ಜೈನ ಮತದ ಬೆಳವಣಿಗೆ

ಜೈನ ಧರ್ಮವು ವೃಷಭದೇವನಿಂದ ಪ್ರಾರಂಭವಾಗಿದ್ದರೂ ಅದು ಮಹಾವಿರನ ಕಾಲದಿಂದ ಹೆಚ್ಚೆಚ್ಚು ಬೆಳೆಯುತ್ತಾ ಹೋಯಿತು. ಇದು ಉತ್ತರ ಭಾರತ ಮತ್ತು ದಕ್ಷಣ ಭಾರತಗಳಲ್ಲಿ ಬಹುಬೇಗನೆ ಹರಡಿತು. ಹಾಗೂ ಇಂದಿಗೂ ಸಹಿತ ಭಾರತದಲ್ಲಿ ಹರಡಿದೆ. ಈ ಧರ್ಮವು ಭಾರತದ್ಯಂತ ಬೆಳವಣಿಗೆಯಾಗುವಾಗ ನಾವು ಈ ಕೆಳಕಂಡ ಅಂಶಗಳನ್ನು ಗುರುತಿಸಬಹುದು.

. ತೀರ್ಥಂಕರರು ಹಾಗೂ ಜೈನ ಧರ್ಮದ ತತ್ವಗಳು: ತೀರ್ಥಂಕರ ಎಂದರೆ “ಯಾವ ಮಹಾಮಾನವ(ಜೀನ) ಸ್ವಯಂಸಂಸಾರ ಸಾಗರವನ್ನು ದಾಟಿ ಅನ್ಯರಿಗೂ ಅದರಿಂದ ಪಾರಾಗುವ ಕಲೆಯನ್ನು ಸುಪರಿಚಿತವಾಗುವಂತೆ ಮಾಡಿದ್ದಾನೋ ಅವನು ತೀರ್ಥಂಕರ. ಇವನು ಕಾಲದ ಮೇಲೆ ವಿಜಯ ಸಾಧಿಸಿದ್ದವನು” ಇವನ ವೈಯಕ್ತಿಕ ಜೀವನ ಹಾಗೂ ಬೋಧಿಸಿದ ತತ್ವಗಳು ಜನರ ಮೇಲೆ ಗಾಢಾವಾದ ಪ್ರಭಾವವನ್ನು ಬೀರಿದವು. ಆದ್ದರಿಂದ ಈ ಮತವು ವಿಶಾಲ ಪ್ರದೇಶಕ್ಕೆ ಹರಡಲು ಸಾಧ್ಯವಾಯಿತು. ಇಂಥ ೨೪ ತೀರ್ಥಂಕರರು ಜೈಮ ಧರ್ಮದಲ್ಲಿದ್ದರು ಎಂದು ಜೈನ ಸಂಪ್ರದಾಯ ಗುರುತಿಸುತ್ತದೆ. ಅವರುಗಳೆಂದರೆ,

೧. ಋಷಭದೇವ, ೨. ಅಜಿತ, ೩. ಸಂಭವ, ೪. ಅಭಿನಂದನ, ೫. ಸುಮತಿ, ೬. ಪದ್ಮಪ್ರಭ, ೭. ಪಾರ್ಶ್ವ, ೮. ಚಂದ್ರ ಪ್ರಭ, ೯. ಪುಷ್ಪದಂತ, ೧೦. ಶೀತಲ, ೧೧. ಶ್ರೇಯಾಂಸ, ೧೨. ವಾಸುಪೂಜ್ಯ, ೧೩. ವಿಮಲ, ೧೪. ಅನಂತ, ೧೫. ಧರ್ಮ, ೧೬. ಶಾಂತಿ, ೧೭. ಕುಂದು, ೧೮. ಅರಹ, ೧೯. ಮಲ್ಲಿ ೨೦. ಮುನಿಸುವ್ರತ ೨೧. ನಮಿ, ೨೨. ನೇಮಿನಾಥ, ೨೩. ಪಾರ್ಶ್ವನಾಥ, ೨೪. ಮಹಾವೀರ

ಮೊದಲನೆ ತೀರ್ಥಂಕರನಾದ ಋಷಭದೇವ ರಾಜನಾಗಿದ್ದು ತಂದೆಯ ಮರಂದಿಂದ ವೈರಾಗ್ಯ ಹೊಂದಿ ರಾಜ್ಯ –ಕುಟುಂಬ ತ್ಯಾಗ ಮಾಡಿ ತೀಥಂಕರನಾದನು. ಇವನ ಹಿರಿಯ ಮಗ ಭರತ ರಾಜನಾದರೆ, ಕಿರಿಯ ಮಗ ಬಾಹುಬಲಿ  ವಿರಕ್ತನಾಗಿ ತಪಸ್ಸು ಮಾಜಿ ಜೈನ ಸನ್ಯಾಸಿಯಾದನು. ೨೩ನೆಯ ತೀರ್ಥಂಕರ ಪಾರ್ಶ್ವನಾಥನು ಬನಾರಸದ ರಾಜ ಅಶ್ವಸೇನನ ಮಗ. ೩೩ನೆಯ ವಯಸ್ಸಿನಲ್ಲಿ ಮನೆಯನ್ನು ತ್ಯಜಿಸಿ ತೀರ್ಥಂಕರನಾಗಿ ಜೈನ ಧರ್ಮ ಪ್ರಮುಖ ಐದು ತತ್ವಗಳಲ್ಲಿ ಮೊದಲನೆ ನಾಲ್ಕನ್ನು ಬೋಧಿಸಿದನು. ೨೪ನೆಯ ಮತ್ತು ಕೊನೆಯ ತೀರ್ಥಂಕರನಾದ ಮಹಾವೀರ ಸಹಿತ ರಾಜ್ಯ ತ್ಯಜಿಸಿ ಧರ್ಮಪ್ರಚಾರದಲ್ಲಿ ತೊಡಗಿಸಿಕೊಂಡನು.

ಜೈನ ಪ್ರಚಾರಕರು ತಮ್ಮ ಧರ್ಮದ ತತ್ವಗಳನ್ನು ಜನರಿಗೆ ಅರ್ಥವಾಗುವ ಭಾಷೆಯಾದ ಪ್ರಾಕೃತದಲ್ಲಿ ಬೋಧಿಸಿದರು.

. ಜೈನ ಸಂಘಗಳು: ಇವು ಮಹಾವೀರನ ಕಾಲದಿಂದ ಆರಂಭವಾದವು. ಈ ಸಂಘಗಳಲ್ಲಿದ್ದ ಶಿಸ್ತು, ಆತ್ಮ ಸಂಯಮಗಳು ಜೈನ ಮತದ ಬೆಳವಣಿಗೆಗೆ ಕಾರಣವಾಗಿದ್ದವು. ಮಹಾವೀರನ ೧೧ ಜನ ಶಿಷ್ಯಂದಿರು ಅವಿರತ ಶ್ರಮಪಟ್ಟರು. ಅವರನ್ನು “ಗಣಧರರು” ಎಂದು ಕರೆಯಲಾಗಿದೆ. ಮಹಾವೀರನ ನಂತರ ಸುಧಾರಮನು ಜೈನ ಸಂಘದ ಮುಖ್ಯಸ್ಥನಾಗಿ ಜೈನ ಧರ್ಮದ ಪ್ರಚಾರ ಮಾಡಿದನು. ಇವನಾದ ಮೇಲೆ ಜಂಬು ಮುಖ್ಯಸ್ಥನಾದನು. ಹೀಗೆ ಇವರು ಜೈನ ಧರ್ಮ ಬೆಳವಣಿಗೆಗೆ ಶ್ರಮಿಸಿದರು. ಜೈನ ಸಂಘಗಳು ಕೆಲವು ನಿಯಮಗಳನ್ನು ಹಾಕಿಕೊಂಡಿದ್ದವು. ಅವುಗಳೆಂದರೆ:

ಅ. ಅಹಿಂಸೆ ಪಾಲಿಸುವುದು: ಇವರು ಜೀವಂತವಿರುವ ಪ್ರಾಣಿ ಹಾಗೂ ಗಿಡಮರಗಳನ್ನು ಕೊಲ್ಲುತ್ತಿರಲಿಲ್ಲ.

ಆ. ಸತ್ಯ ನುಡಿಯುವುದು: ಎಂಥ ಸಂದರ್ಭಗಳಲ್ಲೂ ಸುಳ್ಳನ್ನು ಹೇಳುತ್ತಿರಲಿಲ್ಲ.

ಇ. ಸಂಪತ್ತು, ವೈಭೋಗ, ಹಬ್ಬ, ಉತ್ಸವ, ಐಶಾರಾಮದ ಊಟ ಮುಂತಾದವುಗಳಿಂದ ಸಂಪೂರ್ಣವಾಗಿ ದೂರವಿದ್ದರು.

