. ‘ಗಣಿಗಳು ಯುದ್ಧಶಸ್ತರಗಳ ಗರ್ಭವಿದ್ದಂತೆ’ ಇದರಿಂದಲೂ ಪ್ರಬಲಸೈನ್ಯ ನಿರ್ಮಿಸಿದರು.

೫. ಯಾವುದೇ ಸಂದರ್ಭದಲ್ಲೂ ಮಗಧ ರಾಜ್ಯಕ್ಕೆ ಅರ್ಥಿಕ ಸಮಸ್ಯೆಗಳಿಲ್ಲದೆ ಸದಾ ಶ್ರೀಮಂತವಾಗಿತ್ತು. ಇದೊಂದು ಪ್ರಬಲ ರಾಜ್ಯವಾಗಿ ಬೆಳೆಯಲು ಕಾರಣವಾಯಿತು.

೬. ಮಗಧ ಪ್ರದೇಶವಿದ್ದ ಅರಣ್ಯಗಳಲ್ಲಿ ಅನೆಗಳಿದ್ದವು. ಅವುಗಳುಯುದ್ಧದಲ್ಲಿ ಜಯ ಸಾಧಿಸಲು ಕಾರಣವಾದವು. ಉದಾಹರಣೆಗೆ, ಗ್ರೀಕ್ ದಾಖಲೆಗಳ ಪ್ರಕಾರ ನಂದರು ೬೦೦೦ ಯುದ್ಧದ ಆನೆಗಳನ್ನು ಹೊಂದಿದ್ದರು.

೭. ಮಗಧ ರಾಜ್ಯವು ಉದಾರ ಧಾರ್ಮಿಕ ನೀತಿಯನ್ನು ಅಳವಡಿಸಿಕೊಂಡಿದ್ದು, ಕ್ಷತ್ರಿಯ, ಬ್ರಾಹ್ಮಣ, ಜೈನ, ಬೌದ್ಧ ಮುಂತಾದವರಿಗೆ ರಾಜಾಶ್ರಯ ನೀಡಿದು, ಅವರೆಲ್ಲರ ಬೆಂಬಲಗಳಿಸಿತ್ತು.

೮. ಮಗಧ ರಾಜರು ಆರಂಭದಿಂದಲೂ ಆಕ್ರಮಣಕಾರಿ ನೀತಿಗಳನ್ನು ಹೊಂದಿದ್ದು, ರಾಜ್ಯ ವಿಸ್ತರಣೆಗೆ ಮಹತ್ವ ನೀಡಿ ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಯಶಸ್ವಿಯಾದರು.

ಈ ಕಾರಣಗಳಿಂದ ಮಗಧ ರಾಜ್ಯವು ಬೇರೆ ರಾಜ್ಯಗಳ ಮೇಲೆ ಜಯಸಾಧಿಸಿ ಪ್ರಬಲ ರಾಜ್ಯವಾಗಿ ಬೆಳವಣಿಗೆ ಹೊಂದಿತು.

ಮೌರ್ಯರ ರಾಜಕೀಯ ಇತಿಹಾಸ ರಾಜ್ಯ ರಚನೆ (ಕ್ರಿ.ಪೂ. ೩೨೨ ರಿಂದ ೧೮೪)

