ಮೌರ್ಯರ ಅವನತಿ

ಭಾರತದ ಮೊದಲ ವಿಶಲ ಸಾಮ್ರಾಜ್ಯ ಸ್ಥಾಪಸಿದ ಕೀರ್ತಿ ಮೌರ್ಯರಿಗೆ ಸಲ್ಲುತ್ತದೆ. ಚಂದ್ರಗುಪ್ತ, ಬಿಂದುಸಾರ ಮತ್ತು ಅಶೋಕರಿಂದ ನಿರ್ಮಾಣಗೊಂಡ ಮೌರ್ಯ ಸಾಮ್ರಾಜ್ಯ ಅಥವಾ ಅವರ ಆಡಳಿತವು ಅಶೋಕನ ನಂತರ ಐವತ್ತು ವಷಗಳಲ್ಲಿ ಕೊನೆಗೊಂಡಿತು. ಈ ಅರ್ಧ ಶತಮಾನದಲ್ಲಿ ಏಳು ರಾಜರು ರಾಜ್ಯದ ನೇತೃತ್ವ ವಹಿಸಿಕೊಂಡಿದ್ದರು. ಅಂತಿಮವಾಗಿ ಕ್ರಿ.ಪೂ. ೧೮೭ರಲ್ಲಿ ಪುಷ್ಯಮಿತ್ರ ಶೃಂಗನಿಂದ ಮೌರ್ಯರ ಆಳ್ವಿಕೆಯು ಕಿತ್ತೊಗೆಯಲ್ಪಟ್ಟಿತು.

ಮೌರ್ಯರ ಶೀಘ್ರ ಅವನತಿಗೆ ವಿವಿಧ ಕಾರಣಗಳನ್ನು ನೀಡಲಾಗಿದೆ. ಅಶೋಕನ ಕಾಲದಿಂದಲೇ ಮೌರ್ಯ ಅವನತಿಯ ಪ್ರಕ್ರಿಯೆ ಆರಂಭವಾಹಿತೆಂದು ಕೆಲವರು ಅಭಿಪ್ರಾಯಿಸಿದ್ದಾರೆ. ಮೌರ್ಯರ ಅವನತಿ ಕುರಿತ ವಿವಿಧ ಕಾರಣಗಳನ್ನು ಅಥವಾ ಅಭಿಪ್ರಾಯಗಳನ್ನು ಇಲ್ಲಿ ಚರ್ಚಿಸಲಾಗಿದೆ.

ಒಂದು ಪಂಥದ ಇತಿಹಾಸಕಾರರ ಪ್ರಕಾರ ಅಶೋಕನ ಧಾರ್ಮಿಕ ನೀತಿಯು ಮೌರ್ಯರ ಅವನತಿಗೆ ಮೂಲ ಕಾರಣವಾಗಿದೆ. ಈ ಪಂಥಕ್ಕೆ ಸೇರಿದ ಡಾ. ಹರಪ್ರಸಾದ ಶಾಸ್ತ್ರೀಯವರು ಹೇಳುವಂತೆ, ಅಶೋಕನು ಬೌದ್ಧ ಮತಕ್ಕೆ ರಾಜಾಶ್ರಯ ನೀಡಿದ್ದು, ಹಿಂದೂ ಧರ್ಮದ ಆಚರಣೆಗಳು ಮತ್ತು ಯಜ್ಞ ಯಾಗಗಳನ್ನು ಕೈಬಿಟ್ಟಿದ್ದು, ಧರ್ಮ ಮಹಾಮಾತ್ರರ ನೇಮಕಾತಿ ಹಾಗೂ ಬ್ರಾಹ್ಮಣರ ನಿರ್ಲಕ್ಷ್ಯ, ಶೂದ್ರ ವರ್ಗಕ್ಕೆ ಸೇರಿದ ಮೌರ್ಯ ಅರಸರು ಹಲವು ಕಾಯ್ದೆಗಳನ್ನು ರೂಪಿಸಿದುದು ಮೊದಲಾದವುಗಳು ಬ್ರಾಹ್ಮಣ ವರ್ಗದ ಪ್ರತಿಭಟನೆಗೆ ಕಾರಣವಾದವು. ಇದೇ ವರ್ಗಕ್ಕೆ ಸೇರಿದ ಪುಷ್ಯಮಿತ್ರ ಶೃಂಗನು ಈ ಪ್ರತಿಭಟನೆಯನ್ನು ಯಶಸ್ವಗೊಳಿಸಿದನು.” ಈ ದೃಷ್ಟಿಕೋನವನ್ನು ಸಮರ್ಥಿಸುವ ಅಂಶಗಳೆಂದರೆ, ಮೌರ್ಯರ ಅವನತಿಯ ನಂತರ ಅಸ್ತಿತ್ವಕ್ಕೆ ಬಂದ ರಾಜವಂಶಗಳು ಬ್ರಾಹ್ಮಣ ವರ್ಗಕ್ಕೆ ಸೇರಿದವುಗಳಾಗಿದ್ದುದು. ಉದಾಹರಣೆಗೆ ಶುಂಗರು, ಕಣ್ವರು ಮತ್ತು ಶಾತವಾಹನರು ಹಾಗೂ ಈ ರಾಜವಂಶಗಳು ಅಶೊಕನು ತ್ಯಜಿಸದ್ದ ವೈದಿಕ ಆಚರಣೆಗಳು ಮತ್ತು ಯಾಗ-ಯಜ್ಞಗಳನ್ನು ಆಚರಿಸತೊಡಗಿದ್ದು. ಆದರೆ ಈ ವಾದಕ್ಕೆ ಬಹುತೇಕ ಇತಿಹಾಸಕಾರರ ವಿರೋಧವಿದೆ. ಅಶೋಕನು ಬ್ರಾಹ್ಮಣ ವಿರೋಧಿಯಾಗಿದ್ದ ಎನ್ನಲು ಆಧಾರಗಳಿಲ್ಲ ಮತ್ತು ಮೌರ್ಯರ ವಿರುದ್ಧದ ದಂಗೆಯಲ್ಲಿ ಬ್ರಾಹ್ಮಣ ವರ್ಗವೆಲ್ಲ ಸೇರಿಕೊಂಡಿತ್ತು ಎನ್ನುವುದಕ್ಕೂ ಆಧಾರಗಳಿಲ್ಲ. ಅಶೋಕನು ತನ್ನ ಆಳ್ವಿಕೆಯ್ಲಲಿ ಬ್ರಾಹ್ಮಣರನ್ನು ನಿರ್ಲಕ್ಷಿಸಿಲ್ಲ. ಬ್ರಾಹ್ಮಣರಿಗೆ ಗೌರವ ನೀಡಬೇಕೆಂದು ತನ್ನ ಸಾಸನದಲ್ಲಿ ಹೇಳಿದ್ದಾನೆ. ಆತನ ಆಡಳಿತದಲ್ಲಿ ಬ್ರಾಹ್ಮಣ ಅಧಿಕಾರಿಗಳಿದ್ದರು. ಆತನ ಉತ್ತರಾಧಿಕಾರಿಗಳು ಕೂಡ ಬ್ರಾಹ್ಮಣ ವಿರೋಧಿಗಳಾಗಿರಲಿಲ್ಲ. ಇದಕ್ಕೆ ಪುಷ್ಯಮಿತ್ರ ಶುಂಗನು ಮೌರ್ಯರ ಸೇನಾನಿಯಾಗಿದ್ದುದೇ ಸಾಕ್ಷಿಯಾಗಿದೆ. ಪುಷ್ಯಮಿತ್ರ ಬ್ರಾಹ್ಮಣರ ನಾಯಕನಾಗಿ ದಂಗೆಯ ನೇತೃತ್ವವಹಿಸಿಲ್ಲ. ಓರ್ವ ಅವಕಾಶವಾದಿಯಾಗಿ, ಅಸಮರ್ಥ ದೊರೆಯನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೆ ಬಂದಿದ್ದಾನೆ ಎಂದು ಈ ಇತಿಹಾಸಕಾರರು ಬ್ರಾಹ್ಮಣೀಯ ಪ್ರತಿಕ್ರಿಯೆ” ಎಂಬ ವಾದವನ್ನು ತಳ್ಳಿಹಾಕಿದ್ದಾರೆ.

ಇನ್ನೊಂದು ಪಂಥದ ಇತಿಹಾಸಕಾರರ ಅಭಿಪ್ರಾಯದಂತೆ, ಅಶೋಕನು ಅನುಸರಿಸಿದ ಅಹಿಂಸಾ ನೀತಿಯೇ ಸಾಮ್ರಾಜ್ಯದ ಅವನತಿಗೆ ಮೂಲ ಕಾರಣವಾಗಿದೆ. ಅಶೋಕನು ಅನುಸರಿಸಿದ ಅಹಿಂಸಾ ನೀತಿಯಿಂದ ಸೈನಿಕರು ಕ್ಷಾತ್ರ ತೇಜಸ್ಸು ಮತ್ತು ಉತ್ಸಾಹವನ್ನು ಕಳೆದುಕೊಂಡರು. ಸೈನ್ಯವು ವಿದೇಶಿ ದಾಳಿಗಳನ್ನು ಮತ್ತು ಪ್ರಾಂತೀಯ ದಂಗೆಗಳನ್ನು ಅಡಗಸಲು ವಿಫಲವಾಯಿತು. ಡಾ. ಹೆಚ್.ಸಿ. ರಾಯ ಚೌಧುರಿ, ಈ ಅಭಿಪ್ರಾಯವನ್ನು ಬೆಂಬಲಿಸಿದ್ದಾರೆ. ಅವರ ಪ್ರಕಾರ ಮಿಲಿಟರಿ ಅಸಮರ್ಥತೆಯೇ ಮೌರ್ಯರ ಅವನತಿಗೆ ಕಾರಣವಾಗಿದೆ. ಈ ಅಭಿಪ್ರಾಯವು ಕೂಡ ಬಹುತೇಕ ವಿದ್ವಾಂಸರಿಂದ ತಿರಸ್ಕರಿಸಲ್ಪಟ್ಟದೆ. ಅಶೋಕನ ‘ಅಹಿಂಸಾ’ ನೀತಿ ಕೆಲಮಟ್ಟಿಗೆ ಸೈನ್ಯದ ಸ್ಥೈರ್ಯವನ್ನು ಕುಗ್ಗಿಸಿರಬಹುದು. ಆದರೆ ಅದರಿಂದಲೇ ಮೌರ್ಯರ ಅವನತಿಯಾಯಿತೆನ್ನಲಾಗದು. ಅಶೋಕನು ಯುದ್ಧ ನೀತಿ ತ್ಯಜಿಸಿದ ನಂತರ ಸೈನ್ಯವನ್ನು ವಿಸರ್ಜಿಸಿದನ್ನೆನಲು ಅಥವಾ ಅದರ ಗಾತ್ರವನ್ನು ಕಡಿಮೆಮಾಡಿದನೆನ್ನಲು ಆಧಾರಗಳಿಲ್ಲ. ಅಶೋಕನ ‘ಅಹಿಂಸಾ’ ನೀತಿಯನ್ನು ವೈಭವೀಕರಿಸಿ ಅದನ್ನು ‘ಶಾಂತಿ ಸಂದೇಶ’ದಂತೆ ವರ್ಣಿಸಿದ ಹಿನ್ನೆಲೆಯಲ್ಲಿ ಶಾಂತಿ ನೀತಿಯೇ ಮೌರ್ಯರ ಅವನತಿಗೆ ಕಾರಣವೆಂಬ ವಾದವು ಹುಟ್ಟಿಕೊಂಡಿತು.