ಈ. ಬ್ರಹ್ಮಚರ್ಯೆ ಪಾಲನೆ: ಇವರು ಕುಟುಂಬ, ಪ್ರಾಪಂಚಿಕ ಸುಖ, ಸಂಪತ್ತು ಹಾಗೂ ಎಲ್ಲಾರೀತಿಯ ವ್ಯಾಮೋಹಗಳಿಂದ ದೂರು ಇರುತ್ತಿದ್ದರು.

ಈ ಜೈನ ಸಂಘಗಳು ತಮ್ಮ ಧರ್ಮದ ಅನುಯಾಯಿಗಳನ್ನು ಈ ಕೇಳಕಂಡ ೪ ವರ್ಗಗಳನ್ನಾಗಿ ವಿಭಜಿಸಿದ್ದರು.

ಅ. ಜೈನ ಮುನಿಗಳು: ಇವರು ಸಂಪೂರ್ಣವಾಗಿ ಮತದ ಪ್ರಚಾರಕ್ಕಾಗಿ ತೊಡಗಿಕೊಂಡಿದ್ದರು ಹಾಗೂ ಸಂಪತ್ತು-ಪ್ರಾಪಂಚಿಕ ವೈಭೋಗಗಳಿಂಧ ದೂರು ಇರುತ್ತಿದ್ದರು.

ಅ. ಸನ್ಯಾಸಿನಿಯರು: ಜೈನ ಸಂಘದಲ್ಲಿ ಸ್ತ್ರೀಯರಿಗೂ ಪ್ರವೇಶ ನೀಡಿದ್ದು, ಧರ್ಮ ಪ್ರಚಾರ ಮಾಡಲು ಇವರು ತೊಡಗಿಸಿಕೊಂಡಿದ್ದರು.

ಇ. ಸಾಮಾನ್ಯ ಜೈನ ಧರ್ಮೀಯ ಪುರುಷರು: ಇವರು ಕುಟುಂಬ, ಆಸ್ತಿಯನ್ನು ಹೋಂದಿರಬಹುದಿತ್ತು. ಆದರೆ ಜೈನ ಮುನಿಗಳ ಸೇವೆ, ದಾನ ದತ್ತಿಗಳನ್ನು ನೀಡಬೇಕಾಗಿತ್ತು.

ಈ. ಸಾಮಾನ್ಯ ಜೈನ ಮಹಿಳೆಯರು: ಜೈನ ಪ್ರಚಾರಕರಿಗೆ ವಿವಿಧ ರೀತಿಯ ಸೇವೆಯನ್ನು ಮಾಡುತ್ತಿದ್ದರು.

ಜೈನ ಸಂಘಗಳಲ್ಲಿದ ಉತ್ತಮ ನಡತೆ, ಧರ್ಮ ಪ್ರಚಾರದ ಶ್ರದ್ಧೆ, ಸರಳ ಜೀವನ, ಹಾಗೂ ಅಹಿಂಸಾ ತತ್ವಗಳು ಬಹಳ ಜನರನ್ನು ತಮ್ಮೆಡೆ ಆಕರ್ಷಿಸಿದವು.

. ರಾಜಾಶ್ರಯ: ಜೈನ ಮತಕ್ಕೆ ಮಹಾವೀರನ ಕಾಲದಿಂದಲೂ ಅನೇಕ ರಾಜಮನೆತನಗಳ ಆಶ್ರಯ ದೊರೆಯಿತು. ಉತ್ತರ ಹಾಗೂ ದಕ್ಷಿಣ ಭಾರತದ ಅನೇಕ ರಾಜರು ಈ ಧರ್ಮವನ್ನು ಪೋಷಣೆ ಮಾಡಿ, ರಾಜ್ಯ ಧರ್ಮವನ್ನಾಗಿಸಿಕೊಂಡು ಇದರ ಬೆಳವಣಿಗೆಗೆ ಕಾರಣರಾದರು.

ಮಗಧ ರಾಜ್ಯವನ್ನು ಆಳಿದ ಬಿಂಬಸಾರನು ಜೈನ ಮತಾವಲಂಬಿಯಾಗಿದ್ದು, ಅದರ ಬೆಳವಣಿಗೆಗೆ ಸಾಕಷ್ಟು ಸಹಕಾರ ನೀಡಿದ್ದನು. ಅದೇ ರೀತಿಯಾಗಿ ಅಜಾತಶತ್ರ, ಉದಯನ್‌, ನಂದ ದೊರೆಗಳು, ಕಳಿಂಗದ ಖಾರವೇಲರವರು ಜೈನ ಧರ್ಮಕ್ಕೆ ರಾಜಾಶ್ರಯ ನೀಡಿ ಅದರ ವೃದ್ಧಿಗೆ ಸಹಾಯ ಮಾಡಿದ್ದರು. ಮೌರ್ಯ ಸಾಮ್ರಾಜ್ಯದ ಸ್ಥಾಪಕನಾಗಿದ್ದ ಚಂದ್ರಗುಪ್ತ ಮೌರ‍್ಯನು ಜೈನ ಧರ್ಮೀಯನಾಗಿದ್ದು, ಕೊನೆ ಕಾಲದಲ್ಲಿ ತನ್ನ ಜೈನ ಗುರು ಭದ್ರಬಾಹುವಿನೊಂದಿಗೆ ಶ್ರವಣಬೆಳಗೊಳಕ್ಕೆ ಬಂದು ಸಲ್ಲೇಖನ ವ್ರತ ಕೈಗೊಂಡು ಮರಣ ಹೊಂದಿದನು ಎಂಬುದಾಗಿ ಜೈನ ಸಂಪ್ರದಾಯ ತಿಳಿಸುತ್ತದೆ. ಅವನ ನಂತರ ಅಶೋಕನು ಸಹಿತ ಜೈನ ಧರ್ಮಕ್ಕೆ ಪೋಷಣೆ ನೀಡಿದ್ದನು. ವರ್ಧನರ ಕಾಲದಲ್ಲಿ ಮಥುರಾಜೈನ ಧರ್ಮದ ಕೇಂದ್ರವಾಗಿದ್ದು ರಾಜ್ಯದಿಂದ ದಾನ-ದತ್ತಿಯನ್ನು ಪಡೆದುಕೊಂಡು ಬಸದಿಗಳನ್ನು ಕಟ್ಟಿಸಿಕೊಂಡಿದ್ದರು.

ಗುಪ್ತರ ಕಾಲದಲ್ಲಿ ಜೈನ ಧರ್ಮವು ಬಂಗಾಳ, ವಲ್ಲಭ, ಮಥುರಾ, ಪುನವರ್ಥನ, ಉದಯಗಿರಿ ಮುಂತಾದ ಪ್ರದೇಶಗಳಿಗೆ ಹರಡಿತು ಹಾಗೂ ಅನೇಕ ಜೈನಕೃತಿಗಳು ಸಂಸ್ಕೃತದಲ್ಲಿ ರಚಿಸಲ್ಪಟ್ಟವು. ದಕ್ಷಿಣ ಭಾರತದಲ್ಲಿ ಅತಿ ಬೇಗನೆ ಜೈನ ಧರ್ಮವು ಹರಡಿತು. ಜೈನ ಧರ್ಮವು ಚಂದ್ರಗುಪ್ತ ಮೌರ್ಯ ಶ್ರವಣಬೆಳಗೊಳಕ್ಕೆ ಬರುವುದಕ್ಕಿಂತ ಪೂರ್ವದಲ್ಲೇ ನೆಲೆಸಿತ್ತು. ಶಾತವಾಹನರು ಈ ಧರ್ಮಕ್ಕೆ ರಾಜಾಶ್ರಯ ನೀಡಿದ್ದರು. ದಿಗಂಬರರು ಕುಂದಕುಂದಾಚಾರ್ಯ ಶಾತವಾಹನ ಅರಸರ ಗುರುವಾಗಿದ್ದನು. ಪಲ್ಲವರ ಕಾಲಾವಧಿಯಲ್ಲಿ ಜೈನ ಧರ್ಮ ತಮಿಳುನಾಡಿಗೂ ಹರಡಿತು. ಈ ಮನೆತನದ ಪ್ರಸಿದ್ದ ದೊರೆ ಒಂದನೇ ಮಹೇಂದ್ರವರ್ಮನ್‌ನು ಜೈನ ಧರ್ಮೀಯನಾಗಿದ್ದ.

