ಸಿಂಧೂ ಲಿಪಿಯ ವಿಕಾಸ

ಹರಪ್ಪಾ ಸಂಸ್ಕೃತಿಯ ಪ್ರೌಢಹಂತದ ಕಾಲದ ಬರಹದಲ್ಲಿ ಕ್ರಿಮಿಕೀಟಗಳು, ಪಕ್ಷಿಗಳು, ಚೇಳು, ನಾಯಿ, ಕೊಡೆ, ಬೇಲಿ, ಸರೀಸೃಪ, ಅರಳಿ ಎಲೆ ಹಾಗೂ ಮರ ಇವುಗಳನ್ನು ಹೋಲುವಂತಹ ೧೨ ಚಿತ್ರ ಸಂಕೇತಗಳನ್ನೊಳಗೊಂಡಂತೆ ೫೨ ಮೂಲಚಿಹ್ನೆಗಳಿವೆ. ಆದರೆ, ಕಾಲ ಕಳೆದಂತೆ ಇಂಥ ಅನೇಕ ಚಿತ್ರಗಳು ಲೋಥಲ್ ಮತ್ತು ಕಾಲಬಂಗಾನ್‌ಗಳಲ್ಲಿ ಕಾಣೆಯಾಗುತ್ತವೆ. ಕೆಲವನ್ನಂತೂ ಹರಪ್ಪಾದಲ್ಲೇ ಕೈಬಿಡಲಾಗಿದೆ. ಪ್ರಾರಂಭದಿಂದಲೂ ‘ಮನುಷ್ಯ’ ಮತ್ತು ‘ಮೀನು’  ಸಂಕೇತಗಳನ್ನು ರೇಖಾರೂಪದಲ್ಲಿ ಮಾತ್ರ ತೋರಿಸಲಾಗಿದ್ದು, ಅನೇಕ ವೇಳೆ ಅವುಗಳಿಗೆ ಗೆರೆಗಳನ್ನು ಸೇರಿಸಲಾಗಿದೆ. ಈ ಎರಡೂ ಚಿಹ್ನೆಗಳಾಗಲೇ ಭಾಷಾಧ್ವನಿ  ನಿರೂಪಕಗಳಾಗಿದ್ದು (phontized)  ವರ್ಣಮಾಲೆಯ ಸ್ಥಿಯನ್ನು ತಲುಪಿದ್ದುದು ಸೂಚಿತವಾಗುತ್ತದೆ. ಒಟ್ಟುಗೂಡಿಸಿದಂಥ ೧೨ ಚಿತ್ರ ಸಂಕೇತಗಳಲ್ಲಿರುವಲ್ಲಿ ೪೦ರಷ್ಟು ಚಿತ್ರಗಳಿಲ್ಲದ ಸಂಕೇತಗಳಿರುವುದು (non-pictorials) ಒಟ್ಟಿನಲ್ಲಿ ೫೨ ಕ್ಕಿಂತ ಹೆಚ್ಚಿಲ್ಲದ ಮೂಲ ಚಿಹ್ನೆಗಳಿರುವುದು ಸಿಂಧೂ ಬರಹ ಭಾಗಶಃ ಉಚ್ಚಾರಾಂಶ ಮತ್ತು ವರ್ಣ ಮಾಲೆಯ ಪ್ರಕ್ರಮವಲ್ಲದಿದ್ದರೂ, ಉಚ್ಚಾರಾಂಶ ಹಂತವನ್ನು ಆಗಲೇ ತಲುಪಿತ್ತೆಂಬುದನ್ನು ಸೂಚಿಸುತ್ತದೆ.

ಹರಪ್ಪಾ ಲಿಪಿಯಲ್ಲಿ ಬಳಕೆಯಲ್ಲಿದ್ದು, ಹರಪ್ಪಾ ಸಂಸ್ಕೃತಿಯ ಅಂತ್ಯಕಾಲದಲ್ಲಿ ಕೈಬಿಡಲಾದ ಪರ್ಯಾಯ ಚಿಹ್ನೆಗಳು, ದಾಕ್ಷಿಣಾತ್ಯ ಸಿಮಿಟಿಕ್ ವರ್ಣ ಮಾಲಾ ಕ್ರಮದಲ್ಲಿ (south semetic alphabetic system) ಬಹುತೇಕ ಉಳಿದು ಬಂದಿವೆ. ಲೋಥಲ್ ಮತ್ತು ರಂಗಪುರಗಳ ಉತ್ಖನನ ಸ್ತರಗಳಲ್ಲಿಯ ಪುರಾವೆ, ಮುದ್ರೆಗಳನ್ನೂ ಗೀರು ಚಿತ್ರಗಳನ್ನೂ ಕಾಲಾನುಕ್ರಮವಾಗಿ ಹೊಂದಿಸುವಲ್ಲಿ ಮತ್ತು ಸಿಂಧೂಲಿಪಿಯ ವಿಕಾಸವನ್ನು ಗುರುತಿಸುವಲ್ಲಿ ಅತ್ಯುಪಯುಕ್ತವಾಗಿದೆ. ಈ ಸಂಸ್ಕೃತಿಯ ಅಂತ್ಯಕಾಲದಲ್ಲಿ, ‘ಅಕ್’ ‘ಅಹ್’ ‘ಅರ್’ ‘ಕತ್’ ‘ವವ್’ ಇವುಗಳ ಉಚ್ಚಾರಾಂಶ ಚಿಹ್ನೆಗಳನ್ನು ಕೈಬಿಡಲಾಯಿತು. ಕುತೂಹಲಕಾರಿಯಾದ ಅಂಶವೆಂದರೆ, ಅಂತ್ಯಕಾಲದ ಹರಪ್ಪಾ ಬರಹಗಳಲ್ಲಿ ೨೦ ಮೂಲ ಚಿಹ್ನೆಗಳಿಂದ ವಿಕಾಸಗೊಂಡ ಒಟ್ಟು ೪೪ ಚಿಹ್ನೆಗಳಿವೆ. ಮಿಕ್ಕವು ಸಂಯುಕ್ತಾಕ್ಷರಗಳು ಅಥವಾ ಜೊಡಕ್ಷರಗಳು. ಕೆಲವು ಪದಗಳನ್ನು ಉಚ್ಚರಿಸುವಲ್ಲಿ ಮತ್ತು ಬರೆಯುವಲ್ಲಿ ಪ್ರಾದೇಶಿಕ ಅಂತರಗಳಿದ್ದವು ಎಂಬುದನ್ನು ಇವುಗಳ ಸಂಖ್ಯಾಶಾಸ್ತ್ರೀಯ ವಿಶ್ಲೇಷಣೆ (statistical analyasis) ತೋರಿಸುತ್ತದೆ.

ಸಿಂಧೂ ಲಿಪಿಯ ಬರಹವು ಬಲದಿಂದ ಎಡಕ್ಕೆ  ಹೋಗುತ್ತದೆ ಎಂದು ಲಾಲ್ ಅವರು ಆಭಿಪ್ರಾಯಪಟ್ಟಿದ್ದಾರೆ. ಮೊದಲು ಗುರುತುಗಳ ಗಾಹೂ ಫಲಕಗಳ ಮೇಲಿನ ಬರಹವನ್ನೂ ಕನ್ನಡಿಯಲ್ಲಿ ಪ್ರತಿಬಿಂಬಿತವಾಗುವ ಮುದ್ರೆಗಳ ಮೇಲಿನ ಬರಹವನ್ನೂ ಇದೇ ರೀತಿಯಲ್ಲೇ ಓದಬೇಕು. ಎರಡು ಸಾಲುಗಳ ಬರಹವುಳ್ಳ ಮುದ್ರೆಗಳ ವಿಷಯದಲ್ಲಿ ಎರಡನೆಯ ಸಾಲನ್ನೂ ಬಲದಿಂದ ಎಡಕ್ಕೆ ಓದಲಾಗಿದೆ. ಇದಕ್ಕೆ ಅಪವಾದವೆನಿಸುವ ಕೆಲವು ನಿದರ್ಶನಗಳಲ್ಲಿ, ಬರಹದ ಸಾಲುಗಳನ್ನು ಅನ್ಯ ಪ್ರತ್ಯನ್ನವಾಗಿ ಬಲದಿಂದ ಎಡಕ್ಕೆ ಮತ್ತು ಎಡದಿಂದ ಬಲಕ್ಕೆ ಬರೆಯಲಾಗಿದೆ.