ಮೌರ್ಯ ಸಾಮ್ರಾಜ್ಯ ವಿಶಾಲವಾಗಿದ್ದು, ಅದರ ನಿರ್ವಹಣೆಗೆ ಬೃಹತ್‌ ಸೈನ್ಯ ಮತ್ತು ಅಧಿಕಾರಿ ವರ್ಗ ಅವಶ್ಯವಾಗಿತ್ತು. ಇದರ ವೆಚ್ಚ ರಾಜ್ಯದ ಖಜಾನೆ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ವೆಚ್ಚ ಸರಿದೂಗಿಸಲು ಜನರ ಮೇಲೆ ವಿವಿಧ ತೆರಿಗೆಗಳನ್ನು ವಿಧಿಸಲಾಯಿತು. ಕಡಿಮೆ ದರ್ಜೆಯ ಲೋಹದ ನಾಣ್ಯಗಳನ್ನು ಜಾರಿಗೆ ತಾರಲಾಯಿತು. ಆದರೂ ಅಗತ್ಯ ಹಣವನ್ನು ಪೂರೈಸುವಲ್ಲಿ ರಾಜ್ಯವು ಯಶಸ್ವಿಯಾಗಲಿಲ್ಲ. ಕೃಷಿ, ವ್ಯಾಪರ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಧಕ್ಕೆಯಾಯಿತು. ಇಂತಹ ಆರ್ಥಿಕ ಬಿಕ್ಕಟ್ಟು ಮೌರ್ಯ ಅವನತಿಗೆ ಮೂಲ ಕಾರಣವೆಂದು ಕೋಸಾಂಬಿಯವರ ಅಭಿಪ್ರಾಯವಾಗಿದೆ. ಅಶೋಕನು ಯುದ್ಧಗಳನ್ನು ತ್ಯಜಿಸಿದ್ದು, ವಿವಿಧ ಅಧಿಕಾರಿವರ್ಗವನ್ನು ನೇಮಿಸಿ ನೌಕರಶಾಹಿಯ ಗಾತ್ರ ಹೆಚ್ಚಿಸಿದ್ದು ಆತನ ವಿವಿಧ ಸಾರ್ವಜನಿಕ ಕಾರ್ಯಗಳು, ಬೌದ್ಧ ಸನ್ಯಾಸಿಗಳಿಗೆ ಹಾಗೂ ವಿಹಾರಗಳಿಗೆ ನೀಡಿದ ಕೊಡುಗೆಗಳು ಮೊದಲಾದವು ರಾಜ್ಯದ ಖಜಾನೆ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಆದರೆ ಅದರಿಂದಲೇ ಸಾಮ್ರಾಜ್ಯ ಅವನತಿ ಹೊಂದಿತೆನ್ನಲಾಗದು.

ರೊಮಿಲಾ ಥಾಪರ್‌ರವರು ಮೌರ್ಯರ ಅವನತಿಗೆ ಒಂದು ತಾರ್ಕಿಕ ಅಭಿಪ್ರಯವನ್ನು ಮುಂದಿಡುತ್ತಾರೆ. ಅವರ ಪ್ರಕಾರ “ಕೆಂದ್ರೀಕೃತ ಆಡಳಿತ ವ್ಯವಸ್ಥೆ ಹಾಗೂ ಒಂದು ಐಕ್ಯ ರಾಜ್ಯ ಅಥವಾ ರಾಷ್ಟ್ರದ ಕಲ್ಪನೆ ಅಂದು ಇರದೆಯಿದ್ದುದೇ ಮೌರ್ಯರ ಪತನಕ್ಕೆ ಮುಖ್ಯ ಕಾರಣವಾಗಿದೆ.” ಮಿಲಿಟರಿ ಅಸಮರ್ಥತೆ, ಬ್ರಾಹ್ಮಣೀಯ ಪ್ರತಿಭಟನೆ, ದಂಗೆಗಳು ಮತ್ತು ಆರ್ಥಿಕ ಕಾರಣಗಳನ್ನು ಮಾತ್ರ ಉಲ್ಲೆಖಿಸುವುದರಿಂದ ಮೌರ್ಯರ ಅವನತಿಯನ್ನು ಸೂಕ್ತವಾಗಿ ವಿವರಿಸಲಾಗದು. ಅವುಗಳಿಗಿಂತ ಮೂಲಭೂತ ಕಾರಣಗಳಿವೆ ಎಂದು ಥಾಪರ್ ಅಭಿಪ್ರಾಯಸುತ್ತಾರೆ. ಮೌರ್ಯರ ಆಡಳಿತ ವ್ಯವಸ್ಥೆಯು ನಿರಂಕುಶವಾದುದು. ಅದರ ಯಶಸ್ವಿಗೆ ಸಮರ್ಥ ಅರಸರು ಮತ್ತು ನಿಷ್ಠಾವಂತ ಹಾಗೂ ಸಮರ್ಥ ಅಧಿಕಾರಿವರ್ಗ ಅವಶ್ಯವಾದುದು. ಮೌರ್ಯರ ಕಾಲದಲ್ಲಿ ಸಮರ್ಥ ಅಧಿಕಾರಿವರ್ಗದ ನೇಮಕಾತಿಗೆ ಸೂಕ್ತ ವ್ಯವಸ್ಥೆಯಿರಲಿಲ್ಲ. ಯಾವುದೇ ಜನಪ್ರತಿನಿಧಿ ಸಭೆಗಳಿರಲಿಲ್ಲ. ಅಲ್ಲದೇ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳನ್ನು ಪ್ರತ್ಯೇಕಿಸಲು ಪ್ರಯತ್ನವು ನಡೆಯಲಿಲ್ಲ. ಅಲ್ಲದೆ ಪ್ರಜೆಗಳ ನಡುವೆ ಅರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಭಿನ್ನತೆಗಳಿದ್ದವು. ಇದರಿಂದ ಪ್ರಜೇಗಳು ಒಂದೇ ಆಡಳಿತಕ್ಕೆ ಒಳಪಟ್ಟರೂ, ಒಂದೇ ರಾಷ್ಟ್ರವೆಂಬ ಕಲ್ಪನೆ ಮೂಡಲಿಲ್ಲ. ಇದರಿಂದ ಮೌರ್ಯರ ಅವನತಿಯಾಯಿತೆಂದು ಥಾಪರ್‌ರವರ ಅಭಿಪ್ರಾಯವಾಗಿದೆ. ಇದು ತರ್ಕಬದ್ಧವಾದ ಅಭಿಪ್ರಾಯವಾದರೆ ಅಧಿಕಾರ ವಿಭಜನೆಯ ಕಲ್ಪನೆ ಮತ್ತು ರಾಷ್ಟ್ರ ಪ್ರಜ್ಞೆಯ ಕಲ್ಪನೆಗಳು ಆಧುನಿಕವಾದವುಗಳು. ಇವುಗಳನ್ನು ಮೌರ್ಯರ ಯುಗದಲ್ಲಿ ನಿರೀಕ್ಷಿಸುವುದು ಸೂಕ್ತವಲ್ಲ. ಅಲ್ಲದೆ ಆ ಯುಗದಲ್ಲಿ ಜನಪ್ರತಿನಿಧಿ ಸಭೆ ರಚನೆಕೂಡಾ ಅಸಾಧ್ಯವಾಗಿತ್ತು. ಹೀಗಾಗಿ ರಾಜಕೇಂದ್ರಿತ ಮತ್ತು ಕೇಂದ್ರೀಕೃತ ಅಧಿಕಾರಿಶಾಹಿ ವ್ಯವಸ್ಥೆಗೆ ಪರ್ಯಾಯ ವ್ಯವಸ್ಥೆಯೊಂದು ರೂಪುಗೊಳ್ಳಲಿಲ್ಲ. ಈ ಹಿನ್ನೆಲೆಯಲ್ಲಿ ಥಾಪರ್‌ರವರು ನೀಡಿರುವ ಕಾರಣಗಳನ್ನೆ ಮೌರ್ಯರ ಅವನತಿಯ ಮೂಲ ಕಾರಣವೆನ್ನಲು ಕೆಲವರು ನಿರಾಕರಿಸಿದ್ದಾರೆ. ಮುಖರ್ಜಿಯವರು ಮೌರ್ಯ ಅವನತಿಯ ಕಾರಣಗಳು ಅವರ ರಾಜಕೀಯ ಸಂಘಟನೆಯಲ್ಲಿಯೇ ಇದೆ. ನಿರಂಕುಶ ಪ್ರಭುತ್ವ ಮಾದರಿಯ ಸರ್ಕಾರ ಸಾಮ್ರಾಜ್ಯದ ಅವನತಿಗೆ ಕಾರಣವೆಂದಿದ್ದಾರೆ. ಈ ವಾದವು ಥಾಪರ್‌ರವರ ವಾದಕ್ಕೆ ಸಮೀಪವಾದುದು.

ಉಳಿದಂತೆ ಮೌರ್ಯರ ಅವನತಿಗೆ ಕೆಲವು ಸಾಮಾನ್ಯ ಕಾರಣಗಳನ್ನು ಆರೋಪಿಸಲಾಗಿದೆ. ಇಂತಹ ಕಾರಣಗಳನ್ನು ಭಾರತದ ಬಹುತೇಕ ರಾಜವಂಶಗಳ ಅವನತಿಗೆ ಅನ್ವಯಿಸಲಾಗಿದೆ. ಅವುಗಳನ್ನು ಈ ಮುಂದಿನಂತೆ ನೋಡಬಹುದಾಗಿದೆ.

ಉತ್ತರಾಧಿಕಾರ ಕುರಿತ ಸ್ಪಷ್ಟವಾದ ಕಾಯ್ದೆ ಇಲ್ಲದಿರುವುದು ಕೂಡಾ ಮೌರ್ಯರ ಅವನತಿಯ ಕಾರಣಗಳಲ್ಲಿ ಒಂದಾಗಿದೆ. ಇದರಿಂದಾಗಿ ಉತ್ತರಾಧಿಕಾರಕ್ಕೆ ಘರ್ಷಣೆಗಳು ನಡೆಯುತ್ತಿದ್ದವು. ಇದು ಅನವಶ್ಯಕ ಗೊಂದಲ ಉಂಟುಮಾಡುತ್ತಿದ್ದುದಲ್ಲದೆ, ಅವಕಾಶವಾದಿ ಮತ್ತು ಮಗತ್ವಾಕಾಂಕ್ಷಿ ಪ್ರಾಂತ್ಯಾಧಿಕಾರಿಗಳನ್ನು ದಂಗೆಯೇಳಲು ಪ್ರೇರೇಪಿಸುತ್ತಿದ್ದಿತು. ಅಶೋಕನು ಅಧಿಕಾರಕ್ಕೆ ಬರುವ ಸಂದರ್ಭ ಮತ್ತು ಆತನ ನಂತರದ ಸಂದರ್ಭದಲ್ಲಿ ಇಂತಹ ಸನ್ನಿವೇಶ ಉಂಟಾಗಿದ್ದುದನ್ನು ಗಮನಿಸಬಹುದು. ಅಶೋಕನು ಅಧಿಕಾರಕ್ಕೆ ಬಂದ ನಂತರ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದನು. ಆದರೆ ಆತನ ನಂತರದ ದೊರೆಗಳು ವಿಫಲರಾದರು.

ಅಂದಿನ ಸಾರಿಗೆ-ಸಂಪರ್ಕ ಮಾಧ್ಯಮಗಳನ್ನು ಬಳಸಿಕೊಂಡು ಆಡಳಿತ ನಿರ್ವಹಿಸಲು ಸಾಧ್ಯವಾಗದಿರುವಷ್ಟು ವಿಶಾಲ ಸಾಮ್ರಾಜ್ಯವನ್ನು ಮೌರ್ಯರು ಹೊಂದಿದ್ದುದು ಅವರ ಅವನತಿಗೆ ಇನ್ನೊಂದು ಕಾರಣವೆನ್ನಬಹುದು. ಒಂದೇ ಆಡಳಿತ ಕೇಂದ್ರದಿಂದ ದೂರದ ಪ್ರದೇಶದ ಅಧಿಕಾರಿಗಳು ಮತ್ತು ಪ್ರಜೆಗಳನ್ನು ಹತೋಟಿಯಲ್ಲಿಡುವುದು ಸುಲಭ ಸಾಧ್ಯವಲ್ಲ. ಇದರಲ್ಲಿ ಚಂದ್ರಗುಪ್ತ, ಅಶೋಕರಂತಹ ಅರಸರು ಯಶಸ್ವಿಯಾದರೇ ಹೊರತು, ಉಳಿದವರಲ್ಲಿ ಅಂತಹ ಸಾಮರ್ಥ್ಯವಿರಲಿಲ್ಲ. ವಿಶಾಲ ಸಾಮ್ರಾಜ್ಯವನ್ನು ನಿರ್ವಹಿಸಲು ಸೂಕ್ತವಾದ ವ್ಯವಸ್ಥೆಯನ್ನು ಮೌರ್ಯರ ಆಡಳಿತವು ಹೊಂದಲಿಲ್ಲ. ಅಸಮರ್ಥ ಅಧಿಕಾರಿಗಳು ಮತ್ತು ಗೊಢಚರ್ಯೆ ಇಲಾಖೆಯ ವಿಫಲತೆ ಕೂಡಾ ಅವನತಿಯ ಮೇಲೆ ಪ್ರಭಾವ ಬೀರಿತು.