ರಾಷ್ಟ್ರಕೂಟರ ಅರಸ ಅಮೋಘವರ್ಷನು ಜೈನ ಧರ್ಮೀಯನಾಗಿದ್ದು, ಜೈನ ಮುನಿಗಳಿಗೆ, ಕವಿಗಳಿಗೆ ಆಶ್ರಯದಾತನಾಗಿದ್ದನು. ಉದಾತ ಪೊನ್ನ, ಪಂಪ, ವೀರಸೇನ, ಜಿನಸೇನ ಮುಂತಾದ ಜೈನ ಕವಿಗಳು ಇವರ ಕಾಲದಲ್ಲಿದ್ದು ರಾಜಾಶ್ರಯ ಪಡೆದಿದ್ದರು. ಚಾಲುಕ್ಯರ ಅರಸರಾದ ವಿನಯಾದತ್ಯ. ಇಮ್ಮಡಿ ಪುಲಕೇಶಿಯವರು ಜೈನ ವಿದ್ವಾಂಸರಿಗೆ, ಮುನಿಗಳಿಗೆ ದಾನದತ್ತಿ ಉದಾರವಾಗಿ ನೀಡಿ ಜೈನ ಬಸದಿಗಳನ್ನು ಕಟ್ಟಿಸಿಕೊಟ್ಟಿದದರು. ಇಮ್ಮಡಿ ಪುಲಿಕೇಶಿಯ ದಂಡನಾಯಕ ರವಿಕೀರ್ತಿ ಜೈನ ಧರ್ಮೀಯವನಾಗಿದ್ದ. ಬಾದಾಮಿ, ಐಹೊಳೆ, ಲಕ್ಷ್ಮೇಶ್ವರಗಳು ಜೈನ ಕೇಂದ್ರಗಳಾಗಿದ್ದವು. ಕದಂಬರು, ಗಂಗರು ಜೈನ ಧರ್ಮದ ಬೆಳವಣಿಗೆಗೆ ಗಣನೀಯವಾಗಿ ಕೊಡುಗೆಗಳನ್ನು ನೀಡಿದ್ದಾರೆ. ಉದಾ: ಗಂಗರ ಮಂತ್ರಿ ಚಾವುಂಡರಾಯನು ಶ್ರವಣಬೆಳಗೊಳದಲ್ಲಿನ ಗೋಮಟೇಶ್ವರ ವಿಗ್ರಹವನ್ನು ನಿರ್ಮಿಸಿದನು.

ಜೈನ ಮತಕ್ಕೆ ಆರಂಭದಿಂದಲೂ ಭಾರತದ ಪ್ರಮುಖ ರಾಜಮನೆತನಗಳ ಆಶ್ರಯ ದೊರೆತಿದ್ದರಿಂದ ಭಾರತದಾದ್ಯಂತ ಹರಡಲು ಸಾಧ್ಯವಾಯಿತು.

. ಜೈನ ಸಮ್ಮೇಳನಗಳು: ಈ ಮತವನ್ನು ಮಾರ್ಪಡಿಸಲು ಹೊಸ ತತ್ವಗಳನ್ನು ಅಳವಡಿಸಿಕೊಳ್ಳಲು, ಪ್ರಚಾರ ಮಾಡಲು ಸಮ್ಮೇಳಗಳನ್ನು ನಡೆಸುತ್ತಿದ್ದರು. ಆ ರೀತಿಯ ಪ್ರಮುಖ ಎರಡು ಜೈನ ಸಮ್ಮೇಳನಗಳು ನಡೆದಿವೆ.

ಅ. ಮೊದಲನೇ ಜೈನ ಸಮ್ಮೇಳನ (ಕ್ರಿ.ಪೂ. ೩೦೦): ಈ ಸಮ್ಮೇಳನವು ‘ಪಾಟಲೀಪುತ್ರ’ದಲ್ಲಿ ಸ್ಥೂಲಭದ್ರನ ಅಧ್ಯಕ್ಷತೆಯಲ್ಲಿ ನಡೆಯಿತು. ಇದರಲ್ಲಿ ಮಹಾವೀರನ ತತ್ವಗಳನ್ನು ೧೨ ಅಂಗದಲ್ಲಿ ಸೇರಿಸಲು ಪ್ರಯತ್ನಿಸಲಾಯಿತು. ದಕ್ಷಿಣದಿಂದ ಬಂದಿದ್ದ ಭದ್ರಬಾಹುವಿನ ಅನುಯಾಯಿಗಳು ಇದನ್ನು ಜೈನ ಧರ್ಮದ ಪವಿತ್ರ ಗ್ರಂಥವೆಂದು ಸ್ವೀಕರಿಸಲು ಸಿರಾಕರಿಸಿದರು. ಅದರ ಬಗ್ಗೆ ಚರ್ಚೆ ನಡೆಯಿತು ಹಾಗೂ ಬಟ್ಟೆಯ ಬಗ್ಗೆಯೂ ಚರ್ಚೆ ನಡೆಯಿತು.

ಆ. ಎರಡನೇ ಜೈನ ಸಮ್ಮೇಳನ (ಕ್ರಿ.ಪೂ. ೫೧೨): ಈ ಸಮ್ಮೇಳನ ‘ವಲ್ಲಬಿ’ಯಲ್ಲಿ ದೇವವಧ ಅಶ್ವಶ್ರಮಣನ ಅಧ್ಯಕ್ಷತೆಯಲ್ಲಿ ನಡೆಯಿತು. ಇದರಲ್ಲಿ ಜೈನ ತತ್ವಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಯತು. ಈ ಹಿಂದೆ ತತ್ವ ಮತ್ತು ಬಟ್ಟೆಯ ವಿಷಯದಲ್ಲಿದ್ದ ಭಿನ್ನಾಭಿಪ್ರಾಯ ಇಲ್ಲೂ ಮುಂದುವರೆದ ‘ಶ್ವೇತಾಂಬರ’ ಮತ್ತು ‘ದಿಗಂಬರ’ ಎಂದು ಇಬ್ಭಾಗವಾಯಿತು.

ಧರ್ಮವು ಎರಡು ಪಂಥಗಳಾಗಿ ವಿಭಜನೆಯಾದರೂ ಜೈನ ಧರ್ಮದ ಪ್ರಚಾರಕ್ಕೆ ಅಡ್ಡಿಯಾಗಲಿಲ್ಲ. ಈ ಎರಡೂ ತಮ್ಮ ಸಿದ್ಧಾಂತಗಳನ್ನು ಸಮರ್ಥಿಸುತ್ತಾ ಧರ್ಮ ಪ್ರಚಾರವನ್ನು ಮುಂದುವರೆಸಿದರು. ಶ್ವೇತಾಂಬರರು ಪಾರ್ಶ್ವನಾಥನ ಅನುಯಾಯಿಗಳಾಗಿದ್ದು ಸರಳ ಜೀವನ. ಅಲ್ಪವಸ್ತ್ರ, ಸ್ಥವಿರಕಲ್ಪಗಳ ಮೂಲಕ ಮಹಾವ್ರತಿಯಾಗಬಹುದೆಂದು ನಂಬಿದ್ದು ಬಿಳಿ ವಸ್ತ್ರವನ್ನು  ಧರಿಸಿದರು. ಇವರು ಉತ್ತರ ಭಾರತದಲ್ಲಿ ಧರ್ಮವನ್ನು ಪ್ರಚಾರ ಮಾಡಿದರು. ದಿಗಂಬರರು ಮಹಾವೀರನ ಅನುಯಾಯಿಗಳಾಗಿದ್ದು, ಅಚೇಲ ತತ್ವ, ಎಲ್ಲಾ ರೀತಿಯ ವ್ಯಾಮೋಹದಿಂದ ದೂರವಿರುವುದು, ಜಿನಕಲ್ಪಗಳಲ್ಲಿ ನಂಬಿಕೆ ಉಳ್ಳವರಾಗಿದ್ದ ಜೈನ ಮುನಿಗಳು ಯಾವುದೇ ರೀತಿಯ ಉಡುಪನ್ನು ಧರಿಸಬಾರದು ಎಂದು ನಂಬಿಕೆಯಿಟ್ಟವರು. ಇವರು ದಕ್ಷಿಣ ಭಾರದಲ್ಲಿ ಧರ್ಮ ಹರಡಲು ಸಫಲರಾದರು.

೫. ಜೈನ ಸಾಹಿತ್ಯ: ಜೈನ ಧರ್ಮದ ಬೆಳವಣಿಗೆಯಲ್ಲಿ ವಿವಿಧ ಮುನಿಗಳು, ಲೇಖಕರಿಂದ ರಚಿತವಾದ ತತ್ವಜ್ಞಾನದ ಸಾಹಿತ್ಯವು ಬಹಳ ಪ್ರಭಾವ ವೀರಿದೆ. ಜೈನರ ತಾತ್ವಿಕ ಸಾಹತ್ಯ ಈ ರೀತಿ ಇದೆ. ಅವುಗಳನ್ನು ಅರ್ಧಮಾಗದಿ ಭಾಷೆಯಲ್ಲಿ (ಪ್ರಾಕೃತ) ರಚಿಸಲಾಗಿದೆ.

ಅ. ೧೨ ಅಂಗಗಳು : ಇವು ಜೈನ ಧರ್ಮದ ನೀತಿ ನಿಯಮ, ತತ್ವಗಳು, ದಂತಕಥೆಗಳು ಹಾಗೂ ಸಿದ್ಧಾಂತಗಳನ್ನೊಳಗೊಂಡಿವೆ.

ಆ. ೧೨ ಉಪಾಂಗಗಳು: ಜೈನ ದರ್ಶನಗಳನ್ನೊಳಗೊಂಡಿದಿ.