ಅಂತ್ಯ ಕಾಲದ ಹರಪ್ಪಾ ಲಿಪಿಯಲ್ಲಿ ಚಿಹ್ನೆಗಳ ಸಂಖ್ಯೆ ಸೀಮಿತವಾಗಿದೆ. ಶಬ್ಧರೂಪ ರಚನಾಶಾಸ್ತ್ರದಲ್ಲಿ ಅವು ಸರಳವಾಗಿದ್ದು, ಸಿಮಿಟೆಕ್ ಲಿಪಿಗೆ ಸಾದೃಶ್ಯವಿರುವುದರಿಂದ ಪ್ರತಿ ಬಿಡಿ ಚಿಹ್ನೆಯನ್ನೂ ಒಂದು ಪದ ಅಥವಾ ಉಚ್ಚಾರಾಂಶ ಎಂದು ಪರಿಗಣಿಸುವ ಪ್ರಶ್ನೆಯೇ ಇಲ್ಲ. ಅದೇನಿದ್ದರೂ, ಪ್ರತಿ ಮೂಲ ಚಿಹ್ನೆಗೂ ಯುಕ್ತವಾದ ಭಾಷಾಧ್ವನಿ ಮೌಲ್ಯವನ್ನು ಕೊಡುವ ವಿಷಯ ಅಷ್ಟೇ.

ಅವನತಿಯ ಕುರಿತ ವಾದಗಳು

ಸಿಂಧೂ ಲಿಪಿಯನ್ನು ಓದಲು ಹೇಗೆ ಸಾಧ್ಯವಾಗುತ್ತಿಲ್ಲವೋ ಹಾಗೆಯೇ ಸಿಂಧೂ ನಾಗರೀಕತೆಯ ಅವನತಿಯ ವಿಷಯವಾಗಿಯೂ ಒಂದು ಖಚಿತ ತೀರ್ಮಾನಕ್ಕೆ ಬರಲಾಗದೆ ಒಗಟಾಗಿಯೇ ಉಳಿದಿದೆ. ಈ ನಾಗರೀಕತೆಯ ಕೊನೆಯ ಹಂತದಲ್ಲಿ ಅಂದರೆ ಕ್ರಿ. ಪೂ. ೨೦೦೦-೧೭೦೦ರ ಅವಧಿಯಲ್ಲಿ ಅವನತಿಯ ಹಾದಿಯನ್ನು ಹಿಡಿಯಿತು. ಈ ನಾಗರಿಕತೆಯ ಅವನತಿಗೆ ಇತಿಹಾಸತಜ್ಞರು ಅನೇಕ ಕಾರಣಗಳನ್ನು ನೀಡಿದ್ದಾರೆ. ಅವುಗಳಲ್ಲಿ ಪ್ರಮುಖ ವಾದುವುಗಳೆಂದರೆ ಹವಾಮಾನದ ವೈಪರೀತ್ಯ, ರೋಗಗಳು, ಸೈನಿಕ ದಾಳಿ, ಗೊಂದಲಮಯ ಮತ್ತು ಅರಕ್ಷ ಪರಿಸ್ಥಿತಿ, ಪದೇ ಪದೇ ಎರಗಿದ ಪ್ರವಾಹ, ಭೂಕುಸಿತ ಮುಂತಾದವು.

ಪಿಗೆಟ್ ಅವರು ‘ಕ್ಷೋಭೆಯ ಕಾಲ’ (the time of troubles) ಕುರಿತಂತೆ ಪ್ರಸ್ತಾಪಿಸುತ್ತಾ, ಸುಮಾರು ಕ್ರಿ. ಪೂ. ೨೦೦೦ದ ಅನಂತರದಲ್ಲಿ ತೀವ್ರ ನಾಶಕ್ಕೆ ತುತ್ತಾದ ಈ ಕೆಲವು ಗ್ರಾಮಗಳ ನಿದರ್ಶನಗಳನ್ನು ಕೊಟ್ಟಿದ್ದಾರೆ. ಉತ್ತರ ಬಲೂಚಿಸ್ತಾನದಲ್ಲಿಯ ರಾಣಾಘುಂಡೈ, ನಾಲ್ ಮತ್ತು ಡಾಬರ್ ಕೋಟ್; ದಕ್ಷಿಣ ಬಲೂಚಿಸ್ತಾನದಲ್ಲಿಯ ಕುಲ್ಲಿ ಮತ್ತು ಷಾಹಿಟುಂಪ್ ಇವುಗಳಲ್ಲಿ ಮುಖ್ಯವಾದವು. ಸಿಂಧೂ ಕಣಿವೆಯ ಮೇಲೆ ನಡೆದ ಹಿಂಸಾತ್ಮಕವಾದ ಆಕ್ರಮಣದಿಂದಾಗಿ ಆ ನಗರವು ನಾಶವಾಯಿತು ಎನ್ನಲಾಗಿದೆ. ಚಾನ್ಹುದಾರೋದಲ್ಲಿಯಾ ಹರಪ್ಪಾ ನೆಲೆಯು ನಾಶವಾದುದೂ ಅದೇ ಕಾರಣದಿಂದಲೇ ಎಂದು ವಾದಿಸಲಾಗಿದೆ. ದಕ್ಷಿಣ ಪರ್ಷಿಯಾದಿಂದ ಬಂದರೆನ್ನಲಾಗಿರುವ ಈ ಆಕ್ರಮಣಕಾರರು, ಬಲೂಚಿಸ್ತಾನದ ಬೆಟ್ಟಗಳಲ್ಲಿಯ ಗ್ರಾಮಗಳನ್ನು ನಾಶಪಡಿಸಿದ ನಂತರ ಸಿಂಧೂ ನಗರಗಳ ಮೇಲೆ ಬಂದೆರಗಿದರೆಂದು ಊಹಿಸಲಾಗಿದೆ. ಗೋರ್ಡನ್ ಚೈಲ್ಡ್ ಮತ್ತು ಪಿಗಟ್ ಅವರ ಪ್ರಕಾರ, ಆ ಜನರ ಹಗುರ ಆಯುಧಗಳು ಮತ್ತು ಇತರ ವಸ್ತುಗಳು ಹೆಚ್ಚೇನಿರಲಿಲ್ಲ ತಾಮ್ರ ಮತ್ತು ಕಂಚುಗಳಿಂದ ಮಾಡಿದ ಈಟಿಯ ಮೊನೆ ಮತ್ತು ಹಿಡಿಕೆಯ ರಂಧ್ರವುಳ್ಳ ಕೊಡಲಿಗಳು, ತಾಮ್ರದ ಪಿನ್ನುಗಳು, ಮೂಳೆಯ ದಬ್ಬಳಗಳು ಮತ್ತು ತಾಮ್ರದ ಒತ್ತು  ಮುದ್ರೆಗಳು ಇವುಗಳನ್ನು ತಮ್ಮೊಡನೆ ತಂದಿದ್ದರು. ತಾನಾಗಿ ನುಗ್ಗಿ ಬಂದಂತಹ ಈ ಸಂಸ್ಕೃತಿಯ ಭೌತಿಕ ಆವಶೇಷಗಳು, ಷಾಹಿಟುಂಪ್ ನಲ್ಲಿನ ಸ್ಮಾಶಾಸನದ ನೆಲೆಗಳಲ್ಲಿ ಮತ್ತು  ಚಾನ್ಹುದಾರೊದಲ್ಲಿಯ ಝಕಾರ್ ಕಾಲಕ್ಕೆ ಸೇರಿದ ಸ್ತರಗಳಲ್ಲಿ ಕಂಡುಬಂದಿದೆ. ಎಚ್- ಸ್ಮಶಾನದ ಮಡಕೆಗಳು ಆಕ್ರಮಣಕಾರರಾದ ಅನಾಗರೀಕ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ ಎನ್ನಲಾಗಿದೆ. ಇದುವರೆಗೂ ತಿಳಿದಿರುವಂತೆ, ಮೊಹೆಂಜೋದಾರೊ, ಹರಪ್ಪಾ ಸಂಸ್ಕೃತಿಗೆ ಸೇರಿದ ಅತಿ ದೊಡ್ಡ ನಗರವೆನಿಸಿದ್ದರೂ, ಅಕ್ರಮಣಕಾರರು ಇಲ್ಲಿ ನೆಲೆಗಳನ್ನು ಸ್ಥಾಲಿಸಿದ್ದರೆನ್ನಲು ಯಾವ ಪುರಾವೆಯೂ ಇಲ್ಲ.