ಮೌರ್ಯ ರಾಜ್ಯವು ಭಾರತದ ಮೊಟ್ಟಮೊದಲ ವಿಶಾಲ ರಾಜ ಪ್ರಭುತ್ವ. ಈ ರಾಜ್ಯವು ಪ್ರಾಚೀನ ಭಾರತದಲ್ಲಿ ನೂತನ ರಾಜಕೀಯ ಹಾಗೂ ಸಾಂಸ್ಕೃತಿಕ ಅಧ್ಯಾಯವನ್ನು ಪ್ರಾರಂಭಿಸಿತು. ಇದು ಇಡೀ ದೇಶವನ್ನು ಮೊದಲ ಬಾರಿಗೆ ಒಂದೇ ರಾಜಕೀಯ ಪ್ರಭುತ್ವದಡಿ ತಂದಿತ್ತು. ಇದೊಂದು ವಿಶಾಲ ಸಾಮ್ರಾಜ್ಯವಾಗಿದ್ದು, ಉತ್ತರದಲ್ಲಿ ಗಾಂಧಾರದಿಂದ (ಇಗಿನ ಆಫ್ಘಾನಿಸ್ಥಾನ) ದಕ್ಷಿಣದಲ್ಲಿ ಕುಂತಲನಾಡಿವರೆಗೂ (ಮೈಸೂರು ಪ್ರಾಂತ್ಯ) ವಿಸ್ತರಿಸಿತು. ಪ್ರಾಚೀನ ತಮಿಳು ಸಂಗಂ ಸಾಹಿತ್ಯದಲ್ಲಿ ವಂಬ ಮೋರಿಯರ್ ಕುರಿತು ಉಲ್ಲೇಖವಿದೆ. ಅದರ ಪ್ರಕಾರ ಮೌರ್ಯರ ಸೈನ್ಯವು ಮಧುರೆಯವರೆಗೂ ಬಂದಿತ್ತು. ಮುಂದೆ ಚಲಿಸಲು ಅವರ ರಥಗಳು ಪರ್ವತಗಳಲ್ಲಿ ಚಲಿಸಲು ಆಗಲಿಲ್ಲವಾದ್ದರಿಂದ ಹಿಂದಕ್ಕೆ ಹೋದರು. ಈ ರೀತಿ ಮೌರ್ಯರು ದಕ್ಷಿಣ ಭಾರತದವರೆಗೂ ತಮ್ಮ ಆಳ್ವಿಕೆ ವಿಸ್ತರಿಸಿದರು. ಈ ರಾಜ್ಯದ ಅರಸರು ಗ್ರೀಕ್‌ನ ಸೆಲ್ಯೂಕಸ್‌, ಸಿರಿಯಾದ ಆಂಟಿಕೋಸ್‌, ಮ್ಯಾಸಿಡೋನಿಯಾದ ಅಂಟಿಗೋನಸ್‌, ಸಿಲೋನಿನ ತಿಸ್ಸ ಮತ್ತು ನೇಪಾಳದ ರಾಜರೊಂದಿಗೆ ರಾಜತಾಂತ್ರಿಕ  ಸಂಬಂಧಗಳನ್ನು ಬೆಳೆಸಿದ್ದರು. ಇವರ ಕಾಲದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಧರ್ಮಗಳು ಸಿಲೋನ್‌, ಸಯಾಮ್, ಬರ್ಮ, ಚೀನಾ, ಜಪಾನ್ ಮುಂತಾದ ದೇಶಗಳಲ್ಲಿ ಹರಡಿದವು.