ಅಶೋಕನ ನಂತರ ಮೌರ್ಯ ಸಾಮ್ರಾಜ್ಯವನ್ನು ಆತನ ಉತ್ತರಾಧಿಕಾರಿಗಳು ಹಂಚಿಕೊಂಡರು. ಕಾಶ್ಮೀರಕ್ಕೆ ಚೋಕನು, ಗಾಂಧಾರಕ್ಕೆ ವೀರಸೇನನು ಹಾಗೂ ಉಳಿದ ಪ್ರಾಂತ್ಯಗಳಿಗೆ ಸಂಪ್ರತಿ ಮತ್ತು ದಶರಥರು ಅಧಿಕಾರಕ್ಕೆ ಬಂದರು. ಇಂತಹ ವಿಭಜನೆಯು ರಾಜ್ಯದ ರಾಜಕೀಯ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಪ್ರಭಾವ ಬೀರಿತು.

ಅಶೋಕನ ನಂತರದ ಅಸಮರ್ಥ ಮೌರ್ಯ ಅರಸರೇ ಅವನತಿಗೆ ಹೆಚ್ಚಿನ ಜವಾಬ್ದಾರರೆಂಬ ಅಭಿಪ್ರಾಯವೂ ಇದೆ. ವಿಶಾಲವಾದ ಸಾಮ್ರಾಜ್ಯದ ಭಾರವನ್ನು ಹೊರಲು ಇವರ ಭುಜಗಳು ಸಮರ್ಥವಾಗಿರಲಿಲ್ಲ ಎಂಬ ಮಾತಿದೆ. ಅಶೋಕನ ಉತ್ತರಾಧಿಕಾರಿಗಳು ಸಾಮ್ರಾಜ್ಯವನ್ನು ತಮ್ಮಲ್ಲಿ ಹಂಚಿಕೊಂಡು ಆಳಿದರೆಂದು ಕಲ್ಹಣ ಮತ್ತು ತಾರನಾಥರ ಕೃತಿಗಳು ತಿಳಿಸುತ್ತವೆ. ಜಾದುನಾಥ ಸರ್ಕಾರರ ಅಭಿಪ್ರಾಯಿಸುವಂತೆ ಭಾರತದ ಇತಿಹಾಸದ ಪುಟಗಳನ್ನು ನೋಡಿದರೆ, ಆಯವುದೇ ರಾಜ ವಂಶಗಳಲ್ಲಿ ಐದಕ್ಕಿಂತ ಹೆಚ್ಚು ಸಮರ್ಥ ರಾಜರು ಬಂದಿಲ್ಲ. ಎಲ್ಲ ರಾಜವಂಶಗಳಲ್ಲಿಯೂ ಒಂದಲ್ಲ ಒಂದು ದಿನ ಅಸಮರ್ಥ ಅಸರರು ಅಧಿಕರಕ್ಕೆ ಬರುವುದು ಮತ್ತು ಸಾಮ್ರಾಜ್ಯವು ಪತನಗೊಳ್ಳವುದು ಖಚಿತವಾಗಿತ್ತು. ಇದೇ ಮೌರ್ಯ ಸಾಮ್ರಾಜ್ಯದ ಪತನದ ಸಂದರ್ಭದಲ್ಲಿ ಆಗಿದೆ.

ಮೌರ್ಯರ ಪತನಕ್ಕೆ ಇನ್ನೂ ಒಂದು ಪ್ರಮುಖ ಕಾರಣವಿದೆ. ಅದೇನೆಂದರೆ ಪ್ರಾಂತ್ಯಾಧಿಕಾರಿಗಳ ದುರಾಡಳಿತವಾಗಿದೆ. ಬಿಂದುಸಾರನ ಕಾಲದಲ್ಲಿ ತಕ್ಷಶಿಲೆಯ ಪ್ರಾಂತ್ಯಾಧಿಕಾರಿಗಳ ದುರಾಡಳಿತ ತಾಳದೇ ಜನರು ದಂಗೆಯೆದ್ದ ಉಲ್ಲೇಖವಿದೆ. ಅಲ್ಲಿನ ದಂಗೆಯನ್ನು ಅಶೋಕನು ಅಡಗಿಸಿದಾಗ, ಜನರು ತಮ್ಮ ಪ್ರತಿಭಟನೆಯು ರಾಜರ ಅಥವಾ ರಾಜಕುಮಾರನ ವಿರದ್ಧವಲ್ಲ. ತಮ್ಮನ್ನು ಅವಮನಿಸಿದ ಅಧಿಕಾರಿಗಳ ವಿರುದ್ಧವೆಂದು ಅಶೋಕನಲ್ಲಿ ಹೇಳಿದರೆನ್ನಲಾಗೆದೆ. ಅಶೋಕನ ಕಾಲದಲ್ಲಿಯೂ ತಕ್ಷಶಿಲೆಯಿಂದ ಅಂತಹ ದೂರೂ ಕೇಳಿಬಂದಿತು. ಆಗ ಅಶೋಕನು ಅಧಿಕಾರಿಗಳಿಗೆ ಪ್ರಜೆಗಳನ್ನು ಹಿಂಸಿಸದಂತೆ ಸೂಚನೆ ನೀಡದನೆಂದು ಕಳಿಂಗದ ಶಾಸನಗಳು ತಿಳಿಸುತ್ತವೆ. ಆಧಿಕಾರಿಗಳ ದಬ್ಬಾಳಿಕೆಯನ್ನು ತಡೆಯಲು ವರ್ಗಾವಣೆ ಪದ್ಧತಿಜಾರಿಗೆ ತಂದರೂ ಹಾಗೂ ಧರ್ಮಯಾತ್ರೆಯ ನೆಪದಲ್ಲಿ ಸ್ವತಃ ಅಶೋಕನು ಪ್ರಾಂತ್ಯಗಳಿಗೆ ಭೇಟಿ ನೀಡುತ್ತಿದ್ದರೂ ದೂರದ ಪ್ರಾಂತ್ಯಗಳಲ್ಲಿ ಅಧಿಕಾರಿಗಳ ದಬ್ಬಾಳಿಕೆಯನ್ನು ತಡೆಯಲಾಗಲಿಲ್ಲ.

ಮೌರ್ಯರ ಪತನಕ್ಕೆ ವಿದೇಶಿ ದಾಳಿಯು ಕೂಡಾ ಪ್ರಮುಖ ಕಾರಣವೆನ್ನಲಾಗಿದೆ. ಪಾಲಿಬಿಯಸ್‌ ಬರಹಗಳು ಮತ್ತು ಗಾರ್ಗಿ ಸಂಹಿತೆಗಳು ಗ್ರೀಕ್‌ದಾಳಿಯನ್ನು ಉಲ್ಲೇಖಿಸುತ್ತವೆ. ಅಶೋಕನ ನಂತರದ ಮೌರ್ಯ ಅರಸರು ಇಂತಹ ದಾಳಿಗಳನ್ನು ತಡೆಯುವಲ್ಲಿ ವಿಫಲವಾದುದು ಮೌರ್ಯರ ಅವನತಿಗೆ ನಿರ್ಣಯಾತ್ಮಕ ಅಂಶವಾಯತು. ಅಶೋಕನು ಧರ್ಮ ಪ್ರಸಾರ ಕಾರ್ಯದಲ್ಲಿ ಮಗ್ನನಾಗಿ ವಾಯುವ್ಯ ಗಡಿಯನ್ನು ನಿರ್ಲಕ್ಷಿಸಿದ್ದನು. ಚೀನಾದ ಚಕ್ರವರ್ತಯು ಸಿಥಿಯನ್ನರ ದಾಳಿ ತಡೆಯಲು ಮಹಾ ಗೋಡೆಯನ್ನು ನಿರ್ಮಿಸಿದುದರಿಂದ ಸಿಥಿಯನ್ನರು ಭಾರತದ ಕಡೆಗೆ ನುಗ್ಗಿದರು. ಅದರ ಪರಿಣಾಮವಾಗಿ ಗ್ರೀಕರು ಮೌರ್ಯ ಸಾಮ್ರಾಜ್ಯಕ್ಕೆ ದಾಳಿಯಿಡುವಂತಾಯಿತೆಂದು ಆರ್.ಎಸ್‌.ಶರ್ಮರವರು ಅಭಿಪ್ರಾಯಪಟ್ಟಿದ್ದಾರೆ.

ಮೌರ್ಯರ ಅವನತಿಗೆ ನೀಡಲಾದ ಮತ್ತೊಂದು ಕಾರಣವೆಂದರೆ ಭೌತಿಕ ಅಂಶಗಳ ಅರಿವಿನ ವಿಸ್ತರಣೆ ಕ್ರಿ.ಪೂ. ೬ನೆಯ ಶತಮಾನದ ವೇಳೆಗೆ ಮಗಧವು ಮಾತ್ರ ಐಹಿಕ ಸಂಸ್ಕೃತಿಯಿಂದಾಗಿ (ಕಬ್ಬಿಣದ ಬಳಕೆ, ಸಾರಿಗೆ ಸೌಲಭ್ಯ ಬೆಳವಣಿಗೆ ಮೊದಲಾದವು) ಬೆಳವಣಿಗೆ ಹೊಂದಿ ವಿಸ್ತಾರವಾಗಿ ಬೆಳೆದಿತ್ತು. ಮಗಧವು ವಿಸ್ತೃತಗೊಂಡಂತೆ ಅದುವರೆಗೆ ಅದು ಹೊಂದಿದ್ದ ವಿಶಿಷ್ಟ ಸೌಲಭ್ಯಗಳು ಇತರ ಪ್ರದೇಶಗಳಿಗೂ ಹರಡಿದವು. ಇದರಿಂದ ಈ ಪ್ರದೇಶಗಳಲ್ಲಿ ಹೊಸ ರಾಜ್ಯಗಳು ಅಸ್ತಿತ್ವಕ್ಕೆ ಬಂದವು. ಹೊಸ ರಾಜ್ಯಗಳು ರೂಪುಗೊಂಡಂತೆ ಮಗಧದ ಪ್ರಾಮುಖ್ಯತೆ ಕುಂದಿತು.

ಅಶೋಕನ ನಂತರ ಅವನತಿಯತ್ತ ಸಾಗಿದ್ದ ಮೌರ್ಯ ವಂಶವು ಅಂತಿಮವಾಗಿ ಅದರ ಸೇನಾನಿ ಪುಷ್ಯಮಿತ್ರ ಶೃಂಗದ ಅವಕಾಶವಾದಿ ರಾಜಕೀಯಕ್ಕೆ ಬಲಿಯಾಯಿತು. ಪುಷ್ಯಮಿತ್ರನು ಕೊನೆಯ ಮೌರ್ಯ ಅರಸು ಬೃಹದ್ರಥನನ್ನು ಕೊಂದು ಶೃಂಗ ಸಂತತಿಯ ಆಳ್ವಿಕೆಯನ್ನು ಸ್ಥಾಪಿಸಿದನು. ಆದರೆ ಶೃಂಗರ ಆಳ್ವಿಕೆಯು ಪಾಟಲಿಪುತ್ರ ಮತ್ತು ಮಧ್ಯಭಾರತದ ಪ್ರದೇಶಗಳಿಗೆ ಸೀಮಿತವಾಗಿದ್ದು ಅಲ್ಪಕಾಲದ್ದಾಗಿದ್ದಿತು. ನಂತರ ಕಣ್ವರು ಅಧಿಕಾರಕ್ಕೆ ಬಂದರು. ಈ ನಡುವೆ ಮಧ್ಯ ಏಷ್ಯಾದಿಂದ ಬಂದ ಹಲವು ರಾಜವಂಶಗಳು ಮೌರ್ಯರ ಸ್ಥಾನವನ್ನಾಕ್ರಮಿಸಿದವು. ಹೀಗೆ ವಿವಿಧಾಂಶಗಳು ಮೌರ್ಯರ ಅವನತಿಗೆ ಕಾರಣವಾಗಿವೆ. ಯಾವುದೇ ಒಂದು ಕಾರಣವನ್ನು ಅವನತಿಗೆ ಜವಾಬ್ದಾರಿಯೆನ್ನಲಾಗದು. ಅವನತಿಯ ನಂತರವೂ ಮೌರ್ಯ ಸಾಮ್ರಾಜ್ಯ ರೂಪಿಸಿದ ಆಡಳಿತ ನೀತಿಗಳು ಮುಂದುವರೆದಿವೆ. ಅಶೋಕನಿಂದಾಗಿ ಮೌರ್ಯರ ಕೀರ್ತಿ ಇತಿಹಾಸದಲ್ಲಿ ಹಾಗೆಯೇ ಉಳಿದು ಬಂದಿದೆ.