ಹರಪ್ಪಾ ಸಂಸ್ಕೃತಿಯ ಪಟ್ಟಣ ಹಾಗೂ ನಗರಗಳು ನಾಶವಾದುದು, ಹಿಂಸಾತ್ಮಕ ಆಕ್ರಮಣದಿಂದ ಎಂಬ ವಾದದ ಪರವಾಗಿ ನೀಡಲಾಗಿರುವ ಸಾಕ್ಷ್ಯಾಧಾರಗಳನ್ನು ಕುರಿತು ಪರಿಶೀಲಿಸಬಹುದು. ರಾಣಾ ಘುಂಡೈನಲ್ಲಿ ಉತ್ಖನನ ನಡೆಸಿದ ಬ್ರಿಗೇಡಿರ್ ರಾಸ್ ಅವರು ಪ್ರಾಚೀನವಾದ ವಸತಿ ನಿಕ್ಷೇಪದಲ್ಲಿ ಬೂದಿಯನ್ನೊಳಗೊಂಡ ಕುಳಿಗಳನ್ನು ಕಂಡರು. ಇವು ಹಿಂದೆ ಸಂಭವಿಸಿದ್ದ ದಳ್ಳುರಿಯನ್ನು ಸೂಚಿಸುತ್ತದೆ.

ಸಿಂಧೂ ಕಣಿವೆಯಲ್ಲಿ ಚಾನ್ಹುದಾರೊ ಹಾಗೂ ಮೊಹೆಂಜೋದಾರೊ, ಈ ಎರಡೂ ಪ್ರಮುಖ ನಗರಗಳನ್ನು ನಾಶ ಮಾಡಿದವರು ಆಕ್ರಮಾಣಕಾರರೇ ಎನ್ನಲಾಗಿದೆ. ಆದರೆ, ಚಾನ್ಹುದಾರೋದಲ್ಲಿಯ ಪುರಾವೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಲ್ಲಿ, ಅತ್ಯಂತ ಕಡೆಯ ಹರಪ್ಪಾ ನೆಲೆಯಾದ ‘ಚಾನ್ಹುದಾರೋ-೧ಸಿ’ ನಾಶಮಾಡಿದ್ದು ಮಹಾಪೂರವೇ ಹೊರತು ಯಾವುದೇ ಆಕ್ರಮಾಣವಲ್ಲವೆಂಬುದು ಸ್ಪಷ್ಟವಾದೀತು. ‘ಚಾನ್ಹುದಾರೋ-೧ಸಿ’ ಯಲ್ಲಿಯ ವಸತಿ ಪ್ರದೇಶವನ್ನು ಮಹಾಪೂರದಿಂದಾದ ನಿಕ್ಷೇಪ ಮುಚ್ಚಿಹಾಕಿರುವುದು, ಈ ಅಂಶವನ್ನು ರುಜುವಾತುಪಡಿಸುತ್ತದೆ. ‘ಚಾನ್ಹುದಾರೋದಲ್ಲಿಯ ೧ನೆಯ ದಿಬ್ಬದಲ್ಲಿ (mound ೧) ನೆಲೆಸಿದ್ದ ಹರಪ್ಪಾ ಜನರ ಬಗ್ಗೆ ಪ್ರಸ್ತಾಪಿಸುತ್ತಾ, ಉತ್ಖನನಕಾರರು ಹೀಗೆ ಅಭಿಪ್ರಾಯಪಟ್ಟಿದ್ದಾರೆ.

ಜನರು, ಕಾಲಾನುಕ್ರಮದಲ್ಲಿ ನಶಿಸಿಹೋಗುವವರೆಗೂ, ಇಲ್ಲವೇ ಬೇರೆಡೆಯಲ್ಲಿಯ ಹೆಚ್ಚು ಅಭಿವೃದ್ಧಿಶೀಲರಾದ ಜನರೊಡನೆ ಸೇರಲು ಪ್ರದೇಶವನ್ನು ಬಿಟ್ಟು ಹೊರಡುವವರೆಗೂ, ಇಲ್ಲೇ ಬಳಸಲ್ಪಡುತ್ತಿದ್ದರು. ಪ್ರತಿ ಬಾರಿಯೂ, ಸಿಂಧೂ ನದಿಯಲ್ಲಿಯ ಮಹಾಪೂರ ಹೆಚ್ಚು ಪ್ರದೇಶವನ್ನು ವ್ಯಾಪಿಸಿ, ಪದೇ ಪದೇ ಸಂಭವಿಸಿ ಮತ್ತು ಹೆಚ್ಚು ಸಮಯದವರೆಗೂ ಹಾವಳಿಮಾಡುತ್ತಾ, ಚಾನ್ಹುದಾರೋದಲ್ಲಿಯ ಅನಂತರದ ನಿವಾಸಿಗಳು ಇನ್ನೂ ಎತ್ತರದ ಪ್ರದೇಶಗಳಿಗೆ ವಲಸೆ ಹೋಗುವಂತೆ ಮಾಡಿತು. ಕೊನೆಗೆ, ಅವರು ತಮ್ಮ ವ್ಯಕ್ತಿತ್ವವನ್ನೇ ಕಳೆದುಕೊಳ್ಳುವಂತಾಗಿದ್ದುದು ಅಸಂಭವವೇನಲ್ಲ.

ಹೊಸದಾಗಿ ವಲಸೆ ಬಂದಂತಹ ಝಕಾರ್ ಜನರು ಅಲ್ಲಿಗೆ ಬರುವ ಮುನ್ನವೇ ಹರಪ್ಪಾ ಜನರು ಆ ಪ್ರದೇಶವನ್ನಾಗಲೇ ತ್ಯಜಿಸಿದ್ದರೆಂಬುದನ್ನು ಸ್ತರಶಾಸ್ತ್ರಕ್ಕೆ ಸಂಬಂಧಿಸಿದಂತಹ ಪುರಾವೆಯೂ ಖಚಿತಪಡಿಸುತ್ತದೆ. ಆದ್ದರಿಂದ ಹರಪ್ಪಾ ಜನರ  ನಾಶಕ್ಕೆ ಹೊಸದಾಗಿ ವಲಸೆ ಬಂದವರು ಕಾರಣವೆನ್ನಲಾಗದು.

