ಸೆಲ್ಯೂಕಸ್ನೊಂದಿಗೆ ಯುದ್ಧ (ಕ್ರಿ.ಪೂ.೩೦೫೩೦೪)

ಸಿರಿಯಾದ ಅರಸನಾದ ಗ್ರೀಕ್‌ ಸೆಲ್ಯೂಕಸ್‌ನಿಕೆಟರ್ ತಮ್ಮ ಭಾರತದ ಪ್ರದೇಶಗಳನ್ನು ಮರುವಶಪಡಿಸಿಕೊಳ್ಳಲು ನಿರ್ಧರಿಸಿ ಭಾರತದ ಕಡೆ ದಂಡೆಯಾತ್ರೆ ಕೈಗೊಂಡನು. ಆಗ ಚಂದ್ರಗುಪ್ತ ಮೌರ್ಯನಿಗೂ ಗ್ರೀಕರ ಸೆಲ್ಯೂಕಸ್‌ನಿಗೂ ಯುದ್ಧ ನಡೆಯಿತು. ಈ ಯುದ್ಧದಲ್ಲಿ ಸೆಲ್ಯೂಕಸ್‌ಸೋತು ಕಾಂದಾಹಾರ್, ಕಾಬೂಲ್‌, ಹಿರಾತ್‌ ಮತ್ತು ಬಲೂಚಿಸ್ಥಾವಗಳನ್ನು ಚಂದ್ರಗುಪ್ತನಿಗೆ ಬಿಟ್ಟುಕೊಟ್ಟನು. ನಂತರ ಇವರಿಬ್ಬರ ಮಧ್ಯೆ ವೈವಾಹಿಕ ಸಂಬಂಧಗಳೇರ್ಪಟ್ಟು ಚಂದ್ರಗುಪ್ತನು ಸೆಲ್ಯೂಕಸ್‌ನ ಮಗಳನ್ನು ವಿವಾಹವಾದನು. ನಂತರ ಚಂದ್ರಗುಪ್ತನು ಸೆಲ್ಯೂಕಸ್‌ನನು ಇಫ್‌ಸಸ್‌ ಯುದ್ಧದಲ್ಲಿ ಜಯಸಾಧಿಸಲು ೫೦೦ ಅನೆಗಳನ್ನು ಕಳುಹಿಸಿ ಕೊಟ್ಟನು. ನಂತರ ಇವರಿಬ್ಬರ ಮಧ್ಯೆ ಉತ್ತಮ ಬಾಂಧವ್ಯ ಏರ್ಪಟ್ಟು ಸೆಲ್ಯುಕಸ್‌ನು ರಾಯಭಾರಿಯಾಗಿ ಮೆಗಾಸ್ತನೀಸನನ್ನು ಚಂದ್ರಗುಪ್ತನ ಆಸ್ಥಾನಕ್ಕೆ ಕಳುಹಿಸಿಕೊಟ್ಟನು.

ಈ ರೀತಿಯಾಗಿ ಯುದ್ಧಗಳಲ್ಲಿ ಜಯಸಾಧಿಸಿದ ಚಂದ್ರಗುಪ್ತನು ವಿಶಾಲವಾದ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಇವನ ಕಾಲದಲ್ಲಿ ಮೌರ್ಯ ಸಾಮ್ರಾಜ್ಯವು ಪರ್ಶಿಯಾದ ಗಡಿಗಳಿಂದ ದಕ್ಷಿಣದ ಮೈಸೂರಿನವರೆಗೂ ವಿಸ್ತರಿಸಿತು.

ಸುಮಾರು ೨೫ ವರ್ಷಗಳ ಕಾಲ ಆಳ್ವಿಕೆ ನಡೆಸಿದ ಚಂದ್ರಗುಪ್ತ ಮೌರ್ಯನು ಕ್ರಿ.ಪೂ. ೨೯೭ರಲ್ಲಿ ಮರಣಹೊಂದಿದನು. ಜೈನ ಧರ್ಮದ ಪ್ರಕಾರ “ಚಂದ್ರಗುಪ್ತ ಮೌರ್ಯನು ತನ್ನ ಮಗನಾದ ಬಿಂದುಸಾರನಿಗೆ ರಾಜ್ಯಾಧಿಕಾರ ವಹಿಸಿಕೊಟ್ಟು ಜೈನ ಮುನಿಯಾಗಿ ತನ್ನ ಗುರುವಾದ ಭದ್ರಬಾಹುವಿನೊಂದಿಗೆ ದಕ್ಷಿಣ ಭಾರತದ ಶ್ರವಣಬೆಳಗೊಳಕ್ಕೆ ಬಂದು ಸಲ್ಲೇಖನ ವ್ರತ ಕೈಗೊಂಡು ಮರಣ ಹೊಂದಿದನು.”

ಬಿಂದುಸಾರ (ಕ್ರಿ.ಪೂ. ೨೯೭ ರಿಂದ ೨೭೩)

ಚಂದ್ರಗುಪ್ತ ಮೌರ್ಯನ ಉತ್ತರಾಧಿಕಾರಿಯಾಗಿ ಇವನು ಕ್ರಿ.ಪೂ. ೨೯೭ರಲ್ಲಿ ಅಧಿಕಾರಕ್ಕೆ ಬಂದನು. ಸುಮಾರು ೨೫ ವರ್ಷಗಳ ಕಾಲ ಆಳಿದ ಇವನು ತನ್ನ ಪೂರ್ವಜರಿಂದ ಬಂದಿದ್ದ ಸಾಮ್ರಾಜ್ಯವನ್ನು ದಕ್ಷವಾಗಿ ಆಡಳಿತ ನಡೆಸಿದನು. ಗ್ರೀಕರ ದೊರೆಗಳು, ಈಜಿಪ್ಟಿನ ಎರಡನೇ ಫಿಲೆಡಿಲ್ಪಿಯಾ ಮುಂತಾದವರೊಂದಿಗೆ ರಾಜತಾಂತ್ರಕ ಸಂಬಂಧ ಹೊಂದಿದ್ದನು. ಇವನ ಆಸ್ಥಾನಕ್ಕೆ ಡಯೋನಿಷಿಯಸ್‌ನನ್ನು ತನ್ನ ರಾಯಭಾರಿಯಾಗಿ ಸಿರಿಯಾದ ಅಂಟಿಯೋಕಸ್‌ ಕಳುಹಿಸಿದ್ದನು. ಇವನ ಕಾಲದಲ್ಲಿ ತಕ್ಷಶಿಲೆ ಪ್ರಾಂತ್ಯದಲ್ಲಿ ದಂಗೆಗಳಾದವು. ಅವನು ತನ್ನ ಮಗನಾದ ಅಶೋಕನನ್ನು ಕಳುಹಿಸಿ ನಿಯಂತ್ರಸಿದನು. ಗ್ರೀಕರು ಬಿಂದುಸಾರನನ್ನು “ಶತ್ರುಗಳ ವಿನಾಶಕ” ಎಂದು ಕರೆದಿದ್ದಾರೆ. ಇವನ ಕಾಲದಲ್ಲಿ ವ್ಯಾಪಾರ, ವಾಣಿಜ್ಯ ಅಭಿವೃದ್ಧಿ ಹೊಂದಿ ರಾಜ್ಯವು ಸಂಪದ್ಭರಿತವಾಗಿತ್ತು.

ಅಶೋಕ (ಕ್ರಿ.ಪೂ. ೨೭೩ ರಿಂದ ೨೩೨)