ನಗರೀಕರಣ (ಕ್ರಿ.. ಆರಂಭದ ಕಾಲ)

ಕ್ರಿ.ಪೂ. ೬ ಮತ್ತು ೫ನೆಯ ಶತಮಾನದಿಂದಲೇ ಎರಡನೇ ನಗರೀಕರಣದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆಯಾದರೂ ಮೌರ್ಯ ಸಾಮ್ರಾಜ್ಯದ ಅನಂತರದ ಕಾಲ ಭಾರತದ ಚರಿತ್ರೆಯಲ್ಲಿ ಹಲವು ದೃಷ್ಟಿಯಿಂದ ಮಗತ್ವವನ್ನು ಪಡೆದುಕೊಂಡಿದೆ. ಮೌರ್ಯ ಸಾಮ್ರಾಜ್ಯವು ರಸ್ತೆಗಳನ್ನು ನಿರ್ಮಿಸಿ ಮತ್ತು ಏಕರೂಪದ ಆಡಳಿತ ಪದ್ಧತಿಗಾಗಿ ಮಾಡಿದ ಪ್ರಯತ್ನದಿಂದಾಗಿ ಉಪಖಂಡದಲ್ಲಿ ಸಂಛಾರಕ್ಕೆ ಹೆಚ್ಚಿನ ಅವಕಾಶ ಒದಗಿಸಿತು. ಮುಂದೆ ಅಧಿಕಾರಕ್ಕೆ ಬಂದ ಕುಶಾನರು ಈ ಸಂಚಾರ ವ್ಯವಸ್ಥೆಯನ್ನು ಸಮರ್ಥವಾಗಿ ಬಳಸಿಕೊಂಡು ವ್ಯಾಪಾರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದರು. ಈ ಕಾಲದಲ್ಲಿ ತಕ್ಷಶಿಲೆ, ಭಾರತ, ಚೀನಾ ಮತ್ತು ಪೂರ್ವ ಯೂರೋಪಿನ ವ್ಯಾಪಾರದ ಸಂಪರ್ಕ ಕೇಂದ್ರವಾಯಿತು. ಸರಿಸುಮಾರು ಕ್ರಿಸ್ತಶಕ ಪ್ರಾರಂಭದವೇಳೆಗೆ ದಕ್ಷಿಣ ಭಾರತ ಮತ್ತು ರೋಮ್‌ನ ನಡುವಿನ ವ್ಯಾಪಾರ ಉಚ್ಚ್ರಾಯ ಸ್ಥಿತಿಯನ್ನು ತಲುಪಿದವು. ಇದರ ಪರಿಣಾಮವಾಗಿ ಭಾರತದ ಸಂಭಾರ ಪದಾರ್ಥಗಳು ಕುಶಲ ವಸ್ತುಗಳಿಗೆ ಇನ್ನಿಲ್ಲದಷ್ಟು ಬೇಡಿಕೆ ಹೆಚ್ಚಿತು. ಇದರಿಂದ ಕುಶಲವಸ್ತುಗಳ ಉತ್ಪಾದನೆ ಗಣನೀಯವಾಗಿ ಹೆಚ್ಚಿತು. ಉತ್ಪಾದನೆ ಅದರಿಂದ ವಾಣಿಜ್ಯ ಮತ್ತು ಹಣದ ಪ್ರಸರಣಾ ಹೆಚ್ಚಿ ಭಾರತ ಆರ್ಥಿಕ ಸಮೃದ್ಧಯತ್ತ ಸಾಗಿತು. ಪರಿಣಾಮವಾಗಿ ಕುಶಲ ಕಸುಬುದಾರರು ಕೇಂದ್ರಕೃತವಾದ ಅನೇಕ ನಗರಗಳು ಭಾರತದಲ್ಲಿ ತಲೆಯತ್ತಿ ಉಚ್ಛ್ರಾಯ ಸ್ಥಿತಿಯನ್ನು ತಲುಪಿದನು. ಈ ಪ್ರಕ್ರಿಯೆ ಕ್ರ.ಶ. ಮೂರನೇ ಶತಮಾನದ ಅಂತ್ಯದವರಗೆ ಮುಂದುವರಿಯಿತು. ಈ ಹಂತದಲ್ಲಿ ಬೆಳೆದ ನಗರವ್ಯವಸ್ಥೆಯನ್ನು ಭಾರತದ ಚರಿತ್ರೆಯಲ್ಲಿ “ದ್ವಿತೀಯ ನಗರೀಕರಣ” ಎಂದು ವಿದ್ವಾಂಸರು ಗುರುತಿಸಿದ್ದಾರೆ.

ದ್ವಿತೀಯ ನಗರೀಕರಣವು ಸುಮಾರು ಕ್ರಿ.ಪೂ. ೬೦೦ರಿಂದಲೇ ಪ್ರಾರಂಭವಾಯಿತು. ನಂತರ ವೇದ ಕಾಲದಲ್ಲಿ ಗಂಗಾಬಯಲಿನಾದ್ಯಂತ ಮಡಕೆಯನ್ನು ಬಳಸುತ್ತಿದ್ದ ಕೃಷಿ ಸಂಸ್ಕೃತಿಗಳು ಅಸ್ತಿತ್ವದಲ್ಲಿ ಬಂದವು. ಈ ಬೆಳವಣಿಗೆಗೆ ಕಬ್ಬಿಣದ ತಂತ್ರಜ್ಞಾನ ಪ್ರಮುಖ ಕಾರಣವಾಯಿತು ಎಂದು ಅನೇಕರು ವಾದಿಸಿದ್ದಾರೆ. ಕಬ್ಬಿಣದ ತಂತ್ರಜ್ಞಾನದಿಂದ ಈ ಆದಿ ಕೃಷಿಕರು ಗಂಗಾಬಯಲಿನ ಅರಣ್ಯಗಳನ್ನು ಕಡಿದು ಹೊಸ ಹೊಸ ಭೂಮಿಯನ್ನು ಉಳುಮೆಗೆ ತೊಡಗಿಸಲು ಸಾಧ್ಯವಾಯಿತು. ಈ ಕಾಲದ ವಸತಿಗಳ ಉತ್ಖನನದಲ್ಲಿ ಕಬ್ಬಿಣದ ನೇಗಿಲು ಕುಳಗಳು, ಕೊಡಲಿ, ಗುದ್ದಲಿ, ಗರಗಸ, ಕತ್ತಿ, ಉಳಿ ಮುಂತಾದ ಆಯುಧಗಳು ಸಿಗುತ್ತವೆ. ಈ ರೀತಿ ಕ್ರಿ.ಪೂ. ಆರನೆಯ ಶತಮಾನದಲ್ಲಿ ಗಂಗಾಬಯಲಿನಾದ್ಯಂತ ಸಮೃದ್ಧ ಹಳ್ಳಿಗಳೂ ಹಾಗೂ ಈ ಕೃಷಿ ಉತ್ಪಾದನೆಯ ಹೆಚ್ಚುವರಿಯ ವ್ಯಾಪಾರವೂ ಮತ್ತೂ ಈ ಹೆಚ್ಚುವರಿಯನ್ನು ವಸೂಲಿ ಮಾಡಿ ನಡೆಸಲಾದ ರಾಜ್ಯ ವ್ಯವಸ್ಥೆಯೂ ಕಣ್ಣು ತೆರೆದವು. ಬೌದ್ಧ ಸಾಹಿತ್ಯದಲ್ಲಿ ೧೬ ಮಹಾ ಜನಪದಗಳ ಉಲ್ಲೇಖ ಬರುತ್ತದೆ. ಹಾಗೂ ಈ ಮಹಾಜನಪದಗಳ ರಾಜಧಾನಿಗಳಾದ ಹಸ್ತಿನಾಪುರ, ಅಹಿಚ್ಛತ, ಕಾಶಿ, ಕೋಸಲ, ಮಗಧ, ವೈಶಾಲಿ ಮುಂತಾದವು ನಗರಗಳಾಗಿ ರೂಪಗೊಂಡಿದ್ದವು.

ಈ ಕಾಲದಲ್ಲಿ ‘ಗೃಹಪತಿ’ ಅಥವಾ ‘ಗಹಪತಿ’ ಎಂದು ಕರೆಯಲ್ಪಟ್ಟ ಕೃಷಿ ಕುಟುಂಬಗಳ ಯಜಮಾನರು ಉಚ್ಛ್ರಾಯಸ್ಥಿತಿ ಹೊಂದಿದ್ದರು. ಜೊತೆಗೇ ಗಣ ಪ್ರಭುತ್ವಗಳಲ್ಲಿ ‘ರಾಜ’ ಎಂದು ಕರೆಸಿಕೊಂಡ ಕ್ಷತ್ರಿಯ ಕುಲದವರು ಕೂಡ ದಾಸ-ಕಾರ್ಮಿಕಾರರನ್ನು ನೇಮಿಸಿಕೊಂಡು ಕೃಷಿ ಚಟುವಟಿಕೆ ನಡೆಸುತ್ತ ತಾವು ಪಟ್ಟಣಗಳಲ್ಲಿ ವಾಸಿಸುತ್ತಿದ್ದರು. ಗಹಪತಿಗಳೂ ಕೂಡ ಪಟ್ಟಣಗಳಲ್ಲಿ ವಾಸಿಸುತ್ತ ವ್ಯಾಪಾರ-ವ್ಯವಹಾರಗಳನ್ನೂ ರೂಢಿಸಿಕೊಂಡಿದ್ದರು. ಊರೂರಿಗೆ ಸರಕುಗಳನ್ನು ಹೊತ್ತೊಯ್ದು ಮಾರಾಟ ಮಾಡುವ ಚಿಲ್ಲರೆ ವ್ಯಾಪಾರಿಗಳ ಜೊತೆಗೆ ನೂರಾರು ಬಂಡಿಗಳ ಮೇಲೆ ಆಮಾನು ಹೇರಿಕೊಂಡು ನೂರಾರು ಮೈಲಿಗಳ ದೂರಗಳನ್ನು ಕ್ರಮಿಸುತ್ತಿದ್ದ ‘ಸಾರ್ಥವಾಹ’ರೂ ಅಸ್ತಿತ್ವದಲ್ಲಿ ಬಂದರು. ಪಟ್ಟಣ ವಸತಿಗಳಲ್ಲಿ ಧನಿಕ ವ್ಯಾಪಾರಿಗಳು ಶ್ರೇಷ್ಠಿ ಎಂಬ ಹೆಸರಿನಿಂದ ಪ್ರಸಿದ್ಧರಾದರು. ಈ ಶ್ರೇಷ್ಠಿಗಳು ಅನೇಕ ಕೋಟಿ ನಾಣ್ಯಗಳನ್ನು ಹೊಂದಿ ಇಂದಿನ ಅರ್ಥದ ಬ್ಯಾಂಕರ್‌ಗಳೂ ಕೂಡ ಆಗಿದ್ದರು. ಬಹುಶಃ ಇವರೇ ಪ್ರಚಲಿತದಲ್ಲಿ ತಂದ ನಾಣ್ಯ ವ್ಯವಸ್ಥೆ ‘ಪಂಚ್‌ಮಾರ್ಕ್’ ನಾಣ್ಯಗಳ(ಆಹತ ನಾಣ್ಯಗಳು) ರೂಪದಲ್ಲಿ ನಮಗೆ ದೇಶದಾದ್ಯಂತ ವಿಫುಲವಾಗಿ ಸಿಕ್ಕಿವೆ. ಈ ನಾಣ್ಯಗಳನ್ನು ‘ಕಾರ್ಷಪಣ’, ‘ಶತಮಾನ’ (ಬೆಳ್ಳಿನಾಣ್ಯಗಳು), ಸುವರ್ಣ(ಬಂಗಾರ), ಕಾಕಿಣಿ(ತಾಮ್ರ) ಎಂದು ಕರೆಯುತ್ತಿದ್ದರು. ಈ ಎಲ್ಲ ಬೆಳವಣಿಗೆಗಳು ನಗರೀಕರಣಕ್ಕೆ ಪುಷ್ಠಿ ನೀಡಿದವು.