ಯಾವುದೇ ಕಾಲದಲಿ, ಹರಪ್ಪಾ ಜನರಲ್ಲದವರು ಮೊಹೆಂಜೋದಾರೋದಲ್ಲಿ ನೆಲಸಿದ್ದರೆನ್ನಲು ಸಾಕ್ಷ್ಯಧಾರಗಳಿಲ್ಲದಿದ್ದರೂ, ಆ ನಗರವು ನಾಶವಾದುದು ನಿರ್ದಯಿಗಳಾದ ಶತ್ರುಗಳಿಂದ ಎಂದು ಚೈಲ್ಡ್ ಮತ್ತಿತರರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವರು ನೀಡಿರುವ ಸಾಕ್ಷ್ಯಧಾರಗಳೆಂದರೆ, ಅಲ್ಲಿ ಸಿಕ್ಕಿರುವ ಅಸ್ಥಿಪಂಜರಗಳು ಐದಾರು ಗುಂಪು. ಈ  ಅಸ್ಥಿಪಂಜರಗಳ ಮೇಲೆ ಹರಿತವಾದ ಆಯುಧಗಳಿಂದ ಉಂಟದ ಗಾಯದ ಗುರುತುಗಳಿದ್ದು, ಇವು ಮೊಹೆಂಜೋದಾರೋದ ಕೊನೆಯ ಹಂತಕ್ಕೆ ಸೇರಿದ ಎಲ್ಲಾ ಜನರನ್ನೂ ಸಂಪೂರ್ಣವಾಗಿ ಕಗ್ಗೊಲೆ ಮಾಡಲಾಯಿತೆಂಬುದನ್ನು ಸೂಚಿಸುತ್ತದೆ. ಇದು ಅವರ ಹೇಳಿಕೆ.

ಇತ್ತೀಚಿಗೆ ‘ಹೆಚ್.ಆರ್.ಪ್ರದೇಶ’ ದಲ್ಲಿಯ ಅತ್ಯಂತ ಕೊನೆಯ ಹಂತದಲ್ಲಿ, ಇಕ್ಕಲಗಳಲ್ಲೂ ಮನೆಗಳಿರುವ ಓಣಿಯೊಂದರಲ್ಲಿ, ಡೇಲ್ಸ್ ಅವರು ೫ ಅಸ್ಥಿಪಂಜರಗಳ ಗುಂಪೊಂದನ್ನು ಪತ್ತೆ ಮಾಡಿದರು. ಇಂತಹ ಕೆಲವೊಂದು ಅಸ್ಥಿಪಂಜರಗಳನ್ನು ಬಿಟ್ಟರೆ, ೧೯೩೧ಕ್ಕಿಂತ ಮುಂಚಿನ ಉತ್ಖನನಗಳಲ್ಲಿ ಸಿಕ್ಕಿರುವ ಹರಿತವಾದ ಆಯುಧಗಳಿಂದಾದ ಗುರುತುಗಳುಳ ಅಸ್ಥಿಪಂಜರಗಳು, ಹರಪ್ಪಾದ ವಸತಿಯ ಅಂತಿಮ ಹಂತಕ್ಕೆ ಸೇರಿದ್ದವೆಂದು ತೋರಿಸಲು ಯಾವ ನಿರ್ಣಾಯಕ ಸಾಕ್ಷಿಗಳೂ ಇಲ್ಲ ಒಂದು ಪಕ್ಷ ಈ ಆಕ್ರಮಣಕಾರರು ಮೊಹೆಂಜೋದಾರೊ ಜನರನ್ನು ಕಗ್ಗೊಲೆ ಮಾಡಿದರೆಂದೇ ಭಾವಿಸೋಣ, ಆಗ ಹರಪ್ಪಾದ ನಿವಾಸಿಗಳನ್ನೇಕೆ ಕೊಲ್ಲದೆ ಬಿಟ್ಟರು. ಈ ಪ್ರಶ್ನೆ ಉದ್ಭವಿಸುತ್ತದೆ.

ಅಂತ್ಯಕಾಲದ ಸ್ತರಗಳಲ್ಲಿ ಕಂಡುಬಂದಿರುವ ಆಭರಣಗಳ ರಾಶಿ, ಕ್ಷೋಭೆಯ ಪರಿಸ್ಥಿತಿಯನ್ನು ಸೂಚಿಸುತ್ತದೆ ಎಂಬುದು ಈ ಕಗ್ಗೋಲೆಯ ವಾದವನ್ನು ಮಂಡಿಸುವವರ ಮತ್ತೊಂದು ತರ್ಕ ವಿಧಾನ. ಭಾರತದ ಗ್ರಾಮಗಳಲ್ಲಿ, ಆಶಾಂತಿಯ ವಾತಾವರಣವಿರಲಿ, ಇಲ್ಲದಿರಲಿ, ಧನನಕನಕಾದಿಗಳನ್ನು ಒಂದೆಡೆ ಕೂಡಿಹಾಕಿ ಭದ್ರಪಡಿಸುವ ಅಭ್ಯಾಸ ಇಂದಿಗೂ ಇದೆ. ಮೊಹೆಂಜೋದಾರೊ  ಹಾಗೂ ಚಾನ್ಹುದಾರೊಗಳ ಅಂತ್ಯಕಾಲದಲ್ಲಿ ಲೋಥಲ್‌ದಲ್ಲಿ ಆದುದೂ ಹೀಗೆಯೇ. ಅಂತರಿಕವಾಗಿ ಅವನತಿಯಾಗಲೇ ತಲೆದೋರಿತೆಂಬುದೇನೋ ನಿಜ. ಅಲ್ಲಿಯ ನಿವಾಸಿಗಳು, ಆಗಾಗ್ಗೆ ಮೇಲೆರಗಿ ಬರುತ್ತಿದ್ದ ಮಹಾಪೂರಗಳಿಂದ ಬೇಸತ್ತಿದ್ದರು. ಕಟ್ಟಡ ನಿರ್ಮಾಣದ ಗುಣಮಟ್ಟ ಅಧೋಗತಿಗಿಳಿದಿತ್ತು. ಈ ಅವನತಿಯನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಆಡಳಿತಗಾರರು ಅಸಮರ್ಥರಾಗಿದ್ದರು. ಆದರೆ, ಗುಣಮಟ್ಟಗಳ ಈ ಅಧಃಪತನಕ್ಕೆ ಶತ್ರುಗಳ ಆಕ್ರಮಣ ಕಾರಣವೇನಾಗಬೇಕಿಲ್ಲ. ಬಲೂಚಿಸ್ತಾನದ ಬೆಟ್ಟಗಳಿಂದ ಬಂದರೆನ್ನಲಾದ ಈ ಕೊಳ್ಳೆ ಹೊಡೆಯುವ ಜನರಿಂದೇನಾದರೂ ಬೃಹತ್ ಪ್ರಮಾಣದಲ್ಲಿ ಆಕ್ರಮಣವಾಗಿದ್ದ ಪಕ್ಷದಲ್ಲಿ. ಈಗ ಸಿಕ್ಕಿರುವಂತಹ ಹಿಡಿಕೆಯ ರಂಧ್ರವುಳ್ಳ ತಾಮ್ರದ ಕೊಡಲಿಯ ಬಾಚಿ ಅಥವಾ ನಡುದಿಂಡುಳ್ಳ ಒಂದೂವರೆ ಮೀ. ಉದ್ದದ ಕತ್ತಿ ಇವುಗಳಿಗಿಂತ ಇನ್ನೂ ಹೆಚ್ಚು ಸ್ಥಿರ ಸಾಕ್ಷ್ಯಾಧಾರಗಳು ಸಿಗಬೇಕಿತ್ತು. ಈ ಆಯುಧಗಳು, ಕೊಳವೆಯಾಕಾರದ ಹಾಗೂ ವೃತ್ತಾಕಾರದ ಮುದ್ರೆಗಳೊಡನೆಯೋ, ವ್ಯಾಪಾರದ ಮೂಲಕವಾಗಿ ಮೆಸೊಪೊಟೋಮಿಯಾದಿಂದ ಮೊಹೆಂಜೋದಾರೊವನ್ನು ತಲುಪಿರಬೇಕು.