ಪ್ರಸಿದ್ಧ ಇತಿಹಾಸಕಾರ ಎಚ್‌.ಜಿ. ವೇಲ್ಸ್‌ರವರು ಅಶೋಕನನ್ನು ಕುರಿತು ಈ ರೀತಿ ಹೇಳಿದ್ದಾರೆ: “ಪ್ರಪಂಚದ ಇತಿಹಾಸದಲ್ಲಿ ಸಾವಿರಾರು ಸಾಮ್ರಾಜ್ಯಗಳು, ರಾಜರು ಬಂದು ಹೋಗಿದ್ದಾರೆ. ಆದರೆ ಅಶೋಕನೇ ಅವರೆಲ್ಲರ ಮಧ್ಯೆ ಧೃವತಾರೆಯಂತಿದ್ದಾನೆ.” ಬಿಂದುಸಾರನ ಉತ್ತರಾಧಿಕಾರಿಯಾಗಿ ಅಧಿಕಾರಕ್ಕೆ ಬಂದ ಅಶೋಕ ಶಾಂತಿ, ಭಾತೃತ್ವ, ಅಹಿಂಸೆ ನೀತಿಗಳಿಂದ ಪ್ರಪಂಚ ಪ್ರಸಿದ್ಧ ದೊರೆಯಾಗಿದ್ದಾನೆ. ಅಶೋಕನು ೧೮ನೇಯ ವಯಸ್ಸಿನಲ್ಲಿ ಅಧಿಕಾರಕ್ಕೆ ಬರುತ್ತಾನೆ. ಅದಕ್ಕೂ ಪೂರ್ವದಲ್ಲಿ ಅವಂತಿ ಪ್ರಾಂತ್ಯದ ರಾಜ್ಯಪಾಲನಾಗಿದ್ದನು. ನಂತರ ತಕ್ಷಶಿಲೆಗೆ ವರ್ಗಾಯಿಸಲ್ಪಟ್ಟು ಆ ಪ್ರಾಂತ್ಯದಲ್ಲಿ ಆರಂಭವಾದ ದಂಗೆಯನ್ನು ಯಶಸ್ವಿಯಾಗಿ ಹತ್ತಿಕ್ಕಿದ್ದನು. ಆ ಮೂಲಕ ತಾನೊಬ್ಬ ದಕ್ಷ ಆಡಳಿತಗಾರ ಎಂಬುದನ್ನು ರುಜುವಾತು ಪಡಿಸಿದ್ದನು. ಬಿಂದುಸಾರನು ಮರಣಹೊಂದಿದ ಕೂಡಲೇ ರಾಧಗುಪ್ತನ ನೆರವಿನೊಂದಿಗೆ ಸಿಂಹಾಸನವನ್ನು ವಶಪಡಿಸಿಕೊಂಡನು. ಬೌದ್ಧ ದಾಖಲೆಗಳ ಪ್ರಕಾರ “ಸಿಂಹಾಸನಕ್ಕಾಗಿ ಅಶೋಕನಿಗೂ ಮತ್ತು ಅವನ ಸಹೋದರನಾದ ಸುಶಿಮಾನಿಗೂ ಕಲಹ ಆರಂಭವಾಯಿತು. ಹಾಗೂ ಸುಶಿಮಾನಿಗೆ ಇತರೆ ೯೮ ಸಹೋದರರು ಬೆಂಬಲಿಸಿದರು. ಆ ಕಲಹದಲ್ಲಿ ಅಶೋಕನು ತನ್ನ ೯೯ ಜನ ಸಹೋದರರನ್ನು ಕೊಂದು ಅಧಿಕಾರ ಪಡೆದುಕೊಂಡನು.” ಬಹುಶಃ ಈ ರೀತಿಯ ಕಲಹಗಳು ಇದ್ದುದ್ದರಿಂದ ಪಟ್ಟಾಭಿಷೇಕ ತಡವಾಗಿರಬಹುದು. ಬೌದ್ಧ ಸಾಹಿತ್ಯವು ಅಶೋಕನು ಆರಂಭದಲ್ಲಿ ಕ್ರೂರಿಯಾಗಿದ್ದ. ಬೇಟೆಯಾಡಿ ಅನೇಕ ಪ್ರಾಣಿ-ಪಕ್ಷಿಗಳನ್ನು ಕೊಲ್ಲುತ್ತಿದ್ದ. ಅರಮನೆಯಲ್ಲಿ ಪ್ರತಿ ದಿನವೂ ಮಾಂಸಾಹಾರ ಭೋಜನವಿರುತ್ತಿತ್ತು ಎಂದು ವರ್ಣಿಸುತ್ತದೆ.

ಆರಂಭದಲ್ಲಿ ಅಶೋಕನು ಸಾಮ್ರಾಜ್ಯ ವಿಸ್ತರಣಾ ನೀತಿಯನ್ನು ಅಳವಡಿಸಿಕೊಂಡಿದ್ದನು ಹಾಗೂ ವಿದೇಶಿ ರಾಜರೊಂದಿಗೆ ಸ್ನೇಹ ಸಂಬಂಧ ಏರ್ಪಡಿಸಿಕೊಂಡಿದ್ದನು.

ಕಳಿಂಗ ಯುದ್ಧ (ಕ್ರಿ.ಪೂ. ೨೬೧)

ಅಶೋಕನು ತನ್ನ ಆಡಳಿತಾವಧಿಯ ೧೩ನೆಯ ವರ್ಷದಲ್ಲಿ ಕಳಿಂಗ ಯುದ್ಧವನ್ನು ಮಾಡಿದನು. ಅಶೋಕನ ಕಳಿಂಗ ಶಾಸನ ಈ ಯುದ್ಧದ ಕುರಿತು ತಿಳಿಸುತ್ತದೆ. ಈ ಯೂದ್ಧವು ಭೀಕರವಾಗಿದ್ದು ಲಕ್ಷಾಂತರ ಜನರು ಕೊಲ್ಲಲ್ಪಟ್ಟರು, ಅಷ್ಟೇ ಪ್ರಮಾಣದಲ್ಲಿ ಗಾಯಗೊಂಡರು ಹಾಗೂ ಸೆರೆಸಿಕ್ಕರು. ಇದರಲ್ಲಿ ವಿಜಯಶಾಲಿಯಾದ ಅಶೋಕ ಕಳಿಂಗವನ್ನು ವಶಪಡಿಸಿಕೊಂಡು ತನ್ನ ರಾಜ್ಯದಲ್ಲಿ ವಿಲೀನಗೊಳಿಸಿ ಕೊಂಡನು. ಆದರೆ ಈ ಯುದ್ಧದಲ್ಲಾದ ಸಾವು-ನೋವುಗಳನ್ನು ನೋಡಿ ಪಶ್ಚಾತ್ತಾಪಪಟ್ಟು ದಿಗ್ವಿಜಯಗಳನ್ನು ಸಂಪೂರ್ಣವಾಗಿ ತ್ಯಜಿಸಿ ಅಲ್ಲಿಂದ ಮುಂದೆ ತನ್ನ ಆಡಳಿತಾವಧಿಯಲ್ಲಿ ಕೇವಲ ಧರ್ಮ ವಿಜಯವನ್ನು ಅಳವಡಿಸಿಕೊಂಡನು ಹಾಗೂ ಶಾಂತಿ-ಅಹಿಂಸೆಗಳಿಗೆ ಹೆಚ್ಚಿನ ಮಹತ್ವ ನೀಡಿದನು. ಇದರಿಂದ ಮಗಧ ರಾಜ್ಯದಲ್ಲಿ ದಿಗ್ವಿಜಯಗಳು ಮುಕ್ತಾಯಗೊಂಡು ಧರ್ಮ ವಿಜಯಗಳು” ಆರಂಭವಾದವು.

ಅಶೋಕನು ಕಳಿಂಗ ಯುದ್ಧದ ನಂತರ ಕೇವಲ ಧರ್ಮದ ನೀತಿಗಳ ಮೂಲಕ ವಿಶಾಲ ಸಾಮ್ರಾಜ್ಯವನ್ನು ಆಳ್ವಿಕೆ ಮಾಡಿದ್ದಲ್ಲದೆ ‘ಕಲ್ಯಾಣ ರಾಜ್ಯ’ವನ್ನು ಸ್ಥಾಪಿಸಿ ಶಾಂತಿ, ಅಹಿಂಸೆ, ಸಮೃದ್ಧ ರಾಜ್ಯವನ್ನು ನಿರ್ಮಿಸಿದ ಜಗತ್ತಿನ ಏಕೈಕ ಅರಸನಾಗಿದ್ದಾನೆ.

ಅಶೋಕನ ಉತ್ತರಾಧಿಕಾರಿಗಳು

ಪಂಚ್‌ಮಾರ್ಕ್ ನಾಣ್ಯಗಳನ್ನು ಅಧ್ಯಯಾನ ಮಾಡಿದಾಗ ಸುಮಾರು ೧೦ ಜನ ರಾಜರು ಅಶೋಕನ ನಂತರ ಮೌರ್ಯ ಸಾಮ್ರಾಜ್ಯವನ್ನು ಆಳಿದ್ದಾರೆ. ಅಶೋಕನಿಗೆ ಕುನಾಲ, ಜಲೂಕ, ಮಹೇಂದ್ರ ಮತ್ತು ತಿವರ ಎಂಬ ನಾಲ್ಕು ಜನ ಗಂಡು ಮಕ್ಕಳಿದ್ದರು. ಅದರಲ್ಲಿ ಕೊನೆ ಮಗನಾದ ತಿವರನು ಅಶೋಕನ ಜೀವಿತ ಕಾಲದಲ್ಲೇ ಮರಣ ಹೊಂದದನು. ಮಹೇಂದ್ರನು ಬೌದ್ಧಭಿಕ್ಷುವಾದನು. ಜಲೂಕನು ಪಶ್ಚಿಮ ಪ್ರಾಂತ್ಯದ ಆಡಳಿತಗಾರನಾದನು ಹಾಗೂ ಶಿವನ ಆರಾಧಕನಾದನು. ವಾಯು ಪುರಾಣದ ಪ್ರಕಾರ ಕುನಾಲನು ಅಶೋಕನ ಉತ್ತರಾಧಿಕಾರಿಯಗಿ ೮ ವರ್ಷ ಆಡಳಿತ ನಡೆಸಿದನು. ನಂತರ ಇವನ ಮಕ್ಕಳಾದ ದಶದ್ರಥ, ಸಂಪ್ರತಿ ಕ್ರಮವಾಗಿ ೮ ವರ್ಷಗಳು ಹಾಗೂ ೯ ವರ್ಷಗಳು ಆಳ್ವಿಕೆ ಮಾಡಿದರು. ಸಂಪ್ರತಿಯು ಜೈನ ಮತವಾಲಂಬಿಯಾಗಿ ಆವಂತಿ, ಪಶ್ಚಿಮ ಭಾರತ, ಪಾಟಲಿಪುತ್ರ, ಉಜೈನಿ ಪ್ರಾಂತ್ಯಗಳನ್ನು ಆಳಿದನು. ಸಂಪ್ರತಿಯ ನಂತರ ಬೃಹಸ್ಪತಿ, ದೇವವರ್ಮನ್‌ ಹಾಗೂ ಬೃಹದ್ರಥರು ಕ್ರಮವಾಗಿ ಆಳಿದರು. ಮೌರ್ಯರ ಕೊನೆಯ ದೊರೆ ಬೃಹದ್ರಥನ ಕಾಲದಲ್ಲಿ ದಂಡನಾಯಕನಾಗಿದ್ದ ಪುಷ್ಯ ಮಿತ್ರನು ಬೃಹದ್ರಥನನ್ನು ಕೊಂದು ಶುಂಗವಂಶದ ಆಳ್ವಿಕೆಯನ್ನು ಸ್ಥಾಪಿಸಿದನು.