ಮೌರ್ಯ ಸಾಮ್ರಾಜ್ಯದ ಕುರಿತು ಅಧ್ಯಯನ ಮಾಡಲು ನಮಗೆ ವಿಫಲವಾದ ಆಧಾರಗಳು ದೊರಕುತ್ತವೆ. ಸ್ವದೇಶ ಸಾಹಿತ್ಯಿಕ ಆಧಾರಗಳಾದ ಕೌಟಿಲ್ಯನ ಅರ್ಥಶಾಸ್ತ್ರ, ವಿಶಾಖದತ್ತನ ಮುದ್ರಾರಾಕ್ಷಸ, ವಿಷ್ಣುಪುರಾಣ, ಮತ್ಸ್ಯಪುರಾಣ, ವಾಯುಪುರಾಣ, ಆಶೋಕನ ಶಿಲಾಶಾಸನಗಳು, ರುದ್ರದಾಮನನ ಜುನಾಗಡ್‌ಶಾಸನ, ದಶರಥನ ನಾಗಾರ್ಜುನ ಗುಹಾಂತರ ಶಾಸನ ಮುಂತಾದವುಗಳು. ಇವುಗಳಲ್ಲಿ ಕೌಟಿಲ್ಯನ ಅರ್ಥಶಾಸ್ತ್ರವು ಅಂದಿನ ಕಾಲದ ರಾಜಪ್ರಭುತ್ವ ರಚನೆ, ಆಡಳಿತ, ರಾಜನೀತಿ, ತೆರಿಗೆ ಮುಂತಾದವುಗಳ ಕುರಿತು ವಿವರ ಮಾಹಿತಿ ನೀಡುತ್ತದೆ. ಆದೇ ರೀತಿ ಆಶೋಕನ ಶಿಲಾಶಾಸನಗಳು ರಾಜ್ಯದ ಗಡಿಗಳು, ಧರ್ಮ, ಆಡಳಿತಗಳ ಬಗ್ಗೆ ಸಾಕಷ್ಟು ಮಾಹಿತಿ ಒದಗಿಸುತ್ತದೆ. ಇವುಗಳಲ್ಲದೆ ವಿದೇಶಿ ಬರವಣಿಗೆಗಳು ಕೂಡ ಸಾಕಷ್ಟು ಮಾಹಿತಿ ಒದಗಿಸುತ್ತವೆ. ಅವುಗಳೆಂದರೆ ಮೆಗಾಸ್ತನೀಸನ ಇಂಡಿಕಾ, ಸ್ಟ್ರಾಬೋ, ಡಿಡೋರಸ್‌, ಪ್ಲೀನಿ, ಅರಿಯನ್, ಪ್ಲುಟಾರ್ಕ್ ಮತ್ತು ಜಸ್ಟೀನ್‌ರವರ ಬರಹಗಳು, ಸಿಂಹಳ ದ್ವೀಪದ ಬೌದ್ಧ ಕೃತಿಯಳಾದ ದ್ವೀಪ ವಂಶ ಮತ್ತು ಮಹಾವಂಶ ಸೆಲ್ಯೂಕಸ್‌ನ ರಾಯಭಾರಿಯಾಗಿ ಮೌರ್ಯರ ಆಸ್ಥಾನದಲ್ಲಿದ್ದ ಮೆಗಾಸ್ತನೀಸನು ‘ಇಂಡಿಕಾ’ ಕೃತಿಯಲ್ಲಿ ಮೌರ್ಯರ ಕಾಲದ ಜನ ಜೀವನ ಹಾಗೂ ರಾಜಕೀಯ ಪರಿಸ್ಥಿತಿ ಕುರಿತು ಹೆಚ್ಚಿನ ಮಾಹಿತಿಯನ್ನು ಒದಗಿಸಿದ್ದಾನೆ. ಈ ಆಧಾರಗಳಿಂದ ನಾವು ಮೌರ್ಯರ ಇತಿಹಾಸವನ್ನು ವಸ್ತುನಿಷ್ಟವಾಗಿ ಅಧ್ಯಯನ ಮಾಡಬಹುದು.