ಉತ್ತರ ಭಾರತದಲ್ಲಿ ವೈಶಲಿ, ಪಾಟಲೀಪುತ್ರ, ವಾರಣಾಸಿ, ಕೌಶಾಂಬಿ, ಶ್ರಾವಸ್ತಿ, ಹಸ್ತಿನಾಪುರ, ಮಥುರಾ, ಇಂದ್ರಪ್ರಸ್ಥ (ಈಗಿನ ದೆಹಲಿಯ ಪುರಾನಾ ಖಿಲ್ಲಾ) ಮುಂತಾದ ಮುಖ್ಯನಗರಗಳು ಏಳಿಗೆಗೆ ಬಂದವು. ಆಕಾಲದ ಸಾಹಿತ್ಯ ಕೃತಿಗಳಲ್ಲಿ ಮೇಲಿನ ನಗರಗಳ ಹೆಸರುಗಳು ಸಾಕಷ್ಟು ಪ್ರಸ್ತಾಪಿತವಾಗಿವೆ. ಅವುಗಳಲ್ಲಿ ಕೆಲವನ್ನು ಚೀನೀ ಯಾತ್ರಿಕರೂ ಪ್ರಸ್ತಾಪಿಸಿದ್ದಾರೆ. ಇವುಗಳಲ್ಲಿ ಬಹುಪಾಲು ಕ್ರಿ.ಶ. ಒಂದು ಹಾಗೂ ಎರಡನೆಯ ಶತಮಾನಗಳಲ್ಲಿ ಕುಶಾನರ ಕಾಲದಲ್ಲಿ ವೈಭವದಿಂದ ಬೆಳಗಿದವು. ಉತ್ಖನನಗಳು ಈ ಅವಧಿಯ ಉತ್ತಮ ಕಟ್ಟಡಗಳನ್ನು ತೋರಿಸಿಕೊಟ್ಟವೆ. ಬಿಹಾರದ ಚಿರಾಂಡ್, ಸೋಗ್‌ಪುರ್, ಬಕ್ಸಾರ್ ಮುಂತಾದವು ಮತ್ತು ಪೂರ್ವ ಉತ್ತರ ಪ್ರದೇಶದ ಖೌರು, ಮೆಸನ್‌ ಮುಂತಾದವು. ಕುಶಾನರ ಕಾಲದಲ್ಲಿ ಸಮೃದ್ಧವಾದ ಊರುಗಳಾಗಿದ್ದುದನ್ನು ಸಹ ಉತ್ಖನನಗಳು ಸ್ಪಷ್ಟಪಡಿಸುತ್ತವೆ.

ಇದೇ ರೀತಿ ಉತ್ತರ ಪ್ರದೇಶದ ಸೋಹ್‌ಗೌರು, ಭಿಚಾ, ಅಲಹಾಬಾದಿನ ಬಳಿಯಿರುವ ಕೌಶಾಂಬಿ, ಶೃಂಗಿಬೇರುಪುರ, ಅತ್ರಂಜಿಖೇರಾ ಮತ್ತು ಮೀರತ್‌ ಹಾಗೂ ಮುಜಾಫರ್ ನಗರದ ಜಿಲ್ಲೆಗಳ ಹಲವು ನಿವೇಶನಗಳು ಕುಶಾನರ ಕಾಲದಲ್ಲಿನ ಸಮೃದ್ಧ ಸ್ಥಿತಿಯಲ್ಲಿದ್ದವು ಎಂಬುದನ್ನು ಉತ್ಖನನಗಳು ಸ್ಪಷ್ಟಪಡಿಸುತ್ತವೆ. ಶೃಂಗಬೇರುಪುರ ಮತ್ತು ಚಿರಾಂಡ್‌ಗಳಲ್ಲಿ ಕುಶಾನರ ಅವಧಿಯ ಉತ್ತಮ ಇಟ್ಟಿಗೆ ಕಟ್ಟಡಗಳು ಕಂಡುಬಂದವೆ. ಮಥುರಾದಲ್ಲಿರುವ ಸೋಂಖ್‌ ಉತ್ಖನನಗಳು ಕುಶಾನರ ಕಾಲದ ಏಳು ಮಟ್ಟಗಳನ್ನು ತೋರಿಸುತ್ತವೆ. ಅಲ್ಲಿ ಗುಪ್ತರ ಕಾಲದ್ದು ಒಂದೇ ಒಂದು ಮಟ್ಟ. ಇದು ಕುಶಾನರ ಕಾಲದ ಸಮೃದ್ಧಿಯನ್ನು ನಂತರದ ಕಾಲದ ಅವನತಿ ಹಾದಿಯನ್ನು ತೋರಿಸುತ್ತದೆ. ಪಂಜಾಬಿನ ಜಾಲಂಧರ್, ಲೂಧಿಯಾನ ಹಾಗೂ ರೋಪಾಗಳಲ್ಲೂ ಕುಶಾನರ ಕಾಲದ ಉತ್ತಮ ಕಟ್ಟಡಗಳು ಕಂಡಬಂದಿವೆ. ಕೆಲವು ಕಡೆ ಕುಶಾನರ ಕಾಲದಲ್ಲಿ ಬಳಸಿಬಿಟ್ಟ ಇಟ್ಟಿಗೆಗಳನ್ನೇ ಬಳಸಿ ಕಟ್ಟಿದ ಕೆಳದರ್ಜೆಯ ನಿರ್ಮಾಣಗಳು ಗುಪ್ತರ ಅವಧಿಯಲ್ಲಿ ಕಂಡುಬರುತ್ತವೆ. ಒಟ್ಟನಲ್ಲಿ ಕುಶಾನರ ಕಾಲದ ಅವಶೇಗಳು ಆ ಕಾಲದಲ್ಲಿ ನಗರೀಕರಣವು ಉಚ್ಚ ಸ್ಥಿತಿಯಲ್ಲಿತ್ತು ಎಂಬುದನ್ನು ಸಾರಿ ಹೇಳುತ್ತವೆ.

ಮಾಳವ  ಮತ್ತು ಪಶ್ಚಿಮ ಭಾರತದ ಶಕರ ರಾಜಯವೂ ಇದೇ ಸ್ಥಿತಿಯನ್ನು ಹೇಳುತ್ತದೆ. ಕೌಶಂಬಿ ಹಾಗೂ ಮಥುರಾಗಳಿಂದ ಬರುವ ಎರಡು ಮಾರ್ಗಗಳು ಕೂಡುತ್ತಿದ್ದ ಉಜೈನಿಯು ಆ ಭಾಗದ ಅತಿ ಪ್ರಮುಖ ನಗರ. ಉತ್ಖನನಗಳು ಕ್ರಿ.ಪೂ. ೨೦೦ರ ನಂತರ ಮಣಿಶಿಲೆಗಳು ಬೃಹತ್‌ ಪ್ರಮಾಣದಲ್ಲಿ ತಯಾರಾಗುತ್ತಿದ್ದುದನ್ನು ತೋರಿಸಿಕೊಟ್ಟಿವೆ. ರತ್ನಕಲ್ಪ ಮತ್ತು ರತ್ನಗಳ ರಫ್ತಿಗೆ ಉಜ್ಜೈನಿ ಹೆಸರಾಗಿತ್ತು. ಇದೇ ಕಾಲದಲ್ಲಿ ದಕ್ಷಿಣದ ಶಾತವಾಹನ ಹಾಗೂ ತಮಿಳುನಾಡು ತೀರದ ನಗರಗಳು ಹಾಗೂ ಊರುಗಳು ಉಚ್ಛ್ರಾ ಸ್ಥಿತಿಯಲ್ಲಿದ್ದವು. ಟೇರ್, ಪೈಠನ್, ದಾನ್ಯಕಟಕ, ಅಮರಾವತಿ, ನಾಗಾರ್ಜುನಕೊಂಡ, ಬ್ರೋಚ್, ಸೋಪಾರ, ಅರಿಕಮೇಡು, ಕಾವೇರಿಪಟ್ಟಣ (ಪುಹಾರ್)ಗಳು ಆ ಕಾಲದ ಪಶ್ಚಿಮ ಹಾಗೂ ದಕ್ಷಿಣ ಭಾರತದ ಸಮೃದ್ಧ ನಗರಗಳು. ಪ್ರಚೀನ ತಮಿಳು ಸಾಹಿತ್ಯವು ಕಾವೇರಿ ಪಟ್ಟಣಮ್‌ನಗರಕ್ಕೆ ತಮ್ಮ ಸರಕುಗಳನ್ನು ಹೊತ್ತು ಬರುವ ಯವನ ಹಡುಗುಗಳನ್ನು ಹಾಗೂ ಕಾವೇರಿ ಪಟ್ಟಣಮ್‌ನಗರದ ಯವನ ಭಾಗವು ಸಮೃದ್ಧತೆಯಿಂದ ತುಂಬಿ ತುಳುಕುತ್ತಿದ್ದುದವನ್ನು ವರ್ಣಿಸುತ್ತದೆ. ಅಲ್ಲದೆ ನಗರವು ಉದ್ಯಾನವನ ಮತ್ತು ಮಧ್ಯದಲ್ಲಿ ಹಾಯ್ದುಹೋದ ಮುಕ್ತ ಪೇಟೆಗಳಿಂದ ಇಬ್ಭಾಗ ಮಾಡಲ್ಪಟ್ಟಿದೆಯೆಂದು ವರ್ಣಿಸುತ್ತದೆ. ಅರಮನೆ ಮತ್ತು ಇಟ್ಟಿಗೆಯಿಂದ ಕಟ್ಟಿದ ಶ್ರೀಮಂತ ವರ್ತಕರ ಮನೆಗಳು ನಗರದ ಒಳಭಾಗದಲ್ಲಿದ್ದವು. ಕುಶಲಕರ್ಮಿಗಳು ಮತ್ತು ಕಸುಬುದಾರರು ಮತ್ತು ಕಡಿಮೆ ಸ್ಥಿತಿವಂತರು ವಾಸವಾಗಿದ್ದ ಕರಾವಳಿ ಅರ್ಧವು ಉಗ್ರಾಣಗಳು ಮತ್ತು ವರ್ತಕರ ಕಛೇರಿಗಳನ್ನು ಹೊಂದಿತ್ತು. ಅರಿಕಮೇಡು ಆ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಇನ್ನೊಂದು ಪ್ರಮುಖಕ ದಕ್ಷಿಣ ಭಾರತದ ನಗರ. ಇದು ಮಲಯ ಮತ್ತು ಚೇನಾಕ್ಕೆ ಹೋಗುವ ಮಾರ್ಗದಲ್ಲಿ ಹಡುಗುಗಳು ಹೊಕ್ಕು ಹೋಗುವ ಬಂದರಿಗಿಂತ ಹೆಚ್ಚಾಗಿತ್ತು ಎಂಬುದನ್ನು ೧೯೪೫ರ ಉತ್ಖನನ ತೋರಿಸಿಕೊಡುತ್ತದೆ. ಭಾರತೀಯ ಸರಕುಳನ್ನು ಇಲ್ಲಿ ಕೊಂಡು ಹಡಗಿಗೆ ಹಾಗುತ್ತಿದ್ದುದಲ್ಲದೆ ರೋಮನ್ನರ ಅಭಿರುಚಿಗೆ ಅನುಗುಣವಾಗಿ ಮಲ್‌ಮಲ್‌ನಂತಹ ವಸ್ತುವನ್ನು ಇಲ್ಲಿ ಉತ್ಪಾದಿಸುತ್ತಿದ್ದರು. ಭಾರುಕಚ್ಚ ಅಥವಾ ಆಧುನಿಕ ಬ್ರೋಚ್‌ಭಾರತದ ಪಶ್ಚಿಮ ಕರಾವಳಿಯಲ್ಲಿ ಅತಿ ಪುರಾತನ ಮತ್ತು ಅತಿದೊಡ್ಡ ವಾಣಿಜ್ಯ ಕೇಂದ್ರವಾಗಿತ್ತು.