ಮೌರ್ಯರ ಆಡಳಿತ

ಮೌರ್ಯರು ವಿಶಾಲವಾದ ಸಾಮ್ರಾಜ್ಯಕ್ಕೆ ಸಮರ್ಥವಾದ ಆಡಳಿತ ಪದ್ಧತಿಯನ್ನು ಜಾರಿಗೊಳಿಸಿದ್ದರು. ಇವರ ಆಡಳಿತ ಪದ್ಧತಿ ಕುರಿತ ಕೌಟಿಲ್ಯನ ಅರ್ಥಶಾಸ್ತ್ರ, ಮೆಗಾಸ್ತನೀಸನ ಇಂಡಿಕಾ, ಅಶೋಕನ ಶಾಸನಗಳು ಹಾಗೂ ಗ್ರೀಕರ ಕೃತಿಗಳು ಮಾಹಿತಿ ಒದಗಿಸುತ್ತದವೆ. ‘ಇಂಡಿಕಾ’ ಕೃತಿಯು ಅತ್ಯುತ್ತಮವಾದ ಮಾಹಿತಿ ನೀಡುತ್ತದೆ. ಅದೇ ರೀತಿ ಮೌರ್ಯರ ಆಡಳಿತ ಪದ್ಧತಿ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಕೌಟಿಲ್ಯನ ಅರ್ಥಶಾಸ್ತ್ರವು ನೀಡುತ್ತದೆ. ಈ ಆಧಾರಗಳಲ್ಲಿರುವಂತೆ ಮೌರ್ಯರ ಆಡಳಿತ ಪದ್ಧತಿಯು ಈ ಕೆಳಕಂಡಂತೆ ರಚನೆಯಾಗಿತ್ತು.

ಕೇಂದ್ರ ಸರ್ಕಾರ

ರಾಜನು ಆಡಳಿತ ಮುಖ್ಯಸ್ಥನಾಗಿದು ಅಪರವಾದ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಅಧಿಕಾರಗಳನ್ನು ಹೊಂದಿದ್ದನು. ಸೈನ್ಯದ ಮುಖ್ಯಸ್ಥನಾಗಿದ್ದು ಕೆಲವು ಪ್ರಮುಖ ಯುದ್ಧಗಳಲ್ಲಿ ಪಾಲ್ಗೊಳ್ಳುತ್ತಿದ್ದನು. ನ್ಯಾಯಾಂಗದ ಆಡಳಿತ ಅತಿ ಮುಖ್ಯವಾಗಿದ್ದು ಕೌಟಿಲ್ಯನು ಹೇಳುವಂತೆ “ರಾಜನು ನ್ಯಾಯ ವಿತರಣೆಯಲ್ಲಿ ತಡಮಾಡಕೂಡದು ಒಂದು ವೇಳೆ ಹಾಗೆ ಆದರೆ ಪ್ರಜೆಗಳು ಅತೃಪ್ತರಾಗುತ್ತಾರೆ. ಇದು ಶತ್ರುಗಳಿಗೆ ಅವಕಾಶಮಾಡಿಕೊಟ್ಟಂತೆ ಆಗುತ್ತದೆ.” ಅದಕ್ಕಾಗಿ ರಾಜನು ನ್ಯಾಯಾಂಗಕ್ಕೆ ಹೆಚ್ಚಿನ ಮಹತ್ವ ನೀಡಿದ್ದನು. ಶಾಸನಗಳನ್ನು, ರಾಜಾಜ್ಞೆಗಳನ್ನು ಹೊರಡಿಸುವುದು ರಾಜನ ಕರ್ತವ್ಯವಾಗಿತ್ತು. ಉದಾಹರಣೆಗೆ, ಅಶೋಕನ ಶಾಸನಗಳ ಪ್ರಕಾರ, ಮಂತ್ರಿಗಳು, ಪುರೋಹಿತರು, ಅಧಿಕಾರಿಗಳು ಮತ್ತು ಗೊಢಾಚಾರರನ್ನು ರಾಜನೇ ನೇಮಕ ಮಾಡುತ್ತಿದ್ದನು. ಸಾಮ್ರಾಜ್ಯದ ಖರ್ಚು-ವೆಚ್ಚಗಳನ್ನು ನೋಡಿಕೊಳ್ಳುವುದು ಸಹಿತ ರಾಜನೇಮಾಡುತ್ತಿದ್ದನು. ಆದಾಗ್ಯೂ ಸಂಪ್ರದಾಯದಂತೆ ಕಾನೂನು ರಚನೆಕಾರರು ರಚಿಸಿದ ಕಾನೂನಿನಂತೆ ಆಡಳಿತ ನಡೆಸುತ್ತಿದ್ದು ಆಡಳಿತದಲ್ಲಿ ’ಮಂತ್ರಿ ಪರಿಷತ್ತು’ ರಚಿಸಿಕೊಂಡು ಅದರ ಸಹಾಯದೊಂದಿಗೆ ಆಡಳಿತ ನಡೆಸುತ್ತಿದ್ದನು. ರಾಜನನ್ನು ಬಿಟ್ಟರೆ ನಂತರದ ಆಡಳಿತ ಮುಖ್ಯಸ್ಥ ಅಮಾತ್ಯ ಇವರು ನಾಗರಿಕರ ಆಡಳಿತದಲ್ಲಿ ರಾಜನಿಗೆ ಸಹಾಯ ಮಾಡುತ್ತಿದ್ದು, ಕೌಟಿಲ್ಯನೇ ಹೇಳುವಂತೆ “ರಾಜನು ರಥದ ಒಂದು ಚಕ್ರವಾದರೆ ಅಮಾತ್ಯನು ಮತ್ತೊಂದು ಚಕ್ರದಂತೆ” ಇವನು ಆಡಳಿತ, ಯುದ್ಧಗಳೆರಡರಲ್ಲೂ ರಾಜನಿಗೆ ನೆರವು ನೀಡುತ್ತಿದ್ದನು. ಇದಲ್ಲದೇ ಮಂತ್ರಿ ಪರಿಷತ್ತು ಸಹಿತ ಆಡಳಿತದಲ್ಲಿ ನೆರವು ನೀಡುತ್ತಿದ್ದು, ತುರ್ತು ಸಮಯದಲ್ಲಿ ಇದರ ಸಭೆ ಕರೆದು ರಾಜುನು ತೀರ್ಮಾನ ಕೈಗೊಳ್ಳುತ್ತಿದ್ದನು.

ನಾಗರಿಕ ಆಡಳಿತವನ್ನು ಸುಗಮವಾಗಿ ನಡೆಸಲು ಮೌರ್ಯರು ಇಡೀ ಆಡಳಿತವನ್ನು ೧೮ ವಿಭಾಗಗಳನ್ನಾಗಿ ವಿಭಜಿಸಿದ್ದರು. ಪ್ರತಿಯೊಂದು ವಿಭಾಗಕ್ಕೂ ಮೇಲ್ವಿಚಾರಕರಿದ್ದರು. ಅವರ ಸಹಾಯಕರಾಗಿ ಅನೇಕ ಜನ ನೌಕರರು ಇದ್ದರು. ಇವರನ್ನು ಪ್ರತಿಭೆಯ ಆಧಾರದ ಮೇಲೆ ನೇಮಕ ಮಾಡಲಾಗುತ್ತಿತ್ತು. ಜಾತಿ, ಧರ್ಮ, ರಾಷ್ಟ್ರೀಯತೆ ಭೇದ-ಭಾವ ಮಾಡದೆ ನೇಮಿಸುತ್ತಿದ್ದರು. ಕೆಲವು ಗ್ರೀಕರು ಕೂಡ ಆಡಳಿತ ಸೇವೆಯಲ್ಲಿದ್ದರು.