ಇ. ೧೦ ಪ್ರಕೀರ್ಣಗಳು: ಗದ್ಯರೂಪದಲ್ಲಿ ಜೈನ ತಾತ್ವಿಕತೆಯನ್ನು ತಿಳಿಸುತ್ತದೆ.

ಈ. ಷಡ್‌ ಸೂತ್ರಗಳು: ಜೈನ ಮಠಗಳು, ಬಸದಿಗಳು ಅನುಸರಿಸಬೇಕಾದ ನಿಯಮಗಳನ್ನೊಳಗೊಂಡಿದೆ ಎಂದು ಜೈನ ಚರಿತ್ರೆ ತಿಳಿಸುತ್ತದೆ.

ಉ. ಮೂಲ ಸೂತ್ರಗಳು: ಜೈನ ಪದ್ಯಗಳು, ಸಂಭಾಷಣೆಗಳು, ಜಾನಪದ ಕಥೆಗಳು ದಂತ ಕಥೆಗಳು ಮುಂತಾದವುಗಳಿವೆ.

ಇವುಗಳಲ್ಲದೇ ಸಂಸ್ಕೃತ, ಕನ್ನಡ, ಪ್ರಾಕೃತ, ತಮಿಳು ಮುಂತಾದ ಭಾಷೆಗಳಲ್ಲಿ ಭಾಷ್ಯಗಳು, ಟೀಕೆಗಳು ರಚನೆಗೊಂಡಿವೆ.

ದಿಗಂಬರ ಪಂಥದ ಪ್ರಮುಖ ತತ್ವ ಜ್ಞಾನಿಯಾದ ಕುಂದಕುಂದಾಚಾರ್ಯನು ಅತ್ಯುತ್ತಮ ಜೈನ ಕೃತಿಗಳನ್ನು ರಚಿಸಿದ್ದಾನೆ. ಅವುಗಳೆಂದರೆ ಪ್ರಭಾತ ಸಾರೆ, ರಾಯನಸಾರ, ಸಮಬಸಾರ, ಪ್ರವಚನ ಸಾರ, ಇವು ಜೈನ ಧರ್ಮವನ್ನು ದಕ್ಷಿಣ ಭಾರತದಲ್ಲಿ ಹರಡಲು ಉಪಯುಕ್ತವಾಗಿದ್ದವು. ವಟ್ಟಕೆರೆ, ಸ್ವಾಮಿ ಕೇರ್ತಿಕೆಯ, ಮತಿ ವೃಷಭ, ಸಾವಂತ ಭದ್ರ, ಮಾನತುಂಗ, ಪಂಪ, ರನ್ನ, ಪೊನ್ನ, ಜನ್ನ, ಅಜಿಕಸೇನ, ಮುಂತಾದವರ ಕೃತಿಗಳು ಜೈನ ಧರ್ಮ ಹರಡುವಲ್ಲಿ ಯಶಸ್ವಿಯಾಗಿದ್ದವು.

ಈ ರೀತಿ ತೀರ್ಥಂಕರರು, ಜೈನ ಧರ್ಮದ ತತ್ವಗಳು, ಜೈನ ಸಂಘಗಳು, ಉತ್ತರ ಭಾರತದಕ್ಷಿಣ ಭಾರತದ ರಾಜರ ಆಶ್ರಯ, ಜೈನ ಸಮ್ಮೇಳನಗಳು, ಜೈನ ಪಂಥಗಳು, ಹಾಗೂ ಜೈನ ಸಾಹಿತ್ಯ ಮುಂತಾದವುಗಳು ಈ ಮತದ ಬೆಳವಣಿಗೆಯಲ್ಲಿ ಮುಖ್ಯ ಪಾತ್ರವಹಿಸಿದ್ದವು.

ಭಕ್ತಿ ಪಂಥಗಳ ಬೆಳವಣಿಗೆ

ಈ ಪಂಥಗಳು ಒಬ್ಬ ಪರಮ ದೇವರ ಕಲ್ಪನೆಯಲ್ಲಿ ಕೇಂದ್ರಿಕೃತವಾಗಿದ್ದವು. ಆ ದೇವರನ್ನು ವಿಷ್ಣು ಅಥವಾ ಶಿವ ಅಥವಾ ಶಕ್ತಿ ಅಥವಾ ಇತರೆ ರೂಪದಲ್ಲಿ ಗುರುತಿಸಿಕೊಳ್ಳಲಾಯತು. ಮೊಕ್ಷವು ದೇವರ ದಯೆಯಿಂದ ಮಾತ್ರ ಸಾಧ್ಯ. ಭಕ್ತಿಯಿಂದ ದೇವರ ದಯೆಯನ್ನುಗಳಿಸಬಹುದು ಎಂಬುದು ಅವುಗಳ ಮುಖ್ಯ ಆಶಯವಾಗಿದ್ದಿತು. ಈ ಸಂಪ್ರದಾಯಗಳು ಆರಂಭವಾದ ಕಾಲವನ್ನು ನಿರ್ದಿಷ್ಟವಾಗಿ ಗುರುತಿಸಲಾಗದು. ಮೂಲತಃ ಚಿಕ್ಕ ಪಂಥಗಳಾದ ಇವುಗಳಲ್ಲಿ ಭಾಗವತ ಮತ್ತು ಶೈವಪಂಥಗಳು ಕ್ರಮೇಣ ಗಮನಾರ್ಹವಾಗಿ ಬೆಳವಣಿಗೆ ಹೊಂದೆವೆ. ಭಾಗವತ ಪಂಥವು ಮುಂದೆ ವೈಷ್ಣವ ಪಂಥವಾಯಿತು. ಹಾಗೆಯೇ ಸೈವ ಪಂಥವು ಹಲವು ಪ್ರಭೇದಗಳಾಗಿ ರೂಪುಗೊಂಡಿತು.

ಭಾಗವತ ಪಂಥ

ಭಾಗವತ ಪಂಥದ ಚಿಂತನೆಗಳು ಮೂಲತಃ ಉಪನಿಷತ್‌ಗಳಿಂದ ಹುಟ್ಟಿಕೊಂಡವೆ ಯೆಂಬುದು ಡಾ. ಭಂಡಾರ್ಕರ್‌ರವರ ಅಭಿಪ್ರಾಯವಾಗಿದೆ. ಪೂರ್ವ ಭಾರತದಲ್ಲಿ ಜೈನ ಮತ್ತು ಬೌದ್ಧ ಮತಗಳು ಕಾಣಿಸಿಕೊಂಡ ಸಂದರ್ಭದಲ್ಲಿಯೇ ಪಶ್ವಿಮ ಭಾರತದಲ್ಲಿ ಭಾಗವತ ಪಂಥವು ಕಾಣಿಸಿಕೊಂಡಿತು. ಮಥುರಾ ಪ್ರಾಂತ್ಯದಲ್ಲಿನ ಯಾದವರ ಕುಲಕ್ಕೆ ಸೇರಿದ ಶೌರಸೇನೀಯರು ವಾಸುದೇವ ಕೃಷ್ಣ ಹರಿಯನ್ನು ಶ್ರೇಷ್ಠ ದೇವರೆಂದು ಅಂಗೀಕರಿಸಿಕೊಂಡು ಈ ಪಂಥವನ್ನು ಆರಂಭಿಸಿದರು. ಪ್ರಾಣಿಬಲಿಯನ್ನು ತಿರಸ್ಕರಿಸಿ, ಜೈನ ಮತ್ತು ಬೌದ್ಧ ಧರ್ಮಗಳಿಗಿಂತ ಭಿನ್ನವಾಗಿ, ಸಾಂಪ್ರದಾಯಕ ರೀತಿಯಲ್ಲಿ ಧಾರ್ಮಿಕ ಸುಧಾರಣೆಯನ್ನು ಆ ಮೂಲಕ ಆರಂಭಿಸಲಾಯಿತು. ಮುಂದೆ ವಾಸುದೇವ ಕೃಷ್ಣನಿಂದ ಈ ಪಂಥವು ಜನಪ್ರಿಯ ಗೊಂಡಿತು.