ಚಂದ್ರಗುಪ್ತ ಮೌರ್ಯ ಹಾಗೂ ಮೌರ್ಯ ರಾಜ್ಯದ ಸ್ಥಾಪನೆ

ಚಂದ್ರಗುಪ್ತ ಮೌರ್ಯನು ಕ್ರಿ.ಪೂ. ೩೨೩ ರಿಂದ ಕ್ರಿ.ಪೂ. ೨೯೭. ಮೌರ್ಯರು ಮಗಧದಲ್ಲಿ ರಾಜ್ಯ ಸ್ಥಾಪಿಸುವುದಕ್ಕಿಂತ ಪೂರ್ವದಲ್ಲಿ ಪಿಪ್ಪಲವನದ ಪ್ರದೇಶದಲ್ಲಿ(ಪಿಪ್ಪಲವು ಅರಣ್ಯದಲ್ಲಿರುವ ಪವಿತ್ರವಾದ ಮರ) ಅಂದರೆ ಈಗಿನ ಹಿಮಾಲಯ ಪರ್ವತ ತಪ್ಪಲಿನ ತೆಹ್ರಿಯಲ್ಲಿ ತಮ್ಮದೇ ಆದ ಗಣರಾಜ್ಯ ಮಾದರಿ ಪ್ರಭುತ್ವವನ್ನು ಹೊಂದಿದ್ದರು. ಆದರೆ ಚಂದ್ರಗುಪ್ತ ಮೌರ್ಯನು ರಾಜ್ಯ ಸ್ಥಾಪಿಸಿದ ನಂತರ ಈ ವಂಶವು ಹೆಚ್ಚಿನದಾಗಿ ಮಹತ್ವ ಪಡೆದುಕೊಳ್ಳುತ್ತದೆ. ಬ್ರಾಹ್ಮಣ ಸಾಹಿತ್ಯವು ಚಂದ್ರಗುಪ್ತನ ಕುರಿತು ಈ ರೀತಿ ಹೇಳುತ್ತದೆ: ಇವನು ನಂತರದ ಆಸ್ಥಾನದಲ್ಲಿ ಮುರಾ ಎಂಬ ಶೂದ್ರತಿಯ ಮಗ. ಬೌದ್ಧ ಸಾಹಿತ್ಯದ ಪ್ರಕರ ಚಂದ್ರಗುಪ್ತ ಮೌರ್ಯನು ಕ್ಷತ್ರಿಯ ವಂಶಕ್ಕೆ ಸೇರಿದವನಾಗಿದ್ದು, ಉತ್ತರ ಪ್ರದೇಶದ ಗೋರಖ್‌ಪುರ ಪ್ರಾಂತ್ಯ ಹಾಗೂ ನೇಪಾಳದ ತೆಹ್ರಿ ಪ್ರಾಂತ್ಯದವನು. ಮಗಧದಲ್ಲಿ ಆಳ್ವಿಕೆ ನಡೆಸುತ್ತಿದ್ದ ನಂದರ ದೌರ್ಬಲ್ಯಗಳ ಉಪಯೋಗ ಪಡೆದುಕೊಂಡು ಚಾಣಕ್ಯನ ಸಹಾಯದಿಂದ ತನ್ನ ವಂಶದ ಆಳ್ವಿಕೆಯನ್ನು ಸ್ಥಾಪಿಸುತ್ತಾನೆ. ಜೈನ ಹಾಗೂ ಗ್ರೀಕ್‌ನ ಜಸ್ಟಿನ್‌ನ ಪ್ರಕಾರ ಚಂದ್ರಗುಪ್ತನು ಕೆಳವರ್ಗಕ್ಕೆ ಸೇರಿದವು. ಮತ್ತೊಂದು ಹೇಳಿಕೆ ಪ್ರಕಾರ ಚಂದ್ರಗುಪ್ತ ಮೌರ್ಯನು ಗೌತಮ ಬುದ್ಧನ ಕಾಲದಲ್ಲಿದ್ದ ಮೊರಿಯ ಎಂಬ ಕ್ಷತ್ರಿಯ ಕುಲಕ್ಕೆ ಸೇರಿದವನು. ಈ ಎಲ್ಲಾ ಅಭಿಪ್ರಾಯಗಳನ್ನು ಕ್ರೋಢೀಕರಿಸಿದಾಗ ನಮಗೆ ಅರ್ಥವಾಗುವುದೇನೆಂದರೆ ಚಂದ್ರಗುಪ್ತ ಮೌರ್ಯನು ಶೂದ್ರ ಅಥವಾ ಕ್ಷತ್ರಿಯ ವರ್ಗಕ್ಕೆ ಸೇರಿದವನಾಗಿದ್ದು ಮೌರ್ಯ ಸಾಮ್ರಾಜ್ಯದ ಸ್ಥಾಪಕನಾಗಿದ್ದಾನೆ.

ಆರಂಭದಲ್ಲಿ ನಂದರ ಸೈನ್ಯದಲ್ಲಿ ಸೇನಾಪತಿಯಾಗಿದ್ದ ಚಂದ್ರಗುಪ್ತ ಮೌರ್ಯನು ಚಾಣಕ್ಯನ ನೆರವಿನೊಂದಿಗೆ (ಚಾಣಕ್ಯನಿಗೆ, ವಿಷ್ಣುಗುಪ್ತ ಎಂದೂ ಕರೆಯುತ್ತಾರೆ) ರಾಜ್ಯ ನಿರ್ಮಿಸಲು ನಿರ್ಧರಿಸುತ್ತಾನೆ. ಒಂದು ಹೇಳಿಕೆ ಪ್ರಕಾರ “ಕೌಟಿಲ್ಯನು ನಂದರ ಆಸ್ಥಾನದಲ್ಲಿ ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದು. ನಂದರು ಅವನನ್ನು ಅಪಮಾನ ಮಾಡಿದ್ದರಿಂದ ಅವರ ರಾಜ್ಯ ನಿರ್ನಾಮ ಮಾಡಲು ಚಂದ್ರಗುಪ್ತನೊಡನೆ ಸೇರಿಕೊಂಡನು. ಚಾಣಕ್ಯನ ನೆರವಿನೊಂದಗೆ ಚಂದ್ರಗುಪ್ತನು ಬೃಹತ್‌ಸೈನ್ಯವನ್ನು ಸಂಘಟಿಸಿದನು. ಇದರಲ್ಲಿ ವಾಯುವ್ಯ ಪ್ರದೇಶದ ಬುಡಕಟ್ಟು ಜನರು, ದರೋಡೆಕೋರರು, ಅರಣ್ಯವಾಸಿಗಳು, ಕ್ಷತ್ರಿಯರು, ಕಳ್ಳರ ಗುಪುಂಗಳು ಮುಂತಾದವರಿದ್ದರು. ಹಿಮವತ್‌ಕೂಟದ (ಹಿಮಾಲಯ ಪ್ರದೇಶ) ಪರ್ವತಕ ರಾಜನೊಂದಿಗೆ ಒಕ್ಕೂಟ ರಚಿಸಿಕೊಂಡ ಚಂದ್ರಗುಪ್ತನು ಗ್ರೀಕರನ್ನು ಹಾಗೂ ನಂದರನ್ನು ಕಿತ್ತೊಗೆಯಲು ನಿರ್ಧರಿಸಿದನು. ಮೊದಲಿಗೆ ಗ್ರೀಕ್‌ರ ವಿರುದ್ಧ ದಂಡೆತ್ತಿ ಹೋಗಿ ಅವರನ್ನು ಪಂಜಾಬ್‌ಮತ್ತು ಸಿಂಧ್‌ ಪ್ರಾಂತ್ಯಗಳಿಂದ ಹಿಮ್ಮೆಟ್ಟಿಸಿದನು. ಇದರಿಂದ ಈ ಪ್ರಾಂತ್ಯದಲ್ಲಿ ಚಂದ್ರಗುಪ್ತನು ಪ್ರಬಲನಾದನು.”