ಆ ಪ್ರಮುಖವಾದ ಆಡಳಿತ ವಿಭಾಗಗಳೆಂದರೆ,

೧. ಖಜಾನೆ, ೨. ಗಣಿ, ೩. ಬಂಗಾರ, ೪. ವಿದೇಶಾಂಗ, ೫. ವ್ಯಾಪಾರ ಮತ್ತು ವಾಣಿಜ್ಯ, ೬. ಸುಂಕ, ೭. ನೇಯ್ಗೆ, ೮. ಕೃಷಿ, ೯. ಮಧ್ಯಪಾನ, ೧೦. ವೇಶ್ಯಾವಾಟಿಕೆ, ೧೧. ಬಂದೀಖಾನೆ, ೧೨. ರಸ್ತೆ (ಮಾರ್ಗ), ೧೩. ಬಂದರು, ೧೪. ಕೈಗಾರಿಕೆ, ೧೫. ತೂಕ ಮತ್ತು ಅಳತೆ, ೧೬. ಅರಣ್ಯೋತ್ಪತ್ತಿ, ೧೭. ಶಸ್ತ್ರಾಗಾರ ಮುಂತಾದವುಗಳು.

ಒಟ್ಟಾರೆ ಆಡಳಿತವು ವ್ಯವಸ್ಥಿತವಾಗಿದ್ದು, ಕೌಟಿಲ್ಯ ಹೇಳುವಂತೆ ರಾಜ್ಯಕ್ಕೆ ಸಪ್ತಾಂಗಗಳು ಅವಶ್ಯಕ, ಅವುಗಳೆಂದರೆ, ೧. ರಾಜ, ೨. ಅಮಾತ್ಯ, ೩. ಕೋಶ (ಖಜಾನೆ), ೪. ಬಲ (ಸೇನೆ), ೫. ಜನಪದ (ಪ್ರಾಂತ್ಯ), ೬. ದುರ್ಗ (ಕೋಟೆ), ೭. ಮಿತ್ರ (ನೆರೆರಾಜ್ಯ) ಈ ರೀತಿಯಾಗಿ ಕೇಂದ್ರ ಸರ್ಕಾರದ ಆಡಳಿತವನ್ನು ರಚಿಸಿದ್ದರು.

ಪ್ರಾಂತೀಯ ಆಡಳಿತ

ಮೌರ್ಯರು ಆಡಳಿತವನ್ನು ಕೇಂದ್ರ ಸರ್ಕಾರದಿಂದ ಮಾತ್ರ ನಿಯಂತ್ರಿಸದೇ ಆಡಳಿತದ ಅನುಕೂಲಕ್ಕಾಗಿ ಅನೇಕ ಪ್ರಾಂತ್ಯಗಳನ್ನಾಗಿ ವಿಭಜಿಸಿದ್ದರು. ಅಲ್ಲಿ ಪ್ರತ್ಯೇಕವಾದ ಆಡಳಿತ ರಚಿಸಿದ್ದರು. ಈ ಪ್ರಾಂತ್ಯಗಳು ಒಬ್ಬ ರಾಜನಿಂದ ಮತ್ತೊಬ್ಬ ರಾಜನ ಕಾಲಕ್ಕೆ ವ್ಯತ್ಯಾಸವಿದ್ದವು. ಚಂದ್ರಗುಪ್ತ ಮೌರ್ಯನ ಕಾಲದಲ್ಲಿದ್ದ ಪ್ರಾಂತ್ಯಗಳ ಸಂಖ್ಯೆ ಬಗ್ಗೆ ಮಾಹಿತಿ ಇಲ್ಲ. ಆದರೆ ಅಶೋಕನ ಕಾಲದಲ್ಲಿ ತಕ್ಷಶಲೆ (ವಾಯುವ್ಯ ಪ್ರಾಂತ್ಯ) ಉಜೈನಿ (ಪಶ್ಚಿಮ ಭಾಗ), ಪಾಟಲಿಪುತ್ರ (ಪೂರ್ವಪ್ರಾಂತ್ಯ), ಸುವರ್ಣಗಿರಿ (ದಕ್ಷಿಣ ಪ್ರಾಂತ್ಯ) ಎಂಬ ಪ್ರಾಂತ್ಯಗಳಿದ್ದವು. ಪ್ರಾಂತೀಯ ಆಡಳಿತದ ಮುಖ್ಯಸ್ಥನನ್ನು ‘ಕುಮಾರ’ ಅಥವಾ ರಾಜ್ಯಪಾಲ ಎಂದು ಕರೆಯುತ್ತಿದ್ದರು. ಈ ರಾಜ್ಯಪಾಲರನ್ನಾಗಿ ಸಾಮಾನ್ಯವಾಗಿ ರಾಜ ಪರಿವಾರದವರನ್ನೇ ನೇಮಕ ಮಾಡಳಾಗುತ್ತಿತ್ತು. ಪ್ರಾಂತ್ಯದ ಆಡಳಿತವು ಕೇಂದ್ರ ಸರ್ಕಾರದಂತೆ ಇದ್ದು, ಕೆಲವು ವಿಷಯಗಳಲ್ಲಿ ಸ್ವಯಂ ಆಡಳಿತ ಹೊಂದಿತ್ತು. ರಾಜ್ಯಪಾಲರ ಪ್ರಮೂಖ ಕರ್ತವ್ಯಗಳೆಂದರೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ತೆರಿಗೆ ವಸೂಲಿ ಮಾಡುವುದು, ಪ್ರಾಮತ್ಯದ ಆಗು ಹೋಗುಗಳ ಕುರಿತು ರಾಜನಿಗೆ ಮಾಹಿತಿ ನೀಡುವುದು ಮುಂತಾದವುಗಳು. ಕೆಂದ್ರ ಸರ್ಕಾರದಂತೆ ಪ್ರಾಂತೀಯ ಆಡಳಿತವೂ ಸಹ ಮಂತ್ರಿ ಪರಿಷತ್ತು ಹೊಂದಿದ್ದು ಅವರು ಆಡಳಿತದಲ್ಲಿ ನೆರವು ನೀಡುತ್ತಿದ್ದರು.

ಪ್ರಾಂತ್ಯಗಳನ್ನು ಆಡಳಿತದ ಅನುಕೂಲಕ್ಕಾಗಿ ವಿಂಡಿಸಲಾಗಿತ್ತು. ಅದರ ಮುಖ್ಯಸ್ಥನನ್ನು ಸ್ಥಾನಿಕ ಎಂದು ಕರೆಯುತ್ತಿದ್ದರು. ಇವನು ಕಾನೂನು ಮತ್ತು ಶಿಸ್ತು ಪರಿಪಾಲನೆ ಮಾಡುವುದು, ಕಂದಾಯ ವಸೂಲಿ ಮಾಡುವುದು ಮುಂತಾದ ಕರ್ತವ್ಯಗಳನ್ನು ಮಾತ್ತಿದ್ದನು. ಆಡಳಿತದಲ್ಲಿ ಸಹಾಯಕರಾಗಿ ಯುಕ್ತರು ಉಪಯುಕ್ತರು ಎಂಬ ಅಧಿಕಾರಿಗಳಿದ್ದರು.

ಗ್ರಾಮಾಡಳಿತ ಗ್ರಾಮವು ಆಡಳಿತದ ಸಣ್ಣ ಘಟಕವಾಗಿತ್ತು. ಇದು ಸ್ವಯಂ ಆಡಳಿತವನ್ನು ಹೊಂದಿದ್ದು. ಇದರ ಮುಖ್ಯಸ್ಥನನ್ನು ಗ್ರಾಮಕ ಎಂದು ಕರೆಯುತ್ತಿದ್ದರು. ಇವನು ಹಳ್ಳಿಯವರಿಂದಲೇ ಚುನಾಯಿತನಾಗುತ್ತಿದ್ದನು. ಗ್ರಾಮದ ಕಂದಾಯ ವಸೂಲಿ, ಕಾನೂನು ಶಿಸ್ತು ಪರಿಪಲಿಸುವುದು ಗ್ರಾಮಿಕನ ಕರ್ತವ್ಯಗಳಾಗಿದ್ದವು. ಗೋಪ ಎಂಬ ಸರ್ಕಾರದಿಂದ ನೇಮಕವಾದ ಮತ್ತೊಬ್ಬ ಅಧಿಕಾರಿಯು ಇದ್ದು ಹಳ್ಳಿ ಹಳ್ಳಿಗಳ ನಡುವಿನ ಗಡಿ ವಿವಾದ ಬಗೆಹರಿಸುವುದು, ಹಳ್ಳಿಗಳ ವಿವಾದ ಬಗೆಹರಿಸುವುದನ್ನು ಮಾಡುತ್ತಿದ್ದನು.