ವಾಸುದೇವ ಕೃಷ್ಣನ ಕಾಲಮಾನವನ್ನು ನಿರ್ದಿಷ್ಟವಾಗಿ ಹೇಳಲಾಗದು. ಮಹಾಭಾರತದ ಪ್ರಮುಖ ಪಾತ್ರವಾಗಿ ಆತನು ಉಲ್ಲೇಖಿಸಲ್ಪಟ್ಟಿದ್ದಾನೆ. ಛಾಂದೋಗ್ಯ ಉಪನಿಷತ್‌ನಲ್ಲಿ ಋಷಿ ಗೋರಾನ ಶಿಷ್ಯವಾಗಿ ಕೃಷ್ಣನ ಉಲ್ಲೇಖವಿದೆ. ಪಾಣಿನಿಯ ಅಷ್ಟಾದ್ಯಾಯಿ (ಕ್ರಿ.ಪೂ. ೫ನೆಯ ಶತಮಾನ)ಯಲ್ಲಿ ವಾಸುದೇವ ಭಕ್ತಿ ಪಂಥದ ಉಲ್ಲೇಖವಿದೆ. ಬೆಸನಗರ್‌ ಶಾಸನದಲ್ಲಿ ಉಲ್ಲೇಖಿತವಾದಂತೆ ವಾಸುದೇವ ಪಮಥಕ್ಕೆ ಆಳುವ ವರ್ಗದವರೂ ಬೆಂಬಲಿಸುತ್ತಿದ್ದರು. ಹೀಗಾಗಿ ವಾಸುದೇವ ಕೃಷ್ಣನ ಕಾಲವನ್ನು ಕ್ರಿ.ಪೂ. ೪ನೆಯ ಶತಮಾನಕ್ಕಿಂತ ಮೊದಲು ಎನ್ನಬಹುದು. ಮೆಗಾಸ್ತಾನೀಸನ ಬರಹಗಳಲ್ಲಿಯೂ ಮಥುರ ಪ್ರಾಂತ್ಯದಲ್ಲಿ ಈ ಪಂಥ ಜನಪ್ರಿಯವಾಗಿತ್ತೆಂದು ಉಲ್ಲೇಖವಿದೆ. ಮಥುರಾ ಪ್ರದೇಶವೇ ಭಾಗವತ ಪಂಥದ ಮೂಲ ಸ್ಥಳವಾಗಿತ್ತು.

ಭಾಗವತ ಪಂಥದ ಶ್ರೇಷ್ಠ ಧಾರ್ಮಿಕ ಕೃತಿ ಭಗವದ್ಗೀತೆ, ಇದು ಗೀತೆ ಎಂದೇ ಪ್ರಸಿದ್ಧವಾಗಿದೆ. ಕೃಷ್ಣ ಇದರ ಕರ್ತೃ ಎನ್ನಲಾಗಿದೆ. ವಾಸುದೇವ ಕೃಷ್ಣ ಮತ್ತು ಗೀತೆಯ ಕೃಷ್ಣ ಬೇರೆ ಬೇರೆ ಎಂಬ ಅಭಿಪ್ರಾಯವಿದೆ. ವಾಸುದೇವ ಎಂಬುದು ಒಂದು ಬಿರುದು. ಗೀತೆ ಭಾರತದಲ್ಲಿ ಬಹು ಜನಪ್ರಯವಾದ ಮತ್ತು ಹೆಚ್ಚು ಪ್ರಸ್ತಾಪಿಸಲ್ಪಡುವ ಕೃತಿ. ಇದರ ರಚನಾ ಕಾಲವನ್ನು ಸ್ಪಷ್ಟವಾಗಿ ಹೇಳಲಾಗದಿದ್ದರೂ ಸುಮಾರು ಕ್ರಿ.ಶ. ನಾಲ್ಕನೆಯ ಶತಮಾನಕ್ಕೆ ನಿಗದಿಪಡಿಸಲಾಗಿದೆ.

ಗೀತೆಯು ಮೋಕ್ಷ ಸಾಧನೆಗೆ ಮೂರು ಮಾರ್ಗಗಳನ್ನು ಪ್ರಸ್ತಾಪಿಸಿದೆ. ಜ್ಞಾನ, ಕರ್ಮ, ಮತ್ತು ಭಕ್ತಿ ಇವೆಲ್ಲವೂ ಮೋಕ್ಷಕ್ಕೆ ಮಾರ್ಗಗಳೇ ಆದರೆ ಅಂತಿಮವಾಗಿ ನನ್ನನ್ನೇ ತಲುಪುವುದು ಎಂದು ಕೃಷ್ಣನು ಹೇಳುತ್ತಾನೆ. ಅಂದರೆ ಕೃಷ್ಣ ಅಥವಾ ವಿಷ್ಣುವನ್ನು ಹೊಂದುವುದೇ ಮೋಕ್ಷವೆಂದು ಗೀತೆಯ ಅಭಿಪ್ರಾಯ.

ಪರಮಾತ್ಮನ ಒಂದು ಭಾಗವಾಗಿರುವ ಆತ್ಮವನ್ನು ಅರಿಯುವುದೇ ಜ್ಞಾನ, ಅಜ್ಞಾನವೆಂಬುದು ಆಧ್ಯಾತ್ಮಿಕ ಕುರುಡುತನ, ಪ್ರತಿಯೋರ್ವನಲ್ಲಿಯೂ ಆತ್ಮವಿದೆ. ಆತ್ಮಕ್ಕೆ ಮರಣವಿಲ್ಲ. ದೇಹಕ್ಕೆ ಮಾತ್ರ ಮರಣ ಆತ್ಮಕ್ಕೆ ಲೌಕಿಕವಾಗಿ ಯಾವುದೇ ಸಂಬಂಧವಿರದು (ಸ್ನೇಹಿತ, ವೈರಿ, ನೆಂಟ ಇತ್ಯಾದೆ) ಅದಕ್ಕೆ ಸುಖ ಅಥವಾದುಃಖದ ಅನುಭವವಾಗದು ಆತ್ಮವನ್ನು ಯಾರು ನಾಶಪಡಿಸಲು ಸಾಧ್ಯವಿಲ್ಲ. ಆತ್ಮದ ಅಸ್ತಿತ್ವವನ್ನು ಅರಿಯದಿದ್ದಲ್ಲಿ ವ್ಯಕ್ತಿಗೆ ಮೋಕ್ಷ ಸಾಧನೆ ಅಸಾಧ್ಯವಾದುದು ಎಂದು ಗೀತೆಯಲ್ಲಿ ಹೇಳಲಾಗಿದೆ.

ಜ್ಞಾನ ಮಾರ್ಗ ಸುಲಭ ಸಾಧ್ಯವಲ್ಲ. ಹೀಗಾಗಿ ಕರ್ಮ ಮಾರ್ಗ ಸೂಕ್ತವೆಂದು ಗೀತೆಯಲ್ಲಿ ಹೇಳಲಾಗಿದೆ. ಪ್ರತಿ ವ್ಯಕ್ತಿಯು ಕರ್ಮಯೋಗಿಯಾಗಬೇಕೆಂಬುದು ಗೀತೆಯ ಸಂದೇಶ. ಪ್ರತಿಯೋರ್ವನು ಧರ್ಮದ ಪ್ರಕಾರ ಕರ್ಮ(ಕರ್ತವ್ಯ)ವನ್ನು ನಿರ್ವಹಿಸಬೇಕು. ಫಲಾಪೇಕ್ಷೆ ಮಾಡಬಾರದು. ಕರ್ಮ ಫಲದಲ್ಲಿ ಆಸಕ್ತಿ ತೋರದೇ ಅದನ್ನು ಮಾಡುವವನು ಪರಮ ಪದವನ್ನು (ಮೋಕ್ಷ) ಹೊಂದುವನು. ಕರ್ಮವು ಫಲ ನಿರೀಕ್ಷಿಸುವ ಮಾಧ್ಯಮವಾಗಬಾರದು. ಫಲ ನಿರೀಕ್ಷಿಸಿದರೆ ಅದು “ದಾಸ್ಯ” ವಾಗುತ್ತದೆ. ಪ್ರತಿಯೋರ್ವನ ಕರ್ಮವನ್ನು ಭಗವಂತನೇ ನಿರ್ದೇಶಿಸುವುದರಿಂಧ ಫಲವನ್ನು ನಿರೀಕ್ಷಿಸಬಾರದು. ವ್ಯಕ್ತಿಯು ತನ್ನ ಕರ್ತವ್ಯವನ್ನು ಬಿಟ್ಟು ‘ಸನ್ಯಾಸ’ ಸ್ವೀಕರಿಸಲು ದೇವರು ಹೇಳುವುದಿಲ್ಲ. ತನ್ನ ಕರ್ಮಕ್ಕಾಗಿ ಫಲಾಪೇಕ್ಷೆ ಮಾಡುವುದು ಸ್ವಾರ್ಥ ಮತ್ತು ಮಾಯೆ. ಈ ಮಾಯೆಯೇ ಆತ್ಮವು ಮೋಕ್ಷ ಸಾಧಿಸಲು ಇರುವ ಅಡ್ಡಿಯಾಗಿದೆ. ಹೀಗಾಗಿ ಫಲಾಪೇಕ್ಷೆಯಿಂದ ದೂರ ಉಳಿಯಬೇಕೆಂದು ಗೀತೆಯು ಒತ್ತಿ ಹೇಳಿದೆ.