ನಗರೀಕರಣದ ಬಗ್ಗೆ ಚರ್ಚಿಸುವಾಗ ನಗರಗಳ ಬೆಳವಣಿಗೆಗೆ ವ್ಯಾಪಾರ ವಾಣಿಜ್ಯ ಪ್ರಮುಖ ಕಾರಣವಾಗಿದ್ದಂತೆ ವೃತ್ತಿ ಸಂಗಗಳು ನಗರಗಳ ಬೆಳವಣಿಗೆಯಲ್ಲಿ ತಮ್ಮ ಕಾಣಿಕೆಯನ್ನು ನೀಡಿವೆ. ವೃತ್ತಿ ಸಂಘಗಳೂ ಮೌರ್ಯರ ಕಾಲದಿಂದ ಮುಂದುವರಿದುಕೊಂಡು ಬಂದಿದ್ದವು. ಇವು ಉತ್ಪಾದೆ, ಸಂಘಟನೆ ಮತ್ತು ಸಾರ್ಮಜನಿಕ ಅಭಿಪ್ರಾಯ ರೂಪಿಸುವಲ್ಲಿ ಮಹತ್ವದ ಪ್ರಾತ್ರವಹಿಸಿದ್ದವು. ಬಹುತೇಕ ಎಲ್ಲ ವೃತ್ತಿಗಳ ಕಸುಬುದಾರರೂ ವೃತ್ತಿ ಸಂಘಗಳನ್ನು ಸೇರಿದರು. ಏಕೆಂದರೆ ಅವರಿಗೆ ವೃತ್ತಿ ಸಂಘಗಳ ಸಾಮಾಜಿಕ ಗಣ್ಯತೆ ಮತ್ತು ಸಾರ್ವತ್ರಿಕವಾದ ಭದ್ರತೆಯನ್ನು ಅಡಗಿಸಿದವು. ಕಸುಬುದಾರ ಮತ್ತು ಗ್ರಾಹಕರಿಬ್ಬರ ಹಿತ ಸಂರಕ್ಷಿಸಲು ವೃತ್ತಿ ಸಂಘಗಳು ಕೆಲಸದ ನಿಯಮಗಳನ್ನು ಸಿದ್ಧವಸ್ತುವಿನ ಗುಣವನ್ನು ಮತ್ತು ಬೆಲೆಯನ್ನು ನಿರ್ಧರಿಸುತ್ತಿದ್ದವು. ಇದರಿಂದ ವ್ಯಾಪಾರ ವಾಣೀಜ್ಯಕ್ಕೆ ಇನ್ನಷ್ಟು ಉತ್ತೇಜನ ಸಿಕ್ಕಿತು. ವೃತ್ತಿಸಂಘಗಳು ಬ್ಯಾಂಕರನಾಗಿ ಕೆಲಸ ನಿರ್ವಹಿಸುತ್ತಿದ್ದವು. ಜೊತೆಗೆ ರಾಜಕೀಯ ಪ್ರಾಬಲ್ಯವನ್ನೂ ಗಳಿಸಿದ್ದವು. ವೃತ್ತಿಸಂಘ ಅದರಿಂದ ಉತ್ಪಾದನೆ, ಗುಣಮಟ್ಟದ ವೃದ್ಧಿ ತನ್ಮೂಲಕ ವ್ಯಾಪಾರಕ್ಕೆ ಇನ್ನಷ್ಟು ಪ್ರೋತ್ಸಾಹ ಸಿಕ್ಕು ಗ್ರಾಮೀಣ ಪ್ರದೇಶಗಳ ಕಸುಬುದಾರರನ್ನೂ ನಗರಗಳು ಆಕರ್ಷಿಸಿದವು. ವೃತ್ತಿಸಂಘಗಳು ಒದಗಿಸುತ್ತಿದ್ದ ಕೆಲಸದ ಭದ್ರತೆ ಮತ್ತು ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಈ ಪ್ರಕ್ರಿಯೆಯನ್ನು ಇನ್ನಷ್ಟು ತಿವ್ರಗೊಳಿಸಿತು. ಈ ಎಲ್ಲ ಅಂಶಗಶಳನ್ನು ನಗರಗಳ ಬೆಳವಣಿಗೆಗೆ ಇನ್ನಷ್ಟು ಪುಷ್ಠಿ ನೀಡಿದವು.

ವ್ಯಾಪಾರ, ವಾಣಿಜ್ಯ ಮತ್ತು ನಗರ ವೃತ್ತಿಗಳು

ಪ್ರಾಚೀನ ಭಾರತದ ವ್ಯಾಪಾರ, ವಾಣಿಜ್ಯ ಮತ್ತು ಕುಶಲ ಕಸುಬುಗಳ ಇತಿಹಾಸದಲ್ಲಿ ಶಕರು, ಕುಶಾನರು, ಶಾತವಾಹನರು ಹಾಗೂ ಮೊದಲ ತಮಿಳು ರಾಜ್ಯಗಳ ಕಾಲವು (ಕ್ರಿ.ಪೂ. ೨೦೦ ರಿಂದ ಕ್ರಿ.ಶ ೨೦೦) ಅತ್ಯಂತ ಉಚ್ಛ್ರಾಯಕಾಲ, ಮೌರ್ಯರು ಭಾರತದಲ್ಲಿ ಜಾರಿಗೆ ತಂದ ಏಕರೂಪದ ಆಡಳಿತ, ಶಾಂತಿ, ಸ್ಥಿರತೆ ಹಾಗೂ ಅವರು ನಿರ್ಮಿಸಿದ ರಾಜಮಾರ್ಗಗಳು ಮುಂದೆ ವ್ಯಾಪಾರ ಮತ್ತು ವಾಣಿಜ್ಯಕ್ಕೆ ಪ್ರೇರಣೆ ನೀಡಿತು.

ವ್ಯಾಪಾರ ಮತ್ತು ವಾಣಿಜ್ಯ

ಭಾರತದ ಇತಿಹಾಸದಲ್ಲಿ ಕ್ರಿ.ಪೂ. ೨೦೦ ರಿಂದ ಕ್ರಿ.ಶ. ೨೦೦ರವರೆಗೆ ಆದ ಪ್ರಮುಖ ಆರ್ಥಿಕ ಬೆಳವಣಿಗೆಯೆಂದರೆ ಭಾರತ ಮತ್ತು ರೋಮ್‌ಸಾಮ್ರಾಜ್ಯಗಳ ನಡುವೆ ನಡೆಯುತ್ತಿದ್ದ ಸಮೃದ್ಧ ವ್ಯಾಪಾರ. ಮೊದಲಿಗೆ ಇದು ಭೂಮಾರ್ಗದಲ್ಲಿ ಜರುಗುತ್ತಿತ್ತು. ಅಲೆಗ್ಸಾಂಡರನ ದಾಳಿಯ ಕಾಲದಲ್ಲಿ ಬೆಳಕಿಗೆ ಬಂದ ಮೂರು ಭೂಮಾರ್ಗಗಳೂ(ಕಾಬೂಲ್‌, ಮಲ್ಲಾಪಾನ್‌ಮತ್ತು ಗೆಡ್ರೋಸಿಯಾ) ಭಾರತ ಮತ್ತು ರೋಮಿನ ವ್ಯಾಪಾರದ ಪ್ರಮುಖ ಮಾರ್ಗಗಳಾಗಿದ್ದವು. ಆದರೆ ಕ್ರಿ.ಶ. ೧ನೆಯ ಶತಮಾನದಲ್ಲಿ ಶಕರು, ಕುಶಾನರು ಮತ್ತು ಪಾರ್ಥಿಯನ್ನರು ಭಾರತದತ್ತ ಚಲಿಸಲಾರಂಭಿಸಿದಾಗ ಭೂಮಾರ್ಗ ಕತ್ತರಿಸಿಹೋಯಿತು. ಇರಾನಿನ ಪಾರ್ಥಿಯನ್ನರು ಭಾರತದಿಂದ ಕಬ್ಬಿಣ ಮತ್ತು ಉಕ್ಕುಗಳನ್ನು ತರಿಸಿಕೊಳ್ಳುತ್ತಿದ್ದರಾದರೂ ತಮ್ಮ ರಾಜ್ಯ ಮೂಲಕ ಪಶ್ಚಿಮಕ್ಕೆ ಭಾರತದ ಸರಕುಗಳ ಸಾಗಣೆ ಅಡ್ಡಿ ಮಾಡಿದರು. ಕ್ರಿ.ಶ. ಆರಂಭದ ಕಾಲದಲ್ಲಿ ವ್ಯಾಪಾರವು ಜಲಮಾರ್ಗ ಹಿಡಿಯಿತು. ಆ ವೇಳೆಗೆ ಹಿಂಗಾರು, ಮುಂಗಾರು ಮಾರುತಗಳು ಕಂಡುಹಿಡಿಯಲ್ಪಟ್ಟು ನಾವಿಕರು ಅರಬ್ಬೀ ಸಮುದ್ರದ ಪೂರ್ವತೀರದಿಂದ ಪಶ್ಚಿಮ ತೀರಕ್ಕೆ ನೇರವಾಗಿ ಯಾನಮಾಡುವುದು ಸಾಧ್ಯವಾಯಿತು. ಜೊತೆಗೆ ಯಾನಕ್ಕೆ ಹಿಡಿಯುತ್ತಿದ್ದ ಸಮಯವೂ ತಗ್ಗಿತ್ತು. ವ್ಯಾಪಾರಿಗಳು ಬ್ರೋಚ್‌ಸೋಪಾರಗಳಂತ ಪಶ್ಚಿಮ ತೀರದ ರೇವುಗಳಿಗೂ ಅರಿಕಮೇಡು ತಾಮ್ರಲಿಪ್ತಗಳಂತಹ ಪೂರ್ವತೀರದ ರೇವುಗಳಿಗೂ ಬಂದು ಹೋಗುವುದು ಸುಲಭವಾಯಿತು. ಇವುಗಳಲ್ಲೆಲ್ಲ ಬ್ರೋಚ್‌, ಅತ್ಯಂತ ಮುಖ್ಯವಾದ ರೇವುಪಟಣ್ಣವಾಗಿತ್ತು. ಶಾತವಾಹನ, ಕುಶಾನ ಮತ್ತು ಶಕ ರಾಜ್ಯಗಳ ಸರಕುಗಳು ಅಲ್ಲಿಗೆ ಬರುತ್ತಿದ್ವು. ಶಕರು ಮತ್ತು ಕುಶಾನರು ವಾಯುವ್ಯ ಭಾರತದಿಂದ ಪಶ್ಚಿಮ ತೀರಕ್ಕೆ ಎರಡು ಮಾರ್ಗಗಳನ್ನು ಅನುಸರಿಸುತ್ತಿದ್ದರು. ಇವೆರಡೂ ತಕ್ಷಶಿಲೆಯಲ್ಲಿ ಒಂದು ಗೂಡುತ್ತಿದ್ದವು. ಆಮೂಲಕ ಮಧ್ಯ ಏಷ್ಯಾದಲ್ಲಿ ಹಾದು ಹೋಗುತ್ತಿದ್ದ ರೇಷ್ಮೆ ಪಥಕ್ಕೆ ಸೇರುತ್ತಿದ್ದವು. ಮೊದಲ ಮಾರ್ಗವು ತಕ್ಷಶಿಲೆಯಿಂದ ಸಿಂಧೂ ನದಿಯ ಕೆಳಬಯಲಿನ ಮೂಲಕ ಬ್ರೋಚ್‌ಗೆ ಮುಟ್ಟುತ್ತಿತ್ತು. ಎರಡನೆಯದು ತಕ್ಷಶಿಲೆಯಿಂದ ಪಂಜಾಬನ್ನು ಹಾದು ಯಮುನಾ ನದಿಯ ಪಶ್ಚಿಮ ದಂಡೆ ಹಿಡಿದು ಸಾಗಿ ಮಥುರಾ, ಮಾಳವದ ಉಜೈನಿಯ ದಾರಿಯಾಗಿ ಬ್ರೋಚ್‌ಗೆ ಬರುತ್ತಿತ್ತು. ಇದನ್ನು ಉತ್ತರಾಪಥ ಎಂದು ಕರೆಯುತ್ತಿದ್ದು ಇದು ಹೆಚ್ಚಾಹಿ ಬಳಕೆಯಲ್ಲಿತ್ತು. ಉಜೈನಿಯಲ್ಲಿ ಕೌಶಾಂಬಿಯಿಂದ ಇನ್ನೊಂದು ಮಾರ್ಗವು ಬಂದು ಇದನ್ನು ಕೊಡುತ್ತಿತ್ತು.