ನೈಸರ್ಗಿಕ ಆಪತ್ತುಗಳು

ಸಿಂಧೂ ನಗರಗಳು ಆಕ್ರಮಣಕ್ಕೆ ತುತ್ತಾದುವೆಂಬ ವಾದವನ್ನು ಅಂತಿಮವಾಗಿ ಒಪ್ಪಿಕೊಳ್ಳುವ, ಇಲ್ಲವೇ ತಳ್ಳಿಹಾಕುವ ಮುನ್ನ, ಕ್ರಿ. ಪೂ. ೨೦೦೦- ೧೯೦೦ರ ಸುಮಾರಿಗೆ, ಸೌರಾಷ್ಟ್ರದಲ್ಲಿ ಸಂಭವಿಸಿದ್ದಾದರೂ ಏನು ಎಂಬುದನ್ನು ಈಗ ಪರಿಶೀಲಿಸಬಹುದು. ಲೋಥಲ್, ರಂಗಪುರ ಮತ್ತು ಕೋಠ್, ಇವು ಇಂದಿನ ಕರಾವಳಿಯಿಂದ ೨೦೫೦ ಕಿ. ಮೀ. ಗಳ ದೂರದಲ್ಲಿದೆ. ಆದರೆ ಸಾವಿರ ವರ್ಷಗಳ ಹಿಂದೆ, ಇವೆಲ್ಲವೂ ಸಮುದ್ರದ ಸಮೀಪದಲ್ಲೇ ಇದ್ದವು. ಹರಪ್ಪಾ ಕಾಲದಿಂದಲೂ ನದೀ ಮುಖಜ ಪ್ರದೇಶಗಳಲ್ಲಿ ಮಣ್ಣಿನ ಸಂಗ್ರಹಣೆಯ ಪರಿಣಾಮದಿಂದುಂಟಾದ ಪ್ರಸಾರ ಪ್ರವಾಹದಿಂದ ತಗ್ಗು ಪ್ರದೇಶದಲ್ಲಿಯ ಹರಪ್ಪಾ ನೆಲೆಗಳಲ್ಲಿ ಮುಳುಗಡೆಯಾದವು, ಕೆಲವು ಬಾರಿ ಸುಮಾರು  ಕಿ. ಪೂ. ೨೦೦೦ದಲ್ಲಿ ನಡೆದಂತೆ, ಮಹಾಪೂರ ಬೃಹತ್ ಸ್ವರೂಪದ್ದಾಗಿದ್ದು ಲೋಥಲ್ ಮತ್ತು ಕೋಠ್‌ಗಳಲ್ಲಿಯ ನಿವಾಸಿಗಳು ಮಹಾಪೂರವನ್ನು ತಡೆಹಿಡಿಯಲು ಎಷ್ಟೇ ಕ್ರಮಗಳನ್ನು ಕೈಗೊಂಡರೂ, ಪಟ್ಟಣಗಳನ್ನು ನಾಶಮಾಡಿತು. ಕೆಲವು ನಿವಾಸಿಗಳಂತೂ ಎತ್ತರದ ಪ್ರದೇಶಗಳಿಗೆ ಹೋಗಿ ನೆಲೆಸಿದರು. ಆದರೂ ಸುಮಾರು ಕ್ರಿ. ಪೂ. ೧೯೦೦ರಲ್ಲಿ ಸಂಭವಿಸಿದ ಮಹಾಪೂರ ಎಷ್ಟು ದೀರ್ಘಾವಧಿಯದು ಮತ್ತು ವಿನಾಶಕಾರಿ ಆಗಿತ್ತೆಂದರೆ, ಹೆಚ್ಚು ಕಡಿಮೆ ಎಲ್ಲಾ ಹರಪ್ಪಾ ನೆಲೆಗಳು ಸೌರಾಷ್ಟ್ರದಲ್ಲಿಯ ಲೋಥಲ್  ಕೋಠ್  ಮತ್ತು ರಂಗಪುರ ಕಚ್ಚದಲ್ಲಿನ ದೇಸಲ್ ಪುರ, ದಕ್ಷಿಣ ಗುಜಾರಾತ್ ದಲ್ಲಿಯ ಭಗತ್ರಾವ್ ನಿರ್ನಾಮವಾಗಿ ಹೋದವು. ಭಗ್ನಾವಶೇಷಗಳನ್ನು ಪ್ರವಾಹ ನಿಕ್ಷೇಪಗಳು ಮುಚ್ಚಿಬಿಟ್ಟವು.

ಚಾನ್ಹುದಾರೊದಲ್ಲಿನ ಪ್ರವಾಹ ನಿಕ್ಷೇಪಗಳು ಸೂಚಿಸುವಂತೆ, ಸಿಂಧೂ ಕಣಿವೆಯೂ ಕೂಡ, ಒಂದಕ್ಕಿಂತ ಹೆಚ್ಚು ಬಾರಿ, ಮಹಾಪೂರದ ಹಾವಳಿಗೆ ತುತ್ತಾದಂತಿದೆ. ಹರಪ್ಪಾದ ಕೋಟೆಗೋಡೆಗಳನ್ನು ಸುಟ್ಟ ಇಟ್ಟಿಗೆಗಳಿಂದ ಭದ್ರಪಡಿಸಿರುವುದು ಹಾಗೂ ಮೊಹೆಂಜೋದಾರೊದಲ್ಲಿಯ ಮನೆಗಳ ಅಡಿಪಾಯದಲ್ಲಿ ಹಸಿ ಇಟ್ಟಿಗೆಗಳನ್ನು ತುಂಬಿರುವುದು ಸ್ಪಷ್ಟಪಡಿಸುವಂತೆ, ಸಿಂಧೂ ನಗರಗಳು ಪದೇ ಪದೇ ಸಂಭವಿಸುತ್ತಿದ್ದ ಮಹಾಪೂರಗಳಿಗೆ ತುತ್ತಾಗುತ್ತಿದ್ದವು. ಈಗ ನಗರಗಳನ್ನು ಹೊತ್ತು ನಿಂತಿರುವ ವೇದಿಕೆಗಳೂ ಕೂಡ, ಮಹಾಪೂರದ ಅಪಾಯದಿಂದ ರಕ್ಷಿಸುವ ವಿಧಾನಗಳೇ. ಕೆಲವು ವೇಳೆ ಅನಿರೀಕ್ಷಿತವಾಗಿ ಸಂಭವಿಸಬಹುದಾದ ಮಹಾಪೂರಗಳಿಂದ ರಕ್ಷಿಸಲು ಹರಪ್ಪಾ ಮತ್ತು ಮೊಹೆಂಜೋದಾರೊಗಳಲ್ಲಿಯ ಕೋಟೆಗೋಡೆಗಳನ್ನು ತುರ್ತಾಗಿ ದುರಸ್ತಿ ಮಾಡಲಾಗುತ್ತಿತ್ತು. ಎಚ್‌. ಆರ್. ದಿಬ್ಬದಲ್ಲಿ ನೆರೆ ಭಗ್ನಾವಶೇಷಗಳು ಸಂಗ್ರಹವಾಗಿರುವುದು. ಮೊಹೆಂಜೋದಾರೊದಲ್ಲಾದ ನೆರೆಹಾವಳಿಗೆ ಮತ್ತೊಂದು ಸಾಕ್ಷಿ.