ಕರ್ಮಯೋಗಿಯ ಕರ್ತವ್ಯ ಮತ್ತು ಕರ್ಮದ ಅಗತ್ಯತೆಯನ್ನು ಹೇಳುವ ಗೀತೆಯು ವ್ಯಕ್ತಿಯು ತಾನು ನೆಲೆಸಿರುವ ಸಮಾಜದ ಅಭಿವೃದ್ಧಿಗೆ ತನ್ನ ನೀಡಲು ತನ್ನ ಕರ್ಮವನ್ನು ನಿರ್ವಹಿಸಬೇಕು. ಆದೇ ವೇಳೆಗೆ ಆತನ ವೈಯಕ್ತಿಕ ಗುರಿ ಮೋಕ್ಷ ಸಾಧನೆ ಎಂದಿದೆ. ವ್ಯಕ್ತಿಯು ಪ್ರತಿಯೊಂದು ಕರ್ಮವು ದೇವರಿಂದ ಗಮನಿಸಲ್ಪಡುತ್ತದೆ ಮತ್ತು ಕರ್ಮಯೋಗಿಯನ್ನು ದೇವರ ಸಮೀಪಕ್ಕೆ ಕರೆದೊಯ್ಯತ್ತದೆ ಎಂಬುದನ್ನು ಕರ್ಮಯೋಗಿ ಅರಿತಿರಬೇಕು. ಪ್ರತಿಯೊಂದು ಕರ್ಮವು ಭಗವಂತನ ಸೇವೆಯಾಗಿದ್ದು ಮೋಕ್ಷದತ್ತ ಕೊಂಡೊಯ್ಯತ್ತದೆ. ಹೀಗಾಗಿ ಪ್ರತಿಯೋರ್ವನು ಕರ್ಮವನ್ನು ಮಾಡಬೇಕು ಆದರೆ ಫಲದಿಂದ ದೂರವಿಬೇಕು. ಇದೇ ಶ್ರೇಷ್ಠ ತ್ಯಾಗವೆಂದು ಹೇಳಲಾಗಿದೆ. ವೇದಗಳ ರೀತಿ ಗೀತೆಯು ಕೂಡಾ ಭೌತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಗಮನ ನೀಡಿದೆ.

ಗೀತೆಯ ಪ್ರಕಾರ ಮೋಕ್ಷಗಳಿಸಲು ಬಹು ಸುಲಭ ಮತ್ತು ಸರಳ ಮಾರ್ಗವೆಂದರೆ “ಭಕ್ತಿ” ಮಾರ್ಗ, ಆತ್ಮದ ಬೆಳವಣಿಗೆಗೆ ಕರ್ಮವು ಹಾಗೂ ಮೋಕ್ಷ ಸಾಧನೆಗೆ ಭಕ್ತಿಯು ಅಗತ್ಯವಾದುದು. ಭಗವಂತನನ್ನು ಹೊಂದುವ ತೀವ್ರವಾದ ಹಂಬಲವೇ ಭಕ್ತಿ. ಈ “ಭಕ್ತಿ” ಕಲ್ಪನೆ ಅಥವಾ ಮಾರ್ಗವೇ ಮುಂದೆ ವೈಷ್ಣವ ಚಳವಳಿಯ ಪ್ರಮುಖ ಮಾಧ್ಯಮವಾಯಿತು.

ಗೀತೆಯು ಯಜ್ಞ ಯಾಗದಿಗಳನ್ನು ನಿರಾಕರಿಸಿಲ್ಲ. ಆದರೆ ಪ್ರಣಿಬಲಿಯನ್ನು ಕುರಿತು ಹೇಳಿಲ್ಲ. ಆತ್ಮವು ಪರಮಾತ್ಮನಲ್ಲಿ ಐಕ್ಯಗೊಳ್ಳುವ ಮತ್ತು ದೇವರ ಅವತಾರಗಳ ಕಲ್ಪನೆಯನ್ನು ಒಪ್ಪಕೊಂಡಿದೆ. ಪ್ರತಿಯೋರ್ವನ ಜೀವನವು ಅವನ ಪೂರ್ವಜನ್ಮದ ಕರ್ಮಾನುಸಾರ ರೂಪುಗೊಂಡಿದೆ ಎನ್ನುವುದು ಗೀತೆಯ ಅಭಿಮತ. ಕೃಷ್ಣನೇ ಹೇಳುವಂತೆ “ಧರ್ಮಕ್ಕೆ ಹಾನಿಯಾದಾಗಲೆಲ್ಲಾ ದೇವರು ಭೂಮಿಯಲ್ಲಿ ಅವತರಿಸುವನು” ಇದು ದೇವರ ಅವತಾರದ ಅಗತ್ಯತೆ ಕುರಿತು ಭಾಗವತ ಪಂಥದ ದೃಷ್ಟಿ ಕೋನವಾಗಿದೆ. ಗೀತೆ ಮತ್ತು ಕೃಷ್ಣ ಪಂಥಗಳೆರಡೂ ಭಾಗವತ ಪಂಥವನ್ನು ಜನಪ್ರಿಯಗೊಳಿಸಿವೆ. ಮುಂದೆ ಅನೇಕ ಹೊಸ ಹೊಸ ವಿಚಾರಗಳು ಸೇರಿಕೊಂಡವೆ.

ಭಾಗವತ ಮತ ಪಂಥವೇ ನಂತರದ ವೈಷ್ಣವ ಪಂಥ. ಇದರಲ್ಲಿ ‘ವಿಷ್ಣು’ ಸರ್ವೋತ್ಕೃಷ್ಟ ದೇವರು ಈತನ ಪತ್ನಿ ‘ಲಕ್ಷ್ಮಿ’ಯೂ ಸಂಪತ್ತು ಮತ್ತು ಸಮೃದ್ಧಿಯ ದೇವತೆ. ಬ್ರಹ್ಮ ಕೂಡಾ ವಿಷ್ಣುವಿನ ಸೃಷ್ಟಿ. ಹೀಗಾಗಿ ವಿಷ್ಣುವನ್ನು ಪರಮ ಬ್ರಹ್ಮ, ಪರಮಾತ್ಮ, ನಾರಾಯಣ, ಹರಿ, ಎಂಬ ಹೆಸರುಗಳಿಂದ ಕರೆಯಲಾಗಿದೆ. ಚೈತನ್ಯ, ಮೀರಾಬಾಯಿ, ರಮಾನಂದ, ಮೊದಲಾದವರು, ದಕ್ಷಿಣ ಭಾರತದಲ್ಲಿ ಆಳ್ವಾರರು, ರಾಮಾನುಜಾಚಾರ‍್ಯ ಮತ್ತು ದಾಸಪಂಥೀಯರು ಈ ಪಂಥದ ಜನಪ್ರಿಯತೆಗೆ ಕರಣರಾಗಿದ್ದಾರೆ. ಕೆಲವು ವಿದೇಶಿ ಅರಸರು ಈ ಮತ ಸ್ವೀಕರಿಸಿದ್ದಾರೆ. ಹೆಲಿಯೋಡೊರಸ್‌ಎಂಬ ಗ್ರೀಕ್‌ರಾಯಭಾರಿಯು ಮಧ್ಯಪ್ರದೇಶದ ವಿದಿಷ್‌ಜಿಲ್ಲೆಯ ಬೇಸ್‌ನಗರದಲ್ಲಿ ಕನ್ನರಾಜ ಆಂಟಿಅಲ್‌ಕಾಡಾಸ್‌ನ ಆಜ್ಞೆಯ ಮೇರೆಗೆ ಗರುಡ ಸ್ತಂಭ ನಿರ್ಮಿಸಿದ್ದಾನೆ (ಕ್ರಿ.ಪೂ. ೨ನೆಯ ಶತಮಾನ).

ಭಾಗವತ ಮತ ಪಂಥವು ಕ್ರಿಶ್ಚಿಯನ್‌ ಧರ್ಮ ಪ್ರಭಾವದಿಂದ ಹುಟ್ಟಿಕೊಂಡಿತೆಂದು ಕೆಲವರ ಅಭಿಪ್ರಾಯ. ಆದರೆ ಬಹುತೇಕ ವಿದ್ವಾಂಸರು ಇದನ್ನು ತಿರಸ್ಕರಿಸಿದ್ದಾರೆ. ಕ್ರಿಶ್ಚಿಯನ್‌ ಧರ್ಮದ ಸ್ಥಾಪನೆಗಿಂತ ಮೊದಲೇ ಈ ಮತವು ಅಸ್ತಿತ್ವದಲ್ಲಿದ್ದಿತು. ಇದು ಕೆಲವು ವಿಚಾರದಲ್ಲಿ ಜೈನ ಮತ್ತು ಬೌದ್ಧ ಮತಗಳಿಂದ ಪ್ರಭಾವಯುತವಾಗಿವೆ.

ಶೈವ ಪಂಥ

‘ವಿಷ್ಣು’ ಪ್ರಾಮುಖ್ಯತೆ ಹೊಂದಿರುವ ಭಾಗವತ ಪಂಥದಂತೆ ‘ಶಿವ’ ಪ್ರಾಮುಖ್ಯತೆ ಹೊಂದಿರುವ ಶೈವ ಪಂಥ ಕೂಡಾ ಭಾರತದಲ್ಲಿ ಪ್ರಸಿದ್ಧವಾಗಿವೆ. ಎರಡು ಪಂಥಗಳಲ್ಲಿ ತಮ್ಮ ದೇವರೇ ಶ್ರೇಷ್ಠವೆಂಬ ಅಭಿಪ್ರಾಯವಿದೆ. ಈ ಎರಡರ ನಡುವೆ ಸಮನ್ವಯತೆ ತರುವ ಹರಿಹರ ಕಲ್ಪನೆಯೂ ರೂಪುಗೊಂಡಿದೆ.