ದಕ್ಷಿಣದ ರಾಜ್ಯಗಳಿಗೆ ದೊಡ್ಡ ಪ್ರಮಾಣದ ಕಡಲ ಸಂಬಂಧವಾದ ವ್ಯಾಪಾರದ ಪರಿಚಯವಿತ್ತು ಮತ್ತು ಅವುಗಳ ಸಾಹಿತ್ಯವು ಬಂದರುಗಳು, ದಕ್ಕೆಗಳು, ದೀಪಗೃಹಗಳು, ಸುಂಕದ ಕಛೇರಿಗಳು ಹಾಗೂ ಬಂದರುಗಳಿಗೆ ಸಂಬಂಧಿಸಿದ ಎಲ್ಲಾ ಯಥಾಪ್ರಕಾರದ ಕಟ್ಟಡಗಳನ್ನು ಉಲ್ಲೇಖಿಸುತ್ತದೆ. ಭಾರತೀಯರು ಇತರ ದೇಶಗಳ ನಾವಿಕರಿಗೆ ತಮ್ಮ ಸರಕುಗಳನ್ನು ಸಾಗಿಸಲು ಹೆಚ್ಚಾಗಿ ಅನುಮತಿ ಕೊಟ್ಟಂತೆ ಕಂಡುಬರುತ್ತದೆ. ಆದರೆ ಚೋಳರು ಹಿಂದೂ ಮಹಾಸಾಗರದ ಸಾರಿಗೆಯಲ್ಲಿ ದೊಡ್ಡ ಪಾಲನ್ನು ತಾವೇ ಇಟ್ಟುಕೊಂಡಿದ್ದರು. ಹಗುರಾದ ಕರಾಳಿ ನೌಕೆಗಳು. ಏಕವಾದ ಮರದ ತುಂಡುಗಳನ್ನು ಕಟ್ಟಿಮಾಡಲಾದ ದೊಡ್ಡ ಹಡಗುಗಳು ಮತ್ತು ಮಲಯ ಮತ್ತು ಆಗ್ನೇಯ ಏಷ್ಯಾದ ದೂರ ಪ್ರಯಾಣಕ್ಕಾಗಿ ಇನ್ನು ದೊಡ್ಡ ಹಡಗುಗಳನ್ನು ಅವರು ಕಟ್ಟುತ್ತಿದರೆಂದು ತಿಳಿದುಬರುತ್ತದೆ.

ಅಂದಿನ ಭಾರತದ ಅತ್ಯಂತ ಲಾಭದಾಯಕವಾದ ವ್ಯಾಪಾರವು ದಕ್ಷಣ ಭಾರದೊಂದಿಗಿನ ರೋಮನ್‌ವ್ಯಾಪಾರವಾಗಿತ್ತು. ಅದು ಸಾಮಾನ್ಯ ಜನರು ಬಳಸುತ್ತಿದ್ದ ದಿನಬಳಕೆಯ ವಸ್ತುಗಳದ್ದಲ್ಲ. ಬದಲಿಗೆ ಭೋಗವಸ್ತುಗಳದ್ದು. ಮೊಟ್ಟಮೊದಲಿಗೆ ರೋಮನ್ನರು ವ್ಯಾಪಾರ ಆರಂಭಿಸಿದ್ದು ಶಾತವಾಗನ ರಾಜ್ಯದ ಹೊರೆಗೆ ಇದ್ದ ತಮಿಳು ರಾಜ್ಯಗಳೊಂದಿಗೆ. ಪ್ರಾಚೀನ ತಮಿಳು ಸಾಹಿತ್ಯವು ಕಾವೇರಿ ಪಟ್ಟಣಮ್‌ನಗರಕ್ಕೆ ತಮ್ಮ ಸರಕುಗಳನ್ನು ಹೊತ್ತು ಬರುವ ಯವನ ಹಡಗುಗಳನ್ನು ವರ್ಣಿಸುತ್ತದೆ. ಜೊತೆಗೆ ನಗರದ ಯವನ ಭಾಗವು ಸಮೃದ್ಧತೆಯಿಂದ ತುಂಬಿ ತುಳುಕುತ್ತಿದ್ದುದನ್ನು ವರ್ಣಿಸುತ್ತದೆ. ರೋಮನ್ನರು ದಕ್ಷಿಣ ಭಾರತದಿಂದ ಸಾಂಬಾರ ಪದಾರ್ಥಗಳೂ, ದಕ್ಷಿಣ ಹಾಗೂ ಮಧ್ಯ ಭಾರತಗಳಿಂದ ಮಸ್ಲಿನ್‌, ಮುತ್ತು, ರತ್ನಗಳು ಮುಂತಾದ ಆಭರಣಗಳನ್ನೂ ಕಬ್ಬಿಣದ ವಸ್ತುಗಳನ್ನು ಅದರಲ್ಲೂ ಚಾಕು, ಚೂರಿ, ಕತ್ತರಿ ಮುಂತಾದವುಗಳನ್ನು ಆಮದು ಮಾಡಿಕೊಳ್ಳತ್ತಿದ್ದರು. ಮುತ್ತು, ರತ್ನಗಳು ದಂತ ಮತ್ತು ಪ್ರಾಣಿಗಳು ಭೋಗವಸ್ತುಗಳಾಗಿ ಪರಿಗಣಿಸಲ್ಪಟ್ಟಿದ್ದವು.

ಭಾರತವು ತಾನೇ ಸರಬರಾಜು ಮಾಡುತ್ತಿದ್ದ ಸರಕುಗಳನ್ನು ಮಾತ್ರವಲ್ಲದೆ ಚೀನಾ ಮತ್ತು ಮಧ್ಯ ಏಷ್ಯಾದಿಂದ ಕೆಲವು ವಸ್ತುಗಳನ್ನು ತರಿಸಿ ರೋಮನ್‌ಸಾಮ್ರಾಜ್ಯದ ಪೂರ್ವಭಾಗಗಳಿಗೆ ಕಳುಹಿಸುತ್ತಿತ್ತು. ರೇಷ್ಮೆ ಪಥವು ಕತ್ತರಿಸಿ ಹೋದ ನಂತರ ಚೇನಾವು ರೇಷ್ಮೆಯನ್ನು ವಾಯವ್ಯ ಭಾರತದ ಮೂಲಕ ಪಶ್ಚಿಮ ತೀರದ ಬಂದರುಗಳಿಗೆ ಕಳುಹಿಸುತ್ತಿತ್ತು. ಕೆಲವೊಮ್ಮೆ ಅದು ಪೂರ್ವ ಕರಾವಳಿಯ ಬಂದರುಗಳಿಗೆ ಸಮುದ್ರ ಮಾರ್ಗವಾಗಿ ಬಂದು ಪಶ್ಚಿಮಕ್ಕೆ ಹೋಗುತ್ತಿತ್ತು. ಹೀಗೆ ಭಾರತ ಮತ್ತು ರೋಮ್‌ಗಳ ನಡುವೆ ರೇಷ್ಮೆ ವ್ಯಾಪಾರವು ಪರೋಕ್ಷವಾಗಿ ಸಾಗಣೆ ವ್ಯಾಪಾರವಾಗಿ ಜರುಗುತ್ತಿತ್ತು.

ಇದಕ್ಕೆ ಪ್ರತಿಯಾಗಿ ರೋಮನ್ನರು ಭಾರತಕ್ಕೆ ಮದ್ಯ, ಮದ್ಯದ ಪಾತ್ರೆಗಳು ಮತ್ತು ಇತರ ಕುಂಭ ಕಾವಸ್ತುಗಳನ್ನು ಕಳುಹಿಸುತ್ತಿದ್ದರು. ಇವು ಪಶ್ಚಿಮ ಬಂಗಾಳದ ತಾಮಲುಕ್‌ನಲ್ಲಿಯೂ ಪಾಂಡಿಚೇರಿಯ ಬಳಿಯಿರುವ ಅರಿಕಮೇಡಿನಲ್ಲಿಯೂ ದೊರೆತಿವೆ. ಶಾತವಾಹನು ನಾಣ್ಯ ಟಂಕಿಸಲು ಬಳಸುತ್ತಿದ್ದ ಸೀಸವನ್ನು ತಗಡಿನ ಸುರುಳಿಗಳ ರೂಪದಲ್ಲಿ ಆಮದು ಮಾಡಿಕೊಳ್ಳುತ್ತಿದ್ದರು. ಭಾರತಕ್ಕೆ ರೋಮಿನಿಂದ ಬರುತ್ತಿದ್ದ ವಸ್ತುಗಳಲ್ಲಿ ಅತ್ಯಂತ ಪ್ರಮುಖವಾದುದು ಅವರ ಚಿನ್ನ ಹಾಗೂ ಬೆಳ್ಳಿ ನಾಣ್ಯಗಳು. ಭಾರತೀಯ ಭೂಖಂಡದಲ್ಲಿ ಸುಮಾರು ೧೫೦ ರೋಮನ್‌ ನಾಣ್ಯ ನಿಧಿಗಳು ದೊರೆತಿವೆ. ಅವುಗಳಲ್ಲಿ ಬಹುಪಾಲು ದಕ್ಷಿಣ ಭಾರತದಲ್ಲೆ ದೊರೆತಿವೆ. ಇದರಿಂದ ರೋಮಿನ ಲೇಖಕ ಪ್ಲಿನಿ ತನ್ನ ‘ನ್ಯಾಚುರಲ್‌ ಹಿಸ್ಟರಿ’ ಯಲ್ಲಿ ಭಾರತದೊಂದಿಗಿನ ವ್ಯಾಪಾರದಿಂದ ರೋಮಿನ ಚಿನ್ನ ಭಾರತಕ್ಕೆ ಹರಿದು ಹೋಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವುದರಲ್ಲಿ ಆಶ್ಚರ್ಯವಿಲ್ಲ. ಭಾರತ ರೋಮ್‌ನೊಂದಿಗೆ ನಡೆಸುತ್ತಿದ್ದ ವ್ಯಾಪಾರದಲ್ಲಿ ಹೆಚ್ಚಿನ ಲಾಭ ಪಡೆಯುತ್ತಿತ್ತೆಂದು ಗ್ರಹಿಸಬಹುದು. ಇತ್ತೀಚಿನ ತಲಕಾಡು ಉತ್ಖನನದಲ್ಲಿ ಟಂಕಸಾಲೆ ಮತ್ತು ಅದರಲ್ಲಿ ರೋಂ ರಾಜನ ಚಿತ್ರದ ಮೌಲ್ಡ್ (mould) ಸಿಕ್ಕಿರುವುದನ್ನು ಸ್ಮರಿಸಬಹುದು. ಪಾಶ್ಚಿಮಾತ್ಯರು ಮೆಣಸನ್ನು ಬಹಳವಾಗಿ ಇಷ್ಟಪಡುತ್ತಿದ್ದುದರಿಂದ ಸಂಸ್ಕೃತದಲ್ಲಿ ಅದನ್ನು ಯವನಪ್ರಿಯ ಎಂದೇ ಕರೆಯಲಾಗಿದೆ. ಭಾರತದಲ್ಲಿ ತಯಾರಾಗುತ್ತಿದ್ದ ಉಕ್ಕಿನ ಚಾಕು, ಚೂರಿಗಳಿಗೆ ರೋಮನ್‌ ಪ್ರಭುಗಳು ದುಬಾರಿ ಬೆಲೆ ತರಲು ಸಿದ್ಧರಿದ್ದರು. ರೋಮನ್ನರು ಹಣದ ರೂಪದಲ್ಲಿ ಅನುಭವಿಸುತ್ತಿದ್ದ ನಷ್ಟ ಯಾವ ಮಟ್ಟ ಮುಟ್ಟಿತೆಂದರೆ ರೋಮ್‌ ಭಾರತದಿಂದ ಮೆಣಸು ಮತ್ತು ಉಕ್ಕಿನ ವಸ್ತುಗಳ ಆಮದಿನ ಮೇಲೆ ನಿಷೇಧ ಹೇರಲು ಕ್ರಮಕೈಗೊಂಡಿತು.