ನಗರಾಡಳಿತ ಮೆಗಾಸ್ತನೀಸನು ಮೌರ್ಯ ಕಾಲದ ನಗರಾಡಳಿತ ಕುರಿತು ಉಪಯುಕ್ತ ಮಾಹಿತಿ ನೀಡಿದ್ದಾನೆ. ಅವನ ಪ್ರಕಾರ ಮೌರ್ಯರು ಅತ್ಯಂತ ಮುಂದುವರೆದ ನಗರಾಡಳಿತವನ್ನು ರಚಿಸಿದ್ದರು. ನಗರದ ಆಡಳಿತವನ್ನು ನೋಡಿಕೊಳ್ಳಲು ೩೦ ಜನರ ಮಂಡಳಿ ಇತ್ತು. ಆ ಮಂಡಳಿಯಲ್ಲಿ ೬ ಸಮಿತಿಗಳಿದ್ದವು. ಪ್ರತಿ ಸಮಿತಿಯಲ್ಲೂ ೫ ಜನ ಸದಸ್ಯರಿದ್ದರು. ಆ ಸಮಿತಿಗಳೆಂದರೆ,

೧. ಗುಡಿಕೈಗಾರಿಕೆ ಮತ್ತು ವಸ್ತು ಉತ್ಪಾದನೆ ಸಮಿತಿ : ಇದು ವಸ್ತುಗಳ ಉತ್ಪಾದನೆ ಮತ್ತು ಕೆಲಸಗಾರರ ಯೋಗಕ್ಷೇಮ ನೋಡಿಕೊಳ್ಳಬೇಕಾಗಿತ್ತು.

೨. ವಿದೇಶಿಯರ ಯೋಗಕ್ಷೇಮ ಸಮಿತಿ: ವಿದೇಶಿಯರು ಬಂದಾಗ ಅವರನ್ನು ಆಹ್ವಾನಿಸುವುದು, ವಸತಿ, ಊಟ, ರಕ್ಷಣೆ ನೋಡಿಕೊಳ್ಳಬೇಕಾಗಿತ್ತು. ಒಂದು ವೇಳೆ ವಿದೇಶಿಯರು ಮರಣ ಹೊಂದಿದರೆ ಅವರ ಶವ ಸಂಸ್ಕಾರದ ಏರ್ಪಾಡು ಮಾಡಬೇಕಾಗಿತ್ತು.

೩. ಜನನ ಮರಣಗಳ ಸಮಿತಿ: ಇದು ಜನನ ಮರಣಗಳ ಲೆಕ್ಕ ಪತ್ರವನ್ನು ದಾಖಲಿಸಬೇಕಾಗಿತ್ತು.

೪. ವ್ಯಾಪಾರ ಮತ್ತು ವಾಣಿಜ್ಯ ಸಮಿತಿ: ತೂಕ, ಅಳತೆ, ವಸ್ತುಮಾರಾಟದ ಉಸ್ತುವಾರಿ ನೋಡಿಕೊಳ್ಳಬೇಕಿತ್ತು.

೫. ವಸ್ತುಗಳ ಮೇಲ್ವಿಚಾರಣಾಸಮಿತಿ: ವಸ್ತುಗಳ ಗುಣಮಟ್ಟ ಹಳೆ ಮತ್ತು ಹೊಸ ಸರಕುಗಳ ಕಲಬೆರಕೆಯಾಗದಂತೆ ನೋಡಿಕೊಳ್ಳಬೇಕಾಗಿತ್ತು. ಒಂದು ವೇಳೆ ಯಾರಾದರೂ ಕಲಬೆರಕೆ ಮಾಡಿದರೆ ಅಂತಹವರಿಗೆ ಶಿಕ್ಷೆ ನೀಡುವ ಅಧಿಕಾರ ಹೊಂದಿತ್ತು.

೬. ಕರ ವಸೂಲಾತಿ ಸಮಿತಿ: ಇದು ಸುಂಕ ವಸೂಲಿ ಮಾಡುವುದು, ಮಾರಟವಾಗುವ ವಸ್ತುಗಳ ಬೆಲೆ ನಿರ್ಧರಿಸುವುದು ಮುಂತಾದುವುಗಳನ್ನು ನಿರ್ಧರಿಸುತ್ತಿತ್ತು.

ಈ ರೀತಿ ಆಡಳಿತ ವ್ಯವಸ್ಥೆ ಇದ್ದು, ಪಟಲಿಪುತ್ರ ನಗರದಲ್ಲೂ ಸ್ಪಷ್ಟವಾಗಿ ಅಳವಡಿಸಿದ್ದರು. ಇದೇ ಆಡಳೀತ ಇತರ ನಗರಗಳಲ್ಲೂ ಅಥವಾ ಪ್ರಾಂತದ ರಾಜಧಾನಿಗಳಲ್ಲಿ ಇದ್ದಿರಬಹುದು.

ನ್ಯಾಯಾಡಳಿತ ಕೌಡಟಿಲ್ಯನ ಅರ್ಥಶಾಸ್ತ್ರವು ತಿಳಿಸುವಂತೆ ಮೌರ್ಯರು ವ್ಯವಸ್ಥಿತವಾದ ನ್ಯಾಯಾಂಗ ಪದ್ದತಿ ಜಾರಿಗೊಳಿಸಿದರು. ರಾಜನು ನ್ಯಾಯಾಂಗದ ಮುಖ್ಯಸ್ಥರಾಗಿದ್ದು, ಶೋಘ್ರಾಗಿ ವಿವಾದಗಳನ್ನು ಬಗೆಹರಿಸಲು ಪ್ರಾಮುಖ್ಯತೆ ನೀಡಲಾಗಿತ್ತು. ಮೌರ್ಯರ ಕಾಲದಲ್ಲಿ ಎರಡು ರೀತಿಯ ನ್ಯಾಯಾಲಯಗಳಿದ್ದವು. ಅವುಗಳೆಂದರೆ,

೧. ಧರ್ಮಸ್ತೀಯ (ಸಿವಿಲ್ ನ್ಯಾಯಾಲಯಗಳು): ಇದು ವಿವಾಹ, ವಿವಾದ ಮುಂತಾದವುಗಳನ್ನು ವಿಚಾರಣೆ ಮಾಡುತ್ತಿತ್ತು.

೨. ಕಂಠಕ ಶೋಧನಾ (ಕ್ರಿಮಿನಲ್ ನ್ಯಾಯಾಲಯಗಳು): ಕಳ್ಳತನ, ಕೊಲೆ, ದರೋಡೆ, ವಿಶ ಪ್ರಯೋಗ, ಖೋಟಾನಾಣ್ಯ, ರಾಜದ್ರೋಹ, ದಂಗೆ, ರಾಜನ ವಿರುದ್ದ ಪಿತೂರಿ ಮುಂತಾದವುಗಳ ವಿಚಾರಣೆ ಮಡುತ್ತಿತ್ತು.

ಪ್ರತಿ ನ್ಯಾಯಾಲಯವು ಮೂರು ಜನ ನ್ಯಾಯಾಧೀಶರನ್ನು ಹಾಗು ಮೂವರು ಅಯುಕ್ತರನ್ನು ಹೊಂದಿತ್ತು. ಪ್ರಾಂತ್ಯ, ಜಿಲ್ಲೆ ಮತ್ತು ಗ್ರಾಮಗಳಲ್ಲಿ ಪ್ರತ್ಯೇಕವಾದ ನ್ಯಾಯಾಂಗ ವ್ಯವಸ್ಥೆಯಿದ್ದಿತ್ತು. ಗ್ರಾಮಗಳಲ್ಲಿ ಗ್ರಾಮ ಪಂಚಾಯತಿಗಳು ನ್ಯಾಯಾಂಗ ಕೆಲಸ ನಿರ್ವಹಿಸುತ್ತಿದ್ದವು. ತೀರ್ಪನ್ನು ನೀಡುವಾಗ ಶಾಸ್ತ್ರಗಳು, ಪುರಾಣಗಳು, ಸಂಪ್ರದಾಯಗಳನ್ನು ಅನುಸರಸಲಾಗುತ್ತಿತ್ತು. ಈ ಕಾಲದಲ್ಲಿ ಅಪರಾಧಕ್ಕೆ ತಕ್ಕಂತೆ ಶಿಕ್ಷೆ ವಿಧಿಸಲಾಗುತ್ತಿತ್ತು. ಅವುಗಳೆಂದರೆ, ಮರಣದಂಡನೆ, ಚಿತ್ರಹಿಂಸೆ, ದಂಡ, ಸೆರೆಮನೆವಾಸ, ಆಸ್ತಿ, ಮುಟ್ಟುಗೋಲು ಮುಂತಾದವು.‌