ಶಿವನ ಆರಾಧನೆಯು ವೇದಕಾಲಕ್ಕಿಂತ ಪ್ರಾಚೀನವಾದುದು ಎನ್ನುವುದಕ್ಕೆ ಅನೇಕ ಆಧಾರಗಳಿವೆ. ಸಿಂಧೂ ಕಣಿವೆಯ ನಾಗರೀಕತೆಯ ಪ್ರಾಚೀನ ಅವಶೇಷಗಳಲ್ಲಿ ದೊರೆತಿರುವ, ಶಿವನ ರೂಪವೆಂದು ಗುರುತಿಸಲಾದ ಒಂದು ಪುರುಷ ದೇವತೆಯ ಶಿಲ್ಪ, ಕಾಡುಪ್ರಾಣಿಗಳಿಂದ ಸುತ್ತುವರೆಯಲ್ಪಟ್ಟ ಯೋಗ ಮುದ್ರೆಯ ಭಂಗಿಯಲ್ಲಿ ಕುಳಿತಿರುವ ಒಂದು ದೇವಾಕೃತಿಯ ಮುದ್ರೆ, ಮತ್ತು ಲಿಂಗಗಳು ಶಿವನ ಆರಾಧನೆಯಿದ್ದೆ ತೆಂಬುದಕ್ಕೆ ಪ್ರಮುಖ ಸಾಕ್ಷಿಗಳಾಗಿವೆ. ಇದರಿಂದ ಶವನ ಆರಾಧನೆ ವೇದ ಸಂಸ್ಕೃತಿಗಿಂತ ಹಿಂದಿನದು ಎನ್ನಬಹುದು.

ಋಗ್ವೇದದಲ್ಲಿ ‘ಶಿವ’ ಎಂಬ ಹೆಸರಿನ ದೇವತೆ ಕಂಡುಬರುವುದಿಲ್ಲ ‘ರುದ್ರ’ ಎಂಬ ದೇವತೆಗೆ ಶಿವ ಎಂಬ ವಿಶೇಷಣವು ಬಳಕೆಯಾಗಿದೆ. ‘ರುದ್ರ’ ಇಲ್ಲಿ ‘ಉಗ್ರ’ ದೇವತೆ ಪಶುಗಳ ನಾಶಕ ಮತ್ತು ಜನರಿಗೆ ರೋಗಗಳನ್ನು ತರುವವನು. ಅವನ ದಯೆಯಿಲ್ಲದೆ ಬದುಕಲಾರೆವು ಎಂಬ ಭೀತಿ ಋಗ್ವೇದದಲ್ಲಿ ವ್ಯಕ್ತವಾಗಿದೆ. ಎಲೈ ರುದ್ರನೇ ನಿನ್ನ ಕೋಪಾಗ್ನಿಯಿಂದ ನಮ್ಮ ಮಕ್ಕಳನ್ನು ಜನಗಳನ್ನು ಹಸುಗಳನ್ನು ನಮ್ಮ ಮನೆಗಳನ್ನು ವಿನಾಶಗೊಳಿಸಬೇಡ. ನಿನಗೆ ಯಾವಾಗಲೂ ಕಾಣಿಕೆ ನೀಡಿ ಪ್ರಾರ್ಥಿಸುತ್ತೇವೆ ಎಂಭರ್ಥದ ಮಂತ್ರವು ಉಲ್ಲೇಖಿಸಲ್ಪಟ್ಟಿದೆ.

ಯಜುರ್ವೇದದಲ್ಲಿ ಶಂಭು ಅಥವಾ ಶಂಕರನೆಂದು ಶಿವನನ್ನು ಉಲ್ಲೇಖಿಸಲಾಗಿದೆ. ಅಥರ್ವಣ ವೇದದ ಕಾಲದಲ್ಲಿ ಶಿವನು ಪ್ರಮುಖ ದೇವತೆಗಳಲ್ಲಿ ಓರ್ವನಾಗಿ ಸ್ಥಾನ ಪಡೆದಿದ್ದನು. ಕ್ರಮೇಣ ಮೊದಲಿನ ‘ಭಯಂಕರತೆ’ಯ ಕಲ್ಪನೆ ಕಡಿಮೆಯಾಗಿ ಶಿವನನ್ನು ದಯಾಮಯ, ಕರುಣಾಳು, ಉದಾರಿ ಎಂದು ಚಿತ್ರಿಸಿಕೊಳ್ಳಲಾಯಿತು.

‘ಶ್ವೇತಾಶ್ವತರ’ ಉಪನಿಷತ್ತು ರಚನೆಯಾಗುವ ಕಾಲಕ್ಕೆ ಶಿವನು ಏಕೈಕ ಸರ್ವೇಶ್ವರ (supreme god)ನಾಗಿ ಸ್ಥಾನ ಪಡೆದಿದ್ದನು. ಅದರಲ್ಲಿ ‘ರುದ್ರನೊಬ್ಬನೇ ಸತ್ಯ’ ಜಗತ್ತನ್ನು ಆಳುವವನು, ಎಲ್ಲರ ಆತ್ಮದಲ್ಲಿರುತ್ತಾನೆ. ಎಲ್ಲಾ ಜೀವಿಗಳ ಸೃಷ್ಟಿಕರ್ತ ಮತ್ತು ರಕ್ಷಕನೆಂದು ಕರೆಯಲಾಗಿದೆ. ಶಿವನ ಪತ್ನಿ ಉಮಾ ಅಥವಾ ಪಾರ್ವತಿಗೂ ಆತನಷ್ಟೇ ಸ್ಥಾನಮಾನವನ್ನು ನೀಡಲಾಗಿದೆ. ‘ಸೂತ್ರ’ಗಳು ರಚನೆಯಾಗುವ ವೇಳೆಗೆ ಸೈವ ಪಂಥವು ಹಲವು ಲಕ್ಷಣಗಳನ್ನು ರೂಢಿಸಿಕೊಂಡಿತ್ತು. ಲಿಂಗ ರೂಪದ ಶಿವನ ಆರಧನೆ, ಆತನ ಪತ್ನಿ ಮತ್ತು ಮಕ್ಕಳ ಕುರಿತ ಉಲ್ಲೇಖಗಳೂ ‘ಗೃಹ ಸೂತ್ರ’ದಲ್ಲಿ ಕಂಡುಬರುತ್ತದೆ. ಆ ವೇಳೆಗೆ ಶಿವನ ಪತ್ನಿಯನ್ನು ಮಹಾಕಾಳಿ ಮಹಾಯೋಗಿನಿ, ದುರ್ಗಾ ಎಂಬ ಹೆಸರುಗಳಲ್ಲಿ ಕರೆದು ಸ್ವತಂತ್ರ ಅಸ್ತಿತ್ವ ನೀಡಲಾಗಿತ್ತು.

ರಾಮಾಯಣದಲ್ಲಿ ಶಿವನು ಮಹೇಶ್ವರ, ಮಹಾದೇವ ಮತ್ತು ಶಂಕರನೆಂದು, ಪಾರ್ವತಿಯು ಪರ್ವತ ರಾಜನ ಮಗಳಾಗಿ ಚಿತ್ರಿಸಲ್ಪಟ್ಟಿರುವರು, ಈ ಕಾವ್ಯದಲ್ಲಿ ಶಿವನಿಗೆ ಸಂಬಂಧಿಸಿದ ಗಂಗಾವತರಣ, ದಕ್ಷಯಜ್ಞ, ಸ್ಕಂದನ ಜನನ ಮೊದಲಾದ ಪ್ರಸಂಗಗಳಿವೆ. ಮಹಾಭಾರತದಲ್ಲಿ ಶಿವನು ಪ್ರಧಾನ ಆರಾಧ್ಯ ದೇವರಾಗಿ ವರ್ಣಿಸಲ್ಪಟ್ಟಿದ್ದಾನೆ.