ನಗರ ವೃತ್ತಿಗಳು

ಭಾರತ ವಿದೇಶಗಳೊಂದಿಗೆ ನಡೆಸಿದ ಲಾಭದಾಯಕ ವ್ಯಾಪಾರ ಸಹಜವಾಗಿಯೇ ಅನೇಕ ರೀತಿಯ ವಸ್ತುಗಳ ಉತ್ಪಾದನೆಯು ತೀವ್ರವಾಗಿ ಹೆಚ್ಚಲು ಕಾರಣವಾಯಿತು. ವಸ್ತುಗಳ ಉತ್ತಪಾದನೆ ತೀವ್ರವಾಗಿ ಹೆಚ್ಚಿದ್ದರಿಂದ ವೃತ್ತಿಸಂಘಗಳ ಉಗಮ ಹಾಗೂ ನಗರಗಳ ಬೆಳವಣಿಗೆಯೂ ಕಂಡುಬಂದಿತು. ಎಲ್ಲಕ್ಕಿಂತ ಮುಖ್ಯವಾಗಿ ವಿದೇಶೀ ವ್ಯಾಪಾರವು ಕುಶಲಕಸುಬುಗಳ ಉತ್ಪಾದನೆಯನ್ನು ತೀವ್ರಗೊಳಿಸಿತು. ಇವುಗಳ ಉತ್ಪಾದನೆ ಹೆಚ್ಚಾಗಿ ನಗರ ಕೇಂದ್ರಿತವಾಗಿತ್ತು.

ಕುಶಲವೃತ್ತಿಗಳಲ್ಲಿ ಮುಖ್ಯವಾದವುಗಳೆಂದರೆ ಚಿನ್ನ, ಬೆಳ್ಳಿ, ತವರ, ಹಿತ್ತಾಳೆ, ತಾಮ್ರ, ಕಬ್ಬಣ, ರತ್ನಗಳ ತಯಾರಿಗೆ, ಮಡಿಕೆ, ಹತ್ತಿ ಮತ್ತು ರೇಷ್ಮೆ ಬಟ್ಟೆ ತಯಾರಿಕೆ, ನಾಣ್ಯ ತಯಾರಿಗೆ ಇನ್ನು ಮುಂತಾದವುಗಳು. ಕ್ರಿ.ಶ. ಆರಂಭದ ಕಾಲದಲ್ಲಿ ರಚಿತವಾದ ಮಹಾವಸ್ತುವು ರಾಜಗೃಹದಲ್ಲಿ ಮೂವತ್ತಾರು ಬಗೆಯ ವೃತ್ತಿಗಾರರಿದ್ದುದನ್ನು ಪ್ರಸ್ತಾಪಿಸುತ್ತದೆ. ಮಿಲಿಂದಪನ್ಹೋ ಅಥವಾ ಮಿಲಿಂದ ಪ್ರಶ್ನೆಯು ೭೫(ಎಪ್ಪತ್ತೈದು) ವೃತ್ತಿಗಳನ್ನು ಹೆಸರಿಸಿದೆ. ಅವುಗಳಲ್ಲಿ ೬೦ ನಾನಾ ಬಗೆಯ ಕುಶಲ ಕಸುಬುಗಳು. ಈ ಕಸುಬುದಾರರಲ್ಲಿ ಬಹುತೇಕರು ನಗರಗಳಲ್ಲಿ ವಾಸಿಸುತ್ತಿದ್ದರಾದರೂ ಕೆಲವು ವೃತ್ತಿಯವರು ಹಳ್ಳಿಗಳಲ್ಲಿಯೂ ನೆಲಸಿದ್ದಂತೆ ಕಂಡುಬರುತ್ತದೆ.

ಗಣಿಗಾರಿಕೆ ಮತ್ತು ಲೋಹ ತಾಂತ್ರಕತೆಯಲ್ಲಾದ ಅಪಾರ ಪ್ರಗತಿ ಕಬ್ಬಿಣದ ಉತ್ಪಾದನೆಯಲ್ಲಿ ಅತಿ ಹೆಚ್ಚಿನ ಶ್ರೇಷ್ಟತೆಯನ್ನು ಸಾಧಿಸಲು ಕಾರಣವಾಯಿತು. ಉತ್ಖನನಗೊಂಡ ಹಲವಾರು ನಿವೇಶನಗಳ ಕುಶಾನ ಮತ್ತು ಶಾತವಾಹನ ಪದರಗಳಲ್ಲಿ ಹೆಚ್ಚಿನ ಸಂಖ್ಯೆಯ ಕಬ್ಬಿಣದ ವಸ್ತುಗಳು ದೊರೆತಿವೆ. ಆಂಧ್ರದ ತೆಲಂಗಾಣ ಪ್ರದೇಶ ಇದಕ್ಕೆ ಉತ್ತಮ ಉದಾಹರಣೆ. ಕರೀಂ ನಗರ ಮತ್ತು ನೆಲಗೊಂಡ ಜಿಲ್ಲೆಗಳಲ್ಲಿ ಆಯುಧಗಳ ಜೊತೆಗೆ ಕಬ್ಬಿಣದ ತಕ್ಕಡಿ ಕೋಲು ಕೊಡಲಿ, ಗುದ್ದಲಿ, ಕ್ಷೌರಕತ್ತಿ, ಕುಡುಗೋಲು, ಚಾಕು, ಚೂರಿ ಮತ್ತು ಸೌಟುಗಳೂದೊರೆತಿವೆ. ಕಬ್ಬಿಣ ಮತ್ತು ಉಕ್ಕಿನ ವಸ್ತುಗಳನ್ನು ಅಬಿಸೀನಿಯಾದ ಬಂದರುಗಳಿಗೆ ರಫ್ತು ಮಾಡಲಾಗುತ್ತಿತ್ತು.

ಹತ್ತಿ ಬಟ್ಟೆ ರೇಷ್ಮೆ, ಆಯುಧಗಳು ಮತ್ತು ಭೋಗವಸ್ತುಗಳ ತಯಾರಿಕೆ ಪ್ರಗತಿಹೊಂದಿತು. ಮಥುರಾದಲ್ಲಿ ಶಾಟಕ ಎಂಬ ಹೆಸರಿನ ವಿಶಿಷ್ಟ ಬಟ್ಟೆ ತಯಾರಿಸುತ್ತಿದ್ದರು. ಬಟ್ಟೆಗಳಿಗೆ ಬಣ್ಣ ಹಾಕುವುದು ಒಂದು ದೊಡ್ಡ ಕಸುಬಾಗಿತ್ತು. ತಿರುಚನಾಪಳ್ಳಿ ನಗರದ ಉಪನಗರವಾದ ಉರೈಯೂರಿನಲ್ಲಿ ಇಟ್ಟಿಗೆಯಲ್ಲಿ ಕಟ್ಟಿದ ಬಣ್ಣ ಹಾಕುವ ತೊಟ್ಟಿಯೊಂದು ದೊರೆತಿದೆ. ಅರಿಕಮೇಡುವಿನಲ್ಲಿಯೂ ಇದೇ ರೀತಿಯ ತೊಟ್ಟಗಳೂ ದೊರೆತಿವೆ. ಇವು ಈ ಊರುಗಳಲ್ಲಿ ಉಚ್ಪ್ರಾಯ ಸ್ಥಿತಿಯಲ್ಲಿದ್ದ ಕ್ರಿ.ಶ. ಒಂದರಿಂದ ಮೂರನೇ ಶತಮಾನಕ್ಕೆ ಸೇರಿದೆ. ಗಾಣಗಳು ಬಳಕೆಗೆ ಬಂದು ಎಣ್ಣೆಯ ಉತ್ಪಾದನೆಯು ಸಹ ಏರಿತು. ಈ ಅವಧಿಯ ಶಾಸನಗಳು ನೇಕಾರರು, ಅಕ್ಕಸಾಲಿಗಳು, ಬಣ್ಣಗಾರರು, ಲೋಹ ಹಾಗೂ ದಂತಗಳ ಕೆಲಸಗಾರರು, ರತ್ನಪಡಿ ತಯಾರಕರು, ಶಿಲ್ಪಿಗಳು, ಬೆಸ್ತರು, ಕಮ್ಮಾರರು ಹಾಗೂ ಸುಗಂಧ ತಯಾರಕರು ಬೌದ್ಧ ಸನ್ಯಾಸಿಗಳಿಗಾಗಿ ಗುಹೆಗಳನ್ನು ನಿರ್ಮಿಸಿದರು ಹಾಗೂ ಕಂಬಗಳು, ಫಲಕಗಳು, ನೀರಿನ ತೊಟ್ಟಿಗಳು ಮುಂತಾವನ್ನು ದಾನ ಮಾಡಿದ ಬಗ್ಗೆ ಮಾಹಿತಿ ಒದಗಿಸುತ್ತವೆ. ಇವೆಲ್ಲವೂ ಆ ಕಸುಬುಗಳು ಉಚ್ಛ್ರಾಯ ಸ್ಥಿತಿ ಮುಟ್ಟಿದುದನ್ನು ಸೂಚಿಸುತ್ತವೆ.

ಭೋಗವಸ್ತುಗಳಿಗೆ ಸಂಬಂಧಿಸಿದ ತಯಾರಿಕೆಯನ್ನು ಹೆಸರಿಸಬಹುದು. ಕವಡೆ, ಶಂಖ, ಹಾಗೂ ಮುತ್ತಿನ ಚಿಪ್ಪುಗಳಿಂದ ಮಾಡುವ ವಸ್ತುಗಳ ತಯಾರಿಕೆಯು ಸಹ ಉತ್ತಮ ಸ್ಥಿತಿಯಲ್ಲಿತ್ತು. ಭಾರತದ ದಂತದ ವಸ್ತುಗಳು ಆಫ್ಘಾನಿಸ್ತಾನ ಮತ್ತು ರೋಮ್‌ಗಳಲ್ಲಿ ದೊರೆತಿದ್ದು ಶಾತವಾಹನ ನಿವೇಶನಗಳ ಉತ್ಖನನಗಳಲ್ಲಿ ದೊರಕಿರುವ ದಂತದ ವಸ್ತುಗಳನ್ನು ಹೋಲುತ್ತವೆ. ನಾಣ್ಯ ಟಂಕಿಸುವುದು ಸಹ ಒಂದು ಮುಖ್ಯ ಕಸಬಾಗಿತ್ತು. ಚಿನ್ನ, ಬೆಳ್ಳಿ, ತಾಮ್ರ, ಕಂಚು, ಸೀಸ ಹಾಗೂ ಪೋಟಿನ್‌ಗಳಲ್ಲಿ ತಯಾರಿಸಿದ ಹಲವು ಬಗೆಯ ನಾಣ್ಯಗಳು ದೊರೆತಿವೆ. ಕುಶಲ ಕೆಲಸಗಾರರು ಖೋಟಾ ರೋಮನ್‌ ನಾಣ್ಯಗಳನ್ನು ತಯಾರಿಸಿದ್ದು ಕಂಡುಬರುತ್ತದೆ. ಮಣ್ಣು ಬೊಂಬೆಗಳನ್ನು ತಯಾರಿಸುವುದೂ ಸಹ ಒಂದು ಉದ್ಯಮವಾಗಿತ್ತು. ಶಾತವಾಹನ ಹಾಗೂ ಕುಶಾನ ಪದರಗಳಲ್ಲಿ ಇವು ಹೆಚ್ಚಾಗಿ ದೊರೆತಿವೆ. ಬಹಳ ಸಂಖ್ಯೆಯ ಮಣ್ಣು ಬೊಂಬೆಗಳು ಅವುಗಳನ್ನು ತಯಾರಿಸುತ್ತಿದ್ದ ಅಚ್ಚುಗಳು ಆಂಧ್ರದ ನೆಲಗೊಂಡ ಜಿಲ್ಲೆಯ ಮಲ್ಲೇಶ್ವರಂ ಹಾಗೂ ಹೈದರಾಬಾದಿಗೆ ೬೫ ಕಿ.ಮೀ. ದೂರದ ಕೊಂಡಾಪುರದಲ್ಲಿ ದೊರೆತಿವೆ. ಈ ಮಣ್ಣು ಬೊಂಬೆಗಳು ನಗರಗಳ ಮೇಲುವರ್ಗದ ಜನರಿಗಾಗಿ ತಯಾರಾಗುತ್ತಿದ್ದವು. ಗುಪ್ತರು ಹಾಗೂ ಗುಪ್ತರ ನಂತರದ ಕಾಲದಲ್ಲಿ ಊರುಗಳು ಅವನತಿಯಾದಂತೆ ಮಣ್ಣು ಬೊಂಬೆಗಳೂ ಜನಪ್ರಿಯತೆ ಕಳೆದುಕೊಂಡವು.