ರೈಕ್ಸ್‌ ಅವರ ಸಹಯೋಗದಲ್ಲಿ ಕಾರ್ಯನಿರತರಾಗಿದ್ದ ಡೇಲ್ಸ್ ಅವರು ಮಕ್ರಾನ್ ತೀರದಿಂದ ಇನ್ನೂ ಒಳನಾಡಿನಲ್ಲಿಯೇ ಕೆಲವು ಪ್ರಾಚೀನ ತೀರಗಳನ್ನು ಗಮನಿಸಿದ್ದರು. ದಷ್ತ್ ಕಣಿವೆಯಲ್ಲಿಯ ಸುತ್ಯಾಜಿನ್ ದೋರ್ ಮತ್ತು ಪಾನ್ಸಿ ಹತ್ತಿರದ ಸೊತ್ಕಕೋಟ್ ಇವು ಈಗ ಕಡಲ ತೀರದಿಂದ ಹಲವು ಮೈಲಿಗಳಷ್ಟು ಒಳನಾಡಿನಲ್ಲಿವೆ. ಇವನ್ನು ಡೇಲ್ಸ್ ಅವರು ಹರಪ್ಪಾದ ಬಂದರುಗಳೆಂದು ಗುರುತಿಸಿದ್ದಾರೆ. ರೈಕ್ಸ್ ಅವರು ಪತ್ತೆ ಮಾಡಿದ, ಕರಾಚಿಯಿಂದ ವಾಯುವ್ಯಕ್ಕೆ ೭೨ಕಿ. ಮೀ. ದೂದಲ್ಲಿರುವ ಬಾಲಾಕೋಟ್ ಕೂಡ ಪ್ರಾಚೀನವಾದದೊಂದು ಬಂದರಾಗಿತ್ತು. ನದೀ ಮುಖಜ ಪ್ರದೇಶಗಳಲ್ಲಿ ಮೆಕ್ಕಲಿನ ಸಂಹ್ರಹಣೆ ಮತ್ತು ಕಡಲ ತೀರದ ಮೇಲೆತ್ತುವಿಕೆ ಇವುಗಳೇ ಅಲ್ಲದೆ, ಸಮುದ್ರದ ಅಲೆಗಳ ಕ್ರಿಯೆಯಿಂದಲೂ ಮರಳುದಂಡೆಗಳು ಅಸ್ತಿತ್ವಕ್ಕೆ ಬಂದಿವೆ. ಕರಾವಳಿ ಪ್ರದೇಶದಲ್ಲಿ ಎಷ್ಟೇ ಅಲ್ಪ ಆಡಚಣೆಯುಂಟಾದರೂ ವಾಯುಭಾರದ ಇಳಿತಕ್ಕೆ ಕಾರಣವಾಗಬಹುದು. ಇದರಿಂದ, ಸಮುದ್ರದ ನೀರು ಹಲವಾರು ಮೈಲಿಗಳಷ್ಟು ಒಳನಾಡಿಗೆ ನುಗ್ಗಿ ಅನಾಹುತಗಳಾಗಬಹುದು. ಅಂತಹ ಘಟನೆ ಸಂಭವಿಸಿತ್ತೆಂಬುದನ್ನು ಆಮ್ರಿಯಲ್ಲಿಯ ಹರಪ್ಪಾಪೂರ್ವ ಸ್ತರಗಳಲ್ಲಿ ಕಂಡುಬಂದಿರುವ ನದಿ ಹಾಗೂ ಕಲ್ಲುಗಳಿಗೆ ಸಂಬಂಧಿಸಿದಂಥ ನಿಕ್ಷೇಪಗಳು ಸೂಚಿಸುತ್ತವೆ. ಕಡಲತೀರ ಮೇಲಕ್ಕೆದ್ದಿರುವುದು ಮಕ್ರಾನ್ ತೀರಕ್ಕೆ ಮಾತ್ರ ಸೀಮಿತವಾಗಿರದೆ, ಅದು ಸಿಂಧೂ ನದಿಯ ಮುಖ ಪ್ರದೇಶ ಹಾಗೂ ಇನ್ನೂ ದಕ್ಷಿಣದವರೆಗೂ ವಿಸ್ತರಿಸಬೇಕೆಂಬುದು ರೈಕ್ಸ್ ಅವರ ಅಭಿಪ್ರಾಯ.

ಮಾರ್ಟಿಮರ್ ವ್ಹೀಲರ್ ರವರ ಪ್ರಕಾರ ಆರ್ಯನ್ನರ ದಾಳಿಯು ಹರಪ್ಪ ನಾಗರಿಕತೆಯ ನಗರಗಳ ಹಾಗೂ ಸಂಸ್ಕೃತಿಯ ನಾಶಕ್ಕೆ ಕಾರಣವೆಂದಿದ್ದಾರೆ. ಇದಕ್ಕೆ ಆಧಾರಗಳಿಗಾಗಿ ಕೊನೆಯ ಹಂತದ ಮೊಹೆಂಜೋದಾರೊದಲ್ಲಿಯ ಪುರುಷರು, ಸ್ತ್ರೀಯರು ಮತ್ತು ಮಕ್ಕಳನ್ನು ಮನೆಗಳಲ್ಲಿ ಮತ್ತು ಬೀದಿಗಳಲ್ಲಿ ಸಾಮೂಹಿಕವಾಗಿ ಕಗ್ಗೊಲೆ ಮಾಡಿರುವಂತೆ ಒಂದು ಕೊಠಡಿಯಲ್ಲಿ ೧೩ ಅಸ್ಥಿಪಂಜರಗಳು ಸಿಕ್ಕಿವೆ. ಈ ಅಸ್ಥಿಪಂಜರಗಳ ಅಧ್ಯಯನದಿಂದ ಅವು ಒಮ್ಮೆಗೆ ಸತ್ತಿರುವ ಶವಗಳೆಂದು ಹಾಗೂ ಒಂದು ತಲೆ ಬುರುಡೆಗೆ ಕತ್ತಿಯಿಂತಹ ಆಯುಧದಿಂದ ಗಾಯವಾದ ಗುರುತಿದೆ. ಈ ಅಂಶಗಳ ಆಧಾರದ ಮೇಲೆ ವೇದಗಳಲ್ಲಿ ಬರುವ ಆರ್ಯರ ದಂಡನಾಯಕ ಇಂದ್ರನೇ ಸಿಂಧೂ ನಾಗರೀಕತೆಯ ನಾಶಕ್ಕೆ ಕಾರಣವೆಂದಿದ್ದಾರೆ. ಹರಪ್ಪಾದ ಮೇಲು ಹಂತದ ಪದರದಲ್ಲಿ ದೊರೆತಿರುವ ಸಮಾಧಿಯಲ್ಲಿ ಆರ್ಮೆನಾಯ್ಡ್ ಜನಾಂಗಕ್ಕೆ ಸೇರಿದ ತಲೆ ಬುರುಡೆ ದೊರೆತಿದೆ. ಇದು ಸಿಂಧೂ ನಗರಗಳ ಮೇಲೆ ದಾಳಿ ಮಾಡಿದ ದಾಳಿಕಾರದಿರಬಹುದೆಂದು ನಂಬಲಾಗಿದೆ. ಇದೇ ಪದರದಲ್ಲಿ ಸಿಂಧೂ ಜನಗಳಲ್ಲದ ಬಲಯುತವಾದ ಆಯುಧಗಳು ದೊರೆತಿದ್ದು ಆರ್ಯರ ದಾಳಿಯ ಸಿದ್ಧಾಂತವನ್ನು ಬೆಂಬಲಿಸುತ್ತವೆ.