ಶೈವ ಸಿದ್ದಾಂತವನ್ನು ವ್ಯವಸ್ಥಿತವಾಗಿ ಮೊದಲಿಗೆ ಪ್ರತಿಪಾದಿಸಿದೆವರು. ಯಾರೆಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಲ್ಲ. ಲಕುಲೀಶ ಅಥವಾ ಲಕುಳೀಶ ಎಂಬಾತನಿಂದ ಈ ಪಂಥದ ಸಿದ್ದಾಂತವು ಪ್ರತಿಪಾದಿಸಲ್ಪಟ್ಟಿತೆನ್ನಾಲಾಗಿದೆ. ಉದಯಪುರದ ಹತ್ತಿರದ ‘ಏಕಲಿಂಗ’ ದೇವಾಲಯದಲ್ಲಿ ದೊರೆತ ಶಾಸನ ಮತ್ತು ‘ಶಿಂತ್ರ ಪ್ರಶಸ್ತಿ’ ಎಂಬ ಶಾಸನಗಳಿಂದ ಲಕುಲೀಶನೆಂಬಾತನು ‘ಪಾಶುಪತ’ ಸಿದ್ದಾಂತವನ್ನು ಪ್ರತಿಪದಿಸಿದನೆಂದು ತಿಳಿಯುತ್ತದೆ. ಈತನ ಶಿಷ್ಯರಾದ ಕುಷಿಕ, ಗಾರ್ಗೀ, ಕೌರುಷ ಮತ್ತು ಮೈತ್ರೇಯಿ ಎಂಬುವವರು ಈ ಪಂಥವನ್ನು ಪ್ರತಿಪಾದಿಸಿದರು. ಮುಂದೆ ಶೈವ ಮತವು ಪಾಶುಪತ, ಶೈವ, ಕಾಪಾಲಿಕ ಮತ್ತು ಕಾಳಮುಖವೆಂದು ನಾಲ್ಕು ಮುಖ್ಯ ವಿಭಾಗವಾಯಿತು. ಕ್ರಿ.ಪೂ. ಎರಡನೆಯ ಶತಮಾನದಲ್ಲಿ ಇವುಗಳು ಹುಟ್ಟಿದವೆನ್ನಲಾಗುತ್ತದೆ.

ಕುಶಾನ ಸಂತತಿಗೆ ಸೇರಿದ ವಿಮಾಕಾಡ ಫೈಸಸ್, ಕನಷ್ಕ ಇವರು ಶೈವ ಪಂಥವನ್ನು ಒಪ್ಪಿಕೊಡಿದ್ದರು. ಶೂಲನಂದಿ ಸಹಿತದ ಶಿವನ ಚಿತ್ರವುಳ್ಳ ನಾಣ್ಯವನ್ನು ಮುದ್ರಿಸಿರುವರು. ಗುಪ್ತರ ಕಾಲದಲ್ಲಿ ಈ ಪಂಥ ಭರತಾದ್ಯಂತ ಜನಪ್ರಿಯಗೋಂಡಿತು.

ದಕ್ಷಿಣ ಭಾರತದಲ್ಲಿ ಈ ಪಂಥವು ತಮಿಳುನಾಡು ಮತ್ತು ಕರ್ನಾಟಕದಲ್ಲಿ ಬೆಳವಣಿಗೆ ಹೊಂದಿತು. ತಮಿಳುನಾಡಿನ ನಾಯನಾರರು ತಮ್ಮ ತೇವಾರಂ ಭಕ್ತಿ ಗೀತೆಗಳಿಂದ ಶಿವತತ್ವವನ್ನು ಹರಡಿದರು. ಅಪ್ಪಾರ್, ಸಂಬಂಧರ್, ಸುಂದರಾರ್ ಮೊದಲಾದ ನಾಯನಾರರು ಪ್ರಸಿದ್ದರಾಗಿದ್ದಾರೆ. ಪಲ್ಲವಚೋಳ ಮೊದಲಾದ ರಾಜವಂಶಗಳು ಈ ಪಂಥಕ್ಕೆ ರಾಜಾಶ್ರಯ ನೀಡಿದುದರಿಂದ ಗಮನಾರ್ಹ ಬೆಳವಣಿಗೆ ಹೊಂದಿರು. ಕರ್ನಾಟಕದಲ್ಲಿ ವೀರಶೈವ ಮತವೆಂದು ಕ್ರಿ.ಶ.೧೨ನೆಯ ಶತಮಾನದಲ್ಲಿ ಪ್ರಸಿದ್ದವಾಯಿತು.

ವಿಷ್ಣು ಮತ್ತು ಶಿವ ಪ್ರಧಾನವಾದ ಭಾಗವತ ಮತ್ತು ಶೈವ  ಮತ ಪಂಥಗಳಲ್ಲದೆ ಕೆಲವು ಚಿಕ್ಕ ಧರ್ಮಕ ಪಂಥಗಳು ಹುಟ್ಟಿಕೊಂಡಿದ್ದವು. ಅವೆಂದರೆ ಶಕ್ತಿ, ಗಣಪತಿ, ಸ್ಕಂದ ಅಥವಾ ಕಾರ್ತಿಕೇಯ, ಬ್ರಹ್ಮ ಮತ್ತು ಸೂರ್ಯ ಆರಾಧಕ ಪಂಥಗಳು. ಶಕ್ತಿಯು ಶಿವನ ಪತ್ನಿ, ಗಣಪತಿ ಮತ್ತು ಸ್ಕಂದರು ಗಣಾಪತಿಗಳು, ನಂತರ ರುದ್ರ ಅಥವಾ ಶಿವನ ಮಕ್ಕಳಾಗಿ ಗುರುತಿಸಲ್ಪಟ್ಟವರು. ಸೂರ್ಯ ವೈದಿಕ ಯುಗದ ಪ್ರಮುಖ ದೇವತೆ. ಬ್ರಹ್ಮ ಎಂಬುದು ಪ್ರಜಾಪತಿಯ ಕಲ್ಪನೆಯಿಂದ ರೂಪುಗೊಂಡಿದೆ. ಬ್ರಾಹ್ಮಣ ಧರ್ಮದ ಕಲ್ಪನೆಯಲ್ಲಿ ಬ್ರಹ್ಮನು ಜಗತ್ತಿನ ಸೃಷ್ಟಿಕರ್ತ. ಈ ಪಂಥಗಳಲ್ಲಿ ಶಕ್ತಿ, ಗಣಪತಿ, ಸ್ಕಂದ ಆರಾಧಕ ಪಂಥಗಳು ಶೈವ ಮತದೊಡನೆ ಐಕ್ಯಗೊಂಡವು. ಸೂರ್ಯ ಮತ್ತು ಬ್ರಹ್ಮ ಆರಾಧಕ ಪಂಥಗಳು ಜನಪ್ರಿಯ ಗೊಳ್ಳಲಿಲ್ಲ.

ಈ ಎಲ್ಲಾ ಮತ ಪಂಥಗಳು ಆಸ್ತಿಕ ಸಂಪ್ರದಾಯದಲ್ಲೇ ಪರ್ಯಾಯ ಹುಡುಕಿಕೊಳ್ಳುವ ಪ್ರಯತ್ನಗಳಾಗಿವೆ. ಇಂತಹ ಮತ ಪಂಥಗಳು ಜೈನ ಮತ್ತು ಬೌದ್ಧ ಮತಗಳ ವಿಸ್ತರಣೆಗೆ ತಡೆಯೊಡ್ಡುವಲ್ಲಿ ಗಮನಾರ್ಹ ಪಾತ್ರವಹಿಸಿದವು.

ಪರಾಮರ್ಶನಗ್ರಂಥಗಳು

೧. ರಾಧಾ ಕುಮುದ್‌ ಮುಖರ್ಜಿ, ೧೯೫೧. ಏನ್ಸಿಯೆಂಟ್ಇಂಡಿಯನ್ಎಜುಕೇಷನ್ಬ್ರಾಹ್ಮಣೀಕಲ್ಅಂಡ್ಬುದ್ಧಿಸ್ಟ್, ದೆಹಲಿ: ಮೋತಿಲಾಲ್‌ ಬನಾರಸಿದಾಸ್‌.

೨. ರಾಯ್‌ ಚೌಧರಿ ಹೆಚ್‌.ಸಿ., ೧೯೫೩. ಪೊಲಿಟಿಕಲ್ಹಿಸ್ಟರಿ ಆಫ್ಏನ್ಸಿಯೆಂಟ್ಇಂಡಿಯಾ, ಕಲ್ಕತ್ತಾ.

೩. ರೋಮಿಲಾ ಥಾಪರ್‌, ೧೯೯೭. ಅಶೋಕ ಅಂಡ್ ಡಿಕ್ಲೈನ್ಆಫ್ದಿ ಮೌರ್ಯಸ್, ದೆಹಲಿ: ಆಕ್ಸ್‌ಫರ್ಡ್‌ ಯುನಿವರ್ಸಿಟಿ ಪ್ರೆಸ್‌.

೪. ಶರ್ಮಾ ಆ.ಎಸ್‌., ೧೯೯೩. ಏನ್ಸಿಯೆಂಟ್ಇಂಡಿಯಾ, ನವದೆಹಲಿ: ನ್ಯಾಷನಲ್‌ ಕೌನ್ಸಿಲ್‌ ಆಫ್‌ ಎಜುಕೇಷನಲ್‌ ರೀಸರ್ಚ್‌ ಅಂಡ್‌ ಟ್ರೈನಿಂಗ್‌.

೫. ಶರ್ಮಾ ಎಲ್‌.ಪಿ., ೧೯೯೬. ಹಿಸ್ಟರಿ ಆಫ್‌ ಏನ್ಸಿಯೆಂಟ್‌ ಇಂಡಿಯಾ, ದೆಹಲಿ: ಕೊನಾರ್ಕ್‌ ಪಬ್ಲಿಷರ್ಸ್.