ಸೈನ್ಯಾಡಳಿತ

ಮೌರ್ಯರ ಸಾಮ್ರಾಜ್ಯ ಸ್ಥಾಪನೆ ಮತ್ತು ವಿಸ್ತರಣೆಯಲ್ಲಿ ಸೈನ್ಯವು ಪ್ರಮುಖ ಪಾತ್ರ ವಿಹಿಸಿತ್ತು. ಅದಕ್ಕಾಗಿ ಮೌರ್ಯರು ಸೈನ್ಯ ಸಂಘಟನೆಗೆ ಹೆಚ್ಚು ಗಮನ ನೀಡಿದ್ದು, ಬೃಹತ್‌ ಸೈನ್ಯವನ್ನು ಹೊಂದಿದ್ದರು. ಸೈನ್ಯಾಡಳಿತ ನೋಡಿಕೊಳ್ಳಲು ೩೦ ಜನರ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಗಳಲ್ಲಿ ಐದೈದು ಜನರನ್ನೊಳಗೊಂಡ ಆರು ಮಂಡಳಿಗಳಿದ್ದವು. ಅವುಗಳೆಂದರೆ,

೧. ಪದಾತಿ ಪಡೆಯ ಸಮಿತಿ

೨. ನೌಕಾಪಡೆ ಸಮಿತಿ

೩. ಅಶ್ವಪಡೆಯ ಸಮಿತಿ

೪. ರಥಗಳ ಸಮಿತಿ

೫. ಗಜದಳದ ಸಮಿತಿ

೬. ಸಂಚಾರ-ಸಾರಿಗೆ ಸಮಿತಿ

ಅರಸನು ಸೈನ್ಯದ ಪರಮೊಚ್ಚ ದಂಡನಾಯಕವಾಗಿದ್ದನು. ಸೈನ್ಯದಲ್ಲಿ ದಂಡನಾಯಕರನ್ನು ನೇಮಿಸಲಾಗಿತ್ತು. ಗ್ರೀಕಿನ ಬರಹಗಾರ ಪ್ಲೀನಿ ಪ್ರಕಾರ ಚಂದ್ರಗುಪ್ತ ಮೌರ್ಯನ ಸೈನ್ಯದ ಸಂಖ್ಯೆ ಈ ಕೆಳಗಿನಂತೆ ಇತ್ತು.

೧. ಕಾಲ್ದಳ – ೬,೦೦,೦೦೦

೨. ಅಶ್ವದಳ – ೩೦,೦೦೦

೩. ಗಜದಳ – ೯,೦೦೦

ಮತ್ತೊಂದು ಮೂಲದ ಪ್ರಕಾರ ಯುದ್ಧ ರಥಗಳು-೮,೦೦೦ ಇದ್ದುದಾಗಿ ತಿಳಿದು ಬರುತ್ತದೆ. ಒಟ್ಟಾರೆ ಮೌರ್ಯರು ಬೌಹತ್‌ಪ್ರಮಾಣದ ಸೈನ್ಯವನ್ನು ಹೊಂದಿದ್ದರು. ಅಶೋಕನು ಸತ್ಯ, ಶಾಂತಿ- ಅಹಿಂಸೆ, ಧರ್ಮವನ್ನು ಪಾಲಿಸುತ್ತಿದ್ದರೂ ಸೈನ್ಯವನ್ನು ಕಡಿತಗೊಳಿಸಿರಲಿಲ್ಲ.

ಗೂಢಾಚಾರ ವ್ಯವಸ್ಥೆ

ಕೌಟಿಲ್ಯನು ಹೇಳುವಂತೆ ಗೂಢಾಚಾರರು ಅರಸನ ಕಣ್ಣುಗಳು ಹಾಗೂ ಕಿವಿಗಳಿದ್ದಂತೆ. ಇವರು ದಕ್ಷ ಗೂಢಾಚಾರರ ವ್ಯವಸ್ಥೆ ಹೊಂದಿದ್ದು, ಗುಪ್ತಚಾರರು ರಾಜ್ಯದಲ್ಲಿ ನಡೆಯುವ ಚಟುವಟಿಕೆಗಳು, ಹೊರ ರಾಜ್ಯಗಳ ಬಗ್ಗೆ ಮಾಹಿತಿ, ರಾಣಿಯರ, ಮಂತ್ರಿಯರ, ಅಧಿಕಾರಿಗಳ ಚಟುವಟಿಕೆಗಳನ್ನು ಅರಸನಿಗೆ ಗುಪ್ತವಾಗಿ ತಿಳಿಸುತ್ತಿದ್ದರು. ಕೌಟಿಲ್ಯನು “ಸನ್ಯಾಸಿಗಳು, ವ್ಯಾಪಾರಿಗಳು, ಹಾವಾಡಿಗರು, ಭಿಕ್ಷುಕರು, ವೇಶ್ಯೆಯರು ಮುಂತಾದವರನ್ನು ಗೂಢಾಚಾರ ಕೆಲಸಕ್ಕೆ ಬಲಶಿಕೊಳ್ಳಬೇಕು” ಎಂದು ಹೇಳಿದ್ದಾನೆ.

ಕಂದಾಯಾಡಳಿತ

ಮೌರ್ಯರು ಅಪಾರ ಪ್ರಮಾಣದ ಸಂಪತ್ತನ್ನು ಖಜಾನೆಯಲ್ಲಿ ಶೇಖರಿಸಿದ್ದರು. ಕ್ರಮಬದ್ಧವಾದ ಕಂದಾಯಾಡಳಿತ ರೂಪಿಸುವುದರ ಮೂಲಕ ಈ ಸಂಪತ್ತನ್ನು ಶೇಖರಿಸಿದ್ದರು. ಇವರು ವಿವಿಧ ಮೂಲಗಳಿಂದ ಆದಾಯ ಸಂಗ್ರಹಿಸುತ್ತಿದ್ದರು. ಅವುಗಳಲ್ಲಿ ಭೂ ಕಂದಾಯವೇ ಪ್ರಮುಖ ಆದಾಯದ ಮೂಲವಾಗಿತ್ತು. ಸಾಮಾನ್ಯವಾಗಿ ೧/೬ ರಿಂದ ೧/೨ ಭಾಗದಷ್ಟು ಭೂಕಂದಾಯ ವಸೂಲಿ ಮಾಡುತ್ತಿದ್ದರು. ಹಾಗೂ ರಾಜ್ಯದ ಒಡೆತನದಲ್ಲಿದ್ದ ಭೂಮಿಯಿಂದಲೂ ಆದಾಯ ಬರುತ್ತಿತ್ತು. ಇದಲ್ಲದೇ ಅರಣ್ಯ ಉತ್ಪನ್ನ, ಮಾರಾಟದ ವಸ್ತುಗಳ ಮೇಲೆ ವಿಧಿಸುತ್ತಿದ್ದ ಸುಂಕ, ಸರಕುಗಳ ಮೇಲೆ ಸುಂಕ ರಫ್ತು –ಆಮದಿನ ಸುಂಕ, ದಂಡಗಳು, ಗಣಿ ಮಧ್ಯಪಾನದ ಮೇಲೆ ಸುಂಕ, ಜೂಜಾಟದ ಮೇಲಿನ ಸುಂಕ ಮುಂತಾದವುಗಳಿಂದ ಆದಾಯ ಬರುತ್ತಿತ್ತು.

ಅಶೋಕನ ಧರ್ಮ

ಅಶೋಕನು ಕಳಿಂಗ ಯುದ್ಧದಲ್ಲಿ (ಕ್ರಿ.ಪೂ. ೨೬೧) ವಿಜಯ ಸಾಧಿಸಿದ ನಂತರ ಆ ಯುದ್ಧದಲ್ಲಾದ ಸಾವು ನೋವಿನಿಂದ ಮನನೊಂದು ದಿಗ್ವಿಜಯಗಳನ್ನು ಸಂಪೂರ್ಣವಾಗಿ ತ್ಯಜಿಸಿ ಧರ್ಮ ವಿಜಯನ್ನು  ಕೈಗೊಂಡು ಸಾಮ್ರಾಜ್ಯವನ್ನು ಧರ್ಮದ ತಳಹದಿಯ ಮೇಲೆ ಆಳ್ವಕೆ ಮಾಡತೊಡಗಿದನು. ಅವನು ಕಳಿಂಗ ಯುದ್ಧದ ನಂತರ ಬೌದ್ಧ ಧರ್ಮದ ಪ್ರಭಾವದಿಂದ ಈ ನೀತಿಯನ್ನು ಅನುಸರಿಸುತ್ತಾನೆ ಎಂದು ಕೆಲವು ಇತಿಹಾಸಕಾರರ ವಾದವಾಗಿದೆ. ಒಂದೊಮ್ಮೆ ಹಾಗಿದ್ದರೂ ಕೂಡ ಅವನು ಬೌದ್ಧ ಧರ್ಮವನ್ನು ತನ್ನ ಆಳ್ವಿಕೆಗೆ ಸರಿಹೊಂದುವಂತೆ ಮಾರ್ಪಡಿಸಿ ಕಲ್ಯಾಣ ರಾಜ್ಯವನ್ನು ಕಟ್ಟಲು ಪ್ರಯತ್ನಿಸಿದನು. ಅಶೋಕನು ಪ್ರಚಾರ ಮಾಡಿದ ಧರ್ಮವು ಪೂರ್ಣವಾಗಿ ಬೌದ್ಧಧರ್ಮವಾಗಿರದೆ ಅದು ಅಶೋಕನ ಧರ್ಮವಾಗಿತ್ತು.