ಇ. ಜೆ. ಹೆಚ್. ಮ್ಯಾಕೆ, ಲ್ಯಾಂಬ್ರಿಕ್ ಮತ್ತು ಮಾರ್ಷಲ್‌ರವರು ಸಿಂಧೂ ನಾಗರೀಕತೆಯು ಸಿಂಧೂ ನದಿಯ ಪ್ರವಾಹದಿಂದ ನಾಶವಾಯಿತೆಂದಿದ್ದಾರೆ. ಇವರ ಅಭಿಪ್ರಾಯದಂತೆ ನದಿಯ ಪ್ರವಾಹವೇ ಈ ನಾಗರೀಕತೆಯ ನಾಶಕ್ಕೆ ಕಾರಣವಾಯಿತೆಂದು ನಂಬುವುದಾದರೆ ಮೊಹೆಂಜೋದಾರೊ ಮತ್ತು  ಲೋಥಲ್ ನಿವೇಶನಗಳಲ್ಲಿ ಇಂತಹ ಆಧಾರಗಳು ಕಂಡುಬಂದಿವೆ. ಆದರೆ ಕಾಲಿಬಂಗಾನ್ ಅಥವಾ ಸಿಂಧೂ ನದಿ ಕಣಿವೆಯಿಂದ ಹೊರಗಿದ್ದ ನೆಲೆಗಳಲ್ಲಿ ಯಾವುದೇ ಪ್ರವಾಹಕ್ಕೀಡಾದ ಆಧಾರಗಳಿಲ್ಲದಿದ್ದರೂ ಅಂತಹ ನಗರಗಳು ನಾಶವಾಗಿವೆ.

ಬಿ. ಕೆ ಥಾಮರ್ ಅವರ ಅಭಿಪ್ರಾಯದಂತೆ ಹವಾಗುಣ, ನದಿಯ ಹರಿತದ ಪ್ರಭಾವ ಮತ್ತು ನೈಸರ್ಗಿಕ ಸಂಪನ್ಮೂಲಗಳು ಸಿಂಧೂ ನಾಗರಿಕತೆಯ ಬೆಳವಣಿಗೆ ಹೇಗೆ ಪ್ರಭಾವ ಬೀರಿದ್ದವೊ ಹಾಗೆ ಅದರ ಅವನತಿಗೂ ಕಾರಣವಾಗಿವೆ.

ಡಿ. ಡಿ. ಕೊಸಾಂಬಿಯವರ ಪ್ರಕಾರ ಸಿಂಧೂ ನಾಗರಿಕತೆ ಮೇಲೆ ಧಾಳಿಮಾಡಿದ ಧಾಳಿಕಾರರು ಪ್ರಥಮವಾಗಿ ಕೃಷಿಕರಾಗಿರಲಿಲ್ಲ. ದಾಳಿಕಾರರು ಸಿಂಧೂ ಜನರು ನಿರ್ಮಿಸಿದ ಅಣೆಕಟ್ಟೆಗಳನ್ನು ನಾಶಮಾಡಿದಾಗ ಪ್ರವಾಹದ ನೀರಿನಲ್ಲಿ ಕೃಷಿ ಮಾಡುತ್ತಿದ್ದ ಹಾಗೂ ಪ್ರವಾಹದಿಂದಾಗಿ ವಿಶಾಲವಾದ ಮೆಕ್ಕಲು ಮಣ್ಣಿನ ಭೂಮಿ ನಿರ್ಮಾಣಗೊಂಡು ಅದರಲ್ಲಿ ಧಾನ್ಯವನ್ನು ಬೆಳೆಯುತ್ತಿದ್ದ ಸಿಂಧೂ ಜನರ ಕೃಷಿ ಉತ್ಪಾದನೆಯಲ್ಲಿ ಇಳಿತಕ್ಕೆ ಕಾರಣವಾಯಿತು. ಧಾನ್ಯದ  ಉತ್ಪಾದನೆ ಕಡಿತಗೊಂಡಂತೆ ಇದೇ ಧಾನ್ಯವನ್ನು ನಂಬಿದ್ದ ನಗರಗಳು ಅವನತಿಗೀಡಾದವು.

ಫೇರ್ ಸರ್ವಿಸ್‌ನಂಥ ಲೇಖಕರು ಹರಪ್ಪ ನಾಗರೀಕತೆ ಕ್ಷಯಿಸುವುದಕ್ಕೆ ಜೀವಿ ಪರಿಸ್ಥಿತಿ ಸಮಸ್ಯೆಗಳು ಕಾರಣ ಎಂದು ನಿರೂಪಿಸುವುದಕ್ಕೆ ಪ್ರಯತ್ನಿಸಿದ್ದಾರೆ. ಹರಪ್ಪಾ ನಗರವಾಸಿಗಳು ತಮ್ಮ ಸೂಕ್ಷ್ಮ ಪರಿಸರವನ್ನು ಹಾಳುಮಾಡಿದವರು ಎಂದು ಅವನು ನಂಬುತ್ತಾನೆ. ಮಾನವ ಹಾಗೂ ಪ್ರಾಣಿಗಳಲ್ಲಿ ಹೆಚ್ಚಿದ ಸಂಖ್ಯೆಯಿಂದಾಗಿ ಸಂಪನ್ಮೂಲಗಳ ಕೊರತೆಯುಂಟಾದಾಗ ಭೂಭಾಗ ನಶಿಸಿರಬೇಕು, ಅರಣ್ಯಗಳು ಹಾಗೂ ಹಸಿರು ಹೊದಿಕೆ ನಾಶವಾಗಿರಬೇಕು. ಅತಿವೃಷ್ಟಿ ಅನಾವೃಷ್ಟಿಗಳುಂಟಾಗಿರಬೇಕು. ಇವುಗಳಿಂದುಂಟಾದ ಒತ್ತಡದಿಂದಾಗಿ ಕೊನೆಗೆ ನಗರ ಸಂಸ್ಕೃತಿ ಕುಸಿಯಿತು. ಈ ಸಿದ್ಧಾಂತವನ್ನು ಸಹ ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ. ಏಕೆಂದರೆ ಲಕ್ಷಾಂತರ ವರ್ಷಗಳಿಂದ ಉಳಿದು ಬಂದಿರುವ ಭಾರತ ಉಪಖಂಡದ ಮಣ್ಣಿನ ಫಲವತ್ತತೆ ಈ ಊಹೆಯನ್ನು ತಳ್ಳಿಹಾಕುತ್ತದೆ.

ನಗರಗಳು, ಪಟ್ಟಣಗಳು ಹಾಗೂ ಗ್ರಾಮಗಳು, ಸಮುದಾಯಗಳು, ಕೃಷಿ ಸಮುದಾಯ ಹಾಗೂ ಅಲೆಮಾರಿ ಸಮುದಾಯಗಳ ನಡುವಿನ ಸಂಬಂಧದ ಸೂಕ್ಷ್ಮ ಸಮತೋಲನ ನಗರದ ಅಸ್ತಿತ್ವವನ್ನು ನಿಯಂತ್ರಿಸುತ್ತದೆ. ವ್ಯಾಪಾರಕ್ಕೆ ಮುಖ್ಯವಾಗಿರುವ ಅನೇಕ ಖನಿಜಗಳನ್ನು ಹೊಂದಿರುವ ನೆರೆಯ ಜನರಿನ ನಡುವಿನ ಸಂಬಂಧ ಕತ್ತರಿಸಿ ಹೋಗಬಹುದಾದಂಥಹುದಾದರೂ ಅದು ಇಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಈ ಸಂಬಂಧಗಳ ಸರಪಣಿಯ ಯಾವುದೇ ಕೊಂಡಿ ಕಳಚಿದರೂ ಅದು ನಗರಗಳ ಅವನತಿಗೆ ಕಾರಣವಾಗಬಹುದು.