ಮಗಧದ ಆಕ್ರಮಣ

ಪಂಜಾಬ್‌ ಮತ್ತು ಸಿಂಧ್‌ನಲ್ಲಿ ಅಧಿಕಾರ ಸ್ಥಾಪಿಸಿದ ನಂತರ ಚಂದ್ರಗುಪ್ತ ಮೌರ್ಯನು ಮಗಧವನ್ನು ವಶಪಡಿಸಿಕೊಳ್ಳಲು ಮುನ್ನಡೆದನು. ಆ ಸಮಯದಲ್ಲಿ ಮಗಧವನ್ನು ನಂದ ವಂಶದ ಧನನಂದನು ಆಳುತ್ತಿದ್ದನು. ನಂದರು ವಿಶಾಲ ಪ್ರದೇಶದ ಒಡೆಯರಾಗಿದ್ದು ಆಪಾರ ಪ್ರಮಾಣದ ಸೈನ್ಯವನ್ನು ಹೊಂದಿದ್ದರು. ಆದರೆ ಧನನಂದನು ಕ್ರೂರಿ ಹಾಗೂ ಜನವಿರೋಧಿಯಾಗಿದ್ದು, ಪ್ರಜೆಗಳ, ಆಡಳಿತಗಾರರ ಆವಕೃಪೆಗೊಳಗಾಗಿದ್ದನು. ಈ ವಿಷಯವನ್ನು ಮನಗಂಡಿದ್ದ ಚಂದ್ರಗುಪ್ತನು ನಂದರ ರಾಜಧಾನಿಯಾದ ಪಾಟಲಿಪುತ್ರಕ್ಕೆ ಮುತ್ತಿಗೆ ಹಾಕಿದನು. ಆಗ ಧನನಂದನಿಗೂ ಚಂದ್ರಗುಪ್ತ ಮೌರ್ಯನಿಗೂ ಭೀಕರ ಕದನ ನಡೆಯಿತು. ಇದರಲ್ಲಿ ಮಗಧವು ಚಂದ್ರಗುಪ್ತನ ಅಧೀನಕ್ಕೆ ಬಂದಿತು. ನಂತರ ಅವನು ಕಳಿಂಗವನ್ನೊಂದು ಹೊರತು ಪಡಿಸಿ ಗಂಗಾ-ಯಮುನಾ ಬಯಲಿನಿಂದ ಹಿಡಿದು ಕರ್ನಾಟಕದವರೆಗಿನ ಪ್ರದೇಶಗಳಿಗೆ ಒಡೆಯನಾದನು. ಇದರೊಂದಿಗೆ ಇಡೀ ಉತ್ತರ ಭಾರತ ಇವನ ಅಧೀನಕ್ಕೊಳಪಟ್ಟಿತು. ಈ ರೀತಿಯಾಗಿ ಚಂದ್ರಗುಪ್ತನು ಮಗಧದಲ್ಲಿ ಮೌರ್ಯರ ರಾಜಪ್ರಭುತ್ವ ಸ್ಥಾಪಿಸಿದನು.