ಅಶೋಕನು ತನ್ನನ್ನು ಪ್ರಿಯದರ್ಶಿ, ದೇವಾನಂಪಿಯ ಅಂದರೆ ದೇವರಿಗೆ ಪ್ರಿಯವಾದವನು ಎಂದು ಕರೆದುಕೊಂಡು ಶಾಸನಗಳು, ರಾಜಾಜ್ಞೆಗಳು ಹಾಗೂ ಅಧಿಕಾರಿಗಳ ಮೂಲಕ ತನ್ನ ಧರ್ಮವನ್ನು ಜಾರಿಗೊಳಿಸಿದ್ದನು. ಅಶೋಕನ ಧರ್ಮದ ಕುರಿತು ರೊಮಿಲಾ ಥಾಪರ್ ಅವರು ಇದೊಂದು ರಾಜನೀತಿ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ. ‘ಧರ್ಮ ಎಂಬ ಪದದ ಪ್ರಾಕೃತ ರೂಪ ‘ಧಮ್ಮ,’ ಸಾಮಾಜಿಕ ಹಾಗೂ ಧಾರ್ಮಿಕ ವ್ಯವಸ್ಥೆ ಎಂಬ ಅರ್ಥವನ್ನು ಧರ್ಮ ಹೊಂದಿದ್ದರೂ ಕೂಡ ಅಶೋಕನ ಧಮ್ಮ ಇನ್ನೂ ವಿಶಾಲಾರ್ಥದಲ್ಲಿ ಬಳಸಲ್ಪಟ್ಟಿದೆ. ಸಾಮಾಜಿಕ ಹೊಣೆಗಾರಿಕೆ ಮತ್ತು ಒಬ್ಬನ ಸಂಗಡ ಇನ್ನೊಬ್ಬರ ನಡತೆಗಳು ಬಹಳ ಮಹತ್ವಪೂರ್ಣ ಎಂದು ಪರಿಗಣಿಸಲಾದ ಒಂದು ಮನೋಭಾವವನ್ನು ಸೃಪ್ಟಿಸುವುದು ಧಮ್ಮದ ಉದ್ದೇಶವಾಗಿತ್ತು. ಅಶೋಕನ ಧಮ್ಮದ ತಿರುಳು, ಸಹಿಷ್ಣುತೆ, ಅಹಿಂಸೆ ಮತ್ತು ಪ್ರಜಾ ಕಲ್ಯಾಣಗಳಿಂದ  ಕೂಡಿತ್ತು.

ಅಶೋಕನ ಧರ್ಮದ ಮುಖ್ಯ ಲಕ್ಷಣಗಳು

ಅಶೋಕನ ಧರ್ಮದ ಲಕ್ಷಣಗಳನ್ನು ಕುರಿತು ಶಿಲಾಶಾಸನಗಳು, ಗೌಣ ಶಿಲಾಶಾಸನಗಳು, ಸ್ಥಂಭ ಶಾಸನಗಳು ಹಾಗೂ ಶ್ರೀಲಂಕಾದ ದ್ವೀಪ ವಂಶ, ಮಹಾವಂಶ ಕೃತಿಗಳು ಮಾಹಿತಿ ಒದಗಿಸುತ್ತವೆ. ಅವುಗಳಂತೆ ಅಶೋಕನ ಧರ್ಮವು ಈ ಕೆಳಕಂಡ ಲಕ್ಷಣಗಳಿಂದ ಕೂಡಿದೆ:

ಪ್ರಾಣಿ ವಧೆ ಹಾಗೂ ಧಾರ್ಮಿಕ ಉತ್ಸವಗಳು ನಿಷೇಧ

ಗಿರಿನಾರ್ ಶಿಲಾ ಶಾಸನದಲ್ಲಿ ಕ್ರಿ.ಪೂ. ೨೫೭ ಈ ರೀತಿ ಹೇಳಿದೆ. “ಯಾವ ಪ್ರಾಣಿಯನ್ನಾಗಲಿ ಜೀವಿಗಳನ್ನಾಗಲಿ ಕೊಲ್ಲಕೂಡದು ಹಾಗೂ ಬಲಿ ಕೂಡಕೂಡದು. ಮೊದಲು ಅಶೋಕನ ಅರಮನೆಯ ಪಾಕಶಾಲೆಯಲ್ಲಿ ಸಾವಿರಾರು ಪ್ರಾಣಿಗಳನ್ನು ಅಡುಗೆಗಾಗಿ ಕೊಲ್ಲುತ್ತಿದ್ದರು. ಆದರೆ ಈಗ ಮೂರು ಪ್ರಾಣಿಗಳನ್ನು ಎರಡು ನವಿಲು ಹಾಗೂ ಒಂದು ಜಿಂಕೆಯನ್ನು ಮಾತ್ರ ಕೊಲ್ಲಲಾಗುತ್ತಿದೆ. ಭವಿಷ್ಯದಲ್ಲಿ ಇವುಗಳನ್ನು ಕೊಲ್ಲುವುದನ್ನು ನಿಲ್ಲಿಸಲಾಗುವುದು.” ಇದರಂತೆ ಅಶೋಕನು ಹಬ್ಬಗಳ ಉತ್ಸವಗಳನ್ನು ನಿಷೇಧಸಿದನು (ಅವುಗಳನ್ನು ಸಮಾಜ್‌ ಎಂದು ಕರೆಯುತ್ತಿದ್ದರು). ಏಕೆಂದರೆ ಇವುಗಳಲ್ಲಿ ಮಾಂಸಾಹಾರ, ಮಧ್ಯಪಾನ ಹಾಗೂ ಐಷಾರಾಮದ ಪದಾರ್ಥ ಪಾನೀಯಗಳನ್ನು ಸೇವಿಸುತ್ತಿದ್ದರು. ಅಂಥವುಗಳ ಬದಲಾಗಿ ಕೇವಲ ಧಾರ್ಮಿಕ ಸಂವಾದಗಳ ಸಭೆಗಳಿಗೆ ಮಾತ್ರ ಅವಕಾಶ ನೀಡಿದನು.

ಪ್ರಜಾ ಕಲ್ಯಾಣದ ಕಾರ್ಯಗಳು

ಪ್ರಜೆಗಳ ಯೋಗಕ್ಷೇಮ ಮತ್ತು ಕಲ್ಯಾಣಕ್ಕಾಗಿ ಅನೇಕ ಪ್ರಜಾಹಿತ ಕಾರ್ಯಗಳನ್ನು ತನ್ನ ರಾಜ್ಯದಲ್ಲಿ ಹಾಗೂ ನೆರೆಯ ರಾಜ್ಯಗಳಲ್ಲಿ ಕೈಗೊಂಡಿದ್ದನು. ಅವುಗಳೆಂದರೆ ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ಆಸ್ಪತ್ರೆಗಳ ನಿರ್ಮಾಣ, ಔಷಧಗಿಡಗಳ ಬೆಳೆಸುವುದು, ಹೆದ್ದಾರಿಗಳನ್ನು ನಿರ್ಮಿಸಿ ಎರಡೂ ಪಕ್ಕದಲ್ಲಿ ಸಾಲು ಮರಗಳನ್ನು ಮುಖ್ಯವಾಗಿ ಹಣ್ಣು ಬಿಡುವ ಮರಗಳನ್ನು ಬೆಳೆಸುವುದು, ನೀರಿಗಾಗಿ ಬಾವಿಗಳ ನಿರ್ಮಾಣ, ಅನ್ನಛತ್ರ, ಅರವಟಿಕೆಗಳ ಪ್ರಾರಂಭಿಸಿದುದು ಮುಂತಾದವುಗಳು. ಇವುಗಳನ್ನು ಪಕ್ಕದ ಈ ಕೆಳಗಿನ ರಾಜ್ಯಗಳಲ್ಲೂ ಮಾಡಿದನು.

೧. ತಾಮ್ರಪಣಿ ಸಿಲೋನ್‌
೨. ಚೋಳ ದೇಶ ತಂಜಾವೂರು-ಮಧುರೆ ಪ್ರದೇಶ
೩. ಪಾಂಡ್ಯ ತಿರುವನವ್ವೇಲಿ (ತಮಿಳುನಾಡು)
೪. ಸತಿಯ ಪುತ್ತ ಉತ್ತರ ಮಲಬಾರ್
೫. ಕೇರಳ ಪುತ್ತ ದಕ್ಷಿಣ ಮಲಬಾರ್ (ತಿರುವಾಂಕೂರು)
೬. ೨ನೇ ಆಂಟಿಕೋಸ್‌ನ ರಾಜ್ಯ ಸಿಂಧೂ ದೇಶ ಮುಂತಾದವು. (ಗಿರಿನಾನ ಬಂಡೆ ಶಾಸನ ಕ್ರ. ಪೂ. ೨೫೭)

ಪ್ರಜೆಗಳ ಯೋಗಕ್ಷೇಮವನ್ನು ಅಶೋಕನು ಹೇಗೆ ವಿಚಾರಿಸುತ್ತಿದ್ದ ಎಂಬುದಕ್ಕೆ ಗಿರಿನಾನ ೬ನೇಯ ಬಂಡೆಗಲ್ಲು ಶಾಸನವು ಮತ್ತು ಕಳಿಂಗ ಶಾಸನ ಈ ರೀತಿ ತಿಳಿಸುತ್ತದೆ. “ಪ್ರಜೆಗಳು ತನ್ನ ಮಕ್ಕಳಿದ್ದ ಹಾಗೆ” ಎನ್ನುವ ಶಾಸನವು,

ಅವರು ಎಲ್ಲ ಸಮಯದಲ್ಲೂ, ನಾನು ಊಟ ಮಾಡುತ್ತಿರಲಿ, ಅರಮನೆಯಲ್ಲಿರಲಿ, ರಾಣಿಯರ ಕೋಣೆಯಲ್ಲಿರಲಿ, ಮಲಗುವ ಕೋಣೆಯಲ್ಲಿರಲಿ, ರಥದಲ್ಲಿರಲಿ, ಉದ್ಯಾನವನದಲ್ಲಿರಲಿ, ಪಲ್ಲಕ್ಕಿಯಲ್ಲಿರಲಿ ಪ್ರಜೆಗಳೂ ತಮ್ಮ ಸಮಸ್ಯೆಗಳನ್ನು ನಿವೇದಿಸಿಕೊಂಡರೆ ತಾನು ಅವುಗಳನ್ನು ಪರಿಗರಿಸುತ್ತೇನೆ. ಪ್ರಜೆಗಳ ಕಲ್ಯಾಣವೇ ನನ್ನ ಆದ್ಯ ಕರ್ತವ್ಯ, ಪ್ರಜೆಗಳ ಸೇವೆಗಳಿಗಿಂತ ಮಿಗಿಲದ ಕಾರ್ಯ ಮತ್ತೊಂದು ಇಲ್ಲ. ಅವರ ಸಂತೋಷಕ್ಕಾಗಿ ನಾನು ನಿಸ್ಪಕ್ಷಪಾತವಾಗಿ ಎಲ್ಲಾ ಪ್ರಜೆಗಳ ಸೇವೆಯನ್ನು ಮಾಡುತ್ತೇನೆ. ಹಾಗೂ ಮುಂದಿನ ಜನ್ಮದಲ್ಲಿ ಅವರು ಸ್ವರ್ಗ ಪಡೆಯುವಂತೆ ಮಾಡುತ್ತೇನೆ. ಹಾಗೂ ಮುಂದಿನ ಜನ್ಮದಲ್ಲಿ ಅವರು ಸ್ವರ್ಗ ಪಡೆಯುವಂತೆ ಮಾಡುತ್ತೇನೆ. ಇದನ್ನು ನನ್ನ ಉತ್ತರಾಧಿಕಾರಿಗಳು ಮುಂದುವರಿಸಲಿ ಎಂದು ಬಯಸುತ್ತೇನೆ

ಎಂದು ಎನ್ನುತ್ತಾನೆ.

ಗುರುಹಿರಿಯರಿಗೆ ಗೌರವ ನೀಡುವಂತೆ ಅಜ್ಞೆ

ತನ್ನ ಧಮ್ಮ ಅಥವಾ ಧರ್ಮದ ಭಾಗವಾಗಿ ಅಶೋಕನು ದಿಗ್ವಿಜಯಗಳ ಬದಲಾಗಿ ಧರ್ಮದ ವಿಜಯಕ್ಕೆ ಒತ್ತು ಕೊಟ್ಟಿದ್ದನು. ಸಮಾಜದಲ್ಲಿ ನೈತಿಕತೆಯು ಬೆಳವಣಿಗೆಯಾಗಲು ಶಾಸನಗಳನ್ನು ಹೊರಡಿಸಿದ್ದನು. ಅವುಗಳೆಂದರೆ ಪ್ರಾಣಿಗಳನ್ನು ಕೊಲ್ಲಬಾರದು. ಜೀವಂತ ಜೀವಿಗಳಿಗೆ ಹಿಂಸೆ ಮಾಡಬಾರದು. ತಂದೆ ತಾಯಿಗಳಿಗೆ, ವೃದ್ಧರಿಗೆ, ಬ್ರಾಹ್ಮಣರಿಗೆ, ಸನ್ಯಾಸಿಗಳಿಗೆ, ಸಂಬಂಧಿಗಳಿಗೆ ಗೌರವ ಕೊಡಬೇಕು, ಜನರು ಧರ್ಮವನ್ನು ಆಚರಣೆ ಮಾಡಲು ರಥಗಳು, ಆನೆಗಳು, ಬೆಂಕಿ, ಅರಮನೆಗಳನ್ನು ದೈವೀಕರಿಸಿದನು. ತನ್ನನ್ನು ಪ್ರಿಯದರ್ಶಿನಿ, ದೇವನಾಂಪ್ರಿಯ- ಅಂದರೆ ದೇವರಿಗೆ ಪ್ರೀತಿ ಪ್ರಾತ್ರನಾದವನು ಎಂದು ಕರೆದುಕೊಂಡನು (ಗಿರಿನಾರ್ನ ೪ನೇಯ ಬಂಡೆ ಶಾಸನ ಹಾಗೂ ಮಸ್ಕಿ ಗೌಣ ಶಿಲಾಶಾಸನ).

ಅಧಿಕಾರಿಗಳ ಪಂಚವಾರ್ಷಿಕ ಪರ್ಯಟನೆಗಳು

ಅಶೋಕನ ರಾಜ್ಯದಲ್ಲಿ ಧರ್ಮವನ್ನು ಪ್ರಚಾರ ಮಾಡಲು ಅಧಿಕಾರಿಗಳು ಐದು ವರ್ಷಕ್ಕೊಮ್ಮೆ ರಾಜ್ಯದಾದ್ಯಂತ ಪರ್ಯಟನೆ ಮಾಡುತ್ತಿದ್ದರು. ಇದರ ಕುರಿತು ಗಿರಿನಾರ್ ನ ೩ನೆಯ ಬಂಡೆಶಾಸನ (ಕ್ರಿ.ಪೂ. ೨೫೭) ವಿವರಿಸುತ್ತದೆ. ಸಾಮ್ರಾಜ್ಯ ದಾದ್ಯಂತ ಯುಕ್ತರು, ರಜ್ಜೂಕರು, ಪ್ರದೇಶಿಕರು ಪ್ರತಿ ಐದು ವರ್ಷಕ್ಕೊಮ್ಮೆ ಸಂಚರಿಸಿ ಧರ್ಮದ ಪ್ರಚಾರ ಮತ್ತು ಇತರೆ ಚಟುವಟಿಕೆಗಳನ್ನು ಮಾಡಬೇಕಿತ್ತು. ಗುರು-ಹಿರಿಯರಿಗೆ, ಬ್ರಾಹ್ಮಣರಿಗೆ, ಸನ್ಯಸಿಗಳಿಗೆ, ಸಂಬಂಧಿಕರಿಗೆ, ಸ್ನೇಹಿತರಿಗೆ ಗೌರವ ಕೊಡುವಂತೆ, ಧಾನ-ಧರ್ಮ ಮಾಡುವಂತೆ ಪ್ರಚಾರ ಮಾಡುತ್ತಿದ್ದರು. ಮಹಾಮಾತ್ರರು ಸಹಿತ ಯುಕ್ತರಿಗೆ ಈ ಕಾರ್ಯ ನಿರ್ವಹಿಸಲು ಆಜ್ಞಾಪಿಸುತ್ತಿದ್ದರು.

ಯುಕ್ತರು ಎಂಬ ಅಧಿಕಾರಿಗಳು ಮಹಾಮಾತ್ರರ ಕಛೇರಿಯಲ್ಲಿದ್ದು ರಾಜಾಜ್ಞೆಗಳನ್ನು ಕ್ರೋಢೀಕರಿಸಿ ಜಾರಿಗೊಳಿಸುವವರು ಆಗಿದ್ದರು. ರಜ್ಜುಕರು ಭೂಕಂದಾಯ, ನ್ಯಾಯಾಂಗ ಹಾಗೂ ಕಾರ್ಯಾಂಗದ ಕೆಲಸಗಳನ್ನು ಮಾಡುತ್ತಿದ್ದರು. ಅದರ ಜೊತೆಗೆ ಪ್ರಜೆಗಳ ಕ್ಷೇಮ ಮತ್ತು ಸುಖ ಸಂತೋಷದ ಕಾರ್ಯನಿರ್ವಹಿಸಬೇಕಾಗಿತ್ತು. ಪ್ರಾದೇಶಿಕರು ವಿಭಾಗದ ಆಡಳಿತ ನಿರ್ವಹಿಸುವುದರ ಜೊತೆಗೆ ಧರ್ಮದ ಕಾರ್ಯ ಕಲಾಪಗಳನ್ನು ಮಾಡುತ್ತಿದ್ದರು.