ಸಿಂಧೂ ನಾಗರಿಕತೆಯ ಅವನತಿಗೆ ಕಾರಣಗಳನ್ನು ವಿಶ್ಲೇಷಿದಾಗ ಅದು ನಾಗರಿಕತೆಯ ಅವನತಿ ಅಥವಾ ಕಣ್ಮರೆ ಅಲ್ಲ. ಅದು ಸಾಕ್ಷರತೆಯ ನಾಗತಿಕತೆಯ ಅವನತಿ ಮೊಹರುಗಳು ಮತ್ತು ಮೊಹರು ಸಾಧನಗಳ ಕಣ್ಮರೆ. ಒಟ್ಟಿನಲ್ಲಿ ಅವನತಿ ಎಂದರೆ ನಗರ ಹಂತದ ಅಂತ್ಯ. ಅನೇಕ ಅತಿ ಸಣ್ಣ ಸ್ಥಳಗಳು ಉಳಿದು ಮುಂದುವರಿದಿವೆ. ಅಂತ ಅನೇಕ ಸ್ಥಳಗಳು ರಾಜಾಸ್ಥಾನ, ಹರಿಯಾಣ, ಗುಜರಾತ್‌ ಮುಂತಾದೆಡೆಗಳಲ್ಲಿ ಕಂಡುಬಂದಿವೆ. ಸಿಂಧೂ ನಾಗರಿಕತೆಯು ಅನೇಕ ಕೃಷಿ ಸಮುದಾಯಗಳು ಸ್ಥಳೀಯ ಕೃಷಿ ಸಮುದಾಯಗಳಾಗಿ ಮಾರ್ಪಟ್ಟವು. ಉದಾಹರಣೆಗೆ, ಸಿಂಧ್‌ನಲ್ಲಿ ಆಮ್ರಿ ಮತ್ತು ಚಾನ್ಹುದಾರೊನಂಥ ಮೊದಲಾದ ಹರಪ್ಪದಲ್ಲಿನ ಪಟ್ಟಣಗಳಲ್ಲಿ ಜನ ಸ್ವಲ್ಪ ವಿಭಿನ್ನವಾದ ಝಾಕಾರ್ ಎಂದು ಕರೆಯಲಾಗುವ ಮಣ್ಣಿನ ಸಾಮಾನುಗಳನ್ನು ಬಳಸಲು ಪ್ರಾರಂಭಿಸಿದರು ಮತ್ತು ಕೆಲವು ಹೊಸ ವಸ್ತುಗಳ ಜೊತೆಗೆ ಬರಹವಿಲ್ಲದ ತಾಮ್ರದ ನಾಣ್ಯಗಳು ದೊರೆತಿವೆ. ಅವರು ಇಟ್ಟಿಗೆಗಳಿಂದ ನಿರ್ಮಾಣವಾದ ಮನೆಗಳಲ್ಲೇ ವಾಸಿಸುತ್ತಿದ್ದರು. ಆದರೆ ಯೋಜಿತ ವಿನ್ಯಾಸವನ್ನು ಅನುಸರಿಸುವುದನ್ನು ಬಿಟ್ಟರು. ಹೀಗೆ ಇಲ್ಲಿ ಹರಪ್ಪ ನಗರಗಳ ಅಂತ್ಯವೆಂದರೆ ಜನರು ವ್ಯಾಪಾರ ಮತ್ತು ವಿನಿಮಯಕ್ಕಾಗಿ ಕಡಿಮೆ ವಸ್ತುಗಳನ್ನು ಬಳಸುತ್ತಿದ್ದರು ಎಂದರ್ಥ.

ನಗರಗಳ ಅಂತ್ಯ ಎಂದರೆ ಹರಪ್ಪನ್‌ಸಂಪ್ರದಾಯದ ಅಂತ್ಯ ಎಂದಾಗಲಿಲ್ಲ. ಆದರೆ ಕಾರ್ಯನೀತಿ ಹಾಗೂ ಆರ್ಥಿಕ ವ್ಯವಸ್ಥೆಯಲ್ಲಿ ನಿರ್ಣಯ ಕೈಗೊಳ್ಳುವ ಕೇಂದ್ರೀಕೃತ ವ್ಯವಸ್ಥೆಯ ಅಂತ್ಯ ಎಂದಾಗಬಹುದು ಅಷ್ಟೇ.

ಪರಾಮರ್ಶನಗ್ರಂಥಗಳು

೧. ಕೋಸಾಂಬಿ ಡಿ.ಡಿ., ೧೯೬೫ ದಿ ಕಲ್ಚರ್ಯ್ಯಾಂಡ್ಸಿವಿಲೈಸೇಶನ್ಆಫ್ಏನ್ಸಿಯೆಂಟ್ಇಂಡಿಯಾ ಇನ್ಹಿಸ್ಟಾರಿಕಲ್ಔಟ್ಲೈನ್, ಲಂಡನ್‌: ರೂಟ್ಲೆಜ್‌ ಯ್ಯಾಂಡ್‌ ಕೇಗನ್‌ಪೌಲ್‌.

೨. ಥಾಪರ್ ಬಿ. ಕೆ., ೧೯೮೫, ರೀಸೆಂಟ್ಆರ್ಕಿಯಲಾಜಿಕಲ್ದಿಸ್ಕವರೀಸ್ಇನ್ಇಂಡಿಯಾ, ಯುನೆಸ್ಕೋ.

೩. ಮಜುಂದಾರ್ ಆರ್. ಸಿ. (ಸಂ.), ೧೯೬೫. ದಿ ಹಿಸ್ಟರಿ ಯ್ಯಾಂಡ್ಕಲ್ಚರ್ ಆಫ್ಇಂಡಿಯನ್ ಪೀಪಲ್ದಿ ವೇದಿಕ್ಏಜ್,  ಸಂಚಿಕೆ ೧, ಭಾರತೀಯ ವಿದ್ಯಾಭವನ ಸಂಪುಟಗಳು, ಬಾಂಬೆ : ಭಾರತೀಯ ವಿದ್ಯಾಭವನ.

೪. ಮೋರ್ಟಿಮರ್ ವೀಲರ್, ೧೯೬೨. ದಿ. ಇಂಡಸ್ಸಿವಿಲೈಸೇಶನ್, ಕೇಂಬ್ರಿಡ್ಜ್‌: ಕೇಂಬ್ರಿಡ್ಜ್‌ ಹಿಸ್ಟರಿ ಆಫ್‌ ಇಂಡಿಯಾ.

೫. ರತ್ನಾಗರ್ ಶೆರೀನ್‌, ೨೦೦೧. ಅಂಡರ್ಸ್ಟ್ಯಾಂಡಿಂಗ್ಹರಪ್ಪ : ಸಿವಿಲೈಸೇಶನ್ಇನ್ದಿ ಗ್ರೇಟರ್ ಇಂಡಸ್ವ್ಯಾಲಿ, ಡೆಲ್ಲಿ : ತುಲಿಕಾ.

೬. ರೋಮಿಲಾ ಥಾಪರ್, ೨೦೦೨. ಅರ್ಲಿ ಇಂಡಿಯಾ : ಫ್ರಮ್ಆರಿಜಿನ್ಸ್ಟು .ಡಿ. ೧೩೦೦, ನ್ಯೂ ಡೆಲ್ಲಿ : ಪೆಂಗ್ವಿನ್‌ ಬುಕ್ಸ್‌.

೭. ಶರ್ಮಾ ಆರ್. ಎಸ್‌., ೧೯೮೫. ಮೆಟೀರಿಯಲ್‌ ಕಲ್ಚರ್ ಯ್ಯಾಂಡ್‌ ಸೋಶಿಯಲ್‌ ಫಾರ್ಮೇಶನ್ ಇನ್‌ ಏನ್ಸಿಯಂಟ್‌ ಇಂಡಿಯಾ, ಡೆಲ್ಲಿ : ಮ್ಯಾಕ್‌ಮಿಲನ